ಅಪರಿಚಿತರು

ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ ಹಲವಾರು ದಿನಗಳಿಂದ ಒಬ್ಬರ ನಂತರ ಇನ್ನೊಬ್ಬರು ಅತಿಥಿಗಳು ಬಂದು, ಅವರ ಆದರ ಸತ್ಕಾರದಲ್ಲೇ ಹಣ್ಣಾದ ಅವರು ಈ ಮೂರು ಬಿಡುವಿನ ದಿನಗಳನ್ನು ಬಹು ಸುಖವಾಗಿ ಕಳೆಯಲಿದ್ದರು. ಮುನ್ನಾದಿನ ರಾತ್ರಿಯೇ ಅವರು ಈ ವಿಷಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೇ ನಿರ್ಧರಿಸಿಕೊಂಡಿದ್ದರು.

ಮೂರನೇ ಮಜಲೆಯ ಕೋಣೆಯ ಹೊರಗೆ ಮೈಚಾಚಿದ ಆ ಬಾಲ್ಕನಿಯಿಂದ ಕಾಣುವ ದೃಶ್ಯ ಅವರ ನಿತ್ಯ ಪರಿಚಯದ್ದು. ಕಟ್ತಡಕಟ್ಟಡದ ಮುಂದೆಯೇ ಉದ್ದೋ‌ಉದ್ದವಾಗಿ ಹರಿದ ಹರವಾದ ಕಪ್ಪು ಡಾಂಬರ ರಸ್ತೆ. ಈ ಹೆದ್ದಾರಿಗೆ ಶಾಖೋಪಶಾಖೆಗಳಾಗಿ ಬೆಳೆದ ಅನೇಕ ಕಿರಿ ಡಾಂಬರ ರಸ್ತೆಗಳು. ರಸ್ತೆಗಳ ಇಕ್ಕೆಲಗಳಲ್ಲಿ ಹಬ್ಬಿಕೊಂಡ ಆಳೆತ್ತರದ ಪಾಗಾರಗಳು ಸುತ್ತುವರಿದ ಕಾಂಪೌಂಡುಗಳ ಮಧ್ಯದಲ್ಲಿ ಯಾವ ಒಂದು ನಿರ್ದಿಷ್ಟವಾದ ಯೋಜನೆ ಇಲ್ಲದೇ ಕಟ್ಟಿದ-ತಮ್ಮಿಂದ ತಾವೇ ಎದ್ದು ನಿಂತಿವೆಯೇನೋ ಎಂಬಂತೆ ತೋರುವ-ಅಂದಗೇಡಿಯಾದ, ವಿವಿಧ ಎತ್ತರಗಳ ಕಟ್ಟಡಗಳು. ಅವೆಲ್ಲವುಗಳ ಮಧ್ಯದಲ್ಲೇ ಎದ್ದು ತೋರುವ ಆ ಎತ್ತರದ ಕ್ಲಾಕ್‌ಟೋವರ…ಅಲ್ಲಿ ಇಲ್ಲಿ ಹೆಸರಿಗಾಗಿ ಇದ್ದುಕೊಂಡ ತೆಂಗಿನ ಮರಗಳು, ಹೂವರಳದ ಗುಲ್‌ಮೊಹರದ ಗಿಡಗಳು. ಏನಿದೆ ಅವುಗಳಲ್ಲಿ ನೋಡುವಂತಹದು? ಆದರೂ ಇಂದಿನ ತಮ್ಮ ಉಲ್ಲಸಿತ ಮನಃಸ್ಥಿತಿಯಲ್ಲಿ ಅವೆಲ್ಲವುಗಳ ಬಗ್ಗೆ ನಿತಾಂತ ಮಮತೆ ಎನಿಸಿತು-ಎಲ್ಲಿಲ್ಲದ ಆತ್ಮೀಯತೆ ಎನಿಸಿತು. ರಸ್ತೆಯ ಮೇಲೆ ಎಡಬಿಡದೇ ನಡೆದ ವಾಹನಗಳ ಓಡಾಟ, ಜನರ ಚಟುವಟಿಕೆಗಳೂ ತುಂಬ ಪ್ರಿಯವೆನಿಸಿದುವು-ಕಾರಣವಿಲ್ಲದೇನೇ ಹಿತವೆನಿಸಿದುವು. ರಸ್ತೆಯ ಒಂದು ಭಾಗವನ್ನು ಸರಿಮಾಡಲು ಬಂದ ದೊಡ್ಡ ಸ್ಟೀಮರೋಲರ ಒಂದು ಗದ್ದಲಮಾಡುತ್ತ ಹಿಂದೆ-ಮುಂದೆ ಉರುಳುತ್ತಿತ್ತು. ಅದರ ಕರ್ಕಶವಾದ ಗಡಗಡಾಟವೂ ಅವರ ಕಿವಿಗೆ ಇಂದು ಹಿತವೆನಿಸಿತು….

ಹೀಗಿರುವಾಗ, ಇದ್ದಕ್ಕಿದ್ದಂತೆಯೇ ಜಾನಕಿ ಒಮ್ಮೆಲೇ ಕಾತರಗೊಂಡವಳಂತೆ ನುಡಿದಳು :
“ಅವರು ನಮ್ಮಲ್ಲೇ ಬರುತ್ತಿದ್ದರೆಬರುತ್ತಿದ್ದಾರೆ.”

ಕಳವಳ ತುಂಬಿದ ಅವಳ ಕನ್ಣುಗಳುಕಣ್ಣುಗಳು ದೂರದ ರಸ್ತೆಯೊಂದರ ಕೊನೆಯಲ್ಲಿ ಯಾರನ್ನೋ ಏನನ್ನೋ ಹುಡುಕುತ್ತಿದ್ದವು. ಕನಸಿನಲ್ಲಿ ಬಡಬಡಿಸುತ್ತಿದ್ದವರ ಮಾತುಗಳಂತೆ ಬಂದ ಅವಳ ಈ ಅರ್ಥಹೀನ ಮಾತುಗಳು ರಾಮಕೃಷ್ಣನ ಸುಖಸ್ವಪ್ನಕ್ಕೆ ಭಂಗ ತಂದಿದ್ದವು. ಅವನು ಮನಸ್ಸಿನ ಬೇಸರವನ್ನು ವ್ಯಕ್ತಪಡಿಸುತ್ತ ಕೇಳಿದ :
“ಯಾರೇ ಅವರು?”-ನಮ್ಮಲ್ಲೇ ಬರುತ್ತಿದ್ದವರು? ನಿದ್ದೆ ಇನ್ನೂ ಪೂರ ಆಗಲಿಲ್ಲವೇನೇ?”
ಜಾನಕಿಗೂ ಪೂರ್ಣ ಖಾತರಿ ಆಗಲಿಲ್ಲ ತಾನು ಇನ್ನೂ ನಿದ್ದೆಯಲ್ಲಿಲ್ಲವಲ್ಲ ಎನ್ನುವುದರ ಬಗ್ಗೆ! ಕೆಲಹೊತ್ತು ಅವಳಿಂದ ಯಾವ ಮಾತೂ ಹೊರಡಲಿಲ್ಲ. ‘ಅರೆ! ಇದೀಗ ನೋಡಿದ್ದೆ, ಈಗ ಎಲ್ಲಿ ಅದೃಶ್ಯರಾದರೋ’ ಎನ್ನುವ ಭಾವದಿಂದ ಅಡ್ಡತಿಡ್ಡವಾಗಿ ಹರಿದ ಆ ರಸ್ತೆಗಳಲ್ಲಿ ದೃಷ್ಟಿ ಹಾಯಿಸಹತ್ತಿದಳು. ತನಗಾದುದು ಬರಿಯ ಭಮೆಭ್ರಮೆ ಇರಲಿಕ್ಕಿಲ್ಲ ತಾನೇ ಎಂದೂ ಅವಳಿಗೆ ಅನಿಸದಿರಲಿಲ್ಲ. ಕೆಲ ಹೊತ್ತಿನವರೆಗೆ ಅವಳಿಗೆ ಅಲ್ಲಿ ಯಾರೂ ಕಣ್ಣಿಗೆ ಬೀಳಲಿಲ್ಲ. ಆದ್ದರಿಂದ ಮನಸ್ಸಿಗೆ ಒಂದು ಬಗೆಯ ಸಮಾಧಾನವೆನಿಸಿತು. ಆದರೆ ಅವಳ ಈ ಸಮಾಧಾನ ಬಹಳ ಹೊತ್ತಿನವರೆಗೆ ಬಾಳಲಿಲ್ಲ. ಮರುಕ್ಷಣವೇ ಅವಳು ಸಣ್ಣ ಚೀರುದನಿಯಲ್ಲೇ ಅಂದಳು:
“ಅದೋ! ಅವರೀಗ ಕಾಣುತ್ತಾರೆ.”

ಹೆಂಡತಿಯ ಈ ಗಾಬರಿ ತುಂಬಿದ ಮಾತುಗಳಿಂದ ತುಂಬ ಅಚ್ಚರಿಪಟ್ಟು ರಾಮಕೃಷ್ಣ ತಿರುಗಿ ಅವಳತ್ತ ಲಕ್ಷ್ಯವಿತ್ತ.

