ನೂರು ವರ್ಷದ ಏಕಾಂತ – ೩

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್
ಕನ್ನಡಕ್ಕೆ: ಎ. ಎನ್. ಪ್ರಸನ್ನ

ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. ಅದೊಂದು ಅನಿರೀಕ್ಷಿತ ಘಟನೆಯಾಗಿತ್ತು. ಅವಳಿಗೆ ವಯಸ್ಸಾಗಿ ಪ್ರತಿಯೊಬ್ಬರಿಂದಲೂ ದೂರವಾಗಿದ್ದರೂ ಅವಳು ಎಂದಿನಿಂದಲೂ ಗುಂಡುಕಲ್ಲಿನಂತೆ ಆರೋಗ್ಯವಾಗಿ ದಟ್ಟ ಪುಷ್ಟವಾಗಿ ಕಾಣುತ್ತಿದ್ದಳು. ಅವಳು ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ಗೆ ಆ ದಿನ ಮಧ್ಯಾಹ್ನ ತನ್ನ ಕೊನೆಯ ನಿರಾಕರಣೆಯನ್ನು ತಿಳಿಸಿ, ಅಳುವುದಕ್ಕೆ ಬಾಗಿಲು ಹಾಕಿಕೊಂಡ ನಂತರ, ಯಾರಿಗೂ ಅವಳ ಆಲೋಚನೆಗಳು ಏನೆಂದು ಗೊತ್ತಿರಲಿಲ್ಲ. ಅವಳು ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಏರಿ ಹೊರಟಾಗ ಅಥವಾ ಅವ್ರೇಲಿಯಾನೋಗಳನ್ನು ನಿರ್ನಾಮ ಮಾಡಿದಾಗ ಅಥವಾ ಅವಳು ಎಲ್ಲರಿಗಿಂತ ಹೆಚ್ಚು ಪ್ರೀತಿಸಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸತ್ತಾಗಲೂ ಅತ್ತ ಹಾಗೆ ಕಂಡಿರಲಿಲ್ಲ. ಆದರೆ ಬಾದಾಮಿ ಮರದ ಕೆಳಗೆ ಅವನ ದೇಹವನ್ನು ಕಂಡಾಗ ಹಾಗೆ ಮಾಡಿದಳು. ಅವಳು ಅವನಿಗೆ ಯೋಧನ ಸಮವಸ್ತ್ರ ತೊಡಿಸಿ, ಶೇವ್ ಮಾಡಿ, ತಲೆ ಬಾಚಿದಳು ಹಾಗೂ ಅವನ ಮೀಸೆಗೆ ಮೇಣ ಸವರಿ, ಅವನ ವೈಭವದ ಕಾಲದಲ್ಲಿ ಇದ್ದದ್ದಕ್ಕಿಂತ ಚೆನ್ನಾಗಿ ಮಾಡಿದಳು. ಅವಳ ಕೆಲಸದಲ್ಲಿ ಯಾರಿಗೂ ಪ್ರೀತಿ ಇತ್ತೆಂದು ತೋರಲಿಲ್ಲ. ಏಕೆಂದರೆ ಸಾವನ್ನು ಕುರಿತ ವಿಧ್ಯುಕ್ತ ಕ್ರಿಯೆಗಳಲ್ಲಿ ಅಮರಾಂತಳ ವರ್ತನೆ ಹೇಗಿರುತ್ತೆಂದು ಅವರಿಗೆ ಗೊತ್ತಿತ್ತು. ಕ್ಯಾಥೊಲಿಕ್ ಧರ್ಮಾನುಸಾರ ಜೀವನದ ಸಂಬಂಧವೇನು ಎನ್ನುವುದು ಫೆರ್ನಾಂಡಳಿಗೆ ಅರ್ಥವಾಗಲಿಲ್ಲ. ಸಾವಿನ ಬಗ್ಗೆ ಮಾತ್ರ ಅದರ ಸಂಬಂಧವಿದ್ದು ಅದೊಂದು ಧರ್ಮವಲ್ಲ, ಕೇವಲ ಶವಸಂಸ್ಕಾರದ ಪದ್ಧತಿಗೆ ಸೇರಿದ್ದು ಎನ್ನುವ ಕಾರಣದಿಂದ ಅವಳು ಗಾಬರಿಯಾಗಿದ್ದಳು. ಅಮರಾಂತ ಕೂಡ ಆ ಎಲ್ಲ ಸೂಕ್ಷ್ಮಗಳು ಅರ್ಥವಾಗದಷ್ಟು ನೆನಪುಗಳ ಕಗ್ಗಂಟಿನಲ್ಲಿದ್ದಳು. ಅವಳು ತನ್ನೆಲ್ಲ ಮನೋವ್ಯಥೆಗಳನ್ನು ಕೂಡಿಕೊಂಡು ಮುದಿತನವನ್ನು ತಲುಪಿದ್ದಳು. ಪಿಯತ್ರೋ ಕ್ರೆಸ್ಪಿ ನುಡಿಸುತ್ತಿದ್ದ ವಾಲ್ಟ್ಜ್ ಸಂಗೀತ ಕೇಳುತ್ತಿದ್ದಾಗಲೂ, ಅವಳಿಗೆ ಚಿಕ್ಕವಳಾಗಿದ್ದಾಗ ಆಗುತ್ತಿದ್ದ ಹಾಗೆ, ಸಮಯ ಹಾಗೂ ಕಷ್ಟದ ಪಾಠಕ್ಕೆ ಅರ್ಥವೇ ಇಲ್ಲವೆನ್ನುವಂತೆ ಅಳು ಒತ್ತರಿಸಿಕೊಂಡು ಬರುತ್ತಿತ್ತು. ಒದ್ದೆಯಾಗಿ ಕೊಳೆತು ಹೋಗಿವೆ ಎಂದು ಮೂಲೆಗೆಸೆದಿದ್ದ ಸಂಗೀತದ ಸುರಳಿಗಳು ಅವಳ ನೆನಪಿನಲ್ಲಿ ತಿರುಗುತ್ತ ನಾದ ಹೊಮ್ಮಿಸುತ್ತಲೇ ಇದ್ದವು. ಅವಳು ಅವುಗಳನ್ನು ತನ್ನ ಸಂಬಂಧಿ ಅವ್ರೇಲಿಯಾನೋ ಹೊಸೆ ಜೊತೆ ಇರುವ ಕೇವಲ ಮೋಹದಲ್ಲಿ ಮುಳುಗಿಸಲು ಪ್ರಯತ್ನಿಸಿದಳು ಮತ್ತು ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ಶಾಂತವಾದ ಹಾಗೂ ಪೌರುಷದ ರಕ್ಷಣೆಯಲ್ಲಿ ಆಶ್ರಯ ಪಡೆಯಲು ಶ್ರಮಿಸಿದಳು. ಆದರೆ ಅವುಗಳನ್ನು ಅದುಮಿಡಲು ಮುದಿತನದ ಹತಾಶ ಕ್ರಿಯೆಯಿಂದಲೂ ಕೂಡ ಸಾಧ್ಯವಾಗಲಿಲ್ಲ. ಹೊಸೆ ಅರ್ಕಾದಿಯೋನನ್ನು ವಿದ್ಯಾಭ್ಯಾಸಕ್ಕೆ ಕಳಿಸುವುದಕ್ಕೆ ಮೂರು ವರ್ಷ ಮುಂಚೆ ಎಳೆಯ ಹೊಸೆ ಅರ್ಕಾದಿಯೋನನ್ನು ಅಜ್ಜಿಯೊಬ್ಬಳು ಮೊಮ್ಮಗನನ್ನು ಸ್ನಾನ ಮಾಡಿಸುವಂತೆ ಅವಳು ಮಾಡುತ್ತಿರಲಿಲ್ಲ. ಆದರೆ ಫ್ರೆಂಚ್ ಹೆಂಗಸರು ಮಾಡುತ್ತಾರೆಂದು ಹೇಳುತ್ತಿದ್ದ ಹಾಗೆ, ಪಿಯತ್ರೋ ಕ್ರೆಪ್ಸಿ ಹನ್ನೆರಡೋ, ಹದಿನಾಲ್ಕೋ ವರ್ಷದವನಾದಾಗ ಬಿಗಿಯಾದ ಪ್ಯಾಂಟ್ ತೊಟ್ಟು ಡ್ಯಾನ್ಸ್ ಮಾಡುವಾಗ ಮತ್ತು ಅವನಿಗೆ ತಾಳ eನದ ಬಗ್ಗೆ ಇದ್ದ ಮಾಂತ್ರಿಕ ಶಕ್ತಿಯನ್ನು ಕಂಡಾಗ, ಹೆಂಗಸೊಬ್ಬಳು ಗಂಡಸಿಗೆ ಮಾಡುವಂತೆ ಮಾಡಬೇಕು ಎಂದು ಅವನ ಬಗ್ಗೆ ಆದಂತೆಯೇ ಅಪೇಕ್ಷೆ ಉಂಟಾಗುತ್ತಿತ್ತು. ಅನೇಕ ವೇಳೆ ತುಂಬಿ ಬರುತ್ತಿರುವ ಯಾತನೆಯನ್ನು ಅದರಷ್ಟಕ್ಕೆ ಬಿಡಲು ನೋವಾಗುತ್ತಿತ್ತು ಮತ್ತು ಅನೇಕ ವೇಳೆ ಅವಳಿಗೆ ಸಿಟ್ಟು ಬಂದು ಸೂಜಿಯಿಂದ ಬೆರಳುಗಳನ್ನು ಚುಚ್ಚಿಕೊಳ್ಳುತ್ತಿದ್ದಳು. ಆದರೆ ಅವಳಿಗೆ ತೀರ ಹೆಚ್ಚಿನ ನೋವು, ಕೋಪ ಮತ್ತು ಕಹಿಯಾಗಿಸಿದ್ದೇನೆಂದರೆ, ಸಾವಿನ ಕಡೆ ಸೆಳೆಯುತ್ತಿದ್ದ ಪ್ರೇಮದ ಪರಿಮಳ. ಹುಳು ಹಿಡಿದ ಹಣ್ಣಿನ ಮರಗಳ ತೋಪಿನಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತಪ್ಪಿಸಿಕೊಳ್ಳಲಾಗದ ಯುದ್ಧದ ಬಗ್ಗೆ ಯೋಚಿಸುತ್ತಿದ್ದ ಹಾಗೆ, ಅಮರಾಂತ ರೆಬೇಕ ಬಗ್ಗೆ ಯೋಚಿಸುತ್ತಿದ್ದಳು. ಆದರೆ ಅವಳ ಸೋದರನಿಗೆ ನೆನಪುಗಳನ್ನು ಹದಗೊಳಿಸುವುದು ಸಾಧ್ಯವಾದರೆ, ಅವಳು ಅವುಗಳನ್ನು ಹೆಚ್ಚು ಸುಡುವಂತೆ ಮಾಡಿಕೊಂಡಳು. ದೇವರು ತನಗೆ ರೆಬೇಕಳಿಗಿಂತ ಮುಂಚೆ ಸಾಯುವಂಥ ಶಿಕ್ಷೆ ಕೊಡದಿರಲಿ ಎಂದು ಅವನಲ್ಲಿ ಅನೇಕ ವರ್ಷ ಕೇಳಿಕೊಂಡಳು. ಪ್ರತಿ ಬಾರಿ ಅವಳ ಮನೆಯನ್ನು ಹಾದು ಹೋಗುವಾಗ ಅದರ ದುರವಸ್ಥೆಯಲ್ಲಿ ಉಂಟಾಗಿರುವ ಪ್ರಗತಿಯನ್ನು ಕಂಡು ದೇವರು ತನ್ನ ಕೋರಿಕೆಯನ್ನು ಕೇಳಿಸಿಕೊಳ್ಳುತ್ತಿದ್ದಾನೆ ಎಂದು ಸಮಾಧಾನಗೊಳ್ಳುತ್ತಿದ್ದಳು. ಒಂದು ದಿನ ಮಧ್ಯಾಹ್ನ, ಅಂಗಳದಲ್ಲಿ ಹೊಲಿಯುತ್ತಿದ್ದಾಗ ರೆಬೇಕಳ ಸತ್ತ ಸುದ್ದಿ ತಲುಪುವಾಗ ತಾನು ಅದೇ ಜಾಗದಲ್ಲಿ, ಅದೇ ಭಂಗಿಯಲ್ಲಿ, ಅಷ್ಟೇ ಬೆಳಕಲ್ಲಿ ಕುಳಿತಿರುತ್ತೇನೆ ಎಂಬ ಖಚಿತ ಭಾವನೆ ಅವಳನ್ನು ಆವರಿಸಿತು. ಅವಳು ಅದಕ್ಕಾಗಿ ಕಾಗದಕ್ಕೆ ಕಾಯುವ ಹಾಗೆ ಕಾಯುತ್ತ ಕುಳಿತಳು ಮತ್ತು ಒಂದು ಸಲ ಅವಳು ಸುಮ್ಮನೆ ಕುಳಿತುಕೊಂಡಿದ್ದರೆ ಕಾಯುವುದು ದೀರ್ಘವೆನಿರುತ್ತದೆ ಮತ್ತು ಆತಂಕಗೊಳಿಸುತ್ತದೆ ಎಂದು ಹೊಲಿದ ಗುಂಡಿಗಳನ್ನು ಕಿತ್ತು ಹಾಕಿ ಮತ್ತೆ ಹೊಲಿಯುತ್ತಿದ್ದಳು. ಆ ಸಮಯದಲ್ಲಿ ಅಮರಾಂತ ರೆಬೇಕಳಿಗಾಗಿ ಮುಸುಕು ಹಾಕಿಕೊಳ್ಳುವ ಒಳ್ಳೆಯ ಬಟ್ಟೆಯನ್ನು ಹೊಲಿಯುತ್ತಿದ್ದಾಳೆ ಎಂದು ಯಾರಿಗೂ ತಿಳಿಯಲಿಲ್ಲ. ಅದಾದ ಮೇಲೆ ಅವ್ರೇಲಿಯಾನೋ ಟ್ರೀಸ್ತೆ ಬಿರಿದ ಚರ್ಮದ, ಭೂತದ ಹಾಗಿದ್ದ, ತಲೆಯ ಮೇಲೆ ಹತ್ತಾರು ಬಂಗಾರದ ಎಳೆಗಳಿದ್ದ ಅವಳನ್ನು ಕಂಡದ್ದು ಹೇಗೆ ಎಂದು ಹೇಳಿದಾಗ ಅಮರಾಂತಳಿಗೆ ಆಶ್ಚರ್ಯವಾಗಲಿಲ್ಲ. ಏಕೆಂದರೆ ಸ್ವಲ್ಪ ಕಾಲದಿಂದ ಅವಳು ಕಲ್ಪಿಸಿಕೊಳ್ಳುತ್ತಿದ್ದ ರೀತಿಯಲ್ಲೇ ಅವಳಿದ್ದಳು. ಅವಳು ರೆಬೇಕಳ ಹೆಣವನ್ನು ತೆಗೆದು ಅವಳ ಮುಖಕ್ಕಾಗಿರುವ ವಿಕಾರವನ್ನು ಮೇಣದಿಂದ ಮುಚ್ಚುವುದಕ್ಕೆ ನಿರ್ಧರಿಸಿದಳು ಮತ್ತು ಅವಳಿಗಾಗಿ ಸನ್ಯಾಸಿಗಳ ಕೂದಲ ವಿಗ್ ತಯಾರಿಸಿದ್ದಳು. ಅವಳು ಅದಕ್ಕೊಂದು ಮುಸುಕು ಹಾಕಿ ಹೆಣವನ್ನು ಸುಂದರವಾಗಿಸಿ ಹಾಗೂ ಶವಪಟ್ಟಿಗೆಯ ಸುತ್ತ ನೇರಳೆ ಪಟ್ಟಿ ಹಾಕುವುದಲ್ಲದೆ ಅದ್ದೂರಿಯ ಶವಸಂಸ್ಕಾರದ ಆಚರಣೆಯೊಂದಿಗೆ ಹುಳುಗಳ ವಶಕ್ಕೆ ಬಿಡುವುದು ಎಂದುಕೊಂಡಳು. ಅವಳು ಎಷ್ಟು ದ್ವೇಷದಿಂದ ಅದರ ರೂಪುರೇಷೆಗಳನ್ನು ರೂಪಿಸಿಕೊಂಡಿದ್ದಳೆಂದರೆ ಅದರ ಯೋಜನೆಯಿಂದಲೇ ಅವಳಿಗೇ ನಡುಕ ಉಂಟಾಗಿತ್ತು. ಅವಳು ಅದನ್ನು ಪ್ರೀತಿಯಿಂದ ಹಾಗೆಯೇ ಮಾಡುತ್ತಿದ್ದಳು. ಆದರೆ ಗೊಂದಲಕ್ಕೆ ಸಿಕ್ಕ ತಾನು ಗಲಿಬಿಲಿಗೆ ಒಳಗಾಗಲು ಬಿಡುತ್ತಿರಲಿಲ್ಲ. ಅವಳು ಎಲ್ಲ ವಿವರಗಳನ್ನು ಎಷ್ಟು ಸರಿಯಾಗಿಟ್ಟಳೆಂದರೆ ಅವಳು ಅದರಲ್ಲಿ ನಿಪುಣರಿಗಿಂತ ಹೆಚ್ಚಾದಳು ಮತ್ತು ಅಪರ ವಿದ್ಯೆಯಲ್ಲಿ ಪರಿಣತಳಾದಳು. ಅವಳ ಭಯಗೊಳಿಸುವ ಯೋಜನೆಯಲ್ಲಿ ದೇವರಲ್ಲಿ ತನ್ನ ಎಲ್ಲ ಕೋರಿಕೆಗಳ ನಡುವೆ ರೆಬೇಕಳಿಗಿಂತ ಮುಂಚೆ ತಾನೇ ಸಾಯಬಹುದೆಂಬ ಸಂಗತಿ ಅವಳ ಮನಸ್ಸಿನಲ್ಲಿರಲಿಲ್ಲ. ಆದರೆ ನಿಜವಾಗಿ ಆದದ್ದು ಹಾಗೆಯೇ. ಆದರೆ ಕೊನೆಯ ಕ್ಷಣದಲ್ಲಿ ಅಮರಾಂತ ಭಗ್ನಗೊಳ್ಳಲಿಲ್ಲ. ಅದಕ್ಕೆ ಪ್ರತಿಯಾಗಿ ಎಲ್ಲ ದ್ವೇಷದಿಂದ ಮುಕ್ತಳಾಗಿದ್ದಳು. ಏಕೆಂದರೆ ಕೆಲವು ವರ್ಷ ಮುಂಚೆಯೇ ಸಾವು ತನ್ನ ಆಗಮನದ ಬಗ್ಗೆ ತಿಳಿಸುವ ಸೌಭಾಗ್ಯವನ್ನು ಕರುಣಿಸಿತ್ತು. ಅವಳು ಒಂದು ದಿನ ಮೆಮೆ ಸ್ಕೂಲ್‌ಗೆ ಹೋದ ಮೇಲೆ ಉರಿವ ಮಧ್ಯಾಹ್ನ ಅಂಗಳದಲ್ಲಿ ಹೊಲಿಯುತ್ತ ಕುಳಿತಾಗ ಅದನ್ನು ನೋಡಿದಳು. ಅವಳು ಕಂಡದ್ದು ನೀಳಗೂದಲಿನ, ನೀಲಿ ಉಡುಪಿನ ಎಲ್ಲೋ ನೋಡುತ್ತಿದ್ದ ಹೆಂಗಸನ್ನು. ಅವಳು ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಿದ್ದ ದಿನಗಳ ಪಿಲರ್ ಟೆರ್‍ನೆರಾಳನ್ನು ಹೋಲುತ್ತಿದ್ದಳು. ಅನೇಕ ಸಲ ಫೆರ್ನಾಂಡ ಅಲ್ಲಿರುತ್ತಿದ್ದರೂ ಕೂಡ ನಿಜವಾಗಲೂ ಮನುಷ್ಯಾಕೃತಿ ಇದ್ದ ಅವಳನ್ನು ನೋಡಲಿಲ್ಲ. ಒಂದು ಸಲ ಆಕೆ ಅಮರಾಂತಳನ್ನು ಸೂಜಿಗೆ ದಾರ ಪೋಣಿಸಿ ಕೊಡುವಂತೆ ಕೇಳಿದಳು. ಅಮರಾಂತ ಯಾವಾಗ ಸಾಯುತ್ತಾಳೆಂದು ಸಾವು ಹೇಳಲಿಲ್ಲ ಅಥವಾ ರೆಬೇಕಳಿಗಿಂತ ಮುಂಚೆ ಅವಳ ಕೊನೆ ಗಳಿಗೆ ಬರಲಿದೆ ಎಂದು ಹೇಳಲಿಲ್ಲ. ಆದರೆ ಬರುವ ಏಪ್ರಿಲ್ ಆರರಂದು ಅವಳಿಗಾಗಿಯೆ ಮುಸುಕನ್ನು ಹೊಲಿಯಲು ಅಪ್ಪಣೆ ಕೊಟ್ಟಿತು. ಅದನ್ನು ಆದಷ್ಟೂ ಸೂಕ್ಷ್ಮವಾಗಿ, ಸುಂದರವಾಗಿ ಹೊಲಿಯಲು ಪರವಾನಗಿ ಕೊಟ್ಟಿತು. ಆದರೆ ರೆಬೇಕಳಿಗೆಂದು ಎಷ್ಟು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಳೋ ಹಾಗೆಯೇ ಮಾಡಬೇಕೆಂದು ತಾಕೀತು ಮಾಡಿತು. ಜೊತೆಗೆ ಅವಳು ಅದನ್ನು ಮುಗಿಸಿದ ಸಂಜೆ ನೋವಿಲ್ಲದೆ ಭಯವಿಲ್ಲದೆ ಅಥವಾ ದ್ವೇಷವಿಲ್ಲದೆ ಸಾಯುತ್ತಾಳೆಂದು ಹೇಳಿತು. ಆದಷ್ಟು ಹೆಚ್ಚು ಸಮಯ ವ್ಯರ್ಥಮಾಡಬೇಕೆಂದು ಅಮರಾಂತ ಒಂದಿಷ್ಟು ಅಗಸೆ ಗಿಡಕ್ಕೆ ಆರ್ಡರ್ ಕೊಟ್ಟಳು ಮತ್ತು ತಾನೇ ದಾರವನ್ನು ಹೆಣೆದುಕೊಳ್ಳಲು ಪ್ರಾರಂಭಿಸಿದಳು. ಅವಳೆಷ್ಟು ಜಾಗರೂಕತೆಯಿಂದ ಮಾಡುತ್ತಿದ್ದಳೆಂದರೆ ಆ ಕೆಲಸವೇ ನಾಲ್ಕು ವರ್ಷ ಹಿಡಿಯಿತು. ಅನಂತರ ಅವಳು ಹೊಲಿಯುವುದಕ್ಕೆ ಪ್ರಾರಂಭಿಸಿದಳು. ಅವಳು ತಪ್ಪಿಸಿಕೊಳ್ಳಲಾಗದ ಕೊನೆ ಹತ್ತಿರವಾಗುತ್ತಿದ್ದಂತೆ ಮಾಡುತ್ತಿದ್ದ ಕೆಲಸವನ್ನು ರೆಬೇಕಳ ಸಾವಿಗಿಂತ ಮುಂದಕ್ಕೆ ಹಾಕಲು ಪವಾಡವೇ ನಡೆಯಬೇಕೆಂದು ಅರ್ಥವಾಯಿತು. ಆದರೆ ಹಾಗೆ ಏಕಮುಖವಾಗಿ ಯೋಚಿಸಿದ್ದೇ ಅವಳಿಗೆ ನಿರಾಸೆಯನ್ನು ಸ್ವೀಕರಿಸಲು ಅಗತ್ಯವಾದ ತಾಳ್ಮೆಯನ್ನು ತಂದುಕೊಟ್ಟಿತು. ಆಗ ಅವಳಿಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಣ್ಣ ಬಂಗಾರದ ಮೀನುಗಳನ್ನು ಕುರಿತ ಕೆಟ್ಟ ಚಾಳಿಯ ಅರಿವಾಯಿತು. ಇಡೀ ಪ್ರಪಂಚ ಅವಳ ಚರ್ಮದ ಹೊರಮೈಗಷ್ಟೇ ಸೀಮಿತಗೊಂಡಿತು ಮತ್ತು ಅವಳ ಅಂತರಂಗ ಎಲ್ಲ ದ್ವೇಷದಿಂದ ಮುಕ್ತವಾಯಿತು. ಕೆಲವು ವರ್ಷಗಳ ಮುಂಚೆಯಷ್ಟೇ ಇದರ ತಿಳಿವಳಿಕೆ ಮೂಡದಿದ್ದಕ್ಕಾಗಿ ಅವಳಿಗೆ ನೋವುಂಟಾಯಿತು. ಹಾಗಾಗಿದ್ದರೆ ಆಗಲೂ ನೆನಪುಗಳನ್ನು ಶುದ್ಧಗೊಳಿಸಲು ಹಾಗೂ ಹೊಸಬೆಳಕಿನಲ್ಲಿ ಜಗತ್ತನ್ನು ಮರುನಿರ್ಮಾಣಮಾಡಲು ಮತ್ತು ಸಂಜೆಯ ಹೊತ್ತಿನಲ್ಲಿ ಯಾವುದೇ ನಡುಕವಿಲ್ಲದೆ, ಪಿಯತ್ರೋ ಕ್ರೆಸ್ಪಿಯ ಸುಗಂಧ ಪರಿಮಳವನ್ನು ಆವಾಹಿಸಬಹುದಾಗಿತ್ತು ಮತ್ತು ರೆಬೇಕಳನ್ನು ದ್ವೇಷದಿಂದ ಅಥವಾ ಪ್ರೀತಿಯಿಂದಲ್ಲದೆ ಪ್ರಮಾಣಿಸಲಾಗದ ಏಕಾಂತದ ವೇದನೆಯಿಂದ ಪಾರು ಮಾಡಲು ಸಾಧ್ಯವಾಗುತ್ತಿತ್ತು ಎಂದುಕೊಂಡಳು. ಅದೊಂದು ದಿನ ರಾತ್ರಿ ಅವಳು ಮೆಮೆಳ ಮಾತಿನಲ್ಲಿದ್ದ ದ್ವೇಷದಿಂದ ಕ್ಷೆಭೆಗೊಳ್ಳಲಿಲ್ಲ. ಏಕೆಂದರೆ ಅದು ಅವಳನ್ನೇ ಕುರಿತಾಗಿತ್ತು. ಅದು ಅವಳಿಗೆ ತನ್ನ ಹಾಗೆಯೇ ನಿರ್ಮಲವಾಗಿದ್ದ ಕೌಮಾರ್ಯವೊಂದರ ಪುನರಾವರ್ತನೆಯಾಗಿತ್ತು. ಆದರೆ ಅದು ಅದರಲ್ಲಿ ಆಗಲೇ ಕಡು ದ್ವೇಷದ ಛಾಯೆಯಿತ್ತು. ಆ ವೇಳೆಗಾಗಲೇ ಅವಳು ತನ್ನ ವಿಧಿಯನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಿದ್ದಳೆಂದರೆ ಸರಿಪಡಿಸುವ ಎಲ್ಲ ಸಾಧ್ಯತೆಗಳೂ ಕೊನೆಯಾಗಿವೆ ಎಂಬ ನಿಶ್ಚಯದಿಂದ ಅವಳ ಮನಸ್ಸು ಕಲಕಲಿಲ್ಲ. ಮುಸುಕನ್ನು ಪೂರೈಸುವುದೇ ಅವಳ ಗುರಿಯಾಗಿತ್ತು. ಪ್ರಾರಂಭದಲ್ಲಿದ್ದ ಕೆಲಸಕ್ಕೆ ಬಾರದ ವಿವರಗಳಿಂದ ನಿಧಾನ ಗತಿಯ ಬದಲು ಅವಳು ಕೆಲಸವನ್ನು ತ್ವರಿತಗೊಳಿಸಿದಳು. ಒಂದು ವಾರದ ಮೊದಲು ಅವಳು ಕೊನೆಯ ಹೊಲಿಗೆಯನ್ನು ಫೆಬ್ರವರಿ ನಾಲ್ಕನೇ ತಾರೀಖು ಹಾಕುತ್ತೇನೆಂದು ಲೆಕ್ಕ ಹಾಕಿದಳು. ಅವಳು ಉದ್ದೇಶವನ್ನು ತಿಳಿಸದೆ, ಮೆಮೆಳಿಗೆ ಅವಳು ವ್ಯವಸ್ಥೆಗೊಳಿಸಿಕೊಂಡಿದ್ದ ಪಿಯಾನೋಥರದ್ದರ ಸಂಗೀತ ಕಾರ್ಯಕ್ರಮವನ್ನು, ಆ ದಿನದ ನಂತರ ಮರುದಿನಕ್ಕೆ ಮುಂದೂಡಲು ಸಲಹೆ ಮಾಡಿದಳು. ಆದರೆ ಮೆಮೆ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಅನಂತರ ಅಮರಾಂತ ನಲವತ್ತೇಳು ಗಂಟೆ ಕಾಲ ವಿಳಂಬ ಮಾಡುವುದಕ್ಕೆ ದಾರಿಯನ್ನು ಹುಡುಕಲು ತೊಡಗಿದಳು. ಫೆಬ್ರವರಿ ನಾಲ್ಕರ ಹಿಂದಿನ ರಾತ್ರಿಯ ಬಿರುಗಾಳಿಗೆ ವಿದ್ಯುಚ್ಛಕ್ತಿ ಕಡಿತಗೊಂಡಿದ್ದರಿಂದ ಸಾವು ದಾರಿಯನ್ನು ತೋರಿಸುತ್ತಿದೆ ಎಂದು ತಿಳಿದಳು. ಆದರೆ ಬೆಳಿಗ್ಗೆ ಎಂಟು ಗಂಟೆಗೆ ಅಲ್ಲಿಯ ತನಕ ಯಾವ ಹೆಂಗಸು ಮಾಡಿರದಂಥ ಅತ್ಯಂತ ಸುಂದರವಾದ ವಸ್ತುವಿಗೆ ಕೊನೆಯ ಹೊಲಿಗೆ ಹೊಲಿದಳು. ಅವಳು ಯಾವುದೇ ರೀತಿಯ ನಾಟಕೀಯತೆಗೆ ಅಸ್ಪದ ಕೊಡದೆ ತಾನು ಸಂಜೆ ಸಾಯುವುದಾಗಿ ಹೇಳಿದಳು. ಅವಳು ಮನೆಯವರಿಗಷ್ಟೇ ಅಲ್ಲದೆ ಊರಿನವರಿಗೆಲ್ಲ ಹೇಳಿದಳು. ಏಕೆಂದರೆ ಅಮರಾಂತ ತನ್ನ ಸಂಕುಚಿತ ಬಾಳಿಗೆ ಸರಿದೂಗಿಸಲು, ಊರಿನವರಿಗೆ ಒಂದು ಉಪಕಾರ ಮಾಡುವಂಥ ಆಲೋಚನೆಯೊಂದನ್ನು ಪರಿಭಾವಿಸಿದ್ದಳು ಮತ್ತು ಸತ್ತವರಿಗೆ ಕಾಗದಗಳನ್ನು ತೆಗೆದುಕೊಂಡು ಹೋಗಲು ತಾನು ಒಳ್ಳೆಯ ಸ್ಥಾನದಲ್ಲಿದ್ದೇನೆ ಎಂದು ಬಗೆದಳು.

ಅಮರಾಂತ ಬ್ಯುಂದಿಯಾ ಸಂಜೆಗೆ ಸತ್ತವರಿಗೆ ಕಾಗದಗಳನ್ನು ತೆಗೆದುಕೊಂಡು ಪ್ರಯಾಣ ಹೊರಡುತ್ತಾಳೆ ಎನ್ನುವ ಸುದ್ದಿ ಮಕೋಂದೋದಲ್ಲಿ ಎಲ್ಲ ಕಡೆ ಮಧ್ಯಾಹ್ನಕ್ಕೆ ಮುಂಚೆ ಹರಡಿತು. ಮಧ್ಯಾಹ್ನ ಮೂರರ ಹೊತ್ತಿಗೆ ನಡುಮನೆಯಲ್ಲಿ ಒಂದು ಪೆಟ್ಟಿಗೆಯ ತುಂಬ ಕಾಗದಗಳಿದ್ದವು. ಬರೆಯಲು ಇಷ್ಟಪಡದವರು ಅಮರಾಂತಳಿಗೆ ಬಾಯಲ್ಲಿ ಸಂದೇಶಗಳನ್ನು ತಿಳಿಸಿದರು. ಅವಳು ಅವುಗಳನ್ನು ಒಂದು ನೋಟ್ ಬುಕ್ಕಿನಲ್ಲಿ ಹೆಸರು ಮತ್ತು ತಲುಪಿಸಬೇಕಾದವರು ಸತ್ತ ದಿನಾಂಕಗಳನ್ನು ಬರೆದುಕೊಂಡಳು. ಅವಳು ಕಳಿಸಿಕೊಡುತ್ತಿದ್ದವರಿಗೆ, “ನೀವೇನೂ ಯೋಚ್ನೆ ಮಾಡ್ಬೇಡಿ ನಾನು ಅಲ್ಲಿಗೆ ಹೋದ ಕೂಡ್ಲೆ ಅವರನ್ನು ವಿಚಾರಿಸಿ ನೀವು ಹೇಳಿದ್ದನ್ನ ಹೇಳ್ತೀನಿ” ಎಂದಳು.

ಅದೊಂದು ಅಣಕಾಗಿತ್ತು. ಅಮರಾಂತ ಯಾವುದೇ ರೀತಿಯ ಕ್ಷೆಭೆಯನ್ನಾಗಲಿ ಅಥವಾ ದು:ಖವನ್ನಾಗಲಿ ತೋರ್ಪಡಿಸಲಿಲ್ಲ. ಅವಳು ಕರ್ತವ್ಯವೊಂದರ ಪೂರೈಕೆಯಿಂದ ಕೊಂಚ ಗೆಲುವಾಗಿದ್ದಳು ಕೂಡ. ಅವಳು ಎಂದಿನಂತೆ ನೆಟ್ಟಗೆ, ನೀಳವಾಗಿದ್ದಳು. ಅವಳಿಗೆ ಗಡುಸಾಗಿದ್ದ ಕೆನ್ನೆಯ ಮೂಳೆಗಳು ಮತ್ತು ಕೆಲವು ಹಲ್ಲುಗಳಿರದ ಬಾಯಿ ಇತ್ತು. ಇಲ್ಲದಿದ್ದರೆ ಅವಳು ಆಗಿದ್ದ ವಯಸ್ಸಿಗಿಂತ ಕಡಿಮೆ ಇರುವಂತೆ ಕಾಣುತ್ತಿದ್ದಳು. ಕಾಗದಗಳನ್ನು ಪೆಟ್ಟಿಗೆಯೊಂದರಲ್ಲಿ ಹಾಕಿ, ಭದ್ರವಾಗಿ ಕಟ್ಟಿ, ಅದನ್ನು ತನ್ನ ಗೋರಿಯಲ್ಲಿ ತೇವದಿಂದ ರಕ್ಷಣೆ ಹೊಂದಿರುವಂತೆ ಇಡಬೇಕೆಂದು ಅವಳೇ ಅವರಿಗೆ ಹೇಳಿದಳು. ಅವಳು ಬೆಳಿಗ್ಗೆ ಬಡಗಿಯನ್ನು ಕರೆದು ಹೊಸ ಬಟ್ಟೆಯನ್ನು ಹೊಲಿಸಿಕೊಳ್ಳುವ ಹಾಗೆ ನಿಂತುಕೊಂಡು, ತನ್ನ ಶವಪೆಟ್ಟೆಗೆಗೆ ಅಳತೆ ತೆಗೆದುಕೊಳ್ಳುವಂತೆ ಹೇಳಿದಳು. ಅವಳು ಕೊನೆಯ ಕ್ಷಣಗಳಲ್ಲಿ ತೋರಿದ ಉತ್ಸಾಹದಿಂದ ಫೆರ್ನಾಂಡಳಿಗೆ ಅವಳು ತಮಾಷೆ ಮಾಡುತ್ತಿದ್ದಾಳೆ ಎನ್ನಿಸಿತು. ಬ್ಯುಂದಿಯಾಗಳು ಯಾವುದೇ ಕಾಯಿಲೆ ಇಲ್ಲದೆ ಸಾಯುತ್ತಿದ್ದ ಅನುಭವವಿದ್ದ ಉರ್ಸುಲಾ, ಸಾವಿನ ಶಕುನ ಅಮರಾಂತಳಿಗೆ ಆಗಿದೆ ಎನ್ನುವುದನ್ನು ಸ್ವಲ್ಪವೂ ಅನುಮಾನಿಸಲಿಲ್ಲ. ಆದರೆ ಕಾಗದಗಳ ವಿಷಯ ಮತ್ತು ಅದನ್ನು ಸಂಬಂಧಪಟ್ಟವರಿಗೆ ಆದಷ್ಟು ಬೇಗ ತಲುಪಿಸಬೇಕೆಂಬ ಆತಂಕ ಮತ್ತು ಗೊಂದಲದಲ್ಲಿ ಅವಳನ್ನು ಮುಂಚೆಯೇ ಹೂಳಿ ಬಿಡುತ್ತಾರೆಂದು ಭಯಗೊಂಡಳು. ಅದಕ್ಕಾಗಿ ಅವಳು ಎಲ್ಲರನ್ನೂ ಮನೆಯಿಂದ ಹೊರಗೆ ಕಳಿಸಲು ಶುರುಮಾಡಿದಳು ಮತ್ತು ಒಳಗೆ ಬರುತ್ತಿದ್ದವರ ಕಡೆ ಕೂಗಿ ವಾದಕ್ಕಿಳಿಯುತ್ತಿದ್ದಳು ಮತ್ತು ನಾಲ್ಕು ಗಂಟೆಯ ಹೊತ್ತಿಗೆ ತನ್ನ ಕೆಲಸದಲ್ಲಿ ಯಶಸ್ವಿಯಾದಳು. ಆ ಸಮಯಕ್ಕೆ ಅಮರಾಂತ ತನ್ನಲ್ಲಿರುವ ವಸ್ತುಗಳನ್ನು ಬಡವರಿಗೆ ಹಂಚುವುದನ್ನು ಮುಗಿಸಿದ್ದಳು ಹಾಗೂ ಇನ್ನೂ ಪೂರ್ತಿಯಾಗದ ಶವಪೆಟ್ಟಿಗೆಯ ಹಲಗೆಗಳ ಮೇಲೆ ಬದಲಾಯಿಸುವ ಬಟ್ಟೆ ಮತ್ತು ಸಾಯುವಾಗ ಹಾಕಿಕೊಳ್ಳಲು ಸಾಮಾನ್ಯವಾದ ಬಟ್ಟೆಯ ಚಪ್ಪಲಿಗಳನ್ನು ಇಟ್ಟಿದ್ದಳು. ಅವಳು ಆ ಮುಂಜಾಗ್ರತೆಯನ್ನು ಮರೆಯಲಿಲ್ಲ. ಏಕೆಂದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸತ್ತಾಗ ಅವನಿಗಾಗಿ ಹೊಸ ಶೂಗಳನ್ನು ಕೊಳ್ಳಬೇಕಾಗಿ ಬಂದದ್ದು ಅವಳಿಗೆ ನೆನಪಿತ್ತು. ಏಕೆಂದರೆ ಅವನ ಹತ್ತಿರ ಅವನು ವರ್ಕ್‌ಶಾಪಿನಲ್ಲಿ ಹಾಕಿಕೊಳ್ಳುತ್ತಿದ್ದ ಬೆಡ್‌ರೂಮ್ ಚಪ್ಪಲಿಗಳು ಮಾತ್ರ ಇತ್ತು. ಐದು ಗಂಟೆಗೆ ಸ್ವಲ್ಪ ಮುಂಚೆ ಅವ್ರೇಲಿಯಾನೋ ಸೆಗುಂದೋ ಮೆಮೆಳನ್ನು ಕರೆದುಕೊಂಡು ಹೋಗಲು ಬಂದಾಗ ಅವನಿಗೆ ಮನೆಯಲ್ಲಿ ಶವಸಂಸ್ಕಾರಕ್ಕೆ ಸಿದ್ಧವಾಗುತ್ತಿದ್ದದ್ದನ್ನು ಕಂಡು ಆಶ್ಚರ್ಯವಾಯಿತು. ಆ ಸಮಯದಲ್ಲಿ ಯಾರಾದರೂ ಬದುಕಿದವರಂತೆ ಕಾಣುತ್ತಿದ್ದವರೆಂದರೆ ಗಂಭೀರವಾಗಿದ್ದ ಅಮರಾಂತ ಮಾತ್ರ. ಅವಳಿಗೆ ಆನೆಗಳನ್ನು ಕೆಡವುವಷ್ಟು ಸಮಯವೂ ಇದ್ದ ಹಾಗಿತ್ತು. ಅವ್ರೇಲಿಯಾನೋ ಸೆಗುಂದೋ ಮತ್ತು ಮೆಮೆ ಅವಳಿಗೆ ಅಣಕು ವಿದಾಯ ಹೇಳಿ, ಬರಲಿರುವ ಶನಿವಾರ ಭಾರಿ ಸಮಾವೇಶದ ಪಾರ್ಟಿಯನ್ನು ಇಟ್ಟುಕೊಂಡಿರುವುದಾಗಿ ಹೇಳಿದರು. ಅಮರಾಂತ ಬ್ಯುಂದಿಯಾ ಸತ್ತವರಿಗೆ ಕೊಡಲು ಕಾಗದಗಳನ್ನು ತೆಗೆದುಕೊಳ್ಳುತ್ತಿದ್ದಾಳೆಂಬ ಸಾರ್ವಜನಿಕರ ಮಾತಿನಿಂದ ಆಕರ್ಷಿತನಾದ ಫಾದರ್ ಆಂಟೋನಿಯೋ ಇಸಬಲ್ ಸಾಯಂಕಾಲ ಎಂಟು ಗಂಟೆಗೆ ಅಪರ ಕ್ರಿಯೆಗಳಿಗಾಗಿ ಬಂದ ಮತ್ತು ಅದನ್ನು ಪಡೆಯಬೇಕಾದವಳು ಸ್ನಾನದಿಂದ ಹೊರಗೆ ಬರಲು ಹದಿನೈದು ನಿಮಿಷ ಕಾಯಬೇಕಾಯಿತು. ನೈಟ್‌ಶರ್ಟ್ ತೊಟ್ಟು, ಸಡಿಲವಾದ ಕೂದಲನ್ನು ಭುಜದ ಮೇಲೆ ಇಳಿಬಿಟ್ಟುಕೊಂಡಿದ್ದ ಅವಳನ್ನು ಕಂಡಾಗ ಅವನು ಸೋಜಿಗಗೊಂq. ಅವನು ಇದೊಂದು ತಮಾಷೆ ಇರಬೇಕೆಂದು ಪವಿತ್ರ ಪೀಠ ಹಿಡಿದುಕೊಂಡಿದ್ದ ಹುಡುಗನನ್ನು ಕಳಿಸಿ ಬಿಟ್ಟ. ಆದರೂ ಆ ಸಂದರ್ಭದ ಉಪಯೋಗ ಪಡೆದು, ಇಪ್ಪತ್ತು ವರ್ಷಗಳ ಬಿಗಿಮೌನದ ನಂತರ ಅಮರಾಂತಳಿಂದ ತಪ್ಪೊಪ್ಪಿಗೆಯನ್ನು ತೆಗೆದುಕೊಳ್ಳಬೇಕು ಎಂದುಕೊಂಡ. ತನ್ನ ಮನಸ್ಸು ತಿಳಿಯಾಗಿರುವುದರಿಂದ ಯಾವುದೇ ಆಧ್ಯಾತ್ಮಿಕ ಸಹಾಯ ಬೇಡವೆಂದು ಅವಳು ಹೇಳಿದಳು. ಫೆರ್ನಾಂಡಳಿಗೆ ಗಾಬರಿಯಾಯಿತು. ಬೇರೆಯವರು ಕೇಳಿಸಿಕೊಳ್ಳುತ್ತಾರೆ ಎನ್ನುವುದನ್ನು ಲೆಕ್ಕಕ್ಕಿಡದೆ ಅವಳು ತನಗೆ ತಾನೆ ಹೇಳಿಕೊಳ್ಳುವಂತೆ ಜೋರಾಗಿ ಅಮರಾಂತ ತಪ್ಪೊಪ್ಪಿಗೆಯ ನಾಚಿಕೆಗೇಡಿಗೆ ಬದಲಾಗಿ ಅಧಾರ್ಮಿಕವಾದ ಸಾವನ್ನು ಇಷ್ಟಪಟ್ಟಿದ್ದಾಳೆ ಎಂದಳು. ಅದಾದ ಮೇಲೆ ಅಮರಾಂತ ಮಲಗಿದಳು ಮತ್ತು ತನ್ನ ಕೌಮಾರ್ಯದ ಬಗ್ಗೆ ಸಾರ್ವಜನಿಕ ಹೇಳಿಕೆಯೊಂದನ್ನು ಕೊಡುವಂತೆ ಉರ್ಸುಲಾಗೆ ಹೇಳಿದಳು.

ಅವಳು ಫೆರ್ನಾಂಡಳಿಗೆ ಕೇಳಿಸುವಂತೆ, “ಯಾರೂ ಅನುಮಾನ ಪಡೋದು ಬೇಡ. ಅಮರಾಂತ ಬ್ಯುಂದಿಯಾ ಈ ಲೋಕಕ್ಕೆ ಬಂದ ರೀತೀಲೇ ಅದನ್ನು ಬಿಟ್ಟು ಹೊಗ್ತಿದಾಳೆ” ಎಂದು ಕೂಗಿದಳು.

ಅವಳು ಮತ್ತೆ ಏಳಲಿಲ್ಲ ಅವಳಿಗೆ ನಿಜವಾಗಿಯೂ ಕಾಯಿಲೆಯಾಗಿದೆ ಎನ್ನುವಂತೆ ಕುಷನ್ ಮೇಲೆ ಮಲಗಿ ಕೂದಲನ್ನು ಹೆಣೆದು, ಸಾವು ಹೇಳಿದಂತೆ ಅದನ್ನು ಕಿವಿಯ ಸುತ್ತ ಸುರಳಿ ಮಾಡಿದ್ದಳು. ಅನಂತರ ಅವಳು ಉರ್ಸುಲಾಗೆ ಕನ್ನಡಿಯನ್ನು ಕೇಳಿದಳು. ನಲವತ್ತು ವರ್ಷಕ್ಕೂ ಹೆಚ್ಚು ಅವಧಿಯ ನಂತರ ಮೊದಲ ಬಾರಿ ಅವಳು ತನ್ನ ವಯಸ್ಸಿನಿಂದ ಹಾಗೂ ಹುತಾತ್ಮತೆಯಿಂದ ಹಣ್ಣಾಗಿದ್ದ ಮುಖವನ್ನು ಅದರಲ್ಲಿ ನೋಡಿಕೊಂಡಳು. ಅವಳಿಗೆ ತಾನು ಕಲ್ಪಿಸಿಕೊಂಡಿದ್ದ ರೀತಿಯಲ್ಲೇ ಇದ್ದದ್ದಕ್ಕಾಗಿ ಆಶ್ಚರ್ಯವಾಯಿತು. ಬೆಡ್‌ರೂಮಿನಲ್ಲಿದ್ದ ನಿಶ್ಯಬ್ದದಿಂದ ಉರ್ಸುಲಾ ಕತ್ತಲಾಗುತ್ತಿದೆ ಎಂದುಕೊಂಳು.

ಅವಳು, “ಫೆರ್ನಾಂಡಾಗೆ ಒಂದು ಮಾತು ಹೇಳು. ಒಂದು ನಿಮಿಷದ ಹೊಂದಾಣಿಕೆ ಇಡೀ ಜೀವಮಾನದ ಸ್ನೇಹಕ್ಕಿಂತ ದೊಡ್ಡದು” ಎಂದು ಕೇಳಿಕೊಂಡಳು.

ಅಮರಾಂತ, “ಈಗ ಅದರಿಂದ ಉಪಯೋಗವಿಲ್ಲ” ಎಂದಳು.

ಉತ್ತಮಗೊಳಿಸಿದ ರಂಗದ ಮೇಲೆ ದೀಪಗಳು ಹೊತ್ತಿಕೊಂಡಾಗ ಮೆಮೆಳಿಗೆ ಅವಳ ಬಗ್ಗೆ ಯೋಚಿಸದಿರುವುದು ಸಾಧ್ಯವಾಗಲಿಲ್ಲ. ಅವಳು ಕಾರ್ಯಕ್ರಮದ ಎರಡನೆ ಭಾಗವನ್ನು ಪ್ರಾರಂಭಿಸಿದಾಗ ಮಧ್ಯದಲ್ಲಿ ಯಾರೋ ಬಂದು ಅವಳ ಕಿವಿಯಲ್ಲಿ ಸುದ್ದಿಯನ್ನು ಹೇಳಿದರು. ಆಗ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು. ಅವ್ರೇಲಿಯಾನೋ ಸೆಗುಂದೋ ಮನೆಗೆ ಬಂದಾಗ ಅವನು ಗುಂಪಿನ ಮಧ್ಯೆ ದಾರಿಮಾಡಿಕೊಂಡು ಕುಮಾರಿಯಾದ, ಕುರೂಪಿಯಾದ, ಕಳೆಯಿಲ್ಲದ ಮತ್ತು ಕೈಗೆ ಕಪ್ಪನೆ ಪಟ್ಟಿ ಕಟ್ಟಿದ್ದ ಹಾಗೂ ಭವ್ಯವಾದ ಮುಸುಕು ಹಾಕಿದ ಹೆಣವನ್ನು ನೋಡಿದ. ಅವಳನ್ನು ಕಾಗದಗಳನ್ನು ತುಂಬಿದ ಪೆಟ್ಟಿಗೆಯ ಪಕ್ಕದಲ್ಲಿ ಮಲಗಿಸಿದ್ದರು.

ಅಮರಾಂತಳಿಗಾಗಿ ಒಂಬತ್ತು ರಾತ್ರಿ ಶೋಕವನ್ನು ಆಚರಿಸಿದ ಉರ್ಸುಲಾ ಮತ್ತೆ ಏಳಲಿಲ್ಲ. ಸೋಫಿಯಾ ದೆಲಾ ಪಿಯದಾದ್ ಅವಳನ್ನು ನೋಡಿಕೊಂಡಳು. ಅವಳಿದ್ದ ಬೆಡ್‌ರೂಮಿಗೆ ಊಟ, ನೀರು ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು ಮತ್ತು ಮಕೋಂದೋದಲ್ಲಿ ಆಗಿನ ತನಕ ಜರುಗಿದ ಸಂಗತಿಯನ್ನು ಹೇಳುತ್ತಿದ್ದಳು. ಅವ್ರೇಲಿಯಾನೋ ಸೆಗುಂದೋ ಅವಳನ್ನು ನೋಡಲು ಆಗಾಗ್ಗೆ ಬರುತ್ತಿದ್ದ. ಅವನು ಅವಳಿಗೆ ದಿನನಿತ್ಯದ ತೀರ ಅಗತ್ಯದ ಬಟ್ಟೆ ಹಾಗೂ ಇತರ ವಸ್ತುಗಳನ್ನು ತಂದಿದ್ದನ್ನು ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳುತ್ತಿದ್ದಳು. ಸ್ವಲ್ಪ ಕಾಲದಲ್ಲಿಯೇ ಅವಳಿಗೆ ಕೈಗೆಟಕುವ ದೂರದಲ್ಲಿ ಒಂದು ಪುಟ್ಟ ಪ್ರಪಂಚವನ್ನೇ ಸೃಷ್ಟಿಸಿಕೊಂಡಿದ್ದಳು. ತನ್ನಂತೆಯೇ ಇದ್ದ ಪುಟ್ಟ ಅಮರಾಂತ ಉರ್ಸುಲಾಳಲ್ಲಿ ಪ್ರೀತಿ ಹುಟ್ಟುವಂತೆ ಮಾಡಿದಳು ಮತ್ತು ಅವಳಿಗೆ ಓದುವುದನ್ನು ಕಲಿಸಿದಳು. ಅವಳ ಸರಳತೆ, ತನ್ನ ಮಟ್ಟಿಗೆ ಸಂತೃಪ್ತಿಯಿಂದ ಇರುವುದು ಇವುಗಳಿಂದ ನೂರು ವರ್ಷಗಳ ಭಾರ ಅವಳ ಮೇಲೆ ಹಿಡಿತ ಸಾಧಿಸಿದೆ ಎಂದು ಯಾರಾದರೂ ತಿಳಿದುಕೊಳ್ಳಬಹುದಿತ್ತು. ಆದರೆ ಅವಳಿಗೆ ಎರಡೆರಡು ಕಾಣಿಸುತ್ತಿದ್ದದ್ದು ನಿಜವಾದರೂ ಯಾರೂ ಅವಳು ಸಂಪೂರ್ಣ ಕುರುಡಿ ಎಂದು ಅನುಮಾನಿಸಿರಲಿಲ್ಲ. ಅವಳಿಗೆ ಆಗ ಎಷ್ಟೊಂದು ಸಮಯವಿತ್ತೆಂದರೆ ಮತ್ತು ಮನೆಯಲ್ಲಿ ನಡೆಯುತ್ತಿರುವುದರ ಬಗ್ಗೆ ಕಣ್ಣಿಡಲು ಎಷ್ಟೊಂದು ಒಳಮೌನವಿತ್ತೆಂದರೆ, ಮೆಮೆಳ ಮೌನ ಹೋರಾಟವನ್ನು ಮೊದಳು ಗಮನಿಸಿದವಳು ಅವಳೇ.

ಅವಳು, “ಬಾ ಇಲ್ಲಿ ಈಗ ಇಲ್ಲಿ ನಾವಿಬ್ಬರೇ ಇರೋದು. ನಿನ್ನ ಮನಸ್ಸಿನಲ್ಲಿ ಏನು ಕೊರೀತಾ ಇದೆ ಹೇಳು” ಎಂದು ಕೇಳಿದಳು.

ಮೆಮೆ ಸಣ್ಣಗೆ ನಕ್ಕು ತಪ್ಪಿಸಿಕೊಳ್ಳಲು ನೋಡಿದಳು. ಉರ್ಸುಲಾ ಒತ್ತಾಯ ಮಾಡಲಿಲ್ಲ. ಆದರೆ ಮೆಮೆ ಮತ್ತೆ ತನ್ನ ಹತ್ತಿರ ಬಾರದೇ ಹೋದದ್ದಕ್ಕೆ ಅವಳ ಅನುಮಾನ ಖಾತ್ರಿಯಾಯಿತು. ಅವಳು ಮಾಮೂಲಿಗಿಂತ ಮೊದಲು ಏಳುತ್ತಿದ್ದಳೆಂದು ಅವಳಿಗೆ ತಿಳಿದಿತ್ತು. ಅವಳು ಹೋಗಬೇಕಾದ ವೇಳೆ ಬರುವ ತನಕ ಒಂದು ಕ್ಷಣದ ವಿಶ್ರಾಂತಿಯೂ ಇರುತ್ತಿರಲಿಲ್ಲವೆಂದು ಗಮನಿಸಿದ್ದಳು. ಅವಳು ಇಡೀ ರಾತ್ರಿ ಪಕ್ಕದ ರೂಮಿನಲ್ಲಿ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಳೆಂದು ಗೊತ್ತಿತ್ತು. ಒಂದು ಚಿಟ್ಟೆಯ ರೆಕ್ಕೆ ಬಡಿದರೂ ಅವಳು ಯೋಚನೆಗೀಡಾಗುತ್ತಾಳೆಂದು ಗೊತ್ತಿತ್ತು. ಒಂದು ಸಲ ಅವಳು ಅವ್ರೇಲಿಯಾನೋ ಸೆಗುಂದೋನನ್ನು ಕಾಣಲು ಹೋಗುವುದಾಗಿ ಹೇಳಿದಳು ಮತ್ತು ಉರ್ಸುಲಾಗೆ ಫೆರ್ನಾಂಡಳ ಗಂಡ ತನ್ನ ಮಗಳನ್ನು ಹುಡುಕಿಕೊಂಡು ಬಂದಾಗ ಅವಳ ಕಲ್ಪನೆಯ ಮಿತಿಯ ಬಗ್ಗೆ ಆಶ್ಚರ್ಯವಾಯಿತು. ಅದೊಂದು ದಿನ ರಾತ್ರಿ ಸಿನಿಮಾ ಥಿಯೇಟರ್‌ನಲ್ಲಿ ಅವಳು ಹುಡುಗನೊಬ್ಬನಿಗೆ ಮುತ್ತು ಕೊಡುತ್ತಿದ್ದದ್ದನ್ನು ಕಂಡು ಹಿಡಿದ ಫೆರ್ನಾಂಡ ಕಳವಳಗೊಳ್ಳುವುದಕ್ಕಿಂತ ಬಹಳ ಮುಂಚೆಯೇ ಮೆಮೆ ಗೌಪ್ಯ ವ್ಯವಹಾರದಲ್ಲಿ, ತುರ್ತಿನ ವಿಷಯಗಳಲ್ಲಿ, ಅದುಮಿಟ್ಟ ಆತಂಕಗಳಲ್ಲಿ ಸಿಲುಕಿದ್ದಾಳೆಂದು ತನ್ನಷ್ಟಕ್ಕೆ ತಿಳಿಯುತ್ತಿತ್ತು.

ಮೆಮೆ ತನ್ನಲ್ಲೇ ತಾನು ಎಷ್ಟು ಮುಳುಗಿದ್ದಳೆಂದರೆ ತನ್ನ ಮೇಲೆ ಚಾಡಿ ಹೇಳಿದ್ದಕ್ಕಾಗಿ ಉರ್ಸುಲಾಳನ್ನು ಬೈದಳು. ಆದರೆ ವಾಸ್ತವಾಗಿ ಅವಳೇ ತನ್ನ ಬಗ್ಗೆ ಹೇಳಿಕೊಂಡಿದ್ದಳು. ಬಹಳ ಕಾಲದಿಂದ ಅವಳು ಸೂಚನೆಗಳನ್ನು ಕೊಡುತ್ತಿದ್ದು ಅದು ಎಂಥ ಕುಂಭಕರ್ಣನನ್ನೂ ಬಡಿದೆಬ್ಬಿಸುವಂಥದಾಗಿತ್ತು ಮತ್ತು ಫೆರ್ನಾಂಡಳಿಗೆ ಅದನ್ನು ಪತ್ತೆ ಹಚ್ಚುವುದಕ್ಕೆ ಅವಳು ಕಾಣದ ಡಾಕ್ಟರ್‌ಗಳೊಂದಿಗೆ ನಡೆಸುತ್ತಿದ್ದ ವ್ಯವಹಾರದಲ್ಲಿ ಮುಳುಗಿಹೋಗಿದ್ದರಿಂದ ಅಷ್ಟು ದಿನ ಬೇಕಾಯಿತು. ಆದರೂ ಕೂಡ ಕೊನೆಗೆ ಅವಳು ತನ್ನ ಮಗಳ ದೀರ್ಘ ಮೌನಗಳನ್ನು, ಹಠಾತ್ ಬಡಬಡಿಕೆಗಳನ್ನು, ಬದಲಾಗುತ್ತಿದ್ದ ಭಾವನೆಗಳನ್ನು ಮತ್ತು ವೈರುಧ್ಯಗಳನ್ನು ಗಮನಿಸಿದಳು. ಅವಳು ಮರೆಮಾಚಿಕೊಂಡು ಅವಳ ಮೇಲೆ ಕಣ್ಣಿಟ್ಟಳು. ಅವಳಿಗೆ ಅವಳ ಗೆಳತಿಯರ ಜೊತೆಗೆ ಎಂದಿನಂತೆ ಹೊರಗೆ ತಿರುಗಾಡುವುದಕ್ಕೆ ಬಿಟ್ಟಳು. ಅವಳು ಶನಿವಾರದ ಪಾರ್ಟಿಗೆ ಡ್ರೆಸ್ ಮಾಡಿಕೊಳ್ಳಲು ಸಹಾಯ ಮಾಡಿದಳು ಮತ್ತು ಅವಳಿಗೆ ಮುಜುಗರವಾಗುವಂಥ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಮೆಮೆ ಹೇಳುವುದಕ್ಕಿಂತ ಬೇರೆಯದೇ ಆದ ಕೆಲಸಗಳನ್ನು ಮಾಡುತ್ತಿದ್ದಾಳೆಂದು ಅವಳಿಗೆ ಸಾಕಷ್ಟು ಪುರಾವೆ ಸಿಕ್ಕಿತ್ತು. ಆದರೂ ಸರಿಯಾದ ಸಮಯ ಸಿಗಲಿ ಎಂದು ತನ್ನ ಅನುಮಾನದ ಬಗ್ಗೆ ಗುಟ್ಟು ಬಿಡಲಿಲ್ಲ. ಒಂದು ದಿನ ಮೆಮೆ ತನ್ನ ತಂದೆಯ ಜೊತೆ ಸಿನಿಮಾಕ್ಕೆ ಹೋಗುವುದಾಗಿ ಹೇಳಿದಳು. ಸ್ವಲ್ಪ ಸಮಯದ ನಂತರ ಅವಳಿಗೆ ಆ ಲಂಪಟನ ಅಬ್ಬರದ ಮಾತುಗಳು ಮತ್ತು ಅಕಾರ್ಡಿನ್‌ನ ಧ್ವನಿ ಪೆತ್ರಾ ಕೊತೆಸ್ ಮನೆಯಿಂದ ಕೇಳಿ ಬಂತು. ಆ ಮೇಲೆ ಅವಳು ಡ್ರೆಸ್ ಮಾಡಿಕೊಂಡು ಥಿಯೇಟರ್‌ಗೆ ಹೋದಳು ಮತ್ತು ಆ ಕತ್ತಲಲ್ಲಿ ಅವಳು ತನ್ನ ಮಗಳನ್ನು ಪತ್ತೆ ಹಚ್ಚಿದಳು. ಅದರ ಕಳವಳದಲ್ಲಿ ಅವಳು ಮುತ್ತು ಕೊಡುತ್ತಿದ್ದವನನ್ನು ಗುರುತು ಹಿಡಿಯಲಾಗಲಿಲ್ಲ. ಪ್ರೇಕ್ಷಕರ ಕೂಗಾಟ ಮತ್ತು ನಗುವಿನ ಮಧ್ಯೆಯೂ ಅವಳಿಗೆ ಅವನ ಕಂಪಿಸುವ ಧ್ವನಿ ಕೇಳಿಸಿತು. ಅವನು, “ನಂದು ತಪ್ಪಾಯ್ತು” ಎಂದು ಹೇಳಿದ ಮತ್ತು ಬೇರೆ ಏನೂ ಮಾತಾಡದೆ ಮೆಮೆಳನ್ನು ಹೊರಗೆ ಕರೆದುಕೊಂಡು ಬಂದು ಅನೈತಿಕ ಕೂಪದ ಗದ್ದಲದ ಟರ್ಕಿಗಳ ರಸ್ತೆಯುದ್ದಕ್ಕೂ ಬಿಡುಬೀಸಾಗಿ ನಡೆಸಿಕೊಂಡು ಹೋದ. ನಂತರ ಅವಳನ್ನು ಅವಳ ರೂಮಿಗೆ ತಲುಪಿಸಿದ.

ಮಾರನೆ ದಿನ ಸಂಜೆ ಆರು ಗಂಟೆಗೆ ಅವಳನ್ನು ಭೇಟಿಯಾಗಲು ಬಂದವನ ಧ್ವನಿಯನ್ನು ಗುರುತು ಹಿಡಿದಳು. ಅವನು ಅಷ್ಟು ಆರೋಗ್ಯವಂತನಲ್ಲದ ಕಪ್ಪಾದ ವೇದನೆ ತುಂಬಿದ ಕಣ್ಣುಗಳ ಯುವಕನಾಗಿದ್ದ. ಅವಳು ಜಿಪ್ಸಿಗಳನ್ನು ನೋಡಿರದಿದ್ದರೆ ಅಷ್ಟು ಚಕಿತಗೊಳ್ಳುತ್ತಿರಲಿಲ್ಲ. ಅವನಲ್ಲೊಂದು ಕನಸುಗಾರಿಕೆಯಿದ್ದು, ಅವಳಿಗಿಂತ ಕೊಂಚ ಕಡಿಮೆ ಬಿಗಿ ಇದ್ದ ಯಾವುದೇ ಹೆಂಗಸಿಗಾದರೂ ಅವಳ ಮಗಳ ಉದ್ದೇಶ ಅರ್ಥವಾಗುತ್ತಿತ್ತು. ಅವನು ಕೊಳಕಾದ ಒಂದು ಸೂಟ್ ತೊಟ್ಟಿದ್ದ ಹಾಗೂ ಜಿಂಕ್‌ನ ಕಲೆಗಳಿದ್ದ ಶೂ ಹಾಕಿಕೊಂಡಿದ್ದ. ಅಲ್ಲದೆ ಕೈಯಲ್ಲಿ ಹಿಂದಿನ ದಿನ ಶನಿವಾರ ತಂದಿದ್ದ ಹುಲ್ಲು ಕಡ್ಡಿ ಹಿಡಿದುಕೊಂಡಿದ್ದ. ಅವನಿಗೆ ಆ ಕ್ಷಣದಲ್ಲಿ ಉಂಟಾದ ಭಯ ಇಡೀ ಜೀವಮಾನದಲ್ಲಿ ಆಗಿರಲಾರದು. ಆದರೆ ಅವನಲ್ಲಿದ್ದ ಘನತೆ ಮತ್ತು ಸಮಯ ಪ್ರಜ್ಞೆಯಿಂದ ಬಚಾವಾದ. ಅವನ ನಿಜವಾದ ಲಕ್ಷಣ ಅವನ ಒರಟು ಕೆಲಸದಿಂದ ಮೆತ್ತಿದ ಬಣ್ಣದ ಕೈಯಿಂದ ವಿಲಕ್ಷಣವೆನಿಸಿತ್ತು. ಫೆರ್ನಾಂಡಳಿಗೆ ಅವನು ಮೆಕ್ಯಾನಿಕ್ ಮಟ್ಟದವನು ಎಂದು ಊಹಿಸಲು ಒಂದೇ ನೋಟ ಸಾಕಾಗಿತ್ತು. ಅವನ ಬಳಿ ಇದ್ದ ಒಂದೇ ಭಾನುವಾರದ ಸೂಟ್ ಹಾಕಿಕೊಂಡಿದ್ದಾನೆಂದು ಮತ್ತು ಅವನ ಶರಟಿನ ಒಳಗೆ ಬಾಳೆತೋಟದ ಕಂಪನಿಯ ಗುರುತಿನ ಬಿಲ್ಲೆ ಇದೆಯೆಂದು ಭಾವಿಸಿದಳು. ಅವಳು ಅವನಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಅವನನ್ನು ಬಾಗಿಲ ಒಳಗೆ ಬರಲೂ ಬಿಡಲಿಲ್ಲ ಮತ್ತು ಇನ್ನೊಂದು ಕ್ಷಣದಲ್ಲಿ ಅವಳು ಇಡೀ ಮನೆ ಹಳದಿ ಚಿಟ್ಟೆಗಳಿಂದ ತುಂಬಿ ಹೋದದ್ದರಿಂದ ಬಾಗಿಲನ್ನು ಮುಚ್ಚಿದಳು.

ಅವಳು, “ಹೊರಟು ಹೋಗು. ನೀನು ಯಾವ್ದೇ ಮರ್‍ಯಾದಸ್ಥರ ಮನೆಗೆ ಬರೋದಕ್ಕೆ ಲಾಯಕ್ಕಾಗಿಲ್ಲ” ಎಂದಳು.

ಅವನ ಹೆಸರು ಮಾರಿಷಿಯೋ ಬಾಬಿಲೋನಿಯಾ. ಅವನು ಮಕೋಂದೋದಲ್ಲೆ ಹುಟ್ಟಿ ಬೆಳೆದವನು. ಅವನು ಬಾಳೆ ತೋಟದ ಗೆರಾಜ್‌ನಲ್ಲಿ ಕಂಪನಿಯ ಮೆಕ್ಯಾನಿಕ್ ಆಗಿ ತರಬೇತಿ ಪಡೆಯುತ್ತಿದ್ದ. ಒಂದು ದಿನ ಪೆಟ್ರೀಷಿಯಾ ಬ್ರೌನ್ ಜೊತೆ ಕಾರೊಂದನ್ನು ತೋಟದೊಳಗೆ ಓಡಿಸಲು ಹೋಗಿದ್ದಾಗ ಮೆಮೆ ಅವನನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದಳು. ಕಾರಿನ ಡ್ರೈವರ್‌ಗೆ ಕಾಯಿಲೆಯಾದ್ದರಿಂದ ಅವರನ್ನು ಕರೆದುಕೊಂಡು ಹೋಗುವ ಕೆಲಸವನ್ನು ಅವನಿಗೆ ವಹಿಸಿದ್ದರು ಮತ್ತು ಮೆಮೆಳಿಗೆ ಕೊನೆಗೂ ಡ್ರೈವರ್‌ನ ಪಕ್ಕದಲ್ಲಿ ಕುಳಿತುಕೊಂಡು ಅವನು ಏನು ಮಾಡುತ್ತಾನೆ ಎಂದು ನೋಡಬೇಕೆನ್ನುವ ಅಭಿಲಾಷೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗಿತ್ತು. ಕಾರಿನ ಸಾಮಾನ್ಯ ಡ್ರೈವರ್‌ನಂತಲ್ಲದೆ ಮಾರೀಷಿಯೋ ಬಾಬಿಲೋನಿಯಾ ಅವಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟ. ಆ ದಿನಗಳಲ್ಲಿ ಮೆಮೆ ಮಿಸ್ಟರ್ ಬ್ರ್ರೌನ್ ಮನೆಗೆ ಆಗಾಗ್ಗೆ ಹೋಗುವುದನ್ನು ಪ್ರಾರಂಭಿಸಿದ್ದಳು. ಮತ್ತು ಆಗ ಹೆಂಗಸೊಬ್ಬಳು ಕಾರನ್ನು ಓಡಿಸುವುದು ಅನುಚಿತವೆಂದು ಪರಿಗಣಿಸಲಾಗಿತ್ತು. ಆದ್ದರಿಂದ ಅವಳು ತಾಂತ್ರಿಕ ಮಾಹಿತಿಯಿಂದ ಸಮಾಧಾನಗೊಂಡಳು ಮತ್ತು ಅವಳು ಅನೇಕ ತಿಂಗಳ ಕಾಲ ಮಾರಿಷಿಯೋ ಬಾಬಿಲೋನಿಯಾನನ್ನು ನೋಡಲಿಲ್ಲ. ಕಾರಿನಲ್ಲಿ ಕುಳಿತಾಗ ತನ್ನ ಗಮನ ಅವನ ಒರಟು ಕೈ ಮೇಲಲ್ಲದೆ ಕಟ್ಟುಮಸ್ತಾದ ಅವನ ಮೈಮೇಲೆ ಇತ್ತೆಂದು ಅವಳಿಗೆ ನೆನಪಾಗುತ್ತಿತ್ತು. ಆದರೆ ಅವಳು ಪಾಟ್ರೀಷಿಯಾ ಬ್ರೌನ್ ಬಳಿ ಅವನ ಸಂರಕ್ಷಣಾ ಭಾವನೆಯ ಹಮ್ಮಿನ ಬಗ್ಗೆ ಕಿರಿಕಿರಿಯಾದದ್ದನ್ನು ಹೇಳಿದ್ದಳು. ಅವಳು ಮೊದಲ ಶನಿವಾರ ತನ್ನ ತಂದೆಯ ಜೊತೆ ಸಿನಿಮಾಕ್ಕೆ ಹೋದಾಗ ಕೆಲವು ಸೀಟುಗಳ ಆಚೆ ಹತ್ತಿ ಬಟ್ಟೆಯ ಸೂಟ್ ಹಾಕಿಕೊಂಡು ಕೂತಿದ್ದ ಮಾರಿಷಿಯೋ ಬಾಬಿಲೋನಿಯಾನನ್ನು ನೋಡಿದಳು. ಮತ್ತು ಅವನು ತನ್ನ ಕಡೆ ನೋಡುತ್ತ ಸಿನಿಮಾ ನೋಡುವುದರ ಬಗ್ಗೆ ಗಮನಕೊಡುತ್ತಿಲ್ಲವೆಂದು ಗಮನಿಸಿದಳು. ಮೆಮೆಳಿಗೆ ಅದು ಅಸಹ್ಯವಾಗಿ ಕಂಡು ಕಸಿವಿಸಿಯಾಯಿತು. ಅನಂತರ ಮಾರಿಷಿಯೋ ಬಾಬಿಲೋನಿಯಾ ಬಂದು ಅವ್ರೇಲಿಯಾನೋ ಸೆಗುಂದೋಗೆ ವಂದಿಸಿದಾಗ ಮೆಮೆ ಅವರಿಬ್ಬರಿಗೂ ಪರಿಚಯವಿದೆಯೆಂದೂ ಮತ್ತು ಅವನು ಅವ್ರೇಲಿಯಾನೋ ಟ್ರೀಸ್ತೆಯ ಪ್ರಾರಂಭದ ವಿದ್ಯುತ್ ಕಾರ್ಯಾಗಾರದಲ್ಲಿ ಕೆಲಸಮಾಡುತ್ತಿದ್ದನೆಂದೂ ಮತ್ತು ಅವನು ತನ್ನ ತಂದೆ ಬಳಿ ಕೆಲಸಗಾರನ ಹಾಗೆ ನಡೆದುಕೊಳ್ಳುತ್ತಿದ್ದಾನೆಂದು ಗೊತ್ತಾಯಿತು. ಆ ಸಂಗತಿ ಅವನ ಹಮ್ಮು ಉಂಟುಮಾಡಿದ್ದ ಭಾವನೆಯನ್ನು ದೂರ ಮಾಡಿತು. ಅವರಿಬ್ಬರು ಪ್ರತ್ಯೇಕವಾಗಿ ಭೇಟಿಯಾಗಿಯೇ ಇರಲಿಲ್ಲ. ಅವರು ಒಬ್ಬರಿಗೊಬ್ಬರು ಔಪಚಾರಿಕ ಮಾತುಗಳನ್ನು ಬಿಟ್ಟರೆ ಬೇರೆ ಏನೂ ಮಾತಾಡಿರಲಿಲ್ಲ. ಅಲ್ಲದೆ ತನ್ನನ್ನು ವಿನಾಶದಿಂದ ಪಾರುಮಾಡುವನೆಂದು ಆ ರಾತ್ರಿ ಕನಸು ಕಂಡಿದ್ದಳು. ಅವಳಿಗೆ ತನ್ನ ಅಪಾರ್ಥವನ್ನು ಕೊನೆಗಾಣಿಸಿದಕ್ಕಾಗಿ ಅವನ ಬಗ್ಗೆ ಕೃತಜ್ಞತೆಗೆ ಬದಲಾಗಿ ರೋಷ ಉಂಟಾಯಿತು. ಅದು ಅವನು ಕಾಯುತ್ತಿದ್ದ ಅವಕಾಶವೊಂದನ್ನು ಒದಗಿಸಿದಂತಿತ್ತು. ಆದರೆ ಮೆಮೆ, ತನ್ನ ಬಗ್ಗೆ ಆಸಕ್ತಿ ಹೊಂದಿದ ಮಾರಿಷಿಯೋ ಬಾಬಿಲೋನಿಯಾ ಅಥವಾ ಬೇರೆ ಯಾವ ವ್ಯಕ್ತಿಯ ಬಗ್ಗೆ, ಅದಕ್ಕೆ ವ್ಯತಿರಿಕ್ತವಾದದ್ದನ್ನು ಬಯಸುತ್ತಿದ್ದಳು. ಆದ್ದರಿಂದ ಆ ಕನಸು ಬಿದ್ದಾಗ ಅವನನ್ನು ದ್ವೇಷಿಸುವುದರ ಬದಲಿಗೆ ಕಾಣಬೇಕೆಂಬ ತೀವ್ರವಾದ ಒತ್ತಾಸೆ ಉಂಟಾದದ್ದಕ್ಕೆ ತನ್ನ ಮೇಲೆ ಸಿಟ್ಟು ಬಂತು. ಆ ಆತಂಕ ಆ ವಾರದಲ್ಲಿ ತೀವ್ರವಾಯಿತು ಮತ್ತು ಶನಿವಾರ ಅದರ ಒತ್ತಡ ಎಷ್ಟು ಹೆಚ್ಚಾಯಿತೆಂದರೆ ಸಿನಿಮಾದಲ್ಲಿ ಮಾರಿಷಿಯೋ ಬಾಬಿಲೋನಿಯೋ ಸಿಕ್ಕು ಕುಶಲ ಕೇಳಿದಾಗ, ತನ್ನ ಹೃದಯ ಬಾಯಿಗೇ ಬಂದದ್ದನ್ನು ಅವನು ಗಮನಿಸದಿರುವಂತೆ ಮಾಡಲು ಅವಳು ಹೆಚ್ಚಿನ ಪ್ರಯತ್ನ ಮಾಡಬೇಕಾಯಿತು. ಸಂತೋಷ ಮತ್ತು ರೋಷದ ಗೊಂದಲದಲ್ಲಿ ಅವಳು ಮೊದಲ ಬಾರಿಗೆ ಅವನಿಗೆ ಕೈ ಚಾಚಿದಳು ಮತ್ತು ಮಾರಿಷಿಯೋ ಬಾಬಿಲೋನಿಯಾ ಅವಳ ಕೈ ಕುಲುಕಿz. ಮರುಕ್ಷಣದಲ್ಲಿ ಅವಳಿಗೆ ತನ್ನ ಆವೇಶಕ್ಕೆ ಪಶ್ಚಾತ್ತಾಪಗೊಂಡರೂ ಅವನ ಕೈ ಕೂಡ ತೆಳು ಬೆವರಿನಿಂದ ತಣ್ಣಗಿದ್ದದ್ದರಿಂದ ವಿಚಿತ್ರ ಸಮಾಧಾನವಾಯಿತು. ಅಂದಿನ ರಾತ್ರಿ ಅವಳಿಗೆ ಮಾರಿಷಿಯೋ ಬಾಬಿಲೋನಿಯಾಗೆ ಅವನ ಅಭೀಪ್ಸೆ ಉಪಯೋಗವಿಲ್ಲದ್ದೆಂದು ತೋರಿಸುವ ತನಕ ತನಗೆ ನೆಮ್ಮದಿ ಸಿಗುವುದಿಲ್ಲವೆಂದು ಅರಿವಾಯಿತು. ಇಡೀ ವಾರ ಅದೇ ಯೋಚನೆಯಲ್ಲೇ ಆತಂಕದಿಂದ ಕಳೆದಳು. ಅವಳು ಪ್ಯಾಟ್ರೀಷಿಯಾ ಬ್ರೌನ್ ಕಾರು ತೆಗೆದುಕೊಂಡು ಬರಲು ತನ್ನನ್ನು ಕರೆದುಕೊಂಡು ಹೋಗಲಿ ಎಂದು ತನಗೆ ತಿಳಿದ ಎಲ್ಲ ತಂತ್ರಗಳನ್ನು ಮಾಡಿದಳು. ಕೊನೆಗೆ ಅವಳು ಆ ಸಮಯದಲ್ಲಿ ಮಕೋಂದೋದಲ್ಲಿ ರಜೆ ಕಳೆಯುತ್ತಿದ್ದ ಅಮೆರಿಕದ ಕೆಂಗೂದಲಿನವನನ್ನು ಬಳಸಿಕೊಂಡಳು. ಮತ್ತು ವಿವಿಧ ಮಾದರಿಯ ಕಾರುಗಳನ್ನು ನೋಡುವ ನೆಪದಿಂದ ತನ್ನನ್ನು ಗರಾಜ್‌ಗೆ ಕರೆದುಕೊಂಡು ಹೋಗುವಂತೆ ಮಾಡಿದಳು. ಅವನನ್ನು ನೋಡಿದ ಕ್ಷಣ ತನಗೆ ತಾನೆ ಮೋಸಗೊಳಿಸಲು ಬಿಟ್ಟು, ಮಾರಿಷಿಯೋ ಬಾಬಿಲೋನಿಯಾನ ಸಂಗಡ ಏಕಾಂತದಲ್ಲಿರಬೇಕು ಎನ್ನುವ ಅಪೇಕ್ಷೆಯನ್ನು ಅವಳಿಗೆ ತಡೆಯಲಾಗಲಿಲ್ಲ. ಅಲ್ಲದೆ ಅದು ಅವಳು ಬಂದಾಗ ಅವನಿಗೆ ಅರ್ಥವಾಗಿದೆ ಎನ್ನುವುದು ಖಚಿತವಾದದ್ದಕ್ಕೆ ಅವಳಿಗೆ ತನ್ನ ಬಗ್ಗೆ ಕೋಪ ಬಂತು.

ಮೆಮೆ, “ಹೊಸ ಮಾಡಲ್‌ಗಳನ್ನು ನೋಡೋಣಾಂತ ಬಂದೆ” ಎಂದಳು.

ಅವನು , “ಅದೊಂದು ಒಳ್ಳೆ ನೆಪ” ಎಂದ.

ಮೆಮೆಗೆ ಅವನು ಹಮ್ಮಿನಿಂದ ಬಿರಿದು ಹೋಗುತ್ತಿದ್ದಾನೆಂದು ಅರ್ಥವಾಯಿತು. ಅವಳ ಅವನಿಗೆ ಅಪಮಾನ ಮಾಡುವ ಬಗೆಯನ್ನು ಹತಾಶೆಯಿಂದ ಹುಡುಕಿದಳು. ಆದರೆ ಅವನು ಅವಳಿಗೆ ಕಾಲಾವಕಾಶವನ್ನೇ ಕೊಡಲಿಲ್ಲ. ಅವನು ಕೆಳದನಿಯಲ್ಲಿ, “ನೀವೇನೂ ತಲೆಕೆಡಿಸಿಕೊಳ್ಳಬೇಡಿ. ಹುಡುಗಿಯೊಬ್ಳು ಒಬ್ಬ ಹುಡುಗನ್ನು ತೀರ ಇಷ್ಟಪಟ್ಟಿರೋದು ಇದೇನು ಮೊದಲ್ನೇ ಸಲ ಅಲ್ಲ” ಎಂದ. ಅವಳಿಗೆ ಕುಸಿದಂತಾಗಿ ಹೊಸ ಮಾಡಲ್‌ಗಳನ್ನು ನೋಡದೆ ಗರಾಜ್‌ನಿಂದ ಹೊರಟು ಹೋದಳು ಮತ್ತು ಆ ದಿನ ರಾತ್ರಿಯೆಲ್ಲ ಕೋಪಗೊಂಡು ಅಳುತ್ತಿದ್ದಳು. ಅವಳ ಬಗ್ಗೆ ಆಸಕ್ತಿ ಹೊಂದಲು ಪ್ರಾರಂಭಿಸಿದ್ದ ಅಮೆರಿಕದ ಕೆಂಗೂದಲ ಮನುಷ್ಯ ಎಳೆ ಮಗುವಿನಂತೆ ಕಂಡ. ಆಗ ಅವಳಿಗೆ ಮಾರಿಷಿಯೋ ಕಾಣಿಸಿಕೊಳ್ಳುತ್ತಿದ್ದಕ್ಕಿಂತ ಮುಂಚೆ ಹಳದಿ ಚಿಟ್ಟೆಗಳು ಬರುತ್ತಿದ್ದದ್ದು ನೆನಪಾಯಿತು. ಅವಳು ಅವುಗಳನ್ನು ಮುಖ್ಯವಾಗಿ ಗರಾಜ್ ಬಳಿ ನೋಡಿದ್ದಳು. ಪೇಂಟ್‌ನ ವಾಸನೆಯಿಂದ ಅವು ಮುತ್ತುತ್ತವೆ ಎಂದು ಅವಳು ತಿಳಿದುಕೊಂಡಿದ್ದಳು. ಒಂದು ಸಲ ಅವಳು ಸಿನಿಮಾಕ್ಕೆ ಹೋಗುವ ಮುಂಚೆ ತನ್ನ ತಲೆಯ ಮೇಲೆ ಹಾರಾಡುತ್ತಿದ್ದದ್ದನ್ನು ಕಂಡಿದ್ದಳು. ಆದರೆ ಮಾರಿಷಿಯೋ ಬಾಬಿಲೋನಿಯಾ ಭೂತದ ಹಾಗೆ ತನ್ನ ಬೆನ್ನು ಹತ್ತಿದಾಗ, ಗುಂಪಿನಲ್ಲಿದ್ದರೂ ಅವನನ್ನು ಗುರುತಿಸಲು ತನಗೆ ಮಾತ್ರ ಸಾಧ್ಯವಾದ ಮೇಲೆ, ಚಿಟ್ಟೆಗಳಿಗೂ ಅವನಿಗೂ ವಿಚಿತ್ರವಾದ ಸಂಬಂಧವಿದೆ ಎಂದು ಅವಳಿಗೆ ಗೊತ್ತಾಯಿತು. ಮಾರಿಷಿಯೋ ಬಾಬಿಲೋನಿಯಾ ಸಂಗೀತ ಗೋಷ್ಠಿಗಳಲ್ಲಿ, ಸಿನಿಮಾದಲ್ಲಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಯಾವಾಗಲೂ ಇರುತ್ತಿದ್ದ. ಅವಳು ಅವನು ಎಲ್ಲಿದ್ದಾನೆ ಎಂದು ಹುಡುಕಬೇಕಾಗಿರಲಿಲ್ಲ. ಏಕೆಂದರೆ ಅವನಿದ್ದ ಕಡೆ ಚಿಟ್ಟೆಗಳು ಯಾವಾಗಲೂ ಇರುತ್ತಿದ್ದವು. ಒಂದು ಸಲ ಅವ್ರೇಲಿಯಾನೋ ಸೆಗುಂದೋ ಅವುಗಳ ಹಾರಾಟದಿಂದ ಎಷ್ಟು ಕಸಿವಿಸಿಗೊಂಡಿದ್ದನೆಂದರೆ ಅವಳಿಗೆ ತನಗೆ ತಿಳಿದಿರುವ ಗುಟ್ಟನ್ನು, ಅವಳೇ ಮಾತು ಕೊಟ್ಟಂತೆ ಹೇಳಿಬಿಡಬೇಕು ಎನ್ನಿಸಿತು. ಆದರೆ ಅವನು ಎಂದಿನ ಹಾಗೆ ನಕ್ಕು, “ನಿಮ್ಮಮ್ಮನಿಗೆ ಗೊತ್ತಾದರೆ ಏನು ಹೇಳ್ತಾಳೆ?” ಎನ್ನುತ್ತಾನೆ ಎಂದುಕೊಂಡಳು. ಒಂದು ದಿನ ಬೆಳಿಗ್ಗೆ ಅವಳು ಗುಲಾಬಿ ಹೂಗಳನ್ನು ಒಪ್ಪಮಾಡುತ್ತಿದ್ದಾಗ ಫೆರ್ನಾಂಡ ಕೂಗಿಕೊಂಡಳು ಮತ್ತು ಮೆಮೆ ತಾನಿದ್ದ ಸ್ಥಳದಿಂದ ಆಚೆ ಹೋದಳು. ಅದು ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಹೋಗುವಾಗ ಕೈತೋಟದಲ್ಲಿ ನಿಂತ ಸ್ಥಳವಾಗಿತ್ತು. ಅವಳು ಮತ್ತೆ ಅದೇ ರೀತಿಯ ಮಾಂತ್ರಿಕ ಘಟನೆ ಜರುಗುವುದೆಂದು ಭಾವಿಸಿದಳು, ಏಕೆಂದರೆ ಒಮ್ಮೆಲೇ ಚಿಟ್ಟೆಗಳ ರೆಕ್ಕೆ ಬಡಿತದಿಂದ ಅವಳು ಕಳವಳಗೊಂಡಿದ್ದಳು. ಅವು ಇದ್ದಕ್ಕಿದ್ದ ಹಾಗೆ ಬೆಳಕಿನಿಂದ ಹುಟ್ಟು ಪಡೆದದ್ದಾಗಿ ಮೆಮೆಗೆ ತೋರಿತು ಮತ್ತು ಅವಳ ಹೃದಯ ಒಮ್ಮೆ ಪುಟಿಯಿತು. ಆ ಸಮಯದಲ್ಲಿ ಮಾರಿಷಿಯೋ ಬಾಬಿಲೋನಿಯಾ ಒಂದು ಕಟ್ಟು ಹಿಡಿದುಕೊಂಡು ಬಂದಿದ್ದ. ಅವನು ಹೇಳಿದಂತೆ ಅದು ಪ್ಯಾಟ್ರೀಷಿಯಾ ಬ್ರೌನಿನಿಂದ ಅವಳಿಗೊಂದು ಕೊಡುಗೆಯಾಗಿತ್ತು. ಮೆಮೆ ನಾಚಿಕೆಯನ್ನು ಮರೆಮಾಚಿ, ಒಳತೋಟಿಯನ್ನು ನುಂಗಿಕೊಂಡಳು ಮತ್ತು ಸಹಜ ನಗು ಬೀರಲು ಕೂಡ ಯಶಸ್ವಿಯಾಗಿ ಅವನಿಗೆ ತನ್ನ ಕೈ ಕೈತೋಟದ ಕೆಲಸದಲ್ಲಿ ಕೊಳಕಾಗಿರುವುದರಿಂದ ಮೆಟ್ಟಿಲು ಕಂಬದ ಹತ್ತಿರ ಇಟ್ಟು ಹೋಗಲು ಹೇಳಿದಳು. ಎಲ್ಲಿ ನೋಡಿದೆನೆಂದು ನೆನಪಾಗದೆ ಕೆಲವು ತಿಂಗಳ ಹಿಂದೆ ಮನೆಯಿಂದ ಹೊರಗೆ ಹಾಕಿದ ಆ ಮನುಷ್ಯನಲ್ಲಿ ಫೆರ್ನಾಂಡ ಗುರುತಿಸಿದ್ದು ಅವನ ಒರಟು ಚರ್ಮವನ್ನು ಮಾತ್ರ.

ಫೆರ್ನಾಂಡ, “ಅವನೊಬ್ಬ ವಿಚಿತ್ರ ಮನುಷ್ಯ. ಬೇಗ ಸಾಯ್ತಾನೆ ಅಂತ ಮುಖ ನೋಡಿದ್ರೆ ಗೊತ್ತಾಗತ್ತೆ” ಎಂದಳು.

ಮೆಮೆಗೆ ತನ್ನ ತಾಯಿ ಚಿಟ್ಟೆಗಳಿ;ಂದ ಪ್ರಭಾವಿತಳಾದಳೆಂದು ತಿಳಿದಳು. ಅವರು ಗುಲಾಬಿ ಗಿಡಗಳನ್ನು ಸರಿಪಡಿಸಿದ ನಂತರ ಅವಳು ಕೈ ತೊಳೆದುಕೊಂಡು ಆ ಕಟ್ಟನ್ನು ತೆಗೆದುಕೊಂಡು ಬಿಚ್ಚಿ ನೋಡಲು ಬೆಡ್‌ರೂಮಿಗೆ ಹೋದಳು. ಅದೊಂದು ಒಂದರೊಳಗೊಂದು ಸೇರಿಕೊಳ್ಳುವ ಐದು ಪೆಟ್ಟಿಗೆಗಳ ಚೀನಾದ ಆಟಿಕೆಯಾಗಿತ್ತು. ಕೊನೆಯದರಲ್ಲಿ ಸರಿಯಾಗಿ ಬರೆಯಲು ಬಾರದವನೊಬ್ಬ, ‘ನಾವು ಶನಿವಾರ ಒಟ್ಟಿಗೆ ಸಿನಿಮಾಕ್ಕೆ ಹೋಗೋಣ\’ ಎಂದು ಕಷ್ಟಪಟ್ಟು ಬರೆದಂತಿತ್ತು. ಮೆಮೆಳಿಗೆ ಆ ಕಟ್ಟು ಬಹಳ ಸಮಯದ ತನಕ ಮೆಟ್ಟಿಲು ಕಂಬದ ಬಳಿಯೇ ಇದ್ದು, ಫೆರ್ನಾಂಡಳ ಕುತೂಹಲಕ್ಕೆ ಕಾರಣವಾಗದಿದ್ದದ್ದ್ದು ನೆನಪಾಗಿ ಶಾಕ್ ಆಯಿತು. ಅವಳಿಗೆ ಮಾರಿಷಿಯೋ ಬಾಬಿಲೋನಿಯಾನ ಧೈರ್ಯ ಹಾಗೂ ಸ್ವಂತಿಕೆಯಿಂದ ಮೆಚ್ಚಿಗೆಯಾದರೂ, ತಾನು ಅದರಂತೆ ನಡೆದುಕೊಳ್ಳುತ್ತೇನೆಂದು ತಿಳಿದ ಅವನ ಮುಗ್ಧತೆಯಿಂದ ಅವಳ ಅಂತ:ಕರಣ ಕಲಕಿತು. ಮೆಮೆಳಿಗೆ ಶನಿವಾರ ಸಾಯಂಕಾಲ ಆ ಸಮಯದಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಬೇರೊಂದು ಕಾರ್ಯಕ್ರಮ ಇದೆಯೆಂದು ಗೊತ್ತಿತ್ತು. ಆದರೂ ಇಡೀ ವಾರ ಆತಂಕದಿಂದ ಎಷ್ಟು ಕುದಿಯುತ್ತಿದ್ದಳೆಂದರೆ ಶನಿವಾರ ಒಬ್ಬಳನ್ನೇ ಸಿನಿಮಾಕ್ಕೆ ಬಿಟ್ಟು ಪ್ರದರ್ಶನ ಮುಗಿದ ಮೇಲೆ, ಕರೆದುಕೊಂಡು ಹೋಗಲು ಬರುವಂತೆ ತನ್ನ ತಂದೆಯನ್ನು ಒಪ್ಪಿಸಿದಳು. ದೀಪಗಳು ಹೊತ್ತಿಕೊಂಡಾಗ ಅವಳ ತಲೆಯ ಮೇಲೊಂದು ಚಿಟ್ಟೆ ಚಟುವಟಿಕೆಯಿಂದ ಹಾರಾಡುತ್ತಿತ್ತು. ಅನಂತರ ದೀಪಗಳು ನಂದಿದಾಗ ಮಾರಿಷಿಯೋ ಬಾಬಿಲೋನಿಯಾ ಅವಳ ಪಕ್ಕದಲ್ಲಿ ಕುಳಿತುಕೊಂಡ. ಅವಳು ತೀವ್ರ ಅನುಮಾನದ ಸುಳಿಯಲ್ಲಿ ಮುಳುಗಿ, ಕನಸಿನಲ್ಲಿ ಇರುವ ಹಾಗನ್ನಿಸಿದ ಅವಳನ್ನು ಗ್ರೀಸಿನ ವಾಸನೆಯ ಕತ್ತಲಲ್ಲಿ ಕಾಣದಿದ್ದ ಆ ಮನುಷ್ಯ ಪಾರು ಮಾಡಬೇಕಾಗಿತ್ತು

ಅವನು, “ನೀನು ಬಾರದೆ ಹೋಗಿದ್ರೆ, ಇನ್ನೆಂದೂ ನನ್ನನ್ನ ನೋಡ್ತಿರ್‍ಲಿಲ್ಲ” ಎಂದ.

ಅವನ ಕೈ ತನ್ನ ಮಂಡಿಯ ಮೇಲೆ ಬಿದ್ದದ್ದು ಮೆಮೆಳಿಗೆ ತಿಳಿಯಿತು ಮತ್ತು ತಾವಿಬ್ಬರೂ ಆ ಸಮಯದಲ್ಲಿ ಕೆಟ್ಟ ದಾರಿಯ ಅಂಚಿಲ್ಲಿರುವುದು ಗೊತ್ತಿತ್ತು.

ಅವಳು ನಗುತ್ತ, “ನಿನ್ನ ಬಗ್ಗೆ ಏನು ಆಶ್ಚರ್ಯ ಆಗತ್ತೆ ಅಂದ್ರೆ, ಏನು ಹೇಳಬಾರ್‍ದೋ ಅದನ್ನೇ ಹೇಳ್ತಿರ್‍ತೀಯ” ಎಂದಳು.

ಅವಳು ಅವನಿಗೆ ಮನಸೋತಳು. ಅವಳಿಗೆ ನಿದ್ದೆ ಬರುತ್ತಿರಲಿಲ್ಲ, ಊಟ ಸೇರುತ್ತಿರಲಿಲ್ಲ, ಅವಳ ತಂದೆಗೂ ಸಿಟ್ಟು ಬರುವಷ್ಟು ಒಂಟಿಯಾಗಿರುತ್ತಿದ್ದಳು. ಅವಳು ಫೆರ್ನಾಂಡಳನ್ನು ದಿಕ್ಕು ತಪ್ಪಿಸುವುದಕ್ಕಾಗಿ ಸುಳ್ಳಿನ ಕಂತೆ ಹೆಣೆದಳು, ಗೆಳತಿಯರನ್ನು ಮರೆತಳು. ಎಲ್ಲ ಸಂಕೋಚಗಳನ್ನು ಮೀರಿ ಯಾವುದೇ ಜಾಗದಲ್ಲಾಗಲೀ, ಯಾವ ಸಮಯದಲ್ಲಾಗಲೀ ಮಾರಿಷಿಯೋ ಬಾಬಿಲೋನಿಯಾ ಜೊತೆಗಿರುತ್ತಿದ್ದಳು. ಮೊದಮೊದಲು ಅವನ ಒರಟುತನ ಅವಳಿಗೆ ಯೋಚನೆ ತಂದಿತ್ತು. ಮೊದಲು ಅವರು ಗರಾಜ್‌ನ ಹಿಂಭಾಗದಲ್ಲಿ ಯಾರೂ ಇಲ್ಲದ ಕಡೆ ಇದ್ದಾಗ, ಅವನು ಪಶುವಿನಂತೆ ಅವಳನ್ನೆಳೆದು ಸುಸ್ತಾಗುವಂತೆ ಮಾಡಿದ್ದ. ಅದೂ ಕೂಡ ಒಂದು ಬಗೆಯ ಕೋಮಲತೆ ಎಂದು ಅರಿವಾಗಲು ಅವಳಿಗೆ ಒಂದಷ್ಟು ಸಮಯ ಬೇಕಾಯಿತು. ಅನಂತರ ಅವಳು ಅವನಿಗಾಗಿ ಮಾತ್ರ ಬದುಕಿದ್ದಳು. ಜೊತೆಗೆ ಕಂಗೆಡಿಸುವ ಉಪ್ಪು ನೀರಿಂದ ತೊಳೆದ ಗ್ರೀಸಿನ ವಾಸನೆಯಲ್ಲಿ ಮುಳುಗುವ ಅಪೇಕ್ಷೆಯಿಂದ ಕಳವಳಗೊಂಡಳು. ಅಮರಾಂತ ಸಾಯುವ ಸ್ವಲ್ಪ ಕಾಲದ ಮುಂಚೆ, ಅವಳ ಹುಚ್ಚಿನ ನಡುವೆ ಸರಳತೆಯ ಪ್ರದೇಶ ಹೊಕ್ಕು, ಭವಿಷ್ಯದ ಅನಿಶ್ಚಯದ ಬಗ್ಗೆ ನಡುಗಿ ಹೋದಳು. ಆಗ ಅವಳಿಗೆ ಕಾರ್ಡುಗಳಿಂದ ಭವಿಷ್ಯ ಹೇಳುವ ಹೆಂಗಸಿನ ಬಗ್ಗೆ ತಿಳಿದು ಬಂತು ಮತ್ತು ಅವಳನ್ನು ಭೇಟಿಯಾಗಲು ಗುಟ್ಟಾಗಿ ಹೋದಳು. ಅವಳು ಪಿಲರ್ ಟೆರ್‍ನೆರಾ. ಅವಳು ಒಳಗೆ ಬಂದದ್ದನ್ನು ಕಂಡ ಪಿಲರ್ ಟೆರ್‍ನೆರಾಳಿಗೆ ಅವಳ ಉದ್ದೇಶ ಅರಿವಾಯಿತು. ಅವಳು, ” ಕೂತ್ಕೋ. ಬ್ಯುಂದಿಯಾ ಮನೆಯವರಿಗೆ ಭವಿಷ್ಯ ಹೇಳಕ್ಕೆ ನಂಗೆ ಕಾರ್ಡುಗಳು ಬೇಕಿಲ್ಲ” ಎಂದಳು. ನೂರು ವರ್ಷದವಳಾಗಿದ್ದ ಅವಳು ತನ್ನ ಮುತ್ತಜ್ಜಿ ಎಂದು ಮೆಮೆಳಿಗೆ ಗೊತ್ತಿರಲಿಲ್ಲ ಮತ್ತು ಗೊತ್ತಾಗಲಿಲ್ಲ. ಅವಳು ಕಟು ವಾಸ್ತವತೆಯಿಂದ, ಪ್ರೇಮಿಸುವ ಹಂಬಲ ಹಾಸಿಗೆಯಲ್ಲಲ್ಲದೆ ಬೇರೆ ರೀತಿಯಲ್ಲಿ ನೆಲೆಗೊಳ್ಳುವುದಿಲ್ಲ ಎಂದು ಹೇಳಿದ ಮೇಲೆ ಅವಳು ಏನನ್ನೂ ನಂಬುತ್ತಿರಲಿಲ್ಲ. ಮಾರಿಷಿಯೋ ಬಾಬಿಲೋನಿಯಾನ ದೃಷ್ಟಿಕೋನವೂ ಅದೇ ರೀತಿ ಇದೆಯೆಂದು ತಿಳಿಸಿದಾಗ ಅವಳು ಮೆಕ್ಯಾನಿಕ್ ಎನ್ನುವ ತೀರ್ಮಾನವೇ ಅವನ ಬಗ್ಗೆ ಊಹಿಸುವುದಕ್ಕೆ ಮೂಲವೆಂದು ಮೆಮೆ ತಿಳಿದುಕೊಂಡು ಅದನ್ನು ಒಪ್ಪಲಿಲ್ಲ. ಹಾಗಾದರೆ ಪ್ರೇಮದ ಒಂದು ಮಗ್ಗಲು ಮತ್ತೊಂದು ಮಗ್ಗುಲಿನ ಪ್ರೇಮವನ್ನು ನಿರ್ನಾಮ ಮಾಡುವುದೇಕೆಂದರೆ, ತಮಗೆ ತೃಪ್ತಿಯಾದ ಮೇಲೆ ಅಪೇಕ್ಷೆಯನ್ನು ನಿರಾಕರಿಸುವುದು ಗಂಡಸರ ಸ್ವಭಾವ ಎಂದು ಯೋಚಿಸಿದಳು. ಪಿಲರ್ ಟೆರ್‍ನೆರಾ ಆ ತಪ್ಪನ್ನು ತಿದ್ದಿದಳಲ್ಲದೆ ತಾನು ಮೆಮೆಳ ಅಜ್ಜ ಅರ್ಕಾದಿಯೋನನ್ನು ಮತ್ತು ಅವ್ರೇಲಿಯಾನೋ ಹೊಸೆಯನ್ನು ಗರ್ಭಧಾರಣೆ ಮಾಡಿದ, ಸಿಂಗರಿಸಿದ ಹಾಸಿಗೆಯನ್ನು ಕೊಡುವುದಾಗಿ ಹೇಳಿದಳು. ಅಲ್ಲದೆ ಬೇಡದ ಗರ್ಭಧಾರಣೆ ತಪ್ಪಿಸಿಕೊಳ್ಳುವುದನ್ನು ತಿಳಿಸಿದಳು ಮತ್ತು ಅವಳಿಗೆ ತೊಂದರೆಯಾದ ಪಕ್ಷದಲ್ಲಿ, ಹೊರಹಾಕಿ ಕ್ಷೇಮವಾಗಿಸುವ ಸಾಸುವೆ ಪಟ್ಟಿನ ಆವಿಯ ವಿಧಾನವನ್ನು ತಿಳಿಸಿ ಕೊಟ್ಟಳು. ಆ ಭೇಟಿ ಮೆಮೆಗೆ ಕುಡಿದು ಬಂದ ರಾತ್ರಿ ಇದ್ದ ಧೈರ್ಯವನ್ನು ತಂದು ಕೊಟ್ಟಿತು. ಆದರೆ ಅಮರಾಂತಳ ಸಾವು ಅವಳಿಗೆ ನಿರ್ಧಾರವನ್ನು ಮುಂದೆ ಹಾಕುವಂತೆ ಮಾಡಿತು. ಮನೆಯೊಳಗೆ ಗುಂಪು ಸೇರಿದವರಲ್ಲಿ ಇದ್ದ ಮಾರಿಷಿಯೋ ಬಾಬಿಲೋನಿಯಾನ ಪಕ್ಕವನ್ನು ಒಂಬತ್ತು ರಾತ್ರಿಯ ಅವಧಿಯಲ್ಲಿ ಒಮ್ಮೆ ಕೂಡ ಅವಳು ಬಿಡಲಿಲ್ಲ. ಅನಂತರ ದು:ಖಸೂಚಕದ ದೀರ್ಘವಾದ ಅವಧಿ ಬಂದು ಅವರು ಒಬ್ಬರಿಂದೊಬ್ಬರು ಕೆಲವು ಕಾಲ ಬೇರೆಯಾಗಿದ್ದರು. ಅವು ಒಳತೋಟಿ ತುಂಬಿ ತಡೆಯಲಾಗದ ಆತಂಕದ ಮತ್ತು ಎಷ್ಟು ಅದುಮಿಟ್ಟ ಆಕಾಂಕ್ಷೆಗಳ ದಿನಗಳಾಗಿದ್ದವೆಂದರೆ ಮೆಮೆ ಹೊರಬರಲು ಸಾಧ್ಯವಾದ ಮೊದಲ ಸಂಜೆಯೇ ಅವಳು ನೇರವಾಗಿ ಪಿಲರ್ ಟೆರ್‍ನೆರಾಳ ಬಳಿಗೆ ಹೋದಳು. ಅವಳು ಮಾರಿಷಿಯೋ ಬಾಬಿಲೋನಿಯಾಗೆ ಯಾವುದೇ ವಿರೋಧವಿಲ್ಲದೆ, ನಾಚಿಕೆಯೆ ಇಲ್ಲದೆ, ರೀತಿ ರಿವಾಜುಗಳಿಲ್ಲದೆ ತೀವ್ರಾಪೇಕ್ಷೆಯಿಂದಲೇ ತನ್ನನ್ನು ಒಪ್ಪಿಸಿಕೊಂಡಳು. ಅದು ತೀರ ಯುಕ್ತವಾಗಿದ್ದು, ಅವನು ಅವಳಿಗಿಂತ ಅನುಮಾನಿಸುವ ಮನುಷ್ಯನಾಗಿದ್ದರೆ ಆಗಲೇ ಅದು ಅನುಭವ ಪಡೆದ ರೀತಿಯದು ಎಂಬ ಗೊಂದಲ ಉಂಟಾಗುತ್ತಿತ್ತು. ಅವರು ಮೂರು ತಿಂಗಳ ಕಾಲ ವಾರಕ್ಕೆರಡು ಬಾರಿ, ತನ್ನ ಮಗಳನ್ನು ಅನುಮಾನಿಸದೆ ಅವಳ ತಾಯಿಯ ಬಿಗಿಹಿಡಿತದಿಂದ ಮುಕ್ತಗೊಳಿಸಲು ಅವ್ರೇಲಿಯಾನೋ ಸೆಗುಂದೋನ ರಕ್ಷಣೆಯಲ್ಲಿ ಪ್ರೇಮಿಸಿದರು.

ಫೆರ್ನಾಂಡ ಆ ದಿನ ಸಿನಿಮಾ ಥಿಯೇಟರ್‌ನಲ್ಲಿ ಪತ್ತೆ ಹಚ್ಚಿದ ಮೇಲೆ ಅವ್ರೇಲಿಯಾನೋ ಸೆಗುಂದೋಗೆ ಮನಸ್ಸು ಭಾರವಾಯಿತು. ಅವನು ಫೆರ್ನಾಂಡ ಮೆಮೆಳನ್ನು ತನ್ನಲ್ಲಿಟ್ಟಿದ್ದ ನಂಬಿಕೆಯಿಂದ ವಿಷಯವನ್ನು ಹೇಳುವಳೆಂದು ಅವಳನ್ನು ಕೂಡಿ ಹಾಕಿದ್ದ ಬೆಡ್‌ರೂಮಿನಲ್ಲಿ ಕಂಡ. ಆದರೆ ಮೆಮೆ ಎಲ್ಲವನ್ನೂ ಅಲ್ಲಗೆಳೆದಳು. ಅವಳು ತನ್ನ ಬಗ್ಗೆ ಎಷ್ಟು ಖಚಿತವಾಗಿದ್ದಳೆಂದರೆ ಮತ್ತು ಎಷ್ಟು ತನ್ನ ಮಟ್ಟಿಗಿದ್ದಳೆಂದರೆ ತಮ್ಮಿಬ್ಬರ ಮಧ್ಯೆ ಇನ್ನೇನೂ ಉಳಿದಿಲ್ಲ ಎನ್ನುವ ಭಾವನೆ ಅವ್ರೇಲಿಯಾನೋ ಸೆಗುಂದೋಗೆ ಬಂತು ಮತ್ತು ಸ್ನೇಹ ಹಾಗೂ ಸೌಹಾರ್ದಗಳಿಗೆ ಬೆಲೆಯಿಲ್ಲದೆ, ಕಳೆದ ದಿನಗಳೆಲ್ಲ ಭ್ರಮೆ ಎಂದು ತೋರಿತು. ಅವನು ಬಾಬಿಲೋನಿಯಾನ ಜೊತೆ ಮಾತನಾಡಬೇಕು ಎಂದುಕೊಂಡ. ತಾನು ಅವನಿಗೆ ಹಿಂದಿನ ಬಾಸ್ ಆಗಿದ್ದರಿಂದ ಅವನು ತನ್ನ ಆಲೋಚನೆಗಳನ್ನು ಬಿಡುವನೆಂದು ಭಾವಿಸಿದ. ಆದರೆ ಪೆತ್ರಾ ಕೊತೆಸ್ ಅದು ಹೆಂಗಸಿಗೆ ಸಂಬಂಧಿಸಿದ ವಿಷಯವೆಂದು ಅವನಿಗೆ ಮನವರಿಕೆ ಮಾಡಿದಳು. ಆದ್ದರಿಂದ ಅವನು ಯಾವ ನಿರ್ಧಾರನ್ನೂ ತೆಗೆದುಕೊಳ್ಳದೆ ಹೊಯ್ದಾಡುತ್ತ, ಕೂಡಿ ಹಾಕುವುದರಿಂದ ಮಗಳ ತೊಂದರೆಗಳು ಕೊನೆಯಾಗುತ್ತವೆ ಎಂದು ನಂಬಿದ.

ಮೆಮೆ ಯಾವ ಬಗೆಯ ಸಂಕಟದ ಸೂಚನೆಯನ್ನೂ ಕೊಡಲಿಲ್ಲ. ಅದಕ್ಕೆ ಪ್ರತಿಯಾಗಿ ಪಕ್ಕದ ರೂಮಿನಿಂದ ಉರ್ಸುಲಾಗೆ ಅವಳ ನಿದ್ದೆಯಲ್ಲಿ ಶಾಂತಿಪೂರ್ಣ ಲಯ, ಕೆಲಸಗಳಲ್ಲಿ ಒಂದು ಬಗೆಯ ಪ್ರಶಾಂತತೆ, ಊಟದಲ್ಲಿನ ಕ್ರಮ ಮತ್ತು ಆರೋಗ್ಯವಂತ ಅರಗುವಿಕೆ ಗೋಚರಿಸುತ್ತಿತ್ತು. ಸುಮಾರು ಎರಡು ತಿಂಗಳ ಶಿಕ್ಷೆಯ ನಂತರ ಅವಳನ್ನು ಕಾಡಿಸಿದ ಸಂಗತಿಯೆಂದರೆ ಮೆಮೆ ಎಲ್ಲರಂತೆ ಬೆಳಿಗ್ಗೆ ಸ್ನಾನ ಮಾಡುತ್ತಿರಲಿಲ್ಲ. ಆದರೆ ಸಂಜೆ ಏಳಕ್ಕೆ ಮಾಡುತ್ತಿದ್ದಳು. ಅವಳಿಗೆ ಚೇಳುಗಳ ಬಗ್ಗೆ ಎಚ್ಚರಿಸಬೇಕು ಎಂದು ಒಂದು ಸಲ ಯೋಚಿಸಿದಳು. ಅವಳನ್ನು ತಾನು ತೊರೆದು ಬಿಟ್ಟಿದ್ದೇನೆ ಎನ್ನಿಸುವಷ್ಟು ದೂರವಾದ ತಾನು, ಮುತ್ತಜ್ಜಿಯಾದ ತನ್ನ ಅಸಂಬದ್ಧ ಮಾತುಗಳಿಂದ ಅವಳಿಗೆ ಭಂಗ ತರಬಾರದು ಎಂದುಕೊಂಡಳು. ಸಾಯಂಕಾಲ ಹಳದಿ ಚಿಟ್ಟೆಗಳು ಬರುತ್ತಿದ್ದವು. ಪ್ರತಿ ದಿನ ಮೆಮೆ ಸ್ನಾನ ಮಾಡಿ ಬಂದಾಗ ಫೆರ್ನಾಂಡ ಕ್ರಿಮಿನಾಶಕದಿಂದ ಅವುಗಳನ್ನು ಸಾಯಿಸಲು ಶ್ರಮಿಸುತ್ತಿದ್ದಳು. ಅವಳು, “ಇದು ವಿಪರೀತವಾಯ್ತು. ರಾತ್ರಿ ಹೊತ್ತು ಚಿಟ್ಟೆಗಳು ಬಂದರೆ ಕೆಟ್ಟದ್ದನ್ನು ತರುತ್ವೆ ಅಂತ ಹೇಳ್ತಾರೆ” ಎಂದಳು. ಒಂದು ರಾತ್ರಿ ಮೆಮೆ ಬಾತ್ ರೂಮಿನಲ್ಲಿದ್ದಾಗ ಫೆರ್ನಾಂಡ ಅಕಸ್ಮಾತ್ತಾಗಿ ಅವಳ ಬೆಡ್‌ರೂಮಿಗೆ ಹೋದಳು. ಅಲ್ಲಿ ಅವಳಿಗೆ ಉಸಿರಾಡಲು ಕಷ್ಟವಾಗುವಷ್ಟು ಚಿಟ್ಟೆಗಳಿದ್ದವು. ಅವಳು ಕೈಗೆ ಸಿಕ್ಕಿದ ಬಟ್ಟೆ ತೆಗೆದುಕೊಂಡು ಅವುಗಳನ್ನು ಓಡಿಸಲು ನೋಡಿದಳು. ಮಗಳ ಸಂಜೆಯ ಸ್ನಾನ ಹಾಗೂ ನೆಲದ ಮೇಲೆ ಹರಡಿ ಬಿದ್ದ ಸಾಸುವೆ ಪಟ್ಟನ್ನು ಒಂದಕ್ಕೊಂದು ಹೊಂದಿಸುತ್ತಿದ್ದಂತೆ ಅವಳ ಹೃದಯ ಮಂಜುಗಟ್ಟಿತ್ತು. ಅವಳು ಮೊದಲ ಸಲ ಮಾಡಿದ ಹಾಗೆ ಅವಕಾಶಕ್ಕೆ ಕಾಯಲಿಲ್ಲ. ಮಾರನೆ ದಿನ ಹೊಸ ಮೇಯರನ್ನು ಊಟಕ್ಕೆ ಕರೆದಳು. ಅವಳ ಹಾಗೆ ಅವನು ಎತ್ತರದ ಪ್ರದೇಶದಿಂದ ಬಂದವನಾಗಿದ್ದ. ಅವಳು ಕೋಳಿಗಳು ಕಳುವಾಗುತ್ತಿವೆ ಎಂದು ತಿಳಿದಿದ್ದರಿಂದ ಹಿಂಭಾಗದಲ್ಲಿ ಒಬ್ಬ ಗಾರ್ಡ್‌ನನ್ನು ನಿಲ್ಲಿಸುವಂತೆ ಕೇಳಿದಳು. ಆ ರಾತ್ರಿ ಮಾರಿಷಿಯೋ ಬಾಬಿಲೋನಿಯಾ ಬಾತ್ ರೂಮಿನ ಹೆಂಚುಗಳನ್ನು ತೆಗೆದು ಮೆಮೆ ಕಾಯುತ್ತಿದ್ದ ಬಾತ್‌ರೂಮಿಗೆ ಹೋಗಲು ಹವಣಿಸುತ್ತಿದ್ದಾಗ ಗಾರ್ಡ್ ಅವನನ್ನು ಹೊಡೆದುರುಳಿಸಿದ. ಮೆಮೆ ಕಳೆದ ಕೆಲವು ತಿಂಗಳುಗಳು ಪ್ರತಿ ರಾತ್ರಿ ಮಾಡಿದಂತೆ ಬೆತ್ತಲೆಯಾಗಿ, ಪ್ರೀತಿಯಿಂದ ನಲುಗುತ್ತ, ಚೇಳುಗಳು ಮತ್ತು ಚಿಟ್ಟೆಗಳ ನಡುವೆ ನಿಂತಿದ್ದಳು. ಅವನ ಬೆನ್ನ ಹುರಿಯಲ್ಲಿ ಹೊಕ್ಕ ಗುಂಡು ಜೀವನ ಪರಂತ ಹಾಸಿಗೆಯಲ್ಲೆ ಇರುವಂತೆ ಮಾಡಿತು. ಅವನು ವಯಸ್ಸಾದ ಮೇಲೆ ಏಕಾಂತದಲ್ಲಿ ಗೋಳಿಡದೆ, ವಿರೋಧಿಸದೆ, ವಿಶ್ವಾಸಘಾತ ಮಾಡದೆ, ನೆನಪುಗಳು ಮತ್ತು ಒಂದು ಗಳಿಗೆಯೂ ಶಾಂತವಾಗಿರಲು ಬಿಡದ ಹಳದಿ ಚಿಟ್ಟೆಗಳ ಚಿತ್ರಹಿಂಸೆಗೆ ಒಳಗಾಗಿ ಮತ್ತು ಕೋಳಿ ಕದ್ದವನೆಂದು ಬಹಿಷ್ಕಾರ ಹಾಕಲ್ಪಟ್ಟು ಸತ್ತ.

೧೫

ಮಕೋಂದೋಗೆ ಮಾರಣಾಂತಿಕ ಹೊಡೆತ ಬೀಳುವಂಥ ಘಟನೆಗಳು ಮೆಮೆ ಬ್ಯುಂದಿಯಾಳ ಮಗನನ್ನು ಮನೆಗೆ ತಂದಾಗ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಆಗ ಸಾರ್ವಜನಿಕ ಸಂದರ್ಭ ಅನಿಶ್ಚಿತವಾಗಿದ್ದರಿಂದ ಯಾರೂ ವೈಯಕ್ತಿಕ ಹಗರಣವನ್ನು ಉತ್ಸಾಹದಿಂದ ಪರಿಗಣಿಸುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಮಗುವನ್ನು ಅದು ಇಲ್ಲವೇ ಇಲ್ಲ ಎನ್ನುವಂತೆ ಬಚ್ಚಿಡುವುದಕ್ಕೆ ಫೆರ್ನಾಂಡಳಿಗೆ ಆ ವಾತಾವರಣ ಸಹಕಾರಿಯಾಯಿತು. ಅವಳು ಅವನನ್ನು ಸ್ವೀಕರಿಸಲೇ ಬೇಕಾಗಿತ್ತು. ಏಕೆಂದರೆ ಅವನನ್ನು ಕರೆದುಕೊಂಡು ಬಂದ ಸಂದರ್ಭದ ಕಾರಣ ನಿರಾಕರಿಸುವಂತಿರಲಿಲ್ಲ. ಅವಳ ದೃಢ ನಿಶ್ಚಯದ ವಿರುದ್ಧ ಇಡೀ ಜೀವನ ಪರ್‍ಯಂತ ಅವನನ್ನು ಸಹಿಸಿಕೊಳ್ಳಬೇಕಾಯಿತು. ಏಕೆಂದರೆ ಅವಳ ಒಳನಿರ್ಧಾರದಂತೆ ಅವನನ್ನು ಬಾತ್‌ರೂಮಿನ ಕೊಳದಲ್ಲಿ ಮುಳುಗಿಸುವ ಧೈರ್ಯವಾಗಲಿಲ್ಲ. ಅವಳು ಅವನನ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಹಳೆಯ ವರ್ಕ್‌ಶಾಪ್‌ನಲ್ಲಿ ಬೀಗ ಹಾಕಿ ಇಟ್ಟಳು. ಅವನು ತೇಲುತ್ತಿದ್ದ ಬುಟ್ಟಿದಲ್ಲಿ ಸಿಕ್ಕನೆಂದು ಸಾಂತ ದೆಲಾ ಪಿಯದಾದ್‌ಗೆ ಮನವರಿಕೆ ಮಾಡಿದ್ದಳು. ಅವನ ಮೂಲವನ್ನು ಅರಿಯದೆ ಉರ್ಸುಲಾ ಸಾಯಬೇಕಿತ್ತು. ಫೆರ್ನಾಂಡ ಮಗುವಿಗೆ ಹಾಲು ಕೊಡುವಾಗ ಒಮ್ಮೆ ವರ್ಕ್‌ಶಾಪಿಗೆ ಹೋದ ಪುಟ್ಟ ಅಮರಾಂತ ಉರ್ಸುಲಾ ಕೂಡ ಮಗು ಬುಟ್ಟಿಯಲ್ಲಿ ತೇಲುತ್ತಿತ್ತು ಎಂಬ ಹೇಳಿಕೆಯನ್ನು ನಂಬಿದಳು. ಅವ್ರೇಲಿಯಾನೋ ಸೆಗುಂದೋ ಮೆಮೆಳ ದುರಂತವನ್ನು ವಿವೇಚನೆಯಿಲ್ಲದೆ ನಿಭಾಯಿಸಿದ್ದರಿಂದ ಹೆಂಡತಿಯ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದ. ಅವನಿಗೆ ಮೊಮ್ಮಗನನ್ನು ಕರೆದುಕೊಂಡು ಬಂದು ಮೂರು ವರ್ಷಗಳ ತಕ ಅವನಿರುವುದೇ ಗೊತ್ತಿರಲಿಲ್ಲ. ಒಂದು ದಿನ ಮಗು ಫೆರ್ನಾಂಡಳ ಸಣ್ಣ ತಪ್ಪಿನಿಂದ ಬಂಧನದಿಂದ ತಪ್ಪಿಸಿಕೊಂಡು ಕೆಲವು ಕ್ಷಣ ಅಂಗಳದಲ್ಲಿ ಬೆತ್ತಲಾಗಿ, ಕೂದಲು ಕೆದರಿಕೊಂಡು, ಜಾಲಿ ಮರದ ಕೊಂಬಿನಂತಿದ್ದ ಭಾರಿ ಮರ್ಮಾಂಗವಿದ್ದ ಅವನು, ಮಾನವ ಮಗುವಲ್ಲ ಅದರೆ ವಿಶ್ವಕೋಶದಲ್ಲಿ ವಿವರಿಸುವ ನರಭಕ್ಷಕನಂತೆ ಅವನಿಗೆ ಕಾಣಿಸಿಕೊಂಡ.

