ನೀವು ಕಾಣದ ನಾಳೆಗಳಲ್ಲಿ…

ನೀವು ಕಾಣದ ನಾಳೆಗಳಲ್ಲಿ…

ಕಿಟಕಿಯಾಚೆ ನೋಡಿದೆ. ಬೆಂಗಳೂರು ಹೊಲಸೆಲ್ಲ ತುಂಬಿ ಹರಿದ ಕೆಂಗೇರಿಯ ಗಬ್ಬು ನಾತ ಮೂಗು ತಟ್ಟಿ, ಕಿಟಕಿ ಜಗ್ಗಿ ಮುಚ್ಚಿದೆ. ಬಸ್ಸಿನೊಳಗೆ ಮುಖ ತಿರುಗಿಸಿದ್ದೇ ತಡ, ಗಪ್ಪನೆ ಹಿಡಿದುಕೊಂಡ ಪಕ್ಕದ ಪ್ರಯಾಣಿಕ.

“ಮೈಸೂರಿಗಾ….?” ಮೈಸೂರಿನ ನಾನ್‌ಸ್ಟಾಪ್‌ನಲ್ಲಿ ಕೂತರೂ ಕಣಿ ಕೇಳ್ತಾನಲ್ಲಪ್ಪಾ…

“ಹೂಂ….” ಎಂದೆ.

“ಅಂದಹಾಗೆ ಮೈಸೂರಿನಲ್ಲಿ ಎಲ್ಲಿಗೋ….’ ಈ ಮನುಷ್ಯನಿಗೆ ಅದೇನು ಕುತೂಹಲವೋ…. ಗೊಣಗಿಕೊಳ್ಳುತ್ತಲೇ,

“ಗೋಕುಲಕ್ಕೆ….” ಎಂದೆ.

“ಓಹ್ ಗೋಕುಲ, ಅದೇ ಒಂಟಿಕೊಪ್ಪಲ್ ಹತ್ತಿರ ತಾನೆ….” ಇನ್ನು ಈತನ ಉತ್ಸಾಹ ಒತ್ತಿಡುವಂತೆಯೇ ಇಲ್ಲ.

“ಅಲ್ಲಿ ರಾಜಾರಾಮ್ ಅಂತ ಇದ್ದಾರೆ, ನಿಮಗೆ ಗೊತ್ತಾ?”

“ಇಲ್ಲ….” ಉದಾಸೀನವಾಗಿ ಉತ್ತರಿಸಿದೆ.

“ಅದೇ ಮಾಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ರು….”ಬಿಡದೆ ಹೇಳಿದ. ಇಲ್ಲಾ ಮಾರಾಯ ಗೊತ್ತಿಲ್ಲ. ಗೊತ್ತಾಗಬೇಕೂ ಇಲ್ಲ. ನೀ ಸ್ವಲ್ಪ ಹೊತ್ತು ಸುಮ್ಮನಿರ್‍ತೀಯ…. ಒಳಗೇ ಬೇಸರದಿಂದ ಬಯ್ದುಕೊಂಡು ಮೇಲೆ ಮಾತ್ರ….

‘ಉಹುಂ….” ಎಂದಿಷ್ಟೆ ತಲೆಯಾಡಿಸಿದೆ.

“ಫಾರಿನ್‌ಗೆಲ್ಲ ಹೋಗಿ ಬಂದಿದ್ದಾರೆ. ಅವರ ಮಗ ‘ಏಪ್ರೋ’ದಲ್ಲಿ ಇಂಜಿನಿಯರ್ರು, ನನ್ನ ಸೋದರತ್ತೆಯ ಸಂಬಂಧಿ….” ನಾನು ಬೇಡ ಅಂದರೂ, ಅಂತೂ ರಾಜಾರಾಯರ ಸಂಪೂರ್ಣ ಚರಿತ್ರೆ ನನ್ನ ತಲೆಗೆ ಕೊರೆದು ಸಂತೃಪ್ತನಾದ. ಕಡೆಗೂ ಸ್ವಲ್ಪ ಪುರುಸೊತ್ತು ಕೊಟ್ಟಾಗ, ಕಿಟಕಿಯಾಚೆ ತಿರುಗಿ ತಟ್ಟನೆ ನಿದ್ದೆ ನಟಿಸಿದೆ. ಏನು ಜನರೋ, ಬಸ್‌ನಲ್ಲಿ ಮೂರು ಗಂಟೆ ನಿಂತು ಹೋಗುವವರ ಇತಿಹಾಸ, ಪುರಾಣ ಸಂಗ್ರಹಿಸಿ ಅದೇನು ಮಾಡುತ್ತಾರೋ, ನಮ್ಮ ಚಿಂತೆಗಳೊಡನೆ ಏಕಾಂತಕ್ಕೂ ಅವಕಾಶವಿಲ್ಲ ಈ ಹಾಳು ಬಸ್ಸಿನಲ್ಲಿ.

ಮರುಕ್ಷಣ ನನ್ನ ಯೋಚನೆಯ ಧಾಟಿಗೆ ನಾಚಿಕೊಂಡೆ. ಸಹಪ್ರಯಾಣಿಕನ ಸಹಜ ಸಂಭಾಷಣೆಯೂ ಏಕಿಷ್ಟು ಕೆಡುಕೆನಿಸಬೇಕು. ನನ್ನ ಮನಸ್ಸಿನ್ನೂ ಹತೋಟಿಗೆ ಬಂದಿಲ್ಲ. ಆದದ್ದು ಆಗಿ ಹೋಯಿತು. ಪ್ರಕ್ಷುಬ್ಧಗೊಂಡ ಮನಸ್ಸನ್ನು ಸ್ತಿಮಿತಕ್ಕೆ ತರಬೇಕು.

ಆರು ತಿಂಗಳಾಗಿತ್ತು ಮೈಸೂರಿಗೆ ತಲೆ ಹಾಕಿ. ‘ನಾ ಮೊದಲೇ ಹೇಳಿರಲಿಲ್ಲವೇನೋ….’ ಎಂದು ಭವಿಷ್ಯವನ್ನೆಲ್ಲ ಬಲ್ಲವನಂತೆ ಪ್ರವರ ಪ್ರಾರಂಭಿಸುವ ಮನೆಯವರನ್ನು ನೆನೆದಾಗಲೆಲ್ಲ, ಮೈಸೂರಿಗೆ ಹೋಗುವ ಧೈರ್ಯ ಉಡುಗಿ ಹೋಗುತ್ತಿತ್ತು, ಸುಮ್ಮನೆ ನಾನಾಗಿ ಹೋಗಿ ಆ ಕಸಿವಿಸಿ, ಮುಜುಗರದ ವಾತಾವರಣದಲ್ಲಿ ಮೇಣಕ್ಕೆ ಸಿಕ್ಕಿಬಿದ್ದ ನೊಣದಂತೆ ಏಕೆ ಒದ್ದಾಡಲಿ ಎನಿಸದೆ ಇರಲಿಲ್ಲ. ಅದ್ಯಾರು ಹೇಳಿದ್ದು, ರಮೇಶ ಅಲ್ಲವೆ_‘ತೊಂಬತ್ತೊಂಬತ್ತು ಪರ್ಸೆಂಟ್ ಪ್ರೇಮ ವಿವಾಹಗಳು ವಿಫಲವಾಗುತ್ತೆ ಕಣೋ,’ ತಾನೇ ಅಂಕಿ ಸಂಖ್ಯೆ ಕಲೆ ಹಾಕಿದಂತೆ ಹೇಳಿದ್ದ. ‘ನೀವೇನೇ ಹೇಳಿ ರವಿ, ಈ ಪ್ರೀತಿ ಪ್ರೇಮ ಅನ್ನೋದೆಲ್ಲ ನಾಲ್ಕು ದಿನ ಅಷ್ಟೆ. ಏನೋ ಒಳ್ಳೆಯದಾಗಲಿ’ ಆಮಂತ್ರಣ ಪತ್ರ ಹಿಡಿದು ಹೋದಾಗಲೂ ಹೇಳಿದ್ದರು ಸುಬ್ಬರಾಯರು. ಅದು ಅವರ ಅನಿಸಿಕೆಯೋ, ಅನುಭವವೋ, ಇಲ್ಲ ವಿಕೃತ ಹಾರೈಕೆಯೋ, ಅರ್ಥವಾಗಿರಲಿಲ್ಲ. ಅವರ ಮಗಳನ್ನು ನನಗೆ ಕೊಡಬೇಕೆಂದು ನಾನು ‘ಬಿ. ಇ. ಸೇರಿದಾಗಲೇ ಅಮ್ಮನಲ್ಲಿ ಹೇಳಿಕೊಂಡಿದ್ದರಂತೆ! ಈ ಎಲ್ಲ ಜನರನ್ನು ಮತ್ತೊಮ್ಮೆ ಭೇಟಿಯಾಗಬೇಕು! ಈ ಜನ ತಮ್ಮ ಸಂಪ್ರದಾಯಗಳ ಮುಸುಕಿನಡಿ ಏನೆಲ್ಲ ಒದ್ದಾಡಿದರೂ ‘ಇದೇ ನಾಕ’ ಎಂದು ನಟಿಸುವವರು. ಅದರಾಚೆ ಜಿಗಿದವರ ಏರುಪೇರುಗಳಿಗೆ ಭೂತಕನ್ನಡಿ ಹಿಡಿದವರು. ಈ ನಗುವ ಜನರೆದುರು ಇಂದು ನಾ ಬೆತ್ತಲು!

ಕಣ್ಣು ತೆರೆದು ಕಿಟಕಿಯಾಚೆ ನೋಡಿದೆ. ರಾಮನಗರದ ದೊಡ್ಡ ಬೆಟ್ಟಗಳು ಹಿಂದೆ ಸರಿಯುತ್ತಿದ್ದವು ಮೊದಲ ಬಾರಿ ಶಶಿ ಈ ಹಾದಿಯಲ್ಲಿ ಬಂದಾಗ ಸಂಜೆಗೆಂಪಿನಲ್ಲಿ ಕಪ್ಪಾಗುತ್ತಿದ್ದ ಗುಡ್ಡಗಳನ್ನು ಕಣ್ಣರಳಿಸಿ ನೋಡಿದ್ದಳು. ‘ಒಂದು ಸಾರಿ ಈ ರಾಮನಗರಕ್ಕೆ ಪಿಕ್‌ನಿಕ್‌ಗೆ ಬರೋಣವಾ?’ ಎಷ್ಟೆಲ್ಲ ಉತ್ಸಾಹದಿಂದ ಕೇಳಿದ್ದಳು ‘ಸದ್ಯ ಊರು ತಲುಪಿ ಅಮ್ಮ ಅಪ್ಪ ಅದೇನು ಎಗರಾಡ್ತಾರೆ ನೋಡಿದರೆ ಸಾಕು’ ಎಂದೇನೋ ಸಿಡುಕಿದ್ದ. ಶಶಿ ಸಪ್ಪೆಯಾಗಿ ಕುಳಿತಿದ್ದಳು. ಪ್ರತಿ ವಿಷಯಕ್ಕೂ ಇಷ್ಟು ಶೀಘ್ರವಾಗಿ ನಾನೇಕೆ ಉದ್ರೇಕಗೊಳ್ಳುತ್ತೇನೆ ಎನಿಸುತ್ತಿತ್ತು. ಯಾವುದೋ ವಿಷಯ ನನ್ನ ಮನಃಸ್ಥಿತಿಯನ್ನು ಕ್ಷಣದಲ್ಲಿ ಕಲಕಿ ಬಿಡುತ್ತಿತ್ತು.

ಮೂರು ವರ್ಷಗಳ ಹಿಂದೆ ನನ್ನ-ಶಶಿಯ ವಿವಾಹವಾಗಿತ್ತು. ಎರಡು ವರ್ಷಗಳ ಪರಿಚಯ ನಮ್ಮದು. ಶಶಿ ಕಾನ್‌ಪುರ್ ‘ಐ. ಟಿ. ಐ. ನಲ್ಲಿ ನನ್ನ ಸಹಪಾಠಿ. ವಾರಕ್ಕೊಮ್ಮೆ ಅಮ್ಮನಿಗೆ ಬರೆವ ಪತ್ರಗಳಲ್ಲಿ ಶಶಿಯೂ ಸಾಕಷ್ಟು ಕಡೆ ಇಣುಕಿರುತ್ತಿದ್ದಳು. ಒಬ್ಬ ಬೆಳೆದ ಮಗ ತನ್ನ ಪ್ರೇಮದ ಹಂತಗಳನ್ನು ಎಷ್ಟು ಸೂಕ್ಷ್ಮವಾಗಿ ತಿಳಿಸಬಲ್ಲನೋ ಅವಿಷ್ಟೂ ಪತ್ರಗಳಲ್ಲಿ ಇರುತ್ತಿತ್ತು. ತಮ್ಮ ರಾಮುಗೆ ಮೈಸೂರಲ್ಲೆ ದೊಡ್ಡ ಹುದ್ದೆಯಾದ ಮೇಲೆ, ಅಮ್ಮ-ಅಪ್ಪ ಉತ್ತರ ಭಾರತ ಪ್ರವಾಸಕ್ಕೆ ಬಂದವರು ಕಾನ್‌ಪುರಕ್ಕೂ ಬಂದಿಳಿದಿದ್ದರು. ಶಶಿಯನ್ನು ‘ಸಹಪಾಠಿ’ಯಾಗಿ ಪರಿಚಯಿಸಿದ್ದ. ಆಗೆಲ್ಲ ಅಮ್ಮನ ಬಗ್ಗೆ ನನ್ನ ಭಾವನೆಗಳು ಎಷ್ಟೊಂದು ಮೃದುವಾಗಿದ್ದವು! ಅಪ್ಪ ಎಂದೂ ಆತ್ಮೀಯರಾಗಿರಲೇ ಇಲ್ಲ. ಮಕ್ಕಳನ್ನು ಅದೂ ಗಂಡು ಮಕ್ಕಳನ್ನು ಶಿಸ್ತಿನಿಂದ ಮಾರು ದೂರ ಇಟ್ಟು ಬೆಳೆಸಬೇಕು ಎಂಬ ಚಿಂತನೆಯವರು. ನಮ್ಮ ಅಹವಾಲೆಲ್ಲ ಅಮ್ಮನ ಮುಖಾಂತರವೇ. ಮಹಾ ಕೋಪದ ಅಪ್ಪನದು ಮೂರು ಹೊತ್ತೂ ಸಿಡಿಮಿಡಿವ ಸ್ವಭಾವ. ಅಮ್ಮನನ್ನು ಗದರಿ ಬಿಸಾಡುವುದೇ ಗಂದಸುತನ ಅಂದುಕೊಂಡವರು. ‘ಅನಕ್ಷರಸ್ಥ ಹಳ್ಳಿ ಹುಡುಗಿ, ಓದಿ ಪೇಟೆ ಸೇರಿದ ತನಗೆ ಸಾಟಿಯಲ್ಲ’ ಎಂಬ ತಾತ್ಸಾರವೂ ಅಪ್ಪನ ಪ್ರತಿ ಮಾತಿನಲ್ಲಿ ಇಣುಕುತ್ತಿತ್ತು. ತಾತನ ಬಲವಂತಕ್ಕೆ ಅಪ್ಪ ಅಮ್ಮನನ್ನು ಕಟ್ಟಿಕೊಂಡದ್ದಂತೆ. ಕಟ್ಟಿಕೊಂಡರು, ಮಕ್ಕಳ ಹುಟ್ಟಿಸಿದರು, ಅದರಾಚೆ ಅಮ್ಮನ ಯಾವ ಅಗತ್ಯವನ್ನೂ ನೋಡಲಿಲ್ಲ. ಸ್ವಾತಂತ್ರ್ಯವನ್ನೂ ಕೊಡಲಿಲ್ಲ. ಮಕ್ಕಳಿಗೆ ಎಂದೂ ಸಲಿಗೆ ನೀಡಲಿಲ್ಲ.

ಅಮ್ಮ ಎಂದಾಗೆಲ್ಲ ನನ್ನ ಬಾಲ್ಯದ ಸಿಹಿ ಸಿಹಿ ನೆನಪುಗಳು ಎದ್ದು ನಿಲ್ಲುತ್ತಿದ್ದವು_ನಾನಾಗ ಎಂಟು ವರ್ಷವಿರಬೇಕು. ದೊಡ್ಡವರ ಸೈಕಲ್‌ನಲ್ಲಿ ‘ಕತ್ತರಿ’ ಹೊಡೆಯಲು ಹೋಗಿ ಟಾರ್ ನೆಲಕ್ಕೆ ದಢಾರನೆ ಬಿದ್ದು ‘ಹೋ’ ಎಂದು ಅರಚಿಕೊಂಡಾಗ, ಅಡಿಗೆ ಮನೆಯಿಂದ ಅಮ್ಮ ದಡಬಡಿಸಿ ಹಿಟ್ಟು ಕಲೆಸಿದ ಕೈಯಲ್ಲೇ ಓಡಿ ಬಂದಿದ್ದಳು. ‘ರವಿ ಏನಾಯ್ತೋ…. ಎಲ್ಲಿ ಬಿದ್ಯೋ… ನನ್ನ ರಾಜ….’ ಎಂದು ಲಗುಬಗೆಯಿಂದ ಅಪ್ಪಿಕೊಂಡು ರಕ್ತ ಸೋರುತ್ತಿದ್ದ ಅಂಗೈ ಅದುಮಿ ಹಿಡಿದು ಒಳಗೋಡಿದ್ದಳು. ಕಾಲು ಬೇರೆ ಉಳುಕಿ ಅಸಾಧ್ಯ ನೋವಿನಿಂದ ಬೊಬ್ಬೆ ಹಾಕುತ್ತಿದ್ದ ನನಗೆ ‘ಯಾಕೋ ಬಿದ್ದೆ…. ಎಲ್ಲಿ ನೋವಾಯಿತಪ್ಪ ನನ್ನ ರಾಜಂಗೆ… ನನ್ನ ಬಂಗಾರ ನೀನು… ಈಗೆಲ್ಲ ಸರಿಹೋಗುತ್ತೆ… ಇನ್ನೇನು ನೋವು ಹೊರಟೇ ಹೋಯ್ತು’ ಎಂದು ಮುದ್ದುಗರೆಯುತ್ತಾ, ಗಾಯಕ್ಕೆ ಅರಿಶಿನ ಒತ್ತಿಕಟ್ಟಿ, ನೋಯುತ್ತಿದ್ದ ಕಾಲನ್ನು ನೀವುತ್ತಾ, ಉಪ್ಪಿನ ಶಾಖ ನೀಡುತ್ತಾ ಲಲ್ಲೆಗರೆದ ಅಮ್ಮನ ಕಣ್ಣಲ್ಲಿ ಎಂಥಾ ಹೊಳಪಿತ್ತು! ಆ ರಾತ್ರಿ ನನಗಂತೂ ಅಮ್ಮನ ಹಿತವಾದ ಒತ್ತಿಗೆ ಸುಖ ನಿದ್ರೆ, ಬೆಳಿಗ್ಗೆ ಕಣ್ಣು ಬಿಟ್ಟಾಗ ಅಮ್ಮ ಇನ್ನೂ ಕಾಲು ನೀವುತ್ತಲೇ ಇದ್ದಳು….!

ನಾ ಓದಲು ಕುಳಿತಾಗೆಲ್ಲ ಅಮ್ಮನ ಉಪಚಾರ ಮುಗಿಲು ಮುಟ್ಟುತ್ತಿತ್ತು. ರಾತ್ರಿ ಹನ್ನೆರಡಕ್ಕೆ ಎದ್ದು, ಓದುತ್ತಿದ್ದ ನನಗೆ ‘ಕಾಫಿ ಮಾಡಲೇನೋ’ ಕೇಳುತ್ತಿದ್ದಳು. ‘ಬೆಳಿಗ್ಗೆ ಎದ್ದು ಓದಪ್ಪ, ಆರೋಗ್ಯ ಕೆಟ್ಟೀತು….’ ಎಷ್ಟೆಲ್ಲ ಕಳಕಳಿ ಇತ್ತು. ‘ನೀ ಮಲಕ್ಕೋ ಹೋಗಮ್ಮಾ….’ ಎಂದು ಐದಾರು ಬಾರಿ ಹೇಳಿದರೂ ಅಮ್ಮನಿಗೆ ನಿದ್ದೆ ಹತ್ತುತ್ತಿದ್ದುದು ನಾನು ರೂಮಿನಲ್ಲಿ ದೀಪ ಆರಿಸಿ ಮಲಗಿದ ಮೇಲೆಯೇ.

