ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕ ಸಂಸ್ಕೃತಿಯೊಂದರ ಕಡೆಗೆ

ಕಡೆಗೂ ಸರ್ಕಾರ ಒಂದು ಕಡೆಗೆ ವಿರೋಧ ಪಕ್ಷಗಳ ಜೊತೆಗೆ, ಇನ್ನೊಂದು ಕಡೆಗೆ ಕನ್ನಡ ಸಾಹಿತಿಗಳು ಮತ್ತು ಅವರ ಹಿಂಬಾಲಕರ ಜೊತೆಗೂ ಅಂತಿಮ ರಾಜಿಯೊಂದನ್ನು ಮಾಡಿಕೊಂಡಿತು. ಈ ಚಳವಳಿ, ಅದರ ಒತ್ತಾಯಗಳು, ಹಿನ್ನೆಲೆಯ ಸಿದ್ಧಾಂತ-ಇವೆಲ್ಲ ಎಷ್ಟು ಅವೈಚಾರಿಕವಾದದ್ದು ಎಂಬುದನ್ನು ಈ ರಾಜಿಸೂತ್ರ ಸಿದ್ಧಪಡಿಸಿತು. ಈಗ ಒಪ್ಪಿತವಾಗಿರುವ ಸೂತ್ರದಲ್ಲಿರುವ ಸಂದಿಗ್ಧಗಳನ್ನು ನೋಡಿದರಂತೂ ಈ ಅಂಶ ಮತ್ತಷ್ಟು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ವಾಸ್ತವವಾಗಿ, ಈ ಸೂತ್ರದಲ್ಲಿ ಕನ್ನಡಿಗರು ಹಾಗೂ ಕನ್ನಡೇತರರಿಬ್ಬರಿಗೂ ಅನ್ಯಾಯವಾಗುವ ಸಾಧ್ಯತೆಗಳು ಹೆಚ್ಚಿವೆ. ಇಲ್ಲಿಯ ಮೊದಲ ಸಮಸ್ಯೆ ಎಂದರೆ, ಕನ್ನಡೇತರ ಭಾಷಿಕರನ್ನು ಗುರುತಿಸುವುದಾದರೂ ಹೇಗೆ ಎಂಬುದು? ಇದನ್ನೇ ಬೇರೆ ಮಾತಲ್ಲಿ ಹೇಳುವುದಾದರೆ; ಕನ್ನಡ ಮಾತನಾಡುವ ಜನರೇ ಗ್ರೇಸ್ ಅಂಕಗಳ ಸಲುವಾಗಿ ತಾವು ಕನ್ನಡತೇತರ ಭಾಷಿಕರು ಎಂದು ಹೇಳುವುದನ್ನು ತಪ್ಪಿಸುವುದಾದರೂ ಹೇಗೆ? ಈಗ ಪ್ರತಿ ದಿನವೂ ಮೇಲು ಜಾತಿಯ ಜನ ಎಸ್.ಸಿ.ಎಸ್.ಟಿ, ಬಿ.ಸಿ. ಇತ್ಯಾದಿ ಸರ್ಟಿಫಿಕೇಟ್ ಪಡೆದು ಮೀಸಲಾತಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರಲ್ಲ. ಅದಕ್ಕಿಂತ ಇದು ಹೇಗೆ ಭಿನ್ನವಾಗುತ್ತದೆ? ಎರಡನೆಯ ಸಮಸ್ಯೆ ಎಂದರೆ, ಯಾರಾದರೂ ಒಬ್ಬ ನಿರ್ಧಿಷ್ಟ ವ್ಯಕ್ತಿ ಕನ್ನಡೆತರ ಭಾಷಿಕ ಎಂದು ಪರೀಕ್ಷಕನಿಗೆ ತಿಳಿದು ಬಂದಾಗ, ಆತ ಮೊದಲು ಅವನಿಗೆ ಕಡಿಮೆ ಅಂಕ ಹಾಕಿ, ನಂತರ ಈ ಗ್ರೇಸ್ ಅಂಕಗಳನ್ನು ಸೇರಿಸಲು ಸಾಧ್ಯವಿದೆಯಲ್ಲ. ಈ ಮಾಹಿತಿಗಳನ್ನು ಸಂಪೂರ್ಣವಾಗಿ ರಹಸ್ಯವಾಗಿಡಲು ಸಾಧ್ಯವಿದೆಯೇನು? ಮೂರನೆಯದಾಗಿ, ಗ್ರೇಸ್ ಅಂಕಗಳನ್ನು ಸೇರಿಸಲಾಗಿದೆ ಎಂಬ ಅಂಶವನ್ನು ಮಾರ್ಕ್ಸ್‌ಕಾರ್ಡಿನಲ್ಲಿ ಸೂಚಿಸಿಬಿಟ್ಟರೆ ಉನ್ನತ ವಿದ್ಯಾಭ್ಯಾಸ, ಉದ್ಯೋಗಗಳಿಗೆ ಹೋಗುವ ಅಭ್ಯರ್ಥಿಗಳು ಅನೇಕ ರೀತಿಯ ತೊಂದರೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಉದಾಹರಣೆಗೆ- ಸಂಬಂಧಪಟ್ಟ ಅಧಿಕಾರಿಗಳು ಈ ಗ್ರೇಸ್ ಅಂಕಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಉಂಟು. ಜೊತೆಗೆ, ಭಾಷಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪೂರ್ವಗ್ರಹಗಳು ಹೆಚ್ಚುತ್ತಲೇ ಹೋಗುತ್ತವೆ. ಇಂಥ ಸನ್ನಿವೇಶಗಳನ್ನು ಎದುರಿಸುವ ಬದಲು ಅಲ್ಪಸಂಖ್ಯಾತರು ಈ ಅವಕಾಶವನ್ನು ಬಿಟ್ಟು ಕೊಡುವ ಸಾಧ್ಯತೆಗಳು ಹೆಚ್ಚು.

ಗ್ರೇಸ್ ಅಂಕಗಳಿಂದಾಗಿ ಕನ್ನಡ ವಿದ್ಯಾರ್ಥಿಗಳು ಕನ್ನಡೆತರ ಭಾಷಿಕರ ಜೊತೆಗೆ ಸ್ಪರ್ಧಿಸಿ ರ್‍ಯಾಂಕು, ಮತ್ತಿತರ ದರ್ಜೆಗಳನ್ನು ಗಳಿಸುವ ಸಾಧ್ಯತೆಯೇ ಇಲ್ಲವಾಗಿ, ಅವರಿಗೆ ತೊಂದರೆಯಾಗುವುದಿಲ್ಲವೇನು? ಕರ್ನಾಟಕ ಪರಿಸರದಲ್ಲಿ ಬೆಳೆದ ಕನ್ನಡೆತರ ಭಾಷಿಕರು ಕನ್ನಡಿಗರಷ್ಟೇ ಸರಳವಾಗಿ, ಸಲೀಸಾಗಿ ಕನ್ನಡವನ್ನು ಓದಿ, ಬರೆಯಲು ಸಾಧ್ಯ ಎಂದು ನನ್ನ ನಂಬಿಕೆ. ಏಕೆಂದರೆ, ಕನ್ನಡದ ಅತಿ ದೊಡ್ಡ ಸಾಹಿತಿಗಳು- ಮಾಸ್ತಿ, ಗೊರೂರು, ಬೇಂದ್ರೆ, ಚಿತ್ತಾಲ- ಬೇರೆ ಭಾಷಿಕರಾಗಿದ್ದೂ ದೊಡ್ಡ ಸಾಹಿತಿಗಳಾಗಲು ಹೇಗೆ ಸಾಧ್ಯ? ಇಲ್ಲಿಯ ಇನ್ನೊಂದು ಸಮಸ್ಯೆ ಎಂದರೆ, ತುಳು ಮತ್ತು ಕೊಂಕಣಿ ಮಾತನಾಡುವವರನ್ನು ಏನೆಂದು ಗುರುತಿಸಬೇಕು? ಕನ್ನಡೆತರ ಭಾಷಿಕರೆಂದೇ?

ಕಾಳಜಿ ಇಲ್ಲ

ಆದರೆ ಹೋರಾಟದ ಕಣದಲ್ಲಿರುವ ಕನ್ನಡ ಸಾಹಿತಿಗಳು ಈ ಸಂದಿಗ್ಧಗಳ ಬಗ್ಗೆ, ಪ್ರಶ್ನೆಗಳ ಬಗ್ಗೆ, ಅನ್ಯಾಯಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡೇ ಇಲ್ಲ. ವಿಜಯೋತ್ಸವ ಆಚರಿಸಬೇಕೆಂಬ ಡಾ|| ರಾಜ್‌ರ ಸಲಹೆಯನ್ನು ಅತ್ತಕಡೆಗೆ ತಳ್ಳಿ, ಮುಕ್ತಾಯದ ಜಾಥಾವನ್ನು ಕನ್ನಡ ಹೋರಾಟದ ಪ್ರಾರಂಭವಂದಷ್ಟೆ ಪರಿಗಣಿಸಬೇಕೆಂದು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸತ್ತ ಮುಸ್ಲಿಮರ ಬಗೆಗಾಗಲೀ, ಕೋಲಾರದಲ್ಲಿ ಸತ್ತ ತಮಿಳರ ಬಗೆಗಾಗಲಿ ಈ ಸಾಹಿತಿಗಳಿಗೆ ಕಿಂಚಿತ್ತು ಕಾಳಜಿ ಇಲ್ಲ. “ಕನ್ನಡದ ನೆಲದಲ್ಲಿದ್ದೂ, ಕನ್ನಡದ ಅನ್ನ ತಿಂದೂ ಕನ್ನಡದ ವಿರುದ್ಧ ಚಳವಳಿ ಮಾಡಲು ಕನ್ನಡೆತರರಿಗೆಷ್ಟು ಧೈರ್‍ಯ” -ಇದು ನಮ್ಮ ಸಾಹಿತಿಗಳ ಮತ್ತು ಅವರ ಹಿಂಬಾಲಕರ ಪ್ರಶ್ನೆ. “ಈ ಜನ ಸಮಯ ಸಾಧಕ ರಾಜಕಾರಣಿಗಳಿಂದಾಗಿ ದಾರಿ ತಪ್ಪದೆ, ಮುಖ್ಯ ಧಾರೆಯನ್ನು ಸೇರಬೇಕು” -ಇದು ಅವರ ಪರಿಹಾರ. ರಾಜ್‌ಕುಮಾರ್ ಅಭಿಮಾನಿಯೂ, ಗೋಕಾಕ್ ಪರ ವ್ಯಕ್ತಿಯೂ ಆದ ಅರಸಪ್ಪನವರ ಸಾವಿನ ಬಗೆಗೆ ಮಾತ್ರ ಗಾಢ ಶೋಕವನ್ನು ಸಾಹಿತಿಗಳು ವ್ಯಕ್ತಪಡಿಸುತ್ತಾರೆ. ಈ ಬಡ ವ್ಯಕ್ತಿಯ ಕುಟುಂಬಕ್ಕೆ ಧನ ಸಹಾಯ ಮಾಡಿ ಎಂದು ಮನವಿ ಕೂಡಾ ಮಾಡುತ್ತಾರೆ ಹಾಗಾದರೆ, ಚಿತ್ರದುರ್ಗ, ಕೋಲಾರಗಳಲ್ಲಿ ಸತ್ತ ಜನ ಮನುಷ್ಯರಲ್ಲವೇನು? ಬಡವರಲ್ಲವೇನು?

ಆದರೆ, ಕೆ.ಜಿ.ಎಫ್ ಚಳವಳಿ, ಈಗಲೂ ಮುಂದುವರಿಯುತ್ತಿರುವ ಉತ್ತರ ಕರ್ನಾಟಕದ ಮರಾಠಿ ಭಾಷಿಕರ ಚಳವಳಿ. ಮುಕ್ತಾಯಜಾಥಾದ ಅದ್ಭುತ ಯಶಸ್ಸು, ಇವೆಲ್ಲಾ ಒಂದು ಮಹತ್ವದ ಸಂಗತಿಗಳನ್ನು ಸೂಚಿಸುತ್ತವೆ. ಈ ರೀತಿಯ ತಾತ್ವಿಕ ಧೋರಣೆಗಳು, ಇದರ ಪರಿಣಾಮವಾದ ಸಾಮಾಜಿಕ ಸಮಸ್ಯೆಗಳು, ಭಾಷಿಕ ಘರ್ಷಣೆಗಳು ಕರ್ನಾಟಕದಲ್ಲಿ ಇನ್ನೂ ದೀರ್ಘ ಪಾತ್ರವನ್ನು ವಹಿಸುತ್ತಲೇ ಹೋಗುತ್ತದೆ ಎಂಬುದು ಇದರಿಂದ ಸ್ಪಷ್ಟ.

ಇವೆಲ್ಲಾ ಮತ್ತೆ ನಾನು ಲೇಖನಿಯನ್ನೆತ್ತಿಕೊಳ್ಳಲು ಕಾರಣಗಳು. ಗೆಳೆಯರು ಬರೆಯಲು ಒತ್ತಾಯಿಸುತ್ತಲೇ ಇದ್ದರು ನಾನು ಹಿಂಜರಿಯುತ್ತಲೇ ಇದ್ದೆ. ಇದೊಂದು ಅತ್ಯಂತ ನೋವಿನ, ಒಂಟಿತನದ, ಕೆರಳಿಸುವ ಕೆಲಸ ಏಕೆಂದರೆ, ನನ್ನ ಮೊದಲ ಲೇಖನ “ಭಾಷೆ ಮತ್ತು ಪ್ರಜಾಪ್ರಭುತ್ವ”ದಿಂದಾಗಿ ನಾನು ಬಯಸದ ಕುಪ್ರಸಿದ್ಧಿ ಕರ್ನಾಟಕ ನಗರ ಪ್ರದೇಶಗಳಲ್ಲಿ ಬಂತು. “ಕನ್ನಡದ ಶತ್ರು”, ಇಂಗ್ಲಿಷ್ ರಕ್ಷಕ”, “ಕನ್ನಡ ವಿರೋಧಿ” ಹೀಗೆ ಎಷ್ಟೊಂದು ಹೆಸರುಗಳು! ಈ ಎಲ್ಲವುಗಳು ಪೋಸ್ಟರು, ಘೋಷಣೆ, ಭಾಷಣ, ಪ್ರದರ್ಶನ, ಬೇನಾಮಿ ಪತ್ರಗಳ ಮೂಲಕ ನನ್ನ ವಿರುದ್ಧ ನಡೆಯುತ್ತಿರುವ ದ್ವೇಷದ ಪ್ರಚಾರಕ್ಕೆ ತಳಹದಿಯನ್ನು ಒದಗಿಸಿದೆ. ನನ್ನ ಲೇಖನಗಳನ್ನು ಪ್ರಕಟಿಸಿದ ಪತ್ರಿಕೆಗಳನ್ನು ಮೊದಲು ಬುದ್ಧಿಜೀವಿಗಳು ಸಾಂಕೇತಿಕವಾಗಿ ಸುಟ್ಟರು. ನಂತರ, ಗೋಕಾಕ್ ಪರ ಜನರು ಹಂಚಿಕೆ ವಾಹನಗಳನ್ನು ಹಿಡಿದು ಸಾವಿರಾರು ಪತ್ರಿಕೆಗಳನ್ನು ಸುಟ್ಟರು. ನನ್ನ ಗೆಳೆಯರೊಬ್ಬರು ಹೇಳಿದ ಪ್ರಕಾರ, ಶೋಷಿತರ ಭಾಷೆಯಾದ ಕನ್ನಡದ ವಿರುದ್ಧವಾಗಿ ಶೋಷಕರ ಭಾಷೆಯಾದ ಇಂಗ್ಲಿಷನ್ನು ನಾನು ಸಮರ್ಥಿಸಿದೆನಂತೆ! ಇದರ ಜೊತೆಗೆ ಇನ್ನೊಂದು ಮಾತು ಕೇಳಿ ಬಂತು. ಅಷ್ಟೊಂದು ಉದಾರವಲ್ಲದ ಈ ಟೀಕಾಕಾರರ ಪ್ರಕಾರ, ನನ್ನ ಮಾತೃ ಭಾಷೆ ತೆಲುಗು; ಆದ್ದರಿಂದ ಕನ್ನಡ ವಿರುದ್ಧ ಬರೆದೆನಂತೆ. ಕನ್ನಡ ಸಾಹಿತ್ಯಿಕ ಬುದ್ಧಿಜೀವಿಗಳು ಬೈಗುಳ, ಅನೈಚಾರಿಕ ಭಾವುಕತೆ, ಬೆದರಿಕೆಗಳ ಮಟ್ಟದಿಂದ ವೈಚಾರಿಕ ನೆಲೆಗೆ ಇಳಿಯಲು ನಿರಾಕರಿಸಿಬಿಟ್ಟರು. (ಇದಕ್ಕೆ ಎರಡು ಅಪವಾದಗಳಿವೆ.) ಹೀಗಾಗಿ, ಇಂಥ ಸಾಮಾಜಿಕ ವಿದ್ವೇಷಕ್ಕೆ ಪಾತ್ರವಾದ ನನ್ನ ವೈಯಕ್ತಿಕ ನೋವು ಏನೇ ಇರಲಿ, ಈ ಏಕಪಕ್ಷೀಯ ವಾದವನ್ನು ಮುಂದುವರಿಸಲು ನಾನು ನಿರ್ಧರಿಸಿದ್ದೇನೆ. ಏಕೆಂದರೆ, ತಿಳಿಯಾದ ವೈಚಾರಿಕ ವಾತಾವರಣದ ನಿರ್ಮಾಣಕ್ಕೆ ಇರುವ ಮಾರ್ಗ ಇದೊಂದೆ. ಬಹುಶಃ ಕನ್ನಡ ಸಾಹಿತಿಗಳು ಎಂದಾದರೊಂದು ದಿನ ಸಾಕ್ಷ್ಯಸತ್ಯಗಳನ್ನು ಆಧರಿಸಿದ ಪ್ರತಿವಾದವೊಂದನ್ನು ಮಂಡಿಸಿಯಾರು.

ಇದರ ಜೊತೆಗೆ, ಈ ಲೇಖನದ ಹಿಂದಿನ ಇನ್ನೊಂದು ಪ್ರೇರಣೆಯನ್ನೂ ಹೇಳಬೇಕಾಗಿದೆ. ನನ್ನ ವಿಚಾರಗಳನ್ನು ಒಪ್ಪುವ ಜನರಲ್ಲಿ ಕೂಡಾ ಕೆಲವು ತಪ್ಪು ಕಲ್ಪನೆಗಳು ಹುಟ್ಟಿವೆ. ನನ್ನ ಮೊದಲಿನ ಲೇಖನದಿಂದಾಗಿ ಉಂಟಾದ ಈ ತಪ್ಪು ತಿಳುವಳಿಕೆಗಳನ್ನ ಹೋಗಲಾಡಿಸುವುದು ಇಲ್ಲಿಯ ಉದ್ದೇಶ. ಅವುಗಳು ಹೀಗಿವೆ: ಒಂದು, ನನ್ನ ಲೇಖನ ಬರೀ ಭಾಷಿಕ ಮತ್ತು ಮತೀಯ ಅಲ್ಪ ಸಂಖ್ಯಾತರ ಸಮರ್ಥನೆಯಾಗಿತ್ತು ಎನ್ನುವುದು. ಎರಡನೆಯದಾಗಿ: ನನಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯಲ್ಲಿ ಮತ್ತು ಕನ್ನಡಿಗರ ಪರವಾಗಿ ಹೋರಾಡಲು ಆಸಕ್ತಿ ಇಲ್ಲ ಎಂಬುದು. ಮೂರನೆಯ ಸಂಗತಿಯೆಂದರೆ: ನಾನು ನಿಜವಾಗಿಯೂ ಇಂಗ್ಲಿಷನ್ನು ಸಮರ್ಥಿಸಿದೆ ಎಂಬ ಗ್ರಹಿಕೆ. ನನ್ನ ಲೇಖನದ ರೂಪವೇ ಈ ಬಗೆಯ ತಪ್ಪು ತಿಳುವಳಿಕೆಗಳಿಗೆ ಕಾರಣವಾಯ್ತು. ಏಕೆಂದರೆ, ಇಂಗ್ಲಿಷ್ ಶಿಕ್ಷಿತ ಬುದ್ಧಿಜೀವಿವರ್ಗಕ್ಕೆ ಸೇರಿದ ನನಗೆ ಕನ್ನಡ ಬೌದ್ಧಿಕ ಪರಂಪರೆಯ ಶೈಲಿ, ತಾತ್ವಿಕತೆ, ಪ್ರಶ್ನಾವಿಧಾನಗಳ ಪೂರ್ಣ ಅರಿವಿರಲಿಲ್ಲ. ಅವಕ್ಕೆ ನಾನು ಸ್ಪಂದಿಸಿರಲೂ ಇಲ್ಲ. ಹೀಗಾಗಿ, ತಪ್ಪು ಕಲ್ಪನೆಗಳು ಹುಟ್ಟಿಕೊಂಡವು. ಈ ಕೊರತೆಯನ್ನ ಈ ಲೇಖನದಲ್ಲಿ ತುಂಬಲು ಯತ್ನಿಸಿದ್ದೇನೆ.

ಈ ಲೇಖನದ ಎರಡನೇ ಭಾಗದಲ್ಲಿ ಈ ಚಳವಳಿ, ಇದರ ಸೈದ್ಧಾಂತಿಕ ನೆಲೆಗಟ್ಟು, ಧೋರಣೆ ಇತ್ಯಾದಿಗಳು ಕನ್ನಡದ ದುಡಿಯುವ ಜನತೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. (ಇದು ಕನ್ನಡೇತರ ಭಾಷಿಕರ ಮಟ್ಟಿಗೂ ನಿಜ) ಎಂಬುದನ್ನ ಮನದಟ್ಟು ಮಾಡಿಸಲು ಯತ್ನಿಸಿದ್ದೇನೆ. ಈ ಚಳವಳಿ ಕನ್ನಡ ಕಾರ್ಮಿಕ, ಕನ್ನಡ ಸಣ್ಣ ರೈತ, ಕೃಷಿ, ಕಾರ್ಮಿಕರ ಪರವಾಗಿರದೆ ಶೋಷಕ ವರ್ಗಗಳ ಪರವಾಗಿದ್ದು, ಬಂಡವಾಳಿಗರ, ಶ್ರೀಮಂತ ರೈತರ, ಭೂಮಾಲೀಕರ ಹಿತಾಸಕ್ತಿಗಳನ್ನ ಕಾಯುವಂಥದು ಎಂಬ ಅಂಶವನ್ನು ವಿವರಿಸಲು ಯತ್ನಿಸಿದ್ದೇನೆ. ಆದರೆ, ಕನ್ನಡ ಪರವಾದ, ಕನ್ನಡಿಗರ ಹಕ್ಕುಗಳ ಪರವಾದ ಚಳವಳಿಯೊಂದು ದುಡಿಯುವ ಕನ್ನಡ ಜನತೆಯ ವಿರುದ್ಧವಾಗಿ ಇರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಇಲ್ಲಿ ಏಳುತ್ತಿದೆ. ಈ ವಿರೋಧಾಭಾಸದ ವಿಶ್ಲೇಷಣೆಯನ್ನೆ ಪ್ರಸ್ತುತ ಲೇಖನದಲ್ಲಿ ಮಾಡಿದ್ದೇನೆ.

ನನ್ನ ಬಗೆಗಿನ ವೈಯಕ್ತಿಕ ವಿವರಣೆಯಿಂದಲೇ ಈ ಕೆಲಸವನ್ನು ಪ್ರಾರಂಭಿಸಬಹುದು. ನನ್ನ ತಾಯಿ ಭಾಷೆ ತೆಲುಗು, ನನ್ನ ಹಿರೀಕರು ಹಳೆಯ ಬಳ್ಳಾರಿ ಜಿಲ್ಲೆಯಿಂದ ಬಂದವರು ಎಂಬುದು ನಿಜ. ಶತಮಾನಗಳಿಂದ ನಾವು ಕರ್ನಾಟಕದಲ್ಲೇ ಬಾಳಿದವರು. ನಮ್ಮ ಮುತ್ತಜ್ಜ ಕೆ. ನೆಟ್ಟಕಲ್ಲಪ್ಪ ಬಳ್ಳಾರಿಯಿಂದ ಬೆಂಗಳೂರಿಗೆ ಬಂದರು. ಅಲ್ಲಿಂದಾಚೆಗೆ ನಮ್ಮ ಮನೆತನ ಬೆಂಗಳೂರಲ್ಲೇ ಬಾಳುತ್ತಿದೆ. ನಾನಂತೂ ಹುಟ್ಟಿದ್ದು, ಬೆಳೆದದ್ದು ಬೆಂಗಳೂರಲ್ಲಿಯೇ. ದೆಹಲಿಯಲ್ಲಿ ಓದುತ್ತಿದ್ದಾಗಿನ ಮೂರು ವರ್ಷ ಬಿಟ್ಟರೆ ಜೀವನದ ಈವರೆಗಿನ ಎಲ್ಲ ವರ್ಷಗಳನ್ನ ಇಲ್ಲೇ ಕಳೆದವನು. ನನ್ನ ಹೃದಯದಲ್ಲಿ ತೆಲುಗಿಗೊಂದು ವಿಶೇಷ ಸ್ಥಾನವಿದೆ. ಅದು ನಾನು ಮನೆ ಮಂದಿಯೊಂದಿಗೆ, ನೆಂಟರೊಂದಿಗೆ, ಕೆಲವು ಗೆಳೆಯರೊಂದಿಗೆ ಆಡುವ ಭಾಷೆ. ಇಷ್ಟನ್ನು ಬಿಟ್ಟರೆ ನನ್ನ ತೆಲುಗು ತೀರಾ ಬಡವಾದದ್ದೆ. ಕೊಂಚ ಮಾತಾಡಬಲ್ಲೆನೇ ಹೊರತು, ತೆಲುಗಿನಲ್ಲಿ ಓದಲಾರೆ, ಬರೆಯಲಾರೆ. ತೆಲುಗು ಸಾಹಿತ್ಯ, ಸಂಸ್ಕೃತಿಯ ಬಗೆಗಾಗಲೀ, ಆಂಧ್ರ ಸಮಾಜದ ಬಗೆಗಾಗಲೀ ನನಗೆ ಏನೂ ತಿಳಿಯದು. ಕನ್ನಡ ಪರಿಸರದಲ್ಲೇ ಬೆಳೆದದ್ದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತೇನೆ, ಓದಬಲ್ಲೆ. ಅಷ್ಟಿಷ್ಟು ಬರೆಯಬಲ್ಲೆ ಕೂಡಾ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ನಾನು ಈಗ ಇಲ್ಲವಾಗಿರುವ ಸಾಮ್ರಾಜ್ಯಶಾಹಿಯ ಮೌಲ್ಯಗಳನ್ನು ಕಲಿತುಕೊಂಡೆ. ಇಂಗ್ಲಿಷ್ ಮಾತನಾಡುವ ಪ್ರತಿಷ್ಠಿತ ವರ್ಗದ ಸದಸ್ಯನಾಗಿಯೇ ಬೆಳೆದೆ. ಪಶ್ಚಿಮವನ್ನು ಕಂಡರೂ ಮೆಚ್ಚಿಗೆ ತುಂಬಿದ ಅಪಾರ ವಿಸ್ಮಯ. ಭಾರತೀಯ ಸಂಗತಿಗಳ ಬಗೆಗೆ ಅಜ್ಞಾನವಿತ್ತು. ಹೀಗೆ ಬೆಳೆದ ನಾನು ಈ ಮೌಲ್ಯಗಳನ್ನ ಕ್ರಮೇಣ ಬಿಟ್ಟುಕೊಡಬೇಕಾಯ್ತು. ಈ ಪ್ರಕ್ರಿಯೆ ಪ್ರಾರಂಭವಾದದ್ದು ಹೈಸ್ಕೂಲಿನಲ್ಲಿ. ರಾಷ್ಟ್ರೀಯ ರಾಜಕಾರಣ, ಅರ್ಥಶಾಸ್ತ್ರದ ಪರಿಚಯ, ನಿರ್ಗತಿಕರ ಬಗೆಗಿನ ಕಾಳಜಿ ಬೆಳೆಯುವುದರೊಂದಿಗೆ ಮೊದಲಿನ ಮೌಲ್ಯಗಳನ್ನು ತ್ಯಜಿಸಲಾರಂಭಿಸಿದೆ. ಈ ಆಸಕ್ತಿ ರಾಷ್ಟ್ರೀಯ ಚಳವಳಿ ಮತ್ತು ಅದರ ಮಹಾನ್ ನಾಯಕರ ವ್ಯಕ್ತಿತ್ವದ ಕಡೆಗೆ ಕರೆದೊಯ್ದಿತು. ಮೊದಲು ಜವಹಾರ್‌ಲಾಲ್ ನೆಹರು ನಂತರ ಗಾಂಧೀಜಿ, ಮತ್ತು ರಾಜಾಜಿ. ಆಮೇಲೆ ದಾದಾಬಾಯಿ ನವರೋಜಿ, ಗೋಖಲೆ, ಸುರೇಂದ್ರನಾಥ ಬ್ಯಾನರ್ಜಿ- ಹೀಗೆ ಆಸಕ್ತಿ ಬೆಳೆಯುತ್ತಾ ಹೋಯಿತು. ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯ ಬಗೆಗೂ ಆಸಕ್ತಿ ಬೆಳೆಯಿತು. ಭಾರತೀಯಾಂಗ್ಲ ಸಾಹಿತ್ಯದ ಆರ್.ಕೆ. ನಾರಾಯಣ್, ರಾಜಾರಾವ್, ನಿಸ್ಸೀಮ್, ಎಜೇಕಿಲ್ ಇತ್ಯಾದಿ ಲೇಖಕರನ್ನು ಓದಿದೆ. ನಂತರ ಇಂಗ್ಲಿಷ್‌ಗೆ ಅನುವಾದಗೊಂಡಿರುವ ಪ್ರಾಂತೀಯ ಭಾಷಾ ಸಾಹಿತ್ಯಗಳ ಓದೂ ನಡೆಯಿತು. ಇದರ ಜೊತೆಗೆ ಭಾರತೀಯ ಸಂಗೀತ, ಕಲೆ, ಚಲನಚಿತ್ರಗಳ ಪರಿಚಯವನ್ನು ಮಾಡಿಕೊಂಡೆ.

ನನ್ನ ದೆಹಲಿ ಶಿಕ್ಷಣದ ನಂತರ ಬೆಂಗಳೂರಿಗೆ ಬಂದಮೇಲೆ ಕನ್ನಡ ಸಾಹಿತ್ಯಕ ಸಂಸ್ಕೃತಿಯನ್ನು ಪರಿಚಯಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಕನ್ನಡ ಸಿನಿಮಾ, ನಾಟಕ ಇತ್ಯಾದಿ ನೋಡಿದೆ. ಇಂಗ್ಲಿಷ್ ಅನುವಾದಗಳ ಅಧ್ಯಯನ, ವಿಚಾರಸಂಕಿರಣಗಳಿಗೆ ಹೋಗುವುದು- ಇವೂ ಸಾಹುತ್ತಾ ಬಂದವು. ನನ್ನ ಸ್ವಂತ ಶಕ್ತಿಗೆ ಸಾಧ್ಯವಾದ ಮಟ್ಟಿಗೆ ಮತ್ತು ನನ್ನ ನೇತೃತ್ವದ ವೃತ್ತಪತ್ರಿಕಾ ಸಂಸ್ಥೆಯ ಮೂಲಕ ಕನ್ನಡ ಸಾಹಿತ್ಯಕ ಸಂಸ್ಕೃತಿಯ ಅಭಿವೃದ್ಧಿಗೆ ಅನೇಕ ವಿಧಗಳಲ್ಲಿ ನೆರವು ನೀಡಲು ಯತ್ನಿಸಿದ್ದೇನೆ. ಉದಾಹರಣೆಗೆ ಕನ್ನಡದ ಸಾಕಷ್ಟು ಸಾಹಿತ್ಯಕ ಪತ್ರಿಕೆಗಳು ಜಾಹಿರಾತುಗಳ ಮೂಲಕವಾಗಿ ನಮ್ಮ ಸಂಸ್ಥೆಯಿಂದ ಧನ ಬೆಂಬಲ ಪಡೆದಿವೆ. ಜೊತೆಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಅನೇಕ ಜನ ಕನ್ನಡ ಸಾಹಿತಿಗಳ ಕೃತಿಗಳನ್ನು ಭಾಷಾಂತರಿಸಿ ಪ್ರಕಟಿಸಲಾಯಿತು. ಕನ್ನಡ-ಸಂಸ್ಕೃತ ಭಾಷಾ ವಿವಾದದ ಹೊತ್ತಿನಲ್ಲಿ ಡೆಕ್ಕನ್ ಹೆರಾಲ್ಡ್‌ನ ಸಂಪಾದಕನಾಗಿ, ಕಡೇಪಕ್ಷ ಮೂರು ಸಾರಿ, ಸಂಸ್ಕೃತವನ್ನು ಶಾಲಾಹಂತದಲ್ಲಿ ಪ್ರಥಮ ಭಾಷಾ ಪಟ್ಟಿಯಲ್ಲಿ ಸೇರಿಸುವುದನ್ನು ವಿರೋಧಿಸಿದೆ. ಒಂದು ದಿನ, ಫೊಫೆಸರ್ ಚಿದಾನಂದ ಮೂರ್ತಿಯವರು ಫೋನಿನಲ್ಲಿ ನನ್ನನ್ನು ಗೋಕಾಕ್ ಸಮಿತಿಯ ಮುಂದೆ ಸಾಕ್ಷ್ಯ ನೀಡುವಂತೆ ಕೇಳಿದರು. ಇದಕ್ಕೆ ಕಾರಣ ಕನ್ನಡ ಪರವಾದ, ಸಂಸ್ಕೃತ ವಿರೋಧಿಗಳಾದ ಜನ ಸಾಕ್ಷ್ಯ ನೀಡಲು ತೀರಾ ಕಡಿಮೆ ಹೋಗುತ್ತಿದ್ದಾರೆ ಎಂಬುದು. ಆ ಸಮಿತಿಯ ಮುಂದೆ ಶಾಲಾ ಹಂತದಲ್ಲಿ ಸಂಸ್ಕೃತದ ವಿರುದ್ಧವಾಗಿ ಸಾಕ್ಷ್ಯ ನೀಡಿದ್ದಾಯ್ತು. ಇಷ್ಟಾದರೂ ಸಮಿತಿಯವರು ಕೇಳಿದ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರ ನೀಡಿದ್ದೆ : ಕನ್ನಡವೊಂದನ್ನೆ ಪ್ರಥಮ ಭಾಷೆಯನ್ನಾಗಿ ಇಡುವುದು ಭಾಷಿಕ ಅಲ್ಪ ಸಂಖ್ಯಾತರ ಹಿತಕ್ಕೆ ವಿರೋಧವಾದದ್ದು. ಆದ್ದರಿಂದ ಅಪೇಕ್ಷಣೀಯವಲ್ಲ ಎಂದು ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯಬೇಕೆ ಎಂಬ ಪ್ರಶ್ನೆಗೆ ಉತ್ತರ ಅದು ಪರಸ್ಪರ ತಿಳುವಳಿಕೆಯ ಮೂಲಕ ಸಾಧ್ಯವಾಗಬೇಕೆ ಹೊರತು ಬಲವಂತದಿಂದಲ್ಲ ಎಂದು. ಗೋಕಾಕ್ ಸಮಿತು ವರದಿಯನ್ನೊಪ್ಪಿಸಿದ ಮೇಲೆ ಸರ್ಕಾರ ಅದನ್ನು ಗುಟ್ಟಾಗಿಟ್ಟಿತ್ತು. ಮೊದಲಿಗೆ ಈ ವರದಿಯ ಕೆಲವು ಮೂಲವಿವರಗಳನ್ನು ಪ್ರಕಟಿಸಿದ್ದು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳೆ. ಸಂಸ್ಕೃತವನ್ನು ಪ್ರಥಮ ಭಾಷೆ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿದಮೇಲೆ, ನಾನು ಈ ವರದಿಯ ಜಾರಿಗಾಗಿ ಸಂಪಾದಕೀಯವೊಂದರ ಮೂಲಕ ಒತ್ತಾಯಿಸಿದೆ. ಸರ್ಕಾರ ವರದಿಯನ್ನು ಮೂಲೆಗೆ ಹಾಕಿರುವ ಬಗ್ಗೆ ಟೀಕಿಸಿದೆ. ವರದಿಯನ್ನು ಒಪ್ಪಿಕೊಂಡಾದಮೇಲೂ ಸಂಪಾದಕೀಯದಲ್ಲಿ ಅದನ್ನು ಸ್ವಾಗತಿಸಿದೆ.

ಆದರೆ, ಕನ್ನಡವೊಂದನ್ನೇ ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡಲಾಗಿದೆ ಎಂದು ತಿಳಿದುಬಂತು. ಆಗ ಇನ್ನೊಂದು ಸಂಪಾದಕೀಯ ಬರೆದು ಎಲ್ಲಾ ಮಾತೃ ಭಾಷೆಗಳಿಗೂ ಪ್ರಥಮಭಾಷೆಯ ಸ್ಥಾನ ಇರಬೇಕು; ಭಾಷಿಕ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಗೋಕಾಕ್‌ವರದಿಯಲ್ಲಿ ತಿದ್ದುಪಡಿಗಳಾಗಬೇಕು ಎಂದು ವಾದಿಸಿದೆ. ಕಡೆಗೆ, ಈ ವರದಿಯ ಜಾರಿಗಾಗಿ ಒಂದು ಪೂರ್ಣ ಪ್ರಮಾಣದ ಭಾಷಾ ದುರಭಿಮಾನಿ ಚಳವಳಿ ಶುರುವಾದಾಗ ವರದಿಯಲ್ಲಿಯ ಈ ಭಾಗ, ಜೊತೆಗೆ ಇದನ್ನು ಆಧರಿಸಿದ ಚಳವಳಿ ಎರಡನ್ನೂ ಮತ್ತೆ ಟೀಕಿಸಿದೆ. ಬಹುಸಂಖ್ಯಾತರ ಜನತೆ ರಾಜಕಾರಣದಲ್ಲಿ ಭಾಗಿಯಾಗಲು, ಸರ್ಕಾರವನ್ನು ನಿಯಂತ್ರಿಸಲು ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕೆಂದು ಅನೇಕ ಸಂಪಾದಕೀಯಗಳಲ್ಲಿ ಪ್ರತಿಪಾದಿಸಿದ್ದೇನೆ. ಜೊತೆಗೆ ಈ ಭಾಷಾ ಸಮಸ್ಯೆಯ ಸಾಮಾಜಿಕ ಆಯಾಮದ ಕಡೆಗೆ ಒತ್ತು ಯಾವಾಗಲೂ ಇದ್ದೇ ಇದೆ. ಕನ್ನಡದಿಂದ ಮಾತ್ರವೇ ಬಹುಸಂಖ್ಯಾತ ಅನಕ್ಷರಸ್ಥ ಕನ್ನಡ ಜನಸ್ತೋಮ ವಿದ್ಯಾವಂತರಾಗಲು ಸಾಧ್ಯ ಎನ್ನುವುದು ನನ್ನ ನಿಲುವು. ಇಲ್ಲಿಯ ಇನ್ನೊಂದು ಸ್ವಾರಸ್ಯಕರ ಸಂಗತಿಯನ್ನು ಗಮನಿಸಬೇಕಾಗಿದೆ. ನಮ್ಮ ತತ್‌ಕ್ಷಣದ ಜ್ವಲಂತ ಸಮಸ್ಯೆಯಾದ ಅನಕ್ಷರತೆಯ ಬಗೆಗೆ ತಮ್ಮ ಕಾಳಜಿಯನ್ನು ಕನ್ನಡ ಸಾಹಿತಿಗಳು ಈ ಭಾಷಾ ಚರ್ಚೆಯಲ್ಲಿ ಎಲ್ಲೂ ಪ್ರಕಟಿಸಿಲ್ಲ.

ಈ ವೃತ್ತಪತ್ರಿಕಾ ಸಂಸ್ಥೆಯ ನೇತೃತ್ವವನ್ನು ನಾನು ವಹಿಸಿಕೊಂಡಾಗಿನಿಂದ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಕುರಿತಂತೆ “ಪ್ರಜಾವಾಣಿ” “ಡೆಕ್ಕನ್ ಹೆರಾಲ್ಡ್” ಪತ್ರಿಕೆಗಳೆರಡೂ ದುಡಿಯುವ ಜನತೆಯ ಪರವಾದ ನಿಲುವನ್ನೇ ತಳೆಯಲು ಪ್ರಯತ್ನಿಸಿವೆ. ಭಾಷೆಯನ್ನು ಮುಖ್ಯವಾಗಿ ಪರಿಗಣಿಸದೆ, ಶೋಷಕರ, ದಮನಕಾರರ ವಿರುದ್ಧವಾಗಿ ತನ್ನ ಶೋಧನಾತ್ಮಕ ವರದಿಗಳ, ಸಂಪಾದಕೀಯಗಳ, ಲೇಖನಗಳ ಮೂಲಕ ಕರ್ನಾಟಕದ ದುಡಿಯುವ ಜನತೆಯ ಪರವಾಗಿಯೇ ನಿಲ್ಲಲು ಯತ್ನಿಸಲಾಗಿದೆ. ನರಗುಂದದ ರೈತ ಚಳುವಳಿಯಾಗಲಿ, ಅಥವ ಉಳಿದ ಕಡೆಗಳಲ್ಲಿ ಸಂಭವಿಸಿದ ಕಾರ್ಮಿಕ ಹೋರಾಟಗಳು, ದಲಿತರ ಮೇಲಿನ ಶೋಷಣೆ, ದಬ್ಬಾಳಿಕೆ, ಪೋಲೀಸ್ ಅತ್ಯಾಚಾರ, ನಗರದ ಕೊಂಪೆ ನಿವಾಸಿಗಳ ಒಕ್ಕಲೆಬ್ಬಿಸುವಿಕೆ, ಕಳ್ಳಬಟ್ಟಿ, ಸರ್ಕಸ್ ದುರಂತಗಳ ಸಾಮಾಜಿಕ ಆಯಾಮಗಳು- ಹೀಗೆ ಅನೇಕ ಘಟನೆಗಳ ಮೇಲೆ ನಾವು ತಳೆದ ನಿಲುವನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಜೊತೆಗೆ, ಉಳಿದ ರಾಜ್ಯಗಳಲ್ಲಿ ಕನ್ನಡ ಭಾಷಿಕರ ಮೇಲಿನ ದಮನಗಳನ್ನು ಬೆಳಕಿಗೆ ತರಲಾಗಿದೆ. ಉದಾ.ಗೆ ಫೆಬ್ರವರಿ ೧೮, ೧೯೮೨ “ಪ್ರಜಾವಾಣಿ”, ಡೆಕ್ಕನ್ ಹೆರಾಲ್ಡ್‌ಗಳಲ್ಲಿ ಮೊದಲ ಪುಟದಲ್ಲೇ ಬಂದ ತಮಿಳುನಾಡು ಧರ್ಮಪುರಿಯಲ್ಲಿಯ ಕನ್ನಡ ರೈತರ ಮೇಲಿನ ಹಿಂಸೆಯ ವರದಿ. ಸುಮಾರು ೪೦ ವರ್ಷಗಳ ಹಿಂದೆ ತಮಿಳುನಾಡಿಗೆ ತೆರಳಿದ್ದ ಈ ರೈತರನ್ನು ಅಲ್ಲಿಯ ಭೂ ಮಾಲೀಕ-ಪೋಲೀಸ್-ಗೂಂಡಾಗಳ ಒಕ್ಕೂಟ ಹಿಂಸೆ, ಅತ್ಯಾಚಾರಗಳ ಮೂಲಕ ತುಳಿದು ಹಾಕಿತ್ತು. ಅವರಿಗೆ ಮತದಾನದ ಹಕ್ಕು ಮತ್ತು ರೇಷನ್ ಕಾರ್ಡ್‌ಗಳನ್ನು ಕೂಡಾ ಇಲ್ಲದಂತೆ ಮಾಡಿತ್ತು. ( ಈ ನಿರ್ಧಿಷ್ಟ ಅಂಶವನ್ನಂತೂ ಈ ಆತ್ಮರತ ಕನ್ನಡ ಸಾಹಿತಿ ವರ್ಗ ಪೂರಾ ಕಡೆಗಣಿಸಿ ಬಿಟ್ಟಿದೆ. ಅದು ತನಗಿಂತ ಬಡವರಾದ, ಹೆಚ್ಚು ತುಳಿತಕ್ಕೆ ಒಳಗಾಗಿರುವ ಜನತೆಯನ್ನು ಕುರಿತು ತಲೆಕೆಡಿಸಿಕೊಳ್ಳುವುದೇ ಕಡಿಮೆ) ರಾಜಕಾರಣದ ಬಗೆಗೂ ನಮ್ಮ ಪತ್ರಿಕೆಗಳ ನಿಲುವು ಈ ರೀತಿಯಾಗಿಯೇ ಇದೆ. ಗುಂಡೂರಾಯರ ನಕಲಿತನ, ಶುದ್ಧ ಅದ್ಯಕ್ಷತೆಗಳನ್ನು, ಖಾನರ ದುಸ್ಸಾಹಸಗಳನ್ನು, ಆರ್‍ಮುಗಂರ ಬ್ರಾಷ್ಟಾಚಾರವನ್ನು, ಡಾ|| ವಿಶ್ವನಾಥಯ್ಯನವರ ಜಾತೀಯತೆಯನ್ನು ಬಯಲಿಗೆಳೆಯುವುದರಲ್ಲಿ ಮೇಲಿನದೇ ರೀತಿಯ ನಿಲುವನ್ನು ತಳೆಯಲಾಗಿದೆ, ಇದು ಕರ್ನಾಟಕದ ಮಟ್ಟಿಗಾಯಿತು, ರಾಷ್ಟ್ರಮಟ್ಟದಲ್ಲೂ ಕೂಡಾ ಇಂದಿರಾಗಾಂಧಿಯವರ ಸರ್ವಾಧಿಕಾರತ್ವವನ್ನು, ಕಾಂಗ್ರೆಸ್ (ಐ) ಚೂರು ಚೂರಾಗುತ್ತಿರುವುದನ್ನು ಎತ್ತಿತೋರಿಸಿದೆ. ಮಧ್ಯೆ ವಾದೀ ವಿರೋಧ ಪಕ್ಷಗಳ ಬೇಜಾವಬ್ದಾರಿತನ, ಬಿ.ಜೆ.ಪಿ, ಆರ್.ಎಸ್.ಎಸ್., ಮುಂತಾದ ಹಿಂದೂ ಮತಾಂಧ ರಾಜಕೀಯ ಪಕ್ಷಗಳ ಬಗೆಗೆ, ಮುಸ್ಲಿಂ ಮತ್ತು ಸಿಖ್ ಮತಾಂಧ ಪಕ್ಷಗಳ ಬಗೆಗೆ, ಉತ್ತರ ಭಾರತದಲ್ಲಿ ರಾಜಕಾರಣಿ ಮತ್ತು ಢಕಾಯಿತರ ನಡುವೆ ಇರುವ ಸಖ್ಯದ ಬಗೆಗೆ- ಹೀಗೆ ಅನೇಕ ಸಂಗತಿಗಳನ್ನು ಎತ್ತಿ ಹೇಳುವಾಗಲೂ ಅದೇ ನಿಲುವನ್ನು ತಳೆದಿದ್ದೇವೆ.

ಆದರೆ ಕನ್ನಡ ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಯಲ್ಲಿ ನನ್ನ ಆಸಕ್ತಿ ತೀರಾ ಕಡಿಮೆ ಎಂದು ಜನ ಟೀಕಿಸಲು ಸಾಧ್ಯವಿದೆ. ಜೊತೆಗೆ, ಪತ್ರಿಕೆಗಳ ಮೂಲಕ ನಾನು ತಳೆದ ನಿಲುವು ಸಾಕಷ್ಟು ಪ್ರಗತಿಪರವಲ್ಲ. ಕರ್ನಾಟಕದ ದುಡಿಯುವ ಜನತೆಯ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಅಷ್ಟಾಗಿ ಬೆಳಕಿಗೆ ತಂದಿಲ್ಲ; ಅಧಿಕಾರಸ್ತರ ಅಕೃತ್ಯಗಳನ್ನು ಇನ್ನೂ ಎತ್ತಿ ಹೇಳಬೇಕಿತ್ತು ಎಂದೂ ಹೇಳಲು ಸಾಧ್ಯವಿದೆ. ಈ ವೈಫಲ್ಯಕ್ಕೆ ಮೂಲ ಕಾರಣ ನನಗೆ ದುಡಿಯುವ ಜನತೆಯ ಬಗೆಗೆ ಸಹಾನುಭೂತಿ ಇಲ್ಲದಿರುವುದು ಎಂದು ಕೆಲವರು ಗುರುತಿಸಲೂಬಹುದು. ಸ್ವತಃ ವಾಣಿಜ್ಯೋದ್ಯಮಿಯಾಗಿರುವುದರಿಂದ. ವೃತ್ತಪತ್ರಿಕೆಯೂ ಒಂದು ವಾಣಿಜ್ಯ ಸಂಸ್ಥೆಯಾದ್ದರಿಂದ ನಾವು ಆಳುವ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವುದು ಸಹಜ; ಹೀಗಾಗಿ ಇನ್ನಷ್ಟು ಕೆಚ್ಚಿನಿಂದ ಹೋರಾಡಲು ಧೈರ್‍ಯ ಸಾಲದು ಎಂಬ ವ್ಯಾಖ್ಯಾನಕ್ಕೂ ಅವಕಾಶವಿದೆ. ಈ ಎಲ್ಲಾ ಮಾತುಗಳಲ್ಲೂ ಸತ್ಯಾಂಶವಿದೆ. ಆದರೆ, ಕನ್ನಡ ಸಾಹಿತ್ಯಕ ಬುದ್ಧಿಜೀವಿ ವರ್ಗ ಈ ನೆಲೆಗಳಿಂದ ನನ್ನನ್ನು ದೋಷಿ ಎಂದು ಕರೆದಿಲ್ಲ.

ಹೀಗೆ ನಾನು ಇಷ್ಟೊಂದು ದೀರ್ಘ ರೀತಿಯಲ್ಲಿ ವಿನಯಹೀನನಾಗಿ, ಪ್ರದರ್ಶಕ ರೀತಿಯಲ್ಲಿ ನನ್ನ ಬಗ್ಗೆಯೇ ಹೇಳಿಕೊಂಡಿದ್ದಕ್ಕೆ ಕಾರಣವಿದೆ. ಏಕೆಂದರೆ, ಇವೆಲ್ಲಾ ಕನ್ನಡ ಸಾಹಿತ್ಯಕ ಬುದ್ಧಿ ಜೀವಿ ವರ್ಗದ ಈ ಚಳವಳಿಯ ನಿಲುವು. ತಾತ್ವಿಕತೆಗಳನ್ನು ಅರ್ಥಮಾಡಿಕೊಳ್ಳಲು ಬೆಳಕು ಚೆಲ್ಲುತ್ತವೆ ಎಂಬ ನಂಬಿಕೆ ನನ್ನದು. ಕನ್ನಡ ವಿರೋಧಿ, ಇಂಗ್ಲಿಷ್ ವ್ಯಾಮೋಹಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲದವನು- ಎಂದೆಲ್ಲಾ ಹೇಳುವಾಗ ಕನ್ನಡ ಲೇಖಕರ ಅರ್ಥವಾದರೂ ಏನು? ವೃತ್ತ ಪತ್ರಿಕೆಗಳು ಮೇಲಿನ ಸಾಮಾಜಿಕ, ರಾಜಕೀಯ ಸಮಸ್ಯೆಗಳನ್ನು ಎತ್ತಿ ಹೇಳಿದಾಗ ನಮ್ಮ ಕನ್ನಡ ಸಾಹಿತಿಗಳೇನು ಮಾಡುತ್ತಿದ್ದರು ಎಂದು ಕೇಳಬೇಕಾಗಿದೆ. ಇವುಗಳ ಬಗ್ಗೆ ಅವರು ಚರ್ಚೆ, ಸಾರ್ವಜನಿಕ ಸಭೆ, ಪ್ರದರ್ಶನಗಳನ್ನು ಸಂಘಟಿಸಿದರೇನು? ವಿವಿಧ ಸರ್ಕಾರಿಸಂಸ್ಥೆಗಳ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಬಂಧನಕ್ಕೊಳಗಾದರೇನು? ಉಳಿದ ರಾಜ್ಯಗಳಲ್ಲಿಯ ಕನ್ನಡಿಗರ ಬಗ್ಗೆ ಅಷ್ಟೊಂದು ಕಾಳಜಿ ತೋರುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡದ ದುಡಿಯುವ ಜನತೆಯ ಪರವಾಗಿ ಎಂದಾದರೂ ನಿರ್ಣಯ ಸ್ವೀಕರಿಸಿದ್ದಾರೇನು?

