ಶಬ್ದದ ಲಜ್ಜೆ ನೋಡಾ

ಹೇಳಿದರ ಕತಿಗಿತಿ ಅಂದೀರಿ ದೇವರೂ
ಶಾಸ್ತ್ರ ಸಂಪದನೀತ, ನಮ್ಮ ನಿಮ್ಮಂಥ
ಪೋಸ್ಟಿನ ವಿಳಾಸವಂತ, ಮತಿವಂತ ಹಾಗಂತ
ಅರಸೀಕನಲ್ಲ, ಕಿಟ್ಟಲ್‌ಕೋಶವಿನಾ ಹಳಗನ್ನಡ
ಪದಾರ್ಥ ಮಾಡಬಲ್ಲ; ಹೊಸೆಯಬಲ್ಲ
ಚುಟುಕಗಿಟಕ ಮುಕ್ತಕ, ಹೇಳಬಲ್ಲ ಸಂಸ್ಕೃತದಲ್ಲಿ
ಮಾರುದ್ದದ ಸಮಸ್ತಪದಗಳ ಪ್ರಾಸಾನುಪ್ರಾಸಗಳ
ಪನ್ನು ಜೋಕುಗಳ ಕಟ್ಟಬಲ್ಲ.
ಹೇಳಿದರ ಕತೆಗಿತಿ ಅಂದೀರ ದೇವರೂ
ಕಿವಿಗೊಟ್ಟು ಕೇಳಿರಿ ಹೇಳುವೆನೀತನ ೧೦
ನಿವಳ ಹಕೀಕತ್ತ
ನವ್ಯ ಕಾವ್ಯದ ಹೊರಗೆ ಕೂತ ಸರಸ್ವತೀ
ಕೊಡು ನನಗೆ ತಾಕತ್ತ.
ವಿಳಾಸವಂತ ಎಂದೆನಲ್ಲ-ಮನೆಯಿಂದ ಅವನಿಗೂ ಊರಿನ ಕೇರಿಯ ರಸ್ತೆಯ ಪಕ್ಕದಲ್ಲಿ,-
ಎಲ್ಲಿ ಊರಿನ ಮೂರು ರಸ್ತೆಯ ವಕ್ರಕೂಟದ ಮಾಟವೋ
ಎಲ್ಲಿ ಮುದಿ ಎತ್ತೊಂದು ಮಲಗಿದೆ ಮೈಗೆ ಸಾವಿರ ನೊಣಗಳೋ
ಎಲ್ಲಿ ಎತ್ತಿನ ತುದಿಯ ಬಾಲನು ಕಣ್ಣಿಗೊತ್ತುವ ಜನಗಳೋ
ಎಲ್ಲಿ ಟ್ರಕ್ಕಿನ ಸರ್ಪನೆರಳಲಿ ಕಿರಿಚಿ ಓಡುವ ಸ್ಕೂಟರೋ
ಅಲ್ಲೆ ಅಲ್ಲೇ ಅವನ ಮನೆಯುಂಟು. ಅಲ್ಲಿಗೂ ಹೋಗುವ ಜನ- ೨೦

ಜನಗಣತಿಯಧಿಕಾರಿ, ಚುನಾವಣೆಯ ಹುರಿಯಾಳು, ಅರಿಷಿಣಕುಂಕುಮದ ಗರತಿ, ಹಾಲಿನ ಗೌಳಿ, ತರಕಾರಿಯ ಥರಥರ ಮಂದಿ.
ಅಕೋ ಬಂದ ಬಂದ! ಅವನೆಂಬಂಥ ಮತಿವಂತ ಕುಲಗೋತ್ರಗಳ ವಿಷಯ ನನಗೆ ಗೊತ್ತಿರದಂಥ, ರಹಿತಾದಿ ಮಧ್ಯಂತ, ಬಿರುದುಬಾವಲಿ ರಹಿತ ಕಥಾನಾಯಕ ಬಂದಂಥವನು ಎತ್ತಿದ ಬಾಲದ ತುದಿ ಮುಟ್ಟಿ ಕಣ್ಣಿಗೊತ್ತಿಕೊಂಡಂಥವನು ನಾಕೈದು ಸಲ ಪ್ರದಕ್ಷಿಣೆಹಾಕಿ ಮಹಮನೆಗೆ ಬಂದು ಬಾಗಿಲು ತಟ್ಟಿದಂಥವನಾದಾಗ-ಸುವಿಶಾಲವಾದ ಆಳೆತ್ತರ ಆಳಗಲದ ಒಂದು ಮೊಲೆ ಬಂದು ಬಾಗಿಲು ತೆರೆದು ಮಾಮೂಲಿನಂತದರ ತುದಿ ಅವನ ಕಿವಿ ತುರಿಸಿ ಮಾಮೂಲು ನಗೆ ನಕ್ಕು ಒಳಬಂದು ಬಾಗಿಲಿಕ್ಕಿಕೊಂಡು-
ತಾಳ್ರಿ- ನಿಮಗೆ ಈ ಮನೆಯ ವಿಚಾರ, ಹೊಸದಾಗಿ ಬಂದಿದ್ದೀರಲ್ಲ-ಹೇಳ ೩೦
ಬೇಕು. ನೋಡ್ರಿ ಇದೊಂದು ರೂಮು, ರೂಮಿಗಂಟಿ ಬಾಕೀ ಮನೆ. ಬಾಕೀ ಮನೆ ವಿಚಾರ ಇತ್ತ ನಮಗೂ ಗೊತ್ತಿಲ್ಲ, ಅತ್ತ ನಾಯಕನಿಗೂ ಗೊತ್ತಿಲ್ಲ.
ರೂಮಿನ ಮೂರು ಗೋಡೆ ಕಲ್ಲುಮಣ್ಣಿನದೆ. ನಾಲ್ಕನೇ ಕರಿಗೋದೆಯಿದೆಯಲ್ಲಾ ಮೊಲೆಗೂ ಅವನಿಗೂ ಮದುವೆಯಾದಾಗ ಇರಲಿಲ್ಲ. ಅಥವಾ ಅಪಾರ್ಥವಾಗದಂತೆ ಹೇಳಬೇಕೆಂದರೆ ಅವನು ಮದುವೆಯಾದದ್ದು ಮೊಲೆಯನ್ನಲ್ಲ-ಹೆಂಗಸನ್ನೆ. ಸುಳ್ಳು ನಾ ಯಾಕೆ ಬೆರೆಸಲಿ? ಇಬ್ಬರೂ ಚೆಲುವರೆ. ಆದರೆ ಅಗ್ನಿಸಾಕ್ಷಿಯಾಗಿ ಸರ್ವಸಮಸ್ತರ ಎದುರು ಅವನು ಕಟ್ಟಿದ್ದ, ಆಕೆ ಕಟ್ಟಿಸಿಕೊಂಡಿದ್ದ ಕರಿಮಣಿ ತಾಳಿ ಅವರಿಬ್ಬರಿಗಿಂತ ಸುಂದರವಾಗಿತ್ತು ಚೆಲುವಾಗಿತ್ತು. ಅಷ್ಟೇ ಯಾಕೆ ಮದುವೆಗೆ ಬಂದಿದ್ದ
ಅಚ್ಚ ಮುತ್ತೈದೇರು ಮೆಚ್ಚಿ ಕೊಂಡಾಡಿದರು ೪೦
ಹೆಚ್ಚೀನ ತಾಳಿಯ ಹೊಗಳಿ
ದಾರಕೆ ಬೆಲೆಯೆಷ್ಟು ಕರಿಮಣಿಗೆ ಬೆಲೆಯೆಷ್ಟು
ಬಂಗಾರಕೆಷ್ಟು ಬೆಲೆ ಹೇಳಿ

ಎಲ್ಲಿ ಮಾಡಿಸಿದಿರಿನ್ನೆಲ್ಲಿಂದ ತಂದೀರಿ
ಎಷ್ಟೊಂದು ಹಣವ ತೆತ್ತೀರಿ
ಕರಕುಶಲ ಪತ್ತಾರ ಮೊದಲು ಹೇಳಿದ್ದೆಷ್ಟು
ನೀವು ಕೊಟ್ಟದ್ದೆಷ್ಟು ಹೇಳ್ರಿ.

