ಅಮೇರಿಕಾದಲ್ಲಿ ಕಣ್ಮರೆಯಾಗುತ್ತಿರುವ ಕ್ರಾಂತಿಕಾರಕತೆ: ಮಹಮ್ಮದಾಲಿ, ಮಾರ್ಟಿನ್ ಲೂಥರ್ ಮತ್ತು ಗೆಳೆಯ ಶೆಲ್ಡನ್

(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ ಆಗುತ್ತಿರುವ ಪಲ್ಲಟವನ್ನು ಈ ಟಿಪ್ಪಣಿಗಳು ಗುರುತಿಸುತ್ತವೆ)
ಭಾನುವಾರ ಫೆಬ್ರವರಿ ೧೯, ೧೯೭೮, ಖಿuಜಿಣs, ಒeಜಜಿoಡಿಜ

ಹಗುರಾಗಿ ಕುಣಿಯುವ ಪಾದಗಳ, ಚಿರತೆಯಂತೆ ಬಳಕುವ ಮೈಕಟ್ಟಿನ ಮಹಮ್ಮದಾಲಿ ಸೋತ. ಇನ್ನು ಮುಂದೆ ಇವ ಜಗತ್ತಿನ ಬಾಕ್ಸಿಂಗ್ ಚಾಂಪಿಯನ್ ಅಲ್ಲ. ಎದುರಾಳಿಯ ಹೊಡೆತಗಳನ್ನು ಪುಷ್ಪಾರ್ಚನೆಯೆಂಬಂತೆ ಸ್ವೀಕರಿಸುತ್ತ, ನಗುತ್ತ, ಹೀಯಾಳಿಸುತ್ತ ಅವು ಅತಿಯಾದಾಗ ಗರ್ಜಿಸುತ್ತ, ಛಂಗನೆ ನೆಗೆಯುತ್ತ, ನಾವು ನೋಡುತ್ತಿರುವುದು ಅವನ ಮುಷ್ಟಿಯನ್ನೋ ನಗುವ ಕಣ್ಣುಗಳನ್ನೋ ಜಿಗಿದಾಡುವ ಕಾಲುಗಳನ್ನೋ ಎಂಬುದೇ ತಿಳಿಯದ ಹಾಗೆ ಪ್ರೇಕ್ಷಕರನ್ನು ರಮಿಸುತ್ತ, ರಕ್ತದಾಹದ ಭೀಕರ ಮುಷ್ಟಿಯುದ್ದವನ್ನೇ ಮೋಹಕ ಕಲೆಯಾಗಿ ಇವನು ಮಾಡಿದ್ದ. ಈ ಕಪ್ಪು ಯುವಕ ತನ್ನ ಹೆಸರನ್ನೂ ಹೆಂಡತಿಯನ್ನೂ ಬದಲಾಯಿಸಿಕೊಂಡು ಮುಸ್ಲಿಂ ಆದವನು. ಕ್ಯಾಸಿಯಸ್ ಕ್ಮೇ ಎಂಬ ಹೆಸರಲ್ಲಿ ಹುಟ್ಟಿ ಬೆಳೆದು ನಂತರ ಮಹಮದಾಲಿಯಾಗಿ ತನ್ನ ನಾಡಿನ ಬಿಳಿ ಜನರ ಧರ್ಮದ ಹಂಗನ್ನು ತೊರೆದವನು; ಕ್ರೌರ್ಯವೂ ಮೋಹಕವಾದ ಆಟವಾಗಬಹುದೆಂಬುದನ್ನು ತನ್ನ ದೇಹವನ್ನೇ ಒಡ್ಡಿಕೊಂಡು ಈತ ಸಾಧಿಸಿದ್ದು ಕಪ್ಪು ಜನಾಂಗದ ಅವಮಾನ, ಒಳಗುದಿಗಳನ್ನು ಮೀರಲಿಕ್ಕೋಸ್ಕರ; ಅಥವಾ ಹಾಗೆನ್ನಿಸುವಂತೆ ಮೀಡಿಯಾ ಬಳಸಿಕೊಂಡಿತು.

ಹೀಗೆ ಸ್ಲಮ್‌ಗಳಲ್ಲಿ ಹಠಾತ್ತನೆ ಸಿಡಿದೇಳುತ್ತಿದ್ದ ದ್ವೇಷವೇ ರಂಗಭೂಮಿಯ ಪ್ರೇಕ್ಷಣೀಯ ನಾಟಕವಾಗಿ ಬಿಡುತ್ತಿತ್ತು. ಬಾಕ್ಸಿಂಗ್ ಅಂಕಣದ ಸ್ಪಾಟ್ ಲೈಟಿನ ವಿಧಿನಿಯಮಗಳ ಚೌಕಟ್ಟಿನಲ್ಲಿ ಕಪ್ಪು ರೋಷದ ತಮವನ್ನು ರಜೋಗುಣ ಮಾಡಿ, ಈ ರಜೋಗುಣವನ್ನು ತನ್ನ ವಿಶ್ರಾಂತಿ ಕಾಲದಲ್ಲಿ ಧಾರ್ಮಿಕವಾದ ಸತ್ವಗುಣವಾಗಿ ಮಾಡಲು ತನ್ನ ಮೋಹಕ ಮಾತುಗಾರಿಕೆಯಲ್ಲಿ, ಮುಗ್ಧ ನಗುವಿನಲ್ಲಿ, ಅಮಾಯಕವಾದ ಜಂಬಗಾರಿಕೆಯಲ್ಲಿ ಮಹಮದಾಲಿ ಶ್ರಮಿಸಿದವನು. ಇನ್ನು ಯಾವ ರಂಗದಲ್ಲೂ ಹೀಗೆ ಒಬ್ಬಮಾತ್ರ ಎಂಬಂತೆ ಇರುವ ಏಕಮೇವಾದ್ವಿತೀಯ – ನಿಜವಾಗಿ – ಇವನೇ. ಕರ್ಮದಲ್ಲಿ ಕೌಶಲವೇ ಯೋಗವೆನ್ನುವುದಾದರೆ ಇವನೂ ಒಬ್ಬ ಯೋಗಿಯೇ. ಕೋಪತಾಪದ್ವೇಷಗಳು ಅಭಿನಯಕ್ಕಾಗಿ ಈತನಿಗೆ ಒದಗುತ್ತಿದ್ದ ಸರಕುಗಳು-ಅಷ್ಟೇ. ಹಾಗೆನ್ನಿಸುವಷ್ಟು ರಾಗದ್ವೇಷಗಳನ್ನು ಹಾಸ್ಯಾಸ್ಪದವಾಗುವಷ್ಟು ಅವುಗಳ ಅತಿಗೆ ಮಾತಿನಲ್ಲಿ ಉಬ್ಬಿಸಿ ಚೀರುತ್ತಿದ್ದವನು ಇವನು. ಹೀಗೆ ಮಹಮದಾಲಿಯಲ್ಲಿ ಎಲ್ಲವೂ ಉತ್ಪ್ರೇಕ್ಷೆಯ ಹುಂಬಲೀಲೆ; ಅತ್ಯಂತ ಜಂಬದ ಮಾತುಗಳೆಲ್ಲವೂ ವಾಸ್ತವಸತ್ಯ. ಅವನು ಕೊಚ್ಚಿಕೊಳ್ಳುತ್ತಿದ್ದಂತೆ ನಿಜಕ್ಕೂ ಅವನು ’ಗ್ರೇಟೆಸ್ಟ್’. ವಿಪರ್ಯಾಸವೆಂದರೆ ಹಲವು ಬಾರಿ ಈ ಕಪ್ಪು ಶಕ್ತಿ ವ್ಯಕ್ತವಾದ್ದು ಕಪ್ಪು ಬಾಕ್ಸರ್‌ಗಳನ್ನು ಕೆಡವಿಯೇ.

