ಬಳ್ಳಿಯಲ್ಲೊಂದು ಬೆಳಕಿನ ಮೊಗ್ಗು

ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ ಕಲ್ಪನೆಯೇ ಅಪೂರ್ವ. ಜೀವದೊಳಗಿಂದ ಜಾರಿ ಮತ್ತೊಂದು ಕುಡಿಯೊಡೆ ಯುವ ಬದುಕೇ ಅಸದಳ.
ನೀಲಿ ಬಟ್ಟೆಯ ನರ್ಸ್‌ಗಳು ಮಳೆಗೆ ಮುನ್ನ ಆಕಾಶದಲ್ಲಿ ಮೋಡಗಳು ಒಟ್ಟಾದಂತೆ ಲಗುಬಗೆಯಿಂದ ಓಡಾಡುತ್ತಾರೆ. ಮಳೆಗೆ ಮುನ್ನ ಅದುರುವ ಕೆರೆಯಂಚಿನ ಕಪ್ಪೆಗಳಂತೆ ಮಿಡಿವ ನಾಡಿಗಳನ್ನು ಅಳೆಯುತ್ತಾರೆ. ಬಳ್ಳಿಯುದರದಲ್ಲಿ ಮುದುಡಿ ಕುಳಿತ ಮೊಗ್ಗಿನ ಬಡಿತವೆಣಿಸುತ್ತಾರೆ. ಬಿಳೀಗೋಡೆ, ಬಿಳೀನೆಲದ ನಿರ್ಜೀವಿ ಕಟ್ಟಡದಲ್ಲಿ ಜೀವೋದಯದ ಮಹೂರ್ತಕ್ಕಾಗಿ ಸಂಭ್ರಮವೋ ಸಂಭ್ರಮ. ಗೋಡೆಯ ಮೇಲಿನ ಡಿಜಿಟಲ್ ಕ್ಲಾಕ್ ಗಂಟೆ ನಿಮಿಷ ಸೆಕೆಂಡುಗಳನ್ನು ಎಣಿಸುತ್ತದೆ- ಟಿಕ್ ಟಿಕ್‌ಗಳ ನಡುವೆ ಸಂಭವಿಸಲಿರುವ ಮರೆಯದ ಅಲೌಕಿಕ ಘಟನೆಗಾಗಿ.
ಕಂಪನಗಳು. ಭೂಮಿತಾಯಿಯಂತೆ ಶಾಂತ ಮುಖಮುದ್ರೆಯಲ್ಲಿದ್ದ ಬಳ್ಳಿ ರೋಮಾಂಚನದಿಂದ ಕಂಪನಗಳನ್ನು ಅನುಭವಿಸುತ್ತದೆ. ತಿಳಿನೀರಿನಲ್ಲಿ ಮೂಡಿದ ಉಂಗುರಗಳಂತೆ ನಿಧಾನವಾಗಿ ಸುತ್ತಲೂ ಹರಡುತ್ತ ದಡ ಮುಟ್ಟುವ ಮುನ್ನ ಕರಗುವ ಕಂಪನಗಳು. ಸುಖದ ಹಂತವನ್ನು ದಾಟಿ ನಿದಾನವಾಗಿ ಕಂಪನಗಳು ವೇಗವನ್ನು ಪಡೆಯುತ್ತವೆ. ಗುಡ್ಡ ಬೆಟ್ಟಗಳನ್ನು ಹಾದು ನಾಡು ಕಾಡನ್ನೆಲ್ಲ ಅದುರಿಸುವ ಭೀಕರ ಅಲೆಗಳು ಅವು ಈಗ. ಎದೆಯಿಂದ ಮೂಡಿ ಜೀವದ ಇಂಚಿಂಚನ್ನು ಬಟ್ಟೆಯಂತೆ ಹಿಂಡುವ ನೋವಿನ ತರಂಗಗಳು. ಈ ಕಂಪನಗಳಿಗೆ ಭೂಮಿತಾಯಿ ನೋವಿನಿಂದ ನಲುಗಿ ಒಸಡು ಕಚ್ಚುತ್ತಾಳೆ. ಹೆದರಿ ಕಂಗಾಲಾದ ಕಣ್ಣುಗಳಿಗೆ ರೆಪ್ಪೆಗಳು ಕಪ್ಪು ಮುಸುಕನ್ನೆಳೆಯುತ್ತವೆ. ಉಸಿರು ಏದುಸಿರಾಗಿ ನಿಟ್ಟುಸಿರಾಗಿ ವೇಗಕ್ಕಿಳಿದ ಓಟಗಾರನಂತೆ ನೋವನ್ನು ನಿಯಂತ್ರಿಸಲು ನೋಡುತ್ತದೆ.
