ಅವಧೇಶ್ವರಿ – ೪

“ನಿನಗೆ ಒಪ್ಪಿಗೆಯೇ?” ಎಂದನು ಶಬರ.
“ಓಹೋ, ಒಪ್ಪಿಗೆ”
ಅವನು ಏನೇನೋ ಹೇಳಿದನು. ಇಬ್ಬರು ಶಬರರು ಒಂದು ಹಗ್ಗದಿಂದ ಅವನನ್ನು ಗಿಡಕ್ಕೆ ಬಿಗಿದರು. ಇನ್ನೊಬ್ಬ ಒಂದು ಬಟ್ಟೆಯಿಂದ ಅವನ ಕಣ್ಣು ಕಟ್ಟತೊಡಗಿದನು. ಇನ್ನೊಬ್ಬ ಅವನು ಉಟ್ಟ ಧೋತ್ರವನ್ನು ಕಳೆದ. ಸೊಂಟಕ್ಕೆ ಸುತ್ತಿದ ಹಮ್ಮಿಣಿಯನ್ನು ಬಿಚ್ಚಿ ಕುಳ್ಳನತ್ತ ಒಗೆದ. ಒಂದೇ ಕೈಯಿಂದ ಅದನ್ನು ಹಿಡಿದು ಭಾರಕ್ಕೆ ಬೀಳದಂತೆ ಪ್ರದಕ್ಷಿಣೆ ಹಾಕಿದ , ಕುಳ್ಳ.
“ಇವರು ಏನು ಮಾಡುತ್ತಾರೆ?”
“ನಿನ್ನ ಜನನಾಂಗವನ್ನು ಕೊಯ್ದು ಬಾಯಲ್ಲಿ ಇಡುತ್ತಾರೆ. ನಮ್ಮ ಪದ್ಧತಿ.”
“ನಾನು ಇಲ್ಲಿ ಬಂದದ್ದು ಶ್ರವಣೆಯನ್ನು ಮದುವೆಯಾಗುವ ಉದ್ದೇಶಕ್ಕಾಗಿ! ಆಕೆಯ ತಂದೆ-ತಾಯಿಗಳಿಗೆ ನನ್ನ ಬೇಡಿಕೆ ಸಲ್ಲಿಸುವುದಕ್ಕಾಗಿ!”
ಒಮ್ಮೆಲೇ ಶಬರರ ಮನಸ್ಸು ಹೊಸಚಿಂತೆಯಿಂದ ಆವರಿಸಿತು.
“ಹಾಗಾದರೆ ಅವಳ ಮಾನಭಂಗ ಏಕೆ ಮಾಡಿದೆ?”
“ಆಗ ನಾನು ಮಧುಮತ್ತನಾಗಿದ್ದೆ. ಏನು ಮಾಡಿದೆನೋ ನನಗೆ ತಿಳಿಯದು.”
ಮತ್ತೆ ಚರ್ಚೆ ಪ್ರಾರಂಭವಾಯಿತು.
ಕುಳ್ಳನು ಗುಗ್ಗನು. ಅವನ ಬಾಯಿ ತುಂಬ ನಾಲಗೆಯೇ ಆವರಿಸಿತ್ತು. ಗೋಣು ಇರಲಿಲ್ಲ. ದಡಕ್ಕೆ ಶಿರ ಅಂಟಿಕೊಂಡಿತ್ತು. ಗುಗ್ಗುತ್ತ ಅವನು ಹೇಳಿದನು, “ಗುರುಗಳತ್ತ ಒಯ್ಯಿರಿ. ಅವರೇ ಶಾಸನ ಮಾಡಲಿ.” ಇಷ್ಟು ಹೇಳುವುದಕ್ಕೆ ಅವನಿಗೆ ಹತ್ತು ಕ್ಷಣಗಳು ಬೇಕಾದವು. ಅನೇಕ ಅಸಂಬದ್ಧ ವ್ಯಂಜನಗಳನ್ನು ಕೂಡಿ.
ಶಬರರು ತಲೆ ಅಲ್ಲಾಡಿಸಿದರು. “ಋಷಭೇಂದ್ರರು ನಮ್ಮ ಪದ್ಧತಿಗಳನ್ನು ಒಪ್ಪುವುದಿಲ್ಲ.”
ಚರ್ಚೆ ಮುಂದುವರೆಯಿತು. ಕೊನೆಗೆ ದುರ್ಗಸಿಂಹನ ಕುರಿತು ಶಬರ ಹೇಳಿದನು;
“ಅವಳ ಕಾಲು ಮುರಿದದ್ದನ್ನು ನಾವೆಲ್ಲ ನೋಡಿದ್ದೇವೆ. ಇದೀಗ ಅವರ ಮನೆಯಿಂದಲೇ ಬಂದೆವು. ಸಮೀಪದ ಹಳ್ಳಿಯೊಂದರಲ್ಲಿ ಅವರು ಇರುತ್ತಾರೆ. ನೀನು ಮಾಡಿದ ಅಕೃತ್ಯಕ್ಕಾಗಿ ಅವರು ಹತ್ತು ಹಳ್ಳಿಗಳಿಗೆ ಊಟ ಹಾಕಬೇಕಾಯಿತು.”
“ಊಟ ಹಾಕಿದರೆ ಏನಾಗುತ್ತದೆ?”
“ಶ್ರವಣೆ ಮತ್ತೆ ನಮ್ಮ ಜಾತಿಯಲ್ಲಿ ಬರುತ್ತಾಳೆ.”
“ನನಗೆ ಏನಾದರೂ ಶಿಕ್ಷೆ ಕೊಡಿರಿ. ನಾನೂ ಶುದ್ಧನಾಗುತ್ತೇನೆ. ನೀವು ಹೇಳಿದ ಶಾಸ್ತಿ ಲಗ್ನವಾಗುವವನಿಗೆ ತಕ್ಕುದಲ್ಲ.”
ಮತ್ತಷ್ಟು ಚರ್ಚೆಯಾಗಿ, ಮೊದಲು ಅವನ ಬಲಗಾಲ ಕಾಲ್ಬೆರಳನ್ನು ಒಂದು ಹದನವಾದ ಚೂರಿಯಿಂದ ಕತ್ತರಿಸಿದರು. ತೆಳ್ಳನೆಯ ಚೂರಿ ಎಷ್ಟು ಹದನವಾಗಿತ್ತೆಂದರೆ ರಕ್ತ ಸೋರತೊಡಗಿದರೂ ನೋವು ಅನಿಸಲಿಲ್ಲ. ನಂತರ ಒಂದು ತೆಂಗಿನ ಪರಟೆಯಲ್ಲಿ ಅವನಿಗೆ ಮೂತ್ರವಿಸರ್ಜನೆ ಮಾಡಿಸಿ ಕುಡಿಯ ಹಚ್ಚಿದರು. ಆಮೇಲೆ ಅವನನ್ನು ಒಂದು ಹಾಸುಗಲ್ಲಿನ ಮೇಲೆ ಕೂರಿಸಿ ಮೆದುವಾಗಿ ಚಿಮಟಿಗೆಯಿಂದ ಅವನ ಕೈಯಲ್ಲಿ ನೆಟ್ಟ ಬಾಣವನ್ನು ಎಳೆದು ತೆಗೆದರು. ಬಾಣದ ಅಳತೆ ಒಂದು ಚೋಟುದ್ದ ಏರಬಹುದು. ಡಬ್ಬಣದಷ್ಟು ಆಗಬಹುದು. ಮಸೆದು ಮಸೆದು ತೆಳುವಾಗಿ ಮಾಡಲ್ಪಟ್ಟಿತ್ತು.
“ನಿನ್ನ ಬೇಡಿಕೆಯನ್ನು ಶ್ರವಣಾಳ ತಂದೆ-ತಾಯಿಗಳಿಗೆ ತಿಳಿಸುತ್ತೇವೆ! ಈಗ ಮನೆಗೆ ಹೊರಟಿದ್ದೇವೆ, ನಡೆ” ಎಂದರು.
ದಾರಿಯಲ್ಲಿ ಅವನಿಗೆ ಹಣ್ಣು ಹಂಪಲು ಹರಿದು ತಿನ್ನಲು ಕೊಟ್ಟರು.
ಋಷಭಮುನಿಗಳ ಆಶ್ರಮದಲ್ಲಿ ಕುಳ್ಳನನ್ನೂ ದುರ್ಗಸಿಂಹನನ್ನೂ ಬಿಟ್ಟು ಶಬರರು ಹೊರಟುಹೋದರು, ತಮ್ಮ ಮನೆಗಳಿಗೆ.
ಸಗರನನ್ನು ಎದುರು ನೋಡುತ್ತಿರುವ ಚಿಕ್ಕ ರಾಣಿ ಯಾದವದೇವಿ ಸ್ವಾಗತಕ್ಕಾಗಿ ಬಾಗಿಲಿಗೆ ಧಾವಿಸಿದಳು. ದುರ್ಗಸಿಂಹನನ್ನು ಕಾಣುತ್ತಲೇ ಚೀತ್ಕಾರ ಮಾಡಿ ನೆಲಕ್ಕೆ ಕುಸಿದು ಮೂರ್ಛೆ ಹೋದಳು.
ಕುಳ್ಳನು ಉರುಗಾಯನು(ಬೇಗ ನಡೆಯುವವನು). ಭರದಿಂದ ಮುಂದೆ ನಡೆದು ತಾಯಿಗೆ ನೆಲಕ್ಕೆ ಬೀಳಗೊಡದೆ ಆಸರೆಯಿತ್ತು, ಮೆಲ್ಲನೆ ನೆಲಕ್ಕೆ ಮಲಗಿಸಿದನು. ದುರ್ಗಸಿಂಹನು ಸಮೀಪ ಬಂದು, ಕೃಶಾಂಗಿ, ನೆರೆತ ಕೂದಲಿನ, ಬಡವೇಷದ ಚಿಕ್ಕರಾಣಿ ಯಾದವಿಯ ಗುರುತು ಹಿಡಿದು ಮುಖ ಕೆಳಗೆ ಮಾಡಿದನು. ಅದೇ ಸಂಧ್ಯಾವಂದನೆಗೆ ಕುಳಿತ ಋಷಭೇಂದ್ರರು ಅರ್ಘ್ಯ ಪ್ರದಾನ ಮಾಡಿದೊಡನೆ ಅಷ್ಟಕ್ಕೇ ಮುಗಿಸಿ ಹೊರಗೆ ಬಂದರು. “ಏನಾಯಿತು?” ಎಂದರು. ಕುಳ್ಳನ ತೊಡೆಯ ಮೇಲೆ ಯಾದವಿ ಒರಗಿದ್ದಳು. ಆಕೆಯ ಸೆರಗಿನಿಂದಲೇ ಕುಳ್ಳನು ಆಕೆಗೆ ಗಾಳಿ ಬೀಸುತ್ತಿದ್ದನು. ಎದುರಿಗೆ ಗೋಣು ಬಾಗಿಸಿ ಕಣ್ಣೀರು ಸುರಿಸುತ್ತ ಹೊಸ ಮುಖ ನಿಂತಿತ್ತು.