ಫೆರ್ನಾಂಡ ಕ್ರೂರ ವಿಧಿ ಹೂಡಿದ ತಂತ್ರವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಆ ಮಗು ತನ್ನ ಮನೆಯಿಂದ ಎಂದೆಂದಿಗೂ ಒದ್ದೋಡಿಸಿದ ನಾಚಿಕೆಯನ್ನು ಮತ್ತೆ ವಾಪಸು ತಂದ ಹಾಗೆ ಅವಳಿಗನ್ನಿಸಿತ್ತು. ಬೆನ್ನು ಹುರಿ ಚಿಂದಿಯಾದ ಮಾರಿಷಿಯೋ ಬಾಬಿಲೋನಿಯಾನನ್ನು ಎತ್ತಿಕೊಂಡು ಹೋದಾಗ, ಫೆರ್ನಾಂಡ, ಎಲ್ಲ ಕುರುಹುಗಳನ್ನು ಅಳಿಸಿ ಹಾಕಲು ಅತ್ಯಂತ ಸೂಕ್ಷ್ಮ ವಿವರಗಳನ್ನು ಯೋಜಿಸಿದ್ದಳು. ಗಂಡನಿಗೆ ತಿಳಿಸದೆ, ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿ, ಸಣ್ಣ ಸೂಟ್‌ಕೇಸಿನಲ್ಲಿ ಮಗಳಿಗೆ ಮೂರು ಜೊತೆ ಬಟ್ಟೆಗಳನ್ನು ಹಾಕಿದಳು ಮತ್ತು ರೈಲಿನಲ್ಲಿ ಬರುವ ಅರ್ಧ ಗಂಟೆ ಮುಂಚೆ ಅವಳನ್ನು ಕರೆದುಕೊಂಡು ಬರಲು ಅವಳ ಬೆಡ್‌ರೂಮಿಗೆ ಹೋದಳು.

ಅವಳು, “ನಡಿ ಹೋಗೋಣ ರೆನೇಟಾ” ಎಂದಳು.

ಅವಳು ಯಾವ ವಿವರಣೆಯನ್ನೂ ಕೊಡಲಿಲ್ಲ. ಮೆಮೆ ಮಟ್ಟಿಗೆ ಅವಳು ಯಾವುದನ್ನೂ ನಿರೀಕ್ಷಿಸಿರಲಿಲ್ಲ, ಅವಳಿಗೆ ಬೇಕಾಗಿರಲಿಲ್ಲ. ಅವಳಿಗೆ ತಾವು ಎಲ್ಲಿಗೆ ಹೋಗುತ್ತಿದ್ದೇವೆಂದು ಗೊತ್ತಿರಲಿಲ್ಲ. ಅಷ್ಟೇ ಅಲ್ಲದೆ, ಅವಳನ್ನು ವಧಾಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರೂ ಯಾವ ವ್ಯತ್ಯಾಸವೂ ಇರುತ್ತಿರಲಿಲ್ಲ. ಅವಳಿಗೆ ಮನೆಯ ಹಿಂಬದಿಯಲ್ಲಿ ಗುಂಡಿನ ಶಬ್ದ ಕೇಳಿದ ನಂತರ ಮತ್ತು ಅದರ ಜೊತೆಗೇ ಮಾರಿಷಿಯೋ ಬಾಬಿಲೋನಿಯಾನ ನೋವಿನ ಕೂಗು ಕೇಳಿದ ಸಮಯದಿಂದ ಅವಳು ಮಾತಾಡಿರಲಿಲ್ಲ. ಅಲ್ಲದೆ ಇಡೀ ಜೀವನ ಪರ್‍ಯಂತ ಮತ್ತೆ ಮಾತನಾಡಲಿಲ್ಲ. ಅವಳ ತಾಯಿ ಬೆಡ್‌ರೂಮಿನಿಂದ ಹೊರಬರಲು ಹೇಳಿದಾಗ ಅವಳು ತಲೆ ಬಾಚಿಕೊಳ್ಳಲಿಲ್ಲ. ಮತ್ತು ಆಗಲೂ ಹಳದಿ ಚಿಟ್ಟೆಗಳು ಜೊತೆಗೆ ಬರುತ್ತಿವೆ ಎನ್ನುವುದನ್ನೂ ಗಮನಿಸದೆ ನಿದ್ದೆಯಲ್ಲಿ ನಡೆಯುವಂತೆ ಬಂದು ರೈಲಿನಲ್ಲಿ ಹತ್ತಿದಳು. ಅವಳ ಮೌನ ಗಟ್ಟಿ ಮನಸ್ಸಿನ ನಿರ್ಧಾರವೋ ಅಥವಾ ದುರಂತದ ಆಘಾತದಿಂದ ಮೂಕಳಾದಳೋ ಎಂದು ಫೆರ್ನಾಂಡ ಕಂಡು ಹಿಡಿಯಲಿಲ್ಲ ಅಥವಾ ಅಂಥ ಪ್ರಯತ್ನವನ್ನೂ ಮಾಡಲಿಲ್ಲ. ಹಿಂದೆ ಮುದ ಕೊಡುತ್ತಿದ್ದ ಪ್ರದೇಶದಲ್ಲಿನ ಪ್ರಯಾಣವನ್ನು ಗಮನಿಸಲೇ ಇಲ್ಲ. ಅವಳು ರೈಲ್ವೆ ಹಳಿಯ ಎರಡೂ ಪಕ್ಕದಲ್ಲಿದ್ದ ಕೊನೆಯಿಲ್ಲದೆ ಹಬ್ಬಿದ ಬಾಳೆ ತೋಟವನ್ನು ನೋಡಲಿಲ್ಲ. ದೂರ ಪ್ರದೇಶಗಳಿಂದ ಬಂದವರ ಬಿಳಿಮನೆಗಳನ್ನು ಅಥವಾ ಧೂಳು ಮತ್ತು ಬಿಸಿಲಿನಿಂದ ಒಣಗಿದ ಅವರ ಗಾರ್ಡ್‌ನ್ನುಗಳನ್ನು ನೋಡಲಿಲ್ಲ. ಅಥವ ತುಂಡು ಚಡ್ಡಿ ಹಾಗೂ ಪಟ್ಟಿಗಳ ಶರಟು ತೊಟ್ಟ ಹೆಂಗಸರು ಟೆರೇಸಿನ ಮೇಲೆ ಇಸ್ಪೀಟು ಆಡುತ್ತ ಕುಳಿತಿದ್ದನ್ನು ನೋಡಲಿಲ್ಲ. ಮಣ್ಣಿನ ರಸ್ತೆಗಳಲ್ಲಿ ಬಾಳೆಗೊನೆಗಳು ತುಂಬಿದ ಎತ್ತಿನ ಗಾಡಿಗಳನ್ನು ನೋಡಲಿಲ್ಲ. ತಿಳಿನೀರಿನ ನದಿಗಳಲ್ಲಿ ಡೈವ್ ಹೊಡೆಯುತ್ತ, ತಮ್ಮ ಅದ್ಭುತ ಮೊಲೆಗಳು ರೈಲಿನಲ್ಲಿ ಕುಳಿತ ಪ್ರಯಾಣಿಕರಿಗೆ ದಕ್ಕುವುದಿಲ್ಲ ಎನ್ನಿಸುವಂತೆ ಮಾಡುತ್ತಿದ್ದ ಹುಡುಗಿಯರನ್ನು ನೋಡಲಿಲ್ಲ. ಅಥವಾ ಜೀರ್ಣವಾಗಿದ್ದ ಗುಡಿಸಲುಗಳ ಬಳಿ ಮಾರಿಷಿಯೋ ಬಾಬಿಲೋನಿಯಾನನ ಹಳದಿ ಚಿಟ್ಟೆಗಳು ಹಾರಾಡುತ್ತಿರುವ ಕಡೆ ಕೆಲಸಗಾರರು ಒಟ್ಟಾಗಿದ್ದದ್ದನ್ನು, ಬಾಗಿಲುಗಳ ಹತ್ತಿರ ಕಕ್ಕಸ್ಸಿಗೆ ಕುಳಿತ ಮಕ್ಕಳನ್ನು ಮತ್ತು ರೈಲಿನ ಕಡೆ ಅವಮಾನಕರವಾಗಿ ಕೂಗುತ್ತಿದ್ದ ಗರ್ಭಿಣಿ ಹೆಂಗಸರನ್ನು ನೋಡಲಿಲ್ಲ. ಸ್ಕೂಲಿನಿಂದ ಬರುವಾಗ ಆ ಚಲಿಸುವ ನೋಟಗಳಿಂದ ಸಂಭ್ರಮಗೊಳ್ಳುತ್ತಿದ್ದ ಮೆಮೆಳ ಹೃದಯವನ್ನು ಕಿಂಚಿತ್ ಅಲ್ಲಾಡಿಸದೆ ಹೋದವು. ಅವಳು ಕಿಟಕಿಯಿಂದ ಆಚೆ ನೋಡಲಿಲ್ಲ, ಕುದಿಯುವ ಜೌಗು ಪ್ರದೇಶ ಕೊನೆಯಾದಾಗಲೂ ಕೂಡ. ಅನಂತರ ರೈಲಿನಿಂದ ಬಿದ್ದ ಇದ್ದಲಿನಿಂದ ಮಾಡಿದ ಸ್ಪೇನ್‌ನ ಯುದ್ಧದ ಹಡಗುಗಳ ಮಾದರಿಗಳನ್ನು ಇರಿಸಿದ್ದ ಹಾಗೂ ಗಸಗಸೆ ಗಿಡಗಳ ವಿಸ್ತಾರದ ಮುಖಾಂತರ ಸಾಗಿದ ಮೇಲೆ ಸಮುದ್ರದ ಪಕ್ಕದಲ್ಲಿ ತಿಳಿಗಾಳಿ, ಕೊಳಕು ನೀರು ಇರುವ ಕಡೆ, ಸುಮಾರು ಒಂದು ಶತಮಾನದ ಮೊದಲು ಹೊಸೆ ಅರ್ಕಾದಿಯೋಗೆ ಭ್ರಮನಿರಸನವಾದ ಸ್ಥಳಕ್ಕೆ ಬಂತು.

ಮಧ್ಯಾಹ್ನ ಐದು ಗಂಟೆಗೆ, ಅವರು ಜೌಗು ಪ್ರದೇಶದ ಕೊನೆಯ ಸ್ಟೇಷನ್‌ಗೆ ಬಂದಾಗ ಫೆರ್ನಾಂಡಳ ಮಾತಿನಂತೆ ರೈಲಿನಿಂದ ಹೊರಗೆ ಬಂದಳು. ಅವರು ಆಸ್ತಮಾ ತಗುಲಿದ್ದ ಕುದುರೆ ಎಳೆಯುತ್ತಿದ್ದ ದೊಡ್ಡ ಬ್ಯಾಟ್‌ನಂತಿದ್ದ ಸಣ್ಣ ಗಾಡಿಯನ್ನು ಹತ್ತಿದರು ಮತ್ತು ಜನರಿಲ್ಲದ, ಕೊನೆಯಿಲ್ಲದ ರಸ್ತೆಗಳಲ್ಲಿ ಸಾಗುವಾಗ ಫೆರ್ನಾಂಡ ಚಿಕ್ಕವಳಾಗಿದ್ದಾಗ ಮಧ್ಯಾಹ್ನದ ಮಲಗುವ ಸಮಯದಲ್ಲಿ ಕೇಳಿಸಿಕೊಳ್ಳುತ್ತಿದ್ದ ಪಿಯಾನೋ ಪಾಠದ ಧ್ವನಿ ಕೇಳಿಸಿತು. ನದಿಯಲ್ಲಿ ಅವರೊಂದು ದೋಣಿಯನ್ನು ಹತ್ತಿದರು. ಅದರ ಮರದ ಚಕ್ರ ದೊಡ್ಡದಾಗಿ ಶಬ್ದ ಮಾಡುತ್ತಿತ್ತು ಮತ್ತು ತುಕ್ಕು ಹಿಡಿದ ಅದರ ಲೋಹದ ಪ್ಲೇಟುಗಳು ಓವನ್‌ನ ಮೂತಿಯ ಹಾಗೆ ಅದುರುತ್ತಿತ್ತು. ಮೆಮೆ ತನ್ನ ಕೋಣೆಯಲ್ಲಿ ಎಲ್ಲ ಮುಚ್ಚಿ ಕುಳಿತಳು. ದಿನಕ್ಕೆ ಎರಡು ಸಲ ಫೆರ್ನಾಂಡ ಅವಳ ಹಾಸಿಗೆಯ ಬಳಿ ಊಟದ ತಟ್ಟೆ ಇಡುತ್ತಿದ್ದಳು. ಮತ್ತು ದಿನಕ್ಕೆ ಎರಡು ಸಲ ಅದನ್ನು ಇದ್ದ ಹಾಗೆಯೇ ತೆಗೆದುಕೊಂಡು ಹೋಗುತ್ತಿದ್ದಳು. ಏಕೆಂದರೆ ಮೆಮೆ ಹಸಿವೆಯಿಂದ ಸಾಯಬೇಕೆಂದು ಮಾಡಿದ ನಿರ್ಧಾರದಿಂದಲ್ಲ, ಆದರೆ ಆಹಾರದ ವಾಸನೆಯೂ ಕೂಡ ಅವಳಿಗೆ ಬೇಡವಾಗಿತ್ತಲ್ಲದೆ, ನೀರನ್ನೂ ನಿರಾಕರಿಸಿದ್ದಳು. ಒಂದು ವರ್ಷದ ನಂತರ ಅವರು ಮಗುವನ್ನು ತರುವ ತನಕ, ತನ್ನ ಗರ್ಭಧಾರಣಾ ಶಕ್ತಿ ಸಾಸುವೆ ಪುಟ್ಟದ ಆವಿಯನ್ನು ಮೀರುವುದೆಂದು ಫೆರ್ನಾಂಡಳಿಗೆ ಗೊತ್ತಾಗದಿರುವಂತೆ, ಅವಳಿಗೂ ಗೊತ್ತಿರಲಿಲ್ಲ. ಉಸಿರುಗಟ್ಟಿಸುವ ಕೋಣೆಯಲ್ಲಿ ಮಣ್ಣನ್ನು ಎತ್ತಲು ತಿರುಗುವ ಚಕ್ರದ ಲೋಹದ ಭಾಗಗಳ ಅದುರುವಿಕೆಯ ಶಬ್ದದಿಂದ ಮೆಮೆಗೆ ಉರುಳುವ ದಿನಗಳ ಅರಿವು ತಪ್ಪಿ ಹೋಯಿತು. ತಿರುಗುವ ಫ್ಯಾನಿಗೆ ಕೊನೆಯ ಹಳದಿ ಚಿಟ್ಟೆ ಸತ್ತು ತುಂಬ ದಿನಗಳಾದ್ದರಿಂದ ಮಾರಿಷಿಯೋ ಬಾಬಿಲೋನಿಯಾ ಸತ್ತು ಹೋಗಿದ್ದಾನೆ ಎಂಬ ಸತ್ಯವನ್ನು ಅವಳು ಒಪ್ಪಿಕೊಂಡಳು. ಅದು ಅನಿವಾರ್ಯವೆಂದು ಅವಳು ಸೋಲನ್ನು ಒಪ್ಪಿಕೊಳ್ಳಲಿಲ್ಲ. ಹಿಂದೆ ಅವ್ರೇಲಿಯಾನೋ ಸೆಗುಂದೋ ಭೂಮಿಯ ಮೇಲಿನ ಅತ್ಯಂತ ಸುಂದರವಾದ ಹೆಣ್ಣನ್ನು ಹುಡುಕುತ್ತ ಅಲೆದು ದಾರಿ ತಪ್ಪಿದ ಮತ್ತು ಭ್ರಮೆಗೊಳಿಸಿದ ಪ್ರದೇಶವನ್ನು ಅವಳು ಕಷ್ಟಪಟ್ಟು ದಾಟುವಾಗ ಅವನ ಬಗ್ಗೆಯೇ ಯೋಚಿಸುತ್ತಿದ್ದಳು ಮತ್ತು ಇಂಡಿಯನ್‌ರ ಜಾಡು ಹಿಡಿದು ಪರ್ವತಗಳ ಪಕ್ಕದಲ್ಲಿ ಹೋಗಿ ಮತ್ತು ಮೂವತ್ತೆರಡು ಚರ್ಚಿನಿಂದ ಕಲ್ಲುಗಂಬದ ಮೇಲಿನ ತಾಮ್ರದ ಗಂಟೆಗಳಿಂದ ಶವ ಸಂಸ್ಕಾರದ ಗಂಟೆ ಶಬ್ದ ಮೊಳಗುವ ಮಂಕು ಬಡಿದ ಊರನ್ನು ಪ್ರವೇಶಿಸಿದರು. ಆ ರಾತ್ರಿ ಅವರು, ಖಾಲಿ ಇದ್ದ ವಸಾಹತು ಕಾಲದ ಬಂಗಲೆಯಲ್ಲಿ ಬೆಳೆದ ಬಳ್ಳಿಗಳ ಮೇಲೆ ಫೆರ್ನಾಂಡ ಹಲಗೆಗಳನ್ನೂ ಇಟ್ಟು, ಕಿಟಕಿಗಳಿದ್ದ ಪರದೆಗಳನ್ನು ಹರಿದು ಸುತ್ತಿಕೊಂಡು ಮಲಗಿದರಾದರೂ ಅವು ಮೈ ಹೊರಳಿದರೆ ತುಂಡಾಗುತ್ತಿದ್ದವು. ನಿದ್ದೆ ಬಾರದೆ ಗಾಬರಿಯಲ್ಲಿ ಕಪ್ಪು ಬಟ್ಟೆ ತೊಟ್ಟವನೊಬ್ಬ, ತಾನು ತಿಳಿದಂತೆ ಅವನು ಬಹಳ ಹಿಂದೆ ಒಂದು ಸಲ, ಕ್ರಿಸ್‌ಮಸ್‌ಗೆ ಮುಂಚೆ ಮನೆಗೆ ಸೀಸದ ಪೆಟ್ಟಿಗೆಯನ್ನು ತಂದುಕೊಟ್ಟಿದ್ದ ಎಂದು ಮೆಮೆಗೆ ನೆನಪಾಯಿತು. ಮಾರನೆ ದಿನ, ಪ್ರಾರ್ಥನೆ ಮುಗಿದ ಮೇಲೆ, ಫೆರ್ನಾಂಡ ಅವಳನ್ನು ಒಂದು ಮಬ್ಬಾದ ಬಿಲ್ಡಿಂಗ್‌ಗೆ ಕರೆದುಕೊಂಡು ಹೋದಳು. ತನ್ನ ತಾಯಿ ಹೇಳುತ್ತಿದ್ದಂತೆ ಅದು ಅವನು ರಾಣಿಯಾಗಬೇಕೆಂದು ಬೆಳೆಸಿದ ಕಾನ್‌ವೆಂಟ್ ಇರಬೇಕೆಂದು ಮೆಮೆ ಗುರುತಿಸಿದಳು ಮತ್ತು ತಾವು ಪ್ರಯಾಣದ ಅಂತ್ಯಕ್ಕೆ ಬಂದಿದ್ದೇವೆಂದು ತಿಳಿದಳು. ಪಕ್ಕದಲ್ಲಿದ್ದ ಆಫೀಸಿನಲ್ಲಿ ಫೆರ್ನಾಂಡ ಯಾರ ಜೊತೆಗೋ ಮಾತನಾಡುತ್ತಿದ್ದಾಗ ಮೆಮೆ ವಸಾಹತು ಕಾಲದ, ಸಣ್ಣನೆ ಕಪ್ಪು ಹೂಗಳಿದ್ದ ಮತ್ತು ಚಳಿಗೆ ಊದಿಕೊಂಡ ಎತ್ತರದ ಶೂ ತೊಟ್ಟು ಆರ್ಚ್‌ಬಿಷಷ್ ಅವರ ತೈಲ ಚಿತ್ರವಿದ್ದ ನಡುಮನೆಯಲ್ಲೇ ಇದ್ದಳು. ಅವಳು ನಡುಮನೆಯ ಮಧ್ಯದಲ್ಲಿ ನಿಂತು ಧೂಳು ಹಿಡಿದ ಕಿಟಕಿಯ ಗಾಜಿನಿಂದ ಹಳದಿ ಬೆಳಕಿನ ಕಿರಣಗಳ ನಡುವೆ ಮಾರಿಷಿಯೋ ಬಾಬಿಲೋನಿಯಾನ ಬಗ್ಗೆ ಯೋಚಿಸುತ್ತಿದ್ದಳು. ಆಗ ಹೊಸಬಳಾದ ಸುಂದರಿಯೊಬ್ಬಳು ಆಫೀಸಿನಿಂದ ಪೆಟ್ಟಿಗೆ ತೆಗೆದುಕೊಂಡು ಬಂದು ಬದಲಾಯಿಸಲು ಬಟ್ಟೆಗಳನ್ನು ಕೊಟ್ಟಳು ಅವಳು ಮೆಮೆಳ ಕೈ ಹಿಡಿದು, “ಬನ್ನಿ, ರೆನೇಟಾ” ಎಂದಳು.

ರೆನೇಟಾ ಅವಳ ಕೈ ಹಿಡಿದುಕೊಂಡು ಹೊರಟಳು. ಫೆರ್ನಾಂಡ ಅವಳನ್ನು ಕೊನೆಯ ಬಾರಿ ನೋಡಿದಾಗ ಅವಳು ಹೊಸಬಳ ಜೊತೆ ನಡೆಯಲು ಪ್ರಯತ್ನಿಸುತ್ತ ಕಬ್ಬಿಣದ ಗೇಟನ್ನು ಮುಚ್ಚಿ ಮುಂದಕ್ಕೆ ಹೋದಳು. ಅವಳಿನ್ನೂ ಮಾರಿಷಿಯೋ ಬಾಬಿಲೋನಿಯಾನ ಬಗ್ಗೆ, ಅವನ ಗ್ರೀಸಿನ ವಾಸನೆ, ಅವನ ಚಿಟ್ಟೆಗಳ ಬಗ್ಗೆ ಯೋಚಿಸುತ್ತಿದ್ದಳು ಮತ್ತು ಅವಳಿಗೆ ವಯಸ್ಸಾಗಿ, ಹೆಸರು ಬದಲಾಯಿಸಿ, ತಲೆ ಬೋಳಿಸಿದ ನಂತರ, ಅವಳು ಆ ಚಳಿಗಾಲದ ಬೆಳಿಗ್ಗೆ, ಯಾವ ಮಾತನ್ನೂ ಆಡದೇ ಇದ್ದು ಮಂಕಾದ ಕ್ರಾರೋ ಆಸ್ಪತ್ರೆಯಲ್ಲಿ ಸಾಯುವ ತನಕ ಅವನನ್ನು ಕುರಿತು ಯೋಚಿಸುತ್ತಲೇ ಇದ್ದಳು.

ಫೆರ್ನಾಂಡ ಶಸ್ತ್ರಧಾರಿ ಪೋಲೀಸರ ರಕ್ಷಣೆಯಲ್ಲಿ ಮಕೋಂದೋಗೆ ಹಿಂತಿರುಗಿದಳು. ಪ್ರಯಾಣ ಮಾಡುತ್ತಿರುವಾಗ ಪ್ರಯಾಣಿಕರ ಆತಂಕವನ್ನು ಉದ್ದಕ್ಕೂ ಊರುಗಳಲ್ಲಿ ಮಿಲಿಟರಿಯವರ ಸಿದ್ಧತೆಯನ್ನು ಮತ್ತು ಯಾವುದೋ ತೀರ ಗಂಭೀರವಾದದ್ದೊಂದು ಖಚಿತವಾಗಿ ಜರುಗಲಿದೆ ಎನ್ನುವಂಥ ವಾತಾವರಣವಿದ್ದದ್ದನ್ನು ನೋಡಿದಳು. ಆದರೆ ಮಕೋಂದೋಗೆ ಹೋಗುವ ತನಕ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲಿ ಅವಳಿಗೆ ಹೊಸೆ ಅರ್ಕಾದಿಯೋ ಸೆಗುಂದೋ ಬಾಳೆ ಕಂಪನಿಯ ಕಾರ್ಮಿಕರನ್ನು ಮುಷ್ಕರ ಹೂಡಲು ಪ್ರಚೋದಿಸುತ್ತಿದ್ದಾನೆಂದು ಹೇಳಿದರು. ಎರಡು ವಾರಗಳ ನಂತರ ಮುಷ್ಕರ ಪ್ರಾರಂಭವಾಯಿತು. ಮತ್ತು ಅದರಿಂದ ನಿರೀಕ್ಷಿಸಿದ್ದ ರೀತಿಯಲ್ಲಿ ಪರಿಣಾಮ ಉಂಟಾಗಲಿಲ್ಲ. ಕಾರ್ಮಿಕರು ಭಾನುವಾರದಂದು ಬಾಳೆ ಗೊನೆಗಳನ್ನು ಕತ್ತರಿಸುವ ಮತ್ತು ಗಾಡಿಗೆ ತುಂಬುವುದನ್ನು ಮಾಡಬೇಕಾಗಿಲ್ಲವೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು ಮತ್ತು ಫಾದರ್ ಆಂಟೋನಿಯೋ ಇಸೆಬಲ್ ಅದರ ಪರವಾಗಿ ಮಧ್ಯೆ ಪ್ರವೇಶಿಸಿದಾಗ ಆ ನಿಲುವು ನ್ಯಾಯ ಸಮ್ಮತವಾಗಿ ತೋರಿತು. ಏಕೆಂದರೆ ಅದು ದೈವ ನಿಯಮದಂತಿದೆ ಎಂದು ಅವನ ಗ್ರಹಿಕೆಯಾಗಿತ್ತು. ಆ ವಿಜಯ ಮತ್ತು ನಂತರದ ತಿಂಗಳುಗಳಲ್ಲಿ ತೆಗೆದುಕೊಂಡ ಇತರೆ ಕ್ರಮಗಳಿಂದ ಅನಾಮಿಕನಾಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಬೆಳಕಿಗೆ ಬಂದ. ಏಕೆಂದರೆ ಅವನು ಫ್ರೆಂಚ್ ಸೂಳೆಯರನ್ನು ಊರಿನಲ್ಲಿ ತುಂಬಲು ಮಾತ್ರ ಲಾಯಕ್ಕು ಎಂದು ಜನ ಆಡಿಕೊಳ್ಳುತ್ತಿದ್ದರು. ಅವನು ದೋಣಿಯ ವ್ಯವಹಾರವನ್ನು ವ್ಯವಸ್ಥೆಗೊಳಿಸುವುದಕ್ಕೆ ಹುಂಜದ ಕಾಳಗವನ್ನು ಹರಾಜು ಹಾಕಿದ ಆವೇಶದಂತೆ ಬಾಳೆ ತೋಟದ ಕಂಪನಿಯಲ್ಲಿನ ಫೋರ್ಮನ್ ಹುದ್ದೆಯನ್ನು ತೊರೆದು ಕಾರ್ಮಿಕರ ಪರ ವಹಿಸಿದ. ಬಹಳ ಬೇಗನೆ ಅವನನ್ನು ಸಾರ್ವಜನಿಕ ಕ್ರಮದ ವಿರುದ್ಧ ಹೂಡಿದ ಅಂತರ ರಾಷ್ಟ್ರೀಯ ಸಂಚಿನ ಏಜೆಂಟ್ ಎಂದು ಗುರುತಿಸಲಾಯಿತು. ಅದೊಂದು ವಾರದಲ್ಲಿ ಒಂದು ರಾತ್ರಿ ಅವನು ಗುಪ್ತ ಸಮಾಲೋಚನೆಯಿಂದ ಹೊರಬಂದಾಗ ಅನಾಮಿಕರು ಹೊಡೆದ ನಾಲ್ಕು ರಿವಾಲ್ವರ್ ಶಾಟ್‌ಗಳಿಂದ ಪವಾಡದ ರೀತಿಯಲ್ಲಿ ಪಾರಾಗಿದ್ದ. ಅನಂತರದ ತಿಂಗಳುಗಳಲ್ಲಿ ವಾತಾವರಣ ಎಷ್ಟು ಗಂಭೀರವಾಗಿತ್ತೆಂದರೆ ಕತ್ತಲ ಮೂಲೆಯಲ್ಲಿದ್ದ ಉರ್ಸುಲಾ ಕೂಡ ಅದನ್ನು ಗ್ರಹಿಸಿದಳು ಮತ್ತು ಅವಳಿಗೆ ತಾನು ಮತ್ತೊಂದು ಸಲ ಮಗ ಅವ್ರೇಲಿಯಾನೋ ಜೇಬಿನಲ್ಲಿ ವಿಪರೀತದ ಹೋಮಿಯೋಪತಿ ಮಾತ್ರೆಗಳನ್ನು ಇಟ್ಟುಕೊಂಡಿರುತ್ತಿದ್ದ ಅಪಾಯದ ದಿನಗಳನ್ನು ಮರುಜೀವಿಸುತ್ತಿದ್ದ ಹಾಗೆ ಕಂಡಿತು. ಅವಳು ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಳಿ ಹಿಂದಾದದ್ದನ್ನು ತಿಳಿದುಕೊಳ್ಳುವ ಸಲುವಾಗಿ ಮಾತನಾಡಲು ಪ್ರಯತ್ನಿಸಿದರು. ಆದರೆ ಅವನ ಮೇಲೆ ಆಕ್ರಮಣವಾದ ಮೇಲೆ ಯಾರಿಗೂ ಅವನಿರುವ ಜಾಗ ಗೊತ್ತಿರುವುದಿಲ್ಲ ಎಂದು ಅವ್ರೇಲಿಯಾನೋ ಸೆಗುಂದೋ ಅವಳಿಗೆ ಹೇಳಿದ.

ಉರ್ಸುಲಾ, “ಎಲ್ಲ ಅವ್ರೇಲಿಯಾನೋ ಇದ್ದ ಹಾಗೇನೇ…. ಲೋಕವೆಲ್ಲ ಮರುಕಳಿಸುತ್ತಿದೆಯೇನೋ ಅನ್ನೋ ಹಾಗೆ” ಎಂದಳು.

ಫೆರ್ನಾಂಡಳಿಗೆ ಆ ದಿನಗಳ ಅನಿಶ್ಚಯತೆ ತಟ್ಟಲಿಲ್ಲ. ತನ್ನ ಗಂಡನ ಜೊತೆ ಅವನ ಅನುಮತಿ ಇಲ್ಲದೆ ಅವಳ ಗತಿಯ ಬಗ್ಗೆ ನಿರ್ಧಾರ ತೆಗೆದುಕೊಂಡದ್ದಕ್ಕೆ ಉಂಟಾದ ತೀವ್ರವಾದ ಮನಸ್ತಾಪದ ನಂತರ ಅವಳಿಗೆ ಹೊರಗಿನ ಪ್ರಪಂಚದ ಬಗ್ಗೆ ಸಂಪರ್ಕವಿರಲಿಲ್ಲ. ತನ್ನ ಮಗಳನ್ನು ಕಾಪಾಡಲು ಪೋಲೀಸ್ ಸಹಾಯ ಪಡೆಯಲು ಅವ್ರೇಲಿಯಾನೋ ಸೆಗುಂದೋ ಸಿದ್ಧನಿದ್ದ. ಆದರೆ ಫೆರ್ನಾಂಡ ಅವನಿಗೆ ಅವಳು ಸ್ವಂತ ಇಚ್ಛೆಯಿಂದ ಕಾನ್ವೆಂಟಿಗೆ ಹೋಗಿರುವ ಪುರಾವೆಯನ್ನು ತೋರಿಸಿದಳು. ಕಬ್ಬಿಣದ ಗೇಟಿನ ಒಳಗೆ ಹೋದ ಮೇಲೆ ಮೆಮೆ ತನ್ನನ್ನು ಒಳಗೆ ಕರೆದುಕೊಂಡು ಹೋಗಲು ಬಿಟ್ಟುಕೊಟ್ಟಷ್ಟೇ ನಿರಾಸಕ್ತಿಯಿಂದ ಸಹಿ ಮಾಡಿದ್ದಳು. ಇವೆಲ್ಲದರ ಮೂಲದಲ್ಲಿ ಅವ್ರೇಲಿಯಾನೋ ಸೆಗುಂದೋ ಆ ದಾಖಲೆಗಳು ನ್ಯಾಯ ಸಮ್ಮತವಾಗಿವೆ ಎನ್ನುವುದನ್ನು ನಂಬಲಿಲ್ಲ. ಮಾರಿಷಿಯೋ ಬಾಬಿಲೋನಿಯಾ ಕೋಳಿ ಕದಿಯಲು ಅವರ ಮನೆಯ ಅಂಗಳಕ್ಕೆ ಹೋಗಿದ್ದ ಎನ್ನುವುದನ್ನು ನಂಬದೇ ಇರುವ ಹಾಗೆ. ಆದರೆ ಯಥೋಚಿತವಾದ ಅವೆರಡು ಅವನ ಮನಸ್ಸನ್ನು ಹಗುರಗೊಳಿಸಿತ್ತು. ಇದರಿಂದ ಅವನು ಯಾವುದೇ ಪಶ್ಚಾತ್ತಾಪವಿಲ್ಲದೆ ಪೆತ್ರಾ ಕೊತೆಸ್ ಬಳಿ ಹೋಗಿ ಎಂದಿನಂತೆ ಗದ್ದಲದ ಕೂಟಗಳು ಮತ್ತು ಹುಚ್ಚಾಪಟ್ಟ ತಿನ್ನುವುದರಲ್ಲಿ ತೊಡಗಿದ. ಊರಿನಲ್ಲಿದ್ದ ಅಶಾಂತಿಗೆ ಕಿವುಡಾಗಿ, ಉರ್ಸುಲಾಳ ಮೆದು ಮುನ್ಸೂಚನೆಗಳಿಗೆ ಕಿವುಡಾಗಿ ಫೆರ್ನಾಂಡ ತಾನು ಸಿದ್ಧಪಡಿಸಿದ ಯೋಜನೆಯಂತೆ ಕೊನೆಯ ಕ್ರಮ ತೆಗೆದುಕೊಂಡಳು. ಅವಳು ಮೊದಲನೆ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದ ಹೊಸೆ ಅರ್ಕಾದಿಯೋಗೆ ದೀರ್ಘವಾದ ಕಾಗದ ಬರೆದು ಅದರಲ್ಲಿ ಅವನ ಸೋದರಿ ರೆನೇಟಾ ಕಪ್ಪಗೆ ವಾಂತಿ ಮಾಡಿಕೊಂಡು ಅನಂತರ ದೈವಾಧೀನಳಾದಳೆಂದು ತಿಳಿಸಿದಳು. ಅನಂತರ ಅವಳು ಸಾಂತ ಸೋಪಿಯಾ ದೆಲಾ ಪಿಯದಾದ್‌ಗೆ ಅಮರಾಂತ ಉರ್ಸುಲಾಳನ್ನು ನೋಡಿಕೊಳ್ಳಲು ಹೇಳಿ ಮೆಮೆಳ ಕಾರಣದಿಂದ ಏರುಪೇರಾಗಿದ್ದ ಡಾಕ್ಟರ್‌ಗಳ ಜೊತೆ ಪತ್ರ ವ್ಯವಹಾರದಲ್ಲಿ ಸಂಪೂರ್ಣ ಮಗ್ನಳಾದಳು. ಅವಳು ಮಾಡಿದ ಮೊದಲನೆ ಕೆಲಸವೆಂದರೆ ಮುಂದೆ ಹಾಕಲ್ಪಡುತ್ತಿದ್ದ ಮನೋಸ್ಪರ್ಶ ಆಪರೇಷನ್‌ಗೆ ನಿಗದಿತ ದಿನಾಂಕ ಕೊಡುವ ಕಾರ್ಯ. ಆದರೆ ಕಾಣದ ಡಾಕ್ಟರ್‌ಗಳು ಮಕೋಂದೋದಲ್ಲಿ ಸಾಮಾಜಿಕ ಆಂದೋಲನ ನಡೆಯುತ್ತಿರುವ ತನಕ ಅದು ಸಾಧ್ಯವಿಲ್ಲವೆಂದು ಉತ್ತರಿಸಿದರು. ಅವಳಿಗೆ ಅದು ಎಷ್ಟು ತುರ್ತಿನ ವಿಷಯವಾಗಿತ್ತೆಂದರೆ, ಮತ್ತು ಎಷ್ಟು ಅಸಮರ್ಪಕ ಮಾಹಿತಿ ಇತ್ತೆಂದರೆ, ಅವಳು ಇನ್ನೊಂದು ಕಾಗದದಲ್ಲಿ ಯಾವುದೇ ರೀತಿಯ ಆಂದೋಲನ ಇಲ್ಲವೆಂದೂ ಮತ್ತು ಹಿಂದೆ ನದಿಯ ದೋಣಿಗಳ ವಿಷಯದಲ್ಲಿ ತಲೆಹಾಕಿದಂತೆ ಹಾಗೂ ಆ ದಿನಗಳಲ್ಲಿ ಕಾರ್ಮಿಕ ಸಂಘದ ಜೊತೆ ಒಡನಾಡುತ್ತಿರುವ ತನ್ನ ಭಾವನೆ ಹುಚ್ಚು ಅಭ್ಯಾಸವೆಂದು ಬರೆದಳು. ಆಗಲೂ ಅವರ ನಡುವೆ ‘ಬುಧವಾರ\’ ಕುರಿತು ಒಮ್ಮತವಿರದಿದ್ದ ಸಮಯದಲ್ಲಿ, ಕೈಯಲ್ಲೊಂದು ಬುಟ್ಟಿಯನ್ನು ಹಿಡಿದುಕೊಂಡಿದ್ದ ನನ್ ಒಬ್ಬಳು ಬಾಗಿಲು ಬಡಿದಳು. ಬಾಗಿಲು ತೆಗೆದಾಗ ಸಾಂತ ಸೋಫಿಯಾ ದೆಲಾ ಪಿಯದಾದ್ ಅದನ್ನು ಕೊಡುಗೆ ಎಂದು ತಿಳಿದು ಲೇಸಿನಿಂದ ಮುಚ್ಚಿದ್ದ ಬುಟ್ಟಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಳು. ಆದರೆ ನನ್ ಅವಳನ್ನು ತಡೆದು ಅದನ್ನು ತಾನೇ ಗುಟ್ಟಾಗಿ ಫೆರ್ನಾಂಡಳಿಗೆ ಮಾತ್ರ ಕೊಡಬೇಕೆಂದು ತನಗೆ ಆದೇಶವಿದೆ ಎಂದು ಹೇಳಿದಳು. ಅದರಲ್ಲಿ ಇದ್ದದ್ದು ಮೆಮೆಳ ಮಗ. ಫೆರ್ನಾಂಡಳ ಆಧ್ಯಾತ್ಮಿಕ ನಿರ್ದೇಶಕ ಮಗು ಹುಟ್ಟಿ ಎರಡು ತಿಂಗಳಾಯಿತೆಂದೂ, ಅದರ ತಾಯಿ ತನ್ನ ಇಷ್ಟವನ್ನು ಹೇಳಲು ತುಟಿ ಎರಡು ಮಾಡದ ಕಾರಣ, ತಮಗೆ ಅವನಿಗೆ ಅವ್ರೇಲಿಯಾನೋ ಎಂದು ಅವರ ಅಜ್ಜನ ಹೆಸರನ್ನು ಇಡುವ ಸುಯೋಗ ದೊರಕಿತೆಂದೂ ತಿಳಿಸಿದ್ದರು. ವಿಧಿ ಹೂಡಿದ ಆಟದಿಂದ ಫೆರ್ನಾಂಡಳಲ್ಲಿ ಉರಿ ಹೊತ್ತಿಕೊಂಡಿತು. ಆದರೆ ಅದನ್ನು ನನ್ ಎದುರು ತೋರ್ಪಡಿಸದಿರುವುದಕ್ಕೆ ಅವಳಲ್ಲಿ ಸಾಕಷ್ಟು ಶಕ್ತಿಯಿತ್ತು.

ಅವಳು, “ನಾವು ಇವನನ್ನ ತೇಲುತ್ತಿದ್ದ ಬುಟ್ಟೀಲಿ ಸಿಕ್ಕ ಅಂತ ಹೇಳ್ತೀವಿ” ಎಂದಳು.

ನನ್, “ಅದನ್ನ ಯಾರೂ ನಂಬಲ್ಲ” ಎಂದಳು.

ಫೆರ್ನಾಂಡ, “ಬೈಬಲ್‌ನಲ್ಲಿರೋದನ್ನ ನಂಬೋದಾದ್ರೆ, ನಾನು ಹೇಳಿದ್ದನ್ನು ಯಾಕೆ ನಂಬಕೂಡದು ಅಂತ ನಂಗೆ ತಿಳಿಯಲ್ಲ” ಎಂದಳು.

ಟ್ರೈನಲ್ಲಿ ವಾಪಸು ಹೋಗಲು ಕಾಯುತ್ತಿದ್ದ ನನ್ ಅವರ ಮನೆಯಲ್ಲೆ ಊಟ ಮಾಡಿದಳು ಮತ್ತು ಅವಳಿಗಿದ್ದ ಸೂಚನೆಯ ಪ್ರಕಾರ ಅವಳು ಮಗುವಿನ ಬಗ್ಗೆ ಮತ್ತೆ ಮಾತನಾಡಲಿಲ್ಲ. ಆದರೆ ಫೆರ್ನಾಂಡಳ ದೃಷ್ಟಿಯಲ್ಲಿ ಅವಳು ಅನಪೇಕ್ಷಣೀಯ ಹೀನಾಯಕ್ಕೆ ಸಾಕ್ಷಿಯಂತಿದ್ದಳು. ಅವರು ಹಿಂದಿನ ಕಾಲದಲ್ಲಿದ್ದ ಕೆಟ್ಟ ಸುದ್ದಿ ತಂದವರನ್ನು, ನೇಣು ಹಾಕುವ ಪದ್ಧತಿಯನ್ನು ಕೈಬಿಟ್ಟಿದ್ದೇಕೆ ಎಂದುಕೊಂಡಳು. ಆಗಲೇ ಅವಳು ಮಗುವನ್ನು ತೊಟ್ಟಿಯ ನೀರಲ್ಲಿ ಮುಳುಗಿಸಿ ಕೊಲ್ಲುವ ನಿರ್ಧಾರ ಮಾಡಿದ್ದು. ಆದರೆ ಅವಳಿಗೆ ಗಟ್ಟಿ ಮನಸ್ಸಿರಲಿಲ್ಲ ಮತ್ತು ಅವಳು ದೈವ ಕೃಪೆಯಿಂದ ಕೋಪ ಕೊನೆಗೊಳ್ಳುವ ತನಕ ತಾಳ್ಮೆಯಿಂದ ಕಾಯಲು ಬಯಸಿದಳು.

ಹೊಸೆ ಅವ್ರೇಲಿಯಾನೋ ಒಂದು ವರ್ಷದವನಿದ್ದಾಗ ಯಾವ ಮುನ್ಸೂಚನೆ ಇಲ್ಲದೆ ಪ್ರಕ್ಷುಬ್ಧ ವಾತಾವರಣ ಉಂಟಾಯಿತು. ಭೂಗತರಾಗಿದ್ದ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಇತರ ಯೂನಿಯನ್ ಮುಖಂಡರು ಅದೊಂದು ವಾರದ ಕೊನೆಯಲ್ಲಿ ದಿಢೀರನೆ ಕಾಣಿಸಿಕೊಂಡು ಬಾಳೆ ಪ್ರದೇಶದ ಊರುಗಳಲ್ಲೆಲ್ಲ ಪ್ರದರ್ಶನಗಳನ್ನು ಏರ್ಪಡಿಸಿದರು. ಪೋಲೀಸರು ಸಾರ್ವಜನಿಕ ವ್ಯವಸ್ಥೆಯನ್ನು ಮಾತ್ರ ನೋಡಿಕೊಂಡರು. ಸೋಮವಾರ ರಾತ್ರಿ ಮುಖಂಡರುಗಳನ್ನು ಅವರ ಮನೆಗಳಿಂದ ಕರೆದುಕೊಂಡು ಹೋದರು ಮತ್ತು ಪ್ರಾಂತದ ರಾಜಧಾನಿಯಲ್ಲಿ ಕಾಲಿಗೆ ಎರಡು ಪೌಂಡು ಸರಪಳಿ ಬಿಗಿದು ಜೈಲಿಗೆ ಹಾಕಿದರು. ಹಾಗೆ ಮಾಡಿದವರಲ್ಲಿ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಮೆಕ್ಸಿಕೋ ಕ್ರಾಂತಿಯಲ್ಲಿ ಕರ್ನಲ್ ಆಗಿದ್ದು ಮಕೋಂದೋದಲ್ಲಿ ಆಶ್ರಯ ಪಡೆದಿದ್ದ ಲೋರೆನ್‌ಜೋ ಇದ್ದ. ಅವನು ಆರ್ತೆಮಿಯೋ ಕ್ರುಜ್‌ನ ಸಾಹಸ ಕೃತ್ಯಗಳಿಗೆ ಸಾಕ್ಷಿಯಾಗಿದ್ದೆನೆಂದು ಹೇಳಿz. ಅವರನ್ನು ಮೂರು ತಿಂಗಳಲ್ಲಿ ಬಿಡುಗಡೆ ಮಾಡಿದರು. ಏಕೆಂದರೆ ಸರ್ಕಾರ ಮತ್ತು ಬಾಳೆ ತೋಟದ ಕಂಪನಿಯವರು ಅವರಿಬ್ಬರಿಗೆ ಜೈಲಿನಲ್ಲಿ ಯಾರು ಊಟ ಹಾಕಬೇಕು ಎನ್ನುವ ವಿಷಯದಲ್ಲಿ ಒಮ್ಮತಕ್ಕೆ ಬರಲಿಲ್ಲ. ಈ ಬಾರಿ ಕಾರ್ಮಿಕರ ವಿರೋಧ ಅವರಿರುವ ಮನೆಗಳಲ್ಲಿ ಕಕ್ಕಸ್ಸಿನ ವ್ಯವಸ್ಥೆ, ವೈದ್ಯಕೀಯ ಸೇವೆ ಸರಿ ಇಲ್ಲದಿರುವುದು ಮತ್ತು ಕೆಲಸದ ವಾತಾವರಣದ ಕಳಪೆ ಪರಿಸ್ಥಿತಿಗಳಾಗಿತ್ತು. ಜೊತೆಗೆ ಅವರು ಹೇಳಿದ್ದೇನೆಂದರೆ ಹಣದ ಬದಲು ಚೀಟಿ ಕೊಡುತ್ತಿದ್ದಾರೆಂದೂ ಮತ್ತು ಅದು ಕಂಪನಿಯವರು ತಿಳಿಸಿದಲ್ಲಿ ಮಾತ್ರ ಸಾಮಾನು ಕೊಳ್ಳಲು ಸಾಧ್ಯವೆಂದು ಹೇಳಿದರು. ಹೊಸೆ ಅರ್ಕಾದಿಯೋ ಸೆಗುಂದೋನನ್ನು ಜೈಲಿನಲ್ಲಿ ಇಡಲಾಯಿತು. ಏಕೆಂದರೆ ಅವನು ಚೀಟಿ ವ್ಯವಸ್ಥೆಯಿಂದ, ಹಣ್ಣಿನ ಹಡಗುಗಳಿಗೆ ಹಣ ಒದಗಿಸಲು ದಾರಿ ಮತ್ತು ಹಾಗೆ ಮಾಡದಿದ್ದರೆ, ಮಾರಾಟದ ಪ್ರತಿನಿಧಿಗಳು ನ್ಯೂ ಆರ್‍ಲೆನ್ಸ್‌ನಿಂದ ಬಾಳೆ ಬೆಳೆಯುವ ನೌಕಾತೀರಗಳಿಗೆ ಖಾಲಿ ಹೋಗಬೇಕಾಗುತ್ತೆಂದು ತಿಳಿಸಿದ. ಇತರ ಬೇಡಿಕೆಗಳು ಸಾಮಾನ್ಯವಾದಂಥವು. ಕಂಪನಿ ವೈದ್ಯ ರೋಗಿಗಳನ್ನು ಪರೀಕ್ಷಿಸದೆ ಒಬ್ಬರ ಹಿಂದೆ ಮತ್ತೊಬ್ಬರನ್ನು ಆಸ್ಪತ್ರೆಯಲ್ಲಿ ಸಾಲಾಗಿ ನಿಲ್ಲಿಸುತ್ತಾನೆ ಮತ್ತು ನರ್ಸೊಬ್ಬಳು ರೋಗಿಗಳಿಗೆ ಮಲೇರಿಯಾ ಇರಲಿ, ಗನೋರಿಯಾ ಇರಲಿ, ಅಥವಾ ಹೊಟ್ಟೆ ಕಟ್ಟಿದರೂ ಸರಿಯೆ ಅವರ ನಾಲಗೆ ಮೇಲೆ ಕಾಪರ್ ಸಲ್‌ಫೇಟ್ ಬಣ್ಣದ ಮಾತ್ರೆಯನ್ನು ಇಡುತ್ತಾಳೆ ಎಂದು. ಅದೆಷ್ಟು ಸಾಮಾನ್ಯವಾದ ನಿವಾರಣೆಯಾಗಿತ್ತೆಂದರೆ ಮಕ್ಕಳು ಅದನ್ನು ನುಂಗುವ ಬದಲು ಮನೆಗೆ ಆಟಕ್ಕೆ ಉಪಯೋಗಿಸಲು ತೆಗೆದುಕೊಂಡು ಹೋಗುತ್ತಿದ್ದರು. ಕಂಪನಿ ಕೆಲಸಗಾರರನ್ನು ಅಸಹ್ಯವಾಗಿ ಕೊಠಡಿಗಳಲ್ಲಿ ಗುಂಪುಗೂಡಿಸಲಾಗಿತ್ತು. ಎಂಜಿನಿಯರ್‌ಗಳು ಖಾಯಂ ಆದ ಕಕ್ಕಸ್ಸುಗಳನ್ನು ಮಾಡದೆ ಕ್ರಿಸ್‌ಮಸ್ ಸಮಯದಲ್ಲಿ ಐವತ್ತು ಜನರಿಗೊಂದರಂತೆ ಸ್ಥಳಾಂತರಿಸಲು ಸಾಧ್ಯವಾಗುವ ಕಕ್ಕಸ್ಸುಗಳನ್ನು ತಂದು ಅವು ಹೆಚ್ಚು ಕಾಲ ಇರಬೇಕಾದರೆ ಹೇಗೆ ಉಪಯೋಗಿಸಬೇಕು ಎಂದು ಪ್ರದರ್ಶಿಸುತ್ತಿದ್ದರು. ಹಿಂದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಸುತ್ತುಗಟ್ಟಿದ ಕಪ್ಪು ಉಡುಪಿನ ಈಗ ಬಾಳೆ ತೋಟದ ಕಂಪನಿಯವರ ನಿಯಂತ್ರಣದಲ್ಲಿದ್ದ ಲಾಯರುಗಳು, ಆ ಬೇಡಿಕೆಗಳನ್ನು ವಿಚಿತ್ರವೆನ್ನಿಸುವ ತೀರ್ಮಾನಗಳಿಂದ ತಳ್ಳಿ ಹಾಕಿದರು. ಕಾರ್ಮಿಕರು ಅವಿರೋಧವಾದ ಅಹವಾಲುಗಳ ಪಟ್ಟಿಯನ್ನು ಮುಂದಿಟ್ಟಾಗ ಅವುಗಳನ್ನು ಅಧಿಕೃತವಾಗಿ ಬಾಳೆ ತೋಟದ ಕಂಪನಿ ಪ್ರಕಟಪಡಿಸಲು ಬಹಳ ಸಮಯ ಹಿಡಿಯಿತು. ಮಿಸ್ಟರ್ ಬ್ರೌನ್‌ಗೆ ಒಪ್ಪಂದದ ಬಗ್ಗೆ ತಿಳಿದಾಗ ಅವನು ಕಂಪನಿಯ ಹೆಚ್ಚು ಪ್ರಭಾವವಿರುವ ಪ್ರತಿನಿಧಿಗಳ ಜೊತೆಗೂಡಿ ಐಷಾರಾಮದ ಗಾಜಿನ ರೈಲಿನ ಬಂಡಿಯಲ್ಲಿ ಮಕೋಂದೋವನ್ನು ಬಿಟ್ಟು ಹೊರಟ. ಆದರೂ ಕೂಡ ಕೆಲವು ಕೆಲಸಗಾರರು ನಂತರದ ಶನಿವಾರ ಸೂಳೆಯರ ಮನೆಯಲ್ಲಿ ಅವರಲ್ಲೊಬ್ಬನನ್ನು ಕಂಡು, ಬಲೆಗೆ ಬೀಳಿಸಲು ಸಹಾಯ ಮಾಡಿದ ಹೆಂಗಸಿನ ಜೊತೆ ಬೆತ್ತಲೆಯಾಗಿರುವಾಗಲೇ ಬೇಡಿಕೆಗಳ ಪಟ್ಟಿಯ ಪ್ರತಿಯ ಮೇಲೆ ಸಹಿ ಮಾಡುವಂತೆ ಮಾಡಿದರು. ಲಾಯರುಗಳು ಅವನಿಗೂ ಕಂಪನಿಗೂ ಸಂಬಂಧವಿಲ್ಲವೆಂದು ಕೋರ್ಟ್‌ನಲ್ಲಿ ಪುರಾವೆ ಒದಗಿಸಿದರು ಮತ್ತು ಯಾರಿಗೂ ಅನುಮಾನ ಬರಬಾರದೆಂದು ಅವನೊಬ್ಬ ನಕಲಿ ಮನುಷ್ಯನೆಂದು ಜೈಲಿಗೆ ಹಾಕಿಸಿದರು. ಅನಂತರ ಮಿಸ್ಟರ್ ಬ್ರೌನ್ ಮೂರನೆ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದನ್ನು ಕಂಡು ಅವನಿಂದ ಬೇಡಿಕೆಗಳ ಪ್ರತಿಗೆ ಸಹಿ ಮಾಡಿಸಿದರು. ಮಾರನೆ ದಿನ ಅವನು ತಲೆಗೂದಲಿಗೆ ಬೇರೆ ಬಣ್ಣ ಬಳಿದುಕೊಂಡು ಚೊಕ್ಕ ಸ್ಪ್ಯಾನಿಷ್ ಭಾಷೆ ಮಾತನಾಡುತ್ತ ನ್ಯಾಯಾಧೀಶರ ಮುಂದೆ ಹಾಜರಾದ. ಲಾಯರುಗಳು ಅವನು ಬಾಳೆ ತೋಟದ ಕಂಪನಿಯ ಸೂಪರಿಂಟೆಡೆಂಟ್ ಆದ, ಅಲಬಾಮಾದ ಪ್ಯಾಟ್ಟಿವಿಲ್ಲೆನಲ್ಲಿ ಹುಟ್ಟಿದ ಮಿಸ್ಟರ್ ಜಾಕ್ ಬ್ರೌನ್ ಅಲ್ಲವೆಂದು ಹೇಳಿದರು. ಆಗ ಅವನು ಮಕೋಂದೋದಲ್ಲಿ ಹುಟ್ಟಿದ ಔಷಧಿ ಸಸ್ಯಗಳ ಮಾರಾಟಗಾರನೆಂದು ಮತ್ತು ಅವನ ಹೆಸರು ಡಗಬೇರ್ಟೊ ಫಾನ್ಸಿಕಾ ಎಂದರು. ಸ್ವಲ್ಪ ಸಮಯದ ನಂತರ ಕೆಲಸಗಾರರು ಮತ್ತೊಂದು ಪ್ರಯತ್ನ ಮಾಡಿದಾಗ, ಲಾಯರುಗಳು ಕಳೆದ ಜೂನ್ ಒಂಬತ್ತನೇ ತಾರೀಖು ಚಿಕಾಗೋದಲ್ಲಿ ಅಗ್ನಿಶಾಮಕ ವಾಹನಕ್ಕೆ ಸಿಕ್ಕು ಮಿಸ್ಟರ್ ಬ್ರೌನ್ ಸತ್ತು ಹೋದ ಎನ್ನುವುದಕ್ಕೆ, ಸಲಹೆಗಾರರು ಮತ್ತು ವಿದೇಶಿ ಮಂತ್ರಿಗಳು ಅನುಮೋದಿಸಿದನ್ನು ಹಾಗೂ ಅವನ ಮರಣದ ಸರ್ಟಿಫಿಕೇಟನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು. ಆ ಬಗೆಯ ಹುಚ್ಚಾಟದಿಂದ ಸುಸ್ತಾದ ಕಾರ್ಮಿಕರು ಮಕೋಂದೋದ ಅಧಿಕಾರಿಗಳಿಗೆ ಮುಖ ತಿರುಗಿಸಿ ಮೇಲಿನ ಕೋರ್ಟುಗಳಿಗೆ ಬೇಡಿಕೆ ಸಲ್ಲಿಸಿದರು. ಅಲ್ಲಿ ಮೋಸದ ಲಾಯರುಗಳು ಬೇಡಿಕೆಗಳು ಏನೂ ಸಮಂಜಸವಾಗಿಲ್ಲವೆಂದು ಸಮರ್ಥಿಸಿದರು. ಇದಕ್ಕೆ ಸರಳವಾದ ಕಾರಣವೆಂದರೆ ಬಾಳೆ ತೋಟದ ಕಂಪನಿಯ ಸೇವೆಯಲ್ಲಿ ಯಾವ ಕೆಲಸಗಾರರೂ ಇಲ್ಲ. ಹಿಂದೆಯೂ ಇರಲಿಲ್ಲ ಮತ್ತು ಇರುವುದೂ ಇಲ, ಏಕೆಂದರೆ ಅವರೆಲ್ಲ ತಾತ್ಕಾಲಿಕ ಆಧಾರದ ಮೇಲೆ, ಆಗಾಗ್ಗೆ ತೆಗೆದುಕೊಂಡ ಬಾಡಿಗೆ ಕೆಲಸಗಾರರು ಎಂದರು. ಹೀಗಾಗಿ ಬೇಡಿಕೆಗಳೆಲ್ಲ ಅರ್ಥವಿಲ್ಲದಂತಾದವು. ಹಾಗೆಯೇ ಗುಳಿಗೆಗಳು ಮತ್ತು ಕಕ್ಕಸ್ಸು ಕೂಡ. ಅಲ್ಲದೆ ಕೋರ್ಟಿನ ಆದೇಶದ ಪ್ರಕಾರ ಕೆಲಸಗಾಗರರೇ ಇರಲಿಲ್ಲವೆಂದು ಸಿದ್ಧವಾಯಿತು.

ದೊಡ್ಡ ಮುಷ್ಕರ ಪ್ರಾರಂಭವಾಯಿತು. ಬೆಳೆಯುವುದೆಲ್ಲ ಅರ್ಧಕ್ಕೆ ನಿಂತಿತು. ಹಣ್ಣುಗಳು ಮರದಲ್ಲೆ ಕೊಳೆತವು. ರೈಲಿನ ನೂರಿಪ್ಪತ್ತು ಬೋಗಿಗಳು ಪಕ್ಕದ ಕಂಬಿಗಳಲ್ಲಿ ನಿಂತವು. ಟರ್ಕಿಗಳ ರಸ್ತೆಯ ಶನಿವಾರದ ಪ್ರತಿಧ್ವನಿ ಕೆಲವು ದಿನಗಳ ತನಕ ಮುಂದುವರೆಯಿತು. ಹೊಟೆಲ್ ಜಾಕೊಬ್‌ನ ರೂಮುಗಳನ್ನು ಇಪ್ಪತ್ನಾಲ್ಕು ಗಂಟೆಗಳ ಸರದಿಯ ಆಧಾರದ ಮೇಲೆ ವ್ಯವಸ್ಥೆಮಾಡಬೇಕಾಯಿತು. ಆ ದಿನ ಹೊಸೆ ಅರ್ಕಾದಿಯೋ ಸೆಗುಂದೋ ಅಲ್ಲಿದ್ದಾಗ ಸಾರ್ವಜನಿಕ ಕಾನೂನು ವ್ಯವಸ್ಥೆಯನ್ನು ಮರುಸ್ಥಾಪಿಸುವುದನ್ನು ಸೇನೆಗೆ ವಹಿಸಿಕೊಡಲಾಗಿದೆ ಎಂದು ಪ್ರಕಟಿಸಲಾಯಿತು. ಅದು ಹೊಸೆ ಅರ್ಕಾದಿಯೋಗೆ, ಹಿಂದೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ಗುಂಡಿಕ್ಕಿ ಸಾಯಿಸುವುದನ್ನು ನೋಡಲು ಅವಕಾಶ ಮಾಡಿಕೊಟ್ಟ ಆ ದಿನ ಬೆಳಿಗ್ಗೆಯಿಂದ ಕಾಯುತ್ತಿದ್ದ, ತನ್ನ ಸಾವಿನ ಪ್ರಕಟಣೆಯಂತೆ ತೋರಿತು. ಆ ಅಪಶಕುನ ಅವನ ಗಾಂಭೀರ್‍ಯವನ್ನು ಬದಲಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ಡ್ರಮ್ಮುಗಳ ಶಬ್ದ, ಬ್ಯೂಗಲ್‌ಗಳ ಶಬ್ದ, ಜನರ ಓಡಾಟ, ಕಿರುಚಾಟಗಳೆಲ್ಲ ಅಂತ್ಯವನ್ನು ಸೂಚಿಸಿದವಲ್ಲದೆ, ತನ್ನೊಡನೆ ತಾನು ಮೌನವಾಗಿ, ಒಬ್ಬಂಟಿಯಾಗಿ, ದಂಡನೆಯ ಸಮಯದಿಂದಲೂ ಮಾಡುತ್ತಿದ್ದ ಹೋರಾಟ ಕೊನೆಯಾಯಿತೆಂದು ಹೇಳಿದವು. ಅನಂತರ ಅವನು ಹೊರಗೆ ರಸ್ತಗೆ ಹೋಗಿ ಅವರನ್ನು ನೋಡಿದ. ಅಲ್ಲಿ ಮೂರು ರೆಜಿಮೆಂಟುಗಳಿದ್ದವು ಮತ್ತು ಅವರ ಹೆಜ್ಜೆ ಶಬ್ದ ಭೂಮಿಯನ್ನು ಅದುರುವಂತೆ ಮಾಡುತ್ತಿದ್ದವು. ಅವುಗಳಿಂದ ಹೊರಡುತ್ತಿದ್ದ ಭೀಕರ ಘೂಂಕರಿಕೆ ಮಧ್ಯಾಹ್ನದ ಬೆಳಕನ್ನು ಮಾರಕವಾದ ಹಬೆಯಿಂದ ತುಂಬಿ ಹೋಯಿತು. ಅವರು ಕುಳ್ಳಗೆ, ದಪ್ಪಗೆ, ಕ್ರೂರವಾಗಿದ್ದರು. ಅವರು ಕುದುರೆಯಂತೆ ಬೆವರುತ್ತಿದ್ದರು ಮತ್ತು ಅದಕ್ಕೆ ಸೂರ್ಯನ ಶಾಖದಿಂದ ಬಣ್ಣಗೆಟ್ಟ ಚರ್ಮದ ವಾಸನೆ ಇತ್ತು. ಕಡಿಮೆ ಮಾತಿನವರಾದ ಅವರು ಒಳನಾಡಿನಿಂದ ಬಂದು, ಹಿಡಿದಿದ್ದನ್ನು ಬಿಡದೆ ಸಾಧಿಸುವರಾಗಿದ್ದರು. ಅವರಿಗೆ ಅಲ್ಲಿಂದ ಹಾದು ಹೋಗಲು ಒಂದು ಗಂಟೆ ಬೇಕಾದರೂ ಅಲ್ಲಿಯೇ ವೃತ್ತ ಸುತ್ತುತ್ತಿದ್ದಾರೆ ಎಂಬ ಭಾವನೆ ಉಂಟಾಗುತ್ತಿತ್ತು. ಏಕೆಂದರೆ ಅವರೆಲ್ಲ ಒಬ್ಬಳೇ ಹಾದರಗಿತ್ತಿಗೆ ಹುಟ್ಟಿದವರಂತೆ ಕಾಣುತ್ತಿದ್ದರು. ಮನಸ್ಸಿಗೆ ಏನೂ ನಾಟದ ಅವರು ತಮ್ಮ ಸಾಮಾನುಗಳ ಜೊತೆಗೆ ಅಲಗುಗಳಿದ್ದ ಬಂದೂಕುಗಳನ್ನು, ನಾಚಿಕೆಗೇಡಿತವನ್ನು, ವಿಧೇಯತೆಯನ್ನು ಹಾಗೂ ಗೌರವದ ಭಾವನೆಯನ್ನು ಹೊತ್ತಿದ್ದರು. ಉರ್ಸುಲಾ ಅವರು ಹಾದು ಹೋಗುವುದನ್ನು ಹಾಸಿಗೆಯಿಂದ ಕೇಳಿಸಿಕೊಂಡಳು ಮತ್ತು ಅವಳು ಬೆರಳುಗಳಿಂದ ಕ್ರಾಸ್ ಚಿಹ್ನೆಯನ್ನು ಮಾಡಿದಳು. ಸಾಂತ ಸೋಫಿಯಾ ದೆಲಾ ಪಿಯದಾದ್ ಆಗ ತಾನೆ ಇಸ್ತ್ರಿ ಮಾಡಿದ ಕಸೂತಿ ಹಾಕಿದ ಟೇಬಲ್ ಕ್ಲಾತ್ ಮೇಲೆ ಬಾಗಿ ಒಂದು ಕ್ಷಣವಿದ್ದಳು. ಅವಳಿಗೆ ಅವಳ ಮಗ ಹೊಸೆ ಅರ್ಕಾದಿಯೋ ಸೆಗುಂದೋನ ನೆನಪಾಯಿತು. ಅವನು ಮುಖ ಚಹರೆ ಬದಲಿಸದೆ ಸೈನಿಕರು ಹೊಟೆಲ್ ಜಾಕೊಬ್‌ನ ಬಾಗಿಲನ್ನು ದಾಟಿ ಹೋಗುವುದನ್ನು ನೋಡಿದ.

ಸೈನ್ಯಕ್ಕೆ ವಿವಾದದಲ್ಲಿ ಮಧ್ಯಸ್ತಿಕೆಯ ಕಾರ್ಯಾಚರಣೆಯನ್ನು ವಹಿಸಿಕೊಳ್ಳಲು ಸೈನಿಕಾಡಳಿತ ಜಾರಿಗೊಳಿಸಿದ್ದು ಸಹಾಯ ಮಾಡಿತು. ಆದರೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಯಾವುದೇ ಪ್ರಯತ್ನವಾಗಲಿಲ್ಲ. ಅವರು ಮಕೋಂದೋಗೆ ಬಂದ ಕೂಡಲೇ ಸೈನಿಕರು ಬಂದೂಕುಗಳನ್ನು ಬದಿಗಿಟ್ಟು ಬಾಳೆಗೊನೆಗಳನ್ನು ಕತ್ತರಿಸಿ ತುಂಬಿ ರೈಲುಗಳನ್ನು ಓಡಿಸಲು ಪ್ರಾರಂಭಿಸಿದರು. ಅಲ್ಲಿಯ ತನಕ ಕಾಯುವುದರಲ್ಲೆ ಸಂತೃಪ್ತರಾಗಿದ್ದ ಕೆಲಸಗಾರರು ಕಾಡಿನೊಳಗೆ ಹೋಗಿ ತಾವು ಕೆಲಸ ಮಾಡುವ ಮಚ್ಚುಗಳ ಹೊರತಾಗಿ ಬೇರೆ ಆಯುಧಗಳಿಲ್ಲದೆ ವಿಧ್ವಂಸಕಕಾರರನ್ನು ಕೊನೆಗೊಳಿಸಲು ಪ್ರಾರಂಭಿಸಿದರು. ಅವರು ಬಾಳೆ ಗಿಡಗಳನ್ನು ಮತ್ತು ಪ್ರತಿನಿಧಿಗಳನ್ನು ತದಕಿ ಹಾಕಿದರು. ಮೆಷಿನ್‌ಗನ್ ಹೊಡೆದು ತಮ್ಮ ದಾರಿ ತೆರವು ಮಾಡಿಕೊಳ್ಳುತ್ತಿದ್ದ ರೈಲಿನ ಓಡಾಟಕ್ಕೆ ಧಕ್ಕೆ ಬರುವಂತೆ ಕಂಬಿಗಳನ್ನು ಕಿತ್ತು, ಟೆಲಿಗ್ರಾಫ್ ಹಾಗೂ ಟೆಲಿಫೋನ್ ತಂತಿಗಳನ್ನು ಕಡಿದು ಹಾಕಿದರು. ನೀರಾವರಿ ಗುಂಡಿಗಳಲ್ಲಿ ರಕ್ತದ ಕಲೆಗಳಾದವು. ಬಂಧನದಲ್ಲಿ ಬದುಕುಳಿದಿದ್ದ ಮಿಸ್ಟರ್ ಬ್ರೌನ್‌ನನ್ನು ಅವನ ಸಂಸಾರ ಮತ್ತು ಅವನ ದೇಶದವರೊಂದಿಗೆ ಮಕೋಂದೋಯಿಂದ ಹೊರಗೆ ಸೈನಿಕರ ರಕ್ಷಣೆಯಲ್ಲಿ ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ಯಲಾಯಿತು. ವಾತಾವರಣ ಒಳಯುದ್ಧ ಆರಂಭವಾಗುವ ಮಟ್ಟದಲ್ಲಿದ್ದಾಗ, ಕೆಲಸಗಾರರಿಗೆ ಮಕೋಂದೋದಲ್ಲಿ ಒಂದೆಡೆ ಸೇರುವಂತೆ ಅಧಿಕಾರಿಗಳು ಹೇಳಿದರು. ಆ ಪ್ರಾಂತದ ಸಿವಿಲ್ ಮತ್ತು ಮಿಲಿಟರಿ ನಾಯಕರು ವಿವಾದದಲ್ಲಿ ಮಧ್ಯೆ ಪ್ರವೇಶಿಸುವುದಕ್ಕೆ ಸಿದ್ಧರಾಗಿ ಮುಂದಿನ ಶುಕ್ರವಾರ ಬರುತ್ತಾರೆಂದು ಸೂಚನೆಯಲ್ಲಿ ಪ್ರಕಟಿಸಲಾಗಿತ್ತು.

ಹೊಸೆ ಅರ್ಕಾದಿಯೋ ಸೆಗುಂದೋ ಶುಕ್ರವಾರ ಬೆಳಿಗ್ಗೆಯಿಂದ ಮುಂಚಿತವಾಗಿ ಸ್ಟೇಷನ್ ಬಳಿ ಸೇರಿದ್ದ ಗುಂಪಿನಲ್ಲಿದ್ದ. ಯೂನಿಯನ್ ಮುಖಂಡರ ಮೀಟಿಂಗ್‌ನಲ್ಲಿ ಭಾಗವಹಿಸಿದ್ದ ಮತ್ತು ಅವನಿಗೆ ಕರ್ನಲ್ ಗ್ಯಾವಿಲ್ ಒಡಗೂಡಿ ಗುಂಪಿನಲ್ಲಿ ಸೇರಿಕೊಳ್ಳುವುದಕ್ಕೆ ಹಾಗೂ ಪರಿಸ್ಥಿತಿಗೆ ತಕ್ಕ ಹಾಗೆ ಅದರ ದಿಕ್ಕು ಬದಲಿಸುವ ಕೆಲಸವನ್ನು ವಹಿಸಲಾಗಿತ್ತು. ಅವನಿಗೆ ಮೈಯಲ್ಲಿ ಹುಷಾರಿರಲಿಲ್ಲ. ಸೈನಿಕರು ಸಣ್ಣ ಚೌಕದಲ್ಲಿ ಮೆಷಿನ್ ಗನ್‌ಗಳನ್ನು ಇಟ್ಟಿರುವುದನ್ನು ಗಮನಿಸಿದಾಗ ಅವನ ನೆತ್ತಿಯ ಮೇಲೆ ತೆಳು ಬೆವರ ಸಾಲು ಮೊದಲಿಟ್ಟಿತು. ಅಲ್ಲದೆ ಬೇಲಿ ಹಾಕಿದ್ದ ಬಾಳೆ ತೋಟದ ಕಂಪನಿಯ ಊರಿನ ಆವರಣವನ್ನು ಫಿರಂಗಿಗಳಿಂದ ರಕ್ಷಿಸಲಾಗಿತ್ತು. ಹನ್ನೆರಡು ಗಂಟೆಯಾದರೂ ಬಾರದಿರುವ ರೈಲಿಗಾಗಿ ಕಾಯುತ್ತ ಮೂರು ಸಾವಿರ ಜನರು, ಕಾರ್ಮಿಕರು, ಹೆಂಗಸರು ಮತ್ತು ಮಕ್ಕಳು ಸ್ಟೇಷನ್ ಎದುರುಗಡೆ ಇದ್ದ ಬಯಲಿನಲ್ಲಿ ತುಂಬಿ ಹೋಗಿದ್ದರು. ಸೈನಿಕರು ಮತ್ತು ಮೆಷಿನ್ ಗನ್‌ಗಳಿಂದ ತುಂಬಿದ ಪಕ್ಕದ ರಸ್ತೆಗೂ ಜನರನ್ನು ವಿಸ್ತರಿಸಿದ್ದರು. ಆ ಸಮಯದಲ್ಲಿ ಕಾಯುತ್ತಿರುವ ಗುಂಪಿಗಿಂತ ಹೆಚ್ಚಾಗಿ, ಅವರು ಸಂತೆಯೊಂದರಲ್ಲಿ ಉತ್ಸಾಹದಿಂದ ಇರುವಂತಿದ್ದರು. ಅವರು ಟರ್ಕಿಗಳ ರಸ್ತೆಯಿಂದ ತಿಂಡಿ ತಿನಿಸುಗಳನ್ನು ತಂದಿದ್ದರು ಮತ್ತು ಅವರು ಕಡು ಬಿಸಿಲಿನಲ್ಲಿ ಕಾಯುತ್ತಿದ್ದರೂ ಗೆಲುವಿನಿಂದಿದ್ದರು. ಮೂರು ಗಂಟೆಗೆ ಸ್ವಲ್ಪ ಮುಂಚೆ ಮಾರನೆಯ ದಿನದ ತನಕ ಟ್ರೈನ್ ಬರುವುದಿಲ್ಲವೆಂಬ ಸುದ್ದಿ ಹಬ್ಬಿತು. ಗುಂಪು ನಿರಾಸೆಯಿಂದ ನಿಟ್ಟುಸಿರಿಟ್ಟಿತು. ಸೈನಿಕ ದಳದ ಲೆಫ್ಟಿನೆಂಟ್ ಒಬ್ಬ, ಮೆಷಿನ್ ಗನ್ನುಗಳನ್ನು ಇರಿಸಿದ್ದ ಸ್ಟೇಷನ್ ಮೇಲೆ ಹತ್ತಿ, ಗುಂಪಿನ ಕಡೆ ಮುಖ ಮಾಡಿ ಶಾಂತವಾಗಿರಲು ಹೇಳಿದ. ಹೊಸೆ ಅರ್ಕಾದಿಯೋ ಸೆಗುಂದೋನ ಪಕ್ಕದಲ್ಲಿ ಬರಿಗಾಲಿನಲ್ಲಿ ದಡೂತಿಯಾದ ನಾಲ್ಕು ಮತ್ತು ಏಳರ ವಯಸ್ಸಿನ ಇಬ್ಬರು ಮಕ್ಕಳ ಜೊತೆಗಿದ್ದ ಹೆಂಗಸೊಬ್ಬಳಿದ್ದಳು. ಒಬ್ಬನನ್ನು ಎತ್ತಿಕೊಂಡಿದ್ದ ಅವಳು ಗೊತ್ತಿರದ ಹೊಸೆ ಅರ್ಕಾದಿಯೋನನ್ನು ಸರಿಯಾಗಿ ನೋಡಲು ಸಾಧ್ಯವಾಗುವಂತೆ ಇನ್ನೊಬ್ಬನನ್ನು ಹಿಡಿದೆತ್ತಲು ಕೇಳಿದಳು. ಹೊಸೆ ಅರ್ಕಾದಿಯೋ ಹುಡುಗನನ್ನು ತನ್ನ ಭುಜದ ಮೇಲೆ ಕೂಡಿಸಿಕೊಂಡ. ಅನೇಕ ವರ್ಷಗಳ ನಂತರ ಅವನು, ಯಾರೂ ನಂಬದಿರುವಂತೆ, ತಾನು ಲೆಫ್ಟಿನೆಂಟ್ ಧ್ವನಿ ವರ್ಧಕದಲ್ಲಿ ಆ ಪ್ರಾಂತದ ಸಿವಿಲ್ ಮತ್ತು ಮಿಲಿಟರಿ ಮುಖಂಡರ ಕಟ್ಟಳೆ ನಂಬರ್ ನಾಲ್ಕನ್ನು ಓದಿದ್ದನ್ನು ನೋಡಿದ್ದಾಗಿ ಹೇಳಬಹುದು. ಅದಕ್ಕೆ ಜನರಲ್ ಕಾರ್ಲೋಸ್ ಕಾರ್ಟ್‌ವೆರ್ಗಾ ಹಾಗೂ ಅವನ ಕಾರ್ಯದರ್ಶಿ, ಮೇಜರ್ ಗಾರ್ಸಿಯಾ ಇಸಾಜಾ ಸಹಿ ಮಾಡಿದ್ದರು. ಅವನು ಎಂಬತ್ತು ಪದಗಳ ಮೂರು ಪಂಕ್ತಿಗಳಲ್ಲಿ ಮುಷ್ಕರ ಹೂಡಿದವರನ್ನು, ಪುಂಡರ ಗುಂಪು ಎಂದು ಘೋಷಿಸಿ, ಸೈನಿಕರಿಗೆ ಗುಂಡಿಟ್ಟು ಕೊಲ್ಲಲು ಅಧಿಕಾರ ಕೊಟ್ಟ.

ನಿರ್ಣಯವನ್ನು ಓದಿದ ಮೇಲೆ ಕಿವುಡಾಗಿಸುವ ವಿರೋಧದ ಕೂಗುಗಳ ನಡುವೆ ಒಬ್ಬ ಕ್ಯಾಪ್ಟನ್ ಸ್ಟೇಷನ್‌ನ ತಾರಸಿಯ ಮೇಲೆ ಒಬ್ಬ ಲೆಫ್ಟಿನೆಂಟ್‌ನ ಸ್ಥಾನವನ್ನು ತೆಗೆದುಕೊಂಡ ಮತ್ತು ಧ್ವನಿವರ್ಧಕದಲ್ಲಿ ತಾನು ಮಾತನಾಡುವುದಾಗಿ ಸನ್ನೆ ಮಾಡಿದ ಗುಂಪು ಮತ್ತೆ ಸುಮ್ಮನಾಯಿತು.

ಕ್ಯಾಪ್ಟನ್ ನಿಧಾನವಾಗಿ, ಕೊಂಚ ದಣಿದ, ಕೆಳದನಿಯಲ್ಲಿ, “ಗಣ್ಯರೇ ಇಲ್ಲಿಂದ ಹೊರಟು ಹೋಗಲು ನಿಮಗೆ ಐದು ನಿಮಿಷ ಸಮಯ ಇದೆ” ಎಂದ.

ಅಬ್ಬರದ ಕೂಗಾಟ ಹೆಚ್ಚಾಯಿತು ಮತ್ತು ಅದು ಎಣಿಕೆ ಪ್ರಾರಂಭವಾಗಿದೆ ಎಂದು ಹೇಳಿದ ತಕ್ಷಣ ನಿಂತು ಹೋಯಿತು. ಯಾರೂ ಅಲ್ಲಾಡಲಿಲ್ಲ.

ಕ್ಯಾಪ್ಟನ್ ಅದೇ ಧ್ವನಿಯಲ್ಲಿ, “ಐದು ನಿಮಿಷ ಮುಗಿಯಿತು. ಇನ್ನೊಂದು ನಿಮಿಷ ಅಷ್ಟೆ. ನಾವು ಶೂಟ್ ಮಾಡ್ತೀವಿ” ಎಂದ.

ಹೊಸೆ ಅರ್ಕಾದಿಯೋ ಸೆಗುಂದೋ ಬೆವತು, ಹುಡುಗನನ್ನು ಇಳಿಸಿ ಅವನ ತಾಯಿಗೆ ಕೊಟ್ಟ. ಅವಳು, “ಆ ಸೂಳೆಮಕ್ಳು ಶೂಟ್ ಮಾಡ್ಬಹುದು” ಎಂದು ಪಿಸುಗುಟ್ಟಿದಳು. ಹೊಸೆ ಅರ್ಕಾದಿಯೋ ಸೆಗುಂದೋಗೆ ಸಮಯವಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಆ ಹೆಂಗಸಿನ ಮಾತನ್ನು ಮತ್ತೆ ಕೂಗಿ ಹೇಳಿದ. ಕರ್ನಲ್ ಗ್ಯಾವಿಡಿನ್‌ನ ಗಂಟಲು ಕಟ್ಟಿದ ಧ್ವನಿ ಕೇಳಿಸಿತು. ಹೊಸೆ ಅರ್ಕಾದಿಯೋ ಸೆಗುಂದೋಗೆ ಆತಂಕದ, ಮೌನದಾಳದ ಭೀಕರತೆ ಅವರಿಸಿ ಹಾಗೂ ಸಾವಿನ ಬಿಗಿತದಲ್ಲಿದ್ದ ಜನರ ಗುಂಪನ್ನು ಚದುರಿಸಲು ಯಾವುದಕ್ಕೂ ಸಾಧ್ಯವಿಲ್ಲವೆಂದು ಮನಗಂಡು, ಅವನು ತನ್ನ ಎದುರಿನಲ್ಲಿ ಇದ್ದವರ ತಲೆಗಳ ಮೇಲೆ ಏರಿದ ಮತ್ತು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಧ್ವನಿ ಎತ್ತರಿಸಿ ಕೂಗಿದ.

ಅವನು “ಸೂಳೆಮಕ್ಳಾ, ಇನ್ನೊಂದು ನಿಮಿಷ ಹೆಚ್ಗೆ ತೊಗೊಂಡು ಕುಂಡಿ ತಿರುಗಿಸಿ ಓಡಿ” ಎಂದ.

ಅವನ ಕೂಗು ಬೆದರಿಕೆ ತರಲಿಲ್ಲ. ಆದರೆ ಒಂದು ರೀತಿ ಉನ್ಮಾದ ತಂದಿತು. ಕ್ಯಾಪ್ಟನ್ ಶೂಟ್; ಮಾಡಲು ಆರ್ಡರ್ ಕೊಟ್ಟ ಮತ್ತು ಹದಿನಾಲ್ಕು ಮೆಷಿನ್ ಗನ್‌ಗಳು ತಕ್ಷಣ ಸಿಡಿದವು. ಆದರೆ ಅದೆಲ್ಲ ಅಣಕಿನ ಹಾಗೆ ಕಂಡಿತು. ಮೆಷಿನ್ ಗನ್‌ಗಳಲ್ಲಿ ಕೇಪುಗಳು ತುಂಬಿರಬೇಕು ಎಂದು ತೋರಿತು. ಏಕೆಂದರೆ ಅವು ಅಲ್ಲಾಡುವುದು ಕೇಳಿಸಿತು ಮತ್ತು ಒಂದಷ್ಟು ಬೆಳಕು ಕಾರಿದ್ದು ಕಂಡಿತು. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ಕಾಣಲಿಲ್ಲ: ಒಂದಿಷ್ಟು ಅಳು ಕೂಡ: ಧಿಡೀರನೆ ಉಂಟಾದ ಗಾಬರಿಗೆ ಗುಂಪಿನ ಒಳಗಿಂದ ಯಾರದೇ ನಿಟ್ಟುಸಿರು ಕೂಡ. ಇದ್ದಕ್ಕಿದ್ದ ಹಾಗೆ ಸ್ಟೇಷನ್‌ನ ಒಂದು ಭಾಗದಲ್ಲಿ, “ಅಯ್ಯೋ ಅಮ್ಮಾ” ಎಂಬ ಧ್ವನಿ ಸೀಳಿ ಬಂತು. ಅದುರುತ್ತಿದ್ದ ಆ ಧ್ವನಿ, ಏರಿಳಿಯುತ್ತಿದ್ದ ಉಸಿರು, ಗುಂಪಿನ ಮಧ್ಯೆ ತಲೆದೋರಿ ಹುಚ್ಚೆದ್ದು ಹರಡಿತು. ಹೊಸೆ ಅರ್ಕಾದಿಯೋ ಸೆಗುಂದೋಗೆ ಹುಡುಗನನ್ನು ಎತ್ತಿಕೊಳ್ಳಲು ಸಮಯವಿರಲಿಲ್ಲ. ಇನ್ನೊಬ್ಬನನ್ನು ಎತ್ತಿಕೊಂಡಿದ್ದ ಹೆಂಗಸು ಗಾಬರಿಯಿಂದ ಸುತ್ತ ತೊಡಗಿದ ಗುಂಪಿನೊಳಗೆ ಸೇರಿಹೋಗಿದ್ದಳು.

ಅನೇಕ ವರ್ಷಗಳ ನಂತರ, ಜನರು ಅವನನ್ನು ಹುಚ್ಚು ಮುದುಕ ಎಂದು ಕರೆದರೂ ಕೂಡ, ಆ ಹುಡುಗ ಹೇಗೆ ಹೊಸೆ ಅರ್ಕಾದಿಯೋ ಸೆಗುಂದೋ ತನ್ನನ್ನು ಅವನ ತಲೆಯ ಮೇಲೆ, ಗಾಳಿಯಲ್ಲಿರುವ ಹಾಗೆ, ಗುಂಪಿನ ಗಾಬರಿಯ ಅಲೆಯ ಮೇಲೆ ತೇಲುತ್ತಿರುವ ಹಾಗೆ ತನ್ನನ್ನು ಎತ್ತಿ ಹಿಡಿದು ಪಕ್ಕದ ರಸ್ತೆಯ ಕಡೆ ಹೋದ ಎಂದು ಹೇಳಬಹುದು. ಆ ಹುಡುಗನಿದ್ದ ವಿಶೇಷವಾದ ಸ್ಥಳದಿಂದ ಆ ಕ್ಷಣದಲ್ಲಿ ದಿಕ್ಕೆಟ್ಟ ಜನರು ಮೂಲೆಯ ಕಡೆ ಹೋಗುತ್ತಿದ್ದದ್ದನ್ನು ನೋಡಲು ಸಾಧ್ಯವಿತ್ತು. ಸಾಲು ಸಾಲು ಮೆಷಿನ್ ಗನ್‌ಗಳು ಗುಂಡು ಹೊಡೆದವು. ಅದೇ ಸಮಯದಲ್ಲಿ ಹಲವಾರು ಧ್ವನಿಗಳು ಕೂಗಿಕೊಂಡವು.

“ಮಲಗಿ! ಮಲಗಿ!”
ಮುಂದುಗಡೆ ಇದ್ದ ಜನರು ಗುಂಡುಗಳ ಅಲೆಯಿಂದ ಆಗಲೇ ಹಾಗೆ ಮಾಡಿದ್ದರು. ಬದುಕುಳಿದವರು ಮಲಗುವ ಬದಲು ಸಣ್ಣ ಚೌಕದ ಕಡೆ ಮತ್ತೆ ಹೋಗಲು ಪ್ರಯತ್ತಿಸಿದರು ಮತ್ತು ಆ ಗಾಬರಿಯಲ್ಲಿ ಎರಡೂ ಕಡೆಯಿಂದ ಹೋಗುತ್ತಿದ್ದ ಜನರು ಮೆಷಿನ್ ಗನ್‌ಗಳು ಗುಂಡು ಹೊಡೆಯುತ್ತಿರುವ ಸ್ಥಳದಲ್ಲಿ ಒಬ್ಬರಿಗೊಬ್ಬರಿಗೆ ಓಡೋಡಿ ಡಿಕ್ಕಿ ಹೊಡೆದರು. ಅವರನ್ನು ದೊಡ್ಡಿಯಲ್ಲಿ ಹಾಕಿದಂತಾಯಿತು ಮತ್ತು ಸುಂಟರ ಗಾಳಿಯಂತೆ ತಿರುತಿರುಗಿ ಸಣ್ಣಗಾಗಿ, ಕನಿಷ್ಠವಾಗಿ, ಈರುಳ್ಳಿಯನ್ನು ಬಿಡಿಸುವಂತೆ ಇಂಗದ ಹಸಿವಿನ ಮೆಷಿನ್‌ಗನ್ ಕ್ರಮಬದ್ಧವಾಗಿ ತನ್ನ ಕಾರ್ಯನಿರ್ವಹಿಸಿತು. ಆ ಹುಡುಗ ಆ ವಿಸ್ತಾರದಲ್ಲಿ ನುಗ್ಗಾಟದಿಂದ ತಪ್ಪಿಸಿಕೊಂಡು, ಮಂಡಿಯೂರಿದ ಹೆಂಗಸೊಬ್ಬಳು ಕೈಗಳನ್ನು ಕ್ರಾಸ್ ಆಕಾರದಲ್ಲಿ ಹಿಡಿದದ್ದನ್ನು ನೋಡಿದ. ಹೊಸೆ ಅರ್ಕಾದಿಯೋ ಸೆಗುಂದೋ ಆ ಕ್ಷಣದಲ್ಲಿ ಅವನನ್ನು ಇಳಿಸಿ ಕೆಳಗೆ ಬಿದ್ದಾಗ ಅವನ ಮುಖ ರಕ್ತದಲ್ಲಿ ತೊಯ್ದು ಹೋಯಿತು. ಅಷ್ಟರೊಳಗೆ ಸೈನಿಕರು ಆ ವಿಸ್ತಾರದಲ್ಲಿ ಇದ್ದದ್ದನ್ನು, ಮಂಡಿಯೂರಿದ ಹೆಂಗಸನ್ನು, ಎತ್ತರದ ದೀಪವನ್ನು, ಉರ್ಸುಲಾ ಮಾಂಸದ ತಿನಿಸನ್ನು ಮಾರಿದ್ದ ಸ್ಥಳವನ್ನು ಮತ್ತು ವೇಶ್ಯೆಯರ ಪ್ರದೇಶವನ್ನು ನೆಲಸಮ ಮಾಡಿದರು.

ಹೊಸೆ ಅರ್ಕಾದಿಯೋ ಸೆಗುಂದೋಗೆ ಅರಿವುಂಟಾದಾಗ ಕತ್ತಲಲ್ಲಿ ಅಂಗಾತ ಬಿದ್ದಿದ್ದ, ಅವನಿಗೆ ಕೊನೆಯಿಲ್ಲದ ಮೌನವಾಗಿ ಓಡುವ ಟ್ರೈನಿನಲ್ಲಿ ಹೋಗುತ್ತಿರುವುದಾಗಿ ತಿಳಿದು ಬಂತು. ಮತ್ತು ತಲೆಯನ್ನು ರಕ್ತದಲ್ಲಿ ಅದ್ದಿದಂತೆ ಕಂಡಿತು ಮತ್ತು ಅವನ ಮೂಳೆಗಳೆಲ್ಲ ನೋಯುತ್ತಿದ್ದವು. ಅವನಿಗೆ ಮಲಗಬೇಕೆಂಬ ಅಸಾಧ್ಯವಾದ ಅಪೇಕ್ಷೆಯುಂಟಾಯಿತು. ಅವನು ಅನೇಕ ಗಂಟೆಗಳ ಕಾಲ ಭಯದಿಂದ ಮುಕ್ತವಾಗಿ, ಮಲಗಲು ಸಿದ್ಧನಾಗಿ, ನೋವು ಕಡಿಮೆ ಇರುವ ಪಕ್ಕಕ್ಕೆ ಹೊರಳಿದ. ಆಗಲೇ ಅವನಿಗೆ ಗೊತ್ತಾದದ್ದು ತಾನು ಸತ್ತವರಿಗೆ ಒತ್ತಿಕೊಂಡಿದ್ದೇನೆ ಎಂದು ಆ ಬೋಗಿಯಲ್ಲಿ ನಡುವೆ ಇದ್ದ ಇಕ್ಕೆಲದ ದಾರಿ ಬಿಟ್ಟರೆ ಬೇರೆ ಖಾಲಿ ಜಾಗವಿರಲಿಲ್ಲ. ಜನರ ಮಾರಣ ಹೋಮ ನಡೆದು ಸಾಕಷ್ಟು ಸಮಯ ಕಳೆದಿರಬೇಕು. ಏಕೆಂದರೆ ಹೆಣಗಳು ಚಳಿಗಾಲದ ಪ್ಲಾಸ್ಟರ್‌ನಂತೆ ಕೊರೆಯುತ್ತಿದ್ದವು ಮತ್ತು ಸೆಟೆದುಕೊಂಡಿದ್ದವು. ಬೋಗಿಯಲ್ಲಿ ಅವುಗಳನ್ನು ಬಾಳೆಗೊನೆಗಳನ್ನು ಸಾಗಿಸಲು ಪೇರಿಸಿ ಇಟ್ಟಂತೆ ಕಂಡಿತು. ದು:ಸ್ವಪ್ನದಿಂದ ಬಿಡಿಸಿಕೊಳ್ಳಲು ಹೊಸೆ ಅರ್ಕಾದಿಯೋ ಸೆಗುಂದೋ ಬೋಗಿಯಿಂದ ಬೋಗಿಗೆ ತೆವಳಿಕೊಂಡು ರೈಲು ಹೋಗುತ್ತಿದ್ದ ದಿಕ್ಕಿನಲ್ಲಿ ಹೋದ. ಊರುಗಳನ್ನು ದಾಟಿ ಹೋಗುತ್ತಿರುವಾಗ ಹಲಗೆ ಸಂದಿಗಳಿಂದ ಬಿದ್ದ ಬೆಳಕಲ್ಲಿ ಕೊಳೆತ ಬಾಳೆ ಹಣ್ಣುಗಳಂತೆ ಸಮುದ್ರಕ್ಕೆ ಎಸೆಯುವ ಗಂಡಸರ, ಹೆಂಗಸರ ಮತ್ತು ಮಕ್ಕಳ ಹೆಣಗಳನ್ನು ಕಂಡ ಅವನು ಚೌಕದಲ್ಲಿ ಪಾನೀಯಗಳನ್ನು ಮಾರುವ ಹೆಂಗಸನ್ನು ಮತ್ತು ಗೊಂದಲದಲ್ಲಿ ದಾರಿ ಮಾಡಿಕೊಳ್ಳುತ್ತ ಕೈಯಲ್ಲಿ ಬೆಳ್ಳಿಯ ಮಾರೆಲಿಯಾ ಬಕಲ್ ಇದ್ದ ಬೆಲ್ಟನ್ನು ಹಿಡಿದುಕೊಂಡಿದ್ದ ಕರ್ನಲ್ ಗಾವಿಲನ್‌ನನ್ನು ಗುರುತು ಹಿಡಿದ. ಮೊದಲನೆ ಬೋಗಿಗೆ ಬಂದಾಗ ಅವನು ಕತ್ತಲಲಲ್ಲಿ ಹೊರಗೆ ಹಾರಿ ರೈಲು ಮುಂದೆ ಹೋಗುವ ತನಕ ಹಾಗೆಯೇ ಕಂಬಿಗಳ ಪಕ್ಕದಲ್ಲಿ ಮಲಗಿದ್ದ. ಸುಮಾರು ಇನ್ನೂರು ಸಾಮಾನು ಸಾಗಿಸುವ ಬೋಗಿಗಳಿದ್ದ ಅದು ಅವನು ಕಂಡ ಅತ್ಯಂತ ಉದ್ದದ ಟ್ರೈನ್ ಆಗಿತ್ತು. ಅದರ ಎರಡೂ ಪಕ್ಕದಲ್ಲಿ ಮತ್ತು ಮಧ್ಯದಲ್ಲಿ ಎಂಜಿನ್‌ಗಳಿದ್ದವು. ಅದರಲ್ಲಿ ಲೈಟ್‌ಗಳಿರಲಿಲ್ಲ. ಕೆಂಪು ಮತ್ತು ಚಲಿಸುವ ಸಮಯದ ಹಸಿರು ದೀಪ ಕೂಡ ಇರಲಿಲ್ಲ. ಅದು ರಾತ್ರಿಯಲ್ಲಿ ಕಳ್ಳಹೆಜ್ಜೆ ಇಡುವಂತೆ ಚಲಿಸುತ್ತಿತ್ತು. ಬೋಗಿಗಳ ಮೇಲೆ ಮೆಷಿನ್‌ಗನ್‌ಗಳನ್ನು ಇಟ್ಟುಕೊಂಡಿದ್ದ ಸೈನಿಕರ ಕಪ್ಪನೆ ಆಕೃತಿಯನ್ನು ಕಾಣಬಹುದಿತ್ತು.

ಮಧ್ಯ ರಾತ್ರಿಯ ನಂತರ ಭರ್ಜರಿ ಮಳೆ ಬಿತ್ತು. ಹೊಸೆ ಅರ್ಕಾದಿಯೋ ಸೆಗುಂದೋಗೆ ತಾನು ಎಲ್ಲಿ ನೆಗೆದದ್ದೆಂದು ತಿಳಿದಿರಲಿಲ್ಲ. ಆದರೆ ರೈಲು ಬಂದ ವಿರುದ್ಧ ದಿಕ್ಕಿನಲ್ಲಿ ಹೋದರೆ ಮಕೋಂದೋ ತಲುಪಬಹುದೆಂದು ಗೊತ್ತಿತ್ತು. ಪೂರ್ತಿಯಾಗಿ ತೊಯ್ದು, ತಲೆನೋವಿನಲ್ಲೆ ಮೂರುಗಂಟೆ ಕಾಲ ನಡೆದ ಮೇಲೆ ಮುಂಜಾವಿನಲ್ಲಿ ಮನೆಯೊಂದನ್ನು ಕಂಡ. ಕಾಫಿಯ ವಾಸನೆಯಿಂದ ಆಕರ್ಷಿತನಾಗಿ, ಸ್ಟೋವ್ ಹತ್ತಿರ ಹೆಂಗಸೊಬ್ಬಳು ಮಗುವನ್ನು ಹಿಡಿದುಕೊಂಡಿದ್ದ ಅಡುಗೆ ಮನೆಗೆ ಹೋದ.

ಅವನು ಕ್ಷೀಣವಾಗಿ, “ನಾನು ಹೊಸೆ ಅರ್ಕಾದಿಯೋ ಸೆಗುಂದೋ” ಎಂದ.

ತಾನು ಬದುಕಿದ್ದೇನೆಂದು ಮನವರಿಕೆ ಮಾಡಿಕೊಡಲು ತನ್ನ ಹೆಸರನ್ನು ಅಕ್ಷರ ಬಿಡಿಬಿಡಿಸಿ ಹೇಳಿದ. ಅವನು ಹಾಗೆ ಮಾಡಿದ್ದು ಉಚಿತವಾಗಿತ್ತು. ಏಕೆಂದರೆ ಅವನು ಕೊಳಕಾದ ತಲೆ ಮತ್ತು ಬಟ್ಟೆಗಳೆಲ್ಲ ರಕ್ತಮಯವಾಗಿ ಭಯಂಕರವಾಗಿದ್ದು ಸಾವಿನ ಸ್ವರ್ಶ ಪಡೆದು ಬಾಗಿಲೋಳಗೆ ಬಂದವನೆಂದು ಭಾವಿಸಿದಳು. ಅವಳು ಅವನನ್ನು ಗುರುತು ಹಿಡಿದಳು. ಅವನ ಬಟ್ಟೆಗಳು ಒಣಗುವ ತನಕ ಇರಲೆಂದು ಸುತ್ತಿಕೊಳ್ಳುವುದಕ್ಕೆ ಹೊದಿಕೆ ಕೊಟ್ಟಳು. ಹೊಸದಾಗಿದ್ದ ಗಾಯಗಳನ್ನು ತೊಳೆಯಲು ನೀರು ಕಾಯಿಸಿದಳು ಮತ್ತು ತಲೆಯ ಬ್ಯಾಂಡೇಜಿಗೆ ಬಟ್ಟೆ ಕೊಟ್ಟಳು, ಅನಂತರ ಬ್ಯುಂದಿಯಾಗಳು ಸಕ್ಕರೆ ಇಲ್ಲದ ಕಾಫಿ ಕುಡಿಯುತ್ತಾರೆ ಎಂದು ಅವರಿವರು ಹೇಳಿದ್ದಂತೆ ಅದನ್ನು ಒಂದು ಮಗ್‌ನಲ್ಲಿ ಕೊಟ್ಟಳು. ಹಾಗೂ ಅವನ ಬಟ್ಟೆಗಳನ್ನು ಒಣಗಲು ಒಲೆಯ ಹತ್ತಿರ ಹರಡಿದಳು.

ಹೊಸೆ ಅರ್ಕಾದಿಯೋ ಸೆಗುಂದೋ ಕಾಫಿಯನ್ನು ಕುಡಿದು ಮುಗಿಸುವ ತನಕ ಮಾತನಾಡಲಿಲ್ಲ.

ಅವನು, “ಅಲ್ಲಿ ಮೂರು ಸಾವಿರ ಜನ ಇದ್ರು ಅಂತ ಕಾಣತ್ತೆ” ಎಂದು ಗೊಣಗಿದ.

“ಏನು?”

“ಅದೇ ಸತ್ತವರು ಸ್ಟೇಷನ್ ಹತ್ರ ಸೇರಿದೋರೆಲ್ರೂ ಅನ್ಸತ್ತೆ” ಎಂದು ಸ್ಪಷ್ಟೀಕರಿಸಿದ.

ಅವಳು ಅವನನ್ನು ಕನಿಕರದಿಂದ ನೋಡಿದಳು. ಅವಳು, “ಇಲ್ಯಾರೂ ಸತ್ತೋರಿಲ್ಲ. ನಿನ್ನ ಅಂಕಲ್ ಕರ್ನಲ್ ಆದ್ಮೇಲೆ ಮಕೋಂದೋದಲ್ಲಿ ಏನೂ ಆಗಲೇ ಇಲ್ಲ” ಎಂದಳು. ಹೊಸೆ ಅರ್ಕಾದಿಯೋ ಸೆಗುಂದೋ ಮನೆಗೆ ತಲುಪುವ ಮುಂಚೆ ಅಲ್ಲಲ್ಲಿ ನಿಂತ ಮೂರು ಮನೆಗಳಲ್ಲಿ ಹಾಗೆಯೇ ಹೇಳಿದರು. “ಅಲ್ಲಿ ಯಾರೂ ಸತ್ತಿಲ್ಲ.” ಅವನು ಸ್ಟೇಷನ್ ಹತ್ತಿರದ ಸಣ್ಣ ಚೌಕದ ಮುಖಾಂತರ ಹೋದ. ಅಲ್ಲಿ ಒಂದರ ಮೇಲೊಂದನ್ನು ಸೇರಿಸಿದ ಚಿಂದಿಯಾದ ಸಾಮಾನುಗಳಿದ್ದದ್ದು ಕಂಡಿತು. ಅವನಿಗೆ ಮಾರಣ ಹೋಮದ ಯಾವ ಕುರುಹೂ ಕಾಣಲಿಲ್ಲ. ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ರಸೆ ನಿರ್ಜನವಾಗಿತ್ತು. ಮನೆಯೊಳಗೆ ಮನುಷ್ಯರಿರುವುದೂ ಗೊತ್ತಾಗದಂತೆ ಬಾಗಿಲು ಹಾಕಿದ್ದವು. ಮನುಷ್ಯರಿರುವ ಮೊದಲನೆ ಸಂಕೇತವೆಂದರೆ ಸಾಮೂಹಿಕ ಪ್ರಾರ್ಥನೆಯ ಬೆಲ್ ಹೊಡೆದದ್ದು. ಅವನು ಕರ್ನಲ್ ಗ್ಯಾವೊಲನ್ ಮನೆಯ ಬಾಗಿಲು ಬಡಿದ. ಅವನು ಅನೇಕ ಸಲ ನೋಡಿದ್ದ ಗರ್ಭಿಣಿ ಹೆಂಗಸೊಬ್ಬಳು, “ಅವನಾಗ್ಲೇ ಹೋದ, ಅವನ ದೇಶಕ್ಕೆ ವಾಪಸ್ ಹೋದ” ಎಂದು ಹೆದರಿಕೆಯಿಂದ ಹೇಳಿ ಮುಖಕ್ಕೆ ರಾಚುವಂತೆ ಬಾಗಿಲು ಹಾಕಿದಳು. ಕೋಳಿಗಳು ಮೊಟ್ಟೆ ಇಡುವ ತಂತಿ ಬಿಗಿದ ಆವರಣದ ಮುಖ್ಯ ದ್ವಾರದಲ್ಲಿ ಎಂದಿನಂತೆ ಇಬ್ಬರು ಪೋಲೀಸರು ಕಾವಲಿದ್ದರು. ರೇನ್ ಕೋಟ್ ಮತ್ತು ರಬ್ಬರ್ ಶೂಗಳನ್ನು ಹಾಕಿಕೊಂಡಿದ್ದ ಅವರು ಮಳೆಯಲ್ಲಿ ಕಲ್ಲಿನಂತೆ ನಿಂತಿದ್ದರು. ಪಕ್ಕದ ರಸ್ತೆಯಲ್ಲಿ ವೆಸ್ಟ್ ಇಂಡಿಯಾದ ಹೆಂಗಸರು ಶನಿವಾರದ ಹಾಡು ಹಾಡುತ್ತಿದ್ದರು. ಹೊಸೆ ಅರ್ಕಾದಿಯೋ ಸೆಗುಂದೋ ಅಂಗಳದ ಗೋಡೆಯನ್ನು ಹಾರಿ ಅಡುಗೆ ಮನೆ ಮುಖಾಂತರ ಮನೆಯೊಳಗೆ ಹೋದ. ಸಾಂತ ಸೊ;ಫಿಯಾ ದೆಲಾ ಪಿಯದಾದ್ ತೀರ ಮೆಲ್ಲಗೆ, “ಫೆರ್ನಾಂಡಗೆ ಕಾಣಿಸಿಕೊಳ್ಬೇಡ ಅವ್ಳು ಈಗಷ್ಟೆ ಎದ್ದಿದ್ದಾಳೆ” ಎಂದಳು. ಅವಳು ಒಪ್ಪಂದವೊಂದನ್ನು ಪೂರೈಸುವಳಂತೆ ಉಚ್ಚೆ ಪಾತ್ರೆಗಳಿದ್ದ ರೂಮಿಗೆ ತನ್ನ ಮಗನನ್ನು ಕರೆದುಕೊಂಡು ಹೋದಳು. ಅಲ್ಲಿ ಮೆಲ್‌ಕಿಯಾದೆಸ್‌ನ ಮುರಿದು ಹೋದ ಮಂಚವನ್ನು ಸರಿಪಡಿಸಿಕೊಟ್ಟಳು. ಮಧ್ಯಾಹ್ನ ಎರಡು ಗಂಟೆಗೆ, ಫೆರ್ನಾಂಡ ನಿದ್ದೆ ಮಾಡುತ್ತಿದ್ದಾಗ ಕಿಟಕಿಯ ಮೂಲಕ ಊಟದ ತಟ್ಟೆ ಕೊಟ್ಟಳು.

ಅವ್ರೇಲಿಯಾನೋ ಸೆಗುಂದೋ ಮನೆಯಲ್ಲಿ ಮಲಗಿದ್ದ. ಏಕೆಂದರೆ ಅವನನ್ನು ಮಳೆ ಹಿಡಿದು ನಿಲ್ಲಿಸಿತ್ತು ಮತ್ತು ಮಧ್ಯಾಹ್ನ ಮೂರು ಗಂಟೆಯಾದರೂ ಅದು ನಿಲ್ಲಲಿ ಎಂದು ಕಾಯುತ್ತಿದ್ದ. ಸಾಂತ ಸೋಫಿಯಾ ದೆಲಾ ಪಿಯದಾದ್ ಗುಟ್ಟಾಗಿ ಅವನಿಗೆ ತಿಳಿಸಿದಾಗ ತನ್ನ ಸೋದರನನ್ನು ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಭೇಟಿಯಾz. ಅವನು ಜನರ ಮಾರಣ ಹೋಮ ಅಥವಾ ಸಮುದ್ರದ ಕಡೆ ಹೆಣಗಳನ್ನು ತುಂಬಿದ ರೈಲಿನಲ್ಲಿ ಮಾಡಿದ ದು:ಸ್ವಪ್ನದ ಪ್ರಯಾಣವನ್ನು ನಂಬಲಿಲ್ಲ. ಹಿಂದಿನ ರಾತ್ರಿ ದೇಶಕ್ಕಾಗಿ ವಿಶೇಷವಾಗಿ ಪ್ರಕಟಿಸಿದ್ದ, ಕಾರ್ಮಿಕರು ಸ್ಟೇಷನ್ ಬಿಟ್ಟು ಶಾಂತವಾಗಿ ಮನೆಗಳಿಗೆ ಹಿಂದಿರುಗಿದರೆಂಬ ಹೇಳಿಕೆಯನ್ನು ಓದಿದ್ದ. ಯೂನಿಯನ್ ಮುಖಂಡರು ದೇಶಭಕ್ತಿಯಿಂದ ತಮ್ಮ ಬೇಡಿಕೆಗಳನ್ನು ಕೇವಲ ಎರಡು ಅಂಶಗಳಿಗೆ ಮಾತ್ರ ಇಳಿಸಿದ್ದಾರೆಂದು ಆ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ವೈದ್ಯಕೀಯ ಸೇವೆಗಳ ಸುಧಾರಣೆ ಮತ್ತು ವಸತಿ ಗೃಹಗಳಲ್ಲಿ ಕಕ್ಕಸ್ಸನ್ನು ಕಟ್ಟಿಸಿಕೊಡುವುದು. ಅನಂತರ ಮಿಲಿಟರಿ ಅಧಿಕಾರಿಗಳು ಕಾರ್ಮಿಕರಿಂದ ಒಪ್ಪಂದವನ್ನು ಪಡೆದಾಗ ಮಿಸ್ಟರ್ ಬ್ರೌನ್ ಅದನ್ನು ತಿಳಿಸಿ ಹೇಳಿದ್ದರು ಮತ್ತು ಅವನು ಅದನ್ನು ಒಪ್ಪಿಕೊಂಡದ್ದಷ್ಟೇ ಅಲ್ಲದೆ ವಿವಾದ ಬಗೆಹರಿದದ್ದಕ್ಕೆ ಮೂರು ದಿನಗಳ ಹಬ್ಬವನ್ನು ಆಚರಿಸುವುದರ ಖರ್ಚನ್ನು ಕೊಡುವುದಾಗಿ ಹೇಳಿದ. ಆದರೆ ಒಪ್ಪಂದಕ್ಕೆ ಸಹಿ ಮಾಡುವುದು ಯಾವಾಗ ಎಂದು ಕೇಳಿದಾಗ ಅವನು ಕಿಟಕಿಯಿಂದ ಆಚೆ ಮಿಂಚು, ಸಿಡಿಲು ಹೊಳೆಸುತ್ತಿದ್ದ ಬೆಳಕನ್ನು ನೋಡಿದ ಮತ್ತು ಅನುಮಾನವೆಂಬಂತೆ ಸನ್ನೆ ಮಾಡಿದ.

ಅವನು, “ಮಳೆ ನಿಂತ ಮೇಲೆ. ಮಳೆ ನಿಲ್ಲುವ ತನಕ ನಾವು ಎಲ್ಲ ಕೆಲಸಗಳನ್ನು ನಿಲ್ಲಿಸಿದ್ದೀವಿ” ಎಂದು ಹೇಳಿದ.

ಮೂರು ತಿಂಗಳಿಂದ ಮಳೆಯಾಗಿರಲಿಲ್ಲ ಮತ್ತು ನೀರಿನ ಕೊರತೆ ಇತ್ತು. ಆದರೆ ಮಿಸ್ಟರ್ ಬ್ರೌನ್ ತನ್ನ ನಿರ್ಧಾರ ಪ್ರಕಟಿಸಿದಾಗ ಇಡೀ ಬಾಳೆ ಬೆಳೆಯುವ ಪ್ರದೇಶದಲ್ಲಿ ಅತಿಯಾಗಿ ಮಳೆಯಾಗುತ್ತಿತ್ತು. ಹೊಸೆ ಅರ್ಕಾದಿಯೋ ಸೆಗುಂದೋ ಮಕೋಂದೋಗೆ ಬರುವಾಗ ಸಿಕ್ಕಿಕೊಂಡದ್ದು ಇಂಥದೊಂದು ಮಳೆಗೆ. ಒಂದು ವಾರದ ನಂತರವೂ ಇನ್ನೂ ಮಳೆಯಾಗುತ್ತಿತ್ತು. ಸರ್ಕಾರ ತನಗೆ ಸಿಕ್ಕ ಎಲ್ಲ ಬಗೆಯ ಮಾಧ್ಯಮಗಳ ಮೂಲಕ ಸಾವಿರಾರು ಬಾರಿ ಮತ್ತೆ ಮತ್ತೆ ಇಡೀ ದೇಶದಲ್ಲಿ ಪ್ರಚುರಪಡಿಸಿದ್ದನ್ನು ಕೊನೆಗೆ ಒಪ್ಪಿಕೊಳ್ಳಲಾಗಿತ್ತು: ಯಾರೂ ಸತ್ತಿರಲಿಲ್ಲ, ಸಂತೃಪ್ತರಾದ ಕಾರ್ಮಿಕರು ತಮ್ಮ ಮನೆಗೆ ಹಿಂತಿರುಗಿದ್ದರು ಮತ್ತು ಮಳೆ ನಿಲ್ಲುವ ತನಕ ಬಾಳೆ ತೋಟದ ಕಂಪನಿ ಎಲ್ಲ ಕೆಲಸಗಳನ್ನು ನಿಲ್ಲಿಸಿತ್ತು. ನಿಲ್ಲದೆ ಬೀಳುತ್ತಿದ್ದ ಮಳೆಯಿಂದಾಗಿ ಮಿಲಿಟರಿ ಕಾನೂನು ಸಾರ್ವಜನಿಕ ದುರಂತಗಳ ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಮೇಲೆ ಕಣ್ಣಿಟ್ಟಿತ್ತು. ಆದರೆ ಸೈನಿಕರನ್ನು ನಿವಾಸಗಳಲ್ಲೇ ಇರಿಸಲಾಗಿತ್ತು. ದಿನದ ಸಮಯದಲ್ಲಿ ಸೈನಿಕರು ಮಳೆಯಲ್ಲಿ ಪ್ಯಾಂಟುಗಳನ್ನು ಮೇಲಕ್ಕೆ ಮಡಚಿ, ರಸ್ತೆಗಳಲ್ಲಿ ಮಕ್ಕಳ ಜೊತೆ ದೋಣಿಯಾಟ ಆಡುತ್ತ ತಿರುಗುತ್ತಿದ್ದರು. ರಾತ್ರಿ ಬಂದೂಕಿನ ತುದಿಯಿಂದ ಮನೆಗಳ ಬಾಗಿಲು ಬಡಿಯುತ್ತ ಅನುಮಾನ ಬಂದವರನ್ನು ಹಾಸಿಗೆಯಿಂದೆಬ್ಬಿಸಿ ಹಿಡಿಯುತ್ತಿದ್ದರು ಮತ್ತು ಅವರು ತಿರುಗಿ ಬಾರದ ಕಡೆ ಕರೆದುಕೊಂಡು ಹೋಗುತ್ತಿದ್ದರು. ಪುಂಡರ, ಕೊಲೆಗಡುಕರ, ಬೆಂಕಿ ಹಚ್ಚುವವರ, ಕಟ್ಟಳೆ ನಂ. ೪ರ ವಿರೋಧಿಗಳನ್ನು ಪತೆ ಹಚ್ಚುವುದು ಮತ್ತು ಕೊನೆಗೊಳಿಸುವುದು ಇನ್ನೂ ಮುಂದುವರಿದಿತ್ತು. ಆದರೆ ಆಫೀಸಿನ ಹತ್ತಿರ ಜಮಾಯಿಸಿದ ಹತಭಾಗ್ಯರ ಬಂಧುಗಳಿಗೂ ಮಿಲಿಟರಿಯವರು ಆದದ್ದನ್ನು ನಿರಾಕರಿಸಿದರು. ಆಫೀಸರುಗಳು, “ನೀವೆಲ್ಲೋ ಕನಸು ಕಾಣ್ತಿದೀರ” ಎಂದು ಎತ್ತೆ ಮತ್ತೆ ಹೇಳಿದರಲ್ಲದೆ, “ಮಕೋಂದೋದಲ್ಲಿ ಏನೂ ಆಗಿಲ್ಲ, ಆಗೋದೂ ಇಲ್ಲ” ಎಂದರು. ಈ ರೀತಿಯಲ್ಲಿ ಅವರು ಕೊನೆಗೆ ಯೂನಿಯನ್ ಮುಖಂಡರನ್ನು ನಿರ್ನಾಮ ಮಾಡಿದರು.

