ಕರಿಮಾಯಿ – ೩

“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತೀಯೋ?”
ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗೂ ಕೇಳಿಸಿಕೊಂಡು ಸುಮ್ಮನೇ ದಾಟಿಹೋದ.

ಮೂವರೂ ಸಿದರಾಮನ ಮನೆಯ ಮುಂದೆ ಧರಣಿ ಕೂತರು. ಸಿದರಾಮ ಹೊರಗೆ ಬರಲಿಲ್ಲ. ಇವರು ಏಳಲಿಲ್ಲ. ಆಯೀ ಮೆರೆಮಿಂಡ,
“ಏ ನೀವು ಹೋಗಿ ಲಗು ಊಟಾ ಮಾಡಿ ಬರ್ರಿ. ಅಮ್ಯಾಲ ನೀವು ಕುಂದರ್ರಿ, ನಾ ಹೋಗಿ ಬರ್‍ತೀನಿ. ಈ ಮಗಾಽ ಏನ ಮಾಡತಾನ ನೋಡೇ ಬಿಡೋಣು.”-ಎಂದ. ಉಳಿದಿಬ್ಬರಿಗೆ ಇದು ಸೈಯೆನ್ನಿಸಿತು. ಐದೇ ಮಿನಿಟಿನಲ್ಲಿ ಊಟಾ ಮಾಡಿ ತಿರುಗಿ ಬರುವುದಾಗಿ ಹೇಳಿ ಅವರಿಬ್ಬರೂ ಹೋದರು.

