ಗೃಹಭಂಗ – ೨

ಅಧ್ಯಾಯ ೪
– ೧ –

ನಂಜಮ್ಮನಿಗೆ ಏಳು ತಿಂಗಳಾದಾಗ ಒಂದು ದಿನ ಕಂಠೀಜೋಯಿಸರು ತಮ್ಮ ಬಿಳೀ ಕುದುರೆ ಏರಿ ರಾಮಸಂದ್ರಕ್ಕೆ ಬಂದರು. ಈ ಸಲ ಹಗಲು ಹೊತ್ತಿನಲ್ಲಿ ಬಂದರು. ಅವರು ಇಳಿದ ಎರಡು ಗಂಟೆಯ ನಂತರ, ದಿಂಬುಗಳಿಂದ ಕೂಡಿದ ಒಂದು ಕಮಾನುಗಾಡಿ ಬಂತು. ಬಾಣಂತನಕ್ಕೆ ಮಗಳನ್ನು ಕರೆದೊಯ್ಯಲು ಬಂದ ಅವರು ಕಲ್ಲೇಶನ ಮದುವೆಯ ವರ್ತಮಾನವನ್ನೂ ಹೇಳಿದರು. ಇನ್ನು ಮದುವೆ ಹದಿನೈದು ದಿನಕ್ಕೆ ಸರಿಯಾಗಿ ಹೆಣ್ಣಿನ ಮನೆಯಲ್ಲಿ ನಡೆಯುತ್ತೆ. ಹಾಸನದ ಹೆಣ್ಣು. ಎಲ್ಲರೂ ಮದುವೆಯ ಹೊತ್ತಿಗೆ ನಾಗಲಾಪುರಕ್ಕೆ ಬರಬೇಕೆಂದೂ, ಅಲ್ಲಿಂದ ಗಾಡಿಯಲ್ಲಿ ಮುಂದೆ ಒಟ್ಟಿಗೆ ಹೋಗುವುದೆಂತಲೂ ಹೇಳಿ ಮಗಳ ಜೊತೆ ಪ್ರಯಾಣ ಮಾಡಿದರು. ನಂಜಮ್ಮ ಗಾಡಿಯ ಮೇಲೆ ಕುಳಿತಳು. ಮುಂಭಾಗದಲ್ಲಿ ದಂಡಿನ ದಳಪತಿಯ ಠೀವಿಯಲ್ಲಿ ಕಂಠೀಜೋಯಿಸರು ಬಿಳೀಕುದುರೆಯ ಮೇಲೆ ಸವಾರಿ ನಡೆಸಿದರು.

ನಾಗಲಾಪುರದ ಮನೆಯಲ್ಲಿ ಈಗಲೂ ಅಜ್ಜಿ ಒಬ್ಬಳೇ ಇದ್ದಳು. ನಂಜಮ್ಮ ಹುಟ್ಟಿದಾಗಿನಿಂದ ಸಾಕಿ ಸಲಹಿದವಳು ಅವಳೇ. ಅಕ್ಕಮ್ಮನನ್ನು ಕಂಡು ನಂಜಮ್ಮ ಕಣ್ಣೀರು ಹಾಕಿದಳು. ತುಂಬ ದಿನ ಅಜ್ಜಿಯನ್ನು ಬಿಟ್ಟಿದ್ದುದಕ್ಕೋ, ಅಥವಾ ಮತ್ತೆ ಯಾವ ಕಾರಣಕ್ಕೋ ಎಂಬುದು ಅವಳಿಗೇ ತಿಳಿಯಲಿಲ್ಲ. ಬಸುರಿಯಾದ ಮೊಮ್ಮಗಳನ್ನು ಇದಕ್ಕೂ ಮೊದಲು ತೌರುಮನೆಗೆ ಕರೆಸಿಕೊಳ್ಳಬೇಕೆಂದು ಅಕ್ಕಮ್ಮನ ಆಶೆಯಾಗಿತ್ತು. ಆದರೆ ಎಲ್ಲೆಲ್ಲಿಯೋ ಸಂಚಾರ ಹೋಗಿದ್ದ ಕಂಠೀಜೋಯಿಸರು ಊರಿಗೆ ಬಂದದ್ದೇ ನೆನ್ನೆ ರಾತ್ರಿ. ಅದೂ ಮಗನ ವಿವಾಹ ಮತ್ತು ದಿನವನ್ನು ನಿಷ್ಕರ್ಷಿಸಿಕೊಂಡೇ ಬಂದಿದ್ದರು. ಮಗನಿಗೆ ಇದಕ್ಕೂ ಮೊದಲೇ ಮಾಡಬೇಕಾಗಿತ್ತು. ಅವರು ಅದಕ್ಕೆ ಗಮನವನ್ನೇ ಕೊಟ್ಟಿರಲಿಲ್ಲ. ಕೆಲವು ದಿನದಿಂದ ಅವನ ಸಂಚಾರ ಕ್ರಮ ಸರಿಯಾಗಿಲ್ಲವೆಂದು ಬೇರೆ ಒಬ್ಬ ಕಾನಿಸ್ಟೇಬಲ್ಲಿನಿಂದ ತಿಳಿಯಿತು. ಸರಿ, ಎರಡೇ ದಿನದಲ್ಲಿ ಹೆಣ್ಣು ಗೊತ್ತುಮಾಡಿ ಲಗ್ನ ನಿಶ್ಚಯಿಸಿದರು.

ಅಣ್ಣನ ಮದುವೆಗೆ ನಂಜಮ್ಮನೂ ತಯಾರಿ ಮಾಡತೊಡಗಿದಳು. ಮನೆಗೆ ಸುಣ್ಣ ಕಾರಿಣೆ ಮೊದಲಾಗಿ ಆಳುಗಳ ಕೆಲಸವನ್ನೆಲ್ಲ ನಿರ್ದೇಶಿಸುವ ಹೊಣೆ ಅವಳದ್ದೇ. ಊರಿನಲ್ಲಿ ಒಂದೇ ಸಮನೆ ಇರುವುದು ಕಂಠೀಜೋಯಿಸರ ಜಾಯಮಾನಕ್ಕೆ ಬಂದದ್ದಲ್ಲ. ಕುದುರೆ ಏರಿ ಹೋದ ಅವರು ಮತ್ತೆ ಎಂಟು ದಿನಕ್ಕೆ ಬಂದರು. ಮದುವೆ ಇನ್ನು ಆರು ದಿನವಿದೆ ಎನ್ನುವಾಗ ಕಲ್ಲೇಶಿ ಪೋಲೀಸರ ವೇಷದಲ್ಲಿಯೇ ಊರಿಗೆ ಬಂದ. ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಅವನು ಬುದ್ಧಿವಂತ. ಮದುವೆಯ ಸಿದ್ಧತೆಯಲ್ಲಿ ತಂಗಿ ಮತ್ತು ಅಕ್ಕಮ್ಮರಿಗೆ ಬೇಕಾದ ಸಹಾಯ ಮಾಡಿದ. ಅವರ ಪೈಕಿಯ ಮುಖ್ಯ ನೆಂಟರೆಂದರೆ ರಾಮಸಂದ್ರದವರೇ. ದೇವರ ಸಮಾರಾಧನೆಗೆ ಒಂದು ದಿನ ಮುಂಚಿತವಾಗಿ ಚೆನ್ನಿಗರಾಯ, ಅಪ್ಪಣ್ಣಯ್ಯ , ಮತ್ತು ಸಾತು ಗಾಡಿಯಲ್ಲಿ ಬಂದರು. ವಿಧವೆಯಾದ ತಾನು ಬರುವುದಿಲ್ಲವೆಂದು ಗಂಗಮ್ಮ ಹೇಳಿಕಳಿಸಿದ್ದಳು. ದೇವರ ಸಂತರ್ಪಣೆಯಾದ ರಾತ್ರಿಗೆ ಎಲ್ಲರೂ ಹೊರಡಬೇಕು. ಆದರೆ ಬಸುರಿ ನಂಜಮ್ಮನಿಗೆ ಮಧ್ಯಾಹ್ನದಿಂದಲೇ ಆಯಾಸವಾಗಿ ಜ್ವರ ಬಂದಂತೆ ಆಗುತ್ತಿತ್ತು. ಸಂಜೆಯ ವೇಳೆಗೆ ಮಲಗಿಬಿಟ್ಟಳು. ಇನ್ನು ರಾತ್ರಿಯ ಹೊತ್ತು ಎತ್ತಿನ ಗಾಡಿಯಲ್ಲಿ ಅವಳು ಇಪ್ಪತ್ತನಾಲ್ಕು ಮೈಲಿಯ ಪ್ರಯಾಣ ಮಾಡುವುದು ಕ್ಷೇಮವಲ್ಲವೆಂದು ಎಲ್ಲರೂ ನಿರ್ಧರಿಸಿದರು. ಅವಳು ಮತ್ತು ಅಕ್ಕಮ್ಮ ಊರಿನಲ್ಲಿ ಉಳಿಯುವುದೆಂದು ನಿರ್ಧಾರವಾಯಿತು.

ಉರಿನಲ್ಲಿ ತಾನು ಮತ್ತು ಅಜ್ಜಿ ಇಬ್ಬರೇ. ಅದೂ ಮೊದಲ ಬಸುರು. ನಂಜಮ್ಮನಿಗೆ ಈ ಹೊಸ ಅನುಭವದಲ್ಲಿ ಸಹಜವಾಗಿಯೇ ಇರುವ ಭಯ ಬೇರೆ. ಆದುದರಿಂದ ಗಂಡ ತನ್ನ ಸಂಗಡ ಇಲ್ಲಿಯೇ ಉಳಿದರೆ ಚೆನ್ನವೆಂದು ಯೋಚಿಸಿದಳು. ತಾನಿದ್ದ ಕಡೆಗೆ ಅವರಿಗೆ ಹೇಳಿಕಳಿಸಿದಳು. ಗಾಡಿಯ ಮೇಲೆ ರಾತ್ರಿ ನಿದ್ದೆಮಾಡಲು ಸರಿಯಾದ ಸ್ಥಳದಲ್ಲಿ ಮೊದಲೇ ಕುಳಿತುಕೊಳ್ಳುವ ಸಿದ್ಧತೆಯಲ್ಲಿದ್ದ ಚೆನ್ನಿಗರಾಯರು ಬಂದು ಗುರ್ರೆನ್ನುವ ಧ್ವನಿಯಲ್ಲಿ, ಆದರೆ ಉಳಿದ ಯಾರಿಗೂ ಕೇಳಿಸದಂತೆ, ‘ಏನು?’ ಎಂದು ಕೇಳಿದರು.
‘ನಂಗೆ ಯಾಕೋ ಒಂದ್ ಥರಾ ಆಗ್ತಿದೆ. ಮನೇಲಿ ಇನ್ಯಾರೂ ಗಂಡಸರು ಇರುಲ್ಲ. ಮದುವೆಗೆ ಅಪ್ಪಣ್ಣಯ್ಯ ಸಾತೂ ಹೋಗ್ಲಿ. ನೀವು ಇಲ್ಲೇ ಇರಿ.’
‘ಅದ್ ಹ್ಯಾಗಾಗುತ್ತೆ?’ ಎಂದು ಕೇಳುವಾಗ, ಮದುವೆಯ ಮನೆಯಲ್ಲಿ ಗೋಪುರದಂತೆ ಬಡಿಸಿದ ಹುಳಿಯನ್ನ, ತೆಕ್ಕೆ ಹಾಕಿದ್ದ ಒಬ್ಬಟ್ಟುಗಳೆಲ್ಲವನ್ನೂ ಅವರ ಎಡೆಯಿಂದ ಯಾರೋ ಕಿತ್ತುಕೊಂಡು ಹೋದ ನಿರಾಶೆ ಒಡೆಯುತ್ತಿತ್ತು.
‘ಯಾಕ್ ಆಗುಲ್ಲ? ನೀವಿಲ್ಲೇ ಇರ್ಲಿ ಅಂತ ನಾನು ಕಲ್ಲೇಶಣ್ಣಯ್ಯಂಗೂ ಅಪ್ಪಂಗೂ ಹೇಳ್ತೀನಿ.’
‘ಏನ್ ಬ್ಯಾಡ ನೀನ್ ಬೇಕಾದ್ರೆ ಸಾತಮ್ಮನ್ನ ಇಲ್ಲೇ ಇಟ್ಕ.’
ನಂಜಮ್ಮ ಮತ್ತೆ ಮಾತನಾಡಲಿಲ್ಲ. ಎರಡು ವರ್ಷ ಸಂಸಾರ ಮಾಡಿದುದರಲ್ಲಿ ಅವರ ಸ್ವಭಾವವೆಂಥದೆಂಬುದು ಅವಳಿಗೆ ತಿಳಿದಿತ್ತು. ‘ಪರವಾಗಿಲ್ಲ, ನೀವು ಹೋಗಿ’-ಎಂದಳು. ಅವರು ಹೋಗಿ ತಾವು ದೃಷ್ಟಿಯಿಟ್ಟಿದ್ದ ಅಗಲವಾದ ಕಮಾನು ಗಾಡಿಯ ಮಧ್ಯೆ ಚಳಿಯಾಗದ ಸ್ಥಳ ಹಿಡಿದು ಒರಗಿ ಕುಳಿತುಕೊಂಡರು. ಸಾತು ತಾನಾಗಿಯೇ ಬಂದು-‘ನಾನು ನಿಮ್ಮ ಜೊತೆ ಇರಲೇ ಅಕ್ಕ?’ ಎಂದು ಕೇಳಿದಳು.
‘ಬ್ಯಾಡ, ನೀನು ಹೋಗಿ ಬಾ’-ಎಂದು ನಂಜಮ್ಮ ಹೇಳಿದರೂ ಕೇಳಲಿಲ್ಲ. ಅವಳೇ ಅಕ್ಕಮ್ಮನ ಹತ್ತಿರ ಹೋಗಿ ಕೇಳಿದಳು: ‘ನೀವೊಬ್ಬರೇ ಮುದುಕರು. ಮನೇಲಿ ಮತ್ತೆ ಯಾರೂ ಇಲ್ಲ. ನಾನು ಇಲ್ಲೇ ಇರ್ತೀನಿ.;
‘ಅಲ್ಲಿ ನಮ್ಮ ಮನೆಯೋರು ಅಂತ ಓಡಾಡುಕ್ಕೆ ಹೆಂಗಸರೇ ಇಲ್ಲದ ಹಾಗೆ ಆಗುತ್ತೆ. ನೀನಾದ್ರೂ ಹೋಗಿ ಹಸೆಮಣೆ ಮುಂದಿನ ಕೆಲಸ ನೋಡ್ಕ. ನಾನು ಇಲ್ಲಿ ನಂಜನ್ನ ನೋಡ್ಕತ್ತೀನಿ, ಪರವಾಗಿಲ್ಲ’-ಎಂದು ಅಕ್ಕಮ್ಮ ಬಲವಂತ ಮಾಡಿದ ಮೇಲೆ ಅವಳು ಹೊರಟಳು.
ರಾತ್ರಿ ಎಂಟು ಗಂಟೆಗೆ ನಾಲ್ಕು ಗಾಡಿಗಳ ಕೊರಳೆತ್ತಿದರು. ಕಂಠೀಜೋಯಿಸರು ಬೂಟು ನಿಕ್ಕರು ಕೋಟುಗಳನ್ನು ಧರಿಸಿ ಕುದುರೆ ಏರಿ ಮುಂಭಾಗದಲ್ಲಿ ಹೊರಟರು. ತನ್ನ ಸ್ನೇಹಿತರಾದ ಕೆಲವರು ಕಾನಿಷ್ಟೇಬಲು ದಫೇದಾರರೊಡನೆ ಕಲ್ಲೇಶಿ ಹಿಂದಿನ ಗಾಡಿಯಲ್ಲಿ ಕುಳಿತ. ನಂಜಮ್ಮ ಎದ್ದು ಬಾಗಿಲಿನ ಹತ್ತಿರ ನಿಂತು ನಾಲ್ಕು ಗಾಡಿಗಳೂ ಕಣ್ಮರೆಯಾಗುವ ತನಕ ನೋಡಿದಳು.
ಆ ರಾತ್ರಿ ಮಲಗಿದಾಗ ಅಕ್ಕಮ್ಮ ಅಂದಳು: ‘ನೋಡು ನಂಜ, ಆಡಿನ ಮೊಲೆ ಹಾಗೆ ನೀವಿಬ್ಬರೇ ಮಕ್ಕಳು. ನೀನು ಏಳು ತಿಂಗಳ ಬಸುರಿ ಅಂತ ನಿಮ್ಮಪ್ಪನಿಗೆ ಗೊತ್ತಿದೆ. ಆದರೂ ಈಗಲೇ ಕಲ್ಲೇಶನ ಮದುವೆ ಗೊತ್ತು ಮಾಡ್ಕಂಡ್ ಬಂದಿದಾನೆ. ಅವ್ನಿಗೆ ಬುದ್ಧಿ ಇದೆ ಅಂತೀಯೋ ಇಲ್ಲ ಅಂತೀಯೋ?’
‘ಅವನ ಸ್ವಭಾವ ಯಾವತ್ತೂ ಯಲ್ಲಾ ಯಡ್ಡಂ ದಡ್ಡಂ.’
‘ನಿನ್ನ ಹೆತ್ತು ನಿಮ್ಮಮ್ಮ ಸತ್ತಾಗಿನಿಂದ ನಾನು ಒಂಟಿಯೇ. ಕಲ್ಲೇಶ ಗಂಡುಹುಡುಗ. ನೀನು ಹುಟ್ಟಿದಾಗ ಅವನಿಗೆ ಏಳು ವರ್ಷ ಅಲ್ಲವೇ? ಗಂಡು ಹುಡುಗರು ಹ್ಯಾಗೋ ಬೆಳೀತೂವೆ. ನಿಮ್ಮಪ್ಪ ಮೂರು ದಿನ ಮನೇಲಿದ್ರೆ ಇನ್ನು ಮೂರು ತಿಂಗಳು ಇರುಲ್ಲ. ನೀನು ಮದುವೆಯಾಗಿ ಹೋದಮ್ಯಾಲೆ ನನಗಂತೂ ಒಬ್ಳೆ ಇದ್ದೂ ಇದ್ದೂ ಬೇಜಾರಾಗಿಹೋಗಿದೆ. ಏನೋ ನಿನ್ನ ಹೊಟ್ಟೇಲಿ ನಾಕು ಮಕ್ಳು ಕಂಡು ಬಾಣಂತನ ಮಾಡಬೇಕು ಅಂತ ಒಂದು ಆಶೆ ಇತ್ತು. ದೇವ್ರು ಅದ್ನೂ ನಡುಸ್ತಿದಾನೆ. ಆದ್ರೂ ಹೆಣ್ಣು ಮಕ್ಕಳು, ಕೊಟ್ಟ ಮೇಲೆ ನಾವು ಬೇಕು ಅಂದಾಗ ಎಲ್ಲಿ ಬರುತ್ವೆ?’
‘ಇನ್ನು ಪರವಾಗಿಲ್ಲ. ಕಲ್ಲೇಶಣ್ಣಯ್ಯನ ಹೆಂಡ್ತಿ ಬತ್ತಾಳೆ. ನಿಂಗೆ ಜೊತೆಯಾಗುತ್ತೆ.’
ನಿಂಗೆಲ್ಲೋ ಬ್ರಾಂತು. ಅವ್ನಿರೋದು ಪೋಲೀಸ್ನಲ್ಲಿ. ಯಾವ್ಯಾವ ಊರಿಗೆ ವರ್ಗವಾಗುತ್ತೋ ಹೋಗ್ತಾನೆ. ಅವನ ಜೊತೆ ಅವನ ಹೆಂಡ್ತಿ ಹೋಗಬೇಕು. ಇಷ್ಟಕ್ಕೂ ಅವಳು ಹಾಸನ ಪ್ಯಾಟೆಯೋಳು. ಮಗನಿಗೆ ಹೆಣ್ಣು ಗೊತ್ತು ಮಾಡುವಾಗ ನಿಮ್ಮಪ್ಪ ನನ್ನೇನು ಒಂದು ಮಾತು ಹೇಳಿದನೇ, ಕೇಳಿದನೇ? ಅವನ ಮನಸ್ಸಿಗೆ ಬಂದದ್ದೇ ಬಂದದ್ದು. ಈ ಯಂಬ್ರಮ್ಮುನ್ನ ಹೆತ್ತ ನನ್ನ ಹೊಟ್ಟೆಪುಣ್ಯಕ್ಕೆ ಏನನ್‌ಬೇಕೋ!’
ನಂಜಮ್ಮನ ಮನಸ್ಸು ತಂದೆಯ ಸ್ವಭಾವವನ್ನು ಕುರಿತು ಚಿಂತಿಸಲು ತೊಡಗಿತು. ಅಷ್ಟರಲ್ಲಿ ಅಕ್ಕಮ್ಮ ಕೇಳಿದಳು: ‘ನಿಮ್ಮತ್ತೆ ನಿನ್ನ ನಿಜವಾಗೂ ಚನ್ನಾಗಿ ನೋಡ್ಕತ್ತಾ ಇದಾಳ್ಯೆ?’
‘ಹೂಂ. ಚನ್ನಾಗಿಯೇ ನೋಡ್ಕತ್ತಿದಾರೆ.’
‘ಸದ್ಯಕ್ ಬಿಡು. ಹೆಣ್ಮಕ್ಳಿಗೆ ಅದುಕ್ಕಿಂತ ಹೆಚ್ಚು ಇನ್ನೇನ್ ಬೇಕು?’-ಎಂದು ಅಕ್ಕಮ್ಮ ಸುಮ್ಮನಾದಳು.
ಸ್ವಲ್ಪ ಹೊತ್ತಾದ ಮೇಲೆ ಅವಳೇ ಮಾತನಾಡಿದಳು: ‘ನೋಡೇ ಪುಟ್ಟ, ನೀನು ಆವಾಗ ಹೇಳ್ತಿದ್ದೆಯಲ್ಲಾ, ಸೀತಾ ವನವಾಸದ ಹಾಡು, ಲವ ಕುಶರು ಕಾಳಗ ಮಾಡಿದ್ದು. ಅದಿನ್ನೂ ಜ್ಞಾಪಕದಲ್ಲಿದೆಯೇ?’
“ಅಲ್ಲಿಗೆ ಹೋದಮೇಲೆ ನಾನು ಒಂದ್ಸಲೀನೂ ಹೇಳ್ಕಂಡಿಲ್ಲ. ಬೆಳಗಿನಜಾವ ರಾಗಿ ಬೀಸುವಾಗ ಒಂದ್ ದಿನ ಹೇಳ್ಕಳುಕ್ ಶುರು ಮಾಡ್ದೆ. ನನ್ನ ನಿದ್ದೆ ಹಾಳ್ಮಾಡ್‌ಬ್ಯಾಡ ಅಂತ ಅವರೆಲ್ಲ ಅಂದ್‌ಬಿಟ್ರು. ಸುಮ್ಮನೆ ಬೀಸುಕ್ ಶುರು ಮಾಡ್ದೆ.’
‘ನಾಳೆಯಿಂದ ದಿನಾ ಹೇಳೇ. ನಂಗೆ ಕೇಳ್‌ಬೇಕು ಅಂತ ಆಸೆಯಾಗಿದೆ’-ಎಂದವಳು ಏನೋ ಜ್ಞಾಪಿಸಿಕೊಂಡು, ‘ಏನೂ ಬ್ಯಾಡ ಬಿಡು. ಬಸುರಿ ಹುಡುಗಿ, ಸೀತಾ ವನವಾಸದಂಥ ಹಾಡು ಹೇಳ್ಲೂ ಬಾರ್ದು, ಕೇಳ್ಲೂ ಬಾರ್ದು’ ಎಂದಳು.
ಎರಡು ನಿಮಿಷವಾದ ಮೇಲೆ ಮತ್ತೆ ಹೇಳಿದಳು: ‘ನೋಡು, ನೀನು ಹೋದಮ್ಯಾಲೆ ನಮ್ಮ ಊರಿನಲ್ಲೇ ಹಾಡು ಹೇಳೋ ಹೆಣ್ಮಕ್ಳು ಯಾರೂ ಇಲ್ಲ. ಯಾರ ಮನೇಲಾದ್ರೂ ಆರತಿ ಅಕ್ಷತೆ ಆದ್ರೆ ಪಿಚ್ ಅನ್ಸುತ್ತೆ ಅಂತ ಯಲ್ಲಾರೂ ಹೇಳ್ತಾರೆ. ನಿನ್ನ ಹಾಡಿನ ಪುಸ್ತಕಾನೂ ಮರ್ತೇ ಹೋಗಿದ್ದೀಯಂತೆ. ಅವತ್ತೊಂದು ದಿನ ಕಂಟಿಗೆ ಸಿಕ್ತಂತೆ. ಪಾಪುಂದು ಅಂತ ಅದೆಲ್ಲೋ ತೆಗೆದಿಟ್ಟಿದ್ದಾನೆ. ಬೆಳಿಗ್ಗೆ ಹುಡುಕಿ ತಗಂಡು ಹೇಳ್ಕ. ಇಲ್ದೆ ಇದ್ರೆ ಮರೆತ್ಹೋಗುತ್ತೆ.’

– ೨ –

ಹಾಸನದಲ್ಲಿ ಕಲ್ಲೇಶನ ಧಾರೆಯಾದ ದಿನ ನಾಗಲಾಪುರದ ಬೆಸ್ತರ ಕೇರಿಯಲ್ಲಿ ಇಲಿ ಬಿದ್ದಿತ್ತು. ಅಂದರೆ ಪಿಳೇಗುಮಾರಮ್ಮ ಊರಿಗೆ ಬರುತ್ತಾಳೆ. ತನಗೆ ಯಾರು ಹರಕೆ ನಡೆಸಿಲ್ಲವೋ,ಯಾರು ಭಕ್ತಿಯಿಂದ ನಡೆದುಕೊಳ್ಳುವುದಿಲ್ಲವೋ, ಅಂಥವರನ್ನೆಲ್ಲ ನುಂಗಿ ನೀರು ಕುಡಿಯುತ್ತಾಳೆ. ಗ್ರಾಮಕ್ಕೆ ಅವಳು ಬರುವುದರೊಳಗೆ ಜನವೆಲ್ಲ ಮನೆ ಕೇರಿಗಳನ್ನು ಬಿಟ್ಟು ಊರ ಹೊರಗೆ ಹೊಲದಲ್ಲೋ ತೋಟದಲ್ಲೋ ಸೋಗೆಗುಡಿಸಲು ಹಾಕಿಕೊಂಡು ಇರಬೇಕು. ಮೂರು ತಿಂಗಳೋ ಅಥವಾ ಸ್ವಲ್ಪ ಹೆಚ್ಚಾಗಿಯೋ ಗ್ರಾಮದಲ್ಲಿ ಇದ್ದು ಅಮ್ಮ ಹೊರಟುಹೋದಮೇಲೆ ಜನರೆಲ್ಲ ಹಿಂತಿರುಗಬಹುದು.

ಆದರ ಮಾರನೆಯ ದಿನ ಗೂಡೆಮಾರಮ್ಮನವರು ಬಂದರು. ರಟ್ಟಿ ದಪ್ಪದ, ಮಾರುದ್ದದ ಸೆಣಬಿನ ಚಾವಟಿಯನ್ನು ಬೀಸಿ ತನ್ನ ಮೈಯಿಗೆ ಫಟಾರನೆ ಹೊಡೆದುಕೊಳ್ಳುತ್ತಾ, ಮೈಗೆ ಅರಿಶಿನ ಕುಂಕುಮಗಳನ್ನು ಮೆತ್ತಿಕೊಂಡಿದ್ದ ಅಮ್ಮನವನು ಗೂಡೆ ಹೊತ್ತು ಬಂದ. ಅವನ ಹಿಂದೆ ಅವನ ಹೆಂಡತಿ ಕಣಿ ಹೇಳುತ್ತಿದ್ದಳು: ‘ಸುತ್ತ ಅರವತ್ತನಾಲ್ಕು ಹಳ್ಳಿಯಾಗೆ ಅಮ್ಮ ಕಾಣಿಸಿಕೊಂಡವ್ಳೆ! ದೂಳಿ ದುಪ್ಪಟ ಮಾಡುತವ್ಳೆ! ತಾಯೀರ ಬಿಟ್ಟು ಮಗೂನ ತಿಂತವ್ಳೆ! ಮಕ್ಕಳ ತಾಯೀರ ಎಳಕೊಂಡು ಹೋಗ್ತವ್ಳೆ! ಸೋಬನವಾಗದ ಹುಡುಗೀ ತಿಂತವ್ಳೆ! ಸೋಬನಕ್ಕೋದ ಗಂಡಿನ ಮುಂಡಿಗೆ ಮುರಿದವ್ಳೆ! ಬಸಿರ ಹೆಂಗಸಿನ ಜೀವ ತಿಗದವ್ಳೆ!’ ಹಾ, ಲ, ಲಲಲಲಲಲ ಛಟೀರ್, ಛಟ್ ಎಂದು ನಡುನಡುವೆ ಗಂಡಸು ಚಾವಟಿಯಿಂದ ತನ್ನ ಬರಿಯ ಮೈಮೇಲೆ ಹೊಡೆದುಕೊಳ್ಳುತ್ತಿದ್ದ.
ಹೀಗೆ ಗೂಡೆಮಾರಮ್ಮ ಬರುವುದು, ಬಂದು ಕಣಿ ಹೇಳುವುದೂ ಅಪರೂಪವೇನಲ್ಲ. ಆದರೆ ಬಸಿರ ಹೆಂಗಸಿನ ಜೀವ ತಿಗದವ್ಳೆ-ಎಂಬ ಮಾತನ್ನು ಕೇಳಿ ಅಕ್ಕಮ್ಮನಿಗೆ ಗಾಬರಿಯಾಯಿತು. ಅರಿಶಿನ, ಕುಂಕುಮ, ಅಕ್ಕಿ, ಬೇಳೆ, ತೆಂಗಿನಕಾಯಿ, ಮೇಲೆ ಮೂರು ಕಾಸಿನ ದಕ್ಷಿಣೆಗಳನ್ನು ಮೊರದಲ್ಲಿಟ್ಟುಕೊಂಡು, ತಾನೇ ಎಲ್ಲರಿಗಿಂತ ಮೊದಲು ಹೋಗಿ ಅಮ್ಮನಿಗೆ ಒಪ್ಪಿಸಿ ಅವಳ ಪ್ರಸಾದದ ಕುಂಕುಮ ತಂದು ಇಟ್ಟುಕೊಳ್ಳುವಂತೆ ನಂಜುವಿಗೆ ಕೊಟ್ಟಳು.

ಮರುದಿನ ಇನ್ನೂ ಹೆಚ್ಚು ಇಲಿಗಳು ಬಿದ್ದವು; ಊರಿನ ಇತರ ಕೇರಿಗಳಲ್ಲಿ ಕಾಣಿಸಿಕೊಂಡವು. ಸುತ್ತ ಹಳ್ಳಿಗಳವರೆಲ್ಲ ಆಗಲೇ ಊರು ಬಿಡುತ್ತಿರುವ ಸುದ್ದಿ ಬಂತು. ಇನ್ನು ಇವರು ಸಹ ಸಾಧ್ಯವಾದಷ್ಟು ಬೇಗ ಶೆಡ್ಡು ಹಾಕಬೇಕು. ಗ್ರಾಮದ ಶ್ಯಾನುಭೋಗ ಶ್ಯಾಮಣ್ಣನವರು ಸಂಜೆಗೇ ಮನೆಗೆ ಒಂದು ಆಳಿನಂತೆ ಬರಹೇಳಿ ಪಂಚಾಯ್ತಿ ಮಾಡಿ, ಬರುವ ಸೋಮವಾರದೊಳಗೆ ಎಲ್ಲರೂ ಊರು ಬಿಡಬೇಕೆಂದು ತೀರ್ಮಾನಿಸಿದರು. ಸರಿ, ಮರುದಿನ ಬೆಳಿಗ್ಗೆಯಿಂದಲೇ ಜನಗಳು ತಮ್ಮ ತಮ್ಮ ಹೊಲ ತೋಟಗಳಲ್ಲಿ, ಜಮೀನಿಲ್ಲದವರು ಮತ್ತೊಬ್ಬರ ಭೂಮಿಯಲ್ಲಿ ಶೆಡ್ಡು ಹಾಕಲು ಪ್ರಾರಂಭಿಸಿದರು. ಸಣ್ಣ ವೈವಾಟಿನವರು ಸಾಮಾನುಗಳನ್ನೂ ಸಾಗಿಸಿದರು.

ಕಂಠೀಜೋಯಿಸರು ಮಗನ ಮದುವೆ ಮಾಡಿಕೊಂಡು ಊರಿಗೆ ಬರುವ ದಿನಕ್ಕೆ ಆಗಲೇ ಎಷ್ಟೋ ಮನೆಗಳವರು ಸಾಮಾನು ಸಾಗಿಸಿದ್ದರು. ಮದುವೆಯ ಗಲಾಟೆ ಕಳೆದು ವಿರಾಮ ತೆಗೆದುಕೊಳ್ಳಬೇಕೆಂಬ ಹೊತ್ತಿಗೆ ಸರಿಯಾಗಿ ಇದೊಂದು ಕೆಲಸ ಬಿತ್ತು. ಹೊಸದಾಗಿ ಸುಣ್ಣಕಾರಿಣೆ ಮಾಡಿಸಿದ್ದ ಮನೆಯನ್ನು ಖಾಲಿ ಮಾಡಬೇಕು. ಊರು ಬಿಡಬೇಕಾದರೆ ಗ್ರಾಮದ ಪುರೋಹಿತರನ್ನು ಕೇಳಿ ನಿರ್ಧರಿಸುವುದು ವಾಡಿಕೆ. ಸಣ್ಣಪುಟ್ಟ ಪೌರೋಹಿತ್ಯ ಕೆಲಸಗಳಿಗೆ ಕಂಠೀಜೋಯಿಸರೇ, ಪುಟ್ಟಭಟ್ಟರು ಎಂಬ ಒಬ್ಬ ಎಡತೊರೆ ಕಡೆಯ ಬಡ ಬ್ರಾಹ್ಮಣನನ್ನು ನೇಮಿಸಿ ಅದರ ಆದಾಯವನ್ನೆಲ್ಲ ಅವರಿಗೇ ಬಿಟ್ಟಿದ್ದರು. ಆದರೆ ಈ ಸಲ ಶ್ಯಾನುಭೋಗ ಶ್ಯಾಮಣ್ಣ ಇವರನ್ನೂ ಕೇಳಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಪುಟ್ಟಭಟ್ಟರನ್ನೂ ಕರೆಸಿರಲಿಲ್ಲ. ತಾನೇ ಎಲ್ಲ ತೀರ್ಮಾನವನ್ನೂ ಮಾಡಿದ್ದ. ಅವನಿಗೂ ಇವರಿಗೂ ಮೊದಲಿನಿಂದ ವೈರ. ಜೊತೆಗೆ, ಹೋದ ವರ್ಷ ಇಬ್ಬರಿಗೂ ಗದ್ದೆಯ ನೀರಿನ ವಿಷಯವಾಗಿ ಜಗಳವಾಗಿತ್ತು. ಆಗಿನಿಂದ ಅವನು ಹೀಗೆಯೇ ಏನಾದರೂ ಮಾಡುತ್ತಿದ್ದಾನೆ. ಅವನ ತೀರ್ಮಾನವನ್ನು ತಾವು ವಿರೋಧಿಸಬೇಕೆಂದು ಅವರು ನಿಶ್ಚಯಿಸಿದರು.

ಮದುವೆಯವರು ಹಿಂತಿರುಗಿದ ಮರುದಿನವೇ ತಿಂಗಳ ಕಂಬೋಲಿ ಶಾಸ್ತ್ರ ಮಾಡಿ ಚಪ್ಪರ ಅಳ್ಳಾಡಿಸಿದರು. ಚೆನ್ನಿಗರಾಯ, ಅಪ್ಪಣ್ಣಯ್ಯ, ಸಾತು, ಮೂವರೂ ಗಾಡಿಯ ಮೇಲೆ ಊರಿಗೆ ಹೋದರು.

ಈ ಶ್ಯಾಮಣ್ಣನಿಗೆ ಏನು ಮಾಡಬೇಕು? ಅವನು ಮಾಡಿರುವ ತೀರ್ಮಾನವನ್ನು ವಿರೋಧಿಸಬೇಕು. ಆದರೆ ಜನಗಳು ಆಗಲೇ ಸಾಮಾನು ಸಾಗಿಸಿ ಮನೆಗೆ ಬೀಗ ಹಾಕಿ, ಅಕ್ಷರ ಬಲ್ಲವರು ಬಾಗಿಲ ಮೇಲೆ ‘ನಾಳೆ ಬಾ’ ಎಂದು ಬರೆದು ಶೆಡ್ಡಿಗೆ ಹೋಗುತ್ತಿದ್ದಾರೆ. ಒಬ್ಬರು ಊರು ಬಿಡುವುದೇ ತಡ, ಉಳಿದವರೆಲ್ಲ ಹೆದರಿಕೆಯಿಂದ ಬೇಗ ಬೇಗ ಸಾಮಾನು ಕಟ್ಟುತ್ತಾರೆ. ‘ನಾನು ಶಾಸ್ತ್ರ ನೋಡಿದೀನಿ. ಊರಿಗೆ ಏನೂ ಆಗುಲ್ಲ. ಯಾರೂ ಬಿಡಬೇಡಿ’ ಎಂದು ಕಂಠೀಜೋಯಿಸರು ಹೇಳಿದರೂ ಯಾರೂ ಕೇಳಲಿಲ್ಲ. ‘ಹಂಗಾದ್ರೆ ನೀವು ಊರೊಳಗೇ ಇರ್ತೀರಾ?’-ಎಂದು ಯಾರೋ ಒಬ್ಬರು ಕೇಳಿದರು ‘ಹೂಂ. ಇರ್ತೀನಿ’-ಎಂದು ಇವರು ಹಟದ ಭರದಲ್ಲಿ ಅಂದುಬಿಟ್ಟರು. ತಾವೇ ಆಡಿದ ಆ ಮಾತನ್ನು
ಉಳಿಸಿಕೊಳ್ಳಬೇಕೆಂದು, ಬಿಟ್ಟ ಊರಿನಲ್ಲಿ ಒಬ್ಬರೇ ಇರಲು ನಿಶ್ಚಯಿಸಿದರು.

