ಹೀಗೊಂದು ದಂತಕಥೆ

“ಇನ್ನೂ ಎಷ್ಟು ಹೊತ್ತೆಂದು ಅವರ ಹಾದಿ ಕಾಯುತ್ತೀರಿ? ಮುಖ್ಯಮಂತ್ರಿಗಳ ಬಳಿಗೆ ಹೋದಲ್ಲಿ ಅದೆಂಥ ತೊಡಕಿನ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡರೋ. ನೀವು ಇನ್ನೊಮ್ಮೆ ಬನ್ನಿ. ನೀವು ಸರಿಯಾಗಿ ಅವರು ಹೇಳಿದ ಹೊತ್ತಿಗೇ ಬಂದಿದ್ದಿರಿ ಎಂದು ನಾನೇ ಅವರಿಗೆ ತಿಳಿಸುತ್ತೇನೆ. ಕಾಳಜಿ ಬೇಡ.”
“ಇಲ್ಲ, ಕಾಯುತ್ತೇನೆ.”
ಸುಮಾರು ಇಪ್ಪತ್ತಮೂರು ಇಪ್ಪತ್ತನಾಲ್ಕು ವಯಸ್ಸಿನ ಆ ತರುಣ ಶಿಕ್ಷಣ ಮಂತ್ರಿಗಳ ಕಾರ್ಯಾಲಯಕ್ಕೆ ಬಂದು ಕಳೆದ ಎರಡು ತಾಸುಗಳಿಂದಲೂ ಅವರ ಭೇಟಿಗಾಗಿ ಕಾಯುತ್ತಿದ್ದಾನೆ. ಅವನ ತಾಳ್ಮೆಯನ್ನು ನೋಡಿ ಮಂತ್ರಿಗಳ ಕಾರ್ಯದರ್ಶಿಗೇ ತಾಳ್ಮೆಗೆಡುವಂತಾಯಿತು. ‘ಇನ್ನೆಷ್ಟು ಹೊತ್ತು ಹಾದಿ ಕಾಯುತ್ತೀರಿ?’ ಎಂದು ಈ ಮೊದಲೂ ಎರಡು ಬಾರಿ ಕೇಳಿದ್ದ. ತರುಣನಿಂದ ಆಗಲೂ ಬಂದಿದ್ದ ಉತ್ತರವೊಂದೇ: ‘ಇಲ್ಲ ಕಾಯುತ್ತೇನೆ.’ ಬೇಸರದ ಲವಲೇಶವೂ ಇಲ್ಲದ ಅವನ ದೃಢ ನಿಶ್ಚಯ ನೋಡಿ ಕಾರ್ಯದರ್ಶಿಗೆ ಆಶ್ಚರ್ಯವಾಯಿತು. ಮಂತ್ರಿಗಳ ಕೋಣೆಯ ಹೊರಗೆ ಗರ್ದಿ ಮಾಡಿದ್ದ ಜನ ಅವರು ಇವತ್ತಿನ ಮಟ್ಟಿಗೆ ಕೋಣೆಗೆ ಹಿಂತಿರುಗಲಾರರು ಎಂದು ತಿಳಿದವರ ಹಾಗೆ ಒಬ್ಬೊಬ್ಬರೇ ಅಲ್ಲಿಂದ ಚೆದರಿದರು. ಆದರೆ ಒಳಗೆ ಕುಳಿತಿದ್ದ ತರುಣ ಕುಳಿತೇ ಉಳಿದ, ಕೂರಲು ಹೇಳಿದ ಜಾಗದಿಂದ ಹಂದಾಡಲಿಲ್ಲ. ಕಾರ್ಯದರ್ಶಿ ವೇದ-ಉಪನಿಷತ್ತುಗಳ ಪರಿಚಯ ಇದ್ದವನಾಗಿದ್ದರೆ ಅವನಿಗೆ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕೂಡ ತನ್ನ ಅತಿಥೇಯನ ಹಾದಿ ಕಾಯುತ್ತ ಕುಳಿತಿದ್ದ ತರುಣ ಅತಿಥಿಯೊಬ್ಬನ ಅಸೀಮ ಸಹನಶೀಲತೆ ನೆನಪಾಗಬಹುದಿತ್ತು.
ಮಂತ್ರಿಗಳನ್ನು ಕಾಣಲು ಬಂದಾಗಲೂ ಸಾದಾ ಶರ್ಟು ಪ್ಯಾಂಟು ತೊಟ್ಟ, ಕಾಲಲ್ಲಿ ಸವೆದ ಚಪ್ಪಲಿಗಳನ್ನು ಮೆಟ್ಟಿರುವ ಯುವಕನಲ್ಲಿಯ ಎಂತಹದೋ ವಿಶೇಷಕ್ಕೆ ಆಕರ್ಷಿತನಾಗಿದ್ದಂತಿದ್ದ ಮಂತ್ರಿಗಳ ಕಾರ್ಯದರ್ಶಿ ಈಗಾಗಲೇ ಅವನ ಮೇಲೆ ಹಲವು ಬಾರಿ ಆಪಾದಮಸ್ತಕ ಕಣ್ಣು ಹಾಯಿಸಿ ನಿರುಕಿಸಿದ್ದಾನೆ. ಇದೀಗ ಮತ್ತೆ ಹಾಗೆಯೇ ನಿರುಕಿಸುತ್ತ ಕೇಳಿದ:
“ಸಾಹೇಬರಿಗೆ ಸಂಬಂಧಿಗಳೇನೋ?”
“ಅಲ್ಲ.”
“ಜಾತಿಯವರೇನೋ?”
“ಅವರ ಮಗನ ಕ್ಲಾಸ್‌ಮೇಟು.”
“ಸಾಹೇಬರಾಗಿಯೇ ನಿಮ್ಮನ್ನು ಕರೆಸಿಕೊಂಡಿದ್ದು ನೋಡಿದರೆ ಕೆಲಸ ಅವರದೇ ಇರಬೇಕು?”
“ಗೊತ್ತಿಲ್ಲ.”
ತನ್ನ ಹತ್ತಿರ ಮಾತನಾಡುವ ಮನಸ್ಸೇ ಇಲ್ಲದವನ ಹಾಗೆ ತೀರಾ ಚುಟುಕಾಗಿ ಹಾರಿಕೆಯ ಉತ್ತರ ಕೊಟ್ಟಿದ್ದನ್ನು ನೋಡಿ ಕಾರ್ಯದರ್ಶಿಗೆ ಕಿರಿಕಿರಿಯಾಗುವಾಗಲೂ ಅವನ ಬಗ್ಗೆ ಎಲ್ಲಿಲ್ಲದ ಕುತೂಹಲವುಂಟಾಯಿತು. ಮಂತ್ರಿಗಳನ್ನು ಕಾಣಲು ಬಂದ ಯಾವನೂ ತನ್ನ ಪ್ರಶ್ನೆಗಳಿಗೆ ಈ ರೀತಿಯಾಗಿ ಉತ್ತರ ಕೊಟ್ಟಿದ್ದು ನೆನಪಾಗಲಿಲ್ಲ. ತಾನು ಸಂಬಂಧಿಗಳೋ ಎಂದು ಕೇಳಬೇಕಾದ್ದೇ ಇಲ್ಲ. ತಾವಾಗಿಯೇ ಸಂಬಂಧ ಹೇಳಿಕೊಂಡು ಜಂಭ ಕೊಚ್ಚಿಕೊಳ್ಳುವವರೇ ಹೆಚ್ಚು. ಜಾತಿಪಾತಿಗಳಲ್ಲಿ ನಂಬಿಕೆಯಿಲ್ಲವೆಂದು ತೋರಿಸಿಕೊಳ್ಳುತ್ತಲೇ ಸಾಹೇಬರ ಜಾತಿಯವರೆಂದೋ ಅಲ್ಲವಾದರೆ ಅವರಿಗಿಂತ ಮೇಲ್ಜಾತಿಯವರೆಂದೋ ಸೂಚಿಸುವವರೇ ಹೆಚ್ಚು. ‘ಜಾತಿಯವರೇನೊ?’ ಎಂದು ಮುಖಕ್ಕೆ ಕೇಳಿದ ಪ್ರಶ್ನೆಗೆ ಕೊಟ್ಟ ಖುಬಿಯ ಉತ್ತರ ನೋಡಿ ಕಾರ್ಯದರ್ಶಿ ಕ್ಷಣ ಹೊತ್ತು ತಬ್ಬಿಬ್ಬಾದ. ಆ ಮೇಲೆ ತಲೆಯೊಳಗೆ ಟ್ಯೂಬ್‌ಲೈಟ್ ತಡ ಮಾಡಿ ಬೆಳಗಿಕೊಂಡಿತೆಂಬಂತೆ,
“ಯಾವ ಪರೀಕ್ಷೆಗೆ ಕುಳಿತಿದ್ದಿರೊ? ಯೂನಿವರ್ಸಿಟಿಗಳಲ್ಲಿ ಕೂಡ ಎಲ್ಲಾ ಅಫರಾತಫರಾ ಅಂತೆ” ಎಂದ.
