ಕಟ್‌ಸೀಟ್

ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ ಮಗು ಯಾರಿಗೂ ಅರ್ಥವಾಗದ ಹಠಕ್ಕೆ ಬಿದ್ದು ಅಳುತಿತ್ತು. ಆ ಹೆಂಗಸಿನ ಪಕ್ಕದಲ್ಲಿ ಕುಳಿತಿದ್ದ ನಡುವಯಸ್ಸಿನ ದಂಪತಿಗಳು ಅಮೂಲ್ಯ ವಸ್ತುಯೊಂದನ್ನು ಜೋಪಾನ ಮಾಡುವಂತೆ ಕೆಂಪು ಚೂಡೀದಾರ ಧರಿಸಿ ಎಲ್ಲರ ಕಣ್ಣು ಕುಕ್ಕುತ್ತಿದ್ದ ತಮ್ಮ ಮಗಳನ್ನು ಮುಂದಿರುವ ಸೂಟ್ಕೇಸಿನ ಮೇಲೆ ಕೂರಿಸಿಕೊಂಡಿದ್ದರು. ಅಲ್ಲಲ್ಲಿ ಪ್ಲಾಟ್‌ಫ಼ಾರಂ ನಂಬರ್ ನಮೂದಿಸಿರುವ ಕಂಬಗಳ ಎತ್ತರದಲ್ಲಿ ಕನ್ನಡ ಚಿತ್ರಗೀತೆ ಹಾಡುತ್ತಿರುವ ಟೀವಿ ನೋಡಲು ಜನರು ಗುಂಪುಗುಂಪಾಗಿ ನಿಂತಿದ್ದರು. ಬಾಯಿಗೆ ರೂಪಾಯಿ ಹಾಕಿದರೆ ಹೊಕ್ಕುಲಿಂದ ಚಟ್ಟೆ ರಟ್ಟಿನ ತುಂಡು ಒಗೆಯುವ ಡಿಸ್ಕೋ ಡಬ್ಬಿ ತನ್ನೊಳಗೆ ಬಣ್ಣದ ಗಿರಗಟ್ಲೆ ತಿರುಗಿಸುತ್ತಿತ್ತು. ಕೆಲವರು ತೂಕ ನೋಡುವ ನೆಪ ಮಾಡಿ ಅದರ ಮೇಲೆ ಉತ್ಸಾಹದಿಂದ ನಿಂತು ಖಾಕಿ ಬಣ್ಣದ ಪುಟ್ಟ ಕಾರ್ಡಿನಲ್ಲಿ ಅಂದದ ನಟಿಯ ಚಿತ್ರ ಬರಲಿಲ್ಲವೋ ಇಲ್ಲಾ ಅದರ ಹಿಂದೆ ಬರೆದಿರುವ ಭವಿಷ್ಯವಾಣಿಯಲ್ಲಿ ’ನಷ್ಟ’ವನ್ನು ಕಂಡ ಬೇಸರದಲ್ಲೋ ಕೆಳಗಿಳಿಯುತ್ತಿದ್ದರು. ಒಬ್ಬ ಕೆದರಿದ ಮಂಡೆಯವನು ಪ್ಲಾಟ್‌ಫ಼ಾರಂನ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ಬರಿಗಾಲಲ್ಲಿ ಕಾರಣವಿಲ್ಲದೆ ನಡೆದಾಡುತ್ತಿದ್ದ. ಎದುರಿನ ಪ್ಲಾಟ್‌ಫ಼ಾರಂಗೂ ಇಲ್ಲಿಗೂ ಮಧ್ಯದಲ್ಲಿ ಹರಡಿರುವ ಬಿಸಿಲಿನ ತೋಟದಲ್ಲಿ ಸತ್ತು ಬಿದ್ದ ಇಲಿಯೊಂದನ್ನು ಕುಕ್ಕಲು ಕಾಗೆಗಳ ಪರಿವಾರ ಸೇರಿತ್ತು. ಕಾಗೆಗಳಿಗೆ ಇಲಿಯ ಕಣ್ಣೆಂದರೆ ಮಕ್ಕಳಿಗೆ ಐಸ್ ಕ್ರೀಮ್ ನಲ್ಲಿರುವ ಚೆರ್ರಿ ಕಂಡಷ್ಟೇ ಇಷ್ಟವಂತೆ. ಸಾಲು ಸಾಲು ಬಸ್ಸುಗಳು, ಎಲ್ಲೆಂದರಲ್ಲಿ ದಿಕ್ಕಿಲ್ಲದೆ ಮಲಗಿರುವ ಜನ, ಪ್ಲಾಟ್‌ಫ಼ಾರಂಗೆ ಅಂಟಿಕೊಂಡಿರುವ ಬೇಕರಿ, ಜ್ಯೂಸ್ ಅಂಗಡಿಗಳಲ್ಲಿ ಗಿಜಿಗುಟ್ಟುವ ಜನರ ನಡುವೆ ಪ್ಲಾಟ್‌ಫ಼ಾರಂ ನಂಬರ್ ನಾಲ್ಕರಲ್ಲಿ ಕೈಯಲ್ಲೊಂದು ಹಾಳೆ, ಟಿಕೆಟ್ ಪ್ರಿಂಟ್ ಮಾಡುವ ಪುಟಾಣಿ ಯಂತ್ರವೊಂದನ್ನು ಹಿಡಿದಿರುವ ಮಧ್ಯಾಹ್ನ ಎರಡು ಗಂಟೆಗೆ ಮಡಿಕೇರಿಗೆ ಹೊರಡುವ ಐರಾವತದ ಬಸ್ ಕಂಡಕ್ಟರ್‌ನ ಕೂಗನ್ನು ಆ ಪ್ಲಾಟ್‌ಫ಼ಾರಂನ ಪರಿವಾರದವರೆಲ್ಲ ಕೇಳಿಸಿಕೊಳ್ಳುತ್ತಿದ್ದರು.

