ಅಲಬಾಮಾದ ಅಪಾನವಾಯು

….ಫಟ್ಟೆಂದು ಹೊಡೆದಿತ್ತು ವಾಸನೆ!
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ. ಅನಿತಾ ಎಂದು ಬರೆಸಿಕೊಳ್ಳುವ ಮತ್ತು ಅನೀಟ ಎಂದು ಕರೆಸಿಕೊಳ್ಳುವ ತನ್ನ ನರ್ಸಿನ ಜತೆ ಡಾ.ಮುಕುಂದ , ಹದಿನೇಳು ವರ್ಷದ ಸುಂದರಿಯೊಬ್ಬಳಿಗೆ “ಸ್ಟಮಕ್ ವಾಷ್” ಕೊಡುವುದಕ್ಕೆ ಒಂದೈದು ನಿಮಿಷ ಮುಂಚೆ. ಏಸಿ ರೂಮಿನಲ್ಲಿ ನಡೆಯುತ್ತಿರುವ ಮೀಟಿಂಗಿನ ನಡುವೆ ಮೂಲಂಗಿ ಹುಳಿಯ ಡಬ್ಬಿ ತೆಗೆದಂತೆ, ಕೆಮಿಸ್ಟ್ರಿ ಲ್ಯಾಬಿನಲ್ಲಿ ಹೈಡ್ರೊಜನ್ ಸಲ್ಫೈಡ್ ಅನಿಲ ತಯಾರಾದಾಗ ಬಂದಂತೆ, ಗಟ್ಟಿಯಾಗಿ ಮತ್ತು ತೀಕ್ಷ್ಣವಾಗಿ ಬಂದಿತ್ತು, ಆ ವಾಸನೆ. ಮೂಗಿನ ಹೊಳ್ಳೆಗಳನ್ನು ಭೇದಿಸಿ ನೇರವಾಗಿ ಮಿದುಳಿಗೇ ಬಡಿದಾಗ, ಈ ಮೂಗಿನ ಹೊಳ್ಳೆಯ ಕೂದಲುಗಳನ್ನೂ ಕತ್ತರಿಸಬೇಕಾಗಿರುವ ಸಭ್ಯ ಕೆಲಸಕ್ಕೆ ಸೇರಿದ್ದಕ್ಕೆ ದೂರಿಕೊಂಡ, ಮುಕುಂದ. ವಾಕರಿಕೆ, ಕಣ್ಣಲ್ಲಿ ನೀರು, ಏರಿದ ಕಿವಿಯ ಬಿಸಿ ಮುಂತಾದ ಕಾರಣಭರಿತ ವೈಜ್ಞಾನಿಕ ಪ್ರತಿಕ್ರಿಯೆಗಳ ಜತೆಗೆ ನಗುವೂ ಬಂದಿತು. ಎದುರು ಮಲಗಿದ್ದ ಬಿಳೀ ಸಪೂರ ಸುಂದರಿಯನ್ನೊಮ್ಮೆ ನೋಡಿದ. ಪ್ರಾಯಶಃ ತನ್ನ ಪ್ರಿಯಕರನಿಗೆ ಬುದ್ಧಿ ಕಲಿಸಲು ಒಂದು ನಾಲ್ಕು ವಿಟಮಿನ್ ಮಾತ್ರೆ ತೆಗೆದುಕೊಂಡು ಸುಳ್ಳು ಸುಳ್ಳೇ ಆತ್ಮಹತ್ಯೆಗೆಂದು ಪ್ರಯತ್ನಿಸಿ, ಈಗ ಪಟಪಟ ಕಣ್ಣುರೆಪ್ಪೆ ಮಿಟುಕಿಸಿಕೊಂಡು ಸುಳ್ಳು ಸುಳ್ಳೇ ಕೋಮಾದಲ್ಲಿರುವಂತೆ ನಟಿಸುತ್ತಿರುವ ಆ ಹುಡುಗಿಯ ಮುಂದೂ ನಗುವುದು ಡಾಕ್ಟರಾದ ತನಗೆ ಒಳ್ಳೆಯ “ಡೆಮೀನರ್’ ಅಲ್ಲವೆಂದು ಸ್ಕ್ರೀನಿನಿಂದ ಹೊರಗೆ ಬಂದು” ಅನೀಟಾ, ಆ ಡ್ರಿಪ್ ಹಾಕಿ ಬಾ. ಇಲ್ಲಿ ಆರ್ಡರ್ ಬರೆದಿದ್ದೇನೆ” ಎಂದು ಬಾಗಿಲು ತೆರೆದು ಹೊರಗೆ ಹೋಗಿ ಬೇರೆಲ್ಲಾದರೂ ಹೊಸಗಾಳಿ ಇದೆಯೇ ಎಂದು ಹುಡುಕಲು ಪ್ರಯತ್ನ ಮಾಡಲು ಪ್ರಯತ್ನ ಮಾಡುತ್ತಿದ್ದ.

” ಬಂದೇ” ಎಂದು ಬದುಕಿದೆಯಾ ಬಡಜೀವವೇ ಎಂದುಕೊಳ್ಳುತ್ತಾ ಹೊರಬಂದು” ಎಂತದದು ವಾಸನೆ” ಎಂದಳು, ನಗುತ್ತಾ. “ಎಂತದೋ, ಯಾರಿಗೆ ಗೊತ್ತು” ಎಂದ ಮುಕುಂದ. ” ನೀನಾ…..? ಮಧ್ಯಾಹ್ನ ಊಟಕ್ಕೆ ಏನು ತಿಂದಿದ್ದೀ?” ಕೇಳಿದಳು, ಯಾವ ಭಾವನೆಯೂ ಇಲ್ಲದೆ. ” ಸ್ಟುಪಿಡ್, ನಾನಲ್ಲ” ಎಂದು ಸ್ವಲ್ಪ ತೋರಿಕೆಗೆ ಸಿಟ್ಟು ಮಾಡಿದ, ಮುಕುಂದ. ” ನಾನೂ ಅಲ್ಲ, ಬಹುಶಃ ಆ ಸುಂದರಿಯೇ ಇರಬಹುದು” ಎಂದಳು, ಮತ್ತೆ ನಗುತ್ತಾ. ನಕ್ಕಾಗ ಈಕೆ ಚೆನ್ನಾಗಿ ಕಾಣುತ್ತಾಳೆ ಎಂದು ಸಾವಿರದ ಒಂದನೆಯ ಬಾರಿ ಅಂದುಕೊಂಡು ” ಗೊತ್ತಿಲ್ಲ, ಆದರೆ ಅದು ಅದರ ವಾಸನೆಯಾ?” ಕೇಳಿದ. “ಮತ್ತಿನ್ನೇನು. ಏನು ತಿಂದು ಬಂದಿದ್ದಳೋ? ” ವಾಸನೆ ತಡೆಯಲಾರದೇ ಕೇಸ್ ಪೇಪರ್‌ನಿಂದಲೇ ಮೂಗಿನ ಮುಂದೆ ಗಾಳಿಹಾಕಿಕೊಳ್ಳುತ್ತಾ ಬಡಬಡಿಸಿದಳು, ಅನೀಟಾ.

” ಮೆಲ್ಲಗೆ, ಮೆಲ್ಲಗೆ. ಕೇಳಿಸಿಕೊಂಡಾಳು” ಎಂದ, ಮತ್ತೊಮ್ಮೆ ನಗುತ್ತಾ, ಡಾ. ಮುಕುಂದ.” ಹೇಗೆ ಕೇಳಿಸಿಕೊಳ್ಳುತ್ತಾಳೆ, ಆಕೆ ಪೂರಾ ಔಟ್. ಆಲ್ಕೋಹಾಲ್ ಮತ್ತು ಔಷಧಗಳ ಕಾಂಬಿನೇಷನ್ ” ಕುತ್ತಿಗೆಗೆ ಕೈಯನ್ನು ಅಡ್ಡಡ್ಡ ಹಿಡಿದು ಸರಕ್ಕನೆ ಕೊಯ್ಯುವಂತೆ ಸರಿಸುತ್ತಾ ನಾಲಿಗೆಯನ್ನು ಹೊರಗೆ ತಂದು ಕಣ್ಣು ಮುಚ್ಚಿ ಸಾಯುವಂತೆ ನಟಿಸಿ ನಕ್ಕಳು.
” ಆಕೆ ಎಂಥದೂ ಸಾಯೋ ಔಷಧ ತೆಗೆದುಕೊಂಡಿಲ್ಲ. ಮತ್ತೆ ಎಂಥ ಕಾಂಬಿನೇಷನ್ ಆದರೂ, ಎಂಥ ಕೋಮಾದಲ್ಲಿದ್ದರೂ ಈ ವಾಸನೆಯಿಂದ ಏಳಲೇಬೇಕಲ್ವ. ಇನ್ನೊಂದು ಸ್ವಲ್ಪ ತೀಕ್ಷ್ಣವಾಗಿದ್ದರೆ ನಾವೆಲ್ಲಾ ಎಕ್ಸ್‌ಪ್ಲೋಡ್ ಆಗ್‌ಹೋಗ್ತಿದ್ವಿ. ಅದು ಎಕ್ಸ್‌ಪ್ಲೋಸೀವ್ ಗೊತ್ತಾ? ” ಕೇಳಿದ.” ಇಲ್ಲಪ್ಪಾ, ನನಗ್ಗೊತ್ತಿಲ್ಲ” ಅಂದಳು ಮತ್ತೊಂದು ಬೇರೆ ರೀತಿಯ ನಗೆಯನ್ನು ಕೊಟ್ಟು.

” ಓ. ನನಗೆ ಬಹಳ ಅನುಭವವಿದೆ. ನಾನು ಮೆಡಿಕಲ್ ಕಾಲೇಜಿನಲ್ಲಿದ್ದಾಗ ಸುಮಾರು ವಾರಕ್ಕೊಂದು ಇಂಥಾ ಕೇಸ್ ನೋಡ್ತಿದ್ವಿ. ನಮ್ಮೂರ್ಕಡೆ ಗಂಡಸರು ಬೆಳಗಾಗೆದ್ದು ಓಪನ್‌ಏರ್‌ಗೇ ಹೋಗೋದಿತ್ತು, ಆಗ” ಎಂದು ಹೇಳಿ, ಓಪನ್‌ಏರ್ ಅಂದರೆ ಏನು ಅನ್ನೋದನ್ನು ಚಿತ್ರಕವಾಗಿ ಅನೀಟಾ ಕಣ್ಣು ಮುಚ್ಚಿ ಹುಬ್ಬುಗಂಟು ಹಾಕುವತನಕ ವಿವರಿಸಿ” ಮತ್ತೆ, ರಿಫ್ಲೆಕ್ಸ್ ಬರಬೇಕಾದರೆ ಅವರುಗಳು ಸಿಗರೇಟ್ ಸೇದಲೇಬೇಕು. ಸರಿ, ಒಂದು ದಿನ ಯಾರೋ ಮೊದಲನೆಯಾತ ಸಿಗರೇಟ್ ಸೇದಿ ಎಸೆದು ಹೋಗಿದ್ದ. ಎರಡನೆಯಾತ ಬಂದು ಆ ಸಿಗರೇಟ್‌ನ ಮೇಲೇ ಕೂತ. ಸರಿ, ಮುಂದೆ ಗೊತ್ತಲ್ಲ, ಆತನಿಗೆ ಹತ್ತು ಪರ್ಸೆಂಟ್ ಸುಟ್ಟಗಾಯ, ಆಯಕಟ್ಟಿನ ಜಾಗದಲ್ಲಿ” ಮುಕುಂದ ಹೇಳಿದ. ಆತನಿಗೆ ಈ ರೀತಿ ಸ್ವಾನುಭವದ ಕಥೆಗಳನ್ನು ಹೇಳುವುದು ಬಹಳ ಇಷ್ಟ, ಅದೂ ಅನೀಟಾಳ ಮುಂದೆ. ಅನೀಟಾ ನಕ್ಕಳು, ಕಣ್ಣಲ್ಲಿ ನೀರು ಬರುವ ತನಕ ನಕ್ಕಳು….. ಡಾ.ಮುಕುಂದನೂ ನಕ್ಕ…. ಕೆಲಸದ ಈ ಕ್ಷಣಗಳನ್ನು ಮುಕುಂದ ಬಹಳ ಇಷ್ಟಪಡುತ್ತಿದ್ದ. ಇದೊಂದು ರೀತಿ ’ಸೆಕ್ಷುಯಲ್ ಟೆನ್‌ಶನ್’ ಬೆಳೆಸುತ್ತದೆಂದೂ, ಓರಗಿನ ಕೆಲಸಗಾರರ ನಡುವಿನ ಈ ರೀತಿಯ ಸಂಬಂಧ ಮ್ಯಾನೇಜ್‌ಮೆಂಟ್‌ನ ದೃಷ್ಟಿಯಿಂದ ಬಹಳ ಆರೋಗ್ಯಕರವೆಂದೂ ಬಹಳಬಾರಿ ತನ್ನ ಗೆಳೆಯರಿಗೆ ಹೇಳಿಕೊಳ್ಳುತ್ತಿದ್ದ.

