ಗರ್ಭ

ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, ಎಷ್ಟು ವಾಸ್ತವಿಕವಾಗಿದೆಯೋ ಹೊರಕವಚ ಅಷ್ಟೇ ಅಸಹಜ ಎನ್ನಿಸುವ ಸ್ಥಿತಿಯಲ್ಲಿದೆ. ಏನೇ ಇರಲಿ ಹೇಳಲೇಬೇಕೆಂದು ನಿರ್ಧರಿಸಿದ ಮೇಲೆ ಈ ತುಮುಲ ಏಕೆ ಬೇಕು? ನಾನು ಯಾರ ಬಗ್ಗೆ ಹೇಳಬೇಕೆಂದು ಹೊರಟಿರುವೆನೋ ಆ ತಾಯಿಯ ಬೇಗುದಿಯ ಚಿತ್ರಣವನ್ನು ಶಬ್ದಗಳಲ್ಲಿ ನೀಡಲಾರೆ ಎಂಬುದಷ್ಟೆ ನನ್ನ ಪ್ರಾಮಾಣಿಕ ಅಳುಕು.

ಆ ತಾಯಿ ಬೇರೆ ಯಾರೂ ಅಲ್ಲ. ನನ್ನ ಆಪ್ತ ಸ್ನೇಹಿತ, ಸಮಪ್ರಾಯದವ, ಬಾಲ್ಯದಿಂದ ಒಡನಾಡಿಯಾಗಿದ್ದವ ಅವನೆ – ಶ್ರೀವತ್ಸ. ಅವನ ಅಮ್ಮ. ನಾನೂ ಕರೆಯುತ್ತಿದ್ದುದು ಅಮ್ಮ ಎಂದೆ. ಅವರೂ ಹಾಗೆ, ಅವನನ್ನು ವತ್ಸ ಎಂದು ಕರೆದರೆ ನನ್ನನ್ನು ಮಗ ಎಂದೇ ಕರೆಯುತ್ತಿದ್ದರು. ಎಷ್ಟು ವಿಚಿತ್ರ ನೋಡಿ. ವತ್ಸನ ಆತ್ಮಹತ್ಯೆ ಖಾತ್ರಿಯಾದಾಗ ನನ್ನನ್ನು ಬಲವಾಗಿ ಹಿಡಿದು ಅವರು ಪುನಃ ಪುನಃ ಹೇಳಿದ್ದು ಒಂದೇ ಒಂದು ಮಾತು. “ವತ್ಸ ಹೋದ, ನಾನು ಯಾರನ್ನು ಮಗಾ ಅಂತ ಕರಿಯಲಿ. . .”. ವತ್ಸನ ನೆರಳಿನಲ್ಲಿ ಯಾರನ್ನು ಅವರು ಮಗಾ ಎಂದು ಕರೆಯುತ್ತಿದ್ದರೋ ಅವನನ್ನು ತಬ್ಬಿ ಹಿಡಿದು ಹೇಳಿದ್ದು, ಒಂದೇ ಮಾತು, “ನನ್ನ ಮಗ ಎಲ್ಲಿ? ಮಗಾ ಅಂತ ಯಾರನ್ನ ಕರೆಯಲಿ.” ಕೈ ಎಳೆಯುತ್ತ ಬೊಬ್ಬೆ ಹಾಕಿದ್ದು ಒಂದೇ ಒಂದು ಮಾತು “ನಿನ್ನ ಗೆಳೆಯ ಎಲ್ಲಿ? ನನ್ನ ಕರುಳಿನ ಚೂರು ಎಲ್ಲಿ?”

