ತೇರು – ೩

‘ಯಾಕೋ ದ್ಯಾವಪ್ಪಾಣಿ…?’
ದ್ಯಾವಪ್ಪನ ಇನೊಂದು ನಿಟ್ಟುಸಿರೇ ಅದಕ್ಕ ಉತ್ತರವಾಯಿತು…
‘ಬಾ…ಇಲ್ಲಿ ಕೂಡೂಣೂ…’ ಅಂತ ಕರಕೊಂಡು ಹೋಗಿ ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮ್ಯಾಲೆ ಕೂಡಿಸಿಕೊಂಡು ಕೂತೆ.
‘ಆ ಬಿಲ್ಡಿಂಗು ಯಾವದರೀ…?’ ಅಂತ ಎದುರಿನ ಕೆಂಪು ಬಿಲ್ಡಿಂಗು ತೋರಿಸಿ ಕೇಳಿದ.
‘ಅದಣಿ…ಅದು ಹೈಕೋರ್ಟು…’
ದ್ಯಾವಪ್ಪ ಒಮ್ಮಿಗೆಲೇ ನಕ್ಕು ‘ಬರಾಬ್ಬರೀ ಆತ ಬಿಡ್ರಿ…ಇಲ್ಲಿ ಕುಂತು ಇವರು ಕಾಯದೇ ಪಾಸು ಮಾಡಿ ಕಳಸತಾರು…ಅಲ್ಲಿ ಕುಂತು ಅವರು ಈ ಕಾಯ್ದೇದ ಫೂಟ ಪಟ್ಟೀ ಹಿಡದು ನ್ಯಾಯದ ಅಳತೀ ಮಾಡತಾರು…’ ಅಂತ ನುಡದ.
ದ್ಯಾವಪ್ಪ ಯಾವದೋ ತಳಮಳದಾಗ ಇದ್ದಾನ ಅಂತ ಮನಸಿಗೆ ತಟ್ಟಿ ‘ಯಾಕೋ ದ್ಯಾವಪ್ಪಾ…ವ್ಯವಸ್ಥಾದ ಮ್ಯಾಲ ಭಾಳ ಸಿಟ್ಟಾದಂಗ ಅದ…’ ಅಂದೆ.ಈ ಮಾತು ಅವನ ಅಂತಃಕರಣಕ್ಕ ಜಡದಿದ್ದ ಕೀಲಿಯನ್ನ ಒಡದು ಅದರ ಬಾಗಲಾ ತೆರೆಯಿತು …
‘ಇದ ವ್ಯವಸ್ಥಾ ಏನರೀ ಸಾಹೇಬರಣಿ…ಇದು ಹೆಂತಾ ವ್ಯವಸ್ಥಾ ?ಇಲ್ಲಿ ನೋಡರಿ…ಈ ಬೆಂಗಳೂರಿನ್ಯಾಗ ಎಲ್ಲಾ ಕಡೆ ಝಗ-ಮಗ ಅಂತ ಬೆಳಕು ಚಲ್ಯಾಡಿ ಹಾದೀಗುಂಟ ಹರೀತೈತಿ…ಇಡೀ ಊರಿಗೆ ಊರಣಿ ಚಲಸಾಕತ್ತೈತಿ ಅನ್ನೂ ಹಂಗ ರಸ್ತಾದ ತುಂಬ ಬಸ್ಸೂ -ಕಾರಗಾಡೀ ಮತ್ತ ಮೋಟರ ಸೈಕಲ್ಲಗೋಳು ಭರಂಡೀ ಹೋಗತಾವು… ಅಲ್ಲಿ ನಮ್ಮ ಊರಗೋಳೊಳಗ ನಿಮಗಣಿ ಗೊತ್ತ ಐತೆಲ್ಲರೀ…ಅಲ್ಲಿ ಕತ್ತಲಿ ತುಂಬೇತಿ… ಚಿಮಣೀ ಬುಡ್ಡಿಗೆ ತಟಕ ಎಣ್ಣಿ ಸಿಗೂದುಲ್ಲ…ಇಡೀ ಊರಿಗೆ ಊರಣಿ ಕುಂಟ ಬಿದ್ದದಾವು…’ ಅಂತಂದು ಮುಖಾ ತೆಳಗ ಮಾಡಿದ.ಅಂವಗ ತೇಕ ಹತ್ತಿದಂಗ ಆಗಿತ್ತು…ನಾನು ಅವನ ಮುಂದಿನ ಮಾತಿಗೆ ಕಾಯ್ದೆ…ಅಂವ ಒಂದು ಮಿನಿಟು ಸುಮ್ಮನೇ ಕೂತವ ಮತ್ತೆ ಮುಖಾ ಮ್ಯಾಲಕೆತ್ತಿ ಮಾತಾಡಿದ :
‘…ಟೆನೆನ್ಸೀ ಬಂತು ಖರೇ ಬಡವರಿಗೇನು ದಕ್ಕಲಿಲ್ಲ…ನಮ್ಮ ಜಮೀನು ನಮ್ಮ ಊರ ಗೌಡಗಣಿ ಹೋತು…ಅಂವಗ ಐವತ್ತ -ಅರವತ್ತ ಎಕರೇ ಭೂಮಿ ಐತಿರೀ.ಆದರ ಕಾಯ್ದೇಕ್ಕ ಹೆಂಗ ಟಾಂಗ ಕೊಡಬೇಕಂತ ಯಾವ ವಕೀಲನಕಿಂತಾ ಹೆಚ್ಚ eನ ಐತಿ ಅಂವಗ…ನನಗಿಂತಾ ಕಮ್ಮ ವಯಸ್ಸಿನ ತನ್ನ ಮಗನ್ನ ನಮ್ಮ ಹೊಲಕ್ಕ ಟೆನೆಂಟ ಅಂತ ಮಾಡಿ ಡಿಕ್ಲೆರೇಶನ್ ಕೊಡಿಸ್ಯಾನರಿ… ಹದಿನೆಂಟ ವರ್ಷದ ಹುಡಗ ಹದಿನೈದ ವರ್ಷದ ಹಿಂದಿಂದಣಿ ನಮ್ಮ ಹೊಲಾ ಹೊಡ್ಯಾಕತ್ಯಾನಂತ…!ಅಲ್ಲಿ ಗೋಕಾಂವೀ ರಾಮದುರ್ಗದಾಗ ಟ್ರಿಬ್ಯೂನಲ್ಲಗೋಳ ಅದಾವ ನೋಡ್ರಿ…ಆ ಟ್ರಿಬ್ಯುನಲ್ಲ ಗೋಳಂದರ ಈ ಎರಡೂ ಬಿಲ್ಡಿಂಗಗೋಳ ಮರಿಗೋಳು !ಆತ ಬಿಡ್ರಿ…’ ಅಂತ ಮತ್ತೆ ಮುಖಾ ತೆಳಗ ಹಾಕಿದ…ನನಗ ಒಂದ ನಮೂನಿ ಶಾಕ್ ಆದಂಗ ಆತು…ಅವನ ಮಾತುಗಳನ್ನ ಅರ್ಥಾ ಮಾಡಿಕೋಲಿಕ್ಕೆ ಪ್ರಯತ್ನಿಸುತ್ತಿದ್ದವನಂತೆ ನಿಶ್ಚೇಷ್ಟಿತನಾಗಿ ಕೂತೆ…
‘…ಮಳೀ ಇಲ್ಲದಿರಕ ಹೊಟ್ಟಿಗೆ ಕ್ಯಾರಾ ಹಾಕೋಬೇಕಾಗತೈತೀ…ಕುಲದ ಕಸಬು ಬಿಡಬ್ಯಾಡಾ…ಹತ್ತ ಊರು ಅಡ್ಯಾಡು…ಹತ್ತ ಊರ ಅಡ್ಯಾಡಿದರ ನಿನ್ನ ಹೊಟ್ಟಿ ತುಂಬತೈತಿ…ಈ ಹೊಲಾ ನೆಂಬಿಕೊಂಡರ ಹೊಟ್ಟಿಗೆ ಕ್ಯಾರಾ ಹಾಕೋಬೇಕಾಗತೈತಿ ನೋಡು ಅಂತ ನಮ್ಮ ಅಜ್ಜಗೋಳಿಗೆ ಈ ಗೌಡನ ಅಜ್ಜಗೋಳು ಹೇಳಿದರಂತ… ಅಂದಿಂದನಣಿ ಬಲೀ ನೇಯಾಕತ್ತಿದ್ದರವರು…ನಮ್ಮ ಅಜ್ಜಗೋಳು ಹುಚಪ್ಯಾಲಿಗೋಳು ಇದ್ದಿರಬೇಕು…! ಗೌಡರು ಹೇಳಿದ್ದು ಅಗದೀ ವಾಜಮಿಯ ಮಾತು ಅಂತ ಜೋಳಿಗೀ ಕಟಿಗೊಂಡು,ತೊಗಲಿನ ಗೊಂಬಿಗೋಳ ಪೆಟಿಗೀ ಹೊತಗೊಂಡು ಊರೂರು ಅಡ್ಯಾಡಿ ರಾಮಾಯಣಾ-ಮಹಾಭಾರತಗೋಳನ ಕಥೀ ಮಾಡಿ ಹೇಳಿದರು… ದುಶ್ಶಾಸನ ದ್ರೋಪದಿಯ ಜಡೀ ಹಿಡದು ಎಳಕೊಂಡು ರಾಜಸಭಾಕ್ಕ ತಂದದ್ದನ್ನ – ದುರ್‌ಯೋಧನ ಧರ್ಮರಾಜಗ ಸ್ವಂತ ಅಪ್ಪಗ ಹುಟ್ಟಿದ ಮಗಾ ಅಲ್ಲ ನೀನಾ…ನಿನಗ ಒಂದ ಇಂಚು ಸೈತ ಜಾಗಾ ಕೊಡೂದುಲ್ಲ ಹೋಗಲೇ…ನೀಯೇನ ನಮ್ಮ ಕುಲದ ಸಂತಾನ ಅಲ್ಲ ಅಂತ ಜಾಡಿಸಿ ಒಕ್ಕೊಟ್ಟದ್ದನ್ನ ಕಥೀ ಮಾಡಿ ಹೇಳೂವಷ್ಟೊತ್ತಿಗೆ ಇವರ ಹೊಲಾನಣಿ ಹೋತು ! ಅತ್ತ ತೊಗಲ ಗೊಂಬಿಗೋಳೂ ಹೋದೂ ಇತ್ತ ಹೊಲಾನೂ ಹೋತು….’.
‘ತೇರಿನ ಸೇವಾ…ತೇರಿನ ಸೇವಾಕ್ಕ ಹೋದಾಗ ಭಕ್ತಾದಿಗಳು ಕೊಡತಿದ್ದರಲಾ…?’
‘ಹ್ಹುಂ…!’ ಅಂತ ದ್ಯಾವಪ್ಪ ಯಾಂಸೀ ದೀಡೀ ದನೀಲೆ ನಕ್ಕ…ಹಂಗ ನಕ್ಕು ‘…ನಮ್ಮ ಅಜ್ಜಗೋಳು ವಿಠ್ಠಲನ ಭಕ್ತರು ಕೊಟ್ಟದ್ದನ್ನ ಚಕಡ್ಯಾಗ ಹೇರಿಕೊಂಡು ಬರತಿದ್ದರು ಅಂತ ನಮ್ಮ ಅಪ್ಪ ಹೇಳತಿದ್ದ…ಆಗ ಕೊಡವರು ಅದನ್ನ ಭಕ್ತೀ ಅಂತ ಕೊಡತಿದ್ದರು ಮತ್ತ ಇಸಗೋಳಾವರ ಅದನ್ನ ಭಿಕ್ಷಾ ಅಂತ ಅನಕೋತಿದ್ದಿಲ್ಲ…ಮುಂದ ಕೊಡವರಿಗೆ ಅದು ಭಿಕ್ಷಾ ಅಂತ ತಿಳೀತು…ಕೊಡೂದನ ಬಂದ ಮಾಡಿದರು…ನಮ್ಮ ಅಪ್ಪನ ಕಾಲದಾಗಣಿ ಯಾವ ಭಕ್ತರೂ ಏನ ಒಂದ ನಯ್ಯಾ ಪೈಸಾ ಕೊಡತಿದ್ದಿಲ್ಲರಿ…ಜ್ವಾಳಾ ಕಾಳನೂ ಇಲ್ಲ….ಕಾಡಿಬೇಡಿ ತಿರಕೊಂಡು ಉಂಬವನಿಗೇ ಕೈಯೆತ್ತಿ ಒಂದು ತುತ್ತು ನೀಡುವುದಿಲ್ಲ…ಹಂತಾದ್ದರಾಗ ಇನ್ನ ಇಲ್ಲದ ದೇವರ ಮ್ಯಾಲಿನ ಭಕ್ತೀಗೆ ಕೊಡಾಂವ ಯಾಂವರೀ…? ಈಗ ಮಂದಿಗೆ ದೇವರ ಖರೇ ಹಕೀಕತ್ತು ತಿಳದೈತಿ.ಹಿಂಗಾಗಿ ಕೊಡೂದೂ ಗಿಡೂದೂ ಬಂದ ಮಾಡ್ಯಾರು…ಅವರದೇನ ತಪ್ಪ ಅಲ್ಲರೀ…ದೇವರೂ

ದಿಂಡರೂ ಎಲ್ಲಾ ಔಟ್ ಆಫ್ ಡೇಟ ಆಗ್ಯಾವರೀ…! ಔಷದದ ಬಾಟಲೀ ಮ್ಯಾಗ ಹಾಕಿರತಾರ ನೋಡರಿ…ಎಕ್ಸ್‌ಪೈರೀ ಡೇಟು…ಹಂಗ! ದೇವರೂ ದಿಂಡರದೂ ಎಕ್ಸ್‌ಪೈರೀ ಡೇಟು ಆಗಿ ಹೋಗೇತಿರಿ…ಹಿಂತಾ ದೇವರ ತೇರಿನ ಸೇವಾ ಮಾಡಿಕೋತ ನಿರುಪಯೋಗ ಆಗಿ ಹಾಳ ಆಗಲಿಕ್ಕೆ ಬಿಡದಣಿ ನಮ್ಮಂಥಾ ಹುಡಗೋರಿಗೆ ದುಡೀಲಿಕ್ಕೆ ಕೆಲಸಾ ಕೊಡಬೇಕರಿ…’.
‘ಹಂಗರಣಿ…ನೀನು ತೇರಿನ ಸೇವಾಕ್ಕ ಹೋಗೂದನ್ನ ನಿಂದರಸೀ ಅನ್ನು !’ ಅಂತ ನಾನು ನಡುವೆಯೇ ಬಾಯಿ ಹಾಕಿದೆ.
‘ಇನೂ ನಿಂದರಿಸಿಲ್ಲರೀ…ಆದರ ನಾವು ನಡಕೋದರೊಳಗ ನಮಗ ನಂಬಿಕೀ -ನಿಷ್ಠಾ ಇರಬೇಕಲ್ಲರಿ…ಖರೇದಿಂದ ನಡಕೋಬೇಕು…ಹೌದಲ್ಲರಿ ?…ನಮ್ಮ ಅಪ್ಪ ಧರಮನಟ್ಟಿಯ ತೇರು ಇನೂ ಹದನ ದಿನಾ ಐತಿ ಅಂತಿರಬೇಕಾದರ ಯಾತ್ರಾಕ್ಕ ಹೋಗೂದನ್ನ ತಪ್ಪಿಸಿ ಮನ್ಯಾಗ ಅಡಿಕ್ಕೊಂಡು ಬಿಡತಿದ್ದನರೀ…! ಒಳಗ ಅಡಿಗೀಮನ್ಯಾಗ ಕುಂಡ್ರಾವ ! …ಹೊತ್ತು ಮುಣಿಗಿ ಕತ್ತಲಿ ಆದಮ್ಯಾಲ -ಮತ್ತ ಹೊತ್ತು ಮೂಡೂಕಿಂತಾ ಒಂದು ತಾಸು ಮದಲಣಿ- ಇನಣಿ ಕತ್ತಲಿ ಐತಿ ಅನ್ನುವಾಗ ಚರಿಗೀ ತಗೊಂಡು ಹೋಗಿ ಬರತಿದ್ದ…ಮಂದಿ ಕೇಳಿದರ ಮನ್ಯಾನ ಮಂದಿ ಎಲ್ಲಾ -ಅಂವ ಧರಮನಟ್ಟೀ ತೇರಿನ ಸೇವಾದ ಯಾತ್ರಾಕ್ಕ ಹೋಗ್ಯಾನ ಅಂತ ಸುಳ್ಳ ಹೇಳತಿದ್ದಿವಿ… ಹಿಂಗ್ಯಾಕ ಅಡಿಕ್ಕೊಳ್ಳೂದೂ-ನಾವೇನ ಯಾರ ಗಂಟ ತಿಂದದೀವ ಏನ ಅಂತ ಕೇಳಿದರ- ಏ‌ಏಣಿ…ಹಂಗಲ್ಲ…ಹಿಂದಿಂದಣಿ ನಡಕೊಂಡು ಬಂದ ಪದ್ಧತೀ ಐತಿ-ಅಂತ ಹೇಳತಿದ್ದ… ಪದ್ಧತೀ ಬಿಡೂ ದಮ್ಮ ಇಲ್ಲದಿರಕ ಅದನ್ನ ಬರಾಬ್ಬರೀ ನಡಸ ಹಂಗರಣಿ.ಇದೆಂಥಾ ಹೇಸಿ ಕೆಲಸಾ…ಬಿಟ್ಟಂಗೂ ಅಲ್ಲಾ ನಡಿಸಿಧಂಗೂ ಅಲ್ಲ ಅಂತ ಅಂದರ ಬಾರಾ ಖೂನ ಮಾಡಿದ ಅಪರಾಧೀ ಹಂಗ ಸುಮ್ಮನಣಿ ಕುಂತ ಬಿಡತಿದ್ದಾ…! ಷಷ್ಟೀ ದಿವಸ ಬೆಳ್ಳೀ ಚಿಕ್ಕಿ ಮೂಡೂಕಿಂತಾ ಮದಲಣಿ ಊರು ಬಿಟ್ಟು ಹೊತ್ತು ಮುಣಗೂ ಹೊತ್ತಿಗೆ ಕರಕ್ಟಾಗಿ ಧರಮನಟ್ಟಿಯ ಪಡೂ ದಿಕ್ಕಿಗೆ ಮೂಡತಿದ್ದ…!’…ಕುಬೇರಪ್ಪನ ಯಾತ್ರಾದ ಕಥೀ ಕೇಳಿ ನಾನು ಒಂದು ಕ್ಷಣ ದಂಗಾಗಿ ಆಮ್ಯಾಲ -ಖೊಕ್ ಖೊಕ್ಕಂತ ನಕ್ಕೆ…ದ್ಯಾವಪ್ಪ ಒಮ್ಮಿಗೆಲೇ ನನ್ನ ದುರುಗುಟ್ಟಿ ನೋಡಿಧಂಗ ಅನಿಸಿತು…ಸ್ವಿಚ್ ಒತ್ತಿಧಂಗ ನಾನು ನನ್ನ ನಗಿಯನ್ನ ನಿಲ್ಲಿಸಿದೆ…
‘ಹೂಂ…! ಸ್ವತಾ ನಾನಣಿ…ಈಗ ಎರಡ ವರ್ಷ ನಮ್ಮ ಮೂಲ ಮುತ್ಯಾ ಏನು ಹಾದೀ ಹಾಕಿಕೊಟ್ಟಿದ್ದ ನೋಡರಿ…ಅದಣಿ ಪ್ರಕಾರನಣಿ ಅಗದೀ ನಿಷ್ಠಾದಿಂದ ಸೇವಾ ನಡಿಸಿದಿನರೀ…ಒಳಗಿಂದು ಶುದ್ದ ಮಾಡಿಕೊಳ್ಳುವ ಆಚಾರಾ – ಯಾತ್ರಾಣಿ …ಎಲ್ಲಾನೂ ಅಗದೀ ನಿಷ್ಠಾದಿಂದ ನಡಿಸಿದಿನಿ…ಆದರ ನನ್ನ ಮನಸಿಗೇ ಎಲ್ಲಾ ವ್ಯರ್ಥ ಅನಿಸಿತರಿ… ಗೂಗೀ ಕೊಳ್ಳದಾಗ ಈಗ ಯಾವ ಸಿದ್ಧರೂ ಕಾಣೂದುಲ್ಲ…ಅಲ್ಲಿ ಈಗ ಕಳ್ಳರು ಅಡಿಗಿಕೊಂಡಿರತಾರರಿ…ನವಲ ತೀರ್ಥದಾಗ ಗಂಗವ್ವ ಈಗ ಸೆಳವ ಕಳಕೊಂಡಾಳರಿ…
ಆಕೀ ಕಾಲಗೋಳನ ಮುರದ್ದಾರು!ಮುನ್ನೋಳೀ ಹಂತೇಕ ನೀವು ನೋಡಬೇಕರೀ… ನದೀ ಅಂಬುವ ಜಾಗಾದ ತುಂಬ ಆಪು ಬೆಳದು…ದರಿಗಟ್ಟಿ …ನೀರು ಕೊಳತ ನಾರತೈತಿ! ಪಂಚಲಿಂಗೇಶ್ವರನ ಗುಡಿಯ ಅಂಗಳಕ್ಕ ಹೋಗೂ ಹಾದೀಗುಂಟ ಏನ ಅದಾವು ಹೇಳ್ರಿ…ಬಾರಗೋಳು ಮತ್ತ ಶರೇದ ಅಂಗಡಿಗೋಳು…! ನಡ ನಡಕ ತೋರಣಾ ಕಟ್ಟಿರತಾರು…! ಮಾವಿನ ಎಲಿಯ ತೋರಣ ಅಲ್ಲರೀ…ತಂಬಾಕಿನ ಪಾಕೀಟಗಳ ಸರಪಳೀ ತೂಗು ಹಾಕಿದ ತೋರಣಾ !
…ತೆಲೀಮ್ಯಾಲ ಬದಾ ಬದಾ ಅಂತ ಬಿಸಲು ಸುರೀತಿದ್ದರೆ ನೆಳ್ಳಿಗಂತ ಯಾರದರೇ ಮನೀ ಕಟ್ಟಿಗೆ ಹೋದರಣಿ ಆ ಮನಿಯವರು ಸಟಕ್ಕನಣಿ ಬಾಗಲಾ ಹಾಕ್ಕೋತಾರರಿ…ಬಾಯಾರಿಸಿ ನೀರ ಕೇಳಿದರ ಒಂದ ಚರಿಗಿ ನೀರು ಸಿಗೂದುಲ್ಲರಿ… ಚಾದ ಅಂಗಡಿಗೆ ಹೋಗೂ ಅಂತ ಹೇಳತಾರ… ಅವರರ ಏನ ಮಾಡ್ಯಾರರೀ…ಎರಡ ಮೂರು ದಿನಕ್ಕ ಒಮ್ಮೆ ನಳಾ ಬಂದಾಗಣಿ ಅವರಿಗೆ ನೀರು…ಮತ್ತ ಎಂದ ನಳಾ ಬಿಡತಾರೋ ಅಂತನ್ನೂ ಅಂಜಿಕಿ ಎಲ್ಲಾರಿಗು…ನಾ ಎರಡ ವರ್ಷ ಅಗದೀ ನಿಷ್ಠಾದಿಂದ- ಅಗದೀ ಭಕ್ತೀಲಿಂದ ಯಾತ್ರಾ ಮಾಡಿದಿನರಿ…ಆದರ ಯಾವ ಒಂದ ದೇವಸ್ಥಾನದೊಳಗನೂ -ಒಂದು ಕ್ಷೇತ್ರದಾಗಾದರೂ ದೇವರಿದ್ದಾನಂತ ಅನ್ನೂ ಭಾವನಾ ನನಗ ಬರಲಿಲ್ಲ ನೋಡ್ರಿ…ನನ್ನ ಹಂತೇಕ ಭಕ್ತೀ ಐತಿ-ರೊಕ್ಕ ಇಲ್ಲ ಅಂತ ದೇವಸ್ಥಾನಗೋಳಿಗೆ ಹೋದರ ಅಲ್ಲಿ ಪೂಜಾರಿಗೋಳು-ಹೋಗೋ ಮಕಳೀ ಹೋಗು ಅಂತ ಚಂಡಮ್ಯಾಲ ಕೈಕೊಟ್ಟು ಹೊರಗ ನುಗಸತಾರು…ಗುಡೀ ಅನ್ನುವದರೊಳಗ ದೇವರುಗಳೆಲ್ಲಾ ಕಲ್ಲ ಮೂರತಿ ಆಗಿ ನಿಂತಾವರೀ ಸಾಹೇಬರಣಿ…!’ ದೆವ್ವ ಹೊಕ್ಕವರಂಗ ಮಾತಾಡತಿದ್ದ ದ್ಯಾವಪ್ಪನಿಗೆ ನಾನು ಇನ್ನೊಮ್ಮೆ ಅಡ್ಡ ಹಾಕಿದೆ-
‘ನಂಬಿಕಿ -ಶ್ರದ್ಧಾ ಅನ್ನೂವು ಮುಖ್ಯಪಾ ದ್ಯಾವಪ್ಪಾ … ನಿನ್ನ ಮುತ್ಯಾಗೋಳಿಗೆ ಇದ್ದ ಶ್ರದ್ಧಾ ನಂಬಿಕೀ ನಿನಗ ಇಲ್ಲದಾಗ್ಯಾವ.ಹಿಂಗಾಗಿ…’ಅಂತ ನಾ ಹೇಳತಿರಬೇಕಾದರ ಅಂವ ನನ್ನ ಮಾತು ಅರ್ಧಕ್ಕಣಿ ತುಂಡು ಆಗೂ ಹಂಗ ಹಾಣಿ ಹ್ಹಾ …ಅಂತ ಗಹಗಹಿಸಿ ನಕ್ಕ…ಅವನ ನಗಿ ನನ್ನ ಮನಸಿನ ಒಳಗ ಮುಳ್ಳು ಚುಚ್ಚಿಧಂಗ ಚುಚ್ಚಿ – ನನ್ನೊಳಗ ನೋವು ಮೂಡಿಸಿತು…ಎಲಾ ಇವನಣಿ…ಅಂತ ಅನಕೊಂಡೆ…ಅಂವ ಮಾತಾಡಲಿಕ್ಕತ್ತಿದ… ಅವನ ಮಾತು ನನ್ನನ್ನ ಹೊರಗ ಎಳಿಯಿತು –
‘ಹಂಗಲ್ಲರೀ ಸಾಹೇಬರಣಿ…ನಮ್ಮ ಮೂಲ ಮುತ್ಯಾ ಏನೋ ಇಲ್ಲದ ಒಂದು ನಂಬಿಕೀ ಹುಟ್ಟಿಸಿಕೊಂಡು ಹೊಸಾದು ಒಂದು ಪದ್ಧತೀ ಹುಟ್ಟಿಸಿಕೊಂಡ…ಆದರ ಆಮ್ಯಾಲ ಬಂದ ನಮ್ಮ ಅಜ್ಜ- ಮುತ್ಯಾಗೋಳಿಗೆ ಅದಣಿ ನಂಬಿಕೀ ಅದಣಿ ನಿಷ್ಠಾ ಇತ್ತಂತ ಹೆಂಗ ಹೇಳತೀರಿ…? ನಮ್ಮ ಅಪ್ಪನ ಕಥೀನಣಿ ಹೇಳಿದಿನಲ್ಲಾ ನಿಮಗ…ಈ ನಮ್ಮ ಅಪ್ಪನ ಅಪ್ಪಾ -ಅಜ್ಜಾ ಅವರೂ ಹಿಂಗಣಿ ಮಾಡಿದ್ದಾರು… ಲಾಭ ಇರೂತನಾ ನಿಷ್ಠಾದ ನಾಟಕಾ ಆಡಿದ್ದಿರಬೇಕಲ್ಲರಿ..’.

