ಕಾಲಿಟ್ಟಲ್ಲಿ ಕಾಲುದಾರಿ

ಬಸ್ಸು ನಿಧಾನವಾಗಿ ಚಲಿಸಿದ ನಂತರವೇ ಅವಳಿಗೆ ಅಂತೂ ತಾನು ಊರಿಗೆ ಹೊರಟಿರುವುದು ಇದೀಗ ಖಚಿತವಾದಂತೆ ಜೋರಾಗಿ ಉಸಿರೆಳೆದುಕೊಂಡಳು. ಆ ಸಂಜೆ ಕಡೆಗಳಿಗೆಯವರೆಗೂ ಎಲ್ಲ ಸುರಳೀತ ಮುಗಿದು ತಾನು ಹೊರಡುತ್ತೇನೆ ಎಂದು ಅನ್ನಿಸಿರಲಿಲ್ಲ. ಹೋಗುವ ಮುಂಚೆ ಮುಗಿಸಲೇಬೇಕಿದ್ದ ಒಂದಿಷ್ಟು ಕೆಲಸಗಳು.. ಚಿಕ್ಕಪುಟ್ಟ ಹೊಂದಾಣಿಕೆಗಳು.. ಬಟ್ಟೆಬರೆ ಜೋಡಿಸಿಕೊಳ್ಳುವುದು.. ತುಸು ಛೆಂದದ ಸೀರೆಗಳನ್ನು ಆರಿಸಿಕೊಂಡು ಅವಕ್ಕೆ ಗಂಜಿ, ಇಸ್ತ್ರಿ.. ಕೊಡಬೇಕಿರುವ ಬಿಲ್‌ಗಳು, ಬಾಡಿಗೆಹಣ.. ಪ್ರತಿ ಬಾರಿಯಂತೆ. ಅವಳಿಗೆ ಕೆಲವು ಸಲವಚಿತೂ ಥತ್ತೇರಿಕಿ ಹೋಗೋದು ಬೇಡ ಏನೂ ಬೇಡ ಎಲ್ಲಾದ್ರೂ ಛೆಂದ ಕುಳಿತು ಒಂದಿಷ್ಟು ಅತ್ತು ಹಗುರಾಗಿಬಿಡಬೇಕು ಎನ್ನಿಸುತ್ತಿತ್ತು.

ಬಸ್ ನಿಲ್ದಾಣ.. ಕಟ್ಟಡಗಳು.. ಸಿಗ್ನಲ್‌ಗಳು ಎಲ್ಲ ದಾಟಿ ಬಸ್ಸು ನಗರದ ಹೊರವಲಯ ದಾಟುತ್ತಿದೆ.. ಹೆದ್ದಾರಿಯ ದೃಶ್ಯಗಳು ತೆರೆದುಕೊಳ್ಳುತ್ತಿದೆ. ಸಂಜೆಗತ್ತಲಲ್ಲಿ ದಾರಿಯ ಪಕ್ಕದ ಹೊಲಗದ್ದೆಗಳು ಕೆಲವೆಡೆ ಕಪ್ಪು ಹಸಿರಾಗಿ.. ಕೆಲವೆಡೆ ಒಣಗಿ ..ಕೆಲವೆಡೆ ಸೂರ್‍ಯಕಾಂತಿ ಹೂಗಳಿಂದ ಕಂದುಹಳದಿಯಾಗಿ ಕಾಣುತ್ತಿದೆ. ಕಂಡಕ್ಟರ್‌ನಿಗೆ ರಿಸರ್‍ವೇಶನ್ ಟಿಕೆಟ್ ತೆಗೆದು ತೋರಿಸುತ್ತಿರುವಂತೆ ಮಡಿಕೆಯಾಗಿದ್ದ ಪುಟ್ಟ ಕಾಗದ ಕಾಣಿಸಿತು. ಊರಿಗೆ ಹೋಗುವ ಮುಂಚೆ ಅಪ್ಪನಿಗೆ ತೆಗೆದುಕೊಳ್ಳುವ ಎಂದು ಬರೆದಿದ್ದ ನಾಲ್ಕಾರು ಪುಸ್ತಕದ ಹೆಸರು.. ಅಮ್ಮನಿಗೆ ಏನಾದರೂ ತೆಗೆದುಕೊಳ್ಳಲೇ ಬೇಕೆಂದಿದ್ದ ಪಟ್ಟಿ ದುಡ್ಡಿನ ಹೊಂದಾಣಿಕೆಯ ಬೆವರಲ್ಲಿ ಮುದ್ದೆಯಾಗಿ ಪರ್ಸ್‌ನ ಮೂಲೆ ಹಿಡಿದು ಕುಳಿತುಬಿಟ್ಟಿದೆ.

’ಪ್ರತಿಸಲ ಹೀಗೇ ಆಗ್ತಿದೆ.. ಶ್ಯೀ’
’ಇದಕ್ಕಿಂತ ಒಳ್ಳೆಯ ಕೆಲಸದಲ್ಲಿದ್ದಿದ್ರೆ..’
’ಆವಾಗ್ಲೇ ಇನ್ನೊಂಚೂರು ಚೆನ್ನಾಗಿ ಓದಿದ್ರೆ…’
’ಓದುವಾಗ ಯಾರಾದ್ರೂ ಒಂಚೂರು ಮಾರ್ಗದರ್ಶನ ಮಾಡಿದ್ರೆ..’
’ಒಳ್ಳೆಯ ಕೋರ್ಸ್‌ಗೆ ಸೇರಿಕೊಂಡಿದ್ದರೆ..’
’ಬೇರೆಯ ಅವಕಾಶಗಳ ಬಗ್ಗೆ ನಾನೇ ಒಂಚೂರು ಯೋಚಿಸಿದ್ರೆ’
’ಹಳವಂಡಗಳ ಬೆನ್ನತ್ತುವುದನ್ನು ಬಿಟ್ಟು ಕ್ರಿಯಾಶೀಲತೆಯಿಂದ ನನ್ನ ಆಕಾಶ ನಾನೇ ವಿಸ್ತರಿಸಿಕೊಂಡಿದ್ದರೆ..’

ಈಗ ಹೆದ್ದಾರಿಯಲ್ಲಿ ಭರ್ರನೆ ಸಾಗಿ ಹೋಗುವ ವಾಹನಗಳ ಹೆಡ್‌ಲೈಟ್ ಒಂದೊಂದೇ ವಾಕ್ಯಗಳ ’ರೆ’ ಮೇಲೆ ಬಿದ್ದು ಫಳಫಳನೆ ಹೊಳೆಯುತ್ತಿದೆ. ಕಿಟಕಿಯ ಹೊರಗೆ ಗೆರೆಯಾಗಿದ್ದ ಚಂದ್ರ ಮೆಲ್ಲನೆ ಅಗಲವಾಗುತ್ತ ಇದೀಗ ಅರೆಮುಕ್ಕಾದ ಚಂದ್ರ ಬಿಂಬವಾಗಿದೆ. ಫಕ್ಕನೆ ಅವಳಲ್ಲಿ ಒಂದು ನೆನಪು. ಈ ಸಲವೂ ಹಡಪ ಜೋಡಿಸಿಡುವಾಗ ’ಅದು’ ಸಿಗಲಿಲ್ಲ. ಆಗೀಗ ತನ್ನ ಇಡೀ ಹಳೆಯ ಹಡಪ ಕಿತ್ತು, ಕುಡುಗಿ ಸಮಾ ಜೋಡಿಸಿಡುವಾಗ ಅವಳು ಮರೆಯದೇ ಮುಲೆಮೂಲೆಯನ್ನು ಶೋಧಿಸುತ್ತಿದ್ದಳು. ಒಂದಾನೊಂದು ಕಾಲದಲ್ಲಿ ಬರೆದಿದ್ದ ಡೈರಿಯಂತಿದ್ದ ಆ ಕಥೆ ಯಾವುದಾದರೂ ಮೂಲೆಯಲ್ಲಿ ಇನ್ನೂ ಮೆತ್ತಗೆ ಉಸಿರಾಡುತ್ತಿರಬಹುದೇ ಎಂದು. ಹಾಗೆ ನೋಡಿದರೆ ಅವಳು ಹಡಪ ಜೋಡಿಸಿಡುವುದೇ ಅದನ್ನು ಹುಡುಕಲು.

ಎದುರಿನ ಯಾವುದೋ ವಾಹನದ ಬೆಳಕು ತುಂಬ ಪ್ರಖರವಾಗಿರಬೇಕು. ರಸ್ತೆಯ ಆಚೆ ಗದ್ದೆಯಲ್ಲಿನ ಗೋಧಿ ತೆನೆಗಳು.. ಅದರ ಪಕ್ಕದ ಸೂರ್ಯಕಾಂತಿ ಹೂಗಳು ಹಳದಿಯಾಗಿ ಹೊಳೆದು ಕಣ್ಣೆದುರು ಮೋಹಕ ದೃಶ್ಯವೊಂದು ಅರೆಕ್ಷಣ ತೆರೆದುಕೊಂಡು ಮತ್ತೆ ಮಾಯವಾಯಿತು. ಹರಡಿದ ಹಳದಿ ಬೆಳಕಲ್ಲಿ ಪುಟ್ಟ ಪ್ರಶ್ನೆಯೊಂದು ಮಿಂಚಿತು.
’ಅಂದಹಾಗೆ ಅದು ಡೈರಿಯಂತಿದ್ದ ಕಥೆಯೋ ಅಥವ ಕಥೆಯಂತಿದ್ದ ಖರೇ ಖರೇ ಡೈರಿಯೋ..?’

