ತೇರು – ೧

ನೆನಕೆಗಳು…
ಈ ಕಥಾನಕವನ್ನು ಮೆಚ್ಚಿ ಬೆನ್ನು ತಟ್ಟಿ ಮುನ್ನುಡಿ ಬರೆದುಕೊಟ್ಟ ಕನ್ನಡದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರಿಗೆ –
ಓದಿ, ಮೆಚ್ಚಿ ತಮ್ಮ ಸ್ಪಂದನವನ್ನು ಸಾನೆಟ್ಟಿನಲ್ಲಿ ಕಟ್ಟಿ ನನ್ನಲ್ಲಿ ಧನ್ಯತೆಯ ಭಾವ ಮೂಡಿಸಿದ ಕನ್ನಡದ ಹಿರಿಯ ಕವಿ ಮತ್ತು ಗೆಳೆಯ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರಿಗೆ-
ಗೆಳೆಯ ಡಾ.ಪುರುಷೋತ್ತಮ ಬಿಳಿಮಲೆಯವರು ತೇರನ್ನು ಓದಿ ಮೆಚ್ಚು ಮಾತುಗಳನ್ನು ಹೇಳಿದ್ದಾರೆ. ಅವರ ಮೆಚ್ಚು ಮಾತುಗಳನ್ನು ಈ ಕೃತಿಯ ಬೆನ್ನುಡಿಯಾಗಿಸಿಕೊಂಡು ನನ್ನ ಧೈರ್ಯ ಹೆಚ್ಚಿಕೊಂಡಿದ್ದೇನೆ.ನನ್ನ ಬಗ್ಗೆ ಅಪಾರ ಪ್ರೀತಿ ತೋರುವ,ಆನಂದಕಂದ ಗ್ರಂಥಮಾಲೆಗೆ ಅಸ್ತಿವಾರ ಹಾಕಿದ ಬಿಳಿಮಲೆಯವರಿಗೆ –
ಯಾವತ್ತಿಗೂ ನನ್ನ ಕಥೆಗಳ ಬಗ್ಗೆ ಅಪಾರ ಪ್ರೀತಿ ತೋರಿಸಿದ,ಈ ಕಥಾನಕಕ್ಕೆ ಬ್ಲರ್ಬ್ ಬರೆದಿರುವ ನನ್ನ ಪ್ರೀತಿಯ ಗೆಳೆಯ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ-
ಈ ಕಾದಂಬರಿಯನ್ನು ಬರೆಯುವಾಗ ಗೊಂದಲಿಗರ ಹಾಡಿನ ಕೋರಸ್ಸಿನ ಬಗ್ಗೆ ಮಾಹಿತಿ ನೀಡಿದ ಗಳೆಯ ಡಾ.ನಿಂಗಣ್ಣ ಸಣ್ಣಕ್ಕಿ ಅವರಿಗೆ-
ಈ ಕಥಾನಕವನ್ನು ಅದರ ಆರಂಭದಿಂದಲೂ ಓದಿ,ಚರ್ಚಿಸಿ ಅದರ ರೂಪಾಂತರಗಳಿಗೆ ಕಾರಣರಾದ ಡಾ.ಸಿ.ಎನ್.ಆರ್.,ನರಹಳ್ಳಿ ಬಾಲಸುಬ್ರಹ್ಮಣ್ಯ,ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಎಚ್.ಎಸ್.ರಾಘವೇಂದ್ರ ರಾವ್,ರಾಜಾರಾಮ ಹೆಗಡೆ,ಮಲ್ಲಿಕಾರ್ಜುನ ಹಿರೇಮಠ, ಚಂದ್ರಶೇಖರ ತಾಳ್ಯ ,ಶಂಕರ ಕಟಗಿ, ಜಿ.ಎಲ್.ರಾಮಪ್ಪ ,ಅವರಿಗೆ-
ಓದಿ ಅಪಾರ ಪ್ರೀತಿಯನ್ನು ತೋರಿದ ಹಿರಿಯ ಮಿತ್ರರೂ,ಕನ್ನಡದ ಅಪರೂಪದ ವಿಮರ್ಶಕರೂ ಆದ ಮಾಧವ ಕುಲಕರ್ಣಿ ಅವರಿಗೆ-
ಬೆಳಗಾವಿಯಲ್ಲಿ ಈ ಕಥಾನಕವನ್ನು ಓದಿಸಿ ಕೇಳಿ ಮೆಚ್ಚು ಮಾತುಗಳನ್ನಾಡಿ ಧೈರ್ಯ ನೀಡಿದ ಹಿರಿಯ ಗೆಳೆಯರಾದ ಚಂದ್ರಕಾಂತ ಕುಸನೂರು,ಮಿತ್ರರಾದ ಡಿ.ಎಸ್.ಚೌಗಲೆ,ಶಿರೀಷ್ ಜೋಶಿ,ಜಿ.ಕೆ.ಕುಲಕರ್ಣಿ,ಮದ್ದು ಗುಂಡೇನಟ್ಟಿ ,ಮತ್ತು ಗೆಳೆಯರಿಗೆ-
ಚಿತ್ರದುರ್ಗದಲ್ಲಿ ಈ ಕಥಾನಕವನ್ನು ಓದಿಸಿ ಕೇಳಿ,ಚರ್ಚೆಯನ್ನು ಏರ್ಪಡಿಸಿದ ‘ಅಭಿರುಚಿ’ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಗೆಳೆಯ ಡಿ.ಎಸ್.ನಾಗಭೂಷಣ, ವೀರೇಂದ್ರಕುಮಾರ್,ಟಿ.ಆರ್.ರಾಧಾಕೃಷ್ಣ ಮತ್ತು ಅಭಿರುಚಿಯ ಎಲ್ಲ ಸದಸ್ಯರಿಗೆ-
ಹೀಗೆ ಈ ಕಥಾನಕದುದ್ದಕ್ಕೂ ನನ್ನನ್ನು ಕೈ ಹಿಡಿದು ನಡೆಸಿದ ಈ ಎಲ್ಲರಿಗೂ
ಶರಣು ಶರಣೆನ್ನುವೆ
ನನ್ನ ಬಗ್ಗೆ ಪ್ರೀತಿ ತೋರುವ ನನ್ನ ಅಣ್ಣ-ತಮ್ಮಂದಿರು-ಅಕ್ಕಂದಿರು ಮತ್ತು ಎಲ್ಲ ಬಂಧುಗಳಿಗೆ-
ಬದುಕಿನ ಬಗ್ಗೆ ಪ್ರೀತಿ ಹೆಚ್ಚಿಸುತ್ತಿರುವ ನಮ್ಮ ಮನೆತನದ ಮುಂದಿನ ಪೀಳಿಗೆಯ ಎಲ್ಲ ಹೊಸ ಕುಡಿಗಳಿಗೆ-
ನನ್ನ ಬಗ್ಗೆ ಯಾವತ್ತಿಗೂ ಪ್ರೀತಿಯನ್ನು ತೋರುವ ಗೆಳೆಯ ಲಿಂಗದೇವರು ಹಳೆಮನೆ,ಸಹೋದರಿ ಡಿ.ನಂದಾ,ಗೆಳೆಯರಾದಬಾಳಾಸಾಹೇಬ ಲೋಕಾಪುರ,ಪ್ರಹ್ಲಾದ್ ಅಗಸನಕಟ್ಟೆ, ಜಿ.ಎನ್.ಮಲ್ಲಿಕಾರ್ಜುನ,ಎಸ್.ಕೆ.ಕೊನೆಸಾಗರ, ಸಿ.ವಿ.ಜಿ.ಚಂದ್ರು,ಮತ್ತು ಎಲ್ಲ ಗೆಳೆಯರಿಗೆ-
ಪ್ರೀತಿ ಎರೆದು ಸಾಕಿದ ಇವರೆಲ್ಲರಿಗೂ ಕೃತಜ್ಞತೆಗಳನ್ನು ಹೇಳುವೆ

ಬಲರಾಮ, – ರಾಘವೇಂದ್ರ ಪಾಟೀಲ
ಅಧ್ಯಾಪಕರ ಕಾಲನಿ,
ಮಲ್ಲಾಡಿಹಳ್ಳಿ – ೫೭೭ ೫೩೧

ಮುನ್ನುಡಿ

ಮಿತ್ರರಾದ ರಾಘವೇಂದ್ರ ಪಾಟೀಲರು ನವ್ಯೋತ್ತರ ಕನ್ನಡ ಕಥೆಗಾರರಲ್ಲಿ ಪ್ರಮುಖರು.ಇದುವರೆಗೆ ಪಾಟೀಲರ ನಾಲ್ಕು ಕಥಾ ಸಂಕಲನಗಳು,ಒಂದು ಕಾಂಬರಿ ,ಒಂದು ಜೀವನ ಚರಿತ್ರೆ, ಇತ್ಯಾದಿ ಒಟ್ಟು ಹದಿಮೂರು ಕೃತಿಗಳು ಹೊರಬಂದಿವೆ;ಮತ್ತು ಕಳೆದ ಹತ್ತು ವರ್ಷಗಳಿಂದ ಸಾಹಿತ್ಯ ಸಂವಾದ ಎಂಬ ನಿಯತಕಾಲಿಕವನ್ನು ಸಂಪಾದಿಸುತ್ತಿರುವ ಸಾಧನೆಯೂ ಇವರದು.ಇವರ ಇತ್ತೀಚಿನ ನೀಳ್ಗತೆ ಅಥವಾ ಕಿರು ಕಾದಂಬರಿ (ಇದನ್ನು ಎಂದು ಕರೆದರೆ ಹೆಚ್ಚು ಸರಿಯಾದೀತೇನೋ?) ತೇರು ಕೃತಿಗೆ ಅವರ ಕೋರಿಕೆಯಂತೆ ‘ಮುನ್ನುಡಿ’ ಎಂಬ ಒಂದು ಪ್ರವೇಶವನ್ನು ಸೂಚಿಸುವುದು ನನಗೆ ತುಂಬಾ ಸಂತೋಷದ ಹಾಗೂ ಅಭಿಮಾನದ ಸಂಗತಿ.
‘ನವ್ಯೋತ್ತರ’ ಎಂಬ ವಿಶೇಷಣವನ್ನು ನಾನು ಪಾಟೀಲರ ಬಗ್ಗೆ ಕೇವಲ ಕಾಲಸೂಚಕವಾಗಿ ಉಪಯೋಗಿಸಿಲ್ಲ. ನಾನು ಗ್ರಹಿಸಿರುವಂತೆ, ಕನ್ನಡದ ‘ಸಣ್ಣ ಕಥೆ’ ಎಂಬ ಪ್ರಭೇದ ನವ್ಯ ಯುಗದಲ್ಲಿ ಒಂದು ದಿಕ್ಕಿನಲ್ಲಿ ಅದ್ಭುತವಾಗಿ ಬೆಳೆಯಿತು – ನವ್ಯ ಕಾವ್ಯಕ್ಕೆ ಸರಿ ಸಾಟಿಯಾಗಿ.(ನವ್ಯ ಸಾಹಿತ್ಯದಲ್ಲಿ ಪ್ರತಿಯೊಂದು ಪ್ರಭೇದವೂ ‘ಕಾವ್ಯ’ದ ಮತ್ತೊಂದು ರೂಪವೇ ಆಗಿತ್ತು ; ಅಥವಾ ಆಗಿರಬೇಕು ಎಂಬುದು ನವ್ಯ ಲೇಖಕರ ನವ್ಯ ಲೇಖಕರ ನಿಲುವಾಗಿತ್ತು ಎಂಬುದು ಇಂದು ಎಲ್ಲರಿಗೂ ಗೊತ್ತಿರುವ ವಿಷಯ). ಈ ನಿಲುವಿಗೆ ವಿರುದ್ಧವಾಗಿ, ನವ್ಯೋತ್ತರ ಕಥನ ಸಾಹಿತ್ಯ ಮತ್ತೊಂದು ದಿಕ್ಕಿನಲ್ಲಿ – ಸಮಷ್ಟಿ ಚಿಂತನೆ, ಅಂತಃಶಿಸ್ತೀಯ ಸಾಮಾಜಿಕ ಗ್ರಹಿಕೆ,ಭ್ರಮೆ – ವಾಸ್ತವಗಳ ಮಿಶ್ರಣ ಇತ್ಯಾದಿಗಳ ದಿಕ್ಕಿನಲ್ಲಿ – ಕಥನ ಸಾಹಿತ್ಯದ ಸಾಧ್ಯತೆಗಳನ್ನು ಆಳವಾಗಿ ಶೋಧಿಸಲು ತೊಡಗಿತು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪಾಟೀಲರ ದೇಸಗತಿ,ಮಾಯಿಯ ಮುಖಗಳು ಮತ್ತು ಇತ್ತೀಚಿಗಿನ ತೇರು ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತವೆ. ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು ಅಥವಾ ಜಾನಪದ/ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು. ಈ ಹೇಳಿಕೆ ತೇರು ಕೃತಿಯನ್ನು ಅದರ ಪ್ರಥಮ ಆವೃತ್ತಿಯಂತೆ ಕಾಣುವ ‘ದೇಸಗತಿ’ ಕಥೆಯೊಡನೆ ಹೋಲಿಸಿದಾಗ ಹೆಚ್ಚು ಸ್ಪಷ್ಟವಾಗುತ್ತದೆ.

ತೇರು ಚಲಿಸುತ್ತದೆ. ಈ ತ್ಯಾಗಕ್ಕಾಗಿ ದ್ಯಾವಪ್ಪನಿಗೆ ದೇಸಾಯಿಯಿಂದ ಕಳ್ಳೀಗುದ್ದಿ ಎಂಬ ಊರಿನಲ್ಲಿ ಎಂಟೆಕರೆ ಜಮೀನು ಇನಾಮಾಗಿ ದೊರೆಯುತ್ತದೆ ; ಮತ್ತು ಅಂದಿನಿಂದ ಪ್ರತಿ ವರ್ಷ ದ್ಯಾವಪ್ಪ ಅಥವಾ ಅವನ ವಂಶದವರು ರಥೋತ್ಸವದ ದಿನ ರಥದ ಚಕ್ರಕ್ಕೆ ಹಣೆ ಒಡೆದುಕೊಂಡು ಮಾಡುವ ‘ರಕ್ತ ತಿಲಕ’ದ ಸೇವೆಯ ಆಚರಣೆ ಪ್ರಾರಂಭವಾಗುತ್ತದೆ. ದರೆ, ಕಾಲಕ್ರಮದಲ್ಲಿ ಜನರಿಗೆ ದೇವರಲ್ಲಿ ಮತ್ತು ರಥೋತ್ಸವದಲ್ಲಿಯೇ ನಂಬಿಕೆ ಕಮ್ಮಿಯಾಗುತ್ತದೆ ; ಇನಾಮಿನ ಜಮೀನನ್ನು ಮೋಸದಿಂದ ಆ ಊರಿನ ಗೌಡ ತನ್ನದಾಗಿಸಿಕೊಳ್ಳುತ್ತಾನೆ ; ಮತ್ತು ಆಧುನಿಕ ಕಾಲದ ದ್ಯಾವಪ್ಪನ ವಂಶಸ್ಥ (ಅವನ ಹೆಸರೂ ದ್ಯಾವಪ್ಪ ಎಂತಲೇ) ರಕ್ತ ತಿಲಕದ ಸೇವೆಯನ್ನು ತ್ಯಜಿಸಿ, ಕೆಲ ಕಾಲ ಜೆ.ಪಿ. ಆಂದೋಳನದಲ್ಲಿ ಭಾಗವಹಿಸಿ ಜೈಲಿಗೆ ಹೋಗಿ, ಆನಂತರ (ಬಾಬಾ ಆಮ್ಟೆ ಅವರ) ಸೇವಾಶ್ರಮವನ್ನು ಸೇರುತ್ತಾನೆ.
ದೇಸಗತಿಯಂತಹ ಊಳಿಗಮಾನ್ಯ ವ್ಯವಸ್ಥೆಯಾಗಲೀ, ಆಧುನಿಕ ಪ್ರಜಾತಂತ್ರ ವ್ಯವಸ್ಥೆಯಾಗಲೀ, ಒಂದು ವ್ಯವಸ್ಥೆಗೆ ಅಧಿಕಾರವನ್ನು ಕೊಡುವ ಮತ್ತು ಅದನ್ನು ಮಾನ್ಯ ಮಾಡುವ ಅನೇಕ ಸಂಕಥನಗಳಲ್ಲಿ ಅತಿ ಪ್ರಬಲ ಹಾಗೂ ಪ್ರಭಾವಿಯಾದುದು ಧಾರ್ಮಿಕ ಸಂಕಥನ. “ನಾ ವಿಷ್ಣುಃ ಪೃಥಿವೀಪತಿಃ” ಎಂಬಂತಹ ಒಂದು ಸಮುದಾಯ ಮಾನ್ಯ ಮಾಡದಿದ್ದರೆ ಅಧಿಕಾರದಲ್ಲಿರುವ ಆ ಸಮುದಾಯದ ನಾಯಕನಿಂದಾಗುವ ಕೃತ್ಯಾಕೃತ್ಯಗಳನ್ನು, ಅಪಾರ ಜೀವಹಾನಿಯನ್ನು ಆ ಸಮುದಾಯ ಒಪ್ಪುವುದು ಸಾಧ್ಯವೇ ಇಲ್ಲ. ಹೀಗೆ ಪ್ರಭುತ್ವವನ್ನು ಅಸ್ತಿತ್ವಕ್ಕೆ ತರುವ, ಅದನ್ನು ಬಲಪಡಿಸುವ , ಹಾಗೂ ಅದಕ್ಕೆ ಮಾನ್ಯತೆ ದೊರಕಿಸಿ ಕೊಡುವ, ಒಂದು ಕಾಲಘಟ್ಟದ ಪ್ರಭಾವೀ ಧಾರ್ಮಿಕ ಸಂಕಥನದ ಸ್ವರೂಪವೇನು? ಅದು ರೂಪುಗೊಳ್ಳುವ ಪ್ರಕ್ರಿಯೆ ಎಂತಹದು?…..ಈ ಪ್ರಶ್ನೆಗಳು ತೇರು ಕೃತಿಯ ಕೇಂದ್ರದಲ್ಲಿದೆ.
ಮೊದಲನೆಯದಾಗಿ (ಕೃತಿ ದಾಖಲಿಸುವಂತೆ) ಯಾವುದೇ ಒಂದು ಧಾರ್ಮಿಕ ಸಂಕಥನಕ್ಕೆ ಶಕ್ತಿ ಬರುವುದು ಅದರ ಮೂರ್ತ ರೂಪದ ಸಂಕೇತಗಳ ಮೂಲಕ – ಗುಡಿ ಗೋಪುರಗಳು, ಸಾಮೂಹಿಕ ಉತ್ಸವಾಚರಣೆಗಳು… ಇತ್ಯಾದಿ ಸಂಕೇತಗಳ ಮೂಲಕ. ಈ ಕಾರಣಕ್ಕಾಗಿಯೇ ಪ್ರತಿಯೊಬ್ಬ ರಾಜ – ನವಾಬನೂ ಮಾಡುತ್ತಿದ್ದ/ಮಾಡುವ ಮೊದೆಲ ಕೆಲಸವೆಂದರೆ ದೇವಾಲಯಗಳನ್ನು /ಮಸೀದೆಗಳನ್ನು / ಚರ್ಚುಗಳನ್ನು ನಿರ್ಮಿಸುವುದು. ಇವುಗಳು ಬೃಹತ್ತಾಗಿದ್ದಷ್ಟೂ, ಭವ್ಯವಾಗಿದ್ದಷ್ಟೂ ಇವುಗಳ ಪ್ರಭಾವ ಹೆಚ್ಚುತ್ತದೆ. ಇದೇ ನೆಲೆಯಲ್ಲಿ, ದರೋಡೆಕೋರ ವೆಂಕೊಭರಾವ್ ‘ರಂಗೋ ಪಟವರ್ಧನ್ ದೇಸಾಯಿ’ ಆಗುವ ಪ್ರಕ್ರಿಯೆಯ ಮೊದಲನೆಯ ಹೆಜ್ಜೆಯೆಂದರೆ ಅವನು ನಿರ್ಮಿಸುವ ವಿಠ್ಠಲ ದೇವರ ಗುಡಿ ಮತ್ತು ಅದರ ಬೃಹತ್ ತೇರು. ಈ ಭಾಗದ ನಿರೂಪಕ ಸ್ವಾಂವಜ್ಜ ಹೇಳುವಂತೆ – “ದೇಸಗತಿ ಹಾಳಾದರೂ ಈ ಗುಡಿಯ ಒಂದ ಮೂಲಿ ಸೈತ ಮುಕ್ಕಾಗದಂಗ ನಿಂತೈತಿ…ದೇಸಗತಿ ಕಟ್ಟಾಕ ಬಲಾ ಕೊಟ್ಟ ಬಲವಂತ ದೈವ ಅದಾ…..ವಿಠ್ಠಲ ರುಕುಮಾಯಿ ದೇವರ ತೇರಂದರ ತೇರು ನೋಡರಿ…ಅದನೂ ದೇಸಾಯರಣಿ ಕಟ್ಟಿಸಿದ್ದು…ಏನಿಲ್ಲಂದರೂ ಒಂದ ಗೇಣು ದೀಡಗೇಣು ದಪ್ಪನಾದ ಎರಡು ಮಾರು ಎತ್ತರಿದ್ದ ಕಲ್ಲಿನ

