ಕನ್ನಡದ ತೇರಿಗೆ ಪ್ರಶಸ್ತಿಯ ಕಳಶ!

ಕನ್ನಡದ ಬಹು ಮುಖ್ಯ ಕತೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಹಲವು ಮಹತ್ವದ ಕೃತಿಗಳನ್ನು ನೀಡಿರುವ ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಬಂದಿದೆ. ಇದು ಅವರ ಎಲ್ಲ ಸಣ್ಣಕತೆಗಳ, ಕಾದಂಬರಿಗಳ ಮರು ಓದಿಗೆ, ಚರ್ಚೆ-ಸಂವಾದಗಳಿಗೆ ಕಾರಣವಾಗಬೇಕಾದ ಸಂದರ್ಭ. ಅನಿವಾರ್ಯವಾಗಿ ಈ ಅಧ್ಯಯನ ಒಂದು ಕಾಲಘಟ್ಟದ ಸಾಹಿತ್ಯದ ಚರ್ಚೆಯಾಗಿಯೂ ಬೆಳೆಯುತ್ತದೆ, ಬೆಳೆಯಬೇಕು. ಕನ್ನಡದ ಸದ್ಯದ ಸಂದರ್ಭದಲ್ಲಿ ಇದೆಲ್ಲ ನಡೆಯಬೇಕಾದ ತುರ್ತು ಹೆಚ್ಚೇ ಇದೆ ಅನಿಸುತ್ತದೆ.

ಲಾಭ

ನವ್ಯ ಕಥಾ ಪರಂಪರೆ ತನ್ನ ಅತಿಗೆ ಹೋದ ಬಗ್ಗೆ ಸಾರ್ವತ್ರಿಕ ಟೀಕೆಗೆ ಒಳಗಾದರೂ ಅದರಿಂದ ಕನ್ನಡ ಸಾಹಿತ್ಯಕ್ಕೆ ಹಲವು ರೀತಿಯ ಲಾಭಗಳಾಗಿವೆ. ಒಂದು ಹೊಸ ಸಂವೇದನೆಯನ್ನು ಅದು ಕನ್ನಡಕ್ಕೆ ತಂದುಕೊಟ್ಟಿತು. ಬರೆಯುವ ಪ್ರಕ್ರಿಯೆಯಲ್ಲಿ ಅನೇಕ ಬಗೆಯ ಪ್ರಯೋಗಶೀಲತೆಗೆ ನವ್ಯ ಕಾರಣವಾಯಿತು. ಮುಖ್ಯವಾಗಿ ವಿಶ್ವಸಾಹಿತ್ಯಕ್ಕೆ ಅಪ್‌ಡೇಟ್ ಆಗುವತ್ತ ಕನ್ನಡದ ಮನಸ್ಸುಗಳು ತುಡಿದಿದ್ದರಿಂದ ಹೆಚ್ಚಿದ ಮಟ್ಟದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪರಿಚಯ ಕನ್ನಡಕ್ಕೆ ದಕ್ಕಿತು. ಇದರಿಂದ ಒಳ್ಳೆಯದೂ ಆಗಿದೆ, ಕೆಟ್ಟದೂ ಆಗಿರಬಹುದು. ಮುಖ್ಯವಾಗಿ ನವ್ಯ ಎಂಬುದು ಕನ್ನಡದ ಜಾಯಮಾನಕ್ಕೆ, ಕನ್ನಡದ ಆವತ್ತಿನ ಸಂದರ್ಭಕ್ಕೆ ಸಹಜವಾಗಿ ಒದಗಿದ ಬೆಳವಣಿಗೆ ಅಥವಾ ಪರಿವರ್ತನೆಯಾಗಿತ್ತೆ, ಅಥವಾ ಅಕಾಲದಲ್ಲಿ ಎರವಲು ತಂದ ಕಟ್ಟಿಕೊಟ್ಟ ಬುತ್ತಿಯಾಗಿತ್ತೆ ಎಂಬೆಲ್ಲ ವಾದ ವಿವಾದ ಇದ್ದೇ ಇದೆ. ಆದರೆ ಇದೆಲ್ಲದರ ಹೊರತಾಗಿಯೂ ನವ್ಯದಿಂದಲೇ ಒದಗಿದ ಕೆಲವೊಂದು ಹೊಸ ಅರಿವು ಎಷ್ಟೆಲ್ಲ ಬಗೆಯಾಗಿ ಇವತ್ತು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದೆ ಎಂಬುದಕ್ಕೆ ಹೊಸ ಪುರಾವೆಗಳನ್ನು ನೀಡಬೇಕಾಗಿಲ್ಲ. ಅದೂ ಅಲ್ಲದೆ, ನವ್ಯಕಾಲ ಘಟ್ಟದಲ್ಲೇ ನವ್ಯದಿಂದ ಒಂದರ್ಥದಲ್ಲಿ ಸಿಡಿದು ನಿಂತು ಹೊಸ ಅನ್ವೇಷಣೆಗಳಿಗೆ ನಮ್ಮ ಅನೇಕ ಮಹತ್ವದ ಲೇಖಕರು ಪ್ರಯತ್ನಿಸುವಂತಾಗಲು ಸಹ ನವ್ಯವೇ ಕಾರಣ. ಹಾಗೆ ಹೊಸ ದಾರಿಗಳನ್ನು ಅನ್ವೇಶಿಸಿ ಕನ್ನಡದ ಕಥನ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೆಲವೇ ಮಹತ್ವದ ಲೇಖಕರಲ್ಲಿ ರಾಘವೇಂದ್ರ ಪಾಟೀಲರು ಒಬ್ಬರು.

