ಮಂಜುಗಡ್ಡೆ

ಇಂದು ಮಾರ್ಚ ಒಂದನೆಯ ತಾರೀಖು.
೨೯೦ ರೂಪಾಯಿ-ಕಿಸೆಯಲ್ಲಿ!
ಗೌರೀಶ ಕಿಸೆ ಮುಟ್ಟಿ ನೋಡಿದ. ದಪ್ಪವಾದ ಪಾಕೀಟು ಕೈಗೆ ಹತ್ತಿತು. ಮನಸ್ಸಿನಲ್ಲಿ ಸಮಾಧಾನ ತೂರಿ ಬಂತು.
ನಾಲ್ಕು ವರುಷಗಳ ಹಿಂದೆ ಬರಿಯ ೧೫೦ ರೂ. ದೊರೆಯುತ್ತಿದ್ದವು. ಸ್ಕೇಲಿನಲ್ಲಿ ಬದಲಾವಣೆ, ಅಕಸ್ಮಾತ್ತಾಗಿ ದೊರೆತ ಹೋದ ವರುಷದ ಪ್ರಮೋಷನ್-ಇವುಗಳ ಮೂಲಕ ಇಂದು ೩೦೦ಕ್ಕೆ ಸಮೀಪಿಸಿದ್ದಾನೆ. ಖಾರಿನಲ್ಲಿ ಒಳ್ಳೆಯ ಹೋಟೆಲಿನಲ್ಲಿ ಸಿಂಗಲ್ ರೂಮು: ವಸೀಲೆ, ಕೊಂಚ ಲಂಚ-ಆದರೂ ಅಡ್ಡಿಯಿಲ್ಲ. ೧೪೦ ರೂ. ತಿಂಗಳಿಗೆ ಊಟ ಹಿಡಿದು. ೬೦ ರೂ. ಉಳಿದ ಖರ್ಚು: ಸಿನೇಮಾ, ಲಾಂಡ್ರಿ, ಚಹ, ಟ್ರೇನು ಮುಂ… ೯೦ ರೂ. ತಿಂಗಳಿಗೆ ಬ್ಯಾಂಕಿನಲ್ಲಿ ಜಮಾ… ಈಗಾಗಲೇ ಒಟ್ಟು ೧೪೦೦ ರೂ. ಇವೆ. ಇನ್ನು ತಿಂಗಳಿಗೆ ೧೦೦ ರೂಪಾಯಿಗಳನ್ನು ಉಳಿಸಬೇಕು. ಅಂದರೆ ೧೦೦ ಗುಣೆಲೆ ೧೨=೧೨೦೦.ರೂ. ವರ್ಷಕ್ಕೆ. ಇನ್ನು, ೫ ವರ್ಷಗಳಲ್ಲಿ ೧೨೦೦ ಗುಣಿಲೆ ೫=೬೦೦೦ ರೂ. ಅಧಿಕ ಭಡತಿಯಿಂದ ಬರಬಹುದಾದ ೧೨೦+೨೪೦ ಅಂದರೆ ೩೬೦ ಅಧಿಕ ೩೬೦-ಅಧಿಕ ೪೮೦ ಅಧಿಕ ೬೦೦… ಸುಮಾರು ೨೦೦೦ ರೂ. ಹೆಚ್ಚಿಗೆ ೫ ವರ್ಷಗಳಲ್ಲಿ…
-ಓಹ್, ಈ ಎಲ್ಲ ಮೀನಮೇಷೆ ಏಕೆ? ಹಣ ಕೂಡಿಟ್ಟು, ಬಂಗಲೆ, ಕಾರು ತೆಗೆದುಕೊಳ್ಳುವದು ಅಷ್ಟರಲ್ಲಿಯೇ ಇದೆ!
ಹಾರ್ನಬಿ ರೋಡು. ಶನಿವಾರ ಬೇರೆ. ಗದ್ದಲ ಕೇಳಬೇಕೆ? ರೋಡು ಕ್ರಾಸು ಮಾಡಿ, ಆ ಬದಿಯ ನೆರಳಿನಲ್ಲಿ ನಡೆಯಬೇಕೆಂದು ಗೌರೀಶ ನಿಶ್ಚಯಿಸಿದ. ಕಾರುಗಳ ಸಾಲೇ ನಡೆದಿತ್ತು-ಇರುವೆಯ ಸಾಲಿನಂತೆ.
-ಒಂದು ದಿನ, ೫ ಅಲ್ಲ ೧೦ ವರ್ಷಗಳ ನಂತರ ತಾನೂ ಆ ಸಾಲಿನಲ್ಲಿರಬಹುದು! ತನ್ನಷ್ಟಕ್ಕೆ ತಾನೇ ನಕ್ಕ ಗೌರೀಶ… ಐದು-ಹತ್ತು ವರುಷ! ಅಷ್ಟರೊಳಗೆ ಏನೇನಾಗುವದೋ ಏನೋ! ಮೂರನೆಯ ಮಹಾಯುದ್ಧ ಸುರುವಾಗಿ ಮುಗಿಯಬಹುದು… ಅಥವಾ ತಾನು ಲಗ್ನವಾಗಿ…
ಲಗ್ನದ ವಿಚಾರ ಸುಳಿಯುತ್ತಲೆ, ಗೌರೀಶನ ಮುಖದ ತೇಜ ಕೊಂಚ ಇಳಿಯಿತು, ತುಟಿಗಳ ತುದಿಗಳು ಕೊಂಚ ಕೆಳಗಿಳಿದವು. ಹುಬ್ಬು ಸ್ವಲ್ಪ ಗಂಟಿಕ್ಕಿದವು. ಇವುಗಳನ್ನೆಲ್ಲ, ಇಸ್ತ್ರೀ ಹೊಡೆದು ಚೊಕ್ಕ ಮಾಡುವವನಂತೆ, ಕರಚೀಫಿನಿಂದ ಮುಖ ಒರೆಸಿದ.
ಹಾಂ-ಸದ್ಯಕ್ಕೆ ಆ ಬದಿಗೆ ಜಾರಬಹುದು-ದಾರಿಯಲ್ಲಿ ಯಾವ ಟ್ರಾಫಿಕ್ಕು ಇಲ್ಲ-ಆ ಕಾರು ಇನ್ನೂ ದೂರವಿದೆ: ಸ್ಟೂಡಬೇಕರ್? ಅಲ್ಲ, ವ್ಹಾಕ್ಝೋಲ್!
ಗೌರೀಶ ರೋಡು ದಾಟಿ, ನೆರಳಿದ್ದ ಪುಟಪಾಥದ ಮೇಲಿಂದ, ಬೋರೀ ಬಂದರದ ಕಡೆಗೆ ನಡೆಯತೊಡಗಿದ.
ತಾರಾಪೋರವಾಲ ಬುಕ್ ಸ್ಟಾಲ್! ಓಹ್! ಹಿಂದೆ ತಾನು ಕನಸು ಕಟ್ಟಿದುದರ ನೆನಪಯಿತು; ಮನೆಯಲ್ಲಿ ಒಳ್ಳೆಯ ಲಾಯಬ್ರರಿ ಕಟ್ಟಬೇಕು-ಎಲ್ಲ ಕ್ಲಾಸಿಕ್ಸು- ಎಲ್ಲ ತರದ ಒಳ್ಳೊಳ್ಳೆಯ ಪುಸ್ತಕಗಳು-ಸುಪ್ರಸಿದ್ಧ ಮ್ಯಾಗಝೀನಗಳು-ಇವೆಲ್ಲ ಓರಣವಾಗಿ ಇಡಲ್ಪಟ್ಟ, ನಾಲ್ಕೆಂಟು ಕನ್ನಡಿಯ ಕಪಾಟುಗಳಿರಬೇಕು…. ಹಾಗೂ ತಾನು… ಒಂದು ಕಟುನಗೆ ಸುಳಿದು ಹೋಯಿತು ಗೌರೀಶನ ಮುಖದ ಮೇಲೆ!-ಒಳಗೆ ಹೋಗಿ ಕೆಲವು ಪುಸ್ತಕಗಳನ್ನು-ಬರ್ಟ್ರಾಂಡ್ ರಸೆಲನ ಎಲ್ಲ ಪುಸ್ತಕಗಳನ್ನು ಕೊಳ್ಳಬೇಕೆಂದೆನಿಸಿತು… ಹುಚ್ಚು! ತನಗೆ ಹುಚ್ಚು ಹಿಡಿದಿಲ್ಲವಷ್ಟೆ! ಅವುಗಳನ್ನು ಓದು ತತ್ವಜ್ಞಾನಿಯಾಗುವದು ಅಷ್ಟರಲ್ಲಿಯೇ ಇದೆ! ತಲೆಗೆ ಒಣ ತಾಪ…! ಒಂದು ಕಾದಂಬರಿಯನ್ನಾದರೂ ಕೊಳ್ಳೋಣ ಎಂದು ನಿಶ್ಚಯಿಸಿ, ಒಳಗೆ ಸೇರಿದ.
ಎಷ್ಟೋ ವರ್ಷಗಳ ನಂತರ ಈ ಬುಕ್ ಸ್ಟಾಲಿನಲ್ಲಿ ಗೌರೀಶ ಹೋಗುತ್ತಿದ್ದಾನೆ-ಏನು ಕೇಳಬೇಕು, ಯಾರಿಗೆ ಕೇಳಬೇಕು ಎಂದು ಯೋಚಿಸತೊಡಗಿದ. ಅಷ್ಟರಲ್ಲಿ ಒಬ್ಬ ಸ್ಮಾರ್ಟ್ ಮನುಷ್ಯ ನಗೆಯಿಂದ ಸ್ವಾಗತಿಸಿದ:

