ಗಂಟೆ ಜೋಗಿ

ಬಹಳ ಬೇಸರದಿಂದ ಸುಸ್ತಾಗಿ, ಹತಾಶೆಯಿಂದ ಆದರೂ ಎಂತದೋ ಒಂದು ಪುಟ್ಟ ಆಸೆಯಿಂದ, ದುಗುಡದಿಂದ ಜೋಗಿ ಬಂದು ಎಂದಿನಂತೆ ಸಾಲದ ಮುಖದಲ್ಲಿ ‘ಟೀ ತತ್ತಪಾ ಒಂದಾ’ ಎಂದ. ಮಟಮಟ ಮಧ್ಯಾಹ್ನದ ಬಿಸಿಲು ಎಲ್ಲೆಡೆ ಚೆಲ್ಲಿತ್ತು. ಗಿರಾಕಿಗಳು ಹೋಟೆಲಲ್ಲಿ ಇಲ್ಲದಿದ್ದರಿಂದ ಒಂದು ಬಗೆಯ ಬಿಸಿಲು ಮಿಶ್ರಿತ ಸೆಖೆಯ ಮೌನ ತುಂಬಿಕೊಂಡಿತ್ತು. ಅಂತಹ ಬಿಸಿಲಲ್ಲಿ ಬಿಸಿಯಾದ ಟೀ ಕುಡಿದರೇ ಸಮಾಧಾನ ಎಂದು ನನ್ನ ತಾತನ ಜೊತೆ ಏನೋ ಹೇಳುತ್ತಿದ್ದ. ನಾನು ಟೀ ಕಲಾಯಿಸಿ ಲೋಟಕ್ಕೆ ತುಂಬಿಕೊಂಡು ಹೋಗಿ ಅವನ ಪಕ್ಕವೇ ಇಡುವಾಗ ಸುಮ್ಮನೇ ಅವನನ್ನೇ ಗಮನಿಸಿದೆ. ನೋಡುವುದಕ್ಕೆ ಥೇಟ್ ಶ್ರೀಲಂಕಾದ ಕ್ರಿಕೆಟ್ ಪಟು ಮುತ್ತಯ್ಯ ಮುರಳೀಧರನ ತರವೇ ಇದ್ದದ್ದು ಈಗ ನೆನಪಾಗುತ್ತದೆ. ಬಿಸಿಲು ತುಂಬಿದ ಆ ಮೌನದಲ್ಲಿ ಏನೋ ಒಂದು ಬಗೆಯ ಲಯಬದ್ಧವಾದ ಧ್ವನಿ ಅವನ ಹೊಟ್ಟೆಯಿಂದ ಸಮನಾಗಿ ಹರಿದು ಬರುತ್ತಿತ್ತು.

ಸೊರ್ರ ಸೊರ್ರಾ ಎಂದು ಬಿಸಿ ಬಿಸಿ ಟೀಯನ್ನು ಬೋಂಡದ ಜೊತೆ ಹೀರುತ್ತಾ ಸವಿಯುತ್ತಾ ಆಗಾಗ ಹೊಟ್ಟೆಯನ್ನು ಮುಟ್ಟಿನೋಡಿಕೊಳ್ಳುತ್ತಿದ್ದ. ಬಾಲಗ್ರಹದ ಮಂತ್ರಗಳ ಪುಸ್ತಕದಲ್ಲಿ ಮಗ್ನನಾಗಿದ್ದ ನನ್ನ ತಾತ ಅವನ ಕಡೆಗೊಮ್ಮೆ ಆಲಿಸಿ ದಿಟ್ಟಿಸಿ ‘ಏನೋ ಜೋಗೀ, ನಿನ್ನ ಹೊಟ್ಟೆ ಕೆಟ್ಟಿರೋ ಹಾಗಿದೆ, ಏನಾಯ್ತು? ಯಾಕೆ ಒಂದ್ ವಾರದಿಂದ್ಲೂ ನಿನ್ನ ದರ್ಶನವೇ ಆಗಲಿಲ್ಲವಲ್ಲಾ, ಎಲ್ಲ ಸರಿಯಾಗಿದೆ ತಾನೆ’ ಎಂದು ಕೇಳಿದರು. ‘ಅಯ್ಯೋ ನನ್ ಕತೆ ಗೊತ್ತೇ ಅದಲ್ಲಪ್ಪಾ ನಿಮಗೇ, ಎಲ್ರುಗೂ ಬಿಟ್ಟಿ ಚಾಕ್ರಿ ಮಾಡುದು…..ಅಲ್ಲಿ ಇಲ್ಲಿ ಸಾಲ ಮಾಡುದು….. ಸಿಕ್ಕಿದ್ದಾ ತಿನ್ನೂದೂ…..