ಎಷ್ಟೋ ವರ್ಷಗಳ ಹಿಂದೆ ಬರೆದಿದ್ದು .. ಕಥೆ ಏನಿತ್ತು ಅಂತ ಪೂರ್ಣ ನೆನಪಾಗುವುದೇ ಇಲ್ಲ. ಆದರೂ ಮಣಿಸರದಲ್ಲಿ ಪೋಣಿಸಿದ್ದ ಪುಟ್ಟಪುಟ್ಟ ಮುತ್ತಿನ ಹಾಗಿದ್ದ ಆ ಕೈಬರಹದ ಮಡಿಸಿದ ಹಾಳೆಗಳು ನೆನಪಾದಾಗೆಲ್ಲ ಅವಳು ತೀವ್ರ ಭಾವತೀವ್ರತೆಗೆ ಪಕ್ಕಾಗುತ್ತಾಳೆ. ಹೊರಗಿನ ಚಿಟ್ಟೆ ಮೇಲೆ ಕುಳಿತು ಬರೆದಿದ್ದು.. ಎದುರಿನ ತಂತಿ ಬೇಲಿ.. ಬೇಲಿಗಂಟಿಕೊಂಡಿದ್ದ ಹಾಗೆ ಬೆಳೆದಿದ್ದ ಜಾಜಿ ಕರವೇರದ ಮರಗಳು.. ಬೇಲಿಯಾಚೆಗಿನ ಲೈಟು ಕಂಬ.. ಆ ಮುಸ್ಸಂಜೆಯ ಗಂಧ ಗಾಳಿ ಅವಳನ್ನು ಇವತ್ತಿಗೂ ಗಾಢವಾಗಿ ಆವರಿಸಿಕೊಳ್ಳುತ್ತದೆ.

ಬಸ್ಸು ಈಗ ಸೇತುವೆ ಮೇಲೆ ಹೋಗುತ್ತಿದೆ. ಬಸ್ಸಿನ ಡ್ರೈವರ್ ವೇಗ ಕಡಿಮೆ ಮಾಡಿದ. ಹಾಗೆ ಹೋಗುವಾಗ ಕೇಳಿ ಬರುವ ಬೇರೆಯದೇ ಆದ ಗಾಳಿಯ ಸದ್ದು.. ಸೇತುವೆ ಕೆಳಗೆ ಕೃಷ್ಣೆಯ ನೀರು ಎಷ್ಟಿರಬಹುದು.. ಬಿರು ಬೇಸಿಗೆ ಬೇರೆ ಬತ್ತಿ ಹೋಗಿದೆಯಾ ಎಂಥ… ಅವಳು ಕೆಳಗೆ ಬಗ್ಗಿ ನೋಡಲು ಪ್ರಯತ್ನಿಸಿದಳು. ಈ ಬಸ್ಸಿನ ಬೆಳಕು.. ಎದುರಿನಿಂದ ಬಂದ ವಾಹನದ ಬೆಳಕು ಎರಡೂ ಅರೆಕ್ಷಣ ತಳ ಕಾಣುವಂತೆ ನಿಧಾನ ಹರಿಯುತ್ತಿದ್ದ ಕೃಷ್ಣೆಯ ಮೇಲೆ ಬಿದ್ದು ತುಸುಭಾಗ ನೀರು ಮಾತ್ರ ನಸು ಹಳದಿಯಾಗಿ ಹೊಳೆಯುತ್ತಿದೆ. ಅದರಾಚೆ, ಈಚೆ ಬದಿಯ ನೀರು ಮಂದ ತಿಂಗಳ ಬೆಳಕಿನಲ್ಲಿ ನಸುಕಂದು ಛಾಯೆಯಲ್ಲಿ ಹೊಳೆಯುತ್ತಿದೆ. ಆಗೀಗ ನೆನಪಾಗುವ ಕಥೆಯ ಸಾಲುಗಳು ಹರಡಿದಂತೆ ಸೇತುವೆಯ ಕೆಳಗೆ ಕೃಷ್ಣೆಯ ದೃಶ್ಯ ಮತ್ತು ಮೆಲ್ಲ ಜುಳು ಜುಳು ನಾದ.. ಸಾಲುಗಳು ಅಕ್ಷರವಾಗಿ ತೆರೆದುಕೊಳ್ಳದೇ.. ಅಕ್ಷರದೊಳಗಿನ ಭಾವ ಮಾತ್ರವಾಗಿ ಎದೆಯಾಳಕ್ಕೆ ಇಳಿದಂತೆ ಕೆಳಗೆ ಹರಿಯುವ ತಣ್ಣಗಿನ ಕೃಷ್ಣೆಯಂತೆ ಆತ್ಮವಿಡೀ ಒದ್ದೆ.
ಒದ್ದೆ ಆತ್ಮದಡಿ ತೇವಗೊಳ್ಳುತ್ತಿರುವ ಚಿತ್ರ..
ಅತ್ತೆ ಮನೆಯಲ್ಲಿ ಓದುತ್ತಿರುವಾಗ ತನಗೆ ಅಪ್ಪನನ್ನು ನೋಡದೆ ಇರುವುದು ಹೇಗೆ ಕಷ್ಟವಾಗುತ್ತಿದೆ ಪೆನ್ಸಿಲ್ ನೋಟ್‌ಪುಸ್ತಕ ಬೇಕಾದಾಗ ಅವರಲ್ಲಿ ಕೇಳುವುದೂ ಎಷ್ಟು ಸಂಕೋಚವೆನ್ನಿಸುತ್ತದೆ.. ಅತ್ತೆ ಮನೆಯಲ್ಲಿ ಎಲ್ಲರ ಪ್ರೀತಿಯಲ್ಲಿ ಬೆಚ್ಚಗೆ ಇರುವಾಗಲೂ ಅಪ್ಪ ಅಮ್ಮನ ಹನಿಪ್ರೀತಿಗಾಗಿ ಮನಸ್ಸು ಎಷ್ಟು ಒದ್ದಾಡುತ್ತೆ, ಅಪ್ಪ ಬಂದಾಗ ಏನೆಲ್ಲ ಮಾತಾಡಬೇಕೆನ್ನಿಸಿದರೂ ಯಾವ ಭಾವವೂ ಶಬ್ದವಾಗದೇ ಒಳಗೊಳಗೇ ನಿರಂತರ ತಲ್ಲಣವಾಗಿ ಪ್ರತೀಕ್ಷೆಯಾಗಿ ಉಳಿದು…
ಇದೀಗ ಕಿಟಕಿಯಲ್ಲಿ ಕಥೆಯ ಪುಟ್ಟ ಹುಡುಗಿ.
ಮತ್ತು ಅರೆಮುಕ್ಕಾದ ಚಂದ್ರಬಿಂಬ ಕಿಟಕಿಯ ಸಮಾ ಎದುರಿಗೆ.
ಮತ್ತು ಹಾಗೆ ಉಳಿದೇಬಿಟ್ಟ ಕನವರಿಕೆ, ಪ್ರತೀಕ್ಷೆ…

ಅರೇ ಹೌದಲ್ಲ ಮನೆಗೆ ವಾಪಾಸಾಗಿ ಕಾಲ್ಭೆಜಿಗೆ ಹೋಗುವ ದಿನಗಳಲ್ಲಿಯು ಇದೇ ಕನವರಿಕೆ, ಇಂಥದೊಂದು ಪ್ರತೀಕ್ಷೆ ಹಾಗೇ ಉಳಿದುಬಿಟ್ಟಿತಲ್ಲ. ಯಾವುದೋ ಹುಡುಗ ಸ್ನೇಹದಿಂದ ನಾಲ್ಕು ಮಾತಾಡಿದ್ದನ್ನು ಅನುಮಾನಿಸಿದ ಅಮ್ಮ.. ಬೆಂಬಲಿಸಿದ ಅಪ್ಪ.. ಸೂಕ್ಷ್ಮ ಕ್ರ್ರೌರ್ಯದಂತಹುದೇನೋ ಬಾಧಿಸಿದ ಹಾಗೆ. ತದನಂತರ ತಾನು ಒಳಗೊಳಗೇ ಅಷ್ಟೆಲ್ಲ ಪ್ರೀತಿಸುವ ಅಪ್ಪನ ಕಣ್ಣಲ್ಲಿ ಬೇರೆಯದೇ ಭಾವ ಇರುವಂತೆ ಭಾಸವಾಗುತ್ತ.. ಸದಾ ಕಣ್ಣೋಟದಿಂದ ತಪ್ಪಿಸಿಕೊಳ್ಳುವ ಪ್ರಯತ್ನ. ಯಾವ ಪ್ರೀತಿಜಲದ ಅಲೆಗಳು ತಟ್ಟದೆ ಇಡೀ ಜಗತ್ತಿನಲ್ಲಿ ಒಂಟಿಯಾದ ಹಾಗೆ… ವಿಚಿತ್ರವಾಗಿ ಕಾಡುವ ಅಸುರಕ್ಷಿತ ಭಾವ.. ಗಾಢಾಂಧಕಾರದಲ್ಲಿ ಅಗಾಧ ಕತ್ತಲು ತನ್ನ ಮೇಲೆ ಕವುಚಿ ಬಿದ್ದು ಭಯದಿಂದ ಥರಗುಟ್ಟಗುಡತೊಗಿದ ಅದೆಷ್ಟು ರಾತ್ರಿಗಳು..

ಎದುರಿನಿಂದ ಬರುತ್ತಿರುವ ಒಂದು ದೊಡ್ಡ ಟ್ರಕ್‌ನ ತೀರಾ ಪ್ರಖರ ಎನ್ನಿಸುವಂತಿದ್ದ ಬೆಳಕು..
ಕಿಟಿಯಾಚೆಗಿನ ಪುಟ್ಟ ಹುಡುಗಿ ಮಾಯವಾದಳು.

