ಸಿಂಗಾರೆವ್ವ ಮತ್ತು ಅರಮನೆ – ೩

ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ ತಲೆಮೇಲೆ ಕೈಹೊತ್ತು ಮಲಗಿದ್ದಳು. ನನ್ನನ್ನು ಕಂಡವಳೇ ಎದ್ದು ಕೂತು “ಬಾ ಶೀನಿಂಗಿ” ಎಂದಳು. ನನಗಿಷ್ಟೇ ಬೇಕಿತ್ತು. ಹಿರಿ ದೊರೆಸಾನಿಯ ನಡಪಟ್ಟಿ ಕಥೆ ಹೇಳಿ ನಗಾಡಿದೆ. ಸಿಂಗಾರೆವ್ವ ನಗಲಿಲ್ಲ. ಗಂಭೀರಳಾದಳು. ಹಣೆಯ ಮೇಲೆ ಚಿಂತೆಯ ಗೆರೆ ಮೂಡಿದವು. ಒಂದು ಬಾರಿ ನಿಟ್ಟುಸಿರಿಟ್ಟು-

“ಏನ ಹೇಳಲೇ ಶೀನಿಂಗಿ; ರಾತ್ರಿ ಕುಡೀತಾನ, ಬಂದ ಬೀಳತಾನ. ನಾ ಮಂಚದ ಮ್ಯಾಲ ಮಲಗಿದ್ದರ ಕೆಳಗ ಮಲಗತಾನ. ಹಾಂಗಂತ ನಾನಽ ಕೆಳಗ ಮಲಗಿ ನೋಡಿದೆ, ಅವ ಮಂಚದ ಮ್ಯಾಲೆ ಬಿದ್ದುಕೊಂಡ. ಒಂದು ಸಲ ಆದರೂ ಈ ಕ್ವಾಣ್ಯಾಗ ನನ್ನ ಹೆಂಡತಿ ಇದ್ದಾಳ; ಆಕೀನ ಮಾತಾಡಸಬೇಕು ಅಂತ ಅಂದವನಽ ಅಲ್ಲ. ಬೆಳಗ್ಗೆದ್ದಾಗ ಒಮ್ಮೊಮ್ಮೆ ಬೆರಗಲೆ ಕಣ್ಣತಗದ “ನೀವೂ ಇದಽ ಕ್ವಾಣ್ಯಾಗ ಮಲಗಿದ್ರಿ?” ಅಂತ ಕೇಳತಾನ. ಹೇಂತೀನ ಮಾಡಿಕೊಂಡದ್ದಾದರೂ ನೆನಪೈತೋ ಇಲ್ಲೊ! ಬರೀ ಮಕ್ಕಳ ಮಕ್ಕಳಂದರ ಅವೇನ ಜಂತ್ಯಾಗಿಂದ ಉದರತಾವು? ಶಿವ ನನ್ನ ಹಣ್ಯಾಗ ಮಕ್ಕಳ್ನ ಬರದಿಲ್ಲ ಶೀನಿಂಗಿ”-ಎಂದು ಅಳತೊಡಗಿದಳು.

ಆತ ರಾತ್ರಿ ತಡಮಾಡಿ ಬರುವುದು ನನಗೆ ಗೊತ್ತಿತ್ತು. ಆದರೆ ಗಂಡಹೆಂಡತಿ ಸರಸವಾಗೇ ಇರಬೇಕೆಂದು ನನ್ನ ಕಲ್ಪನೆಯಾಗಿತ್ತು. ಇಕಾ ಇದನ್ನ ಕೇಳಿದರೆ ಹೀಗ! ದೇಸಾಯಿಯ ಬಿಳಿಚಿಕೊಂಡ ಮುಖ, ತೆಳ್ಳಗಿನ ಮೈ ಕಂಡು ನನಗೆ ನನ್ನ ಅನುಮಾನಗಳಿದ್ದವು. ನಾನು ಅಂಥ ಅನುಭವಿಕಳಲ್ಲವೆಂಬುದನ್ನು ಒಪ್ಪುತ್ತೇನೆ. ಆದರೆ ಹೆಂಗಸರಿಗೆ ಅದೆಲ್ಲ ತಿಳಿಯುತ್ತದೆ. ಮದುವೆಯಾದ ಹೊಸದರಲ್ಲಿ ಹೆಣ್ಣಿಗೆ ಒಂದು ಬಗೆಯ ಸುಖದ ಅಮಲು ಬರುತ್ತದೆ. ಮನಸ್ಸಿನ ತುಂಬಾ ಹಾಸಿಗೆಯ ಪರಿಮಳ ಇಡಗಿ ನರನರಗಳೆಲ್ಲ ಬಿಗಿಯುತ್ತವೆ. ಆಗ ಕೆಲಸ ಬೇಡಾಗಿ ಆಕಳಿಸೋಣ ಎನ್ನಿಸುತ್ತದೆ, ಹೀಗೇ ಇನ್ನೂ ಏನೇನೋ! ಆದರೆ ಇದ್ಯಾವುದನ್ನೂ ಸಿಂಗಾರೆವ್ವ ಅನುಭವಿಸಲೇ ಇಲ್ಲ. ಅಥವಾ ಇದನ್ನು ಮರೆಯುವುದಕ್ಕೇ ಇರಬೇಕು, ಸದಾ ಒಂದಿಲ್ಲೊಂದು ಕಾರುಬಾರು ಅಂಟಿಸಿಕೊಳ್ಳುತ್ತಿದ್ದಳು. ಆದರೆ ಬಾಯಿ ಬಿಟ್ಟು ಕೇಳೋದು ಹ್ಯಾಗೆ? ಸಿಂಗಾರೆವ್ವ ತಾನಾಗೇ ಬಾಯಿಬಿಡುವ ಪೈಕಿ ಅಲ್ಲ. ಅವಳಿನ್ನೂ ಅಳುತ್ತಿದ್ದುದರಿಂದ ಈಗ ಮಾತಾಡಬೇಕಾದವಳು ನಾನು. ಆದರೆ ಏನು ಮಾತಾಡಬೇಕೆಂಬುದೇ ಹೊಳೆಯದಾಯಿತು. “ಬೆಂಕೀ ಹಂತ್ಯಾಕಿನ ಬೆಣ್ಣಿ ಎಷ್ಟದಿನ ಕರಗದಽ ಇದ್ದೀತ ಬಿಡ ಎವ್ವಾ” ಅಂದೆ. ಆದರಿದು ಹುಸಿ ಸಮಾಧಾನದ ಮಾತೆಂದು ಇಬ್ಬರಿಗೂ ಗೊತ್ತಿತ್ತು. ಈಗೇನೋ ಹೇಳಬೇಕಲ್ಲ, ಆದ್ದರಿಂದ ಹೇಳಿದೆ-

“ಅವ ಬರಾಣಿಲ್ಲೆಂದರ ಬ್ಯಾಡ, ನೀನೂ ಹಾಂಗ ಮಾಡಬೇಕೇನ? ನೀನಽ ತುಸು ಹಾದಿಗಿ ಬರಬೇಕವಾ” ಅಂದೆ. ಇದಕ್ಕೆ ಅವಳೇನೂ ಹೇಳಲಿಲ್ಲ. ಸುಮ್ಮನಾದಳು. ನಾನೂ ಸುಮ್ಮನೇ ಎದ್ದು ಬಂದೆ.

ಆದರೆ ಆದಿನ ಬಹಳ ಹೊತ್ತಿನ ತನಕ ನನಗೆ ನಿದ್ದೆಯೇ ಬರಲಿಲ್ಲ. ದೇಸಾಯಿ ಆಗಲೇ ಬಂದಿದ್ದ. ನಾನು ಸಿಂಗಾರೆವ್ವನ ಬಗ್ಗೆಯೇ ಚಿಂತೆ ಮಾಡುತ್ತಿದ್ದೆ. ಗೌಡನ ಮಗಳಾಗಿ, ಚೆಲುವೆಯಾದ ಅವಳು ಸುಖದ ಹಕ್ಕುದಾರಳಾಗಿಯೇ ಹುಟ್ಟಿದ್ದಳು. ಅವಳನ್ನು ಯಾರು ಕಂಡರೂ ಈ ಕೂಸು ಸುಖವಾಗಿರಲೆಂದೇ ಹರಸುತ್ತಿದ್ದರು, ಹಾಂಗಿದ್ದಳು ಸಿಂಗಾರವ್ವ. ಇಲ್ಲಿ ನೋಡಿದರೆ ಏನಿದೆ? ಅಪ್ಪ ಅಂಥವ ಗಂಟುಬಿದ್ದ. ಗಂಡ ನೋಡಿದರೆ ಅಂಥವನು, ಅವಳ ಯಾವ ಕರ್ಮಕ್ಕೆ ಹಿಂಗಾಗಿದೆ? ಮಗ್ಗಲು ಬದಲಿಸಿ ಮತ್ತೆ ಮತ್ತೆ ಇದನ್ನೇ ಧ್ಯಾನಿಸಿದೆ. ಬಗೆ ಹರಿಯಲಿಲ್ಲ.

ಅಷ್ಟರಲ್ಲಿ ಸಿಂಗಾರೆವ್ವ ಧಡಧಡ ಜಿನೆಯಿಳಿದು “ಶೀನಿಂಗೀ” ಎಂದು ಕೂಗಿದಳು. ತಕ್ಷಣ “ಯಾಕವ್ವಾ?” ಎಂದು ಎದ್ದೆ. “ಲಗು ಬಾ” ಎಂದವಳೇ ಮತ್ತೆ ಮೇಲೇರಿ ಹೋದಳು. ನಾನೂ ಓಡಿಹೋದೆ. ನೋಡಿದರೆ, ದೇಸಾಯಿ ಕೈಕಾಲು ಸೆಟೆಸಿ ಬೇಹೋಶ್ ಆಗಿ ಬಿದ್ದುಬಿಟ್ಟಿದ್ದ. ಇಬ್ಬರೂ ಜೋರಿನಿಂದ ಅಂಗಾಲು ತಿಕ್ಕತೊಡಗಿದೆವು. ಸಿಂಗಾರೆವ್ವ ಅತ್ತೆಯ ಬಳಿ ಓಡಿದಳು. ದೆಸಾಯಿಯ ಮುಖ ಕೆಂಪೇರಿ ಕೆಂಜಗವಾಗಿತ್ತು. ಮೈತುಂಬ ನೀರು ಸುರಿದಹಾಗೆ ಬೆವರಿಳಿಯುತ್ತಿತ್ತು. ನನಗೆ ಅಷ್ಟಿಷ್ಟು ಆಸೆ ಮೂಡಿದ್ದೂ ಆ ಬೆವರಿನಿಂದಲೇ. ಸಿಂಗಾರೆವ್ವ ಆತಂಕದಲ್ಲಿ ಎಬ್ಬಿಸಿದರೆ ಆ ಮುದುಕಿ “ಗಡಿಬಿಡಿ ಮಾಡಬ್ಯಾಡ, ಈಗ ಎಚ್ಚರಾಗತಾನ, ಹೋಗಿ ಮೂಗಿಗೆ ಉಳ್ಳಾಗಡ್ಡಿ ಹಿಂಡಿ ಹಿಡಿ” ಎಂದಳಂತೆ. ಬರುವಾಗ ಸಿಂಗಾರೆವ್ವ ಒಂದು ಉಳ್ಳಾಗಡ್ಡಿಯನ್ನು ತಂದಿದ್ದಳು. ಹಿಂಡಿ ಮೂಗಿಗೆ ಹಿಡಿದಳು. ನಾನು ಅವನ ಕಿರಿಬೆರಳು ಹಿಸುಕುತ್ತಿದ್ದೆ. ನಮ್ಮ ಪ್ರಯತ್ನ ಸಾವಿನೊಂದಿಗೆ ಸೆಣೆಸಾಟದಂತಿತ್ತು. ಬಹಳ ಹೊತ್ತಿನ ನಂತರ ನಮ್ಮ ಪ್ರಯತ್ನ ಫಲಕಾರಿಯಾಯಿತು. ಮೆಲ್ಲಗೆ ದೇಸಾಯಿ ಎಚ್ಚರಗೊಂಡು ನರಳಿದ. ಸಿಂಗಾರೆವ್ವ ಈಗ ಹಗುರವಾಗಿ ಹಾಗೇ ಕಂಬಕ್ಕೊರಗಿದಳು.

ನಿನ್ನೆ ರಾತ್ರಿ ಏನು ನಡೆಯಿತೆಂದು ಸಿಂಗಾರೆವ್ವ ಮರುದಿನ ಹೇಳಿದಳು. ನಾನು ಹೇಳಿದೆನಲ್ಲ,-ನೀನು ತುಸು ಹಾದಿಗೆ ಬಾ ಅಂತ. ಸಿಂಗಾರೆವ್ವನಿಗೆ ಅದು ಹೌದೆನಿಸಿತ್ತು. ರಾತ್ರಿ ದೇಸಾಯಿ ಬಂದಾಗ ಇವಳು ನೆಲದ ಮೇಲೆ ಒರಗಿದ್ದಳು. ಬಂದವನು ಮಂಚದ ಮೇಲೆ ಮಲಗಿದ. ಬಹಳ ಹೊತ್ತಾದ ಮೇಲೆ ದೀಪ ಸಣ್ಣದಾಗಿಸಿ ಇವಳೂ ಮಂಚದ ಮೇಲೆ ಹೋದಳು. ಮೆಲ್ಲಗೆ ಅವನೆದೆಯ ಮೇಲೆ ಕೈಯಿಟ್ಟು ಒಂದೆರಡು ಬಾರಿ ಆಡಿಸಿದಳು. ದೇಸಾಯಿ ಗಬಕ್ಕನೆ ಎದ್ದನಂತೆ. ಹೋಗಿ ದೀಪ ದೊಡ್ಡದು ಮಾಡಿ ಬಂದು ಬೆಳಕಿನಲ್ಲಿ ಅಂಗಾತಾಗಿ ಬಿದ್ದಿದ ಹೆಂಡತಿಯ ರೂಪರಾಶಿಯನ್ನು ಹರಿದು ತಿಂಬವರಂತೆ ನೋಡತೊಡಗಿದ. ಸಿಂಗಾರೆವ್ವ ಖುಶಿಯಾಗಿ, ನಾಚಿ, ನೋಡಲಾರದೆ ಎರಡೂ ಕೈಯಿಂದ ಮುಖ ಮುಚ್ಚಿಕೊಂಡಳು. ಈತ ಕಾಲಕಡೆಯಿಂದ ನಿಧಾನವಾಗಿ ಸೀರೆ ಎತ್ತುತ್ತ ಹೋದ. ಸೀರೆ ಮೇಲೆ ಸರಿದ ಹಾಗೆ ಸಿಂಗಾರೆವ್ವ ಅರಳುತ್ತ ಪುಳಕಗೊಂಡಳು. ಮೊಳಕಾಲಿನ ತನಕ ಬಂದಿರಬೇಕು, ಹಾಗೇ ಅವಳ ಹೊಟ್ಟೆಯ ಮೇಲೆ ಬಿದ್ದುಕೊಂಡ. ಸಿಂಗಾರೆವ್ವ ಈಗಲೂ ಕಣ್ಣು ತೆರೆಯಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆತ ಹಾಗೇ ನೆಲಕ್ಕುರುಳಿದ. ಈಗ ಕಣ್ಣು ತೆರೆದು ನೋಡಿದರೆ ದೆಸಾಯಿ ಕೈಕಾಲು ಸೆಟೆಸಿ ಬೇಹೋಶ್ ಆಗಿ ಬಿದ್ದಿದ್ದನಂತೆ. ಇದು ಅವನಿಗೆ ಆಗಾಗ ಬರುವ ರೋಗವೆಂದೂ ಜೀವಕ್ಕೆ ಅಪಾಯವಿಲ್ಲವೆಂದೂ ಮುದುಕಿಯಿಂದ ತಿಳಿಯಿತು. ಬೇಕಾದಷ್ಟು ವೈದ್ಯ ಮಾಡಲಾಗಿದೆಯೆಂದೂ, ಪರಿಣಾಮ ಕಾಣದ್ದರಿಂದ ಹುಶಾರಾಗಿರಬೇಕೆಂದೂ ಹೇಳಿದಳು. ಸಿಂಗಾರೆವ್ವನ ಮುಖದಲ್ಲಿ ಅಂದು ಮೂಡಿದ ಚಿಂತೆಯ ಗೆರೆ ಕೊನೆಯ ತನಕ ಮರೆಯಾಗಲೇ ಇಲ್ಲ.

ಸಿಂಗಾರೆವ್ವ ಈಗ ಹೆಚ್ಚು ಹೆಚ್ಚು ಒಂಟಿಯಾದಳು. ಆಳುಗಳೊಂದಿಗೆ ಮನಸ್ಸಿಗೆ ಬಂದರೆ ಮಾತಾಡಿದಳು, ಇಲ್ಲದಿದ್ದರೆ ಇಲ್ಲ. ಕೆಲಸ ಕಾ‌ಅರ್ಯಗಳಲ್ಲಿ ಮೊದಲಿನ ಉತ್ಸಾಹ ಕಾಣಿಸುತ್ತಿರಲಿಲ್ಲ. ನನ್ನೊಂದಿಗೂ ಒಮ್ಮೊಮ್ಮೆ ಮಾತಾಡುತ್ತಿರಲಿಲ್ಲ. ಯಾಕೆಂದರೆ ಮುದುಕಿ ಇವಳ ಮುಖ ಕಂಡರೆ ಸಾಕು ಬಸಿರಿನ ಬಗ್ಗೆಯೇ ಮಾತಾಡುತ್ತಿದ್ದಳು. ತನ್ನ ತಂದೆ ಮೋಸ ಮಾಡಿದ್ದನ್ನು ಸಿಂಗಾರೆವ್ವ ಒಂದೆರಡು ಬಾರಿ ಖಾರವಾಗಿ ನನ್ನ ಬಳಿ ತೋಡಿಕೊಂಡಲು. ತನ್ನ ತಾಯಿಯಾದರೂ ತಪ್ಪಿಸಬಹುದಿತ್ತಲ್ಲಾ ಎಂದೊಮ್ಮೆ ಕಣ್ಣೀರು ತಂದಳು. ಮರುಕ್ಷ್ಣವೇ ತಂದೆಯ ಕ್ರೌರ್‍ಯದ ನೆನಪಾಗಿ, ತಾಯಿಯ ಅಸಹಾಯಕತೆಗೂ ಅತ್ತಳು. ತನ್ನ ದೈವವನ್ನಂತೂ ಕೂತಾಗೊಮ್ಮೆ, ನಿಂತಾಗೊಮ್ಮೆ, ಮಲಗುವಾಗೊಮ್ಮೆ, ಏಳುವಾಗೊಮ್ಮೆ, ಹಳಿಯುತ್ತಿದ್ದಳು.

ಒಮ್ಮೆ ನನ್ನೊಂದಿಗೆ ಇಡೀ ದಿನ ಮಾತಡಲಿಲ್ಲ. ನನ್ನ ಮೇಲೂ ಇವಳಿಗೆ ಕೋಪವೇನೋ ಅಂದುಕೊಂಡೆ. ನನ್ನೊಡನೆ ಮಾತಾಡುವುದರಿಂದ ಇವಳಿಗೆ ಹಿಂಸೆಯಾಗುತ್ತಿದ್ದರೆ ನಾನ್ಯಾಕೆ ಇಲ್ಲಿರಬೇಕು? ಆ ದಿನ ಮಧ್ಯಾಹ್ನವಾದರೂ ಇಬ್ಬರೂ ಊಟ ಮಾಡಲಿಲ್ಲ. ಪಡಸಾಲೆಯಲ್ಲಿ ಕೂತಿದ್ದಳು. ಮೆಲ್ಲಗೆ ಹೋಗಿ “ಊಟಾ ಮಾಡೇಳು” ಎಂದು. ನನ್ನ ಕಡೆಗೆ ಲಕ್ಷ್ಯ ಕೊಡಲೇ ಇಲ್ಲ. ನನಗೆ ತಡೆಯಲಾಗಲಿಲ್ಲ.
“ನಿನಗ ಬ್ಯಾಡಾದ ಮ್ಯಾಲ ನಾ ಯಾಕ ಇಲ್ಲಿರಲಿ? ನಂದಗಾವಿಗೆ ಹೋಗತೀನಿ”- ಅಂದೆ.