ಯಾಕೋ ಏನೋ…ಈ ದ್ಯಾವನನ್ನ ಹಣಿಯಬೇಕು ಅನ್ನುವ ಭಾವನಾ ನನ್ನೊಳಗ ಜಾಗೃತ ಆಯಿತು…‘ದ್ಯಾವಪ್ಪಾ ನಿನ್ನ ಶಿಕ್ಷಣ ಎಲ್ಲೀತನಕಾ ಆಗೇದ…?’ ಅಂತ ಕೇಳಿದೆ. ದ್ಯಾವಪ್ಪ ಉಸ್…ಅಂತ ಉಸರು ಬಿಟ್ಟು –
‘ಪೀಯೂಸೀ ತನಕಾ ಆಗೇದರಿ…ಸಾಯನ್ಸಿಗೆ ಹಚ್ಚಿದ್ದಿನಿ…ಇಂಗ್ಲೀಷು ಮೀಡಿಯಮ್ಮು ಗಂಟಲಕ್ಕಣಿ ತಂದ ಇಟ್ಟಿತು…ವಿಷಯ ಎಲ್ಲಾ ತಿಳಧಂಗ ತಿಳಧಂಗ ಆಗೋವು…ಆದರ ಬರ್‍ಯಾಕ ಹೋದರ ಕೈಯಣಿ ಕಟ್ಟಾಗಿ ಬಿಡೂದು !ನಪಾಸ ಆಗಿ ಸಾಲೀ ಬಿಡಬೇಕಾತರಿ…’ ಅಂತ ಇನ್ನೊಂದು ಸುಸ್ಕಾರ ಹೊಂಡಿಸಿ ಮುಖಾ ತೆಳಗ ಹಾಕಿ ಸುಮ್ಮನಣಿ ಕೂತ…ನನಗ ಪಾಪ ಅನಿಸಿ-
‘ಇರಲಿ ಬಿಡು…ಆದದ್ದ ಆತಲಾ…ಇದೆಲ್ಲಾ ಹೋಗಲಿ . ನಿಮ್ಮ ಅವ್ವ ಹೆಂಗ ಇದ್ದಾಳಣಿ…? ಪತ್ರಾ ಗಿತ್ರಾ ಬರಿಸಿದ್ದಿರಬೇಕಲಾ…ಪಾಪ ಆಕಿ ನಿನ್ನದಸಿಂದ ಮನಸಿಗೆ ಹಚಿಗೊಂಡು ಚಿಂತೀ ಮಾಡತಿರಬೇಕು !’ ಅಂತ ನುಡಿದೆ.
‘ಹಾಂ…ಆಕೇನ ಆರಾಮ ಇರತಾಳ ಬಿಡ್ರಿ…!’ ಅನ್ನುವ ದ್ಯಾವಪ್ಪನ ಮಾತಿನೊಳಗ ಯಾಕೋ ಏನೋ ಒಮ್ಮಿಗೆಲೇ ರೌಸು ತುಂಬಿಕೊಂಡಂಗ ಇತ್ತು…ಅವನ ದನಿಯೊಳಗಿನ ತಿರಸ್ಕಾರದ ವಾಸನಿ ನನ್ನ ಮೂಗಿಗೆ ಹೊಡಿಯಿತು.ನಾನು ಆಶ್ಚರ್ಯಗೊಂಡು ‘ಹಾಂ…!’ ಅಂತ ಹೊಂಡಿಸಿದ ಉದ್ಗಾರವನ್ನು ಕೇಳಿಸಿಕೊಳ್ಳದೇ ರಭಸದಿಂದ ಅವನು ತನ್ನ ಮಾತು ಮುಂದುವರಿಸಿದ…
‘…ನಮ್ಮ ಊರ ಗೌಡದಾನಲ್ಲರೀ…ಅಂವ ಆ ಗೌಡಂದರಣಿ ತಾ ಬೀಜದ ಹೋರಿ ಅಂತ ತಿಳಕೊಂಡದಾನು…ಆ ಮುಂಬಯ್ಯವರ ಭಾಷಣಾ ಕೇಳತಿದ್ದಂಗಣಿ ಈ ಗೌಡನಂಥವರನ್ನ ನಾಶ ಮಾಡೂ ಹಂತಾ ಹಾದಿ ಕಂಡಂಗಾತು…ಅದಕ್ಕಣಿ ಬೆಳಗಾಂವಿಂದ ಊರಿಗೆ ಹೊಳ್ಳಿ ಹೋಗದಣಿ ನವ ನಿರ್ಮಾಣ ಚಳವಳಿಗೆ ಸೇರಿದಿನಿರಿ… ಮುಂದ ಎರಡಣಿ ದಿನದಾಗ ಬಿಹಾರದಾಗ ಅವರನ ಅರೆಸ್ಟ್ ಮಾಡಿದರಂತ ಸುದ್ದಿ ಬಂತು…ಬೆಳಗಾಂವ್ಯಾಗ ನಮ್ಮದು ಹದಿನೈದು ಮಂದಿಯ ಟೋಳೀ ಇತ್ತರೀ… ನಾವೂ ಭೂಗತ ಇದು -ಬೆಳಗಾಂವ್ಯಾಗ ಮನಿ ಮನಿಗೆ ಹೋಗಿ ಎಮರ್ಜೆನ್ಸಿ ಯ ವಿರುದ್ಧ ಪ್ರಚಾರ ಮಾಡಿ ಓಪಿನಿಯನ್ ಹುಟ್ಟಸಾಕ ಪ್ರಯತ್ನ ಸುರು ಮಾಡಿದಿವಿ…ಆದರ ಮಂದಿ ವಿಚಿತ್ರ ನೋಡರಿ…ಒಂದಿಷ್ಟ ಮಂದಿ ನಮ್ಮನ್ನ ನೋಡಿ ನಕ್ಕರು.ಒಂದಷ್ಟ ಮಂದಿ -ಇಲ್ಲದ ಉಸಾಬರೀ ಯಾಕಬೇಕು ನಿಮಗಣಿ…ನಿಮ್ಮ ಕೆಲಸಾ ನೀವು ನೋಡಿಕೋಹೋಗರಿ. ಇನೊಮ್ಮೆ ಇತ್ತಲಾಕಡೆ ಬಂದರೆ ಪೋಲೀಸರಿಗೆ ಹಿಡದ ಕೊಡತೀವ ನೋಡ್ರಿ ಅಂತ ಬೈದು ಹೆದರಸಲಿಕ್ಕೆ ನೋಡಿದರು….ನಾವು ನವ ನಿರ್ಮಾಣದವರು ಅಂತ ಹೇಳತಿದ್ದಂಗಣಿ ಭಾಳ ಮಂದಿ ರಪ್ಪಂತ ತಮ್ಮ ಮನಿಗೋಳ ಬಾಗಲಾ ಹಾಕತಿದ್ದರು… ಇದು ಕಡೀ ಪೂರೈಸೂದುಲ್ಲ…ಹೆಂಗರಣಿ ಮಾಡಿ ವ್ಯವಸ್ಥಾಕ್ಕ ಶಾಕ್ ಕೊಡಬೇಕು – ಹಂತಾದ್ದು ಏನರೇ ಮಾಡಬೇಕೂ ಅಂತ ವಿಚಾರ ಮಾಡಿ -ದಿನಾ ಆಫೀಸಿನ ವ್ಯಾಳ್ಯಾದಾಗ
ಡೀಸಿ ಆಫೀಸಿನ ಮುಂದ ನಿಂದರಸತಿದ್ದ ಅವರ ಖಾಲೀ ಕಾರನ್ನ ಸೋಙಟ ಮಾಡಬೇಕಂತ ಪ್ಲ್ಯಾನು ಹಾಕಿದಿವಿ…ಛಲೋ ಐಡಿಯಾ -ಏ ಭಾಳ ಛಲೋ ಐಡಿಯಾ…ಹಂಗಣಿ ಮಾಡೂಣೂ ಅಂತ ಅನಕೋತ ಅನಕೋತನಣಿ ಗುಂಪಿನ್ಯಾಗಿನ ಹತ್ತು ಹುಡುಗೋರು ಕಳಚಿಕೊಂಡು ಹೋದರು…ಕ್ರಾಂತಿಗೆ ಒಬ್ಬನಣಿ ಸಾಕು – ನಾವು ಇನ್ನೂ ಐದು ಮಂದಿ ಇದ್ದೀವಿ – ಬೇಕಾದಷ್ಟಾತು -ಅಂತ ನಮಗ ನಾವಣಿ ಸಮಾಧಾನಾ ಹಚಿಗೊಂಡು-ನಮ್ಮ ಪ್ಲಾನಿಗೆ ಬೇಕಾಗುವ ಸಿಡಿಮದ್ದು ಹೆಂಗ ತಯಾರಿಸೂದು ಅನ್ನೂದನ್ನ ತಿಳಕೋ ಸಲುವಾಗಿ ರಸಾಯನ ಶಾಸ್ತ್ರದ ಪುಸ್ತಕ ತರಲಿಕ್ಕೆ ಹೋದರೆ ಅವೆಲ್ಲಾ ಇಂಗ್ಲೀಷಿನ್ಯಾಗಣಿ ಇದ್ದೂ….!
ನಾವು ಐದು ಮಂದ್ಯಾಗ ಇಂಗ್ಲೀಷು ಬರೂ ಹುಡಗ ನಮ್ಮ ಲೀಡರ ಆದ…ಆ ಹುಡಗನ ಬೆನ್ನ ಹತ್ತಿ ಆ ಪುಸ್ತಕದ ಕಾಡಿನೊಳಗ ಹಾದೀ ತಪ್ಪಿಸಿಕೊಂಡು ಅಡ್ಯಾಡಿದೆವು… ಏನ ಮಾಡಿದರೂ ಸಿಡಿಮದ್ದು ತಯಾರಿಸುವ ಪ್ರಶ್ನಾ ಬಗೀಹರಿಲಿಲ್ಲ…ಇಷ್ಟರ ನಡವ ಯಾರು ಸೂಚನಾ ಕೊಟ್ಟರೋ ಏನೋ…ಪೋಲೀಸರು ನಮ್ಮ ಖೋಲೇಕ್ಕ ಬಂದು ನಮ್ಮನ್ನ ಐದೂ ಮಂದಿನ್ನ ಅರೆಸ್ಟ್ ಮಾಡಿದರು…ನಮ್ಮ ಖೋಲ್ಯಾಗ ಅವರಿಗೆ ಸಿಕ್ಕದ್ದು ಬರೇ ಒಂದೆರಡು ರಸಾಯನ ಶಾಸ್ತ್ರದ ಪುಸ್ತಕಗಳು ಮಾತ್ರ…ಆದರ ಅವರು ಆ ಪುಸ್ತಕದ ಜೋಡಿ ಸಿಡಿಮದ್ದು ತಯಾರಿಸುವ ರಸಾಯನಗಳು ಇದ್ದವೂ ಅಂತ ಪಂಚನಾಮೆ ಮಾಡಿ-ಮಗ್ಗಲ ಮನಿಗಳವರ ಸಹಿಗಳನ್ನು ಹಾಕಿಸಿಕೊಂಡು ಕೋರ್ಟಿನ ಮುಂದ ನಮ್ಮನ್ನ ಹಾಜರು ಮಾಡಿದರರೀ…’ ಅಂತ ಹೇಳಿ ಅಂವ ಎದ್ದು ನಿಂತು ವಿಧಾನಸೌಧದತ್ತ ದಿಟ್ಟಿಸಿ ನೋಡತೊಡಗಿದ…ನಾನೂ ಎದ್ದು ನಿಂತು ಅವನ್ನ ನೋಡಿ-
‘ಹಾಂ…ಈಗೇನು…?ನಮ್ಮ ವಿಧಾನಸೌಧವನ್ನ ಸೊಙಟ ಮಾಡುವ ವಿಚಾರ ಮಾಡಲಿಕ್ಕೆ ಹತ್ತಿದೀ ಏನಪಾ ಮತ್ತಣಿ…?’ ಅಂತಂದು ಜೋರಾಗಿ ನಕ್ಕು ಅವನ ಹೆಗಲ ಮೇಲೆ ಕೈಯಿಟ್ಟು – ‘ಹೂಂ…ನಡೀ…ಹೊತ್ತ.ಆತು ಹೋಗೂಣೂ…’ ಅಂತ ಸ್ಕೂಟರನ್ನು ನಿಲ್ಲಿಸಿದ ಕಡೆ ಅವನ್ನ ಕರಕೊಂಡು ನಡೆದೆ….

*
*
*

…ಎಷ್ಟು ಒತ್ತಾಯ ಮಾಡಿದರೂ ದ್ಯಾವಪ್ಪ ಆ ರಾತ್ರಿ ನಿಲ್ಲಲಿಲ್ಲ…ತನ್ನ ಚೀಲಾ ತಗೊಂಡು ಹೊರಟೇ ಬಿಟ್ಟ .ನಾನು ನಮ್ಮ ಬಡಾವಣೆಯ ಬಿ ಟಿ ಎಸ್ ಬಸ್ ಸ್ಟಾಂಡಿಗೆ ಹೋಗಿ ಅವನನ್ನು ಬಸ್ಸಿಗೆ ಕೂಡಿಸಿಬಂದೆ…

ಭಾಗ : ನಾಲ್ಕು
…ಈ ವರ್ಷ ಧರಮನಟ್ಟಿಯ ತೇರಿಗೆ ದೀಡ ನೂರು ವರ್ಷ ಆಗತೈತಿ ಅಂತ ಬೆಂಗಳೂರಿನ ನನ್ನ ವಿಳಾಸಕ್ಕೆ ಧರಮನಟ್ಟಿಯ ಸ್ವಾಂವಜ್ಜ ಪತ್ರಾ ಬರೆದು-ನೀವು ಬರಲಿಕ್ಕೇ ಬೇಕು…ಹೆಂಡತಿ ಮಕ್ಕಳನ್ನ ಕರೆದುಕೊಂಡು ತೇರಿಗೆ ಬರಲಿಕ್ಕೇಬೇಕು…ನಿಮಗ ಇಳಕೋಲಿಕ್ಕೆ ಒಂದು ಬ್ಯಾರೇ ಮನಿಯ ವ್ಯವಸ್ಥಾ ಮಾಡತನು-ತಪ್ಪಸದೇ ಬರುವದು- ಅಂತ ಒತ್ತಾಯಿಸಿ ಪತ್ರ ಬರೆಸಿದ್ದ…ನಾನು ಹಿಂದಿನ ಸರತೇ ಧರಮನಟ್ಟಿಗೆ ಹೋಗಿ ಬಂದಮ್ಯಾಲೆ ನನ್ನ ಹೆಂಡತಿಗೆ ವಿಠ್ಠಲ ದೇವರ ತೇರಿನ ಕಥಿಯನ್ನ ಹೇಳಿದ್ದೆ…ಆಕಿಗೆ ಧರಮನಟ್ಟಿಯ ದೇಸಗತಿಯ ಕಥಿಯೂ ಗೊತ್ತಿತ್ತು… ಹಿಂಗಾಗಿ ಆಕಿಗೆ ಧರಮನಟ್ಟಿಯ ಬಗ್ಗೆ ಬಹಳ ಕುತೂಹಲ ಹುಟ್ಟಿತ್ತು….ಈಗ ಸ್ವಾಂವಜ್ಜನ ಪತ್ರ ಬಂದದ್ದು ತಿಳಿದು –
‘ನನಗ ಎಂದಿಂದಣಿ ಆ ಧರಮನಟ್ಟಿಯ ವಿಠ್ಠಲ ದೇವರ ದೇವಸ್ಥಾನ ನೋಡಬೇಕಂತ ಅನಸಲಿಕ್ಕತ್ತಿತ್ತು …ಈಗ ಛಲೋ ಆತು…ಹೆಂಗೂ ನಿಮ್ಮ ಆ ಯಾರೋ ಅಜ್ಜ ಪತ್ರಾ ಬರದು ಬರಲಿಕ್ಕೆ ಹೇಳ್ಯಾನಲಾ…ನಡೀರಿ ಹೋಗಿಬರೂಣೂ… ಹುಡುಗರನ ಕರಕೊಂಡಣಿ ಹೋಗಿಬರೂಣೂ… ಹುಡುಗೋರೂ-ನಮ್ಮನ್ನ ನೀವು ಎಲ್ಯೂ ಕರಕೊಂಡ ಹೋಗೂದುಲ್ಲ ಅಂತಿರತಾವ…ಈಗ ಎಲ್ಲಾನೂ ಆದಂಗ ಆತು….ಬರುವಾಗ ಬೇಕಾದರ ನಿಮ್ಮ ಊರಿಗೂ ಹಾಯ್ದು ಬಂದರಾತು…’ ಅಂತ ಆಕಿ ನನಗ ನಮ್ಮ ಊರಿಗೆ ಹೋಗುವ ಆಸೇ ತೋರಿಸಿಕೋತ ಧರಮನಟ್ಟಿಗೆ ಹೋಗುವದರ ಬಗ್ಗೆ ವರಾತ ಹಚ್ಚಿದಳು.
ನಾನು-ನೋಡಿದರಾತೂ…ಬರದರಾತೂ ಅಂತ ಮುಂದಕ ಮುಂದಕ ಹಾಕತಿದ್ದರೆ ಕಡೀಕ ಆಕಿ -‘ನೋಡರೀ…ನಾವು ಬರತೀವಂತ ಇಂದಣಿ ನೀವು ನಿಮ್ಮ ಆ ಅಜ್ಜಗ ಬರದ ಹಾಕಬೇಕು…ಇಲ್ಲಾತಂದರ ನಾನಣಿ ಬರದ ಹಾಕಿಬಿಡತನ ನೋಡ್ರಿ…’ ಅಂತ

ಅಲ್ಟಿಮ್ಯಾಟಮ್ಮು ಕೊಟ್ಟಳು…ಅನಿವಾರ್ಯವಾಗಿ ಸ್ವಾಂವಜ್ಜನಿಗೆ ಪತ್ರಾ ಬರೆದು ಹಾಕಿದೆ…
ಸ್ವಾಂವಜ್ಜ ಸಾವಕಾರರಿಗೆ
ನಮಸ್ಕಾರಗಳು…
ಇಲ್ಲಿ ನಾವೆಲ್ಲ ಕ್ಷೇಮ…ನಿಮ್ಮ ಕ್ಷೇಮ ಸಮಾಚಾರ ಮೇಲಿಂದ ಮೇಲೆ ತಿಳಿಸುತ್ತಿರಬೇಕು…
ಅದಾಗಿ ನೂರಾ‌ಐವತ್ತನೆಯ ತೇರಿನ ಉತ್ಸವಕ್ಕೆ ಬರಲಿಕ್ಕೆ ಒತ್ತಾಯಪೂರ್ವಕವಾಗಿ ಬರೆದಿದ್ದೀರಿ.ನಿಮ್ಮ ಒತ್ತಾಯವನ್ನು ಮನ್ನಿಸಿ ನಾನು ಕುಟುಂಬ ಸಮೇತ ನಿಮ್ಮಲ್ಲಿಗೆ ಬರುತ್ತೇನೆ.
…ರಕ್ತ ತಿಲಕದ ಸೇವಾಕರ್ತನು ಧರಮನಟ್ಟಿಗೆ ಬರುವುದನ್ನ -ಸೇವಾ ಮಾಡುವುದನ್ನ ನೋಡಲಿಕ್ಕೆ, ತೇರಿನ ಮಹಾತ್ಮೆಯನ್ನು ಹೇಳುವ ಗೊಂದಲಿಗರ ಕಥೆಯನ್ನು ಇನ್ನೊಮ್ಮೆ ಕೇಳಲಿಕ್ಕೆ ಅನುಕೂಲ ಆಗುವಂತೆ -ತೇರು ಇನ್ನೂ ನಾಲ್ಕು ದಿನಗಳಿರುವಾಗಲೇ ಧರಮನಟ್ಟಿಗೆ ಬರುತ್ತೇನೆ… ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ…ಇಳಿದುಕೊಳ್ಳಲಿಕ್ಕೆ ಬಚ್ಚಲಿರುವ ಒಂದು ಸಣ್ಣ ಮನೆ – ಕೇವಲ ಒಂದು ಕೋಣೆಯ ಮನೆಯಾದರೂ ಸಾಕು…ಹೆಚ್ಚಿನ ತೊಂದರೆಯನ್ನು ತೆಗೆದುಕೊಳ್ಳುವುದು ಬೇಡ…
ಇತ್ಯಾದಿ…

*
*
*

…ಈ ಪತ್ರವನ್ನು ಬರೆದು ಹಾಕಿದ್ದು ಜನೆವರಿ ತಿಂಗಳಿನಲ್ಲಿ…ಅಂದರೆ ಧರಮನಟ್ಟಿಯ ತೇರು ಇನ್ನೂ ನಾಲ್ಕು ತಿಂಗಳು ಇರುವಾಗ…ಸ್ವಾಂವಜ್ಜ ತೇರಿಗೆ ಇನ್ನೂ ಐದು ತಿಂಗಳಿರುವಾಗಲೇ ನನಗೆ ಪತ್ರ ಬರೆದಿದ್ದ…ನೂರಾ ಐವತ್ತನೇ ವರ್ಷದ ತೇರು ಆಗಿದ್ದರಿಂದ ಭಾಳ ಜೋರ ತಯಾರೀ ನಡದಿರಬೇಕು ಅಂತ ಅನಕೊಂಡೆ…ನಾನು ಸ್ವಾಂವಜ್ಜನಿಗೆಪತ್ರ ಬರೆದ ಒಂದು ತಿಂಗಳಿನಮೇಲೆ -ಫೆಬ್ರುವರೀ ಇಪ್ಪತ್ತಮೂರನೇ ತಾರೀಖಿನ ದಿವಸ…ಅವತ್ತು ಮಂಗಳವಾರ…ನಾನು ಮರದಿವಸ ಪ್ರಿಂಟಿಗೆ ಹೋಗಬೇಕಾಗಿದ್ದ ವಾರದ ವಿಶೇಷ ಪುಟಗಳ ತಯಾರಿಯೊಳಗ ತೊಡಗಿದ್ದೆ…ಆಗ ಚೀಫ್ ನ್ಯೂಜ್ ಎಡಿಟರ್ ರಾಮದಾಸ್ ನನ್ನ ಟೇಬಲ್ಲಿಗೆ ಬಂದು -ನನ್ನ ಮುಂದಿನ ಕುರ್ಚಿಯೊಳಗ ಕೂತರು…
‘ಏನ್ಸಾರ್…ಏನೋ ವಿಶೇಷ ಇದ್ದಂಗಿದೆ…ನೀವೇ ನನ್ನ ಟೇಬಲ್ಲಿಗೆ ಬಂದ ಬಿಟ್ಟೀರೀ…?’ ಅಂದೆ.