ಎಂದು ಮುಟ್ಟಿಮುಟ್ಟಿ ನೋಡಿ ತಟ್ಟಿತಟ್ಟಿ ಕೇಳಿದರೆ ಅದ ಕೇಳಿಕೇಳಿ ಅದ ಕೇಳಿಕೇಳಿ ಅವನಿಗೆ ಹೆಮ್ಮೆಯಾದದ್ದು ನಿಜ. ಅಷ್ಟೇ ಅಲ್ಲ, ಅಷ್ಟೇ ಆಗಿದ್ದರೆ ನಿಮ್ಮೆದುರಿಗೆ ಇದೆಲ್ಲಾ ಯಾಕೆ ಹೇಳುತ್ತಿದ್ದೆ-ಆ ದಿನ ಹಿರಿಯರೆಲ್ಲ ಅವರಿಬ್ಬರನ್ನು ಬಿಟ್ಟು ಆ ತಾಳಿಗೇ ಆಶೀರ್ವದಿಸಿದರು. ೫೦ ಅದಕ್ಕೆ ಆಯುರಾರೋಗ್ಯ ಅಷ್ಟಪುತ್ರ ಸುಖ ಸೌಭಾಗ್ಯ ಹಾರೈಸಿದರು. ಅವರ ತುಟಿಯಂಚಿನ ಐರನಿ ಗುರುತಿಸಿ ಅವನು ಹಾಗೆಂದು ಹೇಳಿದರೆ ‘ಕೆಟ್ಟ ಅಭಿರುಚಿ’ಯೆಂದರು.

ಹೇಳಿದರ ಕತಿಗಿತಿ ಅಂದೀರ ದೇವರೂ, ಅಂದಿನಿಂದ ಅವನೂ ಒಬ್ಬ ಮನುಷ್ಯನಾದ. ಈಗ ಜನ ಅವನ ನಂಬುತ್ತಾರೆ. ಮದುವೆ ಮುಂಜಿ ವಿಧಿ ಆಚರಣೆಗಳಿಗೆ ಆಮಂತ್ರಿಸುತ್ತಾರೆ. ಬೆಳೆದ ಹುಡುಗಿಯರ ತಂದೆಯರು, ಸುಂದರಿಯರ ಗಂಡಂದಿರು, ರೋಟರಿ ಕ್ಲಬ್ಬು ಅಕ್ಕಪಕ್ಕ ನೆರೆಹೊರೆ ಅಂಗಡಿ ಶೆಟ್ಟಿ ವಿಶ್ವಾಸದಿಂದ ಇರುತ್ತಾರೆ. ಸ್ವಲ್ಪ ಹಿಂದುಮುಂದಾಯಿತು ಕ್ಷಮಿಸಿರಿ. ಹೀಗೇ ಹೇಳಬೇಕಿತ್ತು-ತಾಳಿಯಿತ್ತಲ್ಲ ಇಬ್ಬರಿಗೂ ಅಚ್ಚುಮೆಚ್ಚಿನದಾಯಿತು. ನೀವು ಪ್ರೀತಿಯಿಂದ ಏನನ್ನಾದರೂ ನೋಡತೊಡಗಿದರೆ ಅದು ಬೆಳೆಯತೊಡಗುತ್ತದೆಂದು ನಂಬಿಕೆಯಿದೆ ಗೊತ್ತಾ? ಮೊದ ೬೦
ಮೊದಲು ಅದರೊಂದಿಗೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಹೌದು. ಆಮೇಲೆ ಭಾರೀ ಸರಳ. ತಾಳಿಯಿತ್ತಲ್ಲ, ಅವರಿಬ್ಬರ ಪ್ರೀತಿಯಿಂದಿರಬೇಕು-ಬೆಳೆಯತೊಡಗಿತು, ಹೀಗೆ:
ಪ್ರಸ್ತದ ದಿವಸ
ಮನೆತುಂಬಿದ ನೆಂಟರ ಕಣ್ಣಲ್ಲಿ
ಅಶ್ಲೀಲ ಹನಿಮೂನೊಂದು ಹೊಳೆಯುವುದ ನೋಡಿ
ಕುಲುಕುಲು ನಕ್ಕು ಖುಶಿಖುಶೀ ಪಡುವಾಗ
ಹಾ-
ಮೈವಾಡದ ನೆನಪಾಯಿತು!
ಸ್ವಲ್ಪ ವಿಷಯಾಂತರವಾಗುತ್ತದೆ ಕ್ಷಮಿಸಬೇಕು. ಆದರೂ ಮಹತ್ವದ ಮಾತು ಬಿತ್ತು. ೭೦
ಅದಕ್ಕೇ ಹೇಳುತ್ತೇನೆ: ಅವನಜ್ಜ ಸಾಯುವಾಗೊಂದು ಕೋತಿಯ ಮೈಚರ್ಮ ಕೊಟ್ಟಿದ್ದ:
ತಗೋ ಮಗಾ
ಸಿಕ್ಕಿದೆಯಂತ ಸಿಕ್ಕಸಿಕ್ಕಲ್ಲಿ ಬಿಚ್ಚಬೇಡ,
ಹಡಬಿಯರ ಹರಿತ ಬೆರಳಿಗೆಚ್ಚರ ತಪ್ಪಬೇಡ
ಟೊಂಕದ ಬೆದೆಯ ಹದವರಿತು ತೋರಿಸು ನಿನ್ನ
ಹನುಮಂತನವತಾರ, ಮರೆಯಬೇಡ ನೀನು
ಕೋತಿಗೆ ಕುಮಾರ.

ಆಗಲೆಂದನು ಅವನು |
ಮೈವಾಡವೆಂದು ಹೊಸ | ೮೦
ಹೆಸರು ಕೊಟ್ಟನು ಅವನು |
ಧರಿಸಿಕೊಂಡನು ಮೈಗೆ |
ಮರವೇರಿದನು ಹೊಂಗೆ |
ಹುಣಿಸೆ ಮಾಮರ ಅತ್ತಿ |
ಹರಿದು ತಿಂದನು ಹತ್ತಿ |
ಸರಿಕರೆದುರಿಗೆ ಹಾಕಿ |
ಮೆರೆದಾಡಿದನು ಶೋಕಿ |
ಸ್ಕೂಲು ಕಾಲೇಜುಗಳ |
ವಾರ್ಷಿಕೋತ್ಸವ ನಿವಳ |
ಅವಕಾಶಗಳಲೆಲ್ಲ | ೯೦
ಬಲ್ಲವರ ನಗಿಸಿದ |