’ಮಡಿಕೇರಿ-ಎರಡ್ ಗಂಟೆ ಗಾಡಿ- ಐರಾವತ……………………….ಇಲ್ರೀ ಆಗೊಲ್ಲ. ರಿಸರ್ವೇಶನ್ ಮಾಡಸ್ಬೇಕಿತ್ತು. ನಿಮಗೇನ್ ಕೈ ಎತ್‌ಬಿಡ್ತೀರ, ನಮ್ಮನ್ನ ಹಿಡ್ಕೊಂಡು ಝಾಡಸ್ತಾರೆ’ ಕಂಡಕ್ಟರ್ ಎದುರಿಗಿದ್ದ ವ್ಯಕ್ತಿಗೆ ಮುಖ ತಿರುಗಿಸಿ ಕಟುವಾಗಿ ಹೇಳಿದ. ಹಾಗೆ ಹೇಳಿಸಿಕೊಂಡ ಮನುಷ್ಯ ನೋಡಲು ಸೇಟುವಿನಂತಿದ್ದ. ವರುಷ ಮೂವತ್ತರ ಒಳಗೇ. ಇದೇ ಮೊದಲ ಬಾರಿ ಹೀಗೆ ಮಾಡುತ್ತಿರುವುದಲ್ಲ, ಮುಂಚೆಯೂ ಹೀಗೆಯೇ. ಬಸ್ಸು ಹೊರಡಲು ಅರ್ಧ ಗಂಟೆ ಇದೆ ಎನ್ನುವಾಗ ಬಂದು ಟಿಕೆಟ್ ಬೇಕೆನ್ನುವುದು. ಎಲ್ಲಾ ಸೀಟ್ಸ್ ರಿಸರ್ವ್ ಆಗಿದೆ ಅಂತ ಹೇಳಿದರೆ ಕಟ್‌ಸೀಟ್ ಕೊಡಿ ಅಂತ ಇದೇ ಕಂಡಕ್ಟರ್‌ನ ಬೆನ್ನು ಹತ್ತುತ್ತಿದ್ದ. ಆದರೆ ಅವನಿಗೆ ಅದನ್ನ ಅಭ್ಯಾಸ ಮಾಡಿಸಿದವನು ಇದೇ ಕಂಡಕ್ಟರ್ ಮಹಾಶಯ. ಪ್ರತಿ ಶುಕ್ರವಾರ ರಾತ್ರಿ ೧೧:೩೦ರ ಮಡಿಕೇರಿ ಗಾಡಿ ಹತ್ತಲು ಈ ಅಸಾಮಿ ಬರ್ತಿದ್ದ. ಒಮ್ಮೆ ಸೀಟೆಲ್ಲ ಫ಼ುಲ್ ಆಗಿದ್ದಾಗ ಬಾಗಿಲ ಪಕ್ಕದಲ್ಲೇ ಮಡಚಿಟ್ಟಿದ್ದ ಕಟ್‌ಸೀಟಿನಲ್ಲಿ ಕೂರಲು ಹೇಳಿ ಟಿಕೆಟಿನ ಪೂರ್ತಿ ಹಣ ವಸೂಲಿ ಮಾಡಿದ್ದ. ಒಂದೆರಡು ಸಲ ರಿಸರ್ವೇಶನ್ ಮಾಡಿಸಿದ್ದರೂ ಪ್ರತಿ ವಾರ ಊರಿಗೆ ಹೋಗುವವನಿಗೆ ಟಿಕೆಟ್ ಮಾಡಿಸೋದಕ್ಕೆ ಏನು ದಾಡಿನೋ ಅಂತ ಕಂಡಕ್ಟರ್ ಅಂದುಕೊಂಡಿದ್ದು ಇದೆ. ಈ ಸಲ ಯಾಕೋ ಶನಿವಾರ ಬಂದಿದ್ದಾನೆ, ನಿನ್ನೆ ರಾತ್ರಿ ಏನೋ ತೊಂದರೆ ಆಗಿರಬೇಕು. ಈಗ ಮತ್ತೆ ನಾನೇ ತಗಲುಹಾಕಿಕೊಂಡೆ ಅಂತ ತಲೆಕೆದರಿಕೊಂಡ. ಆದರೆ ಈ ಬಾರಿ ಮಾತ್ರ ಎಷ್ಟೇ ಬೇಡಿಕೊಂಡರೂ ಸರಿ ತಾನೇನೂ ಮಾಡುವ ಸ್ಥಿತಿಯಲ್ಲಿಲ್ಲ, ’ಇದು ಐರಾವತ ಬಸ್ಸು ಸ್ವಾಮಿ, ಹಾಗೆಲ್ಲ ಕಟ್‌ಸೀಟ್ ಅಂತ ಏನೂ ಇರೋದಿಲ್ಲ’ ಅಂತ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಕಂಡಕ್ಟರ್.

