ದೊರೆಸಾನಿ ಜಾಲಿಬೆಂಚಿ

ನನಗೆ ವಿಕಾಸ ವಾದದಲ್ಲಿ ನಂಬಿಕೆಯಿಲ್ಲವೆಂದು ಯಾರು ಹೇಳಿದ್ದು? ಆದರೆ ನನ್ನ ನಂಬಿಕೆಯನ್ನು ಮತ್ತೆ ಮತ್ತೆ ಸುಳ್ಳು ಮಾಡುವಂತೆ ಮಿಸುಕದ ಬಂಡೆಗಲ್ಲಿನಂತೆ ಬಿದ್ದುಕೊಂಡಿತ್ತು ಈ ಊರು. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಜಾರಿ ವಥ ಭ್ರಾಂತವಾಗಿ ಬಿದ್ದಿದೆಯೇನೊ ಎಂಬ ಭ್ರಮೆ ಹುಟ್ಟಿಸುವ ಸ್ಥಳವಿದು. ಅದೇ ಗುಂಡಿ ಬಿದ್ದ, ಧುಳು ಮುಖಕ್ಕೆ ಹೊಡೆವ ರಸ್ತೆಗಳು. ಎಲ್ಲಿ ನೋಡಿದರೂ ಕಸ. ಹಸಿರಿನ ಮಾತೇ ಕೇಳಿರದ ರಾವು ಬಡಿದ ಬೀದಿಗಳು. ರಣರಣ ನೆತ್ತಿ ಸುಡಿಸಿ, ದಳದಳ ಬೆವರು ಬಸಿಯುವ ಕೆಟ್ಟ ಬಿಸಿಲು. ಜೋಂಯ್ ಎಂದು ರಾಗಬದ್ಧವಾಗಿ ಒಡೆದು ಕೊಡುವ ಸೋಡಾಗಳನ್ನು ಆಕಾಶಕ್ಕೆ ಮುಖ ಮಾಡಿ, ಒಂಟಿಗಾಲಲ್ಲಿ ನಿಂತು ಗಂಟಲಿಗಿಳಿಸುವ ಜನ. ಹಾಳು ಬಿದ್ದ ಕೋಟೆ, ಸಿಕ್ಕುಸಿಕ್ಕಾದ ಸಿಕ್ಕಿಹಾಕಿಕೊಂಡ ದಾರದ ಉಂಡೆಯಂತೆ ಎಲ್ಲೆಂದರಲ್ಲಿ ಕಲ್ಲಿನಿಂದ ಕಟ್ಟಿದ ಮನೆಗಳು. ಸರ್ಕಸ್ಸಿನಲ್ಲಿ ಕತ್ತು ಬಗ್ಗಿಸಿ ರದ್ದಿ ಮೇಯುವ ಕತ್ತೆಗಳು. ಡರ್ ಡರ್ ಎಂದು ಬಾಲ ಅಲುಗಿಸುತ್ತ ಎಗ್ಗಿಲ್ಲದೆ ಜನರನ್ನೆ ಓಡಿಸಿಕೊಂಡು ಹೋಗುವ ಹಂದಿಗಳ ಗುಂಪು. ಜಾಲಿ ಮುಳ್ಳು ಪೊದೆ ಕಂಡಲ್ಲಿ ಸರಕ್ಕನೆ ಚಡ್ಡಿಯೋ, ಧೋತರ‌ಒ ಬಿಚ್ಚಿ ಒಂದು ಎರಡುಗಳನ್ನು ಪಾಂಗಿತವಾಗಿ ಮುಗಿಸುವ ಮಂದಿ…ಹೀಗಿತ್ತು ಊರು. ಹೀಗೆ ಇದು ಊರು. ಹೀಗೆಯೇ ಇರುತ್ತದೆ ಊರು.

ನಾನು ಚಿಕ್ಕವನಾಗಿದ್ದಾಗಿನಿಂದ ಬೆಳೆದು ದೊಡ್ಡವನಾಗಿ ಯಾವ ಕೆಲಸಕ್ಕೂ ಬಾರದ ಬಿಕಾಮಿಯಾಗಿ ಓಡಾಡುವವರೆಗೆ ಅಂದರೆ ಸುಮಾರು ಇಪ್ಪತ್ತೈದು ವರ್ಷಗಳವರೆಗೆ ಈ ಊರಿಗೆ ಯಾವ ಬದಲಾವಣೆಯ ಗಾಳಿಯೂ ಬೀಸಲಿಲ್ಲ. ವಿಕಾಸವಾದಕ್ಕೆ ಸೆಡ್ಡು ಹೊಡೆದು ನಿಂತರೆ ಯಾರೇನು ಮಾಡಲು ಸಾಧ್ಯ? ಊರಿನ ಮೇಯಿನ್ ರೊಡನಾಗ ಒಂದ್ ಕಲ್ಲು ತಂದ ಹಾಕಲೆ. ಮೂರು ವರ್ಸಾದರೂ ನಾ ಅಂಬ ಗಂಡಸು ಸೂಳೆ ಮಗ ಅದನೆತ್ತಿ ಬಗಲಿಗಿಟ್ಟರೆ ಕೇಳಲೆ ಎಂದು ಗೆಳೆಯನೊಬ್ಬ ಓಪನ್ ಚಾಲೆಂಜ್ ಕಟ್ಟಿದ್ದ. ಎಸ್.ಪಿ ರಂಗ್ರಾವ್ ನಟಿಸಿದ್ದ ತೆಲುಗು ಚಿತ್ರವೊಂದರ ಪೋಸ್ಟರನ್ನು ಇಪ್ಪತ್ತು ವರ್ಷಗಳ ನಂತರವೂ ಜತನವಾಗಿ ಕಾಪಾಡಿಕೊಂಡು ಬಂದ ಕಟ್ಟಡವನ್ನು ನಾನು ಇತ್ತೀಚೆಗೆ ನೋಡಿ ದಂಗಾಗಿದ್ದೆ! ಊರಿನ ಐತಿಹಾಸಿಕ ಪ್ರಜ್ಞೆಗೆ ತಲೆದೂಗಿದ್ದೆ.

ಮೂವತ್ತು ವರ್ಷಗಳಿಂದ ದಾಂಬರು ಕಾಣದ ರಸ್ತೆ ಈ ಊರಿಗೆ ಮಾಮೂಲು. ಹತ್ತು ದಿನಕ್ಕೊಮ್ಮೆ ನೀರು ಕಾಣುವ ಕೊಳಾಯಿ ತೀರ ಸಹಜ. ಪ್ರತಿ ಎಲೆಕ್ಷನ್ನಿನಲ್ಲಿ ಕಾಂಗ್ರೆಸ್ ಗೆದ್ದು ಬರುವುದು ಸಂಪ್ರದಾಯ. ಬೀರು ಕುಡಿದು ಹೊಟ್ಟೆ ಬಿಟ್ಟುಕೊಂಡು ಓಡಾಡುವ ರೆಡ್ಡಿ, ಕಮ್ಮಾಗಳು, ಕವಿಗೋಷ್ಠಿ, ನಾಟಕ ಎಂದು ಓಡಾಡುವ ಉಳ್ಳಾಗಡ್ಡಿಗಳು. ಭಾಗವತವೊ ಹರಿಕಥೆಯೊ ಕೇಳಲು ಗುಡಿಗಳಿಗೆ ಹಾರುತ್ತ ಹಾರುತ್ತ ಹೋಗುವ ಹಾರುವರು. ನಾಲ್ಕುನಾಲ್ಕು ಜನ ಕೂತ ರಿಕ್ಷಾ ಎಳೆಯಲು ತೇಕುವ ಬಡಪಾಯಿಗಳು….ಪರವೂರಿನವರಾದರೆ ನಿಮಗೆ ವಿಚಿತ್ರವೆನ್ನಿಸಿ ಮನರಂಜನೆ ನೀಡುತ್ತದೆ.

ಇಲ್ಲಿಗೆ ‘ಅಮ್ಮ’ (ಇಂದಿರಮ್ಮ), ಮಹಾತ್ಮಗಾಂಧಿ ಇಬ್ಬರೂ ಬಂದು ಹೋಗಿದ್ದಾರೆ. ಮಹಾತ್ಮ ಇಲ್ಲಿಗೆ ಬಂದಾಗ ಆ ತಾತನಿಗೆ ಯಾರು ಸನ್ಮಾನಿಸಿ ಹಾರ ಹಾಕಬೇಕು ಎಂಬ ವಿಚಾರಕ್ಕೆ ಎರಡು ಗುಂಪುಗಳಿಗೆ ಜಗಳ ಹುಟ್ಟಿ ಯಾವ ಪಾರ್ಟಿಯವರೂ ರೈಲ್ವೆ ಸ್ಟೇಷನ್ನಿಗೆ ಹೋಗಲಿಲ್ಲವಂತೆ! ಕೊನೆಗೆ ಗಾಂಧಿ ಬೇರೆಲ್ಲೊ ಉಳಿದು ಎರಡೂ ಗುಂಪಿಗೆ ರಾಜಿ ಮಾಡಿಸಬೇಕಾಯಿತಂತೆ.

ಇಂಥ ನಾಲ್ಕಾರು ಊರು ನಿಮಗೆ ಸಿಕ್ಕಬಹುದು. ಬರೀ ಊರಿನ ಬಗ್ಗೆ ಹೇಳುವುದಾದರೆ ಕಥೆ ಬರೆದು ಸಂಭಾವನೆ ಗಿಟ್ಟಿಸುವ ಪ್ರಮೇಯವೂ ಇರಲಿಲ್ಲ. ಹೇಳಿದೆನಲ್ಲ ಇಂಥ ಊರು ಸಿಗಬಹುದು. ಆದರೆ ‘ಜಾಲಿಬೆಂಚೆ’ ಸಿಗಲಾರಳು! ಹೌದು, ಇದು ಕಾಡು ಹೂವಿನಂತೆ ಚೆಲುವೆಯಾಗಿದ್ದ ಬೇಡರಜಾತಿಯ ಹೆಣ್ಣಿನ ಹೆಸರು. ಜಾಲಿಬೆಂಚಿ ಎಂಬ ಊರಿನವಳಾದ ಆಕೆಯ ನಿಜವಾದ ಹೆಸರು ಚಿನ್ನಲಕ್ಷ್ಮಮ್ಮ. ಆದರೆ ಜನ ಆ ಊರಿನ ಹೆಸರಿನಲ್ಲಿ ಏನು ಕಂಡರೊ ಅವಳನ್ನು ಜಾಲಿಬೆಂಚಿ ಅಂದರು. ಬಹುಶಃ ಆಕೆ ಆ ಊರಿನಿಂದ ಓಡಿ ಬಂದಿದ್ದು ಕಾರಣವಿರಬೇಕು. ಆದರೆ ಹಾಗೆ ಕರೆಯುವಾಗ ಆ ಪದಕ್ಕೆ ಅಸಾಧ್ಯ ಅಶ್ಲೀಲತೆ ಅಂಟಿದೆ ಎಂಬಂತೆ ಉಚ್ಚರಿಸುತ್ತಿದ್ದರು. ಹಾಗೆ ಉಚ್ಚರಿಸಿದಾಗಲೊಮ್ಮೆ ಅವಳೊಂದಿಗೆ ಮಲಗಿ ಸುಖಿಸಿದಷ್ಟು ಸಂತೋಷಪಡುತ್ತಿದ್ದರು.

ಆಕೆ ಭೀಮಯ್ಯ ಸರ್ಕಲ್ಲಿನ ಅನಭಿಷಿಕ್ತ ಮಹಾರಾಣಿಯಾಗಿದ್ದಳು. ಒಂದು ಚಹಾದಂಗಡಿ, ಮೂರು-ನಾಲ್ಕು ಮಟ್ಕಾ ಟೇಬಲ್ಲು, ಸರಾಯಿ ಅಡ್ಡೆ, ಚಿಟಿಕೆ ಹೊಡೆದರೆ ನಾನಾ ಅನ್ನುವ ಗಂಡಸರು ಸಂಬಳ ಸುರಿಸುತ್ತ ಡೊಗ್ಗಾಲು ಹಾಕಿ ಕೂರುವ ವರ್ಚಸ್ಸು ಅವಳಿಗಿತ್ತು. ಇನ್ನೇನು ಬೇಕಿತ್ತು ಅವಳಿಗೆ? ಆದರೆ ಅದಕ್ಕೆ ಸವೆಸಿದ ಹಾದಿ ಭಯಾನಕವಾಗಿತ್ತು. ನೆನೆಸಿಕೊಂಡರೆ ಅವಳ ಮೈಗೆ ಮುಳ್ಳೇಳುತ್ತಿದ್ದವು. ಆದರೆ ಅಂಥ ದಾರಿ ಸವೆಸದಿದ್ದರೆ ತಾನು ದೊರೆಸಾನಿಯಾಗುವುದು ಅಸಾಧ್ಯವೆಂದೂ ಆಕೆಗೆ ಗೊತ್ತಿತ್ತು.

