ಗೃಹಭಂಗ – ೫

ಅಧ್ಯಾಯ ೧೦
– ೧ –

ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು.
ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ ಅವಳಲ್ಲಿ ಇತರರಿಗಿಂತ ಭಿನ್ನವಾದ ಅಭಿಪ್ರಾಯ ಬೆಳೆದಿತ್ತು. ಅವಳ ತಂದೆ ಕಂಠೀಜೋಯಿಸರು ಈ ಊರಿನಲ್ಲಿ, ಅಥವಾ ಈ ಸುತ್ತಿನಲ್ಲೇ ಮೀರಿಸುವವರಿಲ್ಲದಷ್ಟು ಪೌರೋಹಿತ್ಯ ಕಲಿತವರು. ಶುಭಾಶುಭ ಎರಡೂ ವಿಧವಾದ ಕರ್ಮಗಳ ಬಗೆಗೆ ಯಾರಿಗಾದರೂ ಸಂಶಯ ಬಂದರೆ ಅವರ ಹತ್ತಿರ ಬಂದು ಪರಿಹರಿಸಿಕೊಂಡು ಹೋಗುತ್ತಿದ್ದರು. ಅಂಥವರು ಸ್ವತಃ ತಮ್ಮ ತಂದೆಯ ಶ್ರಾದ್ಧ ಮಾಡುತ್ತಿರಲಿಲ್ಲ. ಯಾರು ಕೇಳಿದರೂ -‘ನಾನು ಗಯಾಕ್ಕೆ ಹೋಗಿ ಪಿಂಡ ಹಾಕಿ ಬಂದಿದೀನಿ. ಇನ್ನು ಮಾಡೊಹಾಗಿಲ್ಲ’ ಎನ್ನುತ್ತಿದ್ದರು. ಗಯೆಯಲ್ಲಿ ಪಿಂಡಪ್ರದಾನ ಮಾಡಿದಮೇಲೆ ಪ್ರಾತಿಸಾಂವತ್ಸರಿಕ ಶ್ರಾದ್ಧ ಮಾಡುವ ಅಗತ್ಯವಿಲ್ಲವೆನ್ನುವ ಒಂದು ಮಂತ್ರವನ್ನೇ ಹೇಳಿಬಿಡುತ್ತಿದ್ದರು. ಆದರೆ ಅವರು ನಿಜವಾಗಿಯೂ ಗಯೆಗೆ ಹೋಗಿದ್ದರೋ, ಹೋಗಿದ್ದರೂ ಅಲ್ಲಿ ಪಿಂಡಪ್ರಧಾನ ಮಾಡಿದ್ದರೋ ಎಂಬ ಬಗೆಗೆ ಯಾರಿಗೂ ನಂಬಿಕೆ ಇಲ್ಲ. ಸ್ವತಃ ಅಕ್ಕಮ್ಮನಿಗೇ ನಂಬಿಕೆ ಇಲ್ಲ. ಆದರೆ ಕಂಠೀಜೋಯಿಸರ ಎದುರು ನಿಂತು ಮಾತನಾಡುವ ಎದೆ ಯಾರಿಗುಂಟು.

ಅಪ್ಪನಾದರೂ ಇದ್ದಿದ್ದರೆ ಈ ಊರ ಜೋಯಿಸರ ಬಾಲ ಬೆಳೆಯುತ್ತಿರಲಿಲ್ಲ. ನಮ್ಮ ಜಮೀನು ಹೋಗುತ್ತಿರಲಿಲ್ಲ. ಒಂದು ಸಲ ಬಂದು ಗುಡುಗು ಹಾಕಿದ್ದರೆ, ಗಂಡ ಅತ್ತೆ ಎಲ್ಲರೂ ಹೆದರಿ, ಹೇಳಿದಂತೆ ಕೇಳುತ್ತಿದ್ದರು; ಜಮೀನು ಉಳಿಯುತ್ತಿತ್ತು. ಎಲ್ಲಿಗೆ ಹೋದನೋ ಏನು ಕತೆಯೋ! ಅವನು ಖಂಡಿತ ಸತ್ತಿಲ್ಲ. ಹಿಂದೆ ನಾನು ಮಗುವಾಗಿದ್ದಾಗ ಒಂದು ಸಲ ಹೀಗೆಯೇ ಊರು ಬಿಟ್ಟು ಹೋಗಿದ್ದವನು ನಾಲ್ಕು ವರ್ಷ ಬಂದಿರಲಿಲ್ಲವಂತೆ. ಕಾಶಿ, ರಾಮೇಶ್ವರ, ಎಲ್ಲೆಲ್ಲೋ ಸುತ್ತಿಕೊಂಡು ಬಂದಿದ್ದನಂತೆ. ಈಗ ಮತ್ತೆ ಎಲ್ಲಿಹೋದನೋ? ಆದರೆ ಈ ಸಲ ಹೋಗಿ ಆಗಲೇ ಒಂಬತ್ತು ಒಂಬತ್ತು ವರ್ಷದ ಹತ್ತಿರ ಹತ್ತಿರ ಆಯಿತಲ್ಲ. ಪಾರ್ವತಿ ಹುಟ್ಟಿದ ಎಂಟನೆಯ ತಿಂಗಳಿಗೋ ಒಂಬತ್ತನೆಯ ತಿಂಗಳಿಗೋ ಹೋದದ್ದು. ಈಗ ಅವಳಿಗೆ ಒಂಬತ್ತು ನಡೆಯುತ್ತಿದೆ. ದೇಶಾಂತರ ಸುತ್ತುವುದು ಅವನ ಹಣೆಬರಹವೋ, ಅವನು ಹೀಗೆ ದೂರ ಹೋಗುವುದು ನಮ್ಮ ಹಣೆಬರಹವೋ!

ಶ್ರಾದ್ಧದ ದಿನ ತಾಯಿಯ ಮನೆಗೆ ಹೋದಮೇಲೆ ಅವಳ ಮನಸ್ಸು ಕಸಿವಿಸಿಯಾಯಿತು, ತನ್ನ ಮನೆಯಲ್ಲಿಯೇ ಕರ್ಮ ನಡೆದಿದ್ದರೆ ಅವಳು ಉಪವಾಸವಿದ್ದು, ತಲೆಗೂ ಸ್ನಾನ ಮಾಡಿ ಅಡಿಗೆ ಮಾಡಬೇಕಾಗಿತ್ತು. ಈಗ ತನ್ನನ್ನು ದೂರ ಇಟ್ಟಿದ್ದರೂ ತಾನು ಏನಾದರೂ ತಿನ್ನಬಹುದೋ ಬೇಡವೋ? ಮನೆಯ ಸೊಸೆ ತಾನು: ಗಂಡ ಎಡಬಲಕ್ಕೆ ಹಾಕಿಕೊಂಡು ಕರ್ಮ ಮಾಡುತ್ತಿದ್ದಾರೆ. ತಾನು ಹೇಗೆ ಏನಾದರೂ ತಿನ್ನುವುದು? -ಎಂದು ಯೋಚಿಸಿದ ಅವಳು, ಹುಡುಗರಿಗೆ ಮಾತ್ರ ರೊಟ್ಟಿ ಚಟ್ನಿ ಮಾಡಿಕೊಟ್ಟಳು. ಕರ್ಮವನ್ನು ಇಲ್ಲಿ ಮಾಡಿದ್ದರೂ ಹುಡುಗರು ತಿಂಡಿ ತಿನ್ನಬಹುದಾಗಿತ್ತು.
ಮಧ್ಯಾಹ್ನದ ಪ್ರಸಾದಕ್ಕೆ ಹುಡುಗರನ್ನು ಕರೆಯುತ್ತಾರೋ ಇಲ್ಲವೋ ಎಂಬ ಬಗೆಗೆ ಅವಳಿಗೇ ಅನುಮಾನ. ಆದುದರಿಂದ ಅವರಿಗಾದರೂ ಅಡಿಗೆ ಮಾಡುವುದೋ ಬೇಡವೋ ಎಂಬುದನ್ನು ತೀರ್ಮಾನಿಸಲಾರದೆ, ಕೊನೆಗೆ ಹೇಗಾದರೂ ಆಗಲಿ ಎಂದು ಮತ್ತೆ ಎಂಟು ಹತ್ತು ರೊಟ್ಟಿ ಮಾಡಿಟ್ಟಳು. ಅವರು ಕರೆದರೆ ರೊಟ್ಟಿ ಏನೂ ಹಳಸುವುದಿಲ್ಲ. ಕರೆಯದಿದ್ದರೆ ಅದನ್ನೇ ತಿನ್ನುತ್ತವೆ.

ಹುಡುಗರೆಲ್ಲ ಸ್ಕೂಲಿಗೆ ಹೋದರು. ಪಾರ್ವತಿ, ರಾಮಣ್ಣ, ಇಬ್ಬರೂ ನಾಲ್ಕನೇ ಕ್ಲಾಸಿನಲ್ಲಿದ್ದಾರೆ. ವಿಶ್ವನಾಥ ಎರಡನೆಯ ಕ್ಲಾಸು. ನಂಜು ಕೂತು ಎಲೆ ಹಚ್ಚಿಸುತ್ತಿದ್ದಳು. ಮಧ್ಯಾಹ್ನ ಅಲ್ಲಿ ಅತ್ತೆಯ ಮನೆಯಲ್ಲಿ ಅಪರಕರ್ಮ ಶುರುವಾಗುವ ಹೊತ್ತು. ಇಲ್ಲಿಗೆ ಮಾದೇವಯ್ಯನವರು ಬಂದರು. ಇವರ ಮನೆಗೆ ಆಗಾಗ್ಯೆ ಬರುತ್ತಿದ್ದರಾದರೂ ಅವರು ಈ ಹೊತ್ತಿನಲ್ಲಿ ಎಂದೂ ಬಂದವರಲ್ಲ. ಇದು ಅವರು ಕಂತೆಭಿಕ್ಷೆ ಮುಗಿಸಿ ಊಟ ಮಾಡುವ ಹೊತ್ತು. ಹಳ್ಳಿಯ ಕಡೆ ಭಿಕ್ಷಕ್ಕೆ ಹೋಗಿದ್ದರೆ ಹೊರಗೆ ಇರುವ ಹೊತ್ತು. ಅಯ್ಯನವರು ಇನ್ನೂ ಊಟ ಮಾಡಿದಂತೆ ಕಾಣಲಿಲ್ಲ. ಮುಖ ತುಂಬ ಸಪ್ಪಗಾಗಿತ್ತು. ‘ನಾವಂತೂ ಸಂಸಾರಸ್ಥರು, ಬೆಳಿಗ್ಗೆ ಎದ್ದರೆ ಕಾಷ್ಠವ್ಯಸನ. ಸನ್ಯಾಸಿಗಳಾದ ಅವರಿಗೆ ಮುಖ ಸಪ್ಪಗಾಗುವಂಥದ್ದು ಏನು ನಡೆದಿದೆಯೋ!’-ಎಂದು ಯೋಚಿಸಿಕೊಂಡೇ ನಂಜಮ್ಮ ಮಂದಲಿಗೆ ಹಾಕಿಕೊಟ್ಟು ಕೇಳಿದಳು: ‘ಏನು, ಅಯ್ನೋರ ಬಿನ್ನ ತೀರಿದಂತಿಲ್ಲ.’
‘ಈ ಊರಿನ ನಮ್ಮ ಜಾತಿಯೋರ ಮನ್ಲಿ ಕಂತೆಭಿಕ್ಷೆ ಮಾಡಬ್ಯಾಡ್ದು ಅಂತ ಮಾಡಿದೀನಿ ಕಣವ್ವ.’
‘ಏನಾಯ್ತು?’
“ಹಳ್ಳೀಕಡೆ ತಿರುಗಿ ರಾಗಿಕಾಳು ಎತ್ತಿಕೊಂಡು ಬತ್ತೀನಿ. ಪರಸ್ಥಳದೋರು ಇನ್ಯಾರಾದ್ರೂ ಸಾದು ಸನ್ಯಾಸಿಗಳು ಗ್ರಾಮಕ್ಕೆ ಬಂದಾಗ ಗುಡೀಲಿ ಅವರಿಗೆ ಸೈನ್‌ಪಾಕ ಕೊಡ್ತೀನಲ್ಲ. ಊರಿನಾಗಿದ್ರೆ ನನ್ನ ಊಟ ಕಂತೆಬಿಕ್ಷದಾಗೆ ಕಳೀತಿತ್ತು. ಈ ಊರ ಬಣಜಿಗರ ಕೇರಿಯೋರು ಏನೋ ಮಾತಾಡ್ಕಂಡಿರೋ ಹಂಗೆ ಕಾಣ್ತೈತೆ. ಈಗ ಭಿಕ್ಷೆಗೆ ಹೋಗಿದ್ದೆ. ಒಂದು ನಾಕು ಮನೆಗೆ ಹೋದ್ರೆ ಯಲ್ಲಾರೂ, ‘ಈ ಅಯ್ನೋರಿಗೆ ಬೆಳಿಗ್ಗೆ ಕೋರಣ್ಯದ ಬಿಕ್ಷೆ ರಾಗಿಯೂ ಬೇಕು, ಮಧ್ಯಾಹ್ನ ಕಂತೆಬಿಕ್ಷದ ಮುದ್ದೆ ಎಸರೂ ಬೇಕು’ ಅಂದ್ರು. ಬ್ಯಾಸರಾಯ್ತು. ಸುಮ್ಕೆ ಬಂದ್‌ಬಿಟ್ಟೆ.”
ನಂಜಮ್ಮನಿಗೆ ವ್ಯಸನವಾಯಿತು. ಅಯ್ಯನವರು ಹಳ್ಳೀಕಡೆಯಿಂದ ತಂದ ದಿನಸಿಗಳನ್ನು ಮಾರಿ ಗಂಟು ಮಾಡಿಕೊಳ್ಳುತ್ತಿರಲಿಲ್ಲ. ಅವರದಾಗಿ ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅವರು ಕಷ್ಟಪಟ್ಟು ಭಿಕ್ಷೆ ಬೇಡುವುದು ಪರಸ್ಥಳದವರಿಗೆ ಅನ್ನವಿಕ್ಕುವುದಕ್ಕಾಗಿ.
‘ಅಯ್ನೋರೇ, ನೀವು ಗುಡಿಗೆ ಹೋಗಿ ಅಡಿಗೆ ಮಾಡಿಕೊಳ್ಳೋದಿಲ್ವೆ?’
‘ಮನ್ಸಿಲ್ಲ ಕಣವ್ವ. ಹ್ವಟ್ಟೆ ಏನೋ ಹಸೀತೈತೆ. ನೀನೇನಾದ್ರೂ ಇಕ್ಕಿದ್ರೆ ಉಣ್ತೀನಿ.’
ನಂಜಮ್ಮನಿಗೆ ಹೆಚ್ಚು ಆಶ್ಚರ್ಯವಾಗಲಿಲ್ಲ. ಜಂಗಮರಾದ ಈ ಸನ್ಯಾಸಿಗಳು ಇದುವರೆಗೂ ತನ್ನ ಮನೆಯಲ್ಲಿ ಒಂದು ಹನಿ ನೀರೂ ಕುಡಿದಿರಲಿಲ್ಲ. ಈಗ ಅವರೇ ಊಟ ಮಾಡುವುದಾಗಿ ಕೇಳುತ್ತಾರೆ. ‘ಹಂಗೇ ಕುಂತ್ಕಳಿ, ಬ್ಯಾಗ ಒಂದಿಷ್ಟು ಅನ್ನ ಸಾರು ಮಾಡ್ತೀನಿ’-ಅವಳೆಂದುದಕ್ಕೆ, ‘ಅದೆಲ್ಲ ಬ್ಯಾಡ. ಏನು ಮಾಡಿದ್ದೈತೋ ಅದ ಇಕ್ಕವ್ವ’ ಎಂದರು. ನಂಜಮ್ಮ ಒಳಗೆ ಹೋಗಿ, ಮಾಡಿಟ್ಟಿದ್ದ ರೊಟ್ಟಿ ಚಟ್ನಿಗಳ ಜೊತೆಗೆ ಒಂದು ಅಲ್ಯೂಮಿನಿಯಂ ಬಟ್ಟಲಿನ ತುಂಬ ಮೊಸರನ್ನೂ ತಂದು ಅವರ ಮುಂದಿಟ್ಟಳು. ಎದ್ದು ಕೈ ತೊಳೆದುಕೊಂಡು ಅವರು ರೊಟ್ಟಿ ಮುರಿಯಲು ಪ್ರಾರಂಭಿಸಿದರು, ಅವರನ್ನು ನೋಡಿದ ನಂಜಮ್ಮನಿಗೆ ತಕ್ಷಣ ತನ್ನ ಮಾವನವರ ಶ್ರಾದ್ಧವು ಅತ್ತೆಯ ಮನೆಯಲ್ಲಿ ನಡೆಯುತ್ತಿರುವ ನೆನಪಾಯಿತು. ಇಷ್ಟು ಹೊತ್ತಿಗೆ ಅಲ್ಲಿ ಬ್ರಾಹ್ಮಣ ಭೋಜನ ಶುರುವಾಗಿರಬಹುದು. ಅವಳು ಹೇಳಿದಳು: ‘ಅಯ್ನೋರೇ, ಇವತ್ತು ನಮ್ಮ ಮಾವ್ನೋರ ವೈದೀಕ. ನನ್ನೊಬ್ಬಳಿಗೆ ಬಹಿಷ್ಕಾರ ಇನ್ನೂ ಇಟ್ಟಿದಾರೆ ಗೊತ್ತೆ?’
‘ಗೊತ್ತು, ಗೊತ್ತು. ಯಲ್ಲಾನೂ ತುಪ್ಪದಾಗೇ ಮಾಡಬೇಕು, ಇಲ್ದಿದ್ರೆ ನಾನು ಬಿನ್ನಾ ತೀರ್ಸಾಕ್ ಬರಾಕಿಲ್ಲ ಅಂತ ಬ್ರಾಹ್ಮಣೋತ್ತಂರು ಅಂದ್ರಂತೆ. ಅಪ್ಪಣ್ಣಯ್ಯ ಬೆಳ್ಳಿ ಪಂಚತ್ರೇನ ಕಾಶಿಂಬಡ್ಡಿ ಅಂಗ್ಡೀಲಿ ಎಲ್ಡು ರೂಪಾಯಿಗೆ ಅಡುವು ಮಡಗಿ ಬೆಣ್ಣೆ ತಂದ. ನಾನು ಒಂಬತ್ತು ಹತ್ತು ಗಂಟೇನಾಗ ಗುಡಿ ಮುಂದೆ ಕುಂತಿದ್ದೆ. ದಾರೀಲಿ ಬತ್ತಾ ನನ್ನ ಕಂಡು ಹೇಳ್ದ. ಜೋಯಿಸರಿಗೆ ಜ್ವರ ಬಂತಂತೆ. ತುಪ್ಪದ್ದಾದ್ರೆ ವಡೆ, ಉಂಡೆ, ಯಲ್ಲಾ ಭೋಜನ ಮಾಡ್ತಾರಂತೆ. ಎಣ್ಣೇದಾದ್ರೆ ವಲ್ಲೆ ಅಂದ್ರಂತೆ.’
ಇನ್ನು ಬಡ್ಡಿ ತೆತ್ತು ಅವರು ಬೆಳ್ಳಿಯ ಪಾತ್ರೆ ಬಿಡಿಸಿಕೊಳ್ಳುವುದಿಲ್ಲವೆಂಬುದನ್ನು ಯಾರೂ ಬಾಯಿ ಬಿಟ್ಟು ಮಾತನಾಡಿಕೊಳ್ಳುವ ಅಗತ್ಯವಿರಲಿಲ್ಲ. ‘ಅಯ್ನೋರೇ, ಈ ತಿಥಿ ಮತಿ ಅನ್ನೋದೆಲ್ಲ ನಿಜವೆ? ಇಂಥ ಜೋಯ್ಸರುಗಳನ್ನು ಕರ್ದು ಅನ್ನ ಹಾಕೂದು ಅಂದ್ರೆ ಅದೆಲ್ಲ ಸುಳ್ಳು ಅನ್ಸುತ್ತೆ.’
‘ಅದು ನಿಜವೋ ಸುಳ್ಳೊ ಯಾರಿಗೆ ಗೊತ್ತು? ನಿಜವಿದ್ರು ಇರ್ಭೌದು. ರಾಮಣ್ಣ ಶ್ಯಾನುಭಾಗರಿದ್ದಾಗ ನಿಮ್ಮತ್ತೆ ಒಂದಿನವೂ ಸಂಜೆಗಂಟ ಹ್ವಟ್ಟೆಗೆ ಹಿಟ್ಟು ಕಾಣಿಸ್ಲಿಲ್ಲ. ಗಂಡನ್ನ ನ್ಯಟ್ಟಗೆ ನಿಗಾ ಮಾಡ್ಲಿಲ್ಲ. ಈಗ ಹಳ್ಳಿಮ್ಯಾಲೆ ತಿರುಪೆ ಮಾಡ್ಕಂಡ್ ಬಂದಿ, ತುತೀ ಮಾಡ್ತೈತೆ ಆ ಯಮ್ಮ.’
‘ನಮ್ಮ ಮಾವ್ನೋರು ಬದುಕಿದ್ದಾಗ್ಲೂ ನೀವು ಈ ಊರಲ್ಲೇ ಇದ್ರಾ?’
‘ಚಿನ್ನಯ್ಯ ಹುಟ್ಟಾದು ಮೂರು ವರ್ಷಕ್ಕೆ ಮುಂಚೆ ನಾನು ಇಲ್ಲಿಗೆ ಬಂದುದ್ದು.’
‘ಹಾಗಾದ್ರೆ ನಿಮ್ಮೂರು ಯಾವ್ದು?’
‘ಯಾವ್ದಾದ್ರೆ ಏನು? ಶಿವ ಹುಟ್ಸಿದ ಮ್ಯಾಲೆ ಸಾಯೂಗಂಟ ಯಾವ್ದಾದ್ರೂ ಒಂದೂರಾಗಿರಬೇಕಲ್ಲ’-ಎಂದರೇ ಹೊರತು ತಮ್ಮ ಊರಿನ ಹೆಸರು ಹೇಳಲಿಲ್ಲ. ಅವರ ಊರು ಯಾರಿಗೂ ಗೊತ್ತಿಲ್ಲ. ಈ ಊರಿಗೆ ಬಂದ ಹೊಸತರಲ್ಲಿ ಅವರು ಹುಬ್ಬಳ್ಳಿ ಧಾರವಾಡದ ಕಡೆಯ ಉತ್ತರ ಸೀಮೆಯವರ ಹಾಗೆ ಮಾತನಾಡುತ್ತಿದ್ದರಂತೆ. ಬೋರೆಸಂತೆ, ರಾಮನಾಥಪುರ ಜಾತ್ರೆ ಮೊದಲಾದ ಕಡೆಗಳಲ್ಲಿ ಹೋರಿ ಜೋಡಿಗಳನ್ನು ಕೊಳ್ಳಲು ಬರುತ್ತಿದ್ದ ಉತ್ತರ ಸೀಮೆಯವರ ರೀತಿ ಇವರ ಮಾತು ಎಂದು ಆಗ ಜನರು ಗುರುತಿಸಿದ್ದರಂತೆ. ಮೊದಮೊದಲು ರಾಗಿ ಮುದ್ದೆ ನುಂಗುವುದು ಬರುತ್ತಿರದ ಇವರು ಬರೀ ರೊಟ್ಟಿ ತಿನ್ನುತ್ತಿದ್ದರಂತೆ. ಆದರೆ ಒಂದೆರಡು ವರ್ಷದಲ್ಲಿ ಇಲ್ಲಿಯವರ ಹಾಗೆಯೇ ಮಾತನಾಡುವುದನ್ನೂ ಕಲಿತರು, ಮುದ್ದೆ ಮುರಿಯುವುದನ್ನೂ ಅಭ್ಯಾಸ ಮಾಡಿಕೊಂಡರು. ‘ನಿಮ್ದು ಯಾವೂರು?’-ಎಂದರೆ, ‘ರಾಮಸಂದ್ರದ ಚೋಳೇಶ್ವರನ ಗುಡಿ’ ಎನ್ನಲು ಪ್ರಾರಂಭಿಸಿದರು. ಈಗ ಯಾರೂ ಅವರನ್ನು ಈ ಪ್ರಶ್ನೆ ಕೇಳುವುದಿಲ್ಲ. ಏಕೆಂದರೆ ಚೆನ್ನಿಗರಾಯರಂತಹ ನಡುವಯಸ್ಸಿನವರಿಗಿಂತ ಅವರು ರಾಮಸಂದ್ರಕ್ಕೆ ಹಳಬರು. ನಂಜಮ್ಮ ಅವರ ಊರಿನ ವಿಷಯವಾಗಿ ಮತ್ತೆ ಕೇಳಲಿಲ್ಲ.
ಅಷ್ಟರಲ್ಲಿ ಅವರು ರೊಟ್ಟಿ ತಿಂದು ಮುಗಿಸಿದ್ದರು. ಮಧ್ಯಾಹ್ನದ ಊಟಕ್ಕೆಂದು ಹುಡುಗರು ಮನೆಗೆ ಬಂದರು. ಅಮ್ಮ ಕೊಟ್ಟ ರೊಟ್ಟಿ ಚಟ್ನಿಗಳನ್ನು ಗೊಣಗದೆ ತಿಂದು ನೀರು ಕುಡಿದು ಮತ್ತೆ ಸ್ಕೂಲಿಗೆ ಹೋದರು. ನಂಜಮ್ಮ ಮಾತ್ರ ತಿನ್ನಲಿಲ್ಲ. ಹುಡುಗರು ತಿಂದ ಮೇಲೆ ಏನೂ ಉಳಿಯಲಿಲ್ಲ. ಮತ್ತೆ ಮಾಡಲು ಮನಸ್ಸಿರಲಿಲ್ಲ. ಅಯ್ಯನವರು ಹೊರಗೆ ಕುಳಿತೇ ಇದ್ದರು. ಅವಳು ಹೊರಗೆ ಬಂದು, ಅದುವರೆಗೂ ಮನಸ್ಸಿನಲ್ಲೇ ಯೋಚಿಸುತ್ತಿದ್ದ ಒಂದು ಪ್ರಶ್ನೆಯನ್ನು ಕೇಳಿದಳು: ‘ಅಯ್ನೋರೇ, ಮತ್ತೆ ನಿಮ್ಮುನ್ನ ಒಂದು ಪ್ರಶ್ನೆ ಕೇಳ್ತೀನಿ. ಉತ್ತರ ಹೇಳ್ಬೇಕು ಅನ್ಸಿದ್ರೆ ಹೇಳಿ. ಇಲ್ದೆ ಇದ್ರೆ ಬ್ಯಾಡಿ. ನೀವು ಮನೆ ಮಠ ಬಿಟ್ಟು ಯಾಕೆ ಹೀಗೆ ಬಂದುಬಿಟ್ರಿ?’
‘ಮನೆ ಮಠ ಬಿಟ್ಟು ಎಲ್ಲಿ ಬಂದೆನವ್ವಾ? ಸಂಸಾರ ಎಲ್ಲಿತ್ತು? ಹುಟ್ಟಿದಾಗ್ಲೇ ಸನ್ಯಾಸಿಯಾಗಿ ಹುಟ್ಟಿದೆ. ಹಿಂಗೆ ಊರೂರು ಅಲ್ಕಂಡು ಬಂದೆ. ಇಲ್ಲಿರಾ ಮನಸ್ಸಾಯ್ತು ಇದೀನಿ’ -ಎಂದರೇ ಹೊರತು ಅವಳ ಪ್ರಶ್ನೆಗೆ ಉತ್ತರ ಹೇಳಲಿಲ್ಲ. ಅವರಿಗೆ ಮನೆ, ಸಂಸಾರ, ಇತ್ತೋ ಇರಲಿಲ್ಲವೋ ಎಂಬುದೂ ಒಗಟಾಗಿಯೇ ಉಳಿಯಿತು.

ಅವಳು ಅವರ ಹಿಂದಿನ ಜೀವನದ ಬಗೆಗೆ ಯೋಚಿಸುತ್ತಾ ಕುಳಿತಳು. ಮದುವೆಯಾಗಿದ್ದರೋ ಇಲ್ಲವೋ, ಅಥವಾ ಆದಮೇಲೆ ಸಂಸಾರ ಬಿಟ್ಟು ಹೀಗೆ ಹೊರಟುಬಂದರೋ! ಬಳ್ಳಾರಿ ಸೀಮೆಯವರಂತೆ; ಹೆಂಡತಿ ಏನೋ ಚಾತೂರ ಕೆಲಸ ಮಾಡಿದಳಂತೆ; ಅದಕ್ಕೆ ಬೇಜಾರಿನಿಂದ ಎಲ್ಲವನ್ನೂ ಬಿಟ್ಟು ಹೀಗೆ ಹೊರಟುಬಂದರಂತೆ-ಎಂದು ಪಕ್ಕದ ಮನೆಯ ಪುಟ್ಟವ್ವ ಒಂದು ದಿನ ನಂಜಮ್ಮನಿಗೆ ಹೇಳಿದಳು. ‘ಇದು ನಿಂಗೆ ಹ್ಯಾಗೆ ಗೊತ್ತು?’- ಎಂದು ಕೇಳಿದುದಕ್ಕೆ ಅವಳು, ‘ಹಂಗಂತ ಯಾರ್ಯಾರೋ ಅಂದ್ಕಂತಿದ್ರು ಕಣವ್ವ. ನಾನು ಹುಡ್ಗಿಯಾಗಿದ್ದಾಗ ಅಂತಿದ್ದುದು. ಆಗ ಈ ವಯ್ನೋರು ಮುದುಕ್ರಾಗಿರ್ನಿಲ್ಲ’ ಎಂದಿದ್ದಳು. ಪುಟ್ಟವ್ವನ ಮಾತನ್ನು ಸಹ ನಂಬುವಂತಿಲ್ಲ. ಅಯ್ಯನವರು ತಾವಾಗಿಯೇ ಈ ಬಗೆಗೆ ಎಂದೂ ಯಾರಲ್ಲಿಯೂ ಬಾಯಿ ಬಿಡುವುದಿಲ್ಲ ಎಂದು ಯೋಚಿಸಿದ ಅವಳು, ಹೇಳದಿದ್ದರೆ ಬ್ಯಾಡ, ಅವರ ಮನಸ್ಸಿನ ದುಃಖ ಏನಿದೆಯೋ!’ ಎಂದು ಸುಮ್ಮನಾದಳು.
ಒಂದು ಮಾತನ್ನೂ ಆಡದೆ ಇಬ್ಬರೂ ಸ್ವಲ್ಪ ಹೊತ್ತು ಕುಳಿತಿದ್ದರು. ‘ಏನು ಏಚ್ನೆ ಮಾಡ್ತಾ ಕುಂತ್ಕಂಡೆಯವ್ವಾ?’-ಅಯ್ಯನವರು ಕೇಳಿದರು.
‘ಏನೂ ಇಲ್ಲ.’
‘ಈಟು ದಿನ ಈ ಊರ ಋಣವಿತ್ತು. ಬ್ಯಾರೆ ಎಲ್ಲಾರ ಹ್ವಾಗ್ ಬೇಕು ಅಂತ ಯೋಚಿಸ್ತಾ ಇದೀನಿ.’
‘ಅಯ್ನೋರೇ, ನೀವು ಹೇಳಿ ಕೇಳಿ ಸನ್ಯಾಸಿಗಳು. ಯಾರೋ ತಿಳಿವಳಿಕೆ ಇಲ್ಲದ ನಾಕು ಜನ ಏನೋ ಅಂದ್ರೆ ನೀವು ಬೇಜಾರುಪಟ್ಟುಕೋಭೌದಾ? ನೀವು ಯಾವ ಊರಿಗೆ ಹೋದ್ರೂ ಇಂಥೋರು ಇರ್ತಾರೆ, ಅಂಥೋರೂ ಇರ್ತಾರೆ.’
‘ಅದೂ ನಿಜ ಕಣವ್ವ’- ಎಂದರು. ಅವರಿಗೆ ಹೆಚ್ಚು ಮಾತನಾಡುವ ಲಹರಿ ಇರಲಿಲ್ಲವೆಂದು ಕಾಣುತ್ತದೆ. ಸ್ವಲ್ಪ ಹೊತ್ತಿನಲ್ಲಿ ಎದ್ದು ಗುಡಿಗೆ ಹೊರಟುಹೋದರು.

– ೨ –

ಮಾದೇವಯ್ಯನವರು ಆ ದಿನ ಬೆಳಿಗ್ಗೆ ಹಳ್ಳಿಯ ಕಡೆ ಹೋದವರು ಎರಡು ಮೂರು ತಿಂಗಳಾದರೂ ರಾಮಸಂದ್ರಕ್ಕೆ ಹಿಂತಿರುಗಲಿಲ್ಲ. ಅವರು ಊರು ಬಿಟ್ಟು ಹೊರಟೇ ಹೋದರೇನೋ ಎಂದು ನಂಜಮ್ಮ ವ್ಯಾಕುಲಗೊಂಡಳು. ಒಳ್ಳೆಯ ಮನುಷ್ಯ ಎಂದು ಕರೆಯಬಹುದಾದ ವ್ಯಕ್ತಿ ಈ ಊರಿನಲ್ಲಿದ್ದವರು ಅವರೊಬ್ಬರೇ. ಅವರೂ ಬೇಸರಪಟ್ಟುಕೊಂಡು ಹೊರಟುಹೋಗಿದ್ದಾರೆ. ಮತ್ತೆ ಬರುತ್ತಾರೋ ಇಲ್ಲವೋ! ಅವರ ಸಾಮಾನುಗಳು ಮಾತ್ರ ಗುಡಿಯಲ್ಲಿಯೇ ಇವೆ. ಎರಡು ಮೂರು ಪಲ್ಲ ರಾಗಿ, ಎರಡು ಮೂಟೆ ಹುರುಳೀಕಾಳು, ಒಂದು ಗುಡಾಣ ಮೆಣಸಿನಕಾಯಿ, ಕೆಲವು ಅಲ್ಯುಮಿನಿಯಂ ಪಾತ್ರೆಗಳು, ನಾಲ್ಕೈದು ಚಾಪೆಗಳನ್ನು ಇಟ್ಟಿದ್ದ ಕೋಣೆಗೆ ಅವರು ಬೀಗ ಹಾಕಿಕೊಳ್ಳುತ್ತಿದ್ದರು. ಬೀಗದ ಕೈ ತೆಗೆದುಕೊಂಡು ಹೋಗಿದ್ದಾರಂತೆ. ಅಂದರೆ ಒಂದಲ್ಲ ಒಂದು ದಿನ ಹಿಂತಿರುಗುತ್ತಾರೆಂಬ ನಿರೀಕ್ಷೆ ಅವಳಿಗಿತ್ತು. ಅವರು ಹೋದಮೇಲೆ ದೇವಸ್ಥಾನದಲ್ಲಿ ಕಳೆಯೇ ಇರಲಿಲ್ಲ. ನಂಜಮ್ಮ ಅಲ್ಲಿಗೆ ಎಂದೂ ಹೋದವಳಲ್ಲ. ಈಗ ಚೆನ್ನಿಗರಾಯರಂಥವರಿಗೂ ಅಲ್ಲಿಗೆ ಹೋಗಿ ಕೂರಲು ಯಾವ ಆಕರ್ಷಣೆಯೂ ಇರಲಿಲ್ಲ.