ತಕ್ಷಣ ನನ್ನ ಕಡೆಗೆ ತಿರುಗಿ “ನಿನಗೂ ಬ್ಯಾಡಾದ್ನೇನೆ ಶೀನಿಂಗೀ” ಎನ್ನುತ್ತ ಉಕ್ಕಿಬಂದ ಕಣ್ಣೀರು ತೋರಿಸದೆ ಒಳಕ್ಕೆ ಹೋದಳು. ಯಾಕಾದರೂ ಅಂದೆನೊ! ಯಾಕೆಂದರೆ, ಸಿಂಗಾರೆವ್ವ ಸಣ್ಣ ಮುಖಮಾಡಿ ಕೂರುವುದು ನನಗೆ ಸರಿಬರುತ್ತಿರಲಿಲ್ಲ. ಅದಕ್ಕೆ- ನಾನೂ ಬೆನ್ನುಹತ್ತಿ ಹೋದೆ.

ಅಂತಸ್ತಿನ ಕೋಣೆಯಲ್ಲಿ ಅಳುತ್ತಿದ್ದಳು. ನನಗೂ ಅಳು ತಡೆಯಲಾಗಲಿಲ್ಲ. “ತಪ್ಪಾಯಿತು ಎವ್ವಾ”-ಅಂದೆ. ತುಸು ಹೊತ್ತು ಇಬ್ಬರೂ ಮಾತಾಡಲಿಲ್ಲ. ಆಮೇಲೆ ಹೇಳಿದೆ. “ಇಲ್ಲೀತಂಕ ನಿನ್ನ ಅಕ್ಕನ್ಹಾಂಗ ಇದ್ದೆ, ಈಗ ತಾಯಿ ಸಮ, ಹೇಳತೇನ ಕೇಳಽ ಎವ್ವಾ; ಮಕ್ಕಳಾಗೋದಿಲ್ಲಂತ ತಲೀಮ್ಯಾಲ ಕೈಹೊತ್ತು ಕೂತರ ಎದಕ್ಕ ಬಂತು? ಈ ಜಗತ್ತಿನಾಗ ದೇವರ ದಿಂಡರ ಇಲ್ಲಂದಿ? ಹರಿಕಿ ಹೊರು, ವರತ ಮಾಡು. ಈ ಊರಾಗಿನ ಕುಮುದವ್ವ ಎಂಥೆಂಥಾ ಬಂಜೇರಿಗಿ ಮಕ್ಕಳಾ ಕೊಟ್ಟಾಳಂತ, ನಿನಗಽ ಇಲ್ಲಂತಾಳು?” ಈ ಮಾತು ಕೇಳಿ ಅವಳ ಕಣ್ಣೊಳಗೆ ಭಗ್ಗನೆ ಬೆಳಕು ಹೊಳೆಯಿತು. ಮಂಚದ ಮೇಲಿದ್ದವಳು ನನ್ನ ಬಳಿ ಬಂದು
“ಶೀನಿಂಗಿ, ಖರೆಖರೆ ಮಕ್ಕಳ ಆದಾವೇನ?”-ಅಂದಳು. ಮತ್ತೇನು ತಿಳಿಯಿತೋ, “ನನ್ನ ಗಂಡಗ ರೋಗ ಐತಲ್ಲ ಎವ್ವಾ” ಅಂದಳು.
“ದೇವರ ಸತ್ಯೆ ಮನಶೇರಿಗೆ ತಿಳಿದೀತೇನಽ ತಾಯಿ? ದೇವರ ಮುಂದ ನಾವೆಷ್ಟರವರಾ? ನೀ ಬಗ್ಗಿ ಬಂದರ ತಾಯಿ ಅದನ್ನೂ ಪರಿಹಾರ ಮಾಡತಾಳ. ನಿನ್ನ ಗಂಡನ ಸುದ್ದಿ ಕುಮುದವ್ವಗ ಗೊತ್ತಿಲ್ಲಂದಿ?”
ಈ ಮಾತು ಅವಳಿಗೆ ಪಟಾಯಿಸಿತು.
“ಹೌಂದಽ ಶೀನಿಂಗಿ, ದೇವೀನಽ ನಿನ್ನ ಬಾಯಿಂದ ಈ ಮಾತ ಆಡಿಸಿರಬಾರದ್ಯಾಕ?”-ಎಂದು ಎದ್ದಳು.

ಅಂದೇ ಕುಮುದವ್ವನಿಗೆ ಹರಕೆ ಹೊತ್ತಳು. ಮಕ್ಕಳಾದರೆ ತನ್ನ ಅತ್ತೆ ಕೊಡುವ ಚಿನ್ನದ ನಡುಪಟ್ಟಿಯನ್ನು ಅವಳಿಗೇ ಕೊಡುವುದಾಗಿ ಹೇಳಿದಳು. ಹರಕೆ ಹೊತ್ತದಿನ ಸೋಮವಾರ. ಅದು ಸಾವಳಗಿ ಶಿವನಿಂಗನ ವಾರ. ಅವನ ಹೆಸರಿನಲ್ಲಿ ಪ್ರತಿ ಸೋಮವಾರ ಉಪವಾಸವಿರುವುದಾಗಿ ಬೇಡಿಕೊಂಡಳು. ಮಗನಾದರೆ ಮೂರುವರ್ಷ ಎತ್ತಿಕೊಂಡು ಬಂದು ಶಿವನಿಂಗನ ಕೊಂಡ ಹಾಯುವುದಾಗಿಯೂ, ಸಿದ್ಧರಾಮಸ್ವಾಮಿಗಳಿಗೆ ಬೆಳ್ಳೀ ಚಡಿ ಮಾಡಿಸಿಕೊಡುವುದಾಗಿ ಹರಕೆ ಹೊತ್ತಳು. ಅದೇ ಕಾಲಕ್ಕೆ ಕಾಗೆಯೊಂದು ಕೂಗಿ ಶುಭಲಕ್ಷಣವಾಯಿತು. ಕೂಗಿ ನೆಂಟರನ್ನು ಕರೆಯುವ ಹಾಗೆ ಬೇರೆ ಸೀಮೆಯ ಈ ನೆಂಟನನ್ನೂ ಕರೆತರಲೆಂದು ಹಾರೈಸಿದೆವು; ಹಾಗೆಂದು ನಂಬಿದೆವು.

ಏಳು

ನಾವೇ ಹೀಗೇ ಶಿವನೇ ಎಂದು ಕೈ ಹೊತ್ತು ಕೂತಿದ್ದರೆ ಅವರಪ್ಪ ಬಂದು ತನ್ನ ಮನಸ್ಸಿನ ನಿಜ ತೋರಿಸಿ ಹುಣ್ಣಿನ ಮೇಲೆ ಬರೆಯೆಳೆದ. ನಡೆಯಲಿಕ್ಕೆ ಬಂದವಳು ತೌರಿಗಿನ್ನೂ ಹೋಗಿರಲಿಲ್ಲವಲ್ಲ. ಅದೇ ನೆಪದಿಂದ ಗೌಡಬಂದ. ಮದುವೆಯ ಮೊದಲನೇ ವರ್ಷ ಅದು. ದೀಪಾವಳಿ ಹಬ್ಬಕ್ಕೆ ಮಗಳು ಅಳಿಯ ತಮ್ಮಲ್ಲಿಗೇ ಬರಬೇಕೆಂದು ಹೇಳಿದ. ಸರಗಂ ದೇಸಾಯಿ ಸರಳ ಮನುಷ್ಯ. “ಓಹೋ ಇಬ್ಬರೂ ಬರ್‍ತೀವಿ” ಅಂತ ಅಂದುಬಿಟ್ಟ. ಸಿಂಗಾರೆವ್ವನಿಗೆ ಅಸಮಧಾನವಿತ್ತಲ್ಲ” ಆಗೋದಿಲ್ಲ” ಅಂದಳು.
“ಆಗೋದಿಲ್ಲಂದರ ಬ್ಯಾಡ. ಬೇಕಾದರ ನೀವು ಒಬ್ಬರೇ ಹೋಗಿ ಬರ್ರಿ” ಎಂದು ಹೆಂಡತಿಗೆ ಹೇಳಿದ.
“ನಾನೂ ಹೋಗೋದಿಲ್ಲ.”
“ಆಯಿತಲ್ಲ ಮಾವ, ನಾವಿಬ್ಬರೂ ಬರೋಣಿಲ್ಲ”ಎಂದು ಹೇಳಿ ದೇಸಾಯಿ ಹೊರಟುಹೋದ. ಗೌಡ ಅಷ್ಟಕ್ಕೇ ಸುಮ್ಮನಾಗಿದ್ದರೆ ಪಾಡಿತ್ತು. ಕೈ ಹೊಸೆದು ಅಕ್ಕರತೆ ಅಭಿನಯಿಸುತ್ತ ಸುತ್ತ ಯಾರಿಲ್ಲದ್ದನ್ನು ಗಮನಿಸಿ,
“ನೋಡ ಸಿಂಗಾರೆವ್ವ, ನಿನ್ನ ಸಲುವಾಗಿ ಎಷ್ಟ ತ್ರಾಸ ತಗೊಂಡೀನಿ. ಶಿರಟ್ಟಿ ಕೇಸಿನಾಗ ಮನ್ಯಾಗಿನ ಚಿನ್ನ ಕರಗಿಹೋಯ್ತು”-ಅಂದ. ಸಿಂಗಾರೆವ್ವ ಸುಮ್ಮನೆ ಇದ್ದಳು.
“ಚಲೋ ಮನೀಗಿ ಬಂದಿ ಅಂತ ಕೊಟ್ಟ ಮನಿ ಮರೀಬ್ಯಾಡವಾ, ಅದನೂ ಅಷ್ಟು ಎತ್ತಿ ಹಿಡಿ.”
ಸಿಂಗಾರೆವ್ವ ಈಗಲೂ ಸುಮ್ಮನಿದ್ದಳು.
“ಅಡಚಣಿ ಭಾಳ ಐತಿ. ಈಗೊಂದ ಹತ್ತುಸಾವಿರ ರೂಪಾಯಿ ಸಾಗಸ್ತೀಯೇನು?”-ಅಂದ.
“ನನ್ನ ಹಂತ್ಯಾಕ ಎಲ್ಲೀ ರೊಕ್ಕ?” -ಅಂದಳು.
“ಎಲ್ಲೀವಂದರ ಹೆಂಗವಾ, ನಿನ್ನ ಮದಿವೀ ಸಾಲಿದು. ಬೇಕಾದ್ರ ನಿನ್ನವೆರಡು ದಾಗೀನ(ಆಭರಣ) ಕೊಟ್ಟಿರು, ಆಮ್ಯಾಲ ನೋಡೋಣಂತ”-ಅಂದ.
-ಈ ಮಾತು ಹೇಳಿದನೋ ಇಲ್ಲವೋ ಸಿಂಗಾರೆವ್ವನಿಗೆ ಅದೆಲ್ಲಿಂದ ಬಂತೋ ಭಾರೀ ಸಿಟ್ಟು ಬಂದು,-
“ಹೌಂದ ಹೌಂದ, ಜಗತ್ತಿನಾಗ ಯಾರೂ ಮಾಡಾಣಿಲ್ಲ. ನನ್ನ ಮದಿವೀ ಮಾಡಿ ಉಪಕಾರ ಮಾಡಿದೀ ನೋಡು. ಹೆಣದ ಜೋಡಿ ಮದಿವಿ ಮಾಡಿದಿ, ಅಲ್ಲೀ ಆಸ್ತಿಪಾಸ್ತಿ ಎಲ್ಲ ನುಂಗಿದಿ. ಈ ಗಂಡನೂ ಲಗೂ ಸಾಯ್ತಾನ, ಇದೂ ಆಸ್ತಿ ನಿನಗಽ ಆಗ್ತೈತಿ ಅಂತ ಮದಿವಿ ಮಾಡಿದಿ. ನಿನ್ನ ಆಸೆ ಇನ್ನೂ ಕೈಗೂಡವಲ್ದು, ಕೆಡಕನ್ನಿಸೇತ್ಯೋ ಏನೋ! ಅದಕ್ಕಽ ಈಗ ಈ ಆಟ ಹೂಡೀದೀ.”

ನಾನು ಹುಟ್ಟಿದಾಗಿನಿಂದ ಕಂಡಿದ್ದೇನೆ, ಅವಳೆಂದೂ, ಅದೂ ಈ ಥರ ಸಿಟ್ಟಿಗೆದ್ದವಳಲ್ಲ. ನಮ್ಮ ಸಿಂಗಾರೆವ್ವ ಬಹಳ ಮೃದು ಸ್ವಭಾವದ ಹೆಂಗಸು, ಹೂವಿನಂಥಾಕಿ. ಈಗಿನ ಅದ್ಯಾವ ಭೂತ ಅವಳ ಮೈಯಲ್ಲಿ ಹೊಕ್ಕಿತೋ ಅಥವಾ ಹಿಂದಿನಿಂದ ತಡೆದಿಟ್ಟ ಸಿಟ್ಟು ಈಗ ಕಟ್ಟೆಯೊಡೆದು ಹೊರನುಗ್ಗಿತೋ! ಹಡೆದ ಅಪ್ಪನಿಗೇ ಹೀಗೆ ಹೇಳೋಣವೆಂದರೆ! ಗೌಡನ ಬಗ್ಗೆ ಮೊದಲೇ ನನಗೆ ಸಿಟ್ಟಿತ್ತು. ಈ ಮಾತು ಕೇಳಿ ಆನಂದವಾಗಬೇಕಿತ್ತು. ಆದರೆ ನನಗೇ ಗಾಬರಿಯಾಯಿತೆಂದರೆ! ಆಶ್ಚರ್ಯವೆಂದರೆ ಗೌಡನಿಗೆ ಸಿಟ್ಟು ಬರಲೇ ಇಲ್ಲ. ಮೊದಲೇ ಇದನ್ನೆಲ್ಲ ಲೆಕ್ಕಹಾಕಿದ್ದವನಂತೆ ತನ್ನ ವ್ಯಂಗ್ಯನಗೆ ನಗುತ್ತಾ “ಹಡೆದವ್ರಿಗೆ ಹಾಂಗೆಲ್ಲ ಅನಬಾರದವ, ಇದಽ ನಿನ್ನ ಖಾಯಂ ಮನಿ ಅಲ್ಲ”-ಅಂದ.
“ಅಂದರ?”
“ಅದಽ ಹೇಳಿದ್ಯಲ್ಲ ಹಾಂಗ ನಿನ ಗಂಡ ಸತ್ತ ಮ್ಯಾಲ ನಿನಗೊಂದು ಆಧಾರ ಬೇಕೋ ಬ್ಯಾಡೋ?”

ಈಗ ಮಾತ್ರ ಸಿಂಗಾರೆವ್ವ ಭಗ್ಗನೆ ಉರಿಯತೊಡಗಿದಳು. ತುಟಿ ನಡುಗಿ ಕಣ್ಣು ಕೆಂಪಾದವು. ದೊಪ್ಪನೆ ಕೆಳಗಡೆ ಕೂತು ಬಲಗೈಯಿಂದ ನೆಲ ಬಾರಿಸುತ್ತ “ಹಾ ಹಾ, ಇದಽ ನನ್ನ ಖಾಯಂ ಮನಿ. ತೌರುಮನಿ ಹಾಳಾಗಿ ಬಾಗಿಲಿಗೆ ಬೇಲಿ ಹಚ್ಚಲಿ. ನನ್ನನ್ನ ಬರೀ ಸಾಯೋ ಗಂಡರಿಗಿ ಮಾರಿ ಭಾಡಾ ತಿಂದೇನಂತೀಯೇನೋ! ಥೂ ನಿನಗ ಹೆಂಗ ತಂದಿ ಅಂತನ್ಲಿ. ನನ್ಗಂಡ ಸಾಯತಾನಂತ ಲೆಕ್ಕ ಹಾಕೀಯಲ್ಲ, ಉಳಿಸ್ಕೋತೀನಿ. ಗಂಡುಮಗನ್ನ ಹಡದ ತೋರ್‍ಸಾಕ ನಿನ್ನ ಕರಸ್ತೀನಿ, ಆಗ ಬಂದೀಯಂತ. ಅಲ್ಲೀತನಕ ಈ ಕಡೆ ಕಾಲಿಡಬ್ಯಾಡ”-ಎಂದು ಹೇಳಿ ಅಲ್ಲಿ ನಿಲ್ಲಲಾರದೆ ಒಳಕ್ಕೆ ಹೋದಳು.

ಗೌಡ ತುಸು ಹೊತ್ತು ಅಲ್ಲೆ ಕೂತ. ಬಹುಶಃ ಸಿಂಗಾರೆವ್ವನಿಂದ ಇಂಥಾ ಮಾತನ್ನವ ನಿರೀಕ್ಷಿಸಿರಲಿಲ್ಲ. ಅಥವಾ ಯಾರಿಂದಲೂ ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ನಾಚಿಕೆಯ ನೆರಳೇನೋ ಅವನ ಮುಖದಲ್ಲಿ ಸುಳಿದಾಡಿತು. ಬಹುಶಃ ತನ್ನ ಗುಟ್ಟು ಈ ರೀತಿ ಬಯಲಾದದ್ದಕ್ಕೆ ಇದ್ದೀತು. ಆದರೆ ಅದೂ ಬಹಳ ಹೊತ್ತು ಉಳಿಯಲಿಲ್ಲ. ಮತ್ತೆ ಅದೇ ವ್ಯಂಗ್ಯನಗೆ ಮುಖದಲ್ಲಿ ಮೂಡಿತು. ಹೊರಟುಹೋದ. ನಾನೂ ಏನೊಂದೂ ಆಡಲಿಲ್ಲ.

ಸಿಂಗಾರೆವ್ವ ದೊರೆಸಾನಿಯಾದದ್ದರಿಂದ ಮನೆಬಿಟ್ಟು ಊರಲ್ಲಿ ಪ್ರವೇಶಿಸುವಂತಿರಲಿಲ್ಲ. ನನಗ ಅಂಥ ನಿರ್ಬಂಧಗಳಿರಲಿಲ್ಲವಾದ್ದರಿಂದ ಆಳುಗಳನ್ನು ಕರೆಯುವುದಕ್ಕೆ, ಹರಟೆ ಹೊಡೆಯುವುದಕ್ಕೆ ಊರಿನಲ್ಲಿ ಹೋಗುತ್ತಿದ್ದೆ. ಊರಿನಲ್ಲಿ ನನಗೆಷ್ಟೋ ಮಂದಿ ಗೆಲತಿಯರಿದ್ದರು. ಈ ಊರಿನ ಹೆಂಗಸರು ಬಹಳ ಒಳ್ಳೆಯವರು. ಮೈ ಮುರಿದು ಹೊಲಮನೆಗಳಲ್ಲಿ ದುಡಿಯುತ್ತಾರೆ. ಬಂದುದರಲ್ಲಿ ನೀರಂಬಲಿಯೋ ಗಂಜೀನುಚ್ಚೋ ಮಾಡಿ, ಗಂಡ-ಮಕ್ಕಳೊಂದಿಗೆ ಹಂಚಿಕೊಂಡು ಕುಡಿಯುತ್ತಾರೆ. ಯಾರ ಕಣ್ಣಲ್ಲಿಯೂ ಅತೃಪ್ತಿಯೆಂಬುದಿಲ್ಲ. ಏನು ಬಂದರೂ ಅದನ್ನು ಕುಮುದವ್ವನ ಪ್ರಸಾದವೆಂದು ಉಡಿಯೊಡ್ಡಲು ಸದಾ ಸಿದ್ಧ. ಮತ್ತು ಕೃತಜ್ಞತೆಯಿಂದ ಅವಳನ್ನು ಹಾಡಿಹೊಗಳಲು ಪದಗಳು ಅವರ ನಾಲಗೆಯ ತುದಿಗಳಲ್ಲೇ ನಿಂತಿರುತ್ತವೆ. ಈ ಹೆಂಗಸರು ಏನನ್ನೂ ಮುಚ್ಚಿಕೊಂಬವರಲ್ಲ, ಹಾದರವನ್ನೂ, ಏನಿದ್ದರೂ ಎದುರಿಗೇ ಅಡಿ ಚುಕ್ತ ಮಾಡುವಂಥವರು.