ಕಿಟಕಿಯಿಂದ ಬೀಸತೊಡಗಿದ ತಣ್ಣಗಿನ ಗಾಳಿ. ಕಿಟಕಿಯಾಚೆ ಅಲ್ಲೊಂದು ಇಲ್ಲೊಂದು ಮೋಡದ ತುಣುಕಗಳು ಕೆನೆ ಮೊಸರು ಚೆಲ್ಲಿದಂತೆ. ದೂರದಲ್ಲಿ ಯಾವುದೋ ಪಟ್ಟಣದ ದೀಪಗಳು ಸಾಲುಸಾಲಾಗಿ ಮಿನುಗುತ್ತಿದೆ.
ಹಾಗೆ ಶುರುವಾದ ಆ ಪಯಣ ತನ್ನನ್ನು ಯಾವ್ಯಾವುದೋ ತಿರುವಿನಲ್ಲಿ ಹಾದು ಯಾವ್ಯಾವ ಬಿಂದುವಿಗೆ ತನ್ನನ್ನು ಎಳೆತಂದುಬಿಟ್ಟಿತಲ್ಲ.. ಯಾವ ಬಿಂದುವಿನಲ್ಲಿಯೂ ಹುಡುಕಾಟ ಕೊನೆಗೊಳ್ಳಲಿಲ್ಲ. ಯಾವ ಬಿಂದುವೂ ಪೂರ್ಣ ಪರಿಚಿತ ಭಾವ, ಸುರಕ್ಷಿತ ಭಾವ ಹುಟ್ಟಿಸಲಿಲ್ಲ..
ತಟ್ಟನೆ ಕಿಟಕಿ ಮುಚ್ಚಿ ಸೀಟಿಗೊರಗಿ ಬಿಗಿಯಾಗಿ ಕಣ್ಮುಚ್ಚಿದಳು.
ಕತೆಯ ಹುಡುಗಿಯ ಹುಡುಕಾಟದ ದಿನಚರಿ ಮತ್ತು ಕತೆ ಹೊರಗಿನ ದಿನಚರಿಯಲ್ಲಿ ಹುಡುಗಿಯ ತಪ್ತ ಆತ್ಮದ ಅಲೆದಾಟ.. ಏನೇನೋ ನೆನಪುಗಳು.. ಅಕ್ಷರಗಳ ಸಾಲುಗಳಾಗದೇ ಹಾಗೇ ಉಳಿದ ತುಂಡು ತುಂಡು ಭಾವಗಳು.. ಅವಳೀಗ ನಿಧಾನ ಮಂಪರಿಗೆ ಜಾರಿದಳು.
*
*
*
ಓ ಸವಾರಿ ಯಾವಾಗ ಬಂದಿದ್ದು .. ಬೆಳಗಿನ ಝಾವ ಬಂದಿದ್ದನೇ.. ಎಲ್ಲ ಆರಾಮನೇ.. ಮತ್ತೆಂಥೇ ವಿಶೇಷ.. ಇದು ಎಷ್ಟು ತೊಲದ್ದೇ… ಇಂಥ ಹೊಸಾ ನಮೂನಿದೆಲ್ಲ ಕಪ್ಪಾಗುತ್ತೆ ಮಾರಾಯ್ತಿ… ಈ ಸರ ಇನ್ನೊಂಚೂರು ದಪ್ಪ ಮಾಡಿಸ್ಕೋಬೆಕಿತ್ತೇ.. ಮತ್ತೇನೇನು ತಂಗಂಡೆ.. ಮತ್ತೆ ಈ ಸಲವಾದ್ರೂ ಮದುವೆಯಾಗ್ತೀಯ ಹೆಂಗೆ .. ನಿಂಗೇನು ಸುಮಾರು ಜನ ಪರಿಚಯ ಆಯ್ದ.. ನೀನೆ ನೋಡ್ಕ್ಯಂಬಿಂಡು…
ಪಕ್ಕದ ಮನೆಯ ಭಾಗ್ಯ ಚಿಕ್ಕಿಯ ವಿಚಾರಣೆ ಸಾಗುತ್ತಲೇ ಇದೆ.

ಈಗೆಲ್ಲ ಅಷ್ಟು ದಪ್ಪದ ಸರ ಯಾರು ಹಾಕ್ಕೆತ್ತ.. ಅದೆಲ್ಲ ಮದ್ಲಿನ ಕಾಲ್ದಲ್ಲಾತು.. ಅವಳು ಹಂಗೆ ತಾನೆ ನೋಡ್ಕ್ಯಳಾದಾಗಿದ್ರೆ ಯಾವಾಗ್ಲೋ ಮದ್ವೆಯಾಗ್ತಿದ್ದ.. ಎಲ್ಲ ಕೂಡಿ ಬರಕು ಅಷ್ಟೇ… ಇವಳ ಚುಟುಕಾದ ಉತ್ತರಕ್ಕೆ ಅವಳಮ್ಮ ತುಸುತುಸು ಸೇರಿಸಿ ಮುಂದುವರಿಸ್ತಿದ್ದಾಳೆ.

ಅಲ್ಲಿಯ ನಾಟಕವನ್ನು ಇಲ್ಲಿಯೂ ಮುಂದುವರೆಸುವ ಪಾತ್ರಧಾರಿಯ ರೀತಿ ಅವಳು ಭಾಗ್ಯ ಚಿಕ್ಕಿಯನ್ನು, ಅಮ್ಮನನ್ನು ನೋಡುತ್ತ ಅದೂ ಇದೂ ಮಾತಾಡ್ತಾಳೆ.

ಇವಳ ವಿಚಾರಣೆ ಮುಗಿಸಿದ ಭಾಗ್ಯಚಿಕ್ಕಿ ತನ್ನ ಸೊಸೆಯ ಬಗ್ಗೆ ಒಂದಿಷ್ಟು ದೂರುಗಳನ್ನು ಹೇಳತೊಡಗಿದಳು. ತಾನು ಚಿಕ್ಕವಳಿದ್ದಾಗ ಇದೇ ಭಾಗ್ಯಚಿಕ್ಕಿ ತನ್ನತ್ತೆಯ ಸುದ್ದಿಯನ್ನು ಅಮ್ಮನಿಗೆ ಪಿಸಿಪಿಸಿ ಹೇಳುತ್ತ ಕಣ್ಣುಮೂಗು ಎಲ್ಲ ಒರೆಸಿಕೊಳ್ಳುವುದು ನೆನಪಾಗಿ ಅವಳ ಮೂಗಿನ ಸೊರ್‌ಸೊರ್ ಸದ್ದು ಕೇಳುತ್ತ ತಾನು ಹೇಸಿಗೆ ಪಟ್ಟುಕೊಳ್ಳುತ್ತಿದ್ದದ್ದು ನೆನಪಾಯಿತು. ಸೊಸೆಯ ಸುದ್ದಿಯೂ ಮುಗಿಯಿತು.
ಹೊರಡುವ ಸೂಚನೆಯೇ ಇಲ್ಲದ ಭಾಗ್ಯ ಚಿಕ್ಕಿ ಆರಾಮಾಗಿ ಅಕ್ಕಿ ಮರಿಗೆಯ ಮೇಲೆ ಕೂಲಿತು ಹರಟುತ್ತಿದ್ದಾಳೆ.

ಭಾವ ನಾಳೆ ಬರ್‍ತಾನೇನೆ.. ಹಂಗಾರೆ ಅವಂಗೆ ಮಗಳು ಬಂದಿದ್ದು ಗೊತ್ತಿಲ್ಲೆ ಎಂದಳು. ಮದುವೆಯೊಂದಕ್ಕೆ ಹೋದ ಅವಳಪ್ಪ ನಾಳೆ ಬರುವುದನ್ನು ಇವಳು ಬಂದೊಡನೆ ಹೇಳಿದ್ದನ್ನೇ ಅವಳಮ್ಮ ವಿವರಿಸ ತೊಡಗಿದಂತೆ ಇವಳಲ್ಲಿ ಸಣ್ಣನೆಯ ಮಿಂಚು. ಅರೆ… ಹೌದಲ್ಲ… ಹಾಗಾದ್ರೆ ಇವತ್ತು ಮನೆಯಲ್ಲಿ ತಾನು ಮತ್ತು ಅಮ್ಮ ಇಬ್ಬರೇ ಎಂಬ ಸಂಗತಿ ಈಗ ಬೇರೆ ಆಯಾಮದೊಡನೆ ತೆರೆದುಕೊಳ್ಳತೊಡಗಿತು.
ಆ ಕಥೆ ಇಲ್ಲೇ ಎಲ್ಲಾದ್ರೂ ಅಪ್ಪನ ಹಳೇ ಪುಸ್ತಕಗಳ ಮಧ್ಯೆ ಇದ್ದರೆ ಎಂಬ ಪುಟ್ಟ ಅನುಮಾನ ಫಕ್ಕನೆ ಹುಟ್ಟಿಬಿಟ್ಟಿತು. ಆ ಸನ್ನಿವೇಶದಲ್ಲಿ ಅದಕ್ಕೆ ತೀರಾ ಹೊರತಾದ ರೀತಿಯಲ್ಲಿ ಹುಟ್ಟಿದ ಇಂಥದೊಂದು ಅನುಮಾನ ಸಣ್ಣಗೆ ಪುಳಕವನ್ನೂ ಹುಟ್ಟಿಸಿತು. ಅಪ್ಪ ಮನೆಯಲ್ಲಿ ಇಲ್ಲ ಎನ್ನುವ ಸಂಗತಿ ಕಥೆ ಹುಡುಕುವ ಸಾಧ್ಯೆತೆಯೊಂದನ್ನು ತೆರೆಯುತ್ತಿದೆಯೇ.. ಒಂದು ಹಳೇ ಟ್ರಂಕ್‌ನಲ್ಲಿ ಕಾಲೇಜಿನ ತನ್ನ ಹಳೇ ಪುಸ್ತಕಗಳನ್ನಿಟ್ಟದ್ದು ಈಗಲೂ ಹಾಗೆಯೇ ಇದೆ.. ಅದರೊಳಗೆ ಎಲ್ಲಾದ್ರೂ ಆ ಕಥೆ ಅಡಗಿ ಕುಳಿತಿರಬಹುದೇ ಅಥವಾ ಅಪ್ಪನ ಹಳೇ ಪುಸ್ತಕಗಳ ಮಧ್ಯೆ..
ಭಾಗ್ಯಚಿಕ್ಕಿ ಮತ್ತು ಅಮ್ಮ ಮನೆಯ ಸುದ್ದಿ ಮುಗಿಸಿ ಕೇರಿಯ ಮತ್ತಾರದೋ ಸುದ್ದಿಗೆ ಹಾರುತ್ತಿದ್ದಾರೆ.. ಇವಳು ಕಸಬರಿಗೆ ಒದ್ದೆ ಬಟ್ಟೆ, ಚಿಕ್ಕ ಬಕೆಟ್ ಹಿಡಿದವಳೇ ಆನು ಮೆತ್ತು ಕಸ ಹೊಡಿತಿ ಎಂದವಳೇ ಮಹಡಿ ಏರತೊಡಗಿದಳು.
ಇವತ್ತಷ್ಟೇ ಬೈಂದೆ ಅಮ್ಮಿ.. ನಾಳೆ ಮಾಡ್ಲಕ್ಕಡೇ ಅಮ್ಮನ ಕಾಳಜಿ
ಮದ್ಲಿನ ಹಾಗೇ ಇದ್ದಾಳಪ್ಪ.. ಖಾಲಿ ಕೂತ್ಗಳ ಪೈಕಿನೇ ಅಲ್ಲ ಅವಳು .. ಪಾಪ ದಿನಾ ನೀನೆ ಮಾಡ್ತೆ ಇವತ್ತಾರೂ ಮಾಡ್ಲಿ ತಗ ಭಾಗ್ಯಚಿಕ್ಕಿಯ ಮೆಚ್ಚಿಗೆ ಬೆರೆತ ಮಾತು ಏಣಿಯೇರುತ್ತಿದ್ದವಳ ಹಿಂಬಾಲಿಸಿತು.

