ಅಯೋಧ್ಯ : ಪರಸ್ಪರ ಔದಾರ್ಯದ ಅಗತ್ಯ

ಅನುವಾದ: ಶ್ರೀಧರ ಕಲ್ಲಾಳ

ಭಾರತದ ಮುಸ್ಲಿಮರೇನಾದರೂ ಅತ್ಯಂತ ಉದಾರತೆಯನ್ನು ತೋರಿ ಒಂದೊಮ್ಮೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ತಮ್ಮ ಒಪ್ಪಿಗೆಯನ್ನು ನೀಡಬಹುದೇ ಎಂದು ಕನಸು ಕಾಣುತ್ತೇನೆ. ಹಾಗಾದಲ್ಲಿ ಈ ಇಡೀ ಸಮಸ್ಯೆ ಪರಿಹಾರವಾಗಿ ಕಹಿ ಭಾವನೆಯ ಹಿಂದುತ್ವದ ಚಳುವಳಿ ನಮ್ಮ ದೇಶದಲ್ಲಿ ಅಂತ್ಯವಾಗಬಹುದೇನೊ?

ಇದಕ್ಕಿಂತಲೂ ಹೆಚ್ಚು ಅಮರ್ಪಕವಾದ್ದೆಂದರೆ ನಾವು ಹಿಂದೂಗಳು ನಿಜವಾದ ಆದ್ಯಾತ್ಮಿಕ ದೃಷ್ಟಿಯುಳ್ಳವರಾಗುವುದು; ಮತೀಯತೆಯಿಂದ ಮುಕ್ತರಾಗುವುದು; ರಾಮನ ದೇವಸ್ಥಾನವನ್ನು ಅಯೋಧ್ಯೆಯಲ್ಲೇ ಕಟ್ಟಬೇಕೆಂಬ ಹಠವನ್ನು ತೊರೆಯುವುದು; ಬಾಬ್ರಿ ಮಸೀದಿಯನ್ನು ಹೇಡಿತನದಿಂದ ನಾಶಪಡಿಸಿದ್ದಕ್ಕಾಗಿ ಮುಸಲ್ಮಾನರಲ್ಲಿ ಕ್ಷಮೆಕೋರುವುದು; ಸಿಮೆಂಟು ಮತ್ತು ಇಟ್ಟಿಗೆಯ ರಾಮನ ಗುಡಿಗೆ ಬದಲಾಗಿ ನಮ್ಮ ಕವಿಗಳಾದ ವಾಲ್ಮೀಕಿ, ತುಳಸಿ, ಕಂಬನ್, ಎಡುತ್ತಚ್ಚನ್ ಮುಂತಾದವರು ಕಂಡ ರಾಮನಲ್ಲಿ ಜೀವಿಸುವುದು.

ಹೀಗೆ ಸ್ಫಂದಿಸುವುದೇ ಹಿಂದುಗಳಾದ ನಮಗೆ ಹೆಚ್ಚು ಸಹಜವಾದ್ದು. ರಾಮನು ನಮ್ಮ ದೇಶದ ಸಾವಿರಾರು ಅಲಿಖಿತ ಜನಪದ ರಾಮಾಯಣಗಳಲ್ಲಿ ಹೀಗೆಯೇ ಜೀವಂತವಾಗಿರುವುದು.
ನಿಜವಾಗಿ ನಮ್ಮ ದೇವರಾದ ರಾಮ ಎಲ್ಲಿ ಜನಿಸಿದ?

ನಾವು ಹಿಂದೂಗಳು ಚಾರಿತ್ರಿಕವಾಗಿ ನಮ್ಮ ಅವತಾರ ಪುರುಷರನ್ನಂತೂ ನೋಡುವುದಿಲ್ಲ. ಎಲ್ಲವನ್ನೂ ಚಾರಿತ್ರಿಕವಾಗಿ ನೋಡುವುದು ಪಾಶ್ಚಾತ್ಯರ ಸ್ವಭಾವ; ಸೆಮಿಟಿಕ್ ಮೂಲದ ಧರ್ಮಗಳ ಅಗತ್ಯ. ನಮಗಾದರೋ ರಾಮನ ತ್ರೇತಾಯುಗದ ಅಯೋಧ್ಯ ಈ ಭೂಮಿಯಮೇಲೆ ಈಗ ಎಲ್ಲೂ ಇಲ್ಲ; ಅಥವಾ ಎಲ್ಲೆಲ್ಲೂ ಇದೆ. ರಾಮ ಪುನಃ ಹುಟ್ಟಿದ್ದು ಅವನ ಪರಮ ಭಕ್ತರಾದ ಗಾಂಧೀಜಿ ಅವನನ್ನು ಪ್ರಾರ್ಥಿಸಲೆಂದೇ ತೆರಳುತ್ತಿದ್ದಾಗ ಗುಂಡಿಗೆ ಬಲಿಯಾಗಿ ‘ಹೇ ರಾಮ್‘ ಎಂದು ಪ್ರಾಣಬಿಟ್ಟಾಗ.

ರಾಮ ಇಂಥ ದಿನವೇ, ಬಾಬ್ರಿಮಸೀದಿಯಿದ್ದ ಜಾಗದಲ್ಲೇ ಹುಟ್ಟಿದ ಎಂದು ಚಾರಿತ್ರೀಕರಿಸಿ ನೋಡುವುದು ನಮ್ಮ ಪುರಾಣ ಕಲ್ಪನೆಯನ್ನೂ, ಪೌರಾತ್ಯ ಹಿಂದೂ ಪರಂಪರೆಯನ್ನೂ ಕಡೆಗಣಿಸಿದಂತೆಯೇ. ಆದ್ದರಿಂದ ಭಾರತವು ಪುನಃ ಅನನ್ಯವಾಗಿ ಉಳಿಯಲು ಎರಡು ರೀತಿಗಳಲ್ಲೂ ಸಾಧ್ಯವಿದೆ. ಭಾರತೀಯ ಮುಸ್ಲಿಮರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಉದಾರವಾಗಿ ಒಪ್ಪುವುದು; ಅಥವಾ ನಾವು ಹಿಂದೂಗಳು ಮಸೀದಿಯನ್ನು ಹೇಯವಾಗಿ ಕೆಡವಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ನಮ್ಮ ಮಹಾಕವಿಗಳ ಜೀವಂತ ಮಾತುಗಳಲ್ಲಿ ರಾಮನನ್ನು ಅರಸುವುದು.

ಆಗ ಮಾತ್ರ ಇಂದಿನ ಕಹಿ ವಾತಾವರಣ ಬದಲಾಗಬಲ್ಲುದು. ಎರಡೂ ಸಮುದಾಯಗಳ ಹೃದಯ ಬೆಸೆಯಬಹುದು. ಕೇವಲ ಮಾತುಕತೆಗಳಿಂದಾಗಲೀ ನ್ಯಾಯಾಲಯದ ತೀರ್ಪಿಗಾಗಿ ಕಾಯುವುದರಿಂದಾಗಲೀ ಅಲ್ಲ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.