ಇಕೋ ಹೋಳಿಗೆ – ಲೇಖಕನ ಮೊದಲೆರಡು ಮಾತು

ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. ಏತನ್ಮಧ್ಯೆ ಅನಿವಾರ್ಯವಾಗಿ ನಾನು ಪ್ರಸ್ತಾಪಿಸಿದ ನನ್ನ ಬದುಕಿನ ಕೆಲವು ಘಟನೆಗಳು ಕೆಲವರನ್ನಾದರೂ ಖುಷಿಪಡಿಸಿತು. ಆ ದಿನ ಹಾಜರಿದ್ದ ಪತ್ರಕರ್ತ ಮಿತ್ರರಾದ ‘ಕರ್ಮವೀರ’ದ ಗೋಪಾಲವಾಜಪೇಯಿ ಮತ್ತು ಗಣೇಶ ಕಾಸರಗೋಡು ನನ್ನಿಂದ ಲೇಖನಗಳನ್ನು ಬರೆಸಬೇಕೆಂದು ಬೆನ್ನಹಿಂದೆ ಬಿದ್ದು, ನನ್ನನ್ನು ಗೋಳಾಡಿಸಿ, ಆಗಾಗ ಹೆದರಿಸಿ, ತಮ್ಮ ಎಡಬಿಡದ ‘ನಕ್ಷತ್ರಿಕ’ ಹಿಡಿತದಿಂದ ಬಿಡಿಸಿಕೊಳ್ಳಲಾಗದಂತೆ ಹಿಡಿದಿಟ್ಟರು. ನನ್ನ ಸೋಮಾರಿತನವನ್ನು ಒಂದಿಷ್ಟು ದೂರವಿಟ್ಟು ಬರೆಯಲು ಪ್ರಾರಂಭಿಸಿದೆ……ಆ ಮಿತ್ರದ್ವಯರು ಪತ್ರಿಕಾಪ್ರಪಂಚದ ಭೀಷ್ಮರೆನಿಸಿದ ಶ್ರೀ ಕೆ.ಶಾಮರಾಯರ ಭೇಟಿಮಾಡಿಸಿದರು. ಅವರು ತಾವು ಚಿತ್ರದುರ್ಗದಲ್ಲಿ ಕಳೆದ ಕೆಲವು ವರುಷಗಳ ಬಗ್ಗೆ ನೆನಪುಮಾಡಿಕೊಂಡರು; ನನ್ನ ಅಜ್ಜ ಮತ್ತು ಅಪ್ಪನೊಡನೆ ಅವರಿಗಿದ್ದ ನಿಕಟ ಸಂಬಂಧದಿಂದಾಗಿ ಒಂದೆರಡು ಸ್ವಾರಸ್ಯಕರ ಘಟನೆಗಳನ್ನೂ ಜ್ಞಾಪಿಸಿಕೊಂಡರು. “ಬರಿಯಪ್ಪ….ಕರ್ಮವೀರ’ದಲ್ಲಿ ಧಾರಾವಾಹಿಯಾಗಿ ಬರಲಿ” ಎಂದು ಹರಸಿದರು. ಹಾಗಾಗಿ ನನ್ನನೆನಪಿನಿಂದ ಆಯ್ದ ಕೆಲವು ವಿಷಯಗಳನ್ನು ಕುರಿತು ಬರೆದೆ. ಅದೇ “ಸೋಮಣ್ಣನ ‘ಸ್ಟಾಕ್’ನಿಂದ” ಎಂಬ ಶೀರ್ಷಿಕೆಯಲ್ಲಿ ಸುಮಾರು ಐವತ್ತು ಲೇಖನಗಳು ಪ್ರಕಟವಾಯಿತು. ಆ ಪತ್ರಕರ್ತ ಮಿತ್ರರಿಗೆ, ಹಿರಿಯರಾದ ಶ್ರೀಶಾಮರಾಯರಿಗೆ ಮತ್ತು ‘ಕರ್ಮವೀರ’ ಬಳಗದವರಿಗೆಲ್ಲಾ ನಾನು ಕೃತಜ್ಞ.

ಈ ಲೇಖನಗಳಲ್ಲಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದಲ್ಲಿಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಕೌಟುಂಬಿಕ ಬದುಕಿನ ಕೆಲವು ಮೌಲ್ಯಗಳ ಬಗ್ಗೆ ಪ್ರಸ್ತಾಪವಿದೆ. ನನ್ನ ನೆನಪಿನ ಸುರುಳಿಯನ್ನು ಬಿಚ್ಚಿ, ಕೇಳಿದ್ದನ್ನು ಬಹಳ ಸ್ವಲ್ಪ, ಕಂಡಿದ್ದನ್ನು ಅಷ್ಟಿಷ್ಟು, ಆದರೆ ಬಹಳಷ್ಟು ಅನುಭವಿಸಿದ್ದನ್ನು ನನಗೆ ತೋರಿದಂತೆ ಬರೆದಿದ್ದೇನೆ. ತಪ್ಪೋ-ಒಪ್ಪೋ ಅನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅನುಭವಗಳನ್ನು ಹಾಗೆಹಗೇ ಹೇಳಿದ್ದೇನೆ. ನನ್ನ ಲೇಖನಗಳನ್ನು ಕರ್ನಾಟಕದಲ್ಲಷ್ಟೇ ಅಲ್ಲ, ದೂರದ ಬೊಂಬಾಯಿ, ಡೆಲ್ಲಿ, ಕಲ್ಕತ್ತಾಗಳಿಂದ ‘ಕರ್ಮವೀರ’ದ ವಾಚಕರೆಷ್ಟೋ ಮಂದಿ ಓದಿ ನನಗೆ ಪತ್ರಮುಖೇನ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಅವರಲ್ಲಿ ಹಿರಿಯರಿದ್ದಾರೆ, ಕಿರಿಯರಿದ್ದಾರೆ, ಕಾರ್ಮಿಕರಿದ್ದಾರೆ, ಬಂದೂಕು ಹಿಡಿದು ಗಡಿಕಾಯುವ ಸೈನಿಕರಿದ್ದಾರೆ, ಲೇಖಕರಿದ್ದಾರೆ, ಸ್ನೇಹಿತರಿದ್ದಾರೆ ಇವರೆಲ್ಲರ ಮೆಚ್ಚುಗೆ ಪ್ರೋತ್ಸಾಹಕ್ಕಾಗಿ ನಾನು ಋಣಿಯಷ್ಟೇ‌ಅಲ್ಲ, ಅದರಿಂದಾಗಿ ಮತ್ತಷ್ಟು ಬರೆಯುವ ಇಚ್ಚೆಯೂ ಆಗಿದೆ. ಒಟ್ಟಿನಲ್ಲಿ ಜನ ಓದಿ ಮೆಚ್ಚಿ ಖುಷಿಪಟ್ಟರೆ ಸಂತೋಷ…