ಕನ್ನಡಿಗರೇ ಆದ ಕೈಗಾರಿಕೋದ್ಯಮಿಗಳು, ಪೋಲೀಸರು, ಸರ್ಕಾರ, ವಾಣಿಜ್ಯೋದ್ಯಮಿಗಳನ್ನು ಅವರ ಅಕೃತ್ಯಗಳಿಗಾಗಿ ಖಂಡಿಸಿದ್ದಾರೇನು? ಕನ್ನಡ ಶೋಷಿತರನ್ನು ಕನ್ನಡ ಶೋಷಕರೇ ತುಳಿಯುತ್ತಿದ್ದರೂ ಇವರು ಮೌನವಾಗಿದ್ದಾರೆ. ಅಧಿಕಾರಸ್ತ ರಾಜಕಾರಣಿಗಳ ಭ್ರಷ್ಟಾಚಾರ, ಎಲ್ಲ ಬಗೆಯ ಶ್ರೀಮಂತರ ದುರ್ವ್ಯವಹಾರ, ಅದಕ್ಷತೆಗಳ ವಿರುದ್ಧ ಇವರು ದನಿ ಎತ್ತಲೇ ಇಲ್ಲವಲ್ಲ.

-ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂದರೆ, ಉಳಿದ ವಿದ್ಯಾವಂತ ಮಧ್ಯಮ ವರ್ಗಗಳ ಹಾಗೆ ಕನ್ನಡ ಲೇಖಕರು ಕೂಡಾ ಈ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯದಿಂದ ಇದ್ದಾರೆ ಎನ್ನುವುದು. ಇಲ್ಲಿ ಕೆಲವು ಅಪವಾದಗಳೂ ಇವೆ ಎಂಬುದನ್ನು ನಾನು ಮರೆತಿಲ್ಲ) ಖಾಸಗಿಯಾಗಿ ನಮ್ಮ ಸಾಹಿತಿಗಳು ಪತ್ರಿಕೆಗಳ ಕೆಲಸವನ್ನು ಪ್ರಶಂಸಿಸುತ್ತಾರೆ. ಆಳುವ ವರ್ಗದ ಶೋಷಣೆ ಅಕೃತ್ಯಗಳ ಬಗ್ಗೆ ವಿಷಾದಿಸುತ್ತಾರೆ. ಆದರೆ, ಈ ಲೇಖಕರ ನೇತೃತ್ವದ ಕನ್ನಡ ಹೋರಾಟ ಬಹುಸಂಖ್ಯಾತ ಕನ್ನಡ ಜನತೆಯ ಈ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವಂಥದಲ್ಲ ಎನ್ನುವುದಾದರೆ ಈ ಚಳವಳಿಯ ಅರ್ಥವಾದರೂ ಏನು?

ಪ್ರಸ್ತುತ ಚಳವಳಿಯ ಅರ್ಥವನ್ನು ಹೀಗೆ ಸಂಗ್ರಹಿಸಬಹುದು. ಈ ಚಳವಳಿಯ ವಕ್ತಾರರು ಹೇಳುವ ಹಾಗೆ ಕನ್ನಡಕುಲಕೋಟಿಯೆಲ್ಲ ಒಂದು. ಇವರಿಗೆ ಕನ್ನಡೇತರರ ವಿರುದ್ಧವಾಗಿ ಪ್ರತ್ಯೇಕ ವ್ಯಕ್ತಿತ್ವವಿದೆ; ಹಿತಾಸಕ್ತಿಗಳಿವೆ. ಡಾ|| ರಾಜ್‌ಕುಮಾರ್ ಅಂತೂ ಕನ್ನಡಿಗರಲ್ಲಿ ಜಾತೀಯತೆ ಹೋಗಬೇಕು, “ಕನ್ನಡ ಕುಲವೊಂದೆ” ಎಂಬ ಭಾವನೆ ಹುಟ್ಟಬೇಕು ಎಂದು ಈ ಚಳವಳಿಯ ಸಂದರ್ಭದಲ್ಲಿ ಮತ್ತೆ ಮತ್ತೆ ಘೋಷಿಸಿದ್ದಾರೆ. ಇದರರ್ಥವೆಂದರೆ, ಕರ್ನಾಟಕದ ಪ್ರಭುತ್ವ, ನೆಲ, ಜಲ, ಕನ್ನಡ ಭಾಷಿಕರದು ಮಾತ್ರ ಎಂದು. ಆಗ, ಬೇರೆ ಭಾಷೆ ಮಾತಾಡುವ ಜನ ಪರಕೀಯರು ಇಲ್ಲವೆ ದ್ರೋಹಿಗಳಾಗುತ್ತಾರೆ.

ಕನ್ನಡ ಭಾಷಿಕರಲ್ಲೇ ಇರುವ ಬೇರೆ ಬೇರೆ ಐಡೆಂಟಿಟಿಗಳ, ಆಸಕ್ತಿಗಳ ನಡುವಣ ಘರ್ಷಣೆಯನ್ನು ಈ ಸಿದ್ಧಾಂತ ಕಡೆಗಣಿಸುತ್ತದೆ. ನಿರಾಕರಿಸುತ್ತದೆ. ಮೇಲೆ ಎದ್ದು ಕಾಣುವಂತೆ ಈ ಘರ್ಷಣೆಗಳ ಮರೆಮಾಚುವಿಕೆ, ನಿರಾಕರಣೆ ನಡೆಯದಿದ್ದರೂ ಈ ತರಿಕವಾಗಿ ಈ ಕೆಲಸ ನಡೆದೇ ಇರುತ್ತದೆ. ಇದನ್ನ ಬೇರೆ ರೀತಿಯಲ್ಲಿ ಹೀಗೆ ಹೇಳಬಹುದು: ಕನ್ನಡ ಕುಲವೆಲ್ಲ ಒಂದೇ ಎಂಬ ಸಿದ್ಧಾಂತ ಕನ್ನಡ ಬಂಡವಾಳಿಗ, ಕನ್ನಡ ಕಾರ್ಮಿಕರ ನಡುವೆ, ಕನ್ನಡ ಶ್ರೀಮಂತ ರೈತ, ಕೃಷಿಕಾರ್‍ಮಿಕರ ನಡುವೆ, ಮೇಲ್ ಜಾತಿಯ ಕನ್ನಡಿಗ, ಕನ್ನಡ ದಲಿತರ ನಡುವೆ, ಕನ್ನಡ ಚಿತ್ರನಟ, ನಿರುದ್ಯೋಗಿ ಕನ್ನಡಿಗರ ನಡುವೆ ಹೊಸ ಸೌಹಾರ್ದತೆಯನ್ನು, ಐಕ್ಯತೆಯನ್ನು ಬೆಳೆಸುತ್ತದೆ. ಈ ನಂಟಿಗೆ ಆಧಾರ ಎಂದರೆ ಭಾಷೆ. ಆಮೇಲೆ “ಹುಟ್ಟು” ಅಥವಾ “ರಕ್ತ” ನಂಟಿಗೆ ಆಧಾರವಾದರೂ ಆಗಬಹುದು.

ಈ ರೀತಿಯ ಸೌಹಾರ್ದತೆ, ಏಕತೆಯನ್ನು ಕೆಲವು ನಿರ್ಧಿಷ್ಟ ಸನ್ನಿವೇಶಗಳಲ್ಲಿ ಒಪ್ಪಬಹುದು. ಯಾವುದಾದರೂ ಒಂದು ಹೊರಗಿನ ಭಾಷಿಕ ಧಾರ್‍ಮಿಕ, ಸಾಮಾಜಿಕ ರಾಷ್ಟ್ರೀಯ ಗುಂಪು ಕನ್ನಡಿಗರನ್ನು ಶೋಷಿಸುತ್ತಿದ್ದರೆ ಈ ಏಕತೆಯನ್ನು ಒಪ್ಪಬಹುದಾಗಿತ್ತು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಥ ಶೋಷಣೆ ಖಂಡಿತವಾಗಿಯೂ ಇತ್ತು. ಆಗ ಇಡೀ ಕನ್ನಡಿಗರ ಆಸಕ್ತಿಗಳು ಆಳುವವರ ವಿರುದ್ಧವೇ ಇದ್ದವು. ಆಗ ಕನ್ನಡಿಗರ ಹಿತ ಒಟ್ಟಾರೆಯಾಗಿ ಭಾರತದ ಹಿತದ ಜೊತೆಗೆ ಸೇರಿ ಹೋಗಿತ್ತು. ಈ ಕಾರಣಕ್ಕಾಗಿಯೇ, ಕನ್ನಡ ಭಾಷಿಕರು ರಾಷ್ಟ್ರೀಯ ಹೋರಾಟದ ಒಂದು ಭಾಗವಾಗಿದ್ದರು. ರಾಷ್ಟ್ರೀಯ ಚಳವಳಿಯ ನಾಯಕರಿಗೆ ಬಡತನ. ಭಾರತೀಯ ಸಮಾಜ ಎಲ್ಲ ರೀತಿಗಳಿಂದ ಹಿಂದುಳಿದಿರುವ ಸ್ಥಿತಿಯ ಬಗ್ಗೆ ಗಾಢ ಕಾಳಜಿ ಇತ್ತು. ರಾಷ್ಟ್ರೀಯ ಚಳವಳಿಯ ಮೊದಲ ಮಹತ್ವದ ಕೃತಿಯಾದ ದಾದಾಬಾಯಿ ನವರೋಜಿಯವರ “ಬಡತನ ಮತ್ತು ಬ್ರಿಟಿಷ್ ಆಳ್ವಿಕೆ” ಇದಕ್ಕೆ ಸಾಕ್ಷಿ. ಭಾರತದ ಸಂಪತ್ತು ಬ್ರಿಟನ್ನಿಗೆ ಹರಿದುಹೋಗುತ್ತಿದ್ದುದೆ ನಾಡಿನ ಬಡತನಕ್ಕೆ ಕಾರಣ ಎಂದು ಈ ಕೃತಿ ಹೇಳಿತು. ಮುಂದೆ, ದತ್, ರಾನಡೆ, ಜಿ. ಎಸ್. ಐಯರ್, ನೆಹರು, ಆಚಾರ್‍ಯ, ನರೇಂದ್ರದೇವ ಮುಂತಾದವರು ಬ್ರಿಟಿಷ್ ಆಳ್ವಿಕೆಯೇ ಭಾರತದ ಹಿಂದುಳಿದಿರುವಿಕೆಗೆ ಕಾರಣ ಎಂಬುದನ್ನು ಸಾಬೀತು ಪಡಿಸಿದರು. ಈ ದೃಷ್ಟಿಕೋನದ ಕಾರಣದಿಂದಾಗಿಯೇ ರಾಷ್ಟ್ರೀಯ ಹೋರಾಟದ ಮುಂದಿನ ತಲೆಮಾರುಗಳವರು, ರೈತ, ಕಾರ್‍ಮಿಕ, ಮಧ್ಯಮ ವರ್ಗಗಳ ನಡುವೆ ಸಂಘಟನಾ ಕಾರ್‍ಯಕ್ಕೆ ಇಳಿದರು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಟಕ್ಕೆ ಆ ವರ್ಗಗಳನ್ನು ಸಂಘಟಿಸಿದರು. ಆದರೆ, ಭಾರತೀಯ ಸಮಾಜದಲ್ಲಿಯ ಆಂತರಿಕ ಘರ್ಷಣೆಗಳ ಬಗೆಗೆ ಅವರು ಸಾಕಷ್ಟು ಸಾರಿ ಕುರುಡಾಗಿದ್ದರು ಎಂಬುದು ನಿಜ. ಅವರಿಗೆ ಮೊದಲ ಆಸಕ್ತಿ ಇದ್ದುದು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ.

ಮುಂದಿರುವ ಪ್ರಶ್ನೆ

ಈಗ ನಮ್ಮ ಮುಂದಿರುವ ಪ್ರಶ್ನೆ:
ಕರ್ನಾಟಕದಲ್ಲಿ ಈ ದಿನ ನಮ್ಮನ್ನು ಹೊರಗಿನ ಸಾಮ್ರಾಜ್ಯಶಾಹಿ ಶಕ್ತಿಯೊಂದು ಶೋಷಿಸುತ್ತಿದೆ ಎಂಬ ವಾದ ಸಾಧ್ಯವೆ ಎಂದು? ಒಟ್ಟಾರೆಯಾಗಿ ನಮ್ಮ ದೇಶದ ಜನತೆಯನ್ನು ಅಮೇರಿಕನ್ ಮತ್ತು ಯುರೋಪಿಯನ್ ಸಾಮ್ರಾಜ್ಯಶಾಹಿಗಳು ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಶೋಷಿಸುತ್ತಿವೆ. ಈಗಿನ ಭಾರತ ಸರ್ಕಾರದ ನೀತಿ, ಐ‌ಎಮ್‌ಎಫ್ ಸಾಲದ ಷರತ್ತು ಮುಂತಾದುವುಗಳನ್ನು ನೋಡಿದರಂತೂ ಇವುಗಳ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದಾಗಿ, ನಮ್ಮ ರಾಜ್ಯ, ದೇಶಗಳೆರಡೂ ನವ ವಸಾಹತು ಆದರೂ ಆಶ್ಚರ್‍ಯವೇನಿಲ್ಲ. ಆದರೆ, ಕನ್ನಡ ಸಾಹಿತಿಗಳಿಗೆ ಈ ಅಪಾಯದ ಬಗೆಗೆ ಕಾಳಜಿ ಇಲ್ಲ. ಅಲ್ಲದೆ ಕನ್ನಡ ಭಾಷಿಕರನ್ನು ಬೇರೆ ಯಾವುದಾದರೂ ದೇಶ ಅಥವಾ ಭಾರತೀಯ ಭಾಷಿಕ ಗುಂಪು ಶೋಷಿಸುತ್ತಿದೆ ಎಂಬುದಕ್ಕೂ ಅವರು ಯಾವ ಸಾಕ್ಷ್ಯಗಳನ್ನು ಮಂಡಿಸಿಲ್ಲ. ವಾಸ್ತವವಾಗಿ, ಈಗ ಭಾರತ ಒಕ್ಕೂಟದಲ್ಲಿ ಕರ್ನಾಟಕವಿರುವುದರಿಂದ, ರಾಜ್ಯಕ್ಕೆ ಅಪಾರ ಲಾಭವುಂಟಾಗಿದೆ. ಸಾಮಾಜಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ ಭಾರೀ ಬಂಡವಾಳ ಹೂಡಿಕೆ ಕರ್ನಾಟಕದಲ್ಲಿ ಇರುವುದು ನಾವು ಭಾರತ ಒಕ್ಕೂಟದ ಒಂದು ಭಾಗ ಎಂಬ ಕಾರಣಕ್ಕಾಗಿಯೇ. ವ್ಯವಸಾಯ, ಅದರಲ್ಲೂ ನೀರಾವರಿ ವ್ಯವಸಾಯ ಸಾಕಷ್ಟು ಗಮನಾರ್ಹ ಪ್ರಮಾಣದಲ್ಲಿ ಬೆಳೆದಿದೆ. ಕರ್ನಾಟಕದಲ್ಲಿ ಉಳಿದ ರಾಜ್ಯಗಳ ಜನರನ್ನು ಕಾಣುವ ಹಾಗೆಯೇ, ಕನ್ನಡಿಗರನ್ನು ಭಾರತದ ಬೇರೆ ರಾಜ್ಯಗಳಲ್ಲೂ ಕಾಣುತ್ತೇವೆ. ನಾವು ಭಾರತದ ಒಂದು ಭಾಗವಾಗಿ ಗಳಿಸಿರುವ ಲಾಭ ಸ್ಪಷ್ಟವಾಗಿ ತಿಳಿಯಬೇಕಾದರೆ, ನಮ್ಮ ರಾಜ್ಯವನ್ನು ಪಾಕಿಸ್ತಾನದ ಜೊತೆಗೂ, ಬಾಂಗ್ಲಾದೇಶದ ಜೊತೆಗೂ ಹೋಲಿಸಿ ನೋಡಬೇಕಾಗುತ್ತದೆ.

ಯಾವುದೇ ಒಳ ಅಥವಾ ಹೊರ ಜನಾಂಗ ಕನ್ನಡವನ್ನು, ಕನ್ನಡಿಗರನ್ನು ಶೋಷಿಸುತ್ತಿಲ್ಲ, ಬೆದರಿಸುತ್ತಿಲ್ಲ ಎನ್ನುವುದಾದರೆ ನಗರ ಕರ್ನಾಟಕದಾದ್ಯಂತ ಮಧ್ಯಮ ವರ್ಗದ ಕನ್ನಡಿಗರೇಕೆ ಬೆದರಿಕೆ ಮತ್ತು ದಬ್ಬಾಳಿಕೆಯ ತಲ್ಲಣವನ್ನು ಅನುಭವಿಸುತ್ತಿದ್ದಾರೆ ಎನ್ನುವುದು ತೀರಾ ಸ್ವಾರಸ್ಯಕರ ಪ್ರಶ್ನೆ. ಪ್ರತಿಷ್ಠಿತ ಕಾರ್ಮಿಕ ವರ್ಗ ಕೂಡಾ ಇದೇ ರೀತಿಯ ಪ್ರಜ್ಞೆಯನ್ನು ಹೊಂದಿದೆ. ಇನ್ನೊಂದು ಕಡೆಗೆ, ಈ ಚಳವಳಿಯಲ್ಲಿಲ್ಲದ ಕನ್ನಡಿಗರು ಹಾಗೂ ಕನ್ನಡೇತರರಿಗೆ ಇನ್ನೊಂದು ರೀತಿಯ ಪ್ರಜ್ಞೆ ಕಾಡುತ್ತಿದೆ. ಈ ಚಳವಳಿ ಅಲ್ಪಸಂಖ್ಯಾತರ ಮೇಲೆ ಕನ್ನಡದ ಸಾಮಾಜಿಕ ಮತ್ತು ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರುವ ಪ್ರಯತ್ನ ಎಂದು ಇವರು ಹೇಳುತ್ತಾರೆ. ಇದೇಕೆ ಹೀಗೆ! ಈ ಎರಡೂ ಪ್ರಶ್ನೆಗಳಿಗೆ ಉತ್ತರ ಅತ್ಯಂತ ಸಂಕೀರ್ಣವಾದದ್ದೂ ಬಹುಮುಖಿಯೂ ಆಗಿರಬೇಕಾಗುತ್ತದೆ.

ಇದಕ್ಕೆ ಉತ್ತರ ಪಡೆವ ದಿಕ್ಕಿನಲ್ಲಿ, ಮೊದಲಿಗ ಕೆಲವು ಸಂಗತಿಗಳನ್ನು ಪರೀಕ್ಷಿಸಬಹುದು. ಇವುಗಳು: (೧) ತಮಿಳಿನ ಪ್ರಾಧಾನ್ಯ. ದುರಭಿಮಾನ: ಕ್ಯಾಥೊಲಿಕ್ ಚರ್ಚ್. ಸಾರ್ವಜನಿಕ ಉದ್ಯಮ. ಬೆಂಗಳೂರು ದಂಡು ಪ್ರದೇಶಗಳಲ್ಲಿ ಈ ತಮಿಳರ ದುರಹಂಕಾರ: (೨) ಬೆಂಗಳೂರಲ್ಲಿ ಕನ್ನಡ, ಮತ್ತು ಕನ್ನಡಿಗರ ಸ್ಥಾನಮಾನ (೩) ತಮಿಳುನಾಡು, ಮಹಾರಾಷ್ಟ್ರ, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿಯ ಭಾಷಾ ದುರಭಿಮಾನವನ್ನು ತಮ್ಮ ಅನಿಸಿಕೆಗೆ ಬೆಂಬಲವಾಗಿ ಕನ್ನಡ ಸಾಹಿತಿಗಳು ತೆಗೆದುಕೊಳ್ಳುತ್ತಿರುವುದು. ಇದಾದ ನಂತರ, ಈ ಗ್ರಹಿಕೆ ಮತ್ತು ಭಾವನೆಗಳ ಸಾಮಾಜಿಕ, ಆರ್ಥಿಕ ಉಗಮದ ವಿಶ್ಲೇಷಣೆ. ನಂತರ, ಚಳವಳಿಯ ಹೊರಗೆ ಮತ್ತು ಕಾಡಿರುವ ಕೆಲವು ಪ್ರಶ್ನೆಗಳನ್ನು ವಿವರಿಸಲು ಯತ್ನಿಸುತ್ತೇನೆ. ಈ ಕೆಲವು ಪ್ರಶ್ನೆಗಳು ಹೀಗಿವೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಇದರ ನೇತೃತ್ವದ ಲಿಂಗಾಯಿತರಲ್ಲೇ ಈ ಚಳವಳಿ ಏಕೆ ಅತ್ಯಂತ ಬಲಶಾಲಿಯಾಗಿತ್ತು? ಕಳೆದ ವರ್ಷ ತಾನೇ ಕನ್ನಡೇತರ ಕಾರ್ಮಿಕರ ಜೊತೆಗೆ ಹೆಗಲೆಣೆಯಾಗಿ ನಿಂತು ಅಪಾರ ಒಗ್ಗಟ್ಟಿನಿಂದ ಹೋರಾಡಿದ ಸಾರ್ವಜನಿಕ ಉದ್ಯಮಗಳ ಕನ್ನಡ ಕಾರ್ಮಿಕರೇಕೆ ಈ ರೀತಿಯ ಹೋರಾಟಕ್ಕೆ ಇಳಿದಿದ್ದಾರೆ? ತಮ್ಮ ಬಂಧುಗಳ ಜೊತೆ ಏಕೆ ಈ ಕೆಲಸ, ಬಡ್ತಿ, ಪ್ರಭಾವ ಇತರ ಸಂಪನ್ಮೂಲಗಳಿಗಾಗಿ ಹೋರಾಡುತ್ತಿದ್ದಾರೆ? ಈ ಪ್ರಶ್ನೆಗಳನ್ನು ವಿಶ್ಲೇಷಿಸಿದ ನಂತರ ಮುಂದೆ ನಾನು ಈ ಚಳವಳಿಯಲ್ಲಿ ನಟರು, ನಿರ್ಮಾಪಕರು, ಹಂಚಿಕೆದಾರರ ಪಾತ್ರಕ್ಕೆ ಬರುತ್ತೇನೆ. ಕನ್ನಡ ಸಾಹಿತಿಗಳಲ್ಲಿ ಈ ಚಳವಳಿಗೆ ಗಮನಾರ್ಹ ವಿರೋಧವೇ ಇಲ್ಲದಿರುವಿಕೆ ಮುಂತಾದ ಪ್ರಶ್ನೆಗಳನ್ನು ನೋಡಿ ಕಡೆಗೆ, ಈ ಚಳವಳಿಯ, ಕನ್ನಡ ಸಾಹಿತಿಗಳ ಅತ್ಯಂತ ಪ್ರಧಾನ ತಾತ್ವಿಕತೆಯ ವಿಶ್ಲೇಷಣೆಗೆ ಬರುತ್ತೇನೆ. ಇದನ್ನು ಸಾಂಪ್ರದಾಯಿಕ ಏಕತಾವಾದ ಎಂದು ಕರೆಯಬಯಸುತ್ತೆನೆ. ಈ ತಾತ್ವಿಕತೆಯ ಉಗಮ, ಭಾಷಿಕ ರೂಪ, ಜನಾಕರ್ಷಣೆ, ಸರ್ವಾಧಿಕಾರತನ ಮುಂತಾದುವುಗಳ ವಿವರಣೆಯೂ ಇದೆ. ಈ ಅಂಶದ ಸಮಗ್ರ ವಿಶ್ಲೇಷಣೆಯ ಹಿನ್ನೆಲೆಯಲ್ಲಿಯೇ ನಾನು ಈ ಭಾಗದ ಮೊದಲಿಗೇ ಹಾಕಿದ ಪ್ರಶ್ನೆಗಳಿಗೆ ಉತ್ತರ ಇದೆ ಎಂದು ಭಾವಿಸಿದ್ದೇನೆ.
ಇದಿಷ್ಟು ಮುಂದಿನ ಬರಹದ ರೂಪದ ವಿವರಣೆ.

ತಮಿಳರ ಪ್ರಾಧಾನ್ಯ

ಬೆಂಗಳೂರಿನ ದುಂಡು ಪ್ರದೇಶದಲ್ಲಿ ತಮಿಳರ ಪ್ರಾಧಾನ್ಯ ಇದೆ ಎಂಬ ಮಾತು ನಿಜವಾದದ್ದು: ಹಾಗೆಯೇ, ಈ ಜನರಲ್ಲಿ ಒಂದು ಬಗೆಯ ದುರಹಂಕಾರ, ಕನ್ನಡ ಸಂಸ್ಕೃತಿಯ ಬಗ್ಗೆ ಅಲಕ್ಷ್ಯ ಇದೆ ಎಂಬುದೂ ನಿಜವಾದದ್ದೆ. ಆದರೆ, ತಮಿಳರನ್ನು ಬೆಂಗಳೂರಿಗೆ ತಂದವರು, ಅವರನ್ನು ಆಂಗ್ಲೊ ಇಂಡಿಯನ್ನರ ಜೊತೆಗೆ ಬೇರೆಯಾಗಿಯೇ ಉಳಿಸಿದವರು ಬ್ರಿಟಿಷರು. ತಮ್ಮ ಆಳ್ವಿಕೆಗಾಗಿ (ಅಂದರೆ ಮಹಾರಾಜರ, ಮಾರ್ಗದರ್ಶನ ಮತ್ತು ರಕ್ಷಣೆ) ಸ್ಥಾಪಿಸಿದ ಈ ಕಂಟೋನ್ಮೆಂಟ್ ಪ್ರದೇಶದಲ್ಲಿಯೇ ತಮ್ಮ ಜೆತೆಗೆ ತಮಿಳರನ್ನು ಉಳಿಸಿಕೊಂಡರು. ಬ್ರಿಟಿಷ್ ಮತ್ತು ಸ್ಥಳೀಯರ ನಡುವೆ ಒಂದು ರೀತಿಯ ತಡೆಯ ಹಾಗಿದ್ದೆ ತಮಿಳರ ಕನ್ನಡಿಗರನ್ನು ಕುರಿತು ಬ್ರಿಟಿಷರಿಂದ ಒಂದು ಬಗೆಯ ದುರಹಂಕಾರದ ನಿಲುವನ್ನು ಕಲಿತುಕೊಂಡರು. ಕನ್ನಡಿಗರಿಗೆ ಕಂಟೋನ್ಮೆಂಟ್‌ನಲ್ಲಿ ಕನ್ನಡ ಮಾತನಾಡಲು ಭಯವಿದ್ದರೆ, ಈ ಬಗೆಯ ಭಯವೇ ಬ್ರಿಟಿಷರಿಗೆ ಬೇಕಾಗಿದ್ದುದೂ ಕೂಡಾ. ಈಗಿನ ಕನ್ನಡ ಕ್ಯಾಥೊಲಿಕರ ಸಮಸ್ಯೆ ಈ ಪರಂಪರೆಗೆ ಸಂಬಂಧಿಸಿದ್ದೆ. ಕಂಟೊನ್ಮೆಂಟ್ ಪ್ರದೇಶದಲ್ಲಿ ಕ್ಯಾಥೊಲಿಕರು ಬಹುಮಟ್ಟಿಗೆ ತಮಿಳರೇ ಆಗಿದ್ದುದರಿಂದ ಕನ್ನಡ ಕ್ಯಾಥೊಲಿಕರಿಗೆ ಕೊಂಚ ಅನ್ಯಾಯವಾಯಿತು. ಇದು ನಡೆದದ್ದು ಕೆಲಸ, ಅಧಿಕಾರ, ಸಂಪನ್ಮೂಲಗಳ ನಿಯಂತ್ರಣ, ಕನ್ನಡ ಕ್ಯಥೊಲಿಕರ ಬಗೆಗಿನ ಅಲಕ್ಷ್ಯಗಳ ರೂಪದಲ್ಲಿ ಆದರೆ, ಕನ್ನಡ ಕ್ಯಾಥೊಲಿಕರ ಚಳವಳಿ ಮೈಸೂರು, ಬಳ್ಳಾರಿ, ದ.ಕನ್ನಡ ಮತ್ತು ಇನ್ನಿತರ ಪ್ರದೇಶಗಳಲ್ಲಿ ಕನ್ನಡ ಕ್ಯಥೊಲೊಕರ ಬೆಂಬಲ ಪಡೆಯಲಿಲ್ಲ. ಏಕೆಂದರೆ, ಬೆಂಗಳೂರಿನವರ ಸಮಸ್ಯೆಗಳು ಇವರದಾಗಿರಲಿಲ್ಲ.

೧೯೫೦ರಲ್ಲಿ ಸ್ಥಾಪಿತವಾದ ಕೇಂದ್ರಸರ್ಕಾರದ ಸಾರ್ವಜನಿಕರ ಉದ್ಯಮಗಳಲ್ಲಿ ತಮಿಳರ ಪ್ರಾದಾನ್ಯಕ್ಕೆ ಕಾರಣ ಭಾಗಶಃ ಬ್ರಿಟಿಷ್ ಆಳ್ವಿಕೆಯಲ್ಲೇ ಇದೆ. ಏಕೆಂದರೆ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಕೈಗಾರಿಕಾ ಬಂಡವಾಳದ ಅಭಿವೃದ್ಧಿಯ ಕಾರಣಕ್ಕೆ ಮೈಸೂರಿಗಿಂತ ಹೆಚ್ಚಿನ ರೀತಿಯಲ್ಲಿ ಕಾರ್ಮಿಕ ವರ್ಗವೊಂದು ಬೆಳೆದಿತ್ತು. ಬೆಂಗಳೂರು ಮತ್ತು ನೆರೆಯ ಜಿಲ್ಲೆಗಳು ತಮಿಳುನಾಡು ಗಡಿಗೆ ಹತ್ತಿರವಿದ್ದು, ದ್ವಿಭಾಷಾ ಪ್ರದೇಶವಾದ್ದರಿಂದ ೧೯೫೦ರಲ್ಲಿ ಹೆಚ್ಚಾಗಿ ತಮಿಳು ಕಾರ್ಮಿಕರನ್ನೇ ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಆದರೆ, ಕಳೆದೆರಡು ದಶಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಕಾರ್ಮಿಕರನ್ನು ತೆಗೆದುಕೊಂಡಿದ್ದು ಅವರಿಗೆ ಹೆಚ್ಚಿನ ಬಡ್ತಿ ಮತ್ತು ಇತರ ಸೌಲಭ್ಯಗಳು ಸಿಗುತ್ತಿವೆ. ಜೊತೆಗೆ, ಕಳೆದ ಕೆಲವು ವರ್ಷಗಳಿಂದ ತಮಿಳರು ಕೂಡಾ ಕನ್ನಡ ಸಂಸ್ಕೃತಿ, ಸಮಾಜದ ಬಗೆಗೆ ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಚರ್ಚ್‌ಗಳಲ್ಲಿರುವ ತಮಿಳರ ಮಟ್ಟಿಗೂ ಈ ಮಾತು ನಿಜ. ತಮಿಳರ ಬಗೆಗಿನ ದೂರುಗಳೆಲ್ಲಾ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಮಾತ್ರ ಅನ್ವಯವಾಗುವಂಥದ್ದು. ಕರ್ನಾಟಕದ ಉಳಿದ ಭಾಗಗಳಲ್ಲಿ ಮತ್ತು ಬೆಂಗಳೂರಿನ ಇತರ ಪ್ರದೇಶಗಳಲ್ಲಿ ಕನ್ನಡಿಗರೊಂದಿಗೆ ತಮಿಳರು ಯಾವಾಗಲೂ ಬೆರೆತಿದ್ದಾರೆ; ಕನ್ನಡ ಕಲಿತಿದ್ದಾರೆ.ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಅಭಿವೃದ್ಧಿಗೆ ಕಾಣಿಕೆ ಸಲ್ಲಿಸಿದ್ದಾರೆ; ಕನ್ನಡದ, ಕರ್ನಾಟಕದ ಜೆತೆಗೆ ಸಂಪೂರ್ಣ ತಾದಾತ್ಮ್ಯ ಸಾಧಿಸಿ ಸಾಕಷ್ಟು ಪ್ರಸಂಗಗಳಲ್ಲಿ ತಮ್ಮ ತಾಯಿ ನುಡಿಯನ್ನೇ ಬಿಟ್ಟುಕೊಟ್ಟು, ಕನ್ನಡವನ್ನೇ ಮಾತೃಭಾಷೆಯನ್ನಾಗಿ ಒಪ್ಪಿಕೊಂಡಿದ್ದಾರೆ. ಇಷ್ಟಾದರೂ, ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ದುರಭಿಮಾನ ಬೆಳೆಯುತ್ತಲೇ ಇದ್ದು, ಗೋಕಾಕ್ ಚಳವಳಿಯಲ್ಲಿ ಕೊನೆಗೊಂಡಿದೆ. ಹೀಗಾಗಿ, ತಮಿಳರು ದಿನೇ ದಿನೇ ತುಳಿತಕ್ಕೊಳಗಾದ ಅಲ್ಪಸಂಖ್ಯಾತರಾಗಿ ಪರಿವರ್ತಿತರಾಗುತ್ತಿದ್ದಾರೆ.

ಕನ್ನಡ ಸಾಹಿತಿಗಳು ಕೂಡಾ ಬೆಂಗಳೂರಿನ ಕಡೆಗೆ ಬೊಟ್ಟುಮಾಡಿ ತೋರಿಸುತ್ತಿದ್ದಾರೆ; ಬೇರೆ ರಾಜ್ಯಗಳಿಂದ ಅಪಾರವಾಗಿ ವಲಸೆಗಳು ಬರುತ್ತಲೇ ಇದೆ. ಇವರು ಕನ್ನಡ ಕಲಿಯುತ್ತಿಲ್ಲ, ಕನ್ನಡ ಸಂಸ್ಕೃತಿ ಮತ್ತು ಜನರ ಬಗ್ಗೆ ಅಲಕ್ಷ್ಯವನ್ನು, ತಿರಸ್ಕಾರ ಧೋರಣೆಯನ್ನು ತೋರಿಸುತ್ತಿದ್ದಾರೆ ಎಂದು ಅವರ ವಾದ. ಉಳಿದ ರಾಜ್ಯಗಳ ಕಡೆಗೆ ಕೈತೋರಿ, ಅಲ್ಲಿ ದುರಭಿಮಾನ ಬೆಳೆಯುತ್ತಲೇ ಇದೆ. ಅಲ್ಲಿಯ ಕನ್ನಡಿಗರು ಸ್ಥಳೀಯ ಭಾಷೆಯನ್ನು ಕಲಿಯಲೇಬೇಕಾಗಿ ಬಂದು ತುಳಿತಕ್ಕೊಳಗಾಗುತ್ತಿದ್ದಾರೆ ಎಂಬ ಮಾತುಗಳು ಅವರಿಂದ ಬರುತ್ತಿದೆ. ಸ್ವತಃ ಗೋಕಾಕ್ ವರದಿಯೇ ಕನ್ನಡಿಗರು ಒಳಗೂ ಹೊರಗೂ ತಮ್ಮ ಆಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತಿಲ್ಲ ಎಂಬ ಅಂಶವನ್ನು ಹೇಳುತ್ತದೆ. ತಮ್ಮ ರಾಜ್ಯದೊಳಗೆ ಕನ್ನಡಿಗರು ಅಲ್ಪಸಂಖ್ಯಾತರ ಬಗೆಗೆ ಬಹಳ ಉದಾರಿಗಳಾಗಿದ್ದಾರೆ; ಹೊರಗಡೆಯಲ್ಲೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳದೆ ಅಲ್ಲಿಯ ಮುಖ್ಯ ಧಾರೆಯಲ್ಲಿ ಕರಗಿ ಹೋಗಿದ್ದಾರೆ. ಇದು ಗೋಕಾಕ್ ವರದಿಯ ನಿಲುವು. ಹೊರಗಡೆಗೆ ಕನ್ನಡಿಗರು ತಮ್ಮ ಸಾಮಾಜಿಕ ಹಿತ, ಸಾಂಸ್ಕೃತಿಕ ಸ್ವಂತಿಕೆಗಳನ್ನು ಉಳಿಸಿಕೊಳ್ಳಬೇಕು ಎಂಬುದು ಸರಿಯಾದರೆ, ಅದನ್ನೇ ಅಲ್ಪಸಂಖ್ಯಾತರು ಕರ್ನಾಟಕದಲ್ಲಿ ಮಾಡಿದರೆ ತಪ್ಪೇನು? ತಮ್ಮ ಹಿತಾಸಕ್ತಿಯ ದೃಷ್ಟಿಯಿಂದಲೇ ಅಲ್ಪಸಂಖ್ಯಾತರು ಕನ್ನಡಿಗರಾಗಬೇಕು ಎಂದು ಗೋಕಾಕ್ ವರದಿ ಹೇಳುತ್ತದಲ್ಲ ಹಾಗೇಕೆ ಅವರು ನಡೆಯಬೇಕು? ಈ ವಾದಗಳಲ್ಲಿಯ ಸ್ಪಷ್ಟ ಸ್ವಯಂ ವಿರೋಧ ಒಟ್ಟಾರೆಯಾಗಿ ಅಲ್ಪಸಂಖ್ಯಾತರ ದೃಷ್ಟಿಕೋನದಿಂದ ನೋಡಿದಾಗ ಎದ್ದು ಕಾಣುತ್ತದೆ. ಆದರೆ, ಈ ಹೇಳಿಕೆಗಳನ್ನು ಕನ್ನಡಿಗರ ನಾಡು-ನುಡಿಯ ಅಭಿಮಾನ, ಏಕತೆಯ ನೆಲೆಯಿಂದ ನೋಡಿದಾಗ ಈ ಸ್ವಯಂ ವಿರೋಧಗಳು ಕಾಣೆಯಾಗುತ್ತವೆ. ಮದ್ರಾಸ್, ಮುಂಬೈ, ಹೈದರಾಬಾದ್, ನವದೆಹಲಿ ಮುಂತಾದ ನಗರಗಳಿಗೆ ಆಯಾ ಪ್ರದೇಶಗಳ ನಿರ್ದಿಷ್ಟ ಪ್ರಾದೇಶಿಕ ಲಕ್ಷಣಗಳಿವೆ; ಇವಿ ಇಲ್ಲಿಯ ಪ್ರಾಂತೀಯ ಜನತೆಯ ಸಾಮಾಜಿಕ-ಸಾಂಸ್ಕೃತಿಕ ಯಜಮಾನಿಕೆಯಿಂದ ಬಂದದ್ದು ಎಂಬ ಅಂಶವಂತೂ ನಿಜವಲ್ಲ. ಆ ನಗರಗಳು ಕೂಡಾ ಕಾಸ್ಮೊಪಾಲಿಟಿನ್ ನಗರಗಳೇ. ಅಲ್ಲಿ ಕೂಡಾ ಭಾರತದ ಎಲ್ಲೆಡೆಗಳಿಂದ ಬಂದ ಜನ ವಾಸಿಸುತ್ತಾರೆ. ಕೆಲವು ಸಾರಿಯಂತೂ ಈ ನಗರಗಳು ಬೆಂಗಳೂರಿಗಿಂತ ಹೆಚ್ಚಿನ ಕಾಸ್ಮೊಪಾಲಿಟಿನ್ ಗುಣಗಳನ್ನು ಹೊಂದಿರುತ್ತದೆ. ಉದಾ: ಮುಂಬೈ ಕೆಲವು ಸಾರಿ, ಕಾಸ್ಮೊಪಾಲಿಟಿನ್ ಗುಣಗಳನ್ನು ಕೊಂಚ ಕಡಿಮೆ ಹೊಂದಿರುತ್ತವೆ. ಉದಾ: ಕಲ್ಕತ್ತಾ, ಅಹಮದಾಬಾದ್ ಆದರೆ, ಹೆಚ್ಚಿನ ಬಂಡವಾಳಶಾಹಿ ಬೆಳವಣಿಗೆಯಿಂದಾಗಿ ಉಂಟಾಗಿರುವ ಅಖಿಲ ಭಾರತೀಯ ಚಲನೆಯಿಂದಾಗಿ ಇವು ಇನ್ನಷ್ಟು ಹೆಚ್ಚು ಕಾಸ್ಮೊಪಾಲಿಟಿನ್ ನಗರಗಳಾಗುತ್ತವೆ. ಜೊತೆಗೆ, ಉಳಿದ ರಾಜ್ಯಗಳಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತಮ್ಮ ಆಸಕ್ತಿ, ಹಿತಗಳನ್ನು, ಸ್ವಂತಿಕೆಗಳನ್ನು ಕನ್ನಡಿಗರು ಕಾಪಾಡಿಕೊಂಡಿಲ್ಲ ಎಂಬ ಹೇಳಿಕೆಯೂ ಸತ್ಯವಲ್ಲ. ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿ ಎಲ್ಲೆಲ್ಲಿದ್ದಾರೊ, ಆ ಎಲ್ಲ, ಭಾರತೀಯ ಊರು, ನಗರಗಳಲ್ಲಿ ಈ ಹೊತ್ತು ಕನ್ನಡ ಸಂಸ್ಥೆಗಳನ್ನು ಕಾಣುತ್ತೇವೆ. ಅಷ್ಟೇ ಅಲ್ಲದೆ, ನ್ಯೂಯಾರ್ಕ್, ಲಂಡನ್ ಮುಂತಾದ ಮುದುವರೆದ ಬಂಡವಾಳಶಾಹಿ ದೇಶಗಳ ನಗರಗಳಲ್ಲೂ ಇವುಗಳನ್ನು ಕಾಣುತ್ತೇವೆ. ಮುಂಬೈ ಉದಾಹರಣೆಯನ್ನು ಇನ್ನಷ್ಟು ವಿವರವಾಗಿ ನೋಡಬಹುದು. ಅಲ್ಲಿಯ ಕನ್ನಡಿಗರು ಮಧ್ಯಮವರ್ಗದಲ್ಲಿದ್ದು ದೊಡ್ಡ ಪ್ರಭಾವಶಾಲೀ ಸ್ಥಾನಗಳಲ್ಲಿದ್ದಾರೆ. ಇವರು ಮರಾಠಿಗರಾಗಿ ಪರಿವರ್‍ತಿತರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಬಹಳ ಜನರಿಗೆ ಮರಾಠಿ ಅಲ್ಪಸ್ವಲ್ಪ ಮಾತ್ರ ಬರುತ್ತದೆ; ಅಥವಾ ಬರುವುದೇ ಇಲ್ಲ. ಅಲ್ಲಿ ಶಿವಸೇನೆ ಕನ್ನಡಿಗರ(ದಕ್ಷಿಣ ಭಾರತೀಯರ)“ಪ್ರಾಧಾನ್ಯ”,“ದುರಹಂಕಾರ”ದ ವಿರುದ್ಧ ಹೋರಾಡುತ್ತಿದೆ ಎಂಬ ಅಂಶ ನಿಸ್ಸಂದೇಹವಾದದ್ದು. ಆದರೆ, ಇಲ್ಲಿ ಕನ್ನಡ ಸಾಹಿತಿಗಳು ಮಾಡಿದ ಹಾಗೆ ಅಲ್ಲಿ ಮರಾಠಿ ಸಾಹಿತಿಗಳು ಅದನ್ನು ಹುಟ್ಟು ಹಾಕುವುದಾಗಲೀ, ಅದಕ್ಕೆ ಬೆಂಬಲಿಸುವ ಕೆಲಸವನ್ನಾಗಲಿ ಮಾಡಲಿಲ್ಲ. ಹೀಗಿದ್ದಾಗ, ಭಾಷಾದುರಭಿಮಾನದಲ್ಲಿ ಶಿವಸೇನೆಯನ್ನು ಮೀರಿಸುವ ಮಾತಂತೂ ಏಳುವುದೇ ಇಲ್ಲ. ಆದರೆ, ಇಲ್ಲಿ ಕನ್ನಡ ಸಾಹಿತಿಗಳು ಈ ಚಳುವಳಿಯೊಂದನ್ನು ಹುಟ್ಟುಹಾಕಿದ್ದಾರೆ, ಬೆಳೆಸಿದ್ದಾರೆ; ಬೆಂಬಲ ನೀಡಿದ್ದಾರೆ, ಅಷ್ಟೇ ಅಲ್ಲ ಈಗ ಕನ್ನಡ ಪಕ್ಷ, ಕನ್ನಡ ಚಳವಳಿಗಾರರನ್ನು ಮೀರಿಸಿಬಿಟ್ಟಿದ್ದಾರೆ. ಕಾಸರಗೋಡಿನ ಇನ್ನೊಂದು ಉದಾಹರಣೆಯನ್ನೂ ಈಗ ನೋಡಬಹುದು. ಅಲ್ಲಿ ಕೂಡಾ ಕನ್ನಡಿಗರು ತಮ್ಮ ಸಂಸ್ಕೃತಿ, ಸ್ವಂತಿಕೆ, ಭಾಷೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ, ಅವರು ಕರ್ನಾಟಕದ ಏಕೀಕರಣ ಸಮಿತಿಗೆ ವೋಟು ಹಾಕುವುದಿಲ್ಲ. ಅಥವಾ ಬೆಳಗಾಂ ಮರಾಠಿಗರ ಹಾಗೆ ನಿರಂತರವಾಗಿ ಕರ್ನಾಟಕದಲ್ಲಿ ಕಾಸರಗೋಡು ವಿಲೀನವಾಗಬೇಕೆಂದು ಚಳವಳಿ ನಡೆಸುತ್ತಾ ಬಂದಿಲ್ಲ. ಇದೇಕೆ ಹೀಗೆ? ಇದಕ್ಕೆ ಕಾರಣ ಇಷ್ಟೇ. ಕಾಸರಗೋಡು ಕನ್ನಡಿಗರು ಕನ್ನಡವನ್ನಾಗಲೀ, ಕರ್‍ನಾಟಕವನ್ನಾಗಲೀ ಕಡಿಮೆ ಪ್ರೀತಿಸುವುದಿಲ್ಲ. (ಕೆಲವರು ಹೀಗೆ ಸೂಚಿಸುತ್ತಿದ್ದಾರೆ ಈಗ). ಆದರೆ, ಅಲ್ಪಸಂಖ್ಯಾತರಾಗಿ ಅವರಿಗೆ ಸಿಕ್ಕಿರುವ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸೌಲಬ್ಯಗಳು ಸಾಕಷ್ಟಿವೆ. ಅದರಲ್ಲೂ ಕರ್ನಾಟಕದಲ್ಲಿ ಮರಾಠಿಗರಿಗೆ ಸಿಕ್ಕಿರುವ ತುಳಿತದ ಉಪಕಾರ ಜೊತೆಗೆ ಹೋಲಿಸಿದರೆ ಅದು ಎದ್ದು ಕಾಣುತ್ತದೆ. ಇನ್ನು ಮುಂದೆ, ಕನ್ನಡ ಸಾಹಿತಿಗಳು ತಮಿಳುನಾಡಿನ ಕಡೆಗೆ ಕೈತೋರಿಸುತ್ತಾರೆ. ಡಿ.ಎಂ.ಕೆ ಸರ್ಕಾರದ ಸಮಯದಲ್ಲಿ ಅಲ್ಲಿಯ ರಸ್ತೆ, ಬಸ್ಸ್ ಫಲಕಗಳನ್ನು, ಇತ್ಯಾದಿಗಳನ್ನು ತಮಿಳಿನಲ್ಲೇ ಬರೆಸಲಾಯಿತು ಎಂದು ಹೇಳುತ್ತಾರೆ. ತಮಿಳುನಾಡಿಗೆ ಹೊರಗಿನಿಂದ ಬರುವವರ ಅನುಕೂಲಕ್ಕಾಗಿ ಇವು ಇಂಗ್ಲೀಷ್‌ನಲ್ಲಿ ಕೂಡ ತರಬೇಕು ಎಂದು ಇಲ್ಲಿ ವಾದಿಸಲು ಅವಕಾಶವಿದೆ. ಆದರೆ, ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ, ಅಲ್ಪಸಂಖ್ಯಾತರ, ಕನ್ನಡ ಆಡಳಿತ ಭಾಷೆಯಾಗುವುದನ್ನಾಗಲೀ, ನಾಮಫಲಕಗಳು ಕನ್ನಡದಲ್ಲಿ ಇರುವುದನ್ನಾಗಲೀ ವಿರೋಧಿಸಿಲ್ಲ. ಡಿ.ಎಂ.ಕೆ. ಎಂದೂ ಇಂಗ್ಲಿಷ್‌ನಲ್ಲಿದ್ದ ಖಾಸಗೀ ನಾಮಫಲಕಗಳಿಗೆ ಕಲ್ಲೆಸೆಯಲಿಲ್ಲ. ಅಲ್ಲಿ ತಮ್ಮ ಭಾಷೆ ಇರಬೇಕು ಎಂದು ಹೇಳಲಿಲ್ಲ. ಇದನ್ನು ಮೊದಲು ಕನ್ನಡ ಚಳವಳಿಕಾರರು ಮಾಡಿದ್ದರು. ಈಗ ಕನ್ನಡವೂ ಇರುವ ನಾಮಫಲಕಗಳಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಗೋಕಾಕ್ ಚಳವಳಿಗಾರರು ಅಳಿಸುತ್ತಿದ್ದಾರೆ. ತಮಿಳೇ ಕಾಣದಿರುವ ಬರಿ ಇಂಗ್ಲಿಷಲ್ಲೇ ಇರುವ ಬೋರ್ಡ್‌ಗಳನ್ನು ನಾವು ಈ ಹೊತ್ತಿಗೂ ಮದ್ರಾಸಿನಲ್ಲಿ ಕಾಣಬಹುದು. ಒಂದು ಪಕ್ಷ ಡಿ.ಎಂ.ಕೆ. ಎ‌ಐ‌ಎಡಿ‌ಎಂಕೆಗಳ ಅತಿರಂಜಿತ ತಮಿಳು ಸಂಸ್ಕೃತಿಯ ಕಲ್ಪನೆಯನ್ನು, ಅವರ ಪ್ರತ್ಯೇಕತಾ ಧೋರಣೆಯನ್ನು ಮೆಚ್ಚದಿದ್ದರೂ ಆ ಪಕ್ಷಗಳೆಂದೂ ಅಲ್ಪಸಂಖ್ಯಾತ ವಿರೋಧಿಗಳಾಗಲಿಲ್ಲ ಎಂಬುದನ್ನು ಗಮನಿಸಬೇಕು. ಅಲ್ಪಸಂಖ್ಯಾತರ ಮೇಲೆ ತಮಿಳಿನ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರಹೋಗಿಲ್ಲ. “ಮಣ್ಣಿನ ಮಕ್ಕಳು” ವಾದ ಅವರಿಂದ ದೂರವೇ. “ಮುಖ್ಯಧಾರೆ ಸೇರಿರಿ” ಎಂಬ ಘೋಷಣೆಯನ್ನು ಅವರೆಂದೂ ಹಾಕಿಲ್ಲ. ಆದರೆ, ಕನ್ನಡ ಸಾಹಿತಿಗಳು ಒಂದು ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ಅಭಿವೃದ್ಧಿಗೂ ಮತ್ತು ಬೇರೆಯವರ ಮೇಲೆ ಕನ್ನಡ ಹೇರಿಕೆಗೂ ಇರುವ ವ್ಯತ್ಯಾಸವನ್ನು ತಿಳಿಯಲು ವಿಫಲರಾಗಿದ್ದಾರೆ, ಕನ್ನಡ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ, ಅಭಿವೃದ್ಧಿಗೆ ಅಲ್ಪಸಂಖ್ಯಾತರು ಎಂದೂ ವಿರೋಧಿಸಿಲ್ಲ. ಆದರೆ, ಡಿ.ಎಂ.ಕೆ ಮತ್ತಿತರ ರಾಜ್ಯಗಳ ಬಗೆಗೆ ನಾನು ಮಾತನಾಡುವಾಗ ಅಲ್ಲೆಲ್ಲೂ ಭಾಷಾ ದುರಭಿಮಾನ ಇಲ್ಲವೇ ಇಲ್ಲ ಎಂದು ಹೇಳುತ್ತಿಲ್ಲ. ಅಲ್ಪಸಂಖ್ಯಾತರ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ಯಜಮಾನಿಕೆಗಳನ್ನು ಹೇರುವ ಪ್ರಯತ್ನ ಬೇರೆ ಕಡೆಗಳಲ್ಲೂ ನಡೆದಿದೆ. ಕೆಲವು ಬಾರಿಯಂತೂ ಕರ್ನಾಟಕಕ್ಕಿಂತ ತೀವ್ರವಾದ ರೀತಿಯಲ್ಲೇ ನಡೆದಿದೆ. ಆದರೆ, ಕರ್ನಾಟಕ ಈ ಬಗೆಯ ಪ್ರಯತ್ನಗಳಿಂದ ಯಾವಾಗಲೂ ದೂರ. ನಾವು ಹೆಚ್ಚು ಉದಾರಿಗಳು ಎಂದು ಕೆಲವರು ಹೇಳುತ್ತಾರಲ್ಲ, ಆ ಮಾತು ಮಾತ್ರ ಸುಳ್ಳು. ಕೆಲವು ರಾಜ್ಯಗಳಲ್ಲಿ ಈ ಬಗೆಯ ದುರಭಿಮಾನ ಹೆಚ್ಚಿನ ಪ್ರಮಾಣದಲ್ಲಿದೆ. ಕೆಲವುಗಳಲ್ಲಿ ಕಡಿಮೆ ಇದೆ.(ಇದು ನಮಗೆ ನಂಬಲು ಕಷ್ಟ. ಆದರೂ ನಿಜ). ಬೇರೆ ಕಡೆಗಳಲ್ಲಿ ಪರಿಸ್ಥಿತಿ ಏನೇ ಇದ್ದರೂ. ಅಲ್ಲಿಯ ದುರಭಿಮಾನಕ್ಕೆ ಸಮರ್ಥನೆ ಆಗಕೂಡದು. ಎದು ಎಲ್ಲಿ ಹೇಗೆ ಕಂಡು ಬಂದರೂ ಅದರ ವಿರುದ್ಧ ಹೋರಾಡುವ ಅಗತ್ಯವಿದೆ.