ಪಾರ್ವತಿ, ರಾಮಣ್ಣ ಇಬ್ಬರೂ ಪ್ರೈಮರಿ ಸ್ಕೂಲು ಮುಗಿಸಿದರು. ರಾಮಣ್ಣ ತುಂಬ ಜಾಣ ಹುಡುಗ. ಸ್ಕೂಲಿಗೇ ಮೊದಲನೆಯವನಾಗಿದ್ದಾನೆಂದು ಮೇಷ್ಟರು ಸೂರಪ್ಪನವರು ಹೇಳುತ್ತಿದ್ದರು. ಹವಳ ಪೋಣಿಸಿದಷ್ಟು ದುಂಡಗೆ ಅಕ್ಷರ ಬರೆಯುತ್ತಿದ್ದ. ಶ್ಯಾನುಭೋಗಿಕೆ ಪುಸ್ತಕಕ್ಕೆ ತಪ್ಪಿಲ್ಲದೆ ರೂಲು ಹಾಕುತ್ತಿದ್ದ. ಅಲ್ಪಪ್ರಾಣ ಮಹಾಪ್ರಾಣ ಹ್ರಸ್ವದೀರ್ಘಗಳ ತಪ್ಪಿಲ್ಲದೆ ಕನ್ನಡದಲ್ಲಿ ಏನನ್ನಾದರೂ ಓದುತ್ತಿದ್ದ. ಮೂರು ಜನ ಮಕ್ಕಳಿಗೂ ನಂಜಮ್ಮ ಶಾಂತಾಕಾರಂ ಭುಜಗ ಶಯನಂ, ಭಜಗೋವಿಂದಂ ಮೂಢಮತೇ, ಮೊದಲಾಗಿ ಅನೇಕ ಸ್ತೋತ್ರಪಾಠಗಳನ್ನು ಹೇಳಿಕೊಟ್ಟಿದ್ದಳು. ನಳಚರಿತ್ರೆ, ಲವಕುಶ ಕಾಳಗಗಳನ್ನು ಸಹ, ಪಾರ್ವತಿ ರಾಮಣ್ಣರು ಬಾಯಿಪಾಠ ಮಾಡಿದ್ದರು. ಶ್ಯಾನುಭೋಗಿಕೆ ಮಾಡಲು ಇದಕ್ಕಿಂತ ವಿದ್ಯೆ ಬೇಕೆ? ಆದರೆ ನಂಜಮ್ಮನ ಯೋಚನೆ ಬೇರೆಯೇ ಇತ್ತು. ಈ ಕೆಲಸ ತನ್ನ ಮಕ್ಕಳಿಗೆ ಬೇಡ. ಅವು ಓದಿ ಯಾವುದಾದರೂ ನೌಕರಿ ಮಾಡಬೇಕು. ಕೊನೆಯ ಪಕ್ಷ ಶೇಕ್ದಾರಿಕೆ ಮಾಡುವಷ್ಟಾದರೂ ವಿದ್ಯೆ ಕಲಿಯಬೇಕು.
‘ರಾಮಣ್ಣನನ್ನು ಮುಂದಕ್ಕೆ ಮಿಡ್ಳ್‌ಸ್ಕೂಲು ಓದಿಸಿ; ಬಿಡಬೇಡಿ’-ಸೂರಪ್ಪ ಮೇಷ್ಟರು ಹೇಳಿದರು. ಮಿಡ್ಳ್‌ಸ್ಕೂಲು ಇರುವುದು ಕಂಬನಕೆರೆಯಲ್ಲಿ, ರಾಮಸಂದ್ರಕ್ಕೆ ಐದು ಮೈಲಿ ದೂರ. ಆ ಊರಿನಲ್ಲಿ ಹದಿನೈದು ಇಪ್ಪತ್ತು ಬ್ರಾಹ್ಮಣರ ಮನೆಗಳಿವೆಯಂತೆ. ಯಾರಾದರೂ ಗಂಡಸರು ಹೋಗಿ ವಾರ ಮಾಡಿಕೊಟ್ಟು ಬಂದರೆ ಹುಡುಗ ಅಲ್ಲಿಯೇ ಇದ್ದು ಓದಬಹುದು. ಶನಿವಾರ ಊರಿಗೆ ಬಂದು ಸೋಮವಾರದ ಊಟ ಹೆಗಲಿಗೆ ಹಾಕಿಕೊಂಡು ಸ್ಕೂಲಿನ ಹೊತ್ತಿಗೆ ಹೋದರೆ ಒಟ್ಟು ನಾಲ್ಕು ವಾರ ಸಿಕ್ಕಿದರೆ ಸಾಕು. ಶನಿವಾರ ಮಧ್ಯಾಹ್ನಕ್ಕೆ ಯಾರಾದರೂ ಊಟ ಹಾಕಿದರೆ ಸರಿ. ಶೇಕ್ದಾರರನ್ನು ಕೇಳಿದರೆ ಒಂದು ವಾರ ಕೊಡಬಹುದು. ಇನ್ನು ನಾಲ್ಕು ದಿನಕ್ಕೆ ಯಾರನ್ನು ಕೇಳುವುದು? ಸೂರಪ್ಪ ಮೇಷ್ಟರಿಗೋ ದ್ಯಾವರಸಯ್ಯನವರಿಗೋ ಅಲ್ಲಿ ಗುರುತಿನವರಿರಬಹುದು.
ಆದರೆ ಇನ್ನೊಬ್ಬರ ಮನೆಯಲ್ಲಿ ಊಟ ಮಾಡಲು ರಾಮಣ್ಣ ಒಪ್ಪಲಿಲ್ಲ. ಹುಡುಗನಿಗೆ ಸಂಕೋಚವೋ ಅಥವಾ ಭಯವೋ. ದಿನವೂ ಊರಿನಿಂದ ಕಂಬನಕೆರೆಗೆ ನಡೆದೇ ಹೋಗಿ ಬರುತ್ತೇನೆಂದು ಹೇಳಿದ. ಹೋಗುತ್ತಾ ಐದು ಮೈಲಿ, ಬರುತ್ತಾ ಐದು ಮೈಲಿ. ರಾಮಸಂದ್ರದ ಅಮ್ಮನ ಗುಡಿಯ ಆಚೆ ಮುದಿಮಾವಿನ ಮರದ ಕೆಳಗಿನಿಂದ ಹಾಯ್ದು ಕಬ್ಬಳ್ಳಿ ಬುಗವನ್ನು ಏರಿ ಇಳಿದು ಹುತ್ತದ ದಿಬ್ಬದ ಮಗ್ಗುಲಿಗೆ ನಡೆಯಬೇಕು. ಆ ದಿಬ್ಬದ ತುಂಬ ಬರೀ ಹುತ್ತಗಳೇ ಇವೆ. ಅವುಗಳ ಒಳಗೆ ಎಷ್ಟು ಸಾವಿರ ಹಾವುಗಳಿವೆಯೋ. ಕೋಡುಗಳಂತೆ ಬೆಳೆದು ನಿಂತಿರುವ ಅವುಗಳ ಬಾಯಿಯನ್ನು ನೋಡಿದರೇ ಹೆದರಿಕೆಯಾಗುತ್ತೆ. ಅದರ ಆಚೆಗೆ ಗೌಡನ ಕೊಪ್ಪಲು. ಮುಂದೆ ಪಾಪಾಸುಕಳ್ಳಿಯ ಓಣಿಯಿಂದ ಹೋದರೆ ಕಂಬನಕೆರೆ. ರಾಮಣ್ಣ ಇನ್ನೂ ಒಂಬತ್ತು ವರ್ಷದ ಹುಡುಗ. ಒಬ್ಬನೇ ಈ ದಾರಿಯಲ್ಲಿ ಹೋಗಿಬರಬೇಕು. ಆದರೆ ಕಷ್ಟ ಪಡದೆ ವಿದ್ಯೆ ಬರುವುದು ಹೇಗೆ? ಸೂರಪ್ಪ ಮೇಷ್ಟರು ಕೊಟ್ಟ ಪ್ರೈಮರಿ ಸ್ಕೂಲಿನ ಸರ್ಟಿಫಿಕೇಟನ್ನು ದೇವರ ಮುಂದಿಟ್ಟು ಪೂಜೆ ಮಾಡಿ ಕಣ್ಣಿಗೆ ಒತ್ತಿಕೊಂಡು ಕೈಗೆ ತೆಗೆದುಕೊಂಡ ಮೇಲೆ ನಂಜಮ್ಮ ಮಗನಿಗೆ ಮಾಡಿದ್ದ ರೊಟ್ಟಿ ಚಟ್ನಿಯನ್ನು ಕಟ್ಟಿ ಕೊಟ್ಟಳು. ಸ್ಕೂಲಿಗೆ ಹೋಗಿ ಸೇರಿಸಿ ಬರಲು ತಾವು ಹೋಗುತ್ತೇವೆಂದು ಚೆನ್ನಿಗರಾಯರೇನೋ ಒಪ್ಪಿಕೊಂಡಿದ್ದರು. ಹೊರಡುವ ದಿನ ಬೆಳಿಗ್ಗೆ ಏಳು ಗಂಟೆಗೆ ಏಳಬೇಕಾದಾಗ ಮುಸುಕಿನ ಒಳಗೇ, ‘ನಾಳೆ ಹೋದ್ರಾತು’ ಎಂದರು. ಆದರೆ ಮೊದಲೇ ಪಂಚಾಂಗ ನೋಡಿ ನಿಷ್ಕರ್ಷಿಸಿದ್ದ ದಿನವನ್ನು ಬಿಡುವಂತಿರಲಿಲ್ಲ. ಮಗನ ಜೊತೆಗೆ ನಂಜಮ್ಮನೇ ಹೊರಟಳು. ದೇವರಿಗೆ, ತಾಯಿಗೆ, ಅಕ್ಕ ಪಾರ್ವತಿಗೆ ರಾಮಣ್ಣ ನಮಸ್ಕಾರ ಮಾಡಿದ. ಮಲಗಿದ್ದವರಿಗೆ ನಮಸ್ಕಾರ ಮಾಡಬಾರದಲ್ಲ, ತೀರ್ಥರೂಪರು ಮೇಲೆ ಏಳಲಿಲ್ಲವಾದುದರಿಂದ ಅವರಿಗೆ ಸಲ್ಲಲಿಲ್ಲ. ತಾಯಿ ಮಗ, ಇಬ್ಬರೂ ಸ್ಕೂಲಿಗೆ ಹೋದರು. ಪೋಷಕರ ರುಜುವಿನ ಜಾಗದಲ್ಲಿ ತಾಯಿಯ ಸಹಿ ಹಾಕಿಸಿ ಎಂಟಾಣೆ ಪ್ರವೇಶ ಶುಲ್ಕದೊಡನೆ ಹೆಡ್ಮಾಸ್ಟರು ಹುಡುಗನನ್ನು ಸ್ಕೂಲಿಗೆ ಸೇರಿಸಿಕೊಂಡರು. ಅಲ್ಲಿಗೆ ಹೋಗಿ ಉಳಿದ ಹುಡುಗರನ್ನು ನೋಡಿದಾಗ ನಂಜಮ್ಮನಿಗೆ ಎನಿಸಿತು: ತನ್ನ ಮಗನಿಗೆ ಒಂದು ಲುಂಗಿಯ ಪಂಚೆ ತಂದು ಕೊಡಬೇಕು. ತಲೆಗೆ ಒಂದು ಕರಿ ಟೋಪಿ ಬೇಕು. ಇದು ಮಿಡ್ಳ್‌ಸ್ಕೂಲು. ಬರೀ ಚಡ್ಡಿ ಹಾಕಿಕೊಂಡು ಹೋಗುವಂತಿಲ್ಲ.
ಲುಂಗಿ ಎಂದರೆ ಎರಡಾದರೂ ಬೇಕು. ಒಂದನ್ನು ಒಗೆದರೆ ಇನ್ನೊಂದು ಬೇಕಲ್ಲ. ಎರಡು ಲುಂಗಿ ಒಂದು ಟೋಪಿಗೆ ಒಟ್ಟು ಎರಡು ರೂಪಾಯಿ ಬೇಕು. ಅಲ್ಲದೆ ಪುಸ್ತಕವಾಗಬೇಕು. ಸೀಸದ ಕಡ್ಡಿ. ಎಕ್ಸರ್‌ಸೈಜು ಪುಸ್ತಕ, ಅವನ್ನೂ ರೊಟ್ಟಿ ಚಟ್ನಿಗಳನ್ನೂ ಹಾಕಿಕೊಳ್ಳಲು ಒಂದು ಬಣ್ಣದ ಕೈಚೀಲ. ಒಟ್ಟು ಏಳೆಂಟು ರೂಪಾಯಿಯಾದರೂ ತಿನ್ನುತ್ತದೆ. ಮನೆಯಲ್ಲಿ ಅಷ್ಟು ದುಡ್ಡಿಲ್ಲ. ಅಟ್ಟದ ಮೇಲೆ ಹಚ್ಚಿಸಿ ಇಟ್ಟಿದ್ದ ಎಲೆಗಳ ಪಿಂಡಿಯಿತ್ತು. ಈ ಸಲ ಮದುವೆಯ ಕಾಲದಲ್ಲಿ ಹಳ್ಳಿಗಳವರೇ ಬಂದು ಎಲೆಗಳನ್ನು ಮನೆಯಿಂದ ಕೊಂಡು ಹೋಗಿದ್ದರು. ಉಳಿದದ್ದು ಅಟ್ಟದ ಮೇಲಿದೆ. ಮನೆಗೆ ಬಂದ ನಂಜಮ್ಮ ಅಟ್ಟ ಹತ್ತಿ ಎಣಿಸಿ ನೋಡಿದಳು. ಒಟ್ಟು ನೂರು ಪಿಂಡಿಗಳಿವೆ. ಪಿಂಡಿಗೆ ಏಳಾಣೆ ಅಂದರೆ ನಲವತ್ತನಾಲ್ಕೂ ಮುಕ್ಕಾಲು ರೂಪಾಯಿ ಆಯಿತು. ಒಟ್ಟಿಗೆ ಕೊಟ್ಟುಬಿಡಬೇಕು. ಆದರೆ ಬರೀ ನೂರು ಪಿಂಡಿಗಾಗಿ ತಿಪಟೂರಿಗೆ ಒಂದು ಗಾಡಿ ಹೂಡುವುದೆಂದರೆ ಬಾಡಿಗೆ ದಂಡ. ತಕ್ಷಣದಲ್ಲಿ ದುಡ್ಡು ಎಲ್ಲಿಂದ ಬರಬೇಕು?
ಅವಳು ಸರ್ವಕ್ಕನಿಗೆ ಹೇಳಿಕಳಿಸಿದಳು. ಸರ್ವಕ್ಕನ ಹತ್ತಿರವೂ ಎಂಬತ್ತು ಪಿಂಡಿಯಷ್ಟು ಎಲೆ ಇತ್ತು. ಇಬ್ಬರದೂ ಸೇರಿಸಿ ಕಳಿಸಿದರೆ ಗಾಡಿ ಬಾಡಿಗೆ ಅರ್ಧ ಅರ್ಧ ಹಂಚಿಕೊಳ್ಳಬಹುದು. ಸರ್ವಕ್ಕ ಹೇಳಿದಳು: ‘ಯಾವುದೋ ಕೋಲ್ಟು ಸಾಕ್ಷಿಗೆ ನಮ್ಮೋರು ನಾಳಿಕ್ ತಿಪ್ಟೂರಿಗೆ ಓಯ್ತಾರೆ. ಕಮಾನು ಗಾಡೀಲಿ ಒಬ್ರೇ ಓಗಾದು. ಅದ್ರಾಗೆ ಆಕ್ ಕಳ್ಸಾಣ’.
‘ಸರ್ವಕ್ಕ, ಕಳುಸ್‌ಭೌದು. ನಿಮ್ಮ ಯಜಮಾನರ ಸ್ವಭಾವ ನಿಮಗೇ ಗೊತ್ತಿದೆಯಲ್ಲ.’
‘ಅದೂ ನಿಜ’-ಎಂದು ಅವಳು ಒಪ್ಪಿದಳು. ಕೊನೆಗೆ ಒಂದು ಉಪಾಯ ಹೊಳೆಯಿತು. ಇಬ್ಬರ ಎಲೆಯನ್ನೂ ತುಂಬಿಸಿಕೊಂಡು ಗಾಡಿಯಲ್ಲಿ ಗಂಡನ ಜೊತೆಗೆ ಸರ್ವಕ್ಕನೂ ಹೋಗುವುದು. ವ್ಯಾಪಾರವನ್ನು ಅವಳೇ ಮಾಡಿ ಕ್ಷೇಮವಾಗಿ ದುಡ್ಡು ತರುವುದು. ನಂಜಮ್ಮ ಸಲಹೆಗೆ ಒಪ್ಪಿದಳು. ಹಾಗೆಯೇ ರಾಮಣ್ಣನಿಗೆ ತರಬೇಕಾದ ಲುಂಗಿ, ಟೋಪಿ, ಪುಸ್ತಕ, ಅದರ ಚೀಲ ಮೊದಲಾದವುಗಳ ಪಟ್ಟಿಯನ್ನೂ ಹಾಕಿಕೊಟ್ಟಳು.
ಮರುದಿನ ರಾತ್ರಿ ಗಾಡಿಯ ಮೇಲೆ ಗಂಡನ ಜೊತೆ ಸರ್ವಕ್ಕ ಹೋದಳು. ದುಡ್ಡು ತೆಗೆದುಕೊಂಡು, ನಂಜಮ್ಮ ಹೇಳಿದ ಸಾಮಾನುಗಳನ್ನೂ ಖರೀದಿ ಮಾಡಿ ಮುಂದಿನ ರಾತ್ರಿ ಗಾಡಿ ಹತ್ತಿದಳು. ದಾರಿಯಲ್ಲಿ ಅವಳೂ ತೂಕಡಿಸಿದಳು. ಬೆಳಗ್ಗೆ ಊರಿಗೆ ಬಂದು ಮನೆಯ ಮುಂದೆ ಗಾಡಿ ಇಳಿದಾಗ, ಅವಳು ಖರೀದಿ ಮಾಡಿ ತಂದಿದ್ದ ಸಾಮಾನುಗಳು ಇದ್ದವು. ಕೊರಳಿಗೆ ನೇತುಹಾಕಿಕೊಂಡಿದ್ದ ದುಡ್ಡಿನ ಚೀಲ ಇರಲಿಲ್ಲ. ಗಂಡನಿಗೆ ಹೇಳಿದುದಕ್ಕೆ-‘ಕತ್ತೆ ಹಂಗ್ ಬಿದ್ಕಂಡ್ ನಿದ್ದೆ ಮಾಡ್ತಿದ್ದೆ. ದಾರೀಲಿ ಎಲ್ಲಿ ಉದುರುಸ್ಕಂಡು ಬಂದ್ಯೊ ಬಾಂಚೋತ್ ಮುಂಡೆ’ ಎಂದು ರೇವಣ್ಣಶೆಟ್ಟಿ ಉಗ್ರರೂಪ ತಾಳಿದ. ಕಣ್ಣೀರು ಹಾಕುತ್ತಾ ಓಡಿ ಬಂದ ಸರ್ವಕ್ಕ ವಿಷಯ ತಿಳಿಸಿದಾಗ ನಂಜಮ್ಮನಿಗೆ ಏನು ಹೇಳುವುದಕ್ಕೂ ತಿಳಿಯಲಿಲ್ಲ. ನಂಜಮ್ಮನ ಸಾಮಾನಿಗೆ ಅವಳು ಒಟ್ಟು ಆರೂವರೆ ರೂಪಾಯಿ ಖರ್ಚು ಮಾಡಿದ್ದಳು. ಇನ್ನು ಮೂವತ್ತೆಂಟೂಕಾಲು ಕೊಡಬೇಕು. ಅವಳದೂ ಚೀಲದಲ್ಲಿ ಮೂವತ್ತೈದು ರೂಪಾಯಿ ಇತ್ತು.
‘ನಂಜಮ್ಮಾರೇ, ನನ್ನ ಕೊಳ್ಳಲಿರಾ ಕರಡಿಗೆ ಆಣೆ ಮಡಗಿ ಏಳ್ತೀನಿ, ನನ್ನೇ ಕಳ್ಳಿ ಅಂತ ತಿಳ್ಕಬ್ಯಾಡಿ.’
‘ನಂಜಮ್ಮ ತಾಳ್ಮೆಯಿಂದ ಯೋಚಿಸಿ ನಾಲ್ಕಾರು ಪ್ರಶ್ನೆ ಕೇಳಿದಳು. ನಂತರ ಎಂದಳು: ‘ನೀವೇನೇ ಹೇಳಿ. ದುಡ್ಡು ಇನ್ನು ಹ್ಯಾಗೂ ಕಳೆದಿಲ್ಲ. ನೀವು ತೂಕಡುಸ್ತಾ ಇದ್ದಾಗ ನಿಮ್ಮ ಯಜಮಾನರೇ ಹೊಡೆದಿದಾರೆ.’

ಅದೇ ನಿಜವೆಂದು ಸರ್ವಕ್ಕನಿಗೆ ತಕ್ಷಣ ಹೊಳೆಯಿತು. ನೇರವಾಗಿ ಮನೆಗೆ ಹೋಗಿ- ‘ನೀವೇ ದುಡ್ಡು ತಗಂಡಿದೀರಾ. ನಂಜಮ್ಮಾರ ದುಡ್ಡಾರ ಕೊಟ್ಬುಡಿ’ ಎಂದು ಹೇಳಿದುದಕ್ಕೆ ರೇವಣ್ಣಶೆಟ್ಟಿ, ವೀರಭದ್ರನ ಜಾತ್ರೆಯಲ್ಲಿ ಕುಣಿಯುವ ಭೂತದಂತೆ ಆಗಿ ಅವಳನ್ನು ಹಿಡಿದು ಮೈ ಕೈ ಮುರಿಯುವಂತೆ ಹೊಡೆದುಬಿಟ್ಟ. ಕೋರ್ಟಿಗೆ ಹೋಗಿ ಸಾಕ್ಷಿ ಹೇಳಿಬರುವಂತಹ ದೊಡ್ಡ ಮನುಷ್ಯನನ್ನು ಕಳ್ಳನೆಂದರೆ ಅವನು ಸಹಿಸುವುದು ಹೇಗೆ?

ತನಗೆ ಅಷ್ಟು ಏಟು ಬಿದ್ದರೂ ಸರ್ವಕ್ಕ ಮನಸ್ಸಿನಲ್ಲಿಯೇ ಏನೋ ನಿಶ್ಚಯಿಸಿದಳು. ಮರುದಿನ ಹೊತ್ತಿಗೆ ಮುಂಚೆ ಎದ್ದು, ತನ್ನ ಮಗಳು ರುದ್ರಾಣಿಯನ್ನು ಜೊತೆಗೆ ಕರೆದುಕೊಂಡು ತನ್ನ ತೌರೂರಾದ ಶಿವಗೆರೆಗೆ ನಡೆದೇಹೋದಳು. ಅವಳ ಕೊರಳಿನಲ್ಲಿ ತಂದೆಯ ಮನೆಯವರು ಹಾಕಿದ್ದ ಬಂಗಾರದ ಕರಡಿಗೆ ಇತ್ತು. ದೇವರು ಎಂಬ ಭಯದಿಂದಲೋ, ಅಥವಾ ಆ ಆಲೋಚನೆ ಹೊಳೆದಿರಲಿಲ್ಲವೋ, ರೇವಣ್ಣಶೆಟ್ಟಿಯ ದೃಷ್ಟಿ ಅದರ ಮೇಲೆ ಬಿದ್ದಿರದೆ ಅದು ಇನ್ನೂ ಉಳಿದಿತ್ತು. ಒಬ್ಬ ಅಕ್ಕಸಾಲಿಗನಿಗೆ ಅದನ್ನು ನೂರ ಐವತ್ತು ರೂಪಾಯಿಗೆ ಮಾರಿ ಎಂಟು ರೂಪಾಯಿಗೆ ಒಂದು ಬೆಳ್ಳಿಯ ಕರಡಿಗೆ ಮಾಡಿಸಿಕೊಂಡಳು. ಎರಡು ದಿನವಾದ ಮೇಲೆ ಊರಿಗೆ ಹಿಂತಿರುಗಿದ ಅವಳು ನಂಜಮ್ಮನಿಗೆ ಕೊಡಬೇಕಾದುದನ್ನು ಕೊಟ್ಟು, ಉಳಿದ ಹಣವನ್ನೂ ಅವಳ ಕೈಲೇ ಇಟ್ಟು ಹೇಳಿದಳು: ‘ಮನ್ಲಿ ತಿನ್ನಾಕ್ ಇಲ್ಲದ ದಿನ ಬಂದ್ ಕೇಳಿ ರೂಪಾಯಿ, ಎಂಟಾಣೆ, ಇಸ್ಕಂಡ್ ಹೋಯ್ತೀನಿ. ನೀವು ಮಡೀಕಂಡಿರಿ.’
‘ಇಷ್ಟು ದೊಡ್ಡ ಗಂಟು ನಾನು ಎಲ್ಲಿ ಇಟ್ಟಿರ್ಲಿ ಸರ್ವಕ್ಕ? ಅಕಸ್ಮಾತ್ ಏನಾದ್ರೂ ಆದ್ರೆ ನನ್ನ ಗತಿ ಏನು?’
‘ಒಂದು ಮಡಕೇಲಿ ಹಾಕಿ ಅಟ್ಟದಮ್ಯಾಲೆ ಎಲೆ ಸರದ ಒಳಗೆ ಮಡಗಿ. ಯಾರ್ಗೂ ತಿಳಿಯಾಕುಲ್ಲ.’
ನಂಜಮ್ಮ ಹಾಗೆಯೇ ಮಾಡಿದಳು.

– ೩ –

ರಾಮಣ್ಣ ಮಿಡ್ಳ್‌ಸ್ಕೂಲಿಗೆ ಹೋಗಿಬರಲು ಶುರುವಾದ ಮೇಲೆ ಪಾರ್ವತಿ ಮನೆಯಲ್ಲಿ ಉಳಿದಳು. ಅದುವರೆಗೂ ಅವಳ ಬಗೆಗೆ ಮೂಡದಿದ್ದ ಹೊಸ ಯೋಚನೆಯೊಂದು ನಂಜಮ್ಮನ ಮನಸ್ಸಿನಲ್ಲಿ ಹುಟ್ಟಿ ಕಾಡತೊಡಗಿತು. ಅವಳಿಗಾಗಲೇ ಹನ್ನೆರಡು ವರ್ಷ. ತನ್ನಂತೆಯೇ ಎತ್ತರವಾದ ತುಂಬುಮೈಕಟ್ಟಿನ ಅವಳು ಹನ್ನೆರಡಕ್ಕಿಂತ ದೊಡ್ಡ ವಯಸ್ಸಿನ ಹುಡುಗಿಯಂತೆ ಕಾಣುತ್ತಾಳೆ. ಮದುವೆ ಮಾಡಬೇಕು. ಗಂಡು ಹುಡುಕುವವರು ಯಾರು? ದುಡ್ಡು ಹೊಂದಿಸುವುದೆಲ್ಲಿ? ಇಷ್ಟು ದಿನವೂ ತಾನು ಬರೀ ಸಂಸಾರ ಸಾಗಿಸಿಕೊಂಡು ಬಂದಿದೀನಿ. ಈಗ ರಾಮಣ್ಣನ ವಿದ್ಯಾಭ್ಯಾಸದ ಖರ್ಚಿಗೂ ಒದಗಿಸಬೇಕು. ಇದರ ಮೇಲೆ ಮಗಳ ಮದುವೆ ಮಾಡುವುದೆಂದರೆ ಹುಡುಗಾಟವಲ್ಲ. ಆದರೆ ಮಾಡದೆ ಬಿಡುವ ಕೆಲಸವಲ್ಲ ಅದು.

ಪಾರ್ವತಿ ಸ್ಕೂಲಿಗೆ ಹೋಗುತ್ತಿದ್ದಾಗಲೇ, ತಾಯಿಗೆ ಬರುತ್ತಿದ್ದ ಹಾಡುಹಸೆಗಳನ್ನೆಲ್ಲ ಕಲಿತಿದ್ದಳು. ಹಬ್ಬದ ಅಡಿಗೆಯನ್ನು ಸಹ ನಂಜಮ್ಮ ಇತ್ತೀಚೆಗೆ ಅವಳ ಕೈಲಿ ಮಾಡಿಸುತ್ತಿದ್ದಳು. ಸ್ಕೂಲು ಮುಗಿದ ಮೇಲೆ ಮನೆಯಲ್ಲಿ ಕೂತು ಮಾಡುವುದೇನು? ಬೆಳಗಿನಿಂದ ಸಂಜೆಯ ಹೊತ್ತಿಗೆ ಇನ್ನೂರು ಎಲೆ ಹಚ್ಚಿಹಾಕುತ್ತಿದ್ದಳು. ಬೆಳೆಯುವ ಹುಡುಗಿ, ಒಂದಿಷ್ಟು ಹಾಲು ತುಪ್ಪ ಹಾಕಬೇಕು. ವಿಶ್ವನ ಬಾಣಂತಿತನದಲ್ಲಿ ಅಕ್ಕಮ್ಮ ತಂದುಕೊಟ್ಟಿದ್ದ ಹಸುವಿನ ಹೆಣ್ಣುಗರು ಈಗ ಕರು ಹಾಕಿದೆ. ಅದಕ್ಕೆ ಆರೈಕೆ ಇಲ್ಲ. ಹೊರಗೆ ಹಸುರಿನಲ್ಲಿ ಕಾಲಾಡಿಸಿಸುವವರಿಲ್ಲದೆ ಅಂಥ ಒಳ್ಳೆಯ ತಳಿ ದಿನಕ್ಕೆ ಮೂರು ಪಾವು ಹಾಲಿಗೆ ಇಳಿದಿದೆ. ಊಟಕ್ಕೆ ಮೂರು ಕರಟ ಮೊಸರು ಹಾಕದೆ ಇದ್ದರೆ ಯಜಮಾನರು ಹಲಲೋ ಎಂದು ಕಿರುಚಿಕೊಳ್ಳುತ್ತಾರೆ. ಉಳಿದುದರಲ್ಲಿ ಯಾವ ಮಕ್ಕಳಿಗೆ ಎಷ್ಟೆಷ್ಟು ಹಾಕುವುದು? ದಿನಾ ಅಷ್ಟೊಂದು ಮುತ್ತುಗದೆಲೆ ಹಚ್ಚಿ ಉಷ್ಣವಾಗುವ ಹುಡುಗಿ. ದಿನಕ್ಕೆ ಹತ್ತು ಮೈಲಿ ತಿರುಗಿ ಸ್ಕೂಲಿಗೆ ಹೋಗಿಬರುವ ಹುಡುಗ. ಊರಿನಲ್ಲೇ ಸ್ಕೂಲಿಗೆ ಹೋಗುತ್ತಿದ್ದು ಬೆಳೆಯುವ ಚಿಕ್ಕವನು. ಇವರಲ್ಲಿ ಯಾರಿಗೆ ಕಡಮೆ ಮಾಡಬಹುದು, ಯಾರಿಗೆ ಹೆಚ್ಚು ಮಾಡಬಹುದು!

ಆ ವರ್ಷ ಜ್ಯೇಷ್ಠ ಆಷಾಢವಾದರೂ ಮಳೆಯಾಗಲಿಲ್ಲ. ಮಲೆಸೀಮೆಯಲ್ಲಿ ಮಳೆ ಇಲ್ಲವೆಂದು ಯಾರೋ ಹೇಳಿದರು. ಬರೀ ಪಡುವಲಗಾಳಿ ಹೊಡೆಯುತ್ತಿತ್ತು. ಬೇಸಿಗೆಯಲ್ಲಿ ಒಣಗಿದ ಭೂಮಿಯಲ್ಲಿ ಹಸುರು ಚಿಗುರಿಲ್ಲ. ಹೊಟ್ಟೆಗಿಲ್ಲದ ಹಸು ಒಂದು ಪಾವು ಹಾಲಿಗೆ ಇಳಿದದ್ದು ಕೊನೆಗೆ ಪೂರ್ತಿ ಮಾನಿಸಿಕೊಂಡುಬಿಟ್ಟಿತು. ಮನೆಯಲ್ಲಿ ಮಜ್ಜಿಗೆಯ ನೀರು ಪೂರ್ತಿ ಇಲ್ಲವಾಯಿತು. ಯಾರೂ ಹೊಲವನ್ನು ಗೇಯ್ದಿಲ್ಲ. ಈ ವರ್ಷದ ಬೆಳೆ ಪೂರ್ತಿ ಕೈಕೊಡುತ್ತದೆಯೋ ಅಥವಾ ಹಿಂಗಾರಾದರೂ ನಡೆಸಿ ರಾಗಿ ಕೈಗೆ ಬರುತ್ತದೆಯೋ ಎಂಬ ಬಗೆಗೆ ಹಳ್ಳಿಗಳಲ್ಲೆಲ್ಲ ಕಳವಳ. ಹೊಸ ವರ್ಷದ ಕಂದಾಯಕ್ಕೆ ನಂಜಮ್ಮ ಎಂದಿನಂತೆ ಪಟೇಲ ಗುಂಡೇಗೌಡರು ಮತ್ತೆ ಇಬ್ಬರಿಗೆ ನೂರು ರೂಪಾಯಿಗೆ ಗಂಡನಿಂದ ರಶೀತಿ ಬರೆಸಿದ್ದಳು. ಆದರೆ ಮಳೆ ಹೀಗೆ ಕೈಕೊಟ್ಟಿದ್ದನ್ನು ಕಂಡ ಗೌಡರು ಹೇಳಿದರು: ‘ಅವ್ವಾ. ನನ್ನ ಹಗೇವಿನಲ್ಲಿರಾ ರಾಗಿ ಇದೊಂದು ವರ್ಷ ಬೆಳೆಯಾಗದಿದ್ರೂ ಮನೆಯೋರ್ಗೆ ಆಳುಗಳಿಗೆ ಆಯ್ತದೆ. ನಮ್ಮ ಜಮ್ಮೇನಳ್ಳಿ ಬೀಗರ ಮನೇಲಿ ಒಂದು ಕಾಳೂ ಇಲ್ವಂತೆ. ಒಂದ್ ನಾಕ್ ಖಂಡುಗನಾದ್ರೂ ಬೇಕು ಅಂತ ಏಳಿ ಕಳಿಸಿದ್ರು. ಕೊಡಾಹಂಗಿಲ್ಲ, ಬಿಡಾಹಂಗಿಲ್ಲ; ಹಂಗಾಗೈತೆ. ನಿನ್ನ ರಶೀತಿಗೆ ಬೇಕಾದ್ರೆ ದುಡ್ಡು ತಗಾ. ಈ ವರ್ಷ ರಾಗಿ ಇಲ್ಲ.’

ಆಗಲೇ ದುಡ್ಡು ತೆಗೆದುಕೊಂಡು ರಾಗಿ ಕೊಂಡಿದ್ದರೆ ನಂಜಮ್ಮ ಬುದ್ಧಿವಂತಳಾಗುತ್ತಿದ್ದಳು. ಮುಂದೆ ಹೀಗಾಗುತ್ತದೆಂಬುದು ಅವಳಿಗಾದರೂ ಏನು ಗೊತ್ತು? ಮನೆಯಲ್ಲಿ ಇನ್ನೂ ಸ್ವಲ್ಪ ದಾಸ್ತಾನಿತ್ತು. ಅದು ಮುಗಿಯುವ ಹೊತ್ತಿಗೆ ಮತ್ತೆ ಎರಡು ತಿಂಗಳು ಕಳೆಯಿತು. ಇನ್ನೂ ಮಳೆ ಬೀಳಲಿಲ್ಲ. ಅಷ್ಟರಲ್ಲಿ ರಾಗಿಯ ಧಾರಣೆ ರೂಪಾಯಿಗೆ ಎಂಟು ಸೇರಿಗೆ ಏರಿತ್ತು. ಮೂರು ರೂಪಾಯಿಗೆ ಪಲ್ಲವೆಲ್ಲಿ, ಈಗ ಆಗಿರುವ ಹನ್ನೆರಡು ರೂಪಾಯಿಗೆ ಪಲ್ಲದ ದುಬಾರಿ ಧಾರಣೆ ಎಲ್ಲಿ? ಅವಳ ಎದೆ ಜಲ್ ಎಂದಿತು. ಒಂದು ದಿನ ದುಡ್ಡನ್ನೇ ಕೇಳಲು ಕುರುಬರಹಳ್ಳಿಗೆ ಹೋದಾಗ ಗುಂಡೇಗೌಡರು ಎಂದರು: ‘ನಿನ್ಮನ್ಲಿ ರಾಗಿ ಐತೇನೋ ಅಂತ ನಾನ್ ತಿಳ್ಕಂಡಿದ್ದೆ. ನೀನು ಬರ್ನಿಲ್ಲ. ಈಗಲೇ ಸಿಕ್ದೋಟು ತೆಗ್ದು ಮಡೀಕಂಡುಬುಡು. ಇನ್ನೊಂದೆಲ್ಡು ತಿಂಗ್ಳು ಹ್ವಾದ್ರೆ ಬೀಜಕ್ಕೂ ರಾಗಿ ಸಿಕ್ಕಾಕುಲ್ಲ.’
‘ಹಾಗಾದ್ರೆ ನೀವೇ ಎಲ್ಲಾದ್ರೂ ಕೊಡ್ಸಿ ಗೌಡ್ರೆ.’
ಕುರುಬರಹಳ್ಳಿಯ ಪಕ್ಕದ ನಾಗೇನಹಳ್ಳಿಯ ಚಿಕ್ಕತಮ್ಮೇಗೌಡರು ಇನ್ನೂ ಹಗೇವು ಕಿತ್ತಿರಲಿಲ್ಲ. ಅವರು ಕಿತ್ತಿದ್ದನ್ನು ವಿಚಾರಿಸಿ ಗುಂಡೇಗೌಡರು ಐದು ಪಲ್ಲ ರಾಗಿ ತೆಗೆಸಿ ಕಳಿಸಿದರು. ಈಗ ಧಾರಣೆ ಇನ್ನೂ ಏರಿತ್ತು. ಪಲ್ಲಕ್ಕೆ ಹದಿನಾರು ರೂಪಾಯಿ. ಎಂದರೆ ರೂಪಾಯಿಗೆ ಆರು ಸೇರು. ಗುಂಡೆಗೌಡರ ಕಂದಾಯದ ಎಂಬತ್ತು ರೂಪಾಯಿ ಅಷ್ಟಕ್ಕೆ ಮುಕ್ತಾಯವಾಯಿತು. ಇನ್ನು ಉಳಿದಿರುವ ಇಪ್ಪತ್ತು ರೂಪಾಯಿ, ಮೇಲೆ ಯಾವುದಾದರೂ ಚಿಲ್ಲರೆ ಖರ್ಚಿಗೆ ಬೇಕು. ನಂಜಮ್ಮ ಅದನ್ನು ನಗದು ಇಸಿದುಕೊಂಡಳು.
ಐದು ಜನಕ್ಕೆ ಕೊನೆಯ ಪಕ್ಷ ದಿನಕ್ಕೆ ನಾಲ್ಕು ಸೇರು ರಾಗಿಯಾದರೂ ಬೇಕು.

ಮೇಲೆ ಕೈತುಂಬ ಹಾಲು ಮೊಸರು ತರಕಾರಿ ಬೇಳೆ ಕಾಳುಗಳಿದ್ದರೆ ಹಿಟ್ಟಿನ ಖರ್ಚು ಕಡಿಮೆ. ಯಾವುದೂ ಇಲ್ಲದೆ ಬರೀ ಅದರಲ್ಲಿಯೇ ಹೊಟ್ಟೆ ತುಂಬಬೇಕೆಂದರೆ ನಾಲ್ಕು ಸೇರು ಬೇಕೇ ಬೇಕು. ಬೆಳಗಿನ ರೊಟ್ಟಿ ನಿಲ್ಲಿಸಿದರೆ ಒಂದು ಸೇರು ಉಳಿತಾಯವಾಗುತ್ತೆ. ಆದರೆ ಸ್ಕೂಲಿಗೆ ಹೋಗುವ ರಾಮಣ್ಣನಿಗೆ ತೆಗೆದುಕೊಂಡು ಹೋಗಲು ರೊಟ್ಟಿ ತಟ್ಟಬೇಕು. ಹಿರಿಯನಿಗೆ ತಟ್ಟಿ ನೆಲ್ಲಿಯಕಾಯಿ ಉಪ್ಪಿನಕಾಯಿ ಕೊಟ್ಟಾಗ ಕೊನೆಯ ವಿಶ್ವ ಬಿಡುವುದಿಲ್ಲ. ಬೆಳೆಯುತ್ತಿರುವ ಹುಡುಗಿ ಪಾರ್ವತಿಗೆ ಹೇಗೆ ಇಲ್ಲವೆನ್ನುವುದು? ಹುಡುಗರ ಹೊಟ್ಟೆಯನ್ನು ಹೇಗಾದರೂ ಕಟ್ಟಿಸಬಹುದು. ಯಜಮಾನರನ್ನು ಸಮಾಧಾನ ಮಾಡುವುದು ಹುಡುಗಾಟದ ಮಾತಲ್ಲ. ಎದ್ದ ತಕ್ಷಣ ರೊಟ್ಟಿಯಾಗದಿದ್ದರೆ ಅವರು ಬಾಗಿಲಿನಿಂದ ಹೊರಗೆ ಹೋಗಿ ಬೀದಿಯಲ್ಲಿ ನಿಂತು, ಯಕ್ಷಗಾನ ಕುಣಿತದವರು ಊರಿಗೆಲ್ಲ ಕೇಳುವಂತೆ ಕಿರುಚುವ ಹಾಗೆ ಗಟ್ಟಿಯಾಗಿ ಮುಂಡೆ ರಂಡೆಗಳ ಮಂತ್ರ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಎದ್ದರೆ ಮನೆಯ ಮರ್ಯಾದೆ ಊರಿಗೆಲ್ಲ ಕೇಳುವುದು ಅವಳಿಗೆ ಬೇಡ. ಅಲ್ಲದೆ ಬೆಳೆಯುವ ಹುಡುಗರ ಕಿವಿಗೆ ಈ ಮಾತು ಪದೇ ಪದೇ ಬೀಳುವುದನ್ನು ತಪ್ಪಿಸಲು ಅವಳು ಸಾಧ್ಯವಾದ ಮಟ್ಟಿಗೂ ಪ್ರಯತ್ನಿಸುತ್ತಿದ್ದಳು.