ಅವರು ಮರೆಯಾಗುವುದಷ್ಟೇ ತಡ ಮೆರೆಮಿಂಡ ಸಿದರಾಮನ ಮನೆಯೊಳಕ್ಕೆ ನುಗ್ಗಿದ. ಊಟ ಮಾಡುತ್ತಿದ್ದ ಅವನ ಮುಂದೆ ಕೂತು,
“ಏ, ಅವರಿಬ್ಬರೂ ಮನೀಗಿ ಹೋಗ್ಯಾರ. ನಾವಿಬ್ಬರೂ ಹೋಗಿ ಕೊಟ್ಟು ಬರೋಣು ಬಾರೋ”
-ಎಂದ. ಸಿದರಾಮ ಜಗ್ಗಲಿಲ್ಲ. ಕೈಗೆ ಸಿಕ್ಕ ಸೌಭಾಗ್ಯ ಯಾರು ಕೊಡುತ್ತಾರೆ? ಅಷ್ಟರಲ್ಲಿ ಸಿದರಾಮನ ತಾಯಿ “ಏನ್ರೋ ಅದು?” ಎನ್ನುತ್ತಲೂ ಮೆರೆಮಿಂಡ “ಹೋರಗಿರತೇನ ಬಾ” ಎನ್ನುತ್ತ ಹೊರಗೋಡಿದ.
ಕೆಲ ಹೊತ್ತಾದ ಮೇಲೆ ರಮೇಸ, ಸಾತೀರ ಬಂದು ಮೆರೆಮಿಂಡನನ್ನು ಕೂಡಿಕೊಂಡರು. “ಇನ್ನ ನೀ ಊಟ ಮಾಡಿ ಬಾ” ಎಂದರೆ ತನಗೆ ಹಸಿವಾಗಿಲ್ಲ ಎಂದು ಅಲ್ಲೇ ಕೂತ. ಮೂವರೂ ಅಲ್ಲೇ ಕೂತರು. ವಾರಿಗೆಯವರೆಲ್ಲ ಬಣ್ಣ ಎರಚಾಡಿದರೂ ಈ ಮೂವರು ಅಲ್ಲೇ ಕುಳಿತರು. ಸಿದರಾಮ ಹೊರಬರಲಿಲ್ಲ. ಇವರು ಏಳಲಿಲ್ಲ. ಹೆಚ್ಚೇನು ಕೂತು ಕೂತು ಕೂತ ಕಟ್ಟೆಗೆ ತಮ್ಮ ಅಂಡುಗಳನ್ನು ಬೆಸೆದುಬಿಟ್ಟರು.
ಇಳಿ ಹೊತ್ತಿನಲ್ಲಿ ನಿಂಗೂ ಗುಡಸೀಕರನಿಗೂ ಛೀಮಾರಿ ಹಾಕಿ ಬಂದಾಗಲೂ ಈ ತ್ರಿಮೂರ್ತಿಗಳು ಇನ್ನೂ ಅಲ್ಲೇ ಪ್ರತಿಷ್ಠಾಪನಗೊಂಡಿದ್ದರು. ನಿಂಗೂ ಸೀದಾ ಒಳಗೆ ಹೋದ. ಕಳ್ಳ ಪಡಸಾಲೆಯಲ್ಲಿ ಮಲಗಿದ್ದ. ಮುಸುಕು ತೆಗೆದ, ಅಲುಗಿಸಿದ, ಕೂಗಿದ. ಏಳಲಿಲ್ಲ. ನಿಜವಾಗಿ ನಿದ್ದೆ ಹತ್ತಿದವನನ್ನು ಎಬ್ಬಿಸಬಹುದು. ಸುಳ್ಳು ಸುಳ್ಳೇ ನಿದ್ದೆ ಮಾಡುವಂತೆ ಬಿದ್ದವನನ್ನು ಎಬ್ಬಿಸುವುದು ಹೇಗೆ? ಆದರೂ ನಿಂಗೂ ಜಾಣ. “ಯಾಕೆ ಗುಡಸೀಕರ ಈ ಕಡೆ ಬಂದನಲ್ಲಾ?” ಎಂದ ಕೂಡಲೇ ಕಳ್ಳ ಕಿತ್ತುಕೊಂಡೆದ್ದ. ಎದ್ದನಲ್ಲಾ, ನಿಂಗೂ ಚಪ್ಪಾಳೆ ತಟ್ಟಿ ನಗುತ್ತಿದ್ದುದನ್ನು ನೋಡಿದೊಡನೆ ಚೇಷ್ಟೆಯ ಅರಿವಾಯ್ತು. ತಾನೂ ನಕ್ಕ. ನಿಂಗೂ ಎಲ್ಲ ಗೊತ್ತಿದ್ದವರಂತೆ.
“ಸರಪಂಚ ದುರ್ಗಿಗೆ ಕೊಡಂತ ಎಷ್ಟು ರೊಕ್ಕ ಕೊಟ್ಟಾನೋ?”
ಅಂದ. ಕಳ್ಳ ಗಾಬರಿಯಾದ.
“ನಿನಗ ಯಾರ ಹೇಳಿದರೊ?”
“ಎಲ್ಲಾ ಗೊತ್ತೈತಿ ಹೇಳೊ”
ಕಳ್ಳನಿಗೂ ನಿಂಗೂನಿಗೂ ಅಕ್ಷರಶಃ “ಲಂಗೋಟಿ ಗೆಳೆತನ”. ನಿಂಗೂ ಇತ್ತೀಚೆ ಸೀರೆ ಉಟ್ಟಾಗಿನಿಂದ ಅದು ಇನ್ನೂ ಗಾಢವಾಗಿತ್ತು. ಆದ್ದರಿಂದ ಕಳ್ಳ ಊರವರಿಗೆ ನೂರಕ್ಕೆ ನೂರು ಸುಳ್ಳು ಹೇಳಿದರೆ ನಿಂಗೂನಿಗೆ ನೂರಕ್ಕೆ ಮೂರರಷ್ಟಾದರೂ ನಿಜ ಹೇಳುತ್ತಿದ್ದ. ಯಾವ್ಯಾವುದೋ ದುರ್ಬಲ ಕ್ಷಣಗಳಲ್ಲಿ ಏನೇನೋ ಕೊಡುವುದಾಗಿ ಕಳ್ಳ ಭರವಸೆ ಕೊಟ್ಟಿದ್ದ. ಅವುಗಳನ್ನು ನಿಂಗೂ ನಂಬುತ್ತಿರಲಿಲ್ಲ. ಆದರೂ ಪರಸ್ಪರ ಕಂಡಾಗ ಇಬ್ಬರ ಅಂತಃಕರಣವೂ ಮಾತಿಗೆ ಮೀರಿದ ಒಂದು ಥರದಲ್ಲಿ ಮಿಡಿಯುತ್ತಿತ್ತು.
ಕಳ್ಳ ಗುಡಸೀಕರ ದುರ್ಗಿಗೆ ಕೊಡಲು ಹೇಳಿದ ಹಣದ ವಿಚಾರವಾಗಿ ನಿಜವನ್ನೇ ಹೇಳಿದ. ಆದರೆ ಹತ್ತರ ಬದಲು ಐದು ರೂಪಾಯಿಯೆಂದು ಹೇಳಿದ, ಅಷ್ಟೆ. ಇವನ ಒಳಗನ್ನು ಒಡನುಡಿಸುವ ತಂತ್ರ ನಿಂಗೂನಿಗೂ ಗೊತ್ತು. ಹತ್ತೆಂದು ಹೇಳಿಸಿದ. ಆಗಲೂ ನಿಂಗು ನಂಬದಿದ್ದಾಗ ಐದರ ಎರಡು ನೋಟು ಕಿಸೆಯಿಂದ ತೆಗೆದು ತೋರಿಸಿ ಗಪ್ಪನೆ ಮತ್ತೆ ಕಿಸೆಗೇ ಇಳಿಸಿದ. ನಿಂಗೂನ ಬಾಯಲ್ಲಿ ನೀರೂರಿತು.
“ಏ ಕಳ್ಳ ನನಗೊಂದು ಬಾಡಿ (ಬ್ರೇಸಿಯರ್) ಕೊಡಿಸಲೇ”
ಎಂದು ಹೇಳುತ್ತ ಸರ್ರನೆ ಸರಿದು ಸಲಿಗೆಯಿಂದ ಅವನ ಹೆಗಲ ಮೇಲೆ ಕೈಹಾಕಿ ಅಂಗಲಾಚಿದ. ಕಳ್ಳನಿಗೆ ದಿಗಿಲಾಯಿತು. “ಛೇ, ತಗಿಯೋ ನಿನ!” ಎಂದು ದೂರ ಸರಿಸಲು ನೋಡಿದ. ನಿಂಗೂ ತಾನೇ ದೂರ ಸರಿದು,
“ನೋಡೋ ಬಾಡಿ ತಂದು ಕೊಟ್ಟೀ, ಬರೋಬರಿ. ಇಲ್ಲದಿದ್ದರ ಗುಡಸೀಕರಗೂ ಹೇಳತೀನಿ. ದುರ್ಗಿಗೂ ಹೇಳ್ತಿನ್ನೋಡು.”
ಅಂದ. ಈಗ ಕಳ್ಳ ದಾರಿಗೆ ಬರಲೇ ಬೇಕಾಯಿತು.
ಬಾಡಿ ಅಂದರೇನೆಂದು ಕೇಳಿದ. ಬಾಡಿ ತರಿಸುವ ವಿಚಾರ ನಿಂಗೂನಿಗೂ ಇಂದು ನಿನ್ನಿನದಲ್ಲ. ಹಿಂದೆ ರಮೇಸ ಇದರ ವಿಚಾರವಾಗಿ ಅರ್ಧಗಂಟೆ ವರ್ಣಿಸಿ ಬೆಳಗಾವಿಯ ಹುಡುಗಿಯರೆಲ್ಲ ಇಂಥ ಫ್ಯಾಷನ್ ಮಾಡುತ್ತಾರೆಂದು ಹೇಳಿದ್ದ. “ನೀನೂ ಹಂಗಿರಬೇಕೋ ನಿಂಗೂ” ಎಂದೂ ಅಂದಿದ್ದ. ಒಂದು ರೂಪಾಯಿ ರಮೇಸನಿಗೆ ಅವ ಬೆಳಗಾವಿಗೆ ಹೋಗುವಾಗ ಕೊಟ್ಟು “ಅದನ್ನು ಕೊಂಡು ತಾ” ಅಂದಿದ್ದ. ರಮೇಸ ಬಾಡಿ ತರದೆ, ಪೇಪರಲ್ಲಿಯ ಅದರ ಚಿತ್ರ ತಂದುಕೊಟ್ಟಿದ್ದ. ಅದನ್ನು ಏಳೆಂಟು ಮಡಿಕೆ ಮಡಿಚಿ ಸದಾ ತನ್ನ ಮಲಿಕಟ್ಟಿನಲ್ಲೇ ಇಟ್ಟಿರುತ್ತಿದ್ದ. ಕಳ್ಳ ಬಾಡಿ ಅಂದರೇನೆಂದು ಕೇಳಿದನಲ್ಲ, ಕೂಡಲೇ ಅದನ್ನು ತೆಗೆದು ತೋರಿಸಿದ. ಕಳ್ಳನಿಗೆ ನಗೆ ತಡೆಯಲಾಗಲಿಲ್ಲ. ನಿಂಗೂನಿಗೆ ಸ್ವಲ್ಪ ಮುಖಭಂಗವಾಯಿತು.
“ಯಾಕಲಾ, ನಾ ಇದನ್ನ ತೊಡೂದ ನಿನ್ನ ಮನಸ್ಸಿಗೆ ಬರಾಣಿಲ್ಲೇನು” ಅಂದ. ತಂದು ಕೊಡುವುದಾಗಿ ಕರಿಮಾಯಿಯ ಆಣೆ ಮಾಡಿ, ಹೊರಗೆ ಕಳಿಸಿದ. ಇನ್ನು ಈ ಹಣ ತನ್ನೊಬ್ಬನ ಋಣದಲ್ಲಿಲ್ಲ ಎಂದು ಖಾತ್ರಿಯಾಯ್ತು. ಎದ್ದು ಅಂಗೀ ಹಾಕಿಕೊಂಡು ಹೊರಬಂದ. ತ್ರಿಮೂರ್ತಿಗಳಿದ್ದರು. ಹೋಗಿ ಅವರನ್ನು ಸೇರಿಕೊಂಡ.
ಊರಂತೂರು ಬಣ್ಣ ಎರಚಾಡುತ್ತಿದ್ದರೆ ಈ ಮೆಂಬರ್ ಚತುಷ್ಟಯರು ಕೆರೆಯ ದಂಡೆಯ ಮೇಲೆ ಮೊಳಕಾಲ ಮೇಲೆ ಸುತ್ತ ಕೈಹೆಣೆದುಕೊಂಡು ಕೂತು, ಹತ್ತು ರೂಪಾಯಿಗಳನ್ನು ಹೇಗೆ ಹೇಗೆ ಖರ್ಚು ಮಾಡುವುದೆಂದು “ಮೀಟಿಂಗ್” ಮಾಡುತ್ತಿದ್ದರು.ಮುಂಜಾನೆಯ ಘಟನೆಯಿಂದಾಗಿ ಸರಪಂಚ ಬಣ್ಣದಲ್ಲಿ ಪಾಲ್ಗೊಳ್ಳಲಿಲ್ಲ. ಹತ್ತು ರೂಪಾಯಿಯಿಂದಾಗಿ ಮೆಂಬರರು ಪಾಲ್ಗೊಳ್ಳಲಿಲ್ಲ. ಪಾಲ್ಗೊಂಡರೆ ಎಲ್ಲಿ ಕಳ್ಳ ತಪ್ಪಿಸಿಕೊಂಡು ಹೋಗುತ್ತಾನೋ ಎಂದು ಉಳಿದವರಿಗೆ ದಿಗಿಲು.
ಆಯ್ತು, ಹೊತ್ತು ಮುಳುಗೋ ತನಕ ಅಲ್ಲೇ ಕೂತು, ಐದು ರೂಪಾಯಿಗೆ ಸೆರೆ ಕುಡಿಯುವುದೆಂದೂ ಒಂದನೇ ತೀರ್ಮಾನವಾಯಿತು. ಆದರೆ ದುರ್ಗಿಗೆ ಕೊಡುವುದು ಹೇಗೆ? ಲಗಮವ್ವನಿಗೆ ಗೊತ್ತಾದರೆ ಪೂಜೆ ಮಾಡದೆ ಬಿಡುವ ಹೆಂಗಸಲ್ಲ. ಆದ್ದರಿಂದ ಅವಳು ಹೊರಗೆ ಹೋದಾಗ ದುರ್ಗಿಗೆ ಕೊಡಬೇಕೆಂದೂ ಆದರೆ ಹಾಗೆ ಕೊಡುವಾಗ ಉಳಿದ ಮೂವರೂ ಅಲ್ಲಿಯೇ ಹಾಜರಿರತಕ್ಕದೆಂದೂ ಎರಡನೇ ತೀರ್ಮಾನವಾಯಿತು. ಅಲ್ಲದೆ ದುರ್ಗಿಯ ಜೊತೆ ಒಂದೆರಡು ಮಾತು ಹೆಚ್ಚಾಗಿ ಆಡುವ ಅವಕಾಶವನ್ನು ಸಿದರಾಮನಿಗೆ ಸರ್ವಾನುಮತದಿಂದ ಕಲ್ಪಿಸಲಾಯಿತು.
ಸಾತೀರ ಮೇಲಿನ ತೀರ್ಮಾನ ಒಪ್ಪಿಕೊಂಡರೂ ಅವನ ತಲೆಯಲ್ಲಿ ಹುಳುವಿನಂತೆ ಇನ್ನೊಂದು ವಿಚಾರ ಕೊರೆಯುತ್ತಿತ್ತು. ಐದು ರೂಪಾಯೆಂದರೆ ಸಣ್ಣ ಬಾಬತ್ತಲ್ಲ. ಕೊಡುವುದೇ ಹೌದಂತೆ ಹಾಗೆ ಕೊಟ್ಟದ್ದೇ ಆದರೆ ದುರ್ಗಿ ಯಾವುದಕ್ಕೂ ಒಪ್ಪಿಕೊಳ್ಳುವುದರಲ್ಲಿ ಸಂಶಯವಿಲ್ಲ.ಅವಳ ಒಪ್ಪಿಗೆಯನ್ನು ಯಾಕೆ ಸರಿಯಾಗಿ ಉಪಯೋಗಿಸಬಾರದು? ಎಂದುಕೊಂಡ.
“ನೋಡ್ರೋ, ಕೊಡೋದು ಖರೆ ಅಂದಮ್ಯಾಲೆ ಲಗಮವ್ವನ ಮನ್ಯಾಗಽ ಯಾಕ ಕೊಡಬೇಕು? ದುರ್ಗೀನ ಕರಿಮಾಯಿ ಗುಡೀ ಹಿಂದ ಕರಕೊಂಡು ಹೋಗಿ ನಾಕೂ ಮಂದಿ ಕೂಡಿ ಕೊಟ್ಟರ ಹೆಂಗ?”
ಅಂದ. ಸಾತೀರನ ಮನಸ್ಸಿನ ಹುಳಿಯ ವಾಸನೆ ಎಲ್ಲರ ಮೂಗಿಗೂ ತಾಕಿತು. ಎಲ್ಲರಿಗೂ ಸರಿಯೆನ್ನಿಸಿ ರೋಮಾಂಚನಗೊಂಡರು. ಆದರೆ ರಮೇಸ ಒಂದು ತಿದ್ದುಪಡಿ ಮುಂದಿಟ್ಟ. ಐದು ರೂಪಾಯಿ ಸಿದರಾಮ ಒಬ್ಬನೇ ಕೊಡುವುದರ ಬದಲು ಚಿಲ್ಲರೆ ಮಾಡಿಸಿ, ಒಬ್ಬೊಬ್ಬರು ಒಂದೊಂದು ರೂಪಾಯಿ ಕೊಡಬೇಕೆಂದೂ, ಸಿದರಾಮ ಎರಡು ರೂಪಾಯಿ ಕೊಡುವುದೆಂದೂ ಸೂಚಿಸಿದ. ಸದರಿ ಕಳ್ಳನೇ ಮೊದಲು ದುರ್ಗಿಯನ್ನು ಸಾಧ್ಯವಾದರೆ ಹಿಡಿಯುದೆಂಬ ತಿದ್ದುಪಡಿಯೊಂದಿಗೆ ಒಪ್ಪಿ ಎದ್ದರು.
ಆಗಷ್ಟೇ ರಾತ್ರಿಯಾಗಿತ್ತು. ಜನ ಅಲ್ಲಲ್ಲಿ ಕಟ್ಟೆಯ ಮೇಲೆ ಕುಳಿತು ಅಂದಿನ ಬಣ್ಣದ ಮೋಜುಗಳನ್ನು ಮಾತಾಡಿಕೊಂಡು ನಗುತ್ತಿದ್ದರು. ಕೆಲವರು ಗುಡಸೀಕರ ಬಾಳುನ ಮಗನನ್ನು ಹೊಡೆದ ಸುದ್ದಿ ಮಾತಾಡುತ್ತಿದ್ದನು. ಈ ಚತುಷ್ಟಯರು ಬಸೆಟ್ಟಿಯ ಅಂಗಡಿಯಲ್ಲಿ ಐದರ ಎರಡೂ ನೋಟು ಕೊಟ್ಟು ಒಂದೊಂದರ ಹತ್ತು ನೋಟಾಗಿಸಿಕೊಂಡರು. ಆ ಹತ್ತನ್ನೂ ಸಿದರಾಮ ಕಿಸೆಯಲ್ಲಿಟ್ಟುಕೊಂಡ. ಲಗಮವ್ವನ ಮನೆಯ ಕಡೆ ಚಿತ್ತೈಸಿದರು.
ಲಗಮವ್ವನ ಮನೆ ಕಂ ಬಾರಿನಲ್ಲಿ ಆಗಲೇ ನಿಂಗೂ ಕೂತಿದ್ದ, ಇವರ ದಾರಿ ನೋಡುತ್ತ. “ಇಷ್ಟ ಯಾಕ ತಡಾ ಮಾಡಿದಿರೋ? ಬರ್ರಿ ಬರ್ರಿ” ಎನ್ನುತ್ತ ಅವನೇ ಇವರನ್ನು ಸ್ವಾಗತಿಸಿದ. ಕಳ್ಳನ ಜೀವ ಹುಳ್ಳುಳ್ಳಗಾಯಿತು. ತೋರಗೊಡದೆ ಒಳಹೊಕ್ಕ. ಚಾಪೆಯ ಮೇಲೆ ನಾಲ್ವರೂ ಕೂತರು. ನಾಲ್ವರ ಕಣ್ಣುಗಳೂ ಟಕಮಕ ದುರ್ಗಿಯನ್ನೇ ಹುಡುಕುತ್ತಿದ್ದವು. ಲಗಮವ್ವ “ಏನ್ರೋ?” ಅಂದಳು. ಕಳ್ಳ ಧೈರ್ಯದಿಂದ ಹೇಳಿದ.
“ನಾಕ ಕಾಯಿ ಸೆರೆ ಕೊಡಬೇ”
“ಮೊದಲ ರೊಕ್ಕಾ ಕೊಡು”
“ನಾವೆಲ್ಲಿ ಓಡಿಹೋಗ್ತೀವೇನಬೆ?”
ಎಂದ ಕಳ್ಳ;
“ಹೆಂಗೊ ಸರಪಂಚ ಕೊಟ್ಟಾನಲ್ಲ, ತಗದ ಬಿಸಾಕಲೇ”
ಅಂದ ನಿಂಗೂ. ಕಳ್ಳನಿಗೆ ಇನ್ನು ಗಾಬರಿಯಾದರೆ ಉಳಿದವರಿಗೆ ದಿಗಿಲಾಯಿತು. ನಾಲ್ವರ ಐದು ರೂಪಾಯಿ ಕೊಟ್ಟು ಐದು ಕಾಯಿ ತರಿಸಿದ. ನಿಂಗೂನಿಗೆ ಒಂದನ್ನ ಕೊಟ್ಟರು. ಅವನು ಕಳ್ಳನ ಬಳಿಯೇ ಕೂತು ಕುಡಿಯತೊಡಗಿದ. ಸಾತೀರ ಕಿಸೆಯಲ್ಲಿಯ ಸಿಗರೇಟು ಪಾಕೀಟು ತೆಗೆದು, ಅದರಲ್ಲಿಯೇ ಸೇದಿಬಿಟ್ಟ ಒಂದು ಸಿಗರೇಟು ತುಂಡು ತೆಗೆದು ಹೊತ್ತಿಸಿದ. ಒಂದನ್ನು ಕಲ್ಳನಿಗಿತ್ತ. ಸಾಮಾನ್ಯವಾಗಿ ಗುಡಸೀಕರ ಸೇದಿ ಬಿಟ್ಟ ತುಂಡುಗಳೆಲ್ಲ ಸಾತೀರನ ಬಳಿಯೇ ಇರುತ್ತಿದ್ದವು. ಅಷ್ಟರಲ್ಲಿ ದುರ್ಗಿ ಬಂದಳು. ಎಲ್ಲರಿಗೂ ಹುರುಪು ಬಂತು. ರಮೇಸ ಮೆರಮಿಂಡರೂ ಅಂಗಲಾಚಿ ತಲಾ ಒಂದೊಂದು ತುಂಡು ಪಡೆದು ಹೊತ್ತಿಸಿದರು.
ಕಾಯಿ ಬರಿದಾಗುತ್ತ ಬಂದಂತೆ ಅವರ ತಲೆ ನಾಲಿಗೆಗಳ ಸಮತೋಲ ತಪ್ಪತೊಡಗಿತು. ಈ ಮಧ್ಯೆ ಕಳ್ಳ ಏನೇನೋ ನೆಪದಿಂದ ದುರ್ಗಿಯ ಬಳಿ ಹೋಗಿ ತನ್ನಲ್ಲಿದ್ದ ನೋಟುಗಳನ್ನು ತೋರಿಸಿ ಬಂದಿದ್ದ. ಸಾತೀರ ತಾನೂ ಒಮ್ಮೆ ತೋರಿಸಿ ಬರುತ್ತೇನೆ ಕೊಡು ಎಂದು ಕೈ ಸನ್ನೆಯಿಂದಲೇ ಕೇಳಿದ. ಸನ್ನೆಯಿಂದಲೇ ಇವನೂ ನಿರಾಕರಿಸಿದ. ಹೊರಗಡೆ ಒಂದಿಬ್ಬರು ಗಿರಾಕಿಗಳು ಕೂತಿದ್ದರು. ಒಳಹೊರಗೆ ಓಡಾಡುತ್ತಿದ್ದ ದುರ್ಗಿ ಒಬ್ಬೊಬ್ಬರಿಗೆ ಒಂದೊಂದು ಥರ ಕಂಡಳು.