“ಆದರೂ ಇದು ಅದೇನಾ” ಮತ್ತೆ ಕೇಳಿದಳು” ಅನೀಟಾ. ” ಇರಬಹುದು, ಇಲ್ಲದೆಯೂ ಇರಬಹುದು. ಆಪರೇಟಿಂಗ್ ರೂಮಿನಿಂದ ಏನಾದ್ರೂ ಗ್ಯಾಸ್ ಲೀಕಾಯ್ತೋ, ಅಥವಾ ಈ ಕ್ಲೀನ್ ಮಾಡೋರು ಏನಾದರೂ ಚೆಲ್ಲಿದರೋ ಏನೋ, ಆದರೂ ಬಹಳ ದಟ್ಟವಾಗಿದೆ.” ಎಂದು ” ಇರಲಿ, ನಮ್ಮ ಪೇಷೆಂಟು ಹೇಗಿದ್ದಾಳೋ ನೋಡೋಣ” ಎಂದುಕೊಂಡು ಸ್ಕ್ರೀನ್ ಸರಿಸಿ ಒಳಗೆ ಹೋದ.

ಅಲ್ಲಿ ಅವನಿಗೆ ಆಶ್ಚರ್ಯ ಬರುವಂತೆ ಹತ್ತು ನಿಮಿಷದ ಹಿಂದೆ ಕೋಮಾದಲ್ಲಿದ್ದಾಕೆ ಈಗ ಎದ್ದು ಕೂತಿದ್ದಳು. ಆಸ್ಪತ್ರೆ ಗೌನು ತೆಗೆದು ತನ್ನ ಬಟ್ಟೆ ಹಾಕಿಕೊಂಡು ಕೈಗೆ ಚುಚ್ಚಿದ್ದ ಡ್ರಿಪ್ಪನ್ನು ತಾನೇ ಕಿತ್ತೆಸೆದು ಹೊರಡಲನುವಾದಳು. ” ಏನಾಯ್ತು” ಎಂದ, ಮುಕುಂದ.

“ಏನೂ ಇಲ್ಲ, ನನಗೆ ಗುಣವಾಗಿದೆ, ನಾನಿನ್ನು ಮನೆಗೆ ಹೋಗಬೇಕು” ಅಂದಳು, ಸುಂದರಿ.
” ಅದು ಹೇಗೆ ಗುಣವಾಯ್ತು. ನಾವಿನ್ನೂ ಏನೂ ಮಾಡೇ ಇಲ್ಲ!” ಉಗುಳುನುಂಗಿದ, ಮುಕುಂದ.
” ನೀನೇನೂ ಮಾಡುವುದು ಬೇಡ. ನನಗೇನೂ ಆಗಿಲ್ಲ. ಮನೆಗೆ ಹೋಗಿ ಸಾಯ್ತೀನಿ, ಬೇಕಾದರೆ. ಈ ಆಸ್ಪತ್ರೆಯಲ್ಲಿರೋಲ್ಲ” ಅಂದಳು.
” ನೀನು ಹೋಗೋ ಹಾಗೆ ಇಲ್ಲ. ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದೀಯ. ನಾವು ಪೋಲೀಸ್‌ಗೆ ತಿಳಿಸಬೇಕು. ಅವರು ಬಂದು, ನಂತರ ಸೋಷಿಯಲ್ ವರ್ಕರುಗಳು, ಕೌನ್ಸೆಲರ್‌ಗಳು ಎಲ್ಲರನ್ನೂ ನೋಡುವ ತನಕ ನೀನು ಎಲ್ಲಿಗೂ ಹೋಗೋ ಹಾಗಿಲ್ಲ. ” ಮುಕುಂದ ಅಂದ. ಅವನ ಧ್ವನಿಯಲ್ಲಿ ಸ್ವಲ್ಪ ಹೆದರಿಕೆಯಿತ್ತು.
“ಟ್ರೈ ಮಿ, ಡಾಕ್ಟರ್. ನಾನು ಹೋಗುವವಳೇ. ನನ್ನ ಅಡ್ರೆಸ್ಸ್ ತಗೋ. ಪೋಲಿಸ್ನೋರ್ನ ಮನೇಗೇ ಕಳಿಸು” ಎಂದು ಎದ್ದು ನಿಂತಳು.
” ನನ್ನ ಮಾತು ಕೇಳು, ನೀನು ಹೋಗುವುದು ತಪ್ಪು. ಸಿಕ್ಕಾಪಟ್ಟೆ ಸೀರಿಯಸ್ಸಾಗಿದ್ದೀಯ. ಕುಡಿದ ಜ್ಞಾನದಲ್ಲಿ ಸಾಯುವ ಪ್ರಯತ್ನ ಮಾಡಿದ್ದೀಯ. ಏನು ತೆಗೆದುಕೊಂಡಿದ್ದೀಯೋ ಏನೋ. ಮನೆಗೆ ಹೋಗುವಹಾಗಿಲ್ಲ” ಎಂದು ಹೆದರಿಸಲು ಪ್ರಯತ್ನಪಟ್ಟ.
” ನಾನು ಅಷ್ಟೊಂದು ಕುಡಿದೂ ಇಲ್ಲ. ಮತ್ತು ಸಾಯುವಂತದ್ದನ್ನೇನನ್ನೂ ನಾನು ತೆಗೆದುಕೊಂಡೂ ಇಲ್ಲ. ನನ್ನನ್ನು ಈ ಆಸ್ಪತ್ರೆಯಲ್ಲಿ ನನ್ನ ಇಷ್ಟಕ್ಕೆ ವಿರುದ್ಧವಾಗಿ ಇಟ್ಟುಕೊಳ್ಳುವ ಹಕ್ಕು ಯಾರಿಗೂ ಇಲ್ಲ” ಎಂದವಳೇ ದಪದಪ ಹೊರಟೇಬಿಟ್ಟಳು. ಹೊರಗೆ ಕಾಯುತ್ತಿದ್ದ ಅವಳ ಅಮ್ಮನನ್ನು ಹೆದರಿಸಿದರೆ ಸ್ವಲ್ಪ ಹೊತ್ತು ಹುಡುಗಿಯನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳಬಹುದೇನೋ ಎಂದು ಹೊರಗೆ ಹೋಗಿ ಅವಳ ಅಮ್ಮನನ್ನು ಹುಡುಕಿದ. ಆದರೆ ಅವನಿಗೆ ಆ ಅವಕಾಶವನ್ನೇ ಕೊಡದೆ, ಹೊರಗೆ ಹೋಗಿದ್ದ ಸುಂದರಿ ವಾಪಸ್ಸು ಅಮ್ಮನ ಜೊತೆ ಬಂದು, ಇಬ್ಬರೂ ಸೇರಿ” ಯೋ ಡಾಕ್ಟರೇ… ಒಬ್ಬ ಒಳ್ಳೆಯ ಲಾಯರನ್ನು ನೋಡಿಕೋ” ಎಂದು ಹೇಳಿ ಬಲಗೈನ ಮಧ್ಯದ ಬೆಟ್ಟನ್ನು ಆಕಾಶಕ್ಕೆ ಬಲವಾಗಿ ತೋರಿಸಿ ತುಟಿ ಕಚ್ಚಿ ಹೊರಗೆ ಹೋದರು. ಆಸ್ಪತ್ರೆಯ ಮ್ಯಾನೇಜ್‌ಮೆಂಟಿನ ಭಾಷೆಯ ಪ್ರಕಾರ ಹೇಗೆ ಮಿದುವಾಗಿ ವಿವರಿಸಿದರೂ ಇಲ್ಲೊಂದು ’ಅತೃಪ್ತ ಗ್ರಾಹಕ’ ಮನಸ್ಸು ಇದೆ ಎಂದು ಹೊಳೆದುಬಿಟ್ಟಿತು, ಮುಕುಂದನಿಗೆ.

ಬೆಪ್ಪನಂತೆ ನಿಂತಿದ್ದ, ಮುಕುಂದ. ಛೆ!.. ಎಂಥ ಕೆಲಸವಾಗಿಬಿಟ್ಟಿತು. ಹೊರಟೇಬಿಟ್ಟಳಲ್ಲ. ಏನು ಮಾಡಿದರೂ ತನಗೆ ಆಕೆಯನ್ನು ತಡೆದು ನಿಲ್ಲಿಸುವುದು ಸಾಧ್ಯವಿಲ್ಲವೆನ್ನುವುದು ಗೊತ್ತಿದೆ. ಅವಳನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದಕ್ಕೆ, ಅವಳು ಸಾಯಬಹುದು ಅನ್ನುವುದಕ್ಕಿಂತ ಅವಳು ಆಸ್ಪತ್ರೆಯಿಂದ ಹೊರಗೆ ಹೋಗಿ ತನಗೆ ಯಾವರೀತಿ ತೊಂದರೆ ಮಾಡಬಹುದು ಅನ್ನುವ ಹೆದರಿಕೆಯೇ ಬಲವಾಗಿರುವುದು ಆ ಕ್ಷಣದಲ್ಲೂ ಮುಕುಂದನಿಗೆ ಹೊಳೆಯದಿರಲಿಲ್ಲ. ತಾನು ಹುರುಪಿನಲ್ಲಿ ಏನೇನು ಮಾತಾಡಿದೆನೋ? ಏನೇನು ಕೇಳಿಸಿತೋ ಅವಳಿಗೆ? ನನ್ನ ಬುದ್ಧಿಗಿಷ್ಟು! ಸ್ಕ್ರೀನಿನ ಪಕ್ಕದಲ್ಲಿಯೇ ಆಕೆ ಇದ್ದಾಳೆ ಅನ್ನುವುದನ್ನು ಮರೆತು ಮಾತಾಡಿದೆನಲ್ಲ. ಏನು ಬಂದಿತ್ತು, ತನ್ನ ಮನಸ್ಸಿಗೆ. ಯಾವಾಗ ಆಕೆಗೆ ಜ್ಞಾನ ಬಂದಿರಬಹುದು? ಜ್ಞಾನ ಹೋಗಿದ್ದರೆ ತಾನೇ ವಾಪಸ್ಸು ಬರುವುದಕ್ಕೆ. ಯಾವ ಕೋಮಾದಲ್ಲಿದವಳು ಕಣ್ಣು ಪಿಳಿಪಿಳಿ ಬಿಡುತ್ತಾಳೆ, ಉಗುಳು ನುಂಗುತ್ತಾಳೆ, ಆಕಳಿಸಿ ಮೈಮುರಿಯುತ್ತಾಳೆ? ಅಷ್ಟೂ ಗೊತ್ತಾಗಬಾರದೇ ತನಗೆ? ಅನೀಟಾಳ ಮುಂದೆ ’ ಟೆನ್‌ಶನ್’ ಬೆಳೆಸೋಕೆ ಕೆಲವೊಂದು ಸಲ ಏನೇನೋ ಮಾತಾಡಿಬಿಡುತ್ತೇನೆ, ತಾನು. ಸ್ವಲ್ಪ ಯೋಚಿಸಬೇಕಾಗಿತ್ತು. ಲಾಯರ್‌ನ ಬೇರೆ ನೋಡ್ಕೋ ಅಂತಾಳೆ. ಏನ್ಗತೀನೋ ಏನೋ. ಛೆ! ಈ ಊರಲ್ಲಿ ಕೆಲಸಕ್ಕೇ ಬರಬಾರದಾಗಿತ್ತು. ಪೇಶೆಂಟುಗಳಿಗೆ ಯಾರು ತನ್ನ ಡಾಕ್ಟರು ಅನ್ನುವುದು ಗೊತ್ತಾಗದೇ ಇರುವ ಆಸ್ಪತ್ರೆಯಲ್ಲಿ ಕೆಲಸ ಹುಡುಕಬೇಕಾಗಿತ್ತು.

