ಏಕಾಂಗಿ

ಮೂರ್ತಿಗೆ ಈಚೆಗೆ ವಿವರಿಸಲಾಗದ ಆತಂಕ ಹೆಚ್ಚಾಗ ತೊಡಗಿದೆ. ನಾಡಿನ ಖ್ಯಾತ ನಾಸ್ತಿಕ ಬುದ್ಧಿಜೀವಿಯೆಂದು ಮೊದಮೊದಲು ಹೆಮ್ಮೆಯಿಂದ ಬೀಗುತ್ತಿದ್ದರೂ ಈಚೆಗೆ ಅಧೀರತೆ ಹೆಚ್ಚಾಗತೊಡಗಿ, ಮಾತಿನಲ್ಲಿ ಮೊದಲಿದ್ದ ಆತ್ಮವಿಶ್ವಾಸ ಕಡಿಮೆಯಾಗಿ ಬಿಟ್ಟಿದೆ. ಎರಡು ದಿನದ ಹಿಂದೆ ತಾನೆ ತನ್ನ ಐವತ್ತು ವರ್ಷ ಆಚರಿಸಿಕೊಂಡಿದ್ದರು. ಬ್ರಹ್ಮಚಾರಿಯ ಜೀವನದಲ್ಲಿ ಹುಟ್ಟುಹಬ್ಬಕ್ಕೆ ವಿಶೇಷ ಅರ್ಥ ತಲ್ಲಣ ಎರಡು ಇರುತ್ತದೆ ಎಂದು ಮೂರ್ತಿ ಆ ಸಂಜೆ ಗುಂಡಿನ ಗುಂಗಿನಲ್ಲಿ ದೊಡ್ಡದಾಗಿ ಮಾತನಾಡುತ್ತಿದ್ದರು. ಅವರು ಬಿಟ್ಟರೆ ಅಲ್ಲಿದ್ದವರೆಲ್ಲರೂ ವಿವಾಹಿತ ಗಂಡಸರೇ. ಮೂರ್ತಿಯವರ ಚಿಂತನೆಯ ಬರವಣಿಗೆಯ ಅಭಿಮಾನಿಗಳು.

’ವಿವಾಹಿತರಿಗಿಲ್ಲದ ವಿಶೇಷ ಏನದು ನಿಮಗೆ, ಮೂರ್ತಿ?’ – ಪ್ರಶ್ನೆ ಕೇಳಿದವರು ಗಣಪತಿ. ಕಟ್ಟಾ ಮಾರ್ಕ್ಸ್‌ವಾದಿ ಸರ್ಕಾರಿ ಅಧಿಕಾರಿ. ಮಾತಿನಲ್ಲಿ ಅಣಕವಿತ್ತು. ಆದರೆ, ಮೂರ್ತಿ ತುಂಬ ಆಳವಾದ ಪದರಗಳುಳ್ಳ ಮನುಷ್ಯನಾದ್ದರಿಂದ ಏನೊ ಆಳವಾದ ಹೊಳೆಯೇ ಈ ಹೇಳಿಕೆಯಲ್ಲಿರಬಹುದೆಂಬ ಅನುಮಾನವೂ ಇತ್ತು ಆ ಮಾತಿನಲ್ಲಿ.

ವಿಶೇಷವೇ? ಮಕ್ಕಳನ್ನು ಪಡೆದಾತ ತಾನು ಮಕಳಲ್ಲಿ ಮುಂದೆಯೇ ಬಾಳುತ್ತೇನೆ ಎಂದು ನಂಬುತ್ತಾನೆ. ಆದರೆ ಬ್ರಹ್ಮಚಾರಿಗೆ ಪ್ರತಿ ವರ್ಷದ ಹುಟ್ಟು ಹಬ್ಬವೂ ತಾನು ನಾಶವಾಗುವುದರ, ನಿರ್ನಾಮವಾಗುವುದರ ಸೂಚನೆ. ಮೂರ್ತಿ ನಿಧಾನಕ್ಕೆ ವಿಸ್ಕಿ ಗುಟುಕರಿಸುತ್ತಾ ಹೇಳಿದರು. ಕಣ್ಣಾಲಿಗಳಲ್ಲಿ ಅರ್ಧ ನೀರಿತ್ತು. ವಿವರಿಸಲಾಗದ ಭಯವಿತ್ತು. ಅಕ್ಕಕ್ಕೆ, ಪಕ್ಕಕ್ಕೆ, ಎದುರಿಗೆ ಎಲ್ಲವೂ ಬಹು ಅಂತಸ್ತಿನ ಕಟ್ಟಡಗಳೇ. ಮೂರ್ತಿಯದೊಂದು ಮಾತ್ರ ಹಳೆಯ ಕಾಲದ ಸಣ್ಣ ಮನೆ. ಹಠದಿಂದ ಮೂರ್ತಿ ಅದನ್ನು ಉಳಿಸಿಕೊಂಡಿದ್ದರು. ವೈಶಾಖ ಪೂರ್ಣಿಮೆಯ ದಿನ ಮೂರ್ತಿ ಹುಟ್ಟಿದ್ದರಿಂದ ಅಂದೇ ಅದನ್ನು ಮೂರ್ತಿ ಸಂಭ್ರಮದಿಂದ ಆಚರಿಸುತ್ತಿದ್ದರು. ರಾತ್ರೆ ಹನ್ನೊಂದುವರೆಯಾಗಿತ್ತು. ಬೀದಿಗಳಲ್ಲಿ ಬಿಕೋ ಎನ್ನುವ ಮೌನ. ಸೆಖೆ. ಸೇರಿದ್ದವರು ಹತ್ತು, ಹನ್ನೆರಡು ಜನ. ವಿಸ್ಕಿ ಧಾರಳವಾಗಿ ಹರಿಯ ತೊಡಗಿತ್ತು. ಮೂರ್ತಿ ಎಂದಿಗಿಂತ ಹೆಚ್ಚಾಗಿ ಕುಡಿದಂತಿತ್ತು. ನಿರರ್ಗಳ, ಸ್ಪಷ್ಟ ಮಾತಿಗೆ ಹೆಸರಾಗಿದ್ದ ಮೂರ್ತಿಯ ಮಾತುಗಳು ಈ ದಿನ ವಾಕ್ಯದ ಅರ್ಧಕ್ಕೇ ನಿಂತು ಬಿಡುತ್ತಿತ್ತು. ಒಗಟಿನ ಥರ, ರೂಪಕದ ಥರ ವಾಕ್ಯಗಳು ಕೇಳಿಸುತ್ತಿದ್ದವು.

