ಅಚ್ಚರಿಗಳ ಆಗರ ಅಘನಾಶಿನಿ, ಉಷ್ಣ ವಿದ್ಯುತ್ತಿನ ಮುಂದಿನ ಬಲಿ…?

ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, ಹಿರಿಯರೆನ್ನುವ ಭೇದ ರುಚಿಕಾರಕ ಉಪ್ಪಿನ ತಯಾರಿಕೆಯಲ್ಲಿ ಇಲ್ಲಿ ಶತಮಾನದಿಂದ ತೊಡಗಿಕೊಂಡಿದ್ದಾರೆ. ಅಷ್ಟು ದೂರದಲ್ಲಿ ಗಂಡಸರಿಗೆ ಕಮ್ಮಿ ಇಲ್ಲದಂತೆ ಮುಳುಗೇಳುವ ಹೆಂಗಸರು ಇನ್ನಿಲ್ಲದಂತೆ ಚಿಪ್ಪನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಚಿಕ್ಕ ದೋಣಿಯಲ್ಲಿ ಕುಳಿತೇ ಆ ವಯಸ್ಕ ಭರ ಭರನೆ ಬಲೆ ಎಳೆದೆಳೆದು ಮೀನು ಹಿಡಿದಾಕುತ್ತಿದ್ದಾನೆ. ಬೆಳ್ಳಂಬೆಳಿಗ್ಗೆ ನೀರು ಅಡ್ಡಹಾಕಿ ಸಿಗಡಿಗಳನ್ನು ಇನ್ನಾರೊ ಬಲಿ ಹಾಕುತ್ತಿದ್ದರೆ, ಆಗಷ್ಟೆ ದೂರದ ಹೈವೆಯಿಂದ ಬಂದಿಳಿಯುತ್ತಿರುವ ಮ೦ಜುಗಡ್ಡೆಯನ್ನು ಕೊಚ್ಚುತ್ತಿರುವ ಬ್ಯಾರಿಯೊಬ್ಬ ಅದನ್ನು ಹುಡಿ ಮಾಡಿ ಮೀನುಗಳ ಬುಡಕ್ಕೆ ಸರಿ ತಣ್ಣಗಾಗಿಸುತ್ತಿದ್ದಾನೆ.

ಇವೆಲ್ಲವನ್ನು ಯಾಮಾರಿಸಿ ಕಚ್ಚಿಕೊಂಡು ಹೋಗಲು ನಿಂತ ನಾಯಿ.. ಅದರ ಮೇಲೆ ವೃತ್ತಾಕಾರವಾಗಿ ಹಾರುತ್ತ ನಿಂತ ಕಾಗೆಯ ದಂಡು… ಉಳಿದುದರಲ್ಲಿ ಏನಾದರೂ ಸಿಕ್ಕೀತಾ ಎಂದು ಕಾಯುವ ಅಷ್ಟಿಷ್ಟು ಸಂಖ್ಯೆ ಚಿಳ್ಳೆಗಳ ಹಿಂಡು…. ಇನ್ನೂ ಜೀವಂತ ತಕಪಕ ಕುಣಿಯುತ್ತಿರುವ ಅರ್ಧ ಹಲ್ಲು ಮುರಿದ ಏಡಿ… ಕಾಲು ಮುರಿದುಕೊಂಡ ಸಿಗಡಿ… ಬಾಲದಲ್ಲಷ್ಟೆ ಜೀವ ಉಳಿಸ್ಕೊಂಡಿರುವ ಮೀನು ರಾಶಿ… ಎಲ್ಲ ಇದ್ಡೂ ಇಲ್ಲದಂತೆ ತೆಪ್ಪಗೆ ಬಿದ್ದು ಕೊಂಡ ಕಪ್ಪೆ ಚಿಪ್ಪು… ಯಾರಿಗೂ ಬೇಡದ ಅರ್ಧ ಮುರುಟಿಕೊಂಡ ಶ೦ಖುಗಳು… ರಾಡಿಯಲ್ಲಿಂದ ಎದ್ದು ಬಂದಂತಿರುವ ಬೆಸ್ತರ ಹುಡುಗ ಕಣ್ಣರಳಿಸುತ್ತಿದ್ದರೆ.. ಈ ವಾಸನೆಗೆ ಮೂಗು ಮುರಿಯುತ್ತಾ ಅತ್ತ ಧಾವಿಸುತ್ತಿರುವ ಹತ್ತಿರದ ಗೋಕರ್ಣದ ಭಟ್ಟರು… ಅಷ್ಟರಲ್ಲಾಗಲೇ ಮೀನು ದೂರದಿಂದ ಬುಟ್ಟಿಗಳನ್ನೇರಿಸಿಕೊಳ್ಳಲು ಸಜ್ಜಾಗಿ ಬಂದು ನಿಂತ ವ್ಯಾನುಗಳ ಪೊಂ..ಪೊಂ… ಇದಾವುದರ ಕಾಳಜಿ ಇಲ್ಲದೆ ಹರಿಯುತ್ತಿರುವ ಅಘನಾಶಿನಿ ಮಾತ್ರ ಇನ್ಮುಂದೆ ಎಲ್ಲದಕ್ಕೂ ನಿರ್ಲಿಪ್ತೆ.

ಯಾಕೆಂದರೆ ಆಕೆಯ ಮಡಿಲಲ್ಲಿ ನಡೆಯುತ್ತಿರುವ ಈ ದಿನವಹಿ, ಅದೂ ತಲೆತಲಾಂತರಗಳಿಂದ ಬಂದಿರುವ ವಿಶಿಷ್ಟ ಜನಜೀವನ ಅವರ ವ್ಯವಹಾರ… ಅದೇ ರಾಶಿಗಟ್ಟಲೇ ಮೀನು,.. ಅಚ್ಚ ಹಸಿರಿನ ಕಾಂಡ್ಲ ಕಾಡಿನ ಅಪರೂಪದ ಗುಂಪುಗಳು… ಸಾಣಿಕಟ್ಟಾದಿಂದ ಇತ್ತಲಿನ ತದಡಿ ಸೇರಿದಂತೆ ಅತ್ತಲಿನ ಬಂಕಿಕೊಡ್ಲದವರೆಗಿನ ಉಪ್ಪಿನ ದಿಬ್ಬಗಳು… ಯಾರೋ ಪೇರಿಸಿಟ್ಟಂತೆ ಸಾಲಾಗಿ ನಿಂತುಕೊಂಡು ಮೀನಿಗೆ ಗಾಳ ಹಾಕಿರುವ ನಿಶ್ಚಲ ದೋಣಿಗಳು… ಉಹೂಂ ಎಲ್ಲಾ ಈ ನದಿ ತಟದಿಂದೆದ್ದು ಹೋಗಲಿವೆ. ಇದನ್ನೇ ನಂಬಿಕೊಂಡಿರುವ ಸುಮಾರು ಹದಿನೈದು ಸಾವಿರ ಕುಟುಂಬಗಳು ಬೀದಿಗೆ ಬೀಳಲಿವೆ. ಅವ್ಯಾಹತವಾಗಿ ಪಸರಿಸಿಕೊಳ್ಳುವ ಹಾರು ಬೂದಿಗೆ ಇತ್ತಲಿನ ಗಂಗಾವಳಿ ಸೇರಿದಂತೆ ಅತ್ತಲಿನ ಸಮುದ್ರ ತಟ ಸೇರುವವರೆಗಿನ ಎಲ್ಲಾ ನದಿಗಳು ಕಪ್ಪಾಗಿ ರಾಡಿ ಎದ್ದು ಹೋಗಲಿವೆ. ಇದ್ದ ಬದ್ದ ಜೀವ ವೈವಿಧ್ಯವನ್ನು ಕಳೆದುಕೊಂಡು ಅಘನಾಶಿನಿ ಬಂಜೆಯಾಗಲಿದ್ದಾಳೆ.

ಜಗತ್ತಿನ ಅಪರೂಪದ ಜೀವ ವೈವಿಧ್ಯಗಳಲ್ಲಿ ಒಂದಾದ ಅಘನಾಶಿನಿಯ ಒಡಲು ರಾಡಿ ಎದ್ದು ಇದು ನದೀನಾ ಎನ್ನುವಂತಾಗುವ ಕಾಲ ದೂರವಿಲ್ಲ. ಅಪರೂಪದ ಜೀವ ಸಂಕುಲಾನ ಜನ ದನ ಕಾಡು ಬೆಟ್ಟ ಬೇಣ …ಸೇರಿದಂತೆ ಸಕಲ ಜೀವ ಜಂತುಗಳು ಈ ಹವಾಮಾನ ವೈಪರಿತ್ಯ ಮತ್ತು ವಾತಾವರಣದಲ್ಲಿ ಹೆಚ್ಚಾಗುವ ಶಾಖ ಹಾಗು ಹಾರು ಬೂದಿಯ ಆಕ್ಸೈಡ್‌ಗಳ ಹೊಡೆತಕ್ಕೆ ತೋಪೆದ್ಡು ಹೋಗಲಿವೆ. ಅಲ್ಲಿಂದ ಹೊರ ಹೊರಡುವ ಕರೆಂಟು ಲೈನಿಗೋಸ್ಕರ ಮತ್ತೇ ಎಕರೆಗಟ್ಟಲೇ ಜಮೀನು ನಾಪತ್ತೆಯಾಗಲಿದೆ. ಈ ಭೂಮಿ ಇರುವವರೆಗೆ ಈ ಲೈನುಗಳ ಬುಡದಲ್ಲಿ ಮತ್ತು ಸುತ್ತ ಮುತ್ತ ಜೀವ ವೈವಿಧ್ಯ ಬೆಳೆಯಲಾರದು. ಈ ಎಲ್ಲದಕ್ಕೂ ಕಾರಣ ಒಂದೇ. ಇನ್ನೆಲ್ಲೂ ನೆಲೆ ನಿಲ್ಲಲಾಗದೆ ಉ.ಕ.ಜಿಲ್ಲೆಯ ಬುಡಕ್ಕೆ ಬೆಂಕಿ ಇಡಲು ಸಜ್ಜಾಗಿರುವ ಉಷ್ಣ ವಿದ್ಯುತ್ ಸ್ಥಾವರದಿಂದಾಗಿ.

ಅಷ್ಟೇಕೆ ಸರಕಾರ ಸಮಜಾಯಿಸಿ ಪ್ರಕಾರ ಈ ನೆಲ ಖಾಲಿಯಾಗಿದೆ ಎನ್ನುವುದೇನೋ ನಿಜವೇ. ಅದರಿಂದ ಸಾರ್ವಜನಿಕರಿಗೆ ನಯಾ ಪೈಸೆ ಉತ್ಪನ್ನವೂ ಇಲ್ಲ ನಿಜವೇ. ಆದರೆ ಹಾಗಂತ ಈ ಜಾಗಲ್ಲಿ ಬಂದು ನಿಲ್ಲುವ ಭಸ್ಮಕಾರಕ ಯೋಜನೆಯಿಂದ ಸುತ್ತಲಿನ ಮೂವತ್ತು ಕೀ.ಮೀ. ವರೆಗೆ ಇರುವ ಮನೆ, ಮಠ, ಪಟ್ಟಣ, ಜನ-ದನ, ಕಾಡು, ಬೆಟ್ಟ, ಬೇಣ, ಕೊನೆಗೆ ಪಕ್ಕದಲ್ಲೇ ಇರುವ ಸಮುದ್ರ ತೀರ, ಅಸಂಖ್ಯ ಹಿಂದುಗಳ ಪವಿತ್ರ ನಂಬಿಕೆಯ ಧಾರ್ಮೀಕ ಕ್ಷೇತ್ರ ಗೋಕರ್ಣ ಸೇರಿದಂತೆ ಅದರ ಮಗ್ಗುಲ್ಲಲ್ಲೇ ಹರಿವ ಗಂಗಾವಳಿ ನದಿಯಂತೆ, ಇತರ ನದಿಗಳೂ ಕೂಡಾ ಅದರ ಹಾರು ಬೂದಿಗೆ ಒಳಗಾಗುತ್ತವಲ್ಲ. ಅದನ್ನು ತಪ್ಪಿಸುವವರಾರು…?

ಅಷ್ಟಕ್ಕೂ ಈ ಜಿಲ್ಲೆಯಲ್ಲಿ ಇನ್ನಿಲ್ಲದಂತೆ ಯೋಜನೆಗಳು ಆವರಿಸಿಕೊಂಡಿರುವಾಗ ಈ ಯೋಜನೆಯನ್ನು ಇಲ್ಲಿಗೆ ತುರುಕುತ್ತಿರುವ ಉದ್ದೇಶ ಸ್ಪಷ್ಟವಿಲ್ಲವಾದರೂ ಈಗಾಗಲೇ ಜಿಲ್ಲೆಯಾದ್ಯಂತದ ಇದರ ವಿರುದ್ಧ ಹೋರಾಟಕ್ಕೆ ಸಜ್ಜಾಗಿರುವ ಸದ್ಯದ ರೀತಿಯನ್ನು ಗಮನಿಸಿದರೆ ಬಹುಶ: ಈ ಸ್ಥಾವರಕ್ಕೆ ಸುಲಭದಲ್ಲಿ ನೆಲ ಸಿಕ್ಕಲಿಕ್ಕಿಲ್ಲ. ದಿನಾಂಕ ೧೫.ಮಾರ್ಚ್ ೨೦೦೬ ರ ಬಹಿರಂಗ ಧರಣಿ ಮತ್ತು ರಸ್ತೆ ತಡೆ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಅಗಾಧ ಜನಸ್ತೋಮವೇ ಇದಕ್ಕೆ ಸಾಕ್ಷಿ. ಕೇವಲ ಎರಡು ಗಂಟೆಯ ಅವಧಿಯಲ್ಲಿ ಧಾವಿಸಿದ ಜನರ ಸಂಖ್ಯೆ ಆರು ಸಾವಿರ ಚಿಲ್ಲರೆ. ಅಷ್ಟಕ್ಕೂ ಹೀಗೆ ಜಿಲ್ಲೆಯ ಅದರಲ್ಲೂ ಅಘಾನಾಶಿನಿ ನದಿಯ ದಂಡೆಯ ಜನರು ಈ ಹೋರಾಟಕ್ಕೆ ಇನ್ನಿಲ್ಲದಂತೆ ಮುಂದಾಗಲು ಕಾರಣಗಳಿವೆ. ಅಲ್ಲಿನ ನೆಲ, ಜಲ, ನಾಡು, ನುಡಿಗಳಲ್ಲಿ ಒಂದಾಗಿ ಬೆರೆತುಹೋಗಿರುವ ಅಘನಾಶಿನಿ ಜೀವ ವೈವಿಧ್ಯತೆಯಿಂದಾಗಿ ಜಾಗತಿಕವಾಗಿ ಒಂದು ವಿಶಿಷ್ಟ ಜನಾಂಗೀಯ ಮತ್ತು ಭೌಗೋಳಿಕ ನದಿಯಾಗಿ ಗುರುತಿಸಿಕೊಂಡಿದೆ.