‘ಹೂಂ…ಆದರ ನಾನು ನಿಮಗ ಈ ಸುದ್ದೀ ಹೇಳಿ ಚಹಾ ಕೊಡಸರೀ ಅಂತ ಕೇಳಬಹುದೋ -ಕೇಳಬಾರದೋ ಅನ್ನುವದೇ ನನಗೆ ದೊಡ್ಡ ಸಮಸ್ಯಾ ಆಕ್ಕೊಂಡ ಕೂತಿದೆ…! ಬಹುಶಃ ಈ ಸುದ್ದಿಯನ್ನು ಕೇಳಿ ನಿಮಗೆ ಖುಶೀ ಆಗಲಿಕ್ಕಿಲ್ಲ …ಆದರೆ ಈ ಸುದ್ದೀ ಕೇಳಿ ನಿಮಗೂ ದುಃಖನೂ ಆಗಬೇಕಾಗಿಲ್ಲ…ಆದರ ಇಷ್ಟು ಮಾತ್ರ ನಿಜ…ಇದು ನಿಮ್ಮ ಕುತೂಹಲ ಕೆರಳಿಸುವಂಥಾ ಸುದ್ದಿ ಅನ್ನೋದರೊಳಗ ಯಾವ ಸಂಶಯನೂ ಇಲ್ಲ…ಅದಕ್ಕಣಿ ನಿಮ್ಮಿಂದ ಚಹಾ ಕೇಳೇಬಿಡಬಹುದೇನೋ ಅಂತ ವಿಚಾರ ಮಾಡ್ತಾ ಇದೀನಿ…’ ಅಂತ ರಾಮದಾಸ ಅವರು ನಕ್ಕೋತ ದೀರ್ಘ ಪ್ರಸ್ತಾವನೆ ಹಾಕಿದರು…
‘ಏನು ಸಾರ್…ಒಂದು ಚಹಾ ಕೇಳಲಿಕ್ಕೆ ಇಷ್ಟ ದೊಡ್ಡ ಪ್ರಸ್ತಾವನೆ ಬೇಕೇನು…ನೀವು ಯಾವ ಸುದ್ದೀ ಹೇಳದಿದ್ದರೂ ಚಹಾ ಕೊಡಸ್ತೀನಿ…ಸುದ್ದೀ ಹೇಳರಿ ಬೇಕಾರ ಬಿಡ್ರಿ’ ಅಂತ ನಾನೂ ನಕ್ಕೋತ ಹೇಳಿದೆ……ರಾಮದಾಸ ಅವರು ಶರ್ಟಿನ ಜೇಬಿನಲ್ಲಿಯ ಟೆಲಿ ಪ್ರಿಂಟರಿನ ಒಂದು ಸ್ಲಿಪ್ಪನ್ನ ತಗದು ನನ್ನ ಕೈಗೆ ಕೊಟ್ಟು
‘ನಿಮ್ಮ ಕುತೂಹಲ ಕೆರಳಿಸುವಂಥಾ ನ್ಯೂಜ್ ಅದ ನೋಡ್ರಿ…ಚಹಾ ಆಮ್ಯಾಲ ಕೊಡಸ್ರಿ’ ಅಂತ ಹೇಳಿ ತಮ್ಮ ಕೆಲಸಕ್ಕ ತಾವು ಹೋಗಿ ಬಿಟ್ಟರು.
ನಾನು ‘ಆಗಲಿ ಸರ್…’ ಅಂತಂದು ಆ ಸ್ಲಿಪ್ಪನ್ನ ಬಿಚ್ಚಿ ನೋಡಿ ಹೌಹಾರಿದೆ…!
ಮಗ ಮತ್ತು ಅಜ್ಜ ಇಬ್ಬರನ್ನೂ ಬಿಟ್ಟು ಕ್ಯಾಥರೀನ್ ಅನ್ನುವ ಬಿಳಿ ಹುಡಿಗಿಯನ್ನ ಕಟ್ಟಿಕೊಂಡು ಅಮೇರಿಕಾಕ್ಕೆ ಹೋಗಿ ಅಲ್ಲಿಯೇ ನೆಲೆನಿಂತಿದ್ದ ಮಾಣೀಕ್ ದೇಸಾಯಿಯ ಸುದ್ದಿ ಅದು…ಅಮೇರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟಿನಿಂದ ಭಾರತ ಸರ್ಕಾರಕ್ಕೆ ಬಂದ ಸೂಚನೆ ! ಆ ಸೂಚನಾ ಪತ್ರದಲ್ಲಿ ಇದ್ದ ಮಜಕೂರು ಏನೆಂದರೆ – …ಮೂವತ್ತು ವರ್ಷಗಳ ಹಿಂದೆ ಭಾರತದಿಂದ ಅಮೇರಿಕಾಕ್ಕೆ ವಲಸೆ ಬಂದಿರುವ ಮಾಣೀಕ್ ದೇಸಾಯಿ ಎನ್ನುವ ವ್ಯಕ್ತಿಯೊಬ್ಬ ಸುಯಿಸೈಡ್ ಮಾಡಿಕೊಂಡಿದ್ದಾನೆ…ಅವನ ಜೊತೆ ಯಾರೂ ಇಲ್ಲ…ಅಮೇರಿಕಾದಲ್ಲಿನ ಅವನ ಆಸ್ತಿ ಪಾಸ್ತಿಗಳು ಬೇವಾರಸಾ ಆಗಿವೆ.ಕ್ಯಾಥರೀನ್ ಎನ್ನುವ ಅವನ ವಿಚ್ಛೇದಿತ ಹೆಂಡತಿಯನ್ನು ವಿಚಾರಿಸಿದರೆ ಆಕೆ ತನಗೂ ತೀರಿಹೋದ ವ್ಯಕ್ತಿಗೂ ಯಾವ ಸಂಬಂಧವೂ ಇಲ್ಲವೆಂದೂ…ಅವನು ಭೂತಕಾಲದಲ್ಲಿ ತನ್ನ ಗಂಡನಾಗಿದ್ದವನು…ಈಗ ಅವನು ತನಗೆ ಏನೂ ಅಲ್ಲ…ಮತ್ತು ಅವನ ಯಾವ ಆಸ್ತಿ ಮತ್ತು ಜವಾಬ್ದಾರಿಗಳು ತನಗೆ ಸಂಬಂಧವಿಲ್ಲದವು ಎಂದು ತಿಳಿಸಿದ್ದಾಳೆ…ಅವನ ಅಲ್ಮೆರಾದಲ್ಲಿ ಸಿಕ್ಕ ಫೆಡರಲ್ ಕೋರ್ಟಿನಲ್ಲಿ ರಜಿಸ್ಟರ್ ಆದ ಮೃತ್ಯು ಪತ್ರದಲ್ಲಿ ಅವನು ತನ್ನ ಬ್ಯಾಂಕಿನ ಅಂಕೌಂಟಿನಲ್ಲಿರುವ ಎಲ್ಲ ಹಣವನ್ನು ಪ್ಯಾಲಿಸ್ತೀನಿಯನ್ ನಿರಾಶ್ರಿತರ ಶಿಬಿರಗಳಿಗೆ ಮತ್ತು ಭಾರತದಲ್ಲಿನ ತಿಬೆಟಿಯನ್ ನಿರ್ವಸಿತರ ಶಿಬಿರಗಳಿಗೆ ೫೦-೫೦ ಪ್ರಮಾಣದಲ್ಲಿ ಸಂದಾಯಮಾಡಬೇಕೆಂತಲೂ-ತನ್ನ ಅಂತ್ಯ ಸಂಸ್ಕಾರವನ್ನು ಪಾರ್ಸೀ ಪದ್ಧತಿಯಂತೆ ನಡೆಸಬೇಕೆಂತಲೂ ಮತ್ತು ಧರಮನಟ್ಟಿಯ ತಮ್ಮ ಮನೆತನಕ್ಕೆ ಸೇರಿದ ಗುಡ್ಡವನ್ನು ಆ ಊರಿನ ವಿಠ್ಠಲ ದೇವರ ದೇವಸ್ಥಾನಕ್ಕೆ ಕೊಡಬೇಕೆಂದೂ ಸೂಚಿಸಿದ್ದಾನೆ…ಅಮೇರಿಕಾದ ಸ್ಟೇಟ್ ಇಲಾಖೆ ಅಮೇರಿಕಾದಲ್ಲಿನ ಅವನ ಸಂಪತ್ತನ್ನು ಮೃತ್ಯುಪತ್ರದಲ್ಲಿನ ಸೂಚನೆಯ ಪ್ರಕಾರ ನಿರ್ವಹಿಸುತ್ತದೆ…ಭಾರತ ಸರ್ಕಾರವು ಮಾಣೀಕ್ ದೇಸಾಯಿಯ ಭಾರತದಲ್ಲಿನ ಆಸ್ತಿಯ ವಿಲೇವಾರಿಯ ಬಗ್ಗೆ ಸಹಾಯ ನೀಡಲು ಸಾಧ್ಯವೇ…?
ಹೂಂ…! ಮಾಣೀಕ್ ದೇಸಾಯಿ ಹೋಗಿಯೇಬಿಟ್ಟನೇ…ಅಂತ ನನ್ನೊಳಗೆ ವಿಷಾದ ತುಂಬಿತು…ಧರಮನಟ್ಟಿಯ ದೇಸಗತಿ ಇಂದಿಗೆ ಖಾಲಸಾ ಆದಂಗಾತು ಅಂತ ಅನಿಸಿತು…ನಾನು ಪತ್ರ ಬರೆದು ಸ್ವಾಂವಜ್ಜನಿಗೆ ಈ ವಿಷಯ ತಿಳಿಸಿ ಅವನ ಮೃತ್ಯುಪತ್ರದ ವಿಷಯವನ್ನು ಮತ್ತು ಧರಮನಟ್ಟಿಯ ಗುಡ್ಡದ ಬಗ್ಗೆ ತಿಳಿಸಿದೆ :
…ಧರಮನಟ್ಟಿಯ ಕಡೆಯ ದೇಸಾಯರು ತೀರಿಹೋದ ಸುದ್ದಿಯನ್ನು ನಿಮಗೆ ತಿಳಿಸುವ ದುಃಖದ ಕೆಲಸವನ್ನು ಮಾಡುವ ಅನಿವಾರ್ಯ ನನಗೆ ಬಂದಿದೆ…ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ…ಧರಮನಟ್ಟಿಯ ಗುಡ್ಡದ ದೇಸಾಯರ ಆಸ್ತಿಯನ್ನು ವಿಠ್ಠಲ ದೇವರ ದೇವಸ್ಥಾನಕ್ಕೆ ಮಾಣೀಕ್ ದೇಸಾಯರು ಬರೆದಿದ್ದಾರೆ…ನೀವು ದೇವಸ್ಥಾನಕ್ಕೆ ಈ ಆಸ್ತಿಯನ್ನು ವಹಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಲು ತಿಳಿಸಿದರೆ ಅದರ ಬಗ್ಗೆ ಇಲ್ಲಿನ ರೆವೆನ್ಯೂ ಸೆಕ್ರೆಟರಿಯೇಟ್‌ನಲ್ಲಿ ಪ್ರಯತ್ನ ಮಾಡುತ್ತೇನೆ…ಇದಕ್ಕೆ ಸಂಬಂಧಪಟ್ಟಂತೆ ಧರಮನಟ್ಟಿಯ ದೇವಸ್ಥಾನದ ಕಮೀಟಿಯವರು ಒಂದು ಅರ್ಜಿಯನ್ನು ಕೊಡಬೇಕಾಗಬಹುದು…ಅಲ್ಲಿಯೇ ಬೆಳಗಾಂವಿಯ ಡೀಸಿಯವರಿಗೆ ಅರ್ಜಿಯನ್ನು ಕೊಡಬೇಕಾಗುತ್ತದೆ.ಬೆಳಗಾವಿಯ ಡಿಸೀಯವರಿಗೆ ಅರ್ಜೀ ಸಲ್ಲಿಸಿ ನನಗೆ ಅದರ ಒಂದು ಪ್ರತಿಯನ್ನು ಕಳಿಸಿರಿ…ನಾನು ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ… ಮಾಣೀಕ್ ದೇಸಾಯಿಯವರ ಮೃತ್ಯುಪತ್ರದಲ್ಲಿನ ಬೇರೆ ವಿಷಯಗಳು ಹೀಗೆ ಹೀಗೆ… ಇವೆ…ಮತ್ತು ಮಾಣೀಕ್ ದೇಸಾಯಿ ತೀರಿ ಹೋದ ಪ್ರಯುಕ್ತ ಈ ವರ್ಷ ತೇರು ನಡೆಯುತ್ತದೆಯೋ ಇಲ್ಲವೋ ತಿಳಿಸಿರಿ…
ಇತ್ಯಾದಿ….
ನನ್ನ ಪತ್ರಕ್ಕೆ ಸ್ವಾಂವಜ್ಜನಿಂದ ತಾಬಡ ತೋಬಡ ಉತ್ತರ ಬಂತು…ಉಳಿದ ಎಲ್ಲಾ ವಿಷಯಗಳಿಗಿಂತ ಮೊದಲು ತೇರು ನಡೆಯುವದರ ಬಗ್ಗೆ ಬರೆದಿದ್ದ…
…ಧರಮನಟ್ಟಿಯ ತೇರು ಸೂರ್ಯಾ-ಚಂದ್ರಾಮ ಇರುವ ತನಕಾ ನಡೆಯುತ್ತದೆಂದು ದೇಸಾಯರು ಸನದು ಬರೆಸಿದ್ದಾರೆ…ಅದು ಯಾವತ್ತಿಗೂ ನಿಲ್ಲುವುದಿಲ್ಲ !… ಯಾವದೇ ನೆವವನ್ನು ಹೇಳದೇ ತಪ್ಪಿಸದೇ ಮುಂದಿನ ತಿಂಗಳು -ಚೈತ್ರ ಶುಕ್ಲ ನವಮೀ ದಿವಸ ನಡೆಯುವ ತೇರಿಗೆ ಬಂದೇ ಬರಬೇಕು.ತಿಳಿಯಿರಿ…
…ಧರಮನಟ್ಟಿಯ ಗುಡ್ಡದ ವಿಚಾರ-ಅದನ್ನ ಈಗಾಗಲೇ ಸರ್ಕಾರ ತನ್ನ ತಾಬೇ ತಗೊಂಡು ಭೂಮಿಯಿಲ್ಲದವರಿಗೆ ಹಂಚ್ಯಾರೆ…ಅದರಾಗಿನ ಹೆಚ್ಚಿನ ಭೂಮಿ ನಮ್ಮೂರ ಗೌಡ ಮತ್ತು ಕುಲಕರ್ಣಿಯಂಥವರ ಮಕ್ಕಳಿಗೆ ಸಿಕ್ಕಿದೆ…ನೀವು ಆ ಭೂಮೀ

ಬಗ್ಗೆ ತೆಲಿ ಕೆಡಿಸಿಗೋ ಬ್ಯಾಡರಿ…
…ಮೃತ್ಯು ಪತ್ರದಾಗ ತನ್ನ ಹೆಣವನ್ನ ನಮ್ಮ ನಾಡಿಗೆ ಕಳಸರೀ ಅಂತ ಬರದಿದ್ದರ ಮತ್ತ -ನಮ್ಮ ಪದ್ಧತೀ ಪ್ರಕಾರ ಮಣ್ಣ ಮಾಡರೀ ಅಂತ ಬರದಿದ್ದರ ಅಂವ ಧರಮನಟ್ಟಿಯ ದೇಸಾಯಿ ಆಗಿರತಿದ್ದಾ !ಮತ್ತ ಅಂವ ದೇಸಾಯಿ ಆಗಿ ಉಳದಿದ್ದರ ದೇಸಗತಿಯಲ್ಲಿರುವ ನಾವು-ಪ್ರಜಾಮಂದಿಗೆ ಅಂವ ಸತ್ತದ್ದು ಆಗ ಸೂತಕ ಆಗತಿತ್ತು…ಬೇಡಿ ಬಯಸಿ ಆ ಬಿಳೀ ಚರ್ಮದ ಹೆಂಗಸನ್ನ ಮದಿವೀ ಮಾಡಿಕೊಂಡು ಅಜ್ಜಾ -ಮಗನ್ನ ಬಿಟ್ಟು ಅಮೇರಿಕಾಕ್ಕ ಹೋದಾ. ಅಲ್ಲಿಗೆ ಹೋಗಿ ಏನು ಸುಖಾ ಅನುಭೋಗಿಸಿದಾ…? ಆ ಬಿಳೀ ಚರ್ಮದ ಹೇಂತಿ ಇವನ್ನ ಒಕ್ಕೊಟ್ಟ್ಟು ಹೋದಳಲಾ ! …ಕಡೀಕ ನಮ್ಮ ಧರಮನಟ್ಟಿಯ ದೇಸಾಯಿ ಪರದೇಶಿ ಹೆಣಾ ಆದದ್ದು ನಮಗ ಬಾಳ ದುಕ್ಕ ಆಗೇತಿ. ಊರಾನ ವಯಸ್ಸಾದ ಹೆಂಣ ಮ್ಯಾಳದವರು ಅತ್ತೂ ಕರದೂ ಮಾಡಿ ತಮ್ಮ ದುಕ್ಕಾ ತೋಡಿಕೊಂಡಿತು…ನಮ್ಮಂಥಾ ಮುದಕರಿಗೆ ಹಂಗ ದನೀ ತಗದು ಅಳಾಕ ಆಗಲಿಲ್ಲಾ! ಒಳಗೊಳಗಣಿ ದುಕ್ಕಾಪಟಗೊಂಡು ಯಾರ ಜೋಡೀ ಏನೂ ಮಾತಾಡದಣಿ ಎರಡ ದಿನಾ ಮನ್ಯಾಗಣಿ ಮನಕೊಂಡಿದ್ದಿವಿ…ಆದರೂ ನಾ ಆಗಳೇ ಹೇಳಿದ ಅಮುಕ ಕಾರಣದ ಸಲುವಾಗಿ ಧರಮನಟ್ಟೀ ನಾಡಿನ ಮಂದಿಗೆ ಇದರ ಸೂತಕ ಇಲ್ಲಾ… ಜಣಿರ ಒಂದು ವ್ಯಾಳ್ಯಾ ಸೂತಕ ಇದ್ದರೂ ಧರಮನಟ್ಟೀ ತೇರು ನಡೀಲಿಕ್ಕೆ ಏನೂ ಹರಕತ್ತು ಇರೂದುಲ್ಲಾ…ನೀವು ತಪ್ಪಸದೇ ಬರ್ರಿ…
ಇತ್ಯಾದಿ…

*
*
*

…ಸ್ವಾಂವಜ್ಜನ ಒತ್ತಾಯ ಮತ್ತ ನನ್ನ ಹೆಂಡತಿಯ ಡಿಮಾಂಡಿಗೆ ಸೋತು ನನ್ನ ಮೊದಲನೇ ಪತ್ರದಲ್ಲಿ ಬರೆದ ಪ್ರಕಾರ ಎಪ್ರಿಲ್ ಹತ್ತನೇ ತಾರೀಖಿನಂದು ಕುಟುಂಬ ಸಮೇತನಾಗಿ ಧರಮನಟ್ಟಿಗೆ ಬಂದು ಇಳಿದೆ…ಸ್ವಾಂವಜ್ಜ ಬಸ್‌ಸ್ಟಾಂಡಿನಲ್ಲಿ ಕಾಯುತ್ತ ನಿಂತಿದ್ದು, ನಮ್ಮ ಲಗೇಜನ್ನು ಹೊರಿಸಿಕೊಂಡು ನಮಗಾಗಿ ಗೊತ್ತುಮಾಡಿದ ಮನೆಗೆ ಕರೆದುಕೊಂಡು ಹೋಗಿ ಇಳಿಸಿದ…ದೊಡ್ಡದಾದ ಮನೆಯದು…ದೊಡ್ಡ ಬಚ್ಚಲು ಮನೆ-ನೀರು ಕಾಸುವ ದೊಡ್ಡದಾದ ತಾಮ್ರದ ಹಂಡೇ…ತಿಕ್ಕಿ ಥಳ ಥಳ ಅಂತ ಹೊಳೆಯುತ್ತಿತ್ತು.ಇತ್ತೀಚೆಗೆ ಕಟ್ಟಿಸಿದಂತಹ ಸಂಡಾಸು…ಇನ್ನೂ ಬಳಕೆಯಾಗದೇ ಸ್ವಚ್ಛವಾಗಿತ್ತು…ಅಡಿಗೆಯ ಮನೆಯಲ್ಲಿ ಉರುವಲಿನ ಒಲೆ ಇದ್ದಿತಾದರೂ ಸ್ವಾಂವಜ್ಜ ಗ್ಯಾಸ್ ಸ್ಟೋವಿನ ವ್ಯವಸ್ಥೆ ಮಾಡಿಸಿ ಇರಿಸಿದ್ದ…ಚಹಾ-ಅಡಿಗೆ ಮಾಡಿಕೊಳ್ಳಲಿಕ್ಕೆ ಪಾತ್ರೆ – ಪರಿಕರಗಳು ಸಿದ್ಧವಾಗಿದ್ದವು…ನನ್ನ ಹೆಂಡತಿಗೆ ಸಂತೋಷವಾಯಿತು…ಸ್ವಾಂವಜ್ಜ ನಮ್ಮನ್ನ ಆ ಬಿಡದಿಯ ಮನಿಯೊಳಗೆ ಇಳಿಸಿ -‘ಸಾಹೇಬರಣಿ…ಭಾಳ ದೂರದ ಪ್ರವಾಸ
ಮಾಡಿಕೊಂಡ ಬಂದದೀರಿ…ದಣವ ಆಗಿರಬೇಕು…ಆರಾಮ ತಗೋರಿ.ನಾಳೆ ಭೆಟ್ಟಿಯಾಗೂಣೂ.ಚಂಜಿಕ ಎಮ್ಮೀ ಹಿಂಡಿಕೊಂಡ ಮ್ಯಾಲ ನಮ್ಮ ಹುಡುಗ ಹಾಲು ತಂದ ಕೊಡತಾನು…ಏನಾರ ಬೇಕಾದರ ಅವನಕೂಟೇ ಹೇಳಿಕಳಿಸರಿ…’ ಅಂತ ಹೇಳಿ ಹೋದ… ನನಗೆ ನಿಜವಾಗಿಯೂ ದಣಿವಾಗಿತ್ತು…ಬಸ್ಸು ಎತ್ತಿ ಎತ್ತಿ ಹಾಕಿತ್ತು…ಹೆಂಡತಿ ತನ್ನ ಸೀರೆ ಬದಲಿಸಿ -ಕೈಕಾಲು ಮುಖ ತೊಳೆದುಕೊಂಡು-ಆ ನಂತರ ಆPಮಾಡಲಿರುವ ಚಹದ ಹಾದಿಯನ್ನು ಕಾಯುತ್ತ ನಾನು ಪಲ್ಲಂಗದ ಮೇಲೆ ಪವಡಿಸಿದೆ…
…ಮರದಿವಸ ಸ್ವಾಂವಜ್ಜನ ಮನಿಯ ಕಡೆ ಹೋಗಿ ಅವನ ಹೆಂಡತಿ -ಪದ್ದವ್ವ ಸಾವಕಾರ್ತಿಯನ್ನು ಮತ್ತು ಅವರ ಮಕ್ಕಳನ್ನ ಮಾತಾಡಿಸಿ ಆಮ್ಯಾಲೆ ಅವನ ಜೋಡೀ ಕಟ್ಟಿಯ ಮ್ಯಾಲೆ ಹಾಸಿದ ಜಮಖಾನಿಯ ಮ್ಯಾಲೆ ಕೂತೆ… ಸ್ವಾಂವಜ್ಜ –
‘ಹೂಂ…ಬೇಶಾತ ನೋಡ್ರೆಪಾ ನೀವು ಬಂದದ್ದು…ನೀವು ಬಾಳ ದಿನಾ ಪತ್ರಾ ಬರೀಲೇ ಇಲ್ಲಾ…ನಾನು – ಅವರು ಬೆಂಗಳೂರಾಗ ಇರಾವರು…ಈ ಹಳ್ಳೀ ತೇರಿಗೆ ಎಲ್ಲಿ ಬಂದಾರು ಅಂತ ಅರಭರೋಸ ಮಾಡಿಕೊಂಡಿದ್ದಿನಿ…ನಿಮ್ಮ ಪತ್ರ ಬಂದಗಳಸೇ ಸಮಾಧಾನ ಆತು…’ ಅಂತ ಹೇಳತಿದ್ದರಣಿ ಅವನ ಮುಖದ ಮ್ಯಾಲ ಸಂತೋಷದ ಭಾವ ಒಡದ ಕಾಣತಿತ್ತು…ಅವನ ವಿನಾಕಾರಣ ಪ್ರೀತಿಗೆ ಕೌತುಕ ಅನಿಸಿತು…ಅಂವ ಒಮ್ಮಿಗೆಲೇ ನೆನಪು ಮಾಡಿಕೊಂಡವನಂಗ ‘ ಹಾಂ…ಅಂದಂಗ ಬಿಡದೀ ಯವಸ್ಥಾ ಎಲ್ಲಾ ಬರಾಬ್ಬರೀ ಆಗೇತಿಲ್ಲರಿ?…ಹಾಲೂ ಮಸರೂ ಕೊಟ್ಟ ಬರಾಕ ಹೇಳಿದ್ದಿನಿ… ತಂದ ಕೊಟ್ಟಾರೊ ಏನ ಮರತಾರೋ…?’ ಅಂತ ಕೇಳಿದ.
‘ಏ.. ಎಲ್ಲಾ ಅಗದೀ ವ್ಯವಸ್ಥಾಸೀರ ಆಗೇದ…ನಮ್ಮ ಸಲುವಾಗಿ ಭಾಳ ತ್ರಾಸ ತಗೊಂಡಂಗಾತು…’ ಅಂದದ್ದಕ್ಕೆ
‘ಏ…ಎಲ್ಲೀ ತರಾಸರೀ…ನೀವು ಬರೂದು ಹೆಚ್ಚೊ -ನಾವು ಇಷ್ಟು ಯವಸ್ಥಾ ಮಾಡೂದು ಹೆಚ್ಚೋ…’ ಅಂದು ಸಮಾಧಾನ ತಾಳಿದ…ನಾನು ಮಾಣೀಕ್ ದೇಸಾಯಿಯ ಸಾವಿನ ಸುದ್ದಿಯನ್ನು ತಗದು ‘ಪಾಪ…ಆತ್ಮಹತ್ಯಾ ಮಾಡಿಕೋಹಂತಾ ಪ್ರಸಂಗ ಏನ ಬಂತೋ ಯಾಂವಬಲ್ಲ ! ಈಗ ಅವನ ಹೇಂತಿ ಅವನ ಜೋಡೀ ಇಲ್ಲ ಅಂತ…’ ಅಂತ ಹೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ…ಸೋಡಚೀಟೀ ತಗೊಂಡಾಳಂತಲ್ಲರಿ… ಅವೇನ ಬಾಳೇ ಮಾಡ್ಯಾವರೀ…ಆಕಿನ್ನ ನೆಂಬಿ ನಮ್ಮ ದೇಸಾಯಿಪರದೇಶಿ ಹೆಣಾ ಆಗಿ ಹ್ವಾದಾ!…’ ಅಂತ ಮಾತಾಡತಿದ್ದಂಗನಣಿ ಸ್ವಾಂವಜ್ಜನ ಮನಿಗೆ ಬೆಳಗಾಂವಿಯಿಂದ ಅವನ ನೆಂಟರು ಬಂದು ಮಾಣೀಕ್ ದೇಸಾಯಿಯ ಮಾತು ತುಂಡಾತು…ಬೆಳಗಾವಿಯ ನೆಂಟರು ನನ್ನ ಗುರತು ಹಿಡದು ಮಾತಾಡಿಸಿ ಒಳಗ ಹೋದರು…
ಸ್ವಾಂವಜ್ಜ ಏನೋ ಲೆಕ್ಕಾ ಹಾಕಲಿಕ್ಕತ್ತಿದ್ದ…ಬೆಳಗಾಂವಿಯ ನೆಂಟರು ಒಳಗ ಹೋದಕೂಡಲೆ ಅಂವ –
‘ಹಾಂ…ಇವತ್ತ ಯಾವ ದಿನಾ ಹೇಳರಿ…’ ಅಂತ ಕೇಳಿದ.