ಋಷಭರೂ ಕುಳ್ಳನೂ ಯಾದವೀದೇವಿಯನ್ನು ನಡುಮನೆಗೆ ಎತ್ತಿ ಒಯ್ದರು. ಅರಿಷಿನ-ಲೌಳಸರದ ರಸದ ಶೈತ್ಯೋಪಚಾರ ಮಾಡಲಿಕ್ಕೆ ಕುಳ್ಳನಿಗೆ ಬಿಟ್ಟು, ಋಷಿಗಳು ಹೊರಗೆ ಬಂದು, “ನೀವು ಯಾರು?” ಎಂದು ಪ್ರಶ್ನಿಸಿದರು.
“ಯಾದವೀದೇವಿಗೆ ಇಪ್ಪತ್ತು ವರ್ಷದ ಕೆಳಗೆ ನನ್ನ ಅಕ್ಕ ಹಿರಿಯ ರಾಣಿ ಕೇಶಿನಿದೇವಿ ವಿಷ ಹಾಕಿದಾಗ ಆ ವಿಷ ತಂದುಕೊಟ್ಟ ಅಧಮ ನಾನು. ನನ್ನನ್ನು ಕಂಡೊಡನೆ ಮೂರ್ಛೆಹೋದಳು!” ಎಂದು ತನ್ನ ಕತೆಯನ್ನೆಲ್ಲ ಸಾದ್ಯಂತವಾಗಿ ಹೇಳಿದ. ಈಗ ತಾನು ಪದವಿ ಕಳಕೊಂಡು ದೇಶಭ್ರಷ್ಟನಾದುದನ್ನೂ, ಶ್ರವಣಾಳನ್ನು ಮದುವೆಯಾಗಿ, ಇಲ್ಲಿಯೇ ನೆಲೆಸಿ, ಶಬರರ ದಂಡು ಕಟ್ಟಿ ದಶಾರ್ಣದ ಮೇಲೆ ದಾಳಿ ಮಾಡಬೇಕೆಂದು ಇಲ್ಲಿ ಬಂದಿರುವುದಾಗಿಯೂ ಹೇಳಿದನು.
“ಅಕ್ಕನ ಮೇಲೆ ದ್ವೇಷ ಸಾಧಿಸುವುದಕ್ಕಾಗಿಯೇ ಶ್ರವಣಾಳನ್ನು ಲಗ್ನವಾಗುತ್ತೀಯಾ?”
’ಇಲ್ಲ’ವೆಂದು ಹೇಳಿದರೂ ಅನುಮಾನಿಸಿ ’ಹೌದು’ ಎಂದು ಹೇಳಿದನು.
“ದ್ವೇಷದಿಂದ ಮಾಡಿದ ಯಾವ ಕಾರ್ಯಕ್ಕೂ ದೈವದ ಬೆಂಬಲ ಸಿಕ್ಕುವುದಿಲ್ಲ, ಜೋಕೆ!” ಎಂದರು ಋಷಭಮುನಿ.
“ಶ್ರವಣಾಳಿಗೆ ಅನ್ಯಾಯ ಮಾಡಿದ್ದೇನೆ. ಅದನ್ನು ಸರಿಪಡಿಸುವುದು ನನ್ನ ಧರ್ಮವಲ್ಲವೆ?”
“ಅದು ನಿನ್ನ ಧರ್ಮ, ಹೌದು. ಆದರೆ ಲಗ್ನದ ವಿಷಯದಲ್ಲಿ ಧರ್ಮವಷ್ಟೇ ಸಾಲದು. ’ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ’ ಎಂದು ಅಗ್ನಿಸಾಕ್ಷಿಯಾಗಿ ಪಣತೊಡಬೇಕಾಗುತ್ತದೆ.”
ಅರ್ಥವಾದವನಂತೆ ದುರ್ಗಸಿಂಹ ತಲೆಯಾಡಿಸಿದನು.
ಅವನ ಮುಖವನ್ನು ಋಷಭರು ರಾಜಲಕ್ಷಣಗಳಿಗಾಗಿ ಸೂಕ್ಷ್ಮ ಪರಿಶೋಧನೆ ಮಾಡಿದರು. ’ಕೈ ತೋರು’ ಎಂದು ಈಗಲೇ ಹೇಳಲು ಮನಸ್ಸಾಗಲಿಲ್ಲ. ಗೋಣು ಅಲ್ಲಾಡಿಸಿದರು.
“ನನಗೆ ವಿಜಯ ಸಿಕ್ಕಬಹುದೆ?”
“ಈಗ ವಿಶ್ರಮಿಸು. ನಾಳೆ ಹೇಳುತ್ತೇನೆ.” ಎಂದರು. ಸೂರ್ಯ ಮುಳುಗುತ್ತಿದ್ದ. ಪ್ರಶ್ನೆ ಕೇಳಿದ ಸಮಯವನ್ನು ಮನಸ್ಸಿನಲ್ಲೇ ನಮೂದಿಸಿಕೊಂಡರು.
“ರಾಣಿ ಯಾದವೀದೇವಿ ನನ್ನನ್ನು ಕ್ಷಮಿಸಬಹುದೇ?”
“ಕೇಳಿ ನೋಡು, ಒಬ್ಬಳೇ ಇದ್ದಾಗ ಕೇಳು. ವಿಷ ಕೊಟ್ಟವನು ನೀನೇ ಎಂದು ಯಾರಿಗೂ ಹೇಳಬೇಡ. ಆಕೆಯೂ ಹೇಳದಂತೆ ವ್ಯವಸ್ಥೆ ಮಾಡುತ್ತೇನೆ. ಒಳಗೆ ಹೋಗಿ ತುಸು ಉಪಹಾರ ತೀರಿಸು. ಸಗರ ನಿನ್ನನ್ನು ಕರೆದೊಯ್ಯುತ್ತಾನೆ.”
ಯಾದವೀದೇವಿಗೆ ಎಚ್ಚರವಾಗಿತ್ತಾದರೂ ವಿಷಣ್ಣಕಣ್ಣುಗಳಿಂದ ಜಂತಿಯನ್ನೇ ನೋಡುತ್ತ ಶೂನ್ಯವನ್ನೇ ವೀಕ್ಷಿಸುತ್ತಿದ್ದಳು. ಋಷಿಗಳು ಒಳಗೆ ಹೋಗಿ ಮತ್ತೆ ಸಂಧ್ಯಾವಂದನೆಯನ್ನು ಮುಂದುವರೆಸಿದರು. ಅನಂತರ ಸೀದಾ ಯಾದವಿಯತ್ತ ಬಂದು ಎದುರಿಗೆ ಕುಳಿತುಕೊಂಡರು. ಯಾದವೀದೇವಿ ಗೌರವದಿಂದ ಎದ್ದು ಕುಳಿತು ತನ್ನ ಸೆರಗು ಸರಿಪಡಿಸಿಕೊಂಡಳು. ಜೋಲುಮೋರೆ ಹಾಕಿ ಅವರ ಎದುರಿಗೆ ಕುಳಿತಳು.
ತುಸು ಹೊತ್ತು ಮೌನ. ಕೊನೆಗೆ ಯಾದವಿಯ ತಾಳ್ಮೆ ತಪ್ಪಿತು. ತಾನೇ ಮಾತಿಗೆ ಮೊದಲು ಮಾಡಿದಳು.
ಈ ಆಶ್ರಮದಲ್ಲಿ ನನಗೆ ವಿಷ ಹಾಕಿದವನೂ ಇರುವುದಾದರೆ ನಾನು ಎಲ್ಲಿ ಹೋಗಬೇಕು?”
“ಅವನೇ ಹೋಗುತ್ತಾನೆ. ನೀನು ನಿಶ್ಚಿಂತಳಾಗಿರು.”
ಅವರ ಶಾಂತ ದನಿಯನ್ನು ಕೇಳಿಯೇ ಯಾದವಿ ರಚ್ಚಿಗೆದ್ದಳು. ಅವಡುಗಚ್ಚಿ ’ಅಯ್ಯೋ’ ಎಂದು ಚೀತ್ಕಾರ ಹೇಳಿದಳು: “ಇದೇ ಚಾಂಡಾಲನಿಂದ ನನ್ನ ಮಗನ ಕೈಕಾಲು ಊನವಾದವು. ಇವನಿಗೆ ನಾನೇ ಉಣಿಸಬೇಕೆ? ಇದು ಯಾವ ನ್ಯಾಯ? ಒಂಭತ್ತು ತಿಂಗಳು ಊನಗರ್ಭವನ್ನು ಹೊತ್ತೆ. ಹದಿನೆಂಟು ವರ್ಷ ಊನ ಮಗುವನ್ನು ಸಾಕಿದೆ. ಅಸಹ್ಯ ಅನ್ಯಾಯ ಮಾಡುವವರು ಸುಖದಿಂದೇ ಇರುತ್ತಾರೆ. ತುಟಿಪಿಟಿಕ್ಕೆನ್ನದೆ ಕಷ್ಟ ಸಹನ ಮಾಡುವವರಿಗೇನೇ ದೇವರು ಇನ್ನಷ್ಟು ಕಷ್ಟಗಳನ್ನು ತರುತ್ತಾನೆ. ದೇವಾ….ದೇವಾ..ಇದೆಂಥ ನಿನ್ನ ಸೃಷ್ಟಿ?”
“ಮಗಳೇ, ದೇವನಿಗೇ ಬಯ್ಯಿ. ಅದೂ ಅವನ ಸ್ತುತಿಯೇ!”
ರಾಣಿ ಈಗ ನಿಜವಾಗಿಯೂ ರೋದನ ಮಾಡತೊಡಗಿದಳು. “ಇದು ನಿಮ್ಮ ವೇದಾಂತವೇ? ಇದೇ ನೀವು ಕೊಡುವ ಸಮಾಧಾನ? ಇಂಥ ದೇವರ ಮುಖಕ್ಕೆ ನಾನು ಉಗಿಯುತ್ತೇನೆ..” ಎಂದು ಗಡಗಡನೆ ನಡುಗತೊಡಗಿದಳು.
“ನಾನು ಅರ್ಘ್ಯ ಕೊಡುವುದೂ ನೀನು ಉಗಿಯುವುದೂ ಒಂದೇ ಕ್ರಿಯಾರೂಪ! ನೀನು ಉಗಿದಾಗ ನಿನ್ನ ಅಶಾಂತಿ ಇಮ್ಮಡಿಸುತ್ತದೆ. ನಾನು ಅರ್ಘ್ಯದಾನ ಮಾಡಿದಾಗ ನನ್ನ ಶಾಂತಿ ಇನ್ನಷ್ಟೂ ತಂಪುಗೊಳ್ಳುತ್ತದೆ.”
“ನೀವು ಅರ್ಘ್ಯ ಕೊಡುವುದು ನಿಮ್ಮ ಸ್ವಾರ್ಥಕ್ಕಾಗಿಯೇ ತಾನೆ? ಇತರರ ಕಲ್ಯಾಣಕ್ಕಲ್ಲವೆಂದಾಯಿತು, ಅಲ್ಲವೆ?”
