ಕೊನೆಯ ನಿಲ್ದಾಣ


ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ
ಮಂದಿ ಗಿಜಿಗಿಟ್ಟಿರುವ ನಿಲ್ದಾಣ;
ಯಾವುದೋ ಊರು
ಎಲ್ಲಿಯೋ ಏತಕೋ ಅವಸರದ ಕೆಲಸ
ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ;
ನಿಂತಲ್ಲಿಯೆ
ಕುಳಿತಲ್ಲಿಯೆ
ಎದೆಯ ಮಗ್ಗದಲಿ ಮಿಂಚಿನ ಲಾಳ ಓಡಾಡಿದೆ !
ಕೈಯ ಗಡಿಯಾರದಲಿ ಕಾಲದ ನಾಡಿ ಮಿಡಿಯುತಿದೆ
ಅಲ್ಲಿಗೂ ಇಲ್ಲಿಗೂ ಎಲ್ಲಿಗೊ ಎಳೆಯನೆಳೆದಾಡುತಿದೆ ಜೀವಜೇಡ!

ದೂರ ತಾರಸ್ವರದಿ ಕೂಗಿಕೊಂಡಿತು ಗಾಡಿ
(ಮುಗಿಲ ಭೇದಿಸಿ ಬರುವ ಅಶರೀರವಾಣಿ !)
ಅಡಪು ಹತ್ತಿದ ಮೈಯ ತುರಿಸಿಕೊಳ್ಳುತ ನಾಯಿ
ಎದ್ದು ಕಿವಿ ಝಾಡಿಸಿದೆ-
ಧಡ್….ಧಡ್…. ಧಡ್ …ಧಡ್….
ಕಂಪಿಸಿದಬೆರಡೂ ಕಂಬಿ
ನೂರು ಗಾಲಿಗಳುರುಳ ದಡ್ಡು ಬಿದ್ದಿರುವದೆಯು
ಹೊಡೆದುಕೊಂಡಿದೆ ಮತ್ತೆ ಧಡಧಡಿಸಿ-
ಓ ಬಂತು ! ಬಂದು ನುಗ್ಗಿತು ಗಾಡಿ
ಬಂದಂತೆ ಕೊನೆಗೊಮ್ಮೆ ಬೇರುಕಿತ್ತು !
(‘ಬಂದಿತೆಂದರು ಇದ್ದುದಿದ್ದೆ ಇತ್ತು.’)


ಸಾಮಾನು ಸಟ್ಟು ಎಲ್ಲಾ ಒಳಗಿಟ್ಟು ಕುಳಿತೆಯಾ?-
ಇಲ್ಲವೋ ಇಲ್ಲಿ ಜಾಗ ಡಬ್ಬಿ ಭರ್ತಿ
ಮೋಟಾರು ಬಸ್ಸು ಸಿನಿಮಾ ಸರ್ಕಸೊ ಎಲ್ಲಿ ಹೋದರೂ ಇದೇ ಫಜೀತಿ !
ಎಂಥ ಹುಚ್ಚನೊ ನೀನು
ಸುಮ್ಮನೆ ದಂಗು ಬಡಿದೇಕೆ ನಿಂತಿ ?
ಹೂಂ ಹತ್ತು, ಜೋರಾಗಿ ಆ ಕಡೆ ಒತ್ತು ಈಗ ನಿನ್ನ ಸರತಿ
‘ಮಹಾಜನೋಯೇನ ಗತಸ್ಸಪಂಥಾ’
ಯಾರಾದರೇನು, ತಮಗಿಷ್ಟು ಆರಾಮುಜಾಗ ಸಿಕ್ಕರೆ ಸಾಕು
ಸಾಕಪ್ಪ ಸಾಕು ; ಕುತ್ತಿಗೆ ಹಿಡಿದು ದಬ್ಬುವುದೊಂದೆ ಬಾಕಿ !
ಎಲಾ ಅವಿವೇಕಿ !
ಗುಂಪಿನಲ್ಲಿ ನೀನು ಮಾತ್ರ ಏಕಾಕಿ.
* * * *