ಆ ಕ್ಷಣ ಅವರ ಕರುಳಿನ ಚೂರು ಮುದ್ದೆಯಾಗಿ ಎದುರಿತ್ತು. ಅಂಗವಿಲ್ಲ. ಆಕಾರವಿಲ್ಲ, ರೂಪವಿಲ್ಲ, ತೂಕವಿಲ್ಲ. ಒಂದು ಮುದ್ದೆ. ಪಾಲಿತಿನ್ ಬ್ಯಾಗಿನ ಒಳಗೆ ಒಂದಷ್ಟು ಮಾಂಸದ ಮುದ್ದೆ. ಪಡಸಾಲೆ ತುಂಬ ಹರಡಿದ ವಾಸನೆ. ರಾಶಿಗಟ್ಟಲೆ ಹಚ್ಚಿಟ್ಟ ಊದಿನ ಬತ್ತಿ, ಚೆಲ್ಲಿದ ಫಿನಾಯಿಲ್ಲು, ಸೆಂಟಿನ ಪರಿಮಳವನ್ನೆಲ್ಲ ಮೀರಿ ಮೂಗಿನಿಂದ ನೆತ್ತಿಗೇರುತ್ತಿದ್ದ, ಜ್ವಾಲಾಮುಖಿಯಂತೆ ಹೊಟ್ಟೆಯನ್ನು ಹಿಚುಕುತ್ತಿದ್ದ ಅಸಾಧ್ಯ ವಾಸನೆ. ಪೋಸ್ಟ್‌ಮಾರ್ಟಂನ ಶಾಸ್ತ್ರಕ್ಕೂ ಎಡೆಯಿಲ್ಲದ ಸ್ಥಿತಿಯಲ್ಲಿ ಎಲುಬಿಗಂಟಿದ ಮಾಂಸದ ಮುದ್ದೆ. ಆ ಸ್ಥಿತಿಯಲ್ಲಾದರೂ ಆ ಮಾಂಸದ ರಾಶಿ ಮೇಲಕ್ಕೆ ಬರಲು, ಸಮಾಜದ ಮುಂದಕ್ಕೆ ಬರಲು, ಸಂಸ್ಕಾರದ ಕೊನೆ ಕಾಣಲು ಅದೇ ತಾಯಿ ಎಂಥ ಧೈರ್ಯ ತಾಳಬೇಕಾಯಿತು. ಎಂಥ ಸಾಹಸ ಮಾಡಬೇಕಾಯಿತು. ಎಂಥ ಹೋರಾಟ ನಡೆಸಬೇಕಾಯಿತು.

ಇಲ್ಲಿ ನಾನೊಬ್ಬ ಸಾಕ್ಷಿ ಮಾತ್ರ. ಅದರೆ ಸಾಕ್ಷಿಯ ಕಟಕಟೆಯೊಳಗೆ ಕಾಲ ಇಷ್ಟು ದೀರ್ಘವಾಗುತ್ತದೆ ಎಂದು ನಾನೆಣಿಸಿರಲಿಲ್ಲ. ಸ್ಥಿತಿ ಇಷ್ಟು ಮರಗಟ್ಟಿ ಹೋಗುತ್ತದೆ ಎಂದು ನಾನೆಣಿಸಿರಲಿಲ್ಲ. ಎದೆಯೊಳಗಿನ ಜೀವ ಗಾಳಿಗೊಡ್ಡಿದ ಮಿಣುಕುದೀಪವಾದ ಅನುಭವ. ವತ್ಸನ ಅಪ್ಪ ಒಂದು ಮೂಲೆಯಲ್ಲಿ ತಲೆಯನ್ನು – ಮಡಚಿದ ಕಾಲು ಗಂಟುಗಳ ನಡುವೆ ಹುದುಗಿಸುವಂತೆ ಬಗ್ಗಿ ಕುಳಿತಿದ್ದರು – ಆಕ್ರಮಣದ ಅಪಾಯ ಎದುರಾದಾಗ ಮಳಲಿನ ಗೂಡಿನೊಳಗೆ ಹುದುಗಿ ಹೋಗುವ ಏಡಿಯಂತೆ. ಅಥವಾ ಅದೊಂದು ಬಗೆಯ ಸಮಾಧಿ ಸ್ಥಿತಿಯೂ ಆಗಿದ್ದಿರಬಹುದು. ನನ್ನ ಮಟ್ಟಿಗೆ ಅವರು ನಿಷ್ಕ್ರಿಯರಾಗಿದ್ದರು. ಸ್ಪಂದನ ರಹಿತರಾಗಿದ್ದರು. ಚಲಿಸಲಾರದ ಸ್ಥಿತಿಯಲ್ಲಿದ್ದರು. ಈಗ ಮಾತ್ರ ಅಲ್ಲ. ಹತ್ತಾರು ವರ್ಷಗಳಿಂದ ವತ್ಸನ ರಟ್ಟೆಯ ಮಾಂಸಖಂಡಗಳು ಉಬ್ಬಿ ಬಿಗಿಗೊಂಡಂದಿನಿಂದ. ಎದೆ ಸೆಟೆದು ನಿಂತಂದಿನಿಂದ. ಅವನ ಮುಂಗುರುಳು ಎಲ್ಲೆಂದರಲ್ಲಿ ಹಾರಾಡಲು ತೊಡಗಿದಂದಿನಿಂದ. ಅವನ ಹೊಳಪು ಕಣ್ಣುಗಳು ನಿರಂತರವಾಗಿ ಚಲಿಸತೊಡಗಿದಂದಿನಿಂದ. ಉತ್ಸಾಹದಿಂದ ಅವನು ಉಬ್ಬರಿಸುತ್ತಿದ್ದಂತೆ ಅವರ ಜೀವನೋತ್ಸಾಹ ಕುಗ್ಗುತ್ತಿದ್ದುದನ್ನು ನಾನು ಗಮನಿಸಿದ್ದೆ. ಅಥವಾ ಅವರ ಜೀವನೋತ್ಸಾಹದ ಕುದುರೆಗೆ ಕಡಿವಾಣ ಹಾಕಲೆಂದೇ ಅವನು ಅತಿ ಉತ್ಸಾಹ ತಾಳುತ್ತಿದ್ದನೋ ಎನೋ. . .