ನಾನು ಬಿ. ಇ. ಗೆ ಸೇರಿದಾಗ, ಅಮ್ಮನಿಗೆ ನನ್ನ ಬಗ್ಗೆ ಅದೆಷ್ಟು ಹೆಮ್ಮೆ. ‘ರ್‍ಯಾಂಕ್ ಬರಬೇಕು ಕಣೋ…. ಕಾಸೂ ಖರ್ಚಿಲ್ಲದೆ ಇಂಜಿನಿಯರ್ ಸೀಟು ತಗೊಂಡಿದ್ದೀಯಾ. ನಾಳೆ ನೋಡ್ತಾ ಇರು. ಕರೆದು ಕೆಲಸ ಕೊಡ್ತಾರೆ’ ಓದಲು ಎಷ್ಟೆಲ್ಲ ಹುರಿದುಂಬಿಸಿದ್ದಳು. ಬೆಳಗ್ಗೆ ಐದಕ್ಕೇ ಎದ್ದು, ಎಂಟು ಗಂಟೆಗಿದ್ದ ನನ್ನ ಕಾಲೇಜಿಗೆ ಸಡಗರದಿಂದ ತಿಡಿ ಊಟ ಎರಡೂ ತಯಾರಿಸುತ್ತಿದ್ದಳು. ಬಂದು ಹೋಗುವವರ ಮುಂದೆ ನನ್ನ ಗುಣಗಾನ. ಶ್ರೀಮಂತ ಹೆಂಡತಿ ಪಡೆದ ಮಾವ, ಬಡ ಶಾಲಾ ಮೇಷ್ಟರ ಕೈ ಹಿಡಿದ ಅಮ್ಮನನ್ನು ಎಂದೂ ಆದರಿಸಿರಲಿಲ್ಲ. ಮುವತ್ತು ಸಾವಿರ ಕೊಟ್ಟು ತಮ್ಮ ಮಗನಿಗೆ ಇಂಜಿನಿಯರಿಂಗ್ ಸೇರಿಸಿ, ಯಾರ್‍ಯಾರದೋ ಕಾಲು ಹಿಡಿದು ಪಾಸು ಮಾಡಿಸಿ, ಹಣದಿಂದಲೇ ಕೆಲಸವೂ ಕೊಡಿಸಿ ಈಗ ಊರೆಲ್ಲ ತನ್ನ ಪುತ್ರರತ್ನಕ್ಕೆ ತಕ್ಕ ಹೆಣ್ಣೇ ಇಲ್ಲ ಎಂಬಂತೆ ಬೀಗುತ್ತಿರುವ ಮಾವನ ಮೇಲೆ ಅಮ್ಮನ ಪೈಪೋಟಿ. ತನ್ನ ಮಕ್ಕಳು ಅಖಂಡವಾಗಿ ಓದಬೇಕು, ಕೈ ತುಂಬಾ ಸಂಪಾದಿಸಬೇಕು, ಅವರ ತಲೆಯ ಮೇಲೆ ಹೊಡೆದಂತೆ ಬಾಳಿ ತೋರಿಸಬೇಕು. ಅಮ್ಮನ ‘ಬೇಕು’ಗಳ ಪೂರೈಸುವುದೇ ನನ್ನ ಧ್ಯೇಯವಾಗಿ ಹೋಗಿತ್ತು. ಹಗಲಿರುಳೂ ಓದುತ್ತಿದ್ದೆ. ಬಹಳ ಬೆಲೆಯ ಪುಸ್ತಕಗಳನ್ನು ಕೊಳ್ಳಲಾರದೆ, ಲೈಬ್ರರಿಯಲ್ಲಿ ಕುಳಿತು ಇಡೀ ಪುಸ್ತಕವನ್ನೇ ಕಾಪಿ ಮಾಡುತ್ತಿದ್ದೆ. ನನ್ನ ಮನಸ್ಸಿನ ಬಯಕೆಗಳನ್ನು ಮುದುಡಿ ಮೂಟೆ ಕಟ್ಟಿ, ಅಮ್ಮನ ಕನಸುಗಳಿಗೆ ಜೀವಕೊಡಲು ಹೊರಟಿದ್ದೆ.

ಅಂತೂ ಶಶಿಯೊಡನೆ ವಿವಾಹವಾದೊಡನೆ ಅಮ್ಮನ ಅಷ್ಟೆಲ್ಲ ಪ್ರೀತಿ, ಮರಳುಗಾಡಿನಲ್ಲಿ ಸುರಿದ ಬೊಗಸೆ ನೀರಿನಂತೆ ಇಂಗಿ ಹೋಯಿತು. ಬಾಲ್ಯದಲ್ಲಿ ಅಷ್ಟೆಲ್ಲ ಪ್ರೀತಿಸಿದ ಅಮ್ಮ…. ನನ್ನ ಒಂದು ನಗುವಿಗಾಗಿ ಏನೆಲ್ಲ ಉಪಚರಿಸುತ್ತಿದ್ದವಳು…. ಅದೇಕೋ ಬೆಳೆದಂತೆ, ಅವಳ ಬಯಕೆಗಳೂ ಭಯಂಕರವಾಗಿ ಬೆಳೆದುಬಿಟ್ಟವು. ನಿರೀಕ್ಷೆಗಳ ಗುಡ್ಡ ಪರ್ವತವಾಗಿ, ನಾಳೆಗಳಿಗೆ ಜಾರಿ ಹೋಗುತ್ತಿರುವ ಪುತ್ರನನ್ನು ಮುಷ್ಟಿಯಲ್ಲಿ ಬಿಗಿದಿಡಲು ಬಯಸಿದಳು. ಹೊತ್ತಾಗ, ಹೆತ್ತಾಗ, ಹೂಮೈಯ ಎದೆಗಪ್ಪಿ, ಜೋಗುಳ ಹಾಡುವಾಗ ಉಕ್ಕಿ ಹರಿದಿದ್ದ ಪ್ರೇಮ, ಮಗ ಬಲಿತಂತೆ ಸ್ವಾರ್ಥದ ರಂಗು ಪಡೆಯಿತು. ‘ಅವನ ಬದುಕು ತಾನಿತ್ತ ವರ, ಅವನ ಬದುಕಿನ ಪ್ರತಿ ನಿರ್ಣಯ ತನ್ನದಾಗಬೇಕು, ಅವನು ಕೂರುವುದು, ನಿಲ್ಲುವುದು, ಓದುವ ಓದು, ಕಟ್ಟಿಕೊಳ್ಳುವ ಹೆಂಡತಿ, ಹುಟ್ಟಿಸುವ ಮಕ್ಕಳು, ಎಲ್ಲವೂ ತನ್ನ ಆಯ್ಕೆಯಾಗಬೇಕು’ ಎಂಬ ಅಗಾಧ ಆಸೆ! ಕಡೆಗೆ ಅಮ್ಮನ ಪ್ರೀತಿಯೂ ಎಷ್ಟು ವ್ಯವಹಾರಿಕವಾಗಿ ಹೋಯಿತು!

ಮೂರು ವರ್ಷಗಳ ಹಿಂದೆ…. ನನ್ನ ‘ಎಂ. ಟೆಕ್.’ ಮುಗಿದಿತ್ತು. ಬೆಂಗಳೂರಿನಲ್ಲಿ ನನಗೂ ಶಶಿಗೂ ಒಂದೇ ಕಾರ್ಖಾನೆಯ ಒಂದೇ ವಿಭಾಗದಲ್ಲಿ ಕೆಲಸವಾಗಿತ್ತು. ಎಲ್ಲ ಒಂದು ಹಂತ ತಲುಪಿ ನಿರಾಳವಾದ ಖುಷಿ. ಅಮ್ಮನಿಗೆ ನನ್ನ-ಶಶಿಯ ಮದುವೆಯ ಬಗ್ಗೆ ಬರೆದಿದ್ದೆ.

ಬಂದದ್ದು ಎಂಥದ್ದೋ ಉದಾಸೀನದ ಉತ್ತರ_‘ಈಗಲೇ ನಿನಗೆ ಮದುವೆ ವಯಸ್ಸೇನೂ ಆಗಿಲ್ಲ. ಎರಡು-ಮೂರು ವರ್ಷ ಕೆಲಸ ಮಾಡಿ ಕೈಯಲ್ಲಿ ನಾಲ್ಕು ಕಾಸು ಮಾಡಿಕೋ. ತಂಗಿ ಆಶಾಳ ಮದುವೇನೂ ಆಗಬೇಕಲ್ಲ’ ಎಂಬ ಧಾಟಿಯ ನಾಲ್ಕು ಸಾಲು ಗೀಚಿ ಅಲ್ಲಿಗೇ ಮದುವೆ ಮಾತುಕತೆಗೆ ಮುಕ್ತಾಯ ಹಾಡಿ, ಮತ್ತೇನೇನೋ ಊರಲ್ಲಿರುವ ಪುರಾಣವೆಲ್ಲ ಬರೆದು, ‘ಆರೋಗ್ಯ ನೋಡಿಕೊ. ಚಳಿ ನಿನಗೆ ಆಗೋಲ್ಲ. ಸ್ವಟರ್ ಹಾಕಿಕೊಂಡೇ ಓಡಾಡು. ಸಂಜೆ ಹಿಮದಲ್ಲಿ ತಲೆ ಒಡ್ಡಿ ತಿರುಗಬೇಡ’ ಎಂಬೆಲ್ಲ ಉಪದೇಶಗಳಲ್ಲಿ ಪ್ರೀತಿಗಿಂತ ಯಾಂತ್ರಿಕತೆ ಮುಗ್ಗು ಬಡಿವಂತಿತ್ತು.

‘ಅಮ್ಮ ಮದುವೆ ಬಗ್ಗೆ ನನಗೆ ಅವಸರ ಇಲ್ಲದಿದ್ರೂ ಶಶಿ ಅಪ್ಪ-ಅಮ್ಮನ ಬಗ್ಗೆಯೂ ಯೋಚಿಸಬೇಕು. ಅದೂ ಅಲ್ಲದೆ ಒಬ್ಬರನ್ನೊಬ್ಬರು ಒಪ್ಪಿ ಆದ ಮೇಲೆ, ಸುಮ್ಮನೆ ಮದುವೇನ ಮುಂದೂಡೋದು ಏಕೆ?’ ಎಂದೆಲ್ಲ ಬರೆದ ಮೇಲೆ ತೀರಾ ಮೊಟಕಾಗಿ, ಕಟುವಾಗಿ ಎರಡೇ ಸಾಲುಗಳ ಉತ್ತರ ಬಂತು_“ನಿನ್ನ ಮದುವೆ ಬಗ್ಗೆ ಮುಖತಃ ಮಾತಾಡುವೆಯಂತೆ, ರಜೆ ಹಾಕಿ ಬಾ.’

ಶನಿವಾರ ಊರು ತಲುಪಿದ್ದೆ. ಏಕೋ ಎಲ್ಲ ಇದ್ದಂತಿರಲಿಲ್ಲ. ಗೇಟು ದಾಟಿ ಒಳ ಹೊಕ್ಕಾಗೆಲ್ಲ ‘ರವಿ ಬಂದನಾ, ಹೇಗಿದ್ದೀಯೊ?’ ಎಂಬ ಅಮ್ಮನ ಸಂಭ್ರಮದ ಸ್ವಾಗತ ಇರಲಿಲ್ಲ. ಆಶಾ ಬಾಗಿಲು ತೆರೆದವಳು ಮುಖದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ‘ಅಮ್ಮ ರವಿ ಬಂದ’ ಎಂದು ಹೇಳಿ ರೂಮು ಸೇರಿ ಪುಸ್ತಕ ಹಿಡಿದಳು. ‘ಬಂದ್ಯಾ….? ಎಂದಷ್ಟೆ ಉದಾಸೀನವಾಗಿ ಕೇಳಿ ಅಡಿಗೆ ಮನೆ ಸೇರಿದಾಗ, ಎಂಥದ್ದೋ ಪ್ರಳಯದ ಪೀಠಿಕೆ ಸ್ಪಷ್ಟವಾಗಿತ್ತು.

ಸಂಜೆ ಅಪ್ಪ ಬರುವವರೆಗೆ ಮತ್ತೇನೂ ಜರುಗಲಿಲ್ಲ. ಮುಚ್ಚಳ ಮುಚ್ಚಿಟ್ಟ ಪ್ರೆಷರ್ ಕುಕರ್‍ನಲ್ಲಿ ಹಾಕಿದಂತೆ ತಕ ತಕ ಕುದಿದವು ಪ್ರಶ್ನೆಗಳು. ಊಟ ಮಾಡುತ್ತಲೇ ಕೇಳಿದೆ_

“ಯಾಕಮ್ಮಾ ಒಂದು ತರಹ ಇದ್ದೀಯಾ? ಏನೋ ಮಾತಾಡಬೇಕು ಅಂತ ಬರೆದಿದ್ದೆ.”

“ನಿಮ್ಮಪ್ಪ ಬರಲಿ ಕಣೋ…. ಅವರನ್ನೇ ಕೇಳು” ಎಂದಷ್ಟೇ ಹೇಳಿ ಸರಕ್ಕನೆ ಮುಖ ಮರೆಸಿ ಹೋದ ಅಮ್ಮ ಅಪ್ಪಟ ಅಪರಿಚಿತಳಂತೆ ಕಂಡುಬಿಟ್ಟಳು.

ರಾತ್ರಿ ಹನ್ನೆರಡಕ್ಕೂ ಕಾಫಿ ಕಪ್ ಹಿಡಿದ ಅಮ್ಮ…

ಉಳುಕಿದ ಕಾಲನ್ನು, ಕೈ ನೋವೆನ್ನದೆ ಗಂಟೆಗಟ್ಟಲೆ ಕತೆ ಹೇಳುತ್ತಾ ಒತ್ತಿದ ಅಮ್ಮ _

‘ನನಗೀಗ ಸೀರೆಯೇಕೆ, ಕಾಲೇಜಿಗೆ ಹೋಗೋ ಹುಡುಗ-ರವಿಗೊಂದು ಪ್ಯಾಂಟ್ ಹೊಲಿಸಿ’ ಎಂದು ಸಾದಾ ಸೀರೆಯಲ್ಲೇ ನಳನಲಿಸಿದ ಅಮ್ಮಾ….

ತಟ್ಟನೆ ಅಪರಿಚಿತಳಾದಳು!

ರಾತ್ರಿ ಮಾತಿಲ್ಲದೆ ಊಟವಾದ ನಂತರ ಅಪ್ಪ _

“ಏನೋ ಮದುವೆ ಮದುವೆ ಅಂತ ಬರೆದಿದ್ದೆಯಲ್ಲೋ….” ನನ್ನ ಮುಖಕ್ಕೂ ಮುಖ ಕೊಡದೆ ಪೇಪರ್ ಮರೆಯಲ್ಲೇ ಗುಡುಗಿದರು.

“ಹೂಂನಪ್ಪ…. ನಮ್ಮದೂ ಓದು ಮುಗಿದಿದೆ, ಒಳ್ಳೆ ಕೆಲಸಾನೂ ಸಿಕ್ಕಿದೆ. ಕ್ವಾರ್ಟರ್‍ಸ್ ಕೂಡ ಸಿಗುತ್ತೆ….” ನಾ ಹೇಳುತ್ತಿದ್ದಂತೆ _

“ನಿನಗೀಗಲೇ ಎಂಥದ್ದೋ ಅವಸರ. ನಾಲ್ಕು ದಿನ ಹಾಯಾಗಿದ್ದು ನಾಲ್ಕು ಕಾಸು ಮಾಡಿಕೊ. ನಾಲ್ಕು ಗೋಡೆ ಇರೋ ಕ್ವಾರ್ಟರ್ಸ್ ಸಿಕ್ಕಿ ಬಿಟ್ರೆ ಸಂಸಾರ ಆಗೋಲ್ಲ.”

“ಮನೆ ಅನ್ನೋದು ನಾನೊಬ್ಬ ಕಟ್ಟಿ, ಹೆಂಡತೀನ ಅತಿಥಿ ತರಹ ಸ್ವಾಗತಿಸಬೇಕಾದ್ದಲ್ಲ ಅಪ್ಪ. ಅದೇನಿದ್ರೂ ನಾವಿಬ್ಬರೂ ಒಟ್ಟಿಗೇ ಕಟ್ತೀವಿ” ಎಂದೇನೋ ಹೇಳಿದ.

“ಆಶಾದೂ ಮದುವೆ ಆಗಲಿ. ಒಂದೆರಡು ವರ್ಷ ತಡೆ. ಆಮೇಲೆ ಮಾಡಿಕೊಂಡರಾಯ್ತು” ಎಂಥದ್ದೋ ಹಾರಿಕೆಯ ಉತ್ತರ. ನನ್ನ ಮದುವೆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿದಂತೇ ಇರಲಿಲ್ಲ. ಇವರೆಲ್ಲ ಏನೋ ಹೇಳಲು ಹೊರಟು, ಮತ್ತೇನೋ ಬಳಸುತ್ತಿದ್ದಾರೆ ಅನಿಸಿತು.

“ಆಶಾಗಿನ್ನೂ ಹದಿನೇಳೂ ತುಂಬಿಲ್ಲ. ಈಗಲೇ ಎಂಥಾ ಮದುವೆ ಅಪ್ಪಾ. ಒಂದು ಬಿ. ಎ. ಮಾಡಿಕೊಳ್ಳಲಿ.”

“ಹದಿನೇಳು ಏನೂ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಲ್ವೋ” ಅಮ್ಮ ಮೂಲೆಯಿಂದಲೇ ಗೊಣಗಿದಳು. ನನಗೂ ಕೊಂಚ ಸಹನೆ ಕದಡಿತು.

“ಇನ್ನೂ ಆಶಾಗೆ ಹುಡುಕಲೂ ಗಂಭಿರವಾಗಿ ಶುರು ಮಾಡಿಲ್ಲ. ಆಗ್ಲೇ ಮದುವೆ ಅಂತೀರಲ್ಲಮ್ಮ. ಹದಿನೇಳಕ್ಕೆ ಇಷ್ಟು ಚಿಂತೆ ಆದ್ರೆ, ಇಪ್ಪತ್ತೈದರ ಶಶಿ ಅಪ್ಪ, ಅಮ್ಮನಿಗೆ ಆತಂಕ ಇರೋಲ್ಲವೆ?”

“ಉದ್ದಕ್ಕೆ ಓದೋರಿಗೆಲ್ಲ ಮದುವೆ ಚಿಂತೆ ಎಲ್ಲಿರುತ್ತೋ? ಅಷ್ಟೆಲ್ಲ ಓದಿದೋರು ಸಂಸಾರ ಮಾಡ್ತಾರಾ? ಹುಡುಗರ ಜೊತೆ ಓಡಾಡಿಕೊಂಡು ಹಾಸ್ಟಲ್‌ನಲ್ಲಿದ್ದುಕೊಂಡು ಬಂದ ಹುಡುಗಿ….”ತಟ್ಟನೆ ಇವರೆಲ್ಲಾ ಹೇಳಬೇಕಾದುದು ಸ್ಪಷ್ಟವಾಯಿತು.

“ಅಮ್ಮ, ಮದುವೆ ಆಗ್ತಾ ಇರೋನು ನಾನು. ಅವಳ ಓದು, ವಿದ್ಯೆ, ಲೈಫ್‌ಸ್ಟೈಲ್ ಎಲ್ಲ ಒಪ್ಪಬೇಕಾದವನು ನಾನು” ಸ್ವಲ್ಪ ಗಡುಸಾಗಿ ಹೇಳಿದೆ. ಅಪ್ಪನ ಎದುರು ಇಷ್ಟು ನಿಂತು ಮಾತಾಡಿದ್ದು ಇದೇ ಮೊದಲ ಬಾರಿ!

“ಇದು ಬರೀ ನಿನ್ನ ಪ್ರಶ್ನೆ ಅಲ್ಲವೋ, ನಾವೂ ನಾಲ್ಕು ಮಂದಿ ನಡುವೆ ತಲೆ ಎತ್ತಿ ಬಾಳಬೇಕು.” ಇವರ ವಿರೋಧವೇ ಅರ್ಥವಾಗದೆ ಕೇಳಿದೆ _

“ಅಲ್ಲಮ್ಮ ಶಶಿ ಏನಾಗಿದ್ದಾಳೆ?”

“ಕರ್ರಗೆ, ಕುಳ್ಳಗೆ, ಒಂದು ಲಕ್ಷಣವಿಲ್ಲ ಮುಖದಲ್ಲಿ….” ಥಳ ಥಳ ಹೊಳೆವ ಮೂರು ಮಕ್ಕಳನ್ನು ಹೆತ್ತ ಅಮ್ಮ, ಕ್ಷಣಕಾಲ ಅಪ್ಪನ ಮುಖವನ್ನೇ ಮರೆತು ಹೇಳಿದಳು.

