ಗೃಹಭಂಗ – ೩

ಅಧ್ಯಾಯ ೬
– ೧ –

ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ಕತ್ತಲೆಯ ನಡುರಾತ್ರಿಯಲ್ಲಿ ಅಪ್ಪಣ್ಣಯ್ಯ ಬಂದು ಬೆಸ್ತರ ಕೇರಿಯ ಮಾಟನ ಮನೆಯ ಬಾಗಿಲನ್ನು ಬಡಿದ. ಒಳಗಿನಿಂದ ಎದ್ದು ಬಂದ ಮಾಟ ಇವನನ್ನು ಕಂಡು, ‘ಅದೆಲ್ಲಿಗ್ ಓಗಿಬಿಟ್ಟಿದ್ರಿ ಸ್ವಾಮಿ?’ ಎಂದು ಕೇಳಿದ.
‘ಪೋಲೀಸ್‌ಗೀಲೀಸ್ನೋರು ಹುಡುಕ್ತಿದಾರೇನೋ ನನ್ನ?’
‘ಯಂತಾ ಪೋಲೀಸ್ನೋರು ಸಾಮಿ?’
‘ಅದೇ ಅವತ್ತು……’
ಮಾಟನಿಗೆ ಈಗ ಹಿಂದಿನದೆಲ್ಲ ನೆನಪಾಯಿತು; ಹೇಳಿದ: ‘ಅವ್ರು ಪೋಲೀಸ್ನೋರಲ್ವಂತೆ.
ಹ್ವಲ ಅಳಿಯೋ ಮೋಜಣೀದಾರ್ರಂತೆ. ನಮ್ಮೂರಾಗೆ ಮೂರು ತಿಂಗ್ಳಿದ್ರು. ನೀವ್ಯಾಕ್ ಈಟ್ ದಿನ ಅವುತ್‌ಕಂಡಿದ್ರಿ ಸಾಮಿ? ಅಮ್ಮಾರು, ನನ್ನ ಮಗು ಎಲ್ಲಿ ಓಯ್ತೋ ಅಂತ ಪೇಚಾಡ್ಕಂತಿದ್ರು.’
‘ಹಾಗಾದ್ರೆ ನಾನು ಮನೆಗೆ ಹೋಗ್ಲೆ?’
‘ನಡೀರಿ ಸಾಮಿ.’
‘ನಂಗ್ ಹ್ಯದ್‌ರಿಕೆಯಾಗುತ್ತೆ. ಜೊತೆಗೆ ನೀನೂ ಬಾ’-ಎಂದು ಮಾಟನನ್ನು ಕಾವಲಿರಿಸಿಕೊಂಡು ಅಪ್ಪಣ್ಣಯ್ಯ ಅರೆ ಧೈರ್ಯದಿಂದ ತನ್ನ ಮನೆಯ ಕದ ತಟ್ಟಿದ. ‘ಅದ್ಯಾರೋ ಇಷ್ಟೊತ್ನಲ್ಲಿ ಬಾಗ್ಲು ಬಡಿಯೋರು?’-ಎಂದು ಒಳಗಿನಿಂದ ಕೂಗಿದ ಗಂಗಮ್ಮನಿಗೆ ಮಾಟನೇ ಉತ್ತರ ಹೇಳಿದ. ಸೀಮೆ ಎಣ್ಣೆಯ ಬುಡ್ಡಿ ಹೊತ್ತಿಸಿಕೊಂಡು ಹೊರಗೆ ಬಂದ ಗಂಗಮ್ಮ ಮಗನನ್ನು ಕಂಡು-‘ನನ್ ಕಂದಾ, ಇಷ್ಟು ದಿನ ಎಲ್ಲಿಗ್ಹೋಗಿದ್ಯಪ್ಪ. ಆ ಅನಿಷ್ಟಮುಂಡೆಗೆ ಹ್ಯದರ್ಕಂಡು ಎಲ್ಲೆಲ್ಲಿ ತಿರುಗ್ದೆಯಪ್ಪಾ?’ ಎಂದು ಕಣ್ಣಿನಲ್ಲಿ ನೀರು ತಂದುಕೊಂಡಳು. ಮಾಟ ಒಳಗೆ ಬಂದು ಕುಳಿತ. ನಂಜಮ್ಮ ಬಾಣಂತಿತನಕ್ಕೆ ನಾಗಲಾಪುರಕ್ಕೆ ಹೋಗಿದ್ದಳು. ಚೆನ್ನಿಗರಾಯನದು ಬೇಗ ಎಚ್ಚರವಾಗುವ ನಿದ್ದೆಯಲ್ಲ. ಮಗ ಎಲ್ಲೆಲ್ಲಿ ತಿರುಗಿದ, ಊಟ ತಿಂಡಿಗೆ ಏನೇನು ಮಾಡಿದ, ಎಲ್ಲವನ್ನೂ ಗಂಗಮ್ಮ ವಿಚಾರಿಸಿದಳು.

‘ನಾನೇನ್ ಹ್ಯದರ್ಕಳ್ಳಿಲ್ಲ. ಎಲ್ಲ ಕಡೇಲೂ ನಿಭಾಯಿಸ್ಕಂಡ್ ಬಂದೆ’-ವೀರಪುತ್ರ ತನ್ನ ಸಾಹಸದ ಕಥೆ ಹೇಳಿದ: “ಇಲ್ಲಿಂದ ಜಾವಗಲ್ಲು ಕಡೀಕ್ ಹೋದೆ. ದಾರೀಲಿ ಬಿದರೆ ಸಣ್ಣೇಗೌಡನ ಮನೆಗೆ ಹೋಗಿ, ‘ನಾವು ಬಾಮ್ರು. ಅಡಿಗೆ ಮಾಡ್ಕಳುಕ್ ಸಾಮಾನು ಕೊಡ್ಸಿ’ ಅಂದೆ. ಎರಡು ಸೇರಕ್ಕಿ, ಅವರೇಬ್ಯಾಳೆ, ಖಾರಾಪುಡಿ, ಬ್ಯಣ್ಣೆ, ಎಲ್ಲಾ ಕೊಟ್ರು. ಊಟ ಮಾಡಿ ಮಿಕ್ಕಿದ್ದನ್ನು ಕಟ್ಕಂಡು ಜಾವಗಲ್ಲಿನ ಕಡೆಗೆ ಹೋದೆ. ಅಲ್ಲಿ ಒಂದ್ ತಿಂಗ್ಳಿದ್ದೆ. ಈಗ್ಯಾಕ್ ಬಂದಿದೀಯಾ, ಊರಲ್ಲಿ ಎಲ್ಲ ಹ್ಯಾಗಿದಾರೆ, ಅವರ್ಯಾಕ್ ಬರ್ಲಿಲ್ಲ ಅಂತ ಆ ಅವ್ಳಿದಾಳಲ, ಆ ಸುಕನಾತಿಮುಂಡೆ, ಯಂಕಟರಾಮು ಹೆಂಡ್ತಿ, ಕೇಳಿದ್ಲು. ಒಂದಿನ ರಾತ್ರಿನಾಗ ಅಲ್ಲಿಂದ ಹ್ವರಟು ಅರಸೀಕೆರೆ ಕಡೀಕ್ ಹೋದೆ. ಹಾಗೇ ಸುತ್ಕಂಡು ಬಾಣಾವರ ಕಡೂರು ಮ್ಯಾಲ್ಹಾಸಿ ಶಿವಮೊಗ್ಗುಕ್ ಹೋದೆ. ಅಲ್ಲಿ ಹ್ವಳೇ ದಡ್‌ದಾಗೆ ಬೆಕ್ಕಿನ ಕಲ್ಲಿನ ಮಟ ಅಂತ ಇದೆ. ಅಲ್ಲೇ ಕೂತ್ಕಳುಕ್ಕೆ ಮಲೀಕಳುಕ್ಕೆ ಆಗ್ತಿತ್ತು”
‘ಊಟುಕ್ಕೇನ್ಮಾಡ್ದೆಯೋ?’
‘ಆ ಮಟದೋರೇ ಹೇಳ್ಕೊಟ್ರು. ಅವ್ರು ಲಿಂಗಾಯತರು, ನಾನು ಊಟ ಮಾಡೂ ಹಾಗಿಲ್ವಲ್ಲ. ಆ ಊರಲ್ಲಿ ದೊಡ್ದ ಬ್ರಾಮ್ರಕೇರಿ ಅಂತ ಇದೆ. ಯಲ್ಲ ಅನುಕೂಲವಂತ್ರು. ದಿನಾ ಬಿಕ್ಷಾನ್ನ ಮಾಡ್ತಿದ್ದೆ. ಅಮ್ಮಾ, ನೀನೇನೇ ಹೇಳು, ಬಿಕ್ಷಾನ್ನದ ಮುಂದೆ ಇನ್‌ಹ್ಯಾಗ್ ಅಡಿಗೆ ಮಾಡಿದ್ರೂ ಚನ್ನಲ್ಲ. ಜೋಳಿಗೆ ಅನ್ನ ಕೊಳದಪ್ಪಲೆ ಹುಳಿ ಸಾರು ತಂದು ನದೀ ದಡದ ಬಂಡೆ ತೊಳೆದು ಬಿಟ್ಟು ಅದರ ಮ್ಯಾಲೆ ಹಾಕ್ಕಂಡು ಹ್ವಡೀತಿದ್ದೆ.’
‘ಬಿಕ್ಷಾನ್ನ ಅಂದ್ರೇನು ಸಾಮಿ?’-ಮಾಟ ಕೇಳಿದ.
‘ಊಟದ ಹೊತ್ನಲ್ಲಿ ಹೋಗಿ ಯಲ್ಲ ಮನೇ ಮುಂದೂ ನಿಂತ್ಕಂಡು ಬವತಿ ಬಿಕ್ಷಾಂದೇಹಿ ಅಂದ್ರೆ ಜೋಳಿಗೆಗೆ ಅನ್ನ ಕೊಳದಪ್ಪಲೆಗೆ ಸಾರೋ ಹುಳಿಯೋ, ಮ್ಯಾಲೋಗರವೋ ಹೊಜ್ಜೋ, ಯಲ್ಲಾನೂ ಒಂದಕ್ಕೇ ಹಾಕ್ತಾರೆ. ಆಮ್ಯಾಲೆ ಕೂಡ್ಸಿ ಊಟ ಮಾಡೂದು. ಏನು ವೈನಾಗಿರುತ್ತೆ ಅಂತೀಯಾ!’
‘ವೈನಾಗಿರ್ದೆ ಏನ್ ಮಾಡ್ತೈತೆ. ಅಲವು ಮನೆ ಎಸರು ಚಂದ, ಆದರ್‌ಗಿತ್ತಿ ಮಗಳು ಚಂದ ಅಂತ ಗಾದೆಯೇ ಇಲ್ವರಾ?’-ಬಾಯಲ್ಲಿ ನೀರೂಡಿಸಿಕೊಳ್ಳುತ್ತಾ ಮಾಟ ಚಪ್ಪರಿಸಿದ.
‘ಅಮ್ಮಾ, ಆ ಹಾಳು ಶಿವಮೊಗ್ಗದಲ್ಲಿ ಬರೀ ಅನ್ನಾನೇ ತಿಂದು ಬೇಜಾರಾಗಿದೆ. ಒಂದಿಷ್ಟು ಹಿಟ್ಟು ಮಾಡಿ ಹಾಕಮ್ಮ . ಹ್ವಟ್ಟೆ ಹಸಿಯುತ್ತೆ.’
‘ಇಷ್ಟೊತ್ನಲ್ಲೇನೋ?’
‘ರಾತ್ರಿ ಏನೂ ತಿಂದಿಲ್ಲ.’
‘ಆ ಮುಂಡೇರು ಯಾರಾರು ಇದ್ದಿದ್ರೆ ಎದ್ದು ಕೆರೆಯೇ ಅಂತಿದ್ದೆ. ಯಾರೂ ಇಲ್ಲ ಅಪ್ಪಣ್ಣಯ್ಯ, ನಿನ್ನ ಹೆಂಡ್ತಿ ಹೆಣ್ಣು ಮಗು ಹೆತ್ಳಂತೆ. ನಾಮ್‌ಕರಣಕ್ಕೆ ಕರೆಯುಕ್ ಬಂದಿದ್ರು. ಈಗ ನಾಕು ತಿಂಗ್ಳಾಗಿರ್‌ಬೇಕು. ಹೋಗಿ ಕರ್ಕಂಡ್ ಬಾ. ಅಡಿಗೆ ಮಾಡಿ ಮಾಡಿ ನಂಗ್ ಅಸ್ಸಪ್ಪ ಅನ್ನೂ ಹಾಗಾಗಿದೆ’-ಎನ್ನುತ್ತಾ ಗಂಗಮ್ಮ ಮೇಲೆ ಎದ್ದಳು.

– ೨ –

ಊರಿನಲ್ಲೆಲ್ಲ ನಾಲ್ಕು ದಿನ ಧೈರ್ಯವಾಗಿ ತಲೆ ಎತ್ತಿ ತಿರುಗಾಡಿದ ಮೇಲೆ ಅಪ್ಪಣ್ಣಯ್ಯ ಹೆಂಡತಿ ಮಗುವನ್ನು ಕರೆದುಕೊಂಡು ಬರಲು ನುಗ್ಗೀಕೆರೆಗೆ ಹೊರಟ. ರೊಟ್ಟಿ ಚಟ್ನಿಯ ಗಂಟನ್ನು ಹೆಗಲಿಗೆ ಹಾಕಿ ತಿಪಟೂರಿನ ತನಕ ನಡೆದು, ರೈಲಿನಲ್ಲಿ ಒಬ್ಬನೇ ಕಡೂರಿಗೆ ಹೋಗಿ, ಅಲ್ಲಿಂದ ಒಂಬತ್ತು ಮೈಲಿ ನಡೆದು ಮಾವನ ಮನೆ ಮುಟ್ಟಿದ. ಮಗುವಿಗೆ ನಾಲ್ಕು ತಿಂಗಳಾಗಿತ್ತು. ಅವರೇ ಜಯಲಕ್ಷ್ಮಿ ಎಂದು ಹೆಸಟ್ಟಿದ್ದರು.

ಅಪ್ಪಣ್ಣಯ್ಯ ಹೋದಾಗ ಸಂಜೆಯಾಗಿತ್ತು. ಸಾತು ಇನ್ನೂ ಬಾಣಂತಿಯ ಕೋಣೆಯಲ್ಲಿ ಇದ್ದಳು. ಇವನು ಹೋಗಿ ಮಗು ಎತ್ತಿಕೊಂಡು ಆಡಿಸಿದ. ಹೆಂಡತಿಯನ್ನು ಮಾತಾಡಿಸಿದ. ರಾತ್ರಿ ಊಟವಾದ ಮೇಲೆ ನಡುಮನೆಯಲ್ಲಿ ಮಾವನವರ ಹಾಸಿಗೆಯ ಹತ್ತಿರ ಇವನದನ್ನೂ ಹಾಸಿದ್ದರು. ಮುಖ ಸಪ್ಪಗೆ ಮಾಡಿಕೊಂಡು ಹೋಗಿ ಅವನು ಹಾಸಿಗೆಯ ಮೇಲೆ ಕುಳಿತಾಗ ಮಾವನವರು ಕೇಳಿದರು: ‘ನಾಮಕರಣಕ್ಕೆ ಹೇಳಿಕಳಿಸಿದ್ವು. ಆಗ ಎಲ್ಲಿಗೆ ಹೋಗಿದ್ದೆ?’
‘ಶಿವಮೊಗ್ಗಕ್ಕೆ, ಅಲ್ಲ ಜಾವಗಲ್ಲಿಗೆ.’
‘ಹೆಂಡತಿ ಹೆರಿಗೆ ಅನ್ನೂದು ಗೊತ್ತಿರ್ಲಿಲ್ವೆ? ಅದೇನು ಹಾಗೆ ಹೇಳ್ದೆ ಕೇಳ್ದೆ ಊರು ಬಿಟ್ಟು ಹೋಗಿದ್ದುದು?’
‘ಒಂದಿಷ್ಟು ಕೆಲ್ಸವಿತ್ತು.’
ಬಾಣಂತಿಯ ಕೋಣೆಯಲ್ಲಿ ಮಲಗಿದ್ದ ಸಾತು ಎದ್ದು ಕೂತು ಹೇಳಿದಳು: ‘ಅದೇನು ಸೂರೆ ಹೋಗೋ ಕೆಲ್ಸವಿದ್ದದ್ದು? ಸುಳ್‌ಸುಳ್ಳೇ ಯಾಕ್ ಹೇಳ್ತೀರಾ? ನಿಜ ಹೇಳಿಬಿಡಿ. ಅತ್ತಿಗೇನಾ ಕಾಲಾಗೆ ಒದ್ದು, ಆಮ್ಯಾಲೆ ಪೋಲೀಸ್ನೋರು ಹಿಡ್‌ಕತ್ತಾರೆ ಅಂತ ಕದ್ದು ಹೋಗಿರ್ಲಿಲ್ವೆ?’
ಅಪ್ಪಣ್ಣಯ್ಯ ಉತ್ತರ ಹೇಳಲಿಲ್ಲ; ತಲೆ ತಗ್ಗಿಸಿ ಕುಳಿತ. ಸಾತು ಕೇಳಿದಳು: ‘ನಿಮ್ಮಮ್ಮ ಒದೆಯೋ ಅಂದ್ಲು. ನೀವು ಒದ್ದುಬಿಟ್ರೇನೋ? ಆ ಸುಡುಗಾಡು ಹೆಂಗ್ಸು ಸಾಯದೆ ನಿಮಗೆ ಬುದ್ಧಿ ಬರುಲ್ಲ.’
ತನ್ನ ತಾಯಿಯನ್ನು ಬೈದದ್ದಕ್ಕೆ ಅಪ್ಪಣ್ಣಯ್ಯನಿಗೆ ಅಗಾಧ ಸಿಟ್ಟು ಬಂತು. ಆದರೆ ಅದನ್ನು ತೋರಿಸಲು ಇದು ಸಮಯವಲ್ಲ. ಅಲ್ಲದೆ ಸಾತು ಅತ್ತಿಗೆಯಂತಹ ಸಾಧು ಹೆಂಗಸಲ್ಲ. ಆದುದರಿಂದ ಅವನು ಸುಮ್ಮನಿದ್ದ. ಸಾತು ಒಳಗಿನಿಂದ ಮಾತನಾಡಿದಳು: ‘ನಿಮ್ಮಮ್ಮನ ಸಾವಾಸ ನಂಗೆ ಬ್ಯಾಡ. ನಿಮ್ಮನೆ ಹಿಂದುಗಡೆ ಖಾಲಿ ಜಾಗ ಇದ್ಯಲ್ಲಾ, ಅಲ್ಲಿ ಸಣ್ಣದಾಗಿ ಒಂದು ಮನೆ ಕಟ್ಸಿ, ಬ್ಯಾರೆ ಇರುಕ್ಕೆ ಅನುಕೂಲ ಮಾಡಿ. ಆಮ್ಯಾಲೆ ಬಂದು ನನ್ನೂ ಮಗೂನೂ ಕರ್ಕಂಡ್ ಹೋಗಿ.’
‘ಅದ್‌ಹ್ಯಾಗ್ ಆಗುತ್ತೆ?’-ಹಿಡಿದಿದ್ದ ಗಂಟಲನ್ನು ಬಿಡಿಸಿಕೊಳ್ಳಲು ಕೊಸರುತ್ತಾ ಅವನು ಕೇಳಿದ.
‘ಅದ್ಯಾಕ್ ಆಗುಲ್ಲ? ನೀವು ಇರೂಕ್ಕೆ ಸಣ್ಣ ಮನೆ ಕಟ್ಸಿ. ಅಣ್ಣ ತಮ್ಮಂದಿರು ಪಾಲಾಗಿ. ಮನೆಗೆ ಬೇಕಾದ ಪಾತ್ರೆ ಪರಟಿ ನನ್ನ ಮದುವೇಲಿ ಕೊಟ್ಟಿದ್ದೇ ಇದೆ. ಸಾಕಾಗದೆ ಇದ್ರೆ ನಾನು ಇನ್ನಷ್ಟು ತತ್ತೀನಿ.’
ಅವನು ಈಗಲೂ ಮಾತನಾಡಲಿಲ್ಲ. ಸಾತು ಮುಂದುವರಿಸಿದಳು: ‘ನೀವು ಬ್ಯಾರೆ ಆಗ್‌ಬೇಕು ಅಂತಲೇನೂ ಅಲ್ಲ. ಅಣ್ಣತಮ್ಮಂದಿರು ಒಟ್ಟಿಗೆ ಇರಿ. ನಾನು ಅಕ್ಕನ ಜೊತೆ ಇರ್ತೀನಿ. ಆದ್ರೆ ನಿಮ್ಮಮ್ಮ ಬ್ಯಾರೆ ಇರ್‌ಬೇಕು. ಅವ್ಳಿಗೇ ಬೇಕಾದ್ರೆ ಬ್ಯಾರೆ ಒಂದು ಒಪ್ಪಾರು ಕಟ್ಸಿಕೊಟ್ಟು ಹೊರಗೆ ಹಾಕಿ, ಆಮ್ಯಾಲೆ ಬಂದು ನನ್ನೂ ಮಗೂನೂ ಕರ್ಕಂಡ್ ಹೋಗಿ.’
ತಾಯಿಯನ್ನು ಬೈದದ್ದಕ್ಕೆ ಅವನಿಗೆ ಸಿಟ್ಟು ಬಂದು ಮುಖ ಸಿಂಡರಿಸಿತು. ಅದನ್ನು ಗಮನಿಸಿದ ಅತ್ತೆಮ್ಮ ಹೇಳಿದರು: ‘ನಮ್ಮ ಅಪ್ಪಣ್ಣನ ಸ್ವಭಾವ ಒಳ್ಳೇದು. ಅವನು ಚಿನ್ನದಂಥಾ ಹುಡುಗ ಅಂತ ಸಾತು ಹೇಳ್‌ತಾನೇ ಇರ್ತಾಳೆ. ಅತ್ತೆ ಸ್ವಸೆಗೆ ಆಗುಲ್ಲ-ನೀವು ಬ್ಯಾರೆ ಇರಿ. ಸಾತು ಬೇಕಾದ್ರೆ ನಿಮ್ಮಮ್ಮನ ಮನೇಲೂ ಕೈಲಾದ ಕೆಲ್ಸ ಬದುಕು ಮಾಡಿ ಕೊಡ್ತಾಳೆ.’ ಈಗ ಅವನ ಮುಖದ ಮೇಲೆ ಪ್ರಸನ್ನತೆ ಮೂಡಿತು.
ಮಾವನವರು ಕೊನೆಯದಾಗಿ ಹೇಳಿದರು: ‘ಅಂತೂ ಗಂಡ ಹೆಂಡತಿ ಅನ್ಯೋನ್ಯವಾಗಿ ಸಂತೋಷವಾಗಿರೂದು ಮುಖ್ಯ. ಬೆಳಿಗ್ಗೆ ಎದ್ದರೆ ಮುಂಡೆ ರಂಡೆ ಅಂತ ಕೆಟ್ಟ ಮಾತು ಆಡ್ಕಂಡು ಇರ್‌ಬಾರ್ದು. ಒಟ್ನಲ್ಲಿ ನೀನು ಅದಕ್ಕೆ ಬೇಕಾದ ಏರ್ಪಾಡು ಮಾಡ್ಕಂಡು ಹೆಂಡ್ತಿ ಕರ್ಕಂಡು ಹೋಗು. ನಮಗಿರೋಳು ಒಬ್ಬಳೇ ಒಬ್ಬಳು ಮಗಳು. ಇನ್ನು ಮತ್ತೆ ಹೆಣ್ಣೂ ಇಲ್ಲ ಗಂಡೂ ಇಲ್ಲ.’

ಅಪ್ಪಣ್ಣಯ್ಯ ಎಂಟು ದಿನ ಮಾವನವರ ಮನೆಯಲ್ಲಿದ್ದ. ಹೆಂಡತಿಯನ್ನು ಬೈಯದೆ ಸಂತೋಷದಿಂದ ಮಗು ಎತ್ತಿ ಆಡಿಸುತ್ತಿದ್ದ. ಆದರೆ ಅವನ ಮಾತು ನಡೆಗಳಲ್ಲಿ ವಿನಾ ಕಾರಣ ಕಾಣುತ್ತಿದ್ದ ಸೆಡವು ಒರಟುಗಳನ್ನು ಕಂಡರೆ ಎಲ್ಲರಿಗೂ ಕಿರಿಕಿರಿ ಎನ್ನಿಸುತ್ತಿತ್ತು. ಒಂದು ದಿನ ತೆಂಗಿನಕಾಯಿ ಸುಲಿಯುವಾಗ ಸಿಪ್ಪೆ ಗಟ್ಟಿಯಾಗಿ ಅಂಟಿಕೊಂಡು, ಎಳೆದರೆ ಬರದಿದ್ದುದಕ್ಕೆ ‘ಇದರವ್ವನ್ನಾ…..’ ಎಂದುಬಿಟ್ಟ. ಇನ್ನೊಂದು ದಿನ ಕೊಟ್ಟಿಗೆಯಲ್ಲಿ ಹಸು ಕೋಡು ಆಡಿಸಿದುದಕ್ಕೆ, ‘ಅಯ್ಯೋ ನಿನ್ನ ಹೆತ್ತೋಳ್ನಾ’ ಎಂದಾಗ ಅತ್ತೆ ಹತ್ತಿರದಲ್ಲಿಯೇ ಇದ್ದು ಕೇಳಿಸಿಕೊಂಡರು. ಇವನನ್ನು ತಿದ್ದುವುದೆಂದರೆ ಸಾಮಾನ್ಯವಲ್ಲವೆಂಬುದು ಅವರಿಗೂ ಗೊತ್ತು. ತಮ್ಮ ಮಗಳ ಹಣೆಬರಹವನ್ನು ಯೋಚಿಸಿಕೊಂಡು ಅವರು ನಿಟ್ಟುಸಿರು ಬಿಟ್ಟರು.
ಊರಿಗೆ ಹೊರಡುವ ದಿನ, ಬೇರೆ ಇರಲು ವ್ಯವಸ್ಥೆ ಮಾಡಲು ಮತ್ತೆ ಹೇಳಿ ಸಾತು ಅವನಿಂದ ಹೂಂ ಎನಿಸಿದಳು. ಕಡೂರಿಗೆ ನಡೆದು ಬಂದ ಅವನು ಅಲ್ಲಿಂದ ರೈಲು ಹತ್ತಿ ತಿಪಟೂರಿನಲ್ಲಿ ಇಳಿದ. ಇನ್ನೂ ತಿಪಟೂರಿನಿಂದ ಊರಿಗೆ ಹದಿನಾರು ಮೈಲಿ ನಡೆಯಬೇಕು. ಮೊದಲಿಯಾರ್ ಕಂಪನಿಯವರು ಮೋಟಾರು ಶುರು ಮಾಡಿದ್ದರೂ ಅದು ದಿನ ಬಿಟ್ಟು ದಿನ ಹೋಗುತ್ತಿತ್ತು. ಸೋಮವಾರ ಬುಧವಾರ ಶುಕ್ರವಾರ ಮಾತ್ರ ಮೋಟಾರು ಇದ್ದದು. ಅಪ್ಪಣ್ಣಯ್ಯ ಆಗಲೇ ಒಂದು ದಿನ ಕೂತು ಅದರ ಮಜ ಕಂಡಿದ್ದ. ಅವನಿಗೆ ಹೆದರಿಕೆಯೇ ಆಗಿರಲಿಲ್ಲ. ರೈಲಿನಲ್ಲಿ ಒಬ್ಬನೇ ಕೂತು ಬಂದಿರುವ ಅವನಿಗೆ ಮೋಟಾರದೇನು ಭಯ? ಆದರೆ ಈ ದಿನ ಶುಕ್ರವಾರ ಸಾಯಂಕಾಲವಾಗಿತ್ತು. ನಾಳೆ ನಾಡಿದ್ದು ಎರಡು ದಿನವೂ ಮೋಟಾರು ಇರಲಿಲ್ಲ. ನಡೆದುಕೊಂಡು ಹೋಗುವುದೇನೂ ಕಷ್ಟವಲ್ಲ ಆದರೆ ಮೋಟಾರಿನಲ್ಲಿ ಕುಳಿತುಕೊಳ್ಳುವ ಮಜ ತಪ್ಪಿಹೋಯಿತು.
ಆಗಲೇ ಸಂಜೆಯಾಗಿದ್ದುದರಿಂದ ತಿಪಟೂರಿನಲ್ಲಿ ಉಳಿದ. ಹೋಟೆಲಿನಲ್ಲಿ ಆಲೂಗಡ್ಡೆ ನೀರುಳ್ಳಿ ಹುಳಿ, ಬದನೇಕಾಯಿ ಪಲ್ಯ, ಹಪ್ಪಳ ಸಂಡಿಗೆ, ಸಾರು, ಮೊಸರು ಸಮೃದ್ಧಿಯಾಗಿ ಮೂರು ಸಲ ಕಲಸಿಕೊಂಡು ಊಟ ಮಾಡಿದ. ಆರಾಣೆ ದುಡ್ಡು. ಛತ್ರದ ಜಗುಲಿಯ ಮೇಲೆ ಮಲಗಿದ್ದು ಬೆಳಿಗ್ಗೆ ಎದ್ದು ಕೆರೆಯ ಕಡೆಗೆ ಹೋಗಿ ಬಂದು ಅದೇ ಹೋಟೆಲಿಗೆ ಹೋಗಿ ಒಂದು ಮಸಾಲೆ ದೋಸೆ ತಿಂದ. ಅವನು ಶಿವಮೊಗ್ಗದಲ್ಲಿಯೂ ಎರಡು ದಿನ ಮಸಾಲೆ ದೋಸೆ ತಿಂದಿದ್ದ. ಆದರೆ ತಿಪಟೂರಿನಲ್ಲಿ ಇವರು ಮಾಡಿದ್ದ ಹಾಗೆ ಇರಲಿಲ್ಲ. ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಆಲೂಗಡ್ಡೆ, ದಪ್ಪ ನೀರುಳ್ಳಿಯ ಪಲ್ಯ. ಒಳಗೆ ದೋಸೆಗೆ ಸವರಿದ್ದ ಕಾಯಿ ಚಟ್ನಿ. ಸ್ವಲ್ಪ ಖಾರಖಾರವಾಗಿದ್ದ ಅದನ್ನು ಲೊಟ್ಟೆ ಹೊಡೆಯುತ್ತಾ ಮುಗಿಸಿದ ಅವನು ಮತ್ತೆ ಆರು ದೋಸೆಗೆ ಹೇಳಿದ. ಬಿಸಿಬಿಸಿಯಾಗಿ ಬಂದ ಎಲ್ಲವನ್ನೂ ತಿಂದು, ಒಟ್ಟಿನಲ್ಲಿ ಏಳಾಣೆ ಕೊಟ್ಟು ಕಾಲುದಾರಿಯಲ್ಲಿ ರಾಮಸಂದ್ರದ ಕಡೆಗೆ ಹೊರಟ. ಎರಡು ಮೈಲಿ ಬರುವುದರಲ್ಲಿಯೇ ಬಾಯಾರಿಕೆಯಾಯಿತು. ‘ಇದರವ್ವನಾ, ಈ ದ್ವಾಸೆ ತಿಂದುದ್ದೇ ಬಾಯಾರುತ್ತೆ’-ಎಂದು ದಾರಿಯ ಬಲಪಕ್ಕದ ತೆಂಗಿನ ತೋಟದ ಕಡೆ ನೋಡಿದ. ಯಾರೂ ಕಾಣಲಿಲ್ಲ. ಮೆಲ್ಲಗೆ ಬೇಲಿ ನುಸಿದು ಒಳದೋಟದ ಕಡೆಗೆ ಹೋಗಿ ಬುಡ್ಡವಾದ ಮರದಿಂದ ಮೂರು ಎಳನೀರು ಕಿತ್ತು ಒಂದು ಕಡ್ಡಿಯಿಂದ ಅವುಗಳ ಕಣ್ಣು ಕುಕ್ಕಿ ಗಟಗಟನೆ ಗಂಟಲಿಗೆ ಬಗ್ಗಿಸಿದ. ಬಂಬಲಿನ ಆಸೆಯಾದರೂ, ಸಿಕ್ಕಿಹಾಕಿಕೊಳ್ಳುವ ಭಯವಾಗಿ ಬುರುಡೆಗಳನ್ನು ಅಲ್ಲಿಯೇ ಬಿಟ್ಟು ಬೇಲಿ ಬಳಸಿಕೊಂಡು ಹೋಗಿ ದಾರಿ ಸೇರಿ, ಊರ ಕಡೆ ದಾಪುಗಾಲು ಹಾಕಿದ. ದಾರಿಯಲ್ಲಿ ಸಿಕ್ಕಿದ ಒಬ್ಬ ದನ ಕಾಯುವ ಗೌಡ ಇವನಿಗೆ ಒಂದು ಬೀಡಿ ಕೊಟ್ಟ. ಅಪ್ಪಣ್ಣಯ್ಯ ತಾನಾಗಿಯೇ ದುಡ್ಡು ಕೊಟ್ಟು ಬೀಡಿ ಸೇದುತ್ತಿರಲಿಲ್ಲ. ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿದಮೇಲೆ ಅದನ್ನು ಬಿಟ್ಟೇ ಇದ್ದ. ಆದರೆ ಯಾರನ್ನಾದರೂ ಕೇಳಿ ಬಿಟ್ಟಿಯಾಗಿ ಕೊಟ್ಟರೆ ಅಲ್ಲಿಯೇ ಸೇದಿ ಬಿಸಾಕಿಬಿಡುತ್ತಿದ್ದ.

– ೩ –

ಊರು ಮುಟ್ಟುವ ಹೊತ್ತಿಗೆ ಸಂಜೆ ನಾಲ್ಕು ಗಂಟೆಯಾಗಿತ್ತು. ಅವನು ಮನೆಗೆ ಬಂದಾಗ ಅದೇ ತಾನೇ ಪಟೇಲ ಶಿವೇಗೌಡ, ಅವನ ಭಾಮೈದ ಮಾಜೀ ಬದಲಿ ಶ್ಯಾನುಭೋಗ ಸಿವಲಿಂಗೇಗೌಡ ಬಂದು ಕೂತಿದ್ದರು. ಇವನು ಬಂದ ತಕ್ಷಣ ಶಿವೇಗೌಡ ಮಾತು ಪ್ರಾರಂಭಿಸಿದ.
‘ಗಂಗವ್ವ, ಏಳ್‌ಕಳಸ್ತಂಗೆ ಅಪ್ಪಣ್ಣಯ್ಯನೂ ಬಂದ. ನನ್ನ ದುಡ್ಡಿಂದು ಏನು ಮಾಡ್ದೆ? ಮರ್‌ತೇಬಿಟ್ಟಿದೀರಾ?’
ಯಾವ ದುಡ್ಡು ಎಂಬುದು ಗಂಗಮ್ಮನಿಗೆ ಎರಡು ನಿಮಿಷ ನೆನಪಿಗೆ ಬರಲಿಲ್ಲ. ಶಿವೇಗೌಡ ಹೇಳಿದ: ‘ಅಸಲು ಎಲ್ಡು ಸಾವಿರ. ಏಳು ವರ್ಸದ ಬಡ್ಡಿ ಅಂದ್ರೆ ಸಾವಿರದೆಂಟನೂರ ಎಂಬತ್ತು. ಈಟು ವರ್ಸ ಬಡ್ಡೀನೂ ಕಟ್ನಿಲ್ಲ. ಅದರ ಬಡ್ಡಿ ಲ್ಯಕ್ಕ ಇಡುದ್ರೆ ಮ್ಯಾಲೆ ಆರು ನೂರು. ಅಂದ್ರೆ ನಾಕು ಸಾವಿರದ ಆರು ನೂರು ಎಂಬತ್ತಾಯ್ತದೆ. ಇನ್ನೊಂದು ತಿಂಗ್ಳಾಗೆ ನನ್ ಅನ ಮಡಗ್‌ಬಿಡಿ. ವಾಯ್ದೆ ಕಳೀತಿದೆ. ಇಲ್ದಿರಾ ನಾನು ಕೋಲ್ಟಿಗ್ ಓಯ್ತೀನಿ.’
‘ಏನೋ ಹುಡ್ಗ ತಿಳೀದೇ ಯಾವತ್ತೋ ಮಾಡಿದ್ದುಕ್ಕೆ ಇಷ್ಟೊಂದು ದುಡ್ದು ಎಲ್ಲಿ ತರಾಣ ಶಿವೇಗೌಡ?’
‘ಹುಡ್ಗ ಮಾಡಿದ್ದು ಅಂತ ನಾನು ಅಣ ಕೊಟ್ಟಿದ್ ಸುಳ್ಳಾ? ಎಂತಾ ಮಾತಾಡ್ತೀರಾ ನೀವು? ಚನ್ನಯ್ಯ, ಶ್ಯಾನುಭೋಕೆ ಮಾಡ್ತಿಯಲಾ ನೀನೇ ಏಳು. ನಾನ್ ಗಂಟು ಮಡಗಿದ್ದು ಸುಳ್ಳಾ.’
ಚೆನ್ನಿಗರಾಯ ಸುಮ್ಮನೆ ಕುಳಿತಿದ್ದರು. ‘ಇನ್ ಎಂಟು ದಿನದಲ್ಲಿ ಗಂಟು ಮಡ್‌ಗದೆ ಇದ್ರೆ ನಾನು ಕೇಸಾಕ್ತೀನಿ. ನನ್ ಮೇಲೇನೂ ಮಾತಿಲ್ಲ. ಹೂಂ’-ಎಂದು ಹೇಳಿ ಶಿವೇಗೌಡ ಸಿವಲಿಂಗೇಗೌಡನೊಡನೆ ಎದ್ದು ಹೊರಟುಹೋದ.
‘ಈಗೇನ್ಮಾಡೂದೋ ಚಿನ್ನಯ್ಯ?’-ಗಂಗಮ್ಮ ಕೇಳಿದಳು.
‘ನಂಗೇನು ಗೊತ್ತಮ್ಮಾ?’
‘ಶ್ಯಾನುಭೋಗ, ನಿಂಗೆ ಗೊತ್ತಿರ್‌ಬ್ಯಾಡ್ವೇನೋ?’
ಅಪ್ಪಣ್ಣಯ್ಯ ಮಾತನಾಡಿದ: ‘ನಮ್‌ತಾವ ಅವ್ನೇನು ಕಿತ್ಕತಾನೆ ನೋಡಾಣ. ಕೊಡುಲ್ಲ ಅನ್ನು.
‘ಅನ್ನಣೇನೋ?’
‘ಹೂಂ, ಕಣಮ್ಮ.’
‘ಅಮ್ಮ, ನಂಗ್ ಹ್ವಟ್ಟೆ ಹಶೀತಿದೆ. ಮದ್ಲು ಊಟಕ್ಕಿಕ್ಕು. ಅವ್ನೇನ್ ಕಿತ್ಕತಾನೆ ಆಮ್ಯಾಲೆ ನೋಡ್ಕಂಡ್ರಾಗುತ್ತೆ’-ಎಂದ ಅಪ್ಪಣ್ಣಯ್ಯನಿಗೆ ಬಡಿಸಲು ಅವಳು ಒಳಗೆ ಹೋದಳು
ಈ ವಿಷಯದಲ್ಲಿ ಯಾರನ್ನು ಕೇಳಿದರೆ ಸರಿ ಎಂದು ಅವಳು ಯೋಚಿಸಿದಳು. ತಕ್ಷಣ ರೇವಣ್ಣಶೆಟ್ಟಿಯ ಹೆಸರು ಹೊಳೆಯಿತು. ರೇವಣ್ಣಶೆಟ್ಟಿಯನ್ನು ಊರಿನ ಎಷ್ಟೋ ಜನ ಲಾಯರು ಎಂದೇ ಕರೆಯುತ್ತಿದ್ದರು. ಯಾವುಯಾವುದೋ ಕೇಸುಗಳ ಪರವಹಿಸಿ ಅವನು ಆಗಾಗ್ಗೆ ತಿಪಟೂರಿಗೆ ಹೋಗುತ್ತಿದ್ದ. ದೊಡ್ಡ ಲಾಯರಿಗೆ ಗೊತ್ತಿಲ್ಲದ ಪಾಯಿಂಟುಗಳೂ ಅವನಿಗೆ ಗೊತ್ತಿವೆಯಂತೆ. ಗಂಗಮ್ಮ ನೇರವಾಗಿ ಅವನ ಮನೆಗೆ ಹೋದಳು. ಅವನ ಹೆಂಡತಿ ಸರ್ವಕ್ಕ ಹೇಳಿದಳು: ‘ಅವ್ರು ಇಲ್ರ, ಕೋಡೀ-ಅಳ್ಳಿಗೆ ಓಗ್ಯವ್ರೆ.’
‘ಅದೇನ್ ಜಂಬ್ರ?’
‘ಗಂಗಮ್ಮನೋರೇ, ನಿಮಗೆ ಗೊತ್ತಿಲ್ವರಾ?’-ಎಂದು ಅನುಮಾನಿಸಿ ಅವಳು ಹೇಳಿದಳು: ‘ಇಸ್ಪೀಟಾಡಾಕೆ. ಅದೇನ್ ಬಂದಿದ್ರಿ? ಕುಂತ್ಕಳ್ರಿ ಮಣೆ ಆಕ್ಕೊಡ್ತೀನಿ.’
ಗಂಗಮ್ಮ ಮಣೆಯ ಮೇಲೆ ಕುಳಿತು, ಶಿವೇಗೌಡ ಬಂದಿದ್ದ ಸಂಗತಿಯನ್ನೂ ಹಿಂದೆ ಜಮೀನು ಆಧಾರವಾಗಿದ್ದ ಸಂದರ್ಭವನ್ನೂ ಹೇಳಿದಳು. ಜಮೀನು ಆಧಾರವಾಗಿದ್ದುದು ಊರೆಲ್ಲರಿಗೂ ಗೊತ್ತಿದ್ದ ಸಂಗತಿಯೇ. ಸರ್ವಕ್ಕ ಎಂದಳು” ‘ಅವ್ನ ದುಡ್ಡು ನೀವು ಅವ್ನಿಗೆ ಮದ್ಲೇ ತೀರಿಸ್‌ಬ್ಯಾಡ್ದಾ? ಇಷ್ಟೊಂದು ದಿನ ಯಾಕ್ ಬಿಟ್ಕಂಡ್ ಕುಂತಿದ್ರಿ?’
‘ಅದೇನ್ ಉಂಡುದ್ದೇ, ತಿಂದುದ್ದೇ ಗಂಟು? ಅದ್ ಹ್ಯಾಗ್ ಕೊಡಾಣ?’

ಈ ಮಾತಿಗೆ ಸಮಾಧಾನ ಹೇಳುವಷ್ಟು ತಿಳಿವಳಿಕೆ ಸರ್ವಕ್ಕನಿಗೆ ಇರಲಿಲ್ಲ. ಅವಳ ವಯಸ್ಸು ಮೂವತ್ತರ ಸುಮಾರು. ಐದು ಮಕ್ಕಳಿವೆ. ಇನ್ನು ಮೂರು ಮಕ್ಕಳು ಸತ್ತಿವೆ ಎರಡು ವರ್ಷದಿಂದ ಬಸುರಿಯಾಗಿಲ್ಲ. ಅಪ್ಪಣ್ಣಯ್ಯ ಕಬ್ಬಿನ ಗದ್ದೆಗೆ ಬೆಂಕಿ ತಗುಲಿಸಿದ್ದಾಗ ಅವಳ ಗಂಡ ಕೂಳೆಕಬ್ಬಿನ ಲೆಕ್ಕ ಹೇಳಿ ಇಪ್ಪತ್ತೈದು ರೂಪಾಯಿ ತೆಗೆದುಕೊಂಡದ್ದು ಅವಳಿಗೆ ಗೊತ್ತು. ಕೂಳೆಕಬ್ಬನ್ನು ಮತ್ತೆ ಬಿಡುವುದಿಲ್ಲವೆಂದು ಮೊದಲೇ ಹೇಳುತ್ತಿದ್ದ ಅವನು, ಈಗ ಅದರ ಹೆಸರಿನಲ್ಲಿ ದುಡ್ಡು ತೆಗೆದುಕೊಂಡದ್ದು ಅನ್ಯಾಯವೆಂದು ಹೇಳಿ ಅವಳು ದವಡೆಯ ಮೇಲೆ ಏಟು ತಿಂದಿದ್ದಳು.
ಅವರು ಅದೂ ಇದೂ ಮಾತನಾಡುವುದರಲ್ಲಿ ರೇವಣ್ಣಶೆಟ್ಟಿಯೇ ಬಂದ. ಕೊಕ್ಕರೆಯ ಗರಿಯಂತಹ ಬಿಳಿಯ ಪಂಚೆ, ಕಾಲಿಗೆ ರಬ್ಬರು ಚಡಾವು, ಇಸ್ತ್ರಿ ತಿಕ್ಕಿದ ಶರಟು, ಕೊರಳಲ್ಲಿ ಕಾಣುವಂತಹ ಚಿನ್ನದ ಚೈನು, ಕೈಬೆರಳುಗಳಿಗೆ ಕೆಂಪಗೆ ಹೊಳೆಯುವ ಮೂರು ಉಂಗುರಗಳಿಂದ ಭೂಷಿತನಾಗಿ, ಮುಖದಮೇಲೆ ಇನ್ನೂ ಚಿಗುರಾಗಿ ಕಾಣುವಂತೆ ಕತ್ತರಿಸಿದ ಮೀಸೆಯಿಂದ ಕೂಡಿದ ರೇವಣ್ಣಶೆಟ್ಟಿಯನ್ನು ಕಂಡ ಗಂಗಮ್ಮನಿಗೆ, ಶಿವೇಗೌಡನ ಹಣ ಗೆದ್ದೇಬಿಟ್ಟಿತೆಂಬ ನಂಬಿಕೆ ಹುಟ್ಟಿತು.
ಇವರ ಮಾತನ್ನು ಕೇಳಿದ ಮೆಲೆ ಅವನು ಹೇಳಿದ: ‘ಯಾರ ಮನೆ ಬಿಟ್ಟೀ ಗಂಟು ಅಂತ ತಿಳ್ಕಂಡವ್ನೆ ಆ ಅನ್ಯಾಯಕೋರ ನನ್‌ಮಗ? ಕೋಲ್ಟಿಗೆ ಓಗ್ತಾನಂತಾ? ಓಗು ಅನ್ನಿ. ಓಗಿ ನಮ್‌ತಾವ ಏನು ಕಿತ್ಕತೀಯೋ ಕಿತ್ಕ ಅನ್ನಿ. ತಿಪ್ಟೂರ್ನಲ್ಲಿ ನಂಗೆ ದೊಡ್ಡ ಲಾಯರೇ ಗೊತ್ತವ್ರೆ.’
ಗಂಗಮ್ಮನಿಗೆ ಧೈರ್ಯ ಬಂತು. ‘ನಾನು ಹೋಗಿ ಹಾಗಂತ ಹೇಳಿ ಬರಲೇ ರೇವಣ್ಣ?’
‘ಹೋಗಿ ಬನ್ನಿ ಅಮ್ನೋರೆ. ನೀವು ಹ್ಯದರ್ಕಬ್ಯಾಡಿ. ಮುಂದ್ಲುದ್ದೆಲ್ಲಾ ನಾನ್ ನೋಡ್ಕಂತೀನಿ.’
‘ನೀನೂ ಬಾ ನನ್ ಜೊತ್ಗೆ.’
‘ನಾನ್ ಬರಾದು ಚಂದಾಗಿರಾಕಿಲ್ಲ. ನಾನು ಒಳಗ್ ನಿಂತ್ ಕೆಲ್ಸ ಮಾಡ್‌ಬೇಕು. ಹ್ಯದ್‌ರಿಕೆ ಏನು ನಿಮ್ಗೆ? ಗಂಗಮ್ನೋರ ಎದೆಗುಂಡಿಗೆ ಸುತ್ತ ಅರವತ್ತನಾಕು ಹಳ್ಳೀಲಿ ಯಾವ ಗಂಡಸು ಬೋಳೀಮಗಂಗೂ ಇಲ್ಲ ಅಂತಾರೆ ಜನ. ನಿಮ್‌ಗ್ಯಾಕೆ ಹ್ಯದರ್ಕೆ?’
ಈ ಮಾತು ತಕ್ಕ ಪರಿಣಾಮವನ್ನುಂಟುಮಾಡಿತು. ‘ನಾನೇನಂತ ಹ್ಯದರ್‌ಪುಕ್ಲಿ ಮುಂಡೆ ಅಲ್ಲ’-ಎಂದು ಮೇಲೆ ಎದ್ದವಳೇ ಅವಳು ನೇರವಾಗಿ ಶಿವೇಗೌಡನ ಮನೆಯ ಮುಂದೆ ಹೋಗಿ ನಿಂತು ಹೇಳಿದಳು: ‘ನನ್ನ ಗಂಡ ಶ್ಯಾನುಭೋಗ್‌ಕೆ ಮಾಡ್ತಿದ್ದ ಕಾಲ್‌ದಾಗೆ ನಾಯಿಮರಿ ಹಾಗೆ ಇದ್ದೆಯಲ್ಲೋ ಗೌಡ. ಈಗ ಅನ್ಯಾಯದಲ್ಲಿ ದಂಡ ಹಾಕಿಸಿ ಕೋರ್ಟಿಗೆ ಹೋಗ್ತೀನಿ ಅಂತ ಹೆದ್‌ರುಸ್ತೀಯಾ? ಕೋರ್ಟಿಗಲ್ಲದೆ ಇದ್ರೆ ದಿವಾನ್‌ರ ತಂಕ ಹೋಗು. ನಾನೂ ಲಾಯ್ರುನ್ನಿಡ್ತೀನಿ. ನಮ್ಮ ಹತ್ರ ನೀನು ಒಂದು ದಮ್ಡೀನೂ ಕಿತ್ಕಳುಕ್ ಆಗುಲ್ಲ. ಹೆಣ್ಣು ಹೆಂಗಸು ಅಂತ ನಾನೇನು ಹೆದುರ್ಕಳುಲ್ಲ.’
ಒಳಗಿನಿಂದ ಬಂದ ಶಿವೇಗೌಡ ಕೇಳಿದ: ‘ಇದೇನ್ರಮ್ಮಾ, ಈ ಎಲ್ಡು ಗಂಟೇನಾಗ ತಾನೇ ನ್ಯಾಯವಾಗಿ ಮಾತಾಡ್ತಿದ್ರಿ. ಈಗ ಹಿಂಗ್ ಅಂತೀರ?
‘ಅನ್‌ದೇ ಏನ್ ಅಂತೀಯಾ? ನಂಗೂ ಕಷ್ಟಕಾಲಕ್ಕೆ ಆಗೂ ಜನ ಇದಾರೆ. ನಾನೇನು ಪರದೇಶಿಯಲ್ಲ’-ಎಂದವಳೇ ಗಂಗಮ್ಮ ನೇರವಾಗಿ ಮನೆಗೆ ಬಂದಳು.
ಅವಳು ಬರುವ ಹೊತ್ತಿಗೆ ರೇವಣ್ಣಶೆಟ್ಟಿ ಬಂದು ಕುಳಿತಿದ್ದ. ಮುಖ ಕಂಡೇ ಅವಳು ಶಿವೇಗೌಡನ ಕೈಲಿ ಏನು ಹೇಳಿರಬಹುದೆಂದು ಅವನು ಅರಿತುಕೊಂಡ. ಅವನು ತಾನಾಗಿಯೇ ಹೇಳಿದ: ‘ಅಮ್ನೋರೇ, ನೀವು, ಇಬ್ಬರು ಗಂಡು ಮಕ್ಳೂ ಆಗಾಗ್ಗೆ ಗಾಡಿ ಕಟ್ಟಿಕೊಂಡು ಒಂದ್ ನಾಕು ಸಲ ತಿಪ್ಟೂರಿಗೆ ಬರ್‌ಬೇಕಾಯ್ತದೆ. ಹೋಗಿ ಇದು ಅನ್ಯಾಯ ಅಂತ ಜಡ್ಜಿಗಳ ಮುಂದೆ ಬಾಯ್ಬಿಟ್ಟು ಕೇಳ್ಕಂಡ್ರೆ ಕೇಸು ನಿಮ್ಮ ಕಡೆಯೇ ಆಯ್ತದೆ. ಒಟ್ನಲ್ಲಿ ಒಂದೈನೂರು ಖರ್ಚು ಮಾಡಿದ್ರೆ ಸಾಕು.’
‘ತಿಪ್‌ಟೂರ್ಗೆ ಹೋದ್ರೆ ಅಲ್ಲಿ ಊಟ ತಿಂಡಿಗೆ ಏನು?’-ಅಪ್ಪಣ್ಣಯ್ಯ ಕೇಳಿದ.
‘ಹೋಟ್ಳಿಲ್ವಾ!’
ಹೋಟೇಲು ಅಂದ ತಕ್ಷಣ ಅವನ ಬಾಯಿ ನೀರೂರಿತು. ಆಲೂಗಡ್ಡೆ ನೀರುಳ್ಳಿಯ ಹುಳಿ, ಪಲ್ಯ, ಹುರಿಗಡಲೆ ಸೇರಿಸಿದ ಗಮಗಮ ಕಾಯಿಚಟ್ನಿ, ಮೊಸರು. ತಿಂಡಿಗೆ ಮಸಾಲೆ ದೋಸೆ. ‘ಹೂಂ ಕಣಮ್ಮ, ತಿಪ್ಟೂರಿಗೆ ಹೋಗಿ ಕೇಸು ಹಾಕಾಣ’- ಎಂದು ನಿಶ್ಚಯದ ಧ್ವನಿಯಲ್ಲಿ ಅವನು ಹೇಳಿದ.
‘ಏನಂತಿಯೋ ಶ್ಯಾನುಭೋಗ?’-ತಾಯಿ ಕೇಳಿದುದಕ್ಕೆ ಚೆನ್ನಿಗರಾಯರು, ‘ಯಾರಾದ್ರೂ ಬುದ್ಧಿವಂತ್‌ರುನ್ನ ಕೇಳ್ಬೇಕು’ ಎಂದರು.

