ರುದ್ರಪ್ರಯಾಗ

‘ಜೈ ಯಮುನಾಮಯ್ಯಾ… ಜೈ ಗಂಗಾಮಯ್ಯಾ… ಜೈ ಕೇದಾರೇಶ್ವರ…. ಜೈ ಬದರೀ ವಿಶಾಲ…’ ಕಳೆದ ಏಳೆಂಟು ದಿನಗಳಿಂದ ಈ ಚಾರಧಾಮ ಯಾತ್ರೆಯಲ್ಲಿ ಗುರಣ್ಣ ಈ ಜೈಜೈಕಾರಗಳಲ್ಲಿ ಮುಳುಗೇಳುತ್ತಿದ್ದಾನೆ. ಯಾತ್ರೆಯ ಸುರುವಾತಿಗೆ ಗುರಣ್ಣಗ ಈ ಜೈಕಾರಗಳು ಮಜಾ ಅನಸತಿದ್ದವು. ತನ್ನಂತಹ ಸುಶಿಕ್ಷಿತ ಮನಿಶಾ ಹುಚ್ಚು ಹುಚ್ಚರ ಹಂಗ ಏನು ‘ಜೈ’ ಎನ್ನುವದು ಎನ್ನುತ್ತ ಮೊದಮೊದಲಿಗೆ ತಮಾಷೆಗೆಂದು, ಮುಜುಗರಪಡುತ್ತ, ಮುಗುಳು ನಗುತ್ತ ಈ ‘ಜೈ ಗಂಗಾ…… ಜೈ ಕೇದಾರ’ಗಳಿಗೆ ದನಿಗೂಡಿಸುತ್ತಿದ್ದವನು, ಈಗೀಗ ಯಾತ್ರೆ ಕೊನೆಯ ಘಟ್ಟವನ್ನು ತಲುಪುತ್ತಿದ್ದಂತೆ, ಯಾತ್ರೆಯ ಅಮಲು ಅವನನ್ನು ತೀವ್ರವಾಗಿ ಆವರಿಸತೊಡಗಿದಂತೆ ತಾನೂ ಆಸ್ಥೆಯಿಂದ ಹುರುಪಿನಿಂದ ಏನನ್ನೋ ಸಾಧಿಸಿದ, ಸಾಧಿಸುತ್ತಿರುವ ಹೆಮ್ಮೆಯಿಂದ ‘ಜೈ ಬದರೀನಾಥ’ ಎಂದು ಮುಕ್ತ ಕಂಠದಿಂದ ಸಹಯಾತ್ರಿಕರೊಡನೆ ಉದ್ಘೋಷಿಸುತ್ತಾನೆ.

ಲಕ್ಷಾಂತರ ಜನ ಗಂಡಸರು ಮುದುಕರು ತದಕರು ಕೂಸು ಕುನ್ನಿ, ದೇಶದ ಅಷ್ಟಪೈಲು ಮೂಲೆಗಳಿಂದ ಬಂದ ಬಣ್ಣಬಣ್ಣದ ವೇಷದ, ಚಿತ್ರವಿಚಿತ್ರ ಭಾಷೆಯ ಬಹುರಂಗೀ ಜನಸಮುದಾಯ, ಸಾಲದ್ದಕ್ಕೆ ನಾಲ್ಕಾರು ಜನ ಬಿಳೀ ಚರ್ಮದ ವಿದೇಶೀಯರು, ಒಬ್ಬೊಬ್ಬರು ಎದುರಾದಾಗ, ಗುಂಪುಗುಂಪಿಗೆ ದಾರಿಬಿಡುವಾಗ ಈ ಜಯಘೋಷಗಳಿಂದ ಎದುರುಗೊಳ್ಳುತ್ತಿದ್ದರು ಬೀಳ್ಕೊಡುತ್ತಿದ್ದರು. ನಾವೂ ನಿಮ್ಮವರೇ ಎಂದು ಭರವಸೆ ಹುಟ್ಟಿಸುತ್ತಿದ್ದರು. ಈ ನಾವೂ ನಿಮ್ಮವರೇ ಎಂದು ಭರವಸೆ ಹುಟ್ಟಿಸುತ್ತಿದ್ದ ಸಹಯಾತ್ರಿಗಳ ನಡುವೆ ‘ಇದೂ ನಮ್ಮದು, ಏನು ಮಾಡುವದು ನಮ್ಮ ನಮ್ಮ ಕರ್ಮ’ ಎಂಬಂತೆ ಆ ಹಂಡಬಂಡ ಹುಡುಗಿ, ಗುರಣ್ಣನ ಮೊಮ್ಮಗಳು ಸೂಸಿ ಉರ್ಫ ಸುಸಾನಳೂ ಇದ್ದಳು. ಹದಿನೈದು ಹದಿನಾರು ವರುಷದ ಬಿಳೇ ಹುಡುಗಿ, ಪ್ಯಾಂಟು ಶರಟು ಹಾಕ್ಕೊಂಡು ಚಿಣಿಗಿ ಹಾವಿನ್ಹಾಂಗ ಎಲ್ಲೆಂದರಲ್ಲಿ ಜಿಗಿಯುತ್ತ ಕುಣಿಯುತ್ತ, ಮಾತು ಮಾತಿಗೆ ‘ಓಕೆ… ಓಕೆ… ರಾಯಿಟ್… ರಾಯಿಟ್’ ಎನ್ನುತ್ತ ಪುಟಿ ಚಂಡಿನಂತೆ ಪುಟಿಯುವ ಹುಡುಗಿ, ತಾನೂ ಎಲ್ಲರಂತೆ ‘ಘಾಂಘಾಮಾಯಾಕೀ ಛೈ……. ಖೇದಾರೇಷ್ವರ್ ಕಿ ಛೈ’ ಎನ್ನುತ್ತ ಕುಪ್ಪಳಿಸುತ್ತಿದ್ದುದನ್ನು ನೋಡಿ ಗುರಣ್ಣಗ ನಗು ಬರುತ್ತಿತ್ತು. ಮರುಕ್ಷಣ ಇದು ತನ್ನ ಬದುಕಿನ ವೈಫಲ್ಯದ ದ್ಯೋತಕ ಎಂದು ನೆನೆದು ಮನಸ್ಸಿಗೆ ಪಿಚ್ಚೆನಿಸುತ್ತಿತ್ತು.

ಆದರ ಗುರಣ್ಣನ ತಾಯಿ ಕೃಷ್ಟಕ್ಕಗ ಮಾತ್ರ, ಯಾತ್ರೆಗೆ ಹೊರಡಲು ನಾಲ್ಕು ದಿನ ಇರುವಾಗ ಅಮೆರಿಕಾದಿಂದ ಸುಸಾನ ಬಂದು ವಕ್ಕರಿಸಿದ್ದು, ವಕ್ಕರಿಸಿ ತಾನೂ ಬದರೀ ಯಾತ್ರೆಗೆ ಬರುತ್ತೇನೆಂದು ಹಟ ಹಿಡಿದು ಬಂದದ್ದು, ಯಾವದೂ ಮನಸ್ಸಿಗೆ ಬಂದಿರಲಿಲ್ಲ. ಆಕೆಗೆ ಈ ಬಿಳೇ ಹುಡುಗಿ ಬಂದದ್ದೇ ಒಂದು ತರಹ ವಾಗತ್ಯ ಅನಿಸಲಿಕ್ಕೆ ಹತ್ತಿತ್ತು. ಆಕೆರs ಏನು ಮಾಡ್ಯಾಳು ಪಾಪ! ಹತ್ತು ವರುಷದಿಂದ ತನ್ನ ದತ್ತಕ ಮಗ ಗುರಣ್ಣಗ ದುಂಬಾಲು ಬಿದ್ದು, ಹಟ ಹಿಡದು, ಬೈದು, ಅಂದು ಕೆಟ್ಟ ಕೆಟ್ಟ ಮಾತಾಡಿ ಈ ವರುಷ ಕಡಿಕೂ ಅವನ ಮನ ಒಲಿಸಿ ಬದರೀ ಯಾತ್ರೆಗೆ ಹೊರಡಿಸಿದರ, ಆಯತಾ ವ್ಯಾಳ್ಯಾಕ್ಕ ಈ ಚಣ್ಣ ಹಾಕ್ಕೊಂಬೋ ಬಿಳೇ ಹಲ್ಲಿಯಂತಹ ಹುಡುಗಿ ವಕ್ಕರಿಸಬೇಕ? ‘ಒಂದು ಮಡೀನss ಮೈಲಿಗೇss ದೊಡ್ಡದಾಗೇದಂತ, ಮೂರು ಮೂರು ದಿವ್ಸ ಕೂಡೂದುಲ್ಲ ಸಹಿತ ಸುಡ್ಲಿ……. ಒಳಗs ಹೊರಗs ಏಕರಾಸ ಮಾಡಿ ಬಿಡತsದ… ಇದರ ಸಂಗತೀ ಯಾತ್ರಿ ಪುಣ್ಯಾ ಪಡಕೋ ಬೇಕು’ ಎನ್ನುತ್ತ ನಿರಂತರ ಗೊಣಗುತ್ತ ಗುರಣ್ಣನ್ನ ತಿವೀತಿದ್ದಳು.

ಏನs ಆಗಲಿ ಯಾತ್ರೆ ಮುಗಿ ಮುಗೀತಾ ಬಂದ ಬಂಧಗ ಗುರಣ್ಣನ ಮನಸ್ಸು ನಿರುಂಬಳ ಆಗಲಿಕ್ಕೆ ಹತ್ತೇದ. ‘ಹ್ಯಾಂಗೂ ಇನ್ನೊಂದೆರಡು ದಿನಕ್ಕೆ ಮುಗೀತದಲ್ಲ’ ಎನ್ನುತ್ತ ಒಳಗಿಂದೊಳಗs ಸ್ವಲ್ಪ ಉಲ್ಲಸಿತನಾಗಲಿಕ್ಕೆ ಹತ್ಯಾನ. ಮೊದಮೊದಲಿಗೆ ಯಾವ ಯಾವ ಅನಿಶ್ಚಿತಗಳಿಗೆ ಅತೀವ ಹೆದರಿಕೊಂಡಿದ್ದನೋ, ಅವನ್ನೆಲ್ಲ ದಾಟಿ ಬಂದ ಮ್ಯಾಲ, ಈಗ ಅವೆಲ್ಲ ತಾನು ಸಾಧಿಸಿದ ಸಾಹಸೀ ದಿಗ್ವಿಜಯಗಳೇನೋ ಎನ್ನುತ್ತ ಮತ್ತೆ ಮತ್ತೆ ಅವನ್ನೇ ಮೆಲಕುಹಾಕುತ್ತಿರುತ್ತಾನೆ, ಹೆಮ್ಮೆ ಪಟ್ಟುಕೊಳ್ಳುತ್ತಿರುತ್ತಾನೆ.

ಹೃಷಿಕೇಶದ ಉರಿಬಿಸಿಲಿನ್ಯಾಗ, ಸ್ವರ್ಗಾಶ್ರಮ…. ಶಿವಾನಂದಾಶ್ರಮ…. ಲಕ್ಷ್ಮಣ ಝೂಲಾ…. ರಾಮ ಝೂಲಾ…. ಅನಕೋತ ಬೆವರಿಳಿಸುತ್ತ ಒದ್ದ್ಯಾಡತಿರಬೇಕಾದರ, ಪ್ರತೀ ಸರೇ ಯಾವದಾದರೂ ನದಿ ಬರೂತಲೇ, ಕೃಷ್ಟಕ್ಕ ತಾನು ಉಟ್ಟ ಕೆಂಪು ಮಡಿಸೀರಿ ಸಡಿಲಿಸಿ ಸೊಂಟದಿಂದ ಎಂಟಾಣೆ ತೆಗೆದು ಹರಿವ ನದಿಗೆ ಎಸೆಯುತ್ತಿದ್ದದನ್ನ ನೋಡಿ ಹುಡುಗಿ ಸುಸಾನ, ‘ಗ್ರ್ಯಾಂಪಾ…… ವ್ಹಾಯ್ ಧಿಸ್ ಓಲ್ಡೀ ಇಸ್ ವೇಸ್ಟಿಂಗ ಮನೀ?’ ಎಂದದ್ದು ನೆನಪು ಮಾಡಿಕೊಂಡು ಮುಗುಳು ನಗತಾನ. ಆದರ ಅದೇ ಬಿಳೇ ಹುಡುಗಿ ಸುಸಾನ ಹೃಷಿಕೇಶ ಬಿಡುವ ಮುಂದ, ಓಡೋಡಿ ಬಂದು ಬಸ್ಸಿನಲ್ಲಿ ತನ್ನ ಪಕ್ಕದ ಸೀಟಿನಲ್ಲಿ ಕುಕ್ಕರಿಸಿದಾಗ ಭಗ್ಗಂತ ಉಗ್ಗಿದ ಸಿಗರೇಟಿನ ವಾಸನಿಗೆ ಗುರಣ್ಣ ಕುಗ್ಗಿ ಬಿಟ್ಟಿದ್ದ. ಹಿಂದಿನ ಸಾಲಿನಿಂದ ಕೃಷ್ಟಕ್ಕ ‘ಎಲ್ಲಿ ಹೋಗಿತ್ತಂತಪಾ ನಿನ್ನ ವಂಶದ ಕುಡಿ…… ಊಟದ ವ್ಯಾಳ್ಯಾಕ್ಕೂ ಇದ್ದಿದ್ದಿಲ್ಲ……… ಊಟಾ ಉಡಿಗಿ ಏನೂ ಬ್ಯಾಡಂತೇನು?’ ಎಂದು ಫೂತ್ಕರಿಸಿದಾಗ, ಗುರಣ್ಣ ಸುಸಾನಳನ್ನ ಕೇಳಿ ‘ಆಕಿ ಏನೋ ತಿಂದು ಬಂದಾಳಂತ’. ಎಂದದ್ದಕ್ಕ ಕೃಷ್ಟಕ್ಕ ‘ಏನು ಶಗಣೀ ತಿಂದ ಬಂದsದ ಕೇಳು… ಯಾತ್ರಿ ಮುಗಿಯೋ ತನಕ ಒಂದ್ನಾಕು ದಿವಸ ನಮ್ಮ ಸಂಗತೀsನ ಇರಲಿಕ್ಕೆ ಹೇಳು’ ಎಂದು ಚುಚ್ಚಿದ್ದಳು.