ಈ ತೀರ್ಮಾನವನ್ನು ಅಕ್ಕಮ್ಮ ಉಗ್ರವಾಗಿ ವಿರೋಧಿಸಿದಳು: ‘ಮೊಮ್ಮಗಳು ಚೊಚ್ಚಲು ಬಾಣಂತನಕ್ಕೆ ಬಂದಿದ್ದಾಳೆ. ಹಾಳುಬಡಿದ ಊರಿನಲ್ಲಿ ಒಂದೇ ಒಂದು ಸಂಸಾರ ಇರೋದು ಹ್ಯಾಗೆ? ನಾವೂ ಬಿಡಲೇಬೇಕು. ಇಲ್ಲದಿದ್ದರೆ ಅವಳನ್ನು ಅವಳ ಅತ್ತೆಯ ಮನೆಗೇ ಕಳಿಸಿಬಿಡ್ತೀನಿ. ಬಾಣಂತನ ಮಾಡೂಕೆ ಶಕ್ತಿ ಇಲ್ಲದೆ ಕಳಿಸಿದ್ರು ಅಂತ ಅವರು ಅಂದ್‌ಕಂಡ್ರೆ ಅಂದ್‌ಕಳ್ಲಿ. ಬೇಕಾದ್ರೆ ನಾನೂ ಅಲ್ಲಿಗೇ ಹೋಗಿ ಬಾಣಂತನ ಮಾಡಿ ಬರ್ತೀನಿ.’
‘ನಾನು ಊರು ಬಿಡೂದಿಲ್ಲ ಅಂತ ಜೂರತ್ತಿನಿಂದ ಹೇಳಿದೀನಲ್ಲ. ಬಿಟ್ರೆ ನನ್ ಮರ್ಯಾದೆ ಏನಾಗ್‌ಬೇಕು?’
‘ಅದರಲ್ಲೆಂಥ ಮರ್ಯಾದೆ? ಸುಮ್‌ನೆ ಬಾ.’
ಕಂಠೀಜೋಯಿಸರು ತಮ್ಮ ಮರ್ಯಾದೆಯನ್ನು ಕೈಬಿಡಲು ಒಪ್ಪಲಿಲ್ಲ. ಮತ್ತೆ ವಾಗ್ವಾದ ನಡೆದು ಊರ ಆಚೆಯ ಅವರ ಹೊಲದಲ್ಲಿ ಶೆಡ್ಡು ಹಾಕಿಸುವುದು, ಅಲ್ಲಿ ಅಕ್ಕಮ್ಮ ನಂಜಮ್ಮರು ಇರುವುದು, ನಂಜಮ್ಮನ ಬಾಣಂತಿತನ ಶೆಡ್ಡಿನಲ್ಲೇ ಆಗುವುದು ಎಂದು ನಿಶ್ಚಯವಾಯಿತು. ಆದರೆ ಕಂಠೀಜೋಯಿಸರು ಮಾತ್ರ ಊರಿನಲ್ಲಿ ಮನೆಯಲ್ಲಿಯೇ ಉಳಿಯಲು ತೀರ್ಮಾನಿಸಿದರು. ‘ನಿಂದು ಮೊದಲಿಂದ ಯಂಬ್ರಮ್ಮ ಬುದ್ಧಿ. ನೀನೊಬ್ಬನೇ ಇಲ್ಲಿ ಯಾಕಿರಬೇಕು? ಅಲ್ಲಿಗೆ ಬರೂಕಾದೇ?
‘ಫ್ಲೇಗಿನ ಅಮ್ಮ ನನ್‌ತಾವ ಏನೂ ಕಿತ್‌ಕಳಾದಿಲ್ಲ. ನಾನು ಗಂಡು, ಇಲ್ಲೇ ಇರ್ತೀನಿ.’
ಬೇರೆ ಉಪಾಯವಿರಲಿಲ್ಲ. ಅವರು ಹಾಕಿಕೊಟ್ಟ ಶೆಡ್ಡಿಗೆ ಸಾಮಾನು ಸಮೇತ ಅಜ್ಜಿ ಮತ್ತು ಬಸುರಿ ಮೊಮ್ಮಗಳು ಹೋದರು. ಆದರೆ ಬಿಟ್ಟ ಊರಿನಲ್ಲಿ ಒಬ್ಬನೇ ಇರುವ ಅವರ ಮೈಮೇಲೆ ಅಮ್ಮ ಇರುವುದರಿಂದ ಅವರು ಊರ ಹೊರಗಿನ ಶೆಡ್ಡಿಗೆ ಹೋಗಿ ತಮ್ಮ ತಾಯಿ ಮತ್ತು ಮಗಳನ್ನು ಆಗಾಗ್ಗೆ ನೋಡಕೂಡದೆಂದು ಶ್ಯಾಮಣ್ಣ ಪಂಚಾಯ್ತಿ ಮಾಡಿಸಿ ಕಟ್ಟು ಮಾಡಿಸಿದ. ಎಂದರೆ ನಂಜುವಿನ ಹೆರಿಗೆ ಬಾಣಂತಿತನಗಳ ಕಷ್ಟ ಸುಖವೇನಿದ್ದರೂ ಮುದುಕಿ ಅಕ್ಕಮ್ಮನ ಮೇಲೆ ಮಾತ್ರ ಬಿತ್ತು.

– ೩ –

ಇಡೀ ಊರಿಗೇ ಕಂಠೀಜೋಯಿಸರು ಒಬ್ಬರೇ ಉಳಿದರು. ಒಂದು ಹಸುವನ್ನು ಅವರು ಶೆಡ್ಡಿಗೆ ಕಳುಹಿಸಿದ್ದರು. ಇನ್ನೊಂದು ಹಸು ಕರುವನ್ನು ತಮಗೆ ಇಟ್ಟುಕೊಂಡರು. ತಮ್ಮ ಅಡಿಗೆ ತಾವೇ ಮಾಡಿಕೊಳ್ಳುತ್ತಿದ್ದರು. ಮನೆಯನ್ನು ಗುಡಿಸಿ ಚೊಕ್ಕಟವಾಗಿಟ್ಟುಕೊಂಡು ಹುಲಿ ಚರ್ಮದ ಮೇಲೆ ಕೂತು ಜೋತಿಷ್ಯದ ಓಲೆಗರಿಗಳನ್ನು ಎಷ್ಟೋ ತರಹದ ಮಂಡಲಗಳು, ತ್ರಿಕೋಣ, ಚತುಷ್ಕೋಣ, ಪಂಚಕೋಣಾದಿ ಆಕೃತಿಗಳು, ಹ್ರೀಂ, ಧೀಂ, ಓಂ ಮೊದಲಾದುವುಗಳ ಮಂತ್ರ ಶಕ್ತಿಗಳನ್ನು ಕುರಿತು ಮನಸ್ಸಿನಲ್ಲಿಯೇ ಚಿಂತಿಸುತ್ತಿದ್ದರು. ಇಲ್ಲವೇ ಗಟ್ಟಿಯಾಗಿ ಯಾವುದಾದರೂ ಮಂತ್ರ ಹೇಳಿಕೊಂಡು ಹಿತ್ತಲ ಕಡೆ ಸುತ್ತಾಡುವರು. ತುಂಬ ಬೇಸರವಾದರೆ ಒಂದೊಂದು ದಿನ ಕುದುರೆ ಏರಿ ದೂರದ ಚೆನ್ನರಾಯಪಟ್ಟಣದ ಕಡೆಗೆ ಹೋಗಿಬರುವರು.

ಅವರು ಒಟ್ಟಿಗೆ ಇಷ್ಟು ದಿನ ಊರಿನಲ್ಲಿ ಇದ್ದುದೇ ಇಲ್ಲ. ಈಗಲೂ ಇರುವ ಅಗತ್ಯವಿರಲಿಲ್ಲ. ಆದರೆ ಒಂದು ವಿಧವಾದ, ಶ್ಯಾನುಭೋಗ ಶ್ಯಾಮಣ್ಣನ ಮೇಲಿನದಿರಬಹುದು, ಅಥವಾ ತಾವು ಬೇಡವೆಂದರೂ ಕೇಳದೆ ಹೆದರಿ ಊರು ಬಿಟ್ಟು ಹೋದ ಇಡೀ ಗ್ರಾಮಸ್ಥರ ಮೇಲಿನದಿರಬಹುದು, ಹಟದ ಮೇಲೆ ಎಲ್ಲಿಯೂ ಹೋಗದೆ, ಬಿಟ್ಟ ಊರಿನಲ್ಲಿ ಒಬ್ಬರೇ ಇದ್ದರು. ಕತ್ತಲೆ, ಒಂಟಿತನ, ಕಳ್ಳಕಾಕರು, ತಲೆಯೊಡೆಯುವವರು. ಹಾವು, ಹಲ್ಲಿ ಮೊದಲಾಗಿ ಯಾವುದಕ್ಕೂ ಹೆದರುವುದು ಅವರ ರಕ್ತದಲ್ಲೇ ಇರಲಿಲ್ಲ.

ಒಂದು ದಿನ, ಬಿಟ್ಟ ಊರಿನೊಳಕ್ಕೆ ಒಬ್ಬರು ಬಂದರು. ಸುಮಾರು ಐವತ್ತು ವರ್ಷ ವಯಸ್ಸು. ಕಮಾನಿನಂತೆ ನೆತ್ತಿಯ ಮುಂಭಾಗ ಬೋಳಿಸಿದೆ. ಹಿಂಬಾಗದ ಬಿಳೀ ಜುಟ್ಟನ್ನು ಗಂಟುಹಾಕಿ ಕಟ್ಟಿರುವ ಆತ ಒಂದು ಕೆಂಪು ಅಂಗಿ, ಕೊಳೆಯಾದ ಕರಿ ಕೋಟು ಹಾಕಿ ಕಚ್ಚೆ ಪಂಚೆ ಉಟ್ಟಿದ್ದಾರೆ. ಮುಂಭಾಗದ ಎರಡು ಹಲ್ಲು ಬಿದ್ದಿದ್ದ ಬಾಯಿ ಹೊಗೆಸೊಪ್ಪು ಹಾಕುವ ಅಭ್ಯಾಸವನ್ನು ತೋರಿಸುತ್ತದೆ. ಬಲಗೈಯ ಮಧ್ಯದ ಬೆರಳಿಗೆ ಚಿನ್ನದ ದಾರದಲ್ಲಿ ಹೆಣೆದು ಮಾಡಿದಂತಹ ಮಾಂತ್ರಿಕ ಉಂಗುರ. ಬಂದವರ ಗುರುತು ತಕ್ಷಣ ಹತ್ತಲಿಲ್ಲವಾದರೂ ಒಂದು ನಿಮಿಷದ ಮೇಲೆ ನೆನಪಾಗಿ ಕಂಠೀಜೋಯಿಸರೇ ಮಾತನಾಡಿಸಿದರು: ‘ಏನು ವೀರಾಚಾರೀ, ಬಿಟ್ಟ ಊರೊಳಕ್ಕೆ ಬಂದುಬಿಟ್ಟೆ?’
‘ನಿಮ್ಮುನ್ನೇ ಕಂಡು ಹೋಗಾನ ಅಂತ ಎಲ್ಡು ವರ್ಸದಿಂದ ಒಟ್ಟು ನಾಕು ದಿನ ಬಂದಿದ್ದೆ. ನೀವು ಊರಲ್ಲಿ ಇರ್ತೀರಾ ಇಲ್ಲಾ ಅನ್ನೂದು ಯಾರಿಗೂ ತಿಳಿಯಾಕಿಲ್ಲ. ಇವತ್ತು ಹಂಗೇ ನೋಡ್ಕಂಡ್ ಹೋಗಾನಾ ಅಂತ ಮತ್ತೆ ಬಂದೆ.’
‘ಬಾ,ಬಾ. ಒಳಗೆ ಕೂತುಕೊ.’
ವೀರಾಚಾರಿ ಒಳಗೆ ಬಂದು ಕುಳಿತ. ತಮ್ಮ ಆಸನದ ಹತ್ತಿರ ಕಂಠೀಜೋಯಿಸರು ನಾಲ್ಕು ಹಳೇ ಎಕ್ಕಡಗಳನ್ನಿಟ್ಟಿದ್ದರು. ಅವನು ಕೇಳಿದ: ‘ಅಳೇ ಯಕ್ಡ್‌ದ ಸಂಗ್‌ತಿ ನೀವ್ ಒಪ್‌ತೀರಾ ಬುದ್ಧಿ?’
‘ಹೂ. ಕೈಗೆ ತಗಂಡ್ ನಿಂತ್ಕಂಡ್ರೆ ಯಾವನಾದ್ರೂ ಮಾತು ಕೇಳ್ತಾನೆ.’
‘ಅದುಕ್ಕಲ್ಲ ಏಳಿದ್ದು. ಗಾಳಿ ಪೀಡೆ ಓಡುಸ್ತದಂತೆ ಅದು.’
‘ಅದೂ ಆಗುತ್ತೆ ಅನ್ನು. ನಾನು ಇಟ್‌ಕಂಡಿರೋದು ಮನುಷ್ಯರಿಗೆ.’
ಸ್ವಲ್ಪ ಹೊತ್ತು ಅದೂ ಇದೂ ಮಾತನಾಡಿದ ಮೇಲೆ ಜೋಯಿಸರೇ ಕೇಳಿದರು: ‘ಏನು ನೀನು ಬಂದ ಜಂಬ್ರ?’
‘ಹಂಗೇ ಬಂದೆ. ಈಗ ಎಲ್ಡು ವರ್ಸದಾಗೆ ಒಂದ್ ಕೆಲ್ಸವಾಯ್ತು. ಚೋಳನ ಗುಡ್ಡದ್ ತಾವ್‌ಳ ಕಟಿಗೇ‌ಅಳ್ಳಿಯೋರುದ್ದ ಒಂದು ಮಾಟ ಮಾಡ್ಸಿದ್ದೆ. ಅಮಾಸೆ ದಿನ. ಚೌಡಮ್ಮನ್ ಮ್ಯಾಲೆ ಮಡ್‌ಗಿದ್ ದಕ್ಷಿಣೆ ದುಡ್ದು, ಮೂರು ಚಿಪ್ಪು ಬಾಳೇಹಣ್ಣು, ಎಲ್ಲಾನೂ ಯಾರೋ ಯಗರಿಸ್‌ಕಂಡ್ ಓಗಿದ್ರು. ನಿಮ್‌ಗೇನಾರಾ ಗೊತ್ತಾ ಕೇಳಾಣಾ ಅಂತ ಬಂದೆ.’
‘ಮಾಟ ಮಾಡಾದು ಕಲ್ತಿರೋನ್ಗೆ ಕವಡೆ ಬಿಟ್ಟು ಶಾಸ್ತ್ರ ನೋಡಾಕ್ ಬರುಲ್ವೇನೊ? ನನ್ನೇನ್ ಕೇಳ್ತೀಯಾ? ಶಾಸ್ತ್ರ ನೋಡಾಕೆ ನಿಂಗಿಂತ ನಂಗೆ ಗೊತ್ತಾ?’
ಇದುಕ್ ಸಾಸ್ತ್ರವೂ ಬ್ಯಾಡ ಸುಕನಾತಿಯೂ ಬ್ಯಾಡ. ಅವತ್ ರಾತ್ರಿನಾಗ ಮತ್ತೆ ಬಂದ್ ನೋಡಿದ ಪಟೀಗೆ ನನ್ಗೆ ಗೊತ್ತಾಗ್‌ಹೋಯ್ತು. ನಾನ್ ಮಾಡಿ ಮಡಗಿದ ಚೌಡಮ್ಮನ್ನ ಮುರ್‌ದ್‌ಹಾಕಿ ಅವಳ ಮೈಮ್ಯಾಲಿನ ದುಡ್ಡು ತಗಂಡು ಬಾಳೆಹಣ್ಣು ತಿಂದು ಅರಗಿಸ್‌ಕಳಾ ಸಗ್‌ತಿ ಇನ್ಯಾರಿಗೂ ಇಲ್ಲ. ಅಮಾಸೆ ರಾತ್ರಿ ಹೊತ್ನಾಗ ಅಲ್ಲಿಗೆ ಹೋಗಾ ಗುಂಡಿಗೆ ಯಾರಿಗೈತೆ? ಈ ಸೀಮೇಲೇ ಕಂಠ್ಯಪ್‌ನೋರಲ್ದೆ ಇನ್ಯಾರ್ಗೂ ಇದು ಎಟ್‌ಕಾ ಮಾತಲ್ಲ ಅಂತ ನನಗೆ ತಿಳಿದ್‌ಹೋಯ್ತು. ನಿಜ ಹೇಳಿ ದೋಸ್‌ರೆ.’
‘ನಿಂಗೂ ಬುದ್ಧಿ ಇದೆ ಕಣೋ ಆಚಾರಿ. ಈಗ್ ಏನ್ ಆ ದುಡ್ದು ಕೇಳಾಕ್ ಬಂದ್ಯೇನು?’
‘ಆ ದುಡ್ದಿನ ಮನೆ ಆಳಾಯ್ತು. ಅದು ಬ್ಯಾಡ. ಇನ್ ಯಾವತ್ತೂ ನಾನ್ ಕೈ ಆಕಿದ್ ತಾವುಕ್ ನೀವು ಕಾಲ್ ಆಕ್‌ಬ್ಯಾಡಿ ಕಣಪ್ಪ. ನಿಮಿಗ್ ಕೈ ಮುಗೀತೀನಿ.’
‘ಆಯ್ತು ಬಿಡು. ನಾನಿನ್ನೂ ಅಡಿಗೆ ಮಾಡಿಲ್ಲ. ಈಗ ಇಬ್ರಿಗೂ ಮಾಡ್ತೀನಿ. ಇದ್ದು ಊಟ ಮಾಡ್‌ಕಂಡು ಹೋಗು.’

ವೀರಾಚಾರಿ ಊಟಕ್ಕೆ ಉಳಿದ. ಸಂಜೆ ನಾಲ್ಕು ಗಂಟೆಯ ತನಕ ಇದ್ದು ಹೊರಟು ಹೋದ. ಆ ದಿನ ರಾತ್ರಿ ಕಂಠೀಜೋಯಿಸರಿಗೆ ಇದ್ದಕ್ಕಿದ್ದಹಾಗೆಯೇ ಮಗಳ ನೆನಪು ಬಂತು. ‘ಈಗ ಹೆರಿಗೆಯ ದಿನ ಹತ್ತಿರವಾಗಿರಬಹುದು. ನಾನು ಹೋಗಿ ನೋಡಿಯೇ ಇಲ್ಲ. ಆ ಬದ್ಮಾಷ್ ಶಾಮಣ್ಣ ಪಂಚಾಯ್ತೀಲಿ ಕಟ್ಟು ಮಾಡಿಸಿದ ಅಂತ ನಾನ್ಯಾಕೆ ಹೆದರ್‌ಕಂಡು ಅಲ್ಲಿಗೆ ಹೋಗದೆ ಇರಬೇಕು.? ನಾಳೆ ಹೋಗಿ ನೋಡ್‌ಕಂಡೇ ಬತ್ತೀನಿ. ಅವ್ನು ನನ್‌ತಾವ ಅದೇನು ಕಿತ್ಕತಾನೋ ನೋಡಾಣ. ಅವನ ಶೆಡ್ಡು ನಮ್ಮುದ್ರ ಹತ್ರಾನೇ ಇದೆ. ರಾಜಾರೋಷಾಗಿ ಅವನ ಎದುರಿಗೇ ಹೋಗ್ತೀನಿ. ಅವ್ನೇನಾದ್ರು ಗುರ್ ಅಂದ್ರೆ ಚಮ್‌ಡ ನಿಕಾಲ್ ಮಾಡ್ತೀನಿ, ಮಾದರ್‌ಚೋದಂದು. ನಾನು ಇಷ್ಟು ದಿನ ಅಲ್ಲಿಗೆ ಹೋಗದೆ ಇದ್ದುದೇ ಸರಿಯಾಗಲಿಲ್ಲ. ನನ್ನ ಪಂಚಾಯ್ತಿ ಕಟ್ಟೆಗೆ ಹೆದರ್ಕಂಡೇ ಕಂಠಿ ಬರಲಿಲ್ಲ ಅಂತ ತಿಳ್ಕಂಡು ಅವ್ನು ಮೀಸೆ ತಿರುವ್‌ಕತ್ತಿರಭೌದು. ನನ್ ಉಚ್ಚೇಲಿ ಬೋಳಿಸ್‌ಬೇಕು ಆ ಮಿಂಡ್ರಿಗೆ ಹುಟ್ಟಿದ ಮಗನ ಮೀಸೇನ’-ಎಂಬ ಆಲೋಚನೆಯಲ್ಲಿ ಅವರು ಆ ಮಗ್ಗುಲು ಆಡುತ್ತಿರುವಾಗ ಮನೆಯ ಹೆಂಚಿನ ಮೇಲೆ ಎನೋ ಬಿದ್ದಂತೆ ಆಯಿತು. ಮತ್ತೆ ಒಂದು ನಿಮಿಷದಲ್ಲಿ ಎರಡು ಕಲ್ಲು ಬಿದ್ದ ಶಬ್ದವಾಯಿತು. ಈ ವೀರಾಚಾರಿದೇನಾರಾ ಇದೆಯೇ ಕೆಲಸ ಎಂಬ ಯೋಚನೆ ಮನಸ್ಸಿನಲ್ಲಿ ಬರುತ್ತಿರುವಂತೆಯೇ ಮನೆಯ ಮೇಲೆ ಪಟಪಟನೆ ಇಪ್ಪತ್ತು ಮೂವತ್ತು ಕಲ್ಲು ರೊಂಯ್ ರೊಂಯ್ ಎನ್ನುತ್ತಾ ಬಂದು ಬಿದ್ದವು. ‘ವೀರಾಚಾರಿಗೂ ಇದಕ್ಕೂ ಏನೂ ಸಂಬಂಧವಿಲ್ಲ. ಈ ಊರ್ನೋರೇ ಯಾರೋ ಇರಬೇಕು, ನನ್ನ ಹೆದರುಸ್‌ಬೇಕು ಅಂತ ಏನೋ ಮಡಿದಾರೆ. ಇರ್ಲಿ ಈ ಶಿಖಂಡಿ ಸೂಳೆಮಕ್ಳಿಗೆ ತೋರುಸ್ತೀನಿ ಕೈಯ’-ಎಂದು ಅವರು ಹಾಗೆಯೇ ಮೇಲೆ ಎದ್ದು, ಶಬ್ದವಾಗದಂತೆ ಹಿಂಭಾಗದ ಬಾಗಿಲು ತೆಗೆದು ಹಿತ್ತಿಲಿಗೆ ಬಂದರು. ಮೆಲ್ಲಗೆ ಹಿತ್ತಿಲಿನ ಗೋಡೆ ಹಾರಿ ಪಕ್ಕದ ಮನೆಯನ್ನು ಬಳಸಿ ಬೀದಿಗೆ ಬಂದು ಒಂದು ಸಲ ಗಟ್ಟಿಯಾಗಿ ‘ಯಾವನೋ ಅವನು ಬೋಳೀಮಗನೇ, ನಿನ್ನ ಆವ್‌ತಿ ತಗಂಡ್‌ಬಿಡ್ತೀನಿ’ ಎಂದು ಅಬ್ಬರಿಸಿದರು. ನಾಲ್ಕೈದು ಜನಗಳು ದಿಕ್ಕು ತೋಚದೆ ಎತ್ತೆತ್ತಲೋ ಓಡತೊಡಗಿದರು. ಅವರು ಭಯದಿಂದ ತತ್ತರಿಸುತ್ತಿರುವಂತೆ ಇವರು ಇನ್ನೊಂದು ಸಲ ಅಬ್ಬರಿಸುತ್ತಾ ಮುನ್ನುಗ್ಗಿ ಹೋಗಿ ಅವರ ಪೈಕಿ ಒಬ್ಬನನ್ನು ಹಿಡಿದರು. ಉಳಿದವರು ತಪ್ಪಿಸಿಕೊಂಡು ಪರಾರಿಯಾದರು.

ಸಿಕ್ಕಿದವನ ಹೆಸರು ಜುಟ್ಟಗ. ಶ್ಯಾನುಭೋಗ ಶ್ಯಾಮಣ್ಣನವರ ಗದ್ದೆಯನ್ನು ವಾರಕ್ಕೆ ಗೇಯುತ್ತಿದ್ದ ಅವನು ಧೈರ್ಯಶಾಲಿ, ನಿಜ. ಆದರೆ ಈಗ ಭಯದಿಂದ ಗಡಗಡ ನಡುಗಲು ಪ್ರಾರಂಭಿಸಿದ. ಕಂಠೀಜೋಯಿಸರೆಂದರೇ ಒಂದು ಮಾರಮ್ಮನಿಗೆ ಸಮಾನ. ಬಿಟ್ಟ ಊರಿನಲ್ಲಿ ಮಾರಮ್ಮ ಇದ್ದೇ ಇರುತ್ತಾಳೆ ಎಂದು ಅವನು ಕೇಳಿದ್ದ. ಕತ್ತಲೆಯ ಈ ನಡು ರಾತ್ರಿಯಲ್ಲಿ ತನ್ನ ಜೊತೆಯವರೆಲ್ಲ ಹೊರಟು ಹೋಗಿರುವಾಗ ಅಬ್ಬರಿಸಿಕೊಂಡು ಬಂದು ತನ್ನನ್ನು ಹಿಡಿದು ಕೆಡವಿಕೊಂಡಿರುವುದು ಮಾರಮ್ಮನೋ ಅಥವಾ ಕಂಠೀಜೋಯಿಸರೋ ಎಂಬುದು ಅವನಿಗೆ ನಿಶ್ಚಯವಾಗಿ ತಿಳಿಯಲಿಲ್ಲ. ಕಂಠೀಜೋಯಿಸರೆಂದು ಸ್ಪಷ್ಟವಾಗಿ ತಿಳಿದಿದ್ದರೂ, ಅವರೂ ಮಾರಮ್ಮನೇ ಅಲ್ಲವೆಂದು ನಂಬಿಕೆಯಾಗುವಂತಿರಲಿಲ್ಲ.
‘ಯ ಯ ಯಪ್ಪಾ, ನನನನ್ ಬು ಬು ಬುಟ್‌ಬುಡಿ’-ಎಂದು ಕೈ ಮುಗಿದ.
‘ನೀನ್ ಯಾರು, ಶ್ಯಾಮಣ್ಣ ಕಳಿಸಿದ್ನೇನೋ?’
‘ಊಂ.’
‘ಇಲ್ಲೀಗ್ ಬರೋ ಧೈರ್ಯ ಹೆಂಗಾಯ್ತೋ ನಿಂಗೆ?’
‘ನೀ ನೀ ನೀವ್ ಊರಾಗಿರಾಕಿಲ್ಲ ಅಂತ ಏ ಏಳಿದ್ರು.’
‘ನಾನು ಊರಾಗಿಲ್ದೇಹೋದ್ರೂ ನನ್ನ ಮನೇ ಮೇಲೆ ಕಲ್ಲು ಹೊಡಿಯೋ ಧೈರ್ಯ ಹ್ಯಂಗೆ ಬಂತೋ ನಿಂಗೆ?’
‘ನೀನು ಹೋಗ್ದೇ ಇದ್ರೆ ನಿನ್ನ ಗದ್ದೆ ಬುಡುಸ್‌ಬುಡ್ತೀನಿ ಅಂದ್ರು.’
‘ಬಾಕಿಯೋರ್ಯಾರ್ಯಾರು?’
‘ತಿಮ್ಮಕ್ಕನ ಮನೆ ಗಿಡ್ಡ, ಮ್ಯಾಗಳ ಕೇರಿ ಗುಳ್ಳಿಗ, ತಳವಾರರ ಸಿದ್ದೂರ.’
‘ಅವರಿಗೆಲ್ಲ ಹ್ಯಂಗೆ ಧೈರ್ಯ ಬಂತು?’
‘ಇಲ್ದೆ ಇದ್ರೆ ದರಕಾಸ್ತಿನಾಗೆ ಸರ್ಕಾರೀ ಜಮೀನು ಕೊಡಿಸಾಕಿಲ್ಲ ಅಂದ್ರು.’
‘ಆಯ್ತು. ನಿನ್ ಹೆಂಡ್ತಿ ಮುಂಡೆಯಾಗ್ಬೇಕು ಅಂತ ನಿಂಗೆ ಆಶೆಯಾಗೈತೋ?’
‘ನಿಮ್ ದಮ್ಮಯ್ಯ ಬುದ್ಧಿ, ಹಂಗ್ ಮಾಡಿಸ್‌ಬ್ಯಾಡಿ.’
‘ನನ್ ಮನೆ ಮ್ಯಾಲೆ ಕಲ್ಲು ಹೊಡ್ದು ನೀನಿನ್ಹೆಂಗ್ ಉಳ್ಕತೀಯಾ ಹ್ಯೇಳು?’
ಜುಟ್ಟಗ ಮತ್ತೆ ಏನೂ ಹೇಳದೆ ನಡುಗುತ್ತಾ ನಿಂತುಕೊಂಡ. ಈಗಲೇ ಹೋಗಿ ಶ್ಯಾನುಭೋಗ ಶ್ಯಾಮಣ್ಣನ ಶೆಡ್ಡಿಗೆ ಸೀಮೆ ಎಣ್ಣೆ ಹಾಕಿ ಬೆಂಕಿಹೊತ್ತಿಸಬೇಕೆಂದು ಕಂಠೀಜೋಯಿಸರ ಮನಸ್ಸಿನಲ್ಲಿ ಬಂತು. ಆದರೆ ಅವರ ಶೆಡ್ಡಿಗೆ ಹತ್ತಿರವಾಗಿ ಇವರ ತಾಯಿ ಮತ್ತು ಮಗಳು ಇದ್ದ ಶೆಡ್ಡೂ ಇತ್ತು. ಉರಿ ಅಲ್ಲಿಂದ ಇದಕ್ಕೆ ಬಡಿದೀತೆಂಬ ಯೋಚನೆ ಬಂದು ಅವರು ಅದನ್ನು ಕೈಬಿಟ್ಟರು. ಆ ನಾಯಿಮರಿಗೆ ಬುದ್ಧಿ ಕಲಿಸ್ಬೇಕಾದ್ರೆ ಹಾಡಾಹಗಲು ಮಾಡಬೇಕು. ರಾತ್ರಿ ಹೊತ್ನಲ್ಲಿ ಮಾಡಿದ್ರೆ ಅವನ್ಗೂ ನನ್ಗೂ ಏನು ವ್ಯತ್ಯಾಸ-ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಹುಟ್ಟಿತು. ಜುಟ್ಟಗ ಅಲ್ಲಿಯೇ ಕೈಮುಗಿದುಕೊಂಡು ನಿಂತಿದ್ದ.
‘ನಮ್ಮ ಶೆಡ್ಡಿನ ಕಡೆ ಹೋಗಿದ್ಯೇನೋ?’
‘ಒಲೀಕ್ ಓಗಿರ್ನಿಲ್ಲ. ಅದ್ರ ತಾವುಕ್ ಓಗಿದ್ದೆ.’
‘ಹ್ಯಂಗವ್ರೆ ಅಮ್‌ನೋರು?’
‘ನಂಜವ್ವ ಎಣ್ ಮಗ ಎತ್‌ತಂತೆ ಇವತ್ ಮದ್ಯಾನ್‌ದಾಗ. ಮಗ ಬಾಣಂತಿ ವೈನವಾಗ್ಯವ್ರಂತೆ.’
ಈ ಮಾತನ್ನು ಕೇಳಿ ಅವರಿಗೆ ಸಮಾಧಾನವಾಯಿತು. ನಾಳೆ ಬೆಳಿಗ್ಗೆ ಅಲ್ಲಿಗೆ ಹೋಗಿ ಅವರನ್ನು ನೋಡಿಕೊಂಡೇ ಬರಬೇಕು.-ಎಂದು ನಿಶ್ಚಯಿಸಿ ಅವರು ಜುಟ್ಟಗನಿಗೆ ಹೇಳಿದರು: ‘ಆಯ್ತು. ನೀನು ಹೋಗು.’
ಆದರೆ ಅವನು ಹೋಗದೆ ಅಲ್ಲಿಯೆ ಉಳಿದ ‘ಯಾಕೋ?’-ಎಂದು ಕೇಳಿದರೆ, ‘ಒಬ್ಬನೇ ಓಗಾಕ್ ಎದ್‌ರಿಕೆಯಾಯ್ತದೆ. ನೀವು ಸಟಾಗ್ ಬಂದು ಕಳ್ಸಿ’ ಎಂದ.
‘ವಾರೆವಾ ಸೂಳೇಮಗನೇ. ಇಲ್ಲಿಗ್ ಬರಾಕ್ ಹೆದ್‌ರಿಕೆಯಾಗಲಿಲ್ಲ. ಈಗ ಹೋಗು ಅಂದ್ರೆ ಜೊತೆಗೆ ಬರ್‌ಬೇಕಂತೆ. ಸುಮ್ಮನೆ ಹೋಗ್ತೀಯೋ ಇಲ್ಲಾ ನಾಲ್ಕು ಬಿಡ್ಲೋ ಬೆನ್‌ಮ್ಯಾಲೆ?’
‘ಇಲ್ಲ ಕಣಪಾ ಓಯ್ತೀನಿ’-ಎಂದು ಅವನು ಬೇಗ ಬೇಗ ಊರ ಹೊರಗೆ ನಡೆದ. ಆದರೆ ಸಂದಿ ಗೊಂದಿಯ ಹಾದಿಯಲ್ಲಿ ಸುತ್ತಿ, ಮಾರಿಬಡಿದ ಆ ಊರಿನ ಹೊರಗೆ ಹೋಗಬೇಕಾದರೆ ಇನ್ನೂರು ಮುನ್ನೂರು ಹೆಜ್ಜೆಯಾದರೂ ನಡೆಯಬೇಕಾಗಿತ್ತು. ಯಾವುದೋ ಧೈರ್ಯದಿಂದ ಕಂಠೀಜೋಯಿಸರ ಮನೆಯ ಸಂದಿಯನ್ನು ದಾಟಿ ನಡೆದ. ಅವನು ದೂರದಲ್ಲಿ ಇದ್ದಕ್ಕಿದ್ದಹಾಗೆಯೇ-‘ಅಯ್ಯಯ್ಯಪ್ಪೋ’ ಎಂದು ವಿಕಾರವಾಗಿ ಕಿರುಚಿಕೊಂಡು ಓಡಿಹೋದಂತೆ ಕೇಳಿತು.
ಮನೆಯ ಮುಂಬಾಗಿಲಿಗೆ ಒಳಗಿನಿಂದ ಅಗಳಿ ಹಾಕಿದ್ದುದರಿಂದ ಜೋಯಿಸರು ಪುನಃ ಹಿತ್ತಿಲು ಗೋಡೆ ಹಾರಿ, ತಾವು ಬಂದ ಹಿಂಬಾಗಿಲಿನಿಂದಲೇ ಒಳಗೆ ಹೋಗಿ ಮಲಗಿಕೊಂಡರು. ಆದರೆ ತಕ್ಷಣ ನಿದ್ದೆಬರಲಿಲ್ಲ. ನಾಳೆದಿನ ಶ್ಯಾಮನ್ಣನಿಗೆ ಏನು ಮಾಡಬೇಕೆಂಬ ಬಗೆಗೆ ಹಲವು ಯೋಚನೆಗಳು ತಲೆಯಲ್ಲಿ ಸುಳಿಯುತ್ತಿದ್ದವು. ಅವರ ಅಪ್ಪನ ಕಾಲದಿಂದಲೂ ಇವರ ಮತ್ತು ಅವರ ಮನೆಗಳಿಗೆ ಆಗುತ್ತಿರಲಿಲ್ಲ. ಶ್ಯಾನುಭೋಗಿಕೆ ಎಂದರೆ ಅರಮನೆ ಕೆಲಸವಂತೆ. ಅವರು ರಾಜಪ್ರತಿನಿಧಿಗಳಂತೆ. ಶ್ಯಾಮಣ್ಣನ ಅಪ್ಪ ನರಸಿಂಹಯ್ಯ ಹಾಗೆ ಹೇಳಿಕೊಳ್ಳುತ್ತಿದ್ದ. ಈ ಬೋಳೀಮಗನೂ ಹಾಗೆಯೇ ಅಂತಿರ್ತಾನೆ. ನಮ್ಮದೇನು ಕಡಿಮೆ? ಅವನದ್ದು ಅರಮನೆ ಕೆಲಸವಾದರೆ ನಮ್ಮದು ಗುರುಮನೆ ಕೆಲಸ. ಅರಮನೆಯೋರು ಗುರುಮನೆಯೋರನ್ನ ಬೆದರಿಸಿಕೊಂಡು ತಿಂತಿದ್ರು. ಈಗ ನನ್ನ ಕಾಲದಲ್ಲಿ ಅದು ನಿಂತಿದೆ. ದಾನ ತಂದು ಜೀವನ ಮಾಡ್ತಾ, ಇವರು ಹೇಳಿದ್ದು ಕೇಳ್ಕಂಡಿದ್ರೆ ಇವರಿಗೆ ಬೇಕು. ನನ್ನಂಥಾ ಗಂಡು ಜೋಯಿಸನಾದ್ರೆ ಇವ್ರ ಆಟ ನಡೆಯುಲ್ಲ. ಕಂಠೀಜೋಯಿಸ ಅಂದ್ರೆ ಏನಂತ ತಿಳ್ಕಂಡಿದಾರೆ? ಕಂಠಿ ಅಂದ್ರೆ ರಣಧೀರ ಕಂಠೀರವ ಅಂತ. ಈ ಅರಮನೆಗಳಿಗೆಲ್ಲ ಮೇಲಿನ ಮಿಂಡ ಭೂಪತಿ. ನಾಳೆ ದಿನ ತೋರುಸ್ತೀನಿ ಈ ಷಂಡ ಸೂಳೇಮಕ್ಳಿಗೆ!-ಎಂಬ ಯೋಚನೆಯಲ್ಲಿ ಬೆಳಗಿನ ಜಾವದ ವೇಳೆಗೆ ನಿದ್ರೆ ಬಂತು.

ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಹತ್ತು ಗಂಟೆಯೇ ಆಗಿತ್ತು. ಶ್ಯಾಮಣ್ಣನ ಗುಡಿಸಲು ತಾವಕ್ಕೆ ಹೋಗಬೇಕೆಂದು ಎದ್ದು ಹಿತ್ತಿಲ ಕಡೆಗೆ ಹೋಗಿ ಬರುವ ಹೊತ್ತಿಗೆ ಮನೆಯ ಮುಂದೆ ಒಬ್ಬ ಪೋಲೀಸ್ ಕಾನಿಸ್ಟೇಬಲ್ ನಿಂತಿದ್ದುದು ಕಾಣಿಸಿತು. ಸಮಾಚಾರವೇನೆಂದು ಕೇಳಿದ ತಕ್ಷಣ ಅವನು ಹೇಳಿದ: ‘ನಿಮ್ಮ ಮಗ ಕಲ್ಲೇಶನಿಗೆ ಪ್ಲೇಗ್ ಆಗಿದೆ. ಎಡಗಡೆ ಕಂಕುಳಲ್ಲಿ ಗೆಡ್ಡೆ ಕಾಣಿಸ್ಕಂಡಿದೆ. ನೀವು ಈಗ್ಲೆ ಬರ್‌ಬೇಕು.’
ಆಂ, ಎಲ್ಲಿ?’
‘ಬೆಳಗೊಳದಲ್ಲೇ ಇದಾನೆ. ಇನ್ನೂ ಜ್ಞಾನ ನ್ಯೆಟ್ಟಗಿದೆ. ನಿಮ್ಮುನ್ನ ಕರ್ಕಂಡ್ ಬಾ ಅಂತ ದಫೇದಾರ್ರು ಕಳ್ಸಿದ್ರು. ಹಳ್ಳೀ ಬೀಟಿಗೆ ಹೋಗಿದ್ದಾಗ ಅಮ್ಮನ ಕೈಲಿ ಬಡಿಸ್ಕಂಡ್ ಬಂದುಬಿಟ್ಟ. ಬ್ಯಾಗ ನಡೀರಿ.’
ಇನ್ನು ಮಾತನಾಡುವಂತೆ ಇರಲಿಲ್ಲ. ಹಿತ್ತಿಲ ಕಡೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಕರುವನ್ನು ಬಿಚ್ಚಿ ಊರ ಹೊರಗೆ ಹೊಡೆದುಕೊಂಡು ಹೋಗಿ, ಎದುರಿಗೆ ಸಿಕ್ಕಿದ ಒಬ್ಬನಿಗೆ-‘ಇದನ್ನು ನಮ್ಮ ಶೆಡ್ಡಿಗೆ ಅಟ್ಟು’ ಎಂದು ಹೇಳಿಕಳಿಸಿದರು. ಮನೆಗೆ ಬೀಗ ಹಾಕಿ ಕಾನಿಸ್ಟೇಬಲನ್ನು ತಮ್ಮ ಹಿಂದೆಯೇ ಕೂರಿಸಿಕೊಂಡು ಕುದುರೆ ಏರಿ ಶ್ರವಣಬೆಳಗೊಳದ ಕಡೆಗೆ ನಾಗಾಲೋಟ ಓಡಿಸಿದರು.