“ಅದೋ ಅಲ್ಲಿ-ಇಲ್ಲಿಂದ ಒಂದು…ಎರಡು…ಮೂರು…ನಾಲ್ಕು, ಅಹುದು ನಾಲ್ಕನೇ ರಸ್ತೆಯ ಕೊನೆಯಲ್ಲಿ ಕಂಡಿರಾ?… ಇದೋ ಹೀಗೆ ಬನ್ನಿ. ಈ ಮುಂದಿನ ಕಟ್ಟಡ ಹಾಗೂ ಕ್ಲಾಕ್ ಟಾವರುಗಳ ನಡುವಿನ ಅವಕಾಶದಲ್ಲಿ ನೋಡಿ…ದೃಷ್ಟಿಗೆ ಬಿದ್ದರೇ?…ಹಾಂ!ನೋಡಿ ನೋಡಿ, ಕ್ಲಾಕ್ ಟಾವರಿನ ಹಿಂದಿನ ಕಾಂಪೌಂಡಿನ ಗೋಡೆಯ ಆಚೆ ಅವರ ತಲೆಗಳಷ್ಟೇ ಕಾಣಿಸುತ್ತವೆ. ಒಬ್ಬ ಗಂಡಸು, ಒಬ್ಬ ಹೆಂಗಸು ಹಾಗೂ ಜತೆಗೆ ಟ್ರಂಕು ಹೊತ್ತುಕೊಂಡು ಬಂದ ಆಳು…”

“ಅಯ್ಯೋ ಜಾನಕಿ, ಇಂದು ನಿನಗಾದದ್ದಾದರೂ ಏನು? ಹೀಗೇಕೆ ಮಾಡುತ್ತೀ? ಏನೋ ದುಃಸ್ವಪ್ನ ಕಂಡು ಹೆದರಿದವಳಂತೆ? ಇಲ್ಲಿಂದ ಅವರ ಪರಿಚಯ ತಿಳಿಯುವುದುಳಿಯಲಿ, ಮೋರೆಗಳೇ ಕಾಣುವುದಿಲ್ಲ. ಬರಿಯೇ ಕಂಡ ತಲೆಗಳು, ಆಳಿನ ತಲೆಯ ಮೇಲಿನ ಟ್ರಂಕು ಇವನ್ನಷ್ಟೇ ನೋಡಿ ಅವರು ನಮ್ಮ ಮನೆಗೇ ಬರುತ್ತಿದ್ದಾರೆಂದು ಊಹಿಸಿದೆಯಲ್ಲ! ಯಾರೋ ಏನೋ ಎಲ್ಲಿಗೆ ಬಂದಾರೋ! ಇತ್ತಿತ್ತ ಇಂತಹದರ ಭ್ರಮೆಯೇ ಆಗುತ್ತಿರಬೇಕು, ಅತಿಥಿಗಳನ್ನು ಆಧರಿಸಿ ದಣಿದ ನಿನ್ನ ಮನಸ್ಸಿಗೆ,” ಹೆಂಡತಿಯ ವಿವೇಕಶೂನ್ಯವಾದ ಭೀತಿಯನ್ನು ನಿವಾರಿಸುವಂತೆ ಹೇಳಿದ ರಾಮಕೃಷ್ಣ. ಆದರೆ ಹಾಗೆ ಹೇಳುವಾಗ ಏಕೋ ಅರ್ಥವಾಗದ ಭೀತಿಯೊಂದು ತನ್ನ ಮನಸ್ಸನ್ನೂ ಕವಿಯಹತ್ತಿದ ಅನುಭವವಾಗಿ ತುಸು ಅಸ್ವಸ್ಥಗೊಂಡ. ಆದರೂ ಅದನ್ನು ತೋರಗೊಡದೆ ಇನ್ನೂ ಬೆದರಿದ ಕಂಗಳಿಂದ ರಸ್ತೆಗಳನ್ನು ಅರಸುತ್ತಿದ್ದ ತನ್ನ ಹೆಂಡತಿಯ ಲಕ್ಷ್ಯವನ್ನು ಬೇರೆಯೆಡೆ ಹರಿಯಿಸುವ ಉದ್ದೇಶದಿಂದ, “ಬಾ… ಎಷ್ಟು ಹೊತ್ತು ಹಾಗೆಯೇ ನೋಡುತ್ತ ನಿಂತೀಯೆ? ಕೆಲ ಹೊತ್ತು ರಮ್ಮಿಯಾದರೂ ಆಡೋಣ. ಹೇಗಾದರೂ ಊಟಕ್ಕೆ ಹೊರಗೇ ಹೋಗುವವರಿದ್ದೇವೆ. ಅಡುಗೆ ಗೊಂದಲವೇನಿಲ್ಲ,” ಎಂದು ಹೇಳಿ ಕೋಣೆಯೊಳಗಿನ ಸೋಫಾ ಒಂದರ ಮೇಲೆ ಹೋಗಿ ಕುಳಿತು ಹೆಂಡತಿಯ ಹಾದಿಯನ್ನೇ ನೋಡಹತ್ತಿದ. ಆದರೆ ಹೆಂಡತಿ ನಿಂತಲ್ಲಿಂದ ಕದಲದೇ ಇದ್ದುದನ್ನು ಕಂಡು ಅತ್ಯಂತ ಸಹಾನುಭೂತಿಯ ದನಿಯಲ್ಲಿ ಅಂದ: “ಛೀ ಕಾನಕೀಜಾನಕೀ, ಈಗ ಸುಳ್ಳೇ ಹುಚ್ಚಿಯಂತೆ ಮಾಡಬೇಡ, ಯಾರಾದರೂ ನಮ್ಮಲ್ಲೇ ಬರುವವರಿದ್ದರೆ ಒಂದು ಪತ್ರವನ್ನಾದರೂ ಬರೆದು ತಿಳಿಸದೇ ಇರುತ್ತಿದ್ದರೇ?….”

ಈ ಮಾತಿಗೆ ಜಾನಕಿ ಒಮ್ಮೆಲೇ ಕೆರಳಿ ಒಳಗೆ ಬಂದು ‘ಧಡ್’ ಎಂದು ಗಂಡನ ಎದುರಿಗಿದ್ದ ಸೋಫಾದಲ್ಲಿ ಕುಪ್ಪಳಿಸುತ್ತ, “ಅದೇ ಅದೇ ಅಷ್ಟೊಂದು ಬಾಕಿ ಇದೆ… ಹೇಲದೇಹೇಳದೇ ಕೇಳದೇ ಒಮ್ಮೆಲೇ ಒಳಗೆ ನುಗ್ಗಿ ತಮ್ಮದೇ ಮನೆ ಎನ್ನುವಂತೆ ತಳವೂರಿ ನಮ್ಮನ್ನೇ ಹೊರಗೋಡಿಸುವುದೊಂದು ಬಾಕಿಯುಳಿದಿದೆ…ಬರುವ ಮೊದಲು ಪತ್ರ ಬರೆದಾದರೂ ಸುದ್ದಿ ತಿಳಿಸಿ ಬರುವ ಅತಿಥಿಗಳು! ಆಹಾ, ಎಂತಹ ಒಳ್ಳೆಯವರು! ನಮ್ಮ ಅಣ್ಣತಮ್ಮಂದಿರೇ? ನೆಂಟರಿಷ್ಟರೇ? ಹತ್ತಿರದ ಗೆಳೆಯರೇ? ಆದರೂ ಬಂದು ಹೋಗಿಲ್ಲಲೇ?ಹೋಗಿಲ್ಲವೇ? ಮಾಡಿಸಿಕೊಳ್ಳುವ ಸರಬಾಯಿಯೆಲ್ಲವನ್ನು ಮಾಡಿಸಿಕೊಂಡೂ ಹೋಗುವಾಗ ನಮಗೇ ಇಲ್ಲದ ಹೆಸರಿಟ್ಟು ಹೋದವರಿಲ್ಲವೇ…”

“ಜಾನಕೀ ಜಾನಕೀ ಪ್ಲೀಜ್, ಈಗ ನಿಲ್ಲಿಸಿದರಾಗದೇ? ಈಗ ಎಲ್ಲ ಬಿಟ್ಟು ಈ ಹಾಳು ಪುರಾಣ ಬೇಕೇ? ಮೂರು ದಿನ ರಜೆ ಇದೆ. ಆರಾಮಾಗಿ ಸುಳದಲ್ಲಿ ಕಳೆಯೋಣ…ಈಗ ರಮ್ಮಿಯಾಡೋಣವೇ? ಯಾವುದಾದರೂ ‘ಮಾರ್ನಿಂಗ ಷೋ’ಕ್ಕೆ ಆದರೂ ಹೋಗಬಹುದಿತ್ತು. ಆದರೆ ಯಾವುದೂ ಒಳ್ಳೆಯ ಚಿತ್ರವಿಲ್ಲ.”