“ನೀನು ಸರಿಯಾಗಿಯೇ ಹೇಳಿದೆ, ಮಗಳೇ! ಎಲ್ಲರೂ ತಮ್ಮ ತಮ್ಮ ಕಲ್ಯಾಣ ಸಾಧಿಸಿದರೆ ಜಗತ್ತು ಸುಖಿಯಾಗುತ್ತದೆ.”
“ಅದು ನೀಚ ಸ್ವಾರ್ಥವಲ್ಲವೆ?”
“ಸ್ವಾರ್ಥ ನಿಜ, ನೀಚವಲ್ಲ. ನೀನೆ ಕಲ್ಯಾಣವೆಂದೆ. ವೇದಗಳು ಅದನ್ನೇ ಹೇಳಿವೆ. ಕಲ್ಯಾಣ ಮಾಡುವವನು ಎಂದೂ ದುರ್ಗತಿಗೆ ಇಳಿಯುವುದಿಲ್ಲ.”
“ಮಹರ್ಷಿಗಳೇ, ತಮ್ಮ ವೇದಾಂತ ಸಾಕು. ಈಗ ನನ್ನ ಪ್ರಶ್ನೆಗೆ ಉತ್ತರ ಕೊಡಿರಿ. ನನ್ನ ಗರ್ಭದಲ್ಲಿ ಇದ್ದ ಶಿಶು ಏನು ಪಾಪ ಮಾಡಿತ್ತು? ಯಾವ ಅಪರಾಧಕ್ಕಾಗಿ ಅವನ ಕೈಕಾಲುಗಳು ಊನಗೊಂಡವು? ಯಾರ ಅಪರಾಧಕ್ಕಾಗಿ?- ಹೇಳಿ ತಾತ, ಹೇಳಿ ತಂದೆ, ನನ್ನ ಪ್ರಶ್ನೆಗೆ ಉತ್ತರ ಕೊಟ್ಟು ಇಲ್ಲಿಂದ ಹೋಗಿರಿ” ಎಂದು ಯಾದವಿ ಗಟ್ಟಿಯಾಗಿ ಗುರುಗಳ ಕಾಲು ಹಿಡಿದುಕೊಂಡಳು. ಅವರ ಮುಖವನ್ನು ಕ್ರೂರವಾಗಿ ನಿಟ್ಟಿಸತೊಡಗಿದಳು.
“ಈ ನಿನ್ನ ಅವಸ್ಥೆಯಲ್ಲಿ ನಿನಗೆ ಉತ್ತರ ಕೊಟ್ಟರೂ ಅದರ ಅರ್ಥ ನಿನಗಾಗದು ಮಗಳೇ. ಮೊದಲು ಶಾಂತಳಾಗು. ಉತ್ತರ ಕೊಡುತ್ತೇನೆ.” ಎಂದು ಋಷಿಗಳು ಏಳಹೋದರು.
ಅವರ ಪಾದಗಳನ್ನು ಒತ್ತಿ ಹಿಡಿದು, “ನನಗೆ ಉತ್ತರ ಕೊಟ್ಟು ಹೋಗಿರಿ. ಹೊಟ್ಟೆಯಲ್ಲಿನ ಕೂಸು ಏನು ಅಪರಾಧ ಮಾಡಿದ್ದ? ನಾನು ಏನು ಅಪರಾಧ ಮಾಡಿದ್ದೆ? ಯಾಕೆ ಈ ಶಿಕ್ಷೆ? ಏನು ಇದರ ಅರ್ಥ? ಯಾರಿಗೆ ಶಿಕ್ಷೆಯಾಗಬೇಕಿತ್ತು? ಯಾರಿಗೆ ಆಯಿತು? ಹೇಳದೆ ಇದ್ದರೆ ನಿಮ್ಮನ್ನು ಹೋಗಲು ಬಿಡುವುದಿಲ್ಲ” ಎಂದು ಹಠಮಾರಿತನದಿಂದ ಕೂದಲು ನೆಲಕ್ಕೆ ಅಪ್ಪಳಿಸಿದಳು. ಪಾದಗಳನ್ನು ಬಿಡಲೊಲ್ಲಳು. “ನಿಮ್ಮ ಕರ್ಮ, ಪ್ರಾರಬ್ದ, ಸಂಚಿತ, ಕ್ರಿಯಾಮಾಣ, ಪೂರ್ವಜನ್ಮ, ಪುನರ್ಜನ್ಮ ಕಂತೆಗಳನ್ನು ಬಿಚ್ಚಬೇಡಿರಿ. ನೇರ ಉತ್ತರ ಕೊಡಿರಿ.” ಋಷಿಗಳು ಹೆಣ್ಣು ಕರುಳಿನ ಪ್ರಶ್ನೆಗಾಗಿ ನಿರ್ಧಾರ ಬದಲಿಸಿ ಕುಳಿತರು.
“ನಾನು ನಿನಗೆ ಕೆಲವು ಪ್ರಶ್ನೆ ಮಾಡುತ್ತೇನೆ: ನಿನ್ನ ಗಂಡ ಒಳ್ಳೆಯ ಮನುಷ್ಯನಲ್ಲವೆ?”
“ಹೌದು.”
“ನಿನ್ನನ್ನು ಹೇಗೆ ನಡೆಸಿಕೊಂಡ?”
“ಸುಖದಿಂದ; ಮರ್ಯಾದೆಯಿಂದ; ಸೌಜನ್ಯದಿಂದ.”
“ಇಂಥ ಒಳ್ಳೆಯ ಸಜ್ಜನ ರಾಜನಿಗೆ ಮೂರು ಬಾರಿ ಅರ್ಧಾಂಗ ವಾಯುವಿನ ಆಘಾತ ಸ್ಪರ್ಶವಾಯಿತು. ಮೂರನೆಯ ಆಘಾತಕ್ಕೆ ಅವನು ಜೀವಚ್ಚವನಾಗಿ ಮೂಲಂಗಿಯಂತೆ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದಾನೆ. ಸತ್ತಿಲ್ಲ, ಬದುಕಿಲ್ಲ, ಒಂದು ಮಗ್ಗುಲಾಗಲಿಕ್ಕೂ ಅವನಿಗೆ ತ್ರಾಣವಿಲ್ಲ. ಯಾವ ಪಾಪಕ್ಕಾಗಿ ಅವನಿಗೆ ಈ ಶಿಕ್ಷೆ?”
ಬಹಳ ದುಷ್ಟಕ್ಷಣದಲ್ಲಿ, ಬಹಳ ನಿರ್ದಯ ವಾರ್ತೆಯನ್ನು ಹೇಳಿ, ಯಾದವೀದೇವಿಯ ಭೂತಕಾಲದ ಗೋಳುಗಳನ್ನು ವರ್ತಮಾನದ ಗೋಳಿಗೆ ಪರಿವರ್ತಿಸಿ, ಆಕೆಯ ತಾತ್ವಿಕ ರೊಚ್ಚಿಗೆ ನೈಜದುಃಖದ ರೂಪವನ್ನು ಕೊಟ್ಟರು ಗುರುಗಳು.
ಘೋರ ವಾರ್ತೆ ಕೇಳಿ ಆ ಪ್ರೇಮದ ಪುತ್ಥಳಿ ತನ್ನ ತಾತ್ವಿಕ ಪ್ರಶ್ನೆಗಳನ್ನು ಬಿಟ್ಟುಕೊಟ್ಟು ಕಂಬನಿ ಮಿಡಿಯತೊಡಗಿದಳು. ಆಕೆಗೆ ಮನಃಪೂರ್ವಕ ಅಳಲು ಬಿಟ್ಟು, ಶಾಂತಳಾದ ಮೇಲೆ ಋಷಿಗಳು ಹೇಳಿದರು:
“ಅಳಬೇಡ ಮಗಳೇ, ಇನ್ನು ಆರು ವರ್ಷ ಅವನು ಹೀಗೆ ಬದುಕಿರುತ್ತಾನೆ. ನಿನ್ನ ಕುಂಕುಮ ಸೌಭಾಗ್ಯಕ್ಕೆ ಯಾವಧಕ್ಕೆಯೂ ಇಲ್ಲ. ಆದರೆ ಇದನ್ನು ನಿನಗೆ ಹೇಳಿದರೆ ಸಮಾಧಾನವಾಗುವುದೇ?”
“ಇಲ್ಲ” ಎಂದು ಅಳುತ್ತಲೇ ಆಕೆ ಗೋಣಲ್ಲಾಡಿಸಿದಳು.
“ನೀನು ಕೇಳಿದ ಪ್ರಶ್ನೆಗಳು ಬದುಕಿನ ಮೂಲ ಪ್ರಶ್ನೆಗಳು. ಕ್ಷಣಕ್ಷಣಕ್ಕೆ ಮನುಷ್ಯನಿಗೆ ಎದುರಾಗುತ್ತವೆ. ಅವುಗಳಿಗೆ ಉತ್ತರಗಳಿಲ್ಲ. ಆದರೆ ಉತ್ತರ ಕೊಡದಿದ್ದರೆ ಮನಸ್ಸಿಗೆ ಸಮಾಧಾನವಾಗುವುದೇ?”
“ಇಲ್ಲ” ಎಂದು ಅಳುತ್ತಲೇ ಆಕೆ ಗೋಣಲ್ಲಾಡಿಸಿದಳು.
“ನೀನು ಕೇಳಿದ ಪ್ರಶ್ನೆಗಳು ಬದುಕಿನ ಮೂಲಪ್ರಶ್ನೆಗಳು. ಕ್ಷಣಕ್ಷಣಕ್ಕೆ ಮನುಷ್ಯನಿಗೆ ಎದುರಾಗುತ್ತವೆ. ಅವುಗಳಿಗೆ ಉತ್ತರಗಳಿಲ್ಲ. ಆದರೆ ಉತ್ತರ ಕೊಡದಿದ್ದರೆ ಮನಸ್ಸಿಗೆ ಸಮಾಧಾನವಾಗದು. ಅದಕ್ಕಾಗಿ ನನ್ನಂಥ ಕೀರ್ತನಕಾರರು ಏನಾದರೊಂದು ಉತ್ತರ ಹುಡುಕಿ ಇಟ್ಟಿದ್ದೇವೆ. ಪ್ರಾರಬ್ಧ, ಸಂಚಿತ, ಪೂರ್ವ ಜನ್ಮದ ಪಾಪ-ಹೀಗೆ ಕತೆಗಳನ್ನು ಹುಟ್ಟಿಸುತ್ತೇವೆ. ಇವು ಕಂತೆಗಳಲ್ಲ; ಸತ್ಯಗಳೂ ಅಲ್ಲ. ನಿನ್ನ ಪಾಲಿಗೆ ಈ ಜೀವನ ಬಂದಿದೆ; ಅದನ್ನು ಎಷ್ಟು ಚೆನ್ನಾಗಿ ಬಳಸುತ್ತೀ, ಅದರ ಮೇಲೆ ನಿನ್ನದೇ ಕಲ್ಯಾಣ ನಿಂತಿದೆ; ನೀನು ಜ್ಞಾನಿಯಾಗಿದ್ದರೆ ಅದರ ಉದ್ದೇಶ ತಿಳಿದು ಸನ್ಮಾರ್ಗದಿಂದ ನಿನ್ನ ವರ್ತಮಾನವನ್ನು ರೂಪಿಸಿಕೊಳ್ಳುತ್ತಿ; ನೀನು ಜ್ಞಾನಿಯಲ್ಲದಿದ್ದರೂ ಇಂಥ ಕಾಲ್ಪನಿಕ ಭೀತಿಗಳ ಜಾಲ ಒಡ್ಡಿ ಧರ್ಮವು ನಿನ್ನನ್ನು ಸನ್ಮಾರ್ಗಕ್ಕೆ ಎಳೆಯುತ್ತದೆ.”