ಸರಗಂ ದೇಸಾಯಿ ಒಬ್ಬಂಟಿಗನಾಗಿದ್ದಾಗ ಅರಮನೆ ಅವರ ಆಸಕ್ತಿಯ ಕೇಂದ್ರವಾಗಿರಲಿಲ್ಲ. ನಾವು ಬಂದಿವಲ್ಲ, ಸುರುವಾಯ್ತು. ಬಂದು ಬಂದು ಸಿಂಗಾರೆವ್ವನಿಗೆ ನಮಸ್ಕಾರ ಮಾಡೋದೇನು, ಕಣ್ಣರಳಿಸಿ ನೋಡುತ್ತ ನಿಲ್ಲೋದೇನು, ಈಕೆ ಮಾತಾಡಿಸಿದರೆ ಹಿಗ್ಗೋದೇನು, ಅಯ್ಯಯ್ಯೋ ಈಕೆ ಕೇಳಿದ್ದರೆ ನಿಂತಲ್ಲೇ ಪ್ರಾಣಬಿಡೋರು! ಕುಟ್ಟುಬೀಸುವಾಗ ಅವರು ಸಿಂಗಾರೆವ್ವನ ಬಗ್ಗೆ ಹಾಡಿಕೊಳ್ಳೋದನ್ನ ನಾನೇ ಕೇಳಿದ್ದೇನೆ,-ಇವಳು ಸ್ವಥಾ ದೇವಿ ಇದ್ದಹಾಂಗಿದ್ದಳಂತೆ, ಬಂಗಾರ ಕೂದಲಿನವಳಂತೆ,-ಇವಳು ಒಮ್ಮೆ ನೋಡಿದರೆ ರೋಗ ಪರಿಹಾರವಾಗುತ್ತದಂತೆ, ಇವಳು ಅಂಗಾಲಿಟ್ಟಲ್ಲಿ ಕುಂಕುಮದ ಹುಡಿ ಬೀಳುತ್ತದಂತೆ, ಈಕೆ ಇರೋದು ತಮ್ಮ ಸೌಭಾಗ್ಯವೆಂಬಂತೆ ಹಾಡಿಕೊಂಬವರು. ಇಂಥಾ ತಾಯಿಗೆ ಎಂಥಾ ಗಂಡ ಗಂಟುಬಿದ್ದನಲ್ಲಾ ಎಂದು ಕೆಲವು ಮುದುಕಿಯರು ಹಳಹಳಿಸದೆಯೂ ಇರಲಿಲ್ಲ. ಏನೇ ಹೇಳು, ಬಹಳ ಸರಳ ಜನ. ಅಸೂಯೆ ಇಲ್ಲದವರು.

ಆದರೆ ಗಂಡಸರಿದ್ದಾರೆ ನೋಡು, ಹೊಟ್ಟೆಕಿಚ್ಚಿನವರು. ಒಬ್ಬೊಬ್ಬರೂ ಈ ಅರಮನೆಯಲ್ಲಿ ತನ್ನ ಮನೆಯಲ್ಲಿ ಎಂದು ಒಳಗೊಳಗೇ ನಂಬಿದವರು. ಮತ್ತು ಅದೇನಾದರೂ ಹಾಳಾದರೆ ತಮ್ಮ ಪಾಲಿಗೆ ಅದರ ಎಷ್ಟು ಕಲ್ಲು, ಎಷ್ಟು ಮರ ಬರಬೇಕೆಂಬುದನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿ ಮಂಡಿಗೆ ತಿಂಬವರು. ಇವರಲ್ಲಿ ಎಷ್ಟೋ ಮಂದಿ ದೇಸಗತಿಯಿಂದ ಸ್ಥಿತಿವಂತರಾದವರು. ಆದರೂ ಆ ಜನಕ್ಕೆ ಕೃತಜ್ಞತೆ ಬೇಡ, ತೃಪ್ತಿ ಕೂಡ ಇರಲಿಲ್ಲ. ಅವರೇನಾದರೂ ದೇಸಗತಿ ಬಗ್ಗೆ ಆಡಿದರೆ, ನೀನು ಖಂಡಿತ ತಿಳಿಯಬಹುದು: ಅವರ ಮನಸ್ಸಿನಲ್ಲಿರೋದು ಅದಲ್ಲ-ಅಂತ. ತಮ್ಮ ಮಾತುಗಳಿಂದ ಮೈಮರೆಸಿ, ನೀನು ಎಲ್ಲಿ ಮೈಮರೆಯುತ್ತೀಯೋ ಅಲ್ಲಿಂದಲೇ ಒಳಹೊಕ್ಕು ದೋಚುವವರು. ನಾನು ಹೀಗೆ ಹೇಳುವುದಕ್ಕೆ ಕಾರಣಗಳಿವೆ:

ದೇಸಾಯಿಗೆ ಬಯಲಾಟದ ಹುಚ್ಚಿತ್ತಲ್ಲ, ಹುಚ್ಚೇನು ಬಯಲಾತವಾಡುವುದೇ ಅವನ ಕಸುಬಾಗಿತ್ತು. ಬಯಲಾಟಕ್ಕೆ ಅಲತಗಿಯಿಂದ ಚಿಮಣಾಳನ್ನು ಕರೆಸುತ್ತಿದ್ದರು. ಅವಳಿಗೆ ಬೇಕಾದಷ್ಟು ಹಣ ಸುರಿದು ಎಂಟೆಂಟು ದಿನ ಇಲ್ಲೇ ಇಟ್ಟುಕೊಳ್ಳೂತ್ತಿದ್ದರು. ಇವರಾಡುವ ಬಯಲಾಟಗಳೋ, ಸಿಂಗಾರೆವ್ವನ ಮಲಗುವ ಕೋಣೆಯಿಂದ ನಾವೇ ನೋಡಿದ್ದೇವಲ್ಲ,- ಚೆನ್ನಾಗಿರುತ್ತಿರಲಿಲ್ಲ. ಸರಗಂ ದೇಸಾಯಿ ರಾಜನಾಗಿರುತ್ತಿದ್ದ. ಅದೇನು ಪಾರ್ಟೋ, ಅದೇನು ಅಭಿನಯವೋ, ಇವ ಬಂದೊಡನೆ ಜನ ಬಾಯಿ ಮುಚ್ಜಿಕೊಂಡು ನಗುತ್ತಿದ್ದರು. ಸುಳ್ಯಾಕೆ ಹೇಳಲಿ, ಇವನ ಭಾಗ ಬಂದೊಡನೆ ಸಿಂಗಾರೆವ್ವ ಕಿಡಕಿ ಬಾಗಿಲು ಮುಚ್ಚಿ ಮಲಗಿಬಿಡುತ್ತಿದ್ದಳು. ಇದಲ್ಲ ನಾನು ಹೇಳಬೇಕೆಂದದ್ದು. ಬಯಲಾಟದ ಹಿಂದುಮುಂದಿನ ನಾಕೈದು ದಿನ ಸರಿರಾತ್ರಿ ದೇಸಾಯಿಯನ್ನು ಹೊತ್ತುಕೊಂಡೇ ಮನೆಗೆ ಬರುತ್ತಿದ್ದರು. ಅವ ಬೇಹೋಶ್ ಆಗುವುದು ನಮಗೆ ಗೊತ್ತಿತ್ತಲ್ಲ, ದೈವ ಶಪಿಸುತ್ತ ಉಪಚರಿಸುತ್ತಿದ್ದೆವು. ಆದರೆ ಬಯಲಾಟದ ಹಿಂದುಮುಂದಿನ ದಿನಗಳಲ್ಲೇ ಯಾಕೆ ಹೀಗಾಗಬೇಕೆಂದು ನಮಗೆ ಹೊಳೆದಿರಲೇ ಇಲ್ಲ.

ಯಾಕೆಂದರೆ ಅಲ್ಲಿ ಚಿಮಣಾಳ ತೊಡೆ ನೋಡುತ್ತಿದ್ದ! ಆ ಕಾರ್ಯಕ್ರಮ ನಡೆಯುತ್ತಿದ್ದುದು ಹೀಗೆ: ಚಿಮಣಾಳನ್ನು ಕರೆತಂದವನು ತಾಲೀಮು ಮುಗಿದಮೇಲೆ ಚಿಮಣಾಳ ರೂಪ, ಮೈಮಾಟವನ್ನು ವರ್ಣಿಸಿ, ದೇಸಾಯಿಯನ್ನು ರಮಿಸಿ ಒಂದು ಗುಡಿಸಲಿಗೆ ಕರೆದೊಯ್ಯುವುದಂತೆ. ಗುಡಿಸಿಲ ಹೊರಗೆ ದೇಸಾಯಿಯನ್ನು ಕೂರಿಸಿ ಒಂದು ಸಣ್ಣ ಕಿಂಡಿಯಿಂದ ಒಳಗೆ ನೋಡಲಿಕ್ಕೆ ಹೇಳುವುದು. ಒಳಗೆ ದೀಪದ ಬೆಳಕಿನಲ್ಲಿದ್ದ ಅವಳು ಮೆಲ್ಲನೆ ಸೀರೆ ಎತ್ತುವುದು, ಎತ್ತುತ್ತ ಹೋದಂತೆ ಇವ ಉದ್ರಿಕ್ತನಾಗಿ, ಮೈಮುಖ ಕೆಂಪಾಗಿ, ಅವಳು ಪೂರಾ ತೊಡೆ ತೋರಿಸುವಷ್ಟರಲ್ಲಿ ಈತ ಬೇಹೋಶ್ ಆಗಿ ಬೀಳುವುದು. ಆಮೇಲೆ ಹೊತ್ತು ತಂದು ಮನೆಯಲ್ಲಿ ಚೆಲ್ಲುವುದು. ದೇಸಾಯಿ ಈ ಉದ್ರೇಕಕ್ಕಾಗಿ ಬೇಕಾದಷ್ಟು ಹಣ ಸುರಿಯುತ್ತಿದ್ದ. ಊರಿನ ಕೆಲವರು ಇದರ ಉಪಯೋಗವನ್ನು ಸರಿಯಾಗೇ ಮಾಡಿಕೊಳ್ಳುತ್ತಿದ್ದರು. ಕೆಲವರಂತೂ ಚಿಮಣಾ ಎಂದು ಹೇಳಿ ತಮ್ಮ ಹೆಂಡಂದಿರನ್ನು ಕರೆತಂದು ತೋರಿಸುತ್ತಿದ್ದರಂತೆ. ಹ್ಯಾಗೂ ದೇಸಾಯಿ ಮುಖದ ತನಕ ನೋಡುವುದಿಲ್ಲವಲ್ಲ, ಆತಂಕವೇನಿದೆ? ಯಾವಳ ಕತ್ತಿನಲ್ಲಾದರೂ ಅರಮನೆಯ ಆಭರಣ ಕಂಡಿತೆನ್ನು, ಅವಳು ದೇಸಾಯಿಗೆ ತೊಡೆ ತೋರಿದವಳೆಂದೇ ಜನ ಆಡಿಕೊಳ್ಳುತ್ತಿದ್ದರು. ಬರಬರುತ್ತ ಅಂಥ ಆಭರಣ ಧರಿಸುವುದನ್ನೇ ಜನ ನಾಚಿ ಬಿಟ್ಟರಂತೆ.

ಇಂಥಾದ್ದನ್ನ ಎಲ್ಲಿಯಾದರೂ ಕೇಳಿದ್ದೀಯೇನಪ್ಪ? ಕೇಳೋದೇನು ಬಂತು. ಮುಂದೆ ನಾನೇ ಕಣ್ಣಾರೆ ಕಂಡೆ. ಆದರೆ ನನಗೆ ಭಾರೀ ದೊಡ್ಡ ಆಘಾತವಾಗಿತ್ತು. ಜನ ಹೇಳುವುದೆಲ್ಲ ನನಗೆ ಖಾತ್ರಿಯಾಗಿತ್ತು. ಯಾಕೆಂದರೆ ಸಿಂಗಾರೆವ್ವನ ತೊಡೆ ನೋಡಿ ದೇಸಾಯಿ ಮೂರ್ಛೆ ಹೋದದ್ದಿತ್ತಲ್ಲ. ಇವ ಹೀಂಗಿದ್ದರೆ ಸಿಂಗಾರೆವ್ವ ವ್ರತ ಮಾಡಿದರೇನು ಬಂತು, ಹರಕೆ ಹೊತ್ತರೇನು ಬಂತು, ದಿಂಡುರುಳಿದರೇನು ಬಂತು? ಇದನ್ನು ಅವಳಿಗೆ ಹ್ಯಾಗೆ ಹೇಳಬೇಕೆಂಬುದೇ ನನಗೆ ದೊಡ್ಡ ಗೂಢವಾಯ್ತು. ಹೇಳಿದರೆ ಸುಖವಿಲ್ಲ ನಿಜ; ಹೇಳದಿದ್ದರೂ ಸುಖವಿಲ್ಲ. ಅವಳನ್ನು ಕಾಡಿಸಲಿಕ್ಕೆ ಅಪ್ಪ, ಗಂಡ, ಈ ಜನ ಸಾಲದೆಂದು ದೇವರು ಕೂಡ ಇವರ ಸಂಚಿನಲ್ಲಿ ಸಾಮೀಲಾಗಿದ್ದಾನೆನ್ನಿಸಿತು. ಮನುಷ್ಯರ ದುಷ್ಟತನ ಹ್ಯಾಗೊ ಎದುರಿಸಬಹುದು. ದೇವರೇ ಎದುರು ಬಿದ್ದರೆ ಗತಿ ಯಾರು? ಈ ವಿಚಾರ ತಲೆಗೆ ಹೊಕ್ಕೊಡನೆ ನಿಂತ ನೆಲ ಕುಸಿದ ಹಾಗಾಯ್ತು; ಮುಗಿಲು ಹರಿದು ಮೈಮೇಲೆ ಬೀಳುವುದೊಂದು ಬಾಕಿ. “ಸಿಂಗಾರೆವ್ವ ಕೆಟ್ಟೆ ತಾಯಿ ಕೆಟ್ಟೆ” ಎಂದು ಎದೆಯ ಮೇಲೆ ಕೈಯಿಟ್ಟುಕೊಂಡು ಕುಸಿದುಬಿಟ್ಟೆ.

ಆ ದಿನ ಮಧ್ಯಾಹ್ನ ಊರೊಳಗಿಂದ ಬಂದಾಗ ಅರಮನೆಯಲ್ಲಿ ಸಿಂಗಾರೆವ್ವ ಕಾಣಿಸಲಿಲ್ಲ. ಮಲಗೋ ಅಂತಸ್ತಿನಲ್ಲೂ ಇರಲಿಲ್ಲ. ಅತ್ತೆಯ ಬಳಿ ನೋಡಿದೆ. ಅಡಿಗೆಮನೆ ನೋಡಿದೆ; ಬಚ್ಚಲಮನೆ ಕೂಡ ನೋಡಿದೆ: ಆಯ್ ಶಿವನೇ, ಮನೆ ಬಿಟ್ಟು ಪೌಳಿಯಾಚೆ ಹೆಜ್ಜೆಯಿಟ್ಟವಳಲ್ಲ. ಎಲ್ಲಿ ಇದ್ದಿದ್ದಾಳೆಂದು ದನದ ಕೊಟ್ಟಿಗೆಯ ಕಡೆಗೆ ನಡೆದೆ. ಯಾಕೆಂದರೆ, ಕೆಂದಾಕಳು ಮೊನ್ನೆಯಷ್ಟೇ ಕರು ಹಾಕಿತ್ತು,- ಬಾಣಂತಿ ದನಗಳ ಆರೈಕೆ ಮಾಡುವುದು ಅವಳಿಗೆ ತುಂಬ ಪ್ರಿಯವಾದ ಕೆಲಸವೆಂದು ನಾನು ಬಲ್ಲೆ. ನಾನು ಊಹಿಸಿದಂತೆಯೇ ಅಲ್ಲಿದ್ದಳು. ನಂಜಿಯ ಜೊತೆಗೆ ಅದೇನೋ ಗುಟ್ಟನ್ನು ಹಂಚಿಕೊಂಬವರಂತೆ ಇಳಿದನಿಯಲ್ಲಿ ಮಾತಾಡುತ್ತಿದ್ದಳು. ಜೀವ ತಡೆಯಲಿಲ್ಲ, ನಾನೂ ಮೆಲ್ಲಗೆ ಅವರ ಬಳಿಗೇ ಹೋಗಿ ಅವರಾಡುವುದೆಲ್ಲ ಕೇಳಿಸುವಷ್ಟು ಸಮೀಪ ನಿಂತೆ. ಮೇವಿನ ಕಟ್ಟೆಯ ಮರೆಯಲ್ಲಿ ನಿಂತುದರಿಂದ ನಾನು ಅವರ ಕಣ್ಣಿಗೆ ಬೀಳುತ್ತಿರಲಿಲ್ಲ. ಇಣಿಕಿ ನೋಡಿದೆ.

ಎಳೇ ಮಕ್ಕಳಂತೆ ಇಬ್ಬರೂ ಅಸಮಾನ ಆಸಕ್ತಿ ಮತ್ತು ಆನಂದದಿಂದ ಕಳೆಕಳೆಯಾಗಿದ್ದರು. ನಂಜಿ, ನಮ್ಮ ಹೆಣ್ಣಾಳು, ಚೊಚ್ಚಿಲು ಬಸಿರಿದ್ದದ್ದು ನನಗೆ ಗೊತ್ತಿತ್ತು. ಇಬ್ಬರೂ ಅದರ ಬಗ್ಗೇ ಮಾತಾಡುತ್ತಿದ್ದರು. ಈಗಷ್ಟೇ ಹೊಸ ಆಟಿಗೆಯನ್ನು ಹೊಂದಿದ ಯಜಮಾನಿಯಂತೆ ನಂಜಿ, ಅದು ತನಗಿಲ್ಲವಲ್ಲಾ ಎಂದು, ಅವಳ ಕೈಲಾದರೂ ಅದನ್ನು ನೋಡಿ ಆನಂದಿಸೋಣವೆಂದು, ಆಸೆಬುರಕತನದಿಂದ ನೋಡುವ ಬಡಕೂಸಿನಂತೆ ಸಿಂಗಾರೆವ್ವ-ಕಂಡರು. ನಂಜಿಯ ಮುಖದಲ್ಲಿ ತೃಪ್ತಿಯ ಬಣ್ಣ ಬಂದಿತ್ತು. ಹೊಡೆ ಹಿರಿದ ಬೆಳೆಯಂತೆ ಮುಗುಳುನಗೆ ಮುಖದಲ್ಲಿ ತುಳುಕಾಡುತ್ತಿತ್ತು. ದೇವರಮನೆಯ ನಂದಾದೀಪದಂತೆ ಅವಳ ಕಣ್ಣು ಶಾಂತವಾಗಿ, ನಿಶ್ಚಿಂತವಾಗಿ ಬೆಳಗುತ್ತಿದ್ದವು. ಸಿಂಗಾರೆವ್ವನ ಕಣ್ಣು ಆಸೆಯಿಂದ ಝಳಪಿಸುತ್ತಿದ್ದವು. ಮತ್ತೆ ಮತ್ತೆ ಅವಳೊಳಗೆ ಬಿರುಗಾಳಿಯೆದ್ದು ಹೊಯ್ದಾಡಿ ತಂತಾನೇ ಸುಂಟರಗಾಳಿಯಾಗಿ ಸುತ್ತುತ್ತಿತ್ತು. ಮತ್ತು ಅವಳ ಮುಖ ಕನ್ನಡಿಯಂತೆ ಅದನ್ನೆಲ್ಲ ಬಿಂಬಿಸುತ್ತಿತ್ತು. ಎಳೇ ಮಕ್ಕಳ ಹಾಗೆ ಏನೇನೋ ಕೇಳುತ್ತಿದ್ದಳು, ಹಾಗೆ ಕೇಳಿದಾಗ ಅವಳ ಉಸಿರಾಟ ಅಸಹಜವಾಗಿ ತೀವ್ರಗತಿಗೇರಿ ಕುಸಿಯುತ್ತಿತ್ತು. ದನಿಯ ಏರಿಳಿತ ಅಸಮಾನವಾಗಿತ್ತು. ಸಿಂಗಾರೆವ್ವ ಹೇಳಿದಳು:
“ನಂಜೀ, ಇನ್ನಮ್ಯಾಲ ಹೊಲಕ್ಕ ಹೋಗಬ್ಯಾಡ….”
“ನಮ್ಮತ್ತಿ ಬಿಡೋದಿಲ್ರೆವ್ವ.”
“ಬಿಡೋದಿಲ್ಲಂದರ? ಚೊಚ್ಚಿಲ ಬಸರಿ, ನಿಮ್ಮತ್ತಿಗಿ ತಿಳೀಬಾರದಾ? ಶೀನಿಂಗಿ ಬರಲಿ, ನಿಮ್ಮತ್ತಿಗೆ ಹೇಳಿಕಳಸ್ತೀನಿ; ಅಂಧಾಂಗ ನಂಜೀ, ಒಳಗ ಹೆಂಗ ಅನಸತೈತೆ?”
ನಂಜಿಯೇನು ಹೆತ್ತವಳೆ? ಅವಳಿಗೂ ಇದು ಹೊಸದೇ, ಬಾಯಿ ಬಿಟ್ಟು ಹೇಳಲಾರದ ಸುಖದಲ್ಲಿದ್ದವಳು, ಕಣ್ಣು ಮುಚ್ಚಿ ಮುಗುಳುನಕ್ಕು ಒಂದುಕ್ಷಣ ತಲೆದೂಗಿದಳಷ್ಟೆ.
“ಹಂಗಲ್ಲಗಽ ಹೊಟ್ಯಾಗ ಹೆಂಗ ಅನಸತೈತಿ?”