– ೪ –

ಈ ಸಲದ ಪ್ಲೇಗು ನಾಗಲಾಪುರದ ಯಾರಿಗೂ ಬಡಿಯಲಿಲ್ಲ. ಸುತ್ತಮುತ್ತ ಎಲ್ಲೆಲ್ಲಿಯೂ ಊರು ಬಿಟ್ಟಿದ್ದರು. ರಾಮಸಂದ್ರದವರು ಶೆಡ್ಡು ಹಕಿಕೊಂಡು ಹೊರಗೆ ಹೋಗಿದ್ದರೂ ಅಲ್ಲಿ ಮೂರು ಜನ ಸತ್ತರು. ಇತರ ಊರುಗಳಲ್ಲಿಯೂ ಸಾಕಷ್ಟು ಜನ ಬಲಿಯಾಗಿದ್ದರು. ಹಾಗೆ ನೋಡಿದರೆ ನಾಗಲಾಪುರದಲ್ಲಿ ಅಮ್ಮನಿಗೆ ಒಂದೂ ಬಲಿ ಸಿಕ್ಕಲಿಲ್ಲವೆಂದು ಹೇಳುವಂತಿರಲಿಲ್ಲ. ರಾತ್ರಿಯ ಹೊತ್ತಿನಲ್ಲಿ ಕಂಠೀಜೋಯಿಸರ ಮನೆಗೆ ಕಲ್ಲು ಹೊಡೆಯಲು ಹೋಗಿ ಸಿಕ್ಕಿಕೊಂಡ ಜುಟ್ಟಗನಿಗೆ, ಮನೆಗೆ ಬಂದ ಸ್ವಲ್ಪ ಹೊತ್ತಿಗೇ ಜ್ವರ ಏರಿತು. ತಾನು ಊರಿನ ಒಳಕ್ಕೆ ಹೋಗಿದ್ದುದಾಗಿಯೂ ಅಲ್ಲಿಂದ ಒಬ್ಬನೇ ಬರುವಾಗ ಒಂದು ಓಣಿಯಲ್ಲಿ ಹಿಂದಿನಿಂದ ಕಪ್ಪು ಬಣ್ಣದ ಒಬ್ಬ ದೊಡ್ಡ ಹೆಂಗಸು ತನ್ನ ಮೇಲೆ ಕರೀ ಸೆರಗು ಬೀಸಿದಂತೆಯೂ ಆಯಿತೆಂದು ಅವನು ಹೆಂಡತಿಗೆ ಹೇಳಿದ. ಜ್ವರ ಬಹು ಬೇಗ ಏರಿತು; ಮತ್ತೆ ಇಳಿಯಲಿಲ್ಲ. ಮರುದಿನ ಮದ್ಯಾಹ್ನದ ವೇಳೆಗೆ ಪ್ರಜ್ಞೆ ತಪ್ಪಿತು. ಸಂಜೆಗೆ ಸ್ವಲ್ಪ ಎಚ್ಚರವಾಯಿತು. ಎಚ್ಚರಾದವನೇ, ‘ಕಂಟ್ಯಪ್ಪ ದೋಸರ ತಾವ ಮಂತ್ರ ಮಾಡ್ಸು’ ಎಂದು ಹೆಂಡತಿಗೆ ಹೇಳಿದ. ಅವಳು ತನ್ನ ಚಿಕ್ಕ ಮಾವನನ್ನು ಊರೊಳಕ್ಕೆ ಅಟ್ಟಿದಳು. ಮನೆ ಬಾಗಿಲು ಹಾಕಿ ಬೀಗ ಮೆಟ್ಟಿದ್ದುದರಿಂದ ಕಂಠ್ಯಪ್ಪಜೋಯಿಸರ ಪತ್ತೆ ಹತ್ತಲಿಲ್ಲ. ಮರುದಿನ ಬೆಳಿಗ್ಗೆ ಮತ್ತೆ ನೋಡಿದರೂ ಬಾಗಿಲಿನ ಬೀಗ ಹಾಗೆಯೇ ಇತ್ತು. ಜುಟ್ಟಗನಿಗೆ ಮತ್ತೆ ಒಂದು ಸಲ ಪ್ರಜ್ಞೆ ಬಂದು, ‘ದೋಸರು ಬಂದ್ರಾ?’ ಎಂದು ಕೇಳಿದ. ಇಲ್ಲವೆಂದು ತಿಳಿಯುತ್ತಲೂ ಕಣ್ಣು ಮುಚ್ಚಿದ. ಮತ್ತೆ ಜ್ಞಾನ ಬರಲಿಲ್ಲ. ಎರಡು ದಿನಕ್ಕೆ ಸತ್ತುಹೋದ. ಅವನಿಗೆ ಗೆಡ್ಡೆ ಬಂದಿತ್ತೋ ಇಲ್ಲವೋ ಯಾರಿಗೂ ತಿಳಿಯಲಿಲ್ಲ. ಅಮ್ಮ ಬಡಿದು ಸಾಯಬೇಕಾದರೆ ಗೆಡ್ದೆ ಹೊಮ್ಮಿ ಕಾಣಿಸಿಕೊಳ್ಳಬೇಕೆಂಬ ನಿಯಮವುಂಟೆ? ಅಂತೂ ಜುಟ್ಟಗನ ಹೆಂಡತಿ ಮುಂಡೆ ಆದಳು. ಅವಳು ಹಾಗಾಗುವುದು ಬೇಡವೆಂದು ಅವನು ಕಂಠೀಜೋಯಿಸರ ಮುಂದೆ ತತ್ತರಿಸುತ್ತಾ ಅಂಗಲಾಚಿದ್ದ.

ನಂಜು ಹೆಣ್ಣು ಮಗು ಹೆತ್ತು ಮಗು ಬಾಣಂತಿ ಸುಖವಾಗಿರುವುದನ್ನು ಕಂಠಿಗೆ ತಿಳಿಸುವಂತೆ ಅಕ್ಕಮ್ಮ ಅವರ ಹೊಲದ ವಾರದಾರ ಹೊನ್ನನನ್ನು, ಹೆರಿಗೆಯಾದ ಮರುದಿನ ಮಧ್ಯಾಹ್ನದ ಹೊತ್ತಿಗೆ ಕಳಿಸಿದಳು. ಮನೆಗೆ ಬೀಗ ಹಾಕಿರುವುದಾಗಿ ಅವನು ಬಂದು ಹೇಳಿದ. ತಾವು ಊರ ಒಳಗೆ ಹೋಗಿದ್ದ ಸಂಗತಿಯನ್ನು ಕಲ್ಲು ಬೀರಲು ಹೋಗಿದ್ದ ತಿಮ್ಮಕ್ಕನ ಮನೆ ಗಿಡ್ಡನಾಗಲಿ, ಮ್ಯಾಗಳಕೇರಿ ಗುಳ್ಳಿಗನಾಗಲಿ, ತಳವಾರರ ಸಿದ್ದೂರನಾಗಲಿ ಮತ್ತೆ ಯಾರ ಕೈಲೂ ಬಾಯಿಬಿಟ್ಟಿರಲಿಲ್ಲ. ಆದುದರಿಂದ ಆ ವಿಷಯ ಅಕ್ಕಮ್ಮ ನಂಜಮ್ಮರಿಗೆ ಸ್ವಲ್ಪವೂ ತಿಳಿಯಲಿಲ್ಲ. ಹಸು ಕರುವನ್ನು ಕೊಟ್ಟು ಕಳುಹಿಸಿದ್ದುದರಿಂದ ಮಗ ಎಲ್ಲೋ ಸಂಚಾರ ಹೋಗಿದ್ದಾನೆ, ಇನ್ನೂ ಬಂದಿಲ್ಲ, ಎಂದು ಅಕ್ಕಮ್ಮ ಅರ್ಥ ಮಾಡಿಕೊಂಡಳು. ಪುರೋಹಿತ ಪುಟ್ಟಭಟ್ಟರ ಹೆಂಡತಿ ಅಕ್ಕಮ್ಮನಿಗೆ ನೆರವಾದರು. ಪುಟ್ಟಭಟ್ಟರೇ ರಾಮಸಂದ್ರಕ್ಕೆ ಹೋಗಿ ವಿಷಯ ತಿಳಿಸಿ ನಾಮಕರಣದ ದಿನಕ್ಕೆ ಬರುವಂತೆ ಚೆನ್ನಿಗರಾಯನನ್ನು ಕರೆದು ಬರುವಂತೆ ಅಕ್ಕಮ್ಮ ಹೇಳಿದಳು. ಬಿಟ್ಟ ಊರಿನಿಂದ ಅಲ್ಲಿಗೆ ಹೋಗಬಹುದೋ ಬೇಡವೋ ಎಂದು ಅವರು ಅನುಮಾನಿಸಿದಾಗ ಹೊಲೆಮನೆಯಲ್ಲಿ ಮಲಗಿದ್ದ ನಂಜುವೇ- ಆ ಊರು ಬಿಟ್ಟಿದೆ. ನಮ್ಮ ಶೆಡ್ಡು ಊರ ಮುಂದಿನ ಅಮ್ಮನ ಗುಡೀ ಹಿಂದೆ ಅತ್ತೀಮರದ ಹತ್ತಿರ ಇದೆ ಅಂತ ಕಾಣುತ್ತೆ. ನಮ್ಮ ತೋಟ ಇರೂದು ಅಲ್ಲೇ. ನೀವು ಹೋಗಿ ಬನ್ನಿ’ ಎಂದಳು. ಪುಟ್ಟಭಟ್ಟರು ಪೂರ್ವದಿಕ್ಕಿಗೆ ಪಯಣ ಹೊರಟರು.

ಶೆಡ್ಡಿನಲ್ಲಿ ಪುರುಡನ್ನು ಅನುಸರಿಸಿ ಹತ್ತನೆಯ ದಿನ ಚೆನ್ನಿಗರಾಯ ನಾಮಕರಣಕ್ಕೆ ನಡೆದು ಹೊರಟ. ಗಾಡಿ ಹೊಡೆಸಿಕೊಂಡು ಅಪ್ಪಣ್ಣಾಯ್ಯ, ಸಾತು, ಇಬ್ಬರನ್ನೂ ಜೊತೆಗೆ ಕರೆದುಕೊಂಡು ಹೋಗಬಹುದಾಗಿತ್ತು. ಸಾತು ಈಗ ಬಸುರಿಯಾಗಿದ್ದಳು. ವಾಂತಿ ಇನ್ನೂ ನಿಂತಿರಲಿಲ್ಲ. ಅಲ್ಲದೆ ಈಗ ಅವಳು ಗಂಗಮ್ಮನ ಕೈಲಾಗಲಿ ತನ್ನ ಗಂಡನ ಕೈಲಾಗಲಿ ಮಾತನಾಡುತ್ತಿರಲಿಲ್ಲ. ಒಂದು ದಿನ ಹಿಂದಿರುಗಿ ಅವರಿಬ್ಬರನ್ನೂ ಚನ್ನಾಗಿ ಬೈದುಬಿಟ್ಟಿದ್ದಳು. ಭಾವನವರ ಕೈಲಿ ಮೊದಲಿನಿಂದಲೂ ಹೆಚ್ಚಾಗಿ ಮಾತನಾಡಿರಲಿಲ್ಲ. ಅವರೂ ಅವಳನ್ನು ತಾವಾಗಿಯೇ ಮಾತನಾಡಿಸಿರಲಿಲ್ಲ. ಹೀಗಾಗಿ ಅವರೊಬ್ಬರೇ ನಾಗಲಾಪುರಕ್ಕೆ ಹೊರಟರು.

ಹನ್ನೊಂದು ಗಂಟೆಯ ಹೊತ್ತಿಗೆ ಅವರು ಮರಳುಹಳ್ಳ ಕಳೆದು ಚೋಳನಗುಡ್ಡ, ಕಟಿಗೆಹಳ್ಳಿ ದಾಟಿ ನಡುದಾರಿಯಲ್ಲಿ ಸಿಕ್ಕುವ ಹೂವಿನಹಳ್ಳಿಗೆ ಬಂದರು. ಹಳ್ಳಿಯ ಮುಂದುಗಡೆ ಒಂದು ಅಂಗಡಿಯಲ್ಲಿ ಮಾಗಿದ ರಸಬಾಳೆಹಣ್ಣಿನ ಚಿಪ್ಪುಗಳನ್ನು ತೂಗುಹಾಕಿದ್ದರು. ಮೂರಾಣೆಗೆ ಒಂದು ಚಿಪ್ಪಿನಂತೆ ಚೆನ್ನಿಗರಾಯರು ಒಟ್ಟು ಮೂರು ಚಿಪ್ಪನ್ನು ಕೊಂಡರು. ನಾಳೆ ನಾಮಕರಣದ ತಾಂಬೂಲದ ತಟ್ಟೆಗೆ ಇಡಲು ಆಗುತ್ತದೆಂದು ಅವರ ಮನಸ್ಸು ನಿರ್ಧರಿಸಿತು. ಅಂಗಡಿಯಲ್ಲಿ ಒಂದು ತೆರೆದ ಡಬ್ಬದಲ್ಲಿ ಬೂರಾ ಸಕ್ಕರೆ ಇಟ್ಟಿದ್ದುದೂ ಕಣ್ಣಿಗೆ ಬಿತ್ತು. ಸವಾಸೇರು ಅದನ್ನೂ ಕಾಗದದ ಪೊಟ್ಟಣದಲ್ಲಿ ಕಟ್ಟಿಸಿ ತಮ್ಮ ಗಂಟಿಗೆ ಹಾಕಿಕೊಂಡು ಮತ್ತೆ ದಾರಿ ನಡೆಯಲು ಪ್ರಾರಂಭಿಸಿದರು.

ಎರಡು ಮೈಲಿ ಮುಂದೆ ನಡೆಯುವ ಹೊತ್ತಿಗೆ ಅವರ ಮನಸ್ಸಿನಲ್ಲಿ ಒಂದು ಯೋಚನೆ ಹುಟ್ಟಿತು: ಬಾಣಂತನ ಅಂದ್ರೆ ಮೂರು ದಿನಕ್ಕೆ ಒಂದು ಸಲ ಎಣ್ಣೆ ನೀರು, ಊಟಕ್ಕೆ ಒಂದೊಂದು ಸೌಟು ತುಪ್ಪ, ಒಳ್ಳೇ ಘಮ ಘಮ ಅನ್ನೂವಂಥ ಲೇಹ, ಇದೆಲ್ಲ ತಿಂದು ಯಾವಾಗ್ಲೂ ಸುಖವಾಗಿ ಮಲಿಕ್ಕಂಡು ನಿದ್ದೆ ಮಾಡೂದು. ನಂಗೆ ಮಾತ್ರ ಏನೂ ಇಲ್ಲ. ಇವ್ಳು ನಾಗಲಾಪುರಕ್ಕೆ ಹೋದ ಮೇಲೆ ನಂಗೆ ಚನ್ನಾಗಿ ಎಣ್ಣೆ ಒತ್ತಿ ಬಿಸಿಬಿಸಿಯಾಗಿ ಯಾರೂ ನೀರು ಹಾಕೇ ಇಲ್ಲ. ನಂಗೆ ಮೈ ಕೈ ನೋಯುಲ್ವೆ? ಅವಳ ಅಜ್ಜಿ ಇದಾಳಲಾ, ಆ ಅಕ್ಕಮ್ಮ, ಮುದುಕಿ, ಅವ್ಳು ಮೊಮ್ಮಗಳಿಗೆ ಬಯಕೆ ಅಂತ, ಬಸುರೀಲಿ ಕೇಳಿ ಕೇಳಿದ್ದು ಮಾಡಿಕೊಡ್ತಿದ್ಲಂತೆ. ತಾಯಿ ಇಲ್ಲದ ತಬ್ಬಲಿ ಮೊಮ್ಮಗ್ಳು ಅಂತ ಉಪಚಾರ ಮಾಡ್ತಿದ್ಲಂತೆ. ಹಾಗಂತ ಪುಟ್ಟಭಟ್ಟರೇ ಹ್ಯೇಳಿದ್ರಲಾ, ನನ್ನ ಕರಿಯುಕ್ಕೆ ನಮ್ಮೂರಿಗೆ ಬಂದಿದ್ದಾಗ. ನಂಗೆ ಏನಾದ್ರೂ ಕೊಟ್‌ಕಳ್ಸಿದ್ರೇ? ಅಥ್ವಾ, ಹೀಗೆ ತಿಂಡಿ ಮಾಡ್ತೀವಿ, ನೀನು ಬಾ ಅಂತ ನಂಗೆ ಹೇಳಿಕಳ್ಸಿದ್ರೇ? ಇವರ ಯೋಗ್ತೀಗೆ ನನ್ನ ಯಕ್‌ಡ ಹೊಡೆಯ.
ಅವರು ಯೋಚಿಸುತ್ತಿರುವಾಗಲೇ ದಾರಿಯಲ್ಲಿ ಒಂದು ಆಲದ ಮರ ಸಿಕ್ಕಿತು.ಅದರಿಂದ ಹತ್ತು ಮಾರು ದೂರದಲ್ಲಿ ಒಂದು ಕೊಳ ಕಾಣಿಸಿತು. ತಮಗೇ ತಿಳಿಯದಂತೆ ಶ್ಯಾನುಭೋಗರು ನೆರಳಿನಲ್ಲಿ ಗಂಟು ಇಟ್ಟುಕೊಂಡು ಕೂತರು. ಈ ಬಾಳೇಹಣ್ಣೂ ಬೂರಾ ಸಕ್‌ರೇನ ಅಲ್ಲಿಗ್ ಯಾಕ್ ತಗಂಡ್ ಹೋಗ್ಬೇಕು ಆ ಸೂಳೇಮಕ್ಳ ಮನೆಗೆ?- ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟೀದ್ದೇ ತಡ, ಚಿಪ್ಪುಗಳನ್ನು ಹೊರಕ್ಕೆ ತೆಗೆದರು. ಬೂರಾಸಕ್ಕರೆ ಪೊಟ್ಟಣ ಬಿಚ್ಚಿ ಇಟ್ಟುಕೊಂಡು, ಒಂದೊಂದಾಗಿ ಸಿಪ್ಪೆ ಬಿಡಿಸಿ ಸಕ್ಕರೆಯಲ್ಲಿ ಒತ್ತಿ ಅದ್ದಿಕೊಂಡು ಅರ್ಧ ಭಾಗ ಮೆಲುಕು ಹಾಕುವ ಮೊದಲೇ ಗುಳುಕ್ ಎಂದು ನುಂಗಿ, ಮುಂದಿನ ಹಣ್ಣಿನ ಸಿಪ್ಪೆ ಬಿಡಿಸಿ ಅದರ ಮೂತಿಯನ್ನು ಹಿಟ್ಟು ಸಕ್ಕರೆಯಲ್ಲಿ ಒತ್ತುತ್ತಿದ್ದರು.

ಒಟ್ಟು ಮೂವತ್ತೆಂಟು ಹಣ್ಣು, ಸವಾಸೇರು ಸಕ್ಕರೆಯೂ ಮುಗಿದ ಮೇಲೆ ಬಾಯಾರಿಕೆ ಎನಿಸಿತು. ಕೊಳದಲ್ಲಿ ನೀರು ಕುಡಿದು ಬಂದು ಗಂಟನ್ನು ತಲೆದಿಂಬಿಗೆ ಇಟ್ಟುಕೊಂಡು ಗೊರಕೆ ಹೊಡೆಯುತ್ತಾ ಸಂಜೆಯಾಗುವತನಕ ನಿದ್ದೆ ಮಾಡಿದರು. ಎಚ್ಚರವಾದಮೇಲೆ ಗಡಿಬಿಡಿಯಿಂದ ಎದ್ದು ನಾಗಲಾಪುರದ ಕಡೆಗೆ ಹೆಜ್ಜೆ ಓಡಿಸಿದರು. ಅವರ ಶೆಡ್ಡು ಇಂಥ ಕಡೆಯೇ ಎಂದು ಪುಟ್ಟಭಟ್ಟರು ಹೇಳಿದ್ದುದರಿಂದ ಹುಡುಕುವುದು ಕಷ್ಟವೇನೂ ಆಗಲಿಲ್ಲ. ಅದುವರೆಗೂ ಅವರ ಆಗಮನವನ್ನೇ ನಿರೀಕ್ಷಿಸುತ್ತಿದ್ದ ಅಕ್ಕಮ್ಮ, ಮದ್ಯಾಹ್ನದ ಅಡಿಗೆ ಆರಿಹೋಗಿದ್ದುದರಿಂದ ಬಿಸಿಯಾಗಿ ಅಡಿಗೆ ಮಾಡಲು ಒಳಗೆ ಹೋದಳು. ಶೆಡ್ದಿನ ಒಂದು ಭಾಗದಲ್ಲಿ ಬಾಣಂತಿಗೆಂದು ಕಟ್ಟಿದ್ದ ಕೋಣೆಯಲ್ಲಿ ಒಂದು ಮಂಚದ ಮೇಲೆ, ಮಗುವುನೊಡನೆ ಬಾಣಂತಿ ಮಲಗಿದ್ದಳು. ಚೆನ್ನಿಗರಾಯರು ಅದರ ಬಾಗಿಲಿನ ಹತ್ತಿರ ಹೋದಾಗ ಅವಳು ಕೇಳಿದಳು: ‘ಮಧ್ಯಾಹ್ನ ನಿಮಗೆ ಅಂತ ಮಾಡಿದ ಅಡಿಗೆ ಆರಿಹೋಯ್ತು. ನೇರವಾಗಿ ಊರಿಗ್ ಬರದೆ ಆ ಮರದ ಕೆಳಗೆ ಯಾಕೆ ಮಲಗಿದ್ದಿರಿ?’

ಈ ಮಾತನ್ನು ಕೇಳಿ ಚೆನ್ನಿಗರಾಯರಿಗೆ ಆಶ್ಚರ್ಯವಾಯಿತು: ‘ಅದ್ಯಾವ್ನು ಹೇಳ್ದ ಹಾಗಂತ?’

‘ಹೂವಿನಹಳ್ಳಿ ಅಂಗಡಿ ಚಿನ್ನಯ್ಯ ನಮ್ಮನೆ ಪೌರೋಹಿತ್ಯಕ್ಕೆ ಸೇರಿದೋನು. ನೀವು ಅವನ ಅಂಗ್‌ಡೀಲಿ ಮೂರು ಚಿಪ್ಪು ರಸಬಾಳೆಹಣ್ಣು ಒಂದು ಸವಾಸೇರು ಬೂರಾಸಕ್‌ರೆ ತಗಂಡ ಮೇಲೆ ಅವನು ಅಂಗಡಿ ಸಾಮಾನಿಗೆ ಅಂತ ಈ ಊರಿಗೆ ಹೊರಟನಂತೆ. ಬರ್ತಾ ದಾರೀಲಿ ನೀವು ಆಲದ ಮರದ ಕೆಳಗೆ ಮಲಗಿದ್ದಿರಂತೆ. ಬಾಳೆಹಣ್ಣಿನ ಸಿಪ್ಪೆ ಮಗ್ಗುಲಲ್ಲಿ ಬಿದ್ದಿತ್ತಂತೆ.’

‘ಹಾಗಂತ ಹೇಳಿದ್ನೋ ಅವ್ನು? ಅವನವ್ವನ…..’-ಎಂಬ ಅವರ ಮಾತನ್ನು ಮಧ್ಯಕ್ಕೆ ತಡೆದು ಅವಳು ಕೇಳಿದಳು: ‘ಕೆಟ್ಟ ಮಾತು ಯಾಕೆ ಆಡ್ತೀರಾ? ದಾರೀಲಿ ಹೊಟ್ಟೆ ಹಸ್ತಿದೆ ಹಣ್ಣು ತಗಂಡು ತಿಂದ್ರಿ. ಯಾರೂ ಮಾಡದೆ ಇರೂ ಕೆಲಸವೇ ಅದು? ಬೇಗ ಬೇಗ ಬಂದು ಮನೇಲಿ ಊಟಾನೇ ಮಾಡಬಾರದಾಗಿತ್ತೆ?’
ಅವರಿಗೆ ಮತ್ತೆ ಯಾವ ಉತ್ತರವೂ ಹೊಳೆಯಲಿಲ್ಲ; ಅಥವಾ ತಕ್ಷಣಕ್ಕೆ ಯಾವ ಬೈಗುಳವೂ ಬರಲಿಲ್ಲ.
ಪುಟ್ಟಭಟ್ಟರು ಮತ್ತು ಅವರ ಹೆಂಡತಿಯ ಸಹಾಯದಿಂದ ಅಕ್ಕಮ್ಮ ಊಟಕ್ಕೆ ಹತ್ತು ಜನ ಕರೆದೇ ನಾಮಕರಣ ಮಾಡಿಸಿದಳು. ಶ್ಯಾನುಭೋಗ ಶ್ಯಾಮಣ್ಣನವರೂ ಬಂದಿದ್ದರು. ಮನೆಯ ಮೊದಲ ಹೆಣ್ಣುಮಗುವಾದುದರಿಂದ ಅದಕ್ಕೆ ಅಜ್ಜಿಯ ಹೆಸರು ಗಂಗಮ್ಮನೆಂದು ಇಡಬೇಕಾಗಿತ್ತು. ಆದರೆ ಅವರು ಜೀವಂತ ಇರುವುದರಿಂದ, ಕೂಗಲು ಅನುಕೂಲವಾಗುವಂತೆ ಮತ್ತು ಜನ್ಮ ನಕ್ಷತ್ರಕ್ಕೆ ಹೊಂದುವಂತೆ ಪಾರ್ವತಿ ಎಂದು ಇಟ್ಟರು. ಚೆನ್ನಿಗರಾಯರು ಎಂಟು ದಿನ ಅಲ್ಲಿಯೇ ಇದ್ದು ಅಕ್ಕಮ್ಮನಿಂದ ಬಿಸಿಬಿಸಿ ಅಡಿಗೆ ಮತ್ತು ಆದರೋಪಚಾರ ಮಾಡಿಸಿಕೊಂಡರು. ಬಾಣಂತಿಗೆಂದು ತರಿಸಿ ಇಟ್ಟಿದ್ದ ಕೊಬ್ಬರಿ ಬೆಲ್ಲ ಅವರ ಬಾಯಿಗೂ ರುಚಿಯಾಗಿತ್ತು. ಬಾಣಂತಿಯೇ ವೀಳ್ಯದೆಲೆ ಮಡಿಸಿ ಸುಣ್ಣ ಹಾಕಿಕೊಡುತ್ತಿದ್ದಳು. ಮೊಮ್ಮಗಳ ಗಂಡನಿಗೆ ಬಗೆಬಗೆಯಾಗಿ ಮಾಡಿಹಾಕಲು ಅಜ್ಜಿಗೇನೋ ಆಶೆ. ಆದರೆ ಮುದುಕಿಯಾದ ಅವರ ಕೈಲಿ ಆಗುತ್ತಿರಲಿಲ್ಲ. ಅಲ್ಲದೆ ಬೇಕಾದ ಸಾಮಾನುಗಳನ್ನು ಧಾರಾಳವಾಗಿ ತರಿಸಲು ಹತ್ತಿರ ದುಡ್ಡಿಲ್ಲ. ಮಗ ಕಂಠಿ ಎಲ್ಲಿ ಹೋದನೆಂಬುದು ಯಾರಿಗೂ ಗೊತ್ತಿಲ್ಲ.
ನಂಜುವೇ ಒಂದು ದಿನ ಗಂಡನ ಕೈಲಿ- ‘ಊರಿನಲ್ಲಿ ಶ್ಯಾನುಭೋಗ್‌ಕೆ ಇದೆ. ನೀವು ಶೇಕ್‌ದಾರರಿಗೂ ಹೇಳದೆ ಇಲ್ಲೇ ಇದ್ರೆ ಏನು ಗತಿ?’ ಎಂದಳು.
‘ಬೇಕಾದ್ರೆ ಶೇಕ್‌ದಾರರಿಗೆ ಹಾಗಂತ ಕಾಗದ ಬರೆದು ಕಳಿಸಲೇನು?’-ಗಂಡ ಕೇಳಿದರು.
‘ವಸೂಲಿ ಕಾಲ ಹತ್ರ ಬಂತಲ್ಲ. ನೀವೇ ಊರಲ್ಲಿಲ್ದೆ ಇದ್ರೆ ದ್ಯಾವರಸಯ್‌ನೋರು ಏನು ಮಾಡ್ತಾರೆ? ಇಷ್ಟಕ್ಕೂ ವಸೂಲಿ ನಿಮ್ಮ ಕೆಲಸ ತಾನೆ? ಇವತ್ತಾಗಲೇ ತಾರೀಖು ಹದಿನೈದೋ ಹದಿನಾರೋ ಆಯ್ತಲ, ಒಂದು ಹದ ಮಳೆ ಬೇರೆ ಆಯ್ತು. ಊರಿನಲ್ಲಿ ಜಮೀನಿನ ಗತಿ ಏನು ನೋಡಬಾರದೆ?’

ಊರಿಗೆ ಹೊರಡದೆ ನಿರ್ವಾಹವಿರಲಿಲ್ಲ. ಆದುದರಿಂದ ಶ್ಯಾನುಭೋಗ ಚೆನ್ನಿಗರಾಯರು ಮರುದಿನ ತಿಂಡಿ ತಿಂದು, ಅಜ್ಜಿ ಮಾಡಿಕೊಟ್ಟ ಮಾವಿನಕಾಯಿ ಅನ್ನದ ಅಡಿಕೆ ಪಟ್ಟೆಯ ಗಂಟನ್ನು ಹೊತ್ತುಕೊಂಡು ಹೊರಟರು. ಅವರು ಹೋದ ಮೇಲೆ ಅಕ್ಕಮ್ಮ ಅಂದಳು: ‘ನಂಜೂ ನಿನ್ನ ಗಂಡ ಒಂದು ಸಲವಾದರೂ ಮಗೂನ ಕೈಲಿ ಎತ್ತಿಕಳ್‌ಲಿಲ್ವಲಾ? ಹೆಣ್ಣಾಯ್ತು ಅಂತ ಬೇಜಾರೇನು ಅವನಿಗೆ?’

ನಂಜು ಯಾವ ಮಾತೂ ಆಡಲಿಲ್ಲ. ಅವಳ ಕಣ್ಣಿನಲ್ಲಿ ನೀರು ತುಂಬಿಬಂತು. ಅದು ಗಂಡಾಗಿದ್ದರೂ ಎತ್ತಿಕೊಳ್ತಿರಲಿಲ್ಲ-ಎನ್ನಬೇಕೆಂದು ನಾಲಗೆಯಲ್ಲಿ ಬಂದಿತಾದರೂ ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ. ಅಜ್ಜಿಯ ಮಾತು ತನಗೆ ಕೇಳಲೇ ಇಲ್ಲವೆನ್ನುವಂತೆ ಸುಮ್ಮನಾಗಿ ಕಣ್ಣೀರು ಒರೆಸಿಕೊಂಡಳು.

– ೫ –

ಕಂಠೀಜೋಯಿಸರು ಬರುವ ವೇಳೆಗೆ ಕಲ್ಲೇಶನ ಕಂಕುಳಿನಲ್ಲಿದ್ದ ಗೆಡ್ಡೆ ಊದಿಕೊಂಡು ನೋವು ಜಾಸ್ತಿಯಾಗಿತ್ತು. ಸರ್ಕಾರಿ ಆಸ್ಪತ್ರೆಯ ಡಾಕ್ಟರು ಔಷಧಿ ಕೊಟ್ಟಿದ್ದರೂ, ‘ಇದಕ್ಕೆ ದೊಡ್ಡ ಡಾಕ್ಟರಾದರೇ ಒಳ್ಳೇದು ಆದರೆ ರೋಗೀನ ಇಂಥಾ ಸ್ಥಿತೀಲಿ ಕರಕೊಂಡು ಹೋಗೋದು ಕಷ್ಟ. ನನ್ನ ಕೈಲಾದ್ದು ಮಾಡ್ತೀನಿ’ ಎಂದಿದ್ದರು. ಜೋಯಿಸರು ಹೋದ ತಕ್ಷಣ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ದಫೇದಾರರನ್ನು ಕೇಳಿದರು:

‘ನೀವು ಒಂದು ವ್ಯಾನ್ ಕೊಡಿಸಿಬಿಡಿ. ನಾನು ಹಾಸನಕ್ಕೆ ಕರೆದುಕೊಂಡು ಹೋಗ್ತೀನಿ.’
ದಫೇದಾರರು ಚೆನ್ನರಾಯಪಟ್ಟಣಕ್ಕೆ ಹೋಗಿ ಒಂದು ವ್ಯಾನ್ ತಂದು ಅದರಲ್ಲಿ ಮಲಗಿಸಿಕೊಂಡು ಕಲ್ಲೇಶನನ್ನು ಹಾಸನಕ್ಕೆ ಕರೆದುಕೊಂಡು ಹೋದದ್ದಾಯಿತು. ಅವನು ದಾರಿಯಲ್ಲಿ ಸತ್ತಿದ್ದರೂ ಸಾಯಬಹುದಾಗಿತ್ತು. ಸಾಯಲಿಲ್ಲ. ದೊಡ್ಡ ಆಸ್ಪತ್ರೆಯವರು ಸೇರಿಸಿಕೊಂಡರು. ಕಲ್ಲೇಶನ ಮಾವ ರಂಗಣ್ಣನವರು ಹಾಸನದಲ್ಲೇ ಕಳೆದ ಇಪ್ಪತ್ತೈದು ವರ್ಷದಿಂದ ಪೋಸ್ಟ್‌ಮ್ಯಾನ್ ಆಗಿದ್ದವರು. ಅವರಿಗೂ ದೊಡ್ಡ ಆಸ್ಪತ್ರೆಯ ಡಾಕ್ಟರಿಗೂ ಪರಿಚಯ. ಡಾಕ್ಟರು ತಮ್ಮ ಕೈಲಾದ ಪ್ರಯತ್ನ ಮಾಡಿದರು. ಕಂಕುಳಿನ ಗೆಡ್ಡೆಯನ್ನು ಕೊಯ್ದು ಕೀವು ಮತ್ತು ಕೊಳೆತ ಭಾಗವನ್ನು ತೆಗೆದು ಹಾಕಿ ಔಷಧಿ ಕಟ್ಟಿದರು. ಜೀವಕ್ಕೆ ಭಯವಿಲ್ಲವೆನ್ನುವಂತಾಯಿತು. ಅಷ್ಟರಲ್ಲಿ ಅವನು ಕೃಶವಾಗಿ ಹೋಗಿದ್ದ. ‘ಇನ್ನು ಹದಿನೈದು ದಿನವಾದರೂ ಆಸ್ಪತ್ರೆಯಲ್ಲಿರಲಿ’ -ಎಂದು ಡಾಕ್ಟರು ಹೇಳಿದರು. ಅಲ್ಲಿಯವರೆಗೂ ಕಂಠೀಜೋಯಿಸರು ಬೀಗರ ಮನೆಯಲ್ಲಿಯೇ ಇದ್ದು ಮಗನನ್ನು ನೋಡಿಕೊಳ್ಳುತ್ತಿದ್ದರು.

ಆಸ್ಪತ್ರೆಯಿಂದ ಬಿಡುಗಡೆ ಮಾಡುವ ದಿನ ಬಂದರೂ ಅವನ ಎಡಗೈ ಸರಿಯಾಗಿ ಸ್ವಾಧೀನಕ್ಕೆ ಬಂದಿರಲಿಲ್ಲ. ಗೆಡ್ಡೆಯಾಗಿದ್ದುದು ಅದೇ ಭಾಗದ ಕಂಕುಳಿನಲ್ಲಿ. ‘ಇವರು ಈ ಊರಿನಲ್ಲೇ ಇರಲಿ, ನಾವು ಔಷಧಿ ಮುಂದುವರಿಸ್ತೀವಿ’- ಎಂದು ಡಾಕ್ಟರ್ ಹೇಳಿದರು. ರಂಗಣ್ಣನವರು ತಮ್ಮ ಅಳಿಯನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಎಂಟು ದಿನದ ನಂತರ ಕಂಠೀಜೋಯಿಸರು ಕುದುರೆ ಏರಿ ಊರಿಗೆ ಹೊರಟರು. ಕಳೆದ ಇಪ್ಪತ್ತೈದು ದಿನಗಳ ವಾಸ್ತವ್ಯದಲ್ಲಿ ತುಂಬ ನಲುಗಿದ್ದುದೆಂದರೆ ಅವರ ಕುದುರೆ. ಬೀಗರ ಮನೆಯಲ್ಲಿ ಜೋಯಿಸರ ಊಟ ತಿಂಡಿ ಆಗುತ್ತಿತ್ತು. ಹಾಸನದ ಪೇಟೆಯಲ್ಲಿ ಪೋಸ್ಟ್‌ಮ್ಯಾನ್ ಆಗಿದ್ದ ರಂಗಣ್ಣನವರ ಮನೆಯಲ್ಲಿ ಕಂಠೀಜೋಯಿಸರು ತಿನ್ನುವ ಪ್ರಮಾಣದ ಹಾಲು ತುಪ್ಪಗಳು ಸಿಕ್ಕದಿದ್ದರೂ ಹೊಟ್ಟೆತುಂಬ ಗ್ರಾಸಕ್ಕೆ ತೊಂದರೆ ಇರಲಿಲ್ಲ. ಆದರೆ ಅವರ ಬಿಳೀ ಕುದುರೆಗೆ ಬೇಕಾದ ಮೇವನ್ನು ಅವರು ಎಲ್ಲಿಂದ ಹೊಂದಿಸಿಯಾರು?

ಇವರು ಊರಿಗೆ ಬರುವ ಹೊತ್ತಿಗೆ ಪ್ಲೇಗಿನ ಸೂಚನೆ ಕಳೆದು ಆ ಸುತ್ತಿನಲ್ಲೆಲ್ಲ ಎರಡು ಹದ ಮಳೆ ಬಿದ್ದಿತ್ತು. ನಾಗಲಾಪುರದವರು ಶೆಡ್ಡುಗಳನ್ನು ಬಿಟ್ಟು ಊರಿಗೆ ಬಂದಿದ್ದರು. ಕಲ್ಲೇಶನಿಗೆ ಪ್ಲೇಗು ಆಗಿ ಅವನನ್ನು ಹಾಸನಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಗುಣವಾಗಿರುವುದು ಮತ್ತು ಕಂಠಿಯೂ ಅಲ್ಲೇ ಇರುವುದು ಅಕ್ಕಮ್ಮ ನಂಜಮ್ಮರಿಗೆ ಗಾಳಿ ವರ್ತಮಾನದಿಂದ ತಿಳಿಯಿತು. ಇನ್ನು ಊರಿನೊಳಗೆ ಹೋಗಲು ಮಗನನ್ನು ಕಾಯುವುದು ಸಾಧ್ಯವಿಲ್ಲ. ಅವರ ಜಮೀನಿನ ರೈತರಿದ್ದಾರೆ. ಪುಟ್ಟಭಟ್ಟರಿದ್ದಾರೆ. ಅವರ ಸಹಾಯದಿಂದ ತಾನೇ ಶೆಡ್ದಿನ ಸಾಮಾನು ಸಾಗಿಸಿ ಮಗು ಬಾಣಂತಿಯನ್ನು ಮನೆಗೆ ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ ಅಕ್ಕಮ್ಮ, ಮೊದಲು ಮನೆಗೆ ಹೋಗಿ ಆಚಾರಿಯನ್ನು ಕರೆಸಿ ಬಾಗಿಲಿಗೆ ಹಾಕಿದ್ದ ಬೀಗ ಒಡೆಸಿ ಒಳಗೆ ಹೋಗಿ ನೋಡುತ್ತಾಳೆ: ಮಳೆಯ ನೀರು ಒಳಗೆಲ್ಲ ಸೋರಿ ನೆಲ ನೆನೆದು ಕಿಚಿಕಿಚಿಯಾಗಿದೆ. ಅಟ್ಟದ ಹಲಗೆ ದಬ್ಬೆಗಳ ಮೇಲೆಲ್ಲ ನೀರು ಹರಿದು ಅವೆಲ್ಲವೂ ಇನ್ನೂ ಆರದೆ ಒದ್ದೆಯಾಗಿಯೇ ಇದೆ. ಯಾರೋ ತುಂಟರು ಮನೆಗೆ ಕಲ್ಲು ಹೊಡೆದಿದ್ದಾರೆಂಬುದು ಯಾರೂ ಹೇಳದೆಯೇ ಗೊತ್ತಾಯಿತು. ಅದು ಯಾರು ಎಂದು ಈಗ ವಿಚಾರಿಸುತ್ತಾ ಕೂರಲು ಸಮಯವಿರಲಿಲ್ಲ. ವಾರದ ಹೊನ್ನ ಏಣಿ ಹಾಕಿಕೊಂಡು ಅಟ್ಟಕ್ಕೆ ಹತ್ತಿ ಅಲ್ಲಿಂದಲೇ ಹೆಂಚುಗಳನ್ನು ಹಿಂದೆ ಮುಂದೆ ಸರಿಸಿ ಸರಿಮಾಡಿದ. ಎರಡೂ ಕಡೆಯ ಬಾಗಿಲುಗಳನ್ನು ತೆಗೆದು, ನೆಲವು ಗಾಳಿಗೆ ಆರಿಕೊಳ್ಳಲು ಬಿಟ್ಟ. ಆದರೂ ಹೊಸ ಮಣ್ಣು ಹಾಕಿ ಗಟ್ಟಣೆ ಮಾಡಲೇಬೇಕಾಯಿತು. ಅಂತೂ ಅಕ್ಕಮ್ಮ ಸುತ್ತಮುತ್ತಲಿನವರಿಗಿಂತ ನಾಲ್ಕು ದಿನ ತಡವಾಗಿ ಬಾಣಂತಿ ಮತ್ತು ಮಗುವಿನೊಡನೆ ಮನೆಯನ್ನು ಹೊಕ್ಕಳು. ನಂಜು ಹೆತ್ತು ಇನ್ನೂ ಒಂದು ತಿಂಗಳಾಗಿತ್ತು. ಎದ್ದು ಏನಾದರೂ ಕೆಲಸ ಮಾಡುವುದಾಗಿ ಅವಳು ಹೇಳಿದರೂ ಅಕ್ಕಮ್ಮ ಬಿಡಲಿಲ್ಲ. ಮನೆ ಗುಡಿಸಿ ಧೂಳು ಹೊಡೆಯುವುದರಿಂದ ಹಿಡಿದು ಹಸುಗಳಿಂದ ಹಾಲು ಕರೆಯುವತನಕ ಎಲ್ಲವನ್ನೂ ಅವಳೇ ಮಾಡುತ್ತಿದ್ದಳು.