ಇಡೀ ಕುಂಟೆಗಡ್ಡಿಗೆ ಶೀಟು ಹಾಕಿದ್ದು, ಸಿಮೆಂಟು ಗೋಡೆಗಳಿದ್ದ ಮನೆಯೆಂದರೆ ಅವಳೊಬ್ಬಳದೇ. ಉಳಿದ ನೂರಾರು ಗುಡಿಸಲುಗಳಿಗೆ ಆಪು ಹುಲ್ಲಿನ ದಂಟೇ ಗತಿಯಾಗಿತ್ತು. ರಾತ್ರಿ ಎಂಟರ ನಂತರ ನೀವು ಆ ಕುಂಟೆಗಡ್ಡೆ ಗುಂಟ ಹೋದರೆ ಬೇರೆ ಜಗತ್ತೇ ತೆರೆದುಕೊಳ್ಳುತ್ತಿತ್ತು. ನಾವು ಚಿಕ್ಕವರಾಗಿದ್ದಾಗ ಮೊಹರಂ ಸಮಯದಲ್ಲಿ ಪೀರಲುಗಳು ಕುಂಟೆಯಲ್ಲಿ ಸಾಯುವುದನ್ನು ನೋಡಲು ಹೋಗುತ್ತಿದ್ದಾಗ ಹೊರಸಿನ ಮೇಲೆ ಕೂತು ಸಿಗರೇಟು ಸೇದುತ್ತ, ಕುಡಿಯುತ್ತ ಕೂತ ಜಾಲಿಬೆಂಚಿ ಕಾಣುತ್ತಿದ್ದಳು! ಅವಳು ಹೊರಸಿನ ಮೇಲೆ ಗುಟುಕು ಹಾಕುತ್ತ ಕೂತಿದ್ದರೆ ಗಂಡಸರು ಎಂದು ತೊಡೆ ಅಲ್ಲಾಡಿಸಿವ ಮುಂಡೇಮಕ್ಕಳು ಅವಳ ಕೆಳಗೆ ಸರಾಯಿ ಗ್ಲಾಸು ಹಿಡಿದು ನೆಲದ ಮೇಲೆ! ಅವಳನ್ನು ನೋಡುವುದೆಂದರೆ ನನಗೆ ಭಾರೀ ಖುಷಿ! ಅವಳ ಬಗೆಗಿನ ಕಥೆಗಳೆಂದರೆ ಇನ್ನೂ ಮಜ! ಆಕೆ ಗಿಚ್ಚಲು ಎನ್ನುವನನ್ನು ಹಾರಿಸಿಕೊಂಡು ಬಂದಿದ್ದಳೆಂದು ಜನ ಹೇಳುತ್ತಿದ್ದರು. ಅವಳ ಹಿಂದೆ ಗಿಚ್ಚಲು ಏನು ಯಾರಾದರೂ ಓಡಿ ಹೋಗಬಹುದಿತ್ತು. ಹಾಗಿದ್ದಳು ಜಾಲಿಬೆಂಚಿ!

ಆದರೆ ಕುಂಟೆ ಗಡ್ಡೆಯತ್ತ ರಾತ್ರಿ ಇರಲಿ ಹಗಲೂ ಹೋಗಬಾರದಂಥ ಭಯಾನಕ ಕಥೆಗಳನ್ನು ದೊಡ್ಡವರು ಹೇಳುತ್ತಿದ್ದರು. ಅವು ನಿಜವೂ ಇದ್ದವೇನೊ. ರಾತ್ರಿಯೆಲ್ಲಾ ದಂಚಿಸಿಕೊಂಡು ಹರಿದ ತುಟಿಗಳಲ್ಲಿ ಕಾಲು ಅಗಲಿಸಿಕೊಂಡು ಓಡಾಡುವ ರಖೇಲಿಗಳು ಹಗಲೆಲ್ಲ ನೆಲ-ಆಕಾಶ ಒಂದು ಮಾಡುವಂತೆ ಬೈದಾಡುತ್ತ ಓಡಾಡುತ್ತಿದ್ದರು. ಮೂವರು-ನಾಲ್ವರು ಸೇರಿದರೆ ಒಂದು ಜಂಗೀ ಹೊಡೆದಾಟವಾಗಿ ಒಬ್ಬನ ಕಿವಿ, ಇನ್ನೊಬ್ಬರ ಬೆರಳು ಚಾಕುವಿನ ಚೂಪಿಗೆ ಕತ್ತರಿಸಿ ಉದುರುತ್ತಿದ್ದವು. ಕೆಲವರು ಹರಿದುಬಿದ್ದ ಅವಯವಗಳನ್ನೇ ರಿಕ್ಷಾದಲ್ಲಿ ಹಾಕಿಕೊಂಡು ಪೊಲೀಸ್ ಸ್ಟೇಶನ್‌ಗೆ ಲಬೊಲಬೊ ಬಡಿದುಕೊಳ್ಳುತ್ತ ಓಡುತ್ತಿದ್ದರು. ಇವನ್ನೆಲ್ಲ ನೋಡುತ್ತಲೆ ನಾನು ಬೆಳೆದಿದ್ದು.

ನನ್ನ ವಯಸ್ಸಿನ ಹುಡುಗರು ಯಾರಿಂದಲೋ ಉದ್ರಿ ಸೈಕಲ್ ಹೊಡೆದು ಜಾಲಿಬೆಂಚಿಯ ಚಹಾದಂಗಡಿಯ ಮುಂದೆ ಏ ಶಾಮ್ ಮಸತಾನಿ ಹಾಡನ್ನು ಸೀಟಿ ಹೊಡೆಯುತ್ತ ಪೆಡೆಲ್ ಹೊಡೆಯುತ್ತಿದ್ದೆವು. ಹಾಗೆ ಸಿಳ್ಳು ಹೊಡೆದು ಹಿಂದಿ ಹಾಡನ್ನು ಗುನುಗುವುದು ಆಗ ಭಾರೀ ಫ್ಯಾಷನ್ ಆಗಿತ್ತು. (ಅದಾಗಿ ಇಪ್ಪಾತ್ತೈದು ವರ್ಷಗಳ ಮೇಲೆ ಇದೀಗ ನನ್ನ ಕಚೇರಿಯಲ್ಲಿ ರಾಧಾಕೃಷ್ಣನ್ ಎಂಬ ತಾಲೂಚಟ್ಟ ಪತ್ರಕರ್ತ ಅವೇ ಹಾಡುಗಳನ್ನು ಈಗಳೂ ಕಾಯ್ದುಕೊಂಡು ಬಂದು ಟಾಯ್ಲೆಟ್ಟಿನಲ್ಲಿ ಸೀಟಿ ಬಚಾಯಿಸುವುದನ್ನು ಕೇಳಿದ್ದೇನೆ. ಪಳೆಯುಳಿಕೆ ಶಾಸ್ತ್ರಕ್ಕೆ ಎಂದೂ ಅಳಿವಿಲ್ಲ ಎಂಬುದು ನಿಜ.) ಜಾಲಿಬೆಂಚಿ ನಮ್ಮತ್ತ ನೋಡಿದರೆ ನಮಗೆ ಸಿಕ್ಕಾಪಟ್ಟೆ ಸಂತೋಷವಾಗುತ್ತಿತ್ತು.

*
*
*

ಆದರೆ ಮೊನ್ನೆ ಊರಿಗೆ ಹೋದಾಗ ನನ್ನ ಎದೆ ಒಡೆಯುವ ದೃಶ್ಯವನ್ನು ನಾನು ನೋಡಬೇಕಾಯಿತು. ವಿಕಾಸಕ್ಕೆ ತುಸು ಚಾಲನೆ ಸಿಕ್ಕಂತಿತ್ತು. ನಾಲ್ಕು ವರ್ಷಗಳ ಮೇಲೆ ಊರಿಗೆ ಹೋದರೆ ಇಡೀ ಕುಂಟೆಗಡ್ಡೆ, ಭೀಮಯ್ಯ ಸರ್ಕಲ್ಲಿನ ಅನಧಿಕೃತ ಕಟ್ಟಡಗಳು ಪೂರಾ ನೆಲಸಮ! ನನ್ನ ಮನಸ್ಸಿನಲ್ಲಿ ಆವರೆಗೂ ಮರೆಯಾಗಿ ಹೋಗಿದ್ದ ಜಾಲಿಬೆಂಚಿ ತಣ್ಣಗೆ ಆಕ್ರಮಿಸತೊಡಗಿದ್ದಳು. ನಾನವಳನ್ನು ಎಷ್ಟೋ ವರ್ಷ ಮರೆತೇಬಿಟ್ಟಿದ್ದೆ. ಅವಳ ಚಹಾದಂಗಡಿ ಜಾಗ, ಕುಂಟೆಗಡ್ಡೆಯ ಕುಖ್ಯಾತ ಸೂಳೆಗೆರೆ, ಸಾರಾಯಿ ಅಡ್ಡೆ ನೆಲಸಮವಾಗಿದ್ದು ಕಂಡು ಆಕೆ ನೆನಪಿಗೆ ಬಂದಳು.

ನೆಲಸಮಗೊಳಿಸಿದ ಜಾಗದಲ್ಲಿ ದೊಡ್ಡ ಶಾಪಿಂಗ್ ಸಂಕೀರ್ಣ ತಲೆ ಎತ್ತುತ್ತಿತ್ತು. ಕುಂಟೆಗಡ್ಡೆಗಂತೂ ಒಂದು ಉದ್ದೋ ಉದ್ದ ಜೈಲಿನ ದರವಾಜೆಯಂಥ ಗೋಡೆ ಎಬ್ಬಿಸಿದ್ದರು. ಕಬ್ಬಿಣದ ಗೇಟು ನೆಟ್ಟು ಬೀಗಗಳನ್ನೂ ಜಡಿದಿದ್ದರು. ಇಡೀ ಕೊಳೆಗೇರಿ ಸಮವಾಗಿ ಜಾಗ ಬಹಳ ಸ್ವಚ್ಛವಾಗಿತ್ತು. ಈ ದಿಢೀರ್ ಬದಲಾವಣೆ ಹೇಗಾಯಿತು ಎಂದು ಚಿಕಿತ್ಸೆ ಮಾಡಿದಾಗ ತಿಳಿದು ಬಂದಿದ್ದು-

ಹೊಸದಾಗಿ ಬಂದಿದ್ದ ಉತ್ತರ ಭಾರತದ ಅಧಿಕಾರಿ. ಎರಡು ವರ್ಷದ ಹಿಂದೆ ಆಯ್ಕೆಯಾಗಿದ್ದ ಐ.ಎ.ಎಸ್ ಅಧಿಕಾರಿ. ಗೌರಿಯೊ, ಸರಸೋತಿಯೋ ಅವಳ ಹೆಸರು. ಮೊದಲ ಪೋಸ್ಟಿಂಗ್ ಇಲ್ಲೇ. ನಮ್ಮೂರ ರಾಜಕೀಯ ನಿಮಗೆ ಗೊತ್ತಿರಲಿಕ್ಕಿಲ್ಲ. ಗುಂಡಾಗರ್ದಿ, ಖೂನಿ, ಚಪ್ಪರ್ ಬಂದ್, ತಲೆ ಹಿಡುಕ ಹಲಾಲುಕೋರ್, ಮಟ್ಕ ಕಳ್ಳಬಟ್ಟಿ… ಇಂಥ ಹಡಬಿಟ್ಟಿ ಕೆಲಸದಲ್ಲಿ ನಿರತರಾದವರೆ ಇಲ್ಲಿನ ನಾಯಕರು. ಇಲ್ಲಿನ ಶಾಸಕನಿಗೆ ಈ ಸಕಲ ಗುಣಗಳೂ ಇವೆ. ಕುಂಟೆ ಗಡ್ಡೆ ಅವನ ಓಟ್‌ಬ್ಯಾಂಕ್. ಆದರೆ ಹೊಸ ಹುರುಪಿನಿಂದ ಬಂದ ಹರೆಯದ ಆ ಐ.ಎ.ಎಸ್ ಹುಡುಗಿಗೆ ಇಂಥವರನ್ನು ಬಗ್ಗು ಬಡಿದು ಸಮಾಜಕ್ಕೆ ಒಳ್ಳೇದನ್ನು ಮಾಡೋ ಹುಮ್ಮಸ್ಸು. ಒಮ್ಮೆ ಆಕಸ್ಮಿಕವಾಗಿ ಈ ಸ್ಥಳ ಹಾದು ಹೋಗುವಾಗ ಇಲ್ಲಿರುವ ನೀರಿನ ಕುಂಟೆ ಬಹಳ ಸೊಗಸಾಗಿದೆ ಅನ್ನಿಸಿತಂಥೆ. ವಿಹಾರ ಸ್ಥಳ ಮಾಡಿ, ದೋಣಿಗಳನ್ನು ಬಿಟ್ಟರೆ ಜನರಿಗೂ ಮನರಂಜನೆ ದೊರಕೀತು ಅನ್ನಿಸಿತು. ಆದರೆ ಆ ತಾಯಿ ಇಂಥ ಕುಖ್ಯಾತ ವೇಶ್ಯಾವಾಟಿಕೆ ಸ್ಥಳಕ್ಕೆ ಒಬ್ಬಳೇ ಹೋದದ್ದು ಹೇಳಿ. ಜಾಲಿಬೆಂಚಿಯಂತೆ ಮಹಾಧೈರ್ಯಸ್ಥಳು ಅಂಥ ಕಾಣುತ್ತೆ. ಮನಸ್ಸಿಗೆ ಬಂದಿದ್ದೆ ಮೂರು-ನಾಲ್ಕು ದಿನ ನೋಟೀಸು ಕೊಟ್ಟು ಒಬ್ಬರನ್ನೂ ಬಿಡದಂತೆ ಬಟ್ಟಲೆಬ್ಬಿಸಿದಳು. ರಾತ್ರೋರಾತ್ರಿ ಪೋಲೀಸರು, ಕೆಲಸಗಾರರು ಬಂದು ಈ ಕೊಳಗೇರಿ, ಅದಕ್ಕಂಟಿದಂತೇ ಇದ್ದ ಅಂಗಡಿಗಳನ್ನು ನೆಲಸಮ ಮಾಡಿದ್ದಾಯಿತು. ನೆನಪಿಡಿ, ಇಲ್ಲಿಂದ ಒಕ್ಕಲೆಬ್ಬಿಸಿದರೂ ಊರ ಹೊರಗೆ ಅವರಿಗೆಂದೇ ವಿಶಾಲ ಸರ್ಕಾರಿ ಜಾಗದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಳಂತೆ. ಮನೆ ಕಟ್ಟಿಕೊಳ್ಳಲು ಸರ್ಕಾರಿ ಸಾಲವನ್ನೂ ಕೊಡಿಸಿದಳಂತೆ.

