ಇವನಿಂದಲೇ ನನಗೆ ಬೈಗು-ಬೆಳಗು!


ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು
ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು !
ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು
ತೆಗೆದಿರುವ ಅಪ್ರತಿಮ ಪ್ರತಿಮೆ ನೂರು !
ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ
ತುಡಿವ ಬೆಳ್ಳಕ್ಕಿಗಳ ಬಯಕೆ-ಸಾಲು ;
ದೂರ ಬೆಟ್ಟವನಿಳಿದು ಮೆಲುಕಾಡಿಸುತ ಬರುವ ಕೊರಳ ಗಂಟೆಯು ಮಿಡಿವ ನಾದ ಹೊಳಲು.
ಗಿರಿಯ ಮುಡಿಗಿರುವ ಗುಡಿಯಲ್ಲಿ ನಂದಾದೀಪ
ಬಾನಿಗೇರಿದೆ ಹೊಗರು ಅಗರುಧೂಪ-
ಶೂನ್ಯದೊಡನನ್ಯೋನ್ಯವಾಗಿ ಬೆರೆದಿದೆ ವಿಶ್ವಚೈತನ್ಯ ವಿವಿಧರೂಪ.

ಮುಳ್ಳು ಜಾಲಿಯ ಹೂವ ಸೌಗಂಧದಲಿ ತೇಲೆ ದುಂಬಿಗನಸು
ಜೋಂಪಿಸುತ್ತಿದೆ ಮಗುವಿನೆಳೆಯ ಮನಸು.
‘ಕಂದ ಜೋ ಜೋ … ಬೆಳಕಿನಂದ ಜೋ ಜೋ’
ಹೊಂಗೆ ಹುಣಿಸೆಯು ಬೊಗಸೆ ಬೊಗಸೆ ಸುರಿದಿವೆ ಹೂವು
ಹಣ್ಣು ತೂಗಿದೆ ಕೊಂಬೆ ಕೊಂಬೆಯಲಿ ಮಾವು ;
ಧೂಳಿ ನುಣ್ಣಗೆ ನೆಲಕೆ ಜಾರುತಿದೆ ಗಾಳಿಯಲಿ ಆರುತಿಹುದದರ ಕಾವು
ಮನೆಯ ಜಗುಲಿಯನೇರಿ ಬೆಳಕು ತೂಗಾಡುತಿದೆ
ಒಳದನಿಯು ಹಾಡುತಿಹುದು :
‘ಕಂದ ಜೋ ಜೋ ಪೂರ್ಣಚಂದ್ರ ಜೋ ಜೋ’
ನೀಲಪರದೆಯ ನಡುವಿನೆಳೆಯ ಜಗ್ಗಲು ಝಗ್ಗನೆದ್ದು ಕುಣಿದಿವೆ ತಾರೆ
ನೆಲದೆದೆಯ ಮೊಗ್ಗರಳಿ ಪರಿಮಳದ ಸೂರೆ !
ಮುಗಿಲ ಮಂಚವನೇರಿ ಅಂಚೆದುಪ್ಪಳ ಹೊದೆದು
ಚಿಕ್ಕೆಗಂಗಳ ಮುಚ್ಚಿ ತೆರೆವ ನೀರೆ!
ಆಡಿ ದಣಿದಿದೆ ಮಗುವು
(ಅದಕೆ ದಣಿವೇ ಇಲ್ಲ !)
ಎಳೆಯ ಕಂಗಳ ಎವೆಗೆ ತಂಗಾಳಿಯಾಗಿ ಸುಳಿ, ಜೇನಾಗಿ ಇಳಿದು ಬಾರೆ !
* * * *


ಹಗಲು ಕೋಳಿಯ ನಿದ್ದೆ-
ಬಯಲಾಟದಲಿ ಸೋಗು ಕುಣಿದದ್ದೂ ಕುಣಿದದ್ದೆ
ತಕ್ಕ ಥೈ ತಕ್ಕ ಥೈ
ಕಾಳಿಂಗನ ಹೆಡೆಯ ಹತ್ತಿ ಹತ್ತಿ ತುಳಿದ ಬಾಲಕೃಷ್ಣ
ಧಿತ್ಥೈ ಥೈ !
ಆಚೆ ಬೀದಿಗು ಗಸ್ತಿ ಹೊಡೆದು ಬರುವದು ಕೇಕೆ
ಕೊಟ್ಟು ಎಚ್ಚರಿಕೆ !
ಬಿಳಿ ಜೋಳ ಹೊಲದಲ್ಲಿ ಕವಡೆಗಲ್ಲನು ಬೀರಿ ಹಕ್ಕಿ ಹಾರಿಸುತಿಹನು
ಅತ್ತಿತ್ತ ಸುಳಿದೀರಿ ಮತ್ತೆ, ಜೋಕೆ !
ತಾಸಿಗಿಪ್ಪತ್ತು ಮೈಲಿನ ವೇಗ ಮೀರುವುದು
ಮನೆತುಂಬ ಓಡುವುದು ಅಂಬೆಗಾಲಿನ ಕಾರು !
ನೋಡ ನೋಡುತ ಧುಮುಕಿ ಹೊಡೆದು ಮೇಲೇಳುವದು
ಬ್ರೇಕು ಹಾಕಲು ವೇಗ ಮತ್ತಿಷ್ಟು ಜೋರು !
ಏನಿಲ್ಲವೆಂದರೂ ದಿನಕೆಂಟು ಅಪಘಾತ
ಇನ್ನೆಂಟು ಆದರೂ ಈತ ನಿರ್ಭೀತ,
ಎಂಥ ಅದ್ಭುತವಡಗಿ ಕುಳಿತು ಆಡಿಸುತಿಹುದೊ
ಎಂಟು ತಿಂಗಳ ಪುಟ್ಟ ಜೀವಯಂತ್ರ !