ಅವರಲ್ಲಿ ಬದುಕಿ ಉಳಿದವನೆಂದರೆ ಹೊಸೆ ಅರ್ಕಾದಿಯೋ ಸೆಗುಂದೋ ಒಬ್ಬನೇ. ಒಂದು ಶುಕ್ರವಾರ ರಾತ್ರಿ ಅನುಮಾನವಿರದಂತೆ ಬಾಗಿಲ ಮೇಲೆ ಬಂದೂಕಿನ ಕೊನೆಯಿಂದ ಬಡಿದ ಶಬ್ದ ಕೇಳಿಸಿತು. ಅದು ನಿಲ್ಲುವ ತನಕ ಕಾದಿದ್ದ ಅವ್ರೇಲಿಯಾನೋ ಸೆಗುಂದೋ ಬಾಗಿಲು ತೆಗೆದಾಗ ಆರು ಜನ ಸೈನಿಕರು ಅಧಿಕಾರಿಯೊಂದಿಗೆ ಇದ್ದರು. ಮಳೆಯಲ್ಲಿ ತೊಯ್ದು ಹೋಗಿದ್ದ ಅವರು ಒಂದು ಮಾತೂ ಆಡದೆ ಒಂದೊಂದಾಗಿ ಎಲ್ಲ ರೂಮುಗಳನ್ನು, ಕಪಾಟುಗಳನ್ನು, ಅಂಗಳದಿಂದ ಅಡುಗೆ ಮನೆಯ ತನಕ ಹುಡುಕಿದರು. ಉರ್ಸುಲಾಳ ರೂಮಿನಲ್ಲಿ ಲೈಟ್ ಹಾಕಿದಾಗ ಅವಳು ಎದ್ದು ಕುಳಿತಳು. ಹುಡುಕಾಟ ಮುಗಿಯುವ ತನಕ ಅವಳು ಉಸಿರಾಡಲಿಲ್ಲ ಮತ್ತು ಕೈ ಬೆರಳುಗಳನ್ನು ಕ್ರಾಸ್‌ನಂತೆ ಮಾಡಿಕೊಂಡು ಸೈನಿಕರು ಓಡಾಡುತ್ತಿದ್ದ ಕಡೆ ತೋರಿಸುತ್ತಿದ್ದಳು. ಸಾಂತ ಸೋಫಿಯ ದೆಲಾ ಪಿಯದಾದ್ ಮೆಲ್‌ಕಿಯಾದೆಸ್ ರೂಮಿನಲ್ಲಿ ಮಲಗಿದ್ದ ಸೆಗುಂದೋಗೆ ಎಚ್ಚರಿಕೆ ಕೊಟ್ಟಳು. ಆದರೆ ಅವನಿಗೆ ಈಗ ತಪ್ಪಿಸಿಕೊಳ್ಳಲು ಮಾಡುವ ಪ್ರಯತ್ನ ವ್ಯರ್ಥ ಎಂದು ತೋರಿತು. ಆದ್ದರಿಂದ ಸಾಂತ ಸೋಫಿಯಾ ದೆಲಾ ಪಿಯದಾದ್ ಆ ರೂಮಿಗೆ ಮತ್ತೆ ಬೀಗ ಹಾಕಿದಳು. ಅವನು ಶರಟು, ಶೂ ಹಾಕಿಕೊಂಡು ಅವರಿಗಾಗಿ ಕಾಯುತ್ತ ಮಂಚದ ಮೇಲೆ ಕುಳಿತ. ಆ ಸಮಯದಲ್ಲಿ ಅವರು ಚಿನ್ನದ ವಕ್ ಶಾಪಿನಲ್ಲಿ ಹುಡುಕುತ್ತಿದ್ದರು. ಅಧಿಕಾರಿ ಬೀಗವನ್ನು ತೆಗೆಸಿದ ಮತ್ತು ಲಾಟೀನನ್ನು ಸುತ್ತ ಆಡಿಸಿ ಕೆಲಸ ಮಾಡುವ ಬೆಂಚನ್ನು, ಆಮ್ಲದ ಬಾಟಲುಗಳಿದ್ದ ಗಾಜಿನ ಕಪಾಟು ಮತ್ತು ಉಪಯೋಗಿಸುತ್ತಿದ್ದವನು ಅಲ್ಲಿಯೇ ಬಿಟ್ಟು ಹೋದ ಉಪಕರಣಗಳನ್ನು ಕಂಡ. ಜೊತೆಗೆ ಆ ರೂಮಿನಲ್ಲಿ ಯಾರೂ ಇಲ್ಲವೆಂದು ತಿಳಿದುಕೊಂಡ. ಅವನು ಅವ್ರೇಲಿಯಾನೋ ಸೆಗುಂದೋನನ್ನು ಅವನು ಅಕ್ಕಸಾಲಿಗನೇ ಎಂದು ಕೇಳಿದ. ಅವ್ರೇಲಿಯಾನೋ ಸೆಗುಂದೋ ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ವರ್ಕ್ ಶಾಪ್ ಆಗಿತ್ತೆಂದು ಹೇಳಿದ. “ಓಹೋ” ಎಂದ ಆಫೀಸರ್ ಲೈಟ್ ಹಾಕಿ ತೀರ ಕೂಲಂಕಷವಾಗಿ ಹುಡುಕಲು ಅಪ್ಪಣೆ ಕೊಟ್ಟ. ಅವರಿಗೆ ಕರಗಿಸದೆ ಉಳಿದ ಹದಿನೆಂಟು ಸಣ್ಣ ಚಿನ್ನದ ಮೀನುಗಳು ಸಿಕ್ಕವು. ಅವುಗಳನ್ನು ತಗಡಿನ ಡಬ್ಬದಲ್ಲಿ ಬಾಟಲುಗಳ ಹಿಂದೆ ಇಡಲಾಗಿತ್ತು. ಆಫೀಸರ್ ಕೆಲಸ ಮಾಡುವ ಬೆಂಚಿನ ಮೇಲೆ ಅವುಗಳನ್ನು ಇಟ್ಟುಕೊಂಡು ಒಂದೊಂದನ್ನೇ ಪರೀಕ್ಷಿಸಿದ ಮತ್ತು ಮೃದುವಾದ. ಅವನು, “ನಾನು ತೊಗೊಳ್ಳಬಹುದಾದ್ರೆ ಒಂದನ್ನ ತೊಗೊಳ್ತೀನಿ. ಒಂದು ಕಾಲದಲ್ಲಿ ಇವು ರಾಜರನ್ನ ಉರುಳಿಸಿದ ಸಂಕೇತವಾಗಿದ್ವು. ಈಗ ಹಳೆಕಾಲದ ವಸ್ತು ಅಷ್ಟೆ” ಎಂದ. ಅವನು ಮೆತ್ತಗಿರದ, ಹದಿಹರೆಯದವನಾಗಿದ್ದ ಮತ್ತು ಅಲ್ಲಿಯ ತನಕ ಕಾಣದ ಸಜವಾದ ಒಳ್ಳೆಯ ನಡತೆ ಅವನಲ್ಲಿತ್ತು. ಅವ್ರೇಲಿಯಾನೋ ಸೆಗುಂದೋ ಅವನಿಗೆ ಒಂದು ಸಣ್ಣ ಮೀನನ್ನು ಕೊಟ್ಟ. ಅಧಿಕಾರಿ ಚಿಕ್ಕ ಹುಡುಗನಂತೆ ಕಣ್ಣು ಹೊಳೆಸಿ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಉಳಿದವುಗಳನ್ನು ಡಬ್ಬದಲ್ಲಿ ವಾಪಸು ಹಾಕಿ, ಅದು ಮುಂಚೆ ಇದ್ದ ಕಡೆ ಇಟ್ಟ.
ಅವನು, “ಇದು ತುಂಬ ಒಳ್ಳೆ ವಸ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ನಮ್ಮ ದೊಡ್ಡ ಮನುಷ್ಯರಲ್ಲೊಬ್ಬ” ಎಂದ
ಆದರೆ ಅವನಲ್ಲಿ ಉಕ್ಕಿ ಬಂದ ಮಾನವ ಗುಣ ಅವನ ವೃತ್ತಿಪರ ನಡವಳಿಕೆಯನ್ನು ಬದಲಾಯಿಸಲಿಲ್ಲ. ಮತ್ತೆ ಬೀಗ ಹಾಕಿದ್ದ ಮೆಲ್‌ಕಿಯಾದೆಸ್ ರೂಮಿನ ಹತ್ತಿರ ನಿಂತಾಗ ಸಾಂತ ಸೋಫಿಯಾ ದೆಲಾ ಪಿಯದಾದ್ ಕೊನೆಯ ಯತ್ನ ಮಾಡಿದಳು. ಅವಳು, “ಆ ರೂಮಿನಲ್ಲಿ ಒಂದು ಶತಮಾನದಿಂದ ಯಾರೂ ಸುಳಿದಿಲ್ಲ” ಎಂದಳು. ಅಧಿಕಾರಿ ಅದನ್ನು ತೆಗೆಸಿದ ಹಾಗೂ ಲಾಟೀನಿನ ಬೆಳಕನ್ನು ಸುತ್ತ ಆಡಿಸಿದ. ಅವ್ರೇಲಿಯಾನೋ ಸೆಗುಂದೋ ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ಹೊಸೆ ಅರ್ಕಾದಿಯೋನ ಮುಖದ ಮೇಲೆ ಬೆಳಕು ಹಾದು ಹೋದಾಗ ಅವನ ಕಣ್ಣುಗಳನ್ನು ನೋಡಿದರು. ಅವರಿಗೆ ಅದು ಆತಂಕದ ಕೊನೆ ಮತ್ತು ಒಪ್ಪಿಕೊಳ್ಳುವುದರಲ್ಲಿ ಮುಗಿಯುವ ಮತ್ತೊಂದರ ಪ್ರಾರಂಭ ಎಂದುಕೊಂಡರು. ಆದರೆ ಅಧಿಕಾರಿ ಲಾಟೀನಿನಿಂದ ರೂಮನ್ನು ಪರೀಕ್ಷಿಸುವುದನ್ನು ಮುಂದುವರಿಸಿದ ಮತ್ತು ಕಪಾಟಿನಲ್ಲಿ ಪೇರಿಸಿದ್ದ ಎಪ್ಪತೆರಡು ಉಚ್ಚೆ ಪಾತ್ರೆಗಳನ್ನು ನೋಡುವ ತನಕ ಬೇರೆ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ. ಅನಂತರ ಅವನು ಲೈಟ್ ಹಾಕಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಂದಿಗಿಂತ ಗಂಭೀರನಾಗಿ ಹಾಗೂ ಆಲೋಚನಾಪರನಾಗಿ ಕುಳಿತಿದ್ದ. ಹಿಂದುಗಡೆ ಇದ್ದ ಶೆಲ್ಫ್‌ಗಳ ತುಂಬ ಪುಸ್ತಕಗಳು, ಹಾಳೆಯ ಸುರುಳಿಗಳಿದ್ದವು ಮತ್ತು ಇನ್ನೂ ಹೊಸದಾದ ಇಂಕ್ ಇದ್ದ ಇಂಕ್ ಬಾಟಲ್ ಹಾಗೂ ಅಚ್ಚುಕಟ್ಟಾಗಿದ್ದ ಕೆಲಸ ಮಾಡುವ ಟೇಬಲ್ ಇತ್ತು. ಅಲ್ಲಿ ಅದೇ ಶುದ್ಧವಾದ ಗಾಳಿ, ಅದೇ ನಿರ್ಮಲತೆ, ಧೂಳಿನಿಂದ ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅರ್ಥವಾಗದೇ ಹೋದ, ಅವ್ರೇಲಿಯಾನೋ ಸೆಗುಂದೋನ ಹುಡುಗಾಟದಿಂದ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳಿದ್ದವು. ಆದರೆ ಅಧಿಕಾರಿ ಉಚ್ಚೆ ಪಾತೆಯಲ್ಲಿ ಮಾತ್ರ ಆಸಕ್ತಿ ವಹಿಸಿದ್ದ
ಅವನು “ಈ ಮನೇಲಿ ಎಷ್ಟು ಜನ ಇದೀರಿ” ಎಂದ.
“ಐದು”
ಸಹಜವಾಗಿಯೇ ಅಧಿಕಾರಿಗೆ ಅದು ಅಥವಾಗಲಿಲ್ಲ. ಅವನು ಮಾತು ನಿಲ್ಲಿಸಿ ಅವ್ರೇಲಿಯಾನೋ ಸೆಗುಂದೋ ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ಇಬ್ಬರೂ ಇನ್ನೂ ನೋಡುತ್ತಿದ್ದ ಕಡೆ ನೋಟ ಬೀರಿದ. ಹೊಸೆ ಅರ್ಕಾದಿಯೋ ಸೆಗುಂದೋಗೆ ಸೈನಿಕ ತನ್ನ ಕಡೆ ನೋಡಿಯೂ ತಾನು ಕಾಣುತ್ತಿಲ್ಲ ಎನ್ನುವುದು ಗೊತ್ತಾಯಿತು. ಅನಂತರ ಅವನು ಲೈಟ್ ಆರಿಸಿ ಬಾಗಿಲು ಹಾಕಿದ. ಅವನು ಸೈನಿಕರ ಜೊತೆ ಮಾತಾಡಿದಾಗ ಹೊಸೆ ಅವ್ರೇಲಿಯಾನೋ ಸೆಗೊಂದೋಗೆ ಅವನು ರೂಮನ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಕಣ್ಣುಗಳಿಂದ ನೋಡಿದನೆಂದು ತಿಳಿದುಕೊಂಡ.
ಅವನು ಸೈನಿಕರಿಗೆ “ಈ ರೂಮಿನಲ್ಲಿ ಕೊನೇ ಪಕ್ಷ ಒಂದು ಶತಮಾನದಿಂದ ಯಾರೂ ಇರ್‍ಲಿಲ್ಲ ಅಂತ ಕಾಣ್ಸತ್ತೆ. ಇಲ್ಲಿ ಹಾವುಗಳು ಇದ್ದಿರ್‍ಬೇಕು”‘ಎಂದ.
ಬಾಗಿಲು ಹಾಕಿದ ಮೇಲೆ ಅರ್ಕಾದಿಯೋ ಸೆಗುಂದೋಗೆ ಯುದ್ಧ ಮುಗಿದಿರುವುದು ಖಾತರಿಯಾಯಿತು. ವರ್ಷಗಳ ಹಿಂದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯುದ್ಧದ ಆಕರ್ಷಣೆಯ ಬಗ್ಗೆ ಹೇಳಿದ್ದ ಮತ್ತು ಲೆಕ್ಕವಿಲ್ಲದಷ್ಟು ಸ್ವಂತ ಅನುಭವದಿಂದ ವಿವರಿಸಲು ಪ್ರಯತ್ನಿಸಿದ್ದ. ಹೊಸೆ ಅರ್ಕಾದಿಯೋ ಸೆಗುಂದೋ ಅವನನ್ನು ನಂಬಿದ್ದ. ಸೈನಿಕರು ತನ್ನ ಕಡೆ ನೋಡಿಯೂ ತಾನು ಕಾಣದಿದ್ದ ರಾತ್ರಿ, ಕಳೆದ ಕೆಲವು ತಿಂಗಳಿಂದ ಉಂಟಾಗುತ್ತಿದ್ದ ಆತಂಕದ ಬಗ್ಗೆ, ಯಾತನೆಯ ಬಗ್ಗೆ, ಸ್ಟೇಷನ್ ಬಳಿಯ ಜೀವ ಭಯದ ಬಗ್ಗೆ ಮತ್ತು ರೈಲಿನಲ್ಲಿ ತುಂಬಿದ ಸತ್ತ ಜನರ ಬಗ್ಗೆ ಯೋಚಿಸುತ್ತಿದ್ದಾಗ, ಹೊಸೆ ಅರ್ಕಾದಿಯೋ ಸೆಗುಂದೋ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೈಲಾಗದವನು ಅಥವಾ ಮೋಸಗಾರ ಎಂಬ ನಿರ್ಣಯಕ್ಕೆ ಬಂದ. ಯುದ್ಧವನ್ನು ವಿವರಿಸಲು ಅಷ್ಟೊಂದು ಪದಗಳು ಏಕೆ ಬೇಕಿತ್ತೆಂದು ಅವನಿಗೆ ಅರ್ಥವಾಗಲಿಲ್ಲ. ಏಕೆಂದರೆ ಒಂದೇ ಒಂದು ಪದ ಸಾಕಾಗಿತ್ತೆಂದು ಅವನಿಗೆ ತೋರಿತು. ಅದು ಭಯ. ಅದಕ್ಕೆ ಪ್ರತಿಯಾಗಿ ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಅದ್ಭುತವಾದ ಬೆಳಕಿನ ರಕ್ಷಣೆಯಲ್ಲಿ, ಮಳೆಯ ಸದ್ದಿನಲ್ಲಿ, ತೋರದಿರುವ ಭಾವನೆಯಲ್ಲಿ ಅವನಿಗೆ ಕಳೆದ ಜೀವಮಾನದಲ್ಲಿ ಒಂದು ಕ್ಷಣವೂ ಸಿಗದ ಸಮಾಧಾನ ಸಿಕ್ಕಿತು. ಅವನಲ್ಲಿ ಉಳಿದ ಒಂದೇ ಭಯವೆಂದರೆ ತನ್ನನ್ನು ಸಜೀವವಾಗಿ ಹೂಳುತ್ತಾರೆ, ಎಂದು. ಅವನು ಅದನ್ನು ನಿತ್ಯದ ಊಟ ತಂದು ಕೊಟ್ಟಾಗ ಸಾಂತ ಸೋಫಿಯಾ ದೆಲಾ ಪಿಯದಾದ್‌ಳಿಗೆ ಹೇಳಿದ. ಅವಳು ತನ್ನಲ್ಲಿರುವ ಎಲ್ಲ ಶಕ್ತಿಗಳನ್ನು ಮೀರಲು ಹೋರಾಡಿ, ಅವನು ಸತ್ತ ನಂತರವೇ ಹೂಳುವುದು ಖಾತರಿಯಾಗುವ ತನಕ, ತಾನು ಬದುಕಿರುತ್ತೇನೆಂದು ಮಾತು ಕೊಟ್ಟಳು. ಅನಂತರ ಹೊಸೆ ಅರ್ಕಾದಿಯೋ ಸೆಗುಂದೋ ಮೆಲ್‌ಕಿಯಾದೆಸ್‌ನ ಹಸ್ತ ಪ್ರತಿಗಳನ್ನು ಅರ್ಥವಾಗದಿದ್ದರೂ ಸಂತೋಷದಿಂದ ಮತ್ತೆ ಮತ್ತೆ ಓದುವುದಕ್ಕೆ ಉಳಿದ ಜೀವನವನ್ನು ಮುಡುಪಾಗಿರಿಸಲು ನಿಶ್ಚಯಿಸಿದ. ಅವನು ಟ್ರೈನಿನ ಶಬ್ದಕ್ಕೆ ಎಷ್ಟು ಹೊಂದಿಕೊಂಡನೆಂದರೆ ಎರಡು ತಿಂಗಳಲ್ಲಿ ಅದೊಂದು ರೀತಿಯ ನಿಶ್ಯಬ್ದವೇ ಆಗಿತ್ತು. ಸಾಂತ ಸೋಫಿಯಾ ದೆಲಾ ಪಿಯದಾದ್ ಬಂದು ಹೋಗುತ್ತಿದ್ದರಿಂದ ಮಾತ್ರ ಭಂಗ ಉಂಟಾಗುತ್ತಿತ್ತು. ಆದ್ದರಿಂದ ಅವನು ಅವಳಿಗೆ ಊಟವನ್ನು ಕಿಟಕಿಯ ಕಟ್ಟೆಯ ಮೇಲೆ ಇಟ್ಟು ಬಾಗಿಲಿಗೆ ಬೀಗ ಹಾಕಲು ಹೇಳಿದ. ಮನೆಯಲ್ಲಿ ಉಳಿದವರು, ಫೆರ್ನಾಂಡ ಕೂಡ ಸೇರಿದಂತೆ ಅವನನ್ನು ಮರೆತು ಬಿಟ್ಟರು. ಸೈನಿಕರು ಅವನನ್ನು ಕಂಡರೂ ಗುರುತು ಹಿಡಿಯದೇ ಹೋದದ್ದರಿಂದ ಅವನು ಅಲ್ಲಿರುವುದಕ್ಕೆ ಅವಳ ಅಭ್ಯಂತರವಿರಲಿಲ್ಲ. ಸೈನಿಕರು ಮಕೋಂದೋ ಬಿಟ್ಟು ಹೋದ ಆರು ತಿಂಗಳಾದ ಮೇಲೆ ಅವ್ರೇಲಿಯಾನೋ ಸೆಗುಂದೋ ಮಳೆ ನಿಲ್ಲುವ ತನಕ ಮಾತನಾಡಲು ಸಿಗುತ್ತಾನೆ ಎಂದು ಬಾಗಿಲು ತೆಗೆದ. ಬಾಗಿಲು ತೆಗೆದ ಕೂಡಲೇ ಅನೇಕ ಸಲ ಉಪಯೋಗಿಸಿದ ಮತ್ತು ನೆಲದ ಮೇಲೆ ಹರಡಿ ಬಿದ್ದ ಉಚ್ಚೆ ಪಾತ್ರೆಗಳು ಬಲವಾಗಿ ಆಕ್ರಮಣ ಮಾಡಿದ ಹಾಗೆ ಭಾಸವಾಯಿತು. ಸುಳಿದಾಡುತ್ತ, ಸುಳಿದಾಡುತ್ತ ತೀಕ್ಷ್ಣವಾದ ಗಾಳಿಗೆ ವಿಮನಸ್ಕನಾಗಿದ್ದ ಬಕ್ಕ ತಲೆಯ ಹೊಸೆ ಅರ್ಕಾದಿಯೋ ಸೆಗುಂದೋ ಅರ್ಥವಾಗದ ಹಸ್ತಪ್ರತಿಗಳನ್ನು ಇನ್ನೂ ಓದುತ್ತಿದ್ದ. ದಿವ್ಯವಾದ ಪ್ರಭೆ ಅವನನ್ನು ಬೆಳಗಿತ್ತು. ಬಾಗಿಲು ತೆಗೆದ ಶಬ್ದವಾದಾಗ ಅವನು ಸ್ವಲ್ಪವೇ ಕಣ್ಣೆತ್ತಿ ನೋಡಿದ. ಆದರೆ ಅವನ ಸೋದರನಿಗೆ ಆ ನೋಟದಲ್ಲಿ ಸರಿಪಡಿಸಲಾಗದ ಮುತ್ತಜ್ಜನ ವಿಧಿ ಲಿಖಿತವನ್ನು ಇನ್ನೊಮ್ಮೆ ಕಾಣಲು ಅಷ್ಟು ಸಮಯವೇ ಸಾಕಾಯಿತು.
ಹೊಸೆ ಅರ್ಕಾದಿಯೋ ಸೆಗುಂದೋ, “ಮೂರು ಸಾವಿರಕ್ಕಿಂತ ಹೆಚ್ಚಿಗೆ ಜನರಿದ್ರು. ನಂಗೆ ಖಚಿತವಾಗಿ ಗೊತ್ತು. ಅವ್ರೆಲ್ಲ ಸ್ಟೇಷನ್ ಹತ್ರ ಇದ್ದೋರು” ಎಂದಷ್ಟೇ ಹೇಳಿದ.

೧೬

ಮಳೆ ನಾಲ್ಕು ವರ್ಷ ಹನ್ನೊಂದು ತಿಂಗಳು, ಎರಡು ದಿನ ನಿಲ್ಲದೆ ಸುರಿಯಿತು. ತುಂತುರುಗಳಿದ್ದ ಅವಧಿಯೂ ಇದ್ದವು. ಆಗ ಮೋಡ ಚದುರಿದ್ದನ್ನು ಆಚರಿಸಲು ಪ್ರತಿಯೊಬ್ಬರೂ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಗೆಲುವಾಗಿರುತ್ತಿದ್ದರು. ಆದರೆ ಬಹಳ ಬೇಗನೆ ಮಧ್ಯೆ ಮಧ್ಯೆ ನಿಲ್ಲುತ್ತಿರುವುದು ದುಪ್ಪಟ್ಟಿನಷ್ಟು ಹೆಚ್ಚಾಗುವ ಮಳೆಯ ಸೂಚನೆ ಎಂದು ತಿಳಿದುಕೊಂಡರು. ಆಕಾಶ ವಿನಾಶಕಾರಿಯಾದ ಭಾರಿ ಮಳೆ ಸುರಿಸುವ ಸ್ಥಿತಿಗೆ ಬಂತು ಮತ್ತು ಉತ್ತರದಿಂದ ತಾರಸಿ ಮತ್ತು ಗೋಡೆಗಳನ್ನು ಕೆಡವಿ ಉರುಳಿಸುವ ಬಿರುಗಾಳಿ ಬೀಸಿ ಬಾಳೆ ತೋಟದ ಗಿಡಗಳನ್ನು ಒಂದನ್ನು ಕೂಡ ಬಿಡದೆ ಬುಡಮೇಲು ಮಾಡಿತು. ಉರ್ಸುಲಾ ಅಂದಿನ ದಿನಗಳನ್ನು ನೆನಪಿಸಿಕೊಂಡಂತೆ, ನಿದ್ದೆ ಬಾರದ ರೋಗದ ಅವಧಿಯಲ್ಲಿ ಅದಂತೆ, ದುರಂತವೇ ಬೇಸರದ ವಿರುದ್ಧದ ರಕ್ಷಣೆಗೆ ಸ್ಫೂರ್ತಿಕೊಡುತ್ತದೆ. ಸೋಮಾರಿತನಕ್ಕೆ ಶರಣಾಗದಂತೆ ಅತಿ ಹೆಚ್ಚು ಶ್ರಮಿಸುತ್ತಿದ್ದವರಲ್ಲಿ ಅವ್ರೇಲಿಯಾನೋ ಸೆಗುಂದೋ ಕೂಡ ಒಬ್ಬ. ಅವನು ರಭಸದಿಂದ ಮಳೆ ಸುರಿಯಲು ಪ್ರಾರಂಭವಾದ ಅಂದಿನ ರಾತ್ರಿ ಸಣ್ಣ ರಿಪೇರಿಗಾಗಿ ಮನೆಗೆ ಹೋಗಿದ್ದ. ಫೆರ್ನಾಂಡ ಅವನಿಗೆ ಕಪಾಟಿನಲ್ಲಿದ್ದ ಮುರಿದು ಹೋಗಿದ್ದ ಕೊಡೆಯನ್ನು ಹುಡುಕಿಕೊಟ್ಟಳು. ಅವನು, “ಅದೇನೂ ಬೇಕಿಲ್ಲ. ಮಳೆ ನಿಲ್ಲೋ ತನಕ ನಾನಿಲ್ಲೇ ಇರ್‍ತೀನಿ” ಎಂದ. ಅದೇನು ಸುಮ್ಮನೆ ಹೇಳಿದಂಥ ಮಾತಾಗಿರಲಿಲ್ಲ. ಅವನು ಅಕ್ಷರಶ: ಹಾಗೆಯೇ ಮಾಡಿದ್ದು. ಏಕೆಂದರೆ ಪೆತ್ರಾ ಕೊತೆಸ್ ಮನೆಯಲ್ಲಿ ಅವನ ಬಟ್ಟೆಗಳು ಇದ್ದದ್ದರಿಂದ ಪ್ರತಿ ಮೂರು ದಿನಗಳಿಗೊಂದು ಸಲ ಅವನು ಎಲ್ಲ ಬಟ್ಟೆಗಳನ್ನು ಒಗೆಯಲು ಬಿಚ್ಚಿ ಹಾಕಿ, ಅವು ಒಣಗುವ ತನಕ ಚಡ್ಡಿಯಲ್ಲಿ ಇರುತ್ತಿದ್ದ. ಬೇಸರವಾಗಬಾರದು ಎಂದು ಅವನು ಮನೆಯಲ್ಲಿ ರಿಪೇರಿ ಮಾಡಬೇಕಾದ ಕೆಲಸದಲ್ಲಿ ತೊಡಗಿದ. ಅವನು ಬಾಗಿಲು ತಿರುಗಣಿಗಳನ್ನು ಸರಿ ಮಾಡಿದ. ಬೀಗಗಳಿಗೆ ಎಣ್ಣೆ ಹಾಕಿದ. ಸ್ಕ್ರೂಗಳನ್ನು ಗಟ್ಟಿಯಾಗಿ ತಿರುಗಿಸಿದ ಮತ್ತು ಬಾಗಿಲುಗಳ ಅಂಚು ಕೆತ್ತಿ ಸಡಿಲಗೊಳಿಸಿದ. ಅವನು ಅನೇಕ ತಿಂಗಳ ಕಾಲ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಕಾಲದಲ್ಲಿ ಜಿಪ್ಸಿಗಳು ಬಿಟ್ಟು ಹೋದ ಟೂಲ್ ಬಾಕ್ಸ್ ಹಿಡಿದುಕೊಂದು ಓಡಾಡುತ್ತಿದ್ದ. ಅಲ್ಲದೆ ಯಾರಿಗೂ ಕೂಡ ಅವನು ತಿಳಿಯದೆ ಮಾಡಿದ ವ್ಯಾಯಾಮದಿಂದಲೋ, ಮಳೆಗಾಲದ ರೇಜಿಗೆಯಿಂದಲೋ ಅಥವಾ ಸ್ವತ: ಮಾಡಿಕೊಂಡ ಉಪವಾಸದಿಂದಲೋ ಅವನ ಹೊಟ್ಟೆ ಇಷ್ಟಿಟ್ಟೆ, ಇಷ್ಟಿಟ್ಟೆ ಸಣ್ಣಗಾಯಿತು ಮತ್ತು ಆಮೆಯ ಹಾಗೆ ಊದಿಕೊಂಡಿದ್ದ ಮುಖದ ಉರಿಗೆಂಪು ಕಡಿಮೆಯಾಯಿತು. ಜೋಡಿಗಲ್ಲ ಮೃದುವಾಗಿದ್ದಲ್ಲದೆ ಮತ್ತೆ ಶೂಗಳನ್ನು ಹಾಕಿಕೊಳ್ಳಲು ಅವನಿಗೆ ಸಾಧ್ಯವಾಗುತ್ತಿತ್ತು. ಎಲ್ಲ ಹಿಡಿಕೆಗಳನ್ನು ಸರಿ ಮಾಡುತ್ತಿದ್ದ, ಗಡಿಯಾರವನ್ನು ರಿಪೇರಿ ಮಾಡುತ್ತಿದ್ದ ಅವನನ್ನು ನೋಡಿದ ಫೆರ್ನಾಂಡಳಿಗೆ, ಅವನೂ ಕಟ್ಟುವ ಚಾಳಿಗೆ ಬಿದ್ದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮತ್ತು ಅವನ ಸಣ್ಣ ಬಂಗಾರದ ಮೀನು ತಯಾರಿಕೆ, ಅಮರಾಂತ ಮತ್ತು ಅವಳ ಮುಸುಕು, ಗುಂಡಿಗಳು, ಹೊಸೆ ಅರ್ಕಾದಿಯೋ ಮತ್ತು ಚರ್ಮದ ಹಾಳೆಗಳು ಹಾಗೂ ಉರ್ಸುಲಾ ಮತ್ತು ಅವಳ ನೆನಪುಗಳು ಇರುವ ಹಾಗಿದ್ದಾನೋ ಹೇಗೆ ಎಂದುಕೊಂಡಳು. ಮಳೆಯಿಂದ ಉಂಟಾಗುತ್ತಿದ್ದ ಕೆಡುಕೆಂದರೆ ಅದು ಪ್ರತಿಯೊಂದರ ಮೇಲೆ ಪ್ರಭಾವ ಬೀರಿತ್ತು. ಅತಿ ಹೆಚ್ಚು ಒಣಗಿರುತ್ತಿದ್ದ ಮೆಷಿನ್‌ಗಳಲ್ಲಿ ಕೂಡ ಪ್ರತಿ ಮೂರು ದಿನಗಳಿಗೆ ಎಣ್ಣೆ ಸೋಂಕಿಸದಿದ್ದರೆ ಅವುಗಳ ಗೇರ್ ಭಾಗದಲ್ಲಿ ಪಾಚಿ ಕಟ್ಟಿದಂತಾಗುತ್ತಿತ್ತು. ಚಿತ್ರ ನೇಯ್ದಿರುವ ಬಟ್ಟೆಗಳ ದಾರಗಳು ಹುಡಿಯಾಗುತ್ತಿದ್ದವು, ಒದ್ದೆ ಬಟ್ಟೆಗಳು ಬಣ್ಣಗೆಟ್ಟು ತುಂಡಾಗುತ್ತಿದ್ದವು. ಗಾಳಿಯಲ್ಲಿ ಎಷ್ಟು ತೇವವಿತ್ತೆಂದರೆ ಮೀನುಗಳು ಬಾಗಿಲ ಮುಖಾಂತರ ಬಂದು ರೂಮುಗಳಲ್ಲಿ ಈಜುತ್ತ ಕಿಟಕಿಗಳಿಂದ ಹೊರಗೆ ಹೋಗುತ್ತಿದ್ದವು. ಒಂದು ದಿನ ಬೆಳಿಗ್ಗೆ ಫೆರ್ನಾಂಡ ತನ್ನ ಅಂತಿಮ ಗಳಿಗೆ ಬಂದಿದೆ ಎನ್ನುವ ಭಾವದಿಂದ ಎದ್ದಳು. ಅವಳು ತನ್ನನ್ನು ಸ್ಟ್ರೆಚರ್‌ನಲ್ಲಿ ಆದರೂ ಸರಿಯೆ ಫಾದರ್ ಆಂಟೋನಿಯೋ ಇಸಬಲ್ ಬಳಿಗೆ ಕರೆದುಕೊಂಡು ಹೋಗಲು ಹೇಳಿದ್ದಳು. ಆಗ ಸಾಂತ ಸೋಫಿಯಾ ದೆಲಾ ಪಿಯದಾದ್‌ಳಿಗೆ ಅವಳ ಬೆನ್ನಿನ ಮೇಲೆ ಜಿಗಣಿಗಳ ಸಾಲು ಇರುವುದು ಕಂಡು ಬಂತು. ಅವಳು ಅವಳನ್ನು ರಕ್ತ ಹೀರಿ ಸಾಯಿಸುವುದಕ್ಕಿಂತ ಮುಂಚೆ ಒಂದೊಂದನ್ನೇ ಕಿತ್ತು ಸಾಯಿಸಿದಳು. ಅವರು ಮನೆಯೊಳಗಿನ ನೀರನ್ನು ಹೊರಗೆ ಹಾಕಲು ಹಳ್ಳ ತೋಡಬೇಕಾಗಿತ್ತು. ಇದರಿಂದ ಕಪ್ಪೆ ಹಾಗೂ ಬಸವನ ಹು;ಳುಗಳು ನಿವಾರಣೆಯಾಗಿ, ಮಂಚದ ಕಂಬದ ಕೆಳಗಿನ ಇಟ್ಟಿಗೆಗಳನ್ನು ತೆಗೆದು, ಅವರು ಶೂ ಹಾಕಿಕೊಂಡು ಮತ್ತೆ ಮನೆಯಲ್ಲಿ ಓಡಾಡಲು ಸಾಧ್ಯವಾಗುತ್ತಿತ್ತು. ಇಂಥ ಸಣ್ಣ ಸಣ್ಣ ವಿವರಗಳಲ್ಲಿ ಮಗ್ನನಾದ ಅವ್ರೇಲಿಯಾನೋ ಸೆಗುಂದೋಗೆ ಒಂದು ದಿನ ಮಧ್ಯಾಹ್ನ ಹೊತ್ತಿಗೆ ಮುಂಚೆಯೇ ಸಂಜೆಯಾದದ್ದನ್ನು ಯೋಚಿಸುತ್ತಿದ್ದಾಗ ಪೆತ್ರಾ ಕೊತೆಸ್ ಕುರಿತು ಮೈಯಲ್ಲಿ ಯಾವ ಕಂಪನವೂ ಉಂಟಾಗದೆ ಹೋಗುವ ತನಕ ಅರಿವಿಗೆ ಬಾರದೆಯೇ ತನಗೆ ವಯಸ್ಸಾಗುತ್ತಿದೆ ಎನ್ನುವುದು ಅವನಿಗೆ ತಿಳಿದಿರಲಿಲ್ಲ. ಅವನಿಗೆ ಫೆರ್ನಾಂಡಳ ಸಪ್ಪೆ ಪ್ರೀತಿಗೆ ವಾಪಸು ಹೋಗಲು ಯಾವುದೇ ತೊಂದರೆ ಇರಲಿಲ್ಲ. ಏಕೆಂದರೆ ಅವಳ ರೂಪಕ್ಕೆ ವಯಸ್ಸಿನಿಂದಾಗಿ ಗಾಂಭೀರ್ಯ ಬಂದಿತ್ತು. ಆದರೆ ಮಳೆ ಎಲ್ಲ ಬಗೆಯ ಭಾವಾವೇಶದಿಂದ ಅವನನ್ನು ಹೊರತು ಪಡಿಸಿತ್ತು ಮತ್ತು ಅವನಲ್ಲಿ ಅಪೇಕ್ಷೆ ಇಲ್ಲದ ಪ್ರಶಾಂತತೆ ತುಂಬಿತ್ತು. ಬೇರೆ ಕಾಲದಲ್ಲಾಗಿದ್ದರೆ ಒಂದು ವರ್ಷವಾದರೂ ಬಿಡದ ಈ ಮಳೆಯಿಂದ ಏನೇನು ಮಾಡಲು ಸಾಧ್ಯವಿತ್ತು ಎನ್ನುವ ಆಲೋಚನೆಯಿಂದ ತನ್ನಷ್ಟಕ್ಕೆ ನಕ್ಕ. ಅವನು ಬಾಳೆ ತೋಟದ ಕಂಪನಿಯವರು ಜನಪ್ರಿಯಗೊಳಿಸುವ ಬಹಳ ಮುಂಚೆಯೇ ಮಕೋಂದೋಗೆ ಜಿಂಕ್ ಶೀಟುಗಳನ್ನು ತಂದ ಮೊದಲನೆಯವನು. ಅದನ್ನು ಪಿಯತ್ರೋ ಕೊತೆಸ್‌ಳ ಬೆಡ್‌ರೂಮಿನ ಚಾವಣಿಗಾಗಿ ಮತ್ತು ಆ ಸಮಯದಲ್ಲಿ ಬೀಳುತ್ತಿದ್ದ ಮಳೆ ಹೊರಡಿಸುತ್ತಿದ್ದ ತೀವ್ರ ಸಾಮೀಪ್ಯವನ್ನು ಅನುಭವಿಸುವ ಕಾರಣಕ್ಕಾಗಿ ತಂದದ್ದು. ಆದರೆ ತಾರುಣ್ಯದ ವ್ಯೆಪರೀತ್ಯದ ಆ ನೆನಪುಗಳು ಕೂಡ, ಕಳೆದ ಬಾರಿಯ ಲಂಪಟತನದಲ್ಲಿ, ತನ್ನದೆಲ್ಲವೂ ಕೊನೆಯಾದಂತೆ, ಅವನ ಮೇಲೆ ಪರಿಣಾಮ ಬೀರಲಿಲ್ಲ. ಯಾವುದೇ ರೀತಿಯ ವ್ಯಥೆ ಇಲ್ಲದೆ ಅಥವಾ ಪಶ್ಚಾತ್ತಾಪವಿಲ್ಲದೆ ಅದನ್ನು ನೆನಪಿಸಿಕೊಳ್ಳಲು ಸಾಧ್ಯವಾಗುವ ಮಹತ್ತರವಾದ ಉಡುಗೊರೆಯೊಂದೇ ಅವನಿಗೆ ಉಳಿದದ್ದು, ಮಳೆಯಿಂದಾಗಿ ಅವನಿಗೆ ಹಿಂದಿನದನ್ನು ಕುರಿತು ಯೋಚಿಸುವುದಕ್ಕೆ ಅಲ್ಲದೆ ಕೆಲಸದ ಉಪಕರಣ ಹಾಗೂ ಎಣ್ಣೆ ಡಬ್ಬ ಅವನಿಗೆ ತನ್ನ ಜೀವನದಲ್ಲಿ ಕೈಗೊಳ್ಳಬಹುದಾಗಿದ್ದ ಹಾಗೂ ಕೈಗೊಳ್ಳದಿದ್ದ ಉದ್ದಿಮೆಗಳ ಬಗ್ಗೆ ಅರಿವು ಮೂಡಿಸಿತು. ಆದರೆ ಅವರೆಡೂ ಸತ್ಯ ಸಂಗತಿಗಳಾಗಿರಲಿಲ್ಲ. ಏಕೆಂದರೆ ಮನೆಯಲ್ಲಿ ಕುಳಿತುಕೊಂಡಿರಬೇಕೆಂಬ ಆಕರ್ಷಣೆ ಅವನಲ್ಲಿ ಉಂಟಾದದ್ದಕ್ಕೆ ಹೊಸದಾಗಿ ಕಂಡುಕೊಂಡ ಅಂಶವಾಗಲಿ ಅಥವಾ ನೈತಿಕ ಭಾವನೆಯಾಗಲಿ ಕಾರಣವಾಗಿರಲಿಲ್ಲ. ಅದು ಬಹಳ ದೂರದಿಂದ ಬಂದದ್ದು. ಮಳೆಯ ಕಿರಿಕಿರಿಯಿಂದ ಮೆಲ್‌ಕಿಯಾದೆಸ್‌ನ ರೂಮಿನಲ್ಲಿದ್ದಾಗ ಅವನು ಅದ್ಭುತವಾದ ಹಾರುವ ಜಮಖಾನ, ಇಡೀ ಹಡಗನ್ನೇ ತಿನ್ನುವ ತಿಮಿಂಗಿಲ ಮತ್ತು ಆ ದಿನಗಳಲ್ಲಿ ಯಾವುದೋ ಉದಾಸೀನ ಗಳಿಗೆಯಲ್ಲಿ ಪುಟ್ಟ ಅವ್ರೇಲಿಯಾನೋ ಅಂಗಳಕ್ಕೆ ಬಂದಾಗ ಅವನ ಅಜ್ಜ ಅವ್ರೇಲಿಯಾನೋನ ಗುರುತಿನ ಗುಟ್ಟನ್ನು ಕಂಡು ಹಿಡಿದ. ಅವನ ಕೂದಲು ಕಟ್ ಮಾಡಿ, ಬಟ್ಟೆ ತೊಡಿಸಿ ಹೇಗೆ ಜನರಿಗೆ ಹೆದರಬಾರದೆಂದು ಕಲಿಸಿಕೊಟ್ಟ. ಬಹಳ ಬೇಗನೆ ಅವನು ಎದ್ದು ಕಾಣುವ ಕೆನ್ನೆಮೂಳೆ, ಬೆದರಿದ ನೋಟ ಹಾಗೂ ಏಕಾಂತದ ರೀತಿಯಿಂದ ನ್ಯಾಯ ಸಮ್ಮತವಾದ ಅವ್ರೇಲಿಯಾನೋ ಬ್ಯುಂದಿಯಾ ಎಂದು ಸಿದ್ಧವಾಯಿತು. ಇದರಿಂದ ಫೆರ್ನಾಂಡಳಿಗೆ ನಿರಾಳವಾಯಿತು. ಸ್ವಲ್ಪ ಕಾಲದಿಂದ ಅವಳು ತನ್ನ ಹಮ್ಮಿನ ಮಟ್ಟವನ್ನು ಲೆಕ್ಕಹಾಕಿಕೊಂಡಿದ್ದಳು. ಆದರೆ ಅದರ ಉಪಶಮನಕ್ಕೆ ಅವಳಿಗೆ ಯಾವ ದಾರಿಯೂ ಕಂಡಿರಲಿಲ್ಲ. ಏಕೆಂದರೆ ಅದರ ಬಗ್ಗೆ ಯೋಚಿಸಿದಷ್ಟೂ ಅದು ಅತಾರ್ಕಿಕವಾಗಿ ಕಾಣುತ್ತಿತ್ತು. ಅವಳಿಗೆ ಅವ್ರೇಲಿಯಾನೋ ಸೆಗುಂದೋ ಅಜ್ಜನ ಹಾಗೆ ಸಂತೋಷದಿಂದ ನಡೆದುಕೊಳ್ಳುತ್ತಾನೆಂದು ಗೊತ್ತಿದ್ದರೆ ಅವಳು ವಿಷಯಗಳನ್ನು ಕಗ್ಗಂಟಾಗಿಸಿಕೊಂಡು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗೂ ಒಂದು ವರ್ಷದಿಂದ ನೊಂದುಕೊಳ್ಳುವುದರಿಂದ ಮುಕ್ತಳಾಗುತ್ತಿದ್ದಳು. ಎರಡು ಹಲ್ಲುಗಳು ಬಂದಿದ್ದ ಅಮರಾಂತ ಉರ್ಸುಲಾ ಚಿಕ್ಕ ಮಗುವನ್ನು ಓಡಾಡುವ ಗೊಂಬೆ ಎಂದು ಭಾವಿಸಿದಳು. ಅವಳು ಮಳೆಯಿಂದ ಉಂಟಾದ ಜಿಗುಪ್ಸೆಗೆ ಸಮಾಧಾನ ತಂದಿದ್ದಳು. ಅವ್ರೇಲಿಯಾನೋ ಸೆಗುಂದೋಗೆ ಮೆಮೆಳ ಹಳೆಯ ರೂಮಿನಲ್ಲಿದ್ದ ಅಂದಿನಿಂದ ಯಾರೂ ಕಣ್ಣೆತ್ತಿ ನೋಡದಿದ್ದ ಇಂಗ್ಲಿಷ್ ವಿಶ್ವಕೋಶ ನೆನಪಾಯಿತು. ಅವನು ಮಕ್ಕಳಿಗೆ ಚಿತ್ರಗಳನ್ನು ಅದರಲ್ಲೂ ಪ್ರಾಣಿಗಳ ಚಿತ್ರಗಳನ್ನು ಮತ್ತು ನಂತರ ದೂರದ ದೇಶಗಳ ಭೂಪಟಗಳನ್ನು, ಫೋಟೋಗಳನ್ನು ಮತ್ತು ಪ್ರಖ್ಯಾತರನ್ನು ತೋರಿಸಿದ. ಅವನಿಗೆ ಇಂಗ್ಲಿಷ್ ಸ್ವಲ್ಪವೂ ಗೊತ್ತಿಲ್ಲದೆ ಪ್ರಖ್ಯಾತವಾದ ಪಟ್ಟಣಗಳು ಮತ್ತು ಜನರನ್ನು ಕೇವಲ ಗುರುತಿಸಬಲ್ಲವನಾಗಿದ್ದ ಅವನು ಮಕ್ಕಳ ತಣಿಯದ ಕುತೂಹಲವನ್ನು ನೀಗುವುದಕ್ಕಾಗಿ ಹೆಸರುಗಳನ್ನು ಮತ್ತು ಕಥೆಗಳನ್ನು ಸೃಷ್ಟಿಸಿಕೊಂಡು ಹೇಳುತ್ತಿದ್ದ.

ಫೆರ್ನಾಂಡ, ತನ್ನ ಗಂಡ ಇಟ್ಟುಕೊಂಡವಳ ಮನೆಗೆ ಹೋಗಲು ಆಕಾಶ ತಿಳಿಯಾಗುವುದಕ್ಕೆ ಕಾಯುತ್ತಿದ್ದಾನೆ ಎಂದು ತಿಳಿದುಕೊಂಡಿದ್ದಳು. ಮಳೆಯ ಪ್ರಾರಂಭದ ತಿಂಗಳುಗಳಲ್ಲಿ ಅವನು ತನ್ನ ಬೆಡ್‌ರೂಮಿಗೆ ನುಸುಳಿ ಬರುತ್ತಾನೆಂಬ ಗಾಬರಿಯಿತ್ತು ಮತ್ತು ಅಮರಾಂತ ಉರ್ಸುಲಾ ಹುಟ್ಟಿದ ಮೇಲೆ ತಾನು ಆ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯವೆಂದು ಹೇಳಿಕೊಳ್ಳಬೇಕಾದ ನಾಚಿಕೆಗೆಗೆ ತುತ್ತಾಗಬೇಕಾಗುತ್ತದೆ ಎಂದುಕೊಂಡಿದ್ದಳು. ಅವಳು ಕಾಣದ ಡಾಕ್ಟರುಗಳ ಜೊತೆ ನಡೆಸುತ್ತಿದ್ದ, ಆತಂಕದ ಪತ್ರ ವ್ಯವಹಾರಕ್ಕೆ ಅದು ಕಾರಣವಾಗಿತ್ತು. ಅದಕ್ಕೆ ಆಗಾಗ್ಗೆ ಒಳಗಾಗುತ್ತಿದ್ದ ಟಪಾಲಿನ ಅವ್ಯವಸ್ಥೆಯಿಂದ ಅಡೆತಡೆ ಉಂಟಾಗುತ್ತಿತ್ತು ಮೊದಲ ತಿಂಗಳುಗಳಲ್ಲಿ ರೈಲುಗಳು ಹಳಿ ತಪ್ಪುತ್ತಿವೆ ಎನ್ನುವುದು ಗೊತ್ತಾದಾಗ ಕಾಣದ ಡಾಕ್ಟರುಗಳು ಅವಳ ಕಾಗದಗಳು ಬರುತ್ತಿಲ್ಲವೆಂದು ತಿಳಿಸಿದರು. ಅನಂತರ ಸಂಪರ್ಕ ಕಡಿದು ಬಿದ್ದಾಗ, ಅವಳು ತನ್ನ ಗಂಡ ರಕ್ತ ಹರಿದ ಜಾತ್ರೆಯಲ್ಲಿ ಧರಿಸಿದ್ದ ಹುಲಿಯ ಮುಖವಾಡ ಹಾಕಿಕೊಂಡು, ಸುಳ್ಳು ಹೆಸರು ಹೇಳಿ, ಬಾಳೆ ತೋಟದ ಡಾಕ್ಟರ್‌ಗಳಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಗಂಭೀರವಾಗಿ ಯೋಚಿಸಿದ್ದಳು. ಆದರೆ ಸುರಿಮಳೆಯ ಬಗ್ಗೆ ಒಂದಿಲ್ಲೊಂದು ಅಹಿತವಾದ ಸುದ್ದಿಯನ್ನು ತರುತ್ತಿದ್ದವರಲ್ಲಿ ಒಬ್ಬ ಅವಳಿಗೆ ಕಂಪನಿಯವರು ಆಸ್ಪತ್ರೆಗಳನ್ನು ಮುಚ್ಚಿ ಮಳೆ ಇಲ್ಲದ ಕಡೆಗೆ ಹೋಗುತ್ತಿದ್ದಾರೆಂದು ತಿಳಿಸಿದ. ಆಗ ಅವಳು ಅದರ ಆಸೆ ಕೈ ಬಿಟ್ಟಳು. ಅವಳು ಮಳೆ ನಿಂತು ಮತ್ತೆ ಟಪಾಲು ಸೇವೆ ಶುರುವಾಗುವ ತನಕ ಕಾಯುವುದಕ್ಕಾಗಿ ಸಮಾಧಾನ ತಂದುಕೊಂಡಳು. ಇದರ ಮಧ್ಯೆ ಅವಳು ಕಾಯಿಲೆಯ ಉಪಶಮನಕ್ಕಾಗಿ ತನ್ನ ಕಲ್ಪನೆಯ ಮೊರೆಹೊಕ್ಕಳು. ಏಕೆಂದರೆ ಅವಳು ಕತ್ತೆಯ ಹಾಗೆ ಹುಲ್ಲು ತಿನ್ನುತ್ತಿದ್ದ ಡೌಲಿನ ಫ್ರೆಂಚ್ ಡಾಕ್ಟರನ ಕೈಗೆ ಸಿಗುವುದಕ್ಕಿಂತ ಸಾಯಲು ಸಿದ್ಧಳಾಗಿದ್ದಳು. ಅವಳು ಉರ್ಸುಲಾಗೆ ತನ್ನ ರೋಗಗಳಿಗೆ ಕೆಲವು ನಾಟಿ ಔಷಧಿಗಳು ಗೊತ್ತಿರಬಹುದು ಎಂದು ಅವಳಿಗೆ ಹೆಚ್ಚು ಸಮೀಪವಾದಳು. ಆದರೆ ಅವಳಿಗೆ ವಸ್ತುಗಳನ್ನು ಅವುಗಳ ಹೆಸರಿನಿಂದ ಕರೆಯದೆ ಅಭ್ಯಾಸದಿಂದ ಮೊದಲಿನದನ್ನು ಕೊನೆಗೆ ಹೇಳುವಂತೆ ಮಾಡುತ್ತಿತ್ತು. ಅಲ್ಲದೆ ಜನ್ಮ ಕೊಟ್ಟಳು ಎನ್ನುವುದಕ್ಕೆ “ಹೊರಗೆ ಹಾಕಿದಳು” ಮತ್ತು “ಹರಿಯುತ್ತಿದೆ” ಎನ್ನುವುದಕ್ಕೆ “ಉರಿಯುತ್ತಿದೆ” ಎಂದು ನಾಚಿಕೆ ಕಡಿಮೆಯಾಗುವುದಕ್ಕಾಗಿ ಹೇಳುತ್ತಿದ್ದಳು. ಇದರಿಂದ ಉರ್ಸುಲಾ ಅವಳಿಗೆ ಕರುಳಿನ ತೊಂದರೆ ಇದೆ, ಗರ್ಭಾಶಯವಲ್ಲ ಎನ್ನುವ ತೀರ್ಮಾನಕ್ಕೆ ಬಂದಳು ಮತ್ತು ಅವಳಿಗೆ ಖಾಲಿ ಹೊಟ್ಟೆಯಲ್ಲಿ ರಸ ಕರ್ನೂಶ ಕಷಾಯವನ್ನು ಕುಡಿಯಲು ಹೇಳಿದಳು. ನಾಚಿಕೆಪಟ್ಟುಕೊಳ್ಳಬೇಕಾದ್ದಕ್ಕೆ ಮತ್ತು ನಾಚಿಕೆ ಪಡಬೇಕಾಗಿಲ್ಲದ್ದಕ್ಕೆ ಯಾತನೆ ಅನುಭವಿಸುತ್ತಿದ್ದರಿಂದ ಹಾಗೂ ಕಾಗದಗಳು ಕಳೆದು ಹೋದದ್ದಕ್ಕೆ ಫರ್ನಾಂಡಳನ್ನು ಮಳೆ ಬಗ್ಗೆ ಚಿಂತಿಸುವಂತೆ ಮಾಡುತ್ತಿರಲಿಲ್ಲ. ಏಕೆಂದರೆ ಅವಳ ಇಡೀ ಜೀವನ ಮಳೆ ಬರುತ್ತಿದೆಯೇನೋ ಎನ್ನುವ ಹಾಗೆ ಕಳೆದಿತ್ತು. ಅವಳು ತನ್ನ ದಿನಚರಿಯನ್ನಾಗಲಿ ಅಥವಾ ವಿಧ್ಯುಕ್ತ ಕ್ರಿಯೆಗಳನ್ನಾಗಲಿ ಬದಲಿಸಲಿಲ್ಲ. ಇಟ್ಟಿಗಳ ಮೇಲೆ ಟೇಬಲ್ಲನ್ನು ಇಟ್ಟು ಮೇಲೆ ಎತ್ತಿದಾಗ ಮತ್ತು ಕುಳಿತುಕೊಳ್ಳುವವರ ಕಾಲು ಒದ್ದೆಯಾಗಬಾರದೆಂದು ಕುರ್ಚಿಗಳ ಕೆಳಗೆ ಹಲಗೆಗಳನ್ನು ಇಟ್ಟಾಗ ಕೂಡ ಅವಳು ಟೇಬಲ್ ಕ್ಲಾತ್‌ಗಳನ್ನು ಹಾಕುತ್ತಿದ್ದಳು ಹಾಗೂ ಕ್ಯಾಂಡಲ್‌ಗಳನ್ನು ಹಚ್ಚಿ ಚೀನಾದ ಪಾತ್ರೆಗಳನ್ನು ಇಡುತ್ತಿದ್ದಳು. ಏಕೆಂದರೆ ಅವಳು ಪದ್ಧತಿಗಳನ್ನು ವಿನಾಶದ ನೆಪದಿಂದ ಬದಲು ಮಾಡಬಾರದು ಎಂದುಕೊಂಡಿದ್ದಳು. ಈಗ ಯಾರೂ ಹೊರಗೆ ರಸ್ತೆಯಲ್ಲಿ ಹೋಗುತ್ತಿರಲಿಲ್ಲ. ಆದರೆ ಅದು ಫೆರ್ನಾಂಡಳನ್ನು ಅವಲಂಬಿಸಿದ್ದರೆ ಅವರು ಮಳೆ ಪ್ರಾರಂಭವಾದ ಕಾಲದಿಂದಲ್ಲದೆ ಅದಕ್ಕಿಂತ ಮುಂಚಿತವಾಗಿ ಎಂದೂ ಹಾಗೆ ಮಾಡುತ್ತಿರಲಿಲ್ಲ. ಏಕೆಂದರೆ ಬಾಗಿಲುಗಳನ್ನು ಕಂಡುಹಿಡಿದದ್ದು ಅವುಗಳನ್ನು ಮುಚ್ಚಿ ಒಳಗಿರುವುದಕ್ಕಾಗಿ ಹಾಗೂ ರಸ್ತೆಯಲ್ಲಿ ಏನಾಗುತ್ತಿದೆ ಎನ್ನುವುದು ಬೆಲೆವೆಣ್ಣುಗಳಿಗೆ ಸಂಬಂಧಪಟ್ಟಿದ್ದು ಎಂದು ಅವಳ ಭಾವನೆಯಾಗಿತ್ತು. ಆದರೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ಅಂತಿಮ ಯಾತ್ರೆ ಸಾಗುತ್ತಿದೆ ಎಂದು ತಿಳಿದಾಗ ನೊಂದವಳಲ್ಲಿ ಅವಳು ಮೊದಲಿಗಳು. ಅದನ್ನು ಅರ್ಧ ತೆರೆದ ಕಿಟಕಿಯಿಂದ ಮಾತ್ರ ನೋಡಿದರೂ ಸಹ ಅವಳಿಗೆ ಅತೀವವಾದ ನೋವುಂಟಾಗಿ ಬಹಳ ದಿನಗಳ ತನಕ ತನ್ನ ಬಲಹೀನತೆಗಾಗಿ ಪಶ್ಚಾತ್ತಾಪ ಪಟ್ಟುಕೊಂಡಳು.

ಅವಳಿಗೆ ಅದಕ್ಕಿಂತ ಕೆಟ್ಟದಾದ ಶವ ಯಾತ್ರೆಯನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಎತ್ತಿನ ಗಾಡಿಯಲ್ಲಿ ಬಾಳೆ ಎಲೆಗಳ ಚಪ್ಪರ ಕಟ್ಟಿ ಶವಪೆಟ್ಟಿಗೆಯನ್ನು ಇಟ್ಟಿದ್ದರು. ಆದರೆ ಮಳೆಯ ಹೊಡೆತ ಹೆಚ್ಚಾಗಿದ್ದು ರಸ್ತೆಯಲ್ಲಿ ಕೆಸರು ತುಂಬಿ ಪ್ರತಿ ಹೆಜ್ಜೆಗೂ ಗಾಡಿಯ ಚಕ್ರ ಹೂತು ಹೋಗುತ್ತಿತ್ತು ಮತ್ತು ಹೊದಿಕೆ ಬಿದ್ದು ಹೋಗುವುದರಲ್ಲಿತ್ತು. ಶವ ಪೆಟ್ಟಿಗೆಯ ಮೇಲೆ ಬಿದ್ದ ನೀರು ಮೇಲೆ ಇಟ್ಟಿದ್ದ ಧ್ವಜವನ್ನು ತೋಯಿಸುತ್ತಿತ್ತು. ವಾಸ್ತವವಾಗಿ ಅದು ರಕ್ತ ಹಾಗೂ ಗಂಧಕದ ಕಲೆಗಳಿದ್ದ ಧ್ವಜವಾಗಿದ್ದು ಗೌರವಾನ್ವಿತ ಹಳಬರಿಂದ ನಿರಾಕರಿಸ್ಪಟ್ಟಿತ್ತು. ಶವ ಪೆಟ್ಟಗೆಯ ಮೇಲೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಕೋಟ್ ನೇತು ಹಾಕುವ ಅಡ್ಡ ಪಟ್ಟಿಯ ಮೇಲೆ, ಅಮರಾಂತಳ ಹೊಲಿಗೆಯ ರೂಮಿಗೆ ಆಯುಧವಿಲ್ಲದೆ ಹೋಗುವ ಮುಂಚೆ ಇಡುತ್ತಿದ್ದ ಬೆಳ್ಳಿ ಹಾಗೂ ತಾಮ್ರದ ಕುಚ್ಚಿರುವ ಕೊಂಕು ಕತ್ತಿಯನ್ನು ಇಟ್ಟಿದ್ದರು. ಗಾಡಿಯ ಹಿಂದೆ, ಪ್ಯಾಂಟ್‌ಗಳನ್ನು ಮೇಲೆ ಕಟ್ಟಿದ್ದ ಕೆಸರು ತುಳಿಯುತ್ತ ನೀರ್ಲಾಂದಿಯಾದಲ್ಲಿ ಶರಣಾದಾಗ ಕೊನೆಯಲ್ಲಿ ಬದುಕುಳಿದವರು ಒಂದು ಕೈಯಲ್ಲಿ ಕೋಲು ಹಿಡಿದಿದ್ದರು ಮತ್ತು ಇನ್ನೊಂದರಲ್ಲಿ ಮಳೆಗೆ ಸಿಕ್ಕು ಬಣ್ಣಗೆಟ್ಟ ಕಾಗದದ ಹೂಗಳನ್ನು ಹಿಡಿದುಕೊಂಡಿದ್ದರು. ಅವರು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಎಂದು ಇನ್ನೂ ಹೆಸರಿದ್ದ ರಸ್ತೆ, ನಿಜವಲ್ಲದ ನೋಟದಂತೆ ಕಾಣುತ್ತಿತ್ತು. ಅವರು ಮನೆಯನ್ನು ಹಾದು ಹೋಗುವಾಗ ಅದರ ಕಡೆ ನೋಡಿದರು. ಅನಂತರ ಅವರು ಚೌಕದಲ್ಲಿ ತಿರುಗಿದಾಗ ಸಿಕ್ಕಿಹಾಕಿಕೊಂಡ ಗಾಡಿ ಮುಂದೆ ಹೋಗುವುದಕ್ಕೆ ಸಹಾಯ ಕೇಳಬೇಕಾಯಿತು. ಸಾಂತ ಸೋಫಿಯಾ ದೆಲಾ ಪಿಯದಾದ್ ಉರ್ಸುಲಾಳನ್ನು ಬಾಗಿಲಿಗೆ ಕರೆದು ತಂದಿದ್ದಳು. ಅವಳು ಮೆರವಣಿಗೆಯ ಕಷ್ಟವನ್ನು ಎಷ್ಟು ಗಮನವಿಟ್ಟು ಗ್ರಹಿಸಿದಳೆಂದರೆ ಯಾರಿಗೂ ಅವಳು ಅದನ್ನು ನೋಡುತ್ತಿಲ್ಲ ಎನ್ನುವ ಅನುಮಾನ ಬರಲಿಲ್ಲ. ಏಕೆಂದರೆ ಮುಖ್ಯವಾಗಿ ಅವಳ ಎತ್ತಿದ ಕೈ, ಗಾಡಿಯ ಕುಲುಕಾಟಕ್ಕೆ ತಕ್ಕ ಹಾಗೆ ಆಡುತ್ತಿತ್ತು.

ಅವಳು, “ನೋಡು ಮಗ ಗೆರಿನೆಲ್ಡೋ… ಜನರಿಗೆ ಹೇಳು, ಮಳೆ ನಿಂತ ಮೇಲೆ ನಾನು ಅವರನ್ನು ನೋಡ್ತೀನಿ ಅಂತ” ಎಂದು ಕೂಗಿದಳು.

ಅವ್ರೇಲಿಯಾನೋ ಸೆಗುಂದೋ ಅವಳನ್ನು ಹಾಸಿಗೆಗೆ ಕರೆದುಕೊಂಡು ಹೋದ ಮತ್ತು ಅವಳ ಜೊತೆಗಿದ್ದ ಆತ್ಮೀಯತೆಯಿಂದ ಅವಳು ಕೊನೆಗೆ ಹೇಳಿದ್ದರ ಅರ್ಥವೇನು ಎಂದು ಕೇಳಿದ.

ಅವಳು, “ನಿಜ. ನಾನು ಸಾಯಲಿಕ್ಕೋಸ್ಕರ ಮಳೆ ನಿಲ್ಲಲಿ ಅಂತ ಕಾಯ್ತಿದೀನಿ” ಎಂದಳು.

ಅವ್ರೇಲಿಯಾನೋ ಸೆಗುಂದೋಗೆ ರಸ್ತೆಯ ಸ್ಥಿತಿ ಗತಿ ನೋಡಿ ಹೆದರಿಕೆಯಾಯಿತು. ಕೊನೆಗೆ ಅವನಿಗೆ ಪ್ರಾಣಿಗಳ ಬಗ್ಗೆ ಯೋಚನೆ ಮುತ್ತಿಕೊಂಡು ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಪೆತ್ರಾ ಕೊತೆಸ್ ಮನೆಗೆ ಹೋದ. ಅವಳು ಅಂಗಳದಲ್ಲಿ ಸೊಂಟದ ಮಟ್ಟದ ನೀರಿನಲ್ಲಿದ್ದು ಕುದುರೆಯ ಹೆಣವೊಂದನ್ನು ತೇಲಿಸಿ ತಳ್ಳಲು ಪ್ರಯತ್ನಿಸುತ್ತಿದ್ದಳು. ಕೋಲು ಹಿಡಿದು ಅವ್ರೇಲಿಯಾನೋ ಸೆಗುಂದೋ ಅವಳಿಗೆ ನೆರವಾದ ಮತ್ತು ಅಗಾಧವಾಗಿ ಉಬ್ಬಿದ್ದ ಅದು ಸುತ್ತು ಹಾಕಿದ ನಂತರ ಕೆಸರಲ್ಲಿ ಸೆಳೆದುಕೊಂಡು ಹೋಯಿತು. ಮಳೆ ಶುರುವಾದಾಗಿನಿಂದ ಪೆತ್ರಾ ಕೊತೆಸ್ ಸತ್ತ ಪ್ರಾಣಿಗಳನ್ನು ಅಂಗಳದಿಂದ ಹೊರಗೆ ಹಾಕುವ ಕೆಲಸವನ್ನಷ್ಟೇ ಮಾಡುತ್ತಿದ್ದಳು. ಮೊದಲ ವಾರಗಳಲ್ಲಿ ಅವಳು ಅವ್ರೇಲಿಯಾನೋ ಸೆಗುಂದೋಗೆ ಕ್ರಮ ತೆಗೆದುಕೊಳ್ಳಲು ಹೇಳಿ ಕಳಿಸುತ್ತಿದ್ದಳು. ಅವನು, “ಅಂಥದೇನೂ ಅವಸರವಿಲ್ಲ. ಪರಿಸ್ಥಿತಿ ಅಷ್ಟು ಕೆಟ್ಟದಾಗಿಲ್ಲ, ಮಳೆ ನಿಂತ ಮೇಲೆ ಏನಾದರೂ ಮಾಡುವುದಕ್ಕೆ ಸಾಕಷ್ಟು ಸಮಯವಿರುತ್ತದೆ” ಎಂದು ಉತ್ತರಿಸಿದ್ದ. ಅವಳು ಕುದುರೆ ಲಾಯಕ್ಕೆ ನೀರು ನುಗ್ಗಿದೆ, ದನಕರುಗಳು ಹೊಟ್ಟೆಗೆ ಏನೂ ಸಿಗದ ಹುಲ್ಲುಗಾವಲಿರುವ ಎತ್ತರದ ಜಾಗಕ್ಕೆ ಹೋಗಿವೆ. ಅಲ್ಲಿ ಅದಕ್ಕೆ ಚಿರತೆಗಳ ಕಾಟ ಹಾಗೂ ರೋಗ ತಗುಲತ್ತೆ ಎಂದು ಹೇಳಿಸಿದ್ದಳು. ಅದಕ್ಕೆ ಅವ್ರೇಲಿಯಾನೋ ಸೆಗುಂದೋ, “ಅದಕ್ಕೆ ಏನೂ ಮಾಡಕ್ಕಾಗಲ್ಲ ಎಲ್ಲ ತಿಳಿಯಾದ ಮೇಲೆ ಬೇರೇದು ಹುಟ್ಟುತ್ವೆ” ಎಂದು ಉತ್ತರ ಕೊಟ್ಟಿದ್ದ. ಪೆತ್ರಾ ಕೊತೆಸ್ ಅವು ಗುಂಪು ಗುಂಪಾಗಿ ಸಾಯುವುದನ್ನು ನೊಡಿದ್ದಳು ಮತ್ತು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡವನ್ನು ಮಾತ್ರ ಕೊಚ್ಚುವುದಕ್ಕೆ ಸಾಧ್ಯವಾಗಿತ್ತು. ಅವಳು ಏನೂ ಕೈಲಾಗದೆ ಮಕೋಂದೋದಲ್ಲಿ ಒಂದು ಕಾಲಕ್ಕೆ ಅತ್ಯಂತ ದೊಡ್ಡದಾದ ಆಸ್ತಿ ಎಂದು ಪರಿಗಣಿಸಿದ್ದನ್ನು ಕರುಣೆ ಇಲ್ಲದೆ ನಿರ್ನಾಮ ಮಾಡುತ್ತಿದ್ದ ಸುರಿಮಳೆಯನ್ನು ನೋಡುತ್ತಿದ್ದಳು ಅಲ್ಲದೆ ಈಗ ಅದರಿಂದ ಉಳಿದದ್ದು ಕೇವಲ ಅಂಟುರೋಗಗಳು ಮಾತ್ರ. ಅವ್ರೇಲಿಯಾನೋ ಸೆಗುಂದೋ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿದಾಗ ಅವನಿಗೆ ಕುದುರೆ ಲಾಯದಲ್ಲಿ ಸತ್ತ ಕುದುರೆ ಮತ್ತು ಹೇಸರಗತ್ತೆ ಸಿಕ್ಕಿದವು. ಪೆತ್ರಾ ಕೊತೆಸ್ ಯಾವುದೇ ಆಶ್ಚರ್ಯ, ಸಂತೋಷ ಅಥವಾ ಬೇಸರವಿಲ್ಲದೆ ಅವನು ಬಂದದ್ದನ್ನು ನೋಡಿದಳು. ಅವಳ ಮುಖದಲ್ಲಿ ವ್ಯಂಗ್ಯದ ನಗೆಯೊಂದು ತೇಲಿತು.

ಅವಳು. “ಇದು ಲಾಯಕ್ಕಾದ ಸಮಯ” ಎಂದಳು.

ಅವಳಿಗೆ ವಯಸ್ಸಾಗಿ ಮೂಳೆ ಮುದುಡಿ ಚರ್ಮ ಸುಕ್ಕಾಗಿತ್ತು. ಅವಳ ಚೂಪುಗಣ್ಣು ಮಳೆಯನ್ನು ಬಿಡದೆ ನೋಡಿ ಸಾಕಾಗಿ ಸೊರಗಿತ್ತು. ಅವ್ರೇಲಿಯಾನೋ ಸೆಗುಂದೋ ಅವಳ ಮನೆಯಲ್ಲಿ ಮೂರು ತಿಂಗಳಿಗಿಂತ ಹೆಚ್ಚಿಗೆ ಇದ್ದದ್ದು ತನ್ನ ಮನೆಗಿಂತ ಅಲ್ಲಿ ಉತ್ತಮವಾಗಿದೆ ಎಂದಲ್ಲ, ಆದರೆ ತಲೆಯ ಮೇಲೆ ಮತ್ತೆ ಬಟ್ಟೆ ಹಾಕಿಕೊಂಡು ಹೊರಡಬೇಕೆಂದು ನಿರ್ಧರಿಸುವುದಕ್ಕೆ ಅವನಿಗೆ ಇನ್ನಿಲ್ಲದಷ್ಟು ಸಮಯ ಬೇಕಾಗಿತ್ತು. ಅವನು, ಆ ಮನೆಯಲ್ಲಿ ಹೇಳಿದ ಹಾಗೆ, “ಅದಕ್ಕೇನೂ ಅವಸರವಿಲ್ಲ ಕೆಲವು ಗಂಟೇಲಿ ಎಲ್ಲ ತಿಳಿಯಾಗತ್ತೆ ಅಂದ್ಕೊಳ್ಳೋಣ” ಎಂದ. ಮೊದಲನೆ ವಾರದಲ್ಲಿ ಕಾಲ ಮತ್ತು ಮಳೆ ಅವನು ಇಟ್ಟುಕೊಂಡವಳ ಆರೋಗ್ಯದ ಮೇಲೆ ಪ್ರಭಾವ ಬೀರಿದ್ದಕ್ಕೆ ಹೊಂದಿಕೊಳ್ಳುವುದರಲ್ಲಿ ಕಳೆದ ಮತ್ತು ಸ್ವಲ್ಪ ಸ್ವಲ್ಪವಾಗಿ ಮೊದಲಿನಂತೆ ಅವಳನ್ನು ಕಾಣುತ್ತ ಅವಳ ಅತಿಯಾದ ಉತ್ಸಾಹ ಮತ್ತು ಅವಳ ಪ್ರೀತಿ ಪ್ರಾಣಿಗಳಲ್ಲಿ ಉಂಟುಮಾಡಿದ ಫಲವಂತಿಕೆಗಳನ್ನು ನೆನಪಿಸಿಕೊಂಡ. ಒಂದಷ್ಟು ಪ್ರೀತಿ, ಒಂದಷ್ಟು ಆಸಕ್ತಿಯಿಂದ ಎರಡನೆ ವಾರದಲ್ಲಿ ಒಂದು ರಾತ್ರಿ ಅವಳನ್ನು ನೇವರಿಸಿ ಎಚ್ಚರಗೊಳಿಸಿದ. ಪೆತ್ರಾ ಕೊತೆಸ್ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಅವಳು, “ಸುಮ್ನೆ ಮಲಗಿಕೊಳ್ಳಿ. ಈಗ ಅಂಥದ್ದಕ್ಕೆಲ್ಲ ಸಮಯ ಅಲ್ಲ” ಎಂದು ಗೊಣಗುಟ್ಟಿದಳು. ಅವ್ರೇಲಿಯಾನೋ ಸೆಗುಂದೋ ಚಾವಣಿಯಲ್ಲಿದ್ದ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು ಪೆತ್ರಾ ಕೊತೆಸ್ ಬೆನ್ನಹುರಿಯ ನರಗಳ ಸುತ್ತ ಉದ್ದಕ್ಕೂ ಉರುಳೆ ಹೆಣೆದ ಹಾಗಿದ್ದದ್ದನ್ನು ಕಂಡ ಅವನಿಗೆ ಅವಳು ಹೇಳಿದ್ದು ಸರಿ ಎಂದು ಕಂಡಿತು. ಕೇವಲ ಕಾಲದ ಕಾರಣದಿಂದಲ್ಲ ಆದರೆ ಅಂಥದ್ದಕ್ಕೆ ಅವರು ತಕ್ಕವರಲ್ಲದ ಕಾರಣಕ್ಕಾಗಿ.

ಅವ್ರೇಲಿಯಾನೋ ಸೆಗುಂದೋಗೆ ಉರ್ಸುಲಾ ಒಬ್ಬಳೇ ಅಲ್ಲದೆ ಮಕೋಂದೋದ ಜನರೆಲ್ಲ ಸತ್ತು ಹೋಗಲು ಆಕಾಶ ನಿರ್ಮಲವಾಗುತ್ತಿರುವುದಕ್ಕೆ ಕಾಯುತ್ತಿದ್ದಾರೆ ಎಂದು ಖಚಿತವಾಗಿ, ತನ್ನ ಟ್ರಂಕುಗಳೊಡನೆ ಮನೆಗೆ ಹಿಂತಿರುಗಿದ. ಅವರು ನಡೆದಾಡುತ್ತ ಅಂಗಳದಲ್ಲಿ ಉರುಳುವುದನ್ನೇ ಯೋಚಿಸುತ್ತ, ಕೈಕಟ್ಟಿ ಕುಳಿತುಕೊಂಡು ಸುಮ್ಮನೇ ಸಮಯ ಉರುಳುವುದನ್ನೇ ನೋಡುತ್ತ ಕುಳಿತಿರುವುದನ್ನು ಕಂಡ. ಅವರಿಗೆ ಸುರಿಯುವ ಮಳೆಯನ್ನಲ್ಲದೆ ಬೇರೆ ಏನೂ ಯೋಚಿಸುವುದಕ್ಕೆ ಇರದಿರುವಾಗ ಸಮಯವನ್ನು ತಿಂಗಳುಗಳಾಗಿ, ವರ್ಷಗಳಾಗಿ, ದಿನ ಮತ್ತು ಗಂಟೆಗಳಾಗಿ ವಿಭಜಿಸುವುದು ವ್ಯರ್ಥವಾಗಿ ತೋರಿತ್ತು. ಮಕ್ಕಳು ಅವ್ರೇಲಿಯಾನೋ ಸೆಗುಂದೋನನ್ನು ಉತ್ಸಾಹದಿಂದ ಕಾಣುತ್ತಿದ್ದರು. ಏಕೆಂದರೆ ಅವನು ಅವರಿಗೆ ಮತ್ತೆ ತುಂಡಾಗಿದ್ದ ಅಕಾರ್ಡಿಯನ್ ನುಡಿಸುತ್ತಿದ್ದ. ಆದರೆ ಅವರಿಗೆ ಈ ವಾದ್ಯ ನುಡಿಸುವುದಕ್ಕಿಂತ ಹೆಚ್ಚಾಗಿ ವಿಶ್ವಕೋಶದಲ್ಲಿನ ವಿವರಗಳು ಆಕರ್ಷಕವಾಗಿದ್ದವು. ಅವರು ಮತ್ತೆ ಮೆಮೆಯ ರೂಮಿನಲ್ಲಿ ಸೇರಿದಾಗ ಅವ್ರೇಲಿಯಾನೋ ಸೆಗುಂದೋನ ಕಲ್ಪನೆ ಚಲಿಸುವ ಆಕಾಶ ಬುಟ್ಟಿಯನ್ನು ಮೋಡಗಳ ನಡುವೆ ಮಲಗಲು ಜಾಗ ಹುಡುಕುವ ಹಾರುವ ಆನೆಯನ್ನಾಗಿ ಬದಲಾಯಿಸಿತು. ಒಂದು ಸಂದರ್ಭದಲ್ಲಿ ಅವನಿಗೆ ವಿಚಿತ್ರವಾದ ತೊಡುಗೆ ತೊಟ್ಟು ಕುದುರೆಯ ಸವಾರನೊಬ್ಬ ಕಂಡಾಗ ಅವನು ಪರಿಚಿತ ವ್ಯಕ್ತಿ ಎನಿಸಿದ. ಅವನನ್ನು ಸೂಕ್ಷ್ಮವಾಗಿ ನೋಡಿದಾಗ ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಚಿತ್ರವೆಂಬ ನಿರ್ಣಯಕ್ಕೆ ಬಂದ. ಅವನು ಅದನ್ನು ಫೆರ್ನಾಂಡಳಿಗೆ ತೋರಿಸಿದ ಮತ್ತು ಅವಳು ಕೂಡ ಕುದುರೆ ಸವಾರನಿಗೂ ಕರ್ನಲ್‌ಗೂ ಹೋಲಿಕೆ ಇರುವುದನ್ನು ಸಮರ್ಥಿಸಿದಳು. ಅಲ್ಲದೆ ಮನೆಯ ಪ್ರತಿಯೊಬ್ಬರಿಗೂ ಹೋಲಿಕೆ ಇದೆಯೆಂದು ಹೇಳಿದಳು. ವಾಸ್ತವವಾಗಿ ಅವನೊಬ್ಬ ಟಾರ್ಟರ್ ಯೋಧನಾಗಿದ್ದ, ಹೆಂಡತಿ ಮನೆಯಲ್ಲಿ ಮೂರು ತುಂಡು ಮಾಂಸ, ಒಂದು ಚೀಲ ಅಕ್ಕಿ ಮಾತ್ರ ಉಳಿದಿದೆ ಎಂದು ಹೇಳುವ ತನಕ ಅಪೋಲೋ ದೇವತೆಯ ವಿಗ್ರಹ ಮತ್ತು ಹಾವಾಡಿಗರ ಜೊತೆ ಅವನ ಸಮಯ ಕಳೆದುಹೋಗಿತ್ತು.
ಅವನು “ನಾನೇನು ಮಾಡ್ಬೇಕು ಅಂತೀಯ” ಎಂದ.
ಫೆರ್ನಾಂಡ, “ನಂಗೊತ್ತಿಲ್ಲ. ಅದು ಗಂಡಸರ ಕೆಲಸ” ಎಂದಳು.
ಅವ್ರೇಲಿಯಾನೋ ಸೆಗುಂದೋ, “ಮಳೆ ನಿಲ್ಲಲಿ ಆಮೇಲೆ ಏನಾದ್ರೂ ಮಾಡಿದರಾಯಿತು” ಎಂದ.
ಒಂದಿಷ್ಟು ಅಕ್ಕಿಯಲ್ಲೇ ಸಮಾಧಾನಗೊಳ್ಳಬೇಕಾದರೂ ಅವನಿಗೆ ಮನೆ ಕೆಲಸಕ್ಕಿಂತ ವಿಶ್ವಕೋಶದಲ್ಲಿ ಆಸಕ್ತಿ ಹೆಚ್ಚಿಗೆ ಇತ್ತು. ಅವನು “ಈಗಂತೂ ಏನೂ ಮಾಡಕ್ಕೂ ಆಗಲ್ಲ. ಇಷ್ಟಕ್ಕೂ ಮಳೆ ನಮ್ಮ ಜೀವಮಾನವಿಡೀ ನಿಲ್ಲದೇ ಇರಲ್ಲವಲ್ಲ” ಎಂದು ಹೇಳುತ್ತಿದ್ದ. ಅಡುಗೆ ಮನೆಯ ಕೊರತೆಗಳು ಹೆಚ್ಚಾಗುತ್ತಿದ್ದ ಹಾಗೆ ಫೆರ್ನಾಂಡಳ ಸಿಟ್ಟು ಅವಳ ಕೂಗಾಟ, ಅರಚಾಟ ಹೆಚ್ಚಾಯಿತು. ಒಂದು ಬೆಳಿಗ್ಗೆ ಒಂದೇ ಏರುದನಿಯಲ್ಲಿ ಪ್ರಾರಂಭವಾಗಿ ಸಮಯ ಕಳೆದಂತೆ ಬೆಳೆದು ತಾರಕ್ಕೇರಿತು. ಅವ್ರೇಲಿಯಾನೋ ಸೆಗುಂದೋಗೆ ಮಾರನೆಯ ದಿನ ಬೆಳಗಿನ ತಿಂಡಿ ತಿನ್ನುವ ತನಕ, ಬೀಳುತ್ತಿದ್ದ ಮಳೆಯ ಶಬ್ದವನ್ನೂ ಮೀರಿಸಿದ, ಸ್ಪಷ್ಟವಾಗಿ, ಜೋರಾಗಿ, ಬೇಸರವಾಗುವ, ಏಕ ತಾನದ ಗೊಣಗಾಟ ಕೇಳಿಸಿತು. ಅದು ಫೆರ್ನಾಂಡ ಮನೆಯಲೆಲ್ಲ ಓಡಾಡುತ್ತ, ರಾಣಿಯಾಗಬೇಕೆಂದು ಬೆಳೆದ ತಾನು ಹುಚ್ಚರ ಮನೆಯಲ್ಲಿ ಪರಿಚಾರಿಕೆಯಾಗಿ, ಕೆಲಸವಿಲ್ಲದ, ಸೋಮಾರಿಯಾದ, ಬೆಳಗ್ಗೆಯಿಂದ ಸಂಜೆ ತನಕ ಸಾಯುವಷ್ಟು ದುಡಿಯುತ್ತಿದ್ದರೂ, ಮೇಲಿನಿಂದ ಸಂಪತ್ತು ಸುರಿಯುತ್ತದೆ ಎಂದು ಕಾಯುವ ಗಂಡನ ಜೊತೆ ನೀಗುವುದರಲ್ಲಿ ಜೀವನ ಕೊನೆಯಾಗಬೇಕಾಯಿತೆಂದು ಹೇಳುತ್ತಿದ್ದಳು. ಇಷ್ಟಾದರೂ ಮನೆಯಲ್ಲಿ “ಫೆರ್ನಾಂಡ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ಯಾ” ಎಂದು ಯಾರೂ ಕೇಳುವರಿಲ್ಲದೆ, ಅಲ್ಲದೆ ತನ್ನನ್ನು ಒಬ್ಬ ಹಳೆಕಾಲದ ಕಿರಿಕಿರಿ ಉಂಟು ಮಾಡುವ ಹೆಂಗಸು ಎಂದು ಯಾವಾಗಲೂ ಪರಿಗಣಿಸಿರುವ ಮನೆಯಲ್ಲಿ ಯಾರೊಬ್ಬರೂ ತಾನು ನಿರೀಕ್ಷಿಸಿದಂತೆ, “ಏಕೆ ನೀನು ಇಷ್ಟೊಂದು ಸಪ್ಪಗೆ, ಕಣ್ಣಿನ ಕೆಳಗೆ ಕಪ್ಪಾಗಿದೆ” ಎಂದು ಸೌಜನ್ಯಕ್ಕಾದರೂ ಕೇಳಿರಲಿಲ್ಲ. ಅವರು ಯಾವಾಗಲೂ ಅವಳ ಬೆನ್ನ ಹಿಂದೆ ಮನಸ್ಸಿಗೆ ಬಂದ ಹಾಗೆ ಬೈಯುತ್ತಿದ್ದರು. ಅಮರಾಂತರಳಿಗೂ ಸಹ, “ನೀನು ಸತ್ತು ಬೂದಿಯಾದರೂ ನಿನ್ನ ನಿಜ ಸ್ವರೂಪ ಗೊತ್ತಾಗಲ್ಲ” ಎಂದು ಹೇಳಿದ್ದಳು. ಅವಳು ಎಲ್ಲವನ್ನು ಪೂಜ್ಯ ಫಾದರ್‌ನ ಕಾರಣದಿಂದ ಸಮಾಧಾನದಿಂದ ತೆಗೆದುಕೊಂಡಿದ್ದಳು. ಆದರೆ ಹೊಸೆ ಅರ್ಕಾದಿಯೋ ಸೆಗುಂದೋ, “ಇಡೀ ಮನೆಯಲ್ಲಿ ಎತ್ತರದ ಪ್ರದೇಶದವರಿಗೆ ದರಿದ್ರ ಬಡಿದಿದೆ, ಅಲ್ದೆ ಸರ್ಕಾರವೇ ಎತ್ತರದ ಪ್ರದೇಶದ ಕೆಲಸಗಾರರನ್ನು ಕೊಲ್ಲಲು ಕಳಿಸಿಕೊಟ್ಟಿತ್ತು” ಎಂದು ತನ್ನನ್ನೇ ಸೂಚಿಸಿ ಹೇಳಿದಾಗ ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಅವಳಾದರೋ ಆಲ್ಫಾ ರಾಜನ ಮಗಳಾಗಿದ್ದು ಅವಳಂತೆಯೇ ಉತ್ತಮ ಗುಣಮಟ್ಟದ ಅಧ್ಯಕ್ಷರ ಹೆಂಡತಿಯರಿಗೆ ಪ್ರಿಯವಾಗಿದ್ದ ಹಾಗೂ ಹನ್ನೊಂದು ಪರ್ಯಾಯ ದ್ವೀಪಗಳ ಪರವಾಗಿ ಸಹಿ ಮಾಡಲು ಹಕ್ಕು ಪಡೆದಿದ್ದ ಮತ್ತು ವೈರುಧ್ಯದಿಂದ ಕೂಡಿದ ಜನರು ತುಂಬಿದ ಆ ಊರಿನಲ್ಲಿ ಅವಳೊಬ್ಬಳೇ ಸಮಂಜಸವಾದ ಮನುಷ್ಯಳಾಗಿದ್ದಳು. ಅವರಿಗೆ ಹದಿನಾರು ಬೆಳ್ಳಿ ಪಾತ್ರೆಗಳಿಂದ ಗೊಂದಲ ಉಂಟಾಗಲಿಲ್ಲ. ಏಕೆಂದರೆ ವಿಷಯಲಂಪಟನಾದ ಅವಳ ಗಂಡ ಅಷ್ಟೊಂದು ಚಾಕು ಮತ್ತು ಫೋರ್ಕುಗಳು ಮನುಷ್ಯರಿಗಲ್ಲ, ರಾಕ್ಷಸರಿಗೆ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟ. ಆದರೆ ಕಣ್ಣು ಮುಚ್ಚಿಕೊಂಡು ಯಾವಾಗ ವೈಟ್ ವೈನ್, ಯಾವ ಕಡೆ, ಯಾವ ಗ್ಲಾಸಿನಲ್ಲಿ ಮತ್ತು ಯಾವಾಗ ರೆಡ್ ವೈನ್ ಯವ ಕಡೆ, ಯಾವ ಗ್ಲಾಸಿನಲ್ಲಿ ಹಂಚುವುದು ಎಂದು ಹೇಳುವುದಕ್ಕೆ ಸಾಧ್ಯವಿದ್ದವಳು ಅವಳೊಬ್ಬಳು ಮಾತ್ರ. ವೈಟ್ ವೈನ್ ದಿನದ ಸಮಯದಲ್ಲಿ ಮತ್ತು ರೆಡ್ ವೈನ್ ರಾತ್ರಿ ಹೊತ್ತಿನಲ್ಲಿ ಎಂದು ಹೇಳುತ್ತಿರಲಿಲ್ಲ. ಅಲ್ಲದೆ ಇಡೀ ಸಮುದ್ರ ತೀರದ ಪ್ರದೇಶದಲ್ಲಿ ದೇಹದ ಅಗತ್ಯಗಳ ಬಗ್ಗೆ ಕಾಳಜಿ ವಹಿಸಿ, ಬಂಗಾರದ ಉಚ್ಚೆ ಪಾತ್ರೆ ಉಪಯೋಗಿಸುವವಳೆಂಬ ಗರ್ವವಿತ್ತು. ಇದರಿಂದಾಗಿಯೇ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವಳು ಹೇಲನ್ನು ಹೇಲುತ್ತಾಳೆ, ಸಿಹಿ ಹೇಲನ್ನಲ್ಲ ತಾನೇ ಎಂದು ಗೇಲಿ ಮಾಡುವುದಕ್ಕೆ ಕಾರಣವಾಯಿತು. ಹೀಗಾಗಿ ಅವಳು ಬೆಡ್‌ರೂಮಿನಲ್ಲಿ ಕಕ್ಕಸ್ಸಿಗೆ ಕೂತದ್ದನ್ನು ಕಣ್ಣು ಬಿಟ್ಟು ನೋಡಿದ ಅವಳ ಮಗಳು ರೆನೇಟಾಳೇ, ಪಾತ್ರೆ ಬಂಗಾರದ್ದಾದರೂ ಅದರಲ್ಲಿದ್ದದ್ದು ಕೇವಲ ಹೇಲು ಎಂದು ಹೇಳಬೇಕಾಯಿತು. ಅಲ್ಲದೆ, ಅವಳಿಗೆ ಮನೆಯಲ್ಲಿ ಬೇರೆಯವರ ಬಗ್ಗೆ ತಿಳಿಯದಿದ್ದರಿಂದ, ಅದು ಎತ್ತರದ ಪ್ರದೇಶದ ಮೂಲದ್ದಾದ್ದರಿಂದ ಎಲ್ಲದಕ್ಕಿಂತ ಕೆಟ್ಟದಾಗಿತ್ತು ಎಂದಳು. ಆದರೆ ಅವಳಿಗೆ ತನ್ನ ಗಂಡನಿಂದ ಕೊಂಚ ಸಾಂತ್ವನ ಬೇಕಾಗಿತ್ತು. ಅವನು ಅವಳಿಗೆ ಸಹಾಯಕನಾಗಿದ್ದು, ನ್ಯಾಯಸಮ್ಮತವಾಗಿ ಲೂಟಿ ಹೊಡೆಯುವವನಾಗಿದ್ದು, ಅವಳ ತಂದೆ-ತಾಯಿ ಮನೆಯಿಂದ ಕರೆದುಕೊಂಡು ಬರುವ ಜವಾಬ್ದಾರಿ ತೆಗೆದುಕೊಂಡಿದ್ದ. ಅವಳು ಅಲ್ಲಿ ಏನೂ ಮಾಡಬೇಕಾಗಿರಲಿಲ್ಲ ಮತ್ತು ಯಾವ ತೊಂದರೆಯನ್ನೂ ಅನುಭವಿಸಿರಲಿಲ್ಲ. ಅಲ್ಲಿ ಅವಳು ಹೊತ್ತು ಹೋಗಲೆಂದು ಶವಸಂಸ್ಕಾರಕ್ಕೆ ಹೂಗುಚ್ಛಗಳನ್ನು ಮಾಡುತ್ತಿದ್ದಳು. ಏಕೆಂದರೆ ಅವಳ ಧಾರ್ಮಿಕ ಶಿಕ್ಷಣದ ಜವಾಬ್ದಾರಿ ಹೊತ್ತವನು, ತನ್ನ ಮುದ್ರೆಯೊತ್ತಿದ ಕಾಗದದಲ್ಲಿ, ತಾನು ಜವಾಬ್ದಾರಿ ಹೊತ್ತವಳ ಕೈಗಳು ಪಿಯಾನೋ ರೀತಿಯ ವಾದ್ಯ ನುಡಿಸುವುದು ಮಾತ್ರವಲ್ಲದೆ ಲೌಕಿಕದ ಕೆಲಸಗಳನ್ನು ಮಾಡುವುದಕ್ಕಲ್ಲ ಎಂದು ತಿಳಿಸಿದ್ದ. ಆದರೆ ತಲೆ ತಿರುಕ ಗಂಡ ಎಲ್ಲ ಎಚ್ಚರಗಳನ್ನು ದೂರ ಮಾಡಿ ಕುದಿಯುವ ಎಣ್ಣೆಯ ಪಾತ್ರೆಗೆ ಅವಳನ್ನು ಹಾಕಿದಂತೆ ಕರೆದುಕೊಂಡು ಬಂದಿದ್ದ, ಅಲ್ಲಿ ಸೆಖೆಯಿಂದಾಗಿ ಉಸಿರಾಡುವುದೂ ಕಷ್ಟವಾಗಿತ್ತು. ಅವಳು ಯಹೂದಿಗಳ ಸುಗ್ಗಿಯ ಹಬ್ಬದ ಉಪವಾಸವನ್ನು ಪೂರೈಸುವ ಮೊದಲೇ ಅವಳ ಗಂಡ ಟ್ರಂಕುಗಳ ಸಮೇತ ಮತ್ತು ಅಕಾರ್ಡಿಯನ್ ಜೊತೆಗೆ, ಹಿಂಭಾಗದಿಂದ ಮಾತ್ರ ನೋಡಲು ಲಾಯಕ್ಕಾದವಳ ಜೊತೆ ಹಾದರಕ್ಕೆ ಹೋದ. ಕೆಲವರು ಹೇಳುವುದೇನೆಂದರೆ, ಅಂದವಾಗಿರದ ಅವಳು, ಹೆಣ್ಣಿನ ಒಟ್ಟಾರೆ ಅಂದವನ್ನು ಚೆಂದದ ಹಿಂಭಾಗವನ್ನು ಕುಣಿಸಿದರೆ ಯಾರೆಂದು ತಿಳಿಯುತ್ತದೆ ಎಂದು ಚೆನ್ನಾಗಿ ಬೆಳೆಸಿದ್ದಳು, ಎಂದು. ಅವಳಿಗೆ ದೈವದ ಭಯವಿದ್ದು ಅವನ ನಿಯಮವನ್ನು ಪಾಲಿಸುತ್ತ, ಅವನ ಇಷ್ಟದಂತೆ ನಡೆದುಕೊಳ್ಳುವವಳಾಗಿದ್ದಳು. ಅವಳ ಜೊತೆ ಸಹಜವಾಗಿಯೇ ಅವನು ಇನ್ನೊಬ್ಬಳ ಜೊತೆ ನಡೆದುಕೊಂಡ ಹಾಗೆ ಹುಚ್ಚಾಟ ಮತ್ತು ಕೋತಿ ಕುಣಿತಗಳನ್ನು ಮಾಡಲಾಗುತ್ತಿರಲಿಲ್ಲ. ಇನ್ನೊಬ್ಬಳಂತೂ ಫ್ರೆಂಚ್ ಹೆಂಗಸರ ಹಾಗೆ ಮತ್ತು ಇನ್ನೂ ಹೆಚ್ಚಾಗಿ ಎಲ್ಲದಕ್ಕೂ ತಯಾರಾಗಿದ್ದಳು. ಅವರಂತೂ ಮನೆ ಬಾಗಿಲಿಗೆ ಕೆಂಪು ದೀಪ ಹಾಕಿಕೊಳ್ಳುವ ಮಟ್ಟಿಗೆ ಪ್ರಾಮಾಣಿಕವಾಗಿದ್ದರು. ಆದರೆ ದೊನ್ಯಾ ರೆನಾಟ ಆರ್ಗೋತೆ ಮತ್ತು ಒಳ್ಳೆಯ ಕ್ರಿಶ್ಚಿಯನ್‌ನಾದ, ನೇರ ನಡೆಯ, ದೊನ್ಯಾ ಫೆರ್ನಾಂಡಾ ದೆಲ್ ಕಾರ್ಪಿಯೋರ ಒಬ್ಬಳೇ ಮುದ್ದಿನ ಮಗಳಾದ ಅವಳು ಹಾಗೆ ಮಾಡಬೇಕಾಗಿತ್ತು. ಅದರಲ್ಲೂ ದೊನ್ಯಾ ಫೆರ್ನಾಂಡಾ ದೆಲ್ ಕಾರ್ಪಿಯೋ, ಗೋರಿಯಲ್ಲೂ ಮೈಚರ್ಮ ಮದುವಣಗಿತ್ತಿಯ ಹಾಗೆ ಮೃದುವಾಗಿರುವಂತೆ ಮತ್ತು ಕಣ್ಣುಗಳು ಹರಳುಗಳ ಹಾಗೆ ಹೊಳೆಯುತ್ತಿರುವ ವಿನಾಯತಿಯನ್ನು, ದೈವದಿಂದ ನೇರವಾಗಿ ಪಡೆಯುವರಲ್ಲಿ ಒಬ್ಬನಾಗಿದ್ದ. ಅವ್ರೇಲಿಯಾನೋ ಸೆಗುಂದೋ, “ಅದು ನಿಜ ಅಲ್ಲ, ಅವನನ್ನು ಇಲ್ಲಿಗೆ ಕರ್‍ಕೊಂಡು ಬಂದಾಗ್ಲೇ ವಾಸನೆ ಹೊಡೀತಿದ್ದ” ಎಂದ.
ಅವನು ಇದೇ ದಿನ ಅವಳು ತಪ್ಪು ಮಾಡುವ ತನಕ ತಾಳ್ಮೆಯಿಂದ ಕೇಳಿಸಿಕೊಂಡ. ಫೆರ್ನಾಂಡ ಅವನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಧ್ವನಿ ತಗ್ಗಿಸಿದಳು. ಆ ರಾತ್ರಿ ಊಟದ ಸಮಯದಲ್ಲಿ ಮಳೆಯ ಸದ್ದಿಗಿಂತ ಅವಳ ಗೊಣಗಾಟದ ಧ್ವನಿ ಹೆಚ್ಚಿಗೆ ಇತ್ತು. ಅವ್ರೇಲಿಯಾನೋ ಸೆಗುಂದೋ ತಲೆ ಕೆಳಗೆ ಹಾಕಿ, ಕಡಿಮೆ ಊಟ ಮಾಡಿ, ಬೇಗನೆ ತನ್ನ ರೂಮಿಗೆ ಹೊರಟುಹೋದ. ಮಾರನೆ ದಿನ ಬೆಳಗಿನ ತಿಂಡಿಯ ಸಮಯಕ್ಕೆ ರಾತ್ರಿಯೆಲ್ಲ ಉರಿದೇಳುತ್ತ ಸರಿಯಾಗಿ ನಿದ್ದೆ ಮಾಡದೆ ಸೊರಗಿದ್ದಳು. ಆದರೂ ಅವಳ ಗಂಡ “ಬೇಯಿಸಿದ ಮೊಟ್ಟೆ ಇಲ್ಲವೇ” ಎಂದು ಕೇಳಿದಾಗ ಅವಳು, “ಮೊಟ್ಟೆ ಮುಗಿದು ಹೋಗಿ ಒಂದು ವಾರವಾಯಿತು” ಎಂದು ಹೇಳಿ ಸದಾ ಹೊಟ್ಟೆ ಬಗ್ಗೆ ಯೋಚಿಸುತ್ತ ಧಿಮಾಕಿನಿಂದ ದೊಡ್ಡ ಮನುಷ್ಯರ ಹಾಗೆ ಕೇಳುವ ಗಂಡಸರ ಬಗ್ಗೆ ಕೂಗಾಡಿದಳು. ಅವ್ರೇಲಿಯಾನೋ ಸೆಗುಂದೋ ಎಂದಿನಂತೆ ಹುಡುಗರನ್ನು ವಿಶ್ವಕೋಶ ನೋಡಲು ಕರೆದುಕೊಂಡು ಹೋದ ಮತ್ತು ಫೆರ್ನಾಂಡ ಮೆಮೆಯ ರೂಮನ್ನು ಸರಿಯಾಗಿರುವಂತೆ ಹೋಗಿ ತನ್ನ ಗೊಣಗಾಟ ಅವನಿಗೆ ಕೇಳಿಸುವಂತೆ ಮಾಡಿದಳು. ಇದರಿಂದ ಆ ಪಾಪದ ಹುಡುಗರಿಗೆ ವಿಶ್ವಕೋಶದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಚಿತ್ರ ಇದೆ ಎಂದು ಹೇಳಲಾಗಲಿಲ್ಲ. ಮಧ್ಯಾಹ್ನ ಹುಡುಗರು ಮಲಗಿದ್ದಾಗ ಅವ್ರೇಲಿಯಾನೋ ಸೆಗುಂದೋ ಮನೆಯ ಅಂಗಳದಲ್ಲಿ ಕುಳಿತ. ಫೆರ್ನಾಂಡ ಅವನನ್ನು ಸುಮ್ಮನೆ ಬಿಡದೆ ಬಂದು, ಗೊಣಗುಟ್ಟುತ್ತಾ ಪ್ರಚೋದಿಸಿದಳು. ಮನೆಯಲ್ಲಿ ತಿನ್ನುವುದಕ್ಕೆ ಮಣ್ಣು, ಕಲ್ಲು ಬಿಟ್ಟು ಇನ್ನೇನೂ ಇರದಿದ್ದರೂ ತನ್ನ ಗಂಡ ಪರ್ಷಿಯಾದ ಸುಲ್ತಾನನ ಹಾಗೆ ಕುಳಿತುಕೊಂಡು ಮಳೆ ಬೀಳುವುದನ್ನು ನೋಡುತ್ತಿದ್ದಾನೆ. ಅವನೊಬ್ಬ ಶುದ್ಧ ನಾಲಾಯಕ್, ಕೆಲಸಕ್ಕೆ ಬಾರದವನು, ಹೆಂಗಸರ ದುಡಿಮೆಯಿಂದ ಬಾಳುತ್ತಿರುವನು, ಎಂದಳು. ಸುಮಾರು ಎರಡು ಗಂಟೆಯ ಹೊತ್ತು ಅವ್ರೇಲಿಯಾನೋ ಸೆಗುಂದೋ ಕಿವುಡನಂತೆ ಅವಳು ಹೇಳುತ್ತಿದ್ದನ್ನು ಕೇಳಿಕೊಂಡು ಸುಮ್ಮನಿದ್ದ. ಅವನಿಗೆ ಕಿವಿಯ ತಮಟೆಯ ಮೇಲೆ ಬಾರಿಸಿ ತಲೆ ಭಾರವಾಗುತ್ತಿದ್ದುದ್ದನ್ನು ತಡೆಯಲಾಗದೆ ಹೋದಾಗ,
“ಬಾಯಿ ಮುಚ್ಕೊಂಡು ಸುಮ್ಮನಿರ್‍ತೀಯ” ಎಂದ.
ಆದರೆ ಫೆರ್ನಾಂಡ ಧ್ವನಿಯನ್ನು ಮತ್ತಷ್ಟು ಏರಿಸಿದಳು. ಅವಳು, “ಬಾಯಿ ಮುಚ್ಕೊಂಡಿರೋ ಅಂಥಾದನ್ನ ನಾನೇನೂ ಮಾಡಿಲ್ಲ. ನನ್ನ ಮಾತನ್ನ ಕೆಳಿಸಿಕೊಳ್ಳೋದು ಯಾರಿಗಾದ್ರೂ ಇಷ್ಟವಿಲ್ಲದಿದ್ದರೆ ಎಲ್ಲಾದ್ರೂ ಹಾಳಾಗಿ ಹೋಗಿ” ಎಂದಳು. ಆಗ ಅವ್ರೇಲಿಯಾನೋ ಸೆಗುಂದೋ ಸ್ತಿಮಿತ ಕಳೆದುಕೊಂಡ. ಅವನು ಕೋಪದಿಂದ ಎದ್ದು ಜರ್ರ್ರ್ರಿ, ಬೆಗೋನಿಯಾ ಗಿಡಗಳ ಕುಂಡಗಳನ್ನು ಒಂದೊಂದಾಗಿ ಹಿಡಿದೆತ್ತಿ ನೆಲಕ್ಕೆ ಅಪ್ಪಳಿಸಿದ. ಫೆರ್ನಾಂಡಳಿಗೆ ಗಾಬರಿಯಾಯಿತು. ಏಕೆಂದರೆ ಅಲ್ಲಿಯ ತನಕ ಅವಳ ಗೊಣಗಾಟದ ಆಂತರಿಕ ಶಕ್ತಿ ಎಷ್ಟೆಂದು ಅವಳಿಗೆ ತಿಳಿದಿರಲಿಲ್ಲ. ಆದರೆ ಈಗ ಯಾವುದೇ ರೀತಿಯ ತಹಬಂದಿಗೆ ತಡವಾಗಿತ್ತು. ತನಗೆ ಸಿಗುತ್ತಿದ್ದ ಯಾವುದೋ ರೀತಿಯ ಸಮಾಧಾನಕ್ಕೆಂದು ಅವ್ರೇಲಿಯನೋ ಸೆಗುಂದೋ ಚೀನಾ ವಸ್ತುಗಳನ್ನು ಒಂದೊಂದಾಗಿ ನೆಲಕ್ಕೆ ಕುಕ್ಕಿದ. ಪ್ರಶಾಂತನಾಗಿ ಮನೆಗಾಗಿ ಖರ್ಚು ಮಾಡಿದ ರೀತಿಯಲ್ಲೇ ಬೊಹಿಮಿಯಾದ ಹರಳುಗಳನ್ನು, ಚಿತ್ರ ಬಿಡಿಸಿದ ಹೂದಾನಿಗಳನ್ನು ಹೂತುಂಬಿದ ದೋಣಿಯಲ್ಲಿ ಕುಳಿತ ಸುಂದರಿಯರ ಚಿತ್ರಗಳನ್ನು, ಸೊಬಗಿನ ಚೌಕಟ್ಟಿರುವ ಕನ್ನಡಿಗಳನ್ನು ಮತ್ತು ಅಂಗಳದಿಂದ ಅಡುಗೆ ಮನೆವರೆಗೆ, ತುಂಡಾಗಬಹುದಾದ ಎಲ್ಲವನ್ನೂ ಗೋಡೆಗೆ ಬೀಸಿ ಎಸೆದು ಚಿಂದಿ ಮಾಡಿದ. ಅಡುಗೆ ಮನೆಯ ದೊಡ್ಡ ಮಣ್ಣಿನ ಜಾಡಿಯನ್ನು ನಡುಮನೆಯಲ್ಲಿ ಸ್ಫೋಟಿಸುವಂತೆ ಕುಕ್ಕಿದ. ಅನಂತರ ಅವನು ಕೈ ತೊಳೆದುಕೊಂಡು, ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಹೊರಟು ಮಧ್ಯರಾತ್ರಿಯ ಮುಂಚೆ ಒಂದಿಷ್ಟು ಮಾಂಸ, ಒಂದೆರಡು ಚೀಲ ಅಕ್ಕಿ, ಕಾಳು, ಬಾಳೆಗೊನೆಗಳನ್ನು ತಂದ. ಅಂದಿನಿಂದ ಮನೆಯಲ್ಲಿ ಊಟಕ್ಕೆ ಕೊರತೆ ಇರಲಿಲ್ಲ.
ಅಮರಾಂತ ಉರ್ಸುಲಾ ಮತ್ತು ಪುಟ್ಟ ಅವ್ರೇಲಿಯಾನೋ ಮನೆಯಲ್ಲಿರುವ ಅವಧಿಯನ್ನು ಸಂತೋಷದ ದಿನಗಳೆಂದು ಅನಂತರ ನೆನಪಿಸಿಕೊಳ್ಳುವಂತಾಯಿತು. ಫೆರ್ನಾಂಡಳ ಬಿಗಿಯಾದ ಕಟ್ಟಳೆಯ ನಡುವೆಯೂ ಅವರು ನಡುಮನೆಯಲ್ಲಿ ಪರಸ್ಪರ ಕೆಸರನ್ನು ಎರಚುತ್ತಿದ್ದರು, ಹಲ್ಲಿಗಳನ್ನು ಹಿಡಿದು ಸೀಳುತ್ತಿದ್ದರು ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ನೋಡದಿರುವಾಗ ಸೂಪ್‌ಗೆ ಚಿಟ್ಟೆಗಳ ರೆಕ್ಕೆಗಳ ಮೇಲಿನ ಧೂಳನ್ನು ಬೆರೆಸುತ್ತಿರುವಂತೆ ನಟಿಸುತ್ತಿದ್ದರು. ಅವರ ಪಾಲಿಗೆ ಉರ್ಸುಲಾ ತುಂಬಾ ಇಷ್ಟವಾದ ಆಟದ ವಸ್ತುವಾಗಿದ್ದಳು. ಅವರು ಅವಳನ್ನು ತುಂಡಾದ ದೊಡ್ಡ ಗೊಂಬೆಯ ಹಾಗೆ ಪರಿಗಣಿಸಿ, ಮೈಗೆ ಬಣ್ಣದ ಬಟ್ಟೆ ಸುತ್ತಿ, ಮುಖಕ್ಕೆ ಕಪ್ಪು ಬಣ್ಣ ಪೇಂಟ್ ಮಾಡಿ, ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಸಲ ಅವರು ಕಪ್ಪೆಗಳ ಕಣ್ಣುಗಳಿಗೆ ಮಾಡಿದ ಹಾಗೆ ದಬ್ಬಳದಿಂದ ಕೀಳುವುದರಲ್ಲಿದ್ದರು. ಅವಳಿಗೆ ಅವರ ಲವಲವಿಕೆಯ ಮನಸ್ಸು ಕೊಟ್ಟ ಉತ್ಸಾಹದಷ್ಟು ಬೇರೆ ಯಾವುದೂ ಕೊಡಲಿಲ್ಲ. ಮಳೆ ಬೀಳುತ್ತಿದ್ದ ಮೂರನೆ ವರ್ಷದಲ್ಲಿ ಅವಳಿಗೇನೋ ಆಗಿರಬೇಕು. ಏಕೆಂದರೆ ಅವಳಿಗೆ ವಾಸ್ತವದ ಗ್ರಹಿಕೆಯಲ್ಲಿ ನಿಯಂತ್ರಣ ತಪ್ಪಿ ಅದನ್ನು ತನ್ನ ಬಾಳಿನ ಹಿಂದಿನ ದಿನಗಳೊಂದಿಗೆ ಸೇರಿಸಿಕೊಳ್ಳುತ್ತಿದ್ದಳು. ಒಂದು ಸಲ ಅವಳು ಒಂದು ಶತಮಾನದ ಹಿಂದೆ ಹೂಳಿದ ಮುತ್ತಜ್ಜಿ ಪೆತ್ರೋನಿಲಾ ಇಗ್ವಾರಾನ್‌ಗಾಗಿ ಮೂರು ದಿನ ಅತ್ತಳು. ಅವಳು ಎಂಥ ಮನೋಸ್ಥಿತಿಯಲ್ಲಿ ಇದ್ದಳೆಂದರೆ ಪುಟ್ಟ ಅವ್ರೇಲಿಯಾನೋನನ್ನು ಐಸ್ ನೋಡಲು ಹೋದ ಕಾಲದಲ್ಲಿದ್ದ ಕರ್ನಲ್ ಮತ್ತು ಸ್ಕೂಲಿಗೆ ಹೋಗುತ್ತಿದ್ದ ಹೊಸೆ ಅರ್ಕಾದಿಯೋನನ್ನು ಜಿಪ್ಸಿಗಳ ಜೊತೆ ಹೋದ ತನ್ನ ಮೊದಲನೆ ಮಗ ಎಂದು ತಿಳಿದಳು. ಅವಳು ತನ್ನ ಮನೆಯವರ ಬಗ್ಗೆ ಎಷ್ಟು ಮಾತಾಡಿದಳೆಂದರೆ ಮಕ್ಕಳು ಬಹಳ ಹಿಂದೆ ಸತ್ತವರ ಜೊತೆ ಮತ್ತು ಬೇರೆ ಬೇರೆ ಕಾಲದಲ್ಲಿ ಬದುಕಿದ್ದವರ ಜೊತೆ ಕಲ್ಪನಾ ಭೇಟಿ ಮಾಡುವುದನ್ನು ಕಲಿತುಕೊಂಡರು. ಹಾಸಿಗೆಯ ಮೇಲೆ ಬೂದಿ ಸವರಿದ ಕೂದಲಿನ ಮತ್ತು ಕೆಂಪು ಕರ್ಚೀಫ್‌ನಿಂದ ಮುಖ ಸುತ್ತುವರಿಸಿ ಕುಳಿತ ಉರ್ಸುಲಾ ಅವಾಸ್ತವ ಸಂಬಂಧಿಗಳ ಒಡನಾಟದಲ್ಲಿ ಹಾಗೂ ಮಕ್ಕಳು ಅವರ ಬಗ್ಗೆ ಹೇಳುವ ವಿವರಣೆಗಳಲ್ಲಿ ಸಂತೋಷವಾಗಿದ್ದಳು. ಉರ್ಸುಲಾ ತಾನು ಹುಟ್ಟುವುದಕ್ಕಿಂತ ಮುಂಚಿನ ಘಟನೆಗಳ ಬಗ್ಗೆ ಹಿಂದಿನವರ ಜೊತೆ ಮಾತಾಡುತ್ತಿದ್ದಳು. ಅವರು ತಿಳಿಸುತ್ತಿದ್ದ ಸುದ್ದಿಗಳಿಂದ ಸಂತೋಷಗೊಳ್ಳುತ್ತಿದ್ದಳು ಮತ್ತು ಅವರ ಜೊತೆ ಸೇರಿಕೊಂಡು ಅತಿಥಿಗಳಿಗಿಂತ ಇತ್ತೀಚಿನವರ ಸಾವಿನ ಬಗ್ಗೆ ರೋದಿಸುತ್ತಿದ್ದಳು. ದೆವ್ವಗಳ ಜೊತೆಯ ಭೇಟಿಯ ಪ್ರಾರಂಭದಲ್ಲಿ ಉರ್ಸುಲಾ ಮನುಷ್ಯಾಕೃತಿಯ ಸಂತ ಜೋಸೆಫ್‌ನ ವಿಗ್ರಹವನ್ನು ಮಳೆ ನಿಲ್ಲುವ ತನಕ ಇಟ್ಟುಕೊಂಡಿರಿ ಎಂದು ಬಿಟ್ಟು ಹೋದವನು ಯಾರೆಂದು ಪತ್ತೆ ಮಾಡಲು ಕೇಳಿಯೇ ಕೇಳುತ್ತಾಳೆಂದು ಆ ಮಕ್ಕಳಿಗೆ ತಿಳಿಯಲು ಬಹಳ ಕಾಲ ಬೇಕಾಗಲಿಲ್ಲ. ಅದೇ ರೀತಿಯಲ್ಲಿ ಅವ್ರೇಲಿಯಾನೋ ಸೆಗುಂದೋಗೆ, ಉರ್ಸುಲಾ ಒಬ್ಬಳಿಗೆ ಮಾತ್ರ್ರ ಅಗಾಧ ಸಂಪತ್ತನ್ನು ಹೂತಿರುವ ಜಾಗ ಗೊತ್ತಿದೆ ಎಂದು ತಿಳಿದಿತ್ತು. ಆದರೆ ಉದ್ಭವಿಸಿದ ಪ್ರಶ್ನೆಗಳು ಹಾಗೂ ಅದರ ನಿರ್ವಹಣೆಯ ಬಗ್ಗೆ ಅವನಿಗೆ ಹೊಳೆದದ್ದು ಉಪಯೋಗಕ್ಕೆ ಬರಲಿಲ್ಲ. ಏಕೆಂದರೆ ಅವಳ ಹುಚ್ಚಾಟದ ಕಗ್ಗಂಟಿನ ನಡುವೆಯೂ ಗುಟ್ಟನ್ನು ಬಿಟ್ಟುಕೊಡದೇ ಇರುವಂಥ ಚಿತ್ತ ಶಾಂತಿಯನ್ನು ಕಾಪಾಡಿಕೊಂಡಿರುವುದು ಅವಳಿಗೆ ಸಾಧ್ಯವಿದ್ದ ಹಾಗೆ ಕಾಣುತ್ತಿತ್ತು. ಅವಳು ಅದನ್ನು ಆ ಸಂಪತ್ತಿನ ನಿಜವಾದ ಒಡೆಯನೆಂದು ಪುರಾವೆ ಒದಗಿಸುವವನಿಗೆ ಮಾತ್ರ ತಿಳಿಸುವವಳಿದ್ದಳು. ಅವಳೆಷ್ಟು ಚತುರಳಾಗಿ ಮತ್ತು ಕಟ್ಟುನಿಟ್ಟಿನವಳಾಗಿದ್ದಳೆಂದರೆ ಅವ್ರೇಲಿಯಾನೋ ಸೆಗುಂದೋ ತನ್ನ ಸಹಚರನೊಬ್ಬನಿಗೆ ಅವನೇ ಒಡೆಯನೆಂದು ವರ್ತಿಸು ಎಂದು ಹೇಳಿಕೊಟ್ಟಾಗ ಅವಳು ಒಂದೇ ಒಂದು ನಿಮಿಷದಲ್ಲಿ ಅವನು ತಬ್ಬಿಬ್ಬಾಗಿ ಸಿಕ್ಕಿಹಾಕಿಕೊಳ್ಳುವಂಥ ಪ್ರಶ್ನೆಗಳನ್ನು ಕೇಳಿದಳು.
ಉರ್ಸುಲಾ ಆ ಗುಟ್ಟನ್ನು ತನ್ನ ಗೋರಿಗೂ ಕೊಂಡೊಯ್ಯುತ್ತಾಳೆ ಎಂದು ಅವ್ರೇಲಿಯಾನೋ ಸೆಗುಂದೋಗೆ ಖಚಿತವಾಗಿ ಅಂಗಳ ಮತ್ತು ಹಿಂಭಾಗದಲ್ಲಿ ಚರಂಡಿ ಮಾಡುತ್ತಾರೆ ಎಂಬ ನೆಪದಿಂದ ಗುಂಡಿ ತೋಡುವವರನ್ನು ನೇಮಿಸಿದ ಮತ್ತು ಅವನು ಕಬ್ಬಿಣದ ಸರಳುಗಳಿಂದ ಮಣ್ಣು ಅಗೆದು ಪರೀಕ್ಷೆ ಮಾಡಿದ ಮತ್ತು ಲೋಹ ಪರೀಕ್ಷಕಗಳಿಂದ ಮಾಡಿದ ಮೂರು ತಿಂಗಳು ಸುಸ್ತಾಗುವರೆಗಿನ ಪ್ರಯತ್ನದಿಂದ, ಬಂಗಾರವನ್ನು ಹೋಲುವ ಯಾವುದರ ಸೂಚನೆ ದೊರೆಯುಲಿಲ್ಲ. ಅನಂತರ ಅವನು ಕಾರ್ಡುಗಳು ನೆಲ ಅಗೆಯುವವನಿಗಿಂತ ಚೆನ್ನಾಗಿ ನೋಡಬಲ್ಲವು ಎಂದು ಭಾವಿಸಿ ಪಿಲರ್ ಟೆರ್‍ನೆರಾಳ ಹತ್ತಿರ ಹೋದ. ಅವಳು ಕಾರ್ಡು ತೆಗೆಯದೆ ಉರ್ಸುಲಾಗೆ ತಿಳಿಯದಂತೆ ಮಾಡುವ ಪ್ರಯತ್ನ ವ್ಯರ್ಥವೆಂದು ಅವನಿಗೆ ವಿವರಿಸಿದಳು. ಆದರೆ ಅವಳು ಹೂತಿಟ್ಟಿರುವ ಸಂಪತ್ತು ತಾಮ್ರದ ತಂತಿ ಕಟ್ಟಿರುವ ಮೂರು ಬ್ಯಾಗುಗಳಲ್ಲಿ ಏಳು ಸಾವಿರದ ಇನ್ನೂರ ಹದಿನಾಲ್ಕು ಬಂಗಾರದ ನಾಣ್ಯಗಳಿದ್ದು, ಅವು ಉರ್ಸುಲಾಳ ಹಾಸಿಗೆಯನ್ನು ಕೇಂದ್ರಬಿಂದುವಾಗಿರಿಸಿಕೊಂಡು ಮುನ್ನೂರ ಎಂಬತ್ತು ಅಡಿ ವೃತ್ತದಲ್ಲಿದೆ ಎಂದು ಹೇಳಿದಳು. ಅಲ್ಲದೆ ಅವಳು ಅವೆಲ್ಲ ಮಳೆ ನಿಂತು, ಒಂದಾದ ಮೇಲೊಂದು ಸೂರ್ಯನ ಶಾಖದ ಜೂನ್ ತಿಂಗಳು ಕೆಸರನ್ನು ಧೂಳಾಗಿಸುವ ತನಕ ಸಿಗುವುದಿಲ್ಲವೆಂದು ಹೇಳಿದಳು. ಅವಳ ವಿವರಣೆ ಅಷ್ಟು ವಿಸ್ತಾರವಾಗಿ ಮತ್ತು ನಿಖರವಾಗಿತ್ತು. ಅವ್ರೇಲಿಯಾನೋ ಸೆಗುಂದೋಗೆ ತಾವೀಗ ಆಗಸ್ಟ್‌ನಲ್ಲಿದ್ದು ಇನ್ನೂ ಮೂರು ವರ್ಷದ ತನಕ ಅವರ ಭವಿಷ್ಯ ನಿಜವಾಗಲು ಕಾಯಬೇಕಾಗಿದ್ದರೂ ಅದೆಲ್ಲ ಆಧ್ಯಾತ್ಮವಾದಿಗಳು ಹೇಳುವ ಕತೆಗಳಂತೆ ಕಂಡಿತು. ಅವನಿಗೆ ಗೊಂದಲ ಹೆಚ್ಚಾದರೂ, ಅದೇ ಸಮಯದಲ್ಲಿ ಬೆರಗಾಗಿಸಿದ ಮೊದಲನೇ ಅಂಶವೆಂದರೆ, ಉರ್ಸುಲಾಳ ಮಂಚದಿಂದ ಹಿಂದುಗಡೆ ಗೋಡೆಗೆ ಮುನ್ನೂರ ಎಂಭತ್ತೆಂಟು ಅಡಿ ಇದ್ದದ್ದು. ಅವನ ಅವಳಿ ಸೋದರನಂತೆ ಅವನೂ ಕೂಡಾ ಹುಚ್ಚಾಟದವನು ಎಂದು ಫೆರ್ನಾಂಡಳಿಗೆ ಅವನು ಅಳತೆ ಹಿಡಿದಾಗ ಮತ್ತು ಅದಕ್ಕಿಂತ ಹೆಚ್ಚಾಗಿ ನೆಲ ಅಗೆಯುವವರಿಗೆ ಮೂರು ಅಡಿ ಹೆಚ್ಚಿಗೆ ತೆಗೆಯಲು ಹೇಳಿದಾಗ ಗಾಬರಿಯಾಯಿತು. ಅವನ ಮುತ್ತಜ್ಜನಿಗೆ ಮಾತ್ರ ಹೋಲಿಸಬಹುದಾದಂಥ ಆವಿಷ್ಕಾರದ ಮಾರ್ಗದಲ್ಲಿ, ಸಂಶೋಧನೆಯ ಗೀಳು ಹತ್ತಿದ ಅವ್ರೇಲಿಯಾನೋ ಸೆಗುಂದೋನಲ್ಲಿ ಅಳಿದುಳಿದ ಕೊಬ್ಬಿನಂಶ ಕರಗಿ ಹೋಯಿತು. ಅವನಿಗೆ ಅವನ ಸೋದರನ ಹೋಲಿಕೆ ಹೆಚ್ಚಾಯಿತು. ಇದು ನೀಳಕಾಯದಿಂದ ಮಾತ್ರವಲ್ಲ ಆಲೋಚನಾಪರ ಹಾಗೂ ಅಂತರ್ಮುಖಿಯಾಗುವ ಧೋರಣೆಯಿಂದ ಅವನು ಮಕ್ಕಳ ಜೊತೆಗೆ ಸೇರಿ ಕಿರಿಕಿರಿ ಮಾಡುತ್ತಿರಲಿಲ. ಅವನು ತಲೆಯಿಂದ ಉಂಗುಷ್ಠದ ತನಕ ಮಣ್ಣು ಮೆತ್ತಿಕೊಂಡು ಅವೇಳೆಯಲ್ಲಿ ಊಟ ಮಾಡುತ್ತಿದ್ದ. ಅವನು ಇದನ್ನು ಅಡುಗೆ ಮನೆಯ ಮೂಲೆಯಲ್ಲಿ ಒಮ್ಮೊಮ್ಮೆ ಸಾಂತ ಸೋಫಿಯಾ ದೆಲಾ ಪಿಯದಾದ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾಡುತ್ತಿದ್ದ.
ಅವನಿಗೆ ಅಷ್ಟೆಲ್ಲ ಸಾಧ್ಯವೇ ಎಂದು ಕನಸಿನಲ್ಲಿಯೂ ಕಾಣದ ಫೆರ್ನಾಂಡ ಅವನನ್ನು ಆ ರೀತಿ ನೋಡಿದ ಮೇಲೆ ಅವನ ಹಠ ದೃಢವಾಗಿದೆ, ಅತಿಯಾಸೆ ಬಿಟ್ಟು ಹೋಗಿದೆ ಮತ್ತು ಹಿಡಿದಿದ್ದನ್ನು ಬಿಡದೆ ಮಾಡುವ ಮನಸ್ಸಾಗಿದೆ ಎಂದುಕೊಂಡಳು. ತಾನು ಅವನ ಬಗ್ಗೆ ಕೆಟ್ಟದಾಗಿ ನಡೆದುಕೊಂಡದ್ದಕ್ಕೆ ಬೇಸರಗೊಂಡಳು. ಆದರೆ ಅವ್ರೇಲಿಯಾನೋ ಸೆಗುಂದೋ ಆ ಸಮಯದಲ್ಲಿ ದಯಾಪೂರ್ಣ ಹೊಂದಾಣಿಕೆಗೆ ತಯಾರಿರಲಿಲ್ಲ. ಜೀವವಿಲ್ಲದ ಮರದ ಕೊಂಬೆಗಳು ಮತ್ತು ಕುತ್ತಿಗೆ ತನಕ ಮುಳುಗಿದ್ದ ಅವನು, ಅಂಗಳ ಮತ್ತು ಹಿಂಭಾಗವನ್ನು ಶುಚಿ ಮಾಡಿ ಕೈತೋಟದ ಕಸವನ್ನೆಲ್ಲ ಆಚೆಗೆಸೆದ. ಅವನು ಮನೆಯ ಪೂರ್ವದ ಕಡೆಯ ಅಡಿಪಾಯದ ಕೆಳಗೆ ಎಷ್ಟು ಅಗೆಸಿದ್ದನೆಂದರೆ, ಒಂದು ರಾತ್ರಿ ಭೂಕಂಪವಾದಂತಾಗಿ ಮನೆಯವರೆಲ್ಲ ಗಾಬರಿಯಿಂದ ನೆಲಮಾಳಗೆ ಬಿರುಕು ಬಿಟ್ಟಿದೆ ಎಂದು ಎಚ್ಚರಗೊಂಡರು. ಮೂರು ರೂಮುಗಳು ಕಡಿದು ಬೀಳುತ್ತಿದ್ದವು ಮತ್ತು ಅಂಗಳದಿಂದ ಫೆರ್ನಾಂಡಳ ರೂಮಿನ ತನಕ ಬಿರುಕು ಬಿಟ್ಟಿತ್ತು. ಆದರೆ ಅದರಿಂದಾಗಿ ಅವ್ರೇಲಿಯಾನೋ ಸೆಗುಂದೋ ತನ್ನ ಕೆಲಸವನ್ನು ಕೈ ಬಿಡಲಿಲ್ಲ. ಅವನ ಕೊನೆಯ ಆಸೆಯು ಮುಗಿದಾಗ ಮತ್ತು ಕಾರ್ಡುಗಳು ಭವಿಷ್ಯ ತಿಳಿಸಿದ್ದರಲ್ಲಿ ಅರ್ಥವಿದೆ ಎಂದು ತೋರಿದಾಗ ಅವನು ಕಿತ್ತುಹೋದ ಅಡಿಪಾಯವನ್ನು ಸುಭದ್ರಗೊಳಿಸಿ, ಬಿರುಕು ಬಿಟ್ಟಿದ್ದನ್ನು ಗಾರೆಯಿಂದ ಮೆತ್ತಿ ರಿಪೇರಿ ಮಾಡಿz. ಆ ಮೇಲೆ ಅವನು ಪಶ್ಚಿಮದ ಕಡೆ ಮುಂದುವರೆಸಿದ. ಜೂನ್ ಎರಡನೆ ವಾರದಲ್ಲಿದ್ದ ಮಳೆ ಕಡಿಮೆಯಾಗಿ, ಮೋಡ ಚದುರಿತು ಮತ್ತು ಪ್ರತಿಕ್ಷಣವೂ ಕಳೆದಂತೆ ಮಳೆ ನಿಲ್ಲುತ್ತದೆ ಎಂದು ತಿಳಿದುಬಂತು. ಅದು ಆದದ್ದೂ ಹಾಗೆಯೇ. ಒಂದು ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ, ಸೂರ್ಯನಿಂದ ಇಟ್ಟಿಗೆ ಪುಡಿಯ ಹಾಗೆ ಮತ್ತು ಪ್ರಶಾಂತವಾದ ನೀರಿನಂತೆ, ಸುತ್ತಲ ಪ್ರಪಂಚ ಬೆಳಕಾಯಿತು ಮತ್ತು ಹತ್ತು ವರ್ಷ ಮಳೆಯಾಗಲಿಲ್ಲ.
ಮಕೋಂದೋ ಪರಿಸ್ಥಿತಿ ಹದಗೆಟ್ಟಿತ್ತು. ನೀರು ನಿಂತ ರಸ್ತೆಗಳಲ್ಲಿ ಪೀಠೋಪಕರಣಗಳ ಬಿಡಿ ಭಾಗಗಳಿದ್ದವು, ಲಿಲ್ಲಿ ಹೂಗಳಿಂದ ಮುತ್ತಿದ ಪ್ರಾಣಿಗಳ ಅಸ್ಥಿಪಂಜರಗಳಿದ್ದವು ಹಾಗೂ ಮಕೋಂದೋಗೆ ಬಂದ ಹಾಗೆಯೇ ಬಿಟ್ಟು ಹೋದ ಗುಂಪು ಗುಂಪು ಹೊರಗಿನ ಜನರ ಕೊನೆಯ ನೆನಪುಗಳಿದ್ದವು. ಬಾಳೆ ತೋಟದ ಸಮೃದ್ಧ ಅವಧಿಯಲ್ಲಿ ಅವಸರದಲ್ಲಿ ಕಟ್ಟಿದ ಮನೆಗಳು ಹಾಳು ಸುರಿಯುತ್ತಿದ್ದವು. ಬಾಳೆ ತೋಟದ ಕಂಪನಿ ತನ್ನಲ್ಲಿ ವ್ಯವಸ್ಥೆಯನ್ನು ಕೆಳಗುರುಳಿಸಿತು. ಸುತ್ತ ತಂತಿಯ ಬೇಲಿ ಕಟ್ಟಿದ ಆ ಊರಿನಲ್ಲಿ ಈಗ ಉಳಿದದ್ದು ರದ್ದಿ ಮಾತ್ರ. ಮರದ ಮನೆಗಳು, ಬೀಸುವ ತಂಗಾಳಿಯಲ್ಲಿ ಮಧ್ಯಾಹ್ನದ ಹೊತ್ತು ಇಸ್ಪೀಟ್ ಆಡಲು ಟೆರೇಸುಗಳು – ಇವೆಲ್ಲ ಭವಿಷ್ಯ ನುಡಿದ ರೀತಿಯಲ್ಲಿ ಭೂಮಿಯ ಮೇಲಿಂದ ಮಕೋಂದೋ ಹೆಸರು ಇಲ್ಲವಾಗುತ್ತದೆ ಎನ್ನುವುದನ್ನು ನಿರೀಕ್ಷಿಸಿ ಧೂಳೀಪಟವಾಗಿದ್ದವು. ಆ ಭೀಕರ ಹೊಡೆತದಿಂದ ಅಲ್ಲಿ ಉಳಿದಿದ್ದ ಒಂದೇ ಮನುಷ್ಯನ ಗುರುತೆಂದರೆ ವಾಹನವೊಂದರಲ್ಲಿ ಕಾಡುಗಿಡದ ನಡುವೆ ಇದ್ದ ಪ್ಯಾಟ್ರಿಷಿಯಾ ಬ್ರೌನ್‌ಳ ಒಂದು ಕೈ ಗವಸು. ಹೊಸೆ ಅರ್ಕಾದಿಯೋ ಬ್ಯುಂಡಿಯ ಪರಿಶೋಧಿಸಿದ ಉಲ್ಲಾಸದ ಪ್ರದೇಶವಾದ ಮತ್ತು ಅನಂತರ ಬಾಳೆ ತೋಟದವರ ಶ್ರೇಯಸ್ಸಿಗೆ ಕಾರಣವಾದ ಆ ಪ್ರದೇಶದಲ್ಲಿ ಉಸುಬಿನಲ್ಲಿ ಕೊಳೆತ ಬೇರುಗಳಿರುವ ಹಾಗೂ ದೂರ ದಿಗಂತದಲ್ಲಿ ಸಮುದ್ರದ ಮೇಲಿನ ಸದ್ದಿಲ್ಲದ ನೊರೆಯನ್ನು ನೋಡಬಹುದಿತ್ತು. ಅವ್ರೇಲಿಯಾನೋ ಸೆಗುಂದೋ ವ್ಯಥೆಯಲ್ಲಿ ಮುಳುಗಿ ಆ ಭಾನುವಾರ, ಒಣಗಿದ ಬಟ್ಟೆ ಹಾಕಿಕೊಂಡು ಊರಿನಲ್ಲಿರುವವರ ಜೊತೆ ಮತ್ತೆ ಸಂಬಂಧವನ್ನು ನವೀಕರಿಸುವುದಕ್ಕಾಗಿ ಹೋದ. ಆ ದುರಂತದಲ್ಲಿ ಪಾರಾದ, ಬಾಳೆ ತೋಟದ ಕಂಪನಿಯ ಬಿರುಗಾಳಿಗೆ ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ಮುಂಚೆಯೇ ಮಕೋಂದೋದಲ್ಲೇ ನೆಲೆಸಿದ್ದ ಅವರು, ರಸ್ತೆಯ ಮಧ್ಯದಲ್ಲಿ ಬೆಳಕನ್ನು ಸುಖಿಸುತ್ತ ಕುಳಿತಿದ್ದರು. ಅವರು ಚರ್ಮದ ಮೇಲೆ ಇನ್ನೂ ಆ ಗುರುತು ಇತ್ತು ಮತ್ತು ಮೂಲೆಯ ಮಣ್ಣು ವಾಸನೆ ಅವರಿಗಂಟಿತ್ತು. ಆದರೆ ಅವರಿಗೆ ತಾವು ಹುಟ್ಟಿದ ಊರನ್ನು ಮತ್ತೆ ಮರಳಿ ಪಡೆದ ಸಂತೋಷವಿತ್ತು. ಟರ್ಕಿಗಳ ರಸ್ತೆ, ಅರಬರು ಆ ದಿನಗಳಲ್ಲಿ ಚಪ್ಪಲಿ ಹಾಗೂ ಕಿವಿಯಲ್ಲಿ ರಿಂಗುಗಳನ್ನು ಹಾಕಿಕೊಂಡು, ಗಿಣಿಗಳಿಗಾಗಿ ವಸ್ತುಗಳನ್ನು ಅದಲು ಬದಲು ಮಾಡುತ್ತ, ತಿರುಗಾಡುತ್ತಿದ್ದಂತೆಯೇ ಆಯಿತು. ಅಲ್ಲದೆ ಅವರು ಓಬೀರಾಯನ ಕಾಲದಿಂದಲೂ ಅಲೆಮಾರಿಗಳು ಎನ್ನುವುದರಿಂದ ಮಕೋಂದೋ ರಸ್ತೆಯ ತಿರುವಿನಲ್ಲಿ ಬಿಡುಗಡೆಯ ಸಮಾಧಾನ ಪಡೆದರು. ಮಳೆಯ ದಿನಗಳು ಕಳೆದ ಮೇಲೆ ಅಂಗಡಿಯ ಸಾಮಾನುಗಳು ಉದುರಿ ಬೀಳುತ್ತಿದ್ದವು. ಬಾಗಿಲ ಮೇಲೆ ಹಾಕಿದ ಬಟ್ಟೆಗಳೆಲ್ಲ ಚಿತ್ತು ಚಿತ್ತಾಗುತ್ತಿದ್ದವು, ದುಡ್ಡೆಣಿಸುವ ಟೇಬಲ್‌ಗಳಿಗೆ ಗೆದ್ದಲು ಹಿಡಿದಿತ್ತು, ಗೋಡೆಗಳಿಗೆ ತೇವ ಬಡಿದಿತ್ತು. ಆದರೆ ಮೂರನೆ ಸಂತಾನದ ಅರಬರು ಅವರ ಅಪ್ಪ, ತಾತಂದಿರಂತೆ ಅದೇ ರೀತಿಯಲ್ಲಿ ಅವರಂತೆಯೇ ಹೆದರದೆ ಮಿತಭಾಷಿಗಳಾಗಿ, ಜರುಗಿದ ಅನಾಹುತದಿಂದ ಮತ್ತು ಅವಧಿಯಿಂದ ಅಲ್ಲಾಡದೆ, ನಿದ್ದೆ ಬಾರದ ರೋಗದ ಕಾಲದಲ್ಲಿ ಹೇಗೆ ಬದುಕಿದ್ದರೋ ಅಥವಾ ಹೇಗೆ ಸತ್ತಿದ್ದರೋ ಹಾಗೆಯೇ ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮೂವತ್ತೆರಡು ಯುದ್ಧ ಕಾಲದಲ್ಲಿದ್ದಂತೆಯೇ ಇದ್ದರು. ಜೂಜಾಟದ ಟೇಬಲ್ಲುಗಳಲ್ಲಿ ಪೋಲುಮಾಡುವ ಆವರಣದಲ್ಲಿ, ಶೂಟಿಂಗ್ ಗ್ಯಾಲರಿಗಳಲ್ಲಿ ಉಂಟಾದ ನಷ್ಟವನ್ನು ಎದುರಿಸಿ ನಿಲ್ಲುವ ಎದೆಗಾರಿಕೆಯಿತ್ತು. ಅವರು ಕನಸುಗಳನ್ನು ವ್ಯಾಖ್ಯಾನಿಸುವ ಹಾಗೂ ಭವಿಷ್ಯ ಹೇಳುವಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಆ ಅನಾಹುತದಲ್ಲಿ ಕೊಚ್ಚಿಕೊಂಡು ಹೋಗದಂತೆ ಯಾವ ನಿಗೂಢ ಶಕ್ತಿಯನ್ನು ಅವಲಂಬಿಸಿದ್ದರು ಎಂದು ಅನೌಪಚಾರಿಕವಾಗಿ ಕೇಳುವಂತೆ ಮಾಡಿತು. ಮುಳುಗಿ ಹೋಗದಂತೆ ಅದೆಂಥ ಅಮಾನುಷ ಏರ್ಪಾಡು ಮಾಡಿಕೊಂಡಿದ್ದರು ಎಂದು ಕೇಳಿದ. ಅದಕ್ಕೆ ಒಬ್ಬರಾದ ಮೇಲೊಬ್ಬರು, ಒಂದು ಮನೆಯಾದ ಮೇಲೆ ಮತ್ತೊಂದು ಮನೆಯಲ್ಲಿ, ಸಣ್ಣಗೆ ನಕ್ಕು, ತೇಲಿಸಿ ನೋಡುತ್ತಾ, ಯಾವುದೇ ರೀತಿಯ ಮುಂಚಿನ ಸಮಾಲೋಚನೆ ಇಲ್ಲದೆ ಎಲ್ಲರೂ ಒಂದೇ ಉತ್ತರ ಕೊಟ್ಟರು.
“ಈಜಾಡ್ತಾ ಇದ್ವಿ”
ಪೆತ್ರಾ ಕೊತೆಸ್ ಒಬ್ಬಳಿಗೆ ಮಾತ್ರ ಅರಬರ ಹೃದಯವಿತ್ತು. ಅವಳು ತನ್ನ ಕುದುರೆ ಲಾಯದ ಅಂತಿಮ ನಾಶವನ್ನು ನೋಡಿದ್ದಳು, ಅವಳ ಅಡುಗೆ ಸಾಮಾನುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆದರೆ ತನ್ನ ಮನೆಯ ಸ್ಥಿರತೆಯನ್ನು ಕಾಪಾಡಲು ಸಮರ್ಥಳಾಗಿದ್ದಳು. ಎರಡನೆ ವರ್ಷದಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಅವಳು ತುರ್ತಾದ ಸಂದೇಶಗಳನ್ನು ಕಳಿಸಿದ್ದಳು. ಅವನು ಅವಳ ಮನೆಗೆ ಯಾವಾಗ ವಾಪಾಸಾಗುವನೆಂದು ಗೊತ್ತಿಲ್ಲ ಮತ್ತು ಏನೇ ಆದರೂ ಬೆಡ್‌ರೂಮಿನ ನೆಲಕ್ಕೆ ಜೋಡಿಸಲು ಒಂದು ಪೆಟ್ಟಿಗೆ ಬಂಗಾರದ ನಾಣ್ಯ ತೆಗೆದುಕೊಂಡು ಬರುವುದಾಗಿ ಉತ್ತರಿಸಿದ್ದ. ಆ ಸಮಯಕ್ಕೆ ಅವಳು ತನ್ನ ಹೃದಯವನ್ನು ಬಗೆದು, ಆ ಅನಾಹುತದಿಂದ ಪಾರಾಗಲು ಧೈರ್ಯ ಹೊಂದುವ ರೀತಿಯನ್ನು ಹುಡುಕುತ್ತಿದ್ದಳು. ಅವಳು ಅದಕ್ಕಾಗಿ ಬೇಕಾದ ರೋಷವನ್ನು ಕಂಡುಕೊಂಡು ತನ್ನ ಗಂಡ ಪೋಲು ಮಾಡಿದ ಸಂಪತ್ತನ್ನು ಮತ್ತು ಸುರಿಮಳೆ ನಿರ್ನಾಮ ಮಾಡಿದ್ದನ್ನು ಮರಳಿ ಪಡೆಯುವುದಾಗಿ ಪ್ರಮಾಣ ಮಾಡಿದಳು. ಅವಳ ಆ ನಿರ್ಧಾರ ಎಷ್ಟು ದೃಢವಾಗಿತ್ತೆಂದರೆ ಅವಳು ಕೊನೆಯ ಸಂದೇಶ ಕಳುಹಿಸಿಕೊಟ್ಟು ಎಂಟು ತಿಂಗಳಾದ ಮೇಲೆ ಅವಳ ಮನೆಗೆ ಅವ್ರೇಲಿಯಾನೋ ಸೆಗುಂದೋ ವಾಪಾಸು ಹೋದಾಗ, ಕಣ್ಣುಗಳು ಗುಳಿಬಿದ್ದು, ಚರ್ಮರೋಗ ಬಡಿದು ಅಂದಗೆಟ್ಟಿದ್ದರೂ, ಲಾಟರಿ ಶುರು ಮಾಡುವುದಕ್ಕಾಗಿ ತುಂಡು ಕಾಗದಗಳ ಮೇಲೆ ನಂಬರುಗಳನ್ನು ಬರೆಯುತ್ತಿದ್ದನ್ನು ಕಂಡು ಆಶ್ಚರ್ಯವಾಯಿತು. ಅವನು ತೀರ ಕೊಳಕಾಗಿ ವಿಪರೀತ ಗಂಭೀರನಾಗಿದ್ದು ಪೆತ್ರಾ ಕೊತೆಸ್ ತನ್ನನ್ನು ನೋಡಲು ಬಂದವನು ತನ್ನ ಪ್ರಿಯತಮನಲ್ಲ ಅವನ ಅವಳಿ ಸೋದರ ಎಂದು ಭಾವಿಸಿದಳು.
ಅವನು ಅವಳಿಗೆ, “ನಿಂಗೆಲ್ಲೋ ಹುಚ್ಚು. ಮೈಯಲ್ಲಿರೋ ಮೂಳೆಗಳ ಲಾಟರಿ ಮಾಡಿದ್ರೆ ಮಾತ್ರ ಸಾಧ್ಯ” ಎಂದ.
ಅನಂತರ ಅವಳು ಅವನಿಗೆ ಬೆಡ್‌ರೂಮನ್ನು ನೋಡಲು ಹೇಳಿದಳು ಮತ್ತು ಅಲ್ಲಿ ಅವ್ರೇಲಿಯಾನೋ ಸೆಗುಂದೋ ಹಂದಿಯೊಂದನ್ನು ನೋಡಿದ. ಅದರ ಮೈ ಚರ್ಮ ಅದರ ಒಡತಿಯಂತೆ ಮೂಳೆಗಂಟಿದ್ದರೂ ಬದುಕಿತ್ತು ಮತ್ತು ಅವಳ ಹಾಗೆ ಹಠವಿತ್ತು. ಪೆತ್ರಾ ಕೊತೆಸ್ ಅದಕ್ಕೆ ತಿನ್ನಲು ಬೈಗುಳನ್ನು ಕೊಟ್ಟಿದ್ದಳು. ಮನೆಯಲ್ಲಿ ಬೇರೆ ಯಾವ ಕಾಳು ಕಡ್ಡಿ ಇಲ್ಲದೆ ಹೋದಾಗ ಅದಕ್ಕೆ ತನ್ನ ಬೆಡ್‌ರೂಮಿನಲ್ಲಿಯೇ ಆಶ್ರಯ ಕೊಟ್ಟು, ತಿನ್ನುವುದಕ್ಕೆ ಹೊದಿಕೆ, ಪರ್ಷಿಯಾದ ರಗ್ಗು, ಬೆಡ್ ಸ್ಪ್ರೆಡ್, ವೆಲ್‌ವೆಟ್ ಬಟ್ಟೆ ಮತ್ತು ಸಿಂಗಾರದ ಮಂಚದ ಮೇಲಿನ ಬಂಗಾರದ ದಾರದ ಬಟ್ಟೆ ಮತ್ತು ಸಿಲ್ಕ್‌ನ ಕುಚ್ಚುಗಳನ್ನು ಕೊಟ್ಟಿದ್ದಳು.

