ಟಿ.ವಿ. ನಟನಟಿಯರು ಇನ್ನು ಚಿತ್ರದಲ್ಲಿ ನಟಿಸುವಂತಿಲ್ಲ

‘ವಂಶಕೊಬ್ಬ’ ಮುಹೂರ್ತ ಸಮಾರಂಭದಂದು ಈ ಮಾತನ್ನು ಆರಂಭಕ್ಕೆ ಪ್ರಸ್ತಾಪಿಸಿದವರು ನಿರ್ಮಾಪಕ ಮಾಣಿಕ್‌ಚಂದ್!

‘ನಾನೊಂದು ಊರಿಗೆ ಹೋಗಿದ್ದೆ. ೪೦-೫೦ ಜನ ಟಿ.ವಿ. ನೋಡ್ತಿದ್ರು. ಯಾಕೆ ಸಿನಿಮಾ ನೋಡಲ್‌ವೇನ್ರಯ್ಯ ಅಂದೆ. ಅರೆ, ಈ ಟೀವಿಲಿರೋ ಇದಿದೇ ಮುಖಗಳನ್ನು ಸಿನಿಮಾದಲ್ಲಿ ತೋರಿಸಿದ್ರೆ ಯಾರು ಹೋಗ್ತಾರೆ. ಟಿವೀಲೆ ನೋಡ್ಕೋತೀವಿ ಅಂದ್ರು. ಅವರು ಹೇಳೋದು ನಿಜವೇ. ಅದರಿಂದ ಟ.ವಿ.ಕಲಾವಿದರನ್ನು ಸಿನಿಮಾಗೆ ಹಾಕ್ಕೋಳ್ದೇ ಇರೋದೇ ಒಳ್ಳೇದು’

ಎಂದಾಗ ಚಿತ್ರನಟ ಜಗ್ಗೇಶ್ ಸಹಾ ದನಿಗೂಡಿಸಿ ‘ಸತ್ಯ ಆ ಮಾತು ಆ ದೃಷ್ಟಿಯಿಂದಲೇ ಇನ್ನು ಮೇಲೆ ಟೀವೀಲಿ ಪಾರ್ಟು ಮಾಡೋರನ್ನು ಸಿನಿಮಾಗೆ ಹಾಕ್ಕೋಬಾರದು ಅನ್ನೋ ವಿಷಯ ಮಾತುಕತೆ ನಡೀತಾ ಇದೆ’.

‘ಅದು ನಿಮ್ಮ ಬ್ಯಾನರ್‍ ನಿರ್ಧಾರವಾದರೆ, ಹಾಗೆ ಮಾಡಕ್ಕೆ ನೀವು ಸರ್ವತಂತ್ರ ಸ್ವತಂತ್ರರು’ ಎಂದೆ.

‘ನಮ್ಮ ಬ್ಯಾನರ್‍ ಅಂತಲ್ಲ. ಎಲ್ಲಾ ನಿರ್ಮಾಪಕರು ಸೇರಿ ಅಂಥ ಒಂದು ನಿರ್ಧಾರಕ್ಕೆ ಬರೋ ವಿಷಯದಲ್ಲಿ ಚರ್ಚೆ ನಡೀತಿದೆ. ಬರುತ್ತೆ ಆ ಆರ್ಡರ್‍ ಇಷ್ಟರಲ್ಲೆ’ ಎಂದರು.

ಆ ಸುದ್ದಿ ಪ್ರಕಟವಾದ ಮರುಘಳಿಗೆ ಎಲ್ಲೆಡೆ ಈಗ ಆ ಕುರಿತೇ ಬಿಸಿಬಿಸಿ ಚರ್ಚೆ.