ಕಾಯಿಗಳು ಪೂರ್ತಿ ಬರಿದಾದಮೇಲೆ ಮುಂದೇನು ಎಂದು ಗುಸು ಗುಸು ನಡೆಯಿತು. ಗುಡಿಯ ಹಿಂದೆ ಬರಲು ಕಳ್ಳನೇ ದುರ್ಗಿಗೆ ಹೇಳಬೇಕೆಂದು ಮೂವರೂ ಸೂಚಿಸಿದರು. ಕಳ್ಳನಿಗೆ, ಅದೇನೋ ಇಷ್ಟದ ಕೆಲಸವೆ. ಆದರೆ ಭಯ. ಹೇಗೂ ನಿಂಗೂನಿಗೆ ಕುಡಿಸಿದ್ದರಲ್ಲ. ಕಳ್ಳ ದುರ್ಗಿಗೆ ಹೇಳುವ ಜವಾಬ್ದಾರಿಯನ್ನು ನಿಂಗೂಗೆ ಹೇಳಿದ. ನಿಂಗೂ ಗುಡಿಯ ಹಿಂದಿನ ಪೌಳಿಯಲ್ಲಿ ನೀವೆಲ್ಲ ಕಾದಿರಬೇಕೆಂದೂ ಅಲ್ಲಿಗೆ ದುರ್ಗಿಯೊಬ್ಬಳನ್ನೇ ಕಳಿಸುವುದಾಗಿಯೂ ಹೇಳಿದ, ಎದ್ದರು.
ಹೊರಗಡೆ ಮಂದ ಬೆಳ್ದಿಂಗಳಿದ್ದರೂ ಪೌಳಿಯಲ್ಲಿ ಸುತ್ತ ಮರಗಳಿಂದಾಗಿ ಕತ್ತಲೆಯೇ ಇತ್ತು. ದುರ್ಗಿ ಈಗ ಬರುತ್ತಾಳೆ. ಆಗ ಬರುತ್ತಾಳೆಂದು ನೆನೆನೆನೆದು ನಾಲ್ವರ ತೊಡೆ ಬಿಗಿದು ಮೈ ಗರಂ ಆದವು. ರಮೇಶ ಓಡಿಹೋಗಿ ನಾಕೈದು ಸಲ ಒಂದ ಮಾಡಿ ಬಂದ. ಕಳ್ಳನಿನ್ನೂ ಎಲ್ಲರ ಕೈಗೆ ರೂಪಾಯಿ ಕೊಟ್ಟಿರಲಿಲ್ಲ. ಅವಳು ಬಂದಕೂಡಲೇ ಕೊಡುವುದಾಗಿ ಹೇಳಿ ಕಾಲ ತಳ್ಳುತ್ತಿದ್ದ. ಬಂದಳು!
ಕಳ್ಳ ಅವಸರದಲ್ಲಿ ಎಲ್ಲರಿಗೂ ಒಂದೊಂದು ರೂಪಾಯಿ ಕೊಟ್ಟ. ತಾನೂ ಒಂದನ್ನು ಹಿಡಿದುಕೊಂಡು ಇನ್ನೊಂದನ್ನು ಜೇಬಿನಲ್ಲಿ ಬಿಟ್ಟ. ಅವಳು ಸಮೀಪ ಬರುವುದಷ್ಟೇ ತಡ, “ತಗೋ ದುರ್ಗಿ” ಎಂದು ಕಳ್ಳ ಕೈ ಚಾಚಿದ. ಮುಂದೆ ತಾನು ಮಾಡಲಿರುವುದನ್ನು ನೆನೆದು ಆಗಲೇ ಅವನ ಬಾಯಿ ಒಣಗಿತ್ತು. ರಮೇಶ ಮುಂದೆ ಬಂದು “ಗುಡಸೀಕರ ಕೊಟ್ಟದ್ದಲ್ಲ, ನಂದು, ತಗೋ ದುರ್ಗಿ” ಎಂದು ಹಲ್ಲುಕಿರಿದ. ಆ ಕತ್ತಲೆಯಲ್ಲೂ ಅವನ ಹಲ್ಲುಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಸಾತೀರ, ಮೆರಮಿಂಡ ಹಾಗೇ ಕೈಚಾಚಿದರು. ಅಷ್ಟೂ ಹಣ ತಕ್ಕೊಂಡು ಸುಮ್ಮನೇ ನಿಂತಳು ಯಾರೊಬ್ಬರಿಗೂ ಧೈರ್ಯ ಸಾಲದು. ಸುಮ್ಮನೆ ಹಿಂತಿರುಗಿದಳು. ಇನ್ನೇನು ಹೋಗುತ್ತಾಳಲ್ಲಾ ಎಂದವನೇ ಸಾತೀರ ಹಿಂದಿನಿಂದ ಹಾರಿ ತೆಕ್ಕೆ ಹಾದ. ಕೂಡಲೇ ಕಳ್ಳ, ರಮೇಸ ಹಾರಿ ಬಂದು ತಮತಮಗೆ ಅನುಕೂಲವಾದ ಚಪಲಗಳನ್ನು ತೀರಿಸಿಕೊಳ್ಳಲಿದ್ದರು. ಅಷ್ಟರಲ್ಲಿ ಲಗಮವ್ವನ ದನಿ ಕೇಳಿಸಿತು.
“ಥೂ ತುಡುಗು ಭಾಡೇರ್‍ಯಾ. ದುರ್ಗಿಗೆ ಕೊಡಂತ ಗುಡಸ್ಯಾ ಹತ್ತು ರೂಪಾಯಿ ಕೊಟ್ಟರ ಕುಡದ ಉಚ್ಚೀ ಹೋದಿರಿ. ಹೌಂದಲ್ಲ ಥೂ!
ಎನ್ನುತ್ತ ಉಗಲಿದಳು. ನಿಂಗೂ ಹೋ ಹೋ ಹೋ ಎಂದು ಕೈಬಡಿದು ನಗುತ್ತ ಲಗಮವ್ವನತ್ತ ಓಡಿಹೋದ. ನಾಲ್ವರಿಗೂ ಈಗ ತಿಳಿಯಿತು, ತಮ್ಮ ಹತ್ತಿರ ಬಂದವಳು ದುರ್ಗಿಯಲ್ಲ, ನಿಂಗೂ ಎಂದು. ಅವಳು ಯಾವಾಗ “ತಡೀರಿ ಗುಡಿಸ್ಯಾಗ ಹೇಳತೇನ” ಎಂದು ಹೇಳುತ್ತ ಇವರ ಕಡೆ ನುಗ್ಗಿದಳೋ, ನಾಲ್ವರೂ ಹೆದರಿ ಕಾಲಿಗೆ ಬುದ್ಧಿ ಹೇಳಿದರು.
ನಿಂಗೂನಿಗೆ ಸಿಕ್ಕಿದ್ದು ಒಟ್ಟು ನಾಲ್ಕು ರೂಪಾಯಿ. ಮೂರನ್ನು ಲಗಮವ್ವನಿಗೆ ಕೊಟ್ಟು ಒಂದನ್ನು ತಾನಿಟ್ಟುಕೊಂಡಿದ್ದ. ಆದರೆ ಆಮೇಲೆ ದುರ್ಗಿಯನ್ನು ನೋಡಿ ಅವನಿಗೇನು ತಿಳಿಯಿತೋ, ಎಷ್ಟೆಂದರೂ ಹೆಂಗರುಳು. ತಾನಿಟ್ಟುಕೊಂಡ ರೂಪಾಯಿಯನ್ನು ಲಗಮವ್ವನಿಗೆ ತಿಳಿಯದಂತೆ ದುರ್ಗಿದೆ ಕೊಟ್ಟ. ಅವಳು ಅದನ್ನು ತನ್ನ ಮಲಿಕಟ್ಟಿನಲ್ಲಿ ಬಚ್ಚಿಟ್ಟುಕೊಂಡಳು.
ಚತುಷ್ಟಯರು ಓಡೋಡುತ್ತ ಪಂಚಾಯ್ತಿ ಆಫೀಸಿಗೆ ಬಂದಾಗ ಗುಡಸೀಕರ ಒಬ್ಬನೇ ಕುಡಿಯುತ್ತ ಕೂತಿದ್ದ. ನಾಲ್ವರೂ ತೊಯ್ಸಿಕೊಂಡ ಕಾಗೆಗಳ ಹಾಗೆ ಮುದುಡಿ ಕೂತರು. ಯಾರೂ ಮಾತಾಡಲಿಲ್ಲ. ಗುಡಸೀಕರ ಮಾತಾಡದ್ದರಿಂದ ನಿಂಗೂ ಎಲ್ಲವನ್ನೂ ಹೇಳಿದ್ದಾನೇನೋ ಎಂದು ಕಳ್ಳನಿಗೆ ಸಂಶಯ ಬಂತು. ಸಾತೀರ ತನ್ನ ಪಾಡಿಗೆ ತಾನು ಗುಡಸೀಕರ ಎಸೆದ ಸಿಗರೇಟನ್ನು ಎಳೆಯುತ್ತಿದ್ದ. ಬಹಳ ಹೊತ್ತದ ಮೇಲೆ ಗುಡಸೀಕರನೇ ಕೇಳಿದ-
“ಕಳ್ಳಾ, ದುರ್ಗಿಗಿ ರೊಕ್ಕಾ ಕೊಟ್ಟೇನೋ?”
“ಕೊಟ್ಟೆ. ಆದರ ಲಗಮವ್ವನ ಸೊಕ್ಕ ಅಳತಿ ಮೀರಿತ್ರಿ”
ಎಂದ ಗಾಬರಿಯಿಂದ ರೊಕ್ಕದ ವಿಷಯ ಮರೆಹಾಕುತ್ತ. ಮೆರಮಿಂಡ ಬಾಯಿಹಾಕಿದ.
“ಛೇ ಛೇ ಕಂಡಾಪಟಿ ಅಗ್ಗದ ಹೆಂಗಸದು. ಹೇಳಬಾರದ್ದ ನಾ ಏನ ಹೇಳ್ದೆ. ಸರಪಂಚ ಸಾಹೇಬರ ಮ್ಯಾಲ ನೀ ಹಾಂಗ ಪದಾ ಮಾಡಿದ್ದ ತಪ್ಪಂತ ಹೇಳಿದರ ಮೈಯಾಗ ದೆವ್ವ ಬಂದಾಂಗ ಕೈ ಬಾಯಿ ಮಾಡಿ ಬಲ್ಹಾಂಗ ಮಾತಾಡಾಕ ಹತ್ತಿದ್ಲು!” ರಮೇಶನಿಗೆ ಇಷ್ಟು ನೆಪ ಸಾಕಾಯಿತು.
“ಎಸೆಸ್. ಪಾಪ ಸಿದರಾಮ ಸರಪಂಚರ ಕೊಟ್ಟಾರ ತಗೋವಾ ಅಂತ ಹತ್ತು ರೂಪಾಯಿ ಕೊಟ್ಟರ ಐದು ರೂಪಾಯಿ ಅಲ್ಲೇನ? ನಿನ್ನ ಸರಪಂಚರ ನೀರ ಬಲ್ಲಿನ್ಹೋಗ” ಅಂತ ಒದರ್‍ಯಾಡ್ಯಾಕ ಹತ್ತಿದ್ದು!”
ತಾನಿನ್ನೂ ಮಾತಾಡಲಿಲ್ಲವಲ್ಲಾ ಎಂದು ಸಾತೀರ ಗಮನಿಸಿಕೊಂಡ-
“ಗೌಡ ಇಪ್ಪತ್ತ ಕೊಟ್ಟಾನ, ನಿನ್ನ ಸರಪಂಚ ಐದಽ ಅಲ್ಲೇನು ಕೊಟ್ಟಿದ್ದು? ಅಂದ್ಲು!”
ಅಂದ. ಎಲ್ಲಿ ಗುಡಸೀಕರ ಹೋಗಿ ಲಗಮವ್ವನ ಜೊತೆ ಜಗಳಾಡುವನೋ ಎಂದು- “ಬರಲಿ ನಿಮ್ಮ ಸರಪಂಚ ನನ್ನ ಹಂತ್ಯಾಕ. ಚೆಲೋಹಾಂಗ ಬುದ್ಧಿ ಕಲಿಸಿ ಕಳಸತೇನಂತಾಳಲಾ!”
ಎಂದೂ ಕಳ್ಳ ಸೇರಿಸಿದ. ಗುಡಸೀಕರ ಬಾಯಿ ತೆರೆಯಲಿಕ್ಕೆ ಅವಕಾಶ ಕೊಟ್ತರೆ ಕೆಟ್ಟೇವೆಂಬಂತೆ ಒಬ್ಬರಾದ ಮೇಲೆ ಒಬ್ಬರು ಬಿಟ್ಟೂ ಬಿಡದೆ ಮಾತಾಡುತ್ತಿದ್ದರು. ಕೊನೆಗೆ ಗುಡಸೀಕರ-
“ಅಲ್ರೊ, ದುರ್ಗೀ ಕೈಯಾಗ ಕೊಡಂದರ ಲಗಮೀ ಕೈಯಾಗ ಯಾಕ ಕೊಟ್ಟಿರಿ?” ಎಂದು ಕೇಳಿದ ಅವರು ಹೇಳಿದ್ದನ್ನೆಲ್ಲ ನಂಬುತ್ತ.
“ಆಕೀಗೇ ಕೊಡಬೇಕಂತ ಹೋಗಿದ್ದಿವಿ. ಕರೆದ ಕೊಡಬೇಕಂದರ ಈ ಮುದಿರಾಚಿ ಬಂದ ಕೈ ಒಡ್ಡಿದಳ್ರಿ”
ಎಂದು ಇನ್ನೊಂದು ಸುಳ್ಳೆಸೆದ ಕಳ್ಳ. ಆದರೆ ಗುಡಸೀಕರ ನಂಬಿದನೆಂದು ಇವರಿಗಿನ್ನೂ ಖಾತ್ರಿಯಾಗಲೊಲ್ಲದು. ಬಾಯಿಗೆ ಬಂದಂತೆ ಲಗಮವ್ವನನ್ನು ಬೈದರು. ಗೌಡ, ದತ್ತಪ್ಪನ ಹೆಸರು ತಂದರು. ಮಿಕ್ಕವರು ಮಾತಿಗೊಮ್ಮೆ ಕಳ್ಳನ ಸಜ್ಜನಿಕೆ ಹೊಗಳಿದರು. ಕಳ್ಳ ಇವರನ್ನು ಹೊಗಳಿದ. ಕುಡಿದ ದೇಸೀ ದೇವರ ಪ್ರಭಾವವೋ, ಸರಪಂಚ ತಮ್ಮನ್ನು ನಂಬಲಿಲ್ಲವೆಂಬ ಭಯವೋ ಅಕಸ್ಮಾತ್ ಗೊತ್ತಾದಾಗಲೂ ತಮ್ಮ ಮೇಲೆ ಬರಬಾರದೆಂಬ ಮುಂಜಾಗ್ರತೆಯೋ ಅಂತೂ ಮಾತಾಡಿದರು. ಮಾತಾಡಿ ಮಾತಾಡಿ ನಿಲ್ಲಿಸಿದರು. ಕೊನೆಗೆ ಗುಡಸೀಕರ ಹೇಳಿದ:
“ಈ ಲಗಮವ್ವನ ನೀರ ಇಳಿಸಬೇಕಲ್ಲಾ….”
ನಾಲ್ವರೂ ಈಗ ಹಗುರಾದರು. ಗುಡಸೀಕರ ನಂಬಿದ್ದು ಈಗ ಖಾತ್ರಿಯಾಯಿತು. ಒಬ್ಬ ಅವಳನ್ನು ಹೊಡೆಯೋಣವೆಂದ. ದುರ್ಗಿಯನ್ನು ಅಪಹರಿಸೋಣವೆಂದು ಇನ್ನೊಬ್ಬ, ಅವಳ ಸೆರೆ ತರೋಣವೆಂದು ಮಗದೊಬ್ಬ. ಇನ್ನು ಏನೇನೋ ಸೂಚನೆ ಬರುತ್ತಿದ್ದಾಗ ಗುಡಸೀಕರ ಒಂದು ವಿಚಾರ ಹೇಳಿದ.
“ನಾವೂ ಒಂದು ಸೇರೇದಂಗಡಿ ತಗದರ ಹೆಂಗ?”
‘ಓಹೋ, ಬೇಕಾದರ ಅಂಗಡ್ಯಾಗ ನಾ ಕೂರತೀನಿ.”
ಎಂದು ಮೆರೆಮಿಂಡ ಮುಂದ ಬಂದ. ರಮೇಸನಿಗಾಗಲೇ ರೋಮಾಂಚನಗಳೆದ್ದಿದ್ದವು.
“ಎಸೆಸ್, ಈ ಲಗಮಿ ಭಟ್ಟೀ ಸೆರೆ ಮಾರಿದರ, ನಾವು ಫಾರಿನ್ ಬ್ರಾಂಡಿ ಮಾರೋಣು!”
ಆದರೆ ಈ ವಿಚಾರ ಸಾತೀರನಿಗೆ ಸರಿಬರಲಿಲ್ಲ.
“ಒಂದ ಗುಟಕ ಬ್ರಾಂಡಿ ಯಾರ ಕುಡೀತಾರೊ? ಈಡಾಗಿ ಸಿಗುವಂಥಾದ್ದ ಏನರೆ ಹೇಳು”
ಎಂದ ಕೂಡಲೇ ಕಳ್ಳ.
“ಅದಕ್ಯಾಕ ಕಾಳಜೀ ಮಾಡತೀರೋ? ಬ್ರಾಂಡಿ ಒಳಗ ನಾವೂ ನೀರ ಹಾಕಿ ಈಡಮಾಡಿ ಮಾರೋಣು.”
ಎಂದೊಂದು ಪರಿಹಾರ ಸೂಚಿಸಿದ.
“ಎಸೆಸ್, ಫಾರಿನ್ ಬ್ರಾಂಡಿ ಅಂದ ನೀರ ಮಾರಿದರೂ ಮಂದಿ ತಗೋತಾರ. ನಾವು ಬರೇ ಒಂದ ಬಾಟ್ಲೀದಾಗ ಐದಾರ ನೂರ ರೂಪಾಯಿ ಅಗ್ಗದೀ ಸಹಜೀಕ ದುಡಿತೇವು”
ಎಂದು ರಮೇಸ ತನ್ನ ವ್ಯವಹಾರ ಬುದ್ಧಿ ಪ್ರದರ್ಶಿಸಿದ. ಇಷ್ಟಾಯಿತಲ್ಲ, ಕಳ್ಳ ಗುಡಸೀಕರನನ್ನೇ ನೋಡುತ್ತ-
“ಅಂಗಡ್ಯಾಗ ಯಾರನ್ನ ಕುಂದರ್ಸೋಣಂದ್ರಿ?” ಎಂದ. ತನಗೇ ಹೇಳುತ್ತಾನೆಂದು. ಗುಡಸೀಕರ ನಿಧಾನವಾಗಿ ಸಿಗರೇಟು ಸೇದುತ್ತ ಹೇಳಿದ:
“ಬೆಳಗಾವಿಂದ ಒಬ್ಬಾಕಿ ಚಿಮಣಾನ ತರೋಣು. ಅಂಗಡ್ಯಾಗಿಡೋಣು.”
ಬೆಳಗಾವಿ ಎನ್ನುತ್ತಲೂ ರಮೇಸ ಎಷ್ಟು ಉತ್ಸಾಹ ತಾಳಿದನೆಂದರೆ ಕೂತವನು ಎದ್ದು ಗುಡಸೀಕರನ ಬಳಿ ಹೋಗಿ.
“ಸಾಹೇಬರ, ಸಾಹೇಬರ, ಕಾರಹುಣವೀ ದಿನ ಹೆಂಗೂ ಅವರು ಚಿಮನಾನ ತರತಾರಲ್ಲ ಆಗಽ ಸುರು ಮಾಡೋಣ್ರಿ.”
ಅಂದ. ಗುಡಸೀಕರನ ತಲೆಯ ತೀವ್ರತೆ ಇನ್ನೂ ಜಾಸ್ತಿಯಾಯ್ತು.
“ಚಿಮಣಾನ ಯಾಕ ತರ್‍ತಾರೋ?”
“ಆ ದಿನ ಆಟ ಗೀಟ ಮಾಡ್ತಾರಲ್ಲರಿ.”
ಗುಡಸೀಕರ ನಿಧಾನವಾಗಿ ಸಿಗರೇಟನ್ನೆಳೆದ. ವಿದೇಶೀ ಪರಮಾತ್ಮನನ್ನು ತನ್ನ ಜೀವಾತ್ಮದಲ್ಲಿ ಮೆಲ್ಲನೆ ಸುರಿದುಕೊಂಡು ಬಾಟ್ಲಿ ಖಾಲಿ ಮಾಡಿದ. ಸಮರಸ ಸಂಯೋಗವಾದಂತೆ ಆ ಈ ಕಡೆ ಅಡ್ಡಾಡುತ್ತಿದ್ದ ವಿಚಾರಗಳು ಏಕಮುಖವಾಗಿ ಸಂಘಟಿಸಿದವು. ತುಟಿ ಒರೆಸಿಕೊಂಡ. ಚತುಷ್ಟಯರು ಅವನ ಮುಖವನ್ನೇ ನೋಡುತ್ತಿದ್ದರು. ತನಗೆ ತಾನೇ ಒಮ್ಮೆ ತಲೆದೂಗಿ ಗತ್ತಿನಲ್ಲಿ ಕಚ್ಚಿಕೊಂಡಿದ್ದ ತುಟಿಗಳನ್ನು ಎರಡು ಮಾಡಿದ:
“ಅವರು ಆಟ ಮಾಡಲಿ. ಅಂದಽ ನಾವೂ ಒಂದ ನಾಟಕ ಮಾಡೋಣು. ಚಿಮಣಾ ನಮ್ಮಲ್ಲಿ ಬರಲಿ. ಅವರು ಬಯಲಿನಾಗ ಕುಣೀಲಿ. ನಾವು ಒಳ್ಳೇ ನಿವಳ ಥೇಟರ್ ಹಾಕಿ ಲೈಟ, ಲೌಡ್ ಸ್ಪೀಕರ್ ತಂದ ನಾಟಕ ಮಾಡೋಣು. ನಾಟಕ ಮುಗಿದಮ್ಯಾಲ ಚಿಮಣಾ ನಮ್ಮಲ್ಲೇ ಇರಲಿ. ಸೆರೇದಂಗಡಿ ಬ್ಯಾಡಾ. ಚಾದ ಅಂಗಡಿ ತಗದ ಕೊಡೋಣು. ಏನಂತೀರಿ?”
ತಾನು ಈ ತನಕ ಅನುಭವಿಸಿದ ಸೋಲು, ಅವಮಾನಗಳ ಸೇಡು ಈ ಉಪಾಯದಿಂದ ಸರಳಬಡ್ಡಿ, ಚಕ್ರಬಡ್ಡಿ ಸಮೇತ ತೀರಿದಂತಾಯಿತೋ! ಕಾರ ಹುಣ್ಣಿಮೆಯ ಬಯಲಾಟಕ್ಕೆ ಜನ ಹೋಗದೆ ತಮ್ಮ ನಾಟಕಕ್ಕೇ ಬಂದರೆ ಗೌಡನ ಕೊಂಬು ಮುರಿದಂತಾಯಿತೋ! ಚಿಮಣಾಳನ್ನು ತಂದು ಚಹದಂಗಡಿ ತೆರೆಯುವುದರಿಂದ ಲಗಮಿಯ ಸೊಕ್ಕು ಇಳಿದಂತಾಯಿತೋ! ಊರನ್ನು ಬೆಳಗಾವಿಯಾಗಿಸಲು ಪ್ರಥಮ ಹೆಜ್ಜೆ ಇಟ್ಟಂತಾಯಿತೋ! ಪುಳಕದ ಸೊಕ್ಕಿನಲ್ಲೇ ಮನೆಗೆ ಹೋದ.
ಊಟ ಮಾಡುವಾಗ ಅವನ ತಾಯಿ “ಏ ತಮ್ಮಾ, ಗಿರಿಜವ್ವಗ ಒಂದ ವರ ನೋಡಬೇಕಲ್ಲೋ. ಬೆಳದ ನಿಂತಾಳ. ಆಕಿ ವಾರಿಗೆಯವರಿಗೆಲ್ಲಾ ಮದಿವ್ಯಾಗಿ ಮಕ್ಕಳಾಗ್ಯಾವ. ಹಿರಿಯಾ ಇದ್ದಿದ್ದರ ಏನಾದರ ಒಂದ ಮಾಡ್ತಿದ್ದ. ಗೋಕಾಂವ್ಯಾಗ ಒಂದು ವರ ಐತೆಂತ….” ಹೀಗೆ ಏನೇನೋ ಹೇಳುತ್ತಿದ್ದಳು. ಅವನ ತಲೆಯಲ್ಲೀಗ ತಂಗಿಯ ಮದುವೆಯ ವಿಚಾರ ಸೇರುವುದು ಸಾಧ್ಯವೇ ಇರಲಿಲ್ಲ. ಹೇಳಿದ್ದಕ್ಕೆಲ್ಲ ಹಾಂ ಹೂಂ ಅಂದು ಮಹಡಿ ಹತ್ತಿದ.

