ವೇಸ

ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, ಹಿಂಬಾಗಿಲಿಗೆ ತಲುಪಬೇಕೆನ್ನುವಷ್ಟರಲ್ಲಿ ಒಮ್ಮೆಲೆ ಜೂಲಿನಾಯಿ ಬೊಗಳಿದ್ದರಿಂದ ಗಡಿಬಿಡಿಯಲ್ಲಿ ಕಾಲಿಟ್ಟದ್ದೇ… ದಪ್ಪ ಕೆಸರಿನ ಹೊಂಡಕ್ಕೆ! ಪಾದವಿಡೀ ಮುಳುಗಿ ಕಪು ಶೂ ಹಾಕಿದಂತಾಗಿ ಹವಾಯಿ ಚಪ್ಪಲ್ ಕೆಸರೊಳಗೇ ಉಳಿಯಿತು. ಈ ಹಡಬೆ ನಾಯಿಂದಾಗಿ ಅಪ್ಪಂಗೆ ಈಗ ಎಚ್ರಿಗೆ ಆಗಿ ಕೈಗೆ ಸಿಕ್ಕಿಬುಟ್ಟರೆ, ಎರಡ್ ಪೆಟ್ ಸಿಕ್ಕಿರೂ ಸಿಕ್ಕುದು; ಬೊಯ್ಯೋದ್ಹೇಂಗೂ ಬೆಳ್ಜರ್ ವರೆಗೆ ಗ್ಯಾರಂಟಿ ಎಂದು ಬಗೆದು, ಕೆಸರಲ್ಲಿದ್ದ ಚಪ್ಪಲನ್ನು ಬೆಳಿಗ್ಗೆ ತೆಗೆದರಾಯಿತೆಂದು ಸಾರಣೆಯಾಗದ ಕೊಟಗೆಯ ಗೋಡೆಗೆ ಹಲ್ಲಿಯಂತೆ ಅಂಟಿ ನಿಂತ. ಕೆಲನಿಮಿಷ ಸುಮ್ಮಗೆ ಹಾಗೇ ನಿಂತವನಿಗೆ ಮನೆಯೊಳಗಿಂದ ಶಬ್ದವೇನೂ ಬಾರದ್ದರಿಂದ ಬಚಾವ್! ‘ಅಪ್ಪಂಗೆ ಎಚ್‌ರಿಗೆ ಆತ್‌ಲ್ಲೆ!’ ಎಂದು ಖಾತ್ರಿಯಾಗಿ ತರಚುತ್ತಿರುವ ಗೋಡೆಗೆ ಅಂಟಿಕೊಂಡೇ ಮೆಲ್ಲಗೆ ಹಿಂಬಾಗಿಲ ಬಳಿಗೆ ಬಂದ. ಮೆಟ್ಟಿಲ ಬದಿಯಲ್ಲಿ ಬಾಲ್ದಿಯಲ್ಲಿದ್ದ ನೀರನ್ನು ಕಾಲಿಗೆ ಸುರಿದು ಮೆತ್ತಿಕೊಂಡಿದ್ದ ಕೆಸರನ್ನು ತೊಳೆದಂತೆ ಮಾಡಿ, ಮಾಡಿನ ಪಕ್ಕಾಸಿಗೆ ಮೊದಲೇ ಸಿಕ್ಕಿಸಿಟ್ಟ ಕೋಲನ್ನು ತೆಗೆದು ದಳಿಯ ಎಡೆಯಿಂದ ಒಳಗೆ ನಿಧಾನ ಕೈತೂರಿ ಚಿಲಕವನ್ನು ಮೆಲ್ಲ ಮೆಲ್ಲನೆ ಶಬ್ದವಾಗದಂತೆ ಸರಿಸಿದಾಗ ಅಮ್ಮನಿಗೆ ಎಚ್ಚರವಾಯಿತು. ನಿದ್ದೆಯೇ ಬಂದಿರಲಿಲ್ಲವೋ ಏನೋ! ಅಮ್ಮನೇ ಬಂದು ಬಾಗಿಲು ತೆಗೆದು ಹಲ್ಲುಕಚ್ಚಿ ಮೆಲುದನಿಯಲ್ಲಿ “ಎಲ್ಲಿ ಸಾಯಕೆ ಹೋಗಿದ್ದ ಗಂಟೆ ಎಷ್ಟಾತ್ ಗೊತ್ತುಟ್ಟೋ ನಿನ್ನ ಕರ್ಮದ ಆಟನೊ ಮತ್ತೊಂದೊ… ಬೇಗ ತಿಂದ್ ಬಿದ್ದ್‌ಕಾ… ನಿನ್ನ ಅಪ್ಪ ಎದ್ದರೇ ಮಿನಿ…” ಎಂದು ಗೊಣಗುತ್ತಾ ಊಟಕ್ಕೆ ಬಡಿಸಲು ಹೊರಟಾಗ “ಬಾತಾ ನಿನ್ನ ಕೋಂಬ್ಳೆ, ದಂಡಿಗೆ ಹೋದಂವ! ಎಂತರ ಕಡ್ದುಟ್ಟು ಗಡಾ ಬಿಕ್‌ನಾಸಿ…” ಗುಂಡ್ಯಡ್ಕ ಶೇಷಪ್ಪ ಗೌಡರ ಉರಿವ ಅಸಹನೆ ಆಕಳಿಕೆ, ಕೆಮ್ಮುಗಳ ಎಡೆಯಲ್ಲೇ ಕೆಟ್ಟ ಕಫದಂತೆ ಹೊರಬಿತ್ತು. ಅಪ್ಪ ಹೇಳಿದ್ದು ಕೇಳಿಸದವನಂತೆ ಅಮ್ಮ ಬಡಿಸಿದ್ದನ್ನು ಗಬಗಬನೆ ಉಂಡು ಮೊದಲೇ ಹಾಸಿಟ್ಟಿದ್ದ ಮೊಂದ್ರಿ, ಒಲ್ಲಿಯೊಳಗೆ ಸೇರಿಕೊಂಡ.

ತೋಟಕ್ಕೆ ಸೊಪು, ಬುಡಬಿಡಿಸುವುದಕ್ಕೆ, ಮದ್ದು ಬಿಡುವುದಕ್ಕೆ, ಅಡಿಕೆ ಕೊಯ್ಯುವುದಕ್ಕೆ, ಕೆಲಸದವರು ಬಾರದಿದ್ದರೆ ಯಾವುದಕ್ಕೂ ರಡಿಯಾಗಿರುವ ದಿನೇಶ ತೋಟ ಗದ್ದೆಯ ಎಂಥದ್ದೇ ಕೆಲಸವನ್ನು ಮಾಡುವುದರಲ್ಲಿ ಬಹಳ ಚುರುಕು. ಹಗಲಿಡೀ ತೋಟದಲ್ಲೇ ಕೆಲಸದಲ್ಲಿ ಮುಳುಗಿದವ ಸಂಜೆ ಕತ್ತಲಾದ ಮೇಲೆ ಮನೆಗೆ ಬರುವುದು. ಸ್ನಾನ ಮಾಡಿ ಕಾಪಿಯಾಗಿ ಅಂಗಡಿ ಬಳಿ ಹೋಗಿ ಬಂದಂವ ಮತ್ತೆ ರಾತ್ರಿ ಅಡಿಕೆ ಸುಲಿಯಲು ಕೂತರೆ ಒಂಭತ್ತು ಒಂಭತ್ತೂವರೆ ವರೆಗೆ ಅಡಿಕೆ ಸುಲಿಯುತ್ತಿರುತ್ತಾನೆ. ಹೀಗೆ ಕೆಲಸದಲ್ಲೇ ದಿನ ಕಳೆಯುವ ಗಟ್ಟಿ ದೇಹದ ದಿನೇಶ ಎಸ್ಸೆಲ್ಸಿ ದಾಟದಿದ್ದರೂ ಒಳ್ಳೆಯ ಕೆಲಸಗಾರನಾಗಿದ್ದ. ಶೇಷಪ್ಪ ಗೌಡರಿಗೆ ದಿನೇಶನಿಂದಲೂ ಮೊದಲನೇ ಮಗ ನಾರಾಯಣನಲ್ಲಿ ತುಂಬಾ ಸಲುಗೆಯ ಮಾತು. ನಾರಾಯಣ ಎಂ.ಎ. ಮಾಡಿ ಊರಿನ ಹೈಸ್ಕೂಲಿನಲ್ಲಿ ಉಪಾಧ್ಯಾಯನಾಗಿರುವುದು ಗೌಡರಿಗೆ ಬಹಳ ಹೆಮ್ಮೆಯ ವಿಚಾರ. ಎಸ್ಸೆಲ್ಸಿ ಮುಗಿಸಲಾಗದೆ ಮನೆಯಲ್ಲೇ ಸೊಪು, ಗೊಬ್ಬರ, ಪಂಪು ರಿಪೇರಿ, ಅಡ್ಂಚಿಲ್, ಹಂದಿ ಬೇಟೆ, ತಾಳಮದ್ದಲೆ, ಆಟ ಎಂದು ಹಲವೆಡೆ ಹಲವರಿಗೆ ಸಲ್ಲುವ ದಿನೇಶನೆಂದರೆ ಅಷ್ಟು ಸಮಾಧಾನವಿಲ್ಲ. ನಾರಾಯಣನಲ್ಲಿ ಅದೂ ಇದೂ ಊರಿನ, ಶಾಲೆಯ ವಿಚಾರ ಮಾತಾಡುವುದಿದೆ. ದಿನೇಶನಲ್ಲಿ ಮಾತೆಂದರೆ ಏನಾದರೂ ಬೈಗಳು, ಅಸಹನೆಯ ಮಾತು. ದಿನೇಶ ಎಂದೂ ಗೌಡರ ಎದುರು ನಿಂತು ಸರಿಯಾಗಿ ಮಾತನಾಡಿದ್ದಿಲ್ಲ. ಅಪ್ಪ ಒಳಗಿದ್ದರೆ ದಿನೇಶ ತೋಟದಲ್ಲೋ, ಗದ್ದೆಯಲ್ಲೋ, ಹಟ್ಟಿಯಲ್ಲೋ ಏನಾದರೂ ಕೆಲಸದಲ್ಲಿ ಮುಳುಗಿರುತ್ತಾನೆ. ದಿನೇಶ ಮನೆಯಲ್ಲಿದ್ದಾನೆಂದರೆ ಶೇಷಪ್ಪ ಗೌಡರು ಮನೆಯಲ್ಲಿಲ್ಲ ಎಂದು ಎಲ್ಲರಿಗೂ ಗೊತ್ತಾಗುತ್ತಿತ್ತು. ಈ ವ್ಯತ್ಯಾಸ ನೋಡಿ ನೋಡಿ ಸಾಕಾದ ಗಂಗಮ್ಮನವರು ದಿನೇಶನನ್ನು ಹೆಚ್ಚು ಹಚ್ಚಿಕೊಳ್ಳುತ್ತಿದ್ದರು. ಏನೇ ಆದರೂ ಗೌಡರ ಕೃಷಿ ಕೆಲಸ ಸುಸೂತ್ರವಾಗಿ ನಡೆಯುತ್ತಿರುವುದು ಮಾತ್ರ ದಿನೇಶನಿಂದಲೇ ಎಂದು ಗೌಡರಿಗೂ ಗೊತ್ತಿದೆ. ಆದರೂ ವಿದ್ಯೆಯಿಲ್ಲದವನು ಎಂಬ ತಾತ್ಸಾರ. “ಈ ಕೋಣ ಗೆಯ್ಯಕೆ ಮಾತ್ರ ಆದು… ಬೇರೇನೂ ಆಕಿಲ್ಲೆ ಇವಂದ” ಎಂಬುದು ದಿನೇಶನ ಬಗ್ಗೆ ಗೌಡರ ತೀರ್ಮಾನ.

ಇದಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ನಾಟಕ, ಹಾಡು, ಕುಣಿತ, ಯಕ್ಷಗಾನದ ಅಪಾರ ಹುಚ್ಚು ಹಚ್ಚಿಕೊಂಡಿರುವ ಸಾಮಾನ್ಯ ಕಂಠದ ದಿನೇಶನಿಗೆ ಹಾಡುವುದೆಂದರೆ ಬಹಳ ಇಷ್ಟ. ಶಾಲಾ ವಾರ್ಷಿಕೋತ್ಸವದ ನಾಟಕಗಳಿಗೆ ಹಿನ್ನೆಲೆ ಗಾಯನ ಯಾವಾಗಲೂ ದಿನೇಶನದ್ದೇ. ಸಿನಿಮಾ ಹಾಡುಗಳ ಧಾಟಿಯಲ್ಲಿ ಬರೆದ ಪದ್ಯಗಳನ್ನು ನಾಟಕಕ್ಕೆ ಬೇಕಾಗುವಂತೆ ಹಾಡುತ್ತಿದ್ದ. ದಿನೇಶನಿಗೆ ಭಜನೆಯೆಂದರಾಯ್ತು, ಎಲ್ಲ ಬಿಟ್ಟು ಹೊರಡುವುದೇ! ಎಲ್ಲಿ ಭಜನೆಯಿದ್ದರೂ ಅಲ್ಲಿ ತಾಳಸಮೇತ ದಿನೇಶನಿದ್ದಾನೆಂದೇ ಲೆಕ್ಕ. ಯಾವಾಗ ಎಲ್ಲೆಲ್ಲಿ ಭಜನೆಯಿದೆಯೆಂಬ ನಿಖರವಾದ ಮಾಹಿತಿಗೆ ದಿನೇಶನನ್ನೇ ಎಲ್ಲರೂ ಕೇಳುತ್ತಿದ್ದುದರಿಂದ ಭಜನೆ ದಿನೇಶನೆಂದೇ ಎಲ್ಲರಿಗೂ ಪರಿಚಿತನಾಗಿದ್ದ.