ರಾಮಕೃಷ್ಣನ ಈ ಮಾತುಗಳನ್ನು ಕಿವಿಯಲ್ಲಿ ಹಾಕಿಕೊಳ್ಳದೇ ತನ್ನದೇ ವಿಚಾರಗಳ ಗುಂಗಿನಲ್ಲಿದ್ದ ಜಾನಕಿ ಎಂದಳು: ‘ಅವರನ್ನು ನಿಂದಿಸಿ ಏನು ಉಪಯೋಗ? ನಾವು ಅಷ್ಟು ಮೆತ್ತಗೆ: ಕಡಿಯುವವರು ಮೆತ್ತಗಿದ್ದಲ್ಲಿ ಕಡಿಯದೇ ಇನ್ನೆಲ್ಲಿ ಕಡಿದಾರು? ಈಗ ಇದೇ ಕಟ್ಟಡದಲ್ಲೇ ಇದ್ದ ಇನ್ನುಳಿದ ಮನೆಗಳಲ್ಲಿ ಯಾಕೆ ಯಾರೂ ಬರುವುದಿಲ್ಲ? ಎಷ್ಟು ಚೊಕ್ಕವಾದ ಸಂಸಾರ-ರಜೆಯ ದಿನಗಲುದಿನಗಳು ಬಂದ ಕೂಡಲೇ ಏನಾದರೊಂದು ಹೊಸ ಕಾರ್ಯಕ್ರಮ. ನಮ್ಮಲ್ಲಿ? ‘ಏನಕ್ಕಾ ಈ ಹೊತ್ತು ಎಲ್ಲೂ ಹೊರಗೆ ಹೋಗುವುದಿಲ್ಲವೇ?’ ಎಂದು ಯಾರಾದರೂ ನೆರೆಹೊರೆಯವರು ಕೇಳಿದರೆ ನನ್ನದು ಸದಾ ಒಂದೇ ಉತ್ತರ:‘ಇಲ್ಲ…ಇಂದು ನಮ್ಮಲ್ಲಾರೋ ಬರುವವರಿದ್ದಾರೆ!’ ‘ಯಾರು?’ ಎಂದು ಕೇಳಿದರೆ ಉತ್ತರ ಕೊಡಲು ಶಕ್ಯವಿದೆಯೇ? ‘ಯಾರೋ ತಾಯಿ, ನಾನಿನ್ನೂ ಕಂಡಿಲ್ಲ. ಇವರ ಗೆಳೆಯರೊಬ್ಬರ ಪರಿಚಯದವರಂತೆ…ಯಾವದೋ ಪರೀಕ್ಷೆಗಾಗಿ ಮುಂಬಯಿಗೆ ಬರುತ್ತಾರಂತೆ…!’ ಎಲ್ಲ ಎಲ್ಲ ಇಂಥವರೇ! ಯಾವನೋ ಗೆಳೆಯನ ಗೆಳೆಯ, ಅಣ್ಣನ ದೂರದ ಪರಿಚಯದವ, ತಮ್ಮನ ಇನ್ನಾರೋ…ಮುಂಬಯಿಯಲ್ಲಿ ಪರೀಕ್ಷೆಗೆ ಕೂಡುವವರು, ಇಂಟರವ್ಯೂಕ್ಕೆ ಬರುವವರು, ಮುಂಬಯಿ ನೋಡಲು ಬಂದವರು, ಯಾವುದೋ ಹಾಳು ಜಡ್ಡು ಎಂದು ಚಿಕಿತ್ಸೆಗೆ ಬಂದವರು….”
“ಓ! ಜಾನಕೀ ಜಾನಕೀ ಜಾನಕೀ… ಇಂದು ನಿನಗಾದದ್ದಾದರೂ ಏನು…?”
“ಇಲ್ಲ ಇಲ್ಲ, ಇಂದಿನಿಂದ ನನ್ನಿಂದ ಸಾಧ್ಯವಿಲ್ಲ. ನಿಮಗೆ ಅವರ ಬಗ್ಗೆ ಅಷ್ಟೊಂದು ಆತ್ಮೀಯತೆಯ ಪುಳಕವಿದ್ದರೆ…”
“ಈಗ ನಿಲ್ಲಿಸಿದರಾಗದೇ?… ಹಿಂದಿನ ಆ ಹಾಳು ಪುರಾಣವನ್ನೆಲ್ಲ ನೆನೆದು ಈಗ ಕನ್ಣುಕಣ್ಣು ಮುಂದಿದ್ದ ಈ ಬಿಡುವಿನ ದಿನ ಹಾಳುಗೆಡಹುತ್ತೀಯಲ್ಲ…”
“ನಿನ್ನೆಯೇ ಕೆಳಗಿನ ಮನೆಯ ಕಾಳೇಯವರ ಹೆಂಡತಿ ಕೇಳುತ್ತಿದ್ದಳು. ‘ಏನೇ ತಂಗೀ, ಈ ಮೂರು ದಿನವಾದರೂ ನಿಮ್ಮಲ್ಲಾದರೂ ಅತಿಥಿಗಳಿಲ್ಲವಲ್ಲ? ಎಷ್ಟೊಬ್ಬರು ಬರಹೋಗುವವರವ್ವ ನಿನ್ನ ಮನೆಯಲ್ಲಿ? ಪಾಪ, ಲಗ್ನವಾಗಿ ಒಂದು ವರುಷ ಕೂಡ ಆಗಲಿಲ್ಲ….ಅವರಿಗಾದರೂ ಅಷ್ಟು ತಲೆಯಿರಬೇಡವೇ? ನಿಜವಾಗಿ ನೋಡಿದರೆ ಲಗ್ನವಾದ ಮೊದಲು ಕೆಲವು ದಿನಗಳ ಮಟ್ಟಿಗಾದರೂ ಗಂಡಹೆಂಡಿರಿಬ್ಬರಿಗೆ ಪೂರ್ಣ ಏಕಾಂತದ ಅವಶ್ಯಕತೆ ಇರುತ್ತದೆ…”

ಅದಾಗ, ಕೆಳಗೆ ಕಾಂಪೌಂಡಿನ ಗೇಟು ತೆರೆದ ಸದ್ದು ಕೇಳಿ ಬಂದು ಅದರ ಹಿಂದೆಯೇ ಯಾರೋ, ‘ಸಾವಿತ್ರೀ ಸದನ ಇದುವೇನೆ?’ ಎಂದು ಕೇಳಿದ್ದು ಕೇಳಿಸಿತು. ಸ್ಫುಟವಾದ ಗಂಡು ದನಿಯ ಪ್ರಶ್ನೆ. ಮರುಕ್ಷಣ ‘ಮೇಲೆ ಹೋಗುವ ದಾರಿಯೆಲ್ಲಿ?’ ಎಂಬ ಹೆಣ್ಣುದನಿಯ ಪ್ರಶ್ನೆ ಕೇಳಿಸಿತು. ಇನ್ನೂ ಕ್ಷಣಕಾಲ ಬಿಟ್ಟು ಮಾಳಿಗೆಯ ಮೆಟ್ಟಿಲುಗಳ ಮೇಲೆ ಸ್ವಷ್ಟವಾದ ಹೆಜ್ಜೆಗಳು…ಖಟ್ ಖಟ್ ಖಟ್ ಎಂದು ಮೇಲೆ ಬರುತ್ತಿದ್ದವು. ಜಾನಕಿ ಕಿವಿ ನಿಗುರಿಸಿ ಶ್ವಾಸೋಛ್ವಾಸ ನಿಲ್ಲಿಸಿ ಕೇಳುತ್ತಿದ್ದಳು…. ಒಳ ಮನಸ್ಸಿನಲ್ಲೇ ಅವರು ಏರಿಬಂದ ಮೆಟ್ಟಿಲುಗಳನ್ನು ಎಣಿಸುತ್ತಿದ್ದಳು. ಎಣಿಸುತ್ತಿದ್ದಂತೇ ಅವಳ ಮೋರೆ ವಿವರ್ಣವಾಗತೊಡಗಿತು. ಭೀತಿ-ಕಾತರಗಳು ಮೊತ್ತವಾಗಿ ಮೂಡಿದ ಕಂಗಳೆರಡೂ ಕೋಣೆಯ ಕದದ ಮೇಲೆ ಊರಿದ್ದವು. ಹೆಂಡತಿಯ ಈ ವಿಚಿತ್ರ ಮುಖಭಾವವನ್ನು ಕಂಡು ರಾಮಕೃಷ್ಣನಲ್ಲೂ ಭೀತಿ ಮೊಳೆಯಹತ್ತಿತು. ಅವನೂ ಭಯಗ್ರಸ್ತ ಏಕಾಗ್ರದೃಷ್ಟಿಯಿಂದ ಬಾಗಿಲೆಡೆಗೇ ನೋಡುತ್ತಿದ್ದ…ಎಡಬಿಡದೇ ಮೇಲೆ ಮೇಲೆ ಬರುತ್ತಿದ್ದ ಹೆಜ್ಜೆಯ ಆವಾಜನ್ನು ಕಿವಿ ಆನಿಸಿ ಕೇಳುತ್ತಿದ್ದ. ಇದ್ದಕ್ಕಿದ್ದಂತೆ ಎದೆಯ ಗುಂಡಿ, ಹಣೆಗಳ ಮೇಲೆ ತೆಳುವಾದ ಬೆವರು ಮೂಡಹತ್ತಿತು. ತುಟಿ ಬಣ್ಣಗೆಟ್ಟವು…ಹೆಜ್ಜೆಗಳು ಮೂರನೇ ಮಜಲೆಗೆ ಬಂದೊಡನೆಯೇ ಗಂಡಹೆಂಡಿರಿಬ್ಬರೂ ‘ಅದೋ ಅವರು ಇಲ್ಲೇ ಬರುತ್ತಿದ್ದಾರೆ’ ಎಂಬ ಭೀತಿಯ ಭಾವ ಮೂಡಿದ ಕಂಗಳಿಂದ ಒಬ್ಬರನ್ನೊಬ್ಬರು ನೋಡಿ ಒಮ್ಮಲೇ ಸೋಫಾದಿಂದ ಎದ್ದು ನಿಂತರು…ಹೆಜ್ಜೆಗಳು ತಮ್ಮ ಬಾಗಿಲೆಡೆಗೇ ಬರುವುದನ್ನು ಕೇಳುತ್ತಾ ನಿಂತರು. ಇಬ್ಬರ ಎದೆಗಳೂ ಡವಡವ ಎನ್ನುತ್ತಿದ್ದವು… ಮುಂದಿನ ಒಂದು ಕ್ಷಣವನ್ನು ಅವರು ಒಂದು ಯುಗವೆಂಬಂತೆ ಕಳೆದರು.
ಆದಾಗ, ಕದದ ಮೇಲೆ ಯಾರೋ ಜೋರಿನಿಂದ ಬಡಿದ ಸದ್ದು!