“ನಿಮಗೇನು ಬೇಕು-ಪ್ಲೀಜ?” ಎಂದು ಇಂಗ್ಲೀಷಿನಲ್ಲಿ ಕೇಳಿದ.
ಗೌರೀಶ ಸ್ವಲ್ಪ ವಿಚಾರ ಮಾಡುವವನಂತೆ ನಿಂತ. ಒಬ್ಬ ಒಳ್ಳೆಯ ಕಾದಂಬರಿಕಾರನ ಹೆಸರು ನೆನಪಾಗಬಾರದೆ? ಥೂ ಇದರ… ಒಂದೆರಡು ಪೆಂಗ್ವಿನ್ ಪುಸ್ತಕ ಒಯ್ದರಾಯಿತು. ಹಣವೂ ಹೆಚ್ಚು ಹೋಗುವುದಿಲ್ಲ.

“ನನಗೆ ಕೆಲವು ಪೆಂಗ್ವಿನ್ ಪುಸ್ತಕ ಬೇಕಾಗಿವೆ.” ಎಂದು ಧೈರ್ಯವಾಗಿ ಉಸುರಿದ.

“ಹಾಗಾದರೆ ಇತ್ತ ಬನ್ನಿ” ಎಂದು ಗೌರೀಶನನ್ನು ಕರೆದೊಯ್ದು ಒಂದು ದೊಡ್ಡ ಪುಸ್ತಕಗಳ ಶೆಲ್ಫಿನ ಮುಂದೆ ನಿಲ್ಲಿಸಿದ ಆ ನಗುಮುಖದ ಮನುಷ್ಯ. ಮೇಲಿನಿಂದ ಕೆಳಗೆ, ಎಡದಿಂದ ಬಲಕ್ಕೆ ನೋಡುತ್ತ ನಿಂತ ಗೌರೀಶ. ಅಲ್ಲಿ ‘ವೋಡಹೌಸ’ನ ಒಂದು ಪುಸ್ತಕ ಕಣ್ಣಿಗೆ ಬಿತ್ತು. ಹೆಸರು ಪರಿಚಿತವಿದ್ದಂತೆ ತೋರಿತು. ಕೂಡಲೆ ಗೌರೀಶ ಆ ಪುಸ್ತದ ಮನುಷ್ಯನಿಗೆ ಕೇಳಿದ:

“ನಿಮ್ಮ ಹತ್ತಿರ ವೋಡಹೌಸ ಉಂಟೇನು?”

“ಹೌದು ಇಲ್ಲಿ ನೋಡ್ರಿ, ಎರಡು ಇದ್ದಾವೆ. ವೋಡಹೌಸ್-ಓಹ್, ಬಹಳ ಚೆನ್ನಾಗಿ ಬರೆಯುತ್ತಾನೆ.”
ಅಬ್ಬ, ತನಗಿಂತ ಹೆಚ್ಚು ಗೊತ್ತಿದೆ ಎಂದು ತೋರಿಸುತ್ತಿದ್ದಾನಲ್ಲ ಈ ಪೋರ ಎಂದೆನಿಸಿತು ಗೌರೀಶನಿಗೆ-

“ಹೌದು, ನನಗೆ ಗೊತ್ತಿದೆ, ನಾನೂ ಓದಿದ್ದೇನೆ ಅವನನ್ನು, ಇವೆರಡನ್ನು ಕಟ್ಟಿಕೊಡಿ” ಎಂದು ಗಂಭೀರವಾಗಿ ಹೇಳಿದ.
ವೋಡಹೌಸ್ ಒಳ್ಳೆಯ ಹಾಸ್ಯ ಕತೆಗಳನ್ನು ಬರೆಯುತ್ತಾನೆ ಎಂದು ಹಿಂದೆ ಎಂದೋ ಅವನ ಮಿತ್ರರು ಅನ್ನುತ್ತಿದ್ದರು-ಕಾಲೇಜಿನಲ್ಲಿ… ಹಾಗೂ ಅವನ ಬಗ್ಗೆ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯಲ್ಲಿಯೋ ಎಲ್ಲೋ ಓದಿದ್ದರ ನೆನಪಾಯಿತು… ‘ಇಲ್ಲಸ್ಟ್ರೇಟೆಡ್ ವೀಕ್ಲಿ’!-ಇನ್ನು ಮೇಲೆ ಕ್ರಾಸ್‌ವರ್ಡ್ ತುಂಬಿ ಕಳಿಸಲು ಏಕೆ ಸುರುಮಾಡಬಾರದು? ಸಿಕ್ಕರೂ ಸಿಗಬಹುದು ಒಂದು ೪೦-೫೦ ಸಾವಿರ ರೂಪಾಯಿ ಒಮ್ಮೆಲೆ-ಮೊನ್ನೆ ಆ ರಿಝರ್ವ ಬ್ಯಾಂಕಿನ ಕ್ಲಾರ್ಕನಿಗೆ ಸಿಕವಂತೆ ೬೦,೦೦೦ ರೂ… ‘ಗೆಲ್ಲಲೇಬೇಕು ೨ ಲಕ್ಷ ರೂಪಾಯಿ!’ ಅಹುದು ಹಣ-ಹಣ…
ಬಿಲ್ಲು ನೋಡಿ, ಮೂರು ರೂಪಾಯಿ ಕೊಟ್ಟು ಪುಸ್ತಕ ತೆಗೆದುಕೊಂಡು ಹೊತಗೆ ಬಂದ.