ದುರ್ಗಿಯ ಕನಸು

ಗುಡಸೀಕರನ ತಲೆಯಲ್ಲಿ ಕಾರ ಹುಣ್ಣಿವೆ, ಚಹದಂಗಡಿಯ ಹುಳ ಕೊರೆಯುತ್ತಿದ್ದರೆ ಇತ್ತ ಆತ ಕೊಟ್ಟ ಒಂದು ರೂಪಾಯಿಯ ನೋಟು ದುರ್ಗಿಯ ಎಳೆಯ ಎದೆಯನ್ನು ಕೊರೆಯುತ್ತಿತ್ತು.
ಗುಡಸೀಕರ ಕೊಟ್ಟ ಹತ್ತರಲ್ಲಿ ಕೊನೆಗೆ ಒಂದು ರೂಪಾಯಿ ಅದೂ ನಿಂಗೂನ ದಯದಿಂದ ದುರ್ಗಿಗೆ ದಕ್ಕಿತ್ತು. ಅದನ್ನು ಮಲಿಕಟ್ಟಿಗೆ ಸೇರಿಸಿದೊಡನೆ ಹೊಸ ಪ್ರಾಯಕ್ಕಿಂತ ಈ ನೋಟಿನ ಭಾರವೇ ಹೆಚ್ಚಾಗಿ ಎದೆ ಬಿಗಿಯಿತು. ಹುಚ್ಚು ಹುಡುಗಿ ಗಾಳಿ ತುಂಬಿದ ಎಳೆಗರುವಿನಂತೆ ಒಳಗೊಮ್ಮೆ ಹೊರಗೊಮ್ಮೆ ವಿನಾಕಾರಣ ಅಡ್ಡಾಡಿದಳು. ಈಗಷ್ಟೆ ರೆಕ್ಕೆ ಮೂಡಿದ ಚಿಟ್ಟಿ ಅಕಾ ಅಲ್ಲಿ, ಇಕಾ ಇಲ್ಲಿ ಎಲೆ ಎಲೆಗೆ ಹೂ ಹೂವಿಗೆ ಮೇಲಕ್ಕೆ ಕೆಳಕ್ಕೆ ಹಾರಾಡುವಂತೆ ನೆಲಕ್ಕೆ ಕಾಲೂರದೆ ಹರಿದಾಡಿದಳು. ಲಗಮವ್ವನ ಕಣ್ಣು ತಪ್ಪಿಸಿ, ಕತ್ತಲಲ್ಲಿ ಕೈಹಾಕಿ ಆ ನೋಟು ಮುಟ್ಟಿ ಮುಟ್ಟಿ ನೋಡಿದಳು. ಆಯ್ ಶಿವನ; ಮೈ ಬಿಸಿಯೇರಿ ಅಂಗಾಲಿನಿಂದ ನೆತ್ತಿಯ ತನಕ ವಿಷ ಏರಿ, ಎದೆಕುಪ್ಪಸ ತಿಟತಿಟತಿಟ ಎನ್ನುತ್ತಿತ್ತು.
ಲಗಮವ್ವ ಊಟಕ್ಕೆ ಕರೆದರೆ ಬರೀ ಊಟದ ಅಭಿನಯ ಮಾಡಿ ಮಲಗಿದಳು. ಬಿಗಿದ ನರನರಗಳನ್ನು ಜಗ್ಗಿ ಜಗ್ಗಿ ಸಡಿಲ ಮಾಡಲೆಂಬಂತೆ ಒಡಮುರಿದು ಹಾಸಿಗೆಯ ತುಂಬ ತೋಳು ಕಾಲುಗಳನ್ನು ಉದ್ದುದ್ದಕ್ಕೆ ಚಾಚಿ ಆಕಳಿಸಿದಳು. ಈಜು ಬಾರದ ಪಾಪ; ಎಳೇ ಹುಡುಗಿ, ಬಿಸಿ ನೀರ ಹೊಳೆಯ ಮಹಾಪೂರದ ತಿರುಗಣಿಯ ಇಕ್ಕಟ್ಟಿನಲ್ಲಿ ಸಿಕ್ಕು ವಿಲಿವಿಲಿ ಒದ್ದಾಡಿದಳು. ಹಾಸಿಗೆಯಲ್ಲಿ ಅರಿಯದ ಬಾಲಿ, ಬೆನ್ನು ಮೇಲಾಗಿ ಬಿದ್ದುಕೊಂಡು, ನಾಕೈದು ಸಲ ಎದೆಯಿಂದ ತಲೆದಿಂಬು ಗುಮ್ಮಿಗುಮ್ಮಿ ಎದೆಯ ಘನ ಕರಗಿಸಲೆಳಸಿದಳು. ಹಗುರಾದಂತಾಗಿ ಹಾಗೇ ಬಿದ್ದುಕೊಂಡಳು. ನಿದ್ದೆಯಲ್ಲೊಂದು ಕನಸು ಕಂಡಳು:
ಬೆಳದಿಂಗಳ ಮಾಯೆ ಆವರಿಸಿ ಊರಂತೂರು ತೇಲುಗಣ್ಣು, ಮೇಲುಗಣ್ಣಾಗಿ ನಿದ್ರಿಸುತ್ತಿದ್ದಾಗ ಇವಳೊಬ್ಬಳೇ ಕಿಲಕಿಲ ನಗುತ್ತ ಕೆರೆಯ ದಂಡೆಯ ಬಂಡೆಗಳ ಮೇಲೆ ಥೈ ಥೈ ಥೈ ಗೆಜ್ಜೆಯ ಹೆಜ್ಜೆಯೂರಿ ಓಡಾಡುತ್ತಿರುವಾಗ ಗುಡಸೀಕರ ಬಂದು ಇವಳನ್ನು ಅಮಾತ ಎತ್ತಿ ಗೊಂಬೆಯಂತೆ ಮೇಲೆ ಹಾರಿಸಿ ಆಕಾಶದಲ್ಲಿ ಬಿಟ್ಟೊಡನೆ-
ಹೋ ಬಿದ್ದೆನೆಂಬಾಗ ಕೆಳಕ್ಕೆ ಹುಲ್ಲಿನ ಬಣಿವೆ-
ಧಪ್ಪೆಂದು ಅಂಗಾತ ಬಿದ್ದು ಎದೆ ಹೊಮ್ಮಿ ಕುಪ್ಪಸ ಹರಿದು
ಖೊಖ್ಖೊಖ್ಖ್ ಎಂದು ಬಯಲಾಟದ ರಾವಣನಂತೆ ನಗುತ್ತ ಸಿಗರೇಟು ಸೇದಿ
ಬಿಳಿಹೊಗೆ ಬಣಿವೆ ಸೇರಿ, ನೂರ್‍ಮಡಿಯಾಗಿ
ಬಣಿವೆ ತುಂಬ ಹೊಗೆಯಾಗಿ
ಊರ ತುಂಬಾಗಿ
ತನ್ನ ಮೈಮೇಲೆ ಯಾರೋ ಪಸಪಸ ತುಳಿಯುತ್ತ
ಚೆಂಡಾಟವಾಡುವಾಗ-ಎವ್ವಾ ಸತ್ತಿನೇ ಎಂದು
ಚೀರಿ-
-ಎಚ್ಚರಾಯ್ತು. ಎದೆ ಹಿಡಿದುಕೊಂಡು ಮೇಲೆದ್ದು ಕೂತಳು. ಕೆನ್ನೆ, ಕತ್ತಿನ ಮೇಲೆ, ಹಣೆ ಮೂಗಿನ ಮೇಲೆ ಮೂಡಿದ ಬೆವರನ್ನು ಒರೆಸಿಕೊಂಡಳು. ಹೋಗಿ ನೀರು ಕುಡಿದು ಬಂದಳು. ಪಕ್ಕದ ಗುಡಿಸಲಲ್ಲಿ ದೇವರೇಸಿ ಬಿಕ್ಕುತ್ತಿದ್ದುದು ಕೇಳಿಸಿತು.