“ಹಾಗಾದರೆ ನ್ಯಾಯವೆಲ್ಲಿಂದ ಬಂತು.”
“ಮನುಷ್ಯನ ಹೃದಯದಿಂದ. ಅವನ ಸಮಾಜ-ಜೀವನಕ್ಕೆ ನ್ಯಾಯ ಅತ್ಯಗತ್ಯ. ನ್ಯಾಯದಂತೆ ನಡೆದುಕೊಂಡರೆ ಅವನ ಮನಸ್ಸು ಸ್ಥಿರವಾಗುತ್ತದೆ. ಪಾಪ ಮಾಡಿದರೆ ಅವನ ಮನಸ್ಸೇ ಹೋಗುತ್ತದೆ.”
“ಜಗತ್ತಿನಲ್ಲಿ ನ್ಯಾಯವಿಲ್ಲವೆ? ಮನುಷ್ಯನು ತನ್ನ ಅಗತ್ಯಕ್ಕಾಗಿ ಮಾತ್ರ ನ್ಯಾಯಕಲ್ಪನೆಯನ್ನು ಹುಟ್ಟಿಸಿಕೊಂಡಿದ್ದಾನೆಯೇ?”
“ಜಗತ್ತಿನ ಹೃದಯದಲ್ಲೂ ನ್ಯಾಯವೇ ಇದೆ. ಅನ್ಯಾಯ ಮಾಡಿದಾಗ ನಮ್ಮ ಹೃದಯ ಹೋಳಾದಂತೆ ಅನಿಸುವುದು ಜಗತ್ತಿನ ಮೂಲಶಕ್ತಿಯ ಮೂಲಕವೇ.”
“ನನ್ನ ಮೂಲಪ್ರಶ್ನೆಗೆ ಇನ್ನೂ ಉತ್ತರ ಬರಲಿಲ್ಲ. ನನ್ನ ಗರ್ಭಸ್ಥ ಶಿಶು ಏನು ಅನ್ಯಾಯ ಮಾಡಿತ್ತು?”
“ನಿನಗೇಕೆ ಹೆರವರ ಯೋಚನೆ? ಹೆರವರಿಗೆ ಆದ ಅನ್ಯಾಯಕ್ಕೆ ಕರುಣೆ ಪಡಬೇಕು. ರುಷ್ಟರಾಗಬಾರದು.”
“ನನ್ನ ಮಗ ನನಗೇ ಹೆರವನೆ?”
“ಅವನು ಸ್ವತಂತ್ರ ಸ್ವಾಯಂಭುವ ವ್ಯಕ್ತಿ. ಅವನಿಗೆ ಕೈಗಳಿಲ್ಲ. ಕಾಲುಗಳಿಲ್ಲ. ಅದಕ್ಕೆಂದೇ ಅವನ ಆತ್ಮಶಕ್ತಿ ಕೈಕಾಲು ದೃಢವಿರುವ ಜನರಿಗಿಂತ ಹೆಚ್ಚಿನ ಅದ್ಭುತ ಪರಿಣತಿ ಪಡೆದಿದೆ. ಕಾಲಿಲ್ಲದ್ದಕ್ಕಾಗಿ ಅವನ ವೇಗ ವರ್ಧಿಸಿದೆ. ಕೈಯಿಲ್ಲದ್ದಕ್ಕೆ ಅವನ ಕೈಗಳ ಚಾಲಾಕು ನೂರು ಮಡಿ ಹೆಚ್ಚಿ ಎಲ್ಲರಿಗಿಂತ ಚಟುಲವಾಗಿ ಬಾಣ ಪ್ರಯೋಗ ಮಾಡುತ್ತಾನೆ. ಗೋಣಿಲ್ಲದ್ದಕ್ಕಾಗಿ ಅವನ ವಾಚೆ ಕುಂಠಿತಗೊಂಡಿದೆ. ಆದರೆ ಒಮ್ಮೆ ಮಾಡಿದ ನಿರ್ಧಾರವನ್ನು ಸಾಧಿಸುವವರೆಗೆ ನಿಷ್ಠುರ ಕಾರ್ಯ ಮಾಡುತ್ತಾನೆ. ಅವನು ಭಾಗ್ಯಶಾಲಿಯೆಂದು ಮೊದಲೇ ಹೇಳಿದ್ದೇನೆ. ಇದೆಲ್ಲ ನೀನು ಅವನಿಗೆ ಕೊಟ್ಟ ವಿದ್ಯೆಗಳೇ? ನಾನು ಕೊಟ್ಟೆನೆ? ಅವನ ಆತ್ಮಶಕ್ತಿ ಎಲ್ಲ ಊನಗಳನ್ನೂ ಮೀರಿ ಬೆಳೆದಿಲ್ಲವೆ? ವಿಚಾರ ಮಾಡು.”
“ಎಲ್ಲ ಹೆಳವರೂ, ಮೋಟುಗೈಯವರೂ ಹೀಗೆ ಚಟುಲರಾಗುತ್ತಾರೆಯೇ?”
“ಅವರವರ ರೀತಿಯಿಂದ ಆಗುತ್ತಾರೆ. ಶಬರರ ನಡುವೆ ಬೆಳೆದ ನಿನ್ನ ಮಗ ಬಿಲ್ಲುಗಾರನಾಗಿದ್ದಾನೆ; ಆತ್ಮಶಕ್ತಿ ತನ್ನ ಪೂರ್ಣ ವಿಕಸಿತರೂಪದಲ್ಲೇ ಪ್ರಕಟವಾಗುತ್ತದೆ. ಅದಕ್ಕೆ ಊನತೆಗಳು ಬಂಧವಾಗುವುದಿಲ್ಲ. ಅದರ ಮೇಲೆ ಅದರ ತಂದೆ ತಾಯಿಗಳ ಅಧಿಕಾರವೂ ಇರುವುದಿಲ್ಲ.”
“ಮಕ್ಕಳನ್ನು ನಾವು ಏಕೆ ಸಾಕುತ್ತೇವೆ?”
“ನಿಮ್ಮನಿಮ್ಮ ಪ್ರೀತಿಗಾಗಿ. ನಿಮ್ಮ ಭವಿಷ್ಯದ ಆಸೆಗಾಗಿ. ಅದು ಪೂರ್ಣಗೊಳ್ಳುವುದು ಆಯಾ ಮಕ್ಕಳ ಸದ್ಗುಣದ ಮೇಲೆ ಅವಲಂಬಿಸಿರುತ್ತದೆ. ಒಟ್ಟಿನ ಸದ್ಗುಣ ಬೆಳೆಸಲು ಯತ್ನಿಸಬೇಕೇ ಹೊರತು ಮೊದಲೇ ಅವನನ್ನು ಬಿಲ್ಲುಗಾರನೆಂದು ಬೆಳೆಸಲು ನೀನು ಯೋಚಿಸಿದ್ದೆಯಾ? ಪ್ರತಿ ಆತ್ಮವೂ ಸ್ವಯಂಭು. ಸ್ವತಂತ್ರ.”
ಅಷ್ಟೊತ್ತಿಗೆ ಅವಳ ಅಕ್ಕಸದ ತಾಮಸಗುಣ ಶಮನವಾಗಿ ಸತ್ವಗುಣ ಅಭಿವೃದ್ಧಿಯಾಗಿತ್ತು.
“ಸ್ವಾಮೀ, ನನ್ನ ಮೈದುನನನ್ನು ಶಿಕ್ಷಿಸಿರಿ ಎಂದು ಕೇಳುವುದಕ್ಕಾಗಿ ಈ ಎಲ್ಲ ಪ್ರಶ್ನೆಗಳನ್ನು ನಿಮ್ಮೆದುರು ಒತ್ತಾಸೆಯಿಂದ ಇಟ್ಟಿದ್ದೆ. ಈಗ ಅದನ್ನು ಕೇಳುವುದಕ್ಕೆ ಮನಸ್ಸೇ ಆಗುತ್ತಿಲ್ಲ. ನನ್ನ ಮಗನಿಗೆ, ನನ್ನ ಗಂಡನಿಗೆ ಹಿತವಾಗಲಿ ಎಂದು ಪ್ರಾರ್ಥಿಸುತ್ತೇನೆ.”
“ತಥಾಸ್ತು.”
ಅಡಿಗೆಯ ಗುಡಿಸಲಿನಲ್ಲಿ ಉಪಹಾರ ಮುಗಿಸಿ, ಕುಳ್ಳನನ್ನು ಸಂಧ್ಯಾವಂದನೆಗೆ ಬಿಟ್ಟು, ದುರ್ಗಸಿಂಹನು ಆಶ್ರಮಕ್ಕೆ ಬಂದ ಋಷಭ-ಯಾದವಿಯರ ಅರ್ಧದಷ್ಟು ಸಂವಾದವನ್ನು ಮರೆಯಿಂದಲೇ ಕೇಳಿದನು. ಒಳಗೆ ಬಂದು, “ಗುರುಗಳೇ, ಪ್ರತಿಯೊಂದು ಆತ್ಮವೂ ಸ್ವಯಂಭು, ಸ್ವತಂತ್ರನೆಂದು ಹೇಳಿದಿರಿ. ರಾಣಿ ತನ್ನ ಮಗನ-ಗಂಡನ ಕ್ಷೇಮಕ್ಕಾಗಿ ಪ್ರಾರ್ಥಿಸಿದಳು, ಅದನ್ನು ಸ್ವೀಕರಿಸಿದಿರಿ. ಇದರಲ್ಲಿ ವಿರೋಧಾಭಾಸವಲ್ಲವೆ?”
“ಸದ್ಭಾವ, ಸದಿಚ್ಛೆ, ದೇವರಿಂದಲೇ ಹೊರಟವು; ದೇವರ ಪರವಾಗಿ ನಾನು ಸ್ವೀಕರಿಸಿದೆ. ದುರ್ಭಾವ, ದುರಿಚ್ಛೆ ದೇವರ ಭದ್ರಕೋಟೆಗೆ ತಾಕಿ, ಪುಟಿದು ಬಂದು, ಪ್ರಾರ್ಥಿಸುವವನಿಗೇ ದುಃಖ ತರುತ್ತವೆ. ಅವನ್ನು ಸ್ವೀಕರಿಸುವ ಗುರುವು ಕೂಡ ಶಿಕ್ಷೆಗೆ ಅರ್ಹನಾಗುತ್ತಾನೆ.