ಇರಲಿ, ಈಗಾಗಿದ್ದರೂ ಏನು ಮಹಾ! ಎಂಥದೋ ಕೆಟ್ಟ ವಾಸನೆ ಬಂತು. ಎಲ್ಲಿಂದ ಬಂತು ಎನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟು ಕಾಯಿಲೆಯವಳಾಗಿದ್ದರೆ, ಈ ವಾಸನೆಯೆಲ್ಲಾ ಮುಖ್ಯವಾಗುತ್ತಿರಲಿಲ್ಲ, ಆಕೆಗೆ. ಕಾಯಿಲೆಯೆಂಥ ಬಂತು, ಸುಡುಗಾಡು. ಸಾಯೋರು ವಿಟಮಿನ್ ಮಾತ್ರೆ ನುಂಗುತ್ತಾರ? ಹುಚ್ಚು, ಹುಚ್ಚು. ತನ್ನ ಜೀವನ ಎಲ್ಲಾ ಬರೀ ಇಂಥ ಸುಖವಾಗಿರೋ ರೋಗಿಗಳನ್ನು ಶುಶ್ರೂಷೆ ಮಾಡುವುದೇ ಆಗಿಹೋಯಿತು, ಎಂದುಕೊಂಡು, ತಾನು ಈ ಕೆಲಸಕ್ಕೆ ಯಾಕೆ ಸೇರಬಾರದಾಗಿತ್ತು ಅನ್ನೋ ಕಾರಣಗಳಿಗೆ ಆದಿನ ಬಂದ ವಾಸನೆಯನ್ನೂ ಸೇರಿಸಿಕೊಂಡೂ ಆದಿನದ ಕೆಲಸ ಮುಗಿಸಿದ್ದ. ಅನೀಟಾ ಈ ಎಲ್ಲವನ್ನೂ ನೋಡಿಯೂ ನೋಡದಹಾಗೆ ಇರುವುದನ್ನು ನೋಡಿ ಸ್ವಲ್ಪ ಅನುಮಾನವಾಯಿತು.

-೨-

ಬೆಳಿಗ್ಗೆಯೇ ಆಸ್ಪತ್ರೆಯ ಅಡ್ಮಿನಿಸ್ಟ್ರೇಟರ್ ಮೆಕಾರ್ಥಿ ಫೋನ್‌ಮಾಡಿ, ಎರಡು ರೋಗಿಗಳ ನಡುವಿನ “ರಕ್ಷಿತ ಅವಧಿ”ಯಲ್ಲಿ ಒಂದು ಹದಿನೈದು ನಿಮಿಷ ಬಂದು ನೋಡು, ಎಂದು ಹೇಳಿದಾಗ, ಕೊಂಚ ಆತಂಕಗೊಂಡಿದ್ದ, ಮುಕುಂದ. ಏನಾದರೂ ತೊಂದರೆಯಾಗಬಹುದು ಎಂದುಕೊಂಡಿದ್ದರೂ, ವಾಸನೆಬಂದ ಹದಿನೈದು ದಿನಗಳ ಒಳಗೇ ಈ ರೀತಿ ಮೆಕಾರ್ಥಿಯಿಂದ ಕರೆ ಬರಬಹುದೆಂದು ಆತ ಊಹಿಸಿರಲಿಲ್ಲ. ಆತ ಕೇಳಬಹುದಾದ ಪ್ರಶ್ನೆಗಳನ್ನು ಊಹಿಸಿಕೊಂಡು, ಅದಕ್ಕೆ ತಾನು ಕೊಡಬೇಕಾದ ಉತ್ತರಗಳನ್ನು ಮನಸ್ಸಿನಲ್ಲೇ ತಾಳೆಹಾಕಿಕೊಳ್ಳುತ್ತಾ ಆಫೀಸಿನ ಮುಂದೆ ಟೈ ಸರಿಮಾಡಿಕೊಳ್ಳುತ್ತಾ ಕೂತಿದ್ದಾಗ, ಒಳಗಿಂದ ಅನಿಟಾ ಮೆಕಾರ್ಥಿಯ ಆಫೀಸಿನ ಬಾಗಿಲು ತೆಗೆದು, ಮೊದಲು ಬೆನ್ನು ಹೊರಗೆತಂದು ಹಿಂಭಾಗವನ್ನು ಲಯಬದ್ಧವಾಗಿ ಅಲ್ಲಾಡಿಸುತ್ತಾ ಒಳಗಿದ್ದ ಮೆಕಾರ್ಥಿಗೆ “ಹ್ಯಾವ್ ಅ ಗುಡ್ ಒನ್” ಅನ್ನುತ್ತ ತಿರುಗಿ, ಹೊರಗೆ ಕೂತಿರುವ ಮುಕುಂದನನ್ನು ನೋಡಿ ’ಹಾಯ್’ ಅನ್ನುತ್ತ ಹೋದಾಗ ಒಂದು ಕ್ಷಣ ಮೈ ಉರಿದುಹೋಯಿತು, ನಂತರ ಆ ನಗು ವಿಜಯದ ನಗೆಯೇನೋ ಅನ್ನುವ ಅನುಮಾನದಿಂದ ಸ್ವಲ್ಪ ಹೆದರಿಕೆಯೂ ಆಯಿತು. ಗೆಲ್ಲುವುದಕ್ಕೆ ಏನಾದರೂ ವಿಷಯವಿದೆಯೇ ಎನ್ನುವುದೂ ಅವನಿಗೆ ಹೊಳೆಯಲಿಲ್ಲ. ಆ ಘಟನೆಯಾದ ನಂತರದ ದಿನಗಳಲ್ಲಿ ತನ್ನ ಮತ್ತು ಅನೀಟಾಳ ಸಂಬಂಧ ಬರೀ ವೃತ್ತಿಪರವಾಗಿದ್ದು, ಅದರಲ್ಲಿ ಯಾವ ರೀತಿಯ ಟೆನ್‌ಶನ್ನೂ ಇಲ್ಲದಿರುವುದನ್ನು ತಾನೇ ಗಮನಿಸಿಕೊಂಡಿದ್ದ.

” ಕಮಿನ್, ಟೇಕ್ ಅ ಸೀಟ್” ಎಂದ, ಮೆಕಾರ್ಥಿ. ಈ ದಿನದ ಬಿಸಿಲು ಚೆನ್ನಾಗಿರುವುದೆಂದೂ, ತನಗೆ ಈ ದಕ್ಷಿಣದ ಹವಾ ಅಷ್ಟೊಂದು ಒಗ್ಗುತ್ತಿರಲಿಲ್ಲವೆಂದೂ, ತಾನು ಹುಟ್ಟಿಬೆಳೆದಿದ್ದೆಲ್ಲಾ ನ್ಯೂಯಾರ್ಕಿನಲ್ಲೆಂದೂ, ಸಣ್ಣ ಊರು ಶಾಂತವಾಗಿರುವುದರಿಂದ ಇಲ್ಲಿಗೆ ಬಂದನೆಂದೂ, ಹೇಳತೊಡಗಿದ. ಬೇಗ ವಿಷಯಕ್ಕೆ ಬಾರಯ್ಯಾ, ಮಹರಾಯ, ಪೀಠಿಕೆ ಜಾಸ್ತಿಯಾದಷ್ಟೂ ಮುಂದಿನ ಸಂಗತಿ ಕೆಟ್ಟದಾಗಿರುತ್ತದೆ ಅಂದುಕೊಂಡ, ಮುಕುಂದ. ಅವನ ಅನ್ಯಮನಸ್ಕತೆಯನ್ನು ಗಮನಿಸಿ ಮೆಕಾರ್ಥಿ ” ಸ್ವಲ್ಪ ತೊಂದರೆಯಾಗಿದೆ, ನೋಡು ಮುಕುಂದ್, ಅವತ್ತು ಏನಾಯಿತು ಅನ್ನೋದು ಮುಖ್ಯ ಅಲ್ಲ. ಆ ಹುಡುಗಿಯ ಅಮ್ಮ ಆಸ್ಪತ್ರೆಗೆ ಒಂದು ದೂರು ಕೊಟ್ಟಿದ್ದಾಳೆ. ಅದು ಬೋರ್ಡ್‌ಗೆ ಹೋಗುವ ಮುಂಚೆ ನಾವು ನಾವು ಸ್ವಲ್ಪ ವಿಷಯದ ಬಗ್ಗೆ ತಿಳಿದುಕೊಳ್ಳೋಣ, ಅಂತ. ಯಾರೊಬ್ಬರ ಮೇಲೂ ಬೆರಳು ಮಾಡಿ ತೋರಿಸುವುದು, ನಮ್ಮ ಉದ್ದೇಶವಲ್ಲ. ಆದ್ದರಿಂದ ಅಂದು ಎಮರ್ಜನ್ಸಿ ರೂಮಿನಲ್ಲಿದ್ದೋರನ್ನೆಲ್ಲಾ ಪ್ರಶ್ನೆ ಕೇಳಬೇಕಾಗಬಹುದು. ಇವತ್ತು ನಿನ್ನ ಸುಮ್ಮನೆ ವಿಷಯ ತಿಳಿಸೋಣ ಎಂದು ಕರೆಸಿದ್ದು. ಇಲ್ಲಿ ಕೆಲವೊಂದು ’ಗ್ರೌಂಡ್ ರೂಲ್ಸ್’ ಅನುಸರಿಸಬೇಕು. ರಿಸ್ಕ್ ಮ್ಯಾನೇಜ್‌ಮೆಂಟ್ ಹಾಗೂ ಅಡ್ಮಿನಿಸ್ಟ್ರೇಶನ್ ಬಿಟ್ಟು ಆಸ್ಪತ್ರೆಯ ಯಾವೊಂದು ಕೆಲಸಗಾರರ ಜತೆಗೂ ನೀನು ಈ ವಿಷಯದ ಬಗ್ಗೆ ಚರ್ಚೆ ಮಾಡಬಾರದು. ಬೇಕಾದಲ್ಲಿ ನಿನ್ನ ಹೇಳಿಕೆಗಳನ್ನು ಟೇಪ್ ಮಾಡಿಕೊಳ್ಳುತ್ತೇವೆ. ಈಗ ಹೇಳು, ನಿನಗೆ ಗೊತ್ತಿದ್ದಂತೆ ಆದಿನ ನಡೆದ ವಿಷಯವನ್ನು”. ಎಂದ , ಮೆಕಾರ್ಥಿ.