ಊರಲ್ಲಿ ನಡೆಯುವ ಶಾಲೆ, ಹಳೆ ವಿದ್ಯಾರ್ಥಿ ಸಂಘಗಳ ವಾರ್ಷಿಕೋತ್ಸವದ ನಾಟಕಗಳಲ್ಲಿ ಹೇಗಾದರೂ ಮಾಡಿ ಪಾತ್ರ ಗಿಟ್ಟಿಸುವ ದಿನೇಶ ಒಂದು ಸಲ ನಾಟಕವೊಂದರಲ್ಲಿ ನಾಯಿಯ ಪಾತ್ರವೊಂದನ್ನು ಅಬಿನಯಿಸುವ ಸಂದರ್ಭ ಬಂದಿತ್ತು. ಸ್ಟೇಜಿನಲ್ಲಿ ಈತನ ಮುಖ ಕಂಡರೆ ಎಲ್ಲರೂ ತಮಾಷೆ ಮಾಡಿಯಾರೆಂದು ಮಂಗಳೂರಿನಿಂದ ನಾಯಿಯ ಮುಖವಾಡವೊಂದನ್ನು ನಿರ್ದೇಶಕರು ಮೊದಲೇ ತರಿಸಿದ್ದರು. ಹಿನ್ನೆಲೆ ಸಂಗೀತಗಾರರಿಗೆ ಸಹಾಯಕನಾಗಿ ತಮ್ಮಟೆಯೊಂದನ್ನು ಬಡಿಯುವ ಜವಾಬ್ದಾರಿಯೂ ದಿನೇಶನಿಗಿತ್ತು. ಪ್ರದರ್ಶನದಂದು ಖಾಕಿ ಪ್ಯಾಂಟ್, ಷರ್ಟ್ ತೊಟ್ಟು ನಾಯಿಯ ಮುಖವಾಡವನ್ನು ಕೈಯಲ್ಲಿ ಹಿಡಿದು ಸೈಡ್ ವಿಂಗ್ಸ್‌ನಲ್ಲಿ ಸಂಗೀತದವರೊಂದಿಗೆ ಸಹಕರಿಸುತ್ತಿದ್ದ ದಿನೇಶ ತನ್ನ ಪಾತ್ರ ಪ್ರವೇಶದ ಸಮಯ ಬಂದಾಗ ಮುಖವಾಡವನ್ನು ಮರೆತು ಹಾಗೇ ಸ್ಟೇಜಿಗೆ ಬಂದುಬಿಟ್ಟ! ಪ್ರೇಕ್ಷಕರಲ್ಲಿದ್ದ ದಿನೇಶನ ಗುರುತಿನವರೆಲ್ಲ “ನಾಯಿ ದಿನೇಶ; ನಾಯಿ ದಿನೇಶು” ಎಂದು ಕಿರುಚಾಡತೊಡಗಿದರು. ಶೇಷಪ್ಪ ಗೌಡರು ಅಂದು ನಾಟಕ ನೋಡಲು ಬಂದಿದ್ದರು. ದಿನೇಶ ಖಾಕಿ ಪ್ಯಾಂಟ್ ಶರ್ಟಲ್ಲಿ ಕುತ್ತಿಗೆಗೆ ನಾಯಿ ಸರಪಳಿ ಹಾಕಿಸಿಕೊಂಡು ನಾಯಕನ ಹಿಂದೆ ಕೇವಲ ಒಂದು ನಾಯಿಯ ಪಾತ್ರದಲ್ಲಿ ಕೈ, ಮೊಣಕಾಲು ಊರಿಕೊಂಡು ಸ್ಟೇಜಿಗೆ ಬಂದದ್ದು ನೋಡಿ ಗೌಡರು ಅಪಮಾನ, ಅಸಹನೆಯಿಂದ ಉರಿದುಹೋದರು. ಅಲ್ಲಿಂದಲೇ ಎದ್ದು ದಡ ದಡ ಕಾಲಿಡುತ್ತಾ ಮನೆಗೆ ಬಂದು ಹೆಂಡತಿ ಗಂಗಮ್ಮನೊಂದಿಗೆ “ನೋಡ್ದಾ ನಿನ್ನ ಮಂಙನ ಹಣೆಬರಾ! ಇಷ್ಟ್ ದಿನಾ ಪ್ರಾಟೀಸ್ ಮಾಡಿ ಅಂವ ಮಾಡ್ದ್ ಎಂತರಾ ಗೊತ್ತುಟ್ಟೋ ನಾಯಿ! ನಾಯಿ ವೇಸ! ಹಲ್ಕ, ಬಿಕ್‌ನಾಸಿ” ಎಂದು ದಿನೇಶನ ನಾಯಿ ಪ್ರಸಂಗ ಹೇಳಿ, ಹಂಗಿಸಿ ವಿಷಣ್ಣರಾಗಿ ಕುಳಿತರು. ಗಂಗಮ್ಮ ನೊಂದುಕೊಂಡು ಸುಮ್ಮನಾದರು. ಗೌಡರ ಜೂಲಿನಾಯಿ ಓಡಿ ಬಂದು ‘ಕುಂಯಿ… ಕುಂಯಿ’ ಎಂದು ಬಾಲ ಆಡಿಸುತ್ತಾ ಗೌಡರ ಕಾಲಿಗೆ ತನ್ನ ಮೂತಿ, ಹೊಟ್ಟೆಯನ್ನು ಒರಸತೊಡಗಿದಾಗ ಗೌಡರಿಗೆ ಕೋಪ ನೆತ್ತಿಗೇರಿ ಕಾಲೆತ್ತಿ ಜೂಲಿಯನ್ನು ಒದ್ದರು. ದೂರಕ್ಕೆ ಎಸೆಯಲ್ಪಟ್ಟ ಜೂಲಿನಾಯಿ ಕೈಂಕ್ ಎಂದು ಕಿರುಚಿ ಗೌಡರಿಗೇನಾಯ್ತಪ್ಪ! ಎಂದು ಆಶ್ಚರ್ಯದಿಂದ ನೋಡುತ್ತಾ ಬಾಲ ಮುದುರಿ ದೂರದಲ್ಲಿ ಕುಳಿತಿತು. ಅಂದಿನಿಂದ ದಿನೇಶನ ಭಜನೆ, ನಾಟಕದ ಸುದ್ದಿ ಎತ್ತಿದ್ದರೆ ಸಾಕು, ಶೇಷಪ್ಪ ಗೌಡರಿಗೆ ಮುಖ ಕೆಂಪಡರಿ ಭೂತಕ್ಕೆ ಅಕ್ಕಿ ಹಾಕಿದಂತಾಗಿ ದರ್ಶನ ಬರುತ್ತಿತ್ತು.
ಎಲಿಮೆಂಟರಿ ಶಾಲೆ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿಯ ಆಟ ದೇವಿ ಮಹಾತ್ಮೆ ಎಂದು ನಿಶ್ಚಯವಾದಂದಿನಿಂದಲೇ ಮಹಿಷಾಸುರನ ವೇಷ ತಾನೇ ಹಾಕುವುದೆಂದು ದಿನೇಶ ಹಟ ಹಿಡಿದಿದ್ದ. ಹವ್ಯಾಸಿ ಕಲಾವಿದರಾದ ಅಪ್ಪಯ್ಯ ಮಣಿಯಾಣಿಗೂ ಧನಂಜಯ ರೈಗೂ ಇದು ಸರಿಕಾಣದಿದ್ದರೂ ಚಂಡ ಮುಂಡರ ವೇಷ ತಮಗೇ ಕಟ್ಟಿಟ್ಟದ್ದು ಎಂಬ ಹೆಮ್ಮೆಯಿಂದ ಸುಮ್ಮಗಾಗಿದ್ದರು. ಮಧು- ಕೈಟಭರಾಗಿ ಅಂಬ್ರೋಟಿ ಗಿರಿಧರ ಮತ್ತು ಚಾಕೊಟೆ ದಾಮೋದರ, ರಕ್ತಬೀಜಾಸುರನ ವೇಷ ಹಾಕಲು ಮಾರಡ್ಕ ಶಿವರಾಮ ಒಪ್ಪಿದ್ದರೂ, ಮಹಿಷಾಸುರನ ವೇಷ ಹಾಕಲು ಅವನಿಗೆ ತುಂಬ ಆಸೆಯಿತ್ತು. ಭಜನೆ ದಿನೇಶ ಹಾಕಲಿ ಎಂದು ಉಳಿದವರೆಲ್ಲ ಹೇಳಿದ್ದರಿಂದ ಸುಮ್ಮಗಾದ. ಶುಂಭ ನಿಶುಂಭರಾಗಿ ದೊಡ್ಡೇರಿ ಶೀನ ಮತ್ತು ಓಡಬಾ ಕರ್ಣನೂ, ಮತ್ತುಳಿದ ಪಾತ್ರಗಳಿಗೆ ಉಳಿದ ಕೆಲವರೂ ಆಯ್ಕೆಯಾದರು. ಸ್ತ್ರೀ ವೇಷ ಮಾಡಲು ಯಾರೂ ಸರಿಯಾದವರು ಇಲ್ಲದ್ದರಿಂದ ದೇವಿ ಪಾತ್ರಕ್ಕೆ ಹೆಣ್ಣೇ ಆಗಬೇಕೆಂದು ಏನೇನೋ ಕಸರತ್ತು ಮಾಡಿ ಕಾಯರಡಿ ಚೆನ್ನಪ್ಪ ಗೌಡರ ಮಗಳು ಸುಹಾಸಿನಿಯನ್ನು ಒಪ್ಪಿಸಿದ್ದರು. ಕಟೀಲು ದುರ್ಗಾಪರಮೇಶ್ವರಿಯ ಮಹಾಭಕ್ತರಾದ ಚೆನ್ನಪ್ಪ ಗೌಡರು ವರ್ಷದಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿಯಾದರೂ ಕಟೀಲಿಗೆ ಹೋಗಿ ಬರುತ್ತಿದ್ದರು. ಮುಂಜಾನೆ ಸ್ನಾನ ಮಾಡಿ ಮಡಿಯುಟ್ಟು ದೇವರಿಗೆ ದೀಪ ಹಚ್ಚಿದ ನಂತರವೇ ಅವರ ದಿನಚರಿ ಆರಂಭವಾಗುವುದು. ಹಣೆಯಲ್ಲಿ ಉದ್ದ ನಾಮ ಯಾವಾಗಲೂ ಅವರ ಭಕ್ತಿಯ ಲಾಂbನವಾಗಿ ಎದ್ದು ಕಾಣುತಿತ್ತು. ಅದರಿಂದಲೋ ಏನೋ ಎಲ್ಲಾ ಹುಡುಗರೇ ಇರುವ ಬಳಗದಲ್ಲಿ ಸುಹಾಸಿನಿಯೊಬ್ಬಳೇ ಪಾತ್ರ ಮಾಡಲು ಹಲವು ಶರ್ತಗಳನ್ನು ವಿದಿಸಿಯೇ ನಂತರ ಒಪ್ಪಿಗೆ ನೀಡಿದ್ದು. ಸಂಘದ ಹುಡುಗರ್‍ಯಾರೂ ಅಂಥ ಕಿತಾಪತಿಯವರಲ್ಲದ್ದರಿಂದ ಸುಹಾಸಿನಿಯ ಅಮ್ಮನೂ ಹೆಚ್ಚು ಒತ್ತಾಯವಿಲ್ಲದೆ ಸಮ್ಮತಿಸಿದ್ದರು. ಭರತನಾಟ್ಯ, ಸಂಗೀತ ಕಲಿತಿರುವ ಸುಹಾಸಿನಿಗೂ ಅಬಿನಯಿಸುವುದರಲ್ಲಿ ಉಮೇದು ಇತ್ತು. ಆದರೆ ಆಕೆಯನ್ನು ಪ್ರಾಕ್ಟೀಸಿಗೆ ಕರಕೊಂಡು ಹೋಗಿ ಬರಲು ಯಾವಾಗಲೂ ತಮ್ಮ ಸುರೇಶ ಮತ್ತು ಕೆಲಸದ ತಿಮ್ಮ ಇರಲೇಬೇಕಾಗುತಿತ್ತು. ಕೆಲವೊಮ್ಮೆ ರಾತ್ರಿ ಚೆನ್ನಪ್ಪ ಗೌಡರೇ ಪ್ರಾಕ್ಟೀಸ್ ಮುಗಿಯುವ ಹೊತ್ತಿಗೆ ಬಂದಿರುತ್ತಿದ್ದರು. ಕಾಯರಡಿ ಚೆನ್ನಪ್ಪ ಗೌಡರ ಮನೆ ಪ್ರಾಕ್ಟೀಸು ಮಾಡುವ ಎಲಿಮೆಂಟರಿ ಶಾಲೆ ಗ್ರೌಂಡಿನ ಬದಿಯಲ್ಲೇ ಇರುವುದು ಎಲ್ಲರಿಗೂ ದೊಡ್ಡ ಅನುಕೂಲ ಮತ್ತು ಸಮಾಧಾನ. ಪ್ರಾಕ್ಟೀಸು ಮುಗಿಯುವಾಗ ಗಂಟೆ ಹನ್ನೆರಡು ದಾಟುತ್ತಿದ್ದುದರಿಂದ ದಿನೇಶ ಮನೆ ಸೇರುವಾಗ ಯಾವಾಗಲೂ ಹನ್ನೆರಡೂವರೆ, ಒಂದು ಆಗುತ್ತಿತ್ತು. ಅಪ್ಪನಿಗೆ ತಿಳಿಯದಂತೆ ಮನೆಯೊಳಗೆ ತೂರಿಕೊಳ್ಳವುದು ದಿನೇಶನ ದೈನಂದಿನ ಸಾಹಸವಾಗಿತ್ತು. “ನಾಯಿ ವೇಸ ಹಾಕಿಕೆ ಆಗದಂವ… ಮೈಶಾಸುರನ ವೇಸ ಹಾಕಿಕೆ ಹೊರ್ಟುಟು! ಈ ಊರುಲಿ ಬೇರೆ ಯಾರೂ ಇಲ್ಲೆನೊಲು” ಎಂದು ಗೌಡರು ಮೊದಲ ದಿನವೇ ದಿನೇಶನನ್ನು ಹರಸಿಯಾಗಿತ್ತು.

ಆಟದ ದಿನಕ್ಕೆ ಎರಡು ತಿಂಗಳ ಮೊದಲೇ ಪ್ರಾಕ್ಟೀಸು ಆರಂಭವಾಯಿತು. ದಿನಾ ರಾತ್ರಿ ಎಂಟು ಎಂಟೂವರೆಗೆ ಎಲ್ಲರೂ ಎಲಿಮೆಂಟರಿ ಶಾಲೆಯ ಸ್ಟೇಜ್‌ನಲ್ಲಿ ಸೇರಿ, ಬೊಳುಬೈಲು ಸುಬ್ಬಣ್ಣ ಭಟ್ರ ಭಾಗವತಿಕೆ, ದಾಮೋದರ ಆಚಾರಿಯ ಚೆಂಡೆ, ಶೇಖರ ಶೆಟ್ಟಿಯ ಮದ್ದಲೆಗೆ ಸರಿಯಾಗಿ ಹೆಜ್ಜೆ ಹಾಕಿ ಕುಣಿಯುತ್ತಾ ಪ್ರಾಕ್ಟೀಸು ಆರಂಬಿಸುತ್ತಿದ್ದರು. ಶ್ರುತಿಪೆಟ್ಟಿಗೆ ಹಿಡಿಯಲು ಶಿವರಾಯರ ಹೋಟ್ಲಿನ ಮಾಣಿ ಕಮ್ ಕ್ಲೀನರ್ ಜಗ್ಗ ಎಲ್ಲರಿಂದ ಮೊದಲು ರೆಡಿಯಾಗುತ್ತಿದ್ದ. ಆಟವಿದೆಯೆಂದು ಗೊತ್ತಾದ ಒಂದೂವರೆ ತಿಂಗಳ ಮೊದಲಿಂದಲೇ ಭಜನೆ ದಿನೇಶ ಕೂದಲು ಕತ್ತರಿಸದೆ ಉದ್ದಕ್ಕೆ ಬಿಟ್ಟಿದ್ದ. ಅಪ್ಪಯ್ಯ ಮಣಿಯಾಣಿ, ಧನಂಜಯ ರೈ ಇಬ್ಬರೂ ಹವ್ಯಾಸಿ ಕಲಾವಿದರಾದ್ದರಿಂದ ಅವರಿಬ್ಬರಿಗೆ ಯಾವಾಗಲೂ ಸ್ವಲ್ಪ ಉದ್ದಕ್ಕೆ ಕೂದಲಿರುತ್ತಿತ್ತು. ಉಳಿದವರು ಇನ್ನು ಕೂದಲು ತೆಗೆಸುವುದು ಯಕ್ಷಗಾನ ಕಳೆದು ಅಂದರೆ ಇನ್ನು ಮೂರು ತಿಂಗಳು ಕಳೆದು ಎಂದು ಕ್ಷೌರಿಕ ಸುಬ್ರಾಯನಿಗೆ ಗೊತ್ತಿದ್ದರಿಂದಲೋ ಏನೋ ಆಟದ ಬಗ್ಗೆ ಏನೂ ಆಸಕ್ತಿ ತೋರಿಸುತ್ತಿರಲಿಲ್ಲ.“ಮಂಗ್ಳೂರ್ಂದ ಒಳ್ಳೆ ಆರ್ಕೆಸ್ಟ್ರಾ ಇಲ್ಲರೆ… ತುಳು ನಾಟಕ ತರ್‍ಸಿದ್ದರೆ ಗಮ್ಮತ್ ಇರ್‍ತಿತ್, ಇವರ ಈ ದೇವಿ ಮಹಾತ್ಮೆ ಎಂತದಿಕ್ಕೆ ಅದೂ ಭಜನೆ ದಿನೇಶ ಮೈಶಾಸುರನ ವೇಸ ಹಾಕುದು ಗಡಾ! ಹ್ಯಾಂಗಿರ್‍ದು?” ಎಂದು ಸುಬ್ರಾಯ ಕೆಲವರಲ್ಲಿ ತಮಾಷೆ ಮಾಡುತ್ತಿದ್ದ.
ಯಕ್ಷಗಾನದ ವೇಷಭೂಷಣಗಳನ್ನು ಬಾಡಿಗೆಗೆ ಒದಗಿಸುವ ಕೋಡಾರ್ ಗಣೇಶ ಭಟ್ರು ಶಾಲೆಯಲ್ಲಿ ಮೊದಲೇ ಯಕ್ಷಗಾನ ನಾಟ್ಯ ತರಬೇತಿ ನಡೆಸುತ್ತಿದ್ದುದರಿಂದ ಎಲ್ಲರಿಗೂ ಅಲ್ಪಸ್ವಲ್ಪ ನಾಟ್ಯ ಬರುತಿತ್ತು. ಅರ್ಥಗಾರಿಕೆಗೆ ಮಾತ್ರ ಗಣೇಶ ಭಟ್ರು ಬರೆದು ತಂದು ಓದಿಸಿ ಬಾಯಿಪಾಠ ಮಾಡಿಸುತ್ತಿದ್ದರು. ಅಪ್ಪಯ್ಯ ಮಣಿಯಾಣಿ, ಧನಂಜಯ ರೈಯಂಥ ಕೆಲವರಿಗೆ ಇದರ ಅಗತ್ಯ ಇರಲಿಲ್ಲ. ಭಾಗವತರ ಪದ್ಯ ಕೇಳಿ ಸ್ವಯಂಸ್ಫೂರ್ತಿಯಿಂದ ಅರ್ಥ ಹೇಳುತ್ತಿದ್ದರು. ತಪ್ಪಿದಲ್ಲಿ, ಅಭಾಸವಾದಲ್ಲಿ ತಿದ್ದುವುದಕ್ಕೆ ಗಣೇಶ ಭಟ್ರು ಇರುತ್ತಿದ್ದರು. ಭಜನೆ ದಿನೇಶನಿಗೆ ಬಾಯಿಪಾಠವೇ ಗತಿ. ಕಷ್ಟದಿಂದ ಹಠತೊಟ್ಟು ಬಾಯಿಪಾಠ ಮಾಡಿದರೂ ಎಡೆ ಎಡೆಯಲ್ಲಿ ಮರೆತು ಹೋಗುತಿತ್ತು. ಮರೆತು ಹೋದಾಗ ಒಮ್ಮೆ ಜೋರಾಗಿ ಆರ್ಭಟ ಕೊಡುತ್ತಿದ್ದ. ಆಗ ಗಣೇಶ ಭಟ್ರು ಮೆಲ್ಲಗೆ ಹಿಂದಿನಿಂದ ಉಸುರುತ್ತಿದ್ದರು. ಮತ್ತೆ ಸರಾಗವಾಗಿ ಮುಂದುವರೆಯುತ್ತಿತ್ತು. ಮತ್ತೆ ಮರೆತುಹೋದಾಗ ಮತ್ತೊಂದು ಆರ್ಭಟ. ಆದರೆ ದೇವಿ ಪಾತ್ರದ ಸುಹಾಸಿನಿಗೆ ಭರತನಾಟ್ಯ ತಿಳಿದಿದ್ದರೂ, ಯಕ್ಷಗಾನದ ನಾಟ್ಯ ಮತ್ತು ಅರ್ಥಗಾರಿಕೆಯನ್ನು ಹೇಳಿಕೊಡಬೇಕಾಗುತಿತ್ತು. ಸುಹಾಸಿನಿ ಬೇಗನೆ ಕಲಿತುಕೊಳ್ಳುತ್ತಿದ್ದಳು. ಒಂದೊಂದು ದಿನ ಯಾರಾದರೂ ಪ್ರಾಕ್ಟೀಸು ನೋಡಲು ಬಂದವರು ಶಿವರಾಯರ ಹೋಟೆಲಿಂದ ಚಾ, ಬಿಸ್ಕೆಟ್ ತರಿಸುತ್ತಿದ್ದರು. ದಿನೇಶನ ಅಣ್ಣ ನಾರಾಯಣನೂ ಪ್ರಾಕ್ಟೀಸ್ ನೋಡಲು ಆಗಾಗ ಬರುತ್ತಿದ್ದ. ಹೀಗೆ ಪ್ರಾಕ್ಟೀಸಿನಲ್ಲಿ ದಿನ ಕಳೆದದ್ದೇ ಗೊತ್ತಾಗದೆ ಆಟದ ದಿನವೂ ಬಂದುಬಿಟ್ಟಿತು.