ಈಗ ಈ ಪಡಸಾಲೆಯಲ್ಲಿ ವತ್ಸನ ದೇಹ ಉತ್ಸಾಹ ರಹಿತವಾಗಿದೆ. ಶೂನ್ಯದ ತುಂಬ ಅವನ ವಾಸನೆ ತುಂಬಿದೆ. ಯಾರೂ ಹತ್ತಿರ ಬಾರದಷ್ಟು. ಯಾರೂ ಸ್ವೀಕರಿಸದಷ್ಟು. ಅವನ ಪ್ರಾಣ ಸ್ನೇಹಿತನಾದ ನನಗೂ ಸಹಿಸಲಾಗದಷ್ಟು. ಉಳಿದವರೆಲ್ಲ ದೂರದಲ್ಲಿ ಅಂಗಳದ ತುದಿಯಲ್ಲಿ ನಿಂತಿದ್ದಾರೆ. ತೋಟದ ಅಂಚಿನಲ್ಲಿ ಗುಂಪು ಗುಂಪಾಗಿ ಕುಳಿತಿದ್ದಾರೆ. ವತ್ಸನ ಮಟ್ಟಿಗೆ ಸಹಜವಾಗಿ ರೂಪುಗೊಂಡಿದ್ದ ಸಾವನ್ನು ಅಸಹಜಗೊಳಿಸುತ್ತಿದ್ದಾರೆ. ಅವನ ಕೊಳೆತ ದೇಹದ ಮೂಲಕ ಅವನ ಬದುಕನ್ನು ವಿಕೃತಗೊಳಿಸುತ್ತಿದ್ದಾರೆ. ತಮ್ಮ ತಮ್ಮ ಕನ್ನಡಿಯಲ್ಲಿ ರೂಪುಗೆಟ್ಟ ಅವನ ಶವಕ್ಕೆ ತಾವು ಬಯಸುವ ರೂಪ, ಯೌವ್ವನ, ಶಕ್ತಿ, ಯುಕ್ತಿ, ಹೊಳಪು, ಒನಪು, ವಯ್ಯಾರಗಳ ಬಣ್ಣ ಹಚ್ಚಿ ಅಲಂಕರಿಸಲು ಹವಣಿಸುತ್ತಿದ್ದಾರೆ. ಗುಜು ಗುಜು ಮಾತುಗಳ ಭಾರ ಹೇರಿ ಅವನ ಬದುಕಿನ ಸತ್ಯವನ್ನು ಹೂಳತೊಡಗಿದ್ದಾರೆ, ನಿಜವಾದ ಸಂಸ್ಕಾರಕ್ಕೆ ಆತುರವಿಲ್ಲ. ಅದು ತನ್ನಿಂದ ತಾನಾಗಿಯೇ ಆಗುತ್ತದೆ ಎಂಬ ಭರವಸೆಯ ನೆರಳಿನಲ್ಲಿ ಅವರ ಮಾತುಗಳೆಲ್ಲ ಸಮುದ್ರದಲ್ಲಿ ಕರಗುವ ಉಪ್ಪಿನಂತೆ, ಬಾನಿನಲ್ಲಿ ತೇಲಿಹೋಗುವ ತೆಳು ಮೋಡದಂತೆ ಏನನ್ನೂ ಸಾಧಿಸದೆ ಸದ್ದಿನ ಮೊತ್ತವಾಗುತ್ತಿದೆ. ನಾನು ಅಲ್ಲಿ ಅರ್ಥ ಕಾಣದೆ ಪಡಸಾಲೆಗೆ ಬರುತ್ತಿದ್ದೆ. ಇಲ್ಲಿ ಅರ್ಥ ದುರಂತವಾಗುವುದಕ್ಕೆ ಸಾಕ್ಷಿಯಾಗ ತೊಡಗಿದೆ. ಬಾಲ್ಯದ ಪೊರೆ ಕಳಚಿ, ಮುಗ್ಧ ಭಾವನೆಗಳೆಲ್ಲ ಬಾಡಿ ಹೋಗಿ ಯಥಾರ್ಥ ಬದುಕು ಎಂದರೆ ಒಂದು ನಿರಂತರ ಸಂಘರ್ಷ ಎಂಬ ತಿಳಿವು ಮೂಡಿದಂದಿನಿಂದ ನಾನು ಕೇವಲ ಸಾಕ್ಷಿ ಮಾತ್ರ ಆಗಿದ್ದೇನೆ.