ಮಾಮೂಲಿನಂತೆ ನಮ್ಮ ಶಾಸಕನಿಗು-ಅವಳಿಗು ಜಟಾಪಟಿ ಹತ್ತಿತು. ಸರ್ಕಲ್ಲಿನಲ್ಲಿ ಕೈಗೆ ಕೈ ಮಿಲಾಯಿಸುವವರೆಗೂ ಟೆನ್ಷನ್ ಬೆಳೆದಿತಂತೆ. ಶಾಸಕ ಕೈಯೆತ್ತಬೇಕು ಅನ್ನೋದರಲ್ಲಿ ಆ ಅಧಿಕಾರಿ, ಮಿಸ್ಟರ್, ನಾನು ಜಿಲ್ಲಾದಂಡಾಧಿಕಾರಿ. ನೀನು ತಕ್ಷಣ ನಿನ್ನ ಚಮಚಾಗಳೊಂದಿಗೆ ಜಾಗ ಖಾಲಿ ಮಾಡದಿದ್ದರೆ ಅರೆಸ್ಟ್ ಮಾಡಬೇಕಗುತ್ತದೆ ಅಂದಳಂತೆ. ಈತ ಬಾಯಿಮುಚ್ಚಿಕೊಂಡು ಹೋದ. ಆದರೆ ಆರು ತಿಂಗಳು ಹಗಲು ರಾತ್ರಿ ರಾಜಕೀಯ ಮಾಡಿ ಆಕೆಯನ್ನು ಬೇರೆಲ್ಲಿಗೊ ಎತ್ತಿಸಿ ಹಾಕಿದ. ಅದಿರಲಿ, ಇನ್ನೇನು ವಿಕಾಸವಾದಕ್ಕೆ ತೆರೆದುಕೊಳ್ಳಬೇಕು ಅನ್ನುತ್ತಿದ್ದ ಊರು ಮತ್ತೆ ಯಥಾಸ್ಥಿತಿಗೆ ಮರಳುವಂತಾಯಿತು. ಆದರೆ ಆದ ಚೂರು ಬದಲಾವಣೆ ನನ್ನ ನೆನಪು ಕೆದಕಿತು.

ನಾನು ಏಳುತ್ತಿದ್ದ ಸಂಕೀರ್ಣವನ್ನು ತುಸು ಹೊತ್ತು ನೋಡುತ್ತ ನಿಂತೆ. ಅಲ್ಲಿ ಚಹಾ ಹೊಡೆಯುತ್ತ ನಿಂತ ಜಾಲಿಬೆಂಚಿ ಕಂಡಳು. ತನ್ನ ಆಕರ್ಷಕ, ತುಸು ಹೆಚ್ಚು ಉಬ್ಬಿದ ಎದೆಗಳ ನಡುವೆ ಸೆರಗನ್ನು ಸಿಂಬಿಯಂತೆ ಸುತ್ತಿ, ಆ ಕೈಯಲ್ಲೊಂದು ಈ ಕೈಯಲ್ಲೊಂದು ಪಾತ್ರೆ ಹಿಡಿದು ಚಹಾ ಹೊಡೆಯುವ ದೃಶ್ಯ. ಈಗಾಕೆ ಬದುಕಿದ್ದರೆ ಅವಳಿಗೆ ಅರವತ್ತು ವರ್ಷವಾಗಿರಬಹುದು! ಹೌದು, ನಿಜ. ನನಗೆ ಕೊನೆಗೆ ತಡೆಯುವುದಾಗದೆ ಯಾರನ್ನು ಕೇಳಲಿ ಎಂದು ಹಿಂದು-ಮುಂದು ನೋಡಿದೆ. ಕೊನೆಗೆ ಮೂಲೆಯಲ್ಲಿ ಮುದಿ ಕುದುರೆಯೊಂದಿಗೆ ಬೀಡಿ ಸೇದುತ್ತ ಜಟಕಾದಲ್ಲಿ ಕೂತಿದ್ದ ಹಜರತ್ ಒಬ್ಬರು ಕಂಡರು. ಇವರೇ ಸರಿ ಎಂದು ಅಲ್ಲಿ ಹೋದೆ. ಅದು-ಇದು ಎಂದು ಒಂದೆರಡು ಮಾತನಾಡಿದೆ ಆಟೋ ಬಂದಿರುವುದರಿಂದ ಬೇಪಾರ್ ಡಲ್ ಎಂದು ಅವರು ಕೊರಗಿದರು. ನಾನು ಮಾತು ಕತೆ ಬೇರೆಕಡೆ ಹೊರಳುವ ಮೊದಲೇ- ಹಜರತ್, ಇಲ್ಲಿ ಜಾಲಿಬೆಂಚಿ ಅಂತ ಹೆಂಗಸಿನ ಹೋಟೆಲಿತ್ತಲ್ಲ ಎನಾತು ಅಂದೆ.

ಹಜರತ್ ಮುಖದ ಮೇಲೆ ಸ್ವಲ್ಪ ಹೊತ್ತು ನಗು ಸುಳಿಯಿತು. ಅವಳ ಚೆಲುವನ್ನು ನೆನಪಿಸಿಕೊಂಡಿರಬೇಕು! ಆದರೆ ಮರುಕ್ಷಣವೇ ವಿಷಾದದ ಛಾಯೆ ಸುಳಿಯಿತು. ಎಲ್ಲಿ ಯಜಮಾನ್. ಅವಳು ಖೂನಿಯಾಗಿ ಆರು ವರ್ಸಾತಲ್ಲ. ಆ ಹರಾಮ್, ಅವಳ ಗಂಡನೇ ಖೂನಿ ಮಾಡಿಸಿದನಲ್ಲ. ಕೈ ಕಾಲೆಲ್ಲ ಕಡದು ಬಗದಿದ್ದರಂತಪೊ. ಹ್ಯಾಂಗ ಬದುಕಿದ್ದಳು ನನಗಂತೂ ಹೋಟೆಲಿರ ಮಟ ರೇ ನಬೀ, ಚಾ ಕುಡಿ ಅಂತ ಚಾ ಕೊಡತಿದ್ದಳು. ಒಂದು ದಿನಾನೂ ರೊಕ್ಕ ತಗಂಡಿಲ್ಲ. ಅವಾ ಗಂಡ ಅನ್ನೊ ಧಗಡಾಂಕೆ ಇನ್ನ ಬದುಕೇ ಐದಾನೆ. ಅಲ್ಲಿ ಇಲ್ಲಿ ಭಿಕ್ಕಾ ಬೇಡ್ಕಂತ ತಿರಗತಾನ. ಯಂಥಾ ಹೆಣ್ಣಪ್ಪೋ ಅವಳು ಎಂದು ಮೈ ಮರೆತರು. ನಾನು ಮೆಲ್ಲಗೆ ಜಾಗ ಖಾಲಿ ಮಾಡಿದೆ. ಹಜರತ್ ಸಾಹೇಬರಿಗೂ ಆಕೆಗೂ ಯಾವ ಜನ್ಮದ ಋಣಾನುಬಂಧವೊ, ನಾನೇಕೆ ಅಡ್ಡಿಯಾಗಲಿ?

ನನ್ನ ಮನಸ್ಸೆಲ್ಲ ಒಂದು ರೀತಿಯ ವಿಷಾದದಿಂದ ತುಂಬಿ ಹೋಯಿತು. ಆಕೆಯ ಎಳೆವಯಸ್ಸಿನ ಎಲ್ಲ ಚೆಲ್ಲಾಟವನ್ನೂ ಸಹಿಸಿಕೊಂಡಿದ್ದ ಗಿಚ್ಚಲು ಆಕೆಯನ್ನು ಇಳಿವಯಸ್ಸಿನಲ್ಲೇಕೆ ಖೂನಿ ಮಾಡಿಸಿದ? ಬಹುಶಃ ಆ ವೇಳೆಗೆ ಬದುಕಿನ ಸವಿಯೆಲ್ಲ ಕಳೆದುಕೊಂಡು ಬರೀ ಕಹಿಭಾವ ಅವನಲ್ಲಿ ಉಳಿದುಹೋಗಿ, ಅದಕ್ಕೆ ಪ್ರತೀಕಾರವಾಗಿ ಆಕೆಯನ್ನು ಮುಗಿಸಿದನೆ? ತಾನೇ ಪ್ರೀತಿಸಿ ಪಡೆದ ಹೆಣ್ಣನ್ನೂ ಕತ್ತರಿಸಿ ನೆಲಕ್ಕಿಳಿಸುವ ಕಟುಕನಾಗಿದ್ದನೆ ಗಿಚ್ಚಲು? ವಿಷಾದ ಇನ್ನೂ ಒಂದು ಕಾರಣಕ್ಕೆ- ಅವಳು ಮುದಿ ವಯಸ್ಸಿನಲ್ಲಿ ಎಷ್ಟು ಸುಂದರವಾಗಿ ಕಾಣುತ್ತಿದ್ದಳು ಎಂದು ನೋಡುವ ಭಾಗ್ಯ ಈ ಕಣ್ಣಿಗೆ ಒದಗಲಿಲ್ಲ ಎಂದು. ನಾನು ಚಿಕ್ಕಂದಿನಲ್ಲಿ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದ ಬಿ.ಸರೋಜಮ್ಮ, ಈ ಊರಿನವಳೇ ಆಗಿದ್ದ ಬ್ರಾಂಬರ ಹುಡುಗಿ ಜಮುನಮ್ಮನವರಂಥ ಇಬ್ಬರು ಸುಂದರಿಯನ್ನು ಬಿಟ್ಟರೆ ಬಹುವಾಗಿ ಆ ಎಳೆವಯಸ್ಸನ್ನು ಮೀಟುತಿದ್ದ ಚೆಲುವೆಂದರೆ ಈ ಜಾಲಿಬೆಂಚಿಯದೇ. ಕಣ್ಣ ಪಾರಣೆಯಾಗಿದ್ದ ಮಹಾತಾಯಿ. ಆದರೆ ವಿಷಾದದ ನಡುವೆಯೂ ಒಂದು ಸಮಾಧಾನಕೊಟ್ಟ ಸಂಗತಿಯೆಂದರೆ ನನ್ನ ಜಾಲಿಬೆಂಚಿ ಬದುಕಿದ್ದಾಗ, ಅವಳಷ್ಟೇ ಛಲಗಾತಿಯಾದ ಆ ಐ.ಎ.ಎಸ್. ಕಲೆಕ್ಟರ್ ಆಯಮ್ಮ, ಅವಳ ಚಹಾದಂಗಡಿ, ಶೀಟಿನ ಮನೆ ಒಡೆದು ಹಾಕಿ ನುಚ್ಚುನೂರು ಮಾಡಲಿಲ್ಲ ಅನ್ನುವುದು. ಆ ದೊರೆಸಾನಿಯೇ ಹೋದಮೇಲೆ ಅವಳ ಸಾಮ್ರಾಜ್ಯ ಇದ್ದರೆಷ್ಟು ನೆಲಗಚ್ಚಿದರೆಷ್ಟು?