ಎಲ್ಲರೂ ಅಂದು ಬೆಳಗ್ಗಿನಿಂದಲೇ ಆಟದ ತಯಾರಿಯಲ್ಲಿದ್ದರು. ಹಗಲಿಡೀ ದಿನೇಶನಿಗೂ, ಶಿವರಾಯರ ಮಾಣಿ ಜಗ್ಗನಿಗೂ ಮೈಕ್‌ನಲ್ಲಿ “ಇಂದು ಎಲಿಮೆಂಟರಿ ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀದೇವಿ ಮಹಾತ್ಮೆ ಆಟ…ಅ ಬನ್ನಿರಿ ನೋಡಿರಿ ಆನಂದಿಸಿರಿ… ಅರಿತ ನುರಿತ ಹವ್ಯಾಸಿ ಕಲಾವಿದರಿಂದ ಒಂದೇ ಒಂದು ಆಟ… ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಪ್ರಸಂಗವನ್ನು ನೋಡಲು ಮರೆಯದಿರಿ” ಎಂದು ಎನೌನ್ಸ್ ಮಾಡುವುದೇ ಕೆಲಸವಾಗಿ ಸಂಜೆಯಾದದ್ದೇ ಗೊತ್ತಾಗಿರಲಿಲ್ಲ.

ಸಂಜೆ ಆರಕ್ಕೆ ಆರಂಭವಾದ ವಾರ್ಷಿಕೋತ್ಸವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಊರಗಣ್ಯರು, ಶಾಸಕರು ಭಾಗವಹಿಸಿದರು. ಭಾಷಣಗಳಾದ ಮೇಲೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆಯಾಯಿತು. ಸಭಾ ಕಾರ್ಯಕ್ರಮ ಮುಗಿದಾಗ ಎಂಟು ಗಂಟೆ. ಮೊದಲು ಮಕ್ಕಳದ್ದು. ಆ ಮೇಲೆ ಹುಡುಗಿಯರ ಸ್ವಾಗತ ಡಾನ್ಸ್, ಕೋಲಾಟ, ಬೆಸ್ತರ ನೃತ್ಯ, ಜಾನಪದ ನೃತ್ಯ, ಎಲ್ಲಾ ಮುಗಿದಾಗ ಗಂಟೆ ಒಂಭೂತ್ತೂವರೆ. ಮತ್ತೆ ಹುಡುಗರ ಹಾಸ್ಯಮಯ ಸಾಮಾಜಿಕ ನಾಟಕ ಹೆಣ್ಣು ಸಮಾಜದ ಕಣ್ಣು ಆರಂಭವಾಯಿತು.

ಚೌಕಿಯೊಳಗೆ ಉದ್ದ ನೇಕೆಯಲ್ಲಿ ಯಕ್ಷಗಾನದ ವೇಷಭೂಷಣಗಳು ನೇತಾಡುತ್ತಾ ಪಾತ್ರಗಳಿಗೆ ಜೀವ ತುಂಬಲು ಕಾಯುತ್ತಿದ್ದವು. ಕೋಡಾರ್ ಗಣೇಶ ಭಟ್ರು, ಮತ್ತಿಬ್ಬರು ಬಣ್ಣ ಹಾಕುವುದರಲ್ಲಿ, ವೇಷ ತೊಡಿಸುವುದರಲ್ಲಿ ಮಗ್ನರಾಗಿದ್ದರು. ಚಂಡ ಮುಂಡರ ವೇಷದ ಅಪ್ಪಯ್ಯ ಮಣಿಯಾಣಿ, ಧನಂಜಯ ರೈ ಅವಳಿಗಳಂತೆ ಕಾಣುತ್ತಿದ್ದರು. ಕೆದರಿದ ಉದ್ದ ಕೂದಲಿನಲ್ಲಿ ಕಟ್ಟುಮಸ್ತಾದ ಇಬ್ಬರೂ ಆಕರ್ಷಕವಾಗಿ ಕಾಣುತ್ತಿದ್ದರು. ಭಜನೆ ದಿನೇಶ ಮಹಿಷಾಸುರನ ವೇಷದಲ್ಲಿ ಭಯಂಕರವಾಗಿ ಕಾಣುತ್ತಿದ್ದ. ಹಣೆಯಲ್ಲಿ ಕಣ್ಣಿನಂಥ ಆಕಾರ ಬರೆದು ಸುತ್ತ ಕಪು ಕಾಡಿಗೆ ಮೆತ್ತಿ ಅರಸಿನದಲ್ಲಿ ಪಟ್ಟಿ ಬರೆದು ಸಪೇದ್, ಇಂಗ್ಲೀಕದ ಗೆರೆ ಎಳೆದು ಹತ್ತಾರು ಬಟ್ಟೆಗಳ ಗಂಟಿನ ಅಂಡು ಕಟ್ಟಿ, ಬಾಲುಮುಂಡು ಧರಿಸಿ ಮೇಲೆ ದಗಲೆ ಹಾಕಿ ಜಟ್ಟಿಯನ್ನು ಬಿಗಿದು ಹೆಗಲ ಮೇಲೆ ನಾಲ್ಕು ಬಣ್ಣದ ಸೋಗಲಿ ಹಾಕಿ, ಅಗಲಡ್ಡಿಗೆ, ಸಪೂರಡ್ಡಿಗೆ, ಎದೆಪದಕ, ದಂಬೆಗಿಳಿಯೆಂಬ ಭುಜಕೀರ್ತಿಯ ಕೆಳಗೆ ತೋಳ್ಕಟ್ಟು, ಕೈಕಟ್ಟು, ಡಾಬು, ವೀರಗಾಸೆ, ಹಿಂದೆ ಉಲ್ಲನ್ ಡಾಬು ಧರಿಸಿ ಕಾಲಿಗೆ ಸಾಕ್ಸಿನಂತೆ ಪಟ್ಟಿ ಕಟ್ಟಿ ಗೆಜ್ಜೆ ಧರಿಸಿದ ಮೇಲೆ ತಲೆಗೆ ಕೇಸರಿ ಕಟ್ಟಿ, ಓಲೆಗಳನ್ನು ತೊಡಿಸಿ ಕೊಂಬಿನ ಕಿರೀಟವಿಟ್ಟ ದಿನೇಶ ಅತಿಮಾನುಷನಾಗಿ ಭಯಂಕರವಾದ ವಿಚಿತ್ರ ಜೀವಿಯಂತೆ ಕಾಣುತ್ತಿದ್ದ. ದೇವಿ ಮಾತ್ರ ಸಾPತ್ ದೇವಿಯೇ! ನಿಜಕ್ಕೂ ಸುಂದರಿಯಾದ ಸುಹಾಸಿನಿ ದೇವಿಯ ಕಿರೀಟ, ಆಭರಣ, ಮೇಕಪ್‌ನಿಂದಾಗಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದಳು. ಎಲ್ಲರೂ ಆಕೆಯನ್ನೇ ನೋಡುವುದರಲ್ಲಿ ಖುಷಿಪಡುತ್ತಿದ್ದರು. ಚೌಕಿಯ ಒಂದು ತುದಿಯಲ್ಲಿ ದೇವೇಂದ್ರನ ಕಿರೀಟ ಇಟ್ಟು ಸ್ವಸ್ತಿಕಕ್ಕೆ ಕೊಡಿ ಬಾಳೆಲೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಕುಂಕುಮ, ಐದು ವೀಳ್ಯದೆಲೆಯ ಮೇಲೆ ಒಂದಡಿಕೆ ಒಂದೂಕಾಲು ರೂಪಾಯಿ ಇಟ್ಟು ಕಾಲುದೀಪ ಉರಿಸಿ, ಊದುಬತ್ತಿ ಹಚ್ಚಿ ಅದಾಗಲೇ ಪೂಜೆ ಮಾಡಿಯಾಗಿತ್ತು. ಪಕ್ಕದಲ್ಲೇ ಕುಳಿತಿದ್ದ ಸುಹಾಸಿನಿ ಸಾPತ್ ದೇವಿಯೇ ಪ್ರತ್ಯಕ್ಷವಾದಂತೆ ಕಾಣುತ್ತಿದ್ದಳು. ಚೌಕಿಯೊಳಗೆ ವೇಷ ನೋಡಲು ಬಂದ ಕೆಲವರು ಸುಹಾಸಿನಿಯ ದೇವಿರೂಪವನ್ನು ಭಯ, ಭಕ್ತಿ, ಆಶ್ಚರ್ಯಗಳಿಂದ ನೋಡುತ್ತಾ ಆಕೆಯ ಮುಂದೆ ನಾಣ್ಯಗಳನ್ನು ಹಾಕಿ ಕೈಮುಗಿದು ಹೋಗುತ್ತಿದ್ದರು.

ರಾತ್ರಿ ಹತ್ತೂವರೆಗೆ ಸರಿಯಾಗಿ ಗಜಮುಖದವಗೆ ಗಣಪಗೆ ಚೆಲ್ವ ತ್ರಿಜಗವಂದಿತನಿಗಾರತಿ ಎತ್ತಿರೆ … ಭಾಗವತರ ಕಂಚಿನ ಕಂಠದ ಪದ್ಯ, ಚೆಂಡೆಯ ಅಮೋಘ ರಿಂಗಣ, ಮದ್ದಲೆ, ತಾಳಗಳ ಶಿಸ್ತಿನ ಲಯದೊಂದಿಗೆ ಚೌಕಿ ಪೂಜೆ ಆರಂಭವಾಯಿತು. ಚೌಕಿ ಪೂಜೆ ಆರಂಭವಾದುದರಿಂದ ಹೆಣ್ಣು ಸಮಾಜದ ಕಣ್ಣು ನಾಟಕದ ಕೊನೆಯ ದೃಶ್ಯವನ್ನು ಅವಸರದಲ್ಲಿ ಮುಗಿಸಬೇಕಾಯಿತು. ರಂಗಸ್ಥಳಕ್ಕೆ ಮೇಳದೊಂದಿಗೆ ಕಥಾಪಾತ್ರಗಳು ಆಗಮಿಸಿದುವು. ಕಥೆ ಬಿಚ್ಚಿಕೊಳ್ಳುತ್ತಿದ್ದಂತೆ ಪಾತ್ರಗಳು ಒಂದರ ನಂತರ ಒಂದು ರಂಗಸ್ಥಳಕ್ಕೆ ಬಂದು ಕುಣಿದು ಅಬಿನಯಿಸಿ ಸಾಗಿದವು. ಶ್ರೀದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ರಂಗಸ್ಥಳ ಪ್ರವೇಶಿಸುವುದು ಮಧ್ಯರಾತ್ರಿ ಒಂದೂವರೆ ಎರಡು ಗಂಟೆಯ ವೇಳೆಗೆ. ದಿನವಿಡೀ ಮೈಕ್ ಎನೌನ್ಸ್ ಮಾಡಿ ಮಾಡಿ ಆಯಾಸಗೊಂಡಿದ್ದರೂ ಭಜನೆ ದಿನೇಶ ಸಂಜೆಯೇ ವೇಷ ಧರಿಸಿ ಕುಳಿತಿದ್ದ. ಹೇಗೂ ತನ್ನ ಪಾತ್ರ ಪ್ರವೇಶಕ್ಕೆ ಇನ್ನೂ ಬಹಳ ಹೊತ್ತು ಇರುವುದರಿಂದ ದಿನೇಶ ಚೌಕಿಯಿಂದ ಮೆಲ್ಲಗೆ ಹೊರಗೆ ಬಂದು ಗ್ರೌಂಡಿನ ಬದಿಯಲ್ಲೇ ಯಾರಿಗೂ ಗೊತ್ತಾಗದಂತೆ ಕತ್ತಲೆಯಲ್ಲೇ ಸರಿದು ಹಿಂದೆ ನಿಂತು ನೋಡುತ್ತಿದ್ದ ಪ್ರೇಕ್ಷಕರೆಲ್ಲರ ಹಿಂದೆ ಬಂದ. ಮಹಿಷಾಸುರ ರಂಗಸ್ಥಳಕ್ಕೆ ಪ್ರವೇಶಿಸುವುದು ಪ್ರೇಕ್ಷಕರ ನಡುವಿಂದ. ಎರಡೂ ಬದಿಗಳಲ್ಲಿ ಹಿಡಿದ ಉರಿಯುತ್ತಿರುವ ದೊಂದಿಗೆ ರಾಳದ ಹುಡಿಯನ್ನು ರಾಚಿ ಎಸೆಯುತ್ತಾ ಭಯಂಕರವಾಗಿ ಆರ್ಭಟಿಸುತ್ತಾ ಒಮ್ಮೆ ಎಡಕ್ಕೆ ಒಮ್ಮೆ ಬಲಕ್ಕೆ ದಿಟ್ಟಿಸುತ್ತಾ, ಚೆಂಡೆಯ ಲಯಕ್ಕೆ ಸರಿಯಾಗಿ ನಾಲ್ಕು ಹೆಜ್ಜೆ ಮುಂದೆಯಿಟ್ಟು ಮತ್ತೆ ಎರಡು ಹೆಜ್ಜೆ ಹಿಂದಕ್ಕೆ ಎತ್ತಿಡುತ್ತಾ, ಆಗಾಗ ಹಿಂದಕ್ಕೆ ವಾಲಿ ರಂಗಸ್ಥಳ ನೋಡಿ ಮತ್ತೆ ಮತ್ತೆ ಹೂಂಕರಿಸಿ ಅಟ್ಟಹಾಸಗೈಯುತ್ತಾ ರಂಗಸ್ಥಳದೆಡೆಗೆ ಬರುವ ಆ ದೃಶ್ಯ ಭಯಾನಕ. ಪಕ್ಕದಲ್ಲಿರುವ ದೊಂದಿಗೆ ರಾಳದ ಹುಡಿಯನ್ನು ಎಸೆದಾಗ ಒಮ್ಮೆಗೆ ಉದ್ಭವಿಸುವ ಎತ್ತರದ ಬೆಂಕಿ ಜ್ವಾಲೆಯಲ್ಲಿ ಮಹಿಷಾಸುರನ ರೂಪ ಅತ್ಯಂತ ಬಿಕರವಾಗಿ ಕಾಣುತ್ತದೆ. ಮಹಿಷಾಸುರನ ಪ್ರವೇಶವೊಂದು ಅತ್ಯಂತ ಕುತೂಹಲ ಮತ್ತು ಅದ್ಭುತ ಮನರಂಜನೆಯ ಭಾಗವಾದುದರಿಂದ ಪ್ರೇಕ್ಷಕರು ಒಬ್ಬರ ಮೇಲೆ ಒಬ್ಬರು ಬಿದ್ದು ಕಾತರದಿಂದ ಕಾಯುತ್ತಿರುತ್ತಾರೆ. ಆದ್ದರಿಂದ ದಿನೇಶ ಪ್ರೇಕ್ಷಕರೆಲ್ಲರ ಹಿಂಭಾಗಕ್ಕೆ ಬಂದು ನಿಂತಿದ್ದ. ಅಲ್ಲದೆ ಉಳಿದ ಪಾತ್ರಗಳನ್ನು ನೋಡುವ ಕುತೂಹಲವು ಇತ್ತೇನೊ. ಕತ್ತಲೆಯಲ್ಲಿ ಯಾರಿಗೂ ಕಾಣದೆ ನಿಂತ ದಿನೇಶನಿಗೆ ಎಲ್ಲಾದರೂ ಅಂಡು ಊರಬೇಕೆನಿಸಿತು.