“ಅವಳ ಅಂದಚಂದದಿಂದ ಏನಾದ್ರೂ ಉಪಯೋಗವಿದ್ರೆ ಅದು ನನಗೆ ಮಾತ್ರ. ಅವಳನ್ನು ಅವಳಿರುವಂತೆ ನಾನು ಒಪ್ಪಿ ಆಗಿದೆ” ದೃಢವಾಗಿ ಹೇಳಿದೆ.

“ನನಗಂತೂ ಆ ಹುಡುಗಿ ಸೊಸೆಯಾಗಿ ಬರೋಲ್ಲ” ಗಂಟೆ ಹೊಡೆದಂತೆ ಅಮ್ಮ ಉತ್ತರ ಕೊಟ್ಟಳು. ತಬ್ಬಿಬ್ಬಾದ. ಇವರ ಕಾರಣಗಳು ಸ್ಪಷ್ಟವಿಲ್ಲ. ಬಾಯಿಬಿಟ್ಟು ಪೂರಾ ಹೇಳುವುದೂ ಇಲ್ಲ. ಹಣವೇ? ರೂಪವೇ? ಇಲ್ಲ ಎಲ್ಲಕ್ಕಿಂತ ‘ತಾನು ಹೆತ್ತ ಮಗ ತಾನು ಆರಿಸಿದ ಹುಡುಗಿಯನ್ನು ವರಿಸಿ, ತಾನು ಹಾಕಿದ ಗೆರೆ ದಾಟಲಿಲ್ಲ’ ಎಂದು ಬೀಗುವ ಬಯಕೆಯೆ?

“ಅಮ್ಮ ನಿನಗವಳ ಬಗ್ಗೆ ಇಷ್ಟವಿಲ್ಲದಿದ್ದರೆ ಮೊದಲೇ ಏಕೆ ತಿಳಿಸಲಿಲ್ಲ. ನಾ ಕಾನ್‌ಪುರಕ್ಕೆ ಹೋದಾಗಿನಿಂದ ಶಶಿ ಬಗ್ಗೆ ಬರೆಯುತ್ತಲೇ ಇದ್ದೇನೆ….”

“ಅದೆಲ್ಲ ಇಷ್ಟು ಮುಂದುವರೆದು ತಾಳಿ ಕಟ್ಟೋವರೆಗೂ ಬರುತ್ತೆ ಅಂತ ಯಾರು ಕಂಡಿದ್ದರೋ….?” ಆರಾಮವಾಗಿ ಉತ್ತರಿಸಿದಳು ಅಮ್ಮ!

“ಏನಮ್ಮ ಹಾಗೆಂದರೆ? ಯೌವನದಲ್ಲಿ ಒಂದು ಹುಡುಗ-ಹುಡುಗಿ ಆತ್ಮೀಯರಾಗುವುದು, ಸ್ನೇಹವಾಗುವುದು ಈ ದಿಕ್ಕಿಗೆ ತಿರುಗುತ್ತೆ ಅಂತೆ ನಿಮಗೆ ಗೊತ್ತಿರಲಿಲ್ಲವೆ?”

“ಏನೋ ಅಲ್ಲಿ ಒಬ್ಬನೇ ಬೇಜಾರು ಅಂತೇನೋ ಸುತ್ತುತ್ತಾ ಇದ್ದೀಯ. ನಾಳೆ ಮದುವೆಯಾಗುವಾಗ ಮರ್ಯಾದಸ್ಥರ ಮನೆಯಲ್ಲೇ ಮಾಡಿಕೊಳ್ತೀಯಾ ಅಂತ ಅಂದುಕೊಂಡಿದ್ವಿ.”

“ಅಂದರೆ…. ಸುತ್ತೋಕೆ ಪರವಾಗಿಲ್ಲ, ಮದುವೆ ಮಾತ್ರ ನೀವು ಆರಿಸುವ ಹುಡುಗಿಯೊಡನೆಯೇ ಆಗಬೇಕು. ನಾಳೆ ಆಶಾ ಜೊತೆಗೂ ಯಾವೋನಾದ್ರೂ ಎರಡು ವರ್ಷ ಸುತ್ತಿ ಹೀಗೇ ಕೈ ಕೊಟ್ಟರೆ?” ಕೋಪದಿಂದ ಕುದಿದು ಕೇಳಿದೆ. ಅಪ್ಪ ಕಿಡಿಕಿಡಿಯಾಗಿ ಗುಡುಗಿದರು _

“ರವಿ, ಹಲ್ಲಿಡಿದು ಮಾತಾಡು, ನಮ್ಮ ಮನೆ ಮಗಳು ಹೀಗೆಲ್ಲ ಹುಡುಗರನ್ನ ಬಲೆಗೆ ಹಾಕಿಕೊಂಡು ತಿರುಗೋ ಅಂಥವಳಲ್ಲ.”

“ಅಪ್ಪ…. ನೀವು ಸಭ್ಯತೆ ಮೀರುತ್ತಾ ಇದ್ದೀರ. ನೀವು ಮಾತಾಡ್ತಾ ಇರೋದು ನನ್ನ ಭಾವೀ ಪತ್ನಿಯ ಬಗ್ಗೆ….”

“ಹೆತ್ತು ಹೊತ್ತು ಸಾಕಿದ ತಂದೆ-ತಾಯಿಗಳಿಗಿಂತ ಅವಳೇ ಹೆಚ್ಚೇನೋ ನಿನಗೆ….” ಅಮ್ಮ ಆಗಲೇ ತಲೆ ತಲೆ ಲಟ್ಟಿಸುತ್ತಾ ಗೊಳೋ ಎಂದು ರಾದ್ಧಾಂತ ಪ್ರಾರಂಭಿಸಿದಳು. ನನ್ನ ಮೈಯಲ್ಲೂ ಆವೇಶ ತುಂಬಿಬಂದಿತ್ತು _

“ಹೆತ್ತ ಋಣಕ್ಕೆ ಬದುಕು ಪೂರಾ ನಿಮ್ಮ ಕೈಗಿಟ್ಟು ಜೀತದಾಳುಗಳಾಗಬೇಕಾ ಅಮ್ಮ…. ಹೆತ್ತೊಡನೆ ಯಾರೂ ದೈವತ್ವಕ್ಕೆ ಏರೋಲ್ಲಾ….” ಛಟೀರನೆ ಕೆನ್ನೆಗೆ ಏಟು ಬಿತ್ತು. ಕೋಪದಿಂದ ಮೈ ಉರಿಯುತ್ತಿತ್ತು. ಹುಟ್ಟಿಸಿದ ಹಕ್ಕಿನಿಂದ ಎತ್ತಿದ ಕೈ! ತನ್ನೆತ್ತರ ಬೆಳೆದು ನಿಂತ ಮಗ ತನ್ನ ಬದುಕಿನ ಮೊಟ್ಟ ಮೊದಲ ನಿರ್ಣಯಕ್ಕೆ ಅನುಮತಿ ಕೇಳುವಾಗ ಬಿದ್ದ ಪೆಟ್ಟು. ಮೆಲ್ಲನೆ ಕೆನ್ನೆ ಸವರಿಕೊಂಡೆ_

“ಅಮ್ಮ ಹುಟ್ಟಿಸಿದ ಪುಣ್ಯಕಾರ್ಯಕ್ಕೆ ನಮ್ಮ ಬದುಕನ್ನೆ ಕೇಳುವ ಮಹಾನುಭಾವರು ನೀವು. ನನಗೂ ನನ್ನದಾದ ನಿರ್ಣಯಗಳಿಗೆ ನಿರ್ಧಾರಗಳಿವೆ. ನಾನು ಶಶೀನ ಮದುವೆ ಆಗ್ತಾ ಇದ್ದೇನೆ. ಇಷ್ಟವಿದ್ದರೆ ಬನ್ನಿ….” ಹೇಳಿ ರೂಮಿಗೆ ಹೋಗಿ ಧಡಾರನೆ ಬಾಗಿಲು ಹಾಕಿಕೊಂಡೆ. ಆಗಲೇ ಸೂಟ್‌ಕೇಸಿಗೆ ಅಟ್ಟೆ ತುರುಕಿ ಹೊರಟು ಬಿಡಲು ಜೀವ ತವಕಿಸಿತು. ಆದರೆ ಗಂಟೆ ಹತ್ತು ದಾಟಿತ್ತು. ಅಮ್ಮ ಹಾಲಿನಲ್ಲಿ ಎದೆ ಎದೆ ಬಡಿದುಕೊಂಡು ಅಳುತ್ತಿದ್ದಳು_“ಇನ್ನು ನಾ ಬದುಕಿರೋಲ್ಲಾರೀ…. ನಾ ಬದುಕೋಲ್ಲ. ಒಂಬತ್ತು ತಿಂಗಳು ಹೊತ್ತು, ಎದೆ ಹಾಲು ಕೊಟ್ಟು ಸಾಕಿದ ಮಗ…. ಇಂದು ಅವನಿಗೆ ಯಾರೂ ಬೇಡ, ಈ ಮುದಿ ಅಮ್ಮ ಅಪ್ಪ ಏಕೆ….” ಕಿವಿಗೆ ಬೆರಳು ತೂರಿಸಿ ಕಣ್ಣು ಮುಚ್ಚಿದೆ.

“ನೋಡೇ…. ಮಗ ಮಗ ಅಂತ ಮುದ್ದುಗರೆಯುತ್ತಾ ಇದ್ದೆಯಲ್ಲ ನೋಡು…. ಅವನಿಗೆ ಆ ಹುಡುಗಿ ಬಿಟ್ಟರೆ ಬೇರೆ ಪ್ರಪಂಚ ಬೇಕಿಲ್ಲ. ಇಂತ ಕೃತಘ್ಞ ಮಗನನ್ನು ಹಡೆದೆಯಲ್ಲ, ಚಚ್ಚಿಕೋ ಹಣೇನಾ…. ನೀ ಬೆಳೆಸಿದ ರೀತೀನೇ ಅಂಥಾದ್ದು, ಹಿರಿ ಮಗ ಅಂತ ತಲೆ ಮೇಲೆ ಏರಿಸಿಕೊಂಡಿದ್ದೆ… ಅನುಭವಿಸು ನಿನ್ನ ಕರ್ಮಾನಾ….” ಅಪ್ಪನ ಬಾಯಿಗೆ ಬಿಡುವಿದ್ದಂತೆ ಇರಲಿಲ್ಲ. ಇಲ್ಲದ ದುಃಖಗಳನ್ನು ಸೃಜಿಸುವ, ಅವಕ್ಕೆ ನಮ್ಮನ್ನು ಹೊಣೆಯಾಗಿಸುವ ಇವರ ಪರಿಗೆ ಏನೆನ್ನಲಿ!

ಅರ್ಧರಾತ್ರಿ ಕಳೆವ ಹೊತ್ತಿಗೆ ಎಲ್ಲರೂ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ನನಗೆ ನಿದ್ದೆ ಹತ್ತುವಂತೆಯೇ ಇರಲಿಲ್ಲ. ಅಮ್ಮನ ಈ ಅವತಾರ ನಾನು ಹಿಂದೆಂದೂ ಕಂಡಿರಲಿಲ್ಲ. ಎಲ್ಲರಿಗೂ ಮಗು ಬೇಕು. ಆ ಅನುಭವದ ಸವಿ ಬೇಕು. ನಮ್ಮ ಕ್ಷಣಿಕ ಬದುಕನ್ನು ಉದ್ದಕ್ಕೆ ಚಾಚುವ ಒಂದು ವಿಧದಲ್ಲಿ ಅಮರವಾಗುವ ಜೀವದ ಬಯಕೆ ಇದು. ಸೃಷ್ಟಿಯ ಸಹಜಕ್ರಿಯೆಯನ್ನೂ ತ್ಯಾಗದ ಅಟ್ಟಕ್ಕೆ ಏರಿಸಿ ‘ಮಾರ್ಟರ್’ ಆಗುತ್ತಿದ್ದಾಳೆ ಅಮ್ಮ. ತಿಂಗಳುಗಟ್ಟಲೆ ಹೂ ಜಡಿದು, ಕಾಯಿ ಜಿನುಗಿ ಬೀಜ ಉದುರಿಸುವ ವೃಕ್ಷ ತನ್ನಡಿಯಲ್ಲಿ ಚಿಗುರಿದ ಸಸಿಗಳಿಗೆ ತನ್ನ ಮಹತ್ಕಾರ್ಯದ ಬಗ್ಗೆ ಭಾಷಣ ಬಿಗಿಯೋಲ್ಲ. ಈ ಅಪ್ಪ-ಅಮ್ಮ ಜನ್ಮಕೊಟ್ಟ ಋಣಕ್ಕೆ ಏನೆಲ್ಲ ಬಯಸುತ್ತಿದ್ದಾರೆ. ಛೀ… ಏಕೋ ನನ್ನ ಯೋಚನೆಯ ಧಾಟಿಯೇ ಕ್ಲೀಷೆಯಾಗುತ್ತಿದೆ, ತಲೆಕೊಡವಿ ಮಲಗಿದ್ದೆ.

ರಿಜಿಸ್ಟಾರ್ ಆಫೀಸಿನಲ್ಲಿ ನಮ್ಮ ವಿವಾಹವಾಗಿತ್ತು. ಏನೊಂದೂ ಆಡಂಬರವಿಲ್ಲದೆ ಸ್ನೇಹಿತರ ಎದುರು ಸಹಿ ಹಾಕಿದ್ದೆ. ಮರುದಿನವೇ ಇಬ್ಬರೂ ಕೆಲಸಕ್ಕೆ ಹಿಂದಿರುಗಿದ್ದೆವು. ಕೈಯಲ್ಲಿದ್ದ ಸ್ವಲ್ಪ ಹಣ ಮನೆ ಬಾಡಿಗೆಯ ಮುಂಗಡಕ್ಕೆ ಹೋಗಿತ್ತು. ಕ್ವಾರ್ಟರ್‍ಸ್ ಸಿಗಲು ಇನ್ನೂ ಆರು ತಿಂಗಳು ಕಾಯಬೇಕಿತ್ತು. ನೆಲದ ಮೇಲೆ ಚಾಪೆ ಹಾಸಿ ಮಲಗಿದ ದಿನಗಳು. ಮೊದಲೆರಡು ತಿಂಗಳ ಸಂಬಳ ಕೈ ಸೇರಿದಾಗ ಮಧುಚಂದ್ರಕ್ಕೆ ಹೋಗಲು ಯೋಚಿಸಿದೆವು. ಊಟಿಗೆ ಮರುದಿನ ರೈಲು ಬುಕ್ ಕೂಡಾ ಆಗಿತ್ತು. ಅಂದು ಬೆಳಿಗ್ಗೆ ಅಮ್ಮನ ಒಲವಿನ ಪತ್ರ ಬಂದಿಳಿಯಿತು. ನಾಲ್ಕು ತಿಂಗಳ ನಂತರ ಬಂದ ಮೊದಲ ಪತ್ರ!

“ಪ್ರೀತಿಯ ರವಿಗೆ_

ಆಶೀರ್ವಾದಗಳು.

ನಿನ್ನ ಇಚ್ಛೆಯಂತೆ ಮದುವೆ ಆದ ಮೇಲೂ ನಿನ್ನ ಈ ಅಸಮಾಧಾನ, ಮೌನ ಅರ್ಥವಾಗುತ್ತಿಲ್ಲ. ಮೂರು ಗಂಟೆಯ ದೂರದ ಮೈಸೂರಿಗೆ ನಾಲ್ಕು ತಿಂಗಳಾದರೂ ಬಂದಿಲ್ಲ. ಅಂತೂ ನಮ್ಮ ಇಚ್ಛೆಗೆ ವಿರುದ್ಧವಾಗಿಯೇ ವಿವಾಹವಾಗಿದ್ದೀಯ. ಕಡೇ ಪಕ್ಷ ಆಶಾಳ ಭವಿಷ್ಯದ ಬಗ್ಗೆಯಾದರೂ ಹಿರಿಯ ಮಗನಾಗಿ ಸ್ವಲ್ಪ ಕಳಕಳಿ ಇರಬೇಕಿತ್ತು. ಸರಿ ನಿನ್ನಿಷ್ಟ. ದೇವರು ನಿನಗೆ ಒಳ್ಳೆಯದು ಮಾಡಲಿ. ನಿನ್ನ ಹೆಂಡತಿಯನ್ನು ಕರೆದುಕೊಂಡು ಯಾವಾಗ ಬರ್ತಾ ಇದ್ದೀಯ?

ಇಂತಿ ನಿನ್ನ ಅಭಾಗ್ಯ ತಾಯಿ.”

ಅಮ್ಮನ ಪತ್ರ ಎರಡೆರಡು ಬಾರಿ ಓದಿಕೊಂಡೆ. ಅಂತೂ ಶಶಿಯನ್ನು ತನ್ನ ಸೊಸೆಯಾಗಿ ಅಲ್ಲದಿದ್ದರೂ ತನ್ನ ಹೆಂಡತಿಯಾಗಿ ಆಹ್ವಾನಿಸಿದ್ದಳು. ಪ್ರೀತಿಯ ವಿಚಿತ್ರ ತಿರುವುಗಳು ತಬ್ಬಿಬ್ಬುಗೊಳಿಸಿತು. ನಿನ್ನೆ ಮೊನ್ನೆಯವರೆಗೆ ಮೆಚ್ಚಿನ ಮಗನಾಗಿದ್ದ ನಾನು ರಾತ್ರೋ ರಾತ್ರಿ ಕೃತಘ್ಞ ಪುತ್ರನ ಸ್ಥಾನಕ್ಕೆ ವರ್ಗಾಯಿಸಲ್ಪಟ್ಟಿದ್ದೆ.

“ಯಾರದು ಪತ್ರ?”_ಶಶಿ ಕೇಳಿದಳು.

“ಅಮ್ಮಂದು….” ಎನ್ನುತ್ತಾ ಮೇಜಿನ ಮೇಲಿಟ್ಟೆ.

“ಓದಲಾ…?” ಆತಂಕದಿಂದಲೇ ಕೇಳಿದಳು.

“ನಿನ್ನಿಂದ ಮುಚ್ಚಿಡೋದು ಏನಿದೆ….” ಎನ್ನುತ್ತ ಆದಷ್ಟು ತಣ್ಣಗೆ ವರ್ತಿಸಲು ಯತ್ನಿಸಿದೆ. ಆಗಲೇ ಎದೆಯಲ್ಲಿ ಆಂದೋಲನ ಆರಂಭವಾಗಿತ್ತು. ನಿಧಾನವಾಗಿ ಪತ್ರ ಓದಿ ಕೆಳಗಿಡುತ್ತಾ ಕೇಳಿದಳು_

“ಹೋಗಬೇಕಾ ಮೈಸೂರಿಗೆ?”

“ಹೂಂ….” ತಲೆಯಾಡಿಸಿದೆ.

“ನನಗೇಕೋ ಅಳುಕಾಗುತ್ತಿದೆ.”

“ಎಂದಿದ್ರೂ ಎದುರಿಸಲೇಬೇಕಲ್ಲ….”

ನಮ್ಮ ಊಟಿ ಪ್ರವಾಸ ರದ್ದಾಯಿತು. ಮೈಸೂರಿನ ಬಸ್ ಹಿಡಿದೆವು. ಮೈಸೂರಲ್ಲಿ ಮೊದಲ ಬಾರಿಗೆ ಬಂದಿಳಿದ ಶಶಿಗೆ ಕ್ಷಣಕಾಲ ಆತಂಕ ಮರೆತು ಉತ್ಸಾಹ ಉಕ್ಕಿತ್ತು.

“ಅರಮನೆ, ಬೃಂದಾವನ ಎಲ್ಲ ಹೋಗೋಣಲ್ಲ….” ಹೇಳಿದಳು. ನಾನೋ ಮೊದಲ ಭೇಟಿಯ ಸಿಡಿಮದ್ದಿನ ಆಸ್ಪೋಟಕ್ಕೆ ಸಿದ್ಧವಾಗುತ್ತಿದ್ದೆ.