ತಾನು ತಿಳಿದಿರುವುದಕ್ಕಿಂತಾ ವಿಷಯ ಹದಗೆಟ್ಟಿರುವುದು ಮನನವಾಯಿತು, ಮುಕುಂದನಿಗೆ. ಹೆಚ್ಚೆಂದರೆ ಒಂದು ಸಣ್ಣ ದೂರು, ಮತ್ತು ಅದು ಸ್ಟಾಫ್ ಮೀಟಿಂಗಿನಲ್ಲಿ ಬಿದ್ದುಹೋಗಬಹುದೆನ್ನುವ ತನ್ನ ನಂಬಿಕೆ ಈಗಿನ ವಿದ್ಯಮಾನಗಳನ್ನು ನೋಡಿ ಸುಳ್ಳೆನ್ನಿಸಿತು. ಆದರೂ ಆ ವಾಸನೆಯ ಘಾಟು ಇಲ್ಲಿಯವರೆಗೂ ಬಂದಿರುವುದು ನೋಡಿ ತನಗೆ ತೀರ ಆಶ್ಚರ್ಯವಾಗದಿರುವುದನ್ನು ನೋಡಿಯೇ ಆಶ್ಚರ್ಯವಾಯಿತು. ಆದದ್ದಾಗಲಿ, ಎಂದು ಆ ದಿನ ನಡೆದದ್ದೆಲ್ಲಾ ಚಾಚೂ ತಪ್ಪದೆ ವಿವರಿಸಿದ.
” ಎಂಥ ಕಾಂಬಿನೇಷನ್‌ನ ಕೋಮ ಆದರೂ ಈ ವಾಸನೆಯಿಂದ ಏಳಲೇಬೇಕಲ್ವಾ, ಅಂದೆಯಂತೆ, ನೀನು?” ನೇರವಾಗಿ ವಿಷಯಕ್ಕೆ ಇಳಿದಿದ್ದ, ಮೆಕಾರ್ಥಿ.
” ಹೇಳಿರಬಹುದು, ನನಗೆ ಅಷ್ಟೊಂದು ನೆನಪಿಲ್ಲ” ಎಂದ, ಮುಕುಂದ.
” ಹೇಳಿರಬಹುದು, ಅಂದರೆ ಏನು, ನೀನೊಳ್ಳೆ ನಮ್ಮ ಹಳೆಯ ಪ್ರೆಸಿಡೆಂಟ್ ಮಾತಾಡಿದ ಹಾಗೆ ಮಾತಾಡುತ್ತೀಯಲ್ಲ” ಎಂದು ಕ್ಲಿಂಟನನ್ನು ನೆನಪಿಸಿದ.
” ಹೇಳಿದ್ದೆ, ಅನ್ನಿಸುತ್ತೆ” ಎಂದ, ಮುಕುಂದ.
“ಹೇಳಿದ್ದರೆ, ಅದೆಂಥ ವೃತ್ತಿಪರತೆ, ಈ ರೀತಿಯ ನಿನ್ನ ಬೇಜವಾಬ್ದಾರಿ ಮಾತುಗಳು ನಮ್ಮ ಆಸ್ಪತ್ರೆಯ ಸಾರ್ವಜನಿಕ ಸಂಬಂಧವನ್ನು ಯಾವಮಟ್ಟಿಗೆ ಇಳಿಸುತ್ತದೆ, ಅದು ಗೊತ್ತಾ. ಒಬ್ಬ ಜವಾಬ್ದಾರಿ ಇರುವ ವೈದ್ಯನಾಗಿ ನೀನು ಈ ರೀತಿ ಮಾತಾಡೋದು ತಪ್ಪಲ್ವಾ” ಕೆಣಕಿದ, ಮೆಕಾರ್ಥಿ.
” ನಿನಗೆ ಯಾರು ಹೇಳಿದ್ದು, ಅನೀಟಾ ತಾನೇ”
“ಇರಬಹುದು, ಇಲ್ಲವೇ ಆ ಹುಡುಗಿಯ ಅಮ್ಮ ಕೊಟ್ಟ ದೂರಲ್ಲಿದ್ದರೂ ಇರಬಹುದು. ಅದು ಮುಖ್ಯವಲ್ಲ. ನೀನು ಹಾಗೆ ಅಂದಿದ್ದೆ ಎಂದು ಹೊರಗೆ ಮೀಡಿಯಾದವರ ಕಿವಿಗೇನಾದರೂ ಬಿದ್ದರೆ, ನಮ್ಮ ಆಸ್ಪತ್ರೆಯ ಗತಿ ಏನಾಗಬಹುದು ಎಂಬುದನ್ನು ಯೋಚನೆ ಮಾಡಿದ್ದೀಯಾ. ಚಾನಲ್ ಒಂಬತ್ತರವರು ಈ ವಿಷಯದ ಬಗ್ಗೆ ಒಂದು ಪೀಸ್ ಮಾಡುತ್ತಿದ್ದಾರೆ. ಅದರಲ್ಲಿ ಏನೇನಿರುತ್ತೋ. ಮುಂದಿನ ವಾರದ ಹೆರಾಲ್ಡಲ್ಲಿ ಇದೇ ಕವರ್ ಸ್ಟೋರಿಯಂತೆ. ಈ ಹಾಳಾದ ಊರಲ್ಲಿ ಇದಕ್ಕಿಂತ ರಸವತ್ತಾದ ಸುದ್ದಿಯೇನು ಸಿಗಬೇಕು, ಹೇಳು. ಇಡೀ ದೇಶಕ್ಕೆ ದೇಶಾನೇ ಡಾಕ್ಟರುಗಳ ಅದಕ್ಷತೆಯ ಬಗ್ಗೆ ಮಾತಾಡುತ್ತಾ ಇರಬೇಕಾದರೆ ನಮ್ಮ ಸಣ್ಣ ಆಸ್ಪತ್ರೇನೂ ಆ ಪಟ್ಟಿಯಲ್ಲಿ ಸೇರ್ಕೋಬೇಕಾ, ಈಗ” ಕೊಂಚ ಖಿನ್ನನಾಗಿದ್ದ, ಮೆಕಾರ್ಥಿ. ಇದು ಮೀಡಿಯಾದವರ ತನಕ ಹೇಗೆ ಹೋಗುತ್ತದೆ, ಎಂದು ಒಂದು ಕ್ಷಣ ಅನ್ನಿಸಿದರೂ ಪ್ರೈಮರಿ ಸ್ಕೂಲಿನಲ್ಲಿ ಕೊಡುವ ಮಧ್ಯಾಹ್ನದ ಊಟದ ಮೆನುವನ್ನು ಮುಖಪುಟದಲ್ಲಿ ಹಾಕುವ ಈ ಲೋಕಲ್ ಪತ್ರಿಕೆಗಳಿಗೆ ಇದಕ್ಕಿಂತಾ ಹೆಚ್ಚಿನ ಸುದ್ದಿಯೇನು ಬೇಕು ಅನ್ನಿಸಿತು.
” ನಾನು ಹಾಗೆ ಹೇಳಿದ್ದು, ವೈದ್ಯನಾಗಿ ಅಲ್ಲ. ಅದೊಂದು ತರಾ ಪ್ರೊಫೆಶನಲ್ ಗಾಸಿಪ್. ಎಲ್ಲ ಕೆಲಸಗಳಲ್ಲೂ ಇದ್ದೇ ಇರುತ್ತದೆ. ಜೊತೆಯಲ್ಲಿನ ಕೆಲಸಗಾರರ ಜತೆಗಿನ ಸಂಬಂಧಗಳು ಸರಿಯಾಗಿರಬೇಕಾದರೆ ಕೆಲಸ ಮಾಡುವ ಜಾಗದಲ್ಲಿ ಇಂಥ ಗಾಸಿಪ್‌ಗಳು ಇರಲೇಬೇಕಾಗುತ್ತದೆ. ಇಷ್ಟಕ್ಕೂ ಆಕೆಗೆ ನಾನು ಕೊಟ್ಟ ಟ್ರೀಟ್‌ಮೆಂಟ್‌ನಲ್ಲಿ ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ದೂರುಕೊಟ್ಟಿದ್ದರೆ ಏನೋ ಅನ್ನಬಹುದಾಗಿತ್ತು” ಎಂದು ಆಕ್ಷೇಪಿಸಿದ, ಮುಕುಂದ.
” ಇನ್ನುಮೇಲೆ, ಯಾವ ಪೇಷೆಂಟಿನ ಮೇಲಾದರೂ ಗಾಸಿಪ್ ಮಾಡೋ ಹಾಗಿದ್ರೆ, ಆ ವ್ಯಕ್ತಿ ಕೋಮಾದಲ್ಲಿದ್ದಾಳೋ ಇಲ್ಲವೋ ಅನ್ನೋದನ್ನು ಖಚಿತಪಡಿಸಿಕೋ” ಎಂದ, ಮೆಕಾರ್ಥಿ.
” ಆಕೆ ಕೋಮಾದಲ್ಲಿರಬೇಕಾಗಿತ್ತು…..” ಎಂದುಬಿಟ್ಟ, ಮುಕುಂದ. ನಂತರ ತಪ್ಪನ್ನರಿತುಕೊಂಡಂತೆ ” ನಾನೇನನ್ನುತ್ತಿದ್ದೇನೆ ಅನ್ನುವುದು ನಿನಗೆ ಗೊತ್ತಲ್ಲ” ಎಂದು ತಡವರಿಸಿದ.

ಮೆಕಾರ್ಥಿಯ ಹುಬ್ಬುಗಂಟು ಇನ್ನೂ ಬಿಗಿಯಾಗುತ್ತಿರುವಂತೆ ಇಬ್ಬರಿಗೂ ಆಶ್ಚರ್ಯವಾಗುವಂತೆ ಮೆಕಾರ್ಥಿಯ ಆಫೀಸಿನಲ್ಲಿ ಇದ್ದಕ್ಕಿದ್ದಂತೆ ಕೆಟ್ಟ ಘಾಟುವಾಸನೆ ತುಂಬಿತು. ಇದ್ದವರು ಇಬ್ಬರೇ. ಬಲು ಕೆಟ್ಟವಾಸನೆ. ಇಬ್ಬರಿಗೂ ತಡೆಯಲಾಗಲಿಲ್ಲ. ತನ್ನ ಆಫೀಸಿನಿಂದ ಎಮರ್ಜನ್ಸಿ ರೂಮು ಎಷ್ಟು ದೂರದಲ್ಲಿದೆ, ಇದು ಅಲ್ಲಿಂದ ಹೊರಟು ಇಲ್ಲಿಗೆ ಬಂದಿದ್ದೋ ಅಥವಾ ಇಲ್ಲಿಂದ ಅಲ್ಲಿಗೆ ಹೋಗಿದ್ದೋ ಎಂದು ಮೆಕಾರ್ಥಿ ಯೋಚಿಸುತ್ತಿದ್ದರೆ, ಅಂದು ಮೊದಲು ವಾಸನೆ ಬಂದ ದಿನ ಮೆಕಾರ್ಥಿ ಎಮರ್ಜನ್ಸಿ ರೂಮಿನಲ್ಲಿಲ್ಲದಿದ್ದುದರಿಂದ ಈಗ ಬಂದ ವಾಸನೆ ತನ್ನ ಮೇಲಿನ ಅನುಮಾನವನ್ನು ಎಲ್ಲಿಗೆ ಏರಿಸಬಹುದು ಎಂಬುದನ್ನು ಮುಕುಂದ ಯೋಚಿಸುತ್ತಿದ್ದ. ಒಂದು ಕ್ಷಣ ಇಬ್ಬರಿಗೂ ತಮ್ಮ ಮೇಲೆಯೇ ಅನುಮಾನವಾಗಿ ಪೃಷ್ಠಗಳನ್ನು ಒಮ್ಮೆ ಕೂತಲ್ಲಿಂದ ಸರಿಸಿದರಾದರೂ ಮುಖದ ಮೇಲೆ ಯಾವ ಭಾವನೆಯನ್ನೂ ತೋರಿಸದೆ, ಮೂಗನ್ನೂ ತುರಿಸದಷ್ಟು ಸಭ್ಯರಾಗಿ ಕೂತಿದ್ದರು. ” ಈ ಏರ್‌ಕಂಡೀಶನಿಂಗ್ ಸಿಸ್ಟಮನ್ನು ಒಂದು ಬಾರಿ ಸರ್ವಿಸ್ ಮಾಡಿಸ್ಬೇಕು” ಎಂದ ಮೆಕಾರ್ಥಿ. ವಿಷಯಾಂತರ ಮಾಡಲು ಆತ ಮಾಡಿದ ಗರಿಷ್ಠಪ್ರಯತ್ನವದಾಗಿತ್ತು. ಮೆಲ್ಲಗೆ ಮುಕುಂದನಿಗೆ ” ಈಗ ನಿನಗೇನೂ ವಾಸನೆ ಬರಲಿಲ್ವಾ” ಅಂದ. ಮುಕುಂದ ಖಡಾಖಂಡಿತವಾಗಿ “ಇಲ್ಲ” ಅಂದಾಗ “ನನಗೂ ಇಲ್ಲ” ಅಂದ. ಸ್ವಲ್ಪ ಹೊತ್ತಾದ ಮೇಲೆ, ಈ ದಿನ ಮಾತಾಡಲು ಏನೂ ಉಳಿದಿಲ್ಲವೆಂದು ಹೇಳಿ ಮುಕುಂದನನ್ನು ಹೊರಗೆ ಕಳಿಸಿದ. ತಾನೂ ರೂಮಿನಿಂದ ಹೊರಗೆ ಬಂದ.

ಮುಕುಂದ ಕೆಲಸಕ್ಕೆ ಮರಳಿ ಹೋಗುವ ಮುನ್ನ ಕೆಫೆಟೇರಿಯಾಕ್ಕೆ ಹೋಗಿ ಒಂದು ಲೋಟ ಕಾಫಿ ಹಿಡಿದು ಕೂತ. ತಲೆ ಸಿಡಿಯುತ್ತಿತ್ತು. ವಿಷಯ ಎಲ್ಲಿಂದ ಎಲ್ಲಿಗೆ ಹೋಗುತ್ತಾ ಇದೆ. ಎಲ್ಲಿಂದ ಬರುತ್ತಿದೆಯೋ ಆ ದುರ್ವಾಸನೆ. ಆ ಸುಂದರಿಯಾ, ಪಕ್ಕದ ಮಂಚದ ಮೇಲೆ ಮಲಗಿದ್ದ ಆ ಮುದುಕನಾ, ಏಸಿ ಡಕ್ಟಿನ ಮೂಲಕ ಬೇರೆ ವಾರ್ಡಿಂದ ಬಂತಾ? ಅದು ಮನುಷ್ಯನ ಯಾವುದಾದರೂ ಅಂಗದಿಂದ ಬರುವ ವಾಸನೆಯೇ ಅಥವಾ ಆಸ್ಪತ್ರೆಯಲ್ಲೇ ಉದ್ಭವವಾಗುತ್ತಿರುವ ವಾಸನೆಯೇ? ಯಾರಿಗ್ಗೊತ್ತು, ಸಾವಿರಾರು ಜನ ಬಂದು ಹೋಗೋ ಜಾಗ, ಎಲ್ಲಿಂದ ಬಂದಿದೆಯೋ ಏನೋ? ದೊಡ್ಡದೊಡ್ಡ ಮೀಟಿಂಗಿನಲ್ಲಿ ಎಲ್ಲರೂ ಇದ್ದಾಗ ಬರದೇ, ತಾನು ಇದ್ದಾಗ ಮಾತ್ರ ಯಾಕೆ ಬರುತ್ತಿದೆ? ಬಂದದ್ದು ಬಂತು, ತಾನು ಸುಮ್ಮನಿರದೆ ಯಾಕೆ ಏನೇನೋ ಇನುಯೆಂಡೋಗಳಿರುವ ಜೋಕನ್ನು ಅಂದು ಮಾಡಬೇಕಾಗಿತ್ತು. ಆಕೆ ಕೋಮಾದಲ್ಲಿದ್ದಳು ಎಂದೇ ತಿಳಿಯೋಣ. ಹಾಗಾದಾಗಲೂ ರೋಗಿಗಳನ್ನು ತಮಾಷೆ ಮಾಡುವುದು ತನ್ನ ಹಿಪೋಕ್ರಾಟಿಕ್ ಪ್ರಮಾಣಕ್ಕೆ ಹೊರತಲ್ಲವಾ?