ರಾಘವೇಂದ್ರ ಪಾಟೀಲರು ತಮ್ಮ ‘ತೇರು’ ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟವಾದಾಗ, ಇದು ಒಂದು ಮಾತೃಕೆಗೆ ಸಂದ ಪುರಸ್ಕಾರ ಎಂದು ತಮ್ಮ ಸಂಕಥನವನ್ನು ಪ್ರತ್ಯಕ್ಷ, ಪರೋಕ್ಷವಾಗಿ ರೂಪಿಸಿದ ಹಲವು ಲೇಖಕರನ್ನು, ವಿಮರ್ಶಕರನ್ನು ನೆನೆದರು. ಕೇವಲ ಸೌಜನ್ಯದ ಮಾತೆಂದು ಮರೆತು ಬಿಡಬಹುದಾದ ಮಾತಲ್ಲ ಇದು. ಪಾಟೀಲರ ಸಾಹಿತ್ಯವನ್ನು ಅರಿಯಲು ಹೊರಟವರ ಮಟ್ಟಿಗೆ ಬಹಳ ಮುಖ್ಯವಾದ, ಪ್ರಾಮಾಣಿಕವಾದ ಮಾತು. ತಮ್ಮ ‘ದೇಸಗತಿ’ ಕಥಾಸಂಕಲನವನ್ನು ಪಾಟೀಲರು ‘ಕಥೆ ಹೇಳುವುದನ್ನು ಕಲಿಸಿದ ಕನ್ನಡದ ಎಲ್ಲ ಹಿರಿಯ ಕಥೆಗಾರರಿಗೆ ಗೌರವದಿಂದ’ ಅರ್ಪಿಸಿದ್ದಾರೆ. ಕನ್ನಡದ ಎಲ್ಲ ಅತ್ಯುತ್ತಮ ಕಥೆಗಾರರ ಶ್ರೇಷ್ಠ ಅನುಭೂತಿಗಳನ್ನು ಮೈಗೂಡಿಸಿಕೊಂಡು ಬರೆಯುವ ಪಾಟೀಲರ ಶೈಲಿಯನ್ನು ಅಧ್ಯಯನ ಮಾಡುವುದಕ್ಕೆ ಈ ಅರಿವು ರಹದಾರಿ ಇದ್ದಂತೆ.

ಹಾಗೆ ನೋಡಿದರೆ ಪಾಟೀಲರು ‘ತೇರು’ ಕೃತಿಗಿಂತ ಮೊದಲೇ ಆಧುನಿಕ ಪುರಾಣಗಳನ್ನು ಬರೆದವರು! ಅವರ ‘ದೇಸಗತಿ’ಯಾಗಲಿ, ‘ಮಾಯಿಯ ಮುಖಗಳು’ ನೀಳ್ಗತೆಯಾಗಲೀ ಅಂಥ ಬೀಜಗಳನ್ನು ತನ್ನ ಒಡಲೊಳಗೇ ಹೊತ್ತಿಲ್ಲ ಎನ್ನುವಂತಿಲ್ಲ. ಆದರೆ ‘ತೇರು’ ಹಲವಾರು ಕಾರಣಗಳಿಗೆ ಭಿನ್ನವಾಗಿಯೂ ಮುಖ್ಯವಾಗಿಯೂ ಗಮನಾರ್ಹವಾಗುತ್ತದೆ.

ಮೊದಲಿಗೆ, ಇವರ ಕಥನ ಶೈಲಿ ವಿಶಿಷ್ಟವಾದದ್ದು. ದೇವನೂರ ಮಹದೇವರ ‘ಕುಸುಮಬಾಲೆ’ಯನ್ನು ಬಿಟ್ಟರೆ ಇವರಷ್ಟು ಹದವಾಗಿ ಕಾವ್ಯಾತ್ಮಕ ಜಾನಪದ ಗದ್ಯ ಬಳಸಿಯೂ ಗೆದ್ದ ಕತೆಗಾರರು ಬೇರೊಬ್ಬರಿಲ್ಲ ಎನಿಸುತ್ತದೆ. ಮೊಗಳ್ಳಿ ಸೀಮಿತಮಟ್ಟದಲ್ಲಿ ಇದನ್ನು ಪ್ರಯತ್ನಿಸಿದ್ದಾರೆ. ಕಂಬಾರರು ಬೇರೆಯೇ ಸ್ತರದಲ್ಲಿ ಈ ಮಾದರಿಯನ್ನು ಬಳಸಿಕೊಂಡಿದ್ದಾರೆ. ಆದರೆ ಪಾಟೀಲರು ಇದನ್ನು ದುಡಿಸಿಕೊಂಡ ಬಗೆ ಸೂಕ್ಷ್ಮ ಅಧ್ಯಯನವನ್ನು ಬಯಸುವಷ್ಟು ವಿಶಿಷ್ಟವಾಗಿದೆ.

’ಮ್ಯಾಜಿಕಲ್ ರಿಯಲಿಸಂ’