“ಅದೆಲ್ಲ ಆಮೇಲಿರಲಿ, ಮೊದಲು ಪರಿಸ್ಥಿತಿ ಹೇಗಾಗುತ್ತೆ ನೋಡೋಣ” ಎಂದೇನೋ ಗದರಿ, “ಹೋದ ತಕ್ಷಣ ಅಮ್ಮನ ಕಾಲಿಗೆ ನಮಸ್ಕಾರ ಮಾಡಿಬಿಡು. ಅಮ್ಮ ಸ್ವಲ್ಪ ಪೂರ್ವಕಾಲದವಳು” ಎಂದೆ. ತಟ್ಟನೆ ಶಶಿಯ ಕಣ್ಣುಗಳು ಕಿರಿದಾದವು_

“ರವಿ ನಾನು ನಾಟಕ ಮಾಡಲಾರೆ” ಅಂದುಬಿಟ್ಟಳು.

“ಹಾಂ….” ಅವಳ ಉತ್ತರ ಅರಗಿಸಿಕೊಳ್ಳುತ್ತಿದ್ದಂತೆ,

“ನನಗೆ ಗೌವರ ಇಲ್ಲದ ವ್ಯಕ್ತಿಯ ಕಾಲಿಗೆ ಬೀಳೋಕೆ ಮನಸ್ಸಿಲ್ಲ….” ಎಂದವಳು ತಡೆ ಹಿಡಿದು ಮುಂದುವರಿಸಿದಳು. “ನಿನಗೆ ಗೊತ್ತಿದೆ ನನ್ನ ಬಗ್ಗೆ ಅವರಾಡಿದ, ಆಡಬಾರದ ಮಾತುಗಳು.”

“ಶಶಿ ಅವಳೇನೇ ಆದ್ರೂ ನನ್ನ ತಾಯಿ ಕಣೇ….” ಮೊದಲ ಬಾರಿಗೆ ಶಶಿ ಮೇಲೆ ಹರಿಹಾಯ್ದು ಹೇಳಿದ. ಅಮ್ಮನ ಪರ ವಹಿಸಬೇಕೆಂಬ ಕಾರಣಕ್ಕಲ್ಲ. ಅಮ್ಮನ ವರ್ತನೆ ನನಗೆ ಸರಿ ಕಂಡಿತ್ತು ಅಂತಲೂ ಅಲ್ಲ. ಆದರೂ ಅದೇಕೋ ಶಶಿ ಹಾಗೆ ಹೇಳಿದಾಗ ಅಮ್ಮನನ್ನು ಎತ್ತಿ ಹಿಡಿದಿದ್ದೆ.

“ನಿನಗೆ ಜನ್ಮ ಕೊಟ್ಟವಳು, ನನ್ನ ಬದುಕು ಮುಗಿಸಲೂ ಸಿದ್ಧವಿದ್ದವಳು. ಮಾತೃತ್ವ ಅನ್ನೋದು ತನ್ನ ಮಕ್ಕಳ ಸುಖವೊಂದಕ್ಕೆ ತಿರುಗಿ, ಇತರ ಯಾರನ್ನೂ ಬಲಿ ಏರಿಸಲು ಸಿದ್ಧವಿದ್ರೆ ಅಂತಹ ಮಾತೃತ್ವ ನನಗೆ ಎಂದಿಗೂ ಬೇಡ!” ಶಶಿ ದೃಢವಾಗಿ ಹೇಳಿದಳು. ಸುಮ್ಮನೆ ಕಣಿ ಮಾಡ್ತಾಳೆ ಒಂದು ನಮಸ್ಕಾರ ಮಾಡು ಅಂದದ್ದಕ್ಕೆ, ನನಗೆ ರೇಗಿತ್ತು_

“ಅಮ್ಮ ನಮಗೋಸ್ಕರ ಎಷ್ಟು ಒದ್ದಾಡ್ತಾ ಇದ್ದಾಳೆ ನಿನಗೇನು ಗೊತ್ತು…” ಶಶಿ ಮಾತಿಲ್ಲದೆ ನಿಂತಳು. ಮನೆಯಲ್ಲಿ ಆದ ರಾದ್ಧಂತವನ್ನೆಲ್ಲ, ಅಮ್ಮ ಅಪ್ಪ ಅಂದದ್ದೆಲ್ಲ ಶಶಿಯೊಡನೆ ತೋಡಿಕೊಂಡದ್ದು ತಪ್ಪಾಯಿತೇನೋ. ನನ್ನವರ ಬಗ್ಗೆ ಶಶಿಗೆ ಗೌರವವೇ ಉಳಿದಿಲ್ಲ! ತಟ್ಟನೆ ಶಶಿಯ ಭುಜದ ಮೇಲೆ ಕೈ ಇರಿಸಿ ಹತ್ತಿರ ಎಳೆದುಕೊಂಡೆ.

‘ಶಶಿ ನನಗರ್ಥ ಆಗುತ್ತೆ. ಆದ್ರೂ ಸುಮ್ಮನೆ ‘ಸೀನ್’ ಏಕೆ? ಯಾರೇನೇ ಅನ್ನಲಿ, ನಾನಂತು ನಿನ್ನ ಜೊತೆ ಇದ್ದೀನಲ್ಲ….” ಶಶಿ ಕಣ್ಣು ಒರೆಸಿಕೊಂಡಳು. ಆಟೋ ಹತ್ತಿ ಗೋಕುಲ ತಲುಪಿದೆವು.

ಆಟೋ ನಿಂತ ಸದ್ದು ಕೇಳಿ ಕಿಟಕಿಯಿಂದ ಹೊರಗಿಣುಕಿದ ಆಶಾ ನಮ್ಮನ್ನು ಕಂಡೊಡನೆ ಮುಖ ಉಬ್ಬಿಸಿಕೊಂಡು ಬಾಗಿಲು ತೆರೆದು, ಸರ್ರನೆ ಒಳಗೋಡಿದಳು. ಅಮ್ಮ, ಜೋಲು ಮುಖ ಹಾಕಿಕೊಂಡು ನಿಧಾನವಾಗಿ ಇನ್ನಿಲ್ಲದ ನಿತ್ರಾಣದಲ್ಲಿ ಹೊರಬಂದಳು. ಅಮ್ಮ ಏಕಿಷ್ಟು ಇಳಿದು ಹೋಗಿದ್ದಾಳೆ….? ಜನ ತಾವೇ ಕೊಂಡು ತಂದ ದುಃಖದಲ್ಲಿ ನರಳುವುದರಲ್ಲೇ ಪುರುಷಾರ್ಥ ಕಾಣುತ್ತಾರೆಯೇ?

“ಅಂತೂ ನೆನಪಾಯಿತೇನೋ….” ಎಷ್ಟೊಂದು ವ್ಯಂಗ್ಯ! ಶಶಿ ಕಾಲಿಗೆ ಬಿದ್ದಾಗಲೂ ಅವಳ ಕಡೆ ತಿರುಗಿಯೂ ನೋಡದೆ-

“ನೀನ್ಯಾಕೋ ಇಷ್ಟು ಇಳಿದು ಹೊಗಿದ್ದೀಯಾ…. ನಿನ್ನ ಇಚ್ಛೆಯಂತೆ ಮದುವೆ ಆಗಿದ್ದೀಯ, ಸುಖವಾಗಿರು” ಎಂದವಳು, “ನೋಡಿದಿರೇನ್ರೀ ನಿಮ್ಮ ಮಗ ಬಂದಿದ್ದಾನೆ” ಕೂಗಿ ಹೇಳಿದಳು. ಅಪ್ಪ ಒಳಗೇ ಇದ್ದಾರೆಯೆ! ಶಶಿ ಎಲ್ಲಿಲ್ಲದ ಮುಜುಗರದಿಂದ ಮುದ್ದೆಯಾಗಿ ನಿಂತಿದ್ದಳು. ಇದಕ್ಕಿಂತ ಅಮೋಘ ಸ್ವಾಗತವನ್ನೇನೂ ನಿರೀಕ್ಷಿಸಿರದ ನಾನು ಏನೋ ಅಂತೂ ಮುಗಿದರೆ ಸಾಕು ಎಂಬಂತೆ ನಿಂತಿದ್ದೆ. ಅಪ್ಪ ಪೇಪರ್‍ನಿಂದ ಮುಖ ಎತ್ತದೆಯೇ “ಹೂಂ… ಹೂಂ….” ಎಂದು ಹೂಂಕರಿಸಿದರು. ಆ ದಿನ ಹೆಚ್ಚು ಮಾತುಕತೆ ಏನೂ ಆಗಲಿಲ್ಲ. ಅಪರಿಚಿತರ ನಡುವೆ ಎತ್ತಿ ಹಾಕಿದಂತೆ ನನಗೇ ಅನ್ನಿಸಿತ್ತು. ಇನ್ನು ಶಶಿಗೆ ಹೇಗಿತ್ತೊ. ಅಮ್ಮನದೋ ಮಾತು ಮಾತಿಗೂ ಅಳು. “ಹಿರಿಯ ಮಗನ ಮದುವೆ ಕೂಡ ನೋಡಲಾರದ ಹತಭಾಗ್ಯರು ಕಣೋ ನಾವು…. ನಿನಗೆ ಬಿಡು ನಮ್ಮ ನೆನಪೂ ಆಗಲಿಲ್ಲ….’ ಸಾವಿರದೊಂದು ಬಾರಿ ಹೇಳಿದಳು. ಅವಳ ಮೈ ಕೈ ನೋವು, ಎದೆಯಲ್ಲಿ ಎಂಥದ್ದೋ ನೋವು… ಎಲ್ಲಕ್ಕೂ ನಾನೇ ಕಾರಣವೆಂಬಂಥ ದೂರು ಧ್ವನಿ ಇತ್ತು. ಅಂತೂ ಇಲ್ಲಿಂದ ಹೊರಟರೆ ಸಾಕಪ್ಪ ಎಂಬಂಥ ವಾತಾವರಣವನ್ನು ಅಮ್ಮ-ಅಪ್ಪ-ಅಶಾ ಯಶಸ್ವಿಯಾಗಿ ಸೃಷ್ಟಿಸಿದ್ದರು. ತಮ್ಮ ರಾಮು ನನ್ನ ಪರವಿದ್ದನೋ, ವಿರೋಧವಿದ್ದನೋ ಅವನಿಗೇ ಗೊತ್ತು. ಏನೊಂದು ಆಡಿ ತೋರಿಸದ ತಟಸ್ಥ ಸ್ವಭಾವದವ.

ಇಷ್ಟಕ್ಕೆ ಮುಗಿದಿದ್ದರೆ ಸಾಕಿತ್ತು. ಆದರೆ ಮರುದಿನ ದೊಡ್ಡ ರಾದ್ಧಾಂತವೇ ಕಾದಿತ್ತು. ಆ ರಾತ್ರಿ ವರಾಂಡದಲ್ಲೇ ಮಲಗಿದ್ದೆವು. ಬಹಳ ಹೊತ್ತಿಗೆ ನಿದ್ರೆ ಹತ್ತಿತ್ತು. ಬೆಳಿಗ್ಗೆ ಕಿಟಕಿಯಿಂದ ಚುರು ಚುರು ಸೂರ್ಯನ ಕಿರಣಗಳು ಬಿದ್ದಾಗಲೂ ಎಚ್ಚರವಾಗದೆ ಬಿದ್ದುಕೊಂಡ ನನಗೆ, ಅಪ್ಪನ ಹಾರಾಟ ಕೇಳಿ ತಟ್ಟನೆ ಗಲಿಬಿಲಿಯಿಂದ ನಿದ್ದೆ ಕಣ್ಣಲ್ಲೇ ಎದ್ದು ಕುಳಿತೆ. ಶಶಿ ಪಕ್ಕದಲ್ಲಿರಲಿಲ್ಲ. ಅವಳ ಹಾಸಿಗೆಯನ್ನು ನೀಟಾಗಿ ಮಡಚಿ ಇಟ್ಟಿದ್ದಳು.

“ರವೀ…. ನಿನ್ನ ಹೆಂಡತಿಗೆ ಸ್ವಲ್ಪ ಮರ್ಯಾದೆಯಾಗಿ ಬಟ್ಟೆ ಹಾಕಿಕೊಳ್ಳಲು ಹೇಳು” ಅಪ್ಪ ಕೂಗಿ ಹೇಳಿದಾಗ, ಶಶಿ ಕಡೆ ತಿರುಗಿದ್ದೆ. ನೈಟಿಯಲ್ಲಿ ಎದ್ದು ಬಂದಿದ್ದಳು. ಅಪ್ಪನ ಮಾತಿನ ಧೋರಣೆ ತೀರಾ ಕೆಡುಕೆನಿಸಿತು.

“ಅಪ್ಪ ಅವಳೇನೂ ಹಾಕಬಾರದ್ದು ಹಾಕಿಲ್ಲ….” ಸಾವಧಾನವಾಗೇ ಹೇಳಲು ಪ್ರಯತ್ನಿಸಿದೆ. ಸರ್ರನೆ ಸಿಡುಕಿಬಿಟ್ಟರು.

“ಏನಂದ್ಯೋ…. ನನಗೇ ಎದುರು ವಾದಿಸ್ತೀಯಾ? ಕುಲಗೋತ್ರ ಮನೆತನ ಒಂದೂ ನೋಡದೆ ಹೆಣ್ಣು ತಂದ್ರೆ ಇನ್ಹೇಗಿರುತ್ತೆ. ಮರ್ಯಾದೆಯಿಂದ ಸೀರೆ ಉಡಲು ಹೇಳು…” ತಟ್ಟನೆ ನನಗೂ ಪಿತ್ತ ಕೆರಳಿತು.

“ಅಪ್ಪ…. ನೀವು ಬಾಯಿಗೆ ಬಂದ ಹಾಗೆ ಮಾತಾಡಬೇಡಿ…. ಶಶಿ ನನ್ನ ಹೆಂಡತಿ. ಅವಳು ಉಡೋದು ಬಿಡೋದು ನನಗೆ ಸೇರಿದ್ದು….” ಅಪ್ಪನ ಕಣ್ಣು ಕೆಂಪಾಗಿ ಕೋಪದಿಂದ ಇಡೀ ಶರೀರ ಅದುರುವಂತೆ ಕಂಡಿತು. ತಮ್ಮ ಮನೆಯಲ್ಲಿ ತಮ್ಮ ಸರ್ವಾಧಿಕಾರವನ್ನು ಯಾರೂ ಪ್ರಶ್ನಿಸಿದ್ದಿಲ್ಲ.

“ಏನೋ ಅಂದೆ ಮುಠ್ಠಾಳ…. ನೀನು ಮನೆತನ ಗೌರವ ಎಲ್ಲ ಬಿಟ್ಟು ಓಡಿಹೋದೆ ಅಂದರೆ, ನಮಗಿನ್ನು ನಾಲ್ಕು ಜನರ ನಡುವೆ ತಲೆ ಎತ್ತಿ ಬಾಳಬೇಕಿದೆ….” ಏನೇನೋ ಹಾರಾಡತೊಡಗಿದರು. ನಾನು ತಟಕ್ಕನೆ ಎದ್ದು_

“ನಡೀ ಶಶಿ, ಇಂಥಾ ಆತಾವರಣದಲ್ಲಿ ಒಂದು ನಿಮಿಷಾನೂ ಇರಬಾರದು” ಎಂದವನು, ಅಡಿಗೆ ಮನೆಯ ಹೊಸಿಲಲ್ಲಿ ಅಮ್ಮ ನಿಂತದ್ದು ಕಂಡು_

“ಈ ಸಂಪತ್ತಿಗೆ ನನ್ನ ಕರೆದದ್ದು ಯಾಕೆ? ನಿಮಗಿಬ್ಬರಿಗೂ ನಮ್ಮನ್ನು ಒಪ್ಪಿಕೊಳ್ಳೋ ಉದ್ದೇಶ ಇಲ್ಲದ ಮೇಲೆ?” ಗರಬಡಿದಂತೆ ನಿಂತ ಅಮ್ಮ ತಟ್ಟನೆ ಜೋರುದನಿಯಲ್ಲಿ ಅಳುತ್ತಾ “ರವಿ, ಮಗ ಅಂತ ಒಂದು ಮಾತು ಹೇಳೋ ಅಧಿಕಾರಾನೂ ಇಲ್ಲವೇನೋ ಅವರಿಗೆ, ಅವರೇನೋ ಹೇಳಬಾರದ್ದು ಹೇಳಿದ್ದಾರೆ? ಯಾಕೋ ಹೀಗೆ ಹೊಟ್ಟೆ ಉರಿಸ್ತೀಯಾ?”

“ಹೇಳೋ ಮಾತುಗಳು ನಾಗರೀಕವಾಗಿರಬೇಕಮ್ಮ. ಹೇಳೊ ಕೇಳೋ ರೀತಿ ಇದೆ….” ಬುಸುಗುಡುತ್ತಲೇ ಸೂಟ್‌ಕೇಸಿಗೆ ಬಟ್ಟೆತುರುಕಿದೆ. ಶಶಿ ನನ್ನ ಕೈ ತಡೆದು ಸಮಾಧಾನ ಮಾಡಲು ಯತ್ನಿಸಿದಳು. ಅಪ್ಪ ಮಾತ್ರಾ….

“ಹೋಗಲಿ ಬಿಡೇ…. ಒಬ್ಬ ಮಗ ಸತ್ತ ಅಂದ್ಕೋತೀನಿ….” ಎಂದೇನೋ ಹಾಲಲ್ಲಿ ಎಗರಾಡುತ್ತಿದ್ದರು. ಅಶಾ ಎಲ್ಲರಿಗಿಂತಲೂ ಜೋರಾಗಿ ಗೊಳೋ ಎಂದು ಅಳುತ್ತಾ ಶಶಿಯ ಕೈ ಹಿಡಿದು_

“ರೀ ನಿಮಗೆ ಕೈ ಮುಗಿದು ಕೇಳ್ಕೋತೀನಿ, ಬೆಂಗಳೂರಲ್ಲಿ ಹೇಗೆ ಬೇಕಾದ್ರೂ ಇರಿ, ಇಲ್ಲಿ ನಮ್ಮ ಸಂಪ್ರದಾಯದ ಮನೆಯಲ್ಲಿ ಅಪ್ಪನಿಗೆ ಹೊಂದ್ಕೊಳ್ಳಿ….” ಎಂದದ್ದು ಎಷ್ಟು ನಾಟಕೀಯವಾಗಿತ್ತು! ಅಂತೂ ಹೇಗೋ ಆದಿನ ಅಲ್ಲೇ ಉಳಿದೆವು. ಹೆಚ್ಚು ಮಾತಿಲ್ಲದೆ ಊಟ, ತಿಂಡಿ, ಬೇಕು, ಬೇಡ ಇಷ್ಟೆ. ಅಪ್ಪನಿಗೂ ಏರಿದ್ದ ಧ್ವನಿ ಇಳಿದ ಮೇಲೆ ಅರ್ಥವಾಗಿರಬೇಕು-ಮಗ ಬೆಳೆದಿದ್ದಾನೆ. ಇನ್ನು ತಮ್ಮ ಗತ್ತಿನ ಶಿಸ್ತಿನ ಮುಷ್ಟಿಯಲ್ಲಿ ಹಿಡಿದಿಡುವ ವಯಸ್ಸಲ್ಲ.