’ಛೆ! ಬಿಡು ಬಿಡು, ಮುಕುಂದಾ ಎಲ್ಲರೂ ಮಾತಾಡೇ ಆಡ್ತಾರೆ. ದಿನಬೆಳಗಾದರೆ, ಬರೇ ರೋಗಿಗಳ ಜತೆಗೇ ಇರೋ ನಿನ್ನಂಥವರ ಕಲ್ಪನಾಪ್ರಪಂಚ ಈ ಆಸ್ಪತ್ರೆ, ರೋಗಿಗಳನ್ನು ಬಿಟ್ಟು ಎಲ್ಲಿಗೆ ಹೋಗಲು ಸಾಧ್ಯ? ಇಷ್ಟು ಮಾತಾಡ್ತಾನಲ್ಲ, ಈ ಮೆಕಾರ್ಥಿ. ಈಗ ಅಡ್ಮಿನಿಸ್ಟ್ರೇಟರ್ ಆಗುವ ನಾಲ್ಕು ವರ್ಷ ಮುಂಚೆ ಯಾವುದೋ ಹುಡುಗಿ ಹಾಕಿದ ಕೇಸಿನಲ್ಲಿ ಗೆದ್ದಿದ್ದೆ ಎಂದು ಒಮ್ಮೆ ಪಾರ್ಟಿಯಲ್ಲಿ ಹೇಳಿಕೊಂಡಿರಲಿಲ್ಲವಾ? ಈ ಹುಡುಗಿಯರು ಹೊಟ್ಟೆನೋವು ಅಂತ ಬರ್ತಾರೆ, ಹೊಟ್ಟೆ ಅಮುಕಿ ನೋಡಿದರೆ ಡಾಕ್ಟರು ಎಲ್ಲೆಲ್ಲೋ ಮುಟ್ಟುತ್ತಾನೆ, ಅಂತ ಸೆಕ್ಶುಯಲ್ ಅಡ್ವಾನ್ಸ್‌ಮೆಂಟ್ ಅಂತ ಕೇಸ್ ಹಾಕ್ತಾರೆ. ಮುಖ್ಯ, ತಪ್ಪು ನಿನ್ನದು, ಮುಕುಂದ. ಆಕೆ ಕೋಮಾದಲ್ಲಿದ್ದಳೆ ಅನ್ನೋದನ್ನು ಖಚಿತಪಡಿಸಿಕೊಂಡು ಮಾತಾಡಬೇಕಾಗಿತ್ತು….. ಇಲ್ಲ ಬಿಡು…… ನೀ ಮಾಡಿದ್ದೇನೂ ತಪ್ಪಿಲ್ಲ. ಪ್ರಾಣ ಅಲ್ಲವೇ ನೀನು ಉಳಿಸ್ತಿರೋದು? ಒಂದು ಸ್ವಲ್ಪ ತಮಾಷೆ ಮಾಡಿದರೆ ಏನು ತಪ್ಪು?’- ತನ್ನ ಜತೆ ತಾನೇ ಮಾತಾಡಿಕೊಂಡಾಗ ಅದು ದುರಂತದ ಚಿಹ್ನೆ ಎಂದು ಎಲ್ಲಿಯೋ ಓದಿದ್ದ.

ಒಮ್ಮೆ ತಲೆ ಝಾಡಿಸಿಕೊಂಡು ಪ್ರಥಮಪುರುಷದಲ್ಲಿ ಯೋಚಿಸಲು ಮತ್ತೆ ಆರಂಭಮಾಡಿದ- ಅದು ಸರಿ, ಇಂದು ಈ ಮೆಕಾರ್ಥಿಯ ಆಫೀಸಿನಲ್ಲಿ ಎಲ್ಲಿಂದ ಬಂತು ಆ ವಾಸನೆ? ದರಿದ್ರ, ಈ ಆಸ್ಪತ್ರೆಯ ವೆಂಟಿಲೇಶನ್‌ನಲ್ಲಿಯೇ ಏನೋ ತೊಂದರೆಯಿದೆ ಅನ್ನಿಸುತ್ತೆ… ಅಥವಾ ತಾನೇ ಏನಾದರೂ….. ಛೆ! ಇರಲಾರದು… ಹಾಗೆ ತನಗೂ ಗೊತ್ತಾಗದ ಹಾಗೆ ಹೇಗೆ…. ಛೆ, ಛೆ, ಇಲ್ಲ… ಮುಕುಂದಾ.. ನಿನ್ನ ಮೇಲೆಯೇ ನೀನು ಅನುಮಾನ ಪಟ್ಟುಕೊಂಡರೆ ಹೇಗಪ್ಪಾ…. ಧೈರ್ಯವಾಗಿರು, ನೀನು ಹೇಳುವುದು ಸುಳ್ಳಾಗಿದ್ದರೂ ಅದರಲ್ಲಿ ನಿನಗೆ ನಂಬಿಕೆಯಿದ್ದರೆ ಅದು ಸುಳ್ಳಲ್ಲಪ್ಪಾ…..- ಬಹಳ ಹೊತ್ತು ಪ್ರಥಮಪುರುಷದಲ್ಲಿ ನಿಲ್ಲಲಾಗಲಿಲ್ಲ.
” ಯಾರಿರಬಹುದು, ನಿನಗೆ ಗೊತ್ತಾ” ಹಿಂದುಗಡೆಯ ಬೂತಿನಿಂದ ಯಾರೋ ಮಾತಾಡುತ್ತಾ ಇದ್ದರು.
” ನಾನಂತೂ ಅಲ್ಲಪ್ಪ” ಅನೀಟಾಳ ಧ್ವನಿ.
” ಅದ್‌ಹೇಗೆ ಅಷ್ಟು ಖಂಡಿತವಾಗಿ ಹೇಳುತ್ತೀಯ?” ಇನ್ನೊಬ್ಬಾಕೆ.
” ಛೀ! ಅದು ಗಂಡಸಿನ ಗುಣ”- ಅನೀಟಾ.
” ಓಹೋಹೋ… ಅದು ತುಂಬಾ ಸೆಕ್ಸಿಸ್ಟ್ ಹೇಳಿಕೆಯಾಗುತ್ತಮ್ಮ. ವಿಚಾರಣೆಯಲ್ಲಿ ಹಾಗೆ ಹೇಳಿಬಿಟ್ಟೀಯ, ಮತ್ತೆ”

” ಬರೀ ಅಷ್ಟೇ ಅಲ್ಲ. ಜೋರಾಗಿ ತೇಗೋದು, ಆಕಳಿಸೋದು, ಸೂರುಹಾರಿಹೋಗೋ ಹಾಗೆ ಸೀನೋದು, ಇವೆಲ್ಲ ಗಂಡುಗುಣಗಳೇ” ನಗುತ್ತಾ ಮುಂದುವರಿಸಿದಳು, ಅನೀಟಾ.
” ಹಾಗಾದ್ರೆ, ಇನ್ಯಾರು ಡಾ. ಮುಕುಂದೇ”
“ಯಾರಿಗೆಗೊತ್ತು, ಅಲ್ಲಿ ಇನ್ನೂ ಪಕ್ಕದಲ್ಲಿ ನಾಲ್ಕಾರು ಜನ ಗಂಡಸುರೋಗಿಗಳು ಇದ್ದರು, ಆದರೂ…. ಈ ಇಂಡಿಯನ್ ಅಡುಗೆಯಮೆಲೆ ನನಗೇನೋ ಅನುಮಾನ ನೋಡೂ….” ಎಂದು ಜೋರಾಗಿ ನಕ್ಕಳು, ಮತ್ತೊಮ್ಮೆ, ಅನೀಟಾ.
ಧಡ್ ಎಂದು ಎದ್ದು ನಿಂತು, ಹಿಂದೆತಿರುಗಿ ನೋಡಿ ತನ್ನ ಇರವನ್ನು ಅವರುಗಳಿಗೆ ಗೊತ್ತುಮಾಡಿಸಿದ. ಹೆದರುತ್ತಾರೆಂದು ತಿಳಿದವನಿಗೆ ಸ್ವಲ್ಪ ನಿರಾಶೆಯೇ ಆಯಿತು. ತಮ್ಮ ಪಾಲಿಗೆ ತಾವು ನಗುತ್ತಲೇ ಇದ್ದರು. ಮುಕುಂದನನ್ನು ನೋಡಿ ಮತ್ತೊಮ್ಮೆ “ಹಾಯ್” ಎಂದಳು.

-೩-

ಮುಕುಂದನಿಗೆ ಆಸ್ಪತ್ರೆಯ ಅಡ್ಮಿನಿಸ್ಟ್ರೇಷನ್‌ನಿಂದ ಒಂದು ನೋಟೀಸ್ ಬಂದಿತ್ತು. ಆ ಹುಡುಗಿಯ ಅಮ್ಮ ಈ ಆಸ್ಪತ್ರೆಯ ವಾತಾವರಣ ಆರೋಗ್ಯಕರವಲ್ಲವೆಂದೂ, ಅಂದು ಎಮರ್ಜನ್ಸಿರೂಮಿನಲ್ಲಿ ಬಂದ ವಾಸನೆಯ ಮೂಲವನ್ನು ಪತ್ತೆಹಚ್ಚದೇ ಇದ್ದರೆ, ಅದು ಮತ್ತೊಮ್ಮೆ ಬಂದು, ಅಕಸ್ಮಾತ್ ವಿಷವಾಯುವೇನಾದರೂ ಆಗಿದ್ದ ಪಕ್ಷದಲ್ಲಿ ಬರುವ ರೋಗಿಗಳನ್ನು ಯಾಕೆ ಕೊಲ್ಲುವುದಿಲ್ಲ ಅನ್ನುವುದಕ್ಕೆ ಆಸ್ಪತ್ರೆಯ ಅಧಿಕಾರಿಗಳು ಸರಿಯಾದ ಸಮಜಾಯಿಷಿ ಕೊಡಬೇಕು- ಎಂದು ಒಂದು ದೂರನ್ನು ಅಲಬಾಮ ರಾಜ್ಯದ ಆರೋಗ್ಯ ಇಲಾಖೆಗೆ ಕೊಟ್ಟಿದ್ದಳು. ಎರಡುವಾರಗಳಿಂದ ಸ್ಥಳೀಯ ಪತ್ರಿಕೆಗಳು ಈ ವಿಷಯವನ್ನು ಬಣ್ಣಬಣ್ಣವಾಗಿ ಬಿತ್ತರಿಸುತ್ತಿದ್ದವು. ಚಾನಲ್ ಒಂಭತ್ತರ ರಿಪೋರ್ಟರ್ ಯಾವುದೋ ಮುಖ್ಯ ಕಾರ್ಯಕ್ರಮವನ್ನು ಮೊಟಕುಮಾಡಿ ಮಧ್ಯಬಂದು” ಬ್ರೇಕಿಂಗ್ ನ್ಯೂಸ್” ಎಂದು ಅಕ್ಷರಗಳನ್ನು ಡಿಜಿಟಲ್ ಆಗಿ ಬದಲು ಮಾಡುತ್ತಾ ” ಬ್ರೇಕಿಂಗ್ ವಿಂಡ್” ಎಂಬ ಸುದ್ದಿಯನ್ನು ನಗುನಗುತ್ತಾ ಹೇಳಿದಳು. ಆ ಪದಗಳಿಗೆ ಹುಟ್ಟಬಹುದಾದ ಅಪಾರ್ಥದ ಕಲ್ಪನೆಯಿಲ್ಲದೆ ಬರೀ ಪ್ರಾಸಕ್ಕೋಸ್ಕರ ಉಪಯೋಗಿಸುತ್ತಿರುವ ರಿಪೋರ್ಟರ್‌ನ ಮೇಲೆ ಕೇಸ್ ಹಾಕಬೇಕು ಅಂದುಕೊಂಡ. ಮತ್ತೆ ಪ್ರಪಂಚಕ್ಕೆ ಇಷ್ಟೆಲ್ಲಾ ಕಷ್ಟವಿರಬೇಕಾದರೆ, ಅದನ್ನು ತೋರಿಸದೆ ಈ ಸಣ್ಣ ಆಸ್ಪತ್ರೆಯಲ್ಲಿ ಬಂದ ದುರ್ವಾಸನೆಯನ್ನು ಇಷ್ಟೊಂದು ಸ್ವಾರಸ್ಯಕರವಾಗಿ ತೋರಿಸುತ್ತಿರುವ ಟೀವಿಯವರ ಮೇಲೆ ಸಿಕ್ಕಾಪಟ್ಟೆ ಸಿಟ್ಟುಬಂತು, ಮುಕುಂದನಿಗೆ. ಆದರೆ ಮುಕುಂದನ ಹೆಸರು ವಿಶೇಷವಾಗಿ ಏನೂ ಪ್ರಸ್ತಾಪವಾಗಿರಲಿಲ್ಲ. ಕುರ್ಚಿಯ ತುದಿಯಲ್ಲಿ ಕೂತು ನೋಡುತ್ತಿದ್ದು, ತನ್ನ ಹೆಸರನ್ನು ಟೀವಿಯವರು ಹೇಳಲಿಲ್ಲ ಎಂದು ಸಮಾಧಾನಪಟ್ಟುಕೊಂಡ.