ಅಸ್ಸಾಂ ಉದಾಹರಣೆ

ಆಗಾಗ ಕನ್ನಡ ಸಾಹಿತಿಗಳು “ಅಸ್ಸಾಂ ಮಾದರಿ”ಯ ಪ್ರಸ್ತಾಪ ಮಾಡುತ್ತಾರೆ. ಇಲ್ಲೂ ಕೂಡಾ “ಪರದೇಶಿ ವಿರೋಧಿ” ಚಳವಳಿ ಮಾಡುತ್ತೇವೆಂದು ಬೆದರಿಸುತ್ತಾರೆ. ಈ ಹೋಲಿಕೆಯಂತೂ ನಿಜಕ್ಕೂ ದಾರಿ ತಪ್ಪಿಸುವಂಥದು. ಅಸ್ಸಾಂ ಚಳವಳಿಯ ವಿಧಾನ, ಒತ್ತಾಯಗಳ ಬೆಗ್ಗೆ ಒಪ್ಪಿಗೆ ಇಲ್ಲದಿದ್ದರೂ ಕೆಲವು ಜನ ಅಸ್ಸಾಮಿಯರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಕಳೆದ ೧೦೦ ವರ್ಷಗಳಲ್ಲಿ ಅಸ್ಸಾಂನಲ್ಲಿ ಬಂದು ಇಳಿದಿರುವ ಅಪಾರ ಸಂಖ್ಯೆಯ ವಲಸಿಗರ ದಂಡು ಅಲ್ಲಿಯ ಮಧ್ಯಮವರ್ಗ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಹಿಡಿದು ಕೂತುಬಿಟ್ಟಿದೆ. ಅದರಲ್ಲೂ ವಿಶೇಷವಾಗಿ ಬಂಗಾಳಿಗಳು ಪ್ರತಿಷ್ಠಿತ ಸ್ಥಾನದಲ್ಲಿದ್ದಾರೆ. ಆರ್ಥಿಕ ಬೆಳವಣಿಗೆಯೂ ಆ ರಾಜ್ಯದಲ್ಲಿ ಕುಂಠಿತವಾಗಿಬಿಟ್ಟಿದೆ. ಇವೆಲ್ಲದರ ಜೊತೆಗೆ, ಅಲ್ಲಿ ಬಂಗಾಳಿ ಸಾಂಸ್ಕೃತಿಕ ಧಿಮಾಕೂ ಸೇರಿಬಿಟ್ಟಿದೆ. ಈ ಎಲ್ಲ ಬೆಳವಣಿಗೆಗಳೂ ಸಾಮಾಜಿಕ ಮತ್ತು ಚಾರಿತ್ರಿಕ ಕಾರಣಗಳಿವೆ. ಕಳೆದ ೨೦-೨೫ ವರ್ಷಗಳಿಂದ ಅಸ್ಸಾಮಿಯರ ಸ್ಥಿತಿ ಪರವಾ ಇಲ್ಲ. ಆದ್ದರಿಂದ, ಈ ಚಳವಳಿಯ, ಅದರ ತಾತ್ವಿಕತೆ ಬಗ್ಗೆ ನಮಗೆ ಒಪ್ಪೊಗೆ ಇರಲಿ ಇಲ್ಲದಿರಲಿ (ನನಗಂತೂ ಒಪ್ಪಿಗೆ ಇಲ್ಲ) ಅಸ್ಸಾಮನ್ನು ಕರ್ನಾಟಕದ ಜೊತೆಗೆ ಹೋಲಿಸುವುದು ನಿಲ್ಲುವಂಥದಲ್ಲ. ಏಕೆಂದರೆ, ಚಿಕ್ಕಮಗಳೂರು, ಕೊಡಗು, ಕೆ.ಜಿ.ಎಫ್ ಬಿಟ್ಟರೆ ಕರ್ನಾಟಕದಲ್ಲಿ ಕಳೆದ ನೂರು ವರ್ಷಗಳಲ್ಲಿ ವಲಸಿಗರು ಬಂದೇ ಇಲ್ಲ ಎನ್ನಬಹುದು. ಹಾಗೆ ಬಂದವರನ್ನು ಕರ್ನಾಟಕದ ಒಟ್ಟು ಜನಸಂಖ್ಯೆಯ ಜೊತೆ ಇಟ್ಟು ನೋಡಿದಾಗಲಂತೂ, ಅದು ಖಂಡಿತ ಗೌಣವೇ. ಆದರೆ, ಕರ್ನಾಟಕದಿಂದ ಹೊರಗೆ ಸಾಕಷ್ಟು ವಲಸೆ ಹೋಗಿದೆ. ಅಸ್ಸಾಂನಲ್ಲಿ ಹಾಗಲ್ಲ. ಹೈದರಾಬಾದ್ ಕರ್ನಾಟಕದಲ್ಲಿಯ ಉರ್ದು ಭಾಷಿಕರಾಗಲೀ ಅಥವಾ ಬೇರೆ ಜಿಲ್ಲೆಗಳ ಮರಾಠಿ, ತೆಲುಗು, ತಮಿಳು, ಮಲೆಯಾಳಂ ಭಾಷಿಕರು ಹಾಗೆ ನೋಡಿದರೆ ಆ ಪ್ರದೇಶಗಳಿಗೆ ಕನ್ನಡಿಗರಷ್ಟೇ ಹಳಬರು. ಅವರ ತಾಯ್ನಾಡು ಕರ್ನಾಟಕನೇ. ಗೋಕಾಕ್ ವರದಿ ಮತ್ತು ಅದರ ಚಳವಳಿಗಾರರು ಕೆಲವೊಮ್ಮೆ ಹೇಳುವ ಹಾಗೆ ಅವರು ಹೊರಗಿನವರಲ್ಲ. ತಮಿಳುನಾಡು, ಕೇರಳ, ಆಂದ್ರಪ್ರದೇಶ್ ಮಹಾರಾಷ್ಟ್ರಗಳ ಗಡಿಗಳಲ್ಲಿ ವಾಸಿಸುವ ಕನ್ನಡಿಗರಿಗೂ ಈ ಮಾತು ಅನ್ವಯಿಸುತ್ತದೆ. ಅಸ್ಸಾಂಗೆ ಹೋಲಿಸಿದಾಗ ಸ್ವಾತಂತ್ರ್ಯ ನಂತರ ನಮ್ಮ ಆರ್ಥಿಕ ಬೆಳವಣಿಗೆಯೂ ಸಾಕಷ್ಟು ದೊಡ್ಡದೇ. ಭಾರತದ ಅನೇಕ ರಾಜ್ಯಗಳಿಗಿಂತ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಗಮನಾರ್ಹ. ಸಾರ್ವಜನಿಕ ಉದ್ಯಮ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ದೊಡ್ದ ಪ್ರಮಾಣದ ಬಂಡವಾಳ ಹೊರಗಿನಿಂದ ಬಂದಿದೆ. ಕೃಷಿ ಅಭಿವೃದ್ಧಿ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಬೆಂಗಳೂರು ದಂಡು ಪ್ರದೇಶ ಬಿಟ್ಟರೆ(ಅಲ್ಲಿಯೂ ಸ್ವಾತಂತ್ರ್ಯ ಬಂದ ನಂತರ ಹದಿನೈದು ವರ್‍ಷಗಳ ತನಕ ಮಾತ್ರ)ಬೇರೆ ಎಲ್ಲಿಯೂ ಯಾವ ಭಾಷಿಕ ಅಥವಾ ಧಾರ್‍ಮಿಕ ಗುಂಪು ಪ್ರತಿಷ್ಠಿತ ಸ್ಥಾನದಲ್ಲಿರಲಿಲ್ಲ. ಆದರೆ ನಿರ್ಧಿಷ್ಟ ಜಾತಿಗಳು ಪ್ರತಿಷ್ಠಿತ ಸ್ಥಾನಗಳಲ್ಲಿ -ಒಕ್ಕಲಿಗರು, ಲಿಂಗಾಯಿತರು ಇದ್ದೇ ಇವೆ. ಅಲ್ಪಸಂಖ್ಯಾತರ, ಮುಸ್ಲಿಮರ ಮೇಲೆ ಕನ್ನಡಿಗರ ಪ್ರಾಧಾನ್ಯವೂ ಇದೆ. ಈ ಚಳವಳಿಯನ್ನು ಬೇರೆ ಯಾವುದಾದರೂ ಚಳವಳಿಯ ಜೊತೆಗೆ ಹೋಲಿಸಬೇಕೆಂದರೆ ಖಾಲಿಸ್ತಾನ ಚಳವಳಿಯ ಜತೆಗೆ ಹೋಲಿಸಲು ಸಾಧ್ಯವಿದೆ. ಈ ಧಾರ್ಮಿಕ ಜನಾಂಗ ರಕ್ಷಣಾದಳ, ನೌಕರಶಾಹಿ, ಹೊರಗೆ ವಲಸೆ ಹೋಗುವಲ್ಲಿ, ಕೃಷಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಸ್ವಾತಂತ್ರ್ಯಕ್ಕೆ ಮುಂಚೆ ಮತ್ತು ನಂತರ ಎರಡೂ ಕಾಲಗಳಿಗೂ ಈ ಮಾತು ಸಲ್ಲುತ್ತದೆ. ಮಹತ್ವದ ಅಭಿವೃದ್ಧಿ ಸಾಧಿಸಿರುವ ಈ ಪ್ರಾಂತ್ಯಕ್ಕೆ ಹೊರಗಿನಿಂದ ವಲಸೆ ತೀರಾ ತೀರಾ ಕಡಿಮೆ. ಆದರೆ ಗೋಕಾಕ್ ಚಳವಳಿಯ ಜೊತೆಗೆ ಖಾಲಿಸ್ತಾನ್ ಚಳವಳಿಗೆ ಕೆಲವು ಸಾಮ್ಯಗಳಿದ್ದರೂ, ಅದರ ಮೂಲ, ಪ್ರೇರಣೆ, ಚರಿತ್ರೆಗಳು ಬೇರೆಯೇ ಆಗಿವೆ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ.

ಕೇವಲ ನೆಪ

ಈ ಉದಾಹರಣೆಗಳನ್ನು ನೋಡಿದಾಗ ನಮಗೆ ಸ್ಪಷ್ಟವಾಗುವುದು, ಕನ್ನಡಿಗರ ಏಕತೆಗೆ, ದುರಭಿಮಾನಕ್ಕೆ ಇವು ನೆಪ ಮಾತ್ರ ಎಂಬುದು. ಉಳಿದವರ ಮುಂದೆ ಯಜಮಾನಿಕೆ ಹೇರಲು ಈ ಹೋಲಿಕೆಗಳು ಬರೀ ಸಮರ್ಥನೆಗಳಷ್ಟೆ. ಕನ್ನಡ ಕ್ಯಾಥೊಲಿಕರ ಪ್ರಸಂಗ ನೋಡಿದರೆ, ಈ ಸತ್ಯ ಎದ್ದು ಕಾಣುತ್ತದೆ. ಕನ್ನಡ ಸಾಹಿತಿಗಳ ಬೆಂಬಲ ಸಿಕ್ಕಿರುವ ಇವರ ಬೇಡಿಕೆಗಳು ಬರೆ ತಮಿಳು ಕ್ಯಾಥೊಲಿಕರ ಮೇಲೆ ಕನ್ನಡದ ಯಜಮಾನಿಕೆಯನ್ನು ಹೇರುವ ಪ್ರಯತ್ನವಷ್ಟೇ ಅಲ್ಲ. ಉಳಿದ ಅಲ್ಪಸಂಖ್ಯಾತ ಕ್ಯಾಥೊಲಿಕರ ಮೇಲೂ ಅದು ಹರಿಹಾಯುತ್ತದೆ. ಕರ್ನಾಟಕದ ಉಳಿದ ಅಲ್ಪಸಂಖ್ಯಾತರುಗಳಾದ, ಆಂಗ್ಲೋ-ಇಂಡಿಯನ್ನರು, ತೆಲುಗರು, ಮುಸ್ಲಿಮರು, ಕ್ರಿಶ್ಚಿಯನ್ನರು, ಮರಾಠಿಗರ ಮೇಲೆ ಕಿರುಕುಳ, ಪಕ್ಷಪಾತ, ತುಳಿತ ನಡೆದಾಗ ಕನ್ನಡ ಸಾಹಿತಿಗಳು ಎಂದೂ ದನಿಯೆತ್ತಿಯೇ ಇಲ್ಲ. ಅವರ ದೃಷ್ಟಿ ಕೋನ ಮೂಲತಃ ನಗರದ ಮಧ್ಯಮವರ್ಗದ ಗ್ರಹಿಕೆಯಿಂದ ಬಂದದ್ದು. ಹೆಚ್ಚೆಂದರೆ, ದೊಡ್ಡ ಉದ್ಯಮಗಳಲ್ಲಿಯ ಪ್ರತಿಷ್ಠಿತ ಕಾರ್ಮಿಕ ವರ್ಗದ ದೃಷ್ಟಿಕೋನಗಳನ್ನು ಸೇರಿಸಿಕೊಳ್ಳುತ್ತದೆ. ಇನ್ನೊಂದು ಸ್ಪಷ್ಟ ಸಾಕ್ಷ್ಯವನ್ನು ನೀಡಬಹುದು. ಕೂಲಿ, ಜಾಡಮಾಲಿ, ಕೃಷಿಕಾರ್ಮಿಕ, ಕಕ್ಕಸ್ಸು ತೊಳೆಯುವ ಕೆಲಸಗಳೆಲ್ಲಾ, ಬರೀ ಕನ್ನಡೇತರರಿಗೆ (ಒಂದು ಪಕ್ಷ ಹಾಗಿದ್ದರೆ) ಸಿಕ್ಕಿವೆ; ಇದರಿಂದಾಗಿ ಈ ಜಾಗಗಳಲ್ಲೂ ಕನ್ನಡಿಗರಿಗೆ ಮೀಸಲಾತಿ, ಬಡ್ತಿ, ಮುಂತಾದುವು ಇರಬೇಕು ಎಂಬ ಮಾತನ್ನು ಅವರು ಹೇಳುವುದಿಲ್ಲ. ಇದು ಅವರ ಜಗತ್ತಿನಿಂದ ಹೊರತು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಾಕಷ್ಟು ಬಲವಾಗಿ ಬೆಳೆದ ನಗರದ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್ಮಿಕ ವರ್ಗ ಏಕೆ ಇಷ್ಟು ಉಗ್ರವಾಗಿ ತಮ್ಮ ಅನ್ಯಭಾಷಿಕ ವರ್ಗ ಬಂಧುಗಳ ವಿರುದ್ಧವೇ ಕೆಲಸ. ಇತ್ಯಾದಿಗಳಿಗೆ ಹೋರಾಡುತ್ತವೆ? ಈ ಪ್ರಶ್ನೆಗೆ ಉತ್ತರ ಕಳೆದ ೨೫ವರ್ಷಗಳ ನಮ್ಮ ಆರ್ಥಿಕ ಸ್ಥಗಿತ ಅಥವಾ ಅವನತಿಯಲ್ಲಿದೆ. ಇದರ ಪರಿಣಾಮವಾಗಿ ದಿನೇ ದಿನೇ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ. ಬೆಲೆಗಳು ಸಿಕ್ಕಾಬಟ್ಟೆ ಏರಿವೆ. ಜನಸಂಖ್ಯಾ ಉಬ್ಬರದ ಹೊತ್ತಿನಲ್ಲಿನ ಜೀವನ ಮಟ್ಟದ ಇಳಿತ ಸ್ವಾತಂತ್ರ್ಯಾ ನಂತರ ೧೫ವರ್ಷ ಸಾಕಷ್ಟು ಲಾಭ ಉಂಡಿದ್ದ ಈ ವರ್ಗಗಳ ಮೇಲೆ ತೀವ್ರ ಪರಿಣಾಮವನ್ನೆ ಬೀರಿವೆ.

ಈ ಆರ್ಥಿಕ ಸ್ಥಗಿತ ಅಥವಾ ಇಳಿಮುಖ ಬಹುಸಂಖ್ಯಾತ ಜನತೆಯ ನಿರೀಕ್ಷೆ, ಆಸೆಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲೆ ಸಂಭವಿಸತೊಡಗಿದೆ. ಜನರಲ್ಲಿ ಆಶೋತ್ತರಗಳ ಏರಿಕೆಗೆ ಕಾರಣಗಳು ಹೀಗಿವೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಸಂಘಟಿಸುವಾಗ ಅವರಿಗೆ ನೀಡಿದ ಭರವಸೆಗಳು; ರಾಷ್ಟ್ರೀಯ ಸರ್ಕಾರ ಬಂದ ತಕ್ಷಣ ಇದು ಈಡೇರುತ್ತದೆ ಎಂಬ ನಿರೀಕ್ಷೆ.

ಕಳೆದ ೩೦ ವರ್ಷಗಳಲ್ಲಿ, ಅದರಲ್ಲೂ ಚುನಾವಣೆ ಸಮಯಗಳಲ್ಲಿ ಹೆಚ್ಚುತ್ತಾ ಹೋದ ಪ್ರಗತಿಪರ ಘೋಷಣೆಗಳು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೃಷ್ಟಿಯಾದ ಹೆಚ್ಚಿನ ಸಂಪತ್ತು ಅವಕಾಶಗಳು ಸಹಜವಾಗಿ ಭರವಸೆಯ ದಿಗಂತಗಳನ್ನು ವಿಸ್ತರಿಸಿದ್ದು.

೧೯೪೭ರ ನಂತರ ಶಿಕ್ಷಣದಲ್ಲಿ. ಉನ್ನತ ಶಿಕ್ಷಣದಲ್ಲಿ ಕಂಡುಬಂದ ಏರಿಕೆ.

ಆದರೆ ೧೯೪೭ರ ನಂತರ ಆರ್ಥಿಕ ಅಭಿವೃದ್ಧಿಯ ಸಿಂಹಪಾಲು ನಗರ ಮತ್ತು ಹಳ್ಳಿಗರ ಶ್ರೀಮಂತರಿಗೆ ದಕ್ಕಿತು. ಇದರಲ್ಲಿ ಕೊಂಚ ಪಾಲು ನಗರದ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್‍ಮಿಕ ವರ್ಗಕ್ಕೂ ಸಿಕ್ಕಿತು. ಹಳ್ಳಿ ಮತ್ತು ನಗರಗಳ ಬಡವರಿಗೆ ಈ ಕಡೆಗೆ ಹೇಳಿದ ವರ್ಗಗಳಿಗೆ ಸೇರಲು ಚೂರೇ ಚೂರು ಸಾಧ್ಯತೆಯೂ ಉಂಟಾಯಿತು. ಹೀಗಾಗಿ, ಸ್ಥಗಿತತೆ, ಅವಕಾಶಗಳ ಅವನತಿಯಿಂದಾಗಿ ತೀರಾ ಹೆಚ್ಚಿನ ಪೆಟ್ಟು ಬಿದ್ದುದು ನಗರ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್‍ಮಿಕ ವರ್ಗಗಳಿಗೆ. ಕಳಕೊಳ್ಳಲು ಏನಾದರೂ ಇದ್ದುದು ಇವರಿಗೆಯೇ. ಹಳ್ಳಿಗಾಡಿನ ಮತ್ತು ನಗರಗಳ ಶ್ರೀಮಂತರಿಗೆ ಹೆಚ್ಚು ರಿಯಾಯಿತಿಗಳು, ಸೌಲಬ್ಯಗಳು ಈ ಸರ್ಕಾರದಿಂದ ಸಿಗತೊಡಗಿತ್ತು. ಕಾರ್‍ಮಿಕರ ಮತ್ತು ಕೃಷಿ ಕಾರ್‍ಮಿಕರ ನಿರೀಕ್ಷೆಗಳು ಹೆಚ್ಚಿನ ರಿಯಾಯಿತಿಯಲ್ಲಿದ್ದರೂ, ಇವರ ಅಗತ್ಯಗಳು ತೀರಾ ಮೂಲಭೂತ ಸ್ವರೂಪದವು. ಆದರೆ, ಅವರಿಗೆ ಕೂಡಾ ಸಾಮಾಜಿಕ ಶ್ರೇಣೀಕರಣದ ಮೇಲಿನ ಹಂತಗಳಿಗೆ ಹೋಗುವ ಅವಕಾಶ ಸ್ವಲ್ಪಮಟ್ಟಿಗೆ ಇರುವುದರಿಂದ ಅವರೂ ಕೂಡಾ ಸ್ವಲ್ಪಮಟ್ಟಿಗಿನ ಬೆಂಬಲವನ್ನು ಈ ಚಳವಳಿಗೆ, ಅದರ ಸಿದ್ಧಾಂತಕ್ಕೆ ತೋರಿಸುತ್ತಾರೆ.

ಆದರೆ ಈ ಅವನತಿಯ ಬಿಸಿ ಸಣ್ಣ ಮತ್ತು ಮಧ್ಯಮ ಬಂಡವಾಳಿಗ, ಶ್ರೀಮಂತ ರೈತ, ಈ ರೀತಿಯ ಮಧ್ಯವರ್‍ತಿ ಶ್ರೇಣೀಕರಣಗಳಿಗೂ ತಟ್ಟಿದೆ. ಏಕೆಂದರೆ, ತಮ್ಮವರು ಕೂಡಾ ಮಧ್ಯಮ ವರ್ಗಗಳೊಳಗೆ ಪ್ರವೇಶಿಸಬಹುದು ಎಂಬ ನಿರೀಕ್ಷೆ ಇವರದು. ಹೀಗಾಗಿ ನಗರದ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್‍ಮಿಕವರ್ಗಕ್ಕೆ ಈ ಚಳವಳಿಯಲ್ಲಿ ಇವರ ಬೆಂಬಲ ಕೂಡಾ ಇದೆ.

ಹಳ್ಳಿ ಮತ್ತು ನಗರಗಳ ಶ್ರೀಮಂತರು ಏಕೆ ಈ ಚಳವಳಿಗೆ ಬೆಂಬಲ ನೀಡುತ್ತಾರೆ ಎಂಬುದರ ಕಾರಣಗಳನ್ನು ಮುಂದೆ ನೋಡಬಹುದು. ಆದರೆ, ನಗರ ಮಧ್ಯಮವರ್ಗದ, ಬುದ್ಧಿಜೀವಿಗಳ ಒಂದು ವರ್ಗ ಸಾನ್ಯವಾಗಿ ಈ ರೀತಿಯ ಚಳವಳಿಗಳನ್ನು ಬೆಂಬಲಿಸುವುದಿಲ್ಲ. ಇಂಗ್ಲಿಷ್ ಬಳಸುವ ಮೇಲು ಮಧ್ಯಮ ವರ್ಗ ಮತ್ತು ಎಕ್ಸಿಕ್ಯೂಟಿವ್ ಜನರು ಇಂಗ್ಲಿಷ್ ಬಳಸುವ ಬುದ್ಧಿಜೀವಿ ವರ್ಗ, ಸಮಾಜ ವಿಜ್ಞಾನಿ, ವಿಜ್ಞಾನಿ, ವಕೀಲರು, ನ್ಯಾಯಾಧೀಶರು, ಡಾಕ್ಟರುಗಳು ಇತ್ಯಾದಿ ಜನ ಈ ಚಳವಳಿಯನ್ನು ಬೆಂಬಲಿಸುವುದಿಲ್ಲ. ಅವರಿಗೆ ಅಖಿಲ ಭಾರತೀಯ ಚಲನೆ. ದೃಷ್ಟಿಕೋನ, ಆಸಕ್ತಿಗಳಿರುವುದು ಇದಕ್ಕೆ ಕಾರಣ.

ಮೇಲಿನ ವಿಷ್ಲೇಶಣೆಯ ಸ್ವರೂಪ ಮತ್ತೊಂದು ಮುಖ್ಯ ಪ್ರಶ್ನೆಯನ್ನು ಎದುರಿಸುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಚಳವಳಿ ಏಕೆ ತೀವ್ರವಾಗಿತ್ತು? ದಕ್ಷಿಣ ಕನ್ನಡದಲ್ಲಿ ಬಹುಮಟ್ಟಿಗೆ ಇರಲೇ ಇಲ್ಲವಲ್ಲ?-ಇವುಗಳಿಗೆ ನಾವು ಉತ್ತರ ಹುಡುಕಬೇಕಾಗಿದೆ. ದಕ್ಷಿಣ ಕನ್ನಡದ ಜನಕ್ಕೆ ಸಾಕಷ್ಟು ಕನ್ನಡ ಪ್ರೇಮ ಇಲ್ಲ ಎಂದು ಕೆಲವರು ಹೇಳುತ್ತಾರೆ. ಕಾಸರಗೋಡಿನ ಬಗೆಗೂ ಈ ಮಾತನ್ನು ಹೇಳುವುದುಂಟು. ಕಾರಣ, ಇಲ್ಲಿಯವರು ತುಳು ಮತ್ತು ಕೊಂಕಣಿಗಳನ್ನು ಮಾತನಾಡುತ್ತಾರೆ ಎಂದು ಅವರು ತರ್ಕಿಸುತ್ತಾರೆ. ಆದರೆ ಈ ಜನತೆ ಯಾವಾಗಲೂ ಕನ್ನಡವನ್ನೇ ಬರೆಯಲು ಬಳಸಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಸಾಕಷ್ಟು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮನ್ನು ಕನ್ನಡಿಗರು ಎಂದೇ ಅವರು ಕರೆದುಕೊಂಡಿದ್ದಾರೆ. ಈ ವಾಸ್ತವಸ್ಥಿತಿಯ ಕಾರಣದಿಂದ, ಅವರ ಮೌನಕ್ಕೆ ನಾವು ಬೇರೆ ಕಾರಣಗಳನ್ನು ಹುಡುಕಬೇಕಾಗಿದೆ. ಮೊದಲಿಗೇ ಎದ್ದು ಕಾಣುವ ಕಾರಣವೆಂದರೆ, ಅವರು ಕರ್ನಾಟಕದ ಯಾವುದೇ ಭಾಗಕ್ಕಿಂತ ಹೊರಗೆ ಅತ್ಯಂತ ಹೆಚ್ಚು ವಲಸೆ ಹೋಗಿರುವ ಜನರು ಮುಂಬೈ, ಮದ್ರಾಸು, ಕೊಚ್ಚಿ ಇಷ್ಟೇ ಅಲ್ಲದೆ, ಪಾಶ್ಚಾತ್ಯ ರಾಷ್ಟ್ರಗಳಿಗೂ, ಅರಬ್ ದೇಶಗಳಿಗೂ ಅವರು ವಲಸೆ ಹೋಗಿದ್ದಾರೆ. ಅನುಕೂಲಸ್ಥ ಕಾರ್‍ಮಿಕವರ್ಗ, ನಗರದ ಮಧ್ಯಮವರ್ಗ, ಗಣ್ಯವೃತ್ತಿವರ್ಗ-ಮುಂತಾದವುಗಳಲ್ಲಿ ಅವರು ಗಮನಾರ್ಹ ಪ್ರಮಾಣದಲ್ಲಿದ್ದಾರೆ. ದೊಡ್ಡ ಕೈಗಾರಿಕಾ ಮತ್ತು ವಾಣಿಜ್ಯ ಸಂಖ್ಯೆಗಳಲ್ಲೂ ಉನ್ನತ ಹುದ್ದೆಗಳಲ್ಲಿದ್ದಾರೆ. ದೇಶದ ಎಲ್ಲಾ ಮೂಲೆಮೂಲೆಗಳಲ್ಲಿ, ಜಗತ್ತಿನ ಅನೇಕ ಭಾಗಗಳಲ್ಲಿ ಉಡುಪಿ ಹೋಟಲುಗಳ ಮೂಲಕವಾಗಿ ಕಾಣಿಸಿಕೊಳ್ಳುತ್ತಾರೆ. ದಕ್ಷಿಣ ಕನ್ನಡದ ಕೆನರಾ, ಸಿಂಡಿಕೆಟ್, ವಿಜಯಾ ಬ್ಯಾಂಕುಗಳು ದೇಶದಾದ್ಯಂತ, ಮುಖ್ಯವಾಗಿ ದಕ್ಷಿಣದಲ್ಲಿ ವ್ಯಾಪಕವಾಗಿ ಬೆಳೆದು, ಒಳ್ಳೆಯ ಕೆಲಸಗಳು ಮತ್ತು ಪ್ರಭಾವಗಳನ್ನು ಗಳಿಸಿಕೊಟ್ಟಿವೆ. ಇಂಥ ಉತ್ತಮ ಸಂಪರ್ಕ ಮತ್ತು ಭವಿಷ್ಯ ಇವರಿಗೆ ಇರುವುದರಿಂದ ಉದ್ಯೋಗಾವಕಾಶಗಳ ಅವನತಿ ಇವರ ಮೇಲೆ ಕಡಿಮೆ ಪರಿಣಾಮ ಬೀರಿದೆ. ಉಳಿದವರಿಗೆ ಹೋಲಿಸಿದಾಗ ಈ ಅಂಶ ಮನದಟ್ಟಾಗುತ್ತದೆ. ಇಲ್ಲಿಯ ಭಾಷಾದುರಭಿಮಾನ ಹೊರಗೆ ತಮ್ಮವರ ಮೇಲೆ ಖಂಡಿತ ತೊಂದರೆ ತರುತ್ತದೆ ಎಂಬುದು ದಕ್ಷಿಣ ಕನ್ನಡದ ಜನಕ್ಕೆ ಗೊತ್ತಿದೆ. ಬೇರೆ ಕಡೆಗಳಲ್ಲಿಯೂ ಪ್ರತಿದುರಭಿಮಾನ ಬೆಳೆದರೆ ಇವರ ಉದ್ಯೋಗಾವಕಾಶಗಳಿಗೆ ಸಂಚಕಾರ ಒದಗುತ್ತದೆ. ಆಮೇಲೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಲಸೆ ಬಂದಿರುವ ಹೊರಗಿನ ಜನ ಅಷ್ಟಾಗಿ ಇಲ್ಲ. ಕರ್ನಾಟಕವೂ ಸೇರಿದಂತೆ ಎಲ್ಲೆಡೆಗೆ ಅವರು ಎಲ್ಲಿ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳು ಅವರಿಗೊಂದು ಅತ್ಮವಿಶ್ವಾಸ, ಸ್ವಂತಿಕೆ, ನೆಲದ ಅಭಿಮಾನ ತಂದುಕೊಟ್ಟಿದೆ. ಆದ್ದರಿಂದ ಉಳಿದ ಅನೇಕ ಕನ್ನಡ ಮಧ್ಯಮವರ್ಗದ ಮಂದಿಗೆ ಬುದ್ಧಿಜೀವಿಗಳಿಗೆ ಕಾಡುವ ಕೀಳಿರಿಮೆ ಅವರಲ್ಲಿ ಇಲ್ಲ. “ಬೆದರಿಕೆಯ ತಲ್ಲಣ” ಅವರಿಗಿಲ್ಲ. ಕರ್ನಾಟಕದಲ್ಲಿ ಕೂಡಾ ಅವರನ್ನು ಬಹಳ ಬುದ್ಧಿವಂತರೆಂದು ಪರಿಗಣಿಸಲಾಗಿದೆ. ಈ ಅಂಶ ಬಹಳ ಸಾರಿ ಅವರಿಗೆ ಒಂದು ಬಗೆಯ ಧಿಮಾಕನ್ನು ತಂದಿದೆ.

ಇದಕ್ಕೆ ವಿರುದ್ಧ ರೀತಿಯಲ್ಲಿ, ಉತ್ತರ ಕರ್ನಾಟಕದ ಪಟ್ಟಣಗಳಲ್ಲಿ ಈ ಚಳವಳಿಗೆ ಬೆಂಬಲ ದೊರಕಿದ್ದು ಧಾರವಾಡ, ಬೆಳಗಾಂ, ದಾವಣಗೆರೆ, ಶಿವಮೊಗ್ಗ, ಹಾಸನ ಮತ್ತು ನೆರೆಹೊರೆಯ ಜಿಲ್ಲೆಗಳಲ್ಲಿ ಚಳವಳಿ ತುಂಬ ಪ್ರಬಲವಾಗಿತ್ತು.

ಲಿಂಗಾಯತರು

ಈ ಚಳವಳಿಯ ನಾಯಕ ವರ್ಗದಲ್ಲಿಯ ಅತ್ಯಂತ ಗಟ್ಟಿಯಾದ, ರಾಜಿಗೆ ಒಲ್ಲದ ಸಾಹಿತಿಗಳು ಧಾರವಾಡದವರೇ ಆಗಿದ್ದಾರೆ. ಈ ಪ್ರದೇಶಗಳಲ್ಲಿ, ಇಲ್ಲಿಯ ನಾಯಕರುಗಳಲ್ಲಿ ಲಿಂಗಾಯತರು ಪ್ರಧಾನವಾಗಿದ್ದರಿಂದ ಅನೇಕ ಜನ ಪಿಸುಗುಟ್ಟುತ್ತಿದ್ದುದು ಕೇಳಿ ಬತು. ಲಿಂಗಾಯಿತರು ಮತ್ತೆ ರಾಜಕೀಯ ಶಕ್ತಿಯನ್ನು ಗಳಿಸಿಕೊಳ್ಳುತ್ತಿರುವ ಯತ್ನ ಇದು ಎಂದು. ದೇವರಾಜ ಅರಸರ ಹಿಂದುಳಿದ ವರ್ಗಗಳ ಪಡ್ಯಿಂದಾಗಿ ರಾಜಕೀಯ ಅಧಿಕಾರ ಕಳೆದುಕೊಂಡಿದ್ದ ಲಿಂಗಾಯಿತರ ರಾಜಕೀಯ ಪ್ರಯತ್ನ ಈ ಚಳವಳಿ ಎಂಬುದು ಈ ಮಾತಿನ ಹಿನ್ನೆಲೆ. ಈ ತೀರ್‍ಮಾನ ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಾವೀಗ ನೋಡಬೇಕಾಗಿದೆ. ಲಿಂಗಾಯಿತರು ಈ ಚಳವಳಿಯ ಮುಂಚೂಣಿಯಲ್ಲಿದ್ದರು ಎಂಬ ಮಾತು ನಿಜ. ಅವರು ಬಹುಸಂಖ್ಯೆಯಲ್ಲಿಲ್ಲದ ಊರುಗಳ ಮತ್ಟಿಗೂ ಈ ಮಾತು ಸಲ್ಲುತ್ತದೆ. ಏಪ್ರಿಲ್ ೧೯ರ ಸರ್ಕಾರಿ ತೀರ್‍ಮಾನದ ನಂತರ ಬೆಂಗಳೂರಲ್ಲೂ ಚಳವಳಿಯ ಸೂತ್ರಧಾರಿಗಳು ಅವರೇ. ಚರಿತ್ರೆಯಲ್ಲಿ ಕೊಂಚ ಹಿಂದಕ್ಕೆ ಹೋಗಿ ನೋಡಿದರೆ, ಹಾವನೂರು ವರದಿ ವಿರುದ್ಧ ಪ್ರತಿಭಟಿಸಿ ಚಳವಳಿ ನಡೆಸಿದವರು ಲಿಂಗಾಯಿತರು. ಸರ್ಕಾರಿ ಕೆಲಸಗಳ ಹಂತದಲ್ಲಿ ಈ ವರದಿಯಿಂದಾಗಿ ಅತ್ಯಂತ ಹೆಚ್ಚಿನ ಪೆಟ್ಟು ಬಿದ್ದುದು ಈ ಜಾತಿಗೆ. ೧೯೮೦ರ ಜುಲೈನಲ್ಲಿ ಮಲಪ್ರಭಾದಲ್ಲಿ ಪ್ರಾರಂಭವಾದ ರೈತ ಚಳವಳಿಯ ನಾಯಕತ್ವ ಈ ಜನಾಂಗದ ಶ್ರೀಮಂತ ರೈತರದು(ಕಳೆದ ಎರಡು ವರ್ಷಗಳಲ್ಲಿ ಈ ರೈತ ಚಳವಳಿ ಶಿವಮೊಗ್ಗ, ಹಾಸನ ಜಿಲ್ಲೆಗಳಿಗೂ ಹಬ್ಬಿದೆ). ನೀರಾವರಿ ಜಿಲ್ಲೆಯಾದ, ಕಬ್ಬು ಬೆಳೆಯುವ ಮಂಡ್ಯದ ಶ್ರೀಮಂತ ಒಕ್ಕಲಿಗ ರೈತರು ಈ ಚಳವಳಿಗೆ ಧುಮುಕಲಿಲ್ಲ ಎಂಬುದು ಗಮನಾರ್ಹ. ಕಬ್ಬಿಗೆ ಹೆಚ್ಚಿನ ಬೆಲೆ, ಸರ್‍ಕಾರಿ ಸಾಲದ ರದ್ದು, ನೀರಿಗೆ ಕಡಿಮೆ ತೆರಿಗೆ-ಇತ್ಯಾದಿ ಒತ್ತಾಯಗಳೂ ಕೂಡ ಮಂಡ್ಯ ರೈತರನ್ನು ಆಕರ್ಷಿಸಲಿಲ್ಲ. ಜುಲೈ, ಸೆಪ್ಟಂಬರ್ ೧೯೮೦ದಿಂದಾಚೆಗೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಂದು ದೊಡ್ಡ ಹೋರಾಟ ಬೆಲೆ ಏರಿಕೆ ವಿರುದ್ಧ ನಡೆಯಿತು. ಇಲ್ಲಿಯ ನಾಯಕತ್ವ ಕೂಡಾ ಲಿಂಗಾಯಿತರೇ ಪ್ರಧಾನವಾಗಿದ್ದ ನಗರ ಮಧ್ಯಮ ವರ್ಗದ್ದು. ಈ ಎಲ್ಲ ಚಳವಳಿಗಳಲ್ಲಿ ಜಾತಿಯ ಅಂಶವೊಂದೇ ಪ್ರಧಾನ ಪಾತ್ರ ವಹಿಸಿದೆ ಎಂದು ನಾನು ಹೇಳುತ್ತಿಲ್ಲ. ಅಥವಾ ಮರಳಿ ಅಧಿಕಾರ ಪಡೆಯಲು ಲಿಂಗಾಯಿತರು ಒಳಸಂಚೊಂದನ್ನು ನಡೆಸಿದ್ದಾರೆ ಎಂದೂ ನಾನು ಹೇಳುತ್ತಿಲ್ಲ. ಈ ವಿಚಾರ ಕೆಲವು ನಾಯಕರ ತಲೆಯಲ್ಲಿ ಇರಲೂ ಬಹುದು. ನನ್ನ ವಾದದ ಒಟ್ಟು ಅರ್ಥ ಹೀಗಿದೆ. ಇಡಿ ವ್ಯವಸ್ಥೆಯ ಆರ್ಥಿಕ ಅವನತಿಯ ಸನ್ನಿವೇಶದಲ್ಲಿ ಅವಕಾಶಗಳು ಕುಗ್ಗುತ್ತಿರುವ ಹೊತ್ತಿನಲ್ಲಿ, ಈ ಬೆಲೆ ಏರಿಕೆಗಳ ಸಂದರ್ಭದಲ್ಲಿ ಇದೇ ಸಾಮಾಜಿಕ ಸ್ಥಿತಿಯ ಉಳಿದ ಜಾತಿಗಳಿಗಿಂತ ಹೆಚ್ಚಾಗಿ ಬಿಸಿ ತಗಲಿರುವುದು ನಗರಗಳ ಲಿಂಗಾಯಿತ ಮಧ್ಯಮವರ್ಗ ಮತ್ತು ಕಾರ್‍ಮಿಕ ವರ್ಗಕ್ಕೆ. ಸ್ವಲ್ಪಮಟ್ಟಿಗೆ ಅವರಲ್ಲಿಯ ಮಧ್ಯಮ ವ್ಯಾಪಾರಿ, ಶ್ರೀಮಂತ ರೈತರಿಗೂ ಆರ್ಥಿಕ ಕುಸಿತ ಪರಿಣಾಮ ಬೀರಿದೆ. ಅನೇಕ ಸರ್ಕಾರಿ ಕಾರ್ಯಕ್ರಮಗಳ ಲಾಭ ಇವರಿಗೂ ಸಿಕ್ಕಿತ್ತು. ನಗರ ವರ್ಗಗಳಿಗೆ ಸೇರುವ ಆಸೆಯಿಂದಿರುವ ಬಡ ಲಿಂಗಾಯಿತರೂ ಇಲ್ಲಿದ್ದಾರೆ.

ಸುಮಾರು ೧೬ ವರ್ಷಗಳ ಕಾಲ ರಾಜ್ಯದ ಆಳ್ವಿಕೆ ಇವರ ಕೈಲಿ ಇದ್ದುದರಿಂದ ಕೆಲಸಗಳು ಮತ್ತಿತರ ಸಂಪನ್ಮೂಲಗಳ ರೂಪದಲ್ಲಿ ಕೆಲವು ವಿಶೇಷ ಅನುಕೂಲಗಳನ್ನು ಪಡೆಯುತ್ತಿದ್ದರೆ. ಅದು ಈಗ ಇಲ್ಲವಾಗಿರುವುದರಿಂದ ಪದಚ್ಯುತ ಭಾವನೆ ಇನ್ನೂ ಹೆಚ್ಚಾಗಿರಬೇಕು. ಹೀಗಾಗಿ, ಕನ್ನಡದ ಘೋಷಣೆ ಅವರಿಗಿರುವ ಬೆದರಿಕೆ, ಅವಕಾಶ ಹೀನತೆಗಳನ್ನು ವ್ಯಕ್ತಪಡಿಸುತ್ತದೆ. ಜೊತೆಗೆ ಭಾಷಿಕ ಅಲ್ಪಸಂಖ್ಯಾತರು ಮತ್ತು “ಹೊರಗಿನವ”ರಿಂದ ಕೆಲಸ, ಸಂಪನ್ಮೂಲಗಳ ಪಾಲೊಂದನ್ನು ಪಡೆಯಲು ಈ ಘೋಷಣೆ ಸಹಾಯಕ ಕೂಡಾ. ಹಿಂದುಳಿದ ವರ್ಗಗಳು ತಮ್ಮಂಥ “ಮೇಲುಜಾತಿ” (ಇವರ ಜೊತೆಗೆ ಇಲ್ಲಿ ಬ್ರಾಹ್ಮಣರು ಮತ್ತು ಒಕ್ಕಲಿಗರು ಇವರ ಜೊತೆಗಾರರು)ಗಳಿಂದ ಕಿತ್ತುಕೊಂಡದ್ದನ್ನು ಇಲ್ಲಿ ತುಂಬಿಕೊಳ್ಳಲು ನೋಡಿದ್ದಾರೆ. ಇಲ್ಲಿ ಪ್ರಶ್ನೆಯೊಂದು ಏಳಲು ಸಾಧ್ಯವಿದೆ: ಎರಡು ವರ್ಷಗಳ ಹಿಂದಿನ ಸಂಸ್ಕೃತ ವಿರೋಧಿ ಚಳವಳಿಯಲ್ಲೂ ಉತ್ತರ ಕರ್ನಾಟಕದ ಕಡೆಗೆ ಲಿಂಗಾಯಿತ ಸಾಹಿತಿಗಳು ಮತ್ತು ಅವರ ಹಿಂಬಾಲಕರು ಉಗ್ರ ನ್ರೇತೃತ್ವ ನೀಡಿದ್ದರಲ್ಲ ಎಂದು.

ಸಂಸ್ಕೃತ-ಸಂಸ್ಕೃತಿ

ಇದಕ್ಕೆ ಉತ್ತರ ಹೀಗಿದೆ. ಉಳಿದ ಭಾಗದ ಸಾಹಿತಿಗಳು ಬಹುಪಾಲು ಜನ ಬ್ರಾಹ್ಮಣರು-ಇಲ್ಲವೇ ಬ್ರಾಹ್ಮಣ ಪ್ರಭಾವಕ್ಕೆ ಒಳಗಾದವರು. ಹೀಗಾಗಿ ಅವರು ಶಾಲಾ ಹಂತದಲ್ಲಿ ಸಂಸ್ಕೃತವನ್ನು ಎಷ್ಟೇ ವಿರೋಧಿಸಿದರೂ, ಅಂತರಾಳದಲ್ಲಿ ಅವರಿಗೆ ಸಂಸ್ಕೃತದ ಬಗೆಗೆ ಪ್ರೇಮ ಇದ್ದೇ ಇದೆ. ಅವರು ಸಂಸ್ಕೃತವನ್ನು ಪೂರ್ಣವಾಗಿ ಉಗ್ರವಾಗಿ ತಿರಸ್ಕರಿಸಲಾರರು. ಇವರಲ್ಲಿ ಈ “ಸಂಸ್ಕೃತಿ”ಇದ್ದೇ ಇದೆ. ಆದರೆ ಸಂಸ್ಕೃತ ಅಷ್ಟು ಮಹತ್ವದ ಪಾತ್ರವನ್ನು ಲಿಂಗಾಯಿತರಲ್ಲಿ ನಿರ್ವಹಿಸಿಲ್ಲ. ಬ್ರಾಹ್ಮಣರ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆಯ ಭಾಷೆಯನ್ನಾಗಿಯೇ ಲಿಂಗಾಯಿತರು ಸಂಸ್ಕೃತವನ್ನು ಕಂಡಿದ್ದಾರೆ. ಇಷ್ಟಾದರೂ ಕೂಡಾ, ಮೊದಲಿಗೆ ಸಂಸ್ಕೃತ ವಿರೋಧಿ ಚಳವಳಿಗೆ ಉತ್ತರ ಕರ್ನಾಟಕದಲ್ಲಿ ಕನ್ನಡ ಸಾಹಿತಿಗಳ ವಲಯದಿಂದಾಚೆಗೆ ಹೆಚ್ಚು ಬೆಂಬಲ ಸಿಗಲಿಲ್ಲ ಎಂಬುದನ್ನು ಗಮನಿಸಬೇಕು. ಆದರೆ ಲಿಂಗಾಯಿತ ಮಠಗಳು ಸಂಸ್ಕೃತಕ್ಕೆ ತಮ್ಮ ಬೆಂಬಲ ನೀಡಿದರು. ಬಸವಣ್ಣ ಮತ್ತು ಇತರ ಶರಣರು ಬ್ರಾಹ್ಮಣ ಧರ್ಮ ಮತ್ತು ಸಂಸ್ಕೃತಿಯ ವಿರುದ್ಧ ಬಂಡಾಯವೆದ್ದರೂ, ಕ್ರಮೇಣ ಲಿಂಗಾಯತರ ಚಳವಳಿ ಹಿಂದೂಧರ್ಮದ ಚೌಕಟ್ಟಿನೊಳಗೇ ಸೇರಿಕೊಂಡಿತು. ಲಿಂಗಾಯಿತ ಮಠಾಧಿಪತಿಗಳು ಸಂಸ್ಕೃತ ಓದಲು ಕಾಶಿಗೆ ಹೋಗುತ್ತಾರೆ. ಲಿಂಗಾಯಿತರು ಸಂಸ್ಕೃತೀಕರಣ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ. ತಮ್ಮ ಜಾತಿಯ ಹೆಸರನ್ನೇ ವೀರಶೈವ ಎಂದು ಬದಲಾಯಿಸಿಬಿಟ್ಟಿದ್ದಾರಲ್ಲ. ಇದರಿಂದಾಗಿ ಲಿಂಗಾಯಿತ ಮಠಾಧಿಪತಿಗಳು ಸಂಸ್ಕೃತಕ್ಕೆ ಬೆಂಬಲ ನೀಡಿದ್ದು ಸಹಜ.

ಕೇಂದ್ರ ಉದ್ಯಮದ ಕನ್ನಡಿಗರು

ಮುಂದೆ ಕೇಂದ್ರ ಸರ್ಕಾರದ ಬೃಹತ್ ಉದ್ಯಮಗಳಲ್ಲಿಯ ಕನ್ನಡಿಗರು ಈ ಹೋರಾಟದಲ್ಲಿ ಪಾಲುಗೊಂಡದ್ದೇಕೆ ಎಂಬ ಸಮಸ್ಯೆ ಬರುತ್ತದೆ.ಕಳೆದ ವರ್ಷ ತಾನೆ ಎಲ್ಲ ಕಾರ್ಮಿಕರೂ ಒಟ್ಟಾಗಿ ತಮ್ಮ ಬೇಡಿಕೆಗಳಿಗಾಗಿ ಮಹತ್ವದ ದೀರ್ಘ ಹೋರಾಟವನ್ನೇ ನಡೆಸಿದ್ದರು. ಆದರೆ ಈಗ ಅನ್ಯ ಭಾಷಿಕ ಬಂಧುಗಳ ವಿರುದ್ಧವಾಗಿ ಕೆಲಸ, ಬಡತಿ, ಇತ್ಯಾದಿಗಳಿಗಾಗಿ ಹೋರಾಡುತ್ತಿದ್ದಾರೆ. ಅನೇಕ ದಶಕಗಳ ಕಾಲ ಕಾರ್ಮಿಕ ಹೋರಾಟವನ್ನು ಕಟ್ಟಿದ ಕಾರ್ಮಿಕ ನಾಯಕರೇಕೆ ಈ ಬೆಳವಣಿಗೆಯನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ? ಕಾರ್ಮಿಕ ಸೌಹಾರ್ದತೆಯ ಯಶಸ್ವೀ ಚರಿತ್ರೆಯಿದ್ದೂ ಹೀಗಾಯಿತಲ್ಲ? ಈ ಬೆಳವಣಿಗೆಯನ್ನು ನಾವು ಅರ್ಥ ಮಾಡಿಕೊಳ್ಳಲು ಅನೇಕ ಸಂಗತಿಗಳನ್ನು ಗಮನಿಸುವ ಅಗತ್ಯವಿದೆ. ೧೯೭೦ ದಿಂದಾಚೆಗೆ ಕರ್ನಾಟಕದ ಉಳಿದ ಭಾಗಗಳಂತೆ ಈ ಕಾರ್ಮಿಕ ಸಂಘಗಳಲ್ಲಿ ಕೂಡಾ ಕನ್ನಡ ದುರಭಿಮಾನೀ ಭಾವನೆ ಮತ್ತು ಕನ್ನಡಿಗರ ಏಕತೆಯ ನಿಲುವು ಬಲಗೊಳ್ಳುತ್ತಾ ಬಂದಿದೆ. ಕಳೆದ ಐದು ವರ್ಷಗಳಿಂದಂತೂ ಈ ಭಾವನೆ ಅತ್ಯಂತ ತೀವ್ರವಾಗಿ ಬೆಳೆಯುತ್ತಿದೆ. ಇದರ ಮಹಾನ್ ಸ್ಪೋಟ ನಡೆದದ್ದು ಈಗ. ಇದರಿಂದಾಗಿ ಒಂದು ಬಗೆಯ ಸೋಲಿನ ಮತ್ತು ಹತಾಶೆಯ ಧೋರಣೆ ಕಾರ್ಮಿಕ ಸಂಘಗಳಲ್ಲಿ ಕಾಣುತ್ತಿದೆ.