ಕಾಲೇಜಿನಲ್ಲಿರಲು |
ಫುಟ್‌ಬಾಲ್ ಖಯಾಲಿ ಬಲು |
ಗೋಲು ಏಟಿಗೆ ನಾಲ್ಕು |
ಹೊಡೆದ ಹೊಡೆಯದ್ ಅವನ್ |
ಹುಡಿಗಿಯರ ಅರೆಡಜನ್ |
ತೊಡೆಯ ಬೆವರಿಸಿದ |
ಆ ಪೈಕಿ ಇಬ್ಬರಿಗೆ |
ಅವನ ಚಂಡಿಕೆಯೊಳಗೆ |
ಬೆರಳನಾಡಿಸಿದಂತೆ | ೧೦೦
ಹಿಡಿದು ಎಳೆದೆಳೆದಂತೆ |
ಕನಸಾಯಿತಂತೆ |
ಬಂತಂತೆ ಕರುಣೆ ಆ ಬಾಲೆಯರ ಕಣ್ಣ ಕನಸಿಗೆ ಮೈಯ ಹಸಿವೆಗೆ. ಅಂಗಾಂಗಗಳ ಸಂದುಗೊಂದಿಯ ಚಡಪಡಿಕೆಗೆ ಕೋತಿಯ ಮೈವಾಡ ತೊಟ್ಟು ರೂಮಿನಲ್ಲಿ ಫುಟ್ ಬಾಲವಾಡಿದ್ದನಂತೆ! ಅಂತೆ ಇದು ಹಳೆಯ ಕತೆ.
ಹೇಳಿದರ ಕತಿಗಿತಿ ಅಂದೀರಿ, ನೆನಪಾಯಿತು: ಪ್ರಸ್ತದ ದಿವಸ ಈ ಮೈವಾಡದ ನೆನಪಾಯಿತು. ತೊಟ್ಟ. ಹಾಸಿಗೆಯ ಮೇಲಿನ ಹೆಣ್ಣು ಹುಣಿಸೇ ಹಣ್ಣಿನ ಹಾಗೆ ಕಂಡು
ಅಕಾ ಅಕಾ ಅಂದು
ಗಪಾಗಪಾ ತಿಂದ.
ಪಿತ್ತ ನೆತ್ತಿಗೆ ಏರಿ ೧೧೦
ಹಾಸಿಗೆಗೆ ಬೆಂಕೀ ಹಚ್ಚಿ,
ಹಚ್ಚದ ಕಿಚ್ಚಿನಲ್ಲಿ ಫುಟ್‌ಬಾಲನಾಡತೊಡಗಿದಾಗ-
ಸಂದುಸಂದುಗಳಲ್ಲಿ ಬೆಂಕಿಯ ಜಳ
ಬುಗ್ಗೆಂದು ಹೊತ್ತಿದಾಗ-ಘಮಘಮ ಗಾಳಿ ತುಂಬಿದ
ಬಿದಿರು ಮೆಳೆಯಂತೆ
ಅದುರಿ ಚೆದುರಿ ಚೆಲ್ಲಾ ಪಿಲ್ಲಿ ಒಡಮುರಿದು ಒಟ್ಟಾದಾಗ-
ಕುಡಿವರಿದ ತೋಳತೀಟೆಗೆ ಕೈಕಟ್ಟಿ
ಹುರಿಮಾಡಿ ಹೊಸೆವಾಗ
ಕಣ್ಣಿನ ತುಂಬ ಹಂಬಲವಿಂಬಾಗಿ ಸೂಸಾಡುವಾಗ
ಯಾರೋ ಓಡಿ ಬಂದು ಜಿಗಿದಾಡುವ ಕೋತಿಯನ್ನು ಹಿಡಿದು ಚೆನ್ನಾಗಿ ಬೆನ್ನು ಬಾರಿಸಿ ೧೨೦ ಕಿತ್ತಾಡಿದರು. ಕತ್ತಿಗೆ ಕೈಹಾಕಿ ಹಿಂದಕ್ಕೆಳೆದರು. ಏನು ಎಂತಂತ ಅನ್ನೋದರಲ್ಲಿ ಕೆನ್ನೆಗೆರಡೇಟು ಬಿಗಿದು ಮೈವಾಡ ಹಿಡಿದು-
ಯಾರೊ : ಏ ಕೋತಿ, ಸ್ವಲ್ಪ ಕಿರುಚೊ.
ಅವನು : ಯಾಕಲೇ ಮಗನ ಬಾಯಿಗಿಬಂಧಾಂಗ ಆಡತಿ? ತಲಿಗಿಲಿ ನೆಟ್ಟಗಿಲ್ಲಾ?
ನೀ ಯಾರು ಏನಂತ ಹೇಳ್ತೀಯೋ ಇಲ್ಲಾ ಪೋಲೀಸರಿಗಿ ಹೇಳಲೊ?
ಯಾರೊ : ಏ ಇನ್ನಷ್ಟ ಜೋರಿನಿಂದ ಒದರು.
ಅವನು : (ಇನ್ನೂ ಜೋರಿನಿಂದ)ಮತ್ತ ಅದನ್ನ ಅಂತಾನಲ್ಲೊ! ಯಾಕ
ಬಾಯಾಗ ಹಲ್ಲ ಇದ್ದದ್ದ ಸಮ ಆಗವೊಲ್ದೇನ? ಸುಮ್ಮನ ಹೊರ
ಬೀಳ್ತೀಯೊ, ಹಲ್ಲ ಕೀಳಂತೀಯೊ?
ಯಾರೊ : ಇನ್ನ ಸಾಕು ಸುಮ್ಮನ ಬಿದ್ದುಕೊ. ೧೩೦
ಮೈವಾಡ ಸುಮ್ಮನೆ ಕೆಳಗೆ ಬಿತ್ತು. ಮೊದಲಿನ ಕೆಲನಿಮಿಷ ಕೈಕಾಲು ಅಲುಗಿಸಲಿಕ್ಕೂ ಭಯ. ಎದ್ದು ಲೈಟ್‌ಹಚ್ಚಿದ. ಆಮೇಲಾಮೇಲೆ ನೋಡಿದರೆ ತನ್ನ ಮೈಕಪ್ಪಿನೊಂದಿಗೆ ಹೆಣ್ಣಿನ ಮೈ ಬಿಳಿ ವ್ಯತ್ಯಾಸಗೊಂಡಿತ್ತು. ಕಾಣದ ಅಂಗಾಂಗಗಳ ಕಲ್ಪಿಸಿ ಇಬ್ಬರಿಗೂ ಅಂಟಿಸಿಕೊಂಡು ಇಡಿಯಾಗಬಯಸಿದ. ತನ್ನಂತೇ ಕೈಬಾಯಿ ತನ್ನಂತೆ ಕಿವಿ ಮೂಗು ತನ್ನಂತೆಯೇ ಅಂತ ಅಂತೆವೊಲ್ ಹಾಗೆಗಳ ಚಾಚಿ ಒಂದಾಗಬಯಸಿದ. ಎಚ್ಚೆತ್ತ ಅವಳು ‘ನೋಡಬಾರದೆ ಮೊಲೆಯೆಷ್ಟು ಊದಿಕೊಂಡಿದೆ’ ಅಂದಳು. ‘ನಿನಗೆ ದಣಿವಾಗಿಲ್ಲವೆ’ ಅಂದ. ಮಲಗಿದ. ಮಣಮುಕ್ಕ ಹಾವಿನ ನೆನಪಾಯಿತು:
ಮಣಮುಕ್ಕ ಹಾವಿಗೆ ಎರಡೂಕಡೆ ಎರಡು ತಲೆ
ಮೈತುಂಬ ಕಾಲು ತಿನ್ನುವುದು ಮಣ್ಣ
ಸ್ವಂತಕ್ಕೆ ಹುತ್ತಿಲ್ಲ ಅದೂ ಸಾಲದ್ದಕ್ಕೆ ೧೪೦
ಕಣ್ಣಿಲ್ಲ, ಗೊತ್ತಿಲ್ಲ ಸ್ವಂತ ಬಣ್ಣ.

ಅವರಿವರ ಹುತ್ತದಲಿ ನುಗ್ಗಿ ಐಷಾರಾಮ
ಐಹಿಕದ ಬಗೆಗೆಷ್ಟು ಯೋಚಿಸೋಣ
ಕಾಣದೊಡೆಯರ ಏಟು ಒದೆ ತಿವಿತ ಮೂದಲಿಕೆ
ಲೋಕವೇ ಇಂತೆಂಬ ಮುಸಾಫಿರ ತೀರ್ಮಾನ.