ಅಂತೂ ಶಿವೇಗೌಡ ಕೇಸು ಹಾಕಿದ. ಇವರು ಮೂವರೂ ರೇವಣ್ಣಶೆಟ್ಟಿಯ ಜೊತೆಯಲ್ಲಿ ತಿಪಟೂರಿಗೆ ಹೋಗಿ, ಅವನು ಕರೆದುಕೊಂಡು ಹೋದ ಮಹಾಂತಯ್ಯನವರನ್ನು ಲಾಯರಾಗಿ ಇಟ್ಟರು. ಅವರ ಕಡೆಯ ಕೇಸನ್ನು ರೇವಣ್ಣಶೆಟ್ಟಿಯೇ ಹೇಳಿದ: ‘ಊರಿನ ಕೆಲವರು ಸೇರಿಕೊಂಡು ಕಬ್ಬಿನ ಗದ್ದೆಗೆ ಬೆಂಕಿ ಇಟ್ಟು, ತಿಳಿವಳಿಕೆ ಇಲ್ಲದ ಇವರ ಮೇಲೆ ತಪ್ಪು ಹಾಕಿ ದುಡ್ಡು ಕಿತ್ತರು. ಇದಕ್ಕೆ ರುಜು ಮಾಡಿದ್ದು ಮೈನರ್ ಗಂಡು ಮಕ್ಕಳು. ಆಧಾರವಾಗಿರುವುದು ಪಿತ್ರಾರ್ಜಿತ ಆಸ್ತಿ. ಕಾಗದ ಬರೆಯಲು ಬಿಕಲಂ ಹಾಕಿರುವವನು, ಹಣ ಕೊಟ್ಟು ಆಧಾರ ಬರೆಸಿಕೊಂಡಿರುವವನ ಸ್ವಂತ ಬಾಮೈದ. ಈಟೆಲ್ಲ ಇರುವಾಗ ಕೇಸು ಗೆಲ್ಲಾಕಿಲ್ವಾ ಬುದ್ಧಿ?’
‘ಗೆಲ್ದೆ ಉಂಟೆ?’-ಲಾಯರು ಎಂದರು.

ಮೊದಲ ದಿನದ ಖರ್ಚಿಗೆ ಇವರು ಮನೆಯ ಚಿನ್ನ ಮಾರಿ ಇನ್ನೂರು ರೂಪಾಯಿ ಹೊಂದಿಸಿದರು. ಎಲ್ಲರೆದುರಿಗೂ ದುಡ್ಡು ಕೊಟ್ಟರೆ ಲಾಯರು ಮುಟ್ಟುವವರಲ್ಲವೆಂದು ಹೇಳಿ ರೇವಣ್ಣಶೆಟ್ಟಿ ನೂರ ಎಪ್ಪತ್ತೈದು ರೂಪಾಯಿ ಇಸಿದುಕೊಂಡು, ತಾನೊಬ್ಬನೇ ಅನಂತರ ಬೇರೆಯಾಗಿ ಲಾಯರ ಮನೆಗೆ ಹೋಗಿ ಲೆಕ್ಕಾಚಾರ ಮಾಡಿಬಂದ. ಅಪ್ಪಣ್ಣಯ್ಯ ಹೋಟೆಲಿನಲ್ಲಿ ಊಟ ಮಾಡಿದುದೇ ಅಲ್ಲದೆ ಅದರ ಜೊತೆಗೇ ಮೂರು ಮಸಾಲೆ ದೋಸೆ ತಿಂದ. ಶ್ಯಾನುಭೋಗ ಚೆನ್ನಿಗರಾಯರು ಹೋಟೆಲನ್ನು ಚೆನ್ನಾಗಿ ಕಂಡವರು. ವರ್ಷಕ್ಕೆ ನಾಲ್ಕು ಸಲವಾದರೂ ದ್ಯಾವರಸಯ್ಯನವರ ಜೊತೆ ತಿಪಟೂರಿಗೆ ಬಂದು ಹೋಗಿ ಮಾಡುವವರು. ಅವರು ಖಾರ ಶೇವು, ರವೆ ಉಂಡೆ, ಮೈಸೂರು ಪಾಕುಗಳನ್ನೇ ಹೊಟ್ಟೆ ತುಂಬುವಷ್ಟು ತಿಂದರು. ವಿಧವೆ ಗಂಗಮ್ಮ ಊರಿನಿಂದ ತಂದ ಹುರಿಟ್ಟಿನ ಜೊತೆಗೆ ನಾಲ್ಕು ಬಾಳೆ ಹಣ್ಣಿನಲ್ಲಿ ಫಲಾರ ಮುಗಿಸಿದಳು.

– ೪ –

ನಂಜು ಗಂಡು ಮಗು ಹೆತ್ತಳು. ನಾಮಕರಣಕ್ಕೆ ಬಂದ ಚೆನ್ನಿಗರಾಯರು, ಅವರ ಅಮ್ಮ ಹೇಳಿಕಳಿಸಿದ್ದಂತ ತಮ್ಮ ತಂದೆಯ ಹೆಸರಾದ ರಾಮಣ್ಣ ಎಂದು ಇಟ್ಟರು. ಈ ಸಲ ಅವರು ಮಾವನ ಮನೆಯಲ್ಲಿ ಹೆಚ್ಚು ದಿನ ಇರಲಿಲ್ಲ. ಭಾವಮೈದುನನನ್ನು ಕಂಡರೆ ಅವರಿಗೆ ಒಳಗಿಂದೊಳಗೇ ಒಂದು ವಿಧವಾದ ಭಯವಾಗುತ್ತಿತ್ತು. ಅಲ್ಲದೆ ಅವನ ಹೆಂಡತಿ ಕಮಲು ಸಿಡಸಿಡ ಎನ್ನುತಿದ್ದಳು.

ಮೂರು ತಿಂಗಳ ಬಾಣಂತಿತನ ಮುಗಿಸಿಕೊಂಡು ಊರಿಗೆ ಬಂದ ಎರಡನೆಯ ದಿನವೇ ನಂಜುವಿಗೆ ಶಿವೇಗೌಡನ ಜೊತೆ ಕೋರ್ಟಿನಲ್ಲಿ ನಡೆಯುತ್ತಿದ್ದ ಕೇಸಿನ ವಿಷಯ ತಿಳಿದಿದ್ದು. ಶಿವೇಗೌಡನ ಹತ್ತಿರ ಇವರ ಸಾಲವಿರುವುದು ಅವಳಿಗೆ ಮೊದಲೂ ಗೊತ್ತಿತ್ತು. ಜಮೀನು ಆಧಾರ ಮಾಡಿ ಅವನಿಂದ ಎರಡು ಸಾವಿರ ರೂಪಾಯಿ ಪಡೆದು, ಕಬ್ಬಿನ ಗದ್ದೆಗೆ ಬೆಂಕಿ ಬೀಳಿಸಿದುದಕ್ಕೆ ಇವರು ಊರೊಟ್ಟಿನ ದಂಡ ಕೊಟ್ಟರು ಎಂಬ ಮಾತನ್ನು ಈ ಮನೆಯ ಸೊಸೆಯಾಗಿ ಬಂದು ಒಂದು ತಿಂಗಳಿಗೆ ಕೆರೆಯಲ್ಲಿ ಪಾತ್ರೆ ಬೆಳಗುವಾಗ ಕೇಳಿದ್ದಳು. ಆ ಬಗೆಗೆ ತಾನಾಗಿ ಮನೆಯಲ್ಲಿ ಯಾರನ್ನಾದರೂ ಕೇಳಲಾರಳು. ಒಂದು ದಿನ ಗಂಡನನ್ನು ಕೇಳಿದುದಕ್ಕೆ-‘ನಿಂಗ್ಯಾಕೆ ಯಜಮಾನಿಕೆ, ಸುಮ್ಮುನ್ ಕುಕ್ಕರಿಸ್ಕೊ’ಎಂದು ಉತ್ತರ ಬಂದಿತ್ತು.

ತಾನು ಶ್ಯಾನುಭೋಗಿಕೆ ಲೆಕ್ಕ ಬರೆಯಲು ಪ್ರಾರಂಭಿಸಿದ ಮೇಲೆ, ಅವಳಿಗೆ ಆಧಾರ ಸಾಲದ ಪರಿಣಾಮವೇನಾಗಬಹುದೆಂಬ ಕಲ್ಪನೆ ಹುಟ್ಟಿತು. ತಾನಾಗಿಯೇ ಒಂದು ದಿನ ಈ ಮಾತನ್ನು ಮತ್ತೆ ತೆಗೆದು ವಿಚಾರಿಸಬೇಕೆಂಬ ಯೋಚನೆ ಬರುತ್ತಿದ್ದ ಸಮಯದಲ್ಲಿಯೇ ಅಪ್ಪಣ್ಣಯ್ಯ ಅವಳನ್ನು ಕಾಲಿನಿಂದ ಒದೆದು ಊರು ಬಿಟ್ಟು ಓಡಿಹೋಗಿದ್ದ. ‘ಈ ಅನಿಷ್ಟ ಮುಂಡೆಯಿಂದಲೇ ನನ್ನ ಕಂದ ಪರದೇಶಿಯಾಗಿಹೋಯ್ತು’-ಎಂದು ಅತ್ತೆ ಮೊದಲೇ ಅನ್ನುತ್ತಿದ್ದಳು. ಈಗ ಈ ಮಾತು ತೆಗೆದರೆ ತನಗ್ಯಾಕೆ ಯಜಮಾನಿಕೆ ಎಂದು ಬೈಸಿಕೊಳ್ಳಬೇಕಾಗುತ್ತದೆಂದು ಭಯಪಟ್ಟು ಸುಮ್ಮನಾಗಿದ್ದಳು. ಅಷ್ಟರಲ್ಲಿ ಹೆರಿಗೆಗೆ ಊರಿಗೆ ಹೋಗಿ ಈಗ ಹಿಂತಿರುಗುವುದರಲ್ಲಿ ಇದು ಕೋರ್ಟಿಗೇ ಹೋಗಿದೆ. ಒಂದು ದಿನ ಉಪಾಯವಾಗಿ ಗಂಡನನ್ನು ಕೇಳಿದರೆ-‘ಆ ನನ್ ಮಗುನ್ಗೆ ಒಂದು ದಮ್‌ಡೀನೂ ಕೊಡುಲ್ಲ. ಕೋರ್ಟಿನಲ್ಲಿ ಅವನ ಕೈಲೇ ಕಾಸು ಕುಕ್ಕುಸ್ತೀನಿ’ ಎಂದು ಪ್ರತಾಪ ಹೇಳಿಬಿಟ್ಟರು.
‘ಕೇಸು ಗೆಲ್ಲುತ್ತೆ ಅಂತ ನಿಮಗೆ ಯಾರು ಹೇಳಿದರು?’
‘ರೇವಣ್ಣಶೆಟ್ರು.’
‘ರೇವಣ್ಣಶೆಟ್ರ ಮಾತು ಹ್ಯಾಗೆ ನಂಬ್‌ಬೇಕು? ಅವರು ಎಂಥೋರು ಅಂತ ನಿಮ್ಗೆ ಗೊತ್ತಿಲ್ವೆ?’
‘ಕತ್ತೆಮುಂಡೆ, ಅವುನ್ನ ಬೈಯ್ತಿಯೇನೇ? ಇವ್ಳು ನಿಮ್ಮುನ್ನ ಹೀಗಂದ್ಲು ಅಂತ ನಾಳೆ ದಿನ ಅವರ ಕೈಲೇ ಹೇಳ್ತೀನಿ ನೋಡು.’
ಗಂಡ ಅವಿವೇಕಿ ಎಂದು ಅವಳಿಗೆ ಹೊಸದಾಗಿ ತಿಳಿಯಬೇಕಾಗಿರಲಿಲ್ಲ. ಆದರೆ ಅದು ಇಷ್ಟು ಮಟ್ಟಿನದು ಎಂಬುದರ ಅರಿವಾಗಿ ಕಣ್ಣಿನಲ್ಲಿ ನೀರು ಬಂತು. ಅಲ್ಲಿಗೆ ಆ ಮಾತನ್ನು ನಿಲ್ಲಿಸಿದಳು. ಆದರೆ ಅದೇ ಯೋಚನೆ ಮನಸ್ಸನ್ನು ಕೊರೆಯುತ್ತಿತ್ತು. ರೇವಣ್ಣಶೆಟ್ಟಿ ಇಸ್ಪೀಟು ಆಡುತ್ತಾನೆ, ಕುಡಿಯುತ್ತಾನಂತೆ, ಅವನು ಬೀದಿಯಲ್ಲಿ ಹೋಗುವಾಗ ಹೆಂಗಸರ ಕಡೆ ನೋಡುವ ರೀತಿ ಚೆನ್ನಾಗಿಲ್ಲ, ಮನೆಯಲ್ಲಿ ಸರ್ವಕ್ಕ ಸಂತೋಷವಾಗಿಲ್ಲ, ಎಂಬುದೆಲ್ಲ ಅವಳಿಗೆ ಚೆನ್ನಾಗಿ ಗೊತ್ತು. ಅವು ಊರಿನಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿಗಳೇ. ಮರುದಿನ ಪಾತ್ರೆ ಬೆಳಗಲು ಕೆರೆಗೆ ಹೋದಾಗ ರೇವಣ್ಣಶೆಟ್ಟಿಯು ಹಿರೀ ಮಗಳು ರುದ್ರಾಣಿ ಇವಳ ಪಕ್ಕದ ಕಲ್ಲಿನಲ್ಲಿ ಇಳಿದುಕೊಂಡಿದ್ದಳು. ‘ರುದ್ರಾಣೀ, ನಿಮ್ಮವ್ವಯ್ಯ ಮನ್ಲೇ ಐತಾ?’
‘ಊಂ, ಐತೆ!’
‘ಅಪ್ಪಾಜಿ?’
‘ಕೋಡೀಹಳ್ಳೀಗ್ ಹೋಗೈತೆ.’ ಅದು ಇಸ್ಪೀಟಿಗೆ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ.
‘ಹಂಗಾದ್ರೆ ನೀನು ಈಗ್ಲೇ ಮನ್ಗೆ ಹೋಗಿ, ನಾನು ಬರಹೇಳ್ದೆ ಅಂತ ನಿಮ್ಮವ್ವಯ್ಯನ್ನ ಒಂದ್ ಸಟಿಗ್ ಕರ್ಕಂಡ್‌ಬತ್ತೀಯಾ? ನಿನ್ನ ಪಾತ್ರೆ ಇಲ್ಲೇ ಇರ್ಲಿ. ನಾನ್ ನೋಡ್ಕತ್ತೀನಿ. ನೀನು ಮನ್ಲೇ ಇದ್ದು ಅವ್ರುನ್ನ ಕಳ್ಸು.’
ಹತ್ತು ನಿಮಿಷದಲ್ಲಿ ಸರ್ವಕ್ಕ ಬಂದಳು. ಒಂದೆರಡು ನಿಮಿಷ ಪರಸ್ಪರ ಕ್ಷೇಮಸಮಾಚಾರ ವಿಚಾರಿಸಿದ ಮೆಲೆ ನಂಜಮ್ಮ ಒಂದು ಸಲ ಸುತ್ತಮುತ್ತ ನೋಡಿ, ಯಾರೂ ಇಲ್ಲವೆಂದು ಖಚಿತವಾದ ಮೇಲೆ ಕೇಳಿದಳು: ‘ನೋಡ್ರಿ, ನಾನೊನ್ದು ವಿಷಯ ಗುಟ್ನಲ್ಲಿ ಕೇಳ್ತೀನಿ ನೀವು ಹೇಳ್ಬೇಕು.’
‘ಏನು ಹೇಳ್ರಿ.’
‘ನಿಮ್ಮನೆಯೋರು ನಮ್ಮನೇ ಕೇಸು ನಡುಸ್ತೀನಿ ಅಂತ ನಿಂತಿದಾರಲಾ, ಅದು ನಿಜವಾಗ್ಲೂ ಗೆಲ್ಲುತ್ತಾ?’
‘ನಂಜಮ್‌ನೋರೇ, ಗಂಡು ಗಂಡುಸ್ರ ಇಚಾರ ನಮ್ಗೇನು ತಿಳೀತೈತೆ? ನಮಗ್ಯಾಕ್ ಬುಡಿ ಆ ಮಾತು.’
‘ಇಲ್ಲ, ಖಂಡಿತ ನೀವು ನಿಮಗೆ ತಿಳಿದದ್ದ ಹೇಳ್ಲೇ ಬೇಕು.’
‘ತಾನೂ ಒಂದು ಸಲ ಸುತ್ತ ಮುತ್ತ ನೋಡಿ ಸರ್ವಕ್ಕ ಹೇಳಿದಳು: ‘ನಮ್ಮ ಶೆಟ್ರಿಗ್ ತಿಳುದ್ರೆ ನನ್ನ ಸಾಯ್ಸಾಕ್‌ಬುಡ್ತಾರೆ. ಯಾರ್ ಕುಟ್ಟೂ ಹೇಳಾದಿಲ್ಲ ಅಂತ ಗಂಗಮ್ ತಾಯಿ ಮುಟ್ಟಿ ಆಣೆ ಮಡಗ್‌ಬೇಕು.’
‘ಗಂಗಮ್ ತಾಯಿ ಆಣೆಗೂ ಯಾರ ಕೈಲೂ ಹೇಳುಲ್ಲ’-ಎಂದು ನಂಜಮ್ಮ ಕೆರೆಯ ನೀರನ್ನು ಕೈಲಿ ಹಿಡಿದು ಎಂದಳು.
‘ವಳಗೇರಳ್ಳಿ ನಿಂಗಪ್ಪನ ಮನೆ ಅಣ್‌ತಮ್ದೀರ ಜಗಳ್ದಾಗೆ ನಮ್ಮನೆಯೋರು ಲಾಯ್ರಿ ಮಾಡದ್ರಲ. ನಾನು ಗೆಲ್ಲಿಸ್‌ಕೊಡ್ತೀನಿ ಅಂತ ದುಡ್ ತಿಂದಿದ್ರಂತೆ. ಅವ್ರು ಸೋತ್ರಂತೆ. ಒಂದ್ ದಿನ ನಮ್ಮನೆ ಮುಂದುಕ್ ಬಂದಿ, ನಿಮ್ಮವ್ವ ಅಪ್ಪ ಅಂತ ಬೈದಿ, ನಿನ್ ಮಕ್ಳ ಸುಳಿ ನಾಸ್ನಾಗ ಅಂತ ಮಣ್ ತೂರಿ ಹ್ವಾದ. ಇವ್ರು ಇಸ್ಪೀಟಾಡಾಕ್ ದುಡ್ಗೆ ಹಿಂಗೆಲ್ಲ ಲಾಯ್ರಿ ಮಾಡ್ತಾರೆ.’
ತಾನು ಭಾವಿಸಿದ್ದಂತೆಯೇ ಸರ್ವಕ್ಕನೂ ನುಡಿದಳು. ಇನ್ನು ಈ ಕೋರ್ಟಿನ ವ್ಯವಹಾರದಿಂದ ತಪ್ಪಿಸಿಕೊಂಡು, ಇರುವ ಜಮೀನು ಉಳಿಸಿಕೊಳ್ಳುವ ದಾರಿ ಯಾವುದು ಎಂದು ಯೋಚಿಸುತ್ತಾ ನಂಜಮ್ಮ ಮೂಕಳಾದಳು. ಸರ್ವಕ್ಕನೇ ನಿಟ್ಟಿಸಿರಿಟ್ಟು-‘ನಂಜಮ್ಮೋರೆ, ನಂದು ನಿಮ್ದೂ ಒಂದೇ ಹಣೇಬರಾವು. ನಮ್ಮನೆಯೋರ್ಗೆ ಮನೆ ಮರಿಯೂ ಬುದ್ಧಿ ನಿಮ್ಮೋರಿಗ್ ಬುದ್ಧಿಯೇ ಇಲ್ಲ. ಯಾರ್ಗೂ ಸುಕವಿಲ್ಲ. ನಾ ಹೋಯ್ತೀನಿ, ನಾನ್ಹೇಳಿದ್ದು ಮಾತ್ರ ಯಾರ್ಗೂ ಏಳ್‌ಬ್ಯಾಡಿ. ಗಂಗಮ್ಮತಾಯಿ ಆಣೆ ಮಡಗಿದೀರ’ ಎಂದು ಹೇಳಿ ತನ್ನ ಪಾತ್ರೆಗಳನ್ನು ಗೆರಸಿಗೆ ತುಂಬಿಕೊಂಡು ಮನೆಗೆ ಹೋದಳು.

ನಂಜಮ್ಮ ಆ ರಾತ್ರಿ ಎಲ್ಲ ನಿದ್ದೆ ಮಾಡಲಿಲ್ಲ. ಬೆಳಿಗ್ಗೆ ಎದ್ದು ಒಂದು ಹಾಳೆ ಕಾಗದದ ಮೇಲೆ ಕ್ಷೇಮ ಸಮಾಚಾರ ತಿಳಿಸಿ-‘ಇಲ್ಲಿಯ ಜಮೀನೆಲ್ಲ ಆಧಾರ ಮಾಡಿದ್ದರು. ಈಗ ಕೋರ್ಟಿನಲ್ಲಿ ಕೇಸು ಹಾಕಿದಾರೆ. ಖಂಡಿತ ನೀವು ತಕ್ಷಣ ಇಲ್ಲಿಗೆ ಬಂದು ಹೋಗುವುದು’ ಎಂದು ಅಣ್ಣನಿಗೆ ಬರೆದು, ಪಾತ್ರೆ ತೆಗೆದುಕೊಂಡು ಕೆರೆಯ ಕಡೆಗೆ ಹೊರಟಳು. ಕೆರೆಯಲ್ಲಿ ಯಾರಾದರೂ ಸಿಕ್ಕಿ ಅವರಿಂದ ಅದನ್ನು ತೌರಿಗೆ ತಲುಪಿಸುವ ಆಸೆ ಮನಸ್ಸಿನಲ್ಲಿತ್ತು. ಅಲ್ಲಿ ಯಾರೂ ಇರಲಿಲ್ಲ. ಆದರೆ ಗುಡಿಯ ಮಾದೇವಯ್ಯನವರು, ಜೋಳಿಗೆಯಲ್ಲಿ ಎತ್ತಿದ ಗಂಟಿ ಬಿಲ್ವಪತ್ರೆಗಳನ್ನು ನೀರಿಗೆ ಅದ್ದಲು ಇವಳು ಇಳಕೊಂಡಿದ್ದ ಕಡೆಗೆ ಬರುತ್ತಿದ್ದರು. ಅಯ್ಯನವರ ಮೇಲೆ ನಂಜಮ್ಮನಿಗೆ ತುಂಬ ಭಕ್ತಿ ಗೌರವಗಳಿದ್ದವು. ಅವರು ಇತ್ತೀಚೆಗೆ ಈ ಮನೆಗೆ ಹೆಚ್ಚಾಗಿ ಬರದಿದ್ದರೂ ಈ ಹಿರಿ ಸೊಸೆಯ ಬಗೆಗೆ ಅವರಲ್ಲಿ ಗೌರವವಿತ್ತು. ನಂಜಮ್ಮನೇ-‘ಅಯ್ನೋರೇ ಸ್ವಲ್ಪ ಇಲ್ಲಿ ಬನ್ನಿ’ ಎಂದು ಕೂಗಿದಳು. ಸುತ್ತಮುತ್ತ ಒಂದು ಸಲ ಸೂಕ್ಷ್ಮವಾಗಿ ನೋಡಿ, ತನ್ನ ಬಾಳೇಕಾಯಿಯಲ್ಲಿ ಮಡಿಸಿ ಇಟ್ಟುಕೊಂಡಿದ್ದ ಕಾಗದವನ್ನು ತೆಗೆದು ಅವರ ಹತ್ತಿರ ಬೀಳುವಂತೆ ಎಸೆದು, ‘ಇದನ್ನ ನೀವು ಓದಿಕಳ್ಳಿ, ನಿಮಗೇ ತಿಳಿಯುತ್ತೆ. ಏನಾರಾ ಮಾಡಿ ನಮ್ಮ ಅಣ್ಣನಿಗೆ ತಲುಪುಸ್ಬೇಕು. ಯಾರಿಗೂ ತಿಳಿಯಕೂಡದು’ ಎಂದು ಹೇಳಿ, ಏನೂ ತಿಳಿಯದವಳಂತೆ ಕತ್ತು ಬಗ್ಗಿಸಿಕೊಂಡು ಪಾತ್ರೆ ತೊಳೆಯಲು ಶುರು ಮಾಡಿದಳು.

ಕಾಗದದ ಮಡಿಕೆಯನ್ನು ಎತ್ತಿ ಅಯ್ಯನವರು ತಮ್ಮ ಕಾವಿಯ ಅಂಗಿಯ ಜೇಬಿಗೆ ಇಟ್ಟು-‘ಆಗ್ಲವ್ವ’ ಎಂದು ಹೇಳಿ ಜೋಳಿಗೆಯ ಹೂವು ಪತ್ರೆಗಳನ್ನು ನೀರಿನಲ್ಲಿ ಅದ್ದಿಕೊಂಡು ಹೊರಟು ಹೋದರು. ಆದಿನ ಅವರು ಊರಿನಲ್ಲಿ ಗುರುಕೋರಣ್ಯದ ಭಿಕ್ಷೆ ಮಾಡಲಿಲ್ಲ. ಶಿವಗೆರೆಯ ಒಂದೆರಡು ಹಳ್ಳಿಗಳಿಗೆ ಹೋಗಿದ್ದರಂತೆ.

ಮಾರನೆಯ ದಿನ ಮಧ್ಯಾಹ್ನ ಕಲ್ಲೇಶ ಕಾಲುನಡಿಗೆಯಲ್ಲಿ ತಂಗಿಯ ಮನೆಗೆ ಬಂದ. ಅಣ್ಣನ ಕೈಲಿ ಎಲ್ಲವನ್ನೂ ಮಾತನಾಡಲು ಒಂದು ಜಾಗವಿಲ್ಲ. ಹಾಗೆ ಎಲ್ಲಿಯಾದರೂ ಹೋಗಿ ಆಡುವುದಕ್ಕಿಂತ ಎದುರಿಗೆ ಕೂತು ಹೇಳುವುದೇ ಸರಿ ಎಂದು ತೀರ್ಮಾನಿಸಿದ ಅವಳು ಎಲ್ಲರ ಎದುರಿಗೇ ಮಾತನ್ನು ತೆಗೆದಳು. ಆಗಿರುವ ವಿಷಯವನ್ನು ಹೇಳಿ, ಮುಂದೆ ತಾವು ಏನು ಮಾಡಬೇಕೆಂಬ ಬಗೆಗೆ ಅವನ ಸಲಹೆ ಕೇಳಿದಳು.

ಯಾರ ಮೂಲಕವೋ ಹೇಳಿ ಕಳಿಸಿ ಇವಳು ಅಣ್ಣನನ್ನು ಕರೆಸಿಕೊಂಡಿದ್ದಾಳೆ ಎಂಬ ಅನುಮಾನ ಗಂಗಮ್ಮನಿಗೆ ಉಂಟಾಗದೆ ಇರಲಿಲ್ಲ. ಆದರೆ ಪೋಲೀಸು ಕೆಲಸದಲ್ಲಿದ್ದ ಈ ಬೀಗನ ಮಗನ ಎದುರಿಗೆ ಮಾತನಾಡಬಾರದೆಂದು ಅವಳು ಸುಮ್ಮನಿದ್ದಳು. ಇವರು ಆಧಾರ ಪತ್ರದಲ್ಲಿ ಬರೆದಿರುವುದೇನೆಂದು ನಿಖರವಾಗಿ ಕಲ್ಲೇಶನಿಗೆ ಗೊತ್ತಿಲ್ಲ. ಶ್ಯಾನುಭೋಗರಾದ ಭಾವನವರನ್ನು ಕೇಳಿದರೆ, ‘ಅದೇನೋ ನಂಗ್ ಗೊತ್ತಿಲ್ಲ. ಸಿವಲಿಂಗ ಬರದ’ ಎಂದುಬಿಟ್ಟರು.
‘ಏನೂ ಗೊತ್ತಿಲ್ಲದೆ ನೀವು ಕೋರ್ಟಿಗೆ ಹ್ಯಾಗೆ ಹೋದ್ರಿ?’-ಎಂದುದಕ್ಕೆ. ‘ರೇವಣ್ಣಶೆಟ್ರಿಗೂ ಲಾಯರಿಗೂ ಗೊತ್ತು. ಅವ್ರೇನ್ ಸುಳ್ ಹೇಳ್ತಾರೆಯೇ? ಕೇಸು ಗೆದ್ದೇ ಗೆಲ್ಲುತ್ತೆ’ ಎಂದರು.
ನಂಜಮ್ಮ ಧೈರ್ಯವಾಗಿ ರೇವಣ್ಣಶೆಟ್ಟಿಯ ಹಿಂದು ಮುಂದುಗಳನ್ನು ವಿವರಿಸಿದಳು. ‘ಅವ್ರುನ್ನ ನಂಬಿಕಂಡ್ರೆ ಸಂಸಾರ ಮುಳುಗುತ್ತೆ. ಈಗ ನಮಗೆ ತಿಳಿದ ಹಾಗೆ ವಿವೇಕದಿಂದ ನಡೀಬೇಕು. ಪರಬುದ್ಧಿ ಮಾತು ಬ್ಯಾಡ.’
‘ಭಾವಾ ನನ್ನ ಜೊತೆ ಬಾ. ಶಿವೇಗೌಡನ ಮನೆಗೇ ಹೋಗಿ ಕಾಗದದ ವಕ್ಕಣೆ ಏನಿದೆ ಅಂತ ಕೇಳಾಣ’-ಕಲ್ಲೇಶ ಕರೆದ.

ಆದರೆ ಅವನ ಮನೆಗೆ ಹೋಗಲು ಶ್ಯಾನುಭೋಗರಿಗೆ ಹೆದರಿಕೆ. ‘ಈಗ ಯಾಕ್ಲಪ್ಪಯ್ಯ ಬಂದೆ ನನ್ ತಾವುಕ್ಕೆ? ಅದೇನಿದ್ರು ಕೋಲ್ಟಿನಾಗೇ ಮಾಡ್ಕ ಓಗು’-ಎಂದು ಅವನು ಅಂದುಕಳಿಸುತ್ತಾನೆಂಬ ಭಯ ಒಳಗೇ ಕೊರೆಯುತ್ತಿತ್ತು. ಅವರು ಹೇಳಿದರು: ‘ಆ ಬೋಳೀಮಗನ ಮನೆಗೆ ಏನು ಹೋಗೂದು? ನಮ್ಮ ಕೇಸು ಗೆಲ್ಲುತ್ತೆ. ನಂಗಷ್ಟೂ ಗೊತ್ತಿಲ್ವೇನೋ!’

ಕಲ್ಲೇಶ ಒಬ್ಬನೇ ಶಿವೇಗೌಡನ ಮನೆಗೆ ಹೋದ. ಶಿವೇಗೌಡ, ನಿರೀಕ್ಷಿಸಿದ್ದಂತೆಯೇ ಉತ್ತರ ಕೊಟ್ಟು ಕಳಿಸಿದ. ತಿಮ್ಲಾಪುರದ ದ್ಯಾವರಸಯ್ಯನವರನ್ನು ಹೋಗಿ ಕೇಳುವಂತೆ ನಂಜಮ್ಮ ಹೇಳಿದಳು.
ಅವನು ಆ ಊರಿನ ದಾರಿ ಕೇಳಿಕೊಂಡು ಕಾಲಿಗೆ ಎಕ್ಕಡ ಮೆಟ್ಟಿ ಹೊರಟ. ಅವನು ಮನೆಯಿಂದ ಹೋಗಿ ಹತ್ತು ನಿಮಿಷ ಕಳೆಯುವುದೇ ತಡ, ಗಂಗಮ್ಮ ಸೊಸೆಯನ್ನು ಕೇಳಿದಳು: ‘ಅದ್ಯಾವನ್ ಕೈಲಿ ಹೇಳಿಕಳ್ಸಿ ಕರಸ್ಕಂಡ್ಯೆ ನಿನ್ನ ಮಿಂಡನ್ನ? ಇವತ್ತು ರಾತ್ರಿಗೆ ಅವನ ಮಗ್ಗುಲಿಗೇ ಮಲಕ್ಕತೀ ಏನೇ?’
ಈ ಮಾತನ್ನು ಕೇಳಿದ ನಂಜಮ್ಮನಿಗೆ ಇನ್ನಿಲ್ಲದ ಸಿಟ್ಟು ಬಂದುದು ಮಾತ್ರವಲ್ಲ; ಈ ಮೊದಲು ಇಲ್ಲದ ಧೈರ್ಯವೂ ಹುಟ್ಟಿತು. ಅವಳು ಹೇಳಿದಳು: ‘ಅಂಥ ಕೆಲ್ಸ ನೀವು ಮಾಡ್ತಿದ್ರಿ ಅಂತ ಕಾಣುತ್ತೆ. ಅದ್ಕೇ ಆ ಮಾತು ನಿಮ್ಮ ಬಾಯಲ್ಲಿ ಬರುತ್ತೆ. ನಿಮ್ಮ ನಾಲಿಗೆ ಬಿಗಿಯಾಗಿ ಹಿಡ್ಕಳಿ. ಚಿಕ್ಕವಯಸ್ನಿಂದ ನ್ಯಟ್ಟಗೆ ಬುದ್ಧಿ ಕಲ್ತಿದ್ರೆ ನೀವ್ಯಾಕ್ ಹೀಗ್ ಆಗ್ತಿದ್ರಿ? ನಿಮ್ಮ ಮಕ್ಳು ಯಾಕ್ ಹೀಗ್ ಆಗ್ತಿದ್ರು?’
‘ಕೇಳ್ದೆ ಏನೋ ಚಿನ್ನಯ್ಯ? ಎದ್ದು ಒಂದ್ ಸಲಿ ಒದೆಯೋ ಆ ಮುಂಡೆ ಸ್ವಂಟದ ಮ್ಯಾಲೆ?’
‘ಹಾಗಂತ ನನ್ನ ತಂಟೆಗೆ ಬನ್ನಿ. ನಮ್ಮಣ್ಣಯ್ಯ ಸಾಯಂಕಾಲಕ್ಕೆ ಮತ್ತೆ ಬತ್ತಾನೆ’
ಎದ್ದು ಹೆಂಡತಿಯನ್ನು ಒದೆಯುವ ಧೈರ್ಯವಿರಲಿಲ್ಲವೋ, ಅಥವಾ ಅಷ್ಟು ಮಾಡಲು ಸೋಮಾರಿತನವೋ, ಅಂತೂ ಚೆನ್ನಿಗರಾಯರು ಮೇಲೆ ಏಳಲಿಲ್ಲ. ಗಂಗಮ್ಮ ಎರಡನೆಯ ಮಗನಿಗೆ ಆ ಮಾತು ಹೇಳಲಿಲ್ಲ. ಹೇಳಿದ್ದರೂ ಅವನು ಇನ್ನೊಂದು ಸಲ ಧೈರ್ಯ ಮಾಡುತ್ತಿರಲಿಲ್ಲವೋ ಏನೋ!

ಕಲ್ಲೇಶ ಮರುದಿನವೂ ಬರಲಿಲ್ಲ. ಎರಡನೆಯ ದಿನ ಬಂದ. ಅವನ ಜೊತೆಗೆ ದ್ಯಾವರಸಯ್ಯನವರೂ ಇದ್ದರು. ಮೊನ್ನೆಯ ದಿನ ದ್ಯಾವರಸಯ್ಯನವರ ಊರಿನಲ್ಲಿ ಇದ್ದು ಅವನು ನೆನ್ನೆ ಅವರನ್ನೂ ಜೊತೆಗೆ ಕರೆದುಕೊಂಡು ತಿಪಟೂರಿಗೆ ಹೋಗಿ ಸಿವೇಗೌಡನ ಲಾಯರನ್ನೇ ಕಂಡುಬಂದಿದ್ದ. ಇವರ ಎಲ್ಲ ಜಮೀನೂ ಆಧಾರಕ್ಕೆ ಸೇರಿದುದಾಗಿಯೂ ಕಕ್ಷಿಗಾರರನ್ನು ಒಪ್ಪಿಸಿ ಅಸಲು, ಬಡ್ಡಿ, ಕೋರ್ಟು ಖರ್ಚುಗಳನ್ನು ಕೊಟ್ಟರೆ ಕೇಸು ಹಿಂದಿರುಗಿಸುವಂತೆ ಅವನಿಗೆ ತಾವು ಹೇಳುವುದಾಗಿಯೂ ಅವರು ಹೇಳಿದ್ದರು.

ಗಂಗಮ್ಮ, ತನ್ನ ಭಾವ, ಮತ್ತು ಅಪ್ಪಣ್ಣಯ್ಯರನ್ನು ಕೂರಿಸಿಕೊಂಡು ಕಲ್ಲೇಶ ಹೇಳಿದ: ‘ಅಸ್ಲು ಹಣ ಯಾರೂ ಬಿಡೂದಿಲ್ಲ. ಕೋರ್ಟಿಗೆ ಖರ್ಚು ಮಾಡಿರೂದನ್ನೂ ಯಾರೂ ಬಿಡುಲ್ಲ. ಬಡ್ಡೀಲಿ ಒಂದಿಷ್ಟು ಬಿಟ್ಟುಬಿಡಪ್ಪ ಅಂತ ಅವ್ನುನ್ನ ಕೇಳ್ಕಭೌದು. ಒಟ್ನಲ್ಲಿ ಒಂದು ಐದು ಸಾವಿರದಲ್ಲಿ ಬಗೆಹರಿಯೂ ಹಾಗಿದ್ರೆ ಯಾವುದಾದ್ರೂ ಒಂದು ದೊಡ್ದ ಜಮೀನು ಮಾರಿಯೋ, ಅಥವಾ ಅವನಿಗೆ ಖರೀದಿಗೆ ಬರೆದೋ, ಉಳಿದ ಜಮೀನಾದ್ರೂ ಉಳಿಸಿಕೋಭೌದು. ಅವನ ಮನೆಗೆ ಹೋಗಾಣ ನಡೀರಿ.’
ಈ ಸಲಹೆಗೆ ಗಂಗಮ್ಮ ಒಪ್ಪಲಿಲ್ಲ. ಆದರೆ ಕಲ್ಲೇಶ ಬಿಡಲಿಲ್ಲ. ಜೊತೆಗೆ ದ್ಯಾವರಸಯ್ಯನವರು ಚೆನ್ನಿಗರಾಯನಿಗೆ ವಿವೇಕ ಹೇಳಿದರು. ಒಟ್ಟಿನಲ್ಲಿ ತಾಯಿ, ಇಬ್ಬರು ಗಂಡು ಮಕ್ಕಳು, ಕಲ್ಲೇಶ, ದ್ಯಾವರಸಯ್ಯನವರು, ಐದು ಜನವೂ ಶಿವೇಗೌಡನ ಮನೆಗೆ ಹೋದರು. ಇವರಾಗಿಯೇ ಅವರು ಬಂದದಕ್ಕೆ ಅವನು ಮೇಲೆ ಏರಿದ. ಆದರೆ ಕಲ್ಲೇಶ ಮತ್ತು ದ್ಯಾವರಸಯ್ಯನವರು ತಾಳ್ಮೆಯಿಂದ ಅವನ ಮಾತಿಗೆ ಒಂದೊಂದಾಗಿ ಸಮಾಧಾನ ಹೇಳಿ ಒಪ್ಪಿಸುತ್ತಿದ್ದರು. ಶಿವೇಗೌಡ ಒಂದು ಸಲ ಗಂಗಮ್ಮನ ಕಡೆಗೆ ತಿರುಗಿ ಮುಯ್ಯಿ ತೀರಿಸಿಕೊಳ್ಳುವ ಧ್ವನಿಯಲ್ಲಿ ಹೇಳಿದ: ‘ಏನಮ್ಮ, ನನ್ನ ನಾಯಿಮರಿ ಅಂತ ಬೈದು, ನನ್ ತಾವ ಒಂದ್ ದಮ್ಡೀನೂ ಕಿತ್ಕಳಾಕ್ ಆಗಾಕುಲ್ಲ ಅಂದಿದ್ದೆ. ಈಗ ಮತ್ತೆ ಬಾಕ್ಲಿಗೇ ಬಂದ್ಯಲ, ನಾಚಿಕೆಯಾಗ್ಲಿಲ್ವ?’
‘ಅಮ್ಮ, ನೀವು ಈಗ ತಾಳ್ಮೆ ತಗೋಬೇಕು?’-ಎಂದು ದ್ಯಾವರಸಯ್ಯನವರು ಗಂಗಮ್ಮನಿಗೆ ಹೇಳುತ್ತಿದ್ದರು. ಅಷ್ಟರಲ್ಲಿ ಅವಳು ಬೆಂಕಿಯಂತೆ ಉರಿದು ಮಾತನಾಡಿಬಿಟ್ಟಳು: ‘ಏನೋ ಗೌಡ, ನನ್ ಹಂಗ್‌ಸುಕ್ ನಿಂತ್‌ಕಂಡ್ಯೇನೋ? ನೀನೆಷ್ಟು, ನಿನ್ ಯೋಗ್ತಿ ಎಷ್ಟು? ನಾಯಿ ಮುಂಡೆಗಂಡ.’
‘ಹಂಗಾದ್ರೆ, ನೀನ್ ನನ್ ತಾವ ಕಿತ್ಕ ನೋಡಾನಾ.’
‘ನೀನ್ ಕೊಡ್ದೆ ಇದ್ರೆ ಕೋಲ್ಟ್‌ನಾಗೆ ಕಿತ್ಕತ್ತೀನಿ ಕಣೋ. ನೀನು ನನ್ ನೀನು ತಾನು ಅಂತ ಮಾತಾಡ್ತೀಯಾ, ಪಾಪಿ ಮುಂಡೇಮಗನೆ. ಲೋ ಅಪ್ಪಣ್ಣಯ್ಯ, ಚಿನ್ನಯ್ಯ, ಏಳ್ರೋ ಮನೆಗೆ ಹೋಗಾಣ. ಯಾಕ್ರೋ ಏಳ್ಲಿಲ್ಲ, ಅಪ್ಪುಂಗ್ ಹುಟ್ಟಿದ ಮಕ್ಳಲ್ವೇನ್ರೋ ನೀವು?’
ಅಪ್ಪಣ್ಣಯ್ಯ ತಕ್ಷಣ ಎದ್ದು ಅಮ್ಮನ ಪಕ್ಕದಲ್ಲಿ ನಿಂತ. ಗಂಗಮ್ಮ ಚಿನ್ನಯ್ಯನಿಗೆ ಹೇಳಿದಳು: ‘ಲೋ ಚಿನ್ನಯ್ಯ, ನೀನು ಅಲ್ಲೇ ಕೂತಿರ್ತಿ ಏನೋ? ನೀನು ಅಪ್ಪುಂಗ್ ಹುಟ್ಲಿಲ್ವೇನೋ? ಮಿಂಡ್‌ರಿಗ್ಹುಟ್ಟಿದ್ ಸೂಳೇಮಗ್ನೆ ಏಳೋಮ್ಯಾಲೆ.’