ವ್ಯಥೆಯನ್ನು ಕಥೆಯಾಗಿಸುವಾಗ ಮಾತುಗಳೆಲ್ಲ ಗಡಿ ಮೀರದಂತೆ ನೋಡಿಕೊಳ್ಳಬೇಕಾಗಿದೆ. ಜೋಡಿಹಕ್ಕಿಗಳು ಬೇರೆಯಾದಾಗ ಒಂದು ವಾಕ್ಯ ಕಾವ್ಯವಾಯಿತಂತೆ. ಆದರೆ ’ವತ್ಸ ಹೋದ. ನಾನು ಯಾರನ್ನು ಮಗಾ ಅಂತ ಕರೆಯಲಿ’ ಎಂಬ ಆ ಅಮ್ಮನ ಮಾತಿನಲ್ಲಿ, ನಾನು ಕಾವ್ಯವನ್ನು ಹುಡುಕುತ್ತಿಲ್ಲ. ಹತ್ತಾರು ವರ್ಷಗಳಲ್ಲಿ ವತ್ಸ, ಅವನ ಅಪ್ಪ ಮತ್ತು ಈಗ ಗೋಳಿಡುತ್ತಿರುವ ಈ ಅಮ್ಮನ ನಡುವೆ ಒಂದು ಮಾನವೀಯ ಗೊಣಸಾಗಿ, ಸಾಕ್ಷಿಯಾಗಿ ಉಸಿರಾಟ ನಡೆಸಿದ್ದರಿಂದ ನಾನು ತೀರ್ಪನ್ನು ನಿರೀಕ್ಷಿಸುತ್ತಿದ್ದೇನೆ.

ಜಗತ್ತಿನ ಎಲ್ಲ ಮಕ್ಕಳಂತೆ ನನಗೂ ವತ್ಸನಿಗೂ ಮೊದ ಮೊದಲು ಜೀವನ ತೀರ ಸರಳವಾಗಿತ್ತು. ಆಟದ ಬಯಲಾಗಿತ್ತು. ಕನಸಿನ ಹೊಳೆಯಾಗಿತ್ತು. ಶುಚಿರುಚಿಯ ಹೂದೋಟವಾಗಿತ್ತು. ನಾನು ಅನಾಥ. ಆದರೆ ಆ ಪ್ರಜ್ಞೆ ಎಂದೂ ನನ್ನನ್ನು ಕಾಡಿದ್ದಿಲ್ಲ. ಅದಕ್ಕೆ ಕಾರಣ ವತ್ಸನ ಅಂದರೆ ಈಗ ಅವನ ಹೆಣದ ಚೀಲದ ಮುಂದೆ ಕುಳಿತಿರುವ ಈ ಅಮ್ಮ ಒಂದೇ ಬಟ್ಟಲಿನಲ್ಲಿ ನನಗೂ ಅವನಿಗೂ ಬಡಿಸುತ್ತಿದ್ದರು. ನನ್ನ ಚಡ್ಡಿಯ ಗುಂಡಿ ಅವನ ಶರ್ಟಿನ ಹರಿದತೋಳನ್ನು ಒಂದೇ ದಾರದಲ್ಲಿ ಹೊಲಿಯುತ್ತಿದ್ದರು. ನಾನು ನಕ್ಕರೆ ನಗುತ್ತಿದ್ದರು. ಅವನು ಅತ್ತಾಗ ಅಳುತ್ತಿದ್ದರು. ನನ್ನನ್ನು ಬೇಲಿಯಾಗಿಸಿ ಅವನನ್ನು ಕಾಪಾಡುತ್ತಿದ್ದರು. ಅವನನ್ನು ಅರಳಿಸಿ ನನ್ನನ್ನು ಚಿಗುರಿಸುತ್ತಿದ್ದರು. ಒಂದು ಕ್ಷಣ ಹಾಯಾಗಿ ಅವರು ಕುಳಿತುದನ್ನು