ಪ್ರಶ್ನೋತ್ತರ ಮಾಸ್ತರ

ಗೌಡ ದಿನದಂತೆ ಒಂದು ದಿನ ಬೆಳಿಗ್ಗೆದ್ದು ಕೆರೆಯಲ್ಲಿ ಜಳಕ ಮಾಡಿ ಮನೆಗೆ ಬಂದ. ಅಂಗಳದಲ್ಲಿ ನಾಯೆಲ್ಲ್ಯಾ ಆಗಲೇ ಗಳೇ ಸಾಮಾನು ತಯಾರು ಮಾಡಿಕೊಂಡು ಎತ್ತುಹೂಡುತ್ತಿದ್ದ. ಗೌಡ ಅವನಿಗೆ “ಕೆಳಗಿನ ಹೊಲದ ನೆಲ ಇನ್ನೂ ಬಿರುಸಾಗಿರುವುದರಿಂದ ಬಳಸಾಲಕ್ಕೆ ಬದಲು ಇನ್ನೊಮ್ಮೆ ಕುಂಟಿ ಹೊಡೆಯುವುದಕ್ಕೆ ಹೇಳುತ್ತಿದ್ದ. ಪ್ರಶ್ನೋತ್ತರ ಮಾಸ್ತರ ಆಗಷ್ಟೇ ಎದ್ದು ಹೊರಕಡೆಗೆ ಹೊರಟಿದ್ದವನು ಗೌಡನನ್ನು ಕಂಡೊಡನೆ ಚರಿಗೆ ಸಮೇತ ಎರಡೂ ಕೈ ಜೋಡಿಸಿ “ಎದ್ದಿರಾ ಗೌದರೆ?” ಎಂದ. “ನೀವೆದ್ದಿರಾ ಮಾಸ್ತರ?” ಎಂದು ಗೌಡ ಕೇಳಿ ಪ್ರತಿ ನಮಸ್ಕಾರ ಮಾಡಿದ. ಅಷ್ಟರಲ್ಲಿ ಗುಡಸೀಕರ ಕೆರೆಯ ಕಡೆಯಿಂದ ಈ ಕಡೆಗೆ ಬರುತ್ತಿದ್ದುದು ಕಾಣಿಸಿತು. ಮಾಸ್ತರ ಬರುತ್ತಿದ್ದ ಗುಡಸೀಕರನನ್ನು ನೋಡಿಯೂ ನೋಡದಂತೆ ನಿವಾರಿಸಿ, ಹಾದಿ ಬಿಟ್ಟು, ಸಂದಿಯೊಂದರಲ್ಲಿ ತೂರಿ ಮರೆಯಾದ. ಗುಡಸೀಕರ ಇದ್ಯಾವುದನ್ನೂ ಗಮನಿಸಲಿಲ್ಲವೇನೋ ಎಂಬಂತೆ ತನ್ನ ಮನೆಗೆ ಹೋದ.
ಈ ಊರಲ್ಲಿ ಕಗಂಸಾಲೆ (ಕನ್ನಡ ಗಂಡು ಮಕ್ಕಳ ಶಾಲೆ) ಸುರುವಾದಾಗಿನಿಂದ ಇಲ್ಲಿದ್ದವನು ಅವನೊಬ್ಬನೇ ಮಾಸ್ತರ. ವಯಸ್ಸಾಗಿತ್ತು. ಪಕ್ಕದ ಊರಿನವನು. ಹೆಂಡತಿ, ಮಕ್ಕಳು ಕೂಡ ಉಂಟಂತೆ. ಬಂದು ಇಷ್ಟು ವರ್ಷವಾದರೂ ಸಂಸಾರವನ್ನು ತನ್ನ ಹಳ್ಳಿಯಲ್ಲೇ ಬಿಟ್ಟು ಇಲ್ಲೊಂದು ಹಳೆಯ ಮನೆಯಲ್ಲಿದ್ದ. ಶನಿವಾರ ಒಪ್ಪತ್ತು ಸಾಲೆ ಮಾಡಿ ಊರು ಬಿಟ್ಟರೆ ಮತ್ತೆ ಅವನ ದರ್ಶನವಾಗುವುದು ಮಂಗಳವಾರ ಮಧ್ಯಾಹ್ನವೆ. ಅವನ ಬಗ್ಗೆ ವಾರದಾಗ ಮೂರು ದಿನ ಬಂದ ಹೋಗಾಂವ ಎಂದು ಹುಡುಗರು ಕದ್ದು ಹಾಡುತ್ತಿದ್ದರು. ಸೋಮವಾರ ಸಂತೆ ದಿನವಾದ್ದರಿಂದ ಸರಕಾರದ ಅಪ್ಪಣೆಯಿಲ್ಲದೆ ತಾನೇ ರಜಾ ಘೋಷಿಸುತ್ತಿದ್ದ. ಬಂದು ಇಷ್ಟು ದಿನವಾದರೂ ಅವನೇನು ಈ ಊರಿನಲ್ಲಿ ಬೇರು ಬಿಡಲೇ ಇಲ್ಲ. ಸದಾ ಒಂದು ಕಾಲು ಇಲ್ಲಿ, ಇನ್ನೊಂದು ತನ್ನ ಹಳ್ಳಿಯಲ್ಲಿ. ತಾನಾಯಿತು, ತನ್ನ ಸಾಲೆಯಾಯಿತು. ಅಲ್ಲದೆ ಇಂದೋ, ನಾಳೆಯೋ ನಿವೃತ್ತನಾಗಬೇಕು. ಇದ್ದಷ್ಟು ದಿನ ಎಲ್ಲರಿಗೆ ಬೆಲ್ಲದ ಹೇರಾಗಿದ್ದು ಹೋದರಾಯಿತು ಎಂದು ಊರಿನ ಉಸಾಬರಿಯಲ್ಲಿ ತಲೆಹಾಕುತ್ತಲೇ ಇರಲಿಲ್ಲ.
ಪರವೂರಿನವನಲ್ಲವೆ? ಈ ಊರಿನ ಯಾರ್‍ಯಾರ ನೀರು ಎಷ್ಟೆಂದು ಅವನಿಗೆ ಕೊನೆಯ ತನಕ ತಿಳಿಯಲೇ ಇಲ್ಲ. ತಿಳಿದುಕೊಳ್ಳಲು ಅವನು ಯತ್ನಿಸಲೂ ಇಲ್ಲ. ಆದ್ದರಿಂದ ಯಾರು ಕಂಡರೂ ಅವರಿಗೆ ಕೈ ಜೋಡಿಸಿ ಅತಿ ವಿನಯ ಪ್ರದರ್ಶಿಸುತ್ತಾ, ಅವರಿಗೆಲ್ಲಿ ಖಾತ್ರಿಯಾಯಿತೋ ಇಲ್ಲವೋ ಎಂದು ಹಲ್ಲು ಗಿಂಜುತ್ತ, ಮಾತಿಗೊಮ್ಮೆ ರೀ ರೀ ಎನ್ನುತ್ತ ಅವರ ಯೋಗಕ್ಷೇಮ ಕೇಳುತ್ತಿದ್ದ. ಹಾಗೆ ಕೇಳಿದ್ದು ಎಲ್ಲಿ ಸಾಲ ಕೇಳಿದಂತಾಯಿತೋ ಎಂದು, ಅಥವಾ ಪಾಪ, ಅವರಿಗೇಕೆ ಉತ್ತರ ಹೇಳುವ ತಾಪತ್ರಯವೆಂದು ತಾನೇ ಉತ್ತರವನ್ನೂ ಹೇಳುತ್ತಿದ್ದ. ಉದಾಹರಣೆಗೆ ಶಿವಾಪುರದ ಒಬ್ಬ ಸಜ್ಜನ ಭೇಟಿಯಾದನೆನ್ನೋಣ. ಕೂಡಲೇ ಮಾಸ್ತರನು “ನಮಸ್ಕಾರರಿ, ಹೆಂಗ, ಆರಾಮ ಇದ್ದೀರಾ?” ಎಂದು ಕೇಳಿ “ಆರಾಮ ಇರಬೇಕಲ್ಲ, ಮಕ ನೋಡಿದರಽ ತಿಳಿತೈತಿ” ಎಂದು ಉತ್ತರವನ್ನು ತಾನೇ ಹೇಳುತ್ತಿದ್ದ.
“ಬೆಳಿ ಚೆಲೋ ಆದಾವ್ರೆ?”
“ಚೆಲೋ ಇರದೇನ್ರಿ? ಕಂಡಾಪಟಿ ಮಳಿ ಆಗೇತಿ” ಎಷ್ಟೋ ಸಲ ಹೊಲ ಇಲ್ಲದವರಿಗೂ ಹೀಗೇ ಪ್ರಶ್ನೋತ್ತರಿಸಿ ದಾಟಿ ಹೋಗುತ್ತಿದ್ದ. ಅಲ್ಲದೆ ಅವನ ಯೋಚನಾಕ್ರಮವೂ ಹೀಗೇ ಇತ್ತು. ತಾನು ಏನು ಯೋಚನೆ ಮಾಡುತ್ತಿದ್ದೇನೆನ್ನುವುದು ತನಗೇ ಸ್ಪಷ್ಟವಾಗಿ ತಿಳಿದಿರಲೆಂದು ಯೋಚಿಸುವಾಗಲೆಲ್ಲ ಮಾತಾಡುತ್ತಲೇ ಯೋಚಿಸುತ್ತಿದ್ದ. ಏನೂ ಇಲ್ಲದೆ ಮಾತಾಡುವ ಜನ ಇಷ್ಟು ಸಿಕ್ಕರೆ ಬಿಟ್ಟಾರೆಯೆ? ಮಾಸ್ತರನು “ಪ್ರಶ್ನೋತ್ತರ ಮಾಸ್ತರನಾದದ್ದು” ಹೀಗೆ.
ಮಾಸ್ತರ ಈ ದಿನ ಮುಂಜಾನೆ ಗೌಡನಿಗೆ ನಮಸ್ಕರಿಸಿದ್ದನ್ನು ಗುಡಸೀಕರ ನೋಡದವನಂತೆ ನೋಡಿದ್ದ. ರಾತ್ರಿ ಮಾಸ್ತರನಿಗೆ ಪಂಚಾಯ್ತಿ ಆಫೀಸಿಗೆ ಬರಬೇಕೆಂಬ ಬುಲಾವ್ ಹೋಯಿತು. ಯಾವನಾದರೂ ಇನ್ಸ್‌ಪೆಕ್ಟರ್ ಬಂದಿದ್ದಾನೋ? ಯಾರಿಗ್ಗೊತ್ತು. ಏನಾದರೂ ಆರ್ಡರ್ ಬಂದಿದೆಯೋ? ಯಾರಿಗ್ಗೊತ್ತು-ಹೀಗೆ ತಂತಾನೆ ಪ್ರಶ್ನೋತ್ತರಿಸುತ್ತಲೇ ಬಂದ. ಗುಡಸೀಕರನನ್ನೂ ಅಷ್ಟು ದೂರದಲ್ಲಿ ಜಮಖಾನೆಯ ಮೇಲೆ ಚತುಷ್ಟಯರೂ, ಕುಡಿಯುತ್ತ, ಮೀಟಿಂಗ್ ಮಾಡುತ್ತ ಅಂದರೆ ಇಸ್ಪೀಟಾಡುತ್ತ ಕೂತಿದ್ದರು. ಹಾಗೆ ನೋಡಿದರೆ ಪಾಪ, ಮಾಸ್ತರನೇ ಅವರಿಗೆ ಒಂದು ಕಾಲಕ್ಕೆ ಒಂದೆರಡು ಅಕ್ಷರ ಹೇಳಿಕೊಟ್ಟಿದ್ದವನು. ಅವನು ಕಲಿಸಿದ ತಿರುಕನ ಕನಸನ್ನು ಕಳ್ಳ ಇನ್ನೂ ಮರೆತಿಲ್ಲ. ಆದ್ದರಿಂದ ಚತುಷ್ಟಯರಿಗೆ ಮಾಸ್ತರನ ಮುಂದೆ ಮೀಟಿಂಗ್ ಮಾಡಲು ಸಂಕೋಚವಾಯ್ತು. ಆದರೆ ಗುಡಸೀಕರ ಸಿಟ್ಟಾದರೆ ಕಷ್ಟ, ಅಲ್ಲದೆ ವಿದೇಶೀ ‘ಭಿರಂಡಿ’ಯ ಒಂದೆರಡು ತೊಟಕು ಒಳಗಿಳಿದಿತ್ತು. ಅದೂ ಬೇಡ; ಈಗವರು ಊರಿನ ಗ್ರಾಮಪಂಚಾಯಿತಿಯ ಮೆಂಬರರಲ್ಲವೆ? ಗೌಡನನ್ನೇ ಎದುರು ಹಾಕಿಕೊಂಡವರಿಗೆ ಮಾಸ್ತರ ಯಾವ ಲೆಕ್ಕ? ಕಲಿಗಾಲ ಬೇರೆ ಇವರ ಮುಖಾಂತರವೇ ಊರಿಗೆ ಕಾಲಿಟ್ಟಿತ್ತು, ಲಗಮವ್ವನ ಹಾಡಿನ ಪ್ರಕಾರ.
ಮಾಸ್ತರ ಮುದ್ದೆಯಾಗಿ ಮುಷ್ಟಿಯಷ್ಟೇ ಆಗಿ ಬಂದ. “ನಮಸ್ಕಾರರೀ ಸರಪಂಚ ಸಾಹೇಬರಽ” ಅಂದ. ಗುಡಸೀಕರ ಕತ್ತೆತ್ತಿ ಅವನ ಕಡೆ ನೋಡಲೇ ಇಲ್ಲ. ಉಳಿದವರು ಒಳಗೆ ಬರ್ರಿ ಅನ್ನಲಿಲ್ಲ. ಮಾಸ್ತರ ಬರುವ ಮುನ್ನವೇ ಉಳಿದವರಿಗೆ ಗುಡಸೀಕರ ಮುಂಜಾನೆ ನಡೆದದ್ದನ್ನೆಲ್ಲ ಹೇಳಿಬಿಟ್ಟಿದ್ದ. ಅವರು ಹಾಗೆ ಸುಮ್ಮನೆ ಕೂತರೋ ಇಲ್ಲವೋ ಮಾಸ್ತರನ ಜಂಘಾಬಲ ಕೈಕೊಟ್ಟಿತು. ಒಳಗೊಳಗೇ ಚಡಪಡಿಸಿದ. ಏನೇನೋ ಪ್ರಶ್ನೋತ್ತರಿಸಿಕೊಳ್ಳುತ್ತಿದ್ದುದು ಅವನ ಹಸ್ತಾಭಿನಯದ ಮೂಲಕ ಸ್ಪಷ್ಟವಾಗುತ್ತಿತ್ತು. ಬಹುಶಃ ಕರೆಸಿರಲಾರರು, ಯಾರೋ ಬಂದು ಚೇಷ್ಟೆ ಮಾಡಿರಬಹುದೆಂದು “ಬರಲೇನ್ರಿ ಹಂಗಾದರ?” ಎಂದು ಕೇಳಿ “ಆಗಲಿ” ಎಂದು ತಾನೇ ಅಪ್ಪಣೆ ಕೊಟ್ಟುಕೊಂಡು ನಡೆದ. ಕಳ್ಳನ ಗುರುಭಕ್ತಿ ಜಾಗ್ರುತವಾಯಿತು.
“ಕುಂದರ್ರೀ ಮಾಸ್ತರ”
ಮಾಸ್ತರ ಕುಸಿದವರಂತೆ ಕೂತ. ಎಲ್ಲರೂ ತಂತಮ್ಮ ಇಸ್ಪೀಟ್ ಎಲೆಗಳ ಕಡೆಗೇ ನೋಡುತ್ತಿದ್ದರು. ರಮೇಸ ಕೇಳಿದ,
“ಏನ್ರೀ ಮಾಸ್ತರ, ಗೌಡನ ಜೋಡಿ ಅದೇನ ನಿಮ್ಮ ಸಲಿಗಿ?”
“ನಂದೇನ ಸಲಿಗಿ? ಏನೂ ಇಲ್ಲಲ್ಲಾ”
“ಇರದಿದ್ದರ ಹರೀವತ್ತ ಅದ್ಯಾಕಷ್ಟ ಕೈಕೈ ಮುಗೀತಿದ್ದಿರಿ”?
“ಕೈ ಕೈ ಮುಗೀತಿದ್ದೆ? ಹೌಂದು, ಹರೀವತ್ತೆದ್ದಮ್ಯಾಲ ಎದ್ದಿರಾ ಅಂತ ಕೇಳಿದರ ತಪ್ಪ? ತಪ್ಪಲ್ಲ.”
ಮಾಸ್ತರ ತಪ್ಪ ತಪ್ಪಂದನಲ್ಲ, ಸಾತೀರನ ಸೇಡು ಹೆಡೆ ತೆಗೆಯಿತು. ಯಾಕೆಂದರೆ ಚಿಕ್ಕಂದಿನಲ್ಲಿ ತಾನು ಏನು ಬರೆದು ತೋರಿಸಿದರೂ ಈ ಮಾಸ್ತರ ತಪ್ಪು ತಪ್ಪು ಅಂತಿದ್ದ.
“ಏನ್ರಿ ತಪ್ಪಲ್ಲಂದರ? ಹುಡುಗೋರಿಗೆ ಚಲೋ ಸಾಲಿ ಕಲಸೋದ ಬಿಟ್ಟ ಎದ್ದವರ ಮನೀ ಮನೀ ಅಡ್ಡಾಡಿ ಎದ್ದಿರಾ? ಅಂತ ಕೇಳಿಕೊಂಡ ತಿರಗತೀರಿ. ಹದಿನೇಳ ಆರಲಾ ಎಷ್ಟಂತ ಕೇಳಿದರ ಒಬ್ಬ ಹುಡುಗ್ಗೂ ಹೇಳಾಕ ಬರಲಿಲ್ಲ. ಇದಽ ಏನ್ರೀ ಸಾಲಿ ಕಲಿಸೋಣಿಕಿ? ವಾರದಾಗ ಮೂರ ದಿನಾ ಇಲ್ಲಿರತೀರಿ. ನಾಕ ದಿನಾ ನಿಮ್ಮೂರಾಗಿರ್‍ತೀರಿ. ಇಂದಽ ಗುಡಸೀಕರ ಸಾಹೇಬರ ಮ್ಯಾಲ ಬರದ ಹಾಕಿದರ ನಿಮ್ಮ ಗತಿ ಏನಾದೀತು?”
ಎದೆಯ ಮೇಲೆ ಏಕದಂ ಬಂಡೆ ಬಿದ್ದಂತೆ ಮಾಸ್ತರ ಒದ್ದಾಡಿದ. ಕೈಮುಗಿದು “ಇಲ್ಲರೀ, ಇಲ್ಲರೀ” ಅಂದ. ಮಾಸ್ತರನ ಮೇಲೆ ತನ್ನ ಮಾತಿನ ಪ್ರಭಾವ ಹೀಗಾದೀತೆಂದು ಸಾತೀರನಿಗೂ ಗೊತ್ತಿರಲಿಲ್ಲ. ಅವರಲ್ಲೆಲ್ಲ ಸ್ವಲ್ಪ ದಡ್ಡನೆಂದರೆ ಮೆರಮಿಂಡ. ಆದ್ದರಿಂದಲೇ ಅವನ ಕರುಳು ಕರುಗಿತು. ಎಷ್ಟೆಂದರೂ ಅಕ್ಷರ ಕಲಿಸಿದ ಗುರು ಅಲ್ಲವೆ? ಬಳಸಿ ಬಳಸಿ ಯಾಕೆ? ನೇರವಾಗೇ ಹೇಳಬಹುದಲ್ಲಾ,
“ಛೇ ಛೇ ಮಾಸ್ತರ ನೋದರಿಲ್ಲೆ. ನಾಳಿಂದ ದಿನಾ ಹರಿವತ್ತೆದ್ದ ಗುಡಸೀಕರ ಸಾಹೇಬರ ಮನೀಗಿ ಹೋಗಿ ಎದ್ದಿರಾ ಅಂತ ಕೇಳಿ ಬರ್ರಿ. ಮೆಂಬರು ಯಾರಾದರೂ ಸಿಕ್ಕರ “ಎದ್ದಿರಾ?” ಅಂತ ಕೇಳ್ರಿ. ಆ ಗೌಡ, ದತ್ತೂ ಇದ್ದಾರಲ್ಲಾ, ಅವರನ್ನ ಇನ್ನ ಮ್ಯಾಲ ಮಾತಾಡಿಸಬ್ಯಾಡರಿ, ತಿಳೀತ?”
ಅಂದ. ಈ ನೇರ ಮಾತು ಗುಡಸೀಕರನಿಗೆ ಹಿಡಿಸಲಿಲ್ಲ.
“ದಿನಾ ಮುಂಜಾನೆ ಬ್ಯಾಡ, ನೋಡಪಾ, ಸಾಲಿ ಇರೋದು ಪಂಚಾಯ್ತಿ ಕೈಯಾಗ. ನಾವಽ ಮ್ಯಾಲ ಬರದ ಹಾಕಿದರ ನಾಳಿ ನಿಮ್ಮ ಗೌದನೂ ನಿಮ್ಮನ್ನು ಉಳಸಾಕಿಲ್ಲಾ. ದತ್ತೂನೂ ಉಳಸಾಕಿಲ್ಲ. ನಿಮ್ಮಕಡಿಂದ ನಮಸ್ಕಾರ ಮಾಡಿಸ್ಕೋ ಬೇಕಂತ ಹಿಂಗ ಹೇಳಲಿಲ್ಲ ಮತ್ತ, ತಿಳಕೊಳ್ರಿ”
ಮಾಸ್ತರ ಹುಚ್ಚನಂತಾದ. ಏನೋ ಹೇಳಲು ಏಳುತ್ತಿದ್ದ. ಏನು ಹೇಳಬೇಕೆಂದು ತೋಚದೆ ಕೂರುತ್ತಿದ್ದ. ಹಸ್ತಾಭಿನಯಕ್ಕಂತೂ ಮಿತಿಯೇ ಇರಲಿಲ್ಲ. ನೋಡಿದವರಿಗೆ ಕೈ ಮೈ ಚಲನವಲನ ಕಾಣಿಸುತ್ತಿತ್ತೇ ಹೊರತು ಅವನ ಮಾತು ಕೇಳಿಸುತ್ತಿರಲಿಲ್ಲ. ಮೆರಮಿಂಡನಿಗೆ ಬಹಳ ಕೆಡುಕೆನಿಸಿತು. ಕಳ್ಳನಿಗೂ.
“ಹೋಗ್ರಿ ಮಾಸ್ತರ ಇನ್ನ”
ಎಂದು ಗುಡಸೀಕರನ ಪರವಾಗಿ ಅಪ್ಪಣೆ ಕೊಟ್ಟ. ಬದುಕಿದೆ ಎಂದು ಮಾಸ್ತರ ಒಂದೇ ನೆಗೆತಕ್ಕೆ ಪಂಚಾಯ್ತಿ ಆಫಿಸಿನಿಂದ ಹಾರಿಬಿಟ್ಟ. ಮನೆಗೆ ಬಂದು ಶಿಷ್ಯರೆ ಇವರು? ಚಂಡಾಲರು. ಎಂದು ತಂತಾನೇ ಪ್ರಶ್ನೋತ್ತರಿಸಿಕೊಂಡ. ಇನ್ನು ಮೇಲೆ ಇವರು ಸಭೆ ಮಾಡಿದರೆ ಕುರ್ಚಿ ಕೊಡಬೇಕೆ? ಸಾಧ್ಯವಿಲ್ಲ, ಎಂದುಕೊಂಡ. ಆದರೆ ಕೊಡದೆ ಇರುವುದು ಹೇಗೆ ಸಾಧ್ಯ? ಆದ್ದರಿಂದ ಕುರ್ಚಿಯ ಒಂದು ಕಾಲು ಮುರಿದು ಬಿಡಬೇಕೆಂದೂ ನಿಶ್ಚಯಿಸಿಕೊಂಡು ತಂತಾನೇ ಸಮಾಧಾನಪಡಿಸಿಕೊಂಡ.
ಮಾಸ್ತರ ಹೋದೊಡನೆ ಗುಡಸೀಕರ ನಕ್ಕ. ಅವನ ಇಮ್ಮಡಿ ಇವರು ನಕ್ಕರು, ನಿಜ ಹೇಳಬೇಕೆಂದರೆ ಚತುಷ್ಟಯರಿಗೆ ಮೈತುಂಬ ಸಿಕ್ಕಸಿಕ್ಕಲ್ಲಿ ಪುಳಕವೆದ್ದಿತ್ತು. ಪಂಚಾಯ್ತಿ ಮೆಂಬರಾದಾಗಿನಿಂದ ಯಾರೂ ಈ ಥರ ಹೆದರಿರಲಿಲ್ಲ. ಅದೂ ಚಿಕ್ಕಂದಿನಲ್ಲಿ ಎಷ್ಟೊಂದು ಹೆದರಿಸಿದ್ದ ಮಾಸ್ತರ ಹೀಗೆ ಹೆದರುವುದೆಂದರೆ! ಒಬ್ಬೊಬ್ಬರೂ ಮಾತಾಡಿದ ಮಾತನ್ನು ವಿರೋಚಿತವಾಗಿ ಇನ್ನೊಮ್ಮೆ ಹೇಳಿ ನಕ್ಕರು. ಮಾಸ್ತರನ ಅಭಿನಯ ಮಾಡಿ ಮತ್ತೆ ನಕ್ಕರು. ಗುಡಸೀಕರ ಎಲ್ಲರಿಗೂ ಒಂದೊಂದು ಹನಿ ‘ಭಿರಂಡಿ’ ಸಿಡಿಸಿ ಉಳಿದುದನ್ನು ತಾನು ಬಗ್ಗಿಸಿಕೊಂಡು ಬಾಟ್ಲಿ ಖಾಲಿಮಾಡಿದ. ಮತ್ತೊಂದು ಹನಿ ಸಿಕ್ಕಿತಲ್ಲಾ ಎಂಬ ಸಂತೋಷಕ್ಕೆ ಮಗುದೊಮ್ಮೆ ನಕ್ಕರು. ಅಷ್ಟರಲ್ಲಿ ಗೌಡನ ಆಳು ನಾಯೆಲ್ಯಾ ಹಲ್ಲು ಕಿರಿಯುತ್ತ ಹಾಜರಾದ.