ಶ್ಯಾನುಭೋಗ್ ಚೆನ್ನಿಗರಾಯರ ಗೌರವ ಕೆರಳಿತು. ತಾವು ಅಪ್ಪನಿಗೆ ಹುಟ್ಟಿದವರೆಂಬುದನ್ನು ತನ್ನ ಭಾವಮೈದ, ದ್ಯಾವರಸಯ್ಯನವರು, ಮತ್ತು ಪ್ರತೀಕಕ್ಷಿ ಶಿವೇಗೌಡ, ಒಳ ಬಾಗಿಲಿನಲ್ಲಿ ನಿಂತಿದ್ದ ಅವನ ಹೆಂಡತಿ, ಮತ್ತು ಬಾಗಿಲಿನ ಹತ್ತಿರವಿದ್ದ ಆಳು, ಇಷ್ಟು ಜನರೆದುರೂ ಸಿದ್ಧ ಮಾಡಿ ತೋರಿಸುವುದು ಹೇಗೆ? ತಾವೂ ಮೇಲೆ ಎದ್ದು, ತಮ್ಮ ಮತ್ತು ತಾಯಿಯೊಡನೆ ಮನೆಗೆ ಹೊರಟುಹೋದರು. ಕಲ್ಲೇಶ, ದ್ಯಾವರಸಯ್ಯನವರು ಅಲ್ಲಿಯೇ ಉಳಿದು, ಇನ್ನು ಮುಂದೆ ಮಾತನಾಡಲು ಪ್ರಯತ್ನಿಸಿದರಾದರೂ ಶಿವೇಗೌಡ ಅವಕಾಶ ಕೊಡಲಿಲ್ಲ: ‘ಆವಮ್ಮುಂಗೇ ಈಟ್ ಶಡಕು ಇರಬೇಕಾದ್ರೆ ನಂಗೇನ್ರೀ? ಆ ನನ್ ಮಕ್ಳು ಬೀದೀಲಿ ತಿರುಪೆ ಮಾಡ್ಕಂಡ್ ತಿನ್ನೂ ಹಂಗ್ ಮಾಡ್ದೆ ಇದ್ರೆ ನಾನೂ ಅಪ್ಪಂಗ್ ಹುಟ್ಟಿದ ಸೂಳೇಮಗ ಅಲ್ಲ ಅಂತ ತಿಳ್ಕಳಿ. ಕೋಲ್ಟಾಗೆ ಕೇಸ್ ಗೆಲ್ದೇ ಇದ್ರೆ ಥೂ ಬಾಂಚೋತ್ ಅಂತ ನನ್ನ ಎದಿಗ್ ಒದ್ದು ಜೋಡ್ನಾಗೆ ಹೊಡೀರಿ. ಚೀಪ್ ಕೋಲ್ಟ್ ತಂಕ ಆಗ್ಲಿ. ಮಹಾರಾಜರ ಮ್ಯಾಲಿಂತಂಕಾಲಾದ್ರೂ ಆಗ್ಲಿ’-ಎಂದು ತನ್ನ ಕೊರಳಿನ ಕರಡಿಗೆಯನ್ನು ಬಲಗೈಲಿ ಹಿಡಿದು ಆಣೆ ಮಾಡಿ ಹೇಳಿದ: ‘ಆ ಬಣಜಿಗ್ ನನ್ನ್ ಮಗ ರೇವಣ್ಣುನ್ನ ಕಟ್ಕಂಡ್ ನಿಂತವ್ರಲಾ, ತೋರುಸ್ತೀನಿ ನಾನ್ಯಂತ ನೊಣಬಣ್ಣ ಅಂತ.’

ಇನ್ನು ಸಂಧಾನದ ಮಾತಾಡಿ ಪ್ರಯೋಜನವಿಲ್ಲವೆಂದರಿತು, ಕಲ್ಲೇಶ, ದ್ಯಾವರಸಯ್ಯ, ಇಬ್ಬರೂ ಮನೆಗೆ ಬಂದರು. ಗಂಗಮ್ಮ ಜಗುಲಿಯ ಮೇಲೆ ಕೂತು ತನ್ನ ಪ್ರತಾಪಗೀತೆ ಹಾಡುತ್ತಿದ್ದಳು. ಶ್ಯಾನುಭೋಗರು ನಿಧಾನವಾಗಿ ವೀಳ್ಯೆದೆಲೆ ಹೊಗೆಸೊಪ್ಪುಗಳನ್ನು ಮೆಲ್ಲುತ್ತಿದ್ದರೆ, ಮಾತೃಭಕ್ತಸಂಪನ್ನನಾದ ಅಪ್ಪಣ್ಣಯ್ಯ, ಶಿವೇಗೌಡನ ಹೆಂಡಿರ ಮುಡಿಯನ್ನು ಬೋಳಿಸುವ ಮಾತಾಡುತ್ತಿದ್ದ. ಕಲ್ಲೇಶನಿಗೆ ರೇಗಿಹೋಗಿತ್ತು. ಜಗುಲಿಯ ಕೆಳಗೆ ನಿಂತು ಅವನು ಹೇಳಿದ: ‘ಕುರುಬ ನನ್ ಮಕ್ಳಾ. ನಿಮಗೆ ಖುದ್ದು ಬುದ್ಧಿ ಇಲ್ಲ. ನಮ್ಮಂತೋರು ಬಂದು ಏನಾದ್ರೂ ದಾರಿ ಮಾಡಾಣ ಅಂತ ನಿಂತ್ಕಂಡ್ರೆ ಹೆಡಸಾಡ್ತೀರಾ? ಲೇ ಮುದ್ಕೀ, ನೀನು ಸಾಯ್ದೆ ಈ ಮನೆ ಉಳುಯುಲ್ಲ. ಯಲ್ಲಾ ಬಿಟ್ಟು ನಿನ್ನಂತೋಳ ಮನೆಗೆ ಹೆಣ್ಣು ಕೊಟ್ಟ ನಮ್ಮಪ್ಪುಂಗೆ ಮೆಟ್ಟು ತಗಂಡ್ ಹೊಡಿಬೇಕು.’ ಗಂಗಮ್ಮ ಮೊದಲೇ ವಿಜೃಂಭಿಸಿದ್ದಳು. ಮನೆಗೆ ಬಂದಾಗ ತನಗೆ ನಮಸ್ಕಾರ ಮಾಡಬೇಕಾದ ಈ ಬೀಗಮಗ ಹೀಗಂದುದರಿಂದ ಇನ್ನೂ ಕೆರಳಿಬಿಟ್ಟಳು. ‘ಪಾಪರ್ ಸೂಳೇಮಗನೆ, ನನ್ನ ಹೀಗಂತಿ ಏನೋ? ನಿನ್ನ ಯಾರೋ ಇಲ್ಲಿ ಕರೆಸಿದ್ದೋರು? ಅವ್ಳು ಹೇಳ್ಕಳ್ಸಿದ್ಲು ಅಂತ ಕದ್ದು ಅವ್ಳ ಜೊತೆ ಮಲೀಕಳುಕ್ ಬಂದಿದ್ದೆ ಏನೋ? ಲೋ ಅಪ್ಪಣ್ಣಯ್ಯ ಹಿಡಕಂಡು ಅವ್ನ ಕಪಾಳುಕ್ ಎರಡು ಹಾಕೋ.’

ಅಪ್ಪಣ್ಣಯ್ಯನಿಗೆ ಧೈರ್ಯವಿರುವುದು ಸಾಧ್ಯವೇ ಇರಲಿಲ್ಲ. ಕಲ್ಲೇಶ ತಿರುಗಿ ಹೇಳಿದ: ‘ಪಾಪಿ ಮುಂಡೆ, ನಿನ್ನ ಬಾಯ್ಲಿ ಬರೂ ಮಾತಿಗೆ ನಿನ್ನ ನಾಲಿಗೆ ಕೊಳೆತು ಬೀಳುತ್ತೆ. ಸಿವಲಿಂಗನ್ತಾವ ಶ್ಯಾನುಭೋಗ್‌ಕೆ ತಗಳುಕ್ಕಾಗ್ದೆ ಪರದಾಡ್ತಿದ್ರಲ, ಆಗ ಎಲ್ಲಿ ಹೋಗಿತ್ತು ನಿಮ್ಮ ಗಂಡುಸ್ತನ?
ಅವನು ಹೊಸಲ ಒಳಗೆ ಹೋಗಿ ತಂಗಿಗೆ ಹೇಳಿದ: ಲೇ, ನಂಜು, ಇಂಥಾ ಸೂಳೆ ಮಕ್ಳು ಮನ್ಲಿ ಅದೇನು ಸಂಸಾರ ಮಾಡ್ಕಂಡಿದೀಯಾ? ಮಕ್ಳುನ್ನೂ ಕರ್ಕಂಡ್ ಹೊರಡು. ನನ್ ಮನ್ಲಿ ದೇವರು ಕೊಟ್ಟುದ್ದು ಊಟ ಮಾಡ್ಕಂಡಿರೂವಂತೆ.’
ನಂಜು ಶಾಂತಳಾಗಿ ನಿಂತಿದ್ದಳು. ಕಲ್ಲೇಶನೇ ಕೇಳಿದ: ‘ಯಾಕೆ ನಿಂತಿದೀಯಾ? ನಡಿ.’
‘ಅಣ್ಣಯ್ಯ, ಕೋಪದಲ್ಲಿ ಏನೂ ಮಾಡಬಾರ್‌ದು. ಒಳಗೆ ಬಂದು ಕೂತ್ಕಬಾ.’
‘ಈ ಬೋಸುಡಿ ಮನ್ಲಿ ಒಂದು ಲೋಟ ನೀರೂ ಮುಟ್ಟುಲ್ಲ ನಾನು’-ಎಂದು ಹೇಳಿದವನೇ, ಎದುರಿನ ಗೂಟಕ್ಕೆ ತಗುಲಹಾಕಿದ್ದ ತನ್ನ ಕೈಚೀಲ ತೆಗೆದುಕೊಂಡು, ಕಾಲಿಗೆ ಎಕ್ಕಡ ಮೆಟ್ಟಿ ಅವನು ಹೊರಟುಹೋದ. ‘ಅಣ್ಣಯ್ಯಾ, ಇದೇನು ಹೀಗ್ ಮಾಡ್ತೀಯಾ?’- ಎಂದು ಅವಳು ಕೂಗಿಕೊಂಡರೂ ನಿಲ್ಲಲಿಲ್ಲ. ಸಿವೇಗೌಡನ ಮನೆಯಲ್ಲಿ ನಡೆದದ್ದನ್ನು ಈ ಸಮಯದಲ್ಲಿ ತಾವು ನಂಜಮ್ಮನಿಗೆ ಹೇಳಿದರೆ ಜಗುಲಿಯ ಮೇಲಿರುವವರು ಇನ್ನೂ ಕೆರಳುತ್ತಾರೆಂಬುದನ್ನು ಅರಿತ ದ್ಯಾವರಸಯ್ಯನವರೂ ಊರಿಗೆ ಹೊರಟುಹೋದರು.

– ೫ –

ನಂಜಮ್ಮನಿಗೆ ಈಗ ಮೊದಲಿಲ್ಲದ ಧೈರ್ಯ ಬಂದಿತ್ತು. ಸಾತುವಿನ ತಂದೆಗೆ ವಿಷಯ ತಿಳಿಸಿದರೆ ಅವರಾದರೂ ಬಂದು ಇವರಿಗೆ ಏನಾದರೂ ಬುದ್ಧಿ ಹೇಳಬಹುದು-ಎಂಬ ಆಸೆಯೊಂದು ಹುಟ್ಟಿತು. ಕಲ್ಲೇಶನೇನೋ ಸ್ವಂತ ಅಣ್ಣ, ಕಾಗದ ಬರೆದಳು. ಆದರೆ ಅವರಿಗೆ ಹೇಗೆ ಬರೆಯುವುದು? ಹೇಗಾದರೂ ಸರಿ, ಅವರೂ ತನಗೆ ತಂದೆಯ ಸಮಾನರೇ ಎಂದು ಯೋಚಿಸಿ ಒಂದು ಮಧ್ಯಾಹ್ನ ಇವರೆಲ್ಲ ನಿದ್ದೆ ಮಾಡುತ್ತಿದ್ದ, ಪಾರ್ವತಿ ಹೊರಗೆ ಆಟ ಆಡುತ್ತಿದ್ದಾಗ ಕೂತು ಒಂದು ಹಾಳೆಯ ಮೇಲೆ ಬರೆದಳು. ಕಡೂರು ಡಿಸ್ಟ್ರಿಕಟ್ಟು, ಕಸಬಾ ತಾಲ್ಲೂಕು ನುಗ್ಗೀಕೆರೆ ಗ್ರಾಮದ ವೇ|| ಶ್ಯಾಮಭಟ್ಟರು ಎಂಬ ವಿಳಾಸ ಅವಳಿಗೆ ಗೊತ್ತೇ ಇತ್ತು. ಊರಿಗೆ ವಾರಕ್ಕೊಂದು ದಿನ ಕಂಬನಕೆರೆಯಿಂದ ಪೋಸ್ಟ್‌ಮ್ಯಾನ್ ವಾಸಪ್ಪನವರು ಬರುತ್ತಾರೆ. ಈ ಗ್ರಾಮಕ್ಕೆ ಬಂದ ಸಾಕ್ಷಿಯಾಗಿ ಅವರು ಶ್ಯಾನುಭೋಗರಾದ ಚೆನ್ನಿಗರಾಯರ ರುಜುಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಅವರು ನಂಜಮ್ಮನಿಗೆ ಗೊತ್ತಿದೆ.

ಈ ವಾರ ಅವರು ಬಂದಾಗ ಮಕ್ಕಳು ವಿನಾ ಮತ್ತೆ ಮನೆಯಲ್ಲಿ ಯಾರೂ ಇರಲಿಲ್ಲ. ನಂಜಮ್ಮ ಕೇಳಿದಳು: ‘ವಾಸಪ್ಪ್‌ನೋರೇ. ನನಗೊಂದು ಲಕೋಟೆ ಬೇಕು. ನನ್ನ ಹತ್ತಿರ ದುಡ್ಡಿಲ್ಲ. ಎರಡು ಗಿಟುಕು ಕೊಬ್ಬರಿ ಕೊಡ್ತೀನಿ. ಆಗುತ್ತೆಯೆ?’
‘ಅಮ್ಮಾ, ನಾನು ಬಂದಾಗ್‌ಲೆಲ್ಲ ತಿಂಡಿ ಕೊಡ್ತೀರಿ. ನಿಮ್ಮ ಹತ್ರ ಕೊಬ್ಬರಿ ತಗಂಡು ಕವರು ಕೊಡಲೆ? ಆ ಮುಕ್ಕನ ಯೋಗ್ತಿ ಎಷ್ಟು? ತಗಳಿ.’
‘ಈ ವಿಷಯ ಯಾರ ಕೈಲೂ ಹೇಳ್‌ಬಾರ್ದು. ನಮ್ಮನೇ ಕೇಸು ನಿಮಗೂ ಗೊತ್ತಿದೆಯಲ್ಲ. ನನ್ನ ಮೈದುನನ ಮಾವ್‌ನೋರಿಗೆ ಬನ್ನಿ ಅಂತ ಬರ್ದಿದೀನಿ’-ಎಂದು ತನ್ನ ಕಾಗದ ಅವರ ಕೈಲೇ ಕೊಟ್ಟು ವಿಳಾಸ ಹೇಳಿದಳು. ಹಾಕುವುದಾಗಿ ಹೇಳಿ ಅವರು ಕಾಗದವನ್ನು ತಮ್ಮ ಖಾಕಿಯ ಜೇಬಿನಲ್ಲಿ ಇಟ್ಟುಕೊಂಡರು. ಶ್ಯಾನುಭೋಗರು ಊರಮುಂದಿನ ವೀರಾಚಾರಿಯ ಕುಲುಮೆಯ ಹತ್ತಿರವೋ, ಗುಡಿಯ ಮಾದೇವಯ್ಯನವರ ಮುಂದೋ ಕೂತು ಹೊಗೆಸೊಪ್ಪು ಜಗಿಯುತ್ತಿರುತ್ತಾರೆಂಬುದು ಅವರಿಗೂ ಗೊತ್ತು. ಅಲ್ಲಿಯೇ ರುಜು ಮಾಡಿಸಿಕೊಳ್ಳುವುದಾಗಿ ಹೇಳಿ ಹೋದರು.

ತಾನು ತಪ್ಪು ಕೆಲಸ ಮಾಡಿದೆನೆಂದು ಅವರು ಹೊರಟು ಹೋದಮೇಲೆ ಅವಳಿಗೆ ಎನಿಸಿತು. ತಾನು ತಾಯಿಯನ್ನು ಬಿಟ್ಟು ಬೇರೆ ಇರುವಂತಾದರೆ ಬಂದು ಹೆಂಡತಿ ಮಗುವನ್ನು ಕರೆದುಕೊಂಡು ಹೋಗುವಂತೆ ಅವರು ಹೇಳಿದ್ದ ವಿಷಯವನ್ನು ಅಪ್ಪಣ್ಣಯ್ಯ ಊರಿಗೆ ಬಂದ ಕೆಲವು ದಿನಗಳ ಮೇಲೆ ಅಮ್ಮನ ಕೈಲಿ ಹೇಳಿದ್ದ. ‘ನನ್ ಮನೆ ಒಡೆಯುಕ್ ನಿಂತ್ಕಂಡ್ನೋ ಈ ಕಡೂರು ಸೀಮೆಯ ಸುಕನಾತಿ ಜೋಯ್ಸ!’-ಎಂದು ಗಂಗಮ್ಮ ಕೆಲವು ದಿನ ಹಾರಾಡಿದ್ದಳು. ಅದಾದ ನಂತರ ತಿಪಟೂರು ಪ್ರವಾಸಗಳು ಒದಗಿ ಆಕೆಗೆ ಮಾತನಾಡಲು ಬೇರೆ ವಿಷಯಗಳಿದ್ದುದರಿಂದ ಬೀಗರ ಮಾತು ಬರುತ್ತಿರಲಿಲ್ಲ. ಮೊದಲೇ ದ್ವೇಷವಿರುವಾಗ ಇನ್ನು ಅವರು ಬಂದರೆ ಇವರು ಸುಮ್ಮನಿರುವುದಿಲ್ಲ. ತಾನಾಗಿಯೇ ಅವರನ್ನು ಕರೆಸಿ ಜಗಳಕ್ಕೆ ದಾರಿ ಮಾಡಿದಂತೆ ಆಯಿತು-ಎಂಬ ಯೋಚನೆ ಅವಳ ಮನಸ್ಸಿನಲ್ಲಿ ಹೊಕ್ಕಿತು. ಆದರೂ ತಾನು ಮಾಡಿದುದು ಪೂರ್ತಿ ತಪ್ಪಲ್ಲ ಎಂಬ ಒಂದು ಪ್ರಜ್ಞೆಯು ಈ ಯೋಚನೆಗೆ ಸಮಾಧಾನ ಹೇಳುತ್ತಿತ್ತು.

ಅವಳು ವಾಸಪ್ಪನವರೊಡನೆ ಕಾಗದ ಕಳಿಸಿದ ಹನ್ನೆರಡನೆಯ ದಿನ ಮದ್ಯಾಹ್ನಾ ನಂತರ ನಾಲ್ಕು ಗಂಟೆಯ ಹೊತ್ತಿಗೆ ಶ್ಯಾಮಭಟ್ಟರು ಒಬ್ಬರೇ ಬಂದರು. ತೋಟದ ಹಳ್ಳದಲ್ಲಿ ಹೊನ್ನಗೊನೆ ಸೊಪ್ಪು ಕಿತ್ತುತರಲು ಗಂಗಮ್ಮ ಹೋಗಿದ್ದಳು; ಅಪ್ಪಣ್ಣಯ್ಯ ಹಸುವಿನ ಹಿಂದಣ ಹೋರಿಗರುವಿನಂತೆ ಅಮ್ಮನನ್ನು ಹಿಂಬಾಲಿಸಿದ್ದ. ಚೆನ್ನಿಗರಾಯರು ಮನೆಯಲ್ಲಿಯೇ ಇದ್ದರು. ಬಂದವರನ್ನು ಕೈಕಾಲು ತೊಳೆದುಕೊಳ್ಳುವಂತೆ ಹೇಳಿ, ಊಟಕ್ಕೆ ಬಡಿಸುವಾಗಲೇ ನಂಜಮ್ಮ ಕೋರ್ಟಿನ ಎಲ್ಲ ವಿಷಯವನ್ನೂ ತನ್ನ ಅಣ್ಣ ಬಂದಿದ್ದುದನ್ನೂ ಹೇಳಿದಳು. ಹೆಂಡತಿ ಈ ಮಾತನಾಡುತ್ತಿರುವುದಕ್ಕೆ ಶ್ಯಾನುಭೋಗರಿಗೆ ಕೋಪವೇನೋ ಬಂದಿತ್ತು. ಆದರೆ ಬೀಗರ ಎದುರಿಗೆ ಅವಳನ್ನು ಬೈಯುವುದಕ್ಕೆ ಧೈರ್ಯವಿಲ್ಲದೆಯೋ ಅಥವಾ ನಾಚಿಕೆಯಿಂದಲೋ ಅವರು ಅಂಗಳದಲ್ಲಿ ಕೂತು, ಹೊರಗೆ ಸುರಿಯದಂತೆ ಹೊಗೆಸೊಪ್ಪಿನ ರಸವನ್ನು ಬಾಯಲ್ಲೇ ಇಟ್ಟುಕೊಳ್ಳುವ ಸಾಹಸ ಮಾಡುತ್ತಿದ್ದರು.

ಶ್ಯಾಮಭಟ್ಟರು ಊಟಮಾಡಿ ಹೊರಗೆ ಬಂದು ನಶ್ಯ ತಿಕ್ಕುವ ವೇಳೆಗೆ ಗಂಗಮ್ಮ ಒಂದು ಹಿಂಡುವ ಕುಕ್ಕೆಯ ಭರ್ತಿ ಹೊನ್ನಗೊನೆ ಸೊಪ್ಪನ್ನು ಹೊತ್ತುಕೊಂಡು ಬಂದಳು. ಅವಳ ಹಿಂದೆಯೇ ಅಪ್ಪಣ್ಣಯ್ಯ ಕರಾವಿನ ಹಸುವಿನ ಹಗ್ಗ ಹಿಡಿದು ತಂದು ಕೊಟ್ಟಿಗೆಯ ಕಡೆಗೆ ಹೋದ. ಈ ಬೀಗನನ್ನು ಕಂಡ ಗಂಗಮ್ಮನಿಗೆ ಕೋಪ ಉರಿದೆದ್ದಿತು. ನನ್ನ ಮಗುನ್ನ ಬೇರೆ ಮಾಡಿಸೋ ಮಾತು ಹೇಳಿಕೊಟ್ಟಿದ್ದ ಈ ಮನೆಮುರುಕ ಸೂಳೇಮಗ ನಾಚಿಕೆ ಇಲ್ದೆ ಬಂದು ಕೂತಿದಾನೆ, ಇರ್ಲಿ ಮಾಡ್ತೀನಿ, ಎಂದು ಒಳಗೆ ಹೋಗಿ ಸೊಪ್ಪಿನ ಕುಕ್ಕೆಯನ್ನು ಅಡಿಗೆಯ ಮನೆಯಲ್ಲಿ ನೆಲಕ್ಕೆ ಕುಕ್ಕಿದಳು. ಹೊರಗೆ ಬಂದು ಬೀಗನ ಮುಂದೆ ನಿಂತು, ‘ಏನೋ, ನನ್ನ ಮಗುನ್ನ ಬ್ಯಾರೆ ಮಾಡ್ಸುಕ್ಕೆ ಬಂದೆ ಏನೋ ಬ್ರಾಹ್ಮಣಾರ್ಥ ಮಾಡಿ ಹ್ವಟ್ಟೆ ಹೊರೆಯೋ ಜೋಯ್ಸ?’ ಎಂದು ಸಿಡಿದಳು.
ತನ್ನ ಬೀಗಿತ್ತಿ ಲಗಾಮಿಲ್ಲದವಳೆಂಬುದು ಶ್ಯಾಮಭಟ್ಟರಿಗೆ ಗೊತ್ತಿತ್ತು. ಆದರೆ ತನ್ನ ಎದುರಿಗೇ ನಿಂತು ಹೀಗೆ ಮಾತನಾಡುತ್ತಾಳೆಂಬ ಕಲ್ಪನೆ ಸಹ ಅವರಿಗೆ ಎಂದೂ ಹುಟ್ಟಿರಲಿಲ್ಲ. ಅವರು ಅವಾಕ್ಕಾಗಿ ಅವಳನ್ನೇ ನೋಡುತ್ತಾ ಎರಡು ನಿಮಿಷ ಕುಳಿತಿದ್ದು ಹೇಳಿದರು: ‘ನೋಡಿ ನೀವು ತಾಳ್ಮೆ ಇಟ್ಟುಕೊಂಡು ಮಾತಾಡಬೇಕು. ನಿಮ್ಮ ಮಗ ನಿಮ್ಮ ಜೊತೆ ಇದ್ರೆ ನಮಗೇನೂ ಹೊಟ್ಟೆಕಿಚ್ಚಲ್ಲ. ನಾನು ಈಗ ಬಂದ ಮುಖ್ಯ ವಿಷಯ ಅಂದ್ರೆ, ನೀವು ಕೋರ್ಟಿಗೆ ಹೋಗಿ ಹಿರೀಕರು ಮಾಡಿರೋ ಆಸ್ತೀನ ಕಳ್ಕೋಬಾರ್ದು. ವಿವೇಕವಾಗಿ ನಡೆದು…..’

ಅವರಿನ್ನೂ ಮಾತನ್ನು ಪೂರ್ತಿ ಮಾಡುವ ಮೊದಲೇ ಗಂಗಮ್ಮನ ಮನಸ್ಸಿನಲ್ಲಿ ಇವರು ಬಂದಿರುವ ಹಿನ್ನೆಲೆಯು ಚಕಮಕಿಯ ಬೆಂಕಿಯಂತೆ ಕಿಡಿಯಿತು. ಅಡಿಗೆಯ ಮನೆಯ ಬಾಗಿಲಿಗೆ ಹೋಗಿ ಸೊಸೆಯ ಕಡೆ ಗೋಣು ತಿರುಗಿಸಿ ಎಂದಳು: ‘ಏನೇ ಹಾದರಗಿತ್ತಿ ಮುಂಡೆ. ಆಗ ನಿಮ್ಮಣ್ಣನಿಗೆ ಹೇಳಿಕಳ್ಸಿ ಅವನುನ್ನ ಜೊತೇಲಿ ಮಲಗಿಸ್ಕಂಡಿದ್ದೆ. ಈಗ ಈ ಮುದುಕ ಜೋಯ್ಸನಿಗೆ ಹೇಳಿ ಕರಸ್ಕಂಡಿದೀಯಾ. ಇವತ್ತು ರಾತ್ರಿ ಇವನ ಜೊತೆ ವಾಲಾಡಬೇಕೇನೆ? ಬಾರು ಬಂದು ಕುಣೀತಾ ಇದಿ ಏನು ನೀನು?’ ಒಂದು ಸಲ ಜಗುಲಿಯ ಹತ್ತಿರ ಹೋಗಿ ತಂಬುಲವನ್ನು ಉಗಿದು ಬಂದು ಮತ್ತೆ ಆಸೀನನಾಗಿದ್ದ ಮಗನ ಹತ್ತಿರ ಬಂದು ಎಂದಳು: ‘ಏನೋ ಶಂಢಸೂಳೇಮಗನೆ, ಅಪ್ಪುಂಗೆ ಹುಟ್ಟಿಲ್ವೇನೋ ನೀನು? ನಿನ್ನ ಹೆಂಡ್ತಿ ಇವನಿಗೆ ಕಾಗದ ಬರ್ದು ಕರ್ಸಿಕಂಡಿದಾಳೆ. ಇವತ್ತು ನೀನು ಹೊರಗೆ ಜಗಲಿಮ್ಯಾಲೆ ಮಲಿಕ್ಕ. ಅವಳು ಇವನ ಜೊತೆ ಅಟ್ಟದ ಮ್ಯಾಲೆ ವಾಲಾಡ್‌ಲಿ.’
ಅಷ್ಟರಲ್ಲಿ ತಮ್ಮ ಕೈಗಳನ್ನು ಕಿವಿಗಳ ಮೇಲೆ ಇಟ್ಟು ಅದುಮಿಕೊಂಡು ಬಾಯಲ್ಲಿ ‘ರಾಮ ರಾಮ’ ಎನ್ನುತ್ತಿದ್ದ ಶ್ಯಾಮಭಟ್ಟರ ಕಣ್ಣು ಮಾತ್ರ ಬೀಗಿತ್ತಿಯ ಕಡೆ ನೋಡುತ್ತಿದ್ದವು. ಇಷ್ಟು ಹೇಳಿದ ಗಂಗಮ್ಮ ಅಲ್ಲಿ ನಿಲ್ಲದೆ ಹೊರಗೆ ಬಂದು ಅಪ್ಪಣ್ಣಯ್ಯನನ್ನು ಕರೆದುಕೊಂಡು ನೇರವಾಗಿ ರೇವಣ್ಣಶೆಟ್ಟಿಯ ಮನೆಗೆ ಹೋದಳು.

ಕೈಗಳನ್ನು ಕಿವಿಯಿಂದ ತೆಗೆದು ಶ್ಯಾಮಭಟ್ಟರು ಚೆನ್ನಿಗರಾಯನಿಗೆ ಹೇಳಿದರು: ‘ನೋಡಿ, ಮನೇ ಯಜಮಾನ್ರು ಅಂತ ನಾನು ನಿಮಗೆ ಹೇಳ್ತೀನಿ. ಮನೆಗೆ ದೊಡ್ಡವರಾದೋರು ಹೀಗೆ ಮನಸೋ ಇಚ್ಛೆ ಮಾತಾಡಿ ನಡುದ್ರೆ ಸಂಸಾರ ಹ್ಯಾಗೆ ನಿಲ್ಲುತ್ತೆ? ನಮ್ಮ ಸಾತೂನೂ ಹೇಳ್ತೀರ್ತಾಳೆ, ನಿಮ್ಮ ಕುಟುಂಬ ನಂಜಮ್ಮನ ಗುಣ, ಬುದ್ಧಿಶಕ್ತಿ ಗುಣ ತುಂಬ ಚನ್ನಾದ್ದು ಅಂತ. ಆ ಮಗೂನ್ನ, ಅದರಲ್ಲೂ ಹಿರೀ ಸೊಸೇನ ಇವರು ನನ್ನ ಕಣ್ಣೆದುರ್ಗೇ ಹೀಗಂತಿದ್ರೆ, ಇನ್ನು ಕಿರಿಯೋಳು ನನ್ನ ಮಗಳನ್ನ ಏನೇನಂತಾರೆ ಅಂತ ಗೊತ್ತಾಗುತ್ತೆ. ಏನೋ, ಜಾವಗಲ್ಲು ಕಡೆಯೋರು ನಂಟರ ಪೈಕೀನೇ ಹೇಳಿದ್ರು ಅಂತ ನಾವು ಇಲ್ಲಿಗೆ ಹೆಣ್ಣು ಕೊಟ್ಟುಬಿಟ್ವು. ಈಗ ಹ್ಯಾಗಿದ್ರೂ ಉಭಯತಾಪಿ ಹೊಂದಿಕಂಡ್ ಹೋಗ್‌ಬೇಕು. ನಾನು ಹೇಳೂದು ತಿಳೀತೆ?’
‘ಇನ್ನೊಂದೆರ್ಡು ವಿಳ್ಳೇದೆಲೆ ತಗಂಡ್ಬಾರೇ’-ಶ್ಯಾನುಭೋಗರು ಹೆಂಡತಿಗೆ ಹೇಳಿದರು. ನಂಜಮ್ಮ ತಂದುಕೊಟ್ಟ ಮೇಲೆ ಅದಕ್ಕೆ ಸುಣ್ಣ ಹಾಕಿ ಬಾಯಿಗೆ ಹಾಕಿಕೊಂಡು, ಹೊಗೆ ಸೊಪ್ಪು ತೀಡುತ್ತಾ ಅವರು, ‘ಹೂಂ’ ಎಂದರು.
‘ನಿಮ್ಮುನ್ನ ಬ್ಯಾರೆ ಮಾಡ್‌ಬೇಕು ಅಂತ ನಮ್ಮ ಆಶೆಯಲ್ಲ. ಆದ್ರೆ ಮನೇಲಿ ಗಂಡಸ್ರಾದ ನೀವು ವಿವೇಕ ಉಪಯೋಗಿಸಬೇಕು. ಈಗ ಸಾಲಗಾರರನ್ನೇ ಹಿಡಿದು ವ್ಯವಹಾರ ತೀರ್ಮಾನಿಸ್ಕಳ್ಳಿ. ನಂಜಮ್ಮ ಹೇಳೂ ಹಾಗೆ ಯಾವ್ದಾದ್‌ರೂ ಒಂದೆರಡು ಜಮೀನು ಅವನಿಗೇ ಕೊಟ್ಟು, ಋಣ ಹರೀತು ಅಂತ ಆಧಾರಪತ್ರಕ್ಕೆ ಷರಾ ಬರಿಸಿ ತಗೋಳಿ. ಇದ್ದುದ್ರಲ್ಲೇ ಹ್ಯಾಗೋ ಜೀವನ ಮಾಡಿ.’
ಶ್ಯಾನುಭೋಗರು ದವಡೆಯಲ್ಲಿ ಗುಳುಗುಳುಗುಟ್ಟುವ ತಂಬುಲದ ರಸದಲ್ಲಿ ವಿಹರಿಸುತ್ತಿದ್ದರು. ಅವರ ಉತ್ತರಕ್ಕಾಗಿ ಕಾಯ್ದ ಬೀಗರು ‘ಅಲ್ವೆ?’ ಎಂದರೆ, ಮಾತನಾಡುವಂತೆ ಮುಖವನ್ನು ಅಟ್ಟದ ಕಡೆಗೆ ಎತ್ತಿ ಬಾಯಿ ತೆಗೆದರೇ ಹೊರತು ತಂಬುಲದ ರಸದಿಂದ ಮೇಲೆ ಎದ್ದು ನಾಲಿಗೆಯು ಏನೂ ನುಡಿಯಲಿಲ್ಲ. ಅವರು ಎದ್ದು ಹೋಗಿ ಉಗುಳಿ ಬರುವ ತನಗೆ ಕಾದಿದ್ದ ಇವರು ಮತ್ತೊಂದು ಸಲ ಕೇಳಿದರು: ‘ಈಗ ನೀವು ಮಾತಾಡಲೇಬೇಕು.’
ಚೆನ್ನಿಗರಾಯರಿಗೆ ಏನು ಹೇಳುವುದಕ್ಕೂ ಭಯ. ಕೊನೆಗೆ ಕಷ್ಟಪಟ್ಟು ಒಂದು ತೀರ್ಮಾನಕ್ಕೆ ಬಂದು, ‘ನಂಗೊತ್ತಿಲ್ಲ, ನೀವುಂಟು ನಮ್ಮಮ್ಮ ಉಂಟು’ ಎಂದು ಹೇಳಿ ಹೊರಗೆ ಹೊರಟುಹೋದರು.
‘ಅಮ್ಮಾ, ಕೇಳಿದೆಯಾ?’-ಭಟ್ಟರು ಕೇಳಿದರು.

ನಂಜಮ್ಮ ಹೊರಗೆ ಬಂದು ಎಂದಳು: ‘ಇವರ ಸ್ವಭಾವ ನಿಮಗೆ ಚೆನ್ನಾಗಿ ಗೊತ್ತಿಲ್ಲ. ನಿಮ್ಮ ಅಳಿಯನ್ನೇ ಹಿಡಿದು ಕೇಳಿ. ಏನಿಲ್ದೆ ಇದ್ರೂ ನಮ್ಮ ನಮ್ಮ ಪಾಲು ನಮಗೆ ಬಂದುಬಿಡ್ಳಿ, ಸಾಲಾನೂ ಅರ್ಧರ್ಧ ತೀರುಸ್ತೀವಿ ಅಂತ ಅಪ್ಪಣ್ಣಯ್ಯ ಹಟ ಮಾಡಿದ್ರೆ ಒಂದು ತೀರಾಗುತ್ತೋ ಏನೋ.’
ಅವನ ಯೋಗ್ತಿ ಏನು ಅಂತ ನಿಂಗೆ ಗೊತ್ತಿಲ್ವೆ? ಈ ಕೋರ್ಟಿನ ವಿಷಯ ‘ನಂಗೆ ಗೊತ್ತಿರಲಿಲ್ಲ. ಆದರೆ ಅದಕ್ಕೆ ಮೊದಲೇ ನಾವು ತೀರ್ಮಾನ ಮಾಡಿದ್ವು. ಇರೋಳೊಬ್ಳು ಮಗಳು. ಹ್ಯಾಗೂ ಸಾಕ್ತೀವಿ. ದೇವರು ಎರಡು ಹೊತ್ತಿನ ಅನ್ನಕ್ಕೆ ಇಲ್ಲ ಅನ್ಸಿಲ್ಲ. ಈ ಅತ್ತೆ ಕೆಳಗೆ ನಮ್ಮ ಮಗೂನ ಹ್ಯಾಗೆ ಕಳುಸ್ಲಿ? ಅದ್ಕೇ ಬಾಣಂತನ ಮುಗುದ್‌ಮ್ಯಾಲೆ ಅಲ್ಲೇ ಇಟ್ಕಂಡಿದೀವಿ’

ಏನು ಹೇಳುವುದಕ್ಕೂ ತಿಳಿಯದೆ ನಂಜಮ್ಮ ಸುಮ್ಮನೆ ನಿಂತಿದ್ದಳು. ಅಷ್ಟರಲ್ಲಿ ಮನೆಗೆ ನುಗ್ಗಿದ ಗಂಗಮ್ಮ ಸೊಸೆಯನ್ನು ಕಂಡ ತಕ್ಷಣ ಉರಿದುಬಿದ್ದಳು: ‘ಆಯ್ತೇನೇ ಮಿಂಡನ ಕೈಲಿ ಚಕ್ಕಂದ? ನಿನ್ನ ಗಂಡ ಮನೆ ಬಿಟ್ಟು ಹೋಗಿ ಗುಡೀಲಿ ಕುಕ್ಕರು ಬಡ್‌ಕಂಡಿದಾನೆ ತಾನೇ?’
ನಂಜಮ್ಮನಿಗೆ ರೇಗಿದುದು ಮಾತ್ರವಲ್ಲ, ಧೈರ್ಯವೂ ಬಂತು. ತಿರುಗಿಬಿದ್ದಳು: ‘ಅಂಥ ಕೆಲ್ಸ ಮಾಡ್ತೀರಾ ಅಂತ ಕಾಣುತ್ತೆ. ಅದಕ್ಕೇ ಗರತಿ ಹೆಣ್ಣುಮಕ್ಳನ್ನೆಲ್ಲ ಹಾಗಂತೀರಾ. ನಿಮ್ಮ ನಾಲಿಗೇಲಿ ಹುಳ ಬೀಳ. ಸ್ವಲ್ಪ ಬಾಯಿ ಮುಚ್ಕತ್ತೀರೋ ಇಲ್ವೋ ಹೇಳಿ.’
‘ಹೊಲೆಮುಂಡೆ. ನನ್ನ ನನ್ನೇ ಅನ್ನೂಹಾಗಾದ್ಯಾ? ನನ್ ಮಗುಂಗೆ ಹೇಳಿ ನಿನ್ನ ತಾಳಿ ಕಿತ್ಹಾಕುಸ್ದೆ ಇದ್ರೆ ನಾನು ಜಾವಗಲ್ ಹೆಣ್ಣೇ ಅಲ್ಲ ಕಣೇ’-ಎಂದು ಅಬ್ಬರಿಸುತ್ತಲೇ ಗಂಗಮ್ಮ ಗುಡಿಗೆ ಹೋಗಿ ಮಗನ ಮುಂದೆ ನಿಂತು ಗುಡುಗಿದಳು: ‘ನೀನು ಅಪ್ಪಂಗೆ ಹುಟ್ಟಿದ್ ಸೂಳೇಮಗನಾದ್ರೆ ಬಂದು ನಿನ್ನ ಹೆಂಡ್ತಿ ದವಡೆ ಹಲ್ಲು ಉದುರ್ಸಿ, ಅವಳ ತಾಳಿ ಕಿತ್ ಹಾಕೊ. ನನ್ನ ಬಾಯಿಗೆ ಹುಳ ಬೀಳ ಅಂದ್ಲಲಾ ಆ ಹಾದರಗಿತ್ತಿ.’

ಏಕತಾರಿ ಮಿಡಿದುಕೊಂಡು, ‘ಎಚ್ಚರವಾಗೋ ತಮ್ಮಾ! ಹಾವು ಕಚ್ಚುವ ಮೊದಲು……’ ಎಂದು ಹಾಡುತ್ತಿದ್ದ ಮಾದೇವಯ್ಯನವರು ಗಕ್ಕನೆ ನಿಲ್ಲಿಸಿ ನೋಡುತ್ತಾ ಕೂತರು. ‘ನೀನು ಅಪ್ಪುಂಗೆ ಹುಟ್ಟಿದೋನೋ ಅಲ್ವೋ ಹೇಳಿಬಿಡೋ. ಅಪ್ಪುಂಗ್ ಹುಟ್ಟಿದೋನೇ ಆದ್ರೆ ನೀನು ಬಂದು ಅವಳ ತಾಳಿ ಕೀಳ್ತೀಯಾ ನೋಡು’-ಎಂದು ಇನ್ನೊಂದು ಸಲ ಸವಾಲು ಹಾಕಿದಾಗ ತಮ್ಮ ಹುಟ್ಟಿನ ಪಾವಿತ್ರ್ಯವನ್ನು ತಾಯಿಗೆ ಸಾಧಿಸಿ ಹೇಳುವ ಬಗೆ ತಿಳಿಯದೆ ಎರಡು ನಿಮಿಷ ಒದ್ದಾಡುತ್ತಿದ್ದು ಚೆನ್ನಿಗರಾಯರು ಕೊನೆಗೆ ಧೈರ್ಯ ಮಾಡಿ ಮೇಲೆ ಎದ್ದರು. ಹತ್ತಿರದಲ್ಲಿಯೇ ಕುಳಿತಿದ್ದ ಮಾದೇವಯ್ಯನವರು ಅವರ ಕೈ ಹಿಡಿದು ಎಳೆದು ಕೂರಿಸಿ ಹೇಳಿದರು: ‘ಶ್ಯಾನುಭೋಗ್ರೇ, ಇಷ್ಟೊಂತಂಕ ಭಜನೆ ಕೇಳಿದ್ರಿ, ಎಲ್ಲಿಗ್ ಹೋಯ್ತು ಬುದ್ದಿ?’

ಮತ್ತೆ ಏನೂ ತಿಳಿಯದೆ ಶ್ಯಾನುಭೋಗರು-‘ಹೋಕ್ಕಳ್ಳಿ, ಹಾಡೇಳ್ರಿ ಕೇಳಾಣ’ ಎಂದರು. ಅಯ್ಯನವರು ಏಕತಾರಿ ಮಿಡಿಯುತ್ತಾ ಅದೇ ಭಜನೆಯನ್ನು ಶುರು ಮಾಡುತ್ತಲೇ ಗಂಗಮ್ಮ, ‘ಸನ್ಯಾಸಿ ಸೂಳೇಮಗನ ಮಾತು ಕೇಳ್ತಾನೆ, ಈ ಪಾಪರ್ ಮುಂಡೇಗಂಡ. ಹೆತ್ತೋಳ್ ಮರ್ಯಾದೆ ಮ್ಯಾಲೆ ನಿಗಾ ಇಲ್ಲ’ ಎಂದುಕೊಂಡು ಮತ್ತೆ ರೇವಣ್ಣಶೆಟ್ಟಿಯ ಮನೆಗೆ ಹೋದಳು.
ಇತ್ತ ಶ್ಯಾಮಭಟ್ಟರು ನಂಜಮ್ಮನಿಗೆ-‘ಅಮ್ಮಾ, ಇಲ್ಲಿಗೆ ನಾನು ಬಂದು ಏನೂ ಪ್ರಯೋಜನವಾಗಲಿಲ್ಲ. ನಾನ್ ಹೊರಡ್‌ತೀನಿ. ನಂಗೂ ಹದಿನೆಂಟು ಊರ ಪೌರೋಹಿತ್ಯವಿದೆ. ಮಗಳನ್ನೂ ಮೊಮ್ಮಗಳನ್ನೂ ಸಾಕ್ತೀನಿ’ ಎಂದು ಹೇಳಿ ತಮ್ಮ ಗಂಟು ಮತ್ತು ಕೊಡೆಗಳನ್ನು ಕೈಗೆ ಎತ್ತಿಕೊಂಡರು. ಮತ್ತೆ ಏನು ಹೇಳುವುದಕ್ಕೂ ತಿಳಿಯದೆ ಅವಳು. ‘ಹ್ಯಾಗಾದ್ರೆ ಹಾಗಾಗ್ಲಿ, ಸಾತೂನ ಕಳಿಸಿ’ ಎಂದುದಕ್ಕೆ-‘ಯಾಕ್ ಕಳುಸ್ಬೇಕು? ನಿಂಗೇ ಎಲ್ಲಾ ಗೊತ್ತಿಲ್ವೆ?’ ಎಂದರು.

ಅವಳು ಮತ್ತೆ ಮಾತನಾಡಲಿಲ್ಲ. ಹೊರಟು ನಿಂತವರಿಗೆ ನಮಸ್ಕಾರ ಮಾಡಿದಳು. ‘ದೀರ್ಗ ಸುಮಂಗಲೀ ಭವ. ಸಕಲ ಸನ್ಮಂಗಳಾನಿ ಭವಂತು’-ಎಂದು ಹೇಳಿ ಅವರು ಹೊರಟರು. ಬಾಗಿಲಿನ ಹತ್ತಿರಕ್ಕೆ ಬಂದು ನಂಜಮ್ಮ ಹೇಳಿದಳು: ‘ತಿಪಟೂರಿನ ಕಡೆಗೇ ತಿಮ್ಲಾಪುರ ಅಂತ ಇದೆ. ಆ ಊರ್ನಲ್ಲಿ ಶ್ಯಾನುಭೋಗ್ ದ್ಯಾವರಸಯ್ಯನೋರು ಅಂತ ಇದಾರೆ. ಅವರ ಮನೆಗೆ ಹೋಗಿ ರಾತ್ರಿ ಇದ್ದು ಬೆಳಿಗ್ಗೆ ಹೋಗಿ. ಕತ್ತಲಾದ ಮ್ಯಾಲೆ ತಿಪಟೂರು ತಂಕ ನಡೀಬ್ಯಾಡಿ. ಬುಕ್ಕನ ತಿಟ್ಟಿನಲ್ಲಿ ಕಳ್ಳರಿರ್ತಾರೆ. ಒಂದೊಂದು ಎರಡೆರಡು ಗಾಡಿ ಜನ ಹೋಗ್ತಿದ್ರೂ ಚಚ್ಚಿಹಾಕಿ ಇದ್ದುದ್ದೆಲ್ಲ ಕಿತ್ಕಂಡ್‌ಹೋಗ್ತಾರೆ.’

ಅಧ್ಯಾಯ ೭
– ೧ –

ಗಂಡುಮಗು ರಾಮಣ್ಣನಿಗೆ ಒಂದು ವರ್ಷ ತುಂಬಿ ಆರು ತಿಂಗಳಾಗಿತ್ತು. ನಂಜಮ್ಮ ಮತ್ತೆ ಬಸುರಿಯಾಗಿದ್ದಳು. ಕೋರ್ಟಿನ ವ್ಯವಹಾರದಲ್ಲಿ ಜಮೀನೆಲ್ಲವೂ ಹೋಗುತ್ತದೆಂದು ಅವಳ ಅಂತರಂಗವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿತ್ತು. ‘ನಮ್ಮದೇ ಈ ಗೋಳು, ಇನ್ನು ಯಾಕಪ್ಪಾ ಮತ್ತೆ ಮಕ್ಕಳು?’ ಎಂದು ಹಲವು ಸಲ ಬೇಸರಪಟ್ಟುಕೊಳ್ಳುವಳು. ಆದರೆ ಮದುವೆಯಾಗಿ ಇಷ್ಟು ದಿನವಾದರೂ ತೌರಿನಲ್ಲಿ ಅಣ್ಣನಿಗೆ ಮಕ್ಕಳೆ ಆಗಿಲ್ಲ; ದೇವರು ಹಣೆಯಲ್ಲಿ ಬರೆದಿಲ್ಲ ಎಂಬ ನೆನಪಾಗಿ-‘ನಮಗೆ ದೇವರು ಕೊಡುವಾಗ ಬ್ಯಾಡ ಅನ್‌ಬಾರ್‌ದು’ ಎಂದು ಸಮಾಧಾನ ತಂದುಕೊಳ್ಳುವಳು.

ಇದೇ ಸಮಯದಲ್ಲಿ ಊರಿನಲ್ಲಿ ಎರಡು ಘಟನೆಗಳು ನಡೆದುವು. ಮೊದಲನೆಯದು ಊರಿಗೆ ಪ್ಲೇಗು ಬಂದದ್ದು. ಅದು ಆ ಸುತ್ತಿಗೆ ಹೊಸದೇನಲ್ಲ. ಎರಡು ಮೂರು ವರ್ಷಕ್ಕೆ ಒಂದು ಸಲ ಊರು ಬಿಟ್ಟು ಹೊರಗೆ ಶೆಡ್ಡಿನಲ್ಲಿ ವಾಸ ಮಾಡುವುದು ಜನರಿಗೆ ಅಭ್ಯಾಸವಾಗಿಹೋಗಿತ್ತು. ಎರಡನೆಯ ಅಪೂರ್ವ ಸಂಗತಿ ಎಂದರೆ ಆ ಊರಿಗೆ ಕಾಶಿಂಬಡ್ಡಿ ಸಾಹುಕಾರರು ಎಂಬ ಒಬ್ಬ ಲೇವಾದೇವಿಯವರು ಬಂದು ವ್ಯವಹಾರ ಪ್ರಾರಂಭಿಸಿದ್ದರು. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಮೊದಲಾದ ಸಾಮಾನಿನ ಅಡವಿನ ಮೇಲೆ ಸಾಲ ಕೊಟ್ಟು ಒಂದು ರೂಪಾಯಿಗೆ ಒಂದು ದಿನಕ್ಕೆ ಒಂದು ಕಾಸಿನಂತೆ ಬಡ್ಡಿ ತೆಗೆದುಕೊಳ್ಳುತ್ತಿದ್ದ ಅವರು ಮಲಬಾರ್ ಸೀಮೆಯ ಮಾಪಿಳ್ಳೆ ಮುಸಲ್ಮಾನರು. ಲಂಬಾಣಿಯವರ ಲಂಗದಂತೆ ಪಟ್ಟಿಪಟ್ಟಿಯ ಲುಂಗಿ ಕಟ್ಟಿ ತಲೆಗೆ ಕುಚ್ಚಿನ ಟೋಪಿ ಇಡುತ್ತಿದ್ದರು. ವಯಸ್ಸು ಐವತ್ತರ ಸುಮಾರು. ‘ಒಂದ್ ಕಾಸು ಅಂದ್ರೆ ಯಾವ ಗೋಪಾಳುದ್ದು? ಹರ್‌ಕತ್ತಿಗೆ ದುಡ್ಡು ಕೊಡಾಕುಲ್ವಾ?’-ಎಂದು ಶಿವೇಗೌಡನೇ ಹೇಳಿ ಅವರ ಲೇವಾದೇವಿಯ ಔದಾರ್ಯವನ್ನು ಜನಗಳಿಗೆ ವಿವರಿಸಿದ್ದ. ಪರಸ್ಥಳದವರಾದ ಅವರಿಗೆ ಅವನೇ ಇರಲು ಸ್ಥಳ ಕೊಟ್ಟಿದ್ದ. ಶಿವೇಗೌಡನದು ಊರಿನಲ್ಲಿ ಒಟ್ಟು ಮೂರು ಮನೆಗಳಿದ್ದುವು. ಬೀದಿಯ ಪಕ್ಕದಲ್ಲಿದ್ದ ಒಂದು ಪುಟ್ಟ ಮನೆಯಲ್ಲಿ ಒಂದು ದೊಡ್ದ ಕಬ್ಬಿಣದ ಪೆಟ್ಟಿಗೆ ತಂದಿಟ್ಟುಕೊಂಡು ಅವರು ವ್ಯವಹಾರ ಪ್ರಾರಂಭಿಸಿದರು. ಆ ಮನೆಗೆ ವರ್ಷಕ್ಕೆ ಹದಿನೆಂಟು ರೂಪಾಯಿ ಬಾಡಿಗೆ ಕೊಡುತ್ತಿದ್ದರಂತೆ. ಶಿವೇಗೌಡನಿಗೂ ಅವರ ವ್ಯವಹಾರಕ್ಕೂ ಯಾವ ಸಂಬಂಧವೂ ಇಲ್ಲ; ಹಾಗೆಂದು ಅವನೇ ಸ್ಪಷ್ಟವಾಗಿ ಎಲ್ಲರೊಡನೆಯೂ ಹೇಳಿದ.

ಕಾಶಿಂಬಡ್ಡಿ ಸಾಹುಕಾರರು ಊರಿಗೆ ಬಂದ ಒಂದೆರಡು ತಿಂಗಳಲ್ಲಿಯೇ ಹೆಚ್ಚುಕಡಿಮೆ ಊರಿನವರೆಲ್ಲ ಅವರ ಹತ್ತಿರ ಸಾಲ ತರಲು ಶುರು ಮಾಡಿದರು. ಶಿವೇಗೌಡನೂ ಸಮಯವೆಂದರೆ ಅವರ ಹತ್ತಿರವೇ ಬಡ್ಡಿ ಕೊತ್ತು ಸಾಲ ತೆಗೆದುಕೊಳ್ಳುತ್ತಿದ್ದನಂತೆ. ಲೆಕ್ಕಾಚಾರ ಕರಾರುವಾಕ್ಕು; ಸುಳ್ಳಿಲ್ಲ, ಮೋಸವಿಲ್ಲ. ಬಡ್ಡಿಯ ಲೆಕ್ಕಹಾಕುವುದೂ ಕಷ್ಟವಲ್ಲ. ಒಂದು ದಿನಕ್ಕೆ ಒಂದು ರೂಪಾಯಿಗೆ ಒಂದು ಕಾಸು ತಾನೇ. ಹೀಗಾಗಿ ಅವರು ಊರಿಗೆಲ್ಲ ಬೇಕಾದವರಾಗಿದ್ದರು. ಪ್ಲೇಗು ಬಂದು ಊರು ಬಿಡುವಾಗ ಕಾಶಿಂಬಡ್ಡಿಯವರೂ ಶಿವೇಗೌಡನ ತೋಟದಲ್ಲಿ ಅವನ ಶೆಡ್ಡಿನ ಹತ್ತಿರವೇ ಶೆಡ್ಡು ಹಾಕಿಸಿಕೊಂಡರು. ಲೇವಾದೇವಿಯ ಕಬ್ಬಿಣದ ಪೆಟ್ಟಿಗೆಯೂ ಅಲ್ಲಿಯೇ ವಿರಾಜಮಾನವಾಯಿತು.

ಗಂಗಮ್ಮನ ಕುಟುಂಬವು ಎಂದಿನಂತೆ ಊರ ಮುಂದಿನ ತಮ್ಮ ತೋಟದಲ್ಲಿ ಶೆಡ್ಡು ಹಾಕಿತು. ನಂಜಮ್ಮನಿಗೆ ಆಗ ಇನ್ನೂ ಮೂರು ತಿಂಗಳು. ನಡುನಡುವೆ ವಾಂತಿಯಾಗುತ್ತಿದ್ದರೂ ಮನೆಯ ಸಾಮಾನುಗಳೆಲ್ಲ ಕಟ್ಟಿ ಅಲ್ಲಿಗೆ ಸಾಗಿಸಿ ವ್ಯವಸ್ಥೆ ಮಾಡುವತನಕ ಎಲ್ಲ ಕೆಲಸವೂ ಅವಳ ಮೇಲೆಯೇ ಬಿತ್ತು. ಮಾದೇವಯ್ಯನವರೂ ಊರಿನ ಗುಡಿಯನ್ನು ಬಿಡಬೇಕು. ಚೋಳೇಶ್ವರನ ಗುಡಿಯ ಮೂಲ ಲಿಂಗವಿರುವುದು ಕೆರೆಯ ಏರಿಯ ಮೇಲೆ. ಏರಿಯ ಮೇಲಿನ ಗುಡಿ ಕಲ್ಲಿನಕಟ್ಟಡ. ಜಕಣಾಚಾರಿ ಕಟ್ಟಿದ್ದೆಂದು ಎಲ್ಲರೂ ಹೇಳುತ್ತಾರೆ. ಅಲ್ಲಿ ಹಾವುಗಳು ಹೆಚ್ಚೆಂದು ಎಲ್ಲರೂ ಬಲ್ಲರು. ಹಾವೆಂದರೆ ಏನು, ಶಿವನ ಕಂಠಾಭರಣವಲ್ಲವೆ? ಅದು ನನಗೇನು ಮಾಡೀತು?-ಎಂದು ಅಯ್ಯನವರು ತಮ್ಮ ಏಕತಾರಿ, ದಮಡಿ, ಭಿಕ್ಷದ ಜೋಳಿಗೆ, ಕಾಲಿನ ಆವುಗೆ, ಇದ್ದ ದಿನಸಿ ಧಾನ್ಯ ಮೊದಲಾದುವನ್ನು ತೆಗೆದುಕೊಂಡು ಅಲ್ಲಿಗೇ ಹೋದರು. ಗಂಗಮ್ಮನ ಶೆಡ್ಡಿಗೂ ಏರಿಯ ಮೇಲಿನ ಗುಡಿಗೂ ಸ್ವಲ್ಪ ದೂರವೇ. ಹೀಗಾಗಿ ಶ್ಯಾನುಭೋಗ ಚೆನ್ನಿಗರಾಯರು ಈಗ ಅಲ್ಲಿಗೆ ಹೋಗುವುದು ವಿರಳ. ಕಾಶಿಂಬಡ್ಡಿಯವರೂ ಹೊಗೆಸೊಪ್ಪು ಹಾಕುತ್ತಾರೆ. ಆದುದರಿಂದ ಚೆನ್ನಿಗರಾಯರು ಅವರ ಶೆಡ್ಡಿಗೆ ಹೋಗು ಕೂರುತ್ತಾರೆ. ಅಲ್ಲಿಗೆ ಒಮ್ಮೊಮ್ಮೆ ಶಿವೇಗೌಡನೂ ಬರುತ್ತಾನೆ. ಅವರಿಬ್ಬರೂ ಮಾತು ಬಿಟ್ಟಿಲ್ಲ. ಎಷ್ಟಾದರೂ ಶ್ಯಾನುಭೋಗ ಪಟೇಲರು ತಾನೆ? ಅಲ್ಲದೆ ಜಗಳ ನಡೆಯುತ್ತಿರುವುದು ಗಂಗಮ್ಮ, ಶಿವೇಗೌಡನಿಗೆ. ಆದರೆ ಮಗ ಅಲ್ಲಿಗೆ ಹೋಗುವುದನ್ನು ಕೇಳಿದಾಗ ಗಂಗಮ್ಮ ಅವನನ್ನು ಬಾಯಿಗೆ ಬಂದಂತೆ ಬಯ್ಯುತ್ತಾಳೆ.

ಊರು ಬಿಡುವ ಮೊದಲು ಪ್ಲೇಗು ಬಡಿದು ಸತ್ತ ಆರು ಜನ ದೊಡ್ಡವರು, ಇಬ್ಬರು ಮಕ್ಕಳನ್ನು ಬಿಟ್ಟರೆ ಗ್ರಾಮದಲ್ಲಿ ಈ ಸಲ ಹೆಚ್ಚು ಸಾವುಗಳಾಗಿಲ್ಲ. ಊರಿನವರೆಲ್ಲ ಮಾರೀ ಪೂಜೆ ಮಾಡಿಸಿದರು. ತಕ್ಷಣ ಊರ ಹೊರಗೆ ಬಂದರು. ಊರು ಬಿಟ್ಟರೂ, ರೋಗ ಮರಣಗಳಿಲ್ಲದ್ದರಿಂದ ಎಲ್ಲರಿಗೂ ಮನಸ್ಸಿನಲ್ಲಿ ಸಮಧಾನವಿದ್ದರೂ ವಿನಾಕಾರಣ ಊರ ಹೊರಗಿರಲು ಬೇಸರವಾಗುತ್ತಿತ್ತು. ಆದರೆ ಅದನ್ನು ಕಳೆಯುವ ಒಂದು ಮಾತು ಈಗ ಎಲ್ಲರ ನಾಲಿಗೆಗೂ ಸಿಕ್ಕಿತ್ತು.

ಗಂಗಮ್ಮ ಶಿವೇಗೌಡನ ವ್ಯಾಜ್ಯ ಕೋರ್ಟಿನಲ್ಲಿ ಮುಗಿಯುತ್ತ ಬಂದಿತ್ತಂತೆ. ಎರಡು ಕಡೆಯ ಲಾಯರೂ ಕೋರ್ಟಿನಲ್ಲಿ ಪಾಯಿಂಟ್ ಜಡಿದು ವಾದ ಮಾಡಿದರಂತೆ. ‘ನಮ್ ಕಡೆ ಲಾಯ್ರು ಆಕಿದ್ ಪಾಯಿಂಟಿಗೆ ಜಡ್ಜಿಗಳೇ ಅಳ್ಳಾಡಿಹೋಗ್ಬಿಟ್ರು’ -ರೇವಣ್ಣಶೆಟ್ಟಿ ಹೇಳಿದ ಮಾತು ಊರಿನಲ್ಲೆಲ್ಲ ಹರಡಿತು. ‘ನಂ ಲಾಯ್ರಿ ಪಾಯಿಂಟ್ ಮಾಡಿದ್ದುಕ್ಕೆ ಗಂಗಮ್ಮನ ಕಡೆಯೋನು ಅಲ್ಲೇ ಎಲ್ಡಾ ಮಾಡ್ಕ್ಯಂಬುಟ್ಟ’-ಎಂದು ಶಿವೇಗೌಡ ಪ್ರತಿಯಾಗಿ ಹೇಳಿದ. ಎರಡು ಕಡೆಯವರೂ ಹುರುಪಿನಿಂದ ತಿಪಟೂರಿಗೆ ಹೋಗಿಬರುತ್ತಿದ್ದರು. ಅಪ್ಪಣ್ಣಯ್ಯ ಎಲ್ಲರಿಗಿಂತ ಮುಂಚೆ ಗಾಡಿಯಿಂದ ಇಳಿದು ತಿಪಟೂರಿನ ಹೋಟೆಲಿಗೆ ಹೋಗುತ್ತಿದ್ದ. ಚೆನ್ನಿಗರಾಯರು ತಮ್ಮನಿಗಿಂತ ಎಂದೂ ಹಿಂದೆ ಬೀಳಲಿಲ್ಲ. ಶಿವೇಗೌಡ ರಾಗಿರೊಟ್ಟಿ ಹುಚ್ಚೆಳ್ಳುಪುರಿಗಳಲ್ಲೇ ಕೋರ್ಟು ಕೆಲಸ ಮಾಡಿಕೊಂಡು ಹಿಂತಿರುಗುತ್ತಿದ್ದ.

ಜಜ್‌ಮೆಂಟಿನ ದಿನ ಎರಡು ಕಡೆಯವರೂ ಗಾಡಿ ಹೂಡಿಕೊಂಡು ಹೋದರು. ಗಂಗಮ್ಮ ಎದೆಯ ಮೇಲೆ ಕೈ ಇಟ್ಟುಕೊಂಡು ಜಡ್ಜಿಗಳ ತೀರ್ಮಾನವನ್ನು ಕೇಳಿದಳು; ಶಿವೇಗೌಡನಿಂದ ಇವರು ಹಣ ಪಡೆದದ್ದು ಉಂಟು. ಅದಕ್ಕೆ ಬಡ್ದಿ, ಬಡ್ಡಿಯ ಬಡ್ಡಿ, ಅವನ ಕೋರ್ಟು ಖರ್ಚುಗಳು ಸೇರಿ ಐದೂವರೆ ಸಾವಿರ ರೂಪಾಯಿಗಳನ್ನು ಇವರು ಕೋರ್ಟಿಗೆ ಕಟ್ಟಬೇಕು. ಇಲ್ಲದಿದ್ದರೆ ಕೋರ್ಟಿನವರು ಜಮೀನೆಲ್ಲವನ್ನು ಹರಾಜು ಮಾಡಿ ಸಾಲಗಾರನ ಗಂಟು ತೀರಿಸುತ್ತಾರೆ. ‘ನಿನ್ ಹೆಂಡ್ರ ಬಳೆ ಕುಕ್ಕ, ಸೂಳೆಮಗನೆ’-ಎಂದು ಜಡ್ಜಿಗಳನ್ನು ಬೈಯಬೇಕೆಂದು ಗಂಗಮ್ಮನ ನಾಲಿಗೆಗೆ ಬಂದರೂ ಕೋರ್ಟಿನ ಬಾಗಿಲಿನಲ್ಲಿಯೇ ಇದ್ದ ಪೋಲೀಸಿನವರ ನೆನಪಾಗಿ ಅವಳು ಸುಮ್ಮನಾದಳು.
ಕೋರ್ಟಿನಿಂದ ಹೊರಗೆ ಬಂದಮೇಲೆ ಲಾಯರ್ ಮಹಾಂತಯ್ಯನವರು ಹೇಳಿದರು: ‘ತುಮಕೂರು ಕೋರ್ಟಿಗೆ ಅಪೀಲ್ ಹೋಗಬಹುದು. ದುಡ್ದು ಖರ್ಚಾಗುತ್ತೆ. ತಂದಿದೀರಾ?’
‘ಲಾಯ್ರು ಸ್ವಾಮಿಯೋರೆ, ನನ್ನ ಮನೇಲಿದ್ದ ಚಿನ್ನ ಬೆಳ್ಳಿ, ಪಾತ್ರೆ ಪಡಗವೆಲ್ಲ ಅಡೂ ಇಟ್ಟಿದೀನಿ. ಗಂಡ ಸತ್ತ ಮುಂಡೆ ನಾನೆಲ್ಲಿ ದುಡ್ದು ತರ್ಲಿ?’
ಅಷ್ಟರಲ್ಲಿ ಶಿವೇಗೌಡನ ಕಡೆಯ ಲಾಯರು ಅಲ್ಲಿಗೆ ಬಂದರು. ಈ ಇಬ್ಬರು ಲಾಯರೂ ಇಂಗ್ಲೀಷಿನಲ್ಲಿ ಏನೇನೋ ಮಾತನಾಡಿದ ಮೇಲೆ ಗಂಗಮ್ಮನ ಕಡೆಯವರು ಹೇಳಿದರು: ‘ನೋಡಿ ಅಮ್ಮಾ, ಶಿವೇಗೌಡನಿಂದ ನಿಮಗೆ ಇನ್ನೂ ಒಂದಿಷ್ಟು ಸಾಲ ಕೊಡಿಸ್ತಾರಂತೆ. ನಿನ್ನ ಸಾಲ ನೀನು ತೀರಿಸ್ಕ. ನಮ್ಮದೇನೂ ಇಲ್ಲ ಅಂತ ಜಮೀನೆಲ್ಲ ಅವನಿಗೇ ಬರೆದುಕೊಟ್ಟುಬಿಡ್ತೀರಾ? ನಿಮಗೂ ಕೊನೆಗೆ ಅನ್ಯಾಯವಾಗೂದು ಬೇಡ.’
‘ಜಮೀನ್ ಕಳ್‌ಕಂಡು ಹೊಟ್ಟೇಗೇನು ಮಾಡ್ಲಿ ಲಾಯ್ರು ಸ್ವಾಮಿಯೋರೇ?’-ಗಂಗಮ್ಮ ಕೇಳಿದಳು. ಬಾಯಲ್ಲಿ ಹೊಗೆಸೊಪ್ಪಿನ ರಸ ತುಂಬಿದ್ದುದರಿಂದ ಚೆನ್ನಿಗರಾಯರು ಸುಮ್ಮನಿದ್ದರು.
‘ಇಲ್ದೆ ಇದ್ರೆ ಮೇಲಿನ ಕೋರ್ಟಿಗೆ ಹೋಗಬೇಕು. ಅದುಕ್ಕೆ ಸಾವಿರಾರು ರೂಪಾಯಿ ಬೇಕು. ದುಡ್ಡು ಹೊಂದುಸ್ತೀನಿ ಅನ್ನೋ ಧೈರ್ಯವಿದ್ರೆ ಬೇರೆ ಮಾತು.’

ಇನ್ನು ಬೇರೆ ದಾರಿ ಕಾಣಲಿಲ್ಲ. ಶಿವೇಗೌಡನನ್ನು ಅಲ್ಲಿಗೇ ಕರೆಸಿದರು. ತಾನೇ ಇನ್ನೂ ಎರಡು ಸಾವಿರ ಕೊಡುವುದಾಗಿ ಅವನು ಒಪ್ಪಿಕೊಂಡ. ಕೋರ್ಟಿನ ಮೂಲಕ ಹರಾಜು ಮಾಡಿದರೆ ತನ್ನನ್ನು ಬಿಟ್ಟು ಆ ಜಮೀನನ್ನು ಕೂಗುವವರು ಊರಿನಲ್ಲಿ ಮತ್ತೆ ಯಾರಾದರೂ ಹುಟ್ಟಿಕೊಂಡಾರೆಂಬ ಭಯ ಅವನಿಗೆ. ಗಂಗಮ್ಮ ದಿಕ್ಕು ತೋಚದವಳಾಗಿದ್ದಳು. ಎರಡು ಸಾವಿರ ರೂಪಾಯಿಗಳನ್ನು ಅವನು ಅಲ್ಲಿಯೇ ಕೊಪ್ಪರಿ ಅಂಗಡಿಗೆ ಹೋಗಿ ತಂದು ಕೊಟ್ಟ. ಇಬ್ಬರು ಲಾಯರೂ ಸೇರಿ ಕಾಗದ ಬರೆದು ತೀರ್ಮಾನ ಮಾಡಿದರು. ಮಹಾಂತಯ್ಯನವರ ಕೊನೆಯ ಫೀಜು ನೂರು ರೂಪಾಯಿಗಳನ್ನು ಕೊಡಬೇಕಾಗಿತ್ತು. ಅದನ್ನು ರೇವಣ್ಣಶೆಟ್ಟಿ ಕೊಟ್ಟಿಲ್ಲವೆಂದು ಅವರು ಹೇಳಿದರು.

‘ನಿಮಗೆ ಅಂತ ಒಟ್ಟು ಎಂಟು ನೂರು ರೂಪಾಯಿ ಕೊಟ್ಟಿದೀನಿ ಸ್ವಾಮಿಯೋರೇ’-ಎಂದು ಗಂಗಮ್ಮ ಆಣೆ ಇಟ್ಟು ಹೇಳಿದಳು.
‘ಒಟ್ನಲ್ಲಿ ನನಗೆ ನೂರೈವತ್ತು ಮಾತ್ರ ಬಂದಿದೆ’-ಅವರೆಂದರು.

ಜಜ್‌ಮೆಂಟಿನ ದಿನ-‘ನೀವು ಗಾಡೀಲಿ ನಡೀರಿ, ನಾನು ಬ್ಯಳಿಗ್ಗೆ ಮೋಟರಿನಲ್ಲಿ ಬತ್ತೀನಿ’ ಎಂದು ಹೇಳಿದ್ದ ರೇವಣ್ಣಶೆಟ್ಟಿ ಬರಲಿಲ್ಲ. ಅಂತೂ ಇವರು ಲಾಯರಿಗೆ ನೂರು ರೂಪಾಯಿ ಕೊಟ್ಟರು. ಮರುದಿನ, ಮುಂದಿನ ಕಾಗದ ಪತ್ರಗಳನ್ನು ರಿಜಿಸ್ಟರ್ ಮಾಡಿಸಿದ ಮೇಲೆ ಗಾದಿ ಕಟ್ಟಿಸಿಕೊಂಡು ಊರಿಗೆ ಹೊರಟರು. ಸಾವಿರದ ಒಂಬೈನೂರಿ ರೂಪಾಯಿಯ ಗಂಟನ್ನು ಗಂಗಮ್ಮ ತಾನೇ ತೊಡೆಯ ಸಂದಿಯಲ್ಲಿ ಇಟ್ಟುಕೊಂಡು ಕಣ್ಣು ಮಿಟುಕಿಸದೆ ಗಾಡಿಯಲ್ಲಿ ಕೂತು ಊರಿಗೆ ಬಂದಳು.
ಊರಿಗೆ ಬಂದ ಮೇಲೆ ಅವಳು ಕೋರ್ಟಿನ ತೀರ್ಮಾನವನ್ನು ಯಾರ ಕೈಲೂ ಹೇಳಲಿಲ್ಲ. ಆದರೆ ಶಿವೇಗೌಡ ಹೇಳದೆ ಯಾಕೆ ಬಿಟ್ಟಾನು? ಸುದ್ದಿ ತಿಳಿಯುವುದೇ ತಡ, ಇವರು ಕೋರ್ಟಿನ ಖರ್ಚಿಗೆಂದು ಐವತ್ತು ನೂರರಂತೆ ಕಾಗದ ಬರೆದುಕೊಟ್ಟು ತಂದಿದ್ದ ಸಾಲಗಾರರೆಲ್ಲ ಶೆಡ್ಡಿಗೆ ನುಗ್ಗಿದರು. ಒಟ್ಟು ಎಂಟು ನೂರು ರೂಪಾಯಿ ಸಾಲಕ್ಕೆ ಹೋಯಿತು. ಉಳಿದದ್ದನ್ನು ಗಂಗಮ್ಮ ತನ್ನ ಹಾಸಿಗೆಯ ದಟ್ಟದ ಕೆಳಗೆ ಹಾಕಿಕೊಂಡು, ಅದರ ಮೇಲೆ ಎಚ್ಚರದಿಂದ ಮಲಗುತ್ತಿದ್ದಳು. ಒಂದು ದಿನ ರೇವಣ್ಣಶೆಟ್ಟಿಯ ಶೆಡ್ಡಿಗೆ ಹೋಗಿ ಕೇಳಿದಳು: ‘ರೇವಣ್ಣ, ನೀನು ಲಾಯರಿಗೆ ಪೂರ್ತಿ ದುಡ್ಡು ಕೊಟ್ಟೇ ಇಲ್ವಂತೆ. ನನ್ನತಾವ ನೂರು ರೂಪಾಯಿ ತಗಂಡ್ರು.’
‘ಯಾವನು ಏಳ್ದೋನು?’
‘ಲಾಯ್ರೇ ಹಾಗಂದ್ರು.”
‘ಮಿಂಡ್‌ರಿಗೆ ಉಟ್ಟಿದ ನನ್ಮಗನ್ನ ತಂದು. ನಡೀರಿ, ನನ್ನೆದ್ರಿಗ್ ಹಂಗಂದ್ರೆ ಯಕ್‌ಡ ತಗಂಡ್ ಹ್ವಡ್‌ದುಬಿಡ್ತೀನಿ ಕಳ್ಳ ನನ್ ಹೆಂಡ್ತಿಮಗುಂಗೆ’-ಎಂದು ರೇವಣ್ಣಶೆಟ್ಟಿ ಕೆಂಪು ಕಣ್ಣುಗಳನ್ನು ಹೊರಳಿಸಿದ. ಅದೇನೋ ಗಂಗಮ್ಮನಿಗೆ ಮುಂದೆ ಮಾತು ಬೆಳೆಸುವ ಇಚ್ಛೆಯಾಗಲಿಲ್ಲ. ಭಯವೋ ಬೇಸರವೋ, ಅಥವಾ ರೇವಣ್ಣಶೆಟ್ಟಿಯ ಸತ್ಯಸಂಧತೆಯ ಬಗೆಗೆ ನಂಬಿಕೆಯೋ, ಸುಮ್ಮನಾದಳು.
‘ರೇವಣ್ಣಾ, ಗೆಲ್ಲಿಸ್ಕೊಡ್ತೀನಿ ಅಂದಿದ್ರಲಾ ಲಾಯ್ರು, ಅದ್ಯಾಕ್ ಸೋತ್ ಹೋಯ್ತು?’
‘ಜಡ್ಜಿಗಳಿಗೆ ಲಂಚ ತಿನ್ಸಿದ್ರಂತೆ ಕಣ್ರಿ, ಕಂಡೋನ ಹೆಂಡ್ತಿ ಹೇಲ. ಶಿವೇಗೌಡ ಅವ್ರಿಗೇ ಎಲ್ಡು ಸಾವಿರ ರೂಪಾಯಿ ಕೊಟ್ನಂತೆ ಹಿಂದಿನ ದಿನ. ಅದುಕ್ಕೆ ಅವ್ನು ಗಾಡಿ ಕಟ್ಕಂಡು ಒಂದಿನ ಮದ್ಲೇ ಹೋಗಿರ್ಲಿಲ್ವಾ? ನಂಗ್ ಗೊತ್ತಾಯ್ತು. ನಮ್‌ತಾವ ಎಲ್ಡು ಸಾವಿರ ಇದ್ದಿದ್ರೆ ನಾವು ಕೊಡಬೈದಾಗಿತ್ತು. ನಿಮ್‌ತಾವ ಇಲ್ಲ ಅಂತ ನಂಗ್ ಗೊತ್ತಿತ್ತು. ಅದ್ಕೇ ನಾನು ಜಡ್ಜ್‌ಮಿಂಟಿನ ದಿನ ಬರ್ಲಿಲ್ಲ.’
ಗಂಗಮ್ಮ ಸುಮ್ಮನೆ ತನ್ನ ಶೆಡ್ಡಿಗೆ ಹೋದಳು.

– ೨ –

ಎಷ್ಟೋ ಜನರು ಗಂಗಮ್ಮನ ಶೆಡ್ಡಿಗೆ ಹೋಗಿ ಶಿವೇಗೌಡನನ್ನೂ ಕೋರ್ಟಿನ ಜಡ್ಜಿಗಳನ್ನು ಬೈದು ಅವಳಿಗೆ ಅನುತಾಪ ವ್ಯಕ್ತಪಡಿಸಿದರು. ಒಂದು ದಿನ ಬೆಳಿಗ್ಗೆ ಅಯ್ಯಾಶಾಸ್ತ್ರಿಗಳು ಶಿವೇಗೌಡನನ್ನು ಬೈದು, ‘ಗಂಗಮ್ಮಾ, ನಮ್ಮನೆಯೋಳು ನಿನ್ನ ಕೈಲೆ ಮಾತಾಡಬೇಕು ಅಂತಿದ್ಲು ಬಾ, ಬರೂವಂತೆ’-ಎಂದು ತಮ್ಮ ಶೆಡ್ಡಿಗೆ ಕರೆದುಕೊಂಡು ಹೋದರು. ಶಾಸ್ತ್ರಿಗಳ ಹೆಂಡತಿಯೂ ಸೇರಿ ಮತ್ತೆ ಶಿವೇಗೌಡನನ್ನು ಶಪಿಸಿದರು. ಆ ಜಡ್ಜಿಯ ಹೆಂಡತಿ ಮಕ್ಕಳೆಲ್ಲ ಸಾಯುವುದು ಖಂಡಿತವೆಂದು ಶಾಸ್ತ್ರಿಗಳು ಪಂಚಾಂಗ ನೋಡಿ ಭವಿಷ್ಯ ನುಡಿದರು.

‘ಗಂಗಕ್ಕಾ, ನೀನಿಲ್ಲೇ ಮಡಿ ಉಟ್ಕಂಡು ಮಕುಟ ಸುತ್ತಿಕಂಡ್ ಊಟ ಮಾಡು. ನಿಂಗ್ಯಾರು ಅಯ್ಯೋ ಅನ್ನೋರು ಪಾಪ!’-ಎಂದು ಶಾಸ್ತ್ರಿಗಳ ಹೆಂಡತಿ ಸುಬ್ಬಮ್ಮ ಬಲವಂತ ಮಾಡಿದಾಗ ಗಂಗಮ್ಮ ತನ್ನ ಸೊಸೆಯನ್ನು ಮನಃಪೂರ್ವ ಬಯ್ಯಲು ಪ್ರಾರಂಭಿಸಿದಳು: ‘ತಾಟಗಿತ್ತಿ ಮುಂಡೆ ನಮ್ಮನೆಗೆ ಕಾಲಿಟ್ಳು ನೋಡು. ಕಷ್ಟ ಬರೂಕ್ ಶುರುವಾಯ್ತು. ಈಗ ಜಮೀನೆಲ್ಲ ಹೋಯ್ತು. ಹುಟ್ತಾ ಹುಟ್ತಾ ಮಕ್ಕಳ ಪುಣ್ಯ, ಬತ್ತಾ ಬತ್ತಾ ಸ್ವಸೆ ಪುಣ್ಯ ಅನ್ನೂ ಮಾತು ಸುಳ್ಳೆ?’
ಅವಳು ಸ್ನಾನ ಮಾಡಿ ಮಕುಟ ಸುತ್ತಿ ವಿಭೂತಿ ಇಟ್ಟು ಮೂರು ಆಚಮನ ಹೊತ್ತಿಗೆ ಶಾಸ್ತ್ರಿಗಳು ಅವಳ ಶೆಡ್ದಿಗೆ ಹೋಗಿ ಅಪ್ಪಣ್ಣಯ್ಯನನ್ನು ಕರೆದುಕೊಂಡು ಬಂದರು. ಶಾಸ್ತ್ರಿಗಳ ದೊಡ್ದಪ್ಪನ ಮೊಮ್ಮಗ ಅಣ್ಣಾಜೋಯಿಸ ಅಷ್ಟು ಹೊತ್ತಿಗೆ ಬಂದ. ಇವರಿಬ್ಬರಿಗೂ ಸೇರಿಸಿಯೇ ಸುಬ್ಬಮ್ಮ ಅಡಿಗೆ ಮಾಡಿದ್ದಳು. ಬೂದುಗುಂಬಳಕಾಯಿಯ ಮಜ್ಜಿಗೆ ಹುಳಿ, ಹಿಟ್ಟು, ಅನ್ನ ಮಜ್ಜಿಗೆಗಳನ್ನು ಅಡಿಕೆ ಪಟ್ಟಿಯಲ್ಲಿ ಬಡಿಸಿ, ಅವಳು ಉಪಚರಿಸುತ್ತಿರುವಾಗ ಅಯ್ಯಾಶಾಸ್ತ್ರಿಗಳು ಮಾತು ತೆಗೆದರು: ‘ರಾಮಣ್ಣೋರು ಇರಬೇಕಾಗಿತ್ತು. ಅದರ ಕತೆ ಬ್ಯಾರೆಯೇ ಇತ್ತು. ನಾನು ಇವಳ ಕೈಲಿ ಎಷ್ಟು ಹೇಳ್ಕಂಡು ಪೇಚಾಡ್ತಿರ್ತೀನಿ ಕೇಳು. ಅವರು ಹೋದದ್ದು ನಮ್ಮೂರ ಕಲಶ ಬಿದ್‌ಹೋದಾಗೆ ಆಯ್ತು.’
‘ಇಂಥ ಸ್ವಸೆಮುಂಡೇರು ಬತ್ತಾರೆ ಅಂತ ನನ್ನ ಹಣೇಲಿ ಬರ್‌ದಿರೂವಾಗ ಅವರು ಹ್ಯಾಗೆ ಇರ್ತಾರೆ ಹೇಳಿ.’
ಸುಬ್ಬಮ್ಮ ಕೇಳಿದಳು: ‘ಗಂಗಕ್ಕಾ, ನಿಂಗೆ ಮುಟ್ಟು ನಿಂತು ಎರಡು ವರ್ಷ ಆಯ್ತಲ್ವೆ?’
‘ಮೂರು ವರ್ಷವಾಯ್ತು.’
ಶಾಸ್ತ್ರಿಗಳು ಎಂದರು: ‘ನೋಡ್ದ್ಯಾ, ನೀನೂ ಬಾಳಿದೆ ಬದುಕಿದೆ. ನೀನು ಮಾಡ್ದೆ ಇದ್ದ ವ್ರತ ಕತೆ ದಾನ ಧರ್ಮ ಯಾವುದೂ ಇಲ್ಲ. ಮುಟ್ಟು ನಿಂತಮ್ಯಾಲೆ ಹೆಂಗಸರು ಋಷಿ ಪಂಚಮಿ ವ್ರತ ಒಂದು ಮಾಡಿ ಮುಗಿಸಬೇಕು. ನಿನ್ನ ಕಷ್ಟ ಎಲ್ಲ ಬಿಡುಗಡೆಯಾಗುತ್ತೆ.’
ಅಣ್ಣಾಜೋಯಿಸ, ಚಿಕ್ಕಪ್ಪನಿಗಿಂತ ಶಾಸ್ತ್ರ ಮಂತ್ರಗಳನ್ನು ಹೆಚ್ಚು ಕಲಿತವನು. ಶಿಂಧ ಘಟ್ಟದ ಸೂರಣ್ಣಜೋಯಿಸರ ಹತ್ತಿರ ಪಾಠ ಹೇಳಿಸಿಕೊಂಡವನು. ಋಷಿಪಂಚಮಿ ವ್ರತದ ಮಹಿಮೆಯನ್ನು ಮಂತ್ರ ಸಮೇತ ಹೇಳಿದ.
‘ಹ್ಯಾಗಾದ್ರೆ ಹಾಗಾಗ್ಲಿ, ನೀನು ಅದೊಂದು ಮಾಡಿಬಿಡು. ಇಲ್ಲೇ ಶೆಡ್ಡಿನಲ್ಲಿದ್ದರೂ ಪರವಾಗಿಲ್ಲ. ನಿಂಗೆ ಬೇಕಾದ ಸಹಾಯ ನಾನು ಮಾಡ್ತೀನಿ. ಅಣ್ಣಪ್ಪನ ಹೆಂಡ್ತಿ ಯಂಕಟಲಕ್ಷ್ಮಿ ಇದಾಳೆ. ಅದುಕ್ಕೇ ಬ್ಯಾರೆ ಒಂದು ಚಪ್ಪರ ಹಾಕಿಸ್‌ಬಿಟ್ರೆ ಆಗುತ್ತೆ. ನಮ್ಮ ಶೆಡ್ಡಿನ ಮುಂದೆ ದೊಡ್ಡಾದಾಗಿ ಹಾಕ್ಸಾಣ. ನಿಮ್ಮ ಶೆಡ್ಡಿನ ಹತ್ರ ಇತರೇ ಜನಗಳ ಕಾಟ. ಮಡಿ ಮೈಲಿಗೆ ಸರಿಯಾಗುಲ್ಲ’-ಸುಬ್ಬಮ್ಮ ಎಂದಳು.
‘ಮಾಡಣೇನೋ ಅಪ್ಪಣ್ಣಯ್ಯ?’-ಹಿಟ್ಟು ನುಂಗುವುದನ್ನು ಮುಗಿಸಿ ಮಜ್ಜಿಗೆ ಹುಳಿಯಲ್ಲಿ ಅನ್ನ ಕಲಸುತ್ತಿದ್ದ ಮಗನನ್ನು ಕೇಳಿದಳು. ಚನ್ನೇನಹಳ್ಳಿಯ ವೆಂಕಟಾಚಲಯ್ಯನವರ ತಾಯಿ ಋಷಿಪಂಚಮಿ ಮಾಡಿದ್ದಾಗ ಊಟಕ್ಕೆ ಅಪ್ಪಣ್ಣಯ್ಯನೂ ಹೋಗಿದ್ದ. ಒಬ್ಬಟ್ಟು, ಮಾವಿನಕಾಯಿ ಅನ್ನ, ಮೊದಲಾಗಿ ಮೂಗು ನಾಲಿಗೆಗಳೆರಡರಲ್ಲೂ ನೀರು ಬರುವ ಹಾಗೆ ಅಡಿಗೆ ಮಾಡಿಸಿದ್ದರು. ಅವನಿಗೆ ತಕ್ಷಣ ಅದರ ನೆನಪಾಗಿ, ಮುಂದಿದ್ದ ಮಜ್ಜಿಗೆಯ ಹುಳಿ ರಾಗಿ ಮುದ್ದೆಗಳ ಜಾಗದಲ್ಲಿ ಮಾವಿನಕಾಯಿಯ ಅನ್ನ ಮತ್ತು ಒಬ್ಬಟ್ಟಿನ ತೆಕ್ಕೆಗಳು ಕಾಣಿಸಿದುವು.
‘ಮಾಡಾಣ ಕಣಮ್ಮ. ಆ ಯಂಕ್ಟಾಚಲಯ್ಯ್ನೋರಿಗಿಂತ ನಾವೇನು ಕಮ್ಮಿ?’
ಸರಿ, ವ್ರತ ನಿಶ್ಚಯವಾಯಿತು. ಸುಬ್ಬಮ್ಮ ಎಂದರು: ‘ಗಂಗಕ್ಕ ಅಂದ್ರೆ ಏನು ಅಂತೀರಾ? ಆಡಿದ್ದೊಂದೇ ಮಾತು. ಬ್ರಹ್ಮದೇವರ ಅಪ್ಪಾ ಬಂದ್ರೂ ಅವಳು ಆಡಿದ ಮಾತು ಬ್ಯಾರೆ ಮಾಡುಲ್ಲ.’

ಗಂಗಮ್ಮ ಮಾತು ಬದಲಿಸಲಿಲ್ಲ. ಬದಲಿಸಿದರೆ ಅವಳ ಹೆಸರೇನಾಗಬೇಕು? ಅಣ್ಣಾಜೋಯಿಸ ಊಟವಾದ ಮೇಲೆ ಕೂತು ಪಂಚಾಂಗ ನೋಡಿ, ಎರಡೂ ಕೈ ಬೆರಳುಗಳ ಗೆರೆಗಳ ಸಹಾಯದಿಂದ ಎಣಿಸಿ ದಿನ ನಿಶ್ಚಯಿಸಿದ. ಚೆನ್ನೇನಹಳ್ಳಿಯ ವೆಂಕಟಾಚಲಯ್ಯ ತನ್ನ ತಾಯಿಗೆ ಮಾಡಿಸಿದಂತೆ ಗೋಪಾಳದ ಋಷಿಪಂಚಮಿ ಮಾಡುವುದು ಗಂಗಮ್ಮನ ಘನತೆಗೆ ಸಲ್ಲುವುದಿಲ್ಲ. ದೊಡ್ಡದಾಗಿಯೇ ಸಾಮಾನುಗಳನ್ನು ತರಬೇಕು. ಅಯ್ಯಾಶಾಸ್ತ್ರಿಗಳ ಮನೆಯ ರಾಗಿಕರುಕಿನ ಶಾಯಿ ಮತ್ತು ಸ್ಟೀಲುಗಳಿಂದ ಸಾಮಾನುಗಳ ಪಟ್ಟಿ ಮಾಡಿಸಿದರು. ಊರಿನಲ್ಲಿರುವ ಇಬ್ಬರು ಪುರೋಹಿತರಿಗೂ ರೇಷ್ಮೆಯ ಮಗುಟ, ಮೇಲುಕೋಟೆ ಅಂಚಿನ ಪಂಚೆ. ಅವರ ಹೆಂಡತಿಯರಿಗೆ ಐವತ್ತು ಐವತ್ತು ರೂಪಾಯಿಗಳ ಸೀರೆ. ದಾನಕ್ಕೆ ಮನೆಯಲ್ಲಿರುವ ಹಸುವೇ ಆಗುತ್ತೆ. ಇನ್ನು ಸಣ್ಣ ಅಕ್ಕಿ, ಬೇಳೆ, ಸಕ್ಕರೆ, ರವೆ ಮೊದಲಾದುವೆಲ್ಲ ಬೇಕು. ಒಟ್ಟಿನಲ್ಲಿ ಸಾಮಾನು ತರಲು ತಿಪಟೂರಿಗೆ ಗಾಡಿ ಕಟ್ಟಿಸಿಕೊಂಡು ಹೋಗಬೇಕು. ಜೊತೆಗೆ ಅಣ್ಣಾಜೋಯಿಸ, ಅಯ್ಯಾಶಾಸ್ತ್ರಿಗಳು, ಇಬ್ಬರೂ ಹೋಗುವುದೆಂದು ನಿಶ್ಚಯವಾಯಿತು. ಅಪ್ಪಣ್ಣಯ್ಯನಿಗೆ ಮತ್ತೊಮ್ಮೆ ತಿಪಟೂರಿಗೆ ಹೋಗುವ ಯೋಗ ಒದಗಿತು.

– ೩ –

ಭರ್ಜರಿಯಾಗಿ ಋಷಿಪಂಚಮಿ ನಡೆಯಿತು. ಎಂಟು ದಿನ ಕಳೆದ ಮೇಲೆ ಎಲ್ಲರೂ ಊರನ್ನು ಪ್ರವೇಶಿಸುವುದೆಂದು ನಿರ್ಧಾರವಾಯಿತು. ವ್ರತಕ್ಕೆ ತಂದಿದ್ದ ರವೆ ಸಕ್ಕರೆ ತುಪ್ಪಗಳು ಇನ್ನೂ ಉಳಿದಿದ್ದುವು. ಗಂಗಮ್ಮ ಒಂದು ದಿನ ಸೊಸೆಗೆ ಹೇಳಿಬಿಟ್ಟಳು: ‘ನೀನು ಯಾವತ್ತು ಈ ಮನೆಗೆ ಕಾಲಿಟ್ಟೆಯೇ ತಾಟಗಿತ್ತಿ, ಮನೆ ಹಾಳಾಯ್ತು. ಜಮೀನೆಲ್ಲ ಹಾಳಾಯ್ತು. ಊರೊಳಕ್ಕೆ ಬರುವಾಗ ನೀನು, ನಿನ್ನ ಮಕ್ಳು, ಬ್ಯಾರೆ ಇರಿ. ನಾವು ಮನ್ಲಿರ್ತೀವಿ.’
ಅತ್ತೆಯ ಮಾತಿನ, ‘ನೀನು, ನಿನ್ನ ಮಕ್ಳು’ ಎಂಬುದು ನಂಜಮ್ಮನಿಗೆ ತಕ್ಷಣ ಅರ್ಥವಾಗಲಿಲ್ಲ. ಅವಳು ಕೇಳಿದಳು: ‘ಯಾವ ಮನ್ಲಿರ್ತೀರಿ?’
‘ಯಾವ ಮನ್ಲೇ? ನನ್ನ ಗಂಡ ಕಟ್ಸಿದ್ದ ಮನ್ಲಿರ್ತೀವಿ.’
‘ಶಿವೇಗೌಡ ನಿಮ್ಮುನ್ನ ಮನೆ ಒಳಕ್ಕೆ ಹೋಗುಕ್ಕೆ ಬಿಟ್ರೆ ತಾನೆ?’-ಎನ್ನುವ ಮಾತು ನಾಲಿಗೆಯಲ್ಲಿ ಬಂದಿತಾದರೂ, ಅವಳು ಬಾಯಿಬಿಟ್ಟು ಹಾಗೆ ಹೇಳಲಿಲ್ಲ. ಈ ಸಂಸಾರಕ್ಕೆ ಸೇರಿದ ಜಮೀನೆಲ್ಲವೂ ಕೋರ್ಟಿನಲ್ಲಿ ಹೋಗುತ್ತದೆಂದು ಅವಳ ಅಂತರಾತ್ಮವು ಮೊದಲೇ ಸ್ಪಷ್ಟವಾಗಿ ನುಡಿದಿತ್ತು. ಆನಂತರ ಶಿವೇಗೌಡನಿಂದಲೇ ಎರಡು ಸಾವಿರ ರೂಪಾಯಿ ಬರುತ್ತದೆಂದು ಅವಳು ನಿರೀಕ್ಷಿಸಿರಲಿಲ್ಲ. ಬಂದರೂ ಅದರ ಬಗೆಗೆ ವಿವೇಕ ಹೇಳುವ ಗೊಡವೆಗೆ ಹೋಗಲಿಲ್ಲ. ಹೇಳಿದರೆ ಸುಮ್ಮನೆ ಜಗಳ; ಕೆಟ್ಟ ಮಾತುಗಳನ್ನು ಕೇಳಬೇಕಾಗುತ್ತದೆ. ಈಗ ಅವಳು ಆರು ತಿಂಗಳ ಬಸುರಿ. ಗರ್ಭಿಣಿಯರು ಕೆಟ್ಟ ಮಾತು ಕೇಳಬಾರದು, ಕೆಟ್ಟ ಯೋಚನೆ ಮಾಡಬಾರದು, ಸದಾ ಒಳ್ಳೆಯದನ್ನು ಕೇಳುತ್ತಾ ಉಲ್ಲಾಸಚಿತ್ತರಾಗಿರಬೇಕು ಎನ್ನುವುದನ್ನು ಅವಳು ಚಿಕ್ಕವಯಸ್ಸಿನಿಂದಲೇ ಕೇಳಿದ್ದಳು. ಮೊದಲು ಎರಡು ಬಸುರಿಯಲ್ಲಿ ಈ ಮಾತು ಅಷ್ಟಾಗಿ ನೆನಪಿಗೆ ಬಂದಿರಲಿಲ್ಲ. ಈಗ ಇದ್ದಕ್ಕಿದ್ದಹಾಗೆಯೇ ಅದು ಮನಸ್ಸನ್ನು ತುಂಬಿಬಿಟ್ಟಿತು. ದಿನವೂ ಯಾವಾಗಲಾದರೂ ಧ್ರುವಚರಿತ್ರೆ, ಭಕ್ತ ಪ್ರಹ್ಲಾದ, ರಾಮ ಪಟ್ಟಾಭಿಷೇಕದ ಕಥೆಯ ಹಾಡುಗಳನ್ನು ಹೇಳಿಕೊಳ್ಳುವಳು. ಸದಾ ಇಂಥ ಕಥೆಗಳಲ್ಲಿಯೇ ಮನಸ್ಸನ್ನು ತೊಡಗಿಸಿಕೊಳ್ಳುವಳು.
ಆ ದಿನ ಮಧ್ಯಾಹ್ನ ಗಂಡ ಮಲಗಿದ್ದಾಗ ಅತ್ತೆಯ ಆಜ್ಞೆಯನ್ನು ತಿಳಿಸಿ, ಕೇಳಿದಳು: ‘ಬ್ಯಾರೆ ಹೋಗಿ ಅಂದ್ರು. ಎಲ್ಲಿಗೆ ಹೋಗೂದು, ಜೀವನಕ್ಕೆ ಏನು ಮಾಡೂದು, ಯೋಚನೆ ಮಾಡಿದೀರಾ?’
‘ನಿನ್ನ ಯೋಗ್ತಿ ಕಂಡೇ ನಮ್ಮಮ್ಮ ಹಾಗಂದಿದಾಳೆ. ನೀನು ನನ್ಮಕ್ಳು ಏನು ಬೇಕಾದ್ರೂ ಮಾಡ್ಕಳಿ.’

‘ನನ್ನ ಯೋಗ್ತಿ ಎಂಥದು ಅಂತ ಊರಿನೋರಿಗೆಲ್ಲ ಗೊತ್ತು. ಈಗ ಅದರ ಮಾತು ಬ್ಯಾಡ. ಮುಂದೆ ಏನು ಮಾಡೂದು ಹೇಳಿ.’
‘ನಾನ್ಹೇಳ್ಳಿಲ್ವೇನೆ? ನಾನು ನಮ್ಮಮ್ಮನ ಜೊತೆ ಇರ್ತೀನಿ’-ಎಂದು ಶ್ಯಾನುಭೋಗರು ಮುಸುಕು ಹಾಕಿಕೊಂಡು ಮಲಗಿದರು.
ಅವಳಿಗೆ ರೇಗಿತು: ‘ಏನು ಮಾತಾಡ್ತಾ ಇದೀರಾ? ಬುದ್ಧಿ ನ್ಯಟ್ಟಗಿದೆಯೋ ಇಲ್ವೋ?’
‘ಹೋಗೇ ಕತ್ತೆಮುಂಡೆ, ನನ್ನ ನಿದ್ದೆ ಹಾಳುಮಾಡ್ಯಾಡ.’

