ಗಡಿಯಾರದಂಗಡಿಯ ಮುಂದೆ

‘ಶಿಲಾಲತೆ’ ಸಂಗ್ರಹ ಪ್ರಕಟವಾಗುವುದಕ್ಕೂ ಮುಂಚೆ ಅದರಲ್ಲಿರುವ ’ಗಡಿಯಾರದಂಗಡಿಯ ಮುಂದೆ’ ಎನ್ನುವ ಕವಿತೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ ನಾವು ಅನೇಕರು ಆ ಕವಿತೆಯ ಅರ್ಥ ಬಿಡಿಸಲಿಕ್ಕೆ ಹೆಣಗಾಡಿದೆವು. ಕ್ಲಿಷ್ಟತೆ, ಅಪೂರ್ವ ಕಾವ್ಯ ಪ್ರತಿಮೆಗಳು, ಕಾವ್ಯಶಿಲ್ಪ, ಬೌದ್ಧಿಕತೆ ಮತ್ತು ಭಾವನಾಶಕ್ತಿ, ಅನಿಶ್ಚಿತತೆ, ದಿಗ್ಭ್ರಮೆ, ಸಂದಿಗ್ಧತೆ ಮೊದಲಾದ ಎಲ್ಲ ನವ್ಯಕಾವ್ಯ ಲಕ್ಷಣಗಳನ್ನೂ ಇಟ್ಟುಕೊಂಡ ’ಗಡಿಯಾರ ದಂಗಡಿಯ ಮುಂದೆ’ ನರಸಿಂಹಸ್ವಾಮಿಯವರ ಕಾವ್ಯ ಗಟ್ಟಿಯಾದದ್ದು ಎನಿಸಿಬಿಟ್ಟಿತು.

ಕೆ.ಎಸ್.ನ ೧೯೧೫ರ ಜನವರಿ ೨೬ ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಅವರ ತಂದೆ ಸುಬ್ಬರಾಯರು, ತಾಯಿ ನಾಗಮ್ಮ. ೧೯೩೭ರಲ್ಲಿ ಮೈಸೂರು ಪೌರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ಎರಡನೆ ದರ್ಜೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದಾಗ, ಅವರ ಸಂಬಳ ೨೫ ರೂಪಾಯಿ. ಮನೆ ಬಾಡಿಗೆ ರೂ ೪. ಪೌರಸಭಾ ಕಾರ್ಯಾಲಯದಲ್ಲಿ ಅವರು ಪ್ರಿಯವಾದ ವ್ಯಕ್ತಿಯಾಗಿದ್ದರು. ಮೈಸೂರು ದೇವರಾಜ ಮಾರ್ಕೆಟ್‌ನ ಒಂದು ಫಲಪುಷ್ಪ ಪ್ರದರ್ಶನಕ್ಕೆ ಕರಿಯ ಲಾಂಗ್ ಕೋಟು, ಬಿಳಿಯ ಷರಾಯಿ ಮತ್ತು ಕರಿಯ ಬೂಟ್ಸ್ ಧರಿಸಿ ಹೋಗಿದ್ದರಂತೆ. ಅದೇ ದರ್ಬಾರ್ ಡ್ರೆಸ್‌ನಲ್ಲಿ ಅರಮನೆಗೂ ಹೋಗಿ ಬಂದರಂತೆ. ೧೯೪೦ರ್‍ಲಲಿ ಬೆಂಗಳೂರು ಕಾರ್ಪೊರೇಷನ್ ಕಚೇರಿಗೆ ವರ್ಗ ಆಯಿತು. ಅಲ್ಲಿಂದ ಮೈಸೂರು ತಾಲ್ಲೂಕು ಕಚೇರಿಗೆ ಹೆಡ್ ಮುನ್ಷಿಯಾಗಿ ಹೋದರು. ೧೯೪೨ರಲ್ಲಿ ಅವರು ಕಚೇರಿಗೆ ಹೋದಾಗ ಎಲ್ಲರೂ ಅವರನ್ನು ಕವಿ ಎಂದು ಘೋಷಿಸಿದರು. ’ಈ ಗುಮಾಸ್ತರ ಸಮುದ್ರದಲ್ಲಿ ನಾನು ಒಂದು ಅಲೆಯಾಗಿ ಸೇರಿ ಹೋದೆ’ ಎಂದು ಕೆ.ಎಸ್.ನ. ಹೇಳಿದ್ದಾರೆ. ೧೯೭೦ರಲ್ಲಿ ಅವರು ನಿವೃತ್ತರಾದರು.