ಒಂದಾದಮೇಲೊಂದರಂತೆ ವಿಚಾರಣೆಗಳು ನಡೆದಿದ್ದವು. ಮೊದಲು ಆಸ್ಪತ್ರೆಯ ರಿಸ್ಕ್ ಮ್ಯಾನೇಜ್‌ಮೆಂಟ್‌ನವರು ಬಂದು ಮಾತಾಡಿದರು. ನಂತರ ಕೌಂಟಿಯ ಆರೋಗ್ಯ ಇಲಾಖೆಯವರು ಬಂದು ಪ್ರಾಥಮಿಕ ವಿಚಾರಣೆಗಳನ್ನು ಮುಗಿಸಿ, ಇನ್ನೊಂದೆರಡು ದಿನಗಳಲ್ಲಿ ರಾಜಧಾನಿಯಿಂದ ಆರೋಗ್ಯ ಇಲಾಖೆ ಇಬ್ಬರು ವಿಶೇಷ ಅಧಿಕಾರಗಳನ್ನು ವಿಚಾರಣೆಗೆ ಕಳಿಸಿಕೊಡುವುದಾಗಿ ಒಂದು ನೋಟೀಸನ್ನು ಕಳಿಸಿತ್ತು. ವಿಚಾರಣೆ ಇಡೀ ಆಸ್ಪತ್ರೆಯನ್ನು ಕುರಿತಾಗಿ ನಡೆದರೂ ಮುಕುಂದನಿಗೆ, ಎಲ್ಲರೂ ತನ್ನನ್ನೇ ತಪ್ಪಿತಸ್ಥನನ್ನಾಗಿ ನೋಡುತ್ತಿದ್ದಾರೆ ಎಂದನ್ನಿಸಿ, ತಲೆತಗ್ಗಿಸಿಕೊಂಡೇ ಓಡಾಡುತ್ತಿದ್ದ. ಈ ವಿಚಾರಣೆಗಳು ಮುಂದುವರೆದಂತೆಲ್ಲಾ ತನ್ನಮೇಲೆ ತನಗೆ ಅನುಮಾನ ಜಾಸ್ತಿಯಾಗುತ್ತಲೇ ಹೋಗುತ್ತಿತ್ತು. ಸಣ್ಣ ಹುಳು ಎಲ್ಲಿಂದಲೋ ತನ್ನೊಳಗೆ ಹೊಕ್ಕು, ಎಲ್ಲಾ ಪಚನರಸಗಳಿಂದಲೂ ತಪ್ಪಿಸಿಕೊಂಡು ಸಣ್ಣ ಮತ್ತು ದೊಡ್ಡ ಕರುಳಿನ ಮಧ್ಯೆ ಎಲ್ಲೋ ಅಡಗಿಕೂತು, ಟುಸ್ಸೆಂದು ಬುಸುಗುಟ್ಟಿ ತನಗರಿವಿಲ್ಲದೆ ತನ್ನಸುತ್ತಲೂ ಶುರುವಾಗಿ ಎಲ್ಲೆಡೆ ಹರಡಿದಂತೆ ಭಾಸವಾಗತೊಡಗಿತ್ತು. ಹೆದರಿ ಒಬ್ಬನೇ ಟಾಯ್ಲೆಟ್ಟಿನಲ್ಲಿ ಬಟ್ಟೆ ಬಿಚ್ಚಿ, ತನ್ನ ದೇಹದ ವಿವಿಧ ಭಾಗಗಳನ್ನು ಮೂಸಿನೋಡಿ, ಅಂದಿನ ವಾಸನೆಯನ್ನು ಹೋಲಿಸಿನೋಡಿದ. ಮತ್ತೆ ಬಟ್ಟೆ ಹಾಕಿಕೊಳ್ಳಬೇಕಾದರೆ ಸೂಕ್ಷ್ಮವಾಗಿ ಗಮನಿಸಿದ- ಅಂಗಿ ಎಲ್ಲೋ ದಕ್ಷಿಣ ಅಮೆರಿಕಾದಲ್ಲಿ, ಪ್ಯಾಂಟು ಮೆಕ್ಸಿಕೋದಲ್ಲಿ ಮತ್ತು ಷೂಗಳು ಚೈನಾದಲ್ಲೂ ತಯಾರಾಗಿದ್ದವು.ಇವನು ಇಂಡಿಯಾದಲ್ಲಿ ತಯಾರಾಗಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಮೈಮೇಲೆ ಮೂರೆಳೆ ಜನಿವಾರವಿತ್ತು. ಈ ಅಲಬಾಮಾದ ಆಸ್ಪತ್ರೆಯ ಬಾತ್‌ರೂಮಿನಲ್ಲಿ ಕಕ್ಕಸ್ಸಿನ ಪಾಟ್ ಮತ್ತು ನೀರು ಬಿಟ್ಟರೆ ಬೇರೆ ಎಲ್ಲವೂ ಹೊರಗಿನದೇ ಅನ್ನಿಸಿತು. ಮೂಸಿನೋಡಿದಲ್ಲೆಲ್ಲಾ ಒಂದೇವಾಸನೆ ಬರುತ್ತಿತ್ತು. ಅದು ಇವನ ಮೈಯಿಂದ ಬಂದದ್ದೋ, ಹಾಕಿದ್ದ ಬಟ್ಟೆಯಿಂದ ಬಂದದ್ದೋ ಅಥವಾ ಕಕ್ಕಸಲ್ಲಿ ನಿಂತಿದ್ದರಿಂದ ತಿಳಿಯುತ್ತಿಲ್ಲವೋ ಗೊತ್ತಾಗದೇ ಕಂಗಾಲಾದ. ಛೆ! ಈ ವಾಸನೆಯನ್ನು ರೆಕಾರ್ಡ್ ಮಾಡುವಂಥದ್ದೇನಿಲ್ಲವಲ್ಲ ಎಂದು ಹಲುಬಿದ.

ಎಲ್ಲಾ ವಿಚಾರಣೆಗಳೂ ಸುಮಾರು ಒಂದೇ ರೀತಿ. ಅಂದು ಆಸ್ಪತ್ರೆಯಲ್ಲಿ ನಡೆದದ್ದೇನು ಎಂಬುದನ್ನು ಪ್ರತಿಯೊಬ್ಬರ ಬಾಯಿಂದಲೂ ಕೇಳುವುದು. ನಂತರ ಮನಸ್ಸಿಗೆ ಬಂದ ಪ್ರಶ್ನೆ ಕೇಳುವುದು-ಮುಕುಂದನ ಪ್ರಕಾರ,. ಬಟ್ಟೆ ಒಗೆದು ಎಷ್ಟು ದಿನವಾಗಿತ್ತು? ಮೈಗೆ, ಕಂಕುಳಿಗೆ ಡಿ‌ಓಡರೆಂಟ್ ಹಚ್ಚುತ್ತೀಯ? ತಲೆಗೆ ಎಂತ ಕ್ರೀಮ್ ಹಚ್ಚುವುದು? ಊಟ ಎಷ್ಟು ಹೊತ್ತಿಗೆ ಮಾಡಿದ್ದು? ಅಂದು ಬೆಳಿಗ್ಗೆ ಕಕ್ಕಸ್ಸಿಗೆ ಹೋಗಿದ್ದೆಯಾ, ಇತ್ಯಾದಿ. ಮೈಗೆ ಡಿ‌ಓಡೊರಂಟ್ ಹಚ್ಚುತ್ತೀಯ ಎಂಬ ಪ್ರಶ್ನೆಗೆ ಹೌದು ಎನ್ನುವ ಉತ್ತರ ಕೊಡಲಾಗಲಿಲ್ಲ, ಮುಕುಂದನಿಗೆ. ಯಾವುದೋ ಕೆಟ್ಟ ಟೀವಿಯ ಸೀರಿಯಲ್‌ನ ಪ್ರಭಾವ, ಹೌದು ಎಂದು ಎದೆ ತಟ್ಟಿ ಹೇಳುವಷ್ಟು ತನ್ನ ಗಂಡಸುತನ ಸೆಕ್ಯೂರ್ ಆಗಿಲ್ಲವೆಂದು ತಿಳಿದು” ಹಚ್ಚುವುದಿಲ್ಲ” ಎಂದು ಹೇಳಿದ್ದ. ನಂತರ ಈ ಒಂದು ವಿಷಯದಲ್ಲಿ ಅನೀಟ ಗೆದ್ದುಬಿಟ್ಟಳಲ್ಲಾ ಎಂದು ಮತ್ತೆ ಹಲುಬಿದ್ದ.ರಾಜಧಾನಿಯಿಂದ ಬರುವವರು ಇನ್ನೂ ಏನೇನೋ ಕೇಳಬಹುದು ಎಂದು ಆಸ್ಪತ್ರೆಯ ರಿಸ್ಕ್ ಮ್ಯಾನೇಜ್‌ಮೆಂಟ್‌ನವರು ಇವನನ್ನು ತಯಾರುಮಾಡುತ್ತಿದ್ದರು.ಆದಷ್ಟು ಹೌದು ಅಥವಾ ಅಲ್ಲ ಅನ್ನುವ ಉತ್ತರಗಳನ್ನು ಮಾತ್ರ ಕೊಡಬೇಕೆಂದೂ, ಇಲ್ಲಿ ಪ್ರಶ್ನೆಗಿರುವುದು ಆಸ್ಪತ್ರೆಯ ಮರ್ಯಾದೆಯೇ ಹೊರತು, ಮುಕುಂದನ ಗಂಡಸುತನದ ಸೆಕ್ಯುರಿಟಿಯಲ್ಲ ಎಂದು ಮತ್ತೊಮ್ಮೆ ಮನದಟ್ಟು ಮಾಡಿಹೇಳಿದರು. ಮತ್ತೆ ವಿಷಯ ತೀರ ಹದಗೆಟ್ಟರೆ ಅವರುಗಳು ಡೀ‌ಎನ್‌ಏ ಸ್ಯಾಂಪಲ್ಲುಗಳನ್ನೂ ಕೇಳಬಹುದು ಎಂದು ಹೇಳಿದಾಗ ಮುಕುಂದ ತಬ್ಬಿಬ್ಬಾದ. ಎಂಥ ಸ್ಯಾಂಪಲ್ಲು, ಎಲ್ಲಿಂದ ಡೀ‌ಎನ್‌ಏ ಹುಡುಕುತ್ತಾರೆ, ಗಾಳಿಯಲ್ಲಿ ಲೀನವಾಗಿಹೋಗಿರುವ ಆ ಅನಿಲಕ್ಕೆ ಡೀ‌ಎನ್‌ಏ ಅನ್ನುವುದೇನಾದರೂ ಇದೆಯೇ? ಇದ್ದರೂ ಅದನ್ನು ಆಸ್ಪತ್ರೆಯ ಕೆಲಸಗಾರರೆಲ್ಲರ ಡೀ‌ಎನ್‌ಏಗಳಿಗೆ ಹೇಗೆ ಹೋಲಿಸುತ್ತಾರೆ? ಛೆ! ಮುಕುಂದಾ ನೀನು ಕಾಲೇಜುನಲ್ಲಿದ್ದಾಗ ಸ್ವಲ್ಪ ಬೇಸಿಕ್ ರಿಸರ್ಚ್ ಮಾಡಬೇಕಾಗಿತ್ತು, ಕಣಯ್ಯ. ನೋಡು ಈಗ ಇಂಥ ಸಮಯದಲ್ಲಿ ನಿನ್ನನ್ನು ಯಾವ್ಯಾವೋನೋ ಕ್ಲರ್ಕ್‌ಗಳೆಲ್ಲಾ ತಮಗೆ ಗೊತ್ತಿರುವ ಪದಗಳನ್ನೆಲ್ಲಾ ಉಪಯೋಗಿಸಿ ನಿನ್ನನ್ನು ಯಾಮಾರಿಸುತ್ತಿದ್ದಾರೆ. ನೀನು ಹೆದರಬೇಡ, ಇವರೆಲ್ಲಾ ಕಥೆಕಟ್ಟುತ್ತಿದ್ದಾರೆ. ಧೈರ್ಯವಾಗಿರು, ಮುಕುಂದ- ಛೆ! ಮತ್ತೆ ಪರಕಾಯಪ್ರವೇಶ, ತಲೆ ಕೊಡವಿ ಬೈದುಕೊಂಡ.