ನಂಜಮ್ಮ ಮತ್ತೆ ಮಾತನಾಡಲಿಲ್ಲ. ತಾವು ಬೇರೆ ಇರುವುದೇ ನಿಶ್ಚಯವೆಂದು ಅವಳು ತಿಳಿದಿದ್ದಳು. ಆದರೆ ಅತ್ತೆ ತನ್ನ ಗಂಡನನ್ನೂ ತನ್ನಿಂದ ಹೀಗೆ ಬಿಡಿಸುತ್ತಾಳೆಂದು ಕಲ್ಪಿಸಿಕೊಂಡಿರಲಿಲ್ಲ. ಇನ್ನು ಜಮೀನೆಲ್ಲ ಹೋದಮೇಲೆ ಅಮ್ಮ ಈ ಮಗನನ್ನು ಎಷ್ಟು ದಿನ ಇಟ್ಟುಕೊಂಡಾಳು ಎನಿಸುತ್ತಲೂ ಇತ್ತು. ಹೇಗಾದರೂ ಇನ್ನು ಮೇಲೆ ಸಂಸಾರದ ಹೊಣೆ ತನ್ನದು, ಮಕ್ಕಳೂ ಸೇರಿ ಎಲ್ಲರನ್ನೂ ಸಾಕುವ ಭಾರ ತನ್ನ ಮೇಲೆ ಬೀಳುತ್ತದೆ ಎಂಬುದು ಅವಳಿಗೆ ಗೊತ್ತು. ಹೇಗೆ ಎಂದು ಮಾತ್ರ ಹೊಳೆಯಲಿಲ್ಲ. ಎಷ್ಟೇ ಕಷ್ಟವಾದರೂ, ಗರ್ಭಿಣಿಯಾದ ತಾನು ಅಳಬಾರದು, ಮನಸ್ಸನ್ನು ಕಲಕಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡಿದ್ದಳು.

ಗಂಡನಿಗೆ ನಿದ್ದೆ ಬಂದಮೇಲೆ ಮಗು ರಾಮಣ್ಣನನ್ನು ಎತ್ತಿಕೊಂಡಳು. ಹೊಟ್ಟೆ ತುಂಬಿ ಬೆಳೆದದ್ದರಿಂದ ಅದನ್ನು ಸೊಂಟಕ್ಕೆ ಎತ್ತಿಕೊಳ್ಳದೆ ಹೆಗಲಿಗೆ ಒರಗಿಸಿಕೊಂಡು, ಬಲಗೈಲಿ ಪಾರ್ವತಿಯ ಕೈ ಹಿಡಿದು ಏರಿಯ ಮೇಲೆ ನಡೆದಳು. ಕೆರೆಯಲ್ಲಿ ನೀರಿರಲಿಲ್ಲ. ಅಂಗಳದಲ್ಲಿ ಗೋಡುಮಣ್ಣು ಕಾದಿತ್ತು. ಏರಿಯ ಧೂಳು ದಾರಿಯಮೇಲೆ ಬಿಸಿಲಿನ ಝಳ ರಾಚುತ್ತಿತ್ತು. ಏದುಸಿರು ಬರುತ್ತಿದ್ದುದರಿಂದ ನಿಧಾನವಾಗಿ ನಡೆದು ಗುಡಿಯ ಪೌಳಿಯ ಬಾಗಿಲನ್ನು ಹೊಕ್ಕಾಗ ಮಾದೇವಯ್ಯನವರು ಆಗ ತಾನೇ ಸ್ನಾನ ಮಾಡಿ ಕಾವಿಪಂಚೆಯನ್ನು ಒಣಗಹಾಕುತ್ತಿದ್ದುದು ಕಾಣಿಸಿತು. ಇಟ್ಟಿಗೆಯ ಒಲೆಯ ಮೇಲೆ ಒಂದು ಮಡಿಕೆಯಲ್ಲಿ ಅನ್ನ ಕುದಿಯುತ್ತಿತ್ತು. ಅವರೇ-‘ಬಾರವ್ವಾ, ಬಾರವ್ವ. ನಾನೇ ನಿಮ್ಮ ಶೆಡ್ಡಿಗೆ ಬರ್‌ಬೇಕು ಅಂತಿದ್ದೆ. ಅತ್ತ್ಯಮ್ಮ ಏನಂತದೋ ಅಂತ ಬರ್ನಿಲ್ಲ’ ಎಂದರು.
‘ಇನ್ನು ಅತ್ತ್ಯಮ್ಮ ಏನೂ ಅನ್ನೂ ಹಾಗಿಲ್ಲ. ನಾನೇ ಬಂದೆ.’

ಈ ಸಂಸಾರದ ವಿಷಯದಲ್ಲಿ ಮಾದೇವಯ್ಯನವರಿಗೆ ಮಾತ್ರವಲ್ಲ, ಊರಿನ ಸಮಸ್ತರಿಗೂ ತಿಳಿಯದಿದ್ದ ಒಂದು ವಿವರವೂ ಇರಲಿಲ್ಲ. ಆದುದರಿಂದ ಯಾವುದನ್ನೂ ಅವರಿಗೆ ಸ್ವತಃ ಹೇಳುವ ಅಗತ್ಯವಿರಲಿಲ್ಲ. ತನ್ನನ್ನು ಬೇರೆ ಹೋಗುವಂತೆ ಅತ್ತೆ ಹೇಳಿದುದು, ಮತ್ತು ತಾನು ಕೇಳಿದುದುಕ್ಕೆ ಗಂಡ ಹೇಳಿದ ಉತ್ತರ, ಎರಡನ್ನು ಮಾತ್ರ ಅವಳು ಹೇಳಿದಳು.
‘ಎಲ್ಡು ಸಾವಿರ ಬಂತಲ್ಲ, ಅದರಲ್ಲಿ ಸಾಲ ತೀರಿಸಿ ಒಂದು ಸಾವಿರ ಉಳ್ಕಂಡಿತ್ತಂತೆ. ಜೋಯಿಸನ ಕೈಗೆ ಸಿಕ್ಕಿ ಆ ಯಮ್ಮ ಪಂಚಮಿಹಬ್ಬ ಅಂತ ಮುಳುಕು ಹಾಕಿ ದಂಡ ತೆರುವಾಗ ನೀನ್ಯಾಕೆ ಸುಮ್ನಿದ್ದಿ?’
‘ಅಯ್ನೋರೆ, ಎಲ್ಲಾ ಹೋದ್‌ಮೇಲೆ ಇದೂ ಹೋಯ್ತು. ನಾನು ಬ್ಯಾಡ ಅಂದಿದ್ರೆ ಅವ್ರು ಕೇಳ್ತಿರ್‍ಲಿಲ್ಲ. ಸುಮ್ನೆ ಯಾಕ್ ಜಗಳ?’
‘ನಿಮ್ಮ ಮಾತೂ ವೈನ.’
ಅಯ್ಯನವರು ಅನ್ನ ಮತ್ತು ಅವರೇಬೇಳೆಯ ಎಸರುಗಳನ್ನು ಅಲ್ಯುಮಿನಿಯಂ ತಟ್ಟೆಗೆ ಹಾಕಿಕೊಂಡು ಉಂಡರು. ಪ್ರತಿದಿನ ಮಧ್ಯಾಹ್ನವೂ ಅವರು ಲಿಂಗಾಯತರ ಮನೆಗಳಲ್ಲಿ ಕಂತೆಭಿಕ್ಷೆ ಮಾಡಿ ಊಟ ಮುಗಿಸುತ್ತಿದ್ದರು. ಆದರೆ ಮಧ್ಯಾಹ್ನ ಸ್ವಾಮಿ ನೆತ್ತಿಯಿಂದ ವಾಲುವ ಹೊತ್ತಾದ ಮೇಲೆಯಾದರೆ ಭಿಕ್ಷಕ್ಕೆ ಹೋಗುತ್ತಿರಲಿಲ್ಲ. ಈ ದಿನ ಸೋಮವಾರವಾಗಿದ್ದುದರಿಂದ ದೂರದ ಹಳ್ಳಿಗಳಿಗೆ ಭಿಕ್ಷಕ್ಕೆ ಹೋಗಿದ್ದು, ಬರುವುದು ತಡವಾಗಿ, ತಾವೇ ಅಡಿಗೆ ಮಾಡಿಕೊಂಡಿದ್ದರು. ನಂಜಮ್ಮ ಮತ್ತು ಪಾರ್ವತಿಯರಿಗೆ ತಿನ್ನಲು ಒಂದು ಚೂರು ಕಾಯಿ ಬೆಲ್ಲಗಳನ್ನು ಕೊಟ್ಟು, ಅವರೂ ಯೋಚನೆ ಮಾಡುತ್ತಾ ಒಂದು ಗಳಿಗೆ ಸುಮ್ಮನೆ ಕುಳಿತರು.
‘ಅಯ್ನೋರೆ, ನನ್ನ ತೌರುಮನೆ ವಿಷಯ ನಿಮಗೆ ಗೊತ್ತಿದೆಯೋ ಇಲ್ಲವೋ. ನಮ್ಮ ಮನೆ ಒಳಗಿಂದು ನಾವಾಗಿಯೇ ಯಾಕೆ ಯಾರಿಗೋ ಹೇಳ್ಕೋಬೇಕು? ನಾನು ಯಾರಿಗೂ ಹೇಳಿಲ್ಲ. ಅತ್ತಿಗೆ ಸ್ವಭಾವ ಚನ್ನಲ್ಲ. ಇನ್ನು ಬಾಣಂತನಕ್ಕಾಗಲಿ ಮತ್ತೆ ಯಾವ ಕಷ್ಟ ಸುಖಕ್ಕಾಗಲೀ ನಾನು ಅಲ್ಲಿಗೆ ಹೋಗುಲ್ಲ. ಇಲ್ಲೇ ಬಾ ಅಂತ ಕರ್ಕಂಡ್ ಬಂದ್ರೆ ನನ್ನ ಅಜ್ಜಿ ಬಂದು ಮಾಡುತ್ತೆ. ಅದಕ್ಕೂ ಎಪ್ಪತ್ತೈದರ ಮೇಲೆ ಆಗಿದೆ. ಕೈಲಾಗುಲ್ಲ. ಆದ್ರೂ ಹೆಣಗುತ್ತೆ. ಆದರೆ ಇರುಕ್ಕೆ ಒಂದು ನೆರಳು, ತಿನ್ನುಕ್ಕೆ ಒಂದು ಹಿಡಿ ದಿನಸಿ ಬೇಕಲ್ಲ. ಅಲ್ಲದೆ ಈ ಪುಣ್ಯಾತ್ಮರೂ ನನ್ನ ಕೈಬಿಟ್ರೆ ಏನು ಮಾಡ್ಲಿ?’
ಅಯ್ಯನವರು ಯೋಚಿಸಿ ಹೇಳಿದರು: ‘ಚೆನ್ನಯ್ಯ ಎಲ್ಡು ದಿನ್ದಾಗೆ ಹುಡುಕ್ಕಂಡ್ ಬತ್ತೈತೆ. ಅದ ಯೋಚ್ನೆ ಮಾಡ್‌ಬ್ಯಾಡ. ಕುರುಬರಹಳ್ಳಿ ಪಟೇಲ ಗುಂಡೇಗೌಡರು ಗೊತ್ತೈತಲ್ಲ, ಅವರ ಬೆನ್ನುಬಿದ್ರೆ ಬಿಡಾಕಿಲ್ಲ. ಈ ಊರ್ನಲ್ಲಿ ನಿಮ್ಗೆ ಆಗೂ ಜನ ಯಾರೂ ಇಲ್ಲ.’

ಕುರುಬರಹಳ್ಳಿ ಇವರ ಶ್ಯಾನುಭೋಗಿಕೆಗೆ ಸೇರಿದ ಗ್ರಾಮ. ಊರಿನ ನಲವತ್ತು ಮನೆಯೂ ಒಂದೇ ಜಾತಿ: ಹಾಲು ಮತದವರು. ಗುಂಡೇಗೌಡರು ಕಳೆದ ನಲವತ್ತು ವರ್ಷದಿಂದ ಊರಿನ ಪಟೇಲಿಕೆ ಮಾಡುತ್ತಿದ್ದಾರೆ. ಧರ್ಮರಾಯ ಪಟೇಲ ಎಂದು ಸುತ್ತ ಮುತ್ತಿನ ಜನರೆಲ್ಲ ಹೇಳುವುದನ್ನು ನಂಜಮ್ಮನೂ ಕೇಳಿದ್ದಳು. ಅವರ ಪಟೇಲಿಕೆ ಶುರುವಾದ ಇಷ್ಟು ವರ್ಷದಲ್ಲಿ ಆ ಊರಿನಲ್ಲಿ ಒಂದು ಕಳ್ಳತನವಾಗಿಲ್ಲ, ಒಂದು ಹಾದರ ನಡೆದಿಲ್ಲವಂತೆ. ಹೊಟ್ಟೆಗಿಲ್ಲ ಎಂಬ ಕಾರಣದಿಂದ ಯಾರೂ ಊರು ಬಿಟ್ಟು ಬೇರೆ ಊರಿಗೆ ಒಕ್ಕಲೆತ್ತಿಕೊಂಡು ಹೋಗಿಲ್ಲವಂತೆ.
ಅಯ್ಯನವರು ಎಂದರು: ‘ಕೆಳಗಿನ ಕೇರೀಲಿ ಅವ್‌ರುದ್ದೇ ಮನೆ ಐತಲ್ಲ, ಖಾಲಿ ಬುಟ್ಟವ್ರೆ. ಅದ್ರಾಗೆ ವಾಸ ಮಾಡ್ತೀನಿ ಅಂತ ಕೇಳಿ. ಇಲ್ಲ ಅನ್ನಾದಿಲ್ಲ.’

ನಂಜಮ್ಮನಿಗೆ ಈಗ ನೆನಪಾಯಿತು. ಈಗ ರಾಮಸಂದ್ರದಲ್ಲಿಯೇ ಗುಂಡೇಗೌಡರ ಒಂದು ಮನೆಯಿದೆ. ಅದರಲ್ಲಿ ಯಾರೂ ವಾಸಿಸುತ್ತಿಲ್ಲ. ಅವರು ಅದನ್ನು ಬಿಟ್ಟುಕೊಟ್ಟರೆ ವಾಸದ ಯೋಚನೆ ಬಗೆಹರಿಯುತ್ತೆ. ಅವರನ್ನು ಅವಳು ನೋಡಿ ಬಲ್ಲಳು. ಆದರೆ ಚನ್ನಾದ ಪರಿಚಯವಿಲ್ಲ. ಇವರ ಶ್ಯಾನುಭೋಗಿಕೆಗೆ ಸೇರಿದ ಪಟೇಲರೇ ಆದುದರಿಂದ ಎಷ್ಟೋ ಸಲ ಇವರ ಮನೆಗೆ ಬಂದಿದ್ದರು. ಕೆಲವು ಸಲ ನಂಜಮ್ಮ ಅವರಿಗೆ ಊಟಕ್ಕೆ ನೀಡಿದ್ದಳು. ದಪ್ಪ ಬಿಳೀ ಮೀಸೆ, ಅಗಲವಾದ ಮುಖ, ಬಲಗೈ ಮಣಿಕಟ್ಟಿಗೆ ಒಂದು ಬೆರಳಿನ ಗಾತ್ರದ ಚಿನ್ನದ ಕಪ್ಪ. ಮೈಮೇಲೆ ಕೋಟು ಧರಿಸಿದರೂ ಮೊಣಕಾಲು ಕಾಣಿಸುವಂತಹ ದಟ್ಟಿ ಸುತ್ತಿ ಕಾಲಿಗೆ ಕೊಪ್ಪಲಿನ ಮೋಚಿ ಹೊಲಿದ ಗಂಡುಮೆಟ್ಟು ಹಾಕುತ್ತಿದ್ದರು.
‘ನಾಳೀಕೆ ಒಂಬತ್ ಹತ್ ಗಂಟೇ ಹೊತ್ಗೆ ನೀವು ಕುರುಬರ ಹಳ್ಳೀಗ್ ನಡೀರಿ. ನಾನೂ ಭಿಕ್ಷುಕ್ಕೆ ಅಂತ ಬಂದಿರ್ತೀನಿ. ಗೌಡ್ರುನ್ನ ಕೇಳಿ. ನಾನೂ ಮಾತಾಡ್ತೀನಿ. ಅವ್ರು ಇಲ್ಲ ಅನ್ನಾಕಿಲ್ಲ. ಚಿನ್ನಯ್ಯ ಅವ್ವನ ಕುಟ್ಟಿ ಇರಾ ಮಾತು ಅಲ್ಲಿ ಆಡ್‌ಬ್ಯಾಡಿ’ – ಎಂದು ಅಯ್ಯನವರು ಹೇಳಿದ ಮೇಲೆ ನಂಜಮ್ಮ ತಮ್ಮ ಶೆಡ್ಡಿಗೆ ಹೋದಳು.
‘ಬಸವಿ ಎಲ್ಲೋ ಬೀದಿ ತಿರುಗುಕ್ ಹೋಗಿದ್ಲು’ – ಎಂದು ಗಂಗಮ್ಮ ಬೈದರೂ ಮಾತನಾಡಲಿಲ್ಲ.

ಮರುದಿನ ಎದ್ದು ಸ್ನಾನ ಮಾಡಿ ಮಕ್ಕಳಿಗೂ ಮಡಿ ಉಡಿಸಿ ರೊಟ್ಟಿ ಮಾಡಿಕೊಟ್ಟು ತಾನೂ ತಿಂದಳು. ತಲೆ ಬಾಚಿ ಹಣೆಗೆ ಕುಂಕುಮ ಚಂದ್ರಗಳನ್ನಿಟ್ಟುಕೊಂಡಳು. ರಾಮಣ್ಣನನ್ನು ಹೆಗಲಿಗೆ ಹಾಕಿಕೊಂಡು ಪಾರ್ವತಿಯ ಕೈಹಿಡಿದು ಶೆಡ್ಡಿನಿಂದ ಹೊರಟಾಗ ಎದುರಿನ ಮರದ ಕೆಳಗೆ ಕುಳಿತಿದ್ದ ಗಂಗಮ್ಮ – ‘ಅದ್ಯಾವ ಮಿಂಡನ ಮನೆಗೆ ಹೊರಟೆಯೇ ಬಸವಿ?’ ಎಂದು ಗಟ್ಟಿಯಾಗಿ ಕೇಳಿದರೂ ಉತ್ತರ ಹೇಳದೆ ತನ್ನ ಪಾಡಿಗೆ ತಾನು ಹೊರಟು ಹೋದಳು. ಸ್ವಲ್ಪ ದೂರ ಹೋಗಿ ಹಿಂತಿರುಗಿ ನೋಡಿದಳು. ಅತ್ತೆಯಾಗಲಿ ಗಂಡ ಅಥವಾ ಮೈದುನನಾಗಲಿ ಇವಳು ಎಲ್ಲಿ ಹೋಗುತ್ತಾಳೆಂದು ನೋಡಲು ಬರುತ್ತಿರಲಿಲ್ಲ.

ಕುರುಬರಹಳ್ಳಿಗೂ ರಾಮಸಂದ್ರಕ್ಕೂ ಎರಡು ಮೈಲಿಯ ದೂರ. ನಡುವೆ ಒಂದು ಬೋರೆ ಹತ್ತಿ ಇಳಿಯಬೇಕು. ನಂಜಮ್ಮನಿಗೆ ತಾನೊಬ್ಬಳೇ ಹೋಗುತ್ತಿರುವೆನೆಂಬ ಭಯವಾಗುತ್ತಿಲ್ಲ. ಆದರೆ ಹೆಗಲಿನಲ್ಲಿದ್ದ ಮಗುವನ್ನು ಎತ್ತಿಕೊಂಡು ಬೋರೆಯ ಏರನ್ನು ಹತ್ತುವಾಗ, ಬಸುರಿಯಾದ ಅವಳಿಗೆ ಎದೆ ಹೊತ್ತಿಕೊಂಡುಬಂದಂತೆ ಆಗುತ್ತಿತ್ತು. ನಾಲ್ಕು ವರ್ಷ ತುಂಬಿರದಿದ್ದ ಪಾರ್ವತಿ ಕಾಲು ನೋಯುತ್ತದೆಂದು ಅಳುತ್ತಾ ಅಮ್ಮನ ಬಲಗೈ ಹಿಡಿದು ಬರುತ್ತಿತ್ತು. ನಂಜಮ್ಮನಿಗೂ ಇದ್ದಕ್ಕಿದ್ದ ಹಾಗೆಯೇ ದುಃಖ ಹೊತ್ತಿಕೊಂಡು ಅಳು ಬಂದಿತು. ಮಗುವನ್ನು ಕೆಳಗೆ ಇಳಿಸಿ ನೆಲದಮೇಲೆ ಕುಳಿತು ಒಂದು ಸಲ ಪೂರ್ತಿಯಾಗಿ ಅತ್ತು ಸೆರಗಿನಲ್ಲಿ ಕಣ್ಣು ಒರೆಸಿಕೊಂಡಳು. ಯಾವುದಾದರೂ ಕೆರೆಗೋ ಬಾವಿಗೋ ಮಕ್ಕಳನ್ನೂ ಹಾಕು ತಾನೂ ಮಗುಚಿಕೊಳ್ಳಬೇಕೆಂಬ ಯೋಚನೆ ಒಂದು ಕ್ಷಣ ಚಿಮ್ಮಿತು. ಬಸುರಿಯಾದ ತಾನು ಇಂತಹ ಯೋಚನೆ ಮಾಡಬಾರದು, ಅಳಲೂಬಾರದು ಎಂಬ ನೆನಪಾಗಿ ಮತ್ತೆ ಮೇಲೆ ಎದ್ದಳು. ಈ ಸಲ ಮಗುವನ್ನು ಬಲ ಹೆಗಲಿಗೆ ಹಾಕಿಕೊಂಡು ಪಾರ್ವತಿಯನ್ನು ಎಡಗೈಲಿ ಹಿಡಿದು ಮುಂದೆ ಸಾಗಿದಳು. ಬೋರೆ ಏರಿದಮೇಲೆ ಕುರುಬರಹಳ್ಳಿ ಕಾಣಿಸುತ್ತದೆ. ಊರ ನಡುವೆ ಕಾಣಿಸುವುದೇ ಬಸವಣ್ಣನ ಗುಡಿ. ಗುಡಿಯ ಪಕ್ಕದ್ದೇ ಗುಂಡೇಗೌಡರ ಮನೆಯಂತೆ. ದೇವರೇ, ಗುಂಡೇಗೌಡರಿಗೆ ದಯ ಬರುವ ಮಾಡಪ್ಪ ಎಂದು ಪ್ರಾರ್ಥಿಸುತ್ತಾ ನಂಜಮ್ಮ ಇಳಿವಿನಲ್ಲಿ ನಡೆದಳು.

ಗೌಡರು ಜಗುಲಿಯ ಮೇಲೆ ಕೂತು ಹೊಗೆಸೊಪ್ಪು ಜಗಿಯುತ್ತಿದ್ದರು. ಅವರನ್ನು ನೋಡಿ ನಂಜಮ್ಮನಿಗೆ ಮನೆಯ ಪತ್ತೆ ಸಿಕ್ಕಿತು. ಇವಳನ್ನು ಕಂಡ ಗೌಡರು ಮೇಲೆ ಎದ್ದು – ‘ಬಾರವ್ವಾ, ಬಾರವ್ವಾ, ಬಾ. ಲಕುಸ್ಮಿ ಬಂದ ಹಾಂಗ್ ಬಂದುಬುಟ್ಟೆ. ಮಗಾ ಎತ್ತಿಕಂಡೇ ಬಂದ್ಯಾ ಬಿಸಿಲ್ನಾಗೆ’ ಎಂದು ಒಳಬಾಗಿಲಿಗೆ ನೋಡಿ – ‘ಲೇ, ಏ ಲಡ್‌ಗ್ಯಾ, ನಮ್ ಶ್ಯಾನುಭೋಗ್ರಮ್ಮ ಬಂದೈತೆ ಒಂದ್ ಚಾಪೆ ಆಕ್ರಲೇ’ ಎಂದು ಒಳಗೆ ಕರೆದುಕೊಂಡು ಹೋದರು. ಗೋಡೆಗೆ ಆತು ನಂಜಮ್ಮ ಮಕ್ಕಳೊಡನೆ ಕುಳಿತಳು. ಕಂಬಕ್ಕೆ ಒರಗಿ ಗೌಡರು ಕೂತರು. ಇನ್ನೂ ಅಳುತ್ತಿದ್ದ ಪಾರ್ವತಿಯ ಕೈಗೆ ಕೊಬ್ಬರಿ ಬೆಲ್ಲ ಕೊಟ್ಟು ಗೌಡತಿ ಲಕ್ಕಮ್ಮ ಸುಮ್ಮನಾಗಿಸಿದಳು.
‘ನಮ್ಮನೇ ಸಮಾಚಾರವೆಲ್ಲಾ ಗೊತ್ತಾಯ್ತೆ ಗೌಡ್ರೆ?’
‘ಗೊತ್ತಾಯ್ತು ಕಣವ್ವ. ನಿಮ್ಮತ್ತೆ ಅಂದ್ರೆ ಕಟ್ ಹರಿದ್ ಪಂಜು. ಕಟ್ಟಿರಾಗಂಟ ಪಂಜೂ ಉರೀತೈತೆ, ತಾನೂ ಉಳ್ಕಂತೈತೆ. ಅದೇ ಕಿತ್ತಾಕಿದ್‌ಮ್ಯಾಲೆ ಉಳಿಯಾದೇನು? ನಿನ್ನ ಮಾವ ನನ್ನಂತಾ ಹ್ಯಡ್‌ಮುಂಡೇದು. ಇವ್ಳು ಬಂದೇ ಬಂದ್ಳು ನೋಡು, ಮಾರಾಯ್ತಿ ಮನೇ ಹದೀಗೆ ಗುದ್ಲಿ ಆಕಿದ್ಲು. ಇನ್ನೇನಿದ್ರೂ ನೀನು ಉಳುಸ್ಬೇಕು’ – ಎಂದು ಹೆಂಡತಿಯ ಕಡೆಗೆ ತಿರುಗಿ ಹೇಳಿದರು: ‘ಶ್ಯಾನುಬಾಕಿ ಲ್ಯಕ್ಕಾ ಯಲ್ಲಾ ಈ ಯಮ್ಮನೇ ಬರೀತೈತೆ ಕಣ್ಳೇ. ಆ ಚಿನ್ನಯ್ಯನ ಕಲಿ ಕಿಸೀತೈತಾ? ಬಸವಣ್ಣ ಅದು. ಉಲ್ಲು ತಿಂತೀಯ ಬಶಣ್ಣಾ ಅನ್ನು. ಊಂ ಅಂತೈತೆ. ನೀರ್ ಕುಡೀತೀಯಾ ಬಶಣ್ಣಾ? ಊಂ ಅಂತ ಕತ್ತಾಕ್ತೈತೆ. ಆರು ಉಳ್‌ಬೇಕು ಹೆಗಲು ಕೊಡ್ತಿಯಾ ಬಶಣ್ಣ ಅನ್ನು. ವಲ್ಲೆ ವಲ್ಲೆ ಅಂತ ಕೋಡು ಆಡಿಶ್ಕಂಡ್ ವಾಟ ಹ್ವಡೀತೈತೆ. ನಿನ್ನ ಗಂಡುನ್ನ ಬೈದೆ ಅಂತ ಶಿಟ್ಕಾಬ್ಯಾಡ ಕಣವ್ವ.’
‘ಅದ್ಯಾಕ್ ಶಿಟ್ಕತ್ತಾರೆ? ಆ ವಯ್ಯ ಮಾಡಾದೇ ಹಂಗೆ’ – ಗೌಡಮ್ಮ ಎಂದಳು.

ಹೀಗೆಯೇ ಯೋಗಕ್ಷೇಮ ಮಾತಾಡುವುದರಲ್ಲಿ ಗೌರಮ್ಮ ಒಳಗೆ ಹೋಗಿ ಮೂರು ಲೋಟಗಳ ಭರ್ತಿ ಬಿಸಿ ಹಾಲಿಗೆ ಬೆಲ್ಲ ಹೆರೆದು ಹಾಕಿ ಮೂರು ಮೂರು ಮಿಳ್ಳೆ ತುಪ್ಪ ಕರಗಿಸಿ ತಂದು ಮುಂದೆ ಇಟ್ಟಳು.
‘ನಂಗೆ ಈಗ ಹಾಲು ಬ್ಯಾಡ’ – ನಂಜಮ್ಮ ಹೇಳಿದುದಕ್ಕೆ ಗೌಡಮ್ಮ ಎಂದಳು: ‘ಬಸ್ರಿ ಎಂಗ್ಸು ಆಲು ಬ್ಯಾಡ ಅನ್ಬ್ಯಾಡ್ದು. ಕುಡೀರಿ.’
‘ಗೌಡ್ರೆ, ನಿಮ್ಮನೆ ಹಾಲು ಬ್ಯಾಡ ಅನ್ನುಲ್ಲ. ಆದರೆ ನನ್ನ ಕೈ ಬಿಡುಲ್ಲ ಅಂತ ನೀವು ಮಾತು ಕೊಡಬೇಕು.’
‘ಅದೇನು ಏಳವ್ವ.’
‘ನೀವು ಬ್ಯಾರೆ ಹೋಗಿ ಅಂತ ನಮ್ಮತ್ತೆ ನೆನ್ನೆ ದಿನ ಹೇಳಿದ್ರು. ನಮಗೆ ಇರುಕ್ಕೆ ಒಂದು ನೆರಳಿಲ್ಲ.’
‘ನ್ಯಳ್‌ಗೇನಂತೆ, ನಂದೇ ಮನೆ ಇಲ್ವರಾ? ಅದ್ರಲ್ಲಿರೋರಂತೆ. ಆಲು ಕುಡಿ.’

ಗುಂಡೇಗೌಡರನ್ನು ಏನು ಕೇಳಲು ತಾನು ಬಂದಿದ್ದಳೋ ಅದನ್ನು ಕೇಳುವ ಮೊದಲೇ ಅವರೇ ಕೊಟ್ಟಿದ್ದಾರೆ. ಬೇತು ಕೇಳಿಸಿಕೊಳ್ಳಲಿಲ್ಲ, ಏನೂ ಇಲ್ಲ. ದಾನ ಕೊಡುವುದು ತಮಗೆ ಸ್ವಲ್ಪವೂ ಕಷ್ಟವೇ ಇಲ್ಲವೇನೋ ಎಂಬಂತೆ ಕೊಟ್ಟುಬಿಟ್ಟಿದ್ದಾರೆ. ನಂಜಮ್ಮ ಮಕ್ಕಳಿಗೂ ಕುಡಿಸಿ ತಾನೂ ಹಾಲು ಕುಡಿದಳು. ಗೌಡರು ಹೆಂಡತಿಗೆ ಹೇಳಿದರು: ‘ನಾನ್ ನಿನ್‌ಕುಟ್ಟೆ ಅಂತಿರ್ನಿಲ್ವೇನ್ಲೇ? ಈ ಯಮ್ಮನ ಮಕದ ಕಳೆ ನೋಡು ಹ್ಯಂಗೈತೆ. ಸೀತಮ್ನೋರ ಮಕ ಇದ್ದ ಹಂಗೇ ಇಲ್ವಾ?’

ಅಷ್ಟರಲ್ಲಿ ಮಾದೇವಯ್ಯನವರು ಭಿಕ್ಷೆಗೆ ಬಂದರು. ಅಲ್ಲಿಯೇ ನಂಜಮ್ಮ ಕುಳಿತಿರುವುದನ್ನು ನೋಡಿ ತಾವೂ ಕುಳಿತರು. ಗೌಡಮ್ಮ ಅವರಿಗೆ ಮಣೆ ಹಾಕಿ ಕೊಟ್ಟಳು. ತಮಗೆ ಏನೂ ತಿಳಿಯದವರಂತೆ ನಂಜಮ್ಮ ಬಂದ ವಿಷಯವನ್ನು ವಿಚಾರಿಸಿ, ಗೌಡರು ಇವರಿಗೆ ವಾಸಕ್ಕೆ ಮನೆ ಕೊಡುವುದಾಗಿ ಹೇಳಿದುದನ್ನು ತಿಳಿದಮೇಲೆ ಅಯ್ಯನವರು ಕೇಳಿದರು: ‘ಗೌಡಯ್ಯ, ಇರುಕ್ಕೆ ನೆರಳು ಕೊಟ್ರಿ. ಮನೇ ಒಳಗೆ ಕಾಲು ಚಾಚಿಕೊಂಡ್ ಮನೀಕಾ ಬೇಕಾ? ಉಣ್ಣಾಕ್ ಮುದ್ದೇಗೇನು ದಾರಿ?’
‘ಸ್ಯಾನುಬಾಕಿ ಇಲ್ವಾ? ದುಡ್ಕಂಡ್ ತಿನ್ನಾ ಗಂಡಿಗೆ ಸ್ಯಾನುಬಾಕಿಗಿಂತ ಬೇಕಾ ಆಸ್ತಿ?’
‘ಆ ಗಂಡು ಎಂತದು ಅಂತ ನಿಂಗೆ ಗೊತ್ತಿಲ್ವಾ?’
‘ಅದೊಂದು ಸಿಕಂಡಿ ಸೂಳೆಮಗನ ಗಂಡು, ಬುಡಿ. ಜೋಡೀಲಿ ಒಂದು ಬಡಕಲಾದ್ರೆ ಇನ್ನೊಂದು ಮೋಪಾಗಿದ್ರೆ ಸೈ’-ಎಂದು ನಂಜಮ್ಮನ ಕಡೆಗೆ ತಿರುಗಿ ಗೌಡರು ಹೇಳಿದರು: ‘ನೀನೇಳ್ದಂಗೆ ಕೇಳ್ಕಂಡಿರು ಅಂತ ಬಶಣ್ಣುಂಗೆ ಏಳು. ಹ್ವಟ್ಟೆಪಾಡ್ಗೆ ಎಗ್ಗಿಲ್ಲ.’
‘ಹಂಗೆ ಕೇಳ್ಕಂಡಿರಾ ಬೀಜವಾ ಅದು?’-ಗೌಡಮ್ಮ ಕೇಳಿದರು.
‘ಹಣೇಬರಾವು ಕಣ್ರೀ, ಅನುಬೈಸ್ಬೇಕು’-ಗೌಡಮ್ಮ ಎಂದಳು.

ಆಗಲೇ ಮಧ್ಯಾಹ್ನವಾಗಿತ್ತು. ಊಟ ಮಾಡಿಸದೆ ಇವರನ್ನು ಗೌಡರು ಗೌಡಮ್ಮ ಕಳಿಸಲಾರರು. ಗೌಡಮ್ಮ ಒಳಗೆ ಹೋಗಿ ನಾಲ್ಕು ಹಿತ್ತಾಳೆಯ ಪಾತ್ರೆ ಎರಡು ಬಿಂದಿಗೆಗಳನ್ನು ತಂದು ಇಟ್ಟಳು. ತಾವು ಊರಿಗೆ ಹೋಗುವುದಾಗಿ ಹೇಳಿದರೂ ಅಯ್ಯನವರನ್ನೂ ಬಿಡಲಿಲ್ಲ. ಪಾತ್ರೆಗೆ ಹುಳಿ ಹಚ್ಚಿ ಗುಡಿಯ ಮುಂದಿನ ಬಾವಿಯಲ್ಲಿ ನಂಜಮ್ಮ ಮಾದೇವಯ್ಯನವರು ಬೇರೆಬೇರೆಯಾಗಿ ನೀರು ಸೇದಿಕೊಂಡರು. ಗುಡಿಯ ಜಗುಲಿಯ ಮೇಲೆ ಗೌಡರು ಬೇಯಿಸಿಕೊಂಡರು. ಕಾಯಿತುರಿ ಉಪ್ಪು ಮೊಸರಿನಲ್ಲಿ ಎಲ್ಲರದೂ ಊಟವಾಯಿತು. ಮಕ್ಕಳಿಗೆ ಮತ್ತೆ ಹಾಲು ಕುಡಿಸಿಸಿ ತಮ್ಮ ಗಾಡಿ ಹೂಡಿಸಿ ಗೌಡರು ಅದರಲ್ಲಿ ಬಸುರಿ ಮತ್ತು ಮಕ್ಕಳನ್ನು ಕೂರಿಸಿದರು. ತಮ್ಮ ಭಿಕ್ಷದ ಜೋಳಿಗೆಯನ್ನು ಇಟ್ಟುಕೊಂಡು ಮಾದೇವಯ್ಯನವರೂ ಅದೇ ಗಾಡಿಯಲ್ಲಿ ಕುಳಿತರು.

– ೪ –

ಶೆಡ್ಡು ಬಿಟ್ಟು ಊರಿಗೆ ಪ್ರವೇಶ ಮಾಡುತ್ತಲೂ ಗಂಗಮ್ಮ ಹೋಗಿ ತನ್ನ ಹಳೇ ಮನೆಯ ಬಾಗಿಲು ತೆಗೆದಳು. ಅವಳಿನ್ನೂ ಮನೆಯ ಒಳಗೆ ಪ್ರವೇಶಿಸಿ ಅಪ್ಪಣ್ಣಯ್ಯನೊಡನೆ ಅದರ ನಡುಮನೆಯ ಧೂಳು ಗುಡಿಸಿರಲಿಲ್ಲ. ಕೈಲಿ ಒಂದು ದಪ್ಪ ಬೀಗ ಹಿಡಿದು ಶಿವೇಗೌಡನ ಮನೆಯ ಆಳು ಮುರುವ ಬಂದು ಹೇಳಿದ: ‘ನಿಮ್ಮ ಸಾಮಾನು ಎತ್ಕಂಡಿ ವಾಗ್ಬೇಕಂತೆ. ಮನೆಗೆ ಬೀಗ ಮೆಟ್ಟಿಕ್ಯಂಡ್ ಬಾ ಅಂತ ಗೌಡ್ರು ಏಳ್ಯವ್ರೆ.’
‘ಯಾವ ಗೌಡ್ನೋ ಸೂಳೇಮಗ ಹಾಗಂದೋನು?’
‘ಸಿವೇಗೌಡ್ರು ಕಣ್ರವ್ವ.’
‘ಅಯ್ಯೋ ಅವ್ನ ಮನೆತನ ಹಾಳಾಗ. ಜಮೀನೆಲ್ಲ ಹೋಯ್ತು. ಮನೇನೂ ಬಿಟ್ಕೊಡುಕೆ ಅವನಪ್ಪನ ಗಂಟು ಅಂತ ತಿಳ್ಕೊಂಡಿದಾನೇನೋ?’-ಎಂದವಳೇ ಗಂಗಮ್ಮ ಅವನ ಮನೆಯ ಮುಂದೆ ಹೋಗಿ ನಿಂತು ಕೂಗಿಕೊಂಡಳು: ‘ಮನೆ ಏನು ನಿಮ್ಮಪ್ಪುಂದು ಅಂತ ತಿಳ್ಕಂಡೆ ಏನೋ ಗೌಡ? ಕೋರ್ಟಿನಾಗೆ ಇತ್ಯರ್ಥವಾದ್ದು ಜಮೀನು.’
‘ಬೇಕಾದ್ರೆ ತಿಪಟೂರಿಗೆ ಹ್ವಾಗಿ ಇಚಾರಿಸ್ಕಂಡ್ ಬಾರಮ್ಮ. ನೀನೂ ನಿನ್ನ ಮಕ್ಳೂ ಬರಕೊಟ್ಟಿರಾ ಖರೂದಿ ಪತ್ರದ ಕಾಗಜ ಕಬ್ಬುಣದ ಪೆಟ್ಟಿಗೇಲಿ ಐತೆ. ತಂದು ತೋರುಸ್ಲೇನು?’-ಎನ್ನುತ್ತಾ ಗೌಡ ಹೊರಗೆ ಬಂದ.
‘ಅಯ್ಯೋ ಇವನ ಮನೆತನ ಹಾಳಾಗ’-ಎನ್ನುವುದನ್ನು ಬಿಟ್ಟು ಗಂಗಮ್ಮನಿಗೆ ಮತ್ತೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಸ್ವಲ್ಪ ಹೊತ್ತು ಏನೂ ತಿಳಿಯದೆ ನಿಂತಿದ್ದ ಅವಳು ಕೇಲಿದಳು: ‘ಹಾಗಾದ್ರೆ ನಾವು ಎಲ್ಲಿ ಬಿದ್ದು ಸಾಯಾಣ, ಗ್ರಾಮದ ಪಟೇಲ ನೀನೇ ಹ್ಯೇಳು.’
‘ಮನೆ ಇಲ್ದೋರಿಗೆಲ್ಲ ಮನೆ ಕಟ್ಟುಸ್ಕೊಡ್ತೀನಿ ಅಂತ ನಾನೇನು ಪಟೇಲಿಕೆ ಮಾಡ್ತಿಲ್ಲ. ಸುಮ್ಕೆ ವಾಗಮ್ಮ’-ಎಂದ ಗೌಡ ಒಳಗೆ ಹೋಗಿ ಧಬ್ ಎಂದು ಬಾಗಿಲು ಹಾಕಿಕೊಂಡ.
‘ಇವನ ಮನೆ ಬಿದ್ದುಹೋಗಿ ಉತ್ತು ಹರಳು ಹಾಕ . ಮೋಸದಲ್ಲಿ ಆಸ್ತಿ ಬಂತು ಅಂತ ಮ್ಯರೀತಿದಾನೆ ಮನೆಹಾಳ ಸೂಳೆಮಗ. ನಂಗೆ ಯಾರೂ ಇಲ್ದೇ ಇಲ್ಲ’-ಎಂದವಳೇ ಗಂಗಮ್ಮ ನೇರವಾಗಿ ರೇವಣ್ಣಶೆಟ್ಟಿಯ ಮನೆಗೆ ಹೋಗಿ ನಡೆದ ವಿಷಯ ತಿಳಿಸಿ ಕೇಳಿದಳು: ‘ನಿನ್ನ ದನ ಕಟ್ಟೂ ಮನೆ ಇದೆಯಲಾ, ಅಲ್ಲೇ ಒಂದು ತಡಿಕೆ ಕಟ್ಕಂಡು ನಾನೂ ನನ್ನ ಇಬ್ರು ಗಂಡು ಮಕ್ಳೂ ಇರ್ತೀವಿ. ಬಿಟ್ಕೊಡು.’
‘ಅಮ್ನೋರೇ, ನಮ್ಮ ಎಮ್ಮೆ ಕರು ಹಾಕಿದ್ರೆ ಅದ ಕಟ್ಟುಕೆ ಜಾಗವಿಲ್ಲ. ಇನ್ನು ನೀವೆಲ್ಲಿ ಇರ್‍ತೀರಾ? ನಿಮ್ಮೋರೇ ಅಯ್ಯಾಶಾಸ್ತ್ರಿಗಳು ಅವ್ರಲ ಕೇಳಿ ನೋಡಿ.’
‘ನನ್ನ ಹತ್ರ ತಿನ್ನೂತಂಕಲೇ ನಾನು ಬೇಕಾಗಿತ್ತು ಈ ಸೂಳೇಮಗುಂಗೆ’-ಎಂದು ಬೈದುಕೊಳ್ಳುತ್ತಾ ಅವಳು ಅಯ್ಯಾಶಾಸ್ತ್ರಿಗಳನ್ನು ಹೋಗಿ ಕೇಳಿದಳು. ಅವರ ಕೊಟ್ಟಿಗೆಯಲ್ಲೂ ಅವಳಿಗೆ ಸ್ಥಳವಿರಲಿಲ್ಲ.
‘ನನ್ನ ಮನ್ಲಿ ತಿನ್ನೂವಾಗ ಬೇಕಾಗಿತ್ತು. ಈಗ ನಾಕು ಮಳ ಜಾಗವಿಲ್ಲ ಅಂತಿ ಏನೋ ತಿರುಪೆ ಜೋಯ್ಸ?’-ಎಂದು ಅವಳು ಬೀದಿಯಲ್ಲಿ ನಿಂತು ಕೇಳಿದಳು.

ಜೋಯಿಸರಿಗೆ ಸ್ವಲ್ಪ ಕಿರಿಕಿರಿ ಎನ್ನಿಸಿತು. ಅವಳನ್ನು ತಮ್ಮ ದನದ ಸೇರಿಸಲೂ ಇಷ್ಟವಿಲ್ಲ. ಹಾಗೆಂದು ಅವಳ ನಾಲಿಗೆಗೆ ಸಿಕ್ಕಲೂ ಬೇಕಿಲ್ಲ. ಕೊನೆಗೆ ತಮ್ಮ ದೊಡ್ಡಪ್ಪನ ಮೊಮ್ಮಗ ಅಣ್ಣಾಜೋಯಿಸನನ್ನು ಕರೆಸಿ ಮಾತನಾಡಿ ಒಂದು ಉಪಾಯ ಸೂಚಿಸಿದರು. ಊರಿನ ಪೂರ್ವ ದಿಕ್ಕಿನ ಮೂಲೆಯಲ್ಲಿ ಹನುಮಂತರಾಯನ ಗುಡಿ ಇದೆ. ನಾಲ್ಕು ಅಂಕಣದ ಆ ಕಲ್ಲು-ಇಟ್ಟಿಗೆಯ ಕಟ್ಟಡಕ್ಕೆ ಬಾಗಿಲು ಬೀಗಗಳೂ ಇವೆ. ಅಣ್ಣಾಜೋಯಿಸನೇ ಅದರ ಪೂಜಾರಿ. ಈ ತಾಯಿ, ಇಬ್ಬರು ಮಕ್ಕಳು, ಮೂವರು ಅಲ್ಲಿ ಇರಲು ಅಡ್ಡಿಯಿಲ್ಲ. ಆದರೆ ಅದಕ್ಕೆ ಗ್ರಾಮಸ್ಥರ ಒಪ್ಪಿಗೆಬೇಕು. ಗ್ರಾಮಸ್ಥರೆಂದರೆ ಯಾರು? ಮುಖ್ಯ ಮುಖ್ಯವಾದ ಕುಳಗಳು. ಶ್ಯಾನುಭೋಗ, ಪಟೇಲ, ಪಂಚಾಯ್ತಿ ಛೇರ್‌ಮನ್ ಮತ್ತು ಮೆಂಬರುಗಳು. ಉಳಿದವರನ್ನು ಒಪ್ಪಿಸುವುದು ಕಷ್ಟವಿಲ್ಲ. ಆದರೆ ಗ್ರಾಮದ ಪಟೇಲ, ಛೇರ್‌ಮನ್, ಇಬ್ಬರೂ ಆಗಿರುವ ಶಿವೇಗೌಡ ಒಪ್ಪುತ್ತಾನೋ ಇಲ್ಲವೋ! ‘ಗಂಗಮ್ಮ, ನೀನೊಂದು ರವಷ್ಟು ಮಾತು ಬಿಗಿಯಾಗಿ ಆಡ್ಬೇಕು. ಅವನುನ್ನ ಬೀದೀಲಿ ನಿಂತ್ಕಂಡು ಬೋಳೀಮಗ ಸೂಳೇಮಗ ಅಂತ ಮಾತಾಡ್ಬ್ಯಾಡ’-ಎಂದು ಅಯ್ಯಾಶಾಸ್ತ್ರಿಗಳು ಹೇಳಿದುದಕ್ಕೆ ಅವಳು, ‘ನಾನ್ಯಾವ ಸೂಳೇಮಗುಂಗೆ ಹ್ಯದರ್ಬೇಕು ಬಿಡಿ’ಎಂದಳು.

ಜೋಯಿಸರುಗಳಿಬ್ಬರೂ ಶಿವೇಗೌಡನ ಮನೆಗೆ ರಾಯಭಾರಕ್ಕೆ ಹೋದರು. ಅವನು ಒಪ್ಪುತ್ತಿದ್ದನೋ ಇಲ್ಲವೋ. ಆದರೆ ಅವನ ಹೆಂಡತಿ ಗೌರಮ್ಮನಿಗೆ ಒಂದು ಭಯವಿತ್ತು: ಗಂಗಮ್ಮನ ಬಾಯಿ ಒಳ್ಳೇದಲ್ಲ. ಆ ವಮ್ಮನ ನಾಲಿಗೇಲಿ ಕರೀಮತ್ತಿ ಐತಂತೆ. ವಳ್ಳೇ ಹೊತ್ತಲ್ಲ ಕ್ಯಟ್ ಹೊತ್ತಲ್ಲ, ಬೀದೀಲಿ ನಿಂತ್ಕಂಡಿ ಮಣ್ ತೂರಿ ಬೋಯ್ತದೆ. ಈಟುಕ್ಕೂ ಅನುಮಂತರಾಯನ ಗುಡಿ ಹಾರುವರದ್ದೇ. ಅವರವ್ರೆ ಜಾತಿಯೋರು ಅದ್ಕಳ್ಳಿ-ಎಂಬುದು ಅವಳ ವಿಚಾರ. ಗಂಡನನ್ನು ಒಳಗೆ ಕರೆದುಕೊಂಡುಹೋಗಿ ಕಿವಿಯಲ್ಲಿ ಹೇಳಿದಳು. ಅದೆಲ್ಲವನ್ನೂ ಶಿವೇಗೌಡ ನಂಬಿದನೋ ಬಿಟ್ಟನೋ, ತಾನು ಅದರಿಂದ ಕಳೆದುಕೊಳ್ಳುವುದು ಏನೂ ಇರಲಿಲ್ಲವಾದುದರಿಂದ ಹೊರಗೆ ಬಂದು, ‘ಆಯ್ತು. ಬದುಕ್ಕಳ್ಳಿ ಹೋಗಿ’ ಎಂದ.