ಇದ್ದೆರಡು ತಲೆಯಲ್ಲಿ ಬಾಲ ಯಾವುದು ಎಂದು
ಎರಡಕ್ಕು ಕೊನೆಯಿರದ ಪರದಾಟವೆ.
ಮುಂದೆ, ಹೊರಟದ್ದೆ ತಲೆ ಹಿಂದೆ ಇದ್ದುದೆ ಬಾಲ
ಹಿಂದುಮುಂದುಗಳ ನಿರ್ಧರಿಸಬಹುದೆ?

ಹುತ್ತದಲಿ ತಲೆಯೊಂದು ಹೊಕ್ಕು ಗುದ್ದುತ್ತಿರಲು ೧೫೦
ಇನ್ನೊಂದು ಕೂರುವುದು ಯೋಚಿಸುತ್ತ
ಕಲೆ ಗಣಿತ ಜ್ಯಾಮಿತಿಯ ಪರಿಮಿತಿಯ ಪರಿಘಕ್ಕೆ
ಸುತ್ತಿ ಬರೆವುದು ಸೊನ್ನೆ ತನ್ನ ಸುತ್ತ.

ಸೊನ್ನೆಯಂಚಿನಗುಂಟ ಬಣ್ಣಬಣ್ಣದ ಭ್ರಾಂತಿ-
ಬಾ ರಾಜಾ ಏನು ಸುಖ ತಾಜಾ ತಾಜಾ
ಎಲ್ಲೋಡಿ ಅಡಗಿದರು ಅಲ್ಲಿಂದ ಎಳೆಯುವುದು
ಮಣ್ಣೊಳಡಗಿದ ತಲೆಗೆ ಮಣ್ಣಿನ ಮಜ.

ಅತ್ತ ಎಳೆಯುವುದದು ಇತ್ತ ಇದು ಎಳೆಯುವುದು
ಎಳೆತದಲ್ಲಿದ್ದೀತೆ ಸುಖದ ನೋವು?
ನರನರಕವಾಗುತ್ತ ಅದಕಿದೂ ಇದಕದೂ ೧೬೦
ಸಂಶಯವೆ ನಾಚಿಕೆಯೆ ಶೇಷವೇನು?
ಬೆಳೆಗ್ಗೆದ್ದಾಗ ಮೊಲೆಯೂದಿ ಕೊಡದಷ್ಟಾಗಿತ್ತು ಸ್ವಾಮೀ ಕೊಡದಷ್ಟಾಗಿತ್ತು. ತಾಳಿಯಿತ್ತಲ್ಲ ತಾಳಿ-ಅದರ ಕರಿಮಣಿಗಳು ಪೇಪರ್ ವೇಟ್‌ದಷ್ಟು ದೊಡ್ಡ ಕರೀಕರೀ ಗುಂಡುಗಳಾಗಿದ್ದವು ಸ್ವಾಮೀ ಗುಂಡುಗಳಾಗಿದ್ದವು. ಅದರ ಮಾರನೇ ದಿನ ಇನ್ನೂ ಇಷ್ಟು ದೊಡ್ಡದಾಗಿ ಕಟ್ಟಿದ ಕಟ್ಟೆಯಾಗಿ ನಿಂತ ಗೋಡೆಯಾಗಿ ಬೆಳೆಬೆಳೆದು ಮನೆಯಲ್ಲೊಂದು ಕೋಣೆ ಖರ್ಚಿಲ್ಲದೆ ಹೆಚ್ಚಾಯಿತು ಸ್ವಾಮಿ ಕೋಣೆ ಹೆಚ್ಚಾಯಿತು. ಗೋಡೆಯಾಚೆಗೆ ಅವಳ ಮುಖ, ಈಚೆ ಮೊಲೆ! ಮುಖವಿರುವ ಕೋಣೆಯಲ್ಲಿ ಏನಿದೆಯಂತ ಅತ್ತ ಅವನಿಗೂ ಗೊತ್ತಿಲ್ಲ, ಇತ್ತ ನಮಗೂ ಗೊತ್ತಿಲ್ಲ.
ಏನಿರಬಹುದು?
ಐಲೆಂಡಿರಬಹುದು, ೧೭೦
ಭೂಗೋಳ ಇತಿಹಾಸ ಕುದುರೆಸವಾರ ಕೈಕಾಲಾಳು ಚೇಟಿ ಚಾರ ಮೊಳಕಾಲನೂರಿದ ರಾಜಕುಮಾರ ಪರಿಪರಿಯುಪಚಾರ ಪರಿಚಾರ…ಕನವರಿಕೆಯಂತೆ ಆಗೀಗ ಅಲ್ಲಿಂದ ಮಾತು ಕೇಳಿಸುವುದುಂಟು. ಬರೀ ಪ್ರತ್ಯಯಗಳು. ಅವನ ಗೊರಕೆ ಹೆಚ್ಚಾದಂತೆ ಅಲ್ಲಿಯ ನಗು ಕೇಕೆ ಗದ್ದಲ ಗಲಾಟೆ ಹೆಚ್ಚುತ್ತದೆ; ಗೊರಕೆ ಬಿಟ್ಟನೋ ಮೊಲೆಗೆ ನವಿರೆದ್ದು ಒದ್ದೆಯಾಗಿ ಸುಸೂಕ್ಷ್ಮ ಆಕುಂಚನ ಪ್ರಸರಣ ಉಕ್ಕುಸೊಕ್ಕು ಗರ್ದೀಗಮ್ಮತ್ತಾಗಿ
ಅಬಾಬಾ ಕಾ ಅಲ್ಲಿ ಕಾ ಇಲ್ಲಿ
ಎಲ್ಲಿ ನೋಡಿದರಲ್ಲಿ ಚಿಗುರಿರುತ್ತದೆ
ಯಾಕೆ ವಿಷಯಾಂತರವಾಯಿತೆಂದು ಗೊತ್ತಾಯಿತಲ್ಲ. ಕಾವ್ಯದ ಆರಂಭದಲ್ಲಿ ಮಾಮೂಲು ಬಾಗಿಲು ೧೮೦
ತಟ್ಟಿದನಲ್ಲ, ಮಾಮೂಲು ಮೊಲೆಬಂದು ಬಾಗಿಲು ತರೆಯಿತಲ್ಲ-ಮಾಮೂಲಿನಂತರದ ತುದಿ ಅವನ ಕಿವಿತುರಿಸಿ ಮಾಮೂಲು ನಗೆನಕ್ಕು ಮಾಮೂಲು ಒಳಬಂದು ಮಾಮೂಲು ಬಾಗಿಲಿಕ್ಕಿಕೊಂಡ.
ಮಾಮೂಲುಗಳಾಗಿ ರಾತ್ರಿಯಾಗಿ ಮೊಲೆ ಗುಡುಗುತು: ಕರಿದೇವರೆಲ್ಲಿ?(ಕರಿದೇವರೆಂದರೆ ಆ ಕುಟುಂಬದ ಉಪಭಾಷೆಯಲ್ಲಿ ಮೈವಾಡ ತೊಟ್ಟಾಗಿನ ಅವನು ಎಂದರ್ಥ). ಮನಸ್ಸಿರಲಿಲ್ಲ. ಸುಮ್ಮನಾಗಿ ಕೂತು ಮಾಮೂಲಿನಂತೆ ಅಲ್ಲಲ್ಲಿ ಹರಿದ ಮೈವಾಡ ಹೊಲಿದು ರಿಪೇರಿ ಮಾಡತೊಡಗಿದ. ಮೊಲೆ ಮತ್ತೆ ಮತ್ತೆ ಗುಡುಗಿ ಪೀಡಿಸತೊಡಗಿತು. ಎದ್ದುಬಂದು ಮೈವಾಡ ತೊಡಿಸಿತು. ಮೇಲೆ ಕೂತು ನಿಧನಿಧಾನ ಹುಪ್ಪಾಹುಮ್ಮಾ ಜೈಬಜರಂಗಾ ಸುರುಮಾಡಿದ.
ಇತ್ತ ಇನ್ನೊಂದು ತಲೆ ಸಿಗರೇಟು ಹೊತ್ತಿಸಿ ಯೋಚಿಸತೊಡಗಿತು:
ಈ ಸಿಗರೇಟು ತಾನು ಯಾವಾಗಲೋ ಸೇದಿದ್ದೆನಲ್ಲಾ! ನಿನ್ನೆ-ಮೊನ್ನೆ- ೧೯೦
ಬಹುಶಃ ಚಿಕ್ಕವನಿದ್ದಾಗ-ತನ್ನಜ್ಜ ಮುತ್ತಜ್ಜ-ಹೊಗೆ ಕೂಡ ದಿನನಿತ್ಯದಂತೇ ಹಾರಿ ಇಂಗಿ ಹೋಯ್ತು. ತನಗೆ ಸಾವಿರಾರು ವರ್ಷ ವಯಸ್ಸಾಗಿರಬೇಕೆನ್ನಿಸಿತು. ತನ್ನ ಮೀಸೆ ಥೇಟು ತನ್ನಪ್ಪನಂತೆ-ಅವನ ಮೀಸೆ ಅವನಪ್ಪನಂತೆ ಅವನಪ್ಪನ ಮೀಸೆ ಅವನಪ್ಪನಂತೆ-ಬಹುಶಃ ಈ ಮೀಸೆಯಗುಂಟ ಇಳಿದರೆ ಮೈತುಂಬ ಮೀಸೆಯ ಮೈವಾಡದಂಥ ವ್ಯಕ್ತಿ ಸಿಕ್ಕಬಹುದು. ಆತ ಹೇಳಬಹುದು: ಹೇಗಿದ್ದಿ? ಮದುವೆಯಾಯ್ತ? ಮಕ್ಕಳು ವಂಶೋದ್ದಾರಕರು? ನಾನೊಂದು ಪಡಿಯಚ್ಚು ಕೊಟ್ಟಿದ್ದೆನಲ್ಲ, ಅದಿನ್ನೂ ಇದೆಯಾ? ಜೋಪಾನವಾಗಿ ಮುಂದುವರಿಸು. ಇರಲಿ ಗೌರವ ಹಿರಿಯರ ಬಗ್ಗೆ ನನ್ನ ಬಗ್ಗೆ ಕುಲದ ಬಗ್ಗೆ ಪರಂಪರೆಯ ಬಗ್ಗೆ-ಹೀಗೆನ್ನಬಹುದಾತ. ಅದಕ್ಕೇ ಅನಿಸುತ್ತದೆ: ತನ್ನ ಕಣ್ಣಿಗೆ ಮೂಗು ನಾಲಗೆಗೆ ಚರ್ಮ ಮನಸ್ಸಿಗೆ ಸಾವಿರಾರು ವರ್ಷ ವಯಸ್ಸು. ಇನ್ನು ಮೇಲೆ ಇತಿಹಾಸ ಬೆಳೆಯುವುದಿಲ್ಲ, ೨೦೦
ಡಿಕ್ಶನರಿ ಬೆಳೆಯುವುದಿಲ್ಲ. ಅಕ್ಷರಗಳ ಸಂಖ್ಯೆಯೆಲ್ಲಿ ಬೆಳೆದಿದೆ? ಥತ್.
ಕುಟುಂಬ ದೇಶ ಸಮಾಜ ದೇವರು ಹೆಣ್ಣು-ಛೇ ಛೇ ಈ ಪದಗಳ ಅರ್ಥವೇನು? ಡಿಕ್ಶನರಿಯಲ್ಲಿದೆ ಅಲ್ಲವೆ? ಜನಗಳೆಲ್ಲ ಡಿಕ್ಶನರಿಯ ಶಬ್ದಗಳ ಹಾಗೆ ಕಾಣುತ್ತಾರೆ. ಡಿಕ್ಶನರಿಯೇ ಇದ್ದಮೇಲೆ ಈ ಜನಗಳೇಕೆ ಇರಬೇಕು? ಅಥವಾ ಈ ಜನಗಳಿದ್ದರೆ ಡಿಕ್ಶನರಿಯೇಕೆ ಬೇಕು? ಅಥವಾ ಅವರಿಗೆ ಡಿಕ್ಶನರಿಯ ಅರ್ಥ ಬೇರೆ ಇರಬಹುದೆ? ಅಥವಾ ಇವರಿಗೆ ಲೋಕದಲ್ಲಿ ಮತ್ತು ಡಿಕ್ಶನರಿಯಲ್ಲಿ-ಹೀಗೆ ಎರಡೆರಡು ಅಸ್ತಿತ್ವಗಳಿವೆಯೆ? ಓಹ್ ಡಿಕ್ಶನರಿಯ ಅರ್ಥಕ್ಕೆ ಹುಟ್ಟಿದ ಮನುಷ್ಯರೆಷ್ಟು ಬೋರ್ ಮಾಡುತ್ತಾರಂತ. ಅಥವಾ ಮನುಷ್ಯ ಅಂದರೇನು-
ಸಣ್ಣ ಸೊನ್ನೆಯ ಮೇಲೆ ಥರಥರ ನಮೂನೆ ಬಣ್ಣ
ಬಳಿದು ಊದಿ ಉಬ್ಬಿಸಿ, ಆಮೇಲೆ ಬೇಕಾದರೆ ೨೧೦
ಕೈ ಮೈ ಕಾಲು ಬರೆದು ಕಣ್ಣು ಮೂಗು ಕೊರೆದು
ಶೀತೋಷ್ಣ ಇಲಾಸ್ಟಿಕ್ ಪ್ರಸರಣ ಅಕುಂಚನ
ಚುಂಬನ ಘರ್ಷಣ ಅತನೀತನವಳಿವಳ ಹೆಸರಿಟ್ಟು
ಸಾಮಾಜಿಕವಾಗಿಸಿದರೆ
ಒಪ್ಪಿಕೊಳ್ಳುತ್ತೇವೆ, ಪರರ ಒಪ್ಪಿಸುತ್ತೇವೆ.
ಇದೂ ಡಿಕ್ಶನರಿಗೆ ಹುಟ್ಟಿದ ಅರ್ಥವಲ್ಲವೆ?
ಬುದ್ದಿವಂತಿಕೆ-ಎಂಥ ಚಿತ್ರಹಿಂಸೆ ಕೊಡುತ್ತದಂತ! ಗಾಯಗಳಿದ್ದಲ್ಲೆಲ್ಲ ಜ್ಞಾನದ ತಂತು ಹರಿದಾಡುವಂತೆ ಮಾಡುತ್ತದೆ. ಕಾಣಬಾರದಲ್ಲಿ ಗಾಯಗಳು ಕಾಣತೊಡಗುತ್ತವೆ. ನೋಡನೋಡುವುದರಲ್ಲಿ ಅವು ಹುಣ್ಣಾಗಿ ಒಡೆದು ಕೀವು ರಕ್ತ ಬಸಿಯತೊಡಗುತ್ತದೆ.ನಿಕ ಹೇಳಬೇಕೆಂದರೆ ಹುಣ್ಣು ಉಸಿರಾಡುತ್ತದೆ, ಮಾತಾಡುತ್ತದೆ, ೨೨೦
ತಿನ್ನುತ್ತದೆ, ನಗಬಲ್ಲದು ಕೂಡಾ ತನ್ನ ನೋಡಿ, ಮನೆ ಮಾರು ರಸ್ತೆ ಪೇಟೆ ಪುಸ್ತಕ ಜನ ಡಿಕ್ಶನರಿ ನೋಡಿ. ಅದು ಹ್ಯಾಗೆ ಇಷ್ಟೊಂದು ಡುಪ್ಲಿಕೇಟ್ ಪ್ರತಿ ಸಾಧ್ಯವಾಯ್ತು? ಜನಾಂಗಜನಾಂಗ ಹೋಗಲಿ, ದೇಶ ದೇಶ ಹೋಗಲಿ, ಭಾಷೆಭಾಷೆಗಳಲ್ಲಿ ಕೂಡ ವ್ಯತ್ಯಾಸ ಉಳಿಯದಿದ್ದರೆ ಹೇಗೆ? ಇಂಗ್ಲೀಷ್ ಮಾತಾಡಿದರೆ ಕನ್ನಡದ ಹಾಗೆ ಕೇಳಿಸುತ್ತದೆ. ಕನ್ನಡ ಇಂಗ್ಲೀಷ್‌ದಂತೆ ಸಂಸ್ಕೃತದಂತೆ ಜರ್ಮನ್ ಚೀನಾದಂತೆ…….
ಸಿಗರೇಟು ಸುಟ್ಟು ಬೂದಿಯಾಗಿ ಕೆಳಗೆ ಬಿತ್ತು,ಕೈ ಸುಡಲಿಲ್ಲ.ಯಾಕೆಂದರೆ ಸುಟ್ಟು ಸುಟ್ಟು ಕೈ ದಡ್ಡು ಬಿದ್ದಿತ್ತು. ಮೈವಾಡದ ಕಡೆ ನೋಡಿದ:
ಮೊಲೆಯ ಚೂಪು ತುದಿ ಬಾಯೊಳಗಿತ್ತು
ಕೈಯಿಂದ ಕಾಲಿಂದ ತಬ್ಬಿಕೊಂಡಿತ್ತು
ಗಿರಗಿರ ತಿರುಗುತ ಏರುತ ಇಳಿಯುತ ೨೩೦
ಜಾರಿ ತೂರಿ ಹಾರ್‍ಯಾಡಿ ಕುಣಿಯುತ
ತೇಪೆಯ ತೊಗಲಿನ ಬಾಲಿಲ್ಲದ ಕಪಿ
ಮೊಲೆಯ ಸುತ್ತುತಿತ್ತು-ಸೀಪುತ
ಮೊಲೆಯ ಸುತ್ತುತಿತ್ತು||
ಇದೆಲ್ಲದರ ಅರ್ಥ ಕಂಡುಹಿಡಿಯಲೇಬೇಕೆಂದು ಎದ್ದ. ಹೋಗಿ ಕುಣಿಯುವ ಕೋತಿಯ ಮೈವಾಡ ಕಳಚಿದ. ಮುದ್ದೀ ಮಾಡಿದ. ಬಗಲಲ್ಲಿ ಹಿಡಿದ. ಮಧ್ಯರಾತ್ರಿಯಾಗಿತ್ತು ಹೊರವಂಟ. ಮೊಲೆ ಗುರ್ ಎಂದಿತು. ದಾದು ಮಾಡದೆ ಹೊಂಟ. ಸಿಕ್ಕಾಪಟ್ಟೆ ಕಿರುಚುತ್ತ ಬೆನ್ನು ಹತ್ತಿತು. ಓಡಿದ. ರಸ್ತೆಯಲ್ಲಿ ನಿಂತಿದ್ದ ಎತ್ತಿನ ಬದಿ ಅಡಗಿದ. ಎತ್ತು ಓಡತೊಡಗಿತು, ಅದರೊಂದಿಗೆ ಇವನೂ ಓಡಿದ. ರಸ್ತೆಯಲ್ಲಿ ನಿಂತಿದ್ದ ಎತ್ತಿನ ಬದಿ ಅಡಗಿದ. ಎತ್ತು ಓಡತೊಡಗಿತು, ಅದರೊಂದಿಗೆ ಇವನೂ ಓಡಿದ. ಓಡಿದಲ್ಲೆಲ್ಲ ಗೋಡೆಯಿತ್ತು. ಗೋಡೆಯೆಂದ ಮೇಲೆ ಅದಕ್ಕೊಂದು ಬಾಗಿಲಿರಬೇಕು. ಎಲ್ಲಿ
೨೪೦ ಬಾಗಿಲು? ಮುಂದಿರಬಹುದು, ಓಡಿದ. ಆ ಮುಂದಿರಬಹುದು, ಓಡಿದ ಓಡಿದ ಓಡಿದ. ಅದೋ ತುದಿ ಮೊದಲಿಲ್ಲದ ಭಯಂಕರ ಗೋಡೆ. ಈ ಗೋಡೆಯನ್ನು ಈ ಮೊದಲು ಗಮನಿಸಲೇ ಇಲ್ಲವಲ್ಲ! ಓಡುತ್ತೋಡುತ್ತ ಗೋಡೆ ಒಡೆಯುವುದು ಸಾಧ್ಯವೇ ಎಂದು ತಲೆಯಿಂದ ಹಾದ. ನೋವಾಯುತಷ್ಟೆ. ಮತ್ತೆ ಓಡಿದ ಓಡಿ ಓಡಿ ಬೆಳಗಾಯಿತು. ನೋಡಿದರೆ ಎಲ್ಲಿದ್ದರೋ ಅಲ್ಲೇ, ಮನೆ ಮುಂದೇ ಇದ್ದರು. “ಹಾಗಿದ್ದರೆ ಬೆಳತನಕ ಓಡಿದ್ದು ಸುಳ್ಳೇ? ಏನಿದರ ರಹಸ್ಯ?” ಎಂದ…..