ದೇಸಗತಿ ಕಥಾ ಸಂಕಲನದಲ್ಲಿರುವ ‘ದೇಸಗತಿ’ ಎಂಬ ಕಥೆ ಮಧ್ಯಕಾಲೀನ ಭಾರತದಲ್ಲಿ ವ್ಯಕ್ತಿಯೊಬ್ಬನ ಸಾಹಸ,ಆಕಸ್ಮಿಕಗಳು ಇವುಗಳ ಕಾರಣದಿಂದಾಗಿ ಹೇಗೆ ಅನೇಕಾನೇಕ ದೇಸಗತಿಗಳು, ಪಾಳೆಯ ಪಟ್ಟುಗಳು ಮತ್ತು ಚಿಕ್ಕ ಪುಟ್ಟ ರಾಜ್ಯಗಳು ಅಸ್ತಿತ್ವಕ್ಕೆ ಬಂದವು ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.ಈ ಕಥೆಯಲ್ಲಿ , ಧರಮನಟ್ಟಿಯ ದೇಸಗತಿಯನ್ನು ಸ್ಥಾಪಿಸುವ ವೆಂಕೋಬರಾವ್ ನಿಜವಾಗಿ ಒಬ್ಬ ಪಿಂಡಾರೆ ನಾಯಕ.ಒಂದು ಸಂದರ್ಭದಲ್ಲಿ ಪೇಶ್ವೆ ಸೈನಿಕರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಓಡುತ್ತಿರುವಾಗ ಅಕಸ್ಮಾತ್ತಾಗಿ ಧರಮನಟ್ಟಿ ಎಂಬ ಗ್ರಾಮಕ್ಕೆ ಬರುತ್ತಾನೆ.ಅಲ್ಲಿಯವರೆಗೂ ಸಮರ್ಥ ಸ್ಥಳೀಯ ನಾಯಕರಿಲ್ಲದೆ ಪದೇ ಪದೇ ದರೋಡೆಕೋರರ ಧಾಳಿಗೆ ಪಕ್ಕಾಗುತ್ತಿದ್ದ ಧರಮನಟ್ಟಿಯಲ್ಲಿ ವೆಂಕೋಬ ರಾವ್ ‘ರಂಗೋ ಪಟವರ್ಧನ್’ ಎಂಬ ಹೊಸ ಹೆಸರಿನಲ್ಲಿ ಅಲ್ಲಿಯೇ ನೆಲೆಯೂರಿ, ಒಂದು ಪ್ರಬಲ ದೇಸಗತಿಯನ್ನು ಸ್ಥಾಪಿಸುತ್ತಾನೆ. ಈ ದೇಸಗತಿಯ ಸ್ಥಾಪನೆಯ ಹಿಂದೆ ವೆಂಕೋಬರಾಯನ ಸುಳ್ಳು,ಕಾರಭಾರಿಯಾದ ತ್ರಿಯಂಬಕ ಭಟ್ಟನ ಅಧಿಕಾರ ಲಾಲಸೆ, ಅಲ್ಲಿಯ ಸಾಮಾನ್ಯ ಜನರ ಮುಗ್ಧತೆ, ಮತ್ತು ಅಂದಿನ ಕಾಲದ ಅರಾಜಕತೆ – ಇವೆಲ್ಲವೂ ಕ್ರಿಯಾಶೀಲವಾಗಿರುವ್ಠುದನ್ನು ಕಥೆ ಸಮರ್ಥವಾಗಿ ದರ್ಶಿಸುತ್ತದೆ. ಮುಂದೆ ಬ್ರಿಟಿಷರ ಆಗಮನದ ನಂತರ ಮತ್ತು ಸ್ವಾತಂತ್ರ್ಯಾನಂತರ ಭಾರತದ ಇತರ ರಾಜ್ಯ – ಪಾಳೆಪಟ್ಟುಗಳಂತೆ ಧರಮನಟ್ಟಿಯ ದೇಸಗತಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ; ಮತ್ತು ಕೊನೆಯ ದೇಸಾಯಿಯಾದ ಮಾಣಿಕ್ ಅಮೆರಿಕನ್ ಸ್ತ್ರೀಯೊಬ್ಬಳನ್ನು ಮದುವೆಯಾಗಿ ಅಮೆರಿಕಾಕ್ಕೆ ವಲಸೆ ಹೋಗುತ್ತಾನೆ.
‘ದೇಸಗತಿ’ ಎಂಬ ಒಂದು ರಾಜಕೀಯ ವ್ಯವಸ್ಥೆಯ ಆಳದಲ್ಲಿರುವ ಕಪಟ – ಸ್ವಾರ್ಥ-ಕ್ರೌರ್ಯಗಳನ್ನು ‘ದೇಸಗತಿ’ ಕಥೆ ಪರಿಣಾಮಕಾರಿಯಾಗಿ ಬಯಲು ಮಾಡುತ್ತದೆ, ನಿಜ.ಆದರೆ, ಒಂದು ಮಟ್ಟದಲ್ಲಿ ಕಥೆ ವೆಂಕೋಬ ರಾವ್ ಉರುಫ್ ರಂಗೋ ಪಟವರ್ಧನ್‌ನಂತಹವರ ಸಾಹಸಗಳನ್ನು ವೈಭವೀಕರಿಸುತ್ತದೆ ಕೂಡಾ.(ಪ್ರೇಮ – ಕಾಮ- ಸಾಹಸಗಳೇ ಪ್ರಧಾನವಾಗಿರುವ ವೆಂಕೋಬರಾಯನ ಕಥೆ ಎಂಬ ಪ್ರಸಿದ್ಧ ನೀಳ್ಗವನವನ್ನು ನೆನಪಿಗೆ ತರುತ್ತದೆ). ‘ದೇಸಗತಿ’ಯಂತಹ ಊಳಿಗಮಾನ್ಯ ವ್ಯವಸ್ಥೆಯನ್ನು ಮತ್ತೊಂದು ಪರಿಪ್ರೇಕ್ಷ್ಯದಿಂದ ,ಆಳವಾಗಿ ವಿಶ್ಲೇಷಿಸುವ ಪ್ರಯತ್ನ ತೇರು ಕೃತಿಯಲ್ಲಿದೆ.
ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ ‘ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ.ಹೊನ್ನ ಕಳಸದ,ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ. ಆದರೆ ಮೊದಲನೆಯ ರಥೋತ್ಸವದ ಸಂದರ್ಭದಲ್ಲಿಯೇ ಆ ತೇರು ನೂರಾರು ಜನರು ಪ್ರಯತ್ನಿಸಿದರೂ ಚಲಿಸುವುದಿಲ್ಲ ; ಮತ್ತು ಶಾಸ್ತ್ರದ ಅಯ್ಯನವರು ನರ ಬಲಿ ಆಗಬೇಕೆಂದು ಹೇಳುತ್ತಾರೆ. ಕೊನೆಗೆ. ‘ಕೆಳ’ ಜಾತಿಯ ಬಡ ದ್ಯಾವಪ್ಪ ಎಂಬುವವನ ಮಗನನ್ನು ಬಲಿ ಕೊಟ್ಟ ನಂತರ ಗಾಲಿಗಳು…ಗಾಲಿಗಳಿಗಿಂತ ಒಂದು ಮಳದಷ್ಟು ಮ್ಯಾಲ ಎತ್ತರಕ್ಕೆ …ಎತ್ತರವಾದ ಈ ಚೌಕಟ್ಟಿನ ಮ್ಯಾಲೆ ಕುಂತಿದೆ ಆರು ಮಜಲಿನ ಅಷ್ಟ ಕೋನಾಕಾರದ ತೇರು…”.
ಎರಡನೆಯದಾಗಿ, ಧಾರ್ಮಿಕ ಸಂಕಥನಗಳು ತಮ್ಮ ಉಳಿವಿಗಾಗಿ ಮತ್ತು ಪ್ರತಿಷ್ಠೆಗಾಗಿ ಒಂದು ಬಗೆಯ ಹಿಂಸೆಯನ್ನು ವೈಭವೀಕರಿಸುತ್ತವೆಯಷ್ಟೇ ಅಲ್ಲದೇ ಅದನ್ನು ಅನಿವಾರ್ಯವಾಗಿಸುತ್ತವೆ. (“ಸ್ವಧರ್ಮೇ ನಿಧನಃ ಶ್ರೇಯಃ ಪರಧರ್ಮೋ ಭಯಾವಹಃ”, ಮೃತೋವಾ ಪ್ರಾಪ್ತ್ಯತೆ ಸ್ವರ್ಗಂ,ಜಿತೋವಾ ಭುಕ್ಷ್ಯಸೆ ಮಹೀಂ” ಇತ್ಯಾದಿ ವೈಭವೀಕರಿಸುವ ಸೂತ್ರಗಳು) ಈ ಸಂದರ್ಭದಲ್ಲಿ ಮುಖ್ಯವಾಗಿ ನಾವು ಗಮನಿಸಬೇhಕದ ಅಂಶವೆಂದರೆ ಇಂತಹ ಧಾರ್ಮಿಕ ಸಂಕಥನಗಳ ಆಧಾರವಾದ ಸಾಮೂಹಿಕ ನಂಬಿಕೆ – ಆಚರಣೆಗಳ ಬಲಿ ದಲಿತರು ಅಥವಾ/ಮತ್ತು ಸ್ತ್ರೀಯರಾಗಿರುತ್ತಾರೆ.ಅತ್ಯಂತ ಸಿನಿಕತನದ “ದೈವೋ ದುರ್ಬಲ ಘಾತಕಃ” ಎಂಬಂತಹ ಹೇಳಿಕೆಗಳು ಇಂತಹ ಸಂದರ್ಭದಲ್ಲಿ ವಾಚ್ಯಾರ್ಥದ ನೆಲೆಯಲ್ಲಿಯೂ ಸತ್ಯವಾಗುತ್ತವೆ ; ಊರ ಹಬ್ಬಗಳಲ್ಲಿ , ‘ಊರಿನ ಕ್ಷೇಮಕ್ಕಾಗಿ’ ಸಿಡಿ ಏರುವವರು, ಕೊಂಡ ಹಾಯುವವರು, ಓಕಳಿ ಆಡುವವರು, ಕೆರಗೆ ‘ಹಾರ’ವಾಗುವವರು,ದೇವದಾಸಿಯರು, ‘ಸತಿ’ಯಾಗುವವರು …ಇವರೆಲ್ಲರೂ ದಲಿತರೇ / ಸ್ತ್ರೀಯರೇ.
ರಂಗೋ ಪಟವರ್ಧನ್ ಕಟ್ಟಿಸಿದ ತೇರು ಚಲಿಸದೆ ಅದಕ್ಕೆ ನರಬಲಿ ಕೊಡಬೇಕೆಂದು ತೀರ್ಮಾನಿಸಿದಾಗ ದೇಸಾಯರು, ಕಾರಭಾರಿಗಳು, ಡಂಣಾಯಕರು ಇತ್ಯಾದಿ ಅಧಿಕಾರಸ್ಥರೆಲ್ಲರೂ ಒಂದಲ್ಲ ಒಂದು ಕಾರಣ ಹೇಳಿ ತಾವು /ತಮ್ಮ ಮನೆಯವರು ಬಲಿಯಾಗುವ ಆಪತ್ತಿನಿಂದ ತಪ್ಪಿಸಿಕೊಳ್ಳುತ್ತಾರೆ.ಕೊನೆಗೆ ಅವರೆಲ್ಲರೂ, ಎಂದರೆ ಅಧಿಕಾರದಲ್ಲಿರುವವರೆಲ್ಲರೂ, “ಸ್ವಾಮೀಗೆ ಬೇಕಂತ ನರಮನುಸ ಬಲಿಯು/ಕಾಟುಕರ ಜಾತೀಯ ಮನುಸಾ ಬೇಕಲ್ಲೋ” ಎಂದು ನಿರ್ಧರಿಸುತ್ತಾರೆ.ಬಲಿಯಾಗುವವರಲ್ಲಿ “ಹೆಣ್ಣು ಗಂಡೆಂಬುವ ಭೇದ ಇಲ್ಲ…..ಸಣ್ಣವರು, ದೊಡ್ಡವರು ಅಂಬುವ ವಯಸ್ಸಿನ ನಿರ್ಬಂಧ ಇಲ್ಲ… ಫಕ್ತ ಉತ್ತಮರ ಕುಲದವರು ಮಾತ್ರ ಬ್ಯಾಡ / ಉತ್ತಮರ ಕುಲದವರನ್ನ ಬಿಟ್ಟು ಯಾವುದಾದರೂ ಕಾಟುಕರ ಕುಲದ ಒಂದು ಇಸಮನ್ನು ಹಿಡಿದು ತೇರಿನ ಬಲೆಗೆ ತರಬೇಕು”. ಅಂತೆಯೇ ಕೊನೆಗೆ ಸೂತ್ರದ ಗೊಂಬೆ ಆಟದಿಂದ ಹೊಟ್ಟೆ ಹೊರೆಯುವ, ಒಂಭತ್ತು ಮಕ್ಕಳು ಮತ್ತು ಬಸುರಿ ಹೆಂಡತಿ ಇರುವ, ಬಡ ದ್ಯಾವಯ್ಯ ತನ್ನ ನಡುಕಲ ಮಗನನ್ನು ‘ದೇವರ ಕೆಲಸ’ಕ್ಕೆ ಕೊಡಲು ಒಪ್ಪುತ್ತಾನೆ.
ದೇವರ/ಧರ್ಮದ ವಿರುದ್ಧ ಇಂದಿನ ಕಾಲದ ದ್ಯಾವಪ್ಪ ಬಂಡಾಯ ಹೂಡುವುದು ಈ ಕಾರಣಕ್ಕಾಗಿಯೇ – ದುರ್ಬಲರ ಮೇಲಾಗುವ ಕ್ರೌರ್ಯವನ್ನು ಈ ದೇವರುಗಳು/ಧರ್ಮಗಳು ಸಮರ್ಥಿಸುತ್ತವೆ,ಪೋಷಿಸುತ್ತವೆ ಎಂಬ ಕಾರಣಕ್ಕಾಗಿ.ಚಳುವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋಗಿ ಬಂದ ನಂತರ ದ್ಯಾವಪ್ಪ ಹೀಗೆ ಹೇಳುತ್ತಾನೆ :
“…ನಮ್ಮದು ಪುಣ್ಯ…ನಮ್ಮ ಪೂರ್ವಿಕರೆಲ್ಲಾ ಅವತಾರೀ ಪುರುಷರೂ…

ಹಂಗಣಿ- ಹೀಂಗಣಿ ಅಂತ …ತೆಲೀ ಚಿಟ್ಟ ಹಿಡದ ಹೋತರೀ…ಹಿಂದಿಂದ ತಗೊಂಡು ಹಿತ್ತಲದಾಗ ಅತ್ತರಂತ!…ಅಲ್ಲರೀ ನಮ್ಮ ವ್ಯವಸ್ಥಾದಾಗ ಬಡವರು ಮರ್ಯಾದಿಂದ ಬದಕೂ ಹಾದೀ ಹೇಳರಿ…ಹಳ್ಯಾಗಿನ ಗೌಡರೂ-ಕುಲಕರ್ಣ್ಯಾರೂ-ಜಮೀನದಾರರೂ ಮತ್ತ ಜಾತ್ಯಸ್ಥರು ಮಾಡತಿರೋ ಹಂತಾ ದಂಡಾವರ್ತೀ ಬಗ್ಗೆ ವಿಚಾರ ಮಾಡರಿ…”
ದ್ಯಾವಪ್ಪನ ಕಳಕಳಿಯ ಈ ಮಾತುಗಳು ಎಲ್ಲಾ ಧಾರ್ಮಿಕ ಸಂಕಥನಗಳಿಗೂ ಅನ್ವಯಿಸುತ್ತವೆ. ಏಕೆಂದರೆ ಎಲ್ಲಾ ‘ತೇರು’ಗಳೂ ಹರಿಯುವುದು ದಲಿತರ, ದುರ್ಬಲರ,ಸ್ತ್ರೀಯರ ದೇಹಗಳ ಮೇಲೆಯೇ.
ಧಾರ್ಮಿಕ ಸಂಕಥನಗಳಿಗೂ ಒಂದು ಆದಿಯಿದೆ, ಬೆಳವಣಿಗೆಯಿದೆ.ಈ ಬೆಳವಣಿಗೆಯ, ಬೆಳೆದು ಬಲಶಾಲಿಯಾಗುವ ಪ್ರಕ್ರಿಯೆಯನ್ನು ನಾವು ಗುರುತಿಸಲು ಸಾಧ್ಯವೆ? ತೇರು ಕೃತಿಯ ಮುಖ್ಯ ಕಾಳಜಿಗಳಲ್ಲಿ ಇದೊಂದು. ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ಕೃತಿಯ ಅದ್ಭುತ ನಿರೂಪಣಾ ಕ್ರಮಗಳಲ್ಲಿಯೇ ಕಾಣಬಹುದು.
ಕೃತಿಯಲ್ಲಿ ಅನೇಕ ನಿರೂಪಕರಿದ್ದಾರೆ.ಅನೇಕ ಶೈಲಿಯ/ಧಾಟಿಯ ನಿರೂಪಣೆಗಳಿವೆ.ಕೃತಿಯ ಒಟ್ಟಾರೆ ನಿರೂಪಕ ಬೆಂಗಳೂರಿನಲ್ಲಿರುವ ಪಾಟೀಲನೆಂಬ ಪತ್ರಕರ್ತ. ತನ್ನ ತಿರುಗಾಟದಲ್ಲಿ ಅವನು ಭೇಟಿ ಮಾಡುವ ಅನೇಕ ವಿಕ್ಷಿಪ್ತ ವ್ಯಕ್ತಿಗಳಲ್ಲಿ ಸ್ವಾಂವಜ್ಜನೆಂಬ ಧರಮನಟ್ಟಿಯ ಮುದುಕನೂ ಒಬ್ಬ. ಇವನ ಮೂಲಕ ಮತ್ತು ಇವನ ಮಾತುಗಳಲ್ಲಿಯೇ ನಾವು ಧರಮನಟ್ಟಿಯ ಪೂರ್ವೇತಿಹಾಸ ಮತ್ತು ಸದ್ಯ ಸ್ಥಿತಿ ಇವುಗಳನ್ನು ಅರಿಯುತ್ತೇವೆ. ಆದರೆ, ಕಥೆಯ ಒಂದು ಮುಖ್ಯ ಭಾಗವಾದ ತೇರಿನ ಮತ್ತು ರಕ್ತ ತಿಲಕದ ಸಂಗತಿ ವೃತ್ತಿ ಗಾಯಕರಾದ ಗೊಂದಲಿಗರಿಂದ,ಅವರ ‘ಗಾಯನ’ದ ಮೂಲಕವೇ ನಿರೂಪಿಸಲ್ಪಟ್ಟಿದೆ.(ಈ ಗೊಂದಲಿಗರ ಕಥನ ಕಾಲ್ಪನಿಕವಾಗಿದ್ದರೂ ವಾಸ್ತವಿಕ ಮೌಖಿಕ ಕಥನ/ಸ್ಥಳ ಪುರಾಣಗಳಷ್ಟೇ ಪರಿಣಾಮಕಾರಿಯಾಗಿದ್ದು,ಕಥೆಗಾರರ ಬಹುಮುಖೀ ಸೃಜನಶೀಲ ಪ್ರತಿಭೆಗೆ ನಿದರ್ಶನವಾಗಿದೆ.) ಪರಿಣಾಮತಃ ಮುಖ್ಯ ನಿರೂಪಕನ ವಸ್ತು ನಿಷ್ಠ ಧ್ವನಿ,ಸ್ವಾಂವಜ್ಜನ ಹಳಹಳಿಕೆಯ ಹಾಗೂ ಕಳಕಳಿಯ ಧ್ವನಿ, ಗೊಂದಲಿಗರ ಶೈಲೀಕೃತ ಹಾಗೂ ಕಥನೋತ್ಸಾಹದ ಧ್ವನಿ, ಕೊನೆಯ ತಲೆಮಾರಿನ ದ್ಯಾವಪ್ಪನ ಹತಾಶ ಧ್ವನಿ ….ಇವೆಲ್ಲವೂ ಒಂದೆಡೆ ಬಂದು, ನಿರೂಪಣೆಯ ನೆಲೆಯಲ್ಲಿ ಮೌಲಿಕ ಬಹುಧ್ವನಿತ್ವ ತೇರು ಕೃತಿಗೆ ಲಭಿಸಿದೆ.
ಇಂತಹ ಭಿನ್ನ ಭಿನ್ನ ನಿರೂಪಣೆಗಳ ಮೂಲಕ ಲೇಖಕರು ಒಂದು ಧಾರ್ಮಿಕ ಸಂಕಥನ ಹೇಗೆ ಜನ್ಮ ತಾಳುತ್ತದೆ ಮತ್ತು ಯಾವ ಯಾವ ಅಂಶಗಳು ಅದನ್ನು ಪೋಷಿಸುತ್ತವೆ ಎಂಬುದನ್ನು ಯಶಸ್ವಿಯಾಗಿ ನಾಟ್ಯೀಕರಿಸುತ್ತಾರೆ.ಕೃತಿ ದರ್ಶಿಸುವಂತೆ, ಆಕಸ್ಮಿಕವಾಗಿ ಮತ್ತು ಅಧಿಕಾರಸ್ಥರ ಕುಟಿಲತೆಯಿಂದ ಒಂದು ಘಟನೆ (ಅಥವಾ ದುರ್ಘಟನೆ) ನಡೆಯುತ್ತದೆ – ತೇರಿಗೆ ಕೊಡುವ ನರಬಲಿಯಂತೆ. ಇದೊಂದು ದುರದೃಷ್ಟಕರ ಘಟನೆಯೆಂದು ಜನರು ನಂತರ ಮರೆತು ಬಿಡಬಹುದಾಗಿತ್ತು – ಆದರೆ ಆ ಘಟನೆಯಲ್ಲಿಯೇ ತಮ್ಮ ಅಧಿಕಾರದ ಸಮರ್ಥನೆಯನ್ನು ಕಂಡುಕೊಂಡ ‘ಪ್ರಭುಗಳು’ ಅದನ್ನೊಂದು ವಾರ್ಷಿಕ ಅದನ್ನೊಂದು ಆಚರಣೆಯನ್ನಾಗಿಸಿ, ಅದರ ನೆನಪನ್ನು ಜೀವಂತವಾಗಿಡುತ್ತಾರೆ. ಹಾಗೆಯೇ ಆ ಘಟನೆಯಿಂದ ನೊಂದವರೂ ಕೂಡಾ ಅದನ್ನು ವೈಭವೀಕರಿಸಿ ಅದರ ನೆನಪನ್ನು ಜೋಪಾನಿಸುತ್ತಾರೆ – ಮೂಲ ದ್ಯಾವಪ್ಪನಂತೆ. ಅವನು ‘ದೇಸಗತಿಯ ದೈವಕ್ಕ ಮಗನನ್ನು ಬಲಿಕೊಟ್ಟ ಕಥೆಯನ್ನು ಕಣ್ಣು ಮನಸು ತುಂಬುವ ಹಾಗೆ ವರ್ಣಿಸತಾನೆ…ಕಾಣದ ಕಥಿಯನ್ನಣಿ ಕಂಡಂಗೆ ಹೇಳುವವ ಅವ…ಇನ್ನು ತನ್ನ ತೊಗಲಿಗೇ ಅಂಟಿದ ಅನುಭವಕ್ಕೆ ಬಣ್ಣಾ ತುಂಬುವದನ್ನ ಯಾರಾದರೂ ಹೇಳಿಕೊಡಬೇಕೇನು !” ಇದು ಎರಡನೆಯ ಘಟ್ಟ.
ಎರಡನೆಯ ಘಟ್ಟದಲ್ಲಿ , ಮೂಲ ಘಟನೆಯ ವಿವರಗಳು(ಸಾಂಕೇತಿಕವಾಗಿ) ಮತ್ತೆ ಮತ್ತೆ ಪುನರಾವರ್ತಿಸಲ್ಪಟ್ಟು, ಸುತ್ತ ಮುತ್ತಲ ಜನರ ಸಾಮೂಹಿಕ ಭಾವಕೋಶವನ್ನು ಆಕ್ರಮಿಸಿದ ನಂತರ ಅವು (ಘಟನೆಯ ಅತಿ ರಂಜಿತ ವಿವರಗಳು) ಒಂದು ‘ಕಥನ’ದ ರೂಪವನ್ನು ಪಡೆಯುತ್ತವೆ – ವೃತ್ತಿ ಗಾಯಕರಾದ ಗೊಂದಲಿಗರು/ಹಳಬರು ಹಾಡುವ ‘ತೇರಿನ ಕಥೆ’ಯಂತೆ. ಯಾವುದೇ ಒಂದು ವಾಸ್ತವ ಘಟನೆ ಶಾಬ್ದಿಕ/ನಾದದ /ಶಿಲ್ಪದ ರೂಪ ಪಡೆದ ಕೂಡಲೇ ಅದಕ್ಕೊಂದು ಬಗೆಯ ‘ಶಾಶ್ವತತೆ’ ಲಭಿಸುತ್ತದೆ. ಇಲ್ಲಿಂದ ಮುಂದೆ ಅದೊಂದು ಸ್ವತಂತ್ರ ಸಂಗತಿಯಾಗಿ, ವಿಶಿಷ್ಟ ಸ್ಥಳ – ಕಾಲಗಳ ಬದ್ಧತೆಯನ್ನು ಮೀರಿ, ಜನರನ್ನು ಪ್ರಭಾವಿಸುವ ಹಾಗೂ ನಿಯಂತ್ರಿಸುವ ‘ಸಂಕಥನ’ವಾಗುತ್ತದೆ.
ಪ್ರಭುತ್ವ ಕೇಂದ್ರಿತ ವ್ಯವಸ್ಥೆ ಹುಟ್ಟು ಹಾಕುವ ಸಂಕಥನಗಳ ವಿವರಗಳು ಕಾಲಕಾಲಕ್ಕೆ ಬೇರೆ ಬೇರೆಯಾಗಿರಬಹುದು ; ಆದರೆ ಅವುಗಳ ಮೂಲ ಆಶಯ ಮತ್ತು ಸ್ವರೂಪ ಬದಲಾಗುವುದಿಲ್ಲ. ಧರಮನಟ್ಟಿಯ ತೇರಿನ ಸಂಕಥನದ ಬದಲಿಗೆ ಮತ್ತೊಂದು, ‘ನವ ನಿರ್ಮಾಣ ಚಳುವಳಿ’ಯ, ಸಂಕಥನ ಜನ್ಮ ತಾಳಬಹುದು ; ಕಾಲ ಕ್ರಮದಲ್ಲಿ ಅದೂ ಪೊಳ್ಳೆಂದು ಸಾಬೀತಾಗಿ ಮತ್ತೊಂದು ಅದರ ಸ್ಥಾನಕ್ಕೆ ಬರಬಹುದು.ಒಂದು ಕಾಲಘಟ್ಟದಲ್ಲಿ ಮೂಲ ಪುರುಷ ದ್ಯಾವಪ್ಪ “ನೋಡೂ…ದೈವ ಹಿಂತಾ ಸೇವಾ ಮಾಡೂದನ್ನ ನಮ್ಮ ಮನಿತನಕ್ಕ ಕೊಟ್ಟೈತಿ” ಎಂದು ಅಖಂಡ ವಿಶ್ವಾಸದಿಂದ ಹೇಳುವಂತೆಯೇ, ಅವನ ವಂಶಕ್ಕೆ ಸೇರಿದ ಮತ್ತೊಬ್ಬ ದ್ಯಾವಪ್ಪ -“…ಅವರು ಇದ್ದರ ಏನಾತರೀ…ಜೇಪೀ ಅದಾರಲ್ಲರೀ…ಇವರು ತಪ್ಪು ಮಾಡಿದರ ಜೇಪಿ ಅವರು ಸುಮ್ಮನಣಿ ಬಿಟ್ಟಾರ ಏನರೀ?… ಕಿಂವೀಗೆ ಹಳ್ಳಾ ಹಚ್ಚಿ ಬುದ್ಧೀ ಹೇಳ್ಯಾರಲ್ಲರೀ…” ಎಂದು ನಂಬುತ್ತಾನೆ. ಶ್ರದ್ಧಾ ಕೇಂದ್ರಗಳು ಬೇರೆ ಬೇರೆಯಾಗಿರಬಹುದು, ಆದರೆ ಶ್ರದ್ಧೆಯ ಸ್ವರೂಪ ಒಂದೇ ಆಗಿರುತ್ತದೆ.
ಇಂತಹ ಸಂಕಥನಗಳಿಂದ ಬಿಡುಗಡೆ ಪಡೆಯುವ ದಾರಿಗಳು ಯಾವವು? ತೇರು ಎರಡು ಸಾಧ್ಯತೆಗಳನ್ನು ನಮ್ಮ ಮುಂದಿಡುತ್ತದೆ – ಎರಡೂ ಅಸಾಧಾರಣ ವ್ಯಕ್ತಿಗಳಿಗೆ ಮಾತ್ರ ಕಾಣಿಸುವ ಸಾಧ್ಯತೆಗಳು. ಒಂದು : ಒಂದು ಸಂಕಥನಕ್ಕೆ ತನ್ನನ್ನು ಕಾಯಾ ವಾಚಾ ಮನಸಾ ಸಂಪೂರ್ಣವಾಗಿ ಒಪ್ಪಿಸಿಕೊಂಡು ಬಿಡುವುದು ; ಮತ್ತು ಆ ಮೂಲಕ ಆ ಸಂಕಥನದ ನಿಯಂತ್ರಣವನ್ನು ಮೀರುವುದು – ಪ್ರಥಮ ದ್ಯಾವಪ್ಪನಂತೆ.ಅವನು ರಕ್ತ ತಿಲಕದ ಆಚರಣೆಯನ್ನು ಶೋಷಣೆಯಂತೆ ಕಾಣದೇ (ಅದು ಶೋಷಣೆಯೇ ಆಗಿದ್ದರೂ),