ನಾನು ಕಂಡಿರಲಿಲ್ಲ. ಪ್ರತಿ ಕ್ಷಣದಲ್ಲೂ ವತ್ಸನನ್ನು ತುಂಬಿಸಿಕೊಳ್ಳುವ ಒಂದು ಹೋರಾಟ ಅವರ ಬದುಕಾಗಿತ್ತು ಎಂಬುದು ಈಗ ನನಗೆ ಸ್ಪಷ್ಟವಾಗಿದೆ. ಹತ್ತು ದಿನಗಳ ಹಿಂದೆ ಸಿಕ್ಕಾಬಟ್ಟೆ ಕುಡಿದು ಉಪ್ಪರಿಗೆಯಿಂದ ತೂರಾಡುತ್ತ ಕೆಳಕ್ಕಿಳಿದು ಚಾವಡಿಯ ಸೋಫಾದ ಮೇಲೆ ಉರುಳಿ ಬಿದ್ದು ಮೃದುವಾದ ನೆಲಹೊದಿಕೆಯ ಮೇಲೆ ಈಗ ಹೆಣವಾಗಿರುವ ವತ್ಸ ಈಗಿನ ವಾಸನೆಯಷ್ಟೇ ಬಲವಾದ ವಾಸನೆಯನ್ನು ಹೊರಹೊಮ್ಮುತ್ತಿದ್ದ ವಾಂತಿಯನ್ನು ಚೆಲ್ಲಿದಾಗ ಉಟ್ಟ ಪಟ್ಟೆಯ ಸೀರೆಯಲ್ಲಿ ಅವನ ಬಾಯಿಯನ್ನು ಒರಸಿ, ಮಲಗಿಸಿ ಮತ್ತೆ ಚೆಲ್ಲಿದ ವಾಂತಿಯ ಹುಳಿರಸವನ್ನು ಹಿಂಡಿ ತೆಗೆದ ಈ ಅಮ್ಮ ಈಗ ನನಗೆ ಅರ್ಥವಾಗುತ್ತಿದ್ದಾರೆ. ಸ್ಪಷ್ಟವಾಗುತ್ತಿದ್ದಾರೆ. . . .ನನ್ನ ಮುಂದೆ ರೇಖೆಯಾಗುತ್ತಿದ್ದಾರೆ. . . ಜೀವಂತಗೊಳ್ಳುತ್ತಿದ್ದಾರೆ. ಹೆಚ್ಚು ಹೇಳುವುದಿಲ್ಲ. ವತ್ಸನ ಅಪ್ಪನಿಂದ ತಮ್ಮ ದಾಂಪತ್ಯದ ಮೂವತ್ತು ವರ್ಷಗಳ ಅವಧಿಯಲ್ಲಿ ಅವರು ತುಂಬ ಪಡೆದಿದ್ದರು. . . ಉಳಿಸಿಕೊಂಡದ್ದು ಈಗ ಹೆಣವಾಗಿರುವ ವತ್ಸನನ್ನು ಮಾತ್ರ, ಕುಂತಿಯಂತೆ ಕನ್ಯೆಯಾಗಿ ಅಲ್ಲ, ಗಂಗೆಯಂತೆ ಅಲೌಕಿಕತೆಯಿಂದ ಅಲ್ಲ, ಶಾಪದಿಂದ ಅಲ್ಲ, ದೈಹಿಕ ರೋಗದಿಂದ ಅಲ್ಲ – ವತ್ಸನ ಅಪ್ಪನ, ನನಗೆ ಇಂದಿಗೂ ಅರ್ಥವಾಗದ ಮನೋವ್ಯಾಧಿ ಎನ್ನಲೇ, ವಿಕಾರ ಎನ್ನಲೇ, ಅಲ್ಲ ಅವರ ಸ್ವತಂತ್ರ ನಿರ್ಧಾರ ಎನ್ನಲೇ ಒಂದು ಸಂಕಲ್ಪದಿಂದ ಹೊಟ್ಟೆಯೊಳಗೆ ಮೊಳಕೆಯಾದುದನ್ನು ತೋಳತೊಟ್ಟಿಲಲ್ಲಿ ಆಡಿಸದೆ ಸೋತಿದ್ದರು. . .