ಕಳೆದ ಮಹಾನ್ ಮುಷ್ಕರದ ಸೋಲು ಅದರ ನಾಯಕರನ್ನು ಹೀಗಳೆದಿದೆ. ಕಾರ್ಮಿಕರಿಗೆ ತಾವು ಮೋಸ ಹೋದಂತೆ ಅನಿಸುತ್ತಿದೆ. ಸೋಲನ್ನು ಸ್ವೀಕರಿಸಲು ಕಾರ್ಮಿಕರು ಸಿದ್ದರಿರಲಿಲ್ಲ. ಹೀಗಾಗಿ ಶೂನ್ಯವೊಂದು ನಿರ್‍ಮಾಣವಾಯಿತು. ಈ ಶೂನ್ಯವನ್ನು ಅಲ್ಲಿಯ ಕನ್ನಡ ಸಂಘಗಳು ತುಂಬಿದವು. ಇಲ್ಲಿ ತಮಿಳರಲ್ಲಿ ಕೂಡಾ ಏಕತೆಗೆ ದಾರಿ ತೋರಿಸಿತು. (ಕನ್ನಡ ಸಂಘಗಳಲ್ಲಿ ಕೂಡಾ ಉತ್ಕಟವಾದ ಜಾತಿ ಜಗಳಗಳಿವೆ) ಇಂಥ ಆರ್ಥಿಕ ಅವನತಿಯ ಸನ್ನಿವೇಶಗಳಲ್ಲಿ ತಮ್ಮ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳಲು ಬೇರೆ ಯಾವ ದಾರಿಯೂ ಅವರಿಗೆ ಕಾಣಲಿಲ್ಲ. ಕಾರ್ಮಿಕರ ಈ ಆಂತರಿಕ ಜಗಳ ಜಾತಿ, ಧರ್ಮ ಭಾಷೆಯ ರೂಪವನ್ನು ಪಡೆಯಬಲ್ಲದು. ಇದು ಬೆಂಬಲ ಸಿಗುತ್ತದೆ ಎಂಬ ಕಾರಣಕ್ಕೆ ಈಗ ಭಾಷೆಯ ರೂಪದಲ್ಲಿ ವ್ಯಕ್ತವಾಗಿದೆ. ಗೋಕಾಕ್ ಚಳವಳಿ ಈ ಆಂತರಿಕ ಹೋರಾಟಕ್ಕೆ ಸ್ಪಷ್ಟ ಬೆಂಬಲವನ್ನು ನೀಡಿತು. ಉಳಿದ ಮಧ್ಯಮ ವರ್ಗ, ಅನುಕೂಲಸ್ಥ ಕಾರ್ಮಿಕ ವರ್ಗಗಳಲ್ಲಿ ಇದು ಮುಚ್ಚು ಮರೆಯಲ್ಲಿ ವ್ಯಕ್ತವಾಗುತ್ತದೆ. ಪ್ರಾಂತೀಯ ಬುದ್ಧಿಜೀವಿವರ್ಗ, ರಾಜ್ಯಸರ್ಕಾರ, ದುರಭಿಮಾನೀ ಸಂಸ್ಥೆಗಳು, ರಾಜಕಾರಣಿಗಳು ಕೂಡಾ ಈ ಕಿತ್ತಾಟವನ್ನು ಬೆಂಬಲಿಸುತ್ತಾರೆ; ಕಾರ್ಮಿಕ ಸಂಘಗಳನ್ನು ದುರ್ಬಲಗೊಳಿಸಲು ಮಾಲೀಕರೂ ಕೂಡಾ ಪ್ರೋತ್ಸಾಹ ನೀಡುವುದುಂಟು. ಇವೆಲ್ಲದರ ಜೊತೆಗೆ, ಕಾರ್ಮಿಕ ನಾಯಕರಲ್ಲಿ ರಾಜಕೀಯ ದೃಷ್ಟಿಕೋನ ಕೊನೆಮುಟ್ಟಿ, ಮುಂದೆ ಕಾಣದಂತಾಗಿ ಈ ವರ್ಗಕ್ಕೆ ಇಳಿಯುವುದುಂಟು. ದುಡಿಯುವ ವರ್ಗದ ಏಕತೆಯ ಮೂಲಕ, ಒಗ್ಗತ್ಟಿನ ರಾಜಕೀಯ ಕ್ರಿಯೆಗಳ ಮೂಲಕ, ಈ ಸ್ಥಿತಿಯಿಂದ ಹೊರಹೋಗಲು ಸಾಧ್ಯ ಎಂಬುದನ್ನು ಅನ್ಯರು ಕಾರ್ಮಿಕರಿಗೆ ತಿಳಿಸಿಕೊಡುವುದಿಲ್ಲ. ಈ ಆಂತರಿಕ ಹೋರಾಟದ ಬಿಕ್ಕಟ್ಟು ಅಷ್ಟಾಗಿ ಬಡ ಕಾರ್ಮಿಕರ ಮೇಲೆ ಪ್ರಭಾವ ಬೀರುವುದಿಲ್ಲ. ಏಕೆಂದರೆ ತೀರಾ ಮೂಲಭೂತ ಬೇಡಿಕೆಗಳಿರುವ ಇವರಿಗೆ, ತಮ್ಮ ಜೊತೆ ಕೆಲಸಗಾರರ ಜೊತೆಗೆ ಕಿತ್ತಾಡುವುದರಿಂದ ಏನೂ ಸಿಗುವುದಿಲ್ಲ. ಈ ದೇಶದಲ್ಲಿ ಅಂಥ ಸ್ಥಿತಿ ಇನ್ನೂ ಬಂದಿಲ್ಲ.

ಡಾ|| ರಾಜ್ ಪ್ರವೇಶ

ಡಾ|| ರಾಜ್‌ಕುಮಾರ್ ಪ್ರವೇಶದಿಂದಾಗಿ ಈ ಚಳವಳಿ ಸಾಮಾಜಿಕ ನೆಲೆಗಟ್ಟು ವಿಸ್ತರಿಸಿದೆ. ಡಾ|| ರಾಜ್ ಮತ್ತು ಇತರ ಚಿತ್ರನಟರ ಅಭಿಮಾನಿಗಳಾದ ಮಹಿಳೆಯರು ಹಳ್ಳಿ ನಗರಗಳ ಬಡವರು ಚಳವಳಿಯ ಚೌಕಟ್ಟಿನೊಳಗೆ ಪ್ರವೇಶಿಸಿದ್ದಾರೆ. ಬಹಳಷ್ಟು ಜನ ಬರುವುದೇ ಡಾ||ರಾಜ್‌ರನ್ನು ನೋಡಲು, ಹಿಂಬಾಲಿಸಲು, ಕನ್ನಡ ಚಿತ್ರಗಳಿಗೆ ಆಧ್ಯತೆ ನೀಡಬೇಕೆಂದು ಎಲ್ಲಾ ಕಡೆಗಳಲ್ಲೂ ಡಾ|| ರಾಜ್ ಒತ್ತಾಯಿಸಿದ್ದಾರೆ. “ಕರ್ನಾಟಕದಲ್ಲಿ ಮಾತ್ರ ಬೇರೆ ಭಾಷೆಯ ಚಿತ್ರಗಳನ್ನು ತೋರಿಸಲಾಗುತ್ತಿದೆ. ಆದರೆ, ಕನ್ನಡ ಚಿತ್ರಗಳು ಮಾತ್ರ ಹೊರಗೆಲ್ಲೂ ನೆಡೆಯುವುದಿಲ್ಲ” ಎಂಬ ಮಾತೂ ಕೇಳಿ ಬಂತು. ಈ ಹೇಳಿಕೆ ನಿಜವಲ್ಲವೆಂದು ಸುಲಭವಾಗಿ ತೋರಿಸಬಹುದು. ಅಲ್ಲದೆ ಈ ಚಳವಳಿಗೆ ಅವರು ಧುಮುಕಿದುದರ ಹಿಂದೆ ಸ್ವಂತ ಹಿತ ಎಷ್ಟಿದೆ ಎಂಬುದೂ ಇದರಿಂದ ವ್ಯಕ್ತವಾಗುತ್ತದೆ. ಆದರೆ, ಈ ಚಳವಳಿ ತೀವ್ರಗೊಂಡ ಮೇಲೆ ಮಧ್ಯೆ ಏಪ್ರಿಲ್‌ನಲ್ಲಿ ಅವರು ಧುಮುಕಿದರು ಎಂಬುದನ್ನು ಇಲ್ಲಿ ಹೇಳಬೇಕಾಗಿದೆ. ಏ. ಕೆ. ಸುಬ್ಬಯ್ಯ ಡಾ|| ರಾಜ್‌ಗೆ ಚಳವಳಿಗೆ ಧುಮುಕಲು ನಿರಂತರವಾಗಿ ಬಹಿರಂಗ ಆಹ್ವಾನ ನೀಡುತ್ತಲೇ ಇದ್ದರು. ನಂತರ ಧಾರವಾಡದ ಸಾಹಿತಿಗಳೂ ಆಮಂತ್ರಣ ನೀಡಿದರು. ಮೊದಲಿಗೆ ಚಳವಳಿಯನ್ನು ಬೆಂಬಲಿಸಿ ಡಾ||ರಾಜ್ ಹೇಳಿಕೆ ನೀಡಿದರು. ಧಾರವಾಡದ ಸಾಹಿತಿಗಳಿಗೆ ಇದು ಸಾಲದೆ ಹೋದದ್ದರಿಂದ, ನೇರವಾಗಿ ಚಳವಳಿಯಲ್ಲೇ ಧುಮುಕಿದರು. ಬಹುಶಃ ತಮ್ಮ ಹೆಸರಿನ ಬಗೆಗೆ ಕಾಳಜಿಯಾಗಿರಬೇಕು. ಇಂಥ ಚಳವಳಿಯೊಂದಕ್ಕೆ ಇಳಿಯಲಿಲ್ಲ ಎಂದು ಜನ ಮುಂದೆ ಕೈ ತೋರಿಸಿಯಾರು ಎಂಬ ಯೋಚನೆ. ಒಂದು ಸಾರಿ ಚಳವಳಿಗೆ ಇಳಿದ ಮೇಲೆ ಅದರ ಅನುಕೂಲಗಳು ತಿಳಿದವು. ಹಿಂದೀ ಮತ್ತಿತರ ಭಾಷಾ ಚಿತ್ರಗಳ ವಿರುದ್ಧ ಹೋರಾಡುವಾಗ ಇದು ಅಪಾರ ನೆರವಿಗೆ ಬರುತ್ತದೆ ಎಂಬುದು ಕಾಣದೇ ಹೋಗಲಿಲ್ಲ. ನಂತರ ಜನ ಏನನ್ನುತ್ತಾರೊ ಎಂಬ ಹೆದರಿಕೆಗೆ ಇನ್ನಷ್ಟು ಜನ ಚಿತ್ರ ತಾರೆಯರು ಬಂದರು. ಇವರಾದ ಮೇಲೆ ಈ ಅವಕಾಶವನ್ನು ನೋಡಿದ, ಕನ್ನಡ ಚಿತ್ರ ನಿರ್ಮಾಪಕರು, ಹಂಚಿಕೆದಾರರು ಇಳಿದರು. ಈಗಾಗಲೆ ಅವರಿಗೆ ಯಶಸ್ಸಿನ ರುಚಿ ಸ್ವಲ್ಪ ಸಿಕ್ಕಿದೆ.

ಸ್ವಾರಸ್ಯ

ಪ್ರಾಂತೀಯ ಬಂಡವಾಳಿಗರು ಅಖಿಲ ಭಾರತೀಯ ಮತ್ತು ಇತರ ಪ್ರದೇಶಗಳ ಬಂಡವಾಳಿಗರ ವಿರುದ್ಧ ಹೋರಾಡಲು ಭಾಷಾ ಸಮಸ್ಯೆಗಳನ್ನು ಉಪಯೋಗಿಸಿಕೊಳ್ಳುವ ರೀತಿಗೆ ಇದೊಂದು ಉದಾಹರಣೆಯಷ್ಟೆ. ಈ ಕನ್ನಡ ನಿರ್ಮಾಪಕರು ಹಂಚಿಕೆದಾರರೆಲ್ಲಾ ಕನ್ನಡ ಭಾಷಿಕರಲ್ಲ ಎಂಬುದೂ ಉಳಿದ ಭಾಷಾ ಚಿತ್ರಗಳ ಹಂಚಿಕೆದಾರರೆಲ್ಲರೂ ಕನ್ನಡೇತರರಲ್ಲ. ಇದು ಸ್ವಾರಸ್ಯಕರ ಸಂಗತಿ. ಇಲ್ಲಿ ಸಂಬಂಧಪಟ್ಟ ಜನ ಯಾವ ಭಾಷೆ ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ಅವರು ಯಾವ ಭಾಷೆ ಚಿತ್ರ ತಯಾರಿಸುತ್ತಾರೆ, ವಿತರಣೆ ಮಾಡುತ್ತಾರೆ ಎಂಬುದು ಮುಖ್ಯ. ಪ್ರಾಂತೀಯ ಬಂಡವಾಳಿಗರಿಗೆ ಉಳಿದ ಅಖಿಲಭಾರತೀಯ ಮತ್ತು ಇತರ ಪ್ರಾಂತೀಯ ಬಂಡವಾಳಿಗರ ಜೊತೆ ಯಾವ ರೀತಿಯ ಸಂಬಂಧವಿರುತ್ತದೆ ಎಂಬುದರ ಮೇಲೆ ಈ ರೀತಿಯ ಚಳವಳಿಗಳನ್ನು ಬೆಂಬಲಿಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಯಿತು. ಈ ಅಂಶಕ್ಕಿಂತ ಬೇರೆಯಾದ ಯಾವ ಸಾಕ್ಷ್ಯವೂ ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಕಾಣಿಸಿಕೊಂಡಿಲ್ಲ.

ಇನ್ನು ಕನ್ನಡ ಸಾಹಿತಿಗಳು ಈ ಚಳವಳಿಯಲ್ಲಿ ಪಾಲುಗೊಂಡಿದ್ದಕ್ಕೆ ನಾಯಕತ್ವ ವಹಿಸಿದ್ದಕ್ಕೆ ಅನೇಕ ಕಾರಣಗಳಿವೆ. ನಗರದ ಮಧ್ಯಮವರ್ಗದ ಸದಸ್ಯರಾಗಿ ಇವರ ಗ್ರಹಿಕೆ ಮತ್ತು ಸಮಸ್ಯೆಗಳನ್ನು ಇದಕ್ಕೊಂದು ಕಾರಣ ಎಂಬುದನ್ನು ಈ ಹಿಂದೆಯೇ ಗುರುತಿಸಲಾಗಿದೆ. ಇದರ ಜೊತೆಗೆ, ಅನೇಕ ಸೈದ್ಧಾಂತಿಕ ಕಾರಣಗಳೂ ಇವೆ.

ಚಳವಳಿಯಲ್ಲಿ ಭಾಗವಹಿಸಲು ಅವರನ್ನು ಪ್ರೇರೇಪಿಸಿದ ವೈಚಾರಿಕ ನೆಲೆಗಳನ್ನು ನಾನು ಸಾಮ್ಪ್ರದಾಯಿಕ ತಾತ್ವಿಕತೆಯ ಏಕತಾವಾದ ಎಮ್ದು ಕರೆಯುತ್ತೇನೆ. (ದಿ ಕನ್ಸ್‌ರ್ವೇಟಿವ್ ಫಿಲಾಸಫಿ ಆಫ್ ಇಂಟೆಗ್ರೇಶನ್) ಇದು ಕನ್ನಡ ಸಾಹಿತಿಗಳ ಮತ್ತು ಚಳವಳಿಯ ಪ್ರಧಾನ ಸಿದ್ಧಾಮ್ತ. ದುಡಿಯುವ ಜನತೆಯ ಮೇಲೆ ಪರಿಣಾಮ ಉಮ್ಟು ಮಾಡಿದ ಸಾಮಾಜಿಕ, ಆರ್ಥಿಕ, ರಾಜಕೀಯ ಸಮ್ಗತಿಗಳ ಕಡೆಗೇಕೆ ಇವರು ಕುರುಡಾಗಿದ್ದಾರೆ ಎಮ್ಬುದನ್ನು ಇದು ವಿವರಿಸಬಲ್ಲದು. ಎರಡನೆಯ ಸಮ್ಗತಿ ಎಮ್ದರೆ, ಕನ್ನಡ ಸಾಹಿತಿಗಳಿಗೆ ಭಾಷೆಯ ಬಗೆಗೆ ಹಿಡಿದಿರುವ ಗೀಳು, ಭಾಷೆ ಸಾರ್ವಭೌಮವಾದದ್ದು ಎಮ್ಬ ಗ್ರಹಿಕೆ ಇವರದು. ಸಮ್ಪ್ರದಾಯ ಶರಣರ ಭಾವೈಕ್ಯತಾವಾದ ಎಮ್ದಿನಮ್ತೆ ಬರದೆ ಇಲ್ಲಿ ಭಾಷೆಯ ರೂಪದಲ್ಲಿ ಬಂದಿರುವುದನ್ನು ಮತ್ತು ಅಲ್ಪಸಂಖ್ಯಾತರ ಬಗೆಗೆ ಇರುವ ಅಲಕ್ಷ್ಯವನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ. ಕನ್ನಡ ಸಾಹಿತಿಗಳಲ್ಲಿ ದುಡಿಯುವ ಜನತೆಯ ಸಮಸ್ಯೆಗಳ ಬಗೆಗೆ ಕಾಳಜಿ ಇರುವ ಸಾಹಿತಿಗಳೂ ಕೂಡಾ ಈ ಚಳವಳಿಗೇಕೆ ಇಳಿದರು ಎಂಬ ಅಂಶವನ್ನು ಕೂಡಾ ಈ ಭಾಷಾ ಧೋರಣೆ ವಿವರಿಸುತ್ತದೆ. ರಾಮಮನೋಹರ ಲೋಹಿಯಾರ ಅನುಯಾಯಿಗಳಾದ ಈ ಲೇಖಕರು ವ್ಯವಸ್ಥೆಗೆ ಸೇರದಿರುವ, ಅದಕ್ಕೆ ವಿರುದ್ಧವಾಗಿರುವ ಜನ. ಹೀಗಿದ್ದೂ ಈ ಗುಂಪು ಚಳವಳಿಗೆ ಇಳಿದಿರುವ ಕಾರಣವೆಂದರೆ, ದುಡಿಯುವ ಜನತೆಯ, ಅವರ ಸಂಘಟನೆಗಳ ವಾಸ್ತವ ಸಂಪರ್ಕ ಇಲ್ಲದಿರುವುದು. ರಾಜಕಾರಣದ ಆಳವಾದ ಗ್ರಹಿಕೆ ಮತ್ತು ಭಾಗವಹಿಸುವಿಕೆಗಳೆರಡೂ ಕಡಿಮೆಯಾದಗಲೂ ಹೀಗಾಗುತ್ತದೆ. ಅವರು ಯಾವಾಗಲೂ ಅವರ ಕಲ್ಪನೆಯ “ಪೋಷಕರ” ವಿರುದ್ಧ – ಇಂಗ್ಲಿಷ್, ಇಂಗ್ಲಿಷ್ ಕಲಿತವರ, ಮೇಲುಜಾತಿ, ಸಂಸ್ಕೃತ – ಭಾಷೆ ಮತ್ತು ಸಾಹಿತ್ಯದ ವಲಯಗಳಲ್ಲಿ ಮಾತ್ರ ಹೋರಾಟ ಮಾಡಿದವರು. ಗಾಂಧಿ ಉಪ್ಪು, ಚರಕ, ಖಾದಿಗಳಿಗೆ ನೀಡಿದ ಸಾಂಕೇತಿಕ ಶಕ್ತಿಗಳ ಹಾಗೆ ಲೋಹಿಯಾ ಕೂಡಾ ತಮ್ಮ ಪ್ರತಿಭಟನೆಯ ಸಂಕೇತಗಳನ್ನು ಕಲ್ಪಿಸಿಕೊಂಡಿದ್ದರು. ಇಂಗ್ಲಿಷ್, ಇಂಗ್ಲಿಷರ ಪ್ರತಿಮೆಗಳನ್ನು ಲೋಹಿಯಾ ಸಂಕೇತಿಸಿದ್ದು ಅತ್ಯಂತ ವಿಶಾಲವಾದ ರೀತಿಯಲ್ಲಿ. ಇವುಗಳನ್ನು ಇಲ್ಲಿ ಅಕ್ಷರಶಃ ಪಾಲಿಸಿ ಅವುಗಳ ವ್ಯಾಪ್ತಿಯನ್ನು ಕುಗ್ಗಿಸಲಾಯಿತು. ಪರಮೋಚ್ಚವೆಂಬಂತೆ ಅವನ್ನು ಸ್ವೀಕರಿಸಿದರು. ಹೀಗಾಗಿ, ಅವುಗಳ ಸಾಮಾಜಿಕ, ರಾಜಕೀಯ ಅರ್ಥವೇ ಹೊರಟುಹೋಯಿತು. ಲೋಹಿಯವಾದಿಗಳು ತಮ್ಮ ಭಾಷೆಯಾದ ಕನ್ನಡಕ್ಕೆ ಸಾರ್‍ವಭೌಮತ್ವ ನೀಡಿದ್ದರಿಂದ, ಅಲ್ಪಸಂಖ್ಯಾತರ ಬಗ್ಗೆ ಕುರುಡಾಗಿಬಿಟ್ಟರು. ಆದರೆ, ಕನ್ನಡ ಸಾಹಿತಿಗಳಲ್ಲಿ ಇದಕ್ಕೆ ವಿರೋಧ ಕೂಡಾ, ಅದು ಎಷ್ಟೇ ಸೀಮಿತವಾಗಿರಲಿ, ಲೋಹಿಯಾವಾದಿಗಳಿಂದಲೇ ಬಂದದ್ದು ಎಂಬುದನ್ನು ಕೂಡಾ ಇಲ್ಲಿ ದಾಖಲಿಸಬೇಕಾಗಿದೆ. ಈ ಚಳವಳಿಯ ಅತಿರೇಕದ ಮತ್ತು ಸಮೂಹ ಸನ್ನಿಯ ರೂಪಗಳಿಗೆ ಅವರು ವಿರೋಧ ಸೂಚಿಸಿದರು. ಶೋಷಿತ ಜನತೆಯ ಪರವಾಗಿರುವ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಗಳಲ್ಲೂ, ಈ ಚಳವಳಿಯಿಂದಾಗಿ ಭಿನ್ನಾಬ್ನ್ಹಿಪ್ರಾಯಗಳೊ, ಪ್ರತಿಭಟನೆಗಳು ಹುಟ್ಟಿಕೊಂಡವು. ಕೆಲವರು ಬಹಿರಂಗವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಆದರೆ, ಹೆಚ್ಚು ಜನ ಆ ಸಂಘಟನೆಗಳ ಒಳಗೇ ತಮ್ಮ ಭಿನ್ನಾಭಿಪ್ರಾಯ ತೋರಿಸಿದರು. ಈ ಎರಡೂ ಸಂಘಟನೆಗಳಲ್ಲಿ ಲೋಹಿಯಾವಾದಿಗಳು, ,ಮಾರ್ಕ್ಸಿಸ್ಟರು, ಇತತ ಎಡ ಪಂಥೀಯರು ಇದ್ದಾರೆ ಎಂಬುದು ಈಗಾಗಲೇ ತಿಳಿದಿರುವ ಸಂಗತಿ.

ಈ ಚಳವಳಿ, ಅದರ ಸಿದ್ಧಾಂತಗಳ ಬಗ್ಗೆ ಭಿನ್ನಾಭಿಪ್ರಾಯ, ಸ್ಪಷ್ಟ ವಿರೋಧವಿರುವ ಅನೇಕ ಜನ ಕನ್ನಡ ಲೇಖಕರೇಕೆ ಸಾರ್ವಜನಿಕವಾಗಿ ಮಾತನಾಡಲಿಲ್ಲ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಕೆಲವರಿಗೆ ಇಷ್ಟವಿಲ್ಲದಿದ್ದರೂ ಬಂಧನಕ್ಕೊಳಗಾಗುವಂತೆ ಕೇಳಲಾಯಿತು. ಮುಂದೆ ಜನ ತಮ್ಮನ್ನು ಬೆರಳು ತೋರಿಸಿಯಾರು ಎಂಬ ಭಯ.ತಮ್ಮ ಮಾನವೀಯ ಮತ್ತು ಬೌದ್ಧಿಕ ಹೊಣೆಯನ್ನು ಬಿಟುಕೊಟ್ಟ ಈ ಜನರನ್ನು ಹೇಡಿಗಳು ಎಂದೇ ಕರೆಯಬೇಕಾಗಿದೆ. ಹೀಗೆ ಭಿನಾಭಿಪ್ರಾಯವಿದ್ದ ಜನರೆಲ್ಲಾ ಧೈರ್‍ಯವಾಗಿ ತಮ್ಮ ವಿಚಾರವನ್ನು ಹೇಳಿದ್ದರೆ, ಚಳವಳಿಗೆ ಈಗ ಸಿಕ್ಕಿರುವ ಮಾನ್ಯತೆ ಇರುತ್ತಿರಲಿಲ್ಲ.
ಇವರೇ ಅಲ್ಲದೆ ಇನ್ನೂ ಕೆಲವು ಜನ ವಿಶ್ವಾಸಘಾತಕರೂ ಇಲ್ಲಿದ್ದಾರೆ. ಬೇರೆ ಭಾಷೆಗಳನ್ನು ಮಾತನಾದುವ ಜನರಾಗಿದ್ದೂ, ತಕ್ಷಣ ಚಳವಳಿಗೆ ಧುಮುಕಿ ಕನ್ನಡ ಭಾಷಿಕರಿಗಿಂತ ಉಗ್ರ ವೀರಾವೇಶವನ್ನು ತೋರಿಸಿದ ಜನ ಇವರು. ಕೆಲವರಂತು ಸಾರ್ವಜನಿಕವಾಗಿ ತಮ್ಮ ತಮ್ಮ ಮಾತೃಭಾಷೆಗಳನ್ನು ಬಿಟ್ಟಿದ್ದೇವೆಂದೂ (ಬಹ ಸಾರಿ ಇದು ಸುಳ್ಳು) ಕನ್ನಡ ಮುಖ್ಯ ಧಾರೆಗೆ ಸೇರಿದವರೆಂದೂ ಘೋಷಿಸಿದರು. ಕೆಲವು ಸಾರಿ ಈ ರೀತಿಯ ಧೋರಣೆ ನಿಜವಾದ ಅಭದ್ರತೆ, ಎಲ್ಲರೊಳಗೊಂದಾಗಿ ಒಪ್ಪಿಗೆ ಪಡೆಯಬೇಕೆಂಬ ಆಸೆಯಿಂದ ಹುಟ್ಟುತ್ತದೆ. ಆದರೆ, ಇದು ಸಾಕಷ್ಟು ಸಾರಿ, ತತ್ವಹೀನ ಸಮಯಸಾಧಕತನ, ಆರ್‍ಯಾಕರಣಕ್ಕೆ ಒಳಗಾಗಿ, ನಾಜಿ ಪಕ್ಷಕ್ಕೆ ಸೇರಿದ ಯಹೂದಿಗಳಿಗಾದ ದುರ್ಗತಿಯನ್ನು ಇವರು ಯೋಚಿಸಿದರೆ ಒಳ್ಳೆಯದು. ಕಡೆಯದಾಗಿ, ಅತಿರೇಕದ ಘೋಷಣೆಗಳನ್ನು ನೀಡುವಲ್ಲಿ ಕನ್ನಡ ಸಾಹಿತಿಗಳ ನಡುವೆ ನಡೆದ ಸ್ಪರ್ಧೆಯನ್ನು ಇಲ್ಲಿ ಹೇಳಲಾಗಿದೆ. ಬೇರೊಬ್ಬ ಇನ್ನೂ ಹೆಚ್ಚಿನ ಕನ್ನಡ ಪ್ರೇಮದ ಘೋಷಣೆ ಹಾಕಿ ಜನಪ್ರಿಯನಾಗಿಬಿಟ್ಟರೆ? ಈ ಆತಂಕವೇ ಪೈಪೋಟಿಯ ಪ್ರೇರಣೆ.

ಇಂಥ ಕ್ರಿಯೆಗಳ ಹಿನ್ನೆಲೆಯಲ್ಲಿದ್ದ ಈ ಏಕತಾವಾದದ ಸ್ವರೂಪವಾದರೂ ಏನು? ಅದು ಭಾಷೆಯ ರೂಪವನ್ನು ಪಡೆದಿದ್ದಾದರೂ ಏಕೆ? ಈ ಸಿದ್ಧಾಂತ ಜನತೆ, ಸಂಸ್ಕೃತಿ ಮತ್ತು ಪ್ರಭುತ್ವದ ಅಖಂಡ ಏಕತೆಯ ಕನಸು ಕಾಣುತ್ತದೆ. ಸಾಂಪ್ರದಾಯಿಕ ಸಂಸ್ಕೃತಿ, ಮೌಲ್ಯಗಳ ಪುನರ್ ಪ್ರತಿಷ್ಟಾಪನೆಯ ನೆಲೆಯ ಮೇಲೆ ಈ ಕಾರ್‍ಯ ನಿಂತಿರುತ್ತದೆ. ಹೀಗಾಗಿ, ಈ ಸಿದ್ಧಾಂತ ಎಲ್ಲ ಜನರ ಅಥವಾ ಭಾಷೆಯ ನೆಲೆಗಟ್ಟನ್ನು ಆಧರಿಸಿದ ಹೊಸ ಸೌಹಾರ್ದತೆಯನ್ನು ಕಟ್ಟಲು ಯತ್ನಿಸುತ್ತದೆ. ಸ್ವತಃ ಗೋಕಾಕ್ ವರದಿಯನ್ನೇ ಈ ಸಿದ್ಧಾಂತ ರೂಪಿಸಿದೆ.

ಸೌಹಾರ್ದ ಸೂತ್ರ

ಈ ಹೇಳಿಕೆಯ ಸಮರ್ಥನೆಗಾಗಿ ಗೋಕಾಕ್ ವರದಿಯ ಕೆಲವು ಭಾಗಗಳನ್ನೇ ನೋಡಬಹುದು. ಪ್ರಾದೇಶಿಕ ಭಾಷೆಯನ್ನು ಕುರಿತ ಭಾಗಗಳನ್ನೇ ನೋಡಬಹುದು. ಕರ್ನಾಟಕದಲ್ಲಿಯ ಭಾವೈಕ್ಯವನ್ನು ಕುರಿತು ಈ ಹೇಳಿಕೆ ಬರುತ್ತದೆ: ಒಂದು ಭಾಷೆಯನ್ನಾಡುವ ಜನ ಏಕಮೇವವಾದ ರಾಜ್ಯದ ಆಡಳಿತಕ್ಕೆ ಓಳಪಟ್ಟಾಗ ಆಡಳಿತ ಸುಗಮ ಹಾಗೂ ಪ್ರಗತಿಪರವಾಗಿ ಅದರಲ್ಲಿ ತುಂಬಾ ಹೊಂದಾಣಿಕೆಯಿರುತ್ತದೆಂಬುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹೊಂದಾಣಿಕೆಯನ್ನು ಇನ್ನಷ್ಟು ಪ್ರಬಲವಾಗಿಸಲು ಆ ಜನರ ಒಂದೇ ಆಡಳಿತದಲ್ಲಿ ಅಂತರ್ಗತವಾಗಿರುವ ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸಗಳು ಬಹಳ ಸಹಾಯವಾಗುತ್ತವೆ”. ವರದಿ ಮುಂದುವರಿದು ಅಲ್ಪಸಂಖ್ಯಾತರ ಬಗ್ಗೆ ಹೀಗೆ ಹೇಳುತ್ತದೆ: “ಅಲ್ಪಸಂಖ್ಯಾತರು…. ಈ ತತ್ವಗಳನ್ನು ಪಾಲಿಸದೆ ಒಂದು ದ್ವೀಪದಂತೆ ಕನ್ನಡ ಜಲಾಶಯದಲ್ಲಿ ಇರಲು ಬಯಸಿದಾಗ ವಿರಸವೇಳುತ್ತದೆ; ಇದರಿಂದ ಸಹಜೀವನದ ಹಾಗೂ ಭಾವೈಕ್ಯತೆಯ ಬಲವು ಕುಗ್ಗುತ್ತದೆ. ….ಕರ್ನಾಟಕದಲ್ಲಿ ಬಂದು ನೆಲೆಸಿದ ಅಲ್ಪಸಂಖ್ಯಾತರು ………….. ಇನ್ನೂ ತಾವು ತಮ್ಮ ಭಾಷಾ ರಾಜ್ಯದಲ್ಲಿಯೇ ಇರುವಂತೆ ವ್ಯವಹರಿಸುತ್ತಾರೆ. ಇದು ಉಭಯತ್ರಯರಿಗೂ ಕ್ಷೇಮಕರವಲ್ಲ” “ರಾಜ್ಯದಲ್ಲಿ ನೆಲೆಸಿದ ಎಲ್ಲ ಜನಕ್ಕೆ ರಾಜ್ಯ ಭಾಷೆಯು ಕಡ್ಡಾಯವಾದ ಭಾಷೆಯಾಗಿ ಪಠ್ಯಕ್ರಮದಲ್ಲಿರುವುದು ಯುಕ್ತವೂ, ನ್ಯಾಯವೂ ಆಗಿದೆ….. ಕರ್ನಾಟಕ ರಾಜ್ಯದಲ್ಲಿ ನೆಲೆಸಿದವರು – ಅವರು ಎಲ್ಲಿಂದಲೇ ಬಂದಿರಲಿ – ಕನ್ನಡಿಗರಾಗುವುದು ಅವರ ದೃಷ್ಟಿಯಿಂದಲೇ ಅವಶ್ಯವಾಗಿದೆ. ಹತ್ತು ವರ್ಷಗಳಿಗಿಂತ ರಾಜ್ಯದಲ್ಲಿ ನೆಲೆಸಿದವರು ಕನ್ನಡಿಗರೆಂದೇ ಅರ್ಥ. ಅವರ ಭವಿಷ್ಯವೂ ಕನ್ನಡಿಗರ ಭವಿಷ್ಯವೇ ಆಗುತ್ತದೆ.”

ಭಾಷೆ – ರಾಜ್ಯ

ರಾಷ್ಟ್ರೀಯ ಏಕತೆಯನ್ನು ಕುರಿತು ಅದರ ನಿಲುವು ಹೀಗಿದೆ: “ರಾಷ್ಟ್ರದ ದೃಷ್ಟಿಯಿಂದ ಏಕತೆಯನ್ನು ಹೆಚ್ಚು ಸುಗಮವಾಗಿ ಸಾಧಿಸಲೆಂದು ಭಾರತದಲ್ಲಿ ಭಾಷಾ ರಾಜ್ಯಗಳ ನಿರ್ಮಾಣವಾಗಿದೆ. ತಮ್ಮದೇ ಆದ ಭಾಷೆ, ಸಂಸ್ಕೃತಿಯ ಪರಂಪರೆ, ಇತಿಹಾಸದ ಅನನ್ಯತೆ ಹೀಗೆ ಪ್ರತಿಯೊಂದು ಭಾಷಾ ರಾಜ್ಯವೂ ತನ್ನದೇ ವ್ಯಕ್ತಿತ್ವನ್ನು ಪಡೆದಿದೆ. ಇಂತಹ ಅನೇಕ ವ್ಯಕ್ತಿತ್ವಗಳು; ವಿವಿಧ ರಾಗಗಳು ಮೇಳದ ಸಂಗೀತದಲ್ಲಿ ಮಿಲಿತವಾಗುವಂತೆ ಭಾರತೀಯ ರಾಷ್ಟ್ರ ಪುರುಷನ ವ್ಯಕ್ತಿತ್ವದಲ್ಲಿ ಒಂದು ಸಮೃದ್ಧ ಏಕತೆಯನ್ನು ಪಡೆಯುತ್ತವೆ. ಈ ವ್ಯಕ್ತಿತ್ವವು ಅನನ್ಯವಾಗದೆ ರಾಷ್ಟ್ರದ ಏಕತೆಯೂ ಸಮೃದ್ಧವಾಗಲಾರದು. ಈ ಸಮೃದ್ಧಿಯಲ್ಲಿಯೇ ಭಾಷಾ ರಾಜ್ಯಗಳ ಶ್ರೇಯಸ್ಸು ಹಾಗೂ ಸಫಲತೆ ಇದೆ. ಪ್ರಾಂತೀಯತೆಯ ಹೆಸರಿನಲ್ಲಿ ನಾವು ರಾಷ್ಟ್ರೀಯತೆಯನ್ನು ಸಂಕುಚಿತಗೊಳಿಸಬಾರದು. ಅದೇ ರೀತಿಯಲ್ಲಿ ರಾಜ್ಯದ ವ್ಯಕ್ತಿತ್ವವನ್ನೊಡೆದು ರಾಷ್ಟ್ರೀಯತೆಯ ಕಲ್ಪನೆಗೆ ಒಂದು ಕೃತಿಮ ವಿಶಾಲತೆಯನ್ನು ತಂದೊಡ್ಡುವವೆಂದು ತಿಳಿಯಬಾರದು” ರಾಜ್ಯ ಮತ್ತು ಭಾಷೆಗಳ ನಡುವಣ ಸಂಬಂಧವನ್ನು ಕುರಿತ ಮಾತುಗಳು ಇಲ್ಲಿವೆ: “ರಾಜ್ಯಭಾಷೆಗೆ ರಾಜ್ಯದಲ್ಲಿ ಪ್ರಭುತ್ವ ಕಲ್ಪಿಸಿ ಒಂದು ರಾಜ್ಯದ ವ್ಯಕ್ತಿತ್ವವನ್ನು ಪೋಷಿಸಿದಂತೆ. ದೇಶಕ್ಕೆ ಹಿಂದಿಯನ್ನು ಅಂತರರಾಜ್ಯ ಸಂಪರ್ಕ ಭಾಷೆಯನ್ನಾಗಿ ಮಾಡಿ ಮತ್ತು ಇಂಗ್ಲಿಷನ್ನು ಸಂಪರ್ಕ ಭಾಷೆಯನ್ನಾಗಿ ಮಾಡಿ ಕೇಂದ್ರ ಸರ್ಕಾರವು ದೇಶದ ಏಕಮೇವತೆಯನ್ನು ರಕ್ಷಿಸುವ ಪ್ರಯತ್ನದಲ್ಲಿದೆ. …… ಒಟ್ಟಾರೆ ಈ ವಿಷಯದಲ್ಲಿ ನಾವು ಅನುಸರಿಸಬೇಕಾದ ಧೋರಣವಿಷ್ಟು! ನಡುನಡುವೆ ಎತ್ತರದ ಗೋಡೆಗಳಿದ್ದು ದೇಶದ ಏಕತೆಗೆ ಭಂಗ ತಂದಿರಬಾರದು. ಅದರ ಜೊತೆಗೆ ಒಂದಿಲ್ಲೊಂದು ನೆವದಿಂದ ಒಂದು ರಾಜ್ಯದ ಭದ್ರತೆಗೆ ಘಾತುಕವಾಗುವ ಧೋರಣೆಗಳಾಗಲೀ, ವರ್ಗಗಳಾಗಲೀ ತಲೆಯೆತ್ತಿರಬಾರದು”.

ಬಹುಸಂಖ್ಯಾತರ ಭಾಷೆಯ ಮೂಲಕವಾಗಿ ಜನತೆ ಮತ್ತು ಸಂಸ್ಕೃತಿಯನ್ನು ಪ್ರಭುತ್ವದ ಜೊತೆಗೆ ಏಕಗೊಳಿಸುವ ಆಶಯವಾದರೂ ಏಕೆ? ಈ ಹಿನ್ನೆಲೆಯಲ್ಲಿ ಪ್ರಾಂತ ಮತ್ತು ರಾಷ್ಟ್ರಗಳ ಹಂತದಲ್ಲಿ ಬಹುಸಂಖ್ಯಾತ ಭಾಷೆಗಳಿಗೆ ಅಧಿಕೃತ ಭಾಷೆಗಳ – ಕನಡ ಮತ್ತು ಹಿಂದಿ – ಪಟ್ಟ ನೀಡಿ ಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಈ ಆಶಯ ಮೂಲವನ್ನು ಹುಡುಕಬೇಕಾಗಿದೆ.

ಈ ಆಸೆಯ ಮೂಲ ಕಾರಣ ಇರುವುದು ಪ್ರಭುತ್ವ ಮತ್ತು ಸೆಂಟ್ರಸ್ಟ್ ರಾಜಕೀಯ ಪಕ್ಷಗಳು ತಮ್ಮ ನ್ಯಾಯ ಬದ್ಧತೆಯನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ. ಕಾಂಗೈ, ಲೋಕದಳ, ಭಾ.ಜ.ಪ., ಎ.ಡಿ.ಎಂ.ಕೆ. ಮತ್ತು ಇನ್ನಿತರ ಪಕ್ಷಗಳು ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳುತ್ತಿವೆ. ದುಡಿಯುವ ಜನಕ್ಕೆ ತಮ್ಮ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ನಿರಕ್ಷರತೆ ಈ ರಾಜಕೀಯ ವ್ಯವಸ್ಥೆಯ ಚೌಕಟ್ಟಿನಲ್ಲಿ ಪರಿಹಾರವಾಗುವುದಿಲ್ಲ ಎಂಬ ಅರಿವು ಮೂಡತೊಡಗಿರುವುದೇ ಈ ಮಾನ್ಯತೆಯ ನಾಶಕ್ಕೆ ಕಾರಣ. ರಾಷ್ಟ್ರೀಯ ರಾಜಕಾರಣಿಗಳು ನಾಡಿನ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬಲ್ಲರು; ಜನತೆಯ ಕಷ್ಟವನ್ನು ಪರಿಹರಿಸಬಲ್ಲರು ಎಂಬ ೧೯೫೦ರ ಆಶೆ ನಾಶವಾಗತೊಡಗಿದೆ. ಈ ಬಂಡವಾಳಶಾಹಿ ಪಥದ ಫಲಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶ್ರೀಮಂತರಿಗೇಕೆ ಮಾತ್ರ ದಕ್ಕುತ್ತಿದೆ ಎಂಬ ಸತ್ಯ ಅವರಿಗೆ ತಿಳಿದು ಬಂದಿದೆ. ಈ ಶ್ರೀಮಂತ, ಆಸ್ತಿವಂತ ವರ್ಗಗಳು ಎಲ್ಲ ರೀತಿಯ ಕುತಂತ್ರಗಳಿಂದ ಅಪಾರ ತಪ್ಪು ಹಣ ಗಳಿಸುತ್ತಿದ್ದಾರೆ; ಪ್ರಖರ ವೈಭವದ, ಹೊಲಸಾದ ಜೀವನಕ್ರಮದಲ್ಲಿ ಬದುಕುತ್ತಿದ್ದಾರೆ. ಬಹುಸಂಖ್ಯಾತ ಜನತೆಯ ಸಮಸ್ಯೆಗಳಿಗೆ ಕುರುಡಾಗಿಬಿಟ್ಟಿದ್ದಾರೆ. ಈ ಕೆಲಸದಲ್ಲಿ ಸೆಂಟ್ರಸ್ಟ್ ರಾಜಕೀಯ ಪಕ್ಷಗಳು ಕೂಡಾ ಪಾಲುದಾರರೇ. ಶ್ರೀಮಂತರಿಗೆ ಬಿಳಿ ಮತ್ತು ಕಪ್ಪು ಎರಡೂ ರೀತಿಯ ಹಣ ಗಳಿಕೆಗೆ ಈ ಪಕ್ಷಗಳು ನೆರವಾಗುತ್ತಿವೆ. ಅದರಲ್ಲಿ ಕೊಂಚ ಪಾಲನ್ನು ಚುನಾವಣೆಗಳಿಗಾಗಿ, ಶಾಸಕರನ್ನು, ರಾಜಕಾರಣಿಗಳನ್ನು ಕೊಳ್ಳಲು ಮುಂತಾದ ಪಕ್ಷದ ಕೆಲಸಗಳಿಗೆ, ರಾಜಕೀಯಕ್ಕಾಗಿ ಪಡೆಯುತ್ತಾರೆ. ವೈಯಕ್ತಿಕವಾಗಿಯೂ ಸಾಕಷ್ಟು ಕಮಾಯಿಸುತ್ತಾರೆ. ಹೀಗಾಗಿ, ಈ ಪಕ್ಷಗಳ ಮಾನ್ಯತೆ ಇಳಿಮುಖವಾಗುತ್ತಿದ್ದಾಗ, ೬೦ರ ದಶಕದ ಕಡೇ ಭಾಗದಲ್ಲಿ, ಚುನಾವಣೆಗೆ ಗೆಲ್ಲಲು ಹೊಸದೊಂದು ತಂತ್ರವನ್ನು ಪ್ರಯೋಗಿಸಿದರು. ಮತ್ತೆ ಮ್ರ್ಯಾದೆ, ಮನ್ನಣೆಯನ್ನು ಗಳಿಸುವ ಪ್ರಯತ್ನ ಇದು. ಈ ಸಲದ ತಂತ್ರ ವ್ಯಕ್ತಿ ಪೂಜೆಯದು. ಈ ಪ್ರಸಂಗದಲ್ಲಿಯ ನಾಯಕಿ ಶ್ರೀಮತಿ ಇಂದಿರಾ ಗಾಂಧಿ. ಇದರ ಜೊತೆಗೆ, ಪ್ರಗತಿಪರ ಘೋಷಣೆಗಳು. ಈ ತಂತ್ರದ ಜೊತೆಗೆ ಧನಬಲವೂ ಕೂಡಿಕೊಂಡಿದ್ದರಿಂದ, ಈ ಸೂತ್ರ ಕೆಲಕಾಲ ಯಶಸ್ಸನ್ನು ಗಳಿಸಿತು. ಆದರೆ, ಈ ಪ್ರಗತಿಪರ ಘೋಷಣೆಗಳನ್ನು ಕಾರ್‍ಯರೂಪಕ್ಕೆ ಇಳಿಸಲು ವಿಫಲಗೊಂಡರು. ಜನಕಾಕರ್ಷಕ ಕಾರಣಕ್ಕಾಗಿ ಅಲ್ಲಲ್ಲಿ ಚೂರುಪಾರನ್ನು ಕಾರ್‍ಯಕ್ರಮಕ್ಕೆ ಇಳಿಸಿದರು. ರಾಜಕೀಯ ಸಂಕಲ್ಪಹೀನತೆ ಮತ್ತು ನಿಷ್ಠಾವಂತ ಕಾರ್‍ಯಕರ್ತರ ಕೊರತೆಯಿಂದಾಗಿ ಈ ಪರಿಸ್ಥಿತಿ ಉಂಟಾಯಿತು. ಈ ವೈಫಲ್ಯದ ಪರಿಣಾಮವೆಂದರೆ, ಚುನಾವಣೆಗಳಲ್ಲಿ ಹೋರಾಡಲು ಹಣಬಲವೇ ಮುಖ್ಯವಾಗಿ ಹೋಯಿತು. ಇದರಿಂದಾಗಿ, ಈ ಹಣ ನೀಡಿದ ಜನರಾದ ನಗರ ಮತ್ತು ಹಳ್ಳಿಗಳ ಶ್ರೀಮಂತರಿಗೆ ಹೆಚ್ಚು ಹೆಚ್ಚು ರಿಯಾಯಿತಿಗಳು ಸಿಗುತ್ತಾ ಹೋಯಿತು. ಅತ್ಯಂತ ಹೆಚ್ಚು ಕಪ್ಪುಹಣ ತರಬಲ್ಲ, ತಮ್ಮ ನಾಯಕಿಯ ವ್ಯಕ್ತಿತ್ವವನ್ನು ಮರೆಸಬಲ್ಲ ಜನರಿಗೆ ಮಾತ್ರ ಸಂಸತ್ತು ಶಾಸನಸಭಗಳಲ್ಲಿ, ಪಕ್ಷದಲ್ಲಿ ಸ್ಥಾನ ದೂರಾಯಿತು. ಇಂಥ ಬೆಳವಣಿಗೆ ಪ್ರಾಮಾಣಿಕತೆ ಹೊಂದಿದ್ದ ಜನರನ್ನು ಸಹಜವಾಗೇ ಹೊರಹಾಕಿತು. ಅಷ್ಟೇ ಅಲ್ಲದೆ ನಿಧಾನಕ್ಕೆ ಯಾವುದೇ ರಾಜಕೀಯ ಸಾಮರ್ಥ್ಯ ಮತ್ತು ಸಾಮಾಜಿಕ ನೆಲೆ ಹೊಂದಿದ್ದ ಜನರೂ ಹೊರಗುಳಿಯಬೇಕಾಯ್ತು. ಏಕೆಂದರೆ ಈ ರೀತಿಯ ಜನ ಬರೀ ಶ್ರೀಮತಿ ಇಂದಿರಾ ಗಾಂಧಿಯ ವ್ಯಕ್ತಿತ್ವವನ್ನೇ ಯಾವಾಗಲೂ ಮೆರೆಸುತ್ತಾರೆ ಎಂದು ಹೇಳಲಾಗುವುದಿಲ್ಲ. ಸ್ವಂತ ಸಾಮಾಜಿಕ ಅಡಿಪಾಯ ನಿರ್ಮಾಣವಾದರಂತೂ ರಾಜಕೀಯವಾಗಿ ಅವರು ನಿಜಕ್ಕೂ ಒಂದು ಅಪಾಯವೇ ತಾನೆ. ಇದು ಹಳೆಯ ನಾಯಕರು, ಕಾರ್‍ಯಕರ್ತರುಗಳ ನಿರ್ನಾಮ. ಇದರ ಜೊತೆಗೆ, ಪಕ್ಷದ ಸಘಟನೆ, ರಾಜಕೀಯ ಮೌಲ್ಯದ ವಿನಾಶದ ಕೆಲಸ ಪ್ರಾರಂಭವಾದದ್ದು ೧೯೬೯ರ ಅಧ್ಯಕ್ಷೀಯ ಚುನಾವಣೆಯಲ್ಲಿ “ಆತ್ಮಸಾಕ್ಷಿ”ಯ ಮತದ ರೂಪದಲ್ಲಿ ಅದು ಪ್ರಾರಂಭವಾಯಿತು. ಇಲ್ಲಿಂದಾಚೆಗೆ ಅದು ಅಧಿಕಾರದ, ಹಣದ ತತ್ವಹೀನ ಗಳಿಕೆಯಾಗಿ ಬೆಳೆದಿದೆ. ಮರ್ಯಾದೆ, ನಾಚಿಕೆ ಎಂಥದೂ ಇಲ್ಲದೆ ನಗ್ನವಾಗಿ ಇದು ವಿಜೃಂಭಿಸುತ್ತಿವೆ. ಕಾಂಗೈನ ಸಂಶ್ಥೆಯೊಳಗಿನ ಯಾವುದೇ ರೀತಿಯ ಶಿಸ್ತು, ಮೌಲ್ಯಗಳು ಇದಕ್ಕೆ ಅಡ್ಡಿಯಾಗಿಲ್ಲ. ಇವನ್ನು ಭಿನ್ನಮತೀಯರು ಎಂಬ ಸವಕಲುಪದದಲ್ಲಿ ಹಲವೊಮ್ಮೆ ಸೂಚಿಸಲಾಗಿದೆ. ಈ ರೀತಿಯ ರಾಜಕಾರಣಿಗಳು ಪ್ರಭುತ್ವ ಮತ್ತು ಜನತೆಯ ನಡುವೆ ಕಡೇ ಪಕ್ಷ ಮಧ್ಯವರ್‍ತಿಗಳಾಗಿ ಕೆಲಸ ಮಾಡಲು ಕೂಡಾ ವಿಫಲಗೊಂಡಿದ್ದಾರೆ. ಸಮರ್ಥ ಆಳ್ವಿಕೆ, ಕಾರ್‍ಯ ನಿರ್ವಹಣೆಗಳು ಕೂಡಾ ಇವರಿಗೆ ಸಂಪೂರ್ಣ ಅಸಾಧ್ಯವಾಗಿ ಬಿಟ್ಟಿದೆ. ಆದರೆ, ಮತ್ತೆ ಮಾನ್ಯತೆ ಪ್ರಭುತ್ವಕ್ಕೆ ಮರಳಿದ್ದರಿಂದ ಜನತೆಯ ಕೋಪಕ್ಕೆ ಇದೊಂದು ಸೇಪ್ಟಿ ವಾಲ್ವ್ ಆಗಿ ಪರಿಣಮಿಸಿಬಿಟ್ಟಿತೇನೋ ಎನಿಸುತ್ತದೆ. ಜನಗಳ ತೀವ್ರ ಹತಾಶೆಗೆ, ಸಿಟ್ಟಿಗೆ ಒಂದು ಹೊರದಾರಿ ಸಿಕ್ಕಿಬಿಟ್ಟಿತೇನೋ.