ಎರಡು ತಿಂಗಳ ಮೊದಲು ಮಡಿಕೇರಿ ಮಾರ್ಗದ ರಾತ್ರಿಯ ರಾಜಹಂಸ ಬಸ್ಸಿನಲ್ಲಿ ನಿರ್ವಾಹಕನಾಗಿದ್ದಾಗ ಎಕ್ಸ್‌ಟ್ರಾ ಸೀಟ್ ಕೊಟ್ಟು, ಗಾಡಿಯ ಟಾಪ್ ಹತ್ತುವ ಬಣ್ಣ ಬಣ್ಣದ ಹೂವಿನ ಬುಟ್ಟಿಗಳು, ತರಕಾರಿ ಬುಟ್ಟಿಗಳು, ಮುಂತಾದ ಲಗೇಜ್‌ಗಳ ಕಮಿಶನ್‌ನಲ್ಲಿ ಡ್ರೈವರ್‌ನೊಂದಿಗೆ ಹಂಚಿಕೊಳ್ಳುತ್ತಿದ್ದವನು ಈಗ ಏಕಾ‌ಏಕಿ ಸೀಟ್ ಇಲ್ಲಾ ಅಂತ ಹೇಳೋದಕ್ಕೆ ’ಐರಾವತದಲ್ಲಿ ಕಟ್ಸೀಟ್ ಇಲ್ಲಾ’ ಅನ್ನೋದೊಂದೇ ಕಾರಣ ಅಲ್ಲ. ಮೊದಲೆಲ್ಲ ಎಷ್ಟೋ ರಾತ್ರಿ ತನ್ನ ಸೀಟನ್ನೂ ಮಾರಿಕೊಂಡು ಡ್ರೈವರ್ ಸೀಟಿನ ಹಿಂಬದಿಯ ಜಾಗದಲ್ಲಿ ಕಾಲು ಚಾಚದೆ ಮುದುಡಿಕೊಂಡು ಕುಳಿತು ಇಡೀ ರಾತ್ರಿ ಕಳೆದಿದ್ದಾನೆ. ಒಂದೊಂದು ಟ್ರಿಪ್‌ಗೆ ಏನಿಲ್ಲ ಅಂದ್ರೂ ಒಂದು ನಾನೂರೈನೂರು ರೂಪಾಯಿ ಜೇಬ್ ಸೇರ್ತಿತ್ತು. ಆರೋಗ್ಯ ಹದಗೆಡೊ ಸ್ಥಿತಿ ಬಂದಮೇಲೆ ತನ್ನ ಸೀಟನ್ನ ಯಾರಿಗೂ ಕೊಡ್ತಾ ಇರಲಿಲ್ಲ. ಲಗೇಜ್ ಕಮಿಶನ್ನೇ ಸಾಕಾಗ್ತಿತ್ತು. ರಾತ್ರಿ ಪ್ರಯಾಣದಲ್ಲೇ ಒಂಥಾರ ಮಜಾ. ತೂಕಡಿಸ್ತಾ ತೂಕಡಿಸ್ತಾ ನಿದ್ದೆಗಣ್ಣಲ್ಲಿ ಊರಿಂದ ದೂರ ಕತ್ತಲಿನಲ್ಲಿ ಮುಳುಗಿರೋ ಬಯಲು ನೋಡೋದು, ಪಿಶಾಚಿಗಳು ಊಟ ಮಾಡೋ ಹೊತ್ತಲ್ಲಿ ಬಸ್ ಸ್ಟಾಂಡ್ ಹೋಟಲಿನಲ್ಲಿ ಮೆಣಸಿನಕಾಯಿ ಬಜ್ಜಿ ತಿನ್ನೋದು, ಯಾರಿಂದಲೂ ಕೊಡಲು ಸಾಧ್ಯವಿಲ್ಲದಿರೋ ಸುಖದ ಮಧ್ಯದಿಂದ ಎಚ್ಚೆತ್ತು ಬಂದಿರುವ ಪ್ರಯಾಣಿಕರ ಮುಖದಲ್ಲಿನ ಮಂಕು ಹೊಳಪು- ಇವನ್ನೆಲ್ಲ ಕಂಡಕ್ಟರ್ ಇಷ್ಟಪಡುತ್ತಿದ್ದ. ಈಗಿನ ಬಸ್ಸು ಪರ್ವಾಗಿಲ್ಲ. ತಣ್ಣಗಿಡುವ ಏಸಿ, ಟೀವಿ, ಆರಾಮಾದ ಸೀಟು. ಆದರೆ ಕಮಾಯಿ ಕಮ್ಮಿ, ಏನೂ ಇಲ್ಲಾ ಅಂತಾನೆ ಹೇಳಬಹುದು.

ಎದುರುಗಡೆ ಯವುದೋ ಬಸ್ಸು ಹರಿದುಹೋಯಿತು. ಕಾಗೆಗಳೆಲ್ಲ ಕಾ ಕಾ ಎಂದು- ಆ ಬಸ್ಸಿನ ಡ್ರೈವರ್‌ನನ್ನೇ ಇರಬೇಕು- ಶಪಿಸುತ್ತ ಹಾರಿಹೋದವು. ಮತ್ತೆ ಸತ್ತ ಇಲಿಯನ್ನು ಕುಕ್ಕಲು ಬಂದು ಕುಳಿತವು.