‘ಟಿ.ವಿ.ಯವರು ಸಿನಿಮಾಗೆ ಬೇಡ ಅಂತ ಹೇಳಕ್ಕೆ ಇವರು ಯಾರು? ಟ.ವೀಲೆ ಮಾಡಲ್ಲ ಅನ್ನೋರಿಗೆ ಚಿತ್ರದಲ್ಲಿ ಅವಕಾಶ, ಕೈತುಂಬಾ ಹಣ ಕೊಡ್ತಾರಂತಾ? ಈ ದೇಶದ ಪ್ರಜೆಯ ಮೂಲಭೂತವಾದ ಹಕ್ಕು ಕಿತ್ಕೊಳ್ಳಕ್ಕೆ ಯಾರಿಗೆ ರೈಟ್ಸ್ ಇದೆ? ಈ ಧೋರಣೆ ತಪ್ಪು’ ಎಂದವರು ಕಲಾವಿದರ ಸಂಘದ ಕಾರ್ಯದರ್ಶಿ ಸುಂದರರಾಜ್.

‘ಸೀರಿಯಲ್ಲು-ಮೆಗಾ ಧಾರಾವಾಹಿಗಳು ಇಲ್ಲಾ ಅಂದಿದ್ರೆ ನಾವು ಉಪವಾಸ ಸಾಯಬೇಕಾಗಿತ್ತು. ಸೀರಿಯಲ್‌ಲ್ಲಿ ಪಾರ್ಟ್ ಮಾಡೋದು ನೋಡಿ ಕೆಲವರು ಸಿನಿಮಾಕ್ಕೂ ಕರೆದಿದಾರೆ. ವಿನಯ ಪ್ರಸಾದ್‌ನ ಟೀವಿಲಿ ನೋಡಿದ ಮೇಲೆ ತಾನೆ ಪಾರ್ವತಮ್ಮ ರಾಜ್‌ಕುಮಾರ್‍ ಅವರಿಗೆ ಒಂದು ಅವಕಾಶ ಕೊಟ್ಟಿದ್ದು. ಹಾಗೆ ಎಷ್ಟೋ ಜನ ಟಿ.ವಿ.ಯಿಂದ ಸಿನಿಮಾಗೆ ಹಾರಿದಾರೆ’ ಅಂಥ ಕಲಾವಿದರ ಪಟ್ಟಿ ಬಹಳ ಉದ್ದದೇ ಇದೆ.

‘ಹೇಮ ಅಮೆರಿಕಾ-ಅಮೆರಿಕಾ ಸಿನಿಮಾದಲ್ಲೂ ಮಾಡಿದರು-ಟೀವಿಲೂ ಮಾಡ್ತಿದಾರೆ. ತಾರಾ ಸಿನಿಮಾ ನಟಿಯೂ ಹೌದು-ಟಿ.ವಿ ನಟಿಯೂ ಹೌದು. ಇದನ್ನೇ ಮಾಡು-ಇದು ಬೇಡ ಅಂತ ಹೇಳೋ ಹಕ್ಕು ಯಾರು ಯಾರಿಗೆ ಕೊಟ್ಟಿದ್ದಾರೆ. ಅಮಿತಾ ಬಚ್ಚನ್ ಅಂತ ಭಾರಿ ನಟರೇ ಸ್ಮಾಲ್ ಸ್ಕ್ರೀನ್‌ಗೆ ಅಡ್ವರ್‌ಟೈಸ್‌ಮೆಂಟ್ ಫಿಲಮ್ಸ್‌ಲ್ಲಿ ಮಾಡಿಲ್ವೇ?’ ಎಂದು ಪ್ರಶ್ನೆಗಳ ಹುತ್ತವನ್ನೇ ಎದುರಿಸಬೇಕಾಗಿ ಬಂದಿದೆ-ಈಗ.