ಅವಳ ಹಳೇ ಟ್ರಂಕ್‌ನಲ್ಲಿ ಕಂದು ಹಳದಿ ಛಾಯೆಗೆ ತಿರುಗಿದ್ದ ನಾಲ್ಕಾರು ನೋಟ್‌ಪುಸ್ತಕ, ಪಠ್ಯಪುಸ್ತಕ ಬಿಟ್ಟರೆ ಮತ್ತೇನೂ ಇರಲಿಲ್ಲ. ಹಳೇ ಪುಸ್ತಕಗಳ ವಾಸನೆಯಲ್ಲಿ ಅದು ಇಲ್ಲ ಎಂಬ ಸತ್ಯ ಮಿಳಿತವಾಗಿರುವಮತೆ ಅನ್ನಿಸುತ್ತಿದ್ದರೂ ಮತ್ತೆ ಮತ್ತೆ ಎತ್ತಿಟ್ಟು, ತಿರುವಿ ಹಾಕಿದಳು. ಕಡೆಗೆ ಆ ಟ್ರಂಕ್ ಬಾಗಿಲು ಮುಚ್ಚಿ ಆಚೆ ಬೇರೆ ಪೆಟ್ಟಿಗೆಯಲ್ಲಿದ್ದ ಅಪ್ಪನ ಹಳೆಯ ಪುಸ್ತಕಗಳನ್ನು ನೋಡತೊಡಗಿದಳು. ಒಂದೊಂದಾಗಿ ಮಗುಚುತ್ತ, ಧೂಳು ಝಾಡಿಸತೊಡಗಿದಳು. ಪುಸ್ತಕಗಳನ್ನು ಕೊಡವುತ್ತ, ಅವುಗಳನ್ನು ತೆರೆದು ಅಲ್ಲಿ ಇಲ್ಲಿ ಕಣ್ಣು ಹಾಯಿಸುತ್ತ, ಮುನ್ನುಡಿ ಬೆನ್ನುಡಿ ಯಾರು ಬರೆದಿದ್ದಾರೆ, ಮೊದಲ ಮಾತು, ನನ್ನ ಮಾತು ಇತ್ಯಾದಿಗಳಲ್ಲಿ ಆ ಬರೆಹಗಾರರು ಏನು ಹೇಳಿದ್ದಾರೆ, ಯಾರ್‍ಯಾರಿಗೆ ಕೃತಜ್ಞತೆ ಹೇಳಿದ್ದಾರೆ, ಅವರಿಗೆ ಹತ್ತಿರದವರು ಯಾರು ಅಂತ ಆ ಬರಹಗಳಲ್ಲಿ ಹೊಳೆಯುವಂತಿದೆಯೇ ಅಂತೆಲ್ಲ ನೋಡತೊಡಗಿದಳು.
ಆ ಕಂದು ಹಳದಿ ಪುಸ್ತಕಗಳಿಗೆ ಅವುಗಳೆದೇ ವಿಶಿಷ್ಟ ವಾಸನೆಯಿತ್ತು. ಆ ಎಲ್ಲ ಪುಸ್ತಕಗಳು.. ಅವುಗಳೊಳಗಿನ ಅಪ್ಪನ ಕೈಬೆರಳ ಸ್ಪರ್ಶ ಎಲ್ಲ ಅತ್ಯಂತ ಪರಿಚಿತ ಎನ್ನಿಸುತ್ತ ಹಳೇ ಪುಸ್ತಕಗಳಲ್ಲಿ ಕಾಣ ತೊಡಗಿದ ಅಪ್ಪನ ಚಹರೆ ತನಗೆ ತೀರ ಹತ್ತಿರದ್ದು ಎನ್ನಿಸುತ್ತ ಅದನ್ನೆಲ್ಲ ಬೆರಳಿಂದ ಮೆಲ್ಲ ತಟ್ಟುತ್ತ್ತಿದ್ದೇನೆ ..ಅರೆ ತಾನು ತೆರೆದುಕೊಳ್ಳಬೇಕಾಗಿದ್ದೇ ಇಂಥ ಕ್ಷಣಗಳಿಗೆ ಎಂಬಂತೆ ಮೋಡಿಗೊಳಗಾದಂತೆ ಕುಳಿತಿದ್ದಳು. ಅದನ್ನು ಪೂರ್ಣ ಜೋಡಿಸಿಡುವಷ್ಟರಲ್ಲಿ ಅವಳಿಗೆ ಬೆವರು ಕಿತ್ತುಕೊಂಡು ಬರಲಾರಂಭಿಸಿತ್ತು. ಜತೆಗೆ ಕುಕ್ಕುರುಗಾಲಲ್ಲಿ ಕುಳಿತಿದ್ದು ಬೇರೆ.. ಅದನ್ನೆಲ್ಲ ನೋಡುವ ಭರದಲ್ಲಿ ತಾನು ಹಾಗೆ ಕುಳಿತಿದ್ದೇನೆ ಎಂಬುದೂ ಅರಿವಿಗೆ ಬಂದಿರಲಿಲ್ಲ. ಈಗ ಮಂಡಿಯೆಲ್ಲ ನೋಯ ತೊಡಗಿ ಎದ್ದು ಹೊರಟವಳಿಗೆ ಪೆಟ್ಟಿಗೆಯ ಪಕ್ಕದ್ದಲ್ಲಿದ್ದ ಇನ್ನೊಂದು ಪುಟ್ಟ ಟ್ರಂಕ್ ಕಾಣಿಸ್ತು. ಅದನ್ನೊಂದು ಜೋಡಿಸಿಟ್ಟುಬಿಡುವ ಎನ್ನಿಸಿ, ಈ ಸಲ ಚಕ್ಕಳಮಕ್ಕಳ ಹಾಕಿ ಕುಳಿತಳು. ಒಂದೊಂದಾಗಿ ಎಲ್ಲ ಪುಸ್ತಕಗಳ ಧೂಳು ಕೊಡವಿ, ತುಸು ತೆರೆದು ನೋಡುತ್ತ ಹೊರಗಿಟ್ಟಳು. ಮೂಲೆಯಲ್ಲಿ ಹಳೇ ನೋಟ್‌ಪುಸ್ತಕವೊಂದು ಕಾಣಿಸಿತು. ಮೇಲಿನ ರಟ್ಟು ತುಂಬ ಶಿಥಿಲಗೊಂಡಿತ್ತು. ಹಿಂದಿನಿಂದ ಪುಟ ತೆರೆದವಳಿಗೆ ತುಂಬ ಪುಟ ಖಾಲಿಯಾಗಿರುವಂತೆ ಕಾಣಿಸಿ ಮೇಲಿನ ಧೂಳು ಝಾಡಿಸಿ ಹಾಗೇ ಇಟ್ಟು ಮುಂದಿನ ಪುಸ್ತಕಕ್ಕೆ ಕೈಹಾಕಿದವಳಲ್ಲಿ ಪುಟ್ಟ ಕುತೂಹಲ…ಅದರಂಚಿಗೆ ಅನುಮಾನದ ಚಿಕ್ಕ ಎಳೆ ಕೂಡ. ನೋಟ್ ಪುಸ್ತಕ ಮತ್ತೆ ತೆಗೆದುಕೊಂಡು ಮೊದಲಿನಿಂದ ನಿಧಾನವಾಗಿ ಪುಟ ತೆರೆಯತೊಡಗಿದಳು. ಮೊದಲೊಂದೆರೆಡು ಪುಟ ಖಾಲಿ.. ನಂತರದ ಪುಟದಲ್ಲಿ ಯಾವುದೋ ಕವಿಯ ಅಪೂರ್ಣ ಕವನದ ಸಾಲುಗಳಂತೆ
ನಾನು ಕರಗಿ ಹೋಗುತ್ತಿರುವೆ..
ಕಳೆದುಹೋಗುತ್ತಿರುವೆ..
ಬಸಿದು ಹೋಗಿದೆ ಚೈತನ್ಯ..
ಕುಸಿದು ಹೋಗಿರುವೆ ಒಳಗೊಳಗೇ.. ಎಂದು ಬರೆಯಲಾಗಿತ್ತು.

ವೇಗವಾಗಿ ಮುಂದಿನ ಪುಟ ತೆರೆದಳು. ಖಾಲಿ ಇತ್ತು. ಮತ್ತೆ ಮುಂದಿನ ಪುಟದಲ್ಲಿ ಒಂದು ಚಿಕ್ಕ ವಾಕ್ಯ..
ರವಿ ಮೈಸೂರಿಗೆ ಓದಲು ಹೋಗ್ತಿದಾನೆ.. ಹೋಗಲು ಸಾಧ್ಯವಾಗದೇ ನಾನೊಬ್ಬನೇ ಇಲ್ಲಿ