‘-ಹಣ-‘ಹಣವೆಂದ ಕೂಡಲೆ ಹೆಣ ಕೂಡ ಬಾಯಿ ಬಿಡುವದಂತೆ’ ಹೌದು, ನಾನೊಂದು ಹೆಣವಲ್ಲದೆ ಮತ್ತೇನು? ನಾನು ಸತ್ತರೆ ಯಾರು ಇದ್ದಾರೆ ಅಳಲಿಕ್ಕೆ?-ತಾಯಿ! ಅಲ್ಲಿ ದೂರದ ಹಳ್ಳಿಯಲ್ಲಿ ದೊಡ್ಡಪ್ಪನ ಮನೆಯಲ್ಲಿದ್ದಾಳೆ… ತಾಯಿ-ನಂತರ ತಮ್ಮ!ಅವನ ವಿದ್ಯಾಭ್ಯಾಸ ದೊಡ್ಡಪ್ಪ ನೋಡಿಕೊಳ್ಳುತ್ತಾನೆಂದು ಚೆನ್ನು. ತಾಯಿ ಮೊನ್ನೆ ಒಂದು ಪತ್ರ ಹಾಕಿಸಿದ್ದಳಲ್ಲವೇ-‘ಬೈಲಹೊಂಗಲದ ಕುಲಕರ್ಣಿಯವರ ಹೆಣ್ಣು ಬಂದಿದೆ…’
ಹೆಣ್ಣು! ಅವನ ಬಲಬದಿಗೆ ಓರ್ವ ಪಾರ್ಸಿ ಹುಡಿಗೆ ನಡೆದಿದ್ದಳು. ತುಂಬಿದ ದೇಹ, ಬಾಬ್‌ಕಟ್ಟು, ಒಳ್ಳೆಯ ‘ಫಾರ್ಮು’, ಚಂದಾಗಿ ಚಾಚಿದ ‘ಬ್ರೆಸ್ಟ್ಸು’-ಮೂಗು ಸ್ವಲ್ಪ ಉದ್ದು!… ಅವಳ ಆದಷ್ಟು ಹತ್ತಿರದಿಂದ ಹೋಗತೊಡಗಿದ ಗೌರೀಶ… ಲಗ್ನವಾದ ಮೇಲೆ ಹೆಂಡತಿಯೊಡನೆ ಹೀಗೆಯೇ ಹೋಗಬಹುದಲ್ಲವೇ ಹಾದಿಯ ಮೇಲೆ, ತನ್ನ ಕೈಯು ಅವಲ ದೇಹಕ್ಕೆ ತಾಗಿ…
-ಕೂಡಲೆ ಒಂದು ನೆನಪು ಹರಕು-ಹರಕಾಗಿ ಸುಳಿದು ಬಂತು ಅವನ ಮನಸಿನಲ್ಲಿ. ಮಧೂ-ಅವನ ಈಗೀಗಿನ ಗೆಳೆಯ, ಜೀವನದಲ್ಲಿ ಮಜಾದ ಹೊರತು ಬೇರೆ ಏನೂ ಇಲ್ಲ ಎನ್ನುವ ಮಧೂ-ಅಂದು ಅವನು ತಂದ ಹುಡುಗಿ-ಜುಹೂದಲ್ಲಿ ಬಾಡಿಗೆ ಕೋಣೆ-ಆ ಹೊಲಸು ನಾರುವ ಅವಳ ಬಾಯಿ-ಅತ್ತರಿನ ಘಮಘಮಾಟವಿದ್ದ ಅವಳ ಒಳಗಿನ ಎದೆಕಟ್ಟು-ಆ ಕರಿಯ ಮೆತ್ತಗಿನ ಲಠ್ಠ ದೇಹ-ಅವಳ ಹೊಲಸು ಕುಲುಕುಲು ನಗೆ….
-ಗೌರೀಶನ ಮುಖ ಗಂಟಿಕ್ಕಿತು; ಅಯ್ಯೋ, ಎಂಥ ಜೀವನ! ಲಗ್ನ-ತಾನು ಎಂದೂ ಲಗ್ನ ಆಗಲಾರೆ. ಒಂದು ಹೆಣ್ಣನ್ನು ಮನೆಯಲ್ಲಿ ಸಾಕಿ ದಿನಾಲು ಉಪಭೋಗಿಸಿದರೆ, ಎಂಟೇ ದಿನಗಳಲ್ಲಿ ಜೀವನದ ಬಗ್ಗೆ ತಿರಸ್ಕಾರ ಹುಟ್ಟಬಹುದು! ಲಗ್ನ-ಹೆಣ್ಣು-ಉಪಭೋಗ-ಮಕ್ಕಳು-ಟ್ಯಾಂ-ಪ್ಯಾಂ-ಅವುಗಳ ಸಂರಕ್ಷಣೆ-ಸಾಲೆ-ಕಾಲೇಜು-ಓಹ್-ಈ ಚಕ್ರ ಬೇಡ. ಆ ಮಕ್ಕಳೂ ಮುಂದೆ ತನ್ನಂತೆ ಆಗಬಹುದು- ನಿಷ್ಪ್ರಯೋಜಕ, ದುಃಖಿ! ಜಗತ್ತಿನಲ್ಲಿ ಮತ್ತೇಕೆ ದುಃಖ-ಸಂತಾಪ-ಜಂಜಾಟ ಹೆಚ್ಚಿಸಬೇಕು? ತನ್ನಿಂದ ಇಂಥ ತಪ್ಪು-ಅಪರಾಧ ಆಗಕೂಡದು. ತಾನೊಬ್ಬನೇ ಜಗತ್ತಿನಲ್ಲಿದ್ದದ್ದು ಸಾಕು. ಏಕೆ ಆ ಮಕ್ಕಳು-ಮರಿ?… ಯಾಕೆ ಅವರ ಜೀವನ-ಜಂಜಾಟ? ಲಗ್ನವನ್ನೇ ಆಗಕೂಡದು… ತಾನೊಬ್ಬನೇ ಇರಬೇಕು. ಆರಾಮಾಗಿ, ನಿಶ್ಚಿಂತೆಯಿಂದ. ಮುದುಕನಾದರೆ ಅಥವಾ ಸಂಸಾರದ ಬೇಸರ ಬಂದರೆ ಒಂದು ರಾತ್ರಿ ವಿಷ-ಅದರಲ್ಲೇನು ವಿಶೇಷ-ಮುಂಬಯಿಯಲ್ಲಿ ದಿನಾಲು ನೂರಾರು ಮಂದಿ ಸಾಯುತ್ತಿರಬೇಕು. ಮರಣಕ್ಕೆ ಯಾಕೆ ಹೆದರಬೇಕು? ಒಂದು ದಿನ ಸಾಯುವದು ಇದ್ದೇ ಇದೆ… ನಾಲ್ಕು ಜನ ತನ್ನನ್ನು ಸುಡುಗಾಡಿಗೆ ಒಯ್ಯುವ ಚಿತ್ರ ಕಣ್ಣುಕಟ್ಟಿತು. ಸುಡುಗಾಡಿಗೆ ಒಯ್ದು, ತನ್ನನ್ನು ಚಿತೆಯ ಮೇಲೆ ಇರಿಸಿದ್ದಾರೆ-ತನ ಥಟ್ಟನೆ ಜೀವ ಬಂದಿದೆ. ‘ಹಾ-ಹಾ-ಹಾ-ಮರಣಕ್ಕೆ ಯಾಕೆ ಹೆದರುತ್ತೀರಿ, ಲೇಡೀಜ ಆ೦ಡ ಜಂಟಲ್‌ಮೆನ್-ನೋಡಿರಿ, ಬೇಕಾದರೆ ನಾನು ಜೀವಂತ ಚಿತೆಯ ಮೇಲೆ ಕೂಡ್ರುತ್ತೇನೆ.’ ಬೆಂಕಿಯ ಜ್ವಾಲೆಗಳು ಮೇಲೇರುವವು-ಆದರೆ ತಾನು ಮಾತ್ರ ಗಂಭೀರನಾಗಿ, ಶಾಂತನಾಗಿ ನಿಂತಿದ್ದಾನೆ-ಜೋನ್ ಆಥ್ ಆರ್ಕಳಂತೆ! ತಾನು ಮತ್ತು ಜೋನ್-ಏನು ಭೇದ ಇಬ್ಬರಲ್ಲಿ? ಅವಳು ಏನೋ ಮಹತ್ಕಾರ್ಯ ಮಾಡಿದಳು-ಮಹತ್ಕಾರ್ಯವಂತೆ ಮಣ್ಣು!-ಮತ್ತು ತಾನು ಏನೂ ಮಾಡಿಲ್ಲ-ಜೀವಿಸುವದೆಂದರೇನೇ ಮಹತ್ಕಾರ್ಯವಲ್ಲವೆ?… ಇನ್‌ಗ್ರಿಡ್ ಬರ್ಗಮನ್ ಚನ್ನಾಗಿ ಕೆಲಸ ಮಾಡಿದ್ದಾಳೆ ‘ಜೋನ್ ಆಫ್ ಆರ್ಕ’ ಪಿಕ್ಚರಿನಲ್ಲಿ! ಇಂದು ನ್ಯೂ ಎಂಪಾಯಿರ ಥಿಯೇಟರಿನಲ್ಲಿ ‘ಎ ಸ್ಟ್ರೀಟ್ ಕಾರ್ ನೇಂಡ್ ಡಿಸೈರ್’ ಅಂತೆ!… ಯಾಕೆ ಹೋಗಬಾರದು? ಸಿನೆಮಾ ನೋಡುವಾಗ ಹತ್ತಿರ ಒಂದು ಹುಡುಗಿ ಇದ್ದರೆ ಎಷ್ಟು ಚಂದ, ಏನು ಮಜಾ… ಲಂಡನದಲ್ಲಿಯಂತೆ ಇಲ್ಲಿ ‘ಪಿಕ್-ಅಪ್’ ಹುಡುಗಿಯರು ಏಕೆ ದೊರೆಯುವುದಿಲ್ಲವೋ?… ಇಂದು ಆಫೀಸಿನಲ್ಲಿಯ ಆ ಟೈಪಿಸ್ಟ ಕ್ರಿಶ್ಚಿಯನ್ ಕಾಳಿಗೆ ಕರೆದರೆ ಬರುತ್ತಿತ್ತೋ ಏನೋ-
-ಒಂದು ದಿನ ಆಫೀಸಿನ ಅಟ್ಟದ ಮೂಲೆಯಲ್ಲಿ ಅವಳನ್ನು ಜಗ್ಗಿ, ಅಪ್ಪಿ ಮುತ್ತು ಕೊಟ್ಟಿದ್ದರ ನೆನಪಾಯಿತು ಗೌರೀಶನಿಗೆ… ಅವಳೇ ಪ್ರೋತ್ಶಾಹಿಸಿದ್ದಳು-‘ನಿನ್ನ ಕಣ್ಣು ಬಹಳ ಚಂದವವೆ!’ ಅವನದೇನು ತಪ್ಪು? ತಾನಾಗಿಯೇ ಯಾವ ಭಾನಗಡಿಯಲ್ಲಿ ಬೀಳುವ ಮನುಷ್ಯನಲ್ಲ ಗೌರೀಶ. ಆದರೆ ಯಾರಾದರೂ ಅಮಿಷ ತೋರಿಸಿದರೆ, ಸ್ವಲ್ಪ ಹೊತ್ತು ರುಚಿ ನೋಡಿದುದರಲ್ಲಿ ತಪ್ಪೇನು? ಆ ಹುಡುಗಿ ಸಾವಕಾಶ ಅವನನ್ನು ಬುಟ್ಟಿಯಲ್ಲಿ ಹಾಕಲು ಯತ್ನಿಸಿದ್ದಳು. ವಾಹವಾ! ಅವನು ಅವಳ ಗಾಳಕ್ಕೆ ಬಲಿಬೀಳುವ ಮೀನೇ?… ಅಥವಾ ಅವಳನ್ನು ಲಗ್ನವಾದರೆ ಹೇಗೆ? ಬೆಟ್ಟಿ-ಬೆಟ್ಟಿ ಫರ್ನಾಂಡಿಸ-ಹಾಗೆ ನೋಡಿದರೆ ತೀರ ಕೆಟ್ಟೇನೂ ಇಲ್ಲ. ಅಂದ ಹಾಗೆ ಅವಳನ್ನು ಲಗ್ನವಾದರೆ ಏನಾಗಬಹುದು? ಮನೆಯಲ್ಲಿ ಎಲ್ಲರೂ ಸಿಟ್ಟಿಗೇಳಬಹುದು- ಏಳಲಿ!… ಅವನು ಕ್ರಿಶ್ಚಿಯನ್‌ನಾಗಬೇಕೆಂದು ಅವಳು ಹಟಹಿಡಿದರೆ…
ಹುಚ್ಚು! ಎಂದು ಆ ಹುಚ್ಚ ಕಲ್ಪನೆಯನ್ನು ಜಾಡಿಸಿ ಒಗೆದ, ಕೋಟಿನ ಮೇಲೆ ಕುಳಿತ ಕೆಟ್ಟ ಕೀಟಕವನ್ನು ಜಾಡಿಸಿ ಒಗೆಯುವಂತೆ!
ನ್ಯೂ ಎಂಪಾಯಿರ ಥಿಯೇಟರಿಗೆ ಹೋಗಿ ಕ್ಯೂದಲ್ಲಿ ನಿಂತ. ಕ್ಯೂ ಸಾಕಷ್ಟು ಉದ್ದವಿದ್ದುದರಿಂದ ತಿಕೀಟು ಸಿಗಬಹುದೋ ಎಂದು ಸಂಶಯ. ಅವನ ಮುಂದೆ ಪಾರ್ಸಿ ಮುದುಕೆಯೊಬ್ಬಳು ನಿಂತಿದ್ದಳು. ಅವಳನ್ನು ನೋಡಿ ಪಾಪವೆನಿಸಿತು ಗೌರೀಶನಿಗೆ: ಈ ಮುದುಕಿಗೆ ಇನ್ನೂ ಚಿತ್ರಪಟ ನೋಡುವ ಹುಚ್ಚು, ಅದೂ ಒಬ್ಬಳೇ ಬಂದಿದ್ದಾಳೆ. ಮಕ್ಕಳು-ಗಂಡ ಯಾರೂ ಇರಲಿಕ್ಕಿಲ್ಲ. ಈ ತೋಳಿಲ್ಲದ ಬ್ಲಾವುಜೇಕೆ ಹಾಕುತ್ತಾರೋ ಇವರು? ಅಸಹ್ಯವಾದ ತೋಳುಗಳು-ಜೋತುಬಿದ್ದಂಥ ತೊಗಲು… ಅವಳು ಸೀರೆಯಿಲ್ಲದೆ ಹೇಗೆ ಕಾಣಬಹುದು ಎಂದು ಗೌರೀಶ ತನ್ನ ಮನಃಚಕ್ಷುವಿನ ಮುಂದೆ ಕಲ್ಪಿಸಿದ. ಅವನು ಸ್ವಲ್ಪ ನಡುಗಿದ!-ಓ ಡಿಯರ್, ಇದು ಜೀವನವೇ! ಅವನು ಲಗ್ನವಾದ ಹೆಣ್ಣು ಮುಂದೆ ಇದೇ ಸ್ಥಿತಿಗೆ ಬಂದರೆ, ಅವಳೊಡನೆ ಸಂಸಾರ ಮಾಡುವುದು ಹೇಗೆ-ದಿನಾಲು ಅವಳೊಡನೆ ಇರುವದು ಹೇಗೆ?-ಛೆ!