’ಮೂರ್ತಿ, ನಿನಗೆ ಯಾಕೆ ಈ ಥರದ ಯೋಚನೆ? ನಿನ್ನ ಮಕ್ಕಳು ಕೂಡಾ ಎಲ್ಲೊ ಯಾವುದೋ ಬಸ್ ಸ್ಟಾಂಡ್‌ನಲ್ಲಿ ಕುಯ್ಯೊ ಮರ್ರೊ ಎಂದು ಅಳುತ್ತಿರಬೇಕು’ ಎಂದು ಮೂರ್ತಿಯ ಹಳೆಯ ಗೆಳೆಯ ಪೀಟರ್ ಹೇಳಿದಾಗ, ಒಮ್ಮೆಗೆಯೇ ಮೂರ್ತಿ ವ್ಯಗ್ರರಾಗಿಬಿಟ್ಟರು. ’ರ್‍ಯಾಸ್ಕಲ್, ಹಾಗೆ ಮಾತನಾಡಬೇಡ ನನ್ನ ಬಗ್ಗೆ ಎಂದು ಎಷ್ಟು ಸಲ ಹೇಳಿಲ್ಲ ನಿನಗೆ?’ ಎಂದು ಹೊಡೆಯುವವರಂತೆ ಅವನ ಕಡೆಗೆ ನುಗ್ಗಿದರು. ಅವನು ತೂರಾಡುತ್ತಾ ಒಳಗೆ ಇನ್ನೊಂದು ರೂಮಿಗೆ ಓಡಿಹೋದ. ಉಳಿದವರು ಚಪ್ಪಾಳೆ ಹೊಡೆದು ನಕ್ಕರು. ಮೂರ್ತಿ ಮಾತ್ರ ಗಂಭೀರವಾಗಿಬಿಟ್ಟರು. ಅವರೊಳಗೆ ಯಾವುದೋ ಅತಿ ಸೂಕ್ಷ್ಮವಾದದ್ದನ್ನುಪೀಟರ್ ಮುಟ್ಟಿ ಚುಟುಕು ಮುಳ್ಳಾಡಿಸಿದಂತೆ ಅತ್ತಿತ್ತ ಹೊರಳಿದರು. ಕೂತಿದ್ದ ಲಾನ್‌ನ ಹಸಿರು ಹುಲ್ಲು, ಗಿಡ, ಮರ, ಆಕಾಶ ಎಲ್ಲವೂ ಅವರನ್ನು ಅಣಕಿಸಿದಂತೆ ತೋರುತ್ತಿತ್ತು. ಹಾಗೇ ಕಣ್ಣು ಮುಚ್ಚಿ ಕೂತರು. ಎಷ್ಟೋ ಯುಗಗಳಾದಂತೆ, ದೀರ್ಘ ನಿದ್ರೆಯಲ್ಲಿ ಮುಳುಗಿ ಬಿಟ್ಟಂತೆ ಅನ್ನಿಸಿತು. ಉಳಿದವರು ಎದ್ದು ಒಳಗೆ ನಡೆದರು. ಯಾರ ನಡಿಗೆಯಲ್ಲೂ ಸ್ತಿಮಿತವಿರಲಿಲ್ಲ. ಮೂರ್ತಿ ಒಮ್ಮೆಗೇ ಎಚ್ಚೆತ್ತು ನೋಡಿದರು. ಸುತ್ತ ಯಾರೂ ಇಲ್ಲ. ಎದುರು ಮನೆಯಲ್ಲಿ ಎರಡನೆಯ ಮಹಡಿಯ ಇಂಜಿನಿಯರ್ ಜೋಶಿ ಬಾಲ್ಕನಿಯಿಂದ ಇವರ ಕಡೆಗೆ ಕೈ ಬೀಸಿದ. ಆತ ಇವರನ್ನೇ ಕುತೂಹಲದಿಂದ ದಿಟ್ಟಿಸುತ್ತಿದ್ದಂತೆ, ಅಭ್ಯಾಸ ಮಾಡುತ್ತಿದ್ದಂತೆ ಇತ್ತು. ಗಂಟೆ ಎಷ್ಟೆಂದು ತಿಳಿಯಲೂ ಹೆದರಿಕೆಯಾಗಿ ಎಷ್ಟೋ ದಶಕಗಳ ಹಿಂದೆಯೇ ಕೈಗಡಿಯಾರ ಕಟ್ಟುವುದನ್ನೇ ಮೂರ್ತಿ ಬಿಟ್ಟಿದ್ದರು. ಹನ್ನೆರಡೋ, ಹನ್ನೆರಡೂವರೆಯೋ ಆಗಿರಬೇಕು. ಎಲ್ಲರನ್ನೂ ಊಟಕ್ಕಾದರೂ ಎಬ್ಬಿಸೋಣ ಎಂದು ಎದ್ದು ಮುಂಚೆ ಬಾತ್ ರೂಮಿಗೆ ಹೋಗಲು ಹಿಂಭಾಗದ ಬಾತ್ ರೂಮಿಗೆ ಹೋಗುವಾಗ ಹಾಲಿನಿಂದ ಮಾತುಕತೆ ಕಿವಿಗೆ ಬಿತ್ತು. ಕದ್ದು ಕೇಳಲೆಂದು ನಿಂತರು.