೧೯೬೦ ರಿಂದ ೧೯೭೫ರ ವರೆಗೆ ನರಸಿಂಹಸ್ವಾಮಿಯವರ ಯಾವ ಕವನ ಸಂಗ್ರಹವೂ ಬರಲಿಲ್ಲ. ೧೬ ವರ್ಷ ಕಾಲ ’ಅದು ಚಿಂತನೆಯ ಕಾಲ. ಕವನದಿಂದ ಕವನಕ್ಕೆ ಸಂಗ್ರಹದಿಂದ ಸಂಗ್ರಹಕ್ಕೆ ನನ್ನ ಕವಿತೆ ಹೇಗೆ ಸಾಗುತ್ತಿದೆ ಎಂಬುದನ್ನು ನಾನು ಶ್ರದ್ಧೆಯಿಂದ ಸಮೀಕ್ಷೆ ಮಾಡಿದೆ’ ಎಂದು ಅವರು ಹೇಳಿದ್ದಾರೆ. ಆದರೂ ಈ ನಡುವೆ ಅವರಿಗೆ ಅನೇಕ ಸನ್ಮಾನಗಳಾದವು. ೧೯೭೨. ಜಿ.ಎಸ್. ಶಿವರುದ್ರಪ್ಪನವರು ನರಸಿಂಹಸ್ವಾಮಿಯವರ ಬಗ್ಗೆ ’ಚಂದನ’ ಎನ್ನುವ ಅಭಿನಂದನ ಗ್ರಂಥವನ್ನು ಸಂಪಾದಿಸಿದರು. ಅದೇ ವರ್ಷ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿತು. ೧೯೭೮ರಲ್ಲಿ ’ತೆರೆದ ಬಾಗಿಲು’ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಮತ್ತು ೧೯೯೬ರಲ್ಲಿ ಪಂಪ ಪ್ರಶಸ್ತಿಯೂ, ೧೯೯೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಫೆಲೋಶಿಪ್ ಸಿಕ್ಕಿದವು. ಎಲ್ಲದಕ್ಕಿಂತ ದೊಡ್ಡ ಪ್ರಶಸ್ತಿಯಾದ ಜನಪ್ರಿಯತೆಯೂ ಅವರಿಗೆ ಸಿಕ್ಕಿತು.
ಅವರು ಬಡವರಾಗಿ ಬದುಕಿ, ಬಡಜನರ ನೋವು ನಲಿವುಗಳಿಗೆ ಸ್ಪಂದಿಸಿದ್ದಾರೆ. ಬಡತನವನ್ನು ಅವರು ವೈಭವೀಕರಿಸಿಲ್ಲ. ಅದರ ಬಗ್ಗೆ ಭಾವಾತಿರೇಕದಿಂದ ಅಳಲಿಲ್ಲ, ಕೂಗಲೂ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರ ’ಹಸಿದ ಮಗು’ ಎನ್ನುವ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ:

ಅನ್ನವಿಲ್ಲದ ಕಂದ ಬಂತು ಬೀದಿಗೆ, ಗೆಳೆಯ,
ನಾನು ಕವಿತೆಯ ಕೊಡಲು ಹಿಂದೆ ಸರಿದೆ,
ಮಳೆಬಿಲ್ಲು ಕರಗುವುದ ನಾನು ಎಲ್ಲೋ ಕಂಡೆ
ಚೆಲುವು ಹೋಳಾದ ಮನೆ ಅದನು ಕಂಡೆ.