ಸಮುದ್ರ ಸುತ್ತಮುತ್ತಲೂ ಇನ್ನಿಲ್ಲದಂತೆ ಏರುವ ಉಷ್ಣತೆಯ ಪರಿಣಾಮವಾಗಿ ಸಮುದ್ರ ತಟದಿಂದ ಕನಿಷ್ಟ ಐದಾರು ಕೀ.ಮೀ.ವರೆಗೆ ಸಮುದ್ರ ಜೀವಿಗಳು ಸರಿದು ಹೋಗುವ ಕೆಲವೊಂದು ಅಪರೂಪದ ಜೀವಿಗಳು ಶಾಸ್ವತವಾಗಿ ದಂಡೆಯನ್ನೇ ತೊರೆದು ವಲಸೆ ಹೋರಟುಹೋಗುವ ಸಂದರ್ಭ ಸ್ಥಾವರ ಅರ೦ಭವಾದ ಒಂದು ವರ್ಷದ ಅವಧಿಯಲ್ಲಿ ನಡೆದು ಹೋಗುತ್ತದೆ. ಹಾಗಾದಲ್ಲಿ ಜಾಗತಿಕವಾಗಿ ಜೀವ ವೈವಿಧ್ಯತೆಯ ಪಟ್ಟಿಯಲ್ಲಿ ಹೆಸರು ಪಡೆದಿರುವ ಅಘನಾಶಿನಿ ಕೊಳ್ಳ ಮತ್ತು ಹರಿವಿನ ಪ್ರದೇಶದಲ್ಲಿ ಅಕ್ಷರಶ: ಜೀವಿಗಳೊಂದಿಗೆ ಒಂದು ಆಯಕಟ್ಟಿನ ಮೀನುಗಾರ ಸಂಸ್ಕೃತಿಯೇ ಈ ಭೂಮಿಯ ಮುಖದಿಂದ ಒರೆಸಿ ಹಾಕಿದಂತಾಗುತ್ತದೆ.

ಈ ಹಾರು ಬೂದಿಯನ್ನು ನಿಯಂತ್ರಿಸಲು ಅತ್ಯಾಧುನಿಕ ರೆಸ್ಪಿರೇಟರಗಳನ್ನು ಮತ್ತು ತಂಪು ನೀರಿನ ಶಿಥಲೀಕರಣದಂತಹ ತಂತ್ರಗಾರಿಕೆಯನ್ನು ಕೈಗೊಳ್ಳಲಾಗುತ್ತಿದೆಯಾದರೂ, ಸರಿ ಸುಮಾರು ಕೇಂದ್ರದಿಂದ ಮೂವತ್ತು ಕೀ.ಮೀ. ವರೆಗೂ ಈ ಹಾರು ಬೂದಿ ನುಗ್ಗಿ ಹೋಗಿ ಪಸರಿಸುವ ಸಾಮರ್ಥ್ಯ ಹೊ೦ದಿದ್ದು, ಇದರಿಂದ ಪ್ರಮುಖವಾಗಿ ಅದರಲ್ಲಿ ಅಡಗಿರುವಂತಹ ಕಾರ್ಬನ್ ಡೈ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ಇನ್ನಿತರ ತ್ಯಾಜ್ಯ ವಸ್ತುಗಳು ಶ್ವಾಸ ಸಂಬಂಧಿ ರೋಗಸಹಿತ ಮಾರಣಾಂತಿಕವಾಗಿ ಪರಿಣಮಿಸಬಲ್ಲ ಅಸ್ತಮಾಕ್ಕೆ ದಿವ್ಯ ವರವಾಗಲಿದೆ. ಮಿಗಿಲಾಗಿ ಈ ಹಾರು ಬೂದಿಯೊಂದಿಗೆ ಹೊರಹೋಗುವ ನೀರಿನ ಪ್ರಮಾಣವನ್ನು ಪರಿಗಣಿಸಿದರೆ ಈ ಸಮುದ್ರದಿಂದ ಮತ್ಸೊದ್ಯಮದ ಭವಿಷ್ಯವೇ ಅಳಸಿ ಹೋಗಲಿದೆ.

ಕಾರಣ ಸಾಮಾನ್ಯ ನೀರಿನ ಒಟ್ಟು ಪ್ರಮಾಣದಲ್ಲಿ ಇರಬೇಕಾದ ಉಷ್ಣಾಂಶ ಸೇರಿದಂತೆ, ಕಲುಷಿತತೆ, ನೀರಿಗೆ ಸೇರಲಿರುವ ತ್ಯಾಜ್ಯ ನೀರಿನಲ್ಲಿರುವ ಕಾರ್ಬನ್, ಸಲ್ಫರ್ ಹಾಗ್ ಇತ ಮೊನಾಕ್ಸೈಡ್‌ಗಳು ಸಮುದ್ರ ಜೀವಯನ್ನು ಸಾವಿನ೦ಚಿಗೆ ತಳ್ಳುತ್ತದೆ. ದಿನಕ್ಕೆ ಒಂದೂವರೆ ಕೋಟಿ ಗ್ಯಾಲನ್ ನೀರು ಇನ್‌ಟೇಕ್ ನಿಂದ ಒಳ ತೆಗೆದುಕೊಳ್ಳುವುದು ನೇರ ಅಘ್ನಾಶಿನಿ ನದಿಯಿಂದಲೇ. ಅಷ್ಟೇ ಪ್ರಮಾಣದಲ್ಲಿ ಔಟ್ ಲೆಟ್ ಆಗುವುದು ನೇರ ಸಮುದ್ರಕ್ಕೆ. ಆಲ್ಲಿಗೆ ದಿನಕ್ಕೆ ಕೋಟಿ ಗ್ಯಾಲನ್ ಪ್ರಮಾಣದಲ್ಲಿ ನೀರು ಅಘನಾಶಿನಿಯ ಮಡಿಲಿನಿಂದ ಮೊಗೆದು ತೆಗೆಯುತ್ತಿದ್ದರೆ ಪಶ್ಚಿಮ ಘಟ್ಟದಿಂದ ಹರಿದು ಬರುವ ಏಕ ಮಾತ್ರ ತೊರೆಯನ್ನು ಹೊಂದಿರುವ ನದಿ ವರ್ಷ ಕಳೆಯುವಷ್ಟರಲ್ಲಿ ಬರಡಾಗಿ ನಿಂತು ಬಿಡೋದಿಲ್ಲವಾ… ?

ಅಲ್ಲದೇ ಈ ಸ್ಥಾವರದಿಂದ ಹೊರಹೋಗುವ ನೀರಿನ ಉಷ್ಣಾಂಶದ ಕಾರಣ ಸಮುದ್ರ ಡಂಡೆಯಿಂದ ಸುಮಾರು ಹದಿನೆಂಟು ಕೀ.ಮೀ. ದೂರಕ್ಕೆ ಮೀನು ಸಂತತಿ ಸಾಮೂಹಿಕವಾಗಿ ಸರಿದು ಹೋಗಲಿದೆ. ಕಾರಣ ಈಸ್ಥಾವರದಿಂದ ಹೊರಹೋಗುವ ಸ್ಲರಿಯೊಂದಿಗೆ ತ್ಯಾಜ್ಯ ನೀರು ಎಷ್ಟೆ ತಂಪುಕಾರಕಕ್ಕೊಳಪಡಿಸಿದರೂ ಸಧ್ಯ ಕಂಪೆನಿ ಹೇಳಿಕೊಂಡಿರುವಂತೆ ಮೂರು ಕೀಮೀ.ದೂರ ಸಮುದ್ರದಲ್ಲಿ ತ್ಯಾಜ್ಯ ನೀರನ್ನು ಬಿಡುವುದರಿಂದಾಗಿ ಕನಿಷ್ಟ ತಾಪಮಾನಕ್ಕೆ ನೀರನ್ನು ಶೀತಗೊಳಿಸುವುದು ಸಾಧ್ಯವಿಲ್ಲವಾಗಿದೆ. ಒಮ್ಮೆ ಸ್ಥಾವರದಿಂದ ಹೊರಕ್ಕೆ ಹರಿಯುವ ಮಲೀನ ನೀರು ಅಷ್ಟೆ ಪ್ರಮಾಣದಲ್ಲಿ ಉಷ್ಣಾಂಶವನ್ನು ಹೊಂದಿರುವುದರಿಂದ ಅದು ಶೀತಲವಾಗಿ ಮಾಮೂಲಿನ ಸಮುದ್ರ ಉಷ್ಣಾಂಶಕ್ಕೆ ಬರಲು ಕನಿಷ್ಟ ಅಂತರ ಎಂಟು ಕೀ.ಮಿ. ಗಳಾದರೂ ಬೇಕು. ಅದೂ ಕೂಡಾ ನಿಯಂತ್ರಿತ ಒತ್ತಡ ಮತ್ತು ನೈಸರ್ಗಿಕ ಇಳಿಜಾರು ಒತ್ತಡದಲ್ಲಿ ಮಲೀನ ನೀರು ಸರಾಗವಾಗಿ ಯಾವುದೇ ಬಾಹ್ಯ ಒತ್ತಡವಿಲ್ಲದೇ ಹರಿದಲ್ಲಿ ಮಾತ್ರ.

ಆದರೆ ಹೊರಹೋಗುವ ನೀರಿನ ಪ್ರಮಾಣ ಹೆಚ್ಚಾಗಿಯೂ ಇರುವುದರಿಂದ, ಸಾಗುವ ಕನಿಷ್ಟ ಅಂತರದಿಂದಾಗಿ, ನೀರಿನ ಮೇಲಿನ ಒತ್ತಡ ಹೆಚ್ಚಾಗಿ, ನೀರು ಮತ್ತೆ ಇದ್ದ ಉಷ್ಣಾಂಶವನ್ನು ಕಾಯ್ದುಕೊಂಡು ಬಿಡುತ್ತದೆ. ಹೀಗಾಗಿ ಸ್ಲರಿ, ತಾಜ್ಯ ನೀರು ಹಾಗು ಇನ್ನುಳಿದ ಆಕ್ಸೈಡ್ ಭರಿತ ಮಲೀನ ಪದಾರ್ಥಗಳು ಸಮುದ್ರಕ್ಕೆ ನೇರಾ ನೇರ ಸೇರಿಬಿಡುವುದರಿಂದಾಗಿ ಸಂಪೂಣ೯ ಮತ್ಸೊದ್ಯಮ ಕುಸಿದು ಹೋಗಲಿದೆ. ಅಲ್ಲದೆ ಇಲ್ಲಿನ ಪ್ರಮುಖ ಕೈಗಾರಿಕೆಯಾಗಿರುವ ಚಿಪ್ಪು ಉದ್ಯಮಕ್ಕೆ ನೀರಿನಲ್ಲಿ ಕೊಂಚ ಮಾತ್ರದ ವ್ಯತ್ಯಾಸವೂ ಮಾರಾಣಾಂತಿಕವಾಗಿ ಪರಿಣಮಿಸುವುದರಿಂದ ಅದರ ಭವಿಷ್ಯ ಎಲ್ಲದರಿಗಿಂತಲೂ ಮೊದಲು ಆಘಾತಕ್ಕೊಳಗಾಗಲಿದೆ.

ಈಗಾಗಲೇ ಭಾರತದುದ್ದಕ್ಕೂ ಭರಿಸಲಾಗದೇ ಉಳಿದ ಹಾರು ಬೂದಿಯನ್ನು ೬೫೦೦೦ ಎಕರೆ ಪ್ರದೇಶದಲ್ಲಿ ಸಂಗ್ರಹಿಸಿ ಹೂಳಿಟ್ಟಿದ್ದಾರೆ. ಅವುಗಳನ್ನು ಹಾರು ಬೂದಿ ಮಡುಗಳೆಂದೇ ಕರೆಯಲಾಗುತ್ತಿದೆ. ಈ ಹಾರು ಬೂದಿಯ ಬಂಕರುಗಳ ಅಗಾಧತೆಯ ನಿರ್ವಹಣೆ ಮತ್ತು ನಿರ್ಮಿಸುವ ವೆಚ್ಚವೇ ಶೇ.೧೭ಕ್ಕಿಂತಲೂ ಹೆಚ್ಚು. ಪ್ರಸ್ತುತ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ವಾರ್ಷಿಕ ೭೭೦೦೦ ಲಕ್ಷ ಟನ್ ಹಾರು ಬೂದಿಯಲ್ಲಿ ಈವರೆಗೆ ಸಾರ್ವತ್ರಿಕವಾಗಿ, ಸರಕಾರ ಮುತುವರ್ಜಿವಹಿಸಿ ಉಪಯೋಗಿಸುವಂತೆ ಮಾಡಲು ಸಾಧ್ಯವಾಗಿದ್ದು ಕೇವಲ ೩.೮ ಶೇ. ಮಾತ್ರ. ಉಳಿದಂತೆ ಪ್ರತಿದಿನವೂ ಸಂಗ್ರಹವಾಗುತ್ತಿರುವ ಈ ಬೂದಿಯನ್ನು ಉಪಯೋಗಿಸಲಾರದ ಜಾಗವನ್ನು ಗುರುತಿಸಿ ಹುಗಿಯಲಾಗುತ್ತಿದೆ. ಅಲ್ಲಿಗೆ ಅಷ್ಟು ಜಾಗವನ್ನು ನಿರುಪಯುಕ್ತಗೊಳಿಸಿದರೆ ಭವಿಷ್ಯತ್ತಿನಲ್ಲಿ ಅದು ಬಂಜರು ನೆಲವಾಗಿ ಪರಿವರ್ತಿತವಾಗುತ್ತದೆ. ಒಮ್ಮೆ ಹೀಗೆ ಗುರುತಿಸಿ ಹುಗಿಯಲಾದ ಜಾಗವನ್ನು ಭವಿಷ್ಯತ್ತಿನಲ್ಲಿ ಯಾವುದಕ್ಕೂ ಉಪಯೋಗಿಸದಂತೆ ನೋಡಿಕೊಳ್ಳುಲಾಗುತ್ತದೆ. ಯಾಕೆಂದರೆ ಈ ಹಾರು ಬೂದಿಯಲ್ಲಿರುವ ವಿಷಕಾರಿ ಪದಾರ್ಥಗಳ ಸಂಯೋಜನೆಯಾದರೂ ಎಂಥದ್ದು…? ಅದು ಬರೀ ಅಕ್ಸೈಡ್‌ಗಳ ಕೊಂಪೆ. ಅದೊಮ್ಮೆ ನೆಲ ಸೇರಿದರೆ ಇನ್ನು ಬೆಳೆ ಸಾಯಲಿ, ಹುಲ್ಲುಗರಿಕೆಯೂ ಬೆಳೆಯಲಾರದು.

ಅಂದಹಾಗೆ ಹೀಗೆ ದಿನವಹಿ ಲಕ್ಷಗಟ್ಟಲೇ ಟನ್ ಹಾರು ಬೂದಿಯ ಉತ್ಪಾದನೆಯಾಗುತ್ತದಲ್ಲ. ಅದು ಸುಡುವ ಕಲ್ಲಿದ್ದಲಿನ ಪ್ರಮಾಣದ ಶೇ ೧೮ ರಿ೦ದ ಶೇ. ೨೩ ಭಾಗ ಮಾತ್ರವೇ. ಇದು ಎಲ್ಲಾ ಸ್ಥಾವರಗಳ ಸರಾಸರಿ ಶೇಕಡಾವಾರು. ಯಾಕೆಂದರೆ ರಾಯಚೂರಿನ ಪ್ಲಾಂಟ್ ಒ೦ದರಲ್ಲೇ ಶೇ.೩೦ ಕ್ಕಿಂತಲೂ ಹೆಚ್ಚು ಹಾರು ಬೂದಿ ಪರಿಸರವನ್ನು ನೇರವಾಗಿ ಸೇರುತ್ತದೆ. ಕೆಲವು ಕಡೆಗಳಲ್ಲಿ ನಿಯಂತ್ರಣ ಸಾಧ್ಯವಾಗಿದೆಯಾದರೂ ಕನಿಷ್ಟ ಪ್ರಮಾಣವನ್ನು ಪರಿಸರ ಹೊಂದುವುದು ಅನಿವಾರ್ಯವಾಗಿದೆ. ಇಷ್ಟು ಪ್ರಮಾಣದಲ್ಲಿ ಹಾರು ಬೂದಿ ಉತ್ಪಾದನೆಯಾಗಬೇಕಾದರೆ ಅದಾವ ಪರಿಯಲ್ಲಿ ಕಲಿದ್ದಲು ಸುಡಬೇಕಾದೀತು. ಈಗ ಪ್ರಕಟವಾಗಿರುವ ಮಾಹಿತಿಯಂತೆ ತದಡಿಯಲ್ಲೇ ದಿನಕ್ಕೆ ೪ ಲಕ್ಷ ಟನ್ ಕಲ್ಲಿದ್ದಲು ಸುಡಲಾಗುತ್ತದೆ. ಇನ್ನು ಇಷ್ಟು ಕಲ್ಲಿದ್ದಲು ಯಾವಾಗಲೂ ಲಭ್ಯವಿರುವಂತೆ ಮಾಡಿಕೊಳ್ಳಲು ಯುದ್ಧೋಪಾದಿಯಲ್ಲಿ ದಾಸ್ತಾನು ಮಾಡಬೇಕಲ್ಲ.