ಇದು ಹೊರಟಿದ್ದೆ ಲೇಟು
ಬಂದು ಮುಟ್ಟಿದ್ದು ಇನ್ನೂಲೇಟು ;
ಸುಮ್ಮನೆ ಹೋಗಿ ಬಿಡುತ್ತಿದೆ ಸಾಹೇಬರ ಬಾಯ ಚಿರೂಟು
ಫುಸ್….ಫುಸ್…. ಫುಸ್….
ಉಶ್‍ಶ್…. ಎಲ್ಲಿ ಸತ್ತಿತೊ ಗಾಳಿ
ಒಂದೇಸವನೆ ಸೆಖೆ ಕುಚ್ಚುತಿದೆ
ಬಂದ ಬೆವರೆಲ್ಲ ಇಂಗಿ ಒಳ‌ಅಂಗಿ ಒಣಗಿ ಒತ್ತು ಗರಡಾಗಿದೆ!
‘ಸೋಡಾ ಲೆಮನ್ ಆರೆಂಜ್….’
‘ಗರಮಾ ಗರಂ ಚಹಾ ….’
‘ಒಂದಾಣೆ ದಿನಪತ್ರಿಕೆ ’
ಆರೆ, ಎಲ್ಲಿ ಹೋಯಿತು ಕೋಟಿನೊಳಗಿಟ್ಟ ಪಾಕೀಟು !
ಅದರ ಜೊತೆಗೇ ಇತ್ತು ಈಗ ತೆಗೆಸಿದ ತಿಕೀಟು
ಐದರದೊಂದು ನೋಟು !
ನನ್ನ ಪಾಲಿಗೇ ಬರಬೇಕೆ ಇಂಥ ಪಡಿಪಾಟು !
ಅಪರೂಪಕ್ಕೆ ಭೆಟ್ಟಿ ಯಾಗಿದ್ದ ಗೆಳೆಯರಿಗೆ
ಚಹ ಕುಡಿಸಲೊಂದಾಣೆ ಉಳಿಯಲಿಲ್ಲ,
ಅವರಾದರೂ ನನ್ನ ಕರೆಯಲಿಲ್ಲ ;
ಯಾವ ಡಬ್ಬಿಯನೇರಿ ಯಾರ ಡುಬ್ಬದ ಮೇಲೆ ಕುಳಿತರೋ ಯಾವಬಲ್ಲ !
ಕಿಡಿಕಿಯೊಳಗಿಂದಲೇ ಒಳಗೆ ತುರುಕಿರಬೇಕು ಅವರ ಹಮಾಲ.
ಬೆನ್ನ ಹಿಂದೆಯೆ ಬೆಕ್ಕಿನೊಲು ಬಂದು ನಿಲ್ಲುವನೀಗ ಚೆಕ್ಕರು
ಇದ್ದುದನು ಹೇಳಿದರೆ ನಂಬಬಹುದೇ ಅವನು
ಹಾಗು ಹೀಗೂ ಜಡಿದು ವಸೂಲು ಮಾಡದೆ ಬಿಡನು.
ಇಲ್ಲಿ ಗದ್ದಲದಲ್ಲಿ ಕಣ್ಣು ತಪ್ಪಿಸಿ ನುಸುಳಿ ಪಾರಾಗಬಹುದು
ಅಲ್ಲಿ ಏನೋ ಎಂತೊ
ನಾನಿಳಿವ