ಇವರು ಇಲ್ಲಿಗೆ ಬಂದು ನಾಲ್ಕನೆಯ ದಿನ ಮದ್ಯಾಹ್ನ ಮೂರು ಗಂಟೆಗೆ ಕಂಠೀಜೋಯಿಸರು ಕುದುರೆಯ ಮೇಲೆ ಮನೆಗೆ ಬಂದರು. ಕಲ್ಲೇಶನ ಕ್ಷೇಮಸಮಾಚಾರವನ್ನು ಅಕ್ಕಮ್ಮ ಮತ್ತು ನಂಜುವಿಗೆ ಹೇಳಿದ ಮೇಲೆ, ಅವರ ಗಮನವು ನೆಲದ ಕಡೆಗೆ ಹೋಯಿತು. ‘ಇದೇನು, ನೆಲಕ್ಕೆ ಹೊಸದಾಗಿ ಗಟ್ಟಣೆ ಮಾಡ್ಸಿದ್ರಾ? ಈಗೇನು ಅವಸರವಾಗಿತ್ತು ಅದುಕ್ಕೆ?’

‘ನೋಡು, ಮನೆ ಮ್ಯಾಲೆ ಯಾರಾದ್ರೂ ಕಲ್ಲು ಹೊಡೆದಿದ್ರೋ, ಹದ್ದುಗಿದ್ದು ಕೂತು ಹೆಂಚು ಎಳದಿತ್ತೋ. ಮಳೆ ನೀರೆಲ್ಲ ಒಳಗೆ ಸೋರಿ ನೆಂದು ನ್ಯಲ ಅಟ್ಳು ಗದ್ದೆಯಾಗಿತ್ತು. ಒಳಕ್ಕೆ ಕಾಲಿಡುಕ್ ಆಗ್ತಿರ್‌ಲಿಲ್ಲ. ಹೊನ್ನನ ಕೈಲಿ ಮದ್ಲು ಗಟ್ಟಣೆ ಮಾಡ್ಸಿ ಆಮ್ಯಾಲೆ ನಾವು ಸಾಮಾನು ಸಾಗಿಸಿದ್ವು.’
‘ಇವನವ್ವೇ ಹೊಲೇರ….. ಮಾಡ್ತೀನಿ ಭಾಡ್‌ಕೋವ್ ನನ್ಮಗುಂಗೆ’ -ಎಂದವರೇ ಕಂಠೀಜೋಯಿಸರು ಹೊರಗೆ ಹೋಗಿಬಿಟ್ಟರು. ಯಾಕೆ ಏನು ಎಂಬುದು ಅಕ್ಕಮ್ಮನಿಗಾಗಲಿ ನಂಜುವಿಗಾಗಲಿ ತಿಳಿಯಲಿಲ್ಲ.

ಮದ್ಯಾಹ್ನ ಊಟವಾದ ಮೇಲೆ ಶ್ಯಾನುಭೋಗ ಶ್ಯಾಮಣ್ಣನ ಮನೆಯ ದೊಡ್ಡ ಜಗುಲಿಯ ಮೇಲೆ ಗ್ರಾಮದ ಹಲವು ಮುಖ್ಯರು ಸೇರಿ ಸಂಜೆ ಕತ್ತಲಾಗುವ ತನಕ ಪಗಡೆ ಆಡುವುದು ರೂಢಿ. ಈ ಹೊತ್ತಿನಲ್ಲಿ ಶ್ಯಾಮಣ್ಣ ಅಲ್ಲೇ ಇರುತ್ತಾನೆಂಬುದು ಕಂಠೀಜೋಯಿಸರಿಗೆ ಗೊತ್ತು. ಅವರು ನೇರವಾಗಿ ಹೋಗಿ ಜಗುಲಿಯನ್ನು ಹತ್ತಿ ನಿಂತು ಕೇಳಿದರು: ‘ರಾತ್ರಿ ಹೊತ್ನಲ್ಲಿ ನನ್ ಮನೆ ಮೇಲೆ ಕಲ್ಲು ಹೊಡ್ಸಿದೆ ಏನ್ಲಾ ಹಲಾಲ್‌ಕೋರ ನನ್ಮಗನೇ? ಗಂಡುಸ್ತನ ಇದ್ರೆ ಹಗಲು ಹೊತ್ತು ಬರಬೇಕಾಗಿತ್ತು. ಅದೂ ತುಂಬಿದ ಊರಿನಲ್ಲಿ ಬರಬೇಕಾಗಿತ್ತು. ಲೇ, ನಾನು ಅಂದ್ರೆ ಏನಂತ ತಿಳ್ಕಂಡಿದೀಯಾ? ಗಂಡು, ನಿಮ್ಮವ್ವನ ಮಿಂಡ ಅಂತ ತಿಳ್ಕೊ ಬಾಂಚೋತ್.’

ಇವರ ಅನಿರೀಕ್ಷಿತ ಆಗಮನದಿಂದ ಮಾತ್ರವಲ್ಲದೆ ಈ ರೀತಿಯ ಅನಿರೀಕ್ಷಿತ ಯುದ್ಧ ಘೋಷಣೆಯಿಂದ ಪಗಡೆಯ ದಳಪತಿಗಳೆಲ್ಲ ಅವಾಕ್ಕಾದರು. ಶ್ಯಾಮಣ್ಣನೂ ಕಕ್ಕಾಬಿಕ್ಕಿಯಾದ. ಕಂಠೀಜೋಯಿಸರು ಸೀದಾ ಶ್ಯಾಮಣ್ಣನ ಮನೆಯ ಒಳಗೆ ನುಗ್ಗಿ, ಬಾಗಿಲು ಹಿಂಭಾಗದ ಒರಳಿನ ಹತ್ತಿರ ಗೋಡೆಗೆ ಒರಗಿಸಿ ನಿಲ್ಲಿಸಿದ್ದ ಒಂದು ಒನಕೆಯನ್ನು ಬಲಗೈಲಿ ತೆಗೆದುಕೊಂಡರು. ಅಡಿಕೆ ದಬ್ಬೆಗಳ ಅಟ್ಟಕ್ಕೆ ಹಾಕಿದ್ದ ಬಿದಿರಿನ ಏಣಿಯನ್ನು ಎಡಗೈಲಿ ಹಿಡಿದು ಹೊರಕ್ಕೆ ಬಂದು, ಏಣಿಯನ್ನು ಸೂರಿಗೆ ಒರಗಿಸಿ ಹೆಂಚಿನ ಮೇಲೆ ಹತ್ತಿದವರೇ ಎತ್ತಿ ಎತ್ತಿ ಒನಕೆಯಿಂದ ಹೆಂಚನ್ನು ಬಡಿಯಲು ಶುರುಮಾಡಿದರು. ನಾಲ್ಕಾರು ಏಟಿಗೆ, ಇವರು ಪಗಡೆಯಾಡುತ್ತಿದ್ದ ಜಗುಲಿಯ ಅಂಕಣದ ಮೇಲಿನ ಹೆಂಚೆಲ್ಲ ಪುಡಿಪುಡಿಯಾಗಿ ಅವರು ಮೇಲ್ಭಾಗಕ್ಕೆ ಏರಿದರು.

ಜಗುಲಿಯ ಮೇಲ್ಭಾಗದ ಹೆಂಚಿನ ಮೇಲೆ ಒನಕೆ ಒಂದು ಪೆಟ್ಟು ಬೀಳುವುದೇ ತಂಡ, ಪಗಡೆಯವರು ಎದ್ದು ಬೀದಿಗೆ ಬಂದರು. ಮೇಲೆ ನಿಂತ ಕಂಠೀಜೋಯಿಸರು ಅವರ ಕಡೆ ಒಂದು ಸಲ ನೋಡಿ ಗರ್ಜಿಸಿ-‘ಲೇ ಶಿಖಂಡಿಗಳಾ, ಅಲ್ಲಿ ನಿಂತ್ಕಳಿ, ನಿಮ್ಮ ಹೆಂಡ್ತಿ ತಲೆ ಬೋಳ್ಸಿ ತಾಳಿ ಕೀಳುಸ್ತೀನಿ’ ಎಂದು ಬಾಗಿ ಎರಡು ಹೆಂಚುಗಳನ್ನು ತೆಗೆದು ರೊಂಯ್ ಎಂದು ಇವರ ಕಡೆ ಬೀಸಿದುದು ಇಬ್ಬರಿಗೆ ತಗುಲಿ, ಒಬ್ಬರ ಹಣೆಯಿಂದ ಮತ್ತೊಬ್ಬರ ಭುಜದಿಂದ ರಕ್ತ ಹನಿಯಿತು. ಜನಗಳು ಚಲ್ಲಾಪಿಲ್ಲಿಯಾದರು. ತಾನು ಮೇಲೆ ಹತ್ತಿ ಕಂಠೀಜೋಯಿಸನಿಗೆ ಬುದ್ಧಿ ಕಲಿಸಬೇಕೆಂದು ಶ್ಯಾಮಣ್ಣನ ಮನಸ್ಸಿಗೇನೋ ಬಂತು. ಅವನೂ ತಕ್ಕಮಟ್ಟಿನ ಗಟ್ಟೀಗನೇ. ಆದರೆ ಹಾಗೆ ಮೇಲೆ ಹತ್ತುವುದು ಅಪಾಯವೆಂದು ಅವನ ಮನಸ್ಸು ಹೇಳಿದುದೇ ಅಲ್ಲ. ಅದು ಬೇರೆ ಏನೋ ಯೋಚಿಸಿ ತೀರ್ಮಾನಿಸುತ್ತಿತ್ತು.

ಸುಮಾರು ಹತ್ತು ಸಾವಿರ ಉಂಡೆಹೆಂಚುಗಳನ್ನು ಕಂಠೀಜೋಯಿಸರು ಅರ್ಧ ಗಂಟೆಗೂ ಕಡಿಮೆಯಲ್ಲಿ ಬಡಿದು ಪುಡಿ ಮಾಡಿದರು. ನಂತರ ನಿಧಾನವಾಗಿ ಕೆಳಗೆ ಇಳಿದು ಏಣಿ ಒನಕೆಗಳನ್ನು ಅದರದರ ಜಾಗದಲ್ಲಿ ಇಟ್ಟು ಹೊರಕ್ಕೆ ಬಂದರು. ಭಯದಿಂದ ಬೀದಿಗೆ ಬಂದು ಎದುರು ಮನೆಯ ಜಗುಲಿಯ ಮೇಲೆ ಮಕ್ಕಳೊಡನೆ ನಿಂತಿದ್ದ ಶ್ಯಾಮಣ್ಣನ ಹೆಂಡತಿಯ ಮುಂದೆ ನಿಂತು, ‘ನೋಡಮ್ಮ, ನೀನು ತೂಬಿನಕೆರೆ ತಮ್ಮಯ್ಯ ಜೋಯಿಸರ ಮಗಳು ಅಂತ ನಿನ್ನ ಕೈಲಿ ಹೇಳ್ತಿದೀನಿ. ತಮ್ಮಯ್ಯ ಜೋಯಿಸರು ಅಂದ್ರೆ ನನಗೆ ಗುರುಗಳ ಸಮಾನ. ಬಿಟ್ಟ ಊರೊಳಗೆ ನಾನು ಒಬ್ಬನೇ ಇದ್ದೆ ಅಂತ ನಿನ್ನ ಗಂಡ ನಡುರಾತ್ರೀಲಿ ಆಳುಗಳನ್ನು ಕಳಿಸಿ ಮನೆ ಮೇಲೆ ಕದ್ದು ಕಲ್ಲು ಹೊಡುಸ್ದ. ಆದ್ರೆ ನನ್ನ ನೋಡು, ಹಗಲು ಹೊತ್ತಿನಲ್ಲಿ ಬಂದು ಕೆಲ್ಸ ಮಾಡಿದೀನಿ. ಕಂಠಿ ಅಂದ್ರೆ ಗಂಡು. ಇನ್ನು ಮ್ಯಾಲೆ ಏನಿದ್ರೂ ಶಿಖಂಡಿಗಳ ಕೆಲ್ಸ ಮಾಡ್‌ಬ್ಯಾಡ, ಗಂಡಸು ಮಾಡೋ ಕೆಲ್ಸ ಮಾಡು ಅಂತ ನಿನ್ನ ಗಂಡಂಗೆ ಹೇಳು. ಆ ಮಿಂಡರಿಗೆ ಹುಟ್ಟಿದ ಸೂಳೇಮಗನ ಕೈಲಿ ನಾನು ಮಾತಾಡುಲ್ಲ’ ಎಂದು ಹೇಳಿ ನೇರವಾಗಿ ತಮ್ಮ ಮನೆಗೆ ಹೊರಟು ಹೋದರು. ಶ್ಯಾಮಣ್ಣನ ಹೆಂಡತಿ ತಬ್ಬಿಬ್ಬಾಗಿ ನಿಂತುಕೊಂಡಿದ್ದಳು.

ನೇರವಾಗಿ ಮನೆಗೆ ಹೋದ ಕಂಠೀಜೋಯಿಸರು ಅಡಿಗೆ ಮನೆ ಹೊಕ್ಕರು. ಅಷ್ಟು ಹೊತ್ತಿಗೆ ಅಕ್ಕಮ್ಮ ಒಲೆಯಮೇಲೆ ಏರಿಸಿದ್ದ ಕೆಂಪು ಮುಂಗೇಸರಿ ಅಕ್ಕಿಯ ಅನ್ನದ ತಪ್ಪಲೆ ಕುದಿಯುತ್ತಿತ್ತು. ಪಕ್ಕದ ಮನೆಯಿಂದ ಅವಳು ತಂದು ಇಟ್ಟಿದ್ದ ಹುಳಿ, ಕಲಾಯಿ ಮಾಡಿದ ಚುರುಕಿನಲ್ಲಿತ್ತು. ಜೋಯಿಸರು ಹಿತ್ತಿಲ ಕಡೆಗೆ ಹೋಗಿ ಬಾವಿಯಿಂದ ಸೇದಿ ಎರಡು ಬಿಂದಿಗೆ ನೀರು ಹೊಯ್ದುಕೊಂಡು ಸ್ನಾನ ಮಾಡಿದರು. ಜೊತೆಯಲ್ಲಿಯೇ ತಮ್ಮ ಕಂಚಿನ ಕಂಠದಲ್ಲಿ ಗಟ್ಟಿಯಾಗಿ ಸಂಧ್ಯಾವಂದನೆಯ ಮಂತ್ರ ಹೇಳುತ್ತಾ ಮೈ ಒರಸಿಕೊಂಡು ಪಂಚೆ ಉಟ್ಟರು. ದೇವರ ಗೂಡಿನ ಹತ್ತಿರ ಇದ್ದ ಕರಟದಿಂದ ಸಾದನ್ನು ತೇಯ್ದು ನಡುಹಣೆಗೆ ಇಟ್ಟು ಬೆರಳುಗಳನ್ನು ತೊಳೆದು ಊಟಕ್ಕೆ ಕೂತರು. ಒಂದು ಸೇರಕ್ಕಿಯ ಅನ್ನ ಬಿಸಿಬಿಸಿಯಾಗಿ ಸಿದ್ಧವಾಗಿತ್ತು. ಕರೆಯುತ್ತಿದ್ದ ಹಸುವಿನ ತುಪ್ಪ ಬಾಣಂತಿಗೆ ಆಗಿ ಮಿಕ್ಕಿತ್ತು. ಮೊದಲು ಅಡಿಕೆ ಪಟ್ಟಿಯ ತುಂಬ ಹುಳಿಯಲ್ಲಿ ಕಲಸಿದ ಅನ್ನವು ಮೂರೇ ನಿಮಿಷದಲ್ಲಿ ಮುಗಿದ ಮೇಲೆ ಉಪ್ಪಿನಕಾಯಿ ಎಣ್ಣೆಯಲ್ಲಿ ಎರಡನೆಯ ಸಲ ಕಲಸಿಕೊಳ್ಳುತ್ತಾ ಅಕ್ಕಮ್ಮನನ್ನು ಕೇಳಿದರು: ‘ಹಸು ಕೊಡೂದು ಬಾಣಂತಿಗೆ ಸಾಕಾಗುತ್ತೊ?’
‘ಬೇಕಾದಷ್ಟಾಗುತ್ತೆ. ಇನ್ನೂ ಒಂದು ಬುದ್ದಲಿ ತುಂಬ ತುಪ್ಪ ತುಂಬಿಟ್ಟಿದೀನಿ.’
‘ಒಳ್ಳೇದು, ಅವಳು ಬಾಣಂತನ ಮುಗಿಸ್ಕಂಡು ಹೋಗೂ ಹೊತ್ತಿಗೆ ಗುಡ್ಡೆ ಹಾಕಿ ನಾಲ್ಕು ಬುದ್ದಲಿ ತುಪ್ಪ ಕೊಟ್ಟುಕಳ್ಸು. ಸುಖವಾಗಿ ಊಟ ಮಾಡ್‌ಲಿ. ಚಿಟ್ಟಹರಳು ಅರೆಸಿದ್ಯೋ, ದೊಡ್ಡಹರಳು ಅರೆಸಿದ್ಯೋ’
‘ಇನ್ನೂ ಹಸಿ ಬಾಣಂತಿಗೆ ಚಿಟ್ಟ ಹರಳೆಣ್ಣೆ ಒತ್ತಿ ಯಾರು ನೀರು ಹಾಕ್ತಾರೆ? ಶೀತವಾಗುತ್ತೆ.’
‘ಸರಿ, ನಾಮಕರಣ ಮಾಡ್ಸಿದ್ರೊ?’
‘ಹೂಂ, ಚೆನ್ನಿಗರಾಯ ಬಂದಿದ್ದ. ಪಾರ್ವತಿ ಅಂತ ಹೆಸರಿಟ್ತು.’
ಮೊಸರನ್ನವನ್ನು ಪೂರ್ತಿ ಮಾಡಿ ಗಟ್ಟಿಯಾಗಿ ತೇಗುತ್ತಾ ಅವರುಬಾಣಂತಿ ಮಲಗಿದ್ದ ಕೋಣೆಗೆ ಬಂದು ಕೇಳಿದರು: ‘ನಂಜಾ ಎಲ್ಲಿ, ನಿನ್ನ ಮಗಳನ್ನ ಕೊಡಿಲ್ಲಿ ನೋಡಾಣಾ.’
ಮಗುವನ್ನು ಎತ್ತಿ ತೊಡೆಯ ಮೇಲೆ ಮಲಗಿಸಿಕೊಂಡು ಅವರು ಕೋಣೆಯ ಹೊಸಿಲ ಮೇಲೆ ಕೂತರು. ಮಗು ಬೆಳ್ಳಗೆ ದಪ್ಪದಪ್ಪವಾಗಿ ಸುಟಿಯಾಗಿತ್ತು. ‘ಇವ್ಳೂ ನಿನ್ನ ಹಾಗೇ ಇದಾಳೆ ಕಣೆ. ನೋಡು ಹಣೆ ಎಷ್ಟು ದೊಡ್ಡ ದೊಡ್ಡದಾಗಿದೆ. ಯಾವ ನಕ್ಷತ್ರವಂತೆ?’
‘ಪುಟ್ಟಭಟ್ಟರು ಅದ್ಯಾವುದೋ ಅಂದ್ರು. ಜಾತಕ ನೀನೇ ಬಂದ ಮೇಲೆ ಬರೀಲಿ, ಅವ್ರು ನನಗಿಂತ ಚನ್ನಾಗಿ ಬರೀತಾರೆ ಅಂದ್ರು.’
‘ಆಯ್ತು, ನಾಳೆ ದಿನ ಜ್ಞಾಪಿಸು. ಹುಟ್ಟಿದ ಟೈಂ ಸರಿಯಾಗಿ ಗುರುತು ಹಾಕಿದೀರಿ ತಾನೇ? ಎಲ್ಲಿ, ನನಗೆ ಒಂದಿಷ್ಟು ವೀಳ್ಳೆದೆಲೆ ಕೊಡು. ಬೆಳಿಗ್ಗೆಯಿಂದ ಹೊಗೆಸೊಪ್ಪು ಹಾಕ್ಕಂಡಿಲ್ಲ’-ಎಂದು ಹೇಳಿ ಮಗುವನ್ನು ಎತ್ತಿಕೊಂಡೇ ಅಡಿಗೆಯ ಮನೆಗೆ ಹೋಗಿ ಕೇಳಿದರು: ‘ಅಕ್ಕಮ್ಮ, ಖಾರ, ಮೆಣಸು, ಲೇಹ, ಇದಕ್ಕೆಲ್ಲ ದುಡ್ಡಿಗೆ ಏನು ಮಾಡ್ದೆ? ನಂಗೆ ಈ ಕಡೆ ಜ್ಞಾಪಕವೇ ಬರಲಿಲ್ಲ. ತಡಿ ಇಲ್ಲಿ.’ ಆಮೇಲೆ ಹೊರಗೆ ಬಂದು ತಮ್ಮ ಕೋಟಿನ ಜೇಬಿನಿಂದ ಮೂವತ್ತು ರೂಪಾಯಿ ತಂದುಕೊಟ್ಟು-‘ಎಲ್ಲಾದ್ರೂ ಸಾಲಗೀಲ ಮಾಡಿದ್ರೆ ಕೊಟ್ಟುಬಿಡು. ಇನ್ನು ನಾನು ಊರಲ್ಲೇ ಇರ್ತೀನಿ. ಇನ್ನೊಂದು ಇಪ್ಪತ್ತು ದಿನವಾದ ಮೇಲೆ ಹಾಸನಕ್ ಹೋಗಿ ಕಲ್ಲೇಶನಿಗೆ ಗುಣವಾಗಿದ್ರೆ ಕರ್ಕಂಡ್ ಬರಬೇಕು’ ಎಂದರು.
ಮಗಳು ಮಡಿಸಿಕೊಟ್ಟ ವೀಳ್ಯದೆಲೆ ಅಗಿದು, ಮಗುವನ್ನು ಅವಳ ತೊಡೆಯ ಮೇಲೆ ಮಲಗಿಸಿ, ತಮ್ಮ ಎಡ ಅಂಗೈ ಮೇಲೆ ಎರಡು ಚೂರು ಹೊಗೆಸೊಪ್ಪು ಹಾಕಿ ಬಲ ಹೆಬ್ಬೆಟ್ಟಿನಿಂದ ತಿಕ್ಕಿ ಬಾಯಿಗೆ ತುಂಬಿ ಐದಾರು ಸಲ ಹೊರಕ್ಕೆ ಹೋಗಿ ಚರಂಡಿಯ ಹತ್ತಿರ ಚಿಲ್ ಎಂದು ಉಗುಳಿ ಬಂದ ಮೇಲೆ ಮಂದಲಿಗೆ ಹಾಸಿ ತಲೆಯ ಕೆಳಗೆ ಒಂದು ಮಣೆ ಇಟ್ಟುಕೊಂಡು ಒಂದು ಗಳಿಗೆ ನಿದ್ದೆ ತೆಗೆದರು. ಸಾಯಂಕಾಲ ಎದ್ದು ಗದ್ದೆಯ ಹತ್ತಿರ ಹೋಗಿಬಂದು, ರಾತ್ರಿ ಬಿಸಿಬಿಸಿಯಾಗಿ ಅನ್ನ ಹುಳಿ ಹಿಟ್ಟುಗಳನ್ನು ಊಟ ಮಾಡಿ ಬೆಚ್ಚಗೆ ಮಲಗಿದರು.

– ೬ –

ಮಧ್ಯರಾತ್ರಿಯ ಹೊತ್ತಿಗೆ ಯಾರೋ ಮನೆಯ ಬಾಗಿಲನ್ನು ತಟ್ಟಿದಂತೆ ಆಯಿತು. ‘ಯಾರೋ ಅದು?’-ಎಂದು ಕಠೀಜೋಯಿಸರೇ ಎಚ್ಚರವಾಗಿ ಕೇಳಿದುದಕ್ಕೆ ಬಂದ ಉತ್ತರ ಅವರನ್ನು ಚಕಿತಗೊಳಿಸಿತು: ‘ನಿಮ್ಮ ಮಾವನ ಮನೆಯೋರು. ಬಾಗಿಲು ತೆಗೀರ್ರಿ ಸುಮ್ಗೆ.’
‘ಅದ್ಯಾವ್ನೋ ಜ್ಞಾನ ನ್ಯಟ್ಟಗಿಲ್ವೇನೋ ಹೈವಾನ್’-ಎಂದು ಕೋಪದಿಂದ ಅಗಳಿ ಸಡಲಿಸಿ ಬಾಗಿಲು ತೆಗೆಯುತ್ತಾರೆ: ನಾಲ್ಕು ಜನ ಪೋಲೀಸು ಕಾನಿಸ್ಟೆಬಲುಗಳು ಮುಂದೆ ನುಗ್ಗಿ ಇವರ ತೋಳುಗಳನ್ನು ಗಟ್ಟಿಯಾಗಿ ಹಿಡಿದರು. ಕೊಸರಿದರೂ ಬಿಡಲಿಲ್ಲ. ದಫೇದಾರರು ಒಂದು ಸಲ ಸಿಳ್ಳೆ ಹಾಕಿದರು. ಹಿತ್ತಿಲಕಡೆಯ ಬಾಗಿಲಿನಲ್ಲಿ ಹೊರಗಡೆ ನಿಂತಿದ್ದ ಇಬ್ಬರು ಕಾನಿಸ್ಟೇಬಲುಗಳು ಗೋಡೆಯನ್ನು ಬಳಸಿ ಬಂದು ಇವರನ್ನು ಕೂಡಿಕೊಂಡರು.

ಯಾಕ್ರೀ, ಏನ್ ಮಾಡಿದ್ದುಕ್ರೀ ನನ್ನ ಹಿಡ್‌ಕಂಡಿರೋದು? ನಿಮಗೆ ಯಾವ ಅಥಾರ್ಟಿ ಇದೇರಿ?’ -ಎಂದು ಇವರು ಕೇಳಿದುದಕ್ಕೆ ದಫೇದಾರರು, ‘ಅದೇನಿದ್ರೂ ಸ್ಟೇಶನ್‌ನಾಗೆ ಬಂದು ಕೇಳೋರಂತೆ ನಡೀರಿ’ ಎಂದು ಮುಂದೆ ಹೊರಟರು. ಅಷ್ಟರಲ್ಲಿ ಎಚ್ಚರವಾದ ಅಕ್ಕಮ್ಮ ನಂಜಮ್ಮರು ಎದ್ದು ಬಂದು, ‘ಅಯ್ಯೋ’ ಎಂದು ಅಳಲು ಪ್ರಾರಂಭಿಸಿದರು. ಕಂಠೀಜೋಯಿಸರೇ, ಅಕ್ಕಮ್ಮ ನೀನ್ ಅಳಬ್ಯಾಡ. ಈ ನನ್ಮಗ ಶ್ಯಾಮಣ್ಣಂದೇ ಕಿತಾಪತಿ ಅಂತ ಕಾಣುತ್ತೆ. ನಾನು ಚೆನ್ನರಾಯಪಟ್ಟಣದ ತಂಕ ಹೋಗಿ ಬತ್ತೀನಿ. ನೀವು ಬಾಗ್ಲು ಹಾಕ್ಕಳಿ. ನಾನಿಲ್ದೆ ಇರೂವಾಗ ಮನೆತಾವುಕ್ ಯಾವ ನಾಯಿನಾದ್ರೂ ಬಂದ್ರೆ ಕೆರ ತಗಂಡ್ ಹೊಡೆದು ಕಳ್ಸಿ’ ಎಂದು ಹೇಳಿ ಅವರೊಡನೆ ನಡೆದರು. ಊರ ಹೊರಗೆ ವ್ಯಾನು ನಿಂತಿತ್ತು. ಅದರಲ್ಲಿ ಕೂರಿಸಿಕೊಂಡು ಪೋಲೀಸಿನವರು ಚನ್ನರಾಯಪಟ್ಟಣಕ್ಕೆ ನಡೆದರು. ಶ್ಯಾಮಣ್ಣ ಊರಿನಲ್ಲೇ ಉಳಿದ.

ಮಗ ಹೋಗಿ ಶ್ಯಾಮಣ್ಣನ ಮನೆಯ ಹೆಂಚು ಬಡಿದು ಬಂದದ್ದು ಸಾಯಂಕಾಲ ಅವನು ಗದ್ದೆಯ ಕಡೆಗೆ ಹೋಗಿದ್ದಾಗ ಅಕ್ಕಮ್ಮನಿಗೆ ತಿಳಿದಿತ್ತು. ಅದರ ಕಾರಣವೂ ಗೊತ್ತಾಗಿತ್ತು. ಈಗ ಪೋಲೀಸಿನವರನ್ನು ಕರೆಸಿ ಶ್ಯಾಮಣ್ಣ ತನ್ನ ಮಗನನ್ನು ಹಿಡಿಸಿಕೊಂಡು ಹೋದುದಕ್ಕೆ ಅಕ್ಕಮ್ಮನಿಗೆ ಮಹಾ ಸಿಟ್ಟು ಬಂದಿತು. ರಾತ್ರಿಯಲ್ಲಿ ತಾನೊಬ್ಬಳೇ ಶ್ಯಾಮಣ್ಣನ ಮನೆಯ ಮುಂದೆ ಹೋಗಿ ನಿಂತು ಬೀದಿಯ ಮಣ್ಣನ್ನು ಗುಡ್ಡೆ ಮಾಡಿ ಬೊಗಸೆಯಿಂದ ತೂರುತ್ತಾ ಬೈಯಲು ಪ್ರಾರಂಭಿಸಿದಳು: ‘ಅಯ್ಯೋ ನಿನ್ನ ಹೆತ್ತೋರು ಬಾಯಿಗೆ ನನ್ನ ಹೇಲು ಹಾಕ. ಹೆಣ್ಣಿಗ ಸೂಳೇಮಗನೇ, ರಾತ್ರಿ ಹೊತ್ತು ನಮ್ಮ ಮನೆಗೆ ಕಲ್ಲು ಹೊಡ್‌ಸುಕ್ಕೆ ಕಳ್ಸಿದ್ದೆ ಏನೋ ಶಿಖಂಡಿ ಮುಂಡೇಮಗನೆ? ನನ್ನ ಮಗನ್ನ ಗಂಡಸು ಅಂತ ನಾನು ಹೆತ್ತು ಮೊರಕ್ಕೆ ಹಾಕಿದ್ದೆ ಕಣೊ. ಅದುಕ್ಕೇ ಹಗಲು ಹೊತ್ತು ಬಂದು ನಿನ್ನ ಮನೆ ಹೆಂಚು ಬಡಿದ. ಹೆದ್‌ರಿಕಂಡು ಪೋಲೀಸ್ನೋರ್ಗೆ ಹೇಳೂಕ್ ಹೋಗಿದ್ಯಲಾ, ನೀನೇನು ಸೀರೆ ಉಟ್ಕಂಡಿದಿಯೇನೋ? ನಿನ್ನ ವಂಶ ನಿರ್ವಂಶವಾಗ. ನಿನ್ನ ಮಕ್ಕಳ ಸುಳಿ ಅಡಗ. ನಿನ್ನ ಹೆಂಡತಿ ಮುಂಡೆಯಾಗ. ಸೂಳೇಮಗನೇ, ಈಗ ನಾನು ಆಗಿದೀನಲಾ, ತಲೆ ಬೋಳಿಸ್ಕಂಡು ಕೆಂಪಿನ ಸೀರೆ ಉಟ್ಕಂಡು, ನಿನ್ನ ಹೆಂಡ್ತಿಯೂ ಹಾಗೇ ಆಗ್ತಾಳೆ ನೋಡು ಬೇಕಾದ್ರೆ. ಗಂಡ ಸತ್ತ ಮುಂಡೆ ಶಾಪ ಅಂದ್ರೆ ಏನಂತ ತಿಳ್ಕಂಡಿದೀಯಾ?…..

ಅಷ್ಟರಲ್ಲಿ ಸುತ್ತಮುತ್ತ ಎಷ್ಟೋ ಜನರು ಎದ್ದು ಬಂದು ಸೇರಿದರು. ಎಲ್ಲರಿಗೂ ನಡೆದ ವಿಷಯ ಗೊತ್ತಾಯಿತು. ಯಾರೂ ಏನೂ ಬಾಯಿ ಬಿಟ್ಟು ಆಡಲಿಲ್ಲ. ಶ್ಯಾಮಣ್ಣನ ಮನೆಯ ಬಾಗಿಲು ತೆಗೆಯಲಿಲ್ಲ. ಮನೆಯಲ್ಲಿ ನಂಜು ಒಬ್ಬಳೇ ಮಗುವಿನ ಸಂಗಡ ಇರುವ ನೆನಪಾಗಿ, ಅಕ್ಕಮ್ಮ ಮತ್ತೆ ಹತ್ತು ಮಾತಿನಲ್ಲಿ ಬೈಗುಳವನ್ನು ಮುಗಿಸಿ ಮನೆಗೆ ಬಂದಳು.

ಚೆನ್ನರಾಯಪಟ್ಟಣದ ಪೋಲೀಸ್ ಸ್ಟೇಶನ್ನಿಗೆ ಹೋದಾಗ-‘ರಾತ್ರಿ ಇಲ್ಲೇ ಇರಿ. ಬೆಳಿಗ್ಗೆ ಸಬ್‌ಇನ್‌ಸ್ಪೆಕ್ಟರು ಬಂದಮೇಲೆ ನಿಮ್ಮ ಹೇಳಿಕೆ ತಗಾತಾರೆ’ ಎಂದು ದಫೇದಾರರು ಹೇಳಿದರೆ ಕಂಠೀಜೋಯಿಸರು ಕೇಳಲಿಲ್ಲ; ‘ಅವ್‌ರನ್ನ ಈಗ್ಲೇ ಕರಸಿ. ಅದೇನು ಕೇಳಲಿ. ನಿಮ್ಮ ಸ್ಟೇಶನ್ನಿನ್ನಲ್ಲಿ ಸುಮ್‌ಸುಮ್‌ನೆ ಇರೂಕೆ ನಾನೇನೂ ಕಳ್ಳತನ ಮಾಡಿಲ್ಲ’-ಎಂದು ಬಾಯಿ ಜೋರು ಮಾಡಿದರು. ಹೊಡೆದು ಸುಮ್ಮನಾಗಿಸಲು ಪೋಲೀಸಿನವರಿಗೂ ಭಯ ಇವರ ವಿಷಯದಲ್ಲಿ ಅವರೂ ಸಾಕಷ್ಟು ಕೇಳಿ ತಿಳಿದುಕೊಂಡಿದ್ದರು. ಸಬ್‌ಇನ್‌ಸ್ಪೆಕ್ಟರು ಆಗಲೇ ಬಂದರು. ಶ್ಯಾಮಣ್ಣ ಶ್ಯಾನುಭೋಗ; ಎಂದರೆ ಸರ್ಕಾರಿ ಅಧಿಕಾರಿ. ಅವರ ಮನೆ ಹೆಂಚುಗಳನ್ನು ಹೊಡೆದದ್ದೇ ಅಲ್ಲದೆ, ಒಳಗೆ ನುಗ್ಗಿ ಶ್ಯಾನುಭೋಗಿಕೆಯ ಲೆಕ್ಕದ ಪುಸ್ತಕಗಳನ್ನು ಹೊತ್ತುಕೊಂಡು ಹೋದನೆಂದು ಅವನು ಕಂಪ್ಲೇಂಟು ಕೊಟ್ಟಿದ್ದ. ಹೆಂಚು ಒಡೆದುದಕ್ಕೆ ಪೋಲೀಸಿನವರು ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದರೋ ಇಲ್ಲವೋ, ಆದರೆ ಸರ್ಕಾರೀ ಲೆಕ್ಕವನ್ನು ಅಪಹರಿಸಿರುವ ದೂರಿಗೆ ಶ್ರದ್ಧೆ ವಹಿಸಲೇಬೇಕು. ಈ ದೂರಿನ ಪ್ರತಿಯನ್ನು ಶ್ಯಾಮಣ್ಣ ತಾಲ್ಲೂಕು ಅಮಲ್ದಾರರಿಗೂ ಕೊಟ್ಟಿದ್ದ.

‘ನನಗೇನೂ ಗೊತ್ತಿಲ್ಲ. ನಾನು ಅವನ ಮನೆಗೂ ಹೋಗಿಲ್ಲ. ಇದೆಲ್ಲ ಸುಳ್ಳು’-ಎಂದು ಕಂಠೀಜೋಯಿಸರು ಹೇಳಿಕೆ ಕೊಟ್ಟರು. ಮರುದಿನ, ಸ್ಥಳೀಯ ಮ್ಯಾಜಿಸ್ಟ್ರೇಟರಾದ ಅಮಲ್ದಾರರ ಎದುರಿಗೂ ಇದೇ ಹೇಳಿಕೆ ಕೊಟ್ಟರು. ಪೋಲೀಸಿನವರು ಇವರ ಮೇಲೆ ಕೇಸು ದಾಖಲು ಮಾಡಿಕೊಂಡರು. ಸ್ಥಳದ ಮುನಿಸಿಪಾಲಿಟಿ ಮೆಂಬರು ಹನುಮಂತಶೆಟ್ಟರು ಜಾಮೀನು ನಿಂತದ್ದರಿಂದ ಕಂಠೀಜೋಯಿಸರನ್ನು ಪೋಲೀಸು ವಶದಿಂದ ಹೊರಗೆ ಬಿಟ್ಟರು. ಊರಿಗೆ ಬಂದ ಅವರು ಮೀಸೆಯ ಮೇಲೆ ಕೈಹಾಕಿಕೊಂಡೇ ಎಲ್ಲ ಬೀದಿಗಳಲ್ಲಿಯೂ ಒಂದು ಸುತ್ತು ತಿರುಗಿ ಮನೆಗೆ ಹೋದರು.

ಶ್ಯಾಮಣ್ಣನನ್ನು ಹಿಡಿದು ಬಗ್ಗಿಸಿ ಚಚ್ಚಿಬಿಡಬೇಕೆಂದು ಮನಸ್ಸಿನಲ್ಲೇನೋ ಬರುತ್ತಿತ್ತು. ಆದರೆ ತಮ್ಮ ಮೇಲೆ ಕೇಸು ಇರುವಾಗ ಹಾಗೆ ಮಾಡಬಾರದೆಂದು ಸುಮ್ಮನಾದರು. ಕೆಲವು ದಿನದಲ್ಲಿ ಹೊಳೇನರಸೀಪುರದ ಕೋರ್ಟಿನಿಂದ ಸಮನ್ ಬಂತು. ಪ್ರಸಿದ್ಧರಾಗಿದ್ದ ಲಾಯರ್ ವೆಂಕಟರಾಯರನ್ನು ಇವರು ಗೊತ್ತು ಮಾಡಿದರು. ಮೂರು ತಿಂಗಳು ಕಂಠೀಜೋಯಿಸರು ಹೊಳೆನರಸೀಪುರ ಹಾಸನಗಳಿಗೆ ಕುದುರೆಯ ಮೇಲೆ ತಿರುಗಿದರು.

ಸಾಕ್ಷಿ ವಿಚಾರಣೆಯ ದಿನ ಬೆಳಿಗ್ಗೆಯೇ ಇವರು ಹೋಗಿ ಲಾಯರನ್ನು ಕಾಣಬೇಕಾಗಿತ್ತು. ರಾತ್ರಿಗೆ ಊರು ಬಿಟ್ಟ ಕಂಠೀಜೋಯಿಸರು ಕುದುರೆ ಏರಿ ಚೆನ್ನರಾಯಪಟ್ಟಣವನ್ನು ಹಾಯ್ದು ಗನ್ನಿಯ ಉಕ್ಕಡಕ್ಕೆ ಬಂದಾಗ ಹೊಳೆ ತುಂಬಿಬರುತ್ತಿತ್ತು. ಈಗ ಹೊಳೆ ಬರುವುದು ಅನಿರೀಕ್ಷಿತ. ಆದರೆ ಅವರು ಹೊಳೆ ದಾಟಿ ಬೆಳಗಿನ ಒಳಗೆ ನರಸೀಪುರ ಮುಟ್ಟಲೇಬೇಕು. ಆಗಲೇ ಅರ್ಧರಾತ್ರಿಯಾಗಿದೆ. ಬೆಳದಿಂಗಳಿನಲ್ಲಿ ಭರ್ ಎಂದು ಮೊರೆಯುತ್ತಿದ್ದ ಹೊಳೆ ಉಕ್ಕಡದ ಎರಡು ದಂಡೆಗಳನ್ನೂ ಕಟ್ಟಿ ಹರಿಯುತ್ತಿದೆ. ಇನ್ನು ಕುದುರೆಯ ಮೇಲೆ ಏರಿ ಹೋಗುವುದು ಸಾಧ್ಯವಿಲ್ಲ. ನದಿಯ ದಡದಲ್ಲಿಯೇ ಇದ್ದ ಮುಸಾಫಿರ್ ಬಂಗ್ಲೆಗೆ ಹೋಗಿ ಜವಾನನನ್ನು ಎಬ್ಬಿಸಿ ಕೇಳಿದರೆ-‘ಎರಡು ದಿನದಿಂದ ಹರಿಗೋಲೂ ಬಿಡ್ತಿಲ್ಲ, ಅನಾಡಿ ಹ್ವಳೆ ಬಂದೈತೆ’ ಎಂದ. ಆದರೆ ಇವರು ಹಿಂದೆ ನಿಲ್ಲುವಂತಿಲ್ಲ. ತಮ್ಮ ಕುದುರೆ ನೋಡಿಕೊಳ್ಳುವಂತೆ ಅವನಿಗೆ ಹೇಳಿ ಒಪ್ಪಿಸಿ ಖರ್ಚಿಗೆಂದು ಒಂದು ರೂಪಾಯಿ ಕೊಟ್ಟರು. ತಮ್ಮ ಹತ್ತಿರ ಇದ್ದ ಬೆಳ್ಳಿ ರೂಪಾಯಿಯ ಇಮ್ಮಣ್ಣಿಚೀಲವನ್ನು ಬಿಗಿಯಾಗಿ ಸೊಂಟಕ್ಕೆ ಕಟ್ಟಿದರು. ಕೋಟು ಶರಟು ನಿಕ್ಕರುಗಳನ್ನು ಬಿಚ್ಚಿ ತಲೆಗೆ ಕಟ್ಟಿಕೊಂಡು ಒಂದು ಚೌಕ ಬಿಗಿದರು. ಜವಾನ ಬೇಡಬೇಡವೆಂದರೂ ಉಕ್ಕಡದಿಂದ ಸ್ವಲ್ಪ ಮೇಲೆ ಹೋಗಿ ನದಿಯಲ್ಲಿ ಈಜು ಬಿದ್ದರು.