ಅದರ ಸಾರಿಗೆ, ರೈಲು ಸಾಗಾಟ, ಅದರ ರಸ್ತೆಯ ಇಕ್ಕೆಲಗಳಲ್ಲಿನ ಧೂಳು, ಜನ ಜೀವನ ಮೇಲೆ ಎರಗುವ ಕಲ್ಲಿದ್ದಲು ಹುಡಿ, ಕಪ್ಪು ಅಡರಿಕೊಂಡು ಎಲ್ಲೆಂದರಲ್ಲಿ ಧೂಳೆದ್ದು ಹೋಗುವ ಪರಿಸರ. ಮಳೆಯಲ್ಲೂ ಸುರಿವ ಕಪ್ಪು ರಾಡಿ, ಎಲ್ಲೆಲೂ ಕಪ್ಪು ಕಪ್ಪಾಗಿ ರಾಚುವ ಕೆಸರಾಗಿ ಅಲ್ಲಲ್ಲೆ ಗಟ್ಟಿಗೊಳ್ಳುವ, ನೀರಿನ ಚಲನೆಗೆ ಅಡ್ಡಿಯಾಗಿ ಇನ್ನಿಲ್ಲದಂತೆ ಕೊಂಪೆಯನ್ನಾಗಿಸುವ ಮಲಿನತೆ ಒಂದೇ ಎರಡೆ… ಈಗಾಗಲೇ ಉತ್ತರ ಕನ್ನಡದ ಬೇಲೆಕೆರಿಗೆ ಹಾಗು ಕಾರವಾರ ಬಂದರಿನಿಂದ ಮ್ಯಾಂಗನೀಸ್ ಅದಿರು ಸಾಗಾಟದ ಭಾರಕ್ಕೆ ತುತ್ತಾಗಿರುವ ಪರಿಸರ, ಸಾರಿಗೆ ಸಂಪರ್ಕ, ರಸ್ತೆ ಅಫಘಾತ, ಅಸ್ತವ್ಯಸ್ತಗೊಳುತ್ತಿರುವ ಜನಜೀವನ ಸುಧಾರಿಸಿಕೊಳ್ಳಲು ಕನಿಷ್ಟ ಅರ್ಧ ದಶಕವಾದರೂ ಬೇಕು. ಅದೂ ಈ ಕೂಡಲೇ ಮ್ಯಾಂಗನೀಸ್ ದಾಳಿ ತಪ್ಪಿಸಿದರೆ. ಹೀಗಿದ್ದಾಗ ಈ ಮ್ಯಾಂಗನೀಸ್‌ಗೆ ಹೋಲಿಸಿದರೆ ಇಲ್ಲಿ ಬರಲಿರೋ ಕಲ್ಲಿದ್ದಲಿನ ಅಗಾಧತೆ ಬೆಚ್ಚಿ ಬೀಳಿಸುವಂತಹದ್ದು. ಅಕ್ಷರಶ: ಅನೆ ಇರುವೆ ಹೋಲಿಕೆ ಇದು.

ಸಮುದ್ರ ಸುತ್ತಮುತ್ತಲೂ ಇನ್ನಿಲ್ಲದಂತೆ ಏರುವ ಉಷ್ಣತೆಯ ಪರಿಣಾಮವಾಗಿ ಸಮುದ್ರ ತಟದಿಂದ ಕನಿಷ್ಟ ಐದಾರು ಕೀ.ಮೀ. ವರೆಗೆ ಸಮುದ್ರ ಜೀವಿಗಳು ಸರಿದು ಹೋಗುವ ಕೆಲವೊಂದು ಅಪರೂಪದ ಜೀವಿಗಳು ಶಾಶ್ವತವಾಗಿ ದಂಡೆಯನ್ನೇ ತೊರೆದು ವಲಸೆ ಹೋರಟುಹೋಗುವ ಸಂದರ್ಭ ಸ್ಥಾವರ ಅರ೦ಭವಾದ ಒಂದು ವರ್ಷದ ಅವಧಿಯಲ್ಲಿ ನಡೆದು ಹೋಗುತ್ತದೆ. ಹಾಗಾದಲ್ಲಿ ಜಾಗತಿಕವಾಗಿ ಜೀವ ವೈವಿಧ್ಯತೆಯ ಪಟ್ಟಿಯಲ್ಲಿ ಹೆಸರು ಪಡೆದಿರುವ ಅಘನಾಶಿನಿಕೊಳ್ಳ ಮತ್ತು ಹರಿವಿನ ಪ್ರದೇಶದಲ್ಲಿ ಅಕ್ಷರಶ: ಜೀವಿಗಳೊಂದಿಗೆ ಒಂದು ಆಯಕಟ್ಟಿನ ಮೀನುಗಾರ ಸಂಸ್ಕೃತಿಯೇ ಈ ಭೂಮಿಯ ಮುಖದಿಂದ ಒರೆಸಿ ಹಾಕಿದಂತಾಗುತ್ತದೆ.

ಸರಕಾರ ತದಡಿ ಪ್ರದೇಶವನ್ನು ” ಹಾಟ್ ಸ್ಪಾಟ್ ” ಎಂದು ೨೦೦೩ ರಲ್ಲಿ ಪ್ರಕಟಿಸಿದ್ಡು ಇದನ್ನು ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕಾಗುತ್ತದೆ. ಈ ಮೊದಲೇ ಜುಲೈ ೨೩. ೨೦೦೫ ರಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸುವಂತೆ ಕೂಡಾ ಅದೇಶ ಹೊರಡಿಸಲಾಗಿತ್ತು. ಆದರೆ ಇವೆಲ್ಲವನ್ನೂ ಕಡೆಗಣಿಸಿ ಈಗ ತುರಾತುರಿಯಲ್ಲಿ ಈ ಸ್ಥಾವರವನ್ನು ಇಲ್ಲಿ ಸ್ಥಾಪಿಸಲು ಜಿಲ್ಲಾಡಳಿತ ಹೆಣಗುತ್ತಿದೆ. ಈ ಅಘನಾಶಿನಿ ಮುಖಜ ಭೂಮಿಯಿಂದ ಕನಿಷ್ಟ ದಿನವೊಂದಕ್ಕೆ ಎತ್ತಿಕೊಳ್ಳಲಾಗುವ ನೀರಿನ ಪ್ರಮಾಣವೇ ಒಂದೂವರೆ ಕೋಟಿ ಲೀಟರಗಳಷ್ಟು. ಅಷ್ಟು ನೀರನ್ನು ಉಷ್ಣಮಯವಾಗಿಸಿ ವಾಪಸ್ಸು ಅಘನಾಶಿನಿ ಮಡಿಲಿಗೆ ಸುರಿದರೆ ಅಘನಾಶಿನಿಯ ಸೂಕ್ಷ್ಮತೆಯ ಕಥೆ ಏನಾದೀತು…? ಸಧ್ಯಕ್ಕೆ ಇದಕ್ಕೆ ಯಾರೂ ಉತ್ತರಿಸುತ್ತಿಲ್ಲ. ಅಷ್ಟೇಕೆ ಒಂದು ವರ್ಷಕ್ಕೆ ಈ ಕಲ್ಲಿದ್ದಲು ಸ್ಥಾವರ ಸುಡಲಿರುವ ಕಲ್ಲಿಡ್ದಲು ಕನಿಷ್ಟ ೧೫೦ ಲಕ್ಷ ಟನ್. ಇದರ ಇಪ್ಪತ್ತು ಶೇ. ಹಾರು ಬೂದಿಯಾಗಿ ಸುತ್ತಲಿನ ೩೦ ಕಿ.ಮೀ. ಭಾಗವನ್ನು ಆವವರಿಸಿಕೊಳ್ಳಲಿದೆ. ಅಂದರೆ ತಿಂಗಳಿಗೆ ಸರಿ ಸುಮಾರು ಹನ್ನೆರಡು ಲಕ್ಷ ಟನ್ ಹಾರು ಬೂದಿಯನ್ನು ಹೊರಹಾಕುತ್ತದಲ್ಲ ಅದರ ಸಂಗ್ರಹಣೆ ಮತ್ತು ಕಲ್ಲಿದ್ದಲಿನ ದಾಸ್ತಾನಿಗೆ ಬೇಕಾಗುವ ಸ್ಥಳಕ್ಕಾಗಿ ಬೇಕಾಗುವ ಉಳಿದ ಎರಡೂವರೆ ಸಾವಿರ ಎಕರೆ ಪ್ರದೇಶಕ್ಕಾಗಿ ಇಲಾಖೆ ಯಾರ್‍ಯಾರನ್ನು ಒಕ್ಕಲೆಬ್ಬಿಸಲಿದೆಯೋ ದೇವರಿಗೂ ಗೊತ್ತಿಲ್ಲ. ಉಳಿದಂತೆ ಯಾರ ಬಳಿಯು ಉತ್ತರ ಕೂಡಾ ಇಲ್ಲ. ಅಸಲಿಗೆ ಇಲ್ಲಿಗೆ ಬರುತ್ತಿರುವ ಯಾವ ಅಧಿಕಾರಿಗೂ ತಾಂತ್ರಿಕವಾಗಿ ವಿವರಿಸಲು ಗೊತ್ತಾಗುತ್ತಿಲ್ಲ. ಕಾರಣ ಇಲ್ಲಿಗೆ ಇಲ್ಲಿಯವರಗೂ ಭೇಟಿ ನೀಡಿರುವ ಅಧಿಕಾರಗಳಿಗೆ ಒಂದೋ ಥರ್ಮಲ್ ಪ್ಲಾಂಟಿನ ಬಗ್ಗೆ ವೈಜ್ಞಾನಿಕ ಸತ್ಯಗಳು ನಿಖವಾಗಿ ಗೊಟ್ತಿಲ್ಲದಿರಬಹುದು ಅಥವಾ ಅನಿವಾರ್ಯವಾಗಿ ಸತ್ಯಸಂಗತಿಗಳನ್ನು ಮರೆಮಾಚುತ್ತಿರಬಹುದು.

ಇದಲ್ಲದೇ ಇದೇ ಹಾರು ಬೂದಿಯ ಮರುಪಯೋಗಕ್ಕಾಗಿ ಸ್ಥಾಪನೆಗೊಳ್ಳಲಿರುವ ಕೈಗಾರಿಕೆಗಳಿಗಾಗೇ ಕನಿಷ್ಠ ನಾಲ್ಕೂವರೆ ಸಾವಿರ ಎಕರೆ ಪ್ರದೇಶ ಬೇಕಾಗುತ್ತದೆ. ಅದೆಲ್ಲಕ್ಕಿಂತಲೂ ಈಗಾಗಲೇ ಸರಕಾರದ ವಶದಲ್ಲಿರುವ ೧೮೪೮ ಎಕರೆ ಭೂಮಿಯಲ್ಲಿ ೪೦೦ ಎಕರೆ ಸಿ.ಆರ್.ಝೆಡ್. ವ್ಯಾಪ್ತಿಯ ಕಾನೂನಿಗೆ ಒಳಪಡುವುದರಿಂದಾಗಿ ಅದನ್ನು ಸರಕಾರ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳಿಗೂ ಉಪಯೋಗಿಸುವ ಹಕ್ಕಿಲ್ಲ ಎಂದು ಸುಪ್ರಿಂ ಕೋರ್ಟ್ ನೀಡಿರುವ ಆಜ್ಞೆಯಿದೆಯಲ್ಲ. ಅಲ್ಲಿಗೆ ಸರಕಾರದ ಬಳಿ ಇರುವ ಭೂಮಿಯ ವ್ಯಾಪ್ತಿ ಕೇವಲ ೧೪೦೦ ಎಕರೆ ಮಾತ್ರ. ಒಟ್ಟಾರೆ ದಾಸ್ತಾನು, ಹಾರು ಬೂದಿ ಮರು ಉಪಯೋಗಿ ಇಂಡಸ್ಟ್ರೀಯಲ್ ಎಸ್ಟೇಟು, ಈಗ ಸ್ಥಾಪಿಸಬೇಕೆಂದಿರುವ ಸ್ಥಾವರ ಎಲ್ಲ ಸೇರಿದರೆ ಒಟ್ಟು ಭೂಮಿಯ ಪ್ರಮಾಣ ೮೪೫೦ ಎಕರೆ ಪ್ರದೇಶ ಬೇಕಾಗುತ್ತದೆ. ಅಲ್ಲಿಗೆ ಅಳಿದುಳಿದ ನೆಲಕ್ಕಾಗಿ ಒಕ್ಕಲೆಬ್ಬಿಸಲಿರುವ ಕುಂಟುಂಬಗಳ ಸಂಖ್ಯೆ ಕನಿಷ್ಟ ೧೪೭೪೦. ಇವರೆಲ್ಲರನ್ನೂ ಎಲ್ಲಿ ಎಂದು ಮರುಸ್ಥಾಪನೆ ಮಾಡುತ್ತಾರೆ. ಜೊತೆಗೆ ಅದಕ್ಕಾಗಿ ಮತ್ತೆ ಜಾಗ ಹುಡುಕಬೇಕಲ್ಲ. ಅವರು ತಮ್ಮೊಡನೆ ಉಳಿಸಿಕೊ೦ಡಿರಬಹುದಾದ ವಸ್ತುಗಳ ನೆಂಟಾದರೂ ಎಂತಹದ್ದು. ಕುರಿ, ಕೋಳಿ, ತೆಂಗು, ಮೀನು, ರಂಪಣಿ, ದೋಣಿ, ಹಾಯಿಗಳು, ಚಿಪ್ಪುಗಳು, ಮನೆ ಮಾರು, ಆಸ್ತಿ, ಕಟ್ಟಿಗೆ, ವಾಹನಗಳು ಇತ್ಯಾದಿ ಯಾವ್ಯಾವುದನ್ನು ನಿರ್ಧರಿಸಿ ಕಂಪನ್ಸೆಟ್ ಕೊಡಲಿದೆ. ಯಾರಿಗೂ ಗೊತ್ತಿಲ್ಲ.