ಅರಂತೋಡು ಸಂಪಾಜೆ ಕಡೆ ಮಣ್ಣಿನ ಮಡಿಕೆ, ಅಳಗೆ, ನೆಸಲೆ ಮಾರಲು ಹೋಗಿದ್ದ ಕೌಡಿಚ್ಚಾರಿನ ಓಡಾರಿ ಕೂಸ ಹಿಂದಿರುಗುವ ಹಾದಿಯಲ್ಲಿ ಆಟವಿದೆಯೆಂದು ತಿಳಿದು ತನ್ನ ಎತ್ತಿನ ಗಾಡಿಯನ್ನು ನಿಲ್ಲಿಸಿ ಮುಂದೆಲ್ಲೋ ಕುಳಿತು ಆಟ ನೋಡುವುದರಲ್ಲಿ ಮಗ್ನನಾಗಿದ್ದ. ಗಾಡಿಯೆತ್ತುಗಳನ್ನು ಅಲ್ಲೇ ಇದ್ದ ದೇವದಾರ ಮರವೊಂದಕ್ಕೆ ಕಟ್ಟಿದ್ದ. ಗಾಡಿಯ ಮೂಕಿ ಮೇಲಕ್ಕಿದ್ದು ಹಿಂಭಾಗ ನೆಲಕ್ಕೆ ತಾಗಿಕೊಂಡಿತ್ತು. ಭಜನೆ ದಿನೇಶ ತನ್ನ ಭಯಂಕರ ವೇಷಭೂಷಣಗಳೊಂದಿಗೆ ಆ ಗಾಡಿಯ ಹಿಂಭಾಗದಲ್ಲಿ ಹರಡಿದ್ದ ಬೈಹುಲ್ಲಿನ ಮೇಲೆ ಕುಳಿತ. ಇಳಿಜಾರಾಗಿದ್ದ ಮೆತ್ತನೆಯ ಸೋಪಾನದಲ್ಲಿ ಒರಗಿ ಕುಳಿತು ಕಾಲು ನೀಡಿದ. ಅಲ್ಲಿಂದ ಸರಿಯಾಗಿ ರಂಗಸ್ಥಳ ಕಾಣುತ್ತಿದ್ದುದರಿಂದ ಆರಾಮವಾಗಿ ಒರಗಿದ. ಆಟ ನೋಡುತ್ತಾ ಒರಗಿದವನಿಗೆ ಅಲ್ಲೇ ಜೊಂಪು ಹತ್ತಿತು. ಏಳೆಂಟು ದಿನಗಳಿಂದ ಆಟದ ತಯಾರಿಗೆ ಪುರುಸೊತ್ತಿಲ್ಲದೆ ಓಡಾಡಿಕೊಂಡಿದ್ದು ರಾತ್ರಿಯೆಲ್ಲ ಪ್ರಾಕ್ಟೀಸ್ ಮಾಡಿ, ದಿನವಿಡೀ ಮೈಕ್ ಎನೌನ್ಸ್ ಮಾಡಿ ಸುಸ್ತಾಗಿದ್ದ ದಿನೇಶನಿಗೆ ಗಾಢ ನಿದ್ದೆ ಆವರಿಸಿತು.

ಆಟವನ್ನು ರೆಪ್ಪೆಯಾಡಿಸದೆ ಬಾಯಿಬಿಟ್ಟು ನೋಡುತ್ತಿದ್ದ ಓಡಾರಿ ಕೂಸ ಫಕ್ಕನೆ ಎಚ್ಚರವಾದವನಂತೆ ಬಳಿಯಿದ್ದವನಲ್ಲಿ ಗಂಟೆ ಎಷ್ಟಾಯಿತೆಂದು ಕೇಳಿದ. ಒಂದ್ ಗಂಟೆ ಎಂದಾಗ ಹಾಂ… ಈಗ ಇಲ್ಲಿಂದ ಗಾಡಿ ಬುಟ್ಟರೆ… ಬಿಸ್‌ಲ್ ಏರಿಕೆ ಮುಂದೆ ಕೌಡಿಚ್ಚಾರ್ ಮುಟ್ಟಿ, ಮನೆ ಸೇರಿ ಉಂಡು ಮೊಲ್‌ಗಕ್ ಎಂದು ಯೋಚಿಸಿ, ಎದ್ದು ಸೀದಾ ಗಾಡಿ ಬಳಿ ಬಂದ ಕೂಸ ಎತ್ತುಗಳ ಹಗ್ಗ ಬಿಚ್ಚಿ ತಂದು ಗಾಡಿಯ ಮೂಕಿಯನ್ನು ಹಾರಿ ಹಿಡಿದು ಕೆಳಕ್ಕೆ ಬಾಗಿಸಿ, ಎತ್ತುಗಳೆರಡನ್ನು ನೊಗಕ್ಕೆ ಕಟ್ಟತೊಡಗಿದ. ಗಾಡಿ ಮೂಕಿಯನ್ನು ಬಗ್ಗಿಸುವಾಗ ಹಿಂಭಾಗ ಮೇಲಕ್ಕೇರಿ ಹಿಂದೆ ಮಲಗಿದ್ದ ಮಹಿಷಾಸುರನೆಂಬ ದಿನೇಶನ ಕಾಲುಗಳು ನೇತಾಡತೊಡಗಿದವು. ಮೊಣಕಾಲಿಂದ ಕೆಳಗಿನ ಗೆಜ್ಜೆ ಕಟ್ಟಿದ ಕಾಲುಗಳು ಗಾಡಿಯಿಂದ ನೇತಾಡುತಿದ್ದವು. ಮೊಣಕಾಲಿಂದ ಮೇಲ್ಭಾಗದ ದೇಹ ಪೂರ್ತಿ ಗಾಡಿಯೊಳಗಿದ್ದುದರಿಂದ ದಿನೇಶನಿಗೆ ಎಚ್ಚರವಾಗಲೇ ಇಲ್ಲ. ಗಾಡಿಯ ಕೆಳಗೆ ನೇತಾಡುವ ಲಾಟಾನನ್ನು ಉರಿಸಿ ಓಡಾರಿ ಕೂಸ ದಬಕ್ಕ ಮೇಲೆ ಹಾರಿ ಕುಳಿತು ಗಾಡಿ ಹೊಡೆದ. ನಿಧಾನವಾಗಿ ಚಲಿಸಿದ ಗಾಡಿಯ ಕುಲುಕಾಟದಿಂದ ತೂಗಿದಂತಾಗಿ ದಿನೇಶನ ನಿದ್ರಾವಸ್ಥೆ ಮುbವಸ್ಥೆಗೆ ತಲುಪಿತು. ಎತ್ತುಗಳು ನಿಧಾನವಾಗಿ ಹೆಜ್ಜೆಯಿಡುತ್ತಿದ್ದಂತೆ ಗಾಡಿ ಮುಂದಕ್ಕೆ ಹೋಯಿತು. ಎತ್ತುಗಳ ಗೊರಸಿನ ಸದ್ದು, ಗಾಡಿ ಎಡ ಬಲಕ್ಕೆ ಜರುಗುವ ಸದ್ದು, ಚಕ್ರದ ಕೀಲಿನಲ್ಲಿರುವ ಗೆಜ್ಜೆಯ ಖಣ ಖಣ ಎಲ್ಲ ಸೇರಿ ಉಂಟಾದ ವಿಶಿಷ್ಟವಾದ ಲಯ ಕೂಸನಿಗೆ ಏನನ್ನೋ ಗುನುಗಲು ಪ್ರೇರೇಪಿಸುತಿತ್ತು. ಆಟವನ್ನು ಸವಿಯುತ್ತಾ ಕುಳಿತ್ತಿದ್ದ ಓಡಾರಿ ಕೂಸನಿಗೆ ಈಗ ಗಾಡಿಯಲ್ಲಿ ಕುಳಿತರೂ ತಲೆತುಂಬ ಚೆಂಡೆಯ ಸದ್ದು. ಬಣ್ಣ ಬಣ್ಣದ ವೇಷಗಳ ಕುಣಿತ. ಅದೇ ಗುಂಗಿನಲ್ಲಿ ಏನೋ ಹಾಡು ಗುನುಗುತ್ತಾ ಸಾಗಿದ ಕೂಸನಿಗೆ ಗಾಡಿ ಮುಂದೆ ಹೋಗಿ ಪೈಚಾರಿನ ಬಳಿಯ ಓಡಬಾ ಎಂಬಲ್ಲಿಗೆ ತಲುಪಿದಾಗ ಕೊಂಚ ಭಯವೆನಿಸಿತು. ಗಾಡಿಯ ಚಕ್ರದ ಕೀಲಿನ ಗೆಜ್ಜೆಯ ಖಣ ಖಣ ಸದ್ದಿನೊಂದಿಗೆ ಸಣ್ಣಗೆ ದಿನೇಶನ ಕಾಲಿನ ಗೆಜ್ಜೆಯ ಸದ್ದೂ ಸೇರಿ ಆ ಕಗ್ಗತ್ತಲೆಯ ನೀರವತೆಯನ್ನು ಬೇದಿಸುತಿತ್ತು. ಓಡಬಾ ಎಂಬ ಆ ಪ್ರದೇಶದಲ್ಲಿ ದೊಡ್ಡ ದೊಡ್ಡ ದೈತ್ಯ ಮರಗಳಿಂದ ಕೂಡಿದ ದಟ್ಟ ಕಾಡು ಇತ್ತು. ಪ್ರೇತ, ಪಿಶಾಚಿ, ರಣ ಮುಂತಾದವು ಅಲ್ಲಿವೆ ಎಂದು ಎಲ್ಲರೂ ಹೇಳುತ್ತಿದ್ದುದು ಕೂಸನಿಗೂ ಗೊತ್ತಿತ್ತು. ಆದ್ದರಿಂದ ನಿಜವಾಗಿಯೂ ಹೆದರಿಹೋಗಿದ್ದ ಕೂಸ b…ಅ ನಾ ಆಟ ನೋಡಿಕಂಡ್ ಅಲ್ಲೇ ಇರಕಾಯ್ತ್… ಇಷ್ಟ್ ಬೇಗ ಹೊರ್ಟದ್ ತೊಪ್ಪಾತ್… ಎಂದು ಪರಿತಪಿಸುತ್ತಾ ಈಗ ಮೈಶಾಸುರ ರಂಗಸ್ಥಳಕ್ಕೆ ಬಾವ ಸಮಯ ಆತೋಂತಾ… ಎಂದು ನೆನಪಿಸಿಕೊಂಡು ಅತ್ತು ಪಲವೇನಿನ್ನು ಸುಮ್ಮನೇ ಸತ್ತವರು ಜೀವಿಪರೇ ಮರ್ಥನಾಗಿಹ… ತರಳ ಮೈಶಾಸುರಗೆ ಹದನಗಳ… ಬಿತ್ತರಿಸಿ ಹದನಗಳ ಸುಮನಸ… ಮೊತ್ತವನು ಸದೆಬಡಿದು ನಾಕವ… ಅರ್ತಿಯಲಿ ವಶಗೈವೆನೆನುತಲೆ… ಕರೆದಳಾ ಮಗನ… ಎಂದು ಗಟ್ಟಿಸ್ವರದಲ್ಲಿ ಮಹಿಷಾಸುರನ ಪ್ರವೇಶದ ಪದ್ಯವನ್ನು ಹಾಡಲಾರಂಬಿಸಿದ. ತರಗೆಲೆಯ ಸಣ್ಣ ಮಿಸುಕಾಟವೂ ಕೂಸನಿಗೆ ಅಪಾರ ಭಯವನ್ನುಂಟುಮಾಡುತ್ತಿದ್ದುದರಿಂದ ಯಾವ ಶಬ್ದವೂ ಕೇಳಿಸಬಾರದೆಂಬಂತೆ ಗಟ್ಟಿಯಾಗಿ ಹಾಡುತ್ತಿದ್ದ.