ದಿಕ್ಕು-ದೆಸೆಗೆಟ್ಟ ರಾಜಕೀಯ

ಇಲ್ಲಿಯ ತನ ವಿವರಿಸಿದ ಬೆಳವಣಿಗೆ ಕಾಂಗೈ ಪಕ್ಷವನ್ನು ಕುರಿತದ್ದಾದರೂ, ಉಳಿದ ಮಧ್ಯವಾದೀ ರಾಜಕೀಯ ಪಕ್ಷಗಳಿಗೂ ಇದು ಅನ್ವಯಿಸುತ್ತದೆ. ಹೀಗಾಗಿ, ಜನ ಚಲಿಸ ತೊಡಗಿದ್ದಾರೆ. ತಮ್ಮ ಶೋಷಣೆಯ ಬಗ್ಗೆ ಅರಿವು ಬರತೊಡಗಿದೆ. ರಾಜಕಾರಣಿಗಳ, ಆಳುವವರ್ಗಗಳ ಭ್ರಷ್ಟಾಚಾರ ಹಾಗೂ ದಿವಾಳಿಕೋರತನಗಳ ಬಗ್ಗೆ ನಿಶ್ಚಳ ಪ್ರಜ್ಞೆ ಮೂಡತೊಡಗಿದೆ. ಇವುಗಳ ವಿರುದ್ಧ ಹೋರಾಡಲೇಬೇಕೆಂಬ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ಸಂಘಟಿತ, ಶಿಸ್ತಿನ ಪರ್‍ಯಾಯವೊಂದು ಇಲ್ಲದಿದ್ದಾಗ ಈ ರೀತಿಯ ವಿಘಟನೆ ಜನತೆ ತನ್ನೊಳಗೇ ಹೊಡೆದಾಡುವಂಥ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಧರ್‍ಮ, ಭಾಷೆ, ಜತಿ ಮುಂತಾದವುಗಳನ್ನು ಕುರಿತ ಘರ್ಷಣೆಗಳು ಪ್ರಾರಂಭವಾಗುತ್ತವೆ. ಜನ ತಮ್ಮೊಳಗೇ ಹೊಡೆದಾಡುತ್ತಾರೆ. ಇವೆಲ್ಲಾ ತಮ್ಮ ಒಳಿತಿಗೇ ಆಗಿರುವುದರಿಂದ ಆಡಳಿತ ವರ್ಗಗಳು ಇದನ್ನು ಪ್ರೋತ್ಸಾಹಿಸುತ್ತದೆ. ಆಳುವ ವರ್ಗಗಳು ಕೂಡಾ ತಮ್ಮೊಳಗೆ ತೀವ್ರವಾಗಿ ಹೊಡೆದಾಡುತ್ತವೆ. ದಿನೇ ದಿನೇ ತೀವ್ರಗೊಳ್ಳುತ್ತಿರುವ ಈ ವಿಘಟನೆಯಿಂದ, ಸಾಮಾಜಿಕ ಘರ್ಷಣೆಗಳಿಂದ ಪಾರಾಗಲು ಸೆಕ್ಯೂಲರ್ (ಜಾತ್ಯತೀತ) ಆದ ರಾಜಕೀಯ ಏಕತೆಯ ದಾರಿಯೊಂದಿತ್ತು. ಇದೇ ತುರ್ತು ಪರಿಸ್ಥಿತಿ. ಸಿವಿಲಿಯನ್ ಸರ್ವಾಧಿಕಾರ ಮತ್ತು ಪ್ರಗತಿಪರ ಘೋಷಣೆಗಳ ಮೇಳೈಸುವಿಕೆ ಆಧಾರದ ಮೇಲೆ ಇದು ಹುಟ್ಟಿಕೊಂಡಿರು. ಇದೂ ವಿಫಲವಾಯಿತು. ನಂತರ ಜನತಾ ಪಕ್ಷವೂ ವಿಘಟನೆ ಹೊಂದಿತು. ನಂತರ ಯಾವುದೇ ಪ್ರಗತಿಪರ ಘೋಷಣೆಗಳ ಹಂಗಿಲ್ಲದ ಸಂಜಯಗಾಂಧೀ ಶೈಲಿಯ ಸರ್ವಾಧಿಕಾರ ಬಂತು. ಬಂಡವಾಳಿಗರು ಮತ್ತು ಮಧ್ಯಮ ವರ್ಗದ ನಡುವೆ ಇದು ತನ್ನದೇ ಆದ ಆಕರ್ಷಣೆಯನ್ನು ಗಳಿಸಿಕೊಂಡಿತು. ಈ ಮಧ್ಯೆ ವ್ಯವಸ್ಥೆಯ ಚೂರು ಚೂರಾಗುವಿಕೆ ಮುಂದುವರಿಯಿತ್ತಲೇ ಇದೆ. ಈ ಪ್ರಕ್ರಿಯೆ ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರದ ಮೂಲಕ ಪರಾಕಾಷ್ಠೆಯನ್ನು ತಲುಪಿದೆ. ಇಲ್ಲಿಯ ತನಕದ ಚರಿತ್ರೆಯಲ್ಲಿ ಇದೇ ಪರಮಾವಧಿ. ಈ ಸರಕಾರದ ಮುಖ್ಯ ಲಕ್ಷಣಗಳು ಹೀಗಿವೆ:

ರಾಜಕಾರಣ ಮತ್ತು ಆಡಳಿತಗಳಲ್ಲಿ ಸಂಪೂರ್ಣ ಅದಕ್ಷತೆ

ಈಡೇರದ ಭರ್ಜರಿ ಭರವಸೆಗಳು

ಸೌಲಭ್ಯಗಳ ಬೇಜವಾಬ್ದಾರಿ ಹಂಚಿಕೆ. ಉದಾ: ವಿದ್ಯಾಸಂಸ್ಥೆಗಳು, ಗಗನಚುಂಬಿ ಕಟ್ಟದಗಳು, ಕಾಡಿನ ಕಟಾವಿಗೆ ಲೈಸೆನ್ಸ್‌ಗಳು. ಇಂಥ ಕಡೆಗಳಲ್ಲಂತೂ ಎಲ್ಲ ರೀತಿಯ ಕಾನೂನು ನಿಯಮಗಳನ್ನು ಮುರಿಯಲಾಗಿದೆ. ಮಹಾ ಮೋಸಗಾರ ದುಸ್ಸಾಹಸಿಗಳಿಂದ ಹಣ ಪಡೆದು ಈ ಲೈಸೆನ್ಸ್‌ಗಳನ್ನು ನೀಡಲಾಗಿದೆ. ಇದರಿಂದಾಗುವ ಪರಿಣಾಮಗಳ ಬಗ್ಗೆ ಯೋಚನೆಯೇ ಇಲ್ಲ.

ಹೊಗಳುಭಟ್ಟರಿಗೆ, ಮೋಸಕ್ಕೆ, ಅಪ್ರಾಮಾಣಿಕ ಹಣ ಸಂಪಾದನೆಗೆ, ಸಾಮಾಜಿಕ, ವಾಣಿಜ್ಯ ಕ್ಷೇತ್ರಗಳಲ್ಲಿಯ ಸ್ಥಾನ ಪಿಪಾಸೀ ಜನರಿಗೆ ಪ್ರೋತ್ಸಾಹ.

ಹಿಂದೆಂದೂ ಕಂಡಿರದಂಥ ಎತ್ತರಗಳಿಗೆ ಭ್ರಷ್ಟಾದಾರ ಹೋಗುತ್ತಿರುವ ಬಗ್ಗೆ ನಾಚಿಕೆ ಇಲ್ಲದ ಬಹಿರಂಗ ಒಪ್ಪಿಗೆ

ಇದೆಲ್ಲದರ ಪರಿಣಾಮವಾಗಿ, ಸರಕಾರಕ್ಕೆ ಒಂದು ದಿಕ್ಕುದೆಸೆಯೇ ಇಲ್ಲವಾಗಿಬಿಟ್ಟಿದೆ. ಅದು ಸರ್ಕಾರವೇ ಅಲ್ಲ ಎಂಬುದಾಗಿ ಅತ್ಯಂತ ಆಡ್‌ಹಾಕ್ ಮಾದರಿಯಂಲ್ಲಿ ನಡೆಯುತ್ತಿದೆ. ಇದರಿಂದ ಕಳೆದೆರಡೂ ವರ್ಷಗಳಲ್ಲಿ ಕರ್ನಾಟಕ ಅತ್ಯಂತ ತೀವ್ರ ರೀತಿಯ ಘರ್ಷಣೆಗಳನ್ನು, ಅಶಾಂತಿಗಳನ್ನು ಕಂಡದ್ದು ಕೇವಲ ಆಕಸ್ಮಿಕವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಗೋಕಾಕ್ ಚಳವಳಿ ಕೂಡಾ ಇಂಥ ಸಾಮಾಜಿಕ ಅಶಾಂತಿ, ಘರ್ಷಣೆಗಳ ಒಂದು ರೂಪ. ಆದರೆ, ಇದು ಜನತೆಯನ್ನು ಮತ್ತೆ ಪ್ರಭುತ್ವದೊಂದಿಗೆ ಮತ್ತೆ ಬೆಸೆಯುವ ಒಂದು ಪ್ರಯತ್ನ. ಈ ಪ್ರಯತ್ನಕ್ಕೆ ಹೊಸ ಸಾಮಾಜಿಕ ಮತ್ತು ಸೈದ್ಧಾಂತಿಕ ನೆಲೆಗಟ್ಟನ್ನು ಬಳಸಲಾಗಿದೆ.

ಹೊಸ ಮೌಲ್ಯ-ಹೊಸ ಜನ

ಈ ಏಕತಾವಾದ ಸಂಪ್ರದಾಯವಾದೀ ರೂಪವನ್ನಷ್ಟೇ ಏಕೆ ತಳೆಯುತ್ತದೆ ಎಂಬುದು ಮುಖ್ಯ ಪ್ರಶ್ನೆ. ಇದು ಸಾಮಾನ್ಯವಾ‌ಇ ಧಾರ್ಮಿಕ ನೆಲೆಗಟ್ಟನ್ನು ಅಥವಾ ಇಲ್ಲಾದಂತೆ ಭಾಷೆಯ ನೆಲೆಗಟ್ಟನ್ನು ಹೊಂದಿರುತ್ತದಲ್ಲ ಏಕೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ನಾವು ಭಾರತದಲ್ಲಿ ಬಂಡವಾಳಶಾಹೀ ಆರ್ಥಿಕ ಬೆಳವಣಿಗೆಯ ಸಾಮಾಜಿಕ-ಸಾಂಸ್ಕೃತಿಕ ಪರಿಣಾಮಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಬಂಡವಾಳಶಾಹೀ ಬೆಳವಣಿಗೆ ಅನೇಕ ಸಂಪ್ರದಾಯಿಕ ಜೀವನಕ್ರಮಗಳನ್ನು, ಮೌಲ್ಯಗಳನ್ನು, ವ್ಯಕ್ತಿತ್ವಗಳನ್ನು ಕರಗಿಸಿಹಾಕಿದೆ. ಹೊಸ ತಲ್ಲಣಗಳು, ಘರ್ಷಣೆಗಳು ಹುಟ್ಟಿಕೊಂಡಿವೆ. ಹೄದಯಹೀನವಾದ, ಸ್ಪರ್ಧಾತ್ಮಕವಾದ, ಸಿನಿಕ ಸಮಾಜವೊಂದನ್ನು ಇದು ಅಸ್ತಿತ್ವಕ್ಕೆ ತಂದಿದೆ. ಅನೇಕ ಸ್ಸಾಕ್ಷ್ಯಗಳಿಂದ ಈ ವಿವರಣೆಯನ್ನು ಸಮರ್ಥಿಸಲು ಸಾಧ್ಯ. ಉದಾಹರಣೆಗೆ, ವರದಕ್ಷಿಣೆ ಪದ್ಧತಿಯಲ್ಲೇ ಆಗಿರುವ ಬದಲಾವಣೆ. ಮೊದಲು ಅದು ಮದುವೆ ಹೊತ್ತಿನಲ್ಲಿ ಕೊಡುವ ಉಡುಗೊರೆಯಾಗಿತ್ತು. ಬದಲಾವಣೆ. ಮೊದಲು ಅದು ಮದುವೆಯ ಹೊತ್ತಿನಲ್ಲಿ ಕೊಡುವ ಉಡುಗೊರೆ. ಆದರೆ, ಈಗ ಅದು ಅತ್ಯಂತ ಕ್ರೂರ ರೀತಿ‌ಒಯಲ್ಲಿ ನಿರಂತರವಾಗಿ ಸೆಳೆಯುತ್ತಲೇ ಇರುವ ಒಂದು ಪದ್ಧತಿಯಾಗಿಬಿಟ್ಟಿದೆ. ಅನೇಕ ಸಾರಿ, ಇದರ ಕೊನೆ ಕೊಲೆ ಅಥವಾ ಆತ್ಮಹತ್ಯೆಯಲ್ಲಿ. ಈ ಬದಲಾವಣೆಯಂತೂ, ತಮ್ಮೆಲ್ಲ ಮಾನವೀಯತೆ, ಸಂಯಮ ಕಳೆದುಕೊಂಡ ಅತ್ಯಂತ ಮಹತ್ವಾಕಾಂಕ್ಷೀ ಹೊಸ ಮಧ್ಯಮವರ್ಗದಲ್ಲಿ ಪ್ರಖರವಾಗಿ ಕಾಣುತ್ತದೆ. ಪಾರಂಪರಿಕೆ ಸಂಸ್ಕೃತಿಯ ಎಲ್ಲ ಗುಣಗಳನ್ನು ಕಳೆದುಕೊಂಡಿರುವ, ಹಣ ಅಂತಸ್ತಿಗಾಗಿ ತಹತಹಿಸುವ ನಗರದ ಮಧ್ಯಮವರ್ಗದಲ್ಲಿ ಈ ಕರಾಳ ಬೆಳವಣಿಗೆ ಥಟ್ಟನೆ ಒಡೆದು ಕಾಣುತ್ತದೆ. ಇಂಥ ಇನ್ನೊಂದು ಉದಾಹರಣೆ, ಈಗ ತಂದೆ ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧದ ಸ್ವರೂಪ. ಹೊಸಗಾಲದ ಹಸುಮಕ್ಕಳು ಈಗ ಹೊಸ ಮೌಲ್ಯಗಳ, ಹೊಸ ಅಗತ್ಯತೆಗಳ, ಹೊಸ ಗುರಿಗಳ ಜೊತೆಗೆ ಬೆಳೆಯುತ್ತಿದ್ದಾರೆ. ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಿದ್ದಾರೆ. ಜೊತೆಗೆ ತಂದೆ ತಾಯಿಗಳನ್ನು ಕುರಿತ ಅವಿಧೇಯತೆ, ಅಗೌರವ, ನಿರ್ಲಕ್ಷ್ಯ ಕೂಡಾ ತಾನಾಗಿ ಬೆಳೆಯುತ್ತಾ ಹೋಗುತ್ತಿದೆ. ಮಕ್ಕಳಲ್ಲಿ ಈಗ ಸ್ವತಂತ್ರ ಮನೋಭಾವ ತೀವ್ರಗೊಳ್ಳುತ್ತಿದೆ. ಈ ಸಾಮಜಿಕ ಬದಲಾವಣೆ ಬಹಳ ಸಾರಿ ಸಾಂಪ್ರದಾಯಿಕ ಉಡುಪುಗಳ ಬಗ್ಗೆ ಅಲಕ್ಷ್ಯ, ತಿರಸ್ಕಾರದ ರೂಪದಲ್ಲೂ ಬರುತ್ತದೆ. ಈಗ ತರುಣಿಯರು ಸೆಕ್ಸೀ ಉಡುಪು ಧರಿಸುತ್ತಾರೆ. ಜೀವನ ಕ್ರಮಗಳು ಕೂಡಾ ಬದಲಾಗುತ್ತಿವೆ. ಅಪ್ಪ-ಅಮ್ಮಂದಿರಿಂದ ಬೇರೆಯಾಗಿ ಬದುಕ ಬಯಸುವ ಮಕ್ಕಳಿದ್ದಾರೆ. ಮದುವೆಯ ರೀತಿಗಳು ಕೂಡಾ ಬದಲಾಗುತ್ತಿವೆ. ತಮ್ಮ ಜಾತಿಯ ಧರ್ಮದ ಹೊರಗೆ ತಮ್ಮ ಇಷ್ಟದಂತೆ ಮದುವೆಯಾಗುವ ಯುವ ಜನಾಂಗವಿದೆ. ಜೊತೆಗೆ ಡೈವೋರ್ಸ್ ಬಯಸುವ ಜನ ಕೂಡಾ. ಈ ಬದಲಾವಣೆಗಳು ಒಂದು ಇಡೀ ಜೀವನಕ್ರಮದ ಮೇಲಾದ ಹಲ್ಲೆಗಳಂತೆ ಕಾಣುತ್ತವೆ. ಹೀಗಾಗಿ ಒಂದು ಬಗೆಯ ಬೆದರಿಕ್ಜೆಯ ಪ್ರಜ್ಞೆ ಕಾಣುತ್ತಿವೆ. ಇದರಿಂದಾಗಿ ನವವಸಾಹತು ಸಮಾಜದ ಹೊಲಸಿನ ಬಗ್ಗೆ ಗಾಢ ದ್ವೇಷವೂ ಬೆಳೆಯುತ್ತಾ ಬಂದಿದೆ. ಈ ದ್ವೇಷ ಆಧುನಿಕ ಬಂಡವಾಳಶಾಹೀ ಸಮಾಜದ ಇನ್ನು ಕೆಲವು ಅಂಶಗಳಾದ ಕೈಗಾರಿಕೀಕರಣ, ನಗರೀಕರಣ, ಜಾತ್ಯಾತೀತತೆ, ಆಧುನಿಕತೆ, ವೈಚಾರಿಕತೆ, ಇತ್ಯಾದಿಗಳನ್ನ ಕುರಿತೂ ಹಬ್ಬಿದೆ. ಇದೆಲ್ಲದರಿಂದಾಗಿ ಕಾಲ ಕೆಳಗೆ ಕುಸಿದು ಹೋಗುತ್ತಿರುವ ನೆಲದಲ್ಲಿ ನಿಂತ ವ್ಯಕ್ತಿಯ ಸ್ವಂತ ಗುರುತಿನ ಹುಡುಕಾಟ ಪ್ರಾರಂಭವಾಗಿದೆ. ಜೊತೆಗೆ, ಮರೆಯಾಗುತ್ತಿರುವ ಸಾಂಪ್ರದಾಯಿಕ ಸಂಸ್ಕೃತಿಯ ಬಗೆಗೆ ಹಳಹಳಿಕೆ ಕೂಡಾ. ಈ ಬೆಳವಣಿಗೆಗಳು ನಗರದ ಮಧ್ಯಮ ವರ್ಗಗಳನ್ನು ಅತ್ಯಂತ ಗಾಢವಾಗಿ ಕಲಕಿದೆ. ಈ ಜನ ಬದಲಾವಣೆಗಳಿಗೆ ತೀವ್ರವಾಗಿ ಪ್ರತಿಸ್ಪಂದಿಸುತ್ತಾ ಅತ್ಯಂತ ಅಭದ್ರರಾಗಿಬಿಟ್ಟಿದ್ದಾರೆ. ಉಳಿದ ವರ್ಗಗಳಿಗೆ ಹೋಲಿಸಿದಾಗ ಅತ್ಯಂತ ಹೆಚ್ಚು ವಲಸೆ ಹೋಗುವ ಜನರೆಂದರೆ ಇವರೆ. ಈ ಹೃದಯಹೀನ, ಸಿನಿಕ ವ್ಯಾಪಾರಿ ಸಂಸ್ಕೃತಿಯಲ್ಲೀಗ ಅವರು ಮೊದಲಿಗಿಂತ ಹೆಚ್ಚು ಉಗ್ರವಾಗಿ ಸ್ಪರ್ಧೆಗಳನ್ನು ಎದುರಿಸಬೇಕಾಗಿದೆ. ಅವರ ಆಶೋತ್ತರಗಳೂ ಹೆಚ್ಚಿವೆ. ನಗರದ ಶ್ರೀಮಂತರು, ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು ಬಂಡವಾಳಿಗರಿಗೆ ಹಣವಿರುವುದರಿಂದ ಹೆಚ್ಚಿನ ಭದ್ರತೆ ಇದೆ. ಆದರೆ ಅವರಿಗೂ ಬದಲಾವಣೆಯ ಬಿಸಿ ತಟ್ಟುತ್ತಿದೆ. ಸಂಪ್ರದಾಯಿಕ ಏಕತಾವಾದಕ್ಕೆ ಇವರುಗಳಿಗೆ ಬೇರೆ ಇನ್ನೊಂದು ಬೆಂಬಲದ ಮೂಲವೊ ಇದೆ. ಈಗಿ‌ಒರುವ ಸಾಮಾಜಿಕ ವ್ಯವಸ್ಥೆಗೆ ಮಾನ್ಯತೆಯನ್ನು ಅದು ಮರಳಿ ನೀಡುತ್ತದೆ. ಹೊಸ ಸಿದ್ಧಾಂತ, ಸಂಘಟನೆ, ಹೊಸ ಜನರ ಮೂಲಕ ಚೂರುಚೂರಾಗುತ್ತಿರುವ ಈ ವ್ಯವಸ್ಥೆಗೆ ಮತ್ತೆ ಮನ್ನಣೆ ದೊರೆಯುವಂತೆ ಯತ್ನಿಸುತ್ತಿದೆ. ಬದಲಾವಣೆಯ ಬಿಸಿ ಅಷ್ಟಾಗಿ ತಟ್ಟದ ಹಳ್ಳಿಗಾಡಿನ ಶ್ರೀಮಂತರ ಬೆಂಬಲವೂ ಇದೇ ರೀತಿಯದೇ. ಹಳ್ಳಿಗಾಡಿನ ರೈತಾಪ್ಯ ವರ್ಗಕ್ಕೆ ಈ ಬದಲಾವಣೆಗಳ ಬಿಸಿ ಅಷ್ಟಾಗಿ ತಟ್ಟಿಲ್ಲ. ಇನ್ನು ಭೂಹೀನ ಕೃಷ್ಬಿ ಕಾರ್ಮಿಕರ ಮೇಲಂತೂ ಅದರ ಪರಿಣಾಮ ತೀರಾ ಗೌಣ. ಆದರೆ, ನಗರದ ಕಾರ್ಮಿಕ ವರ್‍ಗದ ಮೇಲೆ ಆಳವಾದ ಪರಿಣಾಮ ಈ ಬದಲಾವಣೆ ಬೀರಿದ್ದರೂ, ಅದರ ಅಗತ್ಯತೆ, ಒತ್ತಾಯಗಳು ಅತ್ಯಂತ ಮೂಲಭೂತವಾದವುಗಳು; ಆರ್ಥಿಕಸ್ವರೂಪದವು. ಜೊತೆಗೆ ಬಡತನ ಇವುಗಳ ಬಗೆಗಿನ ಭಾವನೆ ಮತ್ತು ಪ್ರತಿಕ್ರಿಯೆಗಳಸ್ನೂ ಅದುಮಿ ಹಾಕುತ್ತದೆ. ಅನುಕೂಲಸ್ಥ ವರ್‍ಗಗಳು, ಅದರಲ್ಲೂ ಬಿಳಿ ಕಾಲರಿನ ಕೆಲಸಗಾರರು ಈ ಬದಲಾವಣೆಗಳಿಗೆ ಉತ್ಕಟವಾಗಿ ಪ್ರತಿಸ್ಪಂದಿಸುತ್ತಾರೆ. ನಗರ ಮಧ್ಯಮವರ್ಗದ ನೇತೃತ್ವವನ್ನು ಹಿಂಬಾಲಿಸುತ್ತಾರೆ.

ಈ ಹೊಸ ಸಿದ್ಧಾಂತ ಪಾಶ್ಚಾತ್ಯೀಕರಣ ಮತ್ತು ಆಧುನೀಕರಣವನ್ನು ಅವಳಿ ಜವಳಿಗಳಾಗಿ ನೋಡಿ, ಅವನ್ನು ತೀವ್ರವಾಗಿ ವಿರೋಧಿಸುತ್ತದೆ. ಇವೆರಡರ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಸಾಕಷ್ಟು ಬಾರಿ ಕಷ್ಟವೇ. ಇಲ್ಲಿ ಆಧುನಿಕೀಕರಣವೆಂದರೆ ನನ್ನ ಅರ್ಥ = ಆಧುನಿಕ ಬಂಡವಾಳಶಾಕಿಯ ಬೆಳವಣೀಗೆ ಮತ್ತು ಅದರ ಪರಿಣಾಮವಾದ ನಗರೀಕರಣ, ವ್ಯಕ್ತಿಯ ಬೆಳವಣೀಗೆ, ಆಧುನಿಕ ವಿಜ್ಞಾನ, ಸಾಹಿತ್ಯ, ಸಂಸ್ಕೃತಿಗಳ ಅಭಿವೃದ್ಧಿಯೆಂದು. ಹಾಗೆಯೇ ಪಾಶ್ಚಾತ್ಯೀಕರನ ಎಂದರೆ ಪಾಶ್ಚಾತ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳ ಸ್ವೀಕಾರ. ಬಹಳ ಸಾರಿ ಇದು ಕಲೋನಿಯಲ್ ಅಥವಾ ನಿಯೋ ಕಲೋನಿಯಲ್ ರೂಪಗಳಲ್ಲಿ ಜರುಗುತ್ತದೆ (ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಆಧಿನಿಕ ಮಂಡನಾಳಶಾಹೀ ಸಂಸ್ಕೃತಿಗಳಲ್ಲಿಯ ಅಸಮಾನತೆ, ಅಮಾನವೀಯತೆಗಳನ್ನು ತೆಗೆದುಹಾಕುವ ಸಮಾಜವಾದೀ ಆಧುನಿಕೀಕರಣದ ಬಗ್ಗೆ ನಾನು ಮಾತನಾಡುವುದಿಲ್ಲ.) ಈ ರೀತಿಯ ಆಧುನಿಕತಾ ವಿರೋಧಿ, ಪಾಶ್ಚಾತ್ಯ ವಿರೋಧಿ ಸಾಂಪ್ರದಾಯಿಕ ಏಕತಾವಾದ ಸಾಮಾನ್ಯವಾಗಿ ಧಾರ್ಮಿಕ ರೂಪಗಳನ್ನು ತಳೆಯುತ್ತದೆ. ಉದಾ: ಹಿಂದೂ ಮತಾಂಧತೆ (ಹಿಂದೂ ಮಹಾಸಭೆ, ಆರ್ ಎಸ್ ಎಸ್, ಬಿ ಜೆ ಪಿ, ಎ ಬಿ ವಿ ಪಿ) ಮುಸ್ಲಿಂ ಮತಾಂಧತೆ (ಮುಸ್ಲಿಂ ಲೀಗ್, ಪಾಕ್ಸ್ತಾನ್) ಇಸ್ಲಾಂ ಮೂಲರೂಪೀ ವಾದ, (ಇರಾನ್, ಮತ್ತಿತರ ಇಸ್ಲಾಮಿಕ್ ದೇಶಗಳು) ಸಿಖ್ ಮತೀಯತೆ (ಖಾಲಿಸ್ತಾನ್) (ಕಾಂಪೂಚಿಯದ ಆಧುನಿಕತೆಯ ವಿರೋಧಿ, ಪಾಲ್ಪಾಟ್ ಆಳ್ವಿಕೆ ಹೆಚ್ಚು ಕಡಿಮೆ ಇದೇ ಬಗೆಯ ಮೂಲಗಳಿಂದ ಬಂದದ್ದು ಎಂದು ನನ್ನ ಗುಮಾನಿ. ಕೃಷೀ ವಿಕೇಂದ್ರೀಕರಣವನ್ನು ಬಯಸುವ ಈ ಆಳ್ವಿಕೆ ನಗರಿಕೀಕರಣ, ಕೈಗಾರಿಕಿ‌ಈಕರಣ ಮತ್ತು ಪಾಧ್ಚಿಮಾತ್ಯ ವಿರೋಧಿಯಾದದ್ದು).

ದೂರದ ಆಸೆ

ಆದರೆ ಈ ರೀತಿಯ ಚಳವಳಿಗಳು ಮತ್ತು ಗೋಕಾಕ್ ಚಳವಳಿಗಳ ನಡುವೆ ವ್ಯತ್ಯಾಸ ಇಲ್ಲ ಎಂದೇನಲ್ಲ. ವ್ಯತ್ಯಾಸಗಳು ಸಾಕಷ್ಟಿವೆ. ನನ್ನ ಗಮನ ಇಲ್ಲಿ ಬರೀ ಸಾಮ್ಯಗಳ ಕಡ್ಗೆ ಮಾತ್ರ. ಈ ಸಾಂಪ್ರದಾಯಿಕ ಏಕತಾವಾದಕ್ಕೆ ಭಾಷೆ, ವಾಹನ ಮತ್ತು ಸಂಕೇತ ಎರಡೂ ಆಗಬಲ್ಲದು. ಈ ರೀತಿಯ ಏಕತೆಗೆ ಒಂದು ಪ್ರಧಾನ ಭಾಶ್ಹೆ ಬೇಕು. ಅನೇಕ ಭಾಷೆಗಳಿದ್ದಷ್ಟು ಭಿನ್ನ ಪರಂಪರೆಗಳು ಹೆಚ್ಚಿ ಏಕತೆಗೆ ಅಡ್ಡಿ. ಧರ್ಮದ ಮಟ್ಟೀಗೂ ಈ ಮಾತು ನಿಜ. ಒಂದೇ ಒಂದು ಧರ್ಮ, ಅಥವಾ ಒಂದು ಪ್ರಧಾನ ಧರ್ಮ ಅನಿವಾರ್ಯವಾಗುತ್ತದೆ. ಆರ್ ಎಸ್ ಎಸ್, ಬಿ ಜೆ ಪಿ, ಹಿಂದೂ ಮಠಗಳು, ಬ್ರಾಹ್ಮಣರು, ಮೇಲುಜಾತಿಯ ಜನ, ಗೋಕಾಕ್ ಸಮಿತಿಯ ಬಹುಪಾಲು ಸದಸ್ಯರು ಮೊದಲು ಸಂಸ್ಕೃತದ ಪರವಾಗಿದ್ದವರು. ಕಡೆಗೆ ಕನಡ ಏಕಮಾತ್ರ ಪ್ರಥಮ ಭಾಷೆಯಾಗಬೇಕು ಎಂಬ ನಿಲುವನ್ನು ತಳದದ್ದನ್ನು ಈ ಹಿನ್ನೆಲೆಯಿಂದ ನೋಡಬೇಕು. ಬರೀ ಜನಪ್ರಿಯ ಅಭಿಪ್ರಾಯಕ್ಕೆ ತಾಳ ಹಾಕುವ ಧೋರಣೆಯಿದು ಎಂದಷ್ಟೇ ಹೇಳಲಾಗುವುದಿಲ್ಲ. ಉರ್ದುವಿನ ಪರ ಹೋರಾಡುತ್ತಿರುವ ಮುಸ್ಲಿಮರನ್ನು ದ್ರೋಹಿಗಳೂ, ಪರಕೀಯರೂ ಎಂದು ಬೆದರಿಸುವುದಷ್ಟೇ ಇದರ ಉದ್ದೇಶವಲ್ಲ. (ಬಿ ಜೆ ಪಿ, ಆರ್ ಎಸ್ ಎಸ್ ನವರಿಗೆ ಇದು ಒಳ್ಳೆಯ ಸಾಧನ ಎಂಬುದು ನಿಜ) ಕನ್ನಡವನ್ನು ಪೂರ್ಣ ಸಂಸ್ಕೃತೀಕರಿಸಬಹುದು ಎಂಬ ನಿಲುವು ಕೂಡಾ ಅವರ ಈ ಬದಲಾವಣೆಯ ಪೂರ್ಣ ಕಾರಣವಲ್ಲ. ಈ ಎಲ್ಲ ಅಂಶಗಳೂ ಕೊಂಚ ಅಡಗಿರಬಹುದು. ಆದರೆ, ಎಲ್ಲಿಯ ಮುಖ್ಯ ಸಂಗತಿಯೆಂದರೆ, ಸಂಸ್ಕೃತದ ನೆರವಿಲ್ಲದೆಯೂ ಕನ್ನಡ ಭಾಷೆ ಸಾಂಪ್ರದಾಯಿಕ ಮೌಲ್ಯಗಳನ್ನು ಪುನರ್‌ಪ್ರತಿಷ್ಟಾಪಿಸಲು ಸಾಧ್ಯವಿದೆ. ಆರ್ ಎಸ್ ಎಸ್-ಬ್ರಾಹ್ಮಣ-ಸಂಸ್ಕೃತ ಮುಕ್ಕೂಟವನ್ನು ಉಗ್ರವಾಗಿ ವಿರೋಧಿಸುವ ಕನ್ನಡ ಲೇಖಕರ ಕೆಲವು ಮಾತುಗಳಲ್ಲಿ ಇದನ್ನು ಕಾಣಬಹುದಾಗಿದೆ. “ಮಮ್ಮಿ-ಡ್ಯಾಡಿ ಸಂಸ್ಕೃತಿ” (ಇದು ಗೋಕಾಕ್ ವರದಿ ನುಡಿಗಟ್ಟು) ಇಂಗ್ಲೀಷ್ ಕಾನ್ವೆಂಟ್ ಶಾಲೆಗಳನ್ನು ಇಂಗ್ಲೀಷನ್ನು ಟೀಕಿಸುವಾಗ ಇದು ನುಸುಳಿ ಹೊರ ಬರುತದೆ.

ಡಾ||ರಾಜ್‌ಕುಮಾರ್ ಯಾವಾಗಲೂ ಕನ್ನಡವನ್ನು “ತಾಯಿ”, “ಭುವನೇಶ್ವರಿ” ಎಂದೇ ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಗೋಕಾಗ್ ವರದಿ ಇಂಗ್ಲಿಶನ್ನು ಆಧುನಿಕ ಜ್ಞಾನ, ತಂತ್ರಜ್ಞಾನ, ಸಂಸ್ಕೃತಿಗಳ ವಾಹವೆಂದು ಕರೆದರೂ ಅಂತಿಮವಾಗಿ ಕನ್ನಡದಲ್ಲೇ ವಿಜ್ಞಾನ ಸಾಹಿತ್ಯವನ್ನು ನಂತರ ಅನೇಕ ದೇಶಗಳ ಭಾಷಾಂತರಿಸಿಕೊಳ್ಳುತ್ತವೆ ಎಂಬ ನಂಬಿಕೆ ಇಲ್ಲಿದೆ. ಕಾಲಾನುಕ್ರಮೇಣ ಇಲ್ಲಿ ಇಂಗ್ಲಿಷ್‌ಗೆ ಯಾವ ಪಾತ್ರವೂ ಇಲ್ಲವಾಗೊ ಕಡೆಗೆ ಆಧುನಿಕ ವಿಜ್ಞಾನ, ಸಂಸ್ಕೃತಿಗಳ ವಿಕಾಸ ಸಾಂಪ್ರದಾಯಿಕ ಸಂಸ್ಕೃತಿ, ಮೌಲ್ಯಗಳ ಯಜಮಾನಿಕೆಯ ಕೆಳಗೇ ನಡೆಯುತ್ತದೆ ಎಂಬ ತರ್ಕ ಇದು. ಆ ಸಾಂಪ್ರದಾಯಿಕ ಮೌಲ್ಯ, ಸಂಸ್ಕೃತಿಗಳ ಪುನರ್ ಪ್ರತಿಷ್ಟಾಪನೆ ಕನ್ನಡ ಭಾಷೆ, ಸಂಸ್ಕೃತಿಯಲ್ಲಿ ನಡೆಯುತ್ತದೆ ಎಂಬ ದೂರಗಾಮೀ ಆಸೆ ಇದು.
ಕನ್ನಡ ಸಿದ್ಧಾಂತ ಪ್ರತ್ಯೇಕತಾ ಧೋರಣೆಯನ್ನು ತಳೆಯಬಲ್ಲದು. ಮತ್ತು ಈಗ ಅದು ಆ ಬಗೆಯ ನಿಲುವನ್ನು ತಳೆದಿದೆಯಾದರೂ ಅಖಿಲ ಭಾರತೀಯ ಹಂತದಲ್ಲಿ ಕೂಡಾ ಇದು ಏಕತೆಗೆ ನೆರವಾಗಬಲ್ಲದು. ಇದನ್ನು ಗೋಕಾಕ್ ವರದಿ ಮತ್ತು ಅದಕ್ಕೆ ಸಿಕ್ಕಿರುವ ಆರ್ ಎಸ್ ಎಸ್ ಮತ್ತು ರಾಷ್ಟ್ರೀಯವಾದಿ ಮಧ್ಯಮವರ್ಗದ ಹಿಂದೂಗಳ ಬೆಂಬಲ ಸಿದ್ಧಪಡಿಸಿದೆ. ಕರ್ನಾಟಕದಲ್ಲಿ ಕನ್ನಡವನ್ನು, ಮಹಾರಾಷ್ಟ್ರದಲ್ಲಿ ಮರಾಠಿಯನ್ನು, ತಮಿಳಿನಾಡಿನಲ್ಲಿ ತಮಿಳನ್ನು ಬೆಂಬಲಿಸುವ ಆರ್ ಎಸ್ ಎಸ್, ಬಿ ಜೆ ಪಿಗಳು ಬರೀ ಅನುಕೂಲ ಸಿಂಧು ರಾಜಕೀಯವನ್ನು ಮಾಡುತ್ತಿಲ್ಲ. ಇಲ್ಲಿ ಅದರ ದೃಷ್ಟಿಕೋನವೇ ಬೇರೆ. ಮೊದಲು ಪ್ರಾಂತೀಯ ಹಂತದಲ್ಲಿ ಭಾಷಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರೂ ಮುಖ್ಯ ಧಾರೆಯೊಂದಿಗೆ ವಿಲೀನರಾಗಬೇಕು. ನಂತರ ಅಖಿಲ ಭಾರತೀಯ ಮುಖ್ಯ ಧಾರೆಯಲ್ಲಿ ವಿಲೀನ ಅಂದರೆ, “ರಾಷ್ಟ್ರಭಾಷೆ” ಧರ್ಮ, ಸಂಸ್ಕೃತಿಗಳಲ್ಲಿ ಇತ್ಯಾದಿಗಳಲ್ಲಿ ವಿಲೀನರಾಗಬೇಕು.

ಆದರೆ, ಸಾಂಪ್ರದಾಯಿಕ ಏಕತಾವಾದ ಭಾಷೆ ಮತ್ತು ಧರ್ಮದ ರೂಪಗಳಲ್ಲಿ ಬಂದಾಗ ಪ್ರತ್ಯೇಕತೆಗಳನ್ನು ಹೇಳುತ್ತದೆಯಾದ್ದರಿಂದ, ಪಾರಂಪರಿಕ ಸಂಸ್ಕೃತಿಯನ್ನು ಹೇಗೆ ಪ್ರತಿಷ್ಟಾಪಿಸಲು ಸಾಧ್ಯ ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಏಕೆಂದರೆ, ಪಾರಂಪರಿಕ ಸಂಸ್ಕೃತಿ ಜೀರ್ಣಾಗ್ನಿ ಸ್ವರೂಪದ್ದು. ಎಲ್ಲವನ್ನೂ ಮೇಳೈಸಿಕೊಂಡು ಭಾಷೆ ಧಾರ್ಮಿಕ ಗುಂಪುಗಳ ವೈಶಿಷ್ಟ್ಯಗಳನ್ನು ಅದು ಕರಗಿಸಿಬಿಡುತ್ತದೆ. ಅದು ಏಕರೂಪೀ ರಚನೆಯಾಗಿರುವಂಥದ್ದು. ಇದಕ್ಕೆ ಉತ್ತರವೆಂದರೆ ಈ ಸಾಂಪ್ರದಯಿಕ ಏಕತಾವಾದ ಬಂಡವಾಳಶಾಹಿ ಸಮಾಜ ತನ್ನ ಅಧುನೀಕರಣದ ಸಂದರ್ಭದಲ್ಲಿ ಸಮಕಾಲೀನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸೃಷ್ಟಿಯಾದದ್ದು. ಪರಂಪರೆಯ ಸಂಸ್ಕೃತಿಯಿಂದ ಇದು ತನಗೆ ಬೇಕಾದದ್ದನ್ನು ಆಯ್ದು, ಸಮಕಾಲೀನ ಅವಶ್ಯಕತೆಗಳಿಗೆ ತಕ್ಕಂತೆ ವ್ಯಾಖ್ಯಾನಿಸುತ್ತದೆ. ಅದು ಸಮಕಾಲೀನ ಸಮಾಜದಲ್ಲಿ ಉಳಿದಿರುವ ಹಳೆಯ ಮೌಲ್ಯಗಳ ಜೊತೆಗೆ ಸೇರುತ್ತದೆ. ನಮ್ಮ ಸಮಕಾಲೀನ ಸಮಾಜದಲ್ಲಿ ಉಳಿಸಿರುವ ಹಳೆಯ ಮೌಲ್ಯಗಳ ಜೊತೆಗೆ ಸೇರುತ್ತದೆ. ನಮ್ಮ ಸಮಕಾಲೀನ ಸಮಾಜ ಕೂಡಾ ಬ್ರಿಟಿಷ್ ಸಾಮ್ರಾಜ್ಯಶಾಹೀ ಮತ್ತು ನಂತರದ ಬಂಡವಾಳಶಾಹೀ ಬೆಳವಣಿಗೆಯ ಫಲವಾಗಿ ರೂಪಗೊಂಡದ್ದು. ಇದರಿಂದಾಗಿ ಪ್ರತ್ಯೇಕತಾವಾದ, ಹರಳುಗತ್ಟಿದ ಉಪರಾಷ್ಟ್ರೀಯತೆ, ವೈಯಕ್ತಿಕ ವ್ಯಕ್ತಿತ್ವ ಮತ್ತು ಇತರೆ ಸಾಮಾಜಿಕ, ಭಾಷಿಕ, ಧಾರ್ಮಿಕ, ಜಾತಿ ಗುಂಪುಗಳು ಬೆಳೆದವು. ಹೀಗಾಗಿ ಸಾಂಪ್ರದಾಯಿಕ ಏಕತಾವಾದ ಪ್ರತ್ಯೇಕತೆ ಮತ್ತು ಸಮಗ್ರತೆ ಎರಡೂ ಆಯಾಮಗಳಲ್ಲಿ ಪ್ರಕಟವಾಗುತ್ತದೆ. ತನ್ನ ಸಮಗ್ರತೆಯನ್ನು ಅದು ಕಾರ್ಯರೂಪಕ್ಕೆ ತರುವುದು ಅಲ್ಪಸಂಖ್ಯಾತರ ಮೇಲೆ ಎಲ್ಲ ಕ್ಷೇತ್ರಗಳಲ್ಲಿ ಯಜಮಾನಿಕೆಯನ್ನು ಹೇರುವಲ್ಲಿ. ಹೀಗಾಗಿ, ಅಲ್ಪಸಂಖ್ಯಾತರು ಎರಡನೇ ದರ್ಜೆ ನಾಗರಿಕರಾಗಿ ಪರಿವರ್ತಿತರಾಗುತ್ತಾರೆ. ಅವರನ್ನು ಹೊರಗಟ್ಟಲಾಗುತ್ತದೆ. ಕೆಲವೊಮ್ಮೆ ನಿರ್ನಾಮವೂ ಆಗುತ್ತಾರೆ. ಮುಖ್ಯ ಧಾರೆಯಲ್ಲಿ ಸೇರುವಂತೆ, ಅಂದರೆ ವಿಲೀನವಾಗುವಂತೆ ಒತ್ತಾಯಿಸಲಾಗುತ್ತದೆ. ಈ ಹೊತ್ತು ಶಿಯಾ ಅಳ್ವಿಕೆಯ ಇರಾನ್, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ನಡೆಯುತ್ತಿರುವುದು ಇದೇ. ಆರ್.ಎಸ್.ಎಸ್. ಬಿಜೆಪಿ. ಖಾಲಿಸ್ತಾನ್ ಮತ್ತು ಗೋಕಾಕ್ ಚಳವಳಿಯ ಸೈದ್ಧಾಂತಿಕ ನೆಲೆಗಟ್ಟು ಇದೇ. ಸಾಂಪ್ರದಾಯಿಕ ಏಕತಾವಾದಕ್ಕೆ ಚೂರು ಚೂರಾಗುತ್ತಿರುವ ಈ ಶೋಷಣಾತ್ಮಕ, ಈ ಸಾಮಾಜಿಕ ವ್ಯವಸ್ಥೆಯನ್ನು ರಕ್ಷಿಸಲು, ಉಳಿಸಲು ಇರುವ ದಾರಿ ಇದೊಂದೆ. ಆದ್ದರಿಂದಲೇ, ಸಾಂಪ್ರದಾಯಿಕ ಸಂಸ್ಕೃತಿಯ ಪರಿಭಾಷೆಯನ್ನು ಅಲ್ಪಸಂಖ್ಯಾತರು ಅನುಮಾನದಿಂದ ನೋಡುತ್ತಾರೆ. ಇದು ಅನೇಕ ಬಗೆಯ ಅನ್ಯಾಯಗಳನ್ನು ದಬ್ಬಾಳಿಕೆಗಳನ್ನು ಮುಚ್ಚಿ ಹಾಕುತ್ತದೆ. ಅಲ್ಪಸಂಖ್ಯಾತರ ಮೇಲಿನ ಅಧಿಪತ್ಯದ ಸಮರ್ಥನೆಗೆ ಅನೇಕ ವಾದಗಳನ್ನು ಒದಗಿಸುತ್ತದೆ.

ಒಳಭೀತಿ

ಸಾಂಪ್ರದಾಯಿಕ ಏಕತಾವಾದದ ಈ ಯಜಮಾನಿಕೆ ಹೆಚ್ಚು ಮುಂದುವರಿದ, ಅಲ್ಪಸಂಖ್ಯಾತರ ಸಮಾನತೆ ಒಪ್ಪಿರುವ, ಪ್ರಜಾಸತ್ತಾತ್ಮಕ ಸಮಾಜದಲ್ಲಿ ಬಂದಾಗ ಅದಕ್ಕೆ ಉಗ್ರವಾದ ಸರ್ವಾಧಿಕಾರತ್ವದ ಅವಶ್ಯಕತೆ ಬೀಳುತ್ತದೆ. ಈ ಸಮಾಜಗಳಲ್ಲಿ ಅಧುನಿಕೀಕರಣ, ಪಾಶ್ಚಾತ್ಯೀಕರಣ, ತುಂಬ ದೂರ ಹೋಗಿರುತ್ತವೆ. ವಿಘಟನೆಗೊಳ್ಳುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಉತ್ಕಟ ಸರ್ವಾಧಿಕಾರತ್ವವನ್ನು ಏಕತಾವಾದ ಬಯಸುತ್ತದೆ. ಈ ಸರ್ವಾಧಿಕಾರತ್ವ ಸಂವಾದ ಮತ್ತು ವೈಚಾರಿಕತೆಗಳ ನಿರಾಕರಣೆ ಮಾಡುತ್ತದೆ. ಕೊಂಚ ಬಿನ್ನಾಭಿಪ್ರಾಯವನ್ನು ಕೂಡಾ ಇದು ಸಹಿಸದು. ಇದರ ಜೊತೆಗೆ ಒಂದು ಬಗೆಯ “ಬೆದರಿಕೆ” ಯ ಪ್ರಜ್ಞೆಯೂ ಇರುತ್ತದೆ. ಆದರೆ ಯಾವ ಹೊರಗಿನ ಶತ್ರುವನ್ನು ಇದು ಗುರುತಿಸುವುದಿಲ್ಲ. ಖೋಮೈನಿ ಆಳ್ವಿಕೆ. ಖಾಲಿಸ್ತಾನ್ ಚಳುವಳಿಗಳಲ್ಲಿ ಈ ರೀತಿಯ ಮನಸ್ಥಿತಿಯನ್ನು ಕಾಣಬಹುದು. ಸಾರ್ವತ್ರಿಕ ವಿಘಟನೆ ಮತ್ತು ಅಧುನಿಕೀಕರಣ, ಪಾಶ್ಚಾತ್ಯೀಕರಣಗಳಿಗೆ ಪ್ರತಿಸ್ಪಂದಿಸಿ ಈ ತಲ್ಲಣ ಹುಟ್ಟುತ್ತದೆ. ಒಂದು ಇಡೀ ಜೀವನಕ್ರಮವನ್ನು ಸಂಸ್ಕೃತಿಯನ್ನು ಪಲ್ಲಟಮಾಡುವ ಪ್ರಕ್ರಿಯೆಗಳಿಂದಾಗಿ ಹುಟ್ಟುವ ಗಾಢ ಅಭದ್ರತೆ ಅದು. ಬಹಳ ಸಾರಿ ಈ ತಲ್ಲಣ ಅಲ್ಪಸಂಖ್ಯಾತರ ಮೇಲೊ ಅಥವಾ ಬಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಮೇಲೊ ತಿರುಗಿ ಬೀಳುತ್ತದೆ. ಬೇರೆ ಸಂದರ್ಭದಲ್ಲಿ ಯುರೋಪಿಯನ್ ಚರಿತ್ರಕಾರರು “ಮಹಾನ್ ಭಯ” ಎಂದು ವರ್ಣಿಸಿದ್ದು ಇದಕ್ಕೆ ಸಾಮ್ಯವಿರುವ ಸ್ಥಿತಿಯನ್ನೆ, ಇಂಗ್ಲಿಷ್ ಚರಿತ್ರಕಾರನೊಬ್ಬ ಈ ಭಯದ ಸಮಕಾಲೀನ ಇಂಗ್ಲಿಷ್ ರೂಪವನ್ನು ಅತ್ಯಂತ ಸಮರ್ಥವಾಗಿ ವರ್ಣಿಸುತ್ತಾನೆ. “ಅದು ಹೊಂದಿಕೊಳ್ಳಲು ವಿಫಲವಾದ ಸಂಸ್ಕೃತಿಯ ಬಿಕ್ಕಟ್ಟು. ಇಲ್ಲಿ ಒಂದು ಬಗೆಯ ವರ್ಗ ಭಯ, ಸನ್ನಿ ವೈಚಾರಿಕತೆಯನ್ನು ನುಂಗಿ ಹಾಕಿಬಿಟ್ಟಿದೆ. ಅದೊಂದು ಬಗೆಯ ಮಾನಸಿಕ-ಸಾಮಾಜಿಕ ಅವೈಚಾರಿಕತೆಯ ಸೆಳೆವು. ಹುಚ್ಚು ಮನುಷ್ಯನಲ್ಲಿ ಕಂಡು ಬರುವ ಭೀತಿಯ ಹಾಗೆ. ಅದು ಅನೇಕ ಬಲಿಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಇದರ ಮೊದಲ ಬಲಿ ಯಾವಾಗಲೂ ವೈಚಾರಿಕತೆಯೇ. ಇದು ನಮ್ಮನ್ನು ಒಂದು ಬಗೆಯ ಅಧಃಪಾತಾಳಕ್ಕೆ ತಳ್ಳುತ್ತದೆ. ಇಲ್ಲ ನಮ್ಮ ಸಮಾಜದ ಯಾವ ಮಾನವೀಯ ಸಂಯಮಗಳಿಗೂ ಉಳಿಯಲಾರವು”.

ಭಾಷೆ-ಗೀಳು

ಗೋಕಾಕ್ ಚಳುವಳಿಗಾರರ ಪ್ರಕಾರ ಬೆದರಿಕೆ ಈಗಿರುವುದು, “ಕನ್ನಡಕ್ಕೆ”. “ಕನ್ನಡ ಉಳಿಸಿ” ಎಂಬುದು ಅವರ ಕರೆ. ಈ ಹೋರಾಟದ ವಿರೋಧಿಗಳೆಲ್ಲರೂ “ಕನ್ನಡ ವಿರೋಧಿ”ಗಳು. ಕನ್ನಡ ಸಾಹಿತ್ಯಿಕ ಬುದ್ಧಿಜೀವಿ ವರ್ಗದ ಚಿಂತನೆಯ ವೈಖರಿ ಈ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ; ಕನ್ನಡ ಉಳಿಸಿ (ಸಂಸ್ಕೃತದಿಂದ) “ಸಂಸ್ಕೃತ ಹೇಗೆ ತಾನೆ ಕನ್ನಡಕ್ಕೆ ಹಾನಿ ಮಾದುತ್ತದೆ”. “ಕನ್ನಡದ ಬೆಳವಣಿಗೆಗೆ ಸಂಸ್ಕೃತ ನೇರವಾಗಿದೆ”. “ಕನ್ನಡ ಹೇಗೆ ತಾನೆ ಉರ್ದುವಿಗೆ ಹಾನಿ ಮಾಡುತ್ತದೆ?”. ಇಂಗ್ಲಿಷಿನ ಪೂತನಿ ಕನ್ನಡವನ್ನು ಈಂಟುತ್ತದೆ”. ಉಳಿದ ಭಾರತೀಯ ಭಾಷೆಗಳು ಕನ್ನಡವನ್ನು ಕೊಲ್ಲುವುದಿಲ್ಲ”.

ಸಾಮಾನ್ಯವಾಗಿ ಈ ಮಾತುಗಳನ್ನು ಎಲ್ಲರೂ ಮಾತಿನ ಧಾಟಿಯೆಂದೂ, ಉಕ್ತಿ ವೈಚಿತ್ರ್ಯವೆಂದೂ ಭಾವಿಸುವುದುಂಟು. ಆದರೆ, ಈ ಉಕ್ತಿ ವೈಚಿತ್ರ್ಯವನ್ನು ವಾಸ್ತವ ಸತ್ಯ ಎಂದೇ ಭಾವಿಸುವ ತನಕ ಹೊರಟುಹೋಗಿದೆ. ಹೀಗಾಗಿ, ಈ ಅತಿರೇಕದ ವಿರುದ್ಧ ಕನ್ನಡಿಗ ಕಾರ್ಮಿಕ ನಾಯಕರೊಬ್ಬರು ಸಹಜವಾಗೇ ತಿರುಗಿಬಿದ್ದು ಸರಿಯಾಗಿ ಕೇಳಿದರು. “ಕನ್ನಡದ ಹಿತಾಸಕ್ತಿ ಎಂಬುದು ಹೇಗಿರಲು ಸಾಧ್ಯ? ಏನಿದ್ದರೂ ಇರುವುದು ಮನುಷ್ಯನ ಹಿತಾಸಕ್ತಿಗಳು ಮಾತ್ರ”. ಭಾಷೆಯೊಂದನ್ನು ಜೀವಂತ ವ್ಯಕ್ತಿಯನ್ನಾಗಿ ಮಾರ್ಪಡಿಸಿರುವ ಈ ಸಿದ್ಧಾಂತವನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಲಾಗಿದೆ. ಈಗ ನಾವು “ಕನ್ನಡ ತಾಯಿ”, “ಕನ್ನಡ ನೆಲ”, “ಕನ್ನಡ ಜಲ”, “ಕನ್ನಡ-ರಾಜ್ಯ”, “ಕನ್ನಡದ ಅನ್ನ” ಮುಂತಾದ ಮಾತುಗಳನ್ನು ಕೇಳುತ್ತಿದ್ದೇವೆ. ಅಷ್ಟೇ ಏಕೆ, ಆಕೆ “ಶ್ರೀ ಭುವನೇಶ್ವರಿ” ಎಂಬ ದೇವತೆಯೂ ಆಗಿದ್ದಾಳೆ. ಡಾ|| ರಾಜ್‌ಕುಮಾರ್ ಈ ಚಳವಳಿಯ ಸಂದರ್ಭದಲ್ಲಿ ತಾವು ಶ್ರೀ ಭುವನೇಶ್ವರಿಯ ಸೇವೆಗೆ ಸಿದ್ಧ ಎಂದು ಅನೇಕ ಸಾರಿ ಹೇಳಿದ್ದಾರೆ. ಇದು ಭಾಷೆಯ ಅಮಾನವೀಕರಣ, ಅಸಮಾಜೀಕರಣದ ಅಂತಿಮರೂಪ. ಇಲ್ಲಿ ಮನುಷ್ಯ ತನ್ನ ಉಪಯೋಗಕ್ಕೆ ಸೃಷ್ಟಿಸಿಕೊಂಡ ಸಾಮಾಜಿಕ ಉಪಕರಣ ಭಾಷೆ ಎನ್ನುವುದೇ ಮರೆತುಹೋಗಿದೆ. ಭಾಷೆ, ಮಾನವರಿಗಿಂತ ಎತ್ತರದಲ್ಲಿರುವಂಥದೂ, ದೊಡ್ಡದೂ ಆಗಿಬಿಟ್ಟಿದೆ. ಆಕೆಯ ಸೇವೆಯನ್ನು ನಾವು ಮಾಡಬೇಕು ಎಂಬ ಧೋರಣೆ ಆವರಿಸಿದೆ. “ಕನ್ನಡದ ಹಿತಾಸಕ್ತಿ”ಯ ಹಿಂದೆ ಇರುವ ನಿಜವಾದ ಸಾಮಾಜಿಕ ಆಸಕ್ತಿಗಳನ್ನು ಈ ರೀತಿಯಿಂದ ಮಾತ್ರ ಮರೆಮಾಚಲು ಸಾಧ್ಯ. ಭ್ರಮನಿರಸನರಾಗಿ ವ್ಯವಸ್ಥೆಯಿಂದ ಸಿಡಿದುಬಿದ್ದಿರುವ ಜನತೆಯನ್ನು ಇದರಿಂದಾಗಿ ಮತ್ತೆ ಈ ಶೋಷಣಾತ್ಮಕ ವ್ಯವಸ್ಥೆಯ ಜೊತೆಗೆ ಬೆಸೆಯಲು ಸಾಧ್ಯ. ಈ ಕೆಲಸಕ್ಕೆ ಹೊಸ ಸಿದ್ಧಾಂತ, ಸಂಘಟನೆ, ಹೊಸ ನಾಯಕರು, ಹೊಸ ಸಂಸ್ಕೃತಿಯ ಅಗತ್ಯವಿದೆ. ಗೋಕಾಕ್ ಚಳವಳಿ ಈ ಹೊಣೆಯನ್ನೆ ಪೂರೈಸುವ ದಿಕ್ಕಿನಲ್ಲಿ ಒಂದು ಪ್ರಯತ್ನ.