ಪಳಗಿದ ಟಿ.ವಿ ನಿರ್ಮಾಪಕ-ನಿರ್ದೇಶಕರೊಬ್ಬರು ಕೇಳಿದರು ‘ಈಗ ಖ್ಯಾತ ಸಿನಿಮಾ ನಿರ್ದೇಶಕರಾದ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್‍, ಡಿ.ರಾಜೇಂದ್ರಬಾಬು, ವಿಶ್ವನಾಥ್, ದಿನೇಶ್‌ಬಾಬು, ಭಾರ್ಗವ, ದೊರೆ-ಭಗವಾನ್, ಎಂ.ಎಸ್. ರಾಜಶೇಖರ್‍, ಎಸ್. ನಾರಾಯಣ್ ಮುಂತಾದವರೆಲ್ಲ ಟಿ.ವಿ. ಸೀರಿಯಲ್‌ಗಳು ಮಾಡಕ್ಕೆ ಯಾಕೆ ಬರ್‍ತಿದಾರೆ ನಮ್ಮ ಹೊಟ್ಟೆ ಮೇಲೆ ಹೊಡೆಯಕ್ಕಾ? ನಾವಾದ್ರೆ ನಾವೇ ಡೈರೆಕ್ಟ್ ಮಾಡತೀವಿ. ಇವರು ತಮ್ಮ ಹೆಸರು ಲೆಂಡ್ ಮಾಡಿ ಸಬ್ ಕಾಂಟ್ರಾಕ್ಟ್ ಬಿಡ್ತಾರಲ್ಲ ಇದು ಸರಿಯಾ? ಇದಕ್ಕೂ ಅಂಕೆ ಹಾಕ್ತಾರಾ ಹಾಗಾರೆ’ ಎಂದರು.

ಅವರು ಹೇಳಿದ ಮಾತೂ ನಿಜವೇ. ಸಿನಿಮಾದವರಾದ ಜಿ.ವಿ. ಅಯ್ಯರ್‍, ಪಂಡರಿಬಾಯಿ, ಮೈನಾವತಿ, ಕೆ.ಎಸ್. ಅಶ್ವತ್ಥ್ ಟೀವೀಲಿ ಮಾಡ್ತಿದಾರಲ್ವ?

ಟಿ.ವಿ. ಚಾನಲ್ಲುಗಳವರು ದೊಡ್ಡ ಹೆಸರು ಆದ್ರೆ-ಗೋಸ್ಟ್ ಡೈರಕ್ಟರು ಕೆಲಸ ಮಾಡಲಿ ಅನ್ನೋದಾದ್ರೆ ಕ್ವಾಲಿಟಿ ಬಾ ಅಂದ್ರೆ ಹ್ಯಾಗೆ ಬರುತ್ತೆ? ಉಮಾಶ್ರೀ ಅಂಥ ನಟಿ ಸಿನಿಮಾ, ಟೀವಿಗಳಲ್ಲಿ ಇವತ್ತು ದೊಡ್ಡ ಹೆಸರು. ಮುಂಚೆ ಬದುಕಿನ ಸಲುವಾಗಿ ಅದೆಷ್ಟು ಕಂಪನಿ ನಾಟಕಗಳಲ್ಲಿ ಮಾಡಿದರು. ಊರೂರು ಸುತ್ತಿದ್ದರು. ಆಗ ಯಾರು ಬಂದರು ನೆರವಿಗೆ.

ಅಂತಾದ್ರಲ್ಲಿ ಟಿ.ವಿ. ಕಲಾವಿದರನ್ನು ಸಿನಿಮಾದಲ್ಲಿ ಬ್ಯಾನ್ ಮಾಡೋ ಯೋಜನೆಯೇ ತುಂಬಾ ದರಿದ್ರವಾದದ್ದು.

ಈಗ ಸಿನಿಮಾ ಮಾಡ್ತಿರೋ ಎಷ್ಟು ಜನಕ್ಕೆ ಆ ಮಾಧ್ಯಮದ ಮೇಲೆ ಹಿಡಿತವಿದೆ. ಸಿನಿಮಾರಂಗದ ಅ.ಆ.ಇ.ಈ ಗೊತ್ತಿಲ್ದೆ ಸಿನಿಮಾ ನಿರ್ಮಾಣಕ್ಕೆ ನಿರ್ದೇಶನಕ್ಕೆ ಇಳೀತಿಲ್ವೆ.

ಅನುಭವವೇ ಅವರಿಗೆ ಪಾಠ ಹೇಳುತ್ತೆ ನಿನ್ನ ನೆಲೆ ಎಲ್ಲಿ ಅಂತ?