ಪರಿಣಾಮವೆಂದರೆ ದಿನಕ್ಕೆ ನಾಲ್ಕು ಸೇರಿನಂತೆ ಐದು ಪಲ್ಲ ರಾಗಿ ನಾಲ್ಕು ತಿಂಗಳಿನಲ್ಲಿ ಚಟ್-ಎದ್ದುಹೋಗುತ್ತೆ. ಮತ್ತೆ ಕೊಳ್ಳಲು ದುಡ್ಡಿಲ್ಲ. ಆದುದರಿಂದ ಮುಂದಿನ ಸಂಪಾದನೆ ಏನಿದ್ದರೂ ಎಲೆ ಹಚ್ಚುವುದರಲ್ಲಿ ಆಗಬೇಕು. ಸರಿ, ತಾಯಿ ಮಗಳು ಇಬ್ಬರೂ ಕೂತು, ದಿನಕ್ಕೆ ನಾನ್ನೂರರಷ್ಟು ಎಲೆ ದಳೆಯುತ್ತಿದ್ದರು. ಈ ವರ್ಷ ಪಹಣಿ ಬರೆಯುವ ಕೆಲಸವಿಲ್ಲ. ಎಲ್ಲೂ ಯಾವ ಬೆಳೆಯೂ ಆಗದೆ ಹೊಲಗದ್ದೆಗಳಲ್ಲಿ ಸುಟ್ಟ ಬೂದಿಯ ಬಯಲಿನಂತೆ ಆಗಿರುವಾಗ ಪಹಣಿ ಬರೆಯುವುದೇನಿದೆ. ಆದರೆ ಲೆಕ್ಕದ ಪುಸ್ತಕ ಹೊಲಿದು ಹೆಡಿಂಗ್ ಕಟ್ಟಿ ಉದ್ದ ಅಡ್ಡ ರೂಲುಗಳನ್ನು, ಕೆಂಪು ಶಾಯಿ ಸೀಸದ ಕಡ್ಡಿಗಳಲ್ಲಿ ಹಾಕಬೇಕು. ಪ್ರತಿಯೊಂದು ಸರ್ವೆ ನಂಬರಿನ ಜಾಗದಲ್ಲೂ-‘ಖಾಲಿ’, ‘ಖಾಲಿ’ ಎಂದಾದರೂ ಬರೆಯಬೇಕು. ಸರ್ಕಾರೀ ಲೆಕ್ಕವೆಂದರೆ ಲೆಕ್ಕ. ಬಾಗಾಯ್ತು ನಂಬರಿನಲ್ಲಿ ತೆಂಗು, ಮಾವು ಎಂಬುದನ್ನು ‘ಖಾಲಿ’ ಎಂದು ಬರೆಯುವಂತಿಲ್ಲ. ಮುತ್ತಗದೆಲೆ, ಮನೆಗೆಲಸಗಳ ಜೊತೆಗೆ ನಂಜಮ್ಮ ಅದನ್ನೂ ನಿಭಾಯಿಸಿದಳು.

ಮುಂದಿನ ಪುಷ್ಯ, ಮಾಘ ಬರುವ ಹೊತ್ತಿಗೆ, ಜನಗಳಿಗೆ ಬಂದಿದ್ದ ಹಾಹಾಕಾರ ಪೂರ್ತಿಯಾಗಿ ದನಗಳಿಗೂ ಬಡಿಯಿತು. ಎಲ್ಲಿಯೂ ಕುಡಿಯುವ ನೀರಿಲ್ಲ; ಮೇಯಲು ಹುಲ್ಲಿಲ್ಲ. ಬೆಳೆಯೇ ಇಲ್ಲದಿರುವಾಗ ಗೊಂತಿನಲ್ಲಿ ತಿನ್ನುವ ಹುಲ್ಲಿಗೂ ತೊಂದರೆಯಾಗಿತ್ತು. ಸ್ವಲ್ಪ ಹೆಚ್ಚಾಗಿ ಹುಲ್ಲು ಇಟ್ಟಿದ್ದವರು ಕೊಪ್ಪಲಿನಿಂದ ತೆಗೆದು ಅಟ್ಟಕ್ಕೆ ಸಾಗಿಸಿದರು. ಇಲ್ಲದಿದ್ದರೆ ಕಳವಳವಾಗುತ್ತಿತ್ತು. ಇದ್ದುದನ್ನೇ ಒಪ್ಪವಾಗಿ ದಿನಕ್ಕೆ ಅರ್ಧ ತಬ್ಬಿನಂತೆ ಹಾಕಿ, ಜನದ ಜೀವದಂತೆ ದನದ ಜೀವವನ್ನೂ ಶರೀರಕ್ಕೆ ಅಂಟಿಸಿ ಇಡುವ ಪ್ರಯತ್ನ ಮಾಡುತ್ತಿದ್ದರು. ಹುಲ್ಲು ಇಲ್ಲದವರ ದನಗಳು ಸತ್ತು ಬೀಳುತ್ತಿದ್ದವು. ತನ್ನ ಮನೆಯಲ್ಲಿ ಹುಟ್ಟಿದ ಹೋರಿ ಕರುಗಳನ್ನು ಅವು ಬೆಳೆದಂತೆ ನಂಜಮ್ಮ ಮಾರಿಬಿಡುತ್ತಿದ್ದಳು. ಇನ್ನು ಉಳಿದಿದ್ದ ಎರಡು ಹಸು ಒಂದು ಮೊಳಕ, ಹುಲ್ಲಿಲ್ಲದೆ ಸಾಯಲಾದುವು. ಅವನ್ನು ನಾಗಲಾಪುರಕಾದರೂ ಹೊಡೆದು ಕಳಿಸುವ ಯೋಚನೆ ಮಾಡಿದಳು. ಆದರೆ ಅಲ್ಲಿಯೂ ಇದೇ ಕ್ಷಾಮವಂತೆ. ಬರವು ಬರೀ ರಾಮಸಂದ್ರಕ್ಕೇ ಬಂದಿರಲಿಲ್ಲ. ತುಮಕೂರು, ಹಾಸನ, ಕೋಲಾರ, ಮೊದಲಾದ ಬಯಲುಸೀಮೆಯಲ್ಲೆಲ್ಲ ಈ ವರ್ಷ ಅನಾವೃಷ್ಠಿಯಾಗಿತ್ತು. ನಾಲೆ ಬಯಲಿನವರೇ ಪುಣ್ಯವಂತರು. ಎಷ್ಟೋ ಜನ ಗನ್ನಿ ಶ್ರೀನಿವಾಸಪುರಗಳಿಗೆ ಹೋಗಿ ಒಂದು ಗಾಡಿ ನೆಲ್ಲು ಹುಲ್ಲಿಗೆ ಐವತ್ತು ರೂಪಾಯಿ ಕೊಟ್ಟು ಹೇರಿಕೊಂಡು ಬಂದರು. ಎರಡನೆಯ ಸಲ ಹೋದಾಗ ಗಾಡಿಗೆ ಅರವತ್ತೈದು ರೂಪಾಯಿಗೆ ಏರಿಸಿದ್ದರಂತೆ. ನಂಜಮ್ಮನಿಗೆ ಏನೂ ತಿಳಿಯಲಿಲ್ಲ. ಒಂದು ದಿನ ತನ್ನ ಮನೆಯ ಎರಡು ಹಸು ಒಂದು ಮೊಳಕ, ಮೂರನ್ನೂ ಹೊಡೆದುಕೊಂಡು ಕುರುಬರಹಳ್ಳಿಗೆ ಹೋಗಿ ಗುಂಡೇಗೌಡರ ಮುಂದೆ ನಿಲ್ಲಿಸಿ ಹೇಳಿದಳು: ‘ಗೌಡರೇ, ಇವನ್ನ ನಾನು ಗೋದಾನ ಮಾಡ್ತೀನಿ ಅಂತ ತಿಳಕಂಡು ತಗಂಡುಬಿಡಿ. ದಿನಕ್ಕೆ ಒಂದು ಹೊರತೆಯಾದರೂ ಹುಲ್ಲು ಹಾಕಿ ಸಾಕಿ ಬದುಕಿಸಿಕೊಳ್ಳಿ. ಉಳುದ್ರೆ ಮುಂದೆ ನಿಮ್ಮ ಮಮ್ಮಕ್ಕಳು ಹಾಲು ಕುಡಿತೂವೆ. ಅವು ಸಾಯೂದು ನಾನು ನೋಡ್ಲಾರೆ.’
‘ಅವ್ವಾ, ಒಕ್ಕಲಿಗನಾಗಿ ಹುಟ್ಟಿ ನಾನು ಗೋದಾನ ತಗಳ್ಲಾ?’
‘ಹಾಗಾದ್ರೆ ಮೂರರಿಂದ ಒಟ್ಟು ಮೂರು ಬಿಲ್ಲೆ ಕೊಟ್ಟುಬಿಡಿ. ಹಗ್ಗ ಹಿಡಿದು, ಖರೀದಿ ಅಂತ ನಿಮ್ಮ ಕೈಲಿಡ್ತೀನಿ. ಅವುಗಳ ಜೀವ ಉಳ್ಕೊಳ್ಳೋದು ಮುಖ್ಯ.’

ಗೌಡರಿಗೂ ಹುಲ್ಲಿನ ಕಷ್ಟ. ಅವರು ದಿಮ್ಮನೆಯ ಕುಳವೇನೋ ಹೌದು. ಮುಂದಿನ ಒಂದು ವರ್ಷಕ್ಕೆ ಆಗುವ ದಾಸ್ತಾನು ಯಾವಾಗಲೂ ಇಡುತ್ತಿದ್ದರು. ಮುಂದಿನ ವರ್ಷವೂ ಮಳೆರಾಯ ಹೀಗೆ ಕಣ್ಣಾಮುಚ್ಚಾಲೆ ಆಡಿದರೆ ಗತಿ ಏನು? ಆದರೆ ಮುಂದಿನ ವರ್ಷದ ಅನಿಶ್ಚಿತತೆಗೆ ಹೆದರಿ ಅವರು ಈಗ, ತಮ್ಮ ಮನೆಯ ಬಾಗಿಲಿಗೆ ಬಂದಿರುವ ನಂಜಮ್ಮನಂತಹ ಹೆಂಗಸಿನ ಕೋರಿಕೆಯನ್ನು ಹೇಗೆ ತಳ್ಳಿಹಾಕಬಲ್ಲರು? ಅದು ಬರೀ ಶ್ಯಾನುಭೋಗಮ್ಮನ ಮಾತಿನ ಪ್ರಶ್ನೆಯಲ್ಲ, ಮೂರು ಗೋದನಗಳ ಪ್ರಶ್ನೆ. ‘ಆಯ್ತು, ನಾನ್ ಮಡೀಕಂಡ್ ಸಾಕ್ತೀನಿ. ದಾನವೂ ಬ್ಯಾಡ, ಖರೀದಿಯೂ ಬ್ಯಾಡ. ಇದರ ಜಾತೀದ ಒಂದು ಹೆಣ್ಣುತಳಿ ನಂಗೆ ಆಮ್ಯಾಕೆ ಕೊಟ್ಬುಡು. ಬೆಳ್ಳಗೆ ಒಳ್ಳೇ ಚಂದಾಗೈತೆ.’

ನಂಜಮ್ಮನ ಯೋಚನೆ ತಪ್ಪಿತು. ಅವಳು ಊರಿಗೆ ಹಿಂತಿರುಗಿದಳು. ರಾಮಸಂದ್ರದಲ್ಲಿ ಎಷ್ಟೋ ದನಗಳು ಸತ್ತುಹೋದವು. ಉಳಿದುವೆಲ್ಲ ಸಾಯುವ ಸ್ಥಿತಿಗೆ ಬಂದಿದ್ದವು.
ತಾಯಿ ಮಗಳು ಕೂತು ಬೇಗ ಬೇಗ ಹಚ್ಚಿದುದರಿಂದ ಆ ವರ್ಷದ ಎಲೆಯ ಸರಗಳೆಲ್ಲ ಮಾರ್ಗಶೀರ್ಷ ಮಾಸಕ್ಕೇ ಮುಗಿದುಹೋದುವು. ಅಷ್ಟರಲ್ಲಿ ಮನೆಯಲ್ಲಿದ್ದ ರಾಗಿಯೂ ಮುಗಿದು ಹಿಟ್ಟಿನ ಮಡಕೆ ಲೊಟ್ಟೆ ಹಾಕುತ್ತಿತ್ತು. ಅಟ್ಟ ಹತ್ತಿ ಎಣಿಸಿ ನೋಡಿದರೆ ಒಟ್ಟು ಇಪ್ಪತ್ತು ಸಾವಿರಕ್ಕೂ ಮೀರಿ ಎಲೆಗಳಿದ್ದವು. ಈಗ ಧಾರಣೆ ಏರಿರಬಹುದು. ಎಲ್ಲ ಸಾಮಾನುಗಳ ಬೆಲೆಯೂ ಏರಿರುವಾಗ ಅದು ಏರದೆ ಇರುತ್ತದೆಯೆ? ನೂರಕ್ಕೆ ಎಂಟಾಣೆ ಅಂತ ಲೆಕ್ಕ ಹಾಕಿದರೂ ಒಟ್ಟು ಒಂದು ನೂರು ರೂಪಾಯಿ ಬರಬೇಕು. ಎರಡು ಗಾಡಿ ಮಾಡಿಸಿಕೊಂಡು, ರಾಮಣ್ಣ ಮತ್ತು ಸರ್ವಕ್ಕನ ಸಂಗಡ ನಂಜಮ್ಮ ತಿಪಟೂರಿಗೆ ಹೋದಳು. ಸರ್ವಕ್ಕನದು ಆರು ಸಾವಿರ ಎಲೆಯಾಗಿತ್ತು. ಇಷ್ಟೊಂದು ಎಲೆ ಒಟ್ಟಿಗೆ ಬಂದುದನ್ನು ನೋಡಿದ ವ್ಯಾಪಾರಿ ಕ್ವಾಮಟಿಗ ಶೆಟ್ಟಿ ಹೇಳಿದ: ‘ಅಮ್ಮಯ್ಯಾರೇ, ಎಲ್ಲೆಲ್ಲೂ ಬರ. ಉಣ್ಣಾಕೇ ಇಲ್ದೆ ಇರುವಾಗ ಎಲೆ ಯಾರಿಗೆ ಬೇಕು? ಏನೋ ನೀವು ತಂದಿದೀರ ಅಂತ ನಾನು ತಗಾತೀನಿ. ನೂರಕ್ಕೆ ನಾಲ್ಕಾಣೆ ಧಾರಣೆ.’
‘ಇದೇನು ಶೆಟ್ರೆ ಹೀಗಂತೀರ? ನಾವು ತಲೆಮೇಲೆ ಹೊತ್ತು, ಪೋಣಿಸಿ, ಒಣಗಿಸಿ, ಆಮೇಲೆ ಹಚ್ಚಿ ಎಲ್ಲ ಮಾಡಿದುದಕ್ಕೆ ನಾಕಾಣೆ ಅಂದ್ರೆ ಯಾವ ಧರ್ಮ?’
‘ಧರ್ಮ ಕರ್ಮದ ಮಾತಲ್ಲ. ಬೇಕಾದರೆ ಇನ್ನೊಂದು ಕಡೆ ವಿಚಾರಿಸಿ.’
ಬೇರೆ ಅಂಗಡಿಗಳಲ್ಲಿ ವಿಚಾರಿಸಿದರೆ ಮೂರಾಣೆ ಎಂದರು. ಮೊದಲನೆಯವನಿಗೇ ಎರಡು ಗಾಡಿಗಳ ಪಿಂಡಿಯನ್ನೂ ಸೀಯ್ದು ಇಬ್ಬರೂ ಹಂಚಿಕೊಂಡು ನಂಜಮ್ಮ ಮೂರೂವರೆ ರೂಪಾಯಿಯನ್ನೂ ಸರ್ವಕ್ಕ ಒಂದೂವರೆಯನ್ನೂ ಗಾಡಿಯ ಬಾಡಿಗೆ ಕೊಟ್ಟರು. ನಂಜಮ್ಮ ತನಗೆ ಮಗಳಿಗೆ ಒಟ್ಟು ಮೂರು ಮೂರು ರೂಪಾಯಿನ ಎರಡು ಸೀರೆ, ರಾಮಣ್ಣನಿಗೆ ಒಂದು ಅಂಗಿ, ವಿಶ್ವನಿಗೆ ಒಂದು ಅಂಗಿ, ಒಂದೊಂದು ಚಡ್ಡಿಗಳನ್ನು ಕೊಂಡಳು. ಎಲ್ಲ ಕಳೆದು ಇನ್ನು ಮೂವತ್ತೇಳು ರೂಪಾಯಿ ಉಳಿಯಿತು. ತೆಗೆದುಕೊಂಡು ಹೋಗಿದ್ದ ಒಣ ರೊಟ್ಟಿಯನ್ನೇ ಕಡಿದುಕೊಂಡು ಎಲ್ಲರೂ ಊರಿಗೆ ಬಂದರು ಅಷ್ಟರಲ್ಲಿ ರಾಗಿಯ ಧಾರಣೆ ಪಲ್ಲಕ್ಕೆ ಇಪ್ಪತ್ತಕ್ಕೆ ಏರಿತ್ತು.

– ೪ –

ಅದೇ ಸಮಯಕ್ಕೆ ಎಲ್ಲೆಲ್ಲಿಯೂ ಪ್ಲೇಗುಮಾರಿ ಬಂದಳು. ಈ ಸಲ ಗೂಡೆ ಮಾರಮ್ಮನೂ ಬರಲಿಲ್ಲ. ಯಾರಿಗೂ ಅವಳ ಸುಳಿವು ಸೂಕ್ಷ್ಮ ಏನೂ ತಿಳಿಯಲಿಲ್ಲ. ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡ ಪಿಡುಗು, ಊರು ಊರುಗಳಲ್ಲೆಲ್ಲ ಆಹುತಿ ತೆಗೆದುಕೊಳ್ಳಲಾರಂಭಿಸಿತು. ಸುತ್ತಮುತ್ತ ಯಾವ ಊರಿನಲ್ಲಿ ಕೇಳಿದರೂ ಇಲಿ ಬೀಳುತ್ತಿತ್ತು. ಕೆಲವು ಊರುಗಳಲ್ಲಂತೂ ಇಲಿ ಬಿದ್ದುದು ಗಮನಕ್ಕೆ ಬರುವ ಮೊದಲು ಜನಗಳೇ ಬಿದ್ದು ಹೋದರು. ರಾಮಸಂದ್ರದಲ್ಲೂ ಕೆಲವರಿಗೆ ಗೆಡ್ಡೆ ಬಂತು. ತಡ ಮಾಡದೆ ಎಲ್ಲರೂ ಊರು ಬಿಟ್ಟರು. ಸ್ವಂತ ಜಮೀನು ಇದ್ದವರು ತಮ್ಮ ಹೊಲ ತೋಟಗಳಲ್ಲಿ ಶೆಡ್ಡು ಹಾಕಿದರೆ, ಎಲ್ಲ ಜಮೀನನ್ನೂ ಕಳೆದುಕೊಂಡಿದ್ದ ನಂಜಮ್ಮ, ಗಂಗಮ್ಮ, ಸರ್ವಕ್ಕನಂಥವರು ಗ್ರಾಮದೇವತೆಯ ಗುಡಿಯ ಹಿಂಭಾಗದಲ್ಲಿ ಹಾಕಿಕೊಂಡರು.

ಹೊಸ ವರ್ಷದಲ್ಲಿ ಮಳೆ ಇಲ್ಲದೆ ಮುತ್ತುಗದ ಗಿಡಗಳೂ ಚಿಗುರದೆ, ಒಳ್ಳೆಯ ಎಲೆಗಳನ್ನು ಬಿಟ್ಟಿಲ್ಲ. ಹಳೆಯ ಎಲೆಗಳು ಚಕ್ಕಳದಂತೆ ಗಟ್ಟಿಯಾಗಿವೆ. ಅವನ್ನು ಕಿತ್ತು ತಂದರೂ ಹಚ್ಚಲಾಗುವುದಿಲ್ಲ. ಶೆಡ್ಡಿನಲ್ಲಿ ಸುಮ್ಮನೆ ಕೂತು ಮಾಡುವುದಾದರೂ ಏನು? ತಿಪಟೂರಿನಲ್ಲಿ ಎಲೆ ಮಾರಿದ ದುಡ್ಡಿನ ರಾಗಿಯೂ ಮುಗಿಯುತ್ತಾ ಬಂದಿದೆ. ಇನ್ನು ಮೂರು ದಿನ ಕಳೆದರೆ ಒಲೆ ಹಚ್ಚುವಂತೆಯೂ ಇಲ್ಲ. ಕೆಲವು ಗಂಡಸರಂತೂ ರಾತ್ರಿ ಹೊತ್ತು ಅವರಿವರ ತೆಂಗಿನ ತೋಟಗಳಿಗೆ ನುಗ್ಗಿ ಮರ ಹತ್ತಿ ಕೈಗೆ ಸಿಕ್ಕಿದಷ್ಟು ಎಳೆಗಾಯಿಯೋ ಬಳಲುಗಾಯಿಯೋ ಕಿತ್ತು ತರುತ್ತಾರೆ. ಬರೀ ಅವನ್ನೇ ಸುಲಿದು ಒಡಲು ತುಂಬಿಸಿಕೊಳ್ಳುತ್ತಾರೆ. ಅದನ್ನು ಕಂಡ ತೋಟದ ಯಜಮಾನರು ರಾತ್ರಿ ಕಾವಲು ಕಾಯಲು ಹೋದರೆ ಅವರಿಗೇ ಕಲ್ಲೇಟು ಬಿತ್ತು. ಜೀವಭಯದಿಂದ ಅವರು, ತೋಟ ಕಾಯುವುದನ್ನೇ ಬಿಟ್ಟುಬಿಟ್ಟರು. ಇನ್ನು ಯಾವ ದಾರಿಯೂ ಇಲ್ಲದಿದ್ದ ಜನರ ಮನೆಯ ಚಿನ್ನ ಬೆಳ್ಳಿಗಳು ಕಾಶಿಂಬಡ್ಡಿ ಸಾಹುಕಾರರ ಅಂಗಡಿ ಸೇರಿದುವು. ಆನಂತರ ಒಂದೊಂದಾಗಿ ಹಿತ್ತಾಳೆ ತಾಮ್ರದ ಪಾತ್ರೆಗಳೂ ಅಲ್ಲಿಗೇ ಹೋಗಿ ತುಂಬಿದುವು.

ಇವರ ಮನೆಯ ರಾಗಿ ಮುಗಿದುಹೋದ ಮರುದಿನ ರಾಮಣ್ಣ ಹಟಮಾಡಿದವನಂತೆ ಉಪವಾಸವೇ ಸ್ಕೂಲಿಗೆ ನಡೆದು ಹೋದ. ಕಂಬನಕೆರೆಯ ಅವನ ಸ್ಕೂಲು ಊರ ಹೊರಗೆ ಎರಡು ಫರ್ಲಾಂಗ್ ದೂರದಲ್ಲಿ ಎತ್ತರವಾದ ಜಾಗದಲ್ಲಿದ್ದುದರಿಂದ ಅದನ್ನು ಬಿಡುವ ಕಾರಣವಿರಲಿಲ್ಲ. ಓದುವುದೆಂದರೆ ರಾಮಣ್ಣನಿಗೆ ಇನ್ನಿಲ್ಲದ ಆಶೆ. ಅವನ ಪುಸ್ತಕದ, ಮುಂದಿನ ಪಾಠಗಳನ್ನೆಲ್ಲ ತನಗೆ ತಾನೇ ಓದಿಕೊಂಡುಬಿಟ್ಟಿದ್ದ. ಮುಂದಿನ ಅಧ್ಯಾಯದ ಲೆಕ್ಕ ಇಂಗ್ಲಿಷ್ ಪುಸ್ತಕವನ್ನು ಬಾಯಿಪಾಠ ಮಾಡಿಹಾಕಿದ್ದ. ಒಂದು ದಿನವಾದರೂ ಸ್ಕೂಲು ಕಳೆದುಕೊಳ್ಳುವುದು ಅವನಿಗೆ ಇಷ್ಟವಿಲ್ಲ. ಉಪವಾಸವೇ ಐದು ಮೈಲಿ ನಡೆದ ಅವನು ಸ್ಕೂಲಿನಲ್ಲಿ ಮಂಕಾಗಿ ಕುಳಿತಿದ್ದ. ಒಂದೂವರೆ ಗಂಟೆ ಹೊಡೆದಾಗ ಊರಿನ ಹುಡುಗರು ತಮ್ಮ ತಮ್ಮ ಶೆಡ್ಡುಗಳಿಗೆ ಊಟಕ್ಕೆ ಹೋದರು. ಹಳ್ಳಿಯ ಹುಡುಗರು ರೊಟ್ಟಿ ತಿನ್ನಲು ಸ್ಕೂಲಿನ ಹಿಂಬದಿಗೆ ಇದ್ದ ಕೆರೆಯ ಹತ್ತಿರಕ್ಕೆ ನಡೆದರು. ಒಣಗಿದ ಕೆರೆಯ ಅಂಗಳದಲ್ಲಿ ಈಗ, ಇಳಿಯುವ ಬಾವಿ ತೋಡಿದ್ದರು. ಇವನು ಸ್ಕೂಲಿನ ಹಿಂದಿನ ಮರದ ಕೆಳಗೆ ಮುದುರಿಕೊಂಡು ಕೂತಿದ್ದ.

ಮಗ ಉಪವಾಸ ಹೋಗಿದ್ದಾನೆಂದು ಮನೆಯಲ್ಲಿ ನಂಜಮ್ಮ ಕೊರಗುತ್ತಿದ್ದಳು. ಪಾರ್ವತಿ ಸಪ್ಪೆ ಮುಖ ಹಾಕಿಕೊಂಡು ಒಂದು ಕಡೆ ಕೂತಿದ್ದರೆ, ವಿಶ್ವ ಹಸಿವೆಯೆಂದು ಗಲಾಟೆ ಮಾಡಿ ಅಮ್ಮನ ಸೆರಗು ಹಿಡಿದು ಎಳೆಯುತ್ತಿದ್ದ. ಒಂದು ದಿನ ಉಪವಾಸವಿರಬಹುದು; ಎರಡು ದಿನ ಇರಬಹುದು. ಹೀಗೆಯೇ ಎಷ್ಟು ದಿನ ಇರಲು ಸಾಧ್ಯ? ಅದುವರೆಗೂ ನಂಜಮ್ಮ ಯಾವ ಪಾತ್ರೆಯನ್ನೂ ಕಾಶಿಂಬಡ್ಡಿಯ ಹತ್ತಿರ ಅಡವು ಹಾಕಲಿಲ್ಲ. ಮತ್ತೆ ಕೊಳ್ಳಬೇಕಾದರೆ ಇಪ್ಪತ್ತು ರೂಪಾಯಿ ಕೊಡಬೇಕಾದ ಪಾತ್ರೆಗೆ ಕಾಶಿಂಬಡ್ಡಿ ಎರಡು ರೂಪಾಯಿ ಕೊಡುತ್ತಿದ್ದ. ರಾಗಿಯ ಧಾರಣೆ ರೂಪಾಯಿಗೆ ಎರಡು ಸೇರು ಆಗಿದೆ. ಎರಡು ರೂಪಾಯಿ ಕೊಟ್ಟು ನಾಲ್ಕು ಸೇರು ತಂದರೆ ಒಂದು ದಿನ, ತಪ್ಪಿದರೆ ಒಂದೂವರೆ ದಿನವಾದೀತು. ಮತ್ತೆ ಇನ್ನೊಂದು ಪಾತ್ರೆ ಅಡವಿಡಬೇಕು. ಒಟ್ಟು ಹದಿನೈದು ಇಪ್ಪತ್ತು ದಿನಗಳಲ್ಲಿ ಮನೆಯ ಪಾತ್ರೆಗಳೆಲ್ಲ ಕಳೆದುಕೊಂಡರೆ ಮುಂದೆಯೂ ಈ ಉಪವಾಸದ ಸಮಸ್ಯೆ ತಪ್ಪುವುದಿಲ್ಲ. ದೇವರು ಕಾಲವನ್ನು ಹೀಗೆಯೇ ಇಟ್ಟಿರುವುದಿಲ್ಲ. ಮತ್ತೆ ರಾಗಿ ಸಿಕ್ಕುವ ಕಾಲ ಬರಬಹುದು. ಆದರೆ ಕಳಕೊಂಡ ಪಾತ್ರೆಗಳನ್ನು ಪುನಃ ಮಾಡುವುದು ಸಾಧ್ಯವಿಲ್ಲ. ಅದೂ ಅಕ್ಕಮ್ಮ ತಂದುಕೊಟ್ಟವು ಅವು.

ನಂಜಮ್ಮನ ವಿವೇಕವೇನೋ ಹೀಗೆ ಲೆಕ್ಕ ಹಾಕುತ್ತಿತ್ತು. ಆದರೆ ಹೊಟ್ಟೆಗೂ ಮೆದುಳಿಗೂ ದೂರ ಜಾಸ್ತಿ. ಪಾರ್ವತಿ ಮಲಗಿಬಿಟ್ಟಿದ್ದಾಳೆ. ಅತ್ತು ರಂಪ ಮಾಡಿ ಸಾಕಾದ ವಿಶ್ವ ಅಮ್ಮನನ್ನು ಹೊಡೆದು, ಅವಳ ಕೈಲಿ ಮಾತನಾಡದೆ ಹೋಗಿ ಒಂದು ಮೂಲೆಯಲ್ಲಿ ಬಿದ್ದುಕೊಂಡಿದ್ದಾನೆ. ಅವಳ ಹೊಟ್ಟೆಯ ಒಳಗೂ ಉರಿ ಹಾಕಿದ ಹಾಗೆ ಆಗುತ್ತಿದೆ. ಯಜಮಾನರು ಮಧ್ಯಾಹ್ನದಿಂದ ಎಲ್ಲಿಗೋ ಹೋಗಿದ್ದಾರೆ. ಅವರ ತಾಯಿಯ ಶೆಡ್ಡಿಗೆ ಹೋಗಿರಬಹುದು. ಅಲ್ಲಿಯೇ ಏನಾದರೂ ಕವಳ ಸಿಕ್ಕಿರಬಹುದು. ಗಂಗಮ್ಮನ ಹತ್ತಿರ ಇನ್ನೂ ರಾಗಿ ಇದೆ. ತಾಯಿ ಮಗ ಇಬ್ಬರೇ ಆದುದರಿಂದ ಅವರು ಸಾಕಷ್ಟು ಹಳೆಯ ದಾಸ್ತಾನು ಇಟ್ಟಿದ್ದರು. ಕಳೆದ ಮೂರು ತಿಂಗಳಿನಲ್ಲಿ ಎರಡು ಸಲ ನಾಲೆ ಬಯಲಿನ ಕಡೆಗೆ ದೇಶಾವರಿ ಹೋಗಿ ಅಕ್ಕಿಯ ಮೂಟೆಯನ್ನೇ ತಂದಿದ್ದರು. ರಾಮಣ್ಣ ಇನ್ನೂ ಸ್ಕೂಲಿನಿಂದ ಬಂದಿಲ್ಲ. ಕತ್ತಲಾಗಿ ಆಗಲೇ ಎಷ್ಟೋ ಹೊತ್ತಾಗಿದೆ. ಹುಡುಗ ಉಪವಾಸ ಹೋಗಿದ್ದ. ನಡೆಯಲು ಶಕ್ತಿ ಇಲ್ಲದೆ ಎಲ್ಲಿಯಾದರೂ ಬಿದ್ದುಬಿಟ್ಟನೋ ಏನು ಕಥೆಯೋ! ಕಂಬನಕೆರೆಯ ದಾರಿಯಲ್ಲಿ ಸ್ವಲ್ಪ ಹೋಗಿ ನೋಡಬೇಕು. ಆದರೆ ಹೆಂಗಸಾದ ತಾನು ಒಬ್ಬಳೇ ಕತ್ತಲೆಯಲ್ಲಿ ಹೇಗೆ ಹೋಗುವುದು? ಪಾರ್ವತಿ ಮೇಲೆ ಏಳಲಾರದೆ ಮಲಗಿದ್ದಾಳೆ. ಅವಳನ್ನು ಕರೆದುಕೊಂಡು ಹೊರಟರೆ ಶೆಡ್ಡಿನಲ್ಲಿ ವಿಶ್ವ ಒಂದೇ ಹೇಗೆ ಇದ್ದೀತು? ಇಷ್ಟು ಹೊತ್ತಿನಲ್ಲಿ ಶೆಡ್ಡಿನ ಬಾಗಿಲು ಹಾಕಿಕೊಂಡು ಹೋಗುವುದೂ ಅಪಾಯವೇ. ಯಾರಾದರೂ ನುಗ್ಗಿ ಕೈಗೆ ಸಿಕ್ಕಿದ ಪಾತ್ರೆ ಪರಟಿ ಹೊತ್ತುಕೊಂಡು ಹೋಗಬಹುದು. ಹೊಟ್ಟೆಗಿಲ್ಲದ ಕಾಲದಲ್ಲಿ ಏನು ಸಿಕ್ಕಿದರೂ ಕಳವಾಗುತ್ತದೆ.

ಪಾರ್ವತಿ ವಿಶ್ವರನ್ನು ಮನೆಯಲ್ಲಿ ಬಿಟ್ಟು-‘ಇಲ್ಲೇ ಕೆರೆ ಕಡೆ ಹೋಗ್ತೀನಿ ಇರಿ’ಎಂದು ಹೇಳಿ ಅವಳು ಹೊರಗೆ ಬಂದಳು. ಕಂಬನಕೆರೆಯ ದಾರಿಯಲ್ಲಿ ಮೂರು ಫರ್ಲಾಂಗು ನಡೆದರೆ ಮುದಿ ಮಾವಿನಮರವಿದೆ. ಯಾವ ಪುರಾತನ ಕಾಲದ್ದೋ, ಪೊಟರೆಗಳ ತುಂಬ ಗೂಬೆಗಳಿವೆ. ರಾತ್ರಿಯ ಹೊತ್ತು ಅವು ಕೂಗುವುದು ಇವರ ಶೆಡ್ಡಿಗೂ ಕೇಳಿಸುತ್ತಿರುತ್ತದೆ. ‘ಗೂ ಗ್ಗೂ ಗ್ಗೂ, ಗುದ್ಲೀ ತಾ’-ಎಂಬ ಅದರ ಕೂಗೇ ಕೆಟ್ಟ ಸೂಚನೆ. ಯಾರ ಮನೆಯ ಮೇಲಾದರೂ ಕೂತು ಅದು ‘ಗುದ್ಲೀ ತಾ’ ಎಂದು ಕೂಗಿದರೆ ಆ ಮನೆಯಲ್ಲಿ ಒಂದು ಚಿಕ್ಕ ಮಗುವೋ ಹುಡುಗನೋ ಸಾಯುತ್ತಾರೆ. ದೊಡ್ಡವರು ಸತ್ತರೆ ಸುಡುವುದು, ಚಿಕ್ಕವರನ್ನು ಹೂಳುವುದು. ಬ್ರಾಹ್ಮಣರಲ್ಲದವರಾದರೆ ಯಾರು ಸತ್ತರೂ ಹೂಳುತ್ತಾರೆ. ಆದುದರಿಂದ ಗೂಬೆ ಬ್ರಾಹ್ಮಣರ ಮನೆಯ ಮೇಲೆ ಕೂಗಿದರೆ ಹುಡುಗರು ಮಾತ್ರ, ಇತರರ ಮನೆಯ ಮೇಲೆ ಕೂತು ಕೂಗಿದರೆ ಯಾರು ಬೇಕಾದರೂ ಸಾಯುವ ಸೂಚನೆ. ಆ ಮರದ ಹತ್ತಿರಕ್ಕೆ ಬರುವ ವೇಳೆಗೆ ನಂಜಮ್ಮನಿಗೆ ಹೆದರಿಕೆಯಾಯಿತು. ಹಿಂತಿರುಗಿ ಹೋಗಿ ಬಿಡಲೇ ಎಂಬ ಯೋಚನೆಯೂ ಬಂತು. ಆದರೆ ರಾಮಣ್ಣ ಆ ಮರದ ಕೆಳಗಿನಿಂದಲೇ ಬರಬೇಕು. ಹತ್ತು ವರ್ಷದ ಹುಡುಗ ಹೇಗೆ ಧೈರ್ಯವಾಗಿ ಬಂದೀತು?

ಅವಳು ಹಿಂತಿರುಗಿ ಹೋಗಲಾರಳು, ಅಲ್ಲಿಯೇ ಇರಲಾರಳು. ಆದುದರಿಂದ ಇನ್ನೂ ಎರಡು ಫರ್ಲಾಂಗು ನಡೆದಳು. ದಾರಿಯ ಹತ್ತಿರ ಒಂದು ಕಲ್ಲುಬಂಡೆ ಇತ್ತು. ಅದನ್ನು ಹತ್ತಿ ನಿಂತು, ರಾಮಣ್ಣ ಬರಬೇಕಾದ ದಾರಿಯ ಕಡೆಗೆ ನಿಟ್ಟಿಸುತ್ತ ನಿಂತಳು. ಅರ್ಧ ಗಂಟೆ ಕಳೆದರೂ ಅವನು ಬರಲಿಲ್ಲ. ಅವಳಿಗೆ ಹೆದರಿಕೆಯಾಯಿತು. ಹರಿಶ್ಚಂದ್ರನ ಕಥೆ ಜ್ಞಾಪಕಕ್ಕೆ ಬಂತು. ಚಂದ್ರಮತಿ ರೋಹಿತಾಶ್ವನನ್ನು ಹೀಗೆಯೇ ಕಾಯುತ್ತಿರುತ್ತಾಳೆ. ಆದರೆ ರೋಹಿತಾಶ್ವ ಹಾವು ಕಡಿದು ಸತ್ತುಬಿದ್ದಿದ್ದಾನೆ. ಆಮೇಲೆ, ಅವನ ಜೊತೆ ಹೋಗಿದ್ದ ಇತರ ಹುಡುಗರಿಂದ ವಿಷಯ ತಿಳಿಯುತ್ತದೆ. ಚಂದ್ರಮತಿ ಎಷ್ಟು ಗಟ್ಟಿಯಾಗಿ ಗೊಳೋ ಎಂದು ಅತ್ತಳೋ! ನಂಜಮ್ಮನಿಗೂ ಅಳು ಬಂತು. ಕಂಬನಕೆರೆ ದಾರಿಯಲ್ಲೂ ಹುತ್ತಗಳಿವೆ. ಕಬ್ಬಳ್ಳಿಬುಗದ ಆಚೆಗೆ ಇರುವ ಹುತ್ತದ ದಿಬ್ಬದ ಮಗ್ಗುಲಿಗೇ ದಾರಿ ಇದೆ. ಇಡೀ ದಿಬ್ಬದ ತುಂಬ ಹುತ್ತದ ಕೋಡುಗಳೇ ಸೆಟೆದು ನಿಂತಿವೆ. ಸುತ್ತ ಹಳ್ಳ ಕೊಳ್ಳಗಳಲ್ಲಿ ಕಪ್ಪೆ ಹಿಡಿಯಲು ಹೋಗುವ ಹಾವುಗಳೆಲ್ಲ ಆ ಹುತ್ತಗಳಿಗೇ ಹೋಗಿ ಸೇರಿಕೊಳ್ಳುತ್ತವಂತೆ. ಬರುವಾಗ ಹುಡುಗ ಎತ್ತಲೋ ನೋಡುತ್ತಾ ಯಾವುದಾದರೂ ಹಾವನ್ನು ತುಳಿದಿರಬಹುದು. ಅಥವಾ ಹುತ್ತದ ಹತ್ತಿರ ತಲೆ ಹಾಕುತ್ತಿದ್ದ ಹಾವಿಗೆ ಕೀಟಲೆಗೆಂದು ಕಲ್ಲು ಹೊಡೆದಿರಬಹುದು. ದೇವರೇ, ಹಾಗೆ ಏನೂ ಆಗದಿರಲಿ. ರಾಮಣ್ಣ ಜಾಣ ಹುಡುಗ. ಹಾಗೆಲ್ಲ ಕೀಟಲೆ ಮಾಡುವುದಿಲ್ಲ. ಕೀಟಲೆ ಏನಿದ್ದರೂ ವಿಶ್ವನದು.