ಮುಂದ ಈ ಉತ್ತರ ಧ್ರುವ ದಕ್ಷಿಣ ಧ್ರುವಗಳನ್ನ ಎಡಕs ಬಲಕs ಇಟಗೊಂಡs ಯಾತ್ರೆಯ ಉದ್ದಕ್ಕೂ ಗುರಣ್ಣಗ ಒದ್ದಾಡಬೇಕಾಯಿತು. ಖರೆ ಅಂದರ ಗುರಣ್ಣಗ ಈ ಹುಡುಗಿ ಸುಸಾನ ಬಂದಾಗನs ಅಷ್ಟಿಷ್ಟು ಧೈರ್ಯ ಬಂಧಂಗ ಅನಸತsದ. ದಶಕಗಳಿಂದ ಕೃಷ್ಟಕ್ಕನ ಕೈಯಾಗ, ‘ಅಪಹಾತ… ಅಳಬುರಕ…. ಅವ್ವಾಳಿ…’ ಅಂತ ಬೈಸಿಗೊಂಡು ಬೈಸಿಗೊಂಡು ಕ್ಷತವಿಕ್ಷತಗೊಂಡ ಅವನ ವ್ಯಕ್ತಿತ್ವಕ್ಕ ಈ ಹುಡುಗಿಯ ಸ್ವಚ್ಛಂದ ಸ್ವಲ್ಪ ಸ್ಥೈರ್ಯ ತುಂಬಿದ ಹಂಗ ಅನಸತsದ. ಇಲ್ಲದಿದ್ದರ ಧಾರವಾಡದಾಗ ಇದ್ದಾಗ ಒಂದು ಹತ್ತು ಫೂಟು ಎತ್ತರದ ಮೈಲಾರಲಿಂಗನ ಗುಡ್ಡ ಹತ್ತಲಿಕ್ಕೆ ಹೆದರಾವ, ಮಾಳಮಡ್ಡಿಯೊಳಗಿನ ತಮ್ಮ ಮನೀ ಹಿತ್ತಿಲ ಭಾವಿಯೊಳಗ ಹಣಿಕಿ ಹಾಕಿದರ ತಲಿ ತಿರಗತsದ ಅಂತಿದ್ದಾಂವ, ಈಗ ಈ ನಾಲ್ಕs ದಿವಸಕ್ಕs ತಾನೇನು ಈ ಹಿಮಾಲಯದ ಮಡಿಲಲ್ಲೇ ಹುಟ್ಟಿ ಬೆಳೆದ ಪಹಾಡಿಯೇ ಏನೋ ಅನ್ನವರಹಂಗ, ಈ ಪರ್ವತಗಳ ಸಖ್ಯದಲ್ಲಿ ರಮಿಸಲಿಕ್ಕೆ ಹತ್ಯಾನ. ಈ ಬೃಹದಾಕಾರದ ಪರ್ವತಗಳು, ಈ ತಳವೇ ಇಲ್ಲದ ಕೊಳ್ಳಗಳು ಇವೆಲ್ಲ ತನ್ನ ಬಾಲ್ಯ ಸ್ನೇಹಿತರೇನೋ ಅನ್ನುವಷ್ಟು ಸಲಿಗೆಯಿಂದ, ಸಲೀಸಾಗಿ ಈ ಹಿಮಾಲಯದ ಒಡನಾಟದಾಗ ಅಡ್ಡಾಡತಿರತಾನ.

ಯಮುನೋತ್ರಿಗೆ ಹೊರಟಾಗ ಹನುಮಾನ ಚಟ್ಟಿಯಿಂದ ಜಾನಕೀ ಚಟ್ಟೀತನಕ ಕುರೀ ತುಂಬಿದಂತಹ ಒಂದು ಜೀಪಿನ್ಯಾಗ ಕೃಷ್ಟಕ್ಕನ್ನ ಮುಂದಿನ ಸೀಟಿನ್ಯಾಗ ಎತ್ತಿ ಕೂಡಿಸಬೇಕಾರ ಅದೊಂದು ಹರಸಾಹಸವೇ ಆತು. ಆದರೆ ಸುಸಾನ ಮಾತ್ರ ಗುರಣ್ಣನ ಸಂಗತೀನs ಜೀಪಿನ ಹಿಂದಿನ ದೊಡ್ಡಿಯೊಳಗ ಟಣ್ಣಂತ ಜಿಗಿದು, ಮುವತ್ತು ಮಂದೀ ನಡುವ ನುಗ್ಗು ನುಗ್ಗಾಗುತ್ತ, ಮ್ಯಾಲಿನ ಪಟ್ಟೀ ಹಿಡಿದು ತೂಗಾಡುತ್ತ, ‘ಓ ಇಟ್ಸ್ ಗ್ರೇಟ್ ಫನ್…… ಗ್ರೇಟ್ ಥ್ರಿಲ್’ ಅಂತ ಚೀರಾಡತೊಡಗಿದ್ದಳು. ಮುಂದ ಗುರಣ್ಣ ಮತ್ತು ಕೃಷ್ಟಕ್ಕ ಒಂದೊಂದು ಪಾಲಕಿಯೊಳಗೆ ಕೂತು ಯಮನೋತ್ರಿ ಏರತೊಡಗಿದರ, ಸುಸಾನ ಮಾತ್ರ ಒಂದು ಕುದುರೀ ಮ್ಯಾಲ ಜಿಗಿದು ಕೂತು ಟುಣು ಟುಣು ಅನಕೋತ ಮುಂದ ಮುಂದ ಹೊರಟುಬಿಟ್ಟಳು.

ಪರ್ವತದ ಗುಂಟ ಸಾಗಿದ ಇಕ್ಕಟ್ಟಾದ ಕಚ್ಚಾ ಏರುದಾರಿ, ಅಲ್ಲಲ್ಲಿ ಅಲ್ಲಲ್ಲಿ ಸೈಜುಗಲ್ಲಿನ, ಹೆಜ್ಜೆ ಇಟ್ಟರೆ ಅಲ್ಲಾಡುವ ಮೆಟ್ಟಿಲುಗಳು; ಒಂದು ಕಡೆ ಮುಗಿಲು ಹರಿದು ಆಚೆಗೆ ಚಾಚಿರುವ ಪರ್ವತ, ಕೆಳಗೆ ‘ಆ’ ಎಂದು ಬಾಯ್ದೆರೆದು ಆತ್ಮಹತ್ಯೆಗೆ ಪ್ರಚೋದಿಸುವ ಪ್ರಪಾತ, ರಮಣೀಯತೆಗೆ ರೌದ್ರ ಬೆರೆತಿದೆಯೋ, ಇದಕ್ಕೆ ಅದೋ ತಿಳಿಯದಂತಹ ಭಯಾವಹ ದೃಶ್ಯ. ಒಂದಿಷ್ಟು ಅಗಲ ರಸ್ತೆಯಲ್ಲಿ ಪಾಲಕಿಯವರು, ಕಾಲುನಡಿಗೆಯವರು, ಕುದುರೆ ಸವಾರರು…. ಕೂಲಿಗಳ ಬಾಗಿದ ಬೆನ್ನಿಗೆ ಬಿಗಿದ ಬುಟ್ಟಿಯಲ್ಲಿ ಬಿದ್ದುಕೊಂಡವರು… ಏರು ಏರು ಏರು… ಪಾಲಕಿ ಹೊತ್ತವರ ಕೆಮ್ಮು… ಕಾಲು ನಡಿಗೆಯವರ ದಮ್ಮು… ಪೋನಿಗಳ ಹೇಷಾರವ… ‘ಜೈ ಯಮುನಾ ಮಯ್ಯಾ..’ ‘ಅರೇ ಬಾಜೂ… ಸಾಡ… ಸಾಡ… ದೇ ಮಾಯೀ…. ಬಾಜೂ ಅರೇ ಹಾಟ್…’ ಎನ್ನುತ್ತ ಒಬ್ಬರನ್ನೊಬ್ಬರು ಛೇಡಿಸುತ್ತ ಕೆಣಕುತ್ತ ಎದುರು ಬದುರಾಗಿ ಏರುತ್ತಿದ್ದ ಇಳಿಯುತ್ತಿದ್ದ ಪಾಲಕೀ ಹೊತ್ತ ಹುಡುಗರು… ಗದ್ದಲ… ನೂಕು ನುಗ್ಗಲು… ಎಲ್ಲ ಯದೀ ಘಟ್ಟಿದ್ದವರ ಕೆಲಸ. ತಮ್ಮನ್ನು ಹೊತ್ತ ಪಾಲಕಿಗಳು ಒಂದಿಷ್ಟು ಹಿಂದು ಮುಂದಾದರೆ ಹೆದರಿ ಕಕ್ಕಾವಿಕ್ಕಿಯಾಗುವ, ‘ಒಂದs ಒಂದು ಹೆಜ್ಜಿ ಅತ್ತಲಾಗ ಇತ್ತಲಾಗ ಆದರ ಎಲಬು ಸಹಿತ ಸಿಗಲಿಕ್ಕಿಲ್ಲಾ ಅಂದೆ’ ಎನ್ನುವ ಕೃಷ್ಟಕ್ಕನ ಹೌಹಾರಿಕೆಗಳು… ದಾರಿಯ ಎರಡೂ ಕಡೆ ನಿರಂತರವಾಗಿ ಫುಟ್‌ಬಾಲ್‌ಗಳಂತೆ ಉಬ್ಬಿ ಉಬ್ಬಿ ಬಿರಿಯುತ್ತಿರುವ ಬಿಳಿಯ ರೊಟ್ಟಿಗಳನ್ನು ಸುಡುತ್ತಿರುವ ಧಾಬಾಗಳು… ಎಣ್ಣೆಮಯ ಸಬ್ಜಿಗಳು… ನೊಣ ಮುಕುರಿದ ಚಾಯ್‌ಗಳು… ಅಲ್ಲಲ್ಲಿ ಅಲ್ಲಲ್ಲಿ ಕುದುರೆಗಳ ಬಾಥರೂಮುಗಳು… ನಡುನಡುವೆ ಮಳೆ… ಎಲುಬು ಕಂಪಿಸುವ ಹಿಮದ ತುಣುಕುಗಳು… ಹತ್ತು ಹತ್ತು ರೂಪಾಯಿಗಳಿಗೆ ಕೊಂಡು ಈಗ ಗಾಳಿಗೆ ಹರಿದು ಹೋಗಿರುವ ಟೆಂಪರರೀ ಪ್ಲಾಸ್ಟಿಕ್ ರೇನುಕೋಟುಗಳು… ಆಗೊಮ್ಮೆ ಈಗೊಮ್ಮೆ ಮೋಡ ಸರಿದಾಗ ಝಗ್ಗೆಂದು ಮಿಂಚುವ ಹಿಮಾಚ್ಛಾದಿತ ಶಿಖರಗಳು… ಎಳೆ ಬಿಸಿಲಿನಲ್ಲಿ ಥಳಥಳಿಸುವ ಆ ಬೆಳ್ಳಿಬೆಡಗುಗಳು ಇ॒ದ್ದಕಿದ್ದಂತೆ ಮಂಜು ಅ॒ಲ್ಲೊಬ್ಬರು ಬಿದ್ದರು ಇ॒ಲ್ಲೊಬ್ಬರು ಎದ್ದರು… ನಡುನಡುವೆ… ‘ಆ ಕುದರೀ ಮ್ಯಾಲ ಕೂತದ್ದು ಬಿಳೇ ಹಲ್ಲಿ ಎಲ್ಲಿ ಹೋತು ಸುಡ್ಲಿ ನೋಡೋ ಗುರು‘ಗಳು… ಹತ್ತು ಹತ್ತು ಹತ್ತು… ಇಳೀ ಇಳೀ ಇಳೀ…. ಇದೊಂದು ಹತ್ತುವ ಇಳಿಯುವ ಮೆರಿಗೋ ರೌಂಡದ ಬ್ಯಾರೇ ಪ್ರಪಂಚನs ಸೈ… ಇಲ್ಲಿ ಯಾರಿಗೆ ಯಾರೋ?…. ಬಹುಶಃ ಪ್ರೇತಗಳ ಜತೆಗಿನ ಆ ಕೊನೆಯ ಏಕಾಕೀ ಯಾತ್ರೆಯೂ ಹೀಗೇನೇ ಏನೋ….