ಎರಡನೆಯದಾಗಿ, ಫ಼್ಯಾಂಟಸಿ ಮತ್ತು ಜಾನಪದ ಎರಡೂ ಅಭಿವ್ಯಕ್ತಿ ಮಾಧ್ಯಮಗಳ ಸಂತುಲಿತ ಮತ್ತು ಒಂದಕ್ಕೊಂದು ಪೂರಕವಾಗಿ ಒದಗಿ ಬರುವಂಥ ಬಳಕೆ. ನಾನು ಫ಼್ಯಾಂಟಸಿ ಎಂದಿರುವುದು ಮಾಂತ್ರಿಕ ವಾಸ್ತವವಾದ ಅಥವಾ ಮ್ಯಾಜಿಕಲ್ ರಿಯಲಿಸಂ ಎಂದು ಯಾವುದನ್ನು ಗುರುತಿಸಲಾಗುತ್ತಿದೆಯೋ ಅದನ್ನು. ನಮ್ಮ ಜಾನಪದ ಕಥನ ಪರಂಪರೆಯ ಅವಿಭಾಜ್ಯ ದೃವ್ಯವೇ ಆಗಿದ್ದ ಇದು ಗಂಭೀರ ಶಿಷ್ಟ ಸಾಹಿತ್ಯ ಪ್ರಕಾರಕ್ಕೆ ಕೊಂಚ ಹೊಸತೆನಿಸಿದರೂ ಹೊಸತಲ್ಲ. ಕಂಬಾರರ, ಕಾರ್ನಾಡರ ನಾಟಕಗಳಲ್ಲಿ ಇದರ ಬಳಕೆಯಾಗಿದ್ದಿದೆ. ಜಾನಪದೀಯ ತಳಹದಿಯಲ್ಲಿ ಈ ಪವಾಡಗಳಂಥ, ಮಾಂತ್ರಿಕ ವಾಸ್ತವಿಕತೆಯ ಚಿತ್ರಣವನ್ನು ನೀಡಿದಾಗ ಅದು ಆ ಒಂದು ನೆಲೆಯಲ್ಲಿ ಹೆಚ್ಚು ವಾಸ್ತವಿಕವೂ ಸುಸಂಬದ್ಧವೂ ಆಗಿ ಮೂಡಿಬರುವುದಲ್ಲದೆ ಬೇರೆ ಯಾವುದೇ ತಂತ್ರ ಬಳಸಿದರೂ (ಕನಸು/ಭ್ರಮೆ ಇತ್ಯಾದಿ) ಇಷ್ಟು ಸುಗಮವಾಗಲಾರದ, ಒಂದು ವಿಧದ ತಾರ್ಕಿಕ ಪ್ರಶ್ನೆ, ಜಂಜಾಟಗಳಿಲ್ಲದ ಸ್ವೀಕಾರಕ್ಕೆ ಹಾದಿ ಸುಗಮಗೊಳಿಸಿಕೊಡುತ್ತದೆ! ಹಾಗಿದ್ದರೂ ಇದು ಕಥನವನ್ನು ಸರಳಗೊಳಿಸದೆ ಅದಕ್ಕೊಂದು ವಿಶಿಷ್ಟ ಬಿಗಿಯನ್ನೂ ದೊರಕಿಸಿಕೊಡುವುದು ಗಮನಾರ್ಹ. ಹಾಗಾಗಿಯೇ ಪಾಟೀಲರಿಗೆ ಇದು ಒಂದು ತಂತ್ರದ ಮಟ್ಟಿಗೆ ಅಥವಾ ಕೇವಲ ಮಾಧ್ಯಮವಾಗಿ ಮುಖ್ಯ. ಅದರ ಚಿತ್ರಣವೇ ಅವರ ಗುರಿ ಅಲ್ಲ ಎಂಬುದನ್ನು ಕೂಡ ಗಮನಿಸಬೇಕು.

ಮೂರನೆಯದಾಗಿ, ಪಾಟೀಲರ ಕಥಾನಕದ ಆತ್ಮ ಒಂದು ರೀತಿಯಲ್ಲಿ ಆಧ್ಯಾತ್ಮಿಕವೇ ಆಗಿರುವುದು. ಈ ಶಬ್ದದ ಬಗ್ಗೆ ಕೊಂಚ ವಿವರಣೆ ಅಗತ್ಯ. ‘ಮಾಯಿಯ ಮುಖಗಳು’ ಎಂಬ ಹೆಸರಿನ ಕತೆಯಲ್ಲಿ ಕತೆಯ ಹೆಸರೂ ಸೇರಿದಂತೆ ಗಂಗಾ, ತುಂಗಾ ಮತ್ತು ನರ್ಮದಾರ ಪಾತ್ರಗಳ ಪರಿಕಲ್ಪನೆ ಮತ್ತು ಪೋಷಣೆ, ಕೊನೆಯಲ್ಲಿ ಬರುವ ಅಣುಕಾಸುರನ ಜನನ; ‘ಊರಾನ ಮಂದಿ ಎಲ್ಲಾರೂ ಕೂಡಿ ಕರೀಬೇಕಾದ ಛಂದಸ್ಸು ಇದು….’ ಎಂದು ಹೊಸ ‘ಲಯ’ ಕಂಡುಕೊಳ್ಳಲು ಹಾದಿ ತೋರುವ ಲಂಗಟದ ಸ್ವಾಮಿ; ಆಮ್ಟೆಯವರ ಆಶ್ರಮ ಸೇರುವ ದ್ಯಾವಪ್ಪ… ಎಲ್ಲರೂ ಸ್ಫುರಿಸುವ ಒಂದು ಸತ್ ಇದೆಯಲ್ಲ, ಅದನ್ನು ಆಧ್ಯಾತ್ಮ ಎನ್ನಬಹುದೇ? ಆದರ್ಶ ಎಂದರೆ ಸರಳಗೊಳಿಸಿದಂತಾಗದೆ?