ರಾಮಕೃಷ್ಣ ಜಾನಕಿಯವರಿಗೆ ಏಕೊ ಹಾಗೆ ಬಡಿದವರು ಸಿಟ್ಟುಗೊಂಡಿದ್ದಾರೆಂದು ಕಾರಣವಿಲ್ಲದೆಯೇ ಅನಿಸಿತು. ಲಗುಬಗೆಯಿಂದ ಕದವನ್ನು ಸಮೀಪಿಸಿ ರಾಮಕೃಷ್ಣ ನಡುಗುವ ಕೈಗಳಿಂದ ಕದ ತೆರೆದ. ಕಣ್ಣ ಮುಂದೆ ನಿಂತವರನ್ನು ನೋಡು ರಾಮಕೃಷ್ಣ ಜಾನಕಿಯರು ದಿಙ್ಮೂಢರಾದರು. ಗರುಡನನ್ನು ನೋಡಿ ಕಂಗಾಲಾಗಿ ಮೈ ಮುದುಡಿಕೊಂಡ ಹಾವಿನಂತಾದರು. ಆಳೆತ್ತರದ ಕಪ್ಪುಬಣ್ಣದ ಆಜಾನುಬಾಹು ಗಂಡಸು. ಕಬ್ಬಿಣವನ್ನು ಎರಕಹೊಯ್ದು ಮಾಡಿದಂತಹ ಕೆಚ್ಚು ತುಂಬಿದ ಮುಖಕ್ಕೆ ಗೇಣುದ್ದದ ಪೊತ್ತೆ ಮೀಸೆಗಳು ವಿಚಿತ್ರ ಉಗ್ರತೆಯನ್ನು ತಂದಿದ್ದವು. ಪಾದಗಳನ್ನೂ ಮುಚ್ಚುವಂತೆ ಉದ್ದವಾಗಿ ಉಟ್ಟ ಶುಬ್ರಶುಭ್ರವರ್ಣದ ಧೋತರ. ಮೈಯಲ್ಲಿ ಅದೇ ಬಣ್ಣದ ತೆಳುವಾದ ನಿಲುವಂಗಿ. ಅಂಗಿಯ ತೋಳುಗಳನ್ನು ಮೊಣಕೈವರೆಗೆ ಮಡಚಿಕೊಂಡದ್ದರಿಂದ ಹೊರದೋರುವ ವಜ್ರಬಲ ಅಭಿವ್ಯಕ್ತಿಸುವ ಕಪ್ಪು ಕೈಗಳು, ಬಿರುಸಾದ ಸೆರೆಗಳು ಉಬ್ಬಿತೋರುವ ದಪ್ಪವಾದ ಕೊರಳು, ಪ್ರಚಂಡವಾದ ದರ್ಪಸಾರುವ ಹರವಾದ ಎದೆ. ಜೊತೆಗೆ ಬಂದ ಹೆಂಗಸೂ ಹಾಗೆಯೇ-ಅವನ ಹೆಂಡತಿಯಾಗಲು ಶೋಭಿಸುವ ಮೈಕಟ್ಟಿನವಳು. ಅವನದೇ ಬಣ್ಣ, ಕಪ್ಪು. ಕಚ್ಚೆ ಹೊಡೆದುಟ್ಟ ೬ ವಾರಿನ ಸೀರೆ, ಬಿಗಿದು ಮುಡಿಕಟ್ಟಿದ ಕೂದಲು, ಮೊಣಕೈವರೆಗೆ ಮುಚ್ಚಿದ ಹಳೇಕಾಲದ ರವಿಕೆ ಮೋರೆ ಕೊರಳು, ಕೈಗಳು ಅದೇ ಗಂಡಸಿನ ದರ್ಪವನ್ನು ಸಾರುತ್ತಿದ್ದವು. ಏಕೋ ತಮ್ಮ ಜನ್ಮದಲ್ಲೇ ಈವರೆಗೆ ನೋಡಿ ಗೊತ್ತಿರದ-ಹೇಳದೇ ಕೇಳದೇ ತಮ್ಮ ಬಾಗಿಲಿನಲ್ಲಿ ಬಂದು ಹಾಜರಾದ ಈ ಅಪರಿಚಿತರು ಈ ಲೋಕದ ವ್ಯಕ್ತಿಗಳಲ್ಲ ಎಂಬ ಭಾವನೆ ರಾಮಕೃಷ್ಣನ ಮನಸ್ಸಿನಲ್ಲಿ ಮೂಡಿ ಮೈ ನವಿರುಗೊಳಗಾಯಿತು. ಎಲ್ಲೋ ಪುರಾಣ, ಇತಿಹಾಸಗಳಲ್ಲೋ, ರೋಮಾಂಚಕಾರೀ ಕತೆಕಾದಂಬರಿಗಳಲ್ಲೋ ಓದಿ ತಿಳಿದ ವ್ಯಕ್ತಿಗಳಿಬ್ಬರು ಒಮ್ಮೆಲೇ ಜೀವ ಪಡೆದು ತನ್ನ ಕಣ್ಣಮುಂದೆ ನಿಂತಿದ್ದಾರೆ ಎನಿಸಿತು. ತನಗಾದುದು ಬರಿಯ ಭ್ರಮೆಯಲ್ಲ ತಾನೇ? ಆದರೆ ಬಂದವರ ಜತೆಗೆ ಬಂದ, ಅವರ ಟ್ರಂಕನ್ನು ಹೊತ್ತು ತಂದ, ತನ್ನ ಪರಿಚಯದ ಆ ಆಳು ಇದು ಭ್ರಮೆಯಲ್ಲವೆಂದು ಸಾರುತ್ತಿದ್ದ. ಅವರಿಬ್ಬರನ್ನು ಕಂಡು ತನ್ನಂತೆಯೇ ಭಯದಿಂದ ಮುದ್ದೆಯಾದ ತನ್ನ ಹೆಂಡತಿಯ ಮೋರೆಯ ಮೇಲಿನ ಕಂಗಾಲ ಭಾವವೂ ಈ ಮಾತನ್ನೇ ಸಮರ್ಥಿಸುತ್ತಿತ್ತು….. ಬೇರೆ ಯಾರದೋ ಮನೆಗೆ ಬಂದವರು ದಾರಿ ತಪ್ಪಿ ತಮ್ಮ ಮನೆಗೆ ಬಂದಿರಲಿಕ್ಕಿಲ್ಲ ತಾನೇ? ತಮ್ಮ ಮನೆಯ ಬಾಗಿಲ ಮೇಲೆ ತನ್ನ ಹೆಸರಿನ ಹಲಗೆಯನ್ನು ತೂಗಿರಲಿಲ್ಲ. ತಮ್ಮ ಮನೆಗೇ ಬಂದಿದ್ದರೆ ಈ ಮೊದಲು ಎಂದಿಗೂ ಬಂದಿರದ ಈ ಅಪರಿಚಿತರಿಗೆ ಇದೇ ತಮ್ಮ ಮನೆಯೆಂದು ತಿಳಿದ ಬಗೆ ಹೇಗೆ?-ಕೇಳಿ ನೋಡೋಣವೇ?… ರಾಮಕೃಷ್ಣನಿಗೆ ಆ ಧೈರ್ಯವಾಗಲಿಲ್ಲ. ನಾಲಗೆ ಅದಾಗಲೇ ಒಣಗಿ ಕೊರಡಾಗಿತ್ತು. ಮೇಲಾಗಿ ಬಂದವರು ಅವನಿಗೆ ಈ ಅವಕಾಶ ಕೊಟ್ಟರಲ್ಲವೇ! ತಮ್ಮನ್ನು ಬೆದರಿದ ಕಂಗಳಿಂದ ನೋಡುತ್ತ ನಿಂತ ರಾಮಕೃಷ್ಣ ಜಾನಕಿಯರ ಕಡೆಗೆ ಅವರಿಬ್ಬರು ಬರಿಯೆ ಎರಡು ಕ್ಷುದ್ರ ಜಂತುಗಳು ಎಂಬಂತೆ ನೋಡಿ, ಟ್ರಂಕು ಹೊತ್ತು ನಿಂತ ಆಳಿಗೆ, ಕೋಣೆಯ ಮೂಲೆಯೊಂದರತ್ತ ಬೊಟ್ಟು ತೋರಿಸಿ “ಅಲ್ಲಿಡು” ಎಂದು ಆಜ್ಞೆಮಾಡಿದ ಆ ಗಂಡಸು. ಆ ದನಿಯಲ್ಲಿಯ ದರ್ಪ, ಅಧಿಕಾರ ನೋಡಿ ರಾಮಕೃಷ್ಣ ತತ್ಥರ ನಡುಗಿದ. ಏಕೋ ಹೇಳದೇ ಕೇಳದೇ, ಚಿಕ್ಕಂದಿನಲ್ಲಿ ನೋಡಿದ ಬಯಲಾಟದೊಳಗಿನ ದುಷ್ಟಪಾತ್ರವೊಂದರ ನೆನಪು ಅವನ ಮನಸ್ಸಿನಲ್ಲಿ ಮಿಂಚಿನಂತೆ ಸುಳಿದು ಮಾಯವಾಯಿತು. ಆಳು ಕೂಡಲೇ ಕೋಣೆಯೊಳಗೆ ನಡೆದು ಅವರು ಇಡಲು ಹೇಳಿದ ಜಾಗದಲ್ಲಿ ಟ್ರಂಕನ್ನು ಇಟ್ಟು ಅವಸರ ಅವಸರವಾಗಿ ಕೂಲಿ ಕೇಳುವ ಮೊದಲೇ ಬಾಗಿಲ ಕಡೆಗೆ ಹೆಜ್ಜೆಯಿಡಹತ್ತಿದ, ಅದಾಗಲೇ ಕೋಣೆಯೊಳಗೆ ಕಾಲಿಟ್ಟ ಆ ಗಂಡಸು ಅವನನ್ನು ದುರುಗುಟ್ಟಿ ನೋಡಿ ಗುಡುಗಿದ “ಏ ಕುರಿಯ ಗಂಡ, ಕೂಲಿ ಬೇಡವೇನೋ? ಎಷ್ಟು ರೊಕ್ಕ?” ಆಳು ಪುಕ್ಕ ದನಿಯಲ್ಲಿ ಹೇಳಿದ, “ಎಂಟಾಣೆ.” ಆಗ ಆ ಗಂಡಸು ರಾಮಕೃಷ್ಣನತ್ತ ತಿರುಗಿ “ಅವನಿಗೆ ಎಂಟಾಣೆಯನ್ನು ಕೊಟ್ಟು ಕಳಿಸಿಬಿಡು.” ದನಿಯಲ್ಲಿ ಅದೇ ಅಧಿಕಾರವಿತ್ತು. ರಾಮಕೃಷ್ಣ ಒಮ್ಮೆಲೇ ‘ಇವನು ಯಾವಾಗೊಮ್ಮೆ ತನ್ನ ಮನೆಗೆ ಬಂದಾನು, ಹೀಗೆ ಆಜ್ಞೆ ಮಾಡಿಯಾನು, ತಾನು ಅದನ್ನು ಪಾಲಿಸೇನು ಎಂದು ಕಾಯುತ್ತಾ ನಿಂತವನಂತೆ ಕೂಡಲೇ ಒಳಕೋಣೆಗೆ ನುಗ್ಗಿ ಗೋಡ್ರೇಜ್ ಕಪಾಟಿನೊಳಗಿಟ್ಟ ತನ್ನ ಕಾಕೇಟಿಗಾಗಿಪಾಕೇಟಿಗಾಗಿ ಹುಡುಕಾಡಹತ್ತಿದ. ಅದು ಕೂಡಲೇ ಕೈಗೆ ಹತ್ತದ್ದರಿಂದ ಪಿಸುಮಾತಿನಲ್ಲೇ ಜಾನಕಿಯನ್ನು ಕರೆಯಹತ್ತಿದ. ಆದರೆ ಅದಾಗಲೇ ಜಾನಕಿಯನ್ನು ಆ ಹೆಂಗಸು ಬೇರೊಂದು ಕೆಲಸಕ್ಕೆ ನೇಮಿಸುತ್ತಿದ್ದಳು; “ನಮ್ಮಿಬ್ಬರದೂ ಝಳಕವಾಗಬೇಕಾಗಿದೆ. ಕೂಡಲೇ ನೀರು ಕಾಯಿಸಲು ಇಡು ತಾಯಿ.” ಜಾನಕಿಯು