“ಪ್ರಶ್ನೆಯ ಮೊದಲ ಭಾಗ ಅರ್ಥವಾದರೂ ಕೊನೆಯ ಉದ್ಗಾರದ ಸಂದರ್ಭ ತಿಳಿಯಲಿಲ್ಲ.
“ಎಂ.ಎಸ್‌ಸೀ. ಪರೀಕ್ಷೆಯಲ್ಲಿ ಮೊದಲನೇ ರ್‍ಯಾಂಕು. ಜೊತೆಗೆ ಸುವರ್ಣ ಪದಕ” ಎಂದ. ಮಾತಿನಲ್ಲಿ ತುಂಬಾ ಅಪ್ರಿಯವಾದದ್ದೇನೋ ಹೇಳುತ್ತಿದ್ದೇನೆ ಎನ್ನುವಂಥ ಧಾಟಿಯಿತ್ತು.
“ಮುಂದೆ ಕಲಿಯುವ ಮನಸ್ಸಿತ್ತೇನೊ?”
ಕಾರ್ಯದರ್ಶಿಯ ದನಿಯಲ್ಲಿ ಮೊದಲ ಬಾರಿಗೆ ತುಸು ವ್ಯಂಗ್ಯ ಸೇರಿಕೊಂಡತಿತ್ತು. ಯುವಕ ಅವನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಅವನ ಮೌನವೇ ತನ್ನ ಪ್ರಶ್ನೆ ಈ ಭೇಟಿಯ ಗುಟ್ಟಿಗೆ ತೀರ ಹತ್ತಿರವಾಗಿರುವ ಭರವಸೆ ಹುಟ್ಟಿಸಿತು.
“ಈಗ ಏನು ಕೆಲಸ ಮಾಡುತ್ತಿದ್ದೀರೋ?”
ಗುಟ್ಟು ಬಯಲುಗೊಳಿಸುವ ಸ್ಪಷ್ಟ ಉದ್ದೇಶದಿಂದಲೇ ಕೇಳಿದ ತನ್ನ ಪ್ರಶ್ನೆ ಉದ್ಧಟತನದ್ದಾಯಿತೆಂದು ಹೊಳೆದರೂ ಕಾರ್ಯದರ್ಶಿ ಹಿಂದೆಗೆಯಲಿಲ್ಲ. ಮಂತ್ರಿವರ್ಯರೊಬ್ಬರ ಆಪ್ತ ಕಾರ್ಯದರ್ಶಿ ತಾನು ಎನ್ನುವ ಧಿಮಾಕು ಅವನ ದನಿಯಲ್ಲೀಗ ಮೂಡಿತ್ತು. ಯುವಕನಿಗೂ ಇದು ಲಕ್ಷ್ಯಕ್ಕೆ ಬಂದಿರಬೇಕು.
“ನಾನೀಗ ಕೆಲಸ ಹುಡುಕಿಕೊಂಡು ಬಂದಿಲ್ಲ” ಎಂದ.
“ಗೊತ್ತು” ಕಾರ್ಯದರ್ಶಿಯ ದನಿಯಲ್ಲಿ ಅಸಾಧಾರಣ ಚಿತಾವಣಿಯಿತ್ತು. ಯುವಕ ಮೊದಲ ಬಾರಿಗೆ ಮುಗುಳ್ನಕ್ಕ. ಉತ್ತರ ಕೊಡಲಿಲ್ಲ. ಒಂದು ಬಗೆಯ ನಿರ್ಲಜ್ಜತನದಿಂದಲೇ ಕಾರ್ಯದರ್ಶಿ ಕೇಳಿದ:
“ಯಾರೂ ಮಾಡಬಾರದಂಥ ಕೆಲಸವೇನು ಇದ್ದಿರಲಾರದು?”
ಮಾತಿನ ಧಾಟಿಯಲ್ಲೀಗ ವ್ಯಂಗ್ಯದ ಜೊತೆಗೆ ಕ್ರೌರ್ಯದ ಎಳೆ ಸೇರಿಕೊಂಡದ್ದು ನೋಡಿ ಯುವಕನಿಗೆ ಕಾರ್ಯದರ್ಶಿಯ ಬಗೆಗೇ ಕೆಡುಕೆನ್ನಿಸಿತು. ತಾನು ಅವನಿಗೆ ತೃಪ್ತಿಯಾಗುವಂಥ ಉತ್ತರ ಕೊಡಲು ತುಸುವೇ ತಡ ಮಾಡಿದರೂ ತಮಗಿಬ್ಬರಿಗೂ ಅಪ್ರಿಯವಾದಂಥ ಸನ್ನಿವೇಶ ಹುಟ್ಟಿಕೊಳ್ಳುವ ಭಯವಾಯಿತು. ಮಂತ್ರಿವರ್ಯರು ತನ್ನನ್ನು ಕರೆಸಿಕೊಂಡುದರ ಉದ್ದೇಶ ಅವರ ಆಪ್ತ ಕಾರ್ಯದರ್ಶಿಗೂ ಗೊತ್ತಿಲ್ಲ ಎನ್ನುವ ಬಗ್ಗೆ ಖಾತರಿಯಾದಂತೆ ತನ್ನ ಹಾರಿಕೆಯ ಉತ್ತರಗಳಿಗೀಗ ವಿನಾಕಾರಣ ಜಾತೀಯತೆಯ ಅಪಾರ್ಥ ಹುಟ್ಟದಿರಲಿ ಎಂದು ಹಾರೈಸಿದವನ ಹಾಗೆ;

“ನನ್ನ ಮೇಲೆ ಹಾಗೆ ಸಿಟ್ಟಾಗಬೇಡಿ. ಇಲ್ಲಿ ಈ ಏರ್‌ಕಂಡೀಶಂಡ್ ಕೋಣೆಯಲ್ಲಿ ಕೂರಿಸಿಕೊಂಡಿರಿ. ಬೇಡ ಬೇಡವೆಂದರೂ ಚಹ, ಬಿಸ್ಕೀಟ್ ಕೊಡಿಸಿದಿರಿ. ನನ್ನ ಬೇಸರ ಕಳೆಯಲೆಂದೇ ಹತ್ತಿರ ಕೂತು ಮಾತನಾಡಿಸಿದಿರಿ. ಮಂತ್ರಿಗಳು ನನ್ನನ್ನು ಕರೆಸಿಕೊಂಡದ್ದೇಕೆ? ದೇವರಾಣೆಗೂ ನನಗೆ ಗೊತ್ತಿಲ್ಲ. ನಿಮ್ಮ ಪ್ರಶ್ನೆಗಳನ್ನು ನೋಡಿದರೆ ನಿಮಗೂ ಗೊತ್ತಿಲ್ಲ, ಅನ್ನಿಸುತ್ತದೆ. ಬಿಟ್ಟುಬಿಡಿ. ನೀವು ಮನೆಗೆ ಹೊರಡುವ ಸಮಯವಾಗಿದ್ದರೆ ನಾನು ಅಡ್ಡ ಬರಲಾರೆ. ಕಾರ್ರಿಡಾರಿನಲ್ಲಿ ಹಾಕಿದ ಬೆಂಚಿನ ಮೇಲೆ ಹೋಗಿ ಕೂರುತ್ತೇನೆ. ಈ ಕೋಣೆಯ ಕದ ಯಾರು ಮುಚ್ಚುತ್ತಾರೋ ಗೊತ್ತಿಲ್ಲ. ಅದನ್ನು ಮುಚ್ಚಿದ್ದೇ ಇಲ್ಲಿಂದ ಹೊರಟು ಹೋಗುತ್ತೇನೆ. ಇನ್ನೆಂದಿಗೂ ಇಲ್ಲಿ ಕಾಲಿರಿಸಲಾರೆ. ನೀವೇ ನಾಳೆ ನಿಮ್ಮ ಸಾಹೇಬರಿಗೆ ತಿಳಿಸಿರಿ” ಎಂದ.