ಸುಮಾರು ಅರ್ಧಮೈಲಿ ಕೆಳಭಾಗದಲ್ಲಿ ಹೊಳೆಯ ಆಚೆ ದಡವನ್ನು ಮುಟ್ಟಿಯೇ ಮುಟ್ಟಿದರು. ಮೈ ಮತ್ತು ಕಟ್ಟಿದ ಲಂಗೋಟಿಗಳು ಮಾತ್ರ ಒದ್ದೆಯಾಗಿದ್ದವು. ತಲೆಗೆ ಕಟ್ಟಿದ್ದ ಬಟ್ಟೆಗಳಲ್ಲಿ ಸ್ವಲ್ಪ ಭಾಗ ನೆನೆದಿತ್ತು. ಹಾಗೆಯೇ ಅರ್ಧ ಮೈಲಿ ನಡೆಯುವುದರಲ್ಲಿ ಮೈ ಒಣಗಿತು. ನಿಕ್ಕರು ಶರಟು ಕೋಟುಗಳನ್ನು ಹಾಕಿಕೊಂಡು ಬರಿ ಕಾಲಿನಲ್ಲಿ ಸರಸರನೆ ಮುಂದೆ ನಡೆದರು. ಇನ್ನು ಎಂಟೇಮೈಲಿಯ ದೂರ. ನರಸೀಪುರದಲ್ಲಿ ಕೋಳಿ ಕೂಗುವ ಹೊತ್ತಿಗೆ ತಲುಪಿದರು. ಹೊಳೆದಂಡೆಗೆ ಹೋಗಿ ಪ್ರಾತರ್ವಿಧಿಗಳನ್ನು ಮುಗಿಸಿ, ಸ್ನಾನ ಮಾಡಿ ಸಂಧ್ಯಾವಂದನೆ ಮುಗಿಸಿ ಬೆಳಕಾಗುವ ಹೊತ್ತಿಗೆ ಲಾಯರ ಮನೆಗೆ ಬಂದರು.

ಆ ದಿನ ಮುಖ್ಯವಾದ ಎರಡು ಸಾಕ್ಷಿಗಳಿದ್ದವು ಒಂದು ಶ್ಯಾಮಣ್ಣನ ಹೆಂಡತಿಯದೇ. ಕೋರ್ಟಿನ ಎದುರಿಗಿರುವ ಬಸವಣ್ಣನನ್ನು ಆಕೆಯ ಕೈಯಿಂದ ಮುಟ್ಟಿಸಿ ಆಣೆ ಪ್ರಮಾಣ ಮಾಡಿಸಿ, ಸುಳ್ಳು ಹೇಳಿದರೆ ಗಂಡ ಮತ್ತು ಮಕ್ಕಳು ಸಾಯುತ್ತಾರೆಂದು ಲಾಯರು ಹೇಳಿದಾಗ ಅವಳಿಗೆ ಅಕ್ಕಮ್ಮ ಹಾಕಿದ ಶಾಪಗಳೆಲ್ಲವೂ ನೆನಪಾಗಿ ಅರ್ಧ ಅಳುವೇ ಬರುತ್ತಿತ್ತು. ನಿಜ ಹೇಳಬೇಕು ಎಂದು ಲಾಯರು ಹೇಳಿದಾಗ ಅವಳು ಹೆದರಿಕೊಂಡು ಹೇಳಿಬಿಟ್ಟಳು: ‘ಕಂಟ್ಯಪ್ಪಜೋಯಿಸರು ನಮ್ಮನೆ ಒಳಕ್ ನುಗ್ಗಿ ಒನಕೆ ತಗಂಡ್ ಹೆಂಚು ಬಡಿದುದ್ ಉಂಟು. ಊರು ಬಿಟ್ಟಿದ್ದಾಗ ನಮ್ಮನೆ ಇವರು ಗುಳ್ಳುಗ, ಜುಟ್ಟಗ, ಅವರುನ್ನೆಲ್ಲ ಕಳ್ಸಿ ಕಂಟಪ್‌ನೋರ ಮನೆಗೆ ಕಲ್ಲು ಹೊಡೆಸಿದ್ರು. ಅದ್ಕೇ ಹಾಗೆ ಮಾಡಿದ್ರಂತೆ.’

ಅಲ್ಲಿಯೇ ಇದ್ದ ಶ್ಯಾಮಣ್ಣ ಹೆಂಡತಿಯನ್ನು ನುಂಗುವಂತೆ ನೋಡುತ್ತಿದ್ದ. ಜೋಯಿಸರ ಕಡೆಯ ಲಾಯರು ಅವಳನ್ನು ಕೇಳಿದರು: ‘ಅಮ್ಮ, ನಿಜ ಹೇಳಿ. ದೇವರ ಮ್ಯಾಲೆ ಪ್ರಮಾಣ ಮಾಡಿದೀರಾ. ಜೋಯಿಸರು ನಿಮ್ಮನೆಗೆ ನುಗ್ಗಿ ಶ್ಯಾನುಭೋಗ್‌ಕೆ ಲೆಕ್ಕದ ಪುಸ್ತಕಾನ ಹೊತ್‌ಕೊಂಡ್ ಹೊದದ್ದು ಸುಳ್ಳಲ್ಲವೆ?’

‘ಲ್ಯಕ್ಕದ ಪುಸ್ತಕ ಏನೂ ಹೊತ್ಕಂಡ್ ಹೋಗ್ಲಿಲ್ಲ. ನಾನು ಅಲ್ಲೇ ಇದ್ದೆ.’
ಊರಿಗೆ ಹೋದಮೇಲೆ ಶ್ಯಾಮಣ್ಣ ಹೆಂಡತಿಯನ್ನು ಮೈಮುರಿಯ ಹೊಡೆದನಂತೆ.
ಶ್ರವಣಬೆಳಗೊಳದ ಫೋಲೀಸು ದಫೇದಾರರು ಇವರ ಪರವಾಗಿ, ಆ ದಿನ ಮಧ್ಯಾಹ್ನ ಮೂರು ಗಂಟೆಯಲ್ಲಿ ತಾವು ಹಾಸನಕ್ಕೆ ಹೋಗಿದ್ದುದಾಗಿಯೂ ಆಗ ಕಂಠೀಜೋಯಿಸರನ್ನು ಅಲ್ಲಿ ಕಂಡಿದ್ದುದಾಗಿಯೂ ಸಾಕ್ಷಿ ಕೊಟ್ಟರು. ಇವರು ತಮ್ಮ ಮನೆಗೆ ನುಗ್ಗಿ ಶ್ಯಾನುಭೋಗಿಕೆ ಲೆಕ್ಕದ ಪುಸ್ತಕ ಹೊತ್ತುಕೊಂಡು ಹೋಗಿ ಹೆಂಚು ಬಡಿದುದು ಅದೇ ದಿನ ಮಧ್ಯಾಹ್ನ ಮೂರು ಗಂಟೆಗೆ ಎಂಬುದು ಶ್ಯಾಮಣ್ಣನ ಕಂಪ್ಲೇಂಟ್ ಆಗಿತ್ತು.

ಇನ್ನು ಎಂಟು ದಿನಕ್ಕೆ ಜಜ್‌ಮೆಂಟ್ ಎಂದು ಜಡ್ಜಿಗಳು ಹೇಳಿದರು. ಜಜ್‌ಮೆಂಟಿನ ದಿನ ಶ್ಯಾಮಣ್ಣನೂ ಬಂದಿದ್ದ. ಕಂಠೀಜೋಯಿಸರೂ ಬಂದಿದ್ದರು. ಒಂದು ಗಂಟೆಗೆ ಸರಿಯಾಗಿ ಜಡ್ಜಿಗಳು ಓದಿ ಹೇಳಿದರು: ‘ಶ್ಯಾನುಭೋಗಿಕೆ ಲೆಕ್ಕಗಳನ್ನು ಕೈಲೂ ಮುಟ್ಟಿಲ್ಲವೆಂದು ಫಿರ್ಯಾದಿಯ ಹೆಂಡತಿಯೇ ಹೇಳುತ್ತಾಲೆ. ಆಪಾದಿತನ ಮನೆಯ ಮೇಲೆ ಫಿರ್ಯಾದಿಯು ರಾತ್ರಿ ಹೊತ್ತು ಕಲ್ಲು ಹೊಡೆಸಿದ್ದನಂತೆ. ಅದಕ್ಕೆ ಪ್ರತೀಕಾರವಾಗಿ ಆಪಾದಿತನು ಇವರ ಮನೆಯ ಹೆಂಚನ್ನು ಒಡೆದಿರಬಹುದು. ಆದರೆ ಮುಖ್ಯವಾದ ಆಪಾದನೆ ಇರುವುದು ಸರ್ಕಾರೀ ಲೆಕ್ಕದ ಪುಸ್ತಕವನ್ನು ಹೊತ್ತುಕೊಂಡು ಹೋದ ಎಂದು. ಘಟನೆ ನಡೆಯಿತೆಂದು ಆಪಾದಿಸಿದ ಸಮಯದಲ್ಲಿ ಆಪಾದಿತನನ್ನು ಹಾಸನದಲ್ಲಿ ನೋಡಿದುದಾಗಿ ಶ್ರವಣಬೆಳಗೊಳದ ದಫೇದಾರರು ಸಾಕ್ಷಿ ಕೊಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡು ನೋಡಿದರೆ ಆಪಾದನೆಯಲ್ಲಿ ಹುರುಳಿಲ್ಲವೆಂದು ತಿಳಿಯುತ್ತದೆ. ಇವರಿಬ್ಬರಿಗೂ ಪರಸ್ಪರ ದ್ವೇಷವಿದ್ದು ಸಣ್ಣಪುಟ್ಟ ಜಗಳವೇನೋ ನಡೆದಿರಬಹುದು. ಈ ಕೇಸನ್ನು ಖುಲಾಸೆ ಮಾಡಲಾಗಿದೆ.’

– ೭ –

ತಮ್ಮ ಲಾಯರಿಗೆ ಕೊಡಲು ಕಂಠೀಜೋಯಿಸರು ಐವತ್ತು ರೂಪಾಯಿ ತಂದಿದ್ದರು. ಅದನ್ನು ಮನೆಯಲ್ಲಿ ಕೊಡಬೇಕು. ಲಾಯರಿಗೆ ಕೋರ್ಟಿನ ಆಫೀಸಿನಲ್ಲಿ ಸ್ವಲ್ಪ ಕೆಲಸವಿತ್ತು. ಅಷ್ಟರಲ್ಲಿ ಹೋಟೆಲಿಗೆ ಹೋಗಿ ಊಟ ಮಾಡಿಕೊಂಡು ಬರುವುದಾಗಿ ಹೇಳಿ ಜೋಯಿಸರು ಕೋರ್ಟು ಕಟ್ಟಡದ ಹೊರಗೆ ಬಂದು, ಮರಕ್ಕೆ ಕಟ್ಟಿದ್ದ ತಮ್ಮ ಕುದುರೆಯನ್ನು ಏರಿ ಒಂದು ಫರ್ಲಾಂಗ್ ಮುಂದೆ ಹೋದರು. ಅಷ್ಟರಲ್ಲಿ ಶ್ಯಾಮಣ್ಣ ಒಬ್ಬನೇ ಹೋಗುತ್ತಿದ್ದುದು ಕಾಣಿಸಿತು. ಅವರಿಗೆ ಇದ್ದಕ್ಕಿದ್ದಂತೆಯೇ ಕೋಪ ಭುಗ್ ಎಂದಿತು.

‘ಎಲಾ, ನಿನ್ನ ಹೆತ್ತೋಳ್ನಾ…..ಏನ್ಲಾ ಕಿತ್‌ಕಂಡೆ ನನ್ ತಾವ, ಕೋರ್ಟಿಗ್ ಹೋಗಿ?’-ಎಂದು ಕುದುರೆಯಿಂದ ಇಳಿದು ಅವನ ಮುಂದೆ ನಿಂತರು. ಶ್ಯಾಮಣ್ಣ ಗಾಬರಿಯಿಂದ ಸುಮ್ಮನೆ ನಿಂತುಕೊಂಡ. ಜೋಯಿಸರು ತಮ್ಮ ಬಲಗಾಲಿನ ಬೂಟನ್ನು ಕೈಗೆ ತೆಗೆದುಕೊಂಡು ಅವನ ತಲೆಯ ಮೇಲೆ ಮೆಟ್ಟಿದರು. ಶ್ಯಾಮಣ್ಣನೂ ಕೈ ಮಾಡಿದ. ಇವರು ತಮ್ಮ ಬಲವನ್ನೆಲ್ಲ ಬಿಟ್ಟು ಕುತ್ತಿಗೆ ಬಗ್ಗಿಸಿಕೊಂಡು ಬೆನ್ನಿನ ಮೇಲೆ ಇಡಿದ ರಭಸಕ್ಕೆ ಅವನು ನೆಲಕ್ಕೆ ಉರುಳಿದುದೇ ಅಲ್ಲ, ಬಾಯಿಯಿಂದ ರಕ್ತ ಬಂದು ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ. ಅದುವರೆಗೂ ಕಂಠೀಜೋಯಿಸರಿಗೆ ಸಾಧಾರಣ ಬುದ್ಧಿಯೇ ಕೈಲಿರಲಿಲ್ಲ. ಈಗ ಗಾಬರಿಯಾಯಿತು. ಅಷ್ಟರಲ್ಲಿ ಯಾರೋ ಹಿಂಬಾಗದಲ್ಲಿ-‘ಮರ್ಡರ್ ಇರಬಹುದು. ತಕ್ಷಣ ಹಿಡ್‌ಕೊ’-ಎಂಬತೆ ಕೂಗಿದ ಶಬ್ದವಾಯಿತು. ಹಿಂತಿರುಗಿ ನೋಡುತ್ತಾರೆ: ಕೂಗಿದವರು ಇವರ ಕೇಸಿನ ವಿಚಾರಣೆ ಮಾಡಿದ ಜಡ್ಜಿಗಳು. ಹೇಳುತ್ತಿದ್ದುದು: ಅವರ ಜೊತೆಯಲ್ಲಿ ರಕ್ಷಕನಾಗಿ ಬರುತ್ತಿದ್ದ ಪೋಲೀಸ್ ಪ್ಯಾದೆಗೆ. ಜೋಯಿಸರ ಮೈ ಇದ್ದಕ್ಕಿದ್ದಂತೆಯೇ ಬೆವರಿತು. ಪೋಲೀಸಿನವನು ನುಗ್ಗಿ ಬಂದ. ಇವರು ಮಿಂಚಿನಂತೆ ತಮ್ಮ ಕುದುರೆಯ ಮೇಲೆ ನೆಗೆದು ಅದರ ಬೆನ್ನು ಚಬುಕಿಸಿದರು. ಇನ್ನು ಒಂದು ಮಾರು ಹತ್ತಿರ ಇದ್ದರೆ ಪೋಲೀಸಿನವನು ಇವರನ್ನು ಹಿಡಿಯುತ್ತಿದ್ದ. ಅಷ್ಟರಲ್ಲಿ ಕುದುರೆ ಛಂಗನೆ ನೆಗೆದು ಬಾಣದಂತೆ ದೌಡಾಯಿಸಿತು. ಜೋಯಿಸರು ತಿರುಗಿ ನೋಡಲಿಲ್ಲ.

ಮೋಟಾರು ಸೇತುವೆಯ ಮೇಲೆ ಜೋರಿನಿಂದ ಕುದುರೆಯನ್ನು ಓಡಿಸಿ ಅಲ್ಲಿಂದ ಬಲಭಾಗದ ಹಳ್ಳಗಳ ಕಡೆಗೆ ತಿರುಗಿಸಿದರು. ಸಿಕ್ಕಿದ ದಾರಿಯಲ್ಲಿ ನುಗ್ಗಿಸಿ ಸಂಜೆಯ ಹೊತ್ತಿಗೆ ಬರಗೂರಿನ ಹತ್ತಿರಕ್ಕೆ ಬಂದರು. ಪೋಲೀಸಿನವರು ತನ್ನ ಹಿಂದೆ ಖಂಡಿತ ಹೊರಟಿದ್ದಾರೆ. ಕೊಲೆ ಮಾಡಿದವನನ್ನು ಎಲ್ಲಿದ್ದರೂ ಹಿಡಿಯಬೇಕೆಂದು ಸಂಸ್ಥಾನದ ಆಮ್ಳೆ ಹುಕುಂ ಕೊಟ್ಟಿರುತ್ತಾರೆ. ಫಾಸಿ ಶಿಕ್ಷೆಯಾಗುತ್ತೆ. ಜಡ್ಜಿಗಳೇ ಕಣ್ಣಾರೆ ಕಂಡಿರುವುದರಿಂದ ಯಾವ ಲಾಯರೂ ಏನೂ ಮಾಡೂಹಾಗಿಲ್ಲ. ಈ ಸಂಸ್ಥಾನಾನೇ ಬಿಟ್ಟು ಬಿಡಬೇಕು….ಎಂಬ ನಿಶ್ಚಯ ಮನಸ್ಸಿನಲ್ಲಿ ಬಂತು. ಈ ಕುದುರೆಯ ಮೇಲೆ ಹೋಗುವುದು ಅಪಾಯ ಎಂಬ ಅರಿವು ಬಂದರೂ ಅದನ್ನು ಎಲ್ಲಿ ಬಿಡುವುದು ಎಂಬ ಯೋಚನೆಯೂ ಹುಟ್ಟಿತು. ಬಲಭಾಗಕ್ಕೆ ನಾಲ್ಕುಮೈಲಿ ತಿರುಗಿ, ದಣಿದು ಹೋಗಿದ್ದ ಕುದುರೆಯನ್ನು ನಿಲ್ಲಿಸಿ ಊರ ಕಡೆಗೆ ಹೊಡೆದರು. ಅಲ್ಲಿಂದ ನಾಗಲಾಪುರ ಐದು ಮೈಲಿಯ ದೂರ. ಕುದುರೆಗೆ ಪರಿಚಿತವಾದ ದಾರಿ. ಹೇಗೆ ಹೋದರೂ ಮನೆಗೆ ಹೋಗುತ್ತೆ-ಅಥವಾ ಮತ್ತೆ ಯಾರ ಕೈಗೆ ಸಿಕ್ಕಿದರೂ ಬೇಕಾದರೆ ಕಟ್ಟಿ ಹಾಕಿ ಸವಾರಿ ಮಾಡಿಕೊಳ್ಳಲಿ. ಅಲ್ಲಿಂದ ಎಡಗಡೆಗೆ ಬಂದು ಅಲ್ಲಿ ಸಿಕ್ಕಿದ ಒಂದು ಹಳ್ಳಿಗೆ ಹೋದರು. ಅದು ಬೇವಿನ ಹಳ್ಳಿ ಎಂಬುದು ಅವರಿಗೆ ಗೊತ್ತಿತ್ತು. ಅಲ್ಲಿ ಒಂದು ಬಟ್ಟಿ ಅಂಗಡಿಯೂ ಇದೆ. ಅಂಗಡಿಗೆ ಹೋಗಿ ಒಂದು ದಪ್ಪನಾದ ಪಂಚೆಯನ್ನು ಕೊಂಡರು. ಅದೇ ಅಂಗಡಿಗೆ ಲಗತ್ತಿಸಿ ಇದ್ದ ಚಿಲ್ಲರೆ ಅಂಗಡಿಯಲ್ಲಿ ಒಂದು ಆಣೆಗೆ ಅರಿಶಿನದ ಪುಡಿ ಒಂದು ಬೆಂಕೀಪೊಟ್ಟಣ ತೆಗೆದುಕೊಂಡು ಗ್ರಾಮದಿಂದ ಹೊರಗೆ ಹೋದರು.

ಒಂದು ತೋಟದ ಬಾವಿಯಲ್ಲಿ ಹೊಸ ಪಂಚೆಯನ್ನು ನೆನಸಿ ಗಂಜಿ ಹೋಗುವಂತೆ ಚೆನ್ನಾಗಿ ಕಸಕಿ, ಅದಕ್ಕೆ ಅರಿಶಿನ ಹಾಕಿ, ತಮ್ಮ ಹತ್ತಿರ ಇದ್ದ ಎಲೆ ಅಡಿಕೆ ಚೀಲದ ಸುಣ್ಣದ ಡಬ್ಬಿಯಿಂದ ಸುಣ್ಣ ತೆಗೆದು ಬೆರೆಸಿ, ಪಂಚೆಯನ್ನು ಕಾದಿಯ ಶಾಟಿಯಾಗಿ ಪರಿವರ್ತಿಸಿದರು. ಅದನ್ನು ತಲೆಯ ಮೇಲೆ ಹಾಕಿಕೊಂಡು ಉತ್ತರದ ಕಡೆಗೆ ನಡೆಯುವಾಗ ನಡುರಾತ್ರಿಯ ವೇಳೆಗೆ ಒಣಗಿತು.

ಹತ್ತಿರ ಸಿಕ್ಕಿದ ಒಂದು ಮರಳ ಹಳ್ಳದಲ್ಲಿ ಒಂದಿಷ್ಟು ಮರಳನ್ನು ಬಗೆದರು. ಕಾವಿಯನ್ನು ಧರಿಸಿ, ತಾವು ತೊಟ್ಟಿದ್ದ ನಿಕ್ಕರು, ಕೋಟು ಶರಟುಗಳನ್ನು ಬಿಚ್ಚಿ, ತರಗು ಕಡ್ಡಿಗಳನ್ನು ಸೇರಿಸಿ ಅದಕ್ಕೆ ಬೆಂಕಿ ಹಾಕಿದರು. ಚನ್ನಾಗಿ ಉರಿದು ಬೂದಿಯಾದ ಮೇಲೆ ಅದರ ಭರ್ತಿ ಮರಳು ತುಂಬಿ ಮೊದಲಿದ್ದಂತೆಯೇ ಮಾಡಿದರು. ಹತ್ತಿರ ಇದ್ದ ದುಡ್ಡನ್ನು ಗಂಟು ಕಟ್ಟಿ ಒಳಗಿನ ಲಂಗೋಟಿಯಲ್ಲಿ ಸೇರಿಸಿದರು. ಇನ್ನು ಎಂಟು ಮೈಲಿ ನಡೆದರೆ ಅರಸೀಕೆರೆ ಬರುತ್ತೆ. ತಡ ಮಾಡಿದರೆ ಅಪಾಯ. ಮತ್ತೆ ಬೇಗ ಬೇಗ ಹೆಜ್ಜೆ ಹಾಕಿ ಅರಸೀಕೆರೆ ಮುಟ್ಟಿ ಸ್ಟೇಷನ್ನಿನಲ್ಲಿ ವಿಚಾರಿಸಿದರು. ಹುಬ್ಬಳ್ಳಿಯ ಕಡೆಗೆ ಹೋಗುವ ಒಂದು ರೈಲು ಬೆಳಕು ಹರಿದ ಮೇಲೆ ಹೊರಡುತ್ತದೆಂದು ತಿಳಿಯಿತು. ಧೈರ್ಯವಾಗಿ ಸ್ಟೇಷನ್ನಿನಲ್ಲಿಯೇ ಕಾದಿದ್ದು ಬೆಳಗ್ಗೆ ಆ ಗಾಡಿಯಲ್ಲಿ ಹೊರಟೂಹೋದರು. ಸಂಸ್ಥಾನದ ಕೊನೆಯ ಗಡಿ ಹರಿಹರ ದಾಟಿ ಬಿಟ್ಟರೆ ಕುಂಪಣೀ ಸರ್ಕಾರ. ಈ ನನ್ ಮಕ್ಳು ಆಮ್ಯಾಲೆ ನನ್ ತಾವ ಏನೂ ಕಿತ್ಕಳೂ ಹಾಗಿಲ್ಲ – ಎಂಬ ಧೈರ್ಯ ಇದ್ದೇ ಇತ್ತು.

– ೮ –

ಎಂಟು ತಿಂಗಳು ಒಂದೇಸಮನೆ ಔಷಧಿ ಉಪಚಾರಗಳು ನಡೆದರೂ ಕಲ್ಲೇಶನ ಎಡಗೈ ಸ್ವಾಧೀನಕ್ಕೆ ಬರಲಿಲ್ಲ. ಕೈನಡುಕ ಸ್ಪಷ್ಟವಾಗಿ ಕಾಣುತ್ತಿರಲಿಲ್ಲವಾದರೂ ಎಡಗೈಯಲ್ಲಿ ಏನಾದರೂ ಬಿಗಿಯಾಗಿ ಹಿಡಿದು ನಿಭಾಯಿಸಲು ಆಗುತ್ತಿರಲಿಲ್ಲ. ಬಲಗೈ ಒಂದನ್ನೇ ಉಪಯೋಗಿಸಿ ಸೈಕಲ್ ಹಿಡಿಯಲೂ ಸಾಧ್ಯವಾಗುತ್ತಿರಲಿಲ್ಲ. ಅಂತೂ ಮತ್ತೆ ಪೋಲೀಸ್ ಕಾನಿಸ್ಟೇಬಲಾಗಿ ಮುಂದುವರೆಯುವಂತಿರಲಿಲ್ಲ. ಸಮರ್ಪಕ ದೇಹಾದಾರ್ಢ್ಯ ಇಲ್ಲವೆಂದು ಅವನನ್ನು ಕೆಲಸದಿಂದ ತೆಗೆಯಲಾಯಿತು. ಪೋಲೀಸ್ ಖಾತೆಯಲ್ಲಿ ಕನಿಷ್ಠ ಮಟ್ಟದ ಕೆಲಸವಾದ ಕಾನಿಸ್ಟೇಬಲ್ ಆಗಿದ್ದರೂ ಅವನು ಅದುವರೆಗೆ ಸರ್ಕಾರೀ ನೌಕರನ ದರ್ಪ ದೌಲತ್ತುಗಳನ್ನು ಮಾಡುತ್ತಿದ್ದ. ಈಗ ಅದು ಹೋಯಿತು. ಸರಿಯಾಗಿ ನೋಡಿಕೊಂಡರೆ ಜೀವನಕ್ಕೆ ಯೋಚನೆ ಇಲ್ಲದಷ್ಟು ಗದ್ದೆ ತೋಟ ಹೊಲ ಮನೆಗಳು ಊರಿನಲ್ಲಿವೆ. ಅವನು ಅದಕ್ಕೆ ಯೋಚಿಸಲಿಲ್ಲ.

ಈ ನಡುವೆ ನರಸೀಪುರದ ಕೇಸು ತನ್ನ ತಂದೆಯ ಪರ ಆಗಿ, ಆಮೇಲೆ ಶ್ಯಾಮಣ್ಣನನ್ನು ಹಿಡಿದು ಜ್ಞಾನ ತಪ್ಪಿ ಬಾಯಲ್ಲಿ ರಕ್ತ ಬರುವಂತೆ ಹೊಡೆದು ತಾವು ತಲೆ ತಪ್ಪಿಸಿಕೊಂಡು ಹೋಗಿರುವುದು ಅವನಿಗೆ ತಿಳಿಯಿತು. ವಾಸ್ತವಾಗಿ ಶ್ಯಾಮಣ್ಣ ಸತ್ತಿರಲಿಲ್ಲ. ಬೂಟೀನ ಏಟು ಬಾಯಮೇಲೆ ಬಿದ್ದ ರಭಸಕ್ಕೆ ಮುಂದಿನ ಎರಡು ಹಲ್ಲು ಮುರಿದು ರಕ್ತ ಸುರಿದಿತ್ತು; ಹಾಗೆಯೇ ಪ್ರಜ್ಞೆ ತಪ್ಪಿಹೋಗಿತ್ತು. ಜಡ್ಜಿಗಳು ಅಲ್ಲಿಯೇ ನಿಂತು ಡಾಕ್ಟರನ್ನು ಕರೆಸಿದರು. ಡಾಕ್ಟರು ಬರುವ ಮುನ್ನವೇ ಅವನಿಗೆ ಜ್ಞುನ ಬಂದಿತ್ತು. ಎರಡನೇ ಬಾರಿ ಕಂಠೀಜೋಯಿಸರ ಮೇಲೆ ಕೇಸು ಹಾಕಲು ಅವನೇ ಒಪ್ಪಲಿಲ್ಲ. ಕೇಸು ಹಾಕಿ ಅವರಿಗೆ ಜುಲ್ಮಾನೆ ಹಾಕಿಸಬಹುದು; ಅಥವಾ ಜೈಲು ಮಾಡಿಸಬಹುದು. ಆದರೆ ಜೈಲಿನಿಂದ ಬಂದ ಮೇಲೆ ಅವರು ಊರಿನಲ್ಲಿ ರಾತ್ರಿಯ ಹೊತ್ತು ತನ್ನ ಮನೆಗೆ ಹೊರಗಿನಿಂದ ಬೀಗ ಹಾಕಿ ಮೇಲಿನಿಂದ ಸೀಮೆ ಎಣ್ಣೆ ಸುರಿದು ಹೊತ್ತಿಸಿದರೆ ಕಾಯುವವರಾರು? – ಎಂಬ ಯೋಚನೆ ಬಂದು ಸುಮ್ಮನಾಗಿಬಿಟ್ಟ.

ಕಂಠೀಜೋಯಿಸರ ಕುದುರೆ ಮನೆಯನ್ನು ಮುಟ್ಟಿತು. ಅಕ್ಕಮ್ಮ ಹೊನನನ್ನು ಕರೆಸಿ ಕಟ್ಟಿ ಹಾಕಿಸಿದಳು. ಮಗ ಎಲ್ಲಿಗೆ ಹೋದ, ಯಾಕೆ ಹೋದ ಎಂಬುದು ಅವಳಿಗಾಗಲಿ ಕಲ್ಲೇಶನಿಗಾಗಲಿ ತಿಳಿಯಲಿಲ್ಲ. ಈ ನಡುವೆ ಕಲ್ಲೇಶ ಊರಿಗೆ ಬಂದು ತನ್ನ ಎಡತೋಳಿಗೆ ಉಡದ ತುಪ್ಪದ ಔಷಧಿ ಪ್ರಾರಂಭಿಸಿದ. ಕಂಠೀಜೋಯಿಸರ ವಿಷಯವಾಗಿ ಅವನು ಸಹ ಏನೂ ಹೇಳಲು ಅಸಮರ್ಥನಾದ.
ಅಷ್ಟರಲ್ಲಿ ಕಲ್ಲೇಶನ ಹೆಂಡತಿ ಕಮಲು ಮೈನೆರೆದಳು. ಇವರು ಆರು ತಿಂಗಳು ಕಾದರೂ ಕಂಠೀಜೋಯಿಸರ ಸುಳಿವು ಹತ್ತಲಿಲ್ಲ. ‘ಅವನನ್ನು ಕಾಯೂದು ಬ್ಯಾಡ. ಪ್ರಸ್ತ ಮಾಡ್ಕಂಡು ಹುಡುಗೀನ ಕರ್ಕಂಡ್ಬರ್ಬೇಕು. ಇನ್ ಸುಮ್ನಿರೋದು ಚನ್ನಲ್ಲ’ – ಎಂದು ಅಕ್ಕಮ್ಮ ಹೇಳಿದಳು. ದಿನ ನಿಶ್ಚಯವಾಯಿತು. ಕಲ್ಲೇಶ ರಾಮಸಂದ್ರಕ್ಕೆ ಹೋಗಿ ತಂಗಿ, ತಂಗಿಯ ಮಗು, ಮತ್ತು ಭಾವನನ್ನು ಕರೆದುಕೊಂಡು ಬಂದ. ಅಕ್ಕಮ್ಮನೂ ಜೊತೆಗೆ ಸೇರಿ ಗಾಡಿ ಹೊಡೆಸಿಕೊಂಡು ಹಾಸನಕ್ಕೆ ಹೋದರು.

ಬೇರೆ ಮನೆಗೆ ಬಿಟ್ಟಾಗ ಕಮಲು ಗಂಡನಿಗೆ ಅವಕಾಶವನ್ನೇ ಕೊಡಲಿಲ್ಲ. ಮೊಂಡು ಹಿಡಿದು ಮೈ ಮುದುಡಿಕೊಂಡು ರಾತ್ರಿಯನ್ನು ಕಳೆದಳು. ಕಲ್ಲೇಶ ಹೆಣ್ಣನ್ನೇ ಕಾಣದ ಗಂಡಲ್ಲ; ಯಾವ ತಿಳಿವಳಿಕೆಯೂ ಇಲ್ಲದವನಲ್ಲ. ಏಳು ತಿಂಗಳ ಕಾಲ ಅವರ ಮನೆಯಲ್ಲೇ ಇದ್ದುದರಿಂದ ಅವಳೊಡನೆ ಪರಿಚಯವೂ ಇತ್ತು. ಆದರೆ ಈಗ ಪರಿಪರಿಯಾಗಿ ಮಾತನಾಡಿಸಿ ಒಲಿಸಿದರೂ ಅವಳು ಮಣಿಯಲಿಲ್ಲ; ಮಾತೂ ಆಡಲಿಲ್ಲ. ಮುಂದಿನ ರಾತ್ರಿ ಮರಿಪ್ರಸ್ತಕ್ಕೆ ಬಿಟ್ಟಾಗ ಬಾಯಿಬಿಟ್ಟಳು: ‘ಆ ಹಾಳು ಹಳ್ಳಿಗೆ ಬಂದಿರೂಕ್ಕೆ ನನ್ನ ಕೈಲಿ ಆಗುಲ್ಲ.’
ಕಲ್ಲೇಶನಿಗೆ ಅವಳ ಒಳಗು ತಕ್ಷಣ ಹೊಳೆಯಿತು. ಆದರೆ ಅವನು ಏನೂ ಮಾಡುವಂತಿರಲಿಲ್ಲ. ರಮಿಸಿ ಪಿಸುಗುಟ್ಟಿದ: ‘ಹಳ್ಳಿಯಾದ್ರೆ ಏನಂತೆ? ಎರಡು ಹಸು ಕರೆಯುತ್ತೆ. ಈ ಊರಿನ ಹಾಗೆ ಹಾಲು ತುಪ್ಪಕ್ಕೆ ಕಾರ್ಪಣ್ಯವಿಲ್ಲ. ಕಾಳು ಕಡ್ಡಿ ಬತ್ತ ಭರಣ ಯಲ್ಲಾ ಬೇಕಾದಷ್ಟು ಬೆಳೆಯುತ್ತೆ. ಹಳ್ಳೀ ದಾನದಲ್ಲಿ ಪ್ರತಿಯೊಂದೂ ಬರುತ್ತೆ.’
‘ನಂಗ್ ಹಳ್ಳೇಲಿರುಕ್ ಆಗುಲ್ಲ.’
‘ನನೂ ಸರ್ಕಾರೀ ಕೆಲಸದಲ್ಲೇ ಇದ್ನಲ್ಲ. ಅದೃಷ್ಟ ಹೀಗಾಯ್ತು ಏನ್ಮಾಡುಕ್ಯಾಗುತ್ತೆ? ಊರಲ್ಲಿ ಹೊಲ ಮನೆ ಇದ್ಯಲ. ಸುಖವಾಗಿರಾಣ.’
‘ಇನ್ಯಾವ್ದಾದ್ರೂ ಸರ್ಕಾರಿ ಕೆಲ್ಸ ಮಾಡ್ಕಳಿ’ – ಗೋಡೆಯ ಕಡೆಗೆ ತಿರುಗಿಕೊಂಡೇ ಅವಳು ಪಿಟಪಿಟನೆ ಮಾತನಾಡುತ್ತಿದ್ದಳು.
‘ನೋಡಾಣ. ಮೆಡಿಕಲಿ ಆನ್‌ಫಿಟ್ ಅಂತ ಒಂದು ಇಲಾಖೆಯೋರು ಮಾಡಿರುವಾಗ ಇನ್ ಬೇರೆ ಇಲಾಖೆಯೋರು ಸೇರಿಸ್ಕತ್ತಾರೋ ಇಲ್ಲೋ?’
‘ನಂಗದೆಲ್ಲ ಗೊತ್ತಿಲ್ಲ’ – ಎಂದಳೇ ವಿನಾ ಅವಳು ಅವಕಾಶ ಕೊಡಲಿಲ್ಲ. ಕೆನ್ನೆ ಊದುವ ಹಾಗೆ ಬಾರಿಸಿಬಿಡಬೇಕೆಂದು ಅವನ ಬಲಗೈ ಚಲಿಸಿತು. ಆದರೆ ಹೊರಗೆ ಮಾವನ ಕಡೆಯ ನೆಂಟರಿಷ್ಟರೆಲ್ಲ ಇದಾರೆ. ತನ್ನ ಅಜ್ಜಿ, ತಂಗಿ, ಭಾವ ಇದಾರೆ. ಈ ಸಮಯದಲ್ಲಿ ಗದ್ದಲವಾಗುವುದು ತರವಲ್ಲವೆಂದು ಸುಮ್ಮನಾದ.
ಮನಸ್ಸಿನಲ್ಲಿ ಇನ್ನೂ ಒಂದು ಅಂಶ ತೂಗುತ್ತಿತ್ತು. ತಾನು ಕಾಹಿಲೆ ಮಲಗಿದ್ದಾಗ ಇಷ್ಟು ದಿವಸ ಇವರು ಮನೆಯಲ್ಲಿಟ್ಟುಕೊಂಡು ಸೇವೆ ಮಾಡಿದ್ದರು. ಅದರಲ್ಲಿಯೂ ಮಾವನವರು ಅಳಿಯನಿಗಾಗಿ, ಅವನ ಎಡಗೈ ಸ್ವಾಧೀನಕ್ಕೆ ಬರುವಂತೆ ಮಾಡಲು, ಬಹಳ ಮುತುವರ್ಜಿ ವಹಿಸಿದ್ದರು. ಅವರ ಮನಸ್ಸನ್ನು ನೋಯಿಸುವುದು ಅವನಿಗೆ ಸ್ವಲ್ಪ ಕಷ್ಟವಾಯಿತು. ಸುಮ್ಮನಾದ.
ಮರುದಿನ ಎಲ್ಲರೂ ಪಯಣದ ಸಿದ್ಧತೆಯಲ್ಲಿರುವಾಗ ಕಮಲು ತಾಯಿಯ ಕೈಲಿ ಹೇಳಿದಳು: ‘ನಾನು ಅಲ್ಲಿಗ್ ಹೋಗುಲ್ಲ.’
‘ಯಾರಾರು ನಕ್ಕಾರು ಸುಮ್ನಿರು. ಹಾಗೆಲ್ಲ ಅನ್‌ಬಾರ್ದು.’
ಅದಕ್ಕಿಂತ ಹೆಚ್ಚಾಗಿ ಅವರು ಏನೂ ಹೇಳಲಿಲ್ಲ. ತೌರನ್ನು ಬಿಟ್ಟು ಹೋಗುವಾಗ ಹೆಣ್ಣು ಮಕ್ಕಳು ಹೀಗೆಲ್ಲ ಅನ್ನುವುದು ಅಸಹಜವಲ್ಲ ಎಂದು ಸುಮ್ಮನಾದರು. ಅವಳ ತಂದೆ ತಾಯಿ, ತಮ್ಮಂದಿರು, ತಂಗಿಯರು, ಎಲ್ಲರೂ ಗಾಡಿಯಲ್ಲಿ ನಾಗಲಾಪುರಕ್ಕೆ ಬಂದರು. ನಾಲ್ಕು ದಿನದ ನಂತರ ಔತಣ ಉಡುಗೊರೆ ಮಾಡಿಸಿಕೊಂಡು ಹಿಂದಿರುಗಿದರು. ಅದೇ ದಿನ ನಂಜುವೂ ಗಂಡ ಮಗುವಿನೊಡನೆ ತನ್ನ ಊರಿಗೆ ಹೋದಳು.
ಆ ದಿನ ರಾತ್ರಿ ಕಮಲು ಮತ್ತೆ ಅದೇ ಮಾತನಾಡಿದಳು. ಕಲ್ಲೇಶ ಹೇಳಿದ: ‘ನೀನೇ ನೋಡಿದಿಯಲ. ಈ ಮನೇಲಿ ಯಾವುದಕ್ಕೆ ಕಮ್ಮಿ ಇದೆ? ಇಷ್ಟು ಹಾಲು ಮೊಸರು, ತುಪ್ಪ, ಕಾಯಿ ಕಡ್ಡಿ, ಹಾಸನದಲ್ಲೆಲ್ಲಿದೆ?’
‘ನಂಗದೆಲ್ಲ ಗೊತ್ತಿಲ್ಲ’ – ಎಂದು ಅವಳು ಗೋಡೆಯ ಕಡೆಗೆ ತಿರುಗಿ ಮಂಡಿ ಮುದುರಿಕೊಂಡಳು. ಅತ್ತೆ ಮಾವ ಇಲ್ಲಿರುವ ತನಕ ಕಲ್ಲೇಶ ತಾಳ್ಮೆ ಉಳಿಸಿಕೊಂಡಿದ್ದ. ಈಗ ತಡೆಯಲಿಲ್ಲ. ಎತ್ತಿ ಕಪಾಳಕ್ಕೆ ಹೊಡೆದ. ಅವಳು ಬಿಕ್ಕಿ ಅತ್ತಳು. ಪೋಲೀಸ್ ಇಲಾಖೆಯಲ್ಲಿದ್ದ ಅವನು ಎತ್ತಿ ಎತ್ತಿ ಬೆನ್ನಿಗೆ ಬಾರಿಸಿದ. ಹೊರಗೆ ಮಲಗಿದ್ದ ಅಕ್ಕಮ್ಮ – ‘ಇದೇನೋ ಇದು?’ ಎಂದು ಕೇಳಿದಳು.
‘ಪುಲ್ಲುಲ್ಲಿ ಮುಂಡೆ ತಂದು, ನಾನೇನು ಯಾವತ್ತೂ ಕಂಡೇ ಇಲ್ಲ ಅನ್ನೂ ಹಂಗ್ ಆಡ್ತಾಳೆ’ – ಎಂದು ಅವನು ತನ್ನ ಹಾಸಿಗೆಯನ್ನು ತಂದು ಕೋಣೆಯಿಂದ ಹೊರಗೆ ಹಾಕಿಕೊಂಡು ಮಲಗಿದ. ಅಕ್ಕಮ್ಮನಿಗೆ ವಿಷಯ ಹೇಳಿದಾಗ ಅವಳೂ ಕೋಣೆಯ ಒಳಗೆ ಹೋಗಿ ಸಮಾಧಾನ ಹೇಳಲು ಪ್ರಾರಂಭಿಸಿದಳು: ‘ಅದ್ಯಾಕ್ ಹಾಗಂತಿಯೇ? ಇಲ್ಲಿ ನಿಂಗೇನ್ ಕಮ್ಮಿಯಾಗಿರೂದು? ತಿನ್ನೂಕಿಲ್ವೆ, ಉಣ್ಣೂಕಿಲ್ವೆ? ಹಾಗೆಲ್ಲ ಆಡ್‌ಬಾರ್ದು. ನಾವೇನ್ ನಿಂಗೆ ಕಷ್ಟ ಕೊಡುಲ್ಲ. ಸುಖವಾಗಿರು.’
‘ನಂಗ್ ಈ ಸುಡುಗಾಡು ಹಳ್ಳಿ ಆಗುಲ್ಲ’ – ಬಿಕ್ಕಳಿಸಿ ಅವಳು ಅಳುತ್ತ ಅವಳು ಹೇಳಿದಳು.
ಇದಕ್ಕೆ ಸಮಾಧಾನ ಹೇಳಲು ಅಕ್ಕಮ್ಮನಿಗೆ ತಿಳಿಯಲಿಲ್ಲ. ಈ ಪಟ್ಟಣದ ಹೆಣ್ಣನ್ನು ತರುವಾಗಲೇ ಅವಳಿಗೆ ಅನುಮಾವಿತ್ತು. ಆದರೆ ಯಾರನ್ನೂ ಹೇಳದೆ ಕೇಳದೆ ಮಗ ಕಂಟಿ ಗೊತ್ತು ಮಾಡಿದ್ದ. ಈಗ ಆಗುವುದು ಆಯಿತು. ಹೇಗಾದರೂ ಹೊಂದಿಕೊಳ್ಳಬೇಕು ಎಂಬುದು ಮುದುಕಿಯ ಮನಸ್ಸು.
ಹೊರಗೆ ಇದ್ದ ಕಲ್ಲೇಶ ಹೇಳಿದ: ‘ಇದು ಶಿಂಡಾಡುತ್ತೆ ಅಂತ ನೀನು ತುರಿಸುಕ್ ಹೋಗ್‌ಬ್ಯಾಡ. ಸುಮ್ಮಗೆ ಬಾ ಇಲ್ಲಿ.’
ತನಗೆ ತಿಳಿದ ಮಾತನ್ನು ಹೇಳಿ ಅಕ್ಕಮ್ಮ ಬಂದು ಮಲಗಿದಳು. ಕಲ್ಲೇಶ ಸ್ವಲ್ಪ ಹೊತ್ತಿನ ಮೇಲೆ ನಿದ್ರೆ ಮಾಡಿದ. ಬೆಳಗ್ಗೆ ಎದ್ದು ಸ್ನಾನ ಮಾಡಿ ತಿಂಡಿ ತಿಂದು, ಅಪ್ಪನ ಬಿಳಿ ಕುದುರೆಯನ್ನೇರಿ ಶ್ರವಣಬೆಳಗೊಳಕ್ಕೆ ಹೋದ. ಅವನ ಹಳೆಯ ಪರಿಚಿತಳು ಅಲ್ಲೇ ಹತ್ತಿರದ ಹಳ್ಳಿಯಲ್ಲಿದಳು.