ನನಗ ಗೊಂದಲ ಆತು…ತಾರೀಖು ಕೇಳತಾನೊ ಇಲ್ಲಾ ವಾರಾ ಕೇಳಲಿಕ್ಕತ್ಯಾನೋ ಅಂತ ಅನುಮಾನಿಸಿ
‘…ಇವತ್ತ… ಹನ್ನೊಂದನೇ ತಾರೀಖೂ…?’ ಅಂತ ಹೇಳಿದ್ದಕ್ಕ
ಸ್ವಾಂವಜ್ಜ ನಕ್ಕು -‘ಯಾ…ನಿಂಬದೂ ಪಾಡ ಆತ ಬಿಡ್ರಿ…ನಿಮ್ಮ ತಾರೀಖು ಕಟಿಗೊಂಡು ನಮ್ಮೂ ತೇರ ಎಳೀತಾವ ಏನರೀ…?…ಇಂದ ತಿಥಿ ಯಾವದಂತ…?’
‘ತಿಥೀ…? ತಿಥಿ ನನಗ ಗೊತ್ತಿಲ್ಲರೆಪಾಣಿ…’ .
ಅಷ್ಟರಾಗಣಿ ಸ್ವಾಂವಜ್ಜನ ಮಮ್ಮಗಾ ಹೊರಗ ಬಂತು.ಸ್ವಾಂವಜ್ಜ ಅದನ್ನ
‘ಏ ಪಾರೀಸ…ಇವತ್ತ ಯಾವ ತಿಥೀಲೇ…’ ಅಂತ ಕೇಳಿದ್ದಕ್ಕೆ ಅದು ‘ಇವತ್ತ ಷಷ್ಟಿ…’ ಅಂತ ಹೇಳಿ ಆಡಲಿಕ್ಕೆ ಓಡಿಹೋಯಿತು…
‘ಹಾಂ…ಇಂದ ಸಂಜಿಕ ಹೊತ್ತ ಮುಣಗೂ ಹೊತ್ತಿಗೆಂದರ ದ್ಯಾವ ಬರತಾನು…’ ಅಂತ ದ್ಯಾವಪ್ಪ ತನ್ನೊಳಗ ತಾನಣಿ ಅನಕೊಳ್ಳೂ ಹಂಗ ಅಂದ…ನನಗ ಒಮ್ಮಿಗೆಲೇ ದ್ಯಾವಪ್ಪನ ನೆನಪು ಬಂತು…ಅಂವ ಬೆಂಗಳೂರಿಗೆ ಬಂದು ಹೋಗಿ ಹತ್ತು- ಹನ್ನೆರಡು ವರ್ಷ ಆಗಿದ್ದಿರಬೇಕು…ಅಂವ ಬೆಂಗಳೂರಿನಿಂದ ಹೋಗೂಮುಂದ ಭಾಳಂದರ ಭಾಳ ಡಿಪ್ರೆಸ್ ಆಗಿದ್ದ…ನನಗ ಅದು ಅಗದೀ ಕಣ್ಣಿಗೆ ಕಟ್ಟಿದಹಂಗ ಇನ್ನೂ ನೆನಪ ಅದ…ಬೆಂಗಳೂರಿಂದ ಹೋದಮ್ಯಾಲೆ ಮುಂದ ಅವನ ಸುದ್ದಿಯೇ ಗೊತ್ತಾಗಲಿಲ್ಲ…ಈಗ ಹೆಂಗ ಇದ್ದಾನೋ…! ಪಾಪ ಅವನ ನವನಿರ್ಮಾಣದ ಕನಸು ಎಲ್ಲಾ ನೀರಿನ ಗುಳ್ಳಿ ಆದಂಗ ಆಗಿ ಹೋತು…ಅಂವ ಭಾಳ ಆಶಾ ಇಟಗೊಂಡ ಜನ್ತಾ ಪಕ್ಷ ಛಿದ್ರ ಛಿದ್ರ ಆಗಿ ಹೋತು.ಅವನ ಹಿರೋ -ಜಾರ್ಜ್ ಒಬ್ಬ ದೊಡ್ಡ ಬಾರ್ಗೇನರ್ ಅಂತ ಆಗಿ ಹೋದ…ಹಿಂಗ ನನ್ನೊಳಗೇ ನಾನು ಧೇನಿಸತಿರಬೇಕಾದರೆ ಸ್ವಾಂವಜ್ಜ ಸ್ವಲ್ಪ ಹೊತ್ತಿಗೆ ಮೊದಲು ತನಗ ತಾನಣಿ ಹೇಳಿಕೊಂಡದ್ದನ್ನ ಈಗ ನನಗ ಹೇಳಿದ :
‘ಇಂದ ಸಂಜಿಕ ಹೊತ್ತು ಮುಣಗೂ ಹೊತ್ತಿಗಂದರ ಆ ದ್ಯಾವ ಬರತಾನರಿ…’. ಸ್ವಾಂವಜ್ಜನ ಮಾತಿನಿಂದ ಜಾಗೃತಕ್ಕೆ ಬಂದ ನಾನು
‘ಹಾಂ…? ಹಾಂ ..ಹೌದು…ಇಂದ ಸಪ್ತಮಿ…ಅಲ್ಲ ಷಷ್ಟೀ…’ ಅಂತ ಗಡಬಡಿಸಿ ಮಾತಾಡಿದೆ.
‘ಯಾಕರೀ ಸಾಹೇಬರಣಿ…ಏನೋ ವಿಚಾರದಾಗ ಬಿದ್ದೀರಲಾ…?’
‘ಏಣಿ…ಹಂತಾದ್ದು ಏನಿಲ್ಲ …ದ್ಯಾವಪ್ಪನ ಹೆಸರ ಕೇಳತಿದ್ದಂಗಣಿ ಅವನ ನೆನಪ ಬಂತು… ಅಂವ ನನಗ ಬೆಂಗಳೂರಿನ್ಯಾಗ ಭೆಟ್ಟಿ ಆಗಿದ್ದ…’ ಅಂದೆ.
‘ಹಾಂ..!? ಏನಂದರೀ…ಆ ದ್ಯಾವ ಬೆಂಗಳೂರಿಗೆ ಬಂದಿದ್ದನರೇ…? ಹಂಗರಣಿ ನಿಮ್ಮ ಹಂತೇಕ ರೊಕ್ಕಾ ಕೇಳಾಕ ಬಂದಿರಬೇಕು…ಕೊಟ್ಟಿದ್ದಿರ ಬೇಕಲ್ಲರೀ ನೀವು…?ಎಷ್ಟ ಕೊಟ್ಟಿರಿ?ಅವಕ್ಕ ಇನ್ನ ಎಳ್ಳೂ ನೀರೂ ಬಿಟ್ಟಂಗಣಿ…! ಅವದರ ಆಶೇ ಬಿಟ್ಟಬಿಡರಿ…’
‘ಛೇ ಛೇ…! ಪಾಪ ಮೂರು ತಿಂಗಳು ಜೇಲಿನ್ಯಾಗ ಇದ್ದು ಅದಣಿ ಆಗ ಬಿಡುಗಡೆ ಆಗಿ ನನ್ನ ಹತ್ತರ ಬಂದಿದ್ದ…ಅವನ ಹತ್ತರ ರೊಕ್ಕ ಇದ್ದೂವೋ ಇಲ್ಲೋ ಯಾಂವಬಲ್ಲ ! ಈಗ ನೀವು ಅಂದಮ್ಯಾಲೇ ನನಗ ನನ್ನ ತಪ್ಪು ಗೊತ್ತ ಆದಂಗ ಆತು… ನಾನು ಆಗ ಅವನ್ನ -ರೊಕ್ಕ ಗಿಕ್ಕ ಬೇಕ ಏನೂ ಅಂತ ಕೇಳ ಬೇಕಾಗಿತ್ತು… ಅಂವ ಬಾಯಿ ಬಿಟ್ಟು ಏನೂ ಕೇಳಲಿಲ್ಲ…ನಾನೂ ಅಂವನ್ನ ರೊಕ್ಕ ಬೇಕೇನಪಾ ಅಂತ ಒಂದು ಮಾತು ಕೇಳದಣಿ ಹಂಗಣಿ ಕಳಿಸಿಕೊಟ್ಟಬಿಟ್ಟೆ….ಪಾಪ !’
‘ಹಾಂ ಹಾಂಣಿ…ನೀವು -ಹಳೇ ಮಾತು-ಇಪ್ಪತ್ತ ಪಾಯಿಂಟಿನ ಕಾಲದ ಮಾತ ಹೇಳಾಕತ್ತದೀರಿ…ಏ…ಹತ್ತ -ಹನ್ನೆರಡ ವರ್ಷದ ಹಿಂದಿನ ಮಾತ ಹೇಳಾಕತ್ತದೀರಿ ಬಿಡ್ರಿ! ಅದು ಮುಗೀತು ಬಿಡ್ರಿ…ಅಂದಂಗ ಅಂವ ತುರಂಗಿಗೆ ಹೋಗೂಕಿಂತಾ ಮದಲ ಎರಡ ವರ್ಷ ನೋಡ್ರೀ ಅಗದೀ ನಿಷ್ಠಾದಿಂದ ತೇರಿನ ಸೇವಾ ಮಾಡಿದನರೆಪಾ!… ಸುದ್ದೀಕರಣದ ಆಚಾರಾ-ಯಾತ್ರಾಣಿ…ಎಲ್ಲಾನೂ ಅಗದೀ ಪದ್ಧತೀಶೀರ ಅಂದರ ಪದ್ಧತೀಶೀರ ಮಾಡಿದ…ಆದರ ಆಮ್ಯಾಲ ಅದೆಂತಾದ್ದೊ ನಿರ್ವಾಣೋ- ನಿರಮಾಣೋ…ಏನೋ ಹೆಂತಾದ್ದೋ ಒಂದ ಸಂಘಾ ಸೇರಿದನಂತ…ಆ ಸಂಘಕ್ಕ ಸೇರಿ ಬೆಳಗಾಂವೀ ಕಲೆಕ್ಟರಗ ಗುಂಡ ಹಾಕಾಕ ಹೋಗಿದ್ದನಂತ… ಕಲೆಕ್ಟರ ಅಂದರ ಅಸನರೀ ಏನರೀ…ಇಡೀ ಬೆಳಗಾಂವ ಜಿಲ್ಲಾದ ದೇಸಾಯಿ ಇದ್ದಂಗ ಅಂವ ! ನಮ್ಮ ಧರಮನಟ್ಟೀ ದೇಸಗತಿಹಂತಾವು ಯೋಳೆಂಟ ದೇಸಗತಿಗೋಳು ಕೂಡಿ ಆಧಂತಾ ದೇಸಗತಿ ಇದ್ದಂಗ ಅದಾ!ಹಂತಾ ದೊಡ್ಡ ದೇಸಗತಿಯ ದೇಸಾಯಿಗೆ ಗುಂಡು ಹಾಕಾಕ ಹ್ವಾದರಣಿ ಬಿಡತಾರೇನರೀ…! ಪೋಲೀಸರ ಕೈಯಾಗ ಸಿಕ್ಕು ತುರಂಗಿಗೆ ಹ್ವಾದಾ…’
‘ಏ…ಡೀಸೀಗೆ ಗುಂಡು ಹಾಕೂದಕ್ಕಲ್ಲ…ಸರ್ಕಾರಕ್ಕ ಶಾಕ್ ಕೊಡಲಿಕ್ಕೆ ಡೀಸಿಯ ಖಾಲೀ ಕಾರು ಸೊಙಟ ಮಾಡಬೇಕಂತ ವಿಚಾರ ಮಾಡಿದ್ದರಂತ…ಆಗಣಿ ಪೋಲೀಸರು ಹಿಡದರು…’
‘ಏನೋರೆಪಾ…ಅಂತೂ ನಾನಾ ನಮೂನೀ ಸುದ್ದಿ ಅದಾವು…ಯದಕ್ಕರಣಿ ಹಿಡೀವಲ್ಲರ್‍ಯಾಕ…ಪರಂತೂ ತುರಂಗಿಗೆ ಹೋಗಿ ಬಂದಮ್ಯಾಗ ಅವನ ಕುದರಿ ಕತ್ತಿಯಾತು… ಈಗ ಆ ಮೂಲ ದ್ಯಾವಪ್ಪನ ವಂಶದ ಇಂವ ಅವನ ಹೆಸರಣಿ ಇಟಗೊಂಡು ಒಂದ ಹುಳಾ ಆಗಿ ಕುಂತಾನು…!’ ಅಂತ ಸ್ವಾಂವಜ್ಜ ಮುಖಾ ಎಲ್ಲಾ ಕಂಹೀ ಮಾಡಿಕೊಂಡು ಹೇಳಿದ.
‘ಏ…ಮನಸ ಇಷ್ಟ್ಯಾಕ ಕಂಹೀ ಮಾಡಿಕೊಂಡೀರೀ…ಅಂವಂದು ಇನೂ ಸಣ್ಣ ವಯಸ್ಸು…ನೂರಕಡೆ ಓಡುವ ಚಂಚಲ ಮನಸ್ಸು …ಹಂತಾದರಾಗೂ ಮದಲಿನ ಎರಡ ವರ್ಷ ಅಗದೀ ನಿಷ್ಠಾದಿಂದ ತೇರಿನ ಸೇವಾ ಮಾಡ್ಯಾನ ಅಂತ ಹೇಳತೀರಿ… ಅಂದರ ತಂದಿ ಹೋದರೂ ತಾಯಿಯ ಮಾತು ಕೇಳಿಕೊಂಡು ಹಿಂದಿನ ಪದ್ಧತೀ ಎಲ್ಲಾ ತಪ್ಪಸಧಂಗ ನಡಿಸ್ಯಾನ ಅಂದಂಗಾತು…ಹೆಂಗೂ ಎಲ್ಲಾ ತಿಳದ ಅವನ ಅವ್ವ ಇದ್ದಾಳ…

ಆಕಿ ಬುದ್ಧೀ ಹೇಳಿ ಎಲ್ಲಾ ಬರಾಬ್ಬರೀ ಮಾಡತಾಳ ತಗೋರಿ…’ ಅಂತ ನಾನು ಗಂಭೀರವಾಗಿ ಸಾಂತ್ವನಗೊಳಿಸುವ ಮಾತುಗಳನ್ನ ಹೇಳತಿದ್ದರೆ ಸ್ವಾಂವಜ್ಜ ಹಾಣಿ..ಹಾಣಿಣಿ ಅಂತ ಜೋರಾಗಿ ನಕ್ಕ !…ನಾನು ಅವನ ನಗಿಯಿಂದ ವಿಚಲಿತನಾದದ್ದು ಕಂಡು ಸ್ವಾಂವಜ್ಜ ತನ್ನ ನಗಿಯನ್ನ ನಿಯಂತ್ರಿಸಿಕೊಂಡು –
‘ಸಾಹೇಬರಣಿ…ನಿಮಗ ಅಂವಂದು ಗೊಂತಿಲ್ಲ…!ಅವನ ಅವ್ವ ಹೆಂತಾಕ್ಯೋ ಏನೋ ನನಗ ಗೊಂತಿಲ್ಲ…ಆದರ ಇಂವ ಸೈತ ಹಂತಾ ಸುದ್ದ ಮನಶಾ ಅಲ್ಲ ಅನ್ನೂದು ನಮಗ ಖಾತ್ರೀ ಐತಿ… ಇವನ ಜೋಡೀ ಇವನ ಅವ್ವಗ ಹೊಂದಾಣಿಕಿ ಆಗಾಣಿಲ್ಲಂದರ ಆಕಿ ಚಲೂ ಹೆಣಮಗಳು ಇದ್ದಿರಬೇಕಂತಣಿ ನಮ್ಮ ಇಚಾರ !…ಈ ದ್ಯಾವ್ಯಾ ತನ್ನ ಅವ್ವನ ಮ್ಯಾಲಣಿ ಸಂಶೇ ತಾಳಿ ಆಕಿನ್ನ ಖೂನೀ ಮಾಡಲಿಕ್ಕೆ ಹೋಗಿದ್ದನಂತ !ಆಕಿ ತೆಪ್ಪಿಸಿಗೊಂಡು ಕಳ್ಳೀಗುದ್ದೀ ಗೌಡನ ಮನಿಗೆ ಓಡಿಹೋಗಿ-ನನ್ನ ಉಳಸರೀ ಅಂತ ಗೌಡನ ಪಾದಾ ಹೊಕ್ಕಳಂತ…ಈಗ ಗೌಡ ಆಕಿನ್ನ ತಮ್ಮ ತ್ವಾಟದ ಮನ್ಯಾಗ ಇಟ್ಟದಾನು….ಆಕಿ ಗೌಡನ ರಕ್ಷಣಾದೊಳಗ ಅದಾಳು…ಇದು ಒಂದಣಿ ಗೂಗೀ ಹಂಗ ಐತಿ.ಹಿಂತಾದ್ದು ಇದು…! ಇದೇನ ತನ್ನ ತಾಯೀ ಮಾತ ಕೇಳತೈತಿರೀ…!’ ಅಂತ ವಿವರವಾಗಿ ಹೇಳಿದ.
‘ಹಾಂ…! ’ ಅನ್ನುವ ಒಂದು ಉದ್ಗಾರವನ್ನು ಹೊಂಡಿಸಿದೆನಾದರೂ ಅಂವ ಬೆಂಗಳೂರಿನಲ್ಲಿ ಭೆಟ್ಟಿಯಾದಾಗ ತನ್ನ ಅವ್ವನ ಬಗ್ಗೆ ತೋರಿಸಿದ್ದ ತಿರಸ್ಕಾರ – ನಿರುತ್ಸಾಹಗಳು ಮತ್ತು ಗೌಡನ ಬಗ್ಗೆ ತೋರಿಸಿದ್ದ ಆಕ್ರೋಶ ನೆನಪಾಗಿ ಏನು ಆಗಿರಬಹುದು ಅನ್ನುವುದು ಹೊಳೆಯಿತು… ಆದರೂ ಈ ಮಟ್ಟಕ್ಕೆ ಹೋಗುತ್ತದೆಂದು ಅನಿಸಿರಲಿಲ್ಲ…ಸ್ವಾಂವಜ್ಜನಿಗೆ-‘ಹೋಗಲಿ ಬಿಡ್ರಿ… ಅವನ ಸಂಕಟಗೋಳು ಏನ ಅವನೋ ಯಾರಿಗೆ ಗೊತ್ತು…ಇಷ್ಟೆಲ್ಲಾ ಸಂಕಟಗಳೊಳಗನೂ ತೇರಿನ ಸೇವಾ ನಿಂದರಸದಣಿ ನಡಿಸಿಕೊಂಡು ಬರಲಿಕತ್ತಾನಲಾ…’ ಅಂತ ಸಮಾಧಾನ ಹೇಳಿದೆ.
‘ಅವನ ಸಂಕಟಾ-ಗಿಂಕಟಾ ಅನ್ನೂವು ಏನದಾವೋ ನಮಗ ಗೊಂತ ಇಲ್ಲರೆಪಾ…! ಆದರಣಿ ರಗತ ತಿಲಕದ ಸೇವಾ ಒಂದನ್ನ ನಿಂದರಸದಂಗ ದಣಿರ ವರಸಾ ಬರತಾನನ್ನೂದು ಮಾತ್ರ ಗೊಂತ ಐತಿ…ಇದಕ್ಕೂ ತಪ್ಪಸದಣಿ ಯಾಕ ಬರತಿದ್ದಾನೂ ಅನ್ನೂದನ್ನ ಯಾಂವ ಬಲ್ಲ…? ದೇವಸ್ಥಾನ ಕಮೀಟಿಯವರು ರೊಕ್ಕಾ ಕೊಡತಾರಂತ ಬರತಿದ್ದಾನು.ಇಲ್ಲಾಣಿ…ಹಾಂ…ಅದಕ್ಕ ಬರತಾನೋ ಇಲ್ಲಾ….ಊರಾನ ಹುಡಗೋರು ಅದೇನೇನೋ ಮಾತಾಡತಾರ್ರೆಪಾ…ಇಲ್ಲಿ ಯಾವದೋ ಒಂದ ಉಣ್ಣೀ ಕಂಕಣದ ಹುಡಿಗಿನ್ನ ಇಟಗೊಂಡದಾನೂ…ಹಂಗಣಿ ಹಿಂಗಣಿ ಅಂತ!…ಅದಕ್ಕಣಿ ತೇರಿನ ಸೇವಾಕ್ಕ ತಪ್ಪಸದಣಿಬಂದರೂ ಬರತಿದ್ದಾನು !’
ನನಗ ದ್ಯಾವಪ್ಪನ ಈ ವಿಷಯದ ಬಗ್ಗೆ ಏನೂ ಗೊತ್ತಿರಲಿಲ್ಲ.ಆದರೂ ಇಂಥಾ ಸುದ್ದಿಗಳು ಹೆಂಗೆ ಹುಟ್ಟತಾವೆ ಅನ್ನುವ ಕಲ್ಪನಾ ಇದ್ದದ್ದರಿಂದ ನಾನು ಸ್ವಾಂವಜ್ಜಗ ಹಿಂಗ ಕೇಳಿದೆ –
‘…ದ್ಯಾವಪ್ಪ ತೇರಿನ ಸೇವಾದ ಮುಂದ ಅಷ್ಟಣಿ ಧರಮನಟ್ಟಿಗೆ ಬರತಾನೋ ಇಲ್ಲಾ ಹಗಲೆಲ್ಲಾ ಇಲ್ಲಿಗೆ ಬರತಿರತಾನೋ…? ’
ನನ್ನ ಮಾತು ಸ್ವಾಂವಜ್ಜನ್ನ ಒಮ್ಮಿಗೆಲೇ ಮೌನಕ್ಕ ದೂಡಿತು…ಅಂವ ಒಂದು ಕ್ಷಣ ಸುಮ್ಮನಣಿ ಕೂತು -ತನ್ನೊಳಗ ತಾನಣಿ ವಿಚಾರ ಮಾಡಿಕೊಂಡು ಹೇಳಿದ…
‘ಹಾಂ…ಹೌದು !…ನನಗ ಗೊಂತ ಇದ್ದ ಮಟ್ಟಿಗೆ ಅಂವ ವರ್ಷಕ್ಕ ಒಮ್ಮೇ ಧರಮನಟ್ಟಿಗೆ ಬರತಾನ್ರೆಪಾ…ಅಂದಂಗ ಹೌದು…ನೀವು ಕೇಳೂದೂ ವಾಜಮಿ ಐತಿ.ಆ ಹುಡಿಗಿನ್ನ ಇಟಗೊಂಡಿದ್ದರ ಹಗಲೆಲ್ಲಾ ಧರಮನಟ್ಟಿಗೆ ಬರತಿದ್ದಿರಬೇಕಲಾ?ಯಾಂವ ಬಲ್ಲ…ಯಾರಿಗೆ ಗೊಂತ ಆಗಧಂಗ ಇಲ್ಲಿಗೆ ಬಂದು ಹೋಗತಾನೋ!?ಹಾಂ…ಆತು! ಇದ ಹೋಗಲಿ ಬಿಡ್ರಿ…ಇನ್ನ ಇವರ ಅಪ್ಪಾ -ಅಜ್ಜಾ -ಮುತ್ಯಾಗೋಳು ಯಾವ ಪರಮಾಣದೊಳಗ ಸುದ್ದ ಆಗಿ -ಅಗದೀ ನಿಷ್ಠಾದಿಂದ ಯಾತ್ರಾ ಮಾಡಿಕೊಂಡು ತೇರಿನ ಸೇವಾಕ್ಕ ಬರತಿದ್ದರನ್ನೂದು ನಿಮಗ ಗೊಂತಣಿ ಐತಿ.ಆದರ ಈ ದ್ಯಾವ್ಯಾ ಹಂತಾದ್ದ ಯಾವದನ್ನೂ ನಡಸೂದುಲ್ಲ…ರೊಕ್ಕಾ ಮಾತ್ರ ತಗೋತಾನು!…ಇಂವನ ಯಾತ್ರಾ ಅಂದರ ಹೆಂಗ ಗೊಂತ ಏನರೀ? ಅದ ಹಿಂತಾದ್ದ ನೋಡರಿ…! ಹೋಳೀಹುಣ್ಣಿವೀ ಮದಲನೇ ದಿನಾನಣಿ ಊರು ಬಿಡತಾನು…ಅಂದ ಊರ ಬಿಟ್ಟಾಂವ ಮುಂದ ರಾಮದುರ್ಗದಾಗ ಎಂಟ ದಿನಾ ಕುಡದು ಲಾಜಿಂಗಿನ್ಯಾಗ ಬೀಳತಾನು…ಆಮ್ಯಾಲ ಮುಂದ ಗೋಕಾಂವಿಯ ಲಾಜಿಂಗಿನ್ಯಾಗ ಎಂಟು ದಿನಾ ಕುಡದ ಬೀಳೂದು!…’
ನನಗ ಇದು ಅಗದೀ ವಿಚಿತ್ರ ಅನಿಸಿತು…ಅಂದ ಅಲ್ಲಿ ಪ್ರೆಸ್ ಕ್ಲಬ್ಬಿನ್ಯಾಗ ದ್ಯಾವಪ್ಪಗ ಯಾವ ಡ್ರಿಕ್ಸ್ ತಗೋತೀ ಅಂತ ಕೇಳದ್ದಕ್ಕಣಿ ಅಂವ ಗಾಬರ್‍ಯಾಗಿ, ಉದ್ವೇಗಗೊಂಡಿದ್ದ…ಹಂತಾಂವ ಈಗ ಕುಡದ ಬೀಳತಾನ ಅನ್ನೂದು ನನಗ ನಂಬಿಕಿಯನ್ನ ಹುಟ್ಟಸಲಿಲ್ಲ…ಆದರ ರಭಸದಿಂದ ಮಾತಾಡತಿದ್ದ ಸ್ವಾಂವಜ್ಜನ್ನ ತಡದು ನಿಂದರಸುವದು ನನಗ ಆಗಲಿಲ್ಲ …
‘…ಅಂವ ಗೂಗೀಕೊಳ್ಳಾ-ತವಗಾ-ಸೊಗಲಾ ಎಲ್ಲಿಗೂ ಹೋಗೂದುಲ್ಲರಿ… ಹಾಂ ಇನ್ನೇನಾ…ಉದಗಟ್ಟಿಗೆ ಒಂದ ಕಡೆ ಮಾತ್ರ ಹೋಗತಾನು…ಉದ್ದವ್ವನ ದರಶನಕ್ಕ ಹೋಕ್ಕಾನಂತ ತಿಳಕೊಂಡೀರಿ ಮತ್ತ !…ಅಲ್ಲಿ ಒಂದ ಡೊಂಬರ ಹುಡಿಗಿನ್ನ ಇಟಗೊಂಡದಾನಂತ!…ಆ ಹೆಂಗಸಿಗೆ ಮದಿವಿ ಆಗಿ ಗಂಡ ತೀರಿಕೊಂಡದಾನರೀ… ಎಡ್ಡ ಮಕ್ಕಳದಾವಂತ!…ದೇವರ ಸೇವಾ ಮಾಡೂ ಮನಶಾನ ರೀತಿಯೇನರೀ ಇದಾ…?’
‘…ದೇವಸ್ಥಾನದವರು ರೊಕ್ಕಾ ಯಾಕ ಕೊಡತಾರ…? ಮದಲೇನು ಕೊಡತಿದ್ದಿಲ್ಲ ಅಲ್ಲಾ?’
‘ಈ ರೊಕ್ಕಾ ಕೊಡೂ ಪದ್ಧತೀ ದೇವಸ್ಥಾನ ಕಮೀಟಿಯ ಹುಡಗೋರು