ಆಗಿನಿಂದಲೂ ಎರಡೆರಡೇ ಶಬ್ದಗಳಲ್ಲಿ ಉತ್ತರ ಕೊಡುತ್ತಿದ್ದ ಯುವಕ ಈಗ ಒಮ್ಮೆಲೇ ಇಷ್ಟೊಂದು ಮಾತುಗಳನ್ನು ಆಡಿದ್ದು ನೋಡಿ ಕಾರ್ಯದರ್ಶಿಗೆ ಆಶ್ಚರ್ಯವಾಯಿತು. ಜೊತೆಗೆ ಕರಕರೆಯಾಯಿತು. ಹಣವಿದ್ದವನಂತೂ ಅಲ್ಲವೇ ಅಲ್ಲ. ರಾಜಕೀಯ ಬಲವಿದ್ದವನೂ ಇದ್ದಿರಲಾರ. ಮಂತ್ರಿಗಳಿಗೆ ಸುದ್ದಿ ಮುಟ್ಟಿಸುವ ಕೆಲಸವನ್ನು ತನಗೆ ವಹಿಸಿ ಕೊಟ್ಟಾಗಿನ ದರ್ಪ ನೋಡಿದರೆ ಹುಟ್ಟಿನ ಸೊಕ್ಕು ತಲೆಗೇರಿದವನಿರಬೇಕೆಂಬ ಗುಮಾನಿಯಿಂದಾಗಿ ಇಬ್ಬರ ನಡುವೆ ಆರಂಭದಲ್ಲಿದ್ದ ವಿಶ್ವಾಸ ಬಿರುಕು ಬಿಟ್ಟಿತು. ಕೆಲಸದ ಬಗ್ಗೆ ಕೇಳಿದ ಪ್ರಶ್ನೆಗೆ ಕೂಡ ಈಗಲೂ ಉತ್ತರ ಕೊಡದೇ ಇದ್ದದ್ದು ಲಕ್ಷ್ಯಕ್ಕೆ ಬಂದಾಗ ಬಿರುಕು ಇನ್ನಷ್ಟು ದೊಡ್ಡದಾಯಿತು.
“ನಾಳೆ ನೀವೇ ಸಾಹೇಬರಿಗೆ ಫೋನ್ ಮಾಡಿ ತಿಳಿಸಿರಿ. ನಾನು ಏನೂ ಹೇಳಲು ಹೋಗಲಾರೆ.”
“ನಿಮ್ಮ ಮರ್ಜಿ. ನನ್ನ ಮನೆಯಲ್ಲಂತೂ ಫೋನ್ ಇಲ್ಲ.”
“ನಮ್ಮ ಸಾಹೇಬರಿಗಿಂತ ತುಂಬಾ ಮೇಲ್ಜಾತಿಯವರಿರಬೇಕು.”
“ಯಾತರ ಮೇಲಿಂದ?”
“ಆಗ ರ್‍ಯಾಂಕು ಗೀಂಕು ಎಂದು ಜಂಭ ಕೊಚ್ಚಿಕೊಂಡ ರೀತಿ. ನಿಮ್ಮ ಈಗಿನ ಮಾತಿನ ವೈಖರಿ. ನಿಮ್ಮ ಮೂಗಿನ ಚೂಪಾದ ತುದಿ. ಮೋರೆಯ ಬಣ್ಣ.”
“ನಿಮ್ಮ ಸಾಹೇಬರ ಜಾತಿ ನನಗೆ ಗೊತ್ತಿಲ್ಲ. ನನಗಂತೂ ಜಾತಿ ಇಲ್ಲ.”
“ಜಾತ್ಯತೀತರೇನೋ?”
“ಒಂದರ್ಥದಲ್ಲಿ ಹಾಗೆಯೇ ಎನ್ನಬಹುದು”
“ನೀವು ಹೇಳಬೇಕು, ನಾನು ಕೇಳಬೇಕು! ಜಾತಿಯಲ್ಲಿ ನಂಬಿಕೆಯಿಲ್ಲವೆಂದು ಹೇಳಿಕೊಂಡ ಮಾತ್ರಕ್ಕೆ ನಿಮಗೆ ಜಾತಿಯೇ ಇಲ್ಲವೆಂದು ಹೇಗೆ ಹೇಳುತ್ತೀರಿ? ನಿಮ್ಮ ಜಾತಿಗಿಂದು ಆದ ದುರ್ಗತಿ ಯಾರಿಗೂ ಆಗಕೂಡದು, ಒಪ್ಪಿದೆ.”
ಕಾರ್ಯದರ್ಶಿ ಕಾಲು ಕೆದರಿ ನಿಂತ ರೀತಿ ನೋಡಿ ಯುವಕನಿಗೆ ಹೆದರಿಕೆಯಾಯಿತು. ಎಣಿಸಿಯೇ ಇರದ ಈ ಸನ್ನಿವೇಶಕ್ಕೆ ಯಾರು ಕಾರಣರೋ ತಿಳಿಯದಾದ. ಉತ್ತರ ಕೊಡದೇ ಉಳಿದನೋ ತುಂಬಾ ಒಳ್ಳೆಯ ಮನುಷ್ಯನಾಗಿ ತೋರುವ ಕಾರ್ಯದರ್ಶಿ ಅನಾವಶ್ಯಕ ಕ್ರೌರ್ಯಕ್ಕೆ ಅಧಿಕಾರಿಯಾಗಿ ಮುಜುಗರಕ್ಕೆ ಒಳಗಾಗುತ್ತಾನೆ. ಉತ್ತರ ಕೊಟ್ಟನೋ ಆಗಿನಿಂದಲೂ ತುಂಬಾ ಸೂಚ್ಯವಾಗಿ ಹೇಳಲು ಪ್ರಯತ್ನಿಸಿದ್ದನ್ನೇ ಸ್ಪಷ್ಟವಾಗಿ ಹೇಳುವ ಅಪ್ರಿಯ ಕೆಲಸದಿಂದ ತಾನೇ ನೋವನ್ನು ಅನುಭವಿಸಬೇಕು:
“ನೋಡಿ, ನೀವು ನನ್ನ ತಂದೆಯ ಸ್ಥಾನದಲ್ಲಿದ್ದೀರಿ. ಆಗಿನಿಂದಲೂ ಇಷ್ಟೊಂದು ಚೆಂದವಾಗಿ ನನ್ನನ್ನು ನೋಡಿಕೊಂಡವರು ಈಗ ಇದ್ದಕ್ಕಿದ್ದಂತೆ ನನ್ನ ಹುಟ್ಟಿಗೇಕೆ ಗಂಟುಬಿದ್ದಿರಿ? ನನ್ನ ಜಾತಿಯ ಬಗ್ಗೆ ಕೆಲಸದ ಬಗ್ಗೆ ಏನು ಕಲ್ಪಿಸಿಕೊಂಡರೆ ನಿಮ್ಮ ಮನಸ್ಸಿಗೆ ಸುಖವೆನ್ನಿಸುತ್ತದೆಯೋ ಅದನ್ನೇ ಕಲ್ಪಿಸಿಕೊಳ್ಳಿ. ಆದರೆ ನನ್ನ ಬಾಯಿಂದಲೇ ಕೇಳುವ ಹಠ ಬಿಟ್ಟುಕೊಡಿ. ಕೋಣೆಯೊಳಗೆ ನೆಲಸಹತ್ತಿದ ಮಬ್ಬುಗತ್ತಲೆ ನಿಮ್ಮ ಭಾವನೆಯೊಳಗಿನ ಬದಲಾವಣೆಗೆ ಕಾರಣವಾಗಿದ್ದರೆ ದೀಪ ಹಾಕಿ.”
ಪ್ರಾರ್ಥನೆ ತುಂಬಿದ ಶಾಂತ ದನಿಯೊಳಗಿನ ದೃಢ ನಿಶ್ಚಯವನ್ನು ನೊಡಿ ಕಾರ್ಯದರ್ಶಿಗೆ ಅದೇನಾಯಿತೋ: ಸಾವಿರಾರು ವರ್ಷಗಳಿಂದ ಆಡದೇ ಉಳಿದ ಎಲ್ಲ ಬೈಗಳೂ ಈಗ ಒಮ್ಮೆಲೇ ನಾಲಗೆಗೆ ನುಗ್ಗಿದುವೋ ಎನ್ನುವಂತೆ ತುಟಿಗಳು ಪಟಪಟ ಅದುರ ತೊಡಗಿದುವೇ ಹೊರತು ಶಬ್ದಗಳನ್ನು ಹೊರಗೆಡವದಾದವು. ತಾನೇ ಕೆಲ ಹೊತ್ತಿನ ಮೊದಲಷ್ಟೇ ತಂದೆಯ ಸ್ಥಾನದಲ್ಲಿದ್ದವನೆಂದು ಕರೆದ ವ್ಯಕ್ತಿಯ ಈಗಿನ ಸ್ಥಿತಿ ನೋಡಿ ತರುಣನಿಗೆ ಅವನ ಆರೋಗ್ಯದ ಬಗ್ಗೆ ಕಾಳಜಿಯಾಯಿತು. ಕೊನೆಗೂ ತಾನೇ ಸೋಲಬೇಕಾಗುತ್ತದೆಯೇನೋ ಎಂದುಕೊಳ್ಳುವಷ್ಟರಲ್ಲಿ ಕಾರ್ಯದರ್ಶಿಯ ಕ್ಯಾಬಿನ್‌ನಲ್ಲಿ ಟೆಲಿಫೋನ್ ಸದ್ದು ಮಾಡುತ್ತಿದ್ದದ್ದು ಕೇಳಿಸಿತು. ಕಾರ್ಯದರ್ಶಿ ಕೂಡಲೇ ಅತ್ತ ಧಾವಿಸಿದಾಗ ಇಲ್ಲಿಂದ ಕಾಲು ಕೀಳುವುದೇ ಒಳ್ಳೆಯದೆಂದು ತಿಳಿದವನ ಹಾಗೆ ತರುಣ ಅಲ್ಲಿಂದ ಹೊರಟು ಹೋದ.