ಗಂಡುಮೆಟ್ಟಿನ ಸೀಮೆಯ ಜಾನಪದೀಯ ನುಡಿಗಟ್ಟಿನಲ್ಲಿದ್ದರೂ ಭಾವಗೀತೆಯ ಪಲಕುಗಳನ್ನು ಹೊಂದಿದ ಭಾಷೆ; ಜಾನಪದ ಕತೆಗಳ, ಪದ್ಯಗಳ ಮೂಲಕ ಕಥಾನಕವನ್ನು ಮಿಥ್ ಆಗಿಯೂ ಪ್ರಸ್ತುತಕ್ಕೆ ರಿಲವಂಟ್ ಆಗಿಯೂ ಮಾಡಿಕೊಂಡು ಚರಿತ್ರೆ ಮತ್ತು ಸಮಕಾಲೀನ ಜಗತ್ತಿನ ನಡುವೆ ತುಯ್ಯತ್ತಲೆ ಕಥಾನಕವನ್ನು ಬೆಳೆಸುವ ಜಾಣ್ಮೆ; ಈ ಎರಡೂ ಅಂಶಗಳನ್ನು ನಿರ್ದಿಷ್ಟ ಉದ್ದೇಶಕ್ಕೆ, ಮತ್ತು ತಮ್ಮ ಕಥಾನಕದ ತಾಂತ್ರಿಕ ಅಗತ್ಯ, ಅನುಕೂಲಗಳಿಗೆ ಬಳಸಿಕೊಂಡೂ ಅದು ಅತ್ಯಂತ ಸಹಜವಾಗಿ ಒದಗಿಬಂದಂತೆ ಕಾಣುವ ಹಾಗೆ ಕತೆ ಹೇಳುವ ಪಾಟೀಲರ ಕತೆಗಳ ಆಶಯ, ಆಕೃತಿ ಮತ್ತು ಸಂವೇದನೆಗಳ ಪರಿಪ್ರೇಕ್ಷ್ಯ; ಎಲ್ಲವೂ ಇಡೀ ಸಂಕಥನದ ಅಂತಃಸ್ಫೂರ್ತ ಗುಟ್ಟುಗಳನ್ನು ಸುಲಭದಲ್ಲಿ ಬಿಚ್ಚಿಕೊಳ್ಳದ ಛಂದಸ್ಸಿಗೆ ಒಯ್ಯುತ್ತದೆ. ಇದಕ್ಕೆ ಕಾರಣವಿದೆ. ಈ ಎಲ್ಲ ಅಂಶಗಳೂ ಗೌಣವಾಗುವಂತೆ ಮಾಡಬಲ್ಲ ಗಟ್ಟಿಯಾದ ಕಥಾಹಂದರ ಮತ್ತು ಪಾಟೀಲರಿಗಷ್ಟೇ ಸಾಧ್ಯವಾಗಿರುವ ಅಂಥ ಕಥಾನಕಕ್ಕೆ ಅವರು ಒದಗಿಸುವ ಹಲವು ವ್ಯಾಪ್ತಿಗಳುಳ್ಳ ಅರ್ಥಪರಂಪರೆಯ ಅನುರಣನ ಶಕ್ತಿ!

ಮಂತ್ರ ಮುಗ್ಧರಾಗಿ ನಿಂತುಬಿಡುವುದಿಲ್ಲ

ಇಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಅಂಶಗಳಿವೆ. ಮೊದಲನೆಯದಾಗಿ, ಪಾಟೀಲರು ತಮ್ಮ ಕಾವ್ಯಾತ್ಮಕ ಪರಿಭಾಷೆಯಲ್ಲಿ ಎಲ್ಲೂ ರೂಪಕಗಳ ಭಾಷೆ ಬಳಸುವುದಿಲ್ಲ. ಅಂದರೆ ಮನಸ್ಸಿನಲ್ಲಿ ದೀರ್ಘಕಾಲ ನಿಲ್ಲುವ, ಕಾಡುವ ಯಾವುದೇ ಬಿಂಬಗಳನ್ನು ಸೃಜಿಸದ ಸರಳ ಆಡುನುಡಿಯ ಛಂದಸ್ಸಿನಾಚೆ ಪಾಟೀಲರು ತಮ್ಮ ನಿರೂಪಣೆಯ ಕಾವ್ಯಾತ್ಮಕ ಅಂಶಗಳೊಂದಿಗೆ ತಾದ್ಯಾತ್ಮ ಬೆಳೆಸುವುದಿಲ್ಲ. ಎರಡನೆಯದಾಗಿ, ಪಾಟೀಲರು ಜಾನಪದದ ನುಡಿಗಟ್ಟುಗಳಲ್ಲೇ ಮಂತ್ರ ಮುಗ್ಧರಾಗಿ ನಿಂತುಬಿಡುವುದಿಲ್ಲ. ತಾಂತ್ರಿಕ ಅಗತ್ಯಗಳಿಗೆ ಇವುಗಳನ್ನು ಪಾಟೀಲರು ದುಡಿಸಿಕೊಳ್ಳುತ್ತಾರೆಯೇ ಹೊರತು ಅವುಗಳ ಮೇಲೆ ಅವರಿಗೆ ತಮ್ಮ ಇಡೀ ಕೃತಿಯ ಆಶಯವನ್ನೂ ಮೀರಿ ಸೆಳೆಯುವ ಮೋಹವಿಲ್ಲ. ಮೂರನೆಯದಾಗಿ, ಪುರಾಣಗಳನ್ನು, ಚರಿತ್ರೆಯನ್ನು ವರ್ತಮಾನಕ್ಕೆ ಜೋಡಿಸುವ ಹಾದಿಯಲ್ಲಿ ಈಗಾಗಲೇ ಜನ ತಿಳಿದಿರುವ ಕತೆಯು ತನ್ನ ಒಡಲಿನಲ್ಲಿರಿಸಿಕೊಂಡಿರಬಹುದಾದ, ಸರಿಯಾಗಿ ಅನಾವರಣವಾಗದುಳಿದ ಸಂಗತಿಗಳನ್ನು ಶೋಧಿಸುವ ಸಾಹಸಕ್ಕೂ ಪಾಟೀಲರು ಇಳಿಯುವುದಿಲ್ಲ. ಹಾಗಾಗಿಯೇ ಬಹುಷಃ ಪಾಟೀಲರು ಆಧುನಿಕ ಪುರಾಣವನ್ನೇ ಬರೆಯುತ್ತಾರೆ. ಈ ಆಧುನಿಕ ಪುರಾಣಗಳು ಲಭ್ಯ ಪುರಾಣಗಳ ಹೊಸ ಭಾಷ್ಯಗಳಲ್ಲ. ನಾಲ್ಕನೆಯದಾಗಿ, ಪೂರ್ವನಿಯೋಜಿತವಲ್ಲ ಎನಿಸುವ ಕತೆಯನ್ನು ಇವರು ತೊಡಗುವುದಿಲ್ಲ. ಪಾಟೀಲರ ಕತೆಗಳಿಗೆ ನಿರ್ದಿಷ್ಟ ಆರಂಭ, ಗುರಿ ಎಲ್ಲ ಇರುವಂತಿದೆ. ಹಾಗಾಗಿ ಇವು ವರ್ತಮಾನದಲ್ಲಿ ನಿಂತು ಭೂತದ ಕತೆಗಳನ್ನೇ ಹೇಳುವುದು ಹೆಚ್ಚು. ವರ್ತಮಾನದಲ್ಲಿ ತೊಡಗಿ ವರ್ತಮಾನದಲ್ಲೇ ಮುಗಿಯುವುದು, ಅಥವಾ ವರ್ತಮಾನದಲ್ಲಿ ತನ್ನ ಗಮ್ಯವನ್ನು ಶೋಧಿಸುವುದು ಕಡಿಮೆ.