ಮಾಡಿದೂ…ಮದಲೇನ ಈ ಯವಸ್ಥಾ ಇರಲಿಲ್ಲ…ದೇಸಾಯರು ಹೊಲಾನಣಿ ಕೊಟ್ಟಿದ್ದರು…ಈಗ ಹೊಲಾ ಕಳ್ಳೀಗುದ್ದೀ ಗೌಡನ ತಾಬೇಕ್ಕ ಹೋಗೇತಿ…ಹೊಲಾ ಹೋದಗಳಸೇ ಒಂದ ದಿನಾ ಈ ದ್ಯಾವ್ಯಾ ಧರಮನಟ್ಟಿಗೆ ಬಂದು -ನಿಮ್ಮ ದೇಸಾಯರು ನಮ್ಮ ಮನಿತನಕ್ಕ ಬರಕೊಟ್ಟ ಹೊಲಾ ಇತ್ತಲಾ-ಅದನ್ನ ಸರ್ಕಾರದವರು ನಮ್ಮ ಕಡಿಂದ ಕಿತಗೊಂಡು ನಮ್ಮೂರ ಗೌಡಗ ಕೊಟ್ಟದಾರು…ನನಗೇನ ಇನ್ನ ದೇವಸ್ಥಾನದ ಹಂಗ ಇಲ್ಲ…ಮುಂದಿನ ವರ್ಷದಿಂದ ನಾ ತೇರಿನ ಸೇವಾಕ್ಕ ಬರೂದುಲ್ಲರೀ ಅಂದಾ.ಈ ದೇವಸ್ಥಾನ ಕಮೀಟಿಯ ಹುಡಗೋರು-ಏ ಹಂಗ ಮಾಡಬ್ಯಾಡಾ…ತೇರಿನ ಸೋಭಾನಣಿ ಹೋಗಿ ಅಮಂಗಳ ಆದಂಗ ಆಗತೈತೀ – ಅಂತ ದೈನಾಸಪಟ್ಟವು…ಅದಕ್ಕ ದ್ಯಾವ್ಯಾ – ನಾ ಬಂದು ಸೇವಾ ಮಾಡಬೇಕಂದರ-ಹದನ ದಿನದ ಯಾತ್ರಾದ ಪೂರಾ ಖರ್ಚೂ-ಮತ್ತ ರಗತ ತಿಲಕದ ಸೇವಾ ಮಾಡಿದ್ದಕ್ಕ ಒಂದ ಸಾವರ ರುಪಾಯಿ ಸಂಭಾವನೀ ಕೊಡಬೇಕು…ಅಷ್ಟ ಕೊಟ್ಟರ ನಾ ಬಂದು ಸೇವಾ ಮಾಡತನು…ಬ್ಯಾಡಪಾ ಅಂದರ ಬಿಡತನು-ಅಂತ ಧಾರಣೀ ಮಾತಾಡಿದ…ನಾನು-ಅಂವ ಬರದಿರಕ ಬಿಡವಲ್ಲನ್ಯಾಕ…ರೊಕ್ಕಾ ಗಿಕ್ಕಾ ಏನೂ ಕೊಡೂದು ಬ್ಯಾಡರ್‍ಯೋ -ಅಂತ ಹೇಳಿದ್ದಕ್ಕ ಈ ದೇವಸ್ಥಾನದ ಕಮೀಟಿಯ ಹುಡಗೋರು ನನಗ ಏನ ಅನಬೇಕರೀ! ಹಾಂ… ನೀಯೇನೂ !…ನೀ ಜೈನರಾಂವ ಅದೀ… ಅದಕ್ಕಣಿ ಹೆಂಗರಣಿ ಮಾಡಿ ತೇರಿನ ಸೋಭಾ ಕಳೀಬೇಕಂತ ಮಾಡೀ…ಅದಕ್ಕಣಿ ರಗತ ತಿಲಕದ ಸೇವಾ ನಿಂದರಸೂ ಹಾದೀ ಹೇಳಾಕತ್ತದೀ!ನಾಕ ದುಡ್ಡ ಹೋದರ ಹೋಗಲಿ…ರಗತ ತಿಲಕದ ಸೇವಾ ಮಾತ್ರ ನಡ್ಯಾಕಣಿ ಬೇಕು-ಅಂತ ನನ್ನ ಮ್ಯಾಗಣಿ ಹರಲೀ ಹೊರಿಸಿ ಮಾತಾಡಿದವು !ನನಗ ಬಾಳ ದುಕ್ಕ ಆತರೀ…ಹಾಳಾಗಿ ಹೋಗಲಿ ಅಂತ ಸುಮ್ಮನಾಗಿ ಬಿಟ್ಟಿನಿ…’.
‘ಯಜಮಾನರು ನೀವು…ಸಣ್ಣ ಹುಡಗೋರ ಮಾತಗೋಳನ ಮನಸಿಗೆ ಹಚಿಗೊಂಡರ ಹೆಂಗ…?’
‘ಸುಟ್ಟಿತು ನನ್ನ ಯಜಮಾನಿಕಿ…ಸಣ್ಣ ಹುಡಗೋರೇನರೀ ಅವೂ?…ಹೆಂತಾ ರಾಜಕೀಯ ಮಾತಾಡತಾವೂ ಏನ ಕಥೀ…!ಏ…ಈಗಿನ ಹುಡಗೋರು ಎಷ್ಟ ಲಗೂಟ ರಾಜಕೀಯಮಡಾಕ ಸುರೂ ಮಾಡತಾವಂತೀರೀ…ಅವು ಅಡ್ಡಾ -ತಿಡ್ಡಾ ಇಚಾರ ಮಾಡಾಕಣಿ ತಮ್ಮ ತೆಲೀ ಉಪೇಗಿಸತಾವ ನೋಡರಿ…!ಅಲ್ಲರೀ ನನಗ ಊರನ್ನೂ ಅಭಿಮಾನ ಇಲ್ಲ ಏನರೀ?’ ಅಂತ ಹೇಳಿ ಉಸ್…ಅಂತ ಉಸರುಗರೆದ.
‘ಏ…ಅದೇನ ಬಿಡ್ರಿ…ನೀವು ಇರೂಹಂಗ ಇದ್ದ ಬಿಡ್ರಿ…ಅವಕ್ಕಣಿ ಆಮ್ಯಾಲ ಗೊತ್ತ ಆಗತದ…’
‘ಹೂಂ…ತಪ್ಪೋ ನೆಪ್ಪೋ…ನಾ ಅಂತೂ ಇರೂಹಂಗ ಇದ್ದಬಿಡತನರಿ… ಊರಾಗಿನ ಛಂದದ ಕೆಲಸಕ್ಕ ನನ್ನ ಕೈಲೆ ಆಗೂವಷ್ಟು ನಾ ಮಾಡತನು….ಅಷ್ಟೂ ಮೀರಿ- ನಿಂದು ಆ ಜಾತೀ – ಈ ಜಾತೀ ಅಂತಣಿ…ಊರಗಾರಿಕಿಯ ದಗದಕ್ಕ ನೀ ಬರೂದು ಬ್ಯಾಡಪಾ ಅಂದರ ಅದಕ್ಕೂ ತಯಾರನಣಿ… ಹಳ್ಳೀ ಬಾಳೇ…ಕೂಡಿ ಬದಕೂದಕಿಂತಾ ನಮ ನಮ್ಮ ಜಾತೆನಣಿ ಹೆಚ್ಚಾದೂವಂದರ ಏನ ಮಾಡೂದರೀ…? ತೆಪ್ಪಗಣಿ ಬಜಾ ನಾಯೀಗತೆ ಮನ್ಯಾಗ ಕುಂಡರತನು…ನನ್ನೂ ಅರೆ ಇನ್ನ ಎಷ್ಟ ದಿನಾ ಉಳದಿದ್ದಾವರೀ…?’ ಅಂತ ನುಡದ ಸ್ವಾಂವಜ್ಜ ತನ್ನ ಮಾತಿನ ಕೊನೆಗೆ ಇನೊಂದು ಸುಸ್ಕಾರ ಹೊಂಡಿಸಿದ..
ಸ್ವಾಂವಜ್ಜ ಇದನ್ನ ಭಾಳ ಮನಸಿಗೆ ಹಚಿಗೊಂಡಾನ ಅನಿಸಿತು…ಅವನ ಭಾವನಾನೂ ಖರೇನಣಿ ಅದ…ಸ್ವಾಂವಜ್ಜಗ ಯಾವಾಗಲೂ ಊರಿನ ಅಭಿಮಾನ ಅನ್ನುವುದು ಮುಖ್ಯ ಅಂತ ನನಗ ಸ್ಪಷ್ಟ ಗೊತ್ತಿತ್ತು…ಆದರ ನಾನು ಅದರ ಬಗ್ಗೆಯೇ ಮಾತಾಡಿ ಅದನ್ನಣಿ ಮುಂದುವರಿಸುವುದು ಬ್ಯಾಡ ಅನಿಸಿತು…ಅವನ ಮಾತಿಗೆ ಏನೂ ಉತ್ತರಾ ಹೇಳದೇ ಸುಮ್ಮನೇ ಉಳಿದೆ…ಆದರೆ ಸ್ವಾಂವಜ್ಜ ಸುಮ್ಮನುಳಿಯದೇ ಮತ್ತೆ ಅದನ್ನೇ ಮಾತಾಡಿದ –
‘ಅಲ್ಲ …ಈ ಕುಡಕಾ – ರಂಡಿಬಾಜೀ ಮಾಡೂ ದ್ಯಾವ್ಯಾನ ರಗತ ಅಂದರ ಅಗದೀ ಪಾವನ ಇದ್ದಿರಬೇಕು…ಹಿಂತಾ ಪಾವನ ಇದ್ದ ರಗತದ ತಿಲಕಾ ಇಡದಿರಕ ನಮ್ಮ ಊರಿನ ವಿಠ್ಠಲ ದೇವರ ತೇರು ಒಟ್ಟಣಿ ಮುಂದಕ ಸರಿಯೂದೇ ಇಲ್ಲ ಅಂತಿರಬೇಕು ನೋಡರಿ…!’ ಅಂತ ಅಂವ ಊರ ಹುಡುಗೋರ ಮ್ಯಾಲಿನ ಸಿಟ್ಟನ್ನ ದ್ಯಾವಪ್ಪನ ಮ್ಯಾಲೆ ತಿರಿಗಿಸಿದ…ಸ್ವಾಂವಜ್ಜನ ಈ ಮಾತಿಗೂ ನಾನು ಸುಮ್ಮಗುಳಿದೆ.

*
*
*

ಬೆಳಿಗ್ಗೆ ಅಷ್ಟೊಂದು ಬ್ಯಾಸರ-ನೋವು ತುಂಬಿಕೊಂಡಿದ್ದ ಸ್ವಾಂವಜ್ಜ ಇಳಿಹೊತ್ತಿಗಂದರೆ ಎಲ್ಲಾರಕಿಂತಾ ತಾನಣಿ ಮದಲು ತಯಾರಾಗಿ-ಒಟ್ಟಣಿ ಜವಾಬದಾರೀನಣಿ ಇಲ್ಲ ನೋಡ ನಿಮಗ…ಎಲ್ಲಾದಕ್ಕೂ ಹುಡಗಾಟಾ ಮಾಡತೀರಿ… ಅಲ್ಲೇನ ಅಂವ ಬಂದಮ್ಯಾಗ ಹೋಗವರ ಅದೀರಿ ಏನಾ…? ಲಗೂಟಣಿ ಹೊಂಡರಿ… ಅಂತ ಅವಸರಾ ಮಾಡಿ -ಎಲ್ಲಾರನೂ ಎಬ್ಬಿಸಿಗೊಂಡು,ಊದಿಸಿಗೋತ- ಬಾರಿಸಿಗೋತ ಧರಮನಟ್ಟಿಯ ತೆಂಕಣ ದಿಕ್ಕಿನ ಅಗಸಿಗೆ ನಡದ…
ಲಾಗಾಯ್ತಿನಿಂದ ನಡದು ಬಂದದ್ದು ಏನಂದರೆ-ಸೂರ್ಯಾಸ್ತದ ವ್ಯಾಳ್ಯಾಕ್ಕಂದರ ಸೇವಾಕರ್ತನು ಪಡುವಣ ದಿಕ್ಕಿನ ಅಗಸಿಗೆ …ಕಲ್ಲೊಳ್ಳಿಂದ ನಡಕೊಂಡು ಬರುವುದು…ಅಂವ ಬಂದಕೂಡಲೇ ಅವನ ಪಾದಕ್ಕ ಎರಡು ಕೊಡಾ ನೀರು ಹಣಿಸಿ ಅವನನ್ನ ಊದಿಸಿಗೋತ ಬಾರಿಸಿಗೋತ ಮೆರವಣಿಗಿಯೊಳಗ ವಿಠ್ಠಲ ದೇವರ ಗುಡಿಗೆ ಕರಕೊಂಡು ಬರುವುದು…ಅಂವ ದೇವರ ದರ್ಶನಾ ಮಾಡಿಕೊಂಡು ತನ್ನ ಬಿಡದಿಗೆ ಹೋಗಿ ಹೆಂಡತಿ ಮಕ್ಕಳನ್ನು ಸೇರುವುದು…ಆದರೆ ಈ ದ್ಯಾವಪ್ಪ ಪಟ್ಟಕ್ಕ ಬಂದಮ್ಯಾಲೆ-

ಇತ್ತೀಚಿನ ನಾಕಾರು ವರ್ಷಗಳಿಂದ,ಇವನನ್ನ ತೆಂಕಣದ ದಿಕ್ಕಿನ ಅಗಸಿಯಲ್ಲಿ ಎದುರುಗೊಳ್ಳಬೇಕಾಗೇದ…ಯಾಕಪಾ ಅಂತಂದರೆ- ಇಂವ ಉದಗಟ್ಯಾಗ ನಾಕ ದಿನಾ ಮುಕ್ಕಾಮು ಮಾಡಿ ಅಲ್ಲಿಂದ ಫಟಫಟೀ ಹತಿಗೊಂಡು-ತಿಗಡಿ-ಮುಸಗುಪ್ಪಿಗಳ ಮ್ಯಾಲೆ ಹಾಯ್ದು -ಧರಮನಟ್ಟಿಯ ದಕ್ಷಿಣ ದಿಕ್ಕಿಗೆ ಮೂಡುತಾನೆ…! ಇನ್ನೂ ಇವನ ಮದಿವಿ ಆಗಿಲ್ಲ…ಮದಲಿನ ಎರಡು ವರ್ಷ ಇವನ ತಾಯಿ ತಾರವ್ವ ತೇರಿನ ಸೇವಾದ ಕಾಲಕ್ಕ ಧರಮನಟ್ಟಿಗೆ ಬರತಿದ್ದಳು…ಆದರ ಮುಂದ ಆಕಿ ಧರಮನಟ್ಟಿಗೆ ಬರೂದನ್ನ ನಿಂದರಿಸಿದಳು…ಹಿಂಗಾಗಿ ದ್ಯಾವಪ್ಪ ಒಬ್ಬಂಟಿ…
…ಊರಿನ ಹಿರ್‍ಯಾರೂ ಮತ್ತ ದೇವಸ್ಥಾನದ ಕಮೀಟಿಯ ಹುಡಗೋರು ವಾಲಗಾ ತಗೊಂಡು ದಕ್ಷಿಣ ದಿಕ್ಕಿನ ಅಗಸಿಗೆ ಬಂದು ಕೂತಾಗ ಹೊತ್ತು ಮುಣಗಲಿಕ್ಕೆ ಇನ್ನೂ ಒಂದು ಅರ್ಧಾ ತಾಸು ಇದ್ದಿದ್ದೀತು…ಅವರೆಲ್ಲಾ ಅಲ್ಲಿನ ಅರಳೀಕಟ್ಟಿಗೆ ಕುಂತರು…ಹಿರಿಯ ಮಂದಿ ಹಿಂದಿನ ವರ್ಷ ಅಷ್ಟರ ಪೂರ್ತೇನಣಿ ಬಂದ ಮಳಿಯ ಬಗ್ಗೆ …ಕೈಕೊಟ್ಟ ಬೆಳಿಗೋಳ ಬಗ್ಗೆ …ಬೆಳೆದ ಬೆಳಿಗೋಳಿಗೆ ಸಿಗದ ಧಾರಣೆಯ ಬಗ್ಗೆ… ಹಿಂಗಣಿ ಸಂಸಾರದ ತಾಪತ್ರಯಗಳನ್ನ ಮಾತಾಡಲಿಕ್ಕೆ ಸುರುಮಾಡಿದಾಗ,ಹರೇದ ಹುಡಗೋರು ಇವರನ್ನ ಅಲ್ಲೇ ಇರುವಲ್ಲಿ ಬಿಟ್ಟು …ಅಲ್ಲೇ ಸ್ವಲ್ಪ ದೂರದಾಗ ಬ್ಯಾರೇ ಒಂದು ಗುಂಪಾಗಿ ಕೂತರು…ಹಿಂಗ ಬ್ಯಾರೇ ಗುಂಪ ಆಗಿ ಕೂತು ಅವರು ದ್ಯಾವಪ್ಪನ ಉದಗಟ್ಟಿಯ ಹೆಂಗಸಿನ ಸುದ್ದಿಯ ಬುತ್ತಿಯ ಗಂಟು ಬಿಚಿಗೊಂಡರು…ಆಮ್ಯಾಲೆ ಸೂಕ್ಷ್ಮವಾಗಿ ತಾವು ಕುಂತ ಗುಂಪಿನಲ್ಲಿ ಯಾರ್‍ಯಾರು ಇದ್ದಾರೆ ಅನ್ನುವುದನ್ನ ನೋಡಿಕೊಂಡು ತಮ್ಮ ಮಾತುಗಳನ್ನ ಉದಗಟ್ಟಿಯಿಂದ ಧರಮನಟ್ಟಿಗೇ ನಡಿಸಿಗೊಂಡು ತಂದರು…
‘ಇವತ್ತ ಲಗಮವ್ವ ಸಾಬಣಾ ಹಚಿಗೊಂಡು ಜಳಕಾ ಮಾಡಿ ರೆಡಿ ಆಗಿರತಾಳು…’
‘ನಾರೂ ಎಣ್ಣೀ- ಗಿಣ್ಣೀ ತಂದ ಕೊಟ್ಟಿರತಾನ ತಗೋ…’
‘ಹಾಂ…ತೆಲೀಗೆ ನಾರೂಯಣ್ಣೀ ಹಚಿಗೊಂಡು -ಮಕಕ್ಕ ಪಾವಡರ್ ಬಳಕೊಂಡು ಇವನ ಹಾದೀ ನೋಡಿಕೊಂತ ಬಾಗಲದಾಗಣಿ ನಿಂತಿರತಾಳು…’
‘ಅಲ್ಲೋಪಾ…ಊರಾಗ ಇಷ್ಟ ಹರೇದ ಹುಡಗೋರ ಅದಾವು…ಇವನ್ನೆಲ್ಲಾ ಬಿಟ್ಟು ಆ ಬುಬ್ಬಣಿ ಈ ದ್ಯಾವಗ ಹೆಂಗ ಒಲದಿದ್ದಾಳೂ ಅಂತ…!’
‘ಏ…ಈ ಲಗಮಿ ಎರಡ ಸರತೇ ಹೊಟ್ಟೀ ಇಳಿಸಿಕೊಂಡಾಳಂತ!ತಿಗಡಿಗೆ ಹೋಗಿ -ಅಲ್ಲೇ ನರಸಬಾಯಿಯ ಮನ್ಯಾಗಣಿ ಎಲ್ಲಾ ಮುಗಿಸಿಗೊಂಡ ಬಂದಾಳಂತ…’
‘ಹೌದ ಹೌದು.ಏ…ಎಡ್ಡನೇ ಕೂಸಿಗಂತೀ ಕಣ್ಣಾಣಿ -ಮೂಗಾಣಿ…ಎಲ್ಲಾ ಮೂಡಿದ್ದೂ ಅಂತ…!ಏ ಕೂಸ ಬಾಳ ಚಂದ ಇತ್ತಂತ…’
‘ಥೂ ಸೂಳೀ ಮಕ್ಕಳರ್‍ಯಾ…ಥೇಟ್ ಕಣ್ಣೀಲೆ ಕಂಡವರಂಗಣಿ
ಮಾತಾಡತೀರಿ… ಏನ ಕಂಡದೀರಿ ಅಂತ ಹಿಂತಾ ಮಾತ ಆಡತೀರಲೇ…?ಆಚೀ ವರ್ಷ ಕತ್ತಲಾದ ಮ್ಯಾಗ ಲಗಮವ್ವ ದ್ಯಾವಪ್ಪನ್ನ ಮಾತಾಡಿಸಿದಳು ಅಂತ ಆ ತೆಲೀಮಾಸದ ಒಂದ ಹುಡಗ ಹೇಳಿತಂತ!…ಆ ಹುಡಗ ಏನ ನೋಡೇತ್ಯೋ ಯಾಂವ ಬಲ್ಲ ? … ಇಷ್ಟರ ಮ್ಯಾಲಣಿ ಆಕಿಗೆ ಮಕ್ಕಳನ ಹುಟ್ಟಸೂಮಟಾ ಮಾತಾಡತೀರಿ…’ ಅಂತ ಛತ್ರೇರ ಸಾತವೀರ ಎಲ್ಲಾರನೂ ಬೈದ.
‘ಯಾ…ನಮ್ಮ ಸಾತವೀರಣ್ಣ ಲಗಮವ್ವನ ಮ್ಯಾಗ ಕಣ್ಣ ಹಾಕಿದಂಗ ಕಾಣತೈತಿ…ಯಾಕೋ ಯಣ್ಣಾ…’ ಅಂತ ಕಂಬ್ಯಾರ ಚಂದ್ರ್ಯಾ ನಗಿಚಾಟಿಕಿ ಮಾಡಿದ.
‘ಏ…ಚಂದ್ರ್ಯಾಣಿ…ಇದು ನಗಿಚಾಟಿಕೀ ಮಾಡೂ ವಿಷಯ ಅಲ್ಲ ತಮ್ಮಾಣಿ…’ ಅಂತ ಅಂವ ವಜನದಿಂದ ಹೇಳಿದಾಗ ಗುಂಪಿನ್ಯಾಗ ಇದ್ದ ಹುಡಗೋರೆಲ್ಲಾ -ಏ… ತೂಸಿಗಿ…ತೂಸಿಗಿ!ಏ…ಇನ್ನ ಆ ವಿಚಾರನಣಿ ಬ್ಯಾಡ ಬಿಡ್ರೆಪಾಣಿ…ಉದಗಟ್ಟೀ ಸುದ್ದೀನಣಿ ಮಾತಾಡರಿ…ಅಂತ ಮತ್ತ ಮಾತಿನ ದಿಕ್ಕು ಬದಲು ಮಾಡಿ ಉದಗಟ್ಟಿಗೆ ಒಯ್ದರು…
…ಹೀಂಗ ಹಿರ್‍ಯಾರ ಮ್ಯಾಳಾ ಮತ್ತ ಹುಡುಗರ ಮ್ಯಾಳಗೋಳು ತಮ ತಮಗ ಸಲ್ಲುವಂಥಾ ವಿಷಯಗಳನ್ನ ಮಾತಾಡಿಕೊಂತ ಕುಂತಿರಬೇಕಾದರ ಹೊತ್ತು ಮುಣುಗಿ ನಿಧಾನವಾಗಿ ಕತ್ತಲಿ ಕವೀಲಿಕ್ಕತ್ತಿತು…ಸ್ವಾಂವಜ್ಜ ‘ನೋಡದಣಿ…ಹಿರೇ ತಲಿಮಾರಿಗೂ ಈಗಿನ ತೆಲಿಮಾರಿಗೂ ಹೆಂತಾ ಫರಕ ಐತಿ…ಆಗ ಹೊತ್ತು ಮುಣಗೂ ಹೊತ್ತಿಗಂದರ ಅಗದೀ ಗೆರೀ ಕೊರಧಂಗ ಪಡೂ ದಿಕ್ಕಿನ್ಯಾಗ ಈ ದ್ಯಾವ್ಯಾನ ಹಿರ್‍ಯಾರು ಹಾಜರ ಆಗತಿದ್ದರು…ಈಗಿಂದು -ಇದನ್ನ ನೋಡದಣಿ…ಹೊತ್ತು ಮುಣಗಿ ಎರಡ ತಾಸು ಮೀರಾಕ ಬಂತು….! ಇನೂ ಇದರ ಮಾರಿ ಇಲ್ಲ…’ ಅಂತ ತನ್ನ ಮನಸು ಬಿಚ್ಚಿದ… ಉಳದವರೂ ಅವನ ಜೋಡೀ ದನಿಗೂಡಿಸಿದರು…
‘ಏಣಿ…ನಾ ಸಣ್ಣಾವಿರತಣಿ ನಮ್ಮ ಅಜ್ಜ ನನಗ ಕತೀ ಮಾಡಿ ಹೇಳತಿದ್ದನಪಾ! ಆ ಮೂಲ ದ್ಯಾವಪ್ಪನ ಮಮ್ಮಗಾ ಮುಕುಂದಪ್ಪ ಅನ್ನಾವ ಒಬ್ಬ ಈ ಸೇವಾಕ್ಕ ಬರತಿದ್ದನಂತಲಾಣಿ…ಆ ಮುಕುಂದಪ್ಪ ಅಂದರಣಿ ಕುಬೇರಪ್ಪನ ಮಗಾ…ಈ ದ್ಯಾವ್ಯಾನ ಅಜ್ಜನ ಅಜ್ಜಾ…ಆ ಕುಬೇರಪ್ಪನ ತಮ್ಮನ್ನಣಿ ತೇರಿಗೆ ಬಲೀ ಕೊಟ್ಟಿದ್ದರಂತ…ನಮ್ಮ ಅಜ್ಜಗ ಅವನ ಹಿರ್‍ಯಾರು ಹೇಳತಿದ್ದರಂತ…ಆ ಮುಕುಂದಪ್ಪನ್ನ ನೋಡತಿದ್ದರ ದೊಡ್ಡ ಸಾಧೂನ್ನ ನೋಡಿಧಂಗ ಆಗೂದಂತ! ಅಂವ ಕಾಂವೀ ಅಂಗೀ ಹಾಕೊಂಡು -ಕಾಂವೀ ಬಣ್ಣದ ಪಟಕಾ ಸುತಿಗೋತಿದ್ದನಂತ…ಏ…ಬಾಳ ಕಟ್ಟ ನಿಟ್ಟಿನ ಮಡೀ ಅಂತ ಅಂವಂದು…! ಇಡೀ ಹದನ ದಿನದ ಯಾತ್ರಾದೊಳಗ ಅಂವ ಒಟ್ಟಣಿ ಬಾಯಿ ಮುಸರೀ ಮಾಡತಿದ್ದಿಲ್ಲಂತ!…ಬರೇ ಬಾಳೀ ಹಣ್ಣಾ ಮತ್ತ ಹಾಲಾ…ಇವದರ ಮ್ಯಾಲಣಿ ಹದನ ದಿನಾ ಇರತಿದ್ದಂತ…!’
‘ಅದ್ಯಾಕಣಿ…ನಮ್ಮ ಸ್ವಾಂವಪ್ಪಗ ಗೊಂತ ಇದ್ದಿರಬೇಕಲಾಣಿ…ಮಗನ