ಇವರು ಹನುಮಂತರಾಯನ ಗುಡಿಗೆ ಬಂದುದರಿಂದ ಅಣ್ಣಾಜೋಯಿಸನಿಗೆ ಒಂದು ಅನುಕೂಲವಾಯಿತು. ಅದು ಪೂಜಾರಿಗೆಂದು ಐದು ಎಕರೆ ಹೊಲ, ಒಂದು ಎಕರೆ ಗದ್ದೆಯನ್ನು ಬಿಟ್ಟಿದ್ದ ಗುಡಿ. ಪೂಜಾರಿಯಾದ ಅಣ್ಣಾಜೋಯಿಸ ಜಮೀನು ಅನುಭವಿಸುತ್ತಿದ್ದ. ಆದರೆ ಪ್ರತಿದಿನ ಗುಡಿಗೆ ಬಂದು ಅಂಕಣ ಪೌಳಿಗಳನ್ನೆಲ್ಲ ಗುಡಿಸಿ ತೊಳೆದು ದೇವರಿಗೆ ನೀರು ಹಾಕಿ ಪೂಜೆ ಮಾಡುವುದು ಅವನಿಗೆ ಆಗುತ್ತಿರಲಿಲ್ಲ. ದಾನ ದಕ್ಷಿಣೆಗಳಿಗಾಗಿ ಹಳ್ಳಿಗೆ ಹೋದ ದಿನವಂತೂ ಹನುಮಂತರಾಯ ನೀರು ಕಾಣುತ್ತಿರಲಿಲ್ಲ. ಎಷ್ಟೋ ದಿನ ಅಂಕಣದಲ್ಲಿ ತುಂಬುತ್ತಿದ್ದ ಹಕ್ಕಿ ಪಕ್ಷಿಗಳ ಹಿಕ್ಕೆ ಬಿದ್ದು ವಾಸನೆ ಬರುತ್ತಿತ್ತು. ಗ್ರಾಮದ ಪಟೇಲ ಕೆಲವು ದಿನ ಜೋಯಿಸನ ಮೇಲೆ ಕಂಪ್ಲೇಂಟು ಬರೆದದ್ದೂ ಉಂಟು. ಗುಡಿಯ ಮುಂಬಾಗಿಲಿನ ಕಿಂಡಿಯಿಂದ ನೋಡಿದರೆ ಒಳಗೆ ದೇವರಿಗೆ ಪೂಜೆ ಆಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಜೋಯಿಸರು ದೇವರಿಗೆ ಹೂವು ನೀರು ಕಾಣಿಸದಿದ್ದ ದಿನ ಊರಿನವರು ನೋಡಿ ಪರೀಕ್ಷಿಸಿ ಬೈದುಕೊಳ್ಳುತ್ತಿದರು.

ಈಗ ಅಣ್ಣಾಜೋಯಿಸ ಅಪ್ಪಣ್ಣಯ್ಯನಿಗೆ ಹೇಳಿದ: ‘ನಿಂಗೆ ಗುಡೀಲಿರೂಕ್ಕೆ ಜಾಗ ಕೊಟ್ಟಿದೀನಿ ನೋಡು. ನೀವು ದಿನಾ ಅದರ ಪೌಳಿ, ಅಂಕಣ, ಯಲ್ಲಾನೂ ಚನ್ನಾಗಿ ಗುಡಿಸಿ ನೀರು ಹಾಕಿ ತೊಳೀಬೇಕು. ಸ್ವಲ್ಪಾನೂ ಕೊಳೆ ಬಿಡುಕೂಡ್ದು. ಮಡೀಲಿ ದೇವರನ್ನೂ ತೊಳ್ದು ಗಂಟೇ ಹೂವು ತಂದು ಪೂಜೆ ಮಾಡ್‌ಬೇಕು. ನೀನು ಪೂಜೆ ಮಾಡ್ತೀಯಾ ಅಂತ ಯಾರ್ಗೂ ಹೇಳುಕೂಡ್ದು. ಹೇಳಿದ್ರೆ ನಿಮ್ಮುನ್ನ ಗುಡಿಯಿಂದ ಬಿಡುಸ್ಬುಡ್ತೀವಿ. ನಾನೂ ಒಂದೊಂದು ದಿನ ಬಂದು ಪೂಜೆ ಮಾಡ್ತೀನಿ.’
ಅಪ್ಪಣ್ಣಯ್ಯ ಒಪ್ಪಿಕೊಂಡ. ದೇವರ ಪೂಜೆಗೆ ಗಂಗಮ್ಮನೂ ಬೇಡವೆನ್ನುವವಳಲ್ಲ. ಅವಳ ದೈವಭಕ್ತಿ ಅಗಾಧವೇ. ಚೆನ್ನಿಗರಾಯರಿಗೆ ಹೇಗೂ ಪೂಜೆಯ ಮಂತ್ರ ಬರುತ್ತಿತ್ತು.

– ೫ –

ನಂಜಮ್ಮನ ಮದುವೆಯಲ್ಲಿ ತೌರಿನವರು ಕೊಟ್ಟಿದ್ದ ನಾಗರು, ಶೇವಂತಿಗೆ ಹೂವು, ಜೋಡಿ ಬಳೆ, ಮತ್ತು ಬೆಳ್ಳಿಯ ರುಳಿಗಳನ್ನು ಚೆನ್ನಿಗರಾಯರ ಶ್ಯಾನುಭೋಗಿಕೆಯ ಮುಖ್ಯ ವಾದ ಲೆಕ್ಕಗಳನ್ನಿಡುವ ಪೆಟಾರಿಯ ಕೆಳಭಾಗದ ಒಂದು ಮೂಲೆಯಲ್ಲಿ ಇಟ್ಟಿದ್ದರು. ಅವಾದರೂ ತನಗೆ ಬೇಕು. ತಾನೇ ಹೋಗಿ ಕೇಳಿದುದಕ್ಕೆ ಗಂಡ ಸರಿಯಾಗಿ ಉತ್ತರ ಹೇಳಲಿಲ್ಲ. ಮತ್ತೆ ಕೇಳಿದಾಗ ಎಂದರು: ‘ನಿಮ್ಮಪ್ಪನ ಮನ್ಲಿ ಕೊಟ್ಟುದ್ದು ಅಂತ ಇರುತ್ತೇನು? ಖರ್ಚಾತು.’
‘ಅದ್ಯಾಕ್ ಖರ್ಚಾಗುತ್ತೆ? ಏನ್ ಮಾಡಿದ್ರಿ?’
‘ಕೋರ್ಟಿಗ್ ಖರ್ಚಾತು.’
‘ಏನು ಮಾಡುದ್ರಿ?’
‘ಕಾಶಿಂಬಡ್ಡಿ ತಾವ ಐವತ್ತು ರೂಪಾಯಿಗೆ ಅಡವಿಟ್ಟಿದೆ. ಬೇಕಾದ್ರೆ ದುಡ್ ಕೊಟ್ ಬಿಡುಸ್ಕ.’
‘ಎಷ್ಟು ದಿನವಾಯ್ತು ಇಟ್ಟು?’
‘ಹೋದ ದೀವಳಿಗೆ ಹಬ್ಬದಾಗೆ.’
ಎಂದರೆ ಏಳು ತಿಂಗಳಾಗಿದೆ. ಬಡ್ಡಿಯೇ ಐವತ್ತು ರೂಪಾಯಿಯ ಮೇಲೆ ಬೆಳೆದಿದೆ. ಈಗ ನೂರು ರೂಪಾಯಿ ಹೊಂದಿಸಿ ಅವನ್ನು ಬಿಡಿಸಿಕೊಳ್ಳುವುದು ಕನಸಿನಲ್ಲೂ ಆಗದ ಮಾತು.
‘ನನ್ನ ತೌರುಮನೇಲಿ ಕೊಟ್ಟುದ್ದು ನನ್ನ ಹೇಳ್ದೆ ಕೇಳ್ದೆ ಹ್ಯಾಗೆ ಮುಟ್ಟಿದಿರಿ?’
‘ಅಮ್ಮ ತಗಂಡ್ಹೋಗ್ ಇಡು ಅಂದ್ಲು, ಇಟ್ಟೆ.’

ತಾನು ಯಾವ ಕಾರಣಕ್ಕೂ ತಾಳ್ಮೆಗೆಡಬಾರದೆಂಬ ಅವಳ ಸಂಕಲ್ಪ ಇಳಿಯಲಿಲ್ಲ ಮನೆಯ ಪಾತ್ರೆ ಪರಟಿಗಳಲ್ಲಿ ಅತ್ತೆ ಅವಳಿಗೆ ಸ್ವಲ್ಪವೂ ಕೊಡಲಿಲ್ಲ. ಅವಳ ಮದುವೆಯಲ್ಲಿ ಕೊಟ್ಟಿದ್ದ ತಪ್ಪಲೆ, ಕೊಳದಪ್ಪಲೆ, ಅರಕಿನ ಚಿಟ್ಟಿಗಳನ್ನೂ ಇಲ್ಲವೆಂದಿದ್ದಳು. ಈ ಚಿನ್ನವಾದರೂ ಇದ್ದಿದ್ದರೆ ಕಷ್ಟಕಾಲಕ್ಕೆ ಆಗುತ್ತಿತ್ತು. ಈಗ ಹೊಸದಾಗಿ ಸಂಸಾರ ಹೂಡಲು ಒಂದು ಚೊಂಬು ಸಹಾ ಇಲ್ಲ. ಮನೆಯಲ್ಲಿ ಮಕ್ಕಳಿಗೆ ಕೆಂಡರೊಟ್ಟಿ ಬಡಚಿಕೊಡಲು ಒಂದು ಪಾವು ರಾಗಿ ಹಿಟ್ಟಿಲ್ಲ. ಇನ್ನು ಈ ಸ್ಥಿತಿಯಲ್ಲಿ ತನ್ನ ಹೆರಿಗೆ ಬಾಣಂತನಗಳು ಬೇರೆ ಆಗಬೇಕು. ಬಾಣಂತನಕ್ಕೆ ತೌರಿಗೆ ಹೋಗುವ ಕಲ್ಪನೆಯನ್ನೂ ಅವಳು ಬಿಟ್ಟಿದ್ದಳು. ಅಂತಹ ಹೆಂಗಸು ಅವಳ ಅಣ್ಣನಿಗೆ ಹೆಂಡತಿಯಾಗಿ ಬರಲಿಲ್ಲ.

ಈಗ ಕೋಪ ತುಂಬಿಬಂದು ಅವಳು ಗಂಡನನ್ನು ಕೇಳಿದಳು: ‘ಯಾವ ಗಂಡಸರಾದ್ರೂ ಹೆಂಡ್ತಿಗೆ ಸ್ವಂತ ಸಂಪಾದನೆ ಮಾಡಿ ವಡವೆ ವಸ್ತ್ರ ಮಾಡಿಸಿ ಕೊಡಬೇಕು. ಅಂಥಾದ್ರಲ್ಲಿ ತೌರುಮನೇಲಿ ಇಟ್ಟಿದ್ದನ್ನ ನಂಗೆ ಕಾಣದ ಹಾಗೆ ಅವ್ವ ಮಗ ಸೇರ್ಕಂಡು ಕಳುದ್ರಲಾ, ನಾಚಿಕೆಯಾಗುಲ್ವೆ ಜನ್ಮುಕ್ಕೆ?’

ಪತಿದೇವರು ಮಾತನಾಡಲಿಲ್ಲ. ಆಡಿನಂತೆ ಕಣ್ಣುಗುಡ್ಡೆಗಳನ್ನು ಹೊರಳಿಸುತ್ತಾ ನಿಂತಿದ್ದರು. ‘ಈಗ ಮಕ್ಳಿಗೆ ಹೊಟ್ಟೆಗೆ ಏನು ಮಾಡ್ತೀರಿ? ಬ್ಯಾಡ ಅಂತ ಗಿಣಿಗೆ ಹೇಳ್ದಹಾಗೆ ಹೇಳಿದ್ರೂ ಕೋರ್ಟಿಗೆ ಹೋಗಿ ಜಮೀನೆಲ್ಲ ನೀಗಿ ನೀರು ಕುಡ್ದು ಕೂತ್ಕಂಡ್ರಲಾ.’

ಅವಳ ಮಾತಿಗೆ ಉತ್ತರ ಹೇಳುವುದಕ್ಕೆ ಚೆನ್ನಿಗರಾಯರಿಗೆ ತಿಳಿಯಲಿಲ್ಲ. ಆದುದರಿಂದ ತುಂಬ ಕೋಪ ಬಂತು. ಏನಾದರೂ ಬೈಯಬೇಕು. ತಕ್ಷಣಕ್ಕೆ ಹೊಸ ಬೈಗುಳಗಳಾವುವೂ ಪ್ರತಿಭೆಯಲ್ಲಿ ಮೂಡಲಿಲ್ಲ. ‘ಮುಂಡೆ, ಮುಂಡೆ, ಮುಂಡೆ, ಕತ್ತೆಮುಂಡೆ, ಬೋಳಿಮುಂಡೆ, ಸೂಳೆಮುಂಡೆ’-ಎಂದು ಮೂರು ಸಲ ಸಾದಾ ರೀತಿಯಲ್ಲೂ ಎರಡು ಸಲ ವಿಶೇಷ ರೀತಿಯಲ್ಲೂ ಪ್ರಯೋಗಿಸಿ ಅಲ್ಲಿಂದ ಜಾಗ ಬಿಟ್ಟು ಎದ್ದು ಹೊರಟು ಹೋದರು. ನಂಜಮ್ಮನಿಗೂ ಸಿಟ್ಟು ಬಂದಿತ್ತು. ಹಾಗೆಯೇ ಹತ್ತು ನಿಮಿಷ ಕೂತು ಅತ್ತು ಕಣ್ಣು ಒರೆಸಿಕೊಂಡಳು.

ಅದೇ ದಿನ ಅವಳು ಮಾದೇವಯ್ಯನವರ ಗುಡಿಗೆ ಹೋಗಿ ಐದು ರೂಪಾಯಿ ಸಾಲ ಇಸಿದುಕೊಂಡಳು. ಮರುದಿನ ಬೆಳಿಗ್ಗೆ ಮಕ್ಕಳನ್ನು ಗಂಡನ ಹತ್ತಿರ ಬಿಟ್ಟು, ನೋಡಿಕೊಳ್ಳುವಂತೆ ಹೇಳಿ, ಮಗ್ಗದ ಪುಟ್ಟವ್ವನನ್ನು ಜೊತೆಗೆ ಕರೆದುಕೊಂಡು ಸಣ್ಣೇನಹಳ್ಳಿಗೆ ಹೋದಳು. ರಾಮಸಂದ್ರಕ್ಕೆ ಮೂರು ಮೈಲಿ ದೂರದ ಸಣ್ಣೇನಹಳ್ಳಿ ಬರೀ ಕುಂಬಾರರ ಊರು. ಪುಟ್ಟವ್ವ ಕರೆದುಕೊಂಡು ಹೋದ ಒಂದು ಮನೆಯಲ್ಲಿ ಅಡಿಗೆಗೆ ಬೇಕಾದ ಆರು ಸಣ್ಣ ಪುಟ್ಟ ಮಡಿಕೆಗಳು, ನೀರು ಸೇದಲು ಎರಡು ಗಡಿಗೆ, ನೀರು ಕಾಯಿಸಲು ಒಂದು ಗುಡಾಣ, ರೊಟ್ಟಿ ತಟ್ಟುವ ಸಾವೆ ಮೊದಲಾಗಿ ಸಂಸಾರಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡಳು. ಪುಟ್ಟವ್ವ ಚೌಕಾಶಿ ಮಾಡಿದುದರಿಂದ ಎಲ್ಲ ಸಾಮಾನೂ ಹನ್ನೆರಡಾಣೆಗೆ ಬಂದವು. ಮುಕ್ಕಾಲು ಭಾಗವನ್ನೂ ಪುಟ್ಟವ್ವ ಹೊತ್ತಳು. ಉಳಿದುವನ್ನು ನಂಜಮ್ಮ ಹಿಡಿದುಕೊಂಡಳು. ಬಿಸಿಲಿನಲ್ಲಿ ಇವರು ಊರು ಮುಟ್ಟುವ ಹೊತ್ತಿಗೆ ಸ್ವಾಮಿ ನೆತ್ತಿಯ ಮೇಲೆ ಬಂದಿದ್ದ. ಸಾಮಾನುಗಳನ್ನು ಊರೊಳಗಿನ ಗುಂಡೇಗೌಡರ ಮನೆಯಲ್ಲಿಟ್ಟು ಈಗ ಮೆಟ್ಟಿಕೊಂಡು ಶೆಡ್ಡಿಗೆ ಹೋದರೆ ಅಷ್ಟರಲ್ಲಿ ಅತ್ತೆ ಮೈದುನರು ತಮ್ಮ ಸಾಮಾನುಗಳನ್ನು ಹನುಮಂತರಾಯನ ಗುಡಿಗೆ ಸಾಗಿಸಿ ಖಾಲಿ ಮಾಡಿದ್ದಾರೆ. ಶೆಡ್ಡಿನ ಮುಂದೆ ರಾಮಣ್ಣ ಅಳುತ್ತಾ ಬಿದ್ದುಕೊಂಡಿದೆ. ಪಾರ್ವತಿಯೂ ಇಲ್ಲ. ಚೆನ್ನಿಗರಾಯರಂತೂ ಇಲ್ಲವೇ ಇಲ್ಲ. ಮಗುವನ್ನು ಕೈಗೆ ಎತ್ತಿಕೊಂಡು ಹತ್ತಿರವೇ ಇದ್ದ ಕೊಳದಲ್ಲಿ ಅದರ ಕೈ ಮೈಗಳ ಮಣ್ಣನ್ನು ತೊಳೆದಳು. ಅದೃಷ್ಟಕ್ಕೆ ಮಗು ಕೊಳದ ಹತ್ತಿರಕ್ಕೆ ಹೋಗಿರಲಿಲ್ಲ. ಈ ಯೋಚನೆ ಬಂದ ತಕ್ಷಣ ಅವಳಿಗೆ ಪಾರ್ವತಿಯ ನೆನಪಾಯಿತು. ಎಲ್ಲರೂ ಶೆಡ್ಡು ಬಿಟ್ಟು ಊರೊಳಕ್ಕೆ ಸಾಮಾನು ಸಾಗಿಸುತ್ತಿದ್ದಾರೆ. ಇದು ಎಲ್ಲಿ ಹೋಯಿತೋ ಏನು ಕತೆಯೋ! ರಾಮಣ್ಣನನ್ನು ಎತ್ತಿಕೊಂಡು ಅವಳು ಮತ್ತೆ ಊರೊಳಕ್ಕೆ ಬಂದಳು. ಇವರ ಮೊದಲಿನ ಮನೆಯ ಮುಂದಿನ ತಮ್ಮ ಮೂಲದ ಗುಡಿಗೆ ಮಾದೇವಯ್ಯನವರು ಸಾಮಾನು ಸಾಗಿಸುತ್ತಿದ್ದರು. ಚೆನ್ನಿಗರಾಯರು ಗುಡಿಯ ಜಗುಲಿಯ ಮೇಲೆ ಕೂತು ಹೊಗೆಸೊಪ್ಪಿನ ಬಾಯನ್ನು ಮುಲುಕಿಸುತ್ತಿದ್ದರು. ಹತ್ತಿರಬಂದ ನಂಜಮ್ಮ , ‘ಪಾರ್ವತಿ ಎಲ್ಲಿ?’ ಎಂದು ಕೇಳಿದರೆ ಅವರು ಎದ್ದು ಬೀದಿಗೆ ಬಂದು ಬಾಯ ತಂಬುಲವನ್ನು ಉಗುಳಿ, ‘ನಂಗೇನು ಗೊತ್ತು, ಎಲ್ಲ್ಯಾರ ನೋಡು’ ಎಂದರು

‘ಅಯ್ನೋರೇ, ಮಕ್ಳುನ್ನ ನೋಡ್ಕಾಳುಕ್ಕೆ ಹೇಳಿ ನಾನು ಒಂದಿಷ್ಟು ಮಡಿಕೆ ತರಾಣ ಅಂತ ಸಣ್ಣೇನಹಳ್ಳಿಗೆ ಹೋಗಿದ್ದೆ. ಈಗ ಬಂದ್ರೆ ಪಾರ್ವತಿ ಇಲ್ಲ. ಇವರು ಹೀಗಂತಾರೆ ನೋಡಿ.’
‘ಏನ್ರೀ, ಬೆಳಿಗ್ಗೆಯಿಂದ ಇಲ್ಲೇ ಕೂತಿದೀರಲ, ಮಗ ಎಲ್ರಿ?’ – ಎಂದು ಅಯ್ಯನವರು ಕೇಳಿದರೆ ‘ಎಲ್ಲಿ ಹೋಯ್ತೋ ಅನಿಷ್ಟ ಮುಂಡೇದು. ಒಂದ್ ಕಡೆ ಕುಕ್ಕರು ಬಡಿದಿದ್ತೆ ತಾನೇ ಅದು!’ ಎಂದರು.

ಹುಡುಕಲು ನಂಜಮ್ಮ ಒಂದು ಕಡೆಗೆ ಹೋದಳು. ಅಯ್ಯನವರು ಇನ್ನೊಂದು ಕಡೆ ಹೊರಟರು. ಅದು ಬೆಸ್ತರ ಕೇರಿಯಲ್ಲಿ ಇದ್ದುದನ್ನು ತಾವು ಕಂಡಿದ್ದಾಗಿ ಯಾರೋ ಹೇಳಿದರು. ನಂಜಮ್ಮ ಅಲ್ಲಿಗೇ ನುಗ್ಗಿದಳು. ಅದೃಷ್ಟಕ್ಕೆ ಮಗು ಅಲ್ಲಿಯೇ ಒಂದು ಗುಡಿಸಲಿನ ಜಗುಲಿಯ ಕೆಳಗೆ ಅಳುತ್ತಾ ಕೂತಿತ್ತು. ಎಲ್ಲರಿಗೂ ಶೆಡ್ಡುಗಳಿಂದ ಸಾಮಾನು ಸಾಗಿಸುವ ಗಡಿಬಿಡಿ. ಇದು ಯಾವ ಮಗು ಎಂದು ಯಾರೂ ಗಮನಿಸಿರಲಿಲ್ಲ.

ಮಗುವನ್ನು ಕೈಹಿಡಿದು ನಡೆಸಿಕೊಂಡು ನಂಜಮ್ಮ ಮನೆಗೆ ಬಂದಳು. ಮನೆಯ ಪರಿಸ್ಥಿತಿಯರಿತ ಮಾದೇವಯ್ಯನವರು, ತಾವೇ ಒಂದು ಮೊರದಲ್ಲಿ ಎರಡು ಸೇರು ರಾಗಿಹಿಟ್ಟು, ಒಂದಿಷ್ಟು ಅವರೇಬೇಳೆ, ಖಾರದಪುಡಿ ಉಪ್ಪು ಹುಣಿಸೇಹಣ್ಣು, ತಾವು ಎಸರಿಗೆ ಹಾಕಿಬಿಟ್ಟಿದ್ದ ಕಾಯಿತುರಿಗಳನ್ನು ಇಟ್ಟು ತಂದುಕೊಟ್ಟರು. ಹೊಟ್ಟೆ ಹಸಿಯುತ್ತದೆಂದು ಮಕ್ಕಳೆರಡೂ ರಚ್ಚೆ ಮಾಡುತ್ತಿದ್ದವು. ಅವಳಿಗೂ ಹಸಿವಾಗಿತ್ತು. ಬಿಸಿಲಿನಲ್ಲಿ ಆರು ಮೈಲಿ ನಡೆದು ಕಳಲಿಕೆ ಬರುತ್ತಿತ್ತು. ಶಕ್ತಿವಂತ ಹೆಂಗಸಾದರೂ ಒಟ್ಟಿಗೆ ಆರು ಮೈಲಿಯನ್ನು ಅವಳು ಈ ಹಿಂದೆ ಎಂದೂ ನಡೆದಿರಲಿಲ್ಲ. ಅಲ್ಲದೆ ಬಸುರಿನಲ್ಲಿದ್ದ ಮಗುವಿನ ತೂಕವನ್ನು ಹೊತ್ತು ಇಷ್ಟು ದೂರ ನಡೆದಿದ್ದಳು.

ಸಂಕಟವಾಗುತ್ತದೆಂದು ಸುಮ್ಮನೆ ಕೂತಿರುವಂತಿಲ್ಲ. ಎದ್ದು ಹೊಸ ಗಡಿಗೆಯಲ್ಲಿ ನೀರು ಸೇದಿ ತಂದಳು. ಮನೆಯ ಒಳಗೆ ಒಲೆ ಇತ್ತು. ಅದಕ್ಕೇ ನೀರು ಚಿಮುಕಿಸಿದಳು. ಅಯ್ಯನವರೇ ಒಂದು ತಬ್ಬು ಕುರುಂಬಾಳೆ, ಹೆಡೆಮೊಟ್ಟೆಗಳನ್ನು ತಂದುಹಾಕಿದರು. ಹೊಸ ಮಡಿಕೆಗಳನ್ನು ತೊಳೆದು ಮಣ್ಣಿನ ವಾಸನೆಯಾಗುತ್ತದೆಂದು ಗೊತ್ತಿದ್ದರೂ ಅದರಲ್ಲಿಯೇ ಒಂದರಲ್ಲಿ ಅವರೇಬೇಳೆಯ ಹುಳಿ, ಮತ್ತೊಂದರಲ್ಲಿ ರಾಗಿಯ ಮುದ್ದೆಗೆ ಇಟ್ಟಳು. ನಾಲ್ಕು ಗಂಟೆಯ ಹೊತ್ತಿಗೆ ಅಡಿಗೆಯಾಯಿತು. ಊಟಕ್ಕೆ ಬಡಿಸಿದರೆ ಪಾರ್ವತಿ ಹಸಿವನ್ನು ತಡೆಯಲಾರದೆ ಅರ್ಧ ಮುದ್ದೆಯನ್ನು ಚೂರುಚೂರು ಮಾಡಿಕೊಂಡು ಹುಳಿಯಲ್ಲಿ ಹೊರಳಿಸಿ ನುಂಗಿತು. ಆದರೆ ಇನ್ನೂ ಎರಡು ವರ್ಷವೂ ಆಗದಿದ್ದ ರಾಮಣ್ಣನಿಗೆ ಅದು ಸೇರದು. ಒಂದು ಸಲ ಹಲ್ಲಿನಲ್ಲಿ ಅಗಿದು ದವಡೆಗೆ ಮೆತ್ತಿಕೊಂಡಾಗ, ‘ನಂಗ್ ಬ್ಯಾಡಾ’ ಎಂದು ರಚ್ಚೆ ಹಿಡಿಯಿತು. ನಂಜಮ್ಮ ಅಚ್ಚೇರಿನಷ್ಟು ರಾಗಿಯ ಹಿಟ್ಟನ್ನು ಇಟ್ಟಿದ್ದಳು. ಬೇಗ ಎರಡು ಹಿಡಿಯನ್ನು ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ ಸಾವೆಯ ಮೇಲೆ ಒಂದು ರೊಟ್ಟಿ ಹಾಕಿ ಕೊಟ್ಟಳು. ಅದನ್ನೇ ಹುಳಿಯಲ್ಲಿ ಅದ್ದಿಕೊಂಡು ಅಗಿಯುತ್ತಾ ಮಗು ಸುಮ್ಮನಾಯಿತು. ಇನ್ನು ಅರ್ಧ ರೊಟ್ಟಿ ಉಳಿಯಿತು.

ಅಷ್ಟರಲ್ಲಿ ಪತಿದೇವರು ಮನೆಗೆ ಬಂದರು. ಅಡಿಗೆ ಮನೆಯ ಬಾಗಿಲಿನಲ್ಲಿ ಒಂದು ನಿಮಿಷ ನಿಂತು ಒಳಗೆ ನೋಡಿದರು. ನೇರವಾಗಿ ಹೊರಗೆ ನಡೆದವರು ಯಾರ ಹಿತ್ತಲಿಗೋ ಹೋಗಿ ಒಂದು ದೊಡ್ಡ ಸೀಳು ಬಾಳೆಯ ಎಲೆ ಹರಿದು ತಂದು ಒಲೆಯ ಹತ್ತಿರ ಅವಳ ಮುಂದೆ ಹಾಕಿಕೊಂಡು ಚಕ್ಕಲಮಕ್ಕಲದಲ್ಲಿ ಮಂಡಿಸಿದರು. ಅಡಿಗೆ ಮಾಡುವಾಗ ಗಂಡ ಊಟಕ್ಕೆ ಬರುತ್ತಾರೆ ಅಥವಾ ಬರುವುದಿಲ್ಲ ಎಂಬ ಯಾವ ಪ್ರಜ್ಞೆಯೂ ಅವಳಿಗೆ ಇರಲಿಲ್ಲ. ಧ್ಯಾನವೆಲ್ಲ. ಒಂದೇ ಸಮನೆ ಹೊಡೆದುಕೊಳ್ಳುತ್ತಿದ್ದ ಮಕ್ಕಳ ಹೊಟ್ಟೆಯ ಮೇಲಿತ್ತು. ಈಗ ಮಕ್ಕಳು ಸುಮ್ಮನಾಗುತ್ತಿವೆ. ಗಂಡ ಬಂದು ಕೂತಿದಾನೆ. ತಾನು ಅವ್ವನ ಜೊತೆ ಇರುವುದಾಗಿ ಹೇಳಿದ್ದವನು ಈಗ ಯಾಕೆ ಬಂದರು? ಅವ್ವನ ಮನೆಯಲ್ಲಿ ಇನ್ನೂ ಮುದ್ದೆ ತಿರುವಿಲ್ಲವೋ, ನಿನ್ನ ಹೆಂಡತಿಯ ಕೈಲೇ ಉಣ್ಣು ಹೋಗು ಎಂದು ಅವರು ಮಗನಿಗೆ ಹೇಳಿದರೋ, ಅಥವಾ ಇವರಾಗಿಯೇ ಇಲ್ಲಿಗೆ ಬಂದಿದ್ದಾರೆಯೋ! ಬೆಳಗಿನಿಂದ, ನೀನು ಸತ್ತೆಯಾ ಬದುಕಿದೆಯಾ ಎಂದು ಕೇಳಿರಲಿಲ್ಲ. ಮಕ್ಕಳ ಮೇಲೆ ನಿಗವಿಲ್ಲ. ಅಯ್ಯನವರು ಧರ್ಮಕ್ಕೆಂದು ತಂದುಕೊಟ್ಟ ಹಿಟ್ಟು ಬೇಳೆ ಬೇಯಿಸಲು, ಒಂದು ಗಡಿಗೆ ನೀರು ಸೇದಿಕೊಡುತ್ತೇನೆಂದು ಬರಲಿಲ್ಲ. ಈಗ ಬಾಳೆ ಎಲೆ ಅದೂ ತಮಗೆ ಬೇಕಾದ ಒಂದೇ ಒಂದು ಸೀಳು – ತಂದುಹಾಕಿಕೊಂಡು ಕುಳಿತಿದ್ದಾರೆ. ಇವರಿಗೆ ಊಟಕ್ಕೆ ಬಡಿಸಬೇಕೊ ಬೇಡವೊ ಎಂಬ ಯೋಚನೆ ಅವಳಿಗೆ ಬರಲಿಲ್ಲ. ಆದರೆ ಅಲ್ಲಿ ಕೂರುವುದಕ್ಕೇ ಬೇಸರವಾಗಿ ಮಕ್ಕಳನ್ನು ಎತ್ತಿಕೊಂಡು ಹೊರಗೆ ಬಂದುಬಿಟ್ಟಳು.

ಅಷ್ಟು ಹೊತ್ತಿಗಾಗಲೇ ಮಕ್ಕಳೆರಡೂ ತೂಕಡಿಸುತ್ತಿದ್ದುವು. ಅವನ್ನು ಮಲಗಿಸಲು ಒಂದು ಚಾಪೆ ಇಲ್ಲ. ತನ್ನ ಒಂದು ಹಳೆಯ ಸೀರೆಯನ್ನೇ ಹಾಸಿ ಮಲಗಿಸಿದಳು. ತನಗೂ ಆಯಾಸವಾಗಿತ್ತು. ಬಲಗೈಯನ್ನು ತೋಳಿಗೆ ಕೊಟ್ಟು ರಾಮಣ್ಣನ ಪಕ್ಕದಲ್ಲಿ ಉರುಟಿದಳು. ತಾನೇ ಎದ್ದು ಹೋಗಿ ಗಂಡನಿಗೆ ಬಡಿಸಲೆ ಎಂಬ ಯೋಚನೆ ಒಂದು ಸಲ ಬಂತು. ಅವರೇ ಒಂದು ಸಲ ಕೂಗಲಿ ಎಂಬ ಮತ್ತೊಂದು ಯೋಚನೆ. ಹೀಗಾಗಿ ಮೇಲೆ ಏಳದೆ ಹಾಗೆಯೇ ಮಲಗಿದಳು. ಬೆಳಗಿನಿಂದ ಆಗಿದ್ದ ಆಯಾಸಕ್ಕೂ ಹೊಟ್ಟೆಗಿಲ್ಲದ ಕಳಲಿಕೆಗೂ ಕಣ್ಣು ಹೊತ್ತಿಕೊಂಡು ಬಂತು.

ಎಚ್ಚರವಾಗುವ ಹೊತ್ತಿಗೆ ಆಗಲೇ ಒಂದು ಗಂಟೆಗೂ ಮೀರಿ ನಿದ್ದೆ ಮಾಡಿದ್ದುದಾಗಿ ಎನಿಸಿತು. ಹೊರಗಡೆ ಬಿಸಿಲು ಕಂದುತ್ತಿತ್ತು. ಗಂಡ ಊಟ ಮಾಡಿದರೋ ಅಥವಾ ಸಿಟ್ಟು ಮಾಡಿಕೊಂಡು ಹೋದರೋ ಎಂಬ ಯೋಚನೆಯೂ ಆಯಿತು. ಎದ್ದು ಒಳಗೆ ಹೋಗಿ ನೋಡುತ್ತಾಳೆ: ಅಡಿಗೆಯ ಮಡಕೆಗಳ ಮೇಲೆ ಬಿಸಿಲುಕೋಲು ಬಿದ್ದಿದೆ. ಅದರ ಪಕ್ಕದಲ್ಲಿ ಅವರು ಊಟ ಮಾಡಿ ಬಿಟ್ಟುಹೋಗಿದ್ದ ಬಾಳೆಯ ಎಲೆ ಹಾಗೆಯೇ ಇದೆ. ಅವಳು ಒಟ್ಟು ಐದು ಮುದ್ದೆ ಕಟ್ಟಿದ್ದಳು. ಅರ್ಧವನ್ನು ಪಾರ್ವತಿ ತಿಂದಿತ್ತು. ಇನ್ನು ನಾಲ್ಕುವರೆ ಮಡಿಕೆಯಲ್ಲಿತ್ತು. ಈಗ ಅರ್ಧ ಮುದ್ದೆ ಮಾತ್ರ ಇದೆ. ಮಡಿಕೆಯ ತಳದಲ್ಲಿ ಬರೀ ಒಂದು ಸೊಟಕದಷ್ಟು ಹುಳಿ ಇದೆ. ಇಷ್ಟನ್ನು ಅವರು ಹೆಂಡತಿಗೆಂದು ಉಳಿಸಿದರೋ ಅಥವ ಹೊಟ್ಟೆಯಲ್ಲಿ ಇನ್ನು ಜಾಗವಿರಲಿಲ್ಲವೋ ಎಂಬುದು ಅವಳಿಗೆ ತಿಳಿಯಲಿಲ್ಲ. ಅವಳ ಹೊಟ್ಟೆಯೂ ಬೆಂಕಿ ಹಾಕಿ ಉರಿಸಿದಂತೆ ಹಸಿಯುತ್ತಿತ್ತು. ಇರುವ ಅರ್ಧ ಮುದ್ದೆಯನ್ನು ತಿನ್ನಬೇಕೆಂದು ಕೈ ಹೋಯಿತು. ಆದರೆ ರಾತ್ರಿಯ ಊಟಕ್ಕೆ ಮಕ್ಕಳಿಗೆ ಏನು ಇಕ್ಕುವುದು? ಇನ್ನೂ ಒಂದೂವರೆ ಪಾವಿನಷ್ಟು ರಾಗಿಯ ಹಿಟ್ಟಿದೆ. ಅದರಲ್ಲಿ ರೊಟ್ಟಿ ಮಾಡಿಕೊಡಬಹುದು. ಆದರೆ ಗಂಡ ನುಂಗಿ ಬಿಟ್ಟು ಹೋಗಿರುವ ಅರ್ಧ ಮುದ್ದೆಯನ್ನು ತಿನ್ನಲು ಅಸಹ್ಯವಾಯಿತು. ಸುಮ್ಮನೆ ಎದ್ದು ಹೊರಗೆ ಬಂದು ಕಂಬದ ಹತ್ತಿರ ಕುಳಿತಳು.

ಮಕ್ಕಳು ಇನ್ನೂ ನಿದ್ರಿಸುತ್ತಿದ್ದವು. ಆಗಲೇ ಹೊತ್ತು ಮುಳುಗುವ ಹೊತ್ತಾಯಿತು. ಇಷ್ಟು ಹೊತ್ತಿನಲ್ಲಿ ಮಲಗಿರಬಾರದು. ಅವಳೇ ಅವನ್ನು ಎಬ್ಬಿಸಿದಳು. ಆಗ ನೆನಪಾಯಿತು: ಈ ದಿನ ತಾನಾಗಲೀ ಮಕ್ಕಳಾಗಲೀ ಸ್ನಾನ ಮಾಡಿಲ್ಲ. ಅವಳು ಸಣ್ಣೇನಹಳ್ಳಿಯಿಂದ ಬಂದ ಮೇಲೆ ಮುಖ ತೊಳೆದು ಹಣೆಗೆ ಮತ್ತೆ ಕುಂಕುಮವನ್ನೂ ಇಟ್ಟಿಲ್ಲ. ಕುಂಕುಮದ ಬಟ್ಟಲು ಸಹ ಅತ್ತೆಯ ಮನೆಯಲ್ಲಿಯೇ ಇದೆ. ಅದನ್ನಾದರೂ ಕೊಡುತ್ತಾರೆಯೋ ಇಲ್ಲವೋ. ರಾತ್ರಿ ಹಚ್ಚುವುದಕ್ಕೆ ಒಂದು ಸೀಮೆ ಎಣ್ಣೆಯ ಬುಡ್ಡಿ ಇಲ್ಲ. ಹತ್ತಿರ ಇನ್ನೂ ನಾಲ್ಕೂಕಾಲು ರೂಪಾಯಿ ಇತ್ತು. ಮಕ್ಕಳನ್ನು ಕರೆದುಕೊಂಡು ಬಾಗಿಲಿಗೆ ಬೀಗ ಮೆಟ್ಟಿ, ಅವಳೇ ಮಗ್ಗದ ಕೇರಿಯ ಚೆನ್ನಶೆಟ್ಟಿಯ ಅಂಗಡಿಗೆ ಹೋಗಿ ಎರಡು ದೀಪದ ಬುಡ್ಡಿ, ಒಂದು ಸೀಸೆ, ಅದರ ಭರ್ತಿ ಎಣ್ಣೆ, ಒಂದು ಕಡ್ಡಿಪೆಟ್ಟಿಗೆಯನ್ನೂ ತಂದಳು. ಒಟ್ಟೂ ಮೂರೂವರೆ ಆಣೆಯಾಯಿತು. ಆರು ಕಾಸಿಗೆ ಮಕ್ಕಳಿಗೆ ಬತ್ತಾಸು ಕೊಡಿಸಿದಳು. ಮನೆಗ ಬಂದು ತನ್ನ ಹಳೇ ಸೀರೆಯ ಒಂದು ಕೊನೆಯನ್ನು ಹರಿದು ಹೊರಗೆ ಬಂದು, ಇನ್ನೂ ಮಬ್ಬಾಗಿದ್ದ ಬೆಳಕಿನಲ್ಲಿ ಒಂದು ಬುಡ್ಡಿಗೆ ಬತ್ತಿ ಹಾಕಿ ಎಣ್ಣೆ ತುಂಬಿದಳು. ಅದರ ಬೆಳಕಿನಲ್ಲಿ ಒಳಗೆ ಕೂತು ಇನ್ನೊಂದಕ್ಕೆ ಎಣ್ಣೆ ಬತ್ತಿ ಹಾಕಿ ಇಟ್ಟಳು. ಮತ್ತೆ ಏನು ಮಾಡುವುದಕ್ಕೂ ತೋಚಲಿಲ್ಲ; ಮೈಯಲ್ಲಿ ಶಕ್ತಿಯೂ ಇರಲಿಲ್ಲ. ಆದುದರಿಂದ ಕಂಬವನ್ನೊರಗಿ ಸುಮ್ಮನೆ ಕುಳಿತಳು. ಮಕ್ಕಳೆರಡೂ ಎರಡು ತೊಡೆಗಳ ಮೇಲೂ ಒಂದೊಂದರಂತೆ ತಲೆ ಇಟ್ಟು ಕಾಲು ಚಾಚಿದವು. ಹೊಸ ಜಾಗ, ಅವಕ್ಕೆ ಏನೋ ಒಂದು ತರದ ಅಂಜಿಕೆ.

ಸ್ವಲ್ಪ ಹೊತ್ತಿನ ಮೇಲೆ ಅವನ್ನು ಒಳಗೆ ಕರೆದುಕೊಂಡು ಹೋಗಿ, ಉಳಿದಿದ್ದ ಅರ್ಧ ರೊಟ್ಟಿಯನ್ನು ರಾಮಣ್ಣನಿಗೂ ಅರ್ಧ ಮುದ್ದೆ ಹಿಟ್ಟನ್ನು ಪಾರ್ವತಿಗೂ ಹಾಕಿದಳು. ರಾಮಣ್ಣ ತನಗೆ ಕೊಟ್ಟ ಅರ್ಧ ಭಾಗವನ್ನು ತಿಂದು ಸಾಕು ಎಂದಿತು. ಪಾರ್ವತಿ ಎರಡು ಗುಳಿಗೆ ಹಿಟ್ಟನ್ನು ಉಳಿಸಿ ಸಾಕು ಎಂದಿತು. ಅವಳ ಹೊಟ್ಟೆಯ ಒಳಗಡೆ ಶೂಲೆ ಬಂದಂತೆ ಆಗುತ್ತಿತ್ತು. ಕಾಲುಭಾಗ ರೊಟ್ಟಿ ಮತ್ತು ಪಾರ್ವತಿ ಬಿಟ್ಟ ಮುದ್ದೆಯನ್ನು, ಅದು ಉಳಿಸಿದ್ದ ಹುಳಿಯಲ್ಲಿ ಹೊರಳಿಸಿ ತಿಂದಳು. ಉಳಿದಿದ್ದ ಒಂದೂವರೆ ಪಾವಿನಷ್ಟು ರಾಗಿಯ ಹಿಟ್ಟಿನಲ್ಲಿ ರೊಟ್ಟಿಯನ್ನಾದರೂ ಬಡಚಿ ತಿನ್ನುವ ಮನಸ್ಸಾಯಿತು. ಆದರೆ ಏನೋ ಒಂದು ತರಹ ಬೇಸರ ತಿರಸ್ಕಾರಗಳಿಂದ ಸುಮ್ಮನೆ ಮೇಲೆ ಎದ್ದು ಹುಡುಗರನ್ನು ಕರೆದುಕೊಂಡು ಎಡಗೈಯಲ್ಲಿ ದೀಪದ ಬುಡ್ಡಿ ಹಿಡಿದು ನಡುಮನೆಗೆ ಬಂದಳು. ಅದೇ ಹೊತ್ತಿಗೆ ಗಂಡ ಹಾಸಿಗೆಯ ಸುರುಳಿಯನ್ನು ಹೆಗಲ ಮೇಲೆ ಹೊತ್ತು ಮನೆಗೆ ಬಂದರು. ಹುಡುಗರನ್ನು ಯಾವುದರ ಮೇಲೆ ಮಲಗಿಸಬೇಕೆಂಬ ಯೋಚನೆಯಲ್ಲಿರುವಾಗ ಅವರು ಇಷ್ಟಾದರೂ ಮಾಡಿದರಲ್ಲ ಎಂಬ ಸಮಾಧಾನವಾಯಿತು. ಅವರು ತಂದಿದ್ದ ಸುರುಳಿಯನ್ನು ಬಿಚ್ಚಿ ನೋಡಿದಳು. ಅವಳ ಪ್ರಸ್ತದಲ್ಲಿ ತೌರಿನವರು ಕೊಟ್ಟಿದ್ದ ಎರಡು ಜಾನ, ಎರಡು ಜಮಖಾನ, ದಿಂಬು ಮತ್ತು ಕರಿಯ ಕಂಬಳಿಗಳಿದ್ದವು. ಒಂದು ಜಾನವಂತೂ ಪಾರ್ವತಿ ರಾಮಣ್ಣರು ಉಚ್ಚೆ ಹುಯ್ದು ಹುಯ್ದು ಕರಗುವ ಸ್ಥಿತಿಗೆ ಬಂದಿತ್ತು. ಕಂಬಳಿ ಅರ್ಧ ಜೀರ್ಣವಾಗಿತ್ತು. ಮಕ್ಕಳಿಬ್ಬರಿಗೂ ಜೊತೆಯಲ್ಲಿ ಒಂದು ಜಾನ ಹಾಕಿ ಅದರ ಪಕ್ಕದಲ್ಲಿ ತಾನೂ ಒಂದು ಜಮಖಾನ ಹಾಸಿ ದಿಂಬು ಇಟ್ಟುಕೊಂಡಳು. ಗಂಡನಿಗೆ ಬೇರೆ ಅಂಕಣದಲ್ಲಿ ಹಾಸಿ ಕೊಟ್ಟಳು.
ಅದನ್ನು ನೋಡುತ್ತಾ ನಿಂತಿದ್ದ ಅವರು ಸಿಡಾರನೆ ಕೇಳಿದರು; ‘ನನ್ನ ಹಾಸಿಗೇನ ನಿಂದ್ರಜೊತೆಗೇ ಯಾಕೇ ಹಾಕ್ಲಿಲ್ಲ?’
ಅವಳು ಮಾತನಾಡಲಿಲ್ಲ. ರಾಮಣ್ಣನನ್ನು ಮಲಗಿಸಿ ಬೆನ್ನು ತಟ್ಟುತ್ತಿದ್ದಳು.
‘ನೀನು ಬ್ಯಾರೆ ಹಾಸ್ಲಿ ಅಂತ್ಲೇನೇ ನಾನು ಅಲ್ಲಿಂದ ಕಷ್ಟಪಟ್ಟು ಹಾಸಿಗೆ ಹೊತ್ಕಂಡ್ ಬಂದದ್ದು?’
ಅವಳೂ ಈಗಲೂ ಮಾತನಾಡಲಿಲ್ಲ.
‘ಅದ್ಯಾಕೆ ಮುಂಡೆ, ಸುಮ್ನಿದೀಯ?’
ತಾಳ್ಮೆ ಕೆಡಬಾರದೆಂದು ಅವಳು ಮತ್ತೆ ನಿಶ್ಚಯಿಸಿಕೊಂಡು ಹೇಳಿದಳು ‘ನಂಗಾಗಲೇ ಆರು ತಿಂಗಳು ತುಂಬ್ತು’
‘ಏನಂತೆ ತುಂಬಿದ್ರೆ?’ – ಎಂದು ಅವರೇ, ಬೇರೆ ಅಂಕಣದಲ್ಲಿದ್ದ ತಮ್ಮ ಹಾಸಿಗೆಯನ್ನು ಅವಳ ಜಮಖಾನದ ಹತ್ತಿರಕ್ಕೆ ಎಳೆದುಕೊಂಡರು. ಉರಿಯುತ್ತಿದ್ದ ಬುಡ್ಡಿಯನ್ನು ಕೈಲಿ ಹಿಡಿದು ಅಡಿಗೆ ಮನೆಗೆ ಹೋಗಿ ನೋಡಿ ಒಳಗಿನಿಂದಲೇ ಕೂಗಿ ಕೇಳಿದರು; ‘ನಂಗೇನೂ ಇಟ್ಟೇ ಇಲ್ವಲ್ಲ ಯಾಕೆ?’
‘ಮಧ್ಯಾಹ್ನ ನೀವು ಊಟ ಮಾಡಿ ಏನು ಉಳಿಸಿಹೋಗಿದ್ರಿ ಇಡೂಕೆ?’- ಅವಳು ಹೊರಗಿನಿಂದ ಉತ್ತರ ಕೊಟ್ಟಳು.