’ಸಾರ್ ನೋಡಿ ಏನೋ ಅಡ್ಜಸ್ಟ್ ಮಾಡಿ….’ ಅಂತ ಮತ್ತೆ ಆ ಮನುಷ್ಯ ಬಂದ. ಕಂಡಕ್ಟರ್ ಅವನ ಕಡೆ ತಿರುಗಿಯೂ ನೋಡಲಿಲ್ಲ. ಕಂಡಕ್ಟರ್ ಪಕ್ಕದಲ್ಲಿದ್ದ ಶುಭ್ರ ಬಿಳಿಯ ಯುನಿಫ಼ಾರಂ ಧರಿಸಿದ್ದ ಡ್ರೈವರ್ ಆ ಕಟ್‌ಸೀಟ್ ಗಿರಾಕಿಯ ಪರಿಸ್ಥಿತಿಗೆ ಕುಹಕದಿಂದ ಮುಖ ತಿರುಗಿಸಿ ನಕ್ಕ.

’ಮ್ಮೋ ಹೋಗಮ್ಮ ಅತ್ಕಡೆ…. ದಿನಾ ಇಲ್ಲೇ ಆಗ್ಬೇಕಾ?’ ಅಂತ ಬೇಕರಿಯಲ್ಲಿ ಕೆಲಸಕ್ಕಿರುವ ಹುಡುಗ ಊಟದ ಪ್ಯಾಕೆಟ್ ಬಿಚ್ಚುತ್ತಿದ್ದ ಕಸಗುಡಿಸುವ ಕೊಳೆನೀಲಿ ಸೀರೆಯ ಕಸ ಗುಡಿಸುವ ಹೆಂಗಸಿಗೆ ಜೋರು ಮಾಡಿದ. ಕಂಡಕ್ಟರ್‌ಗೆ ತಾನೂ ಕೂಡ ಒಂದು ಕಾಲದಲ್ಲಿ ಹೀಗೇ ಚೆನ್ನೈನ ಕೊಯೆಂಬೆಡ್ ಬಸ್ ಸ್ಟಾಂಡಿನ ಶೌಚಾಲಯದ ಎದುರಿರುವ ಕ್ಯಾಂಟೀನಿನಲ್ಲಿ ಚಿತ್ರನ್ನದ ಜೊತೆ ಉಪ್ಪಿನಕಾಯಿ ಕಲೆಸಿಕೊಂಡು ತಿನ್ನುತ್ತಿದದ್ದು ನೆನಪಾಗಿ ಏನೂ ವ್ಯತ್ಯಾಸವಿಲ್ಲ ಅನ್ನಿಸಿಬಿಟ್ಟಿತು. ಆ ಹೆಂಗಸು ಅವನಿಗೊಂದಿಷ್ಟು ಬಯ್ಯುತ್ತ ಬೇಕರಿಯಿಂದ ಸ್ವಲ್ಪ ಆಚೆ ಕುಳಿತಳು.

ಮದುವೆಗೆ ಮುಂಚೆ ನೆಲಮಂಗಲದ ಪ್ರೈವೆಟ್ ಗಾಡಿಯಲ್ಲಿ ಕಂಡಕ್ಟರ್ ಆಗಿದ್ದಾಗ ಚಿಕ್ಕಪ್ಪನ ಮನೆಯಲ್ಲಿರುವಾಗ ಯಾರ ಅಪ್ಪಣೆಯಿಲ್ಲದೆ ಹ್ಯಾಗೆ ಬೇಕೋ ಹಾಗೆ ಖರ್ಚು ಮಾಡಿಕೊಂಡು ವಾರಕ್ಕೊಂದು ಸಿನೆಮಾ ನೋಡುತ್ತಿದ್ದ ದಿನಗಳು, ಚಿಕ್ಕಪ್ಪನ ಮಕ್ಕಳಿಗೆ ನೆಲಮಂಗಲದ ಸಂತೆಯಲ್ಲಿ ಬೇಕುಬೇಕಾದ್ದು ಕೊಡಿಸುತ್ತಿದ್ದ; ತಿನಿಸುತ್ತಿದ್ದ; ಟೆಂಟಿಗೆ ಸಿನೆಮಾಗೆ ಕರೆದುಕೊಂಡು ಹೋಗುತ್ತಿದ್ದ ದಿನಗಳು ವಿನಾಕಾರಣ ನೆನಪಾದವು. ಮದುವೆಯಾದ ಮೇಲೂ ನೆಲಮಂಗಲದಲ್ಲಿರುವವರೆಗೆ ಹಾಗೇ ಸಾಗಿತ್ತು ಬದುಕು. ಬೆಂಗಳೂರಿಗೆ ಬಂದಮೇಲೆ; ಕೆ‌ಎಸ್‌ಆರ್‌ಟಿಸಿ ಯಲ್ಲಿ ಕೆಲಸ ಸಿಕ್ಕ ಮೇಲೆ; ಸಂಬಳ ಜಾಸ್ತಿಯಾದ ಮೇಲೆ ತನಗೆ ತನ್ನ ಅಪ್ಪಣೆಯೇ ದೊರೆಯುತ್ತಿರಲಿಲ್ಲ. ಅದು ಹೇಗೋ- ತನಗೇ ಅರಿವಿಲ್ಲದಂತೆ ಅಥವಾ ತನ್ನ ಅರಿವಿನ ಆಣತಿಯಂತೆ ಬದುಕಿಗೊಂದು ಅಂತಸ್ತು ಕಲ್ಪಿಸಿಕೊಂಡು ಅನುದಿನದ ಚಿಕ್ಕಪುಟ್ಟ ಸಂಗತಿಯನ್ನೂ ಮನಸ್ಸು ಅನುಭವಿಸುವ ರೀತಿಯೇ ಬದಲಾಗಿ ಹೋಗಿತ್ತು. ತಾನು ತನ್ನ ಬಾಯಿನೀರನ್ನು ನುಂಗಿಕೊಂಡರೂ ಮಕ್ಕಳು ಕಾಡಿದಾಗ ಮಕ್ಕಳ ಮೇಲಿನ ‘ಪಾಪ ಆಸೆ ಪಡ್ತಾವೆ’ ಅನ್ನುವ ಕರುಳಿನ ಅನುಕಂಪದ ಅನಿವಾರ್ಯದಿಂದಾಗಿ, ಬೆಂಗಳೂರಿನ ಪ್ರತಿಬೀದಿಯ ದಿನನಿತ್ಯದ ಜಾತ್ರೆಯಂತಿರುವ ತಳ್ಳೋ ಗಾಡಿಯ ಪಾನೀಪೂರಿ ತಿನ್ನುವಾಗಲೂ ‘ಸುಮ್ಮನೆ ಇಪ್ಪತ್ತು ರೂಪಾಯಿ ದಂಡ’ ಅಂತ ಮಕ್ಕಳ ಎದುರೇ ಆಡುತ್ತಿದ್ದ. ಯಾವುದೋ ಅರ್ಥವಾಗದ ಅನವಶ್ಯಕ ಜಾಗರೂಕತೆ-ಜವಾಬ್ದಾರಿ ಪ್ರತಿ ಕ್ಷಣವೂ ಮನಸ್ಸಿನ ಹಿಂದೆ ನಿಂತು ಕ್ಷಣಿಕ ಚಪಲವನ್ನೂ ಅನುಭವಿಸಲು ಬಿಡುತ್ತಿರಲಿಲ್ಲ.

ನೆಲಮಂಗಲ-ಬೆಂಗಳೂರು ಪ್ರೈವೆಟ್ ಗಾಡಿಯಲ್ಲಿ ಕಂಡಕ್ಟರ್ ಆಗಿದ್ದಾಗಲೂ, ಕೆ‌ಎಸ್‌ಆರ್‌ಟಿಸಿ ಗೆ ಬಂದು ಐರಾವತಕ್ಕೆ ಬಂದಮೇಲೂ ಬಸ್ಸಿನೊಳಗೆ ಲಕ್ಷ್ಮಿ-ಗಣಪತಿ-ಸರಸ್ವತಿ ಇರೋ ಫೋಟೋ ಇಟ್ಟು ತಲತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಆಚರಣೆ ಎಂಬಂತೆ ಅದಕ್ಕೆ ಪ್ರತಿದಿನವೂ ಹೂವೇರಿಸೋದನ್ನ ಮಾತ್ರ ತಪ್ಪಿಸುತ್ತಿರಲಿಲ್ಲ. ನೆಲಮಂಗಲದ ಗಾಡಿಯಲ್ಲಿ ಊದಿನಬತ್ತಿಯ ಸೇವೆಯೂ ನಡೆಯುತ್ತಿತ್ತು. ಬಸ್ಸಿನಲ್ಲಿ ರಾಜಕುಮಾರನ ಹಳೆಯ ಹಾಡುಗಳದ್ದು ಇಲ್ಲಾ ಜಾನಪದ ಹಾಡುಗಳ ಕ್ಯಾಸೆಟ್ಟು ಹಾಕಿಕೊಂಡರೆ ಎಂತಹ ರಶ್ಶಿನಲ್ಲೂ ಸಿಡುಕದೆ ಉಲ್ಲಾಸದಿಂದ ಹಾಡು ಗುನುಗುತ್ತ ದಿನ ಕಳೆದುಹೋಗುತ್ತಿತ್ತು. ಕೆ‌ಎಸ್‌ಆರ್‌ಟಿಸಿ ಗೆ ಸೇರಿದ ಮೇಲೆ ಏಕ್‌ದಂ ಚೆನ್ನೈನ ರಾಜಹಂಸ ಸಿಕ್ಕಿತು. ಹಾಡು ಗುನುಗುತ್ತ ಸೀಟೀ ಹೊಡೆಯುತ್ತ ಬಸ್ಸಿನ ತುಂಬ ಹರಿದಾಡುತ್ತಿದ್ದವನನ್ನು ಕಟ್ಟಿ ಹಾಕಿ ಕೂರಿಸಿದ ಹಾಗಾಯಿತು ಒಂದಿಷ್ಟು ದಿನ. ಆಮೇಲೆ ಮಡಿಕೇರಿ ರಾಜಹಂಸ, ಈಗ ಟಿವಿ ಇರೋ ಐರಾವತ. ನೆಲಮಂಗದ ದಿನಗಳ ನೆನಪಿನಲ್ಲಿದ್ದ ಕಂಡಕ್ಟರ್‌ನ ಬಳಿ ಒಂದಿಬ್ಬರು ಬಂದು ಸೀಟಿಗಾಗಿ ಪೀಡಿಸತೊಡಗಿದರು. ‘ಅಯ್ಯೋ ಶಿವನೆ ಸೀಟ್ ಇದ್ರೆ ನಾವ್ಯಾಕ್ ಇಟ್ಕೊಳೋನ ಸ್ವಾಮಿ……ಎಲ್ಲಾ ಸೀಟ್ಸು ರಿಸರ್ವ್ ಆಗಿದೆ’ ಅಂತ ಎಲ್ಲರಿಗೂ ಕೇಳಿಸುವಂತೆ ಹೇಳುವಾಗ ಟಿಕೆಟ್ ರಿಸರ್ವ್ ಮಾಡಿಸಿದ ವ್ಯಕ್ತಿಯೊಬ್ಬ ಟಿಕೆಟ್ ತೋರಿಸಿದ. ಕಂಡಕ್ಟರ್ ಶೀಟಿನಲ್ಲಿ ಎಂಟ್ರಿ ಮಾಡಿಕೊಂಡು ’ಕೂತ್ಕೊಳ್ಳಿ ಸಾರ್ , ಸಿನ್ನೇನು ಹೊರಡ್ತೀವಿ. ಇನ್ನೊಬ್ರು ಬರಬೇಕು ಅಷ್ಟೆ’ ಅಂದ. ಆ ಮಾತು ಅಲ್ಲಿ ನೆರದಿದ್ದವರಿಗೊಂದು ಖಡಕ್ ಸಂದೇಶದಂತಿತ್ತು. ಜನರೆಲ್ಲ ಎಲ್ಲೆಲ್ಲೋ ಹೋದರು. ಕಟ್‌ಸೀಟ್ ಗಿರಾಕಿ ನಿರಾಶೆಗೊಂಡು ಮತ್ತ್ಯಾವುದೋ ಬಸ್ಸಿನ ಕಡೆ ವಿಚಾರಿಸಲು ಹೊರಟ.