ಯಮುನೋತ್ರಿಯೊಳಗ ಸುಸಾನ ಎಲ್ಲೋ ತಪ್ಪಿಸಿಕೊಂಡುಬಿಟ್ಟಿದ್ದಳು. ಗುರಣ್ಣ ಮತ್ತು ಕೃಷ್ಣಕ್ಕ ತಿರುಗಿ ಹನುಮಾನ ಚಟ್ಟಿಗೆ ಮರಳಿ ಬಂದಾಗ ಅಲ್ಲೆ ಭೆಟ್ಟಿಯಾದಳು. ಅವತ್ತ ಕೃಷ್ಟಕ್ಕ ಒಂದು ತಾಸು ಗೊಣಗಿದ್ದಳು. ‘ಇದರ ಸುಡ್ಲಿ…. ಇದು ಮನೀ ಹೆಣ್ಣು ಮಗಳಾಗಿ ಛಂದಾಗಿ ಒಂದು ಸೀರಿ ಉಟಗೊಂಡು ಬಂದಿದ್ದರs ಅಲ್ಲೇ ಯಮುನಾದೇವಿ ಗುಡಿಯೊಳಗ ಪೂಜಿ ಮಾಡಿ, ಉಡೀ ತುಂಬಿ ಬಾಗಣಾ ಕೊಟ್ಟು ಬರಬಹುದಿತ್ತು…. ಇದನ್ನೆಲ್ಲ ತಲೀ ಬೋಳಿಸಿಕೊಂಡ ಮಡೀ ಹೆಂಗಸಾಗಿ ನಾ ಮಾಡಬೇಕss?…. ಬಂದಿದ್ದೇನs ಇಲ್ಲ ಅಂದ್ರ ಆ ಮಾತು ಬ್ಯಾರೇ…. ಇಲ್ಲೀ ತನಕಾ ಬಂದು ಚಣ್ಣಾ ಹಾಕ್ಕೊಂಡsದ ಸುಡ್ಲಿ… ಹಣೀ ಮ್ಯಾಲ ಒಂದು ಕುಂಕುಮ ಇಲ್ಲ…. ಕೈಯಾಗ ಬಳೀ ಇಲ್ಲ…. ಯಲ್ಲಾ ಆ ಮುಳಗುಂದದ ಸಕೇಶಿ ಶಾಪ… ಶಾಪ…’ ಎನ್ನುತ್ತ ನಾಲ್ಕು ದಿನ ಮರವೆಯಾಗಿದ್ದ ಆ ಮುಳಗುಂದದ ಸಕೇಶಿಯನ್ನು ಮತ್ತೆ ಎಳೆತಂದು ಶಾಪ ಹಾಕತೊಡಗಿದಳು.

ಮರುದಿವಸ ಗಂಗೋತ್ರಿಗೆ ಹೊರಟಾಗ ಮಾತ್ರ ಧಾರವಾಡದಿಂದ ಬಂದ ಸಹಯಾತ್ರಿ ಸುಬ್ಬಕ್ಕನ್ನ ಹಿಡಿದು ಆಕೀ ಕಡಿಂದ ಸುಸಾನಗ ’ಒಂದು ಛಂದನ್ನ ಕೇಸರೀ ಬಣ್ಣದ ಪತ್ತಲಾ ಉಡಿಸಿಗೊಂಡು ಬಂದು, ಗಂಗಾದೇವಿ ಗುಡಿಯೊಳಗ ಪೂಜಿ ಮಾಡಿಸಿ, ಉಡೀ ತುಂಬಿಸಿದಳು. ಆ ಮ್ಯಾಲ ಎಷ್ಟೋ ಹೊತ್ತು ಸುಸಾನ, ಪರ್ವತ ತುದಿಯ ಗಂಗಾ ತಟದ ವಿಶಾಲ ಘಾಟಿನ ಮ್ಯಾಲ ಎಳೆ ಬಿಸಿಲಿನ್ಯಾಗ, ಮಾರಿಗೆಲ್ಲ ಅರಿಷಿಣ ಕುಂಕುಮ ಮೆತ್ತಿಕೊಂಡು, ಉಟ್ಟಿ ಸೀರಿ ಮೊಣಕಾಲ ತನಕ ಎತ್ತಿ ಹಿಡದು ಉದ್ದುದ್ದ ಕಾಲು ಹಾಕುತ್ತ ಗಂಗೆಯ ನೀರನ್ನು ಎಲ್ಲರ ಮೇಲೆ ಚಿಮುಕಿಸುತ್ತ, ಮಂಗ್ಯಾನ್ಹಂಗ ಕುಣಿದಾಡಿದ್ದನ್ನು ನೋಡಿ, ಗುರಣ್ಣನ ಕಣ್ಣಾಗ ನೀರು ಬಂದವು. ಕೃಷ್ಟಕ್ಕ ಹಣೀಹಣೀ ಬಡಕೊಂಡಳು. ಮುಂದ ಕೃಷ್ಟಕ್ಕ ಮತ್ತು ಗುರಣ್ಣ ಹೆದರಿಕೋತ, ಹೆದರಿಕೋತ, ಒಬ್ಬರ ಕೈ ಒಬ್ಬರು ಹಿಡಕೊಂಡು, ಹೌರಗs ಬಗ್ಗಿ ಬಗ್ಗಿ ತಾವು ತಂದ ಪ್ಲಾಸ್ಟಿಕ್‌ದ ಕ್ಯಾನಿನೊಳಗ, ಪವಿತ್ರ ಗಂಗಾಜಲ ತುಂಬಿಕೋತಿದ್ದಾಗ, ಸುಸಾನ ಯಥಾಪ್ರಕಾರ ಗಾಯಬ್ ಆದಳು. ನಾಲ್ಕು ಹೆಜ್ಜೆದಾಟಿ ಮರಳಿ ತಮ್ಮ ಬಸ್ಸಿಗೆ ಹೊರಟಾಗ, ಯಾರೋ ಬಂದಿಬ್ಬರು ಅಪರಿಚಿತ ಪಾಲಕೀ ಹೊರುವ ಹುಡುಗರ ಜತೆಗೆ ಎದೆಯ ಮೇಲಿನ ಸೆರಗನ್ನು ಸೊಂಟಕ್ಕೆ ಬಿಗಿದು, ಕಾಲು ಮೇಲೆ ಕಾಲು ಹಾಕಿ, ಬಲಗೈಯಾಗ ಚಹಾದ ಗ್ಲಾಸ್ ಹಿಡಿದುಕೊಂಡು, ಎಡಗೈಲೇ ಬೀಡೀ ಸೇದಿಕೋತ ಕೂತ ತನ್ನ ಮೊಮ್ಮಗಳು ಸುಸಾನಳನ್ನ ನೋಡಿಯೂ ನೋಡದವರ ಹಾಂಗ, ಗುರಣ್ಣ ಖಿನ್ನನಾಗಿ ಇತ್ತಲಾಗ ಮಾರೀ ಮಾಡಿಕೊಂಡು ಬಂದುಬಿಟ್ಟ. ಪುಣ್ಯಾಕ್ಕ ಕೃಷ್ಟಕ್ಕ ಅತ್ತಲಾಗಿನ ಅಂಗಡಿಯೊಳಗ ಸುಬ್ಬಕ್ಕನ ಸಹಾಯದಿಂದ ಸುಸಾನಗ ಬಳೀ ಖರೀದಿಸಲಿಕ್ಕೆ ಹತ್ತಿದ್ದಳು!
ಮುಂದ ಬಸ್ಸಿನ್ಯಾಗ ಕೂತು ಮರಳಿ ಹೊರಟಾಗ ಯಾವದೋ ಮಾಯದಿಂದ ಸುಸಾನ ಎಲ್ಲರಕ್ಕಿಂತ ಮೊದಲs ಬಂದು ಕೂತಿದ್ದಳು.

ಆಮ್ಯಾಲಿನ ಕೇದಾರ ಯಾತ್ರಾದ್ದೊಂದು ಕಥೀನ. ಕೇದಾರ ಮುಗಿಸಿಕೊಂಡು ಬರೋ ತನಕ ಕೃಷ್ಟಕ್ಕ ಘಾಬರ್‍ಯಾಗಿ ಸುಂದ ಬಡದವರಹಂಗ ಕೂತುಬಿಟ್ಟಿದ್ದಳು. ಒಂದಿಷ್ಟು ಅಗಲ ಹಾದಿಯೊಳಗ, ಹತ್ತವರೂ, ಇಳಿಯವರೂ… ಇಳಿಯವರೂ ಹತ್ತವರೂ… ಈ ಏರುವ ಇಳಿಯುವ ಕಾರವಾನ್‌ಗಳ ನಡುವ ಉಂಟಾಗುವ ಟ್ರಾಫಿಕ್ ಜಾಮುಗಳು… ಇದ್ದಕ್ಕಿದ್ದ ಹಾಗೆ ಗುಡುಗಿ ಬಂದು ಎದೆ ನಡುಗಿಸುವ ಭೂಕುಸಿತಗಳು… ಘಡಘಡಘಡ ಸಪ್ಪಳ ಮಾಡುತ್ತ ಎಲ್ಲೋ ಕನಸಿನ ಆಳದಲ್ಲಿ ಜುಳುಜುಳು ಹರಿಯುತ್ತಿರುವ ಯಾವದೋ ನದಿಯ ಒಡಲಿಗೆ ಬೀಳುತ್ತಿದ್ದ ಬಂಡೆಗಳು… ಗುಡುಗು… ಮಳೆ. ಇದನ್ನೆಲ್ಲ ನೋಡಿ ಅಮೆರಿಕದ ಆ ಬಿಳೇ ಹುಡುಗಿ ಸುಸಾನ ‘ಗ್ರೇಟ… ರಿಯಲಿ ಗ್ರೇಟ… ಹೌ ಎಕ್ಸೈಟಿಂಗ್’ ಎಂದು ಕೈತಟ್ಟಿ ಕುಣೀತಿರಬೇಕಾರ, ಇತ್ತಲಾಗ ಕೃಷ್ಟಕ್ಕ ಘಾಬರ್‍ಯಾಗಿ ‘ನಾವು ಮಾಧ್ವರು ಕೇದಾರಕ್ಕ ಬರಬಾರದೂ ಅಂತಾರss… ಬಂದೇವೀ… ಅದಕ್ಕs ಹಿಂಗೆಲ್ಲ ಆಗಲಿಕ್ಕೆ ಹತ್ತೇದೋ ಏನೋ…’ ಎಂದುಕೊಂಡು ಮರುಕ್ಷಣ ಒಮ್ಮೆಲ್ಲೇ ಬೆಚ್ಚಿ ಬಿದ್ದು. ‘ಛೇ… ಛೇ… ರುದ್ರದೇವರು ಏನು ಅಂದುಕೊಂಡಾರು?’ ಎಂದು ಭಯಭೀತಳಾಗಿ ಗಲ್ಲಗಲ್ಲ ಬಡಕೊಂಡಳು. ಆಮ್ಯಾಲ ಸ್ವಲ್ಪ ಹೊತ್ತು ಬಿಟ್ಟು ಯಲ್ಲಾ ಶಾಂತ ಆಗಿ, ಇನ್ನೊಮ್ಮೆ ಛಂದನ್ನ ಬೆಳ್ಳೀ ಬಿಸಿಲು ಬಿದ್ದಾಗ, ಮತ್ತೆ ತನ್ನ ಬದುಕಿನ ಪಲ್ಲವಿ…‘ಥೀಮ ಸಾಂಗ‘… ‘ಮುಳಗುಂದ ಸಕೇಶಿ ಶಾಪ’ಕ್ಕೆ ಮರಳಿ ‘ಆದರೂ ದೇವರು ಧೊಡ್ಡಾಂವಾ’ ಎಂದು ನಿಟ್ಟುಸಿರುಬಿಡುವಳು. ಸುತ್ತಲಿನ ‘ಜೈ ಕೇದಾರನಾಥ‘ಗಳಿಗೆ ದನಿಗೊಡುವಳು.