ಕೊನೆಯ ನಿಲ್ದಾಣದಲ್ಲಿ!
(ಜಪ್ತು ಮಾಡಿದರೆ ಮಾಡಲಿ, ನನ್ನ ಕಿಸೆಯೆಲ್ಲ ಖಾಲಿ)
* * * *
ಇದು ದೊಡ್ಡ ನಿಲ್ದಾಣಕೂಟ
ಇಲ್ಲಿಂದಲೇ ಹೊರಟು ಇಲ್ಲಿಗೇ ಬಂದು ಕೂಡುವವೆಲ್ಲ ಕಡೆಯಗಾಡಿ
ದೇಹಾದ್ಯಂತ ಸಂಚರಿಸಿ ಪುಪ್ಪುಸಕೆ ಹರಿವಂತೆ ರಕ್ತನಾಡಿ.
ನಮ್ಮ ಗಾಡಿಗೆ ಏನು ಬಂತೊ ಧಾಡಿ
ನಿಂತು ನಿಂತಲ್ಲಿಯೇ ಗೊರಕೆ ಹೊಡೆಯುತ ಮಲಗಿಬಿಡುವ ರೂಢಿ;
ಎಲ್ಲಿ ಹೋದನೊ ಪುಣ್ಯಾತ್ಮ ಗಾರ್ಡ
ತ್ರಿಶಂಕುವಿನಂತೆ ನಮ್ಮಲ್ಲಿಯೆ ಬಿಟ್ಟು, ಕೈಯಲ್ಲಿ ತಾಳಕೊಟ್ಟು
ಕುಣಿಯ ಹಚ್ಚಿದನಲ್ಲ ಇವನೊಬ್ಬ ದೊಡ್ಡ ಕೀರ್ತನಕಾರನೇ ಥೇಟು.
ಆಕಳಿಸಿ ತೂಕಡಿಸಿ ಓಕರಿಸಿ ಸಾಕಾಯ್ತು ಮೂಗು ತಿಕ್ಕಿ!
ಒಬ್ಬರಮೇಲೊಬ್ಬರು ಹತ್ತಿ ಹತ್ತಿಕ್ಕಿ ಹತ್ತಿಯಂಡಿಗೆಯಂತೆ ತುಳಿಯುತ್ತಿಹರು-
ಹೊಡೆಯಬಾರದೆ ಗಂಟೆ
ಊದಬಾರದೆ ಸೀಟಿ
ಉರುಳಬಾರದೆ ಒಮ್ಮೆಲೇ ನೂರುಗಾಲಿ !
“ಉಧೋ ಉಧೋ ಒಳಗಿದ್ದ ಬೆಳಕೆ ಬೆಳಕೇ
ಉಧೋ ಉಧೋ ಹೊರಗೆ ಬಾ ಏಕೆ ಒಳಕೆ!”


ಧಡಗ್….ಗಡಗ್….ಧಡಗ್….ಗಡಗ್….
ಇದ್ದ ಶಕ್ತಿಯನೆಲ್ಲ ಒಟ್ಟುಗೂಡಿಸಿ ಮುಂದಕೆಳೆಯಿತೆಂಜಿನ್ನು
ಒಂದೊಂದೆ ಸುತ್ತು ಎಣಿಸುತ್ತ ಉರುಳಿದವು ಗಾಲಿ
ಉಸಿರಾಡಿಸಿತು ಗಾಳಿ
ಸಾಗಿದವು ಡಬ್ಬಿ ಹೊಯ್ದಾಡುತ್ತ ಒಂದರ ಹಿಂದೆ ಒಂದು….
ದೊಡ್ಡ ಸಂಸಾರಕ್ಕೆ ಒಬ್ಬನೇ ದುಡಿಯುವವ
ಹಬ್ಬಿ ಬೆಳೆದಿದೆ ಬಳಗ ತೂಗು ತೊಟ್ಟಿಲವಾಗಿ ಬೆಳ್ಳಿ ಬಟ್ಟಲವಾಗಿ
ಒಂದಕ್ಕೆ ಹತ್ತಾಗಿ ಹತ್ತು ನೂರಾಗಿ !
ವರುಷ ವರುಷಗಳೆಷ್ಟೊ ಗತಿಸಿದವು ಹೀಗೆಯೇ ಹಳಿಗುಂಟ ಸಾಗಿ.