ನಾಯೆಲ್ಯಾ ಅರ್ಥಾಥ್ ಅಂಗೀಯೆಲ್ಯಾನ ಉಪಕಥೆ

ನಾಯೆಲ್ಯಾ ಬಲು ಮೋಜಿನವ. ಊರಿನಲ್ಲಿ ಅನೇಕ ವಿಕ್ರಮಗಳ ಖ್ಯಾತಿಯಿದ್ದವ. ನಾಯೆಲ್ಯಾ, ಅಂಗೀಯೆಲ್ಯಾ ಎಂದು ಜನರೂಢಿಯಲ್ಲಿ ಜೋಡು ಹೆಸರಿದ್ದವನೆಂದರೆ ಇಡೀ ಊರಿನಲ್ಲಿ ಇವನೊಬ್ಬನೇ. ಜೀವಂತವಾಗಿದ್ದಾಗಲೇ ಗಾದೆ ಮಾತಾದವರು ಇಡೀ ಊರಿನಲ್ಲಿ ನಿಂಗೂ ಮತ್ತು ನಾಯೆಲ್ಯಾ ಇಬ್ಬರೇ: “ನಾಯೆಲ್ಯಾಗ ಅಂಗೀ ಋಣ ಇಲ್ಲ, ನಿಂಗೂಗೆ ಹೇಂತಿ ಋಣ ಇಲ್ಲ”; ಯಾವುದಕ್ಕೂ ಋಣ ಬೇಕೆನ್ನುವ ಸಂದರ್ಭದಲ್ಲಿ ಜನ ಖಂಡಿತ ಈ ಗಾದೆ ಬಳಸುತ್ತಾರೆ. ಕುಡಿತಕ್ಕೆ ನಾಯೆಲ್ಯಾನನ್ನು ಬಿಟ್ಟರೆ ಇನ್ನಿಲ್ಲ.
ನಾಯೆಲ್ಯಾನ ಮೂಲ ಹೆಸರು ಮುನಿಯೆಲ್ಯಾ ಎಂದು. ಚಿಕ್ಕಂದಿನಿಂದ ಗೌಡನ ಮನೆಯಲ್ಲೇ ಚಾಕರಿ ಇದ್ದ. ಸ್ವಂತ ಗುಡಿಸಲಿದೆ, ಜಮೀನೂ ಇದೆ, ಒಂದೆಕರೆ. ಹಿಂದೆ ಮೂರೆಕರೆ ಇದ್ದದ್ದು, ಇವನು ಕುಡಿದು ಅದೂ ಒಂದೆಕರೆ ಹಾಳು ಮಾಡಿಕೊಂಡಾನೆಂದು ಗೌಡ ಅದನ್ನು ತಾನೇ ಮಾಡುತ್ತ ಅವನನ್ನು ಆಳಾಗಿ ನೇಮಿಸಿಕೊಂಡು ಆ ಕುಟುಂಬಕ್ಕೆ ಬೇಕಾದ ಕಾಖು ಕಡಿ ಪೂರೈಸುತ್ತಾನೆ. ಅದರಲ್ಲೇನು ಮೋಸವಿಲ್ಲ.
ನಾಯಕರ ಹುಡುಗರ ಬೇಟೆಗಾಗಿ ಪಳಗಿಸಿದ ಒಂದೆರಡನ್ನು ಬಿಟ್ತರೆ ಶಿವಾಪುರದಲ್ಲಿ ನಾಯಿ ಸಾಕುವುದೇ ಗೊತ್ತಿಲ್ಲ. ಹಾಗಂತ ಬೀದಿ ನಾಯಿಗಳಿಗೇನೂ ಆ ಊರಲ್ಲಿ ಕೊರತೆಯಿಲ್ಲ. ಓಣಿಗೊಂದೊಂದು ಹಿಂಡಿಗೆ ಹಿಂಡೇ ಇದೆ. ಆ ನಾಯಿಗಳು ಎಲ್ಲರ ಮನೆ ಮುಂದೆ ಹೋಗಿ ಬಾಲ ಅಲ್ಲಾಡಿಸುತ್ತವೆ. ಧರ್ಮಾತ್ಮರು ಚೂರು ಪಾರು ರೊಟ್ಟಿ ಎಸೆಯುತ್ತಾರೆ. ಹೀಗಾಗಿ ಅವುಗಳಿಗೆ “ದೈವಾಚಾರೀ ನಾಯಿ”ಗಳೆಂಬ ಪ್ರತ್ಯೇಕ ನಾಮಕರಣವೇ ಇದೆ. ಅವುಗಳ ಮುಖ ಕೆಲಸವೆಂದರೆ ರಾತ್ರಿ ಒದರುವುದು; ಅದಿಲ್ಲಾ ಊಳಿಡುವುದು. ಯಾವುದೋ ಓಣಿಯ ಯಾವುದೋ ನಾಯಿ, ಯಾವುದೋ ಕಾರಣಕ್ಕೆ ಸ್ವಲ್ಪ ಒದರಿದರೆ ಸಾಕು, ಊರಿನ ಉಳಿದ ನಾಯಿಗಳೆಲ್ಲ ಒಂದೇ ಸಮ, ಬಿಟ್ಟೂ ಬಿಡದೆ ಒದರಲಾರಂಭಿಸುತ್ತವೆ. ಒದರುವುದಕ್ಕೆ ಕಾರಣವಿರಲೇಬೇಕೆಂಬ ನಿಯಮವೂ ಅವಕ್ಕಿಲ್ಲ, ಹುಟ್ಟಿದ್ದೇ ಒದರುವುದಕ್ಕೆ. ಊರವರಿಗೂ ಇದು ಗೊತ್ತು. ಸಂಭಾಷಣೆಗಳಲ್ಲಿ ಅವುಗಳ ದೃಷ್ಟಾಂತ ಕೊಡುವುದುಂಟು; ಯಾಕೋ ಧೈವಾಚಾರೀ ನಾಯಿ ಹಾಂಗ ಒದರತಿ? ಎಂದೋ ವಾಚಾಳಿಗ ಅವ ಬಿಡಪಾ ದೈವಾಚಾರಿ ನಾಯಿ ಎಂದೋ, ಅವ ಸೈ-ದೈವಾಚಾರೀ ನಾಯಿ ಸೈ ಎಂದೋ ಹೇಳುವುದುಂಟು.
ಆ ಅನಾಮಿಕ ನಾಯಿಗಳಲ್ಲಿ ಒಂದು ಕರಿ ನಾಯಿ ಇತ್ತು. ಅದೇನು ವರ್ಣಸಾದೃಶ್ಯವೋ, ಸ್ವಭಾವಸಾದೃಶ್ಯವೋ, ಕರ್‍ಮಧರ್ಮ ಸಂಯೋಗವೋ ಮಿನಿಯೆಲ್ಲ್ಯಾನನ್ನು ಕಂಡರೆ ಅದಕ್ಕೆ ವಿಪರೀತ ನಿಷ್ಠೆ. ಅವನಿನ್ನೂ ಅಷ್ಟು ದೂರದಲ್ಲಿ ಬರುತ್ತಿದ್ದಾನೆಂದರೆ ಇಲ್ಲಿ ನಿಂತ ಅದು ಚಂಗನೆ ಹಾರಿ, ಓಡಿಹೋಗಿ, ಬಾಲ ಅಲುಗಿಸುತ್ತ ಪಾದ ಬಳಸಿ, ನೆಕ್ಕಿ ಕುಂಯ್, ಕುಂಯ್, ಕುಂಯ್ ಒರಲುತ್ತ ಅವನ ಮನೆ ತನಕ ಬೆನ್ನು ಹತ್ತುತ್ತಿತ್ತು. ಒಂದೆರಡು ಬಾರಿ ಉಂಡಾದ ಮೇಲೆ ಒಂದೋ ಎರಡೋ ಮೂಳೆ ಚೆಲ್ಲಿದನೋ ಇಲ್ಲವೋ, ಆ ಪ್ರಾಣಿ ಇವನನ್ನು ಜೀವಕ್ಕೇ ಅಂಟಿಸಿಕೊಂಡಿತ್ತು. ಇವನಂತೂ ಅದು ಹೊಂದಿನ ಜನ್ಮದಲ್ಲಿ ತನಗೆ ತಮ್ಮನೋ, ಮಗನೋ ಆಗಿದ್ದಿತೆಂದೇ ನಂಬಿದ. ಹಾಗಂತ ಮಂದಿಯ ಮುಂದೆ ಕುಡಿದಾಗ, ಕುಡೀದಿದ್ದಾಗ ಕೂಡ ಆಡಿಯೂ ಆಡಿದ. ಅದು ಬಾಲವಲ್ಲಾಡಿಸಿ ತನ್ನ ನಿಷ್ಠೆ ಪ್ರದರ್ಶಿಸಿದಾಗೆಲ್ಲ ಇವನಿಗೆರಡು ಕೊಂಬು ಮೂಡಿದಂತೆ ಆಗುತ್ತಿತ್ತು. ಒಂದು ಬಗೆಯ ಅಹಂಕಾರ ಇನ್ನೂ ತಲೆಗೇರಿ, ಗೌಡ ತನ್ನೊಂದಿಗೆ ಮಾತಾಡಿದಂತೆ ಈತ ಆ ನಾಯಿಯೊಂದಿಗೆ ಮಾತಾಡುತ್ತಿದ್ದ. ಅದನ್ನು ‘ಮುನಿಯೆಲ್ಯಾ’ ಎಂದು ಕರೆಯುತ್ತಿದ್ದ. ‘ಹಾಂಗ ಮಗನಽ’ ‘ಹೀಂಗ ಮಗನಽ’ ಎಂದು ಗೌಡನ ಅಭಿನಯ ಮಾಡುತ್ತ ಅದರೊಂದಿಗೆ ಹೆಚ್ಚುಗಾರಿಕೆ ಮೆರೆಯುತ್ತಿದ್ದ. ಅದೇನು ಸಂತೋಷವೋ ಅದನ್ನು ಬಲು ಖುಷಿಯಿಂದ ಅನುಭವಿಸುತ್ತಿದ್ದ. ಇವನು ಹೆಂಡ ಖಂಡ ತಂದಾಗ ಇವನ ಹೆಂಡತಿ ಪಾಲು ಬೇಡುತ್ತಿದ್ದರೆ ಇವನಿಗೆ ಭಾರೀ ಸಿಟ್ಟು ಬರುತ್ತಿತ್ತು. ನಾಯಿಗೆ ಮಾತ್ರ ಹಾಕಿದರೆ ಉಂಟು, ಹಾಕದಿದ್ದರೆ ಇಲ್ಲ. ನಿಷ್ಠೆ, ಪ್ರಾಮಾಣಿಕತೆ ಅಂದರೆ ಹಾಗಿರಬೇಕೆಂದು ಇವನ ಮತ. ಅದಕ್ಕೇ ಆತ ಆಗಾಗ ತನ್ನ ಹೆಂಡತಿ ರಂಗಿಗೆ ಈ ನಾಯಿಯ ಉದಾಹರಣೆ ಕೊಡುವಂತಾಯಿತು.
ಒಂದು ದಿನ ಮಧ್ಯಾಹ್ನ ಎಲ್ಯಾ ಗೌಡನ ತೋಟದಲ್ಲಿ ಕಬ್ಬಿಗೆ ನೀರು ಹಾಕಿಸುತ್ತಿದ್ದ. ಅಷ್ಟರಲ್ಲಿ ಪಕ್ಕದ ಕಾಡಿನಿಂದ ಕುರುಬರ ಹುಡುಗ “ಅಯ್ಯೋ ಬರ್ರೋ ನನ್ನ ಕುರಿ….ನನ್ನ ಕುರಿ ಮುರೀತೇತ್ರೋ”ಎಂದು ಚೀರುತ್ತಿದ್ದುದು ಕೇಳಿಸಿತು. ಮುನಿಯೆಲ್ಯಾ ನಿಂತಲ್ಲೇ ಸೆನಿಕೆ ಚೆಲ್ಲಿ ಆ ದಿಕ್ಕಿಗೆ ಓಡಿಹೋದ. ಪಕ್ಕದ ಹೊಲದ ಇನ್ನೂ ಆರೇಳು ಜನ ಇವನೊಂದಿಗೆ ಸೇರಿದರು. ಹೋಗಿ ನೋಡಿದರೆ ಅದೇ ಕರಿನಾಯಿ ಹಾರಿ ಹಾರಿ ಕುರಿಗಳನ್ನು ಮುರಿಯತೊಡಗಿದೆ! ಎರಡು ಕುರಿಗಳಾಗಲೇ ಅರೆ ಜೀವವಾಗಿ ಒದ್ದಾಡುತ್ತಿದ್ದರೆ ಇನ್ನೊಂದರ ಮೇಲೆ ಜಾತ್ಯಾ ಬೇಟೆಯ ನಾಯಿಯಂತೆ ಹಾರತೊಡಗಿದೆ! ಯಾರಾದರೂ ಹೊಡೆಯ ಹೋದರೆ ಅವರ ಮೇಲೆ ಹುಲಿಯಂತೆ ಹಾರಿ ಬರುತ್ತಿದೆ! ಪಾಪ ಎಂಥಾ ನಾಯಿ, ಏನಾಗಿ ಹೋಗಿದೆ! ಅದು ಈ ತನಕ ಬೆನ್ನುಹತ್ತಿ ಬೇಟೆ ಹಿಡಿದದ್ದಲ್ಲ, ಕಳ್ಳರನ್ನು ಪತ್ತೆಹಚ್ಚಿದ್ದಲ್ಲ, ಬಾಲವಿದ್ದುದರಿಂದ ಅಲುಗಾಡಿಸುತ್ತಿದ್ದು; ಬಾಯಿ ಇದ್ದುದರಿಂದ, ಬೊಗಳಿದ್ದು ಅಷ್ಟೆ. ಹೆಚ್ಚೇನು, ಅದೆಂದೂ ತನ್ನ ಬಾಲದ ಮೇಲೆ ಕೂತ ನೊಣವನ್ನು ಜೋರಿನಿಂದ ಜಾಡಿಸಿಕೊಂಡ ನಾಯಿಯಲ್ಲ, ಅಂಥಾ ನಾಯಿ ಇಂಥಾ ಪ್ರಚಂಡ ಕೆಲಸ ಮಾಡುವುದೆಂದರೇನು? ಏನೋ ಗುಟ್ಟಿರಬೇಕೆಂದು ಮುನಿಯೆಲ್ಯಾ ನಿಲ್ಲದೆ ಅದರ ಮೇಲೆ ಇವನೂ ನಾಯಿಯಂತೆ ಹಾರಿ ಹಿಡಿದುಕೊಂಡ. ಮನುಷ್ಯರ ಮೇಲೆ ಧಡಧಡಿತ ಬಾಯಿ ತೆರೆದು ಹಾರಿ ಬರುತ್ತಿತ್ತು. ಕೊನೆಗೆ ಎಲ್ಲರೂ ಪರೀಕ್ಷಿಸಿ ನೋಡಿದರು. ಮುನಿಯೆಲ್ಯಾ ಅದರ ಬಾಯಿ ಮೂಸಿ ನೋಡಿದ. ಹೆಂಡದ ವಾಸನೆ ಗೊಮ್ಮೆಂದು ಹೊಡೆಯಿತು. ಮುನಿಯೆಲ್ಯಾನ ನಾಯಿಯಲ್ಲವೆ? ಲಗಮವ್ವ ಕಾಡಿನಲ್ಲಿ ಬಚ್ಚಿಟ್ಟ ಹಳೇ ಬೆಲ್ಲದಲ್ಲಿ ಹಾಕಿದ ಭಟ್ಟಿ ಸೆರೆ ಯಥೇಷ್ಟ ಕುಡಿದಿತ್ತು. ಮುನಿಯೆಲ್ಯಾ ಇದನ್ನು ಹೇಳಿದಾಗ ಎಲ್ಲರೂ ಬಿದ್ದು ಬಿದ್ದು ನಕ್ಕರು. ಕುಡಿದಾಗ ನಾಯಿಯಂಥಾ ನಾಯಿ ಹೀಗಾಗಬೇಕಾದರ ಮುನಿಯೆಲ್ಯಾ ಸ್ವಲ್ಪ ಹುಚ್ಚನಂತಾಗುವುದು ಹೆಚ್ಚಲ್ಲ ಎಂದರು. ಇದು ಊರಿಗೆಲ್ಲ ಗೊತ್ತಾಗಿ ಅಂದಿನಿಂದ ನಾಯಿಗೆ ‘ಮುನಿಯೆಲ್ಯಾ’ ಎಂದೂ ಮುನಿಯೆಲ್ಯಾನಿಗೆ ‘ನಾಯೆಲ್ಯಾ’ ಎಂದೂ ಹೆಸರು ಬಂತು. ಯಾಕೆಂದರೆ ಅವನೂ ಭಟ್ಟಿ ಸೆರೆ ಕುಡಿಯುವುದರಲ್ಲಿ ನಿಸ್ಸೀಮ. ನಾಯಿಗೆ ಆ ಹೆಸರು ಒಪ್ಪಿಗೆಯೆಂದು ತೋರುತ್ತದೆ. ಮುನಿಯೆಲ್ಯಾ, ಮುನಿಯೆಲ್ಯಾ ಎಂದಾಗಲೆಲ್ಲಾ ಬಾಲವಲ್ಲಾಡಿಸುತ್ತಿತ್ತು. ಮುನಿಯೆಲ್ಯಾ ಅರ್ಥಾಥ್ ನಾಯೆಲ್ಯಾನಿಗಂತೂ ಆನಂದವೋ ಆನಂದ. ಯಾಕೆಂದರೆ ಕುರುಬರು ನಾಯಿ ಮುರಿದ ಕುರಿಯ ಒಂದು ತೊಡೆಯನ್ನು ಇವನಿಗೇ ಕೊಟ್ಟರು.

ನಾಯೆಲ್ಯಾ ಅಂಗೀಯೆಲ್ಯಾ ಆದದ್ದು

ನಾಯೆಲ್ಯಾ ಬುದ್ಧಿಗಲಿತಾಗಿನಿಂದ ಹಾಕುತ್ತಿದ್ದುದು ಗೌಡನ ಹಳೆಯ ಅಂಗಿಗಳನ್ನೇ. ಅವನೊಮ್ಮೆಯೂ ಹೊಸ ಅಂಗಿ ಹೊಲಿಸಿಕೊಂಡವನೇ ಅಲ್ಲ. ಹೊಲಿಸಿಕೋ ಎಂದು ಕೊಟ್ಟರೂ ಕುಡಿಯುತ್ತಿದ್ದ. ಗೌಡನಿಗೆ ಬೇಸರವಾಯ್ತು. ಕತ್ತೆಯಂಥ ಕತ್ತೆ ಒಂದಾಣೆಯ ಹಗ್ಗ ಹರಿಯುತ್ತದೆ. ನಾಯೆಲ್ಯಾ ಒಂದು ಅಂಗಿಯನ್ನಾದರೂ ಹರಿಯದಿದ್ದರೆ ಹೇಗೆ? ಅವನಳತೆಯ ಎರಡು ಹೊಸ ಅಂಗಿಗಳನ್ನು ಹೊಲಿಸಿಕೊಟ್ಟ.
ಹೊಸ ಅಂಗಿ ಹಾಕಿಕೊಂಡಾಗ ನಾಯೆಲ್ಯಾನನ್ನು ಹಿಡಿಯುವವರೇ ಇಲ್ಲ. ಊರ ತುಂಬ ವಿನಾಕಾರಣ ಅಡ್ಡಾಡಿ ಬಂದ. ಬರುಹೋಗುವವರ ಯೋಗಕ್ಷೇಮ ಕೇಳಿದ. ಕೆಲಸ ಮಾಡುವಾಗ ಅದನ್ನು ಕಳಚಿಟ್ಟದ್ದೇನು, ಹೆಂಡತಿ ಬಂದರ ಅವಳ ಹೊಲಸು ಕೈಗೆ ಮುನಿದದ್ದೇನು, ಮಲಗುವಾಗ ಕಂಬಳಿ ಝಾಡಿಸಿ ಝಾಡಿಸಿ ಹಾಸಿಕೊಂಡದ್ದೇನು! ಇವನ ಸಡಗರಕ್ಕೆ ಕೊಂಬು ಮೂಡಿದಂತೆ ಸಾವಳಗಿ ಜಾತ್ರೆ ಬಂತು. ಊರಿಗಿಂತ ಮುಂಚೆಯೇ ಹೋದ, ಅಡ್ಡಾಡಿದ. ಜಾತ್ರೆಯ ಪ್ರತಿಯೊಬ್ಬರ ಅಂಗಿಯ ಜೊತೆ ತನ್ನ ಅಂಗಿ ಹೋಲಿಸಿಕೊಂಡ. ಆಯಿತು, ಜಾತ್ರೆಯೆಲ್ಲಾ ಮುಗಿದು ಮಾರನೇ ದಿನ ಗುಡಿಸಲಿಗೆ ಬಂದ, ನೋಡಿದರೆ ಬರೀ ಲಂಗೋಟಿಯಲ್ಲೇ ಇದ್ದ! ರಂಗಿ ಯಾಕೆಂದು ಕೇಳಿದರೆ ಹೀಗಾಯಿತಂತೆ:
ರಾತ್ರಿ ಬಯಲಾಟಕ್ಕೆ ಶೂದ್ರರ ಬಳಗದಲ್ಲಿ ಹೋಗಿ ಮುಂದಾಗಿಯೇ ಕೂತನಂತೆ. ಫಕ್ಕನೆ ಅಂಗಿಯ ಬಗ್ಗೆ ಚಿಂತೆ ಮೂಡಿತು. ಮಠದ ಹುಗ್ಗೀ ಪ್ರಸಾದ ಹೊಟ್ಟೆತುಂಬ ಗಚ್ಚಿನಂತೆ ಗಟ್ಟಿಯಾಗಿ ಇಳಿದಿತ್ತು. ಗೌಡ ಜಾತ್ರೆಗೆಂದು ಕೊಟ್ಟ ಚವಲಿಯಿಂದ ಹೆಂಡ ಕುಡಿದಿದ್ದ. ಅಂಗಿಯ ಸಡಗರದಲ್ಲಿ ಹೆಚ್ಚಾಗಿಯೇ ಓಡಾಡಿದ್ದ. ಮಂಪರು ಬಂದು ಕಣ್ಣು ಮುಚ್ಚತೊಡಗಿದವು. ಸುತ್ತ ನೋಡಿದರೆ ಒಬ್ಬ ಶೂದ್ರನಿಗೂ ಮೈಮೇಲೆ ತನ್ನಂತೆ ಅಂಗಿಯಿಲ್ಲ. ಒಮ್ಮೆ ನಿದ್ದೆ ಹತ್ತಿತೋ-ತನ್ನ ನಿದ್ದೆ ಸಾಮಾನ್ಯವೇ? ಮರದ ತುಂಡಿನಂತೆ ಬಿದ್ದ-ಎನ್ನೋಣ, ಆಮೇಲೆ ತನ್ನ ಅಂಗಿಯನ್ನು ಯಾರಾದರೂ ಕಳಚಿಕೊಂಡರೆ? ನಿದ್ದೆ ಮಾಡುವುದೇ-ಬೇಡ ಎನ್ನೋಣ. ಬರೋ ನಿದ್ದೆ ಹೇಳಿ ಕೇಳಿ ತನ್ನಪ್ಪಣೆ ಕೇಳಿ ಬರುತ್ತದೇ? ಆದ್ದರಿಂದ ಅಂಗಿ ಕಳಚಿ ಬಗಲಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಬಯಲಾಟ ನೋಡಿದರೆ, ಮೈಗೆ ತಂಗಾಳಿ ಸವರಿ ಇತ್ತ ನಿದ್ದೆಯೂ ಬರುವುದಿಲ್ಲ; ಒಂದು ವೇಳೆ ಬಂದರೂ ಬಗಲಲ್ಲಿಯ ಅಂಗಿಯನ್ನಾದರೂ ಕಿತ್ತುಕೊಳ್ಳುವಾಗ ತನಗೆ ಎಚ್ಚರವಾಗೇ ಆಗುತ್ತದೆ! ಹೀಗೆಂದುಕೊಂಡು ಅಂಗೀ ಕಳಚಿ ಮುದ್ದೆ ಮಾಡಿ ಬಗಲಲ್ಲಿ ಗಟ್ಟಿಯಾಗಿ ಹಿಡಿದು, ಅವಚಿಕೊಂಡು ಕೂತ. ನಿದ್ದೆಯೂ ಬಂತು. ಮುಂದಿನ ಕಥೆ ನಿಮಗೆ ಗೊತ್ತೇ ಇದೆ. ನಾಯೆಲ್ಯಾ ತನ್ನ ಮೊದಲನೇ ಅಂಗಿ ಕಳಕೊಂಡದ್ದು ಹೀಗೆ.
ಒಂದು ಸಲ ‘ಮುನಿಯೆಲ್ಯಾ’ ಅಂದರೆ ಅದೇ ಅವನ ಕರಿನಾಯಿ ಇತ್ತಲ್ಲಾ, ಅದಕ್ಕೆ ಅದೇನು ಸ್ಪೂರ್ತಿ ಉಕ್ಕಿತೋ ಮಧ್ಯರಾತ್ರಿ, ಅಮಾವಾಸ್ಯೆ ಕತ್ತಲಲ್ಲಿ ಜೋರಿನಿಂದ, ಊರ ನಿಶ್ಯಬ್ಧತೆ ಸೀಳಿ ಎರಡಾಗುವಂತೆ ಕಿರಿಚಿತು. ಕೇಳಿದ ಊರ ನಾಯಿಗಳು ಫಕ್ಕನೆ ಎಚ್ಚತ್ತು ತಂತಮ್ಮ ಸ್ಥಳಗಳಲ್ಲೇ ನಿಂತುಕೊಂಡು ಹೊಲಗೇರಿಯ ಕಡೆ ಮುಖಮಾಡಿ, ಜಿಗ್ಗಾಲು ಕೊಟ್ಟು ಕೂಗಲಾರಂಭಿಸಿದವು. ಎಷ್ಟು ಹೊತ್ತಾದರೂ ಅವುಗಳ ಸೊಲ್ಲು ನಿಲ್ಲಲೊಲ್ಲದು. ಯಾರೋ ಕಳ್ಳ ನುಗ್ಗಿರಬೇಕೆಂದು ಮಲಗಿದ್ದವರು ಎದ್ದರು. ನೋಡಿದರೆ ಯಾರೂ ಇರಲಿಲ್ಲ. ಅಮಾವಾಸ್ಯೆಯಲ್ಲವೆ? ಕರಿಮಾಯಿ ಈ ದಿನ ಸಂಚಾರ ಕೈಗೊಂಡು ಕೆಟ್ಟ ದೆವ್ವಗಳಿಂದ ಊರು ಕಾಯುತ್ತಾಳೆ. ಬಹುಶಃ ನಾಯಿಗಳಿಗೆ ತಾಯಿಯೇ ಕಂಡಿರಬೇಕೆಂದು ಜನ ಭಾವಿಸಿಕೊಂಡು ಮತ್ತೆ ಮಲಗಿದರು.
ಆದರೆ ನಾಯೆಲ್ಯಾ ಈ ಸಂದರ್ಭ ಬಳಸಿಕೊಂಡ. ಯಾರು ಏನೆಂದು ಜನ ಹುಯ್ಯಲೆದ್ದಾಗಲೇ ಈತ ಮಾದರ ಭರಮನ ಗುಡಿಸಲಿಗೆ ನುಗ್ಗಿ ಪಡಸಾಲೆಯ ಕೋಳೀ ಬುಟ್ಟಿಗೆ ಕೈಹಾಕಿ, ಸಪ್ಪಳ ಮಾಡದೆ ಒಂದು ಕೋಳೀ ತಂದು ಕತ್ತು ಹಿಸುಕಿ ತನ್ನ ಗುಡಿಸಲಲ್ಲಿಟ್ಟು ಮತ್ತೆ ಸಾಜೋಗರಂತೆ ಹೊರಬಂದು, ಯಾರು? ಏನು? ಎಂದು ಎಲ್ಲರಂತೆ ಸೋಜಿಗ ನಟಿಸುತ್ತ ಅವರ ಜೊತೆ ನಿಂತ. ಕೆಲಹೊತ್ತಾಗಿ ಒಳಗೆ ಬಂದರೆ ರಂಗಿ, ಆ ಹೊತ್ತಿನಲ್ಲೇ ಎದ್ದು ಆಗಲೇ ನೀರು ಕಾಸಿ ಕೋಳಿ ಅದ್ದಿಬಿಟ್ಟಿದ್ದಳು. ಬೆಳಗಾಗುವುದರೊಳಗೆ, ತನ್ನ ಹೆಂಡತಿಗೂ ಗೊತ್ತಿಲ್ಲದಂತೆ ಕೋಳಿ ಮುಗಿಸಿಬಿಡಬೇಕೆಂದು ಇವನ ಲೆಕ್ಕ. ರಂಗಿ ನಾಯೆಲ್ಯಾನ ಹೆಂಡತಿಯಲ್ಲವೆ? ಒತ್ತಿ ಬಂದ ನಿರಾಸೆ, ಸಿಟ್ಟು ತಡಕೊಂಡು ಒಲೆಯ ಮುಂದೆ ಕೂತ.
ತುಸು ಹೊತ್ತು ಕೂರುವುದರಲ್ಲೇ ಕುದಿಯಿತೋ ಇಲ್ಲವೋ ನೋಡೋಣವೆಂದು ಒಂದು ಹೋಳು ತೆಗೆದು ರಂಗಿ ಹಾಗೇ ತಿಂದಳು. ಈಗ ಕೋಪ ಅಸಹನೀಯವಾಯಿತು.
“ಏ ಬೇಬರಸಿ, ಕದ್ದು ಕೊಂಬಂದವ ನಾನು. ನನಗ ತೋರಿಸದ ಬಕ್ಕರಿಸಾಕ ಸುರು ಮಾಡಿದಿ?”
“ಸುಮ್ ಕುಂದರಬಾರದ? ಕುದ್ದಽತ್ಯೋ ಇಲ್ಲೋ ನೋಡತೀನಿ”
“ಯಾಕ? ನನಗ ತಿಳೀತಿರಲಿಲ್ಲೇನು?”
“ಏ ಭಾಡ್ಯಾ, ಬಾಯಿ ಮುಚ್ಚಿಕೊಂಡು ಕುಂದರತೀಯಾ? ಮಾದರ ಭರಮ್ಯಾಗ ಹೇಳಂತೀಯಾ?
ಎನ್ನುತ್ತಾ ಇನ್ನೊಂದು ಹೋಳು ತಿಂದಳು. ಬಾಯಿ ಮಾಡುವಂತಿಲ್ಲ. ಬಿಡುವಂತಿಲ್ಲ. ಬಾಯಿ ಮಾಡಿದರೆ ರಂಪಾಟ ಮಾಡಿ ಭರಮ್ಯಾಗ ಹೇಳಿದರೆ ಆಶ್ಚರ್‍ಯವಿಲ್ಲ. ಬಾಯಿ ಮುಚ್ಚಿಕೊಂಡಿದ್ದರೆ ಕುದಿಯುವ ಮೊದಲೇ ಈ ರಂಡಿ ಗಡಿಗೆಯ ಬುಡಸಮೇತ ಮುಗಿಸಿಬಿಡುವುದರಲ್ಲಿ ಸಂಶಯವಿಲ್ಲ. ಆಗಲೆಂದು ಇವನೂ ಒಂದು ಹೋಳು ತಿಂದ. ಸೇಡಿನಿಂದೆಂಬತೆ ಅವಳೂ ತಿಂದಳು. ಇವನೂ ತಿಂದ. ಹೀಗೆ ಕುದ್ದಿದೆಯೋ, ಇಲ್ಲವೋ ನೋಡುವುದರಲ್ಲೇ ಅರ್ಧ ಕೋಳಿ ಮುಗಿಯಿತು. ಕುದಿಸಿ ಮಸಾಲೆ ಹಾಕಿ, ಚಂದಾ ಮಾಡಿ ತಿನ್ನುವುದು ಹಾಗಿರಲಿ, ಬರೀ ಕುದಿಯುತ್ತಿದ್ದ ಮಾಂಸ ಕೂಡ ತನಗೆ ಸರಿಯಾಗಿ ಸಿಗುತ್ತಿಲ್ಲ, ಎನಿಸಿತು. ಈ ಸ್ಪರ್ಧೆಯಲ್ಲಿ ರಂಗಿ ಸರಿಯಾಗಿ ಮೂಳೆ ಕೂಡ ಉಗುಳುತ್ತಿರಲಿಲ್ಲ! ಏನೋ ಕೊನೆಯ ಉಪಾಯವೆಂದು “ಏ, ಹಾದರಗಿತ್ತಿ, ಕೂಸಿಗೊಂದೀಟ ಬಿಡತೀಯೋ ಇಲ್ಲೊ?” ಅಂದ.
“ರಸ ಕೊಟ್ಟರಾತು ಬಿಡಽ”
ಎನ್ನುತ್ತ ಮತ್ತೆ ಮುಕ್ಕಿದಳು. ಇನ್ನು ತನಗೊಂದು ಮೂಳೆಯೂ ದಕ್ಕುವುದಿಲ್ಲವೆಂದು ಖಾತ್ರಿಯಾಗಿ ತಕ್ಷಣವೇ ಅವಳ ಕೈಹಿಡಿದು,
“ಇನ್ನೊಂದು ತುತ್ತ ಬಾಯಿಗೆ ಹಾಕಿದರ ಕರಿಮಾಯಿ ಆಣಿ”
ಅಂದ. ಅವಳೂ ಇವನಿಗೆ ಕರಿಮಾಯಿ ಆಣಿ ಹಾಕಿದಳು. ಒಗ್ಗರಣೆ ಹಾಕಿ ಪಲ್ಯ ಮಾಡುವ ತನಕ ಯಾರೂ ಮಾಂಸ ಮುಟ್ಟಕೂಡದೆಂದಾಯಿತು. ಆದರೆ ಆಣಿ ಪಾಲಿಸುವುದರ ಬಗ್ಗೆ ಇಬ್ಬರಿಗೂ ನಂಬಿಕೆಯಿಲ್ಲ. ಆಣೆಯ ಭರಾಟೆಯಲ್ಲಿ ನಾಯೆಲ್ಯಾ ರಂಗಿಗಿಂತ ಮಾಂಸದ ಗಡಿಗೆಗೆ ಹೆಚ್ಚು ಸಮೀಪ ಬಂದಿದ್ದ! ಗೊತ್ತಾದೊಡನೆ ಅವನು ತಿನ್ನದ ಹಾಗೆ, ಆದರೆ ಪ್ರೀತಿಯಿಂದೆಂಬಂತೆ ಗಪ್ಪನೆ ತನ್ನ ನಳಿದೋಳ್ಗಳಿಂದ ನಾಯೆಲ್ಯಾನನ್ನು ಬಳಸಿ ಈಚಲುಮರಕ್ಕೆ ಕಾಡುಬಳ್ಳಿ ಸುತ್ತಿದಂತೆ ತಬ್ಬಿಕೊಂಡು ಕೂತಳು.
ಮಾಂಸ ಕುದಿಯಿತು. ನೀರು ಬಸಿದು ಒಂದೆಡೆಯಿಟ್ಟು ಒಗ್ಗರಣೆ ತಯಾರಿ ನಡೆದಾಗ ಬಾಗಿಲಲ್ಲಿದ್ದ ಮುನಿಯೆಲ್ಯಾ ಗುರ್ ಎಂದಿತು. ಯಾರೋ ಬಂದದ್ದು ಸ್ಪಷ್ಟವಿತ್ತು. ಹೋಗಿ ಕದ ತೆಗೆದು ನೋಡೆಂದು ಹೆಂಡತಿಗೆ ಹೇಳಿದ. ನೀನೇ ನೋಡೆಂದಳು ಅವಳು ಹೇಳಿದಳು. ನೀನು ತಾನು ಎನ್ನುವಷ್ಟರಲ್ಲಿ ಗೌಡ “ಮುನಿಯೆಲ್ಯಾ” ಎಂದು ಕೂಗಿದ್ದು ಕೇಳಿಸಿತು. ಗಡಬಡಿಸಿ, ಬಿಟ್ಟು ಓಡಿಹೋದರೆ ಈ ಹಾಳು ರಂಡೆ ಮುಗಿಸಿಬಿಡಬಹುದೆಂದು ತಕ್ಷಣ ಅವಳ ಕೈ ಹಿಡಿದುಕೊಂಡೇ ಹೋಗಿ ಬಾಗಿಲು ತೆಗೆದ. ಹೊರಗಾಗಲೇ ಮೂಡಲು ಹರಿಯತೊಡಗಿತ್ತು.
ಹೊರಗೆ ಗೌಡ ನಿಂತಿದ್ದ. ಗೌಡನೆದುರಿಗೆ ಹೆಂಡತಿಯನ್ನು ಹೇಗೆ ಹಿಡಿದಿರುತ್ತಾನೆ? ಬಿಟ್ಟ. ಎಡೆ ಹೊಡೆಯಬೇಕೆಂದು ತಾಕೀತು ಮಾಡಿ ಗೌಡ ಹೋದ. ಅತ್ತ ಗೌಡ ಹೋದ. ಇತ್ತ ನಾಯೆಲ್ಯಾ ಬಿಟ್ಟಬಾಣದ ಹಾಗೆ, ಅವಸರದಿಂದ ಒಳಗೆ ಬಂದು ನೋಡಿದರೆ ರಂಗಿ ಎಲ್ಲಾ ಮಾಂಸ ಕಬಳಿಸಿ ಕಟಲ್ ಕಟಲ್ ಎಂದು ಮೂಳೆ ಜಗಿಯುತ್ತಿದ್ದಳು. ನಾಯೆಲ್ಯಾನಿಗೆ ಅಳು ಬರುವಷ್ಟು ಕೋಪ ಬಂತು. ‘ಹಾದರಗಿತ್ತೇ’ ಎಂದು ಹಾರಿ ಅವಳ ತುರುಬಿಗೇ ಕೈಹಾಕಿ ಒದ್ದ. ಅವಳೋ ಛೇ, ಈ ಹತಭಾಗ್ಯನ ಅಂಗಿಗೇ ಕೈ ಹಾಕಿದಳು. ಸಿಟ್ಟಿನ ಭರದಲ್ಲಿ ಅಂಗಿ ಗಮನಿಸದೆ ರಪ್ಪೆಂದು ಹೊಡೆದ. ಅವಳು ಟರ್ರ್ ಎಂದು ಅಂಗಿ ಹರಿದಳು. ಇನ್ನಷ್ಟು ಕೋಪ, ಇನ್ನಷ್ಟು ನಿರಾಶೆ, ಇನ್ನಷ್ಟು ನೋವಿನಿಂದ ಇನ್ನಷ್ಟು ಹೊಡೆದ. ಅವಳು ಅಂಗಿಯನ್ನು ಇನ್ನಷ್ಟು ಹರಿದು ತ್ಯಾಪೆ ಹಚ್ಚಲಿಕ್ಕೂ ಆಗದಂತೆ ಚಿಂದಿ ಚಿಂದಿ ಮಾಡಿ ಎಸೆದಳು!
ನಾಯೆಲ್ಯಾ ಎರಡನೇ ಅಂಗಿಯಿಂದಲೂ ವಂಚಿತನಾದ ಈ ಕಥೆ ಕೇಳಿ ಜನ ನಕ್ಕರು. ಅಂದಿನಿಂದ ಅಂಗೀಯೆಲ್ಯಾ ಎಂದೂ ಧಾರಾಳವಾಗಿ ಇನ್ನೊಮ್ಮೆ ನಾಮಕರಣ ಮಾಡಿದರು. ಆಮೇಲೆ ಅವನಿಗೆ ಗೌಡನ ಅಂಗಿಗಳೇ ಗತಿ! ಗೌಡನ ದೊಡ್ಡ ಅಂಗಿ ಇವನ ಸಣಕಲು ಮೈಗೆ ಜೋತು ಬೀಳುತ್ತಿತ್ತು. ಆದರೂ ಬೇರೆ ಹೊಸ ಅಂಗಿ ಬಯಸಲಿಲ್ಲ. ಬರಬರುತ್ತ ಗೌಡನ ಅಂಗಿಯಲ್ಲಿದ್ದಾಗ ಅಂಗೀಯೆಲ್ಯಾನಿಗೆ ಒಮ್ಮೊಮ್ಮೆ ಅಂದರೆ ಕುಡಿದಾಗ ಹೆಮ್ಮೆ ಕೂಡ ಅನಿಸುತ್ತಿತ್ತು. ಆಗೆಲ್ಲ ತನ್ನ ಹೆಂಡತಿ ರಂಗಿಗೆ ರಂಗಾಸಾನಿ ಎಂದು ಬಾಯಿತುಂಬ ಕರೆಯುತ್ತಿದ್ದ.