ಇಲ್ಲಿನ ರಪರಪಾ ಮುಖಕ್ಕೆ ಹೊಡೆದ ಬಿಸಿಲು, ರಾತ್ರಿಯೆಲ್ಲ ಮೈಯನ್ನು ಚಕ್ಕೆ ಎಬ್ಬಿಸುವ ದ್ವಾಮಿ, ಗುಂಡಾಡಿ ಕಾಟ ತಪ್ಪಿಸಿಕೊಳ್ಳಲು ಬಂದ ಎರಡನೇ ದಿನಕ್ಕೆ ಗಿಚ್ಚ ಹೊಡೆಯುವವನು ನಾನು. ಈ ಸಲ ಇನ್ನೆರಡು ದಿನ ಹೆಚ್ಚಿಗೆ ಕಳೆಯಲು ನಿರ್ಧರಿಸಿದ್ದೆ! ಆಹಾ! ಮೋಹವೇ! ಜಾಲಿಬೆಂಚಿಯ ಖಾಸಗಿ ಬದುಕಿನ ವಿವರ ಕಲೆಹಾಕಲು ನಿರ್ಧರಿಸಿದ್ದೆ! ಖರೆ ಅಂದರೆ ನನ್ನ ತಾಯಿಯ ವಯಸ್ಸಿನವಳು ಅವಳು. ಆದರೆ ಕಾಡಿದ್ದು ಸುಳ್ಳಲ್ಲ. ಆದರೆ ಅವಳ ಬಗ್ಗೆ ಒಂದೆರಡು ವಿವರ, ಕಥೆ ಕೇಳಲು ನನ್ನ ಮನಸ್ಸು ಬಯಸಿತ್ತು. ಆದರಿಂದ ಖುಷಿಯಾಗಿತ್ತು. ಇನ್ನೂ ಒಂದೆಂದರೆ ಬರಹಗಾರನೆಂದುಕೊಂಡಿರುವ ನಾನು ಮುಂದೊಂದು ದಿನ ಕಥೆ ಬರೆದು ಕಾಫಿ ಕಾಸು ಗಿಟ್ಟಿಸಬಹುದೆಂದು ಆಸೆ ಮನಸ್ಸಿನಲ್ಲಿದ್ದರೂ ಇದ್ದೀತು!
*
*
*
ಈಗಾಗಲೇ ಹೇಳಿರಬೇಕು ನಿಮಗೆ. ಜಾಲಿಬೆಂಚಿ ಅನ್ನೋದು ಈ ಊರಿಂದ ಇಪ್ಪತ್ತೆರಡು ಮೈಲಿ ದೂರದ ಹಳ್ಳಿ. ಯಾವುದೇ ಬಯಲು ಸೀಮೆ ಹಳ್ಳಿಯಂತೆ ಬರಗಾಲ, ಕ್ಷಾಮ-ಡಾಮರ,ಹಸಿವು- ಬಡತನವೇ ಆಸ್ತಿಯಾಗಿದ್ದ ಹಳ್ಳಿ. ಅಲ್ಲಿನ ಬೇಡರ ಗುಂಪಿನ ಒಂದು ಮನೆಯಲ್ಲಿ ಹುಟ್ಟಿದವಳು ಈಕೆ. ಮೊದಲು ಹುಟ್ಟಿದ ಕೂಸಿಗೆ ಲಕ್ಷ್ಮಮ್ಮ ಅಂಥ ಹೆಸರಿಟ್ಟರು. ಆಮೇಲೂ ಇಲ್ಲೊಂದು ಹೆಣ್ಣು ಹುಟ್ಟಿದರೆ ಹೆಸರಿಗೇನು ಮಾಡೋದು? ಮೊದಲು ಹುಟ್ಟಿದಕ್ಕೆ ಪೆದ್ದ ಲಕ್ಷ್ಮಮ್ಮ ಅಂಥ ಕರೆದು ಇದಕ್ಕೆ ಚಿನ್ನ ಲಕ್ಷ್ಮಮ್ಮ ಅಂದರು. ಕಳ್ಳಬಟ್ಟಿ ಕಾಯಿಸೋದು, ಇದ್ದ ಜಾಲಿಮರಗಳನ್ನು ಕಡಿದು ಹೊರೆ ಕಟ್ಟಿ ಮಾರೋದು. ಹೀಗೆ ನಡೆಯಬೇಕು ಆ ಬೇಡರ ಬದುಕು. ಅಲ್ಲೆ ಹೇಗೋ ಈ ಕೂಸೂ ಬೆಳೆಬೆಳೆದು ದೊಡ್ಡದಾಯಿತು. ನಮ್ಮ ಪಟ್ಟಣಗಳಲ್ಲಿಯಾದರೆ ಮಕ್ಕಳನ್ನು ಬೆಳೆಸೋದೆ ಒಂದು ಕಸುಬು. ಹಳ್ಳಿಗಳಲ್ಲಿ ಅದಕ್ಕೆಲ್ಲ ಸಮಯವೆಲ್ಲಿಯದು. ಹುಟ್ಟುದವು ಹೇಗೋ ಬದುಕಿ ಬೆಳೆದುಕೊಳ್ಳುತ್ತವೆ. ಅದು ಐವತ್ತು ವರ್ಷದ ಹಿಂದಿನ ಬೆಳೆಯೋ ಆಟ ಹೇಗಿತ್ತೊ ಊಹಿಸಿ. ಮೈ ಮೇಲೆ ಬಟ್ಟೇ ಅಂಥ ಒಂದು. ಜಡೆಗಟ್ಟಿದ ಹೇನುಮಯ ತಲೆ, ಗೊಣ್ಣೆ… ಹೀಗೆ ಇದ್ದಿರಬೇಕು

ಆದರೆ ಹರೆಯಕ್ಕೆ ಬಂದಾಗ ಬೇಡರ ಹಟ್ಟಿಯದೇ ಈ ಕೂಸು ಅಂಥ ಅನ್ನೋಹಾಗೆ ಅದರೆ ಚೆಲುವು ಕಣ್ಣು, ಮೂಗು, ಆ ಸಣ್ಣಕ್ಕಿ ಹಲ್ಲು, ಅದೇನು ತುಟಿಗಳೋ. ಎಲ್ಲರ ಕಣ್ಣು ಬೀಳತೊಡಗಿತು. ಹಾಗೆ ಮೀಸೆ ಮೊಳಕೆ ಬಡೀತಿದ್ದ ಗಿಚ್ಚಲುನ ಕಣ್ಣೂ ಬಿತ್ತು. ಅವನೂ ಒಳ್ಳೆ‌ಏ ಎತ್ತರ, ಎತ್ತರಕ್ಕೆ ತಕ್ಕ ಮೈ, ವಯಸ್ಸಿಗೆ ತಕ್ಕ ತರುಣ ನಗೆ ಎಲ್ಲ ಸೇರಿ ಆಕೆ ಸುಂದರಾಂಗಿಯಾದರೆ ಈತ ಸುಂದರಾಂಗನೆ ಸೈ. ಒಬ್ಬರಿಗೊಬ್ಬರು ಕೆರೆ ದಂಡಿಯಲ್ಲಿ ನೋಡಿದರೆ ಮೈ ನವಿರೇಳುತ್ತಿತ್ತು. ಗಾಳಿ ಕಿವಿ ಹೊಕ್ಕಾಗೆ ಇಬ್ಬರೂ ಮೈ ಮರೆತು ನಿಲ್ಲುತ್ತಿದ್ದರು. ಗಂಟೆಗಳು ಕಳೆದಾದ ಮೇಲೆ ಆತ ಒಣಗಿದ ಬಟ್ಟೆನೆಲ್ಲ ಗಂಟು ಕಟ್ಟಿ ಬೆನ್ನಿಗೆ ಹೊತ್ತುಕೊಂಡು ನಡೆಯುವವನು. ಇವಳು ಜಾಲಿ ಹೊರೆಯನ್ನು ತಲೆಗೆ ಹೆಟ್ಟಿ ನಡೆಯುವವಳು. ತಿರುತಿರುಗಿ ನೋಡುವುದಂತೂ ಸೈಯೇಸೈ. ಒಳ್ಳೆ ವಯಸ್ಸು. ಕಾಮದೇವನ ಆಟ.

ಆ ಹಳ್ಳಿ ಅನ್ನೋ ಹಳ್ಳಿಯಲ್ಲಿ ಮನೆ ಇದ್ದದ್ದೇ ಮೂರು ಮೂವತ್ತು. ಮೂರು ಬ್ರಾಂಬ್ರದ್ದಾದರೆ ಇಪ್ಪತ್ತು ಬೇಡರವು. ಉಳಿದಿದ್ದರಲ್ಲಿ ಸಕಲೆಂಟು ಜಾತಿಗಳೂ ಸೇರುತ್ತಿದ್ದವು. ಬೆಳಿಗ್ಗೆಯಿಂದ ಸಂಜೆವರೆಗೆ ಒಬ್ಬರ ಮುಖ ಇನ್ನೊಬ್ಬರು ನಾಲ್ಕು ಸತಿಯಾದರೂ ನೋಡುವ ಅನಿವಾರ್ಯ. ಇಂಥ ಸಣ್ಣ ಕಗ್ಗಾಡಲ್ಲಿ ಅದೂ ಹರೆಯದ, ಹಾದರದ ಸುದ್ದಿ ಕಿವಿಕಿವಿ ಮುಟ್ಟೋದು ತಡವೇ? ಹಾಗೇ ಆಯಿತು. ಬೇಡರ ಹಟ್ಟಿಜನ ಕುದ್ದೆದ್ದರು. ಆ ಅಗಸರ ಹುಡುಗನೆಲ್ಲಿ, ಈ ಪೌರುಷದ ನಾಯಕ ಜಾತಿಯ ಹೆಣ್ಣೆಲ್ಲಿ? ನರಕಿ ಎಯ್ಯಂಡ್ರಾ (ಕಡೆದು ಹಾಕ್ರಲೇ) ಯಾರೋ ಕುಡಿದ ರೊಚ್ಚಿನಲ್ಲಿ ಕೂಗಿದರು. ಹೇಗಿದೆ ನೋಡಿ. ಇವರಿಗೂ ತಿನ್ನಲು ನಾಲ್ಕು ಮುಷ್ಠಿ ಚೋಳ, ನವಣೆ ಗತಿಯಿಲ್ಲ. ಪಾಪ, ಇದ್ದ ಒಂದೇ ಅಗಸರ ಕುಟುಂಬಕ್ಕೂ ಅದೇ ಗತಿ. ಆದರೆ ಜಾತಿಯ ಪ್ರತಿಷ್ಠೆ ಎಲ್ಲಿ ಹೋದೀತು? ಮನಮೇಮಿಂ ಆ ಸಾಕಲೋಡು ಎಮಿ? (ನಾವೇನು, ಆ ಅಗಸರ ಹುಡಗನೇನು) ಅನ್ನುವ ಪ್ರತಿಷ್ಠೆ. ಕುಲದ ರೋಷ, ರೋಷಕ್ಕೆ ತಕ್ಕ ಆಟ ಗೊತ್ತಿದ್ದ ಚಿನ್ನ ಲಕ್ಷ್ಮಮ್ಮ ಅನಾಹುತವನ್ನು ಗ್ರಹಿಸಿದಳು. ಯಾವುದೇ ಗಳಿಗೆಯಲ್ಲೂ ಅಗಸರ ಗಿಚ್ಚಲು ಇವರ ಕುಡಗೋಲಿಗೆ ತುಂಡಾಗಿ ಮಣ್ಣು ಸೇರಬಹುದು ಎಂದು ಗೊತ್ತಾಗಿ ಹೋಯಿತು.

ಸರಿ ಹೊತ್ತಿನಲ್ಲಿ ಎದ್ದವಳೇ, ಆತನ ಮನೆಗೆ ಕದ್ದು ಹೋದವಳೇ ಮೆಲ್ಲಗೆ ಕೂಗಿ ಕರೆದಳು. ಏನೇ ಹೇಳಿ, ಹರೆಯಕ್ಕೆ ವಿಚಿತ್ರ ಸಂವೇದನೆ ಎಂದು. ಇವಳೊಂದಿಗೇ ಕನಸಿನಲ್ಲಿ ಮಾತನಾಡುತ್ತಿದ್ದೆ ಎಂಬಂತೆ ದನಿ ಕೇಳಿದ್ದೇ ಎದ್ದು ಬಂದ ಗಿಚ್ಚಲು. ನಿಜದಲ್ಲೂ ಅವಳನ್ನೇ ಕಂಡು ದಂಗಾದ. ಲಕ್ಷ್ಮಮ್ಮ ಒಂದೇ ಮಾತಲ್ಲಿ – ನಡೀ ಎಲ್ಲನ ಹೋಗಮ್ಮು. ಇಲ್ಲಿ ಉಳಿಗಾಲಿಲ್ಲ, ಎಂದು ಅವನನ್ನು ಎಳೆದಳು. ಆತ ಆಯಸ್ಕಾಂತಕ್ಕೆ ಮರುಳಾಗಿ ಮರುಮಾತಾಡದೆ ರಾತ್ರಿ ಸರೊತ್ತಿನಲಿ ಅವಳ ಹಿಂದೆ ನಡೆದೇಬಿಟ್ಟ! ಈಗಿನಂತೆ ಡಾಂಬರು ರೊಡ್ಡುಗಳೇ? ಅದೊಂದು ಅಡವಿಯ ಹಾದಿ. ಕತ್ತಲೆ. ಜಾಲಿಮುಳ್ಳೂ ಗಿಡಗಳು. ನರಿಗಳ ಕೂಗು. ಇಡೀ ರಾತ್ರಿ ನಡೆಯುವುದೇ ನಡೇಯುವುದು. ಬಹುಶಃ ಆ ಐದಾರು ತಾಸುಗಳ ಆ ಆತಂಕದ ನಡಿಗೆಯಲ್ಲೂ ಒಂದೋ ಎರಡೋ ಬೆಚ್ಚಗಿನ ಪ್ರೀತಿ ವಿಶ್ವಾಸದ ಮಾತುಗಳನ್ನು ಅವರು ಆಡಿಕೊಂಡಿರಬೇಕು.

ನಸುಕಿಗೆ ಈ ಊರಿಗೆ ಬಂದು ಮುಟ್ಟಿದರು. ಇಲ್ಲೇನು ಬಂಧುವೆ, ಬಳಗವೆ? ಆಗಿನ್ನೂ ಬಸ್ಸುಗಳ ಕಾಲ ಅಲ್ಲ. ಜಟಕಾ ನಿಲ್ಲಿಸುತ್ತಿದ್ದ ಜಾಗದಲ್ಲಿ ಬಂದು ಕೂತರು. ಬೆಳಗಾಯಿತು. ಮಧ್ಯಾಹ್ನವೂ ಆಯಿತು. ಸಂಜೆ, ರಾತ್ರಿಗಳೂ ಬಂದವು. ಇವರ ಬಳಿ ಕಾಸುಗೀಸು ಎಂಥದ್ದು? ಹಳ್ಳೀ ಮುಕ್ಕರು. ಸರಿ ಅವತ್ತು ಉಪವಾಸ. ಅಲ್ಲೇ ಮಲಗಿದರು. ಮೇಮೇಲೆ ಬಟ್ಟೆ ಇದ್ದದ್ದೇ ಹೆಚ್ಚಿನದು. ಹಾಸಿ ಹೊದೆಯಲು ಎಲ್ಲಿಂದ ತಂದಾರು? ಎರಡನೆಯ ದಿನ ಮೈ ಚಳಿ ಬಿಟ್ಟೂ ಅಕ್ಕಪಕ್ಕ ಓಡಾಡಿದರು. ಅಲ್ಲೇ ಇದ್ದ ಬಾವಿಯಿಂದ ಸೇದಿ ನೀರು ಕುಡಿದರು. ಮಲಗಿದರು. ಮೂರನೇ ದಿನಕ್ಕೆ ಹಸಿವಿನಿಂದ ಕಂಗೆಟ್ಟು ಹೆಣವಾಗಿದ್ದರು. ಜಟಕಾ ಸ್ಟ್ಯಾಂಡಿನ ಯುವಕನೊಬ್ಬ ಯಾವೂರು, ಎತ್ತ ಎಂದು ವಿಚಾರಿಸಿದ. ಇವರು ದೊಡ್ಡೂರಿಗೆ ಬಂದದ್ದು ಇದೇ ಮೊದಲು. ಹೆದರಿಕೆಯಲ್ಲೇ ಎಲ್ಲ ಹೇಳಿದರು.