ಇತ್ತ ತನ್ನ ಕ್ಯಾಬಿನ್‌ಗೆ ಹೋದ ಕಾರ್ಯದರ್ಶಿ ಫೋನ್ ಮೇಲೆ ಮಾತಾಡುತ್ತಿದ್ದಂತೆ ಕಾಲುಗಳಲ್ಲಿ ನಡುಕ ಸೇರಿಕೊಂಡಿತು. ಮೋರೆ ಬಣ್ಣ ಕಳೆದುಕೊಳ್ಳ ಹತ್ತಿತ್ತು. ಫೋನಿನ ಆ ತುದಿಯಲ್ಲಿಂದ ಸಚಿವಾಲಯದ ದೊಡ್ಡ ಟೆಲಿಫೋನ್ ಬೋರ್ಡಿನ ಆಪರೇಟರ್ ಹೇಳುತ್ತಿದ್ದ:
“ಎಂಥಾ ಪಿ‌ಏರೀ ನೀವು? ಸಾಹೇಬರ ಡೈರೆಕ್ಟ್ ಫೋನ್ ರಿಸೀವರ್ ಕೆಳಗಿರಿಸಿದೀರೋ? ಸಾಹೇಬರಿಗೆ ನಿಮ್ಮ ಜೊತೆ ಮಾತಾಡಬೇಕಂತೆ. ಕೂಡಲೇ ರಿಸೀವರ್ ಸರಿಯಾಗಿಡಿ” ಎಂದವನು ಮಾತು ನಿಲ್ಲಿಸಿ ಬಿಟ್ಟ. ರಿಸೀವರ್ ಮೇಲಿರಿಸಿದ ಅರ್ಧ ಸೆಕೆಂಡಿನಲ್ಲೇ ಫೋನ್ ಸದ್ದು ಮಾಡತೊಡಗಿತು. ಕಾರ್ಯದರ್ಶಿ ಹೆದರುತ್ತ ರಿಸೀವರ್ ಎತ್ತಿಕೊಂಡ. ಆ ಬದಿಯಿಂದ ಬಂದ ದನಿ ಮಂತ್ರಿಗಳದಾಗಿರಲಿಲ್ಲ. ಯಾರದೆಂದು ಪತ್ತೆಯಾಗಲಿಲ್ಲ.
“ಸಾಹೇಬರು ಇದೀಗ ಮುಖ್ಯಮಂತ್ರಿಗಳ ಬಂಗಲೆಯಿಂದ ಹೊರಟಿದ್ದಾರೆ. ಅವರನ್ನು ಕಾಣಲು ಬಂದವರನ್ನು ಪುಸಲಾಯಿಸಿ ನಿಲ್ಲಿಸಿಕೊಳ್ಳಬೇಕಂತೆ. ಅರ್ಧ ಗಂಟೆಯಿಂದಲೂ ನಿಮ್ಮನ್ನು ಅವರ ಖಾಸಗಿ ಲೈನ್ ಮೇಲೆ ಸಂಪರ್ಕಿಸಲು ಪ್ರಯತ್ನಿಸಿ ಸಾಧ್ಯವಾಗದೇ ಇದೀಗ ತುಂಬಾ ಸಿಟ್ಟಿನಲ್ಲಿ ಹೊರಟಿದ್ದಾರೆ.”
ಕಾರ್ಯದರ್ಶಿಗೆ ಆಕಾಶ ತಲೆಯ ಮೇಲೆ ಕಳಚಿಬಿದ್ದಂತಾಯಿತು. ಮಂತ್ರಿಗಳು ಸಚಿವಾಲಯದಲ್ಲಿ ಇಲ್ಲದ್ದು ಗೊತ್ತಿರಲೇ ಇಲ್ಲ. ಇಲ್ಲವಾದರೆ ಟೆಲಿಫೋನ್ ರಿಸೀವರ್ ಕೆಳಗಿಡುವ ದಡ್ಡತನವನ್ನು ಮಾಡುತ್ತಿರಲೇ ಇಲ್ಲ. ಹುಡುಗನ ಬಾಯಿ ಬಿಡಿಸುವ ಆವೇಶದ ಭರದಲ್ಲಿ ಏನೆಲ್ಲ ಮಾಡಿದೆ! ಹುಡುಗ ಸಾಹೇಬರಿಗೆ ಬೇಕಾದವನಿರಬೇಕು. ಪುಸಲಾಯಿಸಿ ನಿಲ್ಲಿಸಿಕೊಳ್ಳಬೇಕಾದವನ ಎದುರು ಆಡಬಾರದ್ದನ್ನೆಲ್ಲ ಆಡಿದೆ. ಟೆಲಿಫೋನ್ ಕೆಳಗಿರಿಸಿ ಹೊರಗಿನ ಕೋಣೆಗೆ ಬರುವಷ್ಟರಲ್ಲಿ ಆಗಿನಿಂದಲೂ ಸಹನಶೀಲತೆಯ ಮೂರ್ತಿಯಾಗಿ ಕುಳಿತಿದ್ದ ಹುಡುಗ ಅದೃಶ್ಯನಾಗಿದ್ದ. ಕಾರ್ಯದರ್ಶಿಗೆ ತಾನು ತನ್ನ ತಲೆಯ ಮೇಲೆ ಗಂಡಾಂತರದ ಸ್ವಚ್ಛ ಅರಿವು ಮೂಡಿತು. ಕ್ಷಣಾರ್ಧದಲ್ಲಿ ಆತ್ಮಸಂರಕ್ಷಣೆಯ ಪ್ರಾಣಿ-ಬುದ್ಧಿ ಎಚ್ಚರಗೊಂಡು ಮೈಕೊಡವಿತು. ಆವೇಶ ಬಂದವನ ಹಾಗೆ ಕೋಣೆಯೊಳಗಿನ ದೀಪಗಳೆಲ್ಲವನ್ನೂ ಒಂದರ ನಂತರ ಒಂದಾಗಿ ಬೆಳಗಿಸಿದ. ಅವಸರ ಅವಸರವಾಗಿ ಕೋಣೆ ಹೊಕ್ಕ ಮಂತ್ರಿವರ್ಯರಿಗೆ ಅವರು ಪ್ರಶ್ನೆ ಕೇಳುವ ಮೊದಲೇ ಏಕತಾನದ ಧಾಟಿಯಲ್ಲಿ ವರದಿ ಒಪ್ಪಿಸಿದ:
“ಸರಿಯಾಗಿ ನೀವು ಹೇಳಿದ ಹೊತ್ತಿಗೇ ಬಂದಿದ್ದನು ಸರ್! ಅರ್ಧ ಗಂಟೆ ಕಾಯುವುದರಲ್ಲಿ ಬೇಸರಗೊಂಡು ಇನ್ನೊಮ್ಮೆ ಬರುತ್ತೇನೆಂದು ಹೇಳಿ ಹೊರಡಲನುವಾದವನನ್ನು ಪುಸಲಾಯಿಸಿ ನಿಲ್ಲಿಸಿಕೊಳ್ಳಬೇಕಾಯಿತು ಸರ್! ಚಹ, ಬಿಸ್ಕೀಟು ಕೊಡಿಸಿದೆ. ಇಲ್ಲಿ ಈ ಕೋಣೆಯಲ್ಲೇ ಸೋಫಾದ ಮೇಲೆ ಕೂರಿಸಿಕೊಂಡು ಮಾತನಾಡಿಸಿದೆ. ಗೆಳೆಯರು ಹಾದಿ ಕಾಯಬಹುದು ಎಂದ. ಫೋನ್ ಇದ್ದವರಾದರೆ ಇಲ್ಲಿಂದಲೇ ಫೋನ್ ಮಾಡಲು ಅಡ್ಡಿಯಿಲ್ಲ ಎಂದು ಹೇಳಿ ನಿಮ್ಮ ಡೈರೆಕ್ಟ್ ಲೈನ್ ಕೊಟ್ಟೆ. ಖುಷಿಯಿಂದ ಅರ್ಧ ಗಂಟೆಯವರೆಗೆ ಯಾರ ಯಾರದೇ ಜೊತೆಗೆ ಮಾತಾಡಿದ. ಎಷ್ಟೊಂದು ಸುತ್ತುಬಳಸಾಗಿ ಪ್ರಶ್ನೆ ಕೇಳಿದರೂ ತನ್ನ ಭೇಟಿಯ ಉದ್ದೇಶದ ಬಗ್ಗೆ ಚೂರೂ ಮಾಹಿತಿ ಕೊಡಲಿಲ್ಲ. ರ್‍ಯಾಂಕು ಗೀಂಕು, ಪದಕ ಗಿದಕಗಳ ಬಗ್ಗೆ ಜಂಭ ಕೊಚ್ಚಿಕೊಂಡಿದ್ದು ನೋಡಿದರೆ ಅಮೆರಿಕಾ ಗಿಮೆರಿಕಾಗಳಿಗೆ ಹೋಗುವ ಮನಸ್ಸಿತ್ತೋ, ಸ್ಕಾಲರ್‌ಶಿಪ್ ಗೀಲರ್‌ಶಿಪ್ ದೊರಕಿಸುವಲ್ಲಿ ಸಾಹೇಬರ ನೆರವು ಬೇಕಿತ್ತೊ ಒಂದೂ ಗೊತ್ತಾಗಲಿಲ್ಲ. ಹುಡುಗ ತುಂಬಾ ಒಳ್ಳೆಯವನು ಸರ್! ತರುಣ ಪ್ರಾಯ ನೋಡಿ. ಎರಡೆರಡು ಗಂಟೆ ಕಾಯುವುದೆಂದರೆ ಬೇಸರ ಬಂದಿತೋ ಏನೋ. ಫೋನ್ ಗಂಟೆ ಬಾರಿಸಿತೆಂದು ಒಳಗೆ ಹೋದವನು ಹೊರಗೆ ಬರುವಷ್ಟರಲ್ಲಿ ಹುಡುಗ ಹೊರಟು ಹೋಗಿದ್ದ. ಕರೆಸಿದರೆ ಇನ್ನೊಮ್ಮೆ ಬರದಿರಲಾರ.”