ನಂಜಿ ಈ ಮಾತಿಗೂ ಹಾಗೇ ನಕ್ಕು, “ನಂಗೊತ್ತಿಲ್ಲರೆವ್ವಾ” ಎಂದಳು. “ಏಳುವಾಗ, ಕೂಡುವಾಗ ಮೆಲ್ಲಗ ಕೂಡು. ಅವಸರ ಮಾಡಬ್ಯಾಡ. ನಿಚ್ಚಣಿಕಿ ಅಂತೂ ಹತ್ತಬ್ಯಾಡ. ಇದನೆಲ್ಲ ನಿಮ್ಮತ್ತಿಗಿ ಹೇಳಿಕಳಸ್ತೀನಿ. ನೀ ಏನ ಕಾಳಜಿ ಮಾಡಬ್ಯಾಡ. ನಿನ್ನ ಗಂಡ ಈಗ ನಿನ್ನ ಜಾಸ್ತಿ ಮಾಯೇ ಮಾಡತಾನೇನ?”
“ಹೋಗ್ರೆವಾ….”
“ಆಯ್ ಹೇಳಗಽ…..ರಾತ್ರಿ ಬರ್‍ತಾನಿಲ್ಲ?
“ಬರತಾನ, ಮನ್ನಿ ರಾತ್ರಿ ನಾ ಮಲಗಿದ್ದೆ, ಅವ ಬಂದು ಮೆಲ್ಲಗ ಹೊಟ್ಟೀ ಮ್ಯಾಲ ಕೈಯಾಡಿಸಿ ಮುದ್ದ ಕೊಟ್ಟ…”
ಇಷ್ಟು ಹೇಳಬೇಕಾದರೆ ಆ ಹುಡುಗಿ ನಾಚಿ ನೀರಾಗಿ ಮುಖ ಮುಚ್ಚಿಕೊಂಡಳು. ಸಿಂಗಾರೆವ್ವನಿಗೇನೋ ಅದೆಲ್ಲಾ ತನಗೇ ಆದಂತೆ ಮುಖ ಕೆಂಪೇರಿತ್ತು.
“ಆಯ್ ಶಿವನಽ, ಹೌಂದೇನ ನಂಜೀ?”-ಎನ್ನುತ್ತ ಮುಖದ ಮೇಲಿನ ಅವಳ ಕೈ ತೆಗೆದು ನಂಜಿಯ ಮುಖವನ್ನ ಕಣ್ಣಿನಿಂದ ಹೀರುವ ಹಾಗೆ ನೋಡಿ ಆನಂದಭರಿತಳಾದಳು. ತಕ್ಷಣ ಅದೇನೋ ತನ್ನ ಮನಸ್ಸು ಕೊರೆಯುತ್ತಿರುವಂತೆ, “ನಂಜೀ ಒಂದ ಮಾತ ಕೇಳಲೇನ?” ಎಂದಳು.
“ಕೇಳ್ರವ್ವ…..”
“ನೀ ಇಲ್ಲಂದರ….”
“ನಿಮಗ ಇಲ್ಲಂದೇನೇನ್ರಿ?…”
“ನಾನೂ ನಿನ್ನ ಹೊಟ್ಟಿಮ್ಯಾಲ ಒಮ್ಮಿ ಕೈಯಾಡಿಸಲೇನ?”-ಎಂದಳು, “ಹೂಂ” ಎನ್ನುತ್ತ ನಂಜಿ ಹೊಟ್ಟೆಯಮೇಲಿನ ಸೀರೆ ತೆಗೆದಳು. ಅವಳು ಇಷ್ಟು ಬೇಗ ಒಪ್ಪಿಕೊಂಡಾಳೆಂದು ಇವಳಿಗೆ ಅನ್ನಿಸಿರಲಿಲ್ಲವೆಂದು ತೋರುತ್ತದೆ. ಆದರೂ ಕೈಯಾಡಿಸುವ ಮುನ್ನ ಒಮ್ಮೆ ಹಿಂದ ಮುಂದ ನೋಡಿ, ಅಪರೂಪದ ಸೌಭಾಗ್ಯ ದೊರೆತುದಕ್ಕೆ ಆನಂದಗೊಂಡು, ಮೆಲ್ಲಗೆ ಅಂದರೆ ಮೆಲ್ಲಗೆ ಕೈಯಿಟ್ಟಳು. ಆಕೆ ಪುಳಕಿತಳಾದದ್ದನ್ನು, ಅವಳ ಕಣ್ಣು ದೀಪದ ಹಾಗೆ ಹೊಳೆಯುತ್ತಿದ್ದುದನ್ನು ಅಷ್ಟು ದೂರದಿಂದಲೂ ನಾನು ನೋಡುತ್ತಿದ್ದೆ. ಆನಂದೋದ್ರೇಕದಲ್ಲಿ ಮಾತು ಸಮ ಹೊರಡುತ್ತಿರಲಿಲ್ಲ. ದನಿ ಕಂಪಿಸುತ್ತ ಕೇಳಿದಳು-
“ನಂಜೀ, ಒಳಗ ಅದು ಹೆಂಗ ಹತ್ತತೈತಿ?”
“ಹೆಂಗೊ ಏನೋ, ನಂಗೊತ್ತಿಲ್ಲರೆವ್ವಾ.”
“ಗೊತ್ತಿಲ್ಲಂದರ, ನಾ ಹೇಳಲಿ?-ಅಂಗೈಯಾಗ ಹಕ್ಕೀಮರಿ ಹಿಡಿಧಾಂಗ ಅನಸತೈತಿ ಅಲ್ಲಾ?”

ನಂಜಿ ಹೂ ಅಂದಳು. ಹಾಗೇ ಕೈಯಾಡಿಸುತ್ತ, “ನಂಜೀ ನಿನಗ ಏನೇನ ಬೇಕ ಹೇಳ,ಏನೇನ ಬಯಕಾಗ್ಯಾವು? ಏನ ತಿನಬೇಕನಸತೈತಿ? ನನ್ನ ಮುಂದ ಹೇಳಽ….” “ಅವಳು “ಏನೂ ಬ್ಯಾಡ್ರೀ” ಎನ್ನುತ್ತಿದ್ದಳು. ಇವಳೇ ಒತ್ತಾಯ ಮಾಡಿ ಅವಳ ಬಾಯಿಂದ ಏನೇನೋ ಪಲ್ಯ ಏನೇನೋ ರೊಟ್ಟಿ, ಚಟ್ನಿ ಹೊರಡಿಸಿ “ನೀನು ಮೆಲ್ಲಗ ಮನೀ ಕಡೆ ನಡಿ, ಈಗಿಂದೀಗ ತಯಾರ ಮಾಡಿ ಶೀನಿಂಗೀನ ಕಳಸ್ತೀನಿ” ಎಂದು ಹೇಳಿ ಅಡಿಗೆ ಮನೆಯತ್ತ ಓಡಿದಳು. ನಾನೂ ಎದ್ದೆ.

ಓಡಿಹೋದವಳು ಶೀನಿಂಗೀ ಶೀನಿಂಗೀ ಎನ್ನುತ್ತ ಮನೆತುಂಬ ಹುಡುಕುತ್ತಿದ್ದಳು. ನನ್ನ ಕಂಡೊಡನೆ ಕೈ ಹಿಡಿದುಕೊಂಡು ಅಡಿಗೆ ಮನೆಗೆ ಎಳೆದುಕೊಂಡೇ ಹೋದಳು. “ನಂಜಿಗಿ ಬಯಕಿ ಹತ್ಯಾವಂತ; ಲಗೂನ ಅಡಿಗಿ ಮಡೂಣ ಬಾ” ಎಂದು ಹೇಳಿ ತಾನೂ ಸಹಾಯಕ್ಕೆ ನಿಂತಳು. ಅಡಿಗಿ ಮುಗಿಯುವ ತನಕ ನಂಜಿಯ ಬಗ್ಗೆ ಏನೇನೋ ಹೇಳಿದಳು. ಹೊಟ್ಟೆಯ ಮೇಲೆ ಕೈಯಾಡಿಸಿದ್ದನ್ನೂ ಹೇಳಿ, ಆ ಹೊಟ್ಟೆ ಹ್ಯಾಗಿರುತ್ತದೆಂದು ವರ್ಣನೆ ಮಾಡಿದಳು. ಅಡಿಗೆ ಮುಗಿದಾಗ ಸಂಜೆಯಾಗಿ ದನಕರು ಮನೆಗೆ ಬರುತ್ತಿದ್ದವು. ತಾನೇ ಕೈಯಾರೆ ಹೆಡಿಗೆ ತುಂಬಿ, ನನ್ನ ಹೊರಿಸಿ “ಹುಷಾರಾಗಿ ಉಣಿಸಿ ಬಾ” ಎಂದು ಬಾಗಿಲತನಕ ಬಂದು ಕಳಿಸಿದಳು.

ನಂಜಿಯ ಮನೆಗೆ ಹೋದೆ. ಮನೆ ಮುಂದೆ ಹೆಂಗಸರು ಸೇರಿದ್ದರು. ಯಾರೋ ಅವಳತ್ತೆ ಎಂದು ಕಾಣುತ್ತದೆ- ಅಳುತ್ತ ಯಾರನ್ನೋ ಶಪಿಸುತ್ತಿದ್ದಳು. ನಾನು ಬಂದುದನ್ನು ನೋಡಿದ ಒಬ್ಬ ಗರತಿ, ಬಂದವಳೇ ನನ್ನ ರೆಟ್ಟೀ ಹಿಡಿದು ಒಂದು ಸಂದಿಯಲ್ಲಿ ಕರೆದೊಯ್ದು,
“ಏನ ಶೀನಿಂಗಕ್ಕಾ, ಸಣ್ಣ ದೊರಿಸಾನಿ ಹಿಂಗ ಮಾಡಬೇಕೇನು?”-ಎಂದಳು. ನನಗೇನೂ ಅರ್ಥವಾಗಲಿಲ್ಲ.
“ಏನು, ಏನು ”-ಅಂದೆ.
“ಮದ್ದಿನದಾಗ ಸಣ್ಣ ದೊರಿಸಾನಿ ನಂಜೀನ ಕರದು ಹೊಟ್ಟಿಮ್ಯಾಲ ಕೈಯಾಡಿಸಿ ಕಳಿಸಿದಳಂತ. ನಂಜಿ ಮನೀಗಿ ಬಂದ ಹಲಿವುಳ್ದೈತಿ! ಪಾಪ, ಬಂಜೀ ಕೈ ಮುಟ್ಟಿದರ ಹೊಟ್ಟೀ ತಡದೀತಽ? ತಿಳೀಬಾರದ ದೊರಿಸಾನಿಗೆ? ನೀ ಆದರೂ ಬುದ್ಧಿ ಹೇಳಬಾರದ?”

-ಅಂದಳು. ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ. ಹಾ ಹೂ ಎನ್ನದೆ, ಹೊತ್ತ ಹೆಡಿಗೆ ಇಳಿಸದೆ ಒಂದೇ ಹೆಜ್ಜೆಯಲ್ಲಿ ಮನೆಗೆ ಬಂದೆ. ಬಂದವಳೇ ಗಾಳಿ ತುಂಬಿದ ಕರುವಿನಂತೆ ಅಡಿಗೆ ಮನೆ ಹೊಕ್ಕು ಹೆಡಿಗೆ ಇಳಿಸಿ ಕಂಬಕ್ಕೊರಗಿ ಹಾಗೇ ಕುಕ್ಕರಿಸಿದೆ. ಸುರಿಯೋ ಬೆವರು, ಒತ್ತಿ ಬರುತ್ತಿದ್ದ ಏದುಸಿರು, ಢವಢವ ಎದೆ ಹೊಡೆದುಕೊಂಡು ಕಣ್ಣಿಗೇನೂ ಕಾಣಿಸದಂತಾಗಿತ್ತು. ಅಷ್ಟೇ ಆತುರದಲ್ಲಿ ಸಿಂಗಾರೆವ್ವ ಬಂದಳು. ನಾ ಕೂತ ಭಂಗಿಯಿಂದಲೇ ಗಾಬರಿಯಾಗಿ
“ಶೀನಿಂಗೀ, ಯಾಕ? ಏನಾಯ್ತು?”-ಅಂದಳು.
“ನಂಜಿ ಹುಲಿವಳ್ದಾಳ ಎವ್ವಾ.”
‘ಏನಂದಿ?”
ನನ್ನ ಬಾಯೊಳಗ ಹುಳಬೀಳಲಿ, ಯಾರು ಎಂತಾ ಏನೂ ವಿಚಾರ ಮಾಡದೆ ಎಲ್ಲಾ ಹೇಳಿಬಿಟ್ಟೆ.
“ಖರೇನ ಎವ್ವಾ, ನೀ ಮದ್ದಿನದಾಗ ಆಕೀ ಹೊಟ್ಟೀಮ್ಯಾಲ ಕೈಯಾಡಿಸಿದೆಂದ. ಬಂಜೀ ಕೈಮುಟ್ಟಿ ಹಂಗಾಯ್ತಂತ ಎಲ್ಲರೂ ಆಡಿಕೋತಿದ್ದರು. ಓಡಿಬಂದೆ.”
ಸಿಂಗಾರೆವ್ವ ಕೇಳಿ, ಸುಂಟರಗಾಳಿಗೆ ಸಿಕ್ಕ ಎಳೇ ಬಿದಿರುಮೆಳೆಯಂತೆ ನಡುಗಿ, ಹೊಯ್ದಾಡಿ ನಿಂತಿರಲಾರದೆ ನಾ ಕೂತ ಕಂಬ ತಬ್ಬಿಕೊಂಡು ಹಾಗೇ ಕುಸಿದಳು. ಬಹಳ ಹೊತ್ತು ಮಾತಾಡಲಿಲ್ಲ. ಕೊನೆಗೆ ನಾ ಮಾಡಿದ್ದೇನೆಂದು ಅರಿವಿಗೆ ಬಂತು. ಸಿಂಗಾರೆವ್ವನ ಎದೆಯೊಳಗೆ ಭಾರೀ ಗಾಯವಾಗಿತ್ತು. “ಎವ್ವಾಽ” ಅಂದೆ. ಇಲ್ಲೀತನಕ ತಡೆಹಿಡಿದ ಅಳಾಪದ ಕಟ್ಟೆಯೊಡೆದು ಉಕ್ಕಿಬಂತು.

“ಶೀನಿಂಗಿ, ಶಿವ ನನ್ನ ಹಣ್ಯಾಗ ಇನ್ನಽ ಏನೇನ ಬರದ್ದಾನಽ”- ಎಂದು ಒದರಿ ಹೇಳುತ್ತ ಕಂಬಕ್ಕೆ ಹಣೆಹಣೆ ಗಿಟ್ಟಿಸತೊಡಗಿದಳು. ಎವ್ವಾ, ನನ್ನಾಣಿ ಹಿಂಗ ಮಾಡಬ್ಯಾಡೆಂದವಳೇ ಹೋಗಿ ಹಿಡಿದುಕೊಂಡು ಕಂಬದಿಂದ ದೂರ ಎಳೆದುತಂದೆ. ನನ್ನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಳು.

“ಮುತ್ತೈದೆ, ಮೂರೂಸಂಜಿ, ತುಂಬಿದ ಮನ್ಯಾಗ ಅಳಬಾರದೆವ್ವಾ”-ಅಂದೆ. ಹಾಗೇ ಕರೆದುಕೊಂಡು ಹೊರಗೆ ಬಂದೆ. ಪರಸ್ಪರ ಅಂಟಿಕೊಂಡೇ ಮನೆಯಂಗಳದ ತನಕ ಹೋದೆವು. ಬೆಳದಿಂಗಳಿತ್ತು. ಈಗ ಅಳೋದನ್ನ ನಿಲ್ಲಿಸಿ ನನ್ನ ಭುಜದ ಮೇಲೆ ತಲೆಯೂರಿ ಬರೀ ಕಣ್ಣೀರು ಸುರಿಸುತ್ತ ಕೂತಳು.

ಈ ದಿನ ಕಂಡು ಕೇಳಿದ ನಮ್ಮ ಕನಸುಗಳನ್ನು ಹುಡಿ ಮಾಡಿಬಿಟ್ಟಿದ್ದವು. ನಮ್ಮ ಎದೆಯೊಳಗೆ ಎಂಥಾ ದೊಡ್ಡ ಗಾಯವಾಗಿತ್ತೆಂದರೆ, ಅದು ಈ ಜನ್ಮದಲ್ಲಿ ಮಾಯುವ ಹಾಗಿರಲಿಲ್ಲ. ಹಾಗೆನಿಸಿದೊಡನೆ ಥಟ್ಟಂತೆ ಕಣ್ಣೀರು ಬಂತು. ಸಿಂಗಾರೆವ್ವನ ಕಡೆ ನೋಡಿ ಹಾಗೇ ಕೈಚಾಚಿದೆ. ದುಃಖದ ಝಳದಲ್ಲಿ ಅವಳೆಷ್ಟು ಬಾಡಿ ಮೆತ್ತಗಾಗಿದ್ದಳೆಂದರೆ, ಕೈ ಮುಟ್ಟಿದ್ದೇ ತಡ ಮೆತ್ತಗೆ ಕೂಸಿನ ಹಾಗೆ ನನ್ನ ತೆಕ್ಕೆಗೆ ಬಂದು, ಎದೆಯಲ್ಲಿ ಮುಖ ಹುದುಗಿದಳು. ಅಳುವ ಗೆಳತಿಯನ್ನು ಸಾಂತ್ವನಗೊಳಿಸಬೇಕು; ನನ್ನಿಂದಾಗಲಿಲ್ಲ. ಬೆಳದಿಂಗಳೇ ಆ ಕೆಲಸ ಮಾಡಲೆಂದು ಸುಮ್ಮನಾದೆ.