ಹೇಳಿದರ ಕತೆಗಿತಿ ಅಂದೀರಿ ದೇವರೂ,
ಹೇಳಲೆ?-ನಾ ಬಲ್ಲೆ-
ನೀವು ಹೊಗಳುವ ಕೀರ್ತಿಗೆ ಅವಾರ್ಡಿಗೆ ೨೫೦
ಹೊದಿಸುವ ಶಾಲಿಗೆ ಅಂಟಿಸುವ ಪದ್ಮಶ್ರೀಗೆ
ತಕ್ಕ ಹಾಗೆ ಸ್ವಾಮೀ ಈ ತನಕ ಬದುಕಿನ
ಮೈಮ್ ಮಾಡಿದ್ದೇನೆ.
ನನ್ನ ನಗೆ ಜೋಕು ಮಾತು ಸಂಸ್ಕೃತಿ ನಾಗರೀಕತೆ
ಎಸ್‌ನೋಗಳನ್ನೆಲ್ಲ ಸಾಮಾಜಿಕವಾಗಿಸಿದ್ದೇನೆ,
ನಿಮ್ಮ ಸಣ್ಣ ಜೋಕಿಗೆಷ್ಟೊಂದು ನಗೆ ನಕ್ಕು
ಸಕ್ಕರೆಯ ಬ್ರಾಂತಿಗಳನುಂಡುಂಡು ತೇಗಿದ್ದೇನೆ,
ಕುಣಿದಿದ್ದೇನೆ ಬಣ್ಣ ಬಳದತ್ತಿದ್ದೇನೆ-
ಸಾಕು
ನಾನೀಗ ನನ್ನ ಖಾಸಗಿಯನ್ನು ಕಾಣಬೇಕು.
ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು. ೨೬೦
ಶಬ್ದವೇ ನನ್ನ ಶಬ್ದವೇ
ತೋರು ನಿಜವನ್ನ
ನನ್ನಳತೆಯ, ಮನುಷ್ಯನಳತೆಯ ಸತ್ಯವನ್ನ.

ಓಡಿದ್ದರ ರಹಸ್ಯ ಕೇಳಿದ್ದನಲ್ಲ-ಎತ್ತು ಹೇಳಿತು :
“ಏನ ಹೇಳಲಿ ಸಾಬರ” ಹೆಂಗ ಹೇಳಲಿ? ಅತ್ತರ ಅಗ್ಗ, ನಕ್ಕರನಗ್ಗೇಡ, ನಗೋವಾಗೆಲ್ಲ ಕಣ್ಣಾಗ ನೀರ ತುಂಬತಾವ, ಏನ ಹೇಳಲ ಸಾಬರ” ಹೇಂಗ ಹೇಳಲ?