ಆತ ತನ್ನ ಜೇಬಿನ ಆಣೆ ದುಡ್ಡಲ್ಲಿ ಚಹಾ ಕುಡಿಸಿ, ನಾಸ್ಟಾ ಮಾಡಿಸಿದ. ಎರಡು ದಿನ ಕಾದು ಕಂಗೆಟ್ಟ ಹೊಟ್ಟೆಗೆ ಮಂಡಾಳು ಒಗ್ಗರಣೆ ಬಿದ್ದಾಗ ಇಬ್ಬರಿಗೂ ಕೈಕಾಲು ಆಡಿದವು. ನೀವು ಇಲ್ಲಿರದು ಭೇಷಲ್ಲ. ಭಾರೀ ಹೊಲಸು ಜಾಗ ಇದು. ಆ ತಿಂಡ್ಲೂರು ನರನೆಮ್ಲು ಕಣ್ಣೆಗೆ ಬೀಳ ಮದ್ಲು ಫರಾರ್ ಆಗ್ರೀ ಎಂದು ಆ ಜಟಕಾ ಯುವಕ ಗಿಚ್ಚಲುಗೆ ಹೇಳಿದ. ಗಿಚ್ಚಲು ತಲೆಯಾಡಿಸುತ್ತಿರುವಾಗಲೇ ಯಾರಾತ ನರಸಿಮ್ಲು ಕೇಳಿದ್ದು ಲಕ್ಷ್ಮಮ್ಮ. ಐ ನಿನಗ್ಯಾಕ ಬ್ಯಾಡ ಬಿಡು ಬೆಹನ್. ಆತ ಹರಾಂ ಖೋರ್ ಸುವ್ವರೇಳು. ಭಾರಿ ಕೆಟ್ಟೋನು. ಇಲ್ಲೆಲ್ಲ ಅವನ ಮಾತೇ ನಡೆಯೋದು ಅಂದ ಜಟಕಾ ಯುವಕ. ಎಲ್ಲಿರತಾನು? ಪ್ರಶ್ನೆಗೆ, ಬಂಡಿಮೋಟು-ಬಂತು ಉತ್ತರ. ಲಕ್ಷ್ಮಮ್ಮ, ಏಯಿ, ಗಿಚ್ಚಲು, ಇಲ್ಲೇ ಕುಂದ್ರು. ನಾ ಬರವರ್ಗೂ ಯ್ಯಲ್ಲೂ ಹ್ವಾಗಬ್ಯಾಡ ನನ್ನಾಣೆ ಐತಿ ನಿಂಗ, ಎಂದು ಎದ್ದು ನಡದೇಬಿಟ್ಟಳು.

ಬಂಡಿಮೋಟಿನ ಅಡ್ಡೆಯಲ್ಲಿ ತಿಂಡ್ಲೂರು ನರಸಿಮ್ಲು ತನ್ನ ಹುದ್ದರಿಗಳ ಜತೆ ಕೂತು ಬೀಡಿ ಸೇದುತ್ತಿದ್ದ. ಹರೆಯದ ಹುಡುಗಿ, ಎದೆ ನಡುಗಿಸುವ ಕುಖ್ಯಾತಿಯ ಆಸಾಮಿಯೆದುರು ನಿಲ್ಲುವುದೆಂದರೆ? ಏಯ್! ಯಾವುರಂಗೆ? ರುವಾಬು ಹಾಕಿದ. ಜಾಲಿಬೆಂಚಿ-ಉತ್ತರ. ಏನ್ ಕಥೆ? ಹೇಳಿದಳು. ಅದಕ್ಕೇನು ಮಾಡಂತಿ? ಹ್ಯಂಗನ ಬದಕತೀವಿ. ರೋಸ್ಟು ಜಾಗಾ ಕ್ವಡಸು ಜಟಕಾ ನಿಂದರತಾವಲ್ಲ, ಅಲ್ಲಿ. ಅಂದಳು. ಅದಲ್ಲಾ ಸುಮ್ನೆಹ್ಯಂಗ ಆಗ್ತೈತ್ಯಂಗೇ? ಮೀಸೆ ಹುರಿಮಾಡಿದ ನರಸಿಮ್ಲು. ಹುದ್ದರಿಗಳಿಗೆ ಹಿಗ್ಗು.

ಚಿನ್ನಲಕ್ಷ್ಮಮ್ಮನಿಗೆ ಅರ್ಥವಾಯಿತು. ಏಯಿ, ರೆಡ್ಡಿ, ನನ್ನ ಮೈ ಬೇಕೇನೊ ನಡೀ ಎಂದಳು. ಅವನೇನು ಧರ್ಮರಾಯನಲ್ಲ. ನಡೀ ಎಂದ. ಕಾಟೇಗುಡ್ಡ ಹತ್ತಿದರು. ಅವನಿಗೆ ಚೆಂದದ ಹುಡುಗಿ ಸುಖಕ್ಕೆ ಸಿಕ್ಕಳು. ಈಕೆಗೆ ಬದುಕು ಸಿಕ್ಕಿತು. ಎದ್ದುಬಂದದ್ದೇ, ತನ್ನ ಹುದ್ದರಿಯಲ್ಲೊಬ್ಬನಿಗೆ, ರೆಯ್, ಆ ಜಾಲಿಬೆಂಚಿಕಿ ಏಮಿ ಕಾವಾಲ ಚೂಡರಾ, ಅಂದ. ಲಕ್ಷ್ಮಮ್ಮ ಆ ಕ್ಷಣದಲ್ಲಿ ಜಾಲಿಬೆಂಚಿಯಾಗಿ ಇಲ್ಲೊಂದು ಸೂರು ಗಿಟ್ಟಿಸಿಕೊಂಡಳು. ಮೆಚ್ಚಿದ ಹುಡುಗನೊಂದಿಗೆ ಮದುವೆಯಾಗಿ ಬಾಳುವೆ ಮಾಡಲು ಬಂದವಳು ಕುಖ್ಯಾತನೊಬ್ಬನಿಗೆ ಮೀಸಲು ಮುರಿದಿದ್ದಳು! ಹುದ್ದರಿಯೊಂದಿಗೆ ಹೆಜ್ಜೆ ಹಾಕುವಾಗ, ಲಕ್ಷ್ಮಮ್ಮ ನರಸಿಮ್ಮುವನ್ನು ಉದ್ದೇಶಿಸಿ ಕೂಗಿ ಹೇಳಿದಳು. ಇದು ಯಾರಿಗೂ ಗೊತ್ತಾಗಬಾರದು, ನನ್ನಾಣಿ. ನರಸಿಮ್ಲು ಮೀಸೆ ಹುರಿಮಾಡಿಕೊಂಡು ಎಲ್ಲರನ್ನೂ ಒಳಗೊಂಡಂತೆ, ವಿನಿಪಿಚ್ಚಿಂದೆರ್ರಾ? (ಎಲ್ಲರಿಗೂ ಕೇಳಸ್ತಾ?) ಅಂದ. ಎಲ್ಲರೂ ತಲೆ ಹಾಕಿದರು. ಕಟುಕನಿಗೂ ಏನೋ ನಿಯತ್ತು!

ಲಕ್ಮಮ್ಮನ ಜಾದೂವಿಗೆ ಗಿಚ್ಚಲು ಮರುಳಾಗಿದ್ದ. ಹಗಲು ಆರೈಕೆ ಮಾಡುತ್ತಾಳೆ. ರಾತ್ರಿ ಮನಸ್ಸು ತೃಪ್ತಿಯಾಗುವಂತೆ ರಮಿಸುತ್ತಾಳೆ. ಜತೆಗೆ ಚಹಾದಂಗಡಿಯನ್ನು ತಾನೇ ಸಂಭಾಳಿಸುತ್ತಾಳೆ. ಪುರುಷನಿಗೆ ಇನ್ನೇನು ಬೇಕು? ದೇಹಸುಖ, ಸೋಮಾರಿ ಸುಖ, ಎರಡೂ ದಕ್ಕಿದ್ದವು. ಊರವರಿಗೆಲ್ಲ ಆಕೆ ಜಾಲಿಬೆಂಚಿಯದರೂ ಇವನಿಗೆ ಲಚ್ಚುಮಿಯೇ. ಆಕೆ ಓಡಾಡಿ, ಮಾತಾಡಿಸಿ ಹತ್ತು ಗಿರಾಕಿಗಳು ತನ್ನ ಚಹಾದಂಗಡಿಗೆ ಬರುವಂತೆ ಮಾಡಿದಳು. ನೋಡಲು ಚೆಲುವೆ, ಜೊತೆಗೆ ಎಲ್ಲರೂ ಒಂದೇ ಎನ್ನುವ ರೀತಿ ಚಹಾದಂಗಡಿಯಲ್ಲಿ ಆತಿಥ್ಯ. ಅವಳ ವ್ಯಾಪಾರ ಕುದುರಿತು. ನಿಧಾನಕ್ಕೆ ಹೆಣ್ಣೆಂಗಸು ಅಂಬೋಳು ಅಂಗಡಿ ಇಡದು ಕೇಳೀರೇನಲೇ ಎಂದು ಕಿವಿಯಿಂದ ಕಿವಿಗೆ ಮಾತು ಹಬ್ಬಿ ಜನ ಹುಚ್ಚರಂತೆ ಅವಳ ಅಂಗಡಿಯ ಚಹಾ, ಸೊಂಟಿ ಕಾಪಿ, ಹರೇರಾ, ಒಗ್ಗರಣಿ ಸವಿಯಲು ಬರುವವರೇ. ನೆನಪಿಡಿ, ಆಕೆ ತಾನು ಬೆಳೆಯಲು, ಬಲಿಷ್ಠವಾಗಲು ಅಡ್ಡಪಡಿಸುವ ಕೆಲವು ಬಲಾಢ್ಯರೊಂದಿಗೆ (ಅವರೂ ಬೆರಳೆಣಿಕೆಯವರು) ಸೆರಗು ಒದರಿಕೊಂಡಳೇ ಹೊರತು ಪುಡಿ ಜನರಿಗಲ್ಲ. ಉಳಿದವರು ಅವಳಿಗೆ ಹುಳದಂತೆ!

ಆಕೆ ಬೆಳೆದಳು-ಭೀಮಪ್ಪ ಸರ್ಕಲ್, ಕುಂಟೆಗಡ್ಡೆ, ಜಟಕಾ ಸ್ಟ್ಯಾಂಡ್ ಅವಳಿಗೆ ಮುಜುರೆ ಹಾಕುವಷ್ಟು. ತನ್ನ ಕುಲಕಸುಬಾದ ಬಟ್ಟಿಯನ್ನು ಇಲ್ಲಿ ಮಾಡಿದರೆ ಹೇಗೆ ಅನ್ನಿಸಿದ್ದೇ ಅದನ್ನೂ ಸುರು ಹಚ್ಚಿಕೊಂಡಳು. ಈಗ ಅವಳ ಅಮದಾನಿ, ವರ್ಚಸ್ಸು ಇನ್ನೂ ಬೆಳೆಯಿತು. ಇಲ್ಲೇ ಶುರುವಾದದ್ದು ತಿಂಡ್ಲೂರು ನರಸಿಮ್ಲುವಿಗು ಅವಳಿಗೂ ತಿಕ್ಕಾಟ. ಅವನೂ ಅದೇ ದಂದೆಯವನು. ಸಂಘರ್ಷ ಸುದೀರ್ಘಕ್ಕೆ ಹೋಯಿತು. ನರಸಿಮ್ಲು ರೇಗಿ ರೋಸಿ ಹೋದ. ಈಗಾಗಲೇ ಪಳಗಿದ್ದ ಲಕ್ಷ್ಮಮ್ಮ ಇನ್ನೊಂದು ಪಟ್ಟು ಹಾಕಿದಳು. ರೆಡ್ಡಿಯನ್ನು ಸಂಧಾನಕ್ಕೆ ಕುಂಟೆಗದ್ಡೆಗೆ ಮಾದಕ ಸಂಜ್ಞೆಯ ಮೂಲಕ ಆಹ್ವಾನಿಸಿದಳು ಹೆಣ್ಣಿನ ಕಾಮ ತುಂಬಿದ ಕನ್ಣುಗಳಿಗೆ ಕರಗದ ಗಂಡಸು ಅನ್ನುವ ಗಂಡಸು ಯಾವನಿದ್ದಾನೆ? ಈ ರೆಡ್ಡಪ್ಪ ಮೀಸೆ ಹುರಿಮಾಡಿಕೊಳ್ಳುತ್ತ ಹೊಸಬತ್ಟೆ ತೊಟ್ಟು ಹೋದ. ಆಹಾ! ಎನ್ನುವ ಚೆಲುವೆ ಕಾಲು ಎತ್ತುತ್ತಾಳೆಂದರೆ ಸುಮ್ಮನೆಯೇ? ಈ ಮೊದಲು ರುಚಿ ಬೇರೆ ನೋಡಿದ್ದ!