ಅವಳು ಇನ್ನೂ ಸ್ವಲ್ಪ ಹೊತ್ತು ಹಾಗೆಯೇ ನಿಂತಳು. ಶೆಡ್ಡಿಗೆ ಹಿಂತಿರುಗಿ ಹೋಗಿ ಯಾರಾದರೂ ಸುತ್ತಲಿನ ಗಂಡಸರಿಗೆ ಹೇಳಿ ಹುಡುಕಲು ಕಳಿಸಲೇ, ತಾನೂ ಜೊತೆಯಲ್ಲಿ ಹೋಗಲೇ, ಎಂಬ ಯೋಚನೆ ಬಂತು. ಹುಟ್ಟಿಸಿದ ಅಪ್ಪನಿಗೆ ಮಾತ್ರ ಇಂತಹ ಯಾವ ಯೋಚನೆಯೂ ಇಲ್ಲ. ಮಧ್ಯಾಹ್ನದಿಂದ ಅವರ ಮುಖವೂ ಇಲ್ಲ. ಶೆಡ್ಡಿಗೆ ಹಿಂತಿರುಗಲು ಅವಳು ಕಾಲು ತಿರುಗಿಸಿದಳು. ಮತ್ತೆ ಇನ್ನೂ ಸ್ವಲ್ಪ ಹೊತ್ತು ಕಾಯಲು ನಿಂತಳು. ದೃಷ್ಟಿ ರಾಮಣ್ಣ ಬರಬಹುದಾದ ದಿಕ್ಕಿನಲ್ಲಿಯೇ ನೆಟ್ಟಿತ್ತು. ಅವಳು ನಿಂತಿದ್ದ ಜಾಗವೂ ಒಳ್ಳೆಯದಲ್ಲ, ಚೆನ್ನೇನಹಳ್ಳಿಯ ಪಟೇಲ ಶಿದ್ದೇಗೌಡನನ್ನು ಈಗ ಮೂರು ವರ್ಷದಲ್ಲಿ ತಾನೇ, ಅವಳ ಹತ್ತಿರ ಇದ್ದ ಕಲ್ಲುಬಂಡೆಯ ಮಗ್ಗುಲಿನಲ್ಲಿ ಖೂನಿ ಮಾಡಿದ್ದರು. ಬಂಡೆಯ ಮೇಲೆ ಮಲಗಿಸಿಕೊಂಡು ಅವನ ತಲೆಯನ್ನು ಕಲ್ಲುಗುಂಡಿನಿಂದ ಜಜ್ಜಿ ಸಾಯಿಸಿದ್ದರಂತೆ. ಚನ್ನೇಗೌಡ ದೆವ್ವವಾಗಿ ಈ ಬಂಡೆಯ ಹತ್ತಿರ ಕತ್ತಲೆಯ ರಾತ್ರಿಗಳಲ್ಲಿ ಸುತ್ತುತ್ತಿರುತ್ತಾನಂತೆ. ಒಂದೊಂದು ಸಲ ಗೋಳೋ ಎಂದು ಅವನು ಅಳುತ್ತಿರುವುದನ್ನು ತಿಪಟೂರಿನಿಂದ ಗಾಡಿಯಲ್ಲಿ ಬಂದವರು ಕೇಳಿದ್ದಾರೆ.

ನಂಜಮ್ಮನಿಗೆ ಭಯವಾಯಿತು. ಮೈ ಕೈ ಒಂದು ನಿಮಿಷ ಕಂಪಿಸಿತು. ಹಿಂತಿರುಗಿ ಹೋಗಿಬಿಡಲೇ ಎಂಬ ಯೋಚನೆ ಬಂತು. ಆದರೆ ಮಗ ಮನೆಗೆ ಬಂದಿಲ್ಲ. ದೊಡ್ಡವಳಾದ ತಾನೇ ಹೆದರಿಕೊಂಡು ಹೋಗಿಬಿಟ್ಟರೆ ಸಣ್ಣ ಹುಡುಗ ಒಬ್ಬನೇ ಹೇಗೆ ಬಂದಾನು?-ಎಂದು ಯೋಚಿಸಿ ದಾರಿ ನೋಡುತ್ತ ಅಲ್ಲಿಯೇ ನಿಂತಳು. ಆದರೆ ಕತ್ತಲೆಯಲ್ಲಿ ದೃಷ್ಟಿ ದೂರ ಹೋಗುತ್ತಿರಲಿಲ್ಲ.

ದೆವ್ವ ಒಂದು ಕಡೆ ಇರುವುದಿಲ್ಲವಂತೆ. ಸುತ್ತ ಮುತ್ತ ಅಲೆಯುತ್ತಿರುತ್ತದಂತೆ. ಇಲ್ಲಿಂದ ಹಾಗೆಯೇ ಕಂಬನಕೆರೆಯ ಕಡೆಗೆ ಸಂಚಾರ ಹೋಗಿ, ಒಬ್ಬನೇ ಬರುತ್ತಿದ್ದ ರಾಮಣ್ಣನನ್ನು ಹಿಡಿದುಬಿಟ್ಟಿದ್ದರೆ ಏನು ಗತಿ?-ಎಂಬ ಯೋಚನೆಯೂ ಬಂತು. ಆದರೆ ಮನಸ್ಸು ತಕ್ಷಣ ಸಮಾಧಾನ ಹೇಳಿಕೊಂಡಿತು: ದೆವ್ವ ಗಿವ್ವ ಅನ್ನೂದೆಲ್ಲ ಸುಳ್ಳು. ನಮ್ಮ ಅಪ್ಪ, ಕಲ್ಲೇಶಣ್ಣಯ್ಯ, ಎಂಥ ಕತ್ತಲಿನಲ್ಲೂ ಒಬ್ಬೊಬ್ಬರೇ ಹತ್ತು ಹತ್ತು ಹರಿದಾರಿ ಹೋಗೂದಿಲ್ಲವೆ? ದೆವ್ವವೇ ಇದ್ದರೆ ಅವರನ್ನು ಯಾಕೆ ಏನು ಮಾಡುಲ್ಲ?-ಈ ಯೋಚನೆಯಿಂದ ಮನಸ್ಸು ಸಮಾಧಾನಗೊಂಡರೂ ರಾಮಣ್ಣ ಚಿಕ್ಕ ಹುಡುಗ ಎಂಬ ನೆನಪಾಗಿ, ಮತ್ತೆ ಆತಂಕ ಭಯಗಳು ಆಕ್ರಮಿಸಿದುವು.

ಅಷ್ಟರಲ್ಲಿ ಯಾರೋ ಬಂದಂತೆ ಆಯಿತು. ಹೌದು, ಮನುಷ್ಯರೇ. ಆದರೆ ತಲೆಯ ಮೇಲೆ ಏನೋ ದೊಡ್ಡ ಗಂಟು ಇರುವಂತಿದೆ. ಸ್ಕೂಲಿಗೆ ಹೋದ ಹುಡುಗನ ತಲೆಯ ಮೇಲೆ ಗಂಟು ಎಲ್ಲಿಂದ ಬರಬೇಕು? ಅವನು ರಾಮಣ್ಣನಲ್ಲ; ಮತ್ತೆ ಯಾರೋ ಇರಬಹುದು. ಅಷ್ಟರಲ್ಲಿ ಅವರು ಆ ದಾರಿಯನ್ನು ಬಿಟ್ಟು ತೋಟದ ಕಡೆ ಹೊರಟಂತೆ ಆಯಿತು. ಆಮೇಲೆ ಏನೋ ನೋಡಿ ಹೆದರಿದವರಂತೆ ಬೇಗ ಬೇಗ ನಡೆದರು. ಅವಳೇ ಧೈರ್ಯ ತಂದುಕೊಂಡು, ‘ಯಾರದು?’ ಎಂದು ಕೇಳಿದಳು. ಅವರು ಮಾತನಾಡಲಿಲ್ಲ. ಅವಳು ಮತ್ತೊಮ್ಮೆ-‘ಯಾರು ಆ ಕಡೆ ಹೋಗ್ತಿರೂದು?’ ಎಂದಾಗ ಅವರು ಅಲ್ಲಿಯೇ ನಿಂತುಕೊಂಡರು. ಆಮೇಲೆ, ‘ಯಾರು, ಅಮ್ಮನೇ?’-ಎಂದು ಕೇಳಿದಾಗ ಅವನು ರಾಮಣ್ಣನೆನ್ನುವುದು ಗೊತ್ತಾಯಿತು.
‘ನಾನು ಕಣೋ ಮರಿ, ಅದ್ಯಾಕೆ ಆ ಕಡೆ ಹೋಗ್ತಿದೀಯಾ ಕಲ್ಲು ಮುಳ್ನಲ್ಲಿ?’
ರಾಮಣ್ಣ ಹತ್ತಿರ ಬಂದ. ಅವನ ತಲೆಯಮೇಲೆ ದಪ್ಪನಾದ ಮೂರು ಹಲಸಿನಕಾಯಿಗಳಿದ್ದುವು. ಈಚಲ ಶೆಬ್ಬೆಯ ಕಟ್ಟುಹಾಕಿದ್ದ ಅವನ್ನು ಅವನು ಉಟ್ಟ ಲುಂಗಿಯನ್ನು ಬಿಚ್ಚಿ ಶಿಂಬಿ ಮಾಡಿ ತಲೆಯಮೇಲೆ ಇಟ್ಟುಕೊಂಡಿದ್ದ.
‘ಅದ್ಯಾಕೆ ಆ ಕಡೆ ಹೋಗ್ತಿದ್ದೆ ಮರಿ?-ಅಮ್ಮ ಕೇಳಿದಳು.
‘ಅಲ್ಲಿಂದ ದೂರದಲ್ಲಿ ಕರ್ರಗೆ ಕಾಣಿಸ್ತು. ಇಲ್ಲಿ ಕಲ್ಲುಬಂಡೆ ಹತ್ರವಲ್ವೆ ಆವಾಗ ಚೆನ್ನೇನಹಳ್ಳಿ ಶಿವೇಗೌಡುನ್ನ ಖೂನಿ ಮಾಡಿದ್ದು? ಅವ್ನು ದೆವ್ವವಾಗಿದಾನೆ ಅಂತಿರ್‍ಲಿಲ್ವೆ? ದೆವ್ವ ಅಂತ ತಿಳ್ಕಂಡು ಆ ಕಡೆ ವಾಟಹ್ವಡೀತಿದ್ದೆ. ನೀನು ಅಂತ ನನಗೇನು ಗೊತ್ತು?’
‘ಇದುನ್ನೆಲ್ಲಿಂದ ತಂದೆ? ನಾನು ಹೊತ್ಕತ್ತೀನಿ ಕೊಡು’-ಎಂದು, ಹೊರೆಯನ್ನು ಅವಳು ತನ್ನ ತಲೆಯ ಮೇಲೆ ಇಟ್ಟುಕೊಂಡಳು.
‘ಅಲ್ಲಿ ದಾರೀಲಿ, ಗೌಡನ ಕೊಪ್ಪಲು ಸಿಕ್ಕುತ್ತಲ್ಲಾ, ಅದರ ಒಂದು ತ್ವಾಟದಲ್ಲಿ ಹಲಸಿನ ಮರದಲ್ಲಿ ಕಾಯಿ ಬಿಟ್ಟುದ್ದುದು ನೋಡಿದ್ದೆ. ಬೇಕು ಅಂತಲೇ ಕತ್ಲೆ ಮಾಡ್ಕಂಡು ಹೊರಟೆ. ಮೆಲ್ಲಗೆ ಬೇಲಿ ನುಸ್ದು ಈ ಮೂರು ಕಾಯಿ ಕಿತ್ಕಂಡು ಬಂದೆ. ಈಚಲು ಕಟ್ಟು ಕಂಬನಕೆರೆ ಹತ್ರುಲ್ಲೇ ಕಿತ್ಕಂಡು ಚೀಲುಕ್ಕೆ ಹಾಕ್ಕಂಡಿದ್ದೆ. ಹಚ್ಚಿ ಪಲ್ಯ ಮಾಡ್ಕಂಡು ತಿಂದ್ರೆ ಹೊಟ್ಟೆ ತುಂಬಲ್ವೇನಮ್ಮ?’

ಮಗನ ಸಾಹಸ ಮತ್ತು ಬುದ್ಧಿವಂತಿಕೆಗೆ ಏನು ಹೇಳಬೇಕೆಂಬುದು ಅವಳಿಗೆ ತಿಳಿಯಲಿಲ್ಲ. ಕಳ್ಳತನ ಮಾಡುವುದು, ಸುಳ್ಳು ಹೇಳುವುದು ಪಾಪವೆಂದು ಅವಳು ಮಕ್ಕಳಿಗೆ ಹೇಳಿಕೊಟ್ಟಿದ್ದಳು. ರಾಮಣ್ಣ ಮಿಡ್ಳ್‌ಸ್ಕೂಲಿನಲ್ಲಿ ಓದುತ್ತಿದ್ದಾನೆ. ಈ ಪಾಪ ಪುಣ್ಯದ ವಿಚಾರ ಅವನಿಗೆ ಗೊತ್ತಿಲ್ಲದೆ ಇಲ್ಲ. ಈಗ ಅವಳು ಮಗನಿಗೆ ಬುದ್ಧಿ ಹೇಳಲು ಹೋಗಲಿಲ್ಲ. ಇಬ್ಬರೂ ಬೇಗ ಬೇಗ ಹೆಜ್ಜೆ ಹಾಕಿದರು. ಮನೆಯಲ್ಲಿ ಹುಡುಗರು ಸುಸ್ತಾಗಿ ಬಿದ್ದುಕೊಂಡಿವೆ. ತಾವಿಬ್ಬರೂ ಹಸಿದಿದ್ದಾರೆ. ರಾಮಣ್ಣ ಹತ್ತು ಮೈಲಿ ನಡೆದಿದೆ. ಹಲಸಿನಕಾಯಿ ಹೆಚ್ಚಿ ಪಲ್ಯ ಮಾಡಿದರೆ ಹೊಟ್ಟೆಗೆ ಆಧಾರವಾಗುತ್ತೆ.

ಅವಳು ಶೆಡ್ಡಿಗೆ ಬರುವ ವೇಳೆಗೆ ಯಜಮಾನರು ಬಂದು ಹಾಸಿಗೆ ಹಾಸಿಕೊಂಡು ಮಲಗಿ ಗೊರಕೆ ಬಿಡುತ್ತಿದ್ದರು. ಹೊಟ್ಟೆ ಭರ್ತಿ ಇರದಿದ್ದರೆ ಗೊರಕೆ ಎಲ್ಲಿಂದ ಬರುತ್ತದೆ, ಎಂಬಷ್ಟು ಅನುಭವ ಅವಳಿಗೂ ಇತ್ತು. ತಿಳಿವಳಿಕೆ ರಾಮಣ್ಣನಿಗೂ ಇತ್ತು. ಇಬ್ಬರಲ್ಲಿ ಯಾರೂ ಮಾತನಾಡಲಿಲ್ಲ. ಅವರನ್ನು ಎಬ್ಬಿಸಲೂ ಇಲ್ಲ. ಪಾರ್ವತಿ, ವಿಶ್ವ, ಇಬ್ಬರೂ ಸುರುಟಿಕೊಂಡು ನಿದ್ರೆ ಮಾಡುತ್ತಿದ್ದರು. ಈಳಿಗೆಮಣೆ ತೆಗೆದುಕೊಂಡು ನಂಜಮ್ಮ ಮೂರು ಕಾಯಿಗಳನ್ನೂ ಬೇಗ ಬೇಗ ಹೆಚ್ಚಿದಳು. ಸಿಪ್ಪೆ ಮೂಗುಗಳನ್ನು ತೆಗೆದುಹಾಕಿ, ಸ್ವಲ್ಪ ಬಲಿತಿದ್ದ ಬೀಜವನ್ನೂ ಬೇಯಲು ಬಿಟ್ಟಳು. ಅದಕ್ಕೇ ಒಂದು ಹಿಡಿ ಮೆಣಸಿನ ಪುಡಿ ಹಾಕಿದಳು.
ಅದು ಬೇಯುತ್ತಿರುವಾಗ ರಾಮಣ್ಣ ಮೆಲ್ಲನೆ ಕೇಳಿದ: ‘ಅಮ್ಮ, ಒಕ್ಲಿಗರ ಮನೇ ರೊಟ್ಟಿ ತಿಂದ್ರೆ ಪಾಪ ಬರುಲ್ವೇನಮ್ಮ?’
‘ಯಾಕೆ ಮರಿ?’
“ಇವತ್ತು ಮಧ್ಯಾಹ್ನ ನಾನು ತಿಂಡಿ ಇಲ್ದೆ ಮರದ ಕೆಳಗೆ ಕೂತಿದ್ದೆ. ನನ್ನ ಸ್ನೇಹಿತ ಒಬ್ಬ ಇದಾನೆ, ಕೆಂಗಲಾಪುರದ ನರಸೇಗೌಡ ಅಂತ. ಅವನ ರೊಟ್ಟಿ ಉಳಿದಿತ್ತು. ಅದ್ಯಾಕ್ ನೀನು ರೊಟ್ಟಿ ತಿನ್ಲಿಲ್ಲ ಅಂತ ಕೇಳ್ದ. ನಾನು ಹೇಳಲಿಲ್ಲ. ಅವನೇ, ‘ತಿಂದ್ರೆ ಏನೂ ಆಗುಲ್ಲ, ನಾನು ಯಾರ ಕೈಲೂ ಹೇಳುಲ್ಲ, ತಿನ್ನೋ’-ಅಂತ ಒಂದು ರೊಟ್ಟಿ ಹುಚ್ಚೆಳ್ಳು ಹುಡಿ ಕೊಟ್ಟ. ರೊಟ್ಟಿ ಒಳ್ಳೇ ಅಂಗೈ ಮಂದಕ್ಕಿತ್ತು. ತಿಂದುಬಿಟ್ಟೆ. ಅವ್ನು ಯಾರಿಗೂ ಹೇಳುಲ್ಲ ಅಂತ ಅಂಗೈ ಮುಟ್ಟಿ ಭಾಷೆ ಇಕ್ಕಿದಾನೆ.”
ಅಮ್ಮ ಯಾವ ಮಾತನ್ನೂ ಆಡಲಿಲ್ಲ. ರಾಮಣ್ಣನೇ, ‘ಹೇಳಮ್ಮ, ಅದು ಪಾಪವಾ? ದೇವ್ರು ಏನೂ ಮಾಡಲ್ವ?’ ಎಂದು ಇನ್ನೊಂದು ಸಲ ಕೇಳಿದಾಗ ಹೇಳಿದಳು: ‘ವಿಶ್ವ ಮಾದೇವಯ್ನೋರ ತಟ್ಟೇಲಿ ಊಟ ಮಾಡ್ತಿರ್ಲಿಲ್ವೆ?’
‘ಅವ್ನು ಹುಡುಗ. ನಾನು ದೊಡ್ಡೋನಲ್ವ.’
ಮಗನ ಪ್ರಶ್ನೆಗೆ ಉತ್ತರ ಹೇಳಲು ಅವಳಿಗೆ ತಿಳಿಯಲಿಲ್ಲ. ಹುಡುಗರಿಗಿಲ್ಲದ ಪಾಪ ಪುಣ್ಯ ದೊಡ್ಡವರಿಗೆ ಎಲ್ಲಿಂದ ಬರುತ್ತೆ? ಹ್ಯಾಗೆ ಬರುತ್ತೆ?-ಎಂಬ ಪ್ರಶ್ನೆಯನ್ನು ಕುರಿತು ಮನಸ್ಸು ಚಿಂತಿಸುತ್ತಿತ್ತು. ರಾಮಣ್ಣನೂ ಮತ್ತೆ ಕೇಳಲಿಲ್ಲ. ಹಲಸಿನ ಹೋಳು ಬೆಂದಮೇಲೆ ಉಪ್ಪುಹಾಕಿ ಕೆಳಕ್ಕೆ ಇಟ್ಟು ಪಾರ್ವತಿ ವಿಶ್ವರನ್ನು ಎಬ್ಬಿಸಿದಳು. ‘ಹಲಸಿನಕಾಯಿ ಪಲ್ಯ ತಿಂತೀರಾ?’-ಎಂದು ಯಜಮಾನರನ್ನು ಕೇಳಿದುದಕ್ಕೆ, ‘ನಂಗೇನ್ ಬ್ಯಾಡ’ ಎಂದು ಅವರು ನಿದ್ದೆಗಣ್ಣಿನಲ್ಲೇ ಹೇಳಿ ಮತ್ತೆ ಗೊರಕೆ ಶುರುಮಾಡಿದರು. ಪಲ್ಯ ಅದೆಷ್ಟು ರುಚಿಯಾಗಿತ್ತೋ! ಹುಡುಗರು ಹೊಟ್ಟೆ ತುಂಬ ತಿಂದರು. ಜೊತೆಗೆ ಅಮ್ಮನಿಗೂ ಸಾಕಾಯಿತು. ರಾತ್ರಿ ಮಲಗಿದ ಮೇಲೆ ಅವಳು ರಾಮಣ್ಣನಿಗೆ ಹೇಳಿದಳು: ‘ಮತ್ತೆ ಹೀಗೆ ಆ ತೋಟಕ್ಕೆ ಹೋಗ್ಬ್ಯಾಡ. ಒಂದು ದಿನ ಕಳ್ಳತನವಾಯ್ತು ಅಂತ ಗೊತ್ತಾದ್ ಮೇಲೆ ಅವರು ಕಾಯ್ತಾ ಇರ್ತಾರೆ.’

– ೫ –

ಆಹಾರದ ಹಾಹಾಕಾರ ಹೆಚ್ಚಾದಂತೆಲ್ಲ ಅದರ ಶೋಧನೆಯ ಪ್ರಯತ್ನವೂ ಹೆಚ್ಚಾಯಿತು. ಕೆರೆ ಎಲ್ಲ ಒಣಗಿ, ಅದರ ಬಯಲಿನ ಕರಿಯ ನೆಲ ಬಿರುಕು ಬಿಟ್ಟಿತ್ತು. ಗೋಡು ಮಣ್ಣನ್ನು ಅಗೆದರೆ ಶತ್ತೆಯ ಬೇರು ಸಿಕ್ಕುತ್ತದೆಂದು ಬೆಸ್ತರ ಮಾಟ ಕಂಡು ಹಿಡಿದ. ಒಂದು ದಿನ ಅವನು ಅದನ್ನು ತಂದುದೇ ತಡ, ಊರೆಲ್ಲ ಅಲ್ಲಿಗೆ ನುಗ್ಗಿತು. ಒಬ್ಬೊಬ್ಬರು ಒಂದೊಂದು ಜಾಗದಲ್ಲಿ ಅಗೆಯಲು ನಿಂತರು. ಹೆಬ್ಬೆಟ್ಟು ದಪ್ಪದ ಬೇರುಗಳು ಗೆಣಸಿನಂತೆ ಅಲ್ಲೊಂದು ಇಲ್ಲೊಂದು ಸಿಕ್ಕುತ್ತಿದ್ದವು. ಬೆಳಗಿನಿಂದ ಸಂಜೆಯತನಕ ಒಬ್ಬರು ಹೀಗೆ ಮಣ್ಣು ಶೋಧಿಸಿದರೆ ರಾತ್ರಿ ನಾಲ್ಕು ಜನಕ್ಕೆ ಆಗುವಷ್ಟು ಬೇರು ಸಿಕ್ಕುತ್ತಿತ್ತು. ಕಾಯಕಕ್ಕೆ ನಂಜಮ್ಮ ಪಾರ್ವತಿ ಒಂದು ಕೈಪಿಕಾಸಿ, ಗೆರಸಿಕುಕ್ಕೆ ತೆಗೆದುಕೊಂಡು ಜೊತೆಯಲ್ಲಿ ಹೊರಟರು. ಎಲೆ ಹಚ್ಚುವ ಬದಲು ಈ ಕೆಲಸ. ತಲೆಯ ಮೇಲೆ ಸೆರಗು ಹೊದೆದುಕೊಂಡಿದ್ದರೂ, ಕಾಯುವ ಬಿಸಿಲು ಮುಖ ಮೈಗಳನ್ನು ಸುಡುತ್ತಿತ್ತು. ಮೊದಲ ದಿನ ಬೇರನ್ನು ತಂದು ಬಾವಿಯ ನೀರಿನಲ್ಲಿ ಉಜ್ಜಿ ಉಜ್ಜಿ ತೊಳೆದು ಉಪ್ಪುಕಾರ ಹಾಕಿ ಬೇಯಿಸಿದರೆ ಅದರ ವಾಸನೆ ತಿನ್ನುವುದಕ್ಕೆ ಬಿಡುತ್ತಿರಲಿಲ್ಲ. ಆದರೆ ಹೊಟ್ಟೆ ಕೇಳುತ್ತಿರಲಿಲ್ಲ. ಅಂತೂ ಬೇಯಿಸಿದುದರಲ್ಲಿ ಸ್ವಲ್ಪವೂ ಉಳಿಯಲಿಲ್ಲ. ನಾಳೆ ಬೆಳಿಗ್ಗೆ ಬಿಸಿಲು ಏರುವ ಮೊದಲೇ ಹೋಗಬೇಕೆಂದು ತಾಯಿ ಮಗಳು ನಿಶ್ಚಯಿಸಿದರು.
ಮರುದಿನ ಇವರು ಹೊರಟಾಗ ಸರ್ವಕ್ಕನೂ ಬಂದು ಸೇರಿಕೊಂಡಳು. ಮೂವರೂ ಜೊತೆಯಲ್ಲಿ ಮಣ್ಣು ಅಗೆಯುತ್ತಿದ್ದಾಗ ನಂಜಮ್ಮ ಎಂದಳು: ‘ನೋಡ್ರಿ, ಮಾದೇವಯ್ನೋರು ಹೋಗಿಯೇ ಹೋದ್ರು. ಊರಿಗೆ ಈ ಗತಿ ಬಂತು. ಸಾಧು ಸಜ್ಜನರ ಶಾಪ ಒಳ್ಳೇದಲ್ಲ ಅನ್ನೂದು ಇದುಕ್ಕೇ.’
‘ಯಾರೋ ನಾಕು ಜನ ಕ್ಯೆಟ್ಟಮುಂಡೇವು ಹಿಂಗಂದುದಕ್ಕೆ ನೋಡಿ ಊರಿಗೇ ಕೇಡು ಬಂತು.’
‘ನಿಮ್ಮ ಜನವೇಯಂತೆ ಅವ್ರುನ್ನ ಹಂಗಂದುದ್ದು.’
‘ನಂಜಮ್ಮಾರೇ, ನಿಮಗಿನ್ನೂ ವಳಗಡೆ ಮಾತು ಗೊತ್ತಿಲ್ಲ. ನಮ್ಮ ಜನದೋರ್ ಕೈಲಿ ಹಂಗಂತ ಏಳ್ಕೊಟ್ಟಿದ್ದು ನಮ್ಮನೆಯೋರೇಯಂತೆ. ಇಂತದೆಲ್ಲ ಲಾಯ್ರಿ ಪೈಂಟು ಇವ್ರಿಗೇ ಅಲ್ವಾ ತಿಳಿಯಾದು?’
‘ಅವ್ರು ಮತ್ತೆ ಬಂದ್ರೂ ಬರ್‍ಭೌದು ಅನ್ಸುತ್ತೆ ಕಣ್ರೀ. ಗುಡೀಲಿ ಅವರುದ್ದೊಂದಿಷ್ಟು ಪಾತ್ರೆ, ರಾಗಿ, ಕಾಳು, ಮೆಣಸಿನಕಾಯಿ ಇಟ್ಟು ಹೋಗಿದಾರೆ. ಬೀಗದ ಕೈ ಅವರ ಹತ್ರವೇ ಇದೆ. ’
ಏಳೆಂಟು ದಿನ ಸರ್ವಕ್ಕ ಇವರ ಜೊತೆಯಲ್ಲೇ ಗೆಡ್ಡೆ ಅಗೆಯಲು ಬಂದಳು. ಒಂದು ದಿನ ಅವಳೇ ಯಾರಿಗೂ ಕಾಣದಂತೆ ಮುಚ್ಚಿಕೊಂಡು ನಂಜಮ್ಮನ ಶೆಡ್ಡಿಗೆ ಐದು ಸೇರು ರಾಗಿ, ಒಂದು ಸೇರು ಅಕ್ಕಿ ತಂದುಕೊಟ್ಟು ಹೇಳಿದಳು: ‘ ಯಾರಿಗೂ ಏಳ್‌ಬ್ಯಾಡಿ ನಂಜಮ್ಮಾರೇ. ನಮ್ಮನೆಯೋರು ಎಲ್ಡು ಮೂಟೆ ರಾಗಿ ಇಪ್ಪತ್ತೈದು ಸೇರು ಅಕ್ಕಿ, ಕಾಪಿ ಬೀಜ, ಎಲ್ಲ ತಂದವ್ರೆ; ಕೋಲ್ಟಿನ ಕೆಲಸಕ್ಕೆ ತಿಪಟೂರಿಗೆ ಓಗಿದ್ರಂತೆ’.
ಈ ರಾಗಿಯನ್ನು ಮುಚ್ಚಿಟ್ಟು ಒಪ್ಪವಾಗಿ ಮಾಡಿದರೆ ಸ್ಕೂಲಿಗೆ ನಡೆಯುವ ರಾಮಣ್ಣ ಮತ್ತು ಚಿಕ್ಕ ಹುಡುಗ ವಿಶ್ವ, ಇಬ್ಬರಿಗೂ ಎಂಟು ದಿನ ಬೆಳಗಿನ ಹೊತ್ತು ರೊಟ್ಟಿ ಮಾಡಿಕೊಡಬಹುದು. ಈ ಗೆಡ್ಡೆ ತಿಂದು ಹೊಟ್ಟೆ ಉರಿಹತ್ತಿದೆ. ಒಂದು ದಿನವಾದರೂ ಅನ್ನಮಾಡಿ ಹುಣಿಸೆ ನೀರಿನ ಜೊತೆ ತಿನ್ನಬಹುದು. ಸರ್ವಕ್ಕನ ಅಂತಃಕರಣಕ್ಕೆ ನಂಜಮ್ಮನಿಗೆ ಸಂತೋಷವಾಯಿತು. ರೇವಣ್ಣಶೆಟ್ಟಿಯಲ್ಲಿ ಉಳಿದ ದುರ್ಗುಣಗಳೆಷಿದ್ದರೂ, ಸಮಯದಲ್ಲಿ ಬುದ್ಧಿ ಉಪಯೋಗಿಸುತ್ತಾನೆ. ಯಾವುದೋ ಕೋರ್ಟಿನ ಗಿರಾಕಿ ಹಿಡಿದು ಏನೋ ಗೋಲನ್ ಮಾಡಿದಾನೆ. ಇಲ್ಲದಿದ್ದರೆ ಎರಡು ಮೂಟೆ ರಾಗಿ, ಇಪ್ಪತ್ತೈದು ಸೇರು ಅಕ್ಕಿ, ಇವೆಲ್ಲ ತರಲು ದುಡ್ಡೆಲ್ಲಿಂದ ಬರಬೇಕು? ಆದರೆ ಅವನ ಸಂಪಾದನೆ ಎಲ್ಲ ಮನೆಹಾಳು ದಾರಿಯದು-ಎಂದುಕೊಂಡು ನಂಜಮ್ಮ ರಾಗಿ ಬೀಸಲು ಕುಳಿತಳು.

ಐದು ಆರು ದಿನದಲ್ಲಿ ಗ್ರಾಮದ ಬಣಜಿಗರಿಗೂ, ನೊಣಬಗೌಡರಿಗೂ ಉಳಿದ ಮತಸ್ಥರಿಗೂ ಜಗಳ ಹುಟ್ಟಿತು. ಮಾದೇವಯ್ಯನವರು ದೇವಸ್ಥಾನದ ತಮ್ಮ ಕೋಣೆಯಲ್ಲಿ ರಾಗಿ, ಕಾಳುಗಳನ್ನಿಟ್ಟಿದ್ದ ಸಂಗತಿ ಎಷ್ಟೋ ಜನಕ್ಕೆ ಗೊತ್ತು. ನಂಜಮ್ಮ ಸ್ವಾಭಾವಿಕವಾಗಿ ಅದನ್ನು ಸರ್ವಕ್ಕನಿಗೆ ಹೇಳಿದ ಮೇಲೆ ಅವಳು ಅದನ್ನು ಗಂಡನಿಗೆ ಹೇಳಿದಳು. ಆ ದಿನಸಿ ತಮ್ಮ ಮನೆಗೆ ಬರಲಿ ಎಂಬ ಆಶೆ ಅವಳಿಗೆ ಇಲ್ಲದೆ ಇರಲಿಲ್ಲ. ಇಂಥದರಲ್ಲೆಲ್ಲ ರೇವಣ್ಣಶೆಟ್ಟಿಯ ಬುದ್ಧಿ ತುಂಬ ಚುರುಕು. ಒಂದು ದಿನ ಬಿಟ್ಟು ಊರಿನ ಗುಡಿಗೆ ಹೋಗಿ ಆ ಕೋಣೆಯ ಬಾಗಿಲ ಬೀಗ ಮುರಿದು ದಿನಸಿಯನ್ನು ಹೊಡೆದುಕೊಳ್ಳಬೇಕೆಂದು ಅವನು ಯೋಚಿಸಿದ. ಆದರೆ ಬಿಟ್ಟ ಊರಿಗೆ ಒಬ್ಬನೇ ಹೋಗಲು ಹೆದರಿಕೆ. ಸಂಕಲಮ್ಮ ಊರಿನಲ್ಲೆಲ್ಲ ಸಂಚಾರ ಮಾಡುತ್ತಿರುತ್ತಾಳೆ. ಈ ಕೆಲಸಕ್ಕೆ, ಅದೂ ರಾತ್ರಿಯ ಹೊತ್ತು, ಹೋಗಬೇಕು. ಹೋಗಿ ಈಶ್ವರ ಗುಡಿಯ ಒಳಗಣ ಅಂಕಣಕ್ಕೆ ನುಗ್ಗಿ ಬೀಗ ಒಡೆಯಬೇಕು. ಸುಂಕಲಮ್ಮನೆಂದರೆ ಈಶ್ವರನ ಹೆಂಡತಿ ಪಾರ್ವತಿಯೇ ತಾನೇ? ಅವಳ ಗುಡಿಗೇ ಹೋದರೆ ಸುಮ್ಮನಿರಾಕಿಲ್ಲ. ನೆತ್ಲ ಕಾರ್ಕಂಡ್ ಬೀಳಿಸ್ ಬಿಡ್ತಾಳೆ. ಆದರೆ ಅಲ್ಲಿ ಇಟ್ಟಿರುವ ರಾಗಿ ಮತ್ತು ಕಾಳುಗಳ ಆಶೆಯನ್ನ ಅವನು ಬಿಡಲೂ ಆರ. ಒಬ್ಬರಿಗಿಂತ ಇಬ್ಬರು ವಾಸಿ ಎಂದು ಈ ಯೋಚನೆಯನ್ನು ತನ್ನ ದಾಯಾದಿ ಪುಟ್ಟಣ್ಣಶೆಟ್ಟಿಗೆ ಹೇಳಿದ. ಪುಟ್ಟಣ್ಣಶೆಟ್ಟಿ ಆ ದಿನ ರಾತ್ರಿ ತನ್ನ ಹೆಂಡತಿಯ ಕೈಯಲ್ಲಿ ಪಿಸುಗುಟ್ಟಿದ. ಹೀಗಾಗಿ ಅದು ಬಣಜಿಗರಿಗೆಲ್ಲ ತಿಳಿದು ಬಿಟ್ಟಿತು. ‘ಮಾದೇವಯ್ನೋರು ನಮ್ಮ ಜಾತಿ. ನಾವೆಲ್ಲ ಒಟ್ಟಿಗೆ ಹಂಚಿಕಳಾಣ’-ಎನ್ನುವ ಮಟ್ಟಿಗೆ ಮಾತು ಹೋಯಿತು. ಇದು ನೊಣಬಗೌಡರಿಗೆ ತಿಳಿದು, ಒಕ್ಕಲಿಗ, ಕುರುಬ, ಮಗ್ಗ, ಬೆಸ್ತ, ಹೀಗೆ ಊರಿಗೆಲ್ಲ ಹರಡಿತು. ‘ಅಯ್ನೋರು ಬರೀ ಬಣಜಿಗರ ಮನ್ಲೇ ಅಲ್ಲ ಬಿಕ್ಷಾ ಮಾಡಿದ್ದು. ನಮ್ಮ ಜಾತಿಯೋರೂ ಆಕಿದೀವಿ. ನಂಗೂ ಪಾಲು ಸಿಕ್ಬೇಕು’-ಎಂದು ಪ್ರತಿಯೊಬ್ಬರೂ ಹಠ ಹಿಡಿದರು. ಈ ಹಠ ಜಗಳಕ್ಕೆ ತಿರುಗಿ ಹೊಡೆದಾಟ ಆಯಿತು. ಕೊನೆಗೆ ಗ್ರಾಮದ ಪಟೇಲ ಶಿವೇಗೌಡ ನ್ಯಾಯ ಹೇಳಿ, ದಿನಸಿಯನ್ನು ಪ್ರತಿಯೊಬ್ಬರೂ ಹಂಚಿಕೊಳ್ಳಬೇಕೆಂದು ನಿರ್ಣಯ ಮಾಡಿದ. ಎಲ್ಲರೂ ಒಪ್ಪಬೇಕಾಯಿತು. ಪ್ರತಿಯೊಬ್ಬರಿಗೂ ಎರಡೆರಡು ಸೇರು ರಾಗಿ ಇದರಿಂದ ಸಿಕ್ಕಬಹುದು.

ಒಂದು ದಿನ ಮಧ್ಯಾಹ್ನ ಮನೆಗೆ ಒಂದಾಳಿನಂತೆ ಸೇರಿ ಊರಿನೊಳಕ್ಕೆ ಹೋದರು. ಗುಡಿಯ ಒಳಗಡೆ ಪ್ರವೇಶಿಸಿ ನೋಡಿದಾಗ ಅಯ್ಯನವರ ಕೋಣೆ ಬಾಗಿಲಿಗೆ ಬೀಗವೇ ಇರಲಿಲ್ಲ. ಒಳಗೆ ನೋಡಿದರೆ ರಾಗಿಯ ಚೀಲವೂ ಇಲ್ಲ, ಕಾಳಿನ ಮೂಟೆಯೂ ಇಲ್ಲ. ಇನ್ನೊಂದು ಮಡಕೆಯಲ್ಲಿದ್ದ ಮೆಣಸಿನಕಾಯಿಯೂ ಖಾಲಿಯಾಗಿದೆ. ಅಲ್ಯುಮಿನಿಯಂ ಪಾತ್ರೆಗಳು ಮಾತ್ರ ಅಲ್ಲಿಯೇ ಇವೆ.
‘ಯಾವನೋ ನನ್ಮಗ ಕೊಟ್ಟವ್ನೆ ಕೈಯ’-ಎಂದು ಎಲ್ಲರೂ ತೀರ್ಮಾನಿಸಿದರಾದರೂ ಆ ಮಗ ಯಾರೆಂಬುದನ್ನು ಪತ್ತೆ ಹಚ್ಚುವ ಯಾವ ಉಪಾಯವೂ ಯಾರಿಗೂ ಹೊಳೆಯಲಿಲ್ಲ. ನಿರಾಶೆಯಿಂದ ಎಲ್ಲರೂ ಹಿಂತಿರುಗಿದರು.