ನೋವು ಉರಿ ಭಯ ಅಸಹಾಯಕತೆಗಳಿಂದ ಚೀರುತ್ತದೆ ಬಳ್ಳಿ. ಸೃಷ್ಟಿಯ ಎಷ್ಟೇ ಅನುಪಮ ಕೊಡುಗೆಗಳ ಆಸೆಯ ನಡುವೆಯೂ ತಡೆಯಲಾರದ್ದು ಇದು. ತಡೆಯಲೇ ಬೇಕು ಇವಳು, ಏಕೆಂದರೆ ಈ ವಿಶ್ವದಲ್ಲೇ ವಿಶೇಷ ಇವಳು. ಇವಳು ಮೊಗ್ಗುಗಳನ್ನು ಕುಡಿಯೊಡೆಸದಿದ್ದರೆ ಹಸಿರು ನೆಲವಿಲ್ಲ, ಹರಿವ ಜಲವಿಲ್ಲ, ಹರಿತ ದೃಷ್ಟಿಗಳಿಲ್ಲ, ಸಂಭ್ರಮದ ಕಿವಿಗಳಿಲ್ಲ. ಇವಳಿಂದಲೇ ಜೀವಕೋಟಿ ಹುಟ್ಟಿ ಬದುಕಿ ಬಾಳಿ ಬಿರಿದ ಹಣ್ಣಿನಿಂದ ಬೀಜಗಳು ಸಿಡಿದಂತೆ ನೂರ್ಪಟ್ಟಾಗುತ್ತಿವೆ. ಬದುಕನ್ನು ಇಂಪು ಸಂಗೀತದಂತೆ ಜೀವಂತವಾಗಿಟ್ಟವಳು ಇವಳು. ಹೆಣ್ಣಿವಳು, ತಾನೇ ಎರಡಾಗಿ ಮೂರಾಗಿ ಹತ್ತಾಗಿ ಸಾವಿರವಾಗಿ ಸಲಹ ಬಲ್ಲವಳು.
ಬೆಚ್ಚನೆಯ ಕೋಶದಲ್ಲಿ ಟಸಿಲೊಡೆದು ಆರೈಕೆಯ ಕುಡಿಯಾಗಿ ಬೆಳೆದು ದುಂಡನೆಯ ಆಕಾರದ, ಜೀವ ಜಗತ್ತಿನ ಪ್ರತಿನಿಧಿಯಾದ ಮೊಗ್ಗು ಪ್ರಪಂಚಕ್ಕೆ ಕಾಲಿಡಲು ಹಂಬಲಿಸುತ್ತಿದೆ. ತಾಯಿ ಕಂಪನಗಳೊಳಗೆ ತಾನೂ ತೇಲಿ ಕತ್ತಲ ಭೇದಿಸಿ ಹೊರಟ ಜಗದೇಕ ವೀರನಂತೆ ನೆತ್ತಿಯಲ್ಲೇ ಗುದ್ದಿ ಹಾದಿ ಬರೆಯಲು ನೋಡುತ್ತದೆ. ಒಮ್ಮೆ ಮತ್ತೊಮ್ಮೆ ಮಗದೊಮ್ಮೆ ಎದೆ ಮಂಡಿ ಮೊಣಕಾಲುಗಳನ್ನೆಲ್ಲಾ ಚಿಮ್ಮಿ ಜೀವಜಗತ್ತಿನ ಆಶಯವೇ ತಾನಾದಂತೆ ದಿಟ್ಟಲೋಕದ ಅಷ್ಟೂ ಮನೋಸ್ಥೈರ್ಯವನ್ನು ತಾನೊಂದೇ ಹೊತ್ತಂತೆ ಮುಂದುಮುಂದಕ್ಕೆ ಮೀನಿನಂತೆ ಈಜಿ ತಲೆ ಎತ್ತಲು ನೋಡುತ್ತದೆ. ಸುತ್ತಲಿನ ಮಾಸು ಚಳಿತಾಗದ ಚೀಲ ಗಾಳಿಪಟದ ಸೂತ್ರದಂತೆ ಹಿಡಿದಿಡುವ ಹೊಕ್ಕುಳಬಳ್ಳಿಯ ಸುಖಗಳನ್ನು ಮೀರಿ ಹೊರಜಗತ್ತನ್ನು ನೋಡುವ ಕೌತುಕತೆ ಅದಕ್ಕೆ. ತಾನೇ ಬದುಕಬೇಕೆಂಬ ಛಲ.