ಇಷ್ಟರ ಮಧ್ಯೆ ಮುಕುಂದನ ಗ್ರಹಚಾರಕ್ಕೆ ಚಾನಲ್ ಒಂಭತ್ತರವರು ಇನ್ನೊಂದು ಬ್ರೇಕಿಂಗ್ ನ್ಯೂಸ್‌ನಲ್ಲಿ ಆ ಹುಡುಗಿಯನ್ನು ಹಾಗೂ ಅವಳ ಅಮ್ಮನನ್ನು ಸಂದರ್ಶನ ಬೇರೆ ಮಾಡಿಬಿಟ್ಟಿದ್ದರು. ನೀಟಾಗಿ ಮೇಕಪ್‌ಮಾಡಿಕೊಂಡು, ಡ್ರೆಸ್‌ಸೂಟ್ ಹಾಕಿಕೊಂಡು, ಕೂದಲು ಇಳಿಬಿಟ್ಟುಕೊಂಡು ಕತ್ತರಿಗಾಲು ಹಾಕಿ ಕೂತುಕೊಂಡು” ಹೌದು, ನಾನು ತಪ್ಪು ಮಾಡಿದ್ದೆ. ನನಗೆ ಬರಿ ಹದಿನೇಳು ವರ್ಷ. ಬುದ್ಧಿ ಕೆಟ್ಟು ಸಾಯಬೇಕೆಂದು ಅಮ್ಮನ ನಿದ್ದೆಮಾತ್ರೆ ತೆಗೆದುಕೊಂಡೆ. ಯಾರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ನನಗೆ ಇರೋದೆಲ್ಲಾ ಬರೇ ಮಸುಕುಮಸುಕು ನೆನಪು. ಕಣ್ಣು ಮಂಜಾಗುತ್ತಿತ್ತು. ನನಗೆ ವಾಂತಿಮಾಡಿಸಲು ಏನೋ ಕುಡಿಸುತ್ತಿದ್ದರು. ಆಗ ಇದ್ದಕ್ಕಿದ್ದಹಾಗೆ ಒಂದು ಕೆಟ್ಟವಾಸನೆ ಬಂತು. ಕೊಳೆತಹೆಗ್ಗಣದ ತರ. ಅದು ಏನೆಂದು ಹೇಳಲು ಗೊತ್ತಿಲ್ಲ. ಬಹಳ ಕೆಟ್ಟದಾಗಿತ್ತು. ಕಣ್ಣು ಬಿಟ್ಟಾಗ- ಮೊದಲೇ ಹೇಳಿದ್ದೆನಲ್ಲ, ಕಣ್ಣು ತುಂಬಾ ಮಂಜಾಗಿತ್ತು. ಯಾರದೋ ಹಿಂಭಾಗ ಕಾಣಿಸಿತು. ಬಿಳೀಕೋಟು ಇತ್ತು, ಅನ್ನಿಸುತ್ತೆ. ಆದರೆ ಒಂದು ಮಾತ್ರ ತುಂಬಾ ಚೆನ್ನಾಗಿ ನೆನಪಿದೆ ’ ಈ ವಾಸನೆಯಿಂದ ಎಂಥ ಸತ್ತವನೂ ಏಳಲೇಬೇಕು’ ಅಂದಿದ್ದು, ಪ್ರಾಯಶಃ ಗಂಡುಧ್ವನಿ ಅನ್ನಿಸುತ್ತೆ, ಆದರೆ ಮುಖಕಾಣಿಸಲಿಲ್ಲ. ಅಷ್ಟೇ ನೆನಪಲ್ಲಿರೋದು” ಅಂದಿದ್ದಳು.

” ಸೇಂಟ್‌ಮೇರಿಸ್ ಆಸ್ಪತ್ರೆ ತುಂಬಾ ತೊಂದರೆಯಲ್ಲಿದೆ. ಅಂದು ಅಲ್ಲಿಬಂದ ವಾಸನೆ, ಹದಗೆಡುತ್ತಿರುವ ಅಮೆರಿಕಾದ ಆಸ್ಪತ್ರೆಗಳಿಗೆ ಮೆಟಫರ್ ಇರಬಹುದೇ? ಆಸ್ಪತ್ರೆಯ ಅಧಿಕಾರಿಗಳು ನಮಗೆ ಸಂದರ್ಶನ ಕೊಡುತ್ತಿಲ್ಲ. ಎಮರ್ಜನ್ಸಿ ರೂಮನ್ನು ಫ್ಯುಮಿಗೇಟ್ ಮಾಡಿಸಿದ್ದಾರಂತೆ. ಈ ಘಟನೆಯಾದ ಮೇಲೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಶೇಕಡಾ ಮೂವತ್ತರಷ್ಟು ಇಳಿದಿದೆ. ಸುತ್ತ ಮೂವತ್ತು ಮೈಲಿಯಲ್ಲಿ ಬೇರೆ ಆಸ್ಪತ್ರೆಯಿರದಕಾರಣ ಇದು ಊರಿನವರಿಗೆಲ್ಲ ತೊಂದರೆಯಾಗುವ ವಿಚಾರ. ಇನ್ನಾದರೂ ಇದಕ್ಕೆ ಸಂಬಂಧಪಟ್ಟವರು ಸರಿಯಾದ ಕ್ರಮ ಕೈಗೊಳ್ಳಬಹುದೆಂದು ನಾವು ಆಶಿಸಬಹುದೇ” ಎಂದು ವರದಿಗಾರ್ತಿ ದುಃಖಭರಿತವಾಗಿ ನಕ್ಕು, ಮೇಕಪ್ ಹೋಗದಹಾಗೆ ಕಣ್ಣೊರೆಸಿಕೊಳ್ಳುತ್ತಿರುವ ಆ ಹದಿನೇಳರ ಸುಂದರಿಯ ಉದ್ದಕೂದಲಿನ ಡ್ರೆಸ್‌ಸೂಟಿನಲ್ಲಿರುವ ಚಿತ್ರವನ್ನು ಕ್ಲೋಸ್‌ಅಪ್ಪಿನಲ್ಲಿ ಫ್ರೀಜ್ ಮಾಡಿ ಆ ಕ್ಲಿಪ್ಪನ್ನು ಮುಗಿಸಿದಳು.ನಂತರ ಮತ್ತೆ ಬಂದು ’ಇದೀಗ ಬಂದ ಸುದ್ದಿ’ಯಲ್ಲಿ ಆದಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾಕ್ಟರ ಹೆಸರು ಡಾ. ಮೂಕುಂಡ್ ಎಂದು ತಿಳಿದುಬಂದಿದೆ ಎಂದು ಮತ್ತೊಮ್ಮೆ ನಕ್ಕಳು.

ಇನ್ನು ನಾನು ಸತ್ತೆ ಅಂದುಕೊಂಡ.
ಎಂತಾ ನೀಟಾಗಿ ಕೂತಿದ್ದಾಳೆ. ಯಾರೋ ಸೂಟ್ ಬೇರೆ ಕೊಡಿಸಿದ್ದಾರೆ. ಆ ಸೂಟ್‌ನೊಳಗಿರುವ ಮೈಯಿನ ಎಲ್ಲಾ ಉಬ್ಬುತಗ್ಗುಗಳಿಗೂ ವಂಕಿ, ಉಂಗುರಗಳನ್ನು ಚುಚ್ಚಿಕೊಂಡಿದ್ದಾಳೆ ಕಣ್ರೋ ಎಂದು ಕೂಗಿಕೊಂಡ. ಅಯ್ಯೋ ಬೋಳೀಮಕ್ಕಳಾ, ಅವಳು ತಿಂದಿದ್ದು ವಿಟಮಿನ್ ಮಾತ್ರೆ, ಅದರಿಂದ ಸಾಯುತ್ತಿರಲಿಲ್ಲ. ಮೇಲಾಗಿ ಆಕೆ ಆಸ್ಪತ್ರೆಯನ್ನು ತಾನಾಗೇ ಬಿಟ್ಟುಹೋಗಿದ್ದಾಳೆ, ಯಾವ ಜವಾಬ್ದಾರಿಯಿರುವ ರೋಗಿ ಮಾಡುವಕೆಲಸವಿದು, ಬನ್ರೋ ಬನ್ನಿ ನನ್ನ ಸಂದರ್ಶಿಸಿ, ಅವಳು ಹಾಕಿಕೊಂಡಿದ್ದಕ್ಕಿಂತ ನಾಲ್ಕರಷ್ಟು ಬೆಲೆಬಾಳುವ ಸೂಟು ಹಾಕುತ್ತೀನಿ, ನಾನೂ. ಬೇಕಾದರೆ ಡಿ‌ಓಡರೆಂಟನ್ನೂ ಹಚ್ಚುತ್ತೇನೆ. ಅವಳಿಗಿಂತ ಪ್ರೊಫೆಶನಲ್ ಆಗಿ ಉತ್ತರ ಹೇಳುತ್ತೇನೆ, ಬನ್ರೋ ಬನ್ನಿ ಎಂದು ಕೂಗಿಕೊಂಡ.
ಯಾಕೋ ಹೆದರಿಕೆಯಾಯಿತು. ರೂಮಿನಲ್ಲಿದ್ದ ಕಂಪ್ಯೂಟರ್ ಹಚ್ಚಿ ಅಲಬಾಮ ಮತ್ತು ಫಾರ್ಟ್ ಎಂದು ’ಗೂಗಲಿಸಿ’ದರೆ ಸಂಬಂಧಪಟ್ಟ ಇತರ ಶಬ್ದಗಳ ಪೈಕಿ ’ಮುಕುಂದ ’ ಎಂದೂ ಇರುವುದನ್ನು ನೋಡಿ ಹೌಹಾರಿಹೋದ. ಸಂದರ್ಶನ ನಡೆದ ಹದಿನೈದು ನಿಮಿಷದೊಳಗೆ ಇವನ ಹೆಸರು ಅಲಬಾಮಾದ ಅಪಾನವಾಯುವಿನ ಹೆಸರಿನೊಂದಿಗೆ ಸೇರಿಕೊಂಡು ಪ್ರಪಂಚದಾದ್ಯಂತ ಪಸರಿಸುತ್ತಿರುವುದನ್ನು ನೋಡಿ ಬೆದರಿಹೋದ.
ಮತ್ತೆ ಹದಿನೈದು ನಿಮಿಷಕ್ಕೆ ಮುಕುಂದ ಮತ್ತು ಅನೀಟ ಇಬ್ಬರೂ ರಾಜಧಾನಿಯವರುಗಳಿಂದ ವಿಚಾರಣೆ ಆಗುವವರೆಗೆ ಕೆಲಸಮಾಡಬಾರದೆಂದೂ, ಕಡ್ಡಾಯ ರಜೆಯ ಮೇಲೆ ಹೋಗಬೇಕೆಂದೂ, ಊರಿನ ಜನಗಳಿಗೆ ಆಸ್ಪತ್ರೆ, ಈ ವಿಷಯದ ಬಗ್ಗೆ ತೀವ್ರವಾದ ಕ್ರಮ ಕೈಗೊಳ್ಳುತ್ತಿದೆ ಎಂದು ತೋರಿಸುವುದಕ್ಕೆ ಇನ್ನೇನೂ ಮಾರ್ಗವಿಲ್ಲವೆಂದೂ ಹಾಗೂ ಇದರಿಂದಾಗುವ ತೊಂದರೆಗೆ ವಿಷಾದಿಸುತ್ತೇವೆಂದೂ ಮೆಕಾರ್ಥಿ ಇಬ್ಬರಿಗೂ ಒಂದೊಂದು ನೋಟೀಸು ಕಳಿಸಿದ. ಯಾವುದೇ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟರೆ ಅದರಿಂದಾಗುವ ಪರಿಣಾಮಕ್ಕೆ ಆಸ್ಪತ್ರೆ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೆಂದೂ ಮತ್ತು ಹಾಗೇನಾದರೂ ಆದ ಪಕ್ಷದಲ್ಲಿ ಇವರುಗಳ ಪರವಾಗಿ ಆಸ್ಪತ್ರೆ ಯಾವ ಲಾಯರ್‌ಗೂ ಫೀಸು ಕೊಡದಿರಬಹುದಾಗಿ ತೀರ್ಮಾನಿಸಬಹುದೆಂದು ಮಿದುವಾಗಿ ಎಚ್ಚರಿಸೂ ಇದ್ದರು.

ತಾನು ಅಮೆರಿಕಾದಲ್ಲಿರಬೇಕಾದರೆ ಕೆಲಸ ಮಾಡಲೇಬೇಕೆಂದೂ ಇಲ್ಲದಿದ್ದರೆ ವೀಸಾಕ್ಕೆ ತೊಂದರೆಯಾಗುತ್ತದೆಂದೂ ಹಳಹಳಿಸಿದ, ಮುಕುಂದ. ಹಾಗೇನೂ ಆಗುವುದಿಲ್ಲವೆಂದೂ ಆಸ್ಪತ್ರೆಯ ಲಾಯರ್‌ಗಳು ಸಮಾಧಾನಮಾಡಿದ್ದರು.