ಕೆರೆಯ ಶೆತ್ತೆಗೆಡ್ಡೆ ಮುಗಿದುಹೋಯಿತು. ಇಡೀ ಕೆರೆಯ ಬಯಲಿನಲ್ಲಿ ಜನಗಳು ಅಗೆಯದೆ ಬಿಟ್ಟ ಒಂದು ಅಂಗುಲ ಜಾಗವೂ ಉಳಿದಿರಲಿಲ್ಲ. ಅಷ್ಟರಲ್ಲಿ ಯಾರೋ ಒಂದು ದಿನ ಕತ್ತಾಳೆ ಗಿಡವನ್ನು ಕಡಿದು ಅದರ ಗಿಣ್ಣನ್ನು ತಂದು ಬೇಯಿಸಿ ತಿಂದರಂತೆ. ಅದೂ ಶತ್ತೆಗೆಡ್ಡೆಯ ಹಾಗೆಯೇ ಇರುತ್ತದೆ ಎಂದು ತಿಳಿದ ಮೆಲೆ ಊರಿನವರ ಗಮನವೆಲ್ಲ ಸುತ್ತಮುತ್ತ ಇದ್ದ ಕತ್ತಾಳೆ ಗಿಡಗಳನ್ನು ಧ್ವಂಸಮಾಡಲು ಹೋಯಿತು. ಶತ್ತೆಗೆಡ್ಡೆಯಾದರೆ ಅಗೆದು ಅಗೆದು ಆರಿಸಿ ಶೋಧಿಸಿ ಸಾಕಾಗಬೇಕು. ಕತ್ತಾಳೆಗಿಣ್ಣು ದಪ್ಪವಾಗಿರುವುದರಿಂದ ಅಷ್ಟು ಕಷ್ಟ ಪಡಬೇಕಾಗಿಯೂ ಇರಲಿಲ್ಲ. ಆದುದರಿಂದ ಎಲ್ಲರೂ ಹೊಟ್ಟೆ ತುಂಬವೇ ತಿಂದರು.

ತಿಂದ ಎರಡನೆಯ ದಿನಕ್ಕೇ ಊರಿನವರಿಗೆಲ್ಲ ಭೇದಿ ಶುರುವಾಯಿತು. ಮೊದಲೇ ಒಳಗೆ ಏನೂ ಇಲ್ಲದೆ ಚಕ್ಕಳವಾಗಿದ್ದ ಹೊಟ್ಟೆಗಳು ಈಗ ಭೇದಿಯೂ ಆದಮೇಲೆ ಮಡಿಸಿಕೊಂಡು ಬೀಳುವ ಹಾಗೆ ಆದವು. ಊರಿನಲ್ಲಿ ಒಟ್ಟು ಹದಿನಾರು ಜನ ಅದರಲ್ಲಿ ಸತ್ತುಹೋದರು. ಉಳಿದವರು ಭೇದಿಯ ಕಾರಣವನ್ನು ಅರ್ಥಮಾಡಿಕೊಂಡು ಕತ್ತಾಳೆ ಗಿಣ್ಣು ಕಡಿಯುವುದು ಬಿಟ್ಟುಬಿಟ್ಟರು.

– ೬ –

ನಂಜಮ್ಮ, ಪಾರ್ವತಿ, ಸರ್ವಕ್ಕ, ಮೂವರೂ ಕೆರೆಗೆ ಶತ್ತೆಗೆಡ್ಡೆ ಶೋಧಿಸಲು ಹೋಗಿದ್ದಾಗ ಒಂದು ದಿನ ಪಾರ್ವತಿಗೆ ತುಂಬ ತಲೆನೋವು ಬಂತು. ತಲೆಗೆ ಸೆರಗಿನ ಮುಸುಕು ಹಾಕಿಕೊಂಡರೂ ಬಿಸಿಲಿನ ಕಾವಿಗೆ ಅದು ತಡೆಯಾಗಲಿಲ್ಲ. ‘ಮಗ, ನೀನು ಶೆಡ್ಡಿಗೆ ಹ್ವಾಗು. ನಾನು ನಂಜವ್ವಾರು ಆದೋಟು ಕಿತ್ಕಂಡ್ ಬತ್ತೀವಿ’-ಎಂದು ಸರ್ವಕ್ಕ ಹೇಳಿದಳು. ನಂಜಮ್ಮನೂ ಅದೇ ಮಾತು ಹೇಳಿದ ಮೇಲೆ ಪಾರ್ವತಿ ಒಬ್ಬಳೇ ಮನೆಗೆ ಹೊರಟಳು.

ಕಾವಿಗೆ ಬಿರಿದು ಒಡೆದ ಗೋಡುಮಣ್ಣನ್ನು ತುಳಿದುಕೊಂಡು ಗುಡಿಯ ಸಮೀಪದಿಂದ ಹತ್ತಿ ಏರಿಯಮೇಲೆ ನಡೆದು ಅವಳು ಶೆಡ್ಡಿನ ಕಡೆಗೆ ಹೋಗುತ್ತಿದ್ದಾಗ ಏರಿಯ ಕೊನೆಯಲ್ಲಿ ನರಸಿ ಸಿಕ್ಕಿದಳು. ನೀರಿನ ಕಡೆಗೆ ಹೋಗಿದ್ದಳೆಂದು ಅವಳು ಬಂದ ದಿಕ್ಕೇ ಹೇಳುತ್ತಿತ್ತು. ಅವಳು ಪಾರ್ವತಿಯನ್ನು ಕೇಳಿದಳು: ‘ಗೆಡ್ಡೆ ಕಿತ್ ಆಯ್ತಾ ಮಗಾ?’
‘ಇನ್ನೂ ಇಲ್ಲ ಕಣಮ್ಮ. ತಲೆ ನೋಯ್ತಿತ್ತು ನಾನು ಬಂದೆ.’
‘ಹಂಗೆ ನಮ್ಮಂಗ್ಡಿ ತಾವುಕ್ ಬಾ. ಒಂದೀಟು ಕಡ್ಲೆ ಕೊಡ್ತೀನಿ ತಿನ್ನೀವಿ.’

ಪಾರ್ವತಿ ಅದಕ್ಕೆ ಏನೂ ಹೇಳಲಿಲ್ಲ. ಶೆಡ್ಡಿನ ಕಡೆಗೆ ತಿರುಗುವ ಜಾಗ ಬಂದಾಗ ಸುಮ್ಮನೆ ತನ್ನ ಪಾಡಿಗೆ ತಾನು ನಡೆದಳು. ನರಸಿಯೇ-‘ಏನ್ ನಾಚ್ಕಬ್ಯಾಡ ಬಾರವ್ವ. ನಮ್ ಜನ ಮಾಡಿದ್ ಕಡ್ಲೆ ತಿಂದ್ರೆ ಏನೂ ಆಗಾಕುಲ್ಲ’ ಎನ್ನುತ್ತಿರುವಷ್ಟರಲ್ಲಿ ಶೆಡ್ಡಿನ ಹತ್ತಿರ ಆಡುತ್ತಿದ್ದ ವಿಶ್ವ ಅಕ್ಕನನ್ನು ಕಂಡು ಹತ್ತಿರ ಬಂತು. ನರಸಿ ಮತ್ತೆ ಕಡಲೆಯ ಮಾತಾಡಿದುದನ್ನು ಕೇಳಿದ ಅದು ‘ನಡಿಯಕ್ಕಯ್ಯಾ, ಈಸ್‌ಕಂಡ್ ಬರಾಣ’ ಎಂದು ಹಟ ಹಿಡಿಯಿತು. ಇಬ್ಬರೂ ಅಂಗಡಿಗೆ ಬಂದರು. ನರಸಿ ಇಬ್ಬರಿಗೂ ಎರಡೆರಡು ಶಾರೆ ಹುರಿಗಡಲೆ, ಮೇಲೆ ಒಂದೊಂದು ಮುರುಕು ಬೆಲ್ಲ ಕೊಟ್ಟಳು. ವಿಶ್ವ ತನ್ನ ಪಾಲಿನದನ್ನು ಬಾಚಿ ಮುಕ್ಕಲು ಶುರು ಮಾಡಿತು. ಪಾರ್ವತಿ ಒಂದು ಹಿಡಿಯನ್ನು ಬಾಯಿಗೆ ಹಾಕಿಕೊಂಡಳು. ಆದರೆ ತಕ್ಷಣ ಅವಳ ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ‘ಯಾಕ್ ಮಗಾ ಅಳ್ತೀಯಾ?’-ಎಂದು ನರಸಿ ಕೇಳಿದರೆ ಕಣ್ಣೀರು ಇನ್ನೂ ಹೆಚ್ಚಾಗಿ, ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿತು. ನರಸಿಯೇ ಹತ್ತಿರ ಬಂದು ಅವಳ ಬೆನ್ನು ಸವರಿ ಕೇಳಿದ ಮೇಲೆ ಹೇಳಿದಳು: ‘ನಮ್ಮ ರಾಮಣ್ಣ ಉಪಾಸ ಕಂಬನಕೆರೆಗೆ ಹೋಗಿದಾನೆ.’

ನರಸಿಗೆ ದುಃಖವಾಯಿತು. ಇನ್ನೆರಡು ಶಾರೆ ಕಡಲೆ, ಒಂದು ಮುರುಕು ಬೆಲ್ಲವನ್ನು ಪಾರ್ವತಿಯ ಸೆರಗಿಗೆ ಹಾಕಿ-‘ಅದು ಬಂದಮ್ಯಾಲೆ ಕೊಡು’ ಎಂದಮೇಲೆ ಪಾರ್ವತಿಯ ಕಣ್ಣೀರು ಕಡಿಮೆಯಾಯಿತು. ‘ನಾವು ಹೋಗ್ತೀವಿ ಕಣ್ ನರಸಮ್ಮ’-ಎಂದು ಹೇಳಿ ಅವಳು ವಿಶ್ವನ ಕೈಹಿಡಿದು ಶೆಡ್ಡಿಗೆ ನಡೆದಳು. ಬೀಗ ತೆಗೆದು ಒಳಗೆ ಹೋಗಿ ಚಾಪೆ ಹಾಸಿ ಮಲಗಿದ ಮೇಲೆ ಅವಳ ಮನಸ್ಸು ಯೋಚಿಸಲು ಮೊದಲುಮಾಡಿತು. ತಾನು ಇದುವರೆಗೂ ನರಸಮ್ಮನ ಕೈಲಿ ಮಾತನಾಡಿರಲಿಲ್ಲ. ಅವಳು ಕೆಟ್ಟವಳಂತೆ. ಇವತ್ತು ಅವಳೇ ತನ್ನನ್ನು ಕರೆದು ಕಡಲೆ ಕೊಟ್ಟಳು. ತಾನು ತಿನ್ನಬಾರದಾಗಿತ್ತೋ ಏನೋ. ಅದು ಅಮ್ಮನಿಗೆ ಗೊತ್ತಾದರೆ ಬೈಯ್ಯುತ್ತಾಳೆ. ಅಮ್ಮ ಬಂದಮೇಲೆ ಹೇಳಲೇಕೂಡದು-ಎಂದು ನಿಶ್ಚಯಿಸಿದಳು. ಆದರೆ ರಾಮಣ್ಣನಿಗೆ ಇಟ್ಟುಕೊಂಡಿದ್ದ ಕಡಲೆಯ ನೆನಪಾಯಿತು. ಅವನು ಬಂದಮೇಲೆ, ಇದೆಲ್ಲಿ ಬಂತು ಅಂತ ಕೇಳಿದರೆ ಏನು ಹೇಳುವುದು? ಈ ವಿಶ್ವ, ಅಮ್ಮನು ಬಂದ ತಕ್ಷಣ ಹೇಳಿ ಬಿಡುತ್ತೆ. ಈಗ ಏನು ಮಾಡಬೇಕು?-ಎಂದು ಅರ್ಧ ಗಂಟೆ ಯೋಚಿಸಿದಳು. ಕೊನೆಗೆ ಒಂದು ಉಪಾಯ ಹೊಳೆಯಿತು. ಸೆರಗಿನಲ್ಲಿದ್ದ ಕಡಲೆ ಬೆಲ್ಲವನ್ನು ಬಿಚ್ಚಿ ವಿಶ್ವನಿಗೆ ಕೊಟ್ಟು ಹೇಳಿದಳು: ‘ಇದ ನೀನೇ ತಿನ್ನೋ.’
‘ರಾಮಣ್ಣನಿಗೆ? ’ – ಅವನು ಕೇಳಿದ.
‘ಅವ್ನು ಬರೂಹೊತ್ತಿಗೆ ಅಮ್ಮ ಬಂದು ಗೆಡ್ಡೆ ಬೇಸಿರ್ತಾಳೆ. ಅವ್ನಿಗೆ ಹುರಿಗಡ್ಲೆ ಬೆಲ್ಲಸೇರುಲ್ಲ. ನೀನೇ ತಿನ್ನು.’
‘ನೀನೊಂದಿಷ್ಟು, ನಾನೊಂದಿಷ್ಟು’ -ಎಂದು ವಿಶ್ವ ಹೇಳಿದರೂ ಕೇಳದೆ ಎಲ್ಲವನ್ನೂ ಅವನಿಗೇ ತಿನ್ನಿಸಿದಳು. ಚೊಂಬಿನಲ್ಲಿ ನೀರು ಬಗ್ಗಿಸಿಕೊಂಡು ಅವನು ಕುಡಿದ ಮೇಲೆ ಹತ್ತಿರ ಕರೆದು ಕೂರಿಸಿಕೊಂಡು ಹೇಳಿದಳು: ‘ನೋಡು , ಇವತ್ತು ನರಸಮ್ಮನ ಅಂಗ್ಡೀಲಿ ಇದ ತಿಂದಿದ್ದು ಗೊತ್ತಾದ್ರೆ ಅಮ್ಮ ಹ್ವಡೀತಾಳೆ. ಯಾರ ಕೈಲೂ ನೀನು ಹೇಳ್ ಕೂಡ್ದು.’
‘ಯಾಕೆ ಹೊಡೀತಾಳೆ?’
‘ಯಾಕೋ? ನರಸಮ್ಮ ಕೆಟ್ಟೋಳು ಅಂತ ಎಲ್ಲಾರೂ ಮಾತಾಡ್ಕಳಲ್ವೆ? ನೀನು ಯಾರ ಕೈಲೂ ಹೇಳ್ ಕೂಡ್ದು.’
‘ಹೂಂ.’
‘ಹಾಗಂತ ಆಣೆ ಇಡು.’
ವಿಶ್ವ ಅವಳ ಅಂಗೈಮೇಲೆ ತನ್ನ ಅಂಗೈಯಿಂದ ಬಡಿದು ಒಂದು ಸಲ ಚಿಗುಟಿ ಭಾಷೆ ಕೊಟ್ಟ. ಆದರೆ ಅಷ್ಟರಿಂದ ಮಾತ್ರ ಅವಳಿಗೆ ಧೈರ್ಯ ಬರಲಿಲ್ಲ. ಅವನನ್ನು ಹತ್ತಿರವೇ ಇದ್ದ ಗ್ರಾಮದೇವತೆ ಕಾಳಮ್ಮನ ಗುಡಿಗೆ ಕರೆದುಕೊಂಡು ಹೋಗಿ, ಬಾಗಿಲು ಹಾಕಿದ್ದ ಹೊಸಲನ್ನು ಮುಟ್ಟಿಸಿ ಆಣೆ ಮಾಡಿ-‘ಈಗ ಅಮ್ಮನ ಮ್ಯಾಲೆ ಆಣೆ ಹಾಕಿದೀಯಾ. ನೀನೇನಾದ್ರೂ ಹೇಳಿದ್ರೆ ಗುಡೀಲಿರೂ ಬ್ಯಾತಾಳ ಬಂದು ನಿನ್ನ ನುಂಗಿಹಾಕಿಬಿಡುತ್ತೆ’ ಎಂದು ಹೆದರಿಸಿದಳು.
‘ನಾನೇನು ಹೇಳುಲ್ಲ ಕಣೆ, ನಂಗೊತ್ತಿಲ್ವೆ?’-ಎಂದು ಅವನು ರೇಗಿ ನುಡಿದ ಮೇಲೆ ಅವಳು ಸುಮ್ಮನಾದಳು.

ಸಂಜೆಗೆ ಅಮ್ಮ ಮನೆಗೆ ಬಂದು ಗೆಡ್ಡೆಯನ್ನು ತೊಳೆದು ಶೋಧಿಸಿ ಬೇಯಿಸಲು ಇಟ್ಟಳು. ಹೊತ್ತು ಮುಳುಗಿದ ಮೇಲೆ ರಾಮಣ್ಣ ಬಂದ. ಚೆನ್ನಿಗರಾಯರೂ ಎಲ್ಲಿಯೋ ಹೋಗಿದ್ದವರು ಹಿಂತಿರುಗಿದರು. ಗೆಡ್ಡೆ ತಿನ್ನಲು ಕುಳಿತಾಗ ವಿಶ್ವ ಅರ್ಧಕ್ಕೇ ಬೇಡವೆಂದು ಬಿಟ್ಟ. ‘ಯಾಕೋ, ಏನು ತಿಂದಿದ್ದೀಯೋ?’-ಎಂದು ಅಮ್ಮ ಕೇಳಿದಾಗ ಪಾರ್ವತಿಯ ಉಸಿರು ಹಿಡಿದುಕೊಂಡಿತು.
ಆದರೆ ವಿಶ್ವ, ‘ಇವತ್ತು ಚೆನ್ನಾಗಿಲ್ಲ ಕಣಮ್ಮ, ಕೆಟ್ಟ ವಾಸನೆ’-ಎಂದನೇ ಹೊರತು ಮತ್ತೆ ಏನೂ ಹೇಳಲಿಲ್ಲ. ಎಲ್ಲರೂ ತಿಂದಮೇಲೆ ಅವನೇ ಅಕ್ಕನನ್ನು ಶೆಡ್ಡಿನಿಂದ ಹೊರಗೆ ಕರೆದುಕೊಂಡು ಹೋಗಿ-‘ನಾನ್ ಹೇಳಿದ್ನೇನೆ?’ ಎಂದು ಕೇಳಿದ.
‘ಇಲ್ಲ, ನೀನು ಜಾಣ’-ಎಂದು ಮೆಚ್ಚುಗೆ ಹೇಳಿ ಅವಳು ಒಳಗೆ ಬಂದಳು.

– ೭ –

ಸುತ್ತಮುತ್ತ ಎಲ್ಲೆಲ್ಲಿಯೂ ಪ್ಲೇಗು ಅಡಗಿಹೋದುದರಿಂದ ಎಲ್ಲ ಹಳ್ಳಿಗಳವರೂ ಶೆಡ್ಡುಗಳನ್ನು ಬಿಟ್ಟು ಊರಿಗೆ ಹಿಂತಿರುಗಿದರು. ರಾಮಸಂದ್ರದವರೂ ಬಂದರು. ಊರಿಗೆ ಬಂದಿದ್ದಕ್ಕೂ ಹೊರಗೆ ಇದ್ದದ್ದಕ್ಕೂ ಹೆಚ್ಚು ವ್ಯತ್ಯಾಸವೇನೂ ಇರಲಿಲ್ಲ. ಅಲ್ಲಿಯೂ ಹೊಟ್ಟೆಗೆ ಇರಲಿಲ್ಲ; ಇಲ್ಲಿಯೂ ಇಲ್ಲ.

ನಂಜಮ್ಮನಿಗೆ ಒಂದು ಉಪಾಯ ಹೊಳೆಯಿತು. ಹಿಂದೆ ಅಪ್ಪಣ್ಣಯ್ಯ ಗುಡಿಸಲು ಕಟ್ಟಿ ಆಮೇಲೆ ಬೆಂಕಿ ಹಚ್ಚಿ ಸುಟ್ಟುಹಾಕಿದುದು ಗುಂಡೇಗೌಡರ ಹಿತ್ತಲಿನ ಜಾಗ. ಆ ವರ್ಷ ಬರ ಬಂದು ಎಲ್ಲೆಲ್ಲಿಯೂ ಬೆಳೆ ಇಲ್ಲದುದರಿಂದ ನಾಲೆ ಬಯಲನ್ನುಳಿದು ಇತರ ಕಡೆಗಳಲ್ಲೆಲ್ಲ ಸರ್ಕಾರದವರು ರೆವಿನ್ಯೂ ಕಂದಾಯವನ್ನು ವಜಾ ಮಾಡಿದರು. ಆ ವರ್ಷ ವಸೂಲಿಗೆ ಸಹ ಅವರು ಕುರುಬರಹಳ್ಳಿಗೆ ಹೋಗಿರಲಿಲ್ಲ. ವರ್ಷದ ಪೋಟಿಕೆಗೆ ವಜಾ ಹಾಕಿಕೊಳ್ಳಲು ಗುಂಡೇಗೌಡರು ಕೊಟ್ಟು, ಕೊಡಿಸಿದ್ದ ನೂರು ರೂಪಾಯಿಯ ದಿಕ್ಕೇನು?
ಚೆನ್ನಿಗರಾಯರು ಕಳೆದ ಎಂಟು ದಿನದಿಂದ ಊರಿನಲ್ಲಿರಲಿಲ್ಲ. ಎಲ್ಲಿಗೆ ಹೋಗಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ.
ನಂಜಮ್ಮನೇ ಕುರುಬರಹಳ್ಳಿಗೆ ಹೋಗಿ ಕೇಳಿದಳು: ‘ಗೌಡರೇ, ಈ ವರ್ಷ ಕಂದಾಯವಿಲ್ಲ. ನಿಮ್ಮ ದುಡ್ದನ್ನು ಮುಂದಿನ ವರ್ಷಕ್ಕೆ ಹಾಕ್ಕೊಳ್ತೀನಿ.’
‘ಆಯ್ತು ಬುಡವ್ವ, ಈಗ ಹಣ ವಾಪಸ್ ತಾ ಅಂದ್ರೆ ನೀನೆಲ್ಲಿ ತತ್ತೀಯಾ?
‘ಇನ್ನೂ ಒಂದು ಮಾತು. ನಿಮ್ಮ ಹಿತ್ಲು ಇದೆಯಲ್ಲ. ಅದಕ್ಕೆ ಬೇಲಿ ಹಾಕ್ಕಂಡು ನಾನು ಒಂದಿಷ್ಟು ದಂಟಿನ ಸೊಪ್ಪು ಬೆಳ್ಕತ್ತೀನಿ.’
‘ಬ್ಯಳ್ಕ. ನನ್ ಗಂಟೇನ್ ಹೋಯ್ತದೆ?’

ಮನೆಗೆ ಬಂದ ಮುತ್ತೈದೆ ಎಂದು ಗೌಡರು ಒಂದು ತೆಂಗಿನಕಾಯಿ ಒಂದು ಸೇರು ರಾಗಿಹಿಟ್ಟು ಕೊಟ್ಟು ಕಳುಹಿಸಿದರು. ಅವರನ್ನೂ ಅವರ ಮುಂದಿನ ಪೀಳಿಗೆಯನ್ನೂ ಹರಸುತ್ತಾ ಊರಿಗೆ ಬರುವಾಗ ಒಂದು ಯೋಚನೆ ಬಂತು. ಆ ವರ್ಷದ ಕಂದಾಯವನ್ನೇನೋ ಸರ್ಕಾರದವರು ವಜಾ ಮಾಡಿದಾರೆ. ಆದರೆ ಶ್ಯಾನುಭೋಗರ ಪೋಟಿಕೆಯಂತೂ ಬರುತ್ತೆ. ಯಜಮಾನರ ಕೈಗೆ ಪೂರ್ತಿ ಪೋಟಿಕೆ ಹಣ ಸಿಕ್ಕಿದರೆ ಅದು ಮುಗಿಯುವತನಕ ಅವರು ತಿಪಟೂರಿನ ಹೋಟೆಲನ್ನು ಬಿಡುವುದಿಲ್ಲ. ಹಣ ಅವರ ಕೈಗೆ ಸಿಕ್ಕದಂತೆ ಏನಾದರೂ ಮಾಡಬೇಕು. ಯಾರ ಸಹಾಯ ಕೇಳುವುದು? ಕಂಬನಕೆರೆಗೆ ಹೋಗಿ ಶೇಕ್ದಾರರಿಗೇ ಕೈ ಮುಗಿಯಬೇಕು. ಮತ್ತೆ ಯಾರೂ ಈ ವಿಷಯದಲ್ಲಿ ಸಹಾಯ ಮಾಡಲು ಅಸಮರ್ಥರು-ಎಂದು ತೀರ್ಮಾನಕ್ಕೆ ಬಂದಳು.

ಯಜಮಾನರು ಎಂಟು ದಿನದಿಂದ ಊರಿನಲ್ಲಿರಲಿಲ್ಲ. ಗಂಗಮ್ಮ ಅಪ್ಪಣ್ಣಯ್ಯರೂ ಇಲ್ಲ. ಅವರು ನಾಲೆ ಬಯಲು ಕಡೆ ಬತ್ತದ ದೇಶಾವರಿಗೆ ಹೋಗಿದ್ದಾರೆ. ದಿನವೂ ಸುಖವಾಗಿ ಊಟ ಸಿಕ್ಕುತ್ತದೆಂದು ಇವರೂ ತಾಯಿ ತಮ್ಮನನ್ನು ಕೂಡಿಕೊಂಡಿರಬಹುದು.

ಮರುದಿನ ರಾಮಣ್ಣನ ಜೊತೆ ಅವಳು ಕಂಬನಕೆರೆಗೆ ಹೋದಳು. ತಾಯಿ ಮಗ ಇಬ್ಬರೂ ಶೇಕ್ದಾರರ ಮನೆಗೆ ಹೋಗಿ ಕೈಮುಗಿದಾಗ ಅವರು-‘ಏನಮ್ಮಾ ಬಂದ್ರಿ? ಈ ವರ್ಷ ವಸೂಲಿಯೂ ಇಲ್ಲ, ಪಹಣಿಯೂ ಇಲ್ಲ. ಮುಂದಿನ ವರ್ಷ ಏನಾಗುತ್ತೋ ಏನೋ!’ ಎಂದರು.

ನಂಜಮ್ಮ ತನ್ನ ಗಂಡನ ವಿಷಯ ಹೇಳಿ, ಪ್ರತಿವರ್ಷವೂ ಕುರುಬರಹಳ್ಳಿಯ ಪಟೇಲ ಗುಂಡೇಗೌಡರು, ಮತ್ತೆ ಇಬ್ಬರ ಕಂದಾಯಕ್ಕೆ ಪೋಟಿಕೆ ವಜಾ ಕಟ್ಟಿಸುತ್ತಿದ್ದುದನ್ನು ತಿಳಿಸಿ, ಈ ವರ್ಷ ಕಂದಾಯ ರಿಮಿಶನ್ ಆಗಿರುವುದರಿಂದ ಉದ್ಭವಿಸಿರುವ ಸಮಸ್ಯೆಯನ್ನು ವಿವರಿಸಿದಳು.
‘ನೋಡಿ ಅಮ್ಮ, ಚೆನ್ನಿಗರಾಯರ ಕಥೆ ನಂಗೂ ಗೊತ್ತು. ಈ ಹೋಬಳೀಲಿ ಅವರ ವಿಷಯ ಮಾತಾಡದೇ ಇರೋ ಶ್ಯಾನುಭೋಗರೇ ಇಲ್ಲ. ಆದರೆ ಕಾನೂನು ಪ್ರಕಾರ ನಾನು ಏನೂ ಮಾಡೂಹಾಗಿಲ್ಲ. ಸಾಹೇಬರಿಗೆ ಒಂದು ಮಾತು ಹೇಳ್ತೀನಿ.’
‘ನೀವು ಏನಾದರೂ ಮಾಡಿ ಮಕ್ಕಳ ಅನ್ನ ಕೊಡಿಸಿಕೊಡಬೇಕು.’
ಶೇಕ್ದಾರರ ಹೆಂಡತಿ ಗಂಡನಿಗೆ ಹೇಳಿದರು: ‘ಇವತ್ತು ಹ್ಯಾಗೂ ತಿಪಟೂರಿಗೆ ಹೋಗ್ತೀರಲ್ಲ. ಇವರುನ್ನೂ ಕರ್ಕಂಡು ಹೋಗಿ ಸಾಹೇಬರಿಗೇ ತೋರಿಸಿ ನೀವೇ ಎಲ್ಲಾ ಹೇಳಿ. ಅವನ ಯೋಗ್ತಿ ಅವರಿಗೆ ಗೊತ್ತಾಗ್ಲಿ.’
ಹನ್ನೊಂದು ಗಂಟೆಯ ಮೊದಲಿಯಾರ್ ಮೋಟಾರಿನಲ್ಲಿ ತಮ್ಮೊಡನೆ ತಿಪಟೂರಿಗೆ ಬರುವಂತೆ ಶೇಕ್ದಾರರು ಕರೆದರು. ಮೋಟಾರು ಛಾರ್ಜಿಗೆ ತಾನು ದುಡ್ಡು ತಂದಿಲ್ಲವೆಂದು ಅವಳು ಜೀವ ಹಿಂಡಿಕೊಂಡು ಹೇಳಿದಮೇಲೆ, ‘ಪರವಾಗಿಲ್ಲ, ನಿಂಗೆ ನಾಲ್ಕಾಣೆ, ಹುಡುಗನಿಗೆ ಅರ್ಧ ಛಾರ್ಜು ಹಾಕ್ಕೋ ಅಂತೀನಿ. ಆರಾಣೆ ನಾನೇ ಕೊಡ್ತೀನಿ ಬನ್ನಿ.’

ತಾಯಿ ಮಗ ಇಬ್ಬರಿಗೂ ಅವರ ಮನೆಯಲ್ಲಿ ಉಪ್ಪಿಟ್ಟು ಕಾಫಿ ಆಯಿತು. ಮೋಟಾರು ಹತ್ತಿ ಹನ್ನೆರಡು ಗಂಟೆಯ ಹೊತ್ತಿಗೆ ಇವರು ತಾಲ್ಲೂಕ್ ಆಫೀಸಿಗೆ ಹೋದ ತಕ್ಷಣ ಶೇಕ್ದಾರರು ಹೋಬಳಿ ಗುಮಾಸ್ತನನ್ನು ವಿಚಾರಿಸಿದರು. ಅವನು ಹೇಳಿದ: ‘ರಾಮಸಂದ್ರ ಫಿರ್ಖಾದ ಪೋಟಿಕೆ ಕೊಟ್ಟು ಆಗಲೇ ಎಂಟು ದಿನವಾಯ್ತಲ್ಲ ಸಾರ್.’
ನಂಜಮ್ಮನ ಎದೆ ಧಸ್ಸಕ್ಕೆಂದಿತು. ‘ಈಗ ಏನು ಮಾಡೂದಮ್ಮ?’-ಶೇಕ್ದಾರರು ಕೇಳಿದರು.
‘ಹಾಗಾದ್ರೆ ಅವ್ರು ಈ ಊರಿನಲ್ಲೇ ಇರಬೌದು ಸ್ವಾಮಿ. ಪೂರ್ತಿ ದುಡ್ಡು ಇನ್ನೂ ಖರ್ಚಾಗಿರುಲ್ಲ. ನೀವು ದೊಡ್ಡ ಮನಸ್ಸು ಮಾಡಿ ಅವ್ರನ್ನ ಹೆದ್ರಿಸಿದ್ರೆ ಕೊಡ್ತಾರೆ.’
‘ಮಾಧವಭಟ್ರ ಹೋಟ್ಲಿನ ಹತ್ರಾನೇ ಇರ್ತಾರೆ ಸಾರ್ ಅವ್ರು. ನೀವು ಈಗ ಬೇಕಾದ್ರೆ ಅಲ್ಲಿಗೆ ಹೋಗಿ. ಒಳಗೆ ಕೂತು ಊಟ ಹೊಡೀತಿರ್ತಾರೆ.’-ಹೋಬಳಿಯ ಗುಮಾಸ್ತ ಹೇಳಿದ.
ಅರಳಿಕಟ್ಟೆಯ ಹತ್ತಿರ ಇದ್ದ ಹೋಟೆಲಿಗೆ ಮೂವರೂ ಹೋದರು. ನಂಜಮ್ಮ ರಾಮಣ್ಣ ಹೊರಗೆ ನಿಂತರು. ಶೇಕ್ದಾರರು ಊಟದ ಹಾಲಿನ ಬಾಗಿಲಿನಲ್ಲಿ ನಿಂತು ಬಗ್ಗಿ ನೋಡಿದರೆ ಗುಮಾಸ್ತನ ಮಾತು ನಿಜವಾಗಿತ್ತು. ಮಣೆಯ ಮೇಲೆ ಕೂತು ಅಗ್ರದ ಬಾಳೆ ಎಲೆಯಲ್ಲಿ ಅವರು ಆಲೂಗಡ್ಡೆ ಬದನೇಕಾಯಿ ನೀರುಳ್ಳಿಗಳ ಸಾಂಬಾರಿನಿಂದ ಕಲಸಿದ ರಾಶಿ ಹಾಕಿಕೊಂಡು ತುತ್ತು ಎತ್ತುತ್ತಿದ್ದರು. ಅನ್ನದ ರಾಶಿಯ ಸುತ್ತಲೂ ಪಲ್ಯ, ಗೊಜ್ಜು, ಉಪ್ಪಿನಕಾಯಿ, ಹಪ್ಪಳಗಳ ಸಾಮಂತಗುಪ್ಪೆಗಳಿದ್ದವು. ಶೇಕ್ದಾರರು ಅವರನ್ನು ಮಾತನಾಡಿಸಲಿಲ್ಲ. ಹೊರಗೆ ಬಂದು ಒಂದು ಕುರ್ಚಿಯ ಮೇಲೆ ಕುಳಿತರು. ಅರ್ಧ ಗಂಟೆಯ ಕಾಲ ಹೊರಗೆ ನಂಜಮ್ಮ ರಾಮಣ್ಣ, ಒಳಗೆ ಶೇಕ್ದಾರರು ಕಾಯುತ್ತಲೇ ಇದ್ದರು. ಭೋಜನ ಮುಗಿಸಿದ ಶ್ಯಾನುಭೋಗರು ಹೊರಗೆ ಬರುತ್ತಾರೆ: ಶೇಕ್ದಾರರನ್ನು ಕಂಡು ತಕ್ಷಣ ಕೈ ಮುಗಿದು- ‘ಕೈ ಮುಗಿದೆ ಮಹಾಸ್ವಾಮಿ’ ಎಂದರು.
‘ಏನು ಶ್ಯಾನುಭೋಗ್ರೇ ಬಂದಿದ್ರಿ?’
‘ಇ‌ಇ‌ಇ‌ಇ ಇಲ್ಲೇ ಒಂದಿಷ್ಟು ಕ್ಯ ಕ್ಯ ಕ್ಯಲ್ಸವಿತ್ತು ಮಾಸ್ವಾಮಿ.’
‘ಮೊದಲು ಅವರಿಗೆ ಊಟದ ದುಡ್ಡು ಕೊಡಿ. ಒಂದಿಷ್ಟು ಮಾತಿದೆ.’
ಚೆನ್ನಿಗರಾಯರು ಹತ್ತು ಆಣೆ ಕೊಟ್ಟು ಹೊರಗೆ ಬಂದರೆ ಹೆಂಡತಿ ಮಗ ನಿಂತಿದ್ದಾರೆ. ಶೇಕ್ದಾರರು, ‘ನೋಡಿ, ನಿಮ್ ಮ್ಯಾಲೆ ಪೋಲೀಸ್ ವಾರಂಟ್ ಇದೆ. ಅಮಲ್ದಾರ್ ಸಾಹೇಬ್ರು ನಿಮ್ಮುನ್ನ ಅರೆಸ್ಟ್ ಮಾಡಿಸೋಕೆ ಹೇಳಿದಾರೆ.’
ಚೆನ್ನಿಗರಾಯರು ನಡುಗಿಹೋದರು. ಶೇಕ್ದಾರರು: ‘ರೈತರ ಹತ್ರ ಪೋಟಿಗೇಲಿ ಕಟಾಯ್ಸ್ತೀನಿ ಅಂತ ಹೇಳಿ ಕಂದಾಯ ತಗಂಡು ಇಲ್ಲಿ ಬಂದು ಪೋಟಿಗೆ ಖರ್ಚು ಹಾಕಿಸಿ ಕಂಡಿದೀರಲ್ಲ, ಅದು ಕ್ರಿಮಿನಲ್ ಅಲ್ವೆ?’
‘ತಪ್ಪಾಯ್ತು ಸ್ವಾಮಿ, ಈ ಈ ಮುಂ…..’ಎಂದವರು ತಕ್ಷಣ ನಾಲಿಗೆ ಬಿಗಿಹಿಡಿದು ಕೇಳಿದರು:‘ಇವ್ಳು ಹೇಳಿದ್ಲಾ ಸ್ವಾಮಿ.’
‘ಯಾರಾದ್ರೂ ಹೇಳ್ಲಿ. ಸಾಹೇಬ್ರ ಆಫೀಸಿಗೆ ಬನ್ನಿ.’
‘ನಿ ನಿಮ್ ಕಾಲಿಗೆ ಬೀಳ್ತೀನಿ ಸ್ವಾಮಿ. ಪೋಲೀಸ್ನೋರ್ಗೆ ಹಿಡ್ಕೊಡ್ ಬ್ಯಾಡಿ. ನಾನು ಮರ್ಯಾದಸ್ಥ.’
‘ಆಯ್ತು, ನಿಮ್ಮ ಹತ್ರ ಈಗ ಎಷ್ಟು ರೂಪಾಯಿ ಇದೆ? ತೆಗೆದು ನನ್ನ ಕೈಲಿ ಕೊಡಿ. ಈ ನಿಮಿಷವೇ ತೆಗೀಬೇಕು. ಹುಂ.’
‘ಕೊಡ್ತೀನಿ ಸ್ವಾಮಿ. ವಳಗಡೆ ಇದೆ.’
‘ಆದ್ರೂ ಪರವಾಗಿಲ್ಲ. ಇಲ್ಲೇ ತೆಕ್ಕೊಡ್ ಬೇಕು.’
ಚೆನ್ನಿಗರಾಯರು ತಮ್ಮ ಅಂಗಿಯನ್ನು ಎತ್ತಿ ಕಚ್ಚೆಪಂಚೆಯ ಗಂಟಿನಿಂದ ನುಸಿಸಿ ಲಂಗೋಟಿಯ ಜೊತೆಗೆ ಕಟ್ಟಿದ ಅರಿವೆ ಬಳಲಿನ ಒಂದು ಗಂಟನ್ನು ತೆಗೆದರು. ಹತ್ತು ರೂಪಾಯಿಗಳ ಆರು ನೋಟು, ಐದರದು ಒಂದು ಇದ್ದವು. ಹಣವನ್ನು ಎಣಿಸಿದ ಶೇಕ್ದಾರರು ಕೇಳಿದರು: ‘ಉಳಿದದ್ದು ಏನಾಯ್ತು?’
‘ಖರ್ಚಾತು ಸ್ವಾಮಿ.’
‘ಮನೇಲಿ ಹೆಂಡ್ತಿ ಮಕ್ಳುನ್ನ ಉಪವಾಸ ಕೆಡವಿ ಇಲ್ಲಿ ಬಂದು ಹಂದಿ ತಿಂದ ಹಾಗೆ ತಿಂತೀಯಲ್ಲ, ನಾಚಿಕೆಯಾಗುಲ್ವೇನಯ್ಯ ನಿಂಗೆ? ಹಸಿದಿರೋ ನಾಯಿಗೆ ರೊಟ್ಟಿ ಹಾಕಿದ್ರೂ ಕಚ್ಕಂಡು ಹೋಗಿ ಅದರ ಮರಿಗೆ ಕೊಡುತ್ತೆ’-ಎಂದು ಬೈದ ಅವರು, ಹಣವನ್ನು ನಂಜಮ್ಮನ ಕೈಗೆ ಕೊಟ್ಟು ಚೆನ್ನಿಗರಾಯರಿಗೆ ಹೇಳಿದರು: ‘ಶ್ಯಾನುಭೋಗಿಕೆ ಲೆಕ್ಕ ಬರಿಯುಕ್ಕೆ ನಿಂಗೆ ಬರುಲ್ಲ. ಈಯಮ್ಮನೇ ಬರೆಯೋದು ಅಂತ ನಂಗೆ ಗೊತ್ತಿದೆ. ಇನ್ನೊಂದು ದಿನ ಏನಾದ್ರೂ ಹೀಗೆ ಹೆಂಡ್ತಿ ಮಕ್ಳಿಗೆ ಕಾಣದ ಹಾಗೆ ಪೋಟಿಗೆ ತಗಂಡು ತಿಂದ್ರೆ ನಿನ್ನ ಅರೆಸ್ಟ್ ಮಾಡಿಸಿಬಿಡ್ತೀನಿ. ನಾನು ವರ್ಗವಾಗಿ ಹೋದ್ರೂ ಮುಂದಿನ ಶೇಕ್ದಾರರಿಗೆ ಹೇಳಿ ಹೋಗ್ತೀನಿ. ಸಾಹೇಬರ ಕೈಲೂ ಹೇಳ್ತೀನಿ.’