ಒಂದೊಂದು ಬೀದಿಗೊಂದೊಂದು ನೀತಿಯ ಕಂಡೆ,
ಇದರಲ್ಲಿ ಅದನು ಬೇಡುವುದು ಸರಿಯೆ?
ಘಂಟೆಗಳ ಬಡಿಯುತ್ತ ಹುಗ್ಗಿಯನು ಹಂಚಿದರು
ಹಸಿದ ಮಕ್ಕಳಿಗೆಂದು ದೇಗುಲದಲಿ.

’ಅನ್ನ ಹೆಚ್ಚೋ ನಿಮ್ಮ ಕವಿತೆ ಹೆಚ್ಚೋ’ ಎಂದು
ಕೇಳಿದೆ ನಾನು, ಬರಲಿಲ್ಲ ಉತ್ತರ;
ಹಸಿದ ಮಕ್ಕಳ ಕರೆದೆ ’ಬನ್ನಿ ಹತ್ತಿರ’ ಎಂದು,
ಹಸಿದ ಹೊಟ್ಟೆಯ ಮೇಲೆ ತೆರೆಯನೆಳೆದೆ.

ನರಸಿಂಹಸ್ವಾಮಿ ಎಲ್ಲರಿಗೂ ಒಳಿತನ್ನು ಬಯಸುತ್ತಿದ್ದರು. ಆ ರೀತಿಯ ಶುಭವನ್ನು ಸಾಧಿಸುವುದು ಅವರ ಕಾವ್ಯದ ಉದ್ದೇಶವಾಗಿತ್ತು. ಎಲ್ಲರಿಗೂ ಒಳಿತಾಗಲಿ ಎನ್ನುವುದು ಅವರ ಕಾವ್ಯ ಹಿಡಿದ ದಿಕ್ಕೂ ಆಗಿತ್ತು. ಅವರು ಪ್ರೇಮ ಕವಿತೆಗಳನ್ನು ಮಾತ್ರ ಬರೆಯಲಿಲ್ಲ. ನಮ್ಮ ದೈನಂದಿನ ಬದುಕಿನ ವಾಸ್ತವಗಳ ಬಗ್ಗೆ ಮನುಷ್ಯನನ್ನು ಎಂದೆಂದಿನಿಂದಲೂ ಕಾಡುತ್ತಿರುವ ಪ್ರಶ್ನೆಗಳ ಬಗ್ಗೆಯೂ ಬರೆದರು. ದೇವರ ಇರುವಿಕೆಯನ್ನು ಪ್ರಶ್ನಿಸುತ್ತ ’ಎರಡು ಚಿತ್ರಗಳು’ ಎನ್ನುವ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ.

ದೇವರಿದ್ದಾನೆ ಎನುವರು ಕೆಲರು
ಅವನಿಲ್ಲವೆನ್ನುವರು ಇನ್ನು ಕೆಲರು;
ಹಗಲು ರಾತ್ರಿಗಳಲ್ಲಿ ಉರುಳುತ್ತಲಿದೆ ಲೋಕ,
ಇಹನೊ ಇಲ್ಲವೊ ಎಂಬ ಚಿಂತೆ ಇರದೆ.
ದೇವರಿದ್ದಾನೆ ಸರಿ. ಗೊತ್ತಿಲ್ಲ ಎಲ್ಲೆಂದು
ಎಲ್ಲಿದ್ದರೂ ಬರಬೇಕು ಅವನು ಹೊರಗೆ!

ನರಸಿಂಹಸ್ವಾಮಿಗಳಿಗೆ ಭೂಮಿಯೆ ದೇವರು. ಆ ತಾಯಿಯ ಬಗ್ಗೆ ಅಪೂರ್ವ ಪ್ರೀತಿ. ಅನೇಕರಿಗೆ ಚೆಲುವು ಒಲವಾಗಿ ಕಾಣಿಸುತ್ತೆ. ಆದರೆ ನರಸಿಂಹಸ್ವಾಮಿಗಳಿಗೆ ಒಲವು ಚೆಲುವಾಗಿ ಪರಿವರ್ತಿತವಾಗುವುದು ಮುಖ್ಯವಾಗಿತ್ತು.