ಅರವತ್ತರ ದಶಕದಲ್ಲಿ ಈ ಜಂಬದ ಹುಂಜ ಕವಿಯಾಗಿ, ಸುಂದರ ಪುರುಷನಾಗಿ, ಮನೋಹರ ಕಲೆಗಾರನಾಗಿ ಮೆರೆದ. ಕಪ್ಪು ಜನರ ಸ್ವಾಭಿಮಾನವನ್ನು ಬ್ರಿಟಿಷ್ ರಾಣಿಯ ಜೊತೆ ನರ್ತಿಸಿ ಘಾನಾದ ಅಧ್ಯಕ್ಷ ನುಕ್ರುಮಾ ಸ್ಥಾಪಿಸಿದಂತೆ. ಮಹಮದಾಲಿ ಬಾಕ್ಸಿಂಗ್‌ರಿಂಗ್‌ನಲ್ಲಿ ಚೀರಿ ಕುಣಿದು ಕಪ್ಪು ಹೊಳೆಯುವಂತೆ ಮಾಡಿದ. ಬುದ್ಧಿಶಕ್ತಿಯ ಪಟುತ್ವವಿಲ್ಲದಿದ್ದಲ್ಲಿ ಅವನ ಕೈಕಾಲುಗಳ ಚಳಕ ಮಿಂಚುವ ಕಲೆಗಾರಿಕೆಯಾಗುತ್ತಿರಲಿಲ್ಲ. ಬುದ್ಧಿಶಕ್ತಿಯಿಂದಾಗಿಯೇ ಈ ಕಲೆಗಾರಿಕೆ ಬಂಡಾಯವಾಗುವುದೂ ರಾಜಕೀಯವಾಗುವುದೂ ಅನಿವಾರ್ಯವಾಯಿತು; ಅವನ ಕಲೆಯನ್ನು ಗುತ್ತಿಗೆ ಹಿಡಿಯುತ್ತಿದ್ದವರಿಗೆ ಸಮಸ್ಯೆಯೂ ಆಯಿತು. ವಿಯಟ್ನಾಂ ಯುದ್ಧಕ್ಕೆ ವಿರೋಧಿಯಾದ ಮಹಮ್ಮದಾಲಿ ಡ್ರಾಪ್ಟ್ ಕಾರ್ಡನ್ನು ಹರಿದುಹಾಕಿ, ಕಾನೂನು ಭಂಗ ಮಾಡಿ, ಬಾಕ್ಸಿಂಗ್ ಕಣಕ್ಕೆ ಮರಳುವ ಅವಕಾಶವನ್ನು ಕಳೆದುಕೊಂಡ. ಅಮೆರಿಕನ್ ಯುವಜನರ ಸಿಟ್ಟಿಗೆ ಸಂಕೇತವಾದ. ಅಂತೆಯೇ ಬೆವರುವ ಅವಕಾಶವಿಲ್ಲದೆ ಬಳಲಿದ, ತುಸುತೋರವಾದ. ತನ್ನನ್ನು ಬೆಳೆಸಿದ ಮೀಡಿಯಾವನ್ನೂ ಮೀರಿದ.

ಇವತ್ತು ಮಹಮ್ಮದಾಲಿ ಸೋತಿದ್ದಾದರೂ ಯಾರಿಗೆ? ಸಾಮಾನ್ಯ ಕಸುವಿನ ಇನ್ನೊಬ್ಬ ಕಪ್ಪು ಯುವಕನಿಗೆ. ಈ ಯುವಕ ವಿಯಟ್ನಾಂ ಯುದ್ಧದ ಮಾಜಿಯೋಧ ಬೇರೆ! ಮಹಮದಾಲಿಯ ಕಾಲಕ್ಕೆ ತದ್ವಿರುದ್ಧವಾದ ಎಪ್ಪತ್ತರ ದಶಕದ ಮುಖಹೀನ ಹೊಂದಾಣಿಕೆಗೆ ಈತನ ಯಶಸ್ಸು ಒಂದು ಉತ್ತಮ ಸಂಕೇತ.

ನನಗೆ ಆಶ್ಚರ್ಯವೆಂದರೆ ಹಳಬರನ್ನು ಬಿಟ್ಟರೆ ಇನ್ನು ಯಾರೂ ಮಹಮದಾಲಿಯ ಈ ಸೋಲಿನಿಂದ ದುಃಖಿತರಾಗಿಲ್ಲ. ನನ್ನ ಗೆಳೆಯ ಜಾನ್ ಪೆರೆ – ಅರವತ್ತರ ದಶಕದ ಕ್ರಾಂತಿಕಾರಿ ಸಮಾಜವಾದಿ ಮಾತ್ರ ನಿರ್ವಿಣ್ಣವಾಗಿ ಈ ಬಗ್ಗೆ ಮಾತಾಡುತ್ತಾನೆ, ಬಿಟ್ಟರೆ ಸುದ್ದಿಗಾಗಿ ಹಾತೊರೆಯುವ ಅಮೆರಿಕಾದಲ್ಲಿ ಇದೊಂದು ದೊಡ್ಡ ಸುದ್ದಿಯೇ ಅಲ್ಲ. ನಿತ್ಯದ ಆರಾಧಕರಿಗೆ ಶಾಶ್ವತವಾದ ಸ್ಮೃತಿಯೇ ಇಲ್ಲವೇನೋ. ಮಹಮದಾಲಿಯ ಕಲೆಗಾರಿಕೆ ಕೂಡ ಈ ಬಗೆಯ ಸಂಸ್ಕೃತಿಯಿಂದಲೇ ಹುಟ್ಟಿದ್ದಲ್ಲವೆ? ಸಂಚಾರಿಯೇ ಇಲ್ಲಿ ಸ್ಥಾಯಿ….ಬೇಂದ್ರೆ ಅನ್ನುವಂತೆ ’ನಿನ್ನ ತಾಯಿಯೇ ವ್ಯಭಿಚಾರಿ’. ಯಾವ ಮೀಡಿಯಾದ ಭೂತಕನ್ನಡಿ ಮಹಮದಾಲಿಯನ್ನು ದೊಡ್ಡದು ಮಾಡಿತೋ, ಅದೇ ಅವನನ್ನು ಹಿಂಡಿ ಹೀರಿ ಬಿಸಾಡಿತು.