ಕಾರ್ಯದರ್ಶಿಯ ವರದಿಯಲ್ಲಿ ಅನಿರೀಕ್ಷಿತವಾದುದೇನನ್ನೂ ಕಂಡಿರದ ಮಂತ್ರಿಗಳು, “ಇಷ್ಟೆಲ್ಲ ದೀಪಗಳನ್ನೇಕೆ ಬೆಳಗಿಸಿದ್ದೀರಿ?” ಎಂದು ಗುಡುಗಿದರು. ಈಗಿನ ಸಂದರ್ಭದಲ್ಲಿ ಅದೊಂದೇ ಅನಿರೀಕ್ಷಿತವಾದ ಘಟನೆಯಾಗಿತ್ತೆನ್ನುವ ತರಹ.
ಹುಡುಗ ತಾನು ಬರುವ ಮೊದಲೇ ಹೊರಟು ಹೋದದ್ದರಿಂದ ಹತಾಶೆಗೊಂಡ ಮಂತ್ರಿಗಳಿಗೆ ತಮ್ಮ ಹತಾಶೆಯನ್ನು ತೋರಿಸಿಕೊಳ್ಳುವುದಿರಲಿಲ್ಲವೇನೋ! ಆದರೆ ಅದನ್ನು ಅಡಗಿಸುವುದರಲ್ಲಿ ಅವರು ಸಂಪೂರ್ಣ ಗೆಲ್ಲಲಿಲ್ಲ. ಮುಖ್ಯಮಂತ್ರಿಗಳು ತಮ್ಮ ಬಂಗಲೆಯಲ್ಲೇ ಏನೋ ಅರ್ಜೆಂಟು ಸಭೆ ಕರೆದಿರಬೇಕು. ಸಭೆ ಮುಗಿಯುತ್ತಲೇ ಅಲ್ಲಿಂದಲೇ ನೇರವಾಗಿ ಮನೆಗೆ ಹೋಗಬಹುದಾಗಿದ್ದವರು ಇಲ್ಲಿಗೆ ಬಂದದ್ದು ಹುಡುಗನನ್ನು ಭೇಟಿಯಾಗಲೆಂದೇ ಎನ್ನುವುದರ ಬಗ್ಗೆ ಖಾತರಿಯಾದಾಗ ಕಾರ್ಯದರ್ಶಿಗೆ ತನ್ನ ಅಧಿಕಪ್ರಸಂಗ ಅರಿವಾಯಿತು. ಮುಖ್ಯಮಂತ್ರಿಗಳು ಈ ತುರ್ತಿನ ಸಭೆ ಕರೆದಿರದಿದ್ದರೆ ಮಂತ್ರಿಗಳು ಈ ಹುಡುಗನನ್ನು ಅವನು ಬಂದ ಕೂಡಲೇ ಭೇಟಿಯಾಗುತ್ತಿದ್ದರು! ಭೇಟಿಯಾಗಿದ್ದರೆ ಇಷ್ಟೆಲ್ಲ ಘೋಟಾಳೆ ಆಗುತ್ತಿರಲಿಲ್ಲ! ಹಾಗೆ ನೋಡಿದರೆ ಹುಡುಗ ತನಗೆ ತುಂಬಾ ಮೆಚ್ಚುಗೆಯಾಗಿದ್ದ. ಯಾವ ಕೆಟ್ಟ ಗಳಿಗೆಯಲ್ಲಿ ಎಲ್ಲ ಬಿಟ್ಟು ಅವನು ತನ್ನ ಜಾತಿಯನ್ನು ಹಂಗಿಸುತ್ತಾನೆಂದು ತೋರಿತೋ!
ಮಂತ್ರಿಗಳು ಕ್ಷಣ ಹೊತ್ತು ಕುರ್ಚಿಯಲ್ಲಿ ಕುಳಿತರು. ಆಮೇಲೆ ತಮ್ಮ ದೊಡ್ಡ ಮೇಜಿನ ಖಣವನ್ನು ತಾವೇ ತೆರೆದು ಅದರೊಳಗಿಂದ ಕಂದೀ ಬಣ್ಣದ ಬಾಯಿ ಮುಚ್ಚಿದ ದಪ್ಪ ಲಿಫಾಪೆಯನ್ನು ತಮ್ಮ ಬ್ರೀಫ್‌ಕೇಸ್‌ಗೆ ಸೇರಿಸಿಕೊಂಡರು. ಕುತೂಹಲ ತುಂಬಿದ ಕಣ್ಣುಗಳಿಂದ ತಮ್ಮನ್ನು ನೋಡುತ್ತ ನಿಂತ ಕಾರ್ಯದರ್ಶಿಯಿಂದ ಬೀಳ್ಕೊಂಡು ಕಚೇರಿಯ ಹೊಸಲನ್ನು ದಾಟಿದರು.
ಜೋಲು ಬಿದ್ದ ಅವರ ಭುಜಗಳನ್ನು ಬೆನ್ನ ಹಿಂದಿನಿಂದ ನೋಡುತ್ತಿದ್ದಂತೆ ಅಂಥ ಯಾವ ಬಲವಾದ ಕಾರಣವಿಲ್ಲದೇನೇ ಮಂತ್ರಿಗಳು ಮಾಡ ಹೊರಟಿದ್ದು ಹುಡುಗನ ಮಟ್ಟಿಗೆ ಅಷ್ಟೊಂದು ಒಳ್ಳೆಯ ಕೆಲಸವಿದ್ದಿರಲಾರದು ಅನ್ನಿಸಿ ಹೋದಾಗ ಹುಡುಗನೊಡನೆ ತಾನು ನ್ಯಾಯವಾಗಿ ನಡೆದುಕೊಳ್ಳಲಿಲ್ಲವೆಂದು ತೋರಿ ಕಾರ್ಯದರ್ಶಿಗೆ ಕೆಡುಕೆನ್ನಿಸಿತು.
ಇದಾದ ಸುಮಾರು ಆರು ತಿಂಗಳ ನಂತರ ಒಂದು ದಿನ ಬೆಳಗಿನ ಪತ್ರಿಕೆಯಲ್ಲಿ “ಈ ಹೊಲಸು ಕೆಲಸದಲ್ಲಿ ಮಂತ್ರಿಗಳ ಕೈಯಿರಬಹುದೆ?” ಎಂದು ದೊಡ್ಡ ಪ್ರಶ್ನೆ ಚಿಹ್ನೆಯುಳ್ಳ ಶೀರ್ಷಿಕೆ ಹೊತ್ತ ಸುದ್ದಿ ಓದುತ್ತಿದ್ದಂತೆ ಕಾರ್ಯದರ್ಶಿಯ ತೆರೆದ ಬಾಯಿ ತೆರೆದೇ ಉಳಿಯಿತು. ಅರಳಿದ ಕಣ್ಣುಗಳು ಅರಳಿಯೇ ಉಳಿದವು. ಸುದ್ದಿಯಲ್ಲಿ ಉಲ್ಲೇಖಗೊಂಡ ಮಂತ್ರಿ ಬೇರೆ ಯಾರೂ ಅಲ್ಲದೇ ತನ್ನ ಸಾಹೇಬರೇ ಎಂದೂ ಅವರಿಂದ ಅನ್ಯಾಯಕ್ಕೆ ಒಳಗಾದ ಹುಡುಗ ಆ ದಿನ ತಾನು ಜಾತಿಯ ಮಾತೆತ್ತಿದಾಗ ಹೆದರಿ ಓಡಿ ಹೋದ ಹುಡುಗನೇ ಎಂದೂ ಸರಕ್ಕನೆ ಹೊಳೆದು ಹೋಯಿತು. ಅರರೇ! ಹುಡುಗನಿಗಾದ ಅನ್ಯಾಯದಲ್ಲಿ ತನ್ನ ಕೈಯೂ ಇದೆ ಹಾಗಾದರೆ, ಅನ್ನಿಸದೇ ಇರಲಿಲ್ಲ.