‘೧-೫-೦ ಟಿಕೇಟ ಪ್ಲೀಜ. ದಿಸ್ ಶೋ’ ಎಂದ. ಟಿಕೇಟು ತೆಗೆದುಕೊಂಡು ಕ್ಯೂದಿಂದ ಸರಿದ. ಜನರನ್ನು ನೋಡೋಣ ಎಂದು ಒಳ್ಳೆಯ ಮೂಲೆಯ ಜಾಗೆಯಲ್ಲಿ ಹೋಗಿ ನಿಂತ. ನೂರೆಂಟು ಮುಖಗಳು, ಒಂದಾದರೂ ಪರಿಚಯದ ಮುಖವಿರಬಾರದೇ? ಸಿನೇಮಾದ ಚಿತ್ರಗಳನ್ನು ಅಲ್ಲಿ ಇರಿಸಿದ್ದು ಕಂಡುಬಂತು. ಆ ಚಿತ್ರಗಳನ್ನಾದರೂ ನೋಡೋಣ ಎಂದು ಅತ್ತ ಸರಿದ. ಅವನು ಇಂದು ನೋಡಲಿರುವ ಪಿಕ್ಚರಿನಲ್ಲಿ ವ್ಹಿವ್ಹಿಯನ್ ಲೇ-
ವ್ಹಿವ್ಹಿಯನ್ ಲೇನೇ? ಹಾಗಿದ್ದರೆ ಸಿನೇಮಾ ಚೆನ್ನಾಗಿರಬೇಕು! ಬಂದದ್ದು ಸಾರ್ಥಕವಾಯಿತು. ಹಿಂದೆ-‘ಸೀಜರ್ ಆ೦ಡ ಕ್ಲಿಯೋಪಾತ್ರಾ’ ಬಂದಾಗ ವ್ಹಿವ್ಹಿಯನ್ ಲೇ ಇದ್ದಳೆಂದು-ನಾಲ್ಕು ಸಲ ಸಿನೇಮಾ ನೋಡಿದ್ದ ಗೌರೀಶ. ಯಾಕೆ? ವ್ಹಿವ್ಹಿಯನ್ ಲೇ ಅವಳು ಕಲ್ಪಲತೆಯಂತೆ ಕಾಣುತ್ತಿದ್ದಳು. ಅದಕ್ಕಾಗಿ! ಕಲ್ಪಲತೆ! ಗೌರೀಶನ ಮನಸ್ಸಿನಲ್ಲಿ ವಿದ್ಯುಲ್ಲತೆ ಮಿಂಚಿದಂತಾಯಿತು. ಕುತೂಹಲದಿಂದ ಆ ಫೋಟೋಗಳನ್ನು ಕೂಲಂಕಷವಾಗಿ ನೋಡತೊಡಗಿದ. ಹೌದು, ಕಲ್ಪಲತೆಯೇ ಹೌದು! ಕೆಲವು ‘ಪೋಜು’ಗಳಲ್ಲಿ-ವ್ಹಿವ್ಹಿಯನ್ ಲೇ ಎರಡು ಹೆರಳು ಜೋಡಿಸಿದರೆ ಕಲ್ಪಲತೆಯಂತೆಯೇ ಕಾಣಿಸುವಳು… ಗೌರೀಶನ ತಲೆಯಲ್ಲಿ ಕಲಮಲವೆದ್ದಿತು. ಕಲ್ಪಲತೆಯ ವಿಚಾರ ಅವನ ಮನಸ್ಸಿನ ಮೇಲೆ ಮೂಡುವದೇ ತಡ, ಅಲಾರ್ಮ ಬೆಲ್ಲು ಒತ್ತಿದಂತೆ ಅವನ ತಲೆ ತುಂಬ ಗುಲ್ಲೋಗುಲ್ಲು:-
ಕಲ್ಪಲತೆಯನ್ನು ಸುಮ್ಮನೆ ಬಿಡಬಾರದಿತ್ತು…. ಎಷ್ಟೊಂದು ಸಹಜವಾಗಿ ಅವಳು ನನ್ನನ್ನು ನಿರಾಕರಿಸಿದಳಲ್ಲ. ಸ್ವಲ್ಪವೂ ಕರುಣೆಯಿದ್ದಿಲ್ಲವೇ ಅವಳಿಗೆ? ಅವಳ ಮನಸ್ಸೆಂದರೆ ಹಿಮದ ಮುದ್ದೆ-ಮಂಜುಗಡ್ಡೆಯಾಗಿತ್ತೇ? ಈ ಜಗತ್ತಿನಲ್ಲಿ ಯಾವುದಾದರೂ ಹೆಣ್ಣಿನ ಬಗ್ಗೆ ಪ್ರೇಮ ಎಂಬ ಭಾವನೆ ನನ್ನ ಹೃದಯದಲ್ಲಿ ಮೂಡಿದ್ದರೆ, ಅದು ಕಲ್ಪಲತೆಯ ಬಗ್ಗೆ!… ಅವಳ ಸಲುವಾಗಿ ಏನು ಬೇಕಾದರೂ ಮಾಡಲು ತಯಾರಾಗಿದ್ದೆ. ಮನೆ-ಮಠ ಎಲ್ಲ ಬಿಟ್ಟು, ಅವಳ ದಾಸನಾಗಲು ಒಂಟಿಕಾಲಮೇಲೆ ಸಿದ್ಧನಾಗಿದ್ದೆ… ಅವಳ ಬೆನ್ನುಹತ್ತಿ ಎರಡುವರ್ಷ ಬಿ.ಎ. ನಪಾಸಾದೆ… ತ್ಯಾಗ! ತ್ಯಾಗ! ಆಯ್ ಏ ಎಸ್ ಪರೀಕ್ಷೆಗೂ ಕೂಡಲಾಗಲಿಲ್ಲ-ವಯಸ್ಸಾಯಿತೆಂದು ಒಳ್ಳೆಯ ನೌಕರಿ ದೊರೆಯಲಿಲ್ಲ-ಎಲ್ಲ ಅವಳ ಸಲುವಾಗಿ! ಇಷ್ಟೆಲ್ಲ ಗೊತ್ತಿದ್ದೂ ಇವಳು ನನ್ನನ್ನು… ನಾನು ಇವಳ ದೆಸೆಯಿಂದ ಕೊರೆಗಿದ್ದೇನೆ, ದುಃಖಪಟ್ಟಿದ್ದೇನೆ-ಇವಳು ಮಾತ್ರ ನನ್ನ ದುಃಖ-ಕೊರಗು-ಕೂಗು ಎಲ್ಲವುಗಳನ್ನು ಕಡೆಗಣಿಸಿ ಮೂಗು ಮೇಲೆ ಮಾಡಿ ಹೋದಳು. ಎರಡು ವರ್ಷ ಸಾಂಗತ್ಯ-ಸಹವಾಸ! ದಿನಾಲು ಕಾಲೇಜಿಗೆ ಹೋಗಬೇಕಾದರೆ ಅವಳ ಹಾದಿ ಕಾಯುವ ಪರಿಪಾಠ-ಅವಳು ಹಾದಿಯ ಮೇಲೆ ಕಾಣುತ್ತಲೆ ಓಡಿಹೋಗಿ ಅವಳನ್ನು ಬಸ್‌ಟಾಪ್‌ದ ಮೇಲೆ-ಸಹಜವಾಗಿ ಅನ್ನುವಂತೆ-ಭೆಟ್ಟಿಯಾಗುವುದು… ಆಮೇಲೆ ಈ ರೂಟಿನಿಂದ ಅರ್ಧತಾಸು ಪ್ರಯಾಣ-ಹರಟೆ-ಚೇಷ್ಟೆ-ಮಾತು-ನಗುವದು-ಕಲೆಯುವದು… ಎರಡು ವರ್ಷ-ತಲೆಕೆಡಿಸಿದಳು. ನನ್ನ ಮನಸ್ಸು ಬಿಚ್ಚಿ ಇಟ್ಟಾಗ, ಎಷ್ಟೊಂದು ಬಿಗುವಿನಿಂದ, ಶಾಂತತೆಯಿಂದ, ‘ನನಗೆ ಅನಿಸಿರಲಿಲ್ಲ ಬಿಡು-ನೀನು ಇಷ್ಟು ತಪ್ಪು ತಿಳಿದುಕೊಳ್ಳುವಿಯೆಂದು. ದಯವಿಟ್ಟು ಇಂಥ ಹುಚ್ಚು ವಿಚಾರಗಳಿಗೆ ಎದೆಗೊಡಬೇಡ…’ ಎಂದು ಅಂದಳು-ಅವಳನ್ನು ಒಮ್ಮೆ ಎಳೆದೊಯ್ದು ಅವಳ ಮೇಲೆ ಬಲಾತ್ಕಾರ ಮಾಡಬೇಕಾಗಿತ್ತು… ಹೌದು, ಆಗ ಅವಳಿಗೆ…