ಮಹಮದಾಲಿ ಕಪ್ಪುಜನದ ದ್ವೇಷ ರೋಷಗಳನ್ನು ಮುಷ್ಟಿಯುದ್ಧದ ಕಲೆಯನ್ನಾಗಿ ಮಾಡಿದ ಪ್ರತಿಭಾಶಾಲಿಯಾದರೆ ಇದಕ್ಕಿಂತ ಅನ್ಯವಾದ ನೈತಿಕವಾದ ಪ್ರತಿಭೆ, ಅಹಿಂಸಾವಾದಿ ಮಾರ್ಟಿನ್ ಲ್ಯೂಥರ್ ಕಿಂಗ್‌ನದು. ಜೆಫರ್‌ಸನ್, ಲಿಂಕನ್‌ರ ನಂತರ ಅಮೆರಿಕಾ ಒಂದು ರಾಷ್ಟ್ರವಾಗಿ ಪಡೆದ ಮಹಾನುಭಾವನೆಂದರೆ ಮಾರ್ಟಿನ್ ಲೂಥರ್‌ಕಿಂಗ್. ಹೋದವಾರ ಅವನ ಬಗ್ಗೆ ತುಂಬ ಧೈರ್ಯದಿಂದ ತಯಾರಿಸಿದ ಚಿತ್ರವೊಂದನ್ನು ಟೆಲಿವಿಷನ್‌ನಲ್ಲಿ ತೋರಿಸಿದರು. ಅಮೆರಿಕಾದ ಗಾಂಧಿಯಾದ ಕಿಂಗ್ ತನ್ನ ನಡುಪ್ರಾಯದಲ್ಲೇ ಕೊಲೆಗೆ ಈಡಾದ. ಇಡೀ ಅಮೆರಿಕಾದ ಅಂತಃಸಾಕ್ಷಿಯೆಂಬಂತೆ ಹೋರಾಡಿ ಸತ್ತ ಇವನ ಬಗೆಗಿನ ಚಿತ್ರವನ್ನು ಎಲ್ಲ ಹೃದಯಗಳನ್ನೂ ಕಲಕೀತೆಂಬ ನಿರೀಕ್ಷೆಯಲ್ಲಿ ತಯಾರಿಸಲಾಗಿತ್ತು. ಅರವತ್ತರ ದಶಕದ ಅತ್ಯಂತ ಉಜ್ವಲವಾದ ವ್ಯಕ್ತಿ ಈತ – ಹಲವು ಬಿಳಿಯರು ದ್ವೇಷಿಸಿದ, ಕೆಲವು ಬಿಳಿಯರು ತುಂಬ ಪ್ರೀತಿಸಿದ, ತನ್ನ ಮಾತಿನಿಂದ ಲಕ್ಷಾಂತರ ಜನರ ಮಂಪರು ಹರಿದಿದ್ದ ಅಪ್ಪಟ ಅಹಿಂಸಾತ್ಮಕ ಹೋರಾಟಗಾರನಾದ ಈ ಕಪ್ಪು ಮನುಷ್ಯ ಒಬ್ಬ ಧೀರ ಗಾಂಧಿವಾದಿ. ಗಾಂಧೀಜಿಯ ನಂತರ ನಾವು ಕಾಣುವ ದೊಡ್ಡ ಅಹಿಂಸಾವಾದಿ ಜನನಾಯಕ. ಅಮೆರಿಕಾ ಮತ್ತೆ ಮರ್ಯಾದೆಯಿಂದ ತಲೆಯೆತ್ತುವಂತೆ ಮಾಡಿದವನು ಇವನೊಬ್ಬನೇ.

ಇವನು ತನ್ನ ನಾಡಿನ ಸಂಸ್ಕೃತಿಗೆ ಒಳಗಿನವನಾದ ಕ್ರಿಶ್ಚಿಯನ್; ಜೊತೆಗೇ ತನ್ನ ನಾಡಿ ಸಂಸ್ಕೃತಿಯನ್ನು ನಿಷ್ಠುರವಾಗಿ ಛೇಡಿಸುತ್ತಿದ್ದ ಬಂಡಾಯಗಾರ. ಹೀಗೆ ಏಕಕಾಲದಲ್ಲಿ ಒಳಗಿನವನೂ ಬಂಡಾಯಗಾರನೂ ಆದ ಮಾರ್ಟಿನ್ ಲ್ಯೂಥರ್ ಕಿಂಗ್ ಕರಿಯರಿಗೆ ಆತ್ಮ ಗೌರವವನ್ನು ತಂದುಕೊಟ್ಟ. ಸಮಾನತೆಯ ಹೋರಾಟದಲ್ಲಿ ಪೂರ್ಣವಲ್ಲದಿದ್ದರೂ ಬಹುಪಾಲು ಯಶಸ್ವಿಯಾದ. ಇವನ ಯಶಸ್ಸು ಹಿಂಸಾತ್ಮಕ ಬಂಡಾಯಕ್ಕೂ ತಯಾರಾಗಿದ್ದ, ಅಮೆರಿಕನ್ ಸಂಸ್ಕೃತಿಯನ್ನೇ ಧಿಕ್ಕರಿಸಿ ನಿಂತಿದ್ದ ಬ್ಲಾಕ್ ಪ್ಯಾಂಥರ್ಸ್ ಸಾಧಿಸಿದ್ದಕ್ಕಿಂತ ವ್ಯಾಪಕತೆಯಲ್ಲಿ ಹೆಚ್ಚಿನದೆಂದೇ ಹೇಳಬಹುದು. ಈತ ಬಿಳಿಯರ ದ್ವೇಷಕ್ಕೆ ಒಳಗಾದ, ಜೊತೆಗೇ ಬಂಡಾಯಗಾರ ಕರಿಯರ ಅನುಮಾನಕ್ಕೂ ತುತ್ತಾದ. ಕಿಂನಂಥ ನಾಯಕರು ಯಾವ ಸಂಸ್ಕೃತಿಯಲ್ಲೇ ಆಗಲಿ ಹೆಚ್ಚು ಆತಂಕದಲ್ಲಿ, ಹೆಚ್ಚು ಮನಃಪೂರ್ವಕ ಶ್ರದ್ಧೆಯಲ್ಲಿ, ಹೆಚ್ಚು ಜವಾಬ್ದಾರಿಯಲ್ಲಿ ಕಾರ್ಯೋನ್ಮುಖರಾಗಿರುತ್ತಾರೆ. ಅಂಥವರು ಇಡುವ ಪ್ರತಿ ಹೆಜ್ಜೆಯೂ ನೈಜವಾಗಿರುತ್ತದೆ. ಕ್ರಾಂತಿ ಇವರಿಗೆ ಎಂದೂ ತೀಟೆಯಲ್ಲ, ಉಮ್ಮಳದ ಚಪಲವಲ್ಲ, ಶೌರ್ಯದ ಪ್ರದರ್ಶನವಲ್ಲ. ಗಂಧದಂತೆ ನಿತ್ಯ ತನ್ನನ್ನು ತೇದುಕೊಳ್ಳುವ ಸಂಸಾರಿಯ ಹಾಗೆ ಪಾಲನೆಗಾಗಿ ಕ್ರಿಯಾಶೀಲರಾಗುವ ಮಾರ್ಟಿನ್ ಲ್ಯೂಥರ್ ಕಿಂಗ್ ಮತ್ತು ಗಾಂಧೀಜಿಯಂಥವರು ಮಾನವನ ದೈನಿಕದ ಉಪದ್ವ್ಯಾಪಗಳಲ್ಲೇ ದೈವಿಕವಾದ್ದನ್ನೂ ಹುಡುಕುವವರು, ಪಡೆಯುವವರು. ಸಂಸಾರದ ಗೂಡು ಕಟ್ಟಲೆಂದೇ ಸಮಾಜ ಪರಿವರ್ತನೆಯ ಬಿರುಗಾಳಿಗೂ ಸಿದ್ದರಾದಾಗ ಇಂಥವರಲ್ಲಿ ಹುಟ್ಟುವ ನಿಶ್ಚಯದ ಚೆಲುವು ಕೆಲವು ಕ್ಷಣಗಳಲ್ಲಿ ಮಾತ್ರ ಮೆರೆಯಬಲ್ಲ, ಮೆರುಗಬಲ್ಲ ರಮ್ಯವಲ್ಲ.