ಅಂತೂ ಕೇದಾರದ ಆ ಭಯಾನಕತೆಯನ್ನು ದಾಟಿ ಯಾತ್ರೆಯ ಕೊನೆಯ ಘಟ್ಟ ಬದರಿಗೆ ಹೊರಟರು. ದೀರ್ಘ ಬಸ್ಸಿನ ಪ್ರಯಾಣ. ಶತಶತಮಾನಗಳಿಂದ ಅಸಂಖ್ಯ ಶ್ರದ್ಧಾಳುಗಳು ಯಾವದಕ್ಕೆ ಹಪಹಪಿಸುತ್ತಿರುತ್ತಾರೋ, ಆ ಬದರೀ ಯಾತ್ರೆಗೆ ಗುರಣ್ಣ ಇತ್ತಲಾಗ ಮಡೀ ಹೆಂಗಸು ಕೃಷ್ಟಕ್ಕನ್ನs ಅತ್ತಲಾಗ ತನ್ನ ಮೊಮ್ಮಗಳು ಬಿಳೀ ಹುಡುಗಿ ಸುಸಾನಳನ್ನ ಕರಕೊಂಡು, ಪಾವನಗಂಗೆಯಿಂದ ಇನ್ನಷ್ಟು ಪುನೀತವಾದ ಆ ದೇವ ಭೂಮಿಯಲ್ಲಿ, ನಾಲ್ಕಾರು ಬಿಸಲೇರಿ ನೀರಿನ ಬಾಟಲ್ಲುಗಳನ್ನು ಕೊಂಡು ಬಸ್ಸು ಏರಿದ. ಯಥಾಪ್ರಕಾರ ಸುಸಾನ ಅವನ ಬಾಜೂಕ ಕೂತಳು. ಹಿಂದಿನ ಸಾಲಿನ್ಯಾಗ ಕೃಷ್ಟಕ್ಕ, ಸುಬ್ಬಕ್ಕ ಮತ್ತು ಧಾರವಾಡ ಕಡಿಂದ ಬಂದ ಇನ್ನೂ ಕೆಲವು ಯಾತ್ರಿಗಳು ತೂಕಡಿಸಲಿಕ್ಕೆ ಹತ್ತಿದರು. ಪರ್ವತ ಪ್ರದೇಶದ ಎಳೆ ಬಿಸಿಲಿನ್ಯಾಗ ಬಸ್ಸು ಮ್ಯಾಲ ಮ್ಯಾಲ ಏರಲಿಕ್ಕೆ ಹತ್ತಿತು. ನಾಲ್ಕಾರು ದಿವಸ ಗಂಗೋತ್ರಿ ಯಮನೋತ್ರಿ, ಕೇದಾರ ಅನಕೋತ ಹತ್ತೀ ಇಳದೂ ಮಾಡಿದ ಶ್ರಮಕ್ಕೋ ಏನೋ ಇಡೀ ಬಸ್ಸಿಗೆ ಬಸ್ಸೇ ತೂಕಡಿಸಲಿಕ್ಕೇ ಹತ್ತಿತು. ನಾಭಿಯಿಂದ ಧ್ವನಿ ಹೊರಡಿಸುತ್ತ ಅತ್ಯಂತ ಕರ್ಕಶ ದನಿಯಲ್ಲಿ ಮಾತಾಡುತ್ತಿದ್ದ ಆ ಮುಂದಿನ ಸಾಲಿನ ಖಲ್ವಟ ಯಾತ್ರಿ ಗೊರಕೆ ಹೊಡೀಲಿಕ್ಕೆ ಹತ್ತಿದ್ದ. ಮುಂದ ಯಾವಾಗೋ ಎಚ್ಚರ ಆದಾಗ ಹಿಂದಿನ ಸಾಲಿನ ಸುಬ್ಬಕ್ಕ ಮಂದ್ರಗೊಗ್ಗರ ದನಿಯಲ್ಲಿ ‘ಅಂಟಿನ ಉಂಡಿಗೆ ಒಣಖೊಬ್ಬರಿ ಯಾವಾಗ ಹಾಕಬೇಕು… ಉತ್ತತ್ತಿ ಎಷ್ಟು ಸಣ್ಣಗ ಕತ್ತರಿಸಬೇಕು…. ಥಾಲೀ ಪೆಟ್ಟು ಹೊತ್ತಬಾರದಂದರ ಗ್ಯಾಸು ಎಷ್ಟು ಸಿಮ್‌ಕ್ಕ ಇಟ್ಟಿರಬೇಕು…’ ಇತ್ಯಾದಿ ಮಹತ್ವಪೂರ್ಣ ವಿಷಯಗಳ ಬಗ್ಗೆ, ವಿದ್ವತ್‌ಪೂರ್ಣವಾಗಿ ಪಕ್ಕದಲ್ಲಿದ್ದವಳಿಗೆ ವ್ಯಾಖ್ಯಾನ ಕೊಡಲಿಕ್ಕೆ ಹತ್ತಿದ್ದಳು. ಆ ಪಕ್ಕದವಳಿಗೆ ನಿದ್ದಿ ಹತ್ತಿತ್ತು! ಗುರಣ್ಣನೂ ನಿದ್ದೆಯ ಆಳಕ್ಕ ಇಳಿದ. ಮುಂದ ಯಾವದೋ ತಿರುವಿಗೆ ಟ್ರ್ಯಾಫಿಕ್ ಜಾಮು ಆದಾಗ ಅರ್ಧಂಬರ್ಧ ಎಚ್ಚರದಲ್ಲಿ ನೋಡಿದರ ಸುಸಾನ ಅವನ ಹೆಗಲ ಮೇಲೆ ತಲೆ ಇಟ್ಟು ಮಲಗಿತ್ತು. ಗುರಣ್ಣ ಮಗ್ಗಲು ಬದಲಿಸಿ ಮತ್ತೆ ಮೊಮ್ಮಗಳ ತಲೆಯನ್ನು ತನ್ನ ಹೆಗಲಲಿಗೆ ಇಟ್ಟು ಕೊಂಡೇ ನಿದ್ದೆಗಿಳಿದ. ಟ್ರಾಫಿಕ್ ಜಾಮಿನಿಂದ ದಾಟಿ ಬಂದ ಬಸ್ಸು ಮತ್ತೆ ಹಿಮಾಲಯ ಏರತೊಡಗಿತ್ತು. ಇನ್ನೆಷ್ಟೋ ಹೊತ್ತು ಕಳೆದು ಬಸ್ಸು ಯಾವಾಗಲೋ ಬಂದು ನದಿಯ ಮೇಲಿನ ಕಬ್ಬಿಣದ ಸೇತುವೆಯನ್ನು ಧಡಧಢ ಎಂದು ದಾಟುತ್ತಿದ್ದಾಗ ಗುರಣ್ಣಗ ಮತ್ತೆ ಎಚ್ಚರಾತು.

ಹಿಂದಿನ ಸಾಲಿನಲ್ಲಿ ಕೃಷ್ಟಕ್ಕ ತನ್ನ ಪಕ್ಕದವಳಿಗೆ, ‘ಇಷ್ಟೆಲ್ಲಾ ಆ ಸಕೇಶಿಯಿಂದ ಆತು ನೋಡರೆವಾ… ನಾ ಬಡಕೊಂಡೆ…’ ಎನ್ನುತ್ತ ನಲವತ್ತು ವರುಷಗಳ ಹಿಂದಿನ ಇತಿಹಾಸವನ್ನು ಪುನಃ ಪಠಿಸತೊಡಗಿದ್ದಳು. ಗುರಣ್ಣಗ ಈಗ ನಿದ್ದಿ ಪೂರಾ ಹಾರಿ ಹೋತು. ಕೃಷ್ಟಕ್ಕನ ರೆಕಾರ್ಡು ತಿರುಗತೊಡಗಿತ್ತು. ‘ನನಗ ಮಕ್ಕಳು ಆಗಲಿಲ್ಲರೆವಾ… ಪಾಪಿ ನಾನು… ಖರೇ ಅದs… ಆದರs ಆವಾಗಿನ ಕಾಲದ ಲೋಕಾರೂಢಿ ಪ್ರಕಾರ ಇನ್ನೊಂದು ಲಗ್ನ ಮಾಡಿಕೋಬೇಕಾಗಿತ್ತು… ಯಾರು ಬ್ಯಾಡಾ ಅಂತಿದ್ದರು… ಅದೆಲ್ಲ ಬಿಟ್ಟು ಅಡಿಗಿ ಮಾಡಿ ಹಾಕಲಿಕ್ಕೇ ಅಂತ ಬಂದ ಆ ಮುಳಗುಂದದ ಸಕೇಶಿ… ಆಕೀ ಸಂಗತೀನss… ಛೀ…‘
ಕೃಷ್ಟಕ್ಕ ‘ಛೀ’ ಎನ್ನುವದಕ್ಕೂ ಬಸ್ಸು ‘ಠಸ್ಸ್’ ಎಂದು ಪಂಕ್ಚರ್ ಆಗುವದಕ್ಕೂ ಸರಿಹೋತು. ಡ್ರೈವರೂ ಕ್ಲೀನರೂ ಕೈಯಾಗ ಜಾಕು ಪಾನಾ ಇನ್ನೇನೇನೋ ಆಯುಧಗಳನ್ನು ಹಿಡಕೊಂಡು ಬಸ್ಸಿನಿಂದ ಕೆಳಗೆ ಜಿಗಿದರು. ಅಷ್ಟೊತ್ತಿಗೆ ಇಡೀ ಬಸ್ಸಿಗೇ ಪೂರ್ತಿ ಎಚ್ಚರಾತು. ಯಾತ್ರಿಗಳು ಇಳೀಲಿಕ್ಕೆ ಹತ್ತಿದರು. ಗುರಣ್ಣನೂ ಬ್ಯಾಸರದಿಂದ ಆಕಳಿಸುತ್ತ ಇಳಿದು, ತುಸು ದೂರ ಇಕ್ಕಟ್ಟಾದ ದಾರಿಯಲ್ಲಿ ಸಾಗಿ, ಎಡಗಡೆಗೆ ತಲೆ ಎತ್ತಿ ಪರ್ವತದ ತುದಿಯನ್ನೂ ಬಲಗಡೆ ದೂರ ದೂರ ಪಾತಾಳದ ಕೊರಕಲಿನಲ್ಲಿ ಸದ್ದಿಲ್ಲದೇ ಅಂಕು ಡೊಂಕಾಗಿ ಹರಿಯುವ ಯಾವದೋ ನೀಲೀ ನದಿಯನ್ನೂ ನೋಡುತ್ತ ಕ್ಷಣ ಹೊತ್ತು ನಿಂತ. ಆ ಮೇಲೆ ದಾರಿಯ ಪಕ್ಕದ ಒಂದು ಕಲ್ಲನ್ನು ಹೆಕ್ಕಿ ‘ಭರ್ರ್’ ಅಂತ ಬೀಸಿ ಕೊರಕಲ್ಲಿನಲ್ಲಿ ಬಗೆದ. ಅದು ಎರಡೇ ಹೆಜ್ಜೆ ಸಾಗಿ ಒಂದು ಕಂಟಿಗೆ ಸಿಕ್ಕಿಕೊಂಡಿದ್ದನ್ನು ನೋಡಿ ನಕ್ಕು ಬಸ್ಸು ಏರಿದ. ಬಸ್ಸಿನಲ್ಲಿ ನಾಭಿಕಂಠೀ ಖಲ್ವಟ, ಕರ್ಕಶದನಿಯಲ್ಲಿ ಪಕ್ಕದವನಿಗೆ ‘ಕಂಟ್ರಿ ವಿಲ್ ಗೋ ಟು ಡಾಗ್ಸ್’ ಎಂದು ಭವಿಷ್ಯ ಹೇಳುತ್ತಿದ್ದ. ಹಿಂದಿನ ಸಾಲಿನಲ್ಲಿ ಕೃಷ್ಟಕ್ಕನ ರೆಕಾರ್ಡು ಸುತ್ತುತ್ತಿತ್ತು. ‘ಮಂದಿಗೇನರೀ…. ನಾಲ್ಕು ದಿವಸ ಮಾತಾಡಿಕೊಂಡು ಸುಮ್ಮನಾದರು… ಆದರs ಇವರು ಆ ಸಕೇಶಿನ್ನss ಆಕಿಗೆ ಹುಟ್ಟಿದ ಆ ಮಗನ್ನ ತಂದು ಮನ್ಯಾಗ ಇಟಗೊಂಬೋದೇನು… ಅದಕ್ಕ ಅಚ್ಛಾ ಏನು…. ಅದನ್ನ ಬೆಳಸೋದೇನೂ……. ತಿರುಪತಿಗೆ ಹೋಗಿ ಅದರ ಮುಂಜಿವಿ ಮಾಡಿಕೊಂಡು ಬರೋದೇನೂ… ಅತೀ ನಡದು ಬಿಟ್ಟಿತ್ತು. ಕಡೀಕ ಆ ಹುಡುಗ ಬಿಂದ್ಯಾನ್ನs ಅಂದರ ಆ ಮುಳಗುಂದದ ಸಕೇಶಿಗೆ ಹುಟ್ಟಿದವನ್ನss ದತ್ತಕ ತೊಗೋತೇನೀ ಅಂದಾಗ ಮಾತ್ರ ನಾ ಅಗದೀ ತಲೀ ತಕ್ಕೊಂಡು ನಿಂತು… ‘ಸಾಧ್ಯssನs ಇಲ್ಲ… ಭಾಳಾದರs ಶಗಣೀ ತಿಂದ ತಪ್ಪಿಗೆ ಒಂದು ನಾಕೆಂಟಾಣೆ ಕೊಟ್ಟು ಹೊರಗ ಹಾಕಿ ಕೈ ತೊಳಕೋಳ್ರೀ… ಇಷ್ಟು ಆಸ್ತಿ ಪಾಸ್ತಿ ಅದs, ದತ್ತಕ ತೊಗೊಳ್ಳೋದs ಇದ್ದರ ನನ್ನ ತಂಗೀ ಮಗ ಗುರ್‍ಯಾನ್ನss… ಅಂದರ ಆ ಮುಂದಿನ ಸಾಲಿನ್ಯಾಗ ಆ ಬಿಳೇ ಹಲ್ಲೀ ಬಾಜೂಕ ಕೂತಾನಲ್ಲs……. ಅವನ್ನsss ತೊಗೊಳ್ಳಲಿಕ್ಕೆಬೇಕು ಅಂತ ಹಟ ಹಿಡಿದೆ…‘

ಅಷ್ಟೊತ್ತಿಗೆ ಬಸ್ಸಿನ ಪಂಕ್ಚರು ರಿಪೇರಿ ಆಗಿತ್ತು. ಕ್ಲೀನರ ಬಸ್ಸಿನೊಳಗ ಬಂದು ‘ಚಲೋ… ಚಲೋ… ಜಲದೀ ಚಲೋ…’ ಎನ್ನುತ್ತ ಯಾತ್ರಿಕರನ್ನ ಎಣಿಸತೊಡಗಿದ. ಬಸ್ಸು ಮತ್ತೆ ಹೊರಟಿತು. ಮತ್ತೆ ಶಕೆ, ಧೂಳು, ನಿದ್ದೆ, ಬಿಸಲೇರಿ ಬಾಟಲ ನೀರು ಅನಕೋತ ಯಲ್ಲಾ ಸುಸೂತ್ರ ಸಾಗಿತ್ತು. ಮುಂದ ರುದ್ರಪ್ರಯಾಗದಾಗ ಮಾತ್ರ ಕೃಷ್ಟಕ್ಕ ಬಸ್ಸಿನ ಡ್ರೈವರನ ಸಂಗತೀ ಝಗಳಾನs ತಗದಳು.