ಪೀಟರ್ ಗಂಭೀರವಾಗಿ ಹೇಳುತ್ತಿದ್ದ – ಮೂರ್ತಿಗೆ ಏನಾಗಿದೆ ಅಂತ ಗೊತ್ತಿಲ್ಲ. ಕಚಡಾ ಹೆಂಗಸರನ್ನೆಲ್ಲಾ ತಂದು ಮನೇಲಿ ತಿಂಗಳು, ಎರಡು ತಿಂಗಳು ಇಟ್ಟುಕೋತಾನೆ. ಅವರ್‍ಯಾರು ರೂಮು ಬಿಟ್ಟು ಹೊರಗೆ ಕೂಡಾ ಬರೋದಿಲ್ಲ. ಆಮೇಲೆ ಅವರು ಎಲ್ಲಿ ಹೋಗ್ತಾರೋ? ಏನೋ? ಆಮೇಲೆ ಇನ್ಯಾರೋ ಬಂದಿರ್‍ತಾರೆ. ಇವನಿಗೆ ಅಂಥೋರನ್ನ ಯಾರು ಸಪ್ಲೈ ಮಾಡ್ತಾರೋ ಏನೋ ಗೊತ್ತಾಗೋದೇ ಇಲ್ಲ. ಯಾವ ಜಾತಿ, ಕುಲ, ಭಾಷೆ ಅಂತ ತಿಳಿಯೋದು ಕಷ್ಟವೇ. ಧಂಡಿ ಸೂಳೆಗಾರಿಕೆ ಮಾಡ್ತಾನೆ. ಸಂತಾನ ಮುಂದುವರೆಸೋರಿಗೆ ಮಾತ್ರ ದೇವರು ಬೇಕು ಅಂತ ಅದನ್ನು ದೊಡ್ಡಾದಾಗಿ ತತ್ವ ಕೊಡ್ತಾನೆ. ಉಳಿದವರು ಏಕೋ ಚಪ್ಪಾಳೆ ಹೊಡೆದು ನಕ್ಕರು. ತುಂಟ ಗಣಪತಿ ಏನೋ ವ್ಯಗ್ರವಾದ ಪೋಲಿ ಜೋಕು ಹೊಡೆದಿರಬೇಕು. ತನಗೆ ಅದು ಕೇಳಿಸದೇ ಹೋಯಿತಲ್ಲ ಎಂದು ಮು‌ಊರ್ತಿ ತಮ್ಮ ಮೇಲೆಯೇ ಕೃದ್ಧರಾದರು. ಶ್ ಎಂದು ಸುಮ್ಮನಿರಿಸಿ ಪೀಟರ್ ಮುಂದುವರೆಸಿದ.

’ನಿಮಗೆ ಗೊತ್ತಿರೋ ಹಾಗೆ ನಾನೇ ಮೂರ್ತಿಗೆ ಆಪ್ತ ಸ್ನೇಹಿತ. ನನ್ನ ಹತ್ತಿರ ಕೂಡಾ ಆತ ತನ್ನ ಲೈಂಗಿಕ ಜೀವನದ ವಿವರಗಳನ್ನು, ಗುಟ್ಟುಗಳನ್ನು ಹೇಳಲ್ಲ. ನಾನು ಮೊದಲಿಗೆ ಕೆದಕ್ತಾ ಇದ್ದೆ. ಈಗ ಅದನ್ನೂ ಬಿಟ್ಟು ಬಿಟ್ಟಿದೀನಿ. ಹೆಂಗಸರನ್ನು ಹೇಗೆ ಬೆನ್ನು ಹತ್ತಿದರೆ ಹೇಗೆ ಅಂತ ಮೊನ್ನೆ ಕೇಳಿದೆ. ’ನನ್ನ ನೈತಿಕತೆ ನಿನಗೆ ಗೊತ್ತಾಗಲ್ಲ ಪೀಟರ್’ ಅಂತ ಬೈದು ಕೂರಿಸಿಬಿಟ್ಟ ಅಯೋಗ್ಯ’ – ಈ ವಾಕ್ಯ ಮುಗಿಯುವ ಹೊತ್ತಿಗೆ ಮೂರ್ತಿ ಒಳಗೆ ಬಗ್ಗಿ ನೋಡಿದರೆ, ಕಿಟಕಿ ಸಂದಿಯಿಂದ ಪೀಟರ್ ಬೆತ್ತದ ಕುರ್ಚಿಯ ಮೇಲೆ ಕೂತು ಗಂಭೀರವಾಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಹಾಗೆ ಮಾತನಾಡುತ್ತಿದ್ದ. ಉಳಿದವರೆಲ್ಲ ನೆಲದ ಮೇಲೆ ದಿವಾನ್‌ಗಳ ಮೇಲೆ ಅಡ್ಡಾದಿಡ್ಡಿಯಾಗಿ ಬಿದ್ದಿದ್ದರು. ಹೊಗೆ ರೂಮಿನಲ್ಲಿ ತುಂಬಿ ಹೋಗಿತ್ತು. ಮಂಜಿನ ಮಧ್ಯೆ ಅವರು ಅಸ್ಪಷ್ಟವಾಗಿ, ಕದಡಿ ಹೋಗಿದ್ದ ಆಕೃತಿಗಳಂತೆ ಮಾತ್ರ ಕಾಣುತ್ತಿದ್ದರು. ಅವರೆಲ್ಲ ತನ್ನ ಅಭಿಮಾನಿಗಳೇ ತಾನೆ? ಮೂರ್ತಿ ನಕ್ಕರು.