ಅಂದುಕೊಂಡಿದ್ದೆ : ನಾ ಗಾಣದೆತ್ತು, ನನ್ನ ಯಾರೋ ಹೂಡ್ಯಾರ, ಕಣ್ಣ ಕಟ್ಯಾರ, ಸುಳ್ಳಲ್ಲ ಖರೆಖರೆ ನಂಬಿ ತಿರುಗಿದೆ, ತಿರುಗಿದೆ, ತಿರುಗೇ ತಿರುಗಿ ಗುದಮುರಿಗಿ ಹಾಕಿದೆ. ಅಂದುಕೊಂದಿದ್ದೆ : ತಿರುಗೋದಕ್ಕೊಂದ ಗುರಿ, ಗೊತ್ತ ಐತಿ. ನಾವು ರಾತ್ರಿ ನೋಡಿದಿವಲ್ಲ; ಆ ಗೋಡೆಯಾಚೆ ನನ್ನ ಹೂಡಿದ ಗಾಣಿಗ್ಯಾ ಇದ್ದಾನ. ಅದ” ನನ್ನ ೨೭೦
ಗುರಿ, ಅಲ್ಲಿ ಬರೇ ಹಸುರು ಅಥವಾ ಅಲ್ಲಾ ಪ್ರಶ್ನದ ಉತ್ತರ ಅದ. ಈಗ ನನ್ನ ಮೈಂಯಾಲ ನೊಣ ಕೂರತಾವ ನೋಡ್ರಿ ಆ ನೊಣಕ್ಕೆ ಅಲ್ಲಿ ಜಾಗಾನ” ಇಲ್ಲ. ಅಥವಾ ನೊಣ ಇರಬಹುದೋ? ನೊಣ ಇದ್ದರ ಹುದಲ ಖಾತ್ರಿ. ಗಾಣಿಗ್ಯಾನ ಏಟ ಸಹಿಸಬಹುದು; ಈ ನೊಣ ಮಾತ್ರ ಸಹಿಸೋದು ಸಾಧ್ಯ” ಇಲ್ಲ ತಗೀರಿ. ನೊಣ ಅಂದರ ಅಂತಿಂಥ ನೊಣ ಏನ್ರಿ? ಅವುಗಳ ಮೋತಿಗೆ ಕನಿಷ್ಠ ಪಕ್ಷ ಜೋಡ ಸೂಜಿ ಇರಬೇಕು. ಇವೆಂಥಾ ಜಾಣ ನೊಣ ಗೊತ್ತೇನ್ರಿ? ಮೊದಮೊದಲು ಸಣ್ಣಾಗಿ ಚುಚ್ಚಿ ಚುಚ್ಚಿ ಅಕ್ಕೀಕಾಳಿನಷ್ಟು, ಆಮ್ಯಾಲ ತಾವ” ಹೊಕ್ಕ ಹೊರಬರೋವಷ್ಟು ಹುಣ್ಣ ಮಾಡಿ ಹಾರ್‍ಯಾಡತಾವ. ಮಾಡಿದ ತೂತನ್ನ ಸ್ವಂತಕ್ಕ ಮನಿಮಾಡಿಕೊಂಡು ಮರಿ ಹಾಕಿ ಮೂರು ಸಾಕು ಎರಡು ಬೇಕಿನ ಚಿಕ್ಕ ಚೊಕ್ಕ ಸಂಸಾರ ಮಾಡಿಕೊಂಡು ಬದುಕತಾವ. ನಾನೇನೂ ಸುಮ್ಮನಿರೋಣಿಲ್ಲರೀ ಮತ್ತ; ಬಾಲದಿಂದ ೨೮೦
ಹೊಡೀತೀನಿ. ಹೊಡೆದಾಗೊಮ್ಮಿ ಸಾಯತಾವ, ಹಾರ್‍ಯಾಡತಾವ ಮತ್ತ ಬರತಾವ-ಛೇಛೇ ಈ ಸಂಸಾರಗಳಿಂದ, ನೋಡ್ರಿ ಸಾಹೇಬರ ನನ್ನ ಮೈಚರ್ಮ ಈಗ ಗೋಣೀಚೀಲಧಾಂಗ-ಒಣಗ ಹಾಕಿದ ಮೀನ ಬಲೀ ಹಾಂಗ ಆಗೇತಿ ನೋಡರಿ. ಬೇಕಾದರ ಜಿದ್ದ ಕಟ್ಟಿರಿ, ನನ್ನ ಮೈಮ್ಯಾಲ ಸಾವಿರ ಸಂಸಾರ ಅವ” ನೋಡ್ರಿ. ಯಾಕಂದರ ನಡೀಲಿ, ಓಡಲಿ ಕನಿಷ್ಠ ಒಂದ ಸಾವಿರ ಕಡೆ ನನ್ನ ಮೈ ನೋಯತೈತಿ !

ಇದಕ್ಕಲ್ಲರಿ ನನಗ ಸಿಟ್ಟ ಬರೋದು-ನನ್ನ ಮೈಮ್ಯಾಲ ಕೂರತಾವ, ಕೂರಲಿ; ನನ್ನ ಮಾಂಸ ತಿಂತಾವ ತಿನ್ನಲಿ-ಆದರ ಅಸಹ್ಯ ಕಿರಚತಾವ ನೋಡ್ರಿ-ಛೇಛೇ ಶಾಸ್ತ್ರೀಯ ಸಂಗೀತಕ್ಕ, ಸುಬ್ಬಲಕ್ಷ್ಮಿ ಪೂರ್ವಿ, ಛಾಯೋನಟದ ಜೋಶಿ, ಮನ್ಸೂರರ ಭೈರವಿ, ಖಾನರ ಗುಣಕಲಿಗೆ ತಲಿಹಾಕಿದ ಮಗಾ ನಾನು ಅಂದರ ನಾ ಹೇಳೋದಿಷ್ಟು ಸಾಹೇಬರ: ನೋವಿಗೇನೂ ಅರ್ಥ ಇಲ್ಲಂತಿರೇನು? ೨೯೦

ನಿನ್ನಿ ಮತ್ತ ಕಾಡಿಗೆ ಹೋಗಿದ್ದೆ: ಇಲ್ಲೆ ಸನೇದಾಗೊಂದ ಕಾಡ ಐತಿ, ಸಡವಾದಾಗ ನೀವೂ ಒಮ್ಮಿ ಹೋಗಿ ಬರ್ರಿ ಬೇಕಾದರ. ನೀವು ಭಾಳಂದರ ಟ್ರೇನಿನಾಗ ಕೂತಾಗ ಕಾಡ ನೋಡಿದವರು. ನೀವು ಹೆಂಗಸರಿಗೆ ಹೋಲಿಸೋ ಬಳ್ಳಿ, ಅವೆಲ್ಲ-ಈ ಕಾಡಿನಲ್ಲಿ ಅಲ್ಪ. ನೆನಪಿನಾಗಿಡಿರಿ: ಮರ ನುಂಗೋ ಬಳ್ಳಿ, ಹುಲೀ ತಿಂಬೋ ನವಿಲು, ಅಯ್ಯೋ ಇರಿವೀಯಂಥಾ ಇರಿವಿಗೆ ಸಿಟ್ಟ ಬರತೈತ್ರಿ-ಈ ಕಾಡಿನಾಗ !