ಅರೆ ಏನಾಯಿತು.. ಅಪ್ಪನಿಗೆ ಸೀಟು ಸಿಗಲಿಲ್ಲವೋ ಅಥವ ಬೇರೆ ಯಾವುದೋ ಸಮಸ್ಯೆ ಇತ್ತೋ.. ಅಂದಹಾಗೆ ಯಾರಿದು ರವಿ.. ರವಿ ರವಿ ಗುಣುಗಣುಸಿದವಳಿಗೆ ಫಕ್ಕನೆ ನೆನಪಾಯಿತು. ಇದೀಗ ತಾನೆ ಯಾವುದೋ ಪುಸ್ತಕದ ಮೇಲೆ ರವಿ ಅಂತ ಹೆಸರು ನೋಡಿದ ಹಾಗಿತ್ತು… ಪಟ್ಟನೆ ಜೋಡಿಸಿಟ್ಟ ಪುಸ್ತಕಗಳಲ್ಲಿ ಮತ್ತೆ ಹುಡುಕಿದಳು. ಹೌದು.. ಒಂದು ಪುಸ್ತಕ ರವಿ ಅಪ್ಪನಿಗೆ ಉಡುಗೊರೆಯಗಿ ಕೊಟ್ಟಿದ್ದ.. ಓ ಹಾಗಾದ್ರೆ ಅಪ್ಪನ ಆಪ್ತ ಸ್ನೇಹಿತ.. ಈಗ ನೋಟ್‌ಪುಸ್ತಕದ ಪ್ರತಿಪುಟವನ್ನೂ ಎಚ್ಚರಿಕೆಯಿಂದ ತೆರೆಯತೊಡಗಿದಳು. ಕೆಲವು ಪುಟ ಖಾಲಿ.. ಕೆಲವೆಡೆ ಚಿಕ್ಕ ಚಿಕ್ಕ ಒಂದೆರಡು ವಾಕ್ಯಗಳು

ರವಿಯಿಂದ ಪತ್ರ ಬಂದಿದೆ. ಅವನಲ್ಲಿ ಬರವಣಿಗೆಯಲ್ಲಿ.. ನಾನಿಲ್ಲಿ ದೊಡ್ಡ ಸೊನ್ನೆ
ಅಣ್ಣ ದುಡ್ಡು ಕಳಿಸಿದ್ದಾನೆ
ರವಿ ಅರಳುತ್ತಿದ್ದಾನೆ.. ಎಂಥ ಖುಷಿಯ ಸಂಗತಿ .. ನಾನಿಲ್ಲಿ ನಾಯಿಯ ಹಾಗೆ ಅಂಡಲೆದುಕೊಂಡಿದ್ದೇನೆ
ಅಣ್ಣನ ಪತ್ರ ಬಂದಿದೆ ಈ ಸಾರಿ ಮುಳುಗಡೆ ಖಚಿತವಂತೆ.
ತರೀಕೆರೆ ಬಳಿ ಜಮೀನು ಕೊಟ್ಟಿದ್ದಾರಂತೆ.. ಅಣ್ಣ ಮುಂದಿನ ವಾರ ಬರ್‍ತೀನಿ, ಇಬ್ಬರೂ ನೋಡಿಕೊಂಡು ಬರೋಣ ಎಂದಿದ್ದಾನೆ
ರವಿ ಇಲ್ಲದೆ ಇಲ್ಲಿಯ ಬದುಕು ನಿಸ್ಸಾರ. ಸಾಹಿತ್ಯ ಓದು ಎಲ್ಲ ಹಿಂದೆ ಸರಿಯುತ್ತಿದೆ
ಅಣ್ಣನೊಬ್ಬನಿಗೇ ನಿಭಾಯಿಸಲು ಕಷ್ಟವಾಗ್ತಿದೆ. ಓದು ಮುಗಿದೊಡನೆ ಹೊಸ ಜಮೀನು ನೋಡಿಕೊಳ್ಳಬೇಕಾಗಬಹುದು.
ರವಿಯ ಪತ್ರ ಕಡಿಮೆಯಾಗಿದೆ. ಹೊಸ ಗೆಳೆಯರು.. ಮುಕ್ತ ಆಗಸ.. ರವಿ ಮೇಲೆ ಮೇಲೆ ಹಾರ್‍ತಿದಾನೆ.. ನನ್ನ ರೆಕ್ಕೆಗಳು ಸುಟ್ಟುಹೋಗಿದೆ ಇಲ್ಲಿ.
ಅಣೆಕಟ್ಟು ಕೊನೆಯಹಂತದಲ್ಲಿದೆ. ಈ ಸಲದ ಮಳೆಗಾಲದಲ್ಲಿ ಮನೆವರೆಗೆ ನೀರು. ಇನ್ನೆರಡು ತಿಂಗಳಲ್ಲಿ ಎಲ್ಲರೂ ತರೀಕೆರೆಗೆ.
ಇನ್ನು ಕಾಲೇಜಿಗೆ ಮಂಗಳ ಹಾಡಿದಂತೆ.

ಅದರಲ್ಲಿದ್ದಷ್ಟು ಇಷ್ಟೇ.. ಮತ್ತು ಉಳಿದದ್ದು ಖಾಲಿ ಪುಟ..
ಬರೀ ಇಷ್ಟೇನಾ.. ಉಳಿದದ್ದು ನಿಜಕ್ಕೂ ಖಾಲಿಪುಟಗಳೇ..? ಕೆಲವು ಪುಟ ಹರಿದಿರಬಹುದೇ.. ಅದನ್ನು ಕೈಯಲ್ಲಿ ಹಿಡಿದು ಸೂಕ್ಷ್ಮವಾಗಿ ಗಮನಿಸಿದಳು.. ಹೌದು ನಡುನಡುವೆ ಪುಟ ಹರಿದಿದ್ದರ ಗುರುತು ಇದೆ. ಅದಿಷ್ಟು ಹರಿದು ಇಷ್ಟನ್ನು ಇಟ್ಟದ್ದು ಯಾಕೆ.. ಬರೆಯುತ್ತಿದ್ದಂತೆ ಬೇಡ ಎನ್ನಿಸಿ ಹರಿದಿರಬಹುದೇ.. ಹರಿದ ಪುಟದಲ್ಲಿ ದಾಖಲಾದ ಹುಡುಗ ಎಲ್ಲಿ ಮಾಯವಾದ..? ಬರೆದು ಹಾಗೇ ಉಳಿಸಿದ ಈ ಪುಟಗಳಲ್ಲಿಯ ಹುಡುಗ ಬದುಕಿನ ಅದಾವ ಸಂದಿಯಲ್ಲಿ ಕಳೆದುಹೋದ..? ಆ ಹರಿದ ಪುಟಗಳಿಂದ ಮಾಯವಾದ ಹುಡುಗ ಮತ್ತು ಉಳಿದ ಈ ಪುಟಗಳಲ್ಲಿ ದಾಖಲಾಗಿದ್ದ ಹುಡುಗ ಇಬ್ಬರೂ ಅವಳಿಗೆಲ್ಲಿಯೂ ಮುಖಾಮುಖಿಯಾಗಿರಲಿಲ್ಲ. ಅವಳು ಕಂಡ ಅಪ್ಪನ ಭಾವಭಂಗಿ ಚಹರೆಯಲ್ಲಿ ಆ ಯಾವ ಛಾಯೆಯೂ ಕಾಣಿಸಿರಲೇ ಇಲ್ಲ.
ದೇವರೇ ಬದುಕಿನ ಅದಾವ ಮಜಬೂರಿ ಆ ಹುಡುಗನನ್ನು ಹೀಗೆ ಮಾಯವಾಗಿಸಿಬಿಟ್ಟಿತು.. ಅದಾವ ದುರ್ಭರತೆ ಅವನ ಮುಕ್ತ ಆಗಸವನ್ನು, ಅವಕಾಶವನ್ನು ಕಿತ್ತುಕೊಂಡು ಅದಾವ ಬಿಸಿ ಗಳಿಗೆಯಲ್ಲಿ ಅವನ ಆತ್ಮದ ರೆಕ್ಕೆಗಳನ್ನು ಸುಟ್ಟುಹಾಕಿತು..? ಆ ಹಳದಿಕಂದು ಬಣ್ಣದ ನೋಟ್ ಪುಸ್ತಕವನ್ನು ಕೈಯಲ್ಲಿ ಹಿಡುದುಕೊಂಡು ತನಗೆ ಪರಿಚಿತವಾದ ಅಪ್ಪನ ಕೈ ಬರಹವನ್ನು ಮೆಲ್ಲನೆ ಬೆರಳಿಂದ ಸವರುತ್ತ ಅವಳಿಡಿಯಾಗಿ ದ್ರವಿಸತೊಡಗಿ, ಕಣ್ಣಾಲಿಗಳಲ್ಲಿ ನೀರು ತುಂಬಿ ಹಾಗೇ.. ತುಂಬ ಹೊತ್ತು ಹಾಗೇ ಕುಳಿತಿದ್ದಳು.
*
*
*
ಸಂಜೆಗತ್ತಲು ಗಾಢವಾಗುತ್ತ ಮನೆ ಎದುರಿನ ತೋಟದಲ್ಲಿ, ಹಿಂದಿನ ಕಾಡಿನಲ್ಲಿ ರಾತ್ರಿ ಮೆಲ್ಲನೆ ಸೆರಗು ಹಾಸ್ತಿದೆ. ತೋಟದ ಅಡಿಕೆ ಮರಗಳ ಸಂಧಿಯಿಂದ ಮತ್ತೆ ಚಂದ್ರಬಿಂಬ ಗೆರೆಯಂತೆ ಕಾಣುತ್ತಿದೆ. ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಮಸುಕಾಗಿ ಮಿನುಗುತ್ತಿವೆ. ಜೀರುಂಡೆಯ ಸದ್ದು ಕೂಡ ಮೆಲ್ಲನೆ ತೀವ್ರವಾಗುತ್ತಿದೆ. ಅವಳು ಅಂಗಳದಲ್ಲಿ ನಿಧಾನವಾಗಿ ಓಡಾಡುತ್ತ ತನಗೆ ಅತ್ಯಂತ ಪರಿಚಿತಭಾವದ ರಾತ್ರಿಯ ಈ ಗಂಧ ಗಾಳಿಯನ್ನು ಅನುಭವಿಸುತ್ತಿರುವಾಗ ಅಂಗೈಯಲ್ಲಿ, ಕೈ ಬೆರಳಲ್ಲಿ ಆ ನೋಟ್‌ಪುಸ್ತಕದ ಸ್ಪರ್ಶವಿನ್ನೂ ಉಳಿದೇ ಬಿಟ್ಟಿರುವ ಹಾಗೆ.