– ೪ –

ಇದಾಗಿ ಮೂರುವರ್ಷಗಳಾಗುತ್ತಾ ಬಂದಿವೆ. ನ್ಯೂಯಾರ್ಕಿನಲ್ಲಿ ಬಿಲ್ಡಿಂಗ್‌ಗಳು ಕುಸಿದುಬಿದ್ದಿವೆ. ಸದ್ದಾಮನ ಮಕ್ಕಳು ಸತ್ತಿದ್ದಾರೆ. ಆಲ್‌ಖೈಡ ಮಕಾಡೆ ಮಲಗಿದೆ ಅಂತ ಬುಷ್ ಹೇಳುತ್ತಿದ್ದಾನೆ, ಸದ್ದಾಮ್ ಹಾಗೂ ಬಿನ್‌ಲಾಡೆನ್ ಇನ್ನೂ ಜೀವಂತವಾಗಿರಬಹುದೆಂದು ಇನ್ನೂ ಅನುಮಾನವಿದೆ. ಕ್ಯಾಲಿಫೋರ್ನಿಯಾದ ಗವರ್ನರ್ ಚುನಾವಣೆಗೆ ಆರ್ನಾಲ್ಡ್ ಶ್ವಾರ್ಜ್‌ನೆಗರ್ ಹಾಗೂ ಸ್ಟ್ರಿಪ್ಪರ್ ಒಬ್ಬಳು ನಿಂತಿದ್ದಾಳೆ. ಎಕಾನಮಿ ಸುಧಾರಿಸುತ್ತಿದೆ. ಬುಷ್ ಮತ್ತೆ ಚುನಾವಣೆಗೆ ನಿಲ್ಲಬಹುದೆಂದು ಗುಮಾನಿಯಿದೆ. ಈ ಬಾರಿ ಅಲಬಾಮದಲ್ಲಿ ಸಿಕ್ಕಾಪಟ್ಟೆ ಬಿಸಿಲಂತೆ- ಹಾಗಂತ ಅಂತರ್ಜಾಲದಲ್ಲಿ ಓದುತ್ತಾನೆ, ಡಾ. ಮುಕುಂದ.

ಬಾಂಬೆಯಲ್ಲಿ ಮತ್ತೆ ಬಾಂಬ್ ಬಿದ್ದಿದೆ, ವೀರಪ್ಪನ್‌ನ ಹಿಡಿಯುತ್ತಾರಂತೆ, ಸಾಂಗ್ಲಿಯಾನ ರಿಟೈರ್ ಆಗಿದ್ದಾರಂತೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೂರ್ನಾಲ್ಕು ಕನ್ನಡ ಸಿನೆಮಾದವರಿಗೆ ಪ್ರಶಸ್ತಿ ಬಂದಿವೆ,ಮೂರ್ತಿರಾಯರು ಸತ್ತಿದ್ದಾರೆ, ಬೆಂಗಳೂರಲ್ಲಿ ಇನ್ನೂ ನಾಲ್ಕು ಫ್ಲೈ‌ಓವರ್ ಬರಬಹುದಂತೆ-ಹಾಗಂತ ಬೆಳಗಿನ ಪೇಪರಲ್ಲಿ, ಪೇಪರಂದ್ರೆ ಪೇಪರಲ್ಲಿ ಓದುತ್ತಾನೆ.

ಆತ ಈಗ ಬೆಂಗಳೂರಲ್ಲಿ ಪೇಪರ್ ಓದುವಂತಾಗಿರುವುದು ಮೂರುವರ್ಷದ ಹಿಂದೆ ಬಂದ ಘಾಟುವಾಸನೆಯಿಂದ ಎಂದು ಆತ ಬೆಂಗಳೂರಿಗೆ ಬಂದ ದಿನವೇ ಒಂಕೊಂಕಿಯಾದ ತಿಲಕವಿಟ್ಟ ಬೆಂಗಳೂರಿನ ಖಾಸಗಿಟೀವಿಯ ರಿಪೋರ್ಟರ್‌ಗಳು ಹೇಳಿದ್ದರು. ಆಗ ಆತನ ಸಂದರ್ಶನಕ್ಕೆ ಬಹಳ ಪ್ರಯತ್ನಪಟ್ಟಿದ್ದರೂ ಮುಕುಂದ ತಪ್ಪಿಸಿಕೊಂಡಿದ್ದ. ಈಗ ಮುಕುಂದ ಐಸಿ‌ಐಸಿ‌ಐ ಯಿಂದ ಸಾಲ ತೆಗೆದು, ಬೆಂಗಳೂರಲ್ಲಿ ಒಂದು ಹೈಟೆಕ್ ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದಾನೆ. ತಾನೇ ಎಲ್ಲಾ ಮೇಲ್ವಿಚಾರಣೆಯನ್ನೂ ಹೊತ್ತಿದ್ದಾನೆ. ಪ್ರಾಕ್ಟೀಸ್‌ನ ನಡುವೆಯೂ ದಿನಾ ಹೋಗಿ ನೋಡಿಕೊಂಡು ಬರುತ್ತಾನೆ. ಡಾ. ಮುಕುಂದ. ಎಮ್.ಬಿ.ಬಿ.ಎಸ್., ಎಮ್.ಡಿ. (ಯುನಿವರ್ಸಿಟಿ ಆಫ್ ಅಲಬಾಮ ಅಟ್ ಬರ್ಮಿಂಗ್‌ಹ್ಯಾಮ್) ಎನ್ನುವುದರ ಜತೆಗೆ ಯು ಎಸ್ ಎ ಅನ್ನೋದನ್ನು ಬ್ರಾಕೆಟ್ಟಲ್ಲಿ ಸೇರಿಸಿಬಿಡಪ್ಪ, ಎಂದು ಬೋರ್ಡು ಬರೆಯುವವನಿಗೆ ಹೇಳುತ್ತಾನೆ. ಪ್ರತಿಯೊಂದು ರೂಮಿನಲ್ಲೂ ಎಕ್ಸ್‌ಹಾಸ್ಟ್ ಹಾಕಿಸಿದ್ದಾನೆ. ಆದರೂ ನಂಬಿಕೆಯಿಲ್ಲದೆ ಪ್ರತಿರೂಮಿನಲ್ಲಿಯೂ ದೆವ್ವದಂತ ಕಿಟಕಿಗಳನ್ನಿಡಿಸಿದ್ದಾನೆ. ವಾಪಸ್ ಬೆಂಗಳೂರಿಗೆ ಬಂದಮೇಲೆ ತಾನು ತಂದಿದ್ದ ಸಾಮಾನುಗಳೆಲ್ಲವೂ ವಾಸನೆ ಬರುತ್ತಿದೆಯೆಂದು ಎಲ್ಲಾ ಬಟ್ಟೆಗಳನ್ನೂ ಹೊಸದಾಗಿ ಖರೀದಿಸಿದ್ದಾನೆ. ಆಗಾಗ ಮತ್ತೆ ವಾಸನೆ ಬರುತ್ತದೆ. ಗೆಳೆಯನ ಹತ್ತಿರ ಕೆಳಗಿಂದ ಮೇಲಿನ ತನಕ ಎಂಡೋಸ್ಕೋಪಿನಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಗೆಳೆಯ ಎಲ್ಲಾ ಸರಿಯಾಗಿದೆ ಎಂದು ಹೇಳಿದಾಗ, ಮಿಷೀನ್ ಸರಿಯಾಗಿದೆಯಾ ಎಂದು ತಮಾಷೆಗೆ ಕೇಳಿದ್ದ. ಮೊನ್ನೆ ತಾನೆ ಅಮೆರಿಕಾದಿಂದ ತರಿಸಿದ್ದು ಅನ್ನುತ್ತಾನೆ, ಗೆಳೆಯ.
ಮುಕುಂದ ಅಮೆರಿಕಾದಿಂದ ಯಾಕೆ ಬಂದ ಎಂಬ ಪ್ರಶ್ನೆಗೆ ಹಲವಾರು ಊಹಾಪೋಹಗಳಿದ್ದು ಈಗ ಎಲ್ಲ ತಣ್ಣಗಾಗಿವೆ. ಕೆಲಸ ಕಳಕೊಂಡ, ಎಂದು ಒಂದು ಪತ್ರಿಕೆ ವರದಿಮಾಡಿದರೆ, ಅಲ್ಲಿನ ವ್ಯವಸ್ಥೆಗೆ ಬೇಸತ್ತು ರಾಜೀನಾಮೆ ಕೊಟ್ಟ ಎಂದು ಇನ್ನೊಂದು ಪತ್ರಿಕೆ ಹೇಳಿದೆ. ಒಬ್ಬ ಮಾಮೂಲಿ ಡಾಕ್ಟರು ಅಮೆರಿಕಾದಿಂದ ವಾಪಸ್ಸು ಬಂದರೆ ಈ ಪೇಪರ್ರು ಟೀವಿಯವರಿಗೆ ಯಾಕೆ ಇಲ್ಲದ ಆಸಕ್ತಿ ಎಂದು ಮುಕುಂದ ಆಗ ಆಶ್ಚರ್ಯಗೊಂಡಿದ್ದ. ಇಮ್ಮಿಗ್ರೇಷನ್‌ನವರು ತುಂಬಾ ತೊಂದರೆ ಕೊಟ್ಟರು, ಮುಕುಂದ ವಿಷಾನಿಲಗಳನ್ನು ತಯಾರಿಸುವ ಭಯೋತ್ಪಾದಕ ಎಂದು ಕೊಂಚ ದಿನ ಒಳಗೆಹಾಕಿ ಅವನ ಪಾಸ್‌ಪೋರ್ಟನ್ನೂ ಕಸಿದುಕೊಂಡಿದ್ದಾರಂತೆ, ಅಂತ ಇನ್ನು ಕೆಲವರು ಹೇಳಿದ್ದಾರೆ. ಮುಕುಂದ ಬೇಡದೇಬೇಡದೇ ಬಂದ ಜನಪ್ರಿಯತೆಯ ದೆಸೆಯಿಂದಲೇ ದೊಡ್ಡ ಡಾಕ್ಟರಾಗಿಬಿಟ್ಟ. ಮೊನ್ನೆ ಮೊನ್ನೆ ನಡೆಸಿಕೊಟ್ಟ ಟೀವೀ ಚಾನಲ್ಲೊಂದರ “ಫೋನ್ ಇನ್” ಕಾರ್ಯಕ್ರಮದಲ್ಲಿ ” ನೀವು ಅಂತ ಅಮೆರಿಕ ಬಿಟ್ಟು ಇಲ್ಲಿಗೆ ಯಾಕೆ ಬಂದ್ರೀ ಸಾರ್” ಎಂದು ಚಿಕ್ಕಬಳ್ಳಾಪುರದ ಒಬ್ಬ ಕಿಡಿಗೇಡಿಯ ಪ್ರಶ್ನೆಗೆ ” ಕನ್ನಡದ ಮಣ್ಣಿನ ವಾಸನೆ ನನ್ನನ್ನು ಇಲ್ಲಿಯತನಕ ಕರಕೊಂಡುಬಂತು, ” ಎಂದು ಉತ್ತರಕೊಟ್ಟಿದ್ದ.

ಮುಕುಂದನ ಆಸ್ಪತ್ರೆ ಕಟ್ಟಿಯಾದಮೇಲೆ ಯಾವ ಫಾರಿನ್ನಿನ ಆಸ್ಪತ್ರೆಯನ್ನೂ ಮೀರಿಸುತ್ತದೆ ಇಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಅಲ್ಲಿ ಅಲಬಾಮದಲ್ಲಿ ಆ ಸುಂದರಿಯ ಕೇಸನ್ನು ಕೋರ್ಟಿನ ಹೊರಗೆ ಎಷ್ಟೋ ನೂರುಸಾವಿರ ಡಾಲರ್‌ಗಳಿಗೆ ಸೆಟಲ್ ಮಾಡಲಾಗಿದೆ ಎಂದು ಮುಕುಂದನಿಗೆ ಈಮೇಲ್ ಬಂದಿತ್ತು ಅನ್ನೋದನ್ನು ಅವನ ಬೆಂಗಳೂರಿನ ಸೆಕ್ರೆಟರಿ ಕದ್ದು ನೋಡಿದ್ದಾಳಂತೆ.

ಮೆಕಾರ್ಥಿ ಮತ್ತು ಅನೀಟಾ ಸ್ವಲ್ಪ ದಿನ ಜತೆಗಿದ್ದು ಮದುವೆಯಾಗಿ ಒಂದು ಮಗುವನ್ನು ಪಡೆದು, ಈಗ ಡೈವೋರ್ಸ್‌ಗೆ ಪ್ರಯತ್ನಪಡುತ್ತಿದ್ದಾರಂತೆ.

ಕೊನೆಯಲ್ಲಿ ಎಲ್ಲರೂ ಬಹುಕಾಲ ಸುಖವಾಗಿದ್ದರಂತೆ.
*****

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.