ಪೇಪರು ಓದಿ ಮುಗಿಸಿದ್ದೇ ಎಲ್ಲಿಲ್ಲದ ಅವಸರದಲ್ಲಿ ಆಫೀಸಿಗೆ ಹೊರಡುವ ಸಿದ್ಧತೆಗೆ ತೊಡಗಿದ್ದು ನೋಡಿ ಕಾರ್ಯದರ್ಶಿಯ ಮನೆಯವರಿಗೆ ಆಶ್ಚರ್ಯವಾಯಿತು. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ವ್ಯವಧಾನವೂ ಅವನಿಗೆ ಉಳಿಯಲಿಲ್ಲ. ಅವನ ಮನಸ್ಸಿನಲ್ಲೀಗ ಒಂದೇ ವಿಚಾರ: ಮುಖ್ಯಮಂತ್ರಿಗಳ ವಾರದ ಸಭೆಗೆ ಹೊರಡುವ ಮೊದಲೇ ಅವರನ್ನು ಸಂಧಿಸುತ್ತೇನೆ. ಪತ್ರಿಕೆಯೊಳಗಿನ ಸುದ್ದಿಯನ್ನು ಅವರ ಮುಖಕ್ಕೆ ಹಿಡಿದು ಇದು ದೇವರು ಮೆಚ್ಚುವ ಕೆಲಸವೋ ಎಂದು ಕೇಳುತ್ತೇನೆ. ಏನೆಂದರೂ ನಾನು ಸರಕಾರಿ ನೌಕರ. ನನ್ನ ನೌಕರಿಗೇನು ಸಂಚಕಾರ ಬರಲಾರದು. ಮಂತ್ರಿಗಳ ಕೋಪಕ್ಕೆ ತುತ್ತಾಗಬಹುದು. ಆದರೆ ಈ ಅನ್ಯಾಯವನ್ನು ಪ್ರತಿಭಟಿಸದೇ ಇರಲಾರೆ. ಈ ಪೇಪರಿನವರೂ ಎಂಥ ಪುಕ್ಕರು! ಮಂತ್ರಿಗಳು ಎನ್ನುವಾಗ ರಾಜ್ಯದ ಹೆಸರಿಲ್ಲ. ಅನ್ಯಾಯಕ್ಕೆ ಗುರಿಯಾದ ಹುಡುಗನ ಹೆಸರಿಲ್ಲ. ಮಂತ್ರಿಗಳಿಗೆ ಶಾಮೀಲಾಗಿದ್ದಾರೆ ಎನ್ನಲಾದ ಪ್ರಾಧ್ಯಾಪಕರ ಹೆಸರಿಲ್ಲ. ತಾನೂ ಎಂಥ ದಡ್ಡ! ಹುಡುಗನ ಜಾತಿ ಕೇಳಿದೆ, ಹೆಸರು ಕೇಳಲಿಲ್ಲ, ಮಂತ್ರಿಯೂ ಎಂಥಾ ಪಕ್ಕಾ! ಭೇಟಿಯಾಗಲು ಬರಲಿದ್ದವನ ವಯಸ್ಸು ತಿಳಿಸಿದ, ಹೆಸರು ತಿಳಿಸಲಿಲ್ಲ. ಇದು ಲಕ್ಷ್ಯಕ್ಕೆ ಬರುತ್ತಲೇ ಕಾರ್ಯದರ್ಶಿ ಅಧೀರನಾದ: ಪತ್ರಿಕೆಯನ್ನು ಮಂತ್ರಿಗಳ ಮುಖಕ್ಕೆ ಹಿಡಿಯಬಹುದು. ಆದರೆ ಯಾವುದೇ ರೀತಿಯಿಂದ ಪೇಚಿಗೆ ಸಿಕ್ಕಿಸುವುದು ಶಕ್ಯವಿಲ್ಲ. ಶಕ್ಯವಿದ್ದಿದ್ದರೆ ಅವರು ಅದು ಹೇಗೆ ಮಂತ್ರಿಯಾಗುತ್ತಿದ್ದರು?
ಆದರೂ ಮಂತ್ರಿವರ್ಯರು ತಮ್ಮ ಕೋಣೆಗೆ ಬಂದು ತಮ್ಮ ಕುರ್ಚಿಯನ್ನು ಅಲಂಕರಿಸಿದ್ದೇ ಕಾರ್ಯದರ್ಶಿ ಅವರೆದುರು ಹಾಜರಾಗಲು ಹೆದರಲಿಲ್ಲ. ಕಾರ್ಯದರ್ಶಿಯ ಕೈಯಲ್ಲಿದ್ದ ಪತ್ರಿಕೆಯನ್ನೂ, ಡೋಲು ಬಾರಿಸುತ್ತ ಬಂದವನ ಹಾಗೆ ಬಂದು ಎದುರು ನಿಂತ ಠೀವಿಯನ್ನೂ ನೋಡಿ ಅವನ ಇರಾದೆಯನ್ನು ಸರಿಯಾಗಿ ಊಹಿಸಿಕೊಂಡವರ ಹಾಗೆ ಮಂತ್ರಿ ಮುಗುಳ್ನಕ್ಕರು:
“ನನಗೆ ಗೊತ್ತಿತ್ತು”
“ಏನು?”
“ಆ ಪತ್ರಿಕೆಯನ್ನು ನನ್ನೆದುರಿಗೆ ಹಿಡಿಯುತ್ತೀರೆಂದು. ಮುಖ್ಯಮಂತ್ರಿಗಳ ವಾರದ ಮೀಟಿಂಗ್ ಇವತ್ತು. ನಿಮಗೆ ಹೇಳಬೇಕಾದ್ದನ್ನು ಆದಷ್ಟು ಸಂಕ್ಷಿಪ್ತವಾಗಿ ಹೇಳಿ.”
“ವಿಸ್ತರಿಸಿ ಹೇಳುವಂಥದ್ದಾದರೂ ಏನಿದೆ ಅದರಲ್ಲಿ? ಮಗನ ಮೇಲಿನ ವ್ಯಾಮೋಹಕ್ಕೆ ಆ ಹುಡುಗನಿಗೆ ಇಷ್ಟೊಂದು ಘೋರ ಅನ್ಯಾಯವೆಸಗಬಹುದೆ?”