೧೭

ಮಳೆ ನಿಂತ ಮೇಲೆ ಸಾಯುತ್ತೇನೆಂದು ಮಾಡಿದ ವಾಗ್ದಾನವನ್ನು ಉಳಿಸಿಕೊಳ್ಳಲು ಉರ್ಸುಲಾ ಬಹಳ ಕಷ್ಟಪಡಬೇಕಾಯಿತು. ಮಳೆ ಸುರಿಯುತ್ತಿದ್ದ ಕಾಲದಲ್ಲಿ ಸ್ಪಷ್ಟವಾಗಿ ಕಾಣುವುದು ವಿರಳವಾಗಿದ್ದದ್ದು, ಆಗಸ್ಟ್ ನಂತರ ಮತ್ತಷ್ಟು ಹೆಚ್ಚಾಗಿ, ಒಣ ಗಾಳಿ ಗುಲಾಬಿ ಪೊದೆಗಳ ಮೇಲೆ ಉಸಿರುಗಟ್ಟಿಸುವಷ್ಟು ಬೀಸಿ ಮತ್ತು ಪೇರಿಸಿದ್ದ ಕೆಸರು ಗುಪ್ಪೆಗಳನ್ನು ಗಟ್ಟಿ ಮಾಡಿತು. ಮತ್ತು ಅದು ಮಕೋಂದೋ ಮೇಲೆ ಒಣ ಧೂಳನ್ನು ಹರಡಿ ಜಿಂಕ್ ಚಾವಣಿಗ; ಮೇಲೆ ಮತ್ತು ಹಳೆಯ ಕಾಲದ ಬಾದಾಮಿ ಮರದ ಮೇಲೆ ನೆಲೆಯೂರುವಂತೆ ಮಾಡಿತು. ಉರ್ಸುಲಾ ತಾನು ಮೂರು ವರ್ಷಗಳಿಗೂ ಹೆಚ್ಚು ಕಾಲ ಮಕ್ಕಳ ಜೊತೆ ಆಡಿಕೊಂಡು ಕಳೆದಿದ್ದೇನೆಂದು ಯೋಚಿಸಿ ಮುಳು ಮುಳು ಅತ್ತಳು. ಅವಳು ಪೇಂಟ್ ಮಾಡಿದ ಮುಖವನ್ನು ಒರೆಸಿಕೊಂಡು, ಕೊಂಚ ಬಣ್ಣ ಹೊಳೆಯುತ್ತಿದ್ದ ಬಟ್ಟೆ ತುಂಡುಗಳನ್ನು ತೆಗೆದುಕೊಂಡು ಹಲ್ಲಿ ಮತ್ತು ಕಪ್ಪೆಗಳ ಮೈ ಒರೆಸಿದಳು. ಮತ್ತು ತನ್ನ ಮೈಮೇಲೆಲ್ಲಾ ಅವರು ಇಳಿಬಿಟ್ಟಿದ್ದ ಹಳೆಯ ಅರಬ್ ನೆಕ್ಲೇಸ್‌ಗಳನ್ನು ಕೂಡ. ಅವಳು ಅಮರಾಂತ ಸತ್ತ ಮೇಲೆ ಮೊದಲ ಬಾರಿಗೆ ಹಾಸಿಗೆಯಿಂದ ಯಾರ ಸಹಾಯವೂ ಇಲ್ಲದೆ ಎದ್ದು ಮನೆಯವರ ಜೊತೆ ಸೇರಿಕೊಂಡಳು. ಅವಳ ಅಂತಃಶಕ್ತಿ ನೆರಳುಗಳ ಮೂಲಕ ಪ್ರಜ್ಞೆ ಮೂಡಿಸಿತು. ಅವಳು ಯಾವುದಾದರೊಂದಕ್ಕೆ ಡಿಕ್ಕಿ ಹೊಡೆದದ್ದನ್ನು ಮತ್ತು ತಲೆಯ ತನಕ ಕೈಯನ್ನು ಎತ್ತಿ ಹಿಡಿದುಕೊಂಡಿದ್ದನ್ನುನೋಡಿದಾಗ ಅವಳಿಗೆ ಮೈಯಲ್ಲೇನೋ ತೊಂದರೆಯಾಗಿದೆ ಎಂದು ತಿಳಿದುಕೊಳ್ಳುತ್ತಿದ್ದರಲ್ಲದೆ ಕುರುಡಿ ಎಂದು ಭಾವಿಸುತ್ತಿರಲಿಲ್ಲ. ಮನೆಯನ್ನು ಮತ್ತೆ ಕಟ್ಟಿದಾಗ ಅಷ್ಟೊಂದು ಮನಸ್ಸಿಟ್ಟು ಬೆಳೆಸಿದ ಹೂದೋಟ ಮಳೆಯಿಂದ ಮತ್ತು ಅವ್ರೇಲಿಯಾನೋ ಸೆಗುಂದೋ ಅಗೆಸಿದ್ದರಿಂದ ಹಾಳಾಗಿರುವುದನ್ನು ತಿಳಿದುಕೊಳ್ಳಲು ಅವಳು ನೋಡಬೇಕಾಗಿರಲಿಲ್ಲ. ಹಾಗೆಯೇ ನೆಲ ಬಿರುಕು ಬಿಟ್ಟಿರುವುದನ್ನು, ಪೀಠೋಪಕರಣಗಳ ಬಣ್ಣ ಮಂಕಾಗಿರುವುದನ್ನು, ಬಾಗಿಲುಗಳ ತಿರುಗಣಿಗಳು ಬಿದ್ದು ಹೋಗಿರುವುದನ್ನು ಮತ್ತು ತನ್ನ ಕಾಲದಲ್ಲಿ ಊಹಿಸಲೂ ಸಾಧ್ಯವಾಗದಿದ್ದ ಹಾಗೆ ಮನೆಯವರು ಹತಾಶೆಯಿಂದ ಕೈಚೆಲ್ಲಿ ಕುಳಿತಿದ್ದನ್ನು ಕೂಡ. ಖಾಲಿ ಇರುವ ಬೆಡ್‌ರೂಮಿನೊಳಗೆ ಓಡಾಡುತ್ತಿರುವಾಗ ಮರದ ವಸ್ತುಗಳಲ್ಲಿ ಗೆದ್ದಿಲು ಹತ್ತಿರುವುದನ್ನು, ಮುಚ್ಚಿದ ಕಪಾಟುಗಳಲ್ಲಿ ನುಸಿ ಹುಳುಗಳು ಇರುವುದನ್ನು, ಸುರಿ ಮಳೆಯ ದಿನಗಳಲ್ಲಿ ತೀರಾ ಹೆಚ್ಚಾದ ಕೆಂಜಿಗದ ಸದ್ದನ್ನು ಮತ್ತು ಅವು ಅಡಿಪಾಯಕ್ಕೂ ನುಗ್ಗುವುದನ್ನು ಗಮನಿಸಿದ್ದಳು. ಒಂದು ದಿನ ಅವಳು ಪವಿತ್ರ ಟ್ರಂಕನ್ನು ತೆಗೆದಳು. ಅನಂತರ ಅವಳು ಸಾಂತ ಸೋಫಿಯಾ ದೆಲಾ ಪಿಯದಾದ್‌ಳನ್ನು ಕರೆದು ಮೈಮೇಲೆ ಹತ್ತಿರುವ ಜಿಗಣೆಗಳನ್ನು ಓಡಿಸಲು ಹೇಳಬೇಕಾಯಿತು. ಅವು ಆಗಲೇ ಬಟ್ಟೆಗಳನ್ನು ಪುಡಿ ಮಾಡಿದ್ದವು. ಅವಳು “ಇಷ್ಟೊಂದು ನಿರ್ಲಕ್ಷ್ಯದಿಂದ ಇರೋದು ಸರಿಯಿಲ್ಲ, ತಾವು ಹೀಗೆ ಇದ್ರೆ ಪ್ರಾಣಿಗಳು ನಮ್ಮನ್ನು ಮುಗಿಸಿಬಿಡ್ತವೆ” ಎಂದಳು. ಅನಂತರ ಅವಳು ಒಂದು ಕ್ಷಣವೂ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಸೂರ್ಯ ಹುಟ್ಟುವ ಮೊದಲೇ ಎದ್ದು, ಯಾರೆಂದರೆ ಅವರನ್ನು, ಮಕ್ಕಳನ್ನು ಕೂಡ, ಉಪಯೋಗಿಸಿಕೊಳ್ಳುತ್ತಿದ್ದಳು. ಇನ್ನೂ ಬಳಸಲು ಸಾಧ್ಯವಿರುವ ವಸ್ತುಗಳನ್ನು ಬಿಸಿಲಿಗೆ ಹಾಕುತ್ತಿದ್ದಳು. ಕ್ರಿಮಿನಾಶಕಗಳನ್ನು ಹಾಕಿ ಜಿರಲೆಗಳನ್ನು ಓಡಿಸುತ್ತಿದ್ದಳು, ಬಾಗಿಲು ಹಾಗೂ ಕಿಟಕಿಗಳಿಗೆ ಗೆದ್ದಿಲು ಹಿಡಿದ ಸಂದುಗಳನ್ನು ಗೀರಿ ತೆಗೆಯುತ್ತಿದ್ದಳು, ಇರುವೆಗಳ ಗೂಡುಗಳನ್ನು ಸುಣ್ಣ ಹಾಕಿ ಮುಚ್ಚಿ ಉಸಿರುಗಟ್ಟಿಸುತ್ತಿದ್ದಳು. ಎಲ್ಲವನ್ನೂ ಸರಿಪಡಿಸುವ ಉಮೇದು ಅವಳನ್ನು ಮರೆತುಬಿಟ್ಟಿದ್ದ ರೂಮುಗಳಿಗೆ ಕರೆದುಕೊಂಡು ಹೋಯಿತು. ಅವಳು ಸ್ಪರ್ಶ ಮಣಿಗಳನ್ನು ಹುಡುಕುತ್ತ ತಿಕ್ಕಲು ಹಿಡಿಸಿಕೊಂಡಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾನ ರೂಮಿನಲ್ಲಿ ಕಟ್ಟಿದ್ದ ಇಲ್ಲಣಗಳನ್ನು, ರದ್ದಿಯನ್ನು ಹೋಗಲಾಡಿಸಿದಳು. ಸೈನಿಕರು ಚಿಂದಿಯೆಬ್ಬಿಸಿದ್ದ ಬೆಳ್ಳಿಯಂಗಡಿಯನ್ನು ಒಪ್ಪಮಾಡಿದಳು ಮತ್ತು ಕೊನೆಯದಾಗಿ ಅವಳು ಮೆಲ್‌ಕಿಯಾದೆಸ್‌ನ ರೂಮು ಯಾವ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳಲು ಬೀಗದ ಕೈಯನ್ನು ಕೇಳಿದಳು. ಹೊಸೆ ಅರ್ಕಾದಿಯೋ ಸೆಗುಂದೋನ ಅಪೇಕ್ಷೆಯಂತೆ ಅವನು ಸತ್ತುಹೋದನೆಂದು ಖಚಿತವಾಗಿ ತಿಳಿಯುವ ತನಕ ಯಾರಿಗೂ ಬಾಗಿಲು ತೆಗೆಯಬಾರದು ಎನ್ನುವುದನ್ನು ಪಾಲಿಸುವುದಕ್ಕಾಗಿ ಸಾಂತ ಸೋಫಿಯಾ ದೆಲಾ ಪಿಯದಾದ್, ಉರ್ಸುಲಾ ವಿಷಯ ಬದಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದಳು. ಆದರೆ ಮನೆಯ ಯಾವುದೇ ಕಾಣದ ಮೂಲೆಯನ್ನು ಹುಳುಗಳಿಗೆ ಬಿಡಬಾರದು ಎನ್ನುವ ಅವಳ ನಿರ್ಧಾರ ಯಾವುದೇ ಅಡಚಣೆಗೆ ಬಗ್ಗಲಾರದಷ್ಟು ಅಚಲವಾಗಿತ್ತು ಮತ್ತು ಮೂರು ದಿನಗಳ ಸತತ ಪ್ರಯತ್ನದಿಂದ ಅವಳು ರೂಮಿನ ಬಾಗಿಲು ತೆಗೆಸಲು ಯಶಸ್ವಿಯಾದಳು. ಅವಳು ತನಗೆ ಬಡಿದ ದುರ್ವಾಸನೆಯಿಂದ ಬೀಳದಿರುವಂತೆ ಬಾಗಿಲು ಹಿಡಿಕೆಯನ್ನು ಹಿಡಿದುಕೊಳ್ಳಬೇಕಾಯಿತು., ಆದರೆ ಸ್ಕೂಲ್ ಹುಡುಗಿಯರ ಎಪ್ಪತ್ತೆರಡು ಉಚ್ಚೆ ಪಾತ್ರೆಗಳು ಅಲ್ಲಿರುವುದನ್ನು ಮತ್ತು ಒಂದು ಮಳೆಗಾಲದ ರಾತ್ರಿ ಸೈನಿಕರು ಹೊಸೆ ಅರ್ಕಾದಿಯೋ ಸೆಗುಂದೋನನ್ನು ಹುಡುಕಲು ಸಾಧ್ಯವಾಗದೇ ಹೋದದ್ದನ್ನು ನೆನಪಸಿಕೊಳ್ಳಲು ಅವಳಿಗೆ ಎರಡು ಸೆಕೆಂಡು ಬೇಕಾಯಿತು.
ಅವಳು ಎಲ್ಲವನ್ನೂ ನೋಡುತ್ತಿರುವ ಹಾಗೆ, “ದೇವರೇ ನಮ್ಮನ್ನು ಕಾಪಾಡು! ನಿಂಗೆ ಒಳ್ಳೆ ನಡತೆ ಹೇಳಿಕೊಡೋದಕ್ಕೆ ಎಷ್ಟು ಕಷ್ಟಪಟ್ಟಿದ್ದೀನಿ. ಆದರೆ ನೀನು ಹಂದಿ ತರಹ ಇದೀಯ” ಎಂದಳು.
ಹೊಸೆ ಅರ್ಕಾದಿಯೋ ಸೆಗುಂದೋ ಇನ್ನೂ ಬರಹವನ್ನು ಓದುತ್ತಿದ್ದ. ಅವನ ಗಂಟು ಕಟ್ಟಿದ ಕೂದಲಿನ ಮಧ್ಯೆ ಕಾಣುತ್ತಿದ್ದದ್ದು ಹಸಿರುಗಟ್ಟಿದ ಹಲ್ಲುಗಳು ಮತ್ತು ಅಲ್ಲಾಡದ ಕಣ್ಣುಗಳು. ಅವನೂ ತನ್ನ ಮುತ್ತಜ್ಜಿಯನ್ನೂ ಗುರುತು ಹಿಡಿದ ಕೂಡಲೆ ಬಾಗಿಲು ಕಡೆ ನೋಡಿ ನಸುನಗಲು ಪ್ರಯತ್ನಿಸಿದ ಮತ್ತು ತನಗೆ ಅರಿವಾಗದಂತೆಯೇ ಉರ್ಸುಲಾ ಹೇಳುತ್ತಿದ್ದ ಹಳೆಯ ಮಾತನ್ನು ಮತ್ತೊಮ್ಮೆ ಹೇಳಿದ:
ಅವನು “ನೀವೇನು ನಿರೀಕ್ಷೆ ಮಾಡಿದ್ರಿ?…. ಸಮಯ ಕಳೆದು ಹೋಗುತ್ತೆ” ಎಂದ.
ಉರ್ಸುಲಾ ” ಅದು ಹಾಗಾಗತ್ತೆ, ಅದ್ರೆ ಹೀಗಲ್ಲ” ಎಂದಳು.
ಅವಳು ಹಾಗೆ ಹೇಳಿದಾಗ ತಾನು ಸಾವಿನ ಕೂಪದಲ್ಲಿದ್ದ್ಲ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೊಟ್ಟ ಉತ್ತರವನ್ನೇ ಹೇಳುತ್ತಿದ್ದೇನೆ ಎನ್ನುವುದರ ಅರಿವಾಯಿತು ಮತ್ತು ಕಾಲ ಚಲಿಸುತ್ತಿರಲಿಲ್ಲ ಎನ್ನುವುದರ ಪುರಾವೆಯಿಂದ ನಡುಗಿದಳು. ಆದರೆ ಅದು ವೃತ್ತವೊಂದರಲ್ಲಿ ಚಲಿಸುತ್ತಿತ್ತು. ಆದರೂ ಅವಳು ಸಮಾಧಾನಕ್ಕೆ ಆಸ್ಪದ ಕೊಡಲಿಲ್ಲ. ಹೊಸೆ ಅರ್ಕಾದಿಯೋ ಸೆಗುಂದೋ ಚಿಕ್ಕ ಮಗು ಎನ್ನುವ ಹಾಗೆ ಅವನನ್ನು ಬೈದಳು. ಮತ್ತು ಶೇವ್ ಮಾಡಿಕೊಂಡು, ಸ್ನಾನ ಮಾಡಿ, ಮನೆಯನ್ನು ಸರಿಪಡಿಸಲು ಸಹಕರಿಸಬೇಕೆಂದು ಒತ್ತಾಯಿಸಿದಳು. ತನಗೆ ಶಾಂತಿ ತಂದುಕೊಟ್ಟ ರೂಮನ್ನು ಬಿಡಬೇಕೆಂಬ ಆಲೋಚನೆಯಿಂದಲೇ, ಹೊಸೆ ಅರ್ಕಾದಿಯೋ ಸೆಗುಂದೋ ಭಯಗೊಂಡ. ತನ್ನನ್ನು ರೂಮಿನಿಂದ ಆಚೆ ಹೋಗುವಂತೆ ಮಾಡುವ ಯಾವ ಮಾನವ ಶಕ್ತಿಯೂ ಇಲ್ಲವೆಂದು ಅಬ್ಬರಿಸಿದ. ಅದು ಏಕೆಂದರೆ, ಸತ್ತವರನ್ನು ತುಂಬಿರುವ ಇನ್ನೂರು ಬೋಗಿಗಳ ರೈಲು ಪ್ರತಿ ದಿನ ಮಕೋಂದೋದಿಂದ ಸಮುದ್ರದ ಕಡೆ ಹೋಗುವುದನ್ನು ತನಗೆ ನೋಡಲು ಇಷ್ಟವಿಲ್ಲವೆಂದು ಹೇಳಿದ. ಜೊತೆಗೆ, “ಅವರೆಲ್ಲ ಸ್ಟೇಷನ್ ಹತ್ರ ಇದ್ದೋರು. ಮೂರು ಸಾವಿರದ ನಾನೂರ ಎಂಟು ಜನ” ಎಂದು ಕೂಗಿದ. ಉರ್ಸುಲಾಗೆ ಅವನು ನೆರಳುಗಳ ಪ್ರಪಂಚದಲ್ಲಿ ಭೇದಿಸಲಾಗದಂತೆ ಇರುವನೆಂದು ಮತ್ತು ಅವನ ಮುತ್ತಜ್ಜನ ಹಾಗೆ ನಿಲುಕಲಾರದವನು ಹಾಗೂ ಒಂಟಿ ಎಂದು ಅರಿವಾಯಿತು. ಅವಳು ಅವನನ್ನು ರೂಮಿನಲ್ಲಿಯೇ ಬಿಟ್ಟಳು. ಆದರೆ ಆ ರೂಮಿಗೆ ಬೀಗ ಹಾಕದಿರುವಂತೆ ಮಾಡಲು, ಪ್ರತಿದಿನ ಸ್ವಚ್ಛಗೊಳಿಸಲು, ಒಂದನ್ನು ಬಿಟ್ಟು ಮಿಕ್ಕೆಲ್ಲ ಉಚ್ಚೆ ಪಾತ್ರೆಗಳನ್ನು ಬಿಸಾಕುವಂತೆ ಮಾಡಲು ಮತ್ತು ಹೊಸೆ ಅರ್ಕಾದಿಯೋನನ್ನು ಅವನ ಮುತ್ತಜ್ಜ ಬಾದಾಮಿ ಮರದ ಕೆಳಗೆ ಬಂಧನದಲ್ಲಿದ್ದಾಗ ಇದ್ದ ಹಾಗೆ ಎಷ್ಟು ಸಾಧ್ಯವೋ ಅಷ್ಟು ಶುಭ್ರವಾಗಿ ನೋಡಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡುವುದರಲ್ಲಿ ಯಶಸ್ವಿಯಾದಳು. ಪ್ರಾರಂಭದಲ್ಲಿ ಫೆರ್ನಾಂಡಗೆ ಅಷ್ಟೊಂದು ಕೆಲಸಗಳು ತಿಳಿಗೇಡಿತನ ಎಂದು ತೋರಿತು ಮತ್ತು ಅವಳಿಗೆ ಉಂಟಾದ ಉದ್ರೇಕವನ್ನು ತಡೆಹಿಡಿಯಲಾಗಲಿಲ್ಲ. ಆದರೆ ಆ ಸಮಯದಲ್ಲಿ ಹೊಸೆ ಅರ್ಕಾದಿಯೋ ಕೊನೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೊದಲು ರೋಮ್‌ನಿಂದ ಬರುವುದಾಗಿ ತಿಳಿಸಿದ್ದ. ಆ ಒಳ್ಳೆಯ ಸುದ್ದಿ ಅವಳಲ್ಲಿ ಉತ್ಸಾಹ ತುಂಬಿಕೊಳ್ಳುವಂತೆ ಮಾಡಿತ್ತು. ತನ್ನ ಮಗ ಮನೆಯ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಬಾರದು ಎಂದು ಅವಳು ಬೆಳಿಗ್ಗೆಯಿಂದ ರಾತ್ರಿಯ ತನಕ ಹೂಗಿಡಗಳಿಗೆ ನಾಲ್ಕು ಸಲ ನೀರು ಹಾಕುತ್ತಿದ್ದಳು. ಅದೇ ಸಂಗತಿಯೇ ಅವಳನ್ನು ಮತ್ತೆ ಕಾಣದ ಡಾಕ್ಟರುಗಳೊಂದಿಗೆ ಪತ್ರ ವ್ಯವಹಾರವನ್ನು ತ್ವರಿತಗೊಳಿಸಲು ಪ್ರೇರೇಪಿಸಿತು ಮತ್ತು ಉರ್ಸುಲಾಗೆ ಅವ್ರೇಲಿಯಾನೋ ಸೆಗುಂದೋನ ರೋಷ ನಾಶ ಮಾಡಿತೆಂದು ತಿಳಿಯುವ ಮೊದಲೇ ಬದಲಿ ಬೆಗೋನಿಯಾ ಹಾಗೂ ಜರ್ರ್ರ್ರಿ ಗಿಡಗಳ ಕುಂಡಗಳನ್ನು ಹೊಂದಿಸಿಟ್ಟರು. ಅನಂತರ ಅವಳು ಬೆಳ್ಳಿಯ ಕೆಲವು ಪಾತ್ರೆಗಳನ್ನು ಮಾರಿ ಪಿಂಗಾಣಿಯ, ಮಿಶ್ರ ಲೋಹದ ಪಾತ್ರೆಗಳನ್ನು, ಸೂಪ್ ಕುಡಿಯುವ ಚಮಚ, ಮೃದು ಟೇಬಲ್ ಕ್ಲಾತ್‌ಗಳನ್ನು ತಂದಳು. ಆ ಮೂಲಕ ಕಪಾಟುಗಳಲ್ಲಿ ತುಂಬಿರುತ್ತಿದ್ದ ಇಂಡಿಯಾ ಕಂಪನಿಯ ಸಾಮಾನುಗಳು ಮತ್ತು ಬೊಹಿಮಿಯಾ ಹರಳುಗಳನ್ನು ಕಡಿಮೆ ಮಾಡಿದಳು. ಉರ್ಸುಲಾ ಯಾವಾಗಲೂ ಒಂದು ಹೆಜ್ಜೆ ಮುಂದಿಡಲು ಪ್ರಯತ್ನಿಸುತ್ತಿದ್ದಳು. ಅವಳು, “ಕಿಟಕಿ ಬಾಗಿಲು ತೆಗೀರಿ. ಒಂದಿಷ್ಟು ಮೀನು ಮಾಂಸದ ಅಡುಗೆ ಮಾಡಿ, ದೊಡ್ಡ ಸೈಜಿನ ಆಮೆ ತೊಗೊಳ್ಳಿ. ಅವರಿವರು ಬಂದು ಗುಲಾಬಿ ಪೊದೇಲಿ ಉಚ್ಚೆ ಹೊಯ್ದು, ಆ ಕಡೆ ಮೂಲೇಲಿ ಚಾಪೆ ಹಾಕಿಕೊಂಡು ಕೂತು ಎಷ್ಟು ಸಲ ಬೇಕೋ ಅಷ್ಟು ತಿನ್ನಲಿ. ಎಲ್ಲ ಕಡೆ ಬೂಟುಗಾಲಿನಿಂದ ಓಡಾಡಿ ಗಲೀಜು ಮಾಡಿದ್ರೂ ಸರಿ. ಅವರು ನಮ್ಗೆ ಏನು ಬೇಕಾದ್ರೂ ಮಾಡಲಿ ಬಿಟ್ಟು ಬಿಡಿ. ಏಕೆಂದರೆ ದರಿದ್ರಾನ ಓಡಿಸೋಕೆ ಅದೊಂದೇ ದಾರಿ” ಎಂದು ಹೇಳುತ್ತಿದ್ದಳು. ಆದರೆ ಅದು ವ್ಯರ್ಥ ಭ್ರಮೆಯಾಗಿತ್ತು. ಆಗ ಅವಳಿಗೆ ತುಂಬಾ ವಯಸ್ಸಾಗಿತ್ತು ಮತ್ತು ಅವಳು ಎರವಲು ತಂದ ಕಾಲದಲ್ಲಿ ಜೀವಿಸುತ್ತಿದ್ದಳು ಮತ್ತು ಹಿಂದೆ ಪ್ರಾಣಿಗಳ ತಿನಿಸುಗಳನ್ನು ಮಾಡುತ್ತಿದ್ದ ಮಾಂತ್ರಿಕತೆಯನ್ನು ಮತ್ತೊಂದು ಸಲ ಮಾಡಲು ಸಾಧ್ಯವಿರಲಿಲ್ಲ. ಅವಳ ಸಂತತಿಯ ಯಾರೂ ಅವಳ ಶಕ್ತಿಯನ್ನೂ ಬಳುವಳಿ ಪಡೆದಿರಲಿಲ್ಲ. ಫೆರ್ನಾಂಡಳ ಅಪ್ಪಣೆಯಂತೆ ಮನೆ ಬಾಗಿಲು ಹಾಕಲಾಯಿತು.
ಪೆತ್ರಾ ಕೊತೆಸ್ ಮನೆಗೆ ಟ್ರಂಕುಗಳನ್ನು ವಾಪಸು ತೆಗೆದುಕೊಂಡು ಹೋದ ಅವ್ರೇಲಿಯಾನೋ ಸೆಗುಂದೋಗೆ ಮನೆಯವರು ಉಪವಾಸದಿಂದ ಸಾಯದಿರುವಂತೆ ಮಾಡಲು ಮಾರ್ಗಗಳಿರಲಿಲ್ಲ. ಹಂದಿಯ ಲಾಟರಿಯಿಂದ ಅವನು ಮತ್ತು ಪೆತ್ರಾ ಕೊತೆಸ್ ಇನ್ನಷ್ಟು ಪ್ರಾಣಿಗಳನ್ನು ತಂದು ಹಳೆಯ ಲಾಟರಿ ವ್ಯವಹಾರವನ್ನು ಪ್ರಾರಂಭಿಸಿದ್ದರು. ಅವ್ರೇಲಿಯಾನೋ ಸೆಗುಂದೋ ತಾನೇ ಬರೆದು, ಬಣ್ಣದ ಇಂಕ್‌ನಿಂದ ನಂಬಿಕೆ ಬರಲೆಂದು, ಚೆನ್ನಾಗಿ ಕಾಣಲೆಂದು ತಯಾರಿಸಿದ್ದ ಲಾಟರಿ ಟಿಕೇಟುಗಳನ್ನು ಮಾರುವುದಕ್ಕೆ ಮನೆಯಿಂದ ಮನೆಗೆ ಹೋಗುತ್ತಿದ್ದ. ಆದರೆ ಅವನಿಗೆ ಬಹಳಷ್ಟು ಜನರು ಕೃತಜ್ಞತೆಯಿಂದ, ಮರುಕದಿಂದ ಕೊಂಡುಕೊಳ್ಳುತ್ತಿದ್ದರು ಎಂದು ತಿಳಿದಿರಲಿಲ್ಲ. ಆದರೂ ಕೂಡಾ ಅಂಥವರಿಗೂ ಇಪ್ಪತ್ತು ಸೆಂಟ್‌ಗೆ ಒಂದು ಹಂದಿಯನ್ನು ಅಥವಾ ಮೂವತ್ತಕ್ಕೆ ಒಂದು ಕರುವನ್ನು ಗೆಲ್ಲುವ ಅವಕಾಶವಿತ್ತು. ಅವರಿಗೆಲ್ಲ ಆಸೆ ಮೂಡಿ ಮಂಗಳವಾರ ರಾತ್ರಿ ಪೆತ್ರ್ರಾ ಕೊತೆಸ್ ಮನೆಯ ಅಂಗಳದಲ್ಲಿ ಸೇರಿ, ಮಗುವೊಂದು ಚೀಲದಲ್ಲಿ ಬೆರೆಸಿ ಹಾಕಿದ್ದರಲ್ಲಿ ಗೆಲ್ಲುವ ನಂಬರಿನ ಚೀಟಿಯನ್ನು ತೆಗೆಯುವ ಕ್ಷಣಕ್ಕಾಗಿ ಕಾಯುತ್ತಿದ್ದರು. ಅದು ಪ್ರತಿ ವಾರದ ಸಂಗತಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಏಕೆಂದರೆ ಸಂಜೆ ಅಲ್ಲಿ ಅಂಗಳದಲ್ಲಿ ತಿನ್ನಲು ಹಾಗೂ ಕುಡಿಯಲು ಸ್ಯ್ಟಾಂಡ್‌ಗಳನ್ನು ವ್ಯವಸ್ಥೆಗೊಳಿಸಲಾಗುತ್ತಿತ್ತು. ಅಲ್ಲದೆ ಕೆಲವರು ತಾವು ಗೆದ್ದ ಪ್ರಾಣಿಯನ್ನು ಅಲ್ಲೇ ಕತ್ತರಿಸಿ, ಮದ್ಯದ ಸರಬರಾಜು ಮತ್ತು ಸಂಗೀತವನ್ನು ಮಾತ್ರ ಬೇರೊಬ್ಬ ನೋಡಿಕೊಳ್ಳಬೇಕು ಎನ್ನುವ ಷರತ್ತನ್ನು ಅಪೇಕ್ಷೆಪಡುತ್ತಿದ್ದರು. ಇದರಿಂದಾಗಿ ಇಷ್ಟವಿಲ್ಲದೆಯೂ ಕೂಡ ಅವ್ರೇಲಿಯಾನೋ ಸೆಗುಂದೋ ಅಕಾರ್ಡಿಯನ್ ನುಡಿಸುವುದನ್ನು ಮತ್ತೆ ಪ್ರಾರಂಭಿಸಿದ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ತೊಡಗಿದ. ಹಿಂದಿನ ದಿನಗಳ ಮೆರೆದಾಟದ ಪೇಲವ ನಕಲುಗಳಂತೆ ಇದ್ದ ಅವು ಅವ್ರೇಲಿಯಾನೋ ಸೆಗುಂದೋಗೆ ಅವನ ಉತ್ಸಾಹ ಎಷ್ಟು ತಗ್ಗಿದೆ ಮತ್ತು ಕುಡಿತದ ಭರಾಟೆಯಲ್ಲಿ ಮೇರೆ ಮೀರುತ್ತಿದ್ದ ಅವನ ಚತುರತೆ ಯಾವ ಮಟ್ಟಕ್ಕೆ ಇಳಿದಿದೆ ಎಂದು ತೋರಿಸಿಕೊಟ್ಟವು. ಈಗ ಅವನು ಬದಲಾದ ಮನುಷ್ಯನಾಗಿದ್ದ. ‘ಆನೆ\’ ಅವನಿಗೆ ಸವಾಲು ಹಾಕಿದಾಗ ಇನ್ನೂರ ನಲವತ್ತು ಪೌಂಡ್ ಇದ್ದವನು ಈಗ ನೂರ ಐವತ್ತಾರಕ್ಕೆ ಇಳಿದಿದ್ದ. ಮಿರಿಮಿರಿ ಮಿಂಚು ಆಮೆಯಂತೆ ಉಬ್ಬಿದ್ದ ಮುಖ ಉಡದ ಹಾಗಾಗಿತ್ತು. ಅಲ್ಲದೆ ಅವನು ಯಾವಾಗಲೂ ಬೇಸರದಿಂದ ಮತ್ತು ಸುಸ್ತಾಗಿರುತ್ತಿದ್ದ. ಆದರೆ ಪೆತ್ರಾ ಕೊತೆಸ್‌ಗೆ ಹಿಂದಿಗಿಂತ ಅವನು ಒಳ್ಳೆಯ ಮನುಷ್ಯನಾಗಿದ್ದ. ಬಹುಶಃ ಅವನ ಬಗ್ಗೆ ಪ್ರೀತಿಯ ಜೊತೆ ಮರುಕ ಬೆರೆತಿತ್ತು. ಅಲ್ಲದೆ ಇಬ್ಬರಲ್ಲೂ ವ್ಯಥೆ ತಂದುಕೊಟ್ಟ ಬಿಗಿಬಾಂಧವ್ಯದ ಭಾವನೆ ಬೆಳೆದಿತ್ತು. ಮುರಿದು ಹೋಗಿದ್ದ ಮಂಚದಲ್ಲಿ ಹಿಂದಿನ ಅತಿರೇಕಗಳಿರಲಿಲ್ಲ. ಅದು ಆತ್ಮೀಯ ಹೊಂದಾಣಿಕೆಯಲ್ಲಿ ಬದಲಾಗಿತ್ತು. ಲಾಟರಿಗೋಸ್ಕರ ಮತ್ತಷ್ಟು ಪ್ರಾಣಿಗಳನ್ನು ಖರೀದಿಸಲು ಅದನ್ನೇ ಮತ್ತೆ ಮತ್ತೆ ಬಿಂಬಿಸುತ್ತಿದ್ದ ಕನ್ನಡಿಗಳನ್ನು ಮಾರಿ, ಹಂದಿಗಳು ತಿಂದು ಚಿಂದಿ ಮಾಡಿದ್ದ ವೆಲ್‌ವೆಟ್‌ಗಳಿಂದ ದೂರವಾಗಿ ಅವರು ಮಧ್ಯ ರಾತ್ರಿಯ ತನಕ ನಿದ್ದೆಯಿಲ್ಲದೆ, ಮುಗ್ಧ ಅಜ್ಜ-ಅಜ್ಜಿಯರ ಹಾಗೆ ಎಚ್ಚರವಾಗಿರುತ್ತಿದ್ದರು. ಆಗ ಅವರು ಸಿಕ್ಕ ಸಮಯವನ್ನು ಲೆಕ್ಕ ಬರೆಯುವುದಕ್ಕೆ ಉಪಯೋಗಿಸುತ್ತಿದ್ದರು. ಹಿಂದೆ ಸುಮ್ಮನೆ ವ್ಯರ್ಥವಾಗುತ್ತಿದ್ದ ಪೆನ್ನಿಗಳನ್ನು ಮಿಗಿಸುತ್ತಿದ್ದರು. ಕೆಲವು ಸಲ ನಾಣ್ಯಗಳನ್ನು ಎಣಿಸಿ, ಇಲ್ಲಿಂದ ಅಷ್ಟೂ ತೆಗೆದುಕೊಂಡು ಮತ್ತೊಂದಕ್ಕೆ ಹಾಕಿ, ಫೆರ್ನಾಂಡ ಖುಷಿ ಪಡಲು ಇಷ್ಟು ಸಾಕು, ಅದು ಅಮರಾಂತ ಉರ್ಸುಲಾಳ ಶೂಗೆ, ಇನ್ನೊಂದು, ಕೂಗಾಟದ ದಿನಗಳಿಂದ ಹೊಸ ಡ್ರೆಸ್ ತೆಗೆದುಕೊಳ್ಳದ ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಹಾಗೂ ಇದು ಉರ್ಸುಲಾ ಸತ್ತರೆ ಶವಪೆಟ್ಟಿಗೆಗಾಗಿ, ಮತ್ತೆ ಇದು ಮೂರು ತಿಂಗಳಿಗೆ ಒಂದು ಪೌಂಡ್‌ಗೆ ಒಂದು ಸೆಂಟ್‌ನಂತೆ ಹೆಚ್ಚಾಗುತ್ತಿದ್ದ ಕಾಫಿ ಪುಡಿಗೆ, ಇದಿಷ್ಟು ಪ್ರತಿದಿನ ಸಿಹಿ ಕಡಿಮೆಯಾಗುತ್ತಿದ್ದ ಸಕ್ಕರೆಗೆ, ಇದು, ಮಳೆಯಿಂದಾಗಿ ಇನ್ನೂ ತೇವದಿಂದಿದ್ದ ಹರಕು ಮುರುಕು ಸಾಮಾನಿಗೆ, ಇದಿಷ್ಟು ಪೇಪರ್‌ಗೆ, ಮತ್ತಷ್ಟು ಟಿಕೆಟ್ ಮಾಡಬೇಕಾದ ಬಣ್ಣ ಇಂಕ್‌ಗೆ, ಮತ್ತು ಇದು, ಆಗಷ್ಟೇ ಎಲ್ಲಾ ಟಿಕೇಟ್‌ಗಳು ಮಾರಾಟವಾದ ಏಪ್ರಿಲ್ ತಿಂಗಳ ಲಾಟರಿಯಲ್ಲಿ ಕರು ಗೆದ್ದವನಿಗೆ ಕೊಡಲು ಕುರು ರೋಗ ಹರಡುವ ಸೂಚನೆ ಇರುವಂಥದನ್ನು ತಂದು ಮಿಗಿಸಿರುವುದು, ಎಂದು ಜೋಡಿಸಿ, ಮರು ಜೋಡಿಸುವಷ್ಟರಲ್ಲಿ ಅನೇಕ ಸಲ ಬೆಳಗಿನ ಕೋಳಿ ಕೂಗುತ್ತಿತ್ತು. ಬಡತನ ವಿಧಿವಿಧಾನಗಳು ಎಷ್ಟು ಸ್ಪಷ್ಟವಾಗಿದ್ದವೆಂದರೆ ಅವರು ಫೆರ್ನಾಂಡಳಿಗೆ ಎಲ್ಲಕ್ಕಿಂತ ಹೆಚ್ಚಿನ ಭಾಗವನ್ನು ತೆಗೆದಿಡುತ್ತಿದ್ದರು. ಅವರು ಅದನ್ನು ದಾನವಾಗಿ ಅಥವಾ ಪಶ್ಚಾತ್ತಾಪದಿಂದ ಮಾಡುತ್ತಿರಲಿಲ್ಲ. ಅವರಿಗೆ ತಮಗಿಂತ ಅವಳು ಕ್ಷೇಮವಾಗಿರುವುದು ಮುಖ್ಯವಾಗಿತ್ತು. ನಿಜಕ್ಕೂ ಅವರಿಬ್ಬರಿಗೆ ಅರಿವಾಗದೆ ಹೋದದ್ದೇನೆಂದರೆ ಫೆರ್ನಾಂಡಳನ್ನು ಇಲ್ಲಿಯ ತನಕ ತಮಗೆ ಸಾಧ್ಯವಾಗದೆ ಹೋದ ಮತ್ತು ಇಷ್ಟಪಡುವ ಮಗಳ ಹಾಗೆ ಕಾಣುತ್ತಿದ್ದದ್ದು. ಇದಕ್ಕಾಗಿ ಕೆಲವು ಬಾರಿ ಅವಳು ಡಚ್ ಟೇಬಲ್ ಕ್ಲಾತ್ ಕೊಂಡುಕೊಳ್ಳಲಿ ಎಂದು ಅವರು ಮೂರು ದಿನ ರೊಟ್ಟಿಯ ತುಣುಕುಗಳನ್ನು ಮಾತ್ರ ತಿನ್ನುವುದರಲ್ಲಿ ತೃಪ್ತಿ ಹೊಂದುತ್ತಿದ್ದರು. ಆದರೂ ಅವರು ಅಷ್ಟು ಕೆಲಸ ಮಾಡಿ ತಮ್ಮನ್ನು ಸಾವು ನಾಶಪಡಿಸಿಕೊಳ್ಳುತ್ತಿದ್ದರೂ ಕೂಡ, ಆದೆಷ್ಟು ಹಣವನ್ನು ಅವಳು ಉಳಿಸಿದರೂ ಕೂಡ, ಅದೆಷ್ಟು ಬಗೆ ಯೋಜನೆಗಳನ್ನು ಯೋಚಿಸಿದರೂ ಕೂಡ ನಾಣ್ಯಗಳನ್ನು ಒಟ್ಟು ಮಾಡಿ, ಬದುಕಲು ಬೇಕಾದಷ್ಟನ್ನು ಮಾತ್ರ ತೆಗೆಯುತ್ತಿದ್ದಾಗ ಅವರನ್ನು ಪಾಲಿಸುವ ದೈವ ದಣಿವಿನಿಂದ ಮಲಗಿತ್ತು. ಲೆಕ್ಕ ಅನುಕೂಲವಾಗದ ಸಮಯದಲ್ಲಿ ಅವರಿಗೆ ಮೊದಲಿನಂತೆ ಪ್ರಾಣಿಗಳು ಮರಿಗಳನ್ನು ಹಾಕುವುದಿಲ್ಲವೇಕೆ, ಹಣವೇಕೆ ಬೆರಳುಗಳ ಸಂದಿಯಿಂದ ಸೋರಿಹೋಗುತ್ತದೆ ಮತ್ತು ಕೆಲವೇ ಕಾಲದ ಹಿಂದೆ ಕುಡಿತಕ್ಕಾಗಿ ಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದ ಜನರು, ಆರು ಕೋಳಿಗಳ ಲಾಟರಿಗೆ ಹನ್ನೆgಡು ಸೆಂಟು ವಿಧಿಸುವುದನ್ನು ಹೆದ್ದಾರಿಯ ದರೋಡೆ ಎನ್ನುವಂತೆ ಭಾವಿಸುತ್ತಿರುವುದು ಏಕೆ ಎಂದು ಯೋಚಿಸುತ್ತಿದ್ದರು. ಅವ್ರೇಲಿಯಾನೋ ಸೆಗುಂದೋ ಬಾಯಿ ಬಿಟ್ಟು ಹೇಳದಿದ್ದರೂ ಕೆಡಕಿರುವುದು ಹೊರಗಿನ ಪ್ರಪಂಚದಲ್ಲಲ್ಲ, ಪೆತ್ರಾ ಕೊತೆಸ್‌ಳ ನಿಗೂಢ ಹೃದಯದಲ್ಲಿ ಅಡಗಿದೆ ಎಂದು ಯೋಚಿಸಿದ. ಸುರಿಮಳೆಯ ಅವಧಿಯಲ್ಲಿ ಎಂಥದೋ ಜರುಗಿ ಪ್ರಾಣಿಗಳು ನಿರ್ವೀರ್‍ಯವಾಗಿ, ಹಣದ ಮುಗ್ಗಟ್ಟು ಉಂಟಾಗಿದೆ ಎಂದು ಭಾವಿಸಿದ. ಅದರ ನಿಗೂಢ ಸಮಸ್ಯೆಯಲ್ಲಿ ಮುಳುಗಿ ಅವಳ ಭಾವನೆಗಳಾಳಕ್ಕೆ ಹುಡುಕುತ್ತ ಇಳಿದಾಗ ಅವನಿಗೆ ಕಂಡದ್ದು ಪ್ರೀತಿ. ಏಕೆಂದರೆ ತನ್ನನ್ನು ಪ್ರೀತಿಸುವಂತೆ ಮಾಡಿದ ಪ್ರಯತ್ನದಲ್ಲಿ ಕೊನೆಗೆ ಅವನು ಅವಳನ್ನು ಪ್ರೀತಿಸಲು ತೊಡಗಿದ. ಪೆತ್ರಾ ಕೊತೆಸ್ ತನ್ನಷ್ಟಕ್ಕೆ ಅವನ ಪ್ರೀತಿ ಹೆಚ್ಚಾದಂತೆ ಕಂಡು ಹೆಚ್ಚು ಹೆಚ್ಚು ಪ್ರೀತಿಸಿದಳು. ಇದರಿಂದ ಶರತ್ಕಾಲದ ಉತ್ತುಂಗದಲ್ಲಿ ಮತ್ತೆ ಅವಳು, ಬಡತನ ಪ್ರೀತಿಯ ದಾಸ ಎಂಬ ಮೂಢನಂಬಿಕೆಯನ್ನು ಬೆಂಬಲಿಸುವುದಕ್ಕೆ ಪ್ರಾರಂಭಿಸಿದಳು. ಅವರಿಗೆ ಹಳೆಯ ಮೆರೆದಾಟ, ಸಂಪತ್ತುಗಳು ಕೋಪ ತರಿಸುವ ಸಂಗತಿಗಳೆಂದು ಕಂಡವು ಮತ್ತು ಸ್ವರ್ಗದ ಸಹಭಾಗಿತ್ವದ ಏಕಾಂತ ಕಂಡುಕೊಳ್ಳುವುದಕ್ಕೆ ತಮ್ಮ ಜೀವನದ ಬಹುಪಾಲು ಭಾಗ ಬೇಕಾಯಿತೆಂದು ಭಾವಿಸಿದರು. ಅನೇಕ ವರ್ಷಗಳ ಕಾಲ ಜೊತೆಜೊತೆಯಾಗಿದ್ದರೂ ಜೀವ ಕಳೆ ಇಲ್ಲದೆ ಇದ್ದ ನಂತರ, ಈಗ ಅವರು ಪ್ರೇಮದ ಮಾಂತ್ರಿಕತೆಯನ್ನು ಹಾಸಿಗೆಯಲ್ಲಿದ್ದ ಹಾಗೆ ಟೇಬಲ್ಲಿನಲ್ಲಿಯೂ ಕಳೆಯುತ್ತಿದ್ದರು. ಅವರು ಎಲ್ಲ ಕಳೆದುಕೊಂಡು ವಯಸ್ಸಾದವರಾಗಿದ್ದರೂ ಚಿಕ್ಕ ಮಕ್ಕಳ ಹಾಗೆ ಮಿರುಗುತ್ತಿದ್ದರು ಮತ್ತು ನಾಯಿಗಳ ಹಾಗೆ ಆಟವಾಡುತ್ತಿದ್ದರು.
ಲಾಟರಿಯ ವ್ಯವಹಾರ ಬಹಳ ಕಾಲ ನಡೆಯಲಿಲ್ಲ. ಪ್ರಾರಂಭದಲ್ಲಿ ಅವ್ರೇಲಿಯಾನೋ ಸೆಗುಂದೋ ವಾರದಲ್ಲಿ ಮೂರು ದಿನ ತನ್ನ ಆಫೀಸಿನಲ್ಲಿ ಒಂದೊಂದು ಟಿಕೇಟನ್ನೂ ತೆಗೆದುಕೊಂಡು ಅದರ ಮೇಲೆ ಕೆಂಪು ಹಸು, ಹಸಿರು ಹಂದಿ ಅಥವಾ ನೀಲಿ ಕೋಳಿಗಳ ಗುಂಪು ಹೀಗೆ ಲಾಟರಿಗಿಟ್ಟಿರುವ ಪ್ರಾಣಿಯ ಚಿತ್ರ ಬರೆಯುತ್ತಿದ್ದ. ಅನಂತರ ಪ್ರಿಂಟ್ ?ಜಜಿ;iಡಿದ ನಂಬರುಗಳಂತೆ ಮತ್ತು ಎಲ್ಲ ವ್ಯವಹಾರಕ್ಕೂ ಒಳ್ಳೆಯದೆಂದು ಪೆತ್ರಾ ಕೊತೆಸ್ ಹೇಳಿದ ಹಾಗೆ ದೈವ ಕೃಪೆಯ ಲಾಟರಿ ಎಂದು ಬರೆಯುತ್ತಿದ್ದ. ಪ್ರಾಣಿಗಳನ್ನು ಹೊಂದಿಸಿಕೊಂಡ ಮೇಲೆ ಎರಡು ಸಾವಿರ ಟಿಕೇಟುಗಳನ್ನೂ ತಯಾರಿಸಿ, ಹೆಸರು ಮತ್ತು ರಬ್ಬರ್ ಸ್ಟಾಂಪಿನ ಮೇಲೆ ನಂಬರುಗಳನ್ನು ಹಾಕಿದ ನಂತರ ಬೇರೆ ಬೇರೆ ಬಣ್ಣದ ಪ್ಯಾಡುಗಳಾಗಿ ಮಾಡುವ ಕೆಲಸ ಉಳಿದಿರುತ್ತಿತ್ತು. ಕಳೆದ ವರ್ಷ ಅವನಿಗೆ ನಂಬರುಗಳ ಬದಲಿಗೆ ಸಮಸ್ಯೆಗಳನ್ನು ಹಾಕಿದರೆ ಅದನ್ನು ಸರಿಯಾಗಿ ಊಹೆ ಮಾಡಿದವರೆಲ್ಲರೂ ಬಹುಮಾನವನ್ನು ಹಂಚಿಕೊಂಡರೆ ಹೇಗೆ? ಎಂದು ಯೋಚಿಸಿದ. ಆದರ ವ್ಯವಸ್ಥೆ ತೀರ ಗೋಜಲೆನಿಸಿತಲ್ಲದೆ ತೀರ ಸಂದೇಹಕ್ಕೆ ಆಸ್ಪದ ಮಾಡಿಕೊಟ್ಟಿದ್ದಕ್ಕಾಗಿ, ಎರಡನೆ ಪ್ರಯತ್ನಕ್ಕೇ ಅದನ್ನು ನಿಲ್ಲಿಸಬೇಕಾಯಿತು.
ಅವ್ರೇಲಿಯಾನೋ ಸೆಗುಂದೋಗೆ ಲಾಟರಿಯ ಘನತೆಯನ್ನು ಕಾಪಾಡುವುದಕ್ಕಾಗಿ ಎಷ್ಟು ಬಿಡುವಿಲ್ಲದವನಾಗಿದ್ದನೆಂದರೆ ಅವನಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಯವಿರಲಿಲ್ಲ. ಅಮರಾಂತ ಉರ್ಸುಲಾಳನ್ನು ಫೆರ್ನಾಂಡ ಆರು ಹುಡುಗಿಯರನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದ ಖಾಸಗಿ ಸ್ಕೂಲಿಗೆ ಸೇರಿಸಿದಳು. ಆದರೆ ಅವಳು ಅವ್ರೇಲಿಯಾನೋವನ್ನು ಸಾರ್ವಜನಿಕ ಸ್ಕೂಲಿಗೆ ಸೇರಿಸಬೇಕೆನ್ನುವುದನ್ನು ನಿರಾಕರಿಸಿದಳು. ರೂಮಿನಿಂದ ಅವನು ಆಚೆ ಹೋಗುವುದಕ್ಕೆ ಆಗಲೆ ಸಾಕಷ್ಟು ಅವಕಾಶ ಕೊಟ್ಟಿದ್ದಾಗಿದೆ ಎಂದು ಅವಳು ಪರಿಗಣಿಸಿದಳು. ಜೊತೆಗೆ ಆಗಿನ ಕಾಲದಲ್ಲಿ ಸ್ಕೂಲುಗಳು ಕ್ಯಾಥೊಲಿಕ್ ಸಂಪ್ರದಾಯದ ಮದುವೆಯಿಂದ ಹುಟ್ಟಿದ ನ್ಯಾಯ ಸಮ್ಮತವಾದ ಮಕ್ಕಳಿಗೆ ಮಾತ್ರ ಪ್ರವೇಶವನ್ನು ಒಪ್ಪಿಕೊಳ್ಳುತ್ತಿದ್ದವು. ಅವ್ರೇಲಿಯಾನೋನನ್ನು ಮನೆಗೆ ಕರೆದುಕೊಂಡು ಬಂದಾಗ ಅವನ ಶರಟಿಗೆ ಸಿಕ್ಕಿಸಿದ್ದ ಅವನು ಹುಟ್ಟಿದ ಸರ್ಟಿಫಿಕೇಟಿನಲ್ಲಿ ‘ಅನರ್ಹ\’ ಎಂದು ನಮೂದಿಸಲಾಗಿತ್ತು. ಆದ್ದರಿಂದ ಅವನು ಸಾಂತ ಸೋಫಿಯಾ ದೆಲಾ ಪಿಯದಾದ್‌ಳ ಅಕ್ಕರೆಯಲ್ಲಿ ಮತ್ತು ಉರ್ಸುಲಾಳ ವಿಚಿತ್ರ ಮನಸ್ಥಿತಿಯ ರಕ್ಷಣೆಯಲ್ಲೇ ಉಳಿದುಕೊಂಡ ಮತ್ತು ಮನೆಯ ಸೀಮಿತ ಪ್ರಪಂಚದಲ್ಲಿ ಅಜ್ಜಿಯವರು ಹೇಳಿದ್ದನ್ನು ಕಲಿಯಬೇಕಾಯಿತು. ಅವನು ತೆಳ್ಳಗೆ, ಸೂಕ್ಷ್ಮ ಸ್ವಭಾವದವಾಗಿದ್ದ ಮತ್ತು ಅವನಿಗಿದ್ದ ಕುತೂಹಲ ಎಂಥವರನ್ನೂ ದಂಗು ಬಡಿಸುತ್ತಿತ್ತು. ಆದರೆ ಅವನು ಆ ವಯಸ್ಸಿನಲ್ಲಿ ಕರ್ನಲ್‌ಗೆ ಇದ್ದ ಹಾಗೆ ಕುತೂಹಲದೃಷ್ಟಿ ಮತ್ತು ಅಸಾಧಾರಣ ನೋಟವಿರದೆ, ಅವನ ನೋಟದಲ್ಲಿ ಸ್ವಲ್ಪ ಮಟ್ಟಿಗೆ ಅಸ್ಥಿರತೆ ಇತ್ತು. ಅಮರಾಂತ ಉರ್ಸುಲಾ ಕಿಂಡರ್‌ಗಾರ್ಟನ್‌ನಲ್ಲಿದ್ದರೆ ಅವನು ಎರೆ ಹುಳುಗಳನ್ನು ಹಿಡಿಯುತ್ತಿದ್ದ ಮತ್ತು ಕೈತೋಟದಲ್ಲಿ ಹುಳುಗಳನ್ನು ಹಿಂಸಿಸುತ್ತಿದ್ದ. ಆದರೆ ಒಂದು ಸಲ ಉರ್ಸುಲಾಳ ಹಾಸಿಗೆಯಲ್ಲಿ ಬಿಡುವುದಕ್ಕಾಗಿ ಚೇಳುಗಳನ್ನು ಡಬ್ಬಿಯಲ್ಲಿ ಇಟ್ಟುಕೊಂಡಿರುವುದನ್ನು ನೋಡಿದಾಗ ಅವನನ್ನು ಮೆಮೆಯ ರೂಮಿನಲ್ಲಿ ಕೂಡಿ ಹಾಕಿದರೆ ಏಕಾಂತದಲ್ಲಿ ಅವನು ವಿಶ್ವಕೋಶದಲ್ಲಿರುವ ಚಿತ್ರಗಳನ್ನು ನೋಡುತ್ತ ಕೆಲವು ಗಂಟೆಗಳನ್ನು ಕಳೆದ. ಒಂದು ಮಧ್ಯಾಹ್ನ ಉರ್ಸುಲಾ ಮನೆಯಲ್ಲಿ ಭಟ್ಟಿ ಇಳಿಸಿದ ನೀರನ್ನು ಚಿಮುಕಿಸುತ್ತಿದ್ದಾಗ ಅನೇಕ ಸಲ ಅವನ ಜೊತೆ ಇದ್ದರೂ ಕೂಡ, ಅವನು ಯಾರು ಎಂದು ಕೇಳಿದಳು.
ಅವನು, “ನಾನು ಅವ್ರೇಲಿಯಾನೋ ಬ್ಯುಂದಿಯಾ”ಎಂದ.
ಅವಳು ಅದಕ್ಕೆ, “ಅದ್ಸರಿ, ಈಗ ನೀನು ಅಕ್ಕಸಾಲಿಗ ಕೆಲಸವನ್ನು ಕಲಿಯಕ್ಕೆ ಸರಿಯಾದ ಸಮಯ” ಎಂದಳು.
ಅವಳು ಮತ್ತೆ ಅವನನ್ನು ತನ್ನ ಮಗನೆಂದು ತಪ್ಪು ತಿಳಿದುಕೊಂಡಿದ್ದಳು. ಏಕೆಂದರೆ ಸುರಿಮಳೆಯ ಕಾಲ ಮುಗಿದ ಮೇಲೆ ಆಗಾಗ ಉರ್ಸುಲಾಳ ಮೆದುಳಿಗೆ ಸ್ಪಷ್ಟತೆಯ ಅಲೆಯನ್ನು ತಂದಿದ್ದ ಬಿಸಿಗಾಳಿ ಇಲ್ಲವಾಗಿತ್ತು. ಅವಳಿಗೆ ಸರಿಯಾದ ಆಲೋಚನಾಶಕ್ತಿ ಮತ್ತೆ ಬರಲಿಲ್ಲ. ಅವಳು ಬೆಡ್‌ರೂಮಿಗೆ ಹೋದಾಗ ಅವಳಿಗೆ ಸಾಮಾನ್ಯವಾಗಿ ಹೊರಗೆ ಹೋಗುವಾಗ ತೊಡುವ ಉಬ್ಬುಪಟ್ಟಿ ಇರುವ ರವಿಕೆ ಮತ್ತು ಅಂಚುಪಟ್ಟಿ ಇರುವ ಜಾಕೆಟ್ ಹಾಕಿಕೊಂಡು ಇರುಸುಮುರುಸು ಪಡುತ್ತಿದ್ದ ಪೆತ್ರೋನಿಲಾ ಇಗ್ವಾರಾನ್, ಟ್ರಾಂಕ್ಟಿಲಿನಾ ಮರಿಯಾ ಮಿನಾತಾ ಅಲೆಕೊಕ್ ಬ್ಯುಂದಿಯಾ, ತುಂಡಾಗಿದ್ದ ತೂಗಾಡುವ ಕುರ್ಚಿಯಲ್ಲಿ ಕುಳಿತು ನವಿಲುಗಳ ಗರಿಗಳ ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುತ್ತಿದ್ದ ಅವಳ ಅಜ್ಜಿ ಮತ್ತು ವೈಸ್‌ರಾಯ್ ಸಂಬಂಧಿತ ನಕಲಿಯ ಟರ್ಕಿ ಮೇಲುಡುಗೆಯನ್ನು ತೊಟ್ಟಿದ್ದ ಅವಳ ಮುತ್ತಜ್ಜ ಅವ್ರೇಲಿಯಾನೋ ಅರ್ಕಾದಿಯೋ ಕಾಣಿಸಿದರು. ಇವರಲ್ಲದೆ, ಪ್ರಾರ್ಥನೆಯೊಂದನ್ನು ಕಂಡು ಹಿಡಿದು ಅದರ ಮೂಲಕ ಹಸುಗಳ ಮೇಲಿನ ಹುಳುಗಳು ಕೆಳಕ್ಕೆ ಬೀಳುವ ಹಾಗೆ ಮಾಡುತ್ತಿದ್ದ ಅವಳ ಅಪ್ಪ ಮತ್ತು ಮೆತ್ತನೆ ಸ್ವಭಾವದ ತಾಯಿ, ಹಂದಿಯ ಬಾಲವಿರುವ ಸೋದರ ಸಂಬಂಧಿ, ಗೋಡೆಯ ಪಕ್ಕದಲ್ಲಿ ಸಾಲಾಗಿ ಕುರ್ಚಿಯಲ್ಲಿ ಬಂದಿರುವುದು ಭೇಟಿಗಾಗಿ ಅಲ್ಲ, ಜಾಗರಣೆಗಾಗಿ ಎನ್ನುವಂತೆ ಕುಳಿತಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಹಾಗೂ ಸತ್ತ ಅವನ ಮಕ್ಕಳು ಕಾಣಿಸಿದರು. ಅವಳು ಬೇರೆ ಬೇರೆ ಸ್ಥಳಗಳ, ಬೇರೆ ಬೇರೆ ಕಾಲದ ವಸ್ತುಗಳ ಬಗ್ಗೆ ಬಣ್ಣದ ಮಾತಿನ ನೇಯ್ಗೆಯನ್ನು ಹೆಣೆಯುತ್ತಿದ್ದಳು. ಇದರಿಂದಾಗಿ ಅಮರಾಂತ ಉರ್ಸುಲಾ ಸ್ಕೂಲಿನಿಂದ ಹಿಂದಿರುಗಿದಾಗ ಮತ್ತು ಅವ್ರೇಲಿಯಾನೋ ವಿಶ್ವಕೋಶವನ್ನು ನೋಡಿ ನೋಡಿ ಸುಸ್ತಾದಾಗ ಅವಳು ಹಾಸಿಗೆಯಲ್ಲಿ ಕುಳಿತುಕೊಂಡು ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತ ಮತ್ತು ಸತ್ತವರ ಸಂಗದಲ್ಲಿ ಮುಳುಗಿಹೋಗಿರುವುದು ಅವರಿಗೆ ಕಾಣುತ್ತಿತ್ತು. ಅವಳು ಒಂದು ಸಲ, “ಬೆಂಕಿ” ಎಂದು ಗಾಬರಿಯಿಂದ ಕೂಗಿದಳು. ಮರುಕ್ಷಣ ಮನೆಯಲ್ಲಿ ಆತಂಕ ಹಬ್ಬಿತು. ಆದರೆ ಅವಳು ತಾನು ನಾಲ್ಕು ವರ್ಷದವಳಿದ್ದಾಗ ಕಣಜ ಹೊತ್ತಿ ಉರಿಯುತ್ತಿದ್ದನ್ನು ನೋಡಿದ್ದರ ಬಗ್ಗೆ ಹೇಳುತ್ತಿದ್ದಳು. ಕೊನೆಗೆ ಅವಳು ಭೂತಕಾಲವನ್ನು ವರ್ತಮಾನಕಾಲದೊಂದಿಗೆ ಎಷ್ಟರಮಟ್ಟಿಗೆ ಮಿಶ್ರಣ ಮಾಡುತ್ತಿದ್ದಳೆಂದರೆ ಅವಳು ಹೇಳುತ್ತಿರುವುದು ನೆನಪುಮಾಡಿಕೊಂಡಿದ್ದನ್ನೋ ಅಥವಾ ಭಾವಿಸಿದ್ದನ್ನೋ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಸ್ವಲ್ಪ ಸ್ವಲ್ಪವಾಗಿ ಅವಳು ಕುಗ್ಗಿ ಮಾಂಸದ ಮುದ್ದೆಯಾಗಿ ಬದುಕಿದ ಕೊನೆಯ ತಿಂಗಳುಗಳಲ್ಲಿ ನೈಟ್ ಗೌನ್‌ನಲ್ಲಿ ಮರೆಯಾದ ಒಣಗಿ ಹೋದ ದ್ರಾಕ್ಷಿ ಬಳ್ಳಿಯಂತಾದಳು. ಅವಳು ಯಾವಾಗಲೂ ಎತ್ತಿ ಹಿಡಿದಿರುತ್ತಿದ್ದ ಕೈ ಕೋತಿಯ ಅಂಗೈನಂತೆ ಕಾಣುತ್ತಿತ್ತು. ಅವಳು ಅನೇಕ ವಾರ ಚಲಿಸದೆ ಇದ್ದಳು ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ಅವಳನ್ನು ಅಲ್ಲಾಡಿಸಿ ನೋಡಿ ಬದುಕಿದ್ದಾಳೆ ಎಂದು ತನಗೆ ತಾನು ಸಮರ್ಥಿಸಿಕೊಳ್ಳಬೇಕಾಗಿತ್ತು. ಹಾಗೆಯೇ ಅವಳನ್ನು ತೊಡೆಯ ಮೇಲೆ ಕೂಡಿಸಿಕೊಂಡು ಸ್ಪೂನಿನಲ್ಲಿ ಸಕ್ಕರೆ ನೀರನ್ನು ಕುಡಿಸಬೇಕಿತ್ತು. ಅವಳು ಆಗಷ್ಟೇ ಹುಟ್ಟಿದ ಮುದುಕಿಯಂತಿದ್ದಳು. ಅಮರಾಂತ ಉರ್ಸುಲಾ ಮತ್ತು ಅವ್ರೇಲಿಯಾನೋ ಅವಳನ್ನು ಬೆಡ್‌ರೂಮಿನಿಂದ ಒಳಗೆ ಮತ್ತು ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಅವಳು ಬಾಲಕ್ರೈಸ್ತನಿಗಿಂತ ಎತ್ತರವಾಗಿದ್ದಾಳೆಯೇ ಎಂದು ನೋಡಲು ಪವಿತ್ರ ಸ್ಥಾನದಲ್ಲಿ ಕೂಡಿಸುತ್ತಿದ್ದರು. ಒಂದು ದಿನ ಅವರು ಅವಳನ್ನು ಅಡುಗೆಯ ಮನೆಯ ಕಪಾಟೊಂದರಲ್ಲಿ ಅಡಗಿಸಿದ್ದರು. ಅವಳನ್ನು ಅಲ್ಲಿ ಇಲಿಗಳು ತಿಂದು ಹಾಕುವುದರಲ್ಲಿದ್ದವು. ಒಂದು ಕ್ರೈಸ್ತ ಉತ್ಸವದ ದಿನಾಚರಣೆಯ ಸಂದರ್ಭದಲ್ಲಿ ಫೆರ್ನಾಂಡ ಚರ್ಚ್‌ಗೆ ಹೋದಾಗ ಅವರು ಅವಳ ಬೆಡ್‌ರೂಮಿಗೆ ಹೋಗಿ ಕುತ್ತಿಗೆ ಮತ್ತು ಮೊಳಕಾಲು ಹಿಡಿದುಕೊಂಡು ಹೊರಗೆ ಕರೆದುಕೊಂಡು ಹೋದರು.
ಅಮರಾಂತ ಉರ್ಸುಲಾ, “ಪಾಪದ ಮುತ್ತಜ್ಜಿಯ ಅಮ್ಮ ವಯಸ್ಸಾಗಿ ಸತ್ತು ಹೋದಳು” ಎಂದಳು.
“ನಾನು ಬದುಕಿದೀನಿ!” ಎಂದಳು.
ಅಮರಾಂತ ಉರ್ಸುಲಾ ನಗುವನ್ನು ತಡೆಹಿಡಿದುಕೊಂಡು, “ನೋಡಿ, ಅವಳು ಉಸಿರಾಡ್ತಾನೂ ಇಲ್ಲ” ಎಂದಳು.
ಉರ್ಸುಲಾ, “ನಾನು ಮಾತಾಡ್ತಾ ಇದೀನಿ!” ಎಂದಳು.
ಅವ್ರೇಲಿಯಾನೋ, “ಅವಳಿಗೆ ಮಾತಾಡಕ್ಕೂ ಆಗ್ತಿಲ್ಲ. ಹುಳು ತರಹ ಸತ್ತು ಹೋದ್ಲು” ಎಂದಳು.
ಅನಂತರ ಉರ್ಸುಲಾ ಸಾಕ್ಷಿ ಕೊಡಬೇಕಾಯಿತು. ಅವಳು ಕ್ಷೀಣ ಸ್ವರದಲ್ಲಿ, “ಹಾಗಾದ್ರೆ ಸಾಯೋದು ಅಂದ್ರೆ ಹೀಗೆ” ಎಂದಳು. ಅವಳು ಕೊನೆಯಿಲ್ಲದ, ದೀರ್ಘವಾದ, ಆಳದ ಪ್ರಾರ್ಥನೆಯನ್ನು ಪ್ರಾರಂಭಿಸಿದಳು. ಅದು ಎರಡು ದಿನಗಳಿಗಿಂತ ಹೆಚ್ಚಿಗೆ ನಡೆಯಿತು. ಅನಂತರ ಮಂಗಳವಾರದ ಹೊತ್ತಿಗೆ ದೇವರಿಗೆ ಸಲ್ಲಿಸುವ ಬೇಡಿಕೆಯಲ್ಲಿ ಕಲಸುಮೇಲೋಗರವಾಯಿತು. ಅವಳು ಕೆಂಜಿಗಗಳು ಮನೆಯನ್ನು ಉರುಳಿಸದಿರಲಿ ಎಂದು ಕೇಳಿಕೊಂಡಳು. ರೆಮಿದಿಯೋಸ್‌ಳ ಛಾಯಾಗ್ರಹಣದ ಉಪಕರಣದ ಮೇಲೆ ಕ್ಯಾಂಡಲನ್ನು ಹೊತ್ತಿಸಿಟ್ಟಿರುವಂತೆ, ಬ್ಯುಂದಿಯಾನೊಬ್ಬನನ್ನು ಅದೇ ರಕ್ತಸಂಬಂಧದಲ್ಲಿ ಮದುವೆಯಾಗುವುದಕ್ಕೆ ಬಿಡಬಾರದು. ಏಕೆಂದರೆ ಹುಟ್ಟುವ ಮಕ್ಕಳಿಗೆ ಹಂದಿಯ ಬಾಲವಿರುತ್ತದೆ ಎಂದು ಹೇಳಿದಳು. ಅವ್ರೇಲಿಯಾನೋ ಸೆಗುಂದೋ ಅವಳ ಪರಿಸ್ಥಿತಿಯ ಉಪಯೋಗ ಪಡೆದುಕೊಂಡು ಬಂಗಾರವನ್ನು ಹೂತಿಟ್ಟಿರುವ ಜಾಗವನ್ನು ಹೇಳಲಿ ಎಂದು ಪ್ರಯತ್ನಿಸಿದ. ಆದರೆ ಅವನು ಪುಸಲಾಯಿಸಿದ್ದು ವ್ಯರ್ಥವಾಯಿತು. ಉರ್ಸುಲಾ “ಅದರೊಡೆಯ ಬಂದಾಗ ದೇವರು ಅವನಿಗೆ ಎಲ್ಲಿದೆ ಎಂದು ತಿಳಿಸ್ತಾನೆ” ಎಂದಳು. ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಅವಳು ಈ ಕ್ಷಣದಲ್ಲಿ ಅಲ್ಲದಿದ್ದರೆ ಮತ್ತೊಂದು ಕ್ಷಣದಲ್ಲಿ ಸಾಯುತ್ತಾಳೆ ಎಂದು ಖಚಿತವಾಯಿತು. ಏಕೆಂದರೆ ಅವಳು ಆ ದಿನಗಳಲ್ಲಿ ಪ್ರಕೃತಿಯಲ್ಲಿ ಹಲಕೆಲವು ವೈಪರೀತ್ಯಗಳನ್ನು ಗಮನಿಸಿದಳು : ಗುಲಾಬಿ ಹೂಗಳು ರೇಷ್ಮೆಗೂಡಿನ ಹಾಗೆ ವಾಸನೆ ಬೀರಿದವು, ಮಾಂಸದ ತುಂಡುಗಳು ಉರುಳಿಬಿದ್ದವು ಮತ್ತು ಅವರೆ ಕಾಯಿಗಳು ನೆಲದ ಮೇಲೆ ಹರಡಿ ಬಿದ್ದು, ಸ್ಟಾರ್ ಫಿಶ್‌ನ ಆಕಾರ ಪಡೆದವು. ಅಲ್ಲದೆ ಮತ್ತೊಂದು ದಿನ ಅವಳು ಆಕಾಶದಲ್ಲಿ ಹೊಳೆವ ಕಿತ್ತಲೆ ಗೋಳಗಳು ಹಾದುಹೋದದ್ದನ್ನು ನೋಡಿದಳು.
ಗುಡ್‌ಫ್ರೈಡೆ ಬೆಳಿಗ್ಗೆ ಅವಳು ಸತ್ತು ಹೋದದ್ದು ಕಂಡುಬಂತು. ಬಾಳೆ ತೋಟದ ಕಂಪನಿ ಇದ್ದಾಗ ಅವಳ ವಯಸ್ಸನ್ನು ಲೆಕ್ಕಹಾಕಿದಾಗ ಅವಳು ಅದನ್ನು ಸುಮಾರು ನೂರಾ ಹದಿನೈದರಿಂದ ನೂರಾ ಇಪ್ಪತ್ತೆರಡರ ಮಧ್ಯೆ ಇರಬೇಕೆಂದಿದ್ದಳು. ಅವರು ಅವಳನ್ನು ಅವ್ರೇಲಿಯಾನೋನನ್ನು ತಂದಿದ್ದ, ಬುಟ್ಟಿಗಿಂತ ಬಹಳ ದೊಡ್ಡದಲ್ಲದ ಶವಪೆಟ್ಟಿಗೆಯಲ್ಲಿಟ್ಟು ಹೂಳಿದರು. ಶವಸಂಸ್ಕಾರದಲ್ಲಿ ಬಹಳ ಕಡಿಮೆ ಜನರಿದ್ದರು. ಏಕೆಂದರೆ ಅವಳನ್ನು ಬಲ್ಲವರು ತುಂಬಾ ಕಡಿಮೆ ಇದ್ದರು ಮತ್ತು ಮಧ್ಯಾಹ್ನದ ಉರಿಬಿಸಿಲು ತೀರಾ ಹೆಚ್ಚಾಗಿದ್ದು, ಹಕ್ಕಿಗಳು ಗೊಂದಲಗೊಂಡು ಮಣ್ಣಿನ ಪಾರಿವಾಳಗಳ ಹಾಗೆ ಗೋಡೆಗಳಿಗೆ ಬಡಿಯುತ್ತಿದ್ದವು ಮತ್ತು ಪರದೆಗಳ ಮೂಲಕ ಬೆಡ್‌ರೂಮಿನಲ್ಲಿ ಬಿದ್ದು ಸಾಯುತ್ತಿದ್ದವು.