ಒಂದು ಕಡೆಯಿಂದ ರಭಸದಿಂದ ಮುನ್ನುಗ್ಗಿ ಹರಿದು ಬಂದ ತಿಳಿನೀಲಿ ಅಲಕನಂದೆಯನ್ನು ‘ನಿಲ್ಲು ನಾನೂ ಬರುತ್ತೇನೆ’ ಎಂದು ಅಷ್ಟೇ ರಭಸದಿಂದ ಕೂಡಿಕೊಂಡ ಕಂದು ಬಣ್ಣದ ಮಂದಾಕಿನಿ… ಎರಡು ನದಿಗಳ ಪವಿತ್ರ ಸಂಗಮದ ಅದ್ಭುತರಮ್ಯ ರುದ್ರಪ್ರಯಾಗ. ಪ್ರಯಾಗವೇ ವಿಸ್ಮಯ; ಮುಂದಿನ ಪ್ರವಾಹ ಹೇಗೋ ಏನೋ? ನಾಲ್ಕಾರು ಜನ ಅಲ್ಲಲ್ಲಿ ನಿಂತು ಫೋಟೋ ತೆಗೆಯುತ್ತಿದ್ದರು. ವಿಪರೀತ ಗಾಳಿ, ಹನಿ ಹನಿ ಮಳೆ ಬಿಸಿಲು, ಪ್ರಕೃತಿಯ ಸ್ವಚ್ಛಂದವೇನೋ ಸರಿಯೇ; ಆದರ ಪಾಪ ಕೃಷ್ಟಕ್ಕ ಎಷ್ಟೇ ಒದ್ದಾಡಿದರೂ, ಯಾವ ಯಾವ ಮೂಲೆಯ ಯಾವ ಯಾವ ಕೋನದಿಂದ ಒಗೆದರೂ, ಅವಳು ನೀರಿಗೆ ಎಸೆದ ಎಂಟಾಣಿ ಪ್ರಯಾಗದ ಪವಿತ್ರ ನೀರಿನಲ್ಲಿ ಬೀಳದೇ, ಗಾಳಿಗೆ ಹಾರಿ ಯಾವದೋ ಕಲ್ಲಿಗೋ ಕಂಟಿಗೋ ತಾಗಿ ಎಲ್ಲೆಲ್ಲೋ ಬಿದ್ದುಬಿಡುತ್ತಿತ್ತು. ಅವಳ ನಾಲ್ಕಾರು ಎಂಟಾಣಿಗಳು ಈ ರೀತಿ ವ್ಯರ್ಥವಾಗಿ, ಅವಳ ಪುಣ್ಯ ಸಂಚಯಕ್ಕೆ ಚ್ಯುತಿ ಬಂದು, ಸಿಟ್ಟಿಗೆದ್ದ ಕೃಷ್ಟಕ್ಕ ಡ್ರಾಯಿವರಗ ‘ಯಾಕೋ ರಂಡೇಗಂಡ… ಬಸ್ಸು ಇಷ್ಟು ದೂರ ನಿಂದರಿಸಿದರ ಹ್ಯಾಂಗ? ಅಲ್ಲೇ ಸಮೀಪದಾಗ ನಿಂದರಿಸಿದ್ದರ ನಿನಗೇನು ಧಾಡಿ ಆಗತ್ತಿತ್ತು…. ಇಲ್ಲಿಂದ ನಾವು ನದೀ ಪೂಜಿ ಮಾಡೋದು ಹ್ಯಾಂಗ?’ ಎಂದು ಝಾಡಸಲಿಕ್ಕೆ ಹತ್ತಿದಳು. ಡ್ರಾಯಿವರ ಮಾರೀ ತಿರುವದs ಚುಟ್ಟಾ ಸೇದಿಕೋತ ಕೂತುಬಿಟ್ಟ, ಅವಗ ಕನ್ನಡ ಬರತಿದ್ದಿಲ್ಲ! ಮುಂದ ಜೋಶೀ ಮಠದಾಗ ಎಲ್ಲರೂ ಊಟಾ ಮಾಡೋ ಮುಂದ ರುದ್ರ ಪ್ರಯಾಗದ ಸಿಟ್ಟಿನಿಂದ ಇನ್ನೂ ದುಮು ದುಮು ಉರಿಯುತ್ತಿದ್ದ ಕೃಷ್ಟಕ್ಕ, ದೂರ ಒಂದು ಗಿಡದ ಬುಡಕ ಕೂತು ತನ್ನ ಗಂಟು ಬಿಚ್ಚಿ ಅವಲಕ್ಕಿ ಮುಕ್ಕಿ ನೀರು ಕುಡಿದಳು!

ಬಸ್ಸು ಜೋಶಿಮಠ ಬಿಟ್ಟು ಮತ್ತೆ ಗೋವಿಂದ ಘಾಟ, ಪಾಂಡುಕೇಶ್ವರ ಅನಕೋತ ಬಿಸಿಲಿಗೆ ತೇಕಲಿಕ್ಕೆ ಹತ್ತಿತು. ಬಸ್ಸಿನೊಳಗೆ ಮತ್ತೆ ಶಕೆ, ಧೂಳು, ಕೃಷ್ಟಕ್ಕನ ರೆಕಾರ್ಡು ‘ಆ ಮುಳಗುಂದದ ಸಕೇಶಿಗೆ ಮತ್ತ ಆಕಿ ಮಗ ಬಿಂದ್ಯಾಗ, ಯಾವಾಗ ಇನ್ನ ತಮ್ಮ ಬ್ಯಾಳಿ ಬೇಯೂದಿಲ್ಲ ಅಂತ ಗೊತ್ತಾತೋ ಆವಾಗ ಸುರೂ ಮಾಡಿದರು ನೋಡವಾ… ತುಡುಗೂ… ಕಳವೂ… ಸಾಮಾನು ಮುಚ್ಚಿಟ್ಟುಕೊಳ್ಳುವದೂ… ಇವತ್ತ ಬಂಗಾರದ ಬೋರಮಾಳಾ ಹೋತೂ… ನಾಳೆ ಬಚ್ಚಲದಾಗ ತಗದಿಟ್ಟದ್ದು ಉಂಗುರ ಕಳೀತು…… ಇನ್ನೊಮ್ಮೆ ನಲವತ್ತು ತೊಲೀದು ದೊಡ್ಡ ಬೆಳ್ಳೀ ತಾಟು ಮಾಯ ಆತು… ಅನಕೋತ ಸಣ್ಣಾಗಿ ತಾಯಿ ಮಗ ಕೂಡಿ ಮನೀ ತೊಳೀಲಿಕ್ಕೆ ಹತ್ತಿದರು. ಒಂದು ದಿವ್ಸ ಆ ಸಕೇಶಿ ಮಗಾ ಬಿಂದ್ಯಾ ಇವರ ಪಾಕೀಟಿನ್ಯಾಗ ಕೈ ಹಾಕಿ ರೊಕ್ಕ ಕದಿಯೋ ಮುಂದ ಸಿಕ್ಕ ಬಿತ್ತು… ಇವರೂ ಸಿಟ್ಟಿಗೆದ್ದು ಎರಡು ತಪರಾಕಿ ಕೊಟ್ಟರ ಅದು ಚಾಕೂನs ತಗೀತರೆವ್ವ… ಹದಿನಾರು ವರುಷದ ದಾಂಡಿಗ್ಯಾ ಹುಡುಗ… ಅದರ ಇದರಿಗೆ ಇವರೆಲ್ಲಿ ಹತ್ತಬೇಕು… ಮುಂದ ಎಂಟು ದಿವ್ಸ ಆಸ್ಪತ್ರಿಯೊಳಗ ನೆಳ್ಳಿ ನೆಳ್ಳಿ ಹೋದರವಾ….’ ಎನ್ನುತ್ತ ಕಣ್ಣೊರೆಸಿಕೊಂಡಳು ಕೃಷ್ಟಕ್ಕ.

ಗುರಣ್ಣಗ ಅದs ಅದs ಹಳೇ ರೆಕಾರ್ಡು ಕೇಳಿ ಕೇಳಿ ಮನಸ್ಸು ರೋಸಿ ಹೋಗಿತ್ತು. ಒಮ್ಮೊಮ್ಮೆ ‘ತಾ ಯಾಕ ಈ ರಾಡಿಯೊಳಗ ಬಿದ್ದು ಒದ್ದಾಡಬೇಕಾಗಿತ್ತು…. ಹತ್ತು ವರುಷದಾವಿದ್ದಾಗ ದತ್ತಕ ಆತು… ಆವಾಗ ತಾ ಸಣ್ಣಾವಿದ್ದೆ…. ತಿಳೀತಿದ್ದಿಲ್ಲಾ… ಯಲ್ಲಾ ಖರೇ ಅದ… ಆದರ ಧೊಡ್ಡಾಂವಾದಿಂದರs ಝಾಡಿಸಿಕೊಂಡು ಇತ್ತಲಾಗ ಬರಲಿಕ್ಕೆ ಏನಾಗಿತ್ತು?’ ಎಂಬ ಕೀಳರಿಮೆ ಗುರಣ್ಣನ್ನ ಕಾಡತೊಡಗುತ್ತದೆ. ಈಗೀಗ ಈ ಹಳೇ ರೆಕಾರ್ಡು, ಈ ಕೀಳರಿಮೆಯ ಕಾಟ ಯಲ್ಲಾ ರೂಢಾ ಆಗಿ ಅವಗ ದಡ್ಡ ಬಿದ್ಧಂಗ ಆಗೇದ.

ಬದರಿಯೊಳಗ ಹೊಗೆ ಬಡಿದು ಕಪ್ಪಾದ ವಿಶಾಲ ಪೌಳಿಯ ತಮ್ಮವರ ಮಠ ಹುಡುಕಿಕೊಂಡು, ‘ನಾಳೆ ಪಿಂಡ ಪ್ರದಾನದ ವ್ಯವಸ್ಥಾ ಆದೀತೇನು?’ ಅಂದರ ಮಠದವರು ‘ನೀವು ಯಾರು?… ಎಲ್ಲಿಯವರು?… ಯಾವ ಮಠದವರು?… ಗುರುತಿನ ಚೀಟಿ ಏನಾದರೂ ಅದsನೋ ಹೆಂಗ?’ ಎಂದೆಲ್ಲ ಕೇಳಿ ಐನೂರು ರೂಪಾಯಿ ಇಸಕೊಂಡು, ‘ನಾಳೆ ಬೆಳಿಗ್ಗೆ ಬ್ರಹ್ಮಕಪಾಲದ ಹತ್ತರ ವಾದಿರಾಜಾಚಾರ್ ಅಂತ ಇರತಾರ, ಅವರನ್ನ ಭೆಟ್ಟಿಯಾಗರೀ ಅಂದರ ಯಲ್ಲಾ ವ್ಯವಸ್ಥಾ ಆಗತsದ’ ಅಂದರು. ಗುರಣ್ಣಗ ನಗೆ ಬಂತು. ಐನೂರು ರೂಪಾಯಿ ಕೊಟ್ಟರ ಯಲ್ಲಿ ಬೇಕಲ್ಲಿ ಯಾರು ಬೇಕು ಅವರ ಶ್ರಾದ್ಧ ಮಾಡಬಹುದು ಅಂತಹದು ಅದಕ್ಕೂ ಇಷ್ಟು ಖಾನೇಸುಮಾರೀ ಮಾಡತಾರಲ್ಲ ಎಂದು ವಿಸ್ಮಿತನಾಗುತ್ತ ಈಚೆಗೆ ಬಂದ.

ತಾವು ಇಳಕೊಂಡ ಖೋಲಿಗೆ ಬಂದರ ಯಥಾಪ್ರಕಾರ ಮೊಮ್ಮಗಳು ಸುಸಾನ ಎಲ್ಲೋ ಹೋಗಿದ್ದಳು. ಸರಿ ಕೃಷ್ಟಕ್ಕನ್ನ ಕರಕೊಂಡು ಸಂಜೆಯ ಆರತಿಗೆ ಬದರಿ ನಾರಾಯಣನ ದರ್ಶನಕ್ಕೆ ಹೊರಟರ ಅದೊಂದು ಕಥೀನs. ದಾರಿಯನ್ನು ಏರಿ ಇಳಿದು ಎರಡೂ ಬದಿಗಳಲ್ಲಿ ನೂರಾರು ಝಗಮಗಿಸುವ ಅಂಗಡಿಗಳ ಮಧ್ಯದ ಜನಸಾಗರವನ್ನು ಅಕ್ಷರಶಃ ಈಜಿಕೊಂಡು ಈಚೆಗೆ ಬರಬೇಕು. ಸ್ಫಟಿಕದ, ಹವಳದ, ಗೋಮೇಧಕಗಳ, ರುದ್ರಾಕ್ಷಿಯ ಮಾಲೆಯ ಅಂಗಡಿಗಳು… ಬದರೀ, ಕೇದಾರ, ಗಂಗೋತ್ರಿ, ಹರಿದ್ವಾರ ಇತ್ಯಾದಿ ಪುಣ್ಯ ಕ್ಷೇತ್ರಗಳ ಗಾಜು ಕೂಡಿಸಿದ, ಲ್ಯಾಮಿನೇಟ ಮಾಡಿಸಿದ, ವಿವಿಧ ಆಕಾರದ ಫೋಟೋಗಳು… ಸೀಲು ಮಾಡಿ ತುಂಬಿಸಿ ಇಟ್ಟ ಸಣ್ಣ ದೊಡ್ಡ ಗಂಗೋದಕದ ಬಿಂದಿಗೆಗಳು… ಕೆಂಪು ಹಸಿರಿನ ಉಣ್ಣೆಯ ತಲೆಟೋಪಿ ಶಾಲು ಸ್ವೆಟರುಗಳು… ಕುದಿಕುದಿದು ಉಕ್ಕುತ್ತಿರುವ ದೊಡ್ಡ ದೊಡ್ಡ ಮಲಾಯಿ ಹಾಲಿನ ಕಡಾಯಿಗಳು… ರೊಟ್ಟಿ ಸುಡುತ್ತಿರುವ ಧಾಬಾಗಳು, ಇವನ್ನೆಲ್ಲ ದಾಟಿ, ಆಚೆಯಿಂದ ನುಗ್ಗಿ ಬರುತ್ತಿರುವ ಹಿಂಡು ಹಿಂಡು ಜನರನ್ನು ತಳ್ಳಿಕೊಂಡು, ದುಗಿಸಿ, ಸರಿಸಿ, ನುಗ್ಗಿ, ನೂಕಿ, ಮಧ್ಯದ ಅಲಕನಂದಾ ನದಿಯ ಸೇತುವೆಯ ಮೇಲೆ ಕೃಷ್ಟಕ್ಕನ ಕೈ ಹಿಡಿದು ಅಕ್ಷರಶಃ ದರದರ ಎಳಕೊಂಡು, ಕಣ್ಣು ಕೋರೈಸುತ್ತ ಝಗ್ಗೆಂದು ಬೆಳಗುತ್ತಿರುವ ಬದರೀ ನಾರಾಯಣನ ಮಂದಿರದ ಮೆಟ್ಟಿಲಿಗೆ ಬಂದ.