ಈ ಇಡೀ ಪ್ರಕ್ರಿಯೆಯ ಮೂಲ ಇರುವುದು ಕನ್ನಡ ಸಾಹಿತಿಗಳ ಬುದ್ಧಿಜೀವ ವರ್ಗದ ಭಾಷಾ ಧೋರಣೆಯಲ್ಲಿ. ಭಾಷಾ ಎನ್ನುವುದು ಅವರಿಗೊಂದು ಗೀಳು. ಅದು ಇಂಗ್ಲಿಷ್, ಸಂಸ್ಕೃತ, ಕನ್ನಡ ಹೀಗೆ ಯಾವುದೇ ಆಗಿರಬಹುದು. ಅವರು ಎಲ್ಲವನ್ನು-ಸಂಸ್ಕೃತಿ, ರಾಜಕಾರಣ, ಸಮಾಜಿಕ ಘರ್ಷಣೆ, ಸಾಂಸ್ಕೃತಿಕ ಸ್ವಂತಿಕೆ, ದಬ್ಬಾಳಿಕೆ ಇತ್ಯಾದಿ-ಭಾಷೆಯ ಮೂಲಕವಾಗೇ ನೋಡುತ್ತಾರೆ. ಕೆಲವು ಸಾರಿ ಬೇರೆಯವರಿಗೆ ಕಾಣದಂತಹ ಕಲಿಯಬೇಕಾದ ಕೆಲವು ಒಳನೋಟಗಳು ಇವರಿಗೆ ಸಾಧ್ಯವೆಂಬುದು ನಿಸ್ಸಂದೇಹವಾಗಿ ನಿಜ. ಈ ಅಂಶವನ್ನು ಮುಂದೆ ನಾನು ಸಾಕಷ್ಟು ದೀರ್ಘವಾಗಿ ಚರ್ಚಿಸಿದ್ದೇನೆ. ಆದರೆ, ಅವರಿಗೆ ಭಾಷಾ ದೃಷ್ಟಿಕೋನಕ್ಕೆ ಇರುವ ಸೀಮಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಉದಾಹರಣೆಗೆ ಸಂಗೀತ, ಚಿತ್ರಲೇಖ, ಆಧುನಿಕ ವಿಜ್ಞಾನ, ಗಣಿತಶಾಸ್ತ್ರ ಇತ್ಯಾದಿ ಭೌದ್ಧಿಕ ಕ್ಷೇತ್ರಗಳಲ್ಲಿ ಭಾಷೆಯ ಪಾತ್ರ ಗೌಣ ಇಲ್ಲವೇ ಇಲ್ಲ. ಇನ್ನು ಜೀವನದ ಅನೇಕ ವಲಯಗಳಲ್ಲಿ-ಮದುವೆ, ಅಸ್ಪೃಶ್ಯತೆ, ದಲಿತರ ಮೇಲಿನ ದಬ್ಬಾಳಿಕೆ, ಕಾರ್ಮಿಕ ಹೋರಾಟಗಳಲ್ಲಿ ಭಾಷೆ, ಭಾಷೆಗಳ ನಡುವಣ ವ್ಯತ್ಯಾಸಗಳು ಯಾವ ಮಹತ್ವದ ಪಾತ್ರವನ್ನು ವಹಿಸುವುದಿಲ್ಲ.

ಪರ್‍ಯಾಯ ಇದ್ದಿದ್ದರೆ

ದುಡಿಯುವ ಜನತೆಗೆ ಇನ್ನೊಂದು ಎಡಪಂತೀಯ ಪರ್ಯಾಯವಿದ್ದಿದ್ದರೆ, ವರ್ಗ ರಾಜಕಾರಣದ ನೆಲೆಯಲ್ಲಿ ಅವರು ಸಂಘಟಿತರಾಗಿದ್ದರೆ ಬಹುಶಃ ಅವರು ಈ ದಾರಿಗೆ ಇಳಿಯುತ್ತಿರಲಿಲ್ಲ. ಆಗ ಭಾಷೆ ಶೋಷಕರ ವಿರುದ್ಧವಾಗಿ ಶೋಷಿತರನ್ನು ಸಂಘಟಿಸುವ ಸಾಧನವಾಗುತ್ತಿತ್ತು. ಅವರನ್ನು ಒಡೆವ ಅಸ್ತ್ರವಾಗುತ್ತಿರಲಿಲ್ಲ. ಮುಂದಿನ ಸಮಾಜವಾದೀ ಸಮಾಜದ ದರ್ಶನ ನೀಡುತ್ತಿತ್ತು. ಸಾಮಾಜಿಕ ಮತ್ತು ಸಾಮಾಜಿಕ ಸಂಸ್ಥೆಗಳ ಅರ್ಥೈಸುವಿಕೆಗೆ, ಪ್ರಜಾಸತ್ತಾತ್ಮಕ ಸಮಾಜವಾದೀ ಸಮಾಜದ ಕಡೆಗೆ ಕೈದೀವಿಗೆಯಾಗುತ್ತಿತ್ತು. ಆದರೆ, ಕರ್ನಾಟಕದಲ್ಲಿ ಈ ಹೊತ್ತು ಅಂಥ ಬುದ್ದಿಜೀವಿ ಅಥವಾ ಜನತೆಯ ಬೆಂಬಲವಿಲ್ಲ. ಇವಲ್ಲದೆ ಇರುವ ಇನ್ನೊಂದು ಪರ್‍ಯಾಯವೆಂದರೆ; ಭಾ.ಜ.ಪ ಮತ್ತು ಆರ್.ಎಸ್.ಎಸ್. ನಂತಹ ಸಂಘಟನೆಗಳು. ಕರ್ನಾಟಕದಲ್ಲಿ ಅವೂ ಕೂಡಾ ದುರ್ಬಲವಾಗಿವೆ. ಹೀಗಾಗಿ, ಸಾಂಪ್ರದಾಯಿಕ ಐಕ್ಯತಾವಾದ ಅತ್ಯಂತ ಸಂಕೀರ್ಣ ಶಕ್ತಿಗಳ ಆಕಸ್ಮಿಕ ಒಕ್ಕೂಟದ ರೂಪವನ್ನು ಪಡೆದಿದೆ. ಈ ಶಕ್ತಿಗಳು ರೂಪುಗೊಂಡದ್ದು ಭಾಷಾ ಸಿದ್ಧಾಂತ ಮತ್ತು ಸಣ್ಣ ಒತ್ತಾಯವೊಂದರ ಆಧಾರದ ಮೇಲೆ ತಮಗೆ ಸಿಕ್ಕಿದ ಜನತೆಯ ಬೆಂಬಲ ಕಂಡು ಕನ್ನಡ ಲೇಖಕರೇ ವಿಸ್ಮಯಗೊಂಡಿದ್ದಾರೆ. ಈ ಚಳವಳಿ ಸಂಘಟನೆ. ಶಿಸ್ತು, ನಿರ್ದಿಷ್ಟ ದಿಕ್ಕು ಇಲ್ಲದೆ ಬಂದದ್ದು. ಹಠಾತ್ತನೆ ಹುಟ್ಟಿರುವಂಥದು ಜನತೆಯನ್ನು ಕೆರಳಿಸುವಾಗ, ಅದರ ಮುಂದಿನ ಪರಿಣಾಮಗಳ ಬಗ್ಗೆ ಕನ್ನಡ ಲೇಖಕರು ಯೋಚಿಸಲೇ ಇಲ್ಲ. ಅದು ನಿಜವಾಗಿಯೂ ಬೇಜವಾಬ್ದಾರಿಯಾದದ್ದು. ಈ ಬೇಜವಾಬ್ದಾರಿ ಅನೇಕ ಸಾವುಗಳಿಗೂ ಕೂಡಾ ಕಾರಣವಾಯಿತು. ಈ ದೃಷ್ಟಿಯಿಂದ ಇದು ಈ ರೀತಿಯ ಉಳಿದ ಚಳುವಳಿಗಿಂತ ಭಿನ್ನ. ಉಳಿದ ಸಾಂಪ್ರದಾಯಿಕ ಏಕತಾ ಚಳವಳಿಗಳು ಸಾಮಾನ್ಯವಾಗಿ ಶಿಸ್ತಿನಿಂದ, ನಿಷ್ಟ ಕಾರ್‍ಯಕರ್ತರಿಂದ ಕೂಡಿರುತ್ತದೆ; ಪೂರ್ಣಸರ್‍ವಾಧಿಕಾರೀ ರೂಪದಲ್ಲಿರುವ ಇದನ್ನು ಯಾರೊ ಒಬ್ಬ ವ್ಯಕ್ತಿ ನಿರ್ದೇಶಿಸಿರುತ್ತಾರೆ. ಹೀಗಾಗಿ, ತನ್ನ ಮೂಲಭೂತ ತಾತ್ವಿಕತೇ ವಿರುದ್ಧವಾದ ರೀತಿಯಲ್ಲಿ ಅರಾಜಕತೆಯ ಕಡೆಗೆ ಈ ಚಳವಳಿ ಸಾಗುತ್ತಿದೆ. ಕರ್ನಾಟಕದಲ್ಲಿ ಸಂಘಟಿತ ಪರ್ಯಾಯವೊಂದರ ಗೈರು ಹಾಜರಿ ಇದಕ್ಕೆ ಕಾರಣ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ಈ ಭಾಗದ ಚರ್ಚೆಯ ತಿರುಳನ್ನು ಹೀಗೆ ಸಂಗ್ರಹಿಸಿ ಹೇಳಬಹುದು. ಇಲ್ಲಿ ಎಲ್ಲ ವಲಯಗಳ ವಿವಿಧ ಶಕ್ತಿಗಳು ಗೌಣವಾದ ಬೇಡಿಕೆಯೊಂದರ ಆಧಾರದ ಮೆಕೆ ಒಕ್ಕೂಟ ರಚಿಸಿಕೊಂದಿವೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ರಾಜಕೀಯ ವಲಯಗಳ ಈ ಶಕ್ತಿಗಳು ಬೇರೆ ಬೇರೆ ನೆಲೆಗಳಿಂದ ಬಂದಿದ್ದು, ಅನೇಕ ಹಂತಗಳಲ್ಲಿ ಬೇರೆ ಬೇರೆ ಆಸಕ್ತಿಗಳನ್ನೂ ಹೊಂದಿದೆ. ಜಾತಿ, ಕಾರ್ಮಿಕ ಸಂಘ, ಸರ್ಕಾರ ಮತ್ತಿತರ ವಲಯಗಳಲ್ಲಿ ಇವಕ್ಕೆ ತಮ್ಮದೇ ಆದ ಆಸಕ್ತಿಗಳಿವೆ. ಕೆಲವೊಮ್ಮೆ ಇವು ತಮ್ಮ ತಮ್ಮೊಳಗೆ ಹೊಡೆದಾಡುತ್ತವೆ ಕೂಡಾ. ಆದರೆ, ಈ ಚಳವಳಿ ಸಂದರ್ಭದಲ್ಲಿ ಮಾತ್ರ ಇವು ಏಕೀಕೃತ ಶಕ್ತಿಯಾಗಿ ಮಾರ್ಪಾಟಾದವು. ಈ ಒಕ್ಕೂಟದ ಕೆಲವು ಶಕ್ತಿಗಳ ಸ್ವರೂಪವನ್ನು ಸ್ಥೂಲವಾಗಿ ಚರ್ಚಿಸಿದ್ದೇನೆ. ಇವುಗಳ ಜೊತೆಗೆ ಈ ಚಳವಳಿಯಲ್ಲಿ ಭಾಗವಹಿಸಿದ ಇನ್ನಿತರ ಜಾತಿ, ವರ್ಗಗಳನ್ನು ಗುಂಪುಗಳನ್ನು ಅವುಗಳ ನಿರ್ಧಿಷ್ಟತೆಯಲ್ಲಿಯೇ ಅಧ್ಯಯನ ಮಾಡುವ ಅಗತ್ಯವಿದೆ.

ಅಭದ್ರತೆ

ಚರಿತ್ರೆಯಲ್ಲಿ ಕೊಂಚ ಹಿಂದಕ್ಕೆ ಹೋಗಿ ನೋಡುವುದಾದರೆ, ಈ ಬಗೆಯ ಕನ್ನಡ ಸಿದ್ಧಾಂತ ಮತ್ತು ದುರಭಿಮಾನ ೧೯೭೦ರ ಮೊದಲ ವರ್ಷಗಳಲ್ಲೆ ಪ್ರಕಟವಾದದ್ದು ತಿಳಿಯುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಈ ಭಾವನೆಗಳು ತೀವ್ರಗೊಂಡವು. ಸಾಮಾಜಿಕ ಜೀವನದ ಬೇರೆ ಬೇರೆ ವಲಯಗಳಲ್ಲಿ ದಿನ ನಿತ್ಯದ ಜೀವನದಲ್ಲಿ ಇದು ಬೇರೆ ಬೇರೆ ರೂಪುಗಳಲ್ಲಿ ಕಾಣಹತ್ತಿತು. ಗೋಕಾಕ್ ವರದಿ ಕಾಳ್ಗಿಚ್ಚನ್ನು ಎಬ್ಬಿಸಿದ ಒಂದು ಕಿಡಿ ಅಷ್ಟೆ, ಬಹುಶಃ ಯಾವಾಗಲೂ ಅತ್ಯಂತ ಗೌಣ ಸಂಗತಿಯೊಂದು ಮಹತ್ವದ ವಿರೋಧಗಳನ್ನು ಮರೆಮಾಡುತ್ತದೊ ಏನೊ. ಇಲ್ಲಿ ಎಲ್ಲರನ್ನೂ ಒಂದುಗೂಡಿಸಿರುವ ಸಿದ್ಧಾಂತವೆಂದರೆ ಕನ್ನಡದ ಸಾಮಾಜಿಕ ಮತ್ತು ಸಾಂಸ್ಕೃತಿಕ ಯಜಮಾನಿಕೆಯ ಪರಿಕಲ್ಪನೆ. ಈ ಪರಿಕಲ್ಪನೆಯನ್ನು ಒಟ್ಟಾರೆಯಾಗಿ ಎಲ್ಲರೂ ಒಪ್ಪುತ್ತಿದ್ದಾರೆಯೇ ಹೊರತು, ಇದರ ಅರ್ಥ ಮತ್ತು ಸ್ವರೂಪಗಳ ಬಗ್ಗೆ ಸಾಮಾನ್ಯ ಒಪ್ಪಿಗೆ ಇಲ್ಲ. ಆದರೆ, ಒಟ್ಟಾರೆಯಾಗಿ ಈ ಚಳವಳಿಯು ಹಿಂದಿನ ಮುಖ್ಯ ಪ್ರೇರಣೆಯನ್ನು ಈ ಮಾತುಗಳಲ್ಲಿ ಹಿಡಿದಿಡಬಹುದು: ನಗರದ ಮಧ್ಯಮ ವರ್ಗ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸೈದ್ಧಾಂತಿಕ ಕ್ಷೇತ್ರಗಳಲ್ಲಿ ಗಳಿಸಲು ಯತ್ನಿಸುತ್ತಿರುವ ಭದ್ರತೆಯ ಅಭಿವ್ಯಕ್ತಿ ಇದು. ಆಧುನಿಕೀಕರಣ, ಪಾಶ್ಚಾತ್ಯೀಕರಣ ಪ್ರಕ್ರಿಯೆಗಳು ತೀವ್ರಗೊಳ್ಳುತ್ತಿರುವ ಈ ಪರಿಸ್ಥಿತಿಯಲ್ಲಿ, ಕೆಲಸಗಳಿಗಾಗಿ, ಸಂಪನ್ಮೂಲಗಳಿಗಾಗಿ, ಸಾಂಸ್ಕೃತಿಕ ಸ್ವಂತಿಕೆಗಾಗಿ ಈ ಪ್ರಯತ್ನ ನಡೆದಿದೆ. ಇದರ ಹಿನ್ನೆಲೆಯಲ್ಲಿ ಆರ್ಥಿಕ ವಿಘಟನೆ ಒಳ ವಿದ್ಯುತ್ತಿನಂತೆ ಹರಿಯುತ್ತಿದೆ. ಭದ್ರತೆಗಾಗಿ ಒದ್ದಾಡುತ್ತಿರುವ ಈ ಪ್ರಯತ್ನ ಯಜಮಾನಿಕೆಯನ್ನ ಪಡೆಯಲು ಯತ್ನಿಸುತ್ತಿದೆ ಎಂಬುದು ಈ ಚಳವಳಿಯ ವ್ಯಂಗ್ಯಗಳಲ್ಲಿ ಒಂದು.

ಸಂಸ್ಕೃತದ ಪಾತ್ರ

ಆದರೆ. ಇಂಗ್ಲಿಷಿನ ಪಾತ್ರವೇನು? ಭಾರತೀಯ ವಾಸ್ತವತೆಗಳಿಗೆ ಕುರುಡಾದ, ನಿಯೊಕಲೊನಿಯಲ್ ಜನರ ಭಾಷೆಯಾದ ಅದು ಕನ್ನಡವೂ ಸೇರಿದಂತೆ ಉಳಿದ ಭಾರತೀಯ ಭಾಷಿಕರ ಮೇಲಿನ ದಬ್ಬಾಳಿಕೆಯ ಸಾಧನವಲ್ಲವೆ ಎಂಬ ಪ್ರಶ್ನೆ ಏಳುತ್ತದೆ. ಇದರ ಜೊತೆಗೇ ಸಂಸ್ಕೃತದ ನೆನಪೂ ಆಗುತ್ತದೆ. ಸಂಸ್ಕೃತ ಕೂಡಾ ಹಿಂದೂ ಮತಾಂಧರ ಅಸ್ತ್ರವಾಗಿದ್ದು, ಆ ಭಾಷೆ ಕೆಳ ಜಾತಿ ವರ್ಗಗಳ ಮೇಲಿನ ಬ್ರಾಹ್ಮಣ ಯಜಮಾನ್ಯಕ್ಕೆ ಸಾಧನವಲ್ಲವೆ? ಹೀಗಾಗಿ, ಇಂಗ್ಲಿಷ್-ಸಂಸ್ಕೃತದ ವಿರುದ್ಧ ದುಡಿಯುವ ಜನತೆಯ ಭಾಷೆಯೆಂದರೆ ಕನ್ನಡ ಮಾತ್ರವಲ್ಲವೆ? ಪೋಷಕರ ಸಂಸ್ಕೃತಿಯ ವಿರುದ್ಧದ ಹೋರಾಟಕ್ಕೆ ಜನತೆಯ ಆಯುಧವಲ್ಲವೆ ಇದು? ರಾಷ್ಟ್ರಮಟ್ಟದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ, ಆಗ ಕನ್ನಡ-ಹಿಂದಿಗಳೆರಡು ಶೋಷಕರ ಭಾಷೆಗಳ ವಿರುದ್ಧ ಹೋರಾಡಬಹುದಲ್ಲ! ನಾವು ಏನೇ ಮಾಡಿದರೂ, ಅರೆಕೊರೆಯಾಗಿ ಕಲಿಯುತ್ತಿರುವ ಇಂಗ್ಲಿಷಿನ ಮೇಲೆ ಇಷ್ಟೊಂದು ಹಣವನ್ನು ವ್ಯರ್ಥವಾಗಿ ಸುರಿಯುತ್ತಿದ್ದೇವೆ. ಇದರಿಂದಾಗಿ ಬೇರೆ ವಿಷಯಗಳನ್ನು ಕಲಿಯಲು ಸಮಯ ಸಿಗುತ್ತಿಲ್ಲ. ಜೊತೆಗೆ ಇಂಗ್ಲಿಷ್‌ನ ಮರುಭೂಮಿಯಲ್ಲಿ ನಮ್ಮ ಬುದ್ಧಿಶಕ್ತಿ ಪ್ರತಿಭೆ ಇಂಗಿ ಹೋಗುತ್ತಿದೆ. ಬೌದ್ಧಿಕ ವ್ಯಕ್ತಿತ್ವದ ಪೂರ್ಣ ವಿಕಾಸ ಸಾಧ್ಯವಾಗುತ್ತಿಲ್ಲ. ಅದರಲ್ಲು ಬಡವರ ಮಕ್ಕಳ ವ್ಯಕ್ತಿತ್ವಗಳೆಷ್ಟು ಇಂಗ್ಲಿಷ್‌ನಿಂದಾಗಿ ಮುದುಟಿ ಹೋಗುತ್ತಿವೆ? ಇದು ಭಾಷಾ ವಿವಾದದಲ್ಲಿ ಕಾಣುವ ವಿಚಾರಗಳ ಒಂದು ಮುಖ.

ಇನ್ನೊಂದು ಮುಖ

ಆದರೆ, ಇನ್ನೊಂದು ಮುಖವೂ ಇದೆ. ಈ ಭಾಷಾ ಸಮಸ್ಯೆಗೆ, ಕೆಲವರ ಪ್ರಕಾರ, ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿಯ ಅಸಮಾನತೆ, ಜಾತೀಯತೆಗಳ ವಿರುದ್ಧ ಹೋರಾಡಲು ನಮಗಿರುವ ಆಯುಧವೆಂದರೆ ಇಂಗ್ಲಿಷ್ ಮಾತ್ರ. ಹಿಂದಿ ಯಜಮಾನಿಕೆಯ ವಿರುದ್ಧ ಹೋರಾಡಲು, ಪ್ರಾಂತೀಯ ಭಾಷೆಗಳಲ್ಲಿ ಪ್ರಕಟವಾಗುವ ಪ್ರತ್ಯೇಕತಾ ಪ್ರವೃತ್ತಿಗಳನ್ನು ತಡೆಗಟ್ಟಲು ರಾಷ್ಟ್ರೀಯ ಪ್ರಜ್ಞೆಯನ್ನು ಕೂಡಾ ಉದ್ದೀಪಿಸಲು ಇಂಗ್ಲಿಷ್ ಸಹಾಯವಾಗುತ್ತದೆ ಎಂಬ ತರ್ಕವೂ ಇದೆ. ಉಳಿದ ಪ್ರಾಂತೀಯ ಭಾಷೆಗಳಂತೆ ಕನ್ನಡ ಕೂಡಾ ಅಲ್ಪಸಂಖ್ಯಾತರ ಮೇಲೆ ತನ್ನ ಸಾಮಾಜಿಕ-ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರುತ್ತಿದೆಯಲ್ಲ? ಆಧುನಿಕ ವಿಜ್ಞಾನ ಮತ್ತು ಸಂಸ್ಕೃತಿಯ ಏಕಮಾತ್ರ ವಾಹಕ ಇಂಗ್ಲಿಷಲ್ಲವೆ? ಈ ಎಲ್ಲ ವಾದಗಳಲ್ಲೂ ಸತ್ಯದ ಒಂದೊಂದು ಅಂಶವಿದೆ. ಇಲ್ಲಿ ಪ್ರಸ್ತಾಪವಾಗಿರುವ ಎಲ್ಲ ಭಾಷೆಗಳ ಸ್ವರೂಪ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪಾತ್ರವನ್ನು ಅವುಗಳ ಶಕ್ತಿ, ಮಿತಿಗಳನ್ನು ಮುಂದೆ ಚರ್ಚಿಸಲು ಪ್ರಯತ್ನಿಸುತ್ತೇನೆ. ಈ ಚರ್ಚೆಯ ಆಧಾರದ ಮೇಲೆ ಈ ಎಲ್ಲ ಭಾಷೆಗಳನ್ನು ಸಂಬಂಧಿಸಿದಂತೆ ಸಮಗ್ರ ಭಾಷಾ ನೀತಿಯೊಂದನ್ನು ಸೂಚಿಸುವ ಯತ್ನ ಮಾಡಿದ್ದೇನೆ. ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ವಲಯಗಳನ್ನು ಒಳಗೊಳ್ಳುವ ಈ ಭಾಷಾ ನೀತಿಯನ್ನು ಕಾರ್ಯರೂಪಕ್ಕೆ ತರುವ ಪ್ರಜಾಸತ್ತಾತ್ಮಕ ಕಾರ್ಯಕ್ರಮದ ರೂಪುರೇಶೆಗಳನ್ನು ಗುರುತಿಸುವ ಕೆಲಸವನ್ನು ಕಡೆಯಲ್ಲಿ ಮಾಡಿದ್ದೇನೆ.

ಮೊದಲಿಗೆ ಸಂಸ್ಕೃತ ಭಾಷೆಯ ಸ್ವರೂಪ ಮತ್ತು ಪಾತ್ರವನ್ನು ಕುರಿತು ವಿವೇಚಿಸಬಹುದು. ಭಾರತೀಯ ಚರಿತ್ರೆ ಮತ್ತು ಸಂಸ್ಕ್ರುತಿಯಲ್ಲಿ ಇದು ಮಹತ್ತರ ಪಾತ್ರ ವಹಿಸಿದೆ ಎಂಬ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಸಾಮಾಜಿಕ ವಿಜ್ಞಾನ ಮತ್ತು ಸಾಹಿತ್ಯದ ವಿದ್ಯಾರ್ಥಿಗಳಿಗಂತೂ ಈ ಭಾಷೆಯ ಆಳವಾದ ಅಧ್ಯಯನ ನಿಜಕ್ಕೂ ಉಪಯುಕ್ತ. ಆದ್ದರಿಂದ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತದ ಅದ್ಯಯನಕ್ಕೆ ಖಂಡಿತ ಪ್ರೀತ್ಸಾಹ ನೀಡಬೇಕು. ಸಂಸ್ಕೃತ ಸಾಹಿತ್ಯದ ಕ್ರೂತಿಗಳನ್ನು ಅನುವಾದಗಳಲ್ಲಾದರೂ ವಿದ್ಯಾವಂತರು ಓದುವ ಅಗತ್ಯವಿದೆ. ಆದರೆ, ಸಂಸ್ಕೃತದ ಪರ ವಾದಿಗಳು ಭಾರತೀಯ ಚರಿತ್ರೆಯಲ್ಲಿ ಸಂಸ್ಕೃತಕ್ಕೆ ಅಧಿಪತ್ಯವಿತ್ತು ಎಂದೂ, ಅದೇ ರೀತಿಯ ಅಧಿಪತ್ಯ ಈಗಲೂ ಮುಂದುವರಿಯಬೇಕೆಂದೂ ಹೇಳುತ್ತಾರೆ. ಈ ಧೋರಣೆ ಸಂಸ್ಕೃತೇತರ ಪರಂಪರೆಗಳನ್ನು ಗೌಣವಾಗಿ, ಸಂಸ್ಕೃತದ ಅಡಿಯಾಳಾಗಿ ಕಾಣುತ್ತದೆ. ಈಗಿನ ಭಾರತ ಮತ್ತು ಕರ್ನಾಟಕದಲ್ಲಿ ಈ ವ್ಯಾಖ್ಯಾನದ ಅರ್ಥವೆಂದರೆ ಚರಿತ್ರೆಯ ಹಿಂದೂ ಬ್ರಾಹ್ಮಣ ದೃಷ್ಟಿಕೋನವನ್ನು ಒಪ್ಪೊಕೊಂಡ ಹಾಗೆ. ಹಿಂದೂ-ಬ್ರಾಹ್ಮಣ ಸಾಮಾಜಿಕ-ಸಾಂಸ್ಕೃತಿಕ ಯಜಮಾನಿಕೆಯನ್ನು ಮತ್ತೆ ಹೇರಲು ಈ ದೃಷ್ಟಿಕೋನವನ್ನು ಬಳಸಲಾಗುತ್ತಿದೆ. ಇದು ಮುಸ್ಲಿಮ್ ಮತ್ತು ಇತರ ಇತರ ಧಾರ್ಮಿಕ ಅಲ್ಪ ಸಂಖ್ಯಾತರನ್ನು “ಪರಕೀಯರು” ಅಥವಾ “ದ್ರೋಹಿ” ಗಳೆಂದು ಜರೆಯುತ್ತದೆ. ಶಾಲಾ ಹಂತದಲ್ಲಿ ಸಂಸ್ಕೃತದಲ್ಲಿ ಪ್ರಥಮ ಭಾಷೆಯ ಪತ್ಟಿಯಲ್ಲಿಡಬೇಕು ಎಂದು ಒತ್ತಾಯಿಸಿದ್ದರೆ ಹಿಂದೆ ಕೆಲಸ ಮಾಡಿರುವುದು ಈ ತರ್ಕವೇ.

ಕನ್ನಡ ಸಂಸ್ಕೃತೀಕರಣ

ಆದರೆ ಈ ದೃಷ್ಟಿಕೋನವನ್ನು “ಕನ್ನಡ ವಿರೋಧಿ” ಎಂದು ಕರೆಯುವುದು ಸರಿಯಲ್ಲ. ಏಕೆಂದರೆ, ಸಂಸ್ಕೃತಪರ ದೃಷ್ಟಿಕೋನಕ್ಕೆ ಕನ್ನಡ ಭಾಷೆ ಸಂಸ್ಕೃತೀಕರಣದ ಹಾದಿಯಲ್ಲಿ ಬೆಳೆಯುವುದು ಬೇಕಾಗಿದೆ. ಸಂಸ್ಕೃತದ ಮೌಲ್ಯಗಳ ಯಜಮಾನಿಕೆಯ ಕೆಳಗೆ ಕನ್ನಡ ಬೆಳೆಯಬೇಕಾಗಿದೆ. ಕನ್ನಡ ಪರವಾದ ಸಂಸ್ಕೃತವನ್ನು ಶಾಲಾಹಂತದಲ್ಲಿ ವಿರೋಧಿಸುವ ಜನರಲ್ಲಿ ಕೂಡಾ ಸಂಸ್ಕೃತೀಕರಣ ವಾದಿಗಳಿದ್ದಾರೆ. ಹೀಗಾಗಿ, ಸಂಸ್ಕೃತ ಪರ ವಾದಿಗಳನ್ನು “ಕನ್ನಡ ವಿರೋಧಿ” ಎಂದು ಕರೆಯುವುದು ದಾರಿ ತಪ್ಪಿಸುವ ಕೆಲಸವಾಗುತ್ತದೆ. ಈ ಎರಡೂ ರೀತಿಯ ಸಂಸ್ಕೃತೀಕರಣ ವಾದಿಗಳ ನಡುವೆ ಇರುವ ವ್ಯತ್ಯಾಸ ಕೇವಲ ಪ್ರಮಾಣಕ್ಕೆ ಸಂಬಂಧಿಸಿದ್ದು. ಶುದ್ಧ ಸಂಸ್ಕೃತವಾದಿಗಳು ಹೆಚ್ಚು ಸಂಪ್ರದಾಯ ಶರಣರಿರಬಹುದು, ಎರಡನೆಯದು ಕೊಂಚ ಅಧುನಿಕರಿರಬಹುದು ಅಷ್ಟೆ. ಅದೇನೇ ಇದ್ದರೂ, ಮೊದಲು ಸಂಸ್ಕೃತ ಪ್ರಥಮ ಭಾಷೆಯ ಸ್ಥಾನದಲ್ಲಿರಬೇಕು ಎಂದೂ ಆಮೇಲೆ ಕನ್ನಡದ ಏಕಮೇವ ಸ್ಥಾನಕ್ಕೆ ಹೋರಾಡಿದವರ ನಿಲುವಿನಲ್ಲಿ ಸ್ವಯ-ವಿರೋಧವಿಲ್ಲ ಎಂದೂ ಇದು ವಿವರಿಸುತ್ತದೆ. ಈ ರೀತಿಯ ದೃಷ್ಟಿಕೋನವೇ ಏಕಕಾಲಕ್ಕೆ ರಾಜ್ಯ ಮತ್ತು ರಾಷ್ಟ್ರದ ಹನ್ತಗಳಲ್ಲಿ ಹಿಂದೂಮತೀಯತೆಯನ್ನು ಆಧರಿಸಿದ ಸಾಂಪ್ರದಾಯಿಕ ಏಕತಾವಾದಕ್ಕೆ ತಳಹದಿಯನ್ನು ಒದಗಿಸುತ್ತದೆ. ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗೆ ಸಂಸ್ಕೃತ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳುವ ಜನ(ಗೋಕಾಕ್ ವರದಿ ಕೂಡ ಇದನ್ನು ಹೇಳುತ್ತದೆ) ಅಧುನಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತಮ್ಮ ವಾದಕ್ಕೆ ಸಮರ್ಥನೆ, ಸಾಕ್ಷ್ಯಗಳನ್ನು ಒದಗಿಸುವುದಿಲ್ಲ. ಮತ್ತೆ ಗೋಕಾಕ್ ವರದಿಯಂತೆ, ಅದೇ ಜನ ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಭಾಷೆ, ಯುರೋಪಿಯನ್ ಸಾಹಿತ್ಯಗಳ ಕೊಡುಗೆಯನ್ನು ಕಡೆಗಣಿಸುತ್ತಾರೆ. ಇಲ್ಲವೇ ಗೌಣವಾಗಿ ನೋಡುತ್ತಾರೆ. ತಮ್ಮ ವಿಮರ್ಶಾ ಬರಹಗಳಲ್ಲಿ ಕೂಡಾ ಹಳಗನ್ನಡ ಸಾಹಿತ್ಯ ಮತ್ತು ಹೊಸಗನ್ನಡ ಸಾಹಿತ್ಯಗಳ ನಡುವಣ ನಿರಂತರತೆ, ಸಂಬಂಧಗಳನ್ನು ಗುರುತಿಸಲು ಈ ಜನರಿಗೆ ಸಾಧ್ಯವಾಗಿಲ್ಲ. ನೀವು ಒತ್ತಾಯವಾಗಿ ಕೇಳಿದರೆ, ಸಂಸ್ಕೃತ ಹಿದೆ ಕೊಡುಗೆ ನೀಡಿದೆ. ಮುಂದೆಯೂ ಕನ್ನಡದ ಪದ ಸಂಪತ್ತಿಗೆ ಕಾಣಿಕೆ ನೀಡುತ್ತದೆ ಎಂದು ಉತ್ತರಿಸುತ್ತಾರೆ. ಅದರಲ್ಲೂ ತಾಂತ್ರಿಕ ಶಬ್ದಗಳಲ್ಲಿ ಸಂಸ್ಕೃತದ ಕೊಡುಗೆ ವಿಶೇಷವಾದದ್ದು ಎನ್ನುತ್ತಾರೆ. ಲ್ಯಾಟಿನ್ ಇಂಗ್ಲಿಷ್ ಭಾಷೆಗೆ ನೀಡಿದ ಕೊಡುಗೆಗೆ ಇದು ಹೋಲುತ್ತದೆ ಎಂಬುದು ನಿಜ. ಆದರೆ ಬಹಳ ಜನರಿಗೆ ಈ ಘೋಷಣೆ ಕನ್ನಡ ಭಾಷೆ ಮುಂದೆ ಹೇಗೆ ಬೆಳೆಯಬೇಕೆಂಬ ಅವರ ಆಸೆ ತೋರಿಸುತ್ತದೆ. ಅಂದರೆ ಕನ್ನಡ ಭಾಷೆ ಹೆಚ್ಚಿನ ಸಂಸ್ಕೃತೀಕರಣಕ್ಕೆ ಒಳಗಾಗಿ, ಆ ಮೂಲಕ ಸಾಂಪ್ರದಾಯಿಕ, ಹಿಂದೂ ಮೌಲ್ಯಗಳ ಪುನರ್ ಪ್ರತಿಷ್ಟಾಪನೆ ನಡೆಯಬೇಕು. ಈಗಿರುವ ಸಾಮಾಜಿಕ ವ್ಯವಸ್ಥೆಯ ಜೊತೆ ಜನ ಬೆಸೆದುಕೊಳ್ಳಬೇಕು. ಹಿಂದೂ-ಬ್ರಾಹ್ಮಣ ಸಾಮಾಜಿಕ-ಸಾಂಸ್ಕೃತಿಕ ಅಧಿಪತ್ಯದ ಕೆಳಗೆ ಬರಬೇಕು. ಇವು ಅವರ ಆಸೆಗಳು. ಈ ಸಿದ್ಧಾಂತದ ಹಿಂದಿನ ಸಾಮಾಜಿಕ ಶಕ್ತಿಗಳಿಗೂ, ಕನ್ನಡ ಸಿದ್ಧಾಂತದ ಹಿಂದಿನ ಶಕ್ತಿಗಳಿಗೂ ಸಾಮ್ಯಗಳಿವೆ. ಕೆವವೊಮ್ಮೆ ಪರಸ್ಪರ ಬೆರೆತುಹೋಗುತ್ತವೆ ಕೂಡಾ. ಆದರೆ ಸಂಸ್ಕೃತ ವಿರೋಧಿ ಬುದ್ಧಿಜೀವಿಗಳು ಈ ಸಮಸ್ಯೆಯನ್ನು ಇಷ್ಟೇ ಸಂಕುಚಿತವಾಗಿ ನೋಡುತ್ತಾರೆ. ತಮಿಳುನಾಡಿನಲ್ಲಿ ಆದಂತೆ ಬ್ರಾಹ್ಮಣ ವಿರೋಧಿ, ಸಂಸ್ಕೃತ ವಿರೋಧಿ ಸಿದ್ಧಾಂತಗಳು ಆಳವಾದ ಸಾಮಾಜಿಕ, ಸಾಂಸ್ಕೃತಿಕ ಪ್ರಾಭಾವವನ್ನು ಕರ್‍ನಾಟಕದಲ್ಲಿ ಬೀರಲಿಲ್ಲ. ತಮಿಳುನಾಡಿನಲ್ಲಿ ಬ್ರಾಹ್ಮಣ ವಿರೋಧಿ ಸಂಸ್ಕೃತದ ನಿರಾಕರಣೆ ಬಂದು ದೊಡ್ಡ ಸಾಮಾಜಿಕ ಚಳವಳಿ ಆಯಿತು. ಕನ್ನಡ ನವೋದಯದ ಮೊದಲ ತಲೆಮಾರಿನ ಲೇಖಕರು ಸಂಸ್ಕೃತದ ಸಂಸ್ಕೃತಿಯಿಂದ ಗಾಢವಾಗಿ ಪ್ರಭಾವಿತರಾಗಿದ್ದರು. ಈಚಿಗಿನ ಬ್ರಾಹ್ಮಣೇತರ ಬರಹಗಾರರು ಅದರಲ್ಲೂ ಲೋಹಿಯಾ ವಾದಿಗಳು, ದಲಿತರು, ಲಿಂಗಾಯಿತರು, ಕನ್ನಡದ ಆಡುನುಡಿ ಶೂದ್ರ, ನುಡಿಯನ್ನು ಬಳಸಿದರು.ಈ ಭಾಷಾ ಬಳಕೆಯಲ್ಲಿ ಸಂಸ್ಕೃತವಲ್ಲದ ಬ್ರಾಹ್ಮಣೇತರ ಸತ್ವವಿದೆ. ಕರ್ಣಾಟಕದಲ್ಲಿ ಬ್ರಾಹ್ಮಣ ವಿರೋಧವೆಂದರೆ ಕೆಲಸ, ಅದಿಕಾರ, ಸಾಹಿತ್ಯಿಕ ಮನ್ನಣೆಗಳಿಗೆ ಮಾತ್ರ ಸೀಮಿತವಾದದ್ದು. ಆದರೆ, ಈಗಿನ ಹೊಸ ಬರಹಗಾರರು ಸಂಸ್ಕೃತವನ್ನು ಬ್ರಾಹ್ಮಣ ಸಂಸ್ಕೃತಿಯ ಮೌಲ್ಯಗಳ ಭಾಷೆ ಎಂದು ನಿರಾಕರಿಸುತ್ತಿದ್ದಾರೆ. ಇಲ್ಲವೇ ಅದರ ಪಾತ್ರಗಳನ್ನು ಗೌಣಗೊಳಿಸಿದ್ದಾರೆ. ಇದು ಹಿಂದೂ-ಬ್ರಾಹ್ಮಣ ವ್ಯಾಖ್ಯಾನದ ತಿರುಗುಮುರುಗು ರೂಪ. ಆದ್ದರಿಂದ ಅಶ್ಟೇ ಆತ್ಮತೃಪ್ತಿಯನ್ನು ಹುಟ್ಟಿಸುವಂಥದ್ದು.

ಇಂಗ್ಲಿಷಿನ ಸಮಸ್ಯೆ ಇದಕ್ಕಿಂತ ಸಂಕೀರ್ಣವಾದದ್ದು. ಇದು ಭಾರತಕ್ಕೆ ಬಂದದ್ದು ಬ್ರಿಟಿಷರಿಂದ. ಆದ್ದರಿಂದ ಸಹಜವಾಗಿ ಈ ಭಾಷೆ ಬ್ರಿಟನ್ ಸಾಮ್ರಾಜ್ಯಶಾಹಿಯ ಅರ್ಥ ಮತ್ತು ಸಂಸ್ಕೃತಿಯ ವಾಹಕವಾಯಿತು. ವಾಸ್ತವವಾಗಿ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ತೆರೆದ ಉದ್ದೇಶವನ್ನು ಈ ಮಾತುಗಳಲ್ಲಿ ಕಂಡುಕೊಳ್ಳಬಹುದು: “ನಮ್ಮ ಮತ್ತು ನಾವು ಆಳುವ ಕೋಟ್ಯಂತರ ಜನರ ನಡುವೆ ಭಾಷಾಂತರಕಾರರಾಗಿ ವರ್‍ತಿಸುವ ವರ್ಗವೊಂದನ್ನು ರೂಪಿಸಲು;ರಕ್ತ ಮತ್ತು ಬಣ್ಣದಲ್ಲಿ ಭಾರತೀಯರಾಗಿಲ್ಲದಿದ್ದರೂ ಅಭಿರುಚಿ, ಅಭಿಪ್ರಾಯ, ನೀತಿ, ಬೌದ್ಧಿಕತೆಗಳಲ್ಲಿ, ಇಂಗ್ಲಿಷರಾಗಿರುವ ಮಂದಿಯ ವರ್ಗವೊಂದನ್ನು ರೂಪಿಸಲು” ಇದು ಮೆಕಾಲೆಯ ಮಾತು. ಈ ವರ್‍ಗ ಅಧುನಿಕ ಪಾಶ್ಚಾತ್ಯ ಜ್ಞಾನ, ಸಂಸ್ಕೃತಿಯನ್ನು ಅದೇ ಕಾರಣಕ್ಕಾಗಿ ಬೆಳೆಸಿದ ಪ್ರಾದೇಶಿಕ ಭಾಷೆಗಳಲ್ಲಿ ತರುತ್ತದೆಂದು ಮೆಕಾಲೆ ನಿರೀಕ್ಷಿಸಿದ. ಇದಾದ ನಂತರ ಒಂದು ದಿನ ಭಾರತೀಯರು ಯುರೋಪಿಯನ್ ಸಂಸ್ಥೆಗಳನ್ನು ಬೇಡುತ್ತಾರೆಂದೇ ಆತ ನಿರೀಕ್ಷಿಸಿದ್ದ. ಅಷ್ಟೇ ಅಲ್ಲದೆ “ಅವರು ನಾಗರೀಕರ ಎಲ್ಲಾ ಸವಲತ್ತುಗಳನ್ನು ಬಯಸುವವರೂ ಅದಕ್ಕೆ ಅರ್ಹರೂ ಆಗುತ್ತಾರೆ” ಎಂಬ ಆಸೆಯೂ ಇತ್ತು. ಆದರೆ ಪಾಶ್ಚಿಮಾತ್ಯ ನಾಗರಿಕತೆಯ ಬಗ್ಗೆ ಅಪಾರ ಮೆಚ್ಚುಗೆ ತುಂಬಿದ್ದ ವಿಸ್ಮಯ ಆವರಿಸಿದ್ದ ಈ ವರ್‍ಗಕ್ಕೆ ತಾವು ಪಾಶ್ಚಾತ್ಯರಿಗೆ ಸಮಾನವಾಗುವ ಸಾಧ್ಯತೆಯಾದರೂ ಇದೆ ಎಂದು ಕಲ್ಪಿಸಿಕೊಳ್ಳಲಾಗಲೇ ಇಲ್ಲ. ಈ ವರ್‍ಗದ ಸಾಮಾಜಿಕ, ಸಾಂಸ್ಕೃತಿಕ ನೋಟ ಅವರಿಗೊಂದು ಕೀಳು ವ್ಯಕ್ತಿತ್ವವನ್ನು ನಿರ್ಮಿಸಿಬಿಟ್ಟಿತ್ತು. ಹೀಗಾಗಿ ಬ್ರಿಟಿಷರು ಇವರನ್ನು ಆದಳಿತ, ಸಾಮಾಜಿಕ, ಸೈದ್ಧಾಂತಿಕ, ಕ್ಷೆತ್ರಗಳಲ್ಲಿ, ಸಾಧನಗಳನ್ನಾಗಿ ಬಳಸಿಕೊಂಡರು. ಈ ವರ್‍ಗ ಮೆಕಾಲೆ ಮತ್ತು ಇಂಗ್ಲಿಷರಿಂದ ಭಾರತದ ಬಗ್ಗೆ ಗಾಢ ಅಜ್ಞಾನ ಮತ್ತು ತಿರಸ್ಕಾರವನ್ನು ಬೆಳೆಸಿಕೊಂಡಿತ್ತು. ಇಷ್ಟೇ ಪ್ರಮಾಣದಲ್ಲಿ ಪಾಶ್ಚಾತ್ಯದ ಬಗ್ಗೆ ಆರಾಧನಾ ಮನೋಭಾವ ಅಲ್ಪಸ್ವಲ್ಪ ಬದಲಾವಣೆಗಳನ್ನು ಕಂಡಿದ್ದರೂ ಈವತ್ತಿಗೂ ಇಂಡಿಯಾದಲ್ಲಿ ಈ ವರ್‍ಗ ಆಸ್ತಿತ್ವದಲ್ಲಿದೆ. ಈಗ ಅದು ಏಕಕಾಲಕ್ಕೆ ಹೆಚ್ಚಿಗಿನ ಅಮೆರಿಕೀಕರಣಕ್ಕೂ ಭಾರತೀಕರಣಕ್ಕೂ ಒಳಗಾಗಿಬಿಟ್ಟಿದೆ. ಏಕೆಂದರೆ, ಒಂದುಕಡೆಗೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಯಜಮಾನಿಕೆ ಮತ್ತು ಸಂಸ್ಕೃತಿಯ ಪ್ರಭಾವ. ಇನ್ನೊಂದು ಕಡೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು, ರಾಷ್ಟ್ರೀಯತೆ ಅಧಿಕಾರಕ್ಕೆ ಬಂದಿದ್ದು, ಇದರ ಜೊತೆಗೆ ತಮ್ಮ ಹಳೆಯ ಧಣಿಗಳಾದ ಬ್ರಿಟನ್ ಸಾಮ್ರಾಜ್ಯಶಾಹಿಗಳ ಪ್ರತ್ಯೇಕ ಆಸ್ತಿತ್ವ ಇಲ್ಲದಿರುವುದೂ ಅವರಲ್ಲಿಯ ಈ ಬದಲಾವಣೆಗಳಿಗೆ ಕಾರಣವಾಗಿದೆ.

ವಸಾಹತು ಸಂಸ್ಕೃತಿ

ಈ ವಸಾಹತುಶಾಹಿ ಸಂಸ್ಕೃತಿಯ ಮಾಧ್ಯಮವಾಗಿ ಇಂಗ್ಲಿಷ್ ಒಂದೇ ಮುದುವರಿಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ವಸಾಹತುಶಾಹೀ ಸಂಸ್ಕೃತಿಯ ಪ್ರಾಧಾನ್ಯಕ್ಕೆ, ಮುಂದುವರಿಕೆಗೆ ಬೆಂಬಲವಾಗಿರುವ ಒಂದು ಇಡೀ ವ್ಯವಸ್ಥೆಯೇ ಈಗ ಭಾರತದಲ್ಲಿದೆ. ಉದಾಹರಣೆಗೆ ಶೈಕ್ಷಣಿಕ ಸಂಸ್ಥೆಗಳು, ನೌಕರಶಾಹಿ ಸಾಮಾಜಿಕ ಜೀವನದಲ್ಲಿಯ ಕೆಲವು ಸಂಸ್ಥೆಗಳು -ಕ್ಲಬ್, ಡಿಸ್ಕೊತೆ, ಪಾಶ್ಚಾತ್ಯ ಸಂಗೀತ, ಪಾರ್ಟಿಗಳೂ ನೃತ್ಯಗಳು ಇತ್ಯಾದಿ ವಸಾಹತು ಸಂಸ್ಕೃತಿಯ ಪೋಷಕ ಶಕ್ತಿಗಳಾಗಿವೆ. ಈ ಸಂಸ್ಕೃತಿಯನ್ನು ಈಗ ಜಾಹಿರಾತುಗಳಂಥಹ ದೃಶ್ಯ ಮಾಧ್ಯಮದಲ್ಲೂ ಕಾಣಬಹುದು. ಪ್ರಾದೇಶಿಕ ಭಾಷೆಗಳಲ್ಲೂ ಡಿಸ್ಕೊ ದಿವಾನಿಯಂತಹವು ಈಗ ಕಾಣುತ್ತಿದೆ.

ಐ.ಎ.ಎಸ್. ನೌಕರ ಶಾಹಿ

ಇವುಗಳಲ್ಲದೆ ಇಂಗ್ಲಿಷ್ ಮಾತನಾಡುವ ಪ್ರತಿಷ್ಟಿತ ವರ್ಗದ ಸಾಮಾಜಿಕ ಸಾಂಸ್ಕೃತಿಕ ಅಧಿಪತ್ಯಕ್ಕೆ ಕಾರಣವಾಗಿರುವ ಅನೇಕ ಸಾಮಾಜಿಕ ರಾಕೀಯ ಅಂಶಗಳು ಸಮಕಾಲೀನ ಭಾರತದಲ್ಲಿವೆ. ಇದಕ್ಕೆ ಉದಾಹರಣೆಯನ್ನಾಗಿ ಐ.ಎ.ಎಸ್. ನೌಕರರ ಶಾಹಿಯನ್ನೇ ನೋಡಬಹುದು. ಇವರಂತೂ ಇಂಗ್ಲಿಷ್ ಮಾತನಾಡುವ ಪ್ರತಿಷ್ಟಿತ ವರ್ಗದ ಶ್ರೇಷ್ಟ ಉದಾಹರಣೆಗಳು. ಸ್ವಾತಂತ್ರ್ಯಕ್ಕೆ ಮುಂಚೆ ಐ. ಸಿ. ಎಸ್. ಅಧಿಕಾರಿಗಳು ಪೂರ್ಣವಾಗಿ ಇಂಗ್ಲಿಷರಾಗಬೇಕಾಗುತ್ತಿತ್ತು. ಭಾರತೀಯರಿಂದ ಕೂಡಾ ಈ ವರ್ಗ ದೂರವಿರುತ್ತಿದ್ದು, ಮಹಾ ಧಿಮಾಕಿನಿಂದ ವರ್ತಿಸುತ್ತಿದ್ದರಾದರೂ ಇವರಿಗೆ ಸ್ವಂತವಾಗಿ ಅಂತ ದೊಡ್ಡ ಅದಿಕಾರವೇನೂ ಇರುತ್ತಿರಲಿಲ್ಲ…ಏಕೆಂದರೆ ಭಾರತೀಯ ಐ.ಸಿ.ಎಸ್ ಗಳೆಂದೂ ಅತ್ಯಂತ ಉನ್ನತ ಹುದ್ದೆಗಳಿಗೆ ಏರಲು ಸಾಧ್ಯವಾಗುತ್ತಿರಲಿಲ್ಲ. ಇಂಗ್ಲಿಷರು ಇವರನ್ನೆಂದೂ ಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎರಡನೇ ದರ್ಜೆ ಮಂದಿಯನ್ನಾಗೇ ನೋಡುತ್ತಿದ್ದರು. ಸಂಪರ್ಕ ವ್ಯವಸ್ಥೆ ಹೆಚ್ಚಿದಂತೆ ಐ.ಸಿ.ಎಸ್ ಗಳ ಮೇಲೆ ಲಂಡನ್ನಿನ ಇಂಡಿಯಾ ಆಫೀಸಿನ ಹಿಡಿತ ಹೆಚ್ಚಾಯಿತು. ಇಂಗ್ಲೆಂಡಿನಿಂದಲೇ ನೀತಿ, ನಿರ್ದೇಶನಗಳು ಬರುತ್ತಿದ್ದುದರಿಂದ ಇವರಿಗೆ ಹೆಚ್ಚಿನ ಅಧಿಕಾರವೇ ಇರುತ್ತಿರಲಿಲ್ಲ.