ಬ್ಲಾಕ್ ಪ್ಯಾಂಥರ್ಸ್‌ನ ನಾಯಕನಾಗಿದ್ದ ಮಾಲ್ಕಮ್ ಎಕ್ಸ್ ಕರಿಯರಲ್ಲಿ ಅರಿವಿನ ಸ್ಫೋಟ ಉಂಟುಮಾಡಿದ – ನಿಜ. ಪೂರ್ಣ ಧಿಕ್ಕಾರದಿಂದ ಹುಟ್ಟುವ ಮಿಂಚಿನ ಶಕ್ತಿ ಅವನದು. ಅದು ನಿತ್ಯದ ಬಳಕೆಯ ಭಾವನೆಯಾಗದು. ಮಾರ್ಟಿನ್ ಲ್ಯೂಥರ್ ಕಿಂಗ್‌ರಂಥವರ ಕ್ರಿಯೆಯಲ್ಲಿ ಕಂಕುಳಲ್ಲಿ ಕೂಸುಹೊತ್ತ ತಾಯಂದಿರು, ಬ್ರೆಡ್ಡು ಬೆಣ್ಣೆಗಳು ತುಟ್ಟಿಯಾಯಿತೆಂದು ಪರದಾಡುವ ಗಂಡಂದಿರು, ಸಂಸಾರ ಹೂಡುವ ಕನಸಿನ ಗೆಳೆಯ ಗೆಳತಿಯರು ಭಾಗಿಯಾಗಬಲ್ಲರು. ಮಾಲ್ಕಮ್ ಎಕ್ಸ್, ಮಹಮದಾಲಿಯವರದು ಯೌವನಕ್ಕೆ ಸಹಜವಾದ ಆಕರ್ಷಕವಾದ ಆತ್ಮಪ್ರದರ್ಶನದ ಮಾರ್ಗ; ಕಿಂಗ್‌ನದು ಎದುರಾಳಿಯ ಹೃದಯಗೆಲ್ಲುವ (ಹೊಂದಾಣಿಗಳಲ್ಲೂ ಗೆಲ್ಲುವ) ಹಠದ ಮಾರ್ಗ. ಕಿಂಗ್‌ನ ಅನುಯಾಯಿಯಾದ ಕರಿಯ ತನ್ನ ವಿರೋಧಿ ಬಿಳಿಯನಿಗಿಂತಲೂ ಹೆಚ್ಚು ಒಳ್ಳೆಯವನಾಗಲು ಶ್ರಮಿಸಬೇಕಾಗುತ್ತದೆ. ಮಾಲ್ಕಮ್ ಎಕ್ಸ್‌ನ ಅನುಯಾಯಿ ಬಿಳಿಯನನ್ನು ತರಸ್ಕರಿಸಿ ತನ್ನ ಉಮೇದಿನಲ್ಲಿ, ಹಿಗ್ಗಿನಲ್ಲಿ ತತ್ಕ್ಷಣದ ಸ್ವಂತಿಕೆ ಗಳಿಸುತ್ತಾನೆ. ಮಹಮದಾಲಿ ತನ್ನ ವಿಶಿಷ್ಟತೆಯಲ್ಲೇ ಅದರ ಪ್ರದರ್ಶನದಲ್ಲೇ ಖುಷಿಪಡುತ್ತ ಖುಷಿ ಕೊಡುತ್ತಾನೆ. ನಾವು ಅವನಿಂದ ಪಡೆಯುವ ಖುಷಿ ’ಮೂಲಕ ಮಹಾಶಯ’ರಾಗಿ; ನಾವು ಮಾಡಲಾರದ್ದನ್ನು ಅವನು ಮಾಡುತ್ತಿದ್ದಾನೆಂದು. ಅವನ ಮೂಲಕ ಬದುಕುವ ಈ ನಮ್ಮ ಖುಷಿ ಸತ್ಯವೂ ಅಲ್ಲ, ನಿತ್ಯವೂ ಅಲ್ಲ – ಮೇಲಾಗಿ ಅನಧಿಕೃತ.
*
*
*
ಕಿಂಗ್ ಕುರಿತ ಚಿತ್ರವನ್ನು ಟೆಲಿವಿಷನ್‌ನಲ್ಲಿ ನೋಡುತ್ತಿರುವುದೇ ಒಂದು ವಿಚಿತ್ರ ಹಿಂಸೆಯ ಭಾವನೆಯಾಯಿತು. ಈ ಚಿತ್ರ ನಿರ್ಮಾಪಕರು ತುಂಬ ಹಣ ಖರ್ಚು ಮಾಡಿದ್ದರು; ಅಧಿಕಸಂಖ್ಯೆಯ ಪ್ರೇಕ್ಷಕರನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಎಲ್ಲ ಪತ್ರಿಕೆಗಳೂ ಈ ಚಿತ್ರವನ್ನು ಸೋಲೆಂದು ಕರೆದುವು. ಚಿತ್ರ ಚೆನ್ನಾಗಿರಲಿಲ್ಲ ಎಂದಲ್ಲ. ನೋಡಬೇಕಾದಷ್ಟು ಜನ ನೋಡಲಿಲ್ಲ ಎಂದು. ಕರಿಯರೂ ನಿರಾಸಕ್ತರಾಗಿದ್ದರು ಎಂದು.