ತೇರು ಕಥಾನಕ

ಈಗ ತೇರು ಕಾದಂಬರಿಯನ್ನು ಗಮನಿಸಬಹುದು. ಇದು ಹಳೆಯ, ಪುರಾತನವಾದ ಒಂದು ಕಥಾನಕವನ್ನೂ ಅದರ ಮೂಲಕ ಹರಿದು ಬರುವ ಇಂದಿನ ಜಗತ್ತಿನ ಜನರನ್ನೂ ಒಂದು ನಿರ್ದಿಷ್ಟ ಸ್ತರದಲ್ಲಿ ಸಮಾನ ಪಾತಳಿಗೊಯ್ದು ನಿಲ್ಲಿಸುವ ಕೆಲಸವನ್ನು ತನ್ನ ಇತರ ಅನೇಕ ಕೆಲಸಗಳ ಜೊತೆಗೇ ಮಾಡುತ್ತದೆ. ಸ್ವತಃ ಇಲ್ಲಿನ ಕಥಾನಕ ತನ್ನ ಒಂದು ನೆಲೆಯಲ್ಲಿ ಮಿಥ್ ಎಂದು ನಾವು ಕರೆಯುವ, ಪವಾಡ, ಅದ್ಭುತಗಳ ಪುರಾಣವನ್ನೂ, ಇನ್ನೊಂದು ನೆಲೆಯಲ್ಲಿ ಸನದು, ರಿಕಾರ್ಡುಗಳು ಹೇಳುವ ಪುರಾವೆಗಳುಳ್ಳ ಚರಿತ್ರೆಯನ್ನೂ ಒಂದು ನಿರ್ದಿಷ್ಟ ಪಾತಳಿಗೆ ಒಯ್ದು ನಿಲ್ಲಿಸಿ ಮುಖಾಮುಖಿಯಾಗಿಸುತ್ತದೆ; ಅಲ್ಲಿ ಬರುವ ಪಾತ್ರಗಳಲ್ಲ. ಇದು ಬಹಳ ಮುಖ್ಯ. ಕಥಾನಕವೇ ಇಲ್ಲಿ ಬಹಳ ಮುಖ್ಯ ಪಾತ್ರಧಾರಿ. ಅದನ್ನು ಗೌಣವಾಗಿಸಬಲ್ಲ ಕಸು ಉಳ್ಳ ಪಾತ್ರಧಾರಿಗಳು ಇಲ್ಲಿ ಇಲ್ಲ.

ಹಾಗೆಯೇ ವದಂತಿ, ಮೌಢ್ಯ, ನಂಬುಗೆ, ಭಕ್ತಿ ಎಲ್ಲ ಒಂದರೊಳಗೊಂದು ಸೇರಿದಂತಿರುವ ಕಂತೆ ಪುರಾಣವನ್ನೂ, ಒಂದು ತಲೆಮಾರಿನ ಭಕ್ತಿ,ಗೌರವಕ್ಕೆ ಪಾತ್ರವಾದ ಒಂದು ಪ್ರಾಚೀನ ಪರಂಪರೆಯನ್ನೂ ಜತೆಜತೆಯಾಗಿಯೇ ಪ್ರತಿನಿಧಿಸುವ ಅಂಶಗಳಲ್ಲೂ ಆಂತರಿಕ ಮುಖಾಮುಖಿ/ಸಂಘರ್ಷ ಕೂಡಾ ಇಲ್ಲಿ ನಡೆಯುತ್ತಿರುತ್ತದೆ. ಇದು ಇಲ್ಲಿನ ಪಾತ್ರಗಳ, ನಿರೂಪಕನೂ ಸೇರಿ, ಸಮಸ್ಯೆಯೋ ಅನುಕೂಲವೋ ಆಗಿ ಸಂದರ್ಭಾನುಸಾರ ಪ್ರಕಟಗೊಳ್ಳುವ ಅಂಶ. ಹಾಗಾಗಿ ಇಲ್ಲಿ ಬರುವ ಆಧುನಿಕ ಜಗತ್ತಿನ ಮನುಷ್ಯ ಮತ್ತು ಅವನ ಮಟ್ಟಿಗೆ ಅಸಂಗತವಾಗುತ್ತಿರುವ ಪುರಾಣ-ಇತಿಹಾಸಗಳ ಒಂದು ಕಾಲಘಟ್ಟದ ನಡುವಿನ ಸಂಘರ್ಷ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಆಧುನಿಕ ಮನುಷ್ಯನ ಆಂತರಿಕ ತುಡಿತ, ಗತ ಇತಿಹಾಸದಿಂದ ಮುಕ್ತನಾಗಿ ನಿಂತು ಹೊಸದಾಗಿ ಸ್ಥಾಪಿಸಿಕೊಳ್ಳಬಯಸುವ ಅಸ್ಮಿತೆಯ ಕನಸು, ಅದರ ಸುತ್ತ ಬೆಳೆಯುವ ಆಸೆ, ಆಶೋತ್ತರಗಳೇನೇ ಇರಲಿ, ಅವು ಗತದ ಎಲ್ಲವನ್ನೂ ತನ್ನೊಡಲಿನಲ್ಲಿಟ್ಟುಕೊಂಡೇ ಮುಂದೆ ಹೋಗಬೇಕಾಗುತ್ತದೆ. ಆಮ್ಟೆಯವರ ಆಶ್ರಮ ಸೇರಿಕೊಳ್ಳುವ ದ್ಯಾವಪ್ಪನ ಆದರ್ಶ ಎಲ್ಲೋ ಒಂದು ಕಡೆ ರಗುತದೊಳಗೆ ಸೇರಿಕೊಂಡ ವಿಷವನ್ನೂ ಕಳಕೊಂಡು ಶುದ್ಧನಾಗ ಬಯಸುವ ಮೊದಲ ತಲೆಮಾರಿನ ದ್ಯಾವಪ್ಪನ ಆದರ್ಶವನ್ನೇ ಹೋಲುತ್ತದೆ!