ಅದಕ್ಕಾಗಿ ಇನ್ನು ಈಗ ಗುರುತಿಸಿರುವ ತದಡಿ, ಬೇಲೆಕಾನ, ತೊರ್ಕೆ ಸಮುದ್ರ ತೀರಗಳು ಅಪ್ಪಟ ಮಾರಿಶಶ್‌ನಷ್ಟು ಸುಂದರ ಹಾಗು ಸ್ವಚ್ಛ. ತೀರ ಅಷ್ಟು ಅದ್ಭುತ ಬೀಚನ್ನು ಇದೇ ಜಿಲ್ಲೆಯಲ್ಲಿದ್ಡೂ ನೋಡದಿರುವವರು ಬಹುಶ ಶೇ.೯೦. ಈಗ ಸ್ಥಾವರದ ರಾಡಿ ಮತ್ತು ಸ್ಲರಿಯ ಶೇಷ ಪದಾರ್ಥವನ್ನು ಅಲ್ಲಿಗೆ ಸಾಗಿಸಲಿದೆ. ಅದರಷ್ಟು ರಾಡಿ ಮತ್ತು ಗಲೀಜು ಬಹುಶ: ಇನ್ನೊಂದಿರಲಿಕ್ಕಿಲ್ಲ. ಬೇಲೆ ಕಾನ್ ಬೀಚಿನಲ್ಲಿ ಒಂದು ಕ್ಷಣ ನಿಂತುಕೊಂಡಲ್ಲಿ ಎಲ್ಲ ಮರೆತು ಮಾರಿಶಶ್ ಎಂದೆನ್ನಿಸುವಷ್ಟು ನೈಜ ಸಮುದ್ರ ನಿಮ್ಮ ಎದುರಿಗಿರುತ್ತದೆ. ಆ ತೀರ ಇನು ಮೇಲೆ ಈ ಕೊಳೆಯ ದಾಸ್ತಾನಿಗೆ ಗೋಡೆಕಟ್ಟಿಸಿಕೊಂಡು ಕಣ್ಮರೆಯಾಗಲಿದೆ.

ಇನ್ನು ಇದಕ್ಕಾಗಿ ಕಾಡಿನ ನಾಶ ಹೇಗಾಗುತ್ತದೆ… ? ಇದಕ್ಕಾಗಿ ಮತ್ತೆ ಕಾಡು ಕಡಿತ ನಡೆಯಲಿದೆಯಾ…? ಆಫ್ ಕೊರ್ಸ್. ಈ ೪೦೦೦ ಮೆ.ವ್ಯಾಟ್. ವಿದ್ಯುತ್ ಉತ್ಪಾದನೆಗೆ ಬೇಕಾಗುವ ಹೈಟೆನ್ಶನ್ ಲೈನ್ ದಾಟಿಸಲು ಕಾಡು ಕಡಿತಕ್ಕೊಳಗಾಗುವುದು ನಿಸ್ಸಂಶಯ. ಕನಿಷ್ಟ ಎರಡು ಸಾವಿರ ಎಕರೆ ಕಾಡು ಸವರಿ ಹಾಕಲಾಗುತ್ತದೆ. ಜೊತೆಗೆ ಕೇಂದ್ರದಿಂದ ೩೦.ಕಿ.ಮಿ. ಸುತ್ತ ಹಾರು ಬೂದಿ ಪಸರಿಸಿಕೊಳ್ಳುವ ಕಾರಣ ಸುತ್ತಲಿನ ಸಹ್ಯಾದ್ರಿಯ ಪರ್ವತ ಶ್ರೇಣಿಯಲ್ಲಿ ಇರುವ ದಟ್ಟ ಅರಣ್ಯದ ಮೇಲೆ ಈ ಬೂದಿ ಕುಳಿತುಕೊಳ್ಳುವುದರೊಂದಿಗೆ ಕಾಡಿನಿಂದ ಕಾಡು ಉತ್ಪತ್ತಿಯಾಗುವ ನೈಸರ್ಗಿಕ ಕ್ರಿಯೆಗೆ ತಡೆ ಬೀಳಲಿದೆ. ಕಾಡಿನ ಸರ್ವ ಕಾರ್ಯವೂ ನಡೆಯುವುದು ಸೂರ್ಯನ ಬೆಳಕು ಮತ್ತು ಎಲೆಗಳಲ್ಲಿ ನಡೆಯುವ ಸಂಶ್ಲೇಷಣಾ ಕ್ರಿಯೆ ಮೂಲಕ. ಈ ಹಾರು ಬೂದಿ ಎಲೆಗಳ ಮೇಲೆ ಕಾ೦ಡಗಳ ಮೇಲೆ ಕುಳಿತುಕೊಳ್ಳುವುದರೊಂದಿಗೆ ಜೈವಿಕ ಕ್ರಿಯೆಗೆ ಬೇಕಾಗುವ ಸೂರ್ಯ ನೇರ ಶಾಖವನ್ನು ಹೀರಿಕೊಳ್ಳುವಲ್ಲಿ ಅಸಫಲವಾಗುವಂತೆ ಅದು ನೋಡಿಕೊಳ್ಳುತ್ತದೆ. ಇದರಿಂದಾಗಿ ವರ್ಷಾನುಗಟ್ಟಲೇ ಸೂಯ೯ನ ಶಾಖ ಮತ್ತು ಕಿರಣಗಳಲ್ಲಿ ಶಕ್ತಿಯನ್ನು ಹೀರಿಕೊಳ್ಳಲು ಸಸ್ಯ ಸಂಪತ್ತು ಅಸಮರ್ಥವಾಗುವುದರೊಂದಿಗೆ ಅದರ ಜೈವಿಕ ಚಕ್ರ ವಿಫಲಗೊಳ್ಳಲಾರಂಭಿಸುತ್ತದೆ.

ಹೀಗೆ ಸತತ ವಿಫಲತೆಯಿಂದ ಕಾಡು ತಾನೇ ತಾನಾಗಿ ತನ್ನ ಸುತ್ತ, ಮತ್ತೆ ಮತ್ತೆ ಸೃಷ್ಟಿಸುವ ಕ್ರಿಯೆಗೆ ನೇರ ಆಘಾತ ಉಂಟುಮಾಡಿಕೊಳ್ಳಲಿದೆ. ತನ್ನ ನೈಜ ಶಕ್ತಿಯನ್ನು ಕಳೆದುಕೊಳ್ಳಲಿರುವ ಅರಣ್ಯ, ನಂಪುಸಕತೆಯನ್ನು ಕ್ರಮೇಣ ಮೈಗೂಡಿಸಿಕೊಳ್ಳುತ್ತದೆ. ಹೀಗೆ ನಿಸರ್ಗ ನಂಪುಸಕತೆಗೆ ಒಳಗಾಗುವ ಕಾಡಿನ ಸ್ಥಳ ಭವಿಷ್ಯತ್ತಿನ್ನಲ್ಲಿ ಯಾವತ್ತೂ ಚಿಗುರುವ ಲಕ್ಷಣವನ್ನೇ ಕಳೆದುಕೊಳ್ಳುತ್ತದೆ. ಇದರಿಂದಾಗಿ ಒಂದು ದಶಕದ ಅವಧಿಯಲ್ಲಿ ಹೊಸದಾಗಿ ಉತ್ಪನ್ನವಾಗಬೇಕಾದ ಅರಣ್ಯ ಬೆಳವಣಿಗೆಯಾಗದೇ ಕ್ರಮೇಣ ಅಲ್ಲೆಲ್ಲಾ ಬಂಜೆತನ ಸೃಷ್ಟಿಯಾಗುತ್ತದೆ. ಸಂಪೂರ್ಣ ಸಹ್ಯಾದ್ರಿ ಬೋಳು ಗುಡ್ಡಗಳಾಗಿ ನಿಲ್ಲಲಿವೆ. ಇಲ್ಲಿನ ಅರಣ್ಯ ಪ್ರದೇಶ ಸುತ್ತಲೂ ಬೆಟ್ಟಗಳಿಂದ ಸುತ್ತುವರಿದ ಪರಿಣಾಮ ಈ ಹಾರು ಬೂದಿಯ ಬಾಯಿಗೆ ಸಿಕ್ಕುವ ಸುತ್ತಮುತ್ತಲಿನ ಕಾಡು ಯಾವುದೇ ಕಾರಣಕ್ಕೂ ಸ್ವಚ್ಛವಾಗುಳಿಯಲಾರದು.

ಬೆಟ್ಟಗಳನ್ನು ದಾಟಿ ಹೊರಗೂ ಈ ಬೂದಿ ಪಸರಿಸಲಾರದು. ಏನಿದ್ದರೂ ಈ ೩೦ ಕಿ.ಮೀ. ವೃತ್ತದೊಳಗೇ ಅದು ಸಂಗ್ರಹವಾಗುತ್ತದೆ. ವರ್ಷಪೂರ್ತಿ ಬೂದಿಯ ಹೊಡೆತಕ್ಕೆ ನಲುಗುವ ಅರಣ್ಯ ಒಮ್ಮೆಲೆ ಇಲ್ಲಿನ ಮಳೆಗೆ ಸಿಕ್ಕು ಎಲ್ಲೆಡೆಯಿಂದ ಹರಿದು ಕೊಚ್ಚಿಕೊಂಡು ಹೊರಡುವ ಭರದಲ್ಲಿ ಅಲ್ಲಲ್ಲೇ ಗಡ್ಡೆ ಕಟ್ಟಿಕೊಂಡು ಸಂಪೂರ್ಣ ಅರಣ್ಯದ ಮೇಲ್ಭಾಗದಲ್ಲಿ ಬೂದಿಯ ಮೇಲ್ಪದರವೇ ನಿರ್ಮಾಣಗೊಂದು ಸಾವಯವ ಮಣ್ಣಿನ ಫಲವತ್ತತೆ ಮತ್ತು ವರ್ಷದ ಜೈವಿಕ ಚಕ್ರದ ಬದಲಾವಣೆಯಿಂದ ಭೂಮಿಯಿಂದ ಹೊರಬರಬೇಕಿದ್ದ ಚಿಗುರುಗಳು ಅಲ್ಲೇ ಮುರುಟಿ ಹೋಗುತ್ತವೆ. ಅದರಲ್ಲೂ ಈಗ ಈ ಮಲೆನಾಡಿನಲ್ಲಿ ಇಂಗು ಗುಂಡಿಗಳ ತೋಡುವಿಕೆ ಸಮರೋಪಾದಿಯಲ್ಲಿ ನಡೆದಿದ್ದು ಎಲ್ಲಾ ಬೂದಿ ನೀರಿನೊಂದಿಗೆ ಕರಗಿ ನೆಲದಲ್ಲೂ ಅಕ್ಸೈಡ್‌ಗಳ ಸಾರವನ್ನೇ ಇಂಗಿಸಿ ಬೇರುಗಳ ಬುಡಕ್ಕೂ ನುಗ್ಗುತ್ತದೆ. ಅಲ್ಲಿಗೆ ಭೂ ಮುಖದಿಂದ ಕಾಡಿನ ಒಂದು ಭಾಗ ಸ್ವಚ್ಛವಾಗಿ ಸವರಿ ಹಾಕಿದಂತಾಗುತ್ತದೆ.

ಈ ನದಿಯಲ್ಲಿ ನಡೆಯುವಷ್ಟು ಅದ್ಭುತ ಮೀನುಗಾರಿಕೆ ಕೃಷಿ, ಗಣಿಗಾರಿಕೆ, ವ್ಯವಸಾಯ, ಬಂದರು ಕೆಲಸ, ಇತರ ನದಿ ನೀರು ಅವಲಂಬಿತ ಕಾರ್ಯಗಳು, ಮೀನುಗಳ ಸಂತಾನೋತ್ಪತ್ತಿ, ಜನಜೀವನದ ಪ್ರಮುಖ ವ್ಯವಹಾರ ಹಾಗು ಜೀವನೋಪಾಯದ ಮೂಲವಾಗಿರುವ ಕೃತಕ ಮೀನು ಕೃಷಿಯಾದ “ಹ್ಯಾಚರಿ” ಇತ್ಯಾದಿ ಸೇರಿದಂತೆ ಬರೀ ನೀರ ಮೇಲೆ ನೆಲದ ಬೆಂಬಲವಿಲ್ಲದೇ ಬೆಳವಣಿಗೆಯಾಗುತ್ತಿರುವ ವಿಶಿಷ್ಟ ತಳಿಯ ಭತ್ತಗಳು… ಸರಿಸುಮಾರು ನೂರಕ್ಕೂ ಮೇಲ್ಪಟ್ಟು ವರ್ಗಗಳನ್ನು ಹೊ೦ದಿರುವ ನದಿಯ ಜೀವ ಸಂಕುಲನ, ಇವೆಲ್ಲಕ್ಕೂ ಕಳಸವಿಟ್ಟಂತೆ ಇದೆಲ್ಲವನ್ನೂ ನಂಬಿಕೊಂಡು ಶತಮಾನಗಳಿಂದ ಇಲ್ಲಿ ಬೀಡು ಬಿಟ್ಟಿರುವ ಬುಡಕಟ್ಟು ಮತ್ತು ಇತರೆ ಮೀನುಗಾರರ ಕುಟುಂಬಗಳು ಜೀವ ಬೇಕಾದರೂ ಬಿಟ್ಟಾರು. ಅಘನಾಶಿಯನ್ನು ಬಿಡಲಿಕ್ಕಿಲ್ಲ ಎಂಬ ಪರಿಸ್ಥಿತಿಯೇ ಇದರ ಹೆಚ್ಚುಗಾರಿಕೆ.

ಇದರಲ್ಲಿರುವ ಜೀವ ಸಂಕುಲದಲ್ಲಿ ಮತ್ಸ್ಯ ವೈವಿಧ್ಯಗಳಾದರೂ ಎಂತಹವು ನೋಡಿ… ಕುರುಡೆ, ಕಾಗಾಳ್ಸಿ, ಬಣಗು, ಗೋಲಿ, ರಾಂಸಿ, ಏರಿ, ಕೆಂಸ, ಬೈಗೇ, ನೋಗಲ್ ಕಾಂಡಿ, ಶಾಡೇ, ಸಿಂಗಟಿ, ಉಡಾಲಿ, ಉಂಡಾರಿ, ಗೊಂಕ, ಬಿಂಗಲಿ, ಕಡಬಾಳೆ, ಕಂಡ್ಲಿ, ಸಳಕ, ಮಡ್ಲೆ, ಕೊಳೆ ಸೆಟ್ಲಿ, ನುಂಗು, ಬೊಂಡೆಕಾನ, ಅಡ್ಡ ಬಳಚು, ನೀಲಿ ಕಲಗ, ಒಣ ಕಾ೦ಡಿ, ಬುರಂಟೆ, ಕರಸಿ, ಬಾಳಿ, ವಡತಿ, ಸೊಗ, ಕೆಂಕ, ನುಚಿಕೆ, ಇವೆಲ್ಲಾ ಈಗ ಸದ್ಯ ಅಘನಾಶಿನಿಯ ತಟದಲ್ಲಿ ಹೇರಳವಾಗಿ ಲಭ್ಯವಾಗುತ್ತಿದ್ಡರೆ, ಈಗಾಗಲೇ ಈ ನದಿಯ ಮುಖಜ ಭೂಮಿಯಲ್ಲಿ ಅಲ್ಲೊಂದು ಇಲ್ಲೊಂದು ಎಂದೆಣಿಸುವ ಸರಾಸರಿಗೆ ಇಳಿದಿರುವ ಮೀನುಗಳ ಜಾತಿ ಎಂದರೆ ಕೊಕ್ಕರಾ, ಕರಿ ಮಂಡ್ಲಿ, ಬಾಣ, ಸೋಗ, ನೆತ್ರ ಕೊಂಡಗ ಇತ್ಯಾದಿ…, ಒ೦ದೇ, ಎರಡೇ ಕನಿಷ್ಟ ನೂರಕ್ಕೂ ಹೆಚ್ಚು ವೈವಿಧ್ಯಮಯ ಪ್ರಕಾರಗಳು, ಈ ಮುಖಜ ಭೂಮಿಯಿಂದ ವಾತಾವರಣ ವೈಪರೀತ್ಯಕ್ಕೆ ಸಿಲುಕಿ ಈ ನದಿ ಮುಖಜ ಭೂಮಿಯಿಂದ ಕಾಣೆಯಾಗಲಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇದೇ ರೀತಿಯ ಜೀವ ವೈವಿಧ್ಯತೆ ಇದೇ ಜಿಲ್ಲೆಯ ಜೀವ ನದಿಗಳಾದ ಶರಾವತಿ ಮತ್ತು ಕಾಳಿ ನದಿಯ ಹರವಿನಲ್ಲೂ ಇತ್ತು. ಇವತ್ತು ಅಲ್ಲಿ ಕೇವಲ ಬಂಗುಡೆ, ಕರಿಬುಡ್ಡದಂತಹ ಆರ್ಡಿನರಿ ಮೀನು ಬಿಟ್ಟರೆ ಪೂರ್ತಿ ಬಲೆಗೆ ಸಿಗುವುದು ಬರೀ ಕೆಸರು ಜೊಂಡು ಮಾತ್ರ.