“ನಾನು ಶ್ರವಣಾದೇವಿಗೆ, ಮದುವೆಯಾಗಿ ನ್ಯಾಯ ಕೊಡಲಿಕ್ಕೆ ಬಂದಿದ್ದೇನೆ. ಅದು ಸದಿಚ್ಛೆಯಲ್ಲವೇ?”
“ನಿಮ್ಮ ಉದ್ದೇಶಗಳು ದ್ವೇಷಮೂಲವಾದವು. ನಿನ್ನ ದ್ವೇಷದ ಉಮ್ಮಳಿಕೆ ಸಮತಟ್ಟಾಗಿ ಪರಿವರ್ತನೆಯಾಗುವವರೆಗೆ ಅವುಗಳಿಗೆ ದೈವದ ಬೆಂಬಲ ಸಿಕ್ಕದು.”
“ಇದನ್ನು ಯಾವ ದೈವ ನಿರ್ಣಯಿಸುತ್ತದೆ.”
“ನಿನ್ನ ಹೃದಯದಲ್ಲಿ ಅಡಗಿದ ಸರ್ವಸಾಕ್ಷಿ ದೈವ.”
“ಅದರ ಬೆಂಬಲ ಹೇಗೆ ಪಡೆಯಬೇಕು ಸ್ವಾಮಿ, ಹೇಳಿರಿ”
“ಲಗ್ನದ ಉದ್ದೇಶ ಶಬರರ ಸೇನೆಯನ್ನು ಕೂಡಿಸಿ ದಶಾರ್ಣದ ಮೇಲೆ ದಾಳಿ ಮಾಡುವುದು ಆಗಬಾರದು. ಒಂದು ದುಷ್ಟ ಉದ್ದೇಶದಿಂದ ಇನ್ನೊಂದು ಕಾರ್ಯ ಮಾಡಲು ಯತ್ನಿಸಿದರೆ, ಅದಕ್ಕೂ ಹಾನಿ, ಇದಕ್ಕೂ ಹಾನಿ. ನಿನಗೆ ಶ್ರವಣಾ ಧರ್ಮಪತ್ನಿಯಾಗುವ ನಿಜವಾದ ಆಸೆ ಇದ್ದರೆ ಆ ಆಸೆಯ ಜೊತೆಗೆ ಇನ್ನೊಂದು ಆಸೆ ಕೂಡಿಸಬೇಡ.”
“ನಾನು ಕೆಡಿಸಿದ ಹೆಣ್ಣನ್ನು ಇನ್ನಾರು ಲಗ್ನವಾಗುವರು?”
“ಆ ಭಯ ಬೇಡ. ನಿನ್ನೆ ಹತ್ತು ಹಳ್ಳಿಗಳ ಶಬರರಿಗೆ ಊಟ ಹಾಕಿ ಅವಳ ತಂದೆತಾಯಿಗಳು ಮತ್ತೆ ಆಕೆಯನ್ನು ಕುಲದಲ್ಲಿ ಸೇರಿಸಿಕೊಂಡಿದ್ದಾರೆ.”
“ಶ್ರವಣೆಗಾಗಿ ನಾನು ದಂಡ ತೆತ್ತಿದ್ದೇನೆ. ಕಾಲ್ಬೆರಳು ಕಳೆದುಕೊಂಡಿದ್ದೇನೆ. ಸ್ವ-ಮೂತ್ರಪ್ರಾಶನ ಮಾಡಿದ್ದೇನೆ. ನನ್ನ ಶುದ್ಧಿಯಾದಂತೆ ಅಲ್ಲವೆ?”
“ಅವು ಶಿಕ್ಷೆಗಳಾದವು. ಶಿಕ್ಷೆಗಳು ನಿನ್ನ ಉದ್ದೇಶಗಳನ್ನು ಶುದ್ಧಿಮಾಡಲಾರವು. ನಿನಗೆ ಏನು ಬೇಕು ಎನ್ನುವುದು ನಿನಗೇ ಸ್ಪಷ್ಟವಾಗಬೇಕು.”
“ಶುದ್ಧಿಗಾಗಿ ನಾನು ಏನು ಮಾಡಬೇಕು?”
“ಆತ್ಮನಿರೀಕ್ಷಣೆ ಮಾಡಬೇಕು. ನ್ಯಾಯಾನ್ಯಾದ ವಿಚಾರ ಬಿಟ್ಟುಬಿಡಬೇಕು. ನ್ಯಾಯದಾನಕ್ಕಾಗಿ ನೀನು ಮದುವೆಯಾಗುವುದು ಬೇಡ. ಪ್ರೇಮಕ್ಕಾಗಿ, ಸಹಜೀವನಕ್ಕಾಗಿ, ಸಹಧರ್ಮಕ್ಕಾಗಿ ಸಹಧರ್ಮಿಣಿಯನ್ನು ಬಯಸುವುದು ದೈವ ಒಪ್ಪತಕ್ಕ ಮಾತು.”
“ನಾನು ಎಲ್ಲಿ ಆತ್ಮನಿರೀಕ್ಷಣೆ ಮಾಡಲಿ?”
“ಇಲ್ಲಿ, ಅಲ್ಲಿ, ಎಲ್ಲೆಲ್ಲಿ! ಈಗ, ಈ ಕ್ಷಣ-ಅಥವಾ ಇನ್ನಾರು ತಿಂಗಳ ಮೇಲೆ; ಇನ್ನಾರು ವರ್ಷದ ಮೇಲೆ..ನಿನ್ನನ್ನೇ ಅವಲಂಬಿಸಿದೆ.”
“ಮಿಶ್ರ ಉದ್ದೇಶಗಳು ಯಾವಾಗಲೂ ಅಯಶಸ್ವಿಯಾಗುತ್ತವೆ?”
“ಅಪಯಶಸ್ಸಿನ ಸಂಭವ ಜಾಸ್ತಿ. ಯಶಸ್ಸು ಸಿಕ್ಕರೂ ಸಮಾಧಾನ ಉಳಿಯುವುದಿಲ್ಲ. ಯಶಸ್ಸಿನ ರುಚಿಯೇ ಹಿಂಗುತ್ತದೆ.”
ಹುಂಬ ದುರ್ಗಸಿಂಹ ವಿಚಾರ ಮಾಡುತ್ತಾ ಕುಳಿತನು.
“ಮಹಾರಾಣಿ ನನ್ನ ನಾಶದ ಬಗ್ಗೆ ನಿಮಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಮಾಡಿದ್ದಳು. ಅದರ ಬದಲು ತನ್ನ ಮಗ, ಗಂಡ, ತನ್ನ ಕ್ಷೇಮವನ್ನು ಪ್ರಾರ್ಥಿಸಿದಳು-ಅಂದರೆ ನನ್ನ ದುಷ್ಕೃತ್ಯವನ್ನು ಆಕೆ ಕ್ಷಮಿಸಿರುವುದಾಗಿ ಅರ್ಥವೆ?”
“ಅದು ಆಕೆಯ ಸತ್ವಗುಣ ಇಲ್ಲವೆ?”
“ಇದೆ. ಅಭಿವೃದ್ದಿಗೊಂಡಿಲ್ಲ, ಶುದ್ಧಿಗೊಂಡಿಲ್ಲ.”
“ಇರಲಿ ಬಿಡಿ. ಈಗ ರಾಣಿ ನನ್ನ ನಾಶದ ಪ್ರಾರ್ಥನೆ ಮಾಡಿಕೊಳ್ಳಲಿಲ್ಲ ಎಂದ ಮೇಲೆ ನನ್ನ ನಾಶ ತಪ್ಪಿದಂತಾಯಿತಲ್ಲ!”
“ಆಕೆ ಹಾಗೆ ಪ್ರಾರ್ಥಿಸಿಕೊಂಡಿದ್ದರೂ ನಿನ್ನ ವಿನಾಶವಾಗುತ್ತಿದ್ದಿಲ್ಲ. ಬಿಟ್ಟಳೆಂದು ನಿನ್ನ ವಿನಾಶ ತಪ್ಪಿದಂತಾಗಲಿಲ್ಲ! ಆಕೆಯ ಪ್ರಾರ್ಥನೆಗೂ ನಿನಗೂ ಯಾವ ಸಂಬಂಧವಿಲ್ಲ.”
“ಹಾಗಾದರೆ, ನಿಮ್ಮ ಆಶೀರ್ವಚನಕ್ಕೆ ಬೆಲೆಯೇ ಇಲ್ಲವೆ?”
“ಇದೆ. ಪ್ರಾರ್ಥನೆಯ ಸತ್ವಗುಣವನ್ನು ಆಶೀರ್ವದಿಸುತ್ತೇವೆ. ದುರಾಶೆಗಳಿಗೆ ನಾವು ಆಶೀರ್ವದಿಸಲಾರೆವು.”
“ನಿಮ್ಮ ಆಶೀರ್ವಚನದಿಂದ ಏನು ಲಾಭ ದೊರಕುತ್ತದೆ?”
“ಸತ್ವಗುಣ ಸಮರ್ಥವಾಗಿ ಕೆಲಸ ಮಾಡುತ್ತದೆ.”
“ಈಗ ನಾನು ಅಕ್ಕ ಕೇಶಿನೀದೇವಿಯನ್ನು ಸೋಲಿಸಲು ಇಚ್ಚಿಸುತ್ತೇನೆ. ಅದನ್ನೇ ಇಲ್ಲಿರುವ ಯಾದವೀದೇವಿಯು ಇಚ್ಚಿಸುತ್ತಾಳೆ. ( ಯಾದವಿ ವಿರೋಧಿಸಲು ಯತ್ನಿಸಿದಾಗ ಋಷಭಮುನಿ ಸುಮ್ಮನಿರಲು ಸೂಚಿಸಿದರು) ಆಕೆಯಲ್ಲಿ ನೂರಕ್ಕೆ ಎಂಭತ್ತು ಸತ್ವಗುಣವಿದೆಯೆಂದು ಎಣಿಸುವಾ. ನನ್ನಲ್ಲಿ ತೀರ ಕಡಿಮೆಯೆಂದರೆ ನೂರಕ್ಕೆ ಇಪ್ಪತ್ತು ಪಾಲು ಸತ್ವಗುಣವಿದೆಯೆಂದು ಎಣಿಸುವಾ. ನಾವಿಬ್ಬರೂ ಕೂಡಿ ಅದನ್ನೇ ಪ್ರಾರ್ಥಿಸಿಕೊಂಡರೆ, ನಮಗೆ ಐವತ್ತು ಪಾಲು ವಿಜಯ ಬರುತ್ತದೆಯೆಂದು ತಾವು ಆಶೀರ್ವದಿಸಬಹುದೇ?”
“ಅವರವರ ಸತ್ವಗುಣ ಅವರಿಂದಲೇ ಮೂಡಿ ಬರಬೇಕು.”
“ಹಾಗಾದರೆ ಯಾದವೀ ಪ್ರಾರ್ಥಿಸಿಕೊಳ್ಳಲಿ; ನಾನು ಯುದ್ಧ ಮಾಡುತ್ತೇನೆ.”