ಕೃಷ್ಟಕ್ಕ ಒಮ್ಮೆಲೇ ಗುರಣ್ಣನ ಕೈ ಬಿಡಿಸಿಕೊಂಡು ತನ್ನ ಎರಡೂ ಕೈ ಮೇಲೆತ್ತಿ ತಲೆಯ ಮೇಲೆ ಜೋಡಿಸಿ ಹಿಡಿದು ಭಾವ ವಿವಶಳಾಗಿ ‘ನಾರಾಯಣಾ… ನಾರಾಯಣಾ… ಬದರೀನಾರಾಯಣಾ… ಅಂತೂ ಕರೆಸಿಕೊಂಡೆಪ್ಪss… ಸಾಯೋದರಾಗ ಒಮ್ಮೆ ಕರೆಸಿಕೊಂಡೆಪ್ಪ… ನಾರಾಯಣಾ… ಬದರೀನಾಥಾ ನನ್ನ ಖೋಡಿ ಜನ್ಮ ಸಾರ್ಥಕ ಆತಪ್ಪಾ…’ ಎನ್ನುತ್ತ ಪಾವಟಣಿಗೆಗಳ ಮ್ಯಾಲ ಬಿದ್ದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಗುರಣ್ಣನೂ ಸಾಕಷ್ಟು ಭಾವೋದ್ವಿಗ್ನನಾಗಿದ್ದ. ಆ ಮೇಲೆ ಕೃಷ್ಟಕ್ಕ ಗುರಣ್ಣನ ಬೆನ್ನ ಮ್ಯಾಲ ಕೈ ಹಾಕಿ ‘ಅಂತೂ ಇಷ್ಟು ಮಾಡಿಸಿದೆಪ್ಪ… ದತ್ತಕ ತೊಗೊಂಡದ್ದು ಸಾರ್ಥಕ ಆತಪಾ… ನಾಳೆ ಅವರದಷ್ಟು ಶ್ರಾದ್ಧ ಮಾಡಿ ಬಿಡಪ್ಪ…’ ಎನ್ನುತ್ತ ಎಷ್ಟೋ ಹೊತ್ತು ಮೆಟ್ಟಿಲಿಗೆ ತಲೆ ಇಟ್ಟು, ಬದರೀ ನಾರಾಯಣನ ಜತೆ ಏನೇನೋ ಮೂಕ ಸಂಭಾಷಣೆ ನಡೆಸಿದಳು. ಆ ಮ್ಯಾಲೆ ಇಬ್ಬರೂ ಮೆಟ್ಟಲೇರಿ ಎಡಕ್ಕೆ ಹೊಳ್ಳಿ, ಬಲಕ್ಕೆ ತಿರುಗಿ ಪೂರ್ವಕ್ಕೂ ಪಶ್ಚಿಮಕ್ಕೂ ತಿರುಗುತ್ತ, ದರ್ಶನಕ್ಕಾಗಿ ಮೈಲುಗಟ್ಟಲೆ ನಿಂತ ‘ಕ್ಯೂ’ದ ಬಾಲ ಸೇರಿ, ಇಂಚಿಂಚು ಮುಂದೆ ಮುಂದೆ ಸರಿಯುತ್ತ ಬದರೀ ವಿಶಾಲನ ದರ್ಶನ ತಕ್ಕೊಂಡು ಈಚೆಗೆ ಬರಲಿಕ್ಕೆ ಎರಡು ಗಂಟೆಯೇ ಹಿಡಿಯಿತು. ಗರ್ಭಗುಡಿಯ ಮುಂದೆ ಕೈ ಮುಗಿದು ಕಣ್ಣು ಮುಚ್ಚಿ ಜಪ್ಪೆಂದರೂ ಈಚೆಗೆ ಬಾರದೇ ಇದ್ದ ಕೃಷ್ಟಕ್ಕನ್ನ, ಕಡೀಕ ಅಲ್ಲಿಯ ಸ್ವಯಂಸೇವಕರು, ರಟ್ಟೆ ಹಿಡಿದು ಎಳೆದು ಈಚೆಗೆ ಕಳಿಸಬೇಕಾಯಿತು.

ತಿರುಗಿ ಬರಬೇಕಾದರ ಕೃಷ್ಟಕ್ಕ, ‘ಸುಡಲಿ, ಈ ನಿನ್ನ ಅಮೆರಿಕಾದ ಬಿಳೇ ಹಲ್ಲಿ, ಏನು ಕರ್ಮನೋ ಏನೋ ನಮ್ಮ ವಂಶದಾಗ ಹುಟ್ಟೇದ… ಒಂದಿಷ್ಟು ಕೈ ಕಾಲು ತೊಳಕೊಂಡು ಬಂದು ದರ್ಶನಾ ತೊಗೊಬಾರದಿತ್ತss ಅರಿಷ್ಟ ಖೋಡಿ’ ಅಂತ ಒಟ ಒಟ ಒಟ ಅನಕೋತ ಬರತಿರಬೇಕಾದರ, ದಾರಿಯೊಳಗ ಯಾವದೋ ಬಂದು ಧಾಬಾದ ಹತ್ತಿರ ಸುಸಾನ ಕೆಂಪದೊಂದು ಅರ್ಧಚಣ್ಣ ಹಾಕ್ಕೊಂಡು, ನಾಲ್ಕಾರು ಪಂಡಾಗಳು, ಒಂದಿಬ್ಬರು ತಲೆ ಬೋಳಿಸಿಕೊಂಡ ಅಮೆರಿಕನ್ ಇಸ್ಕಾನ್‌ದವರ ಜತೆ, ‘ಜೈ ಜಗದೀಶ ಹರೇ… ಸ್ವಾಮಿ ಜೈ ಜಗದೀಶ ಹರೇ’ ಎಂದು ಉನ್ಮತ್ತಳಾಗಿ ಕುಣೀಲಿಕ್ಕೆ ಹತ್ತಿದ್ದಳು. ಈ ಕುಣಿಯುವವರ ಸುತ್ತ ಒಂದು ಸಣ್ಣ ಗುಂಪು ಸೇರಿ ಈ ಬಿಳೇ ಹುಡುಗಿಯ ಕುಣಿತ ಮಣಿತಗಳನ್ನು ಆಸ್ವಾದಿಸಲಿಕ್ಕೆ ಹತ್ತಿತ್ತು. ಗುರಣ್ಣ ಹೇಸಿ ಈಚೆಗೆ ಬಂದ. ಪುಣ್ಯಕ್ಕ ಕೃಷ್ಟಕ್ಕಗ ಇದ್ಯಾವದೂ ಕಂಡಿರಲಿಲ್ಲ.

ಅವತ್ತ ರಾತ್ರಿ ಸುಸಾನ ಕುಣದು ಕುಣದು ಕಾಲು ಉಳುಕಿಸಿಕೊಂಡು, ಸಾಕಷ್ಟು ತಡವಾಗಿ ಬಂದು ನರಳುತ್ತ ಹಾಸಿಗೆಯಲ್ಲಿ ಬಿದ್ದುಕೊಂಡಳು. ನಿದ್ದೆ ಕೆಟ್ಟ ಕೃಷ್ಟಕ್ಕ ಗುರಣ್ಣಗ ‘ಏನಾಗೇದಂತ ಕೇಳೋ’ ಅಂದಳು. ಗುರಣ್ಣ ಕವಕ್ಕನs ‘ಹಾಳಾಗಿ ಹೋಗು ಅನ್ನು ಅದಕ್ಕ’ ಎಂದು ಸಿಟ್ಟಿನಿಂದ ಅರಚಿ ಮುಸುಕೆಳೆದು ಮಲಗಿಬಿಟ್ಟ. ಆದರೆ ಅವ ಎಳೆದ ಮುಸುಕು, ಅವನ ಅಂತರಂಗದ ತುಮುಲವನ್ನು ಮುಚ್ಚಿಹಾಕಲಿಕ್ಕೆ ಅಸಮರ್ಥವಾಗಿತ್ತು.

ಹತ್ತು ವರುಷದಷ್ಟೊತ್ತಿಗೇ ಅನಾಥನಾದ ತನ್ನ ದತ್ತಕ… ತನ್ನ ಮ್ಯಾಲಿನ, ತನ್ನ ಇಡೀ ವ್ಯಕ್ತಿತ್ವದ ಮ್ಯಾಲಿನ ಕೃಷ್ಟಕ್ಕನ ಉಡದ ಹಿಡಿತ… ತನ್ನ ಒಬ್ಬನೇ ಮಗ ಪ್ರತಿಭಾವಂತ… ಅಮೆರಿಕೆಯಲ್ಲಿ ಒಬ್ಬ ಬಿಳಿಯಳನ್ನು ಮದುವೆಯಾಗಿ ಮನೆಯಿಂದ ದೂರವಾದದ್ದು… ಪ್ರತಿ ವರುಷಕ್ಕೆಂಬಂತೆ ತಮ್ಮೊಡನೆ ಕೆಲದಿನ ಕಳೆಯಲು ಭಾರತಕ್ಕೆ ಬರುತ್ತಿದ್ದ ಮಗನ ಒಬ್ಬಳೇ ಮಗಳು ಸುಸಾನ… ಎರಡು ವರುಷದ ಹಿಂದೆ ಮಗನ ಚಿಂತೆಯಲ್ಲಿ ಕೊರಗಿ ಕೊರಗಿ ತೀರಿ ಹೋದ ತನ್ನ ಹೆಂಡತಿ… ಅವಳ ಕರ್ಮಗಳಿಗೂ ಬಾರದ ಮಗ… ಈ ಗಂಟುಗಂಟಾದ ವಂಶಾವಳಿಯ ಯೋಚನೆಯೇ ಗುರಣ್ಣನನ್ನು ಸಾಕಷ್ಟು ಗಾಸಿಗೊಳಿಸುತ್ತದೆ… ಅದರ ಮ್ಯಾಲ ಇವತ್ತಿನ ಈ ಸುಸಾನ… ಯಲ್ಲಾರೂ ಬಿಟ್ಟರೂ ಇದೊಂದು ಯಾಕ ಇಷ್ಟೊಂದು ಹಚ್ಚಿಕೊಂಡು ಬರತsದೋ ಮುಂಡೇದ್ದು… ಎನ್ನುತ್ತ ಗುರಣ್ಣ ಮಗ್ಗಲು ಬದಲಿಸಿದ.