ಈ ಕಥಾನಕ ನಮ್ಮೆದುರು ತೆರೆದುಕೊಳ್ಳುವ ಅನನ್ಯ ಬಗೆ ಕೂಡ ವಿಶೇಷ ಗಮನಕ್ಕೆ ಅರ್ಹವಾಗಿದೆ.

ಇಲ್ಲಿ ವರ್ತಮಾನವನ್ನು ಪ್ರತಿನಿಧಿಸುವ ಒಬ್ಬ ನಿಷ್ಪಕ್ಷಪಾತಿಯೂ, ನಿಷ್ಟುರ ವಾಸ್ತವವಾದಿಯೂ, ವರದಿಯನ್ನು ನೀಡುವುದೇ ಕೆಲಸವಾಗಿರುವವನೂ ಆದ ಪತ್ರಕರ್ತನಿದ್ದಾನೆ. ಅವನು ಕಥೆ ಹೇಳುತ್ತಾನೆ ನಮಗೆ.

ಭವಿಷ್ಯವನ್ನು ಪ್ರತಿನಿಧಿಸುವ ಒಬ್ಬ – ಕನಸುಗಳನ್ನು, ಆದರ್ಶಗಳನ್ನು ಹೊತ್ತವನು, ಆದರೆ ಸಾಮಾನ್ಯ ಜನರಿಗೆ ಎಡಬಿಡಂಗಿ ತರವೂ, ಹುಚ್ಚನ ತರವೂ ಕಾಣಬಹುದಾದವನು, ಆದರ್ಶವಾದಿಯಾದವನು ಇದ್ದಾನೆ. ಅವನೂ ಕಥೆಯ ಕೆಲವಂಶ ಹೇಳುತ್ತಾನೆ.

ಭೂತಕಾಲವನ್ನು ಪ್ರತಿನಿಧಿಸುವ ಒಬ್ಬನೂ ಇದ್ದಾನೆ. ತನ್ನ ಮೂಢನಂಬುಗೆಗಳನ್ನು ಸ್ವತಃ ತಾನೂ ಪ್ರಶ್ನಿಸಿಕೊಳ್ಳಲಾರದ ಇತರರೂ ಪ್ರಶ್ನಿಸಲಾರದ ಸ್ಥಿತಿ ಅವನದು. ಅವನೂ ಅವನ್ನೆಲ್ಲ ಎಕಾ‌ಎಕಿ ತೊರೆದು ಬಿಡಲಾರ. ತೊರೆ ಎನ್ನಲು ಆಗದ ಹಾಗೆ ಅವುಗಳ ಜೊತೆಗೇ ಅವನಿಂದ ಬೇರ್ಪಡಿಸಲಾಗದ ಕೆಲವು ಮೌಲ್ಯಗಳನ್ನೂ ಆತ ಪ್ರತಿನಿಧಿಸುತ್ತಾನೆ. ಆತ ಮುಗ್ಧ. ಮುದುಕ ಬೇರೆ. ಈ ಮುದುಕನೇ ಕತೆಯನ್ನು ತೊಡಗುವವನೂ ಹೌದು.

ವರ್ತಮಾನಕ್ಕೆ ಸಂವಾದಿಯಾದ ಭೂತಕಾಲದ ಕಥೆಯನ್ನು ಹೇಳುವಲ್ಲಿ ಎಲ್ಲೆಲ್ಲ ಮಿಥ್ ಅಥವಾ ಪುರಾಣವನ್ನು ಕಾಣಿಸಬೇಕಾಗುತ್ತದೋ ಅಲ್ಲೆಲ್ಲ ಗೊಂದಲಿಗರ ಜಾನಪದ ಹಾಡುಗಳನ್ನು ಪಾಟೀಲರು ಬಳಸಿಕೊಳ್ಳುತ್ತಾರೆ. ಅದನ್ನು ಕತೆಯ ಬಹು ಮುಖ್ಯ ಭಾಗದ ನಿರೂಪಣೆಗೆ, ಶಿಷ್ಟ ಭಾಷೆಯಲ್ಲಿ ಸುಲಭ ಸ್ವೀಕೃತವಾಗಲಾರದಂಥ ಸಂಗತಿಗಳನ್ನು ಹೇಳಲು ಬಳಸಿಕೊಳ್ಳುವುದು ಒಂದು ರೀತಿಯಲ್ಲಿ ಅನಿವಾರ್ಯವೂ ಹೌದು.

ಹೀಗೆ ಕಥಾನಕದ ನಿರೂಪಣೆಯ ತಂತ್ರ ವಿಶೇಷ ಗಮನಕ್ಕೆ ಪಾತ್ರವಾಗುವ ಒಂದು ಅಂಶ.