ಅಲ್ಲಿಂದ ಮುಂದೆ ಶಶಿ ಹಬ್ಬ ಹರಿದಿನಗಳನ್ನು ಬಿಟ್ಟರೆ ಮೈಸೂರಿಗೆ ಹೆಚ್ಚಾಗಿ ಬರಲೇ ಇಲ್ಲ. ನಾನು ಆಗಾಗ್ಗೆ ಕರ್ತವ್ಯವೆಂಬಂತೆ ಹೋಗಿಬರುತ್ತಿದ್ದೆ. ತಿಂಗಳಿಗೊಮ್ಮೆಯಾದರೂ ಅಮ್ಮನಿಂದ ‘ತಕ್ಷಣ ಹೊರಟು ಬಾ, ಮೈ ಹುಷಾರಿಲ್ಲ’ ಎಂದೋ ಇಲ್ಲ ‘ನನಗೆ ಹೇಗೆ ಹೇಗೋ ಆಗ್ತಾ ಇದೆ, ನಿನ್ನ ನೋಡಬೇಕು ಈ ಬಗೆಯ ಧಿಡೀರ್ ಪತ್ರಗಳು ಬರುತ್ತಲೇ ಇದ್ದವು. ಪ್ರತಿ ಬಾರಿ ನಾನು ಅಲ್ಲಿ ಇಳಿದಾಗ ಅಮ್ಮ ನಿಶ್ಶಕ್ತಿಯಿಂದ ಕುಳಿತು ‘ಇನ್ನು ನಾನು ಉಳಿಯೋಲ್ವೊ ರವಿ’ ಎಂದೇನೋ ಗೋಳಾಡುವುದು, ನಂತರ ಸ್ವಲ್ಪ ಹೊತ್ತಿಗೆ ಸರಿ ಹೋಗುವುದು ಎಷ್ಟು ಮಾಮೂಲಾಗಿತ್ತು ಎಂದರೆ, ಅಮ್ಮ ತನ್ನ ಅನಾರೋಗ್ಯದ ಬಗ್ಗೆ ತನ್ನನ್ನೇ ನಂಬಿಸಿಕೊಂಡು ಬಿಟ್ಟಿದ್ದಳು. ನಾನು ಹೊರಟು ಬರುವಾಗ ಅಪ್ಪನಿಗೆ ಕಾಣದಂತೆ ಅಮ್ಮನ ಕೈಗೆ ಇನ್ನೂರೋ-ಮುನ್ನೂರೋ ಕೊಡುತ್ತಿದ್ದೆ. ಎಂದೂ ಎರಡು ಕಾಸು ಸ್ವತಂತ್ರವಾಗಿ ಖರ್ಚು ಮಾಡದ ಅಮ್ಮನ ಬಗ್ಗೆ ಕನಿಕರವಿತ್ತು. ಮೂವತ್ತು ವರ್ಷಗಳ ವಿವಾಹ ಜೀವನದಲ್ಲಿ ಅಪ್ಪ ಅಮ್ಮನ ಕೈಗೆ ದುಡ್ಡು ಕೊಟ್ಟದ್ದನ್ನು ನಾನು ಕಂಡೇ ಇರಲಿಲ್ಲ. ಮನೆಯಲ್ಲಿ ಏನು ಮುಗಿದರೂ ನಾಲ್ಕಾರು ಬಾರಿ ಹೇಳಿದ ಮೇಲೆ ತಾವೇ ತಂದು ಹಾಕುತ್ತಿದ್ದರು. ‘ಹಣ ಏನಾದರೂ ಕಳುಹಿಸಲಾ ಅಮ್ಮ’ ಅಂತ ಕೇಳಿಯೂ ಇದ್ದೆ. ‘ಬೇಡ ಬಿಡೋ, ಅವರಿಗೆ ಇನ್ನೂ ಸರ್ವೀಸ್ ಇದೆ. ರಾಮೂನೂ ಕೈತುಂಬ ಸಂಬಳ ತರ್ತಾನೆ. ಹೇಗಿದ್ರೂ ಈ ಮನೆ-ಮಠ ಎಲ್ಲ ಅವನಿಗೇ ಸೇರೋದು. ಅಶಾ ಮದುವೆಗೆ ಒಂದಿಷ್ಟು ಹೊಂದಿಸಿಡು’ ಎಂದು ನನ್ನಲ್ಲಿ ಹೇಳಿದರೂ, ಅದೇಕೋ ಅಮ್ಮ ಊರ ತುಂಬೆಲ್ಲ ‘ಅವರಿಗೇನು ಇಬ್ಬರು ದುಡೀತಾರೆ. ನಾವು ಒಂದು ಕಾಸು ಕೇಳಿಲ್ಲ. ನಮ್ಮ ರವೀ ತೀರಾ ಧಾರಾಳ, ಆದರೆ ಸೊಸೆ ಬಿಡಬೇಕಲ್ಲ’ ಎಂದು ಸಾರಿಕೊಂಡು, ಅಂತೂ ಶಶಿಯ ಮೇಲೆ ಗೂಬೆ ಕೂರಿಸಿದ್ದಳು. ಪ್ರತಿ ಬಾರಿ ಊರಿಂದ ಬಂದಾಗ ಅಮ್ಮನ ಗೋಳು ಕೇಳಿ ಕೇಳಿ ತಲೆ ಅರ್ಧ ಕೆಟ್ಟಿರುತ್ತಿತ್ತು. ಶಶಿ ಸಹಜವಾಗಿ ಏನು ಕೇಳಿದರೂ ರೇಗಿಬಿಡುತ್ತಿದ್ದೆ. ಮತ್ತೆರಡು ದಿನಕ್ಕೆ ಮನಸ್ಸು ಸಮತೋಲಕ್ಕೆ ಬಂದಾಗ ‘ಸಾರಿ’ ಕೇಳಿ ನೋಯುತ್ತಿದ್ದೆ. ಶಶಿ ನನ್ನ ಕೋಪ ಪಶ್ಚಾತ್ತಾಪ ಎರಡಕ್ಕೂ ಪ್ರತಿಕ್ರಿಯಿಸುವುದನ್ನೇ ಮರೆತಳು.

ಅಮ್ಮನ ಗೋಳುಗಳ ಪಟ್ಟಿಗೆ ಮತ್ತಷ್ಟು ಸೇರಿಸಿದ ಪ್ರಶಶ್ತಿ ಆಶಾಗೇ ಸಲ್ಲಬೇಕು. ಆಶಾ ಬೆಂಗಳೂರಿಗೆ ಒಮ್ಮೆ ಬಂದಿದ್ದಳು. ಅವಳು ಬರುವ ಹೊತ್ತಿಗೆ ಸರಿಯಾಗಿ ನಾನು ಕಸಗುಡಿಸುತ್ತಿದ್ದೆ. ಆಶಾ ಸೀದಾ ಒಳಗೆ ಬರುತ್ತಾ ನನ್ನ ಕೈಯಲ್ಲಿನ ಪೊರಕೆಯನ್ನು ಗೇಲಿಯಿಂದ ನೋಡಿ_

“ಓಹೋ ಬಹಳ ಕೆಲಸ ಮಾಡ್ತಾ ಇದ್ದಾರೆ ಅಮ್ಮಾವ್ರ ಗಂಡ” ಎಂದು ವ್ಯಂಗ್ಯವಾಗಿ ನಕ್ಕಳು, ಸ್ವಲ್ಪ ಕೆಡುಕೆನಿಸಿದರೂ ಗುಡಿಸುವುದು ಮುಂದುವರಿಸುತ್ತಲೇ,

“ಶಶಿ ನೋಡು ಯಾರು ಬಂದಿದ್ದಾರೆ….” ಕರೆದೆ. ಉಪ್ಪಿಟ್ಟು ತಯಾರಿಸುತ್ತಿದ್ದ ಶಶಿ ಆಶಾಳನ್ನು ನೋಡಿ_

“ಯಾವಾಗ ಬಂದ್ರಿ? ಒಬ್ಬರೇ ಬಂದ್ರಾ?” ಎಂದು ಉಪಚರಿಸುತ್ತಲೇ ಉಪ್ಪಿಟ್ಟು ಮೇಜಿನ ಮೇಲಿರಿಸಿ_“ರವಿ ತಟ್ಟೆ ಲೋಟಾ ತಂದಿಡ್ತೀಯಾ, ನಾನು ಸ್ನಾನ ಮುಗಿಸಿ ಬಂದುಬಿಡ್ತೀನಿ” ಎಂದು ಹೇಳಿದ್ದಳು. ಇಬ್ಬರೂ ದುಡಿಯುವ ಈ ಮನೆಯಲ್ಲಿ ನಾನು ಯಾವ ಕೆಲಸಕ್ಕೂ ಹಿಂಜರಿದಿರಲಿಲ್ಲ. ನಾ ಒಳಗೆ ಹೋಗಿ ತಟ್ಟೆ ಕಪ್ಪು ಜೋಡಿಸುವಾಗ_

“ಪರವಾಗಿಲ್ಲವೋ ರವಿ, ಎಲ್ಲ ಕೆಲಸದಲ್ಲೂ ಪ್ರವೀಣನಾಗಿದ್ದೀಯ, ಮೈಸೂರಲ್ಲಿ ಅತ್ತಲ ಕಡ್ಡಿ ತೆಗೆದು ಇತ್ತ ಹಾಕ್ತಾ ಇರಲಿಲ್ಲ” ಎಂದು ಕೊಂಕಿ ನುಡಿದಳು. ಇಲ್ಲಿ ಕಂಡ ಪ್ರತಿಯೊಂದನ್ನು ರಂಗು ಬಳಿದು ಅಮ್ಮನಲ್ಲಿ ಹೇಳಿದ್ದಳು ಎಂದು ಕಾಣುತ್ತದೆ. ಮುಂದಿನ ಬಾರಿ ಮೈಸೂರಿನಲ್ಲಿ ಇಳಿದಾಗ ಅಮ್ಮ ಮೂತಿ ಸೊಟ್ಟ ಮಾಡಿ_

“ಯಾಕೋ ಹೀಗೆ ಇಳಿದು ಹೋಗಿದ್ದೀಯೋ? ಆ ಫ್ಯಾಕ್ಟರಿ ಊಟ ಮೈಗೆ ಹತ್ತುತ್ತೇನೋ, ಬೆಳಿಗ್ಗೆ ಅವಳಿಗೊಂದು ಅಡುಗೆ ಮಾಡೋಕ್ಕೂ ಆಗೋಲ್ಲವೆ. ಈ ಚಂದಕ್ಕೆ ಸಂಸಾರ ಯಾಕೆ?” ಎಂದೆಲ್ಲ ಗೊಣಗಿದ್ದಳು.

“ಅಲ್ಲಮ್ಮ ಅವಳೂ ಎಷ್ಟೊತ್ತಿಗೆ ಅಂತ ಎದ್ದು ಮಾಡ್ತಾಳೆ. ಅವಳಿಗೂ ದುಡಿದು ಸಾಕಾಗಿರುತ್ತೆ.”

“ಅದಕ್ಕೇ ಹೇಳೋದು ಈ ದುಡಿಯೋ ಹುಡುಗೀರು ಬೇಡ ಅಂತಾ. ಅಚ್ಚುಕಟ್ಟಾಗಿ ನಿನ್ನ ಹೊಟ್ಟೆ ನೆತ್ತಿ ನೋಡೋ ಅಂತ ಹುಡುಗಿ ತರ್ತಾ ಇದ್ದೆ. ದುಡಿದು ಏನು ಉದ್ಧಾರ ಮಾಡ್ತಾಳೆ, ಗಂಡನ ಕೈಲೇ ಎಲ್ಲ ಮಾಡಿಸೋಳು….”

ಅಂತೂ ಅಮ್ಮ ನಾನು ಇದ್ದ ಎರಡೂ ದಿನವೂ ರುಚಿ ರುಚಿಯಾಗಿ ಮಾಡಿಟ್ಟು ನನ್ನ ತೂಕದ ಬಗ್ಗೆ ಅತಿ ಕಾಳಜಿ ತಳೆದು, ಕಡೆಗೆ ನನಗೇ ನಮ್ಮ ಜೀವನ ಶೈಲಿಯ ಬಗ್ಗೆ ಪ್ರಶ್ನೆಗಳು ಏಳುವಂತಾದವು. ಅಮ್ಮ-ಶಶಿ ಎರಡು ಹೆಣ್ಣುಗಳ ಸೆಳೆತದ ಸುಳಿಯಲ್ಲಿ ನಾನು ಗಿರಗಿಟ್ಟಲೆಯಾದೆ. ಒಂದು ಕಡೆ ತಳವೂರಿ ನಿಲ್ಲಲಾರದ ಪರಿಸ್ಥಿತಿ ಮುಟ್ಟಿತ್ತು.

ಅದೊಂದು ದಿನ ಫ್ಯಾಕ್ಟರಿ ವಿಳಾಸಕ್ಕೆ ಅಮ್ಮನ ಪತ್ರ ಬಂದಿತ್ತು. ಫ್ಯಾಕ್ಟರಿಗೇಕೆ ಬರೆದಳು ಅಂದುಕೊಳ್ಳುತ್ತಲೇ ಒಡೆದು ಓದಿದೆ_

“ಆಶೀರ್ವಾದಗಳು,

ನಿಮ್ಮ ತಂದೆಯವರ ಅನಾರೋಗ್ಯದ ಬಗ್ಗೆ ಪತ್ರ ಬರೆದಿದ್ದೆ. ನೀನು, ನನ್ನ ಪತ್ರ ತಲುಪೇ ಇಲ್ಲದಂತೆ ಉತ್ತರಿಸಿದ್ದೀಯಾ. ಪತ್ರ ಕಂಡ ಕೂಡಲೆ ನೀನು ಬರ್ತೀಯಾ ಎಂದು ಎಷ್ಟು ಕಾದಿದ್ದೆ. ನಿನ್ನಿಂದ ಇಂಥ ನಿರೀಕ್ಷೆ ಇರಲಿಲ್ಲ. ಯಾರು ಸಾಯಲಿ ಬದುಕಲಿ ನಿನಗೇನು? ನಾನು ಸತ್ತರೂ ನೀನು ಬರುವುದು ಬೇಡ. ಯಾರಿಗೆ ಗೊತ್ತು ನಿನಗೆ ನಾನು ಸತ್ತ ಪತ್ರವೂ ಸಿಗದೆ ಹೋಗಬಹುದು. ನಿನಗೆ ನಿನ್ನ ಅಪ್ಪನ ಬಗ್ಗೆಯೂ ಕಿಂಚಿತ್ತೂ ಕಾಳಜಿ ಇಲ್ಲವೆ? ನಿನಗೋಸ್ಕರ ಹಗಲು ರಾತ್ರಿ ಪಾಠ ಹೊಡಕೊಂಡು ದುಡ್ಡು ಕೂಡಿಟ್ಟರು. ಈಗಲೂ ಈ ವಯಸ್ಸಿನಲ್ಲೂ ವಿಶ್ರಾಂತಿ ಇಲ್ಲ. ಮನೆ ಇನ್ಯಾರು ನಡೆಸುತ್ತಾರೆ? ನೀನಂತೂ ಕೈಗೆ ಬರೋ ಹೊತ್ತಿಗೆ ಸರಿಯಾಗಿ ನಮ್ಮ ಕೈ ಬಿಟ್ಟು ಹೋಗಿಬಿಟ್ಟೆ. ಹೆತ್ತ ಸಂಕಟ ನಿನಗೆ ಹೇಗೆ ಅರ್ಥವಾಗಬೇಕು. ನೀವೂ ನಾಳೆ ಅಪ್ಪ-ಅಮ್ಮ ಆದಾಗ ಅರ್ಥವಾಗುತ್ತದೆ. ಯಾವಾಗ ಬರ್‍ತಾ ಇದ್ದೀಯಾ?

ಅಂದಹಾಗೆ ಮನೆಯ ವಿಳಾಸಕ್ಕೆ ಬರೆದ ನನ್ನ ಪತ್ರಗಳು ಸರಿಯಾಗಿ ತಲುಪಿದಂತಿಲ್ಲ. ಅದಕ್ಕೇ ಆಫೀಸಿಗೆ ಬರೀತ ಇದ್ದೇನೆ.

ನಿನ್ನ ಅಭಾಗ್ಯ ತಾಯಿ.”

ಎರಡೆರಡು ಬಾರಿ ಓದಿಕೊಂಡವನಿಗೆ ತಲೆ ಚಿಟ್ಟು ಹಿಡಿಯಿತು. ಅಪ್ಪನಿಗೆ ಏನಾಯಿತು. ಯಾವ ಪತ್ರವೂ ಬರಲಿಲ್ಲವಲ್ಲ. ಅಮ್ಮ ಏಕೆ ಹೀಗೆ ವಿಷ ಕಾರಬೇಕು? ಒಳಗೊಳಗೇ ಹೊರಬರದೆ ಕುದಿದ ಅವಳ ಆಕ್ರೋಶಕ್ಕೆ ಅಪ್ಪನ ಅನಾರೋಗ್ಯ ಬಾಯಿ ಕೊಟ್ಟಿತೇನೋ. ಎರಡು ಗಂಟೆ ‘ಆಫ್’ ತೆಗೆದುಕೊಂಡು ಸೀದಾ ಮನೆ ತಲುಪಿದೆ. ಶಶಿ ಯಾವುದೋ ಕಾನ್‌ಫರೆನ್ಸ್‌ಗೆ ಹೋಗಿದ್ದ ಕಾರಣ ಮೂರು ದಿನದಿಂದ ಫ್ಯಾಕ್ಟರಿಗೆ ಬಂದಿರಲಿಲ್ಲ. ಸೀದಾ ಮನೆಗೇ ಬರುತ್ತಿದ್ದಳು.

ಬಟ್ಟೆಗಳನ್ನು ಸೂಟ್‌ಕೇಸಿಗೆ ತುರುಕಿ ಮೈಸೂರಿಗೆ ಹೊರಡಲು ಸಿದ್ಧವಾಗುವಷ್ಟರಲ್ಲಿ ಶಶಿ ಬಂದಳು.

“ಅರೆ ಎಲ್ಲಿಗೆ ಹೋಗ್ತಾ ಇದ್ದೀಯಾ?” ನನಗೆ ಉತ್ತರಿಸುವ ಸಮಾಧಾನವೂ ಉಳಿದಿರಲಿಲ್ಲ.

“ಸುಡುಗಾಡಿಗೆ….” ಎಂದು ಕಿರುಚಾಡಿದೆ.

“ಏನಾಗಿದೆ ನಿನಗೆ?” ಅಚ್ಚರಿ ಆತಂಕದಿಂದ ಕೇಳಿದಳು.

“ಕಣಿ ಕೇಳು. ಅಮ್ಮನ ಪತ್ರ ಬಂದಿರಲಿಲ್ವೆ? ಏಕೆ ಕೊಡಲಿಲ್ಲ ನನಗೆ? ಈ ಪತ್ರ ನೋಡು_ಎಷ್ಟು ಒದ್ದಾಡ್ತಾ ಇದ್ದಾಳೆ. ಅಪ್ಪನಿಗೆ ಏನಾಗಿದೆಯೋ ಏನೋ….” ಪತ್ರದಲ್ಲಿ ಸರ ಸರ ಕಣ್ಹಾಯಿಸಿ_

“ರವಿ ಯಾವ ಪತ್ರಾನೂ ಬಂದಿಲ್ಲ ಕಣೋ….” ನಾನು ಅವಳಿಗೆ ಉತ್ತರವೂ ಹೇಳದೆ ಹೊರಟು ಬಂದೆ. ಗೇಟು ದಾಟುವಾಗ ಶಶಿ ಓಡಿ ಬಂದಳು. ಒತ್ತಿ ಬಂದ ದುಃಖದಲ್ಲೂ “ನಾನೂ ಬರಲಾ….” ಕೇಳಿದಳು.

“ಸದ್ಯ ನೀನು ಮಾಡ್ತಾ ಇರೋ ಉದ್ಧಾರ ಸಾಕು…” ಎಂದವನೇ ತಿರುಗಿಯೂ ನೋಡದೆ ಬಸ್‌ಸ್ಟಾಂಡಿಗೆ ನಡೆದಿದ್ದ. ಮೈಸೂರು ತಲುಪುವವರೆಗೆ ನಾನು ನಾನಾಗಿರಲಿಲ್ಲ. ಅದೇ ಸ್ಥಿತಿಯಲ್ಲಿ ಮನೆ ತಲುಪಿದೆ. ಅಪ್ಪ ನರ್ಸಿಂಗ್ ಹೋಂಗೆ ಸೇರಿದ್ದರು. ಗ್ಲೂಕೋಸಿನ ಡ್ರಿಪ್ಸ್ ನೇತಾಡುತ್ತಿತ್ತು. ಅಮ್ಮ ಕಣ್ಣು ಕೆಂಪಾಗಿ ಮಂಚದ ತುದಿಯಲ್ಲಿ ಕೂತಿದ್ದಳು. ನನ್ನನ್ನು ನೋಡಿ ಅತಿ ಪ್ರಾಯಾಸದಿಂದ,

“ಅಂತೂ ಬಂದ್ಯೇನೋ….” ಎಂದು ತಲೆಮೇಲೆ ಕೈಹೊತ್ತು ಕೇಳಿದಳು. ಅಪ್ಪ ಸುಧಾರಿಸಲು ನಾಲ್ಕು ದಿನವೇ ಹಿಡಿದಿತ್ತು. ನರ್ಸಿಂಗ್ ಹೋಂ ಬಿಲ್ ಎರಡು ಸಾವಿರ ಕಟ್ಟಿ, ಅಮ್ಮನಿಗೆ ಧೈರ್ಯ ಹೇಳಿ ಮತ್ತೆರಡು ದಿನಕ್ಕೆ ಬೆಂಗಳೂರಿಗೆ ಬಂದಿದ್ದೆ. ವಾರದಿಂದ ನಿದ್ದೆ ಇಲ್ಲದ ಓಡಾಟ, ಅಮ್ಮನ ಈಟಿಯಂಥಾ ಮಾತುಗಳು ನನ್ನ ಮನಃಸ್ಥಿತಿಯನ್ನೇ ಬದಲಾಯಿಸಿ ಬಿಟ್ಟಿತ್ತು. ಮನೆಗೆ ಬಂದೊಡನೆ ಶಶಿ ಕಳಕಳಿಯಿಂದ ಕೇಳಿದ್ದಳು.