ನದಿಯ ಮುಖಜ ಭೂಮಿಯಲ್ಲಿ ಆರ೦ಭದ ಹೆಗಡೆ ಗ್ರಾಮದಿಂದ ನುಶಿಕೊಟೆ, ತೋರ್ಕೆ, ಸಾಣಿಕಟ್ಟಾ. ಬೋಲೆ, ಮಾದನಗೇರಿ, ತದಡಿ, ಬೆಲೆಕಾನದ ಹೆಬ್ಬಾಗಿಲಿನವರೆಗೂ ಸುಮಾರು ೨೫ ಸಾವಿರ ಹೆಕ್ಟೇರ್‌ನಷ್ಟು ಗಜನಿ ಭೂಮಿಯನ್ನು ಹೊಂದಿದ್ದು ಅಘನಾಶಿನಿಯ ಮಿಡ್ಲ ಗಜನಿ, ಬರ್ಗಿಗಜನಿ, ಕೆಪೆಕರು, ಯಂಕನಾ ಗಜನಿ, ಧವಾಲ, ಚೌಳಿಚರು, ಕೆಳಗಿನಪಾಲು, ಹಾಂಬ್ರಿ ಹೊಂಡ, ಕಾಗಲ ಗಜನಿ, ಕಲಕಟ್ಟಾ, ಹೋರಿ ಗಜನಿ, ತುಂಬ್ಲೆ, ಮಾನಿಕಟ್ಟಾ, ಲುಕ್ಕೇರಿ, ನರಿ ಬೋಳೆ, ಬೋಲೇ ಬೆಲೆ ಗಜನಿ, ಹೀಗೆ ಈ ಭೂಮಿಗಳನ್ನು ಗಜನಿ ಭೂಮಿಯೆಂದು ಗುರುತಿಸಲಾಗಿದ್ದು ಇಲ್ಲಿ ಭತ್ತ ಬೆಳೆಯುವ ಪದ್ದತಿಗೆ ವಿಶಿಷ್ಟ ಹೆಸರಿದೆ. ಅಷ್ಟಕ್ಕೂ ಎರಡಡಿಯಿಂದ ಹತ್ತಡಿ ಆಳದವರೆಗೆ ನೀರಿದ್ದರೂ ಅದರಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಭತ್ತದ ಮುಖ್ಯ ತಳಿ ಎಂದರೆ ಕಗ್ಗ ಮತ್ತು ಆರ್ಯ ಹಳಗಾ, ಬಿಳಿ ಕಗ್ಗ, ಜಯಾ ಭತ್ತಗಳು. ಇಲ್ಲಿಯ ಜಾತಿಯ ಭತ್ತಕ್ಕೆ ಯಾವುದೇ ಮಣ್ಣಿನ ಹಂಗಿಲ್ಲ. ಕೇವಲ ಅಘನಾಶಿನಿಯ ನದಿ ನೀರಿನ ಮೇಲೆ ತಲೆಯೆತ್ತಿ ನಿಂತುಬಿಡುವ ಇದು ಸದ್ಯಕ್ಕೆ ಲಭ್ಯವಿರುವ ಎಲ್ಲಾ ಭತ್ತದ ಜಾತಿಯಲ್ಲೇ ದೊಡ್ಡ ಸೈಜಿನದು ಎನ್ನುವ ಹೆಗ್ಗಳಿಕೆ ಇದಕ್ಕೆ. ಅದಕ್ಕೂ ಮಿಗಿಲಾಗಿ ತಿಂಗಳು ಕಾಲ ಭರ್ತಿ ನೀರು ಬಂದು ಪ್ರವಾಹ ಬಂದರೂ ಈ ಭತ್ತದ ಬೆಳೆ ಕದಲುವುದಿಲ್ಲ. ವರ್ಷ ಪೂರ್ತಿ ಮಳೆ- ಬಿಸಿಲು ಹೇಗೆ ಇದ್ದರೂ ಬೆಳೆ ಕೊಟ್ಟೆ ಕೊಡುವದು ಇದರ ಸ್ವಭಾವ. ಯಾಕೆಂದರೆ ಇದು ಸಂಪೂರ್ಣ ನೆಲ ಆಧಾರಿತ ಭತ್ತವಲ್ಲ. ಅಲ್ಲಿ ನೆಪಕ್ಕೆ ಬೇರಿಗೆ ಕೊಂಚ ಅನುಕೂಲಕಾರಿ ಸ್ಥಳ ಸಿಕ್ಕರೆ ಸಾಕು.

ಇದೆಲ್ಲಕ್ಕಿಂತಲೂ ಘೋರವಾಗಿ ಅಘನಾಶಿನಿ ದಂಡೆಯಿಂದ ತೋಪೆದ್ದು ಹೋಗಲಿರುವ ಜೀವ ಸಂತತಿ ಎಂದರೆ, ಮ್ಯಾಂಗ್ರೋ ಮರಗಳು. ಅಂದರೆ ಕಾಂಡ್ಲ ಕಾಡುಗಳದ್ದು. ಅಸಲಿಗೆ ಈ ಕಾಂಡ್ಲದ ಬುಡದಲ್ಲೇ ಮೀನುಗಳ ಪ್ರಮುಖ ಸಂತಾನೋತ್ಪತ್ತಿ ನಡೆಯುತ್ತಿದ್ದು ಜನೇವರಿಯ ಹೊತ್ತಿಗೆ ಏಡಿಗಳು ಇಲ್ಲಿ ಮರಿ ಕಾರ್ಯ ಮಾಡಿದರೆ, ಫೆಬ್ರುವರಿಯಲ್ಲಿ ಸೆಟ್ಲಿ ಮೀನುಗಳು, ಕೊನೆಗೆ ಮಾರ್ಚ್ ವೇಳೆಗೆ ಉಳಿದ ದೊಡ್ಡ ಸಣ್ಣ ಮೀನುಗಳ ಸಂತಾನೋತ್ಪತ್ತಿ ಪ್ರತಿ ವರ್ಷದ ಕಾರ್ಯಕ್ರಮ. ಈಗ ಈ ಕಾಂಡ್ಲ ಕಾಡುಗಳ ಕೊಂಚ ವ್ಯತ್ಯಾಸ ಕೂಡಾ ಇನ್ನಿಲ್ಲದಂತೆ ಮತ್ಸೊದ್ಯಮದ ಮೇಲೆ ಪರಿಣಾಮ ಬೀರಲಿದೆ.

ಅಷ್ಟಕ್ಕೂ ಮೀನುಗಳು ಮತ್ತು ಮತ್ಸೊದ್ಯಮ ಹಾಗು ಈ ಕಾಂಡ್ಲ ಕಾಡುಗಳು ಒಂದು ಪರಿಪೂರ್ಣ ನೈಸರ್ಗಿಕ ವೃತ್ತ. ಮೀನುಗಳಿಗೆ ಮರಿಮಾಡಲು ಕಾಂಡ್ಲ ಕಾಡು ಬೇಕಿದ್ದರೆ, ವ್ಯವಸ್ಥಿತ ಮತ್ಸೋದ್ಯಮಕ್ಕೆ ಅಗತ್ಯವಿರುವ ನೀರಿನ ಮಟ್ಟ ಮತ್ತು ನದಿಯ ಪಾತ್ರದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಕಾಂಡ್ಲ ಕಾಡುಗಳು ಬೇಕೆ ಬೇಕು. ಅಲ್ಲಿಯ ನಿಶಬ್ದತೆ, ಕತ್ತಲಿನ ಮಂಕು ಬೆಳಕು, ಯಾವುದೇ ಇತರ ಜೀವಿಗಳು, ಶತ್ರುಗಳು ಆ ಬೇರ ಸಂದಿನಲ್ಲಿ ನುಗ್ಗಿ ಮೊಟ್ಟೆಗಳನ್ನು ಹಾಳುಗೆಡುವಲು ಅಸಾಧ್ಯವಾದ ಕಂದಕಗಳು, ಇತ್ಯಾದಿ ತುಂಬಾ ಅನುಕೂಲಕರವಾದ ಸ್ಥಳ ಮೀನು ಸಂತಾನೋತ್ಪತ್ಟಿಗೆ ಈ ಕಾಂಡ್ಲ ಕಾಡಿನ ಬೇರುಗಳ ಸಂದಿನಲ್ಲಿ ದೊರೆತಂತೆ ಉಳಿದೆಲ್ಲಿಯೂ ಲಭ್ಯವಾಗುತ್ತಿಲ್ಲ.

ಅಘನಾಶಿನಿ ನದಿಯು ಯಾವುದೇ ಪಾತ್ರ ಬದಲಾವಣೆ ಮಾಡಿಕೊಳ್ಳದೇ ಶತಮಾನಗಳಿಂದಲೂ ನಿಂತಿದೆಯೆಂದರೆ ಅದು ಕೇವಲ ಲಕ್ಷಾಂತರ ಸಂಖ್ಯೆ ಕಾಂಡ್ಲ ಮರಗಳ ಬೇರುಗಳ ಅಗಾಧ ಶಕ್ತಿಯ ಹಿಡಿತದಿಂದಾಗಿ ಮಾತ್ರವೇ. ಅಕಸ್ಮಾತಾಗಿ ಈ ಕಾಡಿನ ಮೂಲಕ್ಕೆ ಕೊಂಚ ಏರು ಪೇರಾದರೂ ಸಂಪೂರ್ಣ ಮತ್ಸೋದ್ಯಮವೇ ಕುಸಿದು ಬೀಳಲಿದೆ. ಯಾಕೆಂದರೆ ಕಾಂಡ್ಲ ಕಾಡುಗಳು ಒಮ್ಮೆ ಈ ನದಿ ಮುಖಜ ಭೂಮಿಯಿಂದ ಒರೆಸಿಕೊಂಡರೆ ಅದರೊಂದಿಗೆ ಪ್ರಮುಖವಾಗಿ ಮೀನು ಸಂತತಿ ಕೂಡಾ ಹೇಳ ಹೆಸರಿಲ್ಲದಂತೆ ಒರೆಸಿ ಹೋಗಲಿದೆ. ಇದರ ಹೊರತಾಗಿ ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆ ಬಾಳುವ ಸೆಟ್ಲಿ( ಫ್ರಾನ್ಸ್ )ಗಳು ಇಲ್ಲಿನ ಮೀನುಗಾರ ಜೀವನವನ್ನೇ ಬದಲಾಯಿಸಬಲ್ಲ ತಾಕತ್ತಿನವು. ಅದರಲ್ಲೂ ಬಿಳಿಸೆಟ್ಲಿ (ವೈಟ್ ಫ್ರಾನ್ಸ್), ಕೊಳೆ ಸೆಟ್ಲಿ (ಬ್ರೌನ್ ಫ್ರಾನ್ಸ್), ಬಣ್ಣದ ಸೆಟ್ಲಿ (ಝೀಬ್ರಾ ಫ್ರಾನ್ಸ್), ಕೊಂಬು ಸೆಟ್ಲಿ (ಲೋಬ ಸ್ಟಾರ್), ಕಾಯಿಸೆಟ್ಲಿ (ಟೈಗರ್ ಫ್ರಾನ್ಸ್) ಇತ್ಯಾದಿಗಳನ್ನು ಹೇಗೆಂದರೆ ಹಾಗೆ ಬೆಳೆಯಲಾಗುವುದಿಲ್ಲ. ಕೊಂಚ ವಾತಾವರಣ ಏರು ಪೇರು ಕೂಡಾ ಇವನ್ನು ಇನ್ನಿಲ್ಲದಂತೆ ಸಾಯಿಸಿ ಬಿಡುತ್ತದೆ. ಈ ಸಿಗಡಿಗಳನ್ನು ಬೆಳೆಯಲು ವಿಶೇಷ ರೀತಿಯ ಗಜನಿ ಭೂಮಿಗಳಲ್ಲಿ ನಾಲ್ಕರಿಂದ ಐದು ಅಡಿ ನೀರು ನಿಲ್ಲಿಸಿ ಸಿಗಡಿ ಮರಿಗಳನ್ನು ಆಯಾ ಸ್ತರಕ್ಕನುಗುಣವಾಗಿ ಬೆಳೆಯಿಸಲಾಗುತ್ತದೆ.

ಇದಕ್ಕಾಗಿ ಆಳ ಸಮುದ್ರದಿಂದ ತಾಯಿ ಸಿಗಡಿಯನ್ನು ಹುಡುಕಿ, ಸರಿಯಾದ ಸಮಯಕ್ಕೆ ತಂದು, ಕೃತಕವಾದ ಜಾಗದಲ್ಲಿ ಸಾಕಿ, ಅದರ ಸಂತಿತಿಯನ್ನು ನಿರ್ದಿಷ್ಟವಾಗಿ ಬೇರ್ಪಡಿಸಿ ಒಂದು ಹೆಕ್ಟರ್‌ಗೆ ೫೦ ಸಾವಿರದಷ್ಟು ಅದರ ಮರಿಗಳನ್ನು ಬಿಡಲಾಗುತ್ತದೆ. ಇಲ್ಲಿ ಮೂರು ತಿಂಗಳಲ್ಲಿ ಬೆಳೆಯುವ ಮರಿಗಳು ನಾಲ್ಕನೆಯ ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗುತ್ತವೆ. ಹೀಗೆ ಒಂದು ಹಂತದಲ್ಲಿ ಗದ್ದೆಯಾಗಿ ಕಗ್ಗ ಭತ್ತವನ್ನು ಬೆಳೆಯಲು ಉಪಯೋಗಿಸುವ ಈ ಗಜನಿ ಭೂಮಿಯನ್ನು ಮಳೆಗಾಲದ ನಂತರ ಮೀನು ಕೃಷಿಗೆ ಬಳಸುವ ಈ ಪದ್ಧತಿಯನ್ನು “ಹ್ಯಾಚರಿ” ಎಂದು ಕರೆಯುತ್ತಾರೆ. ಈ ನೀರು ಕೊಂಚ ಉಪ್ಪಿನ ಸಾರವನ್ನೂ ಹೊ೦ದಿರುವುರಿಂದ ಇಲ್ಲಿನ ಸಿಗಡಿಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಿದೆ. ಕೇವಲ ನೂರು ದಿನಗಳ ಈ ವ್ಯವಹಾರವನ್ನು ಸೂಕ್ತವಾಗಿ ನಿರ್ವಹಿಸಿದಲ್ಲಿ ಕನಿಷ್ಟ ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆದಾಯವನ್ನು ಕೇವಲ ಒಂದು ಹೆಕ್ಟೇರ್ ಪ್ರದೇಶದಲ್ಲಿ ತಂದುಕೊಡುವ ಈ ವ್ಯವಹಾರಕ್ಕೆ ಸಿಗಡಿಗಳಿಂದ ಮಾತ್ರ ಸಾಧ್ಯ. ಪ್ರಸ್ತುತ ಸುಮಾರು ನಾನೂರು ಹೆಕ್ಟೇರ್ ಪ್ರದೇಶದಲ್ಲಿ ಈ ಸಿಗಡಿಯ ಕೃತಕ ಬೆಳೆ ಬೆಳೆಯಲಾಗುತ್ತಿದೆ. ಒಂದು ಕೆ.ಜಿ. ಸಿಗಡಿಗೆ ನಾನೂರರಿಂದ, ಐನೂರು ರೂಪಾಯಿವರೆಗೆ ದರ ಇದ್ದು ಕೆ.ಜಿ.ಗೆ ಹೆಚ್ಚೆಂದರೆ ಇಪ್ಪತ್ತೈದರಿಂದ ಮೂವತ್ತು ಸೆಟ್ಲಿಗಳು ತೂಗುತ್ತವೆ. ಹಾಗೆ ನೋಡಿದರೆ ಲಭ್ಯವಿರುವ ಗಜನಿ ಭೂಮಿಯ ವ್ಯಾಪ್ತಿಯ ಅಘನಾಶಿನಿ ದಂಡೆಯಲ್ಲಿಯೇ ಸುಮಾರು ಹದಿನಾರು ಸಾವಿರ ಹೆಕ್ಟೇರ್. ಆದರೆ ಬಳಸಿಕೊಳ್ಳುವ ಮತ್ತು ಬೆಳೆಸುವ ಅನುಪಾತ ಯಾಕೋ ಅಷ್ಟು ಸರಿಯಾಗಿದ್ದಂತಿಲ್ಲ.