ಒಡನೆಯೇ ಸ್ಟೋವ್ ಹೊತ್ತಿಸಲು ಅಡುಗೆ ಮನೆಗೆ ಧಾವಿಸಿದಳು. ಇತ್ತ ಹಣದ ಪಾಕೀಟನ್ನು ಹುಡುಕುತ್ತಿದ್ದ ರಾಮಕೃಷ್ಣ ಅದು ಕೂಡಲೇ ಸಿಗದ್ದರಿಂದ ಗಾಬರಿಗೊಂಡು ಗೋಡ್ರೇಜ್ ವಾರ್ಡ್‌ರೋಬಿನಲ್ಲಿ ಹ್ಯಾಂಗರುಗಳ ಮೇಲೆ ತೂಗುಹಾಕಿದ್ದ ತನ್ನ ಪೇಂಟು, ಕೋಟುಗಳನ್ನೆಲ್ಲ ಭರಭರನೆ ಹೊರತೆಗೆದು, ಕಿಸೆ ನೋಡಿ ನೆಲದ ಮೇಲೆ ಒಗೆಯುತ್ತಿದ್ದ. ನಿಮಿಷಾರ್ಧದಲ್ಲಿ ಕಪಾಟಿನೊಳಗಿನ ಅರಿವೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಕೋಣೆಯ ನೆಲದ ಮೇಲೆಲ್ಲಾ ಹರಡಿ ಬಿದ್ದಿದ್ದುವು. ಆದರೆ ಪಾಕೀಟು ಮಾತ್ರ ಸಿಗಲಿಲ್ಲ. ಆಗ ಸಿಟ್ಟಿನಿಂದ, ಅದಕ್ಕಿಂತಲೂ ಹೆಚ್ಚಾಗಿ ಭೀತಿಯಿಂದ ತನ್ನ ಹೆಂಡತಿ ತನ್ನ ಸಹಾಯಕ್ಕೆ ಬರದದ್ದನ್ನು ಕಂಡು ಒಳಗೊಳಗೇ ಅವಳನ್ನು ಶಪಿಸಹತ್ತಿದ….ಮರುಕ್ಷಣ, ಒಳಗೆ ಹೋದ ಇವನು ಹೊರಗೆ ಬರದೇ ಇದ್ದುದನ್ನು ಕಂಡು ಬೇಸತ್ತ ಆ ಅಪರಿಚಿತ ಗಂಡಸು ಮೆಲ್ಲನೆ ಕೋಣೆಯ ಬಾಗಿಲಲ್ಲಿ ಬಂದು ದಾರಿಗಟ್ಟಿ ನಿಂತವರ ಹಾಗೆ ತನ್ನ ಎರಡೂ ಕೈಗಳನ್ನು ಬಾಗಿಲಿನ ಚೌಕತ್ಟಿನಚೌಕಟ್ಟಿನ ಮೇಲೆ ಇಟ್ಟು ನಿಂತ. ಆಗ ಅವನ ಭವ್ಯ ಆಕೃತಿ ಆ ಚಿಕ್ಕ ಬಾಗಿಲನ್ನು ಪೂರ್ಣವಾಗಿ ವ್ಯಾಪಿಸಿ ನಿಂತ ಭಾಸವಾಗಿ ರಾಮಕೃಷ್ಣನ ಜಂಘಾಬಲವೇ ಉಡುಗಿ ಹೋಯಿತು. ಅವನ ಚಟುವಟಿಕೆಗಳಲ್ಲಿಯ ಅವ್ಯವಸ್ಥೆ ಇನ್ನೂ ಹೆಚ್ಚಿತು. ಆಗ ಆ ಗಂಡಸು ಬಾಯಬಿಟ್ಟ:
“ಓ!ಇದೆಂತಹ ಹುಚ್ಚು ಗಬಾಳಿತನ. ಇದೇ ಇದೇ ಏನು ಅರಿವೆ ಇಡುವ ರೀತಿ? ಇದು ಮನೆಯೋ ದನಗಳ ಕೊಟ್ಟಿಗೆಯೋ? ಯಾಕೆ, ಹಣ ಇನ್ನೂ ಸಿಗಲಿಲ್ಲವೇ? ಎಷ್ಟು ಹೊತ್ತು ಆ ಬಡವನನ್ನು ಕಾಯಿಸುತ್ತೀ? ಹಣ ಇಲ್ಲದಿದ್ದರೆ ಬಾಯಬಿಟ್ಟು ಹೇಳಬಾರದೇ?-ಇಷ್ಟೆಲ್ಲ ಹಗರಣ ನಡೆಸುವ ಬದಲು?”
ಮಾತಿನಲ್ಲಿ ಅದೇ ದರ್ಪ! ಅದೇ ಅಧಿಕಾರ!
“ಇಲ್ಲ ಇಲ್ಲ, ಹಣ ಬೇಕಾದಷ್ಟಿದೆ. ಪಾ…ಪಾ…ಪಾಕೀ…ಹಾಂ ಇದು ಸಿಕ್ಕಿತು…” ಎಂದು ಏನೋ ಗುಣಿಗುಣಿಸುತ್ತ ಕೊನೆಗೊಮ್ಮೆ ಕೈಗೆ ಸಿಕ್ಕ ಪಾಕೀಟಿನೊಳಗಿಂದ ಎಂಟಾಣೆಯ ನಾಣ್ಯ ಒಂದನ್ನು ಹೊರತೆಗೆದು ದಾರಿಗಡ್ಡ ನಿಂತ ಆ ವ್ಯಕ್ತಿಯನ್ನು ಬದಿಗೆ ಸರಿ ಎನ್ನುವ ಧೈರ್ಯವಾಗದೇ ಅಡುಗೆಯ ಮನೆಯ ದಾರಿಯಿಂದಲೇ ಹೊರಗೆ ಹೋಗಲು ಯತ್ನಿಸಿದ. ಆಗ ತಿರುಗಿ ಗುಡುಗಿತು ಆ ಗಂಡಸಿನ ಅಧಿಕಾರವಾಣಿ:
“ಏ ಏ ಮುಠಾಳಮುಠ್ಠಾಳ, ಅಲ್ಲಿಂದ ಯಾಕೆ ಓಡುತ್ತೀಯೋ? ಇಲ್ಲಿಂದ ಹೋಗಲ್ಲ…ಅವನು ಈ ಬದಿಯ ಬಾಗಿಲಲ್ಲೇ ನಿಂತಾನೆ.” ಹಾಗೆ ಗುಡುಗಿ ತುಸು ಬದಿಗೆ ಸರಿದು ನಿಂತಾಗ ಸಿಕ್ಕ ಸಣ್ಣ ಅವಕಾಶದೊಳಗಿಂದಲೇ ಹೊರಗೆ ನುಸುಳಿ, ರಾಮಕೃಷ್ಣ ಟ್ರಂಕು ಹೊತ್ತು ಬಂದವನು ನಿಂತ ವರಾಂಡಕ್ಕೆ ಬಂದ. ಆದರೆ ಆ ಹೊತ್ತಿಗೆ ಆ ಆಳು ಅಲ್ಲಿಂದ ಅದೃಶ್ಯನಾಗಿದ್ದ. “ಅಯ್ಯೋ ದೊಡ್ಡ ಘಾತವಾಯಿತಲ್ಲ’ ಎನ್ನುವಂತೆ ರಾಮಕೃಷ್ಣ ಕೂಡಲೇ ಓಡಿ- ಮೂರೂ ಮಜಲೆಗಳ ಮೆಟ್ಟಿಲುಗಳನ್ನು ಇಳಿದು ಹೊರಗೆ ಕಂಪೌಂಡಿನ ಗೇಟಿನವರೆಗೆ ಹೋಗಿ ನೋಡಿದ. ಆಳು ಮನುಷ್ಯ ಕನ್ಣಿಗೆ ಬೀಲಲಿಲ್ಲಕಣ್ಣಿಗೆ ಬೀಳಲಿಲ್ಲ. “ಅಯ್ಯೋ ‘ಅವನು’ ಕೇಳಿದರೆ ಏನು ಮಾಡಲೀ?” ಎಂದು ಚಿಂತಾಕ್ರಾಂತನಾಗಿ ಮಾಳಿಗೆಯ ಮೆತ್ಟಿಲುಗಳನ್ನುಮೆಟ್ಟಿಲುಗಳನ್ನು ಭರಭರನೆ ಏರಿ ಬಂದು ತಿರುಗಿ ತಮ್ಮ ಮನೆಯನ್ನು ಸೇರುವ ಹೊತ್ತಿಗೆ ‘ಇದು ತಮ್ಮ ಮನೆ’ ಎಂಬ ಅರಿವು ಪೂರ್ಣವಾಗಿ ಅಳಿಸಿಹೋಗಿತ್ತು. ಇದು ‘ಅವರ’ಮನೆ, ತಾನು ‘ಅವರ’ ದಾಸಾನುದಾಸ ಎಂಬಂತೆ ನಮ್ರನಾಗಿ ಮನೆಹೊಕ್ಕು, ಅದಾಗಲೇ ಸೋಫಾದಮೇಲೆ ಆಸನರೂಢನಾದಆಸನಾರೂಢನಾದ ಆ ಗಂಡಸನ್ನು ಸಮೀಪಿಸಿಮೆಲ್ಲನೇ ಉಸುರಿದ: “ಆ ಆಳು ಮನುಷ್ಯ ಹಣ ಪಡೆಯುವ ಮೊದಲೇ ಹೋಗಿಬಿಟ್ಟ.” ಏನೋ ಮಹಾಪರಾಧ ಮಾಡಿದ ದನಿಯಿತ್ತು ಆ ಮಾತಿನಲ್ಲಿ.
“ಹೋಗಿಬಿಟ್ಟನಲ್ಲ? ಚೆನ್ನಾಯಿತು, ನಿನ್ನ ಎಂಟಾಣೆ ಉಳಿದುಕೊಂಡವು” ಎಂದು ತಿರಸ್ಕಾರದಲ್ಲಿ ನುಡಿದು….“ನನ್ನನ್ನೇನು ನೋಡುತ್ತಾ ನಿಂತಿ? ಹೋಗು ಹೋಗು, ಒಳಗೆ ಹೋಗು… ಆ ಅರಿವಿ ಗಿರಿವಿ ಎಲ್ಲ ಚೊಕ್ಕ ಮಾಡಿ ಇಡು. ಹಾಗೂ ಅಡಿಗೆಯ ಮನೆಯಲ್ಲಿ ನಿನ್ನ ಹೆಂಡತಿ ಘೋಟಾಳೆ ಮಾಡಿ ಕುಳಿತಾಳೆ ನೋಡು. ಅವಳಿಗೂ ತುಸು ಸಹಾಯ ಮಾಡು…ಅಬ್ಬಬ್ಬ! ಎಂತಹ ಗಬಾಳ ಜನರು…ನೀವು ವ್ಯವಸ್ಥೆ ಎನ್ನುವುದನ್ನು ಎಲ್ಲಿ ಕಲಿಯುವವರೊ!”
ಇಡೀ ಕಟ್ಟಡದಲ್ಲೇ ಅತ್ಯಂತ ಸುವ್ಯವಸ್ಥಿತ, ಚೊಕ್ಕವಾದ ಸಂಸಾರ ನಡೆಸುವ ಗಂಡಹೆಂಡಿರೆಂದು ಹೆಸರಾದ ತಮ್ಮ ಬಗ್ಗೆ ಆಡಿದ ಈ ಮಾತುಗಳಿಂದ ರಾಮಕೃಷ್ಣನಿಗೆ ಎಳ್ಳಷ್ಟೂ ಕೆಡಕೆನಿಸಲಿಲ್ಲ. ‘ತಾನು’,ತನ್ನ ಹೆಂಡತಿ’. ‘ತನ್ನ ಮನೆ’ ಎಂಬ ಪ್ರಜ್ಞೆಯೇ ನಾಶವಾದಂತಿತ್ತು. ಏಕೋ ಆ ಕ್ಷಣದ ಮಟ್ಟಿಗಂತೂ ತಾನು ಈ ಜಗತ್ತಿನಲ್ಲೇ ಅತ್ಯಂತ ಅವ್ಯವಸ್ಥೆಯ ಮನುಷ್ಯ ಎಂಬ ಭಾವನೆ ಅವನಲ್ಲಿ ಮೊಳೆತು ತನಗೇ ಕೆಡುಕೆನಿಸಿತು…