ಅದಾವ ಸನ್ನಿವೇಶದ ಅದಾವ ಗಳಿಗೆಯಲ್ಲಿ ಅಪ್ಪನ ಆತ್ಮವೂ ಹಿಂದೆ ಸರಿದು ಬಿಟ್ಟಿತು.. ನೋಟ್ ಪುಸ್ತಕದ ಪುಟಗಳಲ್ಲಿ ದಾಖಲಾದ ಹುಡುಗನ ನವಿರು ಚೈತನ್ಯ ಅದಾವುದೋ ಗಳಿಗೆಯಲ್ಲಿ ಆವಿಯಾಗಿದ್ದೇ ತಾನು ಹುಡುಕುತ್ತಿದ್ದ ಆ ಕತೆಯ ಹುಡುಗಿಯ ಹುಡುಕಾಟಕ್ಕೂ ಕಾರಣವಾಗಿಬಿಟ್ಟಿತೇ.. ಆ ಹುಡುಗ ಹಾಗೆ ಆವಿಯಾಗಿರದಿದ್ದರೆ ಬಹುಶಃ ಕಥೆಯ ಪುಟ್ಟ ಹುಡುಗಿಗೂ ತಲ್ಲಣ ತಡಕಾಟಗಳು ಅಷ್ಟಿರದೇ ಅವಳಿಗೂ ಒಂದು ಸುರಕ್ಷಿತ ಭಾವ ಸಿಗುತ್ತಿತ್ತೇ..? ನಡೆದಾಡುತ್ತ ದಣಪೆಯ ಬಳಿ ಬಂದಳು. ಎದುರಿನ ಎತ್ತರದ ಮರದ ಸುತ್ತ ಮಿಂಚುಹುಳಗಳು .. ಫಳ್ ಫಳಕ್ ಎಂದು ನಸುಹಳದಿಗೆಂಪು ಬೆಳಕನ್ನು ಮಿಂಚಿಸುತ್ತ ಕತ್ತಲಲ್ಲಿ ಮಾಯವಾಗುತ್ತಿದೆ. ಅರೆ ಎಷ್ಟೆಲ್ಲ ಹಿಂಸೆ ಅವಮಾನದ ಕ್ಷಣಗಳು.. ಹುಡುಕಾಟದಲ್ಲಿ ಸೋತುಸುಣ್ಣವಾದ ಎಷ್ಟೆಲ್ಲ ಗಳಿಗೆಗಳು.. ಯಾವುದೂ ತನ್ನ ಆತ್ಮದಾಳದ ನಿಜದ ಹುಡುಕಾಟವನ್ನು ಸುಟ್ಟುಹಾಕಲಿಲ್ಲವಲ್ಲ.. ಇದು ಹೀಗೆಯೇ ತನ್ನ ಸಹಜ ತೀವ್ರತೆಯಲ್ಲಿ ಜೀವಂತ ಉಳಿದು, ತನ್ನನ್ನೂ ಎಷ್ಟೆಲ್ಲ ಸೃಜನಶೀಲ ಗಳಿಗೆಗೆ ಪಕ್ಕಾಗಿಸಿದೆಯಲ್ಲ..ಅರೆ ಎಂಬ ಪುಟ್ಟ ಅಚ್ಚರಿಗೆ ಪಕ್ಕಾಗಿ ಅವಳು ನಿಂತೇ ಇರುವಾಗ ಎದುರಿನ ದೊಡ್ಡ ಮರ ಫಳ್‌ಫಳಕ್ ಹಳದಿಗೆಂಪು ಬಣ್ಣದಲ್ಲಿ ಮಿಂಚುಹುಳದ ತೇರಿನಂತೆ ಹೊಳೆಯುತ್ತಿತ್ತು.
*
*
*
ವಾಪಾಸು ಹೋಗುವ ದಿನ ಬರುತ್ತಿದೆ.. ತಾನು ಎಂದೋ ಬರೆದ ಕಥೆಯ ಪುಟ್ಟ ಹುಡುಗಿ.. ತನಗೆ ಸಿಕ್ಕ ನೋಟ್ ಪುಸ್ತಕದ ವಾಕ್ಯಗಳಲ್ಲಿ ತೆರೆದುಕೊಂಡ ಕಥೆ.. ಅದರೊಳಗೆ ತುಸು ದಾಖಲಾಗಿ, ತುಸು ದಾಖಲಾಗದೇ ಒಟ್ಟಾರೆ ವಾಸ್ತವದಲ್ಲಿ ಕಳೆದುಹೋದ ಹುಡುಗ ಮತ್ತು ಇದೀಗ ಸದ್ಯದ ದೈನಂದಿನ ಬದುಕಿಗೆ ತೆರೆದುಕೊಂಡಿರುವ ತಾನು ಮತ್ತು ಅಪ್ಪ.. ಎಲ್ಲ ಒಂದು ಥರ ಕಲಸು ಮೇಲೋಗರವದಂತೆ; ಯಾವುದು ನಿಜ ಯಾವುದು ಭ್ರಮೆ ತಿಳಿಯೇ ಅವಳಿಗೆ ವಿಚಿತ್ರ ಭಾವಗಳಿಗೆ ಪಕ್ಕಾಗಿ ಅಲ್ಲಿ ಇಲ್ಲಿ ನಿಂತುಬಿಡುವಂತಾಗುತ್ತಿತ್ತು.

ಆ ರಾತ್ರಿ ಊಟಕ್ಕೆ ಕೂತಾಗ ಮುಳುಗಡೆ ಆದ ಊರನ್ನು ಇವಳು ನೋಡಿಯೇ ಇಲ್ಲ ಎಂಬ ವಿಷಯ ಅದು ಹೇಗೋ ಮಾತಿನ ನಡುವೆ ತೂರಿ ಬಂದು. ಮುಳುಗಡೆ ಆದ ಸ್ಥಳದಿಂದ ಸ್ವಲ್ಪ ದೂರದ ಹಳ್ಳಿಯಲ್ಲಿ ಇವರ ದಾಯಾದಿಗಳು ಇದ್ದರು. ಅವರು ಯಾವಾಗಲಾದರೂ ಅವಳ ವಿಷಯ ವಿಚಾರಿಸುವುದು, ಅವರ ಮನೆಯಲ್ಲಿ ’ಯಾರ ಉಪನಯನವಾಯಿತು’, ’ಯಾರ ಮದುವೆ ಆಯಿತು’, ’ಬಾಣಂತನ ಆಯಿತು’ ಎಂದು ಅವಳಮ್ಮ ಕಥೆ ಹೇಳುವಾಗ ’ಹೌದ..’, ’ಆಮೇಲೆ ಎಂಥ ಆಯ್ತು…’, ’ಓ ನಂಗೊತ್ತೆ ಇರಲಿಲ್ಲ’ ಎಂಬಂಥ ಪ್ರತಿಕ್ರಿಯೆ ನೀಡುತ್ತಿದ್ದ ಇವಳಿಗೆ ಇದ್ದಕ್ಕಿದ್ದಂತೆ ಮುಳುಗಡೆ ಆದಲ್ಲಿಗೆ ಹೋಗುವ ಹುಕಿ ಬಂದುಬಿಟ್ಟಿತು. ನಾಳೆ ಹೋಪನ ಅಪ್ಪಾ ಎನ್ನುತತಿದ್ದಂತೆ ಅವಳಪ್ಪ, ಅಮ್ಮನಿಗೂ ತುಸು ಉಮೇದು ಬಂದು ಯಾವ ಬಸ್ಸಿಗೆ ಹೊರಡುವುದು ಎಷ್ಟು ಹೊತ್ತಿಗೆ ಎಂದೆಲ್ಲ ನಿರ್ಧರಿಸಿಯೂ ಆಯ್ತು.
*
*
*
ಬೆಳಿಗ್ಗೆ ದಾಯಾದಿ ನೆಂಟರ ಮನೆಯಲ್ಲಿ ಅಣ್ಣಯ್ಯ ತೋರಿಸುತ್ತಿದ್ದ ತೋಟದಲ್ಲಿ ಓಡಾಡುವಾಗಲೂ ಅವಳ ಕಣ್ಣೆಲ್ಲ ತೋಟದಾಚೆ ತುಂಬ ದೂರದಲ್ಲಿ ಮಸಕಾಗಿ ಕಾಣುತ್ತಿದ್ದ ನೀರಿನ ಮೇಲೆಯೇ.
ಮಧ್ಯಾಹ್ನ ಊಟ ಮುಗಿಸಿ ಹೊರಟಾಗ ಅಣ್ಣಯ್ಯನೊಂದಿಗೆ ಅಪ್ಪ ತೋಟದ ಯಾವತ್ತೂ ಆಗುಹೋಗುಗಳ ಕುರಿತು ಮಾತಾಡುತ್ತ ನಡೆಯುವಾಗ ಆಗೀಗ ಫಕ್ಕನೆ ಮೂವತ್ತು ನಲವತ್ತು ವರ್ಷದ ಹಿಂದೆ ಹೋಗುತ್ತಿದ್ದರು.