ಗಾಡಿಯ ಹಿಂಬದಿಯಲ್ಲಿ ಕಾಲುಗಳೆರಡನ್ನೂ ಕೆಳಬಿಟ್ಟು ಗಾಢ ನಿದ್ದೆಯಲ್ಲಿ ಲೀನಗೊಂಡಿದ್ದ ಮಹಿಷಾಸುರ ವೇಷದ ಭಜನೆ ದಿನೇಶನಿಗೆ ತಟ್ಟನೆ ಎಚ್ಚರವಾಯಿತು. ಓಯ್… ಮೈಶಾಸುರನ ರಂಗಸ್ಥಳ ಪ್ರವೇಶದ ಪದ್ಯ ಕೇಳ್ತಾ ಉಟ್ಟು… ಇನ್ನ್ ಕಳ್ಕಿಕ್ಕಂಡ್, ಕೊಣ್ಕಂಡ್, ಕೊಣ್ಕಂಡ್ ದೊಂದಿಗೆ ರಾಳದ ಹುಡಿನ ಬಿಸಾಡಿಕ್ಕಂಡ್ ರಂಗಸ್ಥಳಕ್ಕೆ ಹೋಕು… ಎಂದು ನೆನಪಾಗಿ… ಭಯಂಕರವಾಗಿ ಒಮ್ಮೆ ಆರ್ಭಟಿಸಿ ಗಾಡಿಯಿಂದ ಕೆಳಕ್ಕೆ ಜಿಗಿದ. ಸುತ್ತ ನೋಡಿದರೆ ಭಯಾನಕ ಕತ್ತಲೋ ಕತ್ತಲು. ರಂಗಸ್ಥಳ ಕಾಣಿಸುತ್ತಲೇ ಇಲ್ಲ! ಜನರೂ ಕಾಣುವುದಿಲ್ಲ! ಒಟ್ಟಾರೆ ಬೆಳಕೇ ಕಾಣುತ್ತಿಲ್ಲ! ಎಂಥದಿದ್!ಲು ಎಂದು ಏನೂ ಅರ್ಥವಾಗದೆ ದಿನೇಶ ಇನ್ನೊಮ್ಮೆ‌ಆರ್ಭಟಿಸುವ ಮೊದಲೇ ಹಿಂಬದಿಯಿಂದ ಓಡಾರಿ ಕೂಸನ ವಿಚಿತ್ರ ಕಿರುಚಾಟ ಕೇಳಿಸಿತು! ಹಾಂ… ಇದೆಂಥ… ಇದ್ ಯಾರ್ ಕಿರ್‍ಚುದು…ಲು ಎಂದು ದಿನೇಶ ಅತ್ತಿತ್ತ ನೋಡಿದ. ಮೊದಲೇ ರಣ, ಪಿಶಾಚಿಗಳ ಭಯದಿಂದ ಉಸಿರು ಕಟ್ಟಿಕೊಂಡಿದ್ದ ಕೂಸ ಈಗ ಮಹಿಷಾಸುರನ ಪ್ರತ್ಯಕ್ಷ ದರ್ಶನವಾಗಿ ಹೆದರಿ ಕಂಗಾಲಾಗಿ ಕಣ್ಣುಮುಚ್ಚಿ ಕರ್ಕಶವಾಗಿ ಕಿರುಚಿದ್ದ. ಗಲಿಬಿಲಿಗೊಂಡ ದಿನೇಶ ಹಿಂದೆ ತಿರುಗಿ ನೋಡಿದರೆ ಕಂಡದ್ದು ಮಿಣಿ ಮಿಣಿ ಉರಿಯುವ ಲಾಟಾನು. ನಿದ್ದೆಯ ಮತ್ತಲ್ಲಿ ಕಂಡ ಲಾಟಾನೇ ದೊಂದಿಯಂತೆ ಕಂಡಿರಬೇಕು. ಕೂಡಲೇ ಕೈಯಲ್ಲಿದ್ದ ರಾಳದ ಹುಡಿಯನ್ನು ಲಾಟಾನಿನ್ನತ್ತ ಎಸೆದ. ಲಾಟಾನು ಭಗ್ಗನೆ ಉರಿದು ಬೆಂಕಿಯ ಆಳೆತ್ತರದ ಜ್ವಾಲೆಗಳು ಭಯಂಕರವಾಗಿ ಹರಡಿದವು. ಕೂಸ ಗಾಡಿಯಿಂದ ಧುಮುಕಿ ಹಿಂದಕ್ಕೆ ತಿರುಗದೆ ಯ್ಯಾಮ್ಮೋ…ಅ ಎಂದು ಕರ್ಕಶವಾಗಿ ಕಿರುಚುತ್ತಾ ಓಡತೊಡಗಿದ. ಬೆಂಕಿಯ ಬಿಸಿತಾಗಿದ ಎತ್ತುಗಳೆರಡೂ ಕಕ್ಕಾಬಿಕ್ಕಿಯಾಗಿ ಓಡತೊಡಗಿದವು. ಅವುಗಳ ಹಿಂದೆ ಬೈಹುಲ್ಲಿಗೆ ಬೆಂಕಿ ಹತ್ತಿಕೊಂಡ ಗಾಡಿ ದಡಬಡನೆ ಸಾಗುತಿತ್ತು. ಇದೇನೆಂದು ಅರ್ಥವಾಗದ ದಿನೇಶ ಮತ್ತೊಮ್ಮೆ ಜೋರಾಗಿ ಆರ್ಭಟಿಸಿದ. ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಗಾಡಿಯನ್ನು ಎಳೆದಾಡಿಕೊಂಡು ಗಾಬರಿಯಿಂದ ಅಡ್ಡಾದಿಡ್ಡಿ ಓಡುತ್ತಿದ್ದ ಎತ್ತುಗಳು ದಿನೇಶನ ಆರ್ಭಟ ಕೇಳಿ ಮತ್ತೂ ಹೆದರಿ ಹಾರಿ ಹಾರಿ ಓಡತೊಡಗಿದವು. ಕೂಸ ಎಲ್ಲಿ ಹೋದನೋ ಕಾಣುತ್ತಿರಲಿಲ್ಲ. ದಿನೇಶ ಅತ್ತ ಇತ್ತ ನೋಡಿದ. ಏನೂ ಕಾಣುತ್ತಿಲ್ಲ, ಅಪಾರ ಕತ್ತಲರಾಶಿ! ಮಾರ್ಗ ಮಧ್ಯದಲ್ಲಿ ಮಹಿಷಾಸುರನ ವೇಷದಲ್ಲಿ ದಿನೇಶ ಬೆರ್ಚಪ್ಪನಂತೆ ನಿಂತಿದ್ದ. ತಾನೆಲ್ಲಿದೇನೆಂದು ದಿನೇಶನಿಗೆ ಗೊತ್ತಾಗಲಿಲ್ಲ. ರಂಗಸ್ಥಳವೂ ಇಲ್ಲ, ಜನರೂ ಇಲ್ಲ. ಏನೂ ಇಲ್ಲ… ಏನು ಮಾಡುವುದೆಂದು ತೋಚದೆ ದಿನೇಶ ಅಲ್ಲೇ ನಿಂತ. ದೂರದಲ್ಲಿ ಮರವೊಂದರ ಅಡ್ಡದಲ್ಲಿ ಕೂಸ ಏದುಸಿರು ಬಿಡುತ್ತಾ ಬೆಂಕಿಯ ಉಂಡೆಯಂಥ ತನ್ನ ಗಾಡಿಯನ್ನು ಎಳೆದಾಡಿ ಓಡಿ ಕುತ್ತಿಗೆ ನೊಗದಲ್ಲಿ ಸಿಕ್ಕಿಕೊಂಡು ಓರೆಕೋರೆ ನಿಂತು ಅಡ್ಡಾದಿಡ್ಡಿ ಎಳೆದಾಡುತ್ತಿರುವ ಎತ್ತುಗಳನ್ನೇ ನೋಡುತ್ತಿದ್ದ. ಎತ್ತ ಹೋಗುವುದೆಂದು ತಿಳಿಯದೆ ದಿನೇಶ ಅಲ್ಲೇ ಕುಳಿತ.
ಇತ್ತ ರಂಗಸ್ಥಳದಲ್ಲಿ ಭಾಗವತ ಬೊಳುಬೈಲು ಸುಬ್ಬಣ್ಣ ಭಟ್ರು ಭಾಮಿನಿ ಷಟ್ಪದಿಯಲ್ಲಿ
ಅತ್ತು ಫಲವೇನಿನ್ನು ಸುಮ್ಮನೇ ಸತ್ತವರು ಜೀವಿಪರೇ ಮರ್ಥನಾಗಿಹ
ತರಳ ಮಹಿಷಾಸುರಗೆ ಹದನಗಳ ಬಿತ್ತರಿಸಿ ಹದನಗಳ ಸುಮನಸ
ಮೊತ್ತವನು ಸದೆಬಡಿದು ನಾಕವ ಅರ್ತಿಯಲಿ ವಶಗೈವೆನೆನುತಲೆ ಕರೆದಳಾ ಮಗನ ೧
ಮಹಿಷಾಸುರನ ತಂದೆ ವಿದ್ಯುನ್ಮಾಲಿ ಬ್ರಹ್ಮನಿಂದ ವದಿಸಲ್ಪಟ್ಟು ಶೋಕತಪ್ತಳಾದ ತಾಯಿ ಮಾಲಿನಿ ಮಗ ಮಹಿಷಾಸುರನನ್ನು ಕರೆಯುವ ಪದ್ಯವನ್ನು ಹಾಡಿದರು. ತಾಯಿ ಮಾಲಿನಿ ಮಹಿಷಾ… ಬಾ… ಬಾ… ಮಹಿಷಾ… ಎಂದು ಹಲವು ಬಾರಿ ಕರೆದರೂ ಮಹಿಷಾಸುರ ಬರಲಿಲ್ಲ. ಮಗನೇ ಬಾ… ನಿನ್ನ ತಂದೆಯನ್ನು ಕೊಂದವರನ್ನು ವದಿಸಿ, ನನ್ನ ಮನಸ್ಸಿಗೆ ನೆಮ್ಮದಿಯನ್ನು ನೀಡು… ಎಲಿದ್ದೀಯಾ ಮಹಿಷಾ… ಬಾ… ಭಾಗವತರು ಪದ್ಯವನ್ನು ಮತ್ತೆ ಮತ್ತೆ ಹಾಡಿದರು. ಆದರೂ ಮಹಿಷಾಸುರ ಬರಲಿಲ್ಲ. ಎಲ್ಲರೂ ಹುಡುಕಾಡಿದರು. ದಿನೇಶನೂ ಇಲ್ಲ! ಮಹಿಷಾಸುರನೂ ಇಲ್ಲ! ಚೌಕಿಯಲ್ಲಿ ನೋಡಿದರು… ಇಲ್ಲ. ಸುತ್ತಮುತ್ತ ಎಲ್ಲಿ ಹುಡುಕಿದರೂ ಮಹಿಷಾಸುರ ಇಲ್ಲ! ಏನೂ ತೋಚದೆ ಹಾಗೇ ಮುಂದುವರಿಸಿ ಕಡೆಗೆ ದೇವಿ ಪಾತ್ರದ ಸುಹಾಸಿನಿಯ ಮಾತಿನಲ್ಲೇ ಮಹಿಷಾಸುರನನ್ನು ವದಿಸಿದೆನೆಂದು ಹೇಳಿಸಿದಾಗ ಪ್ರೇಕ್ಷಕರ ನಡುವೆ ಗುಜು ಗುಜು ಆರಂಭವಾಯಿತು. ಮಹಿಷಾಸುರನ ಪ್ರವೇಶವನ್ನು ಕಾತರದಿಂದ ಕಾಯುತ್ತಿದ್ದವರಿಗೆ ನಿರಾಶೆಯಾಯಿತು. ಸಂಘಟಕರು ಮೈಕ್‌ನಲ್ಲಿ ಮಹಿಷಾಸುರ ಪಾತ್ರದ ಭಜನೆ ದಿನೇಶನವರು ಎಲ್ಲಿ ಹೋದರೆಂದು ಯಾರಿಗೂ ತಿಳಿದಿಲ್ಲ. ಪ್ರಸಂಗವನ್ನು ಹೀಗೆ ಮುಂದುವರಿಸುತ್ತಿರುವುದಕ್ಕೆ ಕಲಾಬಿಮಾನಿಗಳು ದಯವಿಟ್ಟು ಕ್ಷಮಿಸಿ ಸಹಕರಿಸಬೇಕು ಎಂದು ವಿನಂತಿಸಿಕೊಂಡರು. ಹೀಂಗಾದರೆ ಯಾರಿಗಾರೂ ದೇವಿ ಶಾಪ ತಟ್ಟದಿರಿಕ್ಕಿಲ್ಲೆ ಎಂದು ಅಲ್ಲೇ ಇದ್ದ ಬೊಳಿಯಾರ್ ಗಂಗಣ್ಣ ಹೇಳಿದಾಗ ಖಂಡಿತ…ಅ ಎಂದು ಕೆಲವರು ತಲೆದೂಗಿದರು. ಬೆಳಗಾಗುತ್ತಿದ್ದಂತೆ ಅದೆಂತೋ ಕತೆಯನ್ನು ಮುಗಿಸಿ ಮಂಗಳಾರತಿ ಹಾಡಿದರು.