ವಟ್ಟೆಯಾ ಕೆಡಿಸ್ಕೊದೂ. ಮೊನ್ನೆ ಗೌಡ್ರು ಬಾಳೆ ತ್ವಾಟ್‌ದೆಲಿ ಸರಿಯಾದ್ ತ್ವಾಡಗೊಳು ಸೇರ್ಕೊಂಡಿದ್ದೋ; ಅವಾ ವಡುದು ಹಿಡುದು ಸುಟ್ಟಿ ಸಾರ ಮಾಡ್ಕಂಡು ತುಂದೇ….. ಅದೇನ್ ವತ್ಯಾಸ ಆಯ್ತೋ ಹಾಳಾದ್ ವಟ್ಟೆ ಗೊಳ್‌ಗರಿತದೆ’ ಎಂದು ಟೀ ಹೀರಿ ಮತ್ತೊಂದು ಲೋಟ ಟೀ ಬಿಡಿಸಿಕೊಂಡು ಐದಾರು ಬೋಂಡಗಳ ಮುಗಿಸಿದ. ನನ್ನ ತಾತ ಇವನ ಇಕಮತ್ತುಗಳನ್ನೆಲ್ಲ ಚೆನ್ನಾಗಿ ಬಲ್ಲವರಾಗಿದ್ದರು. ಜೋಗಿಯ ವ್ಯವಹಾರವೇ ಅಂತಾದ್ದು. ಏನೂ ಸಿಗಲಿಲ್ಲ ಎಂದರೆ ಗುಡ್ಡೆಗೋ, ಗವಿಗೋ, ಹೊಲಮಾಳಗಳಿಗೋ ಹೋಗಿ ಯಾವುದಾದರೂ ಮಿಕವನ್ನು ಬೇಟೆಯಾಡಿ, ಅದನ್ನು ಮಾರಿಯೋ ಅಥವಾ ಮಾರಾಟವಾಗದಿದ್ದರೆ ತಾನೇ ಅದನ್ನು ಅರ್ಧಂಬರ್ಧ ಬೇಯಿಸಿ ತಿಂದು ಕಾಲಯಾಪನೆ ಮಾಡುವವನಾಗಿದ್ದ.

ನಿರ್ದಿಷ್ಟವಾಗಿ ಅವನಿಗೆ ಇಂತಾದ್ದೇ ಚಾಕರಿ ಎಂಬುದೇ ಇರಲಿಲ್ಲ. ಅವನಂತಹ ನೂರಾರು ಜನ ನಮ್ಮೂರಲ್ಲಿ ಅವರವರ ಶಕ್ತ್ಯಾನುಸಾರ ತಮ್ಮ ಪ್ರತಿಭೆ ಮಾತ್ರದಿಂದಲೇ ಹೊಟ್ಟೆಗಾಗಿ ಏನೇನೋ ಇಕಮತ್ತುಗಳನ್ನು ಹೂಡಿ ಗೆದ್ದುಬಿಡುತ್ತಿದ್ದರು. ಅಂತಾದ್ದರಲ್ಲಿ ಜೋಗಿ ಒಂದು ವಿಶೇಷ. ಬಹುಪಾಲು ಊರ ಎಲ್ಲ ಕುಳಗಳ ಬಳಿಯೂ ಮುಂದಾಗಿಯೇ ಕೂಲಿ ಹಣವನ್ನು ಸಾಲ ರೂಪದಲ್ಲಿ ಪಡೆದು, ಅವರ ಅಗತ್ಯ ಬಿದ್ದಾಗ ಹೋಗಿ ಕೆಲಸ ಮಾಡಿ, ಈ ಹಿಂದೆ ಪಡೆದಿದ್ದ ಹಣಕ್ಕೆ ಜಮಾ ಮಾಡಿಕೊಂಡು ಮತ್ತೆ ಹೊಸ ಸಾಲಗಳಿಗಾಗಿ ಸಿದ್ಧನಾಗುತ್ತಿದ್ದ. ನೋಡಲು ಬಹಳ ಗಟ್ಟಿಮುಟ್ಟಾಗಿ ಕರಿಗೊಬ್ಬಳಿಕೊಂಟಿನ ಹಾಗೆ ಇದ್ದ ಅವನಿಗೆ ಅನೇಕರು ಮೊದಲೇ ದುಡ್ಡುಕೊಟ್ಟು ಯಾವುದಕ್ಕೂ ಮುಂದೆ ಮಳೆಗಾಲದ ಬಿತ್ತನೆ ಕಾಲಕ್ಕೋ, ಕೊಯ್ಲಿನ ಕಾಲಕ್ಕೋ ಇವನು ಬೇಕಾಗುತ್ತದೆ ಎಂದು ದಡಕಸ್ತಾಗಿ ಇದ್ದವರು ದುಡ್ಡು ಕೊಡುತ್ತಿದ್ದರು. ಹೀಗಾಗಿಯೇ ಊರ ತುಂಬಾ ಅವನು ಅನೇಕರಿಂದ ಅಡ್ವಾನ್ಸ್ ಪಡೆದು ಅದರ ಹೊಡೆತ ತಾಳಲಾರದೆ, ಒಂದೇ ಬಾರಿಗೆ ಎಲ್ಲರಿಗೂ ಕೆಲಸಕ್ಕೆ ಹೋಗಲಾರದೆ, ಒಬ್ಬರಿಗೆ ಒಂದೊ ಎರಡೋ ಅವರ ಮಟ್ಟಕ್ಕಾಗುವಷ್ಟು ಸುಳ್ಳು ಹೇಳಿ ಜಾರಿಕೊಂಡು ತಪ್ಪಿಸಿಕೊಳ್ಳುತ್ತಿದ್ದ. ಅವರಿಗೆ ಯಾವ ಕೂಲಿ ಮಾಡಿಸುವ ಕೆಲಸ ಇಲ್ಲದಿದ್ದರೂ ಅಂತಹ ವೇಳೆ ಹೋಗಿ ‘ಖುದ್ದಾಗಿ ನಾನೇ ಬಂದಿವಿನಲ್ರಪ್ಪಾ, ಕೆಲ್ಸ ಮಾಡಿಸ್ಕನಿ ಅಂದ್ರೆ ಅದ್ಯಾರೂ ವಪ್ಪುದಿಲ್ಲ, ನೀವೂ ವೂಂ ಅನ್ನುದಿಲ್ಲ. ಇಂಗಿದ್ರೆ ನಾನೆಂಗೆ ಗೇದು ಸಾಲ ತೀರಿಸ್ಕೊದು. ಮೈಯಿನ್ ಜಲುವೆಲ್ಲ ಬೆವುರಾಗಿ ಹರ್ಸಿ ಮೈಯ ಕಾವ ಇಳ್ಸಿ ಸಕತ್ತಾಗಿ ಕೆಲ್ಸ ಮಾಡಿದ್ರೆ ನನ್ಗೆ ಹಿಡ್ಕಂದಿರು ಜ್ವರವೆಲ್ಲ ಬಿಟ್ಟೋತದೆ ಅಂತಾ ನಾನೆ ನಿಮ್ಮಟ್ಟಿತಕೇ ಬಂದಿದ್ರೂ ಇವತ್ತು ಕೆಲ್ಸ ಇಲ್ಲ ವೋಗಯ್ಯಾ ಅಂತಿರಲ್ಲಾ, ಇದು ನ್ಯಾಯವೇ. ನಿಮ್ಮರುಣ ತೀರಿಸ್ಕಂದೇ ತಾನೇ ನಾನು ಮುಂದುನ್ ಯವಾರ ಮಾಡ್ಬೇಕಾಗಿರುದೂ’ ಎಂದು ಒಂದು ವಾದವನ್ನೇ ಹೂಡಿ ಏನೂ ಕೆಲಸ ಇಲ್ಲದಿದ್ದರೂ ‘ಆಗ್ಲಿ ಹೋಗಪ್ಪಾ ಏನಾರ ವಸಿ ತ್ವಾಟದಲ್ಲಿ ಮಾಡೋಗು’ ಎಂದು ಗುದ್ಲಿಯೋ, ಅರೆಯೋ ಏನೋ ಕೊಟ್ಟು ಕಳಿಸುತ್ತಿದ್ದರು. ಇಂತಹ ಸಂದರ್ಭಗಳನ್ನು ತಾನೇ ಸೃಷ್ಟಿಸಿ ಉಪಾಯವಾಗಿ ಯಾವ ಕಷ್ಟವೂ ಇಲ್ಲದೆ ತೆಳ್ಳಗೆ ಬೆಳ್ಳಗೆ ಏನೋ ಒಂದು ಕೆಲಸವನ್ನು ಮಾಡಿ ಆ ದಿನದ ಊಟ ತಿಂಡಿಯನ್ನೆಲ್ಲ ಅಲ್ಲೇ ಮುಗಿಸಿ ಬೀಡಿ, ಬೆಂಕಿಗೆ ಕಡ್ಡಿಗೆ ಆಗುವಷ್ಟು ಕಾಸನ್ನು ದಕ್ಕಿಸಿಕೊಂಡು ಮುಂದಲವರ ಮನೆಗೆ ಹೋಗುತ್ತಿದ್ದ.