“ಅವರವರ ಸತ್ವಗುಣ ಅವರಿಂದಲೇ ಮೂಡಿ ಬರಬೇಕು.”
“ಮಹರ್ಷಿಗಳು ಬೇರಿಜುವಜಾಬಾಕಿ ಕಲಿತಂತಿಲ್ಲ.”
ರಾಣಿ ಕ್ರುದ್ಧಳಾಗಿ ನೋಡಿದಳು. ಮತ್ತೆ ಋಷಭಮುನಿ ಸನ್ನೆ ಮಾಡಿದರು.
“ಪಾಪ-ಪುಣ್ಯ, ಸದಿಚ್ಚೆ-ದುರಾಸೆ, ಪ್ರೇಮ-ದ್ವೇಷ, ಇಂಥ ಪ್ರವೃತ್ತಿಗಳಲ್ಲಿ ಬೇರೀಜು-ವಜಾಬಾಕಿ-ತಾವೇ ನಿರ್ಣಯಿಸಿಕೊಳ್ಳಬೇಕು. ಅದರ ಲೆಕ್ಕಪತ್ರ ಇನ್ನಾರೂ ಇಡಲಾರರು.”
“ಮಹಾಸ್ವಾಮಿಗಳು ಚಿಕ್ಕರಾಣಿಯ ಪಕ್ಷಪಾತಿಗಳೆಂದು ತೋರುತ್ತದೆ.”
“ಆಕೆಯ ಸತ್ವಗುಣ ಆರುಜನ್ಮಗಳಿಂದ ಬೆಳೆದು ಬಂದಿದ್ದು, ಈ ಏಳನೆಯ ಜನ್ಮದಲ್ಲಿ ೪೦ ವರ್ಷಗಳ ದುಃಖ ದೈನ್ಯಗಳನ್ನು ಸಹಿಸಲು ಆಕೆಗೆ ಶಕ್ತಿ ಒದಗಿಸಿದೆ. ಆರು ಜನ್ಮಗಳ ಕೆಳಗೆ ನೀನು ಕರಡಿಯಾಗಿದ್ದಿ, ಐದನೆಯ ಜನ್ಮದಲ್ಲಿ ನೀನು ಮಂಗನಾಗಿ ಹುಟ್ಟಿದಿ. ನಿನ್ನ ಸುದೈವ, ಯಾರೋ ನಿನ್ನನ್ನು ಹಿಡಿದು ಋಷ್ಯಾಶ್ರಮಕ್ಕೆ ದೂಡಿದರು. ಋಷಿಕುಮಾರರು ನಿನಗೆ ಕುರುಡು ಮುದಿತಾಪಸಿಗಳ ಕೈಹಿಡಿದು ಅಡ್ಡಾಡಿಸುವ ಕಲೆಯನ್ನು ಕಲಿಸಿಕೊಟ್ಟರು. ಆ ಪುಣ್ಯದಿಂದ ಮೂರನೆಯ ಜನ್ಮದಲ್ಲಿ ನರನಾಗಿ ಹುಟ್ಟಿದಿ. ಮಂಗನ ಗುಣ ಇನ್ನೂ ಉಳಿದಿತ್ತು. ಮನೆಮನೆಯ ಮಾಳಿಗೆಯಿಂದ ಮಾಳಿಗೆ ಜಿಗಿಯುತ್ತ ಚೋರ ಕರ್ಮ ಮಾಡುತ್ತಿದ್ದಿ. ಒಮ್ಮೆ ಒಬ್ಬ ರಾಜನ ಮನೆಯಲ್ಲಿ ಮುತ್ತಿನಸರವನ್ನು ಕದ್ದಿ. ಆಗ ಕಾವಲುಗಾರರ ಮೇಲೆ ಆರೋಪ ಬಂದು, ಅವನನ್ನು ವಧಸ್ಥಾನಕ್ಕೆ ಎಳೆದೊಯ್ಯುತ್ತಿದ್ದರು. ಅವನ ಹೆಂಡತಿ-ಮಕ್ಕಳು-ಗೊಳೋ ಎಂದು ಅಳುತ್ತ ಅವನ ಬೆನ್ನ ಹಿಂದೆ ಸಾಗಿದರು. ಒಂದಿಷ್ಟು ಸತ್ವಗುಣ ನಿನ್ನಲ್ಲಿ ಉದಯವಾಗಿ, ವಧಸ್ತಂಭದ ಎದುರು ಬಂದು, “ಯಾವುದೋ ಕಾಗೆ ಮುತ್ತಿನ ಸರವನ್ನು ಕಿಟಕಿಯ ಕೆಳಗೆ ಒಗೆದಿತ್ತು” ಎಂದು ಸುಳ್ಳು ಹೇಳಿ, ಕಾವಲುಗಾರನ ವಿಮೋಚನೆಗೆ ಕಾರಣನಾದಿ. ನಿನ್ನ ಪ್ರಾಮಾಣಿಕತನಕ್ಕೆ ಮೆಚ್ಚಿ ಅರಮನೆಯಲ್ಲೇ ನಿನಗೆ ಕಾವಲಿನ ಕೆಲಸ ಕೊಟ್ಟರು. ನಿನ್ನ ಕಿಟಕಿಯಿಂದ ಕಿಟಕಿಗೆ ಹಾರುವ ಚಾತುರ್ಯದಿಂದ ರಾಜನ ಅನೇಕ ಪರಿತ್ಯಕ್ತ ರಾಣಿಯರಿಗೆ ಸಂತೋಷ ಕೊಟ್ಟು ಅವರ ಹರಕೆಯಿಂದ ಮುಂದಿನ ಜನ್ಮದಲ್ಲಿ ಅಂತಃಪುರ ಕಾಯುವ ಗಂಡುಗೊಜ್ಜೆ ಆದಿ. ನಿನಗೆ ಸ್ವತಃ ಸಿಕ್ಕದಿದ್ದರೂ ರಾಣಿಯರ ಸಂದೇಶಗಳನ್ನು ಅವರ ಪ್ರಿಯಕರರಿಗೆ ಸಲ್ಲಿಸುವ ಕೆಲಸ ಮಾಡಿದಿ. ಪರಚಕ್ರ ಬಂದಾಗ ಅಂತಃಪುರವನ್ನು ಕಾಯುವುದರಲ್ಲಿ ವೀರಮರಣ ಅಪ್ಪಿದ ಮೂಲಕ, ಜನ್ಮದಲ್ಲಿ ರಾಜಕುಮಾರನಾದರೂ, ಎರಡನೆಯವನಾದ್ದರಿಂದ ನಿನ್ನ ಅಣ್ಣ ಯುವರಾಜನು ನಿನ್ನನ್ನು ದೂರವಿಟ್ಟು ನಿನ್ನನ್ನು ಅಕ್ಕನ ಮನೆಯಲ್ಲಿ ಬೆಳೆಯುವಂತೆ ಮಾಡಿದನು. ಅಕ್ಕ ರಾಣಿಗೆ ಅನೇಕ ದ್ವೇಷಕಾರ್ಯದಲ್ಲಿ ನೆರವಾದಿ. ಆಕೆಯ ಎಲ್ಲ ಕಾರ್ಯಗಳೂ ದ್ವೇಷಮೂಲವಾದ್ದರಿಂದ ಕೊನೆಗೆ ನೀನೇ ಆಕೆಯ ದ್ವೇಷಕ್ಕೆ ಗುರಿಯಾಗಿರುವಿ. ದ್ವೇಷವನ್ನು ಸಮೂಲ ಹೋಗಲಾಡಿಸದ ಹೊರತು ನಿನಗೆ ಕ್ಷೇಮವಿಲ್ಲ!”
“ಇದೇ ಜನ್ಮದಲ್ಲಿ ನನಗೆ ಮುಕ್ತಿ ಸಿಕ್ಕಲು ಏನು ಮಾಡಬೇಕು?”
“ಒಂದೇ ಜನ್ಮದಲ್ಲಿ ಯಾವ ಜೀವಕ್ಕೂ ಮುಕ್ತಿ ಸಿಕ್ಕದು. ನೀನಿನ್ನೂ ಅಪಕ್ವ. ಅನೇಕ ಜನ್ಮಗಳ ಅನುಭವದಿಂದ ಸತ್ವಗುಣ ವೃದ್ಧಿಯಾಗುತ್ತ ಆಗುತ್ತ ಜೀವನ್ಮುಕ್ತ ಅವಸ್ಥೆ ಪಡೆಯುತ್ತದೆ-ಆತ್ಮದ ವಿಕಾಸವೇ ಜೀವನದ ಉದ್ದೇಶ.”
“ಇನ್ನೂ ನನಗೆ ಎಷ್ಟು ಜನ್ಮಗಳು ಬೇಕು?”
“ಅದು ನಿನ್ನ ಮೇಲೆ ಅವಲಂಬಿಸಿದೆ.”
“ನೂರಕ್ಕೆ ನೂರರಷ್ಟು ಸಾತ್ವಿಕನಾದರೆ ಅದು ಮುಕ್ತಿಯೆಂದು ಹೇಳಬಹುದೇ?”
“ಆ ಅವಸ್ಥೆಯಲ್ಲಿ ಮನುಷ್ಯ ಹೆರವರ ಹಿತಕ್ಕಾಗಿ ಜೀವಿಸುತ್ತಾನೆ. ಆದರೆ ಸತ್ವಗುಣದ ಬಗ್ಗೆಯೇ ಅವನಿಗೆ ಮೋಹ ಹೊಕ್ಕಿರುತ್ತದೆ. ಜೀವನವು ತಂದು ಇಡುವ ಸಂದಿಗ್ದದಿಂದ ಅವನು ನೋಯುತ್ತಾನೆ. ನನ್ನನ್ನೇ ನೋಡು. ನನ್ನ ಹಿಂದಿನ ಜನ್ಮ ಹಾಗೆ ಇತ್ತು. ಆ ಅಸ್ವಸ್ಥತೆಯನ್ನು ನನ್ನ ಉತ್ತರ ವಯಸ್ಸಿನಲ್ಲಿ ತಾಳ್ಮೆಯಿಂದ ಕಾಣುವುದನ್ನು ಕಲಿತುಕೊಂಡೆ. ಈ ಜನ್ಮದಲ್ಲಿ ಹೆರವರ ಹಿತಕ್ಕಾಗಿಯೇ ನಾನು ವಿದೆಯನ್ನು ಸಂಪಾದಿಸಿ ಸೇವೆ ಮಾಡುತ್ತಿರುವೆ. ವಿದ್ಯೆಯನ್ನು ದೂರದೂರ ಹೋಗಿ ಕಲಿಯಬೇಕಾಯಿತು. ಇವೆಲ್ಲ ಮುಂದಿನ ಜನ್ಮದಲ್ಲಿ ನನ್ನ ಹುಟ್ಟುಗುಣಗಳಾಗಿ ಬರುತ್ತವೆ. ವಿದ್ಯೆ ಇದ್ದೂ ಅದರ ಮೋಹ ಅಳಿಯುತ್ತದೆ. ಆಗ ಮುಂದಿನ ಅವಸ್ಥೆಯನ್ನು ಮುಟ್ಟುವುದಕ್ಕಾಗಿ ಸಿದ್ದತೆ ಮಾಡಬೇಕಾಗುತ್ತದೆ.”