‘ಸೇವೆ’ಯಂತೆ ಪರಿಗಣಿಸಿ, ಅದಕ್ಕಾಗಿ (ಹಾಸ್ಯಾಸ್ಪದವೆನಿಸಿದರೂ) ತನ್ನ ‘ರಕ್ತ ಶುದ್ಧಿ’ಯನ್ನು ಮಾಡಿಕೊಂಡು, ರಥೋತ್ಸವದ ಒಂದು ತಿಂಗಳ ಮೊದಲೇ ಮನೆಯಿಂದ ಹೊರಟು,ಸುತ್ತಮುತ್ತಲಿನ ಎಲ್ಲಾ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ, ಕೊನೆಗೆ ತೇರಿನ ಸೇವೆ ಮಾಡಿ ತನ್ನನ್ನು ಕೃಕೃತ್ಯನೆಂದು ಭಾವಿಸುತ್ತಾನೆ. (ಈ ಭಾಗ ಕೃತಿಯಲ್ಲಿ ಅನುಭಾವೀ ಕಾವ್ಯಾತ್ಮಕತೆಯನ್ನು ಪಡೆಯುತ್ತದೆ). ಇಂತಹ ಸಂಪೂರ್ಣ ಶರಣಾಗತಿಯ ಕಾರಣದಿಂದಲೇ ಅವನಿಗೆ ಗೂಗಿಕೊಳ್ಳದಲ್ಲಿ ಗಂಗಾಮಾಯಿಯ ತುಂಟ ನಡೆಯನ್ನು , ಮತ್ತೊಂದು ಕಡೆ ಅವಳ ಪ್ರಶಾಂತ ಮಂದಸ್ಮಿತವನ್ನು ಮತ್ತು ಇನ್ನೊಂದು ಕಡೆ ಅವಳ ಚೇಷ್ಟೆಯ ಜಿಗಿತವನ್ನು ಕಾಣಲು, ಅನುಭವಿಸಲು ಸಾಧ್ಯವಾಗುತ್ತದೆ. “ಈ ಪೃಥುವೀ ಅಂಬುದರ ಮ್ಯಾಲೆ ಶಿವ ಹೆಂಗೆ ಕಾಣಸತಿದ್ದಾನೂ…” ಎಂದು ಸೋಜಿಗ ಪಡಲು ಸಾಧ್ಯವಾಗುತ್ತದೆ. ರಾತ್ರಿಯ ಬೆಳದಿಂಗಳನ್ನು ಮನಸ್ಸಿನ ತುಂಬಾ ಅವನು ತುಂಬಿಕೊಂಡು ಅಪೂರ್ವ ಶಾಂತಿಯನ್ನು ಪಡೆಯುತ್ತಾನೆ. ಇದು ನಾಮದೇವ,ತುಕಾರಾಮ ಮುಂತಾದ ಸಂತರಿಗಿರುವ ಸಾಧ್ಯತೆ.
ಇಂತಹ ಸಾಧ್ಯತೆ ಇಂದು ದೂರವಾಗಿದೆ. ಆಧುನಿಕ ದ್ಯಾವಪ್ಪ ಹೇಳುವಂತೆ, ಇಂದು “ದೇವರೂ ದಿಂಡರೂ ಎಲ್ಲಾ ಔಟ್ ಆಫ್ ಡೇಟ್ ಆಗ್ಯಾವರೀ…ಗೂಗೀ ಕೊಳ್ಳದಾಗ ಈಗ ಯಾವ ಸಿದ್ಧರೂ ಕಾಣೂದಿಲ್ಲ..ಅಲ್ಲಿ ಈಗ ಕಳ್ಳರು ಅಡಗಿಕೊಂಡಿರತಾರರಿ…ನವಲ ತೀರ್ಥದಾಗ ಗಂಗವ್ವ ಈಗ ಸೆಳವ ಕಳಕೊಂಡಾಳರಿ…” ಹೀಗೆ ಬದಲಾದ ಸಾಮಾಜಿಕ – ರಾಜಕೀಯ ಪರಿಸ್ಥಿತಿಯಲ್ಲಿ ಇರುವ ಮತ್ತೊಂದು ಸಾಧ್ಯತೆಯೆಂದರೆ ತ್ಯಾಗಕ್ಕಾಗಿ, ದೀನ ದುಃಖಿಗಳ ಸೇವೆಗಾಗಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದು – ಕುಷ್ಠ ರೋಗಿಗಳ ಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ಬಾಬಾ ಆಮ್ಟೆಯವರಂತೆ, ಮದರ್ ತೆರೆಸಾ ಅವರಂತೆ. ಇಂದಿನ ದ್ಯಾವಪ್ಪ ಕೊನೆಗೆ ಆಮ್ಟೆಯವರ ಆಶ್ರಮವನ್ನೇ ಸೇರುತ್ತಾನೆ.
ಇವೆರಡೂ ಆಯ್ಕೆಗಳು ಸಾಧ್ಯವಿಲ್ಲದ ಅಸಂಖ್ಯಾತ ಜನ ಸಾಮಾನ್ಯರು ಆಧುನಿಕತೆ, ರಾಷ್ಟ್ರ, ಸ್ವಧರ್ಮ…ಇತ್ಯಾದಿ ಒಂದಲ್ಲಾ ಒಂದು ಸಂಕಥನದ ಒಳಗೇ ಇರಬೇಕಾಗುತ್ತದೆ – ಬೃಹತ್ ಗಾತ್ರದ ತೇರನ್ನು ಎಳೆಯುತ್ತಾ ಅಥವಾ ಅದರ ಕಲ್ಲಿನ ಗಾಲಿಗಳು ನಿಷ್ಕರುಣೆಯಿಂದ ಉರುಳುವುದನ್ನು ನಿಷ್ಕ್ರಿಯವಾಗಿ ನೋಡುತ್ತಾ .
*
*
*
ವಿರಮಿಸುವ ಮೊದಲು ಇಂತಹ ವಿಚಾರ ಪ್ರಚೋದಕ ಹಾಗೂ ಮೌಲಿಕ ಕಥನವನ್ನು ಸೃಜಿಸಿರುವ ರಾಘವೇಂದ್ರ ಪಾಟೀಲರಿಗೆ ನನ್ನ ಹಾರ್ದಿಕ ಅಭಿನಂದನೆಗಳು.ಇನ್ನೂ ಅನೇಕಾನೇಕ ಅರ್ಥಪೂರ್ಣ ಕೃತಿಗಳು ಅವರಿಂದ ಹೊರಬರಲಿ ಮತ್ತು ಗಾಢ ಚಿಂತನೆಗೆ ನಮ್ಮನ್ನು ಪ್ರಚೋದಿಸಲಿ ಎಂದು ಹಾರೈಸುತ್ತೇನೆ.
-ಸಿ.ಎನ್.ರಾಮಚಂದ್ರನ್
ಮಂಗಳೂರು
೦೬-೦೧-೦೩

ಭಾಗ : ಒಂದು

ನಾನು ಗೋಕಾವಿಯ ಬಸ್ ಸ್ಟ್ಯಾಂಡಿನಲ್ಲಿ ಸಿಮೆಂಟಿನ ಬೆಂಚಿನ ಮ್ಯಾಲೆ ಕೂತಿದ್ದೆ…ಯಥಾ ರೀತಿ ವ್ಯಾಳ್ಯಾಕ್ಕ ಸರಿಯಾಗಿ ಬಿಡದ ಬಸ್ಸುಗಳನ್ನು ಬಯ್ಯುತ್ತ…ಮುಖಾ ಎತ್ತಿ ಮುಂದಕ ನೋಡಿದರ ನನ್ನ ಎದುರಿಗಿನ ಬೆಂಚಿನ ಮ್ಯಾಲ ಕೂತಿದ್ದ ಒಬ್ಬ – ಮಿಕೀ ಮಿಕೀ ಅಂತ ನನ್ನಣಿ ನೋಡಲಿಕ್ಕತ್ತಿದ್ದ !…ಕೆಂಪಗಿನ ಮುಖ…ಹಣಿಯ ಮ್ಯಾಲ ಆಳವಾದ ಗೆರಿಗೋಳು…ಅರವತ್ತು ಅರವತ್ತೈದರ ಆಸುಪಾಸಿನ ವಯಸ್ಸು ಇದ್ದೀತು…ನೆಟ್ಟಗಿನ ಮೂಗು…ಹೆಚ್ಚೂ ಕಡಿಮಿ ಪೂರಾ ಬೆಳ್ಳಗಾದ ಮೀಸಿ…ಕಿಂವಿಗೆ ಭಂಗಾರದ ಒಂಟಿಗಳು…ಧೋತರಾ -ಬಿಳೀ ಅಂಗಿ…ಅಂಗಿಗೆ ಬೆಳ್ಳಿಯ ಗುಂಡಿಗಳು…ತಲೀಗೆ ಬಿಳಿಯಪಟಕಾ ಸುತಿಗೊಂಡಿದ್ದ….ಆ ಮನಶಾನ್ನ ಎಲ್ಯೋ ನೋಡಿಧಂಗ ನೋಡಿಧಂಗ ಅನಿಸಿತು…ಬಸ್ ಸ್ಟ್ಯಾಂಡಿನ್ಯಾಗ ಕೂತ ಯಾರರೇ ಹಿಂಗ ನನ್ನನ್ನು ದಿಟ್ಟಿಸಿ ನೋಡತಿದ್ದರೆ ನನಗ ಅವರ ಬಗ್ಗೆ ಭಾಳ ಆಸಕ್ತಿ ಹುಟ್ಟತದ…ಯಾಕಂತಂದರೆ…ಹಿಂಗಣಿ ಬಸ್‌ಸ್ಟ್ಯಾಂಡಿನಲ್ಲಿ ಭೆಟ್ಟಿಯಾಗಿದ್ದ ಒಬ್ಬ ಮನಶಾ(ಭೂತ!?) ನನ್ನನ್ನ ಒಂದು ವಿಶೇಷ ಅನುಭವಕ್ಕೆ ಒಡ್ಡಿದ್ದ …ಆ ದೆವ್ವಿನ ಅನುಭವನಣಿ ಕಥಿಯ ಹುಚ್ಚಿನ ಕರಿ ಟೊಪಿಗಿಯ ರಾಯ ಅನ್ನುವ ಕಥೀ! ಇನೊಬ್ಬ ಮನಶಾ ಇನೊಮ್ಮೆ ಹಿಂಗಣಿ ಗೋಕಾವಿಯ ಸ್ಟ್ಯಾಂಡಿನ್ಯಾಗ ಸಿಕ್ಕು ಧರಮನಟ್ಟಿಯ ದೇಸಗತಿಯ ಕಥೀ ಹೇಳಿದ್ದ…ಈಗ ‘ಇಂವ್ಯಾರಪಾಣಿ…’ ಅಂತ ಮನಸಿನ್ಯಾಗಣಿ ಅನಕೋತಿರಬೇಕಾದರೆ ಅಂವ ಎದ್ದು ನನ್ನ ಕಡೇನಣಿ ಬಂದು -ನನ್ನ ಮುಂದನಣಿ ನಿಂತು ‘ನಮಸ್ಕಾರರೀ…’ ಅಂದ.ನಾನು ಒಮ್ಮಿಗೆಲೆ ಎಚ್ಚರಾದವನಂಗೆ …‘ಹಾಂ…ಹಾಂ.. ನಮಸ್ಕಾರ ’ ಅಂತಂದು ಅವನ್ನ ದಿಟ್ಟಿಸಿ ನೋಡಲಿಕ್ಕತ್ತಿದೆ…

‘ನಾ ಸ್ವಾಂವಪ್ಪರೀ…ಧರಮನಟ್ಯಾಂವ…ಹಿಂದ ಒಮ್ಮಿ ಇಲ್ಲೇ ಇದಣಿ ಟ್ಯಾಣಿನ್ಯಾಗಣಿ ನಿಮ್ಮನ್ನ ಭೆಟ್ಟಿ ಆಗಿದ್ದಿನಿ ನೋಡರಿ…ನೆಪ್ಪ ಇದ್ದಿರಬೇಕಲ್ಲರೀ…’ ಅಂದ. ನಾನು ಗುರುತು ಹತ್ತದೆ ಮಿಕಿ ಮಿಕಿ ಅಂತ ನೋಡಿದೆ…. ಅಂವ -‘ಹಾಂ …ಹೌದ ಬಿಡ್ರಿ.ಬಾಳ ದಿನಾ ಆತು…ನೀವು ಬೆಂಗಳೂರಿನ್ಯಾಗ ವರ್ತಮಾನ ಪತ್ರಿಕಾದಾಗ ಅದಣಿನ ಅಂತ ಹೇಳಿದ್ದಿರಿ…’ ಅಂದಾಗ -ಅರೇ ಈ ಮುದಕಗ ನನ್ನ ಪೂರಾ ಗುರ್ತು ಇದ್ದಂಗದಣಿ ಅಂತ ಅನಕೊಂಡೆ… ಆದರೆ ಅವನ ನೆನಪನ್ನುವದು ನನ್ನ ಮನಸಿನ್ಯಾಗ ಎಳ್ಳು ಕಾಳಿನಷ್ಟೂ ಮೂಡಲಿಲ್ಲ…ಅವನ ಮುಖದ ಚಹರೇ ಹಿಡದು ನೆನಪಿನ ಫೈಲ ಎಲ್ಲಾ ತಕ್ಕೊಂಡು ಕೂತರೆ…‘ಊಂ ಹೂಂ…!’.
ನಾನು ಹಿಂಗ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಅಂವ ತನ್ನಷ್ಟಕ್ಕೆ ತಾನು ತನ್ನ ಮಾತು ಮುಂದುವರಿಸಿದ್ದ.‘….ನೀವು ಶಾರದವರು.ಅದರಾಗೂ ಬೆಂಗಳೂರಿನ್ಯಾವರು…ನಿಮ್ಮೂವಣಿ ನಿಮಗ ನೂರಾ ಎಂಟು ಹಣಗಲಾ ಹರತಾಟಗೋಳು ಇರತಾವು.ಹಂತಾದ್ದರೊಳಗ ನಂದೇನ ಮಹಾ ಅಂತ ನೆಪ್ಪ ಉಳದೀತ ಬಿಡ್ರಿ…ಆ ಸರತೆ ಭೆಟ್ಟಿ ಆದಾಗ ನಿಮಗ ನಾ ಧರಮನಟ್ಟೀ ದೇಸಗತೀ ಕಥೀ ಹೇಳಿದ್ದಿನಿ ನೋಡರಿ…ಅದೇನರ ನೆಪ್ಪ ಇದ್ದರಣಿ ಇದ್ದಿರಬೇಕು….’ ಅಂತ ಹೇಳತಿದ್ದಂಗಣಿ ನನಗ ಒಮ್ಮಿಗೆಲೇ ಆ ಅಜ್ಜನ ನೆನಪು ಸಿಕ್ಕಿತು….ನಾನು ‘ಹಾಂ..ಹಾಂ..!’ ಅಂದು ನೆನಪಿಗೆ ಬಂತು ಅಂತ ಹೇಳಬೇಕಂದರೆ ಆ ಮನಶಾ ನನಗೆ ಮಾತಾಡಲಿಕ್ಕೆ ಚಾನ್ಸು ಕೊಡದೇ ತನ್ನ ಮಾತನ್ನೇ ಮುಂದುವರಿಸಿದ…
‘ಹೂಂ…ನಿಮ್ಮ ಹರತಾಟದೊಳಗ ನಮ್ಮ ಊರಿನ ಕಥೀ ನೆನಪ ಇಟಗೋ ಅಂದರ ಅಧೆಂಗ ಆದೀತು ಬಿಡ್ರಿ…ಅಗದೀ ಕಳಬಳ್ಳೀ ಸಂಬಂಧಗೋಳಣಿ ಮರತ ಹೋಗೂ ಹಂತಾ ಭರಾಟೀ ಕಾಲ ಇದಾ…ಹಂತಾದ್ದರಾಗ ನಮ್ಮ ಧರಮನಟ್ಟೀ ದೇಸಗತೀ ಕಥೀ ನೆಪ್ಪ ಇಟಗೋಪಾ ಅಂದರ ಎಲ್ಲೀ ಮಾತು ! ಹಾಂ..ಹಂಗ ಕೇಳಿದರಣಿ ನಾನಣಿ ಹುಚಪ್ಯಾಲಿ…ಆ ದೇಸಗತೀ ಸುದ್ದೀ ಕಥೀ ಮಾಡಿ ಹೇಳಿ ನಿಮ್ಮ ಮನಸಿನ್ಯಾಗ ಉಳಸಾಕ ನೋಡಾಕತ್ತದನು….ಆದರ ಆ ದೇಸಗತಿಯ ಅಗದೀ ಖಾಸ ವಾರಸುದಾರ ಮಾಣೀಕ್ ದೇಸಾಯನಣಿ ವಿಲಾಯತೀ ಹೆಣ್ಣ ಕಟಿಗೊಂಡು ಅದೆಲ್ಲಿಗೋ ಅಮುರಿಕಾ ಅಂತ…ಆ ಅಮುರಿಕಾಕ್ಕ ಹಾರಿ ಹ್ವಾದನಂತ…ತನ್ನ ಕಳ್ಳಿನ ಕುಡೀ – ಆ ಎಳೇ ಕಂದ ಅಮೃತನ್ನ ಸದೇಕ ಬಿಟ್ಟು ಇಮಾನದಾಗ ಕುಂತು ಹ್ವಾದನಂತ…ಈ ಅಮೃತಂದರ- ಮತ್ತ ನಮ್ಮ ದೇಸಗತಿನ್ನ ಕಟ್ಟಿ ನಿಂದರಸಾಂವ … ಅಂತ ಹಲಬತಿದ್ದ ಅಮೃತನ ಮುತ್ತಜ್ಜ ಕಲ್ಪನಾಥ ದೇಸಾಯರನಣಿ ಮತ್ತ ತನ್ನ ಎಳೇ ಕೂಸನ್ನ – ಇಬ್ಬರನೂ ನೋಡಿಕೊಳ್ಳಲಿಕ್ಕೆಂತ ಇಬ್ಬರು ಆಯಾಗೋಳನ ನೇಮಿಸಿ, ಅವರಿಗೆ ಉಡಿ ತುಂಬ ರೊಕ್ಕಾ ಕೊಟ್ಟು ದೇಸಾ ಬಿಟ್ಟು ಹ್ವಾದನಂತ…! ಅಲ್ಲರೀ…ರೊಕ್ಕ ಸಿಕ್ಕಮ್ಯಾಲ ಯಾರ ದರಕಾರ ಯಾರಿಗೆ ಇರತೈತಿ ಹೇಳ್ರಿ…ಮಜಾ ನೋಡ್ರಿ…ಆ ಕೂಸಿನ್ನ ನೋಡಿಕೊಳ್ಳಾಕ ನೇಮಣೂಕೀ ಮಾಡಿದ ಆಯಾನ ಹೆಸರು ಅನಸೂಯಾ ಅಂತ! ತ್ರಿಮೂರ್ತಿಗೋಳನ ಕೂಸಗೋಳನ ಮಾಡಿ ನಮ್ಮ ಆದಿನಾಥನಂಗ ಪೂರಾ ಬತ್ತಲೇ ಆಗಿ ಮಲೀ ಕುಡಿಸಿದ ಮಾತಾಯಿಯ ಹೆಸರೂ ಅನಸೂಯಾನಣಿ ಅಂತ!…ಇಲ್ಲಿ ಇಕಿ ಈ ಅನಸೂಯಾ ಏನ ನೋಡಿಕೊಂಡಳು…? ಹಾಲು ಕುಡಿಯುವ ಕಂದಮ್ಮನ ತುಟಿಗೋಳಿಗೆ ಮತ್ತ ಇಡೀ ಮೈಯಂತ ಮೈಗೆ ಕಟ್ಟಿರವಿ ಮುಕರಿ…ಕಡದು ಕಡದು …ಚಿಟ್ ಚಿಟ್ಟಂತ ಚೀರಿ…ಆ ಎಳೀ ಕಳಿಗಿ ಪ್ರಾಣಾ ಬಿಟ್ಟಿತ್ತು. ಇನ್ನ ತೊಟ್ಟಲದಾಗ ಹೆಣಾ ಆಗಿ ಮಲಗಿದ ಮರಿಮಗನ್ನ ನೋಡಿದ ಕಲ್ಪನಾಥ ದೇಸಾಯರ ಹರಣನೂ ಹಾರಿ ಹೋಗಿತ್ತು…ನಮ್ಮ ಧರಮನಟ್ಟಿಯ ದೇಸಗತಿಯ ಹೆಸರ ಹೇಳಿಕೊಳ್ಳಾಕ ಯಾರಂಬುವ ಯಾರೂ ನಮ್ಮ ನಾಡಿನ್ಯಾಗ ಉಳೀಲಿಲ್ಲ ನೋಡರಿ!… ಇನ್ನ ಆ ಕಾರಭಾರೀ ತ್ರಿಂಬಕ ಭಟ್ಟನ ಸಂತಾನ ಅಂತೂ ಎಂದೋ ಊರು ಬಿಟ್ಟು … ಪುಣೇ-ಮುಂಬಯಿ -ಬರೋಡಾ ಅಂತ ದೇಸಾಂತರಕ್ಕ ಹೋಗಿ ಧರಮನಟ್ಟಿಯ ಸಂಪರ್ಕಕ್ಕ ಹೊರತಾಗಿ ಬಿಟ್ಟಾವು…ದೇಸಗತಿಗೆ ಸಂಬಂಧ ಇದ್ದವರಣಿ ಹಿಂಗ ಅದರ ಹಂಗು ಹರಕೊಂಡು ಹೋಗಿರಬೇಕಾದರಣಿ…ಅದನ್ನ ಮನಸಿನ್ಯಾಗ ಇಟಗೊಂಡು ಕಥೀ ಮಾಡಿ ಹೇಳುವ ನಾನೂ…ನಾ ಹುಚಪ್ಯಾಲಿ ಹೌದಲ್ಲರಿ…?’
…ಹಿಂಗ ಅಂವ ಒಂದಣಿ ಸವನಣಿ ಮಾತಾಡಿ ನಿಂದರಿಸಿ,ಆಮ್ಯಾಲ ಮಿಕಿ ಮಿಕೀ ಅಂತ ನನ್ನ ಮುಖಾ ನೋಡಲಿಕತ್ತ ಮ್ಯಾಲಣಿ ನನಗ ಮಾತಾಡಲಿಕ್ಕೆ ಅವಕಾಶ ಸಿಕ್ಕಿತು.ನಾನು-‘ಏ..ಏಣಿ ಹಂಗೇನ ಅಲ್ಲರೀ ಯಜ್ಜಾ..ನನಗ ಪೂರಾ ನೆನಪಿಗೆ ಬಂದೈತಿ… ಭಾಳ ದಿನಾ ಆಗಿತ್ತ ನೋಡ್ರಿ.ಅದಕ್ಕಣಿ ಒಮ್ಮಿಗೆಲೇ ಗುರತ ಹತ್ತಲಿಲ್ಲ…ನೀವು ಹೇಳಿದ ಕತೀ ನನ್ನ ತೆಲ್ಯಾಗಣಿ ಕುಂತೈತಿ.ಅಷ್ಟಣಿ ಯಾಕ…ನಾ ಅದನ ಬರದು ಪೇಪರಿನ್ಯಾಗ ಛಾಪಿಸೀದನು’ ಅಂತ ಅಂದೆ.ಸ್ವಾಂವಜ್ಜ ಇದನ ಕೇಳಿ ಭಾಳ ಉತ್ತೇಜಿತನಾದ… ‘ಹೌದರೀ…? ಏ ಬಾಳ ನಿವಳ ಆತ ಬಿಡರಿ…ನಾ ನಿಮಗ ಹೇಳಿದ್ದು ಸಾರ್ಥೇಕ ಆದಂಗ ಆತು…ನಾ ಆಗ ನಿಮಗ ನಮ್ಮ ಊರಿನ ವಿಟ್ಠಲ ದೇವರ ಗುಡೀ ತೇರಿನ ಮಜಕೂರು ಹೇಳಿದ್ದಿನಿ ಏನರಿ…?ಹೇಳಿರಾಕಿಲ್ಲರಿ…’ ಅಂದ. ನಾನು ಊಹೂಂ ಅಂತ ಅಂದದ್ದು ಅಂವಗ ಹೇಳರಿ ಅಂತಂದಂಗ ಕೇಳಿಸಿತೋ ಯಾರಿಗೆ ಗೊತ್ತು !…ಅಂವ ಸುರೂ ಮಾಡೇ ಬಿಟ್ಟ ಧರಮನಟ್ಟಿಯ ವಿಟ್ಠಲ ದೇವರ ಗುಡಿಯ ತೇರಿನ ಪುರಾಣಾವನ್ನ…
*
*
*
…ದೇಸಗತಿಯನ್ನ ಕಟ್ಟಿದ ರಂಗೋ ಪಟವರ್ಧನ ದೇಸಾಯರು ಧರಮನಟ್ಟಿಯೊಳಗ ತಮ್ಮ ಮನಿದೇವರು ವಿಟ್ಠಲಂದು ಒಂದು ಗುಡೀ ಕಟ್ಟಿಸಿದರರೀ…ದೇಸಗತಿ ಹಾಳಾದರೂ ಈ ಗುಡಿಯ ಒಂದ ಮೂಲಿ ಸೈತ ಮುಕ್ಕಾಗದಂಗ ನಿಂತೈತಿ ನೋಡ್ರಿ…ಸಣ್ಣಾಗಿ ಕಟದ ಬಿಳೀ ಕಲ್ಲಿನ ಕಟ್ಟಡ…ಗ್ವಾಡಿ ಮತ್ತ