ಬೆಳಗಾಗುತ್ತಿದ್ದಂತೆ ದಿನೇಶ ತಾನೆಲ್ಲಿದ್ದೇನೆಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸತೊಡಗಿದ. ಕತ್ತಲು ಸರಿಯುತ್ತಿದ್ದಂತೆ ತಾನಿರುವ ಜಾಗ ಯಾವುದೆಂದು ದಿನೇಶನಿಗೆ ನಿಧಾನಕ್ಕೆ ಗೊತ್ತಾಗತೊಡಗಿತು. ಓ… ಇದ್ ಓಡಬಾ… ನಾ ಹೇಂಗೆ ಇಲ್ಲಿಗೆ ಬಂದದ್‌ಲು ದಿನೇಶ ಗೊಂದಲಗೊಂಡ. ಆಟಕ್ಕೆ ಹೋದ ಕೆಲವರು ಹಿಂತಿರುಗಿ ಬರುತ್ತಿದ್ದರು. ದಿನೇಶನಿಗೆ ಈಗ ಸ್ವಲ್ಪ ಸ್ವಲ್ಪವೇ ಅರಿವಾಗತೊಡಗಿತು. ಗಾಡಿಯಲ್ಲಿ ಮಲಗಿದ್ದು… ನಿದ್ದೆ ಹೋದದ್ದು… ಎಲ್ಲವೂ! ದಿನೇಶ ಅಲಿಯಾಸ್ ಮಹಿಷಾಸುರ ನಿಧಾನಕ್ಕೆ ಊರಿನ ಕಡೆಗೆ ನಡೆದ. ಆಟ ನೋಡಿ ಹಿಂತಿರುಗುತ್ತಿದ್ದ ಕೆಲವರು ದಾರಿಯಲ್ಲಿ ಮಹಿಷಾಸುರನನ್ನು ಕಂಡು ಸಂಶಯ, ಆಶ್ಚರ್ಯದಿಂದ ಬದಿಗೆ ಸರಿದು ಕಣ್ಣರಳಿಸಿ ತಿರುಗಿ ತಿರುಗಿ ನೋಡುತ್ತಾ ಹೋದರು. ಕೆಲವರು ಪಕ ಪಕ ನಗತೊಡಗಿದರು. ಮಹಿಷಾಸುರ ನಡೆಯುತ್ತಾ ಊರು ತಲುಪಿ ಎಲ್ಲರಿಗೂ ವಿಷಯ ಅರ್ಥವಾದಾಗ ನಗಲೂ ಆಗದೆ ದಿನೇಶನನ್ನು ಬೈಯಲೂ ಆಗದೆ ವಿಚಿತ್ರ ಸಂಕಟ ಅನುಭವಿಸಿದರು.
ಇದೆಲ್ಲಾ ನಡೆದ ಮೇಲೆ ದಿನೇಶ ಮಂಕುಹಿಡಿದಂತಾದ. ಯಾರು ಏನು ಕೇಳಿದರೂ ಸರಿಯಾದ ಉತ್ತರವಿಲ್ಲ. ಯಾರೊಡನೆಯೂ ಮಾತೂ ಇಲ್ಲ, ಏನೂ ಇಲ್ಲ. ದಿನೇಶನ ಅಮ್ಮನಿಗೆ ಚಿಂತೆ ಶುರುವಾಯಿತು. ಕಲಿಯಲು ದಡ್ಡನಾಗಿದ್ದರೂ ಇತರ ಕೆಲಸಗಳಲ್ಲಿ ಚುರುಕಾಗಿದ್ದ ದಿನೇಶನಿಗೆ ಏನಾಯಿತೆಂದು ಆಕೆ ಹಗಲು ರಾತ್ರಿ ಯೋಚಿಸುವಂತಾಯಿತು. ದಿನೇಶನ ಅಪ್ಪನಲ್ಲಿ ಹೇಳಿದರೆ, ಅವಂಗೆ ಮೊರ್ಲು ಮಾರಾಯ್ತಿ… ಕೆಲ್ಸ ಮಾಡಿಕೆ ಉದಾಶೀನ… ಅದಿಕ್ಕೆ ಹೀಂಗೆ ಮಾಡ್ದು… ಅಂವ ಮೈಶಾಸುರ, ಅಂದರೆ… ಕೋಣ ಗೋತ್ತಾತೋ…ಲು ಎಂದು ವ್ಯಂಗ್ಯವಾಡುತ್ತಿದ್ದರು. ಯಾರು ಏನು ಬೈದರೂ, ತಮಾಷೆ ಮಾಡಿದರೂ ಸಹಿಸಬಲ್ಲ ದಿನೇಶ ಬಹಳ ಸಮಯದಿಂದ ಕಟ್ಟಿಕೊಂಡ ಒಳ್ಳೆಯ ಕಲಾವಿದನಾಗಬೇಕೆಂಬ ಕನಸು ನನಸಾಗಲಿಲ್ಲ. ನನಸಾಗದಿದ್ದರೂ ತೊಂದರೆಯಿರಲಿಲ್ಲ; ಕನಸೇ ಭಗ್ನಗೊಂಡಿತ್ತು. ರಂಗಸ್ಥಳಕ್ಕೆ ಬಂದು ಅಬಿನಯಿಸಿ ವೇಷ ಸಾಧಾರಣ ಎಂದಾಗಿದ್ದರೂ ಸಾಕಾಗಿತ್ತು. ಆದರೆ ತಾನು ರಂಗಸ್ಥಳಕ್ಕೇ ಬಾರದಂತಹ ನಾಚಿಕೆಗೇಡಿನ ಪರಿಸ್ಥಿತಿ ಉಂಟಾದುದು ದಿನೇಶನಿಗೆ ಅತೀವ ದುಃಖವನ್ನು, ಕೀಳರಿಮೆಯನ್ನು, ಜಿಗುಪ್ಸೆಯನ್ನು, ನಿರಾಶೆಯನ್ನು ಏಕಕಾಲದಲ್ಲಿ ಉಂಟುಮಾಡಿತ್ತು. ಅಪ್ಪ ಹೇಳುತ್ತಿದ್ದಂತೆ ತಾನು ಯಾ&ಂgಡಿಚಿve;ದಕ್ಕೂ ಆಗದವನು ಎಂದು ಎಲ್ಲರೂ ತಿಳಿಯುವಂತಾಯಿತಲ್ಲ! ಏನಾದರೂ ತಾಪತ್ರಯದ ಕಷ್ಟದ ಕೆಲಸಗಳಿದ್ದರೆ ತನ್ನನ್ನೇ ಹುಡುಕಿಕೊಂಡು ಬರುವ ಎಲ್ಲರೂ ಈಗ ತನ್ನನ್ನು ನೋಡಿ ಮಾತಿಗೆ ಮೊದಲೇ ನಗುವುದರಿಂದ ಯಾರೊಂದಿಗೂ ಮಾತಾಡಲು ಇಷ್ಟವಾಗುವುದಿಲ್ಲ. ಮನೆಯಿಂದ ಹೊರಗೆ ಬಂದರೆ ಎಲ್ಲರೂ ತನ್ನನ್ನು ವಿದೂಷಕನಂತೆ ಕಾಣುತ್ತಾರಲ್ಲಾ ಎಂದು ಬೇಸರದಿಂದ ತೋಟಕ್ಕೆ ಹೋಗಿ ಕಂಗಿನ ಬುಡದಲ್ಲಿ ಕುಬೆ ನೋಡುತ್ತಾ ಕುಳಿತ್ತಿರುತ್ತಾನೆ. ಇಲ್ಲದಿದ್ದರೆ ಪಂಪ್‌ಶೆಡ್ಡಿನ ಬದಿಯ ಕಲ್ಲಿನ ಮೇಲೆ ಕುಳಿತು ಕೆರೆಯ ನಿಶ್ಚಲ ನೀರಿನಲ್ಲಿ ಕಪ್ಪೆಗಳು ಮುಳುಗೇಳುವುದನ್ನೇ ಧ್ಯಾನಸ್ತನಂತೆ ದಿಟ್ಟಿಸುತ್ತಿರುತ್ತಾನೆ. ಕೆಲವೊಮ್ಮೆ ಗುಡ್ಡೆಗೆ ಹೋಗಿ ಮುಡ್ಕಣೆ ಹಾಕಿ ಯಾವುದಾದರೂ ಹಕ್ಕಿ ಸಿಕ್ಕಿಕೊಳ್ಳುತ್ತದೋ ಎಂದು ದಡ್ಡಲ್ ಮರದ ಬುಡದ ತಂಪಾದ ನೆರಳಿನಲ್ಲಿ ಮಳಂಕಣಿ ಮಲಗಿ ಗಾಳಿಗೆ ಅಲ್ಲಾಡುವ ಎಲೆ, ಗೆಲ್ಲುಗಳ ಎಡೆಯಲ್ಲಿ ಆಗಾಗ ಕಾಣುವ ಬಾನನ್ನು ನೋಡುತ್ತಾ ಇರುತ್ತಾನೆ. ಮಹಿಷಾಸುರನ ಪಾತ್ರವನ್ನು ಅದ್ಭುತವಾಗಿ ಮಾಡಿ, ಚಪ್ಪಾಳೆ ಗಿಟ್ಟಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಬೇಕೆಂದು ಬಹಳ ಆಸೆಯಿಂದಿದ್ದ ದಿನೇಶನ ಎಲ್ಲಾ ಯೋಜನೆ ತಲೆಕೆಳಗಾಗಿತ್ತು. ನಾ ನಿದ್ದೆ ಮಾಡ್ರೂ… ಯಾರಾರ್ ಎಬ್‌ಸಾಕಾಯ್ತಲ್ಲಾ ಈ ಆಟಕ್ಕೆ ನಾ ಎಷ್ಟ್ ಗೈದೊಳೆ! ಎಲ್ಲವೂ ಮೋಸ…ಅ ಯಾರ್‍ನೂ ನಂಬಿಕೆ ಬೊತ್ತ್..ಅ ಎಂದು ಜಿಗುಪ್ಸೆಯಿಂದ ಯಾರಲ್ಲೂ ಮಾತಾಡುತ್ತಿರಲಿಲ್ಲ. ಎಲ್ಲರೂ ಮೈಶಾಸುರ, ಮೈಶಾಸುರು ಎಂದು ಗೇಲಿ ಮಾಡುವಾಗ ಅಪ್ಪ ಕೋಣ… ಕೋಣ… ಎಂದು ಹೀಯಾಳಿಸದಂತಾಗುತ್ತಿತ್ತು. ದಿನೇಶಂಗೆ ಕುಂಭಕರ್ಣನ ವೇಸ ಪಸ್ಟ್ ಎಂದು ಹುಡುಗರು ತಮಾಷೆ ಮಾಡುವಾಗ ಅಸಾಧ್ಯ ಸಿಟ್ಟು ಬರುತಿತ್ತು. ಆದರೆ ತನ್ನದೇ ತಪು ಎಂಬ ಕೀಳರಿಮೆಯಿಂದ ಏನೂ ಹೇಳದೆ ಸುಮ್ಮಗೆ ಇರುತ್ತಿದ್ದ.
ಅಂಗಡಿ ಬಳಿ ಈಗ ದಿನೇಶ ಕಾಣಸಿಗುವುದೇ ಇಲ್ಲ. ಹಂದಿ ಬೇಟೆಗೋ, ರಾತ್ರಿ ಗದ್ದೆಗೆ ಬರುವ ಹಂದಿಗೆ ಕೋವಿ ಕಟ್ಟಲಿಕ್ಕೋ ತೋಟಕ್ಕೆ ನುಗ್ಗುವ ಕಾಟಿ, ಆನೆಗಳನ್ನು ಹೆದರಿಸಿ ಓಡಿಸಲೋ, ನೀರು ಬಿಡುವ ಪಂಪಿನ ಸಣ್ಣ ಪುಟ್ಟ ರೀಪೇರಿಗೋ, ಗದ್ದೆ ಹೂಡುವಾಗ ನೊಗ ತಪ್ಪಿಸಿ ಸರಿಯಾಗಿ ನಿಲ್ಲದ ಎತ್ತುಗಳನ್ನು ಪಳಗಿಸಲೋ, ಇನ್ನಾವುದಕ್ಕೋ ಬೇಕಾದರೆ ದಿನೇಶನನ್ನು ಹುಡುಕಿಕೊಂಡು ಎಲ್ಲರೂ ಮನೆಗೇ ಬರಬೇಕಾಗುತ್ತದೆ. ದಿನೇಶ ಯಾರು ಯಾವುದಕ್ಕೇ ಕರೆದರೂ ಈಗ ಹೋಗುತ್ತಿರಲಿಲ್ಲ. ಸುಮ್ಮನೆ ಏನಾದರೂ ನೆಪವೊಡ್ಡಿ ಗುಡ್ಡೆಗೆ ಹೋಗಿ ಮುಡ್ಕಣೆ ಹಾಕಿ ಕುಳಿತುಕೊಳ್ಳುತ್ತಿದ್ದ. ಆದರೆ ಯಾರಾದರೂ ಭಜನೆಗೆ ಕರೆದರೆ ಮಾತ್ರ ಯಾಗ ಎಲ್ಲಿಲು ಎಂದು ವಿಚಾರಿಸಿ ನೋಡೋಮೊ ಎನ್ನುತ್ತಿದ್ದ. ಆದರೆ ಭಜನೆಗೆ ಹೋಗದೇ ಎಲ್ಲೋ ತೋಟದಲ್ಲೋ, ಗುಡ್ಡೆಯಲ್ಲೋ ದಿನ ಕಳೆಯುತ್ತಿದ್ದ. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಅಮ್ಮನೇ ಹುಡುಕಿಕೊಂಡು ತೋಟಕ್ಕೆ ಹೋಗುವುದೂ ಇದೆ. ದಿನೇಶ ಈ ಬಗೆಯಲ್ಲಿ ಬದಲಾದದ್ದು ನೋಡಿ ಶೇಷಪ್ಪ ಗೌಡರಿಗೆ ಆಶ್ಚರ್ಯವಾಗಿತ್ತು! ದಿನಾ ಏನಾದರೊಂದು ಊರವರ ತಾಪತ್ರಯಗಳನ್ನು ಹಚ್ಚಿಕೊಂಡು ಪರದಾಡುವ ದಿನೇಶ ಇದ್ದಕ್ಕಿದ್ದಂತೆ ಎಲ್ಲ ಮರೆತವನಂತೆ ಇರುವುದು ಕಂಡು ಕೊಂಚ ಚಿಂತೆಗೀಡಾದರು. ದಿನೇಶ ಊಟ ಮಾಡ್ತ್‌ಲ್ಲೇನೆ…ಲು ಎಲ್ಲಿ ಹೋವುಟ್ಟು… ದಿನೇಶಲು ಎಂದು ಹೆಂಡತಿಯಲ್ಲಿ ವಿಚಾರಿಸುವಷ್ಟು ಮೃದುವಾಗಿದ್ದರು.

ಸುಹಾಸಿನಿ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದಳು. ಗೆಳತಿಯರೆಲ್ಲ ತಮಾಷೆಗೆ ಸುಹಾಸಿನಿ ದೇವಿಯೆಂದೇ ಕರೆಯುತ್ತಿದ್ದರು. ಸುಹಾಸಿನಿ ಇತ್ತೀಚೆಗೆ ಏನೋ ಯೋಚಿಸುತ್ತಾ ಸುಮ್ಮನೆ ಕುಳಿತಿರುತ್ತಾಳೆ. ಕೆಲವೊಮ್ಮೆ ಕೆದರಿದ ಕೂದಲನ್ನೂ ಕಟ್ಟಿಕೊಳ್ಳಲು ನೆನಪಾಗದೆ ಎತ್ತಲೋ ದೃಷ್ಟಿನೆಟ್ಟು ಕುಳಿತವಳಿಗೆ ಯಾರಾದರೂ ಕರೆದಾಗಲೇ ಎಚ್ಚರವಾಗುವುದು. ಒಮ್ಮೊಮ್ಮೆ ಸುಮ್ಮನೆ ಕುಳಿತವಳು ಏನೂ ಆಗದಿದ್ದರೂ ಮೈಮೇಲೆ ಹಲ್ಲಿ ಬಿದ್ದವಳಂತೆ ಒಮ್ಮೆಗೆ ಬೆಚ್ಚಿ ಬೀಳುತ್ತಿದ್ದಳು. ಏನಾತ್ ನಿಂಗೆಲು ಎಂದು ಅಮ್ಮ ಕೇಳಿದರೆ ಊಂ… ಏನೂ ಇಲ್ಲೆ… ಎಂದು ಮತ್ತೆ ಮೇಲೆ ನೋಡುತ್ತಾ ಕುಳಿತ್ತಿರುತ್ತಿದ್ದಳು. ದಿನ ಇಡೀ.. ದೆವ್ವ ಹಿಡ್ದವರ್‍ಹಾಂಗೆ ಎಂತಕೆನೆ ಕುದ್ರುದು…ಲು ಎಂದು ಅಪ್ಪ ಆಗಾಗ ಆಕ್ಷೇಪಿಸಿದರೂ ಒಳಗೊಳಗೇ ಸಣ್ಣಗೆ ಕಳವಳ ಪಡುತ್ತಿದ್ದರು.
ಸುಹಾಸಿನಿಗೆ ಕಾಲೇಜಿನಲ್ಲಿ ಲೆಕ್ಚರ್ ಶಂಕರ್ ನಾಯಕ್‌ನೊಂದಿಗೆ ಗೆಳೆತನವಿರುವುದರ ಸಣ್ಣ ಸೂಚನೆ ಚೆನ್ನಪ್ಪ ಗೌಡರಿಗೆ ಸಿಕ್ಕಿ ತಲೆಬೇನೆ ಶುರುವಾಗಿತ್ತು. ಆದಷ್ಟು ಬೇಗನೆ ಸುಹಾಸಿನಿಯ ಮದುವೆ ಮಾಡುವ ಯೋಚನೆಯಲ್ಲಿದ್ದರು. ಗುಂಡ್ಯಡ್ಕ ಶೇಷಪ್ಪ ಗೌಡರ ಮಗ ನಾರಾಯಣ ಹೈಸ್ಕೂಲ್ ಉಪಾಧ್ಯಾಯನಾಗಿದ್ದು, ತಮ್ಮ ಹೆಮ್ಮನ ಬಳಿಗೂ ಶೇಷಪ್ಪ ಗೌಡರ ಬಂಗಾರ್ ಬಳಿಗೂ ಸರಿಹೊಂದುವುದರಿಂದ ಸುಹಾಸಿನಿಯನ್ನು ನಾರಾಯಣನಿಗೆ ಮದುವೆ ಮಾಡಿ ಕೊಡಲು ಚೆನ್ನಪ್ಪಗೌಡರು ಮೊದಲೇ ಯೋಚಿಸಿದ್ದರು. ಬಹಳ ಹಿಂದಿನಿಂದಲೇ ಗೊತ್ತಿರುವ ಒಳ್ಳೆ ಕುಳ, ಹತ್ತು ಹದಿನೈದು ಖಂಡಿ ಅಡಿಕೆ ಆಗುತ್ತದೆ, ರಬ್ಬರ್, ಬೀಜದಕೊಚ್ಚಿ, ಚಾಳೆ ಕೊಪ್ಪಳ, ಗದ್ದೆ ಬೇಸಾಯ ಎಲ್ಲಾ ಇದೆ; ಊರಲ್ಲೇ ಕೆಲಸ, ಮತ್ತೇನು ಬೇಕು ಆದರೆ ಸುಹಾಸಿನಿಯ ಅಮ್ಮ ಇಂದನಿ..; ಈ ಗೂಡೆಗೆ ಎಂತಾವುಟ್ಟೂಂತ… ಸುಮ್ಮ ಸುಮ್ಮಂಗೆ ಹನ್‌ಕಿ ಬೀಳ್ದು…ಅ ಎಂದು ಆತಂಕ ವ್ಯಕ್ತಪಡಿಸಿದ ಮೇಲೆ ಚೆನ್ನಪ್ಪ ಗೌಡರ ಓಡಾಟ, ಪರದಾಟ ಹೆಚ್ಚಾಗಿತ್ತು. ಗುಂಡ್ಯಡ್ಕ ಶೇಷಪ್ಪ ಗೌಡರು ಗೊತ್ತಿರುವವರೇ ಆದರೂ ಗೂಡೆ ನೋಡುವುದು, ಹೈದನ ಮನೆ ನೋಡುವುದು, ನೆಂಟರು ಬರುವ ಹೋಗುವ ಕ್ರಮ ಎಲ್ಲ ಆಗಬೇಕಲ್ಲ. ತಮ್ಮ ಕುಟುಂಬದ ಊರುಗೌಡರಾದ ಜೋತಿಷ್ಯ ಹೇಳುವ ಬೊಳಿಯಾರ್ ಗಂಗಣ್ಣನ ಮೂಲಕ ಪ್ರಸ್ತಾಪ ಕಳಿಸಿದರು. ಎಲ್ಲಾ… ಆದು ಅಲ್ಲೆ…ಅ ಆದರೆ… ಗೂಡೆಗೆ ಆಟ, ನಾಟಕಾಂತ.. ಒಸಿ ಮೊರ್ಲು ಉಟ್ಟಲ್ಲೆ…ಅಲು ಎಂದು ಶೇಷಪ್ಪ ಗೌಡರು ಬಾಯಲ್ಲಿದ್ದ ಎಲೆ ಅಡಿಕೆ ರಸ ಹೊರ ಚಿಮ್ಮದಂತೆ ಮುಖ ಮೇಲೆ ಮಾಡಿ ಕೆಳ ದವಡೆಯನ್ನು ಮುಂದಕ್ಕೆ ತಂದು ತಮ್ಮ ಅನುಮಾನದ ಸೂಕ್ಷ್ಮ ಕಾರಣ ಬಿಚ್ಚಿದರು. ಆದರೆ ಎಂಥವರನ್ನೂ ತನ್ನ ಮಾತಿನ ಜಾಲದಲ್ಲಿ ಸಿಕ್ಕಿಸಿ ಒಪುವಂತೆ ಮಾಡಬಲ್ಲ ಬೊಳಿಯಾರ್ ಗಂಗಣ್ಣನ ಜಾಣ್ಮೆಯಿಂದಾಗಿ ಶೇಷಪ್ಪ ಗೌಡರು ಕೊ&ಇಚಿಛಿuಣe;ಗಂತೂ ಪ್ರಸ್ತಾಪಕ್ಕೆ ಒಪ್ಪಿದರು. ಕೂಡಲೆ ಶೇಷಪ್ಪ ಗೌಡರ ಕಡೆಯಿಂದ ನೆಂಟರಿಷ್ಟರು ಬರುವುದು, ಚೆನ್ನಪ್ಪಗೌಡರ ಕಡೆಯಿಂದ ಹೋಗುವುದೂ, ಎಲ್ಲ ಗಡಿಬಿಡಿಯಲ್ಲೇ ಆಗಿ ವೀಳ್ಯಶಾಸ್ತ್ರಕ್ಕೆ ದಿನವೂ ನಿಗದಿಯಾಯಿತು.