“ಅಪ್ಪ ಹೇಗಿದ್ದಾರೆ?”

“ಇನ್ನೂ ಸತ್ತಿಲ್ಲವೆ….” ಪಟ್ಟನೆ ಹರಿಹಾಯ್ದೆ. ಯಾರ ಮೇಲಿನ ಕೋಪಕ್ಕೋ ಪರಿಸ್ಥಿತಿಯ ಪ್ರಳಯ ರೂಪಕ್ಕೋ ನನ್ನ ಸಹನೆಯೇ ಹಾರಿಹೋಗಿತ್ತು. ಅಪ್ಪನ ಕೋಪದ ಒಂದಂಶ ಆದರೂ ನನ್ನ ರಕ್ತದಲ್ಲಿ ಸೇರಿರಲೇ ಬೇಕು. ಶಶಿಗೂ ಸಾಕಾಗಿರಬೇಕು. ಮಾತಿಲ್ಲದೆ ರೂಮು ಸೇರಿದಳು. ಅಂದು ರಾತ್ರಿ ಇಬ್ಬರೂ ಬೇರೆ ಬೇರೆಯೇ ಮಲಗಿದೆವು.

ಮರುದಿನ ನನ್ನ ಕೈಗೆ ಪೋಸ್ಟ್‌ಮ್ಯಾನ್ ಅಮ್ಮನ ಪತ್ರ ಕೊಟ್ಟು ಹೋದಾಗ ಎಷ್ಟೊಂದು ಅಳುಕಾಗಿತ್ತು. ಸುಮ್ಮನೆ ಶಶಿ ಮೇಲೆ ಅನುಮಾನ ಪಟ್ಟು ಹಾರಾಡೆದ್ದೆ. ಆದರೆ ತಡವಾಗಿತ್ತು…. ನಮ್ಮ ನಡುವಿನ ಅಂತರ ಹಿಗ್ಗಿ ಅಗಲವಾಗಿ ನಿಂತಿತ್ತು. ನಾನು ಅವಳಲ್ಲು ಮನಬಿಚ್ಚಿ ಮಾತನಾಡುವ, ಕ್ಷಮೆ ಕೇಳುವ ಪರಿಸ್ಥಿತಿ ಉಳಿದಿರಲಿಲ್ಲ. ಅಂತೂ ನಾ ತೆರೆದುಕೊಳ್ಳಲಿಲ್ಲ. ಶಶಿಯೂ ಪ್ರಶ್ನಿಸಲಿಲ್ಲ.

ನಮ್ಮ ವೈಯಕ್ತಿಕ ಜಗಳ ನಮ್ಮ ಹುದ್ದೆಗೂ ಹರಡಿತು. ಒಂದೇ ಫ್ಯಾಕ್ಟರಿಯ ಒಂದೇ ವಿಭಾಗದಲ್ಲಿದ್ದವರು. ಆಫೀಸಿನಲ್ಲೂ ಸಣ್ಣ ಸಣ್ಣ ಕಾರಣಗಳಿಗೆ ರೇಗತೊಡಗಿದೆ. ಆಫೀಸಿನ ದಿನಚರಿ, ಆಫೀಸಿನ ತಲೆನೋವುಗಳು ಅಲ್ಲಿಗೇ ಮುಗಿಯದೆ ಮನೆಗೂ ಮುಂದುವರೆಯುತ್ತಿದ್ದವು.

ಅಲ್ಲಿಂದ ಮುಂದೆ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಏನೇನೋ ಕಾರಣಗಳು, ಘಟನೆಗಳು ಗುಡ್ಡೆಯಾಗಿ, ಆರು ತಿಂಗಳ ಹಿಂದೆ ಪರಸ್ಪರ ಒಪ್ಪಿಗೆಯಿಂದಲೇ ವಿಚ್ಛೇದನಕ್ಕೆ ಅರ್ಜಿ ಹಾಕಿ ಬೇರ್ಪಟ್ಟಿದ್ದೆವು. ಬೇರ್ಪಟ್ಟು ಆರು ತಿಂಗಳಾದರೂ, ಶಶಿಯನ್ನು ಮರೆಯಲಾರದೆ ಒದ್ದಾಡಿದ್ದೆ. ಹತ್ತಿರದಲ್ಲಿದ್ದಾಗ ಅಸ್ಪಷ್ಟವಾಗ ನಮ್ಮ ತಪ್ಪು-ಒಪ್ಪುಗಳು, ಇಷ್ಟು ಅಂತರದಲ್ಲಿ ನಿಂತು ಯೋಚಿಸುವಾಗ ನಿಧಾನವಾಗಿ ಗೋಚರಿಸತೊಡಗಿದ್ದವು. ಎಲ್ಲೋ ನಾವು ತಪ್ಪಿದ್ದೆವು. ಪ್ರೀತಿಯ ಹಾದಿಯಲ್ಲಿ ಜೊತೆ ನಿಲ್ಲದೆ ಸೋತಿದ್ದೆವು. ಅಮ್ಮ ಪತ್ರದ ಮೇಲೆ ಪತ್ರ ಬರೆದಳು. ‘ಮೈಸೂರಿಗೆ ಬಂದು ಸ್ವಲ್ಪ ದಿನ ಇದ್ದುಹೋಗು, ಹೀಗಾಗುತ್ತೆ ಅಂತ ಗೊತಿತ್ತು. ಅಂದೇ ನಮ್ಮ ಮಾತು ಕೇಳಿದ್ದರೆ….’ ಸಿಟ್ಟಿನಿಂದ ಪತ್ರಗಳನ್ನು ಮುದುಡಿ ಕಸದ ಬುಟ್ಟಿಗೆ ಎಸೆದೆ.

ಆರು ತಿಂಗಳ ನಂತರ ಮೈಸೂರಿಗೆ ಹೊರಟಿರುವೆ. ನನ್ನ ವಿಚ್ಛೇದನದ ಬಗ್ಗೆ ನನಗೆ ನಾಚಿಕೆ ಅಂಜಿಕೆ ಇದೆ ಎಂದಲ್ಲ. ಆದರೆ ಮನೆಯವರು, ನೆರೆಯವರು, ಸ್ನೇಹಿತರೆಂದು ಹೇಳಿಕೊಳ್ಳುವವರು ಕೇಳದೆ ಕೊಡುವ ಹೊರೆ ಹೊರೆ ಉಪದೇಶಗಳನ್ನು, ಸಂತಾಪಗಳನ್ನು ಎಲ್ಲಿ ಗುಡ್ಡೆ ಹಾಕಲಿ ಎಂಬ ಚಿಂತೆ! ದೀರ್ಘವಾಗಿ ನಿಟ್ಟುಸಿರುಬಿಟ್ಟೆ. ಬಸ್ಸಿನ ವೇಗತಗ್ಗುತ್ತಿದ್ದಂತೆನಿಸಿ ಕಣ್ಣು ತೆರೆದೆ. ದೂರದಲ್ಲಿ ಚಾಮುಂಡಿ ಬೆಟ್ಟ ಕಾಣುತ್ತಿತ್ತು. ನನ್ನ ಯೋಚನೆಗಳಲ್ಲಿ ಮೈಸೂರು ತಲುಪಿದ್ದೂ ತಿಳಿಯಲಿಲ್ಲ.

ಗೇಟ್ ತೆರೆದ ಸದ್ದಾಗುತ್ತಿದ್ದಂತೆಯೇ, ವರಾಂಡದಲ್ಲಿ ಅಕ್ಕಿ ಆರಿಸುತ್ತಾ ಕುಳಿತ ಅಮ್ಮ ದಡಬಡಿಸಿ ಎದ್ದು ಹೊರಬಂದವಳೇ_ “ಹೇಗಿದ್ದೀಯೋ ರವೀ” ಎಂದು ಗಲಗಲ ಅಪ್ಪಿದಳು. ಏನನ್ನೋ ನಿರೀಕ್ಷಿಸುತ್ತಿದ್ದವನು ಅಮ್ಮನ ಮುಖದ ಸಂಭ್ರಮಕ್ಕೆ ದಿಗ್ಭ್ರಮೆಗೊಂಡು ನಿಂತ. “ಈಗೆಷ್ಟೊ ನೋಡೋ ಹಾಗಿದ್ದೀಯೋ. ಕಳೆದ ಬಾರಿ ಬಂದಾಗ ಮೂಳೆ ಚಕ್ಕಳವಾಗಿದ್ದೆ” ಪ್ರೀತಿಯಿಂದ ಗದರಿದಳು. ಮತ್ತಷ್ಟು ತಬ್ಬಿಬ್ಬಾದೆ. ಆರು ತಿಂಗಳಲ್ಲಿ ಐದು ಕೆ.ಜಿ. ಇಳಿದುಹೋಗಿರುವ ನಾನು ಅಮ್ಮನ ಕಣ್ಣಿಗೆ ದಪ್ಪವಾದ ಒಗಟು ಬಿಡಿಸಲಾರದೆ ಕಣ್ಣರಳಿಸಿದೆ. ನನ್ನ ಭಾವನೆಗಳಿಗೆ ತಕ್ಕಂತೆ ನನ್ನ ರೂಪ ಬದಲಾಗುತ್ತದೆಯೆ ಅಮ್ಮನ ಕಣ್ಣುಗಳಲ್ಲಿ? ನನ್ನ ಸ್ವಭಾವವೂ ಅಷ್ಟೇ ಅಲ್ಲವೆ…. ಅಮ್ಮನ ಇಚ್ಛೆಗೆ ತಕ್ಕಂತೆ ಕಪ್ಪು ಬಿಳುಪಾಗಬಲ್ಲದು.

ಅಮ್ಮ ಹದಿನಾರರ ಹರೆಯದವಳಂತೆ ಲಗುಬಗನೆ ಓಡಾಡಿದಳು. ನಾನು ನಿಧಾನವಾಗಿ ಸೂಟ್‌ಕೇಸ್ ಕೆಳಗಿಟ್ಟು, ಬೂಡ್ಸ್ ಬಿಚ್ಚತೊಡಗಿದೆ.

“ಬೇಗ ಮುಖ, ಕೈ ಕಾಲು ತೊಳೆದು ಬಾ, ನಿನಗಿಷ್ಟವಾದ ಸಜ್ಜೆ ಪಾಯಸ ಮಾಡಿದ್ದೇನೆ” ಹಿಗ್ಗಿನಿಂದ ಅರಳಿ ಹಪ್ಪಳವಾದ ಅಮ್ಮನ ಮುಖವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ.

“ಅಂತೂ ಎಲ್ಲ ಗ್ರಹಚಾರ ಕಳೆಯಿತು. ಇನ್ನಾದರೂ ಹಾಯಾಗಿರು, ತಾಯಿ-ಮಗನ್ನ ಅಗಲಿಸಿದ ಪಾಪ ತಟ್ದೆ ಹೋಗೋಲ್ಲವೋ, ನೀನಂತೂ ಬಿಡು ಹಸುವಿನಂಥೋನು, ಯಾರನ್ನಾದರೂ ನಂಬಿಬಿಡ್ತೀಯಾ….” ಕಿವಿ ಮತ್ತೂ ಅಗಲಿಸಿ ಕೇಳಿದೆ, ಅಮ್ಮನ ಮಾತುಗಳ, ತಾನು ಆರಿಸಿದ ಹೆಣ್ಣುಗಳೆಲ್ಲ ಅಮ್ಮನ ಕಣ್ಣಿಗೆ ತಾಟಕಿಯರು, ಶೂರ್ಪನಖಿಯರೆ?

‘ಅಮ್ಮಾ….” ಏನೋ ಹೇಳಲು ಹೊರಟವನು ಸುಮ್ಮನಾಗಿಬಿಟ್ಟೆ. ರೂಮಿಗೆ ಬಂದಾಗ ಬಿಸಿ ಬಿಸಿ ವಾಂಗಿಬಾತ್‌ನೊಡನೆ ಬಟ್ಟಲಲ್ಲಿ ತುಪ್ಪದ ಸವಿಕಂಪಿನ ಪಾಯಸ! ‘ಓ ಗಾಡ್….’ ಕೂದಲು ಕಿತ್ತುಕೊಂಡು ಕಿರುಚುವಂತಾಯಿತು. ಈ ಹಬ್ಬದೂಟ ಯಾರಿಗೆ ಬೇಕಿದೆ, ಇದೆಲ್ಲ ಸವಿಯಲು ಸಮಾಧಾನ ಎಲ್ಲಿದೆ? ಏನೂ ಹೇಲಲಾರದೆ, ಇಳಿಯದ ಗಂಟಲಲ್ಲಿ ಬಲವಂತವಾಗಿ ಎರಡು ತುತ್ತು ತುರುಕಿ_

“ಸಾಕಮ್ಮ….” ಎಂದು ಕೆಳಗಿಟ್ಟೆ. ಅಮ್ಮನ ಮುಖ ಕಂದಿತು.

“ಯಾಕೋ…. ಎರಡು ತುತ್ತೂ ತಿನ್ನದೆ ಕೈ ತೊಳೀತಾ ಇದ್ದೀಯ? ಆ ಹಾಳಾದವಳು ತೊಲಗಿದಳಲ್ಲ…. ಇನ್ನೆಂಥ ಚಿಂತೆಯೋ ನಿನಗೆ. ನೋಡ್ತಾ ಇರು ಬಂಗಾರದಂಥಾ ಹುಡುಗಿ ತರ್ತೀನಿ. ಕೈ ತೊಳೆದು ಮುಟ್ಟಬೇಕು. ಆಗೆಲ್ಲ ಮನಸ್ಸು ಸರಿಹೋಗುತ್ತೆ.” ನನ್ನ ರೋಗ, ವೈಧ್ಯ ಎರಡೂ ಪತ್ತೆಹಚ್ಚಿದವಳಂತೆ ನಗು ನಗುತ್ತಲೇ ತಟ್ಟೆ ತೆಗೆದಿಟ್ಟಳು. ವಿಷಾದವಾಗಿ ನಕ್ಕು, ದಿಂಬಿಗೆ ತಲೆ ಇರಿಸಿದೆ. ಸೊಸೆ ಆರಿಸುವ ಅಧಿಕಾರ ತಡವಾಗಿಯಾದರೂ ಕೈ ಸೇರಿದ ಅಮ್ಮನ ಮುಖದಲ್ಲಿ ದಿಗ್ವಿಜಯ ಪತಾಕೆ! ಶಶಿಯ ಸೋಲಲ್ಲಿ ತನ್ನ ಗೆಲುವು ಕಾಣುತ್ತಿರುವಳೆ? ಬದುಕು ಬರಿದಾದ ನೋವಿನಲ್ಲು ಭಗ್ನವಾಗಿ ನಿಂತ ನನ್ನ ಈ ಸ್ಥಿತಿಯಲ್ಲಿ ಅಮ್ಮನ ಸಂತಸದ ತೇರು ಹೊರಟಿದೆ!

ನನ್ನ ನೋವಿನಲ್ಲಿ ಅಮ್ಮನ ನಲಿವು….

ನನ್ನ ಎದೆಬಡಿತದ ನರಳುವಿಕೆಯಲ್ಲಿ ಅಮ್ಮನ ಊರುಗೆದ್ದ ನಗಾರಿ….

ನನ್ನ ಮ್ಲಾನವದನ ನೋಡಿ ಮತ್ತೆ ಹೇಳಿದಳು_

“ನಿನಗಿನ್ನೂ ಅವಳ ಹುಚ್ಚು ಬಿಟ್ಟಿಲ್ಲವೋ. ಕಟ್ಟಿಕೊಂಡ ಗಂಡನ ಹತ್ತಿರ ಮಾಡಬಾರದ್ದು ಮಾಡಿಸಿ, ತಾನೇ ಓದಿದೋಳು ಅಂತ ಮೆರೆಯೋ ಈ ಹೆಣ್ಣುಗಳೆಲ್ಲ ಸಂಸಾರ ಮಾಡ್ತಾವಾ? ಮೊದಲೇ ನಾ ಬಡಕೊಂಡೆ, ಕೇಳಿದ್ದರೆ….” ಕತ್ತೆತ್ತಿ ನೋಡಿದೆ. ನೋವಿತ್ತೆ ಆ ಕಣ್ಣುಗಳಲ್ಲಿ! ಮಗನ ಬದುಕು ಮೂರಾಬಟ್ಟೆಯಾದ ನೋವು? ಇಲ್ಲ. ಅಂತೂ ತನ್ನ ಭವಿಷ್ಯವಾಣಿ ಸತ್ಯವಾಯಿತೆಂಬ ಸಂತಸವೆ?

“ಹಗಲೂ ರಾತ್ರಿ ಕೆಲಸ ಕೆಲಸ ಅಂತ ಬೀದಿ ಸುತ್ತೋಳು, ಯಾವನೊಡನೆ ಏನೆಲ್ಲ ಇಟ್ಟುಕೊಂಡಿದ್ದಳೊ, ಅದಕ್ಕೆ ಓಡಿ ಹೋದಳು….”

“ಅಮ್ಮಾ” ಸಿಟ್ಟಿನಿಂದ ಚೀರಿದೆ. ಮರುಕ್ಷಣ ತಣ್ಣಗಾದೆ. ನಿಧಾನವಾಗಿ ಬಿಡಿಬಿಡಿಸಿ ಹೇಳಿದೆ-

‘ಅಮ್ಮ…. ನಮ್ಮ ಸಂಬಂಧದ ‘ಪೋಸ್ಟ್‌ಮಾರ್ಟಮ್’ ಮಾಡಬೇಡ. ನಾನು ಶಶಿ ಬೇರ್ಪಟ್ಟಿದ್ದೇವೆ ಅಷ್ಟೆ. ದ್ವೇಷಿಸ್ತಾ ಇಲ್ಲ. ನಿನ್ನ ಅರ್ಥದಲ್ಲಿ ನನ್ನನ್ನು ಒಳ್ಳೆಯವನಾಗಿಸುವ ಭರಾಟೆಯಲ್ಲಿ ಶಶಿ ಮೇಲೆ ಗೂಬೆ ಕೂರಿಸಬೇಡ. ದಯವಿಟ್ಟು ನನ್ನ ಸ್ವಲ್ಪ ಹೊತ್ತು ಒಬ್ಬನೆ ಇರೋಕೆ ಬಿಡ್ತೀಯಾ?” ಅತ್ಯಂತ ದೈನ್ಯವಾಗಿ ಕೇಳಿಕೊಂಡೆ. ಅಮ್ಮ ವಿಚಿತ್ರವಾಗಿ ನೋಡಿದಳು. ಕೊಂಚ ನಿರಾಶೆಯಾದಂತೆ ಮಾತಿಲ್ಲದೆ ಹೊರ ನಡೆದಳು. ಹೋಗುವಾಗಲೂ _‘ಏನೋ ಹುಡುಗ ಇನ್ನೂ ಚೇತರಿಸಿಕೊಂಡಿಲ್ಲ. ಯಾರಿಗೆ ಗೊತ್ತು ಎಷ್ಟು ಹಣ ಕಿತ್ತುಕೊಂಡು ಹೋದಳೋ?’ ತನಗೇ ಎಂಬಂತೆ ಗುಣಗುಣಿಸಿ ಮತ್ತೆ ಮಾಸದ ಸಂಭ್ರಮದಲ್ಲಿ ಅಡಿಗೆ ಮನೆಗೆ ನಡೆದಳು.