ಆದರೆ ಆ ರಾತ್ರಿ ತಿಂಡ್ಲೂರು ನರಸಿಮ್ಲು ರೆಡ್ಡಿ ಮಚ್ಚಿನ ಹೊಡೆತದ ರುಚಿ ಕಂಡಿದ್ದ. ಕುಂಟೆಗಡ್ಡೆಯ ನೀರು ಲಕ್ಷ್ಮಮ್ಮನ ಮೊದಲ ಕೂನಿಯ ರಕ್ತದ ಕಲೆಗಳನ್ನು ತೊಳೆಯಿತು! ನರಸಿಮ್ಲು ಫನಾ ಆಗ ಸುದ್ದಿ ಊರ ಜನಕ್ಕೆಲ್ಲಾ ದಂಗು ಬಡಿಸಿತು. ಯಾರು ಮಾಡಿದರು, ಹೇಗೆ, ಯಾವಾಗ ಎಂದು ಕಥೆಗಳನ್ನು ಕಟ್ಟಿ ಹಬ್ಬಿಸಿದರು. ಆದರೆ ಸಾಕ್ಷಿಗಳೇ ಇರದ ಬರಿ ಬಾಯಿ ಮಾತಿನಲ್ಲಿರುವ ಕಥೆ ನಂಬುವುದು ಹೇಗೆಂದು ಪ್ರಭುತ್ವದವರೂ ಸುಮ್ಮನಾದರು! ಇಷ್ಟಕ್ಕೂ ಆತನೊಬ್ಬ ಪೀಡೆಯಾಗಿದ್ದ. ಜನರ ಹೆದರಿಕೆಯಿಂದಾಗಿ ಬೆಳೆದು ಬೃಹತ್ತಾದ ಹುಳ! ಉದುರಿ ಬಿದ್ದದ್ದೇ ಈಕೆಯ ಸರಾಯಿ ದಂಧೆ ಚಿಗುರಿತ್ತು!

*
*
*

ಇದು ಲಕ್ಷ್ಮಮ್ಮಳ ಬದುಕಿನ ಏರುಗಾಲು. ದುಡ್ಡು, ಬೆಂಬಲದ ಜನ. ಪ್ರೀತಿಸಿದ ಗಂಡ. ಆದರೆ ಗಿಚ್ಚಲು ಮೊದಲಿನವನಾಗಿ ಉಳಿದಿರಲಿಲ್ಲ. ಅವಳ ಪ್ರೀತಿ. ಏಕೈಕ ನಿಷ್ಠೆ ಅವನಿಗೇ ಮೀಸಲಾಗಿದ್ದರೂ ಅವನು ಆಕೆಯ ಕುಖ್ಯಾತಿಯಿಂದ ಅವಮಾನದಲ್ಲಿ ಕುದಿಯುತ್ತಿದ್ದ. ನಿನ್ನಮ್ಮನಾಡ. ನೀನು ಸೂಳೀ, ರಂಡೀ ಎಂದು ಒದರಾಡುತ್ತಿದ್ದ.

ಅದ್ಯಲ್ಲಾ ಸುಳ್ಳೋ ಗಿಚ್ಚಾ. ನಾ ಮಾಡಿದ್ದೆಲ್ಲಾನಿನ್ನ ಸುಖಕ್ಕೆ. ನನ್ನ ಸುಖಕ್ಕೆ. ನಮ್ಮ ಸಂಸಾರಕ್ಕ ಎಂದು ರಮಿಸಿ, ತೆಕ್ಕೆಗೆ ತೆಗೆದುಕೊಂಡರೆ ಆತ ಚಿಕ್ಕ ಮಕ್ಕಳಂತೆ ಅಳಲು ಪ್ರಾರಂಭಿಸಿಬಿಡುತ್ತಿದ್ದ, ಇಲ್ಲ, ನೀನು ರಂಡೀ, ಎಲ್ಲಾರ ಜತಿಗೂ ಮಕ್ಳಂತೀದಿ. ಅದಕ್ಕೆ ನಮಗ ಮಕ್ಕಳ ಆಗವಲ್ಲವು ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದ. ಲಕ್ಷ್ಮಮ್ಮ ಆಗ ಸತ್ಯಕ್ಕೂ ಎದೆಯೊಡೆದು ತನ್ನ ಪಾಪದ ಬದುಕನ್ನು ಹಳಿಯುತ್ತ ಅವನನ್ನು ಎದೆ ಮೇಲೆ ಹಾಕಿಕೊಂಡು ಆಗತಾವ ಆಗತಾವ ಅನ್ನುತ್ತಿದ್ದಳು.

ಗಿಚ್ಚ, ಲಕ್ಷ್ಮಮ್ಮ ಈ ಊರಿಗೆ ಬಂದು ಈಗಾಗಲೇ ವರ್ಷ ವರ್ಷಗಳೇ ಕಳೆದಿದ್ದವು. ಅವರಿಗೆ ಮುಂದೆಯೂ ಮಕ್ಕಳಾಗಲಿಲ್ಲ. ಐಯ್! ಜಾಲಿಬೆಂಚೆ ಗಂಡ ಬಂದು ಕುಂತ. ನಿಂತ. ಬೀಡಿ ಸೇದ್ದ ಎಂದು ಜನವಾರಾಡುವುದು ಅವನಿಗೆ ಅಸಹ್ಯವೆನ್ನಿಸುತ್ತಿತ್ತು. ಆದರೆ ಮಾಡುವುದೇನು? ಅವಳ ಪ್ರಭಾವವೇ ಹಾಗಿತ್ತು. ಅಲ್ಲದೆ ಆತನೊಬ್ಬ ಸಾದಾ ಮನುಷ್ಯನಾಗಿದ್ದ. ಅವಳಿಗೆ ಆತನ ಮೇಲಿರುವಷ್ಟೇ ಪ್ರೀತಿ ಇವನಿಗೂ ಆಕೆಯ ಮೇಲೆ. ಹೀಗೆಯೇ ಸಾಗಿತ್ತು ಅವರ ಬದುಕು. ಇವಳನ್ನು ಬಿಟ್ಟು ಅವ ಎಲ್ಲಿ ಹೋಗಿ ಬದುಕಿಯಾನು?

ಕುಂಟೆಗುಡ್ಡೆಯಲ್ಲಿ, ಸರ್ಕಲ್ಲಿನಲ್ಲಿ ಲಕ್ಷ್ಮಮ್ಮನ ವರ್ಚಸ್ಸು ಎದ್ದು ಕಾಣುತ್ತಿತ್ತು. ದಿನದಿನಕ್ಕೂ ಹೆಚ್ಚುವ ಪ್ರಭಾವ. ಗಡ್ಡೆಯ ಮನೆಮನೆಯವರು ತಮ್ಮ ಸಮಸ್ಯೆಗಳನ್ನು ಈಕೆಯ ಪಂಚಾಯತಿಗೆ ತರುತ್ತಿದ್ದರು. ಇವಳ ಪೈಸಲಾ ಆದರೆ ಮುಂದೆ ತಕರಾರು ಏಳುವಂತಿರಲಿಲ್ಲ. ಇವಳ ವ್ಯಾಪಾರ ಚಹಾದಂಗಡಿಯಿಂದ ಕಳ್ಳಬಟ್ಟಿ, ಕಳ್ಳಬಟ್ಟಿಯಿಂದ ದೋ ನಂಬರ್ ಮಟ್ಕಾವರೆಗೆ ಹಬ್ಬಿತ್ತು! ಪ್ರಭುತ್ವದ ಜನ, ಅಧಿಕಾರದಲ್ಲಿರುವವರು, ನಾಯಕರು ಗುರ್ತು-ಪರಿಚಯದವರಾದರು. ಇಡೀ ಕುಂಟೆಗಡ್ಡೆಯ ರಾಜಕೀಯವನ್ನು ಈಕೆ ನಿಯಂತ್ರಿಸುತ್ತಿದ್ದರಿಂದ ಶಾಸಕರಿಂದ ಮೊದಲು ಮಾಡಿ ಕೌನ್ಸಲರ್‌ಗಳವರೆಗೆ ಯಲೆಕ್ಷನ್ ಬಂದರೆ ದುಡ್ಡಿನ ಗಂಟು ಹಿಡಿದು ದೊರೆಸಾನಿ, ದೊರೆಸಾನಿ, ಎಂದು ಕೈಮುಗಿಯುತ್ತಿದ್ದರು.

ಹಿಂದೆ ಆಗಾಗ ಮೀಸೆ ಚಿಗುರತೊಡಗಿದ ಪಡ್ಡೆ ಹುಡುಗರ ಮುಠಾ! ಇವಳ ಕಣ್ಸನ್ನೆಗೇ ಕಾಯುತ್ತ, ಅವಳ ರಕ್ಷಣೆಗೆಂದು ಹಿಂದೆಮುಂದೆ ಓಡಾಡುವರು. ಈಕೆ ಎಲಡಿಕೆ, ತಮಾಕು ನಮುಲುತ್ತ ಸಿಗರೇಟು ಸೇದುತ್ತ, ತನ್ನ ಬಟ್ಟಿಯಲ್ಲೇ ಕಾಯುಸಿದ ಸಾರಾಯಿ ಗುಟುಕರಿಸುತ್ತ, ತನ್ನದೇ ಹೋಟೆಲಿನ ಚಹಾ ಸೀವುತ್ತ ಯೋಜನೆಗಳನ್ನು ರೂಪಿಸುವವಳು.

ರೆಯ್, ವಂಡ್ರಿ, ರೆಯಾ, ಗಾಡಿದಿ, ಹುಂಡೆ ಎಂದು ಹುಡುಗರ ಹೆಸರು ಕರೆದರೆ ಏನೋ ಮಸಲತ್ತು ಇದೆಯೆಂದೇ! ಏಮಿ ದೊರೆಸಾನಿ ಅನ್ನಬೇಕು ಆ ಹುಡುಗರು. ವಾಡು ಚಾಲಾ ಗಾಂಡ್ನಕ್ಕರಾಲು ದೆಂಗುತುನ್ನಾಡು. (ವನದು ಅತಿಯಾಯಿತು) ಈಕೆ ಹೇಳುತ್ತಾಳೆ. ಏಮಿ ಚೆಯ್ಯಾಲಿ… ಅವರಲ್ಲೊಬ್ಬ ಕೇಳುತ್ತಾನೆ ವಾಡಿ ಕಾಳ್ಳು ನರಕಂಡ್ರ, ನಾ ಬಟ್ವಾಗಾಡು (ಅವನ ಕಾಲು ಕಡಿಯೊ ಹಲ್ಕಟ್ ನನ್….) ಅಂದರೆ ಅಕ್ಷರಶಃ ಆಣೈ ಪಾಲನೆ. ಆವ ಅಂಗ ಹೇಳಿದರೆ ಆ ಅಂಗ! ಎಪ್ಪುಡು (ಯಾವಾಗ?). ಬೇಸ್ತವಾರಂ ಸಾಯಂತ್ರಂ…. ಅಂದು ಆಕೆ ಫರ್ಮಾನು ಹೊರಡಿಸಿದರೆ ಹುಡುಗರು ಎದೆಬಾಕು, ಮಚ್ಚು, ಕತ್ತಿಗಳ ಸಾಮುಹಚ್ಚಿ ತಯಾರಾಗಿ ಇಟ್ಟಿರುತ್ತಿದ್ದರು. ಶಿಕ್ಷೆಗೆ ಒಳಗಾಗುವವನಿಗೆ ಯಾಕೀ ಶಿಕ್ಷೆ ಎಂಬುದು ಗೊತ್ತಾಗಬೇಕು ಅಂಬುವುದು ದೊರೆಸಾನಿಯ ನಿಯಮ. ನಾಲ್ಕೊ ಐದೊ ಮೂಠಾದ ಹುಡುಗರು ನಿಶ್ಚಿತ ವ್ಯಕ್ತಿ ಬಳಿ, ನಿಶ್ಚಿತ ವೇಳೆಗೆ ಹೋಗುವುದು ನಮ್ಮ ದೊರೆಸಾನಿಗೆ ಇಂಥಾ ಅನ್ಯಾಯ ನಿನ್ನಿಂದ ಆಗಿದೆ ಎಂದು ಹೇಳಿ ತಮ್ಮ ಕೆಲಸ ಪೂರೈಸುವುದು. ಹೀಗೆ ಕನಿಷ್ಠ ಹತ್ತು ಖೂನಿ ಮಾಡಿಸಿದ ಕುಖ್ಯಾತಿ ಜಾಲಿಬೆಂಚಿಯದು!