ಗಣಪತಿ ಎದ್ದುನಿಂತು ನಾಟಕೀಯವಾಗಿ ಹೇಳಿದ – ’ಬಿಡ್ರಮ್ಮ, ವಿಷಯ ಇದು ನಮ್ಮ ಗುರು ವಿಷಯ ಶಾನೆ ಸೀರಿಯಸ್. ಅವನ ಬೆಡ್ ರೂಮ್ ವಿಚಾರ ನಮಗ್ಯಾಕೆ? ನಮಗೆ ಅವನ ಲೈಬ್ರರಿ ವಿಚಾರ, ಈ ಗುಂಡು ಹಾಕೋ ಜಾಗ ಲಾನ್ ವಿಚಾರ ಸಾಕು’ ಎಂದ.

ಮೂಲೆಯಲ್ಲಿ ಕುಳಿತು ಕೋಳಿಯಂತೆ ಜ್ಯೂಕರಿಸುತ್ತಾ ಕೂತಿದ್ದ ಶ್ರೀಧರ ಚಪ್ಪಾಳೆ ಹೊಡೆದು ಎದ್ದು ನಿಂತ. ಅವನು ಕುಡಿದಾಗ ಹುಚ್ಚುಚ್ಚಾಗಿ ಆಡುವುದು ಪ್ರಸಿದ್ಧವಾದ್ದರಿಂದ ಇಡೀ ಗುಂಪು ಬೆಚ್ಚಿದಂತೆ ಕಂಡಿತು. ಅವನನ್ನು ನಿಯಂತ್ರಣ ಮಾಡಿದರೆ ಮತ್ತಷ್ಟು ಗಲಾಟೆ ಮಾಡುತ್ತಾನೆ ಎಂದು ಗೊತ್ತಿದ್ದರಿಂದ ಸುಮ್ಮನೆ ಕೂತರು. ಯ್ಯಕ್ ಯ್ಯಕ್ ಎಂದು ಎರಡು ಸಾರಿ ಬಿಕ್ಕಳಿಸಿದ. ಮೂರ್ತಿಗೂ ಒಳಗೆ ಹೋಗಿ ಕೂರಬೇಕೆನ್ನಿಸಿತು. ತನ್ನ ಬಗ್ಗೆ ಚರ್ಚೆ ಆಗುತ್ತಿರುವಾಗ ತಾನೂ ಅಲ್ಲಿದ್ದರೆ ಒಳ್ಳೆಯದು ಎನ್ನಿಸಿತು. ತಾನು ಇರುವಾಗ ಅವರು ಮುಕ್ತವಾಗಿ ಚರ್ಚಿಸುವುದಿಲ್ಲ ಎಂದು ಹೊಳೆದು ಅಲ್ಲೇ ಗೋಡೆಗೆ ಒರಗಿ ನಿಂತರು. ಮಾತನ್ನು ಮನಸ್ಸಿನ ಒಂದು, ಸಣ್ಣ ಭಾಗ ಮಾತ್ರ ಕೇಳುತ್ತಿತ್ತು. ಉಳಿದದ್ದು ಎಲ್ಲೋ ಅಶಾಂತವಾಗಿ ಅಲೆದಾಡುತ್ತಿತ್ತು. ಕೇಳಿಸಿಕೊಂಡ ಮಾತುಗಳೇ ಅಲೆದಾಡುತ್ತಿದ್ದ ಮನಸ್ಸನ್ನು ಮತ್ತಷ್ಟು ದೂರ ತಳ್ಳಿಬಿಟ್ಟಿತು. ಯ್ಯಾಕ್, ಯ್ಯಾಕ್ ಎಂದು ನಿಲ್ಲದ ಬಿಕ್ಕಳಿಕೆಯ ಮಧ್ಯದಲ್ಲೇ ಏನೋ ಹೇಳಲು ಪ್ರಯತ್ನಿಸಿ ವಿಫಲನಾಗಿ ಮತ್ತೆ ಎರಡು ನಿಮಿಷ ನೀರು ಕುಡಿದು ಸುಧಾರಿಸಿಕೊಂಡು ಶ್ರೀಧರ ಮಾತನಾಡತೊಡಗಿದ. ಒಮ್ಮೆಗೇ ಸುತ್ತಲಿನ ಎಲ್ಲ ನಾಯಿಗಳೂ ಬೊಗಳಲು ಶುರು ಮಾಡಲು ಮೂರ್ತಿ ಬೀದಿ ಕಡೆ ನೋಡಿದರು. ಯಾವುದೋ ಒಂದು ಗೂಳಿ ತಪ್ಪಿಸಿಕೊಂಡು ಬಂದು ಬಿಟ್ಟಿತ್ತು. ನಾಯಿಗಳು ಅದನ್ನು ಇಟ್ಟಾಡಿಸುತ್ತಿದ್ದವು. ಗೂಳಿ ಬೆದರಿ ಅತ್ತ ಇತ್ತ ಓಡಿ ಆಗಾಗ ತೀರಾ ಮೇಲೇರಿ ಬಂದ ನಾಯಿಗೆ ಹಾಯಲು ಯತ್ನಿಸಿ ಅಡ್ಡಾದಿಡ್ಡಿಯಾಗಿ ಹಾಯುತ್ತಿತ್ತು. ಗಂಟೆ ಗಣಗಣ ಎಂದು ಶಬ್ಚ ಮಾಡುತ್ತಿತ್ತು. ಟಕ್ ಟಕ್ ಎಂದು ಎದುರಿಗಿನ ಕಟ್ಟಡದ ದೀಪಗಳು ಬಂದು. ಒಂದೆರಡು ಮುಖಗಳು ಕಂಡವು ಕಿಟಕಿಗಳಲ್ಲಿ. ಒಂದು, ನಿಸ್ಸಂದೇಹವಾಗಿ ಜೋಶಿಯದೇ ಎಂದುಕೊಂಡರು ಮೂರ್ತಿ. ’ನಿಮ್ಮ ನಂದಿಗೆ, ಶಿವನ ವಾಹನಕ್ಕೆ ನಾಯಿಗಳು ಕೂಡ ಕಚ್ತಾ ಇವೆ ಜೋಶಿ’ ಎಂದು ಕೂಗಿ ಹೇಳಬೇಕೆನ್ನಿಸಿತು. ತೀರಾ ಒರಟಾಗಿ ಬಿಡುತ್ತದೆಂದು ಭಯವಾಗಿ ಎಲ್ಲೇ ಮತ್ತಷ್ಟು ಮರೆಗೆ, ಸಂಪಿಗೆ ಮರದ ಮರೆಗೆ ಸರಿದರು. ಈ ನಾಯಿಗಳ ಬೊಗಳುವಿಕೆ, ಗಲಾಟೆ ಕೂಡಾ ಈ ಮೂರ್ತಿಗೆ, ಮನೆಗೆ ಸಂಬಂಧಿಸಿದ್ದೇ ಇರಬೇಕೆಂದು ಹೊರಗೆ ತಲೆಹಾಕಿದ ಜೋಶಿಗೆ ನಿರಾಶೆಯಾಗಿ ಟಕ್ ಎಂದು ದೀಪ ಆರಿಸಿದರು. ಬೆದರಿದಂತೆ ಗೂಳಿ ಧಡಧಡನೆ ಇನ್ನೊಂದು ರಸ್ತೆಗೆ ಓಡಿ ಹೋಯಿತು. ನಾಯಿಗಳ ಹಿಂಡು ಹಿಂಬಾಲಿಸಿತು. ಮೂರ್ತಿಯವರ ಕರುಳು ಚುರುಕ್ಕೆಂದಿತು. ಎಷ್ಟು ಹೊತ್ತಾಯಿತು ತಾನು ಕಡೆಯ ವಾಕ್ಯ ಕೇಳಿ ತಿಳಿಯಲಿಲ್ಲ. ಮತ್ತೆ ಎಚ್ಚರದಿಂದ ಕಿವಿಗೊಟ್ಟು ಕೇಳಿದರು. ಹಾಗೇ ಕಿಟಕಿ ಸಂದಿನಿಂದ ಬಗ್ಗಿಯೂ ನೋಡಿದರು. ಅವರು ಮುಂಚೆ ನೋಡಿದ ಭಂಗಿಗಳಿಗಿಂತ ಎಲ್ಲರೂ ಬೇರೆ ರೀತಿಯಲ್ಲಿದ್ದಂತೆ ಕಂಡಿತು. ಶ್ರೀಧರ ದಿವಾನ್ ಅಂಚಿಗೆ ಪದ್ಮಾಸನ ಹಾಕಿ ಕೂತು ಮಾತನಾಡುತ್ತಿದ್ದ.