ಅದರೂ ಅವನ ಬಗ್ಗೆ ಯಾರುಗೂ ಅಂತಹ ದ್ವೇಷ ಇರಲಿಲ್ಲ. ಅವನಿಗೆ ಕೆಲ್ಸದ ಬಗ್ಗೆ ಹುಕೀ ಹತ್ತಿತೆಂದರೆ ಮೂರು ನಾಲ್ಕು ಜನ ಗೇಯುವಷ್ಟೆಲ್ಲವನ್ನು ಅವನೊಬ್ಬನೇ ಮಾಡಿ ಮುಗಿಸಿ, ಕಾಸನ್ನೂ ಕೇಳದೆ ಹೆಂಡದ ಅಂಗಡಿಗೋ, ಸರಾಯಿ ಗುಡಿಸಲಿಗೋ ಹೊರಟು ಹೋಗುತ್ತಿದ್ದ. ಅವನಿಗೆ ಹೆಂಡತಿ ಮಕ್ಕಳು ಅಂತಾ ಯಾರೂ ಇರಲೂ ಇಲ್ಲ. ಬೇಸರ ಬಂತೆಂದರೆ ಒಂದಷ್ಟು ದಿನ ಊರು ಬಿಟ್ಟು ಇನ್ನಾವುದೋ ಸ್ಥಳಕ್ಕೆ ಹೋಗಿ ಅಲ್ಲಿ ಕಾಲ ಕಳೆದು ಮತ್ತೆ ತವರಿಗೆ ಬಂದಂತೆ ಸಡಗರದಿಂದ ಊರು ತಲುಪಿ ಎಂದಿನಂತೆ ಗೌಡರ ತೋಟಗಳ ಖಾಯಂ ಜೀತಗಾರನಂತೆ ಒಂದಷ್ಟು ದಿನ ನಿಯತ್ತಿನಿಂದ ದುಡಿದು ಕೊನೆಗೊಂದು ದಿನ ಬಾಳೆ ಗೊನೆಯನ್ನೋ, ಕೊಬ್ಬರಿಯನ್ನೋ ಕದ್ದುಕೊಂಡು ಹೋಗಿ ಆ ಕಾಸಿನಲ್ಲಿ ಒಂದಷ್ಟು ದಿನ ಪೇಟೆನೆಲ್ಲ ಸುತ್ತಿ ತಾನು ಯಾವ ತಪ್ಪನ್ನೂ ಮಾಡಲಿಲ್ಲ ಎಂಬಂತೆ ಹಿಂತಿರುಗಿ ಬಂದು ಅದೇ ಗೌಡರ ಕೊಟ್ಟಿಗೆಯಲ್ಲಿ ಕುಳಿತು ಕದ್ದು ಹೋಗಿ ಸುತ್ತಾಡಿ ಬಂದದ್ದಕ್ಕೆಲ್ಲ ಒಂದು ಅತಿಮಾನುಷವಾದ ಆರೋಪವನ್ನು ಹೇರಿ ತನ್ನ ತಲೆ ಕೆಟ್ಟು ಹೋಗಿತ್ತು, ಯಾರೋ ಬಂದು ಮಾಟ ಮಾಡಿ ಅಂತಹ ಕೆಲಸವನ್ನು ತನ್ನಿಂದ ಮಾಡಿಸಿದರು ಎಂದು ರೀಲುಬಿಟ್ಟು, ‘ತಕ್ಕೊಳ್ಳಿ ಈ ಪರ್ಸಾದವ, ದೇವುರು ದೂಳ್ತವಾ ಇಟ್ಕಳಿ ಮನೇಲಿ’ ಎಂದು ಎಂತೆಂತದೋ ಪೊಟ್ಟಣಗಳ ಬಿಚ್ಚಿ ಅವರ ಮುಂದಿಡುತ್ತಿದ್ದ. ಆಗೆಲ್ಲ ಅವರಿಗೆ ಇವನನ್ನು ಯಾವ ರೀತಿ ಶಿಕ್ಷಿಸಬೇಕೆಂದು ತೋಚದೆ ಹಾಳಾಗಿ ಹೋಗು ಎಂದು ಬೈಯ್ದು ಉಣ್ಣಲು ತಂಗಳು ಕೊಡುತ್ತಿದ್ದರು. ಆಮೇಲೆ ಮತ್ತೆ ಎಂದಿನಂತೆ ಮತ್ತೊಂದು ಮನೆಯ ಚಾಕರಿಗೆ ಅಂಟಿಕೊಳ್ಳುತ್ತಿದ್ದ. ಅರೆ ಅಲೆಮಾರಿಯಂತಿದ್ದ ಕಳ್ಳತನವಾಗುವಂತದೇನೂ ಇರಲಿಲ್ಲ. ‘ಮನೆ ಮನೆ ಹಿಟ್ಟು, ಮಾರಿ ಗುಡಿ ನಿದ್ದೆ’ ಎಂಬ ಗಾದೆ ಅವನಿಗೆ ಹೊಂದಿಕೊಳ್ಳುತ್ತಿತ್ತು. ಕುಡಿದು ಅಮಲೇರಿದಾಗ ತಾನು ಇಂತಿಂತವರ ತೋಟದ ಕೆಲಸಗಳನ್ನೆಲ್ಲ ಮಾಡಬೇಕಾಗಿದೆ ಎಂದು ಯಾರ್‍ಯಾರಿಗೂ ಒಪ್ಪಿಸಿ ಎಲ್ಲರೂ ತನಗೆ ಒಂದೇ ಬಾರಿಗೆ ಯಾಕೆ ಅಡ್ವಾನ್ಸ್ ಕೊಟ್ಟು ಕೆಲ್ಸಕ್ಕೆ ಕರೆಯುತ್ತಾರೆಂದು ಬೈಯುತ್ತಿದ್ದ.