ಸ್ವಲ್ಪ ಹೊತ್ತು ಸುಸಾನಳ ನರಳುವಿಕೆಯನ್ನು ಕೇಳಿ ಕೃಷ್ಟಕ್ಕ ಹಾಸಿಗೆ ಬಿಟ್ಟು ಮೇಲೆದ್ದು ದೀಪ ಹಾಕಿ, ‘ಏನು ಮಾಡಿಕೊಂಡು ಬಂದೀಯ ನಿನ್ನ ಸುಡ್ಲೀ…’ ಎನ್ನುತ್ತ ಅವಳ ಉಳುಕಿದ ಕಾಲನ್ನು ನೋಡಿ, ತನ್ನ ಚೀಲದಿಂದ ಯಾತ್ರೆಯ ಎಮರ್ಜೆನ್ಸಿಗೆಂದು ತಂದ ಗಂಟಿನಿಂದ ಒಂದಿಷ್ಟು ಅಂಬೀ ಹಳದೀ ರಕ್ತಬಾಳದ ಬೇರು ತೆಗೆದು ಬಚ್ಚಲದಾಗ ಅದನ್ನು ತೇಯ್ದು, ಆ ಮಿಶ್ರಣವನ್ನು ಸುಸಾನಳ ಉಳುಕಿದ ಕಾಲಿಗೆ ಮೆಲ್ಲನೇ ನೀವುತ್ತ ‘ನಿನಗ ಯಾರೂ ಹೇಳವರ ಕೇಳವರು ಇಲ್ಲಂತ ತಿಳದೀ ಏನು?… ಗಂಡ ರಾಮೀ ಹಾಂಗ ಏನು ಕುಣೀತೀದೀ… ಜಿಗೀತೀದಿ… ನೀ ಒಂದು ಹೆಣ್ಣು ಅಂಬೋದರs ನಿನಗ ಗೊತ್ತ ಅದ ಏನು?… ಪುಣ್ಯಾತ್ಮಗಿತ್ತಿ ನಿನ್ನ ಅಜ್ಜಿ, ಗುರಣ್ಣನ ಹೆಂಡತಿ ಮೊದಲs ಸತ್ತು ಪುಣ್ಯಾಕಟ್ಟಿಕೊಂಡಳು, ಇದನ್ನೆಲ್ಲ ನೋಡಲಿಲ್ಲ… ಗಂಡಸರ ಹಂಗ ಅದೇನು ಚಣ್ಣ ಹಾಕ್ಕೊಂಡು ಕುಂಡೀ ಬಿಟಗೊಂಡು ಚುಟ್ಟಾ ಸೇದಿಕೋತ ಅಡ್ಡ್ಯಾಡತೀದೀ… ಎಲ್ಲೆ ಉಣತೀ… ಎಲ್ಲೆ ತಿನ್ನತೀ… ನಿನ್ನ ಸುಡ್ಲಿ ನಿನಗೆ ನಾಚಿಗೆ ಮರ್ಯಾದಿ ಅಂಬೋದು ಏನೂ ಇಲ್ಲೇನು?’ ಎಂದು ಸ್ವಲ್ಪ ಹೊತ್ತು ಬಿಟ್ಟು, ‘ಈಗ ಸ್ವಲ್ಪ ಆರಾಮ ಅನಸತದೋ ಇಲ್ಲೋ?… ಏನಾರs ಚೂರು ತಿಂದು ಮಲಕೋ’ ಎಂದು ತನ್ನ ಗಂಟಿನಿಂದ ಒಂದು ಹಿತ್ತಾಳೀ ಡಬ್ಬೀ ತಗದು ಎರಡು ಅಂಟಿನ ಉಂಡಿ ಕೊಟ್ಟು, ಸುಸಾನ ಅವನ್ನ ತಿಂದ ಮೇಲೆ, ‘ಹಂ… ಇನ್ನ ನಿನ್ನ ಆ ಸುಡಗಾಡ ಬಾಟ್ಲೀ ನೀರು ಕುಡದು ಬೀಳು’ ಎನ್ನುತ್ತ ತನ್ನ ಹಾಸಿಗೆಗೆ ಬಂದಳು.

ಮರುದಿವಸ ಮುಂಜಾನೆ ಗುರಣ್ಣ ಗಿಜಿಗುಟ್ಟುವ ಬ್ರಹ್ಮಕುಂಡದಾಗ ನೂರಾರು ಶ್ರದ್ಧಾಳುಗಳ ಜತೆಗೆ ತಾನೂ ಸ್ನಾನಕ್ಕೆ ಇಳಿದ. ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿರುವ ಅಲಕನಂದಾ ನದಿಯ ವಿಶಾಲ ಮೆಟ್ಟಲುಗಳ ಮೇಲೆ ಪಂಡಾಗಳು ಆಗಳೇ ಮಂತ್ರೋಚ್ಚಾರಣೆಗೆ ತೊಡಗಿದ್ದರು. ಗುರಣ್ಣ ಮಠದ ವಾದಿರಾಜಾಚಾರ್‍ಯರನ್ನು ಹುಡುಕಿ ತೆಗೆದು, ಅವರ ನಿರ್ದೇಶನದಲ್ಲಿ ಇನ್ನೂ ನಾಲ್ಕಾರು ಜನರ ಜತೆಗೆ ಪಿಂಡ ಪ್ರದಾನಕ್ಕೆ ಕುಳಿತ. ಹಿಂದೆ ತುಸು ದೂರದಲ್ಲಿ ಕೃಷ್ಟಕ್ಕ ಗುರಣ್ಣನ ಪ್ಯಾಂಟು ಶರಟು ಸ್ವೆಟರು ಚೀಲ ಹಿಡಕೊಂಡು ಚಪ್ಪಲೀ ಕಾಯುತ್ತ ಕುಳಿತಿದ್ದಳು. ಅವತ್ತ ಕೃಷ್ಟಕ್ಕಗ ತೃಪ್ತಿ ಆಗಿತ್ತು. ಮನಸ್ಸು ತುಂಬಿ ಬಂದಿತ್ತು. ಬದರೀ ಪುಣ್ಯಕ್ಷೇತ್ರದಲ್ಲಿ ತನ್ನ ಗಂಡನ ಶ್ರಾದ್ಧ ಕರ್ಮಾದಿಗಳು ನಡೆದದ್ದನ್ನ ನೋಡತಾ ನೋಡತಾ ಒಂದು ಧನ್ಯತಾ ಭಾವವನ್ನು ಅನುಭವಿಸತೊಡಗಿದ್ದಳು. ಇತ್ತ ಎಷ್ಟು ಬ್ಯಾಡಂದರೂ ಕೇಳದs ಸುಸಾನ ಅಂಬೀ ಹಳದೀ ರಕ್ತಬಾಳದ ಕೆಂಪು ಹಳದೀ ಪಟ್ಟೀ ಕಾಲಿಗೆ ಕಟ್ಟಿಗೊಂಡು ಕುಂಟುತ್ತ ಕುಂಟುತ್ತ ಬಂದು ‘ಗ್ರ್ಯಾಂಪಾ ವಾಟ ಇಸ್ ಧಿಸ್…. ವಾಟ ಇಸ್ ದ್ಯಾಟ….’ ಅಂತ ಕೇಳಿಕೋತ ‘ಛಕಾ ಛಕ್’ ಅಂತ ಕೆಮರಾದಿಂದ ಫೋಟೋ ತೆಗೀಲಿಕ್ಕೆ ಹತ್ತಿದ್ದಳು.

ಗುರಣ್ಣ ಗಳಿಗೆಗೊಮ್ಮೆ ಗಾಳಿಗೆ ಹಾರುತ್ತಿದ್ದ ಮೈ ಮೇಲಿನ ಶಲ್ಲೆ ಸರಿಪಡಿಸಿಕೊಳ್ಳುತ್ತ, ತೀರಿ ಹೋದ ತನ್ನ ಮನೆಯ ಹಾಗೂ ದತ್ತಕ ಮನೆಯ ವಂಶಸ್ಥರಿಗೆಲ್ಲ ತರ್ಪಣ ಕೊಡಲಿಕ್ಕೆ ಹತ್ತಿದ್ದ. ಎರಡು ವರುಷದ ಹಿಂದೆ ತನ್ನನ್ನು ಬಿಟ್ಟು ಹೋದ ಹೆಂಡತಿಯ ಹೆಸರು ಹೇಳಿ ತರ್ಪಣ ಕೊಡುವಾಗ ಕೊರಳು ಬಿಗಿದು ಬಂದಂತಾಗಿ ಗುರಣ್ಣ ಬಿಕ್ಕಿದ. ಎದುರಿಗೆ ಸಾಲೀ ಹುಡುಗರಿಗೆ ಡ್ರಿಲ್ ಮಾಡಿಸುವವರಂತೆ ವಾದಿರಾಜಾಚಾರು ಹಿಂದೆ ಕೈ ಕಟ್ಟಿಕೊಂಡು ಇತ್ತಿಂದತ್ತ ಅತ್ತಿಂದಿತ್ತ ಅಡ್ಡಾಡುತ್ತ, ‘ತಂದೀ……. ತಂದೀ ತಂದೀ ಅವರ ತಂದಿ…… ತಾಯೀ…… ಅಜ್ಜೀ…… ಮುತ್ತಜ್ಜೀ…… ಅತ್ತೀ…… ಮಾವ…… ಚಿಕ್ಕಪ್ಪ…… ದೊಡ್ಡಪ್ಪ…… ಚಿಕ್ಕವ್ವ…… ದೊಡ್ಡವ್ವ’ ಎನ್ನುತ್ತ ತೀರಿಹೋದವರ ಒಂದೊಂದು ಪಿಂಡಕ್ಕೂ ಎಳ್ಳುನೀರು ಬಿಡಲಿಕ್ಕೆ ಹೇಳಲಿಕ್ಕೆ ಹತ್ತಿದ್ದರು. ಆವಾಗ ಏನನ್ನೋ ನೆನೆಸಿಕೊಂಡ ಕೃಷ್ಟಕ್ಕ ಗುರಣ್ಣನಿಗೆ ಏನೋ ಹೇಳಲೆಂದು ಮುಂದೆ ಬಂದಳು. ಬಂದವಳು ವಾದಿರಾಜಾಚಾರ ಮುಖನೋಡಿ ‘ಗಕ್ಕ’ಂತ ನಿಂತು ಬಿಟ್ಟಳು! ಆ ಮೇಲೆ ಸಾವರಿಸಿಕೊಂಡು ಹಿಂದೆ ನಡೆದಳು. ಮತ್ತೆ ಕ್ಷಣ ಬಿಟ್ಟು ಏನೇನೋ ಯೋಚಿಸುತ್ತ, ಅನುಮಾನಿಸುತ್ತ ಮತ್ತೆ ಮುಂದೆ ಬಂದು ವಾದಿರಾಜಾಚಾರ ಮುಖವನ್ನು ಹುಳು ಹುಳು ನೋಡತೊಡಗಿದಳು. ತರ್ಪಣ ವಿಧಿಗಳೆಲ್ಲ ಮುಗಿದಿದ್ದವು. ಎಲ್ಲರೂ ಪಿಂಡಗಳನ್ನು ಹರಿವ ನೀರಿನಲ್ಲಿ ಬಿಟ್ಟು ವಾದಿರಾಜಾಚಾರ್‍ಯರಿಗೆ ದಕ್ಷಿಣೆ ಕೊಟ್ಟು ನಡೆದರು. ಯಾಕೋ ಕಡೀಕ ಉಳಿದ ಗುರಣ್ಣ ತಾನೂ ದಕ್ಷಿಣೆ ಕೊಟ್ಟು ಬಗ್ಗಿ ನಮಸ್ಕರಿಸಿ ಮೇಲೆ ಎದ್ದ. ಇಷ್ಟೂ ಹೊತ್ತೂ ವಾದಿರಾಜಾಚಾರ್‍ಯರನ್ನು ಮಿಕಿ ಮಿಕಿ ನೋಡುತ್ತ ನಿಂತಿದ್ದ ಕೃಷ್ಟಕ್ಕ ‘ನಾನೂ ನಮಸ್ಕಾರ ಮಾಡತೇನಿ’ ಎನ್ನುತ್ತ ತಾನೂ ಹತ್ತಿರ ಹೋಗಿ ಬಗ್ಗಿ ನಮಸ್ಕಾರ ಮಾಡಿ ಎದ್ದು ಅವರನ್ನು ಕ್ಷಣಕಾಲ ನಿಟ್ಟಿಸಿ ನೋಡಿ ಒಮ್ಮೆಲೇ ಕಠೋರಳಾಗಿ ‘ಏ ನೀನು ಮುಳಗುಂದ ಬಿಂದ್ಯಾ ಅಲ್ಲೇನೋ?’ ಎಂದು ಗಟ್ಟಿಯಾಗಿ ಚೀರಿ ಬಿಟ್ಟಳು. ವಾದಿರಾಜಾಚಾರು ತಬ್ಬಿಬ್ಬಾಗಿ ‘ಏನು ತಾಯಿ… ಏನಂದರೀ… ನಾವು ಉಡುಪಿಯವರು… ವಾದಿರಾಜಾ ಅಂತ ನನ್ನ ಹೆಸರು… ಮಠಕ್ಕ ಸೇರೇನಿ…. ಮಠದ ಡ್ಯೂಟಿ…… ಎಲ್ಲಿ ಕಳಿಸತಾರೋ ಅಲ್ಲಿ ಹೋಗಬೇಕಾಗತsದ’ ಎನ್ನುತ್ತ ಮುಗುಳು ನಕ್ಕರು.

ಕೃಷ್ಟಕ್ಕ ವಾದಿರಾಜಾಚಾರ್‍ಯರಿಗೆ ‘ನೀ ಮುಳಗುಂದ ಬಿಂದ್ಯಾ ಅಲ್ಲೇನೋ?’ ಎಂದು ಒದರಿದ್ದು ಕೇಳಿ ಗುರಣ್ಣಗ ಬಹಳ ಸಂಕೋಚ ಆತು. ಅವ ‘ಅವ್ವಾ ನೀ ಯಾರ್‍ಯಾರಿಗೋ ಏನೇನೋ ಅಂತೀದಿ’ ಎನ್ನುತ್ತ, ಆಚಾರ ಕಡೆ ತಿರುಗಿ ‘ಕ್ಷಮಿಸಬೇಕು ಆಚಾರಸ್ವಾಮಿ’ ಎಂದು ಒಂದು ಕ್ಷೀಣ ನಗು ನಕ್ಕು, ಕೃಷ್ಟಕ್ಕನ ಮ್ಯಾಲ ಸಿಟ್ಟು ಸಿಟ್ಟು ಹಾಯುತ್ತ ಅವಳನ್ನು ಕರಕೊಂಡು ಮರಳಿ ನಡೆದ. ಆಗ ಕೃಷ್ಟಕ್ಕ ಕೊಸರಿಕೊಂಡು ಹೊಳ್ಳಿ ನಿಂತು ‘ಹಂಗಾರ ನಿಮ್ಮ ಎಡಗೈಗೆ ಏನಾಗೇದ? ಅದು ಯಾತರ ಕಲೆ?’ ಎಂದು ಕೇಳಿದಳು ಪಟ್ಟು ಬಿಡದವಳಂತೆ.