ಗೌರೀಶನ ಕಣ್ಣುಗಳು ಬರುವ ಹೋಗುವ ಜನರನ್ನು ನೋಡುತ್ತಿದ್ದವು… ಕ್ಯೂ ಉದ್ದಾಗುತ್ತ ನಡೆದಿತ್ತು. ಒಮ್ಮೆಲೆ ಅವನ ಮನಸ್ಸಿನ ಮೇಲೆ ಬರೆ ಎಳೆದಂತಾಯಿತು!
ಕಲ್ಪಲತೆ! ಹೌದು ಕಲ್ಪಲತೆಯೇ ಅವಳು-ಸಂಶಯವಿಲ್ಲ! ಏನಿದು ವಿಚಿತ್ರ-ಎಷ್ಟೋ ದಿನಗಳ ಮೇಲೆ ಅವಳ ವಿಚಾರ ಬರುವದಕ್ಕೂ, ಅವಳೇ ಪ್ರತ್ಯಕ್ಷವಾಗುವದಕ್ಕೂ ಗಂಟುಬಿತ್ತಲ್ಲ!… ಅವನಾರು ಅವಳ ಮುಂದೆ…? ಅವಳ ಗಂಡನಿರಬಹುದು… ಕಾರಿನಿಂದ ಇಳಿದು ಬಂದಿದ್ದನಲ್ಲವೇ ಆ ವ್ಯಕ್ತಿ? ಇವಳೂ ಅದೇ ಕಾರಿನಿಂದ ಇಳಿದಿರಬೇಕು. ನನ್ನ ಲಕ್ಷ್ಯವಿರಲಿಲ್ಲ ಅಷ್ಟೆ… ಅವಳು ನನ್ನೆಡೆಗೆ ನೋಡಿದರೆ-ಗೌರೀಶನ ಬಾಯಿ ಒಣಗತೊಡಗಿತು. ಕಿಸೆಯಿಂದ ಕರವಸ್ತ್ರ ಹೊರತೆಗೆದು ಬೆವರನ್ನು ಒರೆಸತೊಡಗಿದ-
ನೋಡಿದರೆ-ಮುಂದೇನು? ನಗಬೇಕು-ಮಾತನಾಡಬೇಕು… ಏನೇನು ಮಾತನಾಡಬೇಕು?-‘ಹಲ್ಲೊ, ಕಲ್ಪಲತಾ, ಗುಡ್ ಈವ್ಹ್ನಿಂಗ! ಹೇಗಿದ್ದೀ? ಎಲ್ಲ ಸೌಖ್ಯ ತಾನೇ? ಇವನಾರು? ಈ ದಿಮಾಕಿನವ? ನಿನ್ನ ಗಂಡನೇ? ವಾಹ್, ಅಡ್ಡಿಯಿಲ್ಲ. ಒಳ್ಳೆಯ ರೊಕ್ಕಸ್ಥನೆಂದು ಕಾಣಿಸುತ್ತಾನೆ-ಫುಟಬಾಲ್! ನಿನ್ನ ಜೀವನ ಸುಖಮಯವಾಗಲಿ! ಎಷ್ಟು ಮಕ್ಕಳು?- ಲಗ್ನವಾಯಿತೇ? ಎಂದು?’… ಛೇ, ಛೇ… ಈ ರೀತಿ ಒಳ್ಳೆಯದಲ್ಲ… ಮೃದುವಾಗಿ, ಸಹಜವಾಗಿ ಮಾತನಾಡಬೇಕು, ಎಳ್ಳಷ್ಟೂ ಎಕ್ಸೈಟ ಆಗದೆ-‘ಹಲ್ಲೊ-ಕಲ್ಪಲತಾ-ಹೇಗಿದ್ದೀ? ಸೌಖ್ಯ ತಾನೇ? ನಿನ್ನ ತಾಯಿ-ತಂಗಿ-ತಮ್ಮ ಎಲ್ಲರೂ ಕ್ಷೇಮವಷ್ಟೇ? ‘ಸಾಕು-ಇಷ್ಟು ಕೇಳಿದರೆ ಸಾಕು. ಮುಂದೆ ಅವಳೇ ತನ್ನ ಸಂಗಾತಿಯ ಪರಿಚಯ ಮಾಡಿಕೊಡಬಹುದು. ಅವನು ಗಂಡನಿದ್ದರೆ, ‘ನಿಮ್ಮ ಭಾಗ್ಯ ಬಹಳ ದೊಡ್ಡದು. ಕಲ್ಪಲತೆಯಂಥ ಹೆಣ್ಣು ನಿಮಗೆ ದೊರೆತದ್ದು ನಿಮ್ಮ ಸೌಭಾಗ್ಯ-ನನ್ನ ದುರ್ಭಾಗ್ಯ…’-ಥೂ, ಅವಳು ನನ್ನನ್ನು ನೋಡಿಯೇಬಿಟ್ಟಳೆಂದು ಕಾಣುತ್ತದೆ. ಇನ್ನು ಹಾಗೆಯೇ ತಪ್ಪಿಸಿಕೊಂಡು ಒಳಗೆ ನುಸುಳಲು ಸಾಧ್ಯವಿಲ್ಲ… ಹೇಡಿಯಂತೆ ಏಕೆ ನುಸುಳಿ ಹೋಗಬೇಕು ನಾನು? ಬಂದ ಪರಿಸ್ಥಿತಿಗೆ ಧೈರ್ಯದಿಂದ ಎದೆಗೊಡಬೇಕು…. ನನಗೆ ಯಾತರ ಹೆದರಿಕೆ? ಯಾರಪ್ಪನದೇನು ಗಂಟು ತಿಂದಿಲ್ಲ!- ಆದದ್ದು ಆಗಿಹೋಗಿದೆ. ಬರಿಯ ಔಪಚಾರಿಕ ನಾಲ್ಕು ಮಾತು ಆಡಿದರೆ ತೀರಿತು-ಅದರಲ್ಲೇನು ಮಹಾ! ಆದರೆ-ನಡುವೆ ನಾಲಗೆ ಅಡ್ಡ-ತಿಡ್ಡ ಹೋದರೆ, ಧ್ವನಿಯಲ್ಲಿ ಕಂಪ ಉತ್ಪನ್ನವಾದರೆ-ಕಣ್ಣಿಗೆ ಕತ್ತಲೆಬಂದರೆ-ಧಪ್ಪನೆ ಕೆಳಗೆ ಬಿದ್ದರೆ… ಅಷ್ಟೆಲ್ಲಾ ಆಗಲಾರದು-ಆಗಲಾರದು….ಕಲ್ಪಲತೆ! ಆಗ ಮೊದಲಿನಕಿಂತ ದಪ್ಪವಾಗಿದ್ದಾಳೆ: ಪ್ರೌಢಕಳೆ ಬಂದಂತಿದೆ ಮುಖದ ಮೇಲೆ-ಸಮಾಧಾನ-ಸುಖಗಳ ಲೇಪವಿದೆ. ಒಬ್ಬ ಭಿಕ್ಷುಕಿ ಹೋಗಿ ‘ಯವ್ವಾ’ ಅಂದರೆ ಎರಡಾಣೆ ಕೊಡದೆ ಬಿಡಲಿಕ್ಕಿಲ್ಲ!
ಕಲ್ಪಲತೆ ತನ್ನ ಸಂಗಾತಿಯನ್ನು ೨-೧೦-೦ರ ಕ್ಯೂದಲ್ಲಿ ಬಿಟ್ಟು, ಗೌರೀಶನ ಕಡೆಗೆ ಬರತೊಡಗಿದಳು. ಗೌರೀಶನಿಗೆ ದಿಕ್ಕೇ ತೋಚದಾಯಿತು. ಆದರೂ ಸಾವರಿಸಿ ನಿಂತ. ಬಂದ ಸಂಕಟವನ್ನು ಧೈರ್ಯದಿಂದ ಎದುರಿಸಲೇ ಬೇಕು…