ಮೈಮರೆತು ಕುಳಿತ ಕಡೆಗಿವನ ಮಿಂಚಿನದಾಳಿ
ಹೊಂಚುಗಾರ !
ಎಲ್ಲಿಂದಲೊ ಸರ್ರನೆರಗಿ ಬಡಿಯುವ ಗಿಡುಗ
ಆಕ್ರಮಣಶೀಲ !
ರಾಶಿಯೊಕ್ಕುವ ಸಮಯಕೆದ್ದ ಸುಂಟರಗಾಳಿ-
ಕೋಲಾಹಲ!
ಏಳು ಮೆಟ್ಟಿನ ಹುಲಿಯ ಹಿಡಿದು ಪಳಗಿಸಬಲ್ಲ
ಚಂಡ ಪ್ರಚಂಡ !
ಕಣ್ಗೆ ಬಿದ್ದು ದನೆಲ್ಲ ಕಸಿದು ಕೈವಶಗೊಂಬ
ಪುಂಡ ಮಾರ್ತಾಂಡ !
ನಜರು ಕಾಣಿಕೆ ಕೊಟ್ಟು ಮುಜುರೆ ಹೊಡೆದರು ಕೂಡ
ಸಂಧಾನ ವಿಫಲ ವಿಫಲ !
ತುಂಟನಗೆ ಸಮ್ಮೋಹನಾಸ್ತ್ರ ಬೀರುವ ಬಂಟ
ನಿತ್ಯ ಜಯಶೀಲ !
* * * *


ಎರೆದು ಧೂಪವ ಹಾಕಿ ಹೊಚ್ಚಿ ಬೆಚ್ಚಗೆ ತುಂಬುದೊಟ್ಟಿಲನು ತೂಗಿ
ಮೆಲ್ಲನುಲಿಯಲಿ ಇವಳು ಜೋಗುಳವ ಹಾಡುತಿರೆ
ಹೊಮ್ಮಿ ಬರುವುದು ಇವಗು ಕಾವ್ಯ ಸ್ಫೂರ್ತಿ !
ಯಾವ ದೈವಿಕ ಭಾಷೆ ಯಾವುದೋ ಧಾಟಿ-
ಹಾಡಿಯೇ ಹಾಡುವನು ಕಂಠಪೂರ್ತಿ-
ತೂಗಿದವರಿಗೆ ಬಂತು ತೂಕಡಿಕೆ ಎಂದಾಗ
ಹಾಡು ಮುಗಿವುದು ಕನಸಿನಲ್ಲಿ ಕರಗಿ.
ಏರಿ ಗಗನಕೆ ಹಾರಿ ತೂರಿ ಬಿನ್ನಾಣದಲಿ
ಬಗೆ ಬಗೆಯ ಲಾಗ ಹಾಕಿ
ಗೂಡಿಗಿಳಿವುದು ಪಾರಿವಾಳ ನೆಟ್ಟಗೆ ಬಂದು
ಬಾನಿನಲಿ ಸಂಜೆಯಾಗಿ.

ದಡಸೂಸಿ ಹರಿವ ನದಿ ಮಡುವಾಗಿ ನಿಂತಂತೆ
ಇರುಳಿನಲಿ ಇವನ ನಿದ್ದೆ-
(ನಿದ್ದೆಯಲ್ಲೂ ಮುಖವು ಮುದ್ದು ಮುದ್ದೇ)
ನಡುವೆ ಏನೋ ಕನಸು, ತುಟಿಯಂಚಿನಲಿ ಮಿಂಚು-
ಮೂಡಿಮರೆಯಾಗುವದು ದಿವದ ಬೆಳಕು ;
ಕೊಳದ ತಳದಿಂದ ಮೇಲೆದ್ದು ಮುಳುಗಲು ಮೀನು
ಥಳಥಳಿಸಿ ಹೊಳೆಯುವೊಲು ನೀರಿನಂಚು !

ಎಲ್ಲೊ ಒಲವಿನ ಸೂತ್ರ ಹಿಡಿದು ಆಡಿಸುತಿರಲು
ಆನಂದದುಯ್ಯಾಲೆ ಒಳಗು ಹೊರಗು ;
ಸೂರ್ಯಚಂದ್ರರು ದಿನವು ಮೂಡಿ ಬೆಳಕಾಡಿದರು
ಇವನಿಂದಲೇ ನಮಗೆ ಬೈಗು-ಬೆಳಗು.
*****