ಇನ್ನೊಂದು ಜೀವವಿದೆ ಇಲ್ಲಿ. ಬಳ್ಳಿಯ ಸುತ್ತುಗಳಿಗೆ ಎದೆ ನೀಡಿರುವ ಕೋಲು ಅದು. ಬಳ್ಳಿಗೆ ಚಪ್ಪರ, ಮೊಗ್ಗಿಗೆ ಆಸರೆ. ಬಳ್ಳಿ ಮೊಗ್ಗುಗಳ ಜೀವಯಾತನೆಯನ್ನು ಕಂಡು ಮೌನವಾಗಿ ನೋಯುತ್ತಿದೆ ಇದು. ಕೈಹಿಡಿದು ಸಂತೈಸುವುದರ ಹೊರತಾಗಿ ಮತ್ತೇನೂ ಮಾಡಲಾಗದು. ಈ ಜೀವಪ್ರಸವದಲ್ಲಿ ಮತ್ತೇನು ಮಾಡಲೂ ದೇವರಾಗಬೇಕು. ದೇವರಲ್ಲ ಇದು. ನೋವಿನಲೆಗಳಲ್ಲಿ ತಾನೂ ಈಜುತ್ತಾ ಬಳ್ಳಿಯ ನೋವಿಗೆ ಆತಂಕಗೊಳ್ಳುತ್ತ ಮೊಗ್ಗನ್ನು ಹೊರುವ ಕಲ್ಪನೆಯಲ್ಲಿ ಮುಖವನ್ನು ಅರಳಿಸುವ ಸಾಧಾರಣ ಜೀವವಿದು. ನಗುವರೊಂದಿಗೆ ನಕ್ಕು ಅಳುವರೊಂದಿಗೆ ಅಳುವ ಇದು ಮತ್ತೇನು ತಾನೇ ಮಾಡೀತು. ಕುದಿವ ನೀರಿನಲ್ಲಿ ಬೆರೆತ ಮಸಾಲೆ ಪುಡಿಗಳಂತೆ ಆ ಕ್ಷಣದ ಇದರ ಭಾವಲೋಕಕ್ಕೆ ನೂರೆಂಟು ರುಚಿ, ನೂರೆಂಟು ಸುಗಂಧ, ನೂರೆಂಟು ಬಣ್ಣಗಳು. ಅವೆಲ್ಲವನ್ನೂ ಮೀರಿ ಹೆಪ್ಪುಗಟ್ಟಿದ ಆತಂಕ.
ಪೂರ್ತಿ ರಾತ್ರಿ ಭಯ ಆತಂಕ ನೋವುಗಳದ್ದೇ ಕಾರುಬಾರು. ನುಚ್ಚ್ಜುನೂರಾದ ದೇಹ ಮನಸ್ಸುಗಳು ಬೆಳಕಿಗಾಗಿ ದೀನವಾಗಿ ಬೇಡುತ್ತಿವೆ. ಕತ್ತಲೆಯನ್ನು ಸೀಳುವ ಮೊಗ್ಗಿಗೆ ಮೊಗೆದಷ್ಟೂ ಕತ್ತಲೆ ಗವ್ವನೆ ಮುತ್ತುತ್ತಿದೆ. ಯುದ್ಧಕ್ಕೆ ಹರಿಹಾಯ್ದ ಸೈನಿಕರಂತೆ ಕಂಪನಗಳು ಒಂದರ ಹಿಂದೊಂದು ಆವರ್ತಿಸಿ ಮೊಗ್ಗನ್ನು ಬೆಳಕಿಗೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಬಳ್ಳಿಗೆ, ಬಳ್ಳಿಯ ಸಂಗಾತಿ ಚಪ್ಪರಕ್ಕೆ ಕೊನೆಗೊಳ್ಳದ ರಾತ್ರಿಯ ಆ ವಿಷಣ್ಣತೆಯಲ್ಲಿ ದಿಕ್ಕು ತಪ್ಪಿ ಸಮುದ್ರದ ಮೇಲೆ ಹಾರುತ್ತಿರುವ ಜೋಡಿಹಕ್ಕಿಗಳ ಅನುಭವವಾಗುತ್ತಿದೆ.