ಸ್ವಾಮಿಯ ರಥಕ್ಕ ಬಲೀ ಕೊಟ್ಟ ಆ ದ್ಯಾವಪ್ಪ ಅಗದೀ ಥೇಟ್ ವಿಠ್ಠಲ ಸ್ವಾಮಿ ಇದ್ದಂಗಣಿ ಇದ್ದನಂತ !…ನಮ್ಮ ಹಿರ್‍ಯಾರು ಹೇಳತಿದ್ದರು…ತೇರಿಗೆ ಬಲೀ ಕೊಡಾಕಂತ ಅಂವ ತನ್ನ ಮಗನ್ನ ತೆಕ್ಯಾಗ ಅವಚಿ ಹಿಡಕೊಂಡು -ತೇರಿನ ಗಾಲಿಯ ತೆಳಗ ಇಡಾಕ ಹೀಂಗ ತೆಳಗ ಬಗ್ಗತಿದ್ದಂಗಣಿ ತೇರಿನ್ಯಾಗಿನ ವಿಠ್ಠಲಸ್ವಾಮಿ ತೆಳಗ ಇಳದ ಬಂದು…ದ್ಯಾವಪ್ಪನ ತೆಕ್ಯಾಗಿನ ಚಂದ್ರಾಮ ಅನ್ನುವ ಆ ಹುಡುಗನ್ನ ತನ್ನ ತೆಕ್ಕಿಗೆ ತಗೊಂಡನಂತ…ತನ್ನ ರಥಕ್ಕ ಬಲೀ ಆಗಲಿಕ್ಕೆ ಬಂದ ಆ ಕಂದನ್ನ ತನ್ನ ತೆಕ್ಯಾಗ ಇಟಗೊಂಡು ವಿಠ್ಠಲ ಸ್ವಾಮಿ ಗರುಡ ಪಕ್ಸೀ ಮ್ಯಾಲ ಕುಂತಗೊಂಡು ಅಂತರಿಕ್ಸಾಕ್ಕ ಹಾರಿದನಂತ…ಅಂತರಿಕ್ಸಕ್ಕೆ ಹಾರಿ…ಹಂಗಣಿ ಹಿರಿಹೊಳೀ ದಾಟಿ…ಆಕಾಸದಾಗೇ ಪಂಢರಾಪುರದ ಹಾದೀ ಹಿಡದನಂತ…ನೆರದ ಮಂದಿ ಎಲ್ಲಾ ಮಕಾ ಮ್ಯಾಲಕೆತ್ತಿ ಸ್ವಾಮಿಯ ದರಶನಾ ಮಾಡಿದರಂತ !…ಅಲ್ಲಿ ನೆರದ ಮಂದಿ ಅಂಬೂದೆಲ್ಲಾ ಸ್ವಾಮಿಯ ದರಶನಾ ಮಾಡಿ …ಹಂಗಣಿ ಕೈ ಮುಕ್ಕೊಂಡು -ಕಣ್ಣ ಮುಚಿಗೊಂಡು ನಿಂತಿರಬೇಕಾದರಣಿ…ಆ ಸ್ವಾಮಿಯ ತೇರನ್ನೂದು ಯಾರು ಅಂದರ ಯಾರೂ -ಒಬ್ಬರೂ ಕೈಮುಟ್ಟಿ ಎಳೀದಣಿ…ಅದು ತನ್ನಂಗ ತಾನಣಿ ಮುಂದಕ ಹೊಂಟು ಪಾದಾಗಟ್ಟೀ ಸೇರಿತಂತ !…ಸತ್ಯೇದ ಕಾಲ ಅದಾ…ನಾನೂ ಸ್ವಾಂವಪ್ಪಾ ಒಂದಣಿ ವಾರಿಗ್ಯಾವರು.ಅವರ ಅಜ್ಜಗೂ ಈ ಇಚಾರ ಗೊಂತ ಇದ್ದಿರಬೇಕು…ಯಾಕಪಾಣಿ… ನಿನಗೂ ನಿಮ್ಮಜ್ಜ ಇದನ ಹೇಳತಿದ್ದಿರಬೇಕಲಾ…’ ಅಂತ ಕಂಬ್ಯಾರ ಮೇಲಗಿರಿಯಪ್ಪ ಹೇಳಿದ್ದಕ್ಕೆ ಸ್ವಾಂವಜ್ಜ-
‘ ಹೂಂ…ಊರಾನ ಮಂದಿ ಹಿಂಗ ಕಥೀ ಮಾಡಿ ಹೇಳೂದು…ನಮ್ಮ ಅಜ್ಜ ಏನ ಇದನ ನನಗ ಹೇಳತಿರಾಕಿಲ್ಲ …’ ಅಂತ ಹೇಳಿದ. ಆಗ ಇವರ ವಾರಿಗಿಯ ಇನೊಬ್ಬ ಮುದುಕ – ಮಾಡಲಿಗ್ಯಾರ ಗೂಳಪ್ಪಜ್ಜ –
‘ಏ…ಸ್ವಾಂವಪ್ಪನ ಅಪ್ಪಾ ಮತ್ತ ಅವರ ಅಜ್ಜಂದು ಒಂದ ನಮೂನೀ ಇಚಿತ್ರದ ರೀತಿ ಬಿಡು…ಅವರು ನಮ್ಮ ಸ್ವಾಂವಪ್ಪನಗತೇ ಅಲ್ಲ…ಅವರು -ನಮ್ಮದು ಜಯ್ಯಾರ ಕುಲಾ…ನಮ್ಮ ದೇವರಗೋಳು ಬ್ಯಾರೇ -ಪದಮಾವತೀ-ಮಾವೀರಾ…ಅಂತ ಏನೇನೋ ಹೇಳವರಪಾ…ಈ ಇಟ್ಠಲ ಸ್ವಾಮಿ -ಈಸೂರ ದೇವರು -ಲಕ್ಕವ್ವ ಇವೆಲ್ಲಾ ನಮ್ಮ ದೇವರ ಅಲ್ಲಾ…ಅಂತ ಇಚಿತ್ರ ಹಮ್ಮು ಮಾಡಾವರು.ಅದಕ್ಕಣಿ ಸ್ವಾಂವಪ್ಪಗ ಅವರ ಅಜ್ಜ ನಮ್ಮ ದೇವರ ಮಾತ್ಮೇದ ಕಥೀ ಹೇಳತಿರಾಕಿಲ್ಲ…ಆದರ ಮುಂದ ಸ್ವಾಂವಪ್ಪ ಬ್ಯಾರೇನಣಿ ಆದ…ನಮ್ಮನ್ನ ಕೂಡಿಸಿಕೊಂಡು ಕರಡೀ ಮಜಲ ಕಟ್ಟಿದ…ಸುತ್ತ ಹತ್ತು ಊರೊಳಗ ಧರಮನಟ್ಟೀ ಕರಡೀ ಮಜಲಂದರ ಕರಡೀ ಮಜಲ ನೋಡಪಾಣಿ ಅಂತ ಹೆಸರ ಬರೂಹಂತಾ ಕರಡಿ ಮಜಲ ಕಟ್ಟಿದಾ…!ಊರಾಗಿನ ಎಲ್ಲಾ ದೇವರಗೋಳ ಉತ್ಸವಾ ಮತ್ತ ಪಾಲಕೀ ಸೇವಾದಾಗ ಇಂವಂದಣಿ ಕರಡೀ ಮಜಲು.ಏ… ವಯಸ್ಸು ಇರೂಮಟಾ ಸ್ವಾಂವಜ್ಜ ನಮ್ಮ ದೇವರಗೋಳದು ಅಗದೀ ನಿಷ್ಠಾದಿಂದ ಸೇವಾ ಮಾಡಿದಾನ ಬಿಡು…’.

‘ಹಾಂ ನೋಡದಣಿ…ಈ ಗೂಳಪ್ಪ ನಮ್ಮ ಹಿರ್‍ಯಾರನ ಟೀಕಾ ಮಾಡಿಕೊಂತ ಮಾಡಿಕೊಂತನಣಿ ಏನ ಹೇಳಾಕತ್ತದಾನ ನೋಡ್ರಿ…ಊರಾನ ದೇವರಗೋಳ ಎಲ್ಲಾ ತಮ್ಮೂವ ಅನ್ನಾಕತ್ತದಾನು ! ಮತ್ತ ನಾ ವಯಸ್ಸ ಇರೂಮಟಾ ಮಾತ್ರ ಇವರ ದೇವರಗೋಳ ಸೇವಾ ಮಾಡೀದನಂತ!…ಈಗ ಹೇಳರೆಪಾಣಿ…ಈಗ್ಯಾರ ಭೇದಾ ಮಾಡಿದರು…?’ ಅಂತ ಸ್ವಾಂವಜ್ಜ ಹೇಳಿದಾಗ ಎಲ್ಲಾ ಮಂದಿ -ಹೌದ ಹೌದು… ಗೂಳಪ್ಪಂದ ಚೂಕ ಆತು ಅಂತ ಹೇಳಿ ನಕ್ಕರು..
‘…ನೀವು ನಮ್ಮ ಜಯ್ಯಾರ ಕುಲಾ ಟಿಂಗಲ್ಲು ಮಾಡವಲ್ಲರ್‍ಯಾಕ…ಈಗ ಒಂಭತ್ತ ಹೊಡದ ಹೋತು…ನಿಮ್ಮ ಮನಿಗೋಳೊಳಗ ಬಿಸೀ ರೊಟ್ಟಿ ನಿಮ್ಮ ಹಾದೀ ನೋಡತಿರತಾವು… ನಾ ನೋಡದಣಿ…ಹೊತ್ತ ಮುಣಗೂಕಿಂತಾ ಮದಲಣಿ ನನ್ನ ಸೊಸೀ ಮಾಡಿದ ಬಿಸಿಬಿಸೀ ರೊಟ್ಟೀ ಕಟದ ಬಂದನು !…ನಿಮ್ಮದು ಈಗ ಎರಡ ಕಡೇ ಧ್ಯಾನಾ…ಇಕಾಡಿ ದೇವರ ಕೆಲಸಾ- ಅಕಾಡಿ ರೊಟ್ಟೀ ಎಳತಾ… !’ ಅಂತ ಸ್ವಾಂವಜ್ಜ ಚಾಷ್ಟೀ ಮಾಡಿದಾಗ ಮಂದಿ ಎಲ್ಲಾ ನಕ್ಕಿತಾದರೂ ಸ್ವಾಂವಜ್ಜ ಹೇಳಿಧಂಗ ಅವರ ಮನಸಗೋಳು ರೊಟ್ಟೀಕಡೆ ಎಳೀಲಿಕ್ಕತ್ತಿದ್ದವು…ಇಷ್ಟೊತ್ತು ಯಾಕ ಮಾಡಿದ್ದಾನು ಈ ಸೂಳೀ ಮಗಾ ಅಂತ ಮನಸಿನ್ಯಾಗಣಿ ದ್ಯಾವಪ್ಪನ್ನ ಬಯ್ಯಲಿಕ್ಕತ್ತಿದ್ದರು…ಅಷ್ಟೊತ್ತಿಗಂದರ ಒಂದೊಂದಣಿ ಒಂದೊಂದಣಿ ಎದ್ದುಹೋಗಿ ಹುಡುಗೋರ ಮ್ಯಾಳ ಎಲ್ಲಾ ಸಂವದು – ಉಳದಿದ್ದ ಎರಡ ಮೂರು ಹುಡಗೋರು ಸಹಿತ ಬಂದು ಹಿರ್‍ಯಾರ ಗುಂಪಿನ್ಯಾಗ ಸೇರಿಕೊಂಡಿದ್ದವು…
…ಹತ್ತು ಹೊಡದ ಹೋತು …ಆಕಾಶದಾಗ ಹಾಂವೂ-ಚೇಳೂ ಆಕಾರದಾಗ ಮತ್ತ ಹೆಂಗ ಬೇಕಾದಂಗ-ಕಲ್ಲು ಒಗದಂಗ…ಚಿಕ್ಕಿಗೋಳು ಮೂಡಿದ್ದವು.ಅಲ್ಲಿ ಕೂತಂಥಾ ಮಂದಿ ಮುಗಲು ನೋಡೂದೂ ಮತ್ತ ಆಮ್ಯಾಗ ಇತ್ತ ನೆಲದ ಮ್ಯಾಗ ಉದಗಟ್ಟಿಯ ಹಾದೀಕಡೆ ನೋಡೂದೂ ಮಾಡತಿದ್ದರಣಿ ಅವರ ಹೊಟ್ಟಿಯನ್ನುವವು ಹಸದು-ಗುರ್ ಗುರರ್…ಅಂತ ಹಾಡು ಹೇಳಲಿಕ್ಕತ್ತಿದವು…ದಿನಾ ಇಷ್ಟೊತ್ತಿಗಂದರೆ ಊಟಾಮಾಡಿ ಹಳೆಮಾತಾಗಿ ಹೋಗತಿತ್ತು…ಮಲಗಿ ಸರಿ ಹೊತ್ತಾಗಿರುತ್ತಿತ್ತು… ಇಂದು ಇನೂ ಉಣದೇ ಹಸದ ಹೊಟ್ಟೀಲೆ ಗುಂಗಾಡು ಕಡಿಸಿಗೋತ- ಇಲ್ಲಿ …ಊರಿನ ಈ ದಕ್ಷಿಣದ ಬಯಲಿನ್ಯಾಗ ಕುಂಡರೂ ಹಂತಾ ವ್ಯಾಳ್ಯಾ ಬಂದಿದೆ !
…ಇಷ್ಟೊತ್ತಿಗಂದರೆ ಮದಲು ಎದ್ದು ಹೋಗಿದ್ದ ಒಂದ ನಾಕು ಹುಡಗೋರು- ‘ಇನಣಿ ಬರಲಿಲ್ಲಾ…?’ ಅಂತ ಕೇಳಿಕೋತ ಬ್ಯಾಟರೀ ಬಿಟಗೊಂಡು ಊರಕಡಿಂದ ಬಂದವು.ಸ್ವಾಂವಜ್ಜ ಆ ಹುಡಗೋರಿಗೆ ‘ನೀವು ಉಂಡ ಬಂದದೀರ್‍ಯೋ ಹೆಂಗ…?’ ಅಂತ ಕೇಳಿದ್ದಕ್ಕ ಆ ಹುಡುಗೋರು ತಪ್ಪು ಮಾಡಿ ಸಿಕ್ಕ ಬಿದ್ದವರಂಗ,ಸಣ್ಣ ದನೀಲೇ ‘ಹೂಂ ಯಜ್ಜಾಣಿ…’ ಅಂತ ಹೇಳಿದವು. ‘ಹಂಗರಣಿ ಪಾಡ ಆತ ಬರ್ರಿ…ನೀವು

ಅವನ ಹಾದೀ ಕಾಯಕೊಂತ ಇಲ್ಲಿ ಕುಂಡರ್ರಿ…ನಾವು ಉಣ್ಣಾಕ ಹೋಗತೀವು’ ಅಂತ ಗೂಳಪ್ಪಜ್ಜ ಹೇಳತಿದ್ದಂಗಣಿ ಎಲ್ಲಾರೂ ಎದ್ದಣಿ ಬಿಟ್ಟರು…ಅವರ ಜೋಡೀ ತಾಸೇ ಭಜಂತ್ರಿಯವರೂ ಎದ್ದರು.ಒಂದ ಹುಡುಗ – ‘ಭಜಂತ್ರಿಯವರೂ ಎದ್ದರಲಾ?ಮತ್ತಣಿ ದ್ಯಾವಪ್ಪ ಬಂದಾಗ ಬಾರಸವರು ಬ್ಯಾಡಾ?’ ಅಂದಿತು.
‘ಸರಿಹೊತ್ತಿನ್ಯಾಗ ಬಂದರಣಿ ಊದಿಸಿಕೊಂತ ಬಾರಿಸಿಕೊಂತಣಿ ಏನ ಕರಕೊಂಡ ಬರತೀ?…ಬರಬೇಕಾದ ಯಾಳೇದಾಗ ಬಂದರ ಸಿಗಬೇಕಾದ ಮರುವಾದೀ ಸಿಗತೇತಿ…ಯಾಳೇ ಮೀರಿದರ ಮರುವಾದೆನೂ ಇಲ್ಲ…’ ಅಂತ ಹೇಳಿದ ಸ್ವಾಂವಜ್ಜನೂ ಎಲ್ಲಾರ ಜೋಡೀ ಊರಕಡೆ ನಡದ.

*
*
*

ಮರದಿವಸ ಬೆಳಿಗ್ಗೆ ಎದ್ದು ಕೇಳಿದರೆ ದ್ಯಾವಪ್ಪ ಇನ್ನೂ ಬಂದೇ ಇಲ್ಲ ಅನ್ನುವುದು ತಿಳಿದು ಊರ ಮಂದಿಗೆಲ್ಲ ದಿಗಿಲು ಆದಂಗಾತು…ದೀಡನೂರು ವರ್ಷಗಳಿಂದ – ಒಂದು ವರ್ಷ ಸಹಿತ ತಪ್ಪಧಂಗ ನಡಕೊಂಡು ಬಂದ ರಿವಾಜು…ಇಡೀ ಊರು ಅಗದೀ ಹೆಮ್ಮೆಯಿಂದ ನೆನಪು ಇಟಗೊಂಡು ಚಾಚೂ ತಪ್ಪದ ನಡಿಸಿಕೊಂಡು ಬಂದ ಪದ್ಧತೀ… ಹಿಂತಾದ್ದು ಬರೊಬ್ಬರೀ ದೀಡನೂರನೇ ವರ್ಷದ ಈ ತೇರಿಗೇ ಅಡ್ಡನಾಡ ಹೊಡಿಯೂದಂದರ…! ಊರಾಗಿನ ಮಂದಿ ಎಲ್ಲಾ ‘ಏ…ಹೆಂಗೋಪಾ ಇನ್ನ…?’ ಅಂತ ಒಬ್ಬರನ್ನ ಒಬ್ಬರು ಕೇಳಿಕೋತ ತಮ ತಮ್ಮ ಗಾಬರಿಯನ್ನ ಹಂಚಿಗೋಲಿಕ್ಕತ್ತಿದ್ದರೆ ಒಂದಷ್ಟು ಮಂದಿ -‘ಏ…ಆತು ಬಿಡು.ಧರಮನಟ್ಟೀ ಪುಣ್ಣೇ ಮುಗದಂಗಾತು…! ಯಾವಾಗ ಅಂವ ಪಂಚಮೀ ದಿವಸ ಬರಲಿಲ್ಲಂತಂದರಣಿ ಇನ್ನ ಅಂವ ಬರತಾನನ್ನೂ ಖಾತ್ರಿ ಇಲ್ಲ…’ ಅಂತ ಮಂದಿಯ ಗಾಬರಿಯನ್ನ ಹೆಚ್ಚುಮಾಡಿ ತಾವೂ ಆ ಗಾಬರಿಯೊಳಗ ಮುಣಿಗಿ ಸುಂದಾಗಿ ಕೂಡತಿದ್ದರು…
…ಆ ಮೂಲದ್ಯಾವಪ್ಪಗ ಅಂದು ಗೂಗೀಕೊಳ್ಳದ ಸ್ವಾಮಿಗೋಳು ಹೇಳಿದ್ದರಂತ-ವರಷಾ ವರಷಾ ಎಂಟ -ಹತ್ತ ಹನಿ ರಗತಾ ಹನಿಸಿಕೋತ ಹೋದರ ನೂರ -ದೀಡನೂರ ವರಷಕ್ಕಂದರ ಪೂರಾ ಒಬ್ಬ ಮನಶಾನ ರಗತದಷ್ಟಣಿ ಆಗತೈತಿ ತಗೋ…ಅಂತ ! ಅಂದರ ಆ ಮಾತ್ಮರ ಮಾತಿನ್ಯಾಗಿನ ಗೂಢಂಬೂದು ಏನು ಇದ್ದಿದ್ದೀತು?…ಆ ಮಾತ್ಮ ಆಡಿದ ಮಾತಿನ್ಯಾಗಿನ ಅರ್ಥನ್ನುವದಾದರೂ ಏನು ಇದ್ದಿದ್ದೀತು…?ಈ ದ್ಯಾವ್ಯಾ ನೋಡಿದರ ನಿನ್ನೆ ಬರಬೇಕಾದಂವ ಇನ್ನೂ ಬಂದಿಲ್ಲ….ಆ ಮಹಾತ್ಮರು ಏನು ಹೇಳಿದ್ದಾರು…? ಅಂತ ಮಂದಿ ಹಿಂಗ ಏನೇನೋ ಕಲ್ಪಿಸಿಕೊಂಡು ಮಾತಾಡಲಿಕ್ಕೆ ಸುರು ಮಾಡಿತು…ಮತ್ತ ಸ್ವಾಂವಜ್ಜನಣಿ -‘ಏ…ಇಲ್ಲದ್ದಣಿ ಅಪಸಕುನದ
ಮಾತು ಮಾತಾಡಬ್ಯಾಡ್ರಿ…ಆ ಹುಡುಗಗ ಜವಾಬದಾರೀ ಅನ್ನೂದು ಇಲ್ಲ…ಚಂಗಿ ಹುಡಗ ಅದಾ…ಎಲ್ಲಿ ಹ್ವಾದಲ್ಲೇ ಕುಂತಿರಬೇಕು…ಈಗ ಯಾರನರೇ ಉದಗಟ್ಟಿಗೆ ಕಳಿಸಿ ಸಾರಾಸಾರ ಎಲ್ಲಾ ಹಕೀಕತ್ತು ತಿಳಕೊಳ್ಳೂಣೂ…ಅದನ್ನ ಬಿಟ್ಟು ಇಲ್ಲದ್ದಣಿ ಒಂದ ಅಪದ್ಧ ಮಾತಾಡಬ್ಯಾಡ್ರಿ…’ ಅಂತ ಬೈದು ಇಬ್ಬರು ಹುಡಗೋರನ ಕರದು-ಫಟಫಟೀ ತಗೊಂಡು ತಾಬಡ ತೋಬಡ ಉದಗಟ್ಟಿಗೆ ಹೋಗಿಬರ್ರಿ ಅಂತ ಹೇಳಿ ಕಳಸುವ ವ್ಯವಸ್ಥಾ ಮಾಡಿದ…
ಉದಗಟ್ಟಿಗೆ ಹೊಂಟ ಆ ಹುಡಗೋರಿಗೆ ಎಲ್ಲಾರೂ ಒಂದೊಂದ ನಮೂನಿಯ ಸೂಚನಾ ಕೊಡಾವರಣಿ…ಒಬ್ಬ-ಲಗೂಟಣಿ ಹೊಳ್ಳಿ ಬರ್ರಿ ಅಂತ ಹೇಳಿದರೆ ಮತ್ತೊಬ್ಬ – ಅಂವಸರಾ ಮಾಡಿ ಪುಸಕ್ ಅಂತ ಹೊಳ್ಳಿ ಬರಬ್ಯಾಡರಿ…ಪೂರಾ ಎಲ್ಲಾ ಹಕೀಕತ್ತ ತಿಳಕೊಂಡಣಿ ಬರ್ರಿ ಅಂತ ಹೇಳಿದ.ಚಂದರಿಗ್ಯಾರ ಮುತ್ತೆಪ್ಪ – ನೋಡ್ರೆಲೇ…ಉದ್ದವ್ವನ ಗುಡೀ ಪೂಜಾರೀ ಹಂತೇಕ ಹೋಗಿ ನನ್ನ ಹೆಸರ ಹೇಳ್ರಿ… ಅಂದರ ಅಂವ ಎಲ್ಲಾ ಹಕೀಕತ್ತು ತಿಳಸತಾನ ಅಂದಾಗ ಯಾರೋ ಒಬ್ಬ -ಹೂಂ… ಹೌದ ನೋಡಪಾ ! ಮುತ್ತೆಪ್ಪನ ಹೆಸರ ಹೇಳದಿರಕ ಅಂವ ಇವರಿಗೆ ಏನೂ ಹೇಳದಣಿ ಹಂಗಣಿ ಹೊಳ್ಳಿ ಕಳಸತಾನು…! ಅಂತ ಯಾಂಸೀ ಮಾತಾಡಿದ.ಇನೊಬ್ಬ- ನೋಡ್ರಲೇ…ಬರೇ ಆ ಪೂಜಾರೀ ಸುತ್ತ ಗುಂಡಕಣಿ ಸುತ್ತ ಹೊಡದ ಬಂದ ಬಿಡಬ್ಯಾಡರಿ…ಊರ ಮಂದಿನ್ನೂ ಕೇಳರಿ ಅಂತ ಹೇಳಿದ…ಊರಿನ ಹಿರೇ ಮಂದಿ ಹಿಂಗ ತಲಿಗೊಂದೊಂದು ಸಲ್ಲಾ ಕೊಡತಿದ್ದರ ಧರಮನಟ್ಟಿಯ ಹರೇದ ಹುಡುಗೋರ ಮ್ಯಾಳದವರು ಮಾತ್ರ ಐಕಮತ್ಯದಿಂದ ಒಂದಣಿ ಒಂದು ಸಲ್ಲಾ ಕೊಟ್ಟರು…ಅವರ ಸಲ್ಲಾ ಏನಂದರ-ನೀವು ಊರಾನ ಮಂದಿನ್ನ ಕೇಳರೀ ಬೇಕಾರ ಬಿಡರಿ-ನೀವು ಉದ್ದವ್ವನ ಪೂಜಾರಿನ್ನ ಕೇಳರಿ ಬೇಕಾರ ಬಿಡ್ರಿ- ಆದರ ಡೊಂಬರ ಓಣಿಗೆ ಹೋಗಿ ಅಲ್ಲಿ ಮಾತ್ರ ವಿಚಾರ ಮಾಡಾಕಣಿ ಬೇಕು!…ಉದಗಟ್ಟಿಗೆ ಹೊಂಟ ಹುಡುಗೋರು – ನಮಗ ಎಲ್ಲಾ ಗೊಂತ ಐತೇಳರೆಪಾಣಿ ಅಂತ ನುಡದು ಫಟಫಟೀ ಹತ್ತಿ ಉದಗಟ್ಟಿಯ ಹಾದೀ ಹಿಡದವು…
…ಸಂಜಿಯ ಐದರಷ್ಟೊತ್ತಿಗೆ ಆ ಹುಡುಗೋರು ಉದಗಟ್ಟಿಯಿಂದ ಹೊಳ್ಳಿ ಬಂದವು…ಉದಗಟ್ಟಿಗೆ ಹೋಗತಿದ್ದಂಗಣಿ ಅವರು ಮದಲು ಉದ್ದವ್ವನ ಗುಡೀಗೆ ಹೋಗಿ ಅಲ್ಲಿ ಪೂಜಾರಿನ್ನ ಕೇಳಿದರಂತ.ಅಂವ –
‘ಏ…ನಿಮ್ಮ ದ್ಯಾವ ಗುಡೀಗೆ ಬಂದಿದ್ದನರೆಪಾಣಿ…ಗುಡೀಗೆ ಬಂದು ಒಂದ ಇಚಿತ್ರ ಆಟಾನಣಿ ಆಡಿ ಹ್ವಾದಾ!…ನಾಕ ದಿನದ ಹಿಂದಣಿ ಅಂವ ಉದಗಟ್ಟಿಗೆ ಬಂದಾನಂತ ನನಗ ಸುದ್ದಿ ಹತ್ತಿತ್ತು…ಮತ್ತೇನು ಉದಗಟ್ಟಿಗೆ ಬಂದು ಆ ಡೊಂಬರ ಬಾಳವ್ವನ ಮನ್ಯಾಗ ಮನಕೊಂಡಿದ್ದಾನು ಅಂತ ಅನಕೊಂಡು ಸುಮ್ಮಕಣಿ ಇದ್ದನಿ…ಅದ ಹೋಗಲಿ ಬಿಡ್ರಿ…ಬಂದ ನಾಕ ದಿನದ ಮ್ಯಾಗ-ಅಂತೂ ಮನ್ನಿ ಹರ್‍ಯಾಗ…ನಾ