ಮರುಗಳಿಗೆ ಅವನು ಜಾನಕಿಗೆ ನೆರವಾಗಲು ಅಡುಗೆಯ ಮನೆಗೆ ನಡೆದ. ಇಬ್ಬರೂ ಕೂಡಿ ಬಂದವರ ಸ್ನಾನದ ವ್ಯವಸ್ಥೆ ಮಾಡುವಾಗ; ಸ್ನಾನ ಮುಗಿದುದೇ ಚಹದ ಸಿದ್ಧತೆಯಲ್ಲಿದ್ದಾಗ; ತದನಂತರದ ಊಟ, ಮದ್ಯಾಹ್ನದಮಧ್ಯಾಹ್ನದ ನಿದ್ದೆ, ಸಂಜೆಯ ಚಹ, ರಾತ್ರೆಯ ಊಟ- ಈ ಎಲ್ಲವುಗಳನ್ನೂ ಅತ್ಯಂತ ಜಾಗರೂಕತೆಯಿಂದ ಒಂದರ ನಂತರ ಒಂದನ್ನು ಸುವ್ಯವಸ್ಥಿತವಾಗಿ ಪಾರುಗಾಣಿಸುವಾಗ ರಾಮಕೃಷ್ಣ ಜಾನಕಿಯರು ತಾವಿಬ್ಬರೂ ಗಂಡಹೆಂಡಿರೆಂಬುದನ್ನೇ ಮರೆತಂತಿತ್ತು. ತಾವಿಬ್ಬರೂ ಈ ಮನೆಯಲ್ಲಿಯ ಪರಸ್ಪರ ಸಂಬಂಧವಿಲ್ಲದ ಚಾರಕರು ಎಂಬ ಭಾವ ಅವರ ಅಂದಿನ ಚಟುವಟಿಕೆಗಳಲ್ಲಿ ಆದ್ಯಂತವೂ ಒಡೆದು ಕಾಣುತ್ತಿತ್ತು. ಅದೇ ಬಗೆಯ ಕಾತರ; ಸುವ್ಯವಸ್ಥೆ ಓರಣಗಳ ಬಗೆಗೆ ಜಾಗರೂಕತೆ-‘ಅವರಿಂದ ಶಹಭಾಸಗಿರಿ’ ಪಡೆಯಬೇಕು ಎನ್ನುವಂತೆ! ‘ಅವರ’ ಊಟವಾದ ಮೇಲೆಯೇ ತಮ್ಮ ಊಟ. ‘ಅವರ’ ಚಹ ಮುಗಿದ ಮೇಲೆಯೇ ತಮ್ಮ ಚಹ, ಮದ್ಯಾಹ್ನದಮಧ್ಯಾಹ್ನದ ಊಟ ಮುಗಿದ ಮೇಲೆ ‘ಅವರು’ ಹೊರಗಿನ ಕೋಣೆಯಲ್ಲಿ ನಿದ್ದೆ ಮಾಡುತ್ತಿದ್ದಾಗ, ಒಳಗಿನ ಕೆಲಸಬೊಗಸೆಗಳಲ್ಲಿ ನಿರತರಾಗಿದ್ದಾಗ ಪರಸ್ಪರರಲ್ಲಿ ಮಾತನಾಡುವಾಗಲೂ ಅದೇ ಧಾಟಿ, ‘ಗದ್ದಲ ಮಾಡಿದ್ದೀಯಾ ಜೋಕೆ! ಹೊರಗೆ ಮಲಗಿದ್ದಾರೆ.’