ಓ ಅಲ್ಲಿ ಕಾಣಿಸುತ್ತಲ್ಲ.. ಆ ಮನೆಗಳು.. ಇಲ್ಲಿಂದ ಅವಾಗ ಇದೇ ರಸ್ತೆಯಲ್ಲಿ ಹೋಗಿ ಆಮೇಲೆ ಬಲಕ್ಕೆ ತಿರುಗಿ ಗುಡ್ಡದ ಬುಡದಲ್ಲೇ ಹೊಗ್ತಿದ್ವಿ… ಹೇಳುತ್ತಲೇ ಒಮ್ಮೆ ಹಾಗೆ ಹೋಗುವಾಗ ಕತ್ತಲಾಗಿ ದಿಕ್ಕು ತಪ್ಪಿ ತುಂಬ ಹೊತ್ತು ಕಾಡಲ್ಲಿಯೇ ತಿರುಗಾಡಿದ್ದನ್ನು, ಒಳಗೊಳಗೇ ಹೆದರಿಕೆಯಾಗಿದ್ದನ್ನು, ಮತ್ತೊಮ್ಮೆ ಗಬ್ಬದ ಎಮ್ಮೆಯೊಂದು ಆಚೆ ಬದಿ ಕಾನಿನಲ್ಲಿ ದಾರಿ ತಪ್ಪಿ ಎರಡು ದಿನವಾದರೂ ಮನೆಗೆ ಬಾರದೆ ಆಮೇಲೆ ಕರು ಜತೆ ಸೋತು ಬಸವಳಿದು ಬಂದಿದ್ದನ್ನು ಹೀಗೆ ಆಗಿನ ಏನಾದರೂ ಘಟನೆಯನ್ನು ವಿವರಿಸುತ್ತಿದ್ದರು. ಅಲ್ಲಿ ಕಂಡ ಯಾವುದೋ ಬೇರು ಮತ್ತಾವುದೋ ಎಲೆಯ ಔಷದಿ ಗುಣವನ್ನ ಹೇಳುತ್ತಿದ್ದರು. ಕಾಡಿನ ಚಿಕ್ಕ ಕಾಲ್ದಾರಿಯಲ್ಲಿ ಹತ್ತಿ ಇಳಿದು ನಡೆಯುತ್ತಿರುವಾಗ ಅಣ್ಣಯ್ಯ ಇಲ್ಲೊಂದು ಚೌಡಿ ಬಣ್ಣ ಇದೆಯಲ್ಲ.. ನಮಸ್ಕಾರ ಮಾಡಿ ಹೋಪನನ ಎಂದ.
ಕಾಯಿ ತಂದಿದ್ರೆ ಒಡ್ಕೊಂಡು ಹೋಗ್ಬಹುದಿತ್ತಲಾ.. ಅವಾಗೆಲ್ಲ ಚೌಡಿಗೆ ಎಷ್ಟು ನಡ್ಕತಿದ್ವಿ ಮಾರಾಯ.. ಈಗ… ಅಪ್ಪ ಮೆಲ್ಲನೆ ನಿಟ್ಟುಸಿರು ಬಿಡುತ್ತಲೇ ನಮಸ್ಕಾರ ಮಾಡಿದರು. ಅಣ್ಣಯ್ಯ ಕೂಡ ಹೂಂ ಎನ್ನುತ್ತ ನಮಸ್ಕಾರ ಮಾಡಿದ.
’ಯಾವ ದೇವರೂ ನಮ್ಮನ್ನು ಉದ್ದಾರ ಮಾಡುವುದು ಅಷ್ಟರಲ್ಲಿಯೇ ಇದೆ.. ಚೌಡಿ ನಮ್ಮನ್ನು ನಿಜವಾಗಿಯೂ ಕಾಯ್ದಿದ್ದರೆ ಏನೆಲ್ಲ ಕಷ್ಟಗಳನ್ನು ಹಾದುಕೊಂಡು ಬರುವಂತಾಗ್ತಿತ್ತೇ..’ ಅವಳ ಮನದಲ್ಲಿ ಎಂದಿನ ಹಾಗೆ ಚಿಕ್ಕ ಚಿಕ್ಕ ವಾಕ್ಯಗಳು. ತಾನು ಸುಮ್ಮನೆ ನಿಂತಿದ್ದರೆ ಅಪ್ಪನ ಮನಸ್ಸಿಗೆ ಬೇಸರವಾಗುತ್ತೆ ಎನ್ನಿಸಿ ಒಂದು ಸುತ್ತು ತಿರುಗಿ ಕಣ್ಮುಚ್ಚಿ ನೆಲಕ್ಕೆ ಹಣೆಯೂರಿದವಳ ಕಣ್ಣಿನಲ್ಲಿ ನಿಜಕ್ಕೂ ಏನಿತ್ತು?

ಅಲ್ಲಿಂದ ತುಸು ಕೆಳಗೆ ನಡೆದರು.

ಮೊದಲು ಅಲ್ಲಿ ತೋಟ ಇತ್ತು. ಮನೆ ಅಲ್ಲೇ ಒಂಚೂರು ಮೇಲೆ.. ಆ ಕಡೆಯಿಂದ ಸಣ್ಣಕ್ಕೆ ನೀರು ಹರಿದು ಬರ್‍ತಿತ್ತು. ಮಳೆಗಾಲದಲ್ಲಿ ಭಾರಿ ಜೋರು ಮಾರಾಯ. ಮನೆ ಎದ್ರಿಗೇ ಆಗ್ತಿತ್ತಲಾ ಹಂಗಾಗಿ ಅದನ್ನ ದಾಟಕ್ಕೆ ಅಂತ ಎನ್ನಪ್ಪ ಇಲ್ಲಿ ಸಂಕದ ಹಾಕಿದ್ದ. ಮುಳುಗಡೆ ಆದಮೇಲೆ ಎಷ್ಟು ಕೀಳಕ್ಕೆ ಬತ್ತು ಅಷ್ಟು ನಾಟ ತಗಂಡ್ಹೋಗಿ ಅಲ್ಲಿ ಮನೆ ಮಾಡಿದ್ದಾತು. ಮುಳುಗಡೆ ಆದಮೇಲೂ ಎರಡು ಮೂರು ವರ್ಷ ಫಸಲು ಕೈಗೆ ಸಿಕ್ತು. ಆವಾಗ ಇಲ್ಲಿ ಹಂಗೇ ಒಂದು ಲಾಯದ ಥರ ಮನೆ ಮಾಡಿದ್ದ. ಅಪ್ಪ, ಅಮ್ಮ ಇರ್‍ತಿದ್ದ. ಒಂದೆರಡು ದನಕರು ಅಷ್ಟೇ ಕಟ್ಕಂಡಿದ್ದ. ಆ ಲಾಯದ ಎದುರು ಬಾಗಿಲು ಇಲ್ಲೇ ಇತ್ತು ಆ ಕಡಿಗೆ ಕೊಟ್ಟಿಗೆ. ಹೋಗಿ ಬರೋ ದಾರಿ ಇದೇ ಆಗಿತ್ತು.

ಅವಳಪ್ಪ ಇವರಿಬ್ಬರನ್ನೂ ಕರೆದುಕೊಂಡು ಹೋಗಿದ್ದು ಬರಿಯ ಜಾಗ ತೋರಿಸಲಿಕ್ಕೆ ಮಾತ್ರವಾಗಿರಲಿಲ್ಲ. ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಬದುಕಿನ ಒಂದು ಝಲಕ್, ಒಂದು ದೃಶ್ಯದ ತುಣುಕು ಅಪ್ಪನ ಶಬ್ದಗಳಲ್ಲಿ ಫಳಕ್ಕನೆ ಮೂಡಿ ಮರೆಯಾಗತಿತ್ತು. ಲಾಯ ಇತ್ತು ಎಂದು ವರ್ಣಿಸಿದ ಸಪಾಟಾದ ಜಾಗದಲ್ಲಿ ಅಲ್ಲೊಂದು ಇಲ್ಲೊಂದು ಬಿಕ್ಕೆ ಗಿಡ, ಲಂಟಾನ ಪೊದೆಗಳು, ಕೌಳಿಮಟ್ಟಿ, ಮತ್ತಿ ಮರ ಇತ್ತು. ಮನೆ ತೋಟ ಇತ್ತು ಎಂದು ತೋರಿಸಿದ ಜಾಗದಲ್ಲಿ ನೀರು ಮಾತ್ರ ನಿಂತಿತ್ತು. ಅವಳಪ್ಪ ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಬದುಕನ್ನು ಮೆಲ್ಲನೆ ಸ್ಪರ್ಶಿಸುತ್ತಿರುವಚಿತೆ ಅದರೆಲ್ಲ ಭಾವಭಾವನೆಗಳಿಗೆ ಪಕ್ಕಾದವರಂತೆ ತುಸು ಭಾರವಾದ ದನಿಯಲ್ಲಿ ಹೇಳುವಾಗ ಇವಳು ಅಣ್ಣಯ್ಯನಿಗೆ ಬರಿದೇ ಹೂಂಗುಡುವುದು ಮಾತ್ರ ಸಾಧ್ಯವಾಗುತ್ತಿತ್ತು. ಅಪ್ಪ ಹೇಳಿದ ಮಾತನ್ನು ಅನುಸರಿಸಿ ಆ ಜಾಗದತ್ತ ನೋಡಿದರೆ ಅಲ್ಲಿ ಏನೂ ಇರಲಿಲ್ಲ. ಆದರೆ ಅದನ್ನು ಕೇಳುತ್ತ ಅರೆಕ್ಷಣ ಕಣ್ಮುಚ್ಚಿದರೆ ಮಾತ್ರ ವರ್ಷಗಳ ಹಿಂದಿನ ಬದುಕು ಮಿಂಚಿ ಮಾಯವಾಗುತ್ತಿತ್ತು.
ಅಲ್ಲಿಂದ ಮತ್ತೆ ಸ್ವಲ್ಪ ಕೆಳಗೆ ಇಳಿಜಾರಿನಲ್ಲಿ ನಡೆದು ನೀರು ನಿಂತ ಕಡೆ ಬಂದರು. ಎರಡೂ ಕಡೆ ಎತ್ತರದ ಜಾಗದಲ್ಲಿ ದಟ್ಟ ಕಾಡು… ನಡುವೆ ಅಗಳದಲ್ಲಿ ಕಣಿವೆಯಲ್ಲಿ ಹಿನ್ನೀರು ಆವರಿಸಿ ನಿಂತಿತ್ತು. ಕಡುಹಸಿರಿನ ಮಧ್ಯದ ನೀರು ನೀಲ ನೀಲ.. ಅದಕ್ಕೂ ದೂರದಲ್ಲಿ ಬೆಟ್ಟಗುಡ್ಡವನ್ನು, ನೀರನ್ನು ಸ್ಪರ್ಶಿಸುತ್ತಿರುವ ಆಗಸ ಕೂಡ ನೀಲನೀಲ. ಅದೆಂಥಹ ಮಾಂತ್ರಿಕ ಮೋಹಕತೆಯ ದೃಶ್ಯವಾಗಿತ್ತೆಂದರೆ ಹಾಗೆ ನೀರಿಗೆ ಎದುರಾಗಿ ಬಂದು ನಿಲ್ಲುತ್ತಲೇ ಮೂರು ಜನರೂ ಮಾತು ಹೊರಡದೇ ಸುಮ್ಮನೆ ನಿಂತು ಬಿಟ್ಟರು.