*
*
*

ಆದರೆ ಒಂದು ಸಲ ಮಾತ್ರ ಆಕೆ ಭಾಯಾನಕ ಕೃತ್ಯಗಳನ್ನು ಒಂದೇ ದಿನ ಮಾಡಬೇಕಾಯಿತು. ಹೊಸದಾಗಿ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬ ಇವಳ ಮಟ್ಕಾ ದಂಧೆಗೆ, ಕಳ್ಳಬಟ್ಟಿಗೆ ದುಃಸ್ವಪ್ನವಾದ. ಹಗಲು-ರಾತ್ರಿ ಕೈ ತೊಳೆದುಕೊಂಡು ಬೆನ್ನು ಹತ್ತಿ ಹಣ್ಣುಗಾಯಿ ನೀರುಗಾಯಿ ಮಾಡತೊಡಗಿದ ದೊರೆಸಾನಿ ಲಕ್ಷ್ಮಮ್ಮ ಇಸುಗು ಪೆಟ್ಟುಕೊಂಡಳು. ಚೀಲದಲ್ಲಿ ಹಣ್ಣುಕಾಯಿ, ರೊಕ್ಕ, ಹೆಂಡತಿಗೆ ಸೀರೆ ಅಂತೆಲ್ಲ ಕಳಿಸಿಕೊಟ್ಟು ನೋಡಿದಳು. ಆಸಾಮಿ ಕಮಕ್ ಅನ್ನಲಿಲ್ಲ. ಕೊನೆಗೆ ತಾನೇ ಎಣ್ಣೆನೀರು ಹಾಕಿಕೊಂಡು, ಕೊನೆಯ ಅಸ್ತ್ರವೆಂದು ಒಂದೊಳ್ಳೆ ಸಿರೆ ಉಟ್ಟುಕೊಂಡು, ಜಟಕಾದಲ್ಲಿ ಹೋಗಿ ಸ್ಟೇಷನ್ನಿನ ಬಳಿ ಇಳಿದಳು. ಒಳಗೆ ಹೋಗಿ ನಮಸ್ಕಾರ ದೊರೆ ಅಂದಳು. ಅವನೋ ಮಹಾ ಗರ್ವಿಷ್ಠ ಅಧಿಕಾರಿ. ಪ್ರಾಮಾಣಿಕತೆಯಿಂದ ಬಂದ ಆತ್ಮವಿಶ್ವಾಸ, ಗರ್ವ, ಯಾರೇ ರಂಡೆ ನೀ ಅಂದ. ಗೊತ್ತಿದ್ದರೂ. ಆಯಿ, ನಾನು ದೊರೆ, ಚಿನ್ನ ಲಕ್ಷ್ಮಮ್ಮ. ಕುಂಟೆಗಡ್ಡೆ ದೊರೆಸಾನಿ ಅಂದಳು ಈಕೆ. ಓಹೊ. ದೊರೆಸಾನಿನಾ ನೀನು. ಏನು ಈ ದೊರೆ ಹತ್ರ ಮಕ್ಕಂಮಣು ಅಂತೇಳಿ ಬಂದ್ಯಾ? ಮದ್ಲು ಇಲ್ಲಿಂದ ನಡಿ. ಇಲ್ಲಂದ್ರಗಿನ ಬಾಯಾಗ, ಮುಗಳ್ಯಾಗ ಬೂಟು ಇಟ್ಟು ಹೊಡಿತೀನಿ ನೋಡು ಎಂದು ಕುದಿಯಲು ಆರಂಭಿಸಿದ. ಆಯಿ, ಹಂಗಲ್ಲೇಳು ದೊರೆ. ಸಿಟ್ಟಾಗಬ್ಯಾಡ….ಎಂದು ಹೇಳುವಷ್ಟರಲ್ಲಿ ಕುರ್ಚಿಯಿಂದ ಎದ್ದು ಕಪಾಳಕ್ಕೆ ಬಿಗಿದೇ ಬಿಟ್ಟ. ಸ್ಟೇಷನ್ನಿನಲ್ಲಿದ್ದ ಎರಡು-ಮೂರು ಪೇದೆಗಳು ಪರಿಸ್ಥಿತಿ ಪ್ರಮಾದಕ್ಕೆಳೆಯುತ್ತಿದೆ ಎಂದು ದೊರೆಸಾನಿಯನ್ನು ಹಿಡಿದು ಹೊರಗೆ ಬಿಟ್ಟರು. ದೊರೆಸಾನಿಯ ಸರ್ವೀಸಿನಲ್ಲಿ ಯಾರಾದರೂ ಹೊಡೆಯಲು ಎಂದು ಮೈಮುಟ್ಟಿದ್ದು ಇದೇ ಮೊದಲು. ದೊರೆ, ಸುಖ ಕೊಡಮ್ಮು ಅಂತ ಬಂದೆ. ಬ್ಯಾಡಂದ್ರ ಬಿಡಬೇಕಾಗಿತ್ತು. ಆದರೆ ಅವಮಾನ ಮಾಡೀದಿ. ನಿನ್ನ ಹೇಣತಿಗೆ ನಿನ್ನ ಸುಖ ಇನ್ನಮ್ಯಾಗ ಯಾವತ್ತೂ ಸಿಗದಂಗ ಆಗತೈತಿ ಅಂತ ಕೂಗಿ ಮತ್ತೆ ಜಟಕಾ ಹತ್ತಿದಳು.

ದೊರೆಸಾನಿ ಗರಂ ಆಗಿರುವುದು ಮುಖದಿಂದಲೇ ತಿಳಿಯುತ್ತಿತ್ತು. ಯಾರೂ ಮಾತಾಡಿಸಲು ಹೋಗಲಿಲ್ಲ. ಆಕೆ ಒಬ್ಬಳೇ ಬಾಗಿಲು ಹಾಕಿ ಮನೆಯಲ್ಲಿ ಕುಡಿಯುತ್ತ ಕೂತಿದ್ದಳು. ಗ್ರಹಚಾರವೆಂಬಂತೆ ಅಲ್ಲಿಗೆ ಗಿಚ್ಚಲು ಬಂದು. ಹೆಂಡತಿಯ ಸ್ನಾನ ಮಾಡಿದ ಮೈ, ಹೊಸಸೀರೆಯಿಂದ, ಏನೋ ನಡೆದಿದೆ ಎಂಬ ಅನುಮಾನದಿಂದ ಯಾವನತಾಗ ಮಕ್ಕಮಕ ಹೋಗಿದ್ಯಾ ಲಂಜ ಎಂದು ಹಿಂದು-ಮುಂದೆ ನೋಡದೆ ರಪರಪ ಬಾರಿಸತೊಡಗಿದ. ಲಕ್ಷ್ಮಮ್ಮ ಈ ಊರಿನ ದುರ್ಗಮ್ಮನ ಅಪರಾವತಾರದಂಗಾಗಿ ಬಿಟ್ಟಳು. ಅವನು ಹೊಡೆಯುವವರೆಗೂ ಹೊಡೆಯಲಿ ಎಂದು ಮೈ ಕೊಟ್ಟಳು. ಆತ ಚೀರಾಡಿ, ಅತ್ತು, ಒದ್ದು, ಸುಸ್ತಾಗಿ ಬಾಗಿಲು ತೆಗೆದುಕೊಂಡು ಹೋದ. ಕೆದರಿದ ಕೂದಲು ಅಸ್ತವ್ಯಸ್ತ ಸೀರೆಯನ್ನು ಸರಿಮಾಡಿಕೊಂಡ ದೊರೆಸಾನಿ ಸುಧಾರಿಸಿಕೊಂಡು ಮುಠಾದ ಹುಡುಗರಿಗೆ ಫರ್ಮಾನು ಹೊರಡಿಸಿದಳು!

ಇನ್ಸ್‌ಪೆಕ್ಟರ್‌ನ ರುಂಡ ಹಾರಿಸಿ, ಗಿಚ್ಚಲುವಿನ ಎರಡೂ ಕೈ ಕತ್ತರಿಸಿ ಹಗರಿ ನದಿಗೆ ಹಾಕಿ! ಮೊದಲು ಫರ್ಮಾನಿಗೆ ತಲೆ ಹಾಕಿದ ಹುಡುಗರು ಎರಡನೆಯದಕ್ಕೆ ಸಣ್ಣಗೆ ಬೆವೆತರು. ಎಮ್ರಾ, ಚೆಪ್ಪಿನಟ್ಲು ಚೇಯಂಡಿ ಅಂದವಳು ನಡೆದೇ ಬಿಟ್ಟಳು ದೊರೆಸಾನಿ! ಕಲ್ಲು ಕಲ್ಲಾಗಿತ್ತು ಮನಸ್ಸು!

*
*
*

ಮುಂದೆ ಆರು ತಿಂಗಳವರೆಗೆ ಗಿಚ್ಚಲು ಖೋಷಾ ಆಸ್ಪತ್ರೆಯ ಮಂಚಕ್ಕಂಟಿದ್ದ. ಅವ ಸತ್ತಿದ್ದರೆ ಒಳ್ಳೆಯದಿತ್ತು ಎನ್ನುವಷ್ಟು ಹೀನಾಯವಾಗಿತ್ತು ಅವನ ಒಂದು, ಎರಡು ಎಂದು ದೇಹದ ಎಲ್ಲ ಅಗತ್ಯಗಳನ್ನು ಹಾಸಿಗೆಯಲ್ಲೇ ಪೂರೈಸುತ್ತಿದ್ದ. ಒಂದು ಹನಿ ನೀರನ್ನೂ ಬೇರೆಯವರೇ ಬಾಯಿಗೆ ಬಿಡಬೇಕಾಗುತ್ತಿತ್ತು. ಲಕ್ಷ್ಮಮ್ಮ ಅವನಿಗೆ ತೋರಿಸಬೇಕೆಂದಿದ್ದೂ ಇದೇ! ನನ್ನ ಪ್ರೀತಿ-ವಿಶ್ವಾಸವಿಲ್ಲದಿದ್ದರೆ ನೀನು ಪರಾಧೀನ, ಕ್ರಿಮಿ ಎಂದು ಅವನಿಗೆ ಅರಿವಿಗೆ ಬರುವುದು ಅವಳಿಗೆ ಬೇಕಾಗಿತ್ತು! ಅದಕ್ಕಾಗಿ ಭಾರಿ ಬೆಲೆಯನ್ನು ತೆರಲು ಅವಳು ಸಿದ್ಧವಾಗಿದ್ದಳು. ಪ್ರತಿದಿನ ಆಸ್ಪತ್ರೆಗೆ ಬುತ್ತಿಯನ್ನು ಅವಳು ಒಯ್ಯುತ್ತಿದ್ದಳು. ಅವಳೇ ಊಟ ಮಾಡಿಸಿ, ನೀರು ಕುಡಿಸುತ್ತಿದ್ದಳು. ಬಾಯಿಗೆ ಬೀಡಿ ಇಟ್ಟು ಬೆಂಕಿ ಹಚ್ಚುವಳು, ಔಷಧ ಸುರಿಯುವಳು, ಮುಲಾಮು ಹಚ್ಚುವಳು….

ಬದುಕೆಲ್ಲ ತನ್ನ ಜತೆಗೆ ಕಳೀಬೇಕು. ಆದರ ಮತ್ತೆಂದೂ ಮುಟ್ಟಬಾರದು. ಎಲ್ಲದ್ದಕ್ಕೂ ನನ್ನನ್ನೇ ಕೇಳಬೇಕು, ಎನ್ನುವುದು ಲಕ್ಷ್ಮಮ್ಮನ ಗುರಿಯಾಗಿತ್ತು. ಆಕೆಗ ಜನ ತನಗೆ ಗೌರವಿಸಿ ದೊರಸಾನಿ ಅನ್ನುತ್ತಾರೆಂದು ಗೊತ್ತಿತ್ತು. ಜಾಲಿಬೆಂಚಿಲಂಜ ಅನ್ನುತ್ತಾರೆಂದೂ ತಿಳಿದಿತ್ತು. ಏನೆಲ್ಲ ಮಾಡಿ ಸಂಪಾದಿಸಿದ್ದೆಲ್ಲ ಪ್ರೀತಿಗಾಗಿಯೇ ಆಗಿತ್ತು. ಒಂದು ಗಳಾಸು ಸರಾಬು, ಒಂದು ತುಣುಕು ಕೋಳಿ ಊಟಕ್ಕೆ ಆಕೆ ಇಷ್ಟೆಲ್ಲ ಹೋರಾಡಿದ್ದಳು! ಸತ್ಯವೆಂದರೆ ಇಷ್ಟೆಲ್ಲ ಇದ್ದರೂ ಬಂಗಾರ-ಬೆಳ್ಳಿ ಎಂದು ಆಕೆ ಆಸೆಪಟ್ಟಿರಲಿಲ್ಲ. ಕೋಟೆಯಂಥ ಮನೆಯನ್ನು ಕಟ್ಟಿರಲಿಲ್ಲ. ಬಂದದ್ದೆಲ್ಲ ಅಲವತ್ತುಕೊಂಡು ಕೂಡಿಡದೆ ಬಗಲಿಗಿದ್ದವರಿಗೆ ಹಂಚಿಬಿಡುತಿದ್ದಳು. ಅವಳ ಮನೆ ಅಲ್ಲಿನ ಗುಡಿಸಲುಗಳಿಂದ ತುಸು ಬೇರೆಯಾಗಿತ್ತು ಅನ್ನೋದು ಬಿಟ್ಟರೆ ಐಸಿರಿ ಏನೂ ಇರಲಿಲ್ಲ. ಹೊರಸು, ಕಬ್ಬಿಣದ ಅಲಮಾರ, ಮರ್ಫಿ ರೆಡಿಯೊ, ಹಲಗೆಯ ಬಾಕು, ದೊಡ್ಡ ಕನ್ನಡಿ ಒಂದಿಷ್ಟು ಸೀರೆ ಬಿಟ್ಟರೆ ಇನ್ಯಾವ ಆಸ್ತಿಯೂ ಇಲ್ಲ. ಆದರೆ ದಿನ ಬೆಳಗಾದರೆ ಕೈ ತುಂಬ ತುಂಬುತ್ತಿದ್ದ ನೋಟುಗಳು, ಹಾಗೆ ಹಾಗೆ ಹಂಚಿಹೋಗುತ್ತಿದ್ದವು! ಆಲ್ಲಿ ಅವಳು ಕಟ್ಟಿದ್ದೆಂದರೆ ಜನರ ವಿಶ್ವಾಸದ ಅಭೇದ್ಯ ಕೋಟೆ, ಅವಳ ಐಸಿರಿ! ಏನೇ ಇದ್ದರೂ ಅಂಗಡಿಯಲ್ಲಿ ಚಹಾ ಕಾಸುವುದನ್ನು ಆಕೆ ಎಂದೂ ಬಿಟ್ಟಿರಲಿಲ್ಲ.