ಶಿಖರದ ಮ್ಯಾಲೆಲ್ಲಾ ಸುಳವಗೋಳೂ ಮತ್ತ ಚಿತ್ತಾರಗೋಳು…ಒಂದೊಂದು ಕಂಬನೂ ಹೂವಿನ ಬಳ್ಳಿ ಇದ್ದಂಗಣಿ ನೋಡ್ರಿ ! ಗರ್ಭ ಗುಡ್ಯಾಗಿನ ವಿಟ್ಠಲ ರುಕುಮಾಯಿ ಅಂತೂ ಥೇಟ್ ಅವರಣಿ!…ಅಗದೀ ಎದ್ದ ಬರೂಹಂಗ ಕಾಣತಾರು ! ದೇಸಗತಿ ಕಟ್ಟಾಕ ಬಲಾ ಕೊಟ್ಟ ಬಲವಂತ ದೈವ ಅದಾ…ತ್ರಾಹಿ ಅಂಬುವ ಮಂದಿನ್ನ ಕಾಪಾಡುವಂಥಾ ದೇವರು…ದೇಹಿ ಅಂಬುವ ಮಂದಿಗೆ ಬೇಡಿದ್ದು ನೀಡುವ ಜಾಗ್ರುತ ಕ್ಷೇತ್ರ ಅಂತ ನಾಡಿನ ಎಂಟೂ ದಿಕ್ಕಿಗೆ ಹಬ್ಬಿ …ನಮ್ಮ ಊರಿನ ವಿಟ್ಠಲ ದೇವಸ್ಥಾನ ಜಗತ್ ಪ್ರಸಿದ್ಧ ಆಗೇತಿ.ನಮ್ಮ ಊರಾಗ ನಮ್ಮದೊಂದಣಿ ಜಯ್ಯಾರ ಮನಿತನಾರೀ…ಜಯ್ಯಾರ ಆದರೂ ನಾವು ವಿಟ್ಠಲ ದೇವರಿಗೆ ನಡಕೋತೀವರಿ…ಯಾವ್ಯಾವ ನಾಡಿನ್ಯಾಗ ಯಾವ್ಯಾವ ದೇವರು ಇರತಾವೋ ಅವನ್ನಣಿ ನಾವು ನಂಬಬೇಕಲ್ಲರೀ…?
ವಿಟ್ಠಲ ರುಕುಮಾಯಿ ದೇವರ ತೇರಂದರ ತೇರು ನೋಡರಿ…ಅದನೂ ದೇಸಾಯರಣಿ ಕಟ್ಟಿಸಿದ್ದು…ಏನಿಲ್ಲಂದರೂ ಒಂದ ಗೇಣು ದೀಡ ಗೇಣು ದಪ್ಪನಾದ – ಎರಡು ಮಾರು ಎತ್ತರವಿದ್ದ ಕಲ್ಲಿನ ಗಾಲಿಗಳು…ಅಬಬಣಿ! ಅಷ್ಟು ಪಿಂಡ ಇದ್ದ – ಅಷ್ಟು ಅಗಲ ಇದ್ದ ಕಲ್ಲಿನ ಹಾಸು ಫಳಿಗಳನ್ನ ಯಾವ ಖಣಿಯಿಂದ ಎಬ್ಬಿಸಿದ್ದಾರೂ ಅಂತ ! ಧರಮನಟ್ಟಿಯ ದೇಶ ಅಂದರ ಹಿರಿಹೊಳಿಯ ದಂಡಿಯ ಎರೀ ಮಣ್ಣಿನ ಬಯಲೋ ಬಯಲು ನಾಡರಿ… ಇಲ್ಲಿ ಒಂದು ಸಣ್ಣ ಕಲ್ಲು ಸಿಗುವುದೂ ದುರ್ಲಭ! ಹಂತಾದ್ದರಾಗ ಈ ಕಲ್ಲು ಫಳಿಗಳನ್ನ ಎಲ್ಲಿಂದ ತಂದಿದ್ದಾರಪಾ ಅಂತ ಸೋಜಿಗ ಆಗತೈತಿ…ಮಂದಿ ಆ ಗಾಲಿಗೋಳನ ಅವು ಕಲ್ಲಿನವೂ ಅಂತ ಖಾತ್ರೀ ಮಾಡಿಕೊಳ್ಳುವವರಹಂಗ-ಅವನ್ನ ಮುಟ್ಟೀ-ಬಾರಿಸೀ ನೋಡತಾರ…ಆ ಗಾಲಿಗಳ ಮ್ಯಾಲ ಮರಾ ಗಿಡಾ ಬಳ್ಳಿಗೋಳ ಸುಳವುಗಳು…ಗಾಲಿಗಳ ನಟ್ಟ ನಡಕ ಎರಡು ಮಳದಗಲದ ಗುಂಭ…ಗುಂಭದ ನಡೂ ಮಧ್ಯೆ ಮಳದಗಲದ ಆರುಪಾರು ರಂಧ್ರ… ಆ ರಂಧ್ರದೊಳಗಿಂದ ಹಾದು ಬಂದು – ಮಳವುದ್ದ ಹೊರಗೆ ಚಾಚಿದ ಮರದ ಕೆಚ್ಚಿನ ಅಚ್ಚು ಮತ್ತ ಆ ಅಚ್ಚಿಗೆ ಸಿಗಿಸಿದ ರಟ್ಟೆ ಗಾತ್ರದ ಕಬ್ಬಿಣದ ಕೀಲುಗಳು…ಎರಡೆರಡು ಮಳ ಹಮ್ಮ ಚೌಕದಷ್ಟು ದಪ್ಪನಾದ ಅಂಥಾ ಕೆಚ್ಚು ನೀಡಿದ ಆ ಮರವಾದರೂ ಯಾವ ಆಕಾರದ್ದು ಇದ್ದಿರಬೇಕು ಶಿವನೇ ಅಂತ ಸೋಜಿಗ ಆಗತೈತಿ…
ಆ ತೇರು ಕಟ್ಟಿದ ವಿಶ್ವಕರ್ಮ ಈ ಅಚ್ಚಿನ ಮ್ಯಾಲೂ ಸುಳವು ಕೆತ್ತಿದ್ದಾನೆ… ನದೀ…ಕಾಳಿಂದಿ ಮಡು…ಮುಗಲು-ಸೂರ್ಯಾ …ಚಂದ್ರಾಮ…ಮತ್ತ ಚಿಕ್ಕಿಗೋಳು! ಆ ಎರಡು ಅಚ್ಚುಗಳ ಮ್ಯಾಲೆ ಕುಂತ -ಮಾರು ದೀಡ ಮಾರಿನಷ್ಟು ಎತ್ತರವಾದ, ದಪ್ಪನೆಯ ಕೆಚ್ಚಿನಿಂದ ಮಾಡಿದ ಮರದ ಚೌಕಟ್ಟು….ಆ ಚೌಕಟ್ಟಿನ ತೋಳುಗಳ ಮ್ಯಾಲೂ ಚಿಕ್ಕಿ ಚಂದ್ರಾಮರ ರಾಜ್ಯ ! ಗಾಲಿಗಳಿಗಿಂತ ಒಂದು ಮಳದಷ್ಟು ಮ್ಯಾಲ ಎತ್ತರಕ್ಕೆ…ಎತ್ತರವಾದ ಈ ಚೌಕಟ್ಟಿನ ಮ್ಯಾಲೆ ಕುಂತಿದೆ ಆರು ಮಜಲಿನ ಅಷ್ಟಕೋನದಾಕಾರದ ತೇರು…ನಾಳೆ ರಾಮನವಮಿಯ ದಿವಸ ತೇರು
ಎಳೀತಾರೆ…ತೇರು ಎಳಿಯೂಕಿಂತಾ ಮದಲು ಒಬ್ಬ ಪರವಂತ ತೇರಿನ ಗಾಲಿಗೆ ತನ್ನ ತೆಲೀ ಹೊಡಕೊಂಡು ರಗತಾ ತಗದು ತೇರಿನ ಮೂಡಣ ದಿಕ್ಕಿನ ಮಕಕ್ಕ ಹಚ್ಚತಾನರೀ… ಇದಕ್ಕ ರಗತ ತಿಲಕದ ಸೇವಾ ಅಂತಾರು .
ಈ ಪದ್ಧತೀ ಕೇಳಿ ನನ್ನ ಮನಸಿನ್ಯಾಗ ಕುತೂಹಲ ಹುಟ್ಟಿತು…ನನ್ನ ಕಣ್ಣಾಗಿನ ಕೌತುಕವನ್ನ ಕಂಡ ಆ ಹಿರೇಮನಶಾ ‘…ಏ ಹೆಂಗೂ ಇಲ್ಲೇ ಹತ್ತರದಾಗ ಬಂದದೀರಿ. ನಾಳೆ ತೇರು ಮುಗಿಸಿಕೊಂಡ ಹೊಂಡೂರಂತೇ…ಹೆಂಗೂ ನಾಳೆನಣಿ ತೇರು…ನಮ್ಮ ಊರಿಗೆ ಹೊಂಡೂಣೂ ನಡೀರಿ…’ ಅಂತ ಆ ಸ್ವಾಂವಜ್ಜ ಬೆನ್ನಣಿ ಹತ್ತಿ ಬಿಟ್ಟ …ನಾನು ನನ್ನ ಕುತೂಹಲದ ಮೂಲಕವಾಗಿ ಸ್ವಾಂವಜ್ಜನ ಊರಿಗೆ ಹೋಗಿ ಒಂದು ದಿವಸ ಇದ್ದು… ರಕ್ತ ತಿಲಕದ ಸೇವಾ ಮತ್ತ ತೇರಿನ ಉತ್ಸವವನ್ನ ನೋಡಿಕೊಂಡೇ ಹೋದರಾತು ಅಂತ ನಿರ್ಧಾರ ಮಾಡಿ -ಆ ಹಿರೇ ಮನಶಾನ ಬೆನ್ನು ಹತ್ತಿ ಧರಮನಟ್ಟಿಗೆ ಹೋದೆ…
ಎರಡು ದಿನ ಮದಲೇ ಧರಮನಟ್ಟಿಗೆ ಬಂದು ಬೀಡು ಬಿಟ್ಟಿರುವಂಥಾ ನಣದೀ ಗೊಂದಲಿಗ್ಯಾರು…ತೇರಿನ ಮೊದಲಿನ ರಾತ್ರಿ-ಅಂದರೆ-ಚೈತ್ರ ಶುದ್ಧ ಅಷ್ಟಮಿಯ ರಾತ್ರಿ -ಧರಮನಟ್ಟಿಯ ತೇರಿನ ಮಹಾತ್ಮೆಯನ್ನ ಕಥೀ ಮಾಡಿ ಹೇಳುವ ಪದ್ಧತಿ ಇದೆಯಂತೆ…ನನ್ನ ಊಟವಾದ ಮ್ಯಾಲೆ ಸ್ವಾಂವಜ್ಜ ಅನುಮಾನಿಸಿಕೋತ ಅನುಮಾನಿಸಿಕೋತ -‘ಹೆಂಗರೀ…? ಗೊಂದಲಿಗ್ಯಾರು ಹೇಳೂ ತೇರಿನ ಮಹಾತ್ಮಿಯ ಕಥೀ ಕೇಳತಿರ್‍ಯೋ ಇಲ್ಲಾ ಮಲಕೊಂಡು ವಿಶ್ರಾಂತೀ ತಗೋತೀರೋ…?’ ಅಂತ ಕೇಳಿದ.ನಾನು ಆ ತೇರಿನ ಪುರಾಣವನ್ನ ತಿಳಕೋಲಿಕ್ಕೆಂತಣಿ ಅಲ್ಲಿಗೆ ಬಂದವನು… ‘ಏ…ಮಲಗೂದೇನು ಇದ್ದಣಿ ಇರತೈತಿ…ಅವರ ಕಥೀ ಕೇಳೂಣು ನಡೀರಿ’ ಅಂತ ಸ್ವಾಂವಜ್ಜನ್ನ ಹೊಂಡಿಸಿಕೊಂಡು ಹೊಂಟೆ…ಗುಡಿಯ ಬಯಲಿಗೆ ಬಂದಾಗ ಆಗಲೇ ಗಣಪತಿಯ ಪೂಜಿ – ಅಂಬಾ ಭವಾನಿಯ ಪೂಜೀ ಮುಗಿಸಿ ಕಥಿಯ ಭಾಗಕ್ಕ ಪ್ರವೇಶ ಮಾಡಿದ್ದರು…
ಸ್ವಾಂವಜ್ಜ ‘ಈಗ ಕಥೀ ಸುರು ಆಗೇತಿ…ಬರ್ರಿ ಇಲ್ಲಿ ಕುಂಡ್ರೂಣೂ’ ಅಂತ ಜಾಗಾ ಮಾಡತಿರಬೇಕಾದರೆ ನಾನು ಗುಡಿಯ ಮುಂದೆ ಭವ್ಯವಾಗಿ ನಿಂತ ತೇರನ್ನ ನೋಡಿ, ಅಂವ ತೋರಿಸಿದ ಜಾಗಾದಾಗ ಕುಂತು ನಣದಿಯ ಗೊಂದಲಿಗ್ಯಾರು ಹೇಳತಿದ್ದ ಕಥಿಯೊಳಗ ತಲ್ಲೀನನಾದೆ…
*
*
*
ಆಹಾಣಿ…
ಒಂದಾನೇ ಮಜಲಾಗೆ ಏನೇನು ನೋಡು
ಹರ ನನ್ನ ಮಾದೇವೈ ||

ಒಂದಾನೇ ಮಜಲಾಗೆ ಆದಿ ಶೇಷಾನೊ
ಶಿವ ಶಿವ ಮಾದೇವೈ ||
ಆಹಾ…ಒಂದಾನೇ ಮಜಲಿನ ಎಂಟೂ ದಿಕ್ಕೆಂಬುವ ಕಡೆ ಆದಿಶೇಷಾನೆಂಬೊ ಸರ್ಪವು ಮ್ಯಾಗಿನ ಇಡೀ ಬ್ರಹ್ಮಾಂಡವನ್ನ ಹೊತಗೊಂಡು ನಿಂತದಾವೇ…
ಎರಡಾನೆ ಮಜಲಾಗೆ ಏನೇನು ನೋಡೋ
ಹರ ಹರ ಮಾದೇವೈ ||
ಎರಡಾನೇ ಮಜಲಾಗೆ ಐರಾವತವಯ್ಯಾ
ಶಿವ ಶಿವ ಮಾದೇವೈ ||
ಆಹಾಣಿ… ಎರಡಾನೇ ಮಜಲಿನಲ್ಲಿ ಎಂಟೆಂಬುವ ಎಂಟು ದಿಕ್ಕಿಗೆ ಮಕ ಮಾಡಿದ ಎಂಟು ಎಂಟು ಐರಾವತಗೋಳೂ ಸೊಂಡಲೆಂಬುವದನ್ನಣಿ ಮ್ಯಾಲಕೆತ್ತೀ…
ಹರ ಹರ ಮಾದೇವೈ ||
ಸೊಂಡಲೆಂಬುವನ್ನಣಿ ಮ್ಯಾಲಕ ಎತ್ತಿ ಮ್ಯಾಗಿನ ನಾಲ್ಕು ಮಜಲುಗಳನಣಿ ಹೊತ್ತು ನಿಂತಣಿದಾವೆ
ಶಿವ ಶಿವ ಮಾದೇವೈ ||
ಮೂರಾನೆ ಮಜಲಾಗೆ ಮತ್ತೇನು ನೋಡೋ
ಹರ ಹರ ಮಾದೇವೈ ||
ಆಹಾ…
ಮೂರಾನೇ ಮಜಲಾಗೆ ಮತ್ಸ್ಯ -ಕೂರ್ಮ -ಇಲಿ ಹೆಗ್ಗಣ ಹಂದಿಗಳಾದಿಯಾಗಿ ನಾನಾ ನಮೂನೆಯ ಕಾಟಕ ಜೀವಿಗಳಂಬೋವೂ – ಕಾಟಕ ಮಿಕಗೋಳೂ
ಶಿವ ಶಿವ ಮಾದೇವೈ ||
ಆ ನಾನಾ ನಮೂನಿಯ ಕಾಟುಕ ಜೀವಗಳೂ ಮಿಕಗಳೂ ಮ್ಯಾಗಿನ ಮೂರು ಮಜಲನ್ನ ಹೊತ್ತು ನಿಂತದಾವೇ…
ಹರ ನನ್ನ ಮಾದೇವೈ ||

ಹಾಂ…
ನಾಕಾನೇ ಮಜಲಾಗೆ ನೆರದದ್ದು ಏನೊ
ಹರ ನನ್ನ ಮಾದೇವೈ ||
ನಾಕಾನೇ ಮಜಲಾಗೆ ಎತ್ತು ಕುದರಿಗಳೊ
ನಾಕಾನೆ ಮಜಲಾಗೇ ಹೈನದ ಆಕಳವೈ
ನಾಕಾನೆ ಮಜಲಾಗೆ ಮತ್ತೇನು ನೋಡೋ
ನಾಕಾನೆ ಮಜಲಾಗೇ ಕುಂಟಿ ಕೂರಿಗಿಯೈ
ನಾಕಾನೆ ಮಜಲಾಗೆ ನೊಗ ಗಾಲಿ ತಕ್ಕಡಿಯೈ
ಶಿವ ನನ್ನ ಮಾದೇವೈ ||
ಆಹಾಣಿ…
ಐದಾನೇ ಮಜಲಾಗೆ ಇದ್ದದ್ದು ಏನೋ
ಹರ ನನ್ನ ಮಾದೇವೈ ||
ಐದಾನೇ ಮಜಲಾಗೆ ಬಿಲ್ಲು ಬಾಣಗಳೊ
ಐದಾನೆ ಮಜಲಾಗೆ ಬಿಲ್ಲಾಳು ಬಂಟಾರೋ
ಐದಾನೇ ಮಜಲಾಗೆ ಕತ್ತಿ ಕಠಾರಿಗಳೋ
ಐದಾನೆ ಮಜಲಾಗೆ ಕಡುಗಲಿ ಬಂಟಾರೋ
ಬ್ಯಾಟಿಯಾಡುವ ಸಿಂಹ ಶಾರ್ದೂಲ ಮಖವೊ
ಶಿವ ನನ್ನ ಮಾದೇವೈ ||

ಆರಾನೇ ಮಜಲಾಗೆ ಯಾರ್‍ಯಾರು ಇದ್ದಾರೇ
ಹರ ನನ್ನ ಮಾದೇವೈ ||
ಆರಾನೇ ಮಜಲಾಗೆ ವಾಣಿ ಸರಸೋತಿಯೊ
ಆರಾನೇ ಮಜಲಾಗೆ ಗೆಜ್ಜೆ ಕಟ್ಟಿದ ನವಲೊ
ಆರಾನೆ ಮಜಲಾಗೆ ವೇದಾದ ಗ್ರಂಥಾವೊ
ಆಹಾ…
ವೇದಾದ ಗ್ರಂಥಾವು ತಂಬೂರಿ ಢೋಲಕವೈ
ಶಿವ ನನ್ನ ಮಾದೇವೈ ||

ಆಹಾಣಿ…ಆರಾನೇ ಮಜಲಿನ್ಯಾಗೆ ಸರಸೋತಿ ತಾಯೀ ವೇದಾದ ಗ್ರಂಥಾವು ಗೆಜ್ಜೆ ಕಟ್ಟಿದ ನವಲು ತಂಬೂರಿ ಢೋಲಕ್ಕುಗಳದಾವೆಯಾಣಿಹಾಣಿ…
ಹರ ನನ್ನ ಮಾದೇವೈ ||
ಆರಾನೆ ಮಜಲೀನ ಮ್ಯಾಲಕ್ಕ ಏನೊ
ಶಿವ ನನ್ನ ಮಾದೇವೈ |.

ಆರಾನೆ ಮಜಲೀನ ಮ್ಯಾಲಕ್ಕ ನೋಡೊ
ಬಂಗಾರ ಕಳಸಾವು ಸಿಂಗಾರ ಪ್ರಭೆಯೈ
ಸೂರ್ಯ ಬಿಂಬದ ಒಳಗ ಚಂದ್ರಾನ ಬಿಂಬಾ
ನೆತ್ತೀಯ ತುದಿಗೆ ಸಹಸ್ರಾರದ ಕಳಸಾ

ಹರ ಹರ ಮಾದೇವೈ ||
ಉಘೆ ಉಘೆ ಎನ್ನೀರಿ ನಮ್ಮೂರ ತೇರೀಗೇ
ಶಿವ ಶಿವ ಮಾದೇವೈ ||
ಜಯ ಜಯ ಎನ್ನೀರಿ ಧರಮನಟ್ಟೀಯ ತೇರೀಗೆ
ಹರ ನನ್ನ ಮಾದೇವೈ ||
ಆಹಾಂ…
ಇಂಥಾ ಮೂರು ಲೋಕದೊಳಗೂ ಮೆರಿಯುವಂಥಾ ಹೊನ್ನ ಕಳಸದ ತೇರು ಕಟ್ಟಿಸಿದ ಪಟವರ್ಧನ ದೊರೀ ಅಂತಾರೇ…
ಬಾರಪ್ಪ ಮಂತ್ರಿಯೇ ಬಾರಯ್ಯ ಬಾರೋ
ಹೊನ್ನ ಕಳಸದ ತೇರು ಎಳಿಯೂದು ಎಂದೊ
ಬಂಗಾರ ಕಳಸದ ತೇರ ಎಳಿಯೂದು ಎಂದೋ
ಆಹಾಣಿ…
ಕಾರಭಾರಿ ತ್ರಿಂಬಕ ಭಟ್ಟರಾದರೂ ದೊರಿಯ ಮಾತು ಕೇಳಿ ಲಗು ಬಗಿಯಿಂದ ಮನೀಗೆ ನಡದಾರೇಣಿ
ಹರ ನನ್ನ ಮಾದೇವೈ ||
ಲಗುಬಗೆಯಿಂದ ಮನಿಗೆ ಬಂದು ದರಬಾರಿನ ದಿರಿಸನಾದರು ಕಳಿಯುತಾರೇ ದರಬಾರಿನ ದಿರಿಸು ಅಂಬುವುದನ್ನ ಕಳದು ಕೈ ಕಾಲು ಮಕಾ ತೊಳದು ಮಡೀ ಪಂಜೇ ಅಂಬುವುದನ್ನ ಉಟಗೊಂಡು ದೇವರ ಜಗಲಿಯ ಮುಂದ ಕುಂತು
ಆಹಾಣಿ…
ದೇವರ ಜಗಲಿಯ ಮುಂದ ಕುಂತು ಬೆಳ್ಳಿಯ ನೀಲಾಂಜನದಾಗೆ ತುಪ್ಪವನ್ನ ಸುರುವಿ
ಬತ್ತೀಗೆ ದೀಪದ ಕುಡಿಯ ಮುಡಿಸುತಾರೇ
ಶಿವ ನನ್ನ ಮಾದೇವೈ ||
ಆಹಾಣಿ…
ದೇವರ ಮುಂದಿನ ನೀಲಾಂಜನದ ಬತ್ತಿಗೆ ಜೋತಿಯ ಕುಡಿಯನಾದರೂ ಮುಡಿಸಿ ಶಿವನೇ ಅಂದು ಕಣ್ಣು ಮುಚ್ಚಿ ಕೈ ಮುಗಿಯುತಾರೆ
ಹರ ನನ್ನ ಮಾದೇವೈ ||
ಆಹಾ…
ಶಿವನೇ ಅಂತ ಕಣ್ಣು ಮುಚ್ಚಿ ಕೈಯ ಮುಗಿಯತಿದ್ದರೆ ಆಹಾಣಿ…
ಶಿವ ನನ್ನ ಮಾದೇವೈ ||
ಭರ್ರೆಂಬೊ ಗಾಳೀಯು ಬೀಸ್ಯಾವೆ ಶಿವನೆ
ದೀಪಾದ ಕುಡಿಯೂ ಹೊಯ್ದಾಡುತಾವೇ
ಕೈ ಮುಗದು ಕಣ್ಣಾ ತೆರಿಯುವದರೊಳಗೇ
ಆಹಾ…
ಅಲ್ಲಿ ಆಗ ದೇವರ ಮುಂದಿನ ನೀಲಾಂಜನದ ಬತ್ತಿಯ ತುದಿಗೆ ಮುಡಿಸಿದ ದೀಪದ ಕುಡಿಯಾದರೂ ಭರ್ರೆಂಬೊ ಆ ಗಾಳಿಗೆ ನಂದಿ ಹೊಗಿಯ ಗಮಟು ವಾಸನಿ ಎದ್ದಿತಲ್ಲೋ ಶಿವನೇ
ಹರ ನನ್ನ ಮಾದೇವೈ ||
ಹಿಂಗ ದೀಪದ ಕುಡಿಯಾದರೂ ನಂದಿ ಹೊಗಿಯ ಗುನುಗು ಎದ್ದದ್ದು ಕಂಡ ತ್ರಿಯಂಬಕ ಭಟ್ಟ ಅಂತಾನೇ –
ಯಾಕಪ್ಪಾ ಶಿವನೇ ಅಪಸಕುನ ಮಾಡಿ ಬಿಟ್ಟಿಯಲ್ಲಾಣಿ
ಶಿವ ಶಿವ ಮಾದೇವೈ ||
ಯಾಕಪ್ಪಾ ಶಿವನೆ ಅಪಸಕುನ ಮಾಡಿಬಿಟ್ಟಿಯಲ್ಲಾ ಣಿ
ಅಂತ ಬಾಳ ವ್ಯಸನ ಪಡುತಾರೇ…
ಬಾಳ ದುಕ್ಕ ಪಡುತಾ ಸ್ವಾಮಿನ್ನ ನೆನದು ಕೈ ಮುಗದು ಮತ್ತೆ ಬತ್ತಿಗೆ ದೀಪದ ಕುಡಿಯ ಮುಡಿಸುತಾರೆ
ಸ್ವಾಮಿನ್ನ ನೆನದು ಮತ್ತೆ ಬತ್ತೀಗೆ ದೀಪದ ಕುಡೀ ಮುಡಿಸಿದರೇ
ಮತ್ತೆ ಭರ್ರೆಂಬೋ ಗಾಳಿ ಬಂತಲ್ಲೊ ಶಿವನೇ
ಮನಸಂಬುವದನ್ನ ಗಟ್ಟಿ ಮಾಡಿಕೊಂಡು ಮೂರನೇ ಸರತೀ ಮತ್ತೆ ಬತ್ತಿಗೆ ಜ್ಯೋತಿಯನ್ನ ಮುಡಿಸಿದರೆ
ಆ ಜ್ಯೋತಿಯನ್ನಾದರೂ ಭರ್ರೆಂಬೊ ಗಾಳಿ
ಬಂದು ಆರಿಸಿ ಬಿಡತಿದ್ದರೇಣಿ…
ಆಹಾಣಿ…
ಭಟ್ಟಾರ ಮನದಾಗ ಅಂಜೀಕಿ ಹುಟ್ಯಾವೈ
ಅಪಸಕುನ ನೆನದು ಥರ ಥರಾ ನಡಗುತಾರೆ
ಹರ ನನ್ನ ಮಾದೇವೈ ||
ಆಹಾ…
ಭಟ್ಟರ ಮನದಾಗ ಅಂಜಿಕಿ ಅನ್ನುವುದು ಹುಟ್ಟಿ ಅವರು ಎದ್ದು ಧಡಧಡನೆ ಪಡಸಾಲಿಗೆ ಬಂದು ಹಳಬನನ್ನ ಕರೆಯುತಾರೆ
ಆಹಾಣಿ…
ಧಡ ಧಡ ಅಂತ ಪಡಸಾಲಿಗೆ ಬಂದು ಹಳಬನನ್ನ ಕರದು-ಏ ಹಳಬಾ ಶಾಸ್ತ್ರದ