ನೋವು! ನೋವು! ಹುಟ್ಟಿನ ಸಾಕ್ಷಾತ್ಕಾರದ ಘಳಿಗೆಯ ಹಿಂದೆ ಎದೆಬಗೆಯುವ ನೋವಿನದೇ ರಾಜ್ಯಭಾರ.
ಎಂತಹಾ ರಾತ್ರಿಯಾದರೂ ಅದಕ್ಕೆ ಕೊನೆಯಿಲ್ಲವೇನು? ಎಂತಹಾ ನೋವಾದರೂ ನಿರಂತg ವೇನು? ಅದೋ, ಪೂರ್ವದಿಕ್ಕಿನ ಆಸ್ಪತ್ರೆಯ ಕಿಟಕಿಯಿಂದ ನಿಶಾಂತನ ಎಳೆಯ ಕಿರಣಗಳು ಬರುತ್ತಿವೆ. ಒಂದೊಂದು ಕಿರಣವೂ ಹಾದಿಯುದ್ದಕ್ಕೂ ಕತ್ತಲೆಯನ್ನು ಕರಗಿಸಿ ಬೆಳಕಿನ ಹೊಳಪನ್ನು ನೀಡುತ್ತಿದೆ. ಸುತ್ತಲಿನ ಗಿಡ ಮರ ರಸ್ತೆ ಮನೆಗಳೆಲ್ಲಾ ಇಬ್ಬನಿಯ ಭಾಷ್ಪವನ್ನು ಸುರಿಸುತ್ತ ಭಾಸ್ಕರನನ್ನು ಸ್ವಾಗತಿಸುತ್ತಿವೆ.
ಇಗೋ, ಬಳ್ಳಿಯ ಕೊನೆಯ ಕಂಪನಕ್ಕೆ ಮೊಗ್ಗು ಬೆಳಕನ್ನು ಕಂಡೇಬಿಟ್ಟಿದೆ. ಸೋತು ಸೊರಗಿದರೂ ಬಳ್ಳಿ ಒಮ್ಮೆ ಹಗುರಾಗಿ ನಕ್ಕು ಮೊಗ್ಗನ್ನು ಸವರುತ್ತದೆ. ಚಪ್ಪರ ಮೂಕವಿಸ್ಮಿತವಾಗಿದೆ. ಮೊಗ್ಗನ್ನು ತಬ್ಬಿ ಹಿಡಿಯಲು ನೋಡುತ್ತಿದೆ. ಅಡಿಗರ ಸಾಲುಗಳು ಎಲ್ಲಿಂದಲೋ ತೂರಿಬರುತ್ತಿವೆ:
ಪ್ರತಿಯೊಂದು ಮಗು ಕೂಡ ಬಾನಿಂದಲೇ ಕೆಳ
ಕ್ಕಿಳಿದು ಮಣ್ಣಿಗೆ ಬಿದ್ದ ಬೆಳಕಿನ ಮರಿ;
ಗರಿಸುಟ್ಟ ಗರುಡ ಬರುತ್ತಾನೆ ಆರೈಕೆಗೆ
ನಮ್ಮ ನಿಮ್ಮವರಿವರ ಎಡೆಗೆ, ತೊಡೆಗೆ.