ತಾವಿಬ್ಬರೂ ಗಂಡಹೆಂಡಿರು, ಈ ಮನೆಯ ಯಜಮಾನರು. ಆದರೆ ಈ ಅಪರಿಚಿತ ಆಗಂತುಕರ ದುಷ್ಟ ಸಮ್ಮೋಹನ ಪ್ರಭಾವಕ್ಕೆ ಒಳಗಾಗಿ ತಾವು ಇದನ್ನೆಲ್ಲ ಮರೆತಿದ್ದೆವು, ಎನ್ನುವ ಅರಿವು ರಾಮಕೃಷ್ಣ ಜಾನಕಿಯರಿಗೆ ಬಂದದ್ದು ತೀರ ತಡವಾಗಿ. ರಾತ್ರೆ ಬಂದವರಿಗೆ ಹಾಸಿಗೆ ಹಾಸಿಕೊಟ್ಟು ಅವರ ಮುಂದಿನ ಆಜ್ಞೆಯನ್ನು ಕಾಯುವವರಂತೆ ಮಲಗುವ ಕೋಣೆಯಲ್ಲಿ ಬಾಗಿಲಲ್ಲಿ ನಿಂತಾಗ ಆ ಗಂಡಸು ಆಜ್ಞಾಪಿಸಿದ್ದ: “ಏನು ನಮ್ಮನ್ನು ನೋಡುತ್ತ ನಿಂತಿರಿ? ನೀವು ಗಂಡಹೆಂಡಂದಿರು ನಿಮ್ಮ ಕೋಣೆಗೆ ಹೋಗಿ ಮಲಗಿಕೊಳ್ಳಿ”. ರಾಮಕೃಷ್ಣ ಕೂಡಲೇ ತನ್ನ ಕೋಣೆಯ ಕದ ಮುಚ್ಚಹತ್ತಿದ. ಅವನು ಕದ ಮುಚ್ಚುತ್ತಿರುವಾಗಲೇ ಆ ಗಂಡಸು ತಿರುಗಿ ಅಂದ; “ನಾವು ಬೆಳಿಗ್ಗೇ ಎದ್ದು ಹೋಗಬೇಕು; ನಿಮಗೆ ನಸುಕಿಗೆ ಎದ್ದು ಅಭ್ಯಾಸವಿದೆಯೋ ಇಲ್ಲವೋ. ನೀವು ಏಳುವುದು ಬೇಡ. ನಾನು ಬೆಳಿಗ್ಗೆ ಬಂದ ಆ ಆಳಿಗೆ ಆಗಲೇ ಹೇಳಿ ಇಟ್ಟಿದ್ದೇನೆ.” ‘ಈಗ ಹೇಗಾದರೂ ಕೋಣೆಯ ಕದ ಮುಚ್ಚಿದೆ, ನಮ್ಮ ಕೋಣೆಯಲ್ಲಿ ನಾವೀಗ ಭದ್ರರಾಗಿದ್ದೇವೆ’ ಎಂಬ ಭಾವನೆಯಿಂದಲೋ ಅಥವಾ ಹೇಗಾದರೂ ಅಕಸ್ಮಾತ್ತಾಗಿ ಬಂದೊದಗಿದ ಪೀಡೆ ಕೊನೆಗೊಮ್ಮೆ ತೊಲಗುತ್ತದಲ್ಲ ಎಂಬ ಸುದ್ದಿಯಿಂದಲೋ ರಾಮಕೃಷ್ಣ ಜಾನಕಿಯರಿಗೆ ಆ ಗಂಡಸಿನ ದನಿಯಲ್ಲೀಗ ಮೊದಲಿನ ಕಾಠಿಣ್ಯವಾಗಲೀ, ಅಮಾನುಷತೆಯಾಗಲೀ ತೋರಲಿಲ್ಲ. ಮರುಕ್ಷಣ, ಬೆಳಗಿನಿಂದ ಪಡೆದ ಮಾನಸಿಕ ಯಾತನೆಯ ಅರಿವು ಈಗ ಆಯಿತೆನ್ನುವಂತೆ ಇಬ್ಬರೂ ನಿರ್ವಿಣ್ಣರಾಗಿ ಹಾಸಿಗೆಯ ಮೇಲೆ ಒರಗಿದರು. ಬೆದರಿದ ಕಂಗಳಿಂದ ಒಬ್ಬರನ್ನೊಬ್ಬರು ನೋಡುತ್ತ ಪಿಸು ಮಾತಿನಲ್ಲೇ ಮಾತನಾಡಹತ್ತಿದರು.
“ಬಂದವರು ಯಾರೆಂದು ತಿಳಿಯಿತೇ?”
“ಇಲ್ಲ ನನಗಿದಾವುದರ ಅರ್ಥವೇ ಆಗುತ್ತಿಲ್ಲ: ನಮಗೆ ಇದು ಯಾರಾದರೂ ಮೋಡಿ ಗೀಡಿ ಹಾಕಿಲ್ಲ ತಾನೇ?”
ಅದಾಗ ಹೊರಗಿನ ಕೋಣೆಯಿಂದ ಹೆಣ್ಣುದನಿ ನುಡಿಯಿತು:
“ಈಗ ಆ ದೀಪ ಆರಿಸಿ ಸುಮ್ಮನೇ ಮಲಗಿದರಾಗದೇ?”
ಕೂಡಲೇ ರಾಮಕೃಷ್ಣ ಆಜ್ಞಾಧಾರಕ ಬಾಲಕನ ಹಾಗೆ ಹಾಸಿಗೆಯಿಂದ ಎದ್ದು ದೀಪವನ್ನಾರಿಸಿದ! ಆದರೆ ಹಾಗೆ ಆರಿಸುತ್ತಿರುವಾಗ ಅವನ ಮನಸ್ಸು ಷಂಢ ಸಿಟ್ಟಿನಿಂದ ಚೀರಿತು: ‘ಅಬ್ಬಾ ಇವರ ದರ್ಪವೇ; ಉದ್ಧಟತನವೇ! ನಮ್ಮ ಏಕಾಂತತೆಯ ಮೇಲೂ ಇವರ ದಾಳಿಯಲ್ಲ!’ ಆದರೆ ಅದನ್ನು ಪ್ರತಿಭಟಿಸಬೇಕು ಎನ್ನುವ ಸತ್ವ ಮಾತ್ರ ಅವನ ವ್ಯಕ್ತಿತ್ವದಲ್ಲಿ ಆಗ ಉಳಿದಿರಲಿಲ್ಲ. ಮನಸ್ಸಿಗಾದ ಅತೀವ ದಣುವಿನಿಂದಲೋ ತಮ್ಮ ಸತ್ವಹೀನತೆಯ ಅರಿವಿನಿಂದಲೋ ಇಬ್ಬರೂ ನಿದ್ದೆಯ ಮೊರೆಹೊಕ್ಕರು…
*
*
*
ಮರುದಿನ ಬೆಳಿಗ್ಗೆ ರಾಮಕೃಷ್ಣನಿಗೆ ಎಚ್ಚರವಾಗುವ ಹೊತ್ತಿಗೆ ದಿನಕ್ಕಿಂತ ಬಹಳ ತಡವಾಗಿತ್ತು. ರಸ್ತೆಯ ಬದಿಯ ಕಿಡಕಿಯೊಳಗಿಂದ ಮುಂಜಾವಿನ ಎಳೆ ಬೆಳಕು ಕೋಣೆ ತುಂಬ ಹಬ್ಬಿತ್ತು. ರಾಮಕೃಷ್ಣ ಹಾಸಿಗೆಯಲ್ಲಿ ಎದ್ದು ಕುಳಿತವನೇ ಮಗ್ಗುಲಲ್ಲೇ ಇನ್ನೂ ನಿದ್ದೆಯಲ್ಲಿದ್ದ ತನ್ನ ಹೆಂಡತಿಯ ನಿಷ್ಪಾಪ ಮುಗ್ಧ ಮೊಗವನ್ನು ನೋಡಿದವನೇ ಪ್ರೀತಿ ಉಕ್ಕಿ ಬಂದು ಮೃದುವಾಗಿ ಚುಂಬಿಸಿದ. ಅತ್ಯಂತ ಉಲ್ಲಸಿತ ಮನಸ್ಥಿತಿಯಲ್ಲಿ ಹೊರಕೋಣೆಗೆ ಬಂದ. ಆಗ ಅವನ ಲಕ್ಷ್ಯ ತುಸು ತೆರೆದುಕೊಂಡಿದ್ದ ಬಲಬದಿಯ ಬಾಗಿಲ ಕಡೆಗೆ ಹೋಯಿತು. ‘ಅರೇ ರಾತ್ರೆ ಇದನ್ನು ಮುಚ್ಚುವುದನ್ನೇ ಮರೆತೆವೇ?’ ಎಂದು ಆತಂಕಪತ್ತೂಆತಂಕಪಟ್ಟೂ ಲಗುಬಗೆಯಿಂದ ಅದನ್ನು ಸಮೀಪಿಸುವಾಗ ಮೆಲ್ಲನೆ ನಿನ್ನೆಯ ಅನುಭವ ನೆನಪು ಮೂಡಹತ್ತಿತು: ದುಗುಡದ ಕಾರ್ಮೋಡ ತಿರುಗಿ ಮನಸ್ಸನ್ನು ಆವರಿಸಹತ್ತಿತು. ಆದರೂ ಇದ್ದುದರಲ್ಲೇ ತುಸು ಸಮಾಧಾನ-‘ಅಹಾ! ಕೊನೆಗೂ ಒಮ್ಮೆ ಇಲ್ಲಿಂದ ತೊಲಗಿದರಲ್ಲ’ ಎಂದು. ‘ಅಥವಾ ಅವರು ಬಂದುದಾದರೂ ಅಹುದೇ? ಇಲ್ಲವೇ ತಾನು ಕಂಡದ್ದು ಬರಿಯೇ ಒಂದು ಕೆಂಗನಸೇ? ತನ್ನ ಮೆತ್ತಗಿನ ಸ್ವಭಾವದ ಪರಿಚಯವಿದ್ದ ತನ್ನ ಗೆಳೆಯರಾರಾದರೂ ತನ್ನ ತಮಾಷೆ ಮಾಡಬೇಕೆಂದು ಈ ಸುಳ್ಳು ನಾಟಕ ಹೂಡಿರಲಿಕ್ಕಿಲ್ಲವಷ್ಟೇ? ಅಥವಾ ತಮ್ಮ ಊರಿನವರೇ ಯಾರಾದರೂ…ಅಯ್ಯೋ ನಾನಾಗಿಯೇ ಬಂದವರಿಗೆ ಈ ಪ್ರಶ್ನೆ ಕೇಳಲಿಲ್ಲವಲ್ಲ! ಯಾರಿರಬಹುದು? ಹೇಳದೇ ಕೇಳದೇ ಬಂದು ನಮ್ಮ ಮನೆಯಲ್ಲಿ ನಮ್ಮ ಮೇಲೇ ಅಧಿಕಾರ ನಡೆಸಿ ಹೋದ ಈ ವಿಲಕ್ಷಣ ಅಪರಿಚಿತರು ಯಾರಿರಬಹುದು?’ ಮರುಕ್ಷಣ ಅವನ ಮನಸ್ಸು ಸಿಟ್ಟಿನಿಂದ ಬುಸುಗುಟ್ಟಿತು: ‘ಅಲ್ಲ ಅಲ್ಲ, ಅದು ಮುಖ್ಯವಾದ ಪ್ರಶ್ನೆಯೇ ಅಲ್ಲ. ಬಂದವರು ಬೇಕಾದವರು ಇರಲೊಲ್ಲರೇಕೆ? ಆದರೆ ನಮ್ಮ ಮನೆಗೆ ಬಂದವರ ಹೆಸರನ್ನು ನಾವೇ ಕೇಳಲಿಲ್ಲವಲ್ಲ. ಆ ನಮ್ಮ ಸ್ವಾತಂತ್ರ್ಯವನ್ನು ನಾವಾಗಿಯೇ ಬಿಟ್ಟುಕೊಟ್ಟೆವಲ್ಲ….ಮುಖ್ಯವಾಗಿ ನಾವು ನೀರಿಲ್ಲದವರು-ಸತ್ವಹೀನರು!’ ರಾಮಕೃಷ್ಣನಿಗೆ ತನ್ನ ನಡತೆಯ ಬಗ್ಗೆ ತನಗೇ ಸಿಟ್ಟು ಬಂತು. ತಿರಸ್ಕಾರ ಮೂಡಿತು: ‘ನಮ್ಮ ಮನೆಯಲ್ಲಿ ನನಗಿದ್ದ ಸ್ವಾತಂತ್ರ್ಯವನ್ನು ನಾನಾಗಿಯೇ ಚೆಲ್ಲಿಕೊಟ್ಟೆ-ಥೂ ಮೂರ್ಖ-ಹೇಡಿ ಹೇಡಿ…’