ಆ ದಿನ ಸುಹಾಸಿನಿಯ ಮದುವೆ ವೀಳ್ಯಶಾಸ್ತ್ರ. ಗುಂಡ್ಯಡ್ಕ ಶೇಷಪ್ಪ ಗೌಡರು, ನಾರಾಯಣ, ಗಂಗಮ್ಮ, ಸೋದರ ಮಾವ ಕೂಟೇಲ್ ಲಿಂಗಪ್ಪಗೌಡರು, ಶೇಷಪ್ಪಗೌಡರ ಕಡೆಯ ಊರುಗೌಡರಾದ ನೀರ್ಕಜೆ ಸಾಂತಪ್ಪಗೌಡರು ಮತ್ತು ನೆಂಟರು ಎಲ್ಲಾ ಬಂದಿದ್ದರು. ಗಂಗಮ್ಮನವರ ಒತ್ತಾಯಕ್ಕೆ ದಿನೇಶನೂ ಬಂದಿದ್ದ. ಕಾಯರಡಿ ಚೆನ್ನಪ್ಪ ಗೌಡರ ಮನೆಯಲ್ಲಿ ಸಡಗರವೋ ಸಡಗರ. ನೆಂಟರಿಷ್ಟರೆಲ್ಲ ಬಂದಿದ್ದರು. ಅಡಿಗೆ ಕೋಣೆಯಿಂದ ಹೊರಟ ಪದ್ಂಜಿ ಪಾಯಸ, ಕೋಳಿಗೈಪಿನ ಪರಿಮಳ ಎಲ್ಲ ಕಡೆ ಹರಡಿ ಅಹ್ಲಾದಕರ ವಾತಾವರಣವುಂಟಾಗಿತ್ತು. ಕನ್ನೆಗಂಬದ ಅಡಿಯಲ್ಲಿ ಕೊಡಿ ಬಾಳೆಲೆಯಲ್ಲಿ ಅಕ್ಕಿ ತೆಂಗಿನಕಾಯಿ ಇಟ್ಟು ದೀಪ ಹಚ್ಚಿ ಗುರು ಕಾರ್ನೂರಿಗೆ ಕೈ ಮುಗಿದ ಮೇಲೆ ಚಾವಡಿಯಲ್ಲಿ ಇನ್ನೊಂದು ಕೊಡಿ ಬಾಳೆಲೆಯಲ್ಲಿ ಸೇರು ಬೆಳ್ತಿಗೆ ಅಕ್ಕಿಯ ಮೇಲೊಂದು ತೆಂಗಿನಕಾಯಿ, ಐದು ವೀಳ್ಯದೆಲೆಯ ಮೇಲೆ ಒಂದಡಿಕೆ ಇಟ್ಟು ಮಧ್ಯದಲ್ಲಿ ಕಾಲುದೀಪ ಉರಿಸಿ ಇನ್ನೊಂದು ತುಂಡು ಬಾಳೆಲೆಯಲ್ಲಿ ಗಂಧ ಪ್ರಸಾದ ಇರಿಸಿ ಸುತ್ತಲೂ ಚೌಕಾಕಾರವಾಗಿ ಹಾಸಿದ ಒಲಿ ಚಾಪೆಯಲ್ಲಿ ಎಲ್ಲರೂ ಕುಳಿತರು. ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರು ಪೂರ್ವ ಪಶ್ಚಿಮಕ್ಕೆ ಸರಿಯಾಗುವಂತೆ ಎದುರುಬದುರಾಗಿ ಕುಳಿತರು. ಉಳಿದವರು ಉತ್ತರ ದಕ್ಷಿಣಕ್ಕಾಗುವಂತೆ ಚಾಪೆಗಳಲ್ಲಿ ಎದುರುಬದುರಾಗಿ ಕುಳಿತರು. ಕಾಲುದೀಪಕ್ಕೆ ನಾಲ್ಕು ಅಕ್ಕಿ ಹಾಕಿ ನೆಲ, ಹಣೆ ಮುಟ್ಟಿ ಕೈಮುಗಿದ ಹುಡುಗನ ಕಡೆಯ ಊರುಗೌಡರಾದ ನೀರ್ಕಜೆ ಸಾಂತಪ್ಪಗೌಡರು ಮತ್ತು ಹುಡುಗಿ ಕಡೆಯ ಊರುಗೌಡರಾದ ಬೊಳಿಯಾರ್ ಗಂಗಣ್ಣ ಹೇಂಗೆ… ಇನ್ನ್ ಸುರು ಮಾಡಕ್ಕಲ್ಲ…ಲು ಎಂದು ಒಮ್ಮೆ ಸುತ್ತಲೂ ನೋಡಿ ಹತ್ತು ಕುಟುಂಬ ಹದಿನೆಂಟು ಗೋತ್ರ ಬಂಧು ಬಾಂಧವರೆಲ್ಲಾ ಸೇರಿ… ಇಂದ್ ಇಲ್ಲಿ ಗುರು ಕಾರ್ನೂರಿಗೆ ಇಸಿ… ಸುರುಮಾಡುವ ಶುಭಕಾರ್ಯ ಏನ್ಂತ ಹೇಳ್ರೆ… ಹೆಮ್ಮನ ಬಳಿಯ ಕಾಯರಡಿ ಮನೆ ಚೆನ್ನಪ್ಪಗೌಡ್ರ ಮೊಗುಳು ಸುಹಾಸಿನಿ ಗೂಡೆಗೂ… ಬಂಗಾರ್ ಬಳಿಯ ಗುಂಡ್ಯಡ್ಕ ಮನೆ ಶೇಷಪ್ಪಗೌಡರ ಮೊಂಙ ನಾರಾಯಣ ಹೈದಂಗೂ… ಮೊದುವೆ ಮಾಡ್ದೂಂತ… ಗುರು ಹಿರಿಯರಿದ್ದ್ ನಿಗಂಟ್ ಮಾಡ್ದ ವೀಳ್ಯ ಶಾಸ್ತ್ರಕ್ಕೆ ವೀಳ್ಯ ಎತ್ತುವೇಂತ ಹೇಳುವೇ… ಎಂದು ಒಂದೇ ಸ್ವರದಲ್ಲಿ ಹರಿವಾಣದಲ್ಲಿಟ್ಟ ಐದು ಕವಳಿಗೆ ವೀಳ್ಯದೆಲೆ ಐದಡಿಕೆಯನ್ನು ಎರಡು ಕೈಗಳಲ್ಲಿ ಎತ್ತಿ ಹಿಡಿದು ಗಟ್ಟಿಯಾಗಿ ಘೂಷಿಸಿದಾಗ ಎರಡೂ ಕಡೆಯವರು ದೇವರಪ್ಪಣೇಂತ ಹೇಳುವೇ… ಎಂದು ಒಕ್ಕೊರಲಿನಲ್ಲಿ ಒಪ್ಪಿಗೆ ಸೂಚಿಸಿದರು. ವೀಳ್ಯಶಾಸ್ತ್ರಕ್ಕೆ ಎಲ್ಲರ ಒಪ್ಪಿಗೆ ಪಡೆದ ಮೇಲೆ ಕಟ್ಟಲಿರುವ ಹನ್ನೆರಡು ವಿಧದ ವೀಳ್ಯದಲ್ಲಿ ಮೊದಲಿಗೆ ಹೆಣ್ಣು ಮಾತಾಡಿಸುವ ವೀಳ್ಯಕ್ಕೆ ಐದು ಕವಳಿಗೆ ವೀಳ್ಯ ಮತ್ತು ಐದಡಿಕೆ ಹರಿವಾಣದಲ್ಲಿಟ್ಟು ಶೇಷಪ್ಪಗೌಡರ ಕೈಯಲ್ಲಿ ಎತ್ತಿ ಹಿಡಿಸಿ ಊರುಗೌಡ ನೀರ್ಕಜೆ ಸಾಂತಪ್ಪಗೌಡರು ಹತ್ತು ಕುಟುಂಬ ಹದಿನೆಂಟು ಗೋತ್ರ ಬಂಧು ಬಾಂಧವರೆಲ್ಲ ಸೇರಿ… ಹೆಮ್ಮನ ಬಳಿಯ ಕಾಯರಡಿ ಮನೆ ಸುಹಾಸಿನೀಂತ ಹೇಳುವ ಗೂಡೆಗೂ… ಬಂಗಾರ್ ಬಳಿಯ ಗುಂಡ್ಯಡ್ಕ ಮನೆ ನಾರಾಯಣಾಂತ ಹೇಳುವ ಹೈದಂಗೂ… ಮೊದುವೆ ವಿಚಾರಲಿ… ಹೆಣ್ಣ್ ಮಾತಾಡ್ಸುವ ವೀಳ್ಯ ಕಟ್ಟುವೇಂತ ಹೇಳುವೇ… ಎಂದು ಹೇಳಿದಾಗ ಸಭೆಸರ್ವರೂ ಒಳ್ಳೇದ್ಂತ ಹೇಳುವೇ… ಎಂದು ಒಟ್ಟಿಗೆ ಸಮ್ಮತಿಸಿದರು. ಹೆಗಲಲ್ಲಿದ್ದ ಶಾಲನ್ನು ಮುಂದಕ್ಕೊಡ್ಡಿ ಬಗ್ಗಿ ಚೆನ್ನಪ್ಪಗೌಡರು ವೀಳ್ಯವನ್ನು ಸ್ವೀಕರಿಸಿ ದೀಪಕ್ಕೆ ಕೈಮುಗಿದರು.

ಹೀಗೆ ಬಳಿ ನಿರ್ಣಯದ ವೀಳ್ಯ, ಹೆಣ್ಣು ಒಪ್ಪಿಕೊಳ್ಳುವ ವೀಳ್ಯ, ಲಗ್ನ ನಿಶ್ಚಯದ ವೀಳ್ಯ, ದೇವರ ವೀಳ್ಯ ಕಟ್ಟಿ ಹಿರಿಯರ ವೀಳ್ಯ ಕಟ್ಟುವ ಗೌಜಿ ಗದ್ದಲದ ಖುಷಿಯಲ್ಲಿದ್ದಾಗಲೇ ತಿಳಿಹಸಿರಿನ ಸೀರೆಯುಟ್ಟು, ಎರಡೆಳೆ ಚಕ್ರಸರ, ಒಂದು ಪೆಂಡೆಂಟ್ ಚೈನ್, ಕಿವಿಗೆ ಹವಳದ ಜುಮ್‌ಕಿ ಹಾಕಿ, ಜಡೆ ತುಂಬ ಮಲ್ಲಿಗೆ ಮುಡಿದ ಸುಹಾಸಿನಿ ತಲೆಸುತ್ತು ಬಂದು ಬಿದ್ದುಬಿಟ್ಟಳು! ಗಡ ಗಡ ನಡುಗತೊಡಗಿದಳು! ಎಲ್ಲರೂ ಗಾಬರಿಗೊಂಡು ಯಾರಾರ್ ಡಾಕ್ಟ್ರ ಕರ್‍ಕಂಡ್ ಬನ್ನಿ… ಎಂದರು. ಚೆನ್ನಪ್ಪ ಗೌಡರು ಹೆಂಡತಿಯೊಂದಿಗೆ ಸುಹಾಸಿನಿ ಬೊಳ್ಪಿಗೆ ಎಂತ ತಿಂದುಟ್ಟು…ಲು ಎಂದು ಕೇಳಿ, ಮತ್ತೆ ಕಿವಿಯ ಸಮೀಪ ಬಾಯಿ ತಂದು ಯಾರಿಗೂ ಕೇಳಿಸದಂತೆ ಮೆಲುದನಿಯಲ್ಲಿ ಕಕ್ಕುದು ಮಿನಿ ಇತ್ತಾ…ಲು ಎಂದು ಗುಟ್ಟಾಗಿ ವಿಚಾರಿಸಿದರು. ಉಮ್ಮ…ಅ ಎಂದ ಅವರು ತುಟಿ ಜಗ್ಗಿಸಿ ಮುಖ ತಿರುಗಿಸಿದರು. ಎಂತರ ಮಾಡ್ದು ಈಗ…ಲು ಎಂಬ ಚಿಂತೆಯಲ್ಲಿ ಸುಹಾಸಿನಿಯನ್ನು ಉಪಚರಿಸುವುದನ್ನೂ ಮರೆತು ಸುಮ್ಮಗೆ ನೋಡುತ್ತಾ ನಿಂತ ಗೌಡರು ಬೆವರುತ್ತಾ ಮರಗಟ್ಟಿ ಹೋದರು! ಮಕ್ಕಳ ಬಾಲಗ್ರಹಕ್ಕೆ, ಬಾಣಂತಿಯರಿಗೆ, ಕೊಲೆ, ಪೀಡೆ ಬಾಧೆಗೆ ನೂಲು, ಭಸ್ಮ ಮಂತ್ರಿಸಿಕೊಡುವ ಜೋತಿಷ್ಯ, ಮಂತ್ರ, ತಂತ್ರ, ತಿಳಿದಿರುವ ಊರುಗೌಡರಾದ ಬೊಳಿಯಾರ್ ಗಂಗಣ್ಣ ಬೇಡ! ಬೇಡ… ಡಾಕ್ಟ್ರ್ ಎಂತಕ್ಕೆ ಇದ್ ದೇವಿ…ಅ ಇದಿಕ್ಕೆ ದೇವಿ ದರ್ಸನ ಬಂದುಟ್ಟು… ಖಂಡಿತಾ ಇದ್ ಅದೇ… ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿದರು. ಎಲ್ಲರೂ ಭಯಾಶ್ಚರ್ಯದಿಂದ ಅವಾಕ್ಕಾಗಿ ನಿಂತರು. ಹೌದು… ನೋಡ್ರೆ ಲಕ್ಷಣ ಹಾಂಗೇ ಉಟ್ಟು…ಅ ದೇವಿನೇ ಇರೊಕು…ಅ ಸೇರಿದ ಹತ್ತಿರದ ನೆಂಟರಲ್ಲಿ ಕೆಲವರು ಸಂಶಯಿಸಿದರು. ಏನು ಕಂಡರೋ ಊರುಗೌಡ ಗಂಗಣ್ಣನವರೇ ಸುಹಾಸಿನಿಯ ಎದುರು ಕೈ ಮುಗಿದು ನಿಂತರು. ದೇವಿ! ಎಂತಕ್ಕೆ ಬಂದದ್ ನೀ….ಅ ಏನಾಕು ನಮ್ಮಂದ…ಲು ನಡುಬಗ್ಗಿಸಿ ಭಯಭಕ್ತಿಯಿಂದ ಕೇಳಿದರು. ಜೋತಿಷ್ಯ, ಮಂತ್ರ, ಭಸ್ಮ, ಎಲ್ಲ ತಿಳಿದಿರುವ ಗಂಗಣ್ಣನೇ ಕೈಮುಗಿದದ್ದು ನೋಡಿ ಅಲ್ಲಿದ್ದವರೆಲ್ಲಾ ತಮಗರಿವಿಲ್ಲದೇ ಕೈಜೋಡಿಸಿ ನಿಂತರು. ಚೆನ್ನಪ್ಪಗೌಡರಿಗೆ ಈ ಅನಿರೀಕ್ಷಿತ ಬೆಳವಣಿಗೆಯಿಂದ ಆಶ್ಚರ್ಯ ಆತಂಕವಾದರೂ ಸದ್ಯ ಡಾಕ್ಟ್ರ್ ಬರುವುದು ತಪ್ಪಿತಲ್ಲಾ ಎಂದು ಕೊಂಚ ನಿರಾಳವಾಯಿತು. ಅಮ್ಮ ಮತ್ತೆ ಕೆಲ ಹೆಂಗಸರು ಸುಹಾಸಿನಿಯನ್ನು ಎತ್ತಿ ಹಿಡಿದು ಅಲ್ಲೆ ಗೋಡೆಗೆ ಒರಗಿಸಿ ಕುಳ್ಳಿರಿಸಿ ಮುಖಕ್ಕೆ ನೀರು ಚಿಮುಕಿಸಿದರು. ಸುಹಾಸಿನಿ ಮಿಸುಕಾಡಿದಳು. ಅರೆ ಎಚ್ಚರವಾದಂತಾಗಿ ನಂಗೆ ಮೈ ಹುಶಾರಿಲ್ಲೆ… ಎನ್ನಬೇಕೆಂದು ಬಾಯಿ ತೆರೆದು ಮೈ ಹುಶಾ…. ಎನ್ನುವಷ್ಟರಲ್ಲಿ ಮಧ್ಯದಲ್ಲೇ ಬಾಯಿ ಹಾಕಿದ ಅಂಬ್ರೋಟಿ ಗಿರಿಧರ… ಓಯ್… ವೆ&;ಂumಟ;ಶಾಸುರ…ಅ ಮೈಶಾಸುರನ ಕೇಳ್ತಾ ಉಟ್ಟು ದೇವಿ…ಅ ಎಂದ. ಹಾಂ.. ಸರಿಸರಿ… ಅಂದ್ ಆಟಲಿ ದೇವಿಗೆ ಮೈಶಾಸುರನ ಕೊಲ್ಲಿಕೆ ಆತ್‌ಲ್ಲೆಲ್ಲೋ… ಅದಿಕ್ಕೆ ಈಗ ಬಂದ್ ಮೈಶಾಸುರನ ಕೇಳ್ದು…ಅ ಹಾಂ… ಹೌದು… ಎಲ್ಲವೂ ದೂರ ನಿಲ್ಲಿ…ಅ ಎಂದು ಚಾಕೊಟೆ ದಾಮೋದರ ಬೊಬ್ಬಿಟ್ಟ. ಸೇರಿದ್ದ ಜನ ಎಲ್ಲಾ ಬೆವತು ಹೋದರು. ಹೌದು! ಸತ್ಯ! ಅಂದ್ ಮೈಶಾಸುರ ವೇಸ ಹಾಕಿದ ದಿನೇಶ ರಂಗಸ್ಥಳಕ್ಕೆ ಬಾತ್‌ಲ್ಲೆಲ್ಲಾ…ಅ ಹಾಂಗೆ ಈಗ ದೇವಿ ಇಲ್ಲಿ ಬಂದಿರೊಕು…ಅ ಎಂತ ಮಾಡ್ದು ಈಗ…ಲು ಒಬ್ಬರನ್ನೊಬ್ಬರು ಕೇಳಿಕೊಂಡರು. ನಾ ಅಂದೇ ಹೇಳ್ದೆ… ಈ ಆಟಂದಾಗಿ ಏನಾರ್ ಆದೇಂತ… ಈಗ ನೋಡಿ… ಎಂದು ಊರುಗೌಡ ಬೊಳಿಯಾರ್ ಗಂಗಣ್ಣ ಮೊದಲೇ ಭವಿಷ್ಯ ಹೇಳಿದವರಂತೆ ಬೀಗುತ್ತಾ ಸುತ್ತಲೂ ನೋಡಿದರು. ಯಾರೋ ಕಾಲುದೀಪವನ್ನು ತೆಗೆದು ಈಚೆಗಿಟ್ಟರು. ಇನ್ಯಾರೋ ಕುಂಕುಮ ತಂದಿಟ್ಟರು, ಮತ್ತೊಂದು ಕೊಡಿ ಬಾಳೆಲೆ, ದಾಸಾವಾಳ ಹೂ ಎಲ್ಲವೂ ಎಲ್ಲೆಲ್ಲಿಂದಲೋ ಬಂದು ಸೇರಿದವು. ಊದುಬತ್ತಿಯೂ ಬಂತು. ಒಟ್ಟಾರೆ ಕೆಲನಿಮಿಷದಲ್ಲೇ ವೀಳ್ಯಶಾಸ್ತ್ರದ ಕ್ರಮ ಹೋಗಿ ಅಲ್ಲೊಂದು ಪೂಜೆಯ ವಾತಾವರಣ ಉಂಟಾಯಿತು. ಎಲ್ಲರೂ ಭಯಭಕ್ತಿಯಿಂದ ಗಂಬಿರವಾಗಿ ಇದೊಂದು ಅನಾಹುತವೋ ಸಂಭ್ರಮವೋ ತಿಳಿಯದೆ ಉಸಿರು ಬಿಗಿ ಹಿಡಿದು ನಿಂತರು. ಬಂದ ಹೊಸ ನೆಂಟರೂ ಏನೂ ತೋಚದೆ ಎಲ್ಲರಂತೆ ಕೈ ಮುಗಿದು ನಿಂತರು. ಅಡಿಗೆ ಮಾಡುತ್ತಿದ್ದವರೂ ಕುತೂಹಲದಿಂದ ಎಲ್ಲಾ ಅಲ್ಲೇ ಬಿಟ್ಟು ಚಾವಡಿಗೆ ಬಂದು ಅಚ್ಚರಿಯಿಂದ ಕೈ ಮುಗಿದು ನಿಂತರು.