ಆಸ್ಪತ್ರೆಗಳಲ್ಲಿ, ಮನೆಗಳಲ್ಲಿ, ಗುಡಿಸಲುಗಳಲ್ಲಿ, ಜೋಪಡಿಗಳಲ್ಲಿ, ಮರುಭೂಮಿಗಳಲ್ಲಿ, ಗಡಿಗಳ ರಕ್ತದಂಚಿನ ಹೆಂಚಿನ ಮನೆಗಳಲ್ಲಿ, ಕಾಡುಗಳಲ್ಲಿ, ನಗರಗಳಲ್ಲಿ, ಆಸ್ಪತ್ರೆಯ ಆಪರೇಷನ್ ಥಿಯೇಟರುಗಳಲ್ಲಿ, ಅಜ್ಜಿಯ ಬೆಚ್ಚನೆಯ ಕೋಣೆಗಳಲ್ಲಿ, ಹಣತೆಯ ಬೆಳಕಿನಲ್ಲಿ, ಸೋಡಿಯಂ ದೀಪಗಳ ಅಡಿಗಳಲ್ಲಿ, ಬಯಲಿನ ಹಾಲ್ಚೆಲ್ಲಿದ ಬೆಳದಿಂಗಳಲ್ಲಿ … ಭೂಮಂಡಲದ ಪೂರಾ ಬೆಳಕಿನ ಮರಿಗಳು ಧರೆಗಿಳಿಯುತ್ತಿವೆ. ಮಣ್ಣನ್ನು ಮುತ್ತಿಕ್ಕಿದೊಡನೆಯೇ ಬೆಳಕನ್ನು ಚೆಲ್ಲಿ ಸೂರ್ಯನಂತೆ ಪ್ರಕಾಶಮಾನವಾಗಿ ನಿಲ್ಲುತ್ತಿವೆ.
ದೂರದಲ್ಲಿ ಮಿನುಗುವ ನಕ್ಷತ್ರಗಳು ನೋಡಿ ಕಣ್ಣು ಮಿಟುಕಿಸಿ ನಗುತ್ತವೆ ಅಷ್ಟೆ, ಅವುಗಳನ್ನು ಮುಟ್ಟಲಾಗುವುದಿಲ್ಲ. ಮುಟ್ಟಲಾಗದ ನಕ್ಷತ್ರವೊಂದು ಎದುರಿಗೇ ಬಂದಿದೆ ನಮ್ಮ ಸ್ವರೂಪದಲ್ಲಿಯೇ, ನಮ್ಮ ರಕ್ತ ಮಾಂಸ ಮೂಳೆ ಮಜ್ಜೆಗಳನ್ನು ಹೊತ್ತು. ನಮ್ಮೆದುರಿಗೇ ಇದೆ ಕೋಟಿವರ್ಷಗಳನ್ನು ಕ್ರಮಿಸಿ ಬಂದ ಬೆಳಕಿನ ಕಿರಣದಂತೆ. ನಮ್ಮೆದುರಿಗೇ ಇದೆ ಶುಭ್ರ ಧವಳಗಿರಿಯ ಸ್ಪರ್ಶಾತೀತ ಹಿಮರಾಶಿಯಂತೆ. ನಮ್ಮೆದುರಿಗೇ ಇದೆ, ದಾರಿ ಮರೆತು ಧರೆಗಿಳಿದ ಗಂಧರ್ವನಂತೆ. ನಮ್ಮೆದುರಿಗೇ ಇದೆ, ಗರಿಸುಟ್ಟು ಭೂಮಿ ಮುಟ್ಟಿದ ಗರುಡನಂತೆ.
ಬೊಗಸೆಯಲ್ಲಿ ಬಾಚಿ ತಬ್ಬಿ ಹಿಡಿದು ಬೆರಗುಗಣ್ಣುಗಳಿಂದ ನೋಡುತ್ತಾ ಆಸರೆಯ ಹಂದರ ಮೆಲುದನಿಯಲ್ಲಿ, ಬರೀ ಮೊಗ್ಗಿಗೆ ಕೇಳುವಷ್ಟೇ ದನಿಯಲ್ಲಿ ‘ನನ್ನ ಸೂರ್ಯ’ ಎನ್ನುತ್ತದೆ.
ಬೆಳಕಿನ ಮೊಗ್ಗು ಕಣ್ಣಗಲಿಸಿ ಧ್ವನಿ ಮೂಡಿದೆಡೆಗೆ ನೋಡುತ್ತದೆ.

ಪೂರ್ವ ಪಶ್ಚಿಮ ಸೀಮೋಲ್ಲಂಘಿತ ಬರಹಗಳು -ಸಂಕಲನದಿಂದ
ಕನ್ನಡಸಾಹಿತ್ಯ.ಕಾಂ ಪ್ರಕಟಣೆ: ಫೆಬ್ರವರಿ, ೨೦೦೬
ಕೃಪೆ: ಛಂದ ಪುಸ್ತಕ
ಪ್ರತಿಗಳಿಗೆ: ಛಿhಚಿಟಿಜಚಿಠಿusಣಚಿಞಚಿ ಂಖಿ ಥಿಚಿhoo.ಛಿom

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.