ಇದರ ಜೊತೆಗೆ ಸಾಣಿಕಟ್ಟಾ ಉಪ್ಪಿನ ರುಚಿ ಮತ್ತು ಪ್ರಸಿದ್ಧಿಯಂತೂ ಗಾಂಧೀಜಿಯ ಹೆಸರಿನೊಂದಿಗೆ ತಳಕು ಹಾಕಿಕೊಂಡಿದ್ದು. ಇಲ್ಲಿನ ಉಪ್ಪು ಸಾಕಷ್ಟು ನೈಸರ್ಗಿಕ ಅಯೋಡಿನ್ ಯುಕ್ತವಾಗಿರುವುದರಿ೦ದ, ಈ ಉಪ್ಪಿನ ಸೇವನೆಯಿಂದ ಗಳಗಂಡ ರೋಗ ಹತ್ತಿರ ಸುಳಿಯಲಾರದು ಎನ್ನುವುದು ವೈಜ್ಞಾನಿಕವಾಗಿ ಸಾಬೀತಾದ ಸತ್ಯ. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಉಪ್ಪಿನ ಉತ್ಪಾದನಾ ಕೇಂದ್ರವಾಗಿರುವ ಸಾಣಿಕಟ್ಟಾ ಮತ್ತು ತದಡಿಯ ಮುಖದಲ್ಲೀಗ ಉಷ್ಣ ವಿದ್ಯುತ್ತಿನ ರೆಕ್ಕೆಗಳು ಫಡಫಡಸತೊಡಗಿದರೆ ಉಪ್ಪು ಹೇಳಹೆಸರಿಲ್ಲದಂತಾಗಿ ಹೋಗಲಿದೆ. ನಾಗರಬೈಲ್ ಉಪ್ಪು ತಾಯಾರಿಕಾ ಸಂಘಟನೆ ಇದೆಲ್ಲದರ ವ್ಯವಹಾರ ಪ್ರಮುಖ ಕೇಂದ್ರವಾಗಿದೆ. ಸರಿ ಸುಮಾರು ನಾಲ್ಕು ಸಾವಿರ ಕುಟುಂಬಗಳು ನೇರವಾಗಿ ಇದರಲ್ಲಿ ಪಾಲ್ಗೊಂಡಿದ್ದರೆ, ವಸ್ತು ಸಾಗಾಣಿಕೆ, ಪ್ಯಾಕಿಂಗ್, ದಾಸ್ತಾನು, ಮಾರುಕಟ್ಟೆ ನಿರ್ವಹಣೆ, ಆಡಳಿತ, ಸಾರಿಗೆ ಸೌಲಭ್ಯ, ತೀರ ಕೆಳಹಂತದ ಕೂಲಿಕಾರಿಕೆ ಇತ್ಯಾದಿಗೆ ಪರೋಕ್ಷವಾಗಿ ಇದನ್ನೇ ಜೀವನಿರ್ವಹಣೆಗೆ ನಂಬಿಕೊಂಡವರ ಸಂಖ್ಯೆ ಸರಿ ಸುಮಾರು ಎರಡೂವರೆ ಸಾವಿರ ಕುಟುಂಬಗಳು.

ಉಳಿದಂತೆ ಉಸುಕು ತೆಗೆಯುವ ಉದ್ಯಮವನ್ನು ನಂಬಿಕೊಂಡು ಈ ನದಿ ದಂಡೆಯಲ್ಲಿ ಬದುಕು ಕ೦ಡುಕೊಂಡಿರುವವರು ಕನಿಷ್ಟ ಎರಡೂವರೆ ಸಾವಿರ ಕುಟುಂಬಗಳು. ಆಳ ನೀರಿನಿ೦ದ ಮೊಗೆದಷ್ಟೂ ಉಸುಕು ಎತ್ತಿ ಕೊಡುತ್ತಿರುವ ಅಘನಾಶಿನಿ ನದಿಯ ಪಾತ್ರ ನಿಜಕ್ಕೂ ರೇತಿಯ ದೃಷ್ಟಿಯಿಂದ ಅಕ್ಷಯ ಪಾತ್ರೆಯೇ ಸರಿ. ಗುಡಕಾಗಲ್, ಹಿಣಿ, ಮಾಸೂರ, ಹೆಗಡೆ, ಮಿರ್ಜಾನ್, ಮಿಡ್ಲ ಗಜನಿ, ಮಾದನಗೇರಿ, ಶಿರುಗುಳಿ ಇತ್ಯಾದಿ ನದಿ ಮುಖಜ ಭೂಮಿಗಳು ಶತಮಾನದಿಂದಲೂ ಉಸುಕು ಎತ್ತಿಸಿಕೊಳ್ಳುತ್ತಲೇ ಇದ್ದರೂ ಇವತ್ತಿಗೂ ಆಳ ಅಥವಾ ಕಂದಕಗಳಾಗಿ ನದಿಯ ಪಾತ್ರದಲ್ಲೇನೂ ಬದಲಾವಣೆಯಾಗಿಲ್ಲ. ಅದೇ ಪ್ರಮಾಣದಲ್ಲೇ ಇವತ್ತೀಗೂ ಉಸುಕು ಲಭ್ಯವಾಗುತ್ತಲೇ ಇದೆ. ಅಸಲಿಗೆ ಅತ್ಯಧಿಕವಾಗಿ ಕಟ್ಟಡ ನಿರ್ಮಾಣ ಕಾಮಗರಿಗಳು ನಡೆಯುವಾಗ ಲಭ್ಯವಾಗುತ್ತಿರುವ ಬೆಲೆ ಕೂಡಾ ಅಷ್ಟೆ ಆಕರ್ಷಣಿಯ.

ಉಳಿದೆಲ್ಲಾ ಸಲಕರಣೆ ಬಳಸಿ ಮಾಡುವ ಮತ್ಸೋದ್ಯಮವಾದರೆ ಸ್ತ್ರೀಯರು ಮತ್ತು ಬೇಸ್ತರ ಎಲ್ಲಾ ವಯೋಮಾನದವರೂ ಮಾಡಿಕೊಂಡು ಹೋಗುವ, ರಜೆಯಲ್ಲಿ ಮಕ್ಕಳೂ ನದಿದಂಡೆಗಿಳಿದು ದುಡ್ಡು ದುಡಿಯುವ ಕೆಲಸವೆಂದರೆ ಬಳಚು ತೆಗೆಯುವುದು. ಈ ಬಳಚು ಎಂದರೆ ಕಪ್ಪೆ ಚಿಪ್ಪು ಎಂದರ್ಥ. ಉತ್ತರ ಭಾರತದ ಯಾವುದೇ ನದಿಯಿಂದ, ಕೇರಳದ ಕೊಟ್ಟ ಕೊನೆಯ ನದಿಯವರೆಗೆ, ಯಾವುದೇ ನದಿಯ ಪಾತ್ರದಲ್ಲೂ ಇಷ್ಟೊಂದು ಮಟ್ಟದ ಚಿಪ್ಪುಗಳು ಲಭ್ಯವಿಲ್ಲ. ಉಳಿದ ನದಿಗಳಿಗೆ ಹೋಲಿಸಿದರೆ ಭಾರತದಲ್ಲಿ ಅಘನಾಶಿನಿಯೊಂದರಲ್ಲೇ ಶೇ. ೭೪ ರಷ್ಟು ಕಪ್ಪೆ ಚಿಪುಗಳ ವಿಫುಲ ಸಂಪನ್ಮೂಲ ಲಭ್ಯವಿದೆ. ಹೀಗಾಗಿ ದಿನಕ್ಕೆ ೪೦೦೦ ಎಕರೆ ಪ್ರದೇಶದಲ್ಲಿ ಈ ಬಳಚು ತೆಗೆಯುವ ಕಾರ್ಯ ಇಲ್ಲಿ ನಡೆಯುತ್ತಿದೆ. ಇದರಲ್ಲಿ ಮುಖ್ಯವಾಗಿ ಅಡ್ಡ ಬಳಚು, ಕರಿ ಬಳಚು, ಗೊಜ್ಜಲು ಬಳಚು, ಕೊಂಡಗ ಬಳಚು, ಮಾರ್ಗಿ, ನೆತ್ತರ ಬಳಚು, ಹೀಗೆ ಹಲವು ಬಗೆಗಳಿದ್ದು ಅಡ್ಡ ಬಳಚು, ಇದರಲ್ಲಿ ಅತ್ಯಂತ ಲಾಭದಾಯಕವಾಗಿ ಪರಿಗಣಿಸಿವೆ. ಇಲ್ಲಿ ಲಭ್ಯವಿರುವ ಚಿಪ್ಪಿನ ನಿಕ್ಷೇಪದ ಅಂದಾಜು ಮೂರ್ನೂರು ಲಕ್ಷ ಟನ್‌ನಷ್ಟಿರಬಹುದೆಂದು ಅಂದಾಜಿಸಲಾಗಿದೆ.

ಕೇವಲ ನದಿ ತೀರದ ಒಂದಡಿ ನೀರಿನಿಂದ ಆಳದ ನಾಲ್ವತ್ತು ಅಡಿಯವರೆಗೂ ಅಗಾಧ ನಿಕ್ಷೇಪದಂತೆ ಅಡಗಿಕೊಂಡಿರುವ ಬಳಚುಗಳು ಹೀಗೆ ಅದ್ಭುತ ಪ್ರಮಾಣದಲ್ಲಿ ಲಭ್ಯವಾಗಲು ಕಾರಣವೆನೆಂದರೆ ಈ ನದಿಗೆ ಇಲ್ಲಿಯವರೆಗೆ ಯಾವುದೇ ಅನೈಸರ್ಗಿಕ ಆಘಾತದ ಬಿಸಿ ತಟ್ಟಿಲ್ಲ. ಅದೇ ಕಾಳಿ ಮತ್ತು ಶರಾವತಿ ಹಾಗು ಇತರ ಯಾವುದೇ, ಯೋಜನೆಗಳಿಗೆ ಈಡಾಗಿರುವ ನದಿಗಳಲ್ಲಿ ಇವತ್ತು ಬಳಚುಗಳು ಲಭ್ಯವಾಗುತ್ತಿಲ್ಲ. ನದಿಗೆ ಸಾಕಷ್ಟು ನೀರು ಬಂದಾಗ ಸಂಪೂರ್ಣ ಸಿಹಿ ನೀರಾಗಿ ನದಿ ಪರಿವರ್ತಿತವಾದಾಗ ತನ್ನಿಂದ ತಾನೇ ಒಣಗಿದ೦ತಿದ್ದ ಜೀವ ಕಣ ಸ್ಫೋಟಗೊಂಡು ಬಳಚು (ಕಪ್ಪೆ ಚಿಪ್ಪು) ಉತ್ಪತಿಯಾದರೆ, ವರ್ಷಾಂತ್ಯದಲ್ಲಿ ಉಪ್ಪು ನೀರು ಬಂದು ಸೇರತೊಡಗಿದಂತೆ ತಾನೇ ಸಣ್ಣ ಕಣದಂತಾಗಿ ಕರಗಿ ಹೋಗುತ್ತಾ ನೀರ ಬುಡಕ್ಕೆ ಸೇರಿ ಬದುಕಿಕೊಂಡಿರುತ್ತದೆ. ಮತ್ತೆ ವರ್ಷಾರಂಭದಲ್ಲಿ ಮೈದಳೆಯುವ ಇದಕ್ಕೆ ದೇಶಾದ್ಯಂತ ಅಗಾಧ ಪ್ರಮಾಣದ ಬೇಡಿಕೆ ಇದ್ಡು ಅಘನಾಶಿನಿ ನದಿಯೊಂದರಿಂದ ರಫ್ತಾಗುವ ಬಳಚಿನ ಪ್ರಮಾಣವೇ ವಷ೯ಕ್ಕೆ ಸುಮಾರು ನಾನೂರು ಟನ್.

ಈ ಕೆಲಸಕ್ಕೆ ಸಂಬಂಧಿಸಿದಂತೆ ಗಾಂವಕರ್ ಮೈನ್ಸ್ ಇಲ್ಲಿ ಚಿಪ್ಪಿನ ಉದ್ಯಮದ ಮೂಲಕವೇ ಹೆಸರು ಮಾಡಿರುವ ಸಂಸ್ಥೆ. ಕೇವಲ ವರ್ಷವೊಂದಕ್ಕೇ ಒಂದು ಕೋಟಿಗೂ ಅಧಿಕ, ದಾಖಲೆ ತೆರಿಗೆ ಸಲ್ಲಿಸುತ್ತಿರುವ ಗಾಂವಕರ್ ಮೈನ್ಸ್ ಇಲ್ಲಿನ ಮೂರು ಸಾವಿರ ಮೀನುಗಾರರ ಕುಟುಂಬಗಳ ನೇರ ಅನ್ನದಾತರು. ಪರೋಕ್ಷವಾಗಿ ಸರಿ ಸುಮಾರು ಅಷ್ಟೆ ಸ೦ಖ್ಯೆಯ ಕೆಲಸಗಾರರು ಇವರ ಮೈನ್ಸ್ ನಂಬಿಕೊಂಡಿದ್ದಾರೆ. ಹತ್ತಿರದ ಹುಬ್ಬಳ್ಳಿಯಿಂದ ಹಿಡಿದು ದೂರದ ವೆಸ್ಟ್ ಬೆಂಗಾಲವರೆಗೂ ಇನ್ನೂರಕ್ಕೂ ಹೆಚ್ಚು ಕಂಪೆನಿಗಳು ತಮ್ಮ ಉತ್ಪನ್ನಗಳಾದ ಔಷಧಿ, ಬಣ್ಣ, ಕಾಗದ ಮತ್ತು ರಸಾಯನಿಕಗಳಿಗೆ ನಂಬಿಕೊಂಡಿರುವುದು ಇದೇ ಗಾಂವಕರ್ ಮೈನ್ಸ್‌ನ ಬಳಚುಗಳನ್ನು. ಇದಲ್ಲದೇ ಇವರ ಉದ್ಯಮವನ್ನೇ ನಂಬಿಕೊಂಡಿರುವ ಸರಕು ಸಾಗಾಣಿಕೆ, ವಾಹನ, ಕೂಲಿಗಾರಿಕೆ, ದಾಸ್ತಾನು ವ್ಯವಹಾರ ಇತ್ಯಾದಿಗಳು ಈ ತದಡಿ ಸ್ಥಾವರದಿಂದಾಗಿ ತೋಪೆದ್ಡು ಹೋಗಲಿವೆ. ಈ ಎಲ್ಲಾ ರೀತಿಯ ನೂರಾರು ವರ್ಷಗಳ ಬದುಕನ್ನು ಹಾಳುಗೆಡುವಿದರೆ ಉದ್ಯಮಿಗಳಾದ ನಾವು ಹೇಗೋ ಬದುಕಿಯೇವು ಉಳಿದ ಈ ಒಟ್ಟಾರೆ ಎಳೂವರೆ ಸಾವಿರ ಕುಟುಂಬಗಳು ಎಲ್ಲಿ ಹೋಗಬೇಕು ಎನ್ನುತ್ತಾರೆ ಗಾಂವಕರ್ ಮೈನ್ಸ್‌ನ ಮುಖ್ಯಾಧಿಕಾರಿ ಸಂತೋಷ ನಾಯಕ.