ಅವರು ಆ ಮಾತಿಗೆ ಉತ್ತರ ಹೇಳಲಿಲ್ಲ. ಮೊರದಲ್ಲಿ ಇದ್ದ ಒಂದೂವರೆ ಪಾವು ಹಿಟ್ಟಿಗೆ ಉಪ್ಪು ಹಾಕಿ ಕಲಸಿದರು. ತಾವೇ ಒಲೆ ಹೊತ್ತಿಸಿ, ಸಾವೆಯ ಮೇಲೆ ದಪ್ಪನಾಗಿ ಎರಡು ರೊಟ್ಟಿ ಹಾಕಿ ತಮಗೆ ತಿಳಿದಂತೆ ಬೇಯಿಸಿದರು. ಅದನ್ನೇ ಬಿಸಿಬಿಸಿಯಾಗಿ ತಿಂದು, ಮಡಕೆಯಲ್ಲಿಯೇ ಎತ್ತಿ ನೀರು ಕುಡಿದು ದೀಪದ ಬುಡ್ಡಿ ಹಿಡಿದು ನಡುಮನೆಗೆ ಬಂದರು. ಅಷ್ಟು ಹೊತ್ತಿಗೆ ಮಕ್ಕಳಿಬ್ಬರಿಗೂ ನಿದ್ದೆ ಬಂದಿತ್ತು. ಹೆಂಡತಿ ಕಣ್ಣು ಮುಚ್ಚಿಕೊಂಡು ಮಲಗಿದ್ದಳು. ಅವರು ಹೋಗಿ ಪಕ್ಕದಲ್ಲಿದ್ದ ತಮ್ಮ ಮೆತ್ತನೆಯ ಹಾಸಿಗೆಯಲ್ಲಿ ಪವಡಿಸಿದರು. ನಂಜಮ್ಮನಿಗೆ ನಿದ್ದೆ ಬಂದಿರಲಿಲ್ಲ. ಬರುವುದು ಸಾಧ್ಯವಿರಲಿಲ್ಲ. ಬೆಳಗಿನಿಂದ ಏನೂ ಬೀಳದಿದ್ದ ಅವಳ ಹೊಟ್ಟೆಯ ಒಳಗೆ ಉರಿ ಹೊತ್ತಿದಂತೆ ಆಗಿತ್ತು. ಸಂಕಟ ಕಳಲಿಕೆ. ಪಾಪಿ ಹೊಟ್ಟೆಗೆ ಒಂದು ದಿನ ಇಲ್ದೇ ಇದ್ರೆ ಅದೇನು ಗೋಳಾಡ್ಸುತ್ತೆ! ಎಂಬ ಪ್ರಶ್ನೆಯನ್ನು ಅವಳೇ ಕೇಳಿಕೊಂಡಳು. ಇಷ್ಟು ಹಸಿವಾಗಿದ್ದರೂ ತನ್ನ ಹೊಟ್ಟೆ ಭಾರವಾಗಿರುವ ನೆನಪಾಯಿತು ಬಸುರಿ ಉಪವಾಸ ಇರಬಾರ್ದು. ನಾವು ಹ್ಯಾಗಾದರೂ ಇರ್ತೀವಿ ಹೊಟ್ಟೇಲಿರೂ ಮಗೂಗೆ ಆಹಾರ ಹ್ಯಾಗೆ ಸಿಕ್ಕಬೇಕು? ನಾನಿವತ್ತು ಮಧ್ಯಾಹ್ನ ಅವ್ರು ಉಳಿಸಿದ್ದ ಅರ್ಧ ಮುದ್ದೇನಾದ್ರು ತಿನ್ನ ಬೇಕಾಗಿತ್ತು- ಎಂಬ ಯೋಚನೆ ಬಂತು. ಆದರೆ ರಾತ್ರಿಗೆ ಮಕ್ಕಳಿಗೆ ಏನೂ ಉಳಿಯುತ್ತಿರಲಿಲ್ಲ ಎಂಬ ನೆನಪಾಗಿ, ತಾನೂ ತಿನ್ನದೆ ಇದ್ದುದೇ ಸರಿಯಾಯಿತೆಂದುಕೊಂಡಳು. ಉಳಿದಿದ್ದ ಒಂದೂವರೆ ಪಾವು ಹಿಟ್ಟಿನಲ್ಲಿ ರೊಟ್ಟಿಯನ್ನಾದರೂ ತಟ್ಟಿ ತಿನ್ನಬೇಕಾಗಿತ್ತು. ಆದರೆ ನಾಳೆ ಬೆಳಗ್ಗೆ ಎದ್ದ ತಕ್ಷಣ ಮಕ್ಕಳು ಅತ್ತಾಗ ಏನು ಮಾಡಿಕೊಡುವುದು ಎಂಬ ಯೋಚನೆಯೂ ಮನಸ್ಸಿನಲ್ಲಿತ್ತು. ಈಗ ಅದೇ ಹಿಟ್ಟನ್ನು ಕಲಸಿ ರೊಟ್ಟಿ ಮಾಡಿಕೊಂಡು, ಇವೇ ಮಕ್ಕಳನ್ನು ಹುಟ್ಟಿಸಿದ ಅಪ್ಪ ತಿಂದು ಬಂದಿದ್ದಾರೆ. ಸಾಯಂಕಾಲ ತಾನೇ ನಾಲ್ಕು ಮುದ್ದೆ ನುಂಗಿದ ಇವರಿಗೆ ಇಷ್ಟು ಬೇಗ ಹ್ಯಾಗೆ ಹಸಿವಾಯಿತು? ಕೆಲವರಿಗೆ ಅಗ್ನಿ ಪುಟ ತುಂಬ ಇರುತ್ತಂತೆ-ಎಂಬ ನೆನಪಾಯಿತು. ಮಧ್ಯಾಹ್ನ ತಾವೇ ಕೂತು ಬಾಳೆ ಎಲೆಯ ಮೇಲೆ ಹಾಕಿಕೊಂಡು ಉಣ್ಣುವಾಗ ಅವರಿಗೆ ಹೆಂಡತಿಯ ಹೊಟ್ಟೆಯ ಯೋಚನೆ ಬರಲಿಲ್ಲ. ಈಗ ರೊಟ್ಟಿ ತಿನ್ನುವಾಗ ಬರಲಿಲ್ಲ. ಈಗ ಬಂದು ಪಕ್ಕದಲ್ಲಿ ಮಲಗಿ ಹತ್ತಿರ ಬಂದಿದ್ದಾರೆ. ಅವಳ ಆರೋಗ್ಯವೇನು, ಎಷ್ಟು ತಿಂಗಳಾಗಿದೆ, ಬೆಳಗಿನಿಂದ ಹೊಟ್ಟೆಗೆ ತಿಂದಳೇ ಇಲ್ಲವೇ, ಮೈಯಲ್ಲಿ ಶಕ್ತಿ ಇದೆಯೇ ಅಥವಾ ಸಂಕಟ ಪಡುತ್ತಿದ್ದಾಳೆಯೇ ಎಂಬ ಯಾವ ಯೋಚನೆಯೂ ಇಲ್ಲ? ‘ಎದ್ದು ದೂರ ಬಿದ್ಕಳಿ’- ಎನ್ನಬೇಕೆಂದು ಮನಸ್ಸಿನಲ್ಲಿ ಬಂತು.

ಆದರೆ ತನ್ನ ಅವ್ವನ ಜೊತೆ ಇರುವುದಾಗಿ ಹೇಳಿದ್ದ ಗಂಡ ಮಧ್ಯಾಹ್ನ ತಾನಾಗಿಯೇ ಬಂದು ಮುದ್ದೆ ನುಂಗಿ, ಈಗ ರೊಟ್ಟಿ ತಿಂದು, ತನ್ನ ಹತ್ತಿರ ಮಲಗಿಕೊಳ್ಳುಕ್ಕೆ ಅಂತಲೇ ಹಾಸಿಗೆ ಹೊತ್ತುಕೊಂಡು ಬಂದರಂತೆ. ಈಗ ಅವರನ್ನು ಹತ್ತಿರ ಸೇರಿಸದೆ ಇದ್ದರೆ ತನ್ನನ್ನೂ ಮಕ್ಕಳನ್ನೂ ಬಿಟ್ಟು ಹೋಗಿ ಮತ್ತೆ ಅವ್ವನ ಜೊತೆ ಸೇರಿಕೊಳ್ಳಬಹುದು. ಅವರು ಅವ್ವನ ಕುಟ್ಟೆ ಇರಾಕಿಲ್ಲ, ಅದೆಲ್ಲ ಎಲ್ಡು ದಿನ ಅಂತ ಅಯ್ಯನವರು ಹೇಳಿದ ಮಾತಿನ ಅರ್ಥ ಇದೇ ಏನೋ! ನನ್ನ ಸಂಸಾರ ಅಂತ ಉಳೀಬೇಕಾದ್ರೆ ಈ ಕರ್ಮವನ್ನೂ ಅನುಭವಿಸಬೇಕು ಎಂದು ನಿರ್ಧರಿಸಿ ಸುಮ್ಮನಾದಳು. ಸಣ್ಣೇನಹಳ್ಳಿಗೆ ಹೋಗಿ ಬಂದ ಆಯಾಸ, ಮಧ್ಯಾಹ್ನದಿಂದ ಮಾಡಿದ್ದ ಕೆಲಸ, ಬಸುರು ತುಂಬಿದ್ದರೂ ಒಂದು ಮುರುಕು ಹಿಟ್ಟು ಕಾಣದಿದ್ದ ಹೊಟ್ಟೆಯಿಂದ ಅವಳ ಮೈ ಸೋತು ಮಲಗಿತ್ತು. ಚೆನ್ನಿಗರಾಯರಿಗೆ ಆಯಾಸವಾಗುವ ಕಾರಣವೇನೂ ಇರಲಿಲ್ಲ.

ಇವಳಿಗೆ ಇದ್ದಕ್ಕಿದ್ದಹಾಗೆಯೇ ತನ್ನ ತಂದೆಯ ನೆನಪಾಯಿತು. ಅಪ್ಪ ದೈತ್ಯ ಸ್ವಭಾವದವನು. ಯಾವುದೂ ಲೆಕ್ಕವಿಲ್ಲ. ಕೋಪ ಬಂದರೆ ಹೆಂಡತಿಯಾಗಲಿ ಮಕ್ಕಳಾಗಲಿ ತಾಯಿಯಾಗಲಿ, ಸಾಯುವರೇ ಉಳಿಯುವರೇ ಎಂಬುದನ್ನೂ ನೋಡದೆ ಹೊಡೆಯುವ ಯಮರಾಯ ಬುದ್ಧಿ. ಆದರೆ ಅಂತಃಕರಣ ತುಂಬಿಬಂದಾಗ ಅಷ್ಟೇ ಮರುಗುತ್ತಾರೆ. ಕಲ್ಲೇಶನಿಗೆ ಪ್ಲೇಗು ಆಗಿದ್ದಾಗ ಒಂದು ರಾತ್ರಿಯೆಲ್ಲ ಅವನ ತಲೆಯನ್ನು ತೊಡೆಯ ಮೇಲೆಯೇ ಇಟ್ಟುಕೊಂಡು ಕೂತಿದ್ದರಂತೆ. ದೇವರೇ, ಗಂಡ ಹೆಂಡ್ತಿನ ಹೊಡೆದರೂ ಸರಿ- ಅವಳು ಉಂಡಳೇ ಉಪವಾಸ ಮಾಡಿದಳೇ, ಮಕ್ಕಳ ಹೊಟ್ಟೆಗೆ ಏನಾಯ್ತು ಅಂತ ಕೇಳುವಷ್ಟಾದರೂ ಅಂತಃಕರಣ ಇಲ್ಲದಿದ್ದರೆ ಅದೆಂಥ ಸಂಸಾರ? ಇಂಥಾ ಸಂಸಾರದಲ್ಲಿ ಯಾಕ್ ಬದುಕಿರ್ಬೇಕು?-ಎಂದು ಅವಳ ಮನಸ್ಸು ಕೇಳಿಕೊಂಡಿತು. ಅಕ್ಕಮ್ಮನ ನೆನಪು ಬಂತು. ತಾನು ಹುಟ್ಟಿದ ಮೇಲೆ ತಾಯಿಯ ಹಾಲು ಕುಡಿಯಲೇ ಇಲ್ಲವಂತೆ. ಮಗು ಹುಟ್ಟಿತು. ತಾಯಿ ಹಾಗೆಯೇ ಕಣ್ಣು ಮುಚ್ಚಿದಳು. ಆಗಿನಿಂದ ಅಕ್ಕಮ್ಮನೇ ನನ್ನ ಸಾಕಿದ್ದು. ನಾನು ಅಂದರೆ ಕರುಳು ಇಟ್ಟುಕೊಂಡಿರೋದು ಅಕ್ಕಮ್ಮ ಒಬ್ಬಳೇ. ಅವಳಿಗೂ ಎಪ್ಪತ್ತೈದರ ಮೇಲೆ ಆಯಿತು. ಅವ್ಳುನ್ನಾದ್ರೂ ಕರೆಸಿಕೋಬೇಕು. ನಮಗೇ ತಿನ್ನೋಕೆ ಇಲ್ಲ. ಅವ್ಳುನ್ನ ಕರಸ್ಕಂಡ್ ಏನ್ ಮಾಡೂದು? ಬಾಣಂತನ ಮಾಡೋರು ಯಾರು? ಇನ್ನು ನಾಗಲಾಪುರಕ್ಕೆ ಹೋಗೂದಂತೂ ಮುಗಿದೇ ಹೋಯ್ತು. ಇಲ್ಲಿಗೇ ಅಕ್ಕಮ್ಮುನ್ನ ಕರಸ್ಕಂಡ್ರೆ ಬಂದು ಒಂದು ತಿಂಗಳಾದ್ರೂ ನಂಗೂ ಮಗೂಗು ಒಂದಿಷ್ಟು ಎಣ್ಣೆ ನೀರು ಹಾಕ್ತಾಳೆ. ಅವ್ಳು ಬಂದ್ರೂ ಮನೇಲಿ ತಿನ್ನುಕ್ಕೇ ಇಲ್ಲ. ಒಂದು ಹನಿ ಹರಳೆಣ್ಣೆ, ಒಂದಿಷ್ಟು ಸಿಗೇಪುಡಿಯೂ ಇಲ್ಲ. ಈ ಯೋಚನೆಯ ಜೊತೆಗೆ, ನಾಳೆ ಬೆಳಿಗ್ಗೆ ಎದ್ದರೆ ಮಡಕೆಗಳು ಖಾಲಿ ಎಂಬ ನೆನಪಾಯಿತು. ಮಕ್ಕಳಿಗೆ ಏನು ಕೊಡೂದು ಎಂಬುದರ ಜೊತೆಗೆ ತನಗೇ ಆಗಿರುವ ಹಸಿವು ಅರಿವಿಗೆ ಬಂತು. ಒಂದೆ ಮಗ್ಗುಲಿಗೆ ಮಲಗಿ ಮಲಗಿ ಬಲಭಾಗ ನೋವು ಬಂದಿತು. ಬೇರೆ ಮಗ್ಗುಲಾಗಲೆಂದು ಎಡಗಡೆಗೆ ತಿರುಗಿದಳು. ಯಜಮಾನರು ಪಕ್ಕದಲ್ಲಿ ಅಂಗಾತ ಮಲಗಿ ಗೊರಕೆ ಎಳೆದು ಬಿಡುತ್ತಿದ್ದರು. ಅವಳಿಗೆ ಅಸಹ್ಯವಾಯಿತು. ಎದ್ದು ತನ್ನ ಜಮಖಾನ ಮತ್ತು ದಿಂಬನ್ನು ಎತ್ತಿ ಕತ್ತಲೆಯಲ್ಲಿಯೇ ಮಕ್ಕಳ ಆ ಕಡೆಗೆ ಹಾಕಿಕೊಂಡು, ನಿದ್ದೆ ಮಾಡುತ್ತಿದ್ದ ಪಾರ್ವತಿಯ ಮೇಲೆ ಎಡತೋಳು ಇಟ್ಟು ಮಲಗಿದಳು.

– ೬ –

ಬೆಳಿಗ್ಗೆ ಎದ್ದು ಗಡಿಗೆಯಲ್ಲಿ ನೀರು ಸೇದಿ ಮುಖ ತೊಳೆದುಕೊಂಡಳು. ಮಕ್ಕಳ ಮುಖವನ್ನು ತೊಳೆದು ತನ್ನ ಸೀರೆಯಿಂದ ಒರೆಸಿದಳು. ನಿಧಾನವಾಗಿ ಅಡಿಗೆಮನೆಗೆ ಹೋಗಿ ಒಲೆ ಬೂದಿ ತೆಗೆದು ಸಾರಿಸಿ, ನೆನ್ನೆ ಅಡಿಗೆ ಮಾಡಿದ್ದ ಮಡಿಕೆಗಳನ್ನು ತೊಳೆದಳು. ನೆನ್ನೆ ಹಿಟ್ಟು ಮಾಡಿದ್ದ ಮಡಿಕೆಗೆ ನೀರು ಹಾಕಿ ಇಡುವುದು ಮರೆತಿದ್ದರಿಂದ ಒಳಭಾಗವೆಲ್ಲ ಒಣಗಿ ಹಿಡಿದುಕೊಂಡಿತ್ತು. ಅದರ ಭರ್ತಿ ನೀರು ತುಂಬಿ ನಡುಮನೆಗೆ ಬಂದರೂ ಯಜಮಾನರು ಬೀದಿಯ ಬಾಗಿಲಿನ ಕಡೆಗೆ ಕಾಲು ಚಾಚಿ ಸುಖವಾಗಿ ಗೊರಕೆ ಎಳೆಯುತ್ತಿದ್ದರು. ಬೀದಿಯ ಬಾಗಿಲು ಅರ್ಧ ತೆಗೆದು ಬರೀ ನೀರು ಹಾಕಿ ಮುಂಭಾಗವನ್ನು ಸಾರಿಸಿದಳು. ಆದರೆ ಇಡಲು ರಂಗೋಲಿ ಇರಲಿಲ್ಲ. ಪಕ್ಕದ ಮನೆಯ ಚನ್ನಶೆಟ್ಟಿಯ ಸೊಸೆಯನ್ನು ಕೇಳಿ ಒಂದು ಕರಟ ರಂಗೋಲಿ ತಂದು ಬಾಗಿಲಿಗೆ ಹಾಕಿ, ಉಳಿದಿದ್ದನ್ನು ಒಳಗಿಟ್ಟು ಸುಮ್ಮನೆ ಕುಳಿತುಕೊಂಡಳು. ಮುಂದೆ ಮಾಡಲು ಕೆಲಸವೂ ಇರಲಿಲ್ಲ. ಆ ದಿನ ಹೊಟ್ಟೆಯ ಪಾಡು ಏನೆಂಬುದೂ ತಿಳಿಯಲಿಲ್ಲ.
ಬೀದಿಯಲ್ಲಿ ಒಂದು ಎಮ್ಮೆ ಗಟ್ಟಿಯಾಗಿ ಒರಲಿದ ಸದ್ದಿಗೆ ಎಚ್ಚರವಾದ ಚೆನ್ನಿಗರಾಯರು – ‘ಥುತ್ ಇದರವ್ವನ….. ಎಂದು ಮೇಲೆ ಎದ್ದರು. ಹಾಸಿಗೆಯ ಮೇಲೆ ಕುಳಿತೇ ಕೌಸಲ್ಯಾ ಸುಪ್ರಜಾರಾಮ ನುಡಿದು ಕೈಗಳನ್ನು ಮಸೆದು ಪಂಚ ಕನ್ಯಾಃ ಸ್ಮರೇನ್ನಿತ್ಯಂ ಹೇಳಿಕೊಂಡು ಮೇಲೆ ಎದ್ದು ಕೆರೆ ಏರಿಯ ಕಡೆಗೆ ಹೋದರು. ನಂಜಮ್ಮ ಅವರ ಹಾಸಿಗೆ ಸುತ್ತಿ ಇಡುವ ಹೊತ್ತಿಗೆ ಮಾದೇವಯ್ಯನವರ ಹೆಗಲ ಮೇಲೆ ಒಂದು ಚೀಲ ಹೊತ್ತುಕೊಂಡು ಬಂದು ಚೀಲವನ್ನು ಕಂಬದ ಹತ್ತಿರ ಇಳಿಸಿ ಹೇಳಿದರು: ‘ನಾನು ಹಳ್ಳೀಕಡೆ ಭಿಕ್ಷಕ್ಕೆ ಓಯ್ತೀನಿ, ಇದ್ರಾಗೆ ಇಪ್ಪತ್ತು ಸೇರು ರಾಗಿ ನಾಕು ಸೇರು ಅವರೇಕಾಳು ಇವೆ. ನೀವು ಮಾಡ್ಕಳಿ.’
ಈ ದಿನದ ಕಥೆ ಏನು ಎಂದು ಯೋಚಿಸುತ್ತಿದ್ದಾಗ ಮನೆಗೆ ದಿನಸಿ ಬಂದದ್ದರಿಂದ ಒಂದು ವಿಧದಲ್ಲಿ ಸಂತೋಷವಾದರೂ ಅವಳು ಹೇಳಿದಳು: ‘ಅಯ್ನೋರೇ, ನೆನ್ನೆ ದಿನವೂ ಕೊಟ್ರಿ. ಇವತ್ತು ಇದ ತಂದಿದೀರಿ. ನೀವೇ ಊರೂರು ತಿರುಗಿ ಭಿಕ್ಷೆಮಾಡೋರು. ಇದುನ್ನ ಮತ್ತೆ ಹ್ಯಾಗೆ ಕೊಡ್ಳಿ ನಾನು?’‘ಅವ್ವಾ’ ನಾನು ಕರ್ಚು ಮಾಡಾದು ಹ್ಯೆಂಗೆ ಅಂತ ನಿಮಗೇ ಗೊತ್ತಲ್ಲಾ? ನನ್ನ ಹಂಗೇ ಊರಿಗೆ ಸಾಧು ಸನ್ಯಾಸಿಗಳು ಬಂದ್ರೆ ಯೆಡೆಮಾಡಿ ಇಕ್ತೀನಿ. ಇದರಿಂದ ನೀವು ಒಂದ್ ಯೆಂಟು ದಿನ ಉಂಡ್ರೆ ಏನಾಯ್ತದೆ? ಮಾಡ್ಕಂಡ್ ಉಣ್ನೆ. ಶಿವ ಅಟ್ಹೊತ್ತಿಗೆ ಏನಾರಾ ದಿಕ್ ತೋರುಸ್ತಾನೆ’ – ಎಂದು ಎಂದು ಹೇಳಿ ಅವರು ಹೊರಟುಹೋದರು. ಅಯ್ಯನವರು ನೆನ್ನೆ ತಂದು ಕೊಟ್ಟಿದ್ದ ಮೊರ ಮನೆಯಲ್ಲೇ ಇತ್ತು. ಅವಳು ಅದರಲ್ಲಿ ಎರಡು ಸೇರು ರಾಗಿ ಮಾಡಿ ಬೀಸಲು ಕೂತಳು. ಆ ಮನೆಯಲ್ಲಿಯೇ ಹದಿದ ಬೀಸುವ ಕಲ್ಲು, ಒರಳು ಕಲ್ಲು, ಗುಂಡುಗಳೆಲ್ಲ ಇದ್ದುವು. ಆದರೆ ಒಂದು ಪಾವು ಬೀಸುವುದರಲ್ಲಿಯೇ ಸುಸ್ತಾಗಿ ಹೋಯಿತು. ನೆನ್ನೆ ತಾನು ಏನೂ ತಿಂದಿಲ್ಲವೆಂಬ ನೆನಪಾಗಿ ಐದು ನಿಮಿಷ ಸುಧಾರಿಸಿಕೊಳ್ಳುತ್ತ ಕುಳಿತಳು. ಅಷ್ಟರಲ್ಲಿ ಗಂಡ ಮನೆಗೆ ಬಂದರು. ರಾಗಿ ಎಲ್ಲಿಂದ ಬಂತು, ಏನು ಮಾಡಿದೆ ಎಂದು ಅವರು ಏನೂ ಕೇಳಲಿಲ್ಲ. ಸುಮ್ಮನೆ ಕಂಬವನ್ನೊರಗಿ ಕೂತು ಜೇಬಿನಲ್ಲಿದ್ದ ತಾಂಬೂಲ ಮಡಿಸಿ ಹೊಗೆಸೊಪ್ಪು ತಿಕ್ಕಲು ಪ್ರಾರಂಭಿಸಿದರು.
‘ನನ್ನ ಕೈಲಾಗುಲ್ಲ. ಇದುನ್ನೊಂದಿಷ್ಟು ಬೀಸಿಯಾದ್ರೂ ಕೊಡ್ತೀರಾ?’- ನಂಜಮ್ಮ ಕೇಳಿದಳು.
ಅವರು ಮಾತನಾಡಲಿಲ್ಲ. ಅವಳು ಮತ್ತೆ ಕೇಳಿದಾಗ – ‘ಗಂಡುಸ್ರು ಬೀಸೂ ಕಲ್ಲು ತಿರುಗುಸ್ತಾರೇನೆ? ನನ್ನೇನು ಹೆಂಗ್ಸು ಅಂತ ತಿಳ್ಕಂಡಿದಿಯೋ ಗಂಡ್ಸು ಅಂತ ತಿಳ್ಕಂಡಿದಿಯೋ?’ ಎಂದು ಗರ್ಜಿಸಿದರು.
ತಾಳ್ಮೆಗೆಡಕೂಡದೆಂದು ತನ್ನ ಸಂಕಲ್ಪ ನೆನೆಪಾಗಿ ನಂಜಮ್ಮ ಪುನಃ ಮಾತನಾಡಲಿಲ್ಲ. ಮಗ್ಗದ ಕೇರಿಗೆ ಹೋಗಿ ಪುಟ್ಟವ್ವನನ್ನು ಕರೆದುಕೊಂಡು ಬಂದಳು. ಎರಡು ಬಿಲ್ಲೆಗೆ ಒಂದು ಮರ ರಾಗಿ ಬೀಸಿಕೊಡುವುದಾಗಿ ಪುಟ್ಟವ್ವ ಬೀಸುವ ಕಲ್ಲಿನ ಮುಂದೆ ಕುಳಿತಳು. ನಂಜಮ್ಮ ಚೆನ್ನಶೆಟ್ಟಿಯ ಅಂಗಡಿಗೆ ಹೋಗಿ ಮೆಣಸಿನ ಕಾಯಿ, ಕೊತ್ತಂಬರಿ ಬೀಜ, ಉಪ್ಪು, ಎಣ್ಣೆ ಮೊದಲಾಗಿ ಒಟ್ಟು ಒಂದು ರೂಪಾಯಿಯ ಸಾಮಾನುಗಳನ್ನು ತಂದು ಅಡಿಗೆ ಪ್ರಾರಂಭಿಸಿದಳು. ಹನ್ನೊಂದು ಗಂಟೆಯ ಹೊತ್ತಿಗೆ ಅವರೇಕಾಳಿನ ಹುಳಿ, ಹಿಟ್ಟು, ರಾಮಣ್ಣನಿಗೆ ರೊಟ್ಟಿ ಸಿದ್ಧವಾದುವು. ನೆನ್ನೆ ಸಹ ಅವಳು ಸ್ನಾನ ಮಾಡಿರಲಿಲ್ಲ. ಬಾವಿಯಲ್ಲಿ ನೀರು ಸೇದಿ ಹುಡುಗರಿಗೂ ಮೈ ತೊಳೆದು ತಾನೂ ಮಡಿ ಉಟ್ಟು ಬೇರೆ ಸೀರೆಯುಟ್ಟು ಒಳಗೆ ಬಂದಳು. ನೆನ್ನೆಯಂತೆ ಯಜಮಾನರು ಬಾಳೆ ಎಲೆ ಹಾಕಿಕೊಂಡು ಹಿಟ್ಟಿನ ಮುದ್ದೆ ನುಂಗುತ್ತಿದ್ದಾರೆ. ತನಗೂ ಮಕ್ಕಳಿಗೂ ಉಳಿಸಿ ಎಂದು ಅವಳು ಹೇಳಲಿಲ್ಲ. ಆದರೆ ಅವರೇ ಮೂರು ಮುದ್ದೆಗಳನ್ನು ಉಳಿಸಿ ಮೇಲೆ ಎದ್ದರು. ಅವಳು ಒಟ್ಟು ತಿರುವಿದ್ದುದು ಏಳು ಮುದ್ದೆ ಅವಳು ಹುಳಿ ಹಾಕಿಕೊಂಡು ಪಾರ್ವತಿಯೊಡನೆ ಊಟಕ್ಕೆ ಕುಳಿತಳು. ತಾನು ಒಟ್ಟು ಒಂದೂವರೆ ಮುದ್ದೆ ನುಂಗಿದಳು. ಪಾರ್ವತಿಗೆ ಅರ್ಧಕ್ಕೆ ಸಾಕಾಯಿತು. ರೊಟ್ಟಿ ಕಡಿದ ರಾಮಣ್ಣ ನಡುವೆ ನಾಲ್ಕು ಸಲ ನೀರು ಕುಡಿದು ‘ಅನ್ನ’ ಎಂದು ಅಳಲು ಪ್ರಾರಂಭಿಸಿತು. ‘ಅಂಗ್ಡೀಲಿ ಒಂದೂವರಾಣೆ ಕೊಟ್ಟು ಒಂದು ಸೇರು ಅಕ್ಕಿನಾದ್ರೂ ತರ್‌ಬೇಕಾಗಿತ್ತು’ – ಎಂದು ಯೋಚಿಸುತ್ತಾ ಅವಳು ಊಟ ಮುಗಿಸಿದಳು. ಹೊಟ್ಟೆಗೆ ಮುದ್ದೆ ಬಿದ್ದ ತಕ್ಷಣ ಕಳಲಿಕೆ ಬಂದಂತಾಗಿ ಹೊರಗೆ ಬಂದು ಜಮಖಾನ ಹಾಕಿಕೊಂಡು ಮಲಗಿದಳು.
ರಾತ್ರಿಗೆ ಅಡಿಗೆ ಮಾಡಲು ಸೌದೆ ಇಲ್ಲ. ನೆನ್ನೆ ಅಯ್ಯನವರು ತಂದು ಕೊಟ್ಟಿದ್ದುದು ಮುಗಿದು ಹೋಗಿದೆ. ಗಂಡ ಮಲಗಿದ್ದರು. ‘ಎಲ್ಲಾದ್ರೂ ಹೋಗಿ ಒಂದಿಷ್ಟು ಸೌದೆ ತಂದಿದ್ರೆ ಆಗ್ತಿತ್ತು ’ -ಎಂದಳು.
‘ನಾನ್ಯಾವನ್ ಕೇಳುಕ್ ಹೋಗ್ಲಿ ಹೋಗು.’
‘ಹಾಗಂದ್ರೆ ಏನು ಮಾಡಾದು? ತ್ವಾಟದ ಕಡೆ ಹೋಗಿ ಯಾರನ್ನಾದ್ರೂಕೇಳಿ ಒಂದಿಷ್ಟು ಕುರುಂಬಾಳೆ ಹೆಡೆಮೊಟ್ಟೆ ಕಟ್ಕಂಡ್ ಬನ್ನಿ.’
‘ತೆವಲಿದ್ರೆ ನೀನೇ ಹೋಗಿ ಹೊತ್ಕೊಂಡ್ ಬಾ. ನನ್ನ ಕೈಲಾಗುಲ್ಲ’-ಎಂದು ಹೇಳಿ, ತಾವು ನುಂಗಿದುದನ್ನು ಅರಗಿಸಲು ನಿದ್ರೆಯನ್ನು ಆಹ್ವಾನಿಸುತ್ತಾ ಅವರು ಇನ್ನೊಂದು ಮಗ್ಗುಲಾಗಿ ಮಲಗಿದರು.
ಸೌದೆ ಕೇಳಲು ಅವಳು ಯಾರ ತೋಟಕ್ಕೂ ಹೋಗಲಿಲ್ಲ. ಪಕ್ಕದ ಮನೆಯ ಚಿಣ್ಣಯ್ಯನ ಹೆಂಡತಿಯನ್ನು ಕೇಳಿದುದಕ್ಕೆ ಒಂದು ದೊಡ್ದ ಮಂಕರಿ ಕೊಬ್ಬರಿ ಮೊಟ್ಟ ಹದಿನೈದು ಹೆಡೆದಿಬ್ಬಿ, ನಾಲ್ಕು ತುಂಡು ಸೋಗೆಗಳನ್ನು ಕೊಟ್ಟಳು. ನಂಜಮ್ಮ ಚನ್ನಶೆಟ್ಟಿಯ ಅಂಗಡಿಗೆ ಹೋಗಿ ಕೇಳಿದಳು: ‘ಅಕ್ಕಿ ಹ್ಯಾಗೆ ಚನ್ನಶೆಟ್ಟಿ?’
‘ಸಣ್ಣಕ್ಕಿ ಒಂಬತ್ತು ಸೇರು, ದಪ್ಪದ್ದು ಹನ್ನೆಲ್ಡು ಸೇರು.’
ಒಂದು ಪಾವಲಿ ಕೊಟ್ಟು ಮೂರು ಸೇರು ದಪ್ಪಕ್ಕಿ ತೆಗೆದುಕೊಂಡು ಬಂದು ರಾತ್ರಿಗೆ ಅಚ್ಚೇರು ಹಾಕಿ ಅನ್ನ ಮಾಡಿದಳು. ಪಾರ್ವತಿ, ರಾಮಣ್ಣ, ಇಬ್ಬರೂ ಸಂತೋಷವಾಗಿ ಊಟ ಮಾಡಿದರು. ಚಿಣ್ಣಯ್ಯನ ಹೆಂಡತಿ ರಂಗಮ್ಮ ಅರ್ಧ ಚರುಕುಲು ಮಜ್ಜಿಗೆಯನ್ನೂ ಕೊಟ್ಟಿದ್ದಳು. ಹುಡುಗರ ಊಟವಾದಮೇಲೆ ಉಳಿದ ಅನ್ನ ಮಜ್ಜಿಗೆಗೆ ಚೆನ್ನಿಗರಾಯರು ಬಂದರು. ಅದೃಷ್ಟಕ್ಕೆ ಅವರು ಮಕ್ಕಳ ಊಟಕ್ಕೆ ಮೊದಲೇ ಮನೆಗೆ ಬರಲಿಲ್ಲ.

ಮಾದೇವಯ್ಯನವರು ಕೊಟ್ಟಿರುವ ದಿನಸಿ ಎಂಟು ಒಂಬತ್ತು ದಿನಕ್ಕಾಗಬಹುದು. ಆಮೇಲೆ ಏನು ಮಾಡುವುದು ಎಂಬ ಯೋಚನೆ ಅವಳನ್ನು ಬಾಧಿಸುತ್ತಲೇ ಇತ್ತು. ಅದಕ್ಕೆ ಇನ್ನೂ ಉಪಾಯ ಹೊಳೆದಿರಲಿಲ್ಲ. ನಾಳೆ ರಾಮಸಂದ್ರದ ಸಂತೆ ನಡೆಯುತ್ತದೆ. ಹೋಗಿ ಒಂದೆರಡು ಊಟದ ಪಾತ್ರೆ ಕುಡಿಯುವ ಬಟ್ಟಲುಗಳನ್ನಾದರೂ ತರಬೇಕು ಎಂದು ನಿಶ್ಚಯಿಸಿದಳು. ಮರುದಿನ ಬೆಳಗಿನ ಊಟವಾದಮೇಲೆ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಮಕ್ಕಳನ್ನೂ ಕರೆದುಕೊಂಡು ಸಂತೆಗೆ ಹೋದಳು. ಊರಿಗೆ ಮುಕ್ಕಾಲು ಮೈಲಿ ದೂರದ ತೋಪಿನಲ್ಲಿ ಸೇರುವ ಅದಕ್ಕೆ ತಿಪಟೂರಿನ ಸಾಬರು ಅಲ್ಯುಮಿನಿಯಂ ಪಾತ್ರೆಗಳನ್ನು ತಂದಿರುತ್ತಾರೆಂಬುದು ಅವಳಿಗೆ ಗೊತ್ತಿತ್ತು. ತನಗೆ ತಿಳಿದಂತೆ ಚೌಕಾಶಿ ಮಾಡಿ ನಾಲ್ಕು ಊಟದ ತಟ್ಟೆ, ನಾಲ್ಕು ಕುಡಿಯುವ ಲೋಟ, ಒಂದು ಸೌಟು ಮತ್ತು ಒಂದು ಸ್ನಾನ ಮಾಡುವ ಚೊಂಬುಗಳನ್ನು ಕೊಂಡಳು, ಒಟ್ಟು ಒಂದೂ ಮುಕ್ಕಾಲು ರೂಪಾಯಿಯಾಯಿತು. ಅಳುತ್ತಿದ್ದ ಮಕ್ಕಳಿಗೆ ಮೂರು ಮೂರು ಕಾಸಿನ ಸಕ್ಕರೆ ಕಡ್ಡಿ, ಒಂದೊಂದು ಗಿಲಿಕೆಗಳನ್ನು ಕೊಡಿಸಿಕೊಂಡು ಮನೆಗೆ ತಿರುಗುವಾಗ ಪಟೇಲ ಗುಂಡೇಗೌಡರು ಸಿಕ್ಕಿದರು. ಅವರೇ ಕೇಳಿದರು: ‘ಮನ್ಲಿ ಯಲ್ಲಾ ಚಂದಾಗೈತೇನವ್ವ?’
‘ಚನ್ನಾಗಿದೆ ಗೌಡರೇ, ಬನ್ನಿ ಮನೆಗೆ ಹೋಗಿಬರಾಣ.’
ಅಲ್ಯುಮಿನಿಯಂ ಪಾತ್ರೆಗಳನ್ನು ಗೌಡರೇ ಹಿಡಿದುಕೊಂಡರು. ರಾಮಣ್ಣನನ್ನು ಹೆಗಲಿಗೆ ಹಾಕಿಕೊಂಡ ಅವಳು ಹಿಂದೆ ಹಿಂದೆ ನಡೆದಳು. ಮನೆಗೆ ಬಂದು ಬೀಗ ತೆಗೆದ ಮೇಲೆ ಒಳಗೆಲ್ಲ ಒಂದು ಸಲ ನೋಡಿದ ಗೌಡರು ಕೇಳಿದರು: ‘ಮೇವಿಗೆ ಏನು ಗ್ರಾಸ?’
‘ಅದ ನಿಮ್ಮುನ್ನೇ ಕೇಳಾಣ ಅಂತಿದ್ದೆ.’
‘ಅವತ್ತೇ ಕೇಳಿದ್ರೆ ಒಂದಿಪ್ಪತ್ತೈದು ಸೇರು ರಾಗಿ ಕೊಡುಸ್ತಿದ್ನಲಾ?’
‘ಅದರಿಂದ ಎಷ್ಟು ದಿನ ಕಳೆಯುತ್ತೆ?’-ತಕ್ಷಣ ಅವಳಿಗೆ ಒಂದು ಉಪಾಯ ಹೊಳೆದು ಹೇಳಿದಳು: ‘ನೀವು ಹಾಗೇ ಕೊಡೂದೇನು ಬ್ಯಾಡಿ. ನಾನೊಂದು ಮಾತು ಹೇಳ್ತೀನಿ. ಹಾಗೆ ಮಾಡಿದ್ರೆ ನಿಮಗೂ ತೊಂದರೆಯಾಗುಲ್ಲ, ನಮಗೂ ಉಪಕಾರವಾಗುತ್ತೆ.’
‘ಏನ್ಹೇಳವ್ವ.’
‘ನಿಮ್ಮ ಒಟ್ಟು ಕಂದಾಯ ಎಷ್ಟು, ಎಂಬತ್ತು ರೂಪಾಯಿ ಅಲ್ಲವೆ?’
‘ಯಾಕೆ?’
‘ಒಂದು ಕೆಲ್ಸ ಮಾಡಿ. ನಿಮ್ಮ ಕಂದಾಯದ ಬಾಬ್ತು ಈ ವರ್ಷದ್ದು ಐವತ್ತು ರೂಪಾಯಿ ಸಂದಾಯವಾಗಿದೆ ಅಂತ ಇವರ ಕೈಲಿ ರಶೀತಿ ಬರುಸ್ಕಳಿ. ಆ ಐವತ್ತು ರೂಪಾಯಿಗೆ ನಮಗೆ ರಾಗಿ, ಅವರೇಕಾಳು, ಮೆಣಸಿನಕಾಯಿ, ಮನೇಲಿದ್ರೆ ಒಂದಿಷ್ಟು ಬತ್ತ ಕೊಡಿ. ನಮ್ಮ ಜೀವನ ಆಗುತ್ತೆ.’
‘ಈಗ ರಶೀತಿ ಬರಿಸ್ಕ್ಯಂಡ್ರೆ ಆಮ್ಯಾಲೆ ಹ್ಯಂಗೆ ಕಟ್ತೀರಾ ಸರ್ಕಾರಿ ಹಣಾನಾ?’
‘ನಮ್ಮ ಪೋಟಿಗೆ ನೂರಾ ಇಪ್ಪತ್ತು ರೂಪಾಯಿ ಇರುತ್ತಲ್ಲ. ಅದರಲ್ಲಿ ಸರ್ಕಾರ್‌ದೋರು ಕಟಾ ಇಸ್ಕತ್ತಾರೆ.’
ಗೌಡರಿಗೆ ಈ ಉಪಾಯ ವೈನವೆನಿಸಿತು. ‘ನಿಂಗೆ ದಿವಾನಿಕೆ ಮಾಡೂವೋಟು ಬುದ್ಧಿಯೈಯ್ತೆ’-ಎಂದು ಹೇಳಿ ತಮ್ಮ ಒಪ್ಪಿಗೆ ಸೂಚಿಸಿದರು. ಗಂಡ ಮಾದೇವಯ್ಯನವರು ಗುಡಿಯಲ್ಲಿ ಕೂತು ಹೊಗೆಸೊಪ್ಪು ಅಗಿಯುತ್ತಿರುತ್ತಾರೆಂಬುದು ಅವಳಿಗೆ ಗೊತ್ತು. ಗುಂಡೇಗೌಡರು ಬಂದಿರುವುದಾಗಿ ಹೇಳಿ ಕರಕೊಂಡು ಬರುವಂತೆ ಪಾರ್ವತಿಯನ್ನು ಕಳಿಸಿದಳು. ಮನೆಗೆ ಬಂದ ಶ್ಯಾನುಭೋಗರು ಪಟೇಲ ಗುಂಡೇಗೌಡರಿಂದ ಇಸಕೊಂಡು ಇನ್ನೊಂದು ಸಲ ಎಲೆ ಅಡಿಕೆ ಹೊಗೆಸೊಪ್ಪುಗಳನ್ನು ಅಗಿದಮೇಲೆ ಗೌಡರು ಕೇಳಿದರು: ‘ಎಲ್ಲಿ ನಿನ್ನ ಕಾತೆ ಕಿರ್ದಿ ವಸೀ ತೆಗಿ.’
‘ಅದಿಲ್ಲೆಲ್ಲಿದೆ?’
‘ಎಲ್ಲೈತೆ?’
‘ನಮ್ಮಮ್ಮುನ ಮನ್ಲಿ.’
‘ಅಲ್ಲ ಕಣಯ್ಯ, ಶ್ಯಾನುಬಾಕಿ ಅಂದ್ರೆ ಅದೇನು ತರಿಯಾ ಕೆಲ್ಸ ಅಂತ ತಿಳ್ಕಂಡ್ಯಾ? ನಿನ್ನ ಮನೆ ಎಲ್ಲೈತೋ ಅಲ್ಲಿ ಕಡ್ತ ಮಡೀಕ್ಕಂಡಿರ್ಬೇಕು. ಲ್ಯಕ್ಕ ಮಡೀಕ್ಕಳ್ಲಿ ಅಂತ ಅಲ್ವಾ ನಾನು ಮನೆ ಕೊಟ್ಟಿರಾದು? ಸರ್ಕಾರೀ ಕಾನೂನು ಗೊತ್ತೈತಾ ನಿಂಗೆ? ಎಲ್ಲಿ, ಓಡ್ಯಲೇ ಹ್ವಾಗಿ ಕಡ್‌ತಾ ಹೊತ್ಕಂಬಾ.’
ಶ್ಯಾನುಭೋಗರು ಹನುಮಂತರಾಯನ ಗುಡಿಗೆ ಹೋದರೆ ಗಂಗಮ್ಮ ಲೆಕ್ಕದ ಗಂಟನ್ನು ಕೊಡಲಿಲ್ಲ. ಪಟೇಲ ಗುಂಡೇಗೌಡರೇ ಹೇಳಿದ್ದಾರೆಂದ ಮೇಲೆ ಅವಳೇ ಇಲ್ಲಿಗೆ ಬಂದಳು. ‘ಸರ್ಕಾರೀ ಕಾನೂನೇ ಹಂಗೈತೆ ಕಣ್ರಮ್ಮ’-ಎಂದು ಅವರು ಹೇಳಿದ ಮೇಲೆ, ‘ಹಾಗಾದ್ರೆ ನಾನೂ ಇಲ್ಲಿಗೆ ಬಂದು ಇರ್ತೀನಿ’ ಎಂದಳು.
‘ಇರಿ. ನನ್ನ ಗಂಟೇನು ಹೋಗ್ಬೇಕು?’
ಆದರೆ ನಂಜಮ್ಮ ತಕ್ಷಣ ಮಾತನಾಡಿದಳು: ‘ಅದೆಲ್ಲ ಆಗುಲ್ಲ. ಒಂದ್ ಸಲ ಬ್ಯಾರೆ ಅಂತ ನೂಕಿದಮ್ಯಾಲೆ ನಿಮ್ಮ ಪಾಡಿಗೆ ನೀವಿರಿ. ನಮ್ಮ ಪಾಡಿಗೆ ನಾವಿರ್ತೀವಿ.’
‘ನೋಡ್ದ್ಯಾ ಗುಂಡೇಗೌಡ, ಈ ತಾಟಗಿತ್ತಿಮುಂಡೇ ಮಾತ?’
‘ಗಂಗವ್ವಾ, ನಾನು ಈ ಮನೆ ಕೊಟ್ಟಿರಾದು ಶ್ಯಾನುಬಾಕಿ ಪುಸ್ತಕಕ್ಕೆ, ಪುಸ್ತಕ ಬರಿಯೂ ಈ ಯಮ್ಮುಂಗೆ; ಬಾಕಿಯೋರ್ಗಲ್ಲ. ನೀನ್ ಸುಮ್‌ಸುಮ್ಕೆ ಬೊಯ್‌ಬ್ಯಾಡ’- ಎಂದು ಗೌಡರು ಹೇಳಿದುದಕ್ಕೆ ಗಂಗಮ್ಮ ಗಟ್ಟಿಯಾಗಿ ಬೈಯುತ್ತಾ ಹನುಮಂತರಾಯನ ಗುಡಿಗೆ ಹಿಂತಿರುಗಿದಳು. ಶ್ಯಾನುಭೋಗರು ತಾವೇ ಹೋಗಿ ಲೆಕ್ಕದ ಪುಸ್ತಕಗಳನ್ನು ನಾಲ್ಕು ಸಲ ತಲೆಯ ಮೇಲೆ ಹೊತ್ತು ತಂದರು. ಅದನ್ನು ಹಾಕಿದ್ದ ಪೆಟಾರಿಯನ್ನು ಮಾತ್ರ ಗಂಗಮ್ಮ ಕೊಡಲಿಲ್ಲ.
ಎಲ್ಲ ತಂದಮೇಲೆ ಗುಂಡೇಗೌಡರು ಕೇಳಿದರು: ‘ಬಶಣ್ಣಪ್ಪಾ, ಈಟು ವರ್ಸ ಶ್ಯಾನುಭಾಕಿ ಮಾಡ್ದೆ. ಸರ್ಕಾರ್‌ದೋರು ತೋಟಿ ತಳವಾರ್ರುನ್ನ ಯಾಕ್ ಮಡಗ್ಯವ್ರೆ ಗೊತ್ತಿಲ್ವಾ?’
ಶ್ಯಾನುಭೋಗರು ಉತ್ತರ ಹೇಳಲಿಲ್ಲ. ಪಟೇಲರೇ ಕೇಳಿದರು: ‘ಈ ಲ್ಯಕ್ಕದ ಬುಕ್ಕೆಲ್ಲ ನೀನೇ ತಲೆಮ್ಯಾಲೆ ಹೊತ್ಕಂಡ್ ಬಂದ್ಯಲಾ. ತೋಟಿಗ್ ಕರ್ದು, ತಂದು ಮಡುಗ್ಲಾ ಅನ್ನಾಕ್ ಆಗ್ತಿರ್ಲಿಲ್ವಾ? ನೀನ್ಯಂತಾ ಅಧಿಕಾರ ಮಾಡ್ತಿಯಾ, ಬರೀ ಚೆಂಡು ಹ್ವಡಿಯಾದಾ! ಆಯ್ತು, ಕಾಗಜ ದೌತಿ ತಗಂಡ್ ಬರಿ. ಅದೇನ್ ನೀನು ಏಳಿ ಬರ್ಸವ್ವ.’
ಕರಣಿಕ ಚೆನ್ನಿಗರಾಯರು ಕರಣಿ ಹಿಡಿದರು. ಹೆಂಡತಿ ಹೇಳಿದಳು: ‘ರಾಮಸಂದ್ರದ ಫಿರ್ಕಾ ಕುರುಬರಹಳ್ಳಿಯ ಪಟೇಲ್ ಗುಂಡೇಗೌಡರಿಂದ, ಅವರ ಈ ಸಾಲಿನ ರೆವಿನ್ಯೂ ಕಂದಾಯದ ಬಾಬ್ತು ಐವತ್ತು ರೂಪಾಯಿ ಸಂದಾಯವಾಗಿದೆ. ವಸೂಲಿ ಕಾಲದಲ್ಲಿ ಈ ಮೊಬಲಗನ್ನು ಕಟಾಯಿಸಿ ಉಳಿದದ್ದನ್ನು ವಸೂಲಿ ಮಾಡಿ ನಿಮ್ಮ ಪಟ್ಟಿಯಲ್ಲಿ ಬರೆದು ಕೊಡುತ್ತೇನೆ ಶ್ಯಾನುಭೋಗ್ ಚೆನ್ನಿಗರಾಯ. ತಾ…..’
ಅವಳು ಹೇಳಿದಂತೆ ಬರೆದು ಅದನ್ನು ಗೌಡರ ಕೈಗೆ ಕೊಟ್ಟರು. ಕೊಟ್ಟ ಹತ್ತು ನಿಮಿಷದ ತನಕ ಅವರಿಗೆ ತಾವು ಬರೆದುದರ ಅರ್ಥ ಆಗಲಿಲ್ಲ. ಆಮೇಲೆ ಜ್ಞಾಪಿಸಿಕೊಂಡವರಂತೆ, ‘ಎಲ್ರಿ ದುಡ್ಡು?’ ಎಂದರು.
‘ದುಡ್ಡೆಲ್ಲಿ ಹೋಯ್ತದೆ? ನನ್ನ ಕೇಳಬ್ಯಾಡ ಸುಮ್ಕುರಯ್ಯಾ’-ಎಂದುದಕ್ಕೆ ಅವರು ಗೊಣಗುವುದನ್ನು ಬಿಡಲಿಲ್ಲ.
ಅದರ ಮರುದಿನ ಗುಂಡೇಗೌಡರು ಗಾಡಿ ಹೊಡೆಸಿಕೊಂಡು ಬಂದು ಮನೆಗೆ ಚೀಲಗಳನ್ನು ಇಳಿಸಿ ನಂಜಮ್ಮನಿಗೆ ಹೇಳಿದರು: ‘ನೋಡವ್ವ, ನಾಲ್ಕು ಖಂಡುಗ ರಾಗಿ, ಅಂದ್ರೆ ಇಪ್ಪತ್ತನಾಕು ರೂಪಾಯಿ. ಒಂದು ಪಲ್ಲ ಅವರೇಕಾಳು ಎಂಟು ರೂಪಾಯಿ. ಒಂದು ಮಣ ಮೆಣಸಿನಕಾಯಿ ಮೂರು ರೂಪಾಯಿ. ಒಟ್ಟು ಏಟಾಯ್ತು?’
‘ಮೂವತ್ತ ಐದು.’
‘ತಗ ಈ ಐದು ರೂಪಾಯ. ನಲವತ್ತಾಯ್ತಲ. ಇನ್ನು ಹತ್ತು ರೂಪಾಯಿ ತಿಪಟೂರ್ನಾಗೆ ಕೊಪ್ಪರಿ ಬುಟ್‌ಮ್ಯಾಲೆ ಕೊಡ್ತೀನಿ. ನಮ್ಮನ್ಲಿ ಬತ್ತ ಇರಾಕೆ ಇಲ್ಲ. ನೀನೇ ಅಂಗ್ಡೀಲಿ ಅಕ್ಕಿ ತಗಾ.’
ನಂಜಮ್ಮನಿಗೆ ಧೈರ್ಯ ಬಂತು. ಆ ಐದು ರೂಪಾಯಿ, ಜೊತೆಗೆ ತನ್ನಲ್ಲಿದ್ದ ಹೆಚ್ಚು ಕಡಿಮೆ ಎರಡು ರೂಪಾಯಿಗಳನ್ನು ಒಂದು ಅರಿವೆಯಲ್ಲಿ ಕಟ್ಟಿ ತೊಲೆಯ ಒಂದು ಸಂದಿಯಲ್ಲಿ ಮುಚ್ಚಿಟ್ಟಳು.