ನಿಮಗೆ ಗೊತ್ತಲ್ಲ, ಸಾಕ್ಷಿ ಹೇಳುವವನಿಗೆ ಎಲ್ಲವೂ ತಿಳಿದಿರಬೇಕಿಲ್ಲ. ಇಲ್ಲಿ ವಯಸ್ಸಿನ ಅಂತರವಿದೆ. ಮನೋಧರ್ಮದ ಅಂತರವಿದೆ. ಭಾವನಾತ್ಮಕ ಬಿರುಕಿದೆ. ಎಲ್ಲೋ ಒಂದು ದಿನ “ವತ್ಸ, ಅಮ್ಮ ನೋಯುತ್ತಾರೆ. ಕುಡಿತಬಿಡು ಹುಚ್ಚುಬಿಡು. ಕೆಚ್ಚು ಬಿಡು. ಅಲ್ಲೋಲಕಲ್ಲೋಲವಾಗಬೇಡ” ಎಂದು ಬೇಡಿದಾಗ ವತ್ಸ ಹೇಳಿದ್ದನ್ನೆಲ್ಲ ನಾನು ಖಾತ್ರಿಯಾಗಿಸಲಾರೆ. ಅವನ ಅಪ್ಪನ ರಟ್ಟೆ ಹಿಡಿದು ಹೌದೇ ಎಂದು ಕೇಳಲಾರೆ. ತುಂಬು ಕುಂಕುಮದ ಅಮ್ಮನ ಕಣ್ಣುಗಳನ್ನು ದಿಟ್ಟಿಸಿ ಸತ್ಯವೇ ಎಂದು ಕೇಳಲಾರೆ. ಈ ಹತ್ತಾರು ವರ್ಷಗಳಲ್ಲಿ ಈ ಮನೆಯಲ್ಲಿ, ಈ ಕುಟುಂಬದಲ್ಲಿ ಈ ಮೂವರ ನಡುವೆ ಪರಸ್ಪರ ಸ್ಥಾಪನೆಯಾಗಿದ್ದ ಒಂದು ಭಯಾನಕ ಮೌನ ಮಾತ್ರ ನನ್ನ ಮಟ್ಟಿಗೆ ಸತ್ಯವಾಗಿದೆ.