“ಗೌರೀಶ, ಸಿನೇಮ ನೋಡಲು ಬಂದಿರುವೆಯ?”

“ಹೌದು!-ನೀನು?…ಎಲ್ಲ ಸೌಖ್ಯತಾನೇ?”

“ಹುಂ.”

ಸ್ವಲ್ಪ ವೇಳೆ ಮೌನ. ಕಲ್ಪಲತೆಯ ದ್ವನಿಯಲ್ಲಿ ಒಂದು ಬಗೆಯ ಸ್ಥೈರ್ಯ, ಗಾಂಭೀರ್ಯ ಬಂದಿದೆ ಎಂದೆನಿಸಿತು ಗೌರೀಶನಿಗೆ.

“ಅವರು ನಿನ್ನ…?” ಮುಗುಳು ನಗೆ ನಕ್ಕ, ಪ್ರಶ್ನಾರ್ಥಕವಾಗಿ.

“ಹೌದು…” ಕಲ್ಪಲತೆ ಸೂಕ್ಷ್ಮವಾಗಿ ನೋಡಿದಳು ಗೌರೀಶನ ಕಣ್ಣಲ್ಲಿ.

“ಮಕ್ಕಳು…?”

“ಒಂದು ಗಂಡು ಮನೆಯಲ್ಲಿದೆ. ಗೌರೀಶ ಅವನ ಹೆಸರು… ತಪ್ಪು ತಿಳಿದುಕೊಳ್ಳಬೇಡ… ಎಂದಾದರೂ ಒಂದು ದಿನ ಬಾ, ನಮ್ಮ ಮನೆಗೆ ಚೋಪ್ರಾನಗರ, ಹ್ಯೂಜಿಸ ರೋಡ.”

“ಹೆಸರು?”

“ಮೋಡಕ… ಅವರು ಕಾಯುತ್ತಿದ್ದಾರೆ, ಹೋಗುತ್ತೇನೆ, ನೀನು ಆರಾಮಾಗಿದ್ದೀಯಾ?”

“ಹೌದು…”

“ಲಗ್ನವಾಗಿರಬೇಕು…”

“ಇಲ್ಲ.”

“ಯಾಕೆ?… ಅದೆ ಅವರೇ ಇತ್ತಕಡೆಗೆ ಬರುತ್ತಿದ್ದಾರೆ… ಅವರು ನನ್ನ ಕ್ಲಾಸಮೇಟ ಮಿ.ಪಾಟೀಲ… ಇವರು ನನ್ನ-” ಎಂದು ಕಲ್ಪಲತೆ ನಕ್ಕಳು.

“ಹೌ ಡು ಯು ಡು ಮಿ.ಪಾಟೀಲ್?… ಸಿನೇಮ ಸುರುವಾಗುವ ವೇಳೆಯಾಯಿತು. ಒಳಗೆ ಹೋಗೋಣವೇ?”

“ಬರಬೇಕು ಮನೆಯ ಕಡೆಗೆ” ಕಲ್ಪಲತೆ ಮತ್ತೊಮ್ಮೆ ಹೇಳಿದಳು.

“ಬರ್ರಿ, ಮಿ.ಪಾಟೀಲ… ಹ್ಯೂಜಿಸ್ ರೋಡ…”

“ಹೂಂ” ಎಂದು ಉಗುಳು ನುಂಗಿ ಉಸುರಿದ ಗೌರೀಶ.
ಕಲ್ಪಲತೆ ಮತ್ತು ಅವಳ ಗಂಡ ಒಳಗೆ ನುಸುಳಿದರು. ಗೌರೀಶನಿಗೆ ಏಕೋ ಮುಖದ ಮೇಲೆ ಹೊಡೆದಂತಾಯಿತು… ಕಲ್ಪಲತೆ ಕೊನೆಗೆ ಹಣವಿದ್ದವನನ್ನೇ ಲಗ್ನವಾದಳು. ಜಾಣೆ ಅವಳು೧ ಪ್ರೇಮ-ಪ್ರೇಮವೆಂದು ಯಾವ ಭಾನಗಡಿಯಲ್ಲಿ ಬೀಳಲಿಲ್ಲ-ಪ್ರೇಮದ ದಂಡೆಯ ಮೇಲೆ ಅಡ್ಡಾಡಿದರೂ, ಅದರ ನೀರಿನಲ್ಲಿ ಕಾಲಿರಿಸಲಿಲ್ಲ… ತನ್ನನ್ನು ಇಷ್ಟು-ಎಷ್ಟು?-ದುಃಖಿತನನ್ನಾಗಿ ಮಾಡಿ, ಏನೂ ಆಗದಿದ್ದಂತೆ ನಿಶ್ಚಿಂತೆಯಿಂದ ಇದ್ದಾಳೆ ಇವಳು. ಕರುಳೇ ಇಲ್ಲವೇನೂ ಇವಳಿಗೆ? ಅವಳು ಮಾತನಾಡುವ ರೀತಿ ನೋಡಿದರೆ, ಅಟ್ಟದ ಮೇಲಿನಿಂದ, ಕನಿಕರದಿಂದ ಭಿಕ್ಷುಕನೊಡನೆ ಮಾತನಾಡುತ್ತಿದ್ದಂತೆ…

“ನಿಮ್ಮ ಕಡೆಗೆ ಒಂದು ಹೆಚ್ಚಿನ ತಿಕೀಟು ಉಂಟೇ?” ಯಾರೋ ಕೇಳಿದರು.

“ಹೌದು” ಎಂದ ಗೌರೀಶ. ಕಿಸೆಯೊಳಗಿನ ಅದೇ ಕೊಂಡಂಥ ಟೀಕೀಟು ಕೊಟ್ಟ. “ನಾನು ನನ್ನ ಮಿತ್ರನ ಹಾದಿ ಕಾಯ್ದೆ. ಅವನು ಬರಲಿಲ್ಲ ತೆಗೆದುಕೊಳ್ಳಿರಿ…”

“ಹಿಡಿಯಿರಿ ಒಂದು ರೂಪಾಯಿ… ಐದಾಣಿ ಚಿಲ್ಲರ ಇಲ್ಲ… ನಿಮ್ಮ ಹತ್ತಿರ ಚಿಲ್ಲರೆ ಉಂಟೆ?”

“ಅವಶ್ಯವಿಲ್ಲ ಇರಲಿ ಬಿಡಿ.”