ಪ್ರಾರಂಭದಲ್ಲಿ ಅವರು ಅದನ್ನು ಪ್ಲೇಗ್ ಎಂದು ತಿಳಿದರು. ಮನೆಯ ಹೆಂಗಸರಿಗೆ ಅಷ್ಟೊಂದು ಸತ್ತ ಹಕ್ಕಿಗಳನ್ನು, ಅದರಲ್ಲೂ ಮಧ್ಯಾಹ್ನದ ಮಲಗುವ ಸಮಯದಲ್ಲಿ, ಗುಡಿಸಿ ಹೊರಗೆ ಹಾಕುವುದರಲ್ಲಿ ಸಾಕು ಸಾಕಾಯಿತು. ಗಂಡಸರು ಅವುಗಳನ್ನು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಹೋಗಿ ನದಿಗೆ ಹಾಕಿದರು. ಈಸ್ಟರ್ ಭಾನುವಾರ ನೂರು ವರ್ಷದ ಫಾದರ್ ಆಂಟೋನಿಯೋ ಇಸಬೆಲ್ ಉಪದೇಶ ವೇದಿಕೆಯಿಂದ ಹಕಿಗಳು ಸತ್ತದ್ದು ಕಳೆದ ರಾತ್ರಿ ತಾನು ನೋಡಿದ ಅಲೆಮಾರಿ ಯಹೂದಿಯಿಂದಾಗಿ ಎಂದು ಹೇಳಿದ. ಅದು ಗಂಡು ಮತ್ತು ಹೆಣ್ಣು ಮೇಕೆಗಳ ನಡುವಿನ ಪ್ರಾಣಿಯಾಗಿದ್ದು ಆ ಪ್ರಾಣಿಯ ಉಸಿರು ಗಾಳಿಗೆ ಕಿಚ್ಚು ಹಬ್ಬಿಸಿದ್ದಲ್ಲದೆ ಅದರ ನೋಟ ಹೊಸದಾಗಿ ಮದುವೆಯಾದ ಹೆಂಗಸರಲ್ಲಿ ರಾಕ್ಷಸರು ಹುಟ್ಟುವಂತೆ ಮಾಡುತ್ತದೆ ಎಂದು ವಿವರಿಸಿದ. ಅವನ ಕಾಲಜ್ಞಾನದ ಬಗ್ಗೆ ಆಸಕ್ತಿ ಇದ್ದವರು ಬಹಳ ಕಡಿಮೆ. ಏಕೆಂದರೆ ಅವನಿಗೆ ವಯಸ್ಸಾಗಿರುವುದರಿಂದ ಹೀಗೆ ಓಡಾಡಿಕೊಂಡಿದ್ದಾನೆ ಎಂದು ತಿಳಿದುಕೊಂಡಿದ್ದರು. ಆದರೆ ಬುಧವಾರ ಒಬ್ಬ ಹೆಂಗಸು ಪ್ರತಿಯೊಬ್ಬರನ್ನೂ ಮುಂಚೆಯೇ ಏಳುವಂತೆ ಮಾಡಿದಳು. ಏಕೆಂದರೆ ಅವಳು ಎರಡು ಕಾಲಿನ ಭಾರಿ ಪ್ರಾಣಿಯ ಸೀಳುಪಾದಗಳ ಗುರುತನ್ನು ಕಂಡಿದ್ದಳು. ಅದನ್ನು ನೋಡಿದ ಯಾರಿಗೂ ಪಾದ್ರಿ ಹೇಳಿದ ಭಯಾನಕ ಪ್ರಾಣಿ ಇರುವುದರ ಬಗ್ಗೆ ಅನುಮಾನವಿರಲಿಲ್ಲ ಮತ್ತು ಅದಕ್ಕಾಗಿ ತಮ್ಮ ಅಂಗಳದಲ್ಲಿ ಬಲೆ ನಿರ್ಮಿಸಲು ಪ್ರಾರಂಭಿಸಿದರು. ಇದರಿಂದ ಅವರು ಅದನ್ನು ಹಿಡಿಯುವುದರಲ್ಲಿ ಯಶಸ್ವಿಯಾದರು. ಉರ್ಸುಲಾ ಸತ್ತು ಎರಡು ವಾರದ ನಂತರ ಪೆತ್ರಾ ಕೊತೆಸ್ ಮತ್ತು ಅವ್ರೇಲಿಯಾನೋ ಸೆಗುಂದೋ ಹತ್ತಿರದಲ್ಲಿ ಕರುವೊಂದು ಗಟ್ಟಿಯಾಗಿ ಕೂಗುತ್ತಿದ್ದರಿಂದ ಗಾಬರಿಯಾಗಿ ಎಚ್ಚರಗೊಂಡರು. ಅವರು ಅಲ್ಲಿಗೆ ಹೋದಾಗ ಒಣಗಿದ ಎಲೆಗಳಿಂದ ಮುಚ್ಚಿದ ಗುಂಡಿಯೊಂದರಿಂದ ಚೂಪು ಕೋಲುಗಳಿಂದ ಭಾರಿ ಪ್ರಾಣಿಯೊಂದನ್ನು ಹಿಡಿದೆತ್ತುತ್ತಿದ್ದರು ಮತ್ತು ಅದು ಕೂಗುವುದನ್ನು ನಿಲ್ಲಿಸಿತು. ಅದು ಚಿಕ್ಕ ಹೋರಿಯಷ್ಟು ಎತ್ತರವಾಗಿರಲಿಲ್ಲವಾದರೂ ಬಲವಾದ ಎತ್ತಿನಷ್ಟಿತ್ತು. ಅದಕ್ಕೆ ಆದ ಗಾಯಗಳಿಂದ ಹಸಿರು ಬಣ್ಣದ ಲೋಳೆ ಲೋಳೆ ಒಸರುತ್ತಿತ್ತು. ಅದರ ಮೈ ತುಂಬಾ ಒರಟು ಕೂದಲಿತ್ತು. ಜೊತೆಗೆ ಅಲ್ಲಲ್ಲಿ ಗಂಟುಗಳಿದ್ದವು. ಮೈ ಚರ್ಮ ಮೀನಿನ ಹೊರಮೈಯಿನ ಹೆಕ್ಕಳದಂತಿತ್ತು. ಆದರೆ ಪಾದ್ರಿ ಹೇಳಿದ ವಿವರದಂತಿರಲಿಲ್ಲ. ಅದರ ಮಾನವ ರೂಪದ ಭಾಗಗಳು ಗಂಡಸಿನ ಹಾಗಿರದೆ ಸೊರಗಿದ ದೇವತೆಯಂತಿತ್ತು. ಏಕೆಂದರೆ ಅದರ ಕೈಗಳು ಸೆಟೆದುಕೊಂಡಿದ್ದವು, ಮಂಕಾದ ದೊಡ್ಡ ಕಣ್ಣುಗಳಿದ್ದವು. ಭುಜದಲ್ಲಿದ್ದ ರೆಕ್ಕೆಗಳನ್ನು ಕೊಡಲಿಯಿಂದ ಕತ್ತರಿಸಿ ಹಾಕಿದ್ದರಿಂದ ಉಂಟಾದ ಗಾಯದ ಕಲೆ ಇತ್ತು. ಅವರು ಅದನ್ನು ಚೌಕದಲ್ಲಿದ್ದ ಬಾದಾಮಿ ಮರಕ್ಕೆ ಎಲ್ಲರೂ ನೋಡಲೆಂದು ಕಟ್ಟಿ ಹಾಕಿದರು. ಅದು ಕೊಳೆಯುವುದಕ್ಕೆ ಪ್ರಾರಂಭವಾದಾಗ ಸುಟ್ಟು ಹಾಕಿದರು. ಏಕೆಂದರೆ ನದಿಯಲ್ಲಿ ಎಸೆಯುವುದಕ್ಕೆ ಅದು ಪ್ರಾಣಿಯೋ ಅಥವಾ ಹೂಳುವುದಕ್ಕೆ ಮನುಷ್ಯನೋ ಎಂದು ಅವರಿಗೆ ನಿರ್ಧರಿಸಲಾಗಲಿಲ್ಲ. ಪಕ್ಷಿಗಳು ಸಾಯಲು ಅದೇ ಕಾರಣವೇ ಹೇಗೆ ಎನ್ನುವುದಕ್ಕೆ ಸಮರ್ಥನೆ ದೊರೆಯಲಿಲ್ಲ. ಆದರೆ ಹೊಸದಾಗಿ ಮದುವೆಯಾದ ಹೆಣ್ಣುಗಳು, ರಾಕ್ಷಸರನ್ನು ಹೆರಲಿಲ್ಲ. ಅಲ್ಲದೆ ಬಿಸಿಲಿನ ತೀವ್ರತೆಯೂ ಕಡಿಮೆಯಾಗಲಿಲ್ಲ.
ಆ ವರ್ಷದ ಕೊನೆಯಲ್ಲಿ ರೆಬೇಕ ಸತ್ತಳು. ಮೂರು ದಿನಗಳಿಂದ ಬೆಡ್‌ರೂಮಿನಲ್ಲಿ ಬಾಗಿಲು ಹಾಕಿಕೊಂಡಿದ್ದನ್ನು ತೆಗೆಸಲು ಅವಳ ಜೀವನದುದ್ದಕ್ಕೂ ಸೇವಕಿಯಾಗಿದ್ದ ಆರ್ಗೆನೀಡಾ ಅಧಿಕಾರಿಗಳನ್ನು ಕೇಳಿದಳು. ಅವರು ಒಂಟಿ ಹಾಸಿಗೆಯಲ್ಲಿ ಸಿಗಡಿಯ ಹಾಗೆ ಮುದುಡಿಕೊಂಡು, ತಲೆಯೆಲ್ಲಾ ಹುಳುಕಡ್ಡಿಯಿಂದ ಬೋಳಾಗಿ, ಬಾಯಲ್ಲಿ ಬೆರಳನ್ನಿಟ್ಟುಕೊಂಡಿದ್ದ ಅವಳನ್ನು ಕಂಡರು. ಅವ್ರೇಲಿಯಾನೋ ಸೆಗುಂದೋ ಶವ ಸಂಸ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡ ಮತ್ತು ಮಾರುವುದಕ್ಕಾಗಿ ಮನೆಯನ್ನು ಒಂದು ವ್ಯವಸ್ಥೆಗೆ ತರುವುದಕ್ಕೆ ಪ್ರಯತ್ನಿಸಿದ. ಆದರೆ ಅದೆಷ್ಟು ಹಾಳಾಗಿತ್ತೆಂದರೆ ಬಣ್ಣ ಬಳಿದರೆ ಗೋಡೆಗಳಿಂದ ಹೆಕ್ಕಳ ಉದುರುತ್ತಿದ್ದವು. ನೆಲದಲ್ಲಿ ಕಳೆ ಹಬ್ಬುವುದನ್ನು ಮತ್ತು ತೊಲೆಗಳಲ್ಲಿ ಬಳ್ಳಿಗಳು ಕೊಳೆಯುವುದನ್ನು ತಡೆಯುವಷ್ಟು ಗಾರೆ ಇರಲಿಲ್ಲ.
ಮಳೆ ನಿಂತ ಮೇಲೆ ಪ್ರತಿಯೊಂದರ ಸ್ಥಿತಿ ಇದ್ದದ್ದು ಹೀಗೆ. ಮರೆತು ಹೋದ ಜೀವನೋತ್ಸಾಹಕ್ಕೆ ಪ್ರತಿಯಾಗಿ ಜನರ ಸೋಮಾರಿತನವಿತ್ತು. ಅದು ದಯೆ ಇಲ್ಲದೆ ಹಿಂದಿನ ನೆನಪುಗಳ ಮಹತ್ವವನ್ನು ಎಷ್ಟರಮಟ್ಟಿಗೆ ಇಳಿಸಿತ್ತು ಎಂದರೆ ನಿರ್ಲಾಂದಿಯಾದ ವಾರ್ಷಿಕೋತ್ಸವಕ್ಕಾಗಿ ಗಣರಾಜ್ಯದ ಪ್ರತಿನಿಧಿಗಳು ಅನೇಕ ಬಾರಿ ಕರ್ನಲ್ ಅವ್ರೇಲಿಯಾನೋ ಬ್ಯುಂಡಿಯ ತಿರಸ್ಕರಿಸಿದ್ದ ಪ್ರಶಸ್ತಿಯನ್ನು ಕೊನೆಗೊಮ್ಮೆ ನೀಡುವುದಕ್ಕಾಗಿ ನಿರ್ಧರಿಸಿ ಮಕೋಂದೋಗೆ ಬಂದಾಗ, ಅವರು ಇಡೀ ಮಧ್ಯಾಹ್ನವನ್ನು ಅವನ ವಂಶಜರು ಯಾರಿದ್ದಾರೆ ಎಂದು ಹುಡುಕುವುದಕ್ಕಾಗಿ ಕಳೆಯಬೇಕಾಯಿತು. ಅವ್ರೇಲಿಯಾನೋ ಸೆಗುಂದೋಗೆ ಅದು ಮೊದಲು ಅಪ್ಪಟ ಬಂಗಾರದ್ದಾಗಿರಬೇಕೆಂದು ತಿಳಿದು ಪ್ರಶಸ್ತಿಯನ್ನು ತಾನು ಸ್ವೀಕರಿಸುವ ಆಲೋಚನೆ ಬಂತು. ಆದರೆ ಸಮಾರಂಭಕ್ಕೆ ಪ್ರತಿನಿಧಿಗಳು ಕೆಲವು ಹೇಳಿಕೆ ಮತ್ತು ಭಾಷಣಗಳನ್ನು ಸಿದ್ಧಪಡಿಸಿಕೊಂಡು ಬಂದಿರುವಾಗ ಹಾಗೆ ಮಾಡುವುದು ಸರಿಯಲ್ಲ ಎಂದು ಅವನಿಗೆ ಮನದಟ್ಟು ಮಾಡಿದರು. ಸುಮಾರು ಅದೇ ಸಮಯಕ್ಕೆ ಮೆಲ್‌ಕಿಯಾದೆಸ್‌ನ ವಿಜ್ಞಾನದ ಕೊನೆಯ ವಾರಸುದಾರರಾಗಿ ಜಿಪ್ಸಿಗಳು ಮತ್ತೆ ಬಂದಾಗ, ಅವರಿಗೆ ಊರು ಹೀನಾಯ ಸ್ಥಿತಿಯಲ್ಲಿದ್ದು ಅಲ್ಲಿ ವಾಸಿಸುವವರು ಉಳಿದ ಪ್ರಪಂಚದಿಂದ ಎಷ್ಟು ದೂರವಾಗಿ ಕಂಡರೆಂದರೆ ಅವರು ಬ್ಯಾಬಿಲೋನಿಯಾದ ಇತ್ತೀಚಿನ ಶೋಧನೆ ಎನ್ನುವಂತೆ ಅಯಸ್ಕಾಂತದ ಇಟ್ಟಿಗೆಗಳನ್ನು ಮನೆಗಳ ಮುಂದೆ ಎಳೆದುಕೊಂಡು ಹೋದರು. ಅಲ್ಲದೆ ಅವರು ಮತ್ತೆ ದೊಡ್ಡ ಭೂತಗನ್ನಡಿಯ ಮೂಲಕ ಸೂರ್ಯನ ಕಿರಣಗಳನ್ನು ಹಾಯಿಸಿ ಕೇಂದ್ರೀಕರಿಸಿದರು. ಪಾತ್ರೆಗಳು, ಕೆಟಲುಗಳು ಉರುಳಿ ಬೀಳುವುದನ್ನು ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಜನರಿಗೇನೂ ಕೊರತೆ ಇರಲಿಲ್ಲ. ಜೊತೆಗೆ ಐವತ್ತು ಸೆಂಟುಗಳನ್ನು ಕೊಟ್ಟು ಜಿಪ್ಸಿ ಹೆಂಗಸೊಬ್ಬಳು ಕಟ್ಟಿಸಿದ ಹಲ್ಲನ್ನು ಹೊರಗೆ ತೆಗೆದು ಮತ್ತೆ ಹಾಕಿಕೊಳ್ಳುತ್ತಿದ್ದನ್ನು ನೋಡುವವರೂ ಇದ್ದರು. ಯಾರನ್ನೂ ಕರೆದುಕೊಂಡು ಬರದ , ಯಾರನ್ನೂ ಕರೆದುಕೊಂಡು ಹೋಗದೆ ಅಲ್ಲಿ ನಿಲ್ಲುತ್ತಲೂ ಇರದ, ಮಿಸ್ಟರ್ ಬ್ರೌನ್ ತಗಲು ಹಾಕಿದ, ಮುರಿದು ಹೋದ ಹಳದಿ ಬಣ್ಣದ ಉದ್ದನೆಯ ಗಾಜುಗಳಿದ್ದ, ಮಾವಿನ ತೊಗಟೆಯಾಕಾರದ ಕುರ್ಚಿಗಳ ಬೋಗಿ ಮತ್ತು ಹಣ್ಣನ್ನು ಸಾಗಿಸುತ್ತಿದ್ದ ನೂರಾ‌ಇಪ್ಪತ್ತು ಬೋಗಿಗಳ ಮತ್ತು ಅದು ಸ್ಟೇಶನ್‌ನಿಂದ ಹೊರಗೆ ಹೋಗಲು ಇಡೀ ಮಧ್ಯಾಹ್ನ ತೆಗೆದುಕೊಳ್ಳುತ್ತಿದ್ದ ರೈಲೊಂದೇ ಉಳಿದಿತ್ತು. ಸೋಜಿಗದ ರೀತಿಯಲ್ಲಿ ಪಕ್ಷಿಗಳು ಸತ್ತದ್ದನ್ನು ಮತ್ತು ಅಲೆಮಾರಿ ಯಹೂದಿಯ ಆತ್ಮಹತ್ಯೆಯ ವಿಚಾರಣೆಗೆಂದು ದೂರದಿಂದ ಬಂದವರಿಗೆ ಫಾದರ್ ಅನೊಂಶಿಯೋ ಇಸಬಲ್ ಮಕ್ಕಳ ಜೊತೆ ಕುರುಡನ ಆಟವಾಡುತ್ತಿದ್ದದ್ದು ಕಂಡಿತು. ಅವನು ಹೇಳಿದ್ದು ಭ್ರಮೆಯ ಫಲವೆಂದು ಪರಿಗಣಿಸಿ ಅವನನ್ನು ಆಶ್ರಮಕ್ಕೆ ಕರೆದುಕೊಂಡು ಹೋದರು. ಸ್ವಲ್ಪ ಕಾಲದಲ್ಲಿಯೇ ಅವರು ಹೊಸ ರೀತಿಯ ಧೈರ್ಯವಂತ ಹಾಗೂ ಸಾಹಸ ಪ್ರವೃತ್ತಿಯ ಜನರು ಸೋಮಾರಿಯಾಗಿರಬಾರದೆಂದು ತಾನೇ ಸ್ವತಃ ದಿನಕ್ಕೆ ಹಲವಾರು ಸಲ ಗಂಟೆ ಬಾರಿಸುವ ಫಾದರ್ ಏಂಜಲ್‌ರನ್ನು ಕಳಿಸಿದರು. ಅವನು ಮನೆಯಿಂದ ಮನೆಗೆ ಸಾಮೂಹಿಕ ಪ್ರಾರ್ಥನೆಗೆಂದು ಮಲಗಿದವರನ್ನು ಎಬ್ಬಿಸುತ್ತಿದ್ದ. ಆದರೆ ಒಂದು ವರ್ಷ ಕಳೆಯುವುದರೊಳಗೆ ಅವನಿಗೆ, ಅಲ್ಲಿನ ಗಾಳಿಯಲ್ಲಿ ಉಸಿರಾಡುತ್ತಿದ್ದ ನಿರ್ಲಕ್ಷ್ಯ ಹಾಗೂ ಪ್ರತಿಯೊಂದನ್ನೂ ಹಳತಾಗಿಸುತ್ತಿದ್ದು ಬಿಸಿಗಾಳಿ ಮತ್ತು ಊಟವಾದ ಮೇಲೆ ಮಧ್ಯಾಹ್ನದ ತೂಕಡಿಕೆ ಮುತ್ತಿಕೊಂಡಿತು.
ಉರ್ಸುಲಾ ಸತ್ತ ಮೇಲೆ ಗಟ್ಟಿ ಮನಸ್ಸಿನವಳಾದ ಅಮರಾಂತ ಉರ್ಸುಲಾಳಂಥ ಚಟುವಟಿಕೆಯುಳ್ಳವಳಿಂದಲೂ ಕಾಪಾಡಲಾಗದ ರೀತಿಯಲ್ಲಿ ಮನೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ಆದರೆ ಅನೇಕ ವರ್ಷಗಳ ನಂತರ ಯಾವುದೇ ಪೂರ್ವ ಕಲ್ಪಿತ ಅಭಿಪ್ರಾಯಗಳಿಲ್ಲದೆ, ವಾಸ್ತವವನ್ನು ಅರಿತ ಅವಳು ಕಳೆಗಟ್ಟಿದ್ದನ್ನು ಹೊರಹಾಕಲು ಕಿಟಕಿ ಬಾಗಿಲುಗಳನ್ನು ತೆಗೆದಳು, ಕೈತೋಟವನ್ನು ಮೊದಲಿನ ಸ್ಥಿತಿಗೆ ತಂದಳು. ಬೆಳಕಿದ್ದಾಗಲೆ ಸರಿದಾಡುತ್ತಿದ್ದ ಕೆಂಜಿಗಗಳನ್ನು ನಾಶಪಡಿಸಿದಳು ಮತ್ತು ಅತಿಥಿ ಸತ್ಕಾರದ ವೈಭವವನ್ನು ಮತ್ತೆ ಸ್ಥಾಪಿಸಲು ವ್ಯರ್ಥ ಪ್ರಯತ್ನ ಮಾಡಿದಳು. ಫೆರ್ನಾಂಡಳ ಏಕಾಂತ ಪ್ರಿಯತೆ ಉರ್ಸುಲಾಳ ಬಿರುಸಿನ ಜೀವನದ ಎದುರಾಗಿ ಭೇದಿಸಲಾಗದಂಥ ತಡೆಯನ್ನು ನಿರ್ಮಿಸಿತ್ತು.
ಒಣಗಾಳಿ ಬೀಸಿದಾಗ ಬಾಗಿಲುಗಳನ್ನು ತೆಗೆಯಲು ಅವಳು ನಿರಾಕರಿಸಿದ್ದಲ್ಲದೆ, ಕಿಟಕಿಗಳಿಗೆ ಕ್ರಾಸ್ ಆಕಾರದ ಹಲಗೆ ಮುಚ್ಚಿ ಮೊಳೆಹೊಡೆದು ಬದುಕಿರುವಾಗಲೇ ಗೋರಿಯಾಗಬೇಕೆಂಬ ಅಪ್ಪಣೆಯನ್ನು ಪಾಲಿಸಿದಳು. ಕಾಣದ ಡಾಕ್ಟರುಗಳ ಜೊತೆ ನಡೆಸಿದ ದೀರ್ಘಕಾಲದ ಪತ್ರ ವ್ಯವಹಾರ ಸೋಲಿನಲ್ಲಿ ಮುಕ್ತಾಯವಾಯಿತು. ಅನೇಕ ಬಾರಿ ಮುಂದೂಡಲ್ಪಟ್ಟು ಕೊನೆಗೆ ಒಪ್ಪಿಗೆಯಾದ ದಿನ ಮತ್ತು ವೇಳೆಯಲ್ಲಿ ಅವಳು ಬಿಳಿಯ ಹೊದಿಕೆ ಹೊದ್ದುಕೊಂಡು ಅಂಗಾತ ಮಲಗಿದ ಮೇಲೆ ಒಂದು ಗಂಟೆಯ ವೇಳೆಗೆ ತನ್ನ ತಲೆಯನ್ನು ತಿಳಿಯಾದ ದ್ರವದಲ್ಲಿ ತೋಯಿಸಿದ ಕರ್ಚೀಫ್‌ನಿಂದ ಮುಚ್ಚುತ್ತಿದ್ದಾರೆಂದು ಭಾಸವಾಯಿತು. ಅವಳಿಗೆ ಎಚ್ಚರವಾದಾಗ ಕಿಟಕಿಯಲ್ಲಿ ಸೂರ್ಯ ಹೊಳೆಯುತ್ತಿದ್ದ ಮತ್ತು ಅವಳ ಕೆಳಹೊಟ್ಟೆಯಿಂದ ಎದೆಗೂಡಿನ ಕಮಾನಿನ ತನಕ ಒರಟಾದ ಹೊಲಿಗೆ ಹಾಕಲಾಗಿತ್ತು. ಆದರೆ ಅವಳು ನಿಗದಿಯಾದ ಪರೀಕ್ಷೆಯನ್ನು ಪೂರೈಸುವ ಮೊದಲೇ, ಕಾಣದ ಡಾಕ್ಟರುಗಳು ಅವಳನ್ನು ಆರು ಗಂಟೆಗಳ ಕಾಲ ವಿಶ್ಲೇಷಿಸಿದ ನಂತರ, ಅವಳು ಅನೇಕ ಬಾರಿ ವಿವರಿಸಿದಂಥ ರೋಗದ ಲPಣಗಳನ್ನು ಸಮರ್ಥಿಸುವಂಥಾದ್ದು ಸಿಕ್ಕಲಿಲ್ಲವೆಂದು ಬರೆದದ್ದು, ಅವಳ ಅಶಾಂತಿಗೆ ಕಾರಣವಾಯಿತು. ವಾಸ್ತವವಾಗಿ ವಸ್ತುಗಳನ್ನು ಅದೇ ಹೆಸರಿನಿಂದ ಕರೆಯದ ಅವಳ ದುರಭ್ಯಾಸದ ಫಲವಾಗಿ ಹೊಸ ಗೊಂದಲಗಳು ಉಂಟಾಗಿದ್ದವು. ಏಕೆಂದರೆ ಮನೋಸ್ಪರ್ಶ ಸರ್ಜನ್‌ಗಳಿಗೆ ಕಂಡ ಒಂದೇ ಒಂದು ಅಂಶವೆಂದರೆ ಗರ್ಭಕೋಶದಲ್ಲಿ ವಸ್ತುವೊಂದಿದ್ದು ಅದನ್ನು ಗರ್ಭಾಶಯವನ್ನು ಸ್ಥಾನ ಪಲ್ಲಟ ಮಾಡುವ ಸಲಕರಣೆಗಳಿಂದ ಸರಿಪಡಿಸಬಹುದು, ಎಂದು. ಇದರಿಂದ ಭ್ರಮನಿರಸನಗೊಂಡ ಫೆರ್ನಾಂಡ ಹೆಚ್ಚಿನ ವಿವರಗಳನ್ನು ಅವರಿಂದ ಪಡೆಯಲು ಪ್ರಯತ್ನಿಸಿದರೂ ಅವರಿಂದ ಅವಳ ಕಾಗದಗಳಿಗೆ ಮತ್ತೆ ಯಾವ ಉತ್ತರವೂ ಸಿಗಲಲಿಲ್ಲ. ಅವಳಿಗೆ ತಾನರಿಯದ ಸಂಗತಿಗಳಿಂದ ಸೋಲುಂಟಾದ ಭಾವನೆ ಬಂದು, ನಾಚಿಕೆಯನ್ನು ಪಕ್ಕಕ್ಕಿಟ್ಟು, ಗರ್ಭಾಶಯ ಪಲ್ಲಟಗೊಳಿಸುವುದು ಎಂದರೆ ಏನು ಎಂದು ಕೇಳಿದಳು. ಆದರೆ ಅವಳಿಗೆ ಆ ಫ್ರೆಂಚ್ ಡಾಕ್ಟರ್ ಮೂರು ತಿಂಗಳ ಹಿಂದೆ ತೊಲೆಗೆ ನೇಣು ಹಾಕಿಕೊಂಡನೆಂದೂ ಮತ್ತು ಊರಿನವರ ಇಷ್ಟಕ್ಕೆ ವಿರೋಧವಾಗಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಂಗಾತಿಯೊಬ್ಬ ಅವನನ್ನು ಹೂತು ಹಾಕಿದನೆಂದು ತಿಳಿಯಿತು. ಅನಂತರ ಅವಳು ತನ್ನ ಮಗ ಹೊಸೆ ಅರ್ಕಾದಿಯೋಗೆ ಎಲ್ಲ ವಿಷಯ ತಿಳಿಸಿದಳು. ಅವನು ರೋಮ್‌ನಿಂದ ಅದಕ್ಕೆ ಬೇಕಾದ ಸಲಕರಣೆಗಳನ್ನು ಮತ್ತು ಅದರೊಂದಿಗೆ ಅದನ್ನು ಉಪಯೋಗಿಸುವುದು ಹೇಗೆನ್ನುವ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕಳಿಸಿದ್ದ. ಅವಳು ಅದನ್ನು ಬಾಯಿಪಾಠ ಮಾಡಿಕೊಂಡು ಯಾರಿಗೂ ತನ್ನ ತೊಂದರೆ ತಿಳಿಯಬಾರದೆಂದು ಆ ಕಾಗದವನ್ನು ಬಚ್ಚಲೊಳಗೆ ಹಾಕಿದಳು. ಅದು ಅನಗತ್ಯವಾಗಿತ್ತು. ಏಕೆಂದರೆ ಮನೆಯಲ್ಲಿದ್ದವರು ಯಾರೂ ಅವಳ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಸಾಂತ ಸೋಫಿಯಾ ದೆಲಾ ಪಿಯದಾದ್ ಮುದಿತನದ ಏಕಾಂತದಲ್ಲಿ ಅಡುಗೆ ಮಾಡಿಕೊಂಡು, ಹೊಸೆ ಅರ್ಕಾದಿಯೋ ಸೆಗುಂದೋನ ಯೋಗಕ್ಷೇಮಕ್ಕೆ ಮುಡುಪಾಗಿ ಓಡಾಡಿಕೊಂಡಿದ್ದಳು. ಸುಂದರಿ ರೆಮಿದಿಯೋಸ್‌ಳ ಕೆಲವು ಲಕ್ಷಣಗಳನ್ನು ಹೊಂದಿದ್ದ ಉರ್ಸುಲಾ ಅಮರಾಂತ, ಸ್ಕೂಲಿಗೆ ಹೋಗುವಾಗ ಉರ್ಸುಲಾಳನ್ನು ರೇಗಿಸುವುದರಲ್ಲಿ ವ್ಯರ್ಥ ಮಾಡಿದ ಸಮಯವನ್ನು ಒಳ್ಳೆಯ ನಿರ್ಧಾರದಲ್ಲಿ ಮತ್ತು ಓದಿನಲ್ಲಿ ಮಗ್ನಳಾಗಿ, ಅವ್ರೇಲಿಯಾನೋ ಸೆಗುಂದೋಗೆ ಮೆಮೆ ಉಂಟುಮಾಡಿದ್ದ ಉತ್ಸಾಹವನ್ನು ಮರಳಿ ತಂದುಕೊಟ್ಟಳು. ಬಾಳೆ ತೋಟದ ಕಂಪನಿಯ ಪದ್ಧತಿಯಂತೆ ಅವಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬ್ರುಸೆಲ್ಸ್‌ಗೆ ಕಳಿಸುತ್ತೇನೆಂದು ಮಾತುಕೊಟ್ಟ. ಆ ಆಲೋಚನೆ ಸುರಿಮಳೆಯಲ್ಲಿ ನಾಶವಾದ ತನ್ನ ಭೂಮಿಯನ್ನು ಮತ್ತೆ ಸರಿಪಡಿಸುವ ಪ್ರಯತ್ನದಲ್ಲಿ ತೊಡಗುವಂತೆ ಮಾಡಿತು. ಅವನು ಅಮರಾಂತ ಉರ್ಸುಲಾಳಿಗಾಗಿ ಕೆಲವು ಸಲ ಮನೆಗೆ ಹೋದ. ಏಕೆಂದರೆ ಕಾಲ ಕಳೆದಂತೆ ಅವನು ಫೆರ್ನಾಂಡಳಿಗೆ ಅಪರಿಚಿತನಾದಂತಿದ್ದ ಮತ್ತು ಪುಟ್ಟ ಅವ್ರೇಲಿಯಾನೋ ಹದಿವಯಸ್ಸಿಗೆ ಕಾಲಿಡುತ್ತಿದ್ದಂತೆ ಅಂತರ್‌ಮುಖಿಯಾಗುತ್ತಿದ್ದ. ವಯಸ್ಸಾಗುತ್ತ ಹಾಗೆ ಫರ್ನಾಂಡಳ ಹೃದಯ ಮೃದುವಾಗುವುದೆಂದೂ ಹಾಗೂ ಊರಿನವರೊಡನೆ ಒಂದಾಗುವ ಅವನ ಮೂಲದ ಬಗ್ಗೆ ಯಾರೂ ಅನುಮಾನ ಪಡುವುದಿಲ್ಲವೆಂದು ಅವ್ರೇಲಿಯಾನೋ ಸೆಗುಂದೋಗೆ ನಂಬಿಕೆ ಇತ್ತು. ಆದರೆ ಅವ್ರೇಲಿಯಾನೋ ತನ್ನಷ್ಟಕ್ಕೆ ಏಕಾಂತದಲ್ಲಿರುವುದನ್ನು ಅಪೇಕ್ಷಿಸುವವನಂತೆ ಕಾಣುತ್ತಿದ್ದ ಮತ್ತು ಮನೆಯ ಹೊರಬಾಗಿಲಿಂದ ಆಚೆ ಊರಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಯಾವ ಆಸೆಯೂ ಇರಲಿಲ್ಲ. ಉರ್ಸುಲಾ ಮೆಲ್‌ಕಿಯಾದೆಸ್‌ನ ಜೊತೆ ರೂಮಿನ ಬಾಗಿಲನ್ನು ತೆಗೆಸಿದಾಗ, ಅದರ ಬಳಿ ಸುಳಿದಾಡುತ್ತ ಅರ್ಧ ತೆರೆದ ಬಾಗಿಲು ಮೂಲಕ ಒಳಗಡೆ ಇಣುಕುತ್ತಿದ್ದ ಮತ್ತು ಅವನು ಹೊಸೆ ಅರ್ಕಾದಿಯೋ ಬ್ಯುಂದಿಯಾ ಯಾವ ಕ್ಷಣದಲ್ಲಿ ಪರಸ್ಪರ ವಿಶ್ವಾಸ ಬೆಳೆಸಿಕೊಂಡು ಹತ್ತಿರದವನಾದ ಎಂದು ಯಾರಿಗೂ ಗೊತ್ತಿರಲಿಲ್ಲ. ಆ ಪುಟ್ಟ ಹುಡುಗ ಸ್ಟೇಷನ್‌ನಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ಮಾತಾಡುತ್ತಿದ್ದನ್ನು ಕೇಳಿದಾಗಲೇ ಅವ್ರೇಲಿಯಾನೋ ಸೆಗುಂದೋಗೆ ಅವರಿಬ್ಬರಲ್ಲೂ ಬೆಳೆದ ಸ್ನೇಹದ ಬಗ್ಗೆ ಬಹಳ ದಿನಗಳಾದ ಮೇಲೆ ತಿಳಿಯಿತು. ಟೇಬಲ್‌ನಲ್ಲಿ ಕುಳಿತಾಗ ಯಾರೋ ಒಬ್ಬರು ಊರು ಹಾಳಾಗುವುದಕ್ಕೆ ಪ್ರಾರಂಭವಾದದ್ದು ಬಾಳೆ ತೋಟದ ಕಂಪನಿ ಊರನ್ನು ಬಿಟ್ಟು ಹೋದಾಗ ಎಂದು ಹೇಳಿದಾಗ ಅವ್ರೇಲಿಯಾನೋ ಅದನ್ನು ಪ್ರಬುದ್ಧ ರೀತಿಯಲ್ಲಿ ಮತ್ತು ಬೆಳೆದವನ ದೃಷ್ಟಿಯಿಂದ ಅಲ್ಲಗಳೆದ. ಸಾಮಾನ್ಯವಾದ ಅಭಿಪ್ರಾಯಕ್ಕೆ ವಿರುದ್ಧವಾಗಿ ಬಾಳೆತೋಟದ ಕಂಪನಿಯವರು ಕಂಡುಹಿಡಿದು ಭ್ರಷ್ಟಗೊಳಿಸುವ ತನಕ ಮಕೋಂದೋ, ಸಮೃದ್ಧವಾದ ಪ್ರದೇಶವಾಗಿದ್ದು ಹಾಗೆಯೇ ಮುಂದುವರೆಯುತ್ತಿತ್ತೆಂದೂ ಮತ್ತು ಕೆಲಸಗಾರರಿಗೆ ಕೊಟ್ಟ ವಾಗ್ದಾನವನ್ನು ತಪ್ಪಿಸಿಕೊಳ್ಳಲು ಅದರ ಎಂಜಿನಿಯರುಗಳು ಬಿಡದ ಮಳೆಗಾಲವನ್ನು ನೆಪಮಾಡಿಕೊಂಡರೆಂದು ಹೇಳಿದ. ಅವನು ಅರ್ಥವತ್ತಾಗಿ ಮಾತಾಡುತ್ತಿದ್ದರಿಂದ ಫೆರ್ನಾಂಡಳಿಗೆ ಅವನು ತಿಳಿದವರಲ್ಲಿ ಜೀಸಸ್‌ನ ಅಪವಿತ್ರ ಅಣಕಿನಂತೆ ಕಾಣುತ್ತಿದ್ದ. ಅಲ್ಲದೆ ಅವನು ತೀರಾ ನಿಖರವಾಗಿ ಒಪ್ಪಿಗೆಯಾಗುವಂಥ ವಿವರಗಳ ಮೂಲಕ ಸೈನಿಕರು ಮೆಷಿನ್‌ಗನ್‌ನಿಂದ ಸ್ಟೇಷನ್‌ನಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿಗೆ ಕೆಲಸಗಾರರನ್ನು ಹೊಡೆದುರುಳಿಸಿದರು ಮತ್ತು ಇನ್ನೂರು ಬೋಗಿಗಳಿರುವ ಟ್ರೈನ್‌ನಲ್ಲಿ ಹೆಣಗಳನ್ನು ತುಂಬಿ ಸಾಗಿಸಿ ಸಮುದ್ರಕ್ಕೆ ಎಸೆದರು ಎಂದು ಹೇಳಿದ. ಸಾಮಾನ್ಯವಾಗಿ ಬಹಳ ಜನರು ಒಪ್ಪಿದ ಅಧಿಕೃತ ವರದಿಯಂತೆ ಏನೂ ಆಗಿಲ್ಲ ಎಂದು ತಿಳಿದಿದ್ದ ಫೆರ್ನಾಂಡಳಿಗೆ ಆ ವ್ಯಾಖ್ಯಾನದಿಂದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ, ಆದಿಮ ರೀತಿಯ ಆಲೋಚನೆಗಳನ್ನು ಬಳುವಳಿ ಪಡೆದಿರಬಹುದೆಂದು ಜಿಗುಪ್ಸೆ ಉಂಟಾಗಿ ಮತ್ತು ಅವನನ್ನು ಸುಮ್ಮನಿರುವಂತೆ ಹೇಳಿದಳು. ಆದರೆ ಅವ್ರೇಲಿಯಾನೋ ಸೆಗುಂದೋ ಅವನಲ್ಲಿ ತನ್ನ ಅವಳಿ ಸೋದರನನ್ನು ಕಂಡ. ವಾಸ್ತವವಾಗಿ, ಹೊಸೆ ಆರ್ಕೆಡೋನನ್ನು ಪ್ರತಿಯೊಬ್ಬರೂ ಹುಚ್ಚನೆಂದು ಪರಿಗಣಿಸಿದ್ದರೂ, ಇಡೀ ಮನೆಯಲ್ಲಿ ಅವನೊಬ್ಬನೇ ತಿಳುವಳಿಕೆಯಿಂದ ಇದ್ದವನು. ಅವನು ಪುಟ್ಟ ಅವ್ರೇಲಿಯಾನೋಗೆ ಓದು, ಬರಹ ಹೇಳಿಕೊಟ್ಟು, ಚರ್ಮದ ಹಾಳೆಯ ಮೇಲಿನ ಲೇಖನಗಳನ್ನು ಅಭ್ಯಾಸ ಮಾಡುವುದು ಹೇಗೆಂದು ತಿಳಿಸಿದ ಮತ್ತು ಅವನು ಬಾಳೆ ತೋಟದ ಕಂಪನಿ ಮಕೋಂದೋಗೆ ಯಾವ ವಿಧವಾದ ಸಂಬಂಧ ಹೊಂದಿತ್ತು ಎನ್ನುವುದರಲ್ಲಿ ತನ್ನ ವೈಯುಕ್ತಿಕ ನಿಲುವನ್ನು ಬೇರೂರುವಂತೆ ಮಾಡಿದ. ಅದರಂತೆಯೇ ವರ್ಷಗಳ ನಂತರ ಪ್ರಪಂಚ ಭಾಗವಾದಾಗ ಅವ್ರೇಲಿಯಾನೋ ಅವನು ಹೇಳುತ್ತಿರುವುದು ಕಲ್ಪಿತ ವಿಷಯಗಳೆಂದು ಯಾರಾದರೂ ತಿಳಿದುಕೊಳ್ಳುತ್ತಿದ್ದರು. ಏಕೆಂದರೆ ಅದು ಇತಿಹಾಸಕಾರರು ತೆಗೆದುಕೊಂಡಿದ್ದ ಸುಳ್ಳುಸೃಷ್ಟಿಗೆ ಮತ್ತು ಸ್ಕೂಲಿನ ಪಠ್ಯ ಪುಸ್ತಕಗಳಲ್ಲಿ ನಮೂದಿಸಿರುವುದಕ್ಕೆ ಸಂಪೂರ್ಣ ವಿರೋಧವಾಗಿತ್ತು. ಒಣಗಾಳಿ, ಧೂಳು ಅಥವಾ ಧಗೆ ಎಂದೂ ಪ್ರವೇಶಿಸಿರದ ಪ್ರತ್ಯೇಕವಾಗಿದ್ದ ರೂಮಿನಲ್ಲಿ, ಕಾಗೆಯ ರೆಕ್ಕೆಯ ಹಾಗಿದ್ದ ಹ್ಯಾಟ್ ಹಾಕಿಕೊಂಡು, ಕಿಟಕಿಗೆ ಬೆನ್ನು ಮಾಡಿಕೊಂಡು, ತಲೆಮಾರುಗಳ ಹಿಂದಿನ ಕಾಲದ ಬಗ್ಗೆ, ಅನೇಕ ವರ್ಷಗಳ ಹಿಂದಿನ, ಅವರು ಹುಟ್ಟುವ ಮೊದಲಿನ ಪ್ರಪಂಚದ ಬಗ್ಗೆ ಮಾತನಾಡುತ್ತಿದ್ದವನನ್ನು ಕಂಡರು. ಇಬ್ಬರೂ ಒಂದೇ ಬಾರಿಗೆ ಯಾವಾಗಲೂ ಮಾರ್ಚ್ ತಿಂಗಳೇ ಇರುತ್ತದೆ ಮತ್ತು ಯಾವಾಗಲೂ ಸೋಮವಾರವೇ ಎಂದು ಹೇಳಿದಳು. ಆಗ ಅವನಿಗೆ ಹೊಸೆ ಅರ್ಕಾದಿಯೋ ಸೆಗುಂದೋ ಮನೆಯವರು ತಿಳಿದಂತೆ ತಲೆ ಕೆಟ್ಟವನಲ್ಲವೆಂದೂ, ಕಾಲ ಕೂಡಾ ಮುಗ್ಗರಿಸಿತೆಂದು, ಗ್ರಹಿಸುವ ಪರಿಜ್ಞಾನವಿರುವುದು ಅವನೊಬ್ಬನಿಗೆ ಮಾತ್ರ ಎಂದು ಗೊತ್ತಾಯಿತು ಮತ್ತು ಕಾಲ ಅದಕ್ಕಾಗಿಯೇ ಚೂರುಗಳಾಗುವುದಲ್ಲದೆ ನಿರಂತರವಾಗಿರುವ ಭಾಗವನ್ನು ರೂಮಿನಲ್ಲಿ ಬಿಟ್ಟು ಹೋಗಿತ್ತು. ಅಲ್ಲದೆ ಹೊಸೆ ಅರ್ಕಾದಿಯೋ ಸೆಗುಂದೋ ಚರ್ಮದ ಹಾಳೆಯ ಮೇಲಿನ ಲೇಖನಗಳನ್ನು ಪರಿಗ್ರಹಿಸುವುದನ್ನು ರೂಢಿಸಿಕೊಂಡಿದ್ದ. ಅವು ನಲವತ್ತೇಳರಿಂದ ಐವತ್ಮೂರು ಅಕ್ಷರಗಳನ್ನು ಹೊಂದಿದ್ದು, ಪ್ರತ್ಯೇಕಿಸಿದಾಗ ಗೀಚಿದಂತೆ, ಗೀರಿದಂತೆ ಕಾಣುವುದಲ್ಲದೆ ಮೆಲ್‌ಕಿಯಾದೆಸ್‌ನ ಮುದ್ದಾದ ಕೈಬರಹದಲ್ಲಿ, ಹಗ್ಗದ ಮೇಲೆ ಒಣಗಲು ಹಾಕಿದ ಬಟ್ಟೆಗಳಂತೆ ಕಾಣುತ್ತಿದ್ದವು. ಅವ್ರೇಲಿಯಾನೋಗೆ ಅದರಂಥದನ್ನು ವಿಶ್ವಕೋಶದಲ್ಲಿ ನೋಡಿದ್ದು ನೆನಪಾಯಿತು. ಅದಕ್ಕಾಗಿ ಅವನು ಅದನ್ನು ಹೊಸೆ ಅರ್ಕಾದಿಯೋನ ಹತ್ತಿರ ಇದ್ದದ್ದಕ್ಕೆ ಹೋಲಿಸಿ ನೋಡುವುದಕ್ಕೆ ರೂಮಿಗೆ ತೆಗೆದುಕೊಂಡು ಬಂದ. ಅವೆರಡೂ ಒಂದೇ ಆಗಿದ್ದು ವಿಶೇಷವಾಗಿತ್ತು.
ಲಾಟರಿ ನಡೆಸುತ್ತಿದ್ದ ಕಾಲದಲ್ಲಿ ಅವ್ರೇಲಿಯಾನೋ ಸೆಗುಂದೋ ಹೊಟ್ಟೆಯಲ್ಲಿ ಗಂಟಾಗಿ ಅಳು ತಡೆಹಿಡಿಯುವುದಕ್ಕೇನೋ ಎನ್ನುವಂತೆ ಎಚ್ಚರಗೊಳ್ಳುತ್ತಿದ್ದ. ಪೆತ್ರಾ ಕೊತೆಸ್ ಅದನ್ನು ಕೆಟ್ಟ ಗಳಿಗೆಯಿಂದ ಉಂಟಾಗುತ್ತಿದ್ದ ಅನೇಕ ಏರುಪೇರುಗಳಲ್ಲಿ ಒಂದು ಎಂದು ತಿಳಿದುಕೊಂಡಳು. ಒಂದು ವರ್ಷಕಾಲ ಪ್ರತಿ ದಿನ ಅವಳು ಅವನ ಹೊಟ್ಟೆಯ ಮೇಲೆ ಜೇನುತುಪ್ಪ ಹಚ್ಚುತ್ತಿದ್ದಳು ಮತ್ತು ಕಷಾಯ ಕೊಡುತ್ತಿದ್ದಳು. ಉಸಿರಾಡುವುದಕ್ಕೂ ಕಷ್ಟವಾಗುವಷ್ಟು ಗಂಟು ದೊಡ್ಡದಾದಾಗ ಅವ್ರೇಲಿಯಾನೋ ಸೆಗುಂದೋ ಪಿಲರ್ ಟೆರ್‍ನೆರಾಳಿಗೆ ನಾಟಿ ಔಷಧಿಯಿಂದ ಗುಣಪಡಿಸುವುದು ಗೊತ್ತಿದೆಯೋ ಏನೋ ಎಂದು ಅವಳ ಹತ್ತಿರ ಹೋದ. ನೂರು ವರ್ಷ ತಲುಪಿದ್ದ ವೇಶ್ಯಾಗೃಹ ನಡೆಸುತ್ತಿದ್ದ ಅವಳಿಗೆ ವಿಚಿತ್ರ ಮೂಢ ನಂಬಿಕೆಗಳಲ್ಲಿ ವಿಶ್ವಾಸವಿರಲಿಲ್ಲ. ಆದ್ದರಿಂದ ಅವಳು ಕಾರ್ಡುಗಳ ಮೊರೆ ಹೊಕ್ಕಳು. ಅವಳಿಗೆ ವಜ್ರಗಳ ಕ್ವೀನ್ ಸ್ಪೇಡಿನ ಗಂಟಲಲ್ಲಿ ಗಾಯವಾಗಿದ್ದು ಕಂಡಿತು. ಆದರಿಂದ ಫೆರ್ನಾಂಡ, ಅಪನಂಬಿಕೆಗೊಂಡ ಅವನ ಚಿತ್ರಕ್ಕೆ ಪಿನ್ನುಗಳಿಂದ ಚುಚ್ಚಿ, ಅವನು ಮನೆಗೆ ವಾಪಸು ಬರುವಂತೆ ಮಾಡಲು ಪ್ರಯತ್ನಿಸುತ್ತಿದ್ದಾಳೆಂದು ತೀರ್ಮಾನಿಸಿದಳು. ಆದರೆ ಅವಳಿಗೆ ಕಪ್ಪು ಕಲೆಯ ಬಗ್ಗೆ ಅರ್ಧಂಬರ್ಧ ತಿಳುವಳಿಕೆ ಇರುವುದರಿಂದ ಅವನ ಹೊಟ್ಟೆಯಲ್ಲಿ ಗಡ್ಡೆಯಾಗುವಂತೆ ಮಾಡಿದ್ದಾಳೆಂದು ತಿಳಿಸಿದಳು. ಮದುವೆಯ ಫೋಟೋಗಳಲ್ಲದೆ ಬೇರೆ ಯಾವುದೂ ಇರದಿದ್ದರಿಂದ, ಅವ್ರೇಲಿಯಾನೋ ಸೆಗುಂದೋ ತನ್ನ ಹೆಂಡತಿ ಗಮನಿಸದಿರುವಾಗ ಮನೆಯಲ್ಲೆಲ್ಲ ಹುಡುಕಿದ. ಕೊನೆಗೆ ಅವನಿಗೆ ಉಡುಗೆ ಸಲಕರಣೆಯ ಟೇಬಲ್ಲಿನಲ್ಲಿ ಕೆಳಗಡೆ, ಅರ್ಧ ಡಜನ್ ಗರ್ಭಾಶಯ ಪಲ್ಲಟಗೊಳಿಸುವ ಉಪಕರಣಗಳ ಬಾಕ್ಸ್‌ಗಳು ಸಿಕ್ಕವು. ಕೆಂಪನೆಯ ರಿಂಗುಗಳು ಮಾಟದ ವಸ್ತುಗಳು ಎಂದು ತಿಳಿದು ಪಿಲರ್ ಟೆರ್‍ನೆರಾ ಅವುಗಳನ್ನು ನೋಡಲೆಂದು ಜೇಬಿನಲ್ಲಿ ಇಟ್ಟುಕೊಂಡ. ಅವಳಿಗೆ ಅವುಗಳ ಗುಣವನ್ನು ಪತ್ತೆ ಹಚ್ಚಲಾಗಲಿಲ್ಲ. ಆದರೆ ತೀರ ಅನುಮಾನ ಬಂದು ಹೇಗಾದರೂ ಸರಿ ಎಂದು ಅಂಗಳದಲ್ಲಿಟ್ಟು ಸುಟ್ಟು ಹಾಕಿದಳು. ಫೆರ್ನಾಂಡ ಪ್ರಯೋಗಿಸಿದ್ದ ಮಾಟದಿಂದ ಪಾರಾಗಲು, ಕಾವಿಗೆ ಕುಳಿತುಕೊಳ್ಳಲು ಸಿದ್ಧವಿರುವ ಕೋಳಿಯೊಂದನ್ನು ತೋಯಿಸಿಟ್ಟು, ಸಜೀವವಾಗಿ ಅದನ್ನು ಬಾದಾಮಿ ಮರದ ಬುಡದಲ್ಲಿ ಹೂಳುವಂತೆ ಹೇಳಿದಳು. ಅವನು ಅದನ್ನು ನಂಬಿಕೆಯಿಂದ ಕೈಗೊಂಡು ಒಣಗಿದ ಎಲೆಗಳಿಂದ ಅದನ್ನು ಮುಚ್ಚುತ್ತಿದ್ದ ಹಾಗೆಯೇ ತಾನು ಉತ್ತಮವಾಗಿ ಉಸಿರಾಡುತ್ತಿದ್ದೇನೆ ಎಂದು ಭಾವಿಸಿದ. ಫೆರ್ನಾಂಡ ಮಾತ್ರ ಅವೆಲ್ಲ ಕಾಣೆಯಾದದ್ದು ಕಾಣದ ಡಾಕ್ಟರ್‌ಗಳು ಮುಯ್ಯಿ ತೀರಿಸಿಕೊಂಡಿದ್ದರಿಂದ ಎಂದು ತಿಳಿದುಕೊಂಡಳು ಮತ್ತು ತನ್ನ ಮಗ ಕಳಿಸಿಕೊಟ್ಟ ಅಂಥವುಗಳನ್ನು ಒಳ ಉಡುಪಿನಲ್ಲಿ ಪಾಕೆಟ್ ಹೊಲಿದು ಇಟ್ಟುಕೊಂಡಳು.
ಕೋಳಿಯನ್ನು ಹೂಳಿ ಆರು ತಿಂಗಳ ನಂತರ ಕೆಮ್ಮು ಹೆಚ್ಚಾಗಿ ಮಧ್ಯರಾತ್ರಿಯಲ್ಲಿ ಅವ್ರೇಲಿಯಾನೋ ಸೆಗುಂದೋ ಎದ್ದು ಕುಳಿತ. ಅವನಿಗೆ ಹೊಟ್ಟೆಯಲ್ಲಿ ಹಿಂಡುತ್ತಿರುವಂತೆ ಭಾಸವಾಗುತ್ತಿತ್ತು. ಆಗ ಅವನಿಗೆ ತಾನು ಗರ್ಭಾಶಯ ಪಲ್ಲಟಗೊಳಿಸುವ ವಸ್ತುಗಳನ್ನು ಹಾಳುಮಾಡಿದ್ದಕ್ಕೆ ಮತ್ತು ಕಾವು ಪಡೆಯಲು ತಯಾರಾಗಿದ್ದ ಕೋಳಿಗಳನ್ನು ಕತ್ತರಿಸಿದ್ದಕ್ಕೆ ಅರಿವಾದ ಒಂದೇ ಒಂದು ಸತ್ಯವಾದ ಸಂಗತಿಯೆಂದರೆ ತಾನು ಸಾಯುತ್ತಿದ್ದೇ, ಎಂದು. ಅವನು ಯಾರಿಗೂ ಹೇಳಲಿಲ್ಲ. ಅಮರಾಂತ ಉರ್ಸುಲಾಳನ್ನು ಬ್ರುಸೆಲ್ಸ್‌ಗೆ ಕಳಿಸದೇ ಸಾಯುತ್ತಿದ್ದೇನೆಂಬ ಸಂಕಟದಿಂದ ಅವನು ಹಿಂದೆಂದೂ ಮಾಡದಷ್ಟು ಕೆಲಸ ಮಾಡಿದ. ವಾರಕ್ಕೆ ಒಂದರ ಬದಲಾಗಿ ಮೂರು ಲಾಟರಿಗಳನ್ನು ಮಾಡಿದ. ಲಾಟರಿ ಟಿಕೆಟ್ಟುಗಳನ್ನು ಸಾಯುತ್ತಿರುವ ಮನುಷ್ಯನಿಗೆ ಮಾತ್ರ ಅರ್ಥವಾಗುವ ಆತಂಕದಿಂದ ಮಾರುವುದಕ್ಕೆ ಬೆಳಿಗ್ಗೆ ಬೇಗನೆ ಊರೊಳಗೆ ಹಾಗೂ ದೂರದಲ್ಲಿರುವ ಮತ್ತು ಬಡವರು ವಾಸಿಸುವ ಕಡೆಯಲ್ಲಿ ಕೂಡ ಸುತ್ತಾಡುತ್ತಿದ್ದ. ಅವನು, “ಇದು ದೈವ ನಿಮಾಯಕ. ಅದನ್ನು ಸುಮ್ಮನೆ ಬಿಟ್ಟುಬಿಡಬೇಡಿ. ಯಾಕಂದ್ರೆ ಅದು ನೂರು ವರ್ಷಕ್ಕೆ ಒಂದ್ಸಲ ಮಾತ್ರ ಬರೋದು” ಎನ್ನುತ್ತಿದ್ದ. ಅವನು ಗೆಲುವಾಗಿರಲು, ಖುಷಿಯಾಗಿರಲು ಮತ್ತು ವಾಚಾಳಿಯಾಗಿರಲು ಪ್ರಯತ್ನಿಸುತ್ತಿದ್ದ. ಆದರೆ ಅವನ ಒಳಗಿನ ಒದ್ದಾಟವನ್ನು ತಿಳಿಯಲು ಅವನ ಮುಖದ ಮೇಲಿದ್ದ ಬೆವರುಗಳನ್ನು ನೋಡಿದರೆ ಸಾಕಾಗಿತ್ತು. ಕೆಲವೊಮ್ಮೆ ಅವನು ಯಾರೂ ಇರದ ಜಾಗಕ್ಕೆ ತನ್ನನ್ನು ಸೀಳಿ ಬಗೆಯುತ್ತಿರುವುದರಿಂದ ವಿಶ್ರಾಂತಿ ಪಡೆಯಲು ಹೋಗುತ್ತಿದ್ದ. ಅವನು ಮಧ್ಯರಾತ್ರಿಯಲ್ಲಿ ಕೆಂಪು ದೀಪ ಪ್ರದೇಶಕ್ಕೆ ಹೋಗುತ್ತಿದ್ದ. ಅಲ್ಲಿನ ಒಂಟಿ ಹೆಣ್ಣುಗಳಿಗೆ, “ನೋಡಿ ಈ ನಂಬರ್ರು ನಾಲ್ಕು ತಿಂಗಳಿಂದ ಬಂದಿಲ್ಲ” ಎಂದು ಟಿಕೇಟುಗಳನ್ನು ತೋರಿಸಿ ಹೇಳುತ್ತಿದ್ದ. ಅಲ್ಲದೆ, “ಅದನ್ನು ಹಾಗೇ ಹೋಗಕ್ಕೆ ಬಿಡ್ಬೇಡಿ. ನೀವು ಅಂದ್ಕೊಂಡಿರೋದಕ್ಕಿಂತ ಜೀವನ ಕ್ಷಣಿಕ” ಎನ್ನುತ್ತಿದ್ದ. ಕೊನೆಗೆ ಅವರು ಅವನಿಗೆ ಗೌರವ ಕೊಡುವುದನ್ನು ಬಿಟ್ಟರು ಮತ್ತು ಅವನ ಬಗ್ಗೆ ತಮಾಷೆ ಮಾಡಿದರು. ಅವನ ಕೊನೆಯ ತಿಂಗಳುಗಳಲ್ಲಿ ಅವನನ್ನು ‘ಮಿಸ್ಟರ್\’ ಅವ್ರೇಲಿಯಾನೋ ಎಂದು ಮೊದಲು ಕರೆಯುತ್ತಿದ್ದಕ್ಕೆ ಬದಲಾಗಿ “ಮಿಸ್ಟರ್ ದೈವ ನಿಯಾಮಕ” ಎಂದು ಅವನೆದುರಿಗೇ ಹೇಳುತ್ತಿದ್ದರು. ಅವನ ಧ್ವನಿ ಉಡುಗುತ್ತಿತ್ತು ಮತ್ತು ಕೊನೆಗೆ ಅದು ನಾಯಿಯ ಗೊಗ್ಗರ ಧ್ವನಿಯಂತಾಯಿತು. ಆದರೂ ಪೆತ್ರಾ ಕೊತೆಸ್‌ಳ ಅಂಗಳಕ್ಕೆ ಜನರು ಕಡಿಮೆಯಾಗದ ಹಾಗೆ ಮಾಡಲು ಇನ್ನೂ ಸಾಕಷ್ಟು ಉತ್ಸಾಹವಿತ್ತು. ಅವನು ಧ್ವನಿ ಕಳೆದುಕೊಂಡ ಮೇಲೆ ಸ್ವಲ್ಪ ಕಾಲದಲ್ಲಿಯೇ ತನಗೆ ತಡೆದುಕೊಳ್ಳಲಾಗದಷ್ಟು ನೋವು ಉಂಟಾಗುವುದೆಂದು ಮತ್ತು ಹಂದಿಗಳ, ಮೇಕೆಗಳ ಲಾಟರಿಯಿಂದ ಮಗಳು ಬ್ರುಸೆಲ್ಸ್‌ಗೆ ಹೋಗುವುದು ಸಾಧ್ಯವಾಗುವುದಿಲ್ಲವೆಂದು ಅರಿವಾಯಿತು. ಆದ್ದರಿಂದ ಅವನು ಸುರಿಮಳೆಯಿಂದ ನಾಶವಾದ ಭೂಮಿಯ ಲಾಟರಿಯನ್ನು ವ್ಯವಸ್ಥೆ ಮಾಡಬೇಕೆಂಬ ಅದ್ಭುತವಾದ ಯೋಚನೆ ಮಾಡಿದ ಮತ್ತು ದುಡ್ಡಿರುವ ಮನುಷ್ಯನಿಗೆ ಅದನ್ನು ಪಡೆಯುವುದು ತೀರಾ ಸುಲಭ ಎಂದು ಭಾವಿಸಿದ. ಅದು ಎಷ್ಟು ಅದ್ದೂರಿಯಾದ ಕಾರ್ಯವಾಗಿತ್ತೆಂದರೆ ಸ್ವತಃ ಮೇಯರ್ ಅದನ್ನು ಹೇಳಿಕೆಯಿಂದ ಪ್ರಚುರಪಡಿಸಿ ಸಹಾಯ ಮಾಡಿದ ಮತ್ತು ನೂರು ಪೆಸೋಗಳ ಟಿಕೇಟುಗಳನ್ನು ಮಾರುವುದಕ್ಕೆ ಸಂಘಗಳನ್ನು ರಚಿಸಲಾಯಿತು. ಟಿಕೇಟುಗಳೆಲ್ಲಾ ವಾರದೊಳಗೆ ಖರ್ಚಾಯಿತು. ಲಾಟರಿ ಇತ್ಯರ್ಥವಾದ ದಿನ ಗೆದ್ದವರು ಬಾಳ ತೋಟದ ಕಂಪನಿಯವರಿಗೆ ಹೋಲಿಸಬಹುದಾದಂಥ ಅದ್ದೂರಿಯ ಸಮಾರಂಭವನ್ನು ಏರ್ಪಡಿಸಿದರು ಮತ್ತು ಅವ್ರೇಲಿಯಾನೋ ಕೊನೆಯ ಬಾರಿಗೆ ಅವ್ರೇಲಿಯಾನೋ ಸೆಗುಂದೋ ಮರೆತುಹೋಗಿದ್ದ ಪುರುಷ ಫ್ರಾನ್ಸಿಸ್ಕೋನ ಹಾಡುಗಳನ್ನು ಅಕಾರ್ಡಿನ್‌ನಲ್ಲಿ ನುಡಿಸಿದ. ಆದರೆ ಅವನಿಗೆ ಅವುಗಳನ್ನು ಹಾಡಲಾಗಲಿಲ್ಲ.
ಎರಡು ತಿಂಗಳಾದ ಮೇಲೆ ಅಮರಾಂತ ಉರ್ಸುಲಾ ಬ್ರುಸೆಲ್ಸ್‌ಗೆ ಹೋದಳು. ಅವ್ರೇಲಿಯಾನೋ ಸೆಗುಂದೋ ಅವಳಿಗೆ ವಿಶೇಷವಾದ ಲಾಟರಿಯಿಂದ ಬಂದ ದುಡ್ಡನ್ನಲ್ಲದೆ ಹಿಂದಿನ ತಿಂಗಳುಗಳಲ್ಲಿ ಉಳಿಸಲು ಸಾಧ್ಯವಾದದ್ದನ್ನು, ಪಿಯಾನೋದಂಥದನ್ನು ಹಾಗೂ ಅದಕ್ಕೆ ಮೂಲವಾದ್ದುದನ್ನು ಮಾರಿದ್ದರಿಂದ ಬಂದ ಅಲ್ಪಸ್ವಲ್ಪವನ್ನು, ರಿಪೇರಿಯಾಗದಂಥ ವಸ್ತುಗಳನ್ನು ಮಾರಿದ್ದರಿಂದ ಗಳಿಸಿದ್ದನ್ನು ಕೂಡ ಕೊಟ್ಟ. ಅವನ ಲೆಕ್ಕಾಚಾರದ ಪ್ರಕಾರ ಅದು ಅವಳ ವಿದ್ಯಾಭ್ಯಾಸಕ್ಕೆ ಸಾಕಾಗಿತ್ತು ಮತ್ತು ವಾಪಸು ಬರುವುದಕ್ಕೆ ಮಾತ್ರ ಕಡಿಮೆ ಇತ್ತು. ಕೊನೆಯ ಗಳಿಗೆಯ ತನಕ ಫೆರ್ನಾಂಡೋ ಅಲ್ಲಿ ಹೋಗುವುದನ್ನು ವಿರೋಧಿಸಿದಳು. ಏಕೆಂದರೆ ಬ್ರುಸೆಲ್ಸ್ ವಿನಾಶಕಾರಿ ಪ್ಯಾರಿಸ್‌ಗೆ ಹತ್ತಿರವಿದೆ ಎನ್ನುವ ಗಾಬರಿಯಿಂದ. ಆದರೆ ವಿದ್ಯಾಭ್ಯಾಸ ಮುಗಿಯುವ ತನಕ ಕ್ಯಾಥೊಲಿಕ್ ಹುಡುಗಿಯರ ವಸತಿಗೃಹದಲ್ಲಿರಲು ಅಮರಾಂತ ಉರ್ಸುಲಾ ಒಪ್ಪಿಕೊಂಡಿದ್ದಕ್ಕಾಗಿ ಫಾದರ್ ಏಂಜಲ್ ಅದನ್ನು ನಡೆಸುತ್ತಿದ್ದ ನನ್‌ಗಳಿಗೆ ಕಾಗದ ಕೊಟ್ಟ ನಂತರ ಅವಳು ಶಾಂತಳಾದಳು. ಅಷ್ಟೇ ಅಲ್ಲದೆ, ಆ ಪಾದ್ರಿ ಅವಳನ್ನು ಟಾಲೆಡೋಗೆ ಹೋಗುವ ಫ್ರಾನ್ಸಿಸ್ಕಾದ ನನ್‌ಗಳ ಸಂಗಡ ಪ್ರಯಾಣ ಮಾಡುವುದಕ್ಕೆ ಏರ್ಪಾಡು ಮಾಡಿದರು. ಅಲ್ಲಿಂದ ಬೆಲ್ಜಿಯಮ್‌ಗೆ ಹೋಗಲು ವಿಶ್ವಾಸವಿರುವ ಜನ ಸಿಗುತ್ತಾರೆ ಎಂದು ಭಾವಿಸಿದರು. ಈ ರೀತಿಯ ಹೊಂದಾಣಿಕೆಗಾಗಿ ನಡೆಸಿದ ಪತ್ರ ವ್ಯವಹಾರದಿಂದ ಮುಂದೆ ಹೋದದಕ್ಕೆ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೊತೆಸ್‌ಳ ಸಹಾಯದಿಂದ ಅವಳ ಗಂಟು ಮೂಟೆಯನ್ನು ಸಿದ್ಧಗೊಳಿಸಿದ. ಅವರು ಆ ರಾತ್ರಿ ಫೆರ್ನಾಂಡ ಮದುವಣಗಿತ್ತಿಯಾದಾಗಿನ ಟ್ರಂಕುಗಳಲ್ಲೊಂದನ್ನು ಭರ್ತಿ ಮಾಡುವ ಹೊತ್ತಿಗೆ ಪ್ರತಿಯೊಂದೂ ಎಷ್ಟು ವ್ಯವಸ್ಥಿತವಾಗಿತ್ತೆಂದರೆ ಅಮರಾಂತ ಉರ್ಸುಲಾಗೆ ಅಟ್ಲಾಂಟಿಕ್ ದಾಟುವಾಗ ಯಾವ ಬಟ್ಟೆ ಮತ್ತು ಯಾವ ಚಪ್ಪಲಿ ಹಾಕಿಕೊಳ್ಳಬೇಕೆನ್ನುವುದು ಮತ್ತು ಇಳಿಯುವ ಸಮಯದಲ್ಲಿ ತಾಮ್ರದ ಗುಂಡಿಗಳಿರುವ ನೀಲಿ ಉಡುಪುಗಳನ್ನು ಮತ್ತು ಕ್ಯಾನ್‌ವಾಸ್ ಶೂಗಳನ್ನು ಹಾಕಿಕೊಂಡಿರಬೇಕೆನ್ನುವುದು ಬಾಯಿಪಾಠವಾಗಿತ್ತು. ಅವಳು ಹಲಗೆಹಾಸಿನ ಮೇಲೆ ನಡೆಯುವಾಗ ನೀರಿಗೆ ಬೀಳದ ಹಾಗೆ ಹೇಗೆ ನಡೆಯಬೇಕೆಂದು ಮತ್ತು ತಿನ್ನುವುದಕ್ಕಲ್ಲದೆ ಬೇರೆ ಯಾವ ಸಮಯದಲ್ಲೂ ನನ್‌ಗಳನ್ನು ಬಿಟ್ಟಿರಕೂಡದೆಂದು ಹಾಗೂ ಸಮುದ್ರ ತೀರದಲ್ಲಿ ಇರುವಾಗ ಗಂಡಸಾಗಲಿ, ಹೆಂಗಸಾಗಲಿ ಯಾರ ಪ್ರಶ್ನೆಗಳಿಗೂ ಉತ್ತರ ಕೊಡಬಾರದೆಂದು ತಿಳಿದಿತ್ತು. ಅವಳು ಸಮುದ್ರ ಪ್ರಯಾಣದಲ್ಲಿ ಉಂಟಾಗುವ ಪಿತ್ತಕ್ಕೆ ಔಷಧಿಯನ್ನು ತೆಗೆದುಕೊಳ್ಳುವುದಕ್ಕಾಗಿ ಒಂದು ಬಾಟಲನ್ನು ಮತ್ತು ಸಮುದ್ರದಲ್ಲಿ ಉಬ್ಬರಗಳ ಪ್ರತಿರೋಧಕ್ಕಾಗಿ ಫಾದರ್ ತಮ್ಮ ಕೈಯಲ್ಲೇ ಬರೆದಿದ್ದ ಆರು ಪ್ರಾರ್ಥನೆಗಳಿರುವ ನೋಟ್‌ಬುಕ್‌ನ್ನು ಇಟ್ಟುಕೊಂಡಿದ್ದಳು. ದುಡ್ಡನ್ನು ಇಟ್ಟುಕೊಳ್ಳಲು ಫೆರ್ನಾಂಡ ಅವಳಿಗೆ ಕ್ಯಾನ್‌ವಾಸಿನ ಬೆಲ್ಟ್ ಮಾಡಿಕೊಟ್ಟಳು ಮತ್ತು ಅದನ್ನು ಅವಳು ಮಲಗಿದಾಗಲೂ ತೆಗೆಯುವಂತಿರಲಿಲ್ಲ. ಅವಳಿಗೆ ಉಪ್ಪು ನೀರಿಂದ ತೊಳೆದ ಮತ್ತು ಅಂಟು ಜಾಢ್ಯ ಬರದಂತೆ ಆಲ್ಕೋಹಾಲ್ ಉಪಯೋಗಿಸಿದ ಉಚ್ಚೆ ಪಾತ್ರೆಯನ್ನು ಕೊಡಲು ಪ್ರಯತ್ನಿಸಿದಳು. ಆದರೆ ಸಹಪಾಠಿಗಳು ತಮಾಷೆ ಮಾಡುತ್ತಾರೆಂದು ಅಮರಾಂತ ಉರ್ಸುಲಾ ಅದನ್ನು ನಿರಾಕರಿಸಿದಳು. ಕೆಲವು ತಿಂಗಳಾದ ಮೇಲೆ ಸಾಯುವ ಸಮಯದಲ್ಲಿ ಅವಳು ಫೆರ್ನಾಂಡಳ ಅಂತಿಮ ಉಪದೇಶವನ್ನು ಕೇಳಿಸಿಕೊಳ್ಳಲು, ಸೆಕೆಂಡ್ ಕ್ಲಾಸ್ ಬೋಗಿಯ ಕಿಟಕಿಯ ಗಾಜನ್ನು ತೆಗೆಯುವುದಕ್ಕೆ ಪ್ರಯತ್ನಿಸುತ್ತ ವಿಫಲಳಾದದ್ದನ್ನು ಅವ್ರೇಲಿಯಾನೋ ಸೆಗುಂದೋ ನೆನಪಿಸಿಕೊಂಡ. ಅವಳು ನೇರಳೆ ಬಣ್ಣದ ಸಿಲ್ಕ್ ಡ್ರೆಸ್ ಹಾಕಿಕೊಂಡು ಭುಜಕ್ಕೆ ಕೃತಕ ಕುಪ್ಪಸವನ್ನು ಪಿನ್ ಮಾಡಿಕೊಂಡಿದ್ದಳು. ಅವಳು ಹಾಕಿಕೊಂಡ ಕ್ಯಾನ್‌ವಾಸ್ ಶೂಗೆ ಬಕಲ್‌ಗಳಿದ್ದು ಹಿಮ್ಮಡಿ ಕೆಳಗಿತ್ತು ಮತ್ತು ತೊಡೆಯ ತನಕ ಇದ್ದ ಸ್ಟಾಕಿಂಗ್ಸ್‌ನ್ನು ಹಿಗ್ಗುವ ಪಟ್ಟಿಗಳು ಹಿಡಿದಿದ್ದವು. ಅವಳ ದೇಹ ನೀಳವಾಗಿತ್ತು. ಸಡಿಲವಾದ ಉದ್ದ ಕೂದಲಿದ್ದು ಉರ್ಸುಲಾಗೆ ಅವಳ ವಯಸ್ಸಿನಲ್ಲಿ ಇದ್ದ ಹಾಗೆ ಹೊಳುಪು ಕಣ್ಣುಗಳಿದ್ದವು. ಅಲ್ಲದೆ ಅವಳು ಅಳದೇ, ನಸುನಗದೆ, ವಿದಾಯ ಹೇಳಿದ್ದರಿಂದ ಅವಳ ಹಾಗೆಯೇ ಶಕ್ತಿಯುತ ಸ್ವಭಾವ ಕಾಣುತ್ತಿತ್ತು. ಬೋಗಿಯ ಜೊತೆ ಮುಗ್ಗರಿಸದ ಹಾಗೆ, ಫೆರ್ನಾಂಡಳ ಕೈ ಹಿಡಿದು ಅವಳೂ ಮುಗ್ಗರಿಸಿದ ಹಾಗೆ ಓಡುತ್ತಾ, ಅವಳು ಬೆರಳ ತುದಿಯಿಂದ ಮುತ್ತೊಂದನ್ನು ಬೀಸಿದಾಗ, ಅವ್ರೇಲಿಯಾನೋ ಸೆಗುಂದೋಗೆ ಕೈಬೀಸಲು ಸಮಯವಿರಲಿಲ್ಲ. ದಂಪತಿಗಳು ಮದುವೆಯಾದ ಮೇಲೆ ಮೊದಲ ಬಾರಿಗೆ ಕೈಯೊಳಗೆ ಕೈ ಹಾಕಿಕೊಂಡು, ಉರಿಬಿಸಿಲಿನಲ್ಲಿ ನಿಂತುಕೊಂಡು, ರೈಲು ದಿಗಂತದಲ್ಲಿ ಕರಿಛಾಯೆಯೊಡನೆ ಮಿಳಿತಗೊಳ್ಳುವ ತನಕ ನೋಡುತ್ತಿದ್ದರು.
ಆಗಸ್ಟ್ ಒಂಬತ್ತರಂದು, ಬ್ರುಸೆಲ್ಸ್‌ನಿಂದ ಮೊದಲನೆ ಕಾಗದ ಬರುವುದಕ್ಕಿಂತ ಮುಂಚೆ, ಹೊಸೆ ಅರ್ಕಾದಿಯೋ ಸೆಗುಂದೋ ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಅವ್ರೇಲಿಯಾನೋ ಜೊತೆ ತನಗರಿಯದಂತೆ ಮಾತನಾಡುತ್ತಿದ್ದ.
ಅವನು, “ಯಾವಾಗಲೂ ನೆನಪಿಟ್ಟುಕೋ. ಅವರು ಮೂರು ಸಾವಿರಕ್ಕಿಂತ ಹೆಚ್ಚಿಗೆ ಇದ್ದರು ಮತ್ತೆ ಅವರನ್ನೆಲ್ಲ ಸಮುದ್ರಕ್ಕೆ ಎಸೆದರು.” ಎಂದ.
ಅನಂತರ ಅವನು ಚರ್ಮದ ಬರಹಗಳ ಹಾಳೆಯ ಮೇಲೆ ಬಿದ್ದ ಮತ್ತು ಕಣ್ಣು ಬಿಟ್ಟುಕೊಂಡು ಸತ್ತು ಹೋದ. ಅದೇ ಕ್ಷಣದಲ್ಲಿ ಫೆರ್ನಾಂಡಳ ಹಾಸಿಗೆಯಲ್ಲಿದ್ದ, ಅವನ ಅವಳಿ ಸೋದರ ಉಕ್ಕಿನ ಉಗುರುಗಳಿಂದ ಹೊಟ್ಟೆಯನ್ನು ಕಿತ್ತು ತಿನ್ನುತ್ತಿದ್ದ ಕಾಯಿಲೆಯ ದೀರ್ಘವಾದ ಅವಧಿಯ ಅಂತ್ಯಕ್ಕೆ ಬಂದಿದ್ದ. ಒಂದು ವಾರದ ಹಿಂದೆ ಧ್ವನಿ ಸಂಪೂರ್ಣ ಉಡುಗಿ ಹೋಗಿ, ಉಸಿರಾಡಲು ಕಷ್ಟವಾಗಿ, ಕೇವಲ ಎಲುಬು ಮತ್ತು ಚರ್ಮದ ಹಂದರವಾಗಿ, ಅತ್ತಿತ್ತ ಓಡಾಡುತ್ತಿದ್ದ ಟ್ರಂಕುಗಳು ಮತ್ತ್ಟು ಕೆಟ್ಟುಹೋದ ಅಕಾರ್ಡಿಯನ್ ಸಮೇತ ಹೆಂಡತಿಯ ಪಕ್ಕದಲ್ಲಿ ಸಾಯುತ್ತೇನೆ ಎನ್ನುವುದನ್ನು ಪೂರೈಸುವುದಕ್ಕೋಸ್ಕರ ಮನೆಗೆ ವಾಪಸು ಬಂದಿದ್ದ. ಪೆತ್ರಾ ಕೊತೆಸ್ ಅವನ ಬಟ್ಟೆಗಳನ್ನು ಕಟ್ಟಿ ಕೊಟ್ಟು ಕಣ್ಣೀರು ಹಾಕದೆ ವಿದಾಯ ಹೇಳಿದಳು. ಆದರೆ ಅವಳು ಅವನು ಶವ ಪೆಟ್ಟಿಗೆಯಲ್ಲಿ ಹಾಕಿಕೊಳ್ಳಬೇಕೆಂದಿದ್ದ ಚರ್ಮದ ಶೂಗಳನ್ನು ಕೊಡಲು ಮರೆತಳು. ಆದ್ದರಿಂದ ಅವನು ಸತ್ತನೆಂದು ತಿಳಿದಾಗ ಅವಳು ಕಪ್ಪು ಬಟ್ಟೆ ಹಾಕಿಕೊಂಡು, ಶೂಗಳನ್ನು ದಿನ ಪತ್ರಿಕೆಯಲ್ಲಿ ಸುತ್ತಿಕೊಂಡು ಹೋಗಿ ಅವನ ದೇಹವನ್ನು ನೋಡುವುದಕ್ಕೆ ಫೆರ್ನಾಂಡಳ ಅನುಮತಿ ಕೇಳಿದಳು. ಫೆರ್ನಾಂಡ ಅವಳನ್ನು ಬಾಗಿಲೊಳಗೆ ಬರಲು ಬಿಡಲಿಲ್ಲ.
ಪೆತ್ರಾ ಕೊತೆಸ್ “ನೀವೇ ನನ್ನ ಜಾಗದಲ್ಲಿ ಇದ್ದುಕೊಂಡು ಯೋಚನೆ ಮಾಡಿ. ಈ ಅವಮಾನ ಸಹಿಸೋದಕ್ಕೆ ನಾನು ಅವನನ್ನು ಎಷ್ಟು ಪ್ರೀತಿ ಮಾಡಿರ್‍ಬೇಕು ನೋಡಿ” ಎಂದು ಬೇಡಿಕೊಂಡಳು.
ಫೆರ್ನಾಂಡ “ಇಟ್ಟುಕೊಂಡೋಳಿಗೆ ಎಂಥ ಅವಮಾನಾನೂ ದೊಡ್ಡದಲ್ಲ. ಇನ್ಯಾವನಾದ್ರೂ ನಿನ್ನ ಮಿಂಡ ಸಾಯೋವರೆಗೂ ಕಾದಿದ್ದು ಅವ್ನಿಗೆ ಈ ಶೂನ ಹಾಕು.”ಎಂದು ಉತ್ತರಿಸಿದಳು.
ಸಾಂತ ಸೋಫಿಯಾ ದೆಲಾ ಪಿಯದಾದ್ ಮಾತು ಕೊಟ್ಟ ಹಾಗೆ ಹೊಸೆ ಅರ್ಕಾದಿಯೋ ಸೆಗುಂದೋನ ಹೊಟ್ಟೆಯನ್ನು ಅಡುಗೆ ಚಾಕುವಿನಿಂದ ಸೀಳಿ ಅವನನ್ನು ಜೀವ ಸಹಿತ ಹೂಳುವುದಿಲ್ಲ, ಎನ್ನುವುದನ್ನು ಖಾತರಿಪಡಿಸಿಕೊಂಡಳು. ಎರಡು ದೇಹಗಳನ್ನು ಒಂದೇ ರೀತಿಯ ಶವ ಪೆಟ್ಟಿಗೆಯಲ್ಲಿ ಇಡಲಾಯಿತು. ಅವರಿಬ್ಬರೂ ಸಾವಿನಲ್ಲಿ ಕೂಡ ಹದಿವಯಸ್ಸಿಗೆ ಬರುವ ತನಕ ಒಂದೇ ರೀತಿಯಲ್ಲಿ ಇದ್ದಂತೆ ಇದ್ದದ್ದನ್ನು ಕಾಣಬಹುದಿತ್ತು. ಅವ್ರೇಲಿಯಾನೋನ ಹಳೆಯ ಅತಿ ಕುಡುಕ ಸ್ನೇಹಿತರು, ಅಲ್ಲಿದ್ದ ಪಾತ್ರೆಯ ಮೇಲೆ ಕಡುಗೆಂಪು ಬಣ್ಣದ ರಿಬ್ಬನ್ನಿನ ಮೇಲೆ “ಮುಗಿಸಿ, ಬೇಗ ಮುಗಿಸಿ, ಜೀವನ ಕ್ಷಣಿಕ” ಎಂದು ಬರೆದ ಹೂಗುಚ್ಛವನ್ನು ಇಟ್ಟರು. ಪೆರ್ನಾಂಡಗೆ ಅಂಥ ಅಸಾಂಗತ್ಯದಿಂದ ವಿಪರೀತ ಸಿಟ್ಟು ಬಂದು ಹೂಗುಚ್ಛವನ್ನು ತಿಪ್ಪೆಗೆಸೆಯುವಂತೆ ಹೇಳಿದಳು. ಕೊನೆಗಳಿಗೆಯ ಗೊಂದಲದಲ್ಲಿ ಶವ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋದ ಕುಡುಕರು ಒಂದಕ್ಕೊಂದು ಕಲ್ಪಿಸಿಕೊಂಡು ತಪ್ಪು ಗೋರಿಗಳಲ್ಲಿ ಹೂಳಿದರು.

೧೮

ಅವ್ರೇಲಿಯಾನೋ ಬಹಳ ಕಾಲದವರೆಗೆ ಮೆಲ್‌ಕಿಯಾದೆಸ್‌ನ ರೂಮನ್ನು ಬಿಡಲಿಲ್ಲ. ಅವನು ಪುಡಿಯಾಗುತ್ತಿದ್ದ ಪುಸ್ತಕಗಳಲ್ಲಿನ ಪ್ರಗಾಥೆಗಳನ್ನು, ಅಪಾಂಗ ಹೆರ್‌ಮನ್‌ನ ಸಿದ್ಧಾಂತಗಳಲ್ಲಿದ್ದ ಹೊಂದಾಣಿಕೆಯನ್ನು ಭೂತ ವಿದ್ಯೆಯಲ್ಲಿರುವ ವಿಜ್ಞಾನವನ್ನು, ಸ್ಪರ್ಶ ಮಣಿಗಳನ್ನು ಅರಿಯುವ ಸೂತ್ರಗಳನ್ನು, ನಾಸ್ಟರ್‌ಡಾಮಸ್‌ನ ‘ಶತಮಾನ\’ಗಳನ್ನು ಬಾಯಿಪಾಠ ಮಾಡಿದ ಮತ್ತು ಪ್ಲೇಗ್ ಬಗ್ಗೆ ಅಧ್ಯಯನ ನಡೆಸಿದ. ಇವೆಲ್ಲದರಿಂದ ಹದಿವಯಸ್ಸಿಗೆ ಬಂದಾಗ ತನ್ನ ಕಾಲದ ಬಗ್ಗೆ ಏನೂ ತಿಳಿಯದೆ ಮಧ್ಯಯುಗದ ಮನುಷ್ಯನ ಬಗ್ಗೆ ಅರಿತುಕೊಂಡ. ಸಾಂತ ಸೋಫಿಯಾ ದೆಲಾ ಪಿಯದಾದ್ ಯಾವುದೇ ಸಮಯದಲ್ಲಿ ಅವನ ರೂಮಿಗೆ ಹೋದರೂ ಅವನು ಓದುವುದರಲ್ಲಿ ಮಗ್ನನಾಗಿರುತ್ತಿದ್ದ. ಮುಂಜಾನೆ ಅವನಿಗೆ ಒಂದು ಲೋಟ ಸಕ್ಕರೆಯಿಲ್ಲದ ಕಾಫಿ ತಂದುಕೊಡುತ್ತಿದ್ದಳು. ಮಧ್ಯಾಹ್ನ ಒಂದು ಪ್ಲೇಟ್ ಅನ್ನ ಹಾಗೂ ಹುರಿದ ಬಾಳೆಕಾಯಿಯನ್ನು ಕೊಡುತ್ತಿದ್ದಳು. ಅವ್ರೇಲಿಯಾನೋ ಸೆಗುಂದೋ ತೀರಿಕೊಂಡಾಗಿನಿಂದ ಮನೆಯಲ್ಲಿ ತಿನ್ನುತ್ತಿದ್ದದ್ದು ಅಷ್ಟನ್ನು ಮಾತ್ರ. ಅವಳು ಅವನಿಗೆ ಹೇರ್‌ಕಟ್ ಮಾಡಿಸಿ, ಹೇನು ತೆಗೆದು, ಮರೆತುಬಿಟ್ಟಿದ್ದ ಟ್ರಂಕುಗಳಲ್ಲಿದ್ದ ಬಟ್ಟೆಗಳನ್ನು ತೆಗೆದು ಅವನ ಅಳತೆಗೆ ಸರಿಮಾಡಿಸಿದಳು. ಅವನಿಗೆ ಮೀಸೆ ಬೆಳೆಯಲು ಶುರುವಾದಾಗ ಅವಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಉಪಯೋಗಿಸುತ್ತಿದ್ದ ರೇಜರ್ ಮತ್ತು ಶೇವಿಂಗ್ ಕಪ್ ಮಾಡಿಕೊಂಡಿದ್ದ ಸೋರೆ ಬುರುಡೆಯನ್ನು ತಂದುಕೊಟ್ಟಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಕ್ಕಳಲ್ಲಿ ಯಾರಿಗೂ ಕೂಡ ಮುಖ್ಯವಾಗಿ ಎದ್ದು ಕಾಣುವ ಚೂಪುಗಲ್ಲ ಹಾಗೂ ಬಿರುದುಟಿಗಳು ಅವ್ರೇಲಿಯಾನೋಗಿರುವಂತೆ ಇರಲಿಲ್ಲ. ಅವ್ರೇಲಿಯಾನೋ ಸೆಗುಂದೋ ರೂಮಿನಲ್ಲಿ ಓದುತ್ತಿದ್ದಾಗ ಉರ್ಸುಲಾಗೆ ಆದ ಹಾಗೆ ಅವ್ರೇಲಿಯಾನೋ ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತಿದ್ದಾನೆ ಎಂದು ತಿಳಿದಳು. ವಾಸ್ತವವಾಗಿ ಅವನು ಮೆಲ್‌ಕಿಯಾದೆಸ್ ಜೊತೆ ಮಾತಾಡುತ್ತಿದ್ದ. ಅವಳಿ ಸೋದರರು ಸ;ತ್ತ ಸ್ವಲ್ಪ ಕಾಲದ ಮೇಲೆ ಒಂದು ಉರಿಬಿಸಿಲಿನ ದಿನ ಕಿಟಕಿಯ ಬೆಳಕಿಗೆ ಎದುರಾಗಿ, ತಾನು ಹುಟ್ಟುವುದಕ್ಕಿಂತಲೂ ಮುಂಚಿನಿಂದ ಇದ್ದ ನೆನಪೊಂದು ಸಾಕಾರ ಪಡೆದ ಹಾಗೆ, ಕಾಗೆಯ ರೆಕ್ಕೆಯಂಥ ಹ್ಯಾಟ್ ಧರಿಸಿದ್ದ, ಸಪ್ಪೆ ಮುಖದ ಮನುಷ್ಯನೊಬ್ಬನನ್ನು ಕಂಡ. ಅವ್ರೇಲಿಯಾನೋ ಚರ್ಮದ ಹಾಳೆಯ ಮೇಲಿನ ವರ್ಣಮಾಲೆಯನ್ನು ವಿಂಗಡಿಸುವುದನ್ನು ಪೂರೈಸಿದ್ದ. ಆದ್ದರಿಂದ ಮೆಲ್‌ಕಿಯಾದೆಸ್ ಅವು ಯಾವ ಭಾಷೆಯಲ್ಲಿ ಬರೆದಿದೆ ಎಂದು ಅವನನ್ನು ಕೇಳಿದಾಗ ಅವನು ಉತ್ತರ ಕೊಡಲು ಅನುಮಾನಿಸಲಿಲ್ಲ.
ಅವನು “ಸಂಸ್ಕೃತ” ಎಂದು ಹೇಳಿದ.
ಮೆಲ್‌ಕಿಯಾದೆಸ್ ತಾನು ರೂಮಿಗೆ ಹಿಂತಿರುಗುವ ಅವಕಾಶಗಳು ಕಡಿಮೆ ಎಂದ. ಅವನು ಶಾಂತಿಯಿಂದ ಸಾವಿನ ಕೂಪಕ್ಕೆ ಹೋಗುವುದೇಕೆಂದರೆ ಚರ್ಮದ ಹಾಳೆಗಳಿಗೆ ಒಂದು ನೂರು ವರ್ಷವಾಗುವ ತನಕ ಅದರಲ್ಲಿರುವುದನ್ನು ಅರ್ಥೈಸುವುದಕ್ಕೆ ಉಳಿದ ವರ್ಷಗಳಲ್ಲಿ ಅವ್ರೇಲಿಯಾನೋಗೆ ಸಂಸ್ಕೃತವನ್ನು ಕಲಿಯಲು ಸಮಯವಿದೆ ಎಂದ. ಅವನು ಅವ್ರೇಲಿಯಾನೋಗೆ ನದಿಗೆ ಹೋಗುವಾಗ ಇರುವ ಕಿರಿದಾದ ರಸ್ತೆಯೊಂದರಲ್ಲಿ ಬಾಳೆತೋಟದ ಕಂಪನಿಯವರ ಕಾಲದಲ್ಲಿ ಕನಸುಗಳನ್ನು ವಿಶ್ಲೇಷಿಸುವ ಸ್ಥಳವೊಂದಿತ್ತೆಂದೂ, ಅಲ್ಲಿ ಕತಲುನಿಯಾದವನೊಬ್ಬ ಪುಸ್ತಕದ ಅಂಗಡಿ ಇಟ್ಟುಕೊಂಡಿದ್ದಾನೆ ಮತ್ತು ಅಲ್ಲಿ ಸಂಸ್ಕೃತ ಬಾಲಬೋಧೆ ಇರವುದಲ್ಲದೆ, ಅದನ್ನು ಬೇಗ ಕೊಂಡುಕೊಳ್ಳದಿದ್ದರೆ ಇನ್ನು ಆರು ತಿಂಗಳಲ್ಲಿ ಅವನ್ನು ಗೆದ್ದಿಲು ತಿಂದು ಹಾಕುತ್ತವೆ ಎಂದು ಹೇಳಿದ. ಅವ್ರೇಲಿಯಾನೋ ಸಾಂತ ಸೋಫಿಯಾ ದೆಲಾ ಪಿಯದಾದ್‌ಳನ್ನು ಪುಸ್ತಕಗಳ ಎರಡನೆ ಶೆಲ್ಫ್‌ನಲ್ಲಿ ಬಲಗಡೆ ಕೊನೆಯಲ್ಲಿ ಜರುಸಲಮ್‌ನ ವಿಮೋಚನೆ ಮತ್ತು ಮಿಲ್ಟನ್ನನ ಪದ್ಯಗಳು ಪುಸ್ತಕಗಳ ಮಧ್ಯೆ ಇರುವ ಆ ಪುಸ್ತಕವನ್ನು ತಂದುಕೊಡಲು ಹೇಳಿದಾಗ ಅವಳು ತನ್ನ ದೀರ್ಘ ಜೀವನದಲ್ಲಿ ಮೊದಲ ಬಾರಿಗೆ ಚಕಿತಗೊಂಡಳು. ಅವಳಿಗೆ ಓದಲು ಬರುತ್ತಿರಲಿಲ್ಲವಾದ್ದರಿಂದ ಅವನು ಹೇಳಿದ್ದನ್ನು ಬಾಯಿಪಾಠ ಮಾಡಿಕೊಂಡಳು ಮತ್ತು ಸೈನಿಕರು ಮನೆಯನ್ನು ಹುಡುಕಿ ಹೋದ ಮೇಲೆ ತನಗೆ ಮತ್ತು ಅವ್ರೇಲಿಯಾನೋಗೆ ಮಾತ್ರ ಬಚ್ಚಿಟ್ಟಿರುವುದು ಎಲ್ಲಿ ಎಂದು ಗೊತ್ತಿದ್ದ ವರ್ಕ್‌ಶಾಪಿನಲ್ಲಿದ್ದ ಹದಿನೇಳು ಬಂಗಾರದ ಮೀನುಗಳಲ್ಲಿ ಒಂದನ್ನು ಮಾರಿದ್ದರಿಂದ ಸ್ವಲ್ಪ ಹಣ ಗಳಿಸಿದಳು.
ಮೆಲ್‌ಕಿಯಾದೆಸ್ ಬಂದು ಹೋಗುವುದು ಬರಬರುತ್ತ ಕಡಿಮೆಯಾಗುತ್ತಿದ್ದ ಹಾಗೆ, ಅವನು ಚಂದ್ರನ ಪ್ರಕಾಶದಲ್ಲಿ ಕರಗಿ ದೂರ ಹೋಗುತ್ತಿದ್ದ ಹಾಗೆ, ಅವ್ರೇಲಿಯಾನೋ ಸಂಸ್ಕೃತದ ಅಭ್ಯಾಸದಲ್ಲಿ ಪ್ರಗತಿ ಹೊಂದಿದ. ತೀರ ಇತ್ತೀಚೆಗೆ ಅವ್ರೇಲಿಯಾನೋ ನೋಡಿದಾಗ ಕಾಣಿಸದಂತಿದ್ದ ಅವನು ಮೆಲುದನಿಯಲ್ಲಿ, “ನಾನು ಸಿಂಗಪೂರಿನ ಮರಳುರಾಶಿಯಲ್ಲಿ ಸತ್ತು ಹೋದೆ” ಎಂದ. ಅನಂತರ ರೂಮು ಧೂಳು, ಧಗೆ, ನುಸಿಹುಳು, ಕೆಂಜಿಗ ಮತ್ತು ಗೆದ್ದಿಲಿಗೆ ಅವಕಾಶ ಕಲ್ಪಿಸಿತು ಮತ್ತು ಅವು ಚರ್ಮ ಹಾಳೆಯ ಜ್ಞಾನಸಂಪತ್ತನ್ನು ಪುಡಿ ಮಾಡಿದವು.
ಮನೆಯಲ್ಲಿ ಆಹಾರಕ್ಕೆ ಕೊರತೆ ಇರಲಿಲ್ಲ. ಅವ್ರೇಲಿಯಾನೋ ಸೆಗುಂದೋ ಸತ್ತ ಮಾರನೆಯ ದಿನ ಅಸಾಂಗತ್ಯ ಬರಹವನ್ನು ತಂದಿದ್ದ ಅವನ ಸ್ನೇಹಿತರಲ್ಲೊಬ್ಬ ಫೆರ್ನಾಂಡಳಿಗೆ ಅವಳ ಗಂಡನಿಗೆ ಕೊಡಬೇಕಾಗಿದ್ದ ಒಂದಿಷ್ಟು ಹಣ ತಂದು ಕೊಟ್ಟ. ಅದಾದ ಮೇಲೆ ಪ್ರತಿ ಬುಧವಾರ ಒಬ್ಬ ಹುಡುಗ ಬುಟ್ಟಿಯಲ್ಲಿ ಅಡುಗೆ ಪದಾರ್ಥವನ್ನು ತಂದುಕೊಡುತ್ತಿದ್ದ ಮತ್ತು ಅದು ಒಂದು ವಾರಕ್ಕೆ ಸಾಕಾಗುತ್ತಿತ್ತು. ಆ ಸಾಮಾನುಗಳನ್ನು ಪೆತ್ರಾ ಕೊತೆಸ್ ತನಗೆ ಅವಮಾನ ಮಾಡಿದವಳಿಗೆ ದಾನ ಮಾಡುತ್ತ ಹೋಗುವುದೇ ಅವಳನ್ನು ಅವಮಾನಿಸುವ ದಾರಿ ಎಂದು ಕೊಟ್ಟು ಕಳಿಸುತ್ತಿದ್ದಾಳೆ ಎಂದು ಯಾರಿಗೂ ತಿಳಿಯಲಿಲ್ಲ. ಆದರೆ ಆ ದ್ವೇಷ ಅವಳು ನಿರೀಕ್ಷಿಸಿದ್ದಕ್ಕಿಂತಲೂ ಬೇಗನೆ ಕರಗಿ ಹೋಗಿ, ಪ್ರತಿಷ್ಠೆಯಿಂದ ಹಾಗೂ ಕೊನೆಗೆ ಅಂತಃಕರಣದಿಂದ ಅಡುಗೆ ಪದಾರ್ಥಗಳನ್ನು ಕಳಿಸುತ್ತಿದ್ದಳು. ಅನೇಕ ಸಲ ಅವಳಿಗೆ ಲಾಟರಿ ವ್ಯವಸ್ಥೆ ಮಾಡಲು ಪ್ರಾಣಿಗಳೇ ಇರುತ್ತಿರಲಿಲ್ಲ ಮತ್ತು ಜನರು ಅದರಲ್ಲಿ ಆಸಕ್ತಿ ಕಳೆದುಕೊಂಡರು. ಅನೇಕ ಸಲ ಫೆರ್ನಂಡ ಏನಾದರೂ ತಿನ್ನಲಿ ಎಂದು ತಾನು ಉಪವಾಸವಿರುತ್ತಿದ್ದಳು. ಅವಳು ಅದನ್ನು ಅವಳ ಶವಯಾತ್ರೆಯ ತನಕ ವ್ರತದ ಹಾಗೆ ಕಾಪಾಡಿಕೊಂಡು ಬಂದಳು.
ಮನೆಯಲ್ಲಿ ಜನರ ಸಂಖ್ಯೆ ಕಡಿಮೆಯಾದ್ದರಿಂದ ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಅರ್ಧ ಶತಮಾನ ಕೆಲಸ ಮಾಡಿದ ನಂತರ ದೊರೆಯಬೇಕಾಗಿದ್ದ ವಿಶ್ರಾಂತಿ ಸಿಗಬೇಕಾಗಿತ್ತು. ಆ ಕುಟುಂಬದಲ್ಲಿ ದೇವತೆಯಂಥ ಸುಂದರಿ ರೆಮಿದಿಯೋಸ್ ಮತ್ತು ನಿಗೂಢ ವ್ಯಕ್ತಿ ಹೊಸೆ ಅರ್ಕಾದಿಯೋ ಸೆಗುಂದೋನಂಥವರನ್ನು ಹುಟ್ಟಿಸಿದ, ಎಂದೂ ತುಟಿಪಿಟಕ್ಕೆನ್ನದ, ತನ್ನ ಇಡೀ ಜೀವನದ ಏಕಾಂತತೆ ಹಾಗೂ ಸಂಕಲ್ಪವನ್ನು, ತನ್ನ ಮಕ್ಕಳೋ ಅಥವಾ ಮೊಮ್ಮಕ್ಕಳೋ ಎಂದು ಅರಿಯದೆ ಅವರನ್ನು ಪಾಲಿಸುವುದರಲ್ಲೇ ಕಳೆದಳು. ಅವ್ರೇಲಿಯಾನೋನನ್ನು ತಾನವನ ಮುತ್ತಜ್ಜಿ ಎಂದೂ ತಿಳಿಯದೆ ತನ್ನ ಹೊಟ್ಟೆಯಲ್ಲಿ ಹುಟ್ಟಿದವನಂತೆ ನೋಡಿಕೊಂಡಳು. ಅವಳು ಅಡುಗೆ ಮನೆಯ ನೆಲದ ಮೇಲೆ ಇಲಿಗಳ ಚೀಗುಟ್ಟುವಿಕೆಯ ಮಧ್ಯೆ ಮಲಗುವುದನ್ನು ಅಂಥ ಮನೆಯಲ್ಲಿ ಮಾತ್ರ ಕಲ್ಪಿಸಿಕೊಳ್ಳುವುದು ಸಾಧ್ಯ. ಅವಳು ಒಂದು ದಿನ ಕತ್ತಲಲ್ಲಿ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂಬ ಭಾವನೆಯಿಂದ ಎಚ್ಚರಗೊಂಡಳು. ಆಗ ಹಾವೊಂದು ಅವಳ ಹೊಟ್ಟೆಯ ಮೇಲೆ ಹರಿದು ಹೋಗುತ್ತಿತ್ತು. ಅವಳು ಅದನ್ನು ಯಾರಿಗೂ ಹೇಳಲಿಲ್ಲ. ಉರ್ಸುಲಾಗೆ ಅದನ್ನು ಹೇಳಿದ್ದರೆ ತನ್ನ ಹಾಸಿಗೆಯಲ್ಲೇ ಮಲಗು ಎಂದು ಹೇಳುತ್ತಾಳೆಂದೂ ಅವಳಿಗೆ ಗೊತ್ತಿತ್ತು. ಆದರೆ ಆ ದಿನಗಳಲ್ಲಿ ಅಂಗಳದಲ್ಲಿ ನಿಂತು ಕೂಗದಿದ್ದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಬಂದೂಕಿನ ಶಬ್ದ, ಯುದ್ಧದ ಅಚ್ಚರಿಗಳು, ಮಕ್ಕಳ ಯೋಗಕ್ಷೇಮ ಇವುಗಳ ಮಧ್ಯೆ ಮತ್ತೊಬ್ಬರ ಸುಖದ ಬಗ್ಗೆ ಯೋಚಿಸುವಷ್ಟು ಸಮಯವಿರಲಿಲ್ಲ. ಎಂದೂ ನೋಡದ ಪೆತ್ರಾ ಕೊತೆಸ್ ಒಬ್ಬಳೇ ಅವಳನ್ನು ನೆನಪಿನಲ್ಲಿಟ್ಟುಕೊಂಡಿದ್ದವಳು. ಅವಳಿಗೆ ಯಾವಾಗಲೂ ಚಪ್ಪಲಿ ಇರುವಂತೆ, ಲಾಟರಿ ವ್ಯವಹಾರ ಯಾವುದೋ ಪವಾಡದ ಹಾಗೆ ನಡೆಯುತ್ತಿದ್ದಾಗಲೂ ಕೂಡ ಉಟ್ಟುಕೊಳ್ಳುವುದಕ್ಕೆ ಬಟ್ಟೆ ಇರುವಂತೆ ನೋಡಿಕೊಳ್ಳುತ್ತಿದ್ದಳು. ಫೆರ್ನಾಂಡ ಮನೆಗೆ ಬಂದಾಗ ಅವಳನ್ನು ವಯಸ್ಸೇ ಆಗದ ಕೆಲಸದವಳಂತೆ ತಿಳಿದುಕೊಳ್ಳಲು ಕಾರಣವಿತ್ತು. ಅವಳು ತನ್ನ ಗಂಡನ ತಾಯಿಯೆಂದು ಹೇಳಿದ್ದನ್ನು ಕೇಳಿಸಿಕೊಂಡಿದ್ದರೂ ಅದನ್ನು ಮರೆಯುವುದಕ್ಕಿಂತ ಪತ್ತೆ ಹಚ್ಚುವುದಕ್ಕೇ ಹೆಚ್ಚಿಗೆ ಸಮಯ ಹಿಡಿಯಿತು. ಸಾಂತ ಸೋಫಿಯಾ ದೆಲಾ ಪಿಯದಾದ್ ತನಗೆ ಸಿಕ್ಕಿದ ಅಲ್ಪ ಸ್ಥಾನವನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವಳು ಗೊಣಗಾಡದೆ ಮೂಲೆಯಲ್ಲೆಲ್ಲೋ ಇರುವುದಕ್ಕೆ ಇಷ್ಟಪಡುವಳೆಂಬ ಭಾವನೆ ಬರುತ್ತಿತ್ತು. ಅಲ್ಲದೆ ಅವಳು ತನ್ನ ಎಳೆಯ ದಿನಗಳಲ್ಲಿ ಮತ್ತು ಮುಖ್ಯವಾಗಿ ಬಾಳೆ ತೋಟದ ಕಂಪನಿಯವರಿದ್ದಾಗ ಇದ್ದ ದೊಡ್ಡ ಮನೆಗೆ ಹೋಲಿಸಿದರೆ ಅವಳಿದ್ದದ್ದು ಮನೆಗಿಂತ ಹೆಚ್ಚಾಗಿ ಸಿಪಾಯಿಗಳಿರುವ ಮನೆಯಾಗಿತ್ತು. ಆದರೆ ಉರ್ಸುಲಾ ಸತ್ತ ಮೇಲೆ ಅಮಾನುಷ ದೃಢತೆ ಮತ್ತು ಕೆಲಸ ಮಾಡುವ ಸಾಮರ್ಥ್ಯ ತೀರಾ ಕಡಿಮೆಯಾಯಿತು. ಅವಳಿಗೆ ವಯಸ್ಸಾಗಿ ಸುಸ್ತಾದದ್ದಲ್ಲದೆ ರಾತ್ರೋರಾತ್ರಿ ಇಡೀ ಮನೆ ದುರ್ಬಲತೆಯ ಮಡುವಿನಲ್ಲಿ ಮುಳುಗಿತು. ಗೋಡೆಗಳ ಮೇಲೆ ಪಾಚಿ ಕಟ್ಟಿತು. ಅಂಗಳದಲ್ಲಿ ಓಡಾಡುವರಿಲ್ಲದೆ, ಗಾಜಿನಂತೆ ಕಾಂಕ್ರೀಟನ್ನೊಡೆದು ಬಳ್ಳಿಗಳು ಹೊರಬಂದವು. ಆ ಸಂದಿಗಳ ಒಳಗಿನಿಂದ ಒಂದು ಶತಮಾನದ ಹಿಂದೆ ಉರ್ಸುಲಾ ಮೆಲ್‌ಕಿಯಾದೆಸ್‌ನ ಕಟ್ಟಿಸಿದ ಹಲ್ಲಗಳನ್ನು ಇಡುತ್ತಿದ್ದ ಗಾಜಿನ ಬಟ್ಟಲಲ್ಲಿ ಬೆಳೆದಿದ್ದ ಅಂಥದೇ ಹಳದಿ ಹೂಗಳು ಬೆಳೆದವು. ಪ್ರಕೃತಿಗೆ ಸವಾಲೊಡ್ಡಲು ಸಮಯ ಮತ್ತು ಸಂಪನ್ಮೂಲಗಳು ಇಲ್ಲದ ಕಾರಣ ಸಾಂತ ಸೋಫಿಯಾ ದೆಲಾ ಪಿಯದಾದ್, ದಿನವೆಲ್ಲ ಬೆಡ್‌ರೂಮಿನಿಂದ ಹಲ್ಲಿಗಳನ್ನು ಓಡಿಸುತ್ತಾ ಕಳೆದರೆ, ಅವು ರಾತ್ರಿ ವಾಪಸು ಬರುತ್ತಿದ್ದವು. ಒಂದು ದಿನ ಕೆಂಜಿಗಗಳು ಆಗಲೆ ಹಾಳಾಗಿದ್ದ ಅಡಿಪಾಯವನ್ನು ಬಿಟ್ಟು ಕೈತೋಟವನ್ನು ದಾಟಿ, ಮಣ್ಣಿನ ಬಣ್ಣವಾಗಿದ್ದ ಬೆಗೇನಿಯಾ ಗಿಡಗಳಿದ್ದ ಸ್ಥಳದಲ್ಲಿದ್ದ ಕಂಬಿಗಳನ್ನು ಹತ್ತಿ ಮನೆಯ ಮಧ್ಯಕ್ಕೆ ಕೊರೆದು ಬಂದಿದ್ದವು. ಪ್ರಾರಂಭದಲ್ಲಿ ಪೊರಕೆಯಿಂದ ಅನಂತರ ಕ್ರಿಮಿನಾಶಕ ಮತ್ತು ಕೊನೆಗೆ ಉಪ್ಪು ನೀರಿನಿಂದ ಅವುಗಳನ್ನು ಕೊಲ್ಲಲು ಪ್ರಯತ್ನಿಸಿದಳು. ಆದರೆ ಮರುದಿನ ಅವು ಬಿಡದೆ ಮತ್ತೆ ಅದೇ ಸ್ಥಳಕ್ಕೆ ಬರುತ್ತಿದ್ದವು. ಮಕ್ಕಳಿಗೆ ಕಾಗದ ಬರೆಯುವುದರಲ್ಲಿ ನಿರತಳಾಗಿದ್ದ ಫೆರ್ನಾಂಡಗೆ ತಡೆಯಿಲ್ಲದೆ ಅವು ಹಾಳುಗೆಡುವುತ್ತಿದ್ದ ಕಡೆ ಗಮನವಿರಲಿಲ್ಲ. ಸಾಂತ ಸೋಫಿಯಾ ದೆಲಾ ಪಿಯದಾದ್ ಒಬ್ಬಳೇ, ಅಡುಗೆ ಮನೆಗೆ ಬಾರದಿರುವಂತೆ ಮತ್ತು ಗೋಡೆಗಳಲ್ಲಿ ಕಟ್ಟಿದ್ದ ಬಳ್ಳಿಗಳನ್ನು ಕಿತ್ತು ಹಾಕಿದರೂ ಕೆಲವೇ ಗಂಟೆಗಳಲ್ಲಿ ಕಟ್ಟುತ್ತಿದ್ದ ಜೇಡರ ಬಲೆಗಳನ್ನು ಮತ್ತು ಗೆದ್ದಲುಗಳನ್ನು ಕೆರೆದು ಹಾಕುತ್ತಿದ್ದಳು. ಆದರೆ ಪ್ರತಿ ದಿನ ಮೂರು ಸಲ ಗುಡಿಸಿದರೂ ಮೆಲ್‌ಕಿಯಾದೆಸ್‌ನ ರೂಮಿನಲ್ಲಿರುವ ಧೂಳು, ಜೇಡರ ಬಲೆಗಳನ್ನು ಕಂಡಾಗ ಮತ್ತು ಚೆನ್ನಾಗಿ ಶುಚಿ ಮಾಡಿದಷ್ಟೂ ಕೊಳೆ ಹೋಗಲಿಲ್ಲ. ಹಾಗೂ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮತ್ತು ಹರೆಯದ ಅಧಿಕಾರಿ ಮುಂದಾಗುವ ಯಾತನೆಯನ್ನು ತಿಳಿಸಿದ್ದರ ಹಿನ್ನೆಲೆಯಲ್ಲಿ ಅವಳಿಗೆ ತಾನು ಸೋತೆನೆಂದು ಅರಿವಾಯಿತು. ಅನಂತರ ಅವಳು ಭಾನುವಾರದ ಹಳೆಯ ಬಟ್ಟೆಗಳನ್ನು ಉಟ್ಟುಕೊಂಡು ಉರ್ಸುಲಾಳ ಹಳೆಯ ಶೂ ಹಾಗೂ ಅಮರಾಂತ ಉರ್ಸುಲಾ ಕೊಟ್ಟ ಒಂದು ಜೊತೆ ಕಾಲುಚೀಲವನ್ನು ಹಾಕಿಕೊಂಡಳು ಮತ್ತು ಉಳಿದ ಬಟ್ಟೆಗಳನ್ನು ಗಂಟು ಕಟ್ಟಿದಳು.
ಅವಳು ಅವ್ರೇಲಿಯಾನೋಗೆ, “ನನ್ನ ಕೈಲಿ ಇನ್ನಾಗಲ್ಲ. ಇದೆಲ್ಲ ವಯಸ್ಸಾದ ನನ್ನ ಶಕ್ತಿಗೆ ಮೀರಿದ್ದು” ಎಂದಳು.
ಅವ್ರೇಲಿಯಾನೋ ಅವಳನ್ನು ಎಲ್ಲಿಗೆ ಹೋಗುತ್ತೀಯ ಎಂದು ಕೇಳಿದ್ದಕ್ಕೆ ಏನೆಂದು ತಿಳಿಯದಂತೆ ಸುಮ್ಮನೆ ಕೈ ಅಲ್ಲಾಡಿಸಿದಳು. ಅವಳು ತನ್ನ ಸಂಬಂಧಿ ಇರುವ ರಿಯೋ‌ಅಕದಲ್ಲಿ ಕೊನೆಯ ದಿನಗಳು ಕಳೆಯಬೇಕೆಂದಿರುವುದನ್ನು ನಿಖರವಾಗಿ ತಿಳಿಸಲು ಪ್ರಯತ್ನಪಟ್ಟಳು. ಅದು ಹಾಗೆಂದು ಕಾಣುವ ವಿವರಣೆಯಾಗಿರಲಿಲ್ಲ ಅವಳ ತಂದೆ ತಾಯಿ ಸತ್ತ ಮೇಲೆ ಅವಳಿಗೆ ಯಾರಿಂದಲೂ ಕಾಗದವಾಗಲೀ ಸಂದೇಶವಾಗಲೀ ಬಂದಿರಲಿಲ್ಲ ಮತ್ತು ಆ ಊರಿನಲ್ಲಿ ಯಾರೊಂದಿಗೂ ಸಂಪರ್ಕವಿರಲಿಲ್ಲ. ಜೊತೆಗೆ ಅವಳು ಯಾವ ಸಂಬಂಧಿಕರನ್ನು ಕುರಿತು ಮಾತನಾಡಿರಲಿಲ್ಲ. ಅವಳು ತನ್ನ ಬಳಿ ಇದ್ದ ಒಂದು ಪೇಸೋ ಮತ್ತು ಇಪ್ಪತ್ತೈದು ಸೆಂಟುಗಳನ್ನು ಮಾತ್ರ ತೆಗೆದುಕೊಂಡು ಹೊರಟು ಹೋಗುತ್ತೇನೆಂದು ಹಠ ಮಾಡಿದಾಗ ಅವ್ರೇಲಿಯಾನೋ ಅವಳಿಗೆ ಹದಿನಾಲ್ಕು ಬಂಗಾರದ ಸಣ್ಣ ಮೀನುಗಳನ್ನು ಕೊಟ್ಟ. ರೂಮಿನ ಕಿಟಕಿಯಿಂದ ಅವಳು ಬಟ್ಟೆಯ ಗಂಟನ್ನು ಹಿಡಿದುಕೊಂಡು ಅಂಗಳವನ್ನು ದಾಟಿದ್ದು ಮತ್ತು ಮುಂಬಾಗಿಲಿನಲ್ಲಿದ್ದ ಸಣ್ಣ ತೆರೆದ ಜಾಗದಿಂದ ಕೈ ತೂರಿಸಿದ್ದು ಅವನಿಗೆ ಕಾಣಿಸಿತು. ಅವಳು ಹೊರಗೆ ಹೋದ ಮೇಲೆ ಅಡ್ಡಪಟ್ಟಿಯನ್ನು ಮುಂಚಿನ ರೀತಿಯಲ್ಲೆ ಇಟ್ಟಳು. ಅನಂತರ ಅವಳ ಬಗ್ಗೆ ಏನೂ ಕೇಳಿಬರಲಿಲ್ಲ.
ಅವಳು ಹೊರಟು ಹೋದದ್ದನ್ನು ತಿಳಿದ ಫೆರ್ನಾಂಡ ಇಡೀ ದಿನ ಟ್ರಂಕುಗಳನ್ನು, ಬಟ್ಟೆಗಳನ್ನು, ಕಪಾಟುಗಳನ್ನು ಒಂದೊಂದಾಗಿ ಪರೀಕ್ಷಿಸಿ, ಸಾಂತ ಸೋಫಿಯಾ ದೆಲಾ ಪಿಯದಾದ್ ಏನನ್ನಾದರೂ ಹಾರಿಸಿಕೊಂಡು ಹೋಗಿದ್ದಾಳೆಯೋ ಏನೋ ಎಂದು ನೋಡಿದಳು. ಅವಳು ತನ್ನ ಜೀವನದಲ್ಲಿ ಮೊದಲ ಸಲ ಉರಿ ಹಚ್ಚಲು ಹೋಗಿ ಬೆರಳುಗಳನ್ನು ಸುಟ್ಟುಕೊಂಡಳು ಮತ್ತು ಕಾಫಿ ಹೇಗೆ ಮಾಡಬೇಕೆಂದು ತೋರಿಸಲು ಅವಳು ಅವ್ರೇಲಿಯಾನೋನನ್ನು ಕೇಳಬೇಕಾಯಿತು. ಸಮಯ ಕಳೆದಂತೆ ಅವನು ಅಡುಗೆ ಮನೆಯ ಕೆಲಸಗಳನ್ನು ವಹಿಸಿಕೊಂಡ. ಫೆರ್ನಾಂಡ ಎದ್ದಾಗ ಬೆಳಗಿನ ತಿಂಡಿ ಸಿದ್ಧವಾಗಿರುತ್ತಿತ್ತು. ಅವಳು ಮತ್ತೆ ತನ್ನ ರೂಮಿನಿಂದ ಅವ್ರೇಲಿಯಾನೋ ಸಣ್ಣ ಕೆಂಡದ ಮೇಲೆ ಇಟ್ಟಿರುತ್ತಿದ್ದ ಊಟವನ್ನು ತೆಗೆದುಕೊಂಡು ಹೋಗಲು ಮಾತ್ರ ಹೊರಗೆ ಬರುತಿದ್ದಳು. ಅವಳು ಅದನ್ನು ಟೇಬಲ್ ಕ್ಲಾತ್ ಹಾಕಿರುವ ಹಾಗೂ ದೀಪಸ್ತಂಭಗಳನ್ನು ಇಡುತ್ತಿದ್ದ ಟೇಬಲ್ಲಿನಲ್ಲಿ ಖಾಲಿಯಿರುವ ಹದಿನೈದು ಕುರ್ಚಿಗಳ ಎದುರಿಗೆ ಒಬ್ಬಳೇ ಕುಳಿತುಕೊಳ್ಳುತ್ತಿದ್ದಳು. ಅಂತಹ ಸಂದರ್ಭಗಳಲ್ಲಿ ಕೂಡ ಫೆರ್ನಾಂಡ ಮತ್ತು ಅವ್ರೇಲಿಯಾನೋ ತಮ್ಮ ಏಕಾಂತವನ್ನು ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಅವರು ತಮ್ಮಷ್ಟಕ್ಕೇ ಇದ್ದು ತಮ್ಮ ತಮ್ಮ ರೂಮುಗಳನ್ನು ಸ್ವಚ್ಛಮಾಡಿಕೊಳ್ಳುತ್ತಿದ್ದರಾದರೂ ಗುಲಾಬಿ ಪೊದೆಗಳ ಮೇಲೆ ಮಂಜಿನ ಹಾಗೆ ಜೇಡರ ಬಲೆಗಳು ಬೀಳುತ್ತಿದ್ದವು. ತೊಲೆಗಳ ಮೇಲೆ ಚಾಪೆ ಹಾಸಿದಂತೆ ಹಬ್ಬುತ್ತಿದ್ದವು, ಗೋಡೆಗಳ ಮೇಲೆ ಕುಷನ್ನಿನ ಹಾಗೆ ಹೆಣೆಯುತ್ತಿದ್ದವು. ಸರಿ ಸುಮಾರು ಅದೇ ಸಮಯದಲ್ಲಿ ಫೆರ್ನಾಂಡಳಿಗೆ ಮನೆ ದೆವ್ವಗಳಿಂದ ತುಂಬಿದೆ ಎಂಬ ಭಾವನೆ ಬಂತು. ವಸ್ತು, ಅದರಲ್ಲೂ ದಿನನಿತ್ಯ ಉಪಯೋಗಿಸುವಂಥವು ತಮ್ಮಷ್ಟಕ್ಕೆ ತಾವೇ ಸ್ಥಳ ಬದಲಾವಣೆ ಮಾಡಿಕೊಳ್ಳುವ ಪರಿಪಾಠ ಪ್ರಾರಂಭಿಸಿದ್ದವು. ತಾನು ಹಾಸಿಗೆಯ ಮೇಲೆ ಇಟ್ಟಿದ್ದೇನೆಂದು ಖಾತರಿಯಿದ್ದ ಉಣ್ಣೆಗತ್ತರಿಗಳನ್ನು ಹುಡುಕಲು ಸಮಯ ವ್ಯರ್ಥಮಾಡುತ್ತಿದ್ದಳು. ಮನೆಯೆಲ್ಲ ಹುಡುಕಿದ ಮೇಲೆ ಅದು ಅಡುಗೆಯ ಮನೆಯ ಶೆಲ್ಪೊಂದರಲ್ಲಿ ಸಿಗುತ್ತಿತ್ತು. ಆದರೆ ಅವಳು ತಾನು ನಾಲ್ಕು ದಿನಗಳಿಂದ ಅಲ್ಲಿಗೆ ಹೋಗಿಯೇ ಇಲ್ಲವೆಂದು ತಿಳಿದುಕೊಂಡಿರುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಬೆಳ್ಳಿಯ ಬೋಗುಣಿಯಲ್ಲಿ ಫೋರ್ಕ್ ಇರುತ್ತಿರಲಿಲ್ಲ ಮತ್ತು ಅವುಗಳಲ್ಲಿ ಆರು ಪವಿತ್ರ ಪೀಠದಲ್ಲಿ ಹಾಗೂ ಮೂರು ಬಟ್ಟೆ ಒಗೆಯುವ ಸ್ಥಳದಲ್ಲಿ ಕಾಣುತ್ತಿದ್ದವು. ಈ ಹುಡುಕಾಟ ಅವಳು ಬರೆಯುವುದಕ್ಕೆ ಕುಳಿತಾಗ ಇನ್ನೂ ಸುಸ್ತು ತರಿಸುತ್ತಿತ್ತು. ಬಲಗಡೆ ಇಟ್ಟ ಮಸಿ ಕುಡಿಕೆ ಎಡಗಡೆ ಇರುತ್ತಿತ್ತು. ಮಸಿ ಹೀರುವ ಕಾಗದ ಕಳೆದುಹೋಗಿ ಎರಡು ದಿನಗಳ ನಂತರ ದಿಂಬಿನ ಕೆಳಗೆ ಸಿಗುತ್ತಿತ್ತು. ಹೊಸೆ ಅರ್ಕಾದಿಯೋಗೆ ಬರೆದ ಹಾಳೆಗಳು ಅಮರಾಂತ ಉರ್ಸುಲಾಳ ಕಾಗದಗಳ ಜೊತೆಯಲ್ಲಿ ಸೇರಿಕೊಂಡು ಬಿಡುತ್ತಿದ್ದವು. ಅಲ್ಲದೆ ಅವಳು ಒಬ್ಬರಿಗೆ ಬರೆದ ಕಾಗದಗಳನ್ನು ಮತ್ತೊಬ್ಬರ ಕವರುಗಳಲ್ಲಿ ಹಾಕಿದ್ದೇನೆಂದು ಯಾವಾಗಲೂ ನೊಂದುಕೊಳ್ಳುತ್ತಿದ್ದಳು. ಜೊತೆಗೆ ಅನೇಕ ಸಲ ನಿಜಕ್ಕೂ ಹೀಗಾಗಿತ್ತು. ಒಂದು ಸಲ ಅವಳು ಪೆನ್ ಕಳೆದುಕೊಂಡಳು. ಎರಡು ವಾರಗಳ ನಂತರ ಟಪಾಲು ಕೊಡುವವನು ಅವನ ಬ್ಯಾಗ್‌ನಲ್ಲಿದೆ ಎಂದು ಹೇಳಿ ವಾಪಸು ಕೊಟ್ಟ. ಅವನು ಅದು ಯಾರದ್ದು ಎಂದು ಕೇಳುತ್ತ ಮನೆಯಿಂದ ಮನೆಗೆ ಹೋದ. ಪ್ರಾರಂಭದಲ್ಲಿ ಅವಳು ಗರ್ಭಕೋಶ ಪಲ್ಲಟದ ಉಪಕರಣಗಳಂತೆ ಅದು ಕಾಣದ ಡಾಕ್ಟರುಗಳ ಕಿತಾಪತಿ ಎಂದು ತಿಳಿದುಕೊಂಡಿದ್ದಳು ಮತ್ತು ತನ್ನಷ್ಟಕ್ಕೆ ಬಿಟ್ಟು ಬಿಡಿ ಎಂದು ಕೇಳಿ ಅವರಿಗೆ ಪತ್ರ ಬರೆಯುವುದರಲ್ಲಿದ್ದಳು ಕೂಡ. ಆದರೆ ಅವಳು ಇನ್ನೇನೋ ಮಾಡಬೇಕಾದ್ದರಿಂದ ನಿಲ್ಲಿಸಿದಳು. ಅವಳು ವಾಪಸು ಹೋದಾಗ ಬರೆಯುತ್ತಿದ್ದ ಕಾಗದ ಅಲ್ಲಿರಲಿಲ್ಲ ಮತ್ತು ತಾನು ಅವಳಿಗೆ ಬರೆಯುತ್ತಿದ್ದರ ಕಾರಣವೂ ಮರೆತು ಹೋಯಿತು. ಸ್ವಲ್ಪ ಕಾಲ ಇದಕ್ಕೆಲ್ಲ ಅವ್ರೇಲಿಯಾನೋ ಕಾರಣವಿರಬೇಕು ಎಂದು ಭಾವಿಸಿ ಅವನ ಮೇಲೆ ನಿಗಾ ಇಟ್ಟಿದ್ದಳು. ಅವನು ಓಡಾಡುವ ಕಡೆ ಸಾಮಾನುಗಳನ್ನಿಟ್ಟು ಅದನ್ನು ಬದಲಾಯಿಸುವಾಗ ಅವನನ್ನು ಹಿಡಿಯಬೇಕೆಂದಿದ್ದಳು. ಆದರೆ ಅವಳಿಗೆ ಅವ್ರೇಲಿಯಾನೋ ಅಡುಗೆ ಮನೆಗೆ ಮತ್ತು ಬಚ್ಚಲು ಮನೆಗೆ ಹೋಗುವುದಕ್ಕೆ ಬಿಟ್ಟರೆ ಮೆಲ್‌ಕಿಯಾದೆಸ್‌ನ ರೂಮಿನಿಂದ ಆಚೆ ಬರುತ್ತಿಲ್ಲವೆಂದು ಬೇಗನೆ ಗೊತ್ತಾಯಿತು. ಅಲ್ಲದೆ ಅವನು ಕಿತಾಪತಿ ಮಾಡುವ ಮನುಷ್ಯನಲ್ಲವೆಂದು ಕೂಡ. ಆದ್ದರಿಂದ ಕೊನೆಗೆ ಅವಳು ಅದೆಲ್ಲ ದೆವ್ವಗಳ ಕಾಟವೆಂದು ನಂಬಿದಳು ಮತ್ತು ಸಾಮಾನುಗಳನ್ನು ಅವುಗಳನ್ನು ಉಪಯೋಗಿಸುವ ಸ್ಥಾನದಲ್ಲಿ ಇರಿಸಲು ಭದ್ರ ವ್ಯವಸ್ಥೆ ಮಾಡಲು ನಿರ್ಧರಿಸಿದಳು. ಉಣ್ಣೆಗತ್ತರಿಯನ್ನು ಹಾಸಿಗೆಯ ತಲೆಯ ಭಾಗದ ಹತ್ತಿರ ಉದ್ದನೆಯ ದಾರದಿಂದ ಕಟ್ಟಿದಳು. ಪೆನ್ನು ಮತ್ತು ಮಸಿ ಹೀರುವ ಪೇಪರನ್ನು ಟೇಬಲ್ಲಿನ ಎಡಭಾಗದಲ್ಲಿ ಇಟ್ಟಳು ಮತ್ತು ಇಂಕ್ ಬಾಟಲನ್ನು ಸಾಮಾನ್ಯವಾಗಿ ತಾನು ಬರೆಯುವ ಕಡೆ ಬಲಗಡೆಯಲ್ಲಿಟ್ಟು, ಕೊನೆಗೆ ಅಲ್ಲಾಡದಂತೆ ಮಾಡಿದಳು. ಸಮಸ್ಯೆಗಳು ತಕ್ಷಣವೇ ಬಗೆಹರಿಯಲಿಲ್ಲ. ಕಟ್ಟಿದ ಕೆಲವೇ ಗಂಟೆಗಳಲ್ಲಿ ದೆವ್ವಗಳು ಕಡಿಮೆ ಮಾಡಿದವೋ ಎನ್ನುವಂತೆ ಅದನ್ನು ಉಪಯೋಗಿಸಿ ಕಟ್ ಮಾಡಲು ಸಾಧ್ಯವಾಗದಂತಾಯಿತು. ಪೆನ್ನಿಗೆ ಕಟ್ಟಿದ್ದಕ್ಕೂ ಹಾಗೆಯೇ ಆಯಿತು. ಮತ್ತು ಸ್ವಲ್ಪ ಕಾಲದಲ್ಲಿಯೇ ಅವಳ ಕೈ ಕೂಡಾ ಇಂಕ್ ಬಾಟಲ್ ತಲುಪದಂತಾಯಿತು. ಬ್ರುಸೆಲ್ಸ್‌ನಲ್ಲಿದ್ದ ಅಮರಾಂತ ಉರ್ಸುಲಾಗೆ ಅಥವಾ ರೋಮ್‌ನಲ್ಲಿದ್ದ ಹೊಸೆ ಅರ್ಕಾದಿಯೋಗೆ ಈ ಅನಾಹುತಗಳ ಬಗ್ಗೆ ತಿಳಿಯಲಿಲ್ಲ. ತಾನು ಸುಖವಾಗಿರುವೆನೆಂದು ಫೆರ್ನಾಂಡ ಅವರಿಗೆ ತಿಳಿಸಿದಳು. ವಾಸ್ತವವಾಗಿ ಅವಳು ಹಾಗೆಯೇ ಇದ್ದಳು. ಏಕೆಂದರೆ ಅವಳು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಮುಕ್ತಳಾಗಿದ್ದಳು. ಅವಳಿಗೆ ತನ್ನ ತಂದೆ ತಾಯಿಯ ಮನೆಯಲ್ಲಿದ್ದಂತೆ ದೈನಂದಿನ ಸಮಸ್ಯೆಗಳಿಂದ, ಅವು ಮುಂಚೆಯೇ ನಿವಾರಣೆಯಾಗುತ್ತಿದ್ದ ರೀತಿಯಲ್ಲಿ ತನ್ನ ಜೀವನ ಸಾಗುತ್ತಿದೆ ಎಂದು ಭಾವಿಸಿದಳು. ಅವಳು ಮಾಡುತ್ತಿದ್ದ ಮುಖ್ಯವಾಗಿ ಕೊನೆಯಿಲ್ಲದ ಪತ್ರ ವ್ಯವಹಾರದಿಂದ ಸಾಂತ ಸೋಫಿಯಾ ಪಿಯದಾದ್ ಹೊರಟು ಹೋದ ಮೇಲೆ ಕಾಲದ ಬಗ್ಗೆ ಹಿಡಿತ ತಪ್ಪಿತು. ಅವಳಿಗೆ ದಿನ, ತಿಂಗಳು, ವರ್ಷಗಳ ಬಗ್ಗೆ ಸರಿಯಾದ ಪರಿಕಲ್ಪನೆ ಇತ್ತು. ಏಕೆಂದರೆ ಅವಳ ಮಕ್ಕಳು ಹಿಂದಿರುಗಿ ಬರುವ ತಾರೀಖನ್ನು ಅವು ಸೂಚಿಸುತ್ತಿದ್ದವು. ಆದರೆ ಮತ್ತೆ ಮತ್ತೆ ಅವರು ಅದನ್ನು ಮುಂದೆ ಹಾಕಿದಾಗ ಅವಳಿಗೆ ತಾರೀಖುಗಳಲ್ಲಿ ಗೊಂದಲ ಉಂಟಾಯಿತು. ಅವಧಿಗಳು ತಪ್ಪಿಹೋದವು ಮತ್ತು ಒಂದೇ ದಿನ ಮತ್ತೊಂದರಂತೆಯೇ ಕಂಡು ಅದು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಅವಳಿಗೆ ಅದರಿಂದ ತಾಳ್ಮೆ ಕಳೆದುಕೊಳ್ಳುವ ಬದಲು ಆಳದಲ್ಲಿ ಸಂತೋಷವಾಗುತ್ತಿತ್ತು. ಹೊಸೆ ಅರ್ಕಾದಿಯೋ ಅಂತಿಮ ಪ್ರಮಾಣಗಳನ್ನು ತೆಗೆದುಕೊಂಡು ಅನೇಕ ವರ್ಷಗಳಾಗಿದ್ದರೂ ರಾಯಭಾರ ಕೌಶಲ್ಯದ ಬಗ್ಗೆ ಉನ್ನತ ವ್ಯಾಸಂಗ ಪೂರೈಸುವುದಕ್ಕೆ ಕಾಯುತ್ತಿದ್ದೇನೆಂದು ತಿಳಿಸಿದಾಗ ಅವಳಿಗೆ ಯೋಚನೆಯಾಗಲಿಲ್ಲ. ಏಕೆಂದರೆ ಅವಳಿಗೆ ಸಂತ ಪೀಟರನನ್ನು ತಲುಪುವ ಮುಂಚಿನ ಮೆಟ್ಟಿಲುಗಳನ್ನು ಏರುವಾಗ ಎಂಥೆಂಥ ಅಡೆತಡೆಗಳು ಉಂಟಾಗುತ್ತವೆಂದು ಗೊತ್ತಿತ್ತು. ಆದರೆ ಇತರರಿಗೆ ಅಮುಖ್ಯವೆಂದು ತೋರುವ ಸುದ್ದಿಯೊಂದು, ಅಂದರೆ ತನ್ನ ಮಗ ಪೋಪ್‌ನನ್ನು ನೋಡಿದನೆನ್ನುವುದು ಅವಳ ಉತ್ಸಾಹವನ್ನು ಹೆಚ್ಚಿಸಿತ್ತು. ಅಮರಾಂತ ಉರ್ಸುಲಾ ತನ್ನ ವಿದ್ಯಾಭ್ಯಾಸದ ಅವಧಿ ಈ ಮುಂಚೆ ಭಾವಿಸಿದ್ದಕ್ಕಿಂತ ಇನ್ನೂ ಹೆಚ್ಚಾಗುತ್ತದೆ, ಏಕೆಂದರೆ ತನ್ನ ಜಾಣ್ಮೆ ಹಲವೊಂದು ಅನುಕೂಲಗಳನ್ನು ಮಾಡಿಕೊಟ್ಟಿದೆ ಮತ್ತು ಅದನ್ನು ತನ್ನ ತಂದೆ ಪರಿಗಣಿಸಿರಲಿಲ್ಲವೆಂದು ಬರೆದಾಗ ಅದೇ ರೀತಿಯ ಸಂತೋಷವಾಯಿತು.
ಸಾಂತ ಸೋಫಿಯಾ ದೆಲಾ ಪಿಯದಾದ್ ವ್ಯಾಕರಣದ ಪುಸ್ತಕವನ್ನು ತಂದುಕೊಟ್ಟು ಮೂರು ವರ್ಷವಾದ ಮೇಲೆ ಅವ್ರೇಲಿಯಾನೋ ಮೊದಲನೆ ಹಾಳೆಯಲ್ಲಿದ್ದದ್ದನ್ನು ಭಾಷಾಂತರಿಸುವುದರಲ್ಲಿ ಯಶಸ್ವಿಯಾದ. ಅದೊಂದು ವ್ಯರ್ಥವಾದ ಚಿಲ್ಲರೆ ಕೆಲಸವಾಗಿರಲಿಲ್ಲ. ಆದರೆ ಅದು ಉದ್ದವೆಷ್ಟಿದೆ ಎಂದು ತಿಳಿಯಲು ಸಾಧ್ಯವಿಲ್ಲದ ರಸ್ತೆಯಲ್ಲಿ ಮೊದಲನೆಯ ಹೆಜ್ಜೆಯಾಗಿತ್ತು. ಏಕೆಂದರೆ ಸ್ಪ್ಯಾನಿಷ್‌ನಲ್ಲಿದ್ದ ಪಠ್ಯಕ್ಕೆ ಯಾವುದೇ ಅರ್ಥವಿರಲಿಲ್ಲ. ಅದರ ಸಾಲುಗಳು ಸಂಕೇತ ಭಾಷೆಯಲ್ಲಿತ್ತು. ಅವ್ರೇಲಿಯಾನೋಗೆ ಅವುಗಳನ್ನು ಅರಿಯುವ ಸೂತ್ರ ಗೊತ್ತಿರಲಿಲ್ಲ. ಆದರೆ ಮೆಲ್‌ಕಿಯಾದೆಸ್ ಅವರಿಗೆ ಹಾಳೆಯಲ್ಲಿರುವುದರ ತಳ ಶೋಧಿಸಲು ಕತಲುನಿಯಾದವನ ಅಂಗಡಿಯಲ್ಲಿರುವ ಪುಸ್ತಕದ ಅಗತ್ಯವಿದೆ ಎಂದು ಹೇಳಿದ್ದರಿಂದ, ತನಗೆ ಅದು ಸಿಗುವಂತೆ ಮಾಡಲು ಫೆರ್ನಾಂಡಳ ಜೊತೆ ಮಾತನಾಡಲು ನಿರ್ಧರಿಸಿದ. ಅವಳನ್ನು ಕೇಳುವ ರೀತಿಯನ್ನು ಚಿಂದಿಯಾಗಿದ್ದ ತನ್ನ ರೂಮಿನಲ್ಲಿ ಯೋಚಿಸಿದ. ಆದರೆ ಸಣ್ಣಕೆಂಡದ ಮೇಲಿರುವ ಊಟವನ್ನು ತೆಗೆದುಕೊಂಡು ಹೋಗಲು ಬರುವಾಗ ಮಾತ್ರ ಅವಳೊಂದಿಗೆ ಮಾತನಾಡುವುದಕ್ಕೆ ಸಾಧ್ಯ ಎಂದು ಕಂಡಾಗ ಅವನು ಕಷ್ಟಪಟ್ಟು ಸಿದ್ಧಪಡಿಸಿಕೊಂಡಿದ್ದ ಮಾತುಗಳು ಗಂಟಲಲ್ಲೇ ಉಳಿದು ಮಾತು ಹೊರಡದಾಯಿತು. ಆ ಸಮಯದಲ್ಲಿ ಮಾತ್ರ ಅವನು ಅವಳನ್ನು ನೋಡುತ್ತಿದ್ದ. ಅವಳ ಬೆಡ್‌ರೂಮಿನಲ್ಲಿನ ಅವಳ ಹೆಜ್ಜೆ ಸಪ್ಪಳವನ್ನು ಕೇಳಿಸಿಕೊಂಡ. ಅವಳು ಅಂಚೆಯಾತನಿಂದ ಮಕ್ಕಳಿಂದ ಬರುವ ಕಾಗದಗಳನ್ನು ತೆಗೆದುಕೊಳ್ಳಲು ಮತ್ತು ತಾನು ತನ್ನ ಮಕ್ಕಳಿಗೆ ಬರೆದ ಕಾಗದಗಳನ್ನು ಕೊಡಲು ಮುಂಬಾಗಿಲಿಗೆ ಹೋಗುವ ಸದ್ದನ್ನು ಕೇಳಿಸಿಕೊಂಡ. ಅವನು ಲೈಟಿನ ಸ್ವಿಚ್ ಶಬ್ದದ ಮುಂಚೆ ರಾತ್ರಿ ಬಹಳ ಹೊತ್ತಿನ ತನಕ ಪೇಪರಿನ ಮೇಲೆ ಪೆನ್ನು ಮಾಡುವ ಕರ್ಕಶ ಶಬ್ದ ಮತ್ತು ಹಾಗೂ ಪ್ರಾರ್ಥನೆಯ ಪಿಸುದನಿಯನ್ನು ಕತ್ತಲಲ್ಲಿ ಕೇಳಿಸಿಕೊಂಡ. ಆ ನಂತರವೇ ಕಾದಿರುವ ಅವಕಾಶ ನಾಳೆ ಸಿಗುತ್ತದೆ ಎಂಬ ನಂಬಿಕೆಯಿಂದ ನಿದ್ದೆ ಹೋದ. ಒಂದು ದಿನ ಅವನು ಎಷ್ಟು ಉತ್ಸಾಹಭರಿತನಾಗಿದ್ದನೆಂದರೆ ಅವಕಾಶ ಸಿಕ್ಕೇ ಸಿಕ್ಕುತ್ತದೆ ಎಂದು ಭಾವಿಸಿ, ಭುಜದ ತನಕ ಇಳಿಬಿದ್ದಿದ್ದ ಕೂದಲನ್ನು ಕತ್ತರಿಸಿಕೊಂಡು, ಜೋತಾಡುತ್ತಿದ್ದ ಗಡ್ಡ ಶೇವ್ ಮಾಡಿಕೊಂಡು, ಬಿಗಿಯಾಗಿದ್ದ ಪ್ಯಾಂಟ್ ಮತ್ತು ಎಲ್ಲಿಂದ ಬಂದಿತ್ತೆಂದು ತಿಳಿಯದ ಕಾಲರಿದ್ದ ಶರಟನ್ನು ಹಾಕಿಕೊಂಡು ಫೆರ್ನಾಂಡ ಬೆಳಗಿನ ತಿಂಡಿ ತೆಗೆದುಕೊಳ್ಳುವುದಕ್ಕಾಗಿ ಕಾದ. ಪ್ರತಿದಿನ ಬರುತ್ತಿದ್ದ ಆ ಹೈ ಹೀಲ್ಸ್ ಚಪ್ಪಲಿಯ ಸೆಟೆದುಕೊಂಡಿರುತ್ತಿದ್ದ ಆ ಹೆಂಗಸು ದಿನ ಬರಲಿಲ್ಲ. ಆದರೆ ವಯಸ್ಸಾದ, ತೋಳಿಲ್ಲದ ಜುಬ್ಬ ತೊಟ್ಟಿದ್ದ ಸುಂದರಳಾಗಿದ್ದ, ಚಿನ್ನದ ಲೇಪ ಹಾಕಿದ ಕಿರೀಟವನ್ನು ಇಟ್ಟುಕೊಂಡು, ಗುಟ್ಟಾಗಿ ತನ್ನಷ್ಟಕ್ಕೆ ಅಳುವ, ಚಟುವಟಿಕೆ ಇಲ್ಲದವಳೊಬ್ಬಳು ಬಂದಳು. ವಾಸ್ತವವಾಗಿ ಫೆರ್ನಾಂಡ ಅವ್ರೇಲಿಯಾನೋ ಸೆಗುಂದೋನ ಟ್ರಂಕುಗಳಲ್ಲಿ ಸಿಕ್ಕ ರಾಣಿಯ ಡ್ರೆಸ್ಸನ್ನು ಅನೇಕ ಬಾರಿ ಉಟ್ಟುಕೊಂಡಿದ್ದಳು. ಯಾರಾದರೂ ಅವಳು ತೀರ ಸಂತೋಷದಿಂದ ವೈಯ್ಯಾರ ಮಾಡುತ್ತ ಕನ್ನಡಿ ಎದುರು ನಿಂತಿದ್ದನ್ನು ನೋಡಿದ್ದರೆ ಅವಳಿಗೆ ಹುಚ್ಚು ಹಿಡಿದಿದೆ ಎನ್ನಬಹುದಿತ್ತು. ಆದರೆ ಅವಳು ಹುಚ್ಚಿಯಾಗಿರಲಿಲ್ಲ. ಅವಳು ರಾಜರ ವಿಶೇಷ ಲಾಂಛನಗಳನ್ನು ನೆನಪುಗಳಾಗಿ ಬದಲಿಸಿಕೊಂಡ್ಡಿದ್ದಳು. ಅವಳು ಮೊದಲ ಸಲ ಅವನ್ನು ಉಟ್ಟುಕೊಂಡಾಗ ಹೊಟ್ಟೆಯೊಳಗೆ ಉಂಟಾಗುತ್ತಿದ್ದ ಸಂಕಟವನ್ನು ತಡೆಯಲಾಗಲಿಲ್ಲ. ಅವಳ ಕಣ್ಣುಗಳಲ್ಲಿ ನೀರು ತುಂಬಿತ್ತು. ಏಕೆಂದರೆ ಅವಳಿಗೆ ಆ ಗಳಿಗೆಯಲ್ಲಿ ರಾಣಿ ಮಾಡುವುದಕ್ಕಾಗಿ ತನ್ನನ್ನು ಮನೆಗೆ ಕರೆದುಕೊಂಡು ಹೋಗಲು ಬಂದವನ ಶೂಗಳ ಪಾಲೀಷಿನ ವಾಸನೆ ಮೂಗಿಗೆ ಬಡಿದಿತ್ತು. ಕಮರಿದ ಕನಸುಗಳ ನೋವು ಅವಳೊಳಗೆ ತುಂಬಿತು. ಅವಳಿಗೆ ತನಗೆಷ್ಟು ವಯಸ್ಸಾಗಿ ಸೊರಗಿ ಹೋಗಿ, ತನ್ನ ಜೀವನದ ಅತ್ಯುತ್ತಮ ಕ್ಷಣಗಳಿಂದ ಬಹಳಷ್ಟು ದೂರವಾಗಿದ್ದೇನೆ ಎಂದು ತೋರಿತೆಂದರೆ, ಅವಳು ಕನಿಷ್ಠವೆಂದು ಭಾವಿಸಿದ್ದ ಕ್ಷಣಗಳಿಗೂ ಕೂಡ ಕಾತರಿಸಿದಳು. ಆಗಲೇ ಅವಳಿಗೆ ತಾನಿದ್ದ ಊರಿನ ಗಾಳಿ, ಸಂಜೆಯಲ್ಲಿ ಗುಲಾಬಿಗಳ ಸುಗಂಧ ಮುಂತಾದವುಗಳನ್ನು ಕಳೆದುಕೊಂಡಿದ್ದ ಗಟ್ಟಿ ಕುಳಗಳ ನಿರ್ದಯತೆ ಅರಿವಿಗೆ ಬಂತು. ದಿನನಿತ್ಯದ ಬಲವಾದ ಹೊಡೆತಗಳನ್ನು ತೊಂದರೆ ಪಟ್ಟುಕೊಳ್ಳದೆ ತಡೆದುಕೊಳ್ಳುತ್ತಿದ್ದ ಅವಳ ಹುಡಿಯಾದ ಹೃದಯ, ಈ ನೋವಿನಿಂದ ಉದುರಿ ಬಿತ್ತು. ಕುಗ್ಗಿಸುತ್ತಿದ್ದ ವಯಸ್ಸಿನಿಂದಾಗಿ ಅವಳಿಗೆ ಬೇಸರಪಟ್ಟುಕೊಳ್ಳುವುದೊಂದು ದುರಭ್ಯಾಸವಿತ್ತು. ಅವಳು ಏಕಾಂತದಲ್ಲಿ ಸಾಕಷ್ಟು ಮೃದುವಾದಳು. ಹೀಗಿದ್ದರೂ ಅವಳು ಅಡುಗೆ ಮನೆಗೆ ಹೋದ ಆ ದಿನ, ಭಯಗೊಂಡ ಕಣ್ಣುಗಳ, ಮಂಕಾದ, ಮೂಳೆ ಮೂಳೆಯ, ಹದಿಹರೆಯದವನೊಬ್ಬ ಕಾಫಿ ಕೊಟ್ಟಾಗ ಅವಳಿಗೆ ವಿಚಿತ್ರವಾಗಿ ಕಾಣಿಸಿತು. ಅವಳು ಅವನಿಗೆ ಅನುಮತಿ ನಿರಾಕರಿಸಿದ್ದಷ್ಟೇ ಅಲ್ಲದೆ ತಾನು ಉಪಯೋಗಿಸದೆ ಇಟ್ಟಿದ್ದ ಗರ್ಭಾಶಯ ಪಲ್ಲಟದ ಸಲಕರಣೆಗಳಿರುವ ಮನೆಯ ಬೀಗದ ಕೈಯನ್ನು ಅಂದಿನಿಂದ ತನ್ನ ಪಾಕೆಟ್‌ನಲ್ಲಿ ಇಟ್ಟುಕೊಂಡಳು. ಅದು ನಿರುಪಯೋಗವಾಗಿತ್ತು. ಏಕೆಂದರೆ ಅವ್ರೇಲಿಯಾನೋಗೆ ಬೇಕಿದ್ದರೆ ಯಾವಾಗಲಾದರೂ ಮನೆಯಿಂದ ಹೊರಗೆ ಹೋಗಿ ಪುನಃ ವಾಪಸು ಬರುವುದು ಸಾಧ್ಯವಿತ್ತು. ಆದರೆ ಬಹಳ ದಿನಗಳ ಬಂಧನ, ಅನಿಶ್ಚಿತವಾಗಿರುವ ಪ್ರಪಂಚ, ವಿಧೇಯನಾಗಿರುವ ಸ್ವಭಾವ ಅವನಲ್ಲಿ ಬಂಡಾಯದ ಭಾವನೆಯನ್ನು ಅಳಿಸಿಹಾಕಿತ್ತು. ಆದ್ದರಿಂದ ಅವನು ಮತ್ತೆ ತನ್ನ ಕೋಣೆಗೆ ಹೋಗಿ ಓದಿದ ಚರ್ಮದ ಹಾಳೆಯ ಮೇಲಿನ ಬರಹಗಳನ್ನು ಮತ್ತೆ ಮತ್ತೆ ಓದುತ್ತಿದ್ದ ಮತ್ತು ರಾತ್ರಿ ಬಹಳ ಹೊತ್ತಾದ ಮೇಲೆ ಫೆರ್ನಾಂಡ ಬಿಕ್ಕಳಿಸುವುದನ್ನು ಕೇಳಿಸಿಕೊಳ್ಳುತ್ತಿದ್ದ. ಒಂದು ದಿನ ಅವನು ಎಂದಿನಂತೆ ಒಲೆ ಉರಿ ಹೊತ್ತಿಸುವುದಕ್ಕೆ ಹೋದಾಗ, ನಂದಿ ಹೋದ ಕೆಂಡದ ಮೇಲೆ ಹಿಂದಿನ ದಿನ ಇಟ್ಟಿದ್ದ ಊಟ ಹಾಗೆಯೇ ಇದ್ದದ್ದನ್ನು ಕಂಡ. ಆಗ ಅವನು ಅವಳ ಬೆಡ್‌ರೂಮಿನಲ್ಲಿ ನೋಡಿದಾಗ ತೋಳಿಲ್ಲದ ಜುಬ್ಬ ತೊಟ್ಟು ಹಾಸಿಗೆಯಲ್ಲಿ ಮೈ ಚಾಚಿದ್ದ, ದಂತದ ಬಣ್ಣಕ್ಕೆ ತಿರುಗಿದ ಚರ್ಮದ ಎಂದಿಗಿಂತ ಹೆಚ್ಚು ಸುಂದರವಾಗಿದ್ದವಳನ್ನು ಕಂಡ. ನಾಲ್ಕು ತಿಂಗಳ ನಂತರ ಹೊಸೆ ಅರ್ಕಾದಿಯೋ ಬಂದಾಗ ಅವಳು ಹಾಗೆಯೇ ಇದ್ದಳು.
ಅವನ ತಾಯಿಯ ಹೋಲುವ ಮನುಷ್ಯನನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಅವನು ದುಂಡನೆಯ ಗಡುಸಾದ ಕಾಲರ್ ಇದ್ದ ಶರ್ಟ್ ಸೂಟ್ ಹಾಕಿಕೊಂಡಿದ್ದು ಕತ್ತಿನ ಸುತ್ತ ನೆಕ್ ಟೈಗೆ ಬದಲಾಗಿ ಸಿಲ್ಕ್ ರಿಬ್ಬನ್‌ನನ್ನು ಬೋ ಟೈ ರೀತಿ ಕಟ್ಟಿಕೊಂಡಿದ್ದ. ಅವನು ಲವಲವಿಕೆ ಇದ್ದವನಂತೆ ಕಾಣದೆ, ಬೆರಗಾದವನಂತೆ ಕಾಣುತ್ತಿದ್ದ. ಅವನ ತುಟಿಗಳು ತುಂಬಿಕೊಂಡಿರಲಿಲ್ಲ ಮತ್ತು ಎದ್ದು ಕಾಣದ ಮಧ್ಯೆ ಬೈತಲೆಯ ಕಪ್ಪುಗೂದಲಿನವನಾಗಿದ್ದು, ಅದು ಸಂತರು ಕೂದಲು ಬಿಡುವ ರೀತಿಯದಾಗಿತ್ತು. ಅವನ ಚೂಪು ಗಡ್ಡ ಮನಸ್ಸಾಕ್ಷಿಯನ್ನು ಬಿಂಬಿಸುತ್ತಿತ್ತು. ಅವನ ಕೈಗಳು ಒಣಗಿದ್ದು ಹಸಿರು ನರಗಳು ಕಾಣುತ್ತಿದ್ದವು ಮತ್ತು ಬೆರಳುಗಳು ರಕ್ತಹೀನವಾಗಿದ್ದವು. ಅವನು ಎಡ ತೋರು ಬೆರಳಲ್ಲಿ ಸೂರ್ಯಕಾಂತಿ ಹೂವಿನ ಬಣ್ಣದ ಅಪ್ಪಟ ಬಂಗಾರದ ಉಂಗುರ ಹಾಕಿಕೊಂಡಿದ್ದ. ಮನೆಯ ಮುಂಬಾಗಿಲನ್ನು ತೆರೆದಾಗ ಅವನು ಬಹಳ ದೂರದಿಂದ ಬಂದಿದ್ದಾನೆಂದು ಅವ್ರೇಲಿಯಾನೋಗೆ ಯಾರೂ ಹೇಳಬೇಕಾಗಿರಲಿಲ್ಲ. ಅವನು ಮನೆಯೊಳಗೆ ಓಡಾಡಿದಾಗ ನೆರಳುಗಳ ನಡುವೆ ಅವನು ಎಲ್ಲಿದ್ದಾನೆಂದು ತಿಳಿಯಲು ಉರ್ಸುಲಾ ಅವನ ಮೇಲೆ ಬಚ್ಚಲು ಮನೆಯ ನೀರನ್ನು ಸಿಂಪಡಿಸುತ್ತಿದ್ದಾಗ ಇರುತ್ತಿದ್ದ ವಾಸನೆ ಮನೆಯನ್ನೆಲ್ಲ ಹರಡಿತು. ಅನೇಕ ವರ್ಷಗಳು ಅಲ್ಲಿಲ್ಲದ ಕಾರಣ ಹೊಸೆ ಅರ್ಕಾದಿಯೋ ಇನ್ನೂ ಒಂಟಿಯಾಗಿರುವ, ವ್ಯಥೆಗೊಳಗಾಗಿರುವ ಪ್ರಾಯಕ್ಕೆ ಬಂದ ಹುಡುಗನಾಗಿಯೇ ಇದ್ದಾನೆಂದು ಪರಿಗಣಿಸುವುದು ಅಸಾಧ್ಯವಾಗಿತ್ತು. ಅವನು ನೇರವಾಗಿ ಅವ್ರೇಲಿಯಾನೋ ಮೆಲ್‌ಕಿಯಾದೆಸ್‌ನ ಸೂತ್ರದ ಪ್ರಕಾರ, ದೇಹವನ್ನು ಕಾಪಾಡುವುದಕ್ಕಾಗಿ, ಅಜ್ಜನ ತಂದೆಯ ನೀರಿನ ಪೈಪ್‌ನಲ್ಲಿ ನಾಲ್ಕು ತಿಂಗಳ ಕಾಲ ಪಾದರಸವನ್ನು ಕುದಿಸಿದ್ದ ತನ್ನ ತಾಯಿಯ ಬೆಡ್‌ರೂಮಿಗೆ ಹೋದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಗೆ ಹೆಚ್ಚಿಗೆ ಪ್ರಶ್ನೆಗಳನ್ನು ಕೇಳಲಿಲ್ಲ. ಅವನು ಹೆಣದ ಹಣೆಗೆ ಮುತ್ತಿಟ್ಟ. ಅನಂತರ ಅವಳ ಸ್ಕರ್ಟಿನ ಪಾಕೆಟ್‌ನಲ್ಲಿದ್ದ ಇನ್ನೂ ಮೂರು ಉಪಯೋಗಿಸದ ಗರ್ಭಾಶಯ ಪಲ್ಲಟಗೊಳಿಸಲು ಉಪಯೋಗಕ್ಕೆ ಬರುವ ವಸ್ತುಗಳನ್ನು ಮತ್ತು ಅವಳ ಕಪಾಟಿನ ಬೀಗದ ಕೈಯನ್ನು ತೆಗೆದ. ಅವನು ಚಟುವಟಿಕೆ ಇಲ್ಲದಂತೆ ಕಾಣುತ್ತಿದ್ದದ್ದಕ್ಕೆ ವ್ಯತಿರಿಕ್ತವಾಗಿ ತೀರ ನಿಖರವಾದ ಮತ್ತು ನೇರವಾದ ಚಲನೆಗಳಿಂದ ಪ್ರತಿಯೊಂದನ್ನೂ ನಿರ್ವಹಿಸಿದ. ಅವನು ಕಪಾಟಿನಿಂದ ಗಂಧದ ವಾಸನೆ ಇರುವ ಸಣ್ಣ ಪೆಟ್ಟಿಗೆಯಲ್ಲಿ ಫೆರ್ನಾಂಡ ಅವನಿಂದ ಗುಟ್ಟಾಗಿಟ್ಟಿದ್ದ ಅನೇಕ ಸತ್ಯ ಸಂಗತಿಗಳನ್ನು ಬರೆದು ಹೃದಯ ಹಗುರ ಮಾಡಿಕೊಂಡಿದ್ದ, ಉದ್ದನೆಯ ಕಾಗದ ತೆಗೆದ. ಅವನು ನಿಂತುಕೊಂಡೇ ಏನೂ ಆತಂಕ ಪಡದೆ ಅದನ್ನು ಓದತೊಡಗಿದ ಮತ್ತು ಮೂರನೆ ಪುಟಕ್ಕೆ ಬಂದಾಗ ನಿಲ್ಲಿಸಿ, ತಲೆ ಎತ್ತಿ ಅವ್ರೇಲಿಯಾನೋನನ್ನು ಎರಡನೆ ಬಾರಿ ಗುರುತು ಹಿಡಿದವನಂತೆ ನೋಡಿದ.
ಅವನು ತೀಕ್ಷ್ಣವಾದ ಧ್ವನಿಯಲ್ಲಿ, “ಹಾಗಾದ್ರೆ ನೀನು ಹಾದರಕ್ಕೆ ಹುಟ್ಟಿರೋದು” ಎಂದ.
“ನಾನು ಅವ್ರೇಲಿಯಾನೋ ಬ್ಯುಂದಿಯಾ”
ಹೊಸೆ ಅರ್ಕಾದಿಯೋ, “ರೂಮಿಗೆ ಹೋಗು” ಎಂದ.
ಅವ್ರೇಲಿಯಾನೋ ಹೋದ ಮತ್ತು ಅವನು ಕುತೂಹಲಕ್ಕಾಗಿ ಕೂಡ ಶವಸಂಸ್ಕಾರದ ಸಿದ್ಧತೆಗಳು ಉಂಟುಮಾಡುತ್ತಿದ್ದ ಶಬ್ದ ಕೇಳಿ ಹೊರಗೆ ಬರಲಿಲ್ಲ. ಕೆಲವು ಸಲ ಅವನು ಅಡುಗೆ ಮನೆಯಿಂದ ಹೊಸೆ ಅರ್ಕಾದಿಯೋ ಮನೆಯಲ್ಲಿ ಆತಂಕದಿಂದ ಉಸಿರಾಡುತ್ತ ಓಡಾಡುತ್ತಿದ್ದನ್ನು ನೋಡಿದ. ಅವನಿಗೆ ಮಧ್ಯ ರಾತ್ರಿ ಕಳೆದ ಮೇಲೆ ಕೂಡ ಹೆಜ್ಜೆ ಸಪ್ಪಳ ಕೇಳಿಸುವುದು ಮುಂದುವರೆಯಿತು. ಅವನಿಗೆ ಅನೇಕ ತಿಂಗಳ ಕಾಲ ಅವನ ಧ್ವನಿ ಕೇಳಿಸಲಿಲ್ಲ. ಇದಕ್ಕೆ ಹೊಸೆ ಅರ್ಕಾದಿಯೋ ಅವನನ್ನು ಕರೆಯದೇ ಇದ್ದದ್ದು ಒಂದಾದರೆ, ಅವನಿಗೂ ಹಾಗಾಗುವುದು ಬೇಡವಾಗಿತ್ತು. ಜೊತಗೆ ಅವನಿಗೆ ಚರ್ಮದ ಹಾಳೆಯ ಬರಹಗಳನ್ನು ಬಿಟ್ಟ ಬೇರೆ ಏನನ್ನು ಯೋಚಿಸುವುದಕ್ಕೂ ಸಮಯವಿರಲಿಲ್ಲ. ಫೆರ್ನಾಂಡ ಸತ್ತ ಮೇಲೆ ಉಳಿದಿದ್ದ ಸಣ್ಣ ಬಂಗಾರದ ಮೀನನ್ನು ತೆಗೆದುಕೊಂಡು ತನಗೆ ಬೇಕಾದ ಪುಸ್ತಕಗಳನ್ನು ಹುಡುಕಿಕೊಂಡು, ಕತಲುನಿಯಾದವನ ಪುಸ್ತಕದಂಗಡಿಗೆ ಹೋಗಿದ್ದ. ದಾರಿಯಲ್ಲಿ ಕಂಡ ಯಾವುದರ ಬಗ್ಗೆಯೂ ಅವನಿಗೆ ಆಸಕ್ತಿ ಇರಲಿಲ್ಲ. ಪ್ರಾಯಶಃ ಅವನಲ್ಲಿ ಹೋಲಿಕೆ ಮಾಡುವ ನೆನಪುಗಳು ಕಡಿಮೆಯಾಗಿದ್ದವು. ನಿರ್ಜನವಾದ ರಸ್ತೆಗಳು ಹಾಗೂ ಹಾಳು ಸುರಿಯುತ್ತಿದ್ದ ಮನೆಗಳು ಹಿಂದೊಮ್ಮೆ ಅವನು ಕಲ್ಪಿಸಿಕೊಂಡು ಅವುಗಳ ಬಗ್ಗೆ ಅರಿಯಲು ಜೀವ ಕೊಡುವಂತೆ ಇದ್ದ ಹಾಗೆಯೇ ಈಗಲೂ ಇದ್ದವು. ಹಿಂದೆ ಫೆರ್ನಾಂಡ ನಿರಾಕರಿಸಿದ್ದ ಅವಕಾಶವನ್ನು, ಅಗತ್ಯವಾದ ಕನಿಷ್ಠವಾದ ಅವಧಿಯನ್ನು, ಮೊದಲ ಬಾರಿಗೆ ತನಗೆ ತಾನೇ ಕೊಟ್ಟುಕೊಂಡಿದ್ದ. ಆದ್ದರಿಂದ ಸಮಯ ವ್ಯರ್ಥಮಾಡದೆ, ಕನಸುಗಳನ್ನು ವ್ಯಾಖ್ಯಾನಿಸಲಾಗುತ್ತಿದ್ದ ಮನೆಯಿದ್ದ ಸಣ್ಣ ರಸ್ತೆಯಲ್ಲಿ, ಹನ್ನೊಂದು ಬ್ಲಾಕುಗಳನ್ನು ದಾಟಿ, ಏದುಸಿರು ಬಿಡುತ್ತ, ಗೊಂದಲಗೊಂಡು, ಕಾಲಿಡಲು ಸ್ಥಳವಿಲ್ಲದ ಸ್ಥಳಕ್ಕೆ ಹೋದ. ಅದು ಪುಸ್ತಕದ ಅಂಗಡಿಗಿಂತ ಹೆಚ್ಚಾಗಿ ಹಳೆಯ ಪುಸ್ತಕಗಳ ಗುಪ್ಪೆಯಂತೆ ಕಂಡಿತು. ಅಲ್ಲಿ ಶೆಲ್ಫ್‌ಗಳಿಗೆ ಗೆದ್ದಲು ಹತ್ತಿತ್ತು, ಮೂಲೆಗಳಲ್ಲಿ ಹಾಗೂ ಓಡಾಡುವುದಕ್ಕೆಂದು ಇದ್ದ ಸಣ್ಣ ಜಾಗದಲ್ಲಿಯೂ ಜೇಡರ ಬಲೆಗಳಿದ್ದವು. ಉದ್ದನೆ ಟೇಬಲ್ಲಿನ ಮೇಲೆ ಹಳೆಯ ಪುಸ್ತಕಗಳು ಮತ್ತು ಪೇಪರುಗಳು ಇದ್ದ ಗುಪ್ಪೆಯ ಜೊತೆಗೆ ಅಂಗಡಿಯ ಮಾಲೀಕ ನೇರಳೆ ಬಣ್ಣದ ಅಕ್ಷರಗಳಲ್ಲಿ ಬರೆಯುತ್ತಿದ್ದ. ಅಲ್ಲದೆ ಸ್ಕೂಲ್ ನೋಟ್ ಪುಸ್ತಕದ ಬಿಡಿಹಾಳೆಗಳಲ್ಲಿ ಕೂಡ. ಅವನಿಗೆ ಹಣೆಯ ಮೇಲೆ ಜುಟ್ಟಿರುವ ಗಿಣಿಯಂತೆ ಬಿದ್ದಿದ್ದ ಬಿಳಿಗೂದಲಿತ್ತು. ಅವನ ನೀಲಿಗಣ್ಣುಗಳು ಎಲ್ಲ ಪುಸ್ತಕಗಳನ್ನು ಓದಿದ್ದನೆಂದು ಹೇಳುತ್ತಿದ್ದವು. ಅವನು ಚಡ್ಡಿ ಹಾಕಿಕೊಂಡಿದ್ದು ಮೈಯೆಲ್ಲ ಬೆವೆತು ಹೋಗಿತ್ತು ಮತ್ತು ಬಂದವರು ಯಾರೆಂದು ನೋಡುವುದಕ್ಕಾಗಿ ಬರೆಯುವುದನ್ನು ನಿಲ್ಲಿಸಲಿಲ್ಲ. ಅಲ್ಲಿನ ಅವ್ಯವಸ್ಥೆಯ ಮಧ್ಯದಲ್ಲಿಯೂ ಅವ್ರೇಲಿಯಾನೋ ತಾನು ಹುಡುಕುತ್ತಿದ್ದ ಐದು ಪುಸ್ತಕಗಳನ್ನು ಹೊರತೆಗೆದ. ಏಕೆಂದರೆ ಅವು ಮೆಲ್‌ಕಿಯಾದೆಸ್ ಹೇಳಿದ ಸ್ಥಳದಲ್ಲೇ ಇದ್ದವು. ಅವನು ಏನೂ ಮಾತಾಡದೆ ಆ ಪುಸ್ತಕಗಳನ್ನು ಮತ್ತು ಸಣ್ಣ ಬಂಗಾರದ ಮೀನನ್ನು ಕತಲುನಿಯಾದವನಿಗೆ ಕೊಟ್ಟ. ಅವನು ಕಣ್ಣನ್ನು ಎರಡು ಚಿಪ್ಪು ಮೀನಿನ ಥರ ಕಿರಿದಾಗಿಸಿ ಅವುಗಳನ್ನು ಪರೀಕ್ಷಿಸಿದ. ಅನಂತರ ತನ್ನದೇ ಭಾಷೆಯಲ್ಲಿ, “ನಿಂಗೆಲ್ಲೋ ಹುಚ್ಚು ಹಿಡಿದಿರ್‍ಬೇಕು” ಎಂದು ಹೇಳಿ ಭುಜ ಕೊಡವಿದ ಮತ್ತು ಅವ್ರೇಲಿಯಾನೋಗೆ ಐದು ಪುಸ್ತಕಗಳನ್ನು ಹಾಗೂ ಬಂಗಾರದ ಮೀನನ್ನು ವಾಪಸು ಕೊಟ್ಟ.
ಅವನು ಸ್ಪ್ಯಾನಿಷ್‌ನಲ್ಲಿ, “ನೀನವನ್ನು ತೊಗೋ. ಅವನ್ನು ಓದಿದ ಕೊನೇಯವ್ನು ಅಂದ್ರೆ ಕುರುಡನಾದ ಐಸಾಕ್ ಇರ್‍ಬೇಕು. ನೋಡು, ಏನು ಮಾಡ್ತಾ ಇದೀನೀಂತ ಯೋಚ್ನೆ ಮಾಡು” ಎಂದ.
ಹೊಸೆ ಅರ್ಕಾದಿಯೋ ಮೆಮೆಯ ರೂಮನ್ನು ಸುವ್ಯವಸ್ಥೆಗೊಳಿಸಿದ ಮತ್ತು ವೆಲ್‌ವೆಟ್ ಕರ್ಟನ್ನುಗಳನ್ನು ಶುಚಿಗೊಳಿಸಿ ವೈಭವದ ಮಂಚವನ್ನು ಸರಿಪಡಿಸಿದ ಅಲ್ಲದೆ ಉಪಯೋಗಿಸದೆ ಬಿಟ್ಟಿದ್ದ ಬಚ್ಚಲು ಮನೆಯಲ್ಲಿದ್ದ ಕಪ್ಪು ಬಡಿದಿದ್ದ ಸಿಮೆಂಟ್ ಕೊಳವನ್ನು ಉಪಯೋಗಕ್ಕೆ ತಂದ, ಅವನು ತನ್ನ ವೈಭವದ ಪೋಷಾಕು, ಕೃತಕ ಸುಗಂಧ ಮತ್ತು ನಕಲಿ ಒಡವೆಗಳನ್ನು ಬೇಕಾದ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಿದ. ಮನೆಯ ಉಳಿದ ಭಾಗದಲ್ಲಿ ಕಾಣುವಂತೆ ತೋರುತ್ತಿದ್ದ ಒಂದೇ ವಸ್ತುವೆಂದರೆ ಪವಿತ್ರ ಪೀಠದಲ್ಲಿದ್ದ ಸಂತರುಗಳ ವಿಗ್ರಹಗಳು. ಒಂದು ಮಧ್ಯಾಹ್ನ ಅವನು ಅವುಗಳನ್ನೆಲ್ಲ ಅಂಗಳದಲ್ಲಿಟ್ಟು ಬೆಂಕಿ ಹಚ್ಚಿದ. ಸಾಮಾನ್ಯವಾಗಿ ಅವನು ಹನ್ನೊಂದು ಗಂಟೆ ದಾಟುವ ತನಕ ಮಲಗಿರುತ್ತಿದ್ದ. ಅವನು ಬಂಗಾರದ ಡ್ರೇಗಾನ್‌ಗಳಿದ್ದ ಕೊಳಕು ಬಟ್ಟೆಯಲ್ಲಿ ಕಾಲಿಗೆ ಹಳದಿ ಬಣ್ಣದ ಚಪ್ಪಲಿಗಳನ್ನು ಹಾಕಿಕೊಂಡು ಬಚ್ಚಲು ಮನೆಗೆ ಹೋಗುತ್ತಿದ್ದ. ಅಲ್ಲಿ ವಿಧ್ಯುಕ್ತ ಕ್ರಿಯೆಯನ್ನು ಕ್ರಮವಾಗಿ ಜರುಗಿಸಿ ಸುಂದರಿ ರೆಮಿದಿಯೋಸ್‌ಳನ್ನು ಕರೆತರುತ್ತಿದ್ದ. ಸ್ನಾನ ಮಾಡುವುದಕ್ಕಿಂತ ಮುಂಚೆ, ಮೂರು ಡೇಗೆ ರೂಪದ ವಿಶಿಷ್ಟ ಕಲ್ಲಿನ ಪೆಟ್ಟಿಗೆಯಲ್ಲಿ ತಾನು ತೆಗೆದುಕೊಂಡು ಹೋಗುತ್ತಿದ್ದ ಲವಣಗಳನ್ನು ಹಾಕುತ್ತಿದ್ದ. ಅವನು ಸೋರೆ ಬುರುಡೆಯಿಂದ ಸ್ನಾನ ಮಾಡುತ್ತಿರಲಿಲ್ಲ. ಆದರೆ ಅದರಲ್ಲಿ ಎರಡು ಗಂಟೆ ಕಾಲ ತಳ್ಳುತ್ತ, ಅಮರಾಂತಗಳನ್ನು ನೆನಪು ಮಾಡಿಕೊಳ್ಳುತ್ತ ಇರುತ್ತಿದ್ದ. ಅವನು ಊರಿಗೆ ಬಂದು ಕೆಲವು ದಿನಗಳಾದ ನಂತರ ಆ ಊರಿನಲ್ಲಿ ತೀರ ಶಾಖವಾಗಿದ್ದರಿಂದ ಮತ್ತು ಅವನಲ್ಲಿ ಇದ್ದ ಅದೊಂದೇ ಸೂಟ್ ಇತ್ತು, ಪಿಯತ್ರೋ ಕ್ರೆಸ್ಪಿ ನೃತ್ಯಾಭ್ಯಾಸ ಮಾಡಿಸುತ್ತಿದ್ದ ದಿನಗಳಲ್ಲಿ ಉಟ್ಟುಕೊಂಡಿದ್ದಂಥ ಕೆಲವು ಬಿಗಿಯಾದ ಪ್ಯಾಂಟ್‌ಗಳಿಗೆ, ಜೀವವಿರುವ ಕಂಬಳಿ ಹುಳುಗಳಿಂದ ನೇಯ್ದ, ಹೃದಯಕ್ಕೆ ಹೊಂದುವ ಸ್ಥಳದ ಹತ್ತಿರ ಇನಿಷಿಯಲ್ಸ್‌ನ ಕಸೂತಿ ಮಾಡಿರುವ ಸಿಲ್ಕ್ ಶರಟಿಗೆ ಅದಲು ಬದಲು ಮಾಡಿಕೊಂಡ. ವಾರಕ್ಕೆ ಎರಡು ಸಲ ಬಟ್ಟೆ ಶುಚಿ ಮಾಡಿ, ಹಾಕಿಕೊಳ್ಳಲು ಬೇರೆ ಯಾವುದೂ ಇಲ್ಲದ ಕಾರಣ ಅದು ಒಣಗುವ ತನಕ ಮೇಲು ಹೊದಿಕೆಯಲ್ಲಿ ಇರುತ್ತಿದ್ದ. ಅವನು ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಅವನು ಮಧ್ಯಾಹ್ನದ ಬಿಸಿಲು ಕಡಿಮೆಯಾದ ಮೇಲೆ ಹೊರಗೆ ಹೋಗುತ್ತ ಮತ್ತು ರಾತ್ರಿ ಬಹಳ ಹೊತ್ತಾದ ಮೇಲೆ ವಾಪಸು ಬರುತ್ತಿದ್ದ. ಅನಂತರ ಅವನು ಆತಂಕದಿಂದ ಅತ್ತಿಂದಿತ್ತ ಬೆಕ್ಕಿನ ಹಾಗೆ ಓಡಾಡುತ್ತ, ಅಮರಾಂತಳನ್ನು ಕುರಿತು ಯೋಚಿಸುತ್ತಿದ್ದ. ಅವಳು ಮತ್ತು ಆರದ ದೀಪದೆದುರು ಇದ್ದ ಪೂಜ್ಯರ ವಿಗ್ರಹದ ಹೆದರಿಸುವ ನೋಟಗಳು ಅವನಿಗೆ ಆ ಮನೆಯಲ್ಲಿನ ನೆನಪುಗಳನ್ನು ಉಳಿಸಿಕೊಂಡಿದ್ದ. ಅಗಸ್ಟ್‌ನಲ್ಲಿ ಅನೇಕ ಸಲ ಭ್ರಮೆಗೊಳಿಸುವ ನಿದ್ದೆಯ ಮಧ್ಯೆ, ಕಣ್ತೆರೆದು ಲೇಸ್ ಹಾಕಿದ ಒಳಲಂಗ ಮತ್ತು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದ ಅಮರಾಂತ, ಅಮೃತ ಶಿಲೆಯ ಅಂಚಿರುವ ಕೊಳದಿಂz, ದೇಶಬಿಟ್ಟು ಹೋಗಬೇಕಾದ ಆತಂಕದಿಂದ ಹೊರಗೆ ಬರುತ್ತಿರುವುದನ್ನು ನೋಡುತ್ತಿದ್ದ. ಆ ಕಲ್ಪನೆಯನ್ನು ಯುದ್ಧದ ರಕ್ತದೋಕಳಿಯಲ್ಲಿ ಮುಳುಗಿಸುವುದಕ್ಕೆ ಪ್ರಯತ್ನಿಸಿದ. ಅವ್ರೇಲಿಯಾನೋ ಹೊಸೆಗೆ ವ್ಯತಿರಿಕ್ತವಾಗಿ ಅವನು ಅದನ್ನು ತನ್ನ ವಿಷಯಾಸಕ್ತಿಯ ನಡವಳಿಕೆಯಲ್ಲಿ ಜೀವಂತವಾಗಿಡುವುದರ ಜೊತೆಗೆ ತನ್ನ ತಾಯಿಯನ್ನು ಪೂಜ್ಯ ಧೋರಣೆಗೆ ತಕ್ಕ ರೀತಿಯಿಂದ ಸಂತುಷ್ಟಗೊಳಿಸಿದ್ದ. ಅವನಿಗಾಗಲಿ ಅಥವ ಫೆರ್ನಾಂಡಳಿಗಾಗಲಿ ಭ್ರಮೆಗಳನ್ನು ಅದಲು ಬದಲು ಮಾಡಿಕೊಳ್ಳುವುದಕ್ಕಾಗಿ ಪರಸ್ಪರ ಸಂಪರ್ಕಿಸುತ್ತಿರುವುದೆಂದು ತಿಳಿದಿರಲಿಲ್ಲ. ಹೊಸೆ ಅರ್ಕಾದಿಯೋ ರೋಮ್ ತಲುಪಿದ ಕೂಡಲೇ ಧಾರ್ಮಿಕ ವಿದ್ಯಾಭ್ಯಾಸವನ್ನು ಬಿಟ್ಟು, ತನ್ನ ತಾಯಿಯ ಭ್ರಮಾದೀನ ಪಾತ್ರಗಳಲ್ಲಿ ತಿಳಿಸುತ್ತಿದ್ದ ಪರಂಪಾಗತ ವೈಭವವನ್ನು ಹಾಳುಗೆಡವಬಾರದೆಂದು, ಮತಧರ್ಮಶಾಸ್ತ್ರದ ಪ್ರಗಾಥೆಗಳನ್ನು ಮತ್ತು ಕ್ರೈಸ್ತ ಮಠದ ಕಾನೂನನ್ನು ಕಲಿಯುತ್ತಿದ್ದ. ಅಲ್ಲದೆ ಅದು ಅವನು ತನ್ನ ಇಬ್ಬರು ಸ್ನೇಹಿತರೊಂದಿಗೆ ಅನುಭವಿಸಿದ ಯಾತನೆಯನ್ನು ದೂರಮಾಡಿತ್ತು. ಅವನಿಗೆ ಫೆರ್ನಾಂಡಳ ಸಾವು ಹತ್ತಿರದಲ್ಲಿದೆ ಎನ್ನುವ ಭಾವನೆ ತರಿಸಿದ ಕೊನೆಯ ಕಾಗದ ತಲುಪಿದಾಗ ಅವನು ಬಾಕಿ ಉಳಿದ ತನ್ನ ಬೂಟಾಟಿಕೆಯ ವೈಭವವನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಕಸಾಯಿಖಾನೆಗೆ ಹೋಗುವುದಕ್ಕಾಗಿ ಪ್ರಾಣಿಗಳನ್ನು ಒಟ್ಟಿರುವಂತೆ ಹೊರದೇಶದವರನ್ನು ತುಂಬಿದ್ದ ಹಡಗೊಂದರಲ್ಲಿ ಸೇವಿಗೆ ಮತ್ತು ಹುಳು ಹಿಡಿದ ಚೀಸ್ ತಿಂದು ಸಮು;ದ್ರ ದಾಟಿದ. ಅವನು ಫೆರ್ನಾಂಡ ತನ್ನ ದುರದೃಷ್ಟವನ್ನು ಮಾತ್ರ ವಿವರಿಸಿ ಬರೆದಿದ್ದ ಅವಳ ವಿಲ್ ಓದುವ ಮುಂಚೆಯೇ, ಎಂದೆಂದಿಗೂ ರೋಮ್‌ನಿಂದ ದೂರವಾಗಿ, ಮುರಿದು ಹೋಗಿದ್ದ ಪೀಠೋಪಕರಣಗಳು ಮತ್ತು ಅಂಗಳದಲ್ಲಿ ಬೆಳೆದಿದ್ದ ಕಳೆಯಿಂದ ತಪ್ಪಿಸಿಕೊಳ್ಳಲಾಗದಂಥ ಬಲೆಗೆ ಬಿದ್ದಿರುವುದನ್ನು ಸೂಚಿಸಿದ್ದವು. ಆಸ್ತಮಾದಿಂದ ನಿದ್ದೆ ಬಾರದ ಅವಧಿಯಲ್ಲಿ, ಉರ್ಸುಲಾ ತನ್ನ ಕುಗ್ಗಿದ ದನಿಯಲ್ಲಿ ಪ್ರಪಂಚದ ಬಗ್ಗೆ ಉಂಟುಮಾಡಿದ್ದ ಭಯದ ನೆರಳುಗಳು ತುಂಬಿದ ಮನೆಯಲ್ಲಿ, ತನ್ನ ದುರದೃಷ್ಟದ ಪ್ರಮಾಣವನ್ನು ಲೆಕ್ಕಹಾಕುತ್ತಿದ್ದ ನೆರಳುಗಳಲ್ಲಿ ಅವನು ಕಳೆದುಹೋಗಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಯಸಿದಳು. ಅದಕ್ಕಾಗಿ ಅವನಿಗೆ ಮನೆಯಲ್ಲಿ ಸೂರ್ಯ ಮುಳುಗಿದ ಮೇಲೆ ಓಡಾಡುವ ಸತ್ತವರ ದೆವ್ವಗಳಿಂದ ಕ್ಷೇಮವಾಗಿರಲೆಂದು ಬೆಡ್‌ರೂಮಿನ ಮೂಲೆಯಲ್ಲಿ ಸ್ಥಳ ಮಾಡಿಕೊಟ್ಟಿದ್ದಳು. ಉರ್ಸುಲಾ ಅವನಿಗೆ, ‘ನೀನೇನಾದ್ರೂ ಕೆಟ್ಟದ್ದನ್ನು ಮಾಡಿದ್ರೆ ಪೂಜ್ಯರು ನಂಗೆ ಹೇಳಿಬಿಡ್ತಾರೆ” ಎನ್ನುತ್ತಿದ್ದಳು. ಭಯ ತುಂಬಿದ ಬಾಲ್ಯದ ರಾತ್ರಿಗಳಲ್ಲಿ, ಮೂಲೆಯಲ್ಲಿ ನಿದ್ದೆ ಬರುವ ತನಕ ಅಲ್ಲಾಡದೆ, ಬೆವರು ಸುರಿಸುತ್ತ, ಸಂತರ ಕಾಯುವ ನೋಟದ ಎದುರು ಸ್ಟೂಲಿನ ಮೇಲೆ ಕುಳಿತುಕೊಂಡಿರುವುದಕ್ಕೆ ಅವನ ಬಾಲ್ಯ ಸೀಮಿತವಾಗಿತ್ತು. ಅದೊಂದು ಅನಗತ್ಯ ಹಿಂಸೆಯಾಗಿತ್ತು. ಏಕೆಂದರೆ ಆ ವೇಳೆಗಾಗಲೇ ಸುತ್ತಮುತ್ತಲ ಎಲ್ಲದರ ಬಗ್ಗೆ ಭಯ ಉಂಟಾಗಿತ್ತು ಮತ್ತು ಜೀವನದಲ್ಲಿ ಏನನ್ನು ಎದುರಿಸಿದರೂ ಭಯಗೊಳ್ಳಲು ಅವನು ಸಿದ್ಧನಾಗಿರುತ್ತಿದ್ದ: ದಾರಿಯಲ್ಲಿ ಅವನ ರಕ್ತವನ್ನು ಕುಲಗೆಡಿಸುವ ಹೆಂಗಸರು; ಹಂದಿಯ ಬಾಲದ ಮಕ್ಕಳನ್ನು ಹೆರುವ ಹೆಂಗಸರು; ಮನುಷ್ಯರನ್ನು ಕೊನೆಗಾಣಿಸಿ ಮನೆಮಂದಿಗೆಲ್ಲ ಯಾತನೆ ಉಂಟುಮಾಡುವ ಹುಂಜದ ಕಾಳಗ; ಮುಟ್ಟಿದರೆ ಸಾಕು ಇಪ್ಪತ್ತು ವರ್ಷ ಹೋರಾಟವನ್ನು ನೆಲಸಮ ಮಾಡುವ ಬಂದೂಕುಗಳು; ಕೇವಲ ಭ್ರಮ ನಿರಸನ ಮತ್ತು ಹುಚ್ಚು ಹಿಡಿಸುವ ಅನಿಶ್ಚಿತ ಸಾಹಸಗಳು-ಪ್ರತಿಯೊಂದೂ ಇದ್ದವು. ಒಟ್ಟಾಗಿ ದೇವರು ತೀರದ ವಿಶ್ವಾಸದಿಂದ ಸೃಷ್ಟಿಸಿದ್ದನ್ನು, ದೆವ್ವ ತಿರುಚಿದ್ದನ್ನು ಕಂಡು, ಅವನು ದುಃಸ್ವಪ್ನಗಳಿಂದ ಎದ್ದ ಮೇಲೆ, ಕಿಟಕಿಯಲ್ಲಿನ ಬೆಳಕಿನಿಂದ ಮತ್ತು ಅಮರಾಂತ ಮೈಯುಜ್ಜಿ ಸ್ನಾನ ಮಾಡಿಸಿ, ಸಿಲ್ಕ್ ಪಫ್‌ನಿಂದ ಕಾಲುಗಳ ಮಧ್ಯೆ ಪೌಡರ್ ಹಚ್ಚುವಾಗ, ಭಯದಿಂದ ಬಿಡುಗಡೆ ಹೊಂದುತ್ತಿದ್ದ. ಉರ್ಸುಲಾ ಕೂಡ ಕೈತೋಟದಲ್ಲಿ, ಆ ಬೆಳಕಿನಲ್ಲಿ ಬೇರೆಯಾಗಿರುತ್ತಿದ್ದಳು. ಏಕೆಂದರೆ ಅವಳು ಅಲ್ಲಿ ಭಯ ಹುಟ್ಟಿಸುವ ವಿಷಯದ ಬಗ್ಗೆ ಮಾತಾಡುತ್ತಿರಲಿಲ್ಲ. ಆದರೆ ಇದ್ದಲು ಪುಡಿಯಿಂದ ಪೋಪ್‌ಗಿರುವ ಮಿರುಗುವ ನಗುವಿರಲೆಂದು ಉಜ್ಜುತ್ತಿದ್ದಳು. ಅವಳು ಅವನ ಉಗುರುಗಳನ್ನು ಕತ್ತರಿಸಿ ಪ್ರಪಂಚದ ಎಲ್ಲ ಕಡೆಯಿಂದ ರೋಮ್‌ಗೆ ಬರುವ ಭಕ್ತರು ತಮ್ಮನ್ನು ಆಶೀರ್ವದಿಸುವ ಪೋಪ್‌ನ ಕೈಗಳು ಎಷ್ಟು ಚೆನ್ನಾಗಿವೆ ಎಂದು ಬೆಚ್ಚುವಂತಾಗಲಿ ಎಂದು ಅವಕ್ಕೆ ಪಾಲೀಷು ಮಾಡುತ್ತಿದ್ದಳು. ಪೋಪ್‌ನ ಹಾಗೆ ತಲೆ ಬಾಚಿ, ಪೋಪ್‌ಗಿರುವ ಸುವಾಸನೆ ಇರಲೆಂದು ತೊಟ್ಟುಕೊಂಡ ಬಟ್ಟೆಯ ಮೇಲೆ ಬಚ್ಚಲು ಮನೆಗೆ ಹಾಕುವ ಸುಗಂಧವನ್ನು ಸಿಂಪಡಿಸುತ್ತಿದ್ದಳು. ಅವನು ಗಾಂಡಾಲ್ಫೋ ಸೌಧದ ಪ್ರಾಂಗಣದಲ್ಲಿ ಪೋಪ್ ಬಾಲ್ಕನಿಯಿಂದ ನೆರೆದಿದ್ದ ಭಕ್ತರ ಗುಂಪಿಗಾಗಿ ಏಳು ಭಾಷೆಗಳಲ್ಲಿ ಅದೇ ಭಾಷಣ ಮಾಡುತ್ತಿದ್ದನ್ನು ಕೇಳಿದ್ದ. ಅವನ ಗಮನವನ್ನು ಸೆಳೆದ ಒಂದೇ ಒಂದು ಸಂಗತಿಯೆಂದರೆ ಉಪ್ಪು ನೀರಿನಲ್ಲಿ ಅದ್ದಿದ ಅವನ ಕೈಗಳ ಹೊಳಪು ಮತ್ತು ಮಿರುಗುತ್ತಿದ್ದ ಅವನ ಬೇಸಿಗೆಯುಡುಪು ಹಾಗೂ ಕಾಣದಿದ್ದ ಬಚ್ಚಲಿಗೆ ಹಾಕುವ ಸುಗಂಧ ಬೆರೆಸಿದ ನೀರಿನ ವಾಸನೆ.
ಅವನು ಮನೆಗೆ ಬಂದು ಸುಮಾರು ಒಂದು ವರ್ಷದ ಮೇಲೆ ಆಹಾರಕ್ಕಾಗಿ ಬೆಳ್ಳಿಯ ಕ್ಯಾಂಡಲ್‌ಸ್ಟಿಕ್‌ಗಳನ್ನು ಮತ್ತು ಆಗ ಕಂಠದಲ್ಲಿ ಮಾತ್ರ ಕೊಂಚ ಬಂಗಾರದ ಲೇಪವಿದ್ದ ವಂಶದ ಲಾಂಛನವಿದ್ದ ಉಚ್ಚೆ ಪಾತ್ರೆಗಳನ್ನು ಮಾರಿದ ಮೇಲೆ ಹೊಸೆ ಅರ್ಕಾದಿಯೋಗೆ ಊರಿನಲ್ಲಿದ್ದ ಮಕ್ಕಳನ್ನು, ಆಡುವುದಕ್ಕೆಂದು ಮನೆಗೆ ಕರೆದುಕೊಂಡು ಬರುವುದು ಮಾತ್ರ ಮನಸ್ಸು ಬೇರೆ ಕಡೆ ತಿರುಗಲು ಇದ್ದ ಅವಕಾಶ. ಅವನು ಮಧ್ಯಾಹ್ನ ಮಲಗುವ ಸಮಯಕ್ಕೆ ಅವರ ಜೊತೆ ಇದ್ದು, ಅವರಿಗೆ ಕೈತೋಟದಲ್ಲಿ ಹಗ್ಗದಾಟ, ಅಂಗಳದಲ್ಲಿ ಹಾಡುವುದು ಮತ್ತು ಹಜಾರದಲ್ಲಿ ಪೀಠೋಪಕರಣಗಳ ಮೇಲೆ ಹಾರಿ ಕುಣಿದು ಮಾಡಲು ಬಿಟ್ಟು ನಂತರ ಅವನು ಅವರಿಗೆ ಒಳ್ಳೆಯ ನಡತೆಯ ಬಗ್ಗೆ ತಿಳಿಸಿ ಹೇಳುತ್ತಿದ್ದ. ಆ ಸಮಯದಲ್ಲಿ ಅವನು ಬಿಗಿ ಪ್ಯಾಂಟು, ಸಿಲ್ಕ್ ಶರಟುಗಳನ್ನು ಬಿಟ್ಟು ಅರಬ್ ಅಂಗಡಿನಲ್ಲಿ ಖರೀದಿಸಿದ ಸಾಮಾನ್ಯ ಸೂಟ್ ಹಾಕಿಕೊಂಡಿದ್ದನಾದರೂ ಗಂಭೀರನಾಗಿದ್ದು ಪೋಪ್‌ನಂತೆ ವರ್ತಿಸುತ್ತಿದ್ದ. ಹಿಂದೆ ಮೆಮೆಯ ಗೆಳತಿಯರು ಮಾಡಿದಂತೆ ಮಕ್ಕಳು ಮನೆಯನ್ನು ಆಕ್ರಮಿಸಿದರು. ಮಧ್ಯರಾತ್ರಿಯವರೆಗೂ ಅವರು ಹರಟಿ, ಹಾಡಿ, ಕುಣಿಯುತ್ತಿದ್ದರಿಂದ ಮನೆ ಶಿಸ್ತಿಲ್ಲದ ವಿದ್ಯಾರ್ಥಿ ನಿಲಯದಂತಾಯಿತು. ಮೇಲ್‌ಕಿಯಾದೆಸ್‌ನ ರೂಮಿನಲ್ಲಿ ತನಗೆ ತೊಂದರೆ ಕೊಡದಿದ್ದರೆ ಸಾಕೆಂದು ಅವ್ರೇಲಿಯಾನೋ ಅವನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಒಂದು ದಿನ ಬೆಳಿಗ್ಗೆ ಇಬ್ಬರು ಹುಡುಗರು ಬಾಗಿಲು ತಳ್ಳಿ ಕೊಳಕಾದ ಮತ್ತು ಕೂದಲು ಬಿಟ್ಟುಕೊಂಡಿದ್ದವನೊಬ್ಬ ಟೇಬಲ್ ಮೇಲೆ ಚರ್ಮದ ಹಾಳೆಯ ಮೇಲಿನ ಬರಹವನ್ನು ಅರ್ಥೈಸುವುದರಲ್ಲಿ ಮಗ್ನನಾಗಿರುವುದನ್ನು ಕಂಡು ಬೆಚ್ಚಿದರು. ಅವರು ಬಿರುಕುಗಳ ಮೂಲಕ ನೋಡಿ ಪಿಸುಗುಟ್ಟಿ, ಬಾಗಿಲ ಅಡ್ಡಪಟ್ಟಿಯ ಮೂಲಕ ಜೀವವಿರುವ ಜಂತುಗಳನ್ನು ಒಳಗೆ ಹಾಕುತ್ತಿದ್ದರು. ಒಂದು ಸಲ ಅವರು ಕಿಟಕಿ ಮತ್ತು ಬಾಗಿಲಿಗೆ ಮೊಳೆ ಹೊಡೆದದ್ದರಿಂದ ಅದನ್ನು ತೆಗೆಯಲು ಅವ್ರೇಲಿಯಾನೋಗೆ ಅರ್ಧ ದಿನ ಹಿಡಿಯಿತು. ತಮ್ಮ ತುಂಟತನಕ್ಕೆ ಶಿಕ್ಷೆಯಾಗದ್ದರಿಂದ ಆಶ್ಚರ್ಯಗೊಂಡು ಒಂದು ದಿನ ಅವ್ರೇಲಿಯಾನೋ ಅಡುಗೆ ಮನೆಯಲ್ಲಿರುವಾಗ, ನಾಲ್ಕು ಜನ ಹುಡುಗರು ಚರ್ಮದ ಹಾಳೆಯನ್ನು ಹಾಳುಮಾಡುವುದಕ್ಕೆ ಸಿದ್ಧರಾದರು. ಆದರೆ ಆ ಹಳದಿ ಹಾಳೆಗಳ ಮೇಲೆ ಕೈಯಿಟ್ಟ ಕೂಡಲೇ ಅತೀವ ಶಕ್ತಿಯೊಂದು ಅವರನ್ನು ನೆಲದಿಂದ ಮೇಲಕ್ಕೆತ್ತಿ ಅವ್ರೇಲಿಯಾನೋ ಬಂದು ಅವರಿಂದ ಚರ್ಮದ ಹಾಳೆಗಳನ್ನು ತೆಗೆದುಕೊಳ್ಳುವ ತನಕ ಗಾಳಿಯಲ್ಲಿ ತೇಲುವಂತೆ ಮಾಡಿತು. ಅದಾದ ನಂತರ ಅವರು ಅವನ ತಂಟೆಗೆ ಬರಲಿಲ್ಲ.
ಅವರಲ್ಲಿ ಹೆಚ್ಚಿನ ವಯಸ್ಸಿನ, ಚಡ್ಡಿಯನ್ನು ಹಾಕಿಕೊಂಡಿದ್ದ ಇನ್ನೇನು ಹದಿವಯಸ್ಸಿಗೆ ಬರಲಿದ್ದ ನಾಲ್ವರು ಹೊಸೆ ಅರ್ಕಾದಿಯೋನ ವೈಯಕ್ತಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಅವರು ಇತರರಿಗಿಂತ ಮುಂಚೆ ಬರುತ್ತಿದ್ದರು ಮತ್ತು ಬೆಳಿಗ್ಗೆ ಅವನಿಗೆ ಶೇವ್ ಮಾಡುವುದರಲ್ಲಿ, ಬಿಸಿ ಬಟ್ಟೆಗಳಿಂದ ಮಾಲೀಷು ಮಾಡುವುದರಲ್ಲಿ, ಕೈ ಕಾಲುಗಳ ಉಗುರು ಕತ್ತರಿಗೆ ಪಾಲೀಶು ಮಾಡುವುದರಲ್ಲಿ ಮತ್ತು ಸುಗಂಧ ದ್ರವ್ಯ ಹಚ್ಚುವುದರಲ್ಲಿ ಕಳೆಯುತ್ತಿದ್ದರು. ಅನೇಕ ಸಲ ಅವರು ಕೊಳದಲ್ಲಿಳಿದು, ಅವನು ಅಮರಾಂತ ಬಗ್ಗೆ ಯೋಚಿಸುತ್ತ ಅದರಲ್ಲಿ ತೇಲುತ್ತಿದ್ದಂತೆ, ತಲೆಯಿಂದ ಕಾಲಿನ ತನಕ ಸೋಪು ಹಚ್ಚುತ್ತಿದ್ದರು. ಅನಂತರ ಅವರು ಅವನನ್ನು ಒರೆಸಿ, ಪೌಡರ್ ಹಚ್ಚಿ, ಬಟ್ಟೆ ತೊಡಿಸುತ್ತಿದ್ದರು. ಅವರಲ್ಲಿ ಗುಂಗುರು ಕೆಂಗೂದಲಿನ, ಮೊಲದ ಹಾಗೆ ನೇರಳೆ ಬಣ್ಣದ ಕಣ್ಣುಗಳಿದ್ದವನೊಬ್ಬ ಮನೆಯಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ಅವನಿಗೂ ಮತ್ತು ಹೊಸೆ ಅರ್ಕಾದಿಯೋಗೂ ತೀವ್ರವಾದ ಸಂಬಂಧವಿದ್ದು ಅವನು ಅಸ್ತಮಾದಿಂದ ನಿದ್ದೆ ಬಾರದ ಸಂದರ್ಭಗಳಲ್ಲಿ ಜೊತೆಗಿದ್ದು, ಮಾತನಾಡದೆ, ಅವನ ಜೊತೆ ಕತ್ತಲಲ್ಲಿ ಮನೆಯೆಲ್ಲ ಓಡಾಡುತ್ತಿದ್ದ. ಒಂದು ರಾತ್ರಿ ಉರ್ಸುಲಾ ಮಲುಗುತ್ತಿದ್ದ ರೂಮಿನಲ್ಲಿ ಬಿರುಕು ಬಿಟ್ಟ ಸಿಮೆಂಟಿನಿಂದ ಹಳದಿ ಬೆಳಕೊಂದು, ನೆಲದೊಳಗೊಬ್ಬ ಸೂರ್ಯ ರೂಮಿನ ನೆಲವನ್ನು ಗಾಜಿನ ಹಾಸಿನಂತೆ ಮಾಡಿದ್ದಾನೋ ಎನ್ನುವಂತೆ ಅವರಿಗೆ ಕಾಣಿಸಿತು. ಅವರು ರೂಮ್‌ನಲ್ಲಿ ದೀಪ ಹಾಕಬೇಕಾಗಿರಲಿಲ್ಲ. ಅವರು ಉರ್ಸುಲಾಳ ಹಾಸಿಗೆ ಇರುತ್ತಿದ್ದ ಜಾಗದ ಮೂಲೆಯಲ್ಲಿ ಮುರಿದು ಹೋಗಿದ್ದ ಪ್ರಭೆ ತೀವ್ರವಾಗಿ, ಅವ್ರೇಲಿಯಾನೋ ಸೆಗುಂದೋ ಹುಚ್ಚೆದ್ದು ಹುಡುಕುತ್ತಿದ್ದ ಗುಪ್ತನಿಧಿ ಅವರಿಗೆ ಕಂಡಿತು. ಅಲ್ಲಿ ತಾಮ್ರದ ತಂತಿಗಳಿಂದ ಬಿಗಿದು ಕಟ್ಟಿದ್ದ ಮೂರು ಬಟ್ಟೆಯ ಚೀಲಗಳಿದ್ದು, ಅದರೊಳಗೆ ಎಂಟರ ಏಳು ಸಾವಿರದ ಇನ್ನೂರ ಹದಿನಾಲ್ಕು ನಾಣ್ಯಗಳು ಕತ್ತಲೆಯಲ್ಲಿ ಸಣ್ಣ ಕೆಂಡದ ಹಾಗೆ ಹೊಳೆಯುತ್ತಿದ್ದವು.
ನಿಧಿಯನ್ನು ಕಂಡು ಹಿಡಿದದ್ದು ಜ್ವಾಲೆಯಂತಾಯಿತು. ಹಠಾತ್ ಸಿಕ್ಕ ಸಂಪತ್ತಿನೊಡನೆ ವ್ಯಥೆ ತುಂಬಿದ ದಿನಗಳ ಕನಸಿನಂತೆ ರೋಮ್‌ಗೆ ವಾಪಸ್ಸಾಗುವ ಬದಲು ಹೊಸೆ ಅರ್ಕಾದಿಯೋ, ಮನೆಯನ್ನು ಇನ್ನೇನು ಅವನತಿಯಾಗುವ ಸ್ವರ್ಗವನ್ನಾಗಿ ಪರಿವರ್ತಿಸಿದ. ಅವನು ಮಂಚದ ಕರ್ಟನ್ ಮತ್ತು ಅದರ ಹೆಚ್ಚಳದ ವೆಲ್‌ವೆಟ್ಟನ್ನು ಹೊಸದಕ್ಕೆ ಬದಲಾಯಿಸಿದ. ಬಾತ್‌ರೂಮಿನ ನೆಲಕ್ಕೆ ಸಿಂಗರಿಸಿದ ಕಲ್ಲು ಮತ್ತು ಗೋಡೆಗಳಿಗೆ ಟೈಲ್ಸ್‌ಗಳನ್ನು ಹಾಕಿಸಿದ. ಊಟದ ರೂಮಿನ ಕಪಾಟುಗಳ ತುಂಬ ಹಣ್ಣು, ಉಪ್ಪಿನಕಾಯಿಯಿಂದ ತುಂಬಿದ ಮತ್ತು ಉಪಯೋಗಿಸದೆ ಇದ್ದ ಅಡುಗೆ ಮನೆಯ ಭಾಗದಲ್ಲಿ ಹೊಸೆ ಅರ್ಕಾದಿಯೋ ರೈಲ್ವೇ ಸ್ಟೇಷನ್‌ನಿಂದ ವೈನ್ ಮತ್ತು ಮಧ್ಯದ ಕ್ರೇಟುಗಳ ಮೇಲೆ ತನ್ನ ಹೆಸರು ಬರೆಸಿ ತಂದವುಗಳ ಶೇಖರಣೆಗಾಗಿ ಮತ್ತೆ ಉಪಯೋಗಿಸತೊಡಗಿದ. ಒಂದು ರಾತ್ರಿ ನಾಲ್ವರು ಸಾಕಷ್ಟು ವಯಸ್ಸಾದ ಮಕ್ಕಳ ಜೊತೆ ನಡೆಯುತ್ತಿದ್ದ ಪಾರ್ಟಿ ಬೆಳಗಿನ ಜಾವದ ತನಕ ನಡೆಯಿತು. ಬೆಳಿಗ್ಗೆ ಆರು ಗಂಟೆಗೆ ಅವರು ಬೆಡ್‌ರೂಮಿನಿಂದ ಬೆತ್ತಲಾಗಿ ಬಂದು ಕೊಳವನ್ನು ಶಾಂಪೇನ್‌ನಿಂದ ತುಂಬಿದರು. ಅವರು ಅದರೊಳಗೆ ಹಾರಿ ಸುಗಂಧ ಪೂರಿತ ಗುಳ್ಳೆಗಳ ನಡುವೆ ಹಾರಾಡುವಂತೆ ಈಜಾಡುತ್ತಿದ್ದರೆ ಹೊಸೆ ಅರ್ಕಾದಿಯೋ ಅಂಗಾತ ತೇಲುತ್ತ, ಸಂಭ್ರಮಿಸುತ್ತ, ಕಣ್ಣು ಬಿಟ್ಟುಕೊಂಡು ಅಮರಾಂತಳ ಬಗ್ಗೆ ಯೋಚಿಸುತ್ತಿದ್ದ. ಅವನು ಅದೇ ರೀತಿಯಲ್ಲಿ, ಹುಡುಗರು ಸುಸ್ತಾಗಿ, ಬೆಡ್‌ರೂಮ್‌ಗೆ ಹೋಗಿ, ಒರೆಸಿಕೊಳ್ಳಲು ಕರ್ಟನ್‌ಗಳನ್ನು ಎಳೆದು ಹರಿದು ಹಾಕುವ ತನಕ ಕ್ರೌರ್ಯದಿಂದ ಕೂಡಿದ, ಸಂಶಯಾತ್ಮಕವಾದ ಸಂತೋಷದ ಬಗ್ಗೆ ಯೋಚಿಸುತ್ತಿದ್ದ. ಆ ವ್ಯವಸ್ಥೆಯಲ್ಲಿ ಅವರು ರಾಕ್‌ಕ್ರಿಸ್ಟಲ್ ಕನ್ನಡಿಯನ್ನು ಒಡೆದು ತುಂಡು ಮಾಡಿದರು ಮತ್ತು ಮಲಗುವ ಅವಸರದಲ್ಲಿ ಮಂಚದ ಅಲಂಕಾರದ ಭಾಗವನ್ನು ಹಾಳುಗೆಡವಿದರು. ಹೊಸೆ ಆರ್ಕೆಡೋ ಬಾತ್‌ರೂಮಿನಿಂದ ವಾಪಸು ಬಂದಾಗ ಅವರು ಬೆತ್ತಲೆ ಗುಪ್ಪೆಯಾಗಿ ಮಲಗಿದ್ದನ್ನು ಕಂಡ. ಅವರು ಹಾಳುಮಾಡಿದ್ದಕ್ಕಿಂತ ಹೆಚ್ಚಾಗಿ ಸ್ವೇಚ್ಛಾ ಕ್ರೀಡೆಯಿಂದ ವ್ಯಥೆಗೊಂಡು ಜಿಗುಪ್ಸೆಯಿಂದ ಟ್ರಂಕ್‌ನೊಳಗೆ ಉಪಯೋಗಿಸದೇ ಇಟ್ಟಿದ್ದ ಬಾರುಕೋಲು ತೆಗೆದುಕೊಂಡು ಹುಚ್ಚನ ಹಾಗೆ ಕೂಗಾಡುತ್ತ, ಹುಡುಗರಿಗೆಲ್ಲ ಅಳತೆಗೆಟ್ಟು ಬಾರಿಸಿ ಮನೆಯಿಂದ ಹೊರಹಾಕಿದ. ಅನಂತರ ಅವನು ಅಸ್ತಮಾದಿಂದ ವಿಪರೀತ ಕುಗ್ಗಿ ಹೋಗಿ ಸಾಯುವವನಂತೆ ಕಂಡ. ಆ ಹಿಂಸೆ ಮುಗಿದು ಮೂರು ದಿನದ ನಂತರ ಉಸಿರುಗಟ್ಟಿ, ಹತ್ತಿರದ ಔಷಧಿ ಅಂಗಡಿಯಿಂದ ಒಳಗೆ ಹೀರಿಕೊಳ್ಳುವಂಥ ಪೌಡರನ್ನು ತಂದುಕೊಡುವಂತೆ ಕೇಳಲು ಅವ್ರೇಲಿಯಾನೋನ ರೂಮಿಗೆ ಹೋದ. ಇದರಿಂದ ಅವ್ರೇಲಿಯಾನೋ ಎರಡನೆ ಬಾರಿ ಹೊರಗೆ ಹೋಗುವಂತಾಯಿತು. ಅವನು ಎರಡು ಬ್ಲಾಕುಗಳ ಆಚೆ ಧೂಳು ಮುಚ್ಚಿದ ಕಿಟಕಿಗಳಿದ್ದ, ಲ್ಯಾಟಿನ್‌ನಲ್ಲಿ ಬರೆದ ಚೀಟಿಗಳಿದ್ದ ಪಿಂಗಾಣಿ ಬಾಟಲುಗಳಿದ್ದ ಔಷಧಿ ಅಂಗಡಿಗೆ ಹೋದ. ಅಲ್ಲಿ ನೈಲ್‌ನಷ್ಟು ಸುಂದರವಾಗಿದ್ದ ಹುಡುಗಿಯೊಬ್ಬಳು ಹೊಸೆ ಅರ್ಕಾದಿಯೋ ಚೀಟಿಯೊಂದರಲ್ಲಿ ಬರೆದುಕೊಟ್ಟಿದ್ದ ಔಷಧಿಯನ್ನು ಕೊಟ್ಟಳು. ಜನರಿಲ್ಲದ, ಹಳದಿ ಛಾಯೆಯ ಬಲ್ಬುಗಳು ರಸ್ತೆಯ ಮೇಲೆ ಬೀರಿದ್ದ ಬೆಳಕು ಅವ್ರೇಲಿಯಾನೋನ ಮೇಲೆ ಮೊದಲ ಸಲಕ್ಕಿಂತ ಹೆಚ್ಚಿನ ಕುತೂಹಲ ಉಂಟುಮಾಡಲಿಲ್ಲ. ಅವನು ಓಡಿಹೋದನೆಂದು ಹೊಸೆ ಅರ್ಕಾದಿಯೋ ಯೋಚಿಸುತ್ತಿದ್ದಂತೆ ಏದುಸಿರು ಬಿಡುತ್ತ, ಒಳಗೇ ಕುಳಿತು ಓಡಾಟವಿಲ್ಲದೆ ಸೊರಗಿ ಭಾರವಾದ ಕಾಲುಗಳನ್ನು ಎಳೆದು ಹಾಕುತ್ತ ಬಂದ. ಹೊರಗಿನ ಪ್ರಪಂಚದ ಬಗ್ಗೆ ಅವನ ನಿರ್ಲಕ್ಷ್ಯ ಎಷ್ಟು ನಿಶ್ಚಿತವಾಗಿತ್ತೆಂದರೆ ಕೆಲವು ದಿನಗಳಾದ ನಂತರ ಹೊಸೆ ಅರ್ಕಾದಿಯೋ ತನ್ನ ತಾಯಿಗೆ ಕೊಟ್ಟ ಮಾತನ್ನು ಮುರಿದು ಅವನು ಇಷ್ಟ ಬಂದ ಕಡೆ ಹೋಗಲು ಬಿಟ್ಟುಬಿಟ್ಟ.
ಅವ್ರೇಲಿಯಾನೋ ಅವನಿಗೆ, “ನಂಗೆ ಹೊರಗೇನೂ ಮಾಡಬೇಕಾಗಿಲ್ಲ\’ ಎಂದ
ಅವನು ಬಾಗಿಲು ಹಾಕಿಕೊಂಡು ಈಗೀಗ ಕೊಂಚ ತೆರೆದುಕೊಳ್ಳುತ್ತಿದ್ದ, ಆದರೆ ವ್ಯಾಖ್ಯಾನಿಸಲು ಅರ್ಥವಾಗದ ಚರ್ಮದ ಹಾಳೆಗಳ ಬರಹದಲ್ಲಿ ಮಗ್ನನಾದ. ಹೊಸೆ ಅರ್ಕಾದಿಯೋ ಅವನಿಗೆ ಹಂದಿ ಮಾಂಸದ ತುಂಡುಗಳನ್ನು, ಸಕ್ಕರೆ ಸವರಿದ ಹೂಗಳನ್ನು ತಂದುಕೊಡುತ್ತಿದ್ದ ಮತ್ತು ಎರಡು ಸಲ ವೈನ್ ಕೊಟ್ಟ. ಅವನಿಗೆ ಚರ್ಮದ ಹಾಳೆಗಳ ಬರಹಗಳ ಬಗ್ಗೆ ಆಸಕ್ತಿ ಇರಲಿಲ್ಲ. ಏಕೆಂದರೆ ಅವು ಹೊಸ ಇತಿಹಾಸವನ್ನು ತಿಳಿಸುತ್ತದೆ ಎಂದು ಅವನು ತಿಳಿದುಕೊಂಡಿದ್ದ. ಆದರೆ ಅನಾಥನಾದ ಅವನ ಸಂಬಂಧಿಗೆ ಪ್ರಪಂಚದ ಬಗ್ಗೆ ಇರುವ ಅಪಾರ ತಿಳಿವಳಿಕೆ ಮತ್ತು ಜ್ಞಾನ ಅವನನ್ನು ಸೆಳೆಯಿತು. ಅವನಿಗೆ ಲಿಖಿತ ರೂಪದ ಇಂಗ್ಲಿಷ್ ತಿಳಿಯುವುದೆಂದು ಮತ್ತು ಚರ್ಮದ ಹಾಳೆಗಳ ಬರಹದ ಮೂಲಕ ವಿಶ್ವಕೋಶದ ಮೊದಲನೆ ಪುಟದಿಂದ ಆರನೆ ಸಂಪುಟದ ಕೊನೆಯ ತನಕ, ಅದೊಂದು ಕಾದಂಬರಿ ಎನ್ನುವಂತೆ ಓದಿದ್ದಾನೆ ಎಂದು ತಿಳಿಯಿತು. ಪ್ರಾರಂಭದಲ್ಲಿ ಅವನು ರೋಮ್ ಬಗ್ಗೆ ಅವ್ರೇಲಿಯಾನೋ ಇಲ್ಲದಿರುವ ಏನನ್ನೋ ಮಾತಾಡುತ್ತಿದ್ದಾನೆಂದು ತಿಳಿದಿದ್ದ. ಆದರೆ ಬೇಗನೆ ಅವನಿಗೆ ವಿಶ್ವಕೋಶದಲ್ಲಿ ಇರದಿದ್ದ ವಿಷಯಗಳೂ ಗೊತ್ತಿದೆ ಎಂದು ಅರಿವಾಯಿತು. ಉದಾಹರಣೆಗೆ ವಸ್ತುಗಳ ಮೌಲ್ಯ. ಎಲ್ಲಿಂದ ಆ ವಿಷಯ ಗೊತ್ತಾಯಿತೆಂದು ಕೇಳಿದ್ದಕ್ಕೆ ಅವನು, “ಪ್ರತಿಯೊಂದೂ ಗೊತ್ತಿರೋದೇ” ಎಂದು ಮಾತ್ರ ಹೇಳುತ್ತಿದ್ದ. ಅವ್ರೇಲಿಯಾನೋನ ಮಟ್ಟಿಗೆ ತಾನು ಹೊಸೆ ಅರ್ಕಾದಿಯೋನನ್ನು ಹತ್ತಿರದಿಂದ ಕಂಡಿದ್ದಕ್ಕೂ ಮತ್ತು ಮನೆಯಲ್ಲಿ ಓಡಾಡಿಕೊಂಡಿದ್ದಾಗ ಕಲ್ಪಿಸಿಕೊಂಡಿದ್ದಕ್ಕೂ ತುಂಬ ವ್ಯತ್ಯಾಸವಿದೆ ಎಂದು ಆಶ್ಚರ್ಯಗೊಂಡ. ಅವನಿಗೆ ನಗಲು, ಆಗಿಂದಾಗ್ಗೆ ವ್ಯಥೆಗೊಂಡು ಮನೆಯ ಬಗ್ಗೆ ಯೋಚಿಸಲು, ಮೆಲ್‌ಕಿಯಾದೆಸ್‌ನ ರೂಮಿನ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿತ್ತು. ಒಂದೇ ರಕ್ತಕ್ಕೆ ಸೇರಿದ ಇಬ್ಬರು ಒಬ್ಬಂಟಿಗಳನ್ನು ಅದು ಹತ್ತಿರ ತಂದಿದ್ದ ಅವರಲ್ಲಿ ಸ್ನೇಹವಿರಲಿಲ್ಲ. ಅವರಿಬ್ಬರು ಭಿನ್ನವಾಗಿದ್ದರೂ ಒಟ್ಟಿಗೆ ಬಿಗಿದ ಬಾಂಧವ್ಯ ಅವರಿಬ್ಬರನ್ನೂ ಸಹನಶೀಲರನ್ನಾಗಿ ಮಾಡಿತ್ತು. ತನಗೆ ರೇಜಿಗೆ ತಂದ ಮನೆಯ ಸಮಸ್ಯೆಯೊಂದನ್ನು ಬಿಡಿಸಲು ಹೊಸೆ ಅರ್ಕಾದಿಯೋ ಅವ್ರೇಲಿಯಾನೋನನ್ನು ಕೇಳಿದರೆ ಅವ್ರೇಲಿಯಾನೋ ಅಂಗಳದಲ್ಲಿ ಕುಳಿತು ಎಂದಿನಂತೆ ಕರಾರುವಾಕ್ಕಾಗಿ ಬರುತ್ತಿದ್ದ ಅಮರಾಂತ ಉರ್ಸುಲಾಳ ಕಾಗದಗಳನ್ನು ಓದುತ್ತಿದ್ದ. ಅಲ್ಲದೆ ಅವನು ಹೊಸೆ ಅರ್ಕಾದಿಯೋ ಬಂದ ಮೇಲೆ ನಿರ್ಬಂಧಗೊಳಿಸಿದ್ದ ಬಾತ್ ರೂಮನ್ನು ಉಪಯೋಗಿಸಬಹುದಿತ್ತು.
ಅದೊಂದು ದಿನ ಮುಂಜಾನೆ ಅವಸರದ ಮುಂಬಾಗಿಲು ಬಡಿತದ ಶಬ್ದದಿಂದಾಗಿ ಇಬ್ಬರೂ ಏಳಬೇಕಾಯಿತು. ಅವನೊಬ್ಬ ವಯಸ್ಸಾದ, ಭೂತದ ಹಾಗಿರುವ ಹಸಿರುಗಣ್ಣಿನ ಮತ್ತು ಹಣೆಯ ಮೇಲೆ ಬೂದಿಯ ಕ್ರಾಸ್ ಇದ್ದವನಾಗಿದ್ದ. ಅವನ ಬಟ್ಟೆಗಳು ಚಿಂದಿಯಾಗಿ, ಬೂಟುಗಳು ಬಿರುಕು ಬಿಟ್ಟು, ಹೆಗಲ ಮೇಲೊಂದು ಹಳೆಯ ಗಂಟಿತ್ತು ಮತ್ತು ಅವನಲ್ಲಿದ್ದ ಒಟ್ಟಾರೆ ಘನತೆ ಅವನು ಕಾಣಿಸುತ್ತಿದ್ದಕ್ಕೆ ವ್ಯತಿರಿಕ್ತವಾಗಿದ್ದನ್ನು ಬಿಟ್ಟರೆ ಅವನೊಬ್ಬ ಭಿಕ್ಷುಕನಂತಿದ್ದ. ಆ ಅಂಗಳದಲ್ಲಿನ ಅರೆಬೆಳಕಿನಲ್ಲಿ ಅವನನ್ನು ಒಂದು ಸಲ ನೋಡಿದರೆ ಅವನಿಗೆ ಬದುಕುವಂತೆ ಮಾಡಿರುವುದರ ರಹಸ್ಯ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕು ಎನ್ನುವುದರ ಪ್ರೇರಣೆಯ ಹೆದರಿಕೆಯ ಅಭ್ಯಾಸ ಬಲದಿಂದ ಎನ್ನುವುದು ಅರಿವಾಗುತ್ತಿತ್ತು. ಅವನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಹದಿನೇಳು ಗಂಡು ಮಕ್ಕಳಲ್ಲಿ ಬದುಕುಳಿದಿದ್ದ ಒಬ್ಬನೇ ಒಬ್ಬನಾದ ಮತ್ತು ತಲೆತಪ್ಪಿಸಿಕೊಂಡು ಓಡಾಡುವ ಬದುಕಿಗೆ ಬದಲಾಗಿ ನೆಮ್ಮದಿಯ ನೆಲೆಯನ್ನು ಹುಡುಕುತ್ತಿದ್ದ ಅವ್ರೇಲಿಯಾನೋ ಅಮದೋರ್ ಎಂದು ತನ್ನ ಗುರುತು ಹೇಳಿಕೊಂಡು, ಹೀನಾಯವಾಗಿ ಕಳೆದ ರಾತ್ರಿಗಳಲ್ಲಿ ಇದೊಂದೇ ಕ್ಷೇಮವಾದ ಸ್ಥಳ ಎಂದು ನೆನಪಿಸಿಕೊಂಡದ್ದರಿಂದ, ಆ ಮನೆಯಲ್ಲಿ ಆಶ್ರಯ ಕೊಡಬೇಕೆಂದು ಕೇಳಿಕೊಂಡ. ಅವನೊಬ್ಬ ಅಲೆಮಾರಿ ಎಂದು ಭಾವಿಸಿ ಅವರು ಅವನನ್ನು ರಸ್ತೆಗೆ ದಬ್ಬಿದರು. ಆಗ ಅವರಿಬ್ಬರೂ ಹೊಸೆ ಅರ್ಕಾದಿಯೋಗೆ ವಿಚಾರ ಶಕ್ತಿ ಬರುವ ವಯಸ್ಸಿನ ಮುಂಚೆಯೇ ಪ್ರಾರಂಭವಾಗಿದ್ದ ನಾಟಕವೊಂದರ ಅಂತ್ಯವನ್ನು ಬಾಗಿಲಲ್ಲಿ ನಿಂತು ನೋಡಿದರು. ಹತ್ತು ವರ್ಷಗಳಿಂದಲೂ ಅವ್ರೇಲಿಯಾನೋ ಅಮದೋರ್‌ನನ್ನು ಬೆನ್ನು ಹತ್ತಿದ್ದ ಇಬ್ಬರು ಪೋಲೀಸರು ಎದುರು ರಸ್ತೆಯ ಆಚೆ ಬದಿಯಲ್ಲಿದ್ದ ಬಾದಾಮಿ ಮರಗಳಿಂದ ಹೊರಗೆ ಬಂದು ಬಂದೂಕಿನಿಂದ ಅವನ ಹಣೆಯ ಬೂದಿಯ ಕ್ರಾಸನ್ನು ಸರಿಯಾಗಿ ಭೇದಿಸುವಂತೆ ಎರಡು ಗುಂಡು ಹೊಡೆದರು.
ಹುಡುಗರನ್ನು ಮನೆಯಿಂದ ಒದ್ದೋಡಿಸಿದ್ದಾಗಿನಿಂದಲೂ ಹೊಸೆ ಅರ್ಕಾದಿಯೋ ನೇಪಲ್ಸ್‌ನಿಂದ ಕ್ರಿಸ್‌ಮಸ್‌ಗಿಂತ ಮುಂಚೆ ಹೊರಡುವ ಹಡಗು ಸಂಚಾರದ ಸುದ್ದಿಯ ಬಗ್ಗೆ ನಿಜವಾಗಲೂ ಕಾಯುತ್ತಿದ್ದ. ಅವನು ಅವ್ರೇಲಿಯಾನೋಗೆ ಯಾವುದಾದರೂ ಉದ್ದಿಮೆಯನ್ನು ಜೀವನಾಧಾರಕ್ಕಾಗಿ ಹೊಂದಿಸಿಕೊಡುವುದಾಗಿ ಹೇಳಿದ್ದ. ಏಕೆಂದರೆ ಫೆರ್ನಾಂಡ ಸತ್ತ ಮೇಲೆ ಆಹಾರದ ಬುಟ್ಟಿಗಳು ಬರುವುದು ನಿಂತು ಹೋಗಿತ್ತು. ಆದರೆ ಆ ಕೊನೆಯ ಕನಸೂ ಫಲಗೂಡಲಿಲ್ಲ. ಸೆಪ್ಟೆಂಬರ್‌ನಲ್ಲಿ ಒಂದು ದಿನ ಬೆಳಿಗ್ಗೆ ಅಡುಗೆ ಮನೆಯಲ್ಲಿ ಅವ್ರೇಲಿಯಾನೋನ ಜೊತೆ ಕಾಫಿ ಕುಡಿದು ಹೊಸೆ ಅರ್ಕಾದಿಯೋ ದಿನ ನಿತ್ಯದ ಸ್ನಾನವನ್ನು ಮುಗಿಸುತ್ತಿದ್ದಂತೆ ಹೆಂಚುಗಳನ್ನು ತೆಗೆದು ಮನೆಯಿಂದ ಹೊರಹಾಕಿದ್ದ ನಾಲ್ವರು ಹುಡುಗರು ಮನೆಯೊಳಗೆ ಹಾರಿ ನುಗ್ಗಿದರು. ಅವನಿಗೆ ರಕ್ಷಿಸಿಕೊಳ್ಳಲು ಅವಕಾಶವೇ ಕೊಡದಂತೆ, ಪೂರ್ತಿ ಬಟ್ಟೆಯುಟ್ಟುಕೊಂಡು ಕೊಳಕ್ಕೆ ಹಾರಿ, ಅವನ ಕೂದಲು ಹಿಡಿದುಕೊಂಡು, ತಲೆಯನ್ನು ನೀರಿನಲ್ಲಿ ಮುಳುಗಿಸಿ, ಸಾಯುವ ತನಕ ಮೇಲೆ ಬರುತ್ತಿದ್ದ ಗುಳ್ಳೆಗಳು ನಿಲ್ಲುವ ತನಕ ಹಾಗೆಯೇ ಹಿಡಿದಿದ್ದರು. ಅನಂತರ ಸುಮ್ಮನಾದ ಅವನ ದೇಹ ಸುಗಂಧಪೂರಿತ ನೀರಿನ ತಳಭಾಗಕ್ಕೆ ಜರುಗಿತು. ಅನಂತರ ಅವರಿಗೆ ಮತ್ತು ಸತ್ತವನಿಗೆ ಮಾತ್ರ ಗೊತ್ತಿದ್ದ ಬಂಗಾರವಿದ್ದ ಮೂರು ಚೀಲಗಳನ್ನು ಬಚ್ಚಿಟ್ಟ ಸ್ಥಳದಿಂದ ಹೊರಗೆ ತೆಗೆದರು. ಅದೆಷ್ಟು ಶೀಘ್ರವಾದ ಮತ್ತು ಕ್ರಮಬದ್ಧವಾದ ಕ್ರಿಯೆಯಾಗಿತ್ತೆಂದರೆ, ಮಿಲಿಟರಿ ಕಾರ್ಯಾಚರಣೆಯಂತಿತ್ತು. ಬಾಗಿಲು ಹಾಕಿಕೊಂಡು ರೂಮಿನಲ್ಲಿದ್ದ ಅವ್ರೇಲಿಯಾನೋಗೆ ಯಾವುದೂ ತಿಳಿಯಲಿಲ್ಲ. ಅವನು ಅಡುಗೆ ಮನೆಯಲ್ಲಿ ಮಧ್ಯಾಹ್ನ ಸಿಗದೇ ಹೋದದ್ದರಿಂದ ;ಸೆ ಅರ್ಕಾದಿಯೋಗಾಗಿ ಮನೆಯೆಲ್ಲ ಹುಡುಕಿದ ಅವ್ರೇಲಿಯಾನೋಗೆ ಕೊಳದಲ್ಲಿ ಸುಗಂಧಿತ ಕನ್ನಡಿಯ ಮೇಲೆ ತೇಲುತ್ತ, ಊದಿಕೊಂಡಿದ್ದ ಹಾಗೂ ಇನ್ನೂ ಅಮರಾಂತಳ ಬಗ್ಗೆ ಯೋಚಿಸುತ್ತಿದ್ದವನು ಕಂಡ. ಆಗಲೇ ಅವನಿಗೆ ಅವನನ್ನು ತಾನೆಷ್ಟು ಪ್ರೀತಿಸುತ್ತಿದ್ದೇನೆ ಎಂದು ತಿಳಿದದ್ದು.