ಎಷ್ಟು ಹೊತ್ತು ಹೀಗೇ ಕೂತಿದ್ದೆವೋ, ಸಿಂಗಾರೆವ್ವನ ಕಣ್ಣೀರಿನಿಂದ ನನ್ನ ಕುಬಸ ಒದ್ದೆಯಾಗಿತ್ತು. ಬಿಕ್ಕು ನಿಂತಿದ್ದರೂ ನಿಟ್ಟುಸಿರಿನ ಬಿಸಿಯಿನ್ನೂ ಎದೆಗೆ ತಾಗುತ್ತಿತ್ತು. ಕರುಳು ಹಂಚಿಕೊಂಡವರ ಭಾವನೆಗಳು ಮಾತಿಲ್ಲದೆ ಪರಸ್ಪರ ತಿಳಿಯುವಂತಿತ್ತು. ಹಾಗೆ ನಮಗೂ ತಿಳಿದುಬಿಟ್ಟಿತ್ತು. ಶಿವನಿಗೆ ಕರುಳಿರಲಿಲ್ಲ. ಹಡೆದವನೊಬ್ಬ ವೈರಿ, ಮದುವೆಯಾದವ ಇನ್ನೊಬ್ಬ ವೈರಿ. ಮದುವೆಯಾಗಿ ಹೆಣ್ತನದ ಸುಖವಿಲ್ಲ, ಅದನ್ನು ಮರೆಯುವುದಕ್ಕೆ ಸಂತಾನ ಸುಖವಿಲ್ಲ. ಬರಿಯುಡಿಯಲ್ಲಿ ಬಂದು, ಬರಿಯುಡಿಯಲ್ಲೇ ಮಣ್ಣುಗಾಣುವುದು. ನನ್ನ ಹೃದಯಕ್ಕೆ ಹೇಳುವ ಹಾಗೆ ಎದೆಗೊರಗಿಕೊಂಡೇ, “ಶಿವ ನನ್ನ ಕೈ ಬಿಟ್ನಽ ಶೀನಿಂಗಿ!” ಎಂದಳು. ಈ ಮಾತು ಅವಳು ಹೇಳುವುದಷ್ಟೇ ತಡ, ತಮ್ಮಾ ನೀನು ನಂಬುತ್ತೀಯೋ ಇಲ್ಲವೋ ಪೌಳಿಯ ತೊಲೆಬಾಗಿಲು ಧಡ್ಡನೆ ತೆರೆದುಕೊಂಡಿತು. ಇಬ್ಬರೂ ಆ ಕಡೆ ನೋಡುತ್ತೇವೆ. ಬಾಗಿಲ ಉದ್ದಗಲ ತುಂಬಿ ಜಂಗಮ ಮೂರ್ತಿಯೊಂದು ನಿಂತುಬಿಟ್ಟಿದೆ! ಕಾವಿಬಟ್ಟೆ, ಕರ್ರಗಿನ ಮೈ, ಗುಡಿಯೊಳಗಿನ ಶಿವಲಿಂಗವೇ ಕಾವಿಯುಟ್ಟಂತೆ. ಹೊಳೆಯೋ ಕಣ್ಣು ಉರಿಯುವ ಪಂಜಿನಂತೆ; ಒಂದು ಕೈಯಲ್ಲಿ ಕಂದೀಲಿದೆ, ಇನ್ನೊಂದರಲ್ಲಿ ಜೋಳಿಗೆಯಿದೆ! ಮೈ ಝುಮ್ಮೆಂದು, ಸಳಸಳ ಪುಳಕವೆದ್ದು, ಬೆವರಿಳಿದು, ತೆರೆದ ಕಣ್ಣು ತೆರೆದಂತೇ, ಬರೆದ ಗೊಂಬೆಯಹಾಗೆ ಮಾತು ಮರೆತು ಕೂತೆವು. ಬಂದವನು ಸಿಡಿಲ ಗುಡುಗಿದ ಹಾಗೆ “ಉಂಟು, ಮಕ್ಕಳ ಫಲ ಉಂಟು! ನಿನಗ ಮಕ್ಕಳಾ ಕೊಡದಿದ್ದರೆ ಶಿವನ ಪಾದ ತಿರುವತೀನಿ!”-ಎಂದು ಗುಡುಗಿ, ಹಾಗೇ ಮಾಯವಾದ!
ಎಂಟು

“ಸಾಕ್ಷಾತ್ ಶಿವನೇ ಹಾಗೆ ಹೇಳಿ ಹೋದನೆಂದು ಸಿಂಗಾರೆವ್ವ ಸಂಪೂರ್ಣ ನಂಬಿದಳು. ಹಾಗಂತ ನಾನು ಸುಮ್ಮನಿರಲಿಲ್ಲ. ಅವರಿವರೆದುರಿಗೆ ಅವನ ವರ್ಣನೆ ಮಾಡಿ ಅವ ಯಾರು, ಏನು, ಎತ್ತ ತಿಳಿಯಲು ಹವಣಿಸುತ್ತಿದ್ದೆ. ನಂಜಿ ಹಲಿವುಯ್ದಳಲ್ಲ. ಸಿಂಗಾರೆವ್ವನಿಗೆ ಬಂಜೆ ಎಂಬ ಶಬುದ ಖಾಯಂ ಅಂಟಿಕೊಂಡುಬಿಟ್ಟಿತು. ಮೊದಮೊದಲು ಜನ ಹೆಂಗಸರು ಅರಮನೆಗೆ ಬರುತ್ತಿದ್ದವರು, ಬರಬರುತ್ತಾ ಕಮ್ಮಿಯಾಗಿ ಕೊನೆಗೆ ಅವರು ಬರುವುದು ನಿಂತೇ ಹೋಯಿತು. ಮಕ್ಕಳನ್ನೆತ್ತಿಕೊಂಡು ಹೋಗುತ್ತಿದ್ದ ಅವ್ವಕ್ಕಗಳು ಅರಮನೆ ಮುಂದೆ ಹಾಯುವಾಗ ಬಂಜಿ ದೊರೆಸಾನಿಯ ಕೆಟ್ಟದೃಷ್ಟಿ ತಾಗೀತೆಂದು ಮಕ್ಕಳಮೇಲೆ ಸೀರೆ ಸೆರಗು ಹೊದಿಸಿ ಮರೆಮಾಡಿಕೊಂಡು ದಾಟಿಹೋಗುತ್ತಿದ್ದರು. ಇದೆಲ್ಲ ಸಿಂಗಾರೆವ್ವನಿಗೆ ತಿಳಿಯಲಿಲ್ಲವೆಂದಲ್ಲ. ಈ ಜನ ಮಕ್ಕಳ ಬಗ್ಗೆ ಎಷ್ಟೊಂದು ಸೂಕ್ಷ್ಮ ಮತ್ತು ಅದೇ ಕಾರಣಕ್ಕಾಗಿ ಅವರು ಎಷ್ಟೊಂದು ನಿರ್ದಯಿಗಳಾಗಬಲ್ಲರೆಂಬುದಕ್ಕೂ ಇದು ಸಾಕ್ಷಿಯಾದೀತು. ಆದರೆ ಅದೇನೋ ಅಂತಾರಲ್ಲ – ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಧಾರ ಅಂತ. ಹಾಗೆ ನಾವಂತೂ ಆ ಜಂಗಮನ ಮಾತಿಗೆ ಜೋತುಬಿದ್ದು ಶಿವನೇ ಎನ್ನುತ್ತ ಕುಂತೆವು. ಆ ಜಂಗಮನ ಹೆಸರು ಹುಚ್ಚಯ್ಯ ಅಂತ…..”

ಇಲ್ಲಿ ಹುಚ್ಚಯ್ಯನ ಬಗ್ಗೆ ನನ್ನ ಒಂದೆರಡು ಮಾತು ಸೇರಿಸುತ್ತೇನೆ. ಹುಚ್ಚಯ್ಯನನ್ನು ಚಿಕ್ಕಂದಿನಲ್ಲಿ ನಾನು ನೋಡಿದ್ದೆ. ಅವನೊಂದಿಗೆ ಆಟ ಆಡಿದ್ದೆ. ಅವನ ಊರುಕೇರಿಗಳ ವಿಚಾರ ನಮ್ಮ ಊರಿನವರಿಗೂ ತಿಳಿಯದು. ಊರು ಕೇಳಿದರೆ ಶಿವನೂರು ಅನ್ನುತ್ತಿದ್ದ. ತಂದೆ ತಾಯಿ ಬಗ್ಗೆ ಕೇಳಿದರೆ ಶಿವಪಾರ್ವತಿಯರ ಹೆಸರು ಹೇಳುತ್ತಿದ್ದ. ಇಂಥವನಿಂದ ಏನು ಬಿಚ್ಚಲಾದೀತು? ಅವನಿಗೊಂದು ಮನೆಯಿಲ್ಲ, ಮಠವಿಲ್ಲ, ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ. ಕರೆದವರ ಮನೆಗೆ ಊಟಕ್ಕೆ ಹೋದರೆ ಹೋದ, ಇಲ್ಲದಿದ್ದರಿಲ್ಲ. ಕೆಲವು ಸಲ ಯಾರದೋ ಅಡಿಗೆ ಮನೆಗೆ ನುಗ್ಗಿ “ಇಂದು ಶಿವನ ಊಟ ಇಲ್ಲೇ”-ಎಂದು ಹೇಳಿ ಕೂತುಬಿಡುತ್ತಿದ್ದ. ಅವನಿಗೆ ಇಲ್ಲವೆಂದು ಹೇಳಿವಂಥ ಧೈರ್ಯ ಅಥವಾ ಮನಸ್ಸು ನಮ್ಮೂರಿನಲ್ಲಿ ಯಾರಿಗೂ ಇರಲಿಲ್ಲ. ಅಷ್ಟೇ ಅಲ್ಲ, ಅವ ಉಂಡು ಹೋದರೆ ಸ್ವಯಂ ಶಿವನೇ ಬಂದು ಉಂಡುಹೋದಂತೆ ಧನ್ಯರಾಗುತ್ತಿದ್ದರು.

ಮಕ್ಕಳೆಂದರೆ ಅವನಿಗೆ ಪ್ರಾಣ. ಒಮ್ಮೊಮ್ಮೆ ಎಳೇ ಮಕ್ಕಳ ಹಾಗೆ ಬೆರಳು ಸೀಪಿಕೊಂಡು ಮಣ್ಣಾಟ ಆಡುತ್ತಿದ್ದ. ನಾವೇನಾದರೂ ಚಿಣ್ಣಿದಾಂಡ, ಹುತುತು, ಸರಮಂಚ ಆಡುತ್ತಿದ್ದರೆ ಬಂದು ಸೇರಿಕೊಳ್ಳುತ್ತಿದ್ದ. ಆಟ ತಪ್ಪಿದರೆ ಎದುರಾಳಿಯ ಅಂಗಿ ಹಿಡಿದು ಮಕ್ಕಳಂತೇ ಬೈದಾಡಿ ಜಗಳಾಡುತ್ತಿದ್ದ. ಗೆದ್ದರೆ ಕುಣಿದಾಡುತ್ತಿದ್ದ. ಸೋತರೆ ಬಾಡುತ್ತಿದ್ದ. ಒಮ್ಮೆ ಅವನೇ ಆಟ ತಪ್ಪಿ, ತಪ್ಪನ್ನೇ ಸಮರ್ಥಿಸಿಕೊಂಡಾಗ ಈ ನನ್ನ ಮಿತ್ರ ಶಿರಸೈಲ ಮತ್ತವನ ಹುಡುಗರು ಅವನನ್ನು ಮುತ್ತಿ ಥಳಿಸಿದ್ದರು. ಹುಚ್ಚಯ್ಯ ಅಳುತ್ತ ಶಿವನಿಗೆ ಹೇಳುವುದಾಗಿ ಕುಮುದವ್ವನ ಗುಡಿಯತ್ತ ಹೋಗಿದ್ದ. ಆದರೆ ಹುಣ್ಣಿಮೆ ಅಮಾವಾಸ್ಯೆ ಬಂತೆಂದರೆ ಅದರ ಹಿಂದುಮುಂದಿನ ದಿನ ಮಾಯವಾಗುತ್ತಿದ್ದ. ಆಗ ಅವ ಎಲ್ಲಿ ಹೋಗುತ್ತಿದ್ದ, ಏನು ಮಾಡುತ್ತಿದ್ದ ಎಂಬುದ್ಯಾರಿಗೂ ತಿಳಿಯದು. ಆದರೆ ಆತನ ಬಗ್ಗೆ ಜನರಲ್ಲಿಯ ಭಯಭಕ್ತಿ ಮಾತ್ರ ಅಪಾರ. ಅದಕ್ಕೆ ಮುಖ್ಯ ಕಾರಣವೆಂದರೆ ಅವನ ನಾಲಗೆ. ಆ ಭಾಗದಲ್ಲಿ ಪ್ರಚಾರದಲ್ಲಿದ್ದ ಅವನ ಪವಾಡಗಳೂ ಹಾಗಿದವು. ಒಮ್ಮೆ ಕುಮುದವ್ವನ ಜಾತ್ರೆಯಲ್ಲಿ ಜನ ಊಟಕ್ಕೆ ಕುಳಿತಿದ್ದರು. ಜೋರಿನಿಂದ ಮಳೆ ಬಂತು. ಜನ ಬುದಿಂಗನೆ ಏಳಬೇಕೆನ್ನುವಾಗ ಇವನು “ಏಳಬ್ಯಾಡ್ರೀ, ಪಂಕ್ತಿ ಹಂಗಾಽ ಸಾಗಲಿ” ಎಂದು ಹೇಳಿ ಎರಡೂ ಕೈ ಎತ್ತಿದನಂತೆ. ಜನ ಊಟಕ್ಕೆ ಕೂತಲ್ಲಿ ಮಾತ್ರ ಮಳೆ ಇರಲಿಲ್ಲ, ಅದಷ್ಟು ಸ್ಥಳ ಬಿಟ್ಟು ಉಳಿದೆಲ್ಲಾ ಕಡೆ ಧೋ ಧೋ ಮಳೆ ಸುರಿದು ನೀರಾಡಿತಂತೆ!

ಇಷ್ಟಿದ್ದೂ ಆತ ಹೆಚ್ಚು ಖ್ಯಾತನಾದದ್ದು ತನ್ನ ಕಚ್ಚೆಹರುಕುತನದಿಂದ. ಮತ್ತು ಅವನ ಈ ಬಗೆಯ ಪವಾಡಗಳೇ ಹೆಚ್ಚು ಜನಪ್ರಿಯವಾಗಿದ್ದವು. ಒಂದೆರಡು ಸ್ಯಾಂಪಲ್ ನೋಡಿರಿ: ಒಮ್ಮೆ ನಮ್ಮೂರಿನ ಠಕ್ಕಪ್ಪ ಗಾಡಿಹೂಡಿಕೊಂಡು ಗೋಕಾವಿಗೆ ಹೊರಟಿದ್ದ. ಹುಚ್ಚಯ್ಯ ತಾನೂ ಬರುವುದಾಗಿ ಹೇಳಿ ಗಾಡಿ ಹತ್ತಿ ಕೂತ. ಅದೇ ದಾರಿಯಲ್ಲಿ ಬುಟ್ಟಿಹೊತ್ತು ಕೊಣ್ಣೂರಿಗೆ ಹೊರಟಿದ್ದ ಹೆಂಗಸೊಬ್ಬಳು ಸಿಕ್ಕಳು. “ದಣಿವಾಗೇತಿ ನನ್ನಷ್ಟ ಗಾಡಿ ಹತ್ತಿಸಿಕೊಳ್ರಪ್ಪ” ಎಂದು ಕೇಳಿಕೊಂಡು ಅವಳು ಹತ್ತಿದಳು. ಗಾಡಿ ತುಸು ಮುಂದೆ ಸಾಗುವಷ್ಟರಲ್ಲೇ ಹುಚ್ಚಯ್ಯ ಆ ಹೆಂಗಸನ್ನು ಮರುಳು ಮಾಡಿದ್ದ. ಗಾಡಿ ಹೊಡೆಯುತ್ತಿದ್ದ ಠಕ್ಕಪ್ಪನಿಗೆ ಹುಚ್ಚಯ್ಯ “ಮಗನಽ ಠಕ್ಕ್ಯಾ ಹಿಂದಿರಿಗಿ ನೋಡಬ್ಯಾಡ; ನೋಡಿದರ ನಿನ್ನ ಕಣ್ಣ ಹೋಗ್ತಾವಲೇ”- ಅಂದ. ಠಕ್ಕಪ್ಪನಿಗೆ ಕುತೂಹಲ ತಡೆದುಕೊಳ್ಳಲಾಗಲಿಲ್ಲ. ಮೆಲ್ಲಗೆ ಎಡಗಣ್ಣಿಂದ ಓರೆ ನೋಡಿದ. ಆದರೆ ನೋಡನೋಡುತ್ತಿದ್ದಂತೆ ಅವನ ಎಡಗಣ್ಣು ಕುರುಡಾಗಿಬಿಟ್ಟಿತು. ಈ ಪವಾಡ ನನಗೂ ಖಾತ್ರಿಯಾಗಿದೆ. ಯಾಕೆಂದರೆ ಈಗಲೂ ಠಕ್ಕಪ್ಪ ಜೀವಂತವಾಗಿದ್ದಾನೆ, ಎಡಗಣ್ಣು ಕುರುಡಾಗಿದೆ.

ಹುಚ್ಚಯ್ಯನೊಮ್ಮೆ ಸಾವಳಗಿ ಜಾತ್ರೆಗೆ ಹೋಗಿದ್ದಾಗ ಯಾವಳೋ ಒಬ್ಬ ಹೆಂಗಸಿನ ಮೇಲೆ ಆಸೆಯಾಯ್ತು. ನೆರೆದ ಭಾರೀ ಜಾತ್ರೆಯಲ್ಲಿಯೇ ಕೂಡಿಬಿಟ್ಟ. ತಕ್ಷಣ ನಮ್ಮೂರ ನಾಕೈದು ಜನ ಅವನ ಭಕ್ತರು ನೋಡಿ, ಓಡಿಹೋಗಿ ದಿಕ್ಕಿಗೊಬ್ಬೊಬ್ಬರು ಸುತ್ತುಗಟ್ಟಿ ನಿಂತು ಉಟ್ಟ ಧೋತ್ರಗಳನ್ನೆ ಕಳಚಿ ಅವರ ಸುತ್ತ ಪರದೆಯಂತೆ ಹಿಡಿದು ಮರೆಮಾಡಿದರಂತೆ!

ಇನ್ನೊಂದು ಪವಾಡ ಕೇಳಿರಿ: ಒಮ್ಮೆ ಒಬ್ಬ ಗೌಡನ ಮನೆಗೆ ಹುಚ್ಚಯ್ಯ ಬಿನ್ನಾಯಕ್ಕೆ ಹೋಗಿದ್ದ. ಊಟ ಬಡಿಸುತ್ತಿದ್ದ ಅವನ ಹೆಂಡತಿಯನ್ನು ನೋಡಿ ಹುಚ್ಚಯ್ಯ “ಗೌಡಾ, ಈಕೀನ ನನಗೆ ಕೊಡೋ” ಎಂದನಂತೆ. ಗೌಡ ಕೊಟ್ಟ. ಕೊಟ್ಟು “ನನಗೇನ ಕೊಡ್ತೀಯಪ”-ಅಂದನಂತೆ. ಹುಚ್ಚಯ್ಯ “ತಗೋ” ಎಂದು ತನ್ನ ಕಾಲ್ಮರಿಯನ್ನೇ ಕೊಟ್ಟನಂತೆ. ಆ ಕಾಲ್ಮರಿಯನ್ನು ಈಗಲೂ ಆ ಮನೆತನದವರು ದೇವರ ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ! ನಮ್ಮೂರವರನ್ನು ಕೇಳಿದರೆ ಇಂಥ ಸಾವಿರ ಪವಾಡ ಹೇಳಿಯಾರು. ಇವನ್ನು ಪವಾಡವೆಂದು ಒಪ್ಪಿಕೊಂಡು ಕಥೆಮಾಡಿ ಹೇಳುವ ಈ ಜನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನಮ್ಮ ಊರಿನಲ್ಲಿ ಆತ ಬಯಸಿದ್ದನ್ನು ಎರಡು ಮಾತಿಲ್ಲದೆ ಕೊಡುವ ಭಕ್ತರಿದ್ದಾರೆ. ಸುಳ್ಳಲ್ಲ, ಅವನು ಉಗಿದ ಉಗುಳನ್ನೂ ನುಂಗಿದ ಭಕ್ತರಿದ್ದಾರೆ. ಬಹುಶಃ ಎದುರಾಡಿದರೆ ಅವನು ನೊಂದು ಏನಾದರೂ ಅಂದುಗಿಂದಾನೆಂದು, ಹಾಗೇನಾದರೂ ಅಂದರೆ ಅದು ಹುಸಿ ಹೋಗುವುದಿಲ್ಲವೆಂದು ಹೆದರಿಕೊಂಡು ಜನ ಅವನನ್ನು ಒಪ್ಪಿರಬೇಕು. ನನ್ನ ಇತ್ತೀಚಿನ ಅಂದಾಜಿನ ಪ್ರಕಾರ ಅವನೊಬ್ಬ ವಿಷಯಾಸಕ್ತನಾದ ತಾಂತ್ರಿಕ ಸಿದ್ಧ. ಕೆಲವು ವಿಲಕ್ಷಣ ಶಕ್ತಿಗಳು ಅವನಲ್ಲಿದ್ದುದು ನಿಜ. ಮತ್ತು ಆ ಶಕ್ತಿಗಳ ದುಡಿಮೆಯಿಂದ ಅವನು ಚಕ್ರಬಡ್ಡಿ ಸಮೇತ ಸುಖ ಪಡೆಯುತ್ತಿದ್ದ. ಮುಖದ ವರ್ಚಸ್ಸಿನಿಂದಾಗಿ ಅವನು ಸಾಕ್ಷಾತ್ ಶಿವನೆಂದು ಸಣ್ಣ ದೊರೆಸಾನಿ ನಂಬಿದ್ದರೆ ಅದು ಹೆಚ್ಚಲ್ಲ. ಆದರೆ ಹೋಗಿ ಹೋಗಿ ಇಂಥವನ ಪ್ರಭಾವಕ್ಕೆ ಒಳಗಾದಳಲ್ಲ-ಎಂದು ನನಗೂ ಹಳಹಳಿಯಾಯಿತೆಂದು ಮಾತ್ರ ಹೇಳಬಲ್ಲೆ, ಈಗ ಶೀನಿಂಗವ್ವನ ಮುಂದಿನ ಕಥೆ ಕೇಳೋಣ:

“ಹುಚ್ಚಯ್ಯನ ಹೆಸರನ್ನು ಈ ಹಿಂದೆ ನಾವು ಕೇಳಿದ್ದೆವಾದರೂ ಅಷ್ಟು ಗಮನ ಕೊಟ್ಟಿರಲಿಲ್ಲ. ಊರ ಭಕ್ತರೊಂದಿಗೆ ಅಷ್ಟೊಂದು ವಹಿವಾಟಿದ್ದವನು ಅರಮನೆಗ್ಯಾಕೆ ಈತನಕ ಬಂದಿರಲಿಲ್ಲವೆನ್ನುವುದೂ ಸೋಜಿಗವೇ. ಈಗ ಕರೆಯದೆಯೇ ಅರಮನೆಗೆ ಬಂದಿದ್ದ. ಅವನ ನಾಲಗೆ ಹುಸಿ ಹೋಗುವುದಿಲ್ಲವೆಂದು ಅನೇಕರನ್ನು ಕೇಳಿ ಖಾತ್ರಿ ಮಾಡಿಕೊಂಡಿದ್ದೆ. ಅವನ ಬಗ್ಗೆ ಹೇಳುವ ಜನ ಮತ್ತೆ ಮತ್ತೆ ಆ ಮಾತನ್ನು ಹೇಳುವ ಹಾಗೆ ಮಾಡುತ್ತಿದ್ದೆ.