ಒಟ್ಟಿನಲ್ಲಿ ಜೋಗಿ ತನ್ನ ಹೊಟ್ಟೆ ಪುರಾಣವನ್ನು ಯಾರ ಮುಂದೆಯೂ ಕಕ್ಕಿಕೊಂಡು ತನಗೆ ಅಪಾರವಾದ ಹಲ್ಲೆ, ಶೋಷಣೆ, ಅನ್ಯಾಯವಾಗುತ್ತಿದೆ ಎಂದು ಮಾತ್ರ ಯಾರಲ್ಲೂ ಹೇಳಿಕೊಳ್ಳದೆ, ತಾನು ಹೇಗೆ ಒಂದೇ ಬಾರಿಗೆ ಇವರಿಗೆಲ್ಲ ಕೆಲಸ ಮಾಡಿಕೊಡಲಿ ಎಂಬ ತಗಾದೆಯನ್ನು ಎತ್ತುತ್ತಿದ್ದ. ಇದ್ದಕ್ಕಿದ್ದಂತೆ ಬೇಸಿಗೆ ಬಂತೆಂದರೆ ಸಾಕು, ಅವನ ಆರ್ಥಿಕ ವ್ಯವಸ್ಥೆಗೆ ಬರಬಡಿದು ಕ್ಷೋಭೆ, ಕ್ಷಾಮ ಡಾಮರಗಳೆಲ್ಲ ಒಟ್ಟಿಗೇ ನುಗ್ಗಿ ತತ್ತರಿಸಿ ಹೋಗುತ್ತಿದ್ದ. ದಮ್ಮಯ್ಯ ದಪ್ಪಯ್ಯ ಎಂದು ಕಾಡಿ ಬೇಡಿ ಏನಾದರೂ ಗಿಟ್ಟಿಸಿಕೊಳ್ಳುವ ಸಂಚು ಮಾಡಿ ಗೌಡರ ಬಳಿಗೆ ಅಂತಹ ಕಾಲದಲ್ಲಿ ಹೋಗುತ್ತಿದ್ದ.

ಮತ್ತೆ ಯಥಾ ಪ್ರಕಾರ ಹಳೆ ಗಂಡನ ಪಾದವೇ ಗತಿ ಎಂಬಂತೆ ಖಾಯಂ ಕುಳ ಗೌಡರ ಬಳಿ ಹೋಗಿ ‘ಏನೋ ವಸಿ ನೀವೇ ನೋಡ್ರಪ್ಪಾ, ಅನಾದಿಗೆ ಆಕಾಸ್‌ವೇ ಆಧಾರ ಅಂದಂಗೆ, ನನಂತ ಬಿಕನಾಸಿಗೆ ನೀವೇ ದಾರಿ’ ಎಂದು ನುಣ್ಣಗೆ ಮಾತಾಡಿ ಅತ್ಯಂತ ವಿನಯದಿಂದ ಅವರು ಬರುವ ದಾರಿಗಡ್ಡವಾಗಿ ಕುಳಿತು ಬೇಡಿಕೊಳ್ಳುತ್ತಿದ್ದ. ಆಯ್ತು ಹೋಯ್ತು ನಡಿಲಾ ಇಪಟು. ನಿನ್ ನಾಟುಕ್‌ಗೊಳೆಲ್ಲಾ ಸಾಕು ಎಂದು ಗೌಡರು ಹೇಳಿದ ಕೂಡಲೆ ಅತ್ಯುತ್ಸಾಹದಿಂದ ಎದ್ದು ಜಿಗಿದು ತೋಟದ ಆಗತೆ ಕೆಲಸಗಳನ್ನೆಲ್ಲ ಭರ್ಜರಿಯಾಗಿ ನಿರ್ವಹಿಸುತ್ತಿದ್ದ. ಈಗಲೂ ಹಾಗೇ ಆಯಿತು. ಅದೇ ಬೇಸಿಗೆ ಬರದಿಂದಾಗಿ ಗೌಡರ ತೋಟಕ್ಕೆ ಹೋದ ಕೂಡಲೆ ಗೌಡರು ಇವನಿಗಾಗಿಯೇ ಕಾದಿದ್ದವರಂತೆ, ‘ಅಯ್ಯೋ ನಿನ್ ಮೊಕ ನನ್ನ ಲವುಡಾ ವಡಿಯಾ, ಎಲ್ ಹಾಳಾಗೊಗಿದ್ಲಾ, ಊರೆಲ್ಲನು ವುಡುಕಿಸಬೇಕಲ್ಲಾ ನಿನ್ ಕರ್‌ತರುಕೇ, ಆಮೆಕೆ ನಿನ್ ಪುರಾಣವ ಹೇಳುವಂತೆ, ಮೊದ್ಲು ಬಾಳೆ ತೋಟುದ್ ಕೆಲ್ಸ ಮಾಡೋಗ್ಲ. ಅಲ್ಲೇ ನಮ್ಮುಡಗ ಅವ್ನೆ’ ಎಂದದ್ದನ್ನು ಕೇಳಿಸಿಕೊಂಡು ಸದ್ಯ ಯಾವ ಕಿರಿಕಿರಿಯೂ ಎದುರಾಗಲಿಲ್ಲ ಎಂದುಕೊಳ್ಳುತ್ತಾ ಗೌಡರ ತೋಟದ ಕೆಲಸವನ್ನು ವಾರಪೂರ್ತಿ ಮಾಡಿ ಮುಗಿಸಿದ. ಗೌಡರು ಮೆಚ್ಚಿಕ್ಕೊಳ್ಳಲಿ ಎಂದು ಬೋ ಪಸಂದಾಗಿ ಗೇದ. ಗೌಡರು ಒಳಗೊಳಗೆ ಸಂತೋಷಪಡುತ್ತಾ, ‘ಯೀ ಬೊಡ್ಡಿಮಗ ಕೆಲ್ಸವ ಇಡಿಸ್ಕಂಡ ಅಂದ್ರೆ ಆಯ್ತು. ಹತ್ತಾಳ್ ಕೆಲ್ಸವ ವಬ್ಬನೇ ಮಾಡ್ತಾನೆ. ಸದ್ಯ ಇವನಿದ್ದಿದ್ರಿಂದ ಎಷ್ಟೋ ಸಲೀಸಾಯ್ತು’ ಎಂದುಕೊಂಡು ಮನೆಗೆ ಹೊರಟು ಹೋದರು.