ಬಾಲಚಂದರ್‍ ಸಿನಿಮಾ ರಂಗದ ಖ್ಯಾತಿವೆತ್ತ ನಿರ್ದೇಶಕರು. ಅವರು ನಿರ್ದೇಶನ ಮಾಡೋ ಸೀರಿಯಲ್ ತುಂಬ ಜನಪ್ರಿಯವಾಗುತ್ತೆ. ಖ್ಯಾತ ನಟ-ನಟಿಯರು ಅವರ ಸೀರಿಯಲ್‌ಗಳಲ್ಲಿ ಮಾಡಕ್ಕೆ ಹಾತೊರಿತಾರೇ. ಯಾಕೆ? ಅವರು ನಿರೂಪಣೇಲಿ ಅಂಥ ಬಿಗಿ ಇರುತ್ತೆ.

ಅಂಥವರನ್ನು ನೀವು ಸಿನಿಮಾದವರು ಟಿ.ವಿ. ಮಾಡಬೇಡಿ ಅಂತ ಹೇಳಬೇಕು ಯಾಕೆ?

ಈಗ ಯಾರು ಬೇಕಾದ್ರೂ ಸಿನಿಮಾ ಮಾಡಬಹುದು. ಆತ ಬ್ಲಾಕ್ ಮಾರ್ಕೆಟೀರ್‍ ಆಗಿರಬಹುದು,. ಸ್ಮಗ್ಲರ್‍ ಇರಬಹುದು, ಈರುಳ್ಳಿ ಮಾರೋನು ಇರಬಹುದು, ಎಣ್ಣೆ ಗಡಂಗ್‌ನವರಿರಬಹುದು. ಯಾರಾದರೂ ಆಗಿರ್‍ಲಿ-ಹಣ ಹಾಕೋನು ಅವನು ಕಳ್ಕೊಳ್ಳಬಹುದು ಅಥವಾ ದುಡ್ಡು ಕೊಳ್ಳೆಯೇ ಹೊಡೀಬಹುದು.

ಥಿಯೇಟರ್‌ಗೆ ಜನ ಬರದಿರಲು ಟೀವಿ ಸೀರಿಯಲ್ಲೇ ಕಾರಣ ಎಂದು ಹೇಗೆ ಹೇಳುವುದು. ದೂರದರ್ಶನ, ಉದಯ, ಈಟಿ.ವಿ. ಕಾವೇರಿ ಇದಲ್ಲದೆ ಪರಭಾಷಾ ಚಾನೆಲ್‌ಗಳಲ್ಲಿ ಕಾಂಪಿಟಿಷನ್ ಮೇಲೆ ಎಷ್ಟೋ ಸಲ ತುಂಬ ಒಳ್ಳೊಳ್ಳೆ ಸಿನಿಮಾಗಳು ಹಾಕ್ತಿರತಾರೆ. ಅಲ್ಲೂ ರಾಜ್‌ಕುಮಾರ್‍, ವಿಷ್ಣು, ಅನಂತ್‌ನಾಗ್, ಅಂಬರೀಶ್, ಶಿವರಾಜ್‌ಕುಮಾರ್‍, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಸುದೀಪ್, ದೇವರಾಜ್, ದೊಡ್ಡಣ್ಣ, ಪ್ರಕಾಶ್‌ರೈ ಎಲ್ಲರ ಚಿತ್ರಗಳೂ ಬರ್‍ತಿರತ್ತಲ್ಲ. ಕಲ್ಯಾಣ್‌ಕುಮಾರ್‍, ನರಸಿಂಹರಾಜು, ಉದಯಕುಮಾರ್‍, ಬಾಲಣ್ಣ, ಎನ್.ಎಸ್. ರಾವ್, ಮುಸರಿ, ಕಲ್ಪನಾ, ಮಂಜುಳಾ ಮುಂತಾದ ದಿವಂಗತರ ಚಿತ್ರಗಳೂ ಬರ್‍ತಿರ್‍ತವೆ. ಸಿನಿಮಾ ಥಿಯೇಟರ್‌ಗೆ ಇವರ ಚಿತ್ರಗಳು ಬಂದಾಗ ಎಲ್ಲ ಅದದೇ ಮುಖಗಳು ಅಂಥ ಸಿನಿಮಾ ಮಂದಿರಕ್ಕೆ ಬರೋದು ಬಿಟ್‌ಬಿಟ್ಟಿದಾರಾ?