“ನಾನು ಅನ್ಯಾಯ ಮಾಡಿದ್ದು ಮಗನ ಮೇಲಿನ ವ್ಯಾಮೋಹಕ್ಕೆಂದು ನೀವೇ ಹೇಳಿದಿರಿ. ಆದರೆ ನೀವು ಅವನ ಹುಟ್ಟಿನ ಬಗ್ಗೆ ನಿಮಗೆ ಗೊತ್ತಿಲ್ಲದ್ದನ್ನು ಆಡಿ ಅವನು ಇಲ್ಲಿಂದ ಓಡಿ ಹೋಗುವಷ್ಟು ಮನಸ್ಸು ನೋಯಿಸಿದ್ದು ಯಾವ ಕಾರಣಕ್ಕೆಂದು ತಿಳಿಯಬಹುದೇ? ನನಗೆ ಯಾರು ಹೇಳಿದರು ಎಂದು ಆಶ್ಚರ್ಯವಾಗುತ್ತಿದೆಯಲ್ಲವೆ? ಯಾರೂ ಹೇಳಲಿಲ್ಲ. ನಾನೇ ಊಹಿಸಿದೆ. ನಿಮ್ಮಂತಹವರ ತಲೆ ನಾಲಗೆ ಹೇಗೆ ಕೆಲಸ ಮಾಡುತ್ತವೆಯೆಂದು ಚೆನ್ನಾಗಿ ಬಲ್ಲವನಾದ್ದರಿಂದ. ನೀವು ಸ್ವತಃ ನನಗಿಂತ ಮೇಲ್ಜಾತಿಯವರೆಂದು ಇಲ್ಲಿ ಬಂದವರೆದುರೂ ತೋರಿಸಿಕೊಳ್ಳಲು ಹೋಗುತ್ತೀರೆಂಬುದು ನನಗೆ ಗೊತ್ತಿಲ್ಲವೆಂದು ತಿಳಿಯಬೇಡಿ. ನೀವು ಯಾವುದನ್ನು ಘೋರ ಅನ್ಯಾಯವೆಂದು ಕರೆದಿರೋ ಆ ಕೆಲಸಕ್ಕೆ ಹುಡುಗನ ಪೂರ್ವ ಸಮ್ಮತಿಯನ್ನು ಪಡೆಯಲೆಂದೇ ಅವನನ್ನು ಇಲ್ಲಿಗೆ ಕರೆಸಿದ್ದೆ-ನಾನಾಗಿ! ಅವನಾಗಿ ಬಂದದ್ದಲ್ಲ. ಇಷ್ಟಕ್ಕೂ ಈಗ ಆದದ್ದಾದರೂ ಏನು? ನನ್ನ ಮಗ ಇವನಷ್ಟು ಬುದ್ಧಿವಂತನಲ್ಲ, ಒಪ್ಪಿದೆ. ಆದರೆ ದಡ್ಡನೂ ಅಲ್ಲ. ಇಲ್ಲವಾದರೆ ಪಿ‌ಎಚ್‌ಡಿಗಾಗಿ ಇಂಗ್ಲೆಂಡಿಗೆ ಹೋಗುವ ಧೈರ್ಯ ಮಾಡುತ್ತಿರಲಿಲ್ಲ. ಇವನಿಗೆ ಬೇಕಾದ ಪ್ರವೇಶ ಕಾಲೇಜಿನಲ್ಲಿ ಪ್ರವೇಶ ಸಿಗಲು ಇವನು ಪ್ರಕಟಿಸಿದ ರಿಸರ್ಚ್ ಪೇಪರುಗಳೇನಾದರೂ ಇದ್ದರೆ ಹೆಚ್ಚು ಅನುಕೂಲವಾದೀತೆಂದು ಅವನ ಇಲ್ಲಿಯ ಕಾಲೇಜಿನ ಪ್ರಾಧ್ಯಾಪಕರೇ ತಿಳಿಸಿದರಂತೆ; ಅವರೇ ಉಪಾಯ ಸೂಚಿಸಿದರಂತೆ: ಈ ಹುಡುಗ ಬರೆದ ಸುದೀರ್ಘ ಪ್ರಬಂಧವೊಂದು ಅದೇ ಆಗ ಪ್ರಕಟಣೆಗೆ ಹೋಗಲು ಸಿದ್ಧವಾಗಿತ್ತು. ಅವನ ಪ್ರಾಧ್ಯಾಪಕರೇ ಅದನ್ನು ಇಂಗ್ಲೆಂಡಿನ ಜರ್ನಲ್‌ಗೆ ಕಳಿಸುವವರಿದ್ದರು. ಆ ಪ್ರಬಂಧಕ್ಕೆ ಹುಡುಗನ ಹೆಸರಿನ ಜೊತೆಗೆ ನನ್ನ ಮಗನ ಹೆಸರನ್ನೂ ಜೋಡಿಸುವ ಯೋಚನೆ ಈ ಪ್ರಾಧ್ಯಾಪಕರದ್ದೇ ಆಗಿತ್ತು. ಆದರೆ ಅದಕ್ಕೆ ಹುಡುಗನ ಒಪ್ಪಿಗೆ ಪಡೆಯುವ ಕೆಲಸವನ್ನು ನನಗೆ ಬಿಟ್ಟುಕೊಟ್ಟರು. ನನಗೂ ಈ ಯೋಚನೆ ಅಷ್ಟೊಂದು ಕೆಟ್ಟದ್ದೆಂದು ತೋರಲಿಲ್ಲ. ಇಷ್ಟೇ, ಒಬ್ಬರ ಬದಲು ಇಬ್ಬರಿಗೆ ಆ ಪ್ರಬಂಧಕ್ಕಾಗಿ ಮಾನ ಸಿಗುತ್ತಿತ್ತು. ಆದರೆ ಅದೇ ಹೊತ್ತಿಗೆ ನನ್ನ ಮಗನಿಗೆ ಇಂಗ್ಲೆಂಡಿನಲ್ಲಿ ಪಿ‌ಎಚ್‌ಡಿಗೆ ಪ್ರವೇಶ ದೊರಕಿಸಲು ನೆರವಾಗುತ್ತಿತ್ತು. ಈಗ ಆದದ್ದೂ ಹಾಗೆಯೇ ಅಲ್ಲವೆ? ನನ್ನ ಮಗನಿಗೀಗ ಪ್ರವೇಶ ದೊರಕಿದೆ. ಮುಂದಿನ ತಿಂಗಳು ಅವನು ಇಂಗ್ಲೆಂಡಿಗೆ ಹೊರಟಿದ್ದಾನೆ. ನಮ್ಮ ಕೃತ್ಯಕ್ಕೆ ಬೇರೆ ಇರಾದೆ ಇರಲಿಲ್ಲ. ತಿಳಿ ಹೇಳಿದರೆ ಹುಡುಗನೂ ಬೇಡವೆನ್ನುತ್ತಿರಲಿಲ್ಲ. ಹೇಳುವುದು ಆ ದಿನ ಸಾಧ್ಯವಾಗಿದ್ದರೆ ಹುಡುಗನಿಗೂ ಸಮಾಧಾನವಾಗುತ್ತಿತ್ತು. ನೀವು ನನ್ನ ಮೇಲೆ ಆರೋಪ ಹೊರೆಸುವುದೂ ತಪ್ಪುತ್ತಿತ್ತು.”
“ಸುದ್ದಿ ಪತ್ರಿಕೆ ಹಾಗೆ ಹೇಳುವುದಿಲ್ಲವಲ್ಲ! ತುಂಬಾ ಉಚ್ಚಮಟ್ಟದ, oಡಿigiಟಿಚಿಟ ಆದ ವಿಚಾರಗಳಿದ್ದ ಪ್ರಬಂಧವಂತೆ ಅದು. ಪ್ರಕಟಗೊಂಡಿದ್ದು ಮಾತ್ರ ನಿಮ್ಮ ಮಗನ ಹೆಸರಿನಲ್ಲಿ!” ಕಾರ್ಯದರ್ಶಿಯ ಮಾತಿನಲ್ಲಿ ಅವುಡುಗಚ್ಚಿದ ವ್ಯಂಗ್ಯವಿತ್ತು.
“ಅದು ಹೇಗೆಂದು ನನಗೂ ಗೊತ್ತಾಗಲಿಲ್ಲ. ಪ್ರಕಟಿಸಿದ ಜರ್ನಲ್‌ನ ಆಫೀಸಿನಲ್ಲೇ ಏನೇ ಘೋಟಾಳೆಯಾಗಿರಬೇಕು Iಣ musಣ be ಚಿ boಟಿಚಿ ಜಿiಜe eಡಿಡಿoಡಿ. ಇಲ್ಲವಾದರೆ ಪ್ರಾಧ್ಯಾಪಕರೇ ಹುಡುಗನನ್ನು ಕಾಲೇಜಿಗೆ ಕರೆಸಿಕೊಂಡು, ಮುದ್ರಣಗೊಂಡ ಪ್ರಬಂಧದ ಪ್ರತಿಯೊಂದನ್ನು ಅವನ ಕೈಯಲ್ಲಿರಿಸಿ ಅವನಲ್ಲಿ ಮಾಫಿ ಕೇಳುತ್ತಿರಲಿಲ್ಲ. ಬೆಳಿಗ್ಗೆ ಪತ್ರಿಕೆ ಓದಿ ಕಳವಳ ಪಟ್ಟು ಪ್ರಾಧ್ಯಾಪಕರಿಗೆ ಫೋನ್ ಮಾಡಿದ ಮೇಲೇ ನಡೆದದ್ದು ಏನೆಂದು ನನಗೂ ಗೊತ್ತಾದದ್ದು. ಈಗ ಅನ್ನಿಸುತ್ತದೆ, ಅವರು ಹುಡುಗನಿಗೆ ಹೇಳದೇ ಉಳಿದಿದ್ದರೇ ಒಳಿತಿತ್ತೇನೋ. ಅದು ಪ್ರಕಟವಾಗುವುದರಲ್ಲಿ ಅವನಿಗೇ ಅಷ್ಟೊಂದು ಆಸ್ಥೆಯಿರಲಿಲ್ಲವಂತೆ.”
“ಮೇಲಾಗಿ ಪ್ರಾಧ್ಯಾಪಕರು ಹೇಳದೇ ಉಳಿದಿದ್ದರೆ ಪೇಪರಿನಲ್ಲಿ ಸುದ್ದಿಯಾಗುವುದೂ ತಪ್ಪುತ್ತಿತ್ತು!”