ಚೆನ್ನಿಗರಾಯರು ಬೀದಿಯಲ್ಲಿಯೇ ಬಾಗಿ, ಬೂಟು ಹಾಕಿದ್ದ ಅವರ ಕಾಲು ಹಿಡಿದುಕೊಂಡು-‘ಸಾಹೇಬ್ರಿಗೆ ಹೇಳ್ ಬ್ಯಾಡಿ ಸ್ವಾಮಿ. ನಾನು ಬಡವ’ ಎಂದು ನಡುಗುತ್ತಾ ಕೇಳಿಕೊಂಡಮೇಲೆ ಶೇಕ್ದಾರರು, ‘ಅಮ್ಮಾ, ನಾಕು ಗಂಟೆಗೆ ಮೋಟಾರಿದೆ. ಅಷ್ಟರಲ್ಲಿ ನೀವು ಏನಾದ್ರೂ ಸಾಮಾನು ಗೀಮಾನು ತಗೂಳೂದಿದ್ರೆ ತಗಳಿ. ನಾನು ತಾಲ್ಲೂಕ್ ಆಫೀಸಿಗೆ ಹೋಗ್ ಬೇಕು. ಅದೇ ಬಸ್ಸಿನಲ್ಲಿ ನಾನೂ ಬರ್ತೀನಿ’ ಎಂದು ಹೇಳಿಹೋದರು. ಚೆನ್ನಿಗರಾಯರು ಮಾನಭಂಗವಾದವರಂತೆ ಅರಳೀಕಟ್ಟೆಯ ಮೇಲೆ ಹತ್ತಿ ತಲೆಯನ್ನು ಮಂಡಿಗಳ ಸಂದಿನಲ್ಲಿ ಬಗ್ಗಿಸಿಕೊಂಡು ಕುಕ್ಕರಗಾಲಿನಲ್ಲಿ ಕುಳಿತುಬಿಟ್ಟರು. ರಾಮಣ್ಣ, ‘ಅಮ್ಮ, ಹೋಟ್ಲಲ್ಲಿ ನಾನು ಯಾವತ್ತೂ ಊಟ ಮಾಡಿಲ್ಲ. ಇವತ್ತು ಇಕ್ಕಿಸು’ ಎಂದ.
‘ಊರಲ್ಲಿ ಅಕ್ಕಯ್ಯ, ವಿಶ್ವ ಉಪವಾಸ ಇವೆಯಲ್ಲಾ ಮರಿ. ಬೆಳಿಗ್ಗೆ ಒಂದೊಂದು ರೊಟ್ಟಿ ತಿಂದಿದ್ವು.’

ಅವನು ಉತ್ತರ ಹೇಳಲಿಲ್ಲ. ಮುಖ ಸಪ್ಪಗೆ ಮಾಡಿಕೊಂಡ. ಅಮ್ಮನ ಹೊಟ್ಟೆ ಚುರ್ ಎಂದಿತು. ಮಗನನ್ನು ಒಳಗೆ ಕರೆದುಕೊಂಡು ಹೋಗಿ-‘ಈ ಹುಡುಗ್ನಿಗೆ ಊಟಕ್ಕೆ ಎಷ್ಟು?’ ಎಂದು ಕೇಳಿದಳು. ಅವರು-‘ಆರಾಣೆ’ಎಂದರು. ‘ಇವನಿಗೆ ಇಕ್ಕಿ’-ಎಂದುದಕ್ಕೆ ಅವನು, ‘ಅಮ್ಮ, ನೀನು ಮಾಡದಿದ್ರೆ ನಂಗೂ ಬ್ಯಾಡ’ ಎಂದ. ಅವಳು ಕುಳಿತಳು. ದೊಡ್ಡವರಿಗೆ ಹತ್ತಾಣೆ. ಗಮ ಗಮ ಎನ್ನುವ ಹಾಗೆ ಅಡಿಗೆ ಮಾಡಿದ್ದರು. ‘ಸಾಮಾನೆಲ್ಲ ಇದ್ರೆ ಮನೇಲಿ ನಾವೂ ಹೀಗೇ ಮಾಡ್ಭೌದು. ನೀನು ದೊಡ್ಡೋನಾಗಿ ಸಂಬಳ ತರುವಾಗ ನಾನು ಚನ್ನಾಗಿ ಮಾಡಿ ಇಕ್ತೀನಿ’-ಎಂದು ಹೇಳುತ್ತಾ ಅವಳು ಊಟ ಮುಗಿಸಿದಳು. ಇಬ್ಬರಿಂದ ಒಂದು ರೂಪಾಯಿ ಆಯಿತು. ಮನೆಯಲ್ಲಿ ಮಕ್ಕಳಿಗೆಂದು ನಾಲ್ಕಾಣೆಗೆ ಖಾರಾ ಶೇವು, ನಾಲ್ಕಾಣೆಗೆ ಕಡಲೆಪುರಿ, ಎಂಟಾಣೆಗೆ ಮೈಸೂರು ಪಾಕುಗಳನ್ನು ಕಟ್ಟಿಸಿಕೊಂಡು ಅವಳು ಹತ್ತಿರವೇ ಇದ್ದ ಒಂದು ದೊಡ್ಡ ಅಂಗಡಿಗೆ ಹೋಗಿ ವಿಚಾರಿಸಿದರೆ ರಾಗಿಯ ಧಾರಣೆ ಪಲ್ಲಕ್ಕೆ ಮೂವತ್ತೇ ರೂಪಾಯಿ. ಅದೇ ರಾಮಸಂದ್ರದಲ್ಲಿ ಐವತ್ತಕ್ಕೆ ಮಾರುತ್ತಿತ್ತು. ಅರವತ್ತು ರೂಪಾಯಿ ಕೊಟ್ಟು ಎರಡು ಪಲ್ಲ ರಾಗಿ ಕೊಂಡು, ಅದನ್ನು ಮೋಟಾರಿಗೆ ಹಾಕಿಸಿಕೊಡುವಂತೆ ಅಂಗಡಿಯವನನ್ನೇ ಕೇಳಿಕೊಂಡಳು. ಅದೇ ಬಸ್ಸಿಗೆ ಬಂದ ಶೇಕ್ದಾರರು ಹೇಳಿದ ಮೇಲೆ ಮೋಟಾರಿನವನು ರಾಗಿಯ ಮೂಟೆಗಳಿಗೆ ಛಾರ್ಜು ಮಾಡಲಿಲ್ಲ. ಚೆನ್ನಿಗರಾಯರು ಎಲ್ಲಿ ಹೋದರೋ ಯಾರಿಗೂ ಗೊತ್ತಾಗಲಿಲ್ಲ.

ಊರಿಗೆ ಒಂದು ಮೈಲಿ ದೂರದ ರಸ್ತೆಯಲ್ಲಿ ರಾಗಿಯ ಮೂಟೆಗಳನ್ನು ಇಳಿಸಿ ಮೋಟಾರು ಮುಂದೆ ಹೋದಾಗ, ರಾಮಣ್ಣ ಊರಿಗೆ ಹೋಗಿ ಕುಳವಾಡಿಗೆ ಹೇಳಿ ಒಂದು ಗಾಡಿ ಹೂಡಿಸಿಕೊಂಡು ಬಂದ. ಅದುವರೆಗೂ ಮೂಟೆಯನ್ನು ಕಾಯುತ್ತಾ ನಂಜಮ್ಮ ರಸ್ತೆಯ ದಡದಲ್ಲೇ ಇದ್ದಳು.
ಚೆನ್ನಿಗರಾಯರು ಮರುದಿನ ಕಾಲುನಡಿಗೆಯಲ್ಲಿ ಒಂದು ಊರು ಸೇರಿದರು. ನಂಜಮ್ಮ ಅವರನ್ನು ಏನೂ ಅನ್ನಲಿಲ್ಲ. ರಾಮಣ್ಣ ಅಪ್ಪನನ್ನು ಛೇಡಿಸುವ ಮಾತನಾಡಿದಾಗ ಅವಳೇ-‘ಮಗೂ ಅವರು ಏನೇ ಮಾಡಿದರೂ ಹೆತ್ತ ತಂದೆ. ನೀನು ಜಾಣ. ಹಾಗೆಲ್ಲ ಅವರನ್ನ ಅನ್ಬಾರ್ದು’ ಎಂದು ಹೇಳಿ ಸುಮ್ಮನಾಗಿಸಿದಳು.

ಮನೆಗೆ ಎರಡು ಪಲ್ಲ ರಾಗಿ ಬಂದದ್ದು ಎಲ್ಲರಿಗೂ ಸ್ವರ್ಗದ ಕಾಮಧೇನುವೇ ಬಂದಷ್ಟು ಸಂತೋಷ. ಹೊಟ್ಟೆಗಿಲ್ಲದೆ ನಂಜಮ್ಮ ಒಣಗಿದ ಹತ್ತಿಯ ಗಿಡದಂತೆ ಆಗಿದ್ದಳು. ತುಂಬಿಕೊಂಡು ಬೆಳೆಯುತ್ತಿದ್ದ ಪಾರ್ವತಿ ರಾಮಣ್ಣರು ಸೀಕಲು ಕೋತಿಗಳಾಗಿದ್ದರು. ವಿಶ್ವ ಮೊದಲಿನಿಂದ ತುಂಬ ದಷ್ಟಪುಷ್ಟನಾದ ಹುಡುಗ. ಈಗ ಅವನನ್ನೂ ನೋಡುವಂತಿರಲಿಲ್ಲ. ಇದು ಅವರೊಬ್ಬರ ಪಾಡಲ್ಲ. ಊರಿನಲ್ಲಿ ಮುಕ್ಕಾಲು ಜನರ ಸ್ಥಿತಿ ಹೀಗೆಯೇ ಆಗಿತ್ತು. ಉಳಿದ ಕಾಲುಭಾಗ ಚನ್ನಾಗಿದ್ದರು. ಇವರ ಮನೆಯಲ್ಲಿ ಚೆನ್ನಿಗರಾಯರ ಕಾಯ ಸ್ವಲ್ಪ ಕಂದಿದ್ದರೂ ಇದ್ದದ್ದರಲ್ಲಿ ಚನ್ನಾಗಿತ್ತು.

ಹೊಟ್ಟೆ ತುಂಬ ತಿಂದರೆ ರಾಗಿ ಎರಡು ತಿಂಗಳಿಗೆ ಚಟ್ಟೆದ್ದುಹೋಗುತ್ತೆ. ದಿನಕ್ಕೆ ಎರಡು ಸೇರಿಗಿಂತ ಹೆಚ್ಚು ಖರ್ಚು ಮಾಡಕೂಡದೆಂದು ನಂಜಮ್ಮ ನಿರ್ಧರಿಸಿದಳು. ಈ ವರ್ಷ ಇನ್ನೂ ಮಳೆಯಾಗಿಲ್ಲ; ಮುಂದೆ ಕಾಲ ಇದಕ್ಕಿಂತ ಕೆಡಬಹುದು ಎಂದು ಯೋಚಿಸಿದ ಅವಳು ಪಾರ್ವತಿಗೆ ಹೇಳಿದಳು: ‘ಬೆಳಗ್ಗೆ ಸಮನಾಗಿ ಏಳು ರೊಟ್ಟಿ ಮಾಡು. ಎಲ್ಲ ರೊಟ್ಟಿಯೂ ಒಂದೇಸಮಕ್ಕಿರಬೇಕು. ಎಲ್ಲರಿಗೂ ಒಂದೊಂದು ರೊಟ್ಟಿ. ರಾಮಣ್ಣ ಒಂದು ತಗಂಡು ಹೋಗ್ತಾನೆ. ಮಧ್ಯಾಹ್ನ ವಿಶ್ವ, ನೀನು, ಅರ್ಧ ಅರ್ಧ ತಿನ್ನಿ. ಇನ್ನು ರಾತ್ರಿತನಕ ಏನೂ ಇಲ್ಲ. ರಾತ್ರಿ ಒಂದು ಸೇರು ರಾಗಿ ಬೀಸಿ ಹಿಟ್ಟು ಹುಯ್ದು ಸಮನಾಗಿ ಐದು ಮುದ್ದೆ ಕಟ್ಟು. ಯಾರಿಗೆ ಸಾಕಾದರೂ ಅಷ್ಟೇ ಬೇಕಾದರೂ ಅಷ್ಟೇ.’

ಈ ವ್ಯವಸ್ಥೆಯ ಊಟ ಹುಡುಗರಿಗೆ ಹೇಗೋ ಹೊಟ್ಟೆ ತುಂಬಿದಂತೆ ಆಗುತ್ತಿತ್ತು. ನಂಜಮ್ಮ ಹಸಿವು ತಡೆಯುವುದಕ್ಕೆ ಸಿದ್ಧಳಾಗಿಯೇ ಇದ್ದಳು. ಚೆನ್ನಿಗರಾಯರ ಹೊಟ್ಟೆಗೇ ತಾಪತ್ರಯ. ಅವರು ಹೆಂಡತಿಯ ಮೇಲೆ ರೇಗಿದಾಗ, ರಾಮಣ್ಣ ಪಾರ್ವತಿಯರೇ ತಿರುಗಿಬಿದ್ದರು. ಜೊತೆಗೆ ಕಿರಿಯವನಾದ ವಿಶ್ವ-‘ನೀನು ಅಣ್ಣನಲ್ವೆ, ಅಕ್ಕಿ ತಂದ್ಹಾಕು. ನಾನು ಅನ್ನ ಉಣ್ಣಬೇಕು’ ಎಂದು ಕೇಳಿತು.
‘ಇವರವ್ವುನಾ….. ಹಿಡಕಂಡು’-ಎಂದು ಬೈಯುತ್ತಾ ಅವರು ಏರಿಯ ಕಡೆಗೆ ಹೊರಟು ಹೋದರು.
ಅಡಿಗೆ ಮತ್ತು ಇತರ ಕೆಲಸಗಳನ್ನು ಪೂರ್ತಿಯಾಗಿ ಪಾರ್ವತಿಯ ಮೇಲೆ ಬಿಟ್ಟು ನಂಜಮ್ಮ ಹಿತ್ತಿಲನ್ನು ಒಂದು ಹದಕ್ಕೆ ತರಲು ನಿಂತಳು. ಅಪ್ಪಣ್ಣಯ್ಯ ಸುಟ್ಟುಹಾಕಿದ ಮೇಲೆ ಮಸಿ ಕಟ್ಟಿದ ಗೋಡೆಗಳು ಹಾಗೆಯೇ ನಿಂತಿದ್ದವು. ಅವುಗಳನ್ನೆಲ್ಲ ಹಾರೆಯಿಂದ ಉರುಳಿಸಿ ಕೆಡೆವಿದ ಮೇಲೆ ಅವಳು ಇಡೀ ಹಿತ್ತಿಲಿಗೆ ಬೆಳಿಗ್ಗೆ ಸಂಜೆ ಬಾವಿಯಿಂದ ನೀರು ಸೇದಿಹುಯ್ದಳು. ಒಂದು ವರ್ಷದಿಂದ ನೀರನ್ನೇ ಕಾಣದ ನೆಲದ ಒಂದೊಂದು ಮೊಳ ಜಾಗವೂ ಬಿಂದಿಗೆ ಬಿಂದಿಗೆ ನೀರು ಕುಡಿಯಿತು. ನೆಲ ಮೆದುವಾದ ಮೇಲೆ, ತಾನೇ ಒಂದು ಕಡೆಯಿಂದ ಅಗೆಯಲು ಶುರುಮಾಡಿದಳು. ಹೊಲೆಯರ ಬೇಲೂರನಿಗೆ ಎರಡು ರೂಪಾಯಿಕೊಟ್ಟು ಒಂದು ಗಾಡಿ ಬಿದಿರುಮುಳ್ಳು ತರಿಸಿದಳು. ಹಿತ್ತಲಿನ ನಾಲ್ಕು ಕಡೆಗೂ ಸಾಲಿಗೆ ಕಳ್ಳೀಕೊಂಬೆಗಳನ್ನು ನೆಟ್ಟು ಬಿಗಿಯಾಗಿ ಎರಡು ವರಸೆ ಬಿದಿರುಮುಳ್ಳು ಕೊಟ್ಟು ಈಚಲು ಶಬ್ಬೆಯಿಂದ ಕಟ್ಟಿದಳು. ನಡುವೆ ತೆಳ್ಳಗೆ ಗೊಬ್ಬಳಿಯ ಮುಳ್ಳು ಸೇರಿಸಿ ಬೇಲಿಯನ್ನು ಬಂದೋಬಸ್ತ್ ಮಾಡಿ ಒಂದು ಬಾಗಿಲು, ತದ್ದಲು ಕಟ್ಟಿ ಬೀಗ ಹಾಕುವಂತೆ ಮಾಡಿದಳು. ಒಂದು ಸ್ವಲ್ಪ ಜಾಗಕ್ಕೆ ದಂಟು, ಇನ್ನು ಸ್ವಲ್ಪಕ್ಕೆ ಕೀರೇಗಿಡಗಳನ್ನು ಹಾಕಿದ ಮೇಲೆ, ತಾನೇ ಕಂಬನಕೆರೆಯ ಸಂತೆಗೆ ಹೋಗಿ ತಿಂಗಳು ಹುರುಳಿ, ಬದನೆ ಬೀಜಗಳನ್ನು ತಂದಳು. ಬದನೆಯ ಒಟ್ಟಲುಹಾಕಿ ಗುಣಿ ತೋಡಿ ತಿಂಗಳುಹುರುಳಿಯ ಬೀಜ ಬಿತ್ತಿದಳು. ಹೊಟ್ಟೆಗಿಲ್ಲದಿದ್ದರೆ ತರಕಾರಿಯನ್ನಾದರೂ ಬೆಳೆಯಬೇಕು. ಬಾವಿಯ ಗಂಗಮ್ಮ ತಾಯಿ ಮಾತ್ರ ಕಣ್ಮರೆಯಾಗಿಲ್ಲ-ಎಂದು ಬೆಳಿಗ್ಗೆ ಸಂಜೆ ನೀರು ಸೇದಿ ಹುಯ್ಯುತ್ತಿದ್ದಳು.

ಈ ನಡುವೆ ಸರ್ವಕ್ಕನ ಮಗಳು ರುದ್ರಾಣಿಗೆ ವಾಂತಿ ಭೇದಿ ತಗುಲಿತು. ಎರಡನೇ ದಿನದಲ್ಲಿ ಸುಸ್ತಾಗಿ ಹುಡುಗಿ ಸತ್ತೂ ಹೋದಳು. ಅವಳಿಗೆ ವಾಂತಿ ಭೇದಿಯಾಗಿದ್ದ ವಿಷಯ ನಂಜಮ್ಮನಿಗೂ ತಿಳಿದಿರಲಿಲ್ಲ; ಯಾರಿಗೂ ಗೊತ್ತಿರಲಿಲ್ಲ. ಸುದ್ದಿ ತಿಳಿದ ತಕ್ಷಣ ನಂಜಮ್ಮ ಸರ್ವಕ್ಕನ ಮನೆಗೆ ಹೋದರೆ, ಅಷ್ಟರಲ್ಲಿ ಶವವನ್ನು ದುಪ್ಪಟಿಯ ಮೇಲೆ ಹಾಕಿ ನಾಲ್ಕು ಜನ ನಾಲ್ಕು ಮೂಲೆಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ರೇವಣ್ಣಶೆಟ್ಟಿ ತಲೆತಗ್ಗಿಸಿ ಮಗಳ ಹೆಣದ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅವರ ಜನರ ಪದ್ಧತಿಯಂತೆ ಹೆಣದ ಹಿಂದೆ ಒಬ್ಬರು ಹಿಡಿ ಹಿಡಿ ಪುರಿ ಎರಚಿಕೊಂಡು ನಡೆಯುತ್ತಿದ್ದರು. ಸರ್ವಕ್ಕ ಮನೆಯ ಹೊಸಿಲಿಗೆ ಹಣೆ ಚಚ್ಚಿಕೊಂಡು ಕಣ್ಣೀರು ಸುರಿಸುತ್ತಿದ್ದಳೇ ಹೊರತು ಗಟ್ಟಿಯಾಗಿ ಅಳುತ್ತಿರಲಿಲ್ಲ.

ರುದ್ರಾಣಿ ಪಾರ್ವತಿಗಿಂತ ನಾಲ್ಕು ವರ್ಷಕ್ಕೆ ದೊಡ್ಡವಳು. ಮಾಡಿದ್ದರೆ ಮದುವೆಯಾಗಿ ಇಷ್ಟರಲ್ಲಿ ಒಂದೆರಡು ಮಕ್ಕಳ ತಾಯಿಯಾಗಬೇಕಾಗಿದ್ದ ಹುಡುಗಿ. ಸರ್ವಕ್ಕನ ಹಾಗೆಯೇ ದೊಡ್ಡ ಹೆಣ್ಣು, ತುಂಬಿದ ತಲೆಕೂದಲು. ಹಿಂದಿನಿಂದ ನೋಡಿದರೆ ತಾಯಿ ಮಗಳಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ನಂಜಮ್ಮ ಹೋಗಿ ಹತ್ತಿರ ಕೂತು ಸೂತಕದ ಸರ್ವಕ್ಕನ ಕೈಹಿಡಿದು-‘ತಲೆ ಚಚ್ಚಿಕಂಡ್ರೆ ಏನು ಬಂತು? ಹಾಗೆ ಮಾಡಬ್ಯಾಡ ಕಣ್ರಿ. ಏನಾಗಿತ್ತು ಮಗೀಗೆ?’ ಎಂದು ಸಮಾಧಾನ ಹೇಳಿದುದಕ್ಕೆ ಮಗಳನ್ನು ಕಳೆದುಕೊಂಡ ತಾಯಿ, ‘ಬಂದಿತ್ತು ಅವರಪ್ಪನ ರ್‍ವಾಗ’ ಎಂದವಳೇ ಆ ದುಃಖದಲ್ಲೂ ನಾಲಿಗೆ ಕಚ್ಚಿಕೊಂಡಳು.

ಹೆಣವನ್ನು ಮಣ್ಣುಮಾಡಿ ರೇವಣ್ಣಶೆಟ್ಟಿ ಮನೆಗೆ ಹಿಂತಿರುಗುವವರೆಗೂ ನಂಜಮ್ಮ ಅಲ್ಲಿ ಕೂತಿದ್ದಳು. ಸುತ್ತಮುತ್ತ ಎಷ್ಟೋ ಜನ ಹೆಂಗಸರೂ ಗಂಡಸರೂ ಬಂದು ನಿಂತಿದ್ದರು. ರೇವಣ್ಣಶೆಟ್ಟಿ ಬಂದತಕ್ಷಣ ಹೆಂಗಸರೆಲ್ಲ, ರೊಂಯ್ ಎಂದು ಬೀಸಿಬಂದ ಕಲ್ಲಿಗೆ ಹಕ್ಕಿಗಳು ಪ್ರವೃತ್ತಿಮಾತ್ರದಿಂದ ಹೆದರಿ ಹಾರುವಂತೆ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. ಗಂಡಸರು ಮಾತ್ರ ಉಳಿದರು. ನಂಜಮ್ಮನೂ ತನ್ನ ಮನೆಗೆ ಬಂದಳು. ಸರ್ವಕ್ಕನ ಮನೆಗೂ, ನಂಜಮ್ಮ ತರಕಾರಿ ಹಾಕಿದ್ದ ಹಿತ್ತಲಿಗೂ ಹತ್ತಿರ. ಸರ್ವಕ್ಕನನ್ನು ಅಲ್ಲಿಗೇ ಕರೆದುಕೊಂಡು ಹೋಗಿ ಕೂರಿಸಿಕೊಂಡು ಮರುದಿನದಿಂದ ನಂಜಮ್ಮ ಸಮಾಧಾನ ಹೇಳುತ್ತಿದ್ದಳು. ಜೀವ ಯಾರಿಗೆ ಶಾಶ್ವತ? ಜವರಾಯ ಯಾವತ್ತು ಬಾ ಅಂದ್ರೂ ಹೋಗಬೇಕು. ತಾಯಿ ಮಗಳು, ನಾವು ಹೆತ್ತದ್ದು. ನಮ್ಮನ್ನು ಹೆತ್ತವರು, ಅನ್ನುವುದೆಲ್ಲ ಬರೀ ಮಾಯೆ-ಎಂದು ತನಗೆ ತಿಳಿದಂತೆ ಅವಳು ಎಷ್ಟು ಹೇಳಿದರೂ ಸರ್ವಕ್ಕನ ದುಃಖ ಆರಲಿಲ್ಲ. ಅವಳು ತಾನಾಗಿಯೇ ನಂಜಮ್ಮನ ಹಿತ್ತಿಲಿಗೆ ಬಂದು ಕೂರುವಳು. ಒಂದು ಮಾತೂ ಆಡುತ್ತಿರಲಿಲ್ಲ. ನಂಜಮ್ಮ ತನ್ನ ಮನೆಯ ಬಾವಿಯಿಂದ ನೀರು ಸೇದಿ, ಸೊಂಟದಲ್ಲೊಂದು ಬಲಗೈಯಲ್ಲೊಂದು ಬಿಂದಿಗೆ ಹಿಡಿದು ತಂದು ಸೊಪ್ಪಿನ ಮಡಿ, ಬದನೆಯ ಗುಳಿಗಳಿಗೆ ಹಾಕುವಳು. ನಡುವೆ ಅವಳು ಮಾತನಾಡಿಸಿದರೂ ಸರ್ವಕ್ಕ ಮಾತನಾಡುತ್ತಿರಲಿಲ್ಲ. ಒಂದು ದಿನ ಸಂಜೆ ನಂಜಮ್ಮ ಸೊಪ್ಪಿನ ಮಡಿಗೆ ನೀರು ಹಾಕಿದ ಮೇಲೆ ಸರ್ವಕ್ಕ ಎಂದಳು: ‘ಹುಟ್ಟಿಸಿದ ಅಪ್ಪನೇ ಮಗಳನ್ನು ಕೊಂದ್ರೆ ಹಣೇಬರಾವು ಏನು ಮಾಡ್ತೈತ್ರೀ?’
‘ಹಾಗಂದ್ರೇನು ಸರ್ವಕ್ಕ?’
‘ಓಕ್ಕಳ್ಳಿ ಬುಡಿ.’
‘ಅದೇನು ಹೇಳಿ. ನಾನು ಯಾರ ಕೈಲೂ ಹೇಳುಲ್ಲ. ನಿಮ್ಮಾಣೆ.’
‘ಕೋಲ್ಟ್ನಲ್ಲಿ ಸಾಕ್ಷಿ ಏಳಿ ನಮ್ಮೋರು ಎಲ್ಡು ಪಲ್ಲ ರಾಗಿ ಇಪ್ಪತ್ತೈದು ಸೇರು ಅಕ್ಕಿ, ಯಲ್ಲಾ ತಂದ್ರು ಅಂತ ನಾನು ನಿಮಗೆ ಒಂದೀಟು ರಾಗಿ ತಂದ್ ಕೊಡಲಿಲ್ವರಾ?’
‘ಹೂಂ.’
‘ಅದು ಕೋಲ್ಟಿಂದಲ್ವರಂತೆ. ಆ ಪರದೇಶಿ ನನ್ಮಗ ಕಾಶಿಂಬಡ್ಡಿ, ಅವನ ಹೆಂಡ್ತಿ ಮಕ್ಳು ಯಲ್ಲಾ ಮಲೆಯಾಳದಲ್ಲವ್ರಂತೆ. ಅವ್ನ ತಾವ ನಮ್ಮೋರು ದುಡ್ಡು ಇಸ್ಕಂಡ್ರಂತೆ.’
‘ಇಸ್ಕಂಡ್ರೇನಾಯ್ತು?’
‘ನಾನೂ ನೀವೂ ಶೆತ್ತೆಗ್ಯಡ್ಡೆ ಕೀಣಾಕೆ ಕೆರೆಗೆ ಓಯ್ತಿರ್‍ಲಿಲ್ವರಾ? ಆಗ ನಮ್ಮನೆಯೋರೇ ಅವ್ನುನ್ನ ನಮ್ಮ ಶೆಡ್ಡಿಗೆ ಕರ್ಕಂಡ್ ಬತ್ತಿದ್ರಂತೆ. ರುದ್ರಾಣಿ ಬಸುರಿಯಾಗ್ಬಿಟ್ಳು.’
ಸರ್ವಕ್ಕ ಹೇಳಿದುದನ್ನು ಸರಿಯಾಗಿ ಕಲ್ಪಿಸಿಕೊಳ್ಳುವುದು ನಂಜಮ್ಮನಿಗೆ ಕಷ್ಟವಾಯಿತು. ಈ ಸಲ ಗ್ರಾಮಕ್ಕೆ ಬಂದಿದ್ದ ಬರದಲ್ಲಿ ಎಷ್ಟೋ ಜನ ಹೆಂಗಸರು ಮಾನ ಬಿಟ್ಟು ಹೊಟ್ಟೆಗೆ ಸಂಪಾದಿಸಿದರೆಂಬುದನ್ನು ಅವಳು ಕೇಳಿದ್ದಳು. ಆದರೆ ತಂದೆಯೇ ಮಗಳಿಂದ ಹೀಗೆ ಮಾಡಿಸುತ್ತಾನೆಂಬುದನ್ನು ಅವಳು ತಕ್ಷಣ ನಂಬಲಾರದಾದಳು.
‘ಕೈ ಹಿಡಿದ ಗಂಡನ ಮ್ಯಾಲೆ ನಾನ್ ಸುಳ್ ಏಳ್ತೀನೇನ್ರೀ? ಅಪ್ಪ ಅನ್ನಿಸ್ಕಂಡ್ ಸೂಳೆ ಮಗ ಹಿಂಗ್ ಏಳ್ದ ಅಂತ ಅವ್ಳು ಹ್ಯಂಗೆ ಒಪ್ಕಂಡ್ಳು? ಶಿವಗೆರೆ ಕಡೆಯೋರೇ ಕೇಳಾಕ್ ಬಂದಿದ್ರು. ಮದ್ವೆ ಮಾಡಾನ ಅಂತ ನಾನು ಏಟೇಟು ಏಳ್ದೆ. ಅನ್ನ ಖರ್ಚಿಗೆ ದುಡ್ಡಿಲ್ಲ ತಡಿ, ಆಮ್ಯಾಲೆ ಮಾಡಾನ ಅಂತ ಇವ್ರೇ ಅಂದಿದ್ರು.’
‘ಮುಂದೇನಾಯ್ತು?’
“ನಂಗ್ ಗೊತ್ತೇ ಇಲ್ಲ. ಮೂರು ತಿಂಗ್ಳು ಆದಮ್ಯಾಲೆ ಗೊತ್ತಾಯ್ತು. ಮುಂಡೆ ನಿಂದೇ ತೆಪ್ಪು ಅಂತ ಇವ್ರು ಅವ್ಳುನ್ನೇ ಹ್ವಡದ್ರು. ‘ಇಲ್ಲ ಕಣವ್ವ. ಅಪ್ಪಾಜಿಯೇ, ಏನೂ ಪರವಾಗಿಲ್ಲ ಹ್ಯೆದರ್ಕಾಬ್ಯಾಡ ಅಂತ ಏಳಿ ಕಾಶಿಂಬಡ್ಡಿನ ವಳಕ್ಕೆ ಬುಟ್ಟು, ಅವ್ರು ಈಚೆಕಡೆ ಬಾಕ್ಲು ಆಕ್ಕಂಡ್ರು’ ಅಂತ ಅವ್ಳು ಆಣೆ ಮಾಡಿದ್ಲು. ಇನ್ನೇನ್ ಮಾಡಾಕಾಯ್ತದೆ? ಇವ್ರೇ ಆ ನರಸೀ ತವ ಔಸ್ತಿ ತಂದು ಮೂರು ದಿನ ಕುಡಿಸಿದ್ರು. ಬರೀ ನೆತ್ಲ ಹ್ವಂಡಾಕೆ ಶುರುವಾಯ್ತು. ನಿಲ್ಲೇ ಇಲ್ಲ. ನನ್ಮಗು ಸತ್ಹೋಗ್ ಬುಡ್ತು.”
ನಂಜಮ್ಮ ಮೂಕಳಾದಳು. ಸರ್ವಕ್ಕ ಮತ್ತೆ ಒಂದು ಸಲ ಗಟ್ಟಿಯಾಗಿ ಅತ್ತು ಕಣ್ಣೀರು ಒರೆಸಿಕೊಳ್ಳುತ್ತಿರುವಾಗ ನಂಜಮ್ಮನ ಯೋಚನೆಯು ಪಾರ್ವತಿಯ ಕಡೆಗೆ ಹೋಯಿತು. ಅವಳಿಗಾಗಲೇ ಹನ್ನೆರಡು ವರ್ಷ ತುಂಬುವುದರಲ್ಲಿದೆ. ಈ ಬರ ಬರದೆ ಹೊಟ್ಟೆಗೆ ನೆಮ್ಮದಿಯಾಗಿದ್ದರೆ ಇಷ್ಟರಲ್ಲಿಯೇ ಮೈನೆರೆಯುತ್ತಿದ್ದಳೇನೋ. ಅಕಸ್ಮಾತ್ ಮೊದಲೇ ನೆರೆದು ಕೂತರೆ ಗತಿ ಏನು? ಇಂತಹ ದುರ್ಭಿಕ್ಷ ಬಂದಿರುವಾಗ ಮದುವೆ ಮಾಡುವುದು ಹೇಗೆ? ಎಷ್ಟೇ ಬಡತನದ ಮದುವೆ ಎಂದರೂ, ಹುಲ್ಲು ನೀರು ಇರುವ ಒಂದು ಗೊಂತು ಹುಡುಕಿ ಕಟ್ಟಬೇಕೆಂದರೆ ಏಳು ಎಂಟು ರೂಪಾಯಿಯಾದರೂ ಬೇಕು. ಬೆಳಿಗ್ಗೆ ಸಂಜೆಯ ಹೊಟ್ಟೆಗೇ ಸಂಕಟ ಬಂದಿರುವ ಈ ಕಾಲದಲ್ಲಿ ಎಂಟು ನೂರು ರೂಪಾಯಿ ಎಲ್ಲಿಂದ ಬಂದೀತು?
‘ನಂಜಮ್ಮಾರೇ, ನೀವು ಯಾರ ಕುಟ್ಟೂ ಏಳ್ಕೂಡ್ದು.’
‘ದೇವರಾಣೆಗೂ ಹೇಳುಲ್ಲ ಸರ್ವಕ್ಕ. ನಿಮ್ಮ ಮರ್ಯಾದೆ ಬ್ಯಾರೆಯಲ್ಲ ನನ್ನ ಮರ್ಯಾದೆ ಬ್ಯಾರೆಯಲ್ಲ.’
‘ಈ ಗಂಡನ ಸವಾಸ ಬ್ಯಾಡ, ಬುಟ್ ತೌರೂರಿಗೆ ಓಗಿಬಿಡಾನಾ ಅನ್ನುಸ್ತೈತೆ. ಆದ್ರೆ ಅಲ್ಲಿ ಓಗಿ ಅತ್ತಿಗೇರ ಕೈಕೆಳಗೆ ಬೀಳ್ಬೇಕು. ನಾವು ಯಾಕೆ ಬದುಕಿದೀವಿ ನೀವಾರ ಹೇಳಿ.’
ಸರ್ವಕ್ಕ ಈಗ ಕೇಳಿದ ಪ್ರಶ್ನೆಯನ್ನು ನಂಜಮ್ಮ ಈ ಹಿಂದೆ ಅನೇಕ ಸಲ ತನ್ನನ್ನು ತಾನೇ ಕೇಳಿಕೊಂಡಿದ್ದಳು. ತನ್ನ ಜೀವನದಲ್ಲಾದರೂ ಏನಿತ್ತು. ಗಂಡನ ಪ್ರೀತಿಯೇ? ಅತ್ತೆಯ ಅಂತಃಕರಣವೇ? ತೌರಿನ ಸುಖವೆ? ಆದರೂ ತಾನು ಸಾಯದೆ ಬದುಕಿದೆ. ಮಕ್ಕಳಾದವು. ಈಗ ತಾನು ಯಾಕೆ ಬದುಕಿದ್ದೀನಿ ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಮಕ್ಕಳು ಎದುರಿಗೆ ನಿಲ್ಲುತ್ತವೆ. ಹಿತ್ತಿಲಿನ ತರಕಾರಿಗೆ ನೀರು ಹುಯ್ದು, ಗಂಡ ಕದ್ದು ಪೋಟಿಕೆ ಹಣ ತಿನ್ನದಂತೆ ಕಾವಲು ಕಾಯ್ದು, ಬೆಳಿಗ್ಗೆ ಸಂಜೆ ಮುತ್ತಗದೆಲೆ ಹಚ್ಚಿ ಅವಕ್ಕೆ ಒಂದು ರೊಟ್ಟಿ ಅರ್ಧ ಮುದ್ದೆ ಹಿಟ್ಟು, ಅದೂ ಇಲ್ಲದಿದ್ದರೆ ಒಂದು ಹಿಡಿ ಸೊಪ್ಪು, ಇಷ್ಟನ್ನು ತೂತು ಬಿದ್ದು ಅರಿವೆ ಬಳಲು ಹಾಕಿ ಮುಚ್ಚಿದ ಅಲ್ಯೂಮಿನಿಯಂ ತಟ್ಟೆಗೆ ಬಡಿಸುವುದಕ್ಕೆ ಮಾತ್ರವೇ ಬದುಕಿರಬೇಕೆ? ಅಷ್ಟೇ, ಇನ್ನೇನುಂಟು ಬದುಕಿನಲ್ಲಿ?-ಎಂದುಕೊಂಡಳು.