ಸೋಫಾದಿಂದ ಧಡಕ್ಕನೆ ಎದ್ದವನೇ ರಾಮಕೃಷ್ಣ ಹೊರಗೆ ಬಾಲ್ಕನಿಗೆ ಬಂದ. ಬಾಲ್ಕನಿಯ ಗೋಡೆಯೊಂದರ ಮೇಲೆ ತೂಗಹಾಕಿದ ಕೆಲೆಂಡರ್ ಒಂದರ ಮೇಲೆ ಅವನ ಲಕ್ಷ್ಯ ಹೋಯಿತು. ಕೆಂಪು ಬಣ್ಣದ ಮೂರು ತಾರೀಖುಗಳು ನಿನ್ನೆ ಇಂದು ನಾಳೆ ರಜೆ ಎಂದು ಸಾರುತ್ತಿದ್ದವು. ಏಕೋ ಅವನ್ನು ನೋಡಿದ ಕೂಡಲೇ ರಾಮಕೃಷ್ಣನಿಗೆ ತಡೆಯಲಾಗದ ಸಿಟ್ಟು ಬಂದಿತು. ಕೆಲೆಂಡರನ್ನು ಸಮೀಪಿಸಿ ಆ ಹಾಳೆಯನ್ನು ಕಿತ್ತು ಚೂರುಚೂರಾಗಿ ಹರಿದೊಗೆದ. ಗಾಳಿಯಲ್ಲಿ ತೂರಿದ ಆ ಕಾಗದದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಕೆಳಗಿಳಿಯುವುದನ್ನೇ ನೋಡುತ್ತಿದ್ದಾಗ ಅವನ ಲಕ್ಷ್ಯ ಒಮ್ಮೆಲೇ ಮುಂದಿನ ರಸ್ತೆಯ ಮೇಲೆ ಹೋಯಿತು. ನಿನ್ನೆ ನೋಡಿದ ಆ ಸ್ಟೀಮ್‌ರೋಲರ್ ತಿರುಗಿ ಬಂದಿತ್ತು- ರಸ್ತೆಯನ್ನು ಸರಿಗೊಳಿಸಲು. ‘ಗಡಗಡ’ ಗುಡುಗುತ್ತ ಹಿಂದೆಮುಂದೆ ಉರುಳುವಾಗ ಅದರ ಭಾರದ ಕೆಳಗೆ ರಸ್ತೆಯ ಮೇಲೆ ಹಾಸಿದ ಕಲ್ಲುಗಳು ಒಂದರ ನಂತರ ಒಂದು ಸಪಾಟಾಗುತ್ತಿದ್ದವು. ಸ್ಟೀಮ್‌ರೋಲರಿನಿಂದ ತುಸು ಅಂತರದಲ್ಲಿ ಬಿದ್ದ ದೊಡ್ಡ ಕಲ್ಲೊಂದು ರಾಮಕೃಷ್ಣನ ಲಕ್ಷ್ಯವನ್ನು ಸೆಳೆಯಿತು. ಎಲ್ಲಿಲ್ಲದ ಕುತೂಹಲ ಕೆರಳಿಸಿತು. ರಾಮಕೃಷ್ಣ ನೆಟ್ಟ ದೃಷ್ಟಿಯಿಂದ ಅದನ್ನೇ ನೋಡಹತ್ತಿದ. ಉಳಿದವುಗಳಿಗಿಂತ ತುಸು ದೊಡ್ಡದಾದ ಆ ಕಲ್ಲು ಆ ರೋಲರಿನ ಭಾರವನ್ನು ಹೇಗೆ ಪ್ರತಿಭಟಿಸೀತೋ ಎನ್ನುವುದನ್ನು ನೋಡಲು ಆತುರಗೊಂಡ. ಸ್ಟೀಮ್‌ರೋಲರು ಮೂರು ನಾಕ್ಲುನಾಲ್ಕು ಸಲ ಅದರ ಹತ್ತಿರ ಹತ್ತಿರ ಬಂದು ಹಿಂದೆ ಹೊರಳಿತು. ರಾಮಕೃಷ್ಣನ ಕುತೂಹಲ ಕ್ಷಣಕ್ಷಣಕ್ಕೆ ಹೆಚ್ಚಹತ್ತಿತು. ಏನೋ ದಿವ್ಯ ಘಟನೆಯೊಂದನ್ನು ಪ್ರತ್ಯಕ್ಷ ನೋಡಲಿದ್ದವನಂತೆ ಆ ಕೊನೆಯ ಕ್ಷಣವನ್ನು ಕಾಯಹತ್ತಿದ. ಕೊನೆಗೊಮ್ಮೆ ಆ ಕಲ್ಲೂ ಸ್ಟೀಮ್‌ರೋಲರಿನ ಪ್ರಚಂಡ ಭಾರದ ಕೆಳಗೆ ‘ಗುಡುಪ್’ ಎಂದು ಉಳಿದವುಗಳೊಂದಿಗೆ ಸಪಾಟಾಯಿತು. ಏಕೋ ಆ ಕಲ್ಲಿನ ಬಗೆಗೆ ಮೊದಲೊಮ್ಮೆ ತೀವ್ರವಾದ ತಿರಸ್ಕಾರವೆನಿಸಿತು: ಮರುಕ್ಷಣ ಅದರ ಬಗ್ಗೆ ಅರ್ಥವಾಗದ ಸಹಾನುಭೂತಿ ರಾಮಕೃಷ್ಣನ ಹೃದಯವನ್ನು ಮೆಲ್ಲನೇ ಆವರಿಸಹತ್ತಿತು.
*****
(೧೯೫೯)

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.