ಅಯ್ಯನವರನ್ನ ಕರದ ತಾ ಹೋಗೋ ಅಂತ ಹೇಳುತಾರೇ
ಹರ ನನ್ನ ಮಾದೇವೈ ||
ಶಾಸ್ತ್ರದ ಅಯ್ಯನವರು ಬಂದು ಹೊತಿಗೀ ತಗದು ಶಾಸ್ತ್ರ ನೋಡಿ ಕಾರಭಾರಿಗಳಿಗೆ ಹೇಳುತಾರೇ –
ಕಾರಭಾರೀ ದೊರೆಯೆ ನೀವು ನನ್ನ ಮನ್ನಸರಿ
ಈ ತೇರು ಎಳಿಯುವದುದು ತರವಲ್ಲ ತಂದೇ
ಎಡಕೆ ಅಪಸಕುನಾವು ಬಲಕೆ ಅಪಸಕುನಾ
ಹಿಂದೆ ಅಪಸಕುನಾವು ಮುಂದೆ ಅಪಸಕುನಾ
ಎಂಟು ಮೂಲಿಗಳಲ್ಲಿ ಎಂಟು ಅಪಸಕುನಾ
ಹಿಂಗೆ ಅಪಸಕುನವೆಂಬುದು ಆವರಿಸಿದ ಈ ತೇರನ್ನ ಎಳಿಯುವುದು ತರವಲ್ಲ ತಂದೇ ಅಂತ ನುಡದ ಶಾಸ್ತ್ರದ ಅಯ್ಯನವರನ್ನ ಕಾರಭಾರಿ ಎಂಬ ತ್ರಿಂಬಕ ಭಟ್ಟ ಬೈಯ್ಯುತಾರೆ
ಆಹಾಣಿ…
ಶಾಸ್ತ್ರದ ಅಯ್ಯನವರನ್ನ ಬೈದು ಕಳಿಸಿ – ಕಾರಭಾರಿಯೆಂಬವರೂ ಇತ್ತ ದೇಸಾಯರ ವಾಡೇಕ್ಕ ಬರುತಾರೆ
ಹರ ನನ್ನ ಮಾದೇವೈ ||
ದೇಸಾಯರ ವಾಡೇಕ್ಕ ಬಂದು ದೇಸಾಯರಿಗೆ ಹೇಳುತಾರೇ –
ಚೈತ್ರ ಶುಕ್ಲದ ತ್ರಯೋದಶಿಯ ದಿನವೊ
ಅಕ್ಷಯ್ಯ ತದಗೀಯ ಸುಮುಹೂರ್ತದಾಗೆ
ಸ್ವಾಮೀಯ ತೇರೂ ಎಳಿಯೂವದಯ್ಯಾ
ಶಿವ ಶಿವ ಮಾದೇವೈ ||
ಆಹಾಣಿ…ಕಾರಭಾರಿಯೆಂಬೋರು ಶುಕ್ಲ ತದಗಿಯ ಮುಹೂರ್ತದಾಗೆ ತೇರನ್ನ ಎಳಿಯೂದಕ್ಕ ದೊರಿಯ ಅಪ್ಪಣೀ ಪಡದು …ಆಹಾಣಿ…
ಊರೂರಿಗೆ ಸುದ್ದೀಯ ಕಳಿಸ್ಯಾರು ಕಾಣಿ
ಡಂಗೂರ ಹೊಡಿಸ್ಯಾರು ದೇಸಗತಿ ತುಂಬ
ಅಕ್ಕ ತಂಗಿಯದರನ್ನ ಕರಿಯ ಕಳುಹ್ಯಾರೊ
ಬೀಗಾರು ಬಿಜ್ಜರಿಗೆ ಹೇಳಿ ಕಳುಹ್ಯಾರೊ
ನೆಂಟಾರು ಇಷ್ಟಾರು ಬಂಧು ಬಳಗಾವೊ
ಎಂಟು ದಿಕ್ಕೀನಿಂದ ಭಕ್ತ ಕೋಟೀಯೊ
ಬಂಡೀಯ ಕಟಿಗೊಂಡು ಬಂದು ಸೇರ್‍ಯಾರೊ
ಸ್ವಾಮೀಯ ತೇರಾನು ನೋಡ ಬಂದಾರೊ
ಧರಮನಟ್ಟಿಯ ಸಿಂಗಾರ ಕಾಣಬಂದಾರೊ ||
ಹರ ನನ್ನ ಮಾದೇವೈ ||
ಆಹಾಣಿ…
ಚೈತ್ರ ಬಹುಳ ತದಗಿಯ ದಿವಸ ಸ್ವಾಮೀಯ ಗುಡಿಯ ಅಂಗಳದಾಗೆ ನಿಂತ ತೇರಿನ ಸುತ್ತ ದೇಸಗತಿಯ ಭಕುತ ಜನರೆಂಬೋರು ನೆರದು ಉಧೋ ಉಧೋ ಅನ್ನುತಾರೆ
ಶಿವ ನನ್ನ ಮಾದೇವೈ ||
ಇಟ್ಠಲ ಸ್ವಾಮೀಗೆ ಚಾಂಗ ಬೋಲೋ ಚಾಂಗ ಬೋಲೋ ಅಂತ ಮೈ ಮರತು ಕೂಗೂತಾರೆ…ಆಹಾಣಿ…
ಹರ ನನ್ನ ಮಾದೇವೈ||
ಆಹಾಣಿ…
ಆಗ ಅರಬ್ಬೀ ಕುದರಿಯನ್ನ ಹತಿಗೊಂಡು ಮೆರವಣಿಗಿಯಿಂದ ಪಟವರ್ಧನ ದೊರಿಯಾದರೂ ಬರುತಾನೆ
ಶಿವ ನನ್ನ ಮಾದೇವೈ ||
ಪಟವರ್ಧನ ದೊರಿಯ ಮಾರಾಣಿ ಲೀಲಾವತಿಯಾದರೂ ಮೇಣೆಯೊಳಗ ಕುಂತು ಪರಿವಾರ ಕಟಿಗೊಂಡು ಅಲ್ಲಿಗೆ ಬರುತಾಳೆ
ಆಹಾಣಿ…
ದೇಸಾಯರು ಲೀಲಾವತಿ ರಾಣಿಯನ್ನ ಜೊತೆಗೊಂಡು ಸ್ವಾಮಿಯ ಗರ್ಭ ಗುಡಿಯೊಳಗ ಹೋಗಿ ಸ್ವಾಮೀಯ ಪಾದಕ್ಕ ಶರಣು ಮಾಡತಾರೆ
ಆಹಾಣಿ…
ಸ್ವಾಮಿಯ ಪಾದಕ್ಕ ಶರಣು ಮಾಡಿ ಪೂಜಾ ಅಂಬುವದ ಮಾಡಿಸಿ ಮಂಗಳಾರತಿಯ ಮಾಡಸುತಾರೇ…
ಶಿವ ನನ್ನ ಮಾದೇವೈ ||
ಪೂಜಾ ಅಂಬುವದ ಮಾಡಿಸಿ ಮಂಗಳಾರತಿಯನಾದರೂ ಮಾಡುಸಿ ಪಟವರ್ಧನ ದೊರಿ ರಾಣಿ ಸಹಿತಾಗಿ ವಿಟ್ಠಲ ಸ್ವಾಮಿಯ ಚರ ಮೂರ್ತಿಯನ್ನ ಹೊತ್ತು ತರುವ ಪೂಜಾರಿಯನ್ನ ಬಲಗೊಂಡು ಗರ್ಭ ಗುಡಿಯಿಂದ ಹೊರಗೆ ಬರುತಾರೆ
ಆಹಾಣಿ..
ಆಗ ವಿಟ್ಠಲ ಸ್ವಾಮಿಯನ್ನ ಸಿಂಗಾರದಿಂದ ತೇರಿನ್ಯಾಗ ಇಡುತಾರೆ
ವಿಟ್ಠಲ ಸ್ವಾಮಿಯನ್ನ ಸಿಂಗಾರದಿಂದ ತೇರಿನ್ಯಾಗ ಇಟ್ಟು ಪಟವರ್ಧನ ದೇಸಾಯರು ಮತ್ತ ರಾಣೀ ಸಾಹೇಬರು ಸ್ವಾಮಿಯ ರಥಕ್ಕ ಪೂಜೀಯ ಮಾಡುತಾರೆ
ಪೂಜೀಯ ಮಾಡಿ ಆರುತಿಯಾ ಎತ್ತುತಾರೈ ||
ಆರುತಿಯ ಬೆಳಗಿ ಪ್ರದಕ್ಷಿಣಾ ಹಾಕುತಾರೈ ||
ಶಿವ ನನ್ನ ಮಾದೇವೈ ||

ಪ್ರದಕ್ಷಿಣಾ ಹಾಕುತಾ ಜಯ ಜಯ ವಿಟ್ಠಲ ರುಕುಮಾಯೀ ವಿಠ್ಠಲ ಅಂತ ಘೋಷಾವ ಮಾಡೂತಾರೇ ಆಹಾಣಿ…
ನೆರದ ಮಂದಿ ಎಲ್ಲಾ ಚಾಂಗ ಬೋಲೊ ಚಾಂಗ ಬೋಲೊ ಅಂತ ಉಧೋ ಉಧೋ ಅಂತ ಘೋಷಾವ ಮಾಡುತಾರೇ
ಆಹಾಣಿ…
ಪ್ರದಕ್ಷಿಣಾ ಹಾಕಿ ಸ್ವಾಮಿಗೆ ಜಯ ಜಯ ಅಂತ ಘೋಷ ಮಾಡಿ ಪಟವರ್ಧನ ದೇಸಾಯರು ಮತ್ತ ಲೀಲಾವತಿ ರಾಣಿ ಸ್ವಾಮಿಯ ರಥಕ್ಕ ಸಾಷ್ಟಾಂಗ ನಮಸ್ಕಾರ ಮಾಡುತಾರೆ
ಆಹಾಣಿ..
ಸ್ವಾಮಿಯ ರಥಕ್ಕ ಸಾಷ್ಟಾಂಗ ನಮಸ್ಕಾರ ಮಾಡಿ ಭಕುತಿಯಿಂದ ಸ್ವಾಮಿಯ ರಥದ ಹಗ್ಗವನ್ನಾದರೂ ಕೈಯಿಂದ ಮುಟ್ಟುತಾರೇ
ಆಹಾಣಿ…
ಸ್ವಾಮಿಯ ರಥದ ಹಗ್ಗವನ್ನಾದರೂ ಕೈಯಿಂದ ಮುಟ್ಟಿ ಅಲ್ಲಿ ನೆರೆದಂಥಾ ಭಕ್ತರು ಸ್ವಾಮಿಯ ತೇರನ್ನ ಎಳಿಯಲೀ ಅಂತ ಹಿಂದಾಕೆ ಸರಿಯುತಾರೆ
ಆಹಾಣಿ…
ಅಲ್ಲಿ ಲಕ್ಷ ಲಕ್ಷ ಭಕುತ ಮಂದೀಗೆ ಸಾಕಾಗುವ ಹಂಗೆ ಫರ್ಲಾಂಗುಗಟ್ಟಲೇ ಉದ್ದಾನುದ್ದ ತೇರಿನ ಹಗ್ಗ ಇದ್ದೂ …
ಆಹಾಣಿ…
ಸ್ವಾಮೀಯ ತೇರು ಎಳದು ಸೇವಾ ಮಾಡಬೇಕನ್ನೋ ಮಂದಿ ಯಂಬುವದು ನಾ ಮುಂದು ತಾ ಮುಂದು ಅಂತ ನುಗ್ಗಿ ಬಂದೂ
ಚಾಂಗ ಬೋಲೊ ಚಾಂಗ ಬೋಲೋ ಅಂತ ಘೋಷಾವ ಮಾಡಿ ತೇರಿನ ಹಗ್ಗವನ್ನ ಎಳಿಯೂತಾರೇ
ಹರ ನನ್ನ ಮಾದೇವೈ||
ಆಹಾಣಿ…
ಸ್ವಾಮಿಯ ಮಹಿಮೆ ಏನೆಂಬುವದು ಯಾರಿಗೆ ತಿಳದೀತು !
ಭೋರೆಂಬ ಜನಸಾಗರವೆಲ್ಲಾ ಕಾಲು ಊರಿ ಕಸುವು ಹಾಕಿ ಉಸರು ಬಿಗಿ ಹಿಡಿದು ಸ್ವಾಮಿಯ ಆ ರಥವನ್ನಾದರೂ ಎಳದಾರೇ
ಆಹಾಣಿ…
ಭೋರೆಂಬುವ ಸಾಗರದ ಹಂಗೆ ಇದ್ದ ಅಷ್ಟು ಮಂದಿ ಮಂದಾರ ಅಂಬುವ ಪರ್ವತಕ್ಕೆ ಹಗ್ಗವನ್ನ ಕಟ್ಟಿ ಎಳದಿದ್ದರೇ ಅದಾದರೂ ಮುಂದಕ ಸರಿಯತಿತ್ತೋ ಏನೊ…ಆಹಾಣಿ…
ಆದರೆ ಇಲ್ಲಿ ಈ ಭೋರೆಂಬ ಜನಸಾಗರವೆಲ್ಲಾ ಕಾಲು ಊರಿ ಕಸುವು ಹಾಕಿ ಉಸರು
ಬಿಗಿ ಹಿಡಿದು ಸ್ವಾಮಿಯ ಆ ರಥವನ್ನಾದರೂ ಎಳದರೇ
ಸ್ವಾಮೀಯ ತೇರು ಜಪ್ಪಂತ ಅನಲಿಲ್ಲ …ಆ ತೇರಿನ ಗಾಲಿಯಂಬೋವು ನಾಕು ಬಟ್ಟಿನಷ್ಟಾದರೂ ಮುಂದಕ ಸರದು ಬರಲಿಲ್ಲಾ…ಆಹಾಣಿ…
ಶಿವ ನನ್ನ ಮಾದೇವೈ ||
ಆಗ ಕಾರಭಾರಿ ತ್ರಿಂಬಕ ಭಟ್ಟರು ದೇಸಾಯರನ ಏಕಾಂತಕ ಕರಕೊಂಡು ಹೋಗುತಾರೇ
ಆಹಾಣಿ…
ಏಕಾಂತಕ ಕರಕೊಂಡು ಹೋಗಿ ಶಾಸ್ತ್ರದ ಅಯ್ಯನವರು ಹೇಳಿದ ಶಾಸ್ತ್ರವನ್ನಾದರೂ ನುಡದು ಹೇಳುತಾರೇ
ಆಹಾಣಿ…
ಮಂತ್ರಿ ಅಂಬೋನು ಹೇಳಿದ್ದು ಕೇಳಿ ದೇಸಾಯರ ಹರಣ ತಲ್ಲಣಿಸುತಾದೆ…
ಮುಂದೇನು ಮಾಡೂದೋ ಮಂತ್ರೀ ಅಂತ –
ಆಹಾಣಿ…ಸ್ವಾಮಿಯ ತೇರು ಎಳಿಯದಿದ್ದರ ಈ ದೇಸಗತಿ ಉಳದೀತು ಹೆಂಗೋ ಮಂತ್ರೀ ಅಂತ ಹಲುಬಿ ಹಂಬಲಿಸುತಾರೇ
ಆಗ ತ್ರಿಂಬಕ ಭಟ್ಟ ಮನದಾಗೇ ವಿಚಾರ ಮಾಡಿ ಡಂಣಾಯಕಗ ಹೇಳಿ ಕಳುಹತಾನೆ
ಆಹಾಣಿ…
ಯಾರಲ್ಲಿ ಬಾರಪ್ಪ ಬ್ಯಾಗ ಬನ್ನೀರೊ
ಬ್ಯಾಗಾನೆ ಡಂಣಾಯಕನ ಕರದು ತನ್ನೀರೊ
ಹರ ನನ್ನ ಮಾದೇವೈ ||
ಹೇಳಿ ಕಳುಹಿದ ಕೂಡಲೇ ಓಡಿ ಬಂದ ಡಂಣಾಯಕ ದೇಸಾಯರಿಗೆ ಮುಜರೀ ಮಾಡುತಾನೆ
ಆಹಾಣಿ…
ಮುಜರೀ ಮಾಡಿ ಕರಸೀದ ಕಾರಣಾದರೂ ಏನಂತ ಕೇಳುತಾನೆ
ಹರ ನನ್ನ ಮಾದೇವೈ||
ಆಹಾಣಿ…ಆಗ ತ್ರಿಂಬಕ ಭಟ್ಟ ನುಡಿಯುತಾನೇ
ಚನ್ನ ಡಂಣಾಯಕ ನೀನು ಶೂರ ಡಂಣಾಯಕನೊ
ಪಾಗಾದಾಗಿನ ಕುದರೀ ಬ್ಯಾಗಾನೆ ತರಿಸೊ
ಕುದರಿ ಎತ್ತುಗಳನಾ ಕಟ್ಟಿ ತೇರನ್ನ ಎಳಸೋ
ಶಿವ ನನ್ನ ಮಾದೇವೈ||
ಆಹಾಣಿ…ಡಂಣಾಯಕನಾದರೂ ಪಾಗಾದಾಗಿನ ಆರು ನೂರು ಕುದರಿಗಳನ್ನ ತರಸುತಾನೆ
ಆರು ನೂರು ಎತ್ತುಗಳನ್ನಾದರೂ ಕೂಡಿ ಹಾಕಿ ತರಸುತಾನೆ

ಆಹಾಣಿ…
ಆರು ನೂರು ಕುದರೀ ಆರು ನೂರು ಎತ್ತುಗಳನ್ನಾದರೂ ತರಿಸಿ
ಅವುಗಳನ್ನ ಸೂರ್ಯಾ ಚಂದ್ರಾಮ ಚಿಕ್ಕಿಗಳನ್ನ ಕೆತ್ತಿದ ಸ್ವಾಮಿಯ ತೇರಿನ ಅಚ್ಚಿಗೆ ಹೂಡಿ ಹೊಡೆಯುತಾನೇ
ಆಹಾ…
ಆರು ನೂರು ಕುದರಿ ಎತ್ತುಗಳಾದರೂ ಮುಂಗಾಲುಗಳ ಮ್ಯಾಲೆ ಭಾರಾ ಹಾಕೀ
ಆ ತೇರೆಂಬುವ ಸ್ವಾಮಿಯ ರಥವನ್ನ ಎಳಿಯಲಿಕ್ಕೆ ತಿಣಿಕ್ಯಾಡಿ ತಿಣಿಕ್ಯಾಡಿ
ವಸ್ ವಸ್ ಅಂತ ತೇಕತಾವೇ…ಆಹಾಣಿ…
ವಸ್ ವಸ್ ಅಂತ ತೇಕಿ ಮುಂಗಾಲು ಮಡಿಚಿಕೊಂಡು ಮುಂದಕ್ಕ ಬೀಳುತಾವೇ
ಹರ ನನ್ನ ಮಾದೇವೈ ||
ಅಷ್ಟಾದರೂ ಸ್ವಾಮಿಯ ರಥವಂಬುವುದು ನಾಕು ಬೆರಳಿನಷ್ಟಾದರೂ ಮುಂದಕ ಸರಿಯಲಿಲ್ಲವಲ್ಲಾ ತಂದೇ
ಶಿವ ನನ್ನ ಮಾದೇವೈ||
ಆಗ ಡಂಣಾಯಕನ ಮಕದ ಮ್ಯಾಲ ಬೆವರನ್ನುವದು ಹರಿಯತೈತಿ
ಆಹಾಣಿ…ಬೆವರು ಹರಿಯೂವ ಮಕವ ಹೊತ್ತು ಡಂಣಾಯಕನಾದರೂ ಪಟವರ್ಧನ ದೊರಿಯ ವಾಡೇಕ್ಕ ಓಡಿ ಬಂದೂ –
ಆಹಾಣಿ…
ದೇಸಾಯರ ವಾಡೇಕ್ಕಾದರೂ ಓಡಿ ಬಂದು ದೇಸಾಯರಿಗೆ ಸ್ವಾಮೀ ನನ್ನ ಮನ್ನಸಬೇಕು…
ಆ ಸ್ವಾಮಿಯ ಸಕುನವಾದರೂ ಏನಿದ್ದೀತು ಅಂಬುದು ಕೇವಲ ನರಮನುಸನಾದ ನನಗೇನೂ ತಿಳೀದು ಸ್ವಾಮೀ ಅಂತಂಬುವ ಡಂಣಾಯಕನ ಸೊಲ್ಲು ಕೇಳಿ ದೇಸಾಯರ ಎದಿಯಾದರೂ ಝಲ್ಲನ್ನುತಾದೆ…ಆಹಾಣಿ…
ದೇಸಾಯರ ಎದಿಯಾದರೂ ಝಲ್ಲಂದು ಕಾರಭಾರಿ ಭಟ್ಟನ ಹೊಟ್ಟೀ ಕರಳಿನ್ಯಾಗ ಗೊಳ್ ಗೊಳ್…ಅಂತ ಸದ್ದು ಹುಟ್ಟಿ ಅಂವ ಗದಗದಾ ಅಂತ ನಡಗುತಾನೇ…
ದೇಸಾಯರು ತಮ್ಮ ಆಸನಾ ಬಿಟ್ಟು ಎದ್ದು ನೆಟ್ಟಗೇ ಗುಡಿಗೆ ಹೊಂಡುತಾರೆ…ಕಾರಭಾರಿ ಅವರ ಹಿಂದಿಂದ ಹಿಂದಿಂದಣಿ ಓಡಿ ಓಡಿ …ಇಬ್ಬರೂ ಗುಡಿಯ ಮುಟ್ಟುತಾರೆ… ಗುಡಿಯೊಳಗ ಹೊಕ್ಕು ಗರ್ಭ ಗುಡಿಯೊಳಗೆ ಸ್ವಾಮಿಯ ಪಾದದ ಮುಂದೆ ಕುಂಡರತಾರೇ…
ಆಹಾಣಿ…
ಗರ್ಭಗುಡಿಯೊಳಗ ಸ್ವಾಮಿಯ ಪಾದದ ಮುಂದ ಕುಂತಾದಮ್ಯಾಲೆ ಕಾರಭಾರಿಗಳು ಪೂಜಾರಿಗೆ ಅಂತಾರೆ –
ಏನಪ್ಪ ಪೂಜಾರೀಣಿ… ನಿನ್ನ ಸ್ವಾಮಿಯ ಮನಸಿನ್ಯಾಗಾದರೂ ಏನೈತಿ ?
ಎರಡೂ -ನಾಕು ಮಜಲಿನ ಹೊನ್ನ ಕಳಸದ ತೇರು ಮುಂದಕ ನಡೀಬೇಕಂದರ ಏನ ಮಾಡಬೇಕಂತ ನಿನ್ನ ಸ್ವಾಮಿಯನ್ನಾದರೂ ಕೇಳು…
ಪೂಜಾರಿ ಅಂದರ ಬರೇ ಪೂಜಾದ ದಕ್ಷಿಣಾ ಎತ್ತೂದೂ ಭಕ್ತ ಮಂದಿ ತಂದುಕೊಟ್ಟ ಎಡೀ ಅಂಬುವದನ್ನ ತಿನ್ನೋದು ಅಷ್ಟಣಿ ಅಲ್ಲ…
ಆಹಾಣಿ…
ಪೂಜಾರಿ ಅಂದರ ದೇವರನ ಮಾತಾಡಸಬೇಕು…ದೇವರನ ಮಾತಾಡಿಸಿ ಅವನ ಮನಸಿನ್ಯಾಗ ಏನೈತೀ ಅಂತ –
ತೇರಂಬುವದು ಮುಂದಕ ನಡೀಬೇಕಾದರ ಏನು ಮಾಡಬೇಕಂತ ತಿಳದ ಹೇಳಬೇಕಪಾ ಪೂಜಾರೀ ಅಂತ ಅನ್ನುತಾರೆ
ಪೂಜಾರಿಗೆ ಬುಗಲು ಆತು …
ಕಾರಭಾರಿ ಅಂಬುವವ ಇಷ್ಟ ಮಾತು ನುಡದ ಕೂಡಲೇ ದೇಸಾಯರು ಸ್ವಾಮಿಯ ಪಾದಕ್ಕ ಶರಣುಮಾಡಿ ಗರ್ಭಗುಡಿಯಿಂದ ಹೊರಗೆ ನಡಿಯುತಾರೆ…
ಗುಡಿಯಿಂದ ಹೊರಬಿದ್ದ ಕಾರಭಾರಿ ತೇರಿಗೆ ಸೇರಿದ ಮಂದಿಗೆ ಏನು ಹೇಳತಾನಂದರೆ-
ತದಗೀಯ ಮೂರ್ತವು ಓಮು ಬರಲಿಲ್ಲಾ
ಮುಂದ ಒದಗುವ ಮೂರ್ತ ತಿಳದು ಹೇಳೇವೊ
ಶಿವ ನನ್ನ ಮಾದೇವೈ ||
ತೇರು ಎಳಿಯೂದಕ್ಕ ನೆರದ ಮಂದಿ ಕಾರಭಾರಿಯ ನುಡಿ ಕೇಳಿ ಅವರು ಮೂಕರಾಗಿ ನಿಂತಾರಲ್ಲೊ ಶಿವನೇ !
ಆಹಾಣಿ…
ಸ್ವಾಮಿಯ ತೇರು ಎಳಿಯಲಿಕ್ಕೆ ಬಂದರೆ ತೇರು ಎಳಿಯದೇ ಅಪಸಕುನ ಹೊತ್ತು ಊರು ಸೇರುವುದು ಹೆಂಗೋ ತಂದೇ ಅಂತ ಅಲ್ಲಿ ಸೇರಿದ ಮಂದಿ ದುಕ್ಕವ ಮಾಡುತಾರೆ… ದುಕ್ಕವ ಮಾಡಿ ಆಕಾಸದ ಕಡೆ ನೋಡಿ – ಕೈಮುಗದು…
ಹೋಗುವ ಮಂದಿ ಹೋಗಿ…ಉಳದ ಮಂದಿ ಅಲ್ಲಲ್ಲೇ ಗುಂಪು ಗುಂಪಾಗಿ ಕುಂಡರತಾರೇ
ಆಹಾಣಿ…
ನೆರದ ಮಂದಿಗೆ ಹೇಳುವ ಮಾತು ಹೇಳಿ ಕಾರಭಾರಿಗಳು ಮುಂದ ಮುಂದ ಹೋಗತಿದ್ದಂಥಾ ದೇಸಾಯರ ಹಿಂದ ಹಿಂದ ಓಡುತಾರೆ
ಆಹಾಣಿ…
ದೇಸಾಯರು ತಮ್ಮ ವಾಡೇ ಹೊಕ್ಕು ದರ್ಬಾರದ ತಮ್ಮ ಪೀಠದ ಮ್ಯಾಗ ಧಪ್ಪಂತ ಕುಸದು ಕುಂತು ಉಸರುಗರಿಯತಾರೆ…