ಈ ಎಲ್ಲಾ ರೀತಿಯ ಮೀನುಗಳು ಒಂದೇ ರೀತಿಯ ಬಲೆಗಾಗಲಿ, ಮೀನುಗಾರಿಕೆಗಾಗಲಿ ಲಭ್ಯವಾಗುವುದಿಲ್ಲ. ದೊಡ್ಡ ಮಟ್ಟದ ಮೀನುಗಾರಿಕೆ ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲದ್ದರಿಂದಾಗಿ ಹಲವಾರು ರೀತಿಯಲ್ಲಿ ಈ ಜೀವನದಿ ಮೀನುಗಾರಿಕೆಗೆ ಅವರವರ ಅರ್ಹತೆಗೆ ತಕ್ಕಂತೆ ಲಭ್ಯವಾಗುವುದು ಇದರ ವಿಶೇಷ. ಹಾಗಾಗಿ ಇದರಲ್ಲಿ ಗೋರುವುದು, ಬೀಸುವುದು, ಚಾಚುವುದು, ಅಡ್ನ ಕಟ್ಟುವುದು, ಗಾಳ ಹಾಕುವುದು, ಗುಂಡಿ ಬಲೆ ಕಟ್ಟುವುದು, ಕುಳೆ ಹಾಕುವುದು, ಕಂಟ್ಲೆ ಹಾಕುವುದು, ಬಳಚು ತೆಗೆಯುವುದು, ಕಲಗ ಒಡೆಯುವಿಕೆ ಇತ್ಯಾದಿ ಪ್ರಕಾರದ ಮೀನುಗಾರಿಕೆಯಲ್ಲಿ ಇದನ್ನು ವಿಭಜಿಸಲಾಗಿದೆ.
ಸುಮಾರು ಮೂವತ್ತು ಅಡಿ ಉದ್ದ, ಆರು ಅಡಿ ಅಗಲದ ಬಲೆಯನ್ನು ಎರಡೂ ಕಡೆಯಿಂದ ಹಿಡಿದೆಳೆದುಕೊಂಡು ಕೋಲನ್ನು ಅದಕ್ಕೆ ಆಧಾರವಾಗಿ ಬಳಸಿ, ಜಾಳಿಸುತ್ತಾ ಒಂದು ಕಡೆಯಿಂದ ನದಿಯ ಮುಖಜ ಭೂಮಿಯಲ್ಲಿ ಎಳೆದೆಳೆದು ಮೀನು ಹಿಡಿಯುವುದೇ ಗೋರುವ ಪದ್ಧತಿಯಾಗಿ ಚಲಾವಣೆಯಲ್ಲಿದೆ. ಸೆಟ್ಲಿಗಳೂ ಸೇರಿದಂತೆ ಶಾಡೆಗಳು ಮತ್ತು ಮಟ್ಲೆಗಳೆಂಬ ಮೀನು ಬಹುತೇಕ ಇದರಲ್ಲಿ ಬೀಳುತ್ತವೆ.

ಗೋರುವ ಪದ್ಧತಿಯಲ್ಲಿ ಬಲೆಗೆ ಈಡಾಗದ ಮತ್ತು ಮಿಂಚಿನಂತೆ ತಪ್ಪಿಸಿಕೊಳ್ಳುವ ಮೇಲಸ್ತರದ ಮೀನುಗಳಿಗಾಗಿ ಬೀಸುವ ಪದ್ಧತಿಯನ್ನು ಬಳಸಲಾಗುತ್ತದೆ. ಇದರಲ್ಲಿ ಜೇಡರ ಬಲೆಯ ತರಹದ ವಿನ್ಯಾಸವಿದ್ದು ನೇರವಾಗಿ ನೀರಿನಲ್ಲಿ ಲಂಬವಾಗಿ ಇಳಿಯುವಂತೆ ನೋಡಿಕೊಳ್ಳಲು, ಬಲೆಯ ಸುತ್ತಲೂ ಭಾರದ ಸೀಸದ ತುಂಡುಗಳನ್ನು ಸೇರಿಸಿ ಹೊಲೆದಿರುತ್ತಾರೆ. ಇದರಿಂದ ನೀರಿಗೆ ಇದನ್ನು ಬೀಸಿದಾಗ ಭಾರದ ತುಂಡಿನ ಭಾಗದ ತುದಿಗಳು ನೇರ ನೀರಿಗೆ ಲ೦ಬವಾಗಿ ಇಳಿಯುತ್ತಿದ್ದರೆ ಅತ್ತಿತ್ತ ಚಲಿಸಿ ಮರೆಯಾಗಲೆತ್ನಿಸುವ ಮೀನುಗಳು ಇದರ ಬಲೆಗೆ ಸಿಕ್ಕಿಕೊಳ್ಳುತ್ತವೆ. ಈ ಮೀನುಗಾರಿಕೆಯನ್ನು ಬೀಸುವಿಕೆ ಎನ್ನುತ್ತಾರೆ. ಇದಕ್ಕೆ ಯಾವುದೇ ರೀತಿಯ ಅತ್ಯಾಧುನಿಕ ಸೌಲಭ್ಯಗಳು ಬೇಕಿಲ್ಲವಾದರೂ, ಒಂದು ಸಾದಾ ದೋಣಿ ಇದ್ದರೂ ಸಾಕು ಮಧ್ಯ ಸಮುದ್ರದಲ್ಲೂ ಈ ಕಸುಬು ನಡೆಸಬಹುದಾಗಿದೆ. ಆದರೆ ತುಂಬಾ ಆಳ ಸಮುದ್ರ ಅಥವಾ ನದಿಯ ಅಳದ ಪ್ರದೇಶದಲ್ಲಿ ಇದು ಸಮಂಜಸವಲ್ಲ.

ತಿ೦ಗಳ ಬೆಳಕು ಮತ್ತು ದ್ವಾದಶಮಿಯಿಂದ ಪಂಚಮಿಯವರೆಗಿನ ಒಂದೆರಡು ದಿನ ಮಾತ್ರ ಉಬ್ಬರವಿಳಿತ ನೋಡಿಕೊಂಡು ಮೀನು ಹಿಡಿಯಲು, ದೊಡ್ಡ ಮೀಟರುಗಟ್ಟಲೆ ದೊಡ್ಡ ಬಲೆ ಬಳಸಿ ಒಂದೆಡೆಯಿಂದ ಇನ್ನೊಂದೆಡೆಯವರೆಗೂ ಬಲೆಯನ್ನು ಚಾಚಿಕೊಂಡು ಬರಲಾಗುವುದರಿಂದ ಇದಕ್ಕೆ ಚಾಚುವುದು ಎಂದು ಹೆಸರಾಗಿದೆ. ಇದರಲ್ಲಿ ಸುಮಾರು ಕೀ.ಮೀ.ಗಟ್ಟಲೆ ಜಾಗವನ್ನು ಆವರಿಸಿಕೊಳ್ಳುವಂತೆ ಬಲೆಯನ್ನು ನೀರಿನಲ್ಲಿ ಹಾಸಿ ಮೀನನ್ನು ಹಿಡಿಯಲಾಗುತ್ತದೆ. ಈ ಬಲೆಯನ್ನು ದಾಟಲಾಗದೆ ತುಂಬಾ ದೊಡ್ಡ ಮತ್ತು ಅಪರೂಪದ, ಉಬ್ಬರ ಸಮಯದಲ್ಲಷ್ಟೆ ಲಭ್ಯವಾಗುವ ಕಾಗಾಳ್ಸಿ, ನೋಗಲ ಕಾಂಡಿ, ಗೋಲಿ, ಬಣಗು, ಶಾಡೇ, ಸಿಂಗಟಿ, ಮುಂತಾದವು ಲಭ್ಯವಾಗುತ್ತವೆ.

ತೀರ ಬಲೆ, ದೋಣಿ, ಇನ್ನಿತರ ತಾಂತ್ರಿಕ ವಸ್ತುಗಳು ಇದಾವುದೂ ಇಲ್ಲದ, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ಅಗತ್ಯದ ಸಾಮಗ್ರಿಗಳಿಲ್ಲದವರು, ನಿಯಂತ್ರಿತ ಪ್ರಮಾಣದಲ್ಲಿ ಮೀನುಗಳನ್ನು ಹಿಡಿಯುವ ಪದ್ಧತಿಯೇ ಅಡ್ನ ಕಟ್ಟುವಿಕೆ. ಸಮುದ್ರ ನೀರು ಉಬ್ಬರಕ್ಕೇರಿ, ಅಘನಾಶಿನಿ ತುಂಬಿ ಮೇಲೆರಿದಾಗ ಬಂದಾಗ, ನೀರು ಹಾಯ್ದು ಬರುವಂತೆ ಅದಕ್ಕಾಗಿಯೇ ನಿರ್ಮಿಸಲಾದ ಕಾಲುವೆಗಳಲ್ಲಿ ಹರಿಸಿ ಮೀನುಗಳನ್ನು ಮೊದಲು ಒಂದು ಕಕ್ಷೆಗೆ ತಂದುಕೊಳ್ಳಲಾಗುತ್ತದೆ. ನಂತರದಲ್ಲಿ ನೀರು ಉಬ್ಬರ ಇಳಿದು ಆಚೆಗೆ ಮುಂಚೆ ಅದರ ಬಾಯಿಗೆ ಬಲೆ ಬಿಡಿದು ಜಲಚರಿಗಳು ಅತ್ತ ಹೋಗದಂತೆ ತಡೆ ಹಿಡಿದು ಬಲೆಗೆ ಕೆಡುವಲಾಗುತ್ತದೆ. ಹೀಗೆ ಅಡ್ಡ ಕಟ್ಟಿ ಮೀನುಗಾರಿಕೆ ಮಾಡುವವರು ಸಾಮಾನ್ಯವಾಗಿ ಸಣ್ಣ ಮೀನುಗಾರರು, ಬಲೆಗಳಿಲ್ಲದವರು, ತಾಂತ್ರಿಕವಾಗಿ ಸೌಲಭ್ಯಗಳಿಲ್ಲದವರು, ಸಣ್ಣ ಪ್ರಮಾಣದ ಮೀನುಗಳಿಗೆ ತೃಪ್ತಿಪಟ್ಟುಕೊಳ್ಳುವವರದ್ಡು ಈ ಮೀನುಗಾರಿಕೆ. ಮಳೆಗಾಲಕ್ಕೆ ಬೇಕಾಗುವ ಸಮುದ್ರ ಉಪ್ಪಿನಕಾಯಿ, ಸಣ್ಣ ಒಣ ಮೀನುಗಳು, ಒಣ ಸೆಟ್ಲಿ, ಕೊಂಬು ಬಳಚುಗಳ ಪೂರೈಕೆಯಾಗುವುದೇ ಈ ಪದ್ಧತಿಯ ಮೀನುಗಾರಿಕೆ ಕೃಷಿಯಿಂದಾಗಿ. ಕೊಳೆ ಸೆಟ್ಲಿ, ಕಡಬಾಳೆ, ಬಿಂಗಲಿ, ಮಡ್ಲೆ, ಕಂಡ್ಲಿ, ಸಳಕ, ಬೊಂಡೆಕಾನ ಇತ್ಯಾದಿ ಮೀನುಗಳು ಇದರಲ್ಲಿ ಖಂಡಿತಕ್ಕೂ ಬೀಳುತ್ತವೆ. ಈ ಮೀನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳು ನಾಲ್ಕೂವರೇ ಸಾವಿರ.

ಇದೆಲ್ಲಕ್ಕಿಂತಲೂ ಅಗಾಧ ಮತ್ತು ಪ್ರಮಾಣದ ದೃಷ್ಟಿಯಿಂದ ದೊಡ್ಡ ಪ್ರಮಾಣದ ಮೀನುಗಾರಿಕೆ ಮಾಡುವವರು ಸಾಮಾನ್ಯವಾU ಬಳಸುವ ಪದ್ಧತಿಯೆಂದರೆ ಕಂಟ್ಲೆ ಕಟ್ಟುವಿಕೆ. ಇದಕ್ಕಾಗಿ ಒಂದೂವರೆ ಕೀ.ಮೀ.ನಿಂದ ಎರಡೂವರೆ ಕೀಮೀ.ವರೆಗೂ ಅಡ್ಡ ಬಲೆ ಹಾಕಿ ಎತ್ತರಕ್ಕೆ ಎರಡು ಮೀ. ನಷ್ಟು ಅಡ್ಡಗಟ್ಟಿ ಕಂಟ್ಲೆ ಕಟ್ಟುವ ಪದ್ಧತಿಯಲ್ಲಿ ಒಂದೇ ಬಾರಿಗೆ ಸುಮಾರು ಒಂದು ಲೋಡನಷ್ಟು ಮೀನು ಸಿಗುವುದೂ ಉಂಟು. ದೊಡ್ಡ ಸೈಜಿನ ಮೀನುಗಳು ಮತ್ತು ದೊಡ್ಡ ಪ್ರಮಾಣದ ಮೀನುಗಳು ಈ ಮೀನುಗಾರಿಕೆಯಲ್ಲಿ ಸಾಧ್ಯವಿದೆ. ಆದರೆ ಅಷ್ಟೆ ಸಧೃಡ ಮತ್ತು ತುಂಬಾ ಶಕ್ತಿಯುತ ಬಲೆ, ನೀರಿನಲ್ಲಿ ಹುಗಿಯುವ ಗೂಟದ ವಿನ್ಯಾಸ. Zರಿನ ಹರಿವಿಗೆ ಅಡ್ಡವಾಗಿಯೂ ಅಡ್ಡಲಾಗದಂತೆ ಬಲೆ ಬೀಗಿಯುವ ನೈಪುಣ್ಯತೆ ಈ ಮೀನುಗಾರಿಕೆಗೆ ಬೇಕು ಇಲ್ಲವಾದರೆ ಮೀನುಗಳು ಕೊಂಚ ಸಂಶಯಿಸಿದರೂ ಅತ್ತಾಸುಳಿಯದೇ ದಿನವಿಡಿ ಮಾಡಿ ಬೀಗಿದಿರಿಸಿದ್ದ ಬಲೆಗೆ ಬರಿ ಜೊಂಡುಗಳು ಬಿದ್ದಾವು.