ಈ ಮಧ್ಯೆ ಸಿಂಗಾರೆವ್ವ ದೇಸಾಯಿಯ ಮನ ಒಲಿಸಿಕೊಳ್ಳಲು ಖಟಪಟಿ ಮಾಡುತ್ತಿದ್ದಳು. ಅವನ ಬಯಲಾಟದ ಖಯಾಲಿ ತಪ್ಪಿಸಿ ಮನೆಯಲ್ಲಿ ಬಿದ್ದುಕೊಳ್ಳುವ ಹಾಗೆ ಮಾಡಬೇಕಿತ್ತು. ಅದಕ್ಕಾಗಿ ತಾನೇ ಮುಂದಾಗಿ ಸಲಿಗೆ ಬೆಳೆಸಿಕೊಂಡಳು. ಊಟಕ್ಕೆ ನೀಡುತ್ತಿದ್ದಳು, ಜಳಕ ಮಾಡಿಸುತ್ತಿದ್ದಳು, ಕಾಲು ತಿಕ್ಕುತ್ತಿದ್ದಳು. ಒಮ್ಮೆ “ನಿಮಗ ನಾ ಹೆಚ್ಚೋ ಬಯಲಾಟ ಹೆಚ್ಜೋ?” ಎಂದು ಕೇಳಿಯೂ ಬಿಟ್ಟಿದ್ದಳು. ಆದರೆ ದೇಸಾಯಿ, “ಹಾ ಪ್ರಿಯೆ, ಪ್ರಶಾಂತ ಹೃದಯೆ” ಅಂತೇನೋ ನಾಟಕದ ಪ್ರಾಸ ಹೇಳಿ ತಪ್ಪಿಸಿಕೊಂಡಿದ್ದ.

ಅಂತೂ ಹುಚ್ಚಯ್ಯನ ವಾಕ್ಯೆ ಆಗಿ ಎಂಟು ತಿಂಗಳಾದರೂ ದೇಸಾಯಿ ಸಿಂಗಾರೆವ್ವನನ್ನು ಮುಟ್ಟುವ ಗೋಜಿಗೆ ಹೋಗಲೇ ಇಲ್ಲ. ಈ ಅವಧಿಯಲ್ಲಿ ಹುಚ್ಚಯ್ಯನೂ ಅರಮನೆಯ ಕಡೆ ಸುಳಿದಿರಲಿಲ್ಲ.

ಅವನೆಲ್ಲೋ ಯಾತ್ರೆ ಹೋಗಿದ್ದವನು ಬಂದಿದ್ದಾನೆಂದು ದುದ್ದಿ ಬಂತು. ಆದರೆ ಅವನಿದ್ದುದು ಕುಮುದವ್ವನ ಗುಡಿ ಕಡೆಯ ಖಾಲಿ ಗುಡಿಸಲಿನಲ್ಲಿ. ಈ ಊರಿನ ಹೆಂಗಸರು ಕುಮುದವ್ವನ ಹೆಸರು ಹೇಳುವವರೇ ಹೊರತು ಅವಳ ಗುಡಿಯ ಕಡೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ, ಮೈಲಿಗೆ ಮುಡಿಚಟ್ಟಾದಾಗ ಆ ಕಡೆ ಮುಖ ಕೂಡ ಮಾಡುವುದಿಲ್ಲ. ನಾನು ಪರವೂರಿನಲ್ಲಿ ಹುಟ್ಟಿ ಬೆಳೆದವಳಾದುದರಿಂದ ಅಂಥ ಭಯಗಳೇನೂ ಇರಲಿಲ್ಲ. ಅಲ್ಲದೆ ಈ ಗುಡಿಸಲಿಗೂ ಕುಮುದವ್ವನ ಗುಡಿಗೂ ತುಂಬ ದೂರ. ಸಿಂಗಾರೆವ್ವನಿಗೂ ಹೇಳದೆ ಇಂದು ಹುಚ್ಚಯ್ಯನನ್ನು ನೋಡೇ ಬಿಡಬೇಕೆಂದು ಹೊರಟೆ. ಊರ ಸೀಮೆ ದಾಟಿರಬೇಕು, ಸುದೈವಕ್ಕೆ ಅವನೇ ಈ ಕಡೆ ಬರುತ್ತಿದ್ದ. ಅಡ್ದಬಿದ್ದು,
“ಸ್ವಾಮಿ, ಗುರುತ ಸಿಕ್ಕಿತ?”-ಅಂದೆ.
“ನೀ ಅರಮನಿ ಶೀನಿಂಗವ್ವಲ್ಲಾ?”- ಅಂದ. ಅವನು ಗುರುತಿಸಿದ್ದಕ್ಕೆ ಸಂತೋಷಗೊಂಡು “ಹೌಂದ್ರೀಯಪಾ”-ಅಂದೆ.
“ಸಣ್ಣ ದೊರೆಸಾನಿ ಹೆಂಗದಾಳ?”
“ಹಂಗೇನ್ರಿ ಮಕ್ಕಳಾಗತಾವಂತ ನಿಮ್ಮ ವಾಕ್ಯೆ ಆಗಿ ಎಂಟು ತಿಂಗಳಾಯ್ತು; ಇನ್ನಽ ಏನೂ ಆಗಲಿಲ್ಲ.”

-ಅಂದೆ. ಎದುರೆದುರಿಗೇ ನಿಮ್ಮ ನುಡಿ ಹುಸಿಯಾಯಿತೆಂದು ಹೇಳಿದ್ದು ಸರಿಯಾಗಲಿಲ್ಲವೆಂದು ಅನ್ನಿಸಿತು. ಯಾರು ಬಲ್ಲರು, ಅವ ಮೊದಲೇ ಹುಚ್ಚಯ್ಯ, ಇನ್ನೇನಾದರೂ ಆಡಿಬಿಟ್ಟರೆ ಒಂದು ಮಾಡಹೋಗಿ ಇನ್ನೊಂದಾಗಬಾರದಲ್ಲ ಎಂದು ಹೆದರಿದೆ. ಸಧ್ಯ ಅಂಥದ್ದೇನೂ ನಡೆಯಲಿಲ್ಲ. ನನ್ನ ಮಾತು ಕೇಳಿ ಹುಚ್ಚಯ್ಯ ಹುಬ್ಬು ಗಂಟಿಕ್ಕಿಕೊಂಡು ಪಕ್ಕದ ಬಾಂದದಮೇಲೆ ಕೂತ. ನನ್ನ ಕಡೆಗೊಮ್ಮಿ ನೋಡಿ ಕಣ್ಣು ಮುಚ್ಚಿದ. ಬಹುಶಃ ಶಿವನೊಂದಿಗೆ ಮಾತಾಡುತ್ತಿದ್ದಾನೆ ಎಂದುಕೊಂಡೆ. ಶಿವನಿಗೆ ನಮ್ಮಾಸೆ ಮುಟ್ಟಲೆಂದು ನಾನೂ ಕೈ ಮುಗಿದು ಕೂತೆ. ಕಣ್ಣು ತೆರೆದ. ಶಿವನಾಜ್ಞೆ ಏನಾಯಿತೋ ಎಂದು ನನ್ನೆದೆ ಹಾರುತ್ತಿತ್ತು.
“ಹಗಲಲ್ಲ, ರಾತ್ರಿ ಅಲ್ಲ, ಮೂರು ಸಂಜಿಕ ಶಿವ ಅರಮನೀಗಿ ಬರತಾನ, ನೀ ಮುಂದ ನಡಿ” ಅಂದ. ಎದೆ ಹಗುರಾಗಿ ಮನೆಕಡೆ ಓಡಿಬಂದೆ.

ಹುಚ್ಚಯ್ಯನಿಗೆ ಭೇಟಿಯಾದದ್ದನ್ನಾಗಲೀ, ಅವನು ಅರಮನೆಗೆ ಬರುವುದನ್ನಾಗಲಿ ಸಿಂಗಾರೆವ್ವನಿಗೆ ಹೇಳಲೇ ಇಲ್ಲ. ಉತ್ಸಾಹದಿಂದ ನಾನು ಕಳಕಳೆಯಾಗಿರುವುದನ್ನು ನೋಡಿ “ಅದೇನಽ ಅಷ್ಟೊಂದು ಉಮೇದಿ ಉಕ್ಕತೈತಿ?” ಎಂದು ಕೇಳಿಯೂ ಬಿಟ್ಟಳು. ನನ್ನ ಒಡತಿ ಯಾ ಗೆಳತಿಗೆ ಉಪಯುಕ್ತವಾದುದೊಂದು ಕೆಲಸವನ್ನ, ಅವಳಿಂದ ಹೇಳಿಸಿಕೊಳ್ಳದೆಯೇ ಮಾಡಿದ್ದು ಗೊತ್ತಾದಾಗ ಅವಳ ಬೆರಗಿನ ಮತ್ತು ಮೆಚ್ಚುಗೆಯ ಮುಖ ನೋಡಬೇಕೆಂದು ನನ್ನ ತವಕ. ಸಂಜೆಯಾಗುತ್ತಲೂ ಅರಮನೆಯ ತೊಲೆಬಾಗಿಲು ತೆರೆದಿಟ್ಟು ಅಲ್ಲೇ ಕಣ್ಣು ನೆಟ್ಟು ಕೂತೆ. ಹೊತ್ತು ಮುಳುಗುತ್ತಿದ್ದರೂ ಆತ ಬರಲಿಲ್ಲ. ಅಷ್ಟರಲ್ಲಿ ಸಿಂಗಾರೆವ್ವ ಓಡಿಬಂದು “ಏ ಶೀನಿಂಗೀ, ಹಿತ್ತಲಾಗ ಹುಚ್ಚಯ್ಯ ಬಂದಾನ ಬಾರಗಽ”-ಎಂದು ಕರೆದಳು. ಇಬ್ಬರೂ ಅತ್ತ ಓಡಿದೆವು.

ಹುಚ್ಚಯ್ಯ ಹಿತ್ತಲ ಬಣಿವೆಯ ಬಳಿ ಕೂತಿದ್ದ. ಇಬ್ಬರೂ ಹೋಗಿ ನಮಸ್ಕಾರ ಮಾಡಿದೆವು. ಸಿಂಗಾರೆವ್ವನನ್ನು ಕುರಿತು “ಬಾ ತಾಯಿ”-ಅಂದ. “ಕೈ ತಾ” ಅಂದ. ಅವಳು ಬಲಗೈ ನೀಡಿದಾಗ ಅಂಗೈಗೆರೆ ಎಣಿಕೆ ಹಾಕಿ ನನ್ನ ಕಡೆ ಓರೆನೋಟ ಬೀರಿದ. ಅವನ ಚಂಚಲ ಕಣ್ಣುಗಳಲ್ಲಿ ಬೆಳಕಾಡುತ್ತಿತ್ತು. ಆ ಕರಿಮುಖದಲ್ಲೂ ಬಿಸಿನೆತ್ತರಾಡಿ ಕೆಂಪಾಗಿತ್ತು. ಅವಳ ಮುಖ ನೋಡುವುದಕ್ಕೆ ಅವನು ಹೆದರುತ್ತಿದ್ದನೋ ಏನೋ, ಅವಳ ಕೈ ಹಿಡಿದ. ಅವನ ಕೈ ನಡುಗುತ್ತಿದ್ದುದು ನನ್ನ ಗಮನಕ್ಕೆ ಬಂತು.
“ಫಲ ಉಂಟು ತಾಯಿ, ಆದರ ಅಮಾಸೀ ದಿನ ಶಿವನಿಗೆ ಒಂದು ಪೂಜಿ ಆಗಬೇಕು. ಆ ಪೂಜಿಗಿ ನೀ ಅಲ್ಲದಽ ಇನ್ನ್ಯಾರೂ ಇರಬಾರದು.”

-ಈ ಮಾತು ಹೇಳುವಾಗ ಅವನ ಮುಖ ಬಿಳಿಚಿಕೊಂಡಿತು. ಎರಡು ಮೂರು ಸಲ ಉಗುಳು ನುಂಗಿದ. ನಾಲಗೆಯಿಂದ ತುಟಿ ಸವರಿಕೊಂಡು ಒದ್ದೆ ಮಾಡಿಕೊಂಡ. ಆದರೆ ಸಿಂಗಾರೆವ್ವ ಒಬ್ಬಳೇ ಇರಬೇಕೆನ್ನುವ ಮಾತನ್ನು ನಾನು ಒಪ್ಪಲಿಲ್ಲ. ಅವಳಂತೂ ಹೆದರಿ ಕೊಟ್ಟ ಕೈ ಹಿಂತೆಗೆದುಕೊಂಡು ಕಣ್ಣರಳಿಸಿ ಅದಾಗದೆಂದು ಹೇಳೆಂಬಂತೆ ನನ್ನ ಕಡೆ ನೋಡಿದಳು.
“ಅಧೆಂಗರಿ ಯಪಾ, ದೊರೆಸಾನಿ ಒಬ್ಬಾಕೀನಽ ಹೆಂಗಿದ್ದಾಳು? ಗುರು ಹಿರಿಯರಿದ್ದ ಮನಿ ಅಂದಮ್ಯಾಲ ಅವರ್‍ನ ಬಿಟ್ಟ ನಮಗ ನಾವಽ ಪೂಜಿ ಮಾಡಾಕಾದೀತ?”-ಎಂದೆ.
ಅವನು ಬೇರೆ ರೀತಿಯ ವ್ಯವಸ್ಥೆಗೆ ಒಪ್ಪಲೇ ಇಲ್ಲ. ಗಂಡ ಹೆಂಡತಿ ಇಬ್ಬರೂ ಪೂಜಿ ಮಾಡಲಿ-ಅಂದೆ. ಅದಕ್ಕೂ ಒಪ್ಪಲಿಲ್ಲ. ಕೊನೆಗೆ “ಇಚ್ಛಾ ಇಲ್ಲದಿದ್ದರ ಬಿಡಿರಿ” -ಅಂದ. ಇನ್ನೆಲ್ಲಿ ಅವನು ಎದ್ದುಹೋಗುತ್ತಾನೋ ಎಂದು ಆತಂಕವಾಗಿ
-ಸಿಂಗಾರೆವ್ವನ ಜೋಡಿ ನಾ ಇದ್ದರ ಆದೀತೇನ್ರೀ?”- ಅಂದೆ, “ಶಿವನಿಚ್ಛೆ”-ಅಂದ. ಪೂಕೆ ಅರಮನೆಯಲ್ಲೆ, ಸರಿರಾತ್ರಿ ಸುರುವಾಗಬೇಕೆಂದ. ಪೂಜಾಸಾಮಾಗ್ರಿಯ ಪಟ್ಟಿ ಹೇಳಿದ. ಆ ದಿನ ರಾತ್ರಿ ಸುಮಾರಿಗೆ ಹಿತ್ತಲ ಬಾಗಿಲಿನಿಂದ ಬರುವುದಾಗಿ ಹೇಳಿ ಅದೇ ಬಾಗಿಲಿನಿಂದ ಮಾಯವಾದ.

ನಾವು ಭಯ ಮತ್ತು ಸಡಗರ ಎರಡನ್ನೂ ಅನುಭವಿಸುತ್ತಿದ್ದೆವು. ಭಯ, ಇದು ಕಳ್ಳವ್ಯವಹಾರವಾಗಿದ್ದಕ್ಕೆ; ಸಡಗರ; ಹ್ಯಾಗೂ ಮಕ್ಕಳಾಗುತ್ತವಲ್ಲಾ-ಎಂಬುದಕ್ಕೆ. ಆದರೆ ಇದಕ್ಕೆ ಅಡಚಣೆಗಳಿದ್ದವು. ಸಿಂಗಾರೆವ್ವ ಎಷ್ಟೆಂದರೂ ಹೊಸಮನೆಗಿತ್ತಿ. ಹಿರಿಯರನ್ನು ನಿರ್ಲಕ್ಷಿಸಿ, ಇಂಥ ಪೂಜೆ ಮಾಡಿಸುವುದು ಸೊಸೆಯೊಬ್ಬಲಿಗೆ ಶೋಭಿಸುವ ನಡೆಯಲ್ಲ. ಮನೆಯಲ್ಲಿ ಗಂಡನಿದ್ದಾನೆ, ಅವನೇ ಮುಂದೆ ನಿಂತು ಮಾಡಿಸಿದ್ದರೆ ಅದು ಬೇರೆ ಮಾತು. ಗಂಡಸರ ಹೆದರಿಕೆಯಲ್ಲೇ ಬೆಳೆದ ನಮಗೆ ದೇಸಾಯಿಗೆ ತಿಳಿಸದೆ ಪೂಜೆ ಮಾಡಿಸೋದು ಹ್ಯಾಗೆಂದು ಹೆಜ್ಜೆಹೆಜ್ಜೆಗೆ ಚಿಂತೆಯಾಯಿತು. ನಾನು ಆ ರಾತ್ರಿ ಹಿರಿಯ ದೊರೆಸಾನಿಯ ಹತ್ತಿರ ಹೋಗಿ ಅದು ಇದು ಮಾತಾಡಿ, ಹುಚ್ಚಯ್ಯನ ದಯದಿಂದ ಮಕ್ಕಳನ್ನ ಪಡೆಯಬಹುದಲ್ಲಾ ಎಂದು ಸುಚಿಸಿ ಅವಳ ಅಭಿಪ್ರಾಯ ತಿಳಿಯಲು ಪ್ರಯತ್ನಿಸಿದೆ. ಅವಳು ಹೌಂದಲ್ಲಾ ಎಂದರೆ ನಮ್ಮ ಕೆಲಸ ಸರಳವಾಗುತ್ತಿತ್ತು. ಹಿರಿಯಳಿಗೆ ತಿಳಿಸಿಯೇ, ಅವಲ ಅಪ್ಪಣೆಯಿಂದಲೇ ಪೂಜೆ ಮಾಡಿಸಿದ ಹಾಗಾಗುತ್ತಿತ್ತು. ನಾಳೆ ದೇಸಾಯಿ ಕೇಳಿದ ಎನ್ನೋಣ, ಅವರವ್ವನ ಕಡೆ ಬೆರಳು ಮಾಡಿ ತೋರಿಸಬಹುದಲ್ಲ,- ಎಂದು ನಮ್ಮ ಲೆಕ್ಕ. ಆದರೆ ಮುದುಕಿ ಒಂದೇ ಮಾತಿನಲ್ಲಿ,-

“ಬ್ಯಾಡ ಮಗಳಽ. ಜಂಗಮರಿಗೂ ಈ ಅರಮನಿಗೂ ಆಗಿ ಬರಾಣಿಲ್ಲ. ಹಿಂದೊಬ್ಬ ಜಂಗಮ ಈ ವಂಶ ನಿರ್ವಂಸಾಗಲೆಂತ ಅರಮನಿ ಮ್ಯಾಲ ಬೂದಿ ಹಾರಿಸ್ಯಾನ. ಆ ನನ್ನ ಹಾಟ್ಯಾ ಹುಚ್ಚಯ್ಯನೂ ಶಾಪ ಹಾಕ್ಯಾನ. ಅದಕ್ಕಽ ನಾವ್ಯಾರೂ ಜಂಗಮರ್‍ನ ಕರೆಯೂದೂ ಇಲ್ಲ. ಅವರ್‍ಯಾರೂ ಬರೋದೂ ಇಲ್ಲ. ಹುಚ್ಚಯ್ಯ ಮೊದಲಽ ನಾದ ಹಲಕಟ್ಟ ಅವ. ಆ ಭಾಡ್ಯಾ ನಮ್ಮ ಮನ್ಯಾಗ ಕಾಲಿಡೋದಽ ಬ್ಯಾಡಾ”-

ಎಂದು ಸ್ಪಷ್ಟವಾಗಿ ಹೇಳಿಬಿಟ್ಟಳು. ನನ್ನ ತೊಡೆಯೊಳಗಿನ ಕಸುವೇ ಉಡುಗಿ ಹೋಯಿತು. ಆ ರಾತ್ರಿ ನಿದ್ದೆ ಬರಲೇ ಇಲ್ಲ.