“ನಾನು ಹೋಗಿ ತೆಗೆದುಕೊಂಡು ಬರುವೆ.”

“ಸಿನೇಮ ಸುರುವಾಗಿದೆ ಹೋಗಿರಿ ಒಳಗೆ. ಬರಿಯ ಐದಾಣೆಯ ಬಗ್ಗೆ ಇಷ್ಟು ತೊಂದರೆ ತೆಗೆದುಕೊಳ್ಳಬೇಡಿರಿ.”
ಆ ಮನಸ್ಥಿತಿಯಲ್ಲಿ ಸಿನೇಮಾ ನೋಡಿ ಪ್ರಯೋಜನವಿಲ್ಲವೆಂಬ ನಿರ್ಧಾರಕ್ಕೆ ಗೌರೀಶ ಆಗಲೇ ಬಂದಿದ್ದ… ಆ ಅನಾಮಿಕನ ಮುಖದ ಮೇಲಿನ ೫ ಆಣೆ-ಲಾಭದ ಸಮಾಧಾನ ನೋಡಿ, ಸ್ವಲ್ಪ ಹಗುರೆನಿಸಿತು!… ಮೇಲಾಗಿ, ಕಲ್ಪಲತೆಯಂತೆ ಕಾಣುವ ವ್ಹಿವ್ಹಿಯನ್ ಲೇಳನ್ನು ಎರಡು ತಾಸುಗಳವರೆಗೆ ನೋಡುವ ತೊಂದರೆ ತಪ್ಪಿಸಿಕೊಂಡುದಕ್ಕೆ ತನಗೆ ತಾನೇ ಧನ್ಯವಾದಗಳನ್ನಿತ್ತ. ಇನ್ನು ಹೊರಡಬೇಕು-ಮನೆಯ ಕಡೆಗೆ-
ಮನೆ-ಏನಿದೆ ಮನೆಯಲ್ಲಿ? ಏನಿದೆ ಆ ಹೋಟಲಿನ ರೂಮಿನಲ್ಲಿ? ಯಾರಿದ್ದಾರೆ ದಾರಿ ಕಾಯಲು? ಯಾರಿದ್ದಾರೆ ಯೋಗಕ್ಷೇಮ ನೋಡುವವರು? ಮಧೂನ ಕಡೆಗೆ ಹೋದರೆ…? ಛೆ-ಅವನು ಮತ್ತೆ ಒಂದು ಸಾಹಸೀ ಯೋಜನೆ ಹೂಡದೆ ಇರಲಾರನು… ಮನೆಗೆ ಹೋಗಬೇಕು-ಎಷ್ಟು ದಿನ ಹೀಗೆಯೇ ಬರಿ ಮನೆಗೆ, ಬರಿ ಮನದಿಂದ ಹೋಗಬೇಕು?…ಕಲ್ಪಲತೆ ಸುಖವಾಗಿ ಕಾಲಕಳೆಯುತ್ತಿದ್ದಾಳೆ-ಸಂಸಾರ ಹೂಡಿದ್ದಾಳೆ. ಗಂಡ-ಮಕ್ಕಳು-ಹಣ-ಕಾರು-ಸಿನೇಮ-ಮಜಾ… ಬಹಳೇ ಆರಾಮದಿಂದ ಇದ್ದಾಳೆ. ನನಗೆ ಇಷ್ಟೆಲ್ಲ ಸೌಕರ್ಯ ಅವಳಿಗೆ ಒದಗಿಸುವದು ಸಾಧ್ಯವಿತ್ತೇ? ಪ್ರೇಮ ಒಂದು ಕೊಡಬಹುದಿತ್ತು… ಅಲ್ಲ-ಈ ಪ್ರೇಮವೆಂದರೆ ಅಷ್ಟೊಂದು ದಿವ್ಯವಾದದ್ದು? ಕಲ್ಪಲತೆಯ ಕೂಡ ಮಾತನಾಡಬೇಕು, ಅವಖ ಕೈ ಹಿಡಿಯಬೇಕು, ಅವಳನ್ನು ಅಪ್ಪಿ ಮುದ್ದಿಡಬೇಕು-ಇದರ ಹೊರತು ಮತ್ತೇನಾದರೂ ಇತ್ತೆ? ತಲೆ ಕೆದರಿ ಕೆದರಿ ಯೋಚಿಸಿದೆ… ಮಾತು-ಮೈಯು-ಮುತ್ತು ಅವಳಿಗಂತೂ ದೊರತಿವೆ… ನನಗೂ ದೊರೆತಿವೆಯಲ್ಲ ಒಂದು ರೀತಿಯಾಗಿ… ನನಗೂ ದೊರೆಯಬಹುದಲ್ಲ ‘ಪರ್ಮನಂಟಾಗಿ’- ಲಗ್ನವಾದರೆ… ಹೃದಯವನ್ನು ಅಖಂಡ ಮಂಜುಗಡ್ಡೆ ಮಾಡಿದರೇನೇ ಈ ಜಗತ್ತಿನ ಮೋಜು!…ನನ್ನ ಹೃದಯ ಮಂಜುಗಡ್ಡೆಯಾಗುತ್ತ ನಡೆದಿದೆಯೇ?…
ಗೌರೀಶ ತನ್ನಷ್ಟಕ್ಕೆ ತಾನೇ ನಕ್ಕ!
ಒಳ್ಳೆಯ ಸುಂದರವಾದ ಹೆಣ್ಣು ಹೋಗುತ್ತಿತ್ತು. ನಿಟ್ಟಿಸಿ ನೋಡಿದ-ಹೌದು ಚಂದಾಗಿದ್ದಾಳೆ. ಮೂಗು ಸ್ವಲ್ಪ ನೆಟ್ಟಗಿದ್ದರೆ ಚೆನ್ನಾಗಿತ್ತು. ಹಣೆ ಸ್ವಲ್ಪ ಹರವಾಗಿರಬೇಕಿತ್ತು… ನಾಳೆ ತಾಯಿಗೆ ಪತ್ರ ಬರೆಯಬೇಕು. ಬೈಲಹೊಂಗಲದ ಕುಲಕರ್ಣಿಯವರ ಹೆಣ್ಣು ಸುಂದರವಾಗಿದ್ದರೆ ನಾನು ಒಪ್ಪಿದೆ; ಇಲ್ಲದಿದ್ದರೆ ಇಲ್ಲ, ಹೌದು-ಲಗ್ನವಾಗುವದಾದರೆ-ಸೌಂದರ್ಯವೇ ಮುಖ್ಯಬಿಂದು… ಅದೂ ದೊರೆಯದಿದ್ದರೆ ಇಲ್ಲ… ಹಣ-ಉಪಭೋಗ!
ಹಣ! ಉಪಭೋಗ!-ಸೌಂದರ್ಯ ಮನೆಗೆ ಬರುವತನಕ ಉಪಭೋಗ-ಮೋಜು! ಮಧೂನ ಕಡೆಗೇ ಹೋಗೋಣ… ಹಣ ಸಾಕಷ್ಟಿದೆ ಇಂದು. ಯಾವ ಕಾಳಜಿಯೂ ಇಲ್ಲ-ಗೌರೀಶ ಕಿಸೆಯನ್ನು ಮುಟ್ಟಿ, ಪಾಕೀಟು ಇದೆಯೆಂದು ಖಾತ್ರಿ ಮಾಡಿಕೊಂಡ.
೨೯೦ ರೂಪಾಯಿ!
ಒಂದು ವಿಚಿತ್ರ ರೀತಿಯ ಸಮಾಧಾನ ತೂರಿ ಬಂತು ಗೌರೀಶನ ಹೃನ್ಮನಗಳಲ್ಲಿ!
*****
ಅಕ್ಟೋಬರ ೧೮೫೩

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.