– ೮ –

ಪ್ಲೇಗಿನ ಸುಂಕಲಮ್ಮ ಪೂರ್ತಿಯಾಗಿ ಹೊರಟುಹೋದಮೇಲೆ ಬಹಳ ಜನಕ್ಕೆ ನಾಗರು ಬಡಿಯಿತು. ಯಾರನ್ನು ನೋಡಲಿ ತುರಿ, ಕಜ್ಜಿ, ಕುರು ಏಳುತ್ತಿದ್ದವು. ಎಲ್ಲರೂ ಕೂತಲ್ಲಿ, ನಿಂತಲ್ಲಿ, ಮೈ ಕೈಗಳನ್ನು ಪರಪರ ಕೆರೆದುಕೊಳ್ಳುವವರೇ. ಕಾಲು ತೊಡೆಗಳ ಮೇಲೆ ಕುರು ಎದ್ದವರು ಕುಂಟಿಕೊಂಡು ನಡೆಯುವರು. ಬೆಂಕಿಯ ಶಾಖ ಕೊಟ್ಟು ಅದು ಒಡೆಯುವ ತನಕ ಅವರ ಯಾತನೆ ಹೇಳತೀರದು. ಕಜ್ಜಿ ಎದ್ದವರ ಮೈ ಕೈ ಮತ್ತು ಬೆರಳ ಸಂದುಗಳೆಲ್ಲ ರಸಿಕೆಯಿಂದ ಮೆತ್ತಿಕೊಂಡಿರುತ್ತಿದ್ದವು.

ನಂಜಮ್ಮನ ಮನೆಯಲ್ಲಿಯೂ ಕಜ್ಜಿ ಎದ್ದಿತು. ಮೊದಲು ಆದದ್ದು ರಾಮಣ್ಣನಿಗೆ. ಆಮೇಲೆ ಪಾರ್ವತಿ ವಿಶ್ವರಿಗೆ ತಗುಲಿ, ಅಮ್ಮನಿಗೂ ಆಯಿತು. ಎಳೆ ಬಿಸಿಲು ಕಾಸುವುದು, ಇಲ್ಲದಿದ್ದರೆ ಒಲೆಗೆ ಉರಿ ಹಾಕಿ, ಬೆಂಕಿಯ ಮುಂದೆ ಕಜ್ಜಿ ಎದ್ದ ಭಾಗಗಳನ್ನು ಹಿಡಿದು ಹಾ ಎನ್ನುವ ಹಾಗಾಗುವಂತೆ ಕಾಯಿಸುವುದಷ್ಟೇ ಅವರು ಮಾಡುತ್ತಿದ್ದ ಔಷಧಿ. ಒಂದೊಂದು ದಿನ ಬೆಳಗಾಗುವ ವೇಳೆಗೆ ಅಂಗೈ ಮುಂಗೈಗಳ ಮೇಲೆ ಉಪ್ಪಿಯ ಹಣ್ಣಿನಂತೆ ಬೆಳ್ಳಗೆ ಗುಳ್ಳೆಗಳೆದ್ದುಬಿಡುವುವು. ಅವನ್ನು ಹಾಗೆಯೇ ಬಿಡುವುದು ಹುಡುಗರಿಗೆ ಆಗುತ್ತಿರಲಿಲ್ಲ. ಏನಾದರೂ ಮಾಡಿ ಒಡೆದು ಕೀವನ್ನು ಹೊರಗೆ ತೆಗೆಯಬೇಕು. ಗೊಬ್ಬಳಿಮುಳ್ಳಿನಿಂದ ಚುಚ್ಚಿ ರಸಿಕೆ ಹೊರಡಿಸುವುದೇ ಒಂದು ಕೆಲಸ. ಹಾಗೆ ಹೊರಡಿಸುವಾಗ ಅಕ್ಕಪಕ್ಕದ ಭಾಗಗಳಿಗೆ ತಗುಲಿ ವ್ರಣ ಅಲ್ಲಿಗೂ ಹರಡುತ್ತಿತ್ತು. ಮೊದಲು ಹುಚ್ಚುಕಡಿತ, ಅದನ್ನು ತಡೆಯಲಾರದೆ ಮಾಡುವ ಕೆರೆತ. ನಂತರ ಆಗುವ ಉರಿಯನ್ನು ತಾಳಲಾರದೆ ವಿಶ್ವನಂತೂ ಗಟ್ಟಿಯಾಗಿ ಅತ್ತುಬಿಡುತ್ತಿತ್ತು. ರಾಮಣ್ಣ ಪಾರ್ವತಿಯರೂ ಒಂದೊಂದುಸಲ ಅಳು ತಡೆಯುತ್ತಿರಲಿಲ್ಲ. ಇದುವರೆಗೂ ಮನೆಗೆಲಸವೆಲ್ಲ ಪಾರ್ವತಿಯ ಮೇಲಿತ್ತು. ಎರಡು ಕೈಗಳಲ್ಲೂ ಕಜ್ಜಿಯಾದ ಮೇಲೆ ಅವಳು ಪಾತ್ರೆ ತಿಕ್ಕಲಾರಳು. ಗೂಟ ಹಿಡಿದು ಬೀಸುವ ಕಲ್ಲು ತಿರುಗಿಸಲಾರಳು. ಅದೇ ರೀತಿ ನಂಜಮ್ಮ ಹಿತ್ತಿಲಿನ ಗಿಡಗಳಿಗೆ ಹಗ್ಗ ಹಿಡಿದು ನೀರು ಸೇದಲಾರಳು. ಇಷ್ಟು ದಿನ ಕಷ್ಟಪಟ್ಟು ದುಡಿದು ಚಿಗುರಿಸಿದ್ದ ಸೊಪ್ಪು ತರಕಾರಿಗಳು ಒಣಗುವ ಸ್ಥಿತಿಗೆ ಬಂದುವು.

ಊರಿನವರೆಲ್ಲ ನಾಗಪ್ಪನಿಗೆ ಹರಕೆ ಹೊತ್ತರು. ನಂಜಮ್ಮನೂ ಎಂಟು ದಿನ ಒಂದೇ ಸಮನಾಗಿ ಹುಡುಗರಿಗೂ ಸ್ನಾನ ಮಾಡಿಸಿ ತಾನೂ ತಣ್ಣೀರು ಹುಯ್ದುಕೊಂಡು, ತಮ್ಮೇಗೌಡನ ಮನೆಯಲ್ಲಿ ಇಸಿದುಕೊಂಡು ಬಂದ ಅರ್ಧ ಬಟ್ಟಲು ಹಾಲನ್ನು ಹುತ್ತಕ್ಕೆ ತನಿ ಎರೆದು ಹುಡುಗರಿಂದ ಅಡ್ಡ ಬೀಳಿಸಿ ಬಂದಳು. ಆದರೂ ನಾಗಪ್ಪ ಪ್ರಸನ್ನವಾಗಲಿಲ್ಲ. ಕಜ್ಜಿ ತುರಿಗಳು ಇನ್ನೂ ರೇಗಿದವು.
ಇವರಿಗೆಲ್ಲ ಕಜ್ಜಿಯ ನರಳಾಟ ಶುರುವಾದ ಒಂದು ತಿಂಗಳಿನ ಹೊತ್ತಿಗೆ ಚೆನ್ನಿಗರಾಯರಿಗೂ ಹತ್ತಿತು. ಮೊದಲ ಸಲದ ಗುಳ್ಳೆಗೇ ಅವರು ಎದ್ದು ಕುಣಿದುಬಿಟ್ಟರು. ಊರಿಗೆಲ್ಲ ಕಜ್ಜಿಯಾಗಿದ್ದರೂ ಪಟೇಲ ಮೊದಲಾದ ಕೆಲವು ಅನುಕೂಲಸ್ಥರಿಗೆ ಏನೂ ಆಗಿರಲಿಲ್ಲ. ಗಂಗಮ್ಮ ಅಪ್ಪಣ್ಣಯ್ಯರಿಗೂ ಅದರ ಸೋಂಕು ತಗುಲಿರಲಿಲ್ಲ. ಕೈಬೆರಳ ಸಂದುಗಳಲ್ಲಿ ರಸಿಕೆ ಸೋರುವ ವ್ರಣದಿಂದ ಚೆನ್ನಿಗರಾಯರು ತಾಯಿಯ ಮನೆಗೆ ಹೋದಾಗ ಗಂಗಮ್ಮ ಎಂದಳು: ‘ಶೃಂಗೇರಿ ಗುರುಗಳಿಂದ ಬಹಿಷ್ಕಾರವಾಗಿದೆ. ಆ ಲೌಡಿ ಪ್ರಾಯಶ್ಚಿತ್ತ ಮಾಡ್ಕಳ್ಲಿಲ್ಲ. ಮುಟ್ಟು ಚಟ್ಟು ಅಂತ ಮಡಿ ಮೈಲಿಗೆ ಮಾಡುಲ್ಲ. ಮುಟ್ಟಾದೋಳು ಸೊಪ್ಪಿನ ಮಡಿ ಮುಟ್ಟಿ ನೀರು ಹುಯ್ದರೆ ನಾಗಪ್ಪ ಬರದೆ ಇರುತ್ತೆಯೆ? ಆ ಮುಂಡೆಯಿಂದ ನಿಂಗೂ ಬಂತು. ಚಿನ್ನಯ್ಯ, ಅವ್ಳುನ್ನ ಬಿಡದೆ ಇದ್ರೆ ನಿಂಗೆ ಇದು ಹುಶಾರಾಗುಲ್ಲ.’

ಬಿಡುತ್ತೇನೆಂದು ಹೇಳಿದರೆ ಹೆಂಡತಿ ಹೆದರುವುದಿಲ್ಲವೆಂದು ಚೆನ್ನಿಗರಾಯರಿಗೆ ಗೊತ್ತು. ಅವಳನ್ನು ಬಿಟ್ಟು ತಾವು ಕವಳಕ್ಕೆ ಏನು ಮಾಡಬೇಕು? ಅವಳೇನಾದರೂ ಹೋಗಿ ಶೇಕ್ದಾರರಿಗೆ ಹೇಳಿದರೆ! ಆದುದರಿಂದ ಅವರು ಈ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆದರೆ ಕಜ್ಜಿಗೆ ಏನಾದರೂ ಮಾಡಲೇಬೇಕು. ತಾಯಿ ಮಗ, ಇಬ್ಬರೂ ಅಣ್ಣಾಜೋಯಿಸರ ಮನೆಗೆ ಹೋದರು. ಅವರು ಏನೋ ಉಪಾಯ ಹೇಳುತ್ತಿರುವಷ್ಟರಲ್ಲಿಯೇ ಅಯ್ಯಾಶಾಸ್ತ್ರಿಗಳು ಬಂದರು. ಶಾಸ್ತ್ರಿಗಳು ವಯಸ್ಸಿನಲ್ಲಿ ಹಿರಿಯರು. ಯಾರ ಯಾರ ಮನೆಯಲ್ಲಿ ಯಾವ ಯಾವ ಶಾಸ್ತ್ರ ಸಂಪ್ರದಾಯಗಳಿದ್ದುವು ಎಂಬುದೆಲ್ಲ ಅವರಿಗೆ ಗೊತ್ತು. ಹೇಳಿದರು: ‘ಗಂಗಮ್ಮ, ನಿನ್ನ ಗಂಡನ ಕಾಲದಲ್ಲಿ ನಾಗರು ಮಾಡ್ತಿದ್ದುದು ಜ್ಞಾಪಕವಿಲ್ಲವೆ? ಗಂಡ ಸತ್ತ ಮೇಲೆ ಒಂದು ಸರ್ತಿಯಾದರೂ ನೀನು ಮಾಡಿಸಿದೀಯಾ? ನಾಗಪ್ಪ ಹಿಡಿದು ಕಾಡದೆ ಇನ್ನೇನಾಗುತ್ತೆ?’

ಗಂಗಮ್ಮನಿಗೆ ನೆನಪಾಯಿತು. ಅದು ತುಂಬ ಭಕ್ತಿ ಶ್ರದ್ಧೆಗಳಿಂದ ಮಾಡಬೇಕಾದ ಕರ್ಮ. ಪಕ್ಷದ ಯಾವುದೋ ಒಂದು ಷಷ್ಠಿಯ ದಿನ ಮನೆಯವರೆಲ್ಲ ತೋಟಕ್ಕೆ ಹೋಗಬೇಕು. ಹಿಂದಿನ ದಿನವೇ ಗಂಡಸರು ಹೋಗಿ ತೋಟದಲ್ಲಿ ಒಂದು ಪುಟ್ಟ ಬಾವಿ ತೆಗೆದು ಬಂದಿರಬೇಕು. ಈಗ ಅದರಲ್ಲಿ ಬಂದಿರುವ ಜಲದಲ್ಲಿ ವಡೆ, ಒಬ್ಬಟ್ಟು, ಪಾಯಸ, ಅನ್ನ ಸಾರು ಹುಳಿಗಳ ಅಡುಗೆಯಾಗಬೇಕು. ಇಬ್ಬರು ಪುರೋಹಿತರು, ಅವರ ಹೆಂಡತಿಯರು, ಒಬ್ಬ ವಿಧವೆ, ಒಬ್ಬ ವಿಧುರ, ಒಬ್ಬ ಬ್ರಹ್ಮಚಾರಿ, ಇಷ್ಟು ಜನ ಹೊರಗಿನವರನ್ನು ಊಟಕ್ಕೆ ಕರೆಯಬೇಕು. ಗೋಧಿ ಹಿಟ್ಟು ಅಕ್ಕಿಯ ಹಿಟ್ಟುಗಳನ್ನು ಕಲೆಸಿ, ಅದರಲ್ಲಿ ಹೆಡೆ ಎತ್ತಿರುವ ನಾಗಪ್ಪನನ್ನು ಹೊಸೆದು, ಅವನಿಗೆ ಸಕಲ ಪೂಜೆಗಳನ್ನೂ ಸಲ್ಲಿಸಿದಮೇಲೆ ಈ ಬ್ರಾಹ್ಮಣ ಮುತ್ತೈದೆ, ವಿಧುರ, ವಿಧವೆ, ಬ್ರಹ್ಮಚಾರಿಗಳಿಗೆ, ಶ್ರಾದ್ಧದ ದಿನ ಬಡಿಸುವಷ್ಟೇ ಧಾರಾಳವಾದ ಭೋಜನ ಮಾಡಿಸಿ ಕೊನೆಯ ಪಕ್ಷ ಒಂದೊಂದು ಬೆಳ್ಳಿಯ ರೂಪಾಯಿ ದಕ್ಷಿಣೆ, ಗಂಡಸರಿಗೆ ಪಂಚೆ ಹೆಂಗಸರಿಗೆ ರವಿಕೆಕಣ, ಬ್ರಹ್ಮಚಾರಿಗೆ ಒಂಟಿಪಂಚೆ , ಒಂಟಿ ಜನಿವಾರ ದಕ್ಷಿಣೆ ಕೊಡಬೇಕು. ನಂತರ ಇವರು ಪ್ರಸಾದರೂಪವಾಗಿ ಊಟ ಮಾಡಿದ ಮೇಲೆ ಸಂಜೆ ನಾಗಪ್ಪನಿಗೆ ಮಹಾಮಂಗಳಾರತಿ ಮಾಡಿ, ಅವನನ್ನೂ ಅಲ್ಲಿಗೆ ತೆಗೆದುಕೊಂಡು ಹೋಗಿ, ಉಳಿದಿದ್ದ ಅಕ್ಕಿ, ಬೇಳೆ, ಗೋಧಿಹಿಟ್ಟು ಮೊದಲಾದುವನ್ನೂ ಬಾವಿಗೆ ಹಾಕಿ ಬಾವಿಯನ್ನು ಮುಚ್ಚಿಬಿಟ್ಟು ಮತ್ತೆ ಹಿಂತಿರುಗಿ ನೋಡದೆ ಸಂಜೆಗತ್ತಲಿನಲ್ಲಿ ಊರಿಗೆ ಬರಬೇಕು. ‘ಇಷ್ಟು ಮಾಡಿದರೆ ಕಜ್ಜಿ ಕುರು ಎಲ್ಲ ತಾನೇ ಓಡಿಹೋಗುತ್ತೆ. ನಿನ್ನ ಗಂಡ ಇದ್ದಾಗ ನಿಮಗೆ ಯಾವತ್ತಾದ್ರೂ ಹೀಗೆ ಆಗಿತ್ತಾ? ನೀವು ಮಾಡೂ ಕರ್ಮ ಬಿಟ್ಟಿರಿ. ಇಂಥದೆಲ್ಲ ಆಗ್ತಾ ಇದೆ’-ಎಂದು, ತಮಗೂ ಎದ್ದಿದ್ದ ಕಜ್ಜಿಯ ಕೈಯನ್ನು ತುರಿಸುತ್ತಾ ಅಯ್ಯಾಶಾಸ್ತ್ರಿಗಳು ಕೇಳಿದಾಗ ಗಂಗಮ್ಮ, ಏನಾದರೂ ಸರಿ ನಾಗಪ್ಪನನ್ನು ಮಾಡಿಯೇ ತೀರಬೇಕೆಂದು ನಿರ್ಧರಿಸಿದಳು.

ಅಣ್ಣಾಜೋಯಿಸರು ಎಂದರು: ‘ಉಳಿದದ್ದಕ್ಕೆ ಯೋಚನೆ ಮಾಡಬ್ಯಾಡ. ಬ್ರಾಹ್ಮಣರಾಗಿ ನಾನು, ಅಯ್ಯಾ ಚಿಕ್ಕಪ್ಪ, ಚಿಕ್ಕಮ್ಮ, ನನ್ನ ಹೆಂಡತಿ ಇದೀವಿ. ಬ್ರಹ್ಮಚಾರಿಯಾಗಿ ನಮ್ಮ ನರಸಿಂಹನೇ ಇದಾನೆ. ವಿಧವೆಗೆ ಬೇಕಾದ್ರೆ ಕೊಂಡೇನಹಳ್ಳಿಯಿಂದ ನನ್ನ ತಂಗಿ ಕರುಸ್ತೀನಿ. ವಿಧುರನಿಗೆ ರಂಗಾಪುರದಿಂದ ನನ್ನ ಹೆಂಡ್ತಿ ಅಣ್ಣನಿಗೆ ಹೇಳಿಕಳುಸ್ತೀನಿ. ನೀನು ಉಳಿದದ್ದೆಲ್ಲ ಅಣಿಮಾಡಿಕೊ.’
ಸಧ್ಯದಲ್ಲಿಯೇ ಮನೆತನದ ಈ ಧಾರ್ಮಿಕ ವಿಧಿಯನ್ನು ಪೂರೈಸುವುದಾಗಿ ಹೇಳಿ ಗಂಗಮ್ಮ ತನ್ನ ಮನೆಗೆ ಬಂದಳು. ‘ಚಿನ್ನಯ್ಯ, ಅರ್ಧ ಖರ್ಚು ಕೊಡು ಅಂತ ನಿನ್ನ ಹೆಂಡ್ತಿಗೆ ಹೇಳು’-ಎಂದು ಹೇಳಿಕಳಿಸಿದಳು. ಗಂಡ ಹೇಳಿದ ವರ್ಣನೆಯನ್ನು ಕೇಳಿದ ಮೇಲೆ ನಂಜಮ್ಮ ಲೆಕ್ಕ ಹಾಕಿದಳು. ಒಟ್ಟಿನಲ್ಲಿ ಇದಕ್ಕೆ ಒಂದು ನೂರು ರೂಪಾಯಿಯಾದರೂ ಬೇಕು. ಅರ್ಧವೆಂದರೆ ಐವತ್ತು. ಇದರ ಜೊತೆಗೇ ಈ ಜೋಯಿಸರು ತಮ್ಮ ಬಹಿಷ್ಕಾರದ ಪ್ರಾಯಶ್ಚಿತ್ತದ ಪ್ರಶ್ನೆಯನ್ನೂ ಎತ್ತಿ ದುಡ್ಡು ಕೇಳುತ್ತಾರೆ. ಸದ್ಯ, ಹೊಟ್ಟೆಗೇ ಇಲ್ಲದ ಈ ಸ್ಥಿತಿಯಲ್ಲಿ ಇದಕ್ಕೆಲ್ಲ ಎಲ್ಲಿ ತರುವುದು? ಈ ನಾಗಪ್ಪನ ಕೆಲಸವೇ ಬೇಡವೆಂದು ಅವಳು ನಿರ್ಧರಿಸಿದಳು. ಆದರೆ ಅದೇ ಕಜ್ಜಿ ಕುರುಗಳ ಕಾರಣವಾಗಿದ್ದು, ನಾಗಪ್ಪ ಮುನಿದು ರೇಗಿ ಯಾರನ್ನಾದರೂ ಬಲಿ ತೆಗೆದುಕೊಂಡರೆ? – ಎಂಬ ಭಯ ಒಂದು ಕಡೆ.

ಸೊಸೆ ಮತ್ತು ಮೊಮ್ಮಕ್ಕಳ ಗತಿ ಏನಾದರೂ ಆಗಬಹುದು, ತನಗೂ ಅಪ್ಪಣ್ಣಯ್ಯನಿಗೂ ಕಜ್ಜಿ ಆದರೆ ಏನು ಗತಿ ಎಂಬ ಯೋಚನೆ ಗಂಗಮ್ಮನಿಗೆ ಹತ್ತಿತು. ಜೊತೆಗೆ ಮಗ ಚೆನ್ನಿಗರಾಯನನ್ನೂ ಕರೆದುಕೊಂಡು ಹೊಳೆಸೀಮೆಯಾದ ಅಕ್ಕಿಹೆಬ್ಬಾಳಿನ ಕಡೆಗೆ ದೇಶಾವರಿ ಹೊರಟಳು.. ‘ದೇವರ ಕೆಲಸವಾಗಬೇಕು ಧರ್ಮ ಕೊಡಿ’-ಎಂದು ಹಳ್ಳಿಗಳ ಮನೆಮನೆಗೆ ಹೋದರೆ ದುಡ್ಡಂತೂ ಇಲ್ಲ. ಎರಡು ಸೇರು ಬತ್ತ ಇಲ್ಲವೆಂದರೆ ಅವರಿಗೂ ಪಾಪ. ಹೀಗೆ ಬತ್ತ ಗುಡ್ಡೆ ಹಾಕಿ ಅದನ್ನು ಮಾರಿ ಒಟ್ಟಿನಲ್ಲಿ ಒಂದು ತಿಂಗಳಿನಲ್ಲಿ ನೂರು ರೂಪಾಯಿ ಮಾಡಿಕೊಂಡು ಊರಿಗೆ ಬಂದು ಮೂವರೂ ಕೂಡಿ ತೋಟದ ನಾಗಪ್ಪನನ್ನು ಮಾಡುವ ದಿನ ನಿಷ್ಕರ್ಷೆಮಾಡಿದರು.

ಕಜ್ಜಿ ವಿಪರೀತವಾಗಿದ್ದರೂ ರಾಮಣ್ಣ ಸ್ಕೂಲಿಗೆ ಹೋಗುವುದನ್ನು ಮಾತ್ರ ನಿಲ್ಲಿಸಲಿಲ್ಲ. ಈಗ ಅವನು ಇಂಗ್ಲಿಷ್ ಎರಡನೇ ಕ್ಲಾಸು. ಅವನ ಸ್ಕೂಲಿನಲ್ಲಿ ಹೀಗೆಯೇ ಕಜ್ಜಿ ಹತ್ತಿದ ಹುಡುಗರು ಕಡಿಮೆ ಇರಲಿಲ್ಲ. ಊರೂರಿಗೆಲ್ಲ ಪ್ಲೇಗಿನ ಅಮ್ಮ ಬಂದಂತೆ ಈಗ ಎಲ್ಲೆಲ್ಲಿಯೂ ನಾಗರು ಬಂದಿತ್ತು. ಕಜ್ಜಿ ಎದ್ದವರನ್ನೆಲ್ಲ ಮೇಷ್ಟರು ಪ್ರತ್ಯೇಕವಾಗಿ ಕೂರಿಸುತ್ತಿದ್ದರು. ಒಂದು ದಿನ ಸ್ಕೂಲು ಹೆಡ್ಮಾಸ್ಟರೇ ಹುಡುಗರ ಈ ಅಸಹ್ಯವನ್ನು ನೋಡಲಾರದೆ, ಹೋಗಿ ಸರ್ಕಾರಿ ಆಸ್ಪತ್ರೆಯ ಡಾಕ್ಟರಿಗೆ ಹೇಳಿದರು. ಗ್ರಾಮಪಂಚಾಯ್ತಿಯ ಛೇರ್‌ಮನ್ ಮತ್ತು ಡಾಕ್ಟರು ಮೇಲಕ್ಕೆ ಬರೆದು ಮಿಲ್ಕ್ ಇಂಜೆಕ್ಷನ್ ಟ್ಯೂಬುಗಳನ್ನು ತರಿಸಿದರು. ಡಾಕ್ಟರು ಎಲ್ಲ ಹುಡುಗರಿಗೂ ಎರಡು ದಿನ ಚುಚ್ಚಿ, ಹಚ್ಚಿಕೊಳ್ಳಲು ಮುಲಾಮು ಕೊಟ್ಟು ಕಳುಹಿಸಿದರು. ಗಂಧಕದ ಮುಲಾಮು ಹಚ್ಚಿಕೊಳ್ಳದಿದ್ದರೂ ಇಂಜೆಕ್ಷನ್ ತೆಗೆದುಕೊಂಡಮೇಲೆ ಹುಡುಗರ ಕಜ್ಜಿ ತಾನಾಗಿಯೇ ಒಣಗಿ ಚರ್ಮದ ಮೇಲಿನ ಬುರುಗು ಕೆಲವು ದಿನಗಳಲ್ಲಿ ಒಣಗಿ ಹೋಯಿತು.

ರಾಮಣ್ಣ ಅಮ್ಮನಿಗೆ ಹೇಳಿದ: ‘ಆ ಇಂಜೆಕ್ಷನ್ ಚುಚ್ಚಿಸಿಕೊಳ್ಳುವಾಗ ನೋಯುತ್ತೆ ಕಣಮ್ಮ. ನನ್ನ ಮೈ ನೋಡು. ಹ್ಯಾಗೆ ವಾಸಿಯಾಗಿದೆ. ನೀವೆಲ್ಲ ಒಂದು ದಿನ ಬನ್ನಿ. ಆಸ್ಪತ್ರೇಲಿ ಅದ ಚುಚ್ಚಿಸಿಕೊಳ್ಳಿ.’
ಒಂದು ದಿನ, ಪಾರ್ವತಿ ಮತ್ತು ವಿಶ್ವರೊಡನೆ ನಂಜಮ್ಮ ಕಂಬನಕೆರೆಗೆ ಹೋದಳು. ತಮ್ಮ ಕಷ್ಟ ಸುಖ ಹೇಳಿಕೊಂಡ ಮೇಲೆ ಡಾಕ್ಟರು ದುಡ್ಡಿಲ್ಲದೆಯೇ ಸೂಜಿ ಚುಚ್ಚಿದರು. ಮತ್ತೆ ನಾಲ್ಕು ದಿನದ ನಂತರ ಹೋಗಿ ಇನ್ನೊಂದು ಸಲ ಚುಚ್ಚಿಸಿಕೊಂಡು ಬಂದಮೇಲೆ ಇವರ ಮೈಯೂ ಒಣಗಲು ಶುರುವಾಯಿತು. ಒಂದು ದಿನ ರಾಮಣ್ಣನೇ ಹೇಳಿದ: ‘ಅಮ್ಮ, ನಮ್ಮ ಹೆಡ್ಮೇಷ್ಟ್ರು ಹೇಳಿದರು. ಹೋದ ವರ್ಷವೆಲ್ಲ ಮಳೆ ಬೆಳೆಯಿಲ್ಲ. ಯಾರಿಗೂ ಹಾಲು ಮೊಸರಿಲ್ಲ. ಹೊಟ್ಟೆಗಿಲ್ಲದೆ ಗೆಡ್ಡೆ ಗೆಣಸು ಅಂತ ಸಿಕ್ಕಿದ್ದೆಲ್ಲ ತಿಂದು ರಕ್ತ ಕೆಟ್ಟು ಕಜ್ಜಿಯಾಗಿದೆಯಂತೆ. ನಾಗರು ಪಾಗರು ಅನ್ನೋದೆಲ್ಲ ಸುಳ್ಳಂತೆ. ಊರಿನೋರೆಲ್ಲ ಹೀಗೆ ಇಂಜೆಕ್ಷನ್ ತಗಂಡ್ರೆ ವಾಸಿಯಾಗುತ್ತಂತೆ.’

ಅಷ್ಟರಲ್ಲಿ ಗಂಗಮ್ಮ, ಅಪ್ಪಣ್ಣಯ್ಯ, ಚೆನ್ನಿಗರಾಯರು ಹೋಗಿ ಜೋಯಿಸರಿಗೆ ಪಂಚೆ ಸೀರೆ ದಕ್ಷಿಣೆಗಳೊಡನೆ ಶ್ರದ್ಧಾ ಭಕ್ತಿಯ ಭೋಜನವನ್ನೂ ಮಾಡಿಸಿ ತೋಟದ ನಾಗರು ಮಾಡಿಕೊಂಡು ಬಂದರು. ನಂಜಮ್ಮ ಹುಡುಗರ ಜೊತೆ ಹೋಗಿ ಔಷಧಿ ತೆಗೆದುಕೊಂಡಳೆಂಬುದು ಗೊತ್ತಾದಾಗ ಗಂಗಮ್ಮ ಹೇಳಿದಳು: ‘ದೇವರು ಬಂದಿರುವಾಗ ಮುಂಡೆ ಔಸ್ತಿ ತಗಂಡಿದಾಳೆ. ಮೈ ಕೈ ಎಲ್ಲ ಕೊಳೆತು ಸಾಯ್ತಾಳೆ ನೋಡು. ನಾಗಪ್ಪ ಅಂದ್ರೆ ಏನಂತ ತಿಳ್ಕಂಡಿದಾಳೆ ಅವ್ಳು!’

ನಂಜಮ್ಮ ಮತ್ತು ಅವಳ ಮಕ್ಕಳಿಗೆ ಗುಣವಾಗಿ ಮೈ ಕೈಯ ಕಲೆಯೂ ಇಲ್ಲವಾದ ಮೇಲೆ ಊರಿನ ಇತರ ಎಷ್ಟೋ ಜನರು ಒಬ್ಬೊಬ್ಬರಾಗಿ ಕಂಬನಕೆರೆಗೆ ಹೋದರು. ಒಂದು ಇಂಜೆಕ್ಷನ್ ಐದು ರೂಪಾಯಿ.

– ೯ –

ಜ್ಯೇಷ್ಠ ಆಷಾಢ ಕಳೆದರೂ ಒಂದು ಹನಿ ಮಳೆ ಬಿದ್ದಿರಲಿಲ್ಲ. ಈ ವರ್ಷವೂ ಹೋದ ಸಲದಂತೆಯೇ ಬರವು ಮುಂದುವರಿಯುವುದು ನಿಶ್ಚಯವಾಗಿತ್ತು. ಹೋದ ವರ್ಷ ಹಳೆಯ ದಿನಸಿ ಇಟ್ಟುಕೊಂಡಿದ್ದ ದಿಮ್ಮನೆಯ ಕುಳಗಳೂ ಈ ಸಲ ಬಾಯಿ ಬಿಡುತ್ತಿದ್ದರು. ಆಕಾಶದಲ್ಲಿ ಮೋಡಗಳು ಬರುತ್ತಿದ್ದವು. ಆದರೆ ಎತ್ತಲಿಂದಲೋ ಏಳುವ ಗಾಳಿಯೂ ಅವನ್ನು ಎಬ್ಬಿಸಿಕೊಂಡು ಹೊರಟುಹೋಗುತ್ತಿತ್ತು. ಈ ವರ್ಷ ಮೂರು ಕೊಳಗ ಮಳೆಯಾದರೆ ಒಂಬತ್ತು ಕೊಳಗ ಗಾಳಿ ಎಂದು ಪಂಚಾಂಗದಲ್ಲಿಯೇ ಬರೆದಿತ್ತು. ಗಾಳಿಯೇನೋ ಸಿಕ್ಕಾಬಟ್ಟೆ ಇದೆ. ಆದರೆ ಅದರ ಮೂರರಲ್ಲಿ ಒಂದು ಭಾಗವಿರಲಿ, ನೂರರಲ್ಲಿ ಒಂದು ಭಾಗ ಮಳೆಯೂ ಬಿದ್ದಿಲ್ಲ. ಕಜ್ಜಿ ವಾಸಿಯಾದ ಮೇಲೆ ನಂಜಮ್ಮ ಹಗಲು ಸಂಜೆ ಹಿತ್ತಿಲಿನಲ್ಲಿಯೇ ಕೆಲಸ ಮಾಡುತ್ತಾಳೆ. ಈಗೀಗ ದಿನಕ್ಕೆ ಒಂದೇ ಸೇರು ರಾಗಿಯಲ್ಲಿ ಎಲ್ಲರ ಊಟವೂ ಆಗಬೇಕು. ಹೊಟ್ಟೆ ತುಂಬುವಷ್ಟು ದಂಟಿನಸೊಪ್ಪು, ಬದನೆಕಾಯಿ, ತಿಂಗಳಹುರುಳಿ ಮೊದಲಾಗಿ ಬೇಯಿಸಿ ತಿನ್ನುತ್ತಾರೆ. ಈ ಉಪಾಯ ಮಾಡಿರುವುದು ಅವಳದೊಂದೇ ಸಂಸಾರ. ರಾತ್ರಿಯ ವೇಳೆ ತನ್ನ ಹಿತ್ತಿಲಿನಲ್ಲಿ ಕಳ್ಳತನವಾಗುವುದು ತೀರ ಸಹಜವೆಂಬುದು ಅವಳಿಗೆ ಗೊತ್ತು. ಆದುದರಿಂದ ಒಂದು ರಾತ್ರಿಗೆ ನಾಲ್ಕು ಬಾರಿಯಂತೆ ಎದ್ದು ಹುಡುಗರನ್ನೂ ಕರೆದುಕೊಂಡು ಹೋಗಿ ನೋಡಿ ಬರುತ್ತಾಳೆ. ಹೋದ ವರ್ಷವೆಲ್ಲ ಮಳೆ ಇಲ್ಲದುದಕ್ಕೆ ಈ ಸಲ ತೆಂಗಿನ ಮರಗಳೂ ಮಂಕಾಗಿವೆ. ತೋಟದ ಮಾಲೀಕರೇ ಎಳೆಗಾಯಿಗಳನ್ನು ಕಿತ್ತು ತಿಪಟೂರಿಗೆ ಹೇರಿ ಮಾರತೊಡಗಿದುದರಿಂದ ಕಾಯಿಗಳ್ಳರಿಗೆ ಅದೂ ಇಲ್ಲದಂತೆ ಆಗಿದೆ.

ಒಂದು ನಡುರಾತ್ರಿಯಲ್ಲಿ ಇದ್ದಕ್ಕಿದ್ದಹಾಗೆಯೇ ಮಳೆ ಬೀಳಲು ಶುರುವಾಯಿತು. ಆಕಾಶದಿಂದ ಆಲಿಕಲ್ಲುಗಳು ಬಿದ್ದಂತೆಯೇ ಮಳೆಯ ನೀರೇ ಪಟಪಟನೆ ಹೊಡೆಯುತ್ತಾ ಸುರಿಯಿತು. ಮುಂಗಾರಿನ ಕಾಲ ಹೋಗಿ, ಹಿಂಗಾರಿನ ದಿನವೂ ಕಳೆಯುತ್ತಿರುವ ಈಗ ಇದ್ದಕ್ಕಿದ್ದಂತೆ ಮುಂಗಾರನ್ನು ಮೀರಿಸುವಷ್ಟು ಜೋರಾಗಿ ಮಳೆ ಜಡಿಯಿತು. ಮಲಗಿದ್ದ ಊರಿನವರಿಗೆಲ್ಲ ಎಚ್ಚರ. ಎಲ್ಲರೂ ತಮ್ಮ ತಮ್ಮ ಮನೆಗಳಿಂದ ಹೊರಗೆ ಬಂದು ನೋಡುತ್ತಾರೆ: ಸ್ವಲ್ಪವೂ ಗಾಳಿಯಿಲ್ಲ. ಬರೀ ಮಳೆ. ಆಕಾಶ ಕರ್ರಗೆ ಹೆಪ್ಪುಗಟ್ಟಿ ನಿಂತಿದೆ. ಭೂಮಿಯ ಮೇಲೆ ದಢದಢನೆ ನೀರು ಸುರಿಯುವುದು ಬಿಟ್ಟರೆ ಅದಕ್ಕೆ ಬೇರೆ ಯಾವ ಕೆಲಸವೂ ಇಲ್ಲವೆಂಬಂತೆ ಕಾಣಿಸುತ್ತಿದೆ. ಇಷ್ಟು ದಿನ ಇಲ್ಲದ ನೀರು ಮೋಡಗಳು ಒಂದೇ ದಿನ ಆಕಾಶದಲ್ಲಿ ಎಲ್ಲಿ ಸೇರಿಕೊಂಡಿತೋ ಯಾವಾಗ ಕೂಡಿಕೊಂಡಿತೋ! ಗ್ರಾಮದೇವರು ಚೋಳೇಶ್ವರನ ಕೃಪೆಯೇ ಸೈ. ಇಲ್ಲದಿದ್ದರೆ ಕಾಲ ಕಳೆದ ಮೇಲೆಯಾದರೂ ಮಳೆ ಎಲ್ಲಿಂದ ಬರಬೇಕು? ಅರ್ಧ ಗಂಟೆಯಲ್ಲಿಯೇ ಊರ ಬೀದಿ ತುಂಬಿ ನೀರು ಕೊಚ್ಚೆ ಹರಿಯಲು ಮೊದಲಾಯಿತು. ಈ ಮಳೆಯ ಜೋರಿಗೆ ಹಿತ್ತಿಲಿನ ದಂಟು, ಬದನೆ, ತಿಂಗಳಹುರುಳಿ ಮೊದಲಾದ ತರಕಾರಿಗಳೆಲ್ಲ ಕೊಚ್ಚಿಹೋಗಿವೆ-ಎಂದು ನಂಜಮ್ಮನಿಗೆ ಒಂದು ಕಡೆ ಆತಂಕವಾದರೆ ಇನ್ನೊಂದೆಡೆಯಲ್ಲಿ ಸಂತೋಷ. ಊರಿಗೆಲ್ಲ ಮಳೆಯಾಗಿ ಬೆಳೆ ಬೆಳೆದರೆ ತಮಗೂ ತಿನ್ನುವ ಹಿಟ್ಟು ಸಿಕ್ಕುತ್ತದೆ. ಕೊಚ್ಚಿಹೋದ ತನ್ನ ಹಿತ್ತಿಲಿನ ಗಿಡಗಳನ್ನು ಮತ್ತೆ ಬೀಜ ಹಾಕಿ ಬೆಳೆಸಬಹುದು. ಸದ್ಯ ಬೆಳೆಯಾದರೆ ಸಾಕು.