ಇತ್ತ ಸಿಂಗಾರೆವ್ವನಿಗೂ ಹಾಗೇ ಆಯಿತು. “ಹುಚ್ಚಯ್ಯನ ಮಾತು ಹುಸಿ ಹೋಗೋಣಿಲ್ಲಂತ, ಖರೆ ಏನು?” ಎಂದು ಮೆಲ್ಲಗೆ ದೇಸಾಯಿಯನ್ನು ಕೇಳಿದರೆ ಅವನು ಸಿಡಿದು “ಅವ ಲಫಂಗ ಸ್ವಾಮಿ. ಅವನ ಮಾತೇನ ಖರೆ ಬಂದಾವ, ತಗಿ ತಗೀರಿ”-ಎಂದನಂತೆ. ಅಂತೂ ಹುಚ್ಚಯ್ಯನಿಗೂ ಈ ಮನೆತನಕ್ಕೂ ಕೂಡಿ ಬರುವುದಿಲ್ಲವೆಂದಾಯಿತು. ನಾವು ಮಾಡಿಸಬೇಕೆಂದ ಪೂಜೆಗೆ ಹಿರಿಯರ ಸಮ್ಮತಿ ಇಲ್ಲವೆನ್ನುವುದು ಸ್ಪಷ್ಟವಾಯಿತು. ಬೆಳಗ್ಗೆದ್ದವರೇ ಹಲ್ಲು ಕೂಡ ಉಜ್ಜದೆ ಇಬ್ಬರೂ ಇದನ್ನೆ ಮಾತಾಡಿದೆವು. ಸಿಂಗಾರೆವ್ವ ತಾ ಕಂಡ ಕನಸನ್ನು ಬೇರೆ ಹೇಳಿದಳು: ಅರಮನೆಯ ಮೇಲೆ ಹದ್ದು ಹಾರುತ್ತಿದ್ದಂತೆ, ಬೆತ್ತಲೆ ಮೈಗೆ ಎಣ್ಣೆ ಹಚ್ಚಿಕೊಂಡು, ಕೆಂಪು ಹೂಮಾಲೆ ಧರಿಸಿದ್ದ ದೇಸಾಯಿ ಕೋಲಿನಿಂದ ಅವುಗಳ ಜೊತೆ ಆಟ ಆಡುತ್ತಿದ್ದಂತೆ ಕನಸಾಯಿತಂತೆ. ಕನಸಿನ ಅರ್ಥ ನಮಗಾಗಲಿಲ್ಲ. ಶುಭಲಕ್ಷಣವಂತೂ ಆಗಿರಲಾರದೆಂದು ತರ್ಕ ಮಾಡಿದೆವು.

ಹಿರಿಯ ದೊರೆಸಾನಿ ಹುಚ್ಚಯ್ಯನ ಶಾಪದ ವಿಚಾರ ಹೇಳಿದ್ದಳಲ್ಲ, ಅದೇನೆಂದು ಕೇಳಿದೆ. ಒಮ್ಮೆ ಹಿಂದಿನ ದೊಡ್ಡ ದೇಸಾಯಿ ಹೊಸ ಹೆಂಡತಿಯೊಂದಿಗೆ ಶಯ್ಯಾಗೃಹದಲ್ಲಿ ಮಲಗಿರಬೇಕಾದರೆ ಇದೆ ಹುಚ್ಚಯ್ಯ ಸರಿರಾತ್ರಿಯಲ್ಲಿ ಅದ್ಯಾವುದೋ ಮಾಯೆಯಿಂದ ಅರಮನೆಯಲ್ಲಿ ನುಗ್ಗಿದ್ದನಂತೆ. ಹೋಗಿ ದೆಸಾಯಿ ಮಲಗುವ ಕೋಣೆಯ ಬಾಗಿಲು ತಟ್ಟಿದ. ಇಷ್ಟು ಹೊತ್ತಿನಲ್ಲಿ ಅದ್ಯಾರು ಬಂದಿದ್ದಾರಪ ಎಂದು ಬಾಗಿಲು ತೆರೆದರೆ ಎದುರಿಗೆ ಹುಚ್ಚಯ್ಯ ನಿಂತಿದ್ದ. ದೇಸಾಯಿಯ ನೆತ್ತರು ಕುದಿಯಿತು. ದೊರೆಸಾನಿ ಗಾಢ ನಿದ್ದೆಯಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದಳು. ಹುಚ್ಚಯ್ಯ ಏನು ಎತ್ತ ಅನ್ನದೆ “ದೇಸಾಯೀ, ಇಂದು ಶಿವನ ಹಾಸಿಗಿ ಇದಽ” ಎನ್ನುತ್ತ ಹೋಗಿ ದೊರೆಸಾನಿಯ ಪಕ್ಕದಲ್ಲಿ ಮಲಗಿದನಂತೆ! ದೆಸಾಯಿ “ಹುಚ್ಚಯ್ಯ, ಇಂದು ಶಿವನ ಸೆವಾ ಇದಽ” ಎಂದು ಹೇಳಿ ಕೋಲು ಹಿರಿದುಕೊಂಡು ಹುಚ್ಚಯ್ಯನನ್ನು ಎಲ್ಲೆಂದರಲ್ಲಿ ಬಾರಿಸಿದ. ಹುಚ್ಚಯ್ಯ ಓಡಿಹೋಗುತ್ತ ಅರಮನೆಯ ಮೇಲೆ ಭಸ್ಮ ತೂರಿ ನಿನ್ನ ವಂಸ ನಿರ್ವಂಸವಾಗಲೆಂದು ಶಾಪಹಾಕಿದನಂತೆ

ಶಾಪದ ವಿಚಾರ ಇಬ್ಬರಿಗೂ ಬಗೆಹರಿಯಲಿಲ್ಲ. ಯಾಕೆಂದರೆ ನಿರ್ವಂಸವಾಗಲೆನ್ನುವ ಶಾಪ ಒಂದು ಕಡೆ; ಮಕ್ಕಳಾಗುತ್ತವೆನ್ನುವ ಭರವಸೆ ಇನ್ನೊಂದು ಕಡೆ. ಯಾವುದನ್ನ ನಂಬಬೇಕು, ಯಾವುದನ್ನ ಬಿಡಬೆಕು? ಅದೇನಾದರೂ ಆಗಿರಲಿ ಹುಚ್ಚಯ್ಯನ ಬಗೆಗಿನ ನಮ್ಮ ನಂಬಿಕೆಯಂತೂ ಹಾರಿತು. ಅವ ಹಿತ್ತಲ ಬಾಗಿಲಿನಿಂದ ಬಂದುದರ ಅರ್ಥವೂ ಸ್ಪಷ್ಟವಾಯಿತು. ಶಿವ ಮಾಡಿದಂತಾಗಲಿ, ಹಿರಿಯರ ಅನುಮತಿಯಿಲ್ಲದ ಇಂಥ ಕಾರುಬಾರಿಗೆ ಕೈಹಾಕುವುದೇ ಬೇಡವೆಂದು ತೀರ್ಮಾನಿಸಿದೆವು.

ಅಮಾವಾಸ್ಯೆ ಬಂತು. ಈ ಮಧ್ಯೆ ಹುಚ್ಚಯ್ಯನಿಗೆ ನಮ್ಮ ತೀರ್ಮಾನ ಹೇಳೇನೆಂದರೆ ಅವನು ಊರಲ್ಲಿರಲಿಲ್ಲ. ಬಂದಾಗ ಹೇಳಿದರಾಯ್ತೆಂದುಕೊಂಡೆವು. ಆದರೆ ನಾವೋ ನರಮನುಷ್ಯರು; ನಮ್ಮ ನಮ್ಮ ಮನಸ್ಸುಗಳನ್ನೆ ತಿಳಿಯಲಾಗುವುದಿಲ್ಲ; ಇನ್ನು ಶಿವನ ಮನಸ್ಸನ್ನು ತಿಳಿಯಲಾದೀತೆ? ನಂದಗಾವಿಯಿಂದ ಸಿಂಗಾರೆವ್ವನ ಅಪ್ಪ, ಗೌಡ ಬಂದು ಒಕ್ಕರಿಸಿದ.

ಹೋದ ಸಲ ತಂದೆ ಮಗಳಿಗೆ ಜಗಳವಾಗಿತ್ತಲ್ಲ, ಇನ್ನು ಮೇಲೆ ಈ ಕಡೆ ಅವನು ಕಾಲಿಡಲಾರನೆಂದೇ ನಂಬಿದ್ದೆವು. ಆದರೆ ಅಮಾವಾಸ್ಯೆಯ ದಿನವೇ ಮಟಮಟ ಮಧ್ಯಾಹ್ನ ಸರಗಂ ದೇಸಾಯಿಯೊಂದಿಗೆ ನಗುನಗುತ್ತಾ ಅರಮನೆಗೆ ಬಂದ. ಹೋದ ಸಲದ ಅವಮಾನಗಳು ಅವನ ಮುಖದ ಮೇಲೆ ಒಂದೂ ಗೆರೆ ಮೂಡಿಸಿರಲಿಲ್ಲ. ಸಾಲದ್ದಕ್ಕೆ ಗೆಲುವಾಗಿದ್ದ, ಮತ್ತು ಯಾರು ಏನು ಹೇಳಿದರೂ ನಗಲು ಸಿದ್ಧನಾಗಿದ್ದ. ಬಂದವನು ನನ್ನನ್ನೂ ಮಗಳನ್ನೂ ಸಂತೋಶದಿಂದಲೇ ಮಾತಾಡಿಸಿದ. ಊಟಕ್ಕೆ ಕೂತಾಗ ದೇಸಾಯಿಯನ್ನು ಹೊಗಳಿದ.

ಊಟವಾದ ಮೇಲೆ ಮಾವ ಅಳಿಯ ಇಬ್ಬರೂ ಎಲಡಿಕೆ ಹಾಕುತ್ತ ಕೂತಾಗ ಸಿಂಗಾರೆವ್ವನನ್ನು ಅಲ್ಲಿಗೇ ಕರೆಸಿದರು. ಲೋಕಾಭಿರಾಮವೆಂಬಂತೆ ಗೌಡ “ಏನವಾ ಸಿಂಗಾರೆವ್ವ, ಹೋದಸಲ ಬಂದಾಗ ಗಂಡಮಗನ್ನ ಹಡದ ನೋಡಾಕ ನನ್ನ ಕರಸ್ತೇನಂತ ಅಂದಿದ್ದಿ. ಭಾಳ ದಿನ ಕರಿ ಬರಲಿಲ್ಲ. ಅದಕ್ಕ ಹಡದಿದ್ದಿಯೋ ಹಂಗಂತ ನಾನಽ ನೋಡಿಕೊಂಡು ಹೋಗಾಕ ಬಂದೆ” ಅಂದ. ಕತ್ತರಿಸಿದ ಹಲ್ಲಿಯ ಬಾಲದಂತೆ ಮಗಳು ವಿಲಿವಿಲಿ ಒದ್ದಾಡಿದಳು. ಕೋಪದಿಂದ ಉಸಿರಿನ ರಭಸವೇರಿ ಅವಳ ಮೂಗಿನ ತುದಿ ನಡುಗುತ್ತಿತ್ತು. ಆಕೆ ಮಾತಾಡಲಿಲ್ಲ. ನನಗೂ ಧೈರ್ಯವಾಗಲಿಲ್ಲ. ಅಲ್ಲಿ ನಿಲ್ಲದೆ ಹೋಗಬೇಕೆಂದು ಹಿಂತಿರುಗುವಷ್ಟರಲ್ಲಿ- “ಅರರರ, ಹೇಳಬೇಕಾದ ಸುದ್ದೀನಾಽ ಮರತಬಿಟ್ಟಿನಲ್ಲಾ; ನಿನಗೊಬ್ಬ ತಮ್ಮ ಹುಟ್ಟ್ಯಾನವ್ವ! ನಿನ್ನ ಚಿಗವ್ವ ಗಂಡುಮಗನ್ನ ಹಡದ್ದಾಳ; ಭಾಳ ದಿನಕ್ಕ ಹೆಂಗೂ ಒಬ್ಬ ಗಂಡ ಮಗ ಹುಟ್ಟಿದ, ಇನ್ನ ಮಕ್ಕಳು ಸಾಕೋ ಶಿವನಽ ಅಂದರ, ನಿನ್ನ ಇನ್ನೊಬ್ಬ ಚಿಗವ್ವನೂ ಬಸರಾಗ್ಯಾಳ! ಕೊಡೋ ದೇವರು, ನೋಡ್ರಿ ದೇಸಾಯರಽ ಬ್ಯಾಡಂದವರಿಗಿ ಬೇಕಬೇಕಂತ ಕೊಡತಾನ, ಬೇಕಂದವರು ಉಡಿ ಒಡ್ಡಿ ಹಲುಬಿದರೂ ಕೊಡೋದಿಲ್ಲ!ಇದಕ್ಕ ಏನಂತೀರಿ?” ಎಂದು ದನಿಯೇರಿಸಿ ಹೇಳಿ, ಬಾಯಿಯೊಳಗೆ ಎಲೆ ತುರುಕಿ ಮಗಳ ಕಡೆ ನೋಡಿ ವ್ಯಂಗ್ಯವಾಗಿ ನಕ್ಕ. ತಂದೆ ಮಗಳ ಸಂಬಂಧದ ಹುಳುಕು ದೆಸಾಯಿಗೇನು ಗೊತ್ತು? “ಕಂದನಾ ಆಗಮನದ ಮುಂದೆ ಇನ್ನುಳಿದ ಆನಂದಗಳು ಕುಂದೆಂಬುದರಲ್ಲಿ ಸಂದೇಹವೇನು ಮಾವಾ” ಎಂದೇನೋ ಪ್ರಾಸ ಒದರಿದ. ಈ ಪ್ರಾಸವನ್ನೇ ಮೆಚ್ಚಲಿದ್ದ ತಂದೆಯ ಮಾತನ್ನು ಕತ್ತರಿಸಿ ಸಿಂಗಾರೆವ್ವ ಹೇಳಿದಳು:

“ಭಾಳ ಚೆಲೋ ಆತ ಬಿಡಪ. ನಿನ್ನ ಸಂಸ್ಥಾನ ನಿನಗಽ ದಕ್ಕೂ ಹಂಗಾಯ್ತು. ಮರ್‍ಯಾ ತಿರಿಗಿ ಊರಿಗಿ ಬಂದಾನೇನು?”
ಹೀಂಗ್ಯಾಕೆ ಹೇಳಿದಳೆಂದು ನನಗೆ ಗೊತ್ತಿತ್ತು, ಗೌಡನಿಗೂ.

“ಸತ್ತ ಹೋದನಲ್ಲವಾ, ಸತ್ತವರು ಮತ್ತೆಲ್ಲಿ ಬರತಾರ? ಈ ಗೌಡನ ಎದುರಿಗೆ ಇನ್ನೂತನಕ ಯಾರೂ ನಿಂತಿಲ್ಲವಾ. ಅಂಥವರ್‍ನ ಇಲ್ಲಾ ದೇವರು ಮುರೀತಾನ, ಇಲ್ಲಾ ನಾ ಮುರೀತೀನಿ” ಗೌಡನ ಕಣ್ಣು ಕ್ರೂರವಾಗಿ ಇದು ನಿನಗೂ ಎಚ್ಚರಿಕೆ ಎಂಬಂತೆ ಮಗಳನ್ನು ನೋಡಿದವು. ಸಿಂಗಾರೆವ್ವ ಹತಾಶಳಾಗಿದ್ದಳು. ಇವಳನ್ನರಿಯುವುದಕ್ಕೇ ಅವನು ಮುದ್ದಾಂ ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದ. ನೊಂದ ದನಿಯಲ್ಲಿ, ಆದರೂ ಕೊನೆಯ ಅಸ್ತ್ರದಹಾಗೆ, “ಆಯ್ತಲ್ಲಪಾ, ಗಂಡಮಗ ಹುಟ್ಯಾನಂತ ಅರಮನ್ಯಾಗ ಪಾಲಾ ಬೇಡಾಕ ಬಂದಿಲ್ಲ ಹೌಂದಲ್ಲೊ?”-ಎಂದಳು. ಆದರೆ ಗೌಡ ಚಂಡಾಲ. ಇಂಥ ಮಾತುಗಳನ್ನ ನಿರೀಕ್ಷಿಸಿದ್ದಂತೆ “ಅದಕ್ಕಽ ಬಂದೀನವ ನಿನಗೂ ದೇಸಾಯರಿಗೂ ಹೇಳಿ ಹೋಗೋಣಾಂತ ಬಂದೆ; ನೀವ್ಯಾಕ ನನ್ನ ಮಗನ್ನ ದತ್ತಕ ತಗೋಬಾರದು?”-ಅಂದ.

ಏನಪಾ, ತಂದೆಯೆಂಬವ ಮಗಳಿಗಾಡೋ ಮಾತುಗಳ ಇವು? ಬೇರು ಹಿಡಿದಲುಗಿದ ಬಳ್ಳಿಯ ಹಾಗೆ ಸಿಂಗಾರೆವ್ವ ಗಡಗಡ ನಡುಗಿ ಜೀವದಾನ ಮಾಡೆಂಬಂತೆ ಗೌಡನ ಕಡೆ ದೈನ್ಯದಿಂದ ನೋಡಿದಳು. ಈಸಲ ಕುಡುಗೋಲಿನ ಹಾಗೆ ನಗೆಯನ್ನು ಬಳಸಿದ. ಸಿಂಗಾರೆವ್ವನಿಗೆ ಮತ್ತೆ ಕೋಪ ಬಂತು. ಈಗಷ್ಟೆ ಹೊತ್ತು ಮುಳುಗುತ್ತಿತ್ತಲ್ಲ. ಅ ಸಂಜಿ ಮುಗಿಲಿನ ಕೆಂಪೆಲ್ಲ ಅವಳ ಕಣ್ಣೊಳಗೆ ಗಟ್ಟಿಗೊಂಡಹಾಂಗಿತ್ತು. ಕಣ್ಣಂಚಿನಲ್ಲಿ ಒಡೆದ ಹನಿ ನೆತ್ತರಿನಂತೆ ಕಂಡಿತು. ಗೆದ್ದ ಗೌಡ ಕಿಸಕ್ಕನೆ ನಕ್ಕು ದೇಸಾಯಿಯ ಕಡೆ ನೋಡಿ “ನೋಡ್ರಿ ವಿಚಾರಮಾಡ್ರಿ ದೇಸಾಯರಽ, ನನ್ನ ಮಗನ್ನ ಬೇಕಾದ್ರೆ ದತ್ತಕ ಕೊಡಾಕ ನಾ ತಯಾರಿದ್ದೀನಿ.”- ಅಂದ ದೇಸಾಯಿ ಸುಮ್ಮನೆ ಎದ್ದ.

ತಂದೆ ಮಗಳಿಬ್ಬರೂ ಪರಸ್ಪರ ವೈರಿಗಳಾಗಿದ್ದರು. ಸಧ್ಯ ಬೇರೆ ಆಯುಧಗಳಿರಲಿಲ್ಲವಾದ್ದರಿಂದ ಮಾತುಗಳಿಂದಲೇ ಇನ್ನೊಬ್ಬರ ಎದೆ ಸೀಳಲು ಹವಣಿಸುತ್ತಿದ್ದರು. ಗೌಡನಂತೂ ಒಂದೊಂದು ಮಾತಾಡಿ, ಅದು ನಟ್ಟಿತೋ ಇಲ್ಲವೋ ಎಂಬಂತೆ ಮಗಳ ಮುಖ ನೋಡುತ್ತಿದ್ದ. ನಿಜ ಹೇಳಬೇಕೆಂದರೆ ಅವನ ಪುತ್ರೋತ್ಸವವನ್ನು ಆನಂದದಿಂದ ಆಚರಿಸಲು ನಾವಿಬ್ಬರೂ ಸಿದ್ದರಿದ್ದೆವು. ಸಿಂಗಾರೆವ್ವನಿಗೇನು ಕರುಳಿಲ್ಲವೆ? ಆಕಳು ಕರು ಹಾಕಿದರೇ ಹಿಗ್ಗುವವಳು ತನ್ನ ಚಿಕ್ಕಮ್ಮ ಗಂಡು ಹಡೆದಾಗ ಸಂತೋಷಪಡದೆ ಇರುತ್ತಾಳೆಯೇ? ಆದರೆ ಗೌಡನ ಮಾತು ಅವಳೆದೆಯಲ್ಲಿ ವಿಷಬಿತ್ತಿ ಸಂತೋಷಗಳೇ ಮೊಳೆಯದ ಹಾಗೆ ಮಾಡಿದ್ದವು. ಗೌಡನಂತೂ ಹೇಳಿಕೇಳಿ ಅಗ್ಗದ ಮನುಷ್ಯ. ಈಗ ಸಿಂಗಾರೆವ್ವ ತುಸು ಹಣ ಚೆಲ್ಲಿದ್ದರೆ ಅಥವಾ ಒಂದು ಆಭರಣ ಎಸೆದಿದ್ದರೆ ಕುಲುಕುಲು ನಗುತ್ತ “ಹಾಂಗ ಮಗಳಽ. ಹೀಗ ಮಗಳಽ”- ಎಂದು ಹಸ್ತ ಹೊಸೆಯುತ್ತಿದ್ದನೆಂದೂ ನಾ ಬಲ್ಲೆ. ಹೆಣಕ್ಕೇ ಮಗಳನ್ನು ಮದುವೆ ಮಾಡಿಕೊಟ್ಟವನು ಇನ್ಯಾವುದಕ್ಕೆ ಹೇಸಿಕೊಂಡಾನು?