ಅಧ್ಯಾಯ ೫
– ೧ –

ಸಾತು ಬಸುರಿಯಾಗಿ ಐದನೆಯ ತಿಂಗಳಿನಲ್ಲಿ ಅವಳ ತಂದೆ ಬಂದು ಬಾಣಂತಿತನಕ್ಕೆ ಕರೆದುಕೊಂಡು ಹೋದರು. ನಂಜಮ್ಮ ಮತ್ತೆ ಬಸುರಿಯಾದಳು.

ಶ್ಯಾನುಭೋಗಿಕೆಯ ಲೆಕ್ಕ ಬರೆಯುತ್ತಿದ್ದ ತಿಮ್ಲಾಪುರದ ದ್ಯಾವರಸಯ್ಯನವರಿಗೆ ಅರವತ್ತಕ್ಕೂ ಮೀರಿದ ವಯಸ್ಸಾಗಿತ್ತು. ತಮ್ಮ ಫಿರ್ಕಾದ ಲೆಕ್ಕ ಪತ್ರ ಬರೆಯಬೇಕಾಗಿದ್ದ ಅವರಿಗೆ ಚೆನ್ನಿಗರಾಯದನ್ನೂ ಗೇಯುವುದು ಕಷ್ಟವಾಗುತ್ತಿತ್ತು. ಇವರು ಕೊಡುತ್ತಿದ್ದ ಐವತ್ತು ರೂಪಾಯಿಯೇ ಅಲ್ಲದೆ ಅವರಿಗೆ ಈ ಮನೆಯ ಮೇಲೆ ಒಂದು ವಿಧವಾದ ವಿಶ್ವಾಸ ಹುಟ್ಟಿತ್ತು. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಮೂರ್ಖರಾದ ಈ ಸಂಸಾರದಲ್ಲಿ ಸೊಸೆ ನಂಜಮ್ಮನ ಗುಣ ಸ್ವಭಾವಗಳನ್ನು ಕಂಡರೆ ಅವರಿಗೆ ಗೌರವವಿತ್ತು.

ಒಂದು ದಿನ ಮನೆಯಲ್ಲಿ ನಂಜಮ್ಮನ ವಿನಾ ಬೇರೆಯವರು ಇರಲಿಲ್ಲ. ಚೆನ್ನಿಗರಾಯರು ಎದುರಿನ ದೇವಸ್ಥಾನಕ್ಕೆ ಹೋಗಿ ಹೊಗೆಸೊಪ್ಪು ನವಣಿಸುತ್ತಾ ಮಾದೇವಯ್ಯನವರ ಭಜನೆ ಕೇಳುತ್ತಿದ್ದರು. ಅಪ್ಪಣ್ಣಯ್ಯ ಬೆಸ್ತರಕೇರಿಯ ಮಾಟನ ಮನೆಯಲ್ಲಿ ಕೂತು ಬೀಡಿ ಸೇದುತ್ತಿದ್ದ. ಗಂಗಮ್ಮ ಗಾಣಿಗರ ಈರಕ್ಕನ ಮನೆಯ ಮುಂದೆ ಹುಚ್ಚೆಳ್ಳನ್ನು ಗಾಣ ಆಡಿಸುತ್ತಿದ್ದಳು.
ದ್ಯಾವರಸಯ್ಯನವರು ನಂಜಮ್ಮನಿಗೆ ಹೇಳಿದರು: ‘ನೋಡಮ್ಮ, ನಂಗೂ ವಯಸ್ಸಾಯ್ರು. ಇನ್ನೆಲ್ಲ ನಾನು ಒಂದೆರಡು ವರ್ಷ ಲೆಕ್ಕ ಬರೆದುಕೊಟ್ಟೇನು. ನಮ್ಮ ಚೆನ್ನಿಗರಾಯರು ಸ್ವತಃ ಲೆಕ್ಕ ಕಲಿಯಲಿಲ್ಲ. ಮುಂದೇನು ಗತಿ?’
‘ನೀವೇ ಅವರಿಗೆ ಚನ್ನಾಗಿ ಬಿಡಿಸಿ ಬಿಡಿಸಿ ಹೇಳಿಕೊಡಿ ಮಾವಯ್ಯ.’
‘ಈ ಲೆಕ್ಕದಲ್ಲಿ ಏನಿದೆ ಅಂತಲಮ್ಮ ಮಣ್ಣು? ಹೊನ್ನವಳ್ಳಿ ಸೀತಾರಾಮಯ್‌ನೋರ್ ಹತ್ರ ಮೂರು ವರ್ಷ ಇದ್ದೂ ಇವರು ಕಲೀಲಿಲ್ಲ ಅಂದ್ರೆ ಇವ್‌ರಿಗೆ ಬರುಲ್ಲ ಅಂತಲೇ ಇಷ್ಟು ದಿನ ನಾನು ಇಲ್ಲಿದ್ದು ಬರೀತಿದೀನಲಾ, ಎಲ್ಲಾನೂ ನನ್ನ ಮೇಲೆ ಹಾಕಿ ಅವರು ಮಲಿಕ್ಕಂಡು ನಿದ್ದೆ ಮಾಡ್ತಾರೆಯೇ ಹೊರತು ನನ್ನ ಜೊತೆಗೆ ಕೂತ್ಕಂಡು ಬರೀತಾರೆಯೇ ಬರೀತಾ ಬರೀತಾ ತಾನೇ ತಿಳಿಯೂದು? ಮಧ್ಯ ಮಧ್ಯ ನನ್ನ ಕೇಳಿದ್ರೆ ಹೇಳಿಕೊಡ್ತೀನಿ. ತಮ್ಮ ಕಸುಬು ತಾವು ಮಾಡುಕ್ಕಾಗುಲ್ವೆ? ಎಷ್ಟು ದಿನ ಅಂತ ದುಡ್ದು ಕೊಟ್ಟು ಬರಸೋದು?’
ನಂಜಮ್ಮನಿಗೆ ಈ ವಿಚಾರಗಳು ಎರಡು ವರ್ಷ ಮೊದಲಿನಿಂದಲೇ ಮನಸ್ಸಿನಲ್ಲಿ ಬಂದಿದ್ದುವು. ಆದರೆ ಅವಳು ಏನು ಮಾಡಿಯಾಳು?: ‘ಮಾವಯ್ಯ, ನನ್ನ ಅದೃಷ್ಟ ನಿಮಗೇ ಗೊತ್ತಿದೆ. ಏನ್ ಮಾಡ್ಬೇಕು ಅಂತ ನೀವೇ ಹೇಳಿ.’
‘ಅಮ್ಮಾ ನಿನಗೆ ಇಷ್ಟು ಚನ್ನಾಗಿ ಓದುಕ್ಕೆ ಬರಿಯುಕ್ಕೆ ಬರುತ್ತೆ. ನಿನ್ನ ಹಾಡಿನ ಪುಸ್ತಕ ನಾನು ನೋಡಿದೀನಿ. ಒಳ್ಳೇ ಕಡ್ಲೆಕಾಳಿನ ಹಾಗೆ ದುಂಡಗೆ ಅಕ್ಷರ ಬರೀತೀಯಾ. ನಾನು ಹೇಳಿಕೊಡ್ತೀನಿ. ನೀನು ಎಲ್ಲಾನೂ ಕಲ್ತುಕೊ. ಮನೇಲಿ ಕೂತು ಎಲ್ಲಾನೂ ಬರಕೊಡು. ಚೆನ್ನಿಗರಾಯರು ಕೋಟು ಪೇಟ ಕಟ್ಟಿಕೊಂಡು ಹೋಗಿ ಜಮಾಬಂದಿ ಮಾಡ್ಕಂಡು ಬರ್ಲಿ ಇಲ್ದೆ ಹೋದ್ರೆ ಇದು ಊರ್ಜಿತವಾಗುಲ್ಲ.’
‘ಹೆಂಗಸ್ರು ಸರ್ಕಾರಿ ಲೆಕ್ಕ ಬರೀಭೌದೆ?’
ಈ ಅನುಮಾನಕ್ಕೆ ಸಮಾಧಾನವು ದ್ಯಾವರಸಯ್ಯನವರಿಗೂ ತಕ್ಷಣ ತಿಳಿಯಲಿಲ್ಲ. ಸರ್ಕಾರದ ಕಾನೂನು ಈ ವಿಷಯದಲ್ಲಿ ಏನಿದೆಯೋ ಅವರಿಗೂ ಗೊತ್ತಿಲ್ಲ. ಆದರೂ ಹೇಳಿದರು: ‘ನೋಡು, ನೀನೇನು ಶ್ಯಾನುಭೋಗಿಕೆ ಚಾರ್ಜು ತಗಂಡು ನೋಡುಲ್ಲ. ಮನೇಲಿ ಕೂತ್ಕಂಡು ಒಳಗೇ ಲೆಕ್ಕ ಬರೆಯೋದು. ಗಂಡಸು ಬರೆಯೋದೋ ಹೆಂಗಸು ಬರಿಯೋದೋ ಅಂತ ಮೇಲಿನೋರಿಗೆ ಏನು ಗೊತ್ತಾಗುತ್ತೆ? ನೀನು ಸುಮ್ಮನೆ ಕಲುತ್ಕೊ.’
ತಾವು ರೂಲು ಹಾಕುತ್ತಿದ್ದ ಪುಸ್ತಕವನ್ನು ಮುಂದೆ ಸರಿಸಿ ದ್ಯಾವರಸಯ್ಯನವರು ಹೇಳಿದರು: ‘ಎಲ್ಲಿ, ಇದಕ್ಕೆ ಮೊದಲು ರೂಲು ಹಾಕು. ಇಲ್ಲಿ ನೋಡು, ರೂಲುದೊಣ್ಣೆ ಹೆಡಿಂಗಿನ ಕೆಂಪು ಗೀಟಿಗೆ ಸಮನಾಗಿ ಬರಬೇಕು. ಎಡಗೈ ಬೆರಳಿನಲ್ಲಿ ರೂಲುದೊಣ್ಣೇನ ಹಗುರವಾಗಿ ಆಡಿಸಬೇಕು. ಸ್ಟೀಲಿನಿಂದ ಶಾಯಿ ಧುಮುಕದ ಹಾಗೆ ನೋಡಿಕೋಬೇಕು. ಹಾಕು ನೋಡೋಣ.’
ನಂಜಮ್ಮ ಅವರು ಹೇಳಿದಂತೆಯೇ ಹಾಕಿದಳು. ಅವರಷ್ಟು ಬೇಗ ಬೇಗ ಆಗದಿದ್ದರೂ ಗೆರೆಗಳು ನೇರವಾಗಿ ಸರಿಯಾದ ಜಾಗದಲ್ಲಿ ಬಿದ್ದುವು. ‘ಸೊಗಸಾಗಿದೆ. ಅಭ್ಯಾಸವಾಗಲಿ. ಪುಸ್ತಕಕ್ಕೆಲ್ಲ ನೀನೇ ಹಾಕು’ – ಎಂದು ಹೇಳಿ ಅವರು ಕೆರೆಯ ಕಡೆಗೆ ಹೋದರು. ನಂಜಮ್ಮನಿಗೆ ಇದು ಹೊಸ ಅನುಭವ. ಈ ಹಿಂದೆ ಅವಳು ಹುಡುಗಿಯಾಗಿದ್ದಾಗ ತನ್ನ ಹಾಡಿನ ಪುಸ್ತಕಕ್ಕೆ ಸ್ಲೇಟಿನ ಕಟ್ಟಿನಿಂದ ರೂಲು ಹಾಕಿಕೊಂಡಿದ್ದುಂಟು. ಆದರೆ ರೂಲುದೊಣ್ಣೆಯಿಂದ, ಅದೂ ಸರ್ಕಾರಿ ಪುಸ್ತಕಕ್ಕೆ ಹಾಕುವುದೆಂದರೆ ಏನೋ ಒಂದು ತೆರನಾದ ಸಂಭ್ರಮವಾಗುತ್ತಿತ್ತು. ಅಲ್ಲದೆ ಮೊದಲನೆಯ ಸಲಕ್ಕೇ ತಪ್ಪಿಲ್ಲದೆ ಬಂದುಬಿಟ್ಟಿತು. ‘ಶ್ಯಾನುಭೋಗಿಕೆ ಅಂದ್ರೆ ಏನು, ಸರಿಯಾಗಿ ರೂಲು ಹಾಕಬೇಕಾದರೇ ಆರು ವರ್ಷವಾದರೂ ರೂಲುದೊಣ್ಣೇಲಿ ಕೈಗೆಣ್ಣು ಊದೂತಂಕ ಏಟು ತಿನ್ನಬೇಕು. ಲೆಕ್ಕವೇನು ಪುಕ್ಸಟ್ಟೆ ಬರುಲ್ಲ’ – ಎಂದು ಶ್ಯಾನುಭೋಗರುಗಳು ಹೇಳುವುದನ್ನು ಕೇಳಿದ್ದಳು.
ಅವಳು ರೂಲು ಹಾಕುತ್ತಿರುವಾಗ ಅಪ್ಪಣ್ಣಯ್ಯ ಮನೆಗೆ ಬಂದ. ಅತ್ತಿಗೆ ಮಾಡೂತ್ತಿರುವ ಕೆಲಸವನ್ನು ನೋಡಿ ಅವನಿಗೆ ಕಕ್ಕಾಬಿಕ್ಕಿಯಾಯಿತು. ಕೋಪ ಬಂದುಬಿಟ್ಟಿತು. ನೇರವಾಗಿ ಗಾಣಿಗರ ಕೇರಿಗೆ ಹೋಗಿ ಅಮ್ಮನ ಕೈಲಿ ಹೇಳಿದ: ‘ನೋಡಮ್ಮ ಆ ಅವಳು ಲೆಕ್ಕದ ಬುಕ್ಕು ಹಾಳು ಮಾಡ್ತಾ ಇದಾಳೆ.’
‘ಯಾವಳೋ?’
‘ನಿನ್ನ ದ್ವಡ್ಡ ಸೊಸೆ. ಬುಕ್ಕಿಗೆ ರೂಲು ಹಾಕ್ತಿದಾಳೆ.’
‘ಇದೇನೋ ಇವಳ ಮನ್‌ತನ ಹಾಳಾಗ, ಕತ್ತೆಮುಂಡೆ ತಂದು’ – ಎನ್ನುತ್ತಾ ಗಂಗಮ್ಮ ಒಂದೇ ಉಸುರಿಗೆ ಓಡಿಬಂದಳು. ಅವಳು ಬರುವ ಹೊತ್ತಿಗೆ ದ್ಯಾವರಸಯ್ಯನವರು ಕೆರೆಯ ಕಡೆಯಿಂದ ಹಿಂತಿರುಗಿ ಬಂದು ಜಗುಲಿಯ ಮೇಲೆ ಕೂತು ನೆಶ್ಯ ತೀಡುತ್ತಿದ್ದರು. ಸೊಸೆ ಒಳಗೆ ರೂಲು ಹಾಕುತ್ತಿದ್ದಳು. ‘ನಿಂಗೇನ್ ಗ್ಯಾನ ನ್ಯಟ್ಟಗಿಲ್ವೇನೆ ಭೋಸುಡಿ., ಏನ್ಮಾಡ್‌ತಿದೀಯಾ?’ – ಎಂಬ ಅವಳ ಮಾತನ್ನು ಕೇಳಿ ಚ್ಯಾವರಸಯ್ಯನವರೇ ಒಳಗೆ ಬಂದು ಕೇಳಿದರು: ‘ಯಾಕೆ, ಏನಾಯ್ತು?’
‘ಇವ್ಳು ಲೆಕ್ಕದ ಪುಸ್ತಕ ಮುಟ್ಟಿ ಹೀಗ್ ಮಾಡ್‌ಭೌದೆ?’
‘ಇಲ್ಲಮ್ಮ, ರೂಲು ಹಾಕು ಅಂತ ನಾನೇ ಹೇಳ್ದೆ. ನಂಗೆ ಮೈಲಿ ಹುಶಾರಿಲ್ಲ. ಲೆಕ್ಕ ಟೈಮಿಗೆ ಸರಿಯಾಗಿ ಮುಗೀಬೇಕು. ಚೆನ್ನಿಗರಾಯರಂತೂ ಏನೂ ಮಾಡೂದಿಲ್ಲ.’
‘ಹೆಂಗಸು ಮುಂಡೆ ಕೈಲಿ ಲೆಕ್ಕ ಮುಟ್ಟುಸ್ತಾರೇನ್ರೀ?’
‘ಕೆಟ್ಟ ಮಾತು ಯಾಕಮ್ಮಾ ಆಡ್ತೀರಾ ಮುಟ್ಟಿಸಿದ್ರೆ ಏನೂ ಆಗುಲ್ಲ.’
‘ನಮ್ಮ ಯಜಮಾನ್ರು ಮಾಡ್ತಿದ್ದ ಶ್ಯಾನುಭೋಕಿ. ಅದರ ಲೆಕ್ಕ ಇವ್‌ಳು ಮುಟ್ಭೌದೇನ್ರೀ?’
‘ನಿಮ್ಮ ಯಜಮಾನ್ರ ಸೊಸೆಯೇ ಅಲ್ವೇನ್ರಮ್ಮ ಇವ್ಳು? ಬ್ಯಾರೆಯೋಳೇನಲ್ಲ. ’ – ಅಷ್ಟರಲ್ಲಿ ನಂಜಮ್ಮ ರೂಲುದೊಣ್ಣೆ ಸ್ಟೀಲುಮುಳ್ಳುಗಳನ್ನು ಅಲ್ಲಿಯೇ ಬಿಟ್ಟು ಎದ್ದು ಒಳಗೆ ಹೋಗಿಬಿಟ್ಟಿದ್ದಳು. ದ್ಯಾವರಸಯ್ಯನವರೇ ಕೂಗಿ ‘ನಂಜಮ್ಮ, ಅದ್ಯಾಕ್ ಎದ್ದುಹೋದೆ? ಬಾ ನಿನ್ನ ಕೆಲ್ಸ ನೀನು ಮಾಡು. ನಿಮ್ಮತ್ತೆಮ್‌ನೋರಿಗೆ ನಾನು ಹೇಳಿದೀನಿ’ ಎಂದರು.
ಗಂಗಮ್ಮ ದೇವಸ್ಥಾನಕ್ಕೆ ಹೋಗಿ ಮಗನನ್ನು ಕರೆದುಕೊಂಡು ಬಂದರು. ಅಷ್ಟರಲ್ಲಿ ನಂಜಮ್ಮ ಮತ್ತೆ ರೂಲು ಹಾಕುತ್ತಿದ್ದಳು. ಅವಳನ್ನು ತೋರಿಸಿ ಗಂಗಮ್ಮ ಹೇಳಿದಳು: ‘ನೋಡೋ ನಿನ್ನ ಹೆಂಡ್ತಿ ನಿನ್ನ ಸಮಕ್ಕೂ ಶ್ಯಾನುಬಾಕಿ ಮಾಡೂಕ್ ಹೊರಟಿದಾಳೆ.’
ದ್ಯಾವರಸಯ್ಯನವರು ತಾವಾಗಿಯೇ ಚೆನ್ನಿಗರಾಯರಿಗೆ ಹೇಳಿದರು: ‘ನೋಡಿ ಶ್ಯಾನುಭೋಗ್ರೇ, ನಂಗೆ ಹುಶಾರಿಲ್ಲ. ಕೂತು ರೂಲು ಹಾಕಿ ಹಾಕಿ ಬೆನ್ನುನೋವು ಬಂದಿದೆ. ಪುಸ್ತಕ ಕಟ್ಟೋದು, ರೂಲು ಹಾಕೂದು, ಎಡಗಡೆ ಲೆಕ್ಕ ಬರೆಯೋದು, ಇದೆಲ್ಲಾನೂ ಮಾಡ್ತೀನಿ ಅಂತ ನಾನು ಒಪ್ಕಂಡಿರ್‌ಲಿಲ್ಲ. ಇದನ್ನ ನೀವು ಮಾಡಿಕೊಟ್ರೇ ನಾನು ಮುಂದಿಂದು ಬರೀತೀನಿ. ನಿಮ್ಮ ಹೆಂಡ್ತಿ ಸೊಗಸಾಗಿ ರೂಲು ಹಾಕ್ತಾಳೆ. ದುಂಡಗೆ ಅಕ್ಷರ ಬರೀತಾಳೆ. ಅವಳ ಕೈಲಿ ಮಾಡ್ಸಿಸ್‌ಕೊಡುಸ್ತೀರೋ ಅಥ್ವಾ ನೀವೇ ಕೂತ್ಕಂಡ್ ಮಾಡಿ ಕೊಡ್ತೀರೋ ಹೇಳಿ. ಇಲ್ದೆ ಇದ್ರೆ ನನ್ನ ಪಾಡಿಗೆ ನಾನು ತೆಪ್ಪಗೆ ಊರಿಗೆ ಹೋಗ್ತೀನಿ.’

ಚೆನ್ನಿಗರಾಯರಿಗೆ ಈಗ ಸಂಕಟಕ್ಕೆ ಇಟ್ಟುಕೊಂಡಿತು. ಒಂ,ದು ನಿಮಿಷ ಯೋಚಿಸಿ – ‘ಈ ಮುಂಡೇದ್ರ ಕೈಲೇ ಮಾಡ್ಸಿಸ್ಕಳಿ. ನಾನು ಭಜನೆ ಕೇಳುಕ್ ಹೋಗ್ಬೇಕು’ ಎಂದು ಹೇಳಿ ಹೊರಟುಹೋದರು. ಮಗನನ್ನು ಬೈದುಕೊಳ್ಳುತ್ತಾ ಗಂಗಮ್ಮ ಗಾಣಿಗರ ಕೇರಿಗೆ ಹೋದಳು. ಇಲ್ಲಿ ಒಬ್ಬನೇ ಇರಲು ಅವಮಾನವಾಗಿ ಅಪ್ಪಣ್ಣಯ್ಯ ಮತ್ತೆ ಬೆಸ್ತರಕೇರಿಗೆ ಪಾದ ಬೆಳೆಸಿದ.
ದ್ಯಾವರಸಯ್ಯನವರು ನಂಜಮ್ಮನಿಗೆ ಹೇಳಿದರು: ‘ಅಮ್ಮಾ, ಈ ಮನೆ ಸಮಾಚಾರ ನಂಗೆ ಮೊದಲಿನಿಂದ ಗೊತ್ತು. ನಿಮ್ಮ ಮಾವ್‌ನೋರಿಗೆ ಮೊದಲ ಹೆಂಡತಿ ಸತ್ತು ಈ ಮದುವೆಯಾದಾಗ ನಲವತ್ತು ಮೀರಿತ್ತು ಅಂತ ಕಾಣುತ್ತೆ. ನಿಮ್ಮತ್ತೆ ಬುದ್ಧಿಯೇ ಹೀಗೆ. ಅವರೇನಾದ್ರೂ ಅನ್ಲಿ. ನೀನು ಶ್ರದ್ಧೆ ಇಟ್ಟು ಲೆಕ್ಕಪತ್ರ ಎಲ್ಲಾನೂ ಕಲುತ್ಕ. ಇಲ್ದೇ ಇದ್ರೆ ಸಂಸಾರ ಉದ್ಧಾರವಾಗುಲ್ಲ. ನಿಮ್ಮ ಮಾವ್‌ನೋರು ಶ್ಯಾನುಭೋಗ್ರಾಗಿದ್ದಾಗ ಹಿಂದೆ ನಮಗೆ ಒಂದು ಸಮಯದಲ್ಲಿ ಆಗಿದ್ರು. ಅದುಕ್ಕೆ ನಾನು ನನಗೆ ತಿಳಿದಿರೋ ಲೆಕ್ಕಾನೆಲ್ಲ ನಿಂಗೆ ಹೇಳಿಕೊಡ್ತೀನಿ. ನಾನು ಹೇಳ್ದಾಗೆ ಪ್ರತಿಯೊಂದನ್ನೂ ಮಾಡು.’

– ೨ –

ಇದಾದ ಮೂರು ತಿಂಗಳಿಗೆ ಸಾಲಾಖೈರಿನೆ ಲೆಕ್ಕ ಮುಗಿಸಬೇಕಾಗಿತ್ತು. ಶ್ಯಾನುಭೋಗಿಕೆಯ ಲೆಕ್ಕದಲ್ಲಿ ಇದು ತುಂಬ ಮುಖ್ಯವಾದುದು. ಇದನ್ನು ತಪ್ಪಿಲ್ಲದೆ ಬರೆದರೆ ಮುಂದಿನ ವರ್ಷದ ಲೆಕ್ಕಪತ್ರಗಳಲ್ಲಿ ತಪ್ಪಾಗುವ ಸಂಭವ ಇರುವುದಿಲ್ಲ. ‘ಅಮ್ಮಾ, ನಿನಗೆ ದೇವರು ಇಷ್ಟೊಂದು ಬುದ್ಧಿ ಕೊಟ್ಟಿದಾನೆ. ಉಳಿದೋರೆಲ್ಲ ನಾಲ್ಕು ವರ್ಷವಾದರೂ ಎಡ ಬಲ ಎರಡೂ ಅರ್ಥ ಮಾಡಿಕೊಂಡು ಬರೆಯುಲ್ಲ. ಕಷ್ಟವಾದರೂ ನಾನು ಹೇಳಿದ ಹಾಗೆ ಇದೆಲ್ಲ ಬರಿ. ನಾನು ನಿನಗೆ ಆಮೇಲೆ ಸಾಲಾಖೈರಿನ ಲೆಕ್ಕ ಹೇಳಿಕೊಡ್ತೀನಿ’-ಎಂದು, ಅವಳು ಬರೆಯಬೇಕಾದ ಲೆಕ್ಕವನ್ನು ವಹಿಸಿಕೊಟ್ಟು ದ್ಯವಾವರಸಯ್ಯನವರು ಊರಿಗೆ ಹೋದರು. ಅವರು ಬರುವ ದಿನದಲ್ಲಿ ಅವಳು ಎಲ್ಲವನ್ನೂ ಮುಗಿಸಬೇಕಾಗಿತ್ತು.

ನಂಜಮ್ಮನಿಗೆ ಈಗ ಆರು ತಿಂಗಳು ನಡೆಯುತ್ತಿದೆ. ಸಾತು ಹೆರಿಗೆಗೆ ತನ್ನ ತೌರಿಗೆ ಹೋಗಿದ್ದಾಳೆ. ಹೆರಿಗೆಯಾಗಿದೆಯೋ ಇಲ್ಲವೇ ಇವರಿಗೆ ತಿಳಿದಿಲ್ಲ. ಮನೆಯ ಕೆಲಸವನ್ನೂ ಮಾಡಿಕೊಂಡು ಬಸುರಿ ಒಂದೇಸಮನೆ ಕೂತು ಲೆಕ್ಕ ಬರೆಯಲಾರಳು. ಹೆಂಗಸಾದ ಮುಂಡೆ ಗಂಡಸಿನ ಹಾಗೆ ಲೆಕ್ಕ ಬರೆಯೋಕೆ ಕೂತ್ರೆ ನಾನ್ಯಾಕೆ ಕೆಲಸ ಮಾಡಬೇಕು?-ಎಂದು ಗಂಗಮ್ಮ ಅಡಿಗೆಯನ್ನೂ ಮಾಡದೆ ಹಟ ಹಿಡಿದಿದ್ದಳು. ಒಂದು ಮದ್ಯಾಹ್ನ ಊಟವಾದ ಮೇಲೆ ನಂಜಮ್ಮ ಬರೆಯುತ್ತಿದ್ದಳು. ಚೆನ್ನಿಗರಾಯ ಅಪ್ಪಣ್ಣಯ್ಯ, ಇಬ್ಬರೂ ಅದೇ ತೊಟ್ಟಿಯಲ್ಲಿ ಮಲಗಿ ಗೊರಕೆ ಹೊಡೆಯುವುದರಲ್ಲಿ ಸ್ಪರ್ಧಿಸುತ್ತಿದ್ದರು. ಗಂಗಮ್ಮ ಬಾಗಿಲಿನ ಹತ್ತಿರ ಕೂತು ರಾತ್ರಿಯ ತನ್ನ ಫಲಾರಕ್ಕೆ ಉಸಲಿ ಮಾಡಲು ಹೆಸರುಕಾಳು ಆರಿಸುತ್ತಿದ್ದಳು. ಹೆಣ್ಣು ಮಗು ಪಾರ್ವತಿ ಒಳಗೆ ಮಲಗಿತ್ತು.