ನದಿಯ ನೀರಿಗೆ ಅಬ್ಬರದ ಉಬ್ಬರ ಂದಾಗ ಅದರೊಂದಿಗೆ ಬಂದು ಬೀಳುವ ಮೀನುಗಳಿಗೆ ಮೊದಲು ಒಂದಷ್ಟು ಜಾಗ ಕಲ್ಪಿಸುವಂತೆ ಸಣ್ಣ ಕೆರೆಯಂತೆ ನಿರ್ಮಿಸಿ ಇಡಲಾಗುತ್ತದೆ. ಒಂದೆಡೆಯಿಂದ ಭರತದ ನೀರನ್ನು ಒಳಕ್ಕೆ ಬಿಟ್ಟುಕೊಂಡು ಅದರೊಂದಿಗೆ ಮೀನುಗಳೂ ಬಂದು ಬೀಳುವಂತೆ ಮಾಡಲಾಗುತ್ತದೆ. ಅದಕ್ಕೆ ಸುತ್ತಲೂ ಕಟ್ಟೆ ಕಟ್ಟಿ ಎಲ್ಲಿಂದಲೂ ಹೊರಕ್ಕೆ ಹೋಗದಂತೆ ಮೊದಲು ತಡೆದು ನಿಲ್ಲಿಸುವುದರಿಂದಾಗಿ ಭರತ ಇಳಿದ ಮೇಲೂ ನೀರು ಈ ಕೃತಕ ಕೆರೆಯಲ್ಲಿ ನಿಂತೇ ಇರುತ್ತದೆ. ಅದರೊಂದಿಗೆ ಸಿಕ್ಕಿ ಬಿದ್ದ ಮೀನುಗಳೂ ಕೂಡಾ. ತೀರ ಇಳಿಜಾರು ಇರುವ ಕಡೆ ಇದಕ್ಕೆ ಒಂದು ತೂಬನ್ನು ನಿರ್ಮಿಸಿರುತ್ತಾರೆ. ಒಂದೆರಡು ದಿನದ ನಂತರ ಒಂದೇ ಒಂದು ತೂಬು ತೆಗೆದು ಎಲ್ಲಾ ನೀರನ್ನು ಹೊರಕ್ಕೆ ಬಿಡಲಾರಂಭಿಸುತ್ತಾರೆ. ಇದರಿ೦ದಾಗಿ ಏಕತಾನತೆಯಿಂದ ಬೇಸತ್ತ ಮೀನುಗಳು ತೂಬಿನಿಂದ ಹೊರಕ್ಕೆ ಹೋಗಲು ಇನ್ನಿಲ್ಲದಂತೆ ಧಾವಿಸುತ್ತವೆ. ಹೊರಗೆ ತೂಬಿನ ಕೆಳಕ್ಕೆ ಇರಿಸಲಾಗಿರುವ ಕುಳಿ ಬಲೆಯ ಬುಡಕ್ಕೆ ಸಿಕ್ಕಿಕೊಳ್ಳುತ್ತವೆ. ಕುಳಿಯಲ್ಲಿ ಬಿದ್ದ ನೀರು ಹೊರಕ್ಕೆ ಹೋಗುತ್ತಿದ್ದರೆ ಬಲೆಯಲ್ಲಿ ಉಳಿವ ಮೀನು ಸುಲಭ ಶಿಕಾರಿಯಾಗುತ್ತದೆ. ಇದು ತ್ವರಿತಗತಿಯಲ್ಲಿ ಮತ್ತು ಎಷ್ಟು ಬೇಕೋ ಅಷ್ಟೆ ಮೀನು ಹಿಡಿಯಲು ಅನುಸರಿಸುವ ಕಲೆಗಾರಿಕೆಯಾಗಿದೆ.

ಇನ್ನುಳಿದಂತೆ ನೀರಿನೊಳಗೇ ಕಲ್ಲಿಗೆ ಅಂಟಿಕೊಂಡು ಬೆಳೆಯುವ “ಕಲಗಾ” ಸೇರಿದಂತೆ ಎಲ್ಲೆಂದರಲ್ಲಿ ಈ ಅಘನಾಶಿನಿಯ ಗಜನಿ ಭೂಮಿಯಲ್ಲಿ ಲಭ್ಯವಿರುವ ಏಡಿಗಳಿಗಾಗಿ, ತೈವಾನ್, ಮಲೇಶಿಯಾ, ಸಿಂಗಾಪುರ್ ಸೇರಿದಂತೆ ಎಷ್ಯಾದ ಎಲ್ಲಾ ದೇಶಗಳಲ್ಲಿ ಬಳಸಲ್ಪಡುತ್ತಿರುವ ಮಾಂಸದ ಏಡಿಗಳಿಗಾಗಿ ದಿನವಹಿ ಎರಡು ಸಾವಿರ ಕುಟುಂಬಗಳು ಈ ನದಿ ನೀರಿಗಿಳಿಯುತ್ತವೆ. ಕೇವಲ ಆಳ ಸಮುದ್ರದಲ್ಲಿ ಮಾತ್ರ ಬೆಳೆಯುವ ” ಕಲಗಾ ” ಜೀವಿಯ ಮಾಂಸಕ್ಕೆ ಅಗಾಧ ಬೇಡಿಕೆ ಇದ್ಡು, ಅಪರೂಪದ ವಿದ್ಯಾಮಾನ ಎನ್ನುವಂತೆ ಇದು ಅಘ್ನಾಶಿನಿಯ ಬಂಡೆಗಳ ಅಡಿಯಲ್ಲಿ ಮಾತ್ರ ಬೆಳೆಯುತ್ತದೆ. ಕನಿಷ್ಟ ಕಾಲು ಕೆ.ಜಿ.ಯಿಂದ ಎರಡ್ಮೂರು ಕೆ.ಜಿ.ವರೆಗೂ ತೂಗುವ ಇದರ ಚಿಪ್ಪಿನೊಳಗಿನ ಮಾಂಸಕ್ಕೆ ಸಾವಿರ ಲೆಕ್ಕದಲ್ಲಿ ರೇಟಿದೆ. ಕೇವಲ ಹತ್ತಿರದ ಕಾರವಾರ, ಪಣಜಿ, ವಾಸ್ಕೋ ಮಡಗಾ ಸೇರಿದಂತೆ ಹುಬ್ಬಳಿ ಮತ್ತು ಬೆಂಗಳೂರಿನವರೆಗಿನ ಬೇಡಿಕೆ ಪೂರೈಸಲು ಈ ನದಿಗೆ ಇಳಿಯುವ ಕುಟು೦ಬಗಳ ಸಂಖ್ಯೆ ಕನಿಷ್ಟ ಎರಡೂವರೆ ಸಾವಿರ. ತಿಂಗಳ ರಫ್ತಿನ ಪ್ರಮಾಣ ಸುಮಾರು ಒಂದು ಟನ್.

ಇಷ್ಟೆಲ್ಲಾ ರೀತಿಯ ಅಮೋಘವಾದ ಒಂದು ಜನ ಜೀವನ ಪದ್ಧತಿಯು ಈ ಅನ್ದಿ ಮುಖಜ ಭೂಮಿಯಿಂದ ಒರೆಸಿ ಹೋಗಲಿದೆ. ಯಾಕೆಂದರೆ ಈಗ ಪ್ರಸ್ತುತ ಯಾವ ನದಿಯಲ್ಲೊ ಈ ಎಲ್ಲ ರೀತಿಯ ಮೀನುಗಾರಿಕೆಯಾಗಲಿ, ಭತ್ತ ಬೆಳೆಯುವ ಪದ್ಧತಿಯಾಗಲಿ, ಚಿಪ್ಪಿನ ಕೋಟ್ಯಾಂತ ಉದ್ಯಮವಾಗಲಿ ಉಳಿದು ಬೆಳೆದು ಬಂದಿಲ್ಲ. ವಿವಿಧ ಹಂತದ ಮೀನುಗಾರಿಕೆಯಂತೂ ಕಣ್ಮರೆಯಾಗಿ ದಶಕಗಳೆ ಕಳೆದಿವೆ. ಆದರೆ ಅಘನಾಶಿಯ ದಂಡೆಯಲ್ಲಿ ಮಾತ್ರ ಈಗಲೂ ಈ ಬೇಸ್ತರ ಜನಾಂಗ ಈ ಎಲ್ಲಾ ವಿವಿಧತೆಯನ್ನು ಉಳಿಸ್ಕೊಂಡು ಬಂದಿದೆ. ಅಷ್ಟಕ್ಕೂ ಇದೆಲ್ಲ ಬಿಟ್ಟು ಕೊಟ್ಟರೆ ಜನಜೀವನಕ್ಕೆ ಪರಿಹಾರ ಮತ್ತು ನೌಕರಿಯ ಆಮಿಷ ಕೂಡಾ ಬರುತ್ತಿದೆ.

ಕುಚ್ಯೋದ್ಯವೆಂದರೆ ನಾಲ್ಕಕ್ಷರವೂ ಬಾರದ ನಿರಕ್ಷರಿಯಾದ ಹದಿನೈದು ಸಾವಿರ ಮೀನುಗಾರರಿಗೆ ಯಾವ ನೌಕರಿಯೆಂದು ಕೊಡುತ್ತೀರಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಅಷ್ಟಕ್ಕೂ ನದಿಯನ್ನೇ ನಂಬಿಕೊಂಡು ಮೀನು, ಚಿಪ್ಪು, ತರಹೇವಾರಿ ಬಳಚು, ಸಮುದ್ರ ಜೀವಿಗಳ ಬೇಟೆಯಾಡಿಕೊಂಡಿರುವವರಿಗೆ ಸೂಕ್ತವಾದ ಕೆಲಸ ಮತ್ತು ಕೈತುಂಬ ಸಂಬಳವನ್ನು ಈಗಾಗಲೇ ಗಾಂವಕರ ಮೈನ್ಸ್, ಸಾಣಿಕಟ್ಟಾ ಉಪ್ಪು ಕೇಂದ್ರಗಳು, ಸಾಯಿ ಎಕ್ಸ್ ಫೊರ್ಟ್ಸ್ ಕಂಪೆನಿಗಳು ಕೊಡುತ್ತಲೇ ಇದೆಯಲ್ಲ. ಒಂದು ಕಂಪೆನಿ ಸರಕಾರಕ್ಕೆ ವರ್ಷಕ್ಕೆ ಕೋಟಿ ರೂಪಾಯಿಗೂ ಮಿಗಿಲು ಕೇವಲ ತೆರಿಗೆ ಕಟ್ಟುತ್ತದೆಯೆಂದರೆ ಅಲ್ಲೇನು ಬರೀ ಅಂಗಡಿ ನಡೆಸುತ್ತಿಲ್ಲ. ಬದಲಿಗೆ ಮೀನುಗಾರಿಕೆಯ ಅಷ್ಟೂ ಮಜಲಿನ ನಿರ್ದಿಷ್ಟ, ವ್ಯವಸ್ಥಿತ ಕೈಗಾರಿಕೆಯೇ ನಡೆಯುತ್ತಿದೆ. ಅಸಲಿಗೆ ಚಿಪ್ಪು ತೆಗೆಯುವ ಒಂದು ಸ್ಥಳವೇ ಸಾಕು ಅಲ್ಲಿನ ಬ್ರಹತ್ ಮತ್ಸೋದ್ಯಮದ ದರ್ಶನವಾಗಲಿಕ್ಕೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮತ್ಸೊದ್ಯಮ, ತದಡಿ, ನುಶಿಕೋಟೆ, ತೋರ್ಕೆ, ಮಾದನಗೇರಿಗಳಲ್ಲಿ ದಿನವಹಿ ನಡೆಯುತ್ತಿರುವ ಉಸುಕಿನ ಉದ್ಯಮ, ಅದರ ನಿರ್ವಹಣೆ, ನದಿ ನೀರಿನಿಂದೆತ್ತಿ ದೋಣಿಗಳ ಮೂಲಕ ದಂಡೆಗೆ ಸುರಿದು, ಮತ್ತೆ ಅಷ್ಟೆ ಒಪ್ಪವಾಗಿ ಅದನ್ನು ಟಿಪ್ಪರುಗಳಿಗೇರಿಸಿ, ತುಂಬಾ ವ್ಯವಸ್ಥಿತವಾಗಿ ನಡೆಯುವ ಈ ಕೆಳಹಂತದ ಕೂಲಿಕಾರಿಕೆಯಿ೦ದ ಹಿಡಿದು ಅದು ಬಂದರು ವಹಿವಾಟಿನ ಪ್ರದೇಶದಿಂದ ಮುಖ್ಯ ಸಾರಿಗೆ ಕ್ಷೇತ್ರವನ್ನು ತಲುಪುವವರೆಗೂ ಅದರದ್ದೇ ಆದ ಸರಪಣಿ ವ್ಯವಹಾರದ ಕ್ರಮವಿದೆ. ಈ ಎಲ್ಲಾ ಲಿಂಕುಗಳು ತಪ್ಪುವ ಮೂಲಕ ಎಷ್ಟು ಜನರಿಗೆ ಪರಿಣಾಮ ಬೀರಲಿದೆ ಯೋಚಿಸಿ.

ಹೀಗೆ ಒಂದಿಲ್ಲ ಒಂದು ಕಾಲದಲ್ಲಿ ಈ ದಂಡೆಯಗುಂಟ ಬದುಕಿರುವ ಮೀನುಗಾರರಿಗೆ ನಿರಂತರ ಉದ್ಯೋಗಕ್ಕೆ ಬೆನ್ನೆಲುಬಾಗಿರುವ ಮತ್ಸೊದ್ಯಮದೊಂದಿಗೆ ಅಘನಾಶಿನಿ ತನ್ನ ಬೇಕು ಬೇಡಗಳನ್ನೂ ಕೂಡಾ ಈ ಮೀನುಗಾರರೊಂದಿಗೆ ಹಂಚಿಕೊಂಡಿರುವ ಪರಿ ಅನನ್ಯ. ಆದರೆ ಒಂದೇ ಒಂದು ಉಷ್ಣ ವಿದ್ಯುತ್ ಸ್ಥಾವರ ಈ ಎಲ್ಲಾ ನಂಬಿಕೆ, ಅನುಬಂಧ, ನದಿಯೊಂದಿಗಿನ ಮೂಲಭೂತ ಜೀವನವನ್ನು ರೂಢಿಸಿಕೊಂಡಿರುವವರ, ಮೀನುಗಾರರ, ಬೆಸ್ತರ, ಉಳಿದಂತೆ ಪರೋಕ್ಷವಾಗಿ ನದಿಯ ದಂಡೆಯಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿ೦ದ ಬದುಕು ಕ೦ಡುಕೊಂಡಿರುವವರನ್ನು ಬೀದಿಗೆ ಬಿಸಾಡಲಿದೆ. ಇದೆಲದಕ್ಕಿಂತಲೂ ಕೇವಲ ಯೊಜನೆಗಳ ಭಾರದಿಂದ ನಲುಗುತ್ತಿರುವ ಉತ್ತರ ಕನ್ನಡದ ಪರಿಸರಕ್ಕೆ ಈ ಯೋಜನೆಯಿಂದ ಯಾವುದೇ ಉಪಯೋಗವಂತೂ ಖಂಡಿತಾ ಇಲ್ಲ. ಆದರೆ ಮತ್ತೆ ಅಳಿದುಳಿದ ಕಾಡು, ನಾಡು, ಜನಜೀವನ, ಪರಿಸರ ಮಾಲಿನ್ಯ ಸೇರಿದಂತೆ ಆಘಾತಗಳು ಎರವಾಗುತ್ತಲೇ ಇರುವುದನ್ನು ನೋಡಿದರೆ ನಿಜಕ್ಕೂ ಉತ್ತರ ಕನ್ನಡ ಜಿಲ್ಲೆ ಯಾವುದೋ ಪಾಪ ಮಾಡಿರಲೇಬೇಕು ಅಥವಾ ತೀರ ಬಗೆಯರಿಯಲಾಗದ ಶಾಪಕ್ಕೊಳಗಾಗಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.
*****
ಕೃಪೆ: ತರಂಗ-ವಾರಪತ್ರಿಕೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.