– ೭ –

ಎಂಟನೇ ತಿಂಗಳು ನಡೆಯುತ್ತಿದ್ದಾಗ ಒಂದು ಮಧ್ಯಾಹ್ನ ಕೂತು ನಂಜಮ್ಮ ಪಹಣಿ ಪುಸ್ತಕಕ್ಕೆ ರೂಲು ಎಳೆಯುತ್ತಿದ್ದಳು. ಬಸುರು ಆಗಲೇ ತುಂಬಿ ಬೆಳೆದಿದ್ದುದರಿಂದ ಕುಕ್ಕುರುಗಾಲಿನಲ್ಲಿ ಕುಳಿತು ರೂಲು ಹಾಕುವುದು ಸಾಧ್ಯವಾಗುತ್ತಿರಲಿಲ್ಲ. ಆದರೂ ಹೆಣಗಿ ಭಂಗಿಯನ್ನು ಬದಲಾಯಿಸಿಕೊಂಡು ಕೆಲಸ ಮಾಡುತ್ತಿದ್ದಳು. ಚೆನ್ನಿಗರಾಯರು ಅಲ್ಲಿಯೇ ಇನ್ನೊಂದು ಅಂಕಣದಲ್ಲಿ ಮಲಗಿ ಹದವಾಗಿ ಗೊರಕೆ ಹೊಡೆಯುತ್ತಿದ್ದರು.

ಇದ್ದಕ್ಕಿದ್ದಹಾಗೆಯೇ ಗಂಗಮ್ಮ ಮನೆಯೊಳಗೆ ಬಂದಳು. ಹಿಂದೆ ಗುಂಡೇಗೌಡರು ಶ್ಯಾನುಭೋಗಿಕೆ ಪುಸ್ತಕಗಳನ್ನು ತರಿಸಿದ ದಿನವನ್ನು ಬಿಟ್ಟರೆ ಅವಳು ಎಂದೂ ಈ ಮನೆಗೆ ಬಂದಿರಲಿಲ್ಲ. ಬಂದವಳು ಯಾರನ್ನೂ ಹೇಳಲೂ ಇಲ್ಲ, ಕೇಳಲೂ ಇಲ್ಲ. ಒಂದು ವಾಡೆಯ ಮುಚ್ಚಳ ತೆಗೆದು, ತಾನು ತಂದಿದ್ದ ಚೀಲಕ್ಕೆ ರಾಗಿಯನ್ನು ತುಂಬಿಕೊಳ್ಳತೊಡಗಿದಳು. ಈಗ ಏನು ಮಾಡಬೇಕು ಎಂಬುದು ತಿಳಿಯದೆ ಎರಡು ನಿಮಿಷ ಸುಮ್ಮನಿದ್ದ ನಂಜಮ್ಮ ಕೇಳಿದಳು: ‘ಅಮ್ಮ, ಏನ್‌ಮಾಡ್ತಿದೀರಾ?’
‘ಏನ್ ಮಾಡ್ತಿದೀನೇ? ರಾಗಿ ತಗಿತಿದೀನಿ. ಅದುನ್ನ ಕೇಳುಕ್ ನೀನ್ಯಾವಳೇ?’
‘ಮದ್ಲು ಆ ಚೀಲ ಅಲ್ಲಿಟ್ಟು ದೂರ ನಿಂತ್ಕಂಡ್ ಮಾತಾಡಿ. ಹೇಳ್ದೆ ಕೇಳ್ದೆ ಬಂದು ನಮ್ಮನೆ ದಿನಸಿ ಧಾನ್ಯ ಹ್ಯಾಗ್ ಮುಟ್ತೀರಾ?’
‘ಇವ್ಳ ಮನೆಯಂತೆ. ನಿಮ್ಮಪ್ಪ ಕಟ್ಸಿದ್ದೇನೆ ಮನೆ? ಕೇಳ್ದೆ ಏನೋ ಶಿಖಂಡಿ ಸೂಳೇಮಗನೆ? ಇವತ್ತು ಬ್ಯಳಿಗ್ಗೆಯಿಂದ ಮನ್ಲಿ ಏನೂ ಇಲ್ದೆ ನಾನು ಒಲೆ ಹಚ್ಚಿಲ್ಲ. ರಾಗಿ ತಗುಳಕ್ ಬಂದ್ರೆ ಇವಳಪ್ಪ ತಂದ್ಕೊಟ್ಹಾಗ್ ಆಡ್ತಾಳೆ. ಕುರುಬರಹಳ್ಳಿ ಗುಂಡೇಗೌಡ ನಮ್ಮ ಪಟೇಲ; ನಿನ್ನ ಮಿಂಡಲ್ಲ ಬಿಟ್ಟಿ ಕೊಡುಕ್ಕೆ.’
ಅಷ್ಟರಲ್ಲಿ ಎಚ್ಚೆತ್ತ ಚೆನ್ನಿಗರಾಯರು-‘ತಗಂಡ್ರೆ ತಗಳ್ಳಿ ಬಿಡೆ, ನಿನ್ನವ್ವನಾ……’ಎಂದರು.
‘ಗುಂಡೇಗೌಡರು ನಿಮಿಗ್ ಕೊಡಿ ಅಂತ ಧರ್ಮಕ್ ಕೊಟ್ಟಿಲ್ಲ. ಕಂದಾಯಕ್ಕೆ ವಜಾ ಕಟ್ಕಳುಕ್ಕೆ ಅಂತ ನಾನು ಹೇಳಿ ತರ್ಸಿದೀನಿ.’
‘ಶ್ಯಾನುಬಾಕಿ ನನ್ನ ಗಂಡಂದು. ನಿಮ್ಮಪ್ಪುಂದೇನಲ್ಲ ಕಣೆ ಬೋಸುಡಿಮುಂಡೆ’ ಅತ್ತೆ ಎಂದಳು.
‘ನಮ್ಮಪ್ಪನೇ ಕುದುರೆಮೇಲೆ ಬಂದು ಕೊಡ್ಸಿದ್ದು. ಇಲ್ದೆ ಇದ್ರೆ ಅದು ಕೈಗೆ ಸಿಕ್ತಿರ್ಲಿಲ್ಲ ತಿಳ್ಕಳಿ. ಈಗ ಕಣ್ಣಿಗೆ ಎಣ್ಣೆ ಬಿಟ್ಕಂಡು ಲೆಕ್ಕ ಬರೀತಿರೋಳು ನಾನು. ನನ್ನ ಮನೆಗೆ ಬಂದು ಏನಾದ್ರೂ ದಿನಸಿ ಧಾನ್ಯ ಮುಟ್ಟಿದ್ರೆ ಗುಂಡೇಗೌಡ್ರಿಗೇ ಹೇಳಿಕಳುಸ್ತೀನಿ.’
‘ಇವತ್ತು ಬೆಳಗ್ಗೆಯಿಂದ ಊಟ ಮಾಡಿಲ್ವಲ್ಲ, ಏನು ಮಾಡ್ಲೋ ಮುಂಡೇಮಗನೆ?’
‘ಹೋಗಿ ಶಿವೇಗೌಡುನ್ನೋ ಕಾಶಿಂಬಡ್ಡಿನೋ ಕೇಳಿ. ಇಲ್ದೆ ಇದ್ರೆ ರೇವಣ್ಣಶೆಟ್ಟಿಗ್ ಕೇಳಿ’-ನಂಜಮ್ಮನೇ ಉತ್ತರ ಹೇಳಿದಳು.

ಅವಳ ಮಾತಿನ ವ್ಯಂಗ್ಯ ಗಂಗಮ್ಮನಿಗೆ ತಿಳಿಯಲಿಲ್ಲ. ಚೀಲವನ್ನು ಅಲ್ಲಿಯೇ ಬಿಟ್ಟು ನೇರವಾಗಿ ಶಿವೇಗೌಡನ ಮನೆಗೆ ಹೋದಳು. ಅವಳು ಹೋದಮೇಲೆ ನಂಜಮ್ಮನಿಗೇ ಕಸಿವಿಸಿ ಎನಿಸಿತು. ಬೆಳಗಿನಿಂದ ಉಪವಾಸವೆಂಬುದನ್ನು ಕಿವಿಯಲ್ಲಿ ಕೇಳಿಯೂ ತಾನು ಹಾಗೆಯೇ ಕಳಿಸಬಾರದಾಗಿತ್ತು ಎಂದುಕೊಂಡು ಒಳಗೆ ಹೋಗಿ ಒಂದು ಮೊರಕ್ಕೆ ಮೂರು ಸೇರಿನಷ್ಟು ರಾಗಿಯ ಹಿಟ್ಟನ್ನು ಹಾಕಿ, ಅದನ್ನು ಕೊಟ್ಟುಬರುವಂತೆ ಗಂಡನಿಗೆ ಹೇಳಿದಳು. ಮೊರವನ್ನು ಕೈಲಿ ಹಿಡಿದು ಮಗ ಅವ್ವನ ಮನೆಗೆ ಹೋದ.

ಗಂಗಮ್ಮ ನೇರವಾಗಿ ಶಿವೇಗೌಡನ ಮನೆಗೆ ಹೋಗಿ ಕೇಳಿದಳು: ‘ಏನಪ್ಪಾ ಪಟೇಲ, ಇವತ್ತು ಬೆಳಗ್ಗೆಯಿಂದ ಒಲೆ ಹಚ್ಚಿಲ್ಲ. ಒಂದಿಪ್ಪತ್ತೈದು ಸೇರು ರಾಗಿ ಕೊಡು.’
‘ನಿಂಗೇನ್ ಗುರುಗುಟ್ತೈತೇನಮ್ಮ? ಎಲ್ಲಿ ಬತ್ತೈತೆ ಇಪ್ಪತ್ತೈದು ಸೇರು ರಾಗಿ?’
‘ಮನೆಹಾಳ ಸೂಳೇಮಗ್ನೇ, ನನ್ನ ಆಸ್ತೀನೆಲ್ಲ ಹ್ವಡ್ಕಂಡು ಈಗ ಹೀಗಂತೀಯೇನೋ? ನಿನ್ನ ವಂಶ ಉಳಿಯೋಲ್ಲ ನೋಡು.’
‘ಆಸ್ತಿ ಹ್ವಡಕಣಾಕೆ ದುಡ್ಡು ಸುರೀಲಿಲ್ವೇನೇ ಮುಂಡೆ? ನ್ಯಾಲ್ಗೆ ಇಡ್ಕಂಡ್ ಮಾತಾಡ್ತಿಯೋ ಕುತ್ಗೆ ಇಡ್ದು ಆಚಿಕಡೀಕ್ ನೂಕುಸ್ಲೋ?’
ಶಿವೇಗೌಡನ ಹೆಂಡತಿ ಗೌರಮ್ಮ ತಕ್ಷಣ ಮುಂದೆ ಬಂದು ಗಂಡನಿಗೆ ಹೇಳಿದಳು: ‘ಆ ಯಮ್ಮ ಹಂಗಂತೈತಿ ಅಂತ ನೀನದೇನಂತಿ ಸುಮ್ಕುರು. ನೀನ್ ತ್ವಾಟದ್ ತಾವುಕ್ ನಡಿ.’

ಈ ಮುದುಕಿ ಬೀದಿಯಲ್ಲಿ ನಿಂತು ಮಣ್ಣು ತೂರಿ ಶಾಪ ಹಾಕಿದರೆ ತಮ್ಮ ಮನೆಗೆ ಏನಾದರೂ ಕೇಡಾಗುತ್ತದೆಂಬ ಭಯ ಗೌರಮ್ಮನಿಗೆ. ಗಂಗಮ್ಮನ ಸಂಗಡ ನಾಲಗೆಯ ವ್ಯಾಜ್ಯಕ್ಕೆ ನಿಲ್ಲುವುದು ಪಟೇಲನಿಗೂ ಬೇಕಿರಲಿಲ್ಲ. ಹೆಂಡತಿ ಹೇಳಿದ ನೆಪವೇ ಅವನಿಗೆ ಸಾಕಾಯಿತು. ಅವನು ಕಾಲಿಗೆ ಜೋಡು ಮೆಟ್ಟಿಕೊಂಡು ತೋಟದ ಕಡೆಗೆ ಹೊರಟು ಹೋದ. ಗೌರಮ್ಮ ಎರಡು ಮೊರದ ತುಂಬ ರಾಗಿ ತುಂಬಿ ಒಂದು ಸಾರಿಸಿದ ಕುಕ್ಕೆಗೆ ಹಾಕಿ ತಂದು ಮುಂದಿಟ್ಟು ಹೇಳಿದಳು: ‘ಅವ್ರು ಅಂತಾರೆ ಅಂತ ಕ್ವಾಪಸ್ಕಾಬ್ಯಾಡಿ. ಇದ ಕೊಂಡೊಯ್ರಿ.’

ಸಿಟ್ಟಿನಿಂದ ಉರಿಯುತ್ತಿದ್ದ ಗಂಗಮ್ಮ ಅದನ್ನು ಬೇಡವೆನ್ನುತ್ತಿದ್ದಳೋ ಹೇಗೋ. ಆದರೆ ಗೌರಮ್ಮ ಮತ್ತೆ ಹೇಳಿದಮೇಲೆ ಕುಕ್ಕೆಯನ್ನು ಎತ್ತಿ ತಲೆಯ ಮೇಲೆ ಇಟ್ಟುಕೊಂಡು ತಾನು ವಾಸವಾಗಿದ್ದ ಗುಡಿಗೆ ಬಂದಳು.

ಚೆನ್ನಿಗರಾಯರು ರಾಗಿ ಹಿಟ್ಟಿನ ಮೊರವನ್ನು ಅಪ್ಪಣ್ಣಯ್ಯನಿಗೆ ಕೊಟ್ಟು ಮಾದೇವಯ್ಯನವರ ಗುಡಿಗೆ ಹೋಗಿ ಕುಳಿತಿದ್ದರು. ನಂಜಮ್ಮ ಮತ್ತೆ ಕೂತು ಕತ್ತು ಬಗ್ಗಿಸಿಕೊಂಡು ಪುಸ್ತಕಕ್ಕೆ ಕೆಂಪು ಶಾಯಿಯ ರೂಲು ಎಳೆಯುತ್ತಿದ್ದಳು. ಯಾರೋ ಮನೆಯ ಒಳಗೆ ಬಂದಂತೆ ನೆರಳಾಯಿತು. ಅದು ಯಾರೆಂದು ತಲೆ ಎತ್ತಿ ನೋಡುವುದರೊಳಗೇ ಗಂಗಮ್ಮ ರಾಗೀಹಿಟ್ಟಿನ ಮೊರವನ್ನು ಕೈಲಿ ಹಿಡಿದು ಬಂದು ಇವಳ ಮುಂದೆ ನಿಂತಳು. ಯಾಕೆ, ಏನು, ಎಂದು ಕೇಳುವ ಮೊದಲೇ ಅವಳು ಮೊರದ ತುಂಬ ಇದ್ದ ಹಿಟ್ಟನ್ನು ಸೊಸೆಯ ತಲೆಯಮೇಲೆ ಸುರಿದು ಮೊರವನ್ನು ಒಂದು ಸಲ ನೆತ್ತಿಯಮೇಲೆ ಕುಕ್ಕಿ-‘ನಿನ್ನ ಮನೆ ಭಿಕ್ಷದ ಮುದ್ದೆ ತಿಂತೀನಿ ನಾನು ಅಂತ ತಿಳ್ಕಂಡೆ ಏನೇ ತಿರುಪದ ಮುಂಡೆ? ಗಂಗಮ್ಮ ಅಂದ್ರೆ ಏನು ಅಂತ ಮಾಡ್ಕಂಡೆ?’ ಎಂದು ಬಿರಬಿರನೆ ನಡೆದು ಹೋಗಿಬಿಟ್ಟಳು.

ತಲೆ, ಮೈ ಕೈ, ಪುಸ್ತಕ, ಕೆಂಪು ಶಾಯಿಯ ದೌತಿ, ಎಲ್ಲವೂ ರಾಗಿಯ ಹಿಟ್ಟಾಯಿತು. ಎದ್ದು ಹಿಂದಿನಿಂದ ಹೋಗಿ ಅತ್ತೆಯನ್ನು ಹಿಡಿದು ನಿಲ್ಲಿಸಬೇಕೆಂದು ನಂಜಮ್ಮನಿಗೆ ಮನಸ್ಸಾಯಿತು. ಅಥವಾ ಯಾರಾದರೂ ಇಬ್ಬರು ಪುಣ್ಯಾತ್ಮರಿಗೆ ತೋರಿಸಲೇ ಎಂಬ ಯೋಚನೆಯೂ ಬಂತು. ಆದರೆ ತನ್ನ ಮನೆಯ ಜಗಳ ಹೊರಗಿನವರ ಹತ್ತಿರ ಹೋದರೆ ಊರಿಗೆಲ್ಲ ನಗುವುದಕ್ಕೆ ದಾರಿಯಾಗುತ್ತೆ. ಈಗಲೇ ಎಷ್ಟು ಜನ ನಗುತ್ತಿದ್ದಾರೋ ಎಂದು ಯೋಚಿಸಿ ಸುಮ್ಮನಾದಳು. ಮೇಲೆ ಎದ್ದು ಸೀರೆಯ ಸೆರಗನ್ನು ಕೊಡವಿದಳು. ಅದೃಷ್ಟಕ್ಕೆ ಹಿಟ್ಟೆಲ್ಲವೂ ಅವಳು ಕೂತಿದ್ದ ಈಚಲು ಚಾಪೆಯ ಮೇಲೆ ಬಿದ್ದಿತ್ತು. ಪುಸ್ತಕವನ್ನೂ ಕೊಡವಿ ಹಿಟ್ಟನ್ನು ಗುಡ್ಡೆ ಮಾಡಿ ಎತ್ತಿ ಒಂದರಿಯಾಡಿಸಿ ಇಟ್ಟಳು. ತಲೆಗೆ ಸ್ನಾನ ಮಾಡಿ ಹಿಟ್ಟನ್ನು ತೊಳೆದುಕೊಂಡು, ದೌತಿ ಕುಡಿಕೆ ತೊಳೆದು ಚನ್ನಶೆಟ್ಟಿ ಅಂಗಡಿಯಿಂದ ಮೂರುಕಾಸು ಕೊಟ್ಟು ಎರಡು ಪೊಟ್ಟಣ ಕೆಂಪು ಶಾಯಿ ಪುಡಿ ತಂದು ಶಾಯಿ ಮಾಡಿ ಮತ್ತೆ ರೂಲು ಹಾಕಲು ಕುಳಿತಳು.

– ೮ –

ಇದಾದ ಮೂರನೆಯ ದಿನ ಬೆಳಗಿನ ಹತ್ತು ಗಂಟೆಯ ಹೊತ್ತಿನಲ್ಲಿ ನಂಜಮ್ಮ ಒಳಗೆ ಅಡಿಗೆ ಮಾಡುತ್ತಿದ್ದಾಗ ಹೊರಗಿನಿಂದ ‘ನಂಜೂ’ ಎಂದು ಕೂಗಿದಂತೆ ಆಯಿತು. ಧ್ವನಿಯನ್ನು ಕೇಳಿಯೇ ಅಕ್ಕಮ್ಮ ಎಂದು ಗೊತ್ತಾಗಿ ಅವಳು ಸಡಗರದಿಂದ ಹೊರಗೆ ಬಂದು ನೋಡಿದರೆ ನಿಜವಾಗಿತ್ತು-ತಲೆಯ ಮೇಲೆ ಒಂದು ಸೀರೆಯ ಗಂಟು ಇಟ್ಟುಕೊಂಡು ಬಾಗಿದ ಬೆನ್ನಿನಿಂದ ಅಕ್ಕಮ್ಮ ನಿಂತಿದ್ದಾಳೆ. ಅವಳ ಹಿಂದೆ ಎರಡು ಗಂಡಾಳುಗಳು ಒಂದೊಂದು ಗೋಣಿಯ ಚೀಲಗಳನ್ನು ಹೊತ್ತು ನಿಂತಿದ್ದಾರೆ. ‘ನಂಜು, ನೀನು ಬಸುರಿ ಅಂತ ನಂಗೆ ಹೇಳಿ ಕಳುಸ್ಲೇಬ್ಯಾಡ್ವೇ? ಹೀಗಾಗಿದೆ ಅಂತ ಕಷ್ಟ ಸುಖ ತಿಳುಸ್ಲೇಬ್ಯಾಡ್ವೇ?’
‘ನಾನು ಹೇಳಿಕಳ್ಸಾಣ ಅಂತಿದ್ದೆ. ವಳಿಕ್ ನಡಿ. ಮಡಿ ಉಟ್ಕಂಡಿದೀಯಾ?’
‘ನನ್ನ ಮಡಿ ಆಮ್ಯಾಲಾಗುತ್ತೆ. ಅಡಿಗೆಯಾಗಿದ್ರೆ ಮದ್ಲು ಇವರಿಬ್ಬರಿಗೂ ಇಕ್ಕು. ಅವ್ರು ಊರಿಗೆ ಹೋಗ್‌ಬೇಕು.’
ಒಳಗೆ ಹುಳಿ ಕುದಿಯುತ್ತಿತ್ತು. ಹಿಟ್ಟು ಮುದ್ದೆ ಕಟ್ಟುವುದೊಂದು ಬಾಕಿ ಇತ್ತು. ನಂಜು ಒಳಗೆ ಹೋಗಿ ಉರಿ ಜೋರು ಮಾಡಿ ಕಾಲುಗಂಟೆಯಲ್ಲಿ ಹುಳಿ ಹಿಟ್ಟು ಮುಗಿಸಿದಳು. ಕೆರೆಯ ಕಡೆಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದ ಆಳುಗಳಿಗೆ ಬಡಿಸುವಾಗ ಅಕ್ಕಮ್ಮ ಕೇಳಿದಳು: ‘ಮಜ್ಜಿಗೆ ಇಲ್ವೆ?’
‘ಎಲ್ಲಿ ಬರ್‌ಬೇಕು?’
ಆಳುಗಳ ಊಟವಾದ ಮೇಲೆ ಅವರ ಪೈಕಿ ಒಬ್ಬನ ಕೈಲಿ ಅಕ್ಕಮ್ಮ ಹೇಳಿದಳು: ‘ಹೊನ್ನ, ನೋಡು, ಲಕ್ಕ ಏನಾದರೂ ಬಾಯಿಬಿಟ್ಟಾನು. ಅವನಿಗೆ ಇನ್ನೊಂದು ಸಲಿ ಹೇಳು. ಮನೆಗೆ ಹೋದ ತಕ್ಷಣ ಕಲ್ಲೇಶುಂಗೆ ಹೇಳು. ಮನ್ಲಿ ಕರಾವಿಲ್ಲ. ಮುಂದೆ ಬಾಣಂತಿಗೆ ಹಾಲಿಲ್ಲ. ನಮ್ಮ ಬಿಳೀ ಹಸೀನ ತಳಿ ಐತಲಾ-ಈಗ ಒಂದು ತಿಂಗ್ಳಲ್ಲಿ ಈದದ್ದು, ಅದ ಹೊಡೆದು ಕಳ್ಸು ಅಂತ ಹೇಳು. ಅದರ ಅವ್ವುನ್ನ ಧಾರೇಲಿ ನಂಜಮ್ಮುಂಗೆ ಕೊಟ್ಟಿದ್ವು. ಆಮ್ಯಾಲೆ ಇಲ್ಲಿಗೆ ಕಳುಸ್ಲಿಲ್ಲ. ಈಗ ಅದರ ಮಗಳುನ್ನಾದ್ರೂ ಕಳ್ಸು ಅಂತ ನಾನಂದೆ ಅನ್ನು.’
ಆಳುಗಳು ಹೊರಟುಹೋದರು. ತಣ್ಣೀರಿನಲ್ಲಿಯೇ ಸ್ನಾನ ಮಾಡಿ ಒದ್ದೆಯ ಸೀರೆ ಸುತ್ತಿಕೊಂಡು ಹಣೆಗೆ ವಿಭೂತಿ ಇಟ್ಟು ಮೂರು ಆಚಮನ ಮಾಡಿದಮೇಲೆ ಅಕ್ಕಮ್ಮ ಅಡಿಗೆ ಮನೆಗೆ ಬಂದು ಒದ್ದೆ ಸೀರೆ ಕಾಯಿಸಿಕೊಳ್ಳುತ್ತಾ ಒಲೆಯ ಮುಂದೆ ಕುಳಿತಳು. ನಂಜು ಕೇಳಿದಳು: ‘ನಿಂಗ್ ಹ್ಯಾಗೆ ಗೊತ್ತಾಯ್ತು?’
‘ನಮ್ಮೂರ ಮಗ್ಗದ ತಮ್ಮಯ್ಯಶೆಟ್ಟಿಗೆ ಈ ಊರುದ್ದೇ ಅಲ್ವೇ ಹೆಣ್ಣು ಕೊಟ್ಟಿರೂದು? ಈಗೊಂದೇಳೆಂಟು ದಿನದಾಗೆ ಕೆರೆಗೆ ಹೋಗಿದ್ದೆ. ತಿರುಮಲಮ್ಮ ಬಂದಿದ್ಲು. ಯಲ್ಲಾ ಹೇಳಿದ್ಲು. ನೀವೀಗ ಕುರುಬರಹಳ್ಳಿ ಪಟೇಲರ ಮನ್ಲಿದೀರಂತೆ. ಏಳೆಂಟು ತಿಂಗಳು ಬಸುರಿಯಂತೆ. ನಿಮ್ಮತ್ತೆ, ಒಂದು ಕುಡಿಯೂ ಪಂಚಪಾತ್ರೇನೂ ಕೊಡ್ಲಿಲ್ವಂತೆ. ಜಮೀನೇನೋ ಹೋಗುತ್ತೆ ಅಂತ ಆವಾಗ್ಲೇ ಕಲ್ಲೇಶ್ನೇ ಅಂದಿದ್ದ.’
‘ನೀನ್ಯಾವಾಗ ಹೊರಟೆ ಊರಿಂದ?’
’ನೆನ್ನೆ ದಿನವೇ ಹೊರಟೆ. ಸಂಜೆ ಹೊತ್ತಿಗೆ, ಇನ್ನಿಲ್ಲ ಅನ್ನೂವಷ್ಟು ಮಳೆ ಬಂದುಬಿಡ್ತು. ಮೂರು ಜನವೂ ದಾರೀಲಿ ಸಿಕ್ಕುತ್ತಲ್ಲಾ, ಗುಡ್ಡದ ಆಚೆಗೆ ಹೂವಿನಹಳ್ಳಿ ಅಂತ, ಅವರ ಪಟೇಲನ ಮನೆ ಜಗುಲಿಮ್ಯಾಲೆ ಮಲಗಿದ್ವು. ಪಟೇಲನ ಮನೆಯೋರು ಅವರಿಬ್ರಿಗೂ ಊಟಕ್ಕಿಕ್ಕಿ, ನಂಗೆ ಒಂದಿಷ್ಟು ಕಾಯಿತುರಿ ಬೆಲ್ಲ ಮಾಡಿ ಕೊಟ್ರು.’
ಹೊರಗೆ ಆಟಕ್ಕೆ ಹೋಗಿದ್ದ ಹುಡುಗರು ಮನೆಗೆ ಬಂದರು. ಪಾರ್ವತಿಗೆ ಅಕ್ಕಮ್ಮನ ನೆನಪು ಮರೆತಿರಲಿಲ್ಲ. ರಾಮಣ್ಣನಿಗೆ ಏನೂ ಜ್ಞಾಪಕವಿರುವುದು ಸಾಧ್ಯವಿರಲಿಲ್ಲ. ಆದರೆ ಅರ್ಧ ಗಂಟೆಗೆ ಅವು ಅವಳ ಹತ್ತಿರ ಹೋದುವು. ಊಟದ ಹೊತ್ತಿಗೆ ಚೆನ್ನಿಗರಾಯರು ಮನೆಗೆ ಬಂದರು. ’ಚನ್ನಾಗಿದೀರಾ?’ -ಎಂಬುದನ್ನು ಬಿಟ್ಟರೆ ಅವರು ಅಜ್ಜಿಯನ್ನು ಹೆಚ್ಚು ಏನೂ ವಿಚಾರಿಸಲಿಲ್ಲ. ಅಜ್ಜಿಯೂ ಅವರ ಕಡೆಗೆ ಗಮನ ಕೊಡಲಿಲ್ಲ. ಊಟ ಮುಗಿಸಿದ ಮೇಲೆ ಅವರು ಮನೆಯಲ್ಲಿ ಮಲಗದೆ ಮಾದೇವಯ್ಯನವರ ಗುಡಿಯ ಜಗುಲಿಗೆ ಹೋದರು. ಅಕ್ಕಮ್ಮ ತಾನು ತಂದಿದ್ದ ಎರಡು ಮೂಟೆಗಳನ್ನು ಬಿಚ್ಚಿದಳು. ಒಂದರಲ್ಲಿ ತಾಮ್ರ ಹಿತ್ತಾಳೆಯ ಪಾತ್ರೆಗಳು. ನಾಲ್ಕು ಸಣ್ಣ ದೊಡ್ಡ ಅರಕಿನ ಚೆಟ್ಟಿ, ಎರಡು ಹಿತ್ತಾಳೆಯ ಚೊಂಬು, ಒಂದು ಬಿಂದಿಗೆ, ಐದು ಹಿತ್ತಾಳೆಯ ಗಳಾಸು, ಎರಡು ತಾಮ್ರದ ಪಂಚಪಾತ್ರೆ, ಎರಡು ಅನ್ನದ ತಪ್ಪಲೆ, ಎರಡು ಚರಕಲು ಮೊದಲಾಗಿ ಒಂದು ಆಳು ಹೊರುವಷ್ಟು ಪಾತ್ರೆಗಳು. ಇನ್ನೊಂದರಲ್ಲಿ ಅವಲಕ್ಕಿ ಹುರಿಟ್ಟುಗಳಲ್ಲದೆ ಬೆಲ್ಲದ ಉಂಡೆಗಳು. ಮೇಲೆ ಹದಿನೈದು ಸೇರಿನಷ್ಟು ಮುಂಗೇಸರಿ ಅಕ್ಕಿ.
‘ಅಕ್ಕಮ್ಮ, ಇದೆಲ್ಲ ಯಾಕೆ ತಂದೆ?’
‘ಮಕ್ಕಳ ಮನೆ. ಅವಲಕ್ಕಿ ಹುರಿಟ್ಟು ಮಾಡ್ಕಂಡು ಹೋಗು ಅಂತ ಕಲ್ಲೇಶನೇ ಅಂದ. ಬೈಲಲ್ಲಿ ಆಲೆ ಕಟ್ಟಿದೆ. ಗಣೇಶನ ಉಂಡೆ ಮನೇಲಿ ಮೂರು ಗುಡಾಣ ತುಂಬಿದೆ. ಅವನೇ ಬೆಲ್ಲಾನೂ ಕೊಟ್ಟ, ಅಕ್ಕೀನೂ ಗಂಟುಕಟ್ಟಿ ಕೊಟ್ಟ.’
‘ಈ ಪಾತ್ರೆ?’
‘ನೋಡು ಕಲ್ಲೇಶ ಪೋಲೀಸ್ ಕೆಲಸದಾಗಿದ್ನಲ್ಲ, ಆಗ ದಾನದಲ್ಲಿ ಬಂದ ಪಾತ್ರೆ ಪರಟಿಗಳೆಲ್ಲ ನಾನೇ ಅಟ್ಟದ ಮ್ಯಾಲೆ ಒಂದೊಂದು ಕೊಮ್ಮೇಲಿ ತುಂಬಿ ಇಟ್ಟಿದ್ದೆ. ಅದರ ಲೆಕ್ಕ ಯಾರಿಗೂ ಗೊತ್ತಿರ್ಲಿಲ್ಲ. ಇಲ್ಲಿ ನಿಂಗೆ ಹೀಗಾಗಿದೆ ಅಂತ ಕೇಳಿದಮ್ಯಾಲೆ ಅವ್ಳು ಕೆರೆಗೆ ಹೋಗಿದ್ದಾಗ ನೋಡಿ ಒಂದೊಂದಿಷ್ಟು ತೆಗೆದು ಹೊನ್ನನ ಹೆಂಡ್ತೀ ಕೈಲಿ ಕೊಟ್ಟಿದ್ದೆ. ನಾವು ಬರೂವಾಗ ಯಾರಿಗೂ ಕಾಣದ ಹಾಗೆ ಅದುನ್ನ ಲಕ್ಕನ ಕೈಲಿ ಹೊರಿಸಿ ಹೊನ್ನ ಮದ್ಲೇ ಚೌಡೇನಹಳ್ಳಿ ಕೋಡೀ ಹತ್ರ ಕಾಯ್ಕಂಡಿರೂ ಹಾಗೆ ಹೇಳಿಕಳ್ಸಿದ್ದೆ.’
‘ಆದ್ರೂ ನೀನು ಇದ ತರಬಾರದಾಗಿತ್ತು ಅಕ್ಕಮ್ಮ. ಗೊತ್ತಾದ್ರೆ ಕಲ್ಲೇಶಣ್ಣಯ್ಯನಾದ್ರೂ ಸುಮ್ನಿರ್ತಾನೆಯೇ?’
‘ಅವನ್ಗೂ ಗೊತ್ತಾಗುಲ್ಲ ಸುಮ್ನಿರೇ. ಕಂಠಿ ಇದ್ದಾಗ ದಾನದಲ್ಲಿ ಬಂದುದ್ದು’ ಎನ್ನುವಾಗ ಮಗನ ನೆನಪಾಗಿ ಮುದುಕಿ ಕಣ್ಣಿನಲ್ಲಿ ನೀರು ತುಂಬಿಕೊಂಡು ಹೇಳಿತು: ‘ಮುಂಡೇದು ಎಲ್ಲಿ ಹೋಯ್ತೋ, ಏನು ಮಾಡ್ಕಂಡಿದೆಯೋ! ಮೊದಲಿನಿಂದಲೂ ಅಷ್ಟೇ, ಏನೇನೋ ಮಾಡುಕ್ಹೋಗುತ್ತೆ. ತೆಪ್ಪಗೆ ಮನ್ಲಿದ್ದು ದೇವರು ಕೊಟ್ಟುದ್ದ ಉಂಡ್ಕಂಡಿರುಲ್ಲ.’
ತಂದೆಯ ನೆನಪಾಗಿ ನಂಜುವಿನ ಕಣ್ಣಿನಲ್ಲೂ ನೀರು ಬಂತು: ‘ಅಪ್ಪನ ಸಮಾಚಾರ ಏನೂ ತಿಳೀಲಿಲ್ವೇ?’
‘ಏನೂ ಗೊತ್ತಿಲ್ಲ. ಅವನೆಲ್ಲಿದಾನೆ, ಎಲ್ಲೋ ಸತ್ಗಿತ್ ಹೋಗಿದಾನೆ ಅಂತಾರೆ. ಅವ್ನು ಹ್ಯಾಗೆ ಸಾಯ್ತಾನೆ? ವಳ್ಳೇ ಭೋಜರಾಜನ ಹಾಗಿರೋನು.’
‘ಸತ್ತಿಲ್ಲ, ಅದೆಲ್ಲ ಸುಳ್ಳು’-ಎಂದು ಮೊಮ್ಮಗಳು ಹೇಳಿದ ಮೇಲೆ ಅಜ್ಜಿಗೆ ಸಮಾಧಾನವಾಯಿತು.
ಅಕ್ಕಮ್ಮನಿಗೆ ಆಯಾಸವಾಗಿತ್ತು. ಮನೆಯಲ್ಲಿ ಮಂದಲಿಗೆ ಇರಲಿಲ್ಲ. ಮಡಿಯ ಹೆಂಗಸಾದ ಅವಳು ಈಚಲು ಚಾಪೆಯ ಮೇಲೆ ಮಲಗುವವಳಲ್ಲ. ಆದುದರಿಂದ ಬರೀ ನೆಲದ ಮೇಲೆ ಉರುಟಿದಳು. ನಂಜು ಕೇಳಿದಳು: ‘ಈಗ ಅತ್ತಿಗೆಮ್ಮ ಹ್ಯಾಗಿದಾಳೆ?’
‘ಹೀನ ಸುಳಿ ಬೋಳಿಸಿದ್ರೆ ಹೋಗುತ್ತೆಯೇ? ನಿಮ್ಮಪ್ಪುನ ಐಲುಪೈಲಿಗೆ ಏನು ಹೇಳ್ಬೇಕು? ಹಿಂದೆ ಮುಂದೆ ನೋಡ್ಲಿಲ್ಲ, ನಾಕು ಕಡೆ ವಿಚಾರುಸ್ಲಿಲ್ಲ. ಇಲ್ಲಿ ಬಂದ ನಿನ್ನ ಕೊಟ್ಟುಬಿಟ್ಟ. ಅಲ್ಲಿಗ್ಹೋದ, ಅವ್ಳುನ್ನ ತಂದುಬಿಟ್ಟ. ಅವ್ಳು ಸುಖವಾಗಿ ತಿಂತಾಳೆ. ಕರದಿಟ್ಟಿದ್ದ ಕಡೇಲಿ ಕದ್ದು ಹಾಲು ಬಗ್ಗಿಸ್ಕಂಡ್ ಕುಡಿತಾಳೆ. ದೊಕ್ಕಂಡ್ ದೊಕ್ಕಂಡ್ ಕದ್ದು ತುಪ್ಪಾನೇ ನುಂಗ್ತಾಳೆ. ವಾರಕ್ಕೊಂದಿನ ಎಣ್ಣೆ ಒತ್ಕಂಡು ನೀರು ಹುಯ್ಕತಾಳೆ. ನನ್ನ ಕೈಲೂ ಹಾಕುಸ್ಕಳುಲ್ಲ. ಇಷ್ಟೆಲ್ಲ ಆರೈಕೆ ಮಾಡ್ಕಂಡ್ರೂ ಅನಿಷ್ಟ ಮುಂಡೇದು ಬಸರಿ ಮಾತ್ರ ಆಗ್ಲಿಲ್ಲ.’
‘ಗಂಡ ಹೆಂಡ್ತಿ ಚನ್ನಾಗಿದಾರೆಯೇ?’
“ಚನ್ನವೇನು? ಒಂದು ನಾಕು ದಿನ ರಾತ್ರಿ ಚಿಕ್ಕ ಮನೇಲಿ ಮಲಿಕಂಡಾಗ ಪಿಶ್‌ಪಿಶಿ ನಶ್‌ನಶಿ ಅಂತ ಮಾತಾಡ್ಕತಿರ್ತಾರೆ. ಇನ್ನು ನಾಕು ದಿನ ಅವ್ನು ಅವಳಿಗೆ ಹಿಡಕಂಡು ಹೇರಿ ಕೆಡುವ್ತಾನೆ. ನಾನೇ ಮೊಮ್ಮಗುಂಗೆ ಹೇಳಿ ಹೊಡುಸ್ತೀನಿ ಅಂತ ಅದು ನಂಗೆ ಶಾಪ ಹಾಕುತ್ತೆ. ‘ಬ್ಯಾಡ ಕಣೋ, ಹೆಂಡ್ತೀನ ಹೀಗೆ ಹ್ವಡೀಬಾರ್ದು’
ಅಂದ್ರೆ, ‘ಆ ಮುಂಡೆ ಹ್ವಡಿದೇ ಇದ್ರೆ ಎಲ್ಲಿ ನ್ಯಟ್ಕಿರ್ತಾಳೆ? ನೀನು ಸುಮ್ನಿರು’
ಅಂತ ಅವ್ನು ನನ್ನೇ ಗದರುಸ್ಕತಾನೆ. ಕೆಂಪಿ ಅಂತ ಇದ್ಲು ಗೊತ್ತಾ ಹ್ವಲೇರ ಕಾಳನ ಮಗಳು?”
‘ಗೊತ್ತಿಲ್ದೇ ಏನು?’
“ಕಲ್ಲೇಶ ಅವಳ ಜೊತೆ ಕಬ್ಬಿನ ಗದ್ದೇಲಿ ಇರ್ತಾನೆ ಅಂತ ಯಾರ್ಯಾರೋ ಮಾತಾಡ್ಕತ್ತಿದ್ರು. ಬೆಸ್ತರಕೇರಿ ಮಾಯಗ ಇದ್ನಲ್ಲ, ಈಗ ಮೂರು ವರ್ಷದಾಗೆ ಸತ್ಹೋದ. ಅವ್ನ ಹೆಂಡ್ತಿ, ಎರಡು ಚಿಕ್ಕ ಮಕ್ಳು ಇದುವೆ. ಅವಳ ಮನೆಗೆ ಹೋಗಿ ಕೂತಿರ್ತಾನಂತೆ. ಇನ್ನೂ ಏನೇನೋ ಹೇಳ್ತಾರೆ. ಇದೇನೋ ಇದು ಅಂತ ನಾನು ಒಂದ್ ದಿನ ಕೇಳ್ದೆ. ‘ಅದ್ಯಾವ ಸೂಳೇಮಗ ನಿಂಗ್ ಹೇಳ್ದೋನು? ಅವ್ನಿಗೆ ಜೋಡು ತಗೊಂಡು ನೆತ್ತಿ ಕೂದ್ಲು ಉದುರೂ ಹಾಗ್ ಮುಟ್ಟುಸ್ಬಿಡ್ತೀನಿ’ ಅಂದ. ನಾನ್ಯಾಕೆ ಕ್ಯೆದುಕ್ಲಿ ಅಂತ ಸುಮ್ನಾದೆ.”
‘ಮನ್ಲಿ ಹೆಂಡ್ತಿ ಇದ್ರೂ ಅವ್ನ್ಯಾಕ್ ಹೀಗೆಲ್ಲ ಮಾಡ್‌ಬೇಕು ಹೇಳು.’
‘ಪರದೇಶಿ ಮುಂಡೇದು ಕಣೆ ಅದು. ಮದುವೆಯಾದ್‌ಮ್ಯಾಲೆ ನ್ಯೆಟ್‌ಗೆ ಗಂಡನ ಹತ್ರ ನಡಕಂಡಿದ್ರೆ ಅವ್ನ್ಯಾಕೆ ಹೀಗಾಗ್ತಿದ್ದ ಹೇಳು.’

ಅಜ್ಜಿ ಮೊಮ್ಮಗಳ ಕಷ್ಟಸುಖಗಳನ್ನೆಲ್ಲ ಕೇಳಿದಳು. ಅಡಿಗೆಯ ಕೆಲಸವನ್ನು ತಾನೇ ವಹಿಸಿಕೊಂಡಳು. ನಂಜುವಿಗೆ ಆಗಲೇ ಎಂಟು ತಿಂಗಳು ತುಂಬಿತ್ತು. ರಾತ್ರಿಯ ಹೊತ್ತು ಅವಳು ಅಕ್ಕಮ್ಮನ ಹತ್ತಿರ ಹಾಸಿಕೊಂಡು ಚಾಪೆಯ ಮೇಲೆ ಮಲಗಲು ಪ್ರಾರಂಭಿಸಿದಳು. ಮಕ್ಕಳು ಅಕ್ಕಮ್ಮನ ಎರಡು ಪಕ್ಕಕ್ಕೂ ಒಂದೊಂದರಂತೆ ತಬ್ಬಿಕೊಂಡು ಮಲಗುತ್ತಿದ್ದುವು. ಅಜ್ಜಿ ಮೊಮ್ಮಗಳು ನಿದ್ರೆ ಬರುವ ತನಕ ಏನಾದರೂ ಮಾತನಾಡುತ್ತಿದ್ದರು. ಚೆನ್ನಿಗರಾಯರಿಗೆ ಮನೆಯಲ್ಲಿ ಮಲಗುವುದು ಬೇಸರವಾಯಿತು. ಒಂದು ರಾತ್ರಿ ಊಟವಾದಮೇಲೆ ಅವರೇ ತಮ್ಮ ಹಾಸಿಗೆ ಹೊತ್ತುಕೊಂಡು ಮಾದೇವಯ್ಯನವರ ಗುಡಿಯ ಜಗುಲಿಯ ಮೇಲಕ್ಕೆ ಹೋದರು.

ಅಕ್ಕಮ್ಮ ಬಂದ ಎಂಟು ದಿನಕ್ಕೆ ಒಂದು ದಿನ ಕಲ್ಲೇಶನೇ ಬಿಳಿಯ ಹಸು ಮತ್ತು ಕರುಗಳನ್ನು ಹೊಡೆದುಕೊಂಡು ಬಂದ. ಎರಡು ದಿನ ತಂಗಿಯ ಮನೆಯಲ್ಲಿದ್ದು ಊರಿಗೆ ಹಿಂತಿರುಗಿದ. ಒಂಬತ್ತನೆಯ ತಿಂಗಳು ತುಂಬಿದ ಮೇಲೆ ನಂಜು ಗಂಡು ಮಗು ಹೆತ್ತಳು. ಮೈ ಕೈ ತುಂಬಿಕೊಂಡಿದ್ದ ಮಗು ದಪ್ಪಗೆ ಆರೋಗ್ಯವಾಗಿ ಲಕ್ಷಣವಾಗಿತ್ತು. ನಾಮಕರಣ ಮಾಡಲು ಹತ್ತಿರ ದುಡ್ಡಿಲ್ಲ. ಆದರೆ ಶಾಸ್ತ್ರ ಬಿಡುವಂತಿಲ್ಲ. ಅಕ್ಕಮ್ಮ ಹೇಗೂ ಬೆಲ್ಲ ಅಕ್ಕಿಗಳನ್ನು ತಂದಿದ್ದಳು. ಅವಳ ಹತ್ತಿರ ಐದು ರೂಪಾಯಿ ಇತ್ತು. ಅದನ್ನೇ ಖರ್ಚು ಮಾಡಿ ಊರಿನ ನಾಲ್ಕು ಬ್ರಾಹ್ಮಣರ ಮನೆಗೂ, ಇಬ್ಬರು ಜೋಯಿಸರ ಮನೆಗೂ ಊಟಕ್ಕೆ ಹೇಳಿ ಶಾಸ್ತ್ರ ಮಾಡಿಸಿ ವಿಶ್ವನಾಥ ಎಂದು ಹೆಸರಿಡಿಸಿದಳು. ಅದೇ ದಿನ ಗಂಗಮ್ಮ ಮತ್ತು ಅಪ್ಪಣ್ಣಯ್ಯ ಊರಿನಲ್ಲಿರಲಿಲ್ಲ; ಹಿಂದಿನ ದಿನವೇ ಎಲ್ಲೋ ಬೇರೆ ಊರಿಗೆ ಹೋಗಿ ಬಿಟ್ಟಿದ್ದರು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.