ದಿನೇಶನಿಗೆ ಭಯವಾಯಿತು! ನನ್ನಂದಾಗಿ ಸುಹಾಸಿನಿಗೆ ದೇವಿ ಮೈಗೆ ಹಿಡ್ಡುಟ್ಟೂಂತ ಎಲ್ಲೊವೂ ನಂಬಿಕೊಂಡೊಳೊ… ನಾ… ಇಲ್ಲಿ ನಿತ್ತರೆ ನಂಗೇನಾರ್ ಆಪತ್ತ್ ಬಾದು ಈಗ ಖಂಡಿತ… ಎಂದು ಯೋಚಿಸುತ್ತಿರಬೇಕಾದರೆ ಶೇಷಪ್ಪ ಗೌಡರು ಕೆಂಗಣ್ಣಿಂದ ದಿನೇಶನನ್ನೇ ಸುಟ್ಟುಬಿಡುವವರಂತೆ ನೋಡುತ್ತಿದ್ದರು. ಎಲ್ಲಾ ಆದ್ದ್ ಈ ದಿನೇಶಂದಾಗಿ … ಎಂದು ಮಾರಡ್ಕ ಶಿವರಾಮ ತನ್ನ ಅಸಹನೆ ಹೊರಗೆಡಹಿದ. ಎಲ್ಲರೂ ಒಮ್ಮೆ ದಿನೇಶನನ್ನೂ ಒಮ್ಮೆ ಸುಹಾಸಿನಿಯನ್ನೂ ನೋಡತೊಡಗಿದರು. bಅ ನಾ ಇಲ್ಲಿಗೆ ಬಂದದೇ ತೊಪ್ಪಾತ್ ಎಂದು ಯೋಚಿಸಿದ ದಿನೇಶ ಮೆಲ್ಲ ಮೆಲ್ಲನೆ ಹಿಂದೆ ಸರಿಯತೊಡಗಿದ. ಅಡಿಗೆ ಕೋಣೆಯಿಂದ ಪಾಯಸವೋ, ಪಲ್ಯವೋ, ಕೋಳಿಗೈಪೋ, ಯಾವುದೋ ಒಂದು ಬಗೆ ಕರಟಿದ ಹೊಗೆ ವಾಸನೆ ಎಲ್ಲ ಕಡೆ ಹರಡಿತು. ಎಲ್ಲ… ಅಡಿಹಿಡ್ದ್ ಹೋತ್… ಎಂದು ಯಾರೋ ಕೂಗಿದರು. ಎಲ್ಲರೂ ಸುಹಾಸಿನಿಯನ್ನೇ ಭಯಭಕ್ತಿಯಿಂದ ನೋಡುತ್ತಿದ್ದಂತೆ ಭಜನೆ ದಿನೇಶ ಎಲ್ಲರಿಂದ ಹಿಂದೆ ಸರಿದು ಅಂಗಳಕ್ಕೆ ಬಂದ. ಅಂಗಳದ ಮೂಲೆಯ ಬಸಲೆ ದೊಂಪದ ಬಳಿ ಕೋಳಿ ಸಜ್ಜಿ ಮಾಡಿ ಎಸೆದ ಪೊಟ್ಟೆರಾಶಿಗೆ ಮೂರ್‍ನಾಲ್ಕು ನಾಯಿಗಳು ಎಳೆದಾಡಿ ಜಗಳಾಡುತ್ತಿದ್ದವು. ಅಲ್ಲೇ ಇದ್ದ ಕೂಂದ್ರಿ ಚಾಳೆ ಮಡಲಿನ ಮೇಲೆ ಕುಳಿತ ಏಳೆಂಟು ಕಾಗೆಗಳು ಖಾ… ಖ್ರಾ… ಎನ್ನುತ್ತಾ ಆಗಾಗ ಕೆಳಕ್ಕೆ ಬಾಣದಂತೆ ಎರಗಿ ಪೊಟ್ಟೆಯನ್ನು ಕಚ್ಚಿ ಎತ್ತಿಕೊಂಡು ಹೋಗಲು ಹವಣಿಸುತ್ತಿದ್ದವು. ರೋಮಕಂಟ ಬೆಕ್ಕೊಂದು ಒಳ್ಳೆಯ ಅವಕಾಶಕ್ಕಾಗಿ ಹೊಂಚು ಹಾಕಿ ಕಾಯುತ್ತಾ ದೂರದಲ್ಲಿ ಕುಳಿತಿತ್ತು. ಹೆದರಿ ಕಂಗೆಟ್ಟ ದಿನೇಶ ಬೇಲಿ ಹಾರಿ ಮಣ್ಣಿನ ಮಾರ್ಗದಲ್ಲಿ ಹಿಂದೆ ತಿರುಗದೆ ಓಡಿದ. ಮನೆಗೆ ಹೋಗಲು ಮನಸ್ಸಾಗದೆ ದನಗಳನ್ನು ಮೇಯಲು ಗುಡ್ಡೆಗೆ ಅಟ್ಟುವ ಹಾದಿಯಲ್ಲಿ ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ಓಡತೊಡಗಿದ.

ಕೆಲವು ಶಬ್ದಗಳ ಅರ್ಥ

ಉದ್‌ಗಿಲ್: ಬದಿಗೆ ಸರಿಸಲು ಸಾಧ್ಯವಿರುವ ಸಪೂರ ಕೋಲುಗಳ ಗೇಟಿನಂಥ ತಡೆ;
ಕೊಟಗೆ: ಕೊಟ್ಟಿಗೆ;
ದಳಿ: ದೊಡ್ಡ ಕಿಟಕಿಯ ಪಟ್ಟಿ;
ಮೊಂದ್ರಿ: ಹೊದಿಕೆ/ಚಾಪೆ;
ಒಲ್ಲಿ: ತೆಳು ಹೊದಿಕೆ;
ಚೌಕಿ: ಗ್ರೀನ್ ರೂಂ;
ಆಟ: ಯಕ್ಷಗಾನ ಆಟ;
ಮಿನಿ: ಏನಾದರೂ;
ಬಾತಾ: ಬಂದನೋ;
ಕೋಂಬ್ಳೆ: ಮುದ್ದಿನ ಕೂಸು;
ದಂಡಿಗೆ: ಯುದ್ಧಕ್ಕೆ;
ಮಂಙ: ಮಗ;
ನೇಕೆ: ಬಟ್ಟೆ ನೇತು ಹಾಕುವ ಹಗ್ಗ;
ಮಳಂಕಣಿ: ಅಂಗಾತ;
ಬೆಳ್ಜರ್: ಬೆಳಿಗ್ಗೆ;
ಸಪೇದ್: ಬಿಳಿ ಬಣ್ಣ;
ಇಂಗ್ಲೀಕ: ಕೆಂಪು;
ಬಾಲುಮುಂಡು: ಲಂಗ;
ದಗಲೆ: ಅಂಗಿಯಂತಹ ಉಡುಗೆ;
ಜಟ್ಟಿ : ಸೊಂಟ ಪಟ್ಟಿ;
ಸೋಗಲಿ: ಶಾಲು;
ಅಗಲಡ್ಡಿಗೆ: ಅಗಲ ಹಾರ;
ಸಪೂರಡ್ಡಿಗೆ: ಸಪೂರ ಹಾರ;
ದೊಂದಿ: ಕೊಳ್ಳಿ/ದೀಟಿಗೆ;
ಓಡಾರಿ: ಕುಂಬಾರ;
ಅಳಗೆ: ಮಣ್ಣಿನ ಪಾತ್ರೆ;
ನೆಸಲೆ: ಮಣ್ಣಿನ ಅಗಲವಾದ ಪಾತ್ರೆ;
ಬಾವ ಸಮಯ: ಬರುವ ಸಮಯ;
ಮೊಲ್‌ಗಕ್: ಮಲಗಬಹುದು;
ಲಾಟಾನನ್ನು: ಲಾಟೀನನ್ನು;
ಕಂಗಿನ: ಅಡಿಕೆ ಮರದ;
ಕುಬೆ: ಅಡಿಕೆ ಮರದ ತುದಿ;
ಮುಡ್ಕಣೆ: ಹಕ್ಕಿ ಹಿಡಿಯಲು ಮಾಡುವ ಒಂದು ಬಗೆಯ ತಂತ್ರ;
ಅಡ್ಂಚಿಲ್: ಮೊಲದಂತ ಚಿಕ್ಕ ಪ್ರಾಣಿಗಳನ್ನು ಹಿಡಿಯುವ ಇನ್ನೊಂದು ಬಗೆಯ ತಂತ್ರ;
ಕಳ್ಕಿಕಂಡ್: ಆರ್ಭಟಿಸುತ್ತಾ;
ಕೊಣ್ಕಂಡ್: ಕುಣಿದುಕೊಂಡು;
ನೋಡೋಮೊ: ನೋಡೋಣ;
ಬಾದು: ಬರುವುದು;
ಕುದ್ರುದು: ಕುಳಿತುಕೊಳ್ಳುವುದು;
ಎಂತಕೆನೆ: ಯಾಕೆ ಕಣೆ;
ವೀಳ್ಯಶಾಸ್ತ್ರ: ಮದುವೆ ನಿಶ್ಚಿತಾರ್ಥ;
ಊರು ಗೌಡ: ಮನೆತನದ ಮದುವೆ, ಬೊಜ್ಜ, ಎಲ್ಲಾ ಕಾರ್ಯಗಳನ್ನು ಪೂಜಾರಿಯಂತೆ ನಿರ್ವಹಿಸಿಕೊಡುವ ಗೌರವಾನ್ವಿತ ಮುಂದಾಳು;
ಬಳಿ: ಗೋತ್ರ;
ಗುರು ಕಾರ್ನೂರು: ಗುರು ಹಿರಿಯರು;
ಕನ್ನೆಗಂಬ: ಶಿವಲಿಂಗ;
ನಿಗಂಟ್: ನಿಶ್ಚಯ;
ಕವಳಿಗೆ: ಇಪ್ಪತ್ತೈದು ವೀಳ್ಯದೆಲೆಗಳಿರುವ ಒಂದು ಕಟ್ಟು;
ಮೊರ್ಲು: ಹುಚ್ಚು;
ಬೀಜದಕೊಚ್ಚಿ: ಗೇರುತೋಟ;
ಚಾಳೆ ಕೊಪ್ಪಳ: ತೆಂಗಿನ ತೋಟ;
ಇಂದನಿ: ಇವರೇ;
ಇಸಿ: ಇಟ್ಟು;
ದೊಂಪ: ಚಪ್ಪರ;
ಪದ್ಂಜಿ: ಹೆಸರು ಬೇಳೆ;
ಕೋಳಿಗೈಪು: ಕೋಳಿ ಪದಾರ್ಥ;
ರೋಮಕಂಟ: ರೋಮಭರಿತ;
ಅಡಿಹಿಡ್ದ್: ಸೀದು;
ಉಟ್ಟು: ಉಂಟು;
ಹನ್‌ಕಿ: ಬೆಚ್ಚಿ;
ಕಕ್ಕುದ: ವಾಂತಿ;
ಸಜ್ಜಿ: ಹದ ಮಾಡುವುದು;
ಪೊಟ್ಟೆ: ಕೋಳಿಯ ಕರುಳು;
ಕೂಂದ್ರಿ ಚಾಳೆ: ಗಿಡ್ಡ ಜಾತಿಯ ತೆಂಗಿನ ಗಿಡ
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.