ಉದ್ದವ್ವನ ಪೂಜೀ ಮಾಡತಿರಬೇಕಾದರ ಅಂವ ಗುಡೀಗೆ ಬಂದ… ಇವನೂ ದೇವರ ಮನಶಾನಣಿ ಅದಾನು ಅಂತ ತಿಳದು-ಬಾ ದ್ಯಾವಪ್ಪಾ…ಬಾ ಇಲ್ಲೇ ಒಳಗಣಿ ಬಾ ಅಂತ ಗರ್ಭದ ಗುಡೀ ಒಳಗ ಬರಲಿ ಅಂತ ಕರದನಿ…ಅಂವ-ಏ ಇರಲೇಳಪಾ…ನಾ ಇಲ್ಲೇ ಹೊರಗಣಿ ಕುಂತಿರತನು ಅಂತ ಗರ್ಭಗುಡೀ ಬಾಗಲದ ಮುಂದ…ಇಲ್ಲಿದಣಿ ಇಲ್ಲಿ…ಈ ಕಂಬಕ್ಕ ಆನಿಕೊಂಡು ಕುಂತ…ಉದ್ದವ್ವಗ ಕೈಯ್ಯಾರಣಿ ಮುಗದನೋ ಇಲ್ಲೋ ಯಾಂವ ಬಲ್ಲ ! ನಾ ಪೂಜೀ ಮುಗಿಸಿಗೊಂಡು ಹೊರಗ ಬಂದು ಅಂವಗ ಪುಸ್ಪದ ಪರಸಾದಾ ಕೊಟ್ಟಿನಿ… ಅದನ್ನ ಕಿಂವ್ಯಾಗ ಇಟಗೊಂಡು-ಬಾ ಕುಂಡರ ಬಾ -ಅಂತ ನನ್ನ ಕರದ…ಹೆಂಗೂ ಪೂಜಿ ಮುಗದೈತಿ ಅಂತ ನಾನು ಅಂವ ಕುಂತ ಕಂಬದ ಎದುರಿಗೆ…ಈ ಕಂಬಕ್ಕ ಆನಿಕೊಂಡ ಕುಂತಿನಿ…ದ್ಯಾವಪ್ಪ ನನ್ನಣಿ ಮಿಕಿ ಮಿಕಿ ಅಂತ ನೋಡಾಕತ್ತಿದ್ದ …ನಾನು ನಗಿಚಾಟಿಕೀ ಮಾಡವನಂಗ-ಯಾಕಲೇ ಸೂಳೀಮಗನಣಿ!ಹಂಗ್ಯಾಕ ನೋಡಾಕತ್ತದೀ? ಅಂತ ಕೇಳಿದರ ಅಂವ ಅಗದೀ ಗೂಢ ದನೀಲೆ -ದೊಡಪ್ಪಾಣಿ… ಒಂದ ಮಾತ ಕೇಳತನು…ಅಂತರಂಗಾ -ಬಹಿರಂಗಾ ಮಾಡದಣಿ ಹೇಳತೀ? ಅಂತ ಕೇಳಿದ…!
ಅವನ ಮಾತು ನನ್ನ ಕಳ್ಳಿಗೆ ನಾಟಿಧಂಗ ಆತು…ನಾನು-ಅದರಾಗ ಏನೈತೋ ಮಗನಣಿ…ದೊಡಪ್ಪಾಣಿ ಅಂತ ಬಾಯಿ ತುಂಬ ಕರದ್ದೀ…ಇನ್ನ ನಿನ್ನ ಮುಂದ ಅಂತರಂಗಾ ಬಹಿರಂಗಾ ಮಾಡೂಹಂತಾದ್ದು ಏನೈತಿ?…ಅದೇನ ಕೇಳತೀ ಕೇಳು ಅಂತ ಹೇಳಿದಿನಿ…ಅಂವ ಗರ್ಭಗುಡೀ ಒಳಗಿನ -ಪೂಜಿಗಂತ ಸಿಂಗಾರ ಮಾಡಿದ್ದ ಉದ್ದವ್ವನ್ನಣಿ ದಿಟ್ಟಿಸಿ ನೋಡಿಕೋತ -ದೊಡಪ್ಪಾಣಿ…ಖರೇ ಹೇಳು…ವರ್ಷದ ಹನ್ನೆರಡೂ ತಿಂಗಳು- ಒಟ್ಟಣಿ ತಪ್ಪಸದಣಿ ಹರ್‍ಯಾಗಣಿ ಮತ್ತ ಸಂಜೀ ಮುಂದ ಇಲ್ಲಿ ಈ ಉದ್ದವ್ವನ್ನ ಪೂಜೀ ಮಾಡತೀಲಾಣಿ.ಇದೂ…ಬರೇ ಕಲ್ಲ ಹೌದಲ್ಲೊ?… ನಿನಗ ಎಂದರೇ ಈ ಕಲ್ಲು ಉದ್ದವ್ವ ಅಂತ ಅನಿಸೇತೇನು ಹೇಳು…ಅಂತ ಕೇಳಬೇಕೂ ! ನನಗ ಈ ದ್ಯಾವ್ಯಾ ಸೂಳೀಮಗಾ ಹರ್‍ಯಾಗ ಏಳತಿದ್ದಂಗಣಿ ಕುಡದ ಗಿಡದ ಬಂದಾನ ಏನು ಅಂತ ಅನಿಸಿ ಅವನ ಕಣ್ಣ ನೋಡಿದರೆ ಕುಡಧಂಗ ಅನಸಲಿಲ್ಲ…ನನಗ ಕಂಡಾಪಟ್ಟೆ ಸಿಟ್ಟು ಬಂತು… ಹೋಗೋ ಮಕಳೀ ಹೋಗು…ಉದ್ದವ್ವ ಯಾಕ ಕಲ್ಲ ಆಗತಾಳು…ನಿನ್ನ ಕಣ್ಣ ಕುಡ್ಡ ಆಗಿರಬೇಕು!…ನಡೀ ಹೋಗು ಇಲ್ಲಿಂದ ಅಂತ ಬೈದು -ಗರ್ಭ ಗುಡಿಯ ಬಾಗಲಾ ಎಳದು ಕೀಲೀ ಹಾಕಿ…ನಾನು ಮನಿಗೆ ಹೊಂಟು-ಎದ್ದ ಬರತೀಯೋ ಏನ ಇಲ್ಲೇ ಕುಂಡರಾವೋ…ಅಂತ ಕೇಳಿದರೆ ಅಂವ ಏನೂ ಮಾತಾಡದಣಿ-ಬಾಗಲ ಸಳಿಗೋಳ ನಡಕಿಂದ ಉದ್ದವ್ವನ್ನ ಹಂಗಣಿ ತದೇಕ ನೋಡಿಕೊಂತ ಕುಂತಿದ್ದ…ಕುಂಡರ ಹಂಗರಣಿ ಅಂತ ಹೇಳಿ ನಾ ಮನಿಗೆ ಹ್ವಾದಿನಿ.ಆದರ ಆಮ್ಯಾಗ…ಈ ಸೂಳೀಮಗಾ ಉದ್ದವ್ವಗ ಏನಾರ ಮಾಡಿಗೀಡ್ಯಾನು ಅಂತ ಅಂಜಿಕಿ ಬಂತು…ಮನಿಗೆ ಹೋದಮ್ಯಾಗ ಮತ್ತ ನನ್ನ ಮಮ್ಮಗನ್ನ ಗುಡಿಗೆ ಓಡಿಸಿದಿನಿ…ಆ ದ್ಯಾವ್ಯಾ ಹಂಗಣಿ ಅದಣಿ ಕಂಬಕ್ಕ ಆನಿಕೊಂಡು…
ಬೆಲ್ಲ ಬಡದ ಗುಂಡಕಲ್ಲಿನ ಹಂಗ- ಬಾಳೊತ್ತನಕಾ ಇಲ್ಲೇ ಈ ಕಂಬಕ್ಕ ಆನಿಕೊಂಡು ಕುಂತುಕುಂತು…ಆಮ್ಯಾಗ ಬಾಳೊತ್ತಿನಮ್ಯಾಗ ಎದ್ದಹ್ವಾದನಂತ!…ಅಂವ ಎದ್ದ ಹೋಗೂಮಟಾ ನನ್ನ ಮಮ್ಮಗಾ ಇಲ್ಲೇ ಗುಡ್ಯಾಗಣಿ ಕುಂತು -ನೋಡಿಕೊಂಡು ಬಂದ ಹೇಳಿತು…! ಹಿಂಗಾತ ನೋಡಪಾ ನಿಮ್ಮ ದ್ಯಾವನ ಕಥೀ…ಅಂತ ಹೇಳಿ ಉದ್ದವ್ವನ ಪೂಜಾರಿ ಬಿದ್ದ ಬಿದ್ದ ನಕ್ಕನಂತ…!
…ಆ ಹುಡುಗೋರು ಆಮ್ಯಾಲ ಊರಾಗಿನ ಮಂದಿನ್ನ ಕೇಳಿದರಂತ. ಊರಾಗಿನ ಮಂದಿ -‘ ಹಾಂ…ಬಂದಿದ್ದನಲಾ…ಬಂದು ಆ ಡೊಂಬರ ಚಿನಾಲೀ ಮನ್ಯಾಗ ಕುಡದ ಬಿದ್ದಿದ್ದನಂತ ಕಾಣಸತೈತಿ…ಗುಡೀಕಡೆ ಏನೂ ಹೋದಂಗ ಕಾಣಲಿಲ್ಲ…ನಿನ್ನೆ ಚಂಜೀ ಮುಂದಣಿ ಇಲ್ಲಿಂದ ಹ್ವಾದಂಗ ಕಾಣಸತೈತೆರೆಪಾಣಿ…ಇನೂ ನಿಮ್ಮ ಊರಿಗೆ ಬಂದಿಲ್ಲೇನು? ನಿನ್ನೆ ಚಂಜಿಕನಣಿ ನಿಮ್ಮ ಊರ ಮುಟ್ಟಬೇಕಾಗಿತ್ತಲಾ…! ಹಂಗರಣಿ ಅಂವ ಹುಣಿಶಾಳದಿಂದ ಹಂಗಣಿ ಗೋಕಾಂವೀ ಕಡೆ ಗಾಡೀ ಹೊಡದಿರಬೇಕು ಬಿಡ್ರಿ …’ ಅಂತ ಅಂದರಂತ.
ಮುಂದಣಿ…ಡೊಂಬರ ಲಸಮಣ್ಣನನ್ನ ಕೇಳಿದರ ಅಂವ ಇವರಜೋಡೀ ಮಕಾ ಕೊಟ್ಟು ಮಾತಾಡದೇ- ಊರ ಹಲಕಟ ಸೂಳೀಮಕ್ಕಳ ಸುದ್ದಿ ಎಲ್ಲಾ ನನಗೇನು ಗೊಂತು -ಅಂತ ನುಡದು ಧಡಾ ಧಡಾ ಅಂತ ಹೋಗಿಬಿಟ್ಟನಂತ…ಆಮ್ಯಾಲ ಡೊಂಬರ ಓಣಿಗೇ ಹೋಗಿ-ಮದಲಣಿ ಸಿಕ್ಕ ಸುಳವಿನ ಪ್ರಕಾರ-ಅಲ್ಲಿ ಒಂದ ಮನಿಯ ಬಾಗಲದಾಗ ಕೂತಿದ್ದ ಮುದಿಕಿನ್ನ ಹೋಗಿ ಕೇಳ್ಯಾರೆ…ಆ ಮುದುಕಿಯ ಸೊಸಿಯೇ ಈ ದ್ಯಾವನ ಕೀಪು ! ಇವರು ಹೋಗಿ –
‘ಯಮ್ಮಾ ಬೇ…ಇಲ್ಲಿ ಕಳ್ಳಿಗುದ್ದೀ ರಗತ ತಿಲಕದ ಸೇವಾದ ದ್ಯಾವ ಬಂದಿದ್ದ ಏನಬೇ?’ಅಂತ ಕೇಳಿದರಂತ.ಆ ಮುದಿಕಿ ‘ಹಾಂ…ದ್ಯಾವಪ್ಪಣ್ಣಾಣಿ ತಮ್ಮಗೋಳರ್‍ಯಾ…? ನೀವ ಯಾರಾ…?ಅವನ ಗೆಣೆಮೇತರೇನು…?’ಅಂತ ಕೇಳಿದ್ದಕ್ಕ ಇವರು ‘ಹೌದಬೇ… ನಾವು ಅವನ ಗೆಣೆಮೇತರು…’ ಅಂದಾರು.
ಆ ಮುದಿಕಿ ‘ಬರ್ರಿ ಬರ್ರಿ…ಕುಂಡರ್ರಿ ತಮ್ಮಗೋಳರ್‍ಯಾ…ಚಾ ಮಾಡಸತನ ಎಪ್ಪಗೋಳರ್‍ಯಾ…’ಅಂತ ಹೇಳಿ-ಇವರು ಹಾಂ -ಹೂಂ ಅಂತ ಅನ್ನೂಕಿಂತಾ ಮದಲಣಿ- ‘ಬಾಳವ್ವಾಣಿ… ದ್ಯಾವಪ್ಪಣ್ಣನ ಗೆಣೆಮೇತರು ಬಂದಾರು…ಒಂದ ಎಡ್ಡ ಕಪ್ಪ ಚಾ ಮಾಡಿಕೊಂಡು ತಾ ಯವ್ವಾಣಿ’ ಅಂತ ಹೇಳಿದಳಂತ…ಈ ಹುಡಗೋರು ಆ ಮುದಿಕಿಯ ಸೊಸೀ -ಬಾಳವ್ವ ಅನ್ನುವಾಕಿ ಮಾಡಿ ತಂದ ಚಾ ಕುಡದು-ಆ ಮುದಿಕಿ ಹೇಳಿದ ದ್ಯಾವಪ್ಪನ ಕಥಿಯನ್ನ ಕೇಳಿಕೊಂಡು ಬಂದಾರೆ…!
‘…ದ್ಯಾವಪ್ಪಣ್ಣ ಬಂಗಾರದಂತಾ ಹುಡಗ ನನ್ನ ಮಕ್ಕಳರ್‍ಯಾ…ಅಗದೀ ಅಂದರ ಅಗದೀ ಹೆಣಗಳ್ಳಿನವನು…ನನ್ನ ಅಂತೀ ಬಾಯಿತುಂಬ ದೊಡವ್ವಾಣಿ…ಅಂತ ಕರೀತಾನು.ಯಾವ ಜಲಮದ ಋಣಾನೋ ಯಾಂವಬಲ್ಲ ! ಹಿಂದಿನ ಜಲಮದ

ರುಣಾನುಬಂಧನಣಿ ಇದ್ದಿರಬೇಕು…ಇಲ್ಲಾತಂದರ ನಮ್ಮ ಕಷ್ಟ ಕಾಲಕ್ಕ ಹೇಳಿಕಳಿಸಿದಂಗ ಹೆಂಗ ಒದಗತಿದ್ದನೋ ತಮ್ಮಗೋಳರ್‍ಯಾ? ಯೋಳೆಂಟ ವರಸದ ಹಿಂದಿನ ಮಾತು… ಯೋಳೆಂಟ ವರಸದ ಹಿಂದ ಕಳ್ಳೀಗುದ್ದೀ ಓಕಳಿಗೆ ನೀರ ಗೊಜ್ಜಿಸಿಕೊಳ್ಳಾಕ ನನ್ನ ಸೊಸೀ ಹೋಗಿದ್ದಳು…ಆಗ ಇಕಿನ್ನ ನೋಡಿದನಂತ…ಇನೂ ಸಣ್ಣ ಬಾಲಿ ಆಕಿ…ಹಂತಾ ಸಣ್ಣ ವಯಸ್ಸಿನ್ಯಾಗಣಿ ಆಕೀ ಗಂಡ ತೀರಿಕೊಂಡದ್ದು ಗೊಂತಾಗಿ ಮರಕಾ ಪಟ್ಟನಂತ…ಗಂಡ ಇಲ್ಲದ ಹರೇದ ಹುಡಿಗಿ…ಓಕಳೀ ಸೀಜನ್ನದಾಗ ಹತ್ತ ಹಳ್ಳಿಗೆ ಹೋಗಿ ನೀರ ಗೊಜ್ಜಿಸಿಕೊಂಡರನಣಿ ನಮ್ಮ ಬಾಳೇ ನೋಡ್ರಿ ತಮ್ಮಗೋಳರ್‍ಯಾ! ಅದಣಿ ಹೊಟ್ಟಿಗೇ ಬಟ್ಟಿಗೇ ಆಗಬೇಕು…ಆದರ ಓಕಳಿಗೆ ನೀರ ಗೊಜ್ಜಿಸಿಗೊಳ್ಳಾಕ ಹೋದಲ್ಲೆಲ್ಲಾ ಊರ ಹಿರ್‍ಯಾರೂ ಹರೇದ ಹುಡುಗೋರೂ ಎಲ್ಲಾ …ಮಿಸುಗುಡೂ ಹಂತಾ ನನ್ನ ಸೊಸಿನ್ನ ಕೆಡಸಾಕ ಹವಣಸಾವರು…ಓಕಳೀ ಮುಗಿಸಿಕೊಂಡು ಹೊಳ್ಳಿ ಮನಿಗೆ ಬಂದಗಳಸೇ ನನ್ನ ಸೊಸೀ ಮುಸು ಮುಸೂ ಅಂತ ಅತಗೊಂತಣಿ ಅತಗೊಂತಣಿ ಎಲ್ಲಾ ಹೇಳೂದು…ನಾ ಅರೇ ಏನ ಮಾಡಲಿ?ವಯಸ್ಸ ಇದ್ದಾಗ ನಾ ಅನುಭೋಗಿಸಿದ್ದೂ ಇದನ್ನಣಿ…! ಸುತ್ತ ಹತ್ತ ಹಳ್ಳಿಗೋಳ ಓಕಳಿಗೆ ಹೋಗಿ ನೀರು ಗೊಜ್ಜಿಸಿಕೊಂಡು ಹಿರ್‍ಯಾರ ಚಟಕ್ಕೂ ಹೊಂದಿಕೊಂಡ ಬಿಟ್ಟಿದ್ದಿನಿ…ಹಣಮಂತ ದೇವರ ಸೂಳೇರಂತ ನಾವು ! ಇಷ್ಟರ ಮ್ಯಾಗ ನನ್ನ ಗಂಡನೂ ಲಗೂಟಣಿ ಸತ್ತ ಹೋಗಿತ್ತು…ಆದರ ಈ ಹುಡಿಗಿ -ನನ್ನ ಸೊಸೀ – ನಾ ಈ ಧಂಧೇಣಿ ಒಲ್ಲೇ ಯತ್ತೀ…ಅಂತ ಹಗಲೆಲ್ಲಾ ನನ್ನ ಹೆಗಲ ಮ್ಯಾಗ ಮಕಾ ಊರಿ ಅಳೂದು…ನನ್ನ ಕಳ್ಳಣಿ ಕತ್ತರಿಸಿಧಂಗ ಆಗೂದು ನೋಡ್ರಿ ತಮ್ಮಗೋಳರ್‍ಯಾ…! ಹಿಂಗಣಿ ಇಕಿ ಅಳೂದು ಮತ್ತ ನಾ ಅದಕ್ಕ ಸಮಾದಾನಾ ಹೇಳೂದೂ ನಡದಣಿ ಇತ್ತು…! ಹಂತಾದ್ದರಾಗ ಒಂದ ದಿನಾ ಈ ದ್ಯಾವಪ್ಪ ದೇವರಾಗಿ ಬಂದ!
‘ಯಾರದೀರಿಣಿ…’ ಅಂತ ಬಾಗಲದಾಗ ನಿಂತು ಕರದ…ನಾನು ಯಾರೋ ಓಕಳಿಗೆ ಅಡಿಕೀ ಕೊಡಾಕ ಬಂದಿರಬೇಕು ಅಂತ ತಿಳಕೊಂಡು -ಒಳಗ ಬರ್ರಿ…ಕುಂಡರ್ರಿ ಅಂತ ವಾಜಮೀ ಮಾಡಿದಿನಿ…ಅಂವ ಒಳಗ ಬಂದು-ನಾನು ಕಟ್ಟೀ ಮ್ಯಾಲ ಹಾಸಿದ ಗೊಂಗಡೀ ಮ್ಯಾಲ ಕುಂತ.ನಾನು-ಯಾವೂರರಿ…?ಓಕಳಿಯ ಕೊಂಡಪೂಜಿ ಎಂದಣಿ…? ನನ್ನ ಸೊಸಿನ್ನ ಮಾತ್ರ ಒಬ್ಬಾಕಿನ್ನ ಕಳಸೂದುಲ್ಲ ನೋಡರಿ…ಆಕಿ ಜೋಡೀ ನಾನೂ ಬರತನು…ಅಂತ ಹೇಳತಿದ್ದರೆ ದ್ಯಾವಪ್ಪ -ನಾ ಓಕಳಿಗೆ ಅಡಿಕೀ ಕೊಡಾಕ ಬಂದಿಲ್ಲವಾಣಿ ಅಂತಂದ.ನನಗ ಅಂವನ ಮ್ಯಾಗ ಅನುಮಾನ ಬಂತು…ಓಕಳಿಗೆ ಅಡಿಕೀ ಕೊಡಾಕ ಬಂದಿರದಿರಕ ಮತ್ತ ಇಲ್ಯಾಕ ಬಂದಿಪಾ -ಅಂತ ನಾ ಒಗರಲೇ ಕೇಳಿನಿ… ಅಂವ- ದೊಡವ್ವಾಣಿ ನಿನ್ನ ಸೊಸೀ ಇನೂ ಸಣ್ಣ ಹುಡಿಗಿ…ಆಕಿನ್ನ ಅಡ್ಡನಾಡ ಧಂಧೇಕ್ಕ ಹಚ್ಚಬ್ಯಾಡವಾಣಿ ಅಂತಂದ…ನನಗ ಸಿಟ್ಟ ಬಂತು…ನನಗ ಇದನ ಹೇಳಾಕ ಬಂದಾಂವ ನೀ ಯಾವ ನಾಡಿನ ದೊರೀಪಾಣಿ ? ಅಂದಿನಿ…ನಾ ಆಕಿಗೆ ಬಾಳೇ ಕೊಡಾಕ ತಯಾರ ಅದೀನು-ಅಂದ.ನಾನು -ಹಂಗಂದರಣಿ…? ಅಂತ ಕೇಳಿದಿನಿ.ಅಂವ-ನಾ ಆಕಿನ್ನ ಮದವೀ ಆಗತನು ಅಂದ…. ನನಗ ಇಚಿತ್ರ ಅನಿಸಿತು…ನನ್ನ ಸೊಸಿಗೆ ಮದಿವಿ ಆಗಿ ಎಡ್ಡ ಮಕ್ಕಳ ಅದಾವು…ಆ ಮಕ್ಕಳನ ಒಕ್ಕೊಟ್ಟು ,ಯಾರೂ-ಎಂತೂ ಅಂತ ಗೊಂತಿಲ್ಲದ ನಿನ್ನ ಗೂಡೇ ಆಕಿ ಬಂದಾಳಾದರೂ ಹೆಂಗ -ನಾ ಕಳಿಸೀನಾದರೂ ಹೆಂಗ? ಅಂತ ಕೇಳಿದಿನಿ…ಅದಕ್ಕ ದ್ಯಾವಪ್ಪ ಅಂದಾ-ಮಕ್ಕಳನ್ನ ಒಕ್ಕೊಟ್ಟು ಬಾ ಅಂತ ಯಾರು ಹೇಳಿದರು?ಮಕ್ಕಳನ್ನ ಯಾಕ ಒಕ್ಕೊಟ್ಟು ಬರತಾಳು?…ಆ ಮಕ್ಕಳೂ ನನ್ನೂವಣಿ ಆಗತಾವು…ಇನ್ನ ನಾನು ಯಾರೂ-ಎಂತೂ ಅಂತನ್ನೂದು ಗೊಂತ ಇಲ್ಲದಿರಕ ಹೇಳತನ ಕೇಳು-ಧರಮನಟ್ಟೀ ತೇರಿಗೆ ರಗತ ತಿಲಕದ ಸೇವಾ ಮಾಡುವ ಕಳ್ಳೀಗುದ್ದಿಯ ಗೊಂಬೀರಾಮರ ದ್ಯಾವಪ್ಪನ ಮನಿತನದ ಹುಡಗ ನಾನು…ಅಂತ ಹೇಳಿ- ಅದೆಂಥಾದೋ ಹೇಳಿದನಪಾ…ತಾನು ನಿರವಾಣೊ -ಪರಮಾಣೊ ಅದರ ಕೆಲಸಗಾರಾ ಅಂತ…ಹಂಗರಣಿ ಈ ಹುಡಗ ನೌಕರದಾರ ಅದಾನು…ನನ್ನ ಸೊಸಿನ್ನ ಮದಿವೀ ಆಗಿ ಚಲೂತಂಗೆ ನೋಡಿಕೋತಾನು…ಎಲ್ಲಾ ಪಾಡ ಆಗತೈತಿ ಅಂತ ಇಚಾರಮಾಡಿ ಅಂವಗ -ಯಾಕಾಗವಲ್ಲದೇಳಪಾ…ಹಂಗಣಿ ಆಗಲಿ…ಆದರ ನಾ ಉದ್ದವ್ವನ್ನ ಒಂದ ಮಾತ ಕೇಳಬೇಕು…ಆ ತಾಯಿ ಹೇಳಿಧಂಗ ನಾ ಕೇಳಾಕಿ …ಆ ತಾಯಿ ಅಪ್ಪಣೀ ಕೊಟ್ಟು … ಆತೂ…ಮದಿವೀ ಮಾಡು ಅಂದರ ಮದಿವೀ ಮಾಡತನು…ಅಂತ ಹೇಳಿದ್ದಕ್ಕ ಅಂವ ನನ್ನ ಮನಸ್ಸು ಮುರೀಲಾರದಣಿ-ಹೂಂ…ಹಂಗಣಿ ಆಗಲಿ…ಹಂಗಣಿ ಮಾಡ ದೊಡವ್ವಾ ಅಂತ ಹೇಳಿದ…
…ನಾನು ಅಂವ ಉದಗಟ್ಟಿಗೆ ಬಂದು ಹೋದ ಎಡ್ಡ ದಿನಕ್ಕಣಿ…ಅವತ್ತ ಶುಕ್ರಾರ ಇತ್ತ ತಮಗೋಳರ್‍ಯಾ…ಹಣ್ಣೂ -ಕಾಯೀ ತಗೊಂಡ ಗುಡೀಗಿ ಹೋಗಿ -ಪೂಜೀ ಮಾಡಿಸಿ -ಹೆಂಗವಾ ಮತ್ತಣಿ…ಹಿಂಗಿಂಗಣಿ ಒಂದ ಹುಡಗ ಬಂದು…ನನ್ನ ಸೊಸಿನ್ನ ಮದಿವೀ ಆಗತನ ಅಂತ ಅನ್ನಾಕತ್ತೇತಿ…ನಿನ್ನ ಒಂದ ಮಾತು ಕೇಳಿ ಹೇಳತನ ಅಂತ ಹೇಳೀನು…ಈಗ ಎಲ್ಲಾ ನಿನ್ನಣಿ ಕೂಡೇತಿ…ಹೆಂಗ ಮಾಡೂದು ಹೇಳು-ಅಂತ ಕೇಳಿದಿನಿ…ನಾ ಕೇಳಿದ ಯಾಳೇ ಹೆಂತಾ ಕರಗಾಲ ಯಾಳೇ ಇತ್ತೋ ಯಾಂವ ಬಲ್ಲ…! ತಣ್ಣೀರ ಆದರೂ ತಣಿಸಿ ಕುಡೀಬೇಕ ಮಗಳಣಿ…ಅಂವಸರಾ ಮಾಡಿ ಬಾಯಿ ಸುಟಗೋ ಬ್ಯಾಡ…ಮುಂದಕ ನೋಡೂಣೂ-ಅಂತ ಉದ್ದವ್ವನ ಅಪ್ಪಣಿ ಆತು…ಮುಂದಕ ನೋಡೂಣೂ-ಮುಂದಕ ನೋಡೂಣೂ ಅಂತ ಹಂಗಣಿ ಇಂದಿಗೆ ಐದ ವರಸ ಆತು! ತಾಯಿ ಯಾಕೋ ಹಂಗಣಿ ಎಳಿಸಾಕತ್ತದಾಳು…ಆಕೀ ಮನಸಿನ್ಯಾಗ ಏನ ಐತ್ಯೋ ಯಾಂವ ಬಲ್ಲ !
…ಅಂದ ನಮ್ಮ ಮನಿಗೆ ಬಂದು ಮದಿವೀ ಮಾತು ಮಾತಾಡಿದಾಗಿನಿಂದ, ತಿಂಗಳಾ ತಿಂಗಳಾ ನನ್ನ ಮಗಾ…ಮಗಾ ಏನ ತಮ್ಮಗೋಳರ್‍ಯಾ -ಮಗನಕಿಂತಾ ಹೆಚ