ಅದರೆ ಸ್ವಾತಂತ್ರ್ಯ ಬಂದ ಮೇಲೆ ರಾಷ್ಟ್ರೀಯ ನಾಯಕತ್ವದ ಕೈಕೆಳಗೆ ನೌಕರಶಾಹಿಗಳು ಕೆಲಸ ಮಾಡಬೇಕಾಗಲು ಪ್ರಜಾತಾಂತ್ರೀಯ ಚೌಕಟ್ಟಿನ ಕಾರಣಕ್ಕಾಗಿ ಜನತೆಯ ಆಶೋತ್ತರಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕಾಗಿತ್ತು. ಬ್ರಿಟಿಷರ ಭೌತಿಕ ಗೈರು ಹಾಜರಿ, ರಾಷ್ಟ್ರೀಯ ಚಳವಳಿಯ ಸೈದ್ಧಾಂತಿಕ ನಾಯಕತ್ವಗಳು ಅನಿವಾರ್‍ಯವಾಗಿ ನೌಕರಶಾಹಿಯನ್ನು ಹೆಚ್ಚು ಭಾರತೀಕರಿಸಿದವು. ಅವರಲ್ಲಿ ಆಂಗ್ಲತೆ ಕಡಿಮೆಯಾಗಿ ತಮ್ಮ ನೋಟದಲ್ಲಿ ಹೆಚ್ಚು ರಾಷ್ಟ್ರೀಯನ್ನಾದರು. ಬಹಳ ಸಾರಿ ಈಗಿನ ಈ ನೌಕರಶಾಹಿ ಜನ ಭಾರತೀಯ ಭಾಷೆಗಳನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಸಾಹಿತ್ಯ ಕೂಡಾ ಗೊತ್ತಿರುತ್ತದೆ. ಆದರೆ ಅವರ ಧಿಮಾಕು, ಉಚ್ಚ ಪ್ರಾಜ್ಞೆ, ಸೌಜನ್ಯ ಹೀನತೆ, ಅತಿರಂಜಿತ ಆತ್ಮಪ್ರಾಮುಖ್ಯತೆ, ಬೌದ್ಧಿಕ ಚಟುವಟಿಕೆಗಳ ಬಗೆಗೆ ಹುಡುಗಾಟಿಕೆ-ಈ ಸಂಗತಿಗಳ ಮಟ್ಟಿಗೆ ಮಾತ್ರ ಅದೇ ಹಳೆಯ ನೌಕರಶಾಹಿಮಂದಿಯೇ ಆಗಿದ್ದಾರೆ. ಇವರಲ್ಲಿ ಏನಾದರೂ ಹೆಚ್ಚುಗಾರಿಕೆ ಇದ್ದರೆ ಅದು ಧಿಮಾಕು ಉಚ್ಚಪ್ರಜ್ಞೆಗಳಿಗೆ ಸಂಬಂಧಿಸಿದ್ದು ಮಾತ್ರ. ಇದಕ್ಕೆ ಕಾರಣವೆಂದರೆ, ನೌಕರಶಾಹಿಯ ಮೂಲಭೂತ ರಚನೆ ಬದಲಾಗಿಯೇ ಇಲ್ಲ ಎಂಬುದು. ಆದರೆ ಅವರ ಅಧಿಕಾರ ಮಾತ್ರ ಬಹಳ ಹೆಚ್ಚಾಗಿದೆ. ಈ ಬೆಳವಣಿಗೆಗೆ ಅನೇಕ ಕಾರಣಗಳಿವೆ. ಮೊದಲ ಕಾರಣವೆಂದರೆ, ನೆಹರು ತನ್ನ ಆಳ್ವಿಕೆಗಾಗಿ ಪಕ್ಷದ ಸಂಘಟನೆಗಿಂತ ಹೆಚ್ಚಾಗಿ ನೌಕರಶಾಹಿಯನ್ನೇ ಆಧರಿಸಿದ್ದು. ಅವರು ದಿನೇ ದಿನೇ ಎಲ್ಲ ಅಧಿಕಾರಿಗಳನ್ನು ಕೇಂದ್ರದಲ್ಲಿಯೇ , ಅಂದರೆ ತನ್ನಲ್ಲಿಯೇ ಕೇಂದ್ರೀಕರಿಸಿಕೊಳ್ಳುತ್ತಾ ಹೋದರು. ಇಂದಿರಾಗಾಂಧಿಯವರ ಆಳ್ವಿಕೆಯಲ್ಲಂತೂ ಇದು ಇನ್ನಷ್ಟು ಅಪಾರವಾಗಿ ಬೆಳೆದಿದೆ. ಪಕ್ಷದ ಸಂಘಟನೆಯನ್ನು ನಿಧಾನಕ್ಕೆ ಪೂರ್ಣವಾಗಿ ನಾಶಮಾಡುತ್ತ ಆಕೆ ಬಂದದ್ದರಿಂದ ಇದು ಅನಿವಾರ್‍ಯವಾಗಿ ಹೋಯಿತು. ಐ.ಎ.ಎಸ್.ಗಳ ಅಧಿಕಾರ ಹೆಚ್ಚಿದ್ದಕ್ಕೆ ಇನ್ನೊಂದು ಕಾರಣವೆಂದರೆ, ಸಾಮಾಜಿಕ ನೀತಿ ಮತ್ತು ಆರ್ಥಿಕ ಅಭಿವೃದ್ಧಿಗಳಲ್ಲಿ ಸರಕಾರದ ಪಾತ್ರ ಅಧಿಕವಾಗುತ್ತ ಬಂದದ್ದು. ಉದಾಹರಣೆಗೆ-ಭೂಸುಧಾರಣೆ, ಆರೋಗ್ಯ, ಶಿಕ್ಷಣ ಮುಂತಾದ ಖೇತ್ರಗಳಲ್ಲಿ ಐ.ಎ.ಎಸ್. ಅಧಿಕಾರಿಗಳೇ ಸೂತ್ರಧಾರಿಗಳಾಗಿರುತ್ತಾರೆ.

ತೀರಾ ಮಹತ್ವ

ರಾಜಕೀಯ ಸ್ವಾತಂತ್ರದ ಆಗಮನ ಮತ್ತು ಸಾಮ್ಯಾಜ್ಯಶಾಹೀ ಶಕ್ತಿಯೊಂದರ ನೇರ ಆಸ್ತಿತ್ವ ಇಲ್ಲದಿರುವುಕೆ ನೀತಿ ಮತ್ತಿ ತೀರ್‍ಮಾನಗಳ ವ್ಯಾಪ್ತಿ ವಿಸ್ತರಿಸಿತು. ಗಮನಾರ್ಹ ಆರ್ಥಿಕ ಬೆಳವಣಿಗೆಯ ಫಲ ಇದು. ದಿನನಿತ್ಯದ ಆಡಳಿತದ ಜೊತೆಗೆ ಸರ್ಕಾರದ ಎಲ್ಲಾ ಹಂತಗಳಲ್ಲೂ ಸರ್‍ಕಾರದ ಎಲ್ಲಾ ಹಂತಗಳಲ್ಲೂ ಐ.ಎ.ಎಸ್. ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತದೆ. ರಕ್ಷಣಾ ದಳ, ಪೋಲೀಸ್, ಆಂತರಿಕ ಮತ್ತು ವಿದೇಶೀ ಗೂಧಚರ್ಯೆ, ಇತ್ಯಾದಿಗಳನ್ನೂ ಇವರು ನಿಯಂತ್ರಿಸುತ್ತಾರೆ. ದಕ್ಷ ಮತ್ತು ಪ್ರಭಾವಶಾಲೀ ರಾಜಕಾರಣಿ, ಮಂತ್ರಿಗಳ ಗೈರು ಹಾಜರಿಯಲ್ಲಂತೂ ಅನೇಕ ಕ್ಷೇತ್ರಗಳಲ್ಲಿ-ರಕ್ಷನೆ, ಯೋಜನೆ, ವಿದೇಶಾಂಗ ವ್ಯವಹಾರ, ಶಿಕ್ಷಣ, ಕೃಷಿ, ಕೈಗಾರಿಕೆ ಸಾಮಾಜಿಕ ಹಣಕಾಸು ಇತ್ಯಾದಿ-ಐ.ಎ.ಎಸ್ ಅಧಿಕಾರಿಗಳ ಪಾತ್ರ ತೀರಾ ಮಹತ್ವದ್ದಾಗಿಬಿಡುತ್ತದೆ. ದೇಶ ಮತ್ತು ರಾಜ್ಯಗಳೆರಡೂ ಹಂತದಲ್ಲೂ ಈ ಮಾತು ನಿಜ. ಅತ್ಯಂತ ಉನ್ನತ ವಲಯಗಳಲ್ಲೂ ಅವರ ಪ್ರಭಾವ ಮಹತ್ವದು. ಶ್ರೀಮತಿ ಗಾಂಧಿಯವರ ಆಪ್ತ ಸಲಹೆಗಾರರು ಮತ್ತು ರಾಜ್ಯಪಾಲರುಗಳು ನಿವೃತ್ತ ಐ.ಎ.ಎಸ್.ಅಧಿಕಾರಿಗಳೇ.

ಕಡೆಯ ಕಾರಣವೆಂದರೆ, ನೌಕರಶಾಹಿಯಲ್ಲಿಯ ಅಧಿಕಾರ ಸ್ವರೂಪವೇ ಬದಲಗಿಲ್ಲ. ಬ್ರಿಟಿಷರು ಎಲ್ಲ ಅಧಿಕಾರಿಗಳನ್ನೂ ಐ.ಸಿ.ಎಸ್. ಅಧಿಕಾರಿಗಳ ಕೈಯಲ್ಲೇ ಅಂದರೆ ತಮ್ಮಲ್ಲೇ ಕೇಂದ್ರೀಕರಿಸಿಕೊಂಡಿದ್ದರು. ಭಾರತೀಯರು ತುಂಬಿದ್ದ ಕೆಳ ಶ್ರೇಣಿಗಳಲ್ಲಿ ಅಧಿಕಾರವೇ ಇರುತ್ತಿರಲಿಲ್ಲ. ಈವತ್ತಿಗೂ ಈ ಮಾತು ನಿಜ. ಹೊಸದಾಗಿ ಕೆಲಸಕ್ಕೆ ಬಂದ ಒಬ್ಬ ಅಸಿಸ್ಟೆಂಟ್ ಕಮಿಷರನಿಗೆ ಈ ದಿನ ಆಡಳಿತ, ನ್ಯಾಯಾಂಗ, ಪೋಲೀಸ್ ವಿಷಯಗಳಲ್ಲಿ ಇರುವ ಅಧಿಕಾರಿಗಳನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಹಳೇ ಪದ್ಧತಿಯ ಮುಂದುವರಿಕೆ ಇದು. ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಅನೇಕ ವಲಯಗಳಲ್ಲಿ ಈತನಿಕೆ ಅಪಾರ ಅಧಿಕಾರವಿದೆ. ಆತ ಅಧಿಕಾರದ ಏಣಿಯ ಮೆಟ್ಟಿಲುಗಳನ್ನು ಏರಿದಂತೆಲ್ಲಾ ಅದಿಕಾರ ಕೂಡಾ ಇಮ್ಮಡಿಸುತ್ತಾ ಹೋಗುತ್ತದೆ.

ಐ.ಎ.ಎಸ್. ಅದಿಕಾರಿಗಳಿಗೆ ಯಾವ ಒಳ್ಳೆಯ ಗುಣ, ಶಕ್ತಿಗಳೂ ಇಲ್ಲವೆಂದಲ್ಲ ನನ್ನ ಮಾತಿನ ಅರ್ಥ. ನನ್ನ ಈ ವಿಶ್ಲೇಷನೆಯ ಉದ್ದೇಶ ಎರಡು.

ಇಂಗ್ಲಿಷ್ ಮಾತನಾಡುವ ಪ್ರತಿಷ್ಟಿತ ವರ್ಗದಲ್ಲಿ ಉಂಟಾಗಿರುವ ಧೋರಣೆ, ದೃಷ್ಟಿಕೋನಗಳ ಬದಲಾವಣೆಯನ್ನು ಸೂಚಿಸುವುದು.

ಈ ಬದಲಾವಣೆಗಳು ಬಂದಿದ್ದರೂ, ಅವರು ಮೊದಲಿಗಿಂತ ಹೆಚ್ಚು ಅಧಿಕಾರವುಳ್ಳವರೂ, ಪ್ರತಿಷ್ಠಿತರೂ ಆಗಿದ್ದಾರೆ. ಭಾರತೀಯ ಭಾಷೆಗಲನ್ನು ಅವರು ಮಾತನಾಡಿದರೂ ಈ ಅಂಶಗಳು ನಿಜ ಎಂಬುದನ್ನು ತೋರಿಸುವುದು.

ಈ ಬದಲಾವಣೆಗಳ ಹಿಂದಿನ ಪ್ರೇರಣೆಗಳನ್ನು ಸಾಮಾಜಿಕ, ಆರ್ಥಿಕ, ಸೈದ್ಧಾಂತಿಕ ಶಕ್ತಿಗಳಲ್ಲಿ ಹುಡುಕಬೇಕೇ ಹೊರತು, ಇಂಗ್ಲಿಷ್ ಅಥವಾ ಇತರ ಭಾರತೀಯ ಭಾಷೆಗಳ ಪಾತ್ರದಲ್ಲಲ್ಲ.

ಇಂಗ್ಲಿಷ್ ರಾಷ್ಟ್ರೀಯತೆ

ಇರಲಿ, ಮತ್ತೆ ಇಂಗ್ಲಿಷಿನ ಪಾತ್ರಕ್ಕೆ ವಾಪಸು ಬರೋಣ. ಇಂಗ್ಲಿಷ್ ಬರೂ ಸಾಮ್ರಾಜ್ಯಶಾಹಿ ಸಂಸ್ಕೃತಿಯ ಸಾಧನವಲ್ಲ. ಅದು ಭಾರತೀಯ ರಾಷ್ಟ್ರೀಯತೆಯ ಭಾಷೆಯೂ ಹೌದು. ೧೮೮೧ರ ಕಾಂಗ್ರೇಸ್ ಸ್ಥಾಪನೆಯಿಂದ ಹಿಡಿದು ಸ್ವಾತಂತ್ರ್ಯ ಗಳಿಕೆಯ ತನಕ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ನ ಕಾರ್‍ಯಕಲಾಪಗಳು ಇಂಗ್ಲಿಷ್‌ನಲ್ಲೇ ಇದ್ದವು. ತಮ್ಮ ಭಾಷಣ, ನಿರ್ಣಯ, ಲೇಖನ, ಪುಸ್ತಕ, ಪತ್ರ, ಇತ್ಯಾದಿಗಳಿಗೆ ರಾಷ್ಟ್ರೀಯ ನಾಯಕರು ಇಂಗ್ಲಿಷನ್ನೇ ಬಳಸಿದರು. ಇಂಗ್ಲಿಷ್ ವೃತ್ತ ಪತ್ರಿಕೆಗಳನ್ನು ಶುರು ಮಾಡಿದರು. ಉದಾ: ದಿ ಹಿಂದೂ, ದಿ ಫ್ರೀ ಪ್ರೆಸ್ ಜನರಲ್. ದಿ ಹಿಂದುಸ್ತಾನ್ ಟೈಂಸ್, ದಿ ಅಮೃತಬಜಾರ್ಪತ್ರಿಕಾ ಇತ್ಯಾದಿ. ಅವರಿಗೆ ಪ್ರಂತೀಯ ಭಾಷೆಗಳು ತಿಳಿದಿರಲಿಲ್ಲ: ಅಥವಾ ಅದರಲ್ಲಿ ಬರೆಯಲಿಲ್ಲ ಎಂದಲ್ಲ, ಆದರೆ ಇಡೀ ಭಾರತಕ್ಕಿದ್ದ ಸಾಮಾನ್ಯ ಭಾಷೆ ಎಂದರೆ ಇಂಗ್ಲಿಷೊಂದೆ. ಆದ್ದರಿಂದಲೇ ಇಂಗ್ಲಿಷನ್ನು ಬಳಸುವ ವರ್ಗಗಳು ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ವೃತ್ತಿತಜ್ಞರು, ನಗರದ ಮಧ್ಯಂ ವರ್ಗಗಳು-ಆಳವಾದ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದವರಾಗಿದ್ದು, ಪ್ರಾದೇಶಿಕದುರಭಿಮಾನಾ ಸಿದ್ಧಾಂತಗಳಿಗೆ ಅಷ್ಟು ಸುಲಭವಾಗಿ ಆಕರ್ಷಿತವಾಗುವುದಿಲ್ಲ. ಅವರ ಈ ಧೋರಣೆಯ ಹಿಂದೆ ಇನ್ನಷ್ಟು ಆಳವಾದ ಕೆಲವು ಸಾಮಾಜಿಕ ಶಕ್ತಿಗಳು ಕೆಲಸ ಮಾಡುತ್ತವೆ. ಬಂಡವಾಳವರ್ಗ, ಭೂ ಮಾಲೀಕರು, ಶ್ರೀಮಂತ ರೈತರಿಗೆ ಅಖಿಲ ಭಾರತೀಯ ಮಾರುಕಟ್ಟೆಯ ಅಗತ್ಯವಿದೆ. ಹಾಗೆಯೇ, ನಗರದ ಮಧ್ಯಮವರ್ಗ ಮತ್ತು ಮೇಲು ಮಧ್ಯಮವರ್ಗಗಳಿಗೆ ಅಖಿಲ ಭಾರತೀಯ ಚಾಲನೆ ಇದೆ: ಆಶೋತ್ತರಗಳಿವೆ. ಇಂಗ್ಲಿಷು ವಿದೇಶೀ ಕೆಲಸಗಳಿಗೆ, ಮನ್ನಣೆಗೆ ನೆರವಾಗುತ್ತದೆ. ಆದರೆ, ಇಂಗ್ಲಿಷ್ ಭಾಷಿಕ ಬುದ್ದಿಜೀವಿ ವರ್ಗದ ಅತ್ಯುತ್ಸಾಹದ ರಾಷ್ಟ್ರೀಯತೆ ಪ್ರಾದೇಶಿಕ ಸಂಸ್ಕೃತಿ ಮತ್ತು ಸಮಸ್ಯೆಗಳ ಬಗೆಗೆ ಅವರನ್ನು ಕುರುಡರನ್ನಾಗಿ ಮಾಡುತ್ತದೆ. ಕೆಲವೊಮ್ಮೆ ಇವರಿಗೆ ಆಳವಾದ ಪ್ರಾದೇಶಿಕ ಪ್ರಜ್ಞೆ ಪ್ರಾದೇಶಿಕ ವ್ಯಕ್ತಿತ್ವ ಇದ್ದರೂ ಈ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಕೆಲವು ಸಾರಿ. ಇಂಗ್ಲಿಷ್ ಬಳಸುವ ಬುದ್ದಿಜೀವಿಗಳಿಗೂ, ಪ್ರಾದೇಶಿಕ ಭಾಷೆಗಳ ಬುದ್ದಿಜೀವಿಗಳಿಗೂ ದೊಡ್ಡ ಕಂದರವೇ ಇರುತ್ತದೆ. ಇದು ಮುಖ್ಯವಾಗಿ ಸಾಹಿತ್ಯಿಕವಾದದ್ದು. ಇದಕ್ಕೆ ಕಾರಣವೆಂದರೆ , ಪ್ರಾದೇಶಿಕ ಭಾಷೆಗಳ ಸಾಹಿತ್ಯದ ಪರಿಚಯವೇ ಅವರಿಗಿರುವುದಿಲ್ಲ. ಹೀಗಾಗಿ, ಕೆಲವೊಮ್ಮೆ ಪ್ರಾದೇಶಿಕ ಬುದ್ದಿಜೀವಿಗಳ ಸಿದ್ಧಾಂತ, ಕ್ರಿಯೆ, ನಿಲುವ್ವುಗಳು ಅರ್ಥವಾಗದೇ ನಿಬ್ಬೆರಗಾಗುತ್ತಾರೆ. ಕೆಲಮೊಮ್ಮೆ ಇಂಗ್ಲಿಷ್ ಭಾಷಿಕ ಬುದ್ದಿಜೀವಿಗಳಿಗೆ ಈ ನ್ನಿಲುವು ದೊಡ್ಡಸ್ತಿಕೆ ಮತ್ತು ಅಪರಾಧ ಪ್ರಜ್ಞೆಯಿಂದ ಬಂದದ್ದು.

ಅಪರಾದ ಪ್ರಜ್ಞೆ ಏಕೆ – ತಾವು ತಮ್ಮ ಪ್ರಾದೇಶಿಕ ಭಾಷೆಗಳನ್ನು ಬಿಟ್ಟುಕೊಟ್ಟು ಪರದೇಶಿ ಭಾಷೆಯೊಂದನ್ನು ಬಳಸುತ್ತಿದ್ದೇನೆ; ಹೀಗಾಗಿ ಜನತೆ ಮತ್ತು ಅವರ ಸಂಸ್ಕ್ಳುತಿಯಿಂದ ದೂರವಾಗಿದ್ದೇವೆ ಎಂಬ ಚಿಂತನೆಯ ಕಾರಣಕ್ಕೆ ಬಹಳ ಸಾರಿ ಈ ಮಾನಸಿಕ ದೂರ ಉತ್ಪ್ರೆಕ್ಷಿತವಾದದ್ದು. ಇನ್ನು ದೊಡ್ಡಸ್ತಿಕೆ ಏಕೆಂದರೆ, ಇಂಗ್ಲೀಷು ಮತ್ತು ಆದುನಿಕ ಜ್ಝ್ನಾನದ ಸಂಪರ್ಕದಿಂದಾಗಿ ತಾವು ಪ್ರಾದೇಶಿಕ ಬುದ್ದಿ ಜೀವಿಗಳಿಗಿಂತ ಹೆಚ್ಚಿನವರು ಎಂಬ ದ್ದೋರನೆಯ ಕಾರನಕ್ಕೆ. ಆದರೆ, ಈ ಇಂಗ್ಲೀಷ್ ಭಾಷಿಕ ರಾಷ್ಟ್ರೀಯ ಬುದ್ದಿಜೀವಿ ವರ್ಗವನ್ನು ಅವರ ನಿಗೋಕಲೋನಿಯಲ್ ಸಹೋದ್ಯೊಗಿಗಳಿಗೆ ಹೋಲಿಸಿದಾಗ ಪಾಶ್ಚಾತ್ಯ ಸಂಸ್ಕ್ಳುತಿಯಿಂದಾಗಿ ಬಹಳ ಸಳವಿಗೇನೂ ಇವರು ಸಿಕ್ಕಿರುವುದಿಲ್ಲ. ರಾಷ್ಟ್ರೀಯ ಚಳವಳಿ ಮತ್ತು ನಂತರ ಭಾರತೀಯ ಸಮಾಜ ಸಂಸ್ಕ್ರುತಿ ಯೂರೊಪಿಗಿಂತ ದೊಡ್ಡದು ಎಂದೇ ಅವರು ಪ್ರತಿಪಾದಿಸಿದ್ದರು. ಈ ಚಿಂತನೆಯಲ್ಲಿ ಕೆಲವೊಮ್ಮೆ ಉತ್ಪ್ರೇಕ್ಷೆಯ ಎತ್ತರಗಳಿಗೆ ಕೂಡಾ ಹೋಗಿದ್ದರು. ಪಾಶ್ಚಾತ್ಯ ನಾಗರೀಕತೆ ಕಂಡರೆ ಅವರಿಗೆ ಅಂಥ ಮಹತ್ವದ ವಿಸ್ಮಯವೇನೂ ಇಲ್ಲ. ಇವರಲ್ಲಿ ಯುರೋಪಿನವರಷ್ಟೆ ಸಮಾನತೆ ಮತ್ತು ಸ್ವಂತ ಸಾದ್ಯತೆಗಳ ಕಲ್ಪನೆಗಳಿವೆ. ತಾವು ಯುರೋಪಿಗೆ ಸರಿಗಟ್ಟಬಲ್ಲವು ಎಂಬ ನಂಬಿಕೆ ಅವರ ಚಿಂತನೆ, ಭಾವನೆಗಳಲ್ಲಿ ಎದ್ದು ಕಾನುತ್ತದೆ. ಅದರ ಜೊತೆಗೆ ಬಾರತೀಯ ಸಮಾಜ ಮತ್ತು ಸಂಸ್ಕ್ಳುತಿಗಳ ದೌರ್ಬಲ್ಯ, ಸೀಮಿತಗಳ ಅರಿವೂ ಸ್ಪಷ್ಟವಾಗಿರುತ್ತದೆ.

ಇಂಗ್ಲೀಷು ಮಹತ್ವ

ಇಂಗ್ಲೀಷು ಆದುನಿಕ ಜ್ಝ್ನಾನ ಮತ್ತು ಸಂಸ್ಕ್ಳುತಿಗಳ ಬಾಷೆ ಕೂಡಾ ಹೌದು. ಬರೀ ರಾಷ್ಟ್ರೀಯ ಚಳವಳಿ, ರಾಷ್ಟ್ರೀಯ ಬುದ್ದಿಜೀವಿಗಳಲ್ಲದೆ, ಪ್ರಾಂತೀಯ ಸಾಹಿತ್ಯಕ ಬುದ್ದಿಜೀವಿ ವರ್ಗ ಕೂಡೀ ಇಂಗ್ಲೀಷ್ ಶಿಕ್ಷಣಗಳ ಸ್ರುಷ್ಟಿಯೇ. ಕನ್ನಡ ಸಾಹಿತ್ಯದ ಕೆಲವು ಅತ್ಯುತ್ತಮ ಕ್ರುತಿಗಳು ಇಂಗ್ಲೀಶ್ ಅದ್ಯಾಪಕರಿಂದ ಬಂದಿದೆ ಎಂಬುದು ಕೇವಲ ಆಕಸ್ಮಿಕವಲ್ಲ. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ. ಶಿಕ್ಷಣ ಸಾಂಪ್ರದಾಯಿಕ ರೀತಿಯಲ್ಲಿ ಭಾರತೀಯ ಭಾಷೆಗಳಲ್ಲಿರಬೇಕೂ ಅಥವಾ ಇಂಗ್ಳೀಷಿನಲ್ಲಿಯ ಆದುನಿಕ್ ಶಿಕ್ಷಣ ಬೇಕೋ ಎಂಬ ವಿವಾದ ಬಂಡಾಗ ರಾಂ ಮೋಹನ್ ರಾಯ್ ಮತ್ತಿತರರು ಇಂಗ್ಲೀಷ್ ಶಿಕ್ಷಣವನ್ನು ಬೆಂಬಲಿಸಿದ್ದು ಈ ಕಾರಣಕ್ಕಾಗಿಯೆ.

ಭಾಷೆ ಬೇಕು ಮಾಧ್ಯಮವಲ್ಲ

ರಾಷ್ಟ್ರೀಯವಾದಿಗಳ ಮೊದಲ ತಲೆಮಾರಿನವರು ಮತ್ತು ನವೋದಯದ ಮೊದಲ ಸಾಹಿತಿಗಳು ಇಂಗ್ಲೀಷಿನ ಪ್ರಬಲ ಪ್ರತಿಪಾದಕರಾಗಿದ್ದರು. ಈ ಹೊತ್ತಿಗೂ ಈ ವಾದವನ್ನು ಕೇಳಬಹುದು. ಆದರೆ ಈಗ ಕಾಲ ಬದಲಾಗಿದೆ. ಆಧುನಿಕ ವಿಜ್ಝಾನ, ತಂತ್ರಜ್ಝ್ನಾನ, ಆರ್ಥಿಕ ಅಭಿವ್ರುಧ್ದಿ ಸಂಸ್ಕ್ರುತಿ- ಈ ಕ್ಷೇತ್ರಗಳಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ಹೀಗಾಗಿ ನಮಗೆ ಇಂದು ಇಂಗ್ಲೀಷ್ ಶಿಕ್ಷಣ ಮಾಧ್ಯಮವಾಗಿ ಬೇಕಾಗಿಲ್ಲ. ಬರೀ ಭಾಷೆಯಾಗಿ ಬೇಕು. ಇದು ಕೂಡಾ ಭಾಷಾಂತರದ ದುಬಾರಿ ಖರ್ಚನ್ನು ಮತ್ತು ಕಾಲ ವ್ಯಯವನ್ನು ತಪ್ಪಿಸಲು ಮಾತ್ರ. ಈ ಮಾತನ್ನು ನಾವು ಹೇಳುವಾಗ, ಆಧುನಿಕ ವಿಜ್ಝ್ನಾನ, ತಂತ್ರಜ್ಝ್ನಾನ, ಆರ್ಥಿಕ ಅಭಿವ್ಳುಧ್ದಿಗಳು ಭಾಷೆಯ ಮೇಲ್ವ್ ಅಷ್ಟಾಗಿ ಅವಲಂಬಿಸಿಲ್ಲ ಎಂಬ ಅಂಶದ ಮೇಲೆ ವಿಶೆಷ ಒತ್ತು ಹಾಕಬೇಕಾಗಿದೆ. ಇಂಗ್ಲೀಷು ಕೂಡಾ ಇದಕ್ಕೆ ಅಪವಾದವಲ್ಲ. ಆರ್ಥಿಕ ಬೆಳವಣಿಗೆ ಎನ್ನುವುದು ರಾಜಕೀಯ ನೀತಿ ಮತ್ತು ಸಾಮಾಜಿಕ ಶಕ್ತಿಗಳ ಸಂಕೀರ್ಣ ಮಿಲನದ ಫಲ. ಇಂಗ್ಲಿಷೇ ಇಲ್ಲದ ರಷ್ಯ, ಚೈನ, ಜಪಾನ್‌ಗ ಉಡಾಹರಣೆ ನಮ್ಮ ಕಣ್ಣೆದುರಿಗೇ ಇದೆ.

ಒಂದು ಸಾಧ್ಯ

ಕಡೆಯದಾಗಿ ಇಂಗ್ಲೀಷಿನ ಪರವಾಗಿ ಡಿ.ಕೆ.ಡೆ.ಎಂ.ಕೆ. ಮತ್ತು ಬ್ರಾಂಹಣ ವಿರೋಧಿ ಚಳವಳಿಯ ವಕ್ತರರು ನೀಡುವ ಇನ್ನೊಂದು ವಾದವನ್ನು ಪರೀಕ್ಷಿಸುವ ಅಗತ್ಯವಿದೆ. ಸಾಂಪ್ರದಾಯಿಕ ಸಮಾಜದ ಜಾತೀಯತೆ ಮತ್ತು ಇತರ ಕರಾಳ ಮೌಲ್ಯಗಳ ವಿರುದ್ದ ಹೋರಾಡಲು ಇಂಗ್ಲಿಷು ಒಂದು ಸಾಧನ; ಹೀಗಾಗಿ, ಜಾತ್ಯಾತೀತವಾದ, ಪ್ರಜಾಸತ್ತಾತ್ಮಕ ಸಮಾಜವೊಂದರ ನಿರ್ಮಾಣದ ಹೋರಾಟಕ್ಕೆ ಇಂಗ್ಲಿಷು ಕೂಡಾ ಒಂದು ಅಸ್ತ್ರವಗುತ್ತದೆ ಎಂಬ ಆಲೊಚನಾ ವಿಧಾನ ಇವರದು. ಅನ್ಯರ ಪ್ರಕಾರ ಭಾರತೀಯ ಪ್ರಾದೇಶಿಕ ಭಾಷೆಗಳ ಕೈಯ್ಯಲ್ಲಿ ಈ ಬದಲಾವಣೆಯ ಕೆಲಸ ಸಾಧ್ಯವಿಲ್ಲ. ಏಕೆಂದರೆ ಸಾಂಪ್ರದಾಯಿಕ ಸಂಸ್ಕ್ಳ್ತುತಿಯ ಅರ್ಥ, ಸಹಯೋಗಗಳ್ಯ್ ಈ ಭಾಷೆಗಳಲ್ಲಿ ಅಂತರ್ಗತವಾಗಿರುತ್ತದೆ. ಎಂದು ಇವರು ವಾದಿಸುತ್ತಾರೆ. ಈ ವಾದವನ್ನು ನಾವು ಒಪ್ಪಿಕೊಂಡರೆ, ಗಾಡಿಯನ್ನು ಕುದುರೆಯ ಮುಂದೆ ಕಟ್ಟಿದಂತೆ. ಇಂಗ್ಲಿಷ್ ಕೂಡಾ ತನ್ನ ಸಾಮಂತಶಾಹಿ ಮತ್ತು ಅಸಮಾನತೆಯ ಅರ್ಥಗಳನ್ನು ಕಳೆದುಕೊಂಡು ಬೆಳೆಯಿತು ಎಂಬುದು ಇಲ್ಲಿ ನೆನಪಾಗಬೇಕು. ಹಳೆಯ ಊಳಿಗಮಾನ್ಯ ಸಮಾಜದಿಂದ ಇನ್ನಷ್ಟು ಹೆಚ್ಚಿನ ಸಮಾನತೆ ಇರುವ ಪ್ರಜಾಸತ್ತಾತ್ಮಕ ಬಂಡವಾಳಶಾಹೀ ಸಮಾಜದ ಕಡೆಗೆ ನಡೆದಂತೆ ಆ ಹಳೆಯ ಸಂಗತಿಗಳು ಕ್ರಮೇಣ ಇಲ್ಲವಾದವು. ಈ ಇಂಗ್ಲಿಷ್ ಪರ ವಾದಕ್ಕೆ ಪ್ರತಿಯಾದ ಇನ್ನೊಂದು ಪ್ರಶ್ನೆ; ಇಂಗ್ಲೀಷ್ ಭಾಷಿಕರಾದ ಭಾರತೀಯರು ಕೂಡಾ ತಮ್ಮ ಜಾತಿಯ, ಪರಂಪರೆಯ ಮೌಲ್ಯಗಳನ್ನು ಆಚರಿಸುತ್ತಿದ್ದಾರೆ ಎಂಬುದು ಸತ್ಯ ತಾನೆ?

ಇನ್ನು ಹಿಂದಿಯನ್ನು ಕುರಿತು ನೋಡಬಹುದು. ರಾಷ್ಟ್ರೀಯ ಚಳವಳಿಯ ನಯಕರು ಹಿಂದಿಯನ್ನಿ ಅಖಿಲ ಭಾರತೀಯಭಾಷೆಯನ್ನಾಗಿ ಬಳಸಲು ಪ್ರಯತ್ನಪಟ್ಟ ಅಂಶ ಇಲ್ಲಿ ಎದುರಿಗೆ ನಿಲ್ಲುತ್ತದೆ. ಏಕೆಂದರೆ, ಅಖಿಲ ಭಾರತೀಯ ಭಾಷೆ ಎಂಬ ಸ್ಥಾನಕ್ಕೆ ಹತ್ತಿರವಿದ್ದ ಭಾಷೆ ಇದೊಂದೆ. ಇಂಗ್ಲೀಷಿನ ವಸಾಹತುಶಾಹಿ ಸಂಸ್ಕ್ಳುತಿಯ ವಿರುದ್ದ ಹೋರಾಡಲು ಇದೊಂದು ಸಾಧನ ಕೂಡಾ ಹೌದು ಎಂಬ ಅರಿವು ಅವರದು. ಆದರ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹಿಂದಿಯೇತರ ಬಾಷಿಕರ ಮೇಲೆ ಹೇರಲು ಪ್ರಯತ್ನಿಸಿದ, ಹಿಂದಿಯಾ “ಯಜಮಾನಿಕ” ವಾದಿಗಳು ಈ ಪರ್ಯಾಯವನ್ನು ನಾಶಮಾಡಿ ವಿಟ್ಟರು. ವಿಶೇಷವಾಗಿ ತಮಿಳುನಾಡಿನಲ್ಲಿ ಹಿಂದಿಯ ಸಾಮಾಜಿಕ, ಸಾಂಸ್ಕ್ಳುತಿಕ ಯಜಮಾನಿಕೆಯ ವಿರುದ್ದ ತೀವ್ರ ಪ್ರತಿಭಟನೆ ಹುಟ್ಟಿಕೊಂಡಿತು. ಈಗ ಕನ್ನಡ ಹೇರಿಕೆಯ ವಿರುದ್ದ ಅಲ್ಪ ಸಂಖ್ಯಾತರು ತೋರಿಸುತ್ತಿರುವ ಪ್ರಟಿಕ್ರಿಯೆಗೂ ಮೇಲಿನದಕ್ಕೂ ಸಾಂಯಗಳಿವೆ. ಏನೇ ಆದರೂ, ಹಿಂದಿ ಆಧುನಿಕ ಜ್ಝಾನದ, ಸಂಸ್ಕ್ರುತಿಯ ವಾಹಕ ವಾಬಲಾರದು. ಜೊತೆಗೆ, ಒಬ್ಬ ಭಾರತೀಯ ಎಷ್ಟು ಭಾಷೆಗಳನ್ನು ತಾನೆ ಕಲಿಯಬಲ್ಲ?

ಈ ಪ್ರಶ್ನೆ ನಮ್ಮನ್ನು ಕನ್ನಡದ ಬಳಿಗೆ ಕರೆತರುತ್ತದೆ. ಕನ್ನಡ ಮತ್ತು ಇತರ ಪ್ರಾಂತೀಯ ಭಾಷೆಗಳಲ್ಲಿ ನೀಡುವ ಶಿಕ್ಷ್ಣ ಭಾರತೀಯರಿಗೆ ತಮ್ಮ ಸಮಾಜದ ಸಂಸ್ಕ್ರುತಿಯ ಜೊತೆಗೆ ಹತ್ತಿರದ ಸಂಬಂಧವನ್ನು ನೀಡುತ್ತದೆ. ಇಂಗ್ಲಿಷ್ ಶಿಕ್ಷಣ ಬಹು ಮಟ್ಟಿಗೆ ಅವರನ್ನು ಭಾರತೀಯ ಸಮಾಗ ಮತ್ತು ಸಂಸ್ಕ್ರುತಿಗಳಿಂದ ದೂರ ತಳ್ಳುತ್ತದೆ. ಇನ್ನೂ ಮಂದೆ ಹೋಗಿ ಹೇಳುವುದಾದರೆ, ಕನ್ನಡ ಭಾಷೆ ರಾಷ್ಟ್ರೀಯ ಚಳವಳಿ ಮತ್ತು ಆದರೆ ತಾತ್ವಿಕತೆಯ ನಿಕಟ ಸಂಪರ್ಕವನ್ನು ತರುತ್ತದೆ. ಆಧುನಿಕ ಕನ್ನಡ ಸಾಹಿತ್ಯ, ಸಂಸ್ಕ್ರುತಿಗಳ ಜೊತೆಗೆ ಹತ್ತಿರದ ಸಂಬಂಧ ಉಂಟಾಗುತ್ತದೆ. ಆದರೆ ಕನ್ನಡ ಅನ್ಯಭಾಷಿಕರ ಬಗೆಗೆ ಒನ್ದು ಬಗೆಯ ಅಲಕ್ಷ್ಯವನ್ನು ಕೂಡಾ ಮೂಡಿಸಲು ಸಾಧ್ಯವಿದೆ. ಏಕೆಂದರೆ, ಕನ್ನಡ ಭೌಧ್ಧಿಕ ಪರಂಪರೆ ಬಹುಮಟ್ಟಿಗೆ ಸಾಹಿತ್ಯಕವಾದದ್ದು. ಮತ್ತು ಇಲ್ಲಿ ಭಾಷೆಯ ಪಾತ್ರವನ್ನು, ಅದರಲ್ಲೂ ಕನ್ನಡದ ಪಾತ್ರವನ್ನು ಸಾಮಾನ್ಯವಾಗಿ ಅತಿರ‌ಒಜಿಸಲಾಗುತ್ತದೆ. ಭಾಷಿಕವಲ್ಲದ ಇತರೆ ಗ್ರಹಿಕೆ , ಅಭಿವ್ಯಕ್ತಿ ಕ್ರಮಗಳನ್ನು, ಇನ್ನೂ ವಿಶಾಲವಾದ ಸಾಮಾಜಿಕ, ರಾಜಕೀಯ ಶಕ್ತೀಗಳನ್ನು ಅಲಕ್ಷ್ಯಮಾಡಲಾಗಿತೆ. ಇಲ್ಲವೀ ಇವುಗಾಳ ಪಾತ್ರವೀನಿದ್ದ್ಗೂ, ಕನ್ನಡಕ್ಕೆ ಹೋಲಿಸಿದಾಗ ಕೆಳಗಿನ ಹಂತದಲ್ಲಿರುವಂಥವೆ ಎಂಬ ನಿಲುವು ಕಾಣುತ್ತವೆ. ಇಂಗ್ಲೀಷ್ನ ಬಳಕೆ ಹೇಗೆ ಒಂದು ರೀತೆಯ ಉತ್ಪ್ರೇಕ್ಷೆಯ ದೂರವನ್ನು ನಿರ್ಮಿಸುತ್ತದೂ, ಹಾಗೆ ಕನ್ನಡತೆ ಬಳಕೆ ಜೊತೆಗೆ ಅಷ್ಟೇ ಉತ್ಪ್ರೇಕ್ಷಿತೆ ನಿಕಟತೆಯನ್ನು ಆರೋಪಿಸಬಲ್ಲುದು. ತಾವು ಕಲೋನಿಯಲ್ ಅಲ್ಲ ಎಂದೇ ಕನ್ನಡ ಸಾಹಿತಿಗಳು ಭಾವಿಸಿದ್ದಾರೆ. ಈ ಸಂಗತಿಯ ಸತ್ಯಾಸತ್ಯತೆ ತಿಳಿಯುವುದು ನಿರ್ದಿಷ್ಟ ಪ್ರಸನ್ಗಗಳನ್ನು ಚರ್ಚಿಸಿದಾಗ ಮಾತ್ರ. ಆಗ ಕಲೋನಿಯಲ್ ಸಿಧ್ಧಾಂತದ ಪ್ರಭವದ ಆಳ ಎಷ್ಟಿದೆ ಎಂಬುದು ತಿಳಿಯುತ್ತದೆ.

ಕನ್ನಡ ಸಾಹಿತ್ಯಿಕ ಬುದ್ಧಿಜೀವಿಗಳಿಗೆ ಕೀಳರಿಮೆ ಇದೆ. ಇದರ ಜೊತೆಗೆ, ಆಧುನಿಕ ಯೂರೋಪಿಯನ್ ಪರಂಪರೆಯ ಬಗೆಗೆ ಸಾಕಷ್ಟು ತಿಳುವಳಿಕೆ ಇಲ್ಲ. ಹೀಗಾಗಿ, ಆತ ಪಶ್ಚಿಮದ ಸಮಕಾಲೀನ ಬೌದ್ಧಿಕ, ಸೈದ್ಧಾಂತಿಕ, ಫ್ಯಾಶನ್‌ಗಳಿಗೆ ತಕ್ಷಣ ಮನಸೋತುಬಿಟ್ಟು ತನ್ನ ನೆಲೆಯನ್ನು ಕಳೆದುಕೊಂಡು ಬಿಡಬಲ್ಲ ಇಂಗ್ಲಿಷ್ ಬರೆವ ವ್ಯಕ್ತಿಗಿಂತ ಕನ್ನಡ ಸಾಹಿತಿಗೇ ಈ ಅಪಾಯ ಹೆಚ್ಚಿನ ರೀತಿಯಲ್ಲಿದೆ. ಈ ದಿಕ್ಕಿನಲ್ಲಿ ಪ್ರಬುದ್ಧ ವಿಮರ್ಶಾ ಪರಂಪರೆಯೊಂದರ ಗೈರು ಹಾಜರಿ ಕೂಡಾ ಸಾಕಷ್ಟು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇಂಥ ಸನ್ನಿವೇಶದಲ್ಲಿ ಭಾಷೆಯೇ ಮೌಲ್ಯಮಾಪನದ ಪ್ರಮುಖ ನೆಲೆಯಾಗುತ್ತದೆ. ಕನ್ನಡದಲ್ಲಿ ಯಾರು ಬರೆಯುತ್ತರೊ ಅವರು ಹೊಗಳಿಕೆಗೆ ಅರ್ಹರಾಗುತ್ತಾರೆ. ಇಂಗ್ಲಿಷ್ ಮತ್ತು ಇತರೆ ಪ್ರಾಂತೀಯ ಭಾಷೆಗಳಲ್ಲಿ ಬರೆಯುವವರನ್ನ ತಿರಸ್ಕರಿಸಲಾಗುತ್ತದೆ. ಇಲ್ಲಿ ಜಾತಿ ಕೂಡಾ ಸಾಕಷ್ಟು ಮುಖ್ಯವೆ. ಅಂದರೆ, ಬೌದ್ಧಿಕವಾಗಿ, ಮತ್ತು ಈಚೆಗೆ ಬಲಿಷ್ಠ ಬಹುಸಂಖ್ಯಾತ ಜಾತಿಗಳವರಿಗೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ.

ಮೇಲಿನ ಎಲ್ಲಾ ಅಂಶಗಳು ಅತ್ಯಂತ ಉತ್ಪ್ರೇಕ್ಷಿತವಾದ ಸ್ವ-ಪ್ರತಿಮೆಯೊಂದನ್ನು ಕನ್ನಡ ಸಾಹಿತಿಗೆ ನೀಡಿದೆ. ತನ್ನ ಸಾಮರ್ಥ್ಯದ ಬಗ್ಗೆ, ತನ್ನ ಕೃತಿಗಳ ಬಗೆಗೆ ಅತಿರಂಜಿತ ಕಲ್ಪನೆ ಬಂದುಬಿಟ್ಟಿದೆ. ಹೀಗಾಗಿ, ಆತ ತಾನು ಪಾಶ್ಚಾತ್ಯರಿಗಿಂತ ಶ್ರೇಷ್ಟ ಎಂದು ಭಾವಿಸಿದ್ದಾನೆ. ಜಗತ್ತಿನಲ್ಲಿಯ ಯಾವುದೇ ಕೃತಿಯ ಜೊತೆಗೆ ತನ್ನ ಕೃತಿ ಸಾಟಿಯಾಗಬಲ್ಲದು; ಅಥವಾ ಒಂದಿ ಕೈ ಹೆಚ್ಚೇ ಎಂಬ ಕಲ್ಪನೆ ಕಾಣುತ್ತಿದೆ. ಒಬ್ಬ ಪ್ರಸಿದ್ಧ ಕನ್ನಡ ಲೇಖಕರಂತೂ ಈ ಹೇಳಿಕೆಯನ್ನು ನೀಡಿದರು: “ನಾನು ಶೇಕ್ಸ್‌ಪಿಯರ್ ಮತ್ತು ಟಾಲ್‌ಸ್ಟಾಯ್‌ಗಿಂತ ದೊಡ್ಡವನು”. ಅವರ ಅಭಿಮಾನಿಗಳು ಅದನ್ನು ಒಪ್ಪಿಕೊಂಡೂ ಇದ್ದಾರೆ. “ಕನ್ನಡದ ಒಬ್ಬ ನಿರ್ಧಿಷ್ಟ ಕವಿ ಶೆಲ್ಲಿ ಮತ್ತು ವರ್ಡ್ಸ್‌ವರ್ತಗಿಂತ ದೊಡ್ಡವರು”. ಈ ಮಾತನ್ನು ನನಗೆ ಕನ್ನಡ ಸಾಹಿತಿಗಳಲ್ಲಿ ಅತ್ಯಂತ ಪ್ರತಿಭಾವಂತ ಬುದ್ಧಿಜೀವಿಯೊಬ್ಬರು ಹೇಳಿದರು. ತನ್ನ ಕೃತಿಯ ಪರಿಕಲ್ಪನೆಯ ಬಗ್ಗೂ ಕನ್ನಡ ಸಾಹಿತಿ ಮಹತ್ವಾಕಾಂಕ್ಷಿ. ಈತ ನವವಸಾಹತುಶಾಹೀ ಇಂಗ್ಲಿಷ್ ಭಾಷಿಕರಂತೆ ಆಕೃತಿಯ ತಾಂತ್ರಿಕ ಪರಿಪೂರ್ಣತೆಗಾಗಿ ಕೆತ್ತುತ್ತಾ ಕೂರುವುದಿಲ್ಲ. ತನ್ನ ಕೃತಿಯ ದ್ರವ್ಯದಲ್ಲಿ ಅನುಕರಣೆಯ ಮೂಲಕ ಕನ್ನಡ ಸಾಹಿತಿ ಅತ್ಯಂತ ಮಹತ್ವದ ಶೋಧನೆಗಳನ್ನು ಮಾಡಲು ಯತ್ನಿಸುತ್ತಾನೆ. ದ್ರವ್ಯಕ್ಕೆ ಸಂಬಂಧಿಸಿದಂತೆ ಆಕೃತಿಯಲ್ಲೂ, ಆತ ಮಹತ್ವದ ಸಾಧನೆಗೆ ಪ್ರಯತ್ನಿಸುತ್ತಾನೆ. ಆದರೆ ಅಂಥ ತಾಂತ್ರಿಕ ಅನುಕರಣೆಯಾಗಲೀ, ಪರಿಪೂರ್ಣತೆಯಾಗಲೀ, ಈತನಲ್ಲಿಲ್ಲ.

ನೆಲೆಗಟ್ಟಿನ ಮೂಲ

ಈ ಸಮಕಾಲೀನ ಭಾರತದಲ್ಲಿ ಭಾಷೆಗಳು ಅತ್ಯಂತ ಸಂಕೀರ್ಣ ಹಾಗೂ ಬಹುಮುಖೀ ಪಾತ್ರಗಳನ್ನು ನಿರ್ವಹಿಸುತ್ತವೆ. ಎಂದು ಈ ಹಿನ್ನೆಲೆಯಲ್ಲಿ ನನಗೆ ಅನ್ನಿಸುತ್ತದೆ. ಆದರೆ ಕರ್ನಾಟಕದಲ್ಲಿ ಈ ಹೊತ್ತು, ವಿಶೇಷವಾಗಿ ಕನ್ನಡ ಸಾಹಿತಿಗಳಿಗೆ ಸಂಬಂಧಿಸಿದ ಹಾಗೆ ಇದರ ಪಾತ್ರವನ್ನು ಇನ್ನಷ್ಟು ಮಹತ್ವದ್ದಾಗಿಯೂ, ಸರಳವಾಗಿಯೂ ನೋಡಲಾಗುತ್ತಿದೆ. ಉಳಿದ ಅನೇಕ ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಶಕ್ತಿಗಳಂತೆ ಭಾಷೆ ಕೂಡಾ ಒಂದು ಶಕ್ತಿಯಷ್ಟೆ ಎಂಬುದನ್ನು ಮನದಟ್ಟು ಮಾಡಿಸುವುದು ಇಲ್ಲಿ ನನ್ನ ಉದ್ದೇಶ. ಒಂದೇ ಭಾಷೆ ಪರಸ್ಪರ ವಿರೋಧಿ ಅರ್ಥಗಳನ್ನು ಪರಸ್ಪರ ವಿರೋಧಿ ಪಾತ್ರಗಳನ್ನು ಹೊಂದಿರಲು ಸಾಧ್ಯ ಎಂಬುದನ್ನು ನಾವೀಗ ಗಮನಕ್ಕೆ ತಂದುಕೊಳ್ಳಬೇಕಾಗಿದೆ. ಭಾಷೆಯ ಪಾತ್ರ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಒಂದು ಭಾಷೆ ಅನೇಕ ಸಿದ್ಧಾಂತಗಳ, ಧೋರಣೆಗಳ ವಾಹಕವಾಗಿರಲು ಸಾಧ್ಯ. ಒಂದು ನಿರ್ಧಿಷ್ಟ ಸನ್ನಿವೇಶದಲ್ಲಿ ಯಾವ ಸಿದ್ಧಾಂತ, ಧೋರಣೆಯನ್ನು ಹೊಂದಿರುತ್ತದೆ ಎಂಬುದು ಆ ಭಾಷೆಯ ಸಾಮಾಜಿಕ ಸನ್ನಿವೇಶ, ಬೌದ್ಧಿಕ ಪರಂಪರೆ, ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೋಡಬಹುದು. ಉದಾ.ಗೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಗೊತ್ತಿರುವ ವ್ಯಕ್ತಿಯೊಬ್ಬ ಭಾಗಶಃ ನವವಸಾಹತುಶಾಹಿಯಾಗಿ, ಭಾಗಶಃ ರಾಷ್ಟ್ರೀಯ ವ್ಯಕ್ತಿಯಾಗಿರಲು ಸಾಧ್ಯ ಇದರ ಜೊತೆ, ಆತ ಕನ್ನಡ ಪ್ರಾದೇಶಿಕವಾದಿಯೂ ಆಗಿರಬಲ್ಲ. ಒಬ್ಬ ವ್ಯಕ್ತಿಯ ಸೈದ್ಧಾಂತಿಕ ನೆಲೆಗಟ್ಟನ್ನು ಅನೇಕ ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ರೂಪಿಸುತ್ತವೆ.