“ಸುದ್ದಿಯಾಗಲಿಲ್ಲ. ಬರೇ ಕಂತೆ ಪುರಾಣವಾಯಿತು. ಯಾಕೆ ಗೊತ್ತೆ? ಸ್ವತಃಕ್ಕೆ ತನ್ನನ್ನೊಬ್ಬ ಜಾತಿತಜ್ಞರೆಂದು ತಿಳಕೊಂಡ ನೀವು ಅವನ ರ್‍ಯಾಂಕಿನ ಧಿಮಾಕು, ಮಾತಿನ ವೈಖರಿ, ಮೂಗಿನ ತುದಿ-ಹೆದರಬೇಡಿ, ಇದೂ ಯಾರೂ ಹೇಳಿದ್ದಲ್ಲ, ನಾನೇ ಊಹಿಸಿದ್ದು-ಇವುಗಳ ಆಧಾರದ ಮೇಲೆ ಅವನು ಇಂತಿಂಥ ಕುಲದವನೆಂದು ತೀರ್ಮಾನಿಸಿ ಅವನನ್ನು ದ್ವೇಷಿಸಿದಿರಿ. ಆ ಪೇಪರಿನವರೂ ಎಂಥ ಶತಮೂರ್ಖರು ನೋಡಿ. ನೀವು ತಿಳಕೊಂಡದ್ದಕ್ಕೆ ಸರೀ ವ್ಯತಿರಿಕ್ತವಾದ ಜಾತಿಯವನೆಂದು ಗೊತ್ತಿದ್ದವರ ಹಾಗೆ ಅವನ ರ್‍ಯಾಂಕನ್ನು ನಂಬಲಿಲ್ಲ, ಅಂಥ ಆ ಪ್ರಬಂಧ ಬರೆದವನೆಂದೂ ನಂಬಲಿಲ್ಲ. ಆದರೂ ಣo be oಟಿ ಣhe sಚಿಜಿe siಜe ಎಂಬಂತೆ ಎಲ್ಲರ ಹೆಸರನ್ನೇ ಅಳಿಸಿಬಿಟ್ಟರು. ನಮ್ಮ ಪ್ರತ್ಯಕ್ಷ ಸಾಕ್ಷಿಯಲ್ಲಿ ಘಟಿಸಿದ್ದನ್ನು ಪ್ರಶ್ನಾರ್ಥಕ ಚಿಹ್ನೆ ಹೊತ್ತ ಊಹೆಯೆನ್ನುವಂತೆ ಪ್ರಕಟಿಸಿದರು. ಹೇಳಿ, ಈ ದುರಂತಕ್ಕೆ ಮೂಲ ಕಾರಣರು ಯಾರು? ಮುಖ್ಯಮಂತ್ರಿಗಳ ಸಭೆಗೆ ಹೋಗಿ ಬರುವುದರೊಳಗೆ ಉತ್ತರ ಹುಡುಕಿಡಿ,” ಎಂದು ಮನೆಯಿಂದ ಬರುವಾಗಲೇ ತಾಲೀಮು ಮಾಡಿಕೊಂಡೇ ಬಂದವರ ಹಾಗೆ ಮಾತನಾಡಿದವರು ದೊಡ್ಡ ಸುಕೃತ ಗೈದ ಡೌಲಿನಲ್ಲಿ ಸಭೆಯ ಸಲುವಾಗಿ ಬೇಕಾಗಿದ್ದ ಫೈಲೊಂದನ್ನು ಕಾರ್ಯದರ್ಶಿಯಿಂದಲೇ ಪಡೆದು ಕೋಣೆಯ ಹೊರಗೆ ನಡೆದರು. ಹೋಗು ಹೋಗುವಾಗ, “ಅಂದ ಹಾಗೆ ನನ್ನ ಡೈರೆಕ್ಟ್ ಫೋನ್ ರಿಸೀವರ್ ಸರಿಯಾದ ಜಾಗದಲ್ಲೇ ಇರಲಿ” ಎಂದರು.
ಕಾರ್ಯದರ್ಶಿ ವಿಚಾರ ಮಾಡುವ ಸ್ಥಿತಿಯಲ್ಲೇ ಉಳಿಯಲಿಲ್ಲ. ಮಂತ್ರಿಗಳು ತಾವು ಎಸಗಿದ ಅನ್ಯಾಯವನ್ನು ಸಮರ್ಥಿಸಿಕೊಂಡ ನಯನಾಜೂಕನ್ನು ನೆನೆದಷ್ಟು ಅವರನ್ನು ಪ್ರತಿಭಟಿಸಲು ಬೇಕಾದ ನೈತಿಕ ಬಲವೇ ತನ್ನಲ್ಲಿ ಇಲ್ಲದ್ದು ನೋಡಿ ಹತಾಶೆಗೊಂಡರು. ತನ್ನ ಕ್ಯಾಬಿನ್ನಿಗೆ ಮರಳಿ ಬಂದು ತಲೆಯ ಮೇಲೆ ಕೈಹೊತ್ತು ಕುಳಿತವರ ಹಾಗೆ ಕುಳಿತಿರುವಾಗ ಮಂತ್ರಿಗಳ ಡೈರೆಕ್ಟ್ ಟೆಲಿಫೋನ್ ಸದ್ದು ಮಾಡಿತು. ನಿಶ್ಚಿತವಾಗಿ ಹುಡುಗನದಿರಬೇಕು ಅನ್ನಿಸಿ ರಿಸೀವರ್ ಎತ್ತಿಕೊಂಡ. ಅವನೇ ಆಗಿದ್ದ ಪಕ್ಷದಲ್ಲಿ-ಬೇಕಾದ ಜಾತಿಯವನಿರಲೀ, ಕುಲದವನಿರಲೀ ಕ್ಷಮಿಸು ಎಂದು ಕೇಳುತ್ತೇನೆ ಎಂದುಕೊಂಡ.
“ಯಾರು? ಮಂತ್ರಿವರ್ಯರ ಆಪ್ತ ಕಾರ್ಯದರ್ಶಿಗಳಿರಬೇಕು. ನೀವು ಯಾರೆಂದು ತಿಳಿಸಬೇಕಾದ್ದಿಲ್ಲ. ಕಿವಿ ತೆರೆದು ಕೇಳಿಸಿಕೊಂಡರೆ ಸಾಕು. ನನ್ನ ಪ್ರಾಧ್ಯಾಪಕ ಮಹಾಶಯರು ನಿಮ್ಮ ಮಂತ್ರಿಗಳಿಗೆ ಶಾಮೀಲಾಗಿದ್ದಕ್ಕೆ ನನಗೆ ಕಾರಣ ತಿಳಿಸಿದರು. ಅವರ ಇರಾದೆ ಒಳ್ಳೆಯದೇ ಆಗಿತ್ತಂತೆ. ಮಂತ್ರಿಗಳ ಮಗ ಇಂಗ್ಲೆಂಡಿಗೆ ಹೋದರೆ ಖಾಲಿಯಾಗುವ ಜಾಗಕ್ಕೆ ನನ್ನನ್ನು ನೇಮಿಸುವ ಆಶ್ವಾಸನೆಯನ್ನು ನನ್ನ ವತಿಯಿಂದ ಪಡೆದುಕೊಂಡಿದ್ದರಂತೆ. ಆದರೆ ಐನು ಹೊತ್ತಿಗೆ ಇವರಾರೂ ಎಣಿಸಿಯೇ ಇರದ ಒಂದು ಪೇಚು ಇದಿರಾಗಿ ಆ ಜಾಗ ಬಹುಶಃ ಪ್ರಾಧ್ಯಾಪಕರ ಮಗನಿಗೆ ಸಿಗಬಹುದಂತೆ. ಯಾರ ಮಗನಿಗಾದರೇನಂತೆ, ಸಿಗುತ್ತದಲ್ಲ-ಅದು ಮುಖ್ಯ. ಅವರಿಗೆ ನನ್ನಿಂದಾಗಿ ಇದಿರಾದ ಪೇಚು ಏನೆಂದು ಗೊತ್ತೇ? ನನಗೆ ಜಾತಿಯಿಲ್ಲದ್ದು. ಅಂದರೆ ಇಂಥದ್ದೇ ಜಾತಿಯೆಂದು ನಿಶ್ಚಿತವಾಗಿ ಹೇಳಲು ಆಗದ್ದು. ಒಗಟು ಬಿತ್ತಲ್ಲವೆ? ನನಗೆ ನನ್ನ ಅಪ್ಪ ಯಾರೆಂದು ಗೊತ್ತಿಲ್ಲ. ಅಮ್ಮನಿಗೂ ಸರಿಯಾಗಿ ಗೊತ್ತಿಲ್ಲವಂತೆ. ಅಂದ ಮೇಲೆ? ಈಗ ನೀವೇ ಹೇಳಿ. ಇನ್ನೊಮ್ಮೆ ಫೋನ್ ಮಾಡಿ ಕೇಳುವಷ್ಟರಲ್ಲಿ ಉತ್ತರ ಹುಡುಕಿಡಿ ನನ್ನ ಸಲುವಾಗಿ.”
ರಿಸೀವರ್ ತನ್ನಿಂದ ತಾನೇ ಎಂಬಂತೆ ಕೈಯಿಂದ ಜಾರುತ್ತಿದ್ದಾಗ ಕಾರ್ಯದರ್ಶಿಗೆ ತಲೆ ಸುತ್ತು ಬಂದಂತಾಯಿತು. ಅರರೇ! ಇವನು…..? ಇವನು…..? ಮೊದಲ ಬಾರಿಗೆ ಮನುಷ್ಯಯಾತನೆಯನ್ನು ಕುರಿತು ಮನುಷ್ಯನ ಹಾಗೆ ಯೋಚಿಸ ತೊಡಗಿದ್ದ ಕಾರ್ಯದರ್ಶಿಗೆ ಹುಡುಗ ಹಾಕಿದ ಒಗಟು ಬಿಡಿಸಲು ಸಮಯ ಬೇಕಿತ್ತೇನೋ-ಹಾಗೇ ಕುಳಿತಿದ್ದ.
*****
(೧೯೯೨)

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.