ನೋಡ ಈ ದ್ಯಾವಪ್ಪ…ತಿಂಗಳಾ ತಿಂಗಳಾ ಬಂದು ಮನೀ ಖರ್ಚು ಕೊಟ್ಟು -ಎಲ್ಲಾ ಆರಾ ಭಾರಾ ನೋಡತಾನು…ಮಕ್ಕಳಿಗೆ ಅರಿಬೀ ಅಂಚಡೀ ತರತಾನೂ…ನನ್ನ ಸೊಸೀಗೇ ಮತ್ತ ನನಗಣಿ ಸೀರೀ ಕುಬಸಾ ತರತಾನೂ…ನನ್ನ ಹಿರೇ ಮಮ್ಮಗನ್ನ ಸಾಲೀ ಬರ್‍ಯಾಕ ಹಾಕ್ಯಾನು…!ನಮಗ ಓಕಳಿಗೆ ನೀರ ಗೊಜ್ಜಿಸಿಕೊಳ್ಳಾಕ ಹೋಗೂದು ಬ್ಯಾಡಂತ ಆಣೀ ಹಾಕ್ಯಾನೋ ತಮ್ಮಗೋಳರ್‍ಯಾಣಿ!… ಅಂತ ಹೇಳಿದ ಆ ಮುದಿಕಿ -ಮುಸು ಮುಸು ಅಂತ ಅತ್ತು ಕಣ್ಣೂ ಮೂಗೂ ಒರಿಸಿಕೊಂಡಳು…ತನ್ನ ಅಳುವಿನ ಒಂದು ಸರವನ್ನ ಮುಗಿಸಿದ ಆಕಿ ಮತ್ತ ತನ್ನ ಕಥೀ ಮುಂದುವರಿಸಿ ಹೇಳಲಿಕ್ಕತ್ತಿದಳು…
ತಮ್ಮಗೋಳರ್‍ಯಾ…ಸುಳ್ಳ ಹೇಳಿದರೂ ಕೇಳತೀರೀ ಖರೇ ಹೇಳಿದರೂ ಕೇಳತೀರಿ…ಅಂವ ಇಷ್ಟೆಲ್ಲಾ ನಮ್ಮ ದು ಆರಾ ಭಾರಾ ಹಿಡದ್ದಾನ ಖರೇ ಒಂದ ದಿನಾ ಸೈತ ನನ್ನ ಸೊಸಿಯ ಹಾಸಿಗೀ ಕಡೆ ಕಣ್ಣ ಹಾಕಿಲ್ಲ ನೋಡರಿ !…ರಾತ್ರೀ ಆದಗಳಸೇ ಹೊರಗ ತನ್ನ ಹಾಸಿಗೀ ಹಾಸಿಗೊಂಡು…ಬಾಗಲಾ ಹಾಕ್ಕೊಂಡು ಒಳಗಿನ ಚಿಲಕಾ ಹಾಕ್ಕೋರೀ ಅಂತ ಹೇಳಿ ತನ್ನ ಹಾಸಿಗ್ಯಾಗ ತಾ ಮಲಕೋತಾನು…ನಾನಣಿ ಬೇಕಂತ ನನ್ನ ಸೊಸೀಗೆ-ಚಿಲಕಾ ಹಾಕಬ್ಯಾಡ ಬಿಡ ತಂಗೀ ಅಂತ ಬಿಡಸತನು…ಆದರ ಒಂದ ದಿನಾ ಸೈತ ಬೆಳಗ ಆಗೂಮಟಾ ಒಳಗ ಮಕಾ ಹಾಕಿದರ ಕೇಳ ಗಂಡಮಗಾ…! ರಾತ್ರೀ ಎದ್ದು ಒಳಗ ಬರಬೇಕಾದೀತ ಅಂತ ಮನಗೂ ಮುಂದಣಿ ಕುಡ್ಯಾಕ ನೀರ ಒಯ್ದು ಇಟಗೊಂಡಿರತಾನು !
ಅಲ್ಲ …ಈ ಉದ್ದವ್ವ ಯಾಕ ಹಿಂಗ ಮಾಡತಿದ್ದಾಳೂ ಅಂತ…?ಐದ ವರಸದಿಂದ ಒಂದಣಿ ಸಮಾ ಮುಂದಕ ಹಾಕ್ಕೋತನಣಿ ಬಂದದಾಳು…ಈ ಹುಡಗನ್ನ ನೋಡಿ ಮರಗಿ ಮರಗಿ…ಕಡಿಕ ನಾನಣಿ ನನ್ನ ಸೊಸಿಗೆ ಒಂದ ಮಾತ ಹೇಳಿದಿನಿ -ನೋಡ ತಂಗೀ…ಈ ಉದ್ದವ್ವ ನಿಮ್ಮ ಮದಿವಿಗೆ ಎಂದ ಅಪ್ಪಣೀ ಕೊಡತಾಳೋ ಕೊಡವಲ್ಲಳ್ಯಾಕ…ಆಕಿ ಅಪ್ಪಣೀ ಕೊಟ್ಟಮ್ಯಾಲ ಆಮ್ಯಾಗ ಬೇಕಾರ ಮದಿವೀ ಆಗೂವಂತೆ…ಆದರ ಅಲ್ಲೀ ಮಟಾ ಪಾಪ ಈ ಹುಡಗನ್ನ ಒಣಗಸಬ್ಯಾಡ…ಹಾಸಿಗ್ಗೆ ಕರಕೊಂಡಬಿಡೂ-ಅಂತ!ನನ್ನ ಸೊಸೀ ಅಗದೀ ಹೌಸೀಲೇ-ಅತ್ತಿ ಹಿಂಗ ಹೇಳಿದಳು… ನೀವು ಹೊರಗ ಹಾಸಿಗೀ ಹಾಸಿಗೋಬಾರದಂತ…ಒಂದಣಿ ಹಾಸಿಗೀ ಹಾಸಿಗೋರೆಂತ ಹೇಳ್ಯಾಳು-ಅಂತ ಹೇಳಿದ್ದಕ್ಕ ಅಂವ ಏನ ಹೇಳಬೇಕ ತಮ್ಮಗೋಳರ್‍ಯಾ!…ಮತ್ತ ಇಲ್ಲೀಮಟಾ ನಾ ಏನ ಮಾಡಧಂಗಾತು…? ಆ ಹಿರ್‍ಯಾರಕೂಟೇ ಮಲಕೊಂಡಿದ್ದರ ಅವರೂ ನಿನಗ ಹೊಟ್ಟಿಗೇ ಬಟ್ಟಿಗೇ ಕೊಡತಿದ್ದರಿಲ್ಲೋ…?ಮದಿವಿ ಆಗೂತನಕಾ ಏನೂ ಬ್ಯಾಡ-ಅಂತ ಹೇಳಿಬಿಟ್ಟನಂತ! ನನಗ ಸಂಕಟ ಆಗತೈತೆರ್‍ಯೋ ನನ್ನ ದೇವರಗುಡ್ಡಗೋಳರ್‍ಯಾ-ಅಂತ ಆ ಮುದಿಕಿ ಇನೊಂದು ಸರುವು ಅತ್ತು ಹಗುರುಗೊಂಡು ಮತ್ತ ಹೇಳಲಿಕ್ಕತ್ತಿದಳು…
…ಅಂವ ವಾರ ಹದನದಿನಕ್ಕೊಮ್ಮೆ ತಪ್ಪಸದಣಿ ಬಂದು ನಮ್ಮ ಆರಾ ಭಾರಾ
ಎಲ್ಲಾ…ವ್ಯವಸ್ಥಾ ಮಾಡಿ ಹೋಗತಾನು.ಅಂವ ಬಂದ ಹೋದಾಗೊಮ್ಮೆ -ಈ ಸರತೇನರಣಿ ಮುಟಿಗೊಂಡನೇನಣಿ ತಂಗೀ-ಅಂತ ಆಸೇದಿಂದ ನನ್ನ ಸೊಸೀನ್ನ ಕೇಳತನು !…ತಮ್ಮಗೋಳರ್‍ಯಾ…ಹುಡಿಗಿ ಕಣ್ಣಾಗ ನೀರು ತಂದು ಇಲ್ಲಾಣಿ…ಅಂತ ಗೋಣ ಹಾಕತೈತಿ !… ಹೂಂ …! ಆ ಉದ್ದವ್ವನ ಕಣ್ಣ ಏನ ಕುಡ್ಡ ಆಗ್ಯಾವೋ ಯಾಂವ ಬಲ್ಲ?…ಆಕಿ ಎದೀ ಕಲ್ಲ ಮಾಡಿಕೊಂಡು ಕುಂತಬಿಟ್ಟಾಳು…!ಬಾಳಾಗೋಳರ್‍ಯಾ ನೀವು ಆತನ ಗೆಣೆಮೇತರಲ್ಲಾಣಿ…? ನೀವರಣಿ ಅಂವಗ ಒಂದ ಮಾತ ಹೇಳರ್‍ಯೋ ತಮ್ಮಗೋಳರ್‍ಯಾ -ಅಂತ ಹೇಳಿದ್ದಕ್ಕ -ಈ ಹುಡುಗೋರು -‘ಆತೇಳ ಯಮ್ಮಾಣಿ…ನಾವು ಅಂವಗ ಹೇಳತೀವು…ಈಗ ಸದ್ದೇಕ್ಕಂತೀ ಅಂವ ಎಲ್ಲಿ ಅದಾನ ಹೇಳು…ಅಂತ ಕೇಳಿದ್ದಕ್ಕ ಆಕಿ -ಅಂವ ನಿನ್ನೆ ಚಂಜಿಕಣಿ ಧರಮನಟ್ಟಿಗೆ ಹೋದನಲ್ಲೋ ಬಾಳಾಗೋಳರ್‍ಯಾ …ನೀವು ಅಲ್ಲಿಗೆ ಹೋದರ ಅಂವ ಸಿಗತಾನು…ಇನಣಿ ನಾಕ ದಿನಾ -ತೇರು ಮುಗಿಯೂಮಟಾ- ಅಂವ ಅಲ್ಲೇ ಇರತಾನು ಅಂತ ಹೇಳಿದಳಂತ…
…ಉದಗಟ್ಟಿಗೆ ಹೋಗಿಬಂದ ಹುಡಗೋರು ಬೆರಗಿನಿಂದ ದ್ಯಾವಪ್ಪನ ಕಥಿಯನ್ನ ವಿವರಿಸಿದಾಗ ಊರವರ ಗೊಂದಲ ನಾನಾ ನಮೂನಿಯಾಗಿ ಹೆಚ್ಚಾತು… ಉದ್ದವ್ವನ ಪೂಜಾರಿ ಮತ್ತ ಆ ಮ್ಯಾಲ ಡೊಂಬರ ಮುದಿಕಿ ಹೇಳಿದ ಕಥಿಗಳಿಂದ ಅವರು ಕಂಗೆಟ್ಟವರಾಗಿ ಕುಂತರು…ಸೋಜಿಗಗೊಂಡರು…ದ್ಯಾವಪ್ಪನ ಕಥೀ ಅವರ ಕರಳಿಗೆ ಹೋಗಿ ಮುಟ್ಟಿಧಂಗಾತು…ಆದರೆ ಸದ್ಯದಲ್ಲಿ ಅವರು ಕರಳಿಗೆ ಹೆಚ್ಚಿನ ಮಹತ್ವ ಕೊಡುವ ಪರಿಸ್ಥಿತಿಯಲ್ಲಿ ಇರಲಿಲ್ಲ…ಈಗ ಅವರ ತೆಲಿ ಜಾಗೃತವಾಗಿ ಕೂತಿತ್ತು…ತೇರಿನ ಸೇವಾಕ್ಕ ಬರಬೇಕಾದ ಈ ದ್ಯಾವ ಇನ್ನೂ ಬರದೇ ಯಾಕೆ ಉಳದಿದ್ದಾನೂ ಅಂತನ್ನುವ ಪ್ರಶ್ನೆ ಊರಿನ ಪ್ರತಿಯೊಬ್ಬರ ತಲಿಯನ್ನ ಸತತವಾಗಿ ತಿನ್ನತಿರಬೇಕಾದರೆ ಅವನ ಬಗೆಗಿನ- ಬೆರಗೂ-ಕರುಳೂ ಹಿಂದಕ ಸರದವು…ನಿನ್ನೆ ಉದಗಟ್ಟಿಯಿಂದ ಸಂಜೀಮುಂದ ಬರಾಬ್ಬರೀ ವ್ಯಾಳ್ಯಾಕ್ಕ ಬಿಟ್ಟಾನಂತ…! ಹಂಗಾದರಣಿ ಇನ್ನೂ ಧರಮನಟ್ಟಿಗೆ ಯಾಕೆ ಬಂದು ಮುಟ್ಟಿಲ್ಲ ?ಫಟಫಟೀ ಏನರ ಕೆಟ್ಟಗಿಟ್ಟ ನಿಂತಿದ್ದಿರಬೇಕೋ ಏನೋ…? ಛೇ…ಹಂಗಾಗಿದ್ದರೆ ಇಂದರೇ ಅದನ್ನ ರಿಪೇರೀ ಮಾಡಿಸಿಕೊಂಡು ಬಂದು ಮುಟ್ಟತಿದ್ದನಲ್ಲಾ…ಇಂವ ಯಾಕ ಬಂದಿರಲಿಕ್ಕಿಲ್ಲಾ…?
…ಊರಿನ ಜನಾ ಎಲ್ಲಾ ಏನೇನೋ ಭಾವಿಸಿ ಅವರ ಎದಿಯೊಳಗ ಅಂಜಿಕಿಯ ಕರಿ ನೀರು ತುಂಬಿತು…ಮತ್ತ ಸ್ವಾಂವಜ್ಜನಣಿ ಎಲ್ಲಾರಿಗೂ ಸಮಾಧಾನಾ ಹೇಳಿದ -‘ಯಾಣಿ…ಎಲ್ಲಿಗೆ ಹೋಗಿರತಾನ ಬಿಡ್ರೆಲೇ…ಕತ್ತಿ ತೆಪ್ಪಿಸಿಗೊಂಡರ ಹಾಳ ಗ್ವಾಡಿ ಅಂತ…!ಗೋಕಾಂವ್ಯಾಗ ಲಾಜಿಂಗಿನ್ಯಾಗ ಕುಡದ ಬಿದ್ದಿರಬೇಕು…ಒಂದ ದಗದಾ ಮಾಡೂಣೂ…ನಾಳೆ ಹರ್‍ಯಾಗ ಇಬ್ಬರನ ಗೋಕಾಂವಿಗೆ ಓಡಸೂಣೂ….ಅಲ್ಲಿ ಹೋಗಿ ಹುಡಿಕಿದರ ಸಿಕ್ಕಣಿ ಸಿಗತಾನು…’.ಸ್ವಾಂವಜ್ಜನ ಮಾತು ಆ ಮಂದಿಗೆ ಪಟಾಯಿಸಲಿಲ್ಲ… ಉದ್ದವ್ವನ ಪೂಜಾರಿ ಹೇಳಿದ್ದೂ ಮತ್ತ ಡೊಂಬರ ಮುದಿಕಿ ಹೇಳಿದ್ದೂ ಅವರ ಮನಸಿಗೆ ಬಂದು-ಗೋಕಾಂವ್ಯಾಗ ಲಾಜಿಂಗಿನ್ಯಾಗ ಕುಡದ ಬಿದ್ದಿರತಾನು ಅಂತನ್ನುವ ಅವನ ಮಾತು ಅವರಿಗೆ ಪಟಾಯಿಸಲಿಲ್ಲ…ಆದರ ಈಗ ಅವರಿಗೆ ಬ್ಯಾರೇ ಯಾವ ಹಾದಿಯೂ ಕಾಣಸಲಿಲ್ಲ…ಸ್ವಾಂವಜ್ಜ ಹೇಳಿದ ಮಾತಿಗೆ-ಹೂಂ…ಅಂತ ಹೇಳಿ-ಅವರೆಲ್ಲಾ ಚಿಂತಿಯನ್ನ ತಲಿಗೆ ಕಟಿಗೊಂಡು ಮನಿಗೆ

ಭಾಗ : ಐದು
ಮರದಿವಸನಣಿ ಸಪ್ತಮಿ…ಅಂದು ಇಳಿಹೊತ್ತಿಗಂದರ ನಣದಿಯ ಗೊಂದಲಿಗ್ಯಾರ ಮ್ಯಾಳ ಧರಮನಟ್ಟಿಗೆ ಬರಬೇಕು…ಆದರೆ ಯಾರೊಬ್ಬರಿಗೂ ಅವರ ನೆನಪು ಬರಲಿಲ್ಲ…ಊರೊಳಗಿನ ಎಲ್ಲರ ಮನಿಸಿನ್ಯಾಗ ಈಗ ಕೇವಲ ರಗತ ತಿಲಕದ ದ್ಯಾವಪ್ಪ ಒಬ್ಬನೇ ಇದ್ದ !
…ಬೆಳಿಗ್ಗೆ ಏಳತಿದ್ದಂಗೇ ಗೋಕಾಂವಿಗೆ ಹೋಗಿ ದ್ಯಾವನ್ನ ಹುಡುಕಲಿಕ್ಕೆ ಹೇಳಿದ್ದ ಹುಡುಗೋರು ಹೋಗ್ಯಾವೋ ಇಲ್ಲೋ ಅಂತ ನೋಡಲಿಕ್ಕೆ ಸ್ವಾಂವಜ್ಜ ಲಗೂಟ ಎದ್ದು ಮಕಾ ತೊಳಕೊಂಡವನೇ ಅವರ ಮನಿಗೋಳ ಕಡೆ ನಡದ…ಮದಲ ಕಿಲ್ಲೇದಾರ ಚಿಂತಪ್ಪನ ಮನೀ ಹಂತೇಕ ಹೋಗಿ ನೋಡಿದರೆ ಅಂವ ಅಲ್ಲಿ ಹೊರಗಿನ ಕಟ್ಟಿಯ ಮ್ಯಾಲೆ ಇನ್ನೂ ಮುಸಕು ಹಾಕಿಕೊಂಡು ಢುಸ್…ಅಂತ ಬಿದ್ದಾನೆ!…‘ಚಿಂತಪ್ಪಾಣಿ…ಏ ಚಿಂತಪ್ಪಾಣಿ…’ ಅಂತ ಒದರಿದರೆ ಅಂವನೇನು ಮಿಸಿಕ್ಯಾಡಲಿಲ್ಲ…ಸ್ವಾಂವಜ್ಜ ಅವನನ್ನ ಎಬ್ಬಸಲಿಕ್ಕೆ ಪಾಡು ಪಡತಾ ಇದ್ದದ್ದನ್ನ ಚಿಂತಪ್ಪನ ಅವ್ವ -ದುಂಡವ್ವ ಒಳಗಿನಿಂದ ಬಂದು ನೋಡಿದಳು…ಆಕಿ-ನೋಡ ಮಾವಾ…ಹೊತ್ತ ಏರೂಮಟಾ ಹಿಂಗ ಮುಸಕ ಹಾಕೊಂಡ ಬೀಳತಾನು…ಇಂವ ಏನ ಬಾಳೇ ಮಾಡತಾನೋ ಯಾಂವ ಬಲ್ಲ…! ಅಂತ ಒಟಾ ಒಟಾ ಅನಕೋತ ಅವನ್ನ ಅಳಿಗ್ಯಾಡಿಸಿ ಎಬ್ಬಿಸಿದಳು…ಅಂವ ಎದ್ದು ಕೂತು ಕಣ್ಣು ತಿಕ್ಕೋತಿದ್ದರ ಸ್ವಾಂವಜ್ಜ -‘ಅಲ್ಲೋ ತಮ್ಮಾಣಿ…ಇನಣಿ ಎಷ್ಟೊತ್ತು ಮಲಗಾಂವ?… ಹರ್‍ಯಾಗ ಲಗೂಟಣಿ ಎದ್ದು ಗೋಕಾಂವಿಗೆ ಹೋಗಬೇಕಂತ ಹೇಳಿದ್ದಿಲ್ಲಾ…ಮರತಿ ಏನ?ಏಳು…ಲಗೂಟಣಿ ಹೊಂಡರಿ…ನೀ ಎದ್ದ ತಯಾರ ಆಗು.ಅಷ್ಟರಾಗಣಿ ನಾ ಆ ಬಾಳ್ಯಾನ್ನ ಎಬಿಸಿ ಹೊಂಡಸತನು…’ ಅಂತ ಸ್ವಾಂವಜ್ಜ ಹೇಳತಿದ್ದಂಗಣಿ ‘ಹಾಂ ಯಜ್ಜಾಣಿ…ಹತ್ತ ಮಿನಿಟಿನ್ಯಾಗಂದರ ತಯಾರ ಆಗತನು.ನೀ ಬಾಳ್ಯಾನ್ನ ಹೊಂಡಿಸಿ ಇಲ್ಲಿಗೇ ಕಳಸು…’ ಅಂತಂದು ಚಿಂತಪ್ಪ ಹಾಸಿಗೀ ಸುತಿಗೊಂಡು ಒಳಗ ಹೋದ…
…ಸ್ವಾಂವಜ್ಜ ಹುರಕಡ್ಲ್ಯಾರ ಬಾಳ್ಯಾನ ಮನಿಗೆ ಹೋದರ ಅಲ್ಲಿಯೂ ಇದೇ ನಡಿಯಿತು…‘ನಿಮಗ ಒಟ್ಟಣಿ ಜವಾಬದಾರೀ ಅನ್ನೂದ ಇಲ್ಲ ನೋಡು…ಲಗೂಟಣಿ ತಂಪೊತ್ತಿನ್ಯಾಗಣಿ ಗೋಕಾಂವಿಗೆ ಹೋಗಿ ಹೊಳ್ಳಿ ಬರ್ರೆಪಾ ಅಂತ ಹೇಳಿದರ ಹೊತ್ತೇರೂ ಮಟಾ ಮಲಕೊಂಡೀರಿ…ಹೂಂ .ಏಳು…ಇನ್ನಾರ ಲಗ್ಗ ತಯಾರ ಆಗಿ ಹೊಂಡು…ಆ ಚಿಂತ್ಯಾನ್ನ ಎಬ್ಬಿಸಿ ಹೊಂಡಾಕ ತಯಾರ ಮಾಡಿ ಬಂದದಣಿನು…ನೀನೂ ಲಗೂಟಣಿ ಹೊಂಡು…ನಾ ಗುಡೀಮಟಾ ಹೋಗಿ ಬರತನು.ಅಷ್ಟರಾಗಣಿ ನೀವು ಹೊಂಟಿರಬೇಕ ನೋಡ್ರಿ…’ ಅಂತ ತಾಕೀತು ಮಾಡಿ ಹೊಂಡತಿರಬೇಕಾದರೆ, ಅಲ್ಲೇ ತಲಬಾಗಲದಾಗ ಥಳೀ- ರಂಗೋಲೀ ಹಾಕತಿದ್ದ ಬಾಳ್ಯಾನ ಅವ್ವ-ಬಸವ್ವ – ‘ನಿಂದರ ಮಾವಾಣಿ…ನಿನ್ನ ಮಮ್ಮಗಳು ಚಾ ಕಾಸಾಕತ್ತದಾಳು…ಚಾ ಕುಡದಣಿ ಹೋಗೂವಂತೇ…ಕುಂಡರ್ರು ’ ಅಂತ ಹೇಳಿದಳು.ಸ್ವಾಂವಜ್ಜ ‘ಏಣಿ ಬ್ಯಾಡಬಿಡ ತಂಗೀ…ಇನೂ ದಗದ ಬಾಳ ಅದಾವು…’ ಅಂತ ಅನತಿದ್ದರೆ ಆಕಿ ‘ ಇಲ್ಲ ನಿಂದರ ಮಾವಾಣಿ…ತಡಾ ಏನೂ ಆಗೂದುಲ್ಲ . ಕುಂಡರು…ಆಗೇ ಬಿಟ್ಟಣಿತಿ…’ ಅಂತ ಒತ್ತಾಯ ಮಾಡಿ, ಅತ್ತ ಒಳಗ ಚಹಾ ಮಾಡತಿದ್ದ ತನ್ನ ಸೊಸಿಗೆ ‘…ಏ ಸತ್ತೆವ್ವಾಣಿ…ಸ್ವಾಂವಜ್ಜ ಮಾವ ಬಂದಾನು…ಒಂದೀಟಣಿ ಅಂವಸರದಾಗ ಅದಾನು…ಲಗೂಟಣಿ ಒಂದ ಸಿಂಗಲ್ಲ ಚಾ ತಗೊಂಡ ಬಾ ಯವ್ವಾ…’ ಅಂತ ಒದರಿ ಹೇಳಿದಳು.ಸ್ವಾಂವಜ್ಜ ‘ಹೂಂ…ಕೊಡವಾ ಹಂಗರಣಿ…ಕುಡದಣಿ ಹೋಗತನು ’ ಅಂತ ಅನಕೋತ ಅಲ್ಲೇ ಹೊರಗಿನ ಕಟ್ಟಿಯ ಮ್ಯಾಲೆ ಕುಂತ.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.