ನಾನು ಹೋದಾಗ ಸಿಂಗಾರೆವ್ವ ಅಳುತ್ತಿರಲಿಲ್ಲ. ಎದೆಯನ್ನು ಕಲ್ಲಿನಂತೆ ಗಟ್ಟಿ ಮಾಡಿಕೊಂಡಿದ್ದಳು. ಮನಸ್ಸಿನಲ್ಲಿ ಅವಮಾನದ ಸುಳಿವಾಗಲೀ, ಸರಿತಪ್ಪುಗಳ ಹೊಯ್ದಾಟವಾಗಲೀ ಇರಲಿಲ್ಲ. ನನಗೆ ಸಮಾಧಾನವೇ ಆಯಿತು. ಮಾತಿಲ್ಲದೆ ಅವಳ ಪಕ್ಕದಲ್ಲೇ ಕೂತೆ.

ಎಷ್ಟು ಹೊತ್ತು ಹೀಗೇ ಕೂತಿದ್ದೆವೋ, ಆಗಲೇ ಮನೆಯಲ್ಲಿ ಕತ್ತಲಾಗಿತ್ತು. ಅಷ್ಟರಲ್ಲಿ ದೇಸಾಯಿ ಲುಟುಲುಟು ಬಂದು “ಮಾವನವರು ಊರಿಗಿ ಹೊಂಟಾರ. ಅವರ್‍ನ ಕಳಿಸಿ ನಾವು ಹಾಂಗಽ ಪಕ್ಕದ ಹಳ್ಳಿಗಿ ಬಯಲಾಟ ನೋಡ್ಲಿಕ್ಹೋಗತೀವಿ” ಎಂದು ಹೇಳಿ ನೇತುಹಾಕಿದ್ದ ಬಂದುಕು ತಗಂಡು ಹೋಗಿಬಿಟ್ಟ. ನಾನೂ ದೀಪ ಹಚ್ಚಿ ಸಿಂಗಾರೆವ್ವನ ಮುಂದೆ ಇಡಬೇಕೆನ್ನುವಷ್ಟರಲ್ಲಿ ಅವಳು ಎದ್ದುನಿಂತು,
“ಶೀನಿಂಗಿ” ಎಂದಳು.
“ಎವ್ವ.”
“ಹಿತ್ತಲ ಬಾಗಲಾ ತಗದಿಡು. ಹುಚ್ಚಯ್ಯ ಬರಲಿ. ಪೂಜಿ ಮಾಡಿಬಿಡೋಣು.”
“ಹುಚ್ಚಯ್ಯ!…..”
“ನಮ್ಮ ಶೀಲ ನಮ್ಮ ಕೈಯಾಗಿದ್ದರ ಯಾರೇನು ಮಾಡತಾರ? ಇಂದು ಶಿವನ ಪರೀಕ್ಷೆ!.”
‘ಬ್ಯಾಡ ಯವ್ವಾ, ಶಿವನ ಪರೀಕ್ಷೆ ಮಾಡಾಕ ನಾವೆಷ್ಟವರು?’-ಎಂಬ ಮಾತು ನನ್ನ ತುದಿ ನಾಲಗೆಯ ತನಕ ಬಂದಿತ್ತು. ಆದರೆ ಅವಳ ಕಣ್ಣೊಳಗೆ ಉರಿಯುತ್ತಿದ್ದ ಪಂಜುಗಳನ್ನು ನೋಡಿ ಅದು ಗಂಟಲಲ್ಲೇ ಇಂಗಿಹೋಯಿತು.”

ಒಂಬತ್ತು

ಶೀನಿಂಗವ್ವ ತನ್ನ ಪೂಜೆಯ ಕಥೆ ಮುಂದುವರಿಸಿದಳು. ಮಧ್ಯೆ ಅವಳು ಹೇಳುವುದಕ್ಕೆ ಇಷ್ಟಪಡದ ಸಂಗತಿಗಳಿದ್ದವು. ಯಾಕೆಂದರೆ ಪೂಜೆ ಸುರುವಾಗಿ ನಾಕೆಂಟು ಮಾತು ಮುಗಿದಿರಲಿಲ್ಲ, ಅಷ್ಟರಲ್ಲೆ ಸರಗಂ ದೇಸಾಯಿಯ ಪ್ರವೇಶವಾಗಿಬಿಟ್ಟಿತ್ತು. ನಾನು ಕೆದಕಿ ಕೆದಕಿ ಕೇಳಿದರೆ ಮುದುಕಿ ಮತ್ತೆ ಮತ್ತೆ ಬಚ್ಚಿಡತೊಡಗಿದಳು. ಶಿರಸೈಲ ನನ್ನ ಸಹಾಯಕ್ಕೆ ಬಂದ. “ಏನೂ ಮುಚ್ಚಿಡಬ್ಯಾಡವೇ, ಅವರೇನು ಬ್ಯಾರೇದವರಾ? ನಮ್ಮ ಊರವರಽ ಅಲ್ಲೇನು? ಅವರಿಗೆಲ್ಲ ಗೊತ್ತಾಗತೈತಿ, ನೀ ಸುಮ್ಮನ ಹೇಳಿಕೊಂಡು ಹೋಗು”-ಎಂದ. ಬೇರೆ ಯಾರದೋ ಕಥೆಯಾದರೆ ನಡೆದೀತು, ಇದು ತನ್ನ ಆಪ್ತ ಗೆಳತಿಯ ವಿಚಾರ, ಕಥೆಯಲ್ಲಿ ಇವಳೂ ಭಾಗವಹಿಸಿದ್ದವಳು, ಸಂಕೋಚವಿರುವುದು ಸ್ವಾಭಾವಿಕ. ದೊರೆಸಾನಿಯ ಅವಮಾನದ ಬಗ್ಗೆ ಕೇಳುವುದು ನನ್ನ ಉದ್ದೇಶವಾಗಿರಲಿಲ್ಲ. ಈಗ ನಾಕೈದು ದಿನಗಳಿಂದ ಕಥೆ ಕೇಳುತ್ತಿದ್ದೇನಲ್ಲ, ಮುದುಕಿಗೂ ನನಗೂ ಒಂದು ಬಗೆಯ ಸದರ ಬೆಳೆದಿತ್ತು. ನನ್ನ ಮುಖ ನೋಡಿದಳು. ಕಿಡಿಗೇಡಿತನ ಕಾಣಲಿಲ್ಲವೆಂದು ತೋರುತ್ತದೆ. ಆದರೂ ಅನುಮಾನದಿಂದಲೇ ಕಥೆ ಸುರು ಮಾಡಿ, ತುಸು ಮುಂದೆ ಸಾಗುವಷ್ಟರಲ್ಲಿ ಮೈಛಳಿ ಬಿಟ್ಟು ಹೇಳತೊಡಗಿದಳು:

“ದೇಸಾಯಿ ಹ್ಯಾಗೂ ಬಯಲಾಟವೆಂದು ಪಕ್ಕದ ಹಳ್ಳಿಗೆ ಹೋಗಿದ್ದ. ಹಿರಿಯ ದೊರೆಸಾನಿ ಹಾಸಿಗೆ ಬಿಟ್ಟು ಏಳುವವಳಲ್ಲ. ಇನ್ನು ಆಳುಗಳೋ, ಒಂದೊಂದು ದಿಕ್ಕಿನಲ್ಲಿ ಮಲಗುವಂಥವರು. ಪೂಜೆ ಮಾಡೋದಕ್ಕೆ, ಹಿರಿಯರ ಮಾತು ಮೀರಿದ್ದೆವೆಂಬುದನ್ನು ಬಿಟ್ಟರೆ ಬೇರೆ ಯಾವ ಆತಂಕಗಳೂ ಇರಲಿಲ್ಲ. ಸಿಂಗಾರೆವ್ವ ಮನಸ್ಸು ಕಲ್ಲುಮಾಡಿ ಮಕ್ಕಳನ್ನು ಶಿವನ ಕೈಯಿಂದ ಕಸಿದುಕೊಂಡಾದರೂ ಬರಬೇಕೆಂದು ನಿರ್ಧರಿಸಿಬಿಟ್ಟಿದ್ದಳು. ಅದೇ ಅವಳ ಕೆಟ್ಟ ನಿರ್ಧಾರವಾಯಿತು.

ನಾನು ಓಡಾಡಿ ಪೂಜೆಯ ಸಾಮಾನು ಸರಂಜಾಮು ಕೂಡಿಸತೊಡಗಿದೆ. ಸಿಂಗಾರೆವ್ವ ಅತ್ತೆಗೆ ಮತ್ತು ಆಳುಗಳಿಗೆ ಊಟ ಹಾಕಿ ನನ್ನ ನೆರವಿಗೆ ಬಂದಳು. ನಿಂಬೆ ಹಣ್ಣು, ತೆಂಗಿನಕಾಯಿ, ಕರಿಯದಾರ, ಬೇವಿನಸೊಪ್ಪು, ಮಗುವಿನ ಹೇಲು, ಐದು ಕೂದಲು-ಇವನ್ನೆಲ್ಲ ಓಡಾಡಿ ಹ್ಯಾಗೆ ಸಂಗ್ರಹಿಸಿದೆನೆಂದೇ ತಿಳಿಯದು. ಇನ್ನೆರಡು ಕೋಳಿ ಬೇಕಿದ್ದವು. ಹಿತ್ತಲ ಬಾಗಿಲಿನಿಂದ ಹೊಲಗೇರಿಗೆ ಓಡಿಹೋಗಿ ಅವನ್ನೂ ತಂದೆ. ಕೊಟ್ಟಿಗೆಯಲ್ಲಿ ಮಲಗುವ ಆಳನ್ನು ಪುಸಲಾಯಿಸಿ ದನಕರು ನಾನೇ ನೋಡಿಕೊಳ್ಳುವುದಾಗಿ ಹೇಳಿ ಅವನನ್ನ ಅವನ ಮನೆಗೆ ಕಳಿಸಿದ್ದಾಯಿತು.

ಯಾರಿಗೂ ಪತ್ತೆಯಾಗದಿರಲೆಂದು, ದೇಸಾಯಿ ಇಲ್ಲವಲ್ಲ ಎಂದು ಸಿಂಗಾರೆವ್ವ ಮಲಗುವ ಅಂತಸ್ತಿನಲ್ಲೇ ಪೂಜೆ ಮಾಡುವುದೆಂದು ಗೊತ್ತುಮಾಡಿಕೊಂಡಿದ್ದೆವು. ನಾನು ಕರಿ ಆಕಳ ಸೆಗಣಿಯಿಂದ ನೆಲ ಸಾರಿಸುವಾಗ ಸಿಂಗಾರೆವ್ವ ಇನ್ನೊಮ್ಮೆ ಜಳಕ ಮಾಡಿ ಒದ್ದೆಯಲ್ಲೇ ಬಂದಳು. ಊರೆಲ್ಲ ಮಲಗಿ ಸ್ತಬ್ಧವಾಗಿತ್ತು. ಅರಮನೆಯಲ್ಲಂತೂ ಕೆಳಗೆ ಕೊಟ್ಟಿಗೆಯಲ್ಲಿಯ ದನ ಬಾಲ ಜಾಡಿಸಿಕೊಂಡರೂ ಅದರ ಸದ್ದು ನಮಗೆ ಕೇಳಿಸುತ್ತಿತ್ತು. ಸಿಂಗಾರೆವ್ವ ಸೀರೆ ಕಳಚಿ ಮಡಿಯುಟ್ಟಳು. ಹುಚ್ಚಯ್ಯ ಇನ್ನೂ ಬರಲಿಲ್ಲವಲ್ಲ, ನೋಡೋಣವೆಂದು ತಿರುಗುವಷ್ಟರಲ್ಲಿ ಕರಿ ಆಕಾರವೊಂದು ಬಾಗಿಲಬಳಿ ಮರೆಯಾದಂತೆನಿಸಿತು. ಗಾಬರಿಯಾಗಿ ಯಾರೋ ಬಂದಿದ್ದಾರೆಂದು ದೊರೆಸಾನಿಗೆ ಸನ್ನೆಮಾಡಿ ಕಂದೀಲು ಹಿಡಿದುಕೊಂಡು ಬಂದೆ. ಹುಚ್ಚಯ್ಯ ನಿಂತಿದ್ದ. ಸಿಂಗಾರೆವ್ವ ಒದ್ದೆ ಕಳಚಿದ್ದನ್ನೂ ಕದ್ದು ನೋಡಿದನೆಂದು ಅನ್ನಿಸಿತು. ಅಪಾಯವುಂಟಾಗದಂತೆ ನಾನೇ ಹುಷಾರಾಗಿರಬೇಕೆಂದುಕೊಂಡೆ.

ಮಾತಿಲ್ಲದೆ ಒಳಗೆ ಬಂದ. ಮೈತುಂಬ ಬೂದಿ ಬಳಿದುಕೊಂಡು ಬಗಲಿಗೊಂದು ಜೋಳಿಗೆ ತೂಗುಬಿಟ್ಟಿದ್ದ. ಜೋಳಿಗೆಯಿಂದೊಂದು ಮೂಳೆಯನ್ನೂ ತಲೆ ಬುರುಡೆಯನ್ನೂ ತಗೆದ. ನನ್ನ ಎದೆ ಗಡಗಡ ನಡುಗಿತು. ಕೊಡದಲ್ಲಿ ಕರಿಹೋರಿಯ ಸೆಗಣಿ ಹಾಕಿಸಿ ಗಂಜಳ ಮಾಡುವಂತೆ ನನಗೆ ಹೇಳಿದ. ಆಮೇಲೆ ಅವನೇ ಅದರಲ್ಲಿ ಮಗುವಿನ ಹೇಲನ್ನೂ ಕೂದಲನ್ನೂ ಬೆರೆಸಿ ಕೈ ಒರೆಸಿಕೊಂಡ. ಅರಿಷಿಣ ಕುಂಕುಮಗಳಿಂದ ಕುಂಬಳಕಾಯಿಯ ಮೇಲೆ ಏನೇನೋ ಗೆರೆ ಬರೆದು ಕರಿದಾರ ಸುತ್ತಿದ್ದ ನಿಂಬೆಹಣ್ಣು ಅದಕ್ಕೆ ಚುಚ್ಚಿ ಕಣ್ಣು ಮಾಡಿದ. ಸುಣ್ಣದ ಗೆರೆಯಿಂದ ಬಾಯಿ ಬರೆದು ಮಲ್ಲಿಗೆ ಹೂ ಅಂಟಿಸಿ, ಮಂತ್ರ ಗೊಣಗಲಿಕ್ಕೆ ಸುರುಮಾಡಿದ. ಕುಂಕುಮದಲ್ಲದ್ದಿದ್ದ ಅಕ್ಕಿಯಿಂದ ನೆಲದಮೇಲೇನೋ ನಕ್ಷೆ ಬರೆದ. ಕೋಳಿ ಕುಯ್ದು ನಕ್ಷೆಯ ಸುತ್ತ ನೆತ್ತರು ಸಿಂಪಡಿಸಿ ಸೀಮೆ ಕಟ್ಟಿದ. ಈಗ ಆತನ ದನಿ ಬಿರುಸಾಯಿತು. ಬರಲೊಲ್ಲದ ದೇವರುಗಳನ್ನ ಮಂತ್ರಗಳಿಂದ ಬಂಧಿಸಿ ಎಳೆದು ತರುವಂತೆ ಮಂತ್ರ ಹೇಳತೊಡಗಿದ. ಆಗಾಗ ಅವುಗಳನ್ನು ಹೆದರಿಸಿ ಅಪ್ಪಣೆ ಕೊಡುವಂತೆ ಹಾಂ ಹೂಂ ಎಂದು ಹೂಂಕರಿಸುತ್ತಿದ್ದ, ಅಂಕೆಗೆ ಬಾರದ ಪುಂಡುದನಗಳಂತೆ ದೇವರು ಕಾಡಿಸುತ್ತಿದ್ದವೇನೋ, ಕಣ್ಣು ಖೆಕ್ಕರಿಸಿ, ಕೆಂಡ ಕಾರುತ್ತ ವಿಕಾರವಾಗಿ ಅವುಗಳನ್ನು ನೋಡುತ್ತ ನಕ್ಷೆಯ ಸ್ಥಳಕ್ಕೆ ಬರುವಂತೆ ಸೂಚಿಸುತ್ತಿದ್ದ. ಬಲಗೈಯಲ್ಲಿ ಮೂಳೆ ಹಿಡಿದು, ಮಂತ್ರಗಳನ್ನು ಸಣ್ಣದಾಗಿ ಹೇಳುತ್ತ ಹೊಂಚಿ, ಅವು ಸಿಕ್ಕೊಡನೆ ಅವು ಕೂತಿರಬೇಕಾದ ಸ್ಥಳವನ್ನು ಮೂಳೆ ಬಡಿದು ನಿರ್ದೇಶಿಸುತ್ತ, ಅವು ಬಂದವೆಂದಾಗ ಮೂಳೆ ಜಡಿದು ಬಂಧಿಸುವಂತೆ ಮಂತ್ರ ಗೊಣಗಿದ.

ಆಮೆಲೆ ಕುಂಬಳಕಾಯಿಯನ್ನು ಅಡ್ಡಡ್ಡ ಸರಿ ಅರ್ಧ ಹೋಳು ಮಾಡಿ ದೊರೆಸಾನಿಯ ಗರ್ಭದ ಮುಂದೆ ಹಿಡಿದು ಅದರ ಮೇಲೊಂದು ಸೆಗಣಿಯ ಗುಂಡಿಟ್ಟ. ಅದನ್ನು ನಕ್ಷೆಯೊಳಗಿಟ್ಟು ಅದರ ಮ್ಯಾಲೆ ಬುರುಡೆಯಿಟ್ಟು ಕೈಯೊಳಗಿನ ಮೂಳೆ ಊರಿದ. ಹಾಗೆ ಮೂಳೆ ಊರಿದನೋ ಇಲ್ಲವೋ ಭಗ್ಗನೆ ಬೆಂಕಿ ಹೊತ್ತಿತು. ಅದನ್ನು ಕಂಡೊಡನೆಯೇ ಅದೇನು ಮಾಯವೋ, ಮಾಟವೋ ಅರಿವು ಹಾರಿ ಇಬ್ಬರೂ ಪರವಶರಾದೆವು. ನಾನು ಬರೆದ ಚಿತ್ರವಾದೆ, ಅವಳು ಮಾಟದ ಗೊಂಬೆಯಾದಳು. ದೊರೆಸಾನಿಗೂ ಹುಚ್ಚಯ್ಯನಿಗೂ ಅಂತರಂಗದಲ್ಲೇ ಮಾತುಕತೆ ನಡೆಯುತ್ತಿತ್ತೋ ಏನೋ, ಯಾರೂ ಹೇಳುತ್ತಿರಲಿಲ್ಲ, ಯಾರೂ ಕೇಳುತ್ತಿರಲಿಲ್ಲ. ಹುಚ್ಚಯ್ಯ ರಭಸದಿಂದ ಮಂತ್ರ ವಟಗುಟ್ಟುತ್ತ ಕೊಡದಲ್ಲಿಯ ಗಂಜಳವನ್ನು ಅವಳ ಮೈತುಂಬ ಎರೆದ. ಹುಚ್ಚಯ್ಯ ಸಿಂಗಾರೆವ್ವನನ್ನು ಹಾರಿಸಿಕೊಂಡು ಹೋಗುವನೆಂದೋ, ಏನೋ ಸಪ್ಪಳಾಯಿತೆಂದೋ, ಕೆಡುಕಿನ ಅರಿವು ಬಂದುದರಿಂದಲೋ-ಯಾಕೋ ಏನೋ ಎಂತೋ, ಅಂತೂ ಒದರಿ “ಅವ್ವಾ!” ಅಂದೆ. ಹಾಗೆ ಕೂಗಿದ್ದರಿಂದಲೇ ನನಗೆ ಸರಿಯಾಗಿ ಅರಿವು ಮೂಡಿದ್ದು. ಕೇಳಿದರೆ ಯಾರೋ ತೊಲೆಬಾಗಿಲು ಬಡಿಯುತ್ತಿದ್ದರು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.