ನೀವು ಒಮ್ಮಿ ಹೊಕ್ಕಿರೋ ನಿಮಗ ಅನ್ನಸ್ತದ: ಈ ಕಾಡು ನನಗ ಮಾತ್ರ ತನ್ನ ರಹಸ್ಯ ತೋರಸ್ತದಲ್ಲಪ ! ಅಂತ. ಆದರ ಅದಲ್ಲ, ಖರೇ ಅಂದರ ಅದು ಒಳಗೊಳಗ” ಅಂದಕೊಳ್ಳತದ: ಮೂರ್ಖ, ನಾ ಜಗತ್ತಿನಾಗಿದ್ದಲ್ಲೆಲ್ಲಾ ಮುಟ್ಟಿದವಳು, ಅಪ್ಪಿಕೊಂಡವಳು. ಅವರಿವರೆನ್ನದೆ ಎಲ್ಲರಿಗೂ ತೆರೆದಿಟ್ಟುಕೊಂಡವಳು. ೩೦೦
ನೀ ಕಂಡು ಕೇಳರಿಯದ ಪಾಪ ಮಾಡಿದವಳು,-ಅಂತ. ಅಷ್ಟ” ಅಲ್ಲರಿ-ತನ್ನ ಮೀಸಲ ಒಡಪದ ಅರ್ಥ ನಿಮಗ ಮಾತ್ರ ತರೆದಿಟ್ಟಾಂಗ, ನಿಮ್ಮನ್ನ ಬಿಟ್ಟ ಉಳಿದವರನ್ನೆಲ್ಲಾ ನೋಡಿ ಅಪಹಾಸ್ಯ ಮಾಡಿಧಾಂಗ ನಾಟಕ ಮಾಡತೈತಿ. ನೀವು ಈ ನಾಟಕ ನಂಬಿದಿರೋ ಕಾಡಿನಾಚೆ ಇರೋದೆಲ್ಲ ಮಾಯೆ. ಎಲ್ಲಿ ತೊಂದರೆ ಅಂದರ-ನೀವೆಷ್ಟು ಆಳಕ್ಕಿಳಿದರೂ ಇದರ ತಳಿ ಮುಟ್ಟಿಲ್ಲ ಅಂತ ಅನ್ನಿಸಿ ಇಳಿಯೋ ಹಂಬಲ ಬರಬರತ ಜಾಸ್ತಿಯಾಗಿ ನೀವ” ಕಾಡಾಗತೀರಿ, ಕಾಡ” ನೀವಾಗತೀರಿ. ಆಯಿತಲ್ಲ, ನಿಮ್ಮನ್ನೀಗ ಕಾಡಿನಿಂದ ಬೇರ್ಪಡಿಸೋದಂದರ ನಿಮ್ಮನ್ನ ನೀವ” ಖೂನಿ ಮಾಡಿಧಾಂಗ! ಏನಂತೀರಿ?

ಆದರ ಖರೋಖರಂದರ, ಸಾಹೇಬರ, ಈ ಕಾಡಿಗೆಷ್ಟು ಮಿತಿ ಅವ ಗೊತ್ತೇನ್ರಿ? ಒಂದ ದಿನಧಾಂಗ ಇನ್ನೊಂದು ದಿನಾ ಇರೋಲ್ಲಾಂತ ಅನ್ನಸ್ತದಲ್ಲ- ೩೧೦
ಅದೆಲ್ಲಾ ಸುಳ್ಳರೀ ಸಾಹೇಬರ ಸುಳ್ಳು. ಅದರ ಕಲರ ಕಾಂಬಿನೇಷನ್ ಭಾಳ ಕಮ್ಮಿ. ಅಷ್ಟಾಗಿ ಪ್ರಗತಿ, ಬದಲಾವಣೆ ಅಂತೀರಲ್ಲ-ಸಾಧ್ಯ” ಇಲ್ಲ. ಸಸಾರ ಮಾಡಿ ಹೇಳಲ್ರಿ? ಮೂರು ಋತುಮಾನ ಅವ. ಈ ಕಾಡಿನ ಹತ್ತಿರ ಮೂರು ಬಣ್ಣ ಅವ. ಒಂದೊಂದು ಋತುಮಾನಕ ಒಂದೊಂದು ಬಣ್ಣ. ಒಮ್ಮೊಮ್ಮಿ ಅದಲಿ ಬದಲಿ, ಎರಡೆರಡು ಅಥವಾ ಹೆಚ್ಚು-ಒಟ್ಟು ಹದಿನೆಂಟು; ಅಷ್ಟ! ಹಿಂಗ್ಯಾಕಂದ್ರಿ? ಈ ಕಾಡಿಗೆ ರಿಪೀಟ್ ಮಾಡೋದ” ಫ್ಯಾಷನ್ನರಿ !

ನನಗ ಚಿಂತಿ ಕಡಿಮಿ ಆಂತ ತಿಳೀಬ್ಯಾಡ್ರಿ. ಇಲ್ಲಿ ನೋಡ್ರಿ, ನನ್ನ ಕೊಂಬು ಯಾಕ ಮುರದಾವ ಹೇಳ್ರಿ? ಈ ಗೋಡೆಯಾಚೆ ಏನೋ ಇರಬೇಕಂತ ತಿರುಗಿದೆ ಬಾಗಲ” ಸಿಗಲಿಲ್ಲ, ಸಿಟ್ಟಿಗೆದ್ದ ಗೋಡೆ ಒಡೆಯೋಣಾಂತ ಹಾದೆ ಹಾದೆ. ಬಂತೇನು? ಕೊಂಬು ಮುರಕೊಂಡೆ ಅಷ್ಟೆ. ಈ ಗೋಡೆಯಾಚೆ ಏನೈತಿ ಅಂತ ಗೊತ್ತೇನ್ರಿ? ೩೨೦
ಖಾಲಿ! ಆ ಖಾಲಿಗೆ ಸಾಂಪ್ರದಾಯಕವಾಗಿ ಹೆಸರೇನು ಗೊತ್ತಾ?-ದೇವರು! ನನಗ ಈಗ ಅನಿಸೋದಂದರ ಇಷ್ಟ: ನಾನೂ ದೇವರ” ಸಾಹೇಬರ, ಆದರ ನಿಮ್ಮರ್ಥದೊಳಗಲ್ಲ-ಹೋಗಲಿ, ನಿಮ್ಮ ದೇವರೂ ನಿಮ್ಮ ಡಿಕ್ಶನರಿ ಬುದ್ದಿಗೆ ಹುಟ್ಟಿದವನು! ಹೌದಂತೀರೋ ? ಅಲ್ಲಂತೀರೋ ?

ನಿನ್ನಿ ಓಡತ್ತಿದ್ದವಲ್ಲ-ಆಗ ನನಗೆಷ್ಟು ನಾಚಿಕಿ ಬಂತ ಗೊತ್ತೇನ್ರಿ? ಮೂಗ ಕಳಚಿ ಬಿದ್ದಬಿಟ್ಟಿತಲ್ಲಾ! ನೋಡ್ರಿ ಇನ್ನ” ನೆತ್ತರ ಸೋರತೈತಿ! ಹೌದರಿ? ಏನ ಹೇಳಲಿ ಸಾಹೇಬರ, ಹೆಂಗ ಹೇಳಲಿ?”
ನಿಜ. ಎತ್ತಿಗೆ ಮೂಗಿರಲಿಲ್ಲ. ಮನೆಗೋಡಿ ಬಂದು ಕನ್ನಡಿ ನೋಡಿಕೊಂಡ. ಹೇಳಿದರ ಕತಿಗಿತಿ ಅಂದೀರಿ ದೇವರೂ ಅವನಿಗೂ ಮೂಗಿರಲಿಲ್ಲ! ಅದರ ಸ್ಥಳದಲ್ಲೊಂದು ಹುಣ್ಣಿತ್ತು. ಬಾಯೊಂದಿಗೆ ಅದೂ ಸೇರಿ ದೊಡ್ಡ ತೂತು ಬಿದ್ದಿತ್ತು! ೩೩೦
ಇನ್ನು ಮೇಲೆ ಹೊರಗಡೆ ಹೋಗೋದು ಹೇಗೆ?-ಎಂದು ಮೂಗಿನ ಮೇಲೆ ಕೈ ಇಟ್ಟುಕೊಂಡೇ ಹೊರಗಡೆ ನೋಡಿದ-ಅರೆ ಯಾರಿಗೂ ಮೂಗಿಲ್ಲ!


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.