ಲೇಖನಗಳನ್ನು ಓದಿ, ಅವೆಲ್ಲವನ್ನೂ ಪುಸ್ತಕರೂಪದಲ್ಲಿ ಪ್ರಕಟಿಸಲು ಸಂತೋಷದಿಂದ ಮುಂದಾದವರು ಶ್ರೀ ತಾ.ರಾ.ನಾಗರಾಜ್ ಅವರು. ಅವರಿಗೆ ನಾನು ಕೃತಜ್ಞ. ಹಾಗೆಯೇ ಅಂದವಾಗಿ ಮುದ್ರಿಸಿರುವ ಸಿ.ವಿ.ನಾಗರಾಜ್‌ರವರಿಗೂ ಕೃತಜ್ಞ.

ಇನ್ನು ನನ್ನ ಈ ಚೊಚ್ಚಲ ಕೃತಿಗೊಂದು ಮುನ್ನುಡಿ ಬೇಕೆನಿಸಿ, ನನ್ನ ಆತ್ಮೀಯಗೆಳೆಯ ಕವಿ-ವಿಮರ್ಶಕ-ಚಿಂತಕ ಡಾ||ಸುಮತೀಂದ್ರ ನಾಡಿಗರನ್ನು ಕೇಳಿಕೊಂಡೆ. ಕೆಲವುಸಾರಿ ಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ, ಸ್ನೇಹಧರ್ಮ ದೊಡ್ಡದು ಎಂಬುದರಲ್ಲಿ ಬಲವಾದ ನಂಬಿಕೆಯಿದ್ದವ, ನಾಡಿಗ ನನ್ನನ್ನು ಬಯ್ದೂ ಹೊಗಳಿ, ನಿರ್ವ್ಯಾಜ ಪ್ರೀತಿಯಿಂದ ಪುಸ್ತಕಕ್ಕೆ ‘ಮುನ್ನುಡಿ’ ಬರೆದಿದ್ದಾರೆ. ಬರೆಯಲು ಮುಜುಗರವೆನಿಸಿದರೂ, ಅವರಿಗೆ ನನ್ನ“ಥ್ಯಾಂಕ್ಸ್”.

ಪತ್ರಕರ್ತರೂ, ಕತೆಗಾರರೂ ಹಾಗೂ ಮೊಟ್ಟಮೊದಲಿಗೆ ನಮ್ಮ ದೇಶದ ಹಡಗು ಕೈಗಾರಿಕೆ(ಶಿಪ್ಪಿಂಗ್ ಇಂದಸ್ಟ್ರಿ)ಬಗ್ಗೆ ಗ್ರಂಥ ಬರೆದಿರುವ ಹಿರಿಯರಾದ ಶ್ರೀ.ಟಿ.ಎಸ್.ಸಂಜೀವ್‌ರವರ ಪತ್ರಗಳಿಂದ ಆಯ್ದ ಕೆಲವು ಭಾಗಗಳನ್ನು ‘ಬೆನ್ನುಡಿ’ಗೆ ಉಪಯೋಗಿಸಿದೆ. ಅವರಿಗೆ ನನ್ನ ನಮನಗಳು.

ದಿನ ನಿತ್ಯ ಸ್ವಲ್ಪವಾದರೂ ಬರೆಯಲೇಬೇಕಾದ ಅನಿವಾರ್ಯತೆಯಿಂದ ನಾನು ಸಿಡಿಮಿಡಿಗೊಂದರೂ ಬೇಸರಿಸದೆ ನನ್ನೊಡನೆ ನೆರವಾದ ನನ್ನ ಹೆಂಡತಿ ಹಾಗೂ ಕುಟುಂಬ ವರ್ಗದವರಿಗೆ ನಾನು ಆಭಾರಿ.

-ಎಚ್.ಜಿ.ಸೋಮಶೇಖರ ರಾವ್
೮೦“ಶ್ರೀನಿವಾಸ”.೨೩ನೇ ಮುಖ್ಯರಸ್ತೆ
ಶ್ರೀನಗರ. ಬೆಂಗಳೂರು-೫೬೦ ೦೫೦

“I have seen flowers come in stony places
And Kindness done by man with ugly faces….

  • John Manfield

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.