ಬಸ್ ಸ್ಟ್ಯಾಂಡಿನಿಂದ ಹೊರಹೋಗುವ ರಸ್ತೆ ತಿರುಗುವ ಎಡಬದಿಯ ಎತ್ತರದಲ್ಲಿ ವೇಶ್ಯೆಯೊಬ್ಬಳು ಕಾಣಿಸಿದಳು. ’ಥೂ ಮಾನಗೆಟ್ಟ ಜನ…..ಆಗೊಮ್ಮೆ ಓಡಿಸಿದ್ರು. ಈಗ ಮತ್ತೆ ಶುರು ಇವರ ಕಾರ್‌ಬಾರು’ ಎಂದು ಕ್ಷುದ್ರ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡವನಂತೆ ಪ್ಲಾಟ್‌ಫ಼ಾರಂ ಕಡೆ ತಿರುಗಿದ. ಸೇಟು ಬ್ರಾಂಡಿನ ಕಟ್ಸೀಟ್ ಗಿರಾಕಿಯ ಸುಳಿವಿರಲಿಲ್ಲ. ಸೂಟ್ಕೇಸಿನ ಮೇಲೆ ಕುಳಿತಿರುವ ಆ ಕೆಂಪು ಚೂಡಿದಾರದ ಹುಡುಗಿ ಹೆತ್ತವರಿಗೆ ಕಾಣಿಸದಂತೆ ಮುಂದೆ ನಿಂತಿರುವ ಇಬ್ಬರು ಹುಡುಗರನ್ನು ಉತ್ತೇಜಿಸುವಂತೆ ನೋಡಿ ಕದ್ದು ನಗುತ್ತಿದ್ದಳು. ತನ್ನ ಅಪ್ರತಿಮತೆಯನ್ನು ಸಾರುವಂತಿತ್ತು ಅವಳ ನೋಟ. ಅವಳ ಲಜ್ಜೆಗೆಟ್ಟ ದಿಟ್ಟತನಕ್ಕೆ ಹುಡುಗರು ಪೆಚ್ಚಾಗಿದ್ದರು. ಆಕ್ರೋಶಗೊಂಡಿದ್ದ ಕಂಡಕ್ಟರ್‌ನ ಮನಸ್ಸು ಗಾಡಿಯ ಒಳಗಿನ ಏಸಿ ಆನ್ ಮಾಡಿದಂತೆ ತಣ್ಣಗಾಯಿತು. ಇದು ತನಗೆ ಅರ್ಥವಾಗದಿರುವ ಈ ಕಾಲದ ಹುಡುಗಿಯರ ತುಂಟಾಟಿಕೆ ಇರಬೇಕು ಅಂದುಕೊಂಡ. ಇದೆಲ್ಲ ತನ್ನ ಮಗನಿಗೆ ತಿಳಿದಿರಬೇಕು; ಚೂಟಿ ಹುಡುಗ. ಈಗಷ್ಟೆ ಕಾಲೇಜ್ ಸೇರಿದ್ದಾನೆ, ಹುಡುಗಿಯರ ವಿಷಯದಲ್ಲಿ ಹೇಗೋ ಗೊತ್ತಿಲ್ಲ. ನಿನ್ನೆ ತಾನು ಆತನನ್ನು ಬಯ್ಯಬಾರದಿತ್ತು ಅಂತ ಬೇಸರಿಸಿಕೊಂಡ. ದಿನಾ ಬಸ್ ಪಾಸ್ ತೋರಿಸಿ ಬಸ್ಸಿನಲ್ಲಿ ಬರುತ್ತಿದ್ದವನು ನಿನ್ನೆ ಏಸಿ ಬಸ್ಸಿನಲ್ಲಿ ಒಂದಕ್ಕೆರಡು ದುಡ್ಡು ಕೊಟ್ಟು ಬಂದದ್ದೇ ಕಂಡಕ್ಟರ್‌ನ ಸಿಟ್ಟಿಗೆ ಕಾರಣ. ’ದಿನಾ ಅದೇ ಬಸ್ಸಲ್ಲಿ ಹೋಗ್ತೀರ. ಇವತ್ತೊಂದಿವ್ಸ ಏಸಿ ಬಸ್ಸಿನಲ್ಲಿ ಕೂತ್ಕೊಳ್ಳಿ ಸ್ವಾಮಿ’ ಅಂತ ನೀವೇ ಜನರನ್ನ ಕರೀತೀರಲ್ಲ ಅಪ್ಪ. ನಾನು ಇವತ್ತು ಒಂದು