ಈ ಗೊಂದಲಿಗರ ಹಾಡಿನ ಮೂಲಕವೇ ಚರಿತ್ರೆ ಕ್ರಮೇಣ ಪುರಾಣವಾದಾಗ ಪಡೆದುಕೊಳ್ಳುವ ರೂಪಾಂತರ ಮತ್ತು ಕೇಳುವವರಿಗೇ ಯಾಕೆ ನೋವು ಅನುಭವಿಸಿದ ಬಲಿಪಶುಗಳಿಗೂ ಕ್ರಮೇಣ ತಮ್ಮ ನೋವು, ಅವಮಾನಗಳೆಲ್ಲ ಘನವಾಗಿ, ಪುಣ್ಯಫಲವಾಗಿ, ಹಿತಕರವಾಗಿ ಕಾಣಿಸುವಂತೆ ಮಾರ್ಪಾಡಾಗುವ ಸಹಜ ಬಗೆಯನ್ನು ಕಾಣಿಸುತ್ತಾರೆ. ಮಾತ್ರವಲ್ಲ ಈ ಬೆಳವಣಿಗೆಗೆ ಪ್ರೇರಕವಾಗುವ ಇದರ ಹಿಂದಿನ ಶಕ್ತಿಗಳು, ಅಧಿಕಾರದ ಕೇಂದ್ರಗಳು ಚರಿತ್ರೆಯನ್ನು ರೂಪಿಸುವ ಅಮೂರ್ತ ಬಗೆಯನ್ನು ಕಾಣಿಸುತ್ತಾರೆ. ಈ ಕೆಲಸವನ್ನು ಸುಸಂಬದ್ಧವಾಗಿ ಮಾಡಲು ಗೊಂದಲಿಗರ ಹಾಡು ಇಲ್ಲಿ ಕತೆ ಹೇಳುವ ಪಾತ್ರ ನಿರ್ವಹಿಸಿದೆ. ಹೀಗೆ ನಾಲ್ಕು ವಿಭಿನ್ನ ಕೋನಗಳಲ್ಲಿ, ನೆಲೆಯಲ್ಲಿ ಕತೆ ತೆರೆದು ಕೊಳ್ಳುತ್ತದೆ. ಹೀಗೆ ಚರಿತ್ರೆ, ವರ್ತಮಾನ, ಪುರಾಣ, ಐತಿಹ್ಯ, ನಂಬುಗೆ, ಭ್ರಮೆ, ವಾಸ್ತವ ಎಲ್ಲವೂ ಸೇರಿದ ಈ ಕಥಾನಕ ಆಧುನಿಕ ಅಂಶಗಳ ಜೊತೆ ಮುಖಾಮುಖಿಯನ್ನು ಎದುರಿಸಿದರೂ ಒಟ್ಟಾರೆಯಾಗಿ ಈ ಮುಖಾಮುಖಿ ಕೂಡಾ ಇನ್ನೊಂದು ಪುರಾಣವೇ ಆಗಿದೆ. ಅಷ್ಟರ ಮಟ್ಟಿಗೆ ಇಲ್ಲಿನ ದ್ಯಾವಪ್ಪ ಆಯ್ದುಕೊಳ್ಳುವ ಆದರ್ಶ ಕೂಡಾ ಸಹಜವಲ್ಲದ ಒಂದು ದಾರಿಯಾಗಿಯೆ ಉಳಿಯುತ್ತದೆಯೇ ಹೊರತು ಬದುಕಿನ ಒಳಗಿನಿಂದ ಈ ಪುರಾಣಗಳ ಹೇರುವಿಕೆಯನ್ನು ಮೀರುವ ಮಾರ್ಗವಿಲ್ಲ ಎಂಬ ನಿಲುವಿಗೆ ಕಥಾನಕ ಬಂದು ತಲುಪುತ್ತದೆ. ಒಂದೋ ಸಂಪೂರ್ಣ ಶರಣಾಗತಿ ಇಲ್ಲ ಸಂಪೂರ್ಣವಾಗಿ ಅದನ್ನು ಮೀರಿ ನಡೆಯುವ ಹಾದಿ, ಅದು ಇನ್ನೊಂದು ಅತಿಗೆ ನಮ್ಮನ್ನು ಒಯ್ದರೂ.

ಅಧಿಕಾರ ಕೇಂದ್ರಕ್ಕೆ, ಪಟ್ಟಭದ್ರರಿಗೆ ಎಲ್ಲೋ ಅನಿವಾರ್ಯವಾಗುವ ಈ ದೇವರು, ಧರ್ಮ, ಪರಂಪರೆಯ ಪ್ರೀತಿ, ಪುರಾತನವಾದದ್ದರ ರಕ್ಷಣೆ, ಹೊಸ ಹೊಸ ಪುರಾಣಗಳ ನಿರ್ಮಿತಿ ಎಲ್ಲವೂ ಸಾಮಾನ್ಯ ಮನುಷ್ಯನ ಸಹಜ ಸರಳ ಬದುಕಿಗೆ ಹೊರೆಯಾಗುವ, ತೊಡಕಾಗುವ ಹಂತದಲ್ಲಿ ಪುರಾಣಗಳು ಆಧುನಿಕ ಜಗತ್ತಿನ ವರ್ತಮಾನದ ವಿದ್ಯಮಾನವೇ ಆಗಿಬಿಡುವುದನ್ನು ಗಮನಿಸಬೇಕು. ಅಧಿಕಾರ ಕೇಂದ್ರಗಳು ಬದಲಾದರೂ, ಶಿಥಿಲಗೊಂಡರೂ ಈ ಭೂತಗಳು, ಪ್ರೇತಾತ್ಮಗಳು ಮುಕ್ತಿ ಇಲ್ಲದ ಪಿಶಾಚಿಗಳಂತೆ ತೊಡರಿಕೊಂಡೇ ಇರುವುದನ್ನು ಕಾಣಬಹುದು. ಕೃತಿಯ ಘನತೆ ಇರುವುದೇ ಇಲ್ಲಿ. ಅಧಿಕಾರ ಕೇಂದ್ರಗಳು ಶಿಥಿಲವಾಗುವುದಕ್ಕೆ ಆಯಾ ಕೇಂದ್ರದೊಳಗಿನ ಒಡಕುಗಳೇ ಕಾರಣವಾಗುತ್ತವೆ, ಪಾಟೀಲರ ಕತೆಗಳಲ್ಲಿ. ಆದರೆ ಪುರಾಣ ಭಂಜಕ ಶಕ್ತಿಗಳು ಯಶಸ್ಸು ಕಾಣುವುದಿಲ್ಲ. ಇದು ಅವುಗಳ ವಿರಾಟ್ ಸ್ವರೂಪವನ್ನು ತೆರೆದು ತೋರಿಸುತ್ತದೆ. ಆದರೆ ಈ ಹೊಸ ತೊಡಕುಗಳನ್ನು, ಹೊರೆಯನ್ನು ಮೀರಲು ಆಧುನಿಕ ಮನುಷ್ಯನಿಗೆ ಇರುವ ಮಾರ್ಗೋಪಾಯಗಳ ಶೋಧನೆ ಈ ಸಂಕಥನದಲ್ಲಿ ಕಾಣಸಿಗುವುದಿಲ್ಲ. ದ್ಯಾವಪ್ಪನ ಪಾತ್ರವಾದರೂ ಪರಿಪೂರ್ಣತೆಯ ಹಾದಿ ಹಿಡಿದಂತೆ ಎಲ್ಲೂ ಕಂಡು ಬರುವುದಿಲ್ಲ.