ಮಳೆಯೇ ಇಲ್ಲದಿರುವಾಗ ಯಾರೂ ಮನೆಯ ಹೆಂಚು ಕೈಯಾಡಿಸುವ ಯೋಚನೆಗೆ ಹೋಗಿರಲಿಲ್ಲ. ಅಲ್ಲದೆ ವಿಪರೀತ ಗಾಳಿಗೆ ಸಿಕ್ಕಿ ವರ್ಷದ ಶುರುವಿನಿಂದ ಹೆಂಚುಗಳು ಸರುಗಿದ್ದವು. ಆ ರಾತ್ರಿ ಸೋರದಿರುವ ಮನೆಯೇ ಇಲ್ಲ. ಮನೆ ಸೋರಲಿ, ಕೊನೆಗೆ ಗೋಡೆ ಕುಸಿಯಲಿ, ಸದ್ಯ, ಮಳೆಯಾಯಿತಲ್ಲ ಅಷ್ಟೇ ಸಾಕು-ಎಂದು ಎಲ್ಲರೂ ಯೋಚಿಸುತ್ತಿದ್ದರು.
ಬೆಳಗಿನ ಜಾವದ ಹೊತ್ತಿಗೆ ಮಳೆ ನಿಂತಿತು. ಬೆಳಿಗ್ಗೆ ಎದ್ದು ಎಲ್ಲರೂ ಅವರವರ ಹೊಲಗದ್ದೆಗಳ ಕಡೆಗೆ ಹೊರಟರು. ಒಂದೇ ರಾತ್ರಿಯಲ್ಲಿ ಊರ ಕೆರೆಗೆ ಅರ್ಧ ನೀರು ಬಂದಿದೆ: ಎಂದರೆ ಮೇಲ್ಭಾಗದ ಹಳ್ಳಿಗಳಿಗೂ ಮಳೆಯಾಗಿದೆ.
ನಂಜಮ್ಮ ಹಿತ್ತಿಲಿನ ಹತ್ತಿರಕ್ಕೆ ಹೋಗುತ್ತಿದ್ದಳು. ದಾರಿಯಲ್ಲಿ ಮಾದೇವಯ್ಯನವರು ಬಂದರು. ಈ ಊರನ್ನೇ ಬಿಟ್ಟು ಹೊರಟುಹೋದ ಅಯ್ಯನವರು ಇನ್ನು ಮತ್ತೆ ಬರಲಾರರೆಂದು ಅವಳೂ ಭಾವಿಸಿದ್ದಳು.
‘ಅಯ್ನೋರೇ, ನಮ್ಮುನ್ನೆಲ್ಲ ಬಿಟ್ ಇಷ್ಟ್ ದಿನ ಹೊರಟುಹೋಗಿದ್ರಲ್ಲಾ?’
‘ಕಾಶಿಗೆ ಹೋಗಿದ್ದೆ ಕಣವ್ವಾ. ಈಟು ದಿನ ಅಲ್ಲೇ ಇದ್ದೆ. ಏನೋ ಮತ್ತೆ ಇಲ್ಲಿಗೇ ಬರಾಣ ಅನ್ನುಸ್ತು. ಬಂದೆ.’
ಅಯ್ಯನವರನ್ನು ಮನೆಗೆ ಕರೆದುಕೊಂಡು ಹೋದಳು. ಚೆನ್ನಿಗರಾಯರು ಎದ್ದು ಹೊರಗೆ ಹೋಗಿದ್ದರು. ನಂಜಮ್ಮ ಕೇಳಿದಳು: ‘ಯಾವಾಗ ಬಂದ್ರಿ?’
‘ರಾತ್ರಿ ಹೊತ್ತಾಗಿತ್ತು. ನಾನೇ ಬಂದು ನಿಮ್ಮುನ್ನ ಎಬ್ಬಿರಿಸಾನ ಅಂತಿದ್ದೆ. ಓಟ್ರಲ್ಲಿ ಮಳೆ ಬಂತು.’
ಅವರು ಈ ಮಾತು ಹೇಳುವಷ್ಟರಲ್ಲಿ ಯಾತಕ್ಕೋ ಸರ್ವಕ್ಕ ಅಲ್ಲಿಗೆ ಬಂದಳು. ಅಯ್ಯನವರು ಊರಿಗೆ ಬಂದರಂತೆ. ಬಂದ ತಕ್ಷಣ ಮಳೆ ಬಂದಿದೆ. ಅವರು ಹೋಗಿ ಎಷ್ಟು ದಿನವಾಯಿತು? ಅವಳ ಮನಸ್ಸಿನಲ್ಲಿ, ತಕ್ಷಣ ಹೊಳೆದುಬಿಟ್ಟಿತು: ನಮ್ಮ ಬಣಜಿಗ ಜಾತಿಯೋರು ಅವ್ರಿಗೆ ಕಂತೆಬಿಕ್ಷೆ ಹಾಕಾಕುಲ್ಲ ಅಂತ ಅಂದ್ರು. ಕ್ವಾಪಮಾಡ್ಕಂಡು ಅಯ್ನೋರು ಹೊಂಟೋದ್ರು. ಆವಾಗ್ಲಿಂದ ಮಳೆ ಇಲ್ಲ. ನ್ಯನ್ನೆ ರಾತ್ರಿ ಇವ್ರು ಬಂದ್ರು. ಮಳೆ ಬಂತು. ಸಾದು ಶರಣರು ಅಂದ್ರೆ ಏನಂತ ತಿಳ್ಕಂಡವ್ರೆ ನಮ್ಮ ಜನ? ಸರ್ವಕ್ಕ ಹತ್ತಿರ ಬಂದು ಅಯ್ಯನವರ ಪಾದಕ್ಕೆ ಅಡ್ಡಬಿದ್ದಳು.
‘ಅಯ್ನೋರೇ, ನಮ್ಮೂರ ಬಿಟ್ಟು ಬೇಜಾರು ಮಾಡ್ಕಂಡು ಯಾಕೆ ಹೋದ್ರಿ?’-ನಂಜಮ್ಮ ಕೇಳಿದಳು.
‘ಏನೋ ಎಲ್ಲಾರ ಹ್ವಾಗ್ಬೇಕು ಅಂತ ಮನ್ಸಾತು ಕಣವ್ವ. ನನ್ನಂತೋರೇ ಒಬ್ರು ಜೋಡಿ ಸಿಕ್ಕಿದ್ರು. ವಿಶ್ವನಾಥನ ಪಾದ, ಕಾಶಿಗೆ ಹ್ವಾದೆ. ಜಂಗಮವಾಡಿ ಮಠ ಅಂತ ಐತೆ. ನಮ್ಮ ಕಡೆ ಜಂಗಮರು ಯಾರು ಹ್ವಾದ್ರೂ ಏನೂ ಯೋಚ್ನೆ ಇಲ್ದೆ ಇರ್‍ಭೌದು. ಇಲ್ಲಿ ಮಾಡಾ ಭಜನೆ ಅಲ್ಲೇ ಮಾಡ್ಕಂತಿದ್ದೆ. ಏಟಾದ್ರೂ ಅದು ನಮ್ಮ ದೇಸವಲ್ಲ, ನಮ್ಮ ಜನವಲ್ಲ. ಮಠದೊರೇನೋ ನಮ್ಮೋರು. ಇಲ್ಲಿಗೆ ಬರಾನ ಅನ್ನುಸ್ತು. ಬಂದ್ಬುಟ್ಟೆ.’
‘ಅಯ್ನೋರೇ, ನಿಮ್ಮ ರಾಗಿ, ಅವರೇಕಾಳೆಲ್ಲ ಕಳ್ತನವಾಗೈತಂತೆ ನೋಡ್ಕಂಡ್ರಾ?’-ಸರ್ವಕ್ಕ ಕೇಳಿದಳು.
‘ರಾತ್ರಿನಾಗ ಕಡ್ಡಿ ಗೀರಿ ನೋಡ್ದೆ. ಇರ್ಲಿಲ್ಲ. ಸುತ್ತಮುತ್ತ ಬರ ಬಂದೈತಿ. ಹ್ವಟ್ಟೆಗಿಲ್ದೋರು ಯಾರೋ ತಿಂದವ್ರೆ. ಯಾರು ತಿಂದ್ರೂ ಮಣ್ಣಾಗಾದೇ ಅಲ್ವ?’
ನಂಜಮ್ಮನ ಹತ್ತಿರ ಒಂದು ಸೇರು ಹಸಿಟ್ಟು ಸಾಲ ಕೇಳಲು ಬಂದಿದ್ದ ಸರ್ವಕ್ಕ ಅದನ್ನು ಇಸಿದುಕೊಂಡು ಹೊರಟುಹೋದಳು. ಅವರ ಮನೆಗೆ ಯಾರೋ ನೆಂಟರು ಬಂದಿದ್ದಾರೆ. ಸರ್ವಕ್ಕ ಹೋದಮೇಲೆ ಅಯ್ಯನವರು ಹೇಳಿದರು: ‘ನಿಮ್ಮ ಅಪ್ಪಾಜೀನ ನಾನು ನೋಡಿದೆ.’
‘ಎಲ್ಲಿ?’-ನಂಜಮ್ಮ ಉತ್ಸುಕಳಾಗಿ ಕೇಳಿದಳು. ಅವಳ ತಂದೆ ಕಂಠೀಜೋಯಿಸರು ಇದ್ದಕ್ಕಿದ್ದ ಹಾಗೆಯೇ ಕಾಣೆಯಾಗಿ ಒಟ್ಟು ಹನ್ನೆರಡು ವರ್ಷವೇ ಆಗಿತ್ತು. ಹನ್ನೆರಡು ವರ್ಷ ತುಂಬಿದರೆ ಮುಖ ತೊರೆಯುತ್ತೆ. ಜೀವಂತ ಬದುಕಿದ್ದಾರೆಯೋ ಸತ್ತಿದ್ದಾರೆಯೋ ಎಂದು ಅವಳು ಹಲವು ಸಲ ತನ್ನಲ್ಲಿಯೇ ಯೋಚಿಸಿದ್ದಳು.
“ಕಾಶೀಲೇ ಅವ್ರೆ ಕಣವ್ವ. ಈಗ ಒಂದು ತಿಂಗಳಿನಲ್ಲಿ ಒಂದು ದಿನ ಬೆಳಿಗ್ಗೆ ನದೀ ದಡಕ್ಕೆ ಹ್ವಾಗಿದ್ದೆ. ಹನುಮಾನ್ ಘಾಟ್ ಅಂತ ಆ ಘಾಟಿನ ಹೆಸರು, ನಮ್ಮ ಕಡೆ ಬ್ರಾಂಬ್ರು ಯಾರ್ಯಾರೋ ಇದ್ರು. ನಮ್ಮ ಕಡೇಯೋರೇನು. ಹಿಂದೂಸ್ಥಾನದ ಎಲ್ಲಾ ಕಡೆ ಮಂದೀನೂ ಕಾಶಿಗೆ ದಿನಾ ಬತ್ತಾನೇ ಇರ್ತಾರೆ. ಅವ್ರು ತಿಥಿಕರ್ಮ ಮಾಡ್ತಾ ಇದ್ರು. ನಿಮ್ಮ ಅಪ್ಪಾಜಿ ಗಟ್ಟಿಯಾಗಿ ಮಂತ್ರ ಹೇಳ್ತಿತ್ತು. ನಾನೇ ಮಾತಾಡುಸ್ದೆ. ಆಮೇಲೆ ಎಲ್ಡು ದಿನವಾದ್‌ಮ್ಯಾಲೆ ಅವರೇ ನಾನು ಠಿಕಾಣಿ ಹಾಕಿದ್ದ ಜಂಗಮವಾಡಿ ಮಠಕ್ಕೆ ಬಂದ್ರು. ಅವ್ರೇ ಹ್ಯದ್ರಿಹ್ಯದರ್ಕಂಡು-ನನ್ನ ಅರೆಸ್ಟ್ ಮಾಡಬೇಕು ಅಂತ ಪೋಲೀಸ್ನೋರ ಹುಕುಂ ಇನ್ನೂ ಐತಾ?’ ಅಂತ ಕೇಳಿದ್ರು. ಯಾವ್ದು, ಅಂದೆ. ‘ನಮ್ಮೂರ ಶ್ಯಾನುಭೋಗ ಶ್ಯಾಮಣ್ಣ ಸತ್ತದ್ದು’-ಅಂದ್ರು. ನಂಗೆ ಅದೆಲ್ಲ ತಪ್ಸೀಲು ಗೊತ್ತಿರ್ನಿಲ್ಲ. ನಂಗ್ ಗೊತ್ತಿದ್ದುನ್ ಹೇಳ್ದೆ: ‘ಅಲ್ಲಾ ಸ್ವಾಮಿ, ಕೋಲ್ಟಿನಾಗೆ ನೀವೇ ವ್ಯಾಜ್ಯ ಗೆದ್ರಂತೆ. ಗೆದ್ದಮ್ಯಾಲೆ ಯಾಕೆ ಊರು ಬಿಟ್ಟು ಹ್ವಂಟುಬುಟ್ರಿ?’ ಅವರೇನೂ ಜವಾಬು ಹೇಳ್ಲಿಲ್ಲ. ‘ನಾನು ಊರು ಬಿಟ್ಟು ಹನ್ನೆಲ್ಡು ವರ್ಷವಾಗ್ತಾ ಬಂತು. ಊರ್‍ಕಡಿಕ್ ಹೋಯ್ತೀನಿ’ ಅಂದ್ರು. ಆಮ್ಯಾಲೆ ಮತ್ತೆ ನಂಗ್ ಸಿಕ್ನೇ ಇಲ್ಲ. ಅವ್ರೆಲ್ಲಿದಾರೆ ಅಂತ್ಲೂ ಏಳ್ಲಿಲ್ಲ.”

ನಂಜಮ್ಮನಿಗೆ ಈಗ ಎಲ್ಲವೂ ಅರ್ಥವಾಯಿತು. ಕೋರ್ಟಿನಲ್ಲಿ ಕೇಸು ಮುಗಿಸಿಕೊಂಡು ಊರಿಗೆ ಬಂದ ಶ್ಯಾಮಣ್ಣ-‘ಆ ನನ್ಮಗ ಸಿಕ್ಲಿ, ಜಡ್ಜಿಗಳೇ ನೇಣುಗಟ್ಟುಸ್ತಾರೆ’ ಎಂದಿದ್ದ. ಅದಕ್ಕೇ ಹೆದರಿ ಅವರು ಹೀಗೆ ದೇಶಾಂತರ ಹೋಗಿರಬಹುದು. ಇಂಥ ಕೇಸುಗಳ ಜೀವ ಹನ್ನೆರಡು ವರ್ಷ ಇರುತ್ತಂತೆ. ಆಮೇಲೆ ಸರ್ಕಾರದವರು ಆ ಕಾಗದ ಪತ್ರಗಳನ್ನು ಸುಟ್ಟುಹಾಕಿಬಿಡುತ್ತಾರಂತೆ. ಹೀಗೆ ಮನೆ ಮಠ ಬಿಟ್ಟು ದೇಶಾಂತರ ತಿರುಗುವುದೇ ತನ್ನ ತಂದೆಯ ಹಣೆಯಲ್ಲಿ ಬರೆದಿದೆಯೇ ಎಂದು ಯೋಚಿಸುತ್ತಾ ಅವಳು ಅಂತರ್ಮುಖಿಯಾದಳು. ಅಷ್ಟರಲ್ಲಿ ಚೆನ್ನಿಗರಾಯರು ಮನೆಗೆ ಬಂದರು. ಅಯ್ಯನವರನ್ನು ಕಂಡ ಇವರಿಗೂ ಎಷ್ಟೋ ಸಂತೋಷ. ಅವರು ಹಾಡುತ್ತಿದ್ದ ತತ್ವ, ಭಜನೆ, ಲಾವಣಿಗಳನ್ನು ಕೇಳಿಕೊಂಡು ಇವರಿಗೆ ಸಲೀಸಾಗಿ ಹೊತ್ತು ಹೋಗುತ್ತಿತ್ತು. ಅಯ್ಯನವರು ಇದುವರೆಗೂ ಎಲ್ಲಿದ್ದರು ಇತ್ಯಾದಿ ಕುಶಲೋಪರಿಗಳನ್ನು ವಿಚಾರಿಸಿದ ಚೆನ್ನಿಗರಾಯರಿಗೆ, ಕಾಶಿ ಎಂಬುದನ್ನು ಕೇಳಿದ ತಕ್ಷಣ ಒಂದು ಪ್ರಶ್ನೆ ಕೇಳಬೇಕೆನ್ನಿಸಿತು. ಕಾಶಿಯ ಬಗೆಗೆ ಅವರು ಅನೇಕರಿಂದ ಏನೇನೋ ಕೇಳಿದ್ದರು. ಆದರೆ ಮಾದೇವಯ್ಯನವರಂತೆ ಅಲ್ಲಿಯೇ ವರ್ಷ ವರ್ಷವರೆ ಇದ್ದು ತಿಳಿದವರು ಯಾರನ್ನೂ ಇದುವರೆಗೆ ಕಂಡಿರಲಿಲ್ಲ.
‘ಅಯ್ನೋರೇ, ಅಲ್ಲಿ ರಾಜ ಮಹಾರಾಜರು ದಿನಾ ಸಮಾರಾಧನೆ ಮಾಡುಸ್ತಾರಂತೆ. ಊಟದಲ್ಲಿ ಒಂದೊಂದು ಲಾಡು ಉಂಡೆ ತಿಂದ್ರೆ ಒಂದೊಂದು ರೂಪಾಯಿ ದಕ್ಷಿಣೆ ಕೊಡ್ತಾರಂತೆ ನಿಜವೆ?’-ಅವರು ಕೇಳಿದರು.
‘ಅಲ್ಲಿ ರಾಜ ಮಹಾರಾಜರ ಧರ್ಮಶಾಲೆ ಏನೋ ಬಹುತ್ ಅವೆ. ಹೋದೋರಿಗೆ ಒಂದೊಂದು ಧರ್ಮಶಾಲೇಲಿ ಮೂರು ಮೂರು ದಿನ ಮುಫತ್ ಊಟ ನೀಡ್ತಾರೆ. ಹಬ್ಬದ ದಿನ ಊಟ ಹಾಕುಸ್ತಾರೆ. ಒಂದೊಂದು ದಫ ಒಂದು ಲಾಡು ತಿಂದ್ರೆ ಒಂದೊಂದು ರೂಪಾಯಿ ಕೊಡೋದೂ ಉಂಟು.’
‘ಹಾಗಾದ್ರೆ ಅಲ್ಲಿಗೇ ಹೋಗಿ ಇದ್ದು ಬಿಡಬೇಕುಕಣ್ರೀ.’
‘ಶ್ಯಾನುಭೋಗ್ರೇ, ಕಾಶೀಲೇನು ಭಿಕ್ಷುಕರಿಲ್ಲ ಅಂತೀರಾ? ನಿಮ್ಹಂಗೆ ಅಲ್ಲಿಗೆ ಹೋಗಿ ಇರಬೇಕು ಅನ್ನೋರು ಏನು ಕಮ್ಮಿ ಅವ್ರೆ ಅಂತೀರಾ? ಹಿಂಗೆ ಯಲ್ರಿಗೂ ದಿನಾ ಮುಫತ್ ಭೋಜನ ಕೊಡ್ಸುಕ್ಕೆ ಯಾವ ರಾಜನ ಕೈಲಿ ಆಗ್ತೈತಿ?’
‘ಥೂ, ಆ ರಾಜನ ಅವ್ವನ ಯೋಗ್ತಿಗೆ ನನ್ ಯಕ್ಡ ಹ್ವಡೆಯ. ಆ ಸಂಪತ್ತಿಗೆ ಅವನೆಂಥಾ ಮಹಾರಾಜ?’
ಅಯ್ಯನವರು ಅದಕ್ಕೆ ಯಾವ ಉತ್ತರ, ಟಿಪ್ಪಣಿಗಳನ್ನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಕೂತಿದ್ದು ಅವರು ಹೊರಟಾಗ ನಂಜಮ್ಮ, ‘ನಿಮ್ಮ ಗುಡೀಲಿದ್ದ ರಾಗಿ, ಕಾಳು, ಎಲ್ಲಾ ಕಳವಾಗಿದೆ. ಇವತ್ತಿಗೆ ಒಂದಿಷ್ಟು ಹಸಿಟ್ಟು, ಬ್ಯಾಳೆ, ಖಾರದ ಪುಡಿ ಕೊಡ್ತೀನಿ. ಇಲ್ದೆ ಇದ್ರೆ ನಮ್ಮನ್ಲೇ ಬಿನ್ನ ತೀರುಸ್ತೀರಾ?’
ಒಂದು ನಿಮಿಷ ಯೋಚಿಸಿದ ಅವರು-‘ಈ ಊರಲ್ಲಿರಾಣ ಅಂತ ಬಂದೆ. ಸುತ್ತ ಹಳ್ಳೀಲಿ ಜೋಳಿಗೆ ಹಿಡಿದು ಭಿಕ್ಷೆ ಮಾಡ್ತೀನಿ. ಜಾತಿಸ್ಥರ ಮುಲಾಜೇನು ಇಲ್ಲ. ಇಲ್ಲೇ ಬಿನ್ನಕ್ಕೆ ಬತ್ತೀನಿ’ ಎಂದು ಹೇಳಿ ಹೊರಟುಹೋದರು.

ಅವರು ಗುಡಿಗೆ ಹೋಗಿ ಇನ್ನೂ ಅರ್ಧ ಗಂಟೆ ಕಳೆದಿರಲಿಲ್ಲ. ಒಬ್ಬೊಬ್ಬರಾಗಿ ಬಣಜಿಗರ ಗಂಡಸರೆಲ್ಲ ಬಂದು ಸೇರಿದರು. ರೇವಣ್ಣಶೆಟ್ಟಿ, ಶೆಟ್ಟಪ್ಪ, ಮುರಳಶೆಟ್ಟಪ್ಪ, ಲಿಂಗದೇವರು, ಎಲ್ಲರೂ ಒಟ್ಟಿಗೆ ಬಂದು ಅಯ್ಯನವರಿಗೆ ಉದ್ದಕ್ಕೆ ಅಡ್ಡಬಿದ್ದರು. ರೇವಣ್ಣಶೆಟ್ಟಿ ಹೇಳಿದ: ‘ಅಯ್ನೋರೇ, ನೀವು ಮಹಾಂತರು. ನಮ್ಮೂರ ಮ್ಯಾಲೆ ಸಿಟ್ಕಂಡು ಹೊಂಟೋದ್ರಿ. ಊರಲ್ಲಿ ಮಳೆ ಬರ್ನಿಲ್ಲ, ಬೆಳೆ ಬೆಳೀನಿಲ್ಲ. ನೆನ್ನೆ ರಾತ್ರಿ ಬಂದ್ರಿ. ಮಳೆ ಬಂತು. ನಾವು ನಿಮ್ಮುನ್ನ ಅಂದು ಪಾಪ ಮಾಡಿಬಿಟ್ವು. ನೀವು ಆದ ಮರ್ತು, ನಮ್ಮಗಳ ಮನೆಗೆ ದಿನಾ ಕಂತೆಭಿಕ್ಷಕ್ಕೆ ಬರ್‌ಬೇಕು.’
ಅಯ್ಯನವರು ಈ ವಿಚಾರವನ್ನೇ ಮರೆತುಬಿಟ್ಟಿದ್ದರು. ಈಗ ಇವರು ಹೀಗೆ ಹೇಳುತ್ತಿದ್ದಾರೆ. ತಾವು ಊರು ಬಿಟ್ಟುದರಿಂದಲೇ ಇಲ್ಲಿ ಮಳೆ ಹೋಯಿತೇ? ಬರೀ ರಾಮಸಂದ್ರಕ್ಕೆ ಮಾತ್ರ ಹೋಗಿಲ್ಲ, ಸೀಮೆಗೇ ಹೋಗಿದೆ. ತಮಿಳು ತೆಲುಗು ದೇಶಗಳಲ್ಲೂ ಇಲ್ಲದುದನ್ನು ಅವರು ರೈಲಿನಲ್ಲಿ ಬರುವಾಗ ನೋಡಿದ್ದರು. ನೆನ್ನೆ ತಾವು ಈ ಊರು ತಲುಪಿದ್ದಕ್ಕೂ ಇಲ್ಲಿ ಮಳೆ ಆದದ್ದಕ್ಕೂ ಅದೇನು ಶಿವನ ಸಂಬಂಧ?-ಈ ಊರ ಮೇಲಣ ಹಳ್ಳಿಗಳಲ್ಲೂ ಮಳೆಯಾಗೈತೆ. ಅವರೇ ಅಂದ್ರು: ‘ನಾವೇನೂ ಮಹಂತರಲ್ಲ. ಮಳೆ ಬೆಳೆ ಹೋಗಾದು ಬರಾದು ಶಿವನ ಇಚ್ಚೆ. ಜನಗಳ ಪಾಪ ಪುಣ್ಯಕ್ಕೆ ತಕ್ಕ ಹಂಗೆ ಶಿವ ಕೊಡ್ತಾನೆ. ನಮ್ಮ ಮುದ್ದೆ ನಾವು ತೊಳಸ್ಕಂತೀವಿ.’

ಆದರೆ ಅವರು ಕೇಳಲಿಲ್ಲ. ದಿನವೂ ಮಧ್ಯಾಹ್ನ ತಮ್ಮ ಮನೆಗಳಲ್ಲಿ ಕಂತೆಭಿಕ್ಷೆ ಇಕ್ಕಿಸಿಕೊಂಡು ತಮ್ಮನ್ನು ಧನ್ಯರನ್ನಾಗಿ ಮಾಡಬೇಕೆಂದು ಮತ್ತೊಮ್ಮೆ ಕೈಮುಗಿದರು. ಅಯ್ಯನವರು ಬೇಡವೆನ್ನಲಿಲ್ಲ. ಈಗ ಊರಿನಲ್ಲಿ ಎಲ್ಲರ ಮನೆಯಲ್ಲೂ ಕವಳಕ್ಕೆ ಕಷ್ಟವೆಂದು ಅವರು ಕೇಳಿದ್ದರು. ಆದರೂ ಅವರು ಮಧ್ಯಾಹ್ನ ಕಂತೆಭಿಕ್ಷೆ ಮಾಡಿ ಗುಡಿಗೆ ತಂದು ಕೂತು ಉಂಡರು. ನಂಜಮ್ಮನ ಮನೆಗೆ ರಾತ್ರಿ ಬರುವುದಾಗಿ ಹೇಳಿ ಬಂದರು. ಅವಳ ಮಗ ವಿಶ್ವ ಆಗಲೇ ಅಯ್ಯನವರನ್ನು ಅರ್ಧ ಮರೆತುಬಿಟ್ಟಿದ್ದ. ಅವನು ಸ್ಕೂಲಿಗೆ ಬೇರೆ ಹೋಗುತ್ತಾನೆ. ಅವರು ಉಣ್ಣುವಾಗ ಜೊತೆಯಲ್ಲಿ ಜೊತೆಯಲ್ಲಿ ಕೂರಲು ಆಗ ಸ್ಕೂಲಿನ ಸಮಯ.

ಮಾದೇವಯ್ಯನವರು ಊರು ಬಿಟ್ಟು ಹೋದುದಕ್ಕೆ ಊರಿನಲ್ಲಿ ಮಳೆ ಬೆಳೆ ಆಗಲಿಲ್ಲ. ನೆನ್ನೆ ರಾತ್ರಿ ಅವರು ಹಿಂತಿರುಗಿ ಬಂದದ್ದರಿಂದಲೇ ಮಳೆ ಬಂತು ಎಂಬ ಸುದ್ದಿ ಊರಿನಲ್ಲೆಲ್ಲ ಹರಡಿತು. ಕುರುಬ ಕುಂಬಾರ, ಬಡಗಿ, ಚಮ್ಮಾರರಾದಿಯಾಗಿಯೂ ಗುಡಿಗೆ ಬಂದು ಅವರಿಗೆ ಕೈಮುಗಿದು ಹೋದರು. ಪಟೇಲ ಶಿವೇಗೌಡನಂತಹ ಕೆಲವರು ಮಾತ್ರ ಇದನ್ನು ನಂಬಲಿಲ್ಲ. ಆ ದಿನ ರಾತ್ರಿ ಅಯ್ಯನವರು ಒಬ್ಬರೇ ಗುಡಿಯಲ್ಲಿ ಮಲಗಿದ್ದರು. ನಡುರಾತ್ರಿಯ ವೇಳೆಗೆ ಯಾರೋ ಒಬ್ಬ ಬಂದು, ‘ಅಯ್ಯಾರೇ, ಅಯ್ಯಾರೇ’ ಎಂದು ಕೂಗಿ ಎಬ್ಬಿಸಿದ. ಅಯ್ಯನವರು ಎದ್ದು ಬೆಂಕಿಕಡ್ಡಿ ಗೀರಿ ನೋಡಿದರು. ಬಂದಿದ್ದವನು ಪಟೇಲ ಶಿವೇಗೌಡರ ಮನೆಯ ಜೀತದ ಆಳು ಗೊರವ. ಇವರ ಕಾಲು ಮುಟ್ಟಿ ಹೇಳಿದ: ‘ಯಪ್ಪ, ನಂಗೆ ಸಾಪ ಆಕ್‌ಬ್ಯಾಡ. ನಂದೇನೂ ತೆಪ್ಪಿಲ್ಲ.’
‘ಯಾಕೆ ಏನಾಯ್ತು? ಏಳು.’
‘ನಿನ್ನ ರಾಗಿ, ಅವರೇಕಾಳು, ಯಲ್ಲಾನೂ ನಮ್ಮ ಗೌಡ್ರು ರಾತ್ರಿನಾಗ, ಬಿಟ್ಟ ಊರಿಗೆ ಬಂದು ಒರುಸ್ಕಂಡು ಕುಂಡೊಯ್ದ್ರು. ಅವ್ರೇ ಬಂದು ಬೀಗ ಮುರುದ್ರು. ನಾನು ಒತ್ಕಂಡೋಗಿ ಅವ್ರ ಶೆಡ್ಡಿಗೆ ಆಕ್ದೆ. ನನ್ ಮನ್ಗೇನೂ ತಗಂಡಿಲ್ಲ.’
‘ಆಗ್ಲಿ ಬುಡು, ನಿಂದೇನೂ ತೆಪ್ಪಿಲ್ಲ.’
‘ನಾನ್ಹಿಂಗಂದೆ ಅಂತ ಯಾರ್‌ಕುಟ್ಟೂ ಅನ್‌ಬ್ಯಾಡ.’
‘ಹೇಳಾಕುಲ್ಲ’-ಎಂದು ಅವರು ಮಾತು ಕೊಟ್ಟ ಮೇಲೆ ಅವನು ಹೊರಟು ಹೋದ.
ಪಟೇಲ ಶಿವೇಗೌಡರು ಎಂಥವರೆಂಬುದು ಅಯ್ಯನವರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಬಿಟ್ಟ ಊರಿನಲ್ಲಿ ದೇವಸ್ಥಾನದ ಕೋಣೆಯ ಬೀಗ ಮುರಿದು ರಾಗಿಯ ಕಳವು ಮಾಡುವುದೆಂದರೆ ಯಾರೋ ಇಂಥವರೊಬ್ಬರ ಕುಮ್ಮಕ್ಕಿಲ್ಲದೆ ಬರೀ ಹೊಟ್ಟೆಗಿಲ್ಲದ ಕಳ್ಳರು ಮಾಡಲಾರರೆಂದು ಅವರೂ ಊಹಿಸಿದ್ದರು.

ಮರುದಿನ ಬೆಳಿಗ್ಗೆ ಸುಮಾರು ಹತ್ತು ಗಂಟೆಯಲ್ಲಿ ಒಂದು ವಿಶೇಷ ನಡೆಯಿತು. ನೂರು ರೊಂಯಿಪಟಗಳು ಒಂದೇ ಸಮನೆ ಮೊರೆದಂತೆ ಅದೇನೋ ಸದ್ದಾಯಿತು. ಹೊಲ ಗದ್ದೆಗಳ ಅಟ್ಟಲು ಮಣ್ಣಿನ ಮೇಲೆ ನಡೆಯುತ್ತಿದ್ದ ಜನಗಳೆಲ್ಲ ಕತ್ತೆತ್ತಿ ನೋಡುತ್ತಾರೆ: ಆಕಾಶದಲ್ಲಿ ಬೆಳ್ಳನೆಯ ಭಾರೀ ಗರುಡ ಪಕ್ಷಿಯಂಥದೊಂದು ಹೋಗುತ್ತಿದೆ. ರೆಕ್ಕೆ ಆಡಿಸುತ್ತಿಲ್ಲ. ಅದಕ್ಕೆ ಕೊಕ್ಕಿಲ್ಲ. ಆದರೆ ಬಾಲದಂತೆ ಏನೋ ಇದೆ. ರೆಕ್ಕೆಯಂತೆ ಎರಡು ಕಡೆಯೂ ಹರಡಿದೆ. ಊರ ಮೇಲೆ ಬಂದಾಗ ಅದರಿಂದ ಅದೇನೋ ಕೆಳಗೆ ಬಿತ್ತು. ಬಿರುಗಾಳಿಗೆ ತೂರುವ ತರಗು ಎಲೆಗಳಂತೆ ಊರ ಮೇಲೆಲ್ಲ ಚದುರಿ ಬಿದ್ದ ಕಾಗದದ ಚೀಟಿಗಳಾಗಿದ್ದವು. ಮೇಲೆ ಹೋದದ್ದು ವಿಮಾನವೆಂದು, ಈ ಹಿಂದೆ ಅಂಥದ್ದನ್ನು ನೋಡಿರದಿದ್ದರೂ ಎಷ್ಟೋ ಜನಕ್ಕೆ ಗೊತ್ತಾಯಿತು. ನಂಜಮ್ಮ ಕೆಳಗೆ ಬಿದ್ದ ಒಂದು ಚೀಟಿಯನ್ನು ತೆಗೆದುಕೊಂಡು ಓದಿದಳು.

ಮೈಸೂರು ರಾಜ್ಯವನ್ನಾಳುವ ಮಹಾಸ್ವಾಮಿ ಶ್ರೀಮನ್ ಮಹಾರಾಜರ ಘನ ಸರ್ಕಾರವು ಅದನ್ನು ಅಚ್ಚುಹಾಕಿಸಿತ್ತು. ಈಗ ಯುದ್ಧ ನಡೆಯುತ್ತಿದೆಯಂತೆ. ಯೂರೋಪು ದೇಶದಲ್ಲಿ ಜರ್ಮನಿಯವರು ಮುನ್ನುಗ್ಗುತ್ತಿದ್ದಾರಂತೆ. ಜಪಾನಿನವರು ಇಂಡಿಯಾ ದೇಶವನ್ನು ಕಬಳಿಸಲು ಬರುತ್ತಿದ್ದಾರೆ. ನಮ್ಮ ಮೈಸೂರು ದೇಶದ ಮೇಲೂ ಬಾಂಬು ಬಂದು ಬೀಳಬಹುದು. ವಿಮಾನಗಳು ಬಂದಾಗ ಜನಗಳು ನಿಂತು ನೋಡಬಾರದು. ನಿಂತಲ್ಲಿಯೇ ಮಕಾಡೆ ಮಲಗಿಬಿಡಬೇಕು. ಶತ್ರುಗಳನ್ನು ಹೊಡೆದೋಡಿಸಲು ಯುದ್ಧನಿಧಿಗೆ ಜನಗಳೆಲ್ಲ ಸಹಾಯ ಮಾಡಬೇಕು-ಎಂದು ಬರೆದು ಕೊನೆಯಲ್ಲಿ, ‘ವಿಜಯ’ ಎಂದು ಹಾಕಿತ್ತು.

ಇದಾದ ಒಂದು ವಾರದಲ್ಲಿ ಶೇಕ್‌ದಾರರು ರಾಮಸಂದ್ರಕ್ಕೆ ಬಂದರು. ಯುದ್ಧನಿಧಿಗೆ ಹಣ ಕೊಡಿಸಬೇಕೆಂದು ಸರ್ಕಾಸದ ಆಜ್ಞೆಯಾಗಿದೆ. ಮಳೆ ಬೆಳೆ ಇಲ್ಲವೆಂದು ಅದೇ ಸರ್ಕಾರ ಹೋದ ವರ್ಷ ಕಂದಾಯ ವಜಾ ಮಾಡಿತ್ತು. ಆದರೆ ಈಗ ಇಂಗ್ಲೆಂಡ್ ಚಕ್ರವರ್ತಿಗಳು ಹಣವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಜನಗಳು ಆದಷ್ಟು ಕೊಡಲೇಬೇಕು. ಶೇಕ್‌ದಾರರೇ ಬಂದ ಮೇಲೆ ಮಾಡುವುದೇನು? ಶಿವೇಗೌಡ ಕಾಶಿಂಬಡ್ಡಿ ಮೊದಲಾದವರಿಂದ, ಶೇಕ್‌ದಾರರು ಹೇಳಿದಷ್ಟು ವಸೂಲಿಯಾಯಿತು. ಊರ ಹೊರಗೆ ತನ್ನದೇ ಕಿರಾಣಿ ಅಂಗಡಿ ನಡೆಸುತ್ತಿದ್ದ ನರಸಿಯೂ ಐದು ರೂಪಾಯಿ ಕೊಟ್ಟಳು. ಒಟ್ಟಿನಲ್ಲಿ ರಾಮಸಂದ್ರದಲ್ಲಿ ನೂರು ರೂಪಾಯಿ ವಸೂಲಾಯಿತು. ‘ನಿಮ್ಮ ಗ್ರಾಮದ ಮರ್ಯಾದೆ ಉಳೀತು’-ಎಂದು ಶೇಕ್‌ದಾರರು ಹೇಳಿ ಹೋದರು.

ಮರುದಿನ ರಾಮಣ್ಣ ಸ್ಕೂಲಿನಿಂದ ಬರುವಾಗ ಅವನ ಶರಟಿನ ವ್ ಎಂಬ ಆಕಾರದಲ್ಲಿ ಅಚ್ಚುಮಾಡಿರುವ ಗುರುತಿನ ಒಂದು ಬಣ್ಣದ ಕಾಗದವನ್ನು ಗುಂಡುಸೂಜಿಯಿಂದ ಚುಚ್ಚಿಕೊಂಡಿದ್ದ. ಅವನು ಮನೆಗೆ ಬಂದು ಹೇಳಿದ: “ಅಮ್ಮ, ನಮ್ಮ ಸ್ಕೂಲಿನಲ್ಲಿ ಇದನ್ನ ಎಲ್ಲ ಹುಡುಗರಿಗೂ ಹಾಕಿ ಮೆರೆವಣಿಗೆ ಮಾಡಿಸಿದರು. ಇದು ನೋಡು, ನಾನು ನಿಂಗೆ ಹೇಳ್ಕೊಟ್ಟಿರ್‍ಲಿಲ್ವಾ? ಇಂಗ್ಲಿಷಿನ ‘ವಿ’ ಅನ್ನೂ ಅಕ್ಷರ. ‘ವಿ’ಅಂದ್ರೆ ‘ವಿಕ್ಟರಿ’ಅಂತ. ಯುದ್ಧದಲ್ಲಿ ನಮಗೆಲ್ಲ ವಿಜಯವಾಗಲಿ ಅಂತ. ಅದಕ್ಕೆ ಎಲ್ಲ ಹುಡುಗರೂ ಎರಡೆರಡಾಣೆ ತರಬೇಕು ಅಂತ ಹೆಡ್ಮೇಷ್ಟರು ಹೇಳಿದಾರೆ” ಎಂದು ಹುಡುಗ ವಿವರಿಸುತ್ತಿದ್ದ. ಎರಡಾಣೆಯನ್ನು ಎಲ್ಲಿ ಹೊಂಚುವುದೆಂದು ಅಮ್ಮ ಯೋಚಿಸತೊಡಗಿದಳು.
*****
ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್
ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್