ಅದೆಲ್ಲಾ ಬಿಡಿ, ನಾನು ಹೇಳೋ ಮುಖ್ಯ ವಿಚಾರ ಅಂದ್ರೆ.. ಯ್ಯಕ್, ನಾನು ನಾಸ್ತಿಕ ಆದದ್ದೇ ಮೂರ್ತಿ ಪುಸ್ತಕ ಓದಿ. ಮಹಾ ಟ್ರೆಡೀಷನಲ್ ಫ್ಯಾಮಿಲೀಯಿಂದ ಬಂದೋನು ನಾನು. ಮೂರ್ತಿ ಪುಸ್ತಕ ಓದಿ ಅದರಲ್ಲೂ ಅವರ ಪುಸ್ತಕ ’ದೇವರನ್ನು ಧೂಸ ಮಾಡಿ’ ಓದಿ ದೇವರ ಮನೇಲಿ ಉಚ್ಚೆ ಹೊಯ್ದೊನು ನಾನು. ಯಾರೂ ಇಲ್ಲದಾಗ ಅಂತ ಇಟ್ಟುಕೋಳಿ, ಅಫ್‌ಕೋರ್ಸ್ ಎಲ್ಲಿದೆ ಆತ್ಮ? ಪುಸ್ತಕ ಓದಿ ಪೂರ್ಣವಾಗಿ ನಾಸ್ತಿಕ ಆದೆ ಕಣ್ರೋ. ಆದರೆ, ಈಚೆಗೆ ಯಾಕೋ ಮೂರ್ತಿ ಬಗ್ಗೆ ಅನುಮಾನ ಬರ್ತಿದೆ ಕಣ್ರೋ. ’ಆ ಸೂಳೇಮಗ ದೇವರಿಗೆ ಹೇಳಿದೆ, ಯಾಕೆ ಜನರನ್ನು ಈ ರೀತಿ ಕಾಡ್ತೀಯ’ ಅಂತ ಹೇಳಿದೆ ದೇವರಿಗೆ ಅಂತ ಮೊನ್ನೆ ಮೂರ್ತಿ ಹೇಳಿದ್ರು ಯ್ಯಕ್. ಎರಡು ಸಾರಿ ಆ ಡೈಲಾಗ್ ರಿಪೀಟ್ ಮಾಡಿದ್ರು. ದೇವರು ಇದಾನೆ ಅಂತ, ತಾನು ಆತನ ವಿರೋಧಿ ಅಂತ ಮೂರ್ತಿ ನಂಬೋ ಹಾಗೆ ಕಾಣ್ತಾನೆ. ಅಯ್ಯೋ ಯ್ಯಕ್, ಏನ್ರೋ ಗತಿ ಅಗ ನಮ್ಮಂಥೋರದು? ಅಯ್ಯೋ ಯ್ಯಕ್..’ ಎಂದು ಗೋಳಾಡಲಾರಂಭಿಸಿದ. ಅದು ಗಂಭೀರವೋ, ತಮಾಷೆಯೋ ಯಾರಿಗೂ ಹೊಳೆಯಲಿಲ್ಲ.