ಭಲೇ ದಿಲ್‌ದಾರ

ನಾಯೆಲ್ಯಾ ಮಹಾದಿಲ್‌ದಾರ ಕುಡಿತದಲ್ಲಿ, ಹಲಗೆ ಹೊಡೆಯುವುದರಲ್ಲಿ, ಎಲ್ಲದರಲ್ಲೂ. ನಿಮ್ಮ ಹತ್ತಿರ ಬಟ್ಟಲು ಸೆರೆ ಸಿಗುತ್ತದೆಂದರೆ ಅವನ ಮೀಜಿನ ಮಾತು ಕೇಳಬೇಕು; ಬೇಕಾದರೆ ನಿಮ್ಮ ಬಗ್ಗೆ ಪದ ಕಟ್ಟಿ ಹಾಡಿದರೂ ಹಾಡಿದನೇ, ಒಗಟು ಹೇಳಿದನೇ, ಬೇಕಂದರೆ ಎದ್ದು ಕುಣಿದನೇ, ಸುಳ್ಳು ಹೇಳಿದನೇ; ಬೇಡವಾದರೆ ನಿಜ ಹೇಳಿದನೇ ಅಂತೂ ಏನೂ ಮಾಡಬಲ್ಲ. ಒಂಕಾರೆಪ್ಪನ ಬನ್ನೀಮರ ಆ ಊರಿನಲ್ಲೇ ದೆವ್ವಗಳಿರುವ ಭಾರೀ ಸ್ಥಳವೆಂದು ಖ್ಯಾತಿ. ಪ್ರತಿ ಅಮಾವಾಸ್ಯೆಯಂದು ಸರಿರಾತ್ರಿಯಲ್ಲಿ ಐದು ಜನ ಥಳಥಳ ಹೊಳೆಯುವ ಹೆಂಗಸರು ಆರತಿ ಹಿಡಿದು ಆ ಬನ್ನೀಮರಕ್ಕೆ ಬರುವರೆಂದೂ, ಆರತಿ ಬೆಳಗಿ, ಪ್ರದಕ್ಷಿಣೆ ಹಾಕಿ ಬೆಳ್ಳಂಬೆಳಗು ಮಂಗಳಾರತಿ ಮಾಡಿ, ಬೆಳ್ಳೀ ಚಿಕ್ಕೆ ಮೂಡಿದೊಡನೆ ಕೆರೆಯ ಕಡೆ ಓಡುವರೆಂದೂ ಜನರಲ್ಲಿ ನಂಬಿಕೆಯಿದೆ. ಕೆಲವರು ಈ ಅದ್ಭುತ ದೃಶ್ಯವನ್ನು ಕಣ್ಣಾರೆ ಕಂಡದ್ದಾಗಿಯೂ ಹೇಳುತ್ತಾರೆ. ಬಾಟ್ಲಿಸೆರೆ ಕೊಡುವುದಾಗಿ ಜಿದ್ದು ಕಟ್ಟಿದ್ದಾಗ ನಾಯೆಲ್ಯಾ ಆ ಬನ್ನೀಮರಕ್ಕೆ ಅಮಾವಾಸ್ಯೆಯಲ್ಲೇ ಹೋಗಿ ಬಂದಿದ್ದಾನೆ ಎಂದರೆ ಎಂಥ ಧೈರ್ಯವಂತ ಇದ್ದಿರಬೇಕು!
ಶಿವಾಪುರದ ಗ್ರಾಮಪಂಚಾಯತಿ ಮೆಂಬರರ ಮೀಟಿಂಗಿನ ಸುದ್ದಿ ಊರಲ್ಲಿ ಕೇಳಿಸತೊಡಗಿತ್ತಲ್ಲ, ಊರವರಿಗೆ ಆ ಸುದ್ದಿ ಕೇಳಿಸಿದರೆ ನಾಯೆಲ್ಯಾನಿಗೆ ನಾರತೊಡಗಿತು. ಆ “ಪಾರಿನ್ ಭಿರಂಡಿ”ಯನ್ನು ಒಮ್ಮೆಯಾದರೂ ಕುಡಿಯಲೇ ಬೇಕೆಂದು ಮನಸ್ಸು ಹರಿಯತೊಡಗಿತು. ಚತುಷ್ಟಯರಿಗೆ ದೆವ್ವನ ಕಥೆ ಹೇಳಿದ. ಅವರಿಂದೇನೂ ಆಗಲಿಲ್ಲ. ಯಾಕೆಂದರೆ ಅವರೆಲ್ಲಿಂದ ಕೊಡಬೇಕು? ಗುಡಸೀಕರನನ್ನೇ ಹಿಡಿಯಬೇಕೆಂದ. ಅವನೋ ಸಿಡುಕ. ದೆವ್ವಿನ ಕಥೆಗೆ ಬಗ್ಗುವವನಲ್ಲ, ಅಲ್ಲದೆ ಇವನ ಅನೇಕ ಕಥೆಗಳ ದೆವ್ವಗಳು ಇರೋದು ಗೌಡನ ತೋಟದಲ್ಲಿ. ಆದರೂ ಇವನ ಭೂತಕಥಾಸರಿತ್ಸಾಗರದಲ್ಲಿ ಗುಡಸೀಕರ ಇಷ್ಟಪಡುವ ಒಂದು ಕಥೆಯಿತ್ತು. ಗುಡಸೀಕರ ಎರಡು ಮೂರು ಬಾರಿ ಆ ಕಥೆ ಕೇಳಿ ಹಾಗೇ ಕಳಿಸಿದ್ದ. ನಾಯೆಲ್ಯಾ ಬಾಯಿಬಿಟ್ಟು ತನಗೊಂದು ಹನಿ ಹನಿಸಿರೆಂದಿ ಕೇಳಿದರೂ ಮುಂದೆ ಕೊಡೋಣವೆಂದು ಹೇಳಿ ನಿವಾರಿಸಿದ್ದ. ಮಾಸ್ತರ ಎದ್ದುಹೋದ ಮೇಲೆ ನಗಾಡುತ್ತಿದ್ದರಲ್ಲ. ಗುಡಸೀಕರ ಎಲ್ಯಾನಿಗೆ ತಿಳಿಯದಂತೆ ಖಾಲಿ ಬಾಟ್ಲಿಗೆ ನೀರು ಹಾಕಿ ಒಳಗೆ ಕರೆದ. ಕರೆಯುವುದಿನ್ನೂ ಮುಗಿಯುವುದರೊಳಗೇ ನಾಯೆಲ್ಯಾ ಒಳಗೆ ಬಂದಿದ್ದ.
“ನಾಯೆಲ್ಯಾ, ಆ ಗೌಡನ ದೆವ್ವಿನ ಕಥಿ ಇನ್ನೊಮ್ಮಿ ಹೇಳಲೇ.” ಎಂದ ಗುಡಸೀಕರ, ಆ ಬಾಟ್ಲಿಯ ನೀರನ್ನೇ ಗ್ಲಾಸಿಗೆ ಬಗ್ಗಿಸಿಕೊಂಡು ಕುಡಿಯುತ್ತ. ನಾಯೆಲ್ಯಾನ ಆಸೆ ಕರಗಿ ನೀರಾಗಿ ಹರಿದಂತೆ ಬಾಯಲ್ಲಿ ಜೊಲ್ಲು ಬಂತು. ಅನೇಕ ದಿನಗಳ ಆಸೆ ಈಡೇರಬಹುದೆಂಬ ನಂಬಿಕೆಯಿಂದ ಕಣ್ಣು ಅಗಲವಾಗಿ ಬೆಳೆದವು. ಮುಖ ಕಳೆಕಳೆಯಾಯಿತು. ಮನಸ್ಸಿನಲ್ಲಿ ಕರಿಮಾಯಿಯನ್ನು ಸ್ಮರಿಸಿ “ಎವ್ವಾ, ಗುಡಸೀಕರಗ ಚಲೋ ಬುದ್ಧಿ ಕೊಡವಾ” ಎಂದು ಬೇಡಿಕೊಂಡು ಕಥೆ ಹೇಳಲಿಕ್ಕೆ ಸಿದ್ಧನಾದ. ಒಮ್ಮೆ ಚತುಷ್ಟಯರ ಮುಖ ನೋಡಿದ. ಇವನ ಸಂಭ್ರಮ ನೋಡಿ ಅವರಿಗೂ ಅಂದರೆ ಚತುಷ್ಟಯರಿಗೂ ನಗೆ ಬಂತು. ಅದು ಅವರು ಅರಿಯದ ಕಥೆಯೇನಲ್ಲ. ಆದರೆ ಹೇಳುವ ಅವನ ಹುರುಪಿನಲ್ಲಿ ಇದೊಂದು ವಿಶೇಷವಿತ್ತು; ಮದುವೆಯಾದ ಹೊಸ ಹುಡುಗ, ಪ್ರಥಮ ರಾತ್ರಿ, ತನ್ನ ಹೆಂಡತಿಯ ಬಳಿ ಹೋಗುವಾಗಿನ ವಿಶೇಷ ಕಾಂತಿಯಿತ್ತು, ಮುಖದಲ್ಲಿ ಲವಲವಿಕೆಯಿಂದ ಕಥೆ ಹೇಳತೊಡಗಿದ:
ಒಂದಾನೊಂದು ಕಾಲದಲ್ಲಿ, ಒಂದಾನೊಂದು ಹಳ್ಳಿಯಲ್ಲಿ ರಾಜ ಮಂತ್ರಿ ಪ್ರಧಾನಿ ದಂಡು ದಳವಾಯಿ ಮಂದಿ ಮಾರ್ಬಲ ಸಮೇತ ಸುಖವಾಗಿದ್ದರು. ಶಿವಾಪುರದಲ್ಲಿ ನಾಯೆಲ್ಯಾ ರಂಗಸಾನಿ ಅಂತ ಗಂಡ ಹೆಂಡತಿ ಇದ್ದರು. ನಾಯೆಲ್ಯಾ, ಕುಡುಕನನ ಮಗ, ಕುಡಿಯೋದರಲ್ಲಿ ಅವನ್ನ ಮೀರಿಸುವಂಥವರು ಸುತ್ತ ನಾಡಿನಲ್ಲೇ ಇರಲಿಲ್ಲ. ಒಂದು ದಿನ ಆ ಊರಲ್ಲಿದ್ದ ಅಡಗೂಲಜ್ಜಿ ಲಗಮವ್ವನ ಗುಡಿಸಲಲ್ಲಿ ಖೂಬಾಗಿ ಕುಡಿದ. ಕುಡಿದ ಮೇಲೆ ಹೆಂಡತಿ ನೆನಪಾಯ್ತು. ಮನೆಗೆ ಹೋದ, ಮಲಗಿದ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ತನ್ನ ತೋಟದಲ್ಲಿ (ಅಂದರೆ ಗೌಡನ ತೋಟದಲ್ಲಿ) ಯಾರೂ ಇಲ್ಲವೆಂದು, ಸೇಂಗಾ, ಒಣಗು ಹಾಕಿದ್ದರಿಂದ ಯಾರಾದರೂ ಕಳ್ಳರು ಬಂದರೆ ಹೆಂಗಪಾ ಅಂದುಕೊಂಡು ಎದ್ದ. ಅಮಾವಾಸ್ಯೆಯ ಕತ್ತಲೆ. ಹೆದರಿಕೆಯಾಯ್ತು. ಕರಿಮಾಯಿಯ ಮೇಲೆ ಭಾರಹಾಕಿ, ಆದದ್ದಾಗಲಿ ಎಂದು ನಡೆದ.
ತೋಟದ ಸಮೀಪ ಬಂದ ಹಾಗೆ ಸ್ವಲ್ಪ ದೈರ್ಯ ಬಂತು. ಯಾಕೆಂದರೆ ಇವನು ಬರುವ ಮುಂಚೆಯೇ ಗೌಡರು ಬಂದು ಕಣದ ಹತ್ತಿರ ಕಾಲು ಚಾಚಿ ಬೆಂಕಿ ಕಾಸುತ್ತ ಕೂತಿದ್ದರು. ತಡಮಾಡಿ ಬಂದಿದ್ದ. ಅದಕ್ಕೇ ಗೌಡ ಬಯ್ಯುತ್ತಾರೆಂದು ಹೆದರಿಕೊಂಡೇ “ಎಪ್ಪಾ ತಪ್ಪಾತರೀ” ಎನ್ನುತ್ತ ಸಮೀಪ ಬಂದ. ಬಂದು ನೋಡುತ್ತಾನೆ; ಗೌಡರಲ್ಲ. ಗೌಡರ ದೆವ್ವ! ಕೊಡ ಗಾತ್ರದ ತರಡು ಚೆಲ್ಲಿಕೊಂಡು ತನ್ನ ಕಾಲಿಗೇ ಬೆಂಕಿ ಹಚ್ಚಿ, ಉರಿಮಾಡಿ ಕಾಯಿಸಿಕೊಳ್ಳುತ್ತಿದೆ! “ಸತ್ತಿನೋ! ಎವ್ವಾ ಕರಿಮಾಯೀ” ಎಂದವನೇ ಓಡಿಹೋಗಿ ಗುಡಿಸಲದೊಳಗಿಂದ ನೀರು ಚಿಮುಕಿಸಿದನಂತೆ. ದೆವ್ವ ಗಪ್ಪಗಾರ, ಮಟಾಮಾಯ!
ಮಾರನೇ ದಿನ ಗೌಡನನ್ನು ನೋಡಿದಾಗಲೂ ಅವನಿಗೆ ಅದೇ ಥರ ಹೆದರಿಕೆಯಂತೆ. ಈಗಲೂ ಅವನು ರಾತ್ರಿ ಗೌಡರನ್ನು ಮುಖಾಮುಖಿ ನೋಡುವುದಿಲ್ಲವಂತೆ-
“ಅವರಲ್ಲಿ, ನಾವಿಲ್ಲಿ”
ಎನ್ನುತ್ತ ಕಥೆ ಮುಗಿಸಿದ.
ಇಂಥಾ ಕಥೆಗಳನ್ನು ಬೇಕಾದರೆ ಎಣಿಸಿ ಸಾವಿರ ಹೇಳಿಯಾನು, ಸೆರೆ ಸಿಕ್ಕೋದಾದರೆ. ಈ ಸಾವಿರ ಕಥೆಗೂ ಇವನೇ ನಾಯಕನಾದರೂ, ಇವನು ಹೇಳುವುದು ಮತ್ತೆ “ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ” ಎಂದೇ. ಆದರೆ ಬೇರೆಯವರ ದೆವ್ವಗಳಿಗೂ ಒಂದು ವ್ಯತ್ಯಾಸವಿದೆ. ಇವೆಲ್ಲ ನೀರಿಗೆ ಹೆದರುತ್ತವೆ, ಮತ್ತು ಪ್ರತಿಯೊಂದು ಕಥೆಯಲ್ಲೂ ಇವನೇ ಜಯಶಾಲಿಯಾಗುತ್ತಾನೆ. ಇದು ನಿಜವಿದ್ದೀತು, ಯಾಕೆಂದರೆ ಈ ತನಕ ಬದುಕಿದ್ದಾನಲ್ಲ! ಕೆಲವು ಹೆಣ್ಣು ದೆವ್ವಗಳು ಇವನಿಗೆ ಸೆರೆ ಕದ್ದು ತಂದುಕೊಟ್ಟು ಇವನೊಂದಿಗೆ ಮಲಗಿ ಹೋಗುತ್ತವಂತೆ!
ಕಥೆ ಕೇಳಿ ಎಲ್ಲರೂ ಹೋ ಎಂದು ನಕ್ಕರು. ಗುಡಸೀಕರನಿಗೆ ಖುಶಿಯಾಗಿ “ತಗೊಳ್ಲೆ ಮಗನಽ ಭಿರಂಡಿ ಕುಡಿ” ಎಂದು ಬಾಟ್ಲಿಯನ್ನೇ ಅಂದರೆ ನೀರು ತುಂಬಿದ ಬಾಟ್ಲಿಯನ್ನೇ ಇಡಿಯಾಗಿ ಅವನಿಗಿತ್ತು “ಹೋಗು, ನನ್ಹೆಸರ ಹೇಳಿ ಕುಡಿ ಹೋಗು” ಎಂದ. ಕೊಟ್ಟ ತಕ್ಷಣವೇ ನಾಯೆಲ್ಯಾ ಅದೆನ್ನದೆ ಇದೆನ್ನದೆ ಬಾಯಿಗಿಟ್ಟು ಗಟ ಗಟ ಗಟ ಕುಡಿದು ಬಾಟ್ಲಿ ಕಂಕುಳಲ್ಲಿಟ್ಟುಕೊಂಡು ಕಣ್ಣು ಅಗಲವಾಗಿ ತೆರೆದುಕೊಂಡು, ನಿಶ್ಚಲವಾಗಿ ಕೂತುಬಿಟ್ಟ! ಚತುಷ್ಟಯರು ಬಿದ್ದು ಬಿದ್ದು ನಗುತ್ತಿದ್ದರೆ ಎಂಟು ಜನ ನಕ್ಕಂತೆ ಕಂಡರು. ಗುಡಸೀಕರನಿಗೆ ಕೈ ಮುಗಿದು ಹೊರಬಿದ್ದ. ಊರು ಆಗಲೇ ಮಲಗಿತ್ತು.
ನಾಯೆಲ್ಯಾ ಈಗ ಹಿಂದೆ ಭಿರಂಡಿ ಹೇಗಿರುತ್ತದೆಂದು ಚತುಷ್ಟಯರನ್ನು ಕೇಳಿದ್ದ. ಅವರೋ ನಾಲ್ವರು ನಾಲ್ಕು ಥರಾ ಹೇಳಿದ್ದರು. ಕಳ್ಳ “ಹೊಟ್ಯಾಗ ರಂ ಅಂದು ತಲಿ ಗಿರ್ರಂತ ತಿರುಗಿ, ಕಾಲಾಗ ಕುದುರಿ ಮರಿ ಜಿಗಧಂಗಾಗತೈತಿ” ಅಂದಿದ್ದ. “ಒಂದ ನಮೂನಿ ಒಂದಿದ್ದದ್ದ ನಾಕೆಂಟ ಆಧಾಂಗ ಇರತೈತಿ” ಅಂತ ರಮೇಸ ಅಂದಿದ್ದ. “ಕೆರ್‍ಯಾಗ ಈಸ ಬಿದ್ದಾಂಗಿರತೈತಿ” ಎಂದು ಸಾತೀರ ಹೇಳಿದ್ದ. ಮೆರಮಿಂಡನಂತೂ “ಸ್ವರ್ಗಲೋಕ ಕಾಣತೈತಲ್ಲೋ ಮೊನ್ನಿ ನಮ್ಮ ಅಜ್ಜಾ ನಿಮ್ಮ ಅಜ್ಜೀ ಎಲ್ಲಾ ಕಂದರು. ನಿಮ್ಮ ಅಜ್ಜೀನ ನಮ್ಮಜ್ಜಾ ಅಟ್ಟಿಸಿಕೊಂಡ ಓಡತಿದ್ದಾ!” ಎಂದೂ ಹೇಳಿದ್ದ. ಇದನ್ನೆಲ್ಲ ಕೇಳಿ “ಅವರವರ ಭಾವಕ್ಕೆ ತಕ್ಕಂತೆ ಅವರವರ ಪರಮಾತ್ಮ” ಎಂದುಕೊಂಡು ತನಗೇನು ಆಗುತ್ತದೋ, ಕಾಣುತ್ತದೋ ಎಂದು ಕಾತುರದಿಂದ ಇದ್ದ. ತನಗೊಮ್ಮೆ ಈ ಭಿರಂಡಿ ಸಿಕ್ಕರೆ ಮೆರಮಿಂಡನ ಅಜ್ಜಿಯನ್ನು ತಾನು ಹಿಡಿದುಕೊಳ್ಳಬೇಕೆಂದೂ ಅಂದುಕೊಂಡಿದ್ದ. ಈಗ ನೋಡಿದರೆ ಆ ನಾಲ್ವರ ನಾಲ್ಕು ಥರದ ಅನುಭವ ತನಗೊಬ್ಬನಿಗೇ ಏಕದಂ ಏಕ ಕಾಲಕ್ಕೆ ಆದಂತೆ ಅನಿಸಿತು. ನಡೆಯುವುದಕ್ಕೆ ರಸ್ತೆ ಸಾಲದಾಯ್ತು. ಕುದುರೆ ಮರಿಯ ಮೇಲೆ ಹತ್ತಿ ಕೂತಂತೆ ಅನಿಸಿತು. ಒಂದಿದ್ದುದು ನಾಕೆಂಟೂ ಕಂಡಿತು. ಕೆರೆಯಲ್ಲಿ ಈಜಾಡಿದಂತಾಯ್ತು. ಸ್ವರ್ಗಲೋಕ ಕಂಡು, ಅದರಲ್ಲಿ ಮೆರಮಿಂಡನ ಅಜ್ಜಿ ಎದುರುಬಂದಂತಾಗಿ “ಸಿಕ್ಕಲೇ ಹುಡುಗಿ” ಎಂದು ತೆಕ್ಕೆ ಹಾದ. ತೆಕ್ಕೆಗೆ ಸಿಕ್ಕವನು ನಿಂಗೂ!ನಾಯೆಲ್ಯಾನಿಗೆ ಇದು ಗೊತ್ತಾಯಿತು. ಸರಿಯಾಗಿ ನಿಲ್ಲಲೂ ಆಗಲೊಲ್ಲದು. ಅವನ ಕಂಕುಳದ ಬಾಟ್ಲಿ ನೋಡಿ ಇದು ಗುಡಸೀಕರನೆಂದು ನಿಂಗೂ ಗುರುತಿಸಿದ. ಹ್
ಹೀಗೇ ಬಿಟ್ಟರೆ ರಸ್ತೆಯ ಪಾಲಾಗುತ್ತಾನೆಂದು ನಿಂಗೂ ಅವನ ರೆಟ್ಟೆ ಹಿಡಿದು ಅವನ ಗುಡಿಸಲ ಕಡೆ ಬಿಡೋಣವೆಂದು ಕರೆದುಕೊಂಡು ನಡೆದ. ಜೋಲಿ ತಪ್ಪಿ ನಾಯೆಲ್ಯಾ ನಿಂಗೂನ ಸೊಂಟ ತಬ್ಬಿಕೊಂಡ. “ಥೂ ಖೋಡಿ” ಎಂದು ಕತ್ತಲೆಯಲ್ಲೂ ನಿಂಗೂ ನಾಚಿಕೊಂಡ. ತನ್ನ ಓಣಿ ಸಮೀಪಿಸುವತನಕ ನಾಯೆಲ್ಯಾ ಏನೇನೋ ಮಾತಾಡುತ್ತಿದ್ದ. ನಿಂಗೂ ಸೂತ್ರದ ಗೊಂಬೆ ಥರಾ ಕಾಣಿಸುವುದಾಗಿ ಹೇಳಿದ. ಚಿಮಣಾ ನಿನ್ನ ಮುಂದೆ ಏನೇನೂ ಅಲ್ಲ ಅಂದ. ಇನ್ನೇನು ತನ್ನ ಹೆಂದತಿ ಮುಂದಿನ ಅಮಾವಾಸ್ಯೆಗೆ ಸಾಯುತ್ತಾಳಲ್ಲ, ಸತ್ತಕೂಡಲೇ ನಿಂಗೂನನ್ನೇ ಮದುವೆಯಾಗುವುದಾಗಿ ಕರಿಮಾಯಿಯ ಆಣೆ ಮಾಡಿದ. ಓಣಿ ಬಂದೊಡನೆ ಅವನನ್ನು ಅಲ್ಲೇ ಬಿಟ್ಟು “ಇನ್ನು ಗುಡಿಸಲಕ ಹೋಗಲೇ ಭಾಡ್ಯಾ” ಎಂದೂ ನಿಂಗೂ ಅವನಾಡಿದ್ದನ್ನೆಲ್ಲ ಜ್ಞಾಪಿಸಿಕೊಳ್ಳುತ್ತ ತನ್ನ ಮನೇ ಕಡೆ ಓಡಿ ಹೋದ.
ನಾಯೆಲ್ಯಾ ಗುಡಿಸಲಿಗೆ ಹೋಗಿ ಬಾಗಿಲು ಬಡಿದ. ಒಳಗಿನಿಂದ “ಯಾರವರಾ” ಎಂದದ್ದು ಕೇಳಿಸಿತು. ಇವನ ಪಿತ್ಥ ನೆತ್ತಿಗೇರಿತು. “ಯಾರವರಾ? ನಿನ ಗಂಡ! ಬಾಗಿಲ ತಗೆಯೇ ಬಿದ್ದಾಡೀ” ಅಂದ. ಅಂದು ಬಾಗಿಲಿಗೊಂದು ಒದ್ದ. ಒದ್ದು “ಬಾಗಿಲು ತೆಗೆಯೇ ರುಕ್ಮಿಣೀ; ಮೋ‌ಅದ ಅರಗಿಣೀ” ಎಂದು ಪಾರಿಜಾತದ ಕೃಷ್ಣನ ಹಾಡು ತೊದಲಿದ. ಬಾಗಿಲು ತೆರೆಯಿತು, ಒಳನುಗ್ಗಿದ. ಒಳಗೆ ಒಮ್ಮೆಲೇ, ಹಾರಾಟ ಕೂಗಾಟ ಸುರುವಾಯಿತು. ಯಾಕೆಂದರೆ ಅದು ನಾಯೆಲ್ಯಾನ ಗುಡಿಸಲಾಗಿರಲಿಲ್ಲ. ತಪ್ಪಿ ಮಾದರ ಭರಮನ ಗುಡಿಸಲಿಗೆ ನುಗ್ಗಿದ್ದ. ಭರಮ ಮನೆಯಲ್ಲಿರಲಿಲ್ಲ.
ಭರಮನ ಹೆಂಡತಿ ಮತ್ತು ತಾಯಿ ಕಿರಿಚಾಡುತ್ತ, ಒದರಾಡುತ್ತ, ಬೈಗಳಗಳಿಂದ ನಾಯೆಲ್ಯಾನ ಕುಲಕೋಟಿಯನ್ನು ತೊಳೆಯುತ್ತ ಕೈಗೆ ಸಿಕ್ಕ ತಟ್ಲಿ, ಕಸಪೊರಕೆಯಿಂದ ಕೈ ಬಾಯಿ, ನೋಡದೆ ಬಾರಿಸಿ, ಮೈ ನೀರಿಳಿಸುತ್ತ ಹಾಹೋ ಎಂದು ಗದ್ದಲ ಮಾಡತೊಡಗಿದರು. ಕಳ್ಳನಿರಬೇಕೆಂದು ಪಕ್ಕದ ಗುಡಿಸಲಿನವರು ಎಚ್ಚೆತ್ತು ಹೊರಗೆ ಬಂದು ಭರಮನ ಮನೆ ನುಗ್ಗಿ ಅವರೂ ಒದ್ದರು. ಈ ತನಕ ದಿಕ್ಕು ತಪ್ಪಿ, ಏನೆಂದು, ಯಾಕೆಂದು, ಹ್ಯಾಗೆಂದು ತಿಳಿಯದೆ ಒದರಾಡದೆ ಸುಮ್ಮನೆ ಏಟು ತಿನ್ನುತ್ತಿದ್ದವನು ಮಂದಿ ಬರುತ್ತಲೂ ತನಗಿನ್ನು ಉಳಿಗಾಲವಿಲ್ಲವೆಂದು “ಸತ್ತಿನ್ರೋ ಎಪ್ಪಾ” ಎಂದು ಸಿಡಿದ ಉಗುಳಿನಂತೆ ಹೊರಬಿದ್ದ.
ನೋಡಿದರೆ ನಾಯೆಲ್ಯಾ! ಮೂಲೆ ಗುಡಿಸಲದ ಅವನ ಹೆಂಡತಿ ರಂಗಸಾನಿಗಾಗಲೇ ಎಚ್ಚರವಾಗಿ ಹೊರ ಬಂದಿದ್ದಳು. ಇಬ್ಬರೂ ಹೆಂಗಸರು ಅಳುತ್ತ, ಕರೆಯುತ್ತ ಹೊರಬಂದ ಎಲ್ಲರಿಗೂ ಹೇಳಿ ಸಹಾಯಕ್ಕಾಗಿ ಕೂಗಾಡತೊಡಗಿದ್ದರು. ಈಗ ಅವನಿಗೆ ಒಂದುಷ್ಟೂ ನಿಶೆಯಿರಲಿಲ್ಲ. ಕಂಡಕಂಡವರ ಕಾಲು ಹಿಡಿದ. “ನಿಶೇದಾಗ ತಪ್ಪಾತೆಪ್ಪೋ” ಅಂದ. ಕೂಡಿದವರು ಛೀ ಥೂ ಅಂದರು. ಭರಮನ ತಾಯಿ ಹಾಗೂ ಹೆಂಡತಿಯ ಕೂಗಾಟ ಇನ್ನೂ ಸಾಗಿತ್ತು. ಉಳಿದವರು “ನಾಳಿ ಗೌಡಗ ಹೇಳೋಣು, ಹೋಗ್ರಿನ್ನ” ಎಂದು ಸಮಾಧಾನ ಮಾಡಿ ಅವರನ್ನು ಒಳಗೆ ಕಳಿಸಬೇಕಾದರೆ ಕುರಿ ಕೋಣ ಬಿದ್ದವು. ರಂಗಿ ನಾಯೆಲ್ಯಾನನ್ನು ದರದರ ಎಳೆದುಕೊಂಡು ಹೋಗಿ ಬಾಗಿಲಲ್ಲಿ ಕಾಲಿನಿಂದ ಒಂದೆರಡು ಚೆಲ್ಲಿ, ಅಲ್ಲೇ ಬಿಟ್ಟು ಒಳಗೆ ಹೋಗಿ ಮಲಗಿದಳು. “ಕರಿಮಾಯಿ! ಏನ ಹೋಗಿ ಏನಾತಿದು” ಎಂದು ಚಿಂತಿಸುತ್ತ ನಾಯೆಲ್ಯಾ ಬಾಗಿಲಲ್ಲೇ ಬಿದ್ದುಕೊಂಡ, “ಮುನಿಯೆಲ್ಯಾ” ನೊಂದಿಗೆ.