ಮುಂದೆ ಯಾವ್ಯಾವ ಭಾಷೆಗಳು ಯಾವ್ಯಾವ ಪಾತ್ರ ವಹಿಸುತ್ತವೆ ಎಂಬುದನ್ನು ಈಗ ಭವಿಷ್ಯ ಹೇಳುವುದು ಸಾಧ್ಯವಿಲ್ಲ. ಅದರೆ ವಿವಿಧ ಭಾಷೆ, ಭಾಷಿಕರ ಬಗೆಗೆ ಪ್ರಜಾಸತ್ತಾತ್ಮಕ ನೀತಿಯೊಂದರ ರೂಪುರೇಖೆಗಳನ್ನು ಸ್ಥೂಲವಾಗಿ ಗುರುತಿಸಲು ಯತ್ನಿಸುತ್ತಿದ್ದೇನೆ. ಈ ರೀತಿಯ ನೀತಿಯೊಂದು ಶೋಷಣೆ ಇಲ್ಲದಿರುವ, ಸಮಾಜವಾದಿ ಸಮಾಜದ, ವ್ಯಕ್ತಿತ್ವದ ಪೂರ್ಣ ವಿಕಾಸ ಸಾಧ್ಯವಿರುವ ಸಮಾಜವೊಂದರ ನಿರ್ಮಾಣಕ್ಕೆ ಹೇಗೆ ನೆರವಾಗಬಲ್ಲದು ಎಂಬುದನ್ನು ಮುಂದೆ ವಿವೇಚಿಸುವ ಪ್ರಯತ್ನ ಮಾಡಿದ್ದೇನೆ.

ಏಕಮೇವ ಮಾನದಂಡವಲ್ಲ

ಭಾಷೆಯ ಸ್ಥಾನಮಾನಗಳ ಸಮಸ್ಯೆಯಿಂದಲೇ ಈ ಕೆಲಸವನ್ನು ಪ್ರಾರಂಭಿಸೋಣ. ಗೋಕಾಕ್ ಚಳವಳಿಯ, ಬೆಂಬಲಿಗರು ಅನೇಕ ಸಾರಿ ಹೀಗೆ ಮಾತು ಪ್ರಾರಂಭಿಸುತ್ತಾರೆ: “ನಾವು ಭಾಷಾವಾರು ಪ್ರಾಂತ್ಯಗಳನ್ನು ಒಪ್ಪಿಕೊಂಡ ಮೇಲೆ……” ಈ ಮಾತನ್ನು ಚರ್ಚೆಗಳಲ್ಲಿ ಅನೇಕ ಸಾರಿ ಕೇಳಿದ್ದೇನೆ. ೧೯೫೬ರ ರಾಜ್ಯ ವಿಂಗಡನೆಯ ಬಗೆಗಿನ ತಪ್ಪು ಭರವಸೆಯಿಂದ ಹೊರಡುವ ವಾದ ಇದು. ಒಂದೊಂದು ರಾಜ್ಯಕ್ಕೆ ಒಂದೊಂದು ಭಾಷೆ ಎಂಬ ತರ್ಕ ಇಲ್ಲಿದೆ. ಈ ಭರವಸೆಗೆ ಅನೇಕ ಭಾಷಾವಾರು ಪ್ರಾಂತ್ಯಗಳ ಬೆಂಬಲಿಗರು ಪೋಷಿಸಿದರು. ಕಾಂಗ್ರೆಸ್ಸಿನೊಳಗೆ, ಹೊರಗೆ, ಅಷ್ಟೇ ಏಕೆ ರಾಜಕೀಯ ವಲಯಗಳ ಹೊರಗೂ ಈ ರೀತಿಯ ಬೆಂಬಲಿಗರು ಧಂಡಿಯಾಗಿದ್ದರು. ರಾಜ್ಯಗಳ ಮರುವಿಂಗಡನೆಯ ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಈ ಭರವಸೆ ಎಷ್ಟು ಪೊಳ್ಳಾದದ್ದು ಎಂಬುದು ತಿಳಿಯುತ್ತದೆ. ಹಾಗೆ ನೋಡಿದಾಗ ನಮಗೇನು ಕಾಣುತ್ತದೆ? ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಬಿಹಾರ, ರಾಜಸ್ಥಾನ-ಹಿಂದೀ ಇಷ್ಟೊಂದು ರಾಜ್ಯಗಳ ಭಾಷೆ. ಉ. ಪ್ರದೇಶವನ್ನೇ ಎರಡಾಗಿ ಒಡೆಯಬೇಕು ಎಂಬ ವಾದದ ನೆನಪೂ ಇಲ್ಲಿ ಬಂದಿದೆ. ಇದರಿಂದ ನಮಗೆ ಸ್ಪಷ್ಟವಾಗುವ ಸಂಗತಿಯೆಂದರೆ ಈ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ವಿಂಗಡಿಸಿರಲಿಲ್ಲ ಎಂಬುದು. ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅನೇಕ ಭಾಷೆಗಳಿವೆಯಲ್ಲ, ಅದು ಹೇಗೆ? ಒಂದೇ ರಾಜ್ಯದೊಳಗೆ ಮತ್ತು ಹೊರಗೆ ಅನೇಕ ಭಾಷೆಗಳಿವೆ. ಉದಾ. ಕೊಂಕಣಿ, ತುಳು, ಪಂಜಾಬಿ, ಉರ್ದು ಮತ್ತು ಸಿಂಧಿ, ಪ್ರಮುಖ ಭಾಷೆಗಳಾಗಿದ್ದು ಅವಕ್ಕೆ ತಮ್ಮದೇ ಆದ ರಾಜ್ಯಗಳಿಲ್ಲವಲ್ಲ. ಈ ಭಾಷೆಗಳನ್ನು ಮಾತನಾಡುವ ಜನರೂ ಎಲ್ಲೂ ಬಹುಸಂಖ್ಯಾತರಾಗಿಲ್ಲ. ಆದ್ದರಿಂದಲೇ ಅವರಿಗೆ ರಾಜ್ಯವಿಲ್ಲ. ಈ ಅಂಶಗಳ ಹಿಂದಿನ ಒಟ್ಟಾರೆ ತರ್ಕ ಇಷ್ಟೇ; ರಾಜ್ಯಗಳ ಮರು ವಿಂಗಡನೆಯಲ್ಲಿ ಭಾಷೆ ಕೇವಲ ಒಂದು ಮಾನದಂಡವೇ ಹೊರತು ಅದೇ ಏಕಮಾತ್ರ ಮಾನದಂಡವಲ್ಲ. ಆಡಳಿತದ ಅನುಕೂಲಕ್ಕಾಗಿ ಒಂದು ಭಾಷೆಯನ್ನು ಬಳಸಿದರೂ ಬೇರೆ ಭಾಷೆಗಳನ್ನು ಮಾತನಾಡುವ ಜನ, ವಿಶೇಷವಾಗಿ ಗಡಿ ಪ್ರದೇಶಗಳ ಜನರನ್ನು “ಪರಕೀಯರು” ಅಥವಾ “ದ್ರೋಹಿಗಳು” ಎಂದು ಕರೆಯಲಾಗದು.

ಸ್ವಾತಂತ್ರ್ಯದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಇದೇ ರೀತಿಯ ವಾದವನ್ನು ಮುಂದೊಡ್ಡಲಾಗುತ್ತಿತ್ತು. “ನಾವು ಒಂದು ರಾಷ್ಟ್ರ ಎಂದು ಭಾವಿಸುವುದಾದರೆ, ರಾಷ್ಟ್ರಭಾಷೆಯೊಂದನ್ನು ಕೂಡಾ ಒಪ್ಪಿಕೊಳ್ಳಬೇಕು” ಈ ವಾದದ ಮುಸುಕಿನೊಳಗೆ ಬೇರೆಯವರ ಮೇಲೆ ಹಿಂದಿಯ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆ ಹೇರಲು ಪ್ರಯತ್ನಿಸಲಾಯಿತು. ಇದು ನಡೆಯಲಿಲ್ಲ: ಜನತಾ ಕಾಲದಲ್ಲಿ ಹಿಂದೀ ಯಜಮಾನಿಕೆ ಮತ್ತೆ ನುಸುಳಿ ಮೇಲೆ ಬರಲು ಯತ್ನಿಸಿತು. ಈಗ ಶ್ರೀಮತಿ ಗಾಂಧಿಯವರ ಕಾಲದಲ್ಲೂ ಸಣ್ಣಗೆ ಈ ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ಭಾರತದ ಸಂವಿಧಾನ ೧೪ ಭಾಷೆಗಳನ್ನು ರಾಷ್ಟ್ರಭಾಷೆಗಳೆಂದು ಪಟ್ಟಿಮಾಡಿದೆ. ಕೆಲವು ರಾಜ್ಯಗಳಲ್ಲಿ ಇದನ್ನು ಜಾರಿ ತರಲಾಗುತ್ತಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಆಂಧ್ರ ಪ್ರದೇಶಗಳಲ್ಲಿ ಉರ್ದುವನ್ನು ಪ್ರಾಂತೀಯ ಭಾಷೆಗಳೊಂದಿಗೆ ಸೇರಿಸಿ ರಾಜ್ಯ ಭಾಷೆ ಎಂದು ಘೋಷಿಸಲಾಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನೇಪಾಳಿಯನ್ನು ಕೂಡಾ ಅಧಿಕೃತ ಭಾಷೆಯೆಂದು ಘೋಷಿಸಲಾಗಿದೆ. ನೇಪಾಳಿಯನ್ನು ರಾಷ್ಟ್ರಭಾಷೆಗಳಲ್ಲಿ ಒಂದನ್ನಾಗಿ ಪರಿಗಣಿಸಬೇಕೆಂದು ಪ. ಬಂಗಾಳ ರಾಜ್ಯ ಸರ್ಕಾರ ಸೂಚಿಸಿದೆ. ಪ. ಬಂಗಾಳದ ಎಡರಂಗದ ಸರಕಾರದ ಭಾಷಾನೀತಿಯ ಸೂತ್ರ ಇದು: “ಎಲ್ಲ ಅಲ್ಪಸಂಖ್ಯಾತ ಭಾಷೆಗಳ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನ” ಹೀಗಾಗಿ ಭಾರತ ದೇಶದ ಬಹುಭಾಷಾ ಸ್ವರೂಪವನ್ನು ರಾಜ್ಯಗಳ ಆಂತರಿಕ ಸನ್ನಿವೇಶದಲ್ಲೂ ಜಾರಿಗೆ ತರಲು ಯೋಚಿಸಲಾಗುತ್ತಿದೆ. ಆರ್ಥಿಕ ಅಭಿವೃದ್ಧಿ ಮತ್ತು ನಗರೀಕರಣ ಬೆಳೆದಷ್ಟು ವಲಸೆ ಹೆಚ್ಚುತ್ತಾ ಹೋಗುತ್ತದೆ; ಹಾಗೆಯೇ ರಾಜ್ಯಗಳು ಕೂಡಾ ಬಹುಭಾಷಾಮಯವಾಗುತ್ತಾ ಹೋಗುತ್ತವೆ.

ಪರಿಸ್ಥಿತಿ ಹೀಗಿದ್ದರೂ, ಗೋಕಾಕ್ ವರದಿ ಹೇಳುವ ಪ್ರತಿ ಭಾಷಾ ರಾಜ್ಯವು “ಒಂದು ಅನನ್ಯ ವ್ಯಕ್ತಿತ್ವ”ವನ್ನು ಹೊಂದಿರುತ್ತದೆ ಎಂಬ ಮಾತು ಸರಿಯಾದದ್ದೇ. ಇದಕ್ಕೆ ವಿಶಿಷ್ಟ ವ್ಯಕ್ತಿತ್ವವೊಂದು ಇದ್ದು ಅದು ರಾಷ್ಟ್ರೀಯ ಹಂತದಲ್ಲಿ ” ಒಂದು ಕೃತ್ರಿಮ ವಿಶಾಲತೆ”ಯ ಬೆಳವಣಿಗೆಗೆ ವಿರೋಧವಾದದ್ದೇ ಆಗಿರುತ್ತದೆ. ಗೋಕಾಕ್ ವರದಿ ಮುಂದುವರಿಯುತ್ತಾ ಈ ದಿಸೆಯಲ್ಲಿ ಸಮಂಜಸವಾದ ಮಾತನ್ನೇ ಹೇಳುತ್ತದೆ: …………ಹೀಗೆ ಪ್ರತಿಯೊಂದೂ ಭಾಷಾ ರಾಜ್ಯವೂ ತನ್ನದೇ ಆದ ವ್ಯಕ್ತಿತ್ವವನ್ನು ಪಡೆದಿವೆ……….ಈ ವ್ಯಕ್ತಿತ್ವವು ಅನನ್ಯವಾಗದೆ ರಾಷ್ಟ್ರದ ಏಕತೆಯೂ ಸಮೃದ್ಧವಾಗಲಾರದು. ಈ ಸಮೃದ್ಧಿಯಲ್ಲಿಯೂ ಭಾಷಾ ರಾಜ್ಯಗಳ ಶ್ರೇಯಸ್ಸು ಹಾಗೂ ಸಫಲತೆಯಿದೆ.” ಆದರೆ ರಾಷ್ಟ್ರೀಯ ಮಟ್ಟದಲ್ಲಿ ಗೋಕಾಕ್ ಸಮಿತಿಗೆ ಬೇಕಾಗಿರುವ ವೈವಿಧ್ಯ, ಸಮೃದ್ಧಿ ಕರ್ನಾಟಕದ ಮಟ್ಟದಲ್ಲಿ ಮಾತ್ರ ಬೇಡವಾಗಿದೆ, ಕನ್ನಡ ಭಾಷೆ ಸಂಸ್ಕೃತಿ, ಸಾಹಿತ್ಯವನ್ನು ಬೆಸೆಯುವುದರ ಮೂಲಕ “ಕೃತ್ರಿಮ ವೈಶಾಲ್ಯವೊಂದನ್ನು” ಸೃಷ್ಟಿಸಲು ಅವರು ಪ್ರಯತ್ನಿಸಿದ್ದಾರೆ. ಕರ್ನಾಟಕದೊಳಗೆ ಇರುವ ವಿಶಿಷ್ಟ, ವೈವಿಧ್ಯಮಯ ಸಂಸ್ಕೃತಿಗಳನ್ನು ನಿರಾಕರಿಸುವುದರ ಮೂಲಕ ಈ ಕಾರ್ಯವನ್ನು ಅವರು ಸಾಧಿಸಬಯಸಿದ್ದಾರೆ. ಕನ್ನಡ ಸಮಾಜ, ಸಂಸ್ಕೃತಿಯೊಳಗಡೆಯೇ ಅನೇಕ ಭಿನ್ನತೆ, ವೈವಿಧ್ಯಗಳಿವೆ. ದಕ್ಷಿಣ ಕನ್ನಡ, ಧಾರವಾಡ, ಹೈದರಾಬಾದ್ ಕರ್ನಾಟಕ, ಹಳೆ ಮೈಸೂರು, ಕೊಡಗು ಇತ್ಯಾದಿ ಪ್ರದೇಶಗಳು ಪರಸ್ಪರ ಭಿನ್ನತೆಯನ್ನು ಹೊಂದಿವೆಯೆಂಬುದು ಈಗಾಗಲೇ ತಿಳಿದಿರುವ ಸಂಗತಿ. ಈ ಒಂದೊಂದು ಪ್ರದೇಶದೊಳಗೂ ಆಂತರಿಕ ವ್ಯತ್ಯಾಸಗಳಿವೆ ಎಂಬ ಮಾತು ಬೇರೆ. ಜಾತಿ ಜನಾಂಗಗಳೊಳಗೆ, ಮೇಲು ಜಾತಿ, ಕೆಳ ಜಾತಿಗಳೊಳಗೆ, ಮುಸ್ಲಿಂ, ಕ್ರೈಸ್ತರಲ್ಲಿ ವ್ಯತ್ಯಾಸಗಳಿವೆ. ಹಾಗೆಯೇ ಬೇರೆ, ಬೇರೆ ಭಾಷೆಗಳನ್ನು-ಕನ್ನಡ, ತೆಲುಗು, ಮರಾಠಿ, ತಮಿಳು ಮಲಯಾಳಂ, ಉರ್ದು, ಕೊಂಕಣಿ, ತುಳು-ಇತ್ಯದಿ ಮಾತನಾಡುವ ಜನರಲ್ಲೂ ವೈವಿಧ್ಯಗಳಿರುತ್ತವೆ. ಆದ್ದರಿಂದ ಗೋಕಾಕ್ ಸಮಿತಿಯ ವಾದವನ್ನೇ ಇಲ್ಲಿ ಅನ್ವಯಿಸಿ ಹೇಳುವುದಾದರೆ: ಈ ಎಲ್ಲ ಭಿನ್ನ, ವೈವಿಧ್ಯಮಯ ವ್ಯಕ್ತಿತ್ವಗಳು ವಿಶಿಷ್ಟವಾಗಿ ಉಳಿಯದಿದ್ದರೆ ಕರ್ನಾಟಕದ ಚೈತನ್ಯ ತನ್ನ ಭವ್ಯತೆ ಮತ್ತು ಬಹುಮುಖೀ ಉಜ್ವಲತೆಯನ್ನು ಉಳಿಸಿಕೊಳ್ಳಲಾರದು.

ಕರ್ನಾಟಕ ಸಾಹಿತ್ಯ ಪರಿಷತ್ತು

ಆದ್ದರಿಂದ ಪ್ರಜಾಸತ್ತಾತ್ಮಕ ಕಾರ್ಯಕ್ರಮದ ಮೊದಲ ಒತ್ತಾಯ ಇದು: ಗಮನಾರ್ಹ ಸಂಖ್ಯೆಯ ಜನ ಮಾತನಾಡುವ ಎಲ್ಲ ಭಾಷೆಗಳನ್ನೂ ಕರ್ನಾಟಕದ ರಾಜ್ಯ ಭಾಷೆಗಳೆಂದೇ ಪರಿಗಣಿಸಬೇಕು. ಆಗ ಕನ್ನಡದ ಜೊತೆಗೆ ಮರಾಠಿ, ಉರ್ದು, ತಮಿಳು, ತೆಲುಗು, ಮಲಯಾಳಂ, ಕೊಂಕಣಿ ತುಳು, ಕೊಡಗು, ಇಂಗ್ಲಿಷ್ ಭಾಷೆಗಳು ಸೇರಿಕೊಳ್ಳುತ್ತವೆ. ಈ ಭಾಷೆಗಳ ಸಾಂಸ್ಕೃತಿಕ ಕಾರ್ಯಗಳಿಗೆ ಸರ್ಕಾರ ಸಹಾಯ ನೀಡಬೇಕು. ಕನ್ನಡ ಪರಿಷತ್ತು ತನ್ನ ಹೆಸರನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿಕೊಂಡು, ಈ ಎಲ್ಲ ಭಾಷೆಗಳ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಆದರೆ, ಕರ್ನಾಟಕದಲ್ಲಿ ಕನ್ನಡ ಬಹುಸಂಖ್ಯಾತ ಜನತೆಯ ಭಾಷೆಯಾದ್ದರಿಂದ ಅದಕ್ಕೆ ಹಣ ಮತ್ತು ಇತರ ರೂಪಗಳಲ್ಲಿ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇಂಥ ನೀತಿ ಕರ್ನಾಟಕದಲ್ಲಿ ಬದುಕುವ, ದುಡಿಯುವ ಎಲ್ಲರಿಗೂ ಅವರು ಯಾವುದೇ ಭಾಷೆ ಮಾತನಾಡಲಿ, ಸಮಾನ ಮಾನ್ಯತೆ ಸಿಗುವಂತೆ ಮಾಡುತ್ತದೆ. ಕನ್ನಡವಾಗಲಿ ಅಥವ ಯಾವುದೇ ಪ್ರಾಂತೀಯ ಭಾಷೆಯಾಗಲೀ ಶಾಲಾ ಹಂತದಲ್ಲಿ ಕಡ್ಡಾಯವಾಗಿರಕೂಡದು. ಸಂಸ್ಕೃತಕ್ಕೆ ಮಾತ್ರ ಮೂರು ಭಾಷೆಗಳ ಪಟ್ಟಿಯಲ್ಲಿ ಎಲ್ಲಿಯೂ ಸ್ಥಾನವಿರಕೂಡದು. ಏಕೆಂದರೆ ಈ ಭಾಷೆ ಹಿಂದೂ-ಬ್ರಾಹ್ಮಣ ಮಾದರಿಯ ಸಾಂಪ್ರದಾಯಿಕ ಭಾವೈಕ್ಯದ ಅರ್ಥ ಮತ್ತು ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಎರಡನೆ ಒತ್ತಾಯವೆಂದರೆ, ಆಡಳಿತ ಭಾಷೆ ಕನ್ನಡ ಆಗಬೇಕು. ಬಹುಸಂಖ್ಯಾತರ ಭಾಷೆ ಕನ್ನಡ ಎಂಬುದರ ಜೊತೆಗೆ ಅಲ್ಪಸಂಖ್ಯಾತರಿಗೂ ಈಗಾಗಲೇ ಆ ಭಾಷೆ ತಿಳಿದಿದೆ. ಕರ್ನಾಟಕದಲ್ಲಿಯ ಯಾವ ಭಾಷಾ ಅಲ್ಪಸಂಖ್ಯಾತರೂ ಈ ಮಾತನ್ನು ವಿರೋಧಿಸಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದರಿಂದಾಗಿ, ಆಡಳಿತಾಂಗ, ಶಾಸಕಾಂಗ, ನ್ಯಾಯಾಂಗಗಳು ನೀತಿಗಳನ್ನು ಜನತೆ ಅರ್ಥ ಮಾಡಿಕೊಳ್ಳಬಲ್ಲುದು; ವಿರ್ಮಶಿಸಬಲ್ಲದು. ತಮಗೆ ಬೇಕಾದ ಹಾಗೆ ಬದಲಿಸಿ ನಿಯಂತ್ರಿಸಬಲ್ಲರು. ಹೊರಗಿನವರಿಗೆ, ಹೊಸಬರಿಗೆ, ಅಖಿಲ ಭಾರತೀಯ ಉದ್ದೇಶಗಳಿಂದಾಗಿ ಇಂಗ್ಲಿಷನ್ನು ಎರಡನೆಯ ಭಾಷೆಯನ್ನಾಗಿ ಬಳಸಬಹುದು. ಈ ವ್ಯವಸ್ಥೆ ಎಲ್ಲಾ ರಾಜ್ಯಗಳೂ ಹಿಂದಿ ಬಳಕೆಗೆ ಒಪ್ಪುವ ತನಕ (ಒಂದು ಪಕ್ಷ ಒಪ್ಪಿದರೆ) ಮುಂದುವರೆಯಬೇಕಾಗುತ್ತದೆ. ಜಿಲ್ಲೆಯ ಹಂತದಲ್ಲಿ ಬಹು ಸಂಖ್ಯಾತ ಜನ ಮಾತನಾಡುವ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ಈ ಕಡೇ ನೀತಿಯನ್ನು ಪ. ಬಂಗಾಳ ಎಡ ಸರ್ಕಾರ ಜಾರಿಗೆ ತಂದಿದೆ.

ಇಂಗ್ಲಿಷ್ ವ್ಯಾಮೋಹ

ಶೈಕ್ಷಣಿಕ ಹಂತದಲ್ಲಿ ಕೂಡಾ ಪ್ರಾಂತೀಯ ಭಾಷೆಗಳು ಕೆಳಗಿನಿಂದ ಹಿಡಿದು ಸ್ನಾತಕೋತ್ತರ ಮತ್ತು ಸಂಶೋಧನೆಗಳ ತನಕ ಶಿಕ್ಷಣ ಮಾಧ್ಯಮವಾಗಬೇಕು. ಈ ಪಟ್ಟಿಯಲ್ಲಿ ಇಂಗ್ಲಿಷ್ ಕೂಡಾ ಸೇರಬೇಕು. ಏಕೆಂದರೆ, ಅದು ಆಂಗ್ಲೋ-ಇಂಡಿನ್ನರೂ ಸೇರಿದಂತೆ ಅನೇಕರ ಮಾತೃಭಾಷೆಯಾಗಿದೆ. ಈ ಭಾಷಾ ನೀತಿಯಿಂದ ಮಾತ್ರ ಬಹು ಸಂಖ್ಯಾತ ಬಡ ಅನಕ್ಷರಸ್ಥರು ವಿದ್ಯಾವಂತರಾಗಲು ಸಾಧ್ಯ. ಈ ನಿಲುವಿನ ಹಿನ್ನೆಲೆಗಿರುವ ಇನ್ನೊಂದು ಕಾರಣವೆಂದರೆ ಇಂಗ್ಲಿಷಿನ ಮೇಲೆ ಎಷ್ಟೇ ಹಣ ಖರ್ಚು ಮಾಡಿದರೂ, ಅದು ವ್ಯರ್ಥವಾಗಿ ಆ ಭಾಷೆಯನ್ನು ಸರಿಯಾಗಿ ಕಲಿಸಲಾಗುತ್ತಲೇ ಇಲ್ಲ. ಈ ದೋಷಪೂರಿತ ಕಲಿಕೆಯ ಮರುಭೂಮಿಯಲ್ಲಿ ಜನರ ಚಿಂತನೆ, ಗ್ರಹಿಕೆ, ಅಭಿವ್ಯಕ್ತಿ ಸಾಮರ್ಥ್ಯಗಳು ಇಂಗಿಹೋಗುತ್ತಿವೆ. ಒಬ್ಬ ವ್ಯಕ್ತಿಗಿರುವ ಸಾಧ್ಯತೆಗಳು ಪೂರ್ಣವಾಗಿ ವಿಕಾಸಗೊಳ್ಳುತ್ತಿಲ್ಲ. ಇಷ್ಟಾದರೂ ಇಂಗ್ಲಿಷನ್ನು ಮಾಧ್ಯಮಿಕ ತರಗತಿಗಳಿಂದ ಕಾಲೇಜಿನ ತನಕ ಆಧುನಿಕ ವಿಜ್ಞಾನ ಮತ್ತು ಸಂಸ್ಕೃತಿಯ ಕಾರಣದಿಂದಾಗಿ ಕಲಿಸಬಹುದು. ಇದು ಭಾಷಾಂತರಗಳ ದುಬಾರಿ ಖರ್ಚನ್ನು ತಪ್ಪಿಸುತ್ತಿದೆ.

ಇಂಗ್ಲಿಷ್ ಮೋಹ ಏಕೆ?

ಆದರೆ ಈ ನಿಲುವನ್ನು ಕಾರ್ಯರೂಪಕ್ಕೆ ತರುವುದು ಹೇಗೆ? ಈ ಕಾರ್ಯಕ್ರಮದ ಜಾರಿಗಾಗಿ ಹೋರಾಡುವ ಪ್ರಜಾಸತ್ತಾತ್ಮಕ ಚಳವಳಿಯ ಸ್ವರೂಪ ಹೇಗಿರಬೇಕು? ಈ ಎರಡೂ ಪ್ರಶ್ನೆಗಳಿಗೆ ತಕ್ಷಣ ಉತ್ತರ ಹುಡುಕಬೇಕಾಗಿದೆ. ಏಕೆಂದರೆ ಕನ್ನಡಿಗ ಕನ್ನಡೇತರರಿಬ್ಬರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಕಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಕೆಳ ಮಧ್ಯಮವರ್ಗ ಮತ್ತು ಕಾರ್ಮಿಕ ವರ್ಗಗಳಲ್ಲೂ ಹಬ್ಬಿದೆ. ಅತ್ಯಂತ ಸಣ್ಣ ಊರುಗಳಿಗೂ ಈ ಮಾತು ಅನ್ವಯಿಸುತ್ತದೆ. ಇದಕ್ಕೆ ಕನ್ನಡ ಲೇಖಕರು ಕೊಡುವ ಕಾರಣ, ಇಂಗ್ಲಿಷಿಗೆ ಉನ್ನತ ಸಾಮಾಜಿಕ ಅಂತಸ್ತಿದೆ ಎಂದು. ಇದಕ್ಕೆ ಅವರು ಸೂಚಿಸುವ ಪರಿಹಾರ: ಕನ್ನಡಕ್ಕೆ ಹೆಮ್ಮೆಯ ಸ್ಥಾನ ನೀಡುವುದರಿಂದ, ಅಂದರೆ ರಾಜ್ಯ ಭಾಷೆ ಮಾಡುವುದರಿಂದ, ಕನ್ನಡವೊಂದನ್ನು ೧೫೦ ಅಂಕಗಳ ಪ್ರಥಮ ಭಾಷೆಯನ್ನಾಗಿ ಮಾಡುವುದರಿಂದ, ಕನ್ನಡ ಪ್ರೇಮವನ್ನು ಬಡಿದೆಬ್ಬಿಸುವ ವಿಧಾನಗಳಿಂದ (ಗೋಕಾಕ್ ಚಳವಳಿ) ಕನ್ನಡಿಗರನ್ನು ಕನ್ನಡದ ಕಡೆಗೆ ಆಕರ್ಷಿಸಬಹುದು. ಇದರ ಜೊತೆಗೆ ಕನ್ನಡೇತರ ಭಾಷಿಕರನ್ನೂ ಕೂಡಾ ಇಂಗ್ಲಿಷ್‌ನಿಂದ ದೂರ ಸರಿಸಬಹುದು. ಈ ನಿಲುವಿನಲ್ಲಿ ಸತ್ಯಾಂಶವಿದೆ.

ಇಂಗ್ಲಿಷ್ ಭಾಷಿಕರು ಯಾವಾಗಲೂ ಪ್ರೋತ್ಸಾಹಿಸುವುದು ತಮ್ಮಂಥಹ ಜನಗಳನ್ನು ಮಾತ್ರ, ಮತ್ತು ಬೇರೆಯವರ ಬಗೆಗೆ ಅದು ಪೂರ್ವಾಗ್ರಹಗಳನ್ನು ಹೊಂದಿರುತ್ತದೆ. ಆದರೆ, ಇಂಗ್ಲಿಷ್ ಕಲಿಯಲು ನಡೆಯುತ್ತಿರುವ ಈ ತೀವ್ರಸ್ಪರ್ಧೆಯ ಹಿಂದೆ ಇರುವ ಇನ್ನೊಂದು ಕಾರಣವನ್ನು ಕನ್ನಡ ಲೇಖಕರು ಗಮನಿಸಿಲ್ಲ. ಅದು ನಿರುದ್ಯೋಗ, ಭವಿಷ್ಯದ ಬಗೆಗಿನ ಆತಂಕ. (ಸ್ವತಃ ಗೋಕಾಕ್ ಚಳವಳಿಗೆ ದೊರೆತ ಬೆಂಬಲದ ಹಿಂದಿನ ಮುಖ್ಯ ಕಾರಣ ಇದು). ಇಂಗ್ಲಿಷ್ ಕಲಿತ ಒಬ್ಬ ವ್ಯಕ್ತಿಗೆ ಬರೀ ಭಾರತದಲ್ಲಷ್ಟೇ ಅಲ್ಲ, ಅರಬ್ ದೇಶಗಳು ಮುಂತಾದ ಮೂರನೇ ಜಗತ್ತಿನ ಇತರ ದೇಶಗಳಲ್ಲೂ ಆತನಿಗೆ ಕೆಲಸ ಸಿಕ್ಕುವ ಸಾಧ್ಯತೆಗಳಿವೆ. ಅವನಿಗೆ ಅದೃಷ್ಟವಿದ್ದರೆ, ಪ್ರತಿಭೆಯಿದ್ದರೆ ಯುರೋಪ್, ಅಮೆರಿಕಾ, ಆಸ್ಟ್ರೇಲಿಯಗಳಲ್ಲೂ ಕೆಲಸ ಸಿಗಬಹುದು. ಜೊತೆಗೆ, ಕನ್ನಡ ಮಾಧ್ಯಮ ಶಾಲೆಗಳಲ್ಲಿಯ ಶಿಕ್ಷಣದ ಗುಣಮಟ್ಟ ತೀರಾ ಕಡಿಮೆ. ಈ ಸಮಸ್ಯೆಗಳನ್ನು ಎದುರಿಸಲು ಚಳವಳಿ ನೇತಾರರಿಗೆ ಹೊಳೆದ ಮಾರ್ಗವೆಂದರೆ ಬಲವಂತದ ಕನ್ನಡ ಹೇರಿಕೆ. ಕನ್ನಡವನ್ನು ಎಲ್ಲರಿಗೂ ಕಡ್ಡಾಯ ವಿಷಯವನ್ನಾಗಿ ಮಾಡಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯ ಹಾಕಿದರು. ನಂತರ ನೂರಕ್ಕೂ ಹೆಚ್ಚು ಅಂಕಗಳನ್ನಿಟ್ಟು, ಕನ್ನಡವನ್ನು ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡಬೇಕೆಂದು ಹೇಳಿದರು. ಒಂದು ಪಕ್ಷ ಎಲ್ಲಾ ಮಾತೃಭಾಷೆಗಳಿಗೂ ಪ್ರಥಮ ಭಾಷೆಯ ಸ್ಥಾನ ಇರಬೇಕು ಎನ್ನುವುದಾದರೆ, ಇಂಗ್ಲಿಷ್ ಮಾತೃಭಾಷೆಯಲ್ಲದವರು ಅದನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಳ್ಳಲು ಅವಕಾಶವಿರಕೂಡದು ಎಂದರು. ಮಾತೃಭಾಷೆ ಇಂಗ್ಲಿಷ್ ಅಲ್ಲದವರಿಗೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಶಾಲೆಗಳನ್ನು ತೆರೆಯಲು ಅವಕಾಶ ಕೊಡಕೂಡದು ಎಂದು ಒತ್ತಾಯಿಸಿದರು. ಈ ಪಾರ್ಲಿಮೆಂಟರಿ ವ್ಯವಸ್ಥೆಯಲ್ಲಿ ಮತಗಳು ಸಾಕಷ್ಟು ಪ್ರಮುಖಸ್ಥಾನ ವಹಿಸುತ್ತವೆಯಾದ್ದರಿಂದ, ಜನಪ್ರಿಯವಲ್ಲದ ಈ ಸೂಚನೆಯನ್ನು ರಾಜಕಾರಣಿಗಳು ಒಪ್ಪಿಕೊಳ್ಳುವುದಿಲ್ಲ. ಆದರೆ, ಇದರ ನಿಜವಾದ ಅಪಾಯವಿರುವುದು ಈ ಸಲಹೆಯ ಎಲೀಟಿಸ್ಟ್ ಸ್ವರೂಪದಲ್ಲಿ. ಪ್ರೊ|| ಅನಂತಮೂರ್ತಿಯವರು ನೀಡಿರುವ ಇಂಥದೇ ಇನ್ನೊಂದು ಎಲೀಟಿಸ್ಟ್ ಸಲಹೆಯನ್ನು ಇಲ್ಲಿ ಪರೀಕ್ಷಿಸಬೇಕಾಗಿದೆ. ಹತ್ತನೆಯ ತರಗತಿಯಲ್ಲಿ ಮಾತ್ರ ಇಂಗ್ಲಿಷನ್ನು ನಾಲ್ಕನೆ ಭಾಷೆಯನ್ನಾಗಿ ಬೋಧಿಸಬೇಕೆಂದು ಅನಂತಮೂರ್ತಿಯವರು ಸಲಹೆ ನೀಡಿದ್ದಾರೆ. ವಿದೇಶ ಭಾಷೆಯನ್ನಾಗಿ ಇದನ್ನು ಒಂದು ವರ್ಷದಲ್ಲಿ ಚೆನ್ನಾಗಿ ಕಲಿಯಲು ಸಾಧ್ಯ ಎಂದು ಅವರ ವಾದ. ಆದರೆ, ಇದು ಕೂಡಾ ಜನರನ್ನು ಇಂಗ್ಲಿಷ್ ಕಲಿಕೆಯಿಂದ ದೂರವಿಡುವ ತಂತ್ರ. ಜನರಿಗೆ ಇಂಗ್ಲಿಷು ಬೇಕಿಲ್ಲ ಎಂಬ ನಿಲುವು ಇಲ್ಲಿಯದು. ಅನಂತಮೂರ್ತಿ ಮುಂದುವರೆದು ಇಂಗ್ಲಿಷ್ ಕನ್ನಡವನ್ನು ಕೊಲ್ಲಬಲ್ಲದು ಎಂದು ಹೇಳುವ ಮಾತಂತೂ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ. ಉಳಿದ ಕನ್ನಡ ಸಾಹಿತಿಗಳ ಹಾಗೆ ಅನಂತಮೂರ್ತಿಯವರಲ್ಲೂ ಬೆದರಿಕೆಯ ಪ್ರಜ್ಞೆ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಈ ರೀತಿಯ ಇಂಗ್ಲಿಷ್ ವಿರೋಧಿ ಧೋರಣೆ ಬಂಗಾಳ, ತಮಿಳುನಾಡು, ಕೇರಳದ ಬುದ್ಧಿಜೀವಿಗಳಲ್ಲಿ ಅಷ್ಟು ವ್ಯಾಪಕವಾಗಿ ಇಲ್ಲ ಎಂಬುದು ಕುತೂಹಲಕಾರಿಯಾಗಿದೆ. ಅಲ್ಲೂ ಕೂಡಾ ಸ್ವಭಾಷಾಭಿಮಾನ ಮತ್ತು ಸಾಹಿತ್ಯಭಿವೃದ್ಧಿ ಇದೇ ಮಟ್ಟದಲ್ಲಿದ್ದೂ ಆ ನಿಲುವು ಅಲ್ಲಿ ಹಬ್ಬಿಲ್ಲ. ಇಂಗ್ಲಿಷ್ ಅವರಿಗೆ ಮುಖ್ಯ ಬೆದರಿಕೆಯಂತೆ ಕಂಡಿಲ್ಲದಿರುವುದಕ್ಕೆ ಕಾರಣ ಹೆಚ್ಚಿನ ಸಾಂಸ್ಕೃತಿಕ ಅಭಿವೃದ್ಧಿಯಿಂದಾಗಿ ಉಂಟಾಗಿರುವ ಗಾಢ ಆತ್ಮವಿಶ್ವಾಸವಿರಬಹುದು. ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಕನ್ನಡ ಲೇಖಕರಿಗೂ ಈ ಬೆದರಿಕೆ ತಟ್ಟದಿರುವುದಕ್ಕೆ ಇದೇ ಕಾರಣವಿರಬಹುದು. ಏನೇ ಆಗಲಿ, ಕನ್ನಡ ಲೇಖಕರ ಈ ತಾತ್ವಿಕತೆ ಜನರನ್ನು ಸಮಾನವಾಗಿ ಕಂಡು, ಸಂವಾದ ಮತ್ತು ಮುಕ್ತ ಚರ್ಚೆಗಳಿಂದ ಒಲಿಸಿಕೊಳ್ಳಲು ಯತ್ನಿಸುವುದಿಲ್ಲ. ತಮಗೆ ಸರಿ ಅನ್ನಿಸಿದ್ದನ್ನು ಜನತೆ ಕೂಡಾ ಅನುಸರಿಸಬೇಕೆಂದು ಅವರು ಒತ್ತಾಯಿಸಲು ಬಯಸುತ್ತಾರೆ.

ಪ್ರತಿಭಟನೆ ಅನಿವಾರ್ಯ

ಆದರೆ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಚಳವಳಿಯೊಂದು ಜನತೆಯ ಕಡೆಗೆ ಮುಖ ಮಾಡುತ್ತದೆ; ಅವರೊದಿಗೆ ಸಂವಾದ ನಡೆಸುತ್ತದೆ. ಪರ್‍ಯಾಯ ಸಾಂಸ್ಕೃತಿಕ ಸಂಸ್ಥೆಗಳ ಸುತ್ತ-ಗ್ರಂಥಾಲಯ, ಚರ್ಚಾ ಗೋಷ್ಠಿ-ಜನರನ್ನು ಸಂಘಟಿಸಲು ಯತ್ನಿಸುತ್ತದೆ. ಕನ್ನಡ, ಇಂಗ್ಲಿಷ್ ಮತ್ತು ಇತರೆ ಭಾಷೆಗಳ ಮೂಲಕ ಶಾಲಾ ಕಾಲೇಜುಗಳಲ್ಲಿ ತನ್ನ ಕಾರ್‍ಯಕ್ರಮಗಳನ್ನು ನಡೆಸುತ್ತದೆ. ಬಹುಸಂಖ್ಯಾತ ಅನಕ್ಷರಸ್ಥ ಜನತೆಗಾಗಿ ಅಕ್ಷರ ಚಳವಳಿಯೊಂದನ್ನು ಸಂಘಟಿಸುತ್ತದೆ. ರಾಜ್ಯಭಾಷೆ, ಆಡಳಿತ ಭಾಷೆಗಳಾಗಿ ಪ್ರಾಂತೀಯ ಭಾಷೆ ಅಥವಾ ಭಾಷೆಗಳು ಇರಬೇಕೆಂದು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತದೆ. ಇಂಗ್ಲಿಷ್ ಮಾತನಾಡುವ ನವವಸಾಹತುಶಾಹೀ ಪ್ರತಿಷ್ಟಿತ ವರ್ಗಗಳ ಸಾಂಸ್ಕೃತಿಕ ಮೌಲ್ಯಗಳ ಮತ್ತು ಪೂರ್ವಾಗ್ರಹಗಳ ವಿರುದ್ಧದ ಹೋರಾಟವೂ ಈ ಬೃಹತ್ ಆಂದೋಲನದ ಒಂದು ಭಾಗ. ಆದರೆ, ಕನ್ನಡ ಸಾಹಿತ್ಯಕ ಬುದ್ಧಿಜೀವಿವರ್ಗದಲ್ಲೂ ಕಾಣುವ ನಿಯೊಕಲೋನಿಯಲ್ ತಾತ್ವಿಕತೆಯ ವಿರುದ್ಧವೂ ಹೋರಾಡುವ ಅಗತ್ಯವಿದೆ. ಯಾವುದೇ ಪ್ರಾಂತೀಯ ಭೌಗೋಳಿಕ ಪರಂಪರೆ, ಸಂಸ್ಕೃತಿಯಲ್ಲಿ ಕಾಣುವ ಈ ಅಂಶಗಳ ವಿರುದ್ಧ ಪ್ರತಿಭಟಿಸುವುದು ಅನಿವಾರ್‍ಯ.

ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿಯ ಸರ್‍ವಾಧಿಕಾರೀ ಧೋರಣೆ, ಅಸಮಾನತೆ, ಜಾತೀಯ ಅಂಶಗಳ ವಿರುದ್ಧ ಈ ಕಾರ್‍ಯಕ್ರಮ ಹೋರಾಡುತ್ತದೆ. ಆದರೆ, ಅಲ್ಲಿಯ ಮಾನವೀಯ ಅಂಶಗಳನ್ನು ಉಳಿಸಿಕೊಳ್ಳುತ್ತದೆ. ಆಧುನಿಕ ಬಂಡವಾಳಶಾಹೀ ಸಮಾಜದ ಸಿನಿಕ, ವ್ಯಾಪಾರೀ ಸ್ಪರ್ಧಾತ್ಮಕ, ಹೃದಯಹೀನ ಸ್ವರೂಪವನ್ನು ಪ್ರತಿಭಟಿಸುತ್ತದೆ. ಬಂಡವಾಳಶಾಹಿತನ ನಮ್ಮ ಸಮಾಜ, ಸಂಸ್ಕೃತಿಯ ಬಗೆಗೆ ಹೊಂದಿರುವ ತಿರಸ್ಕಾರ, ಹೊಲಸು ಕಲ್ಪನೆಗಳನ್ನು ಧಿಕ್ಕರಿಸುತ್ತದೆ. ಆದರೆ ಆ ಸಮಾಜದ ತಂತ್ರಜ್ಞಾನ, ಆರ್ಥಿಕ ಬೆಳವಣಿಗೆ, ಸಮಾನತೆ, ವಿಜ್ಞಾನ, ಸಂಸ್ಕೃತಿಗಳನ್ನು ಮತ್ತು ಹಳೆಯ ಸಂಸ್ಕೃತಿಯ ಮಾನವೀಯ ಅಂಶಗಳನ್ನು ಹೊಸ ಮಾನವೀಯ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಮೇಳೈಸಿಕೊಳ್ಳುತ್ತದೆ.

ಈ ರೀತಿಯ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಚಳವಳಿ ಕರ್ನಾಟಕ ಸಂಸ್ಕೃತಿಯ ಅನನ್ಯತೆ ಮತ್ತು ವೈಶಿಷ್ಟ್ಯಗಳನ್ನು ಕಾಪಾಡುತ್ತದೆ. ಕರ್ನಾಟಕದೊಳಗೇ ಇರುವ ವಿವಿಧ ಭಾಷಿಕ ಪ್ರಾದೇಶಿಕ, ಸಾಮಾಜಿಕ ಸಂಸ್ಕೃತಿಗಳ ವೈಶಿಷ್ಟ್ಯಗಳನ್ನು ಉಳಿಸುತ್ತದೆ. ಇದು ಯಾವುದೇ ರೀತಿಯ ಕೃತಕ ರಾಷ್ಟ್ರೀಯ ಅಥವಾ ಅಂತರ ರಾಷ್ಟ್ರೀಯ ಚೈತನ್ಯ ಸೃಷ್ಟಿಗೆ ವಿರೋಧಿಯಾಗಿದ್ದು, ಅಖಿಲ ಭಾರತೀಯ ಮತ್ತು ಕರ್ನಾಟಕದ ಹಂತದಲ್ಲಿ ವಿಶ್ವಾತ್ಮಕ ಸತ್ವವನ್ನು ಉಳ್ಳದ್ದಾಗಿರುತ್ತದೆ.ಯಾವುದೇ ರೀತಿಯ ರಾಷ್ಟ್ರೀಯ, ಭಾಷಿಕ, ಸಾಮಾಜಿಕ, ಧಾರ್ಮಿಕ ಯಜಮಾನಿಕೆಯ ಹೇರಿಕೆ ವಿರುದ್ಧ ಉಗ್ರವಾಗಿ ಹೋರಾಡುತ್ತದೆ. ಯಾರೂ ಯಾರ ಮೇಲೂ ಮೇಲಿನ ಅಧಿಪತ್ಯಗಳನ್ನು ಹೇರಲು ಸಾಧ್ಯವಿರದಂಥ ವಾತಾವರಣದ ಸೃಷ್ಟಿಗಾಗಿ ಶ್ರಮಿಸುತ್ತದೆ. ತನ್ನ ಸ್ವಂತಿಕೆಯನ್ನು, ವ್ಯಕ್ತಿ ವಿಶಿಷ್ಟತೆಗಳನ್ನು ಕಳೆದುಕೊಳ್ಳದೆ ಎಲ್ಲ ದಿಕ್ಕುಗಳಿಂದ ಸಂಸ್ಕೃತಿ ಹರಿದು ಬರಲು ಅವಕಾಶ ನೀಡುತ್ತದೆ. ಉಳಿದ ಪ್ರಾದೇಶಿಕ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಸಂಸ್ಕೃತಿಗಳ ಜೊತೆಗೆ ತನ್ನದೇ ಆದ ಪರಿಭಾಷೆಯ ಮೂಲಕ, ತನ್ನ ಪರಂಪರೆ, ಅನುಭವಗಳಿಂದ ರೂಪುಗೊಂಡ ನುಡಿಗಟ್ಟಿನ ಮೂಲಕ ಸಂವಾದ ನಡೆಸುತ್ತದೆ.

ರಾಜ್ಯ ಮತ್ತು ರಾಷ್ಟ್ರಗಳ ಹಂತದಲ್ಲಿ ಬಹು ಭಾಷಾನೀತಿಯ ಅಸ್ತಿತ್ವಕ್ಕಾಗಿ ಹೋರಾಡುವುದು ಈ ಪ್ರಜಾಸತ್ತಾತ್ಮಕ ಕಾರ್‍ಯಕ್ರಮದ ಒಂದು ಅಂಗ. ರಾಜಕಾರಣ ಮತ್ತು ಸಾಂಸ್ಕೃತಿಕ ಬದುಕು ಎರಡರಲ್ಲೂ ಈ ಬಹುಭಾಷಾಮಯತೆ ಸಾಧ್ಯವಾಗಬೇಕು. ಏಕಕಾಲದಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಗೆ ಮತ್ತು ಎಲ್ಲ ಅಲ್ಪಸಂಖ್ಯಾತ ಭಾಷೆ, ಸಂಸ್ಕೃತಿಗಳ ಅಭಿವೃದ್ಧಿಗೆ ಹೋರಾಡುವುದಕ್ಕೆ ಈ ಕಾರ್‍ಯಕ್ರಮ ಪಣತೊಡುತ್ತದೆ. ಶಾಲಾ ಹಂತದಲ್ಲಿ ಕನ್ನಡ ಮತ್ತು ಅಥವಾ ಯಾವುದೇ ಪ್ರಾಂತೀಯ ಭಾಷೆಗಳನ್ನು ಕಡ್ಡಾಯವಾಗಿಡಕೂಡದು. ಸಂಸ್ಕೃತಕ್ಕೆ ಮೂರು ಭಾಷೆಗಳ ಪಟ್ಟಿಯಲ್ಲೆಲ್ಲೂ ಸ್ಥಾನ ನೀಡಕೂಡದು. ಮನುಷ್ಯ ತನ್ನ ಉಪಯೋಗಕ್ಕಾಗಿ ಭಾಷೆಯನ್ನು ಸೃಷ್ಟಿಸಿದ. ಆದ್ದರಿಂದ, ಇಲ್ಲಿ ಭಾಷೆಯ ಮಾನವೀಯ ಮತ್ತು ಸಾಮಾಜಿಕ ಆಯಾಮದ ಕಡೆಗೇ ಮಹತ್ವದ ಒತ್ತು. ಭಾಷೆ ಎಂಬುದು ಜೀವಂತ ವ್ಯಕ್ತಿ ಅಲ್ಲ. ಭೂಮಿ, ಪ್ರಭುತ್ವ, ದೇವತೆ ಯಾವುದೂ ಅಲ್ಲ. ಅದು ಮನುಷ್ಯನಿಗಿಂತ ಎತ್ತರದಲ್ಲಿರುವ, ಅವನಿಂದ ಸೇವೆ ಪಡೆಯುವ ಶಕ್ತಿ ಅಲ್ಲ.

ಕಡೆಯದಾಗಿ, ಭಾಷೆ ಮತ್ತು ಸಂಸ್ಕೃತಿಯನ್ನು ಒಟ್ಟಾರೆ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿಗಳ ಜೊತೆಗೆ ಹೊಂದಿಸಿ, ಸಾಂಪ್ರದಾಯಿಕ ಏಕತಾವಾದದ ಎಲ್ಲ ರೀತಿಯ, ಎಲ್ಲ ರೂಪಗಳ ಬೇರುಗಳನ್ನು ನಾಶ ಮಾಡಲು ಈ ಚಳವಳಿ ಹೋರಾಡುತ್ತದೆ. ಅಂದರೆ ಇದರರ್ಥ- ಈ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಚಳವಳಿ ಇಡೀ ವ್ಯವಸ್ಥೆಯನ್ನು ಬದಲಾಯಿಸಲು ಹೋರಾಡುವ ರಾಜಕೀಯ ಸಂಘಟನೆಯ ಚಳವಳಿಯ ಒಂದು ಭಾಗವಾಗಬೇಕು.

ಈ ಶೋಷಣಾತ್ಮಕ ಸಮಾಜವನ್ನು ಕಿತ್ತೆಸೆದು, ಹೊಸ ಪ್ರಜಾಸತ್ತಾತ್ಮಕ ಸಮಾಜವಾದೀ ಸಮಾಜವನ್ನು ತರುವಲ್ಲಿನ ಆ ಮಹಾನ್ ಬದಲಾವಣೆಯಲ್ಲಿ ಈ ಸಾಂಸ್ಕೃತಿಕ ಹೋರಾಟ ಕೂಡಾ ತನ್ನ ಕಾಣಿಕೆಯನ್ನು ಅರ್ಪಿಸುತ್ತದೆ.
*****
ಕೃಪೆ: ಪ್ರಜಾವಾಣಿ

ಕೀಲಿಕರಣ: ಸೀತಾಶೇಖರ್, ನಂದಿನಿ ಶೇಖರ್, ರೋಹಿತ್, ಶ್ರೀನಿವಾಸ್, ಶೀಲಾ ಸತೀಷ್, ಶ್ರೀನಿವಾಸ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.