ಎರಡು ದಿನ ಎಲ್ಲರೂ ನನ್ನನ್ನು ಸ್ವಲ್ಪ ಹಾಯಾಗಿರಲು ಬಿಟ್ಟರು. ನಾನು ಬಂದ ಸುದ್ದಿ ಕೇಳಿ ಸ್ನೇಹಿತ ರಮೇಶ ಬಂದಿದ್ದ. “ಸಾರಿ ಕಣೋ, ಕೇಳಿ ತುಂಬಾ ಬೇಸರವಾಯಿತು” ಅಂದ. “ಈ ಸಾರಿ ಸುಮ್ಮನೆ ಅಮ್ಮ-ಅಪ್ಪನಿಗೆ ಬಿಡು ಹೆಣ್ಣು ಆರಿಸುವ ಕೆಲಸ. ಎಷ್ಟಾದ್ರೂ ತಿಳಿದವರು ಅವರು” ಉಪದೇಶಿಸಿದ. ಒಂದು ಲಕ್ಷ ತಗೊಂಡು ವಿವಾಹವಾದ ಸದ್ಗೃಹಸ್ಥನಲ್ಲವೆ? ಅವನು ಹೋದ ಮೇಲೆ, ಹಾಗೇ ಮಂಪರಿನಲ್ಲಿ ಒರಗಿಕೊಂಡೆ. ಇವರೆಲ್ಲರೂ ನನ್ನನ್ನು ಅನುಕಂಪದಿಂದ ನೋಡುತ್ತಿರುವರೇ ಇಲ್ಲ ಅಟ್ಟಹಾಸದಿಂದಲೇ? ‘ಹರಿದು ಚಿಂದಿಯಾದ ಸಂಬಂಧಗಳ ಸೊಗಸೆಂದು ತೊಡುವುದಕ್ಕಿಂತ, ಬಿಸಾಟು ಬೆತ್ತಲಾಗುವುದು ಮೇಲು’ ಎಂದಿದ್ದಳು ಶಶಿ. ‘ನಾವು ನಟಿಸೋದು ಬೇಡ. ಹೊಂದಿಕೊಳ್ಳಲಾರದೆ ಹಿಂಸೆಯಾಗೋದು ಬೇಡ’ ಅಂದಿದ್ದಳು. ನನ್ನ ಶಶಿಯ ವಿಚ್ಛೇದನದಲ್ಲಿ ಇವರ ತಮ್ಮ ಗೆಲುವು ಕಾಣುತ್ತಿರುವರೆ? ಹಾಗಾದರೆ ವಿಚ್ಛೇದನವಾಗದ ವಿವಾಹಗಳೆಲ್ಲ ಯಶಸ್ವೀ ವಿವಾಹಗಳೇ? ಮದುವೆಯಾಗಿ ಮೂರು ದಶಕಗಳು ಗೊತೆಗಿರುವ ಅಮ್ಮ-ಅಪ್ಪನದನ್ನು ಸಫಲ ಸಾಂಗತ್ಯವೆನ್ನಲೆ? ಮದುವೆಯಲ್ಲಿ ಮಾತಾಡಿದ್ದ ಹತ್ತು ಸಾವಿರ ಕೊಡಲಿಲ್ಲ ಎಂಬ ಸಿಟ್ಟಿಗೆ ಅಮ್ಮನನ್ನು ಎಂದೂ ತವರಿಗೆ ಕಳಿಸಿರಲೇ ಇಲ್ಲ!

ಅಮ್ಮನೂ ಅಷ್ಟೇ, ತನ್ನ ಅಪ್ಪನ ಮೇಲೆ ಮುನಿಸಾಗಿ‘ ಅಕ್ಕಂದಿರಿಗೆಲ್ಲ ಅದ್ಧೂರಿ ಮದುವೆ ಮಾಡಿ, ನನ್ನನ್ನು ಮಾತ್ರ ಬರಿಗೈಲಿ ಕೈ ತೊಳೆದರು’ ಎಂದು ಇತ್ತ ಮುಖ ಹಾಕಿದವಳು ಹೋದದ್ದು, ತಾತ ಸತ್ತಾಗಲೇ. ‘ಓದದ ಹಳ್ಳಿ ಹುಡುಗಿ’ ಎಂದು ಅಪ್ಪನಿಗೆ ಅದೆಷ್ಟು ತಾತ್ಸಾರ. ಅದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅಪ್ಪ ಪೇಟೆ ಸೇರಿ ಬಿ. ಎ. ಪಾಸಾದೊಡನೆ ಸುಸಂಸ್ಕೃತನಾದೆ ಎಂದು ತಿಳಿದರೆ?’ ‘ ಇದು ಸಾರು ಮಾಡೋ ರೀತೀನ? ಇಪ್ಪತ್ತು ವರ್ಷದಿಂದ ಮಾಡಿದ್ರೂ ಕಲೀಲಿಲ್ಲ. ಗಂಜಲ ಗಂಜಲ ಇದ್ದ ಹಾಗಿದೆ’ ಎಂದು ದಿನಕ್ಕೊಮ್ಮೆಯಾದರೂ ರೇಗಾಡಿ, ನಾಲ್ಕು ಅಕ್ಷರ ಕಲಿತ ಸ್ನೇಹಿತರ ಪತ್ನಿಯರೊಂದಿಗೆ ಹೋಲಿಸಿ, ಯಾವುದೇ ವಿಷಯಕ್ಕೂ ಅಮ್ಮನ ಮಾತುಗಳನ್ನು ಅಸಡ್ಡೆಯಿಂದ_‘ನಿನಗೇನು ಅರ್ಥವಾಗುತ್ತೇ ಬಿದ್ದಿರೇ, ಎದೆ ಸೀಳಿದರೂ ನಾಲ್ಕು ಅಕ್ಷರ ಇಲ್ಲದೋಳು….’ ಎಂದು ಹಾರಾಡುವ ಅಪ್ಪ ವಿವಾಹದ ೨೫ನೇ ವರ್ಷದಲ್ಲೂ ‘ಎಂಥೆಂಥಾ ಸಂಬಂಧಗಳು ಬಂದಿದ್ದು, ಕನ್ನಡಿ ಗಂಟು ತೋರಿಸಿ ಮೋಸ ಮಾಡಿದ ನಿನ್ನಪ್ಪ’ ಎಂದು ಮಕ್ಕಳ ಮುಂದೂ ಮುಖ ಮುರಿಯುತ್ತಿದ್ದುದು ನನಗೇ ಹೇಸಿಗೆ ತರುತ್ತಿತ್ತು. ಬಾಲ್ಯದ ಒಂದೊಂದೇ ನೆನಪಿನಲ್ಲಿ ಅಮ್ಮನ ಅಂದಿನ ಸಾತ್ವಿಕತೆಯಂತೆಯೇ, ಅಪ್ಪನ ಅಗ್ನಿಪರ್ವತ ರೂಪವೂ ಕೊರೆದು ನಿಂತಿವೆ.

ಒಳಗೆ ಎದ್ದು ಬಂದೆ. ಅಮ್ಮ ಒಬ್ಬಲ್ಳೇ ಕೂತು ತೊಗರಿಕಾಯಿ ಬಿಡಿಸುತ್ತಿದ್ದಳು. ಏನೋ ಕನಸು ಕಾಣುತ್ತಿರಬೇಕು. ತುಟಿಗಳಲ್ಲಿ ಕಿರುನಗೆ! ಮನೆ ನಿಶ್ಯಬ್ಧವಾಗಿತ್ತು.

“ಎಲ್ಲ ಎಲ್ಲಮ್ಮ….?” ನೆಲದ ಮೇಲೇ ನಾನೂ ಕುಳಿತು ತೊಗರಿಕಾಯಿಗೆ ಕೈ ಹಚ್ಚಿದೆ.

“ರಮಾದು ಇವತ್ತು ಮದುವೆ ಕಣೋ, ಹೋಗಿದ್ದಾರೆ.”

“ನೀನು ಹೋಗಲಿಲ್ಲವಾ?”

‘ಅವರುಗಳು ಹೋದರಲ್ಲಾ ಸಾಕು ಬಿಡು. ಮನೆ ಮಂದಿ ಎಲ್ಲ ಹೋಗೋದೇನು ಚನ್ನ. ನೀನು ಬೇರೆ ಅಪರೂಪಕ್ಕೆ ಬಂದಿದ್ದೀಯಾ, ಅಂದ ಹಾಗೆ ಎಷ್ಟು ದಿನ ರಜೆ ಹಾಕಿದ್ದೀಯಾ….?”

“ಐದು ದಿನ, ನಾಡದ್ದು ಹೊರಟು ಬಿಡಬೇಕು”

“ಅದ್ಯಾಕೋ ಆರು ತಿಂಗಳ ನಂತರ ಬರ್ತಾ ಇದ್ದೀಯ. ಒಂದು ಹತ್ತು ಹದಿನೈದು ದಿನಾ ಆದ್ರೂ ಇರೋಲ್ಲವಾ?”

“ಅಷ್ಟೊಂದು ರಜ ಇಲ್ಲಮ್ಮ….”

“ಹುಂ…. ಕೋರ್ಟು ಕಛೇರಿ ಅಂತ ಅಲೆಯೋಕೆ ಎಲ್ಲ ಮುಗೀತೇನೋ….ಹಾಗಾದ್ರೆ ನಾಳೇನೇ ಬರೋಕೆ ಹೇಳಬೇಕು ಸುಬ್ಬರಾಯರಿಗೆ.”

‘ಯಾವ ಸುಬ್ಬರಾಯರು?” ತಬ್ಬಿಬ್ಬಾಗಿ ಕೇಳಿದೆ.

“ನಿನಗೆ ಹೆಣ್ಣು ಕೊಡೋರು. ಅವರ ಮಗಳು ಮುತ್ತಿನಂತೆ ಇದ್ದಾಳೆ. ಮನೆ ಕೆಲಸ, ಅಡಿಗೆ-ತಿಂಡಿ ಎಲ್ಲದರಲ್ಲೂ ಮುಂದು, ಬಿ. ಎ. ನೂ ಮಾಡಿದ್ದಾಳೆ. ಅಚುಕಟ್ಟಾಗಿ ಕೊಟ್ಟು ತಂದು ಮಾಡ್ತೇವೆ ಅಂದಿದ್ದಾರೆ. ನಿನಗೇನು ಕಡಿಮೆ. ಸದ್ಯ ಮಕ್ಕಳು ಮರಿ ಅಂತ ತಾಪತ್ರಯ ಹಚ್ಚಲಿಲ್ಲ….” ಸಲೀಸಾಗಿ ಹೇಳಿದಳು.

“ಅಮ್ಮಾ…. ಅಮ್ಮಾ…. ನಾನೀಗ ಹೆಣ್ಣು ನೋಡೋಕೆ ಬರಲಿಲ್ಲ. ನನ್ನ ವಿಚ್ಛೇದನ ಕೂಡ ಆಗಿಲ್ಲ….”

“ಏನೋ ಹಾಗಂದ್ರೆ, ಒಳ್ಳೆ ಹೆಂಡತಿ ಬಂದು ಊಟ ಉಪಚಾರ ಮಾಡಿದರೆ ಎಲ್ಲ ಸಮಾಧಾನವಾಗುತ್ತೆ. ಏನೋ ಹೇಳದೆ ಕೇಳದೆ ಮಾಡಿಕೊಂಡೆ. ಈಗಿಷ್ಟು ಒದ್ದಾಡೋದು ನೋಡೋಕಾಗೋಲ್ಲ. ನೀನೇನು ಇವಳನ್ನೇ ಒಪ್ಪಿಬಿಡು ಅಂತಲ್ಲ. ಇನ್ನೂ ನಾಲ್ಕೈದು ಸಂಬಂಧ ನೋಡಿಟ್ಟಿದ್ದೇನೆ….”

“ಅಮ್ಮಾ ನನಗೀಗಲೇ ಮದುವೆ ಅವಸರವೇನಮ್ಮ?”ಬೇಸರದಿಂದ ಹೇಳಿದೆ.

“ಈಗಲೇ ಮದುವೆ ಬೇಡ ಕಣೋ ಅಂತ ಬಡಕೊಂಡರೂ ಕೇಳದೆ ಆತುರವಾಗಿ ಕಟ್ಟಿಕೊಂಡೆ. ಈಗ ಮಾಡಿಕೊಳ್ಳೋ ಅಂತ ಗೋಗರೆದರೆ ಹೀಗಂತೀಯಲ್ಲೋ….”

ಅಮ್ಮ ಕೂಡ ಎಷ್ಟು ‘ಕ್ರೂಯಲ್’ ಆಗಬಲ್ಲಳು! ಹೆತ್ತ ಕರುಳು ನೋವು ಅರಿಯುತ್ತೆ ಅಂತಾರೆ, ನಿಜವೆ?

“ಅಮ್ಮ ಒಂದು ಮಾತು ಕೇಳಲಾ….?” ವಿಚಿತ್ರವಾಗಿ ನನ್ನನ್ನು ನೋಡಿದ ಅಮ್ಮನ ಕಣ್ಣುಗಳನ್ನೇ ದಿಟ್ಟಿಸಿ ಕೇಳಿದೆ.

“ಏನೋ ಅದೂ….?” ಎಂದಳು. ಆದಷ್ಟು ಮೃದುವಾಗಿ ಕೇಳಿದೆ_

“ಅಮ್ಮ, ಅಪ್ಪನನ್ನು ಕಟ್ಟಿಕೊಂಡು ನೀ ಸುಖವಾಗಿದ್ದೀಯಾ?”

“ನನಗೇನೋ ಆಗಿದೆ ಧಾಡಿ. ಎಂದೂ ಹೊಟ್ಟೆ ಬಟ್ಟೆ ವ್ಯತ್ಯಾಸ ಮಾಡಲಿಲ್ಲ. ಕಾಡು ಹಳ್ಳಿಯಲ್ಲಿದ್ದ ನಾನು ಇವರ ದೆಸೆಯಿಂದ ಪೇಟೆ ಸೇರಿದೆ. ಎರಡು ಗಂಡು ಮಕ್ಕಳು ದೊಡ್ಡ ಇಂಜಿನಿಯರ್ರು, ಆಫೀಸರ್ರು ಆದರು….”

“ಅಮ್ಮ ನಿನ್ನ ಮಕ್ಕಳ ಮೊಮ್ಮಕ್ಕಳ ಕತೆ ಬೇಡ. ನೀನು ಸುಖವಾಗಿದ್ದೀಯಾ? ನಿಮಿಷ ನಿಮಿಷಕ್ಕೂ ಸಿಡಿವ ದೂರ್ವಾಸ ಕೋಪದ ಅಪ್ಪನಿಗೆ ಯಾವಾಗಲೂ ಅದೆಷ್ಯು ಬಗ್ಗಿ ನಡಿತಿದ್ದೆ. ಮದುವೆಯಾದಾಗಿನಿಂದ ನಾಲ್ಕು ಕಾಸೂ ಕೈಗೆ ಹಾಕದೆ, ಕರಿಬೇವಿನ ಸೊಪ್ಪು ಬೇಕು ಅಂದ್ರೂ ತಾನೇ ತರ್ತೀನಿ ಅಂತ ಹೋಗ್ತಾ ಇದ್ದ ಅಪ್ಪನ ಅರ್ವಾಧಿಕಾರದಲ್ಲಿ ಎಷ್ಟು ಸುಖವಾಗಿದ್ದೆ?”

“ಅದೆಲ್ಲ ಆಯಿತಲ್ಲೋ….? ಏನೋ ಗಂಡಸರ ಸ್ವಭಾವವೇ ಹಾಗೆ. ಈಗ ಮಕ್ಕಳ ಕಾಲಕ್ಕೆ ಎಲ್ಲ ನೇರವಾಗಿಲ್ಲವೆ?”

“ಮುದಿ ಕಾಲಕ್ಕೆ ಯಾರಾದ್ರೂ ಮೆದು ಆಗ್ತಾರೆ. ಸೋರಿ ಹೋದ ಬದುಕು ಮತ್ತೆ ತುಂಬುತ್ತಾ? ಅಮ್ಮಾ…. ನೀನು ಎಂದಾದ್ರೂ ಅಪ್ಪನನ್ನು ಬಿಟ್ಟು ಹೋಗೋ ಬಗ್ಗೆ ಯೋಚಿಸಿದ್ದೆಯಾ….” ಅಮ್ಮ ಗಡಬಡಿಸಿ-

“ಎಂಥಾ ಮಾತೋ ಆಡೋದು” ಅಂದಳು.

“ನನಗೆ ಗೊತ್ತಮ್ಮ. ನೀ ವಿಚ್ಛೇದನದ ಬಗ್ಗೆ ಯೋಚಿಸಲೂ ಸಾಧ್ಯವಿರಲಿಲ್ಲ. ಕಾರಣ ನೀನು ಇಲ್ಲಿ ಸುಖವಾಗಿದ್ದೆ ಅಂತಲ್ಲ. ಅಷ್ಟು ಸಂಪ್ರದಾಯಗಳು ನಿನ್ನ ತಲೆ ತೊಳೆದಿದ್ದವು. ಆರ್ಥಿಕ ಸ್ವಾತಂತ್ರ್ಯವೂ ಇರಲಿಲ್ಲ. ಅಸಹಾಯಕತೆಗೆ ಅನಿವಾರ್ಯತೆಗೆ ಅಂಟಿಕೊಂಡ ಸಂಬಂಧಗಳನ್ನೆಲ್ಲ ವೈಭವೀಕರಿಸುವುದೇದಕ್ಕೆ? ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ-ಶಶಿಯ ವಿವಾಹಕ್ಕಿಂತ ನಿಮ್ಮದು ಕೆಟ್ಟಿತ್ತು.”

“ನಿನು ಓದಿದೋನು ಏನೇನೋ ದೊಡ್ಡ ದೊಡ್ಡ ಮಾತಾಡಿ ಬಿಡ್ತೀಯಾ, ನನಗೆ ತಿರುಗಿಸಿ ಹೇಳೋಕೆ ಬರೋಲ್ಲ ಅಂತ. ಅಷ್ಟೆಲ್ಲ ಅನುಭವವಿದ್ರೂ ನಾನು ಗಂಡನನ್ನು ಬಿಟ್ಟು ಹೋದೆನೇನೋ? ಅದೇನು ಆಗಿತ್ತು. ಆ ‘ಊರಬಸವಿ’ಗೆ, ನಿನ್ನ ಬಿಟ್ಟು ಓಡಿ ಹೋಗಲು?”

“ಏನೆಲ್ಲ ಅನುಭವಿಸಿದರೂ ಒಂದು ಸಂಬಂಧವನ್ನು ಉಳಿಸಿಕೊಳ್ಳೊ ಅಂಥಾದ್ದು ಏನಿದೆಯಮ್ಮ? ಅವಳೂ ಸುಖವಾಗಿರಲಿ. ನಾನೂ ಸುಖವಾಗಿರೋಕ್ಕೆ ಪ್ರಯತ್ನಿಸುತ್ತೇನೆ. ಇಲ್ಲದಿದ್ರೆ ನಮ್ಮ ಬದುಕಿನ ಕಹಿಯನ್ನೆಲ್ಲ ಸುತ್ತೆಲ್ಲ ಹರಿಸಿ ಬಿಡ್ತಾ ಇದ್ದೆವು. ಅಮ್ಮಾ ನೀನು ತಿಳಕೊಂಡ ಹಾಗೆ ಶಶಿ ನನ್ನ ಬಿಟ್ಟು ಹೋಗಲಿಲ್ಲ. ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು ನಾವಿಬ್ಬರೂ ಕೂಡಿ ಕೈಗೊಂಡ ನಿರ್ಧಾರ.”

“ಮತ್ತೆ ಯಾಕೋ ಮೂರೂ ಹೊತ್ತೂ ಆಕಾಶ ಬಿದ್ದ ಹಾಗೆ ಒದ್ದಾಡ್ತೀಯಾ?” ಅಮ್ಮ ಕಟುವಾಗಿ ಕೇಳಿದಳು.

“ಅಲ್ಲಮ್ಮ, ಬಸ್‌ನಲ್ಲಿ ಎರಡು ಗಂಟೆ ಜೊತೆಗೆ ಕುಳಿತ ಸಹ ಪ್ರಯಾಣಿಕನನ್ನು ಬೀಳ್ಕೊಡುವಾಗಲೂ ತುಸು ಸಂಕಟವಾಗುತ್ತೆ. ಅಂಥಾದ್ದರಲ್ಲಿ ನಾಲ್ಕು ವರ್ಷ ಒಡನಾಟಾನ ಒಂದೇ ಬಾರಿಗೆ ಬುಡಸಮೇತ ಹೊರಗೆಸೆಯಲು ಸಾಧ್ಯಾನ? ಸಮಯ ಬೇಡವೇ? ಶಶಿ ಯಾವನೋ ಹಿಂದೆ ಓಡಿ ಹೋಗಲಿಲ್ಲ. ನನ್ನೊಡನೆ ಅಸಭ್ಯವಾಗಿ ನಡೆದುಕೊಳ್ಳಲಿಲ್ಲ. ನನ್ನ ಹಣಕ್ಕೆ ಕಾತರಿಸಲಿಲ್ಲ. ನಮ್ಮ ಸಂಬಂಧ ಸರಿ ಹೊಂದಲಿಲ್ಲ ಅಷ್ಟೆ. ಹೊಂದಬಹುದಿತ್ತೇನೋ, ನೀವುಗಳು ಬಿಡಲಿಲ್ಲ. ನಮ್ಮ ವಿಚ್ಛೇದನಕ್ಕೆ ನೀನೇ ಸಂಪೂರ್ಣ ಕಾರಣ ಅಂತ ಆರೋಪಿಸ್ತಾ ಇಲ್ಲಮ್ಮ. ಆದರೆ ನೀನೂ ‘ಕಾರಣ’ ಆಗಿದ್ದೆ ಅನ್ನೋದು ಸತ್ಯ.”