ವಾದಿರಾಜಾಚಾರು ತಮ್ಮ ಎಡಗೈ ಮುಂದೆ ಚಾಚಿ, ‘ಇದೇ? ನಮ್ಮದೇನು ತಾಯೀ… ಬ್ರಾಹ್ಮಣಾರ್ಥದ ಬದುಕು… ಅಗ್ನಿ ಹೋತ್ರ… ನೈವೇದ್ಯ… ದೀಪ… ಧೂಪ ಎನ್ನುತ್ತ ಯಾವಾಗಲೂ ಅಗ್ನಿಯ ಸಹವಾಸ…’ ಎಂದು ಮುಗುಳು ನಕ್ಕರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ರಪ ರಪ ರಪ ಮಳೆ ಹೊಡೆಯಲಿಕ್ಕೆ ಹತ್ತಿತು. ವಾದಿರಾಜಾಚಾರ ಮತ್ತೆ ಅದೇ ಮುಗುಳು ನಗು ನಗುತ್ತ, ‘ಬರಲೇ?’ ಎನ್ನುತ್ತ ಮಳೆಯಿಂದ ರಕ್ಷಿಸಿಕೊಳ್ಳಲು ತಲೆಯ ಮೇಲೊಂದು ಟವಲು ಹಾಕಿಕೊಂಡು, ಯಾತ್ರಿಕರ ಒಂದು ಗುಂಪಿನ ಮಧ್ಯೆ ಹೊಕ್ಕು ಓಡತೊಡಗಿದರು. ಗುರಣ್ಣ ಚೀಲ ಬಗಲಿಗೇರಿಸಿಕೊಂಡು, ಒಂದು ಕೈಯಿಂದ ಕುಂಟುತ್ತಿರುವ ಸುಸಾನಳನ್ನು ಎಳೆಯುತ್ತ, ಕೃಷ್ಟಕ್ಕನ ಕಡೆ ಒಂದು ಅಸಹ್ಯ ಕ್ರುದ್ಧ ನೋಟ ಹರಿಸಿ ತಾನೂ ಓಡತೊಡಗಿದ. ಕೃಷ್ಟಕ್ಕ ಇನ್ನೂ ಅನುಮಾನಿಸುತ್ತ ತಾನೂ ಹೆಜ್ಜೆ ಕಿತ್ತಿದಳು.
ಎಷ್ಟು ಹೇಳಿದರೂ ಕೃಷ್ಟಕ್ಕನ ಅನುಮಾನ ಸಂಶಯ ಹೋಗೋ ಲಕ್ಷಣ ಕಾಣಿಸಲಿಲ್ಲ. ಗುರಣ್ಣ ಹೇಳಿ ಹೇಳಿ ಬ್ಯಾಸತ್ತ. ‘ನಲವತ್ತು ವರುಷದ ಹಿಂದಿನ ಕಥಿ… ಆ ಮುಳಗುಂದದ ಬಿಂದ್ಯಾ ಬದುಕೆರ ಬದುಕ್ಯಾನೋ ಇಲ್ಲೋ… ಒಂದು ವ್ಯಾಳ್ಯಾ ಬದುಕಿದ್ದರೂ ಯಲ್ಲಾ ಬಿಟ್ಟು ಇಲ್ಲೆ ಬದರಿಗೆ ಯಾಕ ಸಾಯಲಿಕ್ಕೆ ಬರತಾನ… ಬಂದಿದ್ದರ ಸಹಿತ ಎಷ್ಟು ಮುದುಕ ಆಗಿರತಾನೋ ಏನೋ… ಅಂಥವನ್ನ ನಲವತ್ತು ವರುಷದ ಮ್ಯಾಲ ನೀ ಗುರುತು ಹಿಡೀತೀಯಾ… ಹುಚ್ಚು… ನಿನಗ ಹಳವಂಡ…‘

ಕೃಷ್ಟಕ್ಕನ ಸಹಯಾತ್ರಿಗಳಾದ ಸುಬ್ಬಕ್ಕ ಮತ್ತು ಉಳಿದವರೂ ಸಾಕಷ್ಟು ಹೇಳಿದರು. ಏನಾದರೂ ಕೃಷ್ಟಕ್ಕನ ಅನುಮಾನ. ಸಂಶಯ ಬಗೆಹರೀಲಿಲ್ಲ. ಆಕೀದು ಒಂದs ಹಟ, ‘ಅವನ ಎಡಗೈಗೆ ಆದದ್ದು ಸುಟ್ಟಗಾಯ ಅಲ್ಲ…… ಅವತ್ತ ಪಾಕೇಟಿನ್ಯಾಗಿನ ರೊಕ್ಕಾ ಕಳವು ಮಾಡೋ ದಿವಸ ಇವರ ಸಂಗತೀ ಹಾತಾಪಾಯೀ ಆತಲ್ಲs…… ಆವಾಗ ಚೂರಿ ತರದು ಆದದ್ದು ಗಾಯ ಅದು… ಪೋಲಿಸರು ಲಾಕಪ್ಪಿನ್ಯಾಗ ನನ್ನ ಕರದು ಅವನ ಕೈ ತೋರಿಸಿದ್ದರು…. ತಿಂಗಳಾನುಗಟ್ಟಲೇ ಲಾಕಪ್ಪಿನ್ಯಾಗs ಇದ್ದ… ಆ ಮ್ಯಾಲ ತಪ್ಪಿಸಿಕೊಂಡು ಓಡಿ ಹೋತಂತ ಖೋಡಿ… ಬರೇ ಅಷ್ಟs ಅಲ್ಲ ಆ ಮಾರಿ, ಥೇಟ ಮುಳಗುಂದ ಸಕೇಶಿ ಮಾರಿ…. ನನ್ನ ಗಂಡನ್ನ ಕೊಂದ ಮಾರೀ ಯಂದಾದರೂ ಮರೀತೀನೇನು ನಾನು?’ ಎನ್ನುತ್ತ ಅದೇ ಮಾತು ಅದೇ ಹಟ.

ಯಾತ್ರೆ ಮುಗಿದಿತ್ತು. ಯಾತ್ರಿಕರು ಮರಳಿ ಹೊರಟಿದ್ದರು ಬಸ್ಸಿನವರು ಗಡಿಬಿಡಿ ಮಾಡಲಿಕ್ಕೆ ಹತ್ತಿದ್ದರು. ‘ಈಗ ಬಿಟ್ಟರ ಸಂಜಿಗೆ ಪೀಪಲಕೋಟ ಮುಟ್ಟತೇವಿ… ಮಳೀ ಬರಬಹುದು… ಜಲ್ದೀ ಜಲ್ದೀ ನಡೀರೀ…’ ಅಂತ ಅವಸರಿಸಲಿಕ್ಕೆ ಹತ್ತಿದ್ದರು. ಸಾಮಾನು ಸರಂಜಾಮು ಎಲ್ಲಾ ಬಸ್ಸಿನ ಮ್ಯಾಲ ಹಾಕಿದ್ದಾಗಿತ್ತು. ಉಳಿದ ಯಾತ್ರಿಕರೆಲ್ಲ ತಮ್ಮ ತಮ್ಮ ಸೀಟಿನ ಮ್ಯಾಲ ಕೂತಿದ್ದರು. ಮುಖ ಗಂಟಿಕ್ಕಿ ಖಿಡಕೀ ಹೊರಗ ಮಾರೀ ಇಟಗೊಂಡು ಕೃಷ್ಟಕ್ಕನೂ ಕೂತಿದ್ದಳು. ಇನ್ನೂ ಕುಂಟುತ್ತಿದ್ದ ಸುಸಾನಳಿಗೆ ಬಸ್ಸ ಏರಲಿಕ್ಕೆ ಗುರಣ್ಣ ಸಹಾಯ ಮಾಡಲಿಕ್ಕೆ ಹತ್ತಿದ್ದ. ಯಾರೋ ಗಟ್ಟಿಯಾಗಿ ‘ಬದರೀ ವಿಶಾಲಕೀ…’ ಎಂದು ಕರೆಕೊಟ್ಟರು ಉಳಿದವರೆಲ್ಲರೂ ‘ಜೈ’ ಎಂದು ಜಯಘೋಷ ಮಾಡಿದರು.

ಅಷ್ಟರಾಗ ಏನಾತೋ ಏನೋ ಇದ್ದಕ್ಕಿದ್ಧಂಗ ಕೃಷ್ಟಕ್ಕ ಛಂಗನೇ ತನ್ನ ಸೀಟು ಬಿಟ್ಟೆದ್ದು, ‘ಅಕಾ… ಅಲ್ಲಿ ಹೊಂಟಾನ ನೋಡ್ರಿ ಅವನs ಅವನs ಮುಳಗುಂದ ಬಿಂದ್ಯಾ’ ಎಂದು ಚೀರುತ್ತ, ಎಲ್ಲರನ್ನೂ ಸರಿಸಿ ಬಸ್ಸಿನ ಒಳಬಾಗಿಲಿನ ಬಳಿ ಬರುತ್ತಿದ್ದ ಗುರಣ್ಣ ಸುಸಾನರನ್ನು ರಭಸದಿಂದ ನೂಕಿ, ‘ನನ್ನ ಗಂಡನ್ನ ಕೊಂದವನ್ನ ಏನಾದರೂ ಬಿಡೂದುಲ್ಲ’ ಎಂದು ಗಟ್ಟಿದನಿಯಲ್ಲಿ ಒದರ್‍ಯಾಡುತ್ತ, ತುಸು ದೂರ ಇವರಿಗೆ ಬೆನ್ನು ಮಾಡಿ ನಡೆದಿದ್ದ, ವಾದಿರಾಜಾಚಾರರಂತೆ ಕಾಣುತ್ತಿದ್ದ ಆ ಮನುಷ್ಯನ ಬೆನ್ನತ್ತಿ, ಬಲಗೈಯಿಂದ ಹಿಂದಿನ ಕಚ್ಚೆಯನ್ನು ಒಳಸರಿಸುತ್ತ, ಎಡಗೈಯಿಂದ ಬಲಗಾಲಿನ ಸೀರೆಯನ್ನು ಎತ್ತಿ ಹಿಡಿದು ‘ಏ ಬಿಂದ್ಯಾ ನಿಂದರೋ…’ ಎನ್ನುತ್ತ ಉನ್ಮತ್ತಳಂತೆ ಓಡತೊಡಗಿದಳು. ಕಕ್ಕಾಬಿಕ್ಕಿಯಾದ ಗುರಣ್ಣ ಏನು ಮಾಡಲೂ ತೋಚದೇ ಕಂಗೆಟ್ಟು ‘ಅವ್ವಾ…….. ಅವ್ವಾ’ ಎನ್ನುತ್ತ ತಾನೂ ಅವಳ ಹಿಂದಿನಿಂದ ಓಡತೊಡಗಿದ. ನಾಲ್ಕು ಹೆಜ್ಜೆ ಹಿಂದಿನಿಂದ ಬಿಳೇ ಹುಡುಗಿ ಸುಸಾನ ತಾನೂ ಆರ್ತಳಾಗಿ ‘ಆವಾ……. ಕಮ್‌ಬ್ಯಾಕ್…….ಆವಾ’ ಎನ್ನುತ್ತ ಅಳುತ್ತಳುತ್ತ ರಭಸದಿಂದ ಕುಂಟುತ್ತ ಅವರಿಬ್ಬರ ಹಿಂದೆ ನಡೆದಳು.

ಬಸ್ಸಿನಲ್ಲಿದ್ದವರೆಲ್ಲ ‘ಅರೇ ಕ್ಯಾ ಹೋಗಯಾ… ಏನಾತು… ವಾಟ ಹ್ಯಾಪಂಡ’ ಎಂದು ನಾನಾ ತರದ ಉದ್ಗಾರ ತಗೀಲಿಕ್ಕೆ ಹತ್ತಿದರು. ಬಸ್ಸು ಹೊರಡಲು ತಡಾ ಆಗತsದ ಅಂತ ಉಗ್ರ ಕೋಪದಲ್ಲಿ ಬಸ್ಸಿನ ಡ್ರಾಯಿವರ ‘ಡ್ರಾಂವ್…….. ಡ್ರಾಂವ್…….. ಡ್ರಾಂವ್’ ಅಂತ ಕ್ರೂರವಾಗಿ ಹಾರ್ನ್ ಬಾರಿಸತೊಡಗಿದ.
*****
ಕೃಪೆ: ದೇಶಕಾಲ (ಸಂಚಿಕೆ: ಜನವರಿ-ಮಾರ್ಚ್: ೨೦೦೬)
ಅನುಮತಿ ನೀಡಿದ ಶ್ರೀನಿವಾಸ ವೈದ್ಯರಿಗೆ ಧನ್ಯವಾದಗಳು.
ಕನ್ನಡಸಾಹಿತ್ಯ.ಕಾಂನಲ್ಲಿ ಪ್ರಕಟೀಸಲು ಅನುಮತಿ ನೀಡಿ ಜೊತೆಗೆ ಶ್ರೀನಿವಾಸ ವೈದ್ಯರಿಂದ ಅನುಮತಿ ಪಡೆದುಕೊಟ್ಟ ವಿವೇಕ ಶಾನಭಾಗರಿಗೆ ಧನ್ಯವಾದಗಳು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.