ಆ ಮೌನ ಈಗ ಮುರಿದಿದೆ. . . ವತ್ಸನ ಆತ್ಮಹತ್ಯೆ ಖಾತ್ರಿಯಾಯಿತು ಎಂದೆನಲ್ಲ. ಆ ಕ್ಷಣದಿಂದ ಮುರಿಯುತ್ತಿದೆ. ಕ್ಷಣ ಅಮ್ಮನ ಉಸಿರಿನ ಒಂದು ಬಿಂದುವಾಗಿತ್ತು. ಕ್ಷಣ ಕ್ಷಣವೂ ಅವರು ವತ್ಸನನ್ನು ಕಣ್ಣಾಲಿಗಳ ಬೇಲಿಯೊಳಗೆ, ತನ್ನ ಉಸಿರಾಟದ ವೃತ್ತದೊಳಗೆ, ಎದೆ ಬೇಗುದಿಯ ಕಾವಿನೊಳಗೆ ಕಾಪಾಡಿಕೊಂಡಿದ್ದರು. ಒಂದೇ ಮಾತು ಹೇಳುತ್ತೇನೆ, “ವತ್ಸಾ, ನೀನು ಹೊರಗೆ ಬಾರಿನಲ್ಲಿ ಕುಡಿಯೋದು ಬೇಡ, ಮನೆಯೊಳಗೇ ಕುಡಿ. ನಾನೇ ಕುಡಿಸುತ್ತೇನೆ. ನನ್ನ ಕಣ್ಣ ಮುಂದೆಯೇ ಇರು” ಎಂದು ಅಮ್ಮ ಹೇಳಿದ ಮಾತಿಗಿಂತ ಬೇರೆ ಏನನ್ನು ಹೇಳಬೇಕು. . . ಆದರೂ ವತ್ಸ ಕಣ್ಮರೆಯಾದ. . . ಕ್ಷಣ ಕ್ಷಣವೂ ಅಮ್ಮನ ಆತಂಕ ಹೆಚ್ಚಿತು. ಹುಡುಕಾಟ ವಿಫಲವಾಯಿತು. ಉದ್ವೇಗ ದುಃಖವಾಯಿತು. ನೋವಾಯಿತು. ಮೂರು ದಿನಗಳ ಮೇಲೆ ವಾಸನೆ ಒಸಗೆ ತಂದಿತು. ಮನೆಯ ಹಿಂದಿನ ತೋಟದ ಬಾವಿಯಲ್ಲಿ ವತ್ಸನ ದೇಹ ಉಬ್ಬಿ ವಿಕಾರವಾಗಿ ತೇಲುತ್ತಿತ್ತು. . .
ಅದು ಆಳವಾದ ಬಾವಿಯಲ್ಲ. ಆದರೆ ಅಷ್ಟೇ ಆಳಕ್ಕೆ ಯಾರೂ ಇಳಿಯಲು ಸಿದ್ಧರಿರಲಿಲ್ಲ. ಸಂಕೋಚವೇಕೆ, ನಾನೂ ಕೂಡಾ. ಅವನ ಅಪ್ಪನೂ ಕೂಡಾ. ನಾನು ಬಹಳ ಕಡಿಮೆ ಮಾತುಗಳಲ್ಲಿ ಹೇಳಲೇಬೇಕಾದುದು ಅಸಹಜ ಎನ್ನಬಹುದಾದ ಈ ಹೊರಕವಚವನ್ನು. . .

ಬಾವಿಯಿಂದ ಎಲ್ಲ ದೂರ ದೂರ ಸರಿದಿದ್ದರು. ಅಮ್ಮ ಹತ್ತಿರ ಬರತೊಡಗಿದ್ದರು. ಕಣ್ಣರಳಿಸಿ ಎಲ್ಲರನ್ನು ನೋಡಿದ್ದರು. “ಬಾವಿಗಿಳಿಯುವವರು ಇನ್ನೇನು ಬಂದಾರು” ಎಂಬ ಮಾತಿನ ಗುಸು ಗುಸು ಮೌನವಾಗಿ ಮಡುಗಟ್ಟುವಂತೆ ಕಣ್ಣರಳಿಸಿದ್ದರು. ಕೈ ಹಿಡಿದ ಗಂಡನನ್ನೂ. . . ಮತ್ತೆ ಬಲವಾಗಿ ವತ್ಸನನ್ನು ಹೊತ್ತ ಹೊಟ್ಟೆಯನ್ನು ತನ್ನೆರಡೂ ಕೈಗಳಿಂದ ಬಲವಾಗಿ ಅದುಮಿಕೊಂಡರು. ಯಾವ ಶಕ್ತಿಯೋ, ಯಾವ ಪ್ರೇರಣೇಯೋ, ಆವೇಶವೋ, ಸೆಳೆತವೋ. . . ಬಗ್ಗಿ ಬಾವಿ ಇಣುಕಿದರು. ಯಾರೋ ತಂದಿಟ್ಟ ಹಗ್ಗವನ್ನು ಕಂಬಕ್ಕೆ ಕಟ್ಟಿದರು. ಸೀರೆಯನ್ನು ಮಡಚಿ ಕಟ್ಟಿಕೊಂಡರು. ಯಾರೋ ತಂದಿಟ್ಟ ಪಾಲಿತಿನ್ ಚೀಲವನ್ನು ಬಾವಿಗೆಸೆದರು. ಹಗ್ಗ ಹಿಡಿದು ಸುತ್ತು ಮೆಟ್ಟಲನ್ನು ಬಳಸಿ ಇಳಿದರು. ಬೇಡ ಅಮ್ಮ ಎನ್ನುವ ಮಾತು ನನ್ನ ಬಾಯಿಯಿಂದಲೂ ಬರಲಿಲ್ಲ. ನಾನು ಸಾಕ್ಷಿ ಮಾತ್ರ. ಗಂಟುದ್ದ ನೀರಿನಲ್ಲಿ ನಿಂತರು. ಬಗ್ಗಿದರು. ಹೊತ್ತು ಹೆತ್ತ ವತ್ಸನ ಕೊಳೆತ ದೇಹವನ್ನು ಚೀಲಕ್ಕೆ ತುಂಬಿದರು. ಚೂರು ಚೂರಾಗಿದ್ದ ಮಾಂಸವನ್ನು ಜೋಪಾನವಾಗಿ ತುಂಬಿದರು. ಎಷ್ಟು ಜಾಗ್ರತೆ. ಎಂಥ ನಿಷ್ಠೆ. . .ಗರ್ಭದಲ್ಲಿ ತುಂಬಿಸಿಕೊಳ್ಳುವ ಹಾಗೆ. . .ಪುನಃ ಜೀವ ಕೊಡುವ ಹಾಗೆ. . . ಪುನಃ ಹಾಲುಣಿಸುವ ಹಾಗೆ. . .ಪುನಃ ಮೈ ತೊಳೆಯುವ ಹಾಗೆ, ನೆಟ್ಟಿಗೆ ಮುರಿಯುವ ಹಾಗೆ, ಜೋಗುಳ ಹಾಡುವ ಹಾಗೆ, ಮುದ್ದು ಮಾಡುವ ಹಾಗೆ. . . ಎದೆಗವಚಿ ಹಾಗೆ ನಿಂತಿದ್ದರು. . . ಅಲ್ಲಿ ಕರಗಿ ಹೋಗುತ್ತಿದ್ದರೋ ಏನೋ. . . ಅಷ್ಟು ಹೊತ್ತಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮನೆಯ ಅಟ್ಟ ಸೇರಿದ್ದ ಹಿತ್ತಾಳೆಯ ತೊಟ್ಟಿಲನ್ನು ನಾಲ್ಕು ಕಡೆ ಹಗ್ಗ ಕಟ್ಟಿ ಉಳಿದವರು ಇಳಿಸಿದರು. . . ಅಮ್ಮನಿಗೆ ಯಾರೂ ಹೇಳಲಿಲ್ಲ. ಪಾಲಿತಿನ್ ಚೀಲದಲ್ಲಿ ಕಟ್ಟಿದ ವತ್ಸನ ದೇಹವನ್ನು ಮೃದುವಾಗಿ ತೊಟ್ಟಿಲಲ್ಲಿ ಇರಿಸಿ ತಾನೂ ಕುಳಿತರು. . .ಹೀಗೆ ಬಂತು ವತ್ಸನ ದೇಹ ಅದೇ ಪಡಸಾಲೆಗೆ. . .ಬಳಿ ಬಂದು ಕುಳಿತ ನನ್ನನ್ನು ತಬ್ಬಿ ಕೂಗಿದರು ಅಮ್ಮ “ಯಾರನ್ನು ಇನ್ನು ಮಗಾ ಎಂದು ಕೂಗಲಿ.” ಆವೇಶದಿಂದ ಗಂಡನ ಬಳಿ ಓಡಿ ಭುಜ ಅಲುಗಿಸಿ ಕೂಗಿದರು. “ಪ್ರತಿ ಸಾರಿಯೂ ಗರ್ಭ ತೆಗೆಸಿದಿರಿ. ಈಗ ನನಗೆ ಗರ್ಭಕೊಡಿ. ನನಗೆ ಜೀವ ಕೊಡಿ. ನನಗೆ ಕೂಸು ಕೊಡಿ.” ಸಾಕ್ಷಿಯಾಗಿ ಹೇಳಲೇಬೇಕು. . . ಗಂಡನನ್ನು ಅಪ್ಪಿ ಮುದ್ದಿಸಿ ಅವರು ಕೂಗಿದ್ದರು. . . “ನನ್ನ ಗರ್ಭಕ್ಕೆ ಜೀವ ಕೊಡಿ” . ನಾನು ಸಾಕ್ಷಿ ಮಾತ್ರ.
*****