ಗೋಪಾಲಕೃಷ್ಣ ಅಡಿಗರಿಗಿಂತ ಮೂರು ವರ್ಷ ದೊಡ್ಡವರಾದ ಕೆ.ಎಸ್. ನರಸಿಂಹಸ್ವಾಮಿ, ೧೯೪೨ರಲ್ಲಿ ತಮ್ಮ ಮೊದಲ ಸಂಕಲನವಾದ ’ಮೈಸೂರು ಮಲ್ಲಿಗೆ’ಯನ್ನು, ಡಿ.ವಿ.ಜಿ. ಯವರ ಮುನ್ನುಡಿಯೊಂದಿಗೆ ಪ್ರಕಟಿಸಿದರು. ಅದಕ್ಕೆ ಎ.ಆರ್. ಕೃಷ್ಣಶಾಸ್ತ್ರಿಗಳು ಕಲಾವಿದ ಪುರುಷೋತ್ತಮ ಅವರಿಂದ ಚಿತ್ರಗಳನ್ನು ಬರೆಸಿದ್ದರು. ನರಸಿಂಹಸ್ವಾಮಿಗಳು ಮತ್ತು ತೀ.ನಂ.ಶ್ರೀ. ಕವಿತೆಗಳನ್ನು ಆರಿಸಿದ್ದರು. ಈ ಸಂಗ್ರಹದ ಅನೇಕ ಕವನಗಳು ’ಪ್ರಬುದ್ಧ ಕರ್ನಾಟಕ’, ’ಜಯ ಕರ್ನಾಟಕ’, ’ವಿಚಾರ ವಾಹಿನಿ’ ಮತ್ತು ಕನ್ನಡನುಡಿ’ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ೧೯೪೨ ಜನವರಿಯಲ್ಲಿ ಒಂದು ಸಂಜೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ’ಮೈಸೂರು ಮಲ್ಲಿಗೆ’ ಬಿಡುಗಡೆಯಾಯಿತು. ಇದು ಮನೆಮಾತಾಯಿತು. ಮದುವೆಯಲ್ಲಿ ಉಡುಗೊರೆ ಕೊಡಬೇಕಾದರೆ ಈ ಪುಸ್ತಕವನ್ನೇ ಕೊಟ್ಟರು. ’ಜೀವನಾನುಭವವಿದ್ದ ಈ ಪದ್ಯಗಳನ್ನು ಓದುವವರಿಗೆ ತಮ್ಮ ಹೃದಯ ಧ್ವನಿಯೇ ಅಲ್ಲಿ ಹೊರಡುತ್ತಿರುವಂತೆ ಕೇಳಿಬಂದೀತೆಂದು ನನಗೆ ಅನ್ನಿಸುತ್ತದೆ’ ಅಂತ ಡಿ.ವಿ.ಜಿ. ಹೇಳಿದರು. ಬೇಂದ್ರೆಯವರು ’ಮೈಸೂರು ಮಲ್ಲಿಗೆ’ಯನ್ನು ತಂಗಾಳಿಗೊಡ್ಡಿದ ನರಸಿಂಹಸ್ವಾಮಿಯವರ ಪ್ರತಿಭೆ ಅಪ್ಸರೆಯಂತೆ. ಈ ಲಾವಣ್ಯವು ಮಣ್ಣುನೆಲದಿಂದ ಬಂದುದಲ್ಲ ಎನಿಸಿಬಿಟ್ಟಿದೆ’ ಎಂದರು.