೧೯

ಅಮರಾಂತ ಉರ್ಸುಲಾ ಡಿಸೆಂಬರ್‌ನ ಪ್ರಾರಂಭದಲ್ಲಿ ನೌಕೆಯೊಂದರಲ್ಲಿ ಕತ್ತಿಗೆ ಸಿಲ್ಕ್ ದಾರ ಸುತ್ತಿದ ಗಂಡನ ಜೊತೆ ವಾಪಸು ಬಂದಳು. ಅವಳು ಯಾವುದೇ ಮುನ್ನೆಚ್ಚರಿಕೆ ಕೊಡದೆ, ದಂತದ ಬಣ್ಣದ ಮಂಡಿಯ ತನಕ ಇಳಿದ ಹರಳುಗಳ, ಪಚ್ಚೆಯ ಮತ್ತು ಗೋಮೇಧಿಕದ ಉಡುಗೆ ತೊಟ್ಟುಕೊಂಡು ಮತ್ತು ಕೂದಲನ್ನು ಕಿವಿಯ ಹಿಂದಕ್ಕೆ ಪಿನ್ನುಗಳಿಂದ ಕಟ್ಟಿ ಕಾಣಿಸಿಕೊಂಡಳು. ಅವಳು ಆರು ತಿಂಗಳ ಹಿಂದೆ ಮದುವೆಯಾಗಿ ನೀಳಕಾಯದವನಾಗಿದ್ದವನು ನೋಡುವುದಕ್ಕೆ ನೌಕಾಯಾನ ಮಾಡುವವನ ಹಾಗಿದ್ದ. ತಾನು ಮನೆಯಿಂದ ಹೋಗಿ ಬಹಳ ಕಾಲವಾಯಿತೆಂದು ಮತ್ತು ತಾನು ಕಲ್ಪಿಸಿಕೊಂಡದ್ದಕ್ಕಿಂತ ಹೆಚ್ಚು ಹಾಳಾಗಿರುವುದನ್ನು ತಿಳಿದುಕೊಳ್ಳಲು ಅವಳು ಮುಂಬಾಗಿಲನ್ನು ತೆಗೆಯಬೇಕಾಯಿತಷ್ಟೆ.
ಅವಳಿಗೆ ಆಶ್ಚರ್ಯಕ್ಕಿಂತ ವಿಚಿತ್ರ ಸಂತೋಷವಾಗಿ, “ಅಯ್ಯೋ ದೇವರೆ! ಈ ಮನೇಲಿ ಹೆಂಗಸರ್‍ಯಾರೂ ಇಲ್ಲ ಅಂತ ನೋಡಿದ್ರೇ ಗೊತ್ತಾಗುತ್ತೆ” ಎಂದಳು.
ಸಾಮಾನುಗಳನ್ನಿಡಲು ಅಂಗಳ ಸಾಕಾಗಲಿಲ್ಲ. ಅವಳನ್ನು ಸ್ಕೂಲಿಗೆ ಕಳಿಸಿ ಕೊಟ್ಟಾಗ ಫೆರ್ನಾಂಡಳ ಎರಡು ಹಳೆಯ ಟ್ರಂಕುಗಳಲ್ಲದೆ ಇನ್ನೆರಡು ಟ್ರಂಕುಗಳು, ನಾಲ್ಕು ದೊಡ್ಡ ಸೂಟ್‌ಕೇಸುಗಳು, ಕೊಡೆಗಳ ಬ್ಯಾಗ್, ಎಂಟು ಟೋಪಿ ಬಾಕ್ಸ್‌ಗಳು, ಐವತ್ತು ಕನೇರಿ ಹಕ್ಕಿಗಳಿದ್ದ ದೊಡ್ಡ ಪಂಜರ ಮತ್ತು ಅವಳ ಗಂಡ ಮುರಿದು ಹೋಗಿದ್ದರೂ ಹಳೆಯ ಕಾಲದ ವಾಹನವನ್ನು ಪೆಟ್ಟಿಗೆಯೊಳಗೆ ತಂದಿದ್ದ. ಅವಳು ದೂರದ ಪ್ರಯಾಣದ ನಂತರ ಒಂದು ದಿನ ವಿಶ್ರಾಂತಿಯನ್ನು ತೆಗೆದುಕೊಳ್ಳಲಿಲ್ಲ. ತನ್ನ ಗಂಡ ಇತರೆ ವಾಹನ ಸಲಕರಣೆಗಳ ಜೊತೆ ತಂದಿದ್ದ ಒಂದು ಮೇಲುಡುಗೆಯನ್ನು ತೊಟ್ಟು ಮನೆಯನ್ನು ಸುವ್ಯವಸ್ಥಿತವಾಗಿಡಲು ಪ್ರಾರಂಭಿಸಿದಳು. ಅವಳು ಅಂಗಳವನ್ನು ಆಕ್ರಮಿಸಿದ್ದ ಕೆಂಜಿಗಗಳನ್ನು ಓಡಿಸಿದಳು. ಕೆಂಗುಲಾಬಿಯ ಪೊದೆಗಳಿಗೆ ಮತ್ತೆ ಜೀವ ತುಂಬಿದಳು. ಕಳೆ ಕೀಳಿಸಿದಳು. ಜರ್ರ್ರೀ ಗಿಡ ಮತ್ತು ಬೆಗೋನಿಯಾಗಳನ್ನು ಪಾಟುಗಳಲ್ಲಿ ಮೆಟ್ಟಿಲುಗಳ ಮೇಲೆ ಇಟ್ಟಳು. ಅವಳು ಮರಗೆಲಸದವರು, ಗಾರೆಯವರು, ಕುಲುಮೆಯವರು ಸೇರಿದ ಗುಂಪಿನ ಉಸ್ತುವಾರಿ ವಹಿಸಿಕೊಂಡಳು. ಅವರು ನೆಲದ ಬಿರುಕುಗಳನ್ನು ಮುಚ್ಚಿದರು, ಕಿಟಕಿ, ಬಾಗಿಲುಗಳನ್ನು ಸರಿಪಡಿಸಿದರು. ಪೀಠೋಪಕರಣಗಳನ್ನು ರಿಪೇರಿ ಮಾಡಿದರು ಮತ್ತು ಮನೆಯ ಒಳ ಹೊರಗೆ ಸುಣ್ಣ ಬಳಿದರು. ಇದರಿಂದಾಗಿ ಅವರು ಒಂದು ಮೂರು ತಿಂಗಳಲ್ಲಿ ಪಿಯಾನೋದಂಥ ವಾದ್ಯವಿದ್ದ ಕಾಲದಲ್ಲಿದ್ದ ಉತ್ಸಾಹ ಮತ್ತು ಲವಲವಿಕೆಯ ವಾತಾವರಣ ಮರುಕಳಿಸಿದ್ದನ್ನು ಯಾರಾದರೂ ಕಾಣಬಹುದಿತ್ತು. ಯಾರೂ ಎಂದೂ ಯಾವ ಸಮಯದಲ್ಲಾದರೂ, ಸಂದರ್ಭದಲ್ಲಾದರೂ ಇಂದಿನಷ್ಟು ಗೆಲುವಿನ ಮನಸ್ಥಿತಿಯಲ್ಲಿರಲಿಲ್ಲ. ಹಳೆಯ ಪದ್ಧತಿಗಳನ್ನು ಮೂಲೆಗೆಸೆದು ಹಾಡಿ ಕುಣಿಯುವುದಕ್ಕೆ ಸಿದ್ಧರಿರಲಿಲ್ಲ. ಅವಳು ಶವಸಂಸ್ಕಾರದ ಕಾಣಿಕೆಗಳು ಮತ್ತು ಮೂಲೆಯಲ್ಲಿ ಸೇರಿಸಿಟ್ಟಿದ್ದ ಮೂಢ ನಂಬಿಕೆಗಳ ವಸ್ತುಗಳನ್ನು ಕಸಬರಿಕೆಯಿಂದ ಗುಡಿಸಿ ಎಸೆದಳು. ಉರ್ಸುಲಾಳ ಬಗ್ಗೆ ತಳೆದ ಕೃತಜ್ಞತೆಯ ಭಾವದಿಂದ ಹಾಗೆ ಮಾಡದೆ ಬಿಟ್ಟ ವಸ್ತುವೆಂದರೆ ನಡುಮನೆಯಲ್ಲಿದ್ದ ರೇಡಿಯೋಗಳ ಛಾಯಾಗ್ರಾಹಕ ಉಪಕರಣವನ್ನು ಮಾತ್ರ. ಅವಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಾ, “ನನ್ನದೆಂಥ ಭಾಗ್ಯ. . .ಹದಿನಾಲ್ಕು ವರ್ಷದ ಅಜ್ಜಿ!” ಎಂದಳು. ಗಾರೆ ಕೆಲಸದವನೊಬ್ಬ ಮನೆಯ ತುಂಬ ದೆವ್ವಗಳಿವೆಯೆಂದೂ, ಅವುಗಳನ್ನು ಓಡಿಸಬೇಕಾದರೆ ಅವು ಹೂತಿಟ್ಟಿರುವ ಸಂಪತ್ತನ್ನು ಹುಡುಕಿ ತೆಗೆಯಬೇಕೆಂದೂ ಹೇಳಿದಾಗ ಅವಳು ನಗುತ್ತಾ ಗಂಡಸರಿಗೆ ಅಷ್ಟೊಂದು ಮೂಢನಂಬಿಕೆ ಇರುವುದು ಸರಿಯಲ್ಲ ಎಂದಳು. ಅವಳೆಷ್ಟು ಬಿಡುಗಡೆ ಹೊಂದಿದ, ಮುಕ್ತಳಾದ, ನವಭಾವದ ವ್ಯಕ್ತಿಯಾಗಿದ್ದಳೆಂದರೆ ಅವಳನ್ನು ಕಂಡಾಗ ಅವ್ರೇಲಿಯಾನೋಗೆ ತಾನೇನು ಮಾಡಬೇಕೆಂದು ತಿಳಿಯಲಿಲ್ಲ. ಅವಳ, “ನನ್ನ…ನನ್ನ.. . ಪ್ರೀತಿಯ ನರಭಕ್ಷಕ ಎಷ್ಟು ಬೆಳೆದಿದ್ದಾನೆ ನೋಡಿ!” ಎಂದಳು. ಸಂತೋಷದಿಂದ ನಕ್ಕು ಕೈ ಚಾಚಿ ಹೇಳಿದಳು. ಅವನು ಪ್ರತಿಕ್ರಿಯೆ ತೋರಿಸುವ ಮೊದಲೇ, ತನ್ನ ಜೊತೆ ತಂದಿದ್ದ ಫೋನೋಗ್ರಾಫ್‌ನಲ್ಲಿ ರಿಕಾರ್ಡ್ ಒಂದನ್ನು ಹಾಕಿ, ಅವನಿಗೆ ನೃತ್ಯದ ಇತ್ತೀಚಿನ ಹೆಜ್ಜೆಗಳನ್ನು ಹೇಳಿಕೊಡಲು ಪ್ರಾರಂಭಿಸಿದಳು. ಅವನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಂದ ಬಳುವಳಿ ಪಡೆದಿದ್ದ ಕೊಳಕು ಪ್ಯಾಂಟನ್ನು ಕಳಚಲು ಹೇಳಿ ಹರೆಯ ಬಿಂಬಿಸುವ ಶರಟು ಮತ್ತು ಶೂಗಳನ್ನು ಹಾಕಿಕೊಳ್ಳಲು ಕೊಟ್ಟಳು ಮತ್ತು ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ತುಂಬ ಸಮಯ ಕಳೆಯುತ್ತಿದ್ದ ಅವನನ್ನು ಮನೆಯಿಂದ ಹೊರಗೆ ಕಳಿಸುತ್ತಿದ್ದಳು.
ಉರ್ಸುಲಾಳ ಹಾಗೆ ಚಿಕ್ಕ ಆಕಾರವಿದ್ದ, ಚಟುವಟಿಕೆಯ, ದೃಢ ಚಿತ್ತದ ಮತ್ತು ಸುಂದರಿ ರೆಮಿದಿಯೋಸ್‌ಳಂತೆ ಪ್ರಚೋದಕಳಾಗಿದ್ದ ಅವಳಿಗೆ ಫ್ಯಾಶನ್‌ಗಳನ್ನು ಮುಂಗಾಣುವ ಶಕ್ತಿಯಿತ್ತು. ಟಪಾಲಿನಲ್ಲಿ ತೀರ ಇತ್ತೀಚಿನ ಫ್ಯಾಶನ್‌ಗಳ ಚಿತ್ರಗಳು ಬಂದಾಗ ತಾನು ಡಿಸೈನ್ ಮಾಡಿದ್ದರಲ್ಲಿ ತಪ್ಪಿಲ್ಲ ಎನ್ನುವುದಕ್ಕೆ ಪುರಾವೆ ಒದಗಿಸುತ್ತಿತ್ತು ಮತ್ತು ಅವುಗಳನ್ನು ಅಮರಾಂತಳ ಕಾಲಿನಿಂದ ಒತ್ತುವ ಯಂತ್ರದಲ್ಲಿ ಹೊಲಿಗೆ ಮಾಡಿದ್ದಳು. ಅವಳು ಯೂರೋಪಿನಿಂದ ಪ್ರಕಟವಾಗುವ ಪ್ರತಿಯೊಂದು ಫ್ಯಾಷನ್ ಮ್ಯಾಗಸೈನ್‌ಗೆ, ಕಲಾಸಂಚಿಕೆಗಳಿಗೆ ಮತ್ತು ಜನಪ್ರಿಯ ಸಂಗೀತದ ವಿಮರ್ಶೆಯ ಪತ್ರಿಕೆಗಳಿಗೆ ಚಂದಾದಾರಳಾದಳು. ಅವುಗಳ ಕಡೆಗೆ ಒಂದು ನೋಟ ಮಾತ್ರದಿಂದಲೇ ತಾನು ಕಲ್ಪಿಸಿದಂತೆ ಜಗತ್ತಿನಲ್ಲಿ ಜರುಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಲು ಅವಳಿಗೆ ಸಾಕಾಗಿತ್ತು. ಆ ರೀತಿಯ ಶಕ್ತಿಯುಳ್ಳ ಹೆಂಗಸೊಬ್ಬಳು ಧೂಳು ಮತ್ತು ಶಾಖದಿಂದ ಸತ್ತು ಸೊರಗಿದ ಊರಿಗೆ ಏತಕ್ಕಾಗಿ ವಾಪಸು ಬಂದಳೆಂದು ತಿಳಿಯುವುದು ಸಾಧ್ಯವಿರಲಿಲಲ. ಅದರಲ್ಲೂ ಪ್ರಪಂಚದ ಯಾವ ಭಾಗದಲ್ಲಾದರೂ ಜೀವಿಸಿರಬಹುದಾದಷ್ಟು ಹಣವಂತ ಮತ್ತು ಅತೀವವಾಗಿ ಪ್ರೀತಿಸುವ ಗಂಡನಿರುವಾಗ. ಕ್ರಮೇಣ ಕಾಲ ಕಳೆದಂತೆ ಅವಳು ಅಲ್ಲಿ ನೆಲೆಸುವ ಅಂಶ ಸ್ಪಷ್ಟವಾಗುತ್ತ ಬಂತು. ಏಕೆಂದರೆ ಅವರು ದೂರದೃಷ್ಟಿ ಇರದ ಯಾವುದನ್ನೂ ಮಾಡುತ್ತಿರಲಿಲ್ಲ. ಅಲ್ಲದೆ ಮಕೋಂದೋದಲ್ಲಿ ಅನುಕೂಲಕರವಾದ ಮತ್ತು ಶಾಂತಿಯಿಂದ ಇಳಿವಯಸ್ಸನ್ನು ಕಳೆಯುವ ಕೆಲಸಗಳನ್ನಲ್ಲದೆ ಬೇರೆ ಯಾವುದನ್ನೂ ಮಾಡುತ್ತಿರಲಿಲ್ಲ. ಕನೇರಿ ಪಕ್ಷಿಗಳಿದ್ದ ಪಂಜರ ಆ ನಿರ್ಧಾರ ಕ್ಷಣವೊಂದರಲ್ಲಿ ತೆಗೆದುಕೊಂಡದ್ದೆಂದು ತಿಳಿಸುತ್ತಿತ್ತು. ಅವಳ ತಾಯಿ ಪಕ್ಷಿಗಳು ಕಾಣೆಯಾಗುತ್ತಿವೆ ಎಂದು ಬರೆದ ಕಾಗದವೊಂದರ ಕಾರಣದಿಂದ, ನೌಕೆ ಫಾರ್‍ಚೂನ್ ದ್ವೀಪಗಳಲ್ಲಿ ನಿಂತು ಮತ್ತು ಅವಳು ಅಲ್ಲಿ ಅತ್ಯಂತ ಚೆಲುವಿನ ಇಪ್ಪತ್ತೈದು ಜೊತೆ ಕನೇರಿ ಪಕ್ಷಿಗಳನ್ನು ಮಕೋಂದೋದ ಆಕಾಶದಲ್ಲಿ ಮತ್ತೆ ಹಾರಿ ಬಿಡುವುದಕ್ಕೋಸ್ಕರ ಪ್ರಯಾಣವನ್ನು ಅನೇಕ ತಿಂಗಳುಗಳ ಕಾಲ ನಿಧಾನಗೊಳಿಸಿದ್ದಳು. ಅವಳು ಉತ್ಸಾಹದಿಂದ ಕೈಗೊಂಡ ಅನೇಕ ಕಾರ್ಯಗಳಲ್ಲಿ ಅದು ಎಲ್ಲಕ್ಕಿಂತ ಹೆಚ್ಚಿನದು. ಅವುಗಳಿಂದ ಮತ್ತಷ್ಟು ಹಕ್ಕಿಗಳು ಹುಟ್ಟಿದ ಮೇಲೆ ಅಮರಾಂತ ಉರ್ಸುಲಾ ಅವುಗಳನ್ನು ಜೋಡಿಯಾಗಿ ಬಿಡುಗಡೆ ಮಾಡುತ್ತಿದ್ದಳು. ಅವುಗಳಿಗೆ ತಾವು ಬಂಧಮುಕ್ತವೆಂದು ಭಾವನೆ ಬಂದ ಕೂಡಲೇ ಊರಿನಿಂದ ಆಚೆ ಓಡುತ್ತಿದ್ದವು. ಉರ್ಸುಲಾ ಮೊದಲು ಮನೆಯ ಮರುನಿರ್ಮಾಣದಲ್ಲಿ ಮಾಡಿದ ಹಾಗೆ, ಪಂಜರದ ಹಕ್ಕಿಗಳಲ್ಲಿ ಪ್ರೇಮವನ್ನು ಜಾಗೃತಗೊಳಿಸಲು ಅವಳು ಪ್ರಯತ್ನಿಸಿದ್ದು ವ್ಯರ್ಥವಾಯಿತು. ಅದೇ ರೀತಿ ಬಾದಾಮಿ ಮರಗಳಲ್ಲಿ ನಿರ್ಮಿಸಿದ ಕೃತಕ ಹುಲ್ಲುಗಳಿಂದ ನಿರ್ಮಿಸಿದ ಗೂಡುಗಳು ಕೂಡ. ಅಲ್ಲದೆ, ಮನೆಯ ತಾರಸಿಯ ಮೇಲೆ ಹಾಕಿದ ಹಕ್ಕಿಕಾಳು ಮತ್ತು ಪಂಜರದ ಹಕ್ಕಿಗಳನ್ನು ಉತ್ತೇಜಿಸಿ, ತೊರೆದು ಹೋಗುವಂಥವುಗಳನ್ನು ತಡೆಹಿಡಿಯಲು ಮಾಡಿದ ಪ್ರಯತ್ನ ಕೂಡ. ಏಕೆಂದರೆ ಅವು ತಮ್ಮ ಮೊದಲ ಪ್ರಯತ್ನದಲ್ಲಿಯೇ ಆಕಾಶಕ್ಕೆ ಹಾರಿ ತಕ್ಷಣವೇ ಫಾರ್ಚೂನ್ ದ್ವೀಪಗಳ ಕಡೆ ಹೋಗುತ್ತಿದ್ದವು.
ಅಮರಾಂತ ಉರ್ಸುಲಾ ಹಿಂದಿರುಗಿ ಒಂದು ವರ್ಷ ಕಳೆದರೂ ಅವಳು ಯಾವುದೇ ಸ್ನೇಹಿತರನ್ನು ಸಂಪಾದಿಸಲು ಯಶಸ್ವಿಯಾಗಿರದಿದ್ದರೂ ಅಥವಾ ಯಾವುದೇ ಪಾರ್ಟಿ ಕೊಡದಿದ್ದರೂ ಕೂಡ ದುರದೃಷ್ಟಕ್ಕೆ ಮತ್ತೆ ಮತ್ತೆ ಸಿಲುಕಿದ ಕುಟುಂಬವನ್ನು ಕಾಪಾಡಲು ಇನ್ನೂ ಸಾಧ್ಯ ಎಂದು ನಂಬಿದ್ದಳು. ಅವಳ ಗಂಡ ಗಾತ್ಸನ್‌ಗೆ, ಆ ದುರ್ದಿನ ಟ್ರೈನಿನಿಂದ ಇಳಿದಾಗ, ತನ್ನ ಹೆಂಡತಿಯ ನಿರ್ಧಾರ ಪಳೆಯುಳಿಕೆಯಿಂದ ಪ್ರೇರಿತವಾದದ್ದೆಂದು ಅರಿವಾದರೂ ಅವಳನ್ನು ರೇಗಿಸಲು ಹೋಗಿರಲಿಲ್ಲ. ಅಲ್ಲಿನ ವಾಸ್ತವಾಂಶಗಳಿಂದ ಅವಳು ಹತಾಶಳಾಗುತ್ತಾಳೆಂದು ಭಾವಿಸಿ ಅವನು ಮನೋವ್ಯಥೆಯಿಂದ ಮುದುಡಿ ಹೋಗಿದ್ದ. ವಾಹನವನ್ನೂ ರಿಪೇರಿ ಮಾಡಲಿಲ್ಲ. ಆದರೆ ಗಾರೆ ಕೆಲಸದವರು ಉರುಳಿಸಿದ್ದ ಜೇಡರ ಬಲೆಗಳಲ್ಲಿ ದೊಡ್ಡ ಮೊಟ್ಟೆ ಇರುವಂಥವುಗಳನ್ನು ಹುಡುಕಿ, ಉಗುರಿನಿಂದ ಕಿತ್ತು ಅದರೊಳಗಿಂದ ಹೊರಡುವ ಸಣ್ಣ ಜೇಡಗಳನ್ನು ಭೂತಗನ್ನಡಿಯಿಂದ ನೋಡುತ್ತ ಗಂಟೆಗಟ್ಟಲೆ ಕಳೆಯುತ್ತಿದ್ದ. ಕ್ರಮೇಣ ಅಮರಾಂತ ಉರ್ಸುಲಾಳಿಗೆ ರಿಪೇರಿಯಿಂದಾಗಿ ಬಿಡುವಿಲ್ಲವೆಂದು ತಿಳಿದು, ಮುಂದಿನ ಚಕ್ರ ಹಿಂದಿನದಕ್ಕಿಂತ ದೊಡ್ಡದಾಗಿದ್ದ ಚಂದವಾಗಿ ಕಾಣಿಸುವ ಬೈಸಿಕಲ್ ರಿಪೇರಿ ಮಾಡಲು ನಿರ್ಧರಿಸಿದ. ಅಲ್ಲದೆ ಅಲ್ಲಿನ ಪ್ರತಿಯೊಂದು ಸ್ಥಳೀಯ ಜಂತುವನ್ನು ಹಿಡಿದು, ಗುಣಪಡಿಸಿ, ಜಾರ್‌ಗಳಲ್ಲಿ ಹಾಕಿ, ಲೀಗೆ ವಿಶ್ವವಿದ್ಯಾಯಾಲಯದಲ್ಲಿ ಅವನಿಗೆ ಪ್ರಕೃತಿ ಇತಿಹಾಸದಲ್ಲಿ ತನಗೆ ಪ್ರೊಫೆಸರ್ ಆಗಿದ್ದವರಿಗೆ ಕಳಿಸಿಕೊಡುತ್ತಿದ್ದ. ಅಲ್ಲಿ ಅವನು ಪ್ರಮುಖವಾಗಿ ವಿಮಾನ ಚಾಲನೆಯನ್ನು ಅಭ್ಯಾಸ ಮಾಡಿದ್ದರೂ ಕ್ರಿಮಿಶಾಸ್ತ್ರ ವಿದ್ಯೆಯಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ್ದ. ಅವನು ಸೈಕಲ್ ಓಡಿಸುವಾಗ ಬಿಗಿಯುಡುಗೆ ತೊಟ್ಟು, ಬಣ್ಣ ಬಣ್ಣದ ಕಾಲುಚೀಲ ಮತ್ತು ಶೆರ್‌ಲಾಕ್ ಹೋಮ್ಸ್‌ನ ಹ್ಯಾಟ್ ಹಾಕಿಕೊಂಡಿರುತ್ತಿದ್ದ. ಆದರೆ ಕಾಲು ನಡಿಗೆಯಲ್ಲಿ ಅವನು ಕುಂದಿರದ ಹತ್ತಿ ಬಟ್ಟೆಯ ಸೂಟ್, ಬಿಳಿ ಶೂ, ಸಿಲ್ಕ್ ಬೋ ಟೈ ಹಾಕಿಕೊಂಡು, ಕೈಯಲ್ಲೊಂದು ಬೆತ್ತ ಹಿಡಿದುಕೊಂಡಿರುತ್ತಿದ್ದ. ಅವನ ಸಪ್ಪೆ ಮುಖ ನೌಕಾಯಾನ ಮಾಡುವವನ ಲಕ್ಷಣವನ್ನು ಎದ್ದು ತೋರಿಸುತ್ತಿತ್ತು ಮತ್ತು ಅವನ ಸಣ್ಣ ಮೀಸೆ ಅಳಿಲಿನ ಕೂದಲಂತೆ ಕಾಣುತ್ತಿತ್ತು. ಅವನು ಅವನ ಹೆಂಡತಿಗಿಂತ ಹದಿನೈದು ವರ್ಷ ದೊಡ್ಡವನಾದರೂ ಅವಳನ್ನು ಸಂತೋಷವಾಗಿರಿಸುವುದಕ್ಕೆ ಅವನ ತೀವ್ರವಾದ ದೃಢತೆ ಮತ್ತು ಪ್ರೇಮಿಯಾಗಿ ಉತ್ತಮ ಗುಣಗಳು ಆ ವ್ಯತ್ಯಾಸವನ್ನು ಸರಿದೂಗಿಸಿದ್ದವು. ನಲವತ್ತರಲ್ಲಿದ್ದ ಅವನ ಕ್ರಮಬದ್ಧವಾದ ಅಭ್ಯಾಸಗಳು, ಕತ್ತಿಗೆ ಸುತ್ತುವರಿದ ಚರ್ಮದ ಹುರಿ ಮತ್ತು ಸರ್ಕಸ್ಸಿನ ಬೈಸಿಕಲ್‌ಗಳನ್ನು ನೋಡಿದವರು ಹೆಂಡತಿಯ ಪ್ರೇಮದ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದಾನೆಂದೂ ತೀರ ಅಸಮರ್ಪಕ ಸ್ಥಳಗಳಲ್ಲಿ ಹಾಗೂ ಭಾವ ಪ್ರಚೋದಿಸುವ ಕಡೆಗಳಲ್ಲಿ ಪರಸ್ಪರ ಪ್ರತಿಕ್ರಿಯಿಸುತ್ತಾರೆಂದೂ ತಿಳಿಯುವಂತಿತ್ತು. ಅವರು ಪರಸ್ಪರ ಸಂಗಾತಿಗಳಾಗಿರಲು ಪ್ರಾರಂಭಿಸಿದಾಗಿನಿಂದ ಹಾಗೆ ಮಾಡುತ್ತಿದ್ದರು. ಅಲ್ಲದೆ ಸಮಯ ಉರುಳಿದಂತೆ ಮತ್ತು ಹೆಚ್ಚು ಹೆಚ್ಚು ಅಸಾಮಾನ್ಯ ಸನ್ನಿವೇಶಗಳಿಂದಾಗಿ ಪ್ರೇಮಾವೇಶ ಹೆಚ್ಚಾಗಿತ್ತು. ಗ್ಯಾತ್ಸನ್ ತನ್ನ ಮೇರೆ ಇರದ ಕಲ್ಪನೆ ಮತ್ತು ಜಾಣ್ಮೆಯಿಂದ ಕೂಡಿದ ತೀವ್ರ ಸ್ವರೂಪದ ಪ್ರೇಮಿಯಷ್ಟೇ ಆಗಿರಲಿಲ್ಲ. ಬಹುಶಃ ಇಡೀ ಮಾನವ ಕುಲದ ಇತಿಹಾಸದಲ್ಲಿಯೇ, ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಿದವರಲ್ಲಿ ಮೊದಲನೆಯವನಾಗಿದ್ದ. ಬಿಳಿ ಹೂಗಳ ಗದ್ದೆಯಲ್ಲಿ ಹೆಂಡತಿಯೊಂದಿಗೆ ಕೇವಲ ರಮಿಸುವ ಕಾರಣದಿಂದ ಹಾಗೆ ಮಾಡಿದಾಗ ಅವರಿಬ್ಬರೂ ಇನ್ನೇನು ಸಾಯುವುದರಲ್ಲಿದ್ದರು.
ಅವರು ಮದುವೆಗೆ ಎರಡು ವರ್ಷದ ಮುಂಚೆ ಭೇಟಿಯಾಗಿದ್ದರು. ಆಗ ಅವನು ನಿರ್ವಹಿಸುತ್ತಿದ್ದ ಸ್ಪೋರ್ಟ್ಸ್ ವಿಮಾನ ಅಮರಾಂತ ಉರ್ಸುಲಾ ಓದುತ್ತಿದ್ದ ಸ್ಕೂಲಿನ ಮೇಲೆ ಉರುಳುರುಳಿ ಧ್ವಜಸ್ತಂಭಕ್ಕೆ ಡಿಕ್ಕಿ ಹೊಡೆಯದಂತೆ ಮಾಡಿದ್ದ ಮತ್ತು ಬಾಲಕ್ಕೆ ತಗುಲಿ ಕ್ಯಾನ್‌ವಾಸ್‌ನ ಚೌಕಟ್ಟು ಹಾಗೂ ಅಲ್ಯುಮಿನಿಯಂ ಹಾಳೆಗಳು ಎಲೆಕ್ಟ್ರಿಕ್ ತಂತಿಗಳಿಗೆ ಸಿಕ್ಕಿಹಾಕಿಕೊಂಡಿದ್ದವು. ಅದಾದ ನಂತರ ಕಾಲಿಗೆ ಆದ ತೊಂದರೆಯನ್ನು ಗಮನಿಸದೆ ಅಮರಾಂತಳಿದ್ದ ನನ್‌ಗಳ ವಸತಿ ಗೃಹದಿಂದ ವಾರಾಂತ್ಯದಲ್ಲಿ ಅವಳನ್ನು ಕರೆದುಕೊಂಡು ಹೋಗುತ್ತಿದ್ದ. ಅಲ್ಲಿ ಫೆರ್ನಾಂಡ ಬಯಸಿದಷ್ಟು ನಿರ್ಬಂಧವಿರಲಿಲ್ಲ. ಅವನು ಅವಳನ್ನು ತನ್ನ ಕಂಟ್ರಿ ಕ್ಲಬ್‌ಗೆ ಕೊಂಡೊಯ್ಯುತ್ತಿದ್ದ. ಅವರು ಭಾನುವಾರದ ವಿಲಾಸದಲ್ಲಿ ಸಾವಿರದ ಐನೂರು ಅಡಿ ಎತ್ತರದಲ್ಲಿ ಪ್ರೇಮಿಸುವುದಕ್ಕೆ ಪ್ರಾರಂಭಿಸಿದರು ಮತ್ತು ಭೂಮಿಯ ಮೇಲಿನವರು ಹೆಚ್ಚು ಹೆಚ್ಚು ಸಣ್ಣಗಾದಷ್ಟೂ ತಾವು ಹೆಚ್ಚು ಹತ್ತಿರಕ್ಕೆ ಬರುತ್ತಿದ್ದೇವೆಂದು ಭಾವಿಸುತ್ತಿದ್ದರು. ಅವಳು ಮಕೋಂದೋ ಬಗ್ಗೆ ಮಾತನಾಡುತ್ತ ಅದು ಭೂಮಿಯ ಮೇಲಿರುವ ಅತ್ಯಂತ ಕಾಂತಿಯುಕ್ತ ಮತ್ತು ಶಾಂತಿಪೂರ್ಣ ಊರೆಂದು ಹೇಳಿದಳು. ಸುಗಂಧಭರಿತ ಆ ಭಾರಿ ಮನೆಯಲ್ಲಿ ಹಣ್ಣಾಗುವ ತನಕ ತನ್ನವನೇ ಆದ ಗಂಡನೊಡನೆ ಬಾಳಬೇಕೆಂದು ಮತ್ತು ಎಂದಿಗೂ ಅವ್ರೇಲಿಯಾನೋ, ಹೊಸೆ ಆರ್ಕಾದಿಯೋ ಎಂದಿರದೆ ರೊಡ್ರಿಗೋ, ಗೋನ್ಜಾಲೋ ಎಂಬ ಇಬ್ಬರು ಶಕ್ತಿವಂತ ಗಂಡು ಮಕ್ಕಳನ್ನು ಹಾಗೂ ರೆಮಿದಿಯೋಸ್ ಅಲ್ಲದೆ ವರ್ಜೀನಿಯಾ ಎಂಬ ಮಗಳನ್ನು ಪಡೆಯುವ ಅಪೇಕ್ಷೆಯನ್ನು ಕುರಿತು ಹೇಳಿದಳು. ಅವಳು ಹಳೆಯ ನೆನಪುಗಳಿಂದ ತೀವ್ರವಾಗಿ ಆದರ್ಶೀಕರಿಸಿದ ಮಕೋಂದೋಗೆ ಅವಳನ್ನು ಕರೆದುಕೊಂಡು ಹೋಗದಿದ್ದರೆ ತನ್ನನ್ನು ಮದುವೆಯಾಗುವುದಿಲ್ಲವೆಂದು ಗ್ಯಾತ್ಸನ್‌ಗೆ ಗೊತ್ತಾಯಿತು. ಅದೊಂದು ಸಮಯ ಕಳೆದಂತೆ ನಶಿಸಿಹೋಗುವ ಅಭಿಲಾಷೆ ಎಂದುಕೊಂಡು ಅವನು ಅದಕ್ಕೆ ಒಪ್ಪಿಕೊಂಡ. ಆದರೆ ಮಕೋಂದೋದಲ್ಲಿ ಎರಡು ವರ್ಷದ ಮೇಲೆ ಕೂಡ ಅಮರಾಂತ ಉರ್ಸುಲಾ ಮೊದಲನೆಯ ದಿನದಷ್ಟೇ ಸಂತೋಷವಾಗಿದ್ದುದನ್ನು ಕಂಡು ಅವನಿಗೆ ಆತಂಕವಾಯಿತು. ಆ ವೇಳೆಗಾಗಲೇ ಅವನು ಆ ಪ್ರದೇಶದಲ್ಲಿ ಕತ್ತರಿಸಬಹುದಾದ ಎಲ್ಲ ಹುಳುಗಳನ್ನು ಕತ್ತರಿಸಿದ್ದ. ಅವನು ಸ್ಪ್ಯಾನಿಷ್ ಭಾಷೆಯನ್ನು ಸ್ಥಳೀಯನೆನ್ನುವ ಹಾಗೆ ಮಾತಾಡುತ್ತಿದ್ದ. ಟಪಾಲಿನಲ್ಲಿ ಬರುತ್ತಿದ್ದ ಮ್ಯಾಗಸೈನ್‌ನಲ್ಲಿರುತ್ತಿದ್ದ ಪದಬಂಧಗಳನ್ನು ಬಿಡಿಸುತ್ತಿದ್ದ. ಅವನು ಒಳ್ಳೆಯ ಹವಾಮಾನ ಮರಳಿ ಬರಲೆಂದು ಅಪೇಕ್ಷಿಸುತ್ತಿರಲಿಲ್ಲ. ಏಕೆಂದರೆ ಪ್ರಕೃತಿದತ್ತವಾಗಿಯೇ ಮಧ್ಯಾಹ್ನದ ಹೊತ್ತು ಮಲಗುವುದನ್ನು ನಿಗ್ರಹಿಸುವ ಮತ್ತು ಜಲಜಂತುಗಳನ್ನು ನಿರೋಧಿಸುವ ಪಿತ್ತಜನಕಾಂಗವನ್ನು ಹೊಂದಿದ್ದ. ಅವನು ಸ್ಥಳೀಯ ಅಡುಗೆಯನ್ನು ಎಷ್ಟು ಇಷ್ಟಪಟ್ಟಿದ್ದನೆಂದರೆ ಒಂದು ಸಲ ಕುಳಿತಾಗ ಎಂಭತ್ತೆರಡು ಇಗ್ವಾನಾ ಮೊಟ್ಟೆಗಳನ್ನು ತಿಂದಿದ್ದ. ಅಮರಾಂತ ಉರ್ಸುಲಾ ರೈಲಿನಲ್ಲಿ ಬರುವಾಗ ಐಸ್ ಬಾಕ್ಸ್‌ಗಳಲ್ಲಿ ಅವಳಿಗೆ ಮಾತ್ರ ತಿನ್ನಲು ಸಾಧ್ಯವಾದ ವಸ್ತುಗಳಾದ ಮೀನುಗಳನ್ನು, ಡಬ್ಬದಲ್ಲಿ ಮಾಂಸ ಮತ್ತು ರಕ್ಷಿಸಲ್ಪಟ್ಟ ಹಣ್ಣುಗಳನ್ನು ತಂದಿದ್ದಳು. ಅವಳಿನ್ನೂ ಯೂರೋಪಿನ ಶೈಲಿಯಲ್ಲಿ ಡ್ರೆಸ್ ಮಾಡುತ್ತಿದ್ದಳು ಮತ್ತು ಹೋಗಬೇಕಾದ ಸ್ಥಳ ಯಾವುದೂ ಇರದಿದ್ದರೂ ಮತ್ತು ಭೇಟಿಯಾಗಬೇಕಾದವರು ಯಾರೂ ಇರದಿದ್ದರೂ ಟಪಾಲಿನಲ್ಲಿ ಡಿಸೈನ್‌ಗಳು ಬರುತ್ತಿತ್ತು. ಆ ಸಮಯಕ್ಕೆ ಅವಳ ಗಂಡನಿಗೆ ಅವಳ ತುಂಡುಲಂಗಗಳು, ಓರೆ ಮಾಡಿದ ಫೆಲ್ಟ್ ಹ್ಯಾಟ್‌ಗಳು ಏಳು ಎಳೆಗಳ ನೆಕ್‌ಲೇಸ್‌ಗಳನ್ನು ಮೆಚ್ಚುವ ಮನಸ್ಸಿರಲಿಲ್ಲ. ಅವಳು ಯಾವಾಗಲೂ ಕೆಲಸ ಮಾಡುತ್ತಿರುವುದಕ್ಕೆ ಮಾರ್ಗಗಳನ್ನು ಹೊಂದಿಸಿಕೊಳ್ಳುತ್ತಿದ್ದಳು. ತಾನೇ ಸೃಷ್ಟಿಸಿದ ಮನೆಯ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮತ್ತು ಸರಿಯಾಗಿ ಪೂರೈಸದ ಸಾವಿರಾರು ಕೆಲಸಗಳನ್ನು ಮರುದಿನ ಸರಿಪಡಿಸಬೇಕೆಂಬ ದೃಢತೆಯಿಂದ ನಿರ್ವಹಿಸುತ್ತಿದ್ದು, ಅದು ಫೆರ್ನಾಂಡಳನ್ನು ಕುರಿತು ಮತ್ತು ವಂಶಪಾರಂಪರ್‍ಯವಾಗಿ ಬಂದ ಕೆಡಿಸಲಕ್ಕಾಗಿಯೇ ಕೆಲಸ ಮಾಡುವ ದುರ್ಗುಣವನ್ನು ಕುರಿತು ಯೋಚಿಸುವಂತೆ ಮಾಡುತ್ತಿತ್ತು. ಅವಳಲ್ಲಿ ಸಂಭ್ರಮಗೊಳ್ಳುವ ಪ್ರವೃತ್ತಿ ಇನ್ನೂ ಎಷ್ಟು ಜೀವಂತವಾಗಿತ್ತೆಂದರೆ ಹೊಸ ರೆಕಾರ್ಡುಗಳು ತಲುಪಿದಾಗ, ತನ್ನ ಸ್ಕೂಲಿನ ಗೆಳತಿಯರು ಚಿತ್ರ ಬರೆದು ವಿವರಿಸಿದ್ದಂತೆ ನೃತ್ಯದ ಹೆಜ್ಜೆಗಳನ್ನು ಹಾಕಲು ಗ್ಯಾತ್ಸನ್‌ಗೆ ನಡುಮನೆಯಲ್ಲಿ ಬಹಳ ಹೊತ್ತಿನ ತನಕ ಇರಲು ಹೇಳುತ್ತಿದ್ದಳು ಮತ್ತು ಅವಳು ಸಾಮಾನ್ಯವಾಗಿ ವಿಯನ್ನಾದ ತೊನೆದಾಡುವ ಕುರ್ಚಿಯಲ್ಲೋ ಅಥವಾ ಬರಿ ನೆಲದ ಮೇಲೋ ಪ್ರೇಮಿಸುವುದರೊಂದಿಗೆ ಮುಕ್ತಾಯ ಮಾಡುತ್ತಿದ್ದರು. ಅವಳಿಗೆ ಸಂಪೂರ್ಣ ಸಂತೋಷ ಕೊಟ್ಟ ಸಂಗತಿಯೆಂದರೆ ಮಕ್ಕಳು ಹುಟ್ಟಿದ್ದು. ಆದರೆ ಮದುವೆಯಾಗಿ ಐದು ವರ್ಷದ ತನಕ ಮಕ್ಕಳು ಬೇಡವೆಂದು ಗಂಡನೊಡನೆ ಮಾಡಿಕೊಂಡ ಹೊಂದಾಣಿಕೆಯನ್ನು ಗೌರವಿಸಿದ್ದಳು.
ಸುಮ್ಮನೆ ವ್ಯರ್ಥವಾಗಿ ಹೋಗುತ್ತಿದ್ದ ಸಮಯವನ್ನು ಏನಾದರೊಂದಕ್ಕೆ ಉಪಯೋಗಿಸಬೇಕೆಂದು ಹುಡುಕುತ್ತಿದ್ದ ಗ್ಯಾತ್ಸನ್, ಬೆಳಗಿನ ಹೊತ್ತು ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಇರುತ್ತಿದ್ದ ಸಂಕೋಚ ಸ್ವಭಾವದ ಅವ್ರೇಲಿಯಾನೋ ಜೊತೆ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡ. ಅವನ ಜೊತೆ ತನ್ನ ದೇಶದ ಮೂಲೆಮೂಲೆಗಳನ್ನು ನೆನಪಿಸಿಕೊಳ್ಳುತ್ತ ಸಂತೋಷಪಡುತ್ತಿದ್ದರೆ, ಅವ್ರೇಲಿಯಾನೋ ಆ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆದಷ್ಟು ಅವುಗಳ ಬಗ್ಗೆ ತಿಳಿದುಕೊಂಡಿದ್ದ. ಗ್ಯಾತ್ಸನ್ ಅವನಿಗೆ ವಿಶ್ವಕೋಶದಲ್ಲಿ ಇಲ್ಲದಿರುವಂಥ ವಿಷಯಗಳನ್ನು ತಿಳಿಯುವುದಕ್ಕಾಗಿ ಮಾಡಿದ್ದೇನು ಎಂದು ಅವ್ರೇಲಿಯಾನೋವನ್ನು ಕೇಳಿದರೆ ಅವನಿಗೆ ಹೊಸೆ ಅರ್ಕಾದಿಯೋಗೆ ಸಿಕ್ಕ ಉತ್ತರವೇ ಸಿಕ್ಕಿತು. “ಪ್ರತಿಯೊಂದೂ ಗೊತ್ತಿದೆ”. ಸಂಸ್ಕೃತದೊಂದಿಗೆ ಇಂಗ್ಲಿಷ್, ಫ್ರೆಂಚ್, ಕೊಂಚ ಲ್ಯಾಟಿನ್ ಮತ್ತು ಗ್ರೀಕ್ ಕಲಿತಿದ್ದ. ಅವನು ಪ್ರತಿದಿನ ಮಧ್ಯಾಹ್ನ ಹೊರಗೆ ಹೋಗುತ್ತಿದ್ದರಿಂದ, ಅಮರಾಂತ ಉರ್ಸುಲಾ ಅವ; ವಾರದ ಖರ್ಚಿಗೆಂದು ಅಷ್ಟು ಹಣವನ್ನು ತೆಗೆದಿರಿಸುತ್ತಿದ್ದಳು. ಅವನ ರೂಮು ಕತಲುನಿಯಾದ ಜಾಣನ ಪುಸ್ತಕದಂಗಡಿಯ ಭಾಗವಾಗಿ ಮಾರ್ಪಾಡಾಗಿತ್ತು. ಅವನು ರಾತ್ರಿ ಬಹಳ ಹೊತ್ತಿನ ತನಕ ಓದುತ್ತಿದ್ದ. ಅವನು ಓದುತ್ತಿದ್ದ ರೀತಿಯಿಂದ ಗ್ಯಾತ್ಸನ್‌ಗೆ ಅವನು ಜ್ಞಾನವನ್ನು ಪಡೆಯಲು ಪುಸ್ತಕಗಳನ್ನು ಕೊಳ್ಳುತ್ತಿಲ್ಲ, ಬದಲಿಗೆ ತನ್ನ ಜ್ಞಾನದ ಸತ್ಯವನ್ನು ಪರೀಕ್ಷಿಸುವುದಕ್ಕಾಗಿ ಎಂದುಕೊಂಡ ಮತ್ತು ಅವನಿಗೆ ಬೆಳಗಿನ ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಿದ್ದ, ಚರ್ಮದ ಹಾಳೆಗಳ ಮೇಲಿನ ಬರಹದಷ್ಟು ಬೇರೆ ಇನ್ನು ಯಾವುದರಲ್ಲೂ ಆಸಕ್ತಿ ಹೊಂದಿಲ್ಲವೆಂದು ಗೊತ್ತಾಯಿತು. ಗ್ಯಾತ್ಸನ್ ಮತ್ತು ಅವನ ಹೆಂಡತಿ ಅವನನ್ನು ಮನೆಯ ವಿಷಯಗಳಲ್ಲಿ ಒಳಗೊಳ್ಳುವಂತೆ ಬಯಸಿದ್ದರು. ಆದರೆ ಅವ್ರೇಲಿಯಾನೋ ಸಮಯ ಹೋದಷ್ಟು ಹೆಚ್ಚು ನಿಗೂಢವಾಗುತ್ತಿದ್ದ ರಸತಂತ್ರಜ್ಞಾನದ ಮನುಷ್ಯನಾಗಿದ್ದ. ಅದೊಂದು ವಿಚಿತ್ರ ಪರಿಸ್ಥಿತಿಯಾಗಿ ಗ್ಯಾತ್ಸನ್ ಅವನ ಜೊತೆ ಆತ್ಮೀಯವಾಗುವ ಪ್ರಯತ್ನದಲ್ಲಿ ಸೋತು ಹೊತ್ತು ಕಳೆಯಲು ಬೇರೆ ದಾರಿಯನ್ನು ಹುಡುಕಬೇಕಾಯಿತು. ಅದೇ ಸಮಯದಲ್ಲಿ ಅವನಿಗೆ ಏರ್‌ಮೇಲ್ ಸೇವೆಯನ್ನು ಪ್ರಾರಂಭಿಸುವ ಆಲೋಚನೆ ಬಂತು.
ಅದು ಹೊಸ ಯೋಜನೆಯಾಗಿರಲಿಲ್ಲ. ಅಮರಾಂತ ಉರ್ಸುಲಾಳನ್ನು ಭೇಟಿಯಾದಾಗಲೇ ಅವನು ಆ ವಿಷಯದಲ್ಲಿ ಸಾಕಷ್ಟು ಪ್ರಗತಿ ಪಡೆದಿದ್ದ. ಆದರೆ ಅದು ಮಕೋಂದೋಗೆ ಆಗಿರದೆ, ತನ್ನ ಮನೆಯವರು ತಾಳೆ ಎಣ್ಣೆ ವ್ಯವಹಾರದಲ್ಲಿ ಹಣ ಹೂಡಿಸಿದ್ದ ಬೆಲ್ಜಿಯನ್ ಕಾಂಗೋಕ್ಕಾಗಿ. ಮದುವೆ ಮತ್ತು ಹೆಂಡತಿಯನ್ನು ಖುಷಿಪಡಿಸುವುದಕ್ಕಾಗಿ ಕೆಲವು ತಿಂಗಳು ಮಕೋಂದೋದಲ್ಲಿ ಕಳೆಯಲು ನಿರ್ಧರಿಸಿದ್ದರಿಂದ ಮುಂದಕ್ಕೆ ಹಾಕಬೇಕಾಗಿತ್ತು. ಆದರೆ ಸಾರ್ವಜನಿಕ ಪ್ರಗತಿಗಾಗಿ ವ್ಯವಸ್ಥೆಯೊಂದನ್ನು ರೂಪಿಸಲು ಅಮರಾಂತ ಉರ್ಸುಲಾ ಯೋಚಿಸುತ್ತಿರುವುದನ್ನು ಕಂಡು, ವಾಪಸು ಹೋಗುವುದೆಂದು ಸೂಚಿಸಿದಾಗ ಅವಳು ನಕ್ಕುಬಿಟ್ಟಿದ್ದಳು. ಇದರಿಂದ ಅವನಿಗೆ ಬಹಳ ಸಮಯ ಹಿಡಿಯುತ್ತದೆ ಎಂದು ತಿಳಿದು, ಬ್ರುಸೆಲ್ಸ್‌ನಲ್ಲಿದ್ದ ಮರೆತುಹೋಗಿದ್ದ ಪಾರ್ಟನರ್‍ಸ್ ಸಂಗಡ, ಆಫ್ರಿಕಾದಲ್ಲಿ ಇದ್ದಂತೆ ಕ್ಯಾಂಬಿಯನ್‌ನಲ್ಲಿ ಕೂಡ ಸ್ಥಾಪಿಸುವುದು ಸರಿ ಎಂದು ಭಾವಿಸಿ, ಸಂಪರ್ಕವನ್ನು ಮತ್ತೆ ಪ್ರಾರಂಭಿಸಿದ. ಅವನು ತನ್ನ ಕೆಲಸದಲ್ಲಿ ಪ್ರಗತಿ ಸಾಧಿಸುತ್ತಿದ್ದ ಹಾಗೆ ಹಳೆಯ ಚಂದದ ಪ್ರದೇಶವಾಗಿದ್ದು ಈಗ ಹುಡಿಯಾದ ಚಕಮಕಿ ಕಲ್ಲಿನಿಂದ ಕೂಡಿದ ವಿಸ್ತಾರದಲ್ಲಿ ವಿಮಾನ ಬಂದಿಳಿಯಲು ಸ್ಥಳವನ್ನು ಏರ್ಪಾಡು ಮಾಡಿದ. ಅವನು ಗಾಳಿ ಬೀಸುವ ದಿಕ್ಕನ್ನು ಮತ್ತು ಸಮುದ್ರ ತೀರದ ಭೌಗೋಳಿಕ ಅಂಶಗಳನ್ನು ಅಭ್ಯಾಸ ಮಾಡಿದ. ಅವನು ಗಾಳಿಯಲ್ಲಿ ಪ್ರಯಾಣಿಸುವುದಕ್ಕೆ ತುಂಬ ಎಚ್ಚರಿಕೆಯಿಂದ ಮಾಡುತ್ತಿದ್ದ ಪ್ರಯತ್ನಗಳು ಅವನಿಗೇ ತಿಳಿಯದಂತೆ ಮಿಸ್ಟರ್ ಹರ್‌ಬರ್ಟ್ ಮಾಡಿದ ರೀತಿಯಂತಿದ್ದವು. ಇದರಿಂದ ಊರಿನವರಿಗೆ ಅವನ ಯೋಜನೆ ಬಾಳೆ ಗಿಡಗಳನ್ನು ನೆಡುವುದಕ್ಕಾಗಿ ಎನ್ನುವ ಅಪಾಯದ ಅನುಮಾನವಾಗಿ ತೋರಿತು. ತನಗೆ ಬಂದ ವಿಶೇಷ ಆಲೋಚನೆಯಿಂದ ಮಕೋಂದೋದಲ್ಲಿ ತಾನು ನೆಲೆಯೂರುವುದಕ್ಕೆ ಸರಿಯಾದ ಕಾರಣ ಸಿಗುವ ಉತ್ಸಾಹದಿಂದ ಅವನು ಆ ಪ್ರಾಂತ್ಯದ ರಾಜಧಾನಿಗೆ ಅನೇಕ ಬಾರಿ ಹೋಗಿ ಬಂದ, ಅಧಿಕಾರಿಗಳನ್ನು ಭೇಟಿಯಾದ, ಲೈಸನ್ಸ್‌ನ್ನು ಪಡೆದ ಮತ್ತು ಪ್ರತ್ಯೇಕ ಹಕ್ಕುಗಳ ಗುತ್ತಿಗೆ ಸಿದ್ಧಪಡಿಸಿದ. ಇದರ ಮಧ್ಯೆ ಬ್ರುಸೆಲ್ಸ್‌ನಲ್ಲಿದ್ದ ತನ್ನ ಪಾರ್ಟ್‌ನರ್‍ಸ್ ಜೊತೆ ಸಂಪರ್ಕವಿರಿಸಿದ್ದು ಫೆರ್ನಾಂಡ ಕಾಣದ ಡಾಕ್ಟರುಗಳೊಂದಿಗೆ ಇಟ್ಟುಕೊಂಡಿದ್ದ ಪತ್ರ ವ್ಯವಹಾರದಂತಿತ್ತು. ಕೊನೆಗೆ ಅವನು ಅವರಿಗೆ ಪರಿಣತ ಮೆಕ್ಯಾನಿಕ್‌ನ ಪರಿವೀಕ್ಷಣೆಯಲ್ಲಿ ಹತ್ತಿರದ ಸ್ಥಳವೊಂದರಲ್ಲಿ ನಿರ್ಮಿಸಿದ ವಿಮಾನವೊಂದನ್ನು ಮಕೋಂದೋಗೆ ಪ್ರಯಾಣಗೊಳಿಸಲು ಒಪ್ಪಿಸಿದ. ಅದರ ಬಗ್ಗೆ ಆಲೋಚನಾ ಮಗ್ನನಾದ ಒಂದು ವರ್ಷಕ್ಕೆ ಮತ್ತು ಹವಾ ನಿರೀಕ್ಷಣೆಯ ಲೆಕ್ಕಾಚಾರದಂತೆ, ತಾನು ಮಾಡಿದ ಪತ್ರ ವ್ಯವಹಾರದ ವಾಗ್ದಾನದಲ್ಲಿ ನಂಬಿಕೆಯಿಟ್ಟು, ಆಕಾಶದ ಕಡೆ ನೋಡುತ್ತ, ಬೀಸುವ ಗಾಳಿ ತರುವ ಸದ್ದು ಏರೋಪ್ಲೇನ್ ಬರುವುದೆನ್ನುವ ನಿರೀಕ್ಷೆಯಿಂದ, ಅವನು ರಸ್ತೆಯಲ್ಲಿ ತಿರುಗಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ.
ಅವರು ಗಮನಿಸದೆ ಇದ್ದರೂ ಅಮರಾಂತ ಉರ್ಸುಲಾ ವಾಪಸು ಬಂದಿದ್ದರಿಂದ ಅವ್ರೇಲಿಯಾನೋನ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು. ಹೊಸೆ ಅರ್ಕಾದಿಯೋ ಸತ್ತ ಮೇಲೆ ಅವನು ಜಾಣ ಕತಲುನಿಯಾದವನ ಪುಸ್ತಕದಂಗಡಿಯ ಮಾಮೂಲಿನ ಗಿರಾಕಿಯಾಗಿದ್ದ. ಅವನಿಗೆ ಅಲ್ಲಿ ಸಿಗುತ್ತಿದ್ದ ಸ್ವಾತಂತ್ರ್ಯ ಮತ್ತು ಇದ್ದ ಕಾಲಾವಕಾಶ ಊರಿನ ಬಗ್ಗೆ ಕೆಲವು ಕುತೂಹಲಗಳು ಹುಟ್ಟುವಂತೆ ಮಾಡಿತು. ಅವುಗಳನ್ನು ತಿಳಿದು ಅವನು ಆಶ್ಚರ್ಯಗೊಳ್ಳಲಿಲ್ಲ. ಅವನು ಧೂಳು ತುಂಬಿದ ನಿರ್ಜನ ರಸ್ತೆಗಳಲ್ಲಿ ಹೋಗಿ, ಪಾಳು ಬಿದ್ದ ಮನೆಗಳ ಒಳಗನ್ನು ವೈಜ್ಞಾನಿಕ ವಿಶ್ಲೇಷಣೆಯಿಂದ ನೋಡಿ, ಅಲ್ಲಿದ್ದ ಲೋಹದ ಕಿಟಕಿಗಳ ಪರದೆಗಳು ತುಕ್ಕು ಹಿಡಿದು ಸಾಯಲಿದ್ದ ಹಕ್ಕಿಗಳ ಬಡಿತಕ್ಕೆ ಸಿಕ್ಕು ತುಂಡಾದದ್ದನ್ನು ನೋಡಿದ ಮತ್ತು ನೆನಪಿನ ಭಾರದಿಂದ ಬಗ್ಗಿ ಹೋದ ಸ್ಥಳೀಯರನ್ನು ಕಂಡ. ಅವನು ಬಾಳೆ ತೋಟದ ಕಂಪನಿಯವರ ವೈಭವದ ಕಾಲದ ಸ್ವಿಮ್ಮಿಂಗ್ ಪೂಲ್ ತುಂಬ ಈಗ ಕೊಳೆತು ಹೋದ ಗಂಡಸರು ಮತ್ತು ಹೆಂಗಸರ ಶೂಗಳಿದ್ದದ್ದನ್ನು ಕಂಡು ಅಂದಿನದನ್ನು ತನ್ನ ಕಲ್ಪನೆಯಲ್ಲಿ ಮರುನಿರ್ಮಿಸಲು ಪ್ರಯತ್ನಿಸಿದ. ಹುಲ್ಲಿನಿಂದ ನಿರ್ನಾಮಗೊಂಡ ಮನೆಗಳೊಂದರಲ್ಲಿ ಅವನಿಗೆ ರಿಂಗೊಂದಕ್ಕೆ ಸ್ಟೀಲ್ ಚೈನ್‌ನಿಂದ ಕಟ್ಟಿದ ನಾಯಿಯ ಅಸ್ಥಿಪಂಜರ ಸಿಕ್ಕಿತು ಮತ್ತು ಅಲ್ಲಿದ್ದ ಟೆಲಿಫೋನ್ ಅವನು ಎತ್ತಿಕೊಳ್ಳುವ ತನಕ ರಿಂಗಣಿಸುತ್ತಲೇ ಇತ್ತು. ಹೆಂಗಸೊಬ್ಬಳು ಇಂಗ್ಲಿಷ್‌ನಲ್ಲಿ ದೂರದಿಂದ ಮಾತಾಡುವಂತೆ ಮಾತನಾಡಿದಳು. ಅವನು, ಹೌದು, ಸ್ಟ್ರೈಕ್ ಮುಕ್ತಾಯಗೊಂಡಿದೆ, ಸತ್ತ ಮೂರು ಸಾವಿರ ಜನರನ್ನು ಸಮುದ್ರಕ್ಕೆ ಎಸೆಯಲಾಗಿದೆ. ಬಾಳೆತೋಟದ ಕಂಪನಿಯವರು ಹೊರಟು ಹೋಗಿದ್ದಾರೆ ಮತ್ತು ಕೊನೆಗೂ ಅನೇಕ ವರ್ಷಗಳ ನಂತರ ಮಕೋಂದೋದಲ್ಲಿ ಶಾಂತಿ ನೆಲೆಸಿದೆ, ಎಂದ. ಅವನ ತಿರುಗಾಟ ಕೆಂಪು ದೀಪ ಪ್ರದೇಶಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಹಿಂದೊಮ್ಮೆ ನಲಿದಾಟವನ್ನು ಹೆಚ್ಚು ಮಾಡುವುದಕ್ಕೆ ಬ್ಯಾಂಕ್ ನೋಟುಗಳನ್ನು ಉರಿಸಲಾಗುತ್ತಿತ್ತು. ಆಗ ಅದು ಬೇರೆಯದಕ್ಕಿಂತ ಹೆಚ್ಚು ಗಜಿಬಿಜಿಯಾದ ತೀವ್ರ ಸಂಕಷ್ಟದ ಮತ್ತು ದಾರುಣ ಸ್ಥಿತಿಯ ರಸ್ತೆಯಾಗಿತ್ತು. ಆಗಲೂ ಇಲ್ಲಿ ಕೆಲವು ಕೆಂಪು ದೀಪಗಳು ಹೊತ್ತಿಕೊಂಡಿದ್ದು ಅಳಿದುಳಿದಿದ್ದರಲ್ಲಿ ಡಾನ್ಸ್ ಹಾಲ್‌ಗಳಿದ್ದು, ಸಪ್ಪೆಯಾದ ಯಾರ ವಿಧವೆಯರಲ್ಲದ ದಡೂತಿಯರು, ಫ್ರೆಂಚ್ ಮುತ್ತಜ್ಜಿ-ಅಮ್ಮಗಳು ಮತ್ತು ಪಕ್ಕದಲ್ಲಿ ಫೋನೋಗ್ರಾಮ್‌ಗಳನ್ನು ಇಟ್ಟುಕೊಂಡ ಬಾಬಿಲೋನಿಯಾದ ಹೆಂಗಸರು ಇನ್ನೂ ಇದ್ದರು. ಅವ್ರೇಲಿಯಾನೋಗೆ ತಮ್ಮ ಮನೆತನದ ಬಗ್ಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಕೂಡ ತಿಳಿದವರು, ಎಲ್ಲರಿಗಿಂತ ಹೆಚ್ಚಿಗೆ ವಯಸ್ಸಾದ, ಹತ್ತಿಯಂತೆ ಕೂದಲಿದ್ದು, ಫೋಟೋ ನೆಗೆಟಿವ್‌ನಂತಿದ್ದ ವೆಸ್ಟ್ ಇಂಡಿಯಾದ ನೀಗ್ರೋನನ್ನು ಬಿಟ್ಟರೆ, ಬೇರೆ ಯಾರೂ ಸಿಗಲಿಲ್ಲ. ಅವನು ಆಗಲೂ ಮನೆಯ ಮುಂಬಾಗಿಲಿನಲ್ಲಿ ನಿಂತು ದುಃಖಸೂಚಕ ಸಂಧ್ಯಾಗೀತೆಗಳನ್ನು ಹಾಡುತ್ತಿದ್ದ. ಅವ್ರೇಲೀಯಾನೋ ಅವನ ಜೊತೆ ಕೆಲವು ವಾರಗಳಲ್ಲಿ ಕಲಿತ, ಅಪಭ್ರಂಶ ಪಾಷಿಯಾಮೆಂತೋದಲ್ಲಿ ಮಾತನಾಡುತ್ತಿದ್ದ ಮತ್ತು ಕೆಲವು ಸಲ ಮರಿಮಗಳು ಮಾಡಿದ್ದ ಚಿಕನ್‌ಸೂಪನ್ನು ಅವನ ಸಂಗಡ ಕುಡಿಯುತ್ತಿದ್ದ. ಅವಳೊಬ್ಬ ಗಟ್ಟಿ ಮೂಳೆಯ ದಪ್ಪಗಿದ್ದ ಕಪ್ಪನೆ ಹೆಂಗಸು. ಅವಳ ಕುಂಡೆಗಳು ಹೆಣ್ಣು ಕುದುರೆಯ ಹಾಗೆ, ಮೊಲೆಗಳು ಕಲ್ಲಂಗಡಿಯ ಹಾಗೆ ಮತ್ತು ದುಂಡನೆ ತಲೆಯ ಮೇಲೆ ಇದ್ದ ಕೂದಲು ಮಧ್ಯ ಯುಗದ ಯೋಧನ ಕವಚದಂತಿತ್ತು. ಅವಳ ಹೆಸರು ನಿಗ್ರೊಮಾಂತ. ಆ ದಿನಗಳಲ್ಲಿ ಅವ್ರೇಲಿಯಾನೋ ಬೆಳ್ಳಿಯ ಸಾಮಾನುಗಳು, ಮೇಣದ ಬತ್ತಿಗಳು ಮತ್ತು ಇತರೆ ಮನೆಗೆ ಉಪಯೋಗವಾಗುವ ವಸ್ತುಗಳನ್ನು ಮಾರಿ ಜೀವಿಸುತ್ತಿದ್ದ. ಅವನ ಹತ್ತಿರ ಬಿಡಿಗಾಸು ಇಲ್ಲದಿದ್ದಾಗ, ಹೆಚ್ಚಿನ ಸಮಯ ಹಾಗೆಯೇ ಇರುತ್ತಿದ್ದದ್ದು, ಅವನು ಮಾರ್ಕೆಟ್ಟಿನಲ್ಲಿ ಹಿಂದುಗಡೆ ಎಸೆಯುತ್ತಿದ್ದ ಕೋಳಿ ತಲೆಗಳನ್ನು ತಂದು ಕೊಡಲು ಕೆಲವರಿಗೆ ಹೇಳಿದ ಮತ್ತು ಅವನು ಅವುಗಳನ್ನು ತೆಗೆದುಕೊಂಡು ಹೋಗಿ ನಿಗ್ರೋಮಾಂತಳಿಗೆ ಮಸಾಲೆ ಹಾಕಿ ಸೂಪ್ ಮಾಡಲು ಕೊಡುತ್ತಿದ್ದ. ಮುತ್ತಜ್ಜನ ಅಪ್ಪ ಸತ್ತ ಮೆಲೆ ಅವನು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ. ಆದರೆ ಚೌಕದಲ್ಲಿದ್ದ ಕಪ್ಪು ಬಾದಾಮಿ ಮರದ ಬಳಿ ಆಗಾಗ ಅವಳನ್ನು ಸಂಧಿಸುತ್ತಿದ್ದ. ಆಗ ಅವಳ ಕಾಡು ಪ್ರಾಣಿಯ ರೀತಿಯ ಶಿಳ್ಳೆ ಹಾಕುವುದನ್ನು ಪ್ರಯೋಗಿಸಿ ಹಲಕೆಲವು ಗೂಬೆಗಳನ್ನು ಕರೆಯುತ್ತಿದ್ದ. ಅನೇಕ ಸಲ ಅವಳ ಜೊತೆ ಪಾಷಿಯಾಮೆಂತೋದಲ್ಲಿ ಚಿಕನ್ ಸೂಪ್ ಮತ್ತು ಇತರೆ ತೊಂದರೆಗಳ ಬಗ್ಗೆ ಮಾತನಾಡುತ್ತ, ಅವನು ಅಲ್ಲಿರುವುದರಿಂದ ಗಿರಾಕಿಗಳು ಹೆದರುತ್ತಾರೆಂದು ಅವಳು ಹೇಳುವ ತನಕ ಅಲ್ಲಿಯೇ ಇರುತ್ತಿದ್ದ. ಆಗಾಗ್ಗೆ ಅವನಲ್ಲಿ ಆಕರ್ಷಣೆ ಉಂಟಾದರೂ, ನಿಗ್ರೊಮಾಂತ ಮನೋವ್ಯಥೆಗಳನ್ನು ಹಂಚಿಕೊಂಡವಳಂತೆ ಕಂಡರೂ, ಅವನು ಅವಳ ಜೊತೆ ಮಲಗಲಿಲ್ಲ. ಇದರಿಂದ ಅಮರಾಂತ ಉರ್ಸುಲಾ ಹಿಂತಿರುಗಿ ಬಂದಾಗಲೂ ಅವನು ಹೆಣ್ಣಿನ ಸಂಗ ಅರಿಯದವನಾಗಿದ್ದ. ಅವಳು ಸೋದರಿಯಂತೆ ಅವನನ್ನು ಆಲಂಗಿಸಿದಾಗ ಅವನಿಗೆ ಉಸಿರು ಕಟ್ಟಿತ್ತು. ಪ್ರತಿ ಬಾರಿ ಅವಳನ್ನು ನೋಡಿದಾಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ನೃತ್ಯಗಳನ್ನು ತೋರಿಸಿದಾಗ, ಮುತ್ತಜ್ಜನ ಅಪ್ಪನಿಗೆ ಪಿಲರ್ ಟೆರ್‍ನೆರಾ ಧಾನ್ಯದ ಉಗ್ರಾಣದಲ್ಲಿ ಕಾರ್ಡುಗಳ ನೆಪ ಹೂಡಿದಾಗ ಆದಂತೆ, ಮೂಳೆಗಳಲ್ಲೆಲ್ಲ ಮೃದು ಸಿಂಚನವಾದ ಹಾಗೆ ಭಾಸವಾಗುತ್ತಿತ್ತು. ಈ ವೇದನೆಯನ್ನು ಅಡಗಿಸಲು ಚರ್ಮದ ಹಾಳೆಯ ಮೇಲಿನ ಬರಹಗಳಲ್ಲಿ ಮತ್ತಷ್ಟು ಮುಳುಗಿದ ಮತ್ತು ಯಾತನೆಯ ಧಾರೆಯಿಂದ ರಾತ್ರಿಗಳಿಗೆ ವಿಷ ತುಂಬುತ್ತಿದ್ದ ಅವಳ ಮುಗ್ಧ ಹೊಗಳಿಕೆಗಳಿಂದ ತಪ್ಪಿಸಿಕೊಂಡ. ಆದರೆ ಅವಳನ್ನು ತಪ್ಪಿಸಿಕೊಂಡಷ್ಟೇ ಹೆಚ್ಚು ಹೆಚ್ಚಾಗಿ, ಅವಳ ಸೀಳು ನಗುವಿಗಾಗಿ, ಸಂತೋಷಗೊಂಡ ಬೆಕ್ಕಿನ ಮುದ್ದುಗರೆತದ ಕೂಗಿಗಾಗಿ, ಅವಳ ಕೃತಜ್ಞತಾಪೂರ್ಣ ಹಾಡುಗಳು ಹಾಗೂ ಮನೆಯಲ್ಲಿ ನಿರೀಕ್ಷಿಸಿದ ಕಡೆಗಳಲ್ಲಿ ಪ್ರೇಮದ ವೇದನೆಯ ಹಾಡುಗಳಿಗಾಗಿ ಆತಂಕದಿಂದ ಕಾಯುತ್ತಿದ್ದ. ಒಂದು ರಾತ್ರಿ ಹಾಸಿಗೆಯಿಂದ ಮೂವತ್ತು ಅಡಿ ದೂರದಲ್ಲಿ, ಬೆಳ್ಳಿಯ ಕೆಲಸ ಮಾಡುವ ಟೇಬಲ್ಲಿನ ಮೇಲೆ, ದಂಪತಿಗಳು ಹೊರಳಾಡುತ್ತ ಬಾಟಲುಗಳನ್ನು ಒಡೆದು, ಚೆಲ್ಲಿ ಹರಡಿದ ಹೈಡ್ರೋಕ್ಲೋರಿಕ್ ಆಮ್ಲದ ತೆಳುಗೊಳದಲ್ಲಿ ಪ್ರೇಮಿಸುವುದರಲ್ಲಿ ಕಳೆದರು. ಅವ್ರೇಲಿಯಾನೋ ಒಂದು ಕ್ಷಣವೂ ನಿದ್ದೆ ಮಾಡಲಿಲ್ಲ. ಅಲ್ಲದೆ, ಮಾರನೆಯ ದಿನ ಜ್ವರ ಬಂದು ರೋಷದಿಂದ ಬಿಕ್ಕುತ್ತ ಕಳೆದ. ಅವನು ಮೊದಲ ಸಲ ರಾತ್ರಿ ನಿಗ್ರೋಮಾಂತಳಿಗಾಗಿ ಬಾದಾಮಿ ಮರದ ನೆರಳಿಗೆ ಬರುವಂತೆ ಹೇಳಿ ಕಾಯುತ್ತಾ ಕುಳಿತದ್ದು ಕೊನೆಯಿಲ್ಲದಂತೆ ಕಂಡು, ಅನಿಶ್ಚಯದ ಸೂಜಿ ಮೊನೆಗಳಿಂದ ತಿವಿಸಿಕೊಳ್ಳುತ್ತ ಮತ್ತು ಮುಷ್ಟಿಯಲ್ಲಿ ಅಮರಾಂತ ಉರ್ಸುಲಾಳಿಂದ ಪಡೆದ ಒಂದು ಪೇಸೋ ಹಾಗೂ ಐವತ್ತು ಸೆಂಟುಗಳನ್ನು ಹಿಡಿದು ನಿಂತಿದ್ದ. ಅವನು ಅವಳನ್ನು ತನ್ನ ಸಾಹಸದಲ್ಲಿ ಭಾಗಿಯಾಗಿಸುವ ಅಗತ್ಯಕ್ಕಲ್ಲದಿದ್ದರೂ ಯಾವುದೋ ವಿಧದಲ್ಲಿ ಹಾದರಕ್ಕಿಳಿಸುವುದಕ್ಕಾಗಿ ಹಾಗೆ ಮಾಡಿದ. ನಿಗ್ರೊಮಾಂತ ಅವನನ್ನು ಅರೆಬೆಳಕಿದ್ದ, ಮಡಚುವ ಮಂಚವಿದ್ದ, ಕೆಟ್ಟ ಪ್ರೇಮಿಗಳ ಕಲೆಗಳಿದ್ದ ಹಾಸಿಗೆಯಿದ್ದ ರೂಮಿಗೆ ಕರೆದುಕೊಂಡು ಹೋದಳು. ಅವಳು ಕಾಡುನಾಯಿಯ ಹಾಗೆ, ಆತ್ಮವಿಲ್ಲದ ಗಡಸು ದೇಹದಿಂದ ಒಳಗೊಂಡಳು. ಆ ದೇಹ ಅವನನ್ನು ಬೆದರಿದ ಮಗುವಿನಂತೆ ನಿರಾಕರಿಸುವುದಕ್ಕೆ ಸಿದ್ಧವಾಗಿತ್ತು. ಆದರೆ ಪ್ರಚಂಡಶಕ್ತಿಯ ಪುರುಷನೊಬ್ಬ ಅದಕ್ಕೆ ದೊರೆತು, ಅವಳ ಒಳಗೆ ಭುಗಿಲೇಳುವ ಮರುಹೊಂದಾಣಿಕೆಯನ್ನು ಅಪೇಕ್ಷಿಸುತ್ತಿತ್ತು.
ಅವರಿಬ್ಬರೂ ಪ್ರೇಮಿಗಳಾದರು. ಅವ್ರೇಲಿಯಾನೋ ಬೆಳಿಗ್ಗೆ ಚರ್ಮದ ಹಾಳೆಗಳ ಬರಹವನ್ನು ವಿಶ್ಲೇಷಿಸುವುದರಲ್ಲಿ ಕಳೆದು ಮಧ್ಯಾಹ್ನ ಅವನಿಗಾಗಿ ಕಾಯುತ್ತಿರುವ ನಿಗ್ರೊಮಾಂತಳ ಬೆಡ್‌ರೂಮಿಗೆ ಹೋಗುತ್ತಿದ್ದ. ಅವಳು ಮೊದಲು ಅವನಿಗೆ ಎರೆಹುಳುಗಳಂತೆ ಅನಂತರ ಬಸವನ ಹುಳುವಿನಂತೆ ಮತ್ತು ಕೊನೆಗೆ ಏಡಿಯ ಹಾಗೆ ಪ್ರೇಮಿಸುವುದು ಹೇಗೆಂದು ಹೇಳಿಕೊಟ್ಟ ಮೇಲೆ, ಅವನನ್ನು ಬಿಟ್ಟು ಅಲೆಮಾರಿ ಪ್ರೇಮಿಗಳಿಗಾಗಿ ಕಾಯುತ್ತಿದ್ದಳು. ಅನೇಕ ತಿಂಗಳು ಕಳೆದ ನಂತರ ಅವಳ ಸೊಂಟದ ಸುತ್ತ ವಿಶೇಷ ಹುರಿಯಿಂದ ಮಾಡಿದಂಥ ಬೆಲ್ಟ್ ಕಟ್ಟಿಕೊಂಡಿರುವುದನ್ನು ಕಂಡ. ಆದರೆ ಅದು ಉಕ್ಕಿನಷ್ಟು ಬಲವಾಗಿದ್ದು ಕೊನೆ ಇರದೆ ಹುಟ್ಟಿನಿಂದಲೇ ಬಂದು, ಅವಳ ಜೊತೆಗೆ ಬೆಳೆದ ಹಾಗೆ ತೋರಿತು. ಹೆಚ್ಚು ಕಡಿಮೆ ಯಾವಾಗಲೂ ಅವರು ಪ್ರೇಮಿಸುವ ನಡುವಿನ ಅವಧಿಯಲ್ಲಿ, ಹಾಸಿಗೆಯಲ್ಲಿ ಬೆತ್ತಲಾಗಿ, ಭ್ರಮೆಗೊಳಿಸುವ ಶೆಖೆಯಲ್ಲಿ ಮತ್ತು ಜಿಂಕ್ ಛಾವಣಿಯ ಮೇಲೆ ತುಕ್ಕು ಹಿಡಿದ ಕಡೆಯಲ್ಲಿ ಬಿದ್ದು ಮಿರುಗುವ ಹಗಲಿನ ನಕ್ಷತ್ರಗಳ ಕೆಳಗೆ ಊಟ ಮಾಡುತ್ತಿದ್ದರು. ಇದು ಮೊದಲ ಸಲಕ್ಕೆ ನಿಗ್ರೋಮಾಂತಳಿಗೆ ಒಬ್ಬ ಸಮಸ್ಥಿತಿಯ ಮನುಷ್ಯ ದೊರಕಿದ್ದು, ಅಲ್ಲದೆ ಅವಳೇ ನಗುತ್ತ ಹೇಳಿದ ಹಾಗೆ ಉಂಗುಷ್ಠದಿಂದ ನೆತ್ತಿಯ ತನಕ ಮೂಳೆ ಪುಡಿಮಾಡುವನು ಮತ್ತು ಅವ್ರೇಲಿಯಾನೋ ಅಮರಾಂತ ಉರ್ಸುಲಾಳ ಬಗ್ಗೆ ತಡೆ ಹಿಡಿದಿರುವ ಮೋಹದ ಬಗ್ಗೆ ಹೇಳಿದಾಗ ಅವಳು ಪ್ರೇಮವನ್ನು ಕುರಿತು ಕಲ್ಪಿಸಿಕೊಳ್ಳಲು ಪ್ರಾರಂಭಿಸಿದಳು. ಅವನಿಗೆ ಪರ್ಯಾಯ ವ್ಯವಸ್ಥೆಯಿಂದ ಅದನ್ನು ಶಮನಪಡಿಸಲಾಗಿರಲಿಲ್ಲ. ಆದರೆ ಅನುಭವದಿಂದ ಉಂಟಾದ ಪ್ರೇಮದ ವಿಸ್ತಾರ ಅವನನ್ನು ಹಿಂಡಿ ಹಾಕುತಿತ್ತು. ಅದಾದ ನಂತರ ನಿಗ್ರೋಮಾಂತ ಅವನನ್ನು ಎಂದಿನಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಳು. ಆದರೆ ತನ್ನ ಸೇವೆಗಾಗಿ ತುಂಬಾ ಕರಾರುವಾಕ್ಕಾಗಿ ದುಡ್ಡು ಕೊಡುವಂತೆ ಮಾಡಿದಳು. ಅವನ ಬಳಿ ದುಡ್ಡಿಲ್ಲದಿದ್ದಾಗ ಅವನ ಲೆಕ್ಕಕ್ಕೆ ಬಾಗಿಲ ಹಿಂದುಗಡೆ ಉಗುರಿನಿಂದ ಗೆರೆ ಎಳೆದು ಗುರುತು ಮಾಡುತ್ತಿದ್ದಳು. ಸೂರ್ಯ ಮುಳುಗಿದ ಮೇಲೆ ಅವಳು ಚೌಕದ ನೆರಳುಗಳಲ್ಲಿ ಜಾರಿ ಹೋಗುತ್ತಿರುವಾಗ, ಆ ಸಮಯದಲ್ಲಿ ಊಟ ಮಾಡುತ್ತಿದ್ದ ಅಮರಾಂತ ಉರ್ಸುಲಾ ಮತ್ತು ಗ್ಯಾತ್ಸನ್ನರನ್ನು ಗಮನಿಸದೆ, ಅಪರಿಚಿತನಂತೆ ಅಂಗಳದ ಮುಖಾಂತರ ಹೋಗಿ ರೂಮಿನ ಬಾಗಿಲು ಹಾಕಿಕೊಂಡರೆ, ಓದುವುದಕ್ಕೆ, ಬರೆಯುವುದಕ್ಕೆ ಅಥವಾ ಯೋಚಿಸುವುದಕ್ಕೂ ಆಗುತ್ತಿರಲಿಲ್ಲ. ಏಕೆಂದರೆ ಅವರ ನಗು, ನಲಿದಾಟ, ಪಿಸುಮಾತುಗಳು ಅವನಲ್ಲಿ ಆತಂಕ ಹುಟ್ಟಿಸುತ್ತಿದ್ದವು. ರಾತ್ರಿ ಅವರ ಉಕ್ಕೇರುವ ಸಂತೋಷ ಮನೆಯನ್ನು ಆವರಿಸುತ್ತಿತ್ತು. ಅದು ಗ್ಯಾತ್ಸನ್ ಏರೋಪ್ಲೇನಿಗಾಗಿ ಎರಡು ವರ್ಷ ಕಾಯುತ್ತಿದ್ದ ಮುಂಚಿನ ಕಾಲದಲ್ಲಿ ಅವನ ಜೀವನವಾಗಿತ್ತು. ಅದು ಹಾಗೆಯೇ ಮುಂದುವರೆದು ಅವನು ಒಂದು ದಿನ ಮಧ್ಯಾಹ್ನ ಜಾಣ ಕತಲುನಿಯಾದವನ ಪುಸ್ತಕದಂಗಡಿಗೆ ಹೋದಾಗ ನಾಲ್ಕು ಜನ ಹುಡುಗರು ಮಧ್ಯಕಾಲದಲ್ಲಿ ಜಿರಲೆಗಳನ್ನು ಕೊಲ್ಲುವುದಕ್ಕೆ ಉಪಯೋಗಿಸುತ್ತಿದ್ದ ವಿಧಾನಗಳನ್ನು ಕುರಿತು ಆವೇಶದಿಂದ ಚರ್ಚಿಸುತ್ತಿದ್ದರು. ಅವ್ರೇಲಿಯಾನೋಗೆ ಬಿದೆ ಎಂಬುವನು ಮಾತ್ರ ಓದಿದ್ದ ಪುಸ್ತಕಗಳ ಬಗ್ಗೆ ಇದ್ದ ಪ್ರೀತಿಯನ್ನು ಗೊತ್ತಿದ್ದ ವಯಸ್ಸಾದ ಅಂಗಡಿಯಾತ, ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರೀತಿಯಿಂದ ಒತ್ತಾಯಿಸಿದ. ಅವನು ಒಂದು ಸಲ ಉಸಿರು ಕೂಡ ಎಳೆದುಕೊಳ್ಳದೆ, ಭೂಮಿಯ ಮೇಲೆ ಇರುವ ಎರಡು ರೆಕ್ಕೆಗಳ ಹುಳುವಾದ ಜಿರಲೆ, ಎಲ್ಲದಕ್ಕಿಂತ ಪುರಾತನದ್ದೆಂದೂ, ಅದಾಗಲೇ ಓಲ್ಡ್ ಟೆಸ್ಟ್‌ಮೆಂಟಿನಲ್ಲಿ ಚಪ್ಪಲಿಗಳ ಕೆಳಗೆ ಸಿಕ್ಕಿ ಸತ್ತು ಹೋಗಿದೆಯೆಂದೂ, ಆದರೆ ಎಲ್ಲ ಬಗೆಯ ನಿರ್ನಾಮ ಕ್ರಿಯೆಯನ್ನು ವಿರೋಧಿಸುತ್ತಿದೆಯೆಂದೂ, ಬೋರಾಕ್ಸ್ ಪುಡಿ ಹಾಗು ಸಕ್ಕರೆ ಬೆರೆಸಿದ ಟೊಮ್ಯಾಟೋ ಹೋಳುಗಳು ಅಲ್ಲದೆ ಅದರ ಸಾವಿರದ ಆರುನೂರ ಮೂರು ವಿಧಗಳು ಕರುಣೆ ಇಲ್ಲದ ಅತ್ಯಂತ ಪುರಾತನವಾದ ನಿರ್ನಾಮ ಮಾಡುವ ರೀತಿಗಳನ್ನು ವಿರೋಧಿಸುತ್ತಾ ಬಂದಿವೆ. ಇದು ಮನುಷ್ಯ ಜೀವವಿರುವ ವಸ್ತುವಿನ ಮೇಲೆ, ಮನುಷ್ಯನನ್ನು ಸೇರಿಕೊಂಡಂತೆ, ಪ್ರಾರಂಭದಿಂದಲೂ ಪ್ರಯೋಗಿಸುತ್ತ ಬಂದಿದ್ದಾನೆ. ಅದು ಎಷ್ಟರ ಮಟ್ಟಿಗೆ ಎಂದರೆ ಮನುಷ್ಯ ಜೀವಿಗೆ ಸಂತಾನ ಹೊಂದುವುದು ಅಂತ:ಸ್ಫೂರ್ತಿಯಾಗಿರುವಂತೆ, ಜಿರಲೆಗಳನ್ನು ಕೊನೆಗಾಣಿಸುವುದು ಅದಕ್ಕಿಂತ ಖಚಿತವಾದ, ತುರ್ತಾದ ಅಗತ್ಯವಿರಬೇಕು. ಆದರೆ ಜಿರಲೆಗಳು ಮನುಷ್ಯನ ಕ್ರೌರ್ಯಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದರೆ ಅವು ನೆರಳುಗಳಲ್ಲಿ ಆಶ್ರಯ ಪಡೆದದ್ದು ಕಾರಣ, ಏಕೆಂದರೆ ಮನುಷ್ಯನಿಗೆ ಕತ್ತಲೆಯ ಭಯವಿದೆ. ಆದರೆ ಮತ್ತೊಂದು ವಿಧದಲ್ಲಿ ಅವುಗಳಿಗೆ ಮಧ್ಯಾಹ್ನದ ಬೆಳಕಿನ ಬಗ್ಗೆ ಆಕರ್ಷಣೆ ಇದೆ. ಆದ್ದರಿಂದ ಮಧ್ಯಯುಗದಿಂದಲೇ, ಈಗಿನಂತೆ ಜಿರಲೆಗಳನ್ನು ಕೊಲ್ಲುವ ಅತ್ಯಂತ ಪ್ರಭಾವಿ ಮಾರ್ಗವೆಂದರೆ ಸೂರ್ಯನ ಬೆಳಕು, ಎಂದ.
ವಿಶ್ವಕೋಶಕ್ಕೆ ಸರಿಹೊಂದಿದ ಆ ವಿವರಣೆ ಸ್ನೇಹಕ್ಕೆ ನಾಂದಿಯಾಯಿತು. ಅವ್ರೇಲಿಯಾನೋ ಮಧ್ಯಾಹ್ನ ಹೊತ್ತು ಚರ್ಚಿಸುವ ಅವರ ಜೊತೆ ಸೇರಿಕೊಳ್ಳುತ್ತಿದ್ದ ಅವರ ಹೆಸರುಗಳು ಅಲ್ಫಾರೋ, ಅಲ್ಫಾಜೋ, ಖೆರ್ಮಾನ್ ಮತ್ತು ಗ್ಯಾಬ್ರಿಯಲ್. ಅವರು ಅವನ ಜೀವನದಲ್ಲಿ ಮೊದಲನೆ ಮತ್ತು ಕೊನೆಯ ಸ್ನೇಹಿತರಾಗಿದ್ದರು. ಕೇವಲ ಬರೆದ ವಾಸ್ತವದಲ್ಲಿ ಮುಳುಗಿದ್ದವನಿಗೆ ಪುಸ್ತಕದಂಗಡಿಯಲ್ಲಿ ಪ್ರಾರಂಭವಾಗುವ ತೀವ್ರವಾದ ಕೂಟಗಳು, ಬೆಳಿಗ್ಗೆ ವೇಶ್ಯಾಗೃಹಗಳಲ್ಲಿ ಕೊನೆಗೊಳ್ಳುತ್ತ ಹೊಸ ಬಗೆಯನ್ನು ತೆರೆದುಕೊಟ್ಟಿತು. ಅಲ್ಲಿಯ ತನಕ ಅವನು, ಸಾಹಿತ್ಯ ಜನರನ್ನು ತಮಾಷೆ ಮಾಡಲು ಎಂದಿನಿಂದಲೂ ಸೃಷ್ಟಿಯಾದ ಅತ್ಯುತ್ತಮ ಆಟದ ವಸ್ತು ಎಂದು ಅಲ್ಫಾರೋ ಒಂದು ದಿನ ರಾತ್ರಿ ವಿಲಾಸದಲ್ಲಿದ್ದಾಗ ಪ್ರಯೋಗಿಸಿ ತೋರಿಸುವವರೆಗೆ ಯೋಚಿಸಿರಲಿಲ್ಲ. ಈ ಬಗೆಯ ವಿವಿಧ ದೃಷ್ಟಿಕೋನಗಳು ಜಾಣ ಕತಲುನಿಯಾದವನ ಮೂಲದವು. ಏಕೆಂದರೆ ಜ್ಞಾನದಿಂದ ವಸ್ತುವೊಂದನ್ನು ಮಾಡುವುದರ ಹೊಸ ರೀತಿಯನ್ನು ತೋರಿಸುವುದಕ್ಕೆ ಸಾಧ್ಯವಿಲ್ಲದಿದ್ದರೆ, ಅದಕ್ಕೆ ಏನೂ ಬೆಲೆ ಇಲ್ಲ ಎಂದು ಅವನ ಅಭಿಪ್ರಾಯ.
ಜಿರಲೆಗಳನ್ನು ಕುರಿತು ಅವ್ರೇಲಿಯಾನೋ ಭಾಷಣ ಮಾಡಿದ ಮೇಲೆ ಉಂಟಾದ ವಾದ ಮಕೋಂದೋದ ಹೊರವಲಯದಲ್ಲಿ ಹಸಿವಿನ ಕಾರಣದಿಂದ ಮಲಗುತ್ತಿದ್ದ ಹುಡುಗಿಯರ ವೇಶ್ಯಾಗೃಹದಲ್ಲಿ ಕೊನೆಯಾಗಿತ್ತು. ಬಾಗಿಲು ಹಾಕಿ ತೆಗೆಯುವ; ಒಂದು ವ್ಯಸನದಿಂದ ನರಳುತ್ತಿದ್ದ ಒಬ್ಬ ನಗುಮೊಗದವಳು ಅದರ ಒಡತಿ. ನಿರಂತರವಾಗಿರುತ್ತಿದ್ದ ಅವಳ ನಸುನಗುವಿಗೆ, ಯಾವುದೇ ವ್ಯವಸ್ಥೆ ಇರದಿರುವುದನ್ನು ಕಲ್ಪನೆಯಲ್ಲಿ ಮಾತ್ರ ಬಿಟ್ಟು, ಒಪ್ಪಿಕೊಂಡಿದ್ದ ಗಿರಾಕಿಗಳ ವಿಚಾರ ಶೂನ್ಯತೆ ಕಾರಣವಾಗಿತ್ತು. ಏಕೆಂದರೆ ತೀರ ಸಾಮಾನ್ಯ ವಸ್ತುಗಳೂ ಸಹ ಅಸಮರ್ಪಕವಾಗಿದ್ದವು. ಕುಳಿತ ಕೂಡಲೇ ಪೀಠೋಪಕರಣಗಳು ಮುರಿದು ಬೀಳುತ್ತಿದ್ದವು, ಹೊಟ್ಟೆ ಬಗೆದಿದ್ದ ಫೋನೋಗ್ರಾಮ್‌ನಲ್ಲಿ ಕೋಳಿ ಗೂಡಿತ್ತು; ಕಾಗದದ ಹೂಗಳ ಕೈತೋಟ ಇತ್ತು; ಬಾಳೆತೋಟದ ಕಂಪನಿ ಬರುವುದಕ್ಕಿಂತ ಹಿಂದಿನ ಕ್ಯಾಲಂಡರ್; ಪ್ರಕಟವಾಗದಿದ್ದ ಮ್ಯಾಗಸೈನ್‌ಗಳಿಂದ ಕತ್ತರಿಸಿದ ಚಿತ್ರಗಳಿದ್ದ ಫ್ರೇಮುಗಳಿದ್ದವು. ಗಿರಾಕಿಗಳು ಬಂದಿದ್ದಾರೆಂದು ಒಡತಿ ಹೇಳಿ ಕಳಿಸುತ್ತಿದ್ದ ಅಕ್ಕಪಕ್ಕದ ಕಡೆಯಿಂದ ಬರುತ್ತಿದ್ದ ಪುಟ್ಟ, ಪುಕ್ಕಲು ಸೂಳೆಯರನ್ನು ಕೂಡಾ ಅವಳು ಕಂಡುಹಿಡಿದದ್ದು. ಅವರು ಯಾವುದೇ ಗೆಲುವಿಲ್ಲದೆ ಐದು ವರ್ಷ ಚಿಕ್ಕವರಾಗಿದ್ದಾಗ, ಉಳಿದ ಬಟ್ಟೆಯಿಂದ ಹೊಲಿದದ್ದನ್ನು ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದರು ಮತ್ತು ಹೇಗೆ ಕಾಣಿಸಿಕೊಂಡಿದ್ದರೋ ಅದೇ ಮುಗ್ಧತೆಯಿಂದ ಅವನ್ನು ಕಳಚುತ್ತಿದ್ದರು. ಪ್ರಣಯದ ಆವೇಶದಲ್ಲಿ, “ಹೋ, ಹೋ, ನೋಡಿ ತಾರಸಿ ಹೇಗೆ ಬೀಳುತ್ತಿದೆ” ಎಂದು ಉದ್ಗರಿಸುತ್ತಿದ್ದರು. ಅವರು ಪೇಸೋ ಮತ್ತು ಐವತ್ತು ಸೆಂಟ್ ಪಡೆದಾಗ ಅದನ್ನು ಒಡತಿ ಮಾರುತ್ತಿದ್ದ ಚೀಸ್ ಸುರುಳಿಗೆ ಖರ್ಚು ಮಾಡುತ್ತಿದ್ದರು. ಏಕೆಂದರೆ ಅವಳಿಗೆ ಮಾತ್ರ ಆ ಊಟ ಕೂಡ ನಿಜವಲ್ಲವೆಂದು ಗೊತ್ತಿತ್ತು. ಆ ದಿನಗಳಲ್ಲಿ ಮೆಲ್‌ಕಿಯಾದೆಸ್‌ನ ಚರ್ಮದ ಹಾಳೆಯ ಮೇಲಿನ ಬರಹಗಳಿಂದ ಪ್ರಾರಂಭವಾಗಿ, ನಿಗ್ರೋಮಾಂತಳ ಹಾಸಿಗೆಯಲ್ಲಿ ಕೊನೆಗೊಳ್ಳುತ್ತಿದ್ದ ಅವ್ರೇಲಿಯಾನೋ ಪ್ರಪಂಚದ ಪುಕ್ಕಲುತನ ಕಲ್ಪನೆಯ ವೇಶ್ಯಾಗೃಹದಲ್ಲಿ ವಾಸಿಯಾಗುವುದನ್ನು ಕಂಡುಕೊಂಡಿದ್ದ. ಮೊದಮೊದಲು ಒಡತಿ ಪ್ರಣಯದ ಚಂದದ ಗಳಿಗೆಗಳಲ್ಲಿ ಆ ಲಾವಣ್ಯದ ಬಗ್ಗೆ ಎಲ್ಲ ರೀತಿಯ ಟಿಪ್ಪಣಿ ಕೊಡುತ್ತಿದ್ದುದರಿಂದ ಅವನಿಗೆ ಏನೊಂದೂ ತಿಳಿಯುತ್ತಿರಲಿಲ್ಲ. ಆದರೆ ಕಾಲ ಕಳೆದಂತೆ ಈ ಪ್ರಪಂಚದ ದೂರದೃಷ್ಟಿಗಳಿಗೆ ಹೊಂದಿಕೊಂಡ. ಒಂದು ದಿನ ರಾತ್ರಿ ಅವನು ಚಿಕ್ಕ ರೆಸೆಪ್ಷನ್ ರೂಮಿನಲ್ಲಿ ಬಟ್ಟೆ ಕಳಚಿ ತನ್ನ ಭಾರೀ ಆಕಾರದ ಮರ್ಮಾಂಗದ ಮೇಲೆ ಬೀರ್ ಬಾಟಲನ್ನು ಇಟ್ಟು ಸರಿದೂಗಿಸುತ್ತ ಇಡೀ ಮನೆಯ ತುಂಬ ಓಡಿದ. ಅವನು ಅತಿಯಾಗಿ ಸಂಭ್ರಮಿಸುವ ಒಡತಿಯ ಯಾವಾಗಲೂ ಇರುವ ನಸುನಗುವನ್ನು ಯಾವ ವಿರೋಧವೂ ಇಲ್ಲದೆ, ಅದರಲ್ಲಿ ನಂಬಿಕೆ ಇರದೆ, ಅಲಂಕಾರಿಕವನ್ನಾಗಿ ಮಾಡಿದ. ಅದೇ ಸಮಯದಲ್ಲಿ ಆ ಮನೆಯೇ ಇರಲಿಲ್ಲವೆಂದು ತೋರಿಸಲು ಖೆರ್ಮಾನ್ ಅದನ್ನು ಸುಟ್ಟು ಹಾಕಲು ಪ್ರಯತ್ನಿಸುತ್ತಿದ್ದಂತೆ ಅಲ್ಫಾನ್ಫೋ ಗಿಣಿಯ ಕತ್ತು ಮುರಿದು ಕೋಳಿ ಸಾರು ಕುದಿಯಲು ಪ್ರಾರಂಭಿಸಿದ್ದ ಪಾತ್ರೆಗೆ ಹಾಕಿದ.
ಅವ್ರೇಲಿಯಾನೋ ಆ ನಾಲ್ಕು ಜನ ಸ್ನೇಹಿತರೊಂದಿಗೆ ಸಮಾನವಾದ ವಿಶ್ವಾಸದಿಂದ ಮತ್ತು ಸಮಾನ ವಿಶ್ವಾಸದಿಂದ ಅವರೆಲ್ಲ ಕೂಡಿ ಒಬ್ಬನೇ ವ್ಯಕ್ತಿ ಎನ್ನುವ ಮಟ್ಟಿಗೆ ಬಂಧಿಸಲ್ಪಟ್ಟಿದ್ದರೂ ಅವನು ಗಾಬ್ರಿಯಲ್‌ಗೆ ಇತರರಿಗಿಂತ ಹೆಚ್ಚು ಸಮೀಪವಾಗಿದ್ದ. ಅದೊಂದು ರಾತ್ರಿ ಅವನು ಸುಮ್ಮನೆ ಕರ್ನಲ್ ಅವ್ರೇಲಿಯನೋ ಬ್ಯುಂದಿಯಾನನ್ನು ಹೆಸರಿಸಿದಾಗ ಗಾಬ್ರಿಯಲ್ ಒಬ್ಬನೇ, ಅವನು ತಮಾಷೆ ಮಾಡುತ್ತಿಲ್ಲ ಎಂದು ತಿಳಿದವನು. ಸಾಮಾನ್ಯವಾಗಿ ಯಾವ ಸಂಭಾಷಣೆಯಲ್ಲೂ ಭಾಗವಹಿಸದ ಒಡತಿ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಹೆಸರನ್ನು ಕೇಳಿರುವುದಾಗಿಯೂ ಮತ್ತು ಸರ್ಕಾರ ಮುಕ್ತವಾದಿಗಳನ್ನು ಕೊಂದು ಹಾಕಲು ಅವನನ್ನು ನೆಪ ಮಾಡಿಕೊಂಡಿದ್ದಾಗಿ ಅವೇಶದಿಂದ ಹೇಳಿದಳು. ಅದಕ್ಕೆ ಪ್ರತಿಯಾಗಿ ಗಾಬ್ರಿಯಲ್‌ಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಇದ್ದದ್ದರ ಬಗ್ಗೆ ಅನುಮಾನವಿರಲಿಲ್ಲ. ಏಕೆಂದರೆ ಅವನ ಮುತ್ತಜ್ಜನ ಅಪ್ಪ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವನ ಆಪ್ತ ಸಹವರ್ತಿಗಳಲ್ಲಿ ಒಬ್ಬನಾಗಿದ್ದ. ಆ ಅಸ್ಪಷ್ಟ ನೆನಪುಗಳು ಕೆಲಸಗಾರರ ವಿಷಯ ಬಂದಾಗ ಮತ್ತಷ್ಟು ಸೂಕ್ಷ್ಮವಾಗುತ್ತಿದ್ದವು. ಪ್ರತಿ ಬಾರಿ ಅವ್ರೇಲಿಯಾನೋ ಅದನ್ನು ಪ್ರಸ್ತಾಪಮಾಡಿದಾಗ ಅಲ್ಲಿನ ಒಡತಿಯಲ್ಲದೆ ಅವಳಿಗಿಂತ ವಯಸ್ಸಾದವರೂ ಕೂಡಾ ಸ್ಟೇಷನ್ ಬಳಿ ಕೆಲಸಗಾರರ ಹತ್ಯಾಕಾಂಡವನ್ನು ಮತ್ತು ಸತ್ತವರನ್ನು ತುಂಬಿದ ಇನ್ನೂರು ಬೋಗಿಗಳ ಟ್ರೈನಿನ ಮಿಥ್ಯೆಯನ್ನು ನಿರಾಕರಿಸುತ್ತಿದ್ದರು. ಅಲ್ಲದೆ ಪ್ರತಿಯೊಂದು ನ್ಯಾಯಾಂಗ ದಾಖಲೆಯಲ್ಲಿ ಮತ್ತು ಪ್ರಾಥಮಿಕ ಸ್ಕೂಲಿನ ಪಠ್ಯದಲ್ಲಿ ನಿರೂಪಿತವಾಗಿದೆ ಎಂದು ಪ್ರತಿಪಾದಿಸುತ್ತಿದ್ದರು; ಅದೇನೆಂದರೆ ಬಾಳೆ ತೋಟದ ಕಂಪನಿ ಇರಲೇ ಇಲ್ಲ, ಎಂದು. ಇದರಿಂದಾಗಿ ಅವ್ರೇಲಿಯಾನೋ ಮತ್ತು ಗ್ಯಾಬ್ರಿಯಲ್ ಯಾರೂ ನಂಬದ ವಾಸ್ತವದ ಸಂಗತಿಯಲ್ಲಿ ಭಾಗಿಗಳಾಗಿದ್ದರು. ಅದು ಅವರ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ಕೊನೆಗೊಂಡ ಪ್ರಪಂಚದುಬ್ಬರದ ದಿಕ್ಕಿನಿಂದ ಹೊರತಾದವರ ಸ್ಥಿತಿ ತಲುಪಿ, ಕೇವಲ ಮನೋವ್ಯಥೆಯಷ್ಟೇ ಉಳಿಯಿತು. ಕಾಲದ ವೇಗ ಅವನ ಹೊಂದಾಣಿಕೆಯನ್ನು ಮೀರಿದಾಗ ಗಾಬ್ರಿಯಲ್ ಎಲ್ಲಂದರಲ್ಲಿ ಮಲಗುತ್ತಿದ್ದ. ಅವ್ರೇಲಿಯಾನೋ ಅನೇಕ ಸಲ ಅವನನ್ನು ಬೆಳ್ಳಿ ಕೆಲಸದ ವರ್ಕ್‌ಶಾಪಿನಲ್ಲಿ ಇರಲು ಬಿಡುತ್ತಿದ್ದ. ಆದರೆ ಅವನು ಬೆಳಗಿನ ತನಕ ಮನೆಯಲ್ಲಿ ಓಡಾಡುವ ಸತ್ತವರ ಶಬ್ದದಿಂದಾಗಿ ಇಡೀ ರಾತ್ರಿ ಎಚ್ಚರವಿದ್ದು ಕಳೆಯುತ್ತಿದ್ದ. ಅನಂತರ ಅವನನ್ನು ನಿಗ್ರೊಮಾಂತಳ ಹತ್ತಿರ ಬಿಟ್ಟ. ಅವಳು ತನಗೆ ಪುರುಸೊತ್ತಿದ್ದಾಗ ಅವನನ್ನು ಒಳ್ಳೆಯ ರೂಮಿಗೆ ಕರೆದುಕೊಂಡು ಹೋಗುತ್ತಿದ್ದಳು ಮತ್ತು ಅವನ ಲೆಕ್ಕವನ್ನು ಬಾಗಿಲ ಹಿಂದುಗಡೆ ಅವ್ರೇಲಿಯಾನೋ ಸಾಲದ ಲೆಕ್ಕದಲ್ಲಿ ಉಳಿದ ಜಾಗದಲ್ಲಿ ಉದ್ದುದ್ದಾಗಿ ಗುರುತು ಹಾಕುತ್ತಿದ್ದಳು.
ತೀರ ಅವ್ಯವಸ್ಥಿತವಾದ ಜೀವನವಿದ್ದರೂ ಜಾಣ ಕತಲುನಿಯಾದವನ ಆಗ್ರಹದ ಮೇರೆಗೆ ಆ ಗುಂಪಿನವರು ಏನಾದರೊಂದು ಶಾಶ್ವತವಾದದ್ದನ್ನು ಮಾಡಲು ಪ್ರಯತ್ನಿಸಿದರು. ಶ್ರೇಷ್ಠ ಸಾಹಿತ್ಯದ ಪ್ರೊಫೆಸರ್ ಆಗಿದ್ದ ಅವನ ಅಂಗಡಿಯಲ್ಲಿದ್ದ ಅಪರೂಪದ ಪುಸ್ತಕಗಳಿಂದ ಪ್ರೈಮರಿ ಸ್ಕೂಲಿನಿಂದ ಮುಂದಕ್ಕೆ ಓದಲು ಯಾರಿಗೂ ಆಸಕ್ತಿ ಇಲ್ಲದಿರುವ ಊರಿನಲ್ಲಿ ಅವರನ್ನು ಇಡೀ ರಾತ್ರಿ ಮೂವತ್ತೇಳು ನಾಟಕೀಯ ಸಂದರ್ಭಗಳನ್ನು ಹುಡುಕುವಂತೆ ಮಾಡಿದ. ಸ್ನೇಹವನ್ನು ಕಂಡು ಕೊಂಡ ಉತ್ಸಾಹದಲ್ಲಿ, ಸಣ್ಣತನದಿಂದ ಫೆರ್ನಾಂಡ ನಿರ್ಬಂಧಿಸಿದ್ದ ಪ್ರಪಂಚದ ಚೆಲುವಿನಿಂದ ಬೆರಗಾದ. ಅವ್ರೇಲಿಯಾನೋ ಚರ್ಮದ ಹಾಳೆಯ ಮೇಲಿನ ಬರಹಗಳು, ಸಂಕೇತಗಳ ಕಾವ್ಯದ ಸಾಲುಗಳ ಮೂಲಕ ಭವಿಷ್ಯ ವಾಣಿಯಂತೆ ತಮ್ಮನ್ನು ತೆರೆದಿಡುವುದಕ್ಕೆ ಪ್ರಾರಂಭ ಮಾಡಿದ. ಅದೇ ವಿಷಯದಲ್ಲಿ ಅವ್ರೇಲಿಯಾನೋ ಅವುಗಳ ಪರಿಶೀಲನೆಯನ್ನು ಕೈ ಬಿಟ್ಟ. ಆದರೆ ವೇಶ್ಯಾಗೃಹಕ್ಕೆ ಹೋಗುವುದನ್ನು ಬಿಡದೆ ಪ್ರತಿಯೊಂದಕ್ಕೂ ಸಾಕಷ್ಟು ಸಮಯವಿರುತ್ತದೆ ಎನ್ನುವುದಕ್ಕೆ ಪುರಾವೆ ಸಿಕ್ಕ ಮೇಲೆ, ಅವನು ಮತ್ತೆ ಮೆಲ್‌ಕಿಯಾದೆಸ್‌ನ ರೂಮಿಗೆ ಹೋಗಲು ಇಚ್ಛೆಯುಂಟಾಗಿ ತನ್ನ ಪ್ರಯತ್ನವನ್ನು ಅದರ ಕೊನೆಯ ಸೂತ್ರಗಳು ಸಿಗುವ ತನಕ ಕೈ ಬಿಡಬಾರದು ಎಂದುಕೊಂಡ. ಸುಮಾರು ಅದೇ ಸಮಯದಲ್ಲಿ ಗ್ಯಾತ್ಸನ್ ಏರೋಪ್ಲೇನಿಗಾಗಿ ಕಾಯುತ್ತಿದ್ದ. ಅಲ್ಲದೆ ತೀರ ಒಂಟಿಯಾಗಿದ್ದ ಅಮರಾಂತ ಉರ್ಸುಲಾ ಒಂದು ದಿನ ಬೆಳಿಗ್ಗೆ ಅವ್ರೇಲಿಯಾನೋನ ರೂಮಿಗೆ ಹೋದಳು.
ಅವಳು, “ಹಲೋ ರಾಕ್ಷಸ! ಮತ್ತೆ ಗುಹೆ ಸೇರಿಕೊಂಡೆಯಾ” ಎಂದಳು.
ಅವಳೇ ಮಾಡಿದ ಉದ್ದನೆಯ ನೆಕ್‌ಲೇಸ್ ಮತ್ತು ವಿನ್ಯಾಸಗೊಳಿಸಿದ್ದ ಡ್ರೆಸ್ ಹಾಕಿಕೊಂಡಿದ್ದ ಅವಳು ತೀರ ಆಕರ್ಷಕವಾಗಿದ್ದಳು. ಅವಳು ತನ್ನ ಗಂಡನ ವಿಧೇಯತೆಯನ್ನು ಮನಗಂಡು ಚರ್ಮದ ಹುರಿಯನ್ನು ಉಪಯೋಗಿಸುವುದನ್ನು ಬಿಟ್ಟುಬಿಟ್ಟಿದ್ದಳು ಮತ್ತು ವಾಪಸು ಬಂದ ಮೇಲೆ ಮೊದಲ ಬಾರಿಗೆ ನಿರಾಳವಾದ ಮನಸ್ಥಿತಿ ದೊರಕಿಸಿಕೊಂಡಂತಿದ್ದಳು. ಅವಳು ಬಂದಳೆಂದು ಗೊತ್ತಾಗುವುದಕ್ಕೆ ಅವಳನ್ನು ಅವ್ರೇಲಿಯಾನೋ ನೋಡಬೇಕಾಗಿರಲಿಲ್ಲ. ಅವಳು ಟೇಬಲ್ ಮೇಲೆ ಮುಂಗೈಯೂರಿ ಅವನಿಗೆ ತೀರ ಹತ್ತಿರವಿದ್ದಳು. ಅದರಿಂದಾಗಿ ಅವ್ರೇಲಿಯಾನೋ ಅವಳ ಮೂಳೆಯಾಳದ ಶಬ್ದಗಳನ್ನು ಕೇಳಿಸಿಕೊಂಡ. ಅವಳು ಚರ್ಮ ಹಾಳೆಯ ಮೇಲಿನ ಬರಹಗಳ ಬಗ್ಗೆ ಆಸಕ್ತಿ ವಹಿಸಿದಳು. ಅವನು ತನಗುಂಟಾದ ತೊಂದರೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತ, ಉಡುಗುತ್ತಿದ್ದ ತನ್ನ ಧ್ವನಿಯನ್ನು, ಹೊರಹಾರುತ್ತಿದ್ದ ತನ್ನ ಹೃದಯವನ್ನು, ಕಲ್ಲಾಗುತ್ತಿದ್ದ ಹವಳದ ಹುಳುವಿನ ರೀತಿಯ ತನ್ನ ನೆನಪನ್ನು ಬಿಗಿ ಹಿಡಿದ. ಅವನು ಅವಳಿಗೆ ಸಂಸ್ಕೃತದ ರಾಜಗಾಂಭೀರ್ಯದ ಬಗ್ಗೆ, ಕಾಗದದಲ್ಲಿ ಬರೆದದ್ದನ್ನು ನಿಚ್ಛಳ ಬೆಳಕಿನಲ್ಲಿ ಕಾಣುವ ಹಾಗೆ ಕಾಲದ ಚಲನೆಯಲ್ಲಿ ಭವಿಷ್ಯವನ್ನು ವೈಜ್ಞಾನಿಕವಾಗಿ ಕಾಣುವ ಸಾಧ್ಯತೆಯ ಬಗ್ಗೆ, ಆ ಭವಿಷ್ಯ ಸೂಚಕಗಳನ್ನು ವಿಶ್ಲೇಷಿಸುವ ಅಗತ್ಯದ ಬಗ್ಗೆ ಮತ್ತು ನಾಸ್ಟರ್ ಡಾಮಸ್‌ನ ‘ಶತಮಾನಗಳು\’ ಹಾಗೂ ಸಂತ ಮಿಲಾನಸ್ ನುಡಿದ ಭವಿಷ್ಯದಂತೆ ಕಂತಾಬ್ರಿಯಾದ ವಿನಾಶದ ಬಗ್ಗೆ ತಿಳಿಸಿದ. ಇದ್ದಕ್ಕಿದ್ದ ಹಾಗೆ ಅವನು ಹುಟ್ಟಿದಾಗಿನಿಂದಲೂ ತೆಗೆದುಕೊಳ್ಳದೆ ಹೋದ ಮತ್ತು ಈಗಿನ ಹಠಾತ್ ನಿರ್ಣಯದಿಂದ ತನ್ನ ಅನುಮಾನಗಳು ಕೊನೆಗೊಳ್ಳುವುದೆಂದು ಅವಳ ಕೈ ಮೇಲೆ ತನ್ನ ಕೈಯನ್ನಿಟ್ಟ. ಅವಳಾದರೂ ಚಿಕ್ಕಂದಿನಿಂದಲೂ ಇದ್ದ ರೀತಿಯ ಮುಗ್ಧ ವಿಶ್ವಾಸದಲ್ಲಿ ಅವನ ತೋರುಬೆರಳನ್ನು ಹಿಡಿದುಕೊಂಡಳು. ಅವನು ಉತ್ತರ ಕೊಡುತ್ತಿರುವಾಗ ಹಾಗೆಯೇ ಹಿಡಿದುಕೊಂಡಿದ್ದಳು. ಯಾವುದನ್ನೂ, ಯಾವುದೇ ರೀತಿಯಲ್ಲಿ ತಿಳಿಸದ ತೋರುಬೆರಳುಗಳ ಶೀತಲ ಸ್ಪರ್ಶದಲ್ಲಿ ಅವಳು ಆ ಕ್ಷಣದ ಕನಸಿನಿಂದ ಎಚ್ಚೆತ್ತುಕೊಳ್ಳುವ ತನಕ ಹಾಗೆಯೇ ಇದ್ದಳು. ಅವಳು ಹಣೆ ಬಡಿದುಕೊಂಡು, “ಕೆಂಜಿಗ” ಎಂದು ಕೂಗಿದಳು. ಹಸ್ತಪ್ರತಿಗಳನ್ನು ಮರೆತು, ನೃತ್ಯದ ಹೆಜ್ಜೆ ಹಾಕುತ್ತ ಬಾಗಿಲಿಗೆ ಹೋಗಿ ಅಲ್ಲಿಂದ ಬೆರಳ ತುದಿಯಿಂದ, ಅವಳು ಆ ದಿನ ಬ್ರುಸೆಲ್ಸ್‌ಗೆ ಹೋಗುವಾಗ ತನ್ನ ತಂದೆಗೆ ವಿದಾಯ ಹೇಳುತ್ತ ಮಾಡಿದ ಹಾಗೆ, ಮುತ್ತೊಂದನ್ನು ಅವ್ರೇಲಿಯಾನೋಗೆ ತೂರಿದಳು.
ಅವಳು, “ಆಮೇಲೆ ಹೇಳುವಂತೆ, ಇವತ್ತು ಕೆಂಜಿಗದ ಗೂಡಿನ ಮೇಲೆ ಸುಣ್ಣ ಹಾಕ್ಬೇಕಿತ್ತು ಅನ್ನೋದನ್ನ ಮರೆತು ಬಿಟ್ಟಿದ್ದೆ” ಎಂದಳು.
ಅವಳು ಮನೆಯ ಆ ಭಾಗದಲ್ಲಿ ಏನಾದರೂ ಕೆಲಸ ಮಾಡಬೇಕೆಂದಿದ್ದಾಗ ಅವನ ರೂಮಿಗೆ ಹೋಗುವುದನ್ನು ಮುಂದುವರೆಸಿದಳು. ಅವಳ ಗಂಡ ಆಕಾಶದ ಕಡೆ ನೋಡುತ್ತಿದ್ದಾಗ, ಅವಳು ಅಲ್ಲಿ ಕೆಲವು ನಿಮಿಷಗಳನ್ನು ಕಳೆಯುತ್ತಿದ್ದಳು. ಆ ಬದಲಾವಣೆಯಿಂದ ಉತ್ತೇಜಿತನಾದ ಅವ್ರೇಲಿಯಾನೋ ಅಮರಾಂತ ಉರ್ಸುಲಾ ವಾಪಸು ಬಂದಾಗ ಮೊದಲ ಕೆಲವು ತಿಂಗಳಲ್ಲಿ ಮಾಡದಿದ್ದ ಹಾಗೆ ಉಳಿದವರ ಜೊತೆ ಊಟ ಮಾಡಲು ಮನೆಯಲ್ಲೇ ಇರುತ್ತಿದ್ದ. ಇದರಿಂದ ಗ್ಯಾತ್ಸನ್‌ಗೆ ಸಂತೋಷವಾಯಿತು. ಸಾಮಾನ್ಯವಾಗಿ ಊಟವಾದ ಮೇಲೆ ನಡೆಯುತ್ತಿದ್ದ ಒಂದು ಗಂಟೆ ಮಾತುಕತೆಯಲ್ಲಿ ಗ್ಯಾತ್ಸನ್, ಅವನ ಪಾರ್ಟ್‌ನರ್‍ಸ್ ಮೋಸ ಮಾಡುತ್ತಿದ್ದಾರೆ ಎಂದ. ಅವರು ಏರೋಪ್ಲೇನನ್ನು ಹಾಕಿ ಕಳಿಸಿದ್ದೇವೆಂದು ತಿಳಿಸಿದ ಹಡಗು ಬರಲಿಲ್ಲ. ಅದರ ಸಾಗಣೆಯ ಏಜೆಂಟರು, ಕ್ಯಾರಿಬಿಯನ್ ನೌಕೆಗಳ ಪಟ್ಟಿಯಲ್ಲಿ ಅದು ಇಲ್ಲವೆಂದು ಹೇಳಿದರೂ, ಅವನ ಪಾರ್ಟ್‌ನರ್‍ಸ್ ತಾವು ಕಳಿಸಿಕೊಟ್ಟಿರುವುದು ನಿಜ ಎಂದು ಪದೇ ಪದೇ ಹೇಳುತ್ತಿದ್ದರು. ಮತ್ತು ಗ್ಯಾತ್ಸನ್ ಅವನ ಕಾಗದದಲ್ಲಿ ಸುಳ್ಳು ಹೇಳುತ್ತಿದ್ದಾನೆಂದು ಪರೋಕ್ಷವಾಗಿ ಹೇಳಿದರು. ಈ ಪತ್ರ ವ್ಯವಹಾರದಿಂದ ಉಂಟಾದ ಸಂಶಯ ಯಾವ ಮಟ್ಟ ತಲುಪಿತೆಂದರೆ ಗ್ಯಾತ್ಸನ್ ಆ ಬಗ್ಗೆ ಮತ್ತೆ ಬರೆಯಬಾರದು ಎಂದು ತೀರ್ಮಾನಿಸಿದ. ಅವನು ಎಲ್ಲವನ್ನೂ ಸ್ಪಷ್ಟಪಡಿಸಿಕೊಳ್ಳುವುದಕ್ಕೋಸ್ಕರ ಬ್ರುಸೆಲ್ಸ್‌ಗೆ ಸ್ವಲ್ಪ ಕಾಲ ಹೋಗಿ ಏರೋಪ್ಲೇನಿನೊಂದಿಗೆ ಹಿಂತಿರುಗುವ ಸೂಚನೆಯನ್ನು ಮುಂದಿಟ್ಟ. ಅಮರಾಂತ ಉರ್ಸುಲಾ ತಾನು ಗಂಡನನ್ನು ಬೇಕಾದರೂ ಬಿಟ್ಟಿರಬಲ್ಲೆ, ಆದರೆ ಮಕೋಂದೋದಿಂದ ಹೊರಗೆ ಹೋಗಲಾರೆ ಎಂದು ಪಟ್ಟು ಹಿಡಿದಿದ್ದರಿಂದ ಆ ಯೋಜನೆ ಹುಸಿಯಾಯಿತು. ಪ್ರಾರಂಭದ ದಿನಗಳಲ್ಲಿ ಸಾಮಾನ್ಯ ಅಭಿಪ್ರಾಯವಿದ್ದ ಹಾಗೆ ಅವ್ರೇಲಿಯನೋ ಕೂಡ ಗ್ಯಾತ್ಸನ್‌ನನ್ನು ಮುರಿದ ಮೋಟಾರು ವಾಹನದ ಮೂರ್ಖನೆಂದು ತಿಳಿದಿದ್ದ. ಅಲ್ಲದೆ ಅದು ಅವನ ಬಗ್ಗೆ ಮರುಕವನ್ನು ತಂದಿತ್ತು. ಅನಂತರ ವೇಶ್ಯಾಗೃಹದಲ್ಲಿ ಮನುಷ್ಯರ ವಿವಿಧ ಗುಣಗಳ ಬಗ್ಗೆ ಆಳವಾದ ಮಾಹಿತಿ ದೊರೆತ ಮೇ, ಅವನಿಗೆ ಗ್ಯಾತ್ಸನ್‌ನ ನಮ್ರತೆಗೆ ಅವನಲ್ಲಿರುವ ಭ್ರಷ್ಟವ್ಯಾಮೋಹವೇ ಕಾರಣ ಎಂದು ತಿಳಿಯಿತು. ಅವನನ್ನು ಇನ್ನೂ ಹೆಚ್ಚು ಅರಿತ ಮೇಲೆ, ಅವನ ನಿಜವಾದ ಸ್ವಭಾವ ಅವನ ವಿಧೇಯ ವರ್ತನೆಗೆ ವ್ಯತಿರಿಕ್ತವಾಗಿದ್ದು, ಅವನು ಏರೋಪ್ಲೇನಿಗಾಗಿ ಕಾಯುತ್ತಿರುವುದೂ ಕೂಡ ಒಂದು ನಾಟಕವೆಂದು ಭಾವಿಸಿದ. ಅಲ್ಲದೆ ಗ್ಯಾತ್ಸನ್ ಕಾಣಿಸುವಷ್ಟು ಮೂರ್ಖನಲ್ಲವೆಂದು, ಅವನೊಬ್ಬ ಅತೀವ ಸಾಮರ್ಥ್ಯವಿರುವ ಹಾಗೂ ತಾಳ್ಮೆ ಇದ್ದವನಾಗಿದ್ದು, ತೀರದ ಒಪ್ಪಂದದಿಂದ ಯಾವುದಕ್ಕೂ ಇಲ್ಲವೆನ್ನದೆ, ಸುತ್ತಲಿನ ಭ್ರಾಮಕಗಳಿಂದ ಸೋತು, ಸೊರಗಿ, ತಡೆಯದಂತಾಗುವ ದಿನದ ತನಕ ಅವಳು ನೇಯ್ದ ಜಾಲದಲ್ಲಿ ಅವಳೇ ಸಿಕ್ಕಿ ಹಾಕಿಕೊಳ್ಳಲು ಬಿಟ್ಟು, ನಂತರ ಅವಳೇ ಗಂಟು ಮೂಟೆ ಕಟ್ಟಿ ಯೂರೋಪಿಗೆ ಹಿಂದಿರುಗುವಂತೆ ಮಾಡಬೇಕೆಂದಿದ್ದಾನೆ ಎಂದುಕೊಂಡ. ಅವ್ರೇಲಿಯಾನೋನ ಹಿಂದಿನ ಮರುಕ ಈಗ ಇಷ್ಟಪಡದ ರೀತಿಗೆ ಪರಿವರ್ತಿತವಾಯಿತು. ಗ್ಯಾತ್ಸನ್‌ನ ರೀತಿ ಅತಿರೇಕವೆನ್ನಿಸಿತು. ಅದೇ ಸಮಯದಲ್ಲಿ ಅಮರಾಂತ ಉರ್ಸುಲಾಗೆ ಎಚ್ಚರಿಕೆಯ ಸೂಚನೆ ಕೊಡಲು ಧೈರ್ಯ ವಹಿಸಿದ. ಅವಳು ಅವನ ಅನುಮಾನಕ್ಕೆ ನಕ್ಕು ಬಿಟ್ಟಳು. ಆದರೆ ಅವನಲ್ಲಿರುವ ಪ್ರೇಮದ ಭಾರ, ಅನಿಶ್ಚಯತೆ ಮತ್ತು ಮಾತ್ಸರ್ಯವನ್ನ್ನು ಅವಳು ಗುರುತಿಸಲಿಲ್ಲ. ಅವಳಿಗೆ ತಾನು ಅವ್ರೇಲಿಯಾನೋನಲ್ಲಿ ಆತ್ಮೀಯ ಸಂಬಂಧದ ಭಾವನೆಗಿಂತ ಹೆಚ್ಚಿನದನ್ನು ಉಂಟುಮಾಡುತ್ತಿದ್ದೇನೆ ಎನ್ನುವುದು ಅವಳು ಡಬ್ಬಿಯೊಂದನ್ನು ತೆಗೆಯುವಾಗ ಕೈ ಗಾಯ ಮಾಡಿಕೊಂಡ ನಂತರ ಅವನು ಹಠಾತ್ತನೆ ಅದನ್ನು ಎಳೆದುಕೊಂಡು ಆಸೆಯಿಂದ ಮತ್ತು ಭಕ್ತಿಯಿಂದ ರಕ್ತ ಚೀಪುವ ತನಕ ಹೊಳೆದಿರಲಿಲ್ಲ. ಅದು ಅವಳ ಬೆನ್ನಹುರಿಯಲ್ಲಿ ಮಂಜು ಹರಿಸಿತು. ಗಲಿಬಿಲಿಗೊಂಡ ಅವಳು, “ಅವ್ರೇಲಿಯಾನೋ… ನೀನು ತೀರಾ ವಿಪರೀತದವನಪ್ಪ” ಎಂದಳು.
ಅನಂತರ ಅವ್ರೇಲಿಯಾನೋ ಮುಕ್ತವಾಗಿ ಮುಂದುವರೆಸಿದ. ಅವಳ ಗಾಯದ ಕೈಗೆ ಇಷ್ಟಿಷ್ಟೆ ಇಷ್ಟಿಷ್ಟೆ ಮುತ್ತಿಡುತ್ತ ಅವನು ತನ್ನ ಹೃದಯದಲ್ಲಿ ಎಲ್ಲೋ ಅಡಗಿದ್ದ ಮಾರ್ಗಗಳನ್ನು ತೆರೆದಿಟ್ಟ ಮತ್ತು ಕೊನೆಯಿಂದ ನೋವಿನ ಕರುಳಿನ ನೇಯ್ಗೆಯನ್ನು ನೇಯ್ದು, ತನ್ನ ಹುತಾತ್ಮತೆಯಲ್ಲಿ ಹುದುಗಿದ್ದ ನಿರಾವಲಂಬಿ ಪ್ರಾಣಿಯನ್ನು ಹೊರ ಹಾಕಿದ. ತಾನು ಮಧ್ಯರಾತ್ರಿಯಲ್ಲಿ ಎದ್ದು, ಒಂಟಿಯಾಗಿ ಅಳುತ್ತ ಬಾತ್‌ರೂಮಿನಲ್ಲಿ ಅವಳ ಒಣಗಲು ಹಾಕಿದ ಅಂಡರ್‌ವೇರ್‌ನ್ನು ನೋಡಿ ರೋಷಗೊಳ್ಳುತ್ತಿರುವುದನ್ನು ಹೇಳಿದ. ನಿಗ್ರೊಮಾಂತಳಿಗೆ ಬೆಕ್ಕಿನ ರೀತಿ ಕೂಗು ಎಂದು ಆತಂಕದಿಂದ ಕೇಳಿಕೊಂಡಿದ್ದನ್ನು, ಗ್ಯಾತ್ಸನ್, ಗ್ಯಾತ್ಸನ್ ಎಂದು ತನ್ನ ಕಿವಿಯಲ್ಲಿ ಪಿಸುಗುಡುವಂತೆ ಹೇಳಿದ್ದನ್ನು ಮತ್ತು ಅವಳ ಸುಗಂಧದ ಸೀಸೆಗಳನ್ನು ಕದ್ದು ಹಸಿವಿಗಾಗಿ ಮಲಗುವ ಹುಡುಗಿಯರ ಕತ್ತಿನ ಮೇಲೆ ಹಾಕಿ ಪರಿಮಳವನ್ನು ಆಸ್ವಾದಿಸಿದ್ದನ್ನು ಹೇಳಿದ. ಅವನು ಆವೇಶಭರಿತನಾಗಿ, ಕಾರಿಕೊಂಡ ಮೋಹದಿಂದ ಬೆದರಿ ಅಮರಾಂತ ಉರ್ಸುಲಾ ಬೆರಳುಗಳನ್ನು ಮಡಚಿ ನೋವಿನಿಂದ ಮುಕ್ತಳಾಗುವ ತನಕ ಶೆಲ್‌ಫಿಶ್ ರೀತಿಯಲ್ಲಿ ಕಿರಿದಾಗಿಸಿದಳು. ಮತ್ತದೇ ಮರುಕ ಬದಲುಗೊಂಡು, ಪಚ್ಚೆ ಗೋಮೇಧಿಕದಿಂದ ಕೂಡಿದ ಸೆಟೆದ ಕೈಯಾಯಿತು.
ಅವಳು ಥೂಕರಿಸುವಂತೆ, “ಮೂರ್ಖ, ನಾನು ಬೆಲ್ಜಿಯಮ್‌ಗೆ ಹೋಗುವ ಮೊದಲನೇ ಶಿಪ್‌ನಲ್ಲಿ ಹೋಗುತ್ತೇನೆ” ಎಂದಳು.
ಒಂದು ದಿನ ಮಧ್ಯಾಹ್ನ ಜಾಣ ಕತಲುನಿಯಾದವನ ಪುಸ್ತಕದಂಗಡಿಗೆ, ಅಲ್ಫಾರೋ ದೊಡ್ಡ ಗಂಟಲಿನಲ್ಲಿ ತಾನು ಹೊಸದಾಗಿ ಕಂಡು ಹಿಡಿದಿದ್ದನ್ನು ಕೂಗಿ ಹೇಳುತ್ತ ಬಂದ; ಅದು ಪ್ರಾಣಿಗಳ ವೇಶ್ಯಾಗೃಹ. ಅದನ್ನು ಬಂಗಾರದ ಮಗು ಎಂದು ಕರೆಯಲಾಗಿತ್ತು ಮತ್ತು ಅದೊಂದು ದೊಡ್ಡ ಹೊರಾಂಗಣದಲ್ಲಿದ್ದು, ಅದರ ಮೂಲಕ ಏನಿಲ್ಲವೆಂದರೂ ಇನ್ನೂರು ಜೌಗು ಪ್ರದೇಶದ ಪಕ್ಷಿಗಳು ಕಿವುಡಾಗುವ ಹಾಗೆ ಕೇಕೆ ಹಾಕುತ್ತ ಸಮಯವನ್ನು ತಿಳಿಸುತ್ತಿದ್ದವು. ಸುತ್ತ ತಂತಿ ಬೇಲಿ ಇದ್ದ ಡಾನ್ಸ್ ಹಾಲ್‌ನಲ್ಲಿ ಮತ್ತು ಅಮೆಜಾನಿನ ಉಷ್ಟ್ರಪಕ್ಷಿಗಳ ಜೊತೆ, ಅನೇಕ ಬಣ್ಣದ ಕ್ರೌಂಚಪಕ್ಷಿಗಳು ಹಂದಿಯ ಗಾತ್ರದ ಮೊಸಳೆಗಳು, ಹಾಗೂ ರಟ ರಟ ಶಬ್ದ ಮಾಡುವ ಹಾವುಗಳಿದ್ದವು. ಅಲ್ಲದೆ ವಿಚಿತ್ರ ಹೊರಮೈ ಇದ್ದ ಆಮೆಗಳು ಕೃತಕವಾದ ಸಣ್ಣ ಕೊಳದಲ್ಲಿ ಹಾರಿ ಬೀಳುತ್ತಿದ್ದವು. ಅಲ್ಲೊಂದು ಭಾರಿ ಗಾತ್ರದ ಸಪ್ಪಗಿದ್ದ ಬಿಳಿ ನಾಯಿ, ಹೊಟ್ಟೆಪಾಡಿಗಾಗಿ ತಳಿ ಹೆಚ್ಚಿಸುವ ಕೆಲಸ ಮಾಡುತ್ತಿತ್ತು. ಇಡೀ ವಾತಾವರಣ ಆಗತಾನೇ ಸೃಷ್ಟಿಯಾದಂತೆ, ಚಟುವಟಿಕೆಯಿಂದಿದ್ದು, ಮುಗ್ಧತೆಯಿಂದ ಕೂಡಿತ್ತು. ಮಿಶ್ರ ಸಂತಾನದ ಹುಡುಗಿಯರು ಕಡುಗೆಂಪು ಪಕಳೆಗಳ ಮಧ್ಯೆ ಕಾಯುತ್ತ ನಿಂತಿದ್ದರು. ಅಲ್ಲದೆ ಫೋನೋಗ್ರಾಮ್ ರೆಕಾರ್ಡುಗಳಿಗೆ, ಭೂಸ್ವರ್ಗದ ಮರೆತು ಹೋದ ಪ್ರಣಯದ ರೀತಿಗಳು ಗೊತ್ತಿತ್ತು. ಮೊದಲ ದಿನ ಆ ಗುಂಪು ತುಯ್ದಾಡುವ ಕುರ್ಚಿಯಲ್ಲಿ ಕುಳಿತು ಕಡಿಮೆ ಮಾತಾಡುತ್ತಿದ್ದ, ವಿಚಿತ್ರ ಹೆಂಗಸು ರಕ್ಷಿಸುತ್ತಿದ್ದ, ಭ್ರಾಮಕದ ಹಸಿರುಮನೆಗೆ ಹೋದಾಗ, ಅವರಿಗೆ ಕಾಲ ಹಿಂದಕ್ಕೋಡಿದಂತೆ ಭಾಸವಾಯಿತು. ಆಗ ಬರುತ್ತಿದ್ದ ಐವರಲ್ಲಿ ಪೀಚಾದ, ಉಬ್ಬಿದ ಕೆನ್ನೆಮೂಳೆಯ ಮತ್ತು ಮುಖದಲ್ಲಿ ಪ್ರಪಂಚ ಹುಟ್ಟಿದ ಕಾಲದಿಂದ ಸಿಡುಬಿನಂತೆ ಅಚ್ಚೊತ್ತಿದ ಏಕಾಂತದ ಲಕ್ಷಣವಿದ್ದವನನ್ನು ನೋಡಿದಳು.
ಅವಳು, “ದೇವರೇ! ಅವ್ರೇಲಿಯಾನೋ” ಎಂದಳು.
ಅವಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು, ಕಂದೀಲು ಬೆಳಕಲ್ಲಿ ಮುದ್ದಾದ ಮಂಜಿನ ದಿನಗಳಲ್ಲಿ ನೋಡಿದಂತೆ, ವೈಭವದಲ್ಲಿ ನಾಶವಾಗುವ ಮತ್ತು ಭ್ರಮನಿರಸನಗೊಂಡು ದೇಶ ಬಿಡುವ ಮೊದಲು, ಆ ದಿನ ಬೆಳಿಗ್ಗೆ ಅವನು ತನ್ನ ಜೀವನದ ಮೊದಲನೆ ಅಪ್ಪಣೆ ಕೊಡಲು, ಪ್ರೇಮಿಸು ಎಂದು ಅಪ್ಪಣೆ ಕೊಡಲು ಅವಳ ಬೆಡ್‌ರೂಮಿಗೆ ಬಂದಾಗ ನೋಡಿದಂತೆ ನೋಡಿದಳು. ಅವಳು ಪಿಲರ್ ಟೆರ್‍ನೆರಾ. ವರ್ಷಗಳ ಹಿಂದೆ ಅವಳಿಗೆ ನೂರಾನಲವತ್ತು ವರ್ಷ ವಯಸ್ಸಾದಾಗ ವಯಸ್ಸನ್ನು ಲೆಕ್ಕ ಇಡುವ ಹಾನಿಕಾರಕ ಪದ್ಧತಿಯನ್ನು ಕೈಬಿಟ್ಟಿದ್ದಳು. ಅವಳು ಚಲಿಸದ ಹಾಗೂ ನೆನಪುಗಳ ಕೊಸರು ಕಾಲದಲ್ಲಿ ಜೀವಿಸುತ್ತಿದ್ದಳು. ಅಲ್ಲಿ ಅವಳಿಗೆ ಸ್ಪಷ್ಟವಾಗಿ ತೆರೆದುಕೊಂಡು, ವ್ಯವಸ್ಥಿತವಾಗಿ ಕಂಡು ಎಲ್ಲ ಭವಿಷ್ಯಗಳಾಚೆ ಮೋಸದ ಉಪಾಯಗಳಿಂದ ಮತ್ತು ಕಾರ್ಯಗಳಿಂದ ಖೇದಗೊಂಡಿದ್ದಳು. ಆ ರಾತ್ರಿಯಿಂದ ಅವ್ರೇಲಿಯಾನೋ ಅವನಿಗೆ ಗೊತ್ತಿಲ್ಲದ ಮುತ್ತಜ್ಜಿಯ ಅಮ್ಮನ ಮೃದು ಅಂತಃಕರಣ ಮತ್ತು ವಾತ್ಸಲ್ಯದಲ್ಲಿ ಆಶ್ರಯ ಪಡೆದ. ಅವಳು ಹಗ್ಗದ ತುಯ್ದಾಡುವ ಕುರ್ಚಿಯಲ್ಲಿ ಕುಳಿತು, ಹಳೆಯದನ್ನು ನೆನಪಿಸಿಕೊಂಡು, ಸಂಸಾರದ ಮತ್ತು ಮಕೋಂದೋದ ಈಗಿಲ್ಲದ ವೈಭವ ಹಾಗೂ ದುರಂತಗಳನ್ನು ಮತ್ತೆ ಸೃಷ್ಟಿಸುತ್ತಿದ್ದಳು. ಆಗ ಅವ್ರೇಲಿಯಾನೋ ಗಟ್ಟಿಯಾಗಿ ನಕ್ಕು ಮೊಸಳೆಗಳನ್ನು ಗಾಬರಿಗೊಳಿಸುತ್ತಿದ್ದ. ಅಲ್ಫಾನ್ಫೋ ಜೌಗು ಪ್ರದೇಶದ ಪಕ್ಷಿಗಳು ಕಳೆದ ವಾರ ಕೆಟ್ಟದಾಗಿ ನಡೆದುಕೊಂಡ ಗಿರಾಕಿಗಳ ಕಣ್ಣು ಕಿತ್ತವೆಂದು ಕತೆ ಕಟ್ಟಿದ. ಗಾಬ್ರಿಯಲ್ ದುಡ್ಡು ವಸೂಲು ಮಾಡದ ಮಿಶ್ರ ಸಂತಾನದ ಹುಡುಗಿಯ ರೂಮಿನಲ್ಲಿದ್ದ. ಅದಕ್ಕೆ ಬದಲಾಗಿ ಒರಿನೋಕೇಡದ ಆಚೆಯ ಕಡೆಯ ಜೈಲಿನಲ್ಲಿರುವ ಕಳ್ಳ ಸಾಗಣೆ ಮಾಡುವ ಹುಡುಗನಿಗೆ ಕಾಗದಗಳನ್ನು ತಲುಪಿಸಲು ಹೇಳಿದ. ಏಕೆಂದರೆ ಅವನನ್ನು ಗಡಿ ರಕ್ಷಣಾ ಪಡೆಯವರು ಹಿಡಿದಿದ್ದರು ಮತ್ತು ಅವನನ್ನು ಹೇಲು ಮತ್ತು ಕಲ್ಲುಗಳು ತುಂಬಿದ ಉಚ್ಚೆ ಪಾತ್ರೆಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದರು. ತಾಯಿಯಂಥ ಒಡತಿ ಇದ್ದ ವೇಶ್ಯಾಗೃಹವೊಂದನ್ನು ಅವ್ರೇಲಿಯಾನೋ ತನ್ನ ವಿಸ್ತೃತ ಬಂಧನದಲ್ಲಿ ಕಲ್ಪಿಸಿಕೊಂಡಿದ್ದ. ಅಮರಾಂತ ಉರ್ಸುಲಾ ಅವನ ಎಲ್ಲ ನಿರೀಕ್ಷೆಗಳನ್ನು ಹುಡಿಮಾಡಿದ ಮಧ್ಯಾಹ್ನ, ಅವನು ತನಗೆ ಸಮಾಧಾನಕ್ಕಾಗಿ ಮತ್ತು ಸಾಂತ್ವನಕ್ಕಾಗಿ ಬೇರೆ ಇನ್ನು ಯಾವ ಆಶ್ರಯನ್ನೂ ಬಯಸಲಿಲ್ಲ. ಅವನು ತನ್ನ ಎದೆಯೊಳಗಿದ್ದ ಕಗ್ಗಂಟನ್ನು ಬಿಡಿಸುವುದಕ್ಕಾಗಿ, ತನ್ನ ಮೇಲಿನ ಭಾರವನ್ನು ವಿವರಿಸಿ ಹೇಳುವುದಕ್ಕೆ ಸಿದ್ದನಿದ್ದ. ಆದರೆ ಅವನಿಗೆ ಪಿಲರ್ ಟೆರ್‍ನೆರಾಳ ತೊಡೆಯ ಮೇಲೆ ಮುಖವಿಟ್ಟು ಅಳುವುದಕ್ಕೆ ಮಾತ್ರ ಸಾಧ್ಯವಾಯಿತು. ಅವಳು ಅವನ ತಲೆಗೂದಲಲ್ಲಿ ಬೆರಳಾಡಿಸುತ್ತ ಅವನು ಮುಗಿಸುವುದಕ್ಕೆ ಬಿಟ್ಟಳು. ಅವನು ಪ್ರೇಮದಿಂದಾಗಿ ಅಳುತ್ತಿದ್ದೇನೆ ಎಂದು ಹೇಳದಿದ್ದರೂ ಅವಳು ಗಂಡು ಪ್ರಾಣಿಯ ಇತಿಹಾಸದಲ್ಲಿ ಪುರಾತನವಾದ ಬಿಕ್ಕಳಿಕೆಗಳನ್ನು ಗುರುತಿಸಿದಳು.
ಅವಳು ಸಮಾಧಾನಪಡಿಸುತ್ತಾ, “ಅದೆಲ್ಲ ಸರಿ. . ಈಗ ಹೇಳು ಯಾರವಳು” ಎಂದಳು.
ಅವ್ರೇಲಿಯಾನೋ ತಿಳಿಸಿ ಹೇಳಿದ ಮೇಲೆ ಪಿಲರ್ ಟೆರ್‍ನೆರಾ ತಡೆ ಇಲ್ಲದೆ ನಕ್ಕಳು ಮತ್ತು ಅದು ಪಾರಿವಾಳಗಳ ಪ್ರಣಯ ಸಲ್ಲಾಪದ ರೀತಿಯಲ್ಲಿ ಕೊನೆಗೊಂಡಿತು. ಬ್ಯುಂದಿಯಾನೊಬ್ಬನ ಎದೆಯಲ್ಲಿ ಭೇದಿಸಲಾಗದಂಥ ಯಾವ ರಹಸ್ಯವೂ ಅವಳಿಗಿರಲಿಲ್ಲ. ಏಕೆಂದರೆ ಒಂದು ಶತಮಾನದ ಕಾರ್ಡುಗಳು ಮತ್ತು ಆ ಮನೆತನದ ಇತಿಹಾಸ ತಪ್ಪಿಸಿಕೊಳ್ಳಲು ಸಾಧ್ಯವಾಗದಂಥ ಪುನರಾವರ್ತನೆಗಳಿರುವ ಮೆಷಿನ್ ಎಂದೂ ಮತ್ತು ಆ ತಿರುಗುವ ಚಕ್ರ ರಿಪೇರಿ ಮಾಡಲು ಸಾಧ್ಯವಿರದ ಹಾಗೆ, ಅದರ ಸೂತ್ರ ಭಾಗ ಸವೆಯದೆ ಹೋಗಿದ್ದರೆ, ನಿರಂತರವಾಗಿ ಸುತ್ತುತ್ತಿತ್ತು ಎಂದು ಅನುಭವ ಅವಳಿಗೆ ಕಲಿಸಿತ್ತು. ಅವಳು ನಗುತ್ತಾ, “ನೀನೇನೂ ಯೋಚಿಸಬೇಡ. ಈಗ ಅವಳೆಲ್ಲಿದ್ರೂ ನಿಂಗೋಸ್ಕರ ಕಾಯ್ತಿದಾಳೆ” ಎಂದಳು.
ಅಮರಾಂತ ಉರ್ಸುಲಾ ಸ್ನಾನ ಮಾಡಿ ಹೊರ ಬಂದಾಗ ಮಧ್ಯಾಹ್ನ ನಾಲ್ಕೂವರೆ. ಅವ್ರೇಲಿಯಾನೋ ಅವಳು ಮೃದು ಮಡಿಕೆಗಳ ಬಟ್ಟೆ ಸುತ್ತಿಕೊಂಡು ಮತ್ತು ತಲೆಯ ಸುತ್ತ ಟರ್ಬನ್ನಿನ ಹಾಗೆ ಟವಲ್ ಸುತ್ತಿಕೊಂಡು ಅವಳ ರೂಮಿಗೆ ಹೋದದ್ದನ್ನು ಕಂಡ. ಅವನು ಹೆಚ್ಚು ಕಡಿಮೆ ತುದಿಗಾಲಲ್ಲಿ ನಡೆಯುತ್ತ, ಕುಡಿದಿದ್ದರಿಂದ ಮುಗ್ಗರಿಸುತ್ತ, ಅವಳನ್ನು ಹಿಂಬಾಲಿಸಿದ. ಅವನು ಒಳಗೆ ಹೋದ ಮೇಲೆ ಬಟ್ಟೆ ತೆಗೆಯಲು ಹೋದವಳು ಮತ್ತೆ ಹೆದರಿಕೆಯಿಂದ ಮುಚ್ಚಿದಳು. ಅವನು ಪಕ್ಕದ ರೂಮಿನ ಕಡೆ ಮೌನವಾಗಿ ಸನ್ನೆ ಮಾಡಿದ. ಅದರ ಬಾಗಿಲು ಅರ್ಧ ತೆರೆದಿತ್ತು ಮತ್ತು ಅಲ್ಲಿ ಗ್ಯಾತ್ಸನ್ ಕಾಗದವೊಂದನ್ನು ಬರೆಯಲು ಪ್ರಾರಂಭಿಸಿದ್ದಾನೆ ಎಂದು ಅವ್ರೇಲಿಯಾನೋಗೆ ಗೊತ್ತಿತ್ತು.
ಅವಳು ಕ್ಷೀಣವಾಗಿ, “ಹೊರಟು ಹೋಗು” ಎಂದಳು.
ಅವ್ರೇಲಿಯಾನೋ ನಕ್ಕು ಬೆಗೋನಿಯಾ ಗಿಡಗಳಂತೆ ಎರಡೂ ಕೈಗಳಿಂದ ಅವಳ ಸೊಂಟ ಹಿಡಿದು ಎತ್ತಿಕೊಂಡು ಹಾಸಿಗೆಯಲ್ಲಿ ಅಂಗಾತ ಮಲಗಿಸಿದ. ಅವಳು ವಿರೋಧಿಸುವುದಕ್ಕೆ ಮುಂಚೆಯೇ ಅವಳು ಹೊದ್ದುಕೊಂಡಿದ್ದ ಬಾತ್‌ರೂಮಿನ ಬಟ್ಟೆಯನ್ನು ಒರಟಾಗಿ ಕಿತ್ತೊಗೆದ. ಅವನಿಗೆ ಅಸ್ಪಷ್ಟವಾಗಿ, ಆಗ ತಾನೆ ತೊಳೆದ ಬೆತ್ತಲೆಯ ಮೈ ಬಣ್ಣ, ರೇಖೆಗಳು ಮತ್ತು ಅಡಗಿದ ಕಲೆಗಳು, ಪಕ್ಕದ ರೂಮುಗಳ ನೆರಳುಗಳಲ್ಲಿ ಕಲ್ಪಿಸಿಕೊಂಡಂತೆ ಕಂಡವು. ಅಮರಾಂತ ಉರ್ಸುಲಾ ತಿಳಿವಳಿಕಸ್ಥಳಂತೆ ಬಾಗುತ್ತ, ಸುಗಂಧ ಸೂಸುತ್ತಿದ್ದ ಮೊಣಕಾಲಿನಿಂದ ಅವನ ಪಕ್ಕಕ್ಕೆ ಒದ್ದು, ಅವನ ಮುಖವನ್ನು ಉಗುರುಗಳಿಂದ ಚೇಳಿನ ಹಾಗೆ ಚಿವುಟಿ ರಕ್ಷಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವೆರಡೂ ಕೂಡ, ನಿಟ್ಟುಸಿರು ಬಿಡುತ್ತ ಕಿಟಕಿಯ ಮೂಲಕ ಏಪ್ರಿಲ್ ತಿಂಗಳ ಸೂರ್ಯಾಸ್ತವನ್ನು ನೋಡುತ್ತಿದ್ದ ವ್ಯಕ್ತಿಯ, ಸಹಜ ಉಸಿರಾಟ ಎಂದು ಹೇಳುವಂತಿರಲಿಲ್ಲ. ಅದೊಂದು ತೀವ್ರ ರೀತಿ ಹೋರಾಟವಾಗಿತ್ತು, ಸಾಯುವರೆಗಿನ ಹೋರಾಟ. ಆದರೆ ಅದು ಹಿಂಸೆಯಿಂದ ಕೂಡಿರಲಿಲ್ಲ. ಏಕೆಂದರೆ ಅದು ಅಸಮ ಆಘಾತಗಳನ್ನು ತಪ್ಪಿಸಿಕೊಳ್ಳುವುದಾಗಿತ್ತು. ಜೊತೆಗೆ ನಿಧಾನವಾದ ಜಾಗರೂಕತೆಯದಾಗಿದ್ದು, ಅವೆಲ್ಲದರ ನಡುವೆ ಹೂ ಬಿಡುವುದಕ್ಕೆ ಕಾಲಾವಕಾಶವಿತ್ತು. ಅಲ್ಲದೆ ಪಕ್ಕದ ರೂಮಿನಲ್ಲಿ ಶತ್ರುಗಳಾದ ಇಬ್ಬರು ಪ್ರೇಮಿಗಳು ಆಕ್ವೇರಿಯಮ್‌ನ ತಳದಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೇನೋ ಎನ್ನುವ ಹಾಗಿದ್ದರೆ ಗ್ಯಾತ್ಸನ್‌ಗೆ ವಿಮಾನ ಚಾಲನೆಯ ಕನಸನ್ನು ಮರೆಯುವಂತಾಯಿತು. ಆ ಹೋರಾಟದ ಕಾವಿನಲ್ಲಿ ತನ್ನ ಮೌನ ಎಷ್ಟು ಅಸಮಂಜಸ ಎಂದರೆ, ತನ್ನ ಗಂಡನಿಗೆ ತಾವು ಮಾಡುತ್ತಿದ್ದ ಕಾದಾಟದ ಶಬ್ದ ಅದಕ್ಕಿಂತ ಹೆಚ್ಚಿನ ಅನುಮಾನ ಉಂಟುಮಾಡುತ್ತದೆ ಎಂದು ಗೊತ್ತಾಯಿತು. ಅನಂತರ ಅವಳು ತುಟಿ ಬಿಗಿ ಹಿಡಿದುಕೊಂಡು, ಸೆಣಸಾಡುವುದನ್ನು ಬಿಡದೆ ನಗುವುದಕ್ಕೆ ಪ್ರಾರಂಭಿಸಿದಳು ಹಾಗೂ ಹುಸಿ ಏಟುಗಳಿಂದ ರಕ್ಷಿಸಿಕೊಳ್ಳಲು ತೊಡಗಿದಳು. ಅಲ್ಲದೆ ಏಕಕಾಲಕ್ಕೆ ಇಬ್ಬರಿಗೂ ಮತ್ತೊಬ್ಬರು ಹಿತಶತ್ರುಗಳಾಗಿರುವುದು ಅರಿವಾಗುವ ತನಕ ಮೈಯನ್ನು ಸ್ವಲ್ಪ ಸ್ವಲ್ಪವಾಗಿ ಸಡಿಲವಾಗಿಸಿದಳು. ಆಗ ಕಾದಾಟ ಎಂದಿನ ರೀತಿಯಂತೆ ಕುಣಿದಾಟದಂತೆ ಬದಲಾಗಿ, ಹೊಡೆತಗಳು ನೇವರಿಸುವ ರೀತಿಯದಾದವು. ಇದ್ದಕ್ಕಿದ್ದಂತೆ ಅಮರಾಂತ ಉರ್ಸುಲಾ ಮತ್ತೊಂದು ತುಂಟಾಟದ ಹಾಗೆ ರಕ್ಷಿಸಿಕೊಳ್ಳುವುದನ್ನು ಕೈಬಿಟ್ಟು, ತಾನು ಹಾಗೆ ಮಾಡಿದ್ದರಿಂದ ಭಯಗೊಂಡು ಮತ್ತೆ ಮೊದಲಿನಂತಾಗಲು ಪ್ರಯತ್ನಿಸುವ ಹೊತ್ತಿಗೆ ತೀರ ತಡವಾಗಿತ್ತು. ಅವಳ ಕೇಂದ್ರದಲ್ಲಿ ಅತೀವ ಗಲಿಬಿಲಿಯುಂಟಾಗಿ ಅವಳನ್ನು ಅಚಲಳನ್ನಾಗಿಸಿ, ಅವಳ ಸ್ಥಾನದಲ್ಲಿ ಅವಳನ್ನಿರಿಸಿತು. ಅವಳ ರಕ್ಷಣೆಯ ಸ್ಥೈರ್ಯ, ಸಾವಿನ ಆಚೆಯಲ್ಲಿ ಕಾಣದಿರುವ ಹೊಸ ಬಗೆಗಳು ಹೇಗಿರುತ್ತೆಂದು ಅರಿಯುವ ಆತಂಕದಲ್ಲಿ ಕೊಚ್ಚಿ ಹೋಯಿತು. ಅವಳಿಗೆ ಕೈ ಚಾಚಿ, ಟವಲನ್ನು ಸೆಳೆದುಕೊಂಡು ಬಾಯಿಗೆ ತುರುಕಿಕೊಳ್ಳುವುದಕ್ಕೂ ಸಮಯವಿರದೆ ಚೀರಾಟಗಳು ಕೇಳದಂತೆ ನುಗ್ಗೇರುತ್ತಿದ್ದವು.