ಆಹಾಣಿ…ಉಸರುಗರಿಯುವ ದೇಸಾಯರಿಗೆ ಕಾರಭಾರಿ ಅಂತಾರೆ –
ದೊರಿಗಳು ಹಂಗ ಉಸರುಗರೀಬಾರದು…ದೊರಿಗಳು ಉಸರುಗರದರೆ ನಾಡಿಗೆ ಒಳ್ಳೇದಲ್ಲ
ಹರ ನನ್ನ ಮಾದೇವೈ ||
ದೇಸಾಯರು ‘ಉಸರುಗರಿಯುವದು ಹಾಳಾಗಲೀ…ಈಗ ಇದಕ್ಕ ಏನ ಹಾದೀ ಹುಡಕತೀ ಹೇಳೂ…’ ಅಂತಾರೆ.
ಆಗ ಕಾರಭಾರಿ ಹೊರಗ ಹೋಗಿ ಹಳಬ ಅನ್ನವನನ್ನ್ನ ಕರದು ಶಾಸ್ತ್ರದ ಅಯ್ಯನವರನ್ನಾದರೂ ಕರಕೊಂಡ ಬಾರಪಾ ಹಳಬಾ ಅಂತ ಹೇಳಿ ಕಳಹುತಾರೆ…
ಹಾಂ ಅನ್ನುವದರೊಳಗೆ ಶಾಸ್ತ್ರದ ಅಯ್ಯ ದೇಸಾಯರ ವಾಡೇಕ್ಕ ಓಡಿಬಂದು
ದೇಸಾಯರಿಗೆ ಮುಜರೀ ಮಾಡಿ
ಕಾರಭಾರಿಗಳ ಕಡೆ ನೋಡಿ ‘ನಾ ಮದಲಣಿ ಹೇಳಿದ್ದಿನಲ್ಲರೀ ’ ಅಂತ ಹೇಳಲಿಕ್ಕೆ ಹೊಂಟ ಅವನ ಬಾಯಿಯನ್ನ ಮುಚ್ಚಿಸಿ –
ಆಹಾಣಿ…
ಅವನ ಬಾಯಿಯನ್ನಾದರೂ ಮುಚ್ಚಿಸಿ ‘ನಿನ್ನ ಅಪಸಕುನದ ಸುದ್ದೀ ಹೇಳಿ ಆತಲಾ…ಈಗ ಆ ಅಪಸಕುನಾ ತಗದು ಶುಭ ಸಕುನ ಸಿಗೂ ಹಾದೀ ತಿಳದ ಹೇಳು ’ ಅಂತ ಕಾರಭಾರಿ ಬಿರುನುಡಿಯ ನುಡಿಯುತಾರೇ
ಆಹಾಣಿ…
ಕಾರಭಾರಿಯ ಮಾತು ಕೇಳತಿದ್ದಂಗೇ ಶಾಸ್ತ್ರದ ಅಯ್ಯನವರು ಅಲ್ಲೇ ಒಂದು ಮಂಚದ ಮ್ಯಾಲೆ ಕುಂತು ತಮ್ಮ ಹೊತಿಗಿಯ ಗಂಟು ಬಿಚ್ಚತಾರೆ
ಹೊತಿಗಿಯ ಗಂಟು ಬಿಚ್ಚಿ ಪ್ರಶ್ನೆ ಕುಂಡಲೀ ಹಾಕೀ –
ಗುಣಿಸಿ ಭಾಗಿಸೀ ಲೆಕ್ಕಾ ಹಾಕಿ ನೋಡತಾರೆ …
ಆಹಾಣಿ…
ಲೆಕ್ಕಾ ಹಾಕಿ ನೋಡಿ ಕವಡೀ ಎಸದು ಸರೀ – ಬೆಸವ ನೋಡುತಾರೆ
ಸರಿ ಬೆಸವ ನೋಡಿ ಮತ್ತ ಹೊತಿಗೀಯ ನೋಡಿ ಸಕುನವ ಓದುತಾರೆ
ಆಹಾ…
ಹತ್ತು ನಮೂನಿಯ ಲೆಕ್ಕಾ ಹಾಕಿ ಅಳದೂ ಸುರದೂ -ಸುರದೂ ಅಳದೂ ಆ ಶಾಸ್ತ್ರದ ಅಯ್ಯನವರು ಹೇಳತಾರೇ –
ಶಾಸ್ತ್ರ ನುಡಿಯುವದನ್ನ ನುಡದೇನು ದೊರಿಯೆ
ನರಮನುಸ ನಾನು ನನಗೇನು ತಿಳಿಯಾದು
ಹರ ನನ್ನ ಮಾದೇವೈ ||
ಆಹಾ…
ನಾನಾದರೂ ಪಾಮರನು…ನಾನೆಂಬ ನಾನು ಏನೂ ಅರಿಯದ ಮೂಢನು… ದೊರಿಯೇ ಶಾಸ್ತ್ರ ಏನು ಹೇಳುತದೆಯೋ ಅದನಷ್ಟೇ ನಿಮಗೆ ಹೇಳೇನು ಅಂತಂದು ಆ ಶಾಸ್ತ್ರದ ಅಯ್ಯನಾದರೂ ಹಿಂಗ ನುಡದಾನೆ –
ಹಿಂಡಿ ಹಾಕದ ಆಕಾಳು ಹಿಂಡೀತು ಹೆಂಗೊ
ಕಾಳು ಹಾಕದೆ ಕುದರಿ ಓಡೀತು ಹೆಂಗೊ
ನರಮನುಸ ಕಟ್ಟಿಸಿದ ತೇರು ನಿನ್ನಾದೂ
ನನಗೇನು ಕೊಟ್ಟೀಯೊ ಮುಂದೆ ನಡಸಾಕೆ
ನರಮನಸನ್ಹೊರತು ನನಗೆ ಮತ್ತೇನು ಬ್ಯಾಡೊ

ಆಹ್ಹಾಣಿ…!

ಶಾಸ್ತ್ರದ ಅಯ್ಯನವರ ಮಾತು ಕೇಳಿದ ಕಾರಭಾರಿ ನುಡೀತಾನೆ –
ಏನು ಮಾಡಂತೀಯೊ ಖಂಬೀರ ದೊರಿಯೆ
ನರಮನುಸ ಬಲಿಯು ಬೇಕಂತ ತೇರೀಗೆ
ಮನುಸ ಕಟ್ಟಿದ ತೇರೀಗೆ ಮನುಸಾಣಿನೆ ಬಲಿಯೊ
ಏನು ಮಾಡಂತೀಯೊ ಖಂಬೀರ ದೊರಿಯೇ
ಶಿವ ನನ್ನ ಮಾದೇವೈ ||
ಬಲೀ ಬೇಡತೈತಿ ಅಂತನ್ನುವ ಮಾತು ಕೇಳತಿದ್ದಂಗೇ ದೇಸಾಯರು ಅಂತಾರೆ –
ವಾಡೇದೊಳಗಿರುವವರು ನಾವು ಇಬ್ಬಾರೇ
ನಾವೇ ಇಲ್ಲದಿರಕ ದೇಸಗತಿಯ ಗತಿ ಹೆಂಗ?
ಹರ ಹರ ಮಾದೇವೈ ||
ಆಹಾಣಿ…
ಆಗ ಕಾರಭಾರಿ ಅನ್ನುತಾರೇ –
ದೊರಿಯೆ ನಿನ್ನ ಮಾತು ಸರಿಯಯ್ಯ ತಂದೆ
ದೇಸಗತಿ ನಡೆಸಾಲು ನಾನೂನು ಬೇಕೂ
ದೇಸಾಯರೂ ಮತ್ತ ಕಾರಭಾರಿಗಳು ಹಿಂಗ ನುಡದಾಗ ಅಂಜಿದ ಡಂಣಾಯಕನಾದರೂ ಹಿಂಗ ನುಡಿಯತಾನೆ –
ಹೌದು ಬರಾಬ್ಬರೀ ನೀವು ಬಲಿಯಲ್ಲಾ ಣಿ
ನನ್ನ ಮನಿಯಾಗೂನೂ ಯಾರೂ ಬಲಿಯಲ್ಲ
ಆಹಾಣಿ…
ದೇಸಾಯರು ಕಾರಬಾರಿ ಮತ್ತ ಡಂಣಾಯಕ ಇವರು ಮತ್ತು ಇವರ ಕುಟುಂಬದವರು

ಯಾರೂ ಬಲಿ ಆಗುವದಿಲ್ಲ ಅಂತಾದ ಮ್ಯಾಲೇ…ಆಹಾಣಿ…
ಆಗ ದೇಸಾಯರೇ ಶಾಸ್ತ್ರದ ಅಯ್ಯನವರನ್ನ ಕೇಳುತಾರೆ –
ಅಯ್ಯನವರೇ ನೀವೇ ಹೊತಿಗೀ ನೋಡಿ ಯಾರು ಬಲಿ ಅಂಬುವುದನ್ನ ತಿಳದು ಹೇಳರೀ ಅಂತ
ಆ ಶಾಸ್ತ್ರದ ಅಯ್ಯನಾದರೂ ಪ್ರಶ್ನೆ ಕುಂಡಲೀ ಹಾಕಿ -ಗುಣಿಸೀ-ಭಾಗಿಸೀ ನೋಡತಾರೆ
ಕವಡೀಯ ಎಸದು ಸರಿ ಬೆಸವ ನೋಡುತಾರೆ…
ಮತ್ತೆ ಗುಣಿಸೀ ಭಾಗಿಸೀ ಲೆಕ್ಕವ ಮಾಡಿ ಹೊತಿಗಿಯ ತಗದು ಸಕುಣವ ಓದುತಾರೆ… ಆಹಾ…
ಹತ್ತು ನಮೂನಿಯ ಲೆಕ್ಕಾ ಹಾಕಿ ಅಳದೂ ಸುರದೂ – ಸುರದೂ ಅಳದೂ ಶಾಸ್ತ್ರದ ಅಯ್ಯನವರು ಹೇಳುತಾರೇ-
ಶಾಸ್ತ್ರ ನುಡಿಯುವುದನ್ನ ನುಡದೇನು ದೊರಿಯೆ
ನರಮನುಸ ನಾನು ನನಗೇನು ತಿಳಿಯಾಣಿದು
ಹರ ಹರ ಮಾದೇವೈ ||
ಮೊದಲೆರಡು ಮಜಲು ದೈವದ ಮಜಲುಗಳೊ
ಮೂರರಿಂದಾರು ನರಮನುಸಾರ ಮಜಲುಗಳೊ
ಕೆಳಗಿನ ಮಜಲಾಗೆ ಕಾಣೊ ಕಾಟುಕ ಜೀವಗಳು
ಮನುಸಾರನ್ನ ಬಿಟ್ಟು ಸ್ವಾಮಿ ಮತ್ತೇನು ಒಲ್ಲಾನು
ಹರ ಹರ ಮಾದೇವೈ ||
ಶಾಸ್ತ್ರದ ಅಯ್ಯನವರ ನುಡಿಯ ಕೇಳಿ ದೇಸಾಯರು ಕಾರಭಾರಿಗಳ ಮುಖವನ್ನ ನೋಡತಾರೆ…
ಆಗ ಕಾರಭಾರಿಗಳು – ಯಾರಪ್ಪ ಹೊರಗೇ ಅಂತ ಬಾಗಿಲಾಳನ್ನ ಕರದು ತಳವಾರನನ್ನ ಕರದು ತಾಣಿ ಅಂತ ಹೇಳುತಾರೆ…
ಆಹಾಣಿ…
ಓಡೋಡಿ ಬರುತಾನೆ ತಳವಾರ ಮಾದ
ಬಾಗಲ ಹೊರಗೇ ನಿಂತು ಶರಣನ್ನುತಾನೆ
ಏನಯ್ಯ ದೊರಿಯೆ ಹೇಳಿ ಕಳುಹಿದ್ದು
ಶಿವ ನನ್ನ ಮಾದೇವೈ ||
ಆಹಾಣಿ…
ತಳವಾರ ಮಾದ ಓಡಿ ಬಂದು ಬಾಗಲ ಹೊರಗೇ ನಿಂತು ಶರಣು ಮಾಡಿ –
ಏನಪ್ಪಾ ದೊರಿಯೆ ಹೇಳಿ ಕಳುಹಿದಿರೀ ಅಂತ ಕೇಳಿದಾಗ ಎದ್ದು ಹೊರಗೆ ಬಂದ ತ್ರಿಂಬಕ ಭಟ್ಟ ಹೇಳುತಾನೆ –
ಆಹಾಣಿ…
ನಿನ್ನ ಹೇಳಿ ಕಳುಹಿದ್ದು ಯಾಕೇ ಅಂದರೇ-
ಅಪಸಕುನವಾಗಿ ಸ್ವಾಮಿಯ ತೇರು ಎಳಿಯಲಾರದೇ ನಿಂತು ದೇಸಗತಿಗೇ ಕುತ್ತು ಬಂದು ಕುಂತೈತಿ.ಶಾಸ್ತ್ರ ಕೇಳಿದ್ದಕ್ಕ ಶಾಸ್ತ್ರ ಹೇಳುತಾದೇ…
ಸ್ವಾಮೀಗೆ ಬೇಕಂತ ನರಮನುಸ ಬಲಿಯು
ಕಾಟುಕರ ಜಾತೀಯ ಮನುಸಾ ಬೇಕಲ್ಲೋ
ಆಹಾಣಿ…
ಏನಪ್ಪಾ ತಳವಾರಾಣಿ
ಸ್ವಾಮಿಯ ತೇರಿಗೆ ಬಲಿ ಕೊಡಬೇಕಂತ ಶಾಸ್ತ್ರ ಹೇಳುತೈತಿ …ಕಾಟುಕರ ಜಾತಿಯ ಮನುಸಾನ್ನ ಬಲಿ ಕೊಡಬೇಕಂತ ಶಾಸ್ತ್ರ ಹೇಳತೈತೆಲ್ಲಪಾಣಿ ತಳವಾರಾಣಿ
ಅದಕ್ಕೇ ನೀನಾದರೂ ಹೊಲಿ ಹದಿನೆಂಟು ಜಾತಿಗಳಿಗೆ ಸೇರಿದ ಯಾವನಾದರೂ ಒಬ್ಬನನ್ನ ಬಲಿಯಾಗಲಿಕ್ಕೆ ಹಿಡದು ತರಬೇಕಲ್ಲಪಾ ತಳವಾರಾಣಿ…
ಆಹಾಣಿ…
ಆಗ ತಳವಾರ ಮಾದ ಅಂತಾನೆ – ಯಾಕಾಗವಲ್ಲದು ಯಪ್ಪಾಣಿ ದೊರಿಯೆ…
ಪುಣ್ಯೇದ ಕೆಲಸಾ…ಸ್ವಾಮಿಯ ತೇರು ಮುಕ್ಯ…
ನೀವು ಹೇಳಿದಂತಾ ಮನುಸನನ್ನ ನಾನಾದರೂ ಹುಡುಕಿ ತಂದು ಒಪ್ಪಸತೇನರೀ ಯಪ್ಪಾ ಅಂತ ಹೇಳಿ ಶರಣು ಮಾಡಿ ಹೋಗತಾನಲ್ಲಾ ತಳವಾರ ಮಾದಾಣಿ…ಆಹಾಣಿ… ||ಶಿವ ನನ್ನ ಮಾದೇವೈ||
ಇಷ್ಟ ಆಗೂದಕಂದರ ತದಗಿಯ ಮುಹೂರ್ತ ಮೀರಿ ಹೋಗಿರತೈತಿ…
ಸೂರ್ಯಾ ಪರಮಾತಮನಾದರೂ ತನ್ನ ತೇರು ಹೊಡಕೊಂಡು ಪಡೂ ದಿಕ್ಕಿನ ತುದಿಗೆ ಹೋಗುತಾನೆ
ಆಹಾಣಿ…
ಪಡೂ ದಿಕ್ಕಿನ ತುದೀಗೆ ಹೋದ ಸೂರ್ಯೇ ಪರಮಾತಮಾ ತಾಯಿಯ ಮಡಲಿನ್ಯಾಗೆ ಸೇರಿ ಮನಕೊಂಡು ಈ ಭೂಮಿ ಅಂಬುವುದರ ಮ್ಯಾಲೆ ಕತ್ತಲು ಕವಕೊಳ್ಳತೈತಿ
ಆಹಾಣಿ…
ಹಂಗ ಕತ್ತಲು ಕವಕೊಂಡಾಗ
ಊರಿನ ಹೊಲಿ ಹದಿನೆಂಟು ಕಾಟುಕ ಜಾತಿಯ ಮಂದಿಯೊಳಗೆ ಸ್ವಾಮಿಯ ತೇರಿಗೆ ತಮ್ಮವರನ್ನ ಬಲಿ ಕೊಡತಾರನ್ನುವ ಸುದ್ದಿ ಹಬ್ಬೀ…
ಆಹಾಣಿ…
ಸ್ವಾಮಿಯ ತೇರಿಗೆ ತಮ್ಮವರನ್ನ ಬಲಿ ಕೊಡತಾರನ್ನುವ ಸುದ್ದಿ ಗೊತ್ತಾಗಿ
ಅವರು ಕವಕೊಂಡ ಆ ಕತ್ತಲದೊಳಗೆ ಯಾರಿಗೂ ಗೊತ್ತು ಆಗದಂಗೆ

ಜಾತ್ರಿಗೆ ಬಂದವರು ಹೊಳ್ಳಿ ತಮ ತಮ್ಮ ಊರಿಗೆ ಹೊಂಟವರಂಗೆ
ಊರು ಬಿಟ್ಟು ಹೋಗುತಾರೇ
ಆಹಾಣಿ…
ಹರೆವತ್ತು ಎದ್ದು ನೋಡಿದರೆ ಹೊಲಿ ಹದಿನೆಂಟು ಕಾಟುಗರ ಜಾತಿಗಳವರಂಬುವವರು ಒಬ್ಬರೂ ಊರಾಗ ಇಲ್ಲದೇ
ಆಹಾಣಿ…
ಊರಾಗಿನ ಕಸಾ ಅಂಬುವದು ಹಂಗಣಿ ಬಿದ್ದೈತಿ
ಡಣ್ಣಾಯಕ ಯಾಕಂತ ವಿಚಾರಸಲಿಕ್ಕೆ ಅಂತ ಅವರ ಕೇರಿಗೆ ಹೋದರೆ ಅವರ ಮನಿಗಳ ಬಾಗಲಂಬುವವು ಎಲ್ಲಾ ಹಾರುಹೊಡದು
ಅಲ್ಲಿ ಮನಸ್ಯಾರು ಇಲ್ಲದ ಖಾಲೀ ಮನಿಗಳಂಬುವವು ನಿಂತಾವಲ್ಲಾ
ಶಿವ ಶಿವ ಮಾದೇವೈ ||
ತಳವಾರ ಮಾದ ಅಂಬುವವನೂ ಓಡಿ ಹೋಗ್ಯಾನೆ
ಆಹಾ…ಹಳಬರಂಬುವವರೂ ಓಡಿ ಹೋಗ್ಯಾರೆ…
ಆಹಾಣಿ…
ಅತ್ತ ಇತ್ತ ಹೇಳಿ ಕಳಿಸೀನಂದರ ಹಂಗ ಕಳಸಾಕ ಕೈಯಾಳುಗಳೂ ಇಲ್ಲದಂಗ ಆಗಿ ಕುಂತೈತೆಲ್ಲೊ ಶಿವನೆ
ಹರ ನನ್ನ ಮಾದೇವೈ||
ಆಹಾಣಿ…
ಬೆಳಗಾಗತಿದ್ದಂಗೇ ಗುಲ್ಲು ಗುಲ್ಲಾಯಿತಲ್ಲಾ …
ಎಳೆಯದ ತೇರು ಮುಂದಕ ಇಟಗೊಂಡು –
ಬಂದ ಬೀಗರು ಬಿಜ್ಜರನ್ನ ಕಟಿಗೊಂಡು ಹೊಲಿ ಹದಿನೆಂಟು ಜಾತಿಗಳ ಜನರೆಂಬುವವರು ಊರು ಬಿಟ್ಟು ಓಡಿ ಹೋಗ್ಯಾರಂತೇ …ಆಹಾಣಿ
ಹೌದೇ…
ಹಾಂ…ಹೌದಂತೆ…
ಅರೇ ಯಾಕಂತೇ…
ಹಿಂಗೆ ಅಂತೆ ಅಂತೇ ಅಂತ ಧರಮನಟ್ಟಿಯೊಳಗ ನಾನಾ ನಮೂನಿಯ ಕಂತೇ ಪುರಾಣಗಳು ಹಬ್ಬುತಾವೇ…ಆಹಾಣಿ…
ನಸುಕು ಹರಿಯತಿದ್ದಂಗೇ ದೇಸಾಯರಿಗೆ ಸುದ್ದಿ ತಿಳದು ಕಾರಭಾರಿಗೆ ಹೇಳಿ ಕಳುಹುತಾರೆ
ಓಡೋಡಿ ಬಂದ ಕಾರಭಾರಿಗೆ ದೇಸಾಯರು ಹಿಂಗೆ ಹೇಳುತಾರೆ –
ಹರ ಹರ ಮಾದೇವೈ ||
ಏನಪ್ಪಾ ಮಂತ್ರಿಯಯ್ಯ…ನಿನ್ನ ನಂಬಿ ನಾನಾದರೂ ಉದ್ಧಾರ ಆದಂಗ ಆತಲ್ಲಾಣಿ!
ರಾತೋ ರಾತ್ರಿ ಕಾಟುಗರ ಜಾತಿಗಳ ಮಂದಿಯೆಲ್ಲಾ ಊರು ಖಾಲೀ ಮಾಡಿ ಓಡಿ ಹೋಗಿದಾರೇ
ಆಹಾಣಿ…
ತೇರಿಗೆ ಬಲಿ ಅಂಬುವುದು ಹೋಗಲಿ ಹಾದಿ ಬೀದಿಗಳನ್ನ ಗುಡುಸಿ ಸ್ವಚ್ಛ ಮಾಡವರೂ ಇಲ್ಲದಂಗ ಆಗಿ ಕುಂತೈತಿ
ಆಹಾ…
ದೇಸಗತಿಯ ಗತಿ ಇಲ್ಲಿಗೆ ಬಂದು ಕುಂತಿತಲ್ಲೋ ಕಾರಭಾರೀ
ಕಾರಭಾರಿ ತ್ರಿಂಬಕ ಭಟ್ಟರಂಬವರು ಹೇಳತಾರೆ –
ದೇಸಾಯರಂಬುವವರು ನೀವು ನೀವ್ಯಾಕೆ ಚಿಂತೀ ಮಾಡುತೀರಿ…
ಊರಾಗಿನ ಕಾಟುಗರೆಲ್ಲ ಓಡಿ ಹೋದರೆ ಏನಾತು ಈ ಭೂಮಿಯ ಮ್ಯಾಲಿನ ಎಲ್ಲಾ ಕಾಟುಗರು ಜಗತ್ತು ಅಂಬುವುದನ್ನ ಬಿಟ್ಟು ತೊಲಗಿಲ್ಲವಲ್ಲಾ …
ಎಲ್ಲಾ ಯವಸ್ತಾ ಆಗುತೈತಿ…ನೀವು ನಿರುಮ್ಮಳವಾಗಿರ್ರಿ… ಅನ್ನುತಾರೇ
ಆಹಾಣಿ…
ಹಿಂಗ ದೇಸಾಯರಿಗೆ ನಿರುಮ್ಮಳ ಇರ್ರಿ ಅಂತ ಹೇಳಿ ಹೊಳ್ಳಿ ತಮ್ಮ ಮನಿಗೆ ಹೊಂಟ ಕಾರಭಾರಿಗಳು ಹಾದಿಯೊಳಗ ಸಿಕ್ಕ ಯಾರನೋ ಒಬ್ಬರನ ಡಂಣಾಯಕನ ಮನಿಗೆ ಓಡಿಸಿ ಅವನನ್ನ ಅರ್ಜೆಂಟು ಕರೆಕಳುಹತಾರೆ
ಶಿವ ಶಿವ ಮಾದೇವೈ ||
ಡಂಣಾಯಕ ಕಾರಭಾರಿಯ ಮನಿಗೆ ಓಡಿ ಓಡಿ ಬರುತಾನೆ…
ಆಹಾ…
ಓಡಿ ಓಡಿ ಬಂದ ಡಂಣಾಯಕ ಕಾರಭಾರಿಗೆ ಕೈಮುಗದು
ಏನು ಸಂಗತಿರೀ ಅಂತಾ ಕೇಳುತಾನೆ…ಆಹಾ…
ಆಗ ಅಲ್ಲಿ ಕಾರಭಾರಿಗಳು ಕೆಂಡವಾಗಿ ಕುಂತದಾರೇ
ಕೆಂಡವಾಗಿ ಕುಂತ ಕಾರಭಾರಿಗಳು ಅಂತಾರೇ –
ಡಂಣಾಯಕರ ನಿದ್ದಿ ಈಗ ಮುಗೀತು ಏನೊ !
ಆಹಾ…ನಿಮ್ಮಂತ ಡಂಣಾಯಕ ಇದ್ದರ ದೇಸಗತಿ ಉದ್ಧಾರ ಆಗತಾವ ನೋಡರಿ !
ಇಲ್ಲಾ ಸ್ವಾಮೀ…
ತೇರಿಗೆ ಅಂತ ಹೋಳಿಗೀ-ಅದೂ ಇದೂ ಅಂತ ಅಡಿಗೀ ಮಾಡಿದ್ದರು…ರಾತರೀ ಸ್ವಲಪ ಹೆಚ್ಚಿಗೇ ಉಂಡಂಗಾಗಿ ಒಂದೀಟು ಹೆಚ್ಚಿಗೇ ನಿದ್ದಿ ಬಂದಂಗಾತು…ಹಿಂಗಾಗಿ…
ಅಂತ ಡಂಣಾಯಕರು ದೈನಾಸಪಟ್ಟರೆ –
ಆಹಾ…
ಡಂಣಾಯಕನು ಹಿಂಗ ದೈನಾಸಪಡತಿದ್ದರೇ ಕಾರಭಾರಿಗಳು ಅಂತಾರೇ