ಹೊರಗೆ ಕಟ್ಟಿ ಹಾಕಿದ್ದ ಹಸುವನ್ನು ಯಾರೂ ಬಿಚ್ಚಿ ಮೇಯಿಸಲು ಹೊಡೆದುಕೊಂಡು ಹೋಗಿರಲಿಲ್ಲ. ಅದಕ್ಕೆ ಒಣ ಹುಲ್ಲನ್ನಾದರೂ ಹಾಕಿ ನೀರು ಸಹ ಇಟ್ಟಿರಲಿಲ್ಲ. ಎರಡು ಸಲ ಗಟ್ಟಿಯಾಗಿ ಕಿರಿಚಿಕೊಂಡು ಹಸು ಕಟ್ಟಿದ್ದಲ್ಲಿಯೇ ದಡಬಡನೆ ಸುತ್ತುವರಿಯಲು ಪ್ರಾರಂಭಿಸಿತು. ನಂಜಮ್ಮ ಗಂಡನನ್ನು ಕೂಗಿದಳು: ‘ಕೇಳ್ತೇ?’
ಅವರಿಗೆ ಎಚ್ಚರವಾಗಲಿಲ್ಲ ಅಪ್ಪಣ್ಣಯ್ಯ ಮಗ್ಗುಲು ಬದಲಿಸಿದ. ಅವಳು ಅವನಿಗೇ ಹೇಳಿದಳು: ‘ಅಪ್ಪಣ್ಣಯ್ಯಾ, ಎಚ್ಚರವಾಯ್ತೇ?
‘ಊಂ’-ಎಂದು ಮತ್ತೆ ಅವನು ಮುಸುಕು ಎಳೆದುಕೊಂಡ.
‘ನಮ್ಮದೆಲ್ಲ ಊಟವಾಯ್ತು. ಗೋತಾಯಿ ಉಪಾಸ ಇದೆ. ಅದನ್ನ ಹೊಡ್‌ಕಂಡು ತ್ವಾಟಕ್ ಹೋಗಿ ಮೇಯಸ್‌ಕಂಡ್ ಬಂದಿದ್ರೆ ಆಗ್ತಿರ್‌ಲಿಲ್ವೆ?’
‘ಊಂ’-ಎಂದು ಅವನು ಮತ್ತೆ ಗಟ್ಟಿಯಾಗಿ ಉಸಿರೆಳೆದ.
ಹತ್ತು ನಿಮಿಷದ ಮೇಲೆ ನಂಜಮ್ಮ ಎಂದಳು: ‘ಅದು ದಿನಕ್ಕೆರಡು ಸರ್ತಿ ಹಾಲು ಕೊಡಬೇಕು. ಅದರ ನಿಗ ಮಾತ್ರ ಯಾರೂ ಮಾಡೂಹಾಗಿಲ್ಲ. ಇಷ್ಟು ಸೋಮಾರಿಗಳಾದ್ರೆ ದೇವರು, ತಿನ್ನುವ ಅನ್ನ ಹ್ಯಾಗ್ ಕೊಡ್‌ಬೇಕೋ!’
ಈ ಮಾತಿನಿಂದ ಗಂಗಮ್ಮನಿಗೆ ಕೋಪ ಬಂತು: ‘ಏನೇ ನೀನು ಬಗುಳ್‌ತಿರೋದು?’ – ಎಂದು ಕೇಳಿದಳು.
‘ನಾನೇನು ತಪ್ಪಿನ ಮಾತು ಅನ್ಲಿಲ್ಲ. ಹಸೂನ ಪು‌ಆಸ ಕಟ್ಟಿದೆಯಲ್ಲಾ ಅಂತ ಅಂದೆ.’
‘ಅಂಥೋಳು ನೀನೇ ಹೋಗಿ ಮೇಯಿಸ್ಕಂಡ್ ಬಾ.’
‘ಇಲ್ಲಿ ಈ ಲೆಕ್ಕ ಯಾರು ಬರೆಯೋರು?’
‘ಆ ಹಾ ಹಾ ಹಾ ತಾಟಗಿತ್ತಿ. ಲೆಕ್ಕ ಬರೀತೀಯಾ ಅಂತ ಸುಬೇದಾರ್ರ ದೌಲತ್ತು ಬಂತೇನೆ ನಿಂಗೆ? ಬೆದೆ ಹತ್ತಿ ಕುಣೀತಿದೀ ಏನೇ ಕಳ್ಳಮುಂಡೆ?’
ಕಂಠೀಜೋಯಿಸರು ಇದ್ದಕ್ಕಿದ್ದಹಾಗೆಯೇ ತಲೆ ತಪ್ಪಿಸಿಕೊಂಡು ಹೋಗಿ ಇನ್ನು ಅವರು ಬರುವ ಸಂಭವವೂ ಕಡಿಮೆಯಾದಮೇಲೆ ಈ ಸೊಸೆಯ ಬಗೆಗೆ ಗಂಗಮ್ಮನಿಗೆ ಸ್ವಲ್ಪವೂ ಭಯ ಉಳಿದಿರಲಿಲ್ಲ. ಈ ಮುಂಡೆ ರಂಡೆ ಮಾತುಗಳನ್ನು ಕೇಳುವುದು ನಂಜಮ್ಮನಿಗೂ ಅಭ್ಯಾಸವಾಗಿಹೋಗಿತ್ತು.
ಅಮ್ಮನ ಮಾತಿನಿಂದ ಎಚ್ಚರವಾದ ಅಪ್ಪಣ್ಣಯ್ಯ ಮಧ್ಯಾಹ್ನದ ನಿದ್ರೆಗೆ ಮಧ್ಯದಲ್ಲೇ ಭಂಗವಾದುದರಿಂದ ಕುಪಿತನಾಗಿ – ‘ಏನಮ್ಮಾ ಅದು?’ ಎಂದು ಹೊರಳಿ ಕೇಳಿದ.
‘ನಾನು ಲೆಕ್ಕ ಬರೆದು ಸುಬೇದಾರಿಕೆ ಮಾಡ್ತೀನಿ. ನೀವು ತಿಂದ್‌ಕಂಡು ಬಿದ್ದಿದೀರಾ ಎದ್ದು ಹೋಗಿ ದನ ಕಾಯ್ಕಂಡ್ ಬರ್ಲಾ ಸೂಳೇಮಗನೆ ಅಂತ ನಿನ್‌ಮ್ಯಾಲೆ ಹುಕುಂ ಮಾಡ್ತಾಳೆ ನೋಡು ಇವ್ಳು.’
ಅಪ್ಪಣ್ಣಯ್ಯ ಕೆರಳಿ ಎದ್ದು ಕೂತು ಕೇಳಿದ: ‘ಏನಲೇ. ಹೀಗೆಲ್ಲ ಅಂತೀಯಾ ಗ್ಯಾನಗೀನ ಎತ್ಲಾಗಿದೆ?’
‘ಅಮ್ಮಾ, ಸುಳ್ಳು ಸುಳ್ಳು ಮಾತು ಯಾಕಂತೀರಾ? ದೇವರಾಣೆ ಹೇಳಿ. ನಾನು ಹಾಗಂದ್ನೆ?’
‘ನೋಡೋ ಅಪ್ಪಣ್ಣಯ್ಯ. ನಾನು ದೇವರಾಣೆ ಇಡಬೇಕೆ? ಸುಳ್ಹೇಳುಕ್ಕೆ ನಾನೇನು ಹಿಟ್ಟು ತಿಂದಿದೀನೋ ಹೇಲ್ ತಿಂದಿದೀನೋ? ನಿಮ್ಮಮ್ಮುನ್ನ ಸುಳ್ಳುಮುಂಡೆ ಅಂದ್ಲಲ್ಲಾ ಇವ್ಳು. ಅದೇನು ಮಕಾ ನೋಡ್ತೀಯಾ, ಎತ್ತಿ ಒಂದು ಸಲ ಒದಿಯೋ ಈ ಲೌಡಿಗೆ?’-ಎಂದು ಗಂಗಮ್ಮ ಹೇಳಿ ಮುಗಿಸುವುದೇ ತಡ, ಅಪ್ಪಣ್ಣಯ್ಯ ಎದ್ದು ಬಂದು ಬಲಗಾಲನ್ನು ಎತ್ತಿ ಅತ್ತಿಗೆಯ ಬೆನ್ನಿಗೆ ಒದೆದ. ಅವಳು ಹಾಗೆಯೇ ನೆಲಕ್ಕೆ ಉರುಟಿದಳು. ಇನ್ನೊಂದು ಸಲ ಕಾಲನ್ನು ಎತ್ತಿ-‘ನಿನ್ನ ಗುಂಡಿ ತೆಗೆದು ಹೂತುಬಿಡ್ತೀನಿ ನೋಡು, ನಮ್ಮಮ್ಮುನ್ನ ಹಾಗಂದ್ರೆ ಎಂದು ಗರ್ಜಿಸುತ್ತಿದ್ದ. ಅಷ್ಟರಲ್ಲಿ ಹೊರಗಿನಿಂದ ಯಾರೋ ಪೋಲೀಸಿನವರು ಬಂದರು. ಕಾಖಿ ಷರಾಯಿ, ಕಾಖಿ ಹ್ಯಾಟು, ಕಾಲಿಗೆ ಬೂಟು, ಕೈಲಿ ಚರ್ಮದ ಚೀಲ, ಕರಿಯ ಕೋಟು. ಅಂದ್ರೆ ಪೋಲೀಸಿನವರೇ. ಅವರ ಹಾಗೆಯೇ ಇಬ್ಬರು ಕಾಖಿ ಲಪ್ಪಟಿ ಸುತ್ತಿದವರು ಚರ್ಮದ ಚೀಲ, ಸರಪಳಿ, ಸಲಾಕಿ, ಏನೇನೋ ಹಿಡಿದು ಬಂದಿದ್ದಾರೆ. ಅಪ್ಪಣ್ಣಯ್ಯನ ಎದೆ ಹಾರಿಹೋಯಿತು. ‘ಅಯ್ಯಯ್ಯಪ್ಪಾ ನಾ ಕೆಟ್ನಲ್ಲೊ’-ಎಂದು ಬಾಗಿಲಿನಿಂದ ನುಗ್ಗಿ ಬೀದಿಗೆ ಓಡಿಹೋದ. ಅಲ್ಲಿಂದ ಅವನು ಪಕ್ಕದ ಓಣಿಯಲ್ಲಿ ನುಗ್ಗಿದ ವೇಗಕ್ಕೆ ಓಣಿಯ ನಾಯಿಗಳೆಲ್ಲ ಬೌ ಎಂದವು.
ಇವರನ್ನು ಕಂಡು ಗಂಗಮ್ಮನಿಗೂ ದಿಗ್ಬ್ರಮೆಯಾಯಿತು. ನಡುಗುತ್ತಾ ಎದ್ದು ನಿಂತುಕೊಂಡಳು. ಅಪ್ಪಣ್ಣಯ್ಯ ಹೀಗೆ ಕಿರುಚಿಕೊಂಡು ಓಡಿದ ಶಬ್ದಕ್ಕೆ ಚೆನ್ನಿಗರಾಯರೂ ಎಚ್ಚರವಾಗಿ ಕುಳಿತರು. ಒಳಗೆ ಮಗು ಅಳಲು ಪ್ರಾರಂಭಿಸಿತು. ಹಾಗೆಯೇ ತಿರುಗಿ, ಬಂದವರನ್ನು ನೋಡಿದ ನಂಜಮ್ಮ ಎದ್ದು ಮಗು ಎತ್ತಿಕೊಳ್ಳಲು ಒಳಗೆ ಹೋಗಲು ಏಳುತ್ತಾಳೆ: ಸೊಂಟ ವಿಪರೀತ ನೋಯುತ್ತಿದೆ. ನರ ಹೊರಳಿಯೋ ಉಳುಕಿಯೋ ಇದೆ. ಹಾಗೆಯೇ ಗೂನುಬೆನ್ನು ಮಾಡಿಕೊಂಡು ಅವಳು ಒಳಗೆ ಹೋಗುವ ಹೊತ್ತಿಗೆ ಚೆನ್ನಿಗರಾಯರು ಮೇಲೆ ಎದ್ದು ಭಯಭಕ್ತಿಗಳಿಂದ ಬಂದವರನ್ನು ಮಾತನಾಡಿಸಿದರು: ‘ಮ ಮ ಮಹಾಸ್ವಾಮಿಗಳು ದ ದ ದಯಮಾಡಿಸ್ಬೇಕು.’
‘ನೀವೇ ಏನ್ರೀ, ಶ್ಯಾನುಭೋಗ ಚೆನ್ನಿಗರಾಯರು?’
‘ಹೂಂ ಸ್ವಾಮಿ.’
‘ಅವರ್ಯಾರು ನಿಮ್ಮ ತಮ್ಮನೋ ಹೆಂಡ್ತಿ ಒದೀತಿದ್ದೋರು?’
‘ಅವ್ಳು ನನ್ನ ಹೆಂಡ್ತಿ ಸ್ವಾಮಿ.’
‘ಓ, ಅತ್ತಿಗೇನ ಒದೀತಿದ್ರೊ?’
‘ಇಲ್ಲ ಸ್ವಾಮಿ.’
‘ಏನ್ರೀ, ಸರ್ಕಾರಿ ಅಧಿಕಾರಿಯಾಗಿ ನೀವು ಸುಳ್ ಹೇಳ್ತೀರಿ? ಸರಿಯಾಗಿ ಹೆಂಡ್ತಿ ನೋಡ್ಕೊಳ್ಳುಕ್ ಆಗುಲ್ವೆ?’

ಗಂಗಮ್ಮನ ಮೈ ಬೆವರುತ್ತಿತ್ತು. ಬಂದವರು ಇದಕ್ಕಿಂತ ಹೆಚ್ಚು ಏನೂ ಹೇಳಲಿಲ್ಲ. ಚೆನ್ನಿಗರಾಯರು ಜಗುಲಿಯ ಮೇಲೆ ಒಂದು ಮದಲಿಗೆ ಹಾಕಿ ಅವರನ್ನು ಕೂರಿಸಿ ಕೈ ಜೋಡಿಸಿ ನಿಂತುಕೊಂಡಿದ್ದರು. ಅದೇ ಸಮಯದಲ್ಲಿ ಗಂಗಮ್ಮ ಮನೆಯಿಂದ ನೇರವಾಗಿ ಬೆಸ್ತರ ಕೇರಿಗೆ ಹೋದಳು. ಮಾಟನ ಮನೆಗೆ ಹೋಗಿ ಕೇಳಿದಾಗ ಅವನು ಇವಳ ಹತ್ತಿರ ಬಂದು ಪಿಸುಗುಟ್ಟಿದ: ‘ಅಟ್ಟದ ಮ್ಯಾಲೆ ಕುರುಂಬಾಳೆವಳ್ಗೆ ಅವಿಸಿಟ್ಟಿವ್ನಿ.’ ಗಂಗಮ್ಮನೇ ಏಣಿ ಹಾಕಿಕೊಂಡು ಅಟ್ಟಕ್ಕೆ ಹತ್ತಿ ಮಗನ ಹತ್ತಿರ ಬಂದು ಪಿಸುಗುಟ್ಟಿದಳು: ‘ಅವರ ಜೊತೆ ಬಂದಿರೋರ ಹತ್ರ ನೋಡಿದೆಯಾ? ಹಗ್ಗದ ಸಿಂಬಿ ತಂದ ಹಾಗೆ ಸರಪಣಿ ತಂದಿದಾರೆ. ಉದ್ದನೇ ಹಾರೆ ಹಾಗಿರೋ ಸಲಾಕಿ ಇದೆ. ಸಿಕ್ಕಿಬಿಟ್ರೆ ಸರಪಣೀನ ಕೈಗೆ ಬಿಗಿದು ಹಾರೇಲಿ ಗುಂಡಿ ತೋಡಿ ನೇಣುಗಟ್ತಾರೋ ಏನೋ. ಅವಳ ಅಣ್ಣ ಕಲ್ಲೇಶ ಪೋಲೀಸ್ನೋನಾಗಿದ್ದ. ಅವರ ಕಡೆಯೋರು. ನೀನು ತ್ವಾಟದ ಕಡೆಯಿಂದ ವಾಟ ಹ್ವಡ್‌ದುಬಿಡು. ಇನ್ನೊಂದ್ ಐದಾರು ತಿಂಗ್ಳು ಇಲ್ಲೆಲ್ಲೂ ತಲೆಹಾಕ್ಬೇಡ. ಜಾವಗಲ್ಲು ಕಡಿಗೆ ಹೊರಟ್ಹೋಗು.’

ಅಪ್ಪಣ್ಣಯ್ಯ-‘ಇನ್ನೇನು ಗತಿಯಮ್ಮಾ?’ ಎಂದು ಕಣ್ಣನ್ನು ಅರಳಿಸಿದ. ‘ನನ್ನ ಕಂದಾ, ಬ್ಯಾಗ ಹ್ವರ್ಡೋ. ಈ ಕೆಟ್ಟಗಾಲಿನ ಮುಂಡೆ ನಮ್ಮನೆ ಸೇರಿದ್ಲು. ನಮಗೆ ಬಂತು ನೋಡು ಗ್ರಾಚಾರ’-ಎಂದಳು. ಅವನು ಕುರುಂಬಾಳೆಗಳ ಒಟ್ಟಿನಿಂದ ಹೊರಕ್ಕೆ ಬಂದು ಏಣಿಯಿಂದ ಸರಸರನೆ ಇಳಿದು ಹೊರಬಾಗಿಲಿನಲ್ಲಿ ಒಂದು ಸಲ ಎರಡು ಕಡೆಗೂ ಇಣಿಕಿ ನೋಡಿ ಹುಲ್ಲುಮೆದೆಯ ಹಿತ್ತಿಲುಗಳ ಬೇಲಿಯ ಸಂದಿಯಿಂದ ಬಗ್ಗಿ ಓಟ ಹೊಡೆದುಬಿಟ್ಟ. ಅವನು ಕೆರೆಯ ಏರಿ ಇಳಿದು ಮರೆಯಾಗುವತನಕ ಹಿತ್ತಿಲಿನ ಬೇಲಿಯ ಸಂದಿಯಿಂದ ನೋಡುತ್ತಿದ್ದು ಗಂಗಮ್ಮ ಸ್ವಲ್ಪ ಧೈರ್ಯ ತಂದುಕೊಂಡಳು.
ಇಲ್ಲಿ ಮನೆಗೆ ಬಂದಿದ್ದವರು ಸರ್ಕಾರಿ ಮೋಜುಂದಾರರು. ಸಂಸ್ಥಾನದಲ್ಲಿರುವ ವ್ಯವಸಾಯದ ಭೂಮಿಯನ್ನೆಲ್ಲ ಅದರದರ ಹಿಡುವಳಿದಾರರ ಲೆಕ್ಕದ ಪ್ರಕಾರ ಹೊಸದಾಗಿ ಅಳೆದು ಅದರ ವಿಸ್ತೀರ್ಣ ಮತ್ತು ಆಕಾರಗಳನ್ನು ನಿರ್ಧರಿಸಿ ಇಂಡೆಕ್ಸ್ ತಯಾರಿಸಲು ರೆವಿನ್ಯೂ ಕಮಿಶನರು ಆರ್ಡರ್ ಮಾಡಿದ್ದರು. ಹೊಸ ಅಳತೆಗಾಗಿ ನಿಯೋಜಿತರಾದ ಮೋಜುಂದಾರರು ತಮ್ಮ ಶಿಬ್ಬಂದಿಯೊಡನೆ ಇಲ್ಲಿಗೆ ಬಂದಿದ್ದರು. ಸುಮಾರು ಮೂರು ತಿಂಗಳು ರಾಮಸಂದ್ರದಲ್ಲಿ ಕ್ಯಾಂಪ್ ಮಾಡಿ ಸುತ್ತಮುತ್ತಣ ಹಳ್ಳಿಗಳ ಭೂಮಿಯನ್ನೆಲ್ಲ ಅಳೆಯುವುದು ಅವರ ಕೆಲಸವಾಗಿತ್ತು. ಅವರ ವಾಸದ ಏರ್ಪಾಟು ಮಾಡುವುದರಿಂದ ಹಿಡಿದು ತಳವಾರ, ಕುಳವಾಡಿ, ಮೊದಲಾದವರ ಸಹಾಯ ಕೊಡಿಸುವ ಜವಾಬ್ದಾರಿ ಶ್ಯಾನುಭೋಗರದ್ದು.

– ೩ –

ಎರಡನೇ ಬಾಣಂತನಕ್ಕೆ ಅಕ್ಕಮ್ಮನೇ ಗಾಡಿ ಹೂಡಿಸಿಕೊಂಡು ಬಂದು ನಂಜುವನ್ನು ಕರೆದುಕೊಂಡು ಹೋದಳು. ಈಗ ಕಲ್ಲೇಶನ ಎಡಗೈ ಇನ್ನೂ ಸ್ವಲ್ಪ ಉತ್ತಮವಾಗಿದೆ. ಎರಡು ಕೈಯಲ್ಲಿಯೂ ತಬ್ಬಿ ತೆಂಗಿನ ಮರ ಹತ್ತುತ್ತಾನೆ. ಹೊಲಗದ್ದೆಯ ಕೆಲಸವನ್ನೂ ಅಲ್ಪ ಸ್ವಲ್ಪ ಮಾಡುತ್ತಾನೆ. ಅವನ ಹೆಂಡತಿ ಹಳ್ಳಿ ಬೇಡವೆಂದರೂ ಅವನಿಗೆ ಸರ್ಕಾರೀ ನೌಕರಿ ಸಿಕ್ಕುವುದು ಸಾಧ್ಯವಿಲ್ಲ. ಅವನಿಗೆ ಅದು ಬೇಡವೂ ಬೇಡ. ಆದರೆ ಅವಳು ಹಳ್ಳಿಗೆ ಹೊಂದಿಕೊಳ್ಳಲಾರಳೋ, ಅಥವಾ ಸ್ವಾಭಾವವೇ ಹಾಗೋ, ಅಂತೂ ಅಜ್ಜಿ ಮೊಮ್ಮಗ, ಇಬ್ಬರಿಗೂ ಅವಳಿಂದ ಸುಖವಿಲ್ಲ.

ನಂಜು ಬಾಣಂತನಕ್ಕೆ ಬಂದಾಗ ಜೊತೆಯಲ್ಲಿ ಎರಡೂವರೆ ವರ್ಷದ ಮಗು ಪಾರ್ವತಿಯೂ ಬಂದಿತ್ತು. ಕಲ್ಲೇಶ ಅದನ್ನು ಎತ್ತಿ ಮುದ್ದಿಸುತ್ತಿದ್ದ. ಒಂದು ದಿನ ಅವನು ಗದ್ದೆಯ ಹತ್ತಿರಕ್ಕೆ ಹೋಗಿದ್ದಾಗ ಕಮಲು ತನಗೆ ತಾನೇ ಹೇಳಿಕೊಳ್ಳುವವಳಂತೆ ಗಟ್ಟಿಯಾಗಿ ಎಂದಳು: ‘ಹಂದಿ ಈದ ಹಾಗೆ ಬ್ಯಾಗ ಬ್ಯಾಗ ಬಸುರಿಯಾಗಿಬಿಟ್ರೆ ಆಯ್ತೆ? ಗಂಡನ ಮನೆಯೊರಿಗೆ ಬಾಣಂತನ ಮಾಡೋ ಯೋಗ್ತಿ ಇಲ್ಲದ ಮ್ಯಾಲೆ ಬಸ್‌ರಿ ಯಾಕಾಗಬೇಕೋ,! ತೌರು ಮನೇರು ಮಾಡ್ತಾರೆ ಮಾಡ್ತಾರೆ ಅಂತ ಅವರ ರಕ್ತ ಎಷ್ಟು ಹೀರಿದ್ರೂ ಸಾಲ್ದು.’

ಈ ಮಾತು ನಂಜುವಿಗೆ ಕೇಳಿಸಿತು. ತನಗೆ ಒಳ್ಳೆಯ ಅತ್ತೆ ಸಿಕ್ಕಲಿಲ್ಲ; ಹಾಗೆಯೇ ಒಳ್ಳೆಯ ಅತ್ತಿಗೆಯೂ ಸಿಕ್ಕಲಿಲ್ಲ. ತನ್ನ ಅದೃಷ್ಟವೇ ಹೀಗೆ. ಈಗ ಇನ್ನೂ ಏಳು ತಿಂಗಳು ಇನ್ನು ಹೆರಿಗೆಯಾಗಿ ಮಗುವಿಗೆ ಮೂರು ತಿಂಗಳಾದರೂ ಆಗಬೇಕಾದರೆ ಐದಾರು ತಿಂಗಳಾದರೂ ಇಲ್ಲಿರಬೇಕು. ಸುಮ್ಮನೆ ಊರಿಗೆ ಹೋಗಿಬಿಡುವುದೇ ಚನ್ನ. ಆದರೆ ಅಲ್ಲಿ ಅತ್ತೆಯ ಕಾಟ. ತೌರುಮನೆಗೆ ಬಾಣಂತಿತನಕ್ಕೆ ಹೋಗಿದ್ದವಳು ಹಾಗೆಯೇ ವಾಪಸು ಹೋದರೆ ಅತ್ತೆ ಕುಕ್ಕದೆ ಬಿಡುವುದಿಲ್ಲ. ಇನ್ನು ಹೆಂಡತಿಯ ಪರವಾಗಿ ಒಂದು ಮಾತಾದರೂ ಆಡುವ ಗಂಡನೇ! ಪುಣ್ಯಕ್ಕೆ ಹೊಟ್ಟೆ ತೊಳಕೋಬೇಕು. ಅವಳ ಕಣ್ಣಿನಲ್ಲಿ ಒಂದು ಹನಿ ನೀರು ತುಳುಕಿತು.

ಕಮಲುವಿನ ಮಾತು ಅಕ್ಕಮ್ಮನಿಗೂ ಕೇಳಿಸಿತ್ತು. ತಾಳ್ಮೆ ಇಟ್ಟುಕೊಂಡಿದ್ದ ಅವಳು ಮೊಮ್ಮಗಳ ಕಣ್ಣಿನಿಂದ ಉರುಳಿದ ನೀರನ್ನು ಕಂಡು ಕ್ರುದ್ಧಳಾದಳು. ಕಮಲುವಿನ ಮುಂದೆ ಹೋಗಿ ನಿಂತು ಕೇಳಿದಳು: ‘ಪ್ರಸ್ತ ಮಾಡ್ಕಂಡ್ ಬಂದು ಒಂದು ವರ್ಷವಾದ್ರೂ ಬಸ್‌ರಿಯಾಗೂ ಯೋಗ್ತಿ ಇಲ್ಲದೋಳೇ. ಅವ್ಳುನ್ನ ಯಾಕೆ ಹಂದಿ ಅಂತೀಯೇ? ಕಟ್ಟೇಲಿ ನೀರಿಲ್ಲ, ಹೊಟ್ಟೇಲಿ ಮಕ್ಳಿಲ್ಲ ಅಂತ ನಿನ್ನಂತ ಪಾಪಿ ಹೊಟ್ಟೇಲಿ ಬಸುರು ಹ್ಯಾಗೆ ನಿಲ್ಲುತ್ತೆ ಹೇಳು.’
‘ನಿನ್ನ ಮೊಮ್ಮಗ ಹೋಗಿ ಪೋಲೀಮುಂಡೇರ ಜೊತೆ ಎಲ್ಲ ಮಲೀಕಂಡು ಬರ್ತಿದ್ರೆ ಮನೆ ಹೆಂಡ್ತಿ ಬಸ್‌ರಿ ಹ್ಯಾಗಾಗ್ತಾಳೆಯೇ ಮುದುಕಿ? ಇಂಥಾ ಪೋಲೀಸೂಳೇಮಕ್ಳು ನಿಮ್ಮನೇಲಿ ಹುಟ್ಟಿರೂದು.’
‘ನಾಚಿಕೆ ಇಲ್ದೆ ಮಾತಾಡಬ್ಯಾಡ, ಕತ್ತೆ ಲೌಡಿ. ನ್ಯಟ್ಟಗೆ ಗಂಡನ ಜೊತೆ ಮಲೀಕಳೂದು ಕಲ್ತಿದ್ರೆ ಗಂಡ್‌ಸ್ಯಾಕ್ ಹ್ವರಗಡೆ ಹೋಕ್ತಾನೆಯೆ? ನೀನು ಹೆಣ್ಣುಜಾತೀಲಿ ಹುಟ್ಟಿದೀಯೇನೇ?’
ಈ ಮಾತಿನಿಂದ ನಂಜುವಿಗೆ ಹೊಸ ವಿಷಯಗಳು ತಿಳಿದವು. ಆದರೂ ಅವಳು ಹತ್ತಿರ ಬಂದು ಹೇಳಿದಳು: ‘ಅಕ್ಕಮ್ಮ, ಮೆಲ್ಲಗಾದರೂ ಮಾತಾಡಿ. ಮಗ್ಗಲು ಮನೆಯೋರಿಗೆ ಕೇಳಿದರೆ?’
‘ಮಗ್ಗಲು ಮನೆಯೋರೇನು, ಈ ಊರ್ನಲ್ಲಿ ಎಲ್ರಿಗೂ ಗೊತ್ತಿದೆ, ಈ ಚಿನ್ನಾಲಿ ಕತೆ. ಇವ್ಳು ಬಂದು ಒಂದು ತಿಂಗ್ಳಿಗೇ ನಮ್ಮನೆ ಮರ್ಯಾದಿ ತೆಗುದ್ಲು. ಕೆರಿಗ್ ನೀರಿಗ್ಹೋದಾಗ್ಲೆಲ್ಲ ನಮ್ಮನೆ ವಿಷಯಾನ ಊರೋರ್ಗೆಲ್ಲ ಹೇಳ್ಕಂಡ್ ಬತ್ತಾಳೆ. ವಂಶೀಕರ ಮನ್ಲಿ ಹುಟ್ಟಿ ಬೆಳೆದಿದ್ದ ಹೆಣ್ಣಾದ್ರೆ ತಾನೇ ಇದು!’
‘ಲೇ ಮುದುಕಿಮುಂಡೆ, ನಮ್ಮಪ್ಪನ ಮನೆಯೋರ್ನ ಅಂತೀಯಾ? ನಮ್ಮನೆ ಬಚ್ಚಲು ಗುಂಡೀಲಿ ಮಡಿ ಉಟ್ಕಂಡ್ರೆ ನಿಂಗೆ ಪುಣ್ಯ ಬರುತ್ತೆ.’
‘ಅಕ್ಕಮ್ಮ, ನೀನು ಇನ್ನು ಮಾತಾಡಬ್ಯಾಡ, ಒಳಿಕ್ನಡಿ’-ಎಂದು ನಂಜು ಅಜ್ಜಿಯನ್ನು ಒಳಗೆ ಕರೆದುಕೊಂಡು ಹೋದಳು. ಮತ್ತೆ ಅಂಗಳಕ್ಕೆ ಬಂದು ಅತ್ತಿಗೆಗೆ ಹೇಳಿದಳು: ‘ಅತ್ತಿಗ್ಯಮ್ಮ, ಸ್ವಲ್ಪ ನಿಧಾನವಾಗಿರಬಾರದೆ? ನಮ್ಮ ನಮ್ಮ ಮನೆ ವಿಷಯ ಬಾಕಿಯೋರಿಗೆ ತಿಳುದ್ರೆ ಹಿಂದ್ಗಡೆ ಆಡ್ಕಂಡ್ ನಗ್ತಾರೆ.’
‘ಗಂಡನ ಮನ್ಲಿ ತಿನ್ನುಕ್ ಹಿಟ್ಟಿಲ್ದೆ ಬಾಣಂತನಕ್ಕೆ ಅಂತ ಬಂದಿದೀಯಾ. ನಂಗ್ ಬುದ್ಧಿ ಹೇಳುಕ್ ಬರ್‌ಬ್ಯಾಡ ಹೋಗು.’

ನಂಜು ಸುಮ್ಮನೆ ಒಳಗೆ ಹೋದಳು. ಕಮಲು ಮಲಗುವ ಕೋಣೆಗೆ ಹೋಗಿ ಚಾಪೆಯ ಮೆಲೆ ಮಕಾಡೆ ಮಲಗಿಕೊಂಡಳು. ಕೋಪಗೃಹದಲ್ಲಿ ಕೈಕಾದೇವಿಯು ಬಿದ್ದುಕೊಂಡಂತೆ ತಲೆ ಕೆದರಿಕೊಂಡು ಹಣೆಯ ಕುಂಕುಮ ಅಳಿಸಿಹಾಕಿ, ಮೊದಲೆ ದಪ್ಪವಾಗಿದ್ದ ಮುಖವನ್ನು ಇನ್ನೂ ಊದಿಸಿಕೊಂಡಳು. ಇನ್ನು ಯಾರೂ ಅವಳನ್ನು ಮಾತನಾಡಿಸಲಿಲ್ಲ.

ಒಂದು ಗಂಟೆಯ ಹೊತ್ತಿಗೆ ಕಲ್ಲೇಶ ಮನೆಗೆ ಬಂದು ಸ್ನಾನ ಮಾಡಿದ. ಹೆಂಡತಿಯ ಸುಳಿವು ಇಲ್ಲದುದನ್ನ ಅವನು ಗಮನಿಸಲಿಲ್ಲ. ಆದರೆ ಕಮಲು ಸುಮ್ಮನಿರುವುದು ಹೇಗೆ? ಒಳಗಿನಿಂದ ಪಿಟಿಪಿಟಿ ಬಯ್ದುಕೊಳ್ಳಲು ಪ್ರಾರಂಭಿಸಿದಳು. ಅವನ ಗಮನ ಅತ್ತ ಹರಿಯಿತು. ಓರೆ ಮಾಡಿದ್ದ ಕೋಣೆಯ ಬಾಗಿಲಿನ ಹತ್ತಿರ ನಿಂತುಕೊಂಡ. ನಿಮಿಷಕ್ಕೆ ನೂರು ಶಬ್ದದಷ್ಟಾದರೂ ವೇಗವಾಗಿ ಆಡುತ್ತಿದ್ದ ಅವಳ ಪಿಟಿಪಿಟಿ ಸ್ಪಷ್ಟವಾಗಿ ಕೇಳಿಸಿತು: ‘ಸೂಳೇ ಮಕ್ಳ ಮನೆ ಹಾಳಾಗ. ಇವರ ವಂಶ ಅಡಗ. ಇವರ ಮನೆ ಗುಡಿಸಿ ಗುಂಡಾಂತರವಾಗ ಈ ಮುಂಡೇವೆಲ್ಲ ಮಾರಿ ಬಡಿದು ಸಾಯ. ಮುಂಡೇಮಕ್ಳು ಮುಂಡೇಮಕ್ಳು ಮುಂಡೇಮಕ್ಳು ಮುಂಡೆ ಮುಂಡೆ ಮುಂಡೆ, ಮುಂಡೇಮಕ್ಳು…..’
ಗದ್ದೆಯಲ್ಲಿ ದುಡಿದು ಬಿಸಿಲಿನಲ್ಲಿ ಮನೆಗೆ ಬಂದಿದ್ದ ಕಲ್ಲೇಶ ಕೇಳಿದ: ‘ಯಾರುನ್ನೇ ಬೋಸುಡಿ ನೀನ್ ಬೈಕತ್ತಿರಾದು?’
‘ಮುಂಡೇಮಕ್ಳು ಮುಂಡೇಮಕ್ಳು ಮುಂಡೇಮಕ್ಳು ಮುಂಡೇಮಕ್ಳು……’ ಎಂದು ಮಂತ್ರ ಹೇಳುತ್ತಾ ಅವಳು ತನ್ನ ಎರಡು ಕೈಗಳನ್ನೂ ಜೋಡಿಸಿ ಚಟಾಕಿಯ ಸರ ಹಾರಿಸಿದಂತೆ ಪಟಪಟನೆ ನೆಟಿಕೆ ಮುರಿದಳು.
‘ಗಾಂಚಾಲಿ ಬಾಂಚೋತ್’-ಎಂದು ಅವನು ಬಲಗೈ ಎತ್ತಿ ಅವಳ ಬೆನ್ನಿನ ಮೇಲೆ ಒಂದು ಸಲ ಗುದ್ದಿದ.
ಮುಖ ತಿರುಗಿಸಿ ಅವಳು ಹೇಳಿದಳು: ಮುಂಡೇಮಗನೆ, ನನ್ನ ಗುದ್‌ತೀಯೇನೋ? ನಿನ್ನ ಎಡಗೈ ಸೇದಿಹೋದ ಹಾಗೆ ಬಲಗೈಯೂ ಸೇದಿಹೋಗುತ್ತೆ. ನನ್ನ ಶಾಪ ಅಂದ್ರೆ ಏನಂತ ತಿಳ್ಕಂಡಿದೀಯಾ?’ ಇನ್ನೂ ಒಂದು ಗುದಿಗೆ ಬಿತ್ತು. ಅವಳು ಅದೇ ಉಸಿರಿನಲ್ಲಿ ಮುಂದುವರಿಸಿದಳು: ‘ಖಾಯ್‌ಲೆ ಅಂತ ಬಂದ್ ಮಲಕ್ಕಂಡು ನಮ್ಮಪ್ಪನ ಮನ್ಲಿ ಎಂಟು ತಿಂಗ್ಳು ಒಂದೇ ಸಮಕ್ ತಿಂದ್ಯಲ್ಲೊ ಕೂಳ. ನನ್ನ ಗುದ್ದುಕ್ ಹ್ಯಾಗ್ ಕೈ ಬಂತೋ? ನಿನ್ನ ಕೈಗೆ ಹುಳ ಬೀಳ.’
ಅಷ್ಟರಲ್ಲಿ ನಂಜು ಅಲ್ಲಿಗೆ ಓಡಿಬಂದಳು. ಈ ಏಟಿನ ಶಬ್ದಕ್ಕೆ ಮಗು ಪಾರ್ವತಿ ಅಡಿಗೆಯ ಮನೆಯಲ್ಲಿಯೇ ಅಳಲು ಪ್ರಾರಂಭಿಸಿತು. ನಂಜು ಅಣ್ಣನ ಕೈ ಎಳೆಯುತ್ತಾ ಹೇಳಿದಳು: ‘ಅಣ್ಣಯ್ಯಾ, ನಿಂಗೇನು ಬುದ್ಧಿ ಸ್ವಾಧೀನದಲ್ಲಿದೆಯೋ ಇಲ್ಲವೋ? ಹೆಂಡ್ತೀನ ಹೀಗೆ ಹೊಡೀತಾರೆಯೆ? ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಏನು ಗತಿ? ಸುಮ್ಮನೆ ಒಳಗೆ ಬಂದು ಊಟ ಮಾಡು.’
‘ನನ್ ಕೈ ಬಿಡು. ಈ ದನಗರ್ ಬಾಂಚೋತೀನ ಗತಿ ಕಾಣುಸ್ತೀನಿ ಇವತ್ತು’-ಎಂದು ಅವನು ಕೊಸರಿಕೊಂಡ.
ಮಲಗಿದ್ದ ಕಮಲು ಹುರಿ ಕಿತ್ತ ಬಿಲ್ಲಿನಂತೆ ಮೇಲೆ ಎದ್ದು ಅವನ ಕಡೆಗೆ ಬೆನ್ನು ತಿರುಗಿಸಿ ನಿಂತು ಸವಾಲು ಹಾಕಿದಳು: ‘ಹೋಡೀಬೇಕೇನೋ? ರಟ್ಟೆ ಮುರೀಯೂವಷ್ಟು ಹೊಡೆಯೋ. ನಿನ್ನ ಇವತ್ತು ನೇಣುಗಟುಸ್ತೀನಿ. ಇವತ್ತೇ ಕಡೇ ದಿನ, ಹೊಡಿ.’
ನಂಜು ಅಣ್ಣನ ಕೈಯನ್ನು ಇನ್ನೂ ಬಲವಾಗಿ ಹಿಡಿದುಕೊಂಡು ಹೊರಗೆ ಎಳೆಯಲು ಶುರು ಮಾಡಿದಳು. ಅವಳೂ ಶಕ್ತಿವಂತೆಯಾದ ಹೆಂಗಸು. ಕಲ್ಲೇಶಿ ಕಡಿಮೆ ಶಕ್ತಿಯ ಆಳಲ್ಲ. ಇಬ್ಬರೂ ಕಂಠೀಜೋಯಿಸರ ಮಕ್ಕಳೇ. ಅವನು ಕೈ ಬಿಡಿಸಿಕೊಳ್ಳಲಿಲ್ಲ. ಎಡಗಾಲನ್ನು ಎತ್ತಿ ಕಮಲುವಿನ ಸೊಂಟಕ್ಕೆ ಒದೆದ. ಆ ರಭಸಕ್ಕೆ ಅವಳು ಮುರಿದುಬಿದ್ದಳು. ‘ಬಾಂಚೋತ್, ಮತ್ತೆ ಗಾಂಚಾಲಿ ಮಾಡು ನಿಂಗ್ ಮಾಡ್ತೀನಿ’-ಎಂದು ಹೇಳಿ ಹೊರಗೆ ಬಂದ. ‘ನಿನ್ ನೇಣುಗಟ್ಟುಸ್ತೀನಿ’-ಎಂದು ಅವಳು ಒಳಗಿನಿಂದ ಹೇಳಿದಳು.

ಕಲ್ಲೇಶ ಒಳಗೆ ಕೂತು ಊಟ ಮಾಡುತ್ತಿದ್ದ. ಈ ದಿನ ನಡೆದಂತಹ ಘಟನೆ ಆ ಮನೆಗೆ ಹೊಸದಲ್ಲ. ಆದರೆ ಈ ದಿನ ಅದು ಹದ್ದುಮೀರಿತ್ತು. ಇವಳನ್ನು ಏನು ಮಾಡಿ ಹತೋಟಿಗೆ ತರಬೇಕೆಂಬುದು ತಿಳಿಯದೆ ಅವನು ಮೌನವಾಗಿ ಹಿಟ್ಟನ್ನು ಮುರಿದು ಕೈಲಿ ಹಿಸುಕಿ ಹುಳಿಯಲ್ಲಿ ಹೊರಳಿಸಿ ಗುಳುಕ್ಕನೆ ನುಂಗುತ್ತಿದ್ದ. ಅವನ ಜೊತೆ ಕುಳಿತುಕೊಳ್ಳದೆ ನಂಜು, ‘ನಾನು ಆಮ್ಯಾಲೆ ಮಾಡ್ತೀನಿ’ ಎಂದು ಹೇಳಿ ಹಿತ್ತಿಲಕಡೆಯಲ್ಲಿ ಬಟ್ಟೆ ಒಗೆಯುತ್ತಿದ್ದಳು. ಅಕ್ಕಮ್ಮ ಹಿಟ್ಟಿನ ಚರುಕಿಗೆ ನೀರು ತುಂಬಿ ನೆನೆಯಹಾಕುತ್ತಿದ್ದಳು. ಅಷ್ಟರಲ್ಲಿ ನಂಜು ಹಿತ್ತಿಲಿನಿಂದ ಕೂಗಿಕೊಂಡಳು: ‘ಅಣ್ಣಯ್ಯ, ಓಡ್ಬಾ, ಅತ್ತಿಗ್ಯಮ್ಮ ಭಾವಿಗ್ ಬಿದ್ರು.’
‘ಎಲಾ ಇವ್ಳಾ’- ಎಂದು ಕಲ್ಲೇಶ ಒಂದೇ ದಾಪಿಗೆ ಹಿತ್ತಿಲ ಬಾವಿಯ ಹತ್ತಿರಕ್ಕೆ ಧಾವಿಸಿದ. ಅಕ್ಕಮ್ಮನೂ ತನ್ನ ಬಗ್ಗಿದ ಸೊಂಟವನ್ನು ಬಗ್ಗಿಸಿಕೊಂಡೇ ಓಡಿ ಬಂದಳು. ಬಾವಿಯ ಹತ್ತಿರ ಇದ್ದ ಹಗ್ಗವನ್ನು ಒಳಕ್ಕೆ ಬಿಟ್ಟು, ‘ಇದ ಗಟ್ಟಿಯಾಗಿ ಹಿಡ್ಕೊ’ ಎಂದು ನಂಜುವಿಗೆ ಹೇಳಿ ಕಲ್ಲೇಶ ಸರ್ರ್ ಎಂದು ಒಳಗೆ ಇಳಿದ. ನಂಜು ಬಾವಿಯ ಕಟ್ಟೆಗೆ ಕಾಲು ಒದೆಕೊಟ್ಟು ಹಗ್ಗ ಹಿಡಿದುಕೊಂಡಳು. ಅವನು ಅದನ್ನು ಹಿಡಿದುಕೊಂಡು ಜಾರಿ ಕೆಳಗೆ ಹೋದ.
ನಂಜು ಕೂಗಿಕೊಂಡದ್ದು ಪಕ್ಕದ ಮನೆಯ ಕಪಿನೀಪತಯ್ಯನವರ ಹೆಂಡತಿಗೆ ಕೇಳಿತು. ‘ಕಮಲಮ್ಮ ಬಾವಿಗೆ ಬಿದ್ಲಂತೆ ಹೋಗೀ’-ಎಂದು ಗಂಡನಿಗೆ ಹೇಳುತ್ತಾ ಅವರೂ ಓಡಿ ಬಂದರು. ಕಪಿನೀಪತಯ್ಯನವರೂ ಕೂಗಿಕೊಂಡು ಬಂದರು. ಅದನ್ನು ಕೇಳಿದ ಅಕ್ಕಪಕ್ಕದವರೆಲ್ಲ ಸೇರಿದರು. ಸುದ್ದಿ ಮಿಂಚಿನಂತೆ ಹಬ್ಬಿ ಅಕ್ಕಪಕ್ಕದ ಕೇರಿಯವರೂ ಜಮಾಯಿಸಿದರು.