“ಏನೋ ಹಾಗಂದರೆ?” ಅಮ್ಮ ಗಾಬರಿಯಿಂದ ಕೇಳಿದಳು. ಏರಿದ್ದ ನನ್ನ ಸ್ವರ ಇಳಿಸಿ, ಸಮಾಧಾನವಾಗಿ ಕೇಳಿದೆ_

“ಶಶಿ ನನ್ನ ಬಿಟ್ಟು ಹೋದ ಬಗ್ಗೆ ನಿನಗೆ ನಿಜಕ್ಕೂ ಕಳಕಳಿ ಇದೆಯಾ ಅಮ್ಮ. ನನ್ನ ವಿಚ್ಛೇದನ ನಿನಗೆ ಖುಷಿ ತಂದಿದೆ ಅಲ್ಲವೆ….?” ಕಣ್ಣಲ್ಲಿ ಕಣ್ಣಿಟ್ಟು ಕೇಳಿದಾಗ ಗಲಿಬಿಲಿಗೊಂಡಳು.

“ಮದುವೆ ಆದೋನು, ಹೇಗದ್ರೂ ಸುಖವಾಗಿ ಇರಲಿ ಅಂತಾನೇ ಅಲ್ಲವೇ ನಾನು ಹಾರೈಸಿದ್ದು.”

“ಹಾರೈಸಿದರೆ ಆಯಿತಾ? ಅದಕ್ಕಾಗಿ ನಿಜವಾಗಲೂ ಪ್ರಯತ್ನಿಸಿದೆಯಾ…. ನಿಜ ಹೇಳು ಅಮ್ಮ, ನನ್ನ ವಿಚ್ಛೇದನದ ವಿಷಯ ನಿನಗೆ ಖುಷಿ ತಂದಿದೆ ಅಲ್ಲ? ಕಳೆದು ಹೋದ ಮಗ ಸಿಕ್ಕ ಖುಷಿ….”

“ಯಾಕೋ ಹೀಗೆಲ್ಲ ಮಾತಾಡ್ತೀಯಾ? ತಾಯಿ ಆದೋಳು ಮಕ್ಕಳ ಸುಖಕ್ಕಾಗಿ ಅಲ್ಲವೇನೋ ಹಗಲು ರಾತ್ರಿ ಹಂಬಲಿಸೋದು” ಅಮ್ಮ ಹೇಳುವುದು ಕೇಳುವಾಗ, ಅವಳಿಗೇ ಗೊತ್ತಿಲ್ಲದೆ ನನಗೆ ಹಿಂಸೆಯಾದಳೇ ಅನಿಸುತ್ತದೆ. ಇಲ್ಲ ವಾತ್ಸಲ್ಯದ ಹೆಸರಲ್ಲಿ ಅಡಗಿರುವ ಸ್ವಾರ್ಥವನ್ನು ಅಗೆದು ನೋಡೇ ಇಲ್ಲವೆ?”

“ಅಮ್ಮ ನಾನು ಶಶಿಯೊಡನೆ ಖುಷಿಯಾಗಿದ್ದ ದಿನಗಳು ನಿನಗೆ ಸಂಕಟವಾಗಿತ್ತು. ಇಂದು…. ಇಂದು ನನ್ನ ಬದುಕಿನ ಅತ್ಯಂತ ನೋವಿನ ದಿನಗಳಲ್ಲಿ ನಿನಗೆ ಹಬ್ಬದ ಸಂಭ್ರಮ! ನಿನಗೆ ಮತ್ತೆ ಮನೆಗೆ ಬಂದ ಮಗ, ನಿನ್ನ ಇಚ್ಛೆಯಂತೆ ಸೊಸೆ ತರುವ ನಿನ್ನ ಜನ್ಮಸಿದ್ಧ ಹಕ್ಕು ನಿನ್ನ ಕೈಗೆ ಸಿಕ್ಕ ಖುಷಿ. ನನ್ನ ಸುಖಕ್ಕಿಂತ ನಿನಗೆ ನಿನ್ನ ಸುಖ ಮುಖ್ಯವಿತ್ತು. ನಿನ್ನ ನಿಚ್ಛೆ, ನಿನ್ನ ಆಸೆ, ಆಜ್ಞೆಗಳಿಗೆ ಗಂಡನಂತೂ ಬಾಗಲಿಲ್ಲ. ನಾವೆಲ್ಲ ಬಾಗಬೇಕೆಂಬ ಬಯಕೆ. ನಿಜ ಹೇಳಲಾ… ನನ್ನ ದುಃಖದಲ್ಲಿ ತನ್ನ ಸುಖ ಕಾಣುವವರನ್ನು ನಾನು ಏನೆಂದು ತಿಳಿಯಲಿ ನನ್ನ ಆತ್ಮೀಯರೆ…. ಇಲ್ಲ ಶತ್ರುಗಳೆ?”

ಅಮ್ಮನ ಕಣ್ಣುಗಳಲ್ಲಿ ನೀರಿನ ಪಸೆ! ಉತ್ತರವಿಲ್ಲದೆ ತುಟಿಗಳು ಒಣಗಿದವು. ಅಮ್ಮನನ್ನು ಈ ಅವಸ್ಥೆಯಲ್ಲಿ ನೋಡಲಾಗಲಿಲ್ಲ. ಬಹುಶಃ ಅಮ್ಮನಿಗೂ ಅವಳ ಅಂತರಂಗ ಅರ್ಥವಾಗಿರಲಿಲ್ಲವೆ?

“ಎಲ್ಲ ನಿನ್ನ ಒಳ್ಳೆಯದಕ್ಕೆ ಅಲ್ವೇನೋ….” ಅಮ್ಮನಿಗೂ ಅವಳ ಮಾತಿನಲ್ಲಿ ನಂಬಿಕೆ ಇಲ್ಲದಷ್ಟು ಸ್ವರ ದುರ್ಬಲವಾಗಿತ್ತು.

“ನನಗೆ ಒಳ್ಳೆಯದೇನು, ಕೆಟ್ಟದ್ದೇನು ತಿಳಿಯದಷ್ಟು ಎಳೆಯವನೇನಮ್ಮ. ನನ್ನ ಬದುಕು ನಿರ್ಧರಿಸುವಷ್ಟೂ ನನಗೆ ಸ್ವಾತಂತ್ರ್ಯ ಇಲ್ಲವೆ? ನೀನು ಹುಡುಕಿದ ಹೆಣ್ಣಿನೊಡನೆ ನಾನು ಸುಖವಾಗಿರ್ತಾ ಇದ್ದೆ ಅಂತ ಯಾವ ಗ್ಯಾರಂಟಿ ನಿನಗಿತ್ತು?”

ಅಮ್ಮ ಏನು ಹೇಳಬೇಕು ತೋಚದೆ ಚಡಪಡಿಸಿದಳು. ಏನೋ ಹೇಳಲು ಒದ್ದಾಡುತ್ತಾ, ಪದಗಳಿಗಾಗಿ ಹುಡುಕಾಡಿದ ಆ ಕ್ಷಣ ಉಸಿರು ಕಟ್ಟಿತು. ನೋಟದಲ್ಲೇ ಕಟ್ಟಿಹಾಕಿದಂತೆ, ನನ್ನ ಕಣ್ಣು ತಪ್ಪಿಸಿ ಎತ್ತಲೋ ನೋಡಲೆತ್ನಿಸಿದಳು. ಅದೇ ಹೊತ್ತಿಗೆ ಕರೆಗಂಟೆ ‘ಟ್ರಿನ್’ ಎಂದಿತು. ಬಿಡುಗಡೆ ಸಿಕ್ಕಂತೆ ತಟ್ಟನೆ ಎದ್ದಳು-

“ಯಾರು ಬಂದ್ರು ನೋಡ್ತೀನಿ….”

ನಾನು ನಿಟ್ಟುಸಿರು ಬಿಟ್ಟೆ. ನನಗೆ ಉತ್ತರ ಬೇಕಿರಲಿಲ್ಲ. ನನ್ನಲ್ಲೆದ್ದ ಪ್ರಶ್ನೆಗಳನ್ನು ಹೊರ ಹಾಕಬೇಕಿತ್ತು. ಅಮ್ಮನನ್ನು ಅಪರಾಧೀ ಸ್ಥಾನದಲ್ಲಿ ಬಂಧಿಸಿಡಲೂ ಹೊರಟಿರಲಿಲ್ಲ.

ಉಳಿದೆರಡು ದಿನ ಮನೆಯಲ್ಲಿ ಗುಸು-ಗುಸು, ಇರುಸು ಮುರುಸು ಸಾಕಷ್ಟು ಇತ್ತು. ಏನೊಂದೂ ಗಮನಿಸದಂತೆ ಉಳಿದೆ. ಅಪ್ಪ ಕೂಡ ನಾನಿದ್ದ ಐದು ದಿನ ಎಲ್ಲಿಲ್ಲದಂತೆ ಮೃದುವಾಗಿದ್ದರು. ಎಂದೂ ಎದುರು ಕೂರಿಸಿಕೊಂಡು ಆತ್ಮೀಯವಾಗಿ ಮಾತನಾಡದ ಅಪ್ಪ ಈ ಬಾರಿ ಬಹಳ ಮಾತನಾಡಿದ್ದರು. “ಮದುವೆ ಅಂದರೆ ಬರೀ ಒಂದು ಗಂಡು-ಒಂದು ಹೆಣ್ಣಿನ ಸಂಬಂಧವಲ್ಲ. ಎರಡು ಮನೆತನಗಳ, ಎರಡು ಸಂಸಾರಗಳ ಮಿಲನ” ಎಂದೆಲ್ಲ ವೇದಾಂತ ಕೊರೆದರು. ಅಂದು ಸಂಜೆಯೇ ಸುಬ್ಬರಾಯರು ಮಗಳೊಡನೆ ಬಂದುಹೋದರು. ಮತ್ಯಾರೋ ಅಡ್ವೋಕೇಟ್ ಕೂಡ ಮಗಳ ಜಾತಕ ಹಿಡಿದು ಬಂದಿದ್ದರು. ನಾನು ಏನೊಂದೂ ಪ್ರತಿಕ್ರಿಯೆ ವ್ಯಕ್ತಪಡಿಸದೆ ಅಮ್ಮ-ಅಪ್ಪ ಹೇಳಿದಂತೆ ಕುಳಿತೆ, ನಿಂತೆ. ಮಾತಾಡಿದೆ, ಎದ್ದು ಬಂದೆ.

ಮನಸ್ಸು ಮಾತ್ರ ಬೇರೆಲ್ಲೋ ಇತ್ತು. ಈ ಆರು ತಿಂಗಳ ದೂರದಲ್ಲಿ, ಶಶಿ ಮತ್ತು ನನ್ನ ನಡುವಿನ ಸ್ನೇಹ-ಸಂಬಂಧದ ಬೆಲೆ ತಿಳಿದಿತ್ತು. ಬೇರ್ಪಡಿಸಲು ಹಾತೊರೆಯುವ ಶಕ್ತಿಗಳ ನಟ್ಟನಡುವೆ, ನಮ್ಮ ಸಂಬಂಧವನ್ನು ಉಳಿಸಿಕೊಳ್ಳುವತ್ತ ನಾವಿಬ್ಬರೂ ದುಡಿಯಬೇಕಿತ್ತು. ಅಮ್ಮಾನ ಪತ್ರ ಬಂದೊಡನೆ ತಲೆ ಪೂರಾ ಕೆಡಿಸಿಕೊಳ್ಳುತ್ತಿದ್ದೆ. ಇಲ್ಲಿ, ಮೈಸುರಿಗೆ ಬಂದು ಅಮ್ಮನ ಗೋಳುಗಳ ಕೇಳಿ ಹೋದ ಮೇಲಂತೂ, ಶಶಿಯ ಸಣ್ಣ ಮಾತಿಗೂ ರೇಗುತ್ತಿದ್ದೆ. ಇಕ್ಕಳದಲ್ಲಿ ಸಿಕ್ಕಿಬಿದ್ದ ನನ್ನ ಮನಃಸ್ಥಿತಿಯ ಸಂತೈಸಲೂ ಶಶಿಗೆ ಅವಕಾಶ ನೀಡಿರಲಿಲ್ಲ. ಹಂಚಿಕೊಳ್ಳದ ಎದೆಯೊತ್ತುವ ನೋವುಗಳು ನನ್ನೊಳಗನ್ನೇ ಸುಟ್ಟು ಹಾಕಿದವು. ನಮ್ಮ ಪ್ರೀತಿಯನ್ನು ನುಂಗಿ ನಿಂತವು.

ನಾವು ಪ್ರಯತ್ನಿಸಬೇಕಿತ್ತು. ನಮ್ಮ ವಿವಾಹವನ್ನು ಉಳಿಸಿಕೊಳ್ಳಲು. ಬಹುಶಃ ಈಗಲೂ ಉಳಿಸಿಕೊಳ್ಳಬಹುದೇನೋ. ಏರುಪೇರಿಲ್ಲದ ಸಮತಟ್ಟ ಹಾದಿಯಲ್ಲಿ ಉಳಿದ ಪ್ರೀತಿಗಳ ಹೆಚ್ಚುಗಾರಿಕೆಯೇನು? ಇಂಥಾ ಪರಿಸ್ಥಿತಿಯ ಪರೀಕ್ಷೆಗಳಲ್ಲಿ ಗೆದ್ದು ಉಳಿದ ಪ್ರೀತಿ ನಮ್ಮದಾಗಬೇಕಿತ್ತು.

ಅಂತೂ ಹೊರಡುವ ದಿನ ಬಂದಾಗ ಅಪ್ಪ-

“ಇವತ್ತೇ ಹೊರಡ್ತಾ ಇದ್ದೀಯೇನೋ….?” ಶಾಲೆಗೆ ತಯಾರಾಗುತ್ತಾ ಕೇಳಿದರು.

“ಮಧ್ಯಾಹ್ನದ ರೈಲಿಗೆ ಹೋಗ್ತೀನಪ್ಪಾ” ಎಂದೆ. ಕೇಳಲೋ ಬೇಡವೋ ಎಂಬಂತೆ ತಡೆದು ಕೇಳಿದರು.

“ಸುಬ್ಬರಾಯರ ಮಗಳ್ನ ನೋಡ್ದೆ ಅಲ್ವೆ?”

“ಹೂಂ….” ಬರೀ ತಲೆ ಆಡಿಸಿದೆ.

“ಏನೂ ಹೇಳಲೇ ಇಲ್ಲ….” ಕೆದಕಿ ಕೇಳಿದರು.

“ಹೋಗಿ ಕಾಗದ ಹಾಕ್ತೀನಪ್ಪ” ಸದ್ಯಕ್ಕೆ ಜಾರಿಕೊಂಡರೆ ಸಾಕು ಎಂಬಂತೆ ಹೇಳಿದೆ.

“ಸರಿ…. ಸರಿ…. ನಿಧಾನವಾಗಿ ಯೋಚಿಸಿ ಹೇಳು. ಇನ್ನೂ ಒಂದೆರಡು ಕಡೆಯಿಂದ ಸಂಬಂಧ ಬಂದಿದೆ. ಜಾತಕ ನೋಡಿ, ಫೋಟೋ ಕಳಿಸಿ ಕೊಡ್ತೇನೆ” ಅಪ್ಪ ಶಾಲೆಗೆ ಹೋದರು. ಅಮ್ಮ ಅಡಿಗೆ ಮನೆಯ ಹೊಸಿಲಲ್ಲಿ ನಿಂತು ದುಗುಡದಿಂದ ನನ್ನ ನೋಡಿದಳು. ರೂಮಿಗೆ ಹೋಗಿ ಬಟ್ಟೆ ಜೋಡಿಸಿಕೊಂಡೆ. ಗಂಟೆ ಒಂದು ಹೊಡೆದಾಗ ಸೂಟ್‌ಕೇಸ್ ಸಿದ್ಧಪಡಿಸಿ ಹೊರಟು ನಿಂತೆ. ಅಮ್ಮ ಬಸ್‌ವರೆಗೂ ಬಂದಳು. ಸ್ಟೇಷನ್‌ಗೆ ರಿಕ್ಷಾ ಹಿಡಿಯಲು ಹೊರಟಾಗ “ರಿಕ್ಷಾ ಯಾಕೋ ಹದಿನಾಲ್ಕನೇ ನಂಬರ್ ಬರುತ್ತೆ” ತಡೆದಳು. ಕ್ಷಣಕಾಲ ಇಬ್ಬರೂ ಮೌನವಾಗಿ ನಿಂತೆವು. ಅಮ್ಮನ ಉದಾಸ ಮುಖ ಕಂಡು ಕನಿಕರವಾಯಿತು.

“ಅಮ್ಮ ನಿನಗೆ ನೋವಾಗಿರಬೇಕು….” ಮೃದುವಾಗಿ ಕೇಳಿದೆ_ “ನೀ ಆರಿಸಿದ ಹುಡುಗೀನ ಆಗಬಾರದು ಎಂಬ ಛಲ ನನಗಿಲ್ಲಮ್ಮ. ಆದರೆ….” ಅಮ್ಮ ತೀರಾ ಮೌನವಾಗಿ ನಿಂತಳು. ನಾನೇ ಮುಂದುವರಿಸಿದೆ_“ಇಷ್ಟು ನೆನಪಿರಲಿ ಅಮ್ಮ, ಸೋತದ್ದು ನಾನು-ಶಶಿ ಮಾತ್ರ. ವ್ಯಕ್ತಿ ವ್ಯಕ್ತಿಯ ಸಂಬಂಧ ಸೋತದ್ದು. ಪ್ರೇಮ ವಿವಾಹವೆಂಬ ವಿಚಾರವಲ್ಲ. ನಾನು ಮತ್ತೊಮ್ಮೆ ಶಶಿಯನ್ನೇ ಸೇರಿದರೆ ಅಚ್ಚರಿ ಪಡಬೇಡ. ಈ ಬಾರಿಯಾದರೂ ಮನಃಪೂರ್ವಕವಾಗಿ ಹಾರೈಸ್ತೀಯಾ ಅಮ್ಮ….”” ಅಮ್ಮ ಒದ್ದೆಯಾಗಿ ಕಣ್ಣೊರೆಸಿದಳು.

“ನಿನಗೆ ಹೇಗೆ ಸರಿ ಅನ್ನಿಸುತ್ತೋ ಹಾಗೇ ಮಾಡೊ. ಅಂತೂ ನೀನು ಸುಖವಾಗಿರಬೇಕು ಕಣೋ….” ದೂರದ ತಿರುವಿನಲ್ಲಿ ಬಸ್ ಬರುತ್ತಿತ್ತು. ಅಮ್ಮನ ಒದ್ದೆ ಕಣ್ಣುಗಳಲ್ಲಿ ಮತ್ತದೇ ಬೆಳ್ಳಿ ಹೊಳಪು…. ಬಾಲ್ಯದ ಮಮತೆಯ ತಂಪು! “ಬರ್ತೀನಮ್ಮ….” ಹೇಳಿ ಬಸ್ಸಿನಲ್ಲಿ ಕುಳಿತೆ. ಕಿಟಕಿ ಬದಿಯ ಸೀಟ್ ಹಿಡಿದು ಹೊರಗೆ ನೋಡಿದೆ, ಅಮ್ಮ ಕೈಯಾಡಿಸುತ್ತಿದ್ದಳು. ನನಗೇ ಎಂಬಂತೆ ಹೇಳಿಕೊಂಡೆ ಖಲೀಲ್ ಗಿಬ್ರಾಸನ ಮಾತುಗಳ_

ನಿಮ್ಮ ಪ್ರೀತಿ ಕೊಡಬಲ್ಲಿರಿ
ನಿಮ್ಮ ಚಿಂತನೆಗಳನ್ನಲ್ಲ
ನಮಗೆ ನಮ್ಮದೇ ಚಿಂತನೆಗಳುಂಟು.
ನಿಮ್ಮಂತೆ ನಾವಾಗಲು ಅರಸಬೇಡಿ,
ಬದುಕು ಹಿಮ್ಮುಖವಾಗಿ ಹರಿಯುವುದಿಲ್ಲ.
ನೀವು ಕಾಣದ ನಾಳೆಗಳಲ್ಲಿ
ನಮ್ಮ ನೆಲೆ, ನಮ್ಮ ಬೆಳೆ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.