ನಿಮ್ಮ ಮುಗ್ಗಲಗೇಡಿತನದಿಂದ ಊರಾಗಿನ ಕಾಟುಕ ಜಾತಿಯ ಮಂದಿ ಎಲ್ಲಾ ರಾತೋ ರಾತ್ರಿ ಓಡಿ ಹೋಗ್ಯಾರೆ…ಈಗ ಹಾದಿ ಬೀದಿಗಳ ಕಸಾ ಗುಡಸಸೂ ಯವಸ್ತಾ ಆಗಬೇಕು…
ದೇಸಾಯರ ವಾಡೇಕ್ಕ ಮತ್ತ ನಮ್ಮ ಮನೀ ಹಂತೇಕ ಬಾಗಲಾಳುಗಳ ಯವಸ್ತಾ ಆಗಬೇಕು…
ಇದು ಎಲ್ಲಾದರಕಿಂತಾ ಮುಖ್ಯವಾದದ್ದಂದರ-ಇಂದ ಚೌತಿ
ಇಂದಿಗೆ ಐದ ದಿನದಲೇ ರಾಮನವಮಿ…
ರಾಮನವಮಿಯ ಮೂರ್ತಕ್ಕ ತೇರು ಎಳೀಲಿಕ್ಕೇ ಬೇಕು ಅಂತ ದೇಸಾಯರು ಆe ಮಾಡ್ಯಾರು…
ಅಷ್ಟರೊಳಗಂದರ ನೀವು –
ಹೆಣ್ಣು ಗಂಡಂಬುವ ಭೇದ ಇಲ್ಲ – ಸಣ್ಣವರು ದೊಡ್ಡವರು ಅಂಬುವ ವಯಸ್ಸಿನ ನಿರ್ಬಂಧ ಇಲ್ಲ . ಫಕ್ತ ಉತ್ತುಮರ ಕುಲದವರು ಮಾತ್ರ ಬ್ಯಾಡ –
ಉತ್ತುಮರ ಕುಲದವರನ್ನ ಬಿಟ್ಟು ಯಾವದಾದರೂ ಕಾಟಕರ ಕುಲದ ಒಂದು ಇಸಮನ್ನ ಹಿಡದು ತೇರಿನ ಬಲಿಗೆ ತರಬೇಕು…
ಆಹಾಣಿ…
ಕಾರಭಾರಿಗಳು ಹೇಳತಾರೇ
ದೇಸಾಯರು ಆಡಿದ ಮಾತನ ನಿಮಗ ಹೇಳಾಕತ್ತನು ನೋಡರಿ…
ಅವರು ಹೇಳ್ಯಾರ –
ನಾ ಬರೂಮುಂದ ತಂದ ಕತ್ತಿಗೆ ಹತ್ತಿದ ರಗತ ಒಣಗಿ ಉದರಾಕತ್ತೇತಿ…
ಅದಕ್ಕ ಹಸೀ ರಗತದ ಲೇಪ ಬೇಕು…ಮದಲು ಡಂಣಾಯಕಂದು ಆಗಲೀ
ಆಮ್ಯಾಲ ನಿಮ್ಮ ರಗತದ ರುಚೀ ನನ್ನ ಕತ್ತಿಗೆ ತೋರಸತನು….
ಡಂಣಾಯಕನ ಹುದ್ದೇ ಅಂದರ ಹುಡಗಾಟ ಅಲ್ಲ…ತಿಳಕೋರಿ…ಹೆಂಗ ಮಾಡತೀರೋ ಮಾಡರಿ…ನಾ ಹೇಳಿದ ಎಲ್ಲಾ ಕೆಲಸಗೋಳನೂ ಪೂರೈಸಬೇಕು ನೋಡರಿ
ಅಂತ ತಾಕೀತು ಮಾಡಿ ಕಾರಭಾರಿಗಳು ಡಂಣಾಯಕನ್ನ ಕಳಿಸಿ ಕೊಡುತಾರೇ
ಹರ ಹರ ಮಾದೇವೈ ||
ಕಾರಭಾರಿನ್ನ ಬೈಕೊಂತ ಹಾದೀ ಹಿಡದ ಡಂಣಾಯಕ ಮದಲು ಊರಿನ ಹಾದಿ ಬೀದಿಗಳ ಕಸಕ್ಕ ಮತ್ತ ದೇಸಾಯರ ವಾಡೇ ಮತ್ತ ಈ ಹಾರುವ ಕಾರಭಾರಿಯ ಮನಿಯ ಬಾಗಲಾಳುಗಳಾಗಿ ಕೆಲಸಾ ಮಾಡಲಿಕ್ಕೆ ಫೌಜಿನ ಸಿಪಾಯಿಗಳನ್ನ ಹೊಂದಸಲಿಕ್ಕೆ ಊರ ಹೊರಗಿನ ಗರಡೀ ಮನಿಗೆ ಬಂದು ಅದರ ಯವಸ್ತಾ ಮಾಡತಾನೇ…
ಅದಾದ ಮ್ಯಾಲ ತೇರಿನ ಬಲಿಯ ವಿಚಾರ ಬಂತು…
ಆಹಾ…ಹೆಣ್ಣಾದರೂ ಆಗಲಿ -ಗಂಡಾದರೂ ಆಗಲಿ…ಸಣ್ಣ ಕಂದಮ್ಮನಾದರೂ ಆಗಲಿ
ಹರೇದವನಾದರೂ ಆಗಲಿ ಇಲ್ಲಾ ಗೋರಿಗೆ ಹೊಂಟಿರುವ ಮುದುಕನಾದರೂ ಆಗಲಿ…
ಫಕ್ತ ಉತ್ತುಮ ಕುಲದವರು ಆಗಿರಬಾರದಂತೆ!ಆಹಾ…
ಈ ಜಗತ್ತಿನ್ಯಾಗ ಕಾಟುಗರ ಕುಲಗಳು ನೂರಾ ಎಂಟು ಇರುತಿರಲಾಗಿ-
ಮತ್ತೆ ಕಾಟುಗರ ಜಾತಿಗೆ ಸೇರಿದವರಿಗೆ ಮಕ್ಕಳಂಬುವವು ಮಣಾರ ಇರುತಿರಲಾಗಿ
ಮತ್ತೆ ಅವರಿಗೆ ಬಡತನ ಅಂಬೋದು ಗಳಿಸಿದ ಆಸ್ತಿ ಇದ್ದಂತೆ ಇರುತಿರಲಾಗಿ –
ಹಿಂತಾ ಒಂದು ಬಲಿಯನ್ನ ಹುಡುಕುವುದೇನು ದೊಡ್ಡ ಮಾತಲ್ಲ
ಎರಡು ದಿನದಾಗೆ ಬಲಿ ಪಶುವನ್ನ ಹುಡಿಕಿ ಈ ಹಾರುವಯ್ಯನ ಮುಂದೆ ಒಯ್ದು ನಿಂದರಿಸಿದರೆ ಆಯಿತಲ್ಲಾ ಅಂತ ಯೋಚನಿಯ ಮಾಡುತಾನೇ…
ಅಲ್ಲ ಈ ಕಾರಭಾರಿ ತೆಲಿ ತಗಿಯುವ ಮಾತು ಆಡುತಾನೆ – ದೇಸಾಯರು ಆ ಮಾತು ಆಡಿರತಾರೊ ಇಲ್ಲಾ ಇವನೆ ಹಂಗ ಹುಟ್ಟಿಸಿ ಹೇಳತಾನೋ…ಯಾಂವ ಬಲ್ಲ ! ಅವರು ಆಡಿರಲಿ ಬಿಡಲೀ…ಈ ಹಾರುವಯ್ಯ ಮನಸು ಮಾಡಿದರೆ ದೇಸಾಯರ ಕೈಯಿಂದನೇ ಹಿಂತಾ ಕೆಲಸಾ ಮಾಡಸೇ ಮಾಡಿಸುತಾನೇ ಅಂತ ಯೋಚಿಸುತಾನೇ…
ನನಗಾದರೂ ಇಲ್ಲದ ಉಸಾಬರೀ ಯಾಕ ಬೇಕು…ಅಂವ ಹೇಳಿದ ಕೆಲಸಾ ಪೂರೈಸಿ ಬಿಟ್ಟರೆ ಮುಗೀತು…
ಆಹಾಣಿ…
ಇದೇನು ಅಗದೀ ಸಸಾರ ಕೆಲಸ ಅಂತ ಹೊಂಟ ಡಂಣಾಯಕನಿಗೆ ಆಮ್ಯಾಲ ದಗದದ ಗಾಢ ಗೊತ್ತಾಗಲಿಕ್ಕೆ ಸುರುವಾತು…
ಲಢಾಯಿ ಆದರೆ ಅದರ ಮಾತು ಬ್ಯಾರೇ…ಅಲ್ಲಿ ಕತ್ತೀ ತಗೊಂಡು ಯಾರನ ಬೇಕಾದವರನ್ನ ಸೀಳಬಹುದು…
ಅಲ್ಲಿ ಹಿಂಗ ಮಾಡಬಹುದೇ – ಇವರನ ಕೊಲ್ಲಬಹುದೇ ಅಂತ ಯಾವ ತರ್ಕಗೋಳೂ ಅಡ್ಡ ಬರೂದುಲ್ಲ…
ಮತ್ತ ಲಢಾಯಿಗೆ ಹೊಂಡಾಕ -ಫೌಜಿಗೆ ಸೇರಾಕ ಬರ್ರೀ ಅಂತ ಮಂದಿನ್ನ ಕರ್‍ಯಾಕ ಯಾವ ಭಿಡೇ-ಅನುಮಾನಾ ಇರಾಣಿಲ್ಲ …
ಇಷ್ಟರ ಮ್ಯಾಗ ಲಢಾಯಿಯ ಸಲುವಾಗಿ ಫೌಜು ಸೇರುವದಂದರೆ -ಅದು ಒಂದು ಉದ್ಯೋಗ ಇದ್ದಂಗೆ…
ಆದರ ತೇರಿಗೆ ಬಲೀ ಆಗರೀ ಅಂತ ಕೇಳಾಕ –
ತೇರಿಗೆ ನಿನ್ನ ಮಗನ್ನ ಬಲೀ ಕೊಡು –
ತೇರಿಗೆ ನಿನ್ನ ಮಗಳನ ಬಲೀ ಕೊಡೂ
ಅಂತ ಕೇಳಲಿಕ್ಕೆ ಈ ಡಂಣಾಯಕ ಅನಿಸಿಕೊಳ್ಳುವ ಡಂಣಾಯಕನಿಗೆ ಬಾಯಿಯೇ ಏಳವಲ್ಲದಾತು…
ಮೂರು ದಿನಾ ಸುತ್ತಮುತ್ತಲಿನ ಊರುಗಳಿಗೆ ಹೋಗಿ-ಹೇಳಲಾರದೇ ಹುಡುಕಲಾರದೇ

ಒಣಾ ಫುಕಟಣಿ ಅಡ್ಯಾಡಿ ಅಡ್ಯಾಡಿ ಹೊಡಮಳ್ಳಿ ಬರುತಾನೆ ಈ ಡಂಣಾಯಕ ಅನಿಸಿಕೊಳ್ಳುವ ಡಂಣಾಯಕ…
ಅಷ್ಟರಾಗಣಿ ತದಗಿಗೆ ಎಳಿಯದ ತೇರು ರಾಮನವಮಿಗೆ ಎಳಿಯತೈತಿ ಅನ್ನುವ ಸುದ್ದಿ ಸದ್ದಿಲ್ಲದಣಿ ತನ್ನಂಗ ತಾನಣಿ ಮಂದ್ಯಾಗ ಹಬ್ಬಿತ್ತು…
ಅಂದ ಅಷ್ಟಮೀ ತಿತಿ…
ಮೂರು ದಿನಾ ಎಲ್ಲಾ ಬಲಿ ಆಗುವ ಮನುಸಾನ್ನ ಹುಡಿಕ್ಕೊಂಡು ಅಡ್ಯಾಡಿದ ಡಂಣಾಯಕ ಏನು ಮಾಡುವುದೂ ಅಂತ ಹರ್‍ಯಾಗ ಏಳತಿದ್ದಂಗಣಿ ಚಿಂತೀ ಮಾಡತಿದ್ದರೆ…
ಪಾರವ್ವ ಅಂಬೋ ಡಂಣಾಯಕನ ಹೆಂಡತಿ-
ನಾಳೆನಣಿ ತೇರು ಎಳೀತಾರಂತ ಹೌದೇನರೀ…
ಅಂತ ಕೇಳುತಾಳೆ. ಹೇಂತಿ ಹಿಂಗ ಕೇಳಿದಾಗ ಡಂಣಾಯಕನಿಗೆ ಬುಗುಲು ಆಗತದೆ
ಆಹಾಣಿ…ಬಲಿಯಾಗುವ ಮನುಸಾನ್ನ ಒಯ್ದು ಕೊಡದಿದ್ದರೆ ತೇರ ಹೆಂಗ ಎಳದಾರು…
ನನಗ ನೋಡಿದರ ಈ ದಗದ ಬಗೀಹರಿಯಧಂಗ ಆಕ್ಕೊಂಡ ಕುಂತೈತಿ…
ಅಯ್ಯೋ ದೇವರಣಿ…ಆ ಹಾರುವಯ್ಯ ಹೇಳಿಧಂಗ ಜೀವಾ ಕಳಕೊ ವ್ಯಾಳ್ಯಾ ಬಂತಲ್ಲಪಾ
ಶಿವನೇ…
ಹೆಂಗ ಮಾಡೂದಿನ್ನಣಿ…ಅಂತ ದುಕ್ಕ ಪಡತಾ ಕುಂತಾಗ…ಆಹಾ…
ಪಾರವ್ವ ಅಂಬುವ ಇವನ ಹೇಂತಿ ಕೇಳುತಾಳೆ…
ಹೆಣ್ಣ ಹೆಂಗಸಿನಂಗ ಹಂಗ್ಯಾಕ ಕುಂತೀ
ತೆಲಿಗಿ ಕೈ ಇಟಗೊಂಡೀದಿ ಯಾತರ ಚಿಂತಿ
ಹರ ನನ್ನ ಮಾದೇವೈ ||
ಡಂಣಾಯಕನ ಹೇಂತಿ ಗಂಡನ್ನ ಕೇಳುತಾಳೇ –
ಮೀಸೀ ಹೊತ್ತ ಗಂಡುಸಾದ ನಿನಗೆ ಹಿಂಗೆ ತೆಲೀ ಮ್ಯಾಲ ಕೈಹೊತ್ತು ಕುಂಡ್ರೂಹಂತಾ ಪರಸಂಗ ಏನು ಬಂತೂ ಅಂತ…
ದೇಸಗತಿಯ ಡಂಣಾಯಕನಾಗಿ ಹಿಂಗ ತೆಲೀಗೆ ಕೈಹೊತ್ತು ಕುಂಡ್ರೂದು ಸೋಭಿಸುವುದಿಲ್ಲ ತಗಿ ಅಂತ
ಛೀಮಾರಿ ಹಾಕುತಾಳೆ…ಆಹಾಣಿ…
ಆಗ ಡಂಣಾಯಕನೆಂಬೋನು ಹೆಂಡತಿಗೆ ಹೇಳುತಾನೆ –
ತೆಲೀ ಹೋಗೂ ಹಂತಾ ಯಾಳೇ ಬಂದಾಗ ತೆಲೀ ಮ್ಯಾಲ ಕೈ ಇಟಗೋದಣಿ ಇನ್ನೆಲ್ಲಿ ಇಟಗೋಲೀ…!
ಆ ಹಾರುವಯ್ಯ ನೀಗದ ಕೆಲಸಾ ಹೇಳಿ ನನ್ನ ಸಿಗಿಸಿ ಇಟ್ಟದಾನು…
ನನ ಮ್ಯಾಲ ಮದಲಿಂದಲೂ ಅಂವಗ ಕಣ್ಣು…
ಇನ್ನೇನ ನಾಳಿಗೆ ನನ್ನ ತೆಲೀ ತಗಿಯೂದೊಂದು ಬಾಕೀ ಉಳದಂಗ ಆಗೇತಿ ಅಂತ ನುಡದು….
ಹಿಂಗಿಂಗ ಹಿಂಗಿಂಗಣಿ ಅಂತ ತಾನು ಹುಡಿಕಿ ತರಬೇಕಾಗಿದ್ದ ಬಲಿಯ ಸಂಗತೀ ಎಲ್ಲಾ ಹೇಳುತಾನೆ…ಆಹಾ…
ಆಗ ಪಾರೋತೆವ್ವ ಹೇಳುತಾಳೆ –
ನೀನು ಧರಮನಟ್ಟೀ ದೇಸಗತಿಯ ಡಂಣಾಯಕ ಆದದ್ದು ಸಾರ್ತೇಕ ಆದಂಗ ಆತು ನೋಡು… ಇಟ್ಠಲ ಸ್ವಾಮಿಯ ಬಲದ ಮ್ಯಾಲಣಿ ಈ ದೇಸಗತಿ ಹುಟ್ಟಿದ್ದು …
ಹಾಂಣಿ…
ತುಂಬಿದ ಹಿರಿಹೊಳೀ ಪಾರು ಹಾಯಿಸಿ ದೇಸಾಯರನ ಇಲ್ಲಿಗೆ ಕಳಿಸಿದ್ದು ಆ ಇಟ್ಠಲ ಸ್ವಾಮಿಯೇ…
ಹಂತಾ ಸ್ವಾಮಿಯ ತೇರಿಗೆ ಒಂದು ಬಲೀ ಹುಡಕಿ ತಾ ಅಂದರಣಿ…
ಕೇಳಾಕ ಬಾಯಿ ಏಳವಲ್ಲದೂ ಅಂತ ಮನ್ಯಾಗ ಕುಂತು ಹೆಂಗಸಿನ ಹಂಗ ಅಳಾಕತ್ತದೀ ಅಲ್ಲಾ
ಇದು ನಿನಗ ಇದು ಸೋಬಾ ತರೂಹಂತಾದ್ದು ಏನ ಹೇಳೂ…
ಅಂತ ಯಡ್ಡಿಸಿ ಕೇಳುತಾಳೆ…
ಆತು ಈಗೇನ ಆಗಿಲ್ಲ…
ತೇರು ಇರೂದು ಇನೂ ನಾಳಿಗೆ…ನಿನ್ನ ತೆಲೀ ಹೋಗಧಂಗ ನಾ ನೋಡಿಕೋತನು ಅಂತ ಧೈರ್ಯಾ ಹೇಳುತಾಳೆ
ಡಂಣಾಯಕಗ ಹೋದ ಜೀವ ಹೊಡಮಳ್ಳಿ ಬಂದಂಗಾಗತೈತೀ…
ಆಹಾಣಿ…
ತನ್ನ ಗಂಡನಿಗಾದರೂ ಈ ಪರಕಾರ ನುಡದಪಾರೋತೆವ್ವ ಸ್ವಾಮಿಯ ಗುಡಿಯ ಹತ್ತರ ಬಂದು ಅಲ್ಲಿ ನೋಡುತಾಳೆ…
ಆಹಾಣಿ…
ಪೌಳೀಯ ತೆಂಕಣ ಮೂಲ್ಯಾಗೆ
ಪೌಳೀಯ ದಕ್ಷಿಣ ಮೂಲ್ಯಾಗೆ
ಶಿವ ನನ್ನ ಮಾದೇವೈ ||
ಗೊಂಬೀರಾಮರಾ ದ್ಯಾವಯ್ಯಾ
ತೊಗಲ ಗೊಂಬೀಯ ಆಡಸವನೊ
ಹರ ನನ್ನ ಮಾದೇವೈ ||
ಹೆಂಡಾತಿ ಮಕ್ಕಳ ಕಟಿಗೊಂಡು
ಗೊಂಬೀಯ ಆಡಸಾಕೆ ಬಂದವನೆ