ದ್ಯಾವಪ್ಪನ ಆದರ್ಶ, ಅವನ ನಿಲುವು ಕೂಡಾ ಇನ್ನೊಂದು ಅತಿಯಾಗಿರಬಹುದಾದ್ದು. ಅಥವಾ ಅವನ ಗೊಂದಲದ ಫಲಶೃತಿಯಾಗಿರಬಹುದಾದ್ದು. ಹೆಚ್ಚೆಂದರೆ ಅವನೂ ಸಾಮಾನ್ಯನ ಬದುಕಿನ ಪರಿಧಿಯಿಂದ ಹೊರಗೇ ಉಳಿಯುವ ಇನ್ನೊಂದು ಪಾತ್ರವಾಗಿ ಬಿಡಬಹುದಾದ್ದು. ಕೊನೆಗೂ ನಿರೂಪಕ ಮತ್ತು ದ್ಯಾವಪ್ಪನ ಹೆಂಡತಿ ಎಲ್ಲ ಇರುವ ಜಗತ್ತಿನಿಂದ ಭಿನ್ನವಾದ ಒಂದು ಜಗತ್ತಿಗೆ ಸೇರಿಕೊಂಡವನಂತೆ ಕಾಣುವ ದ್ಯಾವಪ್ಪನೊಂದಿಗೆ ಮುಕ್ತಾಯವಾಗುವ ಕಾದಂಬರಿ ಕೊಂಚ ನಿರಾಶೆ ಹುಟ್ಟಿಸಿದರೆ ಆಸ್ಚರ್ಯವಿಲ್ಲ.

ಇಲ್ಲಿ ಯು ಆರ್ ಅನಂತಮೂರ್ತಿಯವರ ‘ಸಂಸ್ಕಾರ’ದ ಪ್ರಾಣೇಶಾಚಾರ್ಯರೂ, ‘ಭಾರತೀಪುರ’ದ ಗಣೇಶನೂ ಮನಸ್ಸಿನಲ್ಲಿ ಸುಳಿಯುತ್ತಾರೆ. ಜಗನ್ನಾಥ ಹೊರಟಿದ್ದೂ ಪುರಾಣಭಂಜಕ ಕೆಲಸಕ್ಕೇ, ಕೊಂಚ ವಿಶಾಲ ಅರ್ಥದಲ್ಲಿ. ಅದನ್ನು ಗಣೇಶನ ಉನ್ಮಾದ ಕೆಡಿಸುವುದು ‘ಭಾರತೀಪುರ’ದ ವಿಪರ್ಯಾಸ. ಹಾಗೆಯೇ ಪ್ರಾಣೇಶಾಚಾರ್ಯರ ನೈಷ್ಟಿಕ ಕೋಟೆಯನ್ನು ಚಂದ್ರಿ ಒಡೆಯುವುದೂ ಕೂಡಾ ಒಂದರ್ಥದಲ್ಲಿ ಪುರಾಣಭಂಜಕತೆಯೇ. ಪಾಟೀಲರ ಆಧುನಿಕ ಪುರಾಣ ಈ ಎಲ್ಲ ದೃಷ್ಟಿಯಲ್ಲಿ ಹೊಸ ಜಿಜ್ಞಾಸೆಗಳಿಗೆ ಓದುಗರನ್ನು ಮುಖಾಮುಖಿಯಾಗಿಸುತ್ತದೆ. ಆದರೆ ಕಾದಂಬರಿಯ ಕೇಂದ್ರ ಕೇವಲ ಪುರಾತನವಾದದ್ದು ಮತ್ತು ಆಧುನಿಕವಾದದ್ದರ ಸಂಘರ್ಷವಲ್ಲ. ಅದು ಒತ್ತಟ್ಟಿಗಿರುತ್ತ ಕಾದಂಬರಿ ಇತರ ಅನೇಕ ಹೊಳಹುಗಳನ್ನು ನೀಡುತ್ತ ಹಲವು ರೀತಿಯ ಓದಿಗೆ ತನ್ನನ್ನು ತಾನು ಒಡ್ಡಿಕೊಳ್ಳಲು ಸಿದ್ಧವಾಗಿ ಓದುಗರಿಗೆ ದಕ್ಕುತ್ತದೆ. ಹಾಗಾಗಿ ‘ತೇರು’ ಸ್ಪರ್ಶಿಸುವ ಕೆಲವು ಸಮಕಾಲೀನ ಪ್ರಶ್ನೆಗಳಿಗಾಗಿಯೂ, ಕೃತಿಯ ಕಲಾತ್ಮಕ ನೇಯ್ಗೆಗಾಗಿಯೂ ಬಹಳ ಮಹತ್ವದ ಕೃತಿ. ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಹೂವಿಗೆ ಗಂಧವಿದ್ದಂತೆ, ಹೊಸ ಮತ್ತು ಹಳೆಯ ಓದುಗರನ್ನು ಅದು ಮತ್ತೊಮ್ಮೆ ತನ್ನತ್ತ ಸೆಳೆಯಬೇಕು. ಆಗ ಪ್ರಶಸ್ತಿಗೊಂದು ಅರ್ಥ, ಕೃತಿಕಾರನ ಪರಿಶ್ರಮವೂ ಸಾರ್ಥಕ. ಅದೇ ಪಾಟೀಲರಿಗೆ ನಾವು ನೀಡಬಹುದಾದ ಅರ್ಥಪೂರ್ಣ, ಸಾರ್ಥಕ ಅಭಿನಂದನೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.