“ಅದು ಯಾವ ಅವಸ್ಥೆ?”
“ಅದನ್ನು ಹೇಳುವುದಿಲ್ಲ. ಹೇಳಿದರೂ ತಿಳಿದುಕೊಳ್ಳುವ ಸಿದ್ಧತೆ ನಿನ್ನಲ್ಲಿ ಇಲ್ಲ. ಬೇಕಾದರೆ ಈ ರಾಣಿಗೆ ಹೇಳಬಹುದು. ಭಾಷೆ ತಿಳಿದುಕೊಳ್ಳಲೂ ಪೂರ್ವಸಿದ್ಧತೆ ಬೇಕು-ನಿನಗೆ ಅದು ಇನ್ನೂ ಬಂದಿಲ್ಲ.”
“ಬಿಡಿ. ನಿಮ್ಮ ಕತೆ ನನಗೇಕೆ?-ನನ್ನದೊಂದು ಪ್ರಾರ್ಥನೆ ಇದೆ. ಆಶೀರ್ವದಿಸುವಿರಾ?”
“ಪ್ರಾರ್ಥನೆ ಮಾಡಿಕೊಳ್ಳುವ ಯೋಗ್ಯತೆ ನಿನ್ನಲ್ಲಿ ಇನ್ನೂ ಬಂದಿಲ್ಲ. ಇಚ್ಛೆ ಏನಿದೆ ಹೇಳು.”
“ನಾನು ಈಗ ಮನಸ್ಸಿನಲ್ಲಿ ಮಾಡಿದ ಇಚ್ಛೆ ಕೈಗೂಡುವುದೇ?”
“ಕೈಗೂಡುವುದು, ಇನ್ನು ಎರಡು ವರ್ಷಗಳಲ್ಲಿ.”
“ಧನ್ಯನಾದೆ. ನಿಮಗೆ ವಂದನೆಗಳು.”
“ದೇವರು ನಿನ್ನ ಸತ್ವಗುಣ ವಿಕಸಿಸುವಷ್ಟು ಕಾಲ ನಿನಗೆ ಕೊಡಲಿ. ಈಗ ನಿನ್ನಲ್ಲಿ ಆಶಾಗುಣದಲ್ಲಿಯೇ ಜಿಜ್ಞಾಸಾಗುಣದ ಮೊಳಕೆ ಎದ್ದಿದೆ. ಈ ಅವಸ್ಥೆ ಇನ್ನೂ ಇಪ್ಪತ್ತು ಜನ್ಮಗಳಲ್ಲಿ ಪೂರ್ಣ ವಿಕಸಿಸುತ್ತದೆ. ಇಪ್ಪತ್ತನೆಯ ಜನ್ಮದಲ್ಲಿ ಇದರ ಮುಂದಿನ ಅವಸ್ಥೆ ಮುಮುಕ್ಷು ಪ್ರೇರಣೆಯಾಗುತ್ತದೆ. ಆಮೇಲೆ ಭರದಿಂದ ವಿಕಾಸಗೊಂಡು ಬಹಳವಾದರೆ ಐದಾರು-ಏಳು ಜನ್ಮಗಳಲ್ಲಿ ನಿನಗೆ ಪ್ರಾರ್ಥನೆಯ ಯೋಗ್ಯತೆ ಬರುತ್ತದೆ. ಇಂದು ಇಷ್ಟೇ ಸಾಕು. ನಾಳೆ ಬೆಳಿಗ್ಗೆ ನಿನಗೆ ಮಾರ್ಗದರ್ಶನ ಸಿಕ್ಕುವ ಯೋಗವಿದೆ.”
ಕುಳ್ಳನು ಅವನನ್ನು ಊಟಕ್ಕೆ ಕರೆದೊಯ್ಯಲು ಬಂದನು.
ಋಷಿಗಳು “ಇಂದು ರಾತ್ರಿ ನಿನ್ನ ತಾಯಿಯ ಜೊತೆಯಲ್ಲಿಯೆ ಇರು. ಆಕೆಗೆ ಶೀತ ಜ್ವರ ಬರುವ ಲಕ್ಷಣವಿದೆ. ಪಾಕಾಚಾರಿಯ ಗುಡಿಸಲಿನಲ್ಲಿ ದುರ್ಗಸಿಂಹನ ಶಯನದ ವ್ಯವಸ್ಥೆ ಮಾಡಲಿಕ್ಕೆ ಹೇಳಿ ಬಾ” ಎಂದರು.
ಅವರು ಹೋದಮೇಲೆ ರಾಣಿ ಪ್ರಶ್ನಿಸಿದಳು, “ಸ್ವಾಮಿ, ಅವನ ಇಚ್ಛೆ ಏನಿತ್ತು ಕೇಳಬಹುದೇ?”
“ಭಗವಂತನ ಮಾಯೆ! ಮೃತ್ಯುಮುಖದಲ್ಲೂ ಮನುಷ್ಯನ ಆಶೆ ಮುಗಿಯುವುದಿಲ್ಲ.”
“ಯಾರಿಗೆ ಮೃತ್ಯು, ಸ್ವಾಮಿ!”
“ಅವನು ಕುಳಿತಾಗ ಅವನ ಬೆನ್ನ ಹಿಂದೆ ಒಂದು ಎದ್ದುನಿಂತ ನೆರಳು ಮೂಡಿತ್ತು. ನಿಮಗೆ ಕಾಣಲಿಲ್ಲವೆ?”
“ಇಲ್ಲ”
“ಅದು ಮೃತ್ಯುವಿನ ನೆರಳು.”
ಮರುದಿನ ಮುಂಜಾನೆ ಡಂಗುರದವನು ಸಾರುತ್ತ ಬಂದನು: ಇನ್ನು ಹದಿನೈದು ದಿನ, ಶುಕ್ಲಪಕ್ಷದ ಪೂರ್ಣಿಮೆಯ ದಿನ, ಮಹಾರಾಜಾಧಿರಾಜ ಕರ್ಣಸಿಂಹನ ಪಟ್ಟಾಭಿಷೇಕದ ವಾರ್ತೆಯನ್ನು ಸಾರಿದನು.
ವಾರ್ತೆ ಕೇಳಿ ದುರ್ಗಸಿಂಹನ ಹೃದಯ ಕುಸಿದಿತು. ಹದಿನಾಲ್ಕು ವರ್ಷದ ನನ್ನ ತಮ್ಮನಿಗೆ ದಶಾರ್ಣದ ಪಟ್ಟಾಭಿಷೇಕ!
-ಆದರೂ ಗುರುಗಳು ಇದು ಮಾರ್ಗದರ್ಶನವೆಂದು ಹೇಳಿದ್ದಾರೆ.
-ತಾನು ದಶಾರ್ಣ ರಾಜ್ಯದ ರಾಣಿಯನ್ನು ಸೋಲಿಸಲಿಕ್ಕೆ ಇದು ಮಾರ್ಗದರ್ಶನವಿರಬಹುದೇ?
ಬಾಣ ನೆಟ್ಟ ಸ್ಥಳದಲ್ಲಿ ಬಾವು ಏರಿತ್ತು. ಅದೇ ಅವಸ್ಥೆಯಲ್ಲಿ ಶ್ರವಣಾರಾಣಿಯ ಊರಿಗೆ ಹೋಗಿ ಆಕೆಯ ತಂದೆ ತಾಯಿಗಳ ಮುಂದೆ ತನ್ನ ವಿವಾಹದ ಬೇಡಿಕೆಯನ್ನು ಮುಂದಿಟ್ಟ. “ಗಾಯ ಮಾಯಲಿ. ಮುಂದೆ ವಿಚಾರ ಮಾಡುತ್ತೇವೆ” ಎಂದು ಉತ್ತರ ಕೊಟ್ಟರು. ಆ ಹಳ್ಳಿಯಲ್ಲೇ ನೆಲಸಿದ ಆಶೆಯಿಂದ.
ಶಬರರ ನಾಯಕನಿಗೆ ಭೇಟಿಯಾಗಿ ತನ್ನ ಉದ್ದೇಶವನ್ನು ಅರುಹಿದ. ತಾನು ತಂದ ೫-೬ ಸಾವಿರ ಹೊನ್ನುಗಳಿಂದ ಸೈನ್ಯ ಕೂಡಿಸಿದ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ. ತನ್ನ ಕೈಸಾಗುವವರೆಗೆ ಖಡ್ಗ ಶಿಕ್ಷಣವನ್ನೂ ನೀಡಿದ. ಒಂದು ವರ್ಷದಲ್ಲಿ ಅವನ ಬಲಭಾಗಕ್ಕೆ ಲಕ್ವಾ ಹೊಡೆಯಿತು. ಹಾಸಿಗೆ ಹಿಡಿದು ಮತ್ತೆ ಆಶ್ರಮಕ್ಕೆ ತರಲ್ಪಟ್ಟ. ಋಷಭಮುನಿ ಚಿಕಿತ್ಸೆ ಮಾಡಿದರು. ಇನ್ನೊಂದು ವರ್ಷ ಅವನನ್ನು ಬದುಕಿಸಿದರು. ಆದರೆ ಅವನು ಕಟ್ಟಿದ ಸೈನ್ಯದ ಮುಂದಾಳುತನ ಸ್ವಾಭಾವಿಕವಾಗಿ ಕುಳ್ಳಸಗರನಿಗೆ ಬಂದಿತು.
ಎರಡು ವರ್ಷದ ಮೇಲೆ ಶಬರರ ಪಡೆ ದಶಾರ್ಣದ ಮೇಲೆ ದಾಳಿ ಮಾಡಿತು. ರಾಣಿ ಕೇಶನೀದೇವಿ ತಮ್ಮ ಕರಣಸಿಂಹನೊಡನೆ ಅಹಿಚ್ಛತ್ರದ ತಮ್ಮ ತಂದೆಯ ಮನೆಗೆ ಓಡಿಹೋದಳು. ಗಂಡನನ್ನು ಅಲ್ಲಿಯೇ ಬಿಟ್ಟು. ಭದ್ರಾಯು ದಶಾರ್ಣದ ರಾಜನಾದನು. ಅವನು ರಾಜಪುತ್ರನೆಂದೂ, ರಾಣಿಯಾದವೀದೇವಿಯ ಮಗನೆಂದೂ ರಾಜವೈದ್ಯರು ಸಾಕ್ಷಿ ಹೇಳಿ ಅವನಿಗೆ ಪಟ್ಟಾಭಿಷೇಕ ಮಾಡಿಸಿದರು. ವೈಭವದಿಂದ ರಾಣಿ ಯಾದವಿದೇವಿಯನ್ನು ರಾಜಧಾನಿಗೆ ಕರೆತರಲಾಯಿತು. ಮಗನ ಪಟ್ಟಾಭಿಷೇಕದ ಸಮಯದಲ್ಲೂ ತನ್ನ ಗಂಡನನ್ನು ಬಿಟ್ಟು ರಾಣಿ ಬರಲಿಲ್ಲ.