ಅರವತ್ತರ ದಶಕದ ಭರವಸೆ, ಕನಸುಗಳು ಅಮೆರಿಕಾದಲ್ಲಿ ಉಳಿದಿಲ್ಲ ಎಂದಾಯಿತು.

ಟೆಲಿವಿಷನ್‌ನಲ್ಲಿ ಚಿತ್ರ ನೋಡುವುದೇ ಒಂದು ಹಿಂಸೆ ಎಂದೆ. ನಡುನಡುವೆ ಕಮರ್ಷಿಯಲ್ ಜಾಹೀರಾತುಗಳನ್ನು ನೋಡಬೇಕಾಗುತ್ತದೆ. ಟೆಲಿವಿಷನ್ ಸಂಸ್ಥೆ ಸಂಪಾದಿಸುವುದೇ ಈ ಮಾರ್ಗದಿಂದ. ತಮಾಷೆಯೆಂದರೆ ನಮ್ಮ ಮನಸ್ಸನ್ನು ಕಲಕುವ ಮಾರ್ಟಿನ್ ಲ್ಯೂಥರ್ ಕಿಂಗ್‌ನ ಉಜ್ವಲ ಭಾಷಣದ ನಡುವೆ ಅದನ್ನು ಅಣಕಿಸುವಂಥ ಉಜ್ವಲ ಗದ್ಗದ ಕಂಠದಲ್ಲಿ ಬೆಕ್ಕಿಗೆ ರುಚಿಯಾದ ಮಾಂಸದ ಪೊಟ್ಟಣ ಒಂದರ ಜಾಹೀರಾತು ಕೇಳಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಒಂದು ಉತ್ಕೃಷ್ಟ ಭವನೆಯನ್ನು ಅತ್ಯಂತ ಆಯಸ್ಥಳಗಳಲ್ಲಿ ಮುರಿಯುವ ಈ ಜಾಹೀರಾತುಗಳು ಅಸಂಬದ್ಧವೆನ್ನಿಸುತ್ತವೆ. ಜೊತೆಗೇ ಕಿಂಗ್‌ನ ಪಾದ್ರೀ ಭಾಷಣ ವಾಗ್ವೈಖರಿಯ ಹಿಂದಿರುವ ಆರ್ತತೆ ಮರೆಯಾಗಿ ವೈಖರಿಯೇ ಮುಂದಾದಂತೆ ತೋರುತ್ತದೆ.

ಆದರೆ ಟೆಲಿವಿಷನ್ ಸಂಸ್ಥೆಗೆ ಅಮೆರಿಕಾದ ಸರ್ವಶಕ್ತ, ಕಿಂಗ್ ವಿರೋಧಿ ಪೋಲೀಸ್ ಎಫ್‌ಬಿ‌ಐಯನ್ನು ವಿರೋಧಿಸಿ ಹೀಗೊಂದು ಚಿತ್ರ ತಯಾರಿಸಲು ಸಾಧ್ಯವಾದ್ದು ಕೂಡ, ಈ ಜಾಹೀರಾತುಗಳಿಂದ ಬೆಳೆಯುವ ಅಮೆರಿಕಾದ ಬಂಡವಾಳಶಾಹಿ ಸಂಸ್ಥೆಯಿಂದಾಗಿ ಎಂದು ನನ್ನ ಗೆಳೆಯ ಜಾನ್‌ಪೆರಿ ವ್ಯಂಗ್ಯವಾಗಿ ಹೇಳುತ್ತಾನೆ. ಮುಖ್ಯವಾದ್ದು ಮಾರಾಟ; ಇಸ್ರೇಲಿಗೂ ಯುದ್ಧಕ್ಕೆ ಬೇಕಾದ ವಿಮಾನ ಕೊಡುತ್ತೇವೆ, ಈಜಿಪ್ಟಿಗೂ ಕೊಡುತ್ತೇವೆ; ಎಫ್‌ಬಿ‌ಐಪೊಲೀಸರ ಮುಖೇನ ವ್ಯವಸ್ಥೆ ರಕ್ಷಿಸುತ್ತೇವೆ; ಕಿಂಗ್ ಚಿತ್ರದ ಮುಖಾಂತರ ಮಾಲು ಮಾರಿ ವ್ಯವಸ್ಥೆ ಪೋಷಿಸುತ್ತೇವೆ; ಹೀಗೆ ಮಾಡುವಾಗ ನಿಮ್ಮ ಅಂತಃಸಾಕ್ಷಿ ತಣಿಯುವಂತೆ ಕಿಂಗ್‌ಗೆ ಇಡೀ ವ್ಯವಸ್ಥೆ ಎಷ್ಟು ಅನ್ಯಾಯ ಮಾಡಿತು ಎಂಬ ನಿರುಪದ್ರವಿಯಾದ ವ್ಯಾಕುಲದ ಭಾವನೆಯನ್ನೂ ಹುಟ್ಟಿಸುತ್ತೇವೆ. ಮಹಮದಾಲಿಗೆ ರೋಷ ಉಕ್ಕುವಂತೆ ಮಾಡಿ, ಈ ರೋಷವನ್ನು ಮೀಡಿಯಾಗಳಲ್ಲಿ ರಂಜಕಕಲೆಯಾಗುವಂತೆ ಮಾಡಿ, ವಾಸ್ತವಕ್ಕೂ ನಟನೆಗೂ ನಡುವಿನ ಭೇದವೇ ಸುಳ್ಳೆನ್ನುವಂತೆ ಮಾಡುತ್ತೇವೆ.