೨೦

ಪಿಲರ್ ಟೆರ್‍ನೆರಾ ಹಗ್ಗದ ತುಯ್ದಾಡುವ ಕುರ್ಚಿಯಲ್ಲಿ ಕುಳಿತು, ಹಬ್ಬದಾಚರಣೆಯ ಒಂದು ರಾತ್ರಿ ಸ್ವರ್ಗದ ಬಾಗಿಲನ್ನು ನೋಡುತ್ತಿದ್ದಾಗ ಸತ್ತಳು. ಅವಳ ಅಂತಿಮ ಅಪೇಕ್ಷೆಯಂತೆ, ಅವಳನ್ನು ಶವಪೆಟ್ಟಿಗೆಯಲ್ಲಿಟ್ಟು ಹೂಳz, ತುಯ್ದಾಡುವ ಕುರ್ಚಿಯಲ್ಲಿ ಕುಳಿತಿದ್ದಂತೆ, ಡಾನ್ಸ್ ಮಾಡುವ ಪ್ರಾಂಗಣದ ಮಧ್ಯದಲ್ಲಿ ಅಗೆದಿದ್ದ ದೊಡ್ಡ ಗುಂಡಿಯಲ್ಲಿ ಎಂಟು ಜನರು ಹಗ್ಗದಿಂದ ಕೆಳಗೆ ಇಳಿಸಿದರು. ಮಿಶ್ರ ಸಂತಾನದ ಹುಡುಗಿಯರು ಕಪ್ಪು ಬಟ್ಟೆ ಹಾಕಿಕೊಂಡು, ಅತ್ತು ಅತ್ತು ಸಪ್ಪೆಗಾಗಿ, ಗುಂಡಿಯನ್ನು ಚಪ್ಪಡಿಯಿಂದ ಮುಚ್ಚುವ ಮೊದಲು ಕಿವಿಯೋಲೆಗಳನ್ನು, ಸೂಜಿಗಳನ್ನು ಹಾಗೂ ಉಂಗುರಗಳನ್ನು ತೆಗೆದು ಅಮೆಜಾನಿನ ವಿಶೇಷ ವಸ್ತುವಿನಿಂದ ಪೇರಿಸುವ ಮುಂಚೆ ಅದರಲ್ಲಿ ಹಾಕುವ ವಿಧ್ಯುಕ್ತ ಕ್ರಿಯೆಯನ್ನು ನೆರವೇರಿಸಿದರು. ಅನಂತರ ಎಲ್ಲ ಪ್ರಾಣಿಗಳಿಗೆ ವಿಷ ಹಾಕಿ ಕಿಟಕಿ ಬಾಗಿಲುಗಳನ್ನು ಇಟ್ಟಿಗೆ ಗಾರೆಯಿಂದ ಮುಚ್ಚಿದ ಮೇಲೆ ಮರದ ಪೆಟ್ಟಿಗೆಗಳಲ್ಲಿ ಪ್ರಪಂಚದ ವಿವಿಧ ಸಂತರ ಚಿತ್ರಗಳು, ಮ್ಯಾಗಸೈನ್‌ಗಳ ಚಿತ್ರಗಳು, ಅದ್ಭುತವಾದ, ದೂರದಲ್ಲಿರುವ, ಕೆಲಕಾಲದ ಪ್ರಿಯತಮೆಯರ ಚಿತ್ರಗಳು, ಮಿತಿಮೀರಿ ತಿಂದು ತೇಗಿ, ಅಗಾಧ ಸಂಪತ್ತಿನಲ್ಲಿ ಮೆರೆದವರ ಫೋಟೋಗಳು ಅಥವಾ ಸಮುದ್ರದುಬ್ಬರದಲ್ಲಿ ಇಸ್ಪೀಟು ರಾಜರೆಂದು ಕಿರೀಟಧಾರಣೆ ಮಾಡಿಸಿಕೊಂಡವರ ಚಿತ್ರಗಳನ್ನು ತುಂಬಿಕೊಂಡು ಹೊರಟು ಹೋದರು.
ಅದು ಅಂತಿಮವಾಯಿತು. ಪಿಲರ್ ಟೆರ್‍ನೆರಾಳ ಗೋರಿಯಲ್ಲಿ, ಪವಿತ್ರ ಗೀತೆಗಳ ಪುಸ್ತಕ ಮತ್ತು ಅಗ್ಗವಾದ ವೇಶ್ಯೆಯರ ಆಭರಣಗಳ ಜೊತೆಗೆ ಹಳೆಯ ದುರಂತಗಳು ಕೊಳೆಯುತ್ತಿದ್ದವು. ಕತಲುನಿಯಾದ ಜಾಣ ಹೆಚ್ಚು ಕಾಲ ಇರುವ ಚೈತ್ರದ ದಿನಗಳಿಗೆ ಹಂಬಲಿಸಿ ಪುಸ್ತಕದಂಗಡಿಯನ್ನು ಹರಾಜು ಹಾಕಿದ ಮೇಲೆ, ಅವನು ಹುಟ್ಟಿದ ಮೆಡಿಟರೇನಿಯನ್ನಿನ ಹಳ್ಳಿಗೆ ಹಿಂತಿರುಗಿದ ಮೇಲೆ, ಅಲ್ಲಿ ಉಳಿದದ್ದು ಅತಿ ಕಡಿಮೆ. ಅವನ ನಿರ್ಧಾರವನ್ನು ಯಾರೂ ಮೊದಲೇ ಯೋಚಿಸಿರಲಿಲ್ಲ. ಅವನು ಮಕೋಂದೋಗೆ ಬಾಳೆ ತೋಟದ ಕಂಪನಿಯವರ ವೈಭವದ ಕಾಲದಲ್ಲಿ ಯುದ್ಧಗಳಿಂದ ತಪ್ಪಿಸಿಕೊಂಡು ಬಂದಿದ್ದ. ಅವನಿಗೆ ಪ್ರಾಥಮಿಕ ಮಟ್ಟದ ಮತ್ತು ಅನೇಕ ಭಾಷೆಗಳ ಪ್ರಥಮ ಆವೃತ್ತಿಯ ಪುಸ್ತಕದಂಗಡಿಯನ್ನು ತೆರೆಯುವುದು ಬಿಟ್ಟು ಬೇರೆ ಹೊಳೆದಿರಲಿಲ್ಲ. ಅಲ್ಲಿಗೆ ಬರುತ್ತಿದ್ದ ಸಾಮಾನ್ಯರು ಅವುಗಳ ಮೇಲೆ ಜಾಗರೂಕತೆಯಿಂದ ಹೆಬ್ಬೆರಳನ್ನು ಆಡಿಸುತ್ತ, ಪಕ್ಕದ ಮನೆಯಲ್ಲಿ ತಮ್ಮ ಕನಸುಗಳನ್ನು ವ್ಯಾಖ್ಯಾನಿಸುವುದನ್ನು ಕೇಳಲು, ಸರದಿಯಲ್ಲಿ ನಿಂತು ಕಾಯುತ್ತಿದ್ದರು. ಅವನು ತನ್ನ ಜೀವನದ ಅರ್ಧ ಭಾಗವನ್ನು ಪುಸ್ತಕದಂಗಡಿಯ ಹಿಂಭಾಗದಲ್ಲಿ, ಸ್ಕೂಲ್ ನೋಟ್‌ಬುಕ್ಕುಗಳಿಂದ ಹರಿದ ಹಾಳೆಗಳಲ್ಲಿ, ತುಂಬ ಜಾಗರೂಕತೆಯಿಂದ ನೋಡಿಕೊಳ್ಳುತ್ತ ಇಂಕ್‌ನಲ್ಲಿ ಬರೆಯುತ್ತಿದ್ದರೂ, ಯಾರಿಗೂ ಅವನು ಏನು ಬರೆಯುತ್ತಿದ್ದಾನೆಂದು ಗೊತ್ತಿರಲಿಲ್ಲ. ಅವ್ರೇಲಿಯಾನೋ ಮೊದಲು ಅವನನ್ನು ಭೇಟಿಯಾದಾಗ ಅವನ ಬಳಿ ಆ ರೀತಿಯ ಹಾಳೆಗಳ ಎರಡು ಪೆಟ್ಟಿಗೆಗಳಿದ್ದು, ಅವನ್ನು ನೋಡಿದಾಗ ಅವನಿಗೆ ಮೆಲ್‌ಕಿಯಾದೆಸ್‌ನ ಚರ್ಮದ ಹಾಳೆಯ ಮೇಲಿನ ಬರಹಗಳಂತೆ ಭಾಸವಾಗುತ್ತಿತ್ತು. ಆ ಸಮಯದಿಂದ ಅವನು ಮಕೋಂದೋ ಬಿಡುವ ವೇಳೆಗೆ ಮೂರನೆಯದನ್ನು ತುಂಬಿದ್ದ. ಆದ್ದರಿಂದ ಮಕೋಂದೋದಲ್ಲಿದ್ದಾಗ ಅವನು ಇನ್ನೇನನ್ನೂ ಮಾಡಲಿಲ್ಲ ಎಂದು ತಿಳಿಯಬಹುದಿತ್ತು. ಅವನು ಸಂಪರ್ಕದಲ್ಲಿಟ್ಟುಕೊಂಡಿದ್ದ ಜನರೆಂದರೆ ನಾಲ್ಕು ಜನ ಸ್ನೇಹಿತರು. ಅವನು ಅವರಿಂದ ಪುಸ್ತಕಗಳ ಬದಲಿಗೆ ಮೇಲುಡಿಗೆ ಹಾಗೂ ಗಾಳಿಪಟಗಳನ್ನು ತೆಗೆದುಕೊಂಡಿದ್ದ ಮತ್ತು ಅವರು ಇನ್ನೂ ಗ್ರಾಮರ್ ಸ್ಕೂಲಿನಲ್ಲಿರುವಾಗಲೇ, ಸೆನೆಕಾ ಮತ್ತು ಓವಿಡ್ ಓದುವಂತೆ ಮಾಡಿದ್ದ. ಅವನು ಶ್ರೇಷ್ಠ ಬರಹಗಾರರನ್ನು ಮನೆಯವರಷ್ಟು ಸಲಿಗೆಯಿಂದ, ಅವರೆಲ್ಲ ಒಂದು ಕಾಲದಲ್ಲಿ ತನ್ನೊಂದಿಗೆ ರೂಮಿನಲ್ಲಿ ಇದ್ದವರೇನೋ ಎನ್ನುವಂತೆ ನಡೆಸಿಕೊಂಡಿದ್ದ ಮತ್ತು ಅವನಿಗೆ ಗೊತ್ತಿರಬಾರದ ಸಾಕಷ್ಟು ವಿಷಯಗಳು ಗೊತ್ತಿದ್ದವು. ಸಂತ ಅಗಸ್ಟಿನ್ ಉಣ್ಣೆಯ ಜಾಕೆಟೊಂದನ್ನು ಒಳಗೆ ಹಾಕಿಕೊಂಡಿದ್ದು ಅದನ್ನು ಹದಿನಾಲ್ಕು ವರ್ಷ ತೆಗೆದಿರಲಿಲ್ಲ ಮತ್ತು ಸತ್ತವರ ಜೊತೆ ಮಾತಾಡುವ ವಿಲನೋವದ ಆರ್ನಾಲ್ಡೊ ಹುಟ್ಟಿನಿಂದ ನಪುಂಸಕ ಮುಂತಾದವು. ಅವನಿಗೆ ಬರೆದ ಪದಗಳ ಬಗ್ಗೆ ಗೌರವ ಮತ್ತು ಅನಾದರವಿತ್ತು. ಅವನ ಸ್ವಂತ ಬರಹಗಳೇ ಈ ದ್ವಂದ್ವದಿಂದ ಹೊರತಾಗಿರಲಿಲ್ಲ. ಅಲ್ಫಾನ್ಫೋ ಅವುಗಳನ್ನು ಅನುವಾದಿಸಬೇಕೆಂದು ಕತಲುನಿಯಾ ಭಾಷೆಯನನ್ನು ಕಲಿತ ಮೇಲೆ ವೃತ್ತ ಪತ್ರಿಕೆಯ ಕತ್ತರಿಸಿದ ತುಂಡುಗಳು ಮತ್ತು ವಿಚಿತ್ರ ವ್ಯವಹಾರದ ಕೈಪಿಡಿಗಳು ಯಾವಾಗಲೂ ತುಂಬಿರುತ್ತಿದ್ದ ತನ್ನ ಜೇಬಿನಲ್ಲಿ ಕಾಗದದ ಸುರುಳಿಗಳನ್ನು ಇಟ್ಟುಕೊಂಡಿರುತ್ತಿದ್ದ. ಅದೊಂದು ದಿನ ರಾತ್ರಿ ಹಸಿವೆಗಾಗಿ ಅವನ ಜೊತೆ ಮಲಗಿದ ಚಿಕ್ಕ ಹುಡುಗಿಯರ ಮನೆಯಲ್ಲಿ ಅವುಗಳನ್ನು ಕಳೆದುಕೊಂಡ. ಅದನ್ನು ಮುತ್ತಜ್ಜ ಕಂಡು ಹಿಡಿದಾಗ, ಗಲಾಟೆ ಎಬ್ಬಿಸುತ್ತಿದ್ದಾನೆಂದು ತಿಳಿದ ಅವನು, ಹೊಟ್ಟೆ ಹುಣ್ಣಾಗುವಂತೆ ನಗುತ್ತ, ಅದು ಸಾಹಿತ್ಯದ ಸಹಜ ಅಂತ್ಯ, ಎಂದ. ಆದರೆ ಅವನು ತನ್ನ ಹಳ್ಳಿಗೆ ಹೊರಟಾಗ ಆ ಮೂರು ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗದಿರುವಂತೆ ಮಾಡುವ ಶಕ್ತಿ ಭೂಮಿಯ ಮೇಲೆ ಯಾರಿಗೂ ಇರಲಿಲ್ಲ. ಅವನು ಅವುಗಳನ್ನು ಸರಕು ಎಂದು ಸಾಗಣೆಗೆ ಪರಿಗಣಿಸಿ, ಅವುಗಳನ್ನು ತನ್ನ ಜೊತೆ ಇಟ್ಟುಕೊಳ್ಳಲು ಬಿಡುವ ತನಕ ರೈಲ್ವೆ ಪರಿವೀಕ್ಷಕರನ್ನು ಅವನು ಮನಸಾರೆ ಬೈದ. ಅವನು, “ಇದು ತಲೆ ಕೆಟ್ಟ ಪ್ರಪಂಚ. . .ಇಲ್ಲಿ ಮನುಷ್ಯ ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ್ರೆ, ಸಾಹಿತ್ಯ ಸರಕಿನ ಥರ ಹೋಗ್ಬೇಕಾಗಿದೆ.” ಎಂದ. ಅವು ಅವನು ಆಡಿದ ಕೊನೆಯ ಮಾತುಗಳು. ಒಂದು ವಾರ ಅವನು ಹೊರಡಬೇಕೆಂಬ ಸಿದ್ಧತೆಯಲ್ಲಿ ಅತೀವ ನೋವಿನಿಂದ ಕಳೆದ. ಏಕೆಂದರೆ ಆ ಸಮಯ ಹತ್ತಿರ ಬರುತ್ತಿದ್ದ ಹಾಗೆ ಅವನಲ್ಲಿದ್ದ ಹಾಸ್ಯ ಪ್ರವೃತ್ತಿ ಕಡಿದು ಬಿತ್ತು, ವಸ್ತುಗಳನ್ನು ಇಡಬೇಕಾದ ಸ್ಥಳದಲ್ಲಿ ಇಡುತ್ತಿರಲಿಲ್ಲ. ಒಂದು ಕಡೆ ಇಟ್ಟ ವಸ್ತುಗಳು ಮತ್ತೊಂದು ಕಡೆ ಕಾಣುತ್ತಿದ್ದು ಅವನಿಗೂ ಫೆರ್ನಾಂಡಳಿಗೆ ಆದಂತೆ ಆಗಿತ್ತು. ಅವನು ಶಾಪ ಹಾಕುತ್ತಿದ್ದ.
ಖೆರ್ಮಾನ್ ಮತ್ತು ಅವ್ರೇಲಿಯಾನೋ ಅವನನ್ನು ನೋಡಿಕೊಂಡಿದ್ದರು. ಮಗುವಿನ ಹಾಗೆ ಅವನಿಗೆ ಸಹಾಯಮಾಡಿ, ಟಿಕೆಟ್ಟುಗಳನ್ನು ಮತ್ತು ವಲಸೆಗಾರನೆಂಬ ದಾಖಲೆಗಳನ್ನು ಜೇಬಿನಲ್ಲಿಟ್ಟು ಪಿನ್ನು ಹಾಕಿ, ಮಕೋಂದೋ ಬಿಟ್ಟ ನಂತರ ಬಾರ್‍ಸಿಲೋನಾ ತಲುಪುವ ತನಕ ಎಲ್ಲೆಲ್ಲಿ ಏನೇನು ಮಾಡಬೇಕೆಂಬ ವಿವರಗಳ ಪಟ್ಟಿಯನ್ನು ಕೊಟ್ಟಿದ್ದರು. ಅದರೂ ಕೂಡ ತನ್ನ ಬಳಿ ಇದ್ದ ಅರ್ಧದಷ್ಟು ಹಣವಿದ್ದ ಒಂದು ಜೊತೆ ಪ್ಯಾಂಟನ್ನು ಗೊತ್ತಾಗದೆ ಎಸೆದು ಬಿಟ್ಟ. ಪ್ರಯಾಣದ ಹಿಂದಿನ ದಿನ ರಾತ್ರಿ, ಪೆಟ್ಟಿಗೆಗಳಿಗೆ ಮೊಳೆ ಹೊಡೆದ ನಂತರ, ತಾನು ಅಲ್ಲಿಗೆ ಬಂದಾಗ ತಂದಿದ್ದ ಅದೇ ಸೂಟ್‌ಕೇಸಿನಲ್ಲಿ ಬಟ್ಟೆಗಳನ್ನು ಹಾಕಿ, ಕಣ್ಣನ್ನು ಕಿರಿದು ಮಾಡಿ, ತಾನು ದೇಶ ಬಿಟ್ಟು ಬಂದದ್ದನ್ನು ತಡೆದುಕೊಳ್ಳುವಂತೆ ಮಾಡಿದ ಪೇರಿಸಿದ್ದ ಪುಸ್ತಕಗಳನ್ನು ನೋಡಿ, ಅವನ ಸ್ನೇಹಿತರಿಗೆ ಹೇಳಿದ :
“ಈ ಕೆಲಸಕ್ಕೆ ಬಾರದದ್ದನ್ನೆಲ್ಲ ನಿಮ್ಗೇ ಬಿಟ್ಟು ಬಿಡ್ತೀನಿ!”
ಮೂರು ತಿಂಗಳ ನಂತರ ಮೂರು ದೊಡ್ಡ ಕವರುಗಳಲ್ಲಿ ಸಮುದ್ರಯಾನದಲ್ಲಿ ಬರೆದ ಇಪ್ಪತೆಂಟು ಕಾಗದಗಳು ಮತ್ತು ಒಟ್ಟು ಮಾಡಿದ ಐವತ್ತಕ್ಕಿಂತ ಹೆಚ್ಚು ಚಿತ್ರಗಳು ಅವರಿಗೆ ತಲುಪಿತು. ಅವನು ಅವುಗಳಲ್ಲಿ ತಾರೀಖುಗಳನ್ನು ಬರೆದಿರದಿದ್ದರೂ ಆ ಕಾಗದಗಳನ್ನು ಬರೆದ ಕ್ರಮ ಸ್ಪಷ್ಟವಾಗಿತ್ತು. ಮೊದಲಿನವು ಅವನ ಮಾಮೂಲಿನ ಹಾಸ್ಯ ಲೇಪದಿಂದ ಕೂಡಿ, ದಾಟಬೇಕಾದದ್ದರ ತೊಂದರೆಗಳನ್ನು ತಿಳಿಸಿದ್ದ. ಅವನು ಆ ಪೆಟ್ಟಿಗೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಬಿಡದಿದ್ದರಿಂದ ಸರಕಿಗೆ ಸಂಬಂಧಪಟ್ಟ ಅಧಿಕಾರಿಯನ್ನು ಆಚೆ ತಳ್ಳಬೇಕಾಗಿದ್ದನ್ನು, ಹದಿಮೂರು ಸಂಖ್ಯೆಯಿಂದ ಗಾಬರಿಗೊಂಡಿದ್ದ ಹೆಂಗಸೊಬ್ಬಳ ಬಲಹೀನತೆಯನ್ನು ಅದು ಮೂಢನಂಬಿಕೆ ಎನ್ನುವುದಕ್ಕಲ್ಲದೆ ಆ ಸಂಖ್ಯೆ ಕೊನೆಯಾಗದ ಸಂಖ್ಯೆ ಎಂದು ಆಕೆ ಭಾವಿಸಿದ್ದನ್ನು ಮತ್ತು ಮೊದಲ ಸಲ ಊಟ ಮಾಡುವಾಗ ಕುಡಿಯುವ ನೀರಿನಲ್ಲಿ ರಾತ್ರಿ ಕಿತ್ತ ಗೆಡ್ಡೆಯ ವಾಸನೆ ಇದೆ ಎಂದು ಹೇಳಿ ಬಾಜಿ ಗೆದ್ದದ್ದರ ಬಗ್ಗೆ ಬರೆದಿದ್ದ. ಆದರೆ ದಿನಗಳು ಕಳೆದ ಹಾಗೆ ಹಡಗಿನ ಮೇಲಿನ ಜೀವನದ ವಾಸ್ತವತೆಯ ಬಗ್ಗೆ ಅವನಿಗೆ ಆಸಕ್ತಿ ಕಡಿಮೆಯಾಯಿತು ಮತ್ತು ಅತಿ ಕನಿಷ್ಠವಾದ ನಡೆದ ಘಟನೆಗಳೂ ಕೂಡ ಮನೋವ್ಯಥೆಗೆ ಕಾರಣವಾದವು. ಏಕೆಂದರೆ ಹಡಗು ಮುಂದೆ ಹೋದಂತೆ ಅವನಿಗೆ ನೆನಪುಗಳಿಂದ ದುಃಖವಾಯಿತು. ಅವನ ಮನೋವ್ಯಥೆಯ ಪ್ರಕ್ರಿಯೆಯೂ ಚಿತ್ರಗಳಿಂದ ತಿಳಿಯುತ್ತಿತ್ತು. ಮೊದಲ ಚಿತ್ರಗಳಲ್ಲಿ ಅವನು ಸಂತೋಷದಿಂದ ಇರುವನಂತೆ ಆಸ್ಪತ್ರೆಯ ಜಾಕೆಟ್‌ನ ಹಾಗೆ ಕಾಣುತ್ತಿದ್ದ ಸ್ಪೋರ್ಟ್ಸ್ ಶರಟನ್ನು ಹಾಕಿಕೊಂಡಿದ್ದ ಮತ್ತು ಬಿಳಿಯ ಟೋಪಿಗಳಿದ್ದ ಅಕ್ಟೋಬರ್ ಕ್ಯಾರಿಬಿಯನ್‌ನ ಉದ್ದನೆ ಕೂದಲಿತ್ತು. ಕೊನೆಯ ಚಿತ್ರಗಳಲ್ಲಿ ಕಪ್ಪು ಕೋಟು, ಸಿಲ್ಕ್ ಸ್ಕಾರ್‍ಫ್ ಹಾಕಿಕೊಂಡು ಸಮುದ್ರದಲ್ಲಿ ನಿದ್ದೆಯಲ್ಲಿ ನಡೆಯುವಂತಾಗಿದ್ದ ಹಡಗಿನಲ್ಲಿ ಅತ್ಯಂತ ಮಿತ ಭಾಷಿಯಾಗಿದ್ದನೆಂದು ತೋರುತ್ತಿತ್ತು. ಖೆರ್ಮಾನ್ ಮತ್ತು ಅಲ್ಫಾನ್ಫೋ ಅವನ ಕಾಗದಗಳಿಗೆ ಉತ್ತರ ಕೊಟ್ಟರು. ಅವನು ಮೊದಲನೆ ತಿಂಗಳಲ್ಲಿ ಎಷ್ಟೊಂದು ಕಾಗದ ಬರೆದನೆಂದರೆ ಅವನು ಮಕೋಂದೋದಲ್ಲಿ ಇದ್ದದ್ದಕ್ಕಿಂತ ಹತ್ತಿರದವನಾದನೆಂದು ಅವರಿಗೆ ಭಾಸವಾಯಿತು. ಅಲ್ಲಿಂದ ಹೋಗುವಾಗ ಅವರಲ್ಲಿ ಉಂಟುಮಾಡಿದ್ದ ದ್ವೇಷವನ್ನು ನಿವಾರಿಸಿತ್ತು. ಅವನು ಅವರಿಗೆ ಪ್ರತಿಯೊಂದೂ ಹಾಗೆಯೇ ಇರುವುದೆಂದೂ, ತಾನು ಹುಟ್ಟಿದ ಮನೆಯಲ್ಲಿ ಇನ್ನೂ ಕಡುಗೆಂಪಿನ ಬಸವನ ಹುಳುಗಳು ಇವೆಯೆಂದೂ ಒಣಗಿದ ಒಣಗಿದ ಮೀನುಗಳ ಟೋಸ್ಟ್‌ಗೆ ಇನ್ನೂ ಅದೇ ರುಚಿ ಇದೆಯೆಂದೂ ಮತ್ತು ಹಳ್ಳಿಯ ಜಲಪಾತಗಳಲ್ಲಿ ಸಂಜೆಯ ಹೊತ್ತು ಇನ್ನೂ ಅದೇ ವಾಸನೆ ಇದೆಯೆಂದೂ ಬರೆದಿದ್ದ. ಅವು ಮತ್ತೆ ನೋಟ್ ಬುಕ್ಕಿನ ನೇರಳೆ ಬಣ್ಣದಲ್ಲಿ ಬರೆದ ಹಾಳೆಗಳಾಗಿದ್ದು ಒಂದೊಂದಕ್ಕೂ ವಿಶೇಷ ಪ್ಯಾರಾಗಳನ್ನು ಮೀಸಲಿರಿಸಿದ್ದ. ಆದರೂ ಅವನೇ ಗಮನಿಸದಂತೆ ಕಂಡರೂ ಮರಳಿ ಪಡೆದ ಆ ಕಾಗದಗಳು ಮತ್ತು ಪಡೆದ ಪ್ರಚೋದನೆ, ನಿಧಾನವಾಗಿ ಕುಗ್ಗಿದ ಉತ್ಸಾಹದ ಹೇಳಿಕೆಗಳಿಗಾಗಿ ಬದಲಾದವು. ಒಂದು ಚಳಿಗಾಲದ ರಾತ್ರಿಯಲ್ಲಿ ಸೂಪ್ ಕುಡಿಯುತ್ತಿದ್ದಾಗ, ತನ್ನ ಅಂಗಡಿಯ ಹಿಂದುಗಡೆಯ ಶಾಖವನ್ನು, ಧೂಳು ಮುಸುಕಿದ ಬಾದಾಮಿ ಮರದ ಮೇಲೆ ಸೂರ್ಯನ ಸ್ಪರ್ಶವನ್ನು, ಮಧ್ಯಾಹ್ನದ ನಿದ್ದೆಯ ಸಮಯದಲ್ಲಿನ ರೈಲಿನ ಶಿಳ್ಳೆಯನ್ನು, ಮಕೋಂದೋದಲ್ಲಿ ಆದ ಹಾಗೆ, ಚಳಿಗಾಲದಲ್ಲಿ ಉರಿಯ ಮೇಲಿನ ಸೂಪ್‌ನ್ನು, ಕಾಫಿ ಪುಡಿ ಮಾರುವವನ ಕೂಗನ್ನು ಗಮನಿಸಲಿಲ್ಲ. ಒಂದರ ಎದುರು ಮತ್ತೊಂದು ಕನ್ನಡಿ ಇರುವ ಹಾಗೆ ಮನೋವ್ಯಥೆಗಳಿಂದ ಉದ್ವಿಗ್ನನಾದ ಅವನು, ತನ್ನ ಅದ್ಭುತ ಅವಾಸ್ತವ ಗ್ರಹಿಕೆಯನ್ನು ಕಳೆದುಕೊಂಡ. ಅವನು ಕೊನೆಗೆ ಎಲ್ಲರಿಗೂ ಮಕೋಂದೋ ಬಿಟ್ಟು ಹೋಗಬೇಕೆಂದು ತಾಕೀತು ಮಾಡುವಂತಾದನಲ್ಲದೆ ತಾನು ಅವರಿಗೆ ಪ್ರಪಂಚದ ಬಗ್ಗೆ ಮಾನವನ ಹೃದಯದ ಬಗ್ಗೆ ಹೇಳಿಕೊಟ್ಟಿದ್ದೆಲ್ಲವನ್ನೂ ಮರೆತು ಬಿಡಲು ಹೇಳಿದ. ಎಲ್ಲಿದ್ದರೂ ಭೂತ ಸುಳ್ಳೆಂದೂ, ನೆನಪು ಮರಳಿ ಘಟಿಸದೆಂದೂ ಮತ್ತು ಕಳೆದು ಹೋದ ಚೈತ್ರಗಳು ಎಂದಿಗೂ ಪಡೆಯಲಾಗದೆನ್ನುವುದನ್ನು ನೆನಪಿಟ್ಟುಕೊಳ್ಳುವಂತೆ ಹೇಳಿದ ಮತ್ತು ಎಲ್ಲಕ್ಕಿಂತ ಉತ್ಕಟವಾದ ಪ್ರೇಮವೇ ಅಂತಿಮ ಸತ್ಯ ಎಂದ.
ಮಕೋಂದೋವನ್ನು ತ್ಯಜಿಸಬೇಕೆಂಬ ಸಲಹೆಯನ್ನು ಸ್ವೀಕರಿಸಿದ ಮೊದಲಿಗರಲ್ಲಿ ಅಲ್ವಾರೋ ಒಬ್ಬ. ನಡುಮನೆಯಿಂದ ಅತ್ತಿತ್ತ ಓಡಾಡುವವರನ್ನು ಕೀಟಲೆಮಾಡುತ್ತಿದ್ದ ಸಾಕಿದ ಚಿರತೆಯೂ ಸೇರಿದಂತೆ ಅವನು ಎಲ್ಲವನ್ನೂ ಮಾರಿದ. ಅವನು ಸದಾಕಾಲಕ್ಕೆಂದು ಟ್ರೈನ್ ಟಿಕೆಟ್ ಕೊಂಡುಕೊಂಡ. ಅವನು ಮಧ್ಯದ ಸ್ಟೇಷನ್‌ಗಳಲ್ಲಿ ಬೋಗಿಯ ಕಿಟಕಿಯಿಂದಾಚೆ ಆ ಕ್ಷಣದಲ್ಲಿ ಕಾಣುವುದನ್ನು ವಿವರಿಸಿ ಪೋಸ್ಟ್ ಕಾರ್ಡಿನಲ್ಲಿ ಬರೆಯುತ್ತಿದ್ದ. ಅದೊಂದು ರೀತಿಯಲ್ಲಿ ಉದ್ದನೆಯ ಕವನವೊಂದನ್ನು ಹರಿದು ವಿಸ್ಮೃತಿಗೆ ಹಾಕಿದಂತಿತ್ತು. ಲೂಸಿಯಾನದ ಹತ್ತಿಯ ಗಿಡಗಳಲ್ಲಿನ ನೀಗ್ರೋಗಳು, ಕೆಂಟಕಿಯ ರೆಕ್ಕೆ ಇರುವ ಕುದುರೆಗಳು, ಅರಿನೋವಾದ ಸೂರ್ಯಾಸ್ತದಲ್ಲಿನ ಗ್ರೀಕ್ ಪ್ರೇಮಿಗಳು, ಮಿಚಿಗನ್‌ನ ಕೆರೆಯ ಬಳಿ ಚಿತ್ರ ಬಿಡಿಸುತ್ತಿದ್ದ ಕೆಂಪು ಸ್ವೆಟರ್ ಹಾಕಿಕೊಂಡ ಹುಡುಗಿ ಹುಡುಗನೊಬ್ಬನಿಗೆ ಬ್ರಷ್ ಹಿಡಿದು ಕೈ ಬೀಸುತ್ತಿರುವುದು; ವಿದಾಯ ಹೇಳುವುದಕ್ಕಲ್ಲ, ಆಸೆ ಇಟ್ಟುಕೊಳ್ಳುವುದಕ್ಕಾಗಿ ಹೇಳುತ್ತ. ಏಕೆಂದರೆ ಅವಳಿಗೆ ಆ ಟ್ರೈನು ಮತ್ತೆ ವಾಪಸು ಬರುವುದಿಲ್ಲವೆಂದು ಗೊತ್ತಿರಲಿಲ್ಲ. ಅನಂತರ ಅಲ್ಫಾಲ್ಫೋ ಮತ್ತು ಖೆರ್ಮಾನ್ ಒಂದು ಶನಿವಾರ ಬಂದು ಸೋಮವಾರ ಹಿಂತಿರುಗುವ ಉದ್ದೇಶದಿಂದ ಹೊರಟರು. ಆದರೆ ಅವರಿಂದ ಮತ್ತೆ ಯಾವ ಸುದ್ದಿಯೂ ಕೇಳಿ ಬರಲಿಲ್ಲ. ಕತಲುನಿಯಾದ ಜಾಣ ಹೊರಟು ಹೋಗಿ ಒಂದು ವರ್ಷದ ನಂತರ ನಿಗ್ರೊಮಾಂತಳ ಕೃಪೆಯಲ್ಲಿ ಹಿಗ್ಗಾಡುತ್ತಿದ್ದ ಒಬ್ಬನೇ ವ್ಯಕ್ತಿಯೆಂದರೆ ಗಾಬ್ರಿಯಲ್. ಅವನು ಪ್ಯಾರಿಸ್‌ಗೆ ಪ್ರವಾಸದ ಮೊದಲನೆ ಬಹುಮಾನವೆಂದು ಇರುವ, ಫ್ರೆಂಚ್ ಪತ್ರಿಕೆಗಳಲ್ಲಿ ಬರುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಆ ಸಂಚಿಕೆಗೆ ಚಂದಾದಾರನಾಗಿದ್ದ ಅವ್ರೇಲಿಯಾನೋ, ಕೆಲವು ಸಲ ಗಾಬ್ರಿಯಾಲ್‌ನ ಮನೆಯಲ್ಲಿ ಮತ್ತು ಹೆಚ್ಚಾಗಿ ಪಿಂಗಾಣಿ ಬಾಟಲುಗಳಿದ್ದ ಮತ್ತು ಇಡೀ ಮಕೋಂದೋದಲ್ಲಿ ಕಟುವಾಸನೆಯಿದ್ದ ಔಷಧಿ ಅಂಗಡಿಯಲ್ಲಿ ಹಾಗೂ ಗಾಬ್ರಿಯಲ್‌ನನ್ನು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದ ಮರ್ಸಿದೆಸ್ ವಾಸಿಸುತ್ತಿದ್ದ ಸ್ಥಳದಲ್ಲಿ ಉತ್ತರಗಳನ್ನು ಭರ್ತಿಮಾಡಲು ಅವನಿಗೆ ಸಹಾಯ ಮಾಡುತ್ತಿದ್ದ. ತನ್ನನ್ನೇ ತಾನು ತಿಂದುಕೊಂಡು, ಸರ್ವನಾಶವಾಗುತ್ತಿದ್ದ ಮತ್ತು ಪ್ರತಿ ಕ್ಷಣವೂ ಕೊನೆಯಾಗುತ್ತಿದ್ದ ಆದರೆ ಕೊನೆಯಾಗುವುದನ್ನು ಕೊನೆಯಾಗಿಸದಿದ್ದ ಹಳೆಯದರಲ್ಲಿ ಉಳಿದದ್ದು ಅದೊಂದೇ. ಆ ಊರು ಎಷ್ಟರಮಟ್ಟಿಗೆ ಚಟುವಟಿಕೆಯನ್ನು ಕಳೆದುಕೊಂಡಿತ್ತೆಂದರೆ ಗಾಬ್ರಿಯಲ್ ಸ್ಪರ್ಧೆಯಲ್ಲಿ ಗೆದ್ದು ಪ್ಯಾರಿಸ್‌ಗೆ ಎರಡು ಜೊತೆ ಬಟ್ಟೆ, ಒಂದು ಜೊತೆ ಶೂ ಮತ್ತು ರಬೆಲಾಸ್‌ನ ಸಮಗ್ರ ಕೃತಿಗಳ ಜೊತೆ ಹೊರಟಾಗ ಅವನು ರೈಲಿನ ಎಂಜಿನಿಯರ್‌ನ ನಿಲ್ಲಿಸೆಂದು ಸನ್ನೆ ಮಾಡಿ, ಹತ್ತಬೇಕಾಯಿತು. ಟರ್ಕಿಗಳ ಹಳೆ ರಸ್ತೆ ಆ ಸಮಯದಲ್ಲಿ ಹಾಳು ಸುರಿಯುವ ಮೂಲೆಯಾಗಿತ್ತು. ಅಲ್ಲಿ ಕೊನೆಯದಾಗಿದ್ದ ಅರಬರು ಹಳೆಯ ಪದ್ಧತಿಯಂತೆ ಬಾಗಿಲಲ್ಲಿ ಕುಳಿತು ಹೊರಗೆ ಎಳೆದು ಹಾಕಿಸಿಕೊಂಡರು. ಅವರು ಅದಕ್ಕೆ ವರ್ಷಗಳ ಮೊದಲೇ ಕೊನೆಯ ಇಂಚಿನ ಬಟ್ಟೆಯನ್ನೂ ಮಾರಿದ್ದರು. ಪ್ಯಾಟ್ರಿಷಿಯಾ ಬ್ರೌನ್ ಬಾಳೆ ತೋಟದ ಪಟ್ಟಣದ ಬಗ್ಗೆ ಆಸಕ್ತಿ ಹುಟ್ಟಲೆಂದು ಅಸಹನೆಯ ರಾತ್ರಿಗಳಲ್ಲಿ ಮಾಡಿದ ಪ್ರಯತ್ನ ಮತ್ತು ಅಲಬಾಮಾದ ಪಾತರ್‌ವಿಲಾದಲ್ಲಿ ಉಪ್ಪಿನಕಾಯಿಯನ್ನು ಮಾಡಬೇಕೆಂಬ ಪ್ರದೇಶದಲ್ಲಿ ಈಗ ಕಾಡುಹುಲ್ಲು ಬೆಳೆದಿತ್ತು. ಫಾದರ್ ಏಂಜೆಲ್‌ನ ಸ್ಥಾನಕ್ಕೆ ಬಂದಿದ್ದ ಪಾದ್ರಿಯ ಹೆಸರು ಯಾರಿಗೂ ಗೊತ್ತಿರಲಿಲ್ಲ ಮತ್ತು ಅವನು ಸಂಧಿವಾತ ರೋಗ ಮತ್ತು ನಿದ್ದೆ ಬಾರದ ರೋಗದಿಂದ ಹಾಸಿಗೆಯಲ್ಲಿ ಮಲಗಿ ದೈವಕೃಪೆಗಾಗಿ ಕಾಯುತ್ತಿದ್ದ. ಆದರೆ ಅಲ್ಲಿದ್ದ ಹಲ್ಲಿ ಮತ್ತು ಇಲಿಗಳು ಪಕ್ಕದ ಚರ್ಚ್ ತಲೆತಲಾಂತರವಾಗಿ ಯಾರಿಗೆ ಸೇರಬೇಕು ಎನ್ನುವುದಕ್ಕಾಗಿ ಕಚ್ಚಾಡುತ್ತಿದ್ದವು. ಪಕ್ಷಿಗಳು ಕೂಡ ಮಕೋಂದೋವನ್ನು ಮರೆತು ಬಿಟ್ಟಿದ್ದವು. ಅಲ್ಲಿ ಧೂಳು ಮತ್ತು ಬಿಸಿಲಿನ ತಾಪ ಎಷ್ಟಿತ್ತೆಂದರೆ ಉಸಿರಾಡುವುದು ಕೂಡ ಕಷ್ಟವಾಗಿತ್ತು. ಏಕಾಂತ ಮತ್ತು ಪ್ರೇಮದಿಂದ ಪ್ರತ್ಯೇಕವಾಗಿದ್ದು ಮತ್ತು ಪ್ರೇಮದ ಏಕಾಂತದಲ್ಲಿ ಉಸಿರಾಡುವುದೇ ಕೆಂಜಿಗಗಳ ಸದ್ದಿನಿಂದ ಕಷ್ಟವಾಗಿತ್ತು. ಆದರೆ ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾ ಮಾತ್ರ ಭೂಮಿಯ ಮೇಲೆ ಇರುವವರಲ್ಲಿ ಅತ್ಯಂತ ಸಂತೋಷದಿಂದಿದ್ದವರು.
ಗ್ಯಾತ್ಸನ್ ಬ್ರುಸೆಲ್ಸ್‌ಗೆ ವಾಪಸು ಹೋದ. ಏರೋಪ್ಲೇನಿಗಾಗಿ ಕಾದು, ತೀರ ಅಗತ್ಯವಾದ ಸಾಮಾನುಗಳನ್ನು ಸಣ್ಣ ಸೂಟ್‌ಕೇಸಿನಲ್ಲಿ ಹಾಕಿಕೊಂಡು, ಪತ್ರವ್ಯವಹಾರಗಳ ಫೈಲನ್ನು ತೆಗೆದುಕೊಂಡು, ತನಗೆ ಕೊಟ್ಟ ರಿಯಾಯಿತಿಗಳನ್ನು ತನಗಿಂತ ಹೆಚ್ಚು ಆಶಯದ ಯೋಜನೆಗಳನ್ನು ಪ್ರಾಂತೀಯ ಅಧಿಕಾರಿಗಳಿಗೆ ಕೊಟ್ಟಿದ್ದ. ಖೆರ್ಮಾನ್ ಪೈಲಟ್‌ಗಳಿಗೆ ಕೊಡುವುದಕ್ಕೆ ಮುಂಚೆ ಆಕಾಶದ ಮೂಲಕ ಹಿಂತಿರುಗುವ ಆಲೋಚನೆಯಿಂದ ಹೊರಟಿದ್ದ. ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾರ ಆ ದಿನ ಮಧ್ಯಾಹ್ನದ ಪ್ರಥಮ ಪ್ರಣಯದ ನಂತರ, ಅವಳು ತನ್ನ ಗಂಡನ ಅಪರೂಪದ ರಕ್ಷಣೆ ಇಲ್ಲದ ಸಮಯದ ಉಪಯೋಗ ಪಡೆದು, ಆಕಸ್ಮಿಕ ಭೇಟಿಗಳಲ್ಲಿ ಅವನೊಡನೆ ಅಬ್ಬರದ ಪ್ರಣಯಕ್ಕಿಳಿಯುತ್ತಿದ್ದಳು ಮತ್ತು ಅದು ಪ್ರತಿ ಬಾರಿ ಅಡೆತಡೆಗೆ ಒಳಗಾಗುತ್ತಿತ್ತು. ಆದರೆ ಮನೆಯೊಳಗೆ ಅವರಿಬ್ಬರೇ ಇದ್ದಾಗ ಕಳೆದುಕೊಂಡ ಸಮಯವನ್ನು ಸರಿದೂಗಿಸುವ ಹಾಗೆ ಪ್ರಣಯದಾವೇಶದಲ್ಲಿರುತ್ತಿದ್ದರು. ಅದೊಂದು ಫೆರ್ನಾಂಡ ಅವಳ ಗೋರಿಯಲ್ಲಿ ನಡುಗುವಂತೆ ಮಾಡಿದ ವ್ಯಾಮೋಹ ಮತ್ತು ಅವರನ್ನು ಸದಾ ಕಾಲ ಉತ್ಸಾಹದಿಂದ ಇರುವಂತೆ ಮಾಡಿತ್ತು. ಅಮರಾಂತ ಉರ್ಸುಲಾಳ ಚೀರಾಟಗಳು ಮತ್ತು ಸಂಕಟದ ಹಾಡುಗಳು ಮಧ್ಯಾಹ್ನ ಎರಡು ಗಂಟೆಗೆ ಡೈನಿಂಗ್ ಟೇಬಲ್‌ನ ಮೇಲೆ ಮತ್ತು ಬೆಳಗಿನ ಜಾವ ಎರಡು ಗಂಟೆಗೆ ಅಡುಗೆ ಮನೆಯಿಂದ ಕೇಳಿ ಬರುತ್ತಿತ್ತು. ಅವಳು, “ನಂಗೇನು ಬೇಜಾರಾಗುತ್ತೆ ಅಂದ್ರೆ, ನಾವು ಎಷ್ಟೊಂದು ಟೈಂ ಹಾಳು ಮಾಡಿ ಬಿಟ್ಟಿದ್ದೀವಲ್ಲ ಅಂತ” ಎಂದು ಹೇಳುತ್ತಿದ್ದಳು. ವ್ಯಾಮೋಹದ ವೈಭವದಲ್ಲಿದ್ದ ಅವಳು ಕೆಂಜಿಗಗಳು ಅಂಗಳವನ್ನು ಹಾಳುಗೆಡುವುದನ್ನು, ತನ್ನ ಇತಿಹಾಸಪೂರ್ವ ಹಸಿವನ್ನು ತೊಲೆಗಳಲ್ಲಿ ತೃಪ್ತಿಪಡಿಸಿಕೊಳ್ಳುವುದನ್ನು ಗಮನಿಸಿದಳು ಮತ್ತು ಆ ಜೀವಿಗಳ ಮಹಾಪೂರ ಅಂಗಳವನ್ನು ಮತ್ತೆ ಆಕ್ರಮಿಸಿಕೊಂಡಿದ್ದನ್ನು ಕೂಡ. ಆದರೆ ಅವು ಅವಳ ಬೆಡ್‌ರೂಮಿಗೆ ಬಂದಾಗ ಮಾತ್ರ ಅವುಗಳೊಂದಿಗೆ ಹೋರಾಡುವ ಮನಸ್ಸು ಮಾಡಿದಳು. ಅವ್ರೇಲಿಯಾನೋ ಚರ್ಮದ ಹಾಳೆಯ ಬರಹಗಳನ್ನು ನಿರ್ಲಕ್ಷಿಸಿದನಲ್ಲದೆ ಮನೆಯಿಂದ ಹೊರಗೆ ಮತ್ತೆ ಹೋಗಲಿಲ್ಲ. ಅವನು ಕತಲುನಿಯಾದ ಜಾಣನ ಕಾಗದಗಳಿಗೆ ಉಪೇಕ್ಷೆಯಿಂದ ಉತ್ತರಿಸುತ್ತಿದ್ದ. ಅವರು ವಾಸ್ತವದ ಅರಿವು, ಕಾಲದ ಪ್ರಜ್ಞೆ, ದಿನನಿತ್ಯದ ಅಭ್ಯಾಸಗಳ ಲಯವನ್ನು ಕಳೆದುಕೊಂಡರು. ಅವರು ಬಟ್ಟೆ ಕಳಚುವುದಕ್ಕೆ ಸಮಯ ವ್ಯರ್ಥಮಾಡಬಾರದೆಂದು ಕಿಟಕಿ ಬಾಗಿಲುಗಳನ್ನು ಹಾಕಿದರು ಮತ್ತು ಸುಂದರಿ ರೆಮಿದಿಯೋಸ್ಳಂತೆ ನಡುಮನೆಯ ಹಸಿಮಣ್ಣಿನಲ್ಲಿ ಓಡಾಡುತ್ತಿದ್ದರು. ಅವರು ಒಂದು ನೀರಿನ ತೊಟ್ಟಿಯಲ್ಲಿ ಪ್ರೇಮಿಸುತ್ತ ಮುಳುಗಿ ಬಿಡುತ್ತಿದ್ದರು. ಸ್ವಲ್ಪ ಕಾಲದಲ್ಲಿಯೇ ಅವರು ಕೆಂಜಿಗಗಳು ಹಾಳುಗೆಡವಿದ್ದಕ್ಕಿಂತ ಹೆಚ್ಚಿಗೆ ಹಾಳುಮಾಡಿದರು. ಅವರು ಅಂಗಳದಲ್ಲಿದ್ದ ಪೀಠೋಪಕರಣಗಳನ್ನು ಮುರಿದು ಹಾಕಿದರು. ಅವರ ಹುಚ್ಚುತನದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಆವೇಶದ ಪ್ರಣಯಗಳನ್ನು ತಡೆದುಕೊಂಡಿದ್ದ ಮಂಚವನ್ನು ತುಂಡು ತುಂಡು ಮಾಡಿದರು. ಹಾಸಿಗೆಯನ್ನು ಚಿಂದಿ ಚಿಂದಿ ಮಾಡಿ ನೆಲದ ಮೇಲೆ ಚೆಲ್ಲಿ, ಹತ್ತಿ ಮುತ್ತಿದ್ದರಿಂದ ಉಸಿರುಗಟ್ಟಿದಂತಾಯಿತು. ಅವ್ರೇಲಿಯಾನೋ ತನ್ನ ಪ್ರತಿಸ್ಪರ್ಧಿಗಿಂತ ಆವೇಶಭರಿತ ಪ್ರೇಮಿಯಾದರೂ, ಆ ದುರಂತದ ಸ್ವರ್ಗವನ್ನು ಅಮರಾಂತ ಉರ್ಸುಲಾ, ತನ್ನ ಹುಚ್ಚು ಪ್ರತಿಭೆಯಿಂದ ಹಾಗೂ ಲಯಭರಿತ ಕೌಶಲ್ಯದಿಂದ, ಅವಳ ಮುತ್ತಜ್ಜಿಯ ಅಮ್ಮ ಪ್ರಾಣಿಗಳ ತಿನುಸನ್ನು ಮಾಡುತ್ತಿದ್ದಾಗ ಇದ್ದ ಅಪಾರ ಶಕ್ತಿಯನ್ನು ತನಗೆ ಕೊಟ್ಟಿದ್ದಾಳೆ ಎನ್ನುವ ಹಾಗೆ ಪ್ರಣಯದಲ್ಲಿ ಕೇಂದ್ರೀಕರಿಸಿದ್ದಳು. ಅವಳು ಸಂತೋಷದಿಂದ ಹಾಡುತ್ತ, ಸಾಯುವಷ್ಟು ನಗುತ್ತಿದ್ದರೆ, ಅವ್ರೇಲಿಯಾನೋ ಹೆಚ್ಚು ಹೆಚ್ಚು ತನ್ನೊಳಗೇ ಐಕ್ಯವಾಗುತ್ತ, ಮೌನಿಯಾಗುತ್ತಿದ್ದ. ಏಕೆಂದರೆ ಅವನ ವ್ಯಾಮೋಹ ಸ್ವಕೇಂದ್ರಿತವಾಗಿ ಕುದಿಯುತ್ತಿತ್ತು. ಹೀಗಿದ್ದರೂ ಅವರಿಬ್ಬರೂ ಉತ್ತುಂಗ ತಲುಪಿ ಉತ್ಸಾಹದಿಂದ ಸೋತ ನಂತರ ಅವರಿಗಾದ ದಣಿವಿನ ಉಪಯೋಗ ಪಡೆಯುತ್ತಿದ್ದರು. ಅವರು ತಮ್ಮ ದೇಹಗಳನ್ನು ಆರಾಧಿಸುತ್ತ ಪ್ರಣಯದ ಮಧ್ಯದ ವಿಶ್ರಾಂತಿಯ ಅವಧಿಯಲ್ಲಿ ಆ ತನಕ ಶೋಧಿಸದಿದ್ದ ಅಪೇಕ್ಷೆಗಿಂತಲೂ ಹೆಚ್ಚಿನ ಸಾಧ್ಯತೆಗಳನ್ನು ಕಂಡುಕೊಂಡರು. ಅವನು ಅಮರಾಂತ ಉರ್ಸುಲಾಳ ನಿಮಿರಿದ ಮೊಲೆಗಳಿಗೆ ಮೊಟ್ಟೆಯನ್ನು ಹಚ್ಚಿ ಸವರಿ, ಅವಳ ಮೃದು ತೊಡೆಗಳನ್ನು ಮತ್ತು ಅವಳ ಹೊಟ್ಟೆಯನ್ನು ಬೆಣ್ಣೆ ಹಚ್ಚಿ ನೀವುತ್ತಿದ್ದರೆ, ಅ?ಜಜಿ;ಳು ಅವನ ಮರ್ಮಾಂಗದೊಂದಿಗೆ ಅದೊಂದು ಗೊಂಬೆ ಎನ್ನುವ ಹಾಗೆ ಆಟವಾಡುತ್ತ, ಅದಕ್ಕೆ ಲಿಪ್‌ಸ್ಟಿಕ್‌ನಿಂದ ಕಣ್ಣು ಬರೆದು, ಕಾಡಿಗೆ ತೀಡುವ ಪೆನ್ಸಿಲ್‌ನಿಂದ ಟರ್ಕಿಯವನ ರೀತಿಯ ಮೀಸೆ, ಬೋ ಟೈ ಮತ್ತು ಹ್ಯಾಟ್ ಹಾಕುತ್ತಿದ್ದಳು. ಒಂದು ರಾತ್ರಿ ಅವರು ಉಂಗುಷ್ಠದಿಂದ ತಲೆಯ ತನಕ ಜಾಮ್ ಬಳಿದುಕೊಂಡು ನಾಯಿಗಳ ಹಾಗೆ ಒಬ್ಬರು ಮತ್ತೊಬ್ಬರನ್ನು ನೆಕ್ಕಿದರು ಮತ್ತು ಅಂಗಳದ ನೆಲದಲ್ಲಿ ಪ್ರೇಮಿಸಿದರು. ಅವರನ್ನು ಜೀವಸಹಿತ ತಿಂದು ಹಾಕಲು ಸಿದ್ಧವಿದ್ದ ಇರುವೆಗಳ ಪ್ರವಾಹ ಎಚ್ಚರಿಸಿತು.
ಅವರ ಭ್ರಮಾಧೀನತೆಯ ಮಧ್ಯದ ವಿರಾಮದಲ್ಲಿ ಅಮರಾಂತ ಗ್ಯಾತ್ಸನ್‌ನ ಕಾಗದಗಳಿಗೆ ಉತ್ತರಿಸುತ್ತಿದ್ದಳು. ಅವನು ಬಹಳ ದೂರವಿದ್ದು ಹಿಂತಿರುಗುವುದು ಅಸಾಧ್ಯವೆಂದು ತಿಳಿದಳು. ಅವನ ಮೊದಲ ಕಾಗದಗಳಲ್ಲಿ ಅವಳಿಗೆ ತನ್ನ ಪಾರ್ಟ್‌ನರ್‍ಸ್ ಏರೋಪ್ಲೇನನ್ನು ಕಳಿಸಿದ್ದಾರೆಂದೂ, ಆದರೆ ರವಾನಿಸಬೇಕಾದ ಏಜೆಂಟ್ ಅದನ್ನು ತಪ್ಪಾಗಿ ತಾಂಗಾನಿಕಾಗೆ ಕಳಿಸಿ, ಅಲ್ಲಿ ಅದು ಹಂಚಿಹೋಗಿರುವ ಮಕೋಂದೋದ ಬುಡಕಟ್ಟಿನವರಿಗೆ ಕೊಟ್ಟುಬಿಟ್ಟಿದ್ದಾರೆಂದೂ ಬರೆದಿದ್ದ. ಆ ಗೊಂದಲದಿಂದ ಮತ್ತೆ ಏರೋಪ್ಲೇನ್‌ನನ್ನು ಮರಳಿ ಪಡೆಯಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ ಎಂದು ತಿಳಿಸಿದ್ದ. ಆದ್ದರಿಂದ ಅಮರಾಂತ ಉರ್ಸುಲಾ ಅಕಾಲದಲ್ಲಿ ಹಿಂತಿರುಗುವ ಸಾಧ್ಯತೆಯನ್ನು ತಳ್ಳಿ ಹಾಕಿದಳು. ಅವ್ರೇಲಿಯಾನೋಗೆ ಅವನ ಮಟ್ಟಿಗೆ ಕತಲುನಿಯಾದ ಜಾಣನ ಕಾಗದಗಳನ್ನು ಬಿಟ್ಟರೆ ಪ್ರಪಂಚದೊಡನೆ ಬೇರೆ ಯಾವ ಸಂಪರ್ಕವಿರಲಿಲ್ಲ ಮತ್ತು ಔಷಧಿಯಂಗಡಿಯ ಮೌನಿ ಮರ್ಸಿಡೆಸ್ ಮೂಲಕ ಗಾಬ್ರಿಯಲ್ ಬಗ್ಗೆ ದೊರೆಯುವ ಸುದ್ದಿ. ಗ್ಯಾಬ್ರಿಯಲ್ ಪ್ಯಾರಿಸ್‌ನಲ್ಲಿ ನೆಲೆಸುವುದಕ್ಕೋಸ್ಕರ ಹಿಂತಿರುಗುವ ಟಿಕೆಟ್‌ಗಾಗಿ, ರುಧಾಫೀನ್‌ನ ಮಂಕು ಹೊಟೇಲ್‌ನಿಂದ ಎಸೆದ ಹಳೆಯ ಕಾಗದ ಮತ್ತು ಮನೆಗೆಲಸದವರಿಗಾಗಿ ಬಾಟಲುಗಳನ್ನು ಮಾರುತ್ತಿದ್ದ. ಅವ್ರೇಲಿಯಾನೋ ಕತ್ತಿನ ತನಕ ಸ್ವೆಟರ್ ಹಾಕಿಕೊಂಡು, ಮೌಂತ್‌ಫರ್ನಾನೆಯಲ್ಲಿನ ಕಿರುದಾರಿಗಳಲ್ಲಿರುವ ಕೆಫೆಗಳೆಲ್ಲ ಪ್ರೇಮಿಗಳು ತುಂಬಿದಾಗ, ಅವನು ಅದನ್ನು ತೆಗೆಯುವನೆಂದು ಕಲ್ಪಿಸಿದ ಮತ್ತು ಹಸಿವೆಯನ್ನು ಮರೆಯಲು ದಿನವೆಲ್ಲ ಕುದಿವ ಹೂ ಕೋಸಿನ ವಾಸನೆಯ, ರೊಕೆಮಡೋರ್ ರೂಮಿನಲ್ಲಿ ದಿನವೆಲ್ಲ ಮಲಗಿ, ರಾತ್ರಿಯೆಲ್ಲ ಬರೆಯುತ್ತಿದ್ದ. ಆದರೂ ಸಹ ಅವನ ಬಗ್ಗೆ ಸುದ್ದಿ ಅನಿಶ್ಚಿತವಾಗಿತ್ತು. ಕತುಲುನಿಯಾದ ಜಾಣನಿಂದ ಬರುವ ಕಾಗದಗಳು ದುಃಖತಪ್ತವಾಗಿದ್ದು, ಅವ್ರೇಲಿಯಾನೋ ಅವುಗಳ ಬಗ್ಗೆ ಮತ್ತು ಅಮರಾಂತ ಉರ್ಸುಲಾ ತನ್ನ ಗಂಡನನ್ನು ಕುರಿತು ಆಲೋಚಿಸುತ್ತಿದ್ದರು. ಅಲ್ಲದೆ ಅವರಿಬ್ಬರೂ ಬೇರೆ ಏನೂ ಇರದ ಕೇವಲ ಪ್ರಣಯ ಮಾತ್ರ ದಿನನಿತ್ಯದ ಮತ್ತು ನಿರಂತರ ವಾಸ್ತವವಾಗಿದ್ದ ಜಗತ್ತಿನಲ್ಲಿ ತೇಲುತ್ತಿದ್ದರು.
ಇದ್ದಕ್ಕಿದ್ದ ಹಾಗೆ, ಗೊತ್ತಿರದೆ ಆಗುವ ಆಘಾತದಂತೆ, ಗ್ಯಾತ್ಸನ್ ಹಿಂತಿರುಗುವ ಸುದ್ದಿ ಬಂತು. ಅಮರಾಂತ ಉರ್ಸುಲಾ ಮತ್ತು ಅವ್ರೇಲಿಯನೋ ಆಗ ಕಣ್ಣು ಬಿಟ್ಟು, ತಮ್ಮೊಳಗನ್ನು ನೋಡಿಕೊಳ್ಳುತ್ತ, ಎದೆ ಕೆದಕಿ ಕಾಗದದ ಕಡೆ ನೋಡಿದರು. ಅವರಿಬ್ಬರೂ ಒಬ್ಬರಿಗೊಬ್ಬರು ಎಷ್ಟು ಸಮೀಪದವರಾಗಿದ್ದರೆಂದರೆ ತಾವು ಬೇರ್ಪಡುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂದುಕೊಂಡರು. ಅವಳು ಗಂಡನಿಗೆ ಸತ್ಯಕ್ಕೆ ವಿರುದ್ಧವಾಗಿ ಅವನ ಬಗ್ಗೆ ಇರುವ ಪ್ರೇಮ ಇನ್ನೊಮ್ಮೆ ತಿಳಿಸಿ, ಅವನನ್ನು ಕಾಣಲು ಕಾತರಳಾಗಿದ್ದೇನೆಂದೂ ಮತ್ತು ಜೊತೆಯಲ್ಲಿಯೇ ಅವ್ರೇಲಿಯಾನೋನನ್ನು ಬಿಟ್ಟು ಬದುಕುವುದು ಅಸಾಧ್ಯವೆಂದು ಮಾಡಿರುವ ವಿಧಿಯ ಕೈವಾಡವನ್ನು ತಾನು ಒಪ್ಪಿಕೊಂಡಿರುವುದನ್ನು ಬರೆದಳು. ಅವರ ನಿರೀಕ್ಷಣೆಗೆ ವ್ಯತಿರಿಕ್ತವಾಗಿ, ಗ್ಯಾತ್ಸನ್ ಸಮಾಧಾನಕರವಾಗಿ, ಎರಡು ಪುಟಗಳಲ್ಲಿ ವ್ಯಾಮೋಹದ ಚಂಚಲತೆಯ ಬಗ್ಗೆ ಬರೆದು ಕೊನೆಯ ಪ್ಯಾರಾದಲ್ಲಿ ಅವರಿಬ್ಬರಿಗೂ ಅನುಮಾನಗೊಳ್ಳದಂತೆ ಶುಭಾಶಯಗಳನ್ನು ತಿಳಿಸುತ್ತ, ಅವರು ಅಲ್ಪಾವಧಿಯಲ್ಲಿ ಹೊಂದಿದ್ದ ದಾಂಪತ್ಯ ರೀತಿಯ ಅನುಭವದಲ್ಲೆ ಸಂತೋಷವಾಗಿರಲು ಹೇಳಿದ್ದ. ಅದೊಂದು ಅನಿರೀಕ್ಷಿತ ಧೋರಣೆಯಾಗಿದ್ದು ಅಮರಾಂತ ಉರ್ಸುಲಾಳಿಗೆ, ತನ್ನ ಗಂಡನಿಗೆ ತನ್ನನ್ನು ವಿಧಿ ಲಿಖಿತಕ್ಕೆ ಬಿಟ್ಟು ಬಿಡುವಂತೆ ಅವಕಾಶ ಕೊಟ್ಟಿದ್ದಕ್ಕಾಗಿ ಅವಮಾನವಾದಂತಾಯಿತು. ಆರು ತಿಂಗಳ ನಂತರ ಗ್ಯಾತ್ಸನ್ ಲಿಯೋಪಾಲ್ಡ್‌ವಿಲ್ಲಾದಿಂದ ತನಗೆ ಏರೋಪ್ಲೇನ್ ಸಿಕ್ಕಿದೆಯೆಂದೂ, ತನ್ನ ಮುರುಕು ಮೋಟಾರು ಬೈಕನ್ನು ಕಳಿಸಿಕೊಡಬೇಕೆಂದೂ ಏಕೆಂದರೆ ಮಕೋಂದೋದಲ್ಲಿ ತನ್ನದೆನ್ನುವ ಆತ್ಮೀಯ ವಸ್ತು ಉಳಿದಿರುವುದು ಅದೊಂದೇ ಎಂದು ಬರೆದಾಗ ದ್ವೇಷ ಹೆಚ್ಚಾಯಿತು. ಅವ್ರೇಲಿಯಾನೋ ಅಮರಾಂತಳ ಸಂಕಟವನ್ನು ತಾಳ್ಮೆಯಿಂದ ಸಹಿಸಿಕೊಂಡು, ಸಂತೋಷದಲ್ಲಿದ್ದ ಹಾಗೆ ದುಃಖದಲ್ಲಿಯೂ ಒಳ್ಳೆಯ ಗಂಡನಾಗಿರಲು ಸಾಧ್ಯ ಎನ್ನುವುದನ್ನು ತೋರಿಸಲು ಪ್ರಯತ್ನಿಸಿದ. ದಿನನಿತ್ಯದ ಬಳಕೆಗೆಂದು ಗ್ಯಾತ್ಸನ್ ಕೊಟ್ಟಿದ್ದ ಹಣ ಮುಗಿಯುತ್ತಿದ್ದಂತೆ ಅವರಿಬ್ಬರಲ್ಲಿ ಬಲವಾದ ಬಂಧವ್ಯ ಬೆಳೆದರೂ ಅದಕ್ಕೆ ವ್ಯಾಮೋಹದಷ್ಟು ವಿಜೃಂಭಣೆ ಇರಲಿಲ್ಲ. ಆದರೆ ಕಾಮೋದ್ರೇಕದ ದಿನಗಳಷ್ಟೇ ಸಂತೋಷದಿಂದ ಇರಲು ಅವಕಾಶ ಮಾಡಿತ್ತು. ಪಿಲರ್ ಟೆರ್‍ನೆರಾ ಸತ್ತ ಸಮಯದಲ್ಲಿ ಅವರು ಮಗುವನ್ನು ನಿರೀಕ್ಷಿಸುತ್ತಿದ್ದರು.
ಅವಳು ಬಸುರಿಯಾದ ಆಲಸ್ಯದಲ್ಲಿ ಅಮರಾಂತ ಉರ್ಸುಲಾ ಮೀನಿನ ಬೆನ್ನೆಲುಬುಗಳಿಂದ ಮಾಡಿದ ನೆಕ್ಲೇಸುಗಳ ವ್ಯವಹಾರ ಮಾಡಲು ಪ್ರಯತ್ನಿಸಿದಳು. ಅದನ್ನು ಒಂದು ಡಜ಼ನ್ ಕೊಂಡುಕೊಂಡ ಮರ್ಸಿದೆಸ್ ಬಿಟ್ಟರೆ ಬೇರೆ ಯಾವ ಗಿರಾಕಿಗಳೂ ಅವಳಿಗೆ ಸಿಗಲಿಲ್ಲ. ಅವ್ರೇಲಿಯಾನೋಗೆ ಮೊಟ್ಟ ಮೊದಲ ಬಾರಿಗೆ ತನಗಿದ್ದ ಭಾಷೆಗಳ ಪ್ರಬುದ್ಧತೆ, ವಿಶ್ವಕೋಶದ ಜ್ಞಾನ, ತಾನು ಆಯಾ ಸ್ಥಳಗಳಲ್ಲಿ ಇರದೆ ಎಲ್ಲೆಲ್ಲೋ ನಡೆದ ಘಟನೆಗಳ ವಿವರಗಳನ್ನು ಅರಿಯುವ ಸಾಮರ್ಥ್ಯಗಳು, ಅವನ ಹೆಂಡತಿಯ ಹತ್ತಿರವಿದ್ದ ಮಕೋಂದೋದ ಅರ್ಧದಷ್ಟು ಮೂಲನಿವಾಸಿಗಳ ಬಳಿ ಇದ್ದದ್ದೆಲ್ಲವನ್ನೂ ಒಟ್ಟು ಮಾಡಿದಷ್ಟಿದ್ದ ಅಪ್ಪಟ ಒಡವೆಗಳ ಪೆಟ್ಟಿಗೆಗಳಂತೆ, ಯಾವ ಉಪಯೋಗಕ್ಕೂ ಬರುವುದಿಲ್ಲ ಎಂಬ ಅರಿವಾಯಿತು. ಅವರು ಹೇಗೋ ಬದುಕಿದ್ದರು. ಅಮರಾಂತ ಉರ್ಸುಲಾ ತನ್ನ ಹಾಸ್ಯ ಪ್ರವೃತ್ತಿಯನ್ನು ಮತ್ತು ಪ್ರಚೋದನೆಯ ತುಂಟಾಟವನ್ನು ಕಡಿಮೆ ಮಾಡಿಕೊಳ್ಳದಿದ್ದರೂ ಊಟವಾದ ಮೇಲೆ ಅಂಗಳದಲ್ಲಿ ಯೋಚಿಸುತ್ತ ಕುಳಿತುಕೊಂಡಿರುತ್ತಿದ್ದರೆ, ಅವ್ರೇಲಿಯಾನೋ ಕೂಡ ಅವಳ ಜೊತೆ ಇರುತ್ತಿದ್ದ. ಅವರು ಒಬ್ಬರಿಗೊಬ್ಬರು ನೋಡುತ್ತ, ಮೌನವಾಗಿ ಕತ್ತಲಾಗುವ ತನಕ ಕುಳಿತು, ಅತಿರೇಕದ ದಿನಗಳಷ್ಟೇ ಪರಸ್ಪರ ಪ್ರೀತಿಸುತ್ತಿದ್ದರು. ಅನಿಶ್ಚಯದ ಭವಿಷ್ಯ ಅವರನ್ನು ಭೂತಕಾಲದ ಕಡೆ ನೋಡುವಂತೆ ಮಾಡಿತ್ತು, ಅವರು ಸುರಿಮಳೆಯ ಸ್ವರ್ಗದ ಕಾಲದಲ್ಲಿದ್ದರು: ನಡುಮನೆಯ ನೀರನ್ನು ಎಗರಿಸುತ್ತಾ, ಉರ್ಸುಲಾಳ ಮೇಲೆ ಹಾಕಲು ಹಲ್ಲಿಗಳನ್ನು ಸಾಯಿಸುತ್ತ, ಅವಳನ್ನು ಜೀವ ಸಹಿತ ಹೂಳುವಂತೆ ನಟಿಸುತ್ತ ಮತ್ತು ಆ ನೆನಪುಗಳು ಇದ್ದದ್ದರಿಂದ ಅವರು ಒಟ್ಟಿಗಿದ್ದಾಗ ಸಂತೋಷವಾಗಿದ್ದರು ಎನ್ನುವ ಸತ್ಯವನ್ನು ಆ ನೆನಪುಗಳು ತೆರೆದಿಟ್ಟಿದ್ದವು. ಭೂತ ಕಾಲದಲ್ಲಿ ಮತ್ತಷ್ಟು ಆಳವಾಗಿ ಹೋದ ಮೇಲೆ ಅಮರಾಂತ ಉರ್ಸುಲಾಗೆ, ಆ ದಿನ ಮಧ್ಯಾಹ್ನ ಬಂಗಾರದಂಗಡಿಗೆ ಹೋದಾಗ, ಅವಳ ತಾಯಿ ಪುಟ್ಟ ಅವ್ರೇಲಿಯನೋ ಬುಟ್ಟಿಯಲ್ಲಿ ಸಿಕ್ಕಿದ್ದರಿಂದ ಅವನು ಯಾರ ಮಗುವೂ ಅಲ್ಲ ಎಂದು ಹೇಳಿದ್ದು ನೆನಪಾಯಿತು. ಹಾಗಿರುವುದು ಅಸಂಭವ ಎಂದು ಅವರಿಗೆ ತೋರಿದರೂ ಅದನ್ನು ಬದಲಾಯಿಸುವ ಬೇರೆ ಯಾವ ಸತ್ಯ ಸಂಗತಿಯೂ ಅವರಿಗೆ ದೊರೆಯಲಿಲ್ಲ. ಎಲ್ಲ ಸಾಧ್ಯತೆಗಳನ್ನೂ ಪರಿಗಣಿಸಿದ ಮೇಲೆ ಫೆರ್ನಾಂಡ ಅವನ ತಾಯಿ ಅಲ್ಲ ಎನ್ನುವುದು ಅವರಿಗೆ ಖಾತರಿಯಾಗಿತ್ತು. ಅಮರಾಂತ ಉರ್ಸುಲಾಗೆ ಅವನ ಅಪಕೀರ್ತಿಯ ಕತೆಗಳನ್ನು ಕೇಳಿದ್ದ ಪೆತ್ರಾ ಕೊತೆಸ್‌ಳ ಮಗನೆಂದು ಅನುಮಾನ ಬಂದು, ಆ ಸಾಧ್ಯತೆ ಅವಳ ಹೃದಯದಲ್ಲಿ ಹೆದರಿಕೆಯನ್ನು ಹುಟ್ಟಿಸಿತು.
ತಾನು ತನ್ನ ಹೆಂಡತಿಯ ಸೋದರನೆಂದು ಖಚಿತವಾದದ್ದರಿಂದ ಹಿಂಸೆಗೊಳಗಾದ ಅವ್ರೇಲಿಯಾನೋ ಪಾದ್ರಿಯ ಮನೆಯಲ್ಲಿ ಗೆದ್ದಲು ಹಿಡಿದ ಹಳೆಯ ದಾಖಲೆಗಳಲ್ಲಿ ತನ್ನ ತಂದೆಯ ಸುಳಿವಿಗಾಗಿ ಹುಡುಕಾಡಿದ. ಅವನಿಗೆ ಸಿಕ್ಕ ಅತ್ಯಂತ ಹಳೆಯ ಸರ್ಟಿಫಿಕೇಟ್ ಎಂದರೆ ಅಮರಾಂತ ಬ್ಯುಂದಿಯಾ ಕುರಿತು ಅವನು ಹುಡುಗನಾಗಿದ್ದಾಗ ಫಾದರ್ ನಿಕನೋರ್ ರೆಯ್ನಾ ದೇವರ ಅಸ್ತಿತ್ವವನ್ನು ಚಾಕಲೇಟ್ ಟ್ರಕ್ಕುಗಳ ಮೂಲಕ ಪುರಾವೆ ಒದಗಿಸಲು ಮಾಡುತ್ತಿದ್ದ ಕಾಲದ್ದು. ಅವನು ತಾನು ಹದಿನೇಳು ಅವ್ರೇಲಿಯಾನೋರಲ್ಲಿ ಒಬ್ಬನೆಂಬ ಭಾವನೆ, ಅವರು ಹುಟ್ಟಿದ ಸರ್ಟಿಫಿಕೇಟುಗಳ ನಾಲ್ಕು ಸಂಪುಟಗಳನ್ನು ಪರಿಶೀಲಿಸಿದಾಗ ಮೂಡಿತು. ಆದರೆ ಆ ದಿನಾಂಕಗಳು ಅವನ ವಯಸ್ಸಿಗೆ ಬಹಳ ಹಿಂದಿನದಾಗಿದ್ದವು. ಸಂಬಂಧದ ಗೋಜಲಿನಲ್ಲಿ ಸಿಕ್ಕಿಕೊಂಡು, ಅನಿಶ್ಚಿಯತೆಯಿಂದ ವಿಹ್ವಲನಾಗಿದ್ದ ಅವನನ್ನು ಕಂಡು ಸಂಧಿವಾತ ಪೀಡಿತ ಪಾದ್ರಿ ಹಾಸಿಗೆಯಲ್ಲಿ ಮಲಗಿಕೊಂಡೇ ಅವನ ಹೆಸರೇನೆಂದು ಕೇಳಿದ.
ಅವನು, “ಅವ್ರೇಲಿಯಾನೋ ಬ್ಯುಂದಿಯಾ” ಎಂದ.
ಪಾದ್ರಿ ಖಂಡತುಂಡಾಗಿ, “ನೀವೇನು ತಲೆ ಕೆಡಿಸಿಕೊಳ್ಳಬೇಡಿ, ಅನೇಕ ವರ್ಷಗಳ ಹಿಂದೆ ಇಲ್ಲಿ ಆ ಹೆಸರಿನ ಒಂದು ರಸ್ತೆ ಇತ್ತು. ಮತ್ತೆ ಮಕ್ಕಳಿಗೆ ರಸ್ತೆಗಳ ಹೆಸರಿಡೋ ಪದ್ಧತಿ ಕೂಡ ಆಗ ಇತ್ತು”. ಅವ್ರೇಲಿಯಾನೋಗೆ ರೋಷ ಉಕ್ಕಿ ಬಂತು.
ಅವನು, “ಹಾಗಾದ್ರೆ ನೀವು ಅದನ್ನು ನಂಬಲ್ಲ” ಎಂದ.
“ನಂಬೋದು? ಯಾವದನ್ನ?”
ಅವ್ರೇಲಿಯಾನೋ, “ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮೂವತ್ತೆರಡು ಯುದ್ಧ ಮಾಡಿ ಎಲ್ಲದರಲ್ಲೂ ಸೋತ ಅನ್ನೋದನ್ನ. ಅಲ್ದೆ, ಮೂರು ಸಾವಿರ ಜನ ಕೆಲಸಗಾರರನ್ನು ಸಿಪಾಯಿಗಳು ಮೆಷಿನ್ ಗನ್‌ನಿಂದ ಉರುಳಿಸಿ ಅವರ ದೇಹಗಳನ್ನು ಇನ್ನೂರು ಬೋಗಿಗಳಿದ್ದ ಟ್ರೈನಿನಲ್ಲಿ ತೊಗೊಂಡು ಹೋಗಿ ಸಮುದ್ರಕ್ಕೆ ಎಸೆದ್ರು ಅನ್ನೋದನ್ನ” ಎಂದ.
ಪಾದ್ರಿ ಅವನನ್ನು ಅನುಕಂಪದಿಂದ ಅಳೆಯುವ ದೃಷ್ಟಿಯಿಂದ ನೋಡಿದ.
ಅವನು ನಿಟ್ಟುಸಿರು ಬಿಡುತ್ತ, “ಮಗನೇ, ನೀನು ಮತ್ತು ನಾನು ಈ ಕ್ಷಣದಲ್ಲಿ ಬದುಕಿದೀವಿ ಅನ್ನೋದು ಸಾಕು ನಂಗೆ” ಎಂದ.
ಇದರಿಂದ ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾ ಬುಟ್ಟಿಯ ವ್ಯಾಖ್ಯೆಯನ್ನು ನಂಬಿಕೆಯಿಂದಲ್ಲದೆ ಭಯ ನಿವಾರಣೆಯ ಕಾರಣದಿಂದ ಒಪ್ಪಿಕೊಂಡರು. ಅವಳ ಬಸಿರಿನ ದಿನಗಳು ಮುಂದುವರಿದಂತೆ ಅವರಿಬ್ಬರು, ಕೆಳಗುರುಳಿ ಬೀಳಲು ಒಂದೇ ಹೊಡೆತ ಸಾಕೆನ್ನುವುದರಲ್ಲಿದ್ದ ಮನೆಯಲ್ಲಿ, ಏಕಾಂತದಲ್ಲಿ ಬೆಸೆದು ಹೋಗಿದ್ದರು. ಅವರು ತೀರ ಅಗತ್ಯವಾದ ಕಡೆಗಳಿಗೆ, ಪ್ರೇಮದ ಭಂಗಿಗಳು ಕಾಣುತ್ತಿದ್ದ ಫೆರ್ನಾಂಡಳ ಬೆಡ್‌ರೂಮಿಗೆ, ಅಮರಾಂತ ಉರ್ಸುಲಾ ಹುಟ್ಟುವ ಮಗುವಿಗೆ ಕುಲಾವಿಗಳನ್ನು ಹೊಲಿಯುವ ಮತ್ತು ಅವ್ರೇಲಿಯಾನೋ ಕತಲುನಿಯಾದ ಜಾಣನಿಗೆ ಆಗೀಗ ಕಾಗದಗಳನ್ನು ಬರೆಯುತ್ತಿದ್ದ ಸ್ಥಳಕ್ಕೆ ತಮ್ಮ ಓಡಾಟವನ್ನು ಸೀಮಿತಗೊಳಿಸಿ, ಮನೆಯ ಉಳಿದ ಭಾಗವನ್ನು ಹಾಳಾಗಲು ಬಿಟ್ಟು ಬಿಟ್ಟಿದ್ದರು. ಬೆಳ್ಳಿಯ ಅಂಗಡಿ, ಮೆಲ್‌ಕಿಯಾದೆಸ್‌ನ ರೂಮು ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್‌ಳ ಪುರಾತನ ಮತ್ತು ನಿಶ್ಶಬ್ದ ಪ್ರಪಂಚ ಎಲ್ಲೋ ಹುದುಗಿ ಹೋಗಿ, ಯಾರಿಗೂ ಅದನ್ನು ಭೇದಿಸುವ ಧೈರ್ಯವಿರಲಿಲ್ಲ. ಅವರಿಬ್ಬರೂ ಸುತ್ತುವರಿದ ಪ್ರಕೃತಿಯ ಪ್ರಕೋಪದ ನಡುವೆ, ಬೆಗೋನಿಯಾ ಗಿಡಗಳನ್ನು ಬೆಳೆಸಿ, ತಮಗೆ ಬೇಕಾದ ಆವರಣವನ್ನು ಸುಣ್ಣದ ಕಲ್ಲಿನಿಂದ ಗುರುತು ಮಾಡಿಕೊಂಡಿದ್ದರು ಮತ್ತು ಮನುಷ್ಯ ಮತ್ತು ಇರುವೆಯ ನಡುವೆ ಶತಮಾನಗಳಿಂದ ನಡೆಯುತ್ತಿರುವ ಹೋರಾಟದಿಂದಾಗಿ ಕೊನೆಯ ಗುಂಡಿಗಳನ್ನು ತೋಡಿದ್ದರು. ಪಂಜರದಲ್ಲಿ ಅದೃಷ್ಟಹೀನ ಕನೇರಿ ಪಕ್ಷಿಗಳು ಮತ್ತು ಸೆರೆಯಲ್ಲಿ ಇದ್ದ ಹಾಗಿದ್ದ ಗಂಡನ ಜೊತೆ ಬಂದಾಗ, ಹರೆಯದ ಮೂರ್ತಿಯಾಗಿದ್ದ ಅಮರಾಂತ ಉರ್ಸುಲಾಳನ್ನು, ನಿರ್ಲಕ್ಷಿತ ಉದ್ದನೆಯ ಕೂದಲು, ಮುಖದಲ್ಲಿ ಉಂಟಾಗುತ್ತಿದ್ದ ಕಲೆಗಳು, ಉಬ್ಬುತ್ತಿದ್ದ ಕಾಲುಗಳು, ಪ್ರಣಯಕ್ಕಿಳಿದಾಗ ಹಿಂಜುತ್ತಿದ್ದ ದೇಹದ ಪರಿವರ್ತನೆಗಳು ಬದಲು ಮಾಡಿದ್ದವು. ಆದರೆ ಅವಳೊಳಗಿನ ಭಾವ ತೀವ್ರತೆಯನ್ನು ಕಡಿಮೆ ಮಾಡಿರಲಿಲ್ಲ. ಅವಳು ವಿಚಿತ್ರವಾಗಿ ನಗುತ್ತ, “ಈ ಥರ ದರಿದ್ರರಂತೆ ಬಾಳ್ತೀವಿ ಅಂತ ಯಾರು ಕನಸು ಕಂಡಿದ್ರು!” ಎಂದಳು. ಅವಳು ಆರು ತಿಂಗಳ ಬಸುರಿಯಾಗಿದ್ದಾಗ ಬಂದ ಕಾಗದದಿಂದ ಹೊರ ಪ್ರಪಂಚದೊಡನೆ ಇದ್ದ ಕೊನೆ ಎಳೆ ಕಳಚಿ ಬಿತ್ತು. ಸಹಜವಾಗಿಯೇ ಅದು ಕತಲುನಿಯಾದ ಜಾಣನದಾಗಿರಲಿಲ್ಲ. ಅದನ್ನು ಬಾರ್ಸಿಲೋನಿಯಾದಿಂದ ಅಂಚೆಗೆ ಹಾಕಲಾಗಿತ್ತು. ಆದರೆ ಕವರಿನ ಮೇಲೆ ನೀಲಿ ಇಂಕ್‌ನಲ್ಲಿ ಅಧಿಕಾರಿಯೊಬ್ಬ ಬರೆದ ವಿಳಾಸವಿತ್ತು ಮತ್ತು ಅದು ಬೆದರಿಸುವ ರೀತಿಯಲ್ಲಿ ಕಾಣುತ್ತಿತ್ತು. ಅವ್ರೇಲಿಯಾನೋ ಇನ್ನೇನು ಅದನ್ನು ಒಡೆಯುತ್ತಿದ್ದ ಅಮರಾಂತ ಉರ್ಸುಲಾಳ ಕೈಯಿಂದ ಕಿತ್ತುಕೊಂಡ.
ಅವನು, “ಬೇq, ಬೇಡ . . ಇದರಲ್ಲಿ ಏನಿದೆ ಅಂತ ನಂಗೆ ಗೊತ್ತಾಗೋದು ಬೇಡ” ಎಂದ.
ಅವನು ಊಹಿಸಿದಂತೆ ಕತುಲೂನಿಯಾದ ಜಾಣ ಮತ್ತೆ ಕಾಗದ ಬರೆಯಲಿಲ್ಲ. ಯಾರೂ ಓದದ ಆ ಅಪರಿಚಿತನ ಕಾಗದ ಅಲ್ಫ್‌ನ ಗೆದ್ದಲು ಹುಳುಗಳಿಗಾಗಿ, ಹಿಂದೆ ಫೆರ್ನಾಂಡ ಮದುವೆಯ ಉಂಗುರವನ್ನು ಮರೆತು ಬಿಟ್ಟಿದ್ದ ಸ್ಥಳದಲ್ಲಿ ಇಟ್ಟು ಬಿಟ್ಟರು. ಕೊನೆಯ ಹಂತದ ಅಲೆಗಳ ವಿರುದ್ಧ ಏಕಾಂತ ಪ್ರೇಮಿಗಳು ತೇಲುತ್ತಿದ್ದರೆ, ಕೆಟ್ಟ ಸುದ್ದಿಯಿಂದ ತನ್ನದೇ ಉರಿಯಲ್ಲಿ ನಿರ್ನಾಮವಾಗಲು ಅದು ಅಲ್ಲಿಯೇ ಇತ್ತು. ಅವರ ಪಶ್ಚಾತ್ತಾಪವಿಲ್ಲದ ಮತ್ತು ದುರದೃಷ್ಟದ ಆ ಸಮಯ ನಿರ್ಮೋಹದ ಮತ್ತು ವಿಪತ್ತಿನ ಮರಳುಗಾಡಿಗೆ ಸೆಳೆದುಹೋಗುವುದರಲ್ಲಿ ಕಳೆದುಹೋಯಿತು. ಆ ವಿನಾಶದ ಅರಿವಾಗಿ ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾ ಉಸಿರು ಬಿಗಿ ಹಿಡಿದುಕೊಂಡು, ವ್ಯಭಿಚಾರದ ಹುಚ್ಚಿನಲ್ಲಿ ಕಣ್ಬಿಡುವ ಮಗುವಿನ ಬಗ್ಗೆ ಅಪಾರ ಪ್ರೇಮದಲ್ಲಿ ಕಳೆದರು. ರಾತ್ರಿಯ ಸಮಯದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಹಿಡಿದುಕೊಂಡು ಕುಳಿತ ಅವರು, ಹೆಚ್ಚುತ್ತಿರುವ ಇರುವೆಗಳಿಂದ ಅಥವಾ ಹೆಗ್ಗಣಗಳ ಸದ್ದಿನಿಂದ ಅಥವಾ ಪಕ್ಕದ ರೂಮುಗಳಲ್ಲಿ ಶಿಳ್ಳೆ ಹೊಡೆಯುತ್ತ ಬೆಳೆಯುತ್ತಿದ್ದ ಕಳೆಗಳಿಂದ ಹೆದರುತ್ತಿರಲಿಲ್ಲ. ಅನೇಕ ಸಲ ಸತ್ತವರ ಓಡಾಟದಿಂದ ಎಚ್ಚರಗೊಳ್ಳುತ್ತಿದ್ದರು. ಅವರಿಗೆ ಉರ್ಸುಲಾ ನಿಗದಿತ ಪರಿಧಿಯಲ್ಲೇ ನಿರ್ವಹಿಸಬೇಕಾದ ಸೃಷ್ಟಿಯ ಕಟ್ಟಲೆಗಳ ವಿರುದ್ಧ ಹೋರಾಡುವುದು ಕೇಳಿಸುತ್ತಿತ್ತು ಮತ್ತು ಹೊಸೆ ಅರ್ಕಾದಿಯೋ ಬ್ಯುಂದಿಯಾ ಆವಿಷ್ಕಾರಗಳ ಮಿಥ್ಯೆಯ ಸತ್ಯವನ್ನು ಹುಡುಕುವುದು, ಫೆರ್ನಾಂಡ ಪ್ರಾರ್ಥಿಸುವುದು, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯುದ್ಧದ ಮೋಸದಿಂದ ಮತ್ತು ಸಣ್ಣ ಬಂಗಾರದ ಮೀನುಗಳಿಂದ ಪೆಚ್ಚಾಗುವುದು, ಅವ್ರೇಲಿಯಾನೋ ಸೆಗುಂದೋ ವ್ಯಭಿಚಾರದ ಬೇಗೆಯಲ್ಲಿ ಸಾಯುವ ಏಕಾಂತದಲ್ಲಿರುವುದು ಹಾಗೂ ಅನಂತರ, ಮೀರಿದ ವ್ಯಾಮೋಹ ಸಾವನ್ನು ಮೀರಿಸುತ್ತದೆ, ಎನ್ನುವುದನ್ನು ಅರಿತರು. ಅಲ್ಲದೆ ಇತರೆ ಭವಿಷ್ಯದ ಪ್ರಾಣಿಗಳ ಸಂತತಿಗಳು, ಮನುಷ್ಯನಿಂದ ಯಾತನೆಯ ಸ್ವರ್ಗವನ್ನು ಕೊಳ್ಳೆ ಹೊಡೆಯುವ ಜಂತುಗಳಿಂದ ಕದಿಯುವ ತನಕ, ತಾವು ಭೂತಗಳ ಹಾಗೆ ಪ್ರೇಮಿಸುತ್ತಿರಬಹುದೆಂಬ ನೆಚ್ಚಿಕೆಯಿಂದ ಸಂತೋಷವಾಗಿದ್ದರು.
ಒಂದು ಭಾನುವಾರ ಸಂಜೆ ಆರು ಗಂಟೆಗೆ ಅಮರಾಂತ ಉರ್ಸುಲಾಗೆ ಹೆರಿಗೆಯ ನೋವು ಪ್ರಾರಂಭವಾಯಿತು. ಹಸಿವೆಗಾಗಿ ಮಲಗುತ್ತಿದ್ದ ಎಳೆಯ ಹುಡುಗಿಯರ ನಗುಮುಖದ ಒಡತಿ ಅವಳನ್ನು ಡೈನಿಂಗ್ ಟೇಬಲ್‌ಗೆ ಕೊಂಡೊಯ್ದಳು. ಅಲ್ಲಿ ಅವಳ ಹೊಟ್ಟೆಯನ್ನು ಹಿಚುಕಿ, ಸರಿಯಾಗಿ ನೋಡಿಕೊಳ್ಳದೆ ಕೊನೆಗೆ ಅವಳ ಕೂಗುಗಳು ಗಂಡು ಮಗುವಿನ ಅಳುವಿನಲ್ಲಿ ಮುಳುಗಿಹೋಯಿತು. ಕಣ್ಣೀರಿನ ಮೂಲಕವೇ ಅಮರಾಂತ ಉರ್ಸುಲಾ ಭಾರೀ ಬ್ಯುಂದಿಯಾರಲ್ಲಿ ಒಬ್ಬನಾದ, ಹೊಸೆ ಅರ್ಕಾದಿಯೋನ ಹಾಗೆ ಶಕ್ತಿವಂತನಾದ, ಅವ್ರೇಲಿಯಾನೋಗಳಂತೆ ಅತೀಂದ್ರಿಯ ದೃಷ್ಟಿಯುಳ್ಳವನಾದ ಮತ್ತು ಆ ಜನಾಂಗವನ್ನು ಮತ್ತೆ ಪ್ರಾರಂಭದಿಂದ ಶುರುಮಾಡಿ, ಅದರ ಕೆಟ್ಟ ಗುಣಗಳನ್ನು ತೊಡೆದು ಹಾಕುವ ಒಂಟಿ ಧ್ವನಿಯುಳ್ಳವನನ್ನು ನೋಡಿದಳು. ಏಕೆಂದರೆ ಇಡೀ ಶತಮಾನದಲ್ಲಿ ಪ್ರೇಮದ ಪೂರೈಕೆಯನ್ನು ಅವನೊಬ್ಬ ಮಾತ್ರ ಪಡೆದಿದ್ದ.
ಅವಳು, “ಅವನೊಬ್ಬ ಧಾಂಡಿಗ, ಅವನ್ಗೆ ರೋಡ್ರಿಗೋ ಅಂತ ಹೆಸರಿಡೋಣ” ಎಂದಳು.
ಅವಳ ಗಂಡ, “ಬೇಡ, ಅವನನ್ನ ಅವ್ರೇಲಿಯಾನೋ ಅನ್ನೋಣ. ಅವ್ನು ಮೂವತ್ತೆರಡು ಯುದ್ಧಗಳನ್ನು ಗೆಲ್ತಾನೆ” ಎಂದ.
ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ ನಂತರ ಅವ್ರೇಲಿಯಾನೋ ದೀಪ ಹಿಡಿದಾಗ ಸೂಲಗಿತ್ತಿ ಮಗುವಿಗೆ ಮೆತ್ತಿದ್ದ ನೀಲಿ ಲೋಳೆಯನ್ನು ಬಟ್ಟೆಯಿಂದ ಒರೆಸಿದಳು. ಅದನ್ನು ಹೊಟ್ಟೆಯ ಮೇಲೆ ಮಲಗಿಸಿದಾಗ ಮಾತ್ರ ಉಳಿದ ಗಂಡು ಮಕ್ಕಳಿಗೆ ಇರುವುದಕ್ಕಿಂತ ಹೆಚ್ಚಿನದಿದೆ ಎಂದು ಅವರಿಗೆ ಕಂಡು ಬಂದು ಬಾಗಿ ನೋಡಿದರು. ಅದು ಹಂದಿಯ ಬಾಲದಂತಿತ್ತು.
ಅವರಿಗೆ ಗಾಬರಿಯಾಗಲಿಲ್ಲ. ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾಗೆ ಮನೆತನದ ಹಿನ್ನೆಲೆ ಗೊತ್ತಿರಲಿಲ್ಲ. ಅಲ್ಲದೆ ಅವರಿಗೆ ಉರ್ಸುಲಾಳ ಹೆದರಿಕೆಯ ಬುದ್ಧಿವಾದಗಳು ನೆನಪಿರಲಿಲ್ಲ. ಸೂಲಗಿತ್ತಿ ಅವರಿಗೆ ಅದನ್ನು ಮಗುವಿಗೆ ಎರಡನೇ ಹಲ್ಲು ಬಂದಾಗ ಕತ್ತರಿಸಿ ಹಾಕಬಹುದು ಎಂದು ಸಮಾಧಾನಪಡಿಸಿದಳು. ಅನಂತರ ಅವರಿಗೆ ಮತ್ತೆ ಅದರ ಬಗ್ಗೆ ಯೋಚಿಸಲು ಸಮಯವಿರಲಿಲ್ಲ. ಏಕೆಂದರೆ ಅಮರಾಂತ ಉರ್ಸುಲಾಗೆ ತಡೆಯಲು ಸಾಧ್ಯವಿಲ್ಲದಷ್ಟು ರಕ್ತಸ್ರಾವವಾಗುತ್ತಿತ್ತು. ಅದನ್ನು ಬೂದಿಯುಂಡೆಗಳಿಂದ ತಡೆಯಲು ಪ್ರಯತ್ನಿಸಿದರು. ಆದರೆ ಅದು ಚಿಲುಮೆಯೊಂದನ್ನು ಕೈಯಿಂದ ಮುಚ್ಚಿ ನಿಲ್ಲಿಸಲು ಪ್ರಯತ್ನಿಸಿದಂತಾಯಿತು. ಪ್ರಾರಂಭದ ಗಂಟೆಗಳಲ್ಲಿ ಅವಳು ತನ್ನ ಹಾಸ್ಯ ಪ್ರವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಳು. ಅವಳು ಹೆದರಿದ ಅವ್ರೇಲಿಯಾನೋನನ್ನು ಯೋಚಿಸಬಾರದೆಂದು ಕೈ ಹಿಡಿದು ಕೇಳಿದಳು. ಏಕೆಂದರೆ ಅವಳಂಥ ಜನರು ಅವರ ಇಚ್ಛೆಗೆ ವಿರುದ್ಧವಾಗಿ ಸಾಯುವುದಿಲ್ಲವೆಂದು ಹೇಳಿದಳು. ಅವಳು ಸೂಲಗಿತ್ತಿಯ ಅತಿರೇಕದಿಂದ ಔಷಧೋಪಚಾರದಿಂದ ಮನಸಾರೆ ನಕ್ಕಳು. ಆದರೆ ಅವ್ರೇಲಿಯಾನೋನ ಆಸೆ ಕರಗುತ್ತಿದ್ದಂತೆ, ಅವಳ ಮೇಲಿನ ಬೆಳಕು ನಶಿಸುತ್ತಿದೆಯೋ ಎನ್ನುವಂತೆ, ತೂಕಡಿಕೆಯಲ್ಲಿ ಮುಳುಗಿದಳು. ಸೋಮವಾರ ಬೆಳಿಗ್ಗೆ ಅವಳ ಹಾಸಿಗೆಯ ಪಕ್ಕದವರಿಗೂ ಕೇಳಿಸದಂತೆ ಪ್ರಾರ್ಥಿಸಿ ಚುಟಿಕೆ ಹಾಕುವ ಹೆಂಗಸೊಬ್ಬಳನ್ನು ಕರೆತಂದರು. ಆದರೆ ಯಾವುದೇ ರೀತಿಯ ಪ್ರೇಮವಿರದ ರೀತಿಗೆ ಅವಳ ರಕ್ತ ಪ್ರತಿಕ್ರಿಯಿಸುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ, ಇಪ್ಪತ್ನಾಲ್ಕು ಗಂಟೆಗಳ ಹತಾಶೆಯ ನಂತರ ಅವಳು ಸತ್ತುಹೋಗಿದ್ದಾಳೆಂದು ಅವರಿಗೆ ತಿಳಿಯಿತು. ಏಕೆಂದರೆ ಶುಶ್ರೂಷೆಯಿಲ್ಲದೆ ಸೋರುವುದು ನಿಂತಿತ್ತು. ಅವಳು ಸೆಟೆದುಕೊಳ್ಳುತ್ತಿದ್ದಂತೆ ಮುಖದ ಮೇಲಿನ ಬೊಬ್ಬೆಗಳು ಇಂಗಿಹೋದದ್ದಲ್ಲದೆ ನಸು ನಗುವಿತ್ತು.
ಅಲ್ಲಿಯ ತನಕ ಅವ್ರೇಲಿಯಾನೋಗೆ ತನ್ನ ಸ್ನೇಹಿತರನ್ನು ಎಷ್ಟು ಪ್ರೀತಿಸುತ್ತೇನೆಂದು, ಎಷ್ಟು ಕಳೆದು ಕೊಂಡಿದ್ದೇನೆಂದು ಮತ್ತು ಅವರ ಜೊತೆ ಆ ಕ್ಷಣದಲ್ಲಿ ಇರುವುದಕ್ಕಾಗಿ ಎಷ್ಟೆಲ್ಲ ಕೊಡಲು ಸಿದ್ಧವಾಗಿರುವುದು ತಿಳಿದಿರಲಿಲ್ಲ. ಅವರ ತಾಯಿ ಸಿದ್ಧಪಡಿಸಿದ್ದ ಬುಟ್ಟಿಯಲ್ಲಿ ಮಗುವನ್ನಿಟ್ಟು, ಹೆಣದ ಮುಖವನ್ನು ಹೊದಿಕೆಯಿಂದ ಮುಚ್ಚಿದ. ಅನಂತರ ಊರಿನಲ್ಲೆಲ್ಲ ಗುರಿಯಿರದೆ, ಹಿಂದಿನವರನ್ನು ಹುಡುಕುತ್ತ ಓಡಾಡಿದ. ಅವನು ಇತ್ತೀಚೆಗೆ ಹೋಗಿದ್ದ ಔಷಧಿ ಅಂಗಡಿಯ ಬಾಗಿಲು ಬಡಿದಾಗ ಅದು ಬಡಗಿಯವನದಾಗಿತ್ತು. ಕೈಯಲ್ಲೊಂದು ದೀಪ ಹಿಡಿದುಕೊಂಡು ಬಂದ ವಯಸ್ಸಾದ ಹೆಂಗಸೊಬ್ಬಳು ಅವನ ಭ್ರಮೆಗಾಗಿ ಮರುಕಗೊಂಡು, ಅಲ್ಲಿ ಎಂದೂ ಔಷಧಿಯಂಗಡಿ ಇರಲಿಲ್ಲವಷ್ಟೇ ಅಲ್ಲದೆ ನೀಳ ಕತ್ತಿನ, ನಿದ್ದೆಗಣ್ಣಿನ ಮರ್ಸಿದೆಸ್ ಎಂಬುವಳನ್ನು ನೋಡಿಯೇ ಇಲ್ಲವೆಂದು ಹೇಳಿದಳು. ಅವನು ಕತಲುನಿಯಾದ ಜಾಣನ ಪುಸ್ತಕದಂಗಡಿಯ ಬಾಗಿಲಿಗೆ ಹಣೆ ಇಟ್ಟು ಅತ್ತ. ಹೀಗೆ ಮಾಡುವಾಗ ಅವನಿಗೆ ಅಂಥ ಸಮಯದಲ್ಲಿ ಪ್ರೇಮದ ಭಾವಕ್ಕೆ ಕುಂದು ಬರದ ಹಾಗೆ ಸಾವಿಗಾಗಿ, ಕೆಟ್ಟದಾಗಿ ಬಿಕ್ಕುವುದನ್ನು ನಿರಾಕರಿಸುತ್ತೇನೆ ಎಂದುಕೊಂಡಿದ್ದರ ಅರಿವಿತ್ತು. ಅವನು ಪಿಲರ್ ಟೆರ್‍ನೆರಾಳನ್ನು ಕೂಗುತ್ತ ‘ಬಂಗಾರದ ಮಗು\’ವಿನ ಸಿಮೆಂಟು ಗೋಡೆಗೆ ತಲೆ ಚಚ್ಚಿಕೊಳ್ಳುತ್ತ, ಆಕಾಶದಲ್ಲಿ ಬೆಳಗುವ ಕಿತ್ತಲೆ ಗೋಳಗಳು ಹಾದು ಹೋಗುವುದನ್ನು, ತಾನು ರಜಾ ದಿನದ ರಾತ್ರಿಗಳಲ್ಲಿ ಹುಡುಗತನದ ಹುಮ್ಮಸ್ಸಿನಲ್ಲಿ ನಡುಮನೆಯಿಂದ ಕ್ರೌಂಚ್ ಪಕ್ಷಿಗಳೆಂದು ಭಾವಿಸಿದ್ದನ್ನು ಗಮನಿಸಲಿಲ್ಲ. ಹಾಳು ಬಿದ್ದ ಕೆಂಪು ದೀಪದ ಪ್ರದೇಶದಲ್ಲಿ ತೆರೆದಿದ್ದ ಕೊನೆಯ ದೊಡ್ಡ ಹಜಾರದಲ್ಲಿ ಗುಂಪೊಂದು ಬಿಷಪ್‌ನ ಸಂಬಂಧಿಯಾದ, ಮಹಾಪುರುಷ ಫ್ರಾನ್ಸಿಸ್ಕೋನ ರಹಸ್ಯಗಳ ವಾರಸುದಾರನಾದ, ರಫೆಲ್ ಎಸ್ಕಲೋನಾನ ಹಾಡುಗಳನ್ನು ಅಕಾರ್ಡಿಯನ್‌ನಲ್ಲಿ ನುಡಿಸುತ್ತಿದ್ದರು. ತನ್ನ ತಾಯಿಯ ಮೇಲೆ ಕೈ ಎತ್ತಿದ್ದರಿಂದ ಮುದುಡಿಹೋಗಿದ್ದ ಕೈಯಿನ ಮದ್ಯ ಹಂಚುವ ಹುಡುಗ, ಅವ್ರೇಲಿಯಾನನ್ನು ಜಲ್ಲೆಯ ಮದ್ಯ ಕುಡಿಯಲು ಕರೆದ. ಅವ್ರೇಲಿಯಾನೋ ಅದರಲ್ಲಿ ಒಂದನ್ನು ಕೊಂಡುಕೊಂಡ. ಆ ಹುಡುಗ ತನ್ನ ಕೈಗೆ ಉಂಟಾದ ದುರವಸ್ಥೆಯನ್ನು ಹೇಳಿದ. ಅವ್ರೇಲಿಯಾನೋ ತನ್ನ ಸೋದರಿಯ ವಿರುದ್ಧ ವರ್ತಿಸಿದ್ದಕ್ಕಾಗಿ ಸೊರಗಿ, ತನ್ನ ಹೃದಯಕ್ಕೆ ಉಂಟಾದ ದುರವಸ್ಥೆಯನ್ನು ಹೇಳಿದ. ಕೊನೆಗೆ ಅವರಿಬ್ಬರು ಅಳುತ್ತ ಕುಳಿತರು ಮತ್ತು ಅವ್ರೇಲಿಯಾನೋಗೆ ಒಂದು ಕ್ಷಣ ನೋವು ಇಂಗಿದಂತಾಯಿತು. ಆದರೆ ಅವನು ಮಕೋಂದೋದ ಕೊನೆಯ ಬೆಳಿಗ್ಗೆ ಒಬ್ಬನೇ ಇದ್ದಾಗ, ಚೌಕದ ಮಧ್ಯದಲ್ಲಿ ಕೈಗಳನ್ನು ಅಗಲಿಸಿ, ಇಡೀ ಪ್ರಪಂಚವನ್ನು ಎಬ್ಬಿಸಲು ತಯಾರಾಗಿ, ಎತ್ತರದ ಧ್ವನಿಯಲ್ಲಿ ಕೂಗಿದ.
“ಸ್ನೇಹಿತರೆಲ್ಲ ಹಾದರಕ್ಕೆ ಹುಟ್ಟಿದೋರು!”
ನಿಗ್ರೊಮಾಂತ ವಾಂತಿ ಮತ್ತು ಕಣ್ಣೀರಿನಲ್ಲಿ ಮುಳುಗಿದ್ದ ಅವನನ್ನು ಕಾಪಾಡಿದಳು. ಅವನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ, ತೊಳೆದು, ಒಂದು ಕಪ್ ಮಾಂಸದ ಸಾರು ಕುಡಿಯುವಂತೆ ಮಾಡಿದಳು. ಅವನು ಅದರಿಂದ ಸಮಾಧಾನಗೊಳ್ಳುತ್ತಾನೆಂದು ತಿಳಿದು ಒಂದು ತುಂಡು ಇದ್ದಿಲನ್ನು ತೆಗೆದುಕೊಂಡು, ಲೆಕ್ಕವಿಲ್ಲದಷ್ಟು ಸಲ ಪ್ರೇಮಿಸಿದಕ್ಕಾಗಿ ಇನ್ನೂ ಕೊಡಬೇಕಾಗಿದ್ದ ಬಾಕಿಯನ್ನು ಅಳಿಸಿ ಹಾಕಿದಳು. ಅವಳು ಅವನನ್ನು ಅಳುತ್ತ ಒಬ್ಬನೇ ಇರುವುದಕ್ಕೆ ಬಿಡದೆ ತನ್ನ ದುಃಖಗಳನ್ನೂ ಹೇಳಿಕೊಂಡಳು. ಅವನು ಸ್ವಲ್ಪ ನಿದ್ದೆ ಮಾಡಿ ಎಚ್ಚರವಾದಾಗ ಅವ್ರೇಲಿಯಾನೋಗೆ ತಲೆ ನೋಯುತ್ತಿರುವುದು ತಿಳಿಯಿತು. ಅವನು ಕಣ್ಣು ಬಿಟ್ಟು ಮಗುವನ್ನು ನೆನಪಿಸಿಕೊಂಡ.
ಅವನಿಗೆ ಬುಟ್ಟಿ ಸಿಗಲಿಲ್ಲ. ಸತ್ತ ಅಮರಾಂತ ಉರ್ಸುಲಾ ಮಗುವನ್ನು ನೋಡಿಕೊಳ್ಳುವುದಕ್ಕಾಗಿ ಎದ್ದಿರಬಹುದೆಂದು ಅವನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಆದರೆ ಅವಳ ದೇಹ ಕಲ್ಲಿನಂತೆ ಹೊದಿಕೆಯ ಕೆಳಗಿತ್ತು. ತಾನು ಬಂದಾಗ ಬೆಡ್‌ರೂಮಿನ ಬಾಗಿಲು ತೆರೆದಿತ್ತು ಎಂದು ಅರಿವಿದ್ದ ಅವ್ರೇಲಿಯಾನೋ ಒರೆಗನೋ ಗಿಡಗಳ ನಿಟ್ಟುಸಿರಿಂದ ತುಂಬಿ ಹೋಗಿದ್ದ ಅಂಗಳವನ್ನು ದಾಟಿ, ಡೈನಿಂಗ್ ರೂಮಿನ ಕಡೆ ನೋಡಿದ. ಅಲ್ಲಿ ಹೆರಿಗೆಯ ಸಮಯದ ವಸ್ತುಗಳು ಇನ್ನೂ ಇದ್ದವು; ದೊಡ್ಡ ಪಾತ್ರೆ, ರಕ್ತದ ಕಲೆಗಳ ಬಟ್ಟೆಗಳು, ಬೂದಿ ತುಂಬಿದ್ದ ಪಾತ್ರೆಗಳು ಮತ್ತು ಸುರುಟಿ ಹೋಗಿದ್ದ ಹೊಕ್ಕುಳ ಬಳ್ಳಿ, ಟೇಬಲ್ ಮೇಲೆ ಕತ್ತರಿ ಮತ್ತು ಇತರ ಸಲಕರಣೆ ಪಕ್ಕದಲ್ಲಿತ್ತು. ಸೂಲಗಿತ್ತಿ ಮಗುವನ್ನು ನೋಡಲು ರಾತ್ರಿ ಬಂದಿದ್ದಳು ಎನ್ನುವ ಸಂಗತಿ ಅವನಿಗೆ ಯೋಚಿಸುವುದಕ್ಕೆ ಕೊಂಚ ಅವಕಾಶ ಕೊಟ್ಟಿತು. ಅವನು ತುಯ್ದಾಡುವ ಕುರ್ಚಿಯಲ್ಲಿ ರಬೇಕಾ ಕಸೂತಿ ಪಾಠ ಹೇಳಿ ಕೊಡುವಾಗ ಕುಳಿತುಕೊಳ್ಳುತ್ತಿದ್ದ ಹಾಗೆ, ಅಮರಾಂತ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಜೊತೆ ಚೀನೀಯರದೊಂದು ಆಟವಾಡುವಾಗ ಕುಳಿತುಕೊಳ್ಳುತ್ತಿದ್ದ ಹಾಗೆ ಮತ್ತು ಅಮರಾಂತ ಉರ್ಸುಲಾ ಮಗುವಿಗೆ ಕುಲಾವಿ ಹೊಲಿಯಲು ಕುಳಿತುಕೊಳ್ಳುತ್ತಿದ್ದ ಹಾಗೆ ಕುಳಿತ. ಆಗ ಅವನಿಗೆ ತನ್ನೊಳಗೆ ಆ ಎಲ್ಲ ಭೂತಕಾಲದ ಭಾರವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ ಎನ್ನುವುದು ಅರಿವಿಗೆ ಬಂತು. ಮಾರಣಾಂತಿಕವಾದ ತನ್ನ ಮತ್ತು ಇತರರ ಮನೋವ್ಯಥೆಯಿಂದ ಘಾಸಿಗೊಂಡು ಅವನು, ಗುಲಾಬಿ ಪೊದೆಗಳ ಮೇಲೆ ಪಟ್ಟು ಹಿಡಿದು ಹಬ್ಬುವ ಜೇಡರ ಬಲೆಗಳನ್ನು, ಸತತ ಪ್ರಯತ್ನದಿಂದ ಹಬ್ಬುವ ಹುಲ್ಲನ್ನು, ಫೆಬ್ರವರಿ ಬೆಳಗಿನ ತಾಳ್ಮೆಯ ಗಾಳಿಯನ್ನು ಮೆಚ್ಚಿಕೊಂಡ. ಅನಂತರ ಅವನು ಮಗುವನ್ನು ನೋಡಿದ. ಅದು ಒಣಗಿದ ಹಾಗೂ ಉಬ್ಬಿದ ಚರ್ಮದ ಚೀಲವಾಗಿದ್ದು, ಅದನ್ನು ಪ್ರಪಂಚದೆಲ್ಲ ಇರುವೆಗಳು ಸೇರಿ ಬಿರುಕಿನ ಕಡೆಗೆ, ಕೈತೋಟದ ಕಲ್ಲು ಹಾಸಿನ ಮೇಲೆ ಎಳೆದುಕೊಂಡು ಹೋಗುತ್ತಿದ್ದವು. ಅವ್ರೇಲಿಯಾನೋಗೆ ಚಲಿಸಲಾಗಲಿಲ್ಲ. ಅದು ಅವನು ಆ ಭೀಕರತೆಯಿಂದ ಮರಗಟ್ಟಿದ ಕಾರಣದಿಂದಲ್ಲ ಆದರೆ ಆ ಅದ್ಭುತ ಕ್ಷಣದಲ್ಲಿ ಮೆಲ್‌ಕಿಯಾದೆಸ್‌ನ ಕೊನೆಯ ಸೂತ್ರಗಳು ಬಗೆ ತೆರೆದು ತೋರಿದವು. ಅವನು ಚರ್ಮದ ಹಾಳೆಯ ಮೇಲಿನ ಬರಹಗಳು ಮನುಷ್ಯನ ಕಾಲ ಮತ್ತು ಅವಕಾಶದ ಕ್ರಮದಲ್ಲಿ ನಮೂದಿಸಿದ್ದನ್ನು ಕಂಡ : ಮೊದಲನೆಯವನನ್ನು ಮರಕ್ಕೆ ಕಟ್ಟಿ ಹಾಕಿದೆ ಮತ್ತು ಕೊನೆಯವನನ್ನು ಇರುವೆಗಳು ತಿನ್ನುತ್ತಿವೆ.
ಅವ್ರೇಲಿಯಾನೋ ಸತ್ತವರನ್ನು ಮತ್ತು ಸತ್ತವರ ನೋವನ್ನು ಮರೆತಾಗ ಇದ್ದದ್ದಕ್ಕಿಂತ, ತನ್ನ ಇಡೀ ಜೀವನದಲ್ಲಿ ಎಂದೂ ಇಷ್ಟು ಸ್ತಿಮಿತವಾಗಿರಲಿಲ್ಲ. ಅವನು ಪ್ರಪಂಚದ ಯಾವ ಆಕರ್ಷಣೆಯೂ ಬೇಡವೆಂದು ಬಾಗಿಲು ಕಿಟಕಿಗಳಿಗೆ ಫೆರ್ನಾಂಡಳ ಬಳಿ ಇದ್ದ ಅಡ್ಡಪಟ್ಟಿಗಳನ್ನಿಟ್ಟು ಮೊಳೆ ಹೊಡೆದ. ಏಕೆಂದರೆ ತನ್ನ ವಿಧಿಯನ್ನು ಮೆಲ್‌ಕಿಯಾದೆಸ್ ಚರ್ಮದ ಹಾಳೆಯ ಬರಹಗಳಲ್ಲಿ ಬರೆದಿದ್ದಾನೆಂದು ಅವನಿಗೆ ಗೊತ್ತಿತ್ತು. ಅವನು ಮನುಷ್ಯರಿದ್ದ ಎಲ್ಲ ಗುರುತುಗಳನ್ನು ಕಿತ್ತೊಗೆದಿದ್ದ ಆ ರೂಮಿನಲ್ಲಿ ಇತಿಹಾಸಪೂರ್ವ ಗಿಡಗಳ ಹಬೆಗುಡುವ ಕೊಚ್ಚೆಯ ಮತ್ತು ಮಿನುಗುವ ಹುಳುಗಳ ಮಧ್ಯೆ, ಚರ್ಮದ ಹಾಳೆಗಳನ್ನು ಕಂಡ. ಅವನಿಗೆ ಅವನ್ನೆಲ್ಲ ಹೊರಬೆಳಕಿಗೆ ತೆಗೆದುಕೊಂಡು ಹೋಗಬೇಕೆಂಬ ಶಾಂತ ಮನ:ಸ್ಥಿತಿ ಇರಲಿಲ್ಲ. ಆದರೆ ಅವನು ಅಲ್ಲಿ ನಿಂತುಕೊಂಡೇ, ಏನೂ ಕಷ್ಟವಿಲ್ಲದೆ, ಅವೆಲ್ಲ ಸ್ಪ್ಯಾನಿಷ್‌ನಲ್ಲಿ ಬರೆದಿದೆ ಎನ್ನುವಂತೆ ಮತ್ತು ಮಧ್ಯಾಹ್ನದ ಮಿರುಗುವ ಬೆಳಕಲ್ಲಿ ಗಟ್ಟಿಯಾಗಿ ಓದುತ್ತಿರುವಂತೆ, ಅವನು ಅವುಗಳನ್ನು ಅರ್ಥೈಸಲು ಪ್ರಾರಂಭಿಸಿದ. ಅದು ಮೆಲ್‌ಕ್ವಿಯದೆಸ್ ಬರೆದ, ಅತ್ಯಂತ ಕನಿಷ್ಠದ ವಿವರಗಳನ್ನು ಒಳಗೊಂಡ, ಒಂದು ಶತಮಾನ ಮುಂದಿನ ಕಾಲದ, ಒಂದು ಮನೆತನದ ಚರಿತ್ರೆಯಾಗಿತ್ತು. ಅವನು ಅದನ್ನು ಅವನ ಮಾತೃಭಾಷೆಯಾದ ಸಂಸ್ಕೃತದಲ್ಲಿ ಬರೆದಿದ್ದ. ಅವನು ಸರಿಸಾಲುಗಳಲ್ಲಿದ್ದ ಅಗಸ್ಟಸ್ ರಾಜನ ಖಾಸಗಿ ಸಂಕೇತಗಳನ್ನು ಹಾಗೂ ಬೆಸಸಾಲುಗಳಲ್ಲಿದ್ದ ಲೆಸಿಡಮೋನಿಯಾದ ಮಿಲಿಟರಿ ಸಂಕೇತಗಳನ್ನು ಅರ್ಥೈಸಿದ್ದ. ಅವ್ರೇಲಿಯಾನೋ ಅಮರಾಂತ ಉರ್ಸುಲಾಳ ಪ್ರೇಮವನ್ನು ಕುರಿತ ಭಾಗವನ್ನು ಓದಿ ಗೊಂದಲಕ್ಕೆ ಸಿಲುಕಿದಾಗ, ಅದು ಮೆಲ್‌ಕಿಯಾಡೆಸ್ ಘಟನೆಗಳನ್ನು ಸಾಮಾನ್ಯವಾಗಿ ಮನುಷ್ಯ ಗ್ರಹಿಸುವ ಕಾಲದ ರೀತಿಯಲ್ಲಿ ನಿರೂಪಿಸಿರಲಿಲ್ಲ ಎನ್ನುವುದಕ್ಕೆ ಅಂತಿಮ ಆಧಾರವಾಯಿತು. ಆದರೆ ಅವನು ಒಂದು ಶತಮಾನದ ದೈನಂದಿನ ಘಟನೆಗಳನ್ನು ಅವು ಒಂದೇ ಸಮಯದಲ್ಲಿ ಒಟ್ಟಿಗೆ ಇರುವ ಹಾಗೆ ವ್ಯವಸ್ಥಿಸಿದ್ದ. ತಾನು ಕಂಡುಹಿಡಿದಿದ್ದರಿಂದ ಉಲ್ಲಾಸಗೊಂಡು ಅವ್ರೇಲಿಯಾನೋ ಪುಟ ಎಗರಿಸದೆ ಸ್ವತಃ ಮೆಲ್‌ಕಿಯಾದೆಸ್ ಅರ್ಕಾಡಿಯೊಗೆ ಕೇಳುವಂತೆ ಮಾಡಿದ ಪೋಪ್ ಗುರುವಿನ ನಿರೂಪಣೆಗಳನ್ನು ಗಟ್ಟಿಯಾಗಿ ಉಚ್ಛರಿಸಿದ. ವಾಸ್ತವವಾಗಿ ಅವು ಅವನ ವಧೆಯ ಮುನ್ಸೂಚನೆಯಾಗಿತ್ತು. ಅವನಿಗೆ ಪ್ರಪಂಚದ ಅತ್ಯಂತ ಸುಂದರಿಯ ಹುಟ್ಟಿನ ಉಲ್ಲೇಖ ಕಂಡು, ಅವಳು ದೇಹ ಮತ್ತು ಆತ್ಮಗಳ ಸಮೇತ ಸ್ವರ್ಗಕ್ಕೆ ಹೋದದ್ದನ್ನು, ಚರ್ಮ ಹಾಳೆಯ ಬರಹಗಳನ್ನು ಅರ್ಥೈಸುವುದನ್ನು ಕೈಬಿಟ್ಟ ಅವಳಿಗಳ ಮೂಲವನ್ನು ಕಂಡ. ಅವರು ಹಾಗೆ ಮಾಡಿದ್ದು ಉತ್ಸಾಹ ಮತ್ತು ಸಾಮರ್ಥ್ಯದ ಕೊರತೆಯಿಂದಲ್ಲ. ಆದರೆ ಅವರ ಪ್ರಯತ್ನ ಪ್ರಬುದ್ಧತೆಗೆ ಮುಂಚಿನದಾಗಿತ್ತು. ಆ ಸಮಯದಲ್ಲಿ ತನ್ನ ಮೂಲವನ್ನು ಅರಿಯಬೇಕೆಂದು ತಾಳ್ಮೆಗೆಟ್ಟು, ಅವ್ರೇಲಿಯಾನೋ ಹಾಳೆಗಳನ್ನು ಬಿಟ್ಟು ಮುಂದೆ ಹೋದ. ಆಗ ಹಿತವಾದ, ಆರಂಭದ, ಭೂತಕಾಲದ ಧ್ವನಿಗಳು ತುಂಬಿದ ಪುರಾತನ ಗಿಡಗಳ ಮರ್ಮರಗಳ ಗಾಳಿ ಪ್ರಾರಂಭವಾಯಿತು. ತೀರ ಜಿಗುಟಿನ ಮನೋವ್ಯಥೆಯೊಂದಿಗೆ ನಿರ್ಮೋಹದ ನಿಟ್ಟುಸಿರು ಸೇರಿತು. ಅವನು ಅದನ್ನು ಆಗ ಗಮನಿಸಲಿಲ್ಲ. ಏಕೆಂದರೆ ಆ ಸಮಯದಲ್ಲಿ ಅವನು ತನ್ನ ಅಸ್ತಿತ್ವದ ಬಗ್ಗೆ ಮೊದಲ ಸೂಚನೆಗಳನ್ನು, ತನ್ನನ್ನು ಸಂತೋಷಪಡಿಸುವ ಸುಂದರಿಗಾಗಿ ಹುಡುಕುತ್ತ, ಭ್ರಾಮಕ ಪ್ರದೇಶಗಳಲ್ಲೆಲ್ಲ ಸುತ್ತಿದ ಕಾಮುಕ ಅಜ್ಜನಲ್ಲಿ ಕಂಡುಕೊಂಡ. ಅವ್ರೇಲಿಯಾನೋ ಅವನನ್ನು ಗುರುತು ಹಿಡಿದು, ಆ ರಹಸ್ಯ ಮಾರ್ಗದಲ್ಲಿ ಮುಂದೆ ಹೋದ ಮತ್ತು ಅವನಿಗೆ ಚೇಳುಗಳು ಹಾಗೂ ಹಳದಿ ಚಿಟ್ಟೆಗಳ ಮಧ್ಯೆ, ಸೂರ್ಯ ಹುಟ್ಟುತ್ತಿರುವಾಗ, ಬಾತ್‌ರೂಮಿನಲ್ಲಿ, ಬಂಡಾಯದ ಕಾರಣ ತನ್ನನ್ನು ಒಪ್ಪಿಸಿಕೊಂಡ ಹೆಂಗಸಿನಲ್ಲಿ ತನ್ನ ಕಾಮ ತೃಷೆ ತೀರಿಸಿಕೊಂಡಾಗ, ತನ್ನ ಗರ್ಭಧಾರಣೆಯಾಯಿತೆಂದು ಕಂಡು ಹಿಡಿದ. ಅವನೆಷ್ಟು ತನ್ಮಯನಾಗಿದ್ದನೆಂದರೆ ಎರಡನೆ ಬಾರಿ ಬಲವಾಗಿ ಬೀಸಿದ ಬಿರುಗಾಳಿ ಬಾಗಿಲು ಕಿಟಕಿಗಳನ್ನು ಅವುಗಳ ತಿರುಗಣಿಗಳಿಂದ ಕಿತ್ತುಹಾಕಿದ್ದನ್ನು, ಪೂರ್ವದ ಕಡೆಯ ಛಾವಣಿಯನ್ನು ಕೆಳಗೆ ಬೀಳಿಸಿದ್ದನ್ನು ಮತ್ತು ಅಡಿಪಾಯವನ್ನು ಬುಡಮೇಲು ಮಾಡಿದ್ದನ್ನು ಗಮನಿಸಲಿಲ್ಲ. ಆಗಲೇ ಅವನಿಗೆ ಗೊತ್ತಾದದ್ದು ಅಮರಾಂತ ಉರ್ಸುಲಾ ತನ್ನ ಸೋದರಿಯಲ್ಲ, ಚಿಕ್ಕಮ್ಮ ಎಂದು. ಅವರು ಒಬ್ಬರನ್ನೊಬ್ಬರು ಅತ್ಯಂತ ಸಂಕೀರ್ಣವಾದ ರಕ್ತ ಸಂಬಂಧದಿಂದ ತಿಳಿದುಕೊಳ್ಳುವುದಕ್ಕಲ್ಲದೆ, ಅವರಿಗೆ ಪ್ರಿಯವಾಗುವ ವಿಚಿತ್ರ ಪ್ರಾಣಿಯ ಹುಟ್ಟು ಅವರ ವಂಶವನ್ನು ನಿರ್ನಾಮಗೊಳಿಸುತ್ತದೆ ಎನ್ನುವುದಕ್ಕಾಗಿ ಸರ್ ಫ್ರಾನ್ಸಿಸ್ ಡ್ರೇಕ್ ರಿಯೋ‌ಅಕವನ್ನು ಆಕ್ರಮಣ ಮಾಡಿದ. ಅವ್ರೇಲಿಯಾನೋ ತನಗೆ ಈಗಾಗಲೇ ಚೆನ್ನಾಗಿ ಗೊತ್ತಿರುವ ಸಂಗತಿಗಳಿಗೆ ಸಮಯ ವ್ಯರ್ಥ ಮಾಡಬಾರದೆಂದು ಹನ್ನೊಂದು ಪುಟಗಳನ್ನು ಬಿಟ್ಟು ಮುಂದುವರಿಸಿದಾಗ, ಮಕೋಂದೋಗೆ ಆಗಲೇ ಧೂಳು ಮುತ್ತಿ, ಚಿಂದಿಯಾಗಿ, ಸುಂಟರಗಾಳಿಗೆ ಸಿಲುಕಿತ್ತು. ಅನಂತರ ಅವನು ಆ ಕ್ಷಣದಲ್ಲಿ ಜೀವಿಸುವುದನ್ನು ಅರ್ಥೈಸಿದ. ಜೀವಿಸುತ್ತಿದ್ದಂತೆಯೇ ಅರ್ಥೈಸುತ್ತ, ಮಾತಾಡುವ ಕನ್ನಡಿಯೊಂದನ್ನು ನೋಡುತ್ತಿರುವ ಹಾಗೆ, ಚರ್ಮ ಹಾಳೆಯ ಕೊನೆಯ ಪುಟದ ಬರಹವನ್ನು ಅರ್ಥೈಸುತ್ತ, ತನಗೆ ತಾನೇ ಭವಿಷ್ಯ ಹೇಳಿಕೊಂಡ. ಅನಂತರ ಅವನು ತನ್ನ ಸಾವಿನ ಸಂದರ್ಭ ಮತ್ತು ದಿನಾಂಕಗಳ ಭವಿಷ್ಯವನ್ನು ಅರಿಯುವುದಕ್ಕಾಗಿ ಮತ್ತೆ ಪುಟಗಳನ್ನು ಎಗರಿಸಿದ. ಆದರೆ ಕೊನೆಯ ಸಾಲನ್ನು ತಲುಪುವ ಮುಂಚೆ ತಾನು ರೂಮಿನಿಂದ ಹೊರಗೆ ಹೋಗುವುದಿಲ್ಲವೆಂದು ಅವನಿಗಾಗಲೇ ತಿಳಿದಿತ್ತು. ಏಕೆಂದರೆ ಕನ್ನಡಿಗಳ (ಅಥವಾ ಬಿಸಿಲುಗುದರೆಯ) ಪಟ್ಟಣ ಧೂಳೀಪಟವಾಗುವುದೆಂದು ಹಾಗೂ ಅವ್ರೇಲಿಯಾನೋ ಅರ್ಥೈಸುವುದನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಮನುಷ್ಯರ ನೆನಪಿನಿಂದ ಅಳಿಸಿ ಹೋಗುವುದೆಂದು ಮೊದಲೇ ನಮೂದಿಸಲಾಗಿತ್ತು ಮತ್ತು ಅದರ ಮೇಲೆ ಬರೆದ ಪ್ರತಿಯೊಂದನ್ನು ಅನಾದಿ ಕಾಲದಿಂದ ಮತ್ತು ಎಂದೆಂದಿಗೂ ಮತ್ತೆ ಬರೆಯುವಂತಿರಲಿಲ್ಲ. ಏಕೆಂದರೆ ಒಂದು ನೂರು ವರ್ಷದ ಏಕಾಂತದ ದಂಡನೆಗೆ ಒಳಗಾದ ಜನಾಂಗಕ್ಕೆ ಭೂಮಿಯ ಮೇಲೆ ಮತ್ತೊಂದು ಅವಕಾಶವಿರಲಿಲ್ಲ.
*****
ಮುಗಿಯಿತು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.