ಕುರಿಯ ಬಲಿ

ಮಾರನೇ ಮುಂಜಾನೆ ಕೈ ಮಾರು ಹೊತ್ತೇರಿರಬೇಕು, ಗೌಡನ ಮನೆಯಿಂದ ನಾಯೆಲ್ಯಾನಿಗೆ ಕರೆ ಬಂತು. ಎಲ್ಯಾ ಇದನ್ನು ಊಹಿಸಿಕೊಂಡೇ ಊರಿಗಿಂತ ಮುಂಚೆ ಎದ್ದು, ತೋಟಕ್ಕೆ ಹೋಗಿದ್ದ. ಹಳಬ ಅಲ್ಲಿಗೂ ಬಂದ. ಇನ್ನು ಉಳಿಗಾಲವಿಲ್ಲ. ಬೈಸಿಕೊಳ್ಳುವುದಕ್ಕೆ ಮೈ ಬಿರುಸು ಮಾಡಿಕೊಂಡೇ ಬಂದ.
ಗೌಡರ ಮನೆಯಲ್ಲಾಗಲೇ ಜನ ತುಂಬಿತ್ತು. ಹಿರಿಯರಿದ್ದರು. ಭರಮ, ಅವನವ್ವ ಇದ್ದರು. ಆಶ್ಚರ್ಯವೆಂದರೆ ಮನೆಯ ಹೊರಗಡೆ ಕಟ್ಟೆಯ ಮೇಲೆ ಸರಪಂಚ ಕೂತಿದ್ದ. ಚತುಷ್ಟಯರಿದ್ದರು. ನಾಯೆಲ್ಯಾನನ್ನು ನೋಡಿದೊಡನೆ ಕಳ್ಳ ನಕ್ಕ. ಒಳಕ್ಕೆ ದೀನನಾಗಿ ಹೋಗಿ ದನಗಳ ಹಕ್ಕೆಯಲ್ಲಿ ನಿಂತ.
ವಿಚಾರಿಸುವುದೇನಿದೆ? ‘ಭರಮ ಹೇಳಿದ್ದು ಖರೆ ಏನೋ?’ ಎಂದು ಗೌದ ಕೇಳಿದ. ನಾಯೆಲ್ಯಾ ದೊಪ್ಪನೆ ಕೆಳಗೆ ಬಿದ್ದು
“ತಪ್ಪಾತ್ರಿ ಎಪ್ಪಾ, ನಶೇದಾಗೆ ಏನೇನೋ ಆತು. ನಾ ಎಂದೂ ಹಿಂಗೆ ಮಾಡಿದಾಂವಲ್ಲ. ಸರಪಂಚ ಅದೆಂಥಾದೋ ಭಿರಂಡಿ ಕೊಟ್ಟರು. ಹೊಸಬ ಸೊಲಪ ಹೆಚ್ಚ ಗದ್ದಲಾ ಮಾಡಿತರಿ”
ಎಂದು ತಪ್ಪನ್ನೆಲ್ಲಾ ಭಿರಂಡಿಯ ಮೇಲೆ ಹಾಕಿದ. ಗುಡಸೀಕರನ ಸುದ್ದಿ ಈ ತನಕ ಆ ಜಗಳದಲ್ಲಿ ಕೇಳಿಸಿರಲಿಲ್ಲ. ಅಥವಾ ಯಾರಿಗೂ ಅನಿಸುವಂಥಾದ್ದೇ. ಯಾಕೆಂದರೆ ಅಂಗಿಯೆಲ್ಯಾ ಕುಡಿಯುವುದೇನೂ ಗುಟ್ಟಿನ ಸುದ್ದಿಯಲ್ಲ. ಅಥವಾ ಅದು ಸುದ್ದಿಯೇ ಅಲ್ಲ. ಮೀನು ನೀರು ಕುಡಿಯುತ್ತದೆ ಎಂಬಂತೆ. ಆದರೆ ಒಂದು ಸಲವೂ ಈ ರೀತಿ ಹದ್ದು ಮೀರಿದವನಲ್ಲ. ಅನೀತಿಯೆಂದು ಊರವರು ಯಾವುದಕ್ಕೆ ಉಗುಳಿನಲ್ಲಿ ಬರೆದಿಟ್ಟರೋ ಆ ಸೀಮೆಗೆ ಮರೆತು ಕೂಡ ಕಾಲಿಟ್ಟವನಲ್ಲ. ಅಂಥವನು ಈ ರೀತಿ ಮಾಡಿರೋದರಲ್ಲಿ ಏನೋ ವಿಶೇಷ ಪ್ರೇರಣೆ ಇರಬೇಕೆಂದೂ ಎಲ್ಲರಿಗೂ, ಭರಮನಿಗೂ ಅನಿಸಿತು. ಇದಕ್ಕೆಲ್ಲ ಮಾತು ಕೊಟ್ಟಂತೆ ದತ್ತಪ್ಪ ಬಾಯಿಬಿಟ್ಟ.
“ನೋಡ್ರಿ, ನಾಯೆಲ್ಯಾ ಕುಡುಕ ಖರೆ. ಆದರ ಎಂದೂ ಹದ್ದು ಮೀರಿರಲಿಲ್ಲ. ಸೆರೆ ಅಂದರ ಜೊಲ್ಲ ಸುರಸತಾನ ಅಂದಮ್ಯಾಲ ನಾವಽ ಸ್ವಲ್ಪ ಎಚ್ಚರದಿಂದ ಇರಬೇಕಾಗತದ. ಬರೀ ಲಗಮೀ ಬಟ್ಟಲ ಸೆರೆ ಕುಡದಽ ಮಗಾ ಎಪರಾ ತಪರಾ ಬೀಳತಾನ. ಇನ್ನ ಪರದೇಶಿ ಭಿರಂಡಿ ಅಂದರ ಹೆಂಗಾಗ ಭಾಡ?”
ಹೋಳೀ ಹುಣ್ಣಿಮೆ ದಿನ ತನ್ನ ಮಗನನ್ನು ಗುಡಸೀಕರ ಹೊಡೆದ ಸೇಡು ಬಾಳೂನಲ್ಲಿ ಇನ್ನೂ ಇತ್ತು,
“ಹೌಂದರಿ. ಗ್ರಾಮಪಂಚಾಯ್ತಿ ಯಾಕ ಮಾಡಿದಿವಿ? ಮಂದಿ ಪರದೇಶಿ ಭಿರಂಡಿ ಕುಡ್ಯಾಕ ಕಲೀಲೆಂತ ಮಾಡಿದಿವೋ? ಊರಿಗಷ್ಟು ಒಳ್ಳೇದಾಗಲೆಂತ ಮಾಡಿದಿವೋ? ಮೊದಲಽ ಮಳ್ಳಮಂದಿ ಅವಕ್ಕೆಲ್ಲಾ ಹಿಂಗ ಚಟ ಕಲಿಸಿದರ ಹೆಂಗ ಹೇಳ್ರಿ?”
ಎಂದೂ ಬಾಯಿ ಹಾಕದ ಬಸೆಟ್ಟಿಯೂ ಇಂದು ಬಾಯಿ ಹಾಕಿದ,
“ನನ್ನ ಕೇಳಿದರ, ನಾಯೆಲ್ಯಾ ಕೊಡಬೇಕಾದ ದಂಡ ಸರಪಂಚನೇ ಕೊಡಬೇಕಾಗತೈತ್ರೀ”: ಗೌಡ ಏನೂ ಹೇಳದಾದ. ಯಾಕೆಂದರೆ ನಾಯೆಲ್ಯಾ ಇದ್ದದ್ದು ಗೌಡನ ಮನೆಯಲ್ಲಿ, ಆಳಾಗಿ. ಆದ್ದರಿಂದ ದತ್ತಪ್ಪನ ಕಡೆ ನೋಡಿದ. ಹೇಗೋ ಇಬ್ಬರಿಗೂ ಸಮಾಧಾನವಾಗುವ ಒಂದು ತೀರ್‍ಮಾನ ನೀನೇ ಕೊಡು ಎಂಬರ್ಥದಲ್ಲಿ. ಆದರೆ ದತ್ತಪ್ಪ ತುಟಿ ಬಿಚ್ಚುವುದರೊಳಗೆ ದೇವರೇಸಿ ತೀರ್‍ಮಾನ ಹೇಳಿಬಿಟ್ಟಿದ್ದ.
“ಮಾದರ ಕುಲಕ್ಕ ಅಪಮಾನ ಮಾಡಿಧಾಂಗಾಗೇತಿದು, ಕುಲ ಅಂದಮ್ಯಾಲ ಸಣ್ಣದರಾಗ, ಮುಗ್ಯಾಣಿಲ್ಲ, ಒಂದು ಕುರಿ ದಂಡ ಕೊಡಲಿ.”
ಅಂಗೀಯೆಲ್ಯಾನ ಕಿಮ್ಮತ್ತೆಷ್ಟು? ಕುರಿ ಅಂದರೆ ಅವನೆಲ್ಲಿಂದ ಕೊಡುತ್ತಾನೆ? ದೇವರೇಸಿಗಿದು ಗೊತ್ತಿಲ್ಲದೆ ಇಲ್ಲ. ಆದರೆ ಸಾಮಾನ್ಯವಾಗಿ ಇಂಥ ಕೇಸುಗಳಲ್ಲಿ ಕಟ್ಟುವ ದಂಡವೇ ಇದು. ದೇವರೇಸಿಯ ಬಾಯಿಂದ ಮಾತು ಹೊರಬಿದ್ದಮೇಲೆ ಯಾರೇನು ಹೇಳಿಯಾರು? ಆದರೆ ಕುರಿ ಯಾರು ಕೊಡಬೇಕು? ಎನ್ನುವುದೇ ಪ್ರಶ್ನೆ. ದೇವರೇಸಿ ಮೊದಲೇ ಮುಗ್ಧ. ನಾಯೆಲ್ಯಾನ ಹೆಸರಿನಲ್ಲಿ ಒಂದು ಕುರಿ ವಸೂಲಾಗಲಿ. ಏನಂತೆ? ಕುಲದವರೆಲ್ಲ ಕೂಡಿ ಮಾಂಸ ತಿಂದು ಎಷ್ಟೋ ದಿನಗಳಾಯ್ತು. ಈಗಲಾದರೆ ಬಾಯಿ ಹೊಲಸಾದರೂ ಹರಿದುಹೋದೀತು.
ಕುರಿ ಎಂದೊಡನೆ ಅಂಗೀಯೆಲ್ಯಾ ಭೂಮಿಗೇ ಕುಸಿದ. ಮಾತಾಡಲಿಕ್ಕೆ ಆಗಲೊಲ್ಲದು. ತನ್ನ ಕಡೆ ಯಾರು ನೋಡಿದರೆ ಅವರಿಗೆ ‘ಕಾಪಾಡ್ರಿ’ ಎಂಬ ಸೂಚನೆ ಬರುವಂತೆ “ಕುರಿ ಎಂದ ಕೊಡ್ತೀಯೋ?”
ಎಂದು ಮತ್ತೆ ದೇವರೇಸಿಯೇ ಬಾಯಿ ಹಾಕಿದ.
“ಎಪ್ಪಾ, ತಪ್ಪಾತ್ರಿ, ಇದೊಮ್ಮೆ ಎಲ್ಲಾ ಹೊಟ್ಯಾಗ ಹಾಕ್ಕೊಂಡ ಮಾಫೀ ಮಾಡರಿ.”
-ಎನ್ನುತ್ತ ಅಂಗೀಯೆಲ್ಯಾ ಸರ್‍ವದೈವಕ್ಕೆ ಅಡ್ಡಬಿದ್ದ. ಅಡ್ಡಬಿದ್ದರೆ ಕುರಿ ಬರುತ್ತದೆಯೊ?
ಆದರೆ ಹೇಗೆ ಒತ್ತಾಯ ಮಾಡುತ್ತಾರೆ? ತಕ್ಷಣ ಅಂಗೀಯೆಲ್ಯಾ ನೆಲದ ಮೇಲಿನ ಒಂದೆರಡು ಸಣ್ಣ ಹಳ್ಳ ಆರಿಸಿಕೊಂಡು, ಎಡಗೈಯಿಂದ ಬಲಗಿವಿ, ಬಲಗೈಯಿಂದ ಎಡಗಿವಿ ಹಿಡಿದುಕೊಂಡು ಒಂದೆರಡು ಬಾರಿ ಕೂತು ಎದ್ದ. ಕೂತು ಎದ್ದರೆ ಕುರಿ ಬರುತ್ತದೆಯೊ?
“ಬೇಕಾದರ ಎಪ್ಪಾ, ಮನೀತನಕ ಕುಂಡೀ ಎಳೀತೀನ್ರಿ”
ಹಾಗೆ ಎಳೆದರೆ ಕುರಿ ಬರುವುದೋ? ಬಂತು! ದತ್ತಪ್ಪ “ನೋಡಲೇ ಅಂಗೀಯೆಲ್ಯಾ….” ಎಂದು ದನಿ ಹಾಕುವುದರಲ್ಲಿದ್ದ: ಅಷ್ಟರಲ್ಲಿ ಕಳ್ಳ ಒಳಗೆ ಬಂದು “ನಾಯೆಲ್ಯಾ, ಸರಪಂಚ ಕುರಿ ಕೊಡತಾರಂತ ಬಿಡಲೇ” ಎಂದ. ಅಂಗೀಯೆಲ್ಯಾ ಕೂಡಲೇ ಹೊರಗೋಡಿದ ಗುಡಸೀಕರನ ಕಾಲು ಹಿಡಿಯಲಿಕ್ಕೆ. ಪಂಚರು ‘ಕೊಡಲಿ ಎಂದರು. ಗೌಡ ಸುಮ್ಮನಾದ, ದತ್ತಪ್ಪನೂ.
ಎಲ್ಲರೂ ಎದ್ದುಹೋದ ಮೇಲೆ ಪಂಚರಿನ್ನೂ ಹಾಗೇ ಕೂತಿದ್ದರು. ಇದು ಹಿತವಲ್ಲ’ ಅನ್ನಿಸಿತು. ಅಂಗೀಯೆಲ್ಯಾನ ಬಗ್ಗೆ ಯಾರಿಗೂ ಚಿಂತೆಯಾಗಲಿಲ್ಲ. ಆದರೆ ಗುಡಸೀಕರ ಈ ರೀತಿ ಮಧ್ಯೆ ಪ್ರವೇಶಿಸಿದ್ದು ತಪ್ಪೆನಿಸಿತು. ಬಸೆಟ್ಟಿಯೇನೋ ಬರೋಬರಿ ಅಂದ. ಆದರೆ ಪಂಚರ ತೀರ್‍ಮಾನಕ್ಕಿಂತ ಮುಂಚೆ ಹೇಳಿ ಕಳಿಸಿದ್ದು ತಪ್ಪೆನಿಸಿತ್ತು, ಅಷ್ಟೆ. “ಇದು ಬರೋಬರಿ ಆಗಲಿಲ್ಲ.”
-ಅಂದ. ದತ್ತಪ್ಪ, ಎಲ್ಲರೂ ಸುಮ್ಮನಿದ್ದರು. ಮತ್ತೆ ಅವನೇ ಮುಂದುವರೆಸಿದ. “ಏನೋ ಕಲ್ತ ಹುಡುಗ್ರು, ಊರಿಗೆ ಹಿತ ಮಾಡ್ಯಾವು ಅಂತ ಪಂಚಾಯ್ತಿ ಕೊಟ್ತರ, ಇದು ಕಾಗೀ ಕೈಯಾಗ ಕಚೇರಿ ಕೊಟ್ಟಂಗಾತು. ತಿರುಗಿ ತಗೊಳ್ಳೋದಽ ಬರೋಬರಿ ಕಾಣತದ.”
“ಈಗ ಹೆಂಗ ಮಾಡೋಣಂದಿ?”
-ಬಾಳೂ ಕೇಳಿದ.
“ಹಂಗೇನು? ಪಂಚಾಯ್ತಿ ತಿರಿಗಿ ತಗೊಂಡ ನಾವ ಇಟ್ಟಕೋ ಬೇಕಷ್ಟ”
ಎಂದ ಬಸೆಟ್ಟಿ.
“ದುಡುಕ ಬ್ಯಾಡ್ರಪಾ. ಆ ಹುಡುಗೋರ್‍ನ ಹಾದಿಗಿ ತರಾಕಿ ಯಾವ ಹಾದೀನಽ ಇಲ್ಲೇನು?
-ಗೌಡ ಕೇಳಿದ. ಉಳಿದವರು ಒಪ್ಪಲಿಲ್ಲ. ಬಾಳೂ, ಬಸೆಟ್ಟಿಗಾದರೆ ಇನ್ನೂ ಆತುರ. ಹೆಂಗೂ ನಾವೇ ಪಂಚಾಯ್ತಿ. ಸರಪಂಚ-ಅಂತ ಮಾಡಿದ ಮೇಲೆ ನಾವೇ ಬೇಡ ಅಂದಾಗ ಹಿಂದೆಗೆಯಬೇಕೆಂಬುದೇ ಅವರ ವಾದ. ಅದಂತೂ ಸುಲಭದ ಮಾತಲ್ಲ ಎನ್ನುವುದು ಗೌಡನಿಗೆ ಗೊತ್ತು. ದತ್ತಪ್ಪನಿಗೆ ಗೊತ್ತು. ಕೊನೆಗೆ ಎಲ್ಲರ ಒಪ್ಪಿಗೆಯಂತೆ ಒಂದು ನಿಲುಗಡೆಗೆ ಬಂದರು: ದತ್ತಪ್ಪ ಹಿರಿಯ ಪಂಚರ ಪರವಾಗಿ ಗುಡಸೀಕರನ ಬಳಿಗೆ ಹೋಗಬೇಕು. ಗ್ರಾಮಪಂಚಾಯ್ತಿಗೆ ರಾಜಿನಾಮೆ ಕೊಡೋದಕ್ಕೆ ಹೇಳಬೇಕು.

ಕರಿಮಾಯಿಯ ಆಣೆಗೂ ಸುಳ್ಳು ಬಿದ್ದ

ಆ ದಿನವೇ ಅಂಗೀಯೆಲ್ಯಾನನ್ನು ಕರೆಸಿ ಗೌಡ ಗದರಿಕೊಂಡ. ಇನ್ನು ಮೇಲೆ ಭಿರಂಡಿ ಕುಡಿಯಬಾರದೆಂದು ಕರಿಮಾಯಿ ಭಂಡಾರ ಮುಟ್ಟಿಸಿ ಆಣೆ ಮಾಡಿಸಿದ. ಆದರೆ ಅಂಗೀಯೆಲ್ಯಾನಿಗೆ ನಾಯೆಲ್ಯಾ ಎಂದೂ ಹೆಸರಿಲ್ಲವೆ? ನಾಯಿ ಬಾಲದಂತೆ ಮತ್ತೆ ವಂಕಾದ. ಕರಿಮಾಯಿ ಆಣೆಗೆ ಸುಳ್ಳು ಬಿದ್ದ. ಅದು ಹೀಗಾಯಿತು:
ಗುಡಸೀಕರ ನಾಯೆಲ್ಯಾನಿಗೊಂದು ಕುರಿ ಕೊಟ್ಟನಲ್ಲ, ಹಳೇ ಜನ ಏನಾದರೂ ಅಂದುಕೊಳ್ಳಲಿ, ಚತುಷ್ಟಯರ ಕಣ್ಣಲ್ಲಿ ಮಾತ್ರ ಬಹಳ ದೊಡ್ಡ ಕುಳವಾದ. ‘ಎಂಥಾ ದಿಲ್‌ದಾರ್ ಆಸಾಮಿ,’ ಎಂದುಕೊಂಡರು. ನಾಯೆಲ್ಯಾನ ಬಗ್ಗೆ ಗುಡಸೀಕರನಿಗೆ ನಿಜವಾಗಿ ಅನುಕಂಪ ಮೂಡಿತು. ಹೇಗೂ ದಂಡದ ಕುರಿಹಬ್ಬ ಮಾಡುತ್ತಾರಲ್ಲ. ಆ ದಿನ ಅವನಿಗೆ ನೀರಿನ ಬದಲು ನಿಜವಾದ ಬ್ರಾಂದಿ ಕೊಡಬೇಕೆಂದು ಅಂತಃಕರಣ ಪೂರ್‍ವಕ ಅಂದುಕೊಂಡ.
ಆದರೆ ನಾಯೆಲ್ಯಾನನ್ನು ನೆನೆದು ಎಲ್ಲರೂ ನಕ್ಕರು; ಬರೀ ನೀರು ಕುಡಿದೇ ಮಗ ಎಂಥಾ ಅವತಾರ ಮಾಡಿದನಲ್ಲ-ಎಂದರು. ನಡೆದ ಘಟನೆಯನ್ನು ಕಲ್ಪಿಸಿ ಅಭಿನಯಿಸಿ ನಕ್ಕರು. ಒಂದಕ್ಕೆ ಒಂಬತ್ತು ಒಗ್ಗರಣೆ ಹಾಕಿ ನಕ್ಕರು. ನಿಜ ಹೇಳಬೇಕೆಂದರೆ ಬಿದ್ದು ಬಿದ್ದು ನಕ್ಕರು.
ಹಾಗೆ ಬಿದ್ದು ಬಿದ್ದು ನಗುವುದಕ್ಕೆ ಚತುಷ್ಟಯರಿಗೆ ಅಡ್ಡಖುಶಿಯ ಇನ್ನೊಂದು ಕಾರಣವೂ ಇತ್ತು. ಪ್ರಶ್ನೋತ್ತರ ಮಾಸ್ತರ ತಮಗೆ ಹೆದರುತ್ತಾನೆಂದು ತಿಳಿದೊಡನೆ ಚತುಷ್ಟಯರ ದಿನಚರಿಯಲ್ಲಿ ಒಂದಂಶ ಹೆಚ್ಚಾಗಿ ಸೇರಿಕೊಂಡಿತು. ಮೊನ್ನೆ ಮಾಸ್ತರನನ್ನು ಪೀಡಿಸಿದರಲ್ಲ, ಅದರ ಮಾರನೇ ದಿನ ಕಳ್ಳ ಬೇಕೆಂದೇ ಮಾಸ್ತರನಿಗೆ ಭೇಟಿಯಾಗಿ “ಏನ್ರೀ ಮಾಸ್ತರ” ಅಂದ. ಪಾಪ, ಮಾಸ್ತರ ‘ನಮಸ್ಕಾರರೀ ಸಾಹೇಬರ’ ಎಂದು ಹಲ್ಲು ಕಿಸಿದ. ತನಗೆ ಹಾಗೂ ಗುಡಸೀಕರನಿಗೆ ಮಾತ್ರ ಈ ಮಾಸ್ತರ ‘ಸಾಹೇಬರ’ ಎನ್ನುತ್ತಾನೆಂದು ಕಳ್ಳನ ಖುಶಿ. ಇದ ಕೇಳಿ ಮೆರಮಿಂಡ ನೆಟ್ಟಗೆ ಕ|| ಗಂ|| ಸಾಲೆಗೇ ಹೋದ. ಮಾಸ್ತರ ಇವನಿಗೂ ಸಾಹೇಬರ ಎಂದು ಹಲ್ಲು ಗಿಂಜಿದ. ಮೆರಮಿಂಡನಿಗೆ ಸಂಕೋಚವಾಗಿರಬೇಕು.
“ಸರಪಂಚ ಸಾಹೇಬರಿಗೆ ನಮಸ್ಕಾರ ಮಾಡಿದಿರಿಲ್ಲೊ?”
-ಅಂದ.
“ಸರಪಂಚರಿಗೆ ನಮಸ್ಕಾರ? ದಿನಾ ಮಾಡತೀನಲ್ಲರಿ”
-ಎಂದ ಮಾಸ್ತರ.
“ಗೌಡ್ರು ಭೇಟಿ ಆಗಿದ್ದರೇನ್ರಿ?”
“ಗೌಡ್ರ ಭೇಟಿ? ಆಗಿದ್ದರಲ್ಲ, ನಮಸ್ಕಾರ ಮಾಡಲಿಲ್ಲರಿ”
ಮೆರಮಿಂಡ ಮನಸ್ಸಿನಲ್ಲೇ ಪಾಪ ಅಂದುಕೊಂಡ. ತಪ್ಪು ತಿಳಿದಾರೆಂದೋ ನಮಸ್ಕಾರ ಮಾಡಿಸಿಕೊಳ್ಳಲಿಕ್ಕೇ ಬಂದಾನೆಂದೋ ಭಾವಿಸಬಾರದಲ್ಲ.
“ಹುಡ್ರಿಗೆ ಇತಿಹಾಸ, ಭೂಗೋಳ ಚೆಂದಾಗಿ ಕಲಿಸ್ರಿ”-ಎಂದು ಉಪದೇಶ ಮಾಡಿ ಹೋದ. ಅನಂತರ ಆ ನಾಲ್ವರಲ್ಲಿ ಯಾರು ಭೇಟಿಯಾದರೂ ಮಾಸ್ತರ ಕೂಡಲೇ “ನಮಸ್ಕಾರರೀ ಸಾಹೇಬರ, ಗೌಡ್ರಿಗೆ ನಮಸ್ಕಾರ ಮಾಡಲಿಲ್ಲರಿ”-ಎಂದು ಹೇಳುತ್ತಿದ್ದ. ಚತುಷ್ಟಯರಿಗೆ ಒಂದು ಕಡೆ ಹೆಮ್ಮೆ; ಯಾಕೆಂದರೆ ಕಲಿಸಿದ ಗುರುವಿನಿಂದಲೇ ನಮಸ್ಕರಿಸಿಕೊಳ್ಳುವ ಭಾಗ್ಯ ಬಂದದಕ್ಕೆ; ಗುರುವಿನ ತಲೆಮೇಲೆ ಕೈಯಿಟ್ಟ ಶಿಷ್ಯರು ತಾವಾದದ್ದಕ್ಕೆ. ಇನ್ನೊಂದು ಕಡೆ ಕೆಡುಕೆನಿಸುತ್ತಿತ್ತು; ಎಷ್ಟೆಂದರೂ ಹಳೇ ಶಿಷ್ಯರಲ್ಲವೆ?-ಪಾಪ ಎನಿಸುತ್ತಿತ್ತು. ಸೈ, ಅಂದಿನಿಂದ ಅವನಿಗೆ ಪ್ರಶ್ನೋತ್ತರ ಮಾಸ್ತರ ಎಂಬ ಹೆಸರು ಹೋಗಿ “ಪಾಪ ಮಾಸ್ತರ” ಎಂದು ಹೆಸರು ಬಂತು. ಒಂದು ದಿನ ಅಷ್ಟೂ ಚತುಷ್ಟಯರು ಒಂದೆಡೆ ಸೇರಿ ಸಾಲೆಗೆ ಹೋದರು. ಇವರಿಗೆ ಆಶ್ಚರ್ಯ ಕಾದಿತ್ತು. ಹೋದೊಡನೇ ಪಾಪ ಮಾಸ್ತರನಷ್ಟೇ ಅಲ್ಲ ಹುಡುಗರೆಲ್ಲ ಕೈಮುಗಿದು ಎದ್ದು ನಿಂತರು. ತಾವು ಚಿಕ್ಕಂದಿನಲ್ಲಿ ಸಾಲೆಯಲ್ಲಿದ್ದಾಗಲೂ ಯಾರಾದರೂ ಇನ್ಸ್‌ಪೆಕ್ಟರು ಬಂದರೆ ಗೌಡ, ದತ್ತಪ್ಪ ಬಂದರೆ ಹೀಗೆ ಎದ್ದು ನಿಲ್ಲುತ್ತಿದ್ದರು. ಈಗ ಹುಡುಗರು ಎದ್ದು ನಿಂತುದನ್ನು ‘ನೋಡಿ ಅವರಿಗೆ ಎಷ್ಟು ಸಂತೋಷವಾಗಿತ್ತೆಂದರೆ ಅಂದಿನಿಂದ ವಿನಾಕಾರಣ ನಗತೊಡಗಿದ್ದರು.
*****
ಮುಂದುವರೆಯುವುದು