ವಾರಪೂರ್ತಿ ಕೆಲಸ ಮಾಡಿರುವುದರಿಂದ ಗೌಡತಿಯೂ ಅವನಿಗೆ ಕರುಣೆ ತೋರಿ ಬಿಸಿಬಿಸಿ ರಾಗಿ ರೊಟ್ಟಿಗೆ ಒಳ್ಳೆ ಕಾರವನ್ನು, ಬೆಣ್ಣೆ ಮುದ್ದೆಯನ್ನೂ ಹಾಕಿಕೊಟ್ಟು ಹೊಟ್ಟೆ ತುಂಬ ತಿನ್ನಿಸಿದಳು. ‘ಇದ್ಯಾಕ್ಲಾ ಜೋಗಿ ಇಂಗಾಗೋದಲ್ಲಾ, ಊರೂರ್ ತಿರಿಕಂದು ಇಂಗೆ ಇರುಕಿಂತಾ ಎಲ್ಲಾರ ಯಾವುಳ್‌ನಾರ ಲಗ್ನ ಮಾಡ್ಕಂದು ಸಂಸಾರ ಕಟ್ಕಂದು ಚೆಂದ್ವಾಗಿ ಹೆಂಡ್ತಿ ಜೊತೆ ಇರುಕಿಲ್ಲಲಾ. ಇನ್ನೂ ಎಸ್ಟ್ ದಿವ್ಸ ಅಂತಾ ಇಂಗೆ ಅಲ್ಲಿ ಇಲ್ಲಿ ನೋಡ್ಕಂದು, ಅಲ್ಕಂದು ಕಾಲ ಕಳ್ದಿಯೆ…..’ ಎಂದು ಬುದ್ಧಿ ಹೇಳಿದಳು. ಜೋಗಿಗೆ ಅವೆಲ್ಲ ತಲೆಗೆ ಇಳಿಯುವಂತಿರಲಿಲ್ಲ. ಅಯ್ಯೋ ಬಿಡ್ರವ್ವಾ, ನಿಮ್ಮಂತ ತಾಯಿದೀರು ಇದ್ದೀರಲ್ಲಾ, ನಿಮ್ ಕೈಯ್ನ ಒಂದ್ ಮುದ್ದೆಯಿದ್ರೆ ಅದೇ ಸಾಕು. ನನ್ನಂತ ಅನಾದಿಗೆ ಲಗ್ನ ಬೇರೇ ಕೇಡು’ ಎಂದು ಮಾತು ಬದಲಿಸಿದ್ದ.

ಅಂತೂ ಸಂಜೆ ಆಯ್ತು, ರಾತ್ರಿ ಆಯ್ತು, ಬೆಳಗಾಯ್ತು, ಮತ್ತೆ ಮಧ್ಯಾಹ್ನವಾಯ್ತು, ಎಡಗಲಾಯ್ತು, ಗೌಡರು ತೋಟಕ್ಕೆ ಬಂದು ಮುಂದಿನ ಕೆಲಸ ಹೇಳಲಿಲ್ಲ ಮತ್ತು ಮುಖ್ಯವಾಗಿ ಈ ಹಿಂದೆ ಪಡೆದಿದ್ದ ಸಾಲಕ್ಕೆ ಹಣ ಚುಕ್ತ ಮಾಡಿಕೊಂಡು ಉಳಿಕೆ ಹಣವನ್ನು ನೀಡಲಿಲ್ಲ. ಕಾದು ಕಾದು ಸಾಕಾಯ್ತು. ಮಾರನೆ ದಿನ ಗೌಡರು ಬಂದರು. ತೋಟದ ಮನೆಯ ಅಂಗಳದಲ್ಲೇ ನಾಯಿಗಳ ಜೊತೆ ಜೋಗಿ ಕುಳಿತಿದ್ದ. ‘ಅರೇ ಇದೇನ್ಲಾ ಜೋಗಿ, ಇಲ್ಲೆ ಇದ್ದಿಯಲಾ ಇನ್ನೂವೆ. ಬ್ಯಾರೆ ಯಾರ್‍ಲೂ ಕೆಲುಸಕ್ಕೆ ವೋಲಿಲ್ಲವೇ’ ಎಂದರು. ಅವರ ಮಾತಿನ ಧಾಟಿಗೆ ದಂಗಾದ ಜೋಗಿ ‘ಇದೇನ್ರಪ್ಪಾ ಇಂಗಂತೀರಿ…. ಅಸ್ಟ್ ದಿನದಿಂದ ನಿಮ್‌ತಾವೇ ಕೆಲ್ಸ ಮಾಡಿವಿನೀ…. ಈಗ ಇಂಗಂತೀರಲ್ಲಾ’ ಎಂದ. ‘ಅಂಗಂದ್ರೆ ಅದೇನ್ಲಾ ಅರ್ಥ’ ಎಂಬಂತೆ ಗೌಡರು ಅವನನ್ನೇ ದಿಟ್ಟಿಸಿದರು. ವಿನಯದಿಂದ, ಆತಂಕದಿಂದ ‘ಅಂಗಂದ್ರೇ……. ಅದೇ ಕನ್ರಪ್ಪಾ, ಬಾಕಿ ಕಾಸು………’ ಎಂದು ಉಸುರಿದ. ಗೌಡರು ಕಿರಿಕಿರಿಯಾಗಿ ‘ಇನ್ಯಾವ್ ಕಾಸ್‌ಲಾ ನಿನಗೆ ಕೊಡ್‌ಬೇಕಾಗಿರುವುದು. ಕೊಟ್ಟಿರುದೇ ಸಾಕಾಗದೇ. ಇನ್ಯಾವ್‌ದುನ್‌ಲಾ ಕೊಡಬೇಕಾಗಿರುವುದು. ಕೊಟ್ಟು ಕೊಟ್ಟು ನನಗೇ ಸಾಕಾಗೋಗದೆ, ಇಂದೆ ಅಡ್ವಾನ್ಸ್ ತಕಂದಿರುದು ಎಸ್ಟಾಗದೆ ಅನ್ನುದಾ ಲೆಕ್ಕ ಮಡಗಿದಿಯಾ….. ಅದ್ಕೆ ಅಸ್ಟ್ ದಿನ್‌ಕಂಟಾ ಆಗಿರು ಬಡ್ಡಿಯಾ ಬರ್ದು ಮಡಗಿದ್ದಿಯಾ…. ಅಹಹಾ ಬಂದ್‌ಬುಟಾ ಬಾಕಿ ವಸೂಲಿಗೆ ಇದ್ಕೆ ಕಣ್ಲಾ ನಿನ್ನ ಸಣ್ ಜಾತಿ ಅನ್ನುದೂ ಕೊಟ್ಟೋನೂ ಕೋಡಂಗಿ ಇಸ್ಕಂಡೋನು ಈರಬದ್ರಾ ಅಂತಾ ನಿಮ್‌ತಾವು ಎಲ್ಲಾ ಬರೀ ಇದೇ ನ್ಯಾಯ’ ಎಂದು ಆರೋಪಿಸಿದ. ಗೌಡರ ಮುಂದೆ ಜೋಗಿ ನಿತ್ರಾಣನಾಗಿಬಿಟ್ಟ.
‘ಅಂಗಲ್ಲ ಕನ್ರಪ್ಪಾ….. ಇಗಾ ಅಂಗೆ ಲೆಕ್ಕ ಮಾಡುದಾದ್ರೇ ನೋಡ್ರಪ್ಪಾ…’ ಎಂದು ತೊದಲುತ್ತಾ ಜೋಗಿ ಏನೇನೋ ಹೇಳಲು ತೊಡಗಿದರೂ ಗೌಡರು ಕಿವಿ ಮ್ಯಾಲೆ ಹಾಕಿಕೊಳ್ಳದೆ ‘ಸುಮ್ನೆ ತಿಕಾ ಮುಚ್ಕಂಡು ವೋಲ ಇಪಟು. ಅಯ್ಯೋ ಅಂದ್ರೆ ಆರ್ ತಿಂಗಳು ಕರ್ಮ ಅಂತೇ. ವೋಗೋಗಿಪಟು’ ಎಂದು ನಡೆದೇಬಿಟ್ಟರು.

ಜೋಗಿಗೆ ಕಣ್ಣು ಕಿರ್ರಗಾದವು. ತಲೆ ಅದುರಿತು. ಏನೇನೋ ಲೆಕ್ಕ ಹಾಕಿಕೊಂಡಿದ್ದೆಲ್ಲ ತಲೆಕೆಳಗಾಗಿತ್ತು. ಈಗ ಏನ್ ಮಾಡುವುದು, ಇದು ಇಂಗಾಯ್ತಲ್ಲಾ ಎಂದು ಹತಾಶೆಯಿಂದ ಅಲ್ಲೇ ಸುಮಾರು ಹೊತ್ತು ಜೋಗಿ ಕುಳಿತು ಏನೇನೋ ಯೋಚನೆ ಮಾಡತೊಡಗಿದ. ಏನು ಹೊಸದಾಗಿ ಹೊಳೆಯಲಿಲ್ಲ. ಪೇಟೆಗೆ ಹೋಗುವಾ ಅಂದರೆ ಅದಕ್ಕೂ ನೂರೆಂಟು ತಾಪತ್ರಯಗಳೆಂದು ಹಿಂಜರಿದ. ಎಷ್ಟೋ ಹೊತ್ತು ಕುಳಿತಿದ್ದ ಮೇಲೆ ಒಂದು ಐಡಿಯಾ ಅವನೊಳಗೆ ಎಂದಿನಂತೆ ಬಂತು. ಅದರಂತೆಯೇ ಮಾಡಲು ಸಿದ್ಧನಾದ.