ಈ ನೀಲನೀಲದಡಿಯಲ್ಲಿ ಮುಳುಗಡೆಯಾಗಿದ್ದು ಬರಿಯ ಮನೆ, ತೋಟ, ಕಾಡು ಮಾತ್ರವಾಗಿರಲಿಲ್ಲ. ಅದರೊಂದಿಗೆ ಸಮ್ಮಿಳಿತವಾಗಿದ್ದ ಅಷ್ಟೆಲ್ಲ ಕುಟುಂಬಗಳ ಬದುಕು.. ಸುತ್ತಣ ಚರಾಚರದೊಂದಿಗೆ ಬೆರೆತಿದ್ದ ಭಾವಭಾವನೆಗಳು.. ಮೂರ್ತ‌ಅಮೂರ್ತ ಸಂಬಂಧಗಳು ಎಲ್ಲವೂ ಮುಳುಗಿತ್ತು. ಮುಳುಗಿದ್ದು ಇಷ್ಟು ಮಾತ್ರವಾಗಿರಲಿಲ್ಲ.. ಬಹುಶಃ ಅಪ್ಪನ ನೋಟ್‌ಪುಸ್ತಕದೊಳಗಿನ ಹುಡುಗನ ಆತ್ಮವೂ ಆಳದಲ್ಲಿ ಮುಳುಗಿ ಹೋಗುವಂತಹ ಸನ್ನಿವೇಶಗಳು ಸೃಷ್ಟಿಯಾಗಿಬಿಟ್ಟಿತ್ತೇ… ಇದು ಮಾತ್ರ ಅಷ್ಟು ಸುಲಭವಾಗಿ ಅವಳ ಗ್ರಹಿಕೆಗೆ ಸಿಗುವಂತಿರಲಿಲ್ಲ.

ಈ ಸಲ ನೀರು ಅಷ್ಟು ಹೆಚ್ಚು ಬಂದಿಲ್ಲ. ಮಳೆ ಕಡಿಮೆ ಆತಲ್ಲ ಅದಕ್ಕೇ.. ಮದ್ಲಿನಂಗೆ ಕಾಡೂ ಇಲ್ಲ.. ಮಳೇನೂ ಇಲ್ಲ…
ಅಣ್ಣಯ್ಯ ವಿವರಿಸುತ್ತಿದ್ದಾನೆ.
ಭರ್‍ತಿ ನೀರು ಬಂದರೆ ಅಲ್ಲೀವರೆಗೆ ಬತ್ತು ಅಲ್ದನಾ ಅವಳಪ್ಪ ಗುರುತಿನ ಕಲ್ಲೊಂದನ್ನು ತೋರಿಸಿ ಹೇಳಿದರು. ಅವರಿಬ್ಬರೂ ಹಾಗೆಯೇ ಲೋಕಾಭಿರಾಮ ಮಾತಿಗೆ ತೊಡಗುತ್ತಿದ್ದಂತೆ ಅವಳು ಅವರಿಂದ ಸ್ವಲ್ಪ ದೂರ ಆಚೆ ಹೋಗಿ ನೀರಿನಲ್ಲಿ ಕಾಲು ಇಳಿಬಿಟ್ಟುಕೊಂಡು ಬಂಡೆಯ ಮೇಲೆ ಕುಳಿತಳು. ತಣ್ಣಗಿನ ನೀರು.. ಆಗೀಗ ತುಸು ಜೋರಾಗಿ ಗಾಳಿಗುಂಟ ಬರುವ ನೀರಿನ ಅಲೆಗಳು.
ಈ ನೀರಲ್ಲಿ ಮೂವತ್ತೈದು ವರ್ಷಗಳ ಹಿಂದಿನ ನೀರಿನ ಕಣಗಳೂ ಇರಬಹುದೇ.. ಈ ನೀರಿನ ಕಣಗಳಲ್ಲಿ ಆಗಿನ ಅಪ್ಪನನ್ನು ನೋಡಿದ ನೀರಕಣಗಳೂ ಇರಬಹುದೇ.. ಅವಳಿಗೆ ಕಣ್ಣು ತುಂಬಿ ಬರತೊಡಗಿತ್ತು. ಕಣ್ಣಿನಿಂದ ನೀರಹನಿಗಳು ಕಾಲ ಕೆಳಗಿನ ನೀರಿಗೆ ಬಿದ್ದು ಕಣ್ಣೀರು ಹಿನ್ನೀರಿಗೆ ಸೇರುತ್ತಿರುವ ಗಲಿಗೆಯಲ್ಲಿ ಸಂಜೆಯಾಗುತ್ತಿದೆ. ಮೋಡದ ಮರೆಯಲ್ಲಿರುವ ಸೂರ್ಯನ ಬೆಳ್ಳಿಬೆಳಕಿನ ರೇಖೆಗಳು ನೀರ ಮೇಲೆ ಪ್ರತಿಫಲಿಸುತ್ತಿದೆ. ಅಲೆಗಳು ಬೆಳ್ಳಗೆ ಹೊಳೆಯುತ್ತಿವೆ.
ಅರೆ ಎಂಥ ಅದು ಅಲೆಗಳ ಮೇಲೆ ಬೆಳ್ಳಿ ರೇಖೆಯಂತೆ ಮಿಂಚಿದ್ದು… ಸೂರ್ಯನ ಕಿರಣ ಮಾತ್ರವೇ.. ಊಹೂಂ… ಬರಿಯ ಕಿರಣಗಳಲ್ಲ… ಶಬ್ದಗಳಿಗೆ ಸರಿಯಾಗಿ ನಿಲುಕದ ಭಾವವೊಂದು ರೇಖೆಯಂಚಿನಲ್ಲಿ ಹೊಳೆಯುತ್ತಿದೆ. ಎಷ್ಟೆಲ್ಲ ಬದುಕು ಮುಳುಗಿ ಹೋಗಿರುವುದನ್ನು ನೋಡಿದ ಈ ನೀರಿನ ಕಣಗಳು ತಾನೊಂದು ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವುದುಕ್ಕೂ ಸಾಕ್ಷಿಯಾಗುತ್ತಿದೆಯೇ… ಏನೆಲ್ಲದರ ನಡುವೆಯೂ ತನ್ನೊಳಗಿನ ಚೈತನ್ಯವನ್ನು ಕಾಪಿಟ್ಟುಕೊಳ್ಳಲು ತಾನು ನಡೆಸುವ ಸಂಗರ್ಷಕ್ಕೂ ಸಾಕ್ಷಿಯಾಗುತ್ತಿದೆಯೇ..’

ಲೋಕಾಭಿರಾಮ ಮಾತಿನಲ್ಲಿ ಮುಳುಗಿದ್ದ ಅಣ್ಣಯ್ಯನೊಂದಿಗೆ ಅಪ್ಪ ಕತ್ಲಾಗ್ತಿದ್ದು. ಇನ್ನು ಹೋಪನ. ಕೊನಿಗೆ ರಸ್ತೇನೂ ಕಾಣದಿಲ್ಲೆ ಎನ್ನುತ್ತ ಎದ್ದರು.
ಅಣ್ಣಯ್ಯ, ಅಪ್ಪ ಇಬ್ಬರೂ ಕರೆಯುತ್ತಿದ್ದರೆ ಅವಳು ಧ್ಯಾನಸ್ಥಳಂತೆ ಕುಳಿತೇ ಇದ್ದಾಳೆ.
ಮತ್ತೆ ಮುಂದಿನ ವರ್ಷ ಬಂದಾಗ ಬಪ್ಪನ. ಈಗ ಬಾರೆ ಹೋಪನ

ಮತ್ತೆ ಬರ್‍ತೇವೆ ಎಂಬಂಥ ಭರವಸೆಯಲ್ಲಿ ಅಣ್ಣಯ್ಯ ನಸುನಗುತ್ತಿದ್ದಾನೆ.

ನೀರ ಮೇಲೆ ಮೃದುವಾಗಿ ಹಾಯ ತೊಡಗಿದ ತಂಗಾಳಿ.. ಆಗಸದಂಚಿನಿಂದ ಮೆಲ್ಲಮೆಲ್ಲಗೆ ಹಸಿರು ಕಾಡಿಗೆ ಇಳಿಯತೊಡಗಿದ ಕತ್ತಲು.. ಕಣ್ಣೆದುರಿನ ಅಗಾಧ ಹಿನ್ನೀರು.. ಹಿನ್ನೀರಿನಲ್ಲಿ ಮುಳುಗಿದ ಕಣ್ಣಳತೆಗೆ ಸಿಗದ ಸಂಗತಿಗಳು.. ಕಾಡಿನಾಚೆ ದೂರದಲ್ಲೆಲ್ಲೋ ಉಸಿರಾಡುತ್ತಿರುವ ನಾಗರಿಕ ಜಗತ್ತಿನಿಂದ ಆ ಕ್ಷಣದಲ್ಲಿ ಪ್ರತ್ಯೇಕಗೊಂಡಂತೆ ದಡದಲ್ಲಿ ನಿಂತ ತಾವು ಮೂವರು.. ಅವಳಿಗೇಕೋ ವಿಚಿತ್ರ ಅಚ್ಚರಿಯೆನ್ನಿಸಿತು. ಹಿನ್ನೀರಿನೆಡೆಯಿಂದ ಬಸ್ಸು ಬರುವ ಟಾರ್ ರಸ್ತೆಯತ್ತ ಇವರನ್ನ ಕರೆದೊಯ್ಯಲಿರುವ ಕಾಲುದಾರಿ ಮಲಗಿದೆ ಸದ್ದಿಲ್ಲದೆ.
’ಇದೀಗ ತಾನೆ ನೀರಿನ ಮೇಲೆ ಅಮೂರ್ತವಾಗಿ ಮಿಂಚಿದ ಭಾವನೆಯ ತುಣುಕೊಂದನ್ನು ಮೂರ್ತವಾಗಿಸುವ ಆತ್ಮವಿಶ್ವಾಸದತ್ತ ಈ ಕಾಲುದಾರಿ ತನ್ನನ್ನು ಕೊಂಡೊಯ್ಯಲಿದೆಯೇ…’
ಮರಳ ದಡದಿಂದ ಕಾಲುದಾರಿಯತ್ತ ಸಾಗಿದ ಅಪ್ಪ ಅಣ್ಣಯ್ಯನ ಹಿಂದೆ ಹೆಜ್ಜೆ ಹಾಕತೊಡಗಿದಳು. ಗಾಢವಾಗುತ್ತಿರುವ ನಸುಗ್ತತಲಲ್ಲೂ ಇವರ ಕಣ್ಣಿಗಷ್ಟೇ ಕಾಣುವಂತೆ ಇವರು ಕಾಲಿಟ್ಟಲ್ಲಿ ಕಾಲುದಾರಿ ತೆರೆದುಕೊಳ್ಳತೊಡಗಿತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.