ಇಲ್ಲ. ಸ್ಮಾಲ್ ಸ್ಕ್ರೀನ್‌ನಲ್ಲಿ ನೋಡೋ ಅನುಭವವೇ ಬೇರೆ-ಬಿಗ್ ಸ್ಕ್ರೀನ್‌ನಲ್ಲಿ ನೋಡೋ ಅನುಭವವೇ ಬೇರೆ.

ಅದೆಲ್ಲ ಅವರವರ ಅಭಿರುಚಿಗೆ ಬಿಟ್ಟ ವಿಷಯ. ಯಾರೋ ಹಾಕಿದ ತಾಳಕ್ಕೆ ಯಾಕೆ ಎಲ್ಲ ಕುಣೀಬೇಕು? ಆರ್ಟ್ ಫಿಲಂನಲ್ಲಿ ಮಾಡೋರು ಕಮರ್ಷಿಯಲ್ ಫಿಲಂನಲ್ಲಿ ಮಾಡಬಾರದು ಅಂದಿದ್ರೆ ಶಂಕರ್‌ನಾಗ್ ಅಂಥ ನಟ ಸಿನಿಮಾದಲ್ಲಿ ಮಿಂಚಕ್ಕೇ ಆಗ್ತಿರಲಿಲ್ಲ.

ಕನ್ನಡ ಬರದೆ ಇರೋರು ಕನ್ನಡ ಚಿತ್ರಗಳಿಗೆ ಡೈಲಾಗ್ ಬರೀಬಾರದು ಅನ್ನಕ್ಕೆ ಆಗುತ್ತಾ. ಕಾಸಿನ ಸಲುವಾಗಿ ಯಾರೋ ಗೋಸ್ಟ್ ರೈಟರ್‍ ಆಗಿರ್‍ತಾರೆ. ಇದು ಮಾಡಬೇಡಿ ಅಂತ ಅವರ ಅನ್ನ ಕಿತ್ಕೊಳ್ಳಕ್ಕೇ ನಾವು ಯಾರು?

ಅಪುರೂಪಕ್ಕೆ ಒಂದು ನಿರ್ಮಾಪಕ ಸಂಘವಾಗಿದೆ ಅಂದ ಮಾತ್ರಕ್ಕೆ ಅಲ್ಲಿ ತುಘಲಕ್ ದರ್ಬಾರ್‍ ಆಗಬಾರದಲ್ವೆ?

ರವಿಚಂದ್ರನ್ ಅವರ ಬಳಿ ಪತ್ರಕರ್ತರು ಈ ಅಂಶ ಪ್ರಸ್ತಾಪಿಸಿದಾಗ “ನಾವು ಸಿನಿಮಾದವರು ಎಷ್ಟು ಕಲಾವಿದರಿಗೆ ಕೈತುಂಬ ಸಂಭಾವನೆ ಕೊಡ್ತೀವಿ. ಪೂರ್ತಿ ಹಣಬೇಕು ಅಂದ್ರೆ ಚಿತ್ರಮುಗಿಯುವವರೆಗೆ ಕಾಯಬೇಕು. ಹಾಗೆ ನೋಡಿದರೆ ಟೀವೀಗೆ ಜಗ್ಗೇಶ್ ಚೆನ್ನಾಗಿ ಸೂಟ್ ಆಗ್ತಾರೆ. ಟಿ.ವಿ.ಲೇ ಮಾಡೋಕೆ ಹೇಳಿ ಜಗ್ಗೇಶ್‌ಗೆ” ಎಂದು ನಕ್ಕರು. ಈ ಬಗ್ಗೆ ಈಗ ತುಂಬ ಗಂಭೀರವಾಗಿ ಚರ್ಚೆ ನಡೆಯಬೇಕಿದೆ. ಅಲ್ಲವೆ?
*****
(೩೦-೧೧-೨೦೦೧)