ಜಗ್ ಜಗ್ ಝುಕು ಝುಕು
ಜಗ್ ಜಗ್ ಝುಕು ಝಕು ಜಗ್ ಜಗ್….
ಓಹೋ! ಕುಣಿಯಲೂ ಬಲ್ಲುದೀ ಗಾಡಿ ಒಮ್ಮೊಮ್ಮೆ ಉನ್ಮಾದಗೂಡಿ
ಒಳ್ಳೆ ಪ್ರಾಯದ ಮೋಡಿಃ
ಹತ್ತಿದಿಬ್ಬವ ಸಿಳ್ಳು ಹೊಡೆದು ಹುಬ್ಬನು ಕುಣಿಸಿ
ಹಸಿರ ಸೆರಗನು ಜಗ್ಗಿ ಸರಸವಾಡಿ
ಸೇತುವೆಯನೊತ್ತಿ ಮುತ್ತಿಟ್ಟು ಆಲಿಂಗಿಸುತ
ಕಣಿವೆ ಕಂದರಗಳಲಿ ಕಟ್ಟಾಡಿಸಿ-
ಜಗ್ ಜಗ್ ಝುಕು ಝುಕು
ಜಗ್ ಜಗ್ ಝುಕು ಝುಕು
ಜಗ್ ಜಗ್………
ಕೊಂಚ ಮುಗ್ಗರಿಸಿತ್ತು ಗಾಡಿ ಬಿತ್ತು ಬ್ರೇಕು !

ಅಂತು ಇಂತೂ ಕೊನೆಗೆ ಬಂದು ಮುಟ್ಟಿತು ಇಗೊ ಬಂತು ನಿಲ್ದಾಣ
ನಿಟ್ಟುಸಿರುಗರೆದು ನಿಂತಿತೋ ಆಗಿ ನಿತ್ರಾಣ !
ಹತ್ತುವರು ಇಳಿಯುವರು ಮುತ್ತಿ ಮುಗಿ ಬೀಳುವರು
ಮತ್ತೆ ನಿನ್ನಂಥವರು ಎಷ್ಟೋ ಜನ !
ಎಡಬಲದ ಗಿಡಮರಗಳೋಡಿ ಡಿಕ್ಕಿಯ ಹೊಡೆದು
ಗಿರಿದರಿಗಳೆಲ್ಲ ಗರಗರ ತಿರುಗಿ ಎಲ್ಲಿಗೋ ಬೀಸಿ ಒಗೆದು
ಗಕ್ಕನೆ ಚೇನು ಜಗ್ಗಿ ನಿಲ್ಲಿಸಿದಂತೆ ಬಹುದೂರ ನೆನಪು-
ಇಡಿಯ ಹಾಡಿನಲಿ ಎದೆಯ ಮಿಡಿದಂತೆ ಯಾವುದೋ ಒಂದು ಚರಣ
ಇರಲಿ; ಹೊತ್ತಾಯ್ತು ಮತ್ತೇಕೆ ಆ ಎಲ್ಲ ಹಳೆ ಪುರಾಣ
ಹೊರು ನಿನ್ನ ಹೋಲ್ಡಾಲು
ಹಿಡಿದುಕೋ ಕೈ ಚೀಲ
ಇಳಿದು ಬಿಡು ಸಾವಧಾನ
ಜಗ್….ಜಗ್….ಜಗ್ …ಜಗ್ …
ಚಲಿಸುತಿವೆ ಗಾಲಿ, ಮತ್ತೆ ಎಲ್ಲಿಂದಲೋ ಬಂತು ತ್ರಾಣ
ಎಲ್ಲಿಹುದೊ ಈ ಇದರ ಕೊನೆಯ ನಿಲ್ದಾಣ ?!
*****