ಕಮಲು ಒಂದು ಸಲ ಮುಳುಗಿ ಎದ್ದು ಎರಡನೆಯ ಸಲ ಮುಳುಗಿದ್ದಳು. ಮೇಲೆ ಬಂದಾಗ, ಪ್ರಾಣ ಉಳಿಸಿಕೊಳ್ಳಬೇಕೆಂದು ಅವಳೂ ಎರಡು ಕೈಗಳನ್ನೂ ಬಡಿಯಲು ಆಡಿಸಿದಳು. ಸಾಯಬೇಕೆಂದು ಅವಳು ಬಾವಿಗೆ ಬೀಳಲಿಲ್ಲ. ಗಂಡನಿಗೆ ನೇಣುಗಟ್ಟಿಸುತ್ತೇನೆಂಬ ತನ್ನ ಮಾತನ್ನು ಸಾಧಿಸಲು ಮಾತ್ರ ಬಿದ್ದಿದ್ದಳು. ಆದರೆ ನೀರಿನಲ್ಲಿ ಒಂದು ಸಲ ಮುಳುಗಿ ಎದ್ದಮೇಲೆ ಜೀವದ ಆಶೆ, ಸಾವಿನ ಭಯಗಳು ತುಂಬಿಕೊಂಡು ಒಂದು ಸಲ ಕೂಗಿಕೊಂಡಿದ್ದಳು. ಅದು ಮೇಲಿದ್ದ ನಂಜುವಿಗೆ ಕೇಳಿಸುವ ಮೊದಲೇ ನೀರು ಎರಡನೆಯ ಬಾರಿಗೆ ಒಳಗೆ ಎಳೆದುಕೊಂಡಿತ್ತು. ಮತ್ತೆ ನೀರು ಕುಡಿಸಿ ಕೊನೆಯ ಸಲದ ಅವಕಾಶಕ್ಕಾಗಿ ಗಂಗಮ್ಮ ತಾಯಿ ಅವಳನ್ನು ಮೇಲೆ ಎತ್ತಿದಳು. ಕಲ್ಲೇಶಿ ಗಟ್ಟಿಯಾಗಿ ಜಡೆ ಹಿಡಿದುಕೊಂಡ. ಅಷ್ಟರಲ್ಲಿ ಕಪಿನೀಪತಯ್ಯ ಮೊದಲಾಗಿ ಮೇಲುಗಡೆ ಜನಗಳು ಸೇರಿದ್ದರು. ‘ಹಗ್ಗ ಸ್ವಲ್ಪ ಮೇಲೆ ಎಳ್ಕ’-ಎಂದು ಅವನು ಕೆಳಗಿನಿಂದ ಕೂಗಿ ಹೇಳಿದ. ಎಡಗೈಲಿ ಅವನು ಹಗ್ಗ ಹಿಡಿದಿದ್ದ. ಬಲಗೈಲಿ ಅವಳ ಜಡೆಯಿತ್ತು. ಈಗ ಅವನೇ ಎದೆಗಿಂತ ಕೆಳಗಿನ ಮಟ್ಟಕ್ಕೆ ನೀರಿನಿಂದ ಮೇಲೆ ಬಂದಿದ್ದ. ಅವಳ ಭುಜ ನೀರಿನ ಮೇಲೆ ಇತ್ತು. ಅವನ ಎಡಗೈಗೆ ಸಾಕಷ್ಟು ಬಿಗಿ ಸಿಕ್ಕಿರಲಿಲ್ಲ. ಈ ಭಾರವನ್ನು ಹೆಚ್ಚು ತಡೆಯುವ ಶಕ್ತಿ ಆ ಕೈಗೆ ಇರಲಿಲ್ಲ. ಬಾವಿ ಇಳಿಯಲು ಮಾಡಿದ್ದ ಪೊಟರೆಯನ್ನು ಹುಡುಕಿ ಅದಕ್ಕೆ ಕಾಲುಗಳನ್ನು ಅಡ್ಡ ಕೊಟ್ಟು ಭದ್ರ ಮಾಡಿಕೊಂಡ. ‘ಅಯ್ಯಯ್ಯಪ್ಪಾ, ನಂಗ್ ಹೆದರಿಕೆಯಾಗುತ್ತೆ. ಬ್ಯಾಗ ಮ್ಯಾಲುಕ್ಕೆಳ್ಕಳೀ’-ಎಂದು ಅವಳು ಬಡಬಡಿಸಲು ಮೊದಲು ಮಾಡಿದಳು.

ಅಷ್ಟರಲ್ಲಿ ಮೇಲಿದ್ದವರು ಒಂದು ಪುಟ್ಟ ಬಣ್ಣದ ತೊಟ್ಟಿಲನ್ನು ತಂದು ಬಂದೂಬಸ್ತಾದ ಹಗ್ಗ ಕಟ್ಟಿ ನಿಧಾನವಾಗಿ ಬಾವಿಯ ಒಳಗೆ ಬಿಟ್ಟರು. ಅದನ್ನು ನೀರಿನ ತನಕ ಇಳಿಸಿಸಿ ಕಲ್ಲೇಶ ಅವಳನ್ನು ಅದರಲ್ಲಿ ಎತ್ತಿ ಕೂರಿಸಿದ. ‘ ಹಗ್ಗ ಎಳೀರಿ ’ -ಎಂದು ಅವನು ಕೂಗಿ ಹೇಳಿದರೆ ಇವಳು, ‘ ನಂಗ್ ಹ್ಯದ್‌ರಿಕೆಯಾಗುತ್ತೆ. ನಾ ವಲ್ಲೆ ’ ಎಂದು ಬಡಬಡಿಸಲು ತೊಡಗಿದಳು. ತೊಟ್ಟಿಲು ಮೇಲೆ ಹೋಗುತ್ತಿರುವಾಗ ಇವಳು ಕಪಿಯಂತೆ ನೆಗೆದು ಕುಣಿದು ಮಾಡಿ ಕೆಳಗಿರುವ ತನ್ನ ಮೇಲೆ ಬಿದ್ದರೆ ಆ ರಭಸಕ್ಕೆ ತಾನು ಉಳಿಯುವುದಿಲ್ಲವೆಂದು ಯೋಚಿಸಿದ ಕಲ್ಲೇಶ, ತಾನು ಉಟ್ಟಿದ್ದ ಪಂಚೆ ಬಿಚ್ಚಿ ಅವಳನ್ನು ಸೇರಿಸಿ ತೊಟ್ಟಿಲಿನ ಕಟ್ಟಿಗೆ ಕಟ್ಟಿದ. ಮೈಮೇಲೆ ಹಾಕಿಕೊಂಡಿದ್ದ ಬನೀನು ಬಿಚ್ಚಿ ಅದನ್ನೆ ಲಂಗೋಟಿ ಮಾಡಿಕೊಂಡ. ತೊಟ್ಟಿಲು ನಿಧಾನವಾಗಿ ಮೇಲಕ್ಕೆ ಹೋಯಿತು. ನಾಲ್ಕು ಜನ ಗಂಡಾಳುಗಳು ಸೇರಿ ಎಳೆದ ತೊಟ್ಟಿಲಿನಲ್ಲಿ ಕೂತು ಒಂಬತ್ತು ಮೊಳದ ಪಂಚೆಯಿಂದ ಕಟ್ಟಿಸಿಕೊಂಡ ಅವಳು ಗೌರಿ ಹಬ್ಬದ ದಿನ ಕೆರೆಯಿಲ್ಲದ ಊರಿನಲ್ಲಿ ಬಾವಿಯ ಒಳಗಿನಿಂದ ಬರುವ ಗೌರಮ್ಮನಂತೆ ಮೇಲೆ ಬಂದಳು.

ಅವಳ ಹಿಂದೆಯೇ ಕಲ್ಲೇಶನೂ ಮೇಲೆ ಹತ್ತಿ ಬಂದ. ಒಳಗೆ ಸಾಕಷ್ಟು ನೀರು ಹೋಗಿ ಅವಳ ಹೊಟ್ಟೆ ದಪ್ಪವಾಗಿತ್ತು. ಭಯ, ಗಾಬರಿ, ನಾಚಿಕೆ ಮೊದಲಾದುವೆಲ್ಲ ಸೇರಿ ಕಣ್ಣು ಕೆಂಪಗಾಗಿದ್ದವು. ಮೇಲಿನಿಂದ ಬೀಳುವಾಗ ಬಾವಿಯ ಒಳದಡಕ್ಕೆ ಸವರಿಕೊಂಡು ಹೋಗಿ ಭುಜ, ಬೆನ್ನು ಮತ್ತು ತಲೆಯ ಒಂದು ಪಾರ್ಶ್ವದಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಮೊದಲು ಅವಳನ್ನು ನೆಲದ ಮೇಲೆ ಮಕಾಡೆ ಮಲಗಿಸಿ ಕಲ್ಲೇಶ ಸೊಂಟವನ್ನು ನಿಧಾನವಾಗಿ ಅಮುಕಿದ. ಹೊಟ್ಟೆಯೊಳಗೆ ಸೇರಿದ್ದ ನೀರು ಬಾಯಿಯಿಂದ ಹೊರಗೆ ಬಂದು ಕಕ್ಕಿಕೊಂಡಳು. ರೋಜಾಸೊಪ್ಪು ಅರೆದು, ರಕ್ತ ಬರುತ್ತಿದ್ದ ಜಾಗವನ್ನು ಒರೆಸಿ ಮೆತ್ತಿದಾಗ ಅಯ್ಯಯ್ಯಮ್ಮ ಎಂದು ಹೊಡೆದುಕೊಳ್ಳಲು ಪ್ರಾರಂಭಿಸಿದಳು.
ಕಲ್ಲೇಶ ಅಲ್ಲಿ ನೆರೆದಿದ್ದವರ ಕಡೆ ತಿರುಗಿ ಹೇಳಿದ: ‘ಇಲ್ಲೇನು ಕೆಲಸ, ನೀವೆಲ್ಲ ಮನೆಗೆ ಹೋಗಿ.’ ಜನಗಳು ಹೋಗಲೊಲ್ಲರು. ಆದರೆ ಕಲ್ಲೇಶ, ಅಕ್ಕಮ್ಮ, ಪಕ್ಕದ ಮನೆಗಳ ಇಬ್ಬರು ಗಂಡಸರು ಸೇರಿ ಎಲ್ಲರನ್ನು ಅಲ್ಲಿಂದ ಅಟ್ಟಿದರು.
‘ಬಿಸಿಬಿಸಿಯಾಗಿ ಅವಳಿಗೆ ಒಂದು ಬಟ್ಲು ಕಾಫಿ ಮಾಡಿಕೊಡಿ.’ -ಎಂದು ಕಪಿನೀಪತಯ್ಯನವರ ಹೆಂಡತಿ ಪುಟ್ಟಮ್ಮ ಹೇಳಿದರು.
‘ಈ ಮುಂಡ್ಹೇತ್ತದಕ್ಕೆ ಕಾಫಿ ಬೇರೆ ಕೇಡು. ಇವರವ್ವನ ಮಾದಿಗರು …….’-ಎಂದು ಕಲ್ಲೇಶ ಬೇರೆ ಪಂಚೆ ಉಟ್ಟುಕೊಳ್ಳಲು ಹೋದ. ಅವನು ಪೋಲೀಸು ನೌಕರಿಯಲ್ಲಿದ್ದು ಕಾಫಿ ಕುಡಿಯುವುದು ಕಲಿತಿದ್ದವನು. ಆದರೆ ದಿನವೂ ಬೇಕೆಂಬ ಚಟವಿರಲಿಲ್ಲ. ಆದರೆ ಹಾಸನದಂತಹ ಟೌನಿನಲ್ಲಿದ್ದು, ಅದು ಪೋಸ್ಟ್‌ಮ್ಯಾನರ ಮಗಳಾದ ಕಮಲು ಹಳ್ಳಿಗೆ ಬಂದರೂ ಕಾಫಿ ಇಲ್ಲದಿದ್ದರೆ ಹ್ಯಾಗೆ? ಆದುದರಿಂದ ಅವರ ಮನೆಯಲ್ಲಿ ಕಾಫಿ ಪುಡಿ ಇತ್ತು. ನಂಜುವೆ ಹೋಗಿ ಒಂದು ಲೋಟ ಮಾಡಿ ತಂದು ಅತ್ತಿಗೆಗೆ ಕೊಟ್ಟಳು. ಒಂದು ಸಲ ಬಾಯಿಯಿಂದ ಹೀರಿದ ಕಮಲ ಲೋಟವನ್ನು ನೆಲದ ಮೇಲೆ ಇಟ್ಟು, ‘ಥೂ, ಈ ಹಳ್ಳಿ ಮುಂಡೇವುಕ್ಕೆ ನ್ಯಟ್ಟಗೆ ಕಾಫಿ ಮಾಡಕ್ಕ್ ಬರಲ್ಲ. ಯಾವತ್ತಾದ್ರೂ ಕುಡ್ದಿದ್ರೆ ತಾನೇ’-ಎಂದುದು ಕಲ್ಲೇಶನಿಗೆ ಕೇಳಿಸಿತು. ಅವನು ಹತ್ತಿರ ಬಂದು ಆ ಲೋಟವನ್ನು ಕೈಗೆ ತೆಗೆದುಕೊಂಡು ಅವಳ ತಲೆಯ ಮೇಲೆ ಸುರಿದ. ಅವಳು ಮತ್ತೆ ಬಾಯಿ ತೆಗೆಯಲಿಲ್ಲ. ಅವನು ಒಳಗೆ ಹೋದ, ‘ಏಳೇ, ಬ್ಯಾರೆ ಸೀರೆ ಉಟ್ಕ’ -ಎಂದು ಅಕ್ಕಮ್ಮ ಅವಳಿಗೆ ಹೇಳಿದಳು. ಅಲ್ಲಿ ಉಳಿದಿದ್ದ ಇಬ್ಬರು ಗಂಡಸರು ಒಳಗೆ ಹೋಗಿ ಅಲ್ಲಿ ಬರೀ ಹೆಂಗಸರನ್ನೇ ಬಿಟ್ಟರು. ಅವಳು ಮೇಲೆ ಏಳಲಿಲ್ಲ, ಒದ್ದೆಯಾದ ಸೀರೆಯನ್ನು ಬದಲಾಯಿಸಲೂ ಇಲ್ಲ. ಕೆದರಿದ ಒದ್ದೆ ಕೂದಲನ್ನು ಬಿಟ್ಟುಕೊಂಡು ಬಾವಿಯ ದಡದಲ್ಲಿಯೇ ಕುಕ್ಕುರು ಬಡಿದಿದ್ದಳು.
ಆ ದಿನ ರಾತ್ರಿಯೂ ಕಮಲೂ ಊಟ ಮಾಡಲಿಲ್ಲ. ಕಲ್ಲೇಶ ತನ್ನ ಪಾಡಿಗೆ ತಾನು ಊಟ ಮುಗಿಸಿದ. ನಂಜು ಬೇಡವೆಂದರೂ, ಬಸುರಿಯೆಂದು ಬಲವಂತಮಾಡಿ ಅಕ್ಕಮ್ಮ ಬಡಿಸಿದಳು. ಅಕ್ಕಮ್ಮನದಂತೂ ರಾತ್ರಿ ಊಟವಿಲ್ಲ. ವಯಸ್ಸಾಗಿ ಅರಗುವುದಿಲ್ಲವೆಂದು ಫಲಹಾರ ಸಹ ಬಿಟ್ಟು ಆಗಲೇ ಹತ್ತು ವರ್ಷದ ಮೇಲೆ ಆಗಿತ್ತು.

ರಾತ್ರಿ ಕಮಲು ತನ್ನ ಮಲಗುವ ಕೋಣೆಯಲ್ಲಿ ಬಿದ್ದುಕೊಂಡಳು. ಅಕ್ಕಮ್ಮ, ನಂಜು, ಇಬ್ಬರನ್ನು ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಹೊಂದಿಕೊಂಡು ಮಲಗುವಂತೆ ಕಲ್ಲೇಶ ಸೂಚನೆ ಕೊಟ್ಟ. ಮತ್ತೆ ರಾತ್ರಿಯ ಹೊತ್ತು ಎದ್ದು ಅವಳು ಹೊರಗೆ ಹೋಗಿ ಬಾವಿಗೆ ಬಿದ್ದಾಳೆಂದು ಪೋಲೀಸ್ ಇಲಾಖೆಯಲ್ಲಿದ್ದ ಅವನು ಶಂಕಿಸಿದ. ಅವರಿಬ್ಬರೂ ಹಾಗೆ ಮಲಗಿದುದರಿಂದ ಯಾರೂ ರಾತ್ರಿ ಹೊತ್ತು ಬಾಗಿಲು ತೆಗೆದು ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಕಲ್ಲೇಶ ಕೋಣೆಯ ಬಾಗಿಲಿನಲ್ಲಿ ಹಾಸಿಗೆ ಹಾಕಿಕೊಂಡು ಮಲಗಿದ. ಅವನಿಗೆ ಬೇಗ ನಿದ್ರೆ ಹತ್ತಲಿಲ್ಲ. ಏನೇನೋ ಯೋಚನೆ. ತನಗೆ ಎಂತಹ ಹೆಣ್ಣು ಗೊತ್ತು ಮಾಡಿದ ಎಂದು ತಂದೆಯ ಮೇಲೆ ಕೋಪ. ಹೊರಗೆ ಯಾರಯಾರದೋ ನೆನಪು. ಎಷ್ಟೋ ಹೊತ್ತಿನ ಮೇಲೆ ಕಣ್ಣು ಹೊತ್ತಿಕೊಂಡು ಬಂತು.

ಆದರೆ ಇದ್ದಕ್ಕಿದ್ದ ಹಾಗೆಯೇ ಎಚ್ಚರವಾಯಿತು. ಅಡಿಗೆ ಮನೆಯಲ್ಲಿ ಏನೋ ಬೆಳಕು ಕಂಡಹಾಗೆ ಆಯಿತು. ಮಲಗಿದ್ದವನು ತಲೆ ಎತ್ತಿ ಕೋಣೆಯೊಳಗೆ ನೋಡಿದರೆ ಅವಳು ಇರಲಿಲ್ಲ. ಶಬ್ದ ಮಾಡದೆ ಎದ್ದು, ಅಡುಗೆ ಮನೆಯ ಬಾಗಿಲಿಗೆ ಬೆಕ್ಕಿನ ಹೆಜ್ಜೆ ಇಟ್ಟುಕೊಂಡು ಹೋಗಿ ನೋಡುತ್ತಾನೆ: ಒಲೆಯ ಮುಂದೆ ಕುಳಿತಿದ್ದಾಳೆ. ತಲೆಕೂದಲು ಕೆದರಿಯೇ ಇದೆ. ದೇವರ ಗೂಡಿನ ಸಣ್ಣ ಸೊಡರು ಉರಿಯುತ್ತಿದೆ. ಅವಳು ಅದೇನೋ ತಿನ್ನುತ್ತಿರುವಂತೆ ಕಾಣಿಸಿತು. ಮೆಲ್ಲನೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನೋಡುತ್ತಾನೆ: ರಾತ್ರಿ ಊಟ ಬೇಡವೆಂದು ಹಟ ಮಾಡಿದ್ದ ಅವಳು ಅನ್ನದ ಚರುಕಿಗೆ ಉಳಿ ಸುರಿದು ಕಲಸಿಕೊಂಡು ಗದುಗುತ್ತಿದ್ದಾಳೆ. ಪಕ್ಕದಲ್ಲಿಯೇ ಮಜ್ಜಿಗೆಯ ಮಡಿಕೆ.

ಅವನು ಶಬ್ದ ಮಾಡದೆ ಹಾಗೆಯೇ ಹಿಂತಿರುಗಿ ಬಂದು ಮಲಗಿಕೊಂಡ. ಅವಳು ಹಿಂದೆ ಎಷ್ಟೋ ದಿನ ಹಟ ಮಾಡಿ ಊಟ ಬಿಟ್ಟಿದ್ದಳು. ನಂತರ ಎಲ್ಲರೂ ಮಲಗಿದ ಮೇಲೆ ಹೀಗೆ ಏಕಾಂತದಲ್ಲಿ ನಿಶಾಭೋಜನ ಮುಗಿಸಿ ಏನೂ ತಿಳಿಯದವಳಂತೆ ಬಂದು ಮಲಗಿ ನಿದ್ರೆ ಮಾಡಿ ನಾಳೆ ಬೆಳಿಗ್ಗೆ ಎದ್ದು, ‘ನಿನ್ನೆ ರಾತ್ರಿ ನನ್ನ ಉಪವಾಸ ಕೆಡವಿದ್ರು, ಇವರ ಮನೆ ಹಾಳಾಗ’ ಎಂದು ಪಿಟಿ ಪಿಟಿ ಬೈದುಕೊಂಡು ನೆಟಿಕೆ ಮುರಿದಳು. ಅವಳು ಹಾಗೆ ಮಾಡುತ್ತಾಳೆ ಎಂಬುದಕ್ಕೆ ರಾತ್ರಿ ಮುಚ್ಚಿಟ್ಟಿದ್ದ ಅನ್ನ ಮಾಯವಾಗುತ್ತಿದ್ದುದೇ ಸಾಕ್ಷಿಯಾಗುತ್ತಿತ್ತು. ಆದರೆ ಆದಿನ ಅದನ್ನು ಪ್ರತ್ಯಕ್ಷ ಕಂಡಂತೆ ಆಯಿತು. ಇನ್ನೊಂದು ಮದುವೆ ಮಾಡಿಕೊಂಡು ಬಿಡಬೇಕು, ಈ ಹೀನಸುಳಿ ಮುಂಡೇದ ಒದ್ದು ಓಡಿಸಬೇಕು, ಎಂದು ಅವನು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದ. ಅಷ್ಟರಲ್ಲಿ ಹೊರಗಡೆ ಮೋಟಾರಿನದೋ ಕಾರಿನದೋ ಆಗುವಂತಹ ಶಬ್ದವಾಯಿತು. ಯಾವುದಿರಬಹುದು, ಯಾರಮನೆಗಿರಬಹುದು ಎಂದು ಅವನು ಯೋಚಿಸುತ್ತಿರುವಂತೆಯೇ ಜನಗಳು ಕಾರಿನಿಂದ ಇಳಿದು ಬಂದು ಇವರ ಮನೆಯ ಕದವನ್ನೇ ತಟ್ಟಿದರು. ‘ ಯಾರು? ’ -ಎನ್ನುತ್ತ ಇವನು ಎದ್ದು ದೀಪ ಹೊತ್ತಿಸಿ ಬಾಗಿಲಿಗೆ ಒತ್ತಿ ಮಲಗಿದ್ದ ಅಕ್ಕಮ್ಮನನ್ನು ಎಬ್ಬಿಸಿ ಕದ ತೆಗೆದ. ಬಂದಿದ್ದವರು ಅವರ ಮಾವನವರು, ಅತ್ತೆ. ಜೊತೆಗೆ ಅವರ ಸಂಬಧಿಕರೇ ನಾಲ್ಕು ಜನ. ಕಾರಿನ ಡ್ರೈವರ್ ಯಾರೋ ಅವನಿಗೆ ಗೊತ್ತಿಲ್ಲ. ಅವರನ್ನು ಕಂಡು ಇವನಿಗೆ ಆಶ್ಚರ್ಯ.

‘ಕಮಲು ಹ್ಯಾಗಿದಾಳೆ? ’ -ಗೊಳೋ ಎನ್ನುತ್ತಲೇ ಅವಳ ತಾಯಿ ಒಳಗೆ ಬಂದರು. ‘ಅಡಿಗೆ ಮನೇಲಿ ನೋಡಿ’- ಅವನು ಹೇಳಿದ.
ಅವರು ಅಲ್ಲಿಗೆ ಹೋಗಿ ನೋಡಿದರೆ ಅವಳಿಲ್ಲ. ದೇವರ ಸೊಡರನ್ನು ಅದೇ ತಾನೇ ಆರಿಸಿದ ವಾಸನೆ ಬರುತ್ತಿದೆ. ಎಲ್ಲಿ ಹೋದಳು ಎಂದು ಅವನ ಕೋಣೆಗೆ ಬಂದು ನೋಡಿದರೆ ಚಾಪೆಯ ಮೆಲೆ ಮುಕಾಡೆ ಮಲಗಿ, ತಾನು ಮೇಲೆ ಎದ್ದೇ ಇರಲಿಲ್ಲವೆಂಬಂತೆ ಕಣ್ಣು ಮುಚ್ಚಿಕೊಂಡಿದ್ದಾಳೆ.
‘ನೋಡಿ, ನೀವು ಬಂದಾಗ ಇವಳು ಕದ್ದು ಅಡಿಗೆ ಮನೇಲಿ ಕೂತ್ಕೊಂಡು ಅನ್ನದ ಚರುಕಿನಲ್ಲೇ ಅನ್ನ ಹುಳಿ ತಿಂತಿದ್ಲು. ಈಗ ದೀಪ ಉರುಬಿಬಿಟ್ಟು ಇಲ್ಲಿ ಬಂದು ಏನೂ ತಿಳಿದೋಳ ಹಾಗೆ ಮಲಗಿದಾಳೆ. ನೀವೇ ನೋಡಿ ಬನ್ನಿ’-ಎಂದು ಕೈಲಿ ದೀಪದ ಬುಡ್ಡಿ ಹಿಡಿದು ಅವರನ್ನೆ ಕರೆದುಕೊಂಡು ಹೋಗಿ ತೋರಿಸಿದ.
‘ಈಗ ಹೋಕ್ಕಳ್ಲಿ. ಏನಾಯ್ತು, ಯಲ್ಲಾ ಆರೋಗ್ಯ ತಾನೆ?’ -ಮಾವನವರು ಕೇಳಿದರು.
‘ನೀವು ಯಾಕೆ ಬಂದ್ರಿ? ಏನು ಸಮಾಚಾರ? ’-ಮಾಜಿ ಪೋಲೀಸ್ ಕಾನಿಸ್ಟೇಬಲ್ ಕಲ್ಲೇಶ ಕೇಳಿದ. ‘ನಮಗೆ ನೀನೇ ಟೆಲಿಫೋನ್ ಮಾಡಿಸಿದ್ದೆಯಲ್ಲ: ಕಮಲು ಬಾವಿಗೆ ಬಿದ್ದಿದ್ದಾಳೆ, ಬನ್ನಿ ಅಂತ.’
‘ಹೂಂ. ಹೂಂ. ನಿಮಗೆ ಬಂದು ಫೋನ್ ಮಾಡ್ಸ್‌ದೋರು ಯಾರು ಹೇಳಿ. ಗಡಿಬಿಡೀಲಿ ನಂಗೆ ಮರೆತೇ ಹೋಯ್ತು.’
‘ಯಾವನಾದ್ರೆ ಇವರಿಗೇನಾಗ್ಬೇಕು’-ಎಂದು ಕಮಲು ಒಳಗಿನಿಂದ ಚಟಾರನೆ ಮಾತನಾಡಿದಳು.
ಅಂತು ಮಾಡಿಸಿದವಳು ಅವಳೇ ಎಂಬುದು ಎಲ್ಲರಿಗೂ ಗೊತ್ತಾಯಿತು. ಅವಳ ಪರವಾಗಿ ಮಾಡಿದವರು ಯಾರು ಎಂಬುದು ಮಾತ್ರ ತಿಳಿಯಲಿಲ್ಲ. ಅಷ್ಟು ಪತ್ತೆ ಮಾಡುವುದೇನೂ ಕಷ್ಟವಲ್ಲವೆಂದು ಕಲ್ಲೇಶ ಆ ಮಾತನ್ನು ಮುಂದಕ್ಕೆ ಕೆದಕಲಿಲ್ಲ. ಅವನು ನೇರವಾಗಿ ಪಕ್ಕದ ಮನೆಗೆ ಹೋಗಿ ಬಾಗಿಲು ತಟ್ಟಿದ. ಕಾರು ಬಂದ ಶಬ್ದಕ್ಕೆ ಅವರಿಗೂ ಎಚ್ಚರವಾಗಿತ್ತು. ಕಪಿನೀಪತಯ್ಯ, ಪುಟ್ಟಮ್ಮ, ಇಬ್ಬರನ್ನೂ ಮನೆಗೆ ಕರೆದುಕೊಂಡು ಬಂದ. ಹಾಗೆಯೇ ಇನ್ನೊಂದು ಪಕ್ಕದ ಮನೆಯವರನ್ನೂ ಎಬ್ಬಿಸಿ ತಂದು ಅವನೇ ಮಾತನ್ನು ಪ್ರಾರಂಭಿಸಿದ: ‘ನಾವು ಮಾತಾಡಿದ್ರೆ ಸುಳ್ಳು ಅನ್ನಿಸ್‌ಭೌದು. ಇವರನ್ನೇ ಕೇಳಿ. ಕಪಿನೀಮಾವಯ್ಯ, ಇರೋ ಸಮಾಚಾರ ನೀವೇ ಇವರಿಗೆ ಹೇಳಿ.’

ಅಕ್ಕಪಕ್ಕದವರು ತಾವಾಗಿಯೇ ಮಾತನಾಡಲಿಲ್ಲ. ಕಲ್ಲೇಶನೇ ನಡೆದುದನ್ನು ಹೇಳಿದ. ತಾನು ಒಡೆದುದಾಗಿ ಹೇಳಿದನೇ ಹೊರತು ಒದೆದುದನ್ನು ಆಡಲಿಲ್ಲ. ಅವನು ಹೇಳಿದ್ದೆಲ್ಲ ಸತ್ಯವೆಂದು ಅಕ್ಕಪಕ್ಕದವರು ಬಾಯಿಬಿಟ್ಟು ಒಪ್ಪಿಕೊಂಡರು. ಕಲ್ಲೇಶನ ಅತ್ತೆ ಮಾತನಾಡಿದರು: ‘ಆದ್ರೂನೂ ನಾನು ಸಾಕಿದ ಹೆಣ್ಣುಮಗೂನ ನಿಮ್ಮ ಮನೆ ಹಳ್ಳಿಗಾಡಿಗೆ ಕಳ್ಸಿದೀವಿ. ನೀವು ಅನುಸರಿಸಿಕೊಂಡು ಹೋಗ್ಬೇಕು.’

ಆದರೆ ಮಾವ ಪೋಸ್ಟ್‌ಮ್ಯಾನ್ ರಂಗಣ್ಣನವರು, ತಗ್ಗಿಸಿದ ತಲೆಯನ್ನು ಮೇಲೆ ಎತ್ತಲಿಲ್ಲ. ಕಲ್ಲೇಶ ಅವರನ್ನೇ ಕೇಳಿದ: ‘ನೀವು ಈಗ ಹೇಳಿ. ಅದ್ಯಾವ ಸೂಳೇಮಗ ನಿಮಗೆ ಫೋನು ಮಾಡಿಸ್ದೋನು?’
‘ನನ್ನ ಬಾಯಲ್ಲಿ ಸುಳ್ಳು ಬರುಲ್ಲ. ಫೋನ್ ಬಂದದ್ದು ಚೆನ್ನರಾಯಪಟ್ಟಣದಿಂದ. ಅಲ್ಲಿಯ ಎಲೆಕ್ಟ್ರಿಕ್ ಕ್ಯಾಂಪಿನಿಂದ ಹಾಸನದ ಕ್ಯಾಂಪಿಗೆ ಮಾತಾಡಿದರಂತೆ. ಪೋಸ್ಟ್‌ಮ್ಯಾನ್ ರಂಗಣ್ಣನೋರಿಗೆ ತಕ್ಷಣ ತಿಳಿಸಬೇಕು ಅಂದರಂತೆ. ದಿನಾ ಕಾಗದ ಕೊಡುಕೆ ಆ ಕಡೆ ಹೋಗ್ತಿನಲಾ ನಾನು. ನನ್ನ ಗುರುತಿತ್ತು. ಎಲೆಕ್ಟ್ರಿಕ್ ಫೋರ್‌ಮ್ಯಾನ್ ಬಂದು ವಿಷಯ ಹೇಳ್ದ. ಕಲ್ಲೇಶ ಅನ್ನೋರೇ ಫೋನ್ ಮಾಡಿದ್ರು ಅಂದ. ಇದೇನಪ್ಪ ಗ್ರಾಚಾರ ಅಂತ ಇಪ್ಪತ್ತೈದು ರೂಪಾಯಿ ಬಾಡಿಗೆ ಗೊತ್ತುಮಾಡಿ ಓಡಿಬಂದ್ವು.’
‘ಈಗ ಹ್ಯಾಗೂ ಬಂದಿದೀರಾ. ಜೊತೇಲಿ ಕಾರಿದೆ. ನಿಮ್ಮ ಮಗಳಿಗೂ ಬೇಜಾರು, ಕರ್ಕಂಡು ಹೋಗಿ.’
‘ಒಂದ್ ನಾಕು ದಿನ ಬಂದು ಸುದಾರಿಸ್ಕಳ್ಲಿ’-ಎಂದು ಅತ್ತೆ ತಕ್ಷಣ ಹೇಳಿದರು.
ಆದರೆ ಅಷ್ಟೇ ತಕ್ಷಣ ಮಾವನವರು ಎಂದರು: ‘ಬ್ಯಾಡ, ಬ್ಯಾಡ. ಗಂಡ ಹೆಂಡ್ತಿ ಜಗಳ ಕಾದಿರುವಾಗ ನಾವು ಮಗಳನ್ನ ಕರ್‌ಕಂಡು ಹೋಗ್‌ಬಾರ್‌ದು. ಅವರು ನಗ್ತಾನಗ್ತಾ ಇರುವಾಗ ಬರಬೇಕು ಹೋಗಬೇಕು.’
‘ನಮ್ಮ ಮಗೂನ ನಾವು ತೌರುಮನೆಗೆ ಕರ್ಕಂಡ್ ಹೋಗೂಕ್ಕೆ ಏನೂ ಅಂದ್ರೆ?’-ಅವರ ಹೆಂಡತಿ ಕೇಳಿದರು.
‘ನಿಂಗೇನು ಗೊತ್ತಾಗುತ್ತೆ, ಸುಮ್‌ನಿರು. ಈ ಸಮಯದಲ್ಲಲ್ಲ’-ಯಜಮಾನರು ನುಡಿದರು.
‘ನಾನು ಬಂದೇ ಬತ್ತೀನಿ’-ಎಂದು ಮೊದಲ ಬಾರಿಗೆ ಮಾತನಾಡಿ ಕಮಲು ಮಲಗಿದಲ್ಲಿಂದ ಮೇಲೆ ಎದ್ದು ಬಂದು ತಾಯಿಯ ಪಕ್ಕದಲ್ಲಿ ನಿಂತಳು.
‘ಅಮ್ಮಾ, ನಾನು ಹೇಳ್ದಾಗೆ ಕೇಳು. ನೀನು ಈಗ ಬರ್ಬಾರ್ದು’-ಎಂದು ತಂದೆ ಹೇಳಿದ್ದನ್ನು ಅವಳು ಕೇಳಲಿಲ್ಲ. ಇನ್ನು ನಿಧಾನ ಮಾಡಬಾರದೆಂದು ಯೋಚಿಸಿದ ಅವರು ಮೇಲೆ ಎದ್ದು, ತಮ್ಮ ಜೊತೆಗೆ ಬಂದಿದ್ದವರನ್ನು, ‘ಯಲ್ಲಾ ನಡೀರಿ, ಕಾರಿನಲ್ಲಿ ಕೂತ್ಕಳಿ. ಊರಿಗೆ ಹೋಗ್‌ಬೇಕು’-ಎಂದು ಎಬ್ಬಿಸಿಯೇ ಬಿಟ್ಟರು. ‘ನಮ್ಮ ಹೆಣ್ಮಗು…..’ ಎನ್ನುತ್ತಿದ್ದ ಹೆಂಡತಿಗೆ, ‘ಉದ್ದಕೂ ನಿನ್ನ ಮಾತಿನಂತೆ ನಡೆದು ಹೀಗಾಯ್ತು. ಇನ್ನು ಬಾಯಿ ಮುಚ್ಚು’ ಎಂದರು. ಎಲ್ಲರೂ ಹೋಗಿ ಕಾರಿನಲ್ಲಿ ಕುಳಿತರು. ಕಮಲು ಹಟ ಹಿಡಿದು ತಾನೂ ಒಳಗೆ ನುಗ್ಗಲು ಬಂದಳು. ರಂಗಣ್ಣನವರೇ ಅವಳ ಕೈ ಹಿಡಿದು ಹೊರಗೆ ನಿಲ್ಲಿಸಿದರು. ಓಡಿ ಬಂದು ನಂಜು ಅಣ್ಣನ ಅತ್ತೆಯ ಮುಂದೆ ಕುಂಕುಮ ಹಿಡಿಯುವಷ್ಟರಲ್ಲಿಯೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದ ಡ್ರೈವರು ಕಾರನ್ನು ಸ್ಟಾರ್ಟ್‌ಮಾಡಿ ಮುಂದೆ ಚಲಿಸಿಸಿದ. ‘ಇಪ್ಪತ್ತೈದು ರೂಪಾಯಿ ಸುಮ್ನೆ ದಂಡ. ಒಂದು ತಿಂಗಳ ಸಂಬಳ. ಎಲ್ಲಿಂದ ತರೂದು?’-ಎಂದು ರಂಗಣ್ಣನವರು ಅನ್ನುತ್ತಿದ್ದುದು ನಂಜುವಿಗೆ ಕೇಳಿಸಿತು.
ಇಪ್ಪತ್ತು ಮಾರು ಹೋದ ಮೇಲೆ ಕಾರು ನಿಂತಿತು. ‘ಕಲ್ಲೇಶಣ್ಣ, ಸ್ವಲ್ಪ ಇಲ್ಲಿ ಬಾ’-ಎಂದು ಮಾವ ರಂಗಣ್ಣನವರು ಕೂಗಿದರು. ಕಲ್ಲೇಶ ಹೋಗಿ ಕಾರಿನ ಪಕ್ಕದಲ್ಲಿ ನಿಂತುಕೊಂಡ. ಕೆಳಗೆ ಇಳಿದು ಅವನ ಕೈ ಹಿಡಿದುಕೊಂಡು-‘ಸಿಟ್ ಮಾಡ್‌ಬ್ಯಾಡ. ಹೀನ ಚಾಳಿ ಹಸು ತಂದ್ರೂ ಮೇಯ್ಸಿ ಕಟ್ಟಿ ನಿಭಾಯಿಸ್‌ಬೇಕು. ಅವ್ಳುನ್ನ ನೋಡ್‌ಬ್ಯಾಡ. ನನ್ನ ಮುಖ ನೋಡು’ ಎಂದು ಹೇಳುವಾಗ ಅವರ ಕಣ್ಣೀನಲ್ಲಿ ಪಟಪಟನೆ ನೀರು ತೊಟ್ಟಿಕ್ಕಿತು.

‘ನೀವೊಳ್ಳೇ ಹುಡುಗರ ಹಾಗೆ ಆಡ್ತೀರಿ ಅಂದ್ರೆ. ಅದೇನು ಹೀನ ಚಾಳಿ ಅವ್ಳು ಮಾಡಿದ್ದು?’-ಹೆಂಡತಿ ಗಂಡನನ್ನು ಕೇಳಿದಳು.

‘ಮಾತಾಡಿ ಪ್ರಯೋಜನವಿಲ್ಲ’-ಎನ್ನುತ್ತಾ ಯಜಮಾನರು ಮತ್ತೆ ಕಾರಿನಲ್ಲಿ ಕೂತರು. ಡ್ರೈವರ್ ಬೇಗ ಮುಂದೆ ನಡೆಸಿಬಿಟ್ಟ.

ಅಕ್ಕಪಕ್ಕದವರು ಹೋಗಿ ಮಲಗಿಕೊಂಡರು. ಕಲ್ಲೇಶನ ಮನೆಯವರೂ ಮಲಗಿದರು. ಮಾತನಾಡುವುದು ಬೆಟ್ಟದಷ್ಟಿದ್ದರೂ ಆಡುವಂತಿರಲಿಲ್ಲ. ‘ನಸುಗುನಿ ಕಾಯಿನಂಥಾ ತಾಟಗಿತ್ತಿ’-ಎಂದು ಅಕ್ಕಮ್ಮ ನಾಲ್ಕು ಸಲ ಅಂದಳು. ನಂಜು ಮಾತ್ರ ಎಂದಿನಂತೆ ಮೌನವಾಗಿದ್ದಳು. ಕಲ್ಲೇಶನೂ ಸುಮ್ಮನಿದ್ದುದರಿಂದ ಅಕ್ಕಮ್ಮನಿಗೆ ಮಾತಾಡಲು ಅವಕಾಶ ಆಗಲಿಲ್ಲ. ಅವನ ಕೈಮೇಲೆ ಹನಿಕಿದ ಮಾವನವರ ಕಣ್ಣೀರು ಮನಸ್ಸನ್ನು ಕೊರೆಯಿತ್ತಿತ್ತು. ತನಗೆ ಪ್ಲೇಗು ಆದಾಗ ಅವರು ಮಗುವಿನಂತೆ ಪಾಲಿಸಿದ್ದರು. ಅವರ ಸ್ವಭಾವ ಅಂತಃಕರಣಗಳ ಬಗೆಗೆ ಅವನಲ್ಲಿ ಗೌರವ ಹುಟ್ಟಿತ್ತು. ಮೇಲೆ ಎದ್ದು ಹೆಂಡತಿಯ ಸೊಂಟ ಮುರಿಯುವಂತೆ ಒದೆಯಬೇಕೆಂಬ ಯೋಚನೆ ಹೊತ್ತಿಬರುತ್ತಿತ್ತು. ಆದರೆ ಮಾವನವರ ಕಣ್ಣೀರು ಅವನನ್ನು ಕಟ್ಟಿ ಹಾಕಿ ಹಾಸಿಗೆಯಲ್ಲಿಯೇ ಮಲಗುವಂತೆ ಮಾಡಿತ್ತು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.