ಮೂರ್ತಿಯವರಿಗೆ ಮಾತ್ರ ಶಾಕ್ ಹೊಡೆದಂತಾಯಿತು. ದಿಕ್ಕು ತಪ್ಪಿ ಅಲೆದಾಡುತ್ತಿದ್ದ ಎರಡು ವೈರುಗಳು ಥಟಕ್ಕನೆ ಕಚ್ಚಿಕೊಂಡಂತೆ. ತಲೆ ಗಿರ್ರೆಂದಿತು. ಎಂಥಾ ಮಾತು ಶ್ರೀಧರನದು? ಎಂಥಾ ಮರ್ಮಘಾತಕ ಹೇಳಿಕೆ ಇದು?

ಮೂರ್ತಿ ತೂರಾಡುತ್ತಾ ಒಳಗೆ ಬಂದರು. ಎಲ್ಲರೂ ಮೌನವಾಗಿ ಅವರ ಕಡೆಗೇ ನೋಡಿದರು. ಅಚಿಥಾ ಮತ್ತಿನಲ್ಲೂ ತನ್ನ ಮಾತು ಅವರಿಗೆ ಕೇಳಿಸಿರಬಹುದೇ ಎಂದು ಗಾಬರಿಯಾಗಿ, ಕುಡಿದು ಪೂರಾ ಚಿತ್ತಾಗಿರುವವನಂತೆ ಶ್ರೀಧರ ಕುತ್ತಿಗೆಯನ್ನು ಎಡಕ್ಕೆ ವಾಲಿಸಿದ. ಮೂರ್ತಿ ಮೌನವಾಗಿ ಅವನನ್ನು ಎಬ್ಬಿಸಿದರು. ಹತ್ತು ನಿಮಿಷದಲ್ಲೆ ಊಟ ಮುಗಿದೇ ಹೋಯಿತು. ಮಧ್ಯೆ ಒಂದು ಮಾತೂ ಇಲ್ಲ. ಮೂರ್ತಿಯವರ ಮನಸ್ಸು ಮಾತ್ರ ಎಲ್ಲಿಯೋ ಇತ್ತು.
ಎಲ್ಲರೂ ಚಕಚಕನೆ ತಮ್ಮ ಸ್ಕೂಟರ್, ಲೂನಾ ಹತ್ತಿ ಹೊರಟರು. ಒಮ್ಮೆಗೇ ಏಳೆಂಟು ಗಾಡಿಗಳು ಶುರುವಾದಾಗ ಇಡೀ ಬೀದಿ ಮತ್ತೆ ಒದ್ದಾಡಿದಂತೆ ಕಂಡಿತು. ಮತ್ತೆ ಗೂಳಿ ಚಕ್ಕನೆ ಓಡಿ ಬಂದಿತು. ನಾಯಿಗಳ ಹಿಂಡು ಹಿಂದೆ. ಈ ಗಾಡಿಗಳ ಮಧ್ಯೆ ಅದು ನುಗ್ಗಿತು. ಒಂದಿಬ್ಬರು ’ಅರರೇ’ ಎಂದು ಬೆದರಿ ಲೂನಾಗಳನ್ನು ದಬ್ಬಿ ಹಾಕಿಕೊಂಡು ಕೆಳಕ್ಕೆ ಬಿದ್ದು ಬಿಟ್ಟರು. ನಾಯಿಗಳು ಹಿಂಬಾಲಿಸಿದವು. ಗದ್ದಲಕ್ಕೆ ಮತ್ತೆ ಎದುರಿನ ಕಟ್ಟಡದಲ್ಲಿ ’ಟಕ್’ ’ಟಕ್’ ಎಂದು ದೀಪ ಹತ್ತಿದವು. ಗಾಡಿಗಳು ಹೊರಟವು.