ಋಷಭ ಋಷಿಗಳ ಆಶಿರ್ವಾದದಿಂದಲೂ, ರಾಣಿಯ ಶುಶ್ರೂಶೆಯಿಂದಲೂ ಮಹಾರಾಜ ತುಸು ಗುಣಮುಖನಾಗಿ ಒಂದೆರಡು ತೊದಲುನುಡಿ, ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲ ಆಗುವಷ್ಟು ಸಮರ್ಥನಾದ, ತನ್ನ ಔರಸಪುತ್ರನೇ ರಾಜನಾದದ್ದು ಕೇಳಿ ಸಂತೋಷಪಟ್ಟನು.
ರಾಣಿ ಕೇಶಿನಿದೇವಿ ಹೋಗುವಾಗ ರಾಜ್ಯದ ಬೊಕ್ಕಸವನ್ನು ಖಾಲೀ ಮಾಡಿ ತನ್ನೊಡನೆ ಅಮೂಲ್ಯ ವಜ್ರಗಳನ್ನು ಒಯ್ದಿದ್ದಳು. ಆರು ತಿಂಗಳಲ್ಲೇ ಭದ್ರಾಯು ಪಾಂಚಾಲ ರಾಜ್ಯದ ಮೇಲೆ ದಾಳಿ ಮಾಡಿ ಅದನ್ನು ಆಕ್ರಮಿಸಿಕೊಂಡು ಕುರುಪಾಂಚಾಲ ಸಾಮ್ರಾಜ್ಯವನ್ನು ಕಟ್ಟಿದ; ಮುಂದೆ ಮಾಹಿಷ್ಮತಿಯನ್ನು ಆಕ್ರಮಿಸಿದನು. ಹಡಗುಪಡೆಯನ್ನು ಕಟ್ಟಿ ಗಂಗಾನದಿಯ ದಂಡೆಯಲ್ಲಿ ಇದ್ದ ಅನೇಕ ಚಿಕ್ಕಪುಟ್ಟ ರಾಜ್ಯಗಳನ್ನು ಆಕ್ರಮಿಸಿ ಶ್ರಾವಸ್ತಿಯವರೆಗೆ ಬಂದನು.
ಪಶ್ಚಿಮದಿಂದ ಪರಚಕ್ರ ಬರುವ ವಾಮದೇವರ ಸಂದೇಶ ಹೀಗೆ ಸತ್ಯವಾಯಿತು.
ಆದರೆ ಪುರುಕುತ್ಸಾನಿ ಮಾಡಿದ ಪೂರ್ವ ತಯಾರಿಯ ಮೂಲಕ ಅಯೋಧ್ಯೆಯನ್ನು ಗೆಲ್ಲುವುದು ಭದ್ರಾಯುವಿಗೆ ಶಕ್ಯವಾಗಲಿಲ್ಲ.
ಗಂಗಾತಟದ ಎಂಟು ಬೇರೆ ಸ್ಥಳಗಳಲ್ಲಿ ಅವನ ಸೇನೆಯ ಗುಂಪುಗಳು ಇಳಿದು ಅಯೋಧ್ಯೆಯತ್ತ ಕೂಚು ಮಾಡಿದವು. ಅಲ್ಲಲ್ಲಿ ಪುರುಕುತ್ಸಾನಿ ಬಚ್ಚಿಟ್ಟ ನಾಗ ಬಿಲ್ಲುಗಾರರು ಗಂಗಾ-ಸರಯೂ ನದಿಗಳ ನಡುವೆಯೇ ಸಗರನ ಸೈನಿಕರನ್ನು ತಡೆದು ಹಿಂದಟ್ಟಿದರು.
ಆದರೆ ಒಂದು ಶಬರ ಸೈನಿಕರ ತುಕಡಿಯು ಸುತ್ತು ದಾರಿಯಿಂದ ಬಂದು ಆಮ್ರವನಕ್ಕೆ ಮುತ್ತಿಗೆ ಹಾಕಿ ಮಹಾರಾಜ ಪುರುಕುತ್ಸನನ್ನು ಗುಪ್ತ ರೀತಿಯಿಂದ ಅಪಹರಿಸಿಕೊಂಡು ಓಡಿ ಹೋಯಿತು. ಆಗ ಮಹಾರಾಜರು ಮೃಗನಯನೆಯ ತೋಳ್ತೆಕ್ಕೆಯಲ್ಲಿ ವಿಶ್ರಮಿಸಿದ್ದರು. ಅವರ ಬೆಂಗಾವಲಿಗೆ ಇದ್ದ ಅರಣ್ಯದ ಐವತ್ತು ಸೈನಿಕರು ಶರಯೂ ನದಿಯ ಆಚೆ ದಂಡೆಯಲ್ಲಿ ಹೋರಾಡುತ್ತಿದ್ದರು. ಆರು ಖಡ್ಗದಾರಿ ಕಾವಲುಗಾರರನ್ನು ಶಬರರು ಬಾಣ ಹೊಡೆದುಕೊಂದರು. ಪುರುಕುತ್ಸನನ್ನೂ ಮೃಗನಯನೆಯನ್ನು ಬಂಧಿಸಿ, ಕುದುರೆಯ ಮೇಲೆ ಹೇರಿಕೊಂಡು ಪಲಾಯನ ಹೇಳಿದರು; ಭದ್ರಾಯುವಿಗೆ ತಂದು ಒಪ್ಪಿಸಿದರು.
ಅಯೋಧ್ಯೆಯನ್ನು ಗೆಲ್ಲದಿದ್ದರೂ ಅದರ ರಾಜನನ್ನು ಬಂಧಿಸಿದ್ದಷ್ಟೇ ಭದ್ರಾಯುವಿಗೆ ಸಮಾಧಾನ.
ಮುಂದೆ ಹತ್ತು ವರ್ಷ ಅಯೋಧ್ಯೆ ನಿರ್ಭಾದಿತವಾಗಿ ಉಳಿಯಿತು.
ಹತ್ತು ವರ್ಷ ಅಹಿಚ್ಛತ್ರದ ಸೆರೆಮನೆಯಲ್ಲಿ, ಯಾವ ಸುಖಕ್ಕೂ ಎರವಾಗದೆ, ಸದ್ದುಗದ್ದಲವಿಲ್ಲದೆ, ಮಹಾರಾಜ ಪುರುಕುತ್ಸನು ಮೃಗನಯನೆಯೊಡನೆ ಇದ್ದನು.
ಅವನು ಎಲ್ಲಿ ಬಂಧನದಲ್ಲಿ ಇದ್ದಾನೆಂಬುದರ ಪತ್ತೆ ಕೂಡ ಅಯೋಧ್ಯೆಯ ಪ್ರಜೆಗಳಿಗೆ ತಿಳಿಯದಾಯಿತು. ತಾರ್ಕ್ಷ್ಯನ ಎಲ್ಲ ಪ್ರಯತ್ನಗಳೂ ವಿಫಲವಾದವು. ಯುದ್ಧದಲ್ಲೇ ಮಹಾರಾಜರು ಹತರಾದರೆಂದು ಜನಜನಿತ ಮಾತು ಹಬ್ಬಿತು.
ಬದುಕಿಯೂ ಇರಬಹುದೆಂಬ ವಾರ್ತೆಯೂ ಇದ್ದಿತು. ತನ್ಮೂಲಕ ಪುರುಕುತ್ಸಾನಿ ವಿಧವೆಯೆನಿಸಲಿಲ್ಲ, ಅಷ್ಟೇ!
ಪುರುಕುತ್ಸಾನಿಯ ರಾಜ್ಯಶಾಸನದ ಕುಶಲತೆಯನ್ನು ಮೆಚ್ಚಿ ಭದ್ರಾಯು ಸಂದೇಶ ಕಳಿಸಿದನು: “ಆಕೆಯ ವಿವಾಹ ಭಾರತೀಯ ಪದ್ದತಿಯಿಂದ ನ್ಯಾಯ ಸಮ್ಮತವಲ್ಲವೆಂದು, ತನ್ನನ್ನು ಮದುವೆಯಾಗಬೇಕೆಂದು, ತಮ್ಮ ರಾಜ್ಯಗಳು ಒಂದಾದರೆ ಕಾಶಿ, ವಂಗ, ಅಂಗ, ಕಲಿಂಗರಾಜ್ಯಗಳು ಒಂದಾಗಿ ವಿಶಾಲ ಆರ್ಯಾವರ್ತ ಸಾಮ್ರಾಜ್ಯವನ್ನು ಕಟ್ಟಬಹುದೆಂದು, ಪುರುಕುತ್ಸ ಮಹಾರಾಜರು ಕ್ಷೇಮದಿಂದ ಇಲ್ಲಿಯೇ ಇರುವರೆಂದೂ, ಇದಕ್ಕೆ ಅವರ ಸಮ್ಮತಿ ಇದೆಯೆಂದು, ತಾವೇ ಕಾಶೀವಿಶ್ವನಾಥನ ಸನ್ನಿಧಿಯಲ್ಲಿ ನಮ್ಮ ವಿವಾಹ ನಡೆಯಲೆಂದು ಹೇಳಿದುದಾಗಿಯೂ, ಸಂದೇಶ ಬಂತು.
ಮೊದಲು ನನ್ನ ಗಂಡನನ್ನು ತಂದು ಒಪ್ಪಿಸು, ಆಮೇಲೆ ಮಾತಾಡೋಣ, ಎಂದು ಪುರುಕುತ್ಸಾನಿ ಹಟ ಹಿಡಿದಳು.
ಭದ್ರಾಯು ಅದಕ್ಕೆ ಒಪ್ಪಲಿಲ್ಲ. ಅಯೋಧ್ಯೆ ಅವನಿಗೆ ಕಂಟಕವಾಗಿತ್ತು. ಅಯೋಧ್ಯೆಯನ್ನು ದಾಟದ ಹೊರತು ಕಾಶಿ ಅಲಭ್ಯವಾಗಿತ್ತು.
ತನ್ನ ಊನ ಅವಸ್ಥೆಗೆ ಪುರುಕುತ್ಸಾನಿ ಮಾಡಿದ ಅಪಚಾರವೆಂದು ಭದ್ರಾಯು ಸಿಡಿಮಿಡಿಗೊಂಡನು. ನೂರು ರಾಜಕುವರಿಯರನ್ನು ಲಗ್ನವಾಗಿ ನೂರು ಮಕ್ಕಳನ್ನು ಪಡೆದು, ನಿಃಸಂತಾನ-ಪುರುಕುತ್ಸಾನಿಗೆ ತನ್ನ ಸಂತಾನ ಸಾಮರ್ಥ್ಯವನ್ನು ತೋರ್ಪಡಿಸಿದನು. ಪುರುಕುತ್ಸಾನಿ ಜಗ್ಗಲಿಲ್ಲ.
*****
ಮುಂದುವರೆಯುವುದು

ಕೀಲಿಕರಣ ದೋಷ ತಿದ್ದುಪಡಿ: ಕಿರಣ್.ಎಂ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.