ಎದ್ದು ನಿಂತು ಸುತ್ತ ಮುತ್ತ ನೋಡಿದ. ಯಾರೂ ಇರಲಿಲ್ಲ. ತೋಟದ ಕಾವಲುಗಾರ ಎಲ್ಲೋ ಹೋಗಿದ್ದ. ಗೌಡರ ತೋಟದ ಮನೆ ಒಂಟಿಯಾಗಿತ್ತು. ನಮ್ಮ ಕಡೆಯ ದೊಡ್ಡ ಗೌಡರು ತೋಟದಲ್ಲಿ ಒಂದು ಮನೆಯನ್ನೂ, ಊರಲ್ಲಿ ಇನ್ನೊಂದು ಮನೆಯನ್ನೂ ಹೊಂದಿರುತ್ತಾರೆ. ಸಾಮಾನ್ಯವಾಗಿ ತೋಟದ ಮನೆಯಲ್ಲಿ ಸಂಸಾರ ಇರುವುದಿಲ್ಲ. ಕೃಷಿ ಸಲಕರಣೆಗಳು, ತೋಟದ ಫಸಲನ್ನು ದನ, ಕುರಿ, ಎಮ್ಮೆಗಳನ್ನು ಒಂದೆಡೆ ಕೂಡಿಡಲು ಇಂತಹ ಮನೆಗಳನ್ನು ಕಟ್ಟಿಕೊಂಡಿದ್ದು, ಗೌಡರ ನೂರೆಂಟು ಸೈಡ್ ಬಿಸಿನೆಸ್‌ಗೂ ಅರ್ಥಪೂರ್ಣವಾಗಿ ಬಳಕೆ ಆಗುತ್ತಿರುತ್ತವೆ. ಅಂತಹ ಮನೆಗಳಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನಿಸುತ್ತಿದ್ದು ಕಾವಲುಗಾರನೇ ಅದರ ಜವಾಬ್ದಾರಿ ಹೊತ್ತಿರುತ್ತಾನೆ.

ಹೀಗಿರುವಾಗ ಜೋಗಿ ಅಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿ ಏನಾದರೂ ಒಳಗೆ ಸಿಗಬಹುದೆಂದು ತರ್ಕಿಸಿದ. ಮನೆಯ ಪಡಸಾಲೆಯಲ್ಲಿ ಒಂದು ಕ್ಷಣ ಕುಳಿತು ಅಮೂಲಾಗ್ರವಾಗಿ ಸುತ್ತೆಲ್ಲ ವೀಕ್ಷಿಸಿದ. ಎಲ್ಲ ಸರಿ ಇದೆ ಅನಿಸಿತು. ಮನೆಯ ಮುಂಬಾಗಿಲಿನಿಂದ ಹಿಂಬಾಗಿಲ ತನಕ ದೂರ ದೃಷ್ಟಿ ಇಟ್ಟ. ಇಣುಕಾಡಿದ ಏನೂ ಮಹತ್ವದ್ದು ಕಾಣಲಿಲ್ಲ. ತೊಟ್ಟಿ ಮನೆಯ ಹಜಾರದ ದೀಪದ ಗೂಡಿನ ಕಡೆಗೆ ಅವನ ಕಣ್ಣು ನುಸುಳಿತು. ಅರೇ! ಅಲ್ಲಿ ಅಲಾರಂ ಗಡಿಯಾರ ಕುಳಿತಿದೆ! ನೋಡಿದ ಕೂಡಲೇ ಇದೇ ಸೂಕ್ತವಾದದ್ದೆಂದು ಅದನ್ನು ಎತ್ತಿಕೊಂಡು ಹೊಟ್ಟೆಗೆ ಸಿಕ್ಕಿಸಿಕೊಂಡು ಯಾರಿಗೂ ಕಾಣದಂತೆ ಬಂದುಬಿಟ್ಟ. ಎಲ್ಲವೂ ಸಲೀಸು ಎನಿಸಿತು. ಜೋಗಿ ಗಡಿಯಾರ ಕದ್ದದ್ದು ಯಾರಿಗೂ ತಿಳಿಯಲಿಲ್ಲ. ನೇರ ಹೊರಟವನೆ ನಮ್ಮ ಹೋಟಲಿಗೆ ಬಂದ.

ಬಂದವನೇ ಬೋಂಡ ಟೀ ಕೊಡಪ್ಪ ಎಂದು ಕೇಳಿದ್ದ. ಆಗಲೇ ಅವನ ಹೊಟ್ಟೆಯಿಂದ ಏನೋ ಒಂದು ನಿಗೂಢವಾಗಿ ಲಟ್‌ಲಟ್ ಲಟ್‌ಲಟ್ ಎಂದು ಲಯಬದ್ಧವಾಗಿ ಮಿಡಿಯುವುದನ್ನು ನಾನು ಕೇಳಿಸಿಕೊಂಡದ್ದು. ಅಂತಹ ಸುದ್