ಮೂರ್ತಿಯವರಿಗೆ ಎಚ್ಚರವಾಯಿತು. ಕತ್ತಲ ಅಧೋಲೋಕದಲ್ಲಿ ವಿಚಿತ್ರ ಸ್ವಪ್ನಗಳಲ್ಲಿ ಮುಳುಗಿ ಹೋಗಿದ್ದವರಿಗೆ ಇದ್ದಕ್ಕಿದ್ದಂತೆ ಎಲ್ಲಿಗೊ ರೋಯ್ಯನೆ ಎಸೆದು ಬಿಟ್ಟಂತೆ ಎಚ್ಚರವಾಯಿತು. ಅಯ್ಯೋ, ದೀಪವೇಕೆ ಬಂತು? ಯಾರಲ್ಲಿ? ಯಾರು ಆ ಕತ್ತಲ ಮೂಲೆಯಲ್ಲಿ ಬೆಂಕಿಯ ಮರದಂತೆ ನಿಂತವರು? ಅಯ್ಯೋ? ಯಾರು ನೀನು? ಕುತ್ತಿಗೆಯನ್ನು ಉಸಿರುಕಟ್ಟಿಸುವಂತೆ ಹಿಸುಕುತ್ತಿದ್ದ, ಇದ್ದಕ್ಕಿದ್ದಂತೆ ಗಾಳಿಗಿಂತ ಹಗುರವಾಗಿ ದೀಪವಾಗಿ ಬಿಟ್ಟಿದ್ದವರು ಯಾರು? ಮೂರ್ತಿ ಝಗ್ಗನೆದ್ದು ಕೂತರು. ತಮ್ಮ ಮಂಚವೇ ಸಾವಿರ ಸೂರ್ಯನಂತೆ ಹೊಳೆಯುತ್ತಿದ್ದಂತೆ ದೀಪವಾರಿಸದೆ ತಾನೇಕೆ ಮಲಗಿದೆ? ಎನ್ನಿಸಿ ಮಂಚದ ಹತ್ತಿರವೇ ಇದ್ದ ಸ್ವಿಚ್ ಆರಿಸಿದರು. ಮೂಲೆಯಲ್ಲಿ ಯಾರೋ ಕೂತಂತೆ, ಚಿಕ್ಕ ಮಕ್ಕಳ ಹಾಗೆ ಭೀತಿಯಿಂದ ಅತ್ತಕಡೆಗೆ ನೋಡದೆಯೇ ಮೈಚಾಚಿದರು.

ಕನಸಲ್ಲೋ ಭ್ರಮೆಯಲ್ಲೋ ಅಥವಾ ವೈಚಾರಿಕ ಸಂಕಲ್ಪದಲ್ಲೋ ಮೂರ್ತಿ ಮತ್ತೆ ತೇಲತೊಡಗಿದರು. ಶ್ರೀಧರ ಅವರ ಮರ್ಮವೊಂದನ್ನೆ ಮೀಟಿ ಬಿಟ್ಟಿದ್ದ. ತನಗೆ ದೇವರ ಬಗ್ಗೆ ಅಷ್ಟೇಕೆ ಹುಚ್ಚು? ಅವನು ಇಲ್ಲವೆಂದು ಹೇಳುವ ಮತ್ತೆ ಮತ್ತೆ ಅದನ್ನು ಪ್ರತಿಪಾದಿಸುವ ಹುಚ್ಚು? ಕಣ್ಣು ಬಿಟ್ಟರು. ಸದ್ಯ, ದೊಡ್ದ ಕತ್ತಲೆಯ ಖಾಂಡಲಿ ಮುಳುಗಿಬಿದ್ದಂತೆ, ಅದರಲ್ಲೂ ತಾವು ಕೆಳಗೆ ಸಿಕ್ಕಿದಂತೆ.

ಈಚೀಚೆಗೆ ದೇವರು ಅವರಿಗೆ ನಿಜವಾಗ ತೊಡಗಿದ್ದ. ಆದರೆ, ಅವರು ಅವನನ್ನು ತಮ್ಮ ಶತ್ರು ಎಂದು ಭಾವಿಸತೊಡಗಿದ್ದರು. ಅಷ್ಟೆ ಬರೇ ನಾಸ್ತಿಕ ಸಾಹಿತ್ಯ ಓದಿ ಅದನ್ನೇ ಮತ್ತೆ ಭಾಷೆಯಲ್ಲಿ ಇಳಿಸುವ ತನಕ ಅವರಿಗೆ ಯಾವ ಸಮಸ್ಯೆಯೂ ಕಂಡಿರಲಿಲ್ಲ. ಆದರೆ, ಈಚೆಗೆ ತೀರಾ ಸ್ವಂತದ್ದೆ ಏನಾದರೂ ಹೇಳಬೇಕು ಎನ್ನಿಸಿ ಧಾರ್ಮಿಕ ಸಾಹಿತ್ಯವನ್ನು, ಅನುಭಾವಿ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡ ಹತ್ತಿದರು. ಅದರಿಂದ ಆದ ಪರಿಣಾಮ ಮಾತ್ರ ಬೇರೆಯೇ ಆದ ರೀತಿಯದಾಗಿತ್ತು. ಹೊರಗೆ ಹೇಳುತ್ತಿದ್ದ ವಾಕ್ಯಗಳು ಹಳೆಯವೇ ಆಗಿದ್ದರೂ, ಅದಕ್ಕೆ ಹೊಸ ರೀತಿ ತೀವ್ರತೆ, ಅರ್ಥ ಬಂದು ಬಿಟ್ಟಿತು. ಇದನ್ನು ಕೇಳುತ್ತಿದ್ದ ಅವರ ಅಭಿಮಾನಿಗಳಿಗೆ ರೋಮಾಂಚನವಾಗುತ್ತಿತ್ತು. ಆದರೆ, ಅವರು ಅದನ್ನು ಗ್ರಹಿಸುತ್ತಿದ್ದ ರೀತಿಗೂ, ತಮಗೂ ಒಂದು ಸೂಕ್ಷ್ಮವಾದ ವ್ಯತ್ಯಾಸವೇನೋ ಬಂದು ಬಿಟ್ಟಿದೆ ಎಂದು ಮಾತ್ರ ಅವರಿಗೆ ಗೊತ್ತಾಗಿತ್ತು. ಅದೇನು, ಅದರ ಸ್ವರೂಪದ ಸೂಕ್ಷ್ಮತೆಗಳ ಬಗೆಗೆ ಮಾತ್ರ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಅದರ ಬಗ್ಗೆ ಯೋಚಿಸಲು, ತರ್ಕೀಕರಿಸಲು ಕೂಡಾ ಹೆದರುತ್ತಿದ್ದರು. ಭಾವನಾ ಜಗತ್ತಿನ ಸೂಕ್ಷ್ಮ ವ್ಯತ್ಯಾಸವಾಗಿ ಪ್ರಾರಂಭವಾದದ್ದು, ಅದು ಅಂತಿಮವಾಗಿ ಬೌದ್ಧಿಕ ಜಗತ್ತಿಗೂ ಇಳಿಯುತ್ತಿದ್ದುದು ಅವರಿಗೂ ಅನುಭವಕ್ಕೆ ಬಂದಿತ್ತು. ಆದರೆ, ಅದನ್ನು ಒಪ್ಪಿಕೊಳ್ಳಲು ಮಾತ್ರ ಸಿದ್ಧರಾಗಿರಲಿಲ್ಲ. ನಿದ್ರೆ ಏಕೋ ಭೀಕರವಾಗತೊಡಗಿತು.

ಕಣ್ಣು ಬಿಟ್ಟು ನೋಡಲು ಪ್ರಯತ್ನಿಸಿದರು. ಮೂಲೆಯಲ್ಲಿನ ಕುರ್ಚಿಯಲ್ಲಿ ಯಾರೋ ಕೂತಹಾಗಿತ್ತು. ಅಸ್ಪಷ್ಟ ಆಕಾರ, ಬೆಚ್ಚಿ ಅವರು ಯಾರು, ಯಾರದು ಎಂದರು. ಟಕ್, ಬೆಳಕು ಬಂತು. ಕೂತಿದ್ದವಳು ಕಲಾ.
’ನೀನು ಯಾಕೆ ಬಂದೆ, ಯಾವಾಗ ಬಂದೆ, ಹೇಗೆ….’ ಮಾತು ಒಂದೇ ಸಮವಾಗಿ ಹೊರಡುತ್ತಿತ್ತು. ಹೊರಡದೆ ಒದ್ದಾಡುತ್ತಿತ್ತು.
’ಸುಮ್ಮನೆ ಬಿದ್ಕೊಳಿ, ಸುಸ್ತು ಮಾಡಿಕೋ ಬೇಡಿ, ಪ್ರಶ್ನೆ ಕೇಳಿ. ಯಾಕೆ ಬಂದೆ ಅಚಿದ್ರೆ…. ಇಷ್ಟು ದಿನ ಜತೇಲಿ ಮಲಗಿಸಿಕೊಂಡು ಈಗ ಬೇಡ ಅಂದ್ರೆ ಹೋಗಿ ಬಿಡ್ತೀನಾ’. ಧ್ವನಿಯಲ್ಲಿ ಕಾಠಿಣ್ಯವಿತ್ತು. ನಿರ್ಧಾರವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಏನೋ ಒಂದು ಬಗೆಯ ಒಳಸಂಚಿದ್ದಹಾಗಿತ್ತು.
’ಏನೇ ಹಾಗಂದ್ರೆ, ಬಿಟ್ಟಿ ಮಲಗಿದಿಯೇನು ನೀನು, ಇಲ್ವಲ್ಲಾ. ದುಡ್ದು ತಗೊಂಡಿಲ್ವಾ’ ಮೆತ್ತಗೆ ಈ ಮಾತು. ಗಟ್ಟಿಯಾಗಿ ಹೇಳಲು ಸಾಧ್ಯವಾಗಲಿಲ್ಲ. ತಾನು ಎಷ್ಟೇ ಚೀರಿ ಹೇಳಿದರೂ ಕಲಾಳ ಗಂಟಲು ಅದನ್ನು ಮೀರುತ್ತದೆಂದು ಮೂರ್ತಿಗೆ ಚೆನ್ನಾಗಿ ಗೊತ್ತು. ಕಲಾ ಧಡಕ್ಕನೆ ಎದ್ದಳು. ಎದ್ದು ಧಡಧಡನೆ ಹೆಜ್ಜೆ ಹಾಕಿ ಬಂದು ಜುಟ್ಟು ಹಿಡಿದಳು.
’ಈವತ್ತು ತಾನೇ ಅಬಾರ್ಷನ್ ಮಾಡಿಸಿಕೊಂಡು ಬಂದಿದೀನಿ. ಸೀದಾ ಆಸ್ಪತ್ರೆಯಿಂದ್ಲೇ ಬರ್ತಿದೀನಿ ತಿಳ್ಕೊ’ – ಮೂಸುವಂತೆ ಮೈಯನ್ನು ಇನ್ನಷ್ಟು ಹತ್ತಿರ ಒಡ್ಡಿದಳು. ಆಸ್ಪತ್ರೆಗೆ ಮಾತ್ರ ವಿಶಿಷ್ಟವಾದ ಅನೇಕ ವಾಸನೆಗಳು ಬಂದು ಆವರಿಸಿಬಿಟ್ಟವು. ಅದು ನಿಜವಾಗಿ ಆಸ್ಪತ್ರೆಯ ವಾಸನೆಗಳೇ, ಅಥವಾ ತಮ್ಮ ಭ್ರಮೆಯೇ ಎನ್ನುವುದನ್ನು ತಿಳಿಯುವ ಶಕ್ತಿ ಮೂರ್ತಿಗೆ ಹೊರಟು ಹೋಗಿತ್ತು.
*****

ಕೀಲಿಕರಣ: ಎಂ ಆರ್ ರಕ್ಷಿತ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.