೧೯೪೬ರಲ್ಲಿ ಅಡಿಗರ ಮೊದಲ ಸಂಕಲನ ’ಭಾವತರಂಗ’ ಪ್ರಕಟವಾಯಿತು. ಅಡಿಗರು ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, ನರಸಿಂಹಸ್ವಾಮಿಗಳು ವಿದ್ಯಾರ್ಥಿಯಾಗಿರಲಿಲ್ಲ. ೧೯೩೬ರಲ್ಲಿ ನರಸಿಂಹಸ್ವಾಮಿಯವರು ವೆಂಕಮ್ಮನವರನ್ನು ಮದುವೆಯಾಗಿ ಅವರು ತಿಪಟೂರಿನಲ್ಲಿದ್ದ ಅವರ ಮಾವನ ಮನೆಯಲಿದ್ದರು. ಅಲ್ಲಿಯೇ ಅನೇಕ ಪ್ರೇಮ ಕವಿತೆಗಳನ್ನೂ ಬರೆದರು. ೧೯೩೭ರಲ್ಲಿ ಮೈಸೂರಿನ ಮುನಿಸಿಪಲ್ ಆಫೀಸಿನಲ್ಲಿ ಅವರಿಗೆ ಗುಮಾಸ್ತನ ಕೆಲಸ ಸಿಕ್ಕಿತು. ಮೈಸೂರಿನಲ್ಲಿ ಸಂಸಾರ ಹೂಡಿದರು. ಈ ನಡುವೆ ಅಡಿಗರು ಹೇಳುವ ಹಾಗೆ ’ನರಸಿಂಹಸ್ವಾಮಿ ಆ ಕಾಲೇಜಿನಲ್ಲಿ ಓದುತ್ತಿರಲಿಲ್ಲವಾದರೂ ಅವರು ಮಹಾರಾಜಾ ಕಾಲೇಜಿನಲ್ಲಿ ಆಗಲೇ ಎಲ್ಲರೂ ಬಲ್ಲ ಕವಿಯಾಗಿದ್ದರು’. ಆದಾದ ಮೇಲೆ ಕೆ.ಎಸ್.ನ. ’ಐರಾವತ’ (೧೯೪೫), ’ದೀಪದ ಮಲ್ಲಿ’ (೧೯೪೭), ’ಉಂಗುರ’ (೧೯೪೯), ’ಇರುವಂತಿಗೆ’ (೧೯೫೨) ಪ್ರಕಟಿಸುವ ಹೊತ್ತಿಗೆ ಅಡಿಗರಿಗೆ ಕೆ.ಎಸ್.ನ. ದೊಡ್ಡ ಸವಾಲಾಗಿದ್ದರು. ಕೆ.ಎಸ್.ನ. ಪ್ರಭಾವಕ್ಕೆ ಸಿಕ್ಕಿಕೊಳ್ಳದೆ ಇರುವುದಕ್ಕಾಗಿ ಅಡಿಗರು ’ನಡೆದು ಬಂದ ದಾರಿ’ ಸಂಕಲನದ (೧೯೫೨) ’ಪುಷ್ಪಕವಿಯ ಪರಾಕು’ ಎನ್ನುವ ಕವನದಲ್ಲಿ ಕೆ.ಎಸ್.ನ. ಅವರನ್ನು ಗೇಲಿ ಮಾಡಿದರು. ಅಲ್ಲಿಂದ ಮುಂದೆ ಅಡಿಗರು ಪ್ರಾರಂಭಿಸಿದ ನವ್ಯಕಾವ್ಯ ಪ್ರಬಲವಾಗುತ್ತಾ ಹೋಯಿತು. ಮೊದಲು ಅಡಿಗರಿಗೆ ಕೆ.ಎಸ್.ನ. ಸವಾಲಾಗಿದ್ದರೆ, ಆಮೇಲೆ ಅಡಿಗರು ನರಸಿಂಹಸ್ವಾಮಿಯವರಿಗೆ ಸವಾಲಾದರು. ನರಸಿಂಹಸ್ವಾಮಿಯವರು ಸವಾಲನ್ನು ಸ್ವೀಕರಿಸಿದರು. ಆರು ವರ್ಷ ಕಾದರು. ೧೯೫೮ರಲ್ಲಿ ಅವರ ’ಶಿಲಾಲತೆ’ ಪ್ರಕಟವಾಯಿತು. ನರಸಿಂಹಸ್ವಾಮಿಯವರ ಕಾವ್ಯ ಹೂಮಾಲೆಯಾಗಿದ್ದುದ್ದು ಕಲ್ಲಿನ ಬಳ್ಳಿಯಾಯಿತು.
*****
ಪ್ರಜಾವಾಣಿ ದಿನಾಂಕ ೪ ಜನವರಿ, ೨೦೦೪

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.