ದಿವ್ಸ ಹೋದ್ರೆ ಬಯ್ತೀರ- ಅಂತ ಅವನೂ ತಿರುಗಿ ಕೇಳಿದ್ದ. ಟ್ರಾಫ಼ಿಕ್ಕು, ಪೆಟ್ರೋಲು ಅಂತೆಲ್ಲ ಸಬೂಬು ಕೊಟ್ಟಾಗ ಆ ಮಟ್ಟಿಗೆ ಸುಮ್ಮನಾಗುತ್ತಿದ್ದವ ಮತ್ತೆ ಯಾವಾಗ ಬೈಕಿನ ವಿಚಾರ ಮಾತಾಡುತ್ತಾನೋ?. ’ಮುಂದಿನ ವರ್ಷ ಟ್ಯೂಶನ್ ಸೇರಿದ ಮೇಲೆ ಬೇಕಾಗುತ್ತೆ, ಆಗಲೇ ತೆಗೆಸಿಕೊಡುವ’ ಅಂತ ಹೇಳಿದರೆ ಅವನು ಒಪ್ಪಂದವನ್ನು ಪುರಸ್ಕರಿಸಬಹುದು ಎಂದುಕೊಂಡ.

’ಎರಡ್ ಗಂಟೆ…ಮಡಿಕೇರಿ…’ ಎನ್ನುವ ಹೆಂಗಸಿನ ಧ್ವನಿ ಕೇಳಿ ಆ ಕಡೆ ತಿರುಗಿದ. ಆ ಹೆಂಗಸು ಹಣೆಬೆವರು ಒರೆಸಿಕೊಳ್ಳುತ್ತ ಕಂಡಕ್ಟರ್ ಕೈಗೆ ಟಿಕೆಟ್ ಕೊಟ್ಟಳು. ಅದರ ಮೇಲೂ ಎರಡು ಬರೆ ಎಳೆದು, ಒಂದೊಂದು ಸಂಗತಿಯೂ ರಿಸರ್ವ್ ಮಾಡಿಕೊಂಡು ಬರುವಾಗಲೂ ಟಿಕ್ ಮಾಡಿಕೊಳ್ಳುವ ಸಲುವಾಗಿ ಇರುವ ತನ್ನ ಬದುಕಿನಂತೆಯೇ ಇದ್ದ ಬಿಳಿಶೀಟಿನಲ್ಲಿ ಎಂಟ್ರಿ ಮಾಡಿಕೊಂಡು ’ಹತ್ಕೊಳ್ಳಿ ಹತ್ಕೊಳ್ಳಿ ಹೊರಡೋ ಟೈಮ್ ಆಯ್ತು’ ಎಂದ. ಬಸ್ಸಿನಲ್ಲಿ ಎಷ್ಟು ಸೀಟು ಇದಿಯೋ ಅಷ್ಟೇ ಟಿಕೆಟ್ ನಾನು ಕೊಡವುದು, ನೀನು ಕೇಳಿದಾಗೆಲ್ಲ ಉಗುಳುವುದಿಲ್ಲ, ಸೀಟ್ಸ್ ಎಲ್ಲಾ ರಿಸರ್ವ್ ಆಗಿದ್ದಾಗ ನೀನು ನನ್ನ ತಂಟೆಗೇ ಬರುವಂತಿಲ್ಲ ಎನ್ನುವ ಅಹಂಕಾರದಲ್ಲಿ ಟಿಕೆಟ್ ಪ್ರಿಂಟ್ ಮಾಡುವ ಆ ಪುಟ್ಟ ಯಂತ್ರ ಕಂಡಕ್ಟರ್‌ನ ಕೈಯಲ್ಲಿ ಕುಳಿತಿತ್ತು. ಆ ಪುಟ್ಟ ಯಂತ್ರದ ಮೇಲೆ ಹಟಕಟ್ಟಿ ಸಾಧಿಸಿಕೊಳ್ಳಲೇ ಕಟ್‌ಸೀಟ್ ಮಾರುತ್ತಿದ್ದನೇನೋ ಅನ್ನುವಂತಿತ್ತು ಅವನ ಗತ್ತು. ಅವನ ಗತ್ತು ನೋಡಿದವರಿಗೆ ಹೋದ ವಾರವಷ್ಟೇ ಐರಾವತ ಬಸ್ಸಿನಲ್ಲೇ ಕಂಡಕ್ಟರ್ ಸೀಟನ್ನೇ ಬೈ-ಟು ಮಾಡಿ ಅರ್ಧ ಸೀಟನ್ನ ಪೂರ್ತಿ ದುಡ್ಡಿಗೆ ಮಾರಿ ಸಿಕ್ಕಿಬಿದ್ದಿರುವ ಸಂಗತಿ ಹೇಗೆ ತಾನೆ ತಿಳಿಯಬೇಕು.