ಮುಂದೆ ಎರಡೂ ಕೈಗಳನ್ನು ಭುಜದವರೆಗೆ ಕಳೆದುಕೊಂಡಿದ್ದ ಗಿಚ್ಚಲು ಅಕ್ಷರಶಃ ಅವಳ ಆಸೆಯಂತೆಯೇ ಬದುಕಿದ. ಊಟ ಮಾಡಲು, ಮುಖ ತೊಳೆಯಲು, ಬೀಡಿ ಸೇದಲು, ಬಟ್ಟೆ ಹಾಕಿಕೊಳ್ಳಲು, ಸ್ನಾನ ಮಾಡಲು, ತಲೆ ಬಾಚಲು ಎಲ್ಲಕ್ಕೂ ಲಕ್ಷ್ಮಮ್ಮನೇ ಬೇಕು. ಅವಳು ಮಗುವನ್ನು ಸಲಹುವಂತೆ ಎಲ್ಲವನ್ನೂ ಶ್ರದ್ಧೆಯಿಂದಲೇ ಮಾಡುತ್ತಿದ್ದಳು. ಇಂಥ ಅಧೀನ, ಹೇಳಿದ್ದನ್ನು ಕೇಳುವ ಮಗುವಿನಂಥ ಪ್ರೀತಿ ಆತನಿಂದ ಬಯಸಿದ್ದಳು ಆಕೆ. ಆದರೆ ಆಕೆಯ ಆಡಾಟ, ಉರವಣಿಗೆ ಗಿಚ್ಚಲುಗೆ ಸಹಿಸುವುದಾಗದೆ ಬಲವಂತವಾಗಿ ಅವಳು ಬಯಸುವ ಸಹಜಸ್ಥಿತಿಗೆ ಬಂದು ತಲುಪಿದ್ದ.

ಒಂದೆಂದರೆ ಗಿಚ್ಚಲುಗೆ ಹೀಗಾದ ಮೇಲೆ ಆಕೆ ಬದುಕಿನ ರಸ ಕಳೆದುಕೊಂಡು ಬಿಟ್ಟಳು. ನನ್ಯಾಕೆ ಅನುಮಾನಿಸಿದ್ಯಲೆ ಬಾಡಖೊ. ನಿಂಗೇನು ಕಡಿಮೆ ಮಾಡಿದ್ದೆ. ನಿಂಗ ಬೇಕಾದಾಗ ಮಕ್ಕಂತಿದ್ದೆ. ಬೇಕಾದ್ದ ಮಾಡಿ ಉಣಸತಿದ್ದೆ. ಬೇಕಂದ ಅಂಗಿ-ಚೊಣ್ಣ ತೊಡಸತಿದ್ದೆ. ನಾನು ಹಂಗ ಬದಕದು ಬ್ಯಾಡಂದ್ರ ನೀಯಾಕ ಗಣಮಗನಂಗ ಬಾಳುವಿ ಮಾಡಲಿಲ್ಲ. ದುಡೀಲಿಲ್ಲ ಎಂದು ಅವನ ಎದೆ ಹೊಡೆಹೊಡೆದು ಕೇಳುತ್ತಿದ್ದಳು.

ಇಪ್ಪತ್ತು-ಇಪ್ಪತ್ತೈದು ವರ್ಷ ಹೀಗೆ ಬದುಕಿದ್ದು ಸಾಕಾಗಿ ಅನಾಥ ಹೆಣ್ಣುಕೂಸು ತಂದು ಸಾಕಿದಳು. ತಾಯಮ್ಮ ಎಂದು ಹೆಸರಿಟ್ಟು ತಾನು ಕಾಣದ ಸಿಂಗಾರ ಅದಕ್ಕೆ ಮಾಡಿ ಸಂತೋಷಪಟ್ಟಳು. ಆ ಕೂಸು ಬೆಳೆದಂತೆ ಸಂಭ್ರಮ ಪಟ್ಟಳು. ಗಿಚ್ಚಲು ಕೂಡ ಇಂಥ ಬದುಕಿ‌ಏ ಹೊಂದಿಕೊಂಡುಬಿಟ್ಟಿದ್ದ. ಚಹಾದಂಗಡಿಯ ಫಳಿಯ ಮೇಲೆ ಕೂತು ಕಾಲ ಕಳೆಯುವ ಇಲ್ಲಾ ಮನೆಯಲ್ಲಿನ ತಾಯವ್ವನೊಂದಿಗೆ ನಾಕು ಮಾತೋ-ಆಟವೊ ಆಡಿ ಕಾಲ ಕಳೆಯುವ.

ಹುಡುಗಿಗೆ ಹದಿಮೂರು-ಹದಿನಾಲ್ಕೂ ಆಗಿರಲಿಕ್ಕಿಲ್ಲ. ಒಂದು ಅಚಾತುರ್ಯ ನಡೆಯಿತು. ಅದಾಗ ಕೊಳಗೇರಿಯ ಜನರನ್ನು ಶೋಷಣೆಯಿಂದ ಮುಕ್ತಗೊಳಿಸಿ ಕಮ್ಯುನಿಷ್ಟ್ ರಾಜ್ಯ ಸ್ಥಾಪಿಸುವ ಪುಕಾರು ಎದ್ದಿತ್ತು ನಮ್ಮೂರಲ್ಲಿ.

ಎಲ್ಲೆಲ್ಲಿ ನೋಡಿದರೂ ಜುಬ್ಬಾ ಹಾಕಿ, ಬಗಲಿಗೆ ಚೀಲ ಇಳಿಬಿಟ್ಟು, ಭಾಷಣ ಬಿಗಿಯುತ್ತ ಕುಂಟೆಗಡ್ಡೆಯಲ್ಲಿ ಜನ ಓಡಾಡೋರು. ಅಕ್ಷರ ಕಲೀರಿ-ದಂಧೆ ಬಿಡಿರಿ. ಹೊಟ್ಟೆತುಂಬ ಅನ್ನಕ್ಕೆ-ಬಂದೂಕು ಕೈಯಿಗೆ ಹೀಗೆ ಏನೇನೋ ಕೂಗೋರು. ಲಕ್ಷ್ಮಮ್ಮ ಬಡವರಿಗೆ ಒಳ್ಳೆಯದು ಮಾಡುತ್ತಾರೆಂದು ಅಂಥ ಹುಡುಗರಿಗೆ ಚಹಾಪಾಣಿ ಕೊಡುವಳು. ರೊಕ್ಕಾ ಬೇಕೇನ್ರೋ ತಮ್ಮಂದ್ರ ಎಂದು ಕೇಳುವಳು.

ಇಂಥ ಕಾಮ್ರೇಡುಗಳಲ್ಲಿ ಸುವೇಗ ಇಟಗೊಂಡಿದ್ದ ಬ್ರಾಂಬರ ಹುಡುಗ ಒಬ್ಬಾತ, ದೊರಸಾನಿಯ ಮಗಳು ಅಂತ ತಿಳಿದೇ ತಾಯಮ್ಮನ ಲಂಗದೊಳಗೆ ಕೈ ಹಾಕಿದ. ಹುಡುಗಿ ಲಬೊದಿಬೊ ಎಂದು ಬಡಿದುಕೊಂಡಿದ್ದೆ ಖುದ್ದು ಲಕ್ಷ್ಮಮ್ಮನೇ ಚಹಾದಂಗಡಿ ಬಿಟ್ಟು ಓಡಿ ಬಂದಿದ್ದಳು. ವಿಷಯ ತಿಳಿದು ಲೇ, ಕಾಮರೆಡ್ಡಿ, ನಿನ್ನ ಒಟಕ್ಕಾಯಿ ಒಡೆದು ಬಾಯಗ ತುರಕತೀನಿ, ಹಾಟಗಳ್ಳ, ಎಂದು ಆತನ ಪೈಜಮ ಬಿಚ್ಚಿ ಚಡ್ಡಿಯಲ್ಲಿಯೇ ಓಡಿಸಿದ್ದಳು. ಕಾಮರೆಡ್ಡಿ ಸುವೇಗ ಒಂದು ಕೈಯಲ್ಲಿ ತಳ್ಳಿ ತಳ್ಳಿ ದೂರ ಹೋಗಿ ಸ್ಟಾರ್ಟ್ ಮಾಡಿ ಪೇರಿ ಕಿತ್ತಿದ್ದ.

ತಾಯಮ್ಮ ಭಾರಿ ಗೊಂದಲ-ಗಾಬರಿಗೆ ಬಿದ್ದಿದ್ದಳು. ಗಿಚ್ಚಲು ತಲೆಕೆಟ್ಟು ಕೂತ. ಅಂದು ರಾತ್ರಿ ಕಂಡಾಬಟ್ಟೆ ಕುಡಿದು ಬಂದ. ತಾಯಮ್ಮನನ್ನು ಕೂಸು ಕೂಸು ಎಂದು ಎಬ್ಬಿಸಿದ. ಆಕೆ ದಡಬಡಿಸಿ ನಿದ್ದೆಗಣ್ಣಲ್ಲಿ ಎದ್ದು ನಿಂತಳು. ಈ ಮಿಂಡ್ರಗುಳ್ಳಿಯಿಂದನೆ ಹಿಂಗಾದ್ದು. ಆಕಿ ತಲಿಗಿ ಕಲ್ಲುಹಾಕು ಹಾಕು ಎಂದು ಬಡಬಡಿಸಿ ಒದರತೊಡಗಿದ. ನಿದ್ದೆಯ ಮಬ್ಬಿನಲ್ಲಿದ್ದ ತಾಯಮ್ಮ ಹಿಂದೆ-ಮುಂದೆ ನೋಡದೆ ಮಲಗಿದ್ದ ದೊರಸಾನಿಯ ತಲೆ ಜಜ್ಜಿ, ಕುಡಗೋಲಿನಿಂದ ಕೈ ಕಡಿದಿದ್ದಳು!

ಜಾಲಿಬೆಂಚಿಯ ಚಿನ್ನ ಲಕ್ಷ್ಮಮ್ಮ ದೊರಸಾನಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಪೊಲೀಸ್ ಕೇಸಾಯಿತು. ಗಿಚ್ಚಲು ಒಂದೆರಡು ವರ್ಷ ವಿಚಾರಣೆಗಂತ ಜೈಲಿನಲ್ಲೂ ಇದ್ದನಂತೆ. ಕೊನೆಗೆ ಎರಡೂ ಕೈಯಿಲ್ಲದವನು ಕಲ್ಲು ಎತ್ತಿ ಹಾಕಿ ಕೊಲ್ಲುವುದು ಅಸಾಧ್ಯ ಎಂದು ತೀರ್ಪು ಬಂದು ಬಾ ಇಜ್ಜತ್ ರಿಹಾ ಆದನಂತೆ. ಈಗವ ಭಿಕ್ಷೆ ಬೇಡಿ ಬದುಕುತ್ತಿದ್ದಾನೆ.

*
*
*

ಇದು ನನ್ನ ಎಳೆವಯಸ್ಸಿನಲ್ಲಿ ಬಹುವಾಗಿ ಕಾಡಿದ್ದ ಜಾಲಿಬೆಂಚಿಯ ಕಥೆ. ಎರಡು ದಿನ ಹೆಚ್ಚಿಗೆ ಉಳಿದು ಅಲ್ಲಿಷ್ಟು-ಇಲ್ಲಿಷ್ಟು ನಿಂತು, ಅವರಿವರಿಗೆ ಚಹಾ-ಒಗ್ಗರಣೆ ಕೊಡಿಸಿ, ಎರಡು ಮಾತಾಡಿ ಸಂಗ್ರಹಿಸಿದ್ದು. ಹಾದಿಹೋಕರು ಹಾದಿಹೋಕನಿಗೆ ಹೇಳಿದ ಸಂಗತಿಗಳಲ್ಲಿ ಎಷ್ಟು ಬದುಕಿನ ಸತ್ಯ, ಒಳನೋಟ ಅಡಗಿದ್ಯಾವು?

ಕಥೆ, ಬದುಕು ಎರಡೂ ದೊಡ್ಡವೇ, ಸಣ್ಣವನು ಅಂದರೆ ಕಥೆಗಾರ. ಇದ್ದದ್ದು-ಇಲ್ಲದ್ದು ಸೇರಿ ಹೇಳೋ ಅಭ್ಯಾಸ ಬಹಳ ಹಳೆಯದು. ಬಲ್ಲವರಿಗೆ ಕರುಣೆ ಇದ್ದರೆ ಆಯಿತು.
*****

ಕೀಲಿಕರಣ: ಶ್ರೀಮತಿ ಅನ್ನಪೂರ್ಣ ಸುಬ್ಬರಾವ್, ಶ್ರೀಮತಿ ಸೀತಾ ಶೇಖರ್, ಚಿ! ಚಂ. ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.