ಶಿವ ನನ್ನ ಮಾದೇವೈ ||
ಪೌಳೀಯ ವಾಮ ಮೂಲ್ಯಾಗೆ
ಸಂಸಾರ ಕಟಿಗೊಂಡು ಉಳದವನೆ
ಹರ ನನ್ನ ಮಾದೇವೈ ||
ಆಹಾಣಿ…
ಸ್ವಾಮಿಯ ತೇರು ಮುಂದಕ ಹೋಗಿ ಊರಾಗಿನ ಕಾಟುಕ ಮಂದಿಯೆಲ್ಲಾ ಓಡಿ ಹೋಗಿದ್ದಲ್ಲದೆ …
ತೇರು ನಿಂತು ಹೋಗಿದ್ದಕ್ಕೆ ಊರಾಗಿನ ಮಂದಿಯ ಮನಸೆಂಬುವವು ಸೂತಕದೊಳಗ ಇದ್ದಂಗ ಆಗಿ –
ಆ ಗೊಂಬೀರಾಮರ ದ್ಯಾವಯ್ಯನ ಸೂತರದ ಗೊಂಬಿಯ ಆಟಾ ನೋಡಲಿಕ್ಕೆ ಮಂದಿಯೆನ್ನುವದು ಇಲ್ಲದೇ –
ಅವನ ಸಂಸಾರ ಅಂಬುವುದಕ್ಕೆ ಕೂಳಂಬುವುದು ತತ್ವಾರ ಆಗಿ ಕುಂತೈತೆಲ್ಲಾಣಿ…
ಆಹಾ…
ಬಸುರಿಯಾಗಿರುವ ಹೇಂತಿ ಮತ್ತ ಒಂಭತ್ತ ಮಕ್ಕಳನ ಕಟಿಗೊಂಡು ಕೂಳಿಗೆ ತತ್ವಾರ ಪಡುತಾ ಆ ದೇವಯ್ಯ –
ಅಯ್ಯೋ ಮಕ್ಕಳ ಕೊಡಬ್ಯಾಡೋ ಮುಕ್ಕಣ್ಣಾಣಿ…
ಅವುಗಳ ತುತ್ತಿನ ಚೀಲ ಅಂಬುವುದನ್ನ ತುಂಬುವದು ಹೆಂಗೋ …
ಅಂತಾ ದುಕ್ಕ ಪಡುತಿರಲಾಗೀ…ಆಹಾಣಿ…
ಆಗ ಅಲ್ಲೀಗೆ ಬರುತಾಳೆ ಡಂಣಾಯಕನ ಹೇಂತಿ ಪಾರೋತೆವ್ವ…
ಮೊರ ತುಂಬ ಜ್ವಾಳಾವ ತಂದಾಳೊ
ತೂರು ಬುಟ್ಟಿಯ ತುಂಬ ಗೋದಿಯನೊ
ಶಿವ ನನ್ನ ಮಾದೇವೈ ||
ಅರಪಾವು ಬ್ಯಾಳೀಯ ಸುರಿವ್ಯಾಳೊ
ಮ್ಯಾಲೆ ಬೆಲ್ಲದ ದೊಡ್ಡ ಕರಣೀಯೊ
ಹರ ನನ್ನ ಮಾದೇವೈ ||
ಆಹಾ…
ಜ್ವಾಳಾ-ಗೋದಿ-ಬ್ಯಾಳೀ ಬೆಲ್ಲಾ …ಇವನೆಲ್ಲಾ ಆ ಗೊಂಬೀರಾಮರ ದ್ಯಾವಪ್ಪನ ಸಂಸಾರದ ಮುಂದಾದರೂ ಇಟ್ಟು
ಡಂಣಾಯಕನ ಹೇಂತಿ ಹೇಳುತಾಳೇ …ಆಹಾ…
ಮಕ್ಕಳಂಬೂವು ದೇವಾರೂ…ಆಹಾಣಿ…
ಆ ದೇವರಂಥಾ ಮಕ್ಕಳನಾದರೂ ಉಪಾಸ
ಕೆಡವಿದರೆ ತಂದೀ ತಾಯೀ ಅಂಬುವವರು
ರವ ರವ ನರಕಕ್ಕೆ ಬೀಳುತಾರೆ…ಆಹಾಣಿ…
ಈ ಜ್ವಾಳಾ ಗೋದಿ -ಬ್ಯಾಳಿ ಬೆಲ್ಲಾ ಎಲ್ಲಾ ತಗೋರಿ…ಮಕ್ಕಳಿಗಾದರೂ ಅಡಗೀ ಮಾಡಿ ಉಂಬಾಕ ಹಾಕರೀ…
ಅಂತ ನುಡಿಯುತಾಳೆ…ಆಹಾಣಿ…
ಅಲ್ಲಿ ನೆರದಿದ್ದ ದ್ಯಾವಪ್ಪನ ಮಕ್ಕಳು ಬ್ಯಾಳಿಯ ಮ್ಯಾಗೆ ಇಟ್ಟ
ಬೆಲ್ಲಾದ ಕಣ್ಣಿಯನ್ನ ಬಾಯೊಳಗ ನೀರು ಸುರಿಸಿಗೊಂತ
ತದೇಕ ನೋಡತಿರಬೇಕಾದರೆ…ಆಹಾಣಿ…
ಡಂಣಾಯಕನ ಹೇಂತಿ ಆ ಮಕ್ಕಳಿಗೆ ಆ ಬೆಲ್ಲದ ಕಣ್ಣಿಯನ್ನ ಮುರದು ಸಣ್ಣ ಸಣ್ಣ ತುಂಡು ಮಾಡಿ ಕೊಡುತಾಳೆ…
ದ್ಯಾವಯ್ಯನ ಆ ಮಕ್ಕಾಳು…ಆಹಾಣಿ…
ಬೆಲ್ಲದ ತುಂಡಗಳನ ಅಂಗೈಯಾಗ ಇಟಗೊಂಡೂ
ಕಣ್ಣ ತುಂಬ ನೋಡಿ…ಆಹಾಣಿ…
ಬಾಯಾಗ ಹಾಕೊಂಡು ಒಂದು ಕ್ಷಣಾ ಸೀಪಿ…
ಮತ್ತ ಬಾಯಾಗಿಂದ ತಗದು ಅಂಗೈಯೊಳಗ ಲಿಂಗಯ್ಯನ್ನ ಇಟಗೊಂಡಂಗ ಇಟಗೊಂಡು ನೋಡುತಿರಬೇಕಾದರೇ…ಆಹಾಣಿ…
ಆ ಡಂಣಾಯಕನ ಅಂಬುವವನ ಹೇಂತಿ
ಪಾರೋತೆವ್ವ ಮೆಲ್ಲಗೇ ಬಲಿಯ ಹೆಣಿಯುತಿದ್ದಳಲ್ಲಾಣಿ…
ಹಿರಿಯ ಮಗನನ್ನ ಸ್ವಾಮಿ ತೇರಿಗೆ ನೀಡೊ
ಮೂಡಾಲ ಸೀಮೇಲಿ ಮೂರೆಕರೆ ಭೂಮೀ
ಶಿವ ಶಿವ ಮಾದೇವೈ ||
ಹಿರಿಯ ಮಗನನ್ನ ನಾನು ಕೊಡಲಾರೆ ತಾಯೆ

ಕಡೀಯ ಮಗನನ್ನಾರ ಸ್ವಾಮಿಗೆ ಕೊಡುಬಾರೆ
ಪಡುವಾಣ ದಿಕ್ಕಿನ್ಯಾಗೇ ಆರೆಕರೆ ಭೂಮೀ
ಹರ ಹರ ಮಾದೇವೈ ||
ಮಲಿಯ ಕುಡಿಯುವ ಕಂದ ಕೊಡಲಾರೆ ತಾಯೆ

ನಡಕೀನ ಮಗನನ್ನ ಸ್ವಾಮಿಗೆ ಕೊಡು ಬಾರೊ
ತೆಂಕಾಣ ದಿಕ್ಕಿನ್ಯಾಗೆ ಎಂಟೆಕರೆ ಭೂಮೀ
ಶಿವ ಶಿವ ಮಾದೇವೈ ||

ಕೊಡತೇನು ಬಿಡು ತಾಯೆ ಐದಾನೆ ಮಗನ
ಸ್ವಾಮಿ ಕೊಟ್ಟದ್ದು ಸ್ವಾಮೀಗೇ ಅರುಪಣಿಣಾ
ಗೊಂಬೀರಾಮರ ದ್ಯಾವಯ್ಯನು ತನ್ನ ನಡಕಿನ ಮಗ ಚಂದ್ರಾಮನನ್ನ ಸ್ವಾಮಿಯ ತೇರಿಗೆ ಕೊಡತನು ಅಂತ ಒಪ್ಪಿದರೆ ಅವನ ಹೇಂತಿ ಲಗಮವ್ವ ಬೋರ್‍ಯಾಡಿ ಅತ್ತು –
ನನ್ನ ಮಗನ್ನ ನಾನು ಕೊಡಲಾರೇ ಅಂತ ಗೋಳ್ಯಾಡುತಾಳೇ
ಆ ದ್ಯಾವಯ್ಯ ಅಂಬುವವ ಹೇಂತಿಗೆ ಕಣ್ಣು ಸನ್ನೀ ಮಾಡಿ ಸಮಾದಾನ ಮಾಡುತಾನೇ
ಹಂಗ ಕಣ್ಣು ಸನ್ನಿಯ ಮಾಡಿ ಹೇಂತಿಯನ್ನ ಸಮಾದಾನ ಮಾಡೀದ ದ್ಯಾವಯ್ಯ ಡಂಣಾಯಕನ ಹೇಂತಿ ಹೋದಮ್ಯಾಲೆ ತನ್ನ ಹೆಂಡಾತಿಗೆ ಹೇಳುತಾನೇ…ಆಹಾಣಿ…
ಆಕಿಗೆ ಹೂಂ ಅಂತ ಹೇಳದಿದ್ದರೆ ಈ ಜ್ವಾಳಾ ಗೋದೀ-ಬ್ಯಾಳೀ ಬೆಲ್ಲಾ-
ಎಲ್ಲಾ ಹೊಳ್ಳಿ ಹೊತಗೊಂಡು ಹೋಗತಿದ್ದಳು…
ಅದಕ್ಕಣಿ ಹೂಂ ಅಂದದೀನು…
ಇಂದ ರಾತರೀ ತೆಪ್ಪಿಸಿಕೊಂಡ ಹೋದರಾತು…ಆಹಾಣಿ…

ಇಷ್ಟರಮ್ಯಾಲ ನೀನೂ ಇಚಾರ ಮಾಡು –

ನಮಗೇನು ಮಕ್ಕಳ ಕೊರತಿಯಿಲ್ಲ…ಸ್ವಾಮಿಯೇ ಕೊಟ್ಟ ಮಕ್ಕಳು…
ಒಬ್ಬನನ್ನ ಈ ಸ್ವಾಮಿಗೆ ಕೊಟ್ಟರೆ ಉಳದ ಮಕ್ಕಳೆಲ್ಲಾ ಸುಕದಿಂದ ಇರತಾವೆ
ಅಂತ ತಿಳಿ ಹೇಳಿದರೂ ಲಗಮವ್ವ ತಾಯಿ ಜಪ್ಪಯ್ಯ ಒಪ್ಪಲಿಲ್ಲ…
ಆಹಾಣಿ…

ಇತ್ತ ದ್ಯಾವಯ್ಯನ ಐದನೇ ಮಗನನ್ನಾದರೂ ತೇರಿನ ಬಲಿಗೆ ಹೊಂದಿಸಿಕೊಂಡು ಮನಿಗೆ ಬಂದ ಪಾರವ್ವ ಗಂಡನಿಗೆ ಹೇಳುತಾಳೇ…
ಚಿಂತಿಯನ ಬಿಡು…ತೊಗಲು ಗೊಂಬೀ ಆಡಸೂ ಗೊಂಬರಾಮರ ಸಂಸಾರದ ಐದಾನೆ ಮಗನನ್ನ ಹೊಂದಿಸಿಗೊಂಡು ಬಂದೀನು…
ಗಂಡು ಕಳ್ಳಿನ ಗೊಂಬೀ ಆಡಸೂ-ತಂದಿಯೆಂಬೊ ಆ ಮನುಸಾ
ಒಪ್ಪಿ ಹೂಂ ಅಂದಾನೆ…
ಆದರೆ ಹೆತ್ತ ಕಳ್ಳು ಹೂಂ ಅಂದಿಲ್ಲ…ಆ ದ್ಯಾವಪ್ಪ ಅಂಬುವವ ಕಣ್ಣ ಸನ್ನೀ ಮಾಡಿ ಹೇಂತಿನ್ನ ಸುಮ್ಮಗಾಗಿಸಿದಾನೆ…
ನೀನು ಸದ್ದೇಕ್ಕ ಎದ್ದು ಹೋಗಿ ಆ ಗೊಂಬೀರಾಮರ ಸಂಸಾರ ಊರು ಬಿಟ್ಟು ಓಡಿಹೋಗದಂಗ ಕಾವಲಾ ಹಾಕಸು…
ಆ ಗಂಡಾ ಹೇಂತಿಗೆ ಸೀರೀ ಧೋತರಾ ಮತ್ತ ಆ ಮಕ್ಕಳಿಗೆ ಅಂಗೀ ಚಡ್ಡೀ-ಹೊಟ್ಟಿಗೆ ಕಾಳೂ ಕಡೀ ಕಳಸು…
ಎಂಟೆಕರೇ ತ್ವಾಟದ ಆಸೇ ಹಚ್ಚೀನು…ಆಹಾಣಿ…
ಆ ಕಾರಭಾರೀ ಹಾರುವಯ್ಯನಿಗೆ ಅಷ್ಟು ಭೂಮೀ ಕೊಟ್ಟರೇನಣಿ ಬಲಿ ಆಗುವ ಇಸಮು ಸಿಗತೈತೆಂತ ಹೇಳರಿ
ಅಂತ ತಾಕೀತು ಮಾಡಿದಳು…
ಆಹಾಣಿ…
ಕುಣಕೊಂತ ಬಂದಂಗ ಬರತಾನೆ ಡಂಣಾಯಕ ದೇಸಾಯರ ವಾಡೇಕ್ಕ …
ಇಂವ ಅಲ್ಲಿಗೆ ಬರಾವ ಇದ್ದಾನ ಅನ್ನುವುದು ಮದಲೇ ತಿಳದವನಂಗೆ –
ಪಾಯಸದೊಳಗಿನ ನೊಣಧಂಗ
ಆ ಕಾರಭಾರಿ ಅಂಬುವ ಹಾರುವಯ್ಯ ಮದಲೇ ಬಂದು ಅಲ್ಲಿ ಇವನಿಗೆ ಕಾಕೊಂತ ಕುಂತಂಗ ಕುಂತೈದಾನೆ !…ಆಹಾಣಿ…
ಎಲಾ ಹಾರುವಯ್ಯ ಅದಕ್ಕಣಿ ನೀ ಕಾರಭಾರೀ ಆಗೀದೀ ಅಂತ ಮನಸಿನ್ಯಾಗ ಅನಕೊಂಡು ದೇಸಾಯರಿಗೆ ಮುಜರೀ ಮಾಡಿ ಕಾರಭಾರಿಗಳಿಗೆ ನಮಸ್ಕಾರ ಹೇಳಿ
ಬಲಿಯ ಯವಸ್ತಾ ಆದದ್ದು ಎಲ್ಲಾ ತಿಳಿಸಿ ಭೂಮಿಯ ವಿಚಾರವ ಹೇಳುತಾನೆ-
ಕಾರಭಾರಿಗಳು ಆಗಲಿ ಆಗಲಿ ಅಂದು –
ಮುಂದಿನ ಯವಸ್ತಾ ಎಲ್ಲಾ ಮಾಡ ಹೋಗೂ ಅಂತಾ ಹೇಳಿ ಕಳುಹಿಸುತಾರೇ …
ತಮ್ಮ ಎಲ್ಲಾ ಮಾತಗೋಳನೂ ಕಾರಭಾರಿಗೇ ಕೊಟ್ಟವರಂಗ ದೇಸಾಯರು ಬರೇ ಗೋಣು ಆಡಸತಿದ್ದರು
ಆಹಾ…
ರಾಮನವಮೀಯ ದಿವಸದ ಮೂರ್ತದಾಗೇ…
ಧರಮನಟ್ಟಿಯ ದೇಸಾಯರ ರಾಮರಾಜ್ಯದೊಳಗೆ ದೇಸಾಯರು ಕಟ್ಟಿಸಿದ ಎರಡೂ – ನಾಕು ಮಜಲಿನ ತೇರು ಎಳಿಯತೈತೀ ಅಂತ ಜಾಹೀರು ಆಗಿ ಧರಮನಟ್ಟಿಯ ನಾಡಿನ ಮಂದಿ ಎಲ್ಲಾ ಸಂಭ್ರಮದಿಂದಾಲಿ ನೆರೆಯುತಾರೆ…
ತಳವಾರ ಮಾದ ಮತ್ತ ಕಾಟುಕರ ಎಲ್ಲಾ ಮಂದಿ ಊರಿಗೆ ಹೊಳ್ಳಿ ಬರುತಾರೆ…ಮಾದ ಕಾರಭಾರೀ ಹಂತೇಕ ಬಂದು –
ಯಪ್ಪಾ ನಾನೂ ಬಲಿಯ ಯವಸ್ತಾ ಮಾಡಿಕೊಂಡ ಬರಾಕ ಬಳಗಾ ಎಲ್ಲಾ ಕಟಿಗೊಂಡು ನಾಡಿನ ತುಂಬ ಓಡಾಡತಿದ್ದರೆ ಬಲಿಯ ಯವಸ್ತಾ ಆಗಿ ರಾಮನವಮೀ ಅಂಬೂ ದಿವಸ ಧರಮನಟ್ಟಿಯ ತೇರೂ ಅಂತ ನಾಡಿನ ತುಂಬ ಜಾಹೀರು ಆಗಿ ಸುದ್ದಿ ತಿಳಿದು ಓಡಿ ಬಂದೀವಿ ತಂದೇ ಅಂತ ಗುಂಡಾಡಸತಾನೆ…
ಊರೂ ಕೇರೀಗಳನ ಗುಡಸೂದೂ-ಸ್ವಚ್ಛ ಮಾಡೂದೂ ಹಂತಾ ದಗದ ಇರತಾವೇ

ಆದ್ದರಿಂದ –
ಮತ್ತ ಈಗ ಹೆಂಗೂ ಬಲಿಯ ಸಮಸ್ಯಾ ಮುಗದದ್ದರಿಂದ
ಕಾರಭಾರಿಗಳು ಅವರನ ಬೈದಂಗ ಮಾಡಿ ಅವರವರ ಕೆಲಸಕ್ಕ ಕಳಿಸಿದರು…
ರಾಮನವಮಿಯ ದಿವಸ…ಆಹಾಣಿ…
ಗೊಂಬೀ ರಾಮರ ದ್ಯಾವಪ್ಪನ ಐದನೇ ಮಗಾ ಚಂದ್ರಾಮಗ ಜಳಕಾ ಮಾಡಿಸಿ ರೇಶಿಮಿಯ ಕೆಂಪು ಮಗುಟವ ಉಡಸುತಾರೇ …ಆಹಾಣಿ…
ಕೆಂಪು ಮಗುಟವನ್ನ ಉಡಿಸಿ ಹಣಿತುಂಬ ಕುಂಕುಮವನ್ನಾದರೂ ಹಚ್ಚಿ
ಸ್ವಾಮೀಯ ಗುಡಿಯ ಸುತ್ತ ಪ್ರದಕ್ಷಿಣ ಹೊಡಸುತಾರೆ…
ಆಹಾಣಿ…
ಗರ್ಭ ಗುಡಿಯೊಳಗ ದೇಸಾಯರು ಮತ್ತ ರಾಣೀಸಾಹೇಬರು ಪೂಜಿ ಮಾಡಿಸಿ ಮಂಗಳಾರತಿಯ ಮಾಡಸುತಾರೆ…
ಮಂಗಳಾರುತಿಯ ಮಾಡೀಸಿ ವಿಟ್ಠಲ ಸ್ವಾಮಿಯ ಚರ ಮೂರ್ತಿಯನ್ನ ಪೂಜಾರಿ ಹೊತ್ತು ಹೊರಗೆ ತರಬೇಕಾದರೆ ಅವನನ್ನ ಬಲಕ್ಕೆ ಇಟಗೊಂಡು ಪಟವರ್ಧನ ದೊರಿಗಳೂ ರಾಣೀಸಾಹೇಬರೂ ತೇರಿನ ಹಂತೇಕ ಬರುತಾರೆ
ಹರ ನನ್ನ ಮಾದೇವೈ||
ಆಹಾಣಿ…
ಪೂಜಾರಿ ವಿಟ್ಠಲ ಸ್ವಾಮಿನ್ನ ರಥದಾಗೆ ಇಟ್ಟ ಮ್ಯಾಲೆ ಮತ್ತೆ ಅಲ್ಲಿ ತೇರಿನ ಪೂಜೀ ಮಾಡುತಾರೆ…
ತೇರಿನ ಪೂಜಾನಾದರೂ ಮಾಡಿ ಮಂಗಳಾರುತೀಯ ಬೆಳಗುತಾರೆ…ಆಹಾಣಿ…
ಮಂಗಳಾರುತೀಯ ಬೆಳಗಿ ಆದಮ್ಯಾಲೆ ಆ ಹುಡಗನ ಕೈಹಿಡದು ತೇರಿನ ಸುತ್ತ ಪ್ರದಕ್ಷಿಣವ ಹಾಕಸುತಾರೆ…
ಶಿವ ಶಿವ ಮಾದೇವೈ ||
ಹಿಂಗ ಆ ಹುಡಗ ಪ್ರದಕ್ಷಿಣ ಹಾಕತಿರಬೇಕಾದರೆ ಊರ ಮಡಿವಾಳ ಗೌಡನೆಂಬಾತ ಆ ಹುಡಗನ ಪಾದಗಳಂಬುವವು ನೆಲದ ಮಣ್ಣೀಗೆ ತಾಗಿ ಮುಡಚಟ್ಟು ಆಗದ ಹಂಗೆ-
ಆಹಾಣಿ…
ಆ ಹುಡುಗಾನ ಎಳಿಯ ಪಾದಗಳಂಬುವದಕ್ಕೆ ಬಿಸಲಿಗೆ ಕಾದ ನೆಲದ ಬಿಸಿ ತಾಗಬಾರದೂ ಅಂತ –
ಆ ಮಡಿವಾಳ ಗೌಡನಾದರೂ ಮಡಿಮಾಡಿದ ಧೋತರಗಳನ್ನ ಮೀಸಲ ನೀರಿನ್ಯಾಗ ತೋಯಿಸಿ ತೋಯಿಸಿ -ಪ್ರದಕ್ಷಿಣ ಹೊಡಿಯುವ ಚಂದ್ರಾಮ ಅನ್ನುವ ಆ ಹುಡಗನ ಮುಂದ ಮುಂದ ಹಾಸತಿದ್ದರೆ…ಆಹಾಣಿ… ಶಿವ ಶಿವ ಮಾದೇವೈ||
ಆಹಾಣಿ..
ಆಗ ಆ ಹುಡುಗನ ಅವ್ವ ಲಗಮವ್ವ ಅಂಬುವಾಕಿ ತನ್ನನ್ನ ಬಿಗಿಯಾಗಿ ಹಿಡಕೊಂಡಿದ್ದ ಗಂಡನ ಕೈಯಿಂದ ಕೊಸರಿಕೊಂಡು –
ಅಲ್ಲಿ ನೆರೆದಿದ್ದ ಮಂದೀಯ ಹಿಂಡಿನೊಳಗೆ ನುಗ್ಗಿ ನುಸುಳಿ…
ಓಡಿ ಬಂದು ತನ್ನ ಮಗನನ್ನ ಅವಚಿಕೊಳ್ಳಲಿಕ್ಕೆ ಬರುತಾಳೇ…ಆಹಾಣಿ…
ಮಗನೇ ಚಂದ್ರ್ಯಾ ಅಂತ ಚೀರಿ…
ಅವರ ಕೈಯ್ಯ ಕೊಸರಿಕೊಂಡು ಓಡಿ ಬಾ ಮಗನೇ ಅನ್ನುತಾಳೆ
ಹರ ಹರ ಮಾದೇವೈ||
ಆಹಾಣಿ…
ಆಗ ಅಲ್ಲಿ ಪೂಜಾರಿ ಮತ್ತ ನೆರದ ಹಿರ್‍ಯಾರು –
ಏ ಮುಡಚಟ್ಟು …ಮುಡಚಟ್ಟು ! ಮೈಲಿಗಿ ಆಗುತೈತಿ…
ಆಕಿನ್ನ ಹಿಡಕೋರಿ -ಎಳಕೋರಿ…
ಅಂತ ಕೂಗತಿದ್ದರಣಿ ಅಲ್ಲಿ ನೆರದಂಥಾ ಮಂದಿಯಾದರೂ ಆಕಿನ್ನ ಹಿಡದು ತೇರಿನಿಂದ ಅತ್ತಲಾಕಡೆ ದೂರ ದೂರ ಎಳಕೊಂಡ ಒಯ್ಯತಾರಲ್ಲೋ ಶಿವನೇ
ಹರ ನನ್ನ ಮಾದೇವೈ ||
ಆಮ್ಯಾಲೆ ಆ ಚಂದ್ರಾಮನ್ನ
ತೇರಿನ ಎಡಕೀನ ಗಾಲೀಗೆ ಅಡ್ಡವಾಗಿ ಮನಗಿಸುತಾರೆ…
ಆ ಕಂದಾನ ತೇರೀನ ವಾಮ ಗಾಲಿಯ ಕೆಳಗೆ…
ಅಡ್ಡಾಕೆ ಮನಗಿಸುತಾರೇ
ಆಹಾಣಿ…
ಪರುವತದಂಥಾ ಆ ತೇರೀನ ಎಡದ ಗಾಲೀಗೆ ಆ ಎಳೇಯ ಕಂದಾನ ಅಡ್ಡವಾಗಿ ಮನಗಿಸಿ –
ದೇಸಾಯರು
ಜಯಾ ಜಯ ಶ್ರೀ ವಿಟ್ಠಲ ಮಾರಾಜಕೀ ಅಂತ ಘೋಷ ಮಾಡಿ –
ಕೂಡಿದ ಮಂದಿ ಎಲ್ಲಾ
ಉಧೋ ಉಧೋ ಚಾಂಗಬೋಲೊ ಚಾಂಗ ಬೋಲೋ ಅಂತ ಘೋಷ ಮಾಡಿ
ಆ ತೇರಣಿನ್ನ ಎಳದರೇ
ಆಹಾಣಿ…
ಆ ತೇರಂಬುವದು ಇಳಕಲಿನ್ಯಾಗ ಉಳ್ಳುವ ಗೋಲಿಯ ಗುಂಡದ ಹಂಗ ಸುರಳೀತ ನಡದೀತಲ್ಲೋ ಶಿವನೆ
ಹರ ಹರ ಮಾದೇವೈ ||

ಆಹಾ…
ಆ ಕಾಟುಗರ ಕುಲದ ಕಂದಮ್ಮನ್ನ ತಿಂದು
ಮುಂದಾಕೆ ನಡೆದ ತೇರು
ಸೂರ್ಯೇ ಚಂದ್ರಾಮ ಇರುವ ತನಕಾ…
ಆಹಾ …
ಆಕಾಸದಾಗೆ ಚಿಕ್ಕಿಗೋಳು ಇರೂ ಮಟಾ
ಆ ರಥವಂಬುವದು ಮುಂದಕ ನಡಿಯೂದಕೆ
ಕಾಟುಗರ ರಗುತವನ್ನ ಬಯಸುತಾದಲ್ಲೊ ಶಿವನೇ
ಶಿವ ಶಿವ ಮಾದೇವೈ ||
ಆಹಾ..
ಅದುಕೇ ಪ್ರತೀ ವರಸ ಗೊಂಬೀರಾಮರ ದ್ಯಾವಯ್ಯನ ಮನಿತನದವರಂಬುವವರೂ
ಧರಮನಟ್ಟೀಯ ವಿಠ್ಠಲ ಸ್ವಾಮೀಯ ತೇರಿಗೆ ಬಂದೂ
ಸ್ವಾಮೀಯ ತೇರಿನ ಗಾಲೀಗೆ ತೆಲಿ ಅಂಬುದ ಜಜ್ಜಿಕೊಂಡೂ
ಆಹಾಣಿ…
ಅವರು ತೆಲಿಯಂಬುದ ಜಜ್ಜಿಕೊಂಡೂ
ಹಣಿಯಿಂದ ಬಸಿಯುವ ಬಿಸಿ ರಗುತದಿಂದಾ
ಆ ಹಣಿಯಿಂದ ಬಸಿಯೂ ಹಂತಾ ಹಸಿ ರಗುತದಿಂದಾ ಸ್ವಾಮೀಯ ತೇರಿನ ಮೂಡಣ ದಿಕ್ಕಿನ ಮಖಕ್ಕೆ ರಗುತದಾ ತಿಲಕ ಇಡಬೇಕಂತ ಕಟ್ಟು ವಿಧಿಸುತಾರೇ ಹರ ನನ್ನ ಮಾದೇವೈ ||
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.