ಎರಡು ಗಂಟೆಯ ಮೇಲೆ ಮೂರು ನಿಮಿಷವಾಗಿ ಬಸ್ಸು ಇನ್ನೂ ಹೊರಟಿಲ್ಲವಲ್ಲ ಎಂದು ಒಳಗಿದ್ದ ಪ್ರಯಾಣಿಕರು ತಮ್ಮ ತಮ್ಮ ಗಡಿಯಾರ ನೋಡಿಕೊಳ್ಳುತ್ತಿದ್ದರು. ಆ ಸೇಟು ಬ್ರಾಂಡಿನ ಕಟ್‌ಸೀಟ್ ಗಿರಾಕಿ ಅಲ್ಲೇ ಚಡಪಡಿಸುತ್ತ ಗಿರಕಿ ಹೊಡೆಯುತ್ತ ಕಂಡಕ್ಟರ್ ಬಳಿ ಬಂದ. ಎದುರುಗಡೆ ಎರಡು ಬಸ್ಸುಗಳು ಹಾದುಹೋದವು. ಕಾಗೆಗಳೆಲ್ಲ ಚೆಲ್ಲಾಪಿಲ್ಲಿಯಾದವು. ವೇಶ್ಯೆಗೆ ಯಾವುದೋ ಗಿರಾಕಿ ಸಿಕ್ಕಿರಬೇಕು, ಅಲ್ಲಿ ಕಾಣುತ್ತಿರಲಿಲ್ಲ. ಆ ಕೆಂಪು ಚೂಡಿದಾರದ ಹುಡುಗಿ, ಅವಳ ತಂದೆ-ತಾಯಿ ಅಲ್ಲಿರಲಿಲ್ಲ. ಅವರ ಬಸ್ಸು ಬಂದಿರಬೇಕು. ಆ ಇಬ್ಬರು ಹುಡುಗರು ಯಾವ ಬಸ್ಸಿಗೆ ಕಾಯುತ್ತಿದ್ದಾರೋ?, ಅಲ್ಲೇ ಇದ್ದರು. ಡ್ರೈವರ್ ಗಾಡಿ ಸ್ಟಾರ್ಟ್ ಮಾಡಿದ. ಆಕ್ಸಲರೇಟರ್ ಹೆಚ್ಚಿಸುತ್ತ ಬ್ರೇಕ್ ಮೇಲೆ ಕಾಲಿಟ್ಟುಕೊಂಡು ಕಂಡಕ್ಟರ್‌ನ ಸನ್ನೆಗಾಗಿ ಕಾಯುತ್ತಿದ್ದ. ಇನ್ನೆಲ್ಲೋ ಯಾವುದೋ ಬಸ್ಸು ಹೂಸು ಬಿಟ್ಟ ಸದ್ದು. ಆ ಆಸಾಮಿ ಕಂಡಕ್ಟರ್‌ನತ್ತ ದೃಷ್ಟಿ ಕದಲಿಸದೆ ನೋಡುತ್ತಿದ್ದ. ಕಂಡಕ್ಟರ್ ಬಸ್ಸು ಹತ್ತಿಕೊಂಡು ಹೊರಡಲು ಅನುವಾದ. ಅವನು ನಿರಾಶೆಗೊಂಡು ಎಡಕ್ಕೆ ತಿರುಗಿಕೊಂಡ. ’ಎಲ್ಲಿಗ್ರೀ ನೀವು ಹುಣುಸೂರಾ?…’ ಅಂತ ಕಂಡಕ್ಟರ್ ಆತನತ್ತ ಹೇಳಿದ್ದು ಕೇಳಿಸಿಕೊಂಡವನು ಕುಂಡಿಗೆ ಪಿನ್ನು ಚುಚ್ಚಿಸಿಕೊಂಡವರಂತೆ ಚುರುಕುಗೊಂಡು ಬಸ್ಸಿನ ಒಂದು ಮೆಟ್ಟಿಲ ಮೇಲೆ ಕಾಲಿಟ್ಟು ’ಸಾರ್ ಮಡಿಕೇರಿ’ ಅಂದ. ’ಹತ್ಕೊಳ್ಳಿ ಹತ್ಕೊಳ್ಳಿ’ ಅನ್ನುವುದು ಕೇಳುತ್ತಲೇ ದಿಗ್ವಿಜಯ ಸಾಧಿಸಿದ ಸಂತಸದಲ್ಲಿ ಒಳಹೋದ. ಒಳಗೆ ತಂಡಿ ತುಂಬಿಕೊಂಡಿದ್ದ ಐರಾವತ ತನ್ನನ್ನು ತಾನು ಪೂರ್ತಿಯಾಗಿ ಮುಚ್ಚಿಕೊಂಡು ಠೀವಿಯಿಂದ ಹೊರಟಿತು. ಚದುರಿಹೋಗಿದ್ದ ಕಾಗೆಗಳು ಯಾವುದೇ ಆದೇಶವಿಲ್ಲದೆ ಮತ್ತೆ ಬಂದು ಕುಳಿತವು. ಬಸ್ಸು ನಿಂತಿದ್ದ ಖಾಲಿ ಜಾಗ ಮತ್ತೊಂದು ಬಸ್ಸು ಬಂದು ಆಕ್ರಮಿಸಿಕೊಳ್ಳುವವರೆಗೂ ಯಾವ ಆಕ್ರೋಶವೂ ಇಲ್ಲದೆ ಅಸಹಾಯಕವಾಗಿ ತೆಪ್ಪಗೆ ಮಲಗಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.