ಅಯೋವಾ ಸಿಟಿ, ಅಕ್ಟೋಬರ್-ನವೆಂಬರ್ ೧೯೮೫
೧೯೭೮ರಲ್ಲಿ ನಾನು ಅಮೆರಿಕಾದ ಯುವಜನರಲ್ಲಾಗುತ್ತಿದ್ದ ಕೆಲವು ಬದಲಾವಣೆಗಳನ್ನು ಗುರುತಿಸಿದ್ದೆ. ಏಳುವರ್ಷಗಳ ನಂತರ ಮತ್ತೆ ನೋಡಿದಾಗ ಈ ಬದಲಾವಣೆ ಪೂರ್ಣವಾಗಿತ್ತು. ಈ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಾಗಿ ಯುವಶಕ್ತಿ ಹಂಬಲಿಸುತ್ತಿಲ್ಲ. ಆಗ ಹಿಂದಿರುಗಿದ ಹಿಪ್ಪೀಗಳು ಎಲೆಕ್ಟ್ರಿಕ್ ಬಾಚಣಿಗೆಗಳಲ್ಲಿ ಓರಣಗೊಳಿಸಿಕೊಳ್ಳುತ್ತಿದ್ದ ಉದ್ದ ಕೂದಲು ಕೂಡ ವಿಶ್ವವಿದ್ಯಾನಿಲಯಗಳಲ್ಲಿ ಈಗ ಕಾಣಿಸುವುದಿಲ್ಲ. ನೀಟಾಗಿ ಕಾಣುವ ಯುವಕ ಯುವತಿಯರು ಒಳ್ಳೆಯ ಉದ್ಯೋಗಗಳಿಗಾಗಿ ಹಂಬಲಿಸುವ ಕ್ಯರಿಯರಿಸ್ಟರಾಗಿದ್ದಾರೆ. ಅರವತ್ತರ ದಶಕದಲ್ಲಿ ವಿದ್ಯಾರ್ಥಿ ಚಳುವಳಿಯಲ್ಲಿ ಕ್ರಾಂತಿಕಾರಕ ಮಾರ್ಕ್ಸ್‌ವಾದಿಯಾಗಿದ್ದ ಗೆಳೆಯ ಶೆಲ್ಡನ್ ಈಗ ದೊಡ್ಡ ಸಂಸ್ಕೃತ ಪ್ರಾಧ್ಯಾಪಕರು; ರಾಮಾಯಣವನ್ನು ಇಂಗ್ಲಿಷಿಗೆ ಭಾಷಾಂತರಿಸುತ್ತಿರುವ ಹಾರ್ವಾರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದವರು. ಇವರು ಗುಪ್ತಚಾರ ಸಿ.ಐ.ಎ. ವಿರುದ್ಧ ಯುವಕರನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ. ಸಿ.ಐ.ಎ ಯಾವ ನಾಚಿಕೆಯಾಗಲೀ ಆತಂಕವಾಗಲೀ ಇಲ್ಲದೆ ಯೂನಿವರ್ಸಿಟಿಯ ಕ್ಯಾಂಪಸ್ಸಿನೊಳಗೇ ಬಿಡಾರಮಾಡಿ ವಿದ್ಯಾರ್ಥಿಗಳನ್ನು ಕೆಲಸಗಳಿಗಾಗಿ ಸಂದರ್ಶಿಸುತ್ತಿದೆ. ಇದರಿಂದ ವಿಶ್ವವಿದ್ಯಾನಿಲಯಗಳ ವಸ್ತುನಿಷ್ಠತೆಯ ಆದರ್ಶಕ್ಕೆ ಭಂಗವಾಗುತ್ತದೆಂದು ನನ್ನ ಈ ಗೆಳೆಯನ ವಾದ. ಸಿ.ಐ.ಎ ಜೊತೆ ಸಂಬಂಧವಿರಬಹುದೆಂಬ ಅನುಮಾನದಿಂದಾಗಿ ಈಗಾಗಲೇ ಅಮೆರಿಕನ್ ವಿದ್ವಾಂಸರಿಗೆ ಭರತಕ್ಕೆ ಅಧ್ಯಯನಕ್ಕೆಂದು ಬರಲು ಸಿಗುತ್ತಿದ್ದ ವೀಸಾ ಕಠಿಣವಾಗಿದೆ. ವಿಶ್ವವಿದ್ಯಾನಿಲಯದ ಒಳಗೇ ಈ ಭೀಕರ ಗುಪ್ತಚಾರ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಲ್ಲಿ ಶಕ್ತಿರಾಜಕಾರಣದಲ್ಲಿ ಅನಾಸಕ್ತವಾದ ಧೋರಣೆಯಿಂದ ಮಾತ್ರ ಬೆಳೆಯಬಲ್ಲ ಜ್ಞಾನದ ಶಿಸ್ತುಗಳಿಗೆ ಇರುವ ಸರ್ವಮಾನ್ಯತೆ ಅನುಮಾನಾಸ್ಪದವಾಗುತ್ತದೆಂದು ಈ ಗೆಳೆಯ ಸಂಕಟ ಪಡುತ್ತಾನೆ.

ಆದರೆ ನನಗಾದ ಆಶ್ಚರ್ಯವೆಂದರೆ ನಡುವಯಸ್ಸಿನ ಈ ನನ್ನ ಗೆಳೆಯನಲ್ಲಿ ಕಂಡುಬಂದ ಆದರ್ಶ ಕಿರಿಯರಲ್ಲಿ ಇರಲಿಲ್ಲ. ವಿಯಟ್ನಾಂ ಯುದ್ಧದ ಸಮಯದಲ್ಲಿ, ಕರಿಜನರ ಹಕ್ಕುಗಳಿಗಾಗಿ ಸಿವಿಲ್‌ರೈಟ್ಸ್ ಚಳವಳಿಯಲ್ಲಿ ಮಾರ್ಟಿನ್ ಲ್ಯೂಥರ್ ಕಿಂಗ್‌ರ ನೇತೃತ್ವದಲ್ಲಿ ಕೆಲಸ ಮಾಡಿದವರಲ್ಲಿ ಕಾಣುವ ಸಮುದಾಯಚಿಂತನೆ ಈಗ ಎಳೆಯರಲ್ಲಿ ಇಲ್ಲವಾಗಿದೆ. ವಯಸ್ಸಾದವರಲ್ಲಿ ಇನ್ನೂ ಉಳಿದಿರುವ ಕ್ಯಾಂತಿಕಾರಕತೆ ಎಳೆಯರಲ್ಲಿ ಇಲ್ಲದಿರುವ ವಿಪರ್ಯಾಸ ಅಮೆರಿಕಾದಂತಹ ಬಲಿಷ್ಠ ದೇಶದಲ್ಲಿ ಆತಂಕಕಾರಿಯಾದದ್ದು. ಬಂಡವಾಳಶಾಹೀ ಪದ್ಧತಿಯ ಅತ್ಯಂತ ಅಪಾಯಕಾರಿ ಪರಿಣಾಮವೆಂದರೆ ಈ ಬಗೆಯ ಸ್ವಾರ್ಥಪರವಾದ ವ್ಯಕ್ತಿವಾದದ ಬೆಲವಣಿಗೆ ಎನ್ನಬಹುದು.

ಮಾನವನ ನೈತಿಕವಾದ ವಿಚಾರಗಳೆಲ್ಲ ಹುಟ್ಟುವುದು ವ್ಯಕ್ತಿಗೂ ಸಮುದಾಯಕ್ಕೂ ಇರುವ ನಂಟಿನ ಬಗ್ಗೆ ನಮಗೆ ಇರುವ ಆಸಕ್ತಿಯಿಂದಾಗಿ. ಈ ಸಂಬಂಧ ವ್ಯಕ್ತಿಯನ್ನು ಅರಳಿಸಲೂ ಬಹುದು, ಬಾಡಿಸಲೂ ಬಹುದು ಎಂಬ ಆತಂಕವನ್ನು ಪಡುವವರೆಲ್ಲರೂ ರಾಜಕೀಯ ಸಾಂಸ್ಕೃತಿಕ ವಿಷಯಗಳಲ್ಲಿ ಆಸಕ್ತರಾಗುತ್ತಾರೆ. ಸಮುದಾಯವೆಂದರೆ ಬಿಡಿಬಿಡಿಯಾದ ವ್ಯಕ್ತಿಗಳು ಕ್ಷಣಿಕ ಪ್ರಯೋಜನಗಳಿಗಾಗಿ ಮಾಡಿಕೊಂಡ ಸಂಬಂಧವಲ್ಲ; ವ್ಯಕ್ತಿಯ ಸೃಷ್ಟಿಶೀಲತೆ ಪರಿಪೂರ್ಣವೆನ್ನುವಂತೆ ಅರಳಲು ಆರೋಗ್ಯಕರವಾದ ಸಮುದಾಯದ ಸದಸ್ಯ ಅವನಾಗಿರಬೇಕು; ಅಂತೆಯೇ ಈ ಸೃಷ್ಟಿಶೀಲತೆಯ ಪ್ರಯೋಜನಕ್ಕಾಗಿ, ಬಳಕೆಗಾಗಿ ಕುಟುಂಬ ಸದೃಶವಾದ ಸಮುದಾಯ ಬೇಕು. ಪ್ರಾಯಶಃ ಈ ಆದರ್ಶ ತನ್ನಿಂದ ತಾನಾಗಿಯೇ ಕೈಗೂಡುವಂಥದ್ದು ಅಲ್ಲ. ಯಾವತ್ತೂ ಆದರ್ಶ ಸ್ಥಿತಿಯಲ್ಲಿ ಇದ್ದುದೂ ಅಲ್ಲ. ನಾವು ಕಟ್ಟಿಕೊಳ್ಳುವ ಅರ್ಥವ್ಯವಸ್ಥೆಯೇ ಅತ್ಯಂತ ಜಟಿಲವಾಗಿ ಇಡೀ ಸಮುದಾಯ ಕೇವಲ ಗ್ರಾಹಕರಾಗಿ ಬಿಡುವ ಅಪಾಯ ಬಂಡವಾಳಶಾಹಿ ವ್ಯವಸ್ಥೆಯಲ್ಲಿದೆ. ದುಡ್ಡೇ ದೊಡ್ಡಪ್ಪನಾಗಿ ಬಿಡುವುದು ಬಂಡವಾಳಶಾಹೀ ವ್ಯವಸ್ಥೆಯಲ್ಲಿ; ಫ್ಯೂಡಲ್ ವ್ಯವಸ್ಥೆಯಲ್ಲಲ್ಲ…… ಆದ್ದರಿಂದಲೇ ಏನೋ ಸಮುದಾಯ ಮುಖ್ಯವಾಗುವ ಸಮಾಜವಾದೀ ವ್ಯವಸ್ಥೆಗೆ ಫ್ಯೂಡಲ್ ದೇಶಗಳು ಮಾನಸಿಕವಾಗಿ ತಯಾರಾಗಿರುವಂತೆ ಸಿರಿವಂತ ದೇಶಗಳು ಸನ್ನದ್ಧವಾಗಿಲ್ಲ. ವಿಯೆಟ್ನಾಂ, ಕ್ಯೂಬಾ, ಚೈನಾ – ಈ ದೇಶದ ಜನರಿಗೆ ಸಾಧ್ಯವಾದದ್ದು ಪ್ರತಿಯೊಬ್ಬನೂ ತನಗೇ ಒಂದು ಕಾರು ಬೇಕೆಂದು ಬಯಸುವ ಮುಂದುವರಿದ ದೇಶಗಳ ಪ್ರಜೆಗಳಿಗೆ ಸಾಧ್ಯವಾಗಿಲ್ಲ. ಪೂರ್ವಯೂರೋಪಿನ ಕಮ್ಯುನಿಸ್ಟ್ ದೇಶಗಳ ಜನರೂ ಈ ಬಗೆಯ ವ್ಯಕ್ತಿವಾದದಿಂದ ಪ್ರಭಾವಿತರಾಗುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಯಾಕೆ, ಈಗ ಮಹಮದಾಲಿಯೂ ವಿ.ಐ.ಪಿ; ಹೊರ ಜಗತ್ತಿಗೆ ಅಮೆರಿಕನ್ ರಾಯಭಾರಿ. ತಾನು ಅಮೆರಿಕಾದ ಜೀವನಕ್ರಮವನ್ನು ಎಷ್ಟು ಪ್ರೀತಿಸುತ್ತಿರುವೆನೆಂದು ಅವನಿಗೆ ತಿಳಿದದ್ದು ಕೂಡ ಅವನು ಹೊರಗೆ ಹೋದಾಗ, ಕಮ್ಯುನಿಸ್ಟ್ ದೇಶಗಳಲ್ಲಿ ಅಲೆದಾಡಿದಾಗ. ನನ್ನ ಗೆಳೆಯ ಶೆಲ್ಡನ್ ಮಾತ್ರ ತನ್ನ ಚೀಲದಲ್ಲಿ ಕರಪತ್ರಗಳನ್ನು ತುಂಬಿಕೊಂಡು ಕ್ಯಾಂಪಸ್ಸಿಡೀ ಕನಸುಗಾರ ಯುವಕರಿಗಾಗಿ ಅಲೆದಾಡುತ್ತಾನೆ. ’ಸಿ.ಐ.ಎ.ಯನ್ನು ಇಲ್ಲಿಬರಲು ಬಿಡಬೇಡಿ’ ’ನಿಕರಾಗುವಾದ ಸರ್ಕಾರ ಬೆಂಬಲಿಸಿ’ ’ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿಸಿ’ ’ತಾರಾಯುದ್ಧ ಅರ್ಥಹೀನವಾದ್ದು’ ’ನಗುವ ರೀಗನ್ ರಕ್ತ ಪಿಪಾಸು’.

ರಷ್ಯಾದ ಕಮ್ಯುನಿಸ್ಟ್ ವ್ಯವಸ್ಥೆಯನ್ನು ಜರೆಯುವುದು ಇವನಿಗೆ ಅಪ್ರಸ್ತುತ. ತನ್ನ ದೇಶದ ವ್ಯವಸ್ಥೆಯ ಅಸಹನೆ, ಹಸ್ತಕ್ಷೇಪದ ದುಷ್ಟರಾಜಕೀಯ ಇವನನ್ನು ಸದಾ ಬಾಧಿಸುತ್ತದೆ. ಉಳಿದ ಸಮಯದಲ್ಲಿ ನನ್ನ ಗೆಳೆಯ ರಾಮಾಯಣ ಭಾಷಾಂತರಿಸುತ್ತಾನೆ. ಸಂಸ್ಕೃತ ಹೇಳಿಕೊಡುತ್ತಾನೆ. ಜೆಫರಸನ್, ಲಿಂಕನ್, ಮಾರ್ಟಿನ್ ಲ್ಯೂಥರ್ ಕಿಂಗ್ – ಹೀಗೆ ಅವನಲ್ಲಿ ಸಣ್ಣದಾಗಿಯಾದರೂ ಉರಿಯುತ್ತಾರೆ; ನನಗಷ್ಟೇ ಸಮಾಧಾನ.

ಈ ನನ್ನ ಗೆಳೆಯ ಈಗ ತನ್ನೆರಡು ಮಕ್ಕಳ ಜೊತೆ ಬದುಕುತ್ತಿದ್ದಾನೆ. ನಾಲ್ಕೈದು ವರ್ಷಗಳ ಹೊಯ್ದಾಟದ ಅನಂತರ ಹೆಂಡತಿಯಿಂದ ಬೇರಾಗಿದ್ದಾನೆ. ಅರವತ್ತರ ದಶಕದ ಹೋರಾಟಗಳಲ್ಲಿ ಸಂಗಾತಿಯಾಗಿದ್ದ ಅವಳು ಕ್ರಮೇಣ ಅವನಿಂದ ದೂರವಾಗಿಬಿಟ್ಟದ್ದೂ ಮಾನಸಿಕ ದೈಹಿಕ ಕಾರಣಗಳಿಗಾಗಿ ಮಾತ್ರವಲ್ಲ; ಯಾವುದು ಅವರಿಬ್ಬರನ್ನು ಬೆಸೆದಿತ್ತೋ ಈಗ ಅದು ಅವರು ಉಸಿರಾಡುವ ಗಾಳಿಯಲ್ಲಿಲ್ಲ. ಹಾಗೆಂದೇ ನನ್ನ ಗೆಳೆಯ ತನ್ನ ಖಾಸಗಿ ಜೀವನದ ಕಷ್ಟಗಳನ್ನು ವ್ಯಾಖ್ಯಾನಿಸುತ್ತಾನೆಂಬುದು ಗಮನಿಸಬೇಕಾದ ಸಂಗತಿ. ಚಿತ್ರಕಾರಳಾದ ಹೆಂಡತಿ ವಸ್ತುವಿಗಿಂತ ಹೆಚ್ಚಾಗಿ ರೂಪದಲ್ಲಿ ಮಗ್ನಳಾದಳು; ರೂಪಮಗ್ನತೆ ಕ್ರಮೇಣ ಅಮೂರ್ತ ವಿಚಾರಗಳ ಸ್ವಪ್ರತಿಷ್ಠೆಯಾಯಿತು. ತನ್ನ ಹೆಂಡತಿ ಹೆಚ್ಚು ಹೆಚ್ಚಾಗಿ ಹೀಗೆ ಸ್ವಮಗ್ನಳಾಗುತ್ತ ಹೋದಂತೆ ತಾನೂ ಅವಳಿಂದ ದೂರವಾದೆ ಎಂದು ತಮ್ಮ ದಾಂಪತ್ಯವನ್ನೂ ರಾಜಕೀಯ ಚಿಂತನೆಯ ಒಂದಂಶವಾಗಿ ಕಾಣುವ ನನ್ನ ಗೆಳೆಯ ತನ್ನ ಬಗ್ಗೆಯೂ ವ್ಯಥೆಯಿಂದ ಹೇಳಿಕೊಳ್ಳುತ್ತಾನೆ. “ನಾನೂ ಈಚೆಗೆ ಬರಿದಾಗಿಬಿಟ್ಟಿದ್ದೇನೆ. ಏನೋ ಹಳೆಯ ಕಾಲದ ಹಳಹಳಕೆಯಿಂದಾಗಿ ಈ ಕರಪತ್ರಗಳನ್ನು ಅಚ್ಚುಮಾಡಿಸಿ ಹಂಚುತ್ತೇನೆ – ಅಷ್ಟೆ. ಆದರೆ ನನ್ನ ಹೃದಯವಿರುವುದು ಈಗ ಇಲ್ಲಿ ಯಾರಿಗೂ ಬೇಡದ ಪಾಂಡಿತ್ಯದ ಪ್ರಶ್ನೆಗಳಲ್ಲಿ. ಆದರೆ ನಾನು ಕೆಲಸ ಮಾಡುತ್ತಿರುವ ಸರಕು ನಿನ್ನ ದೇಶದಲ್ಲಿ ಇನ್ನೂ ಎಷ್ಟು ನೈಜ – ಅದೇ ನನ್ನ ಸಮಾಧಾನ. ಸಂಸ್ಕೃತಿಯ ದೃಷ್ಟಿಯಿಂದ ಶೇಕ್ಸ್‌ಪಿಯರ್‌ಗಿಂತ ವಾಲ್ಮೀಕಿಯೇ ಹೆಚ್ಚು ಜೀವಂತ ಅಲ್ಲವೇ ಹೇಳು”.

ಅರವತ್ತರ ದಶಕದ ಆದರ್ಶಗಳನ್ನು ಇನ್ನೂ ಉಳಿಸಿಕೊಂಡ ಈ ಗೆಳೆಯನಂಥವರ ಸ್ವಂತ ಜೀವನದ ಅನಿವಾರ್ಯ ಕಷ್ಟಗಳು, ಭಾರತದಲ್ಲಿ ಅಂಥವರ ಆಸಕ್ತಿ _ ಈ ಎರಡೂ ನನಗೆ ಅರ್ಥಪೂರ್ಣವೆನ್ನಿಸಿದುವು. ಎಲ್ಲೇ ಆಗಲಿ, ಯಾವತ್ತೇ ಆಗಲಿ ನಾವು ಬದುಕುವ ಜೀವನ ನಮ್ಮದು ಮಾತ್ರವಲ್ಲ, ಸುಲಭವೂ ಅಲ್ಲ. ಮಕ್ಕಳು ಸ್ಕೂಲಿನಿಂದ ಬರುವ ಮುಂಚೆ ಅವಸರವಾಗಿ ಮನೆಗೆ ಹೋಗಿ ಊಟಕ್ಕೆ ಸಿದ್ಧಮಾಡುವ ಈ ನನ್ನ ಗೆಳೆಯ ಪಾಲನೆಯ ಕಟ್ಟುಪಾಡುಗಳಿಗೆ ಬದ್ಧನಾಗಿದ್ದು, ಈ ಪಾಲನೆಯ ಅವಿಭಾಜ್ಯ ಅಂಶವಾಗಿಯೇ ರಾಜಕೀಯವನ್ನೂ ಕಾಣುತ್ತಾನಲ್ಲ – ಅದೇ ನನಗೆ ಅಮೆರಿಕಾದ ಅರವತ್ತರ ದಶಕದ ಹೆಚ್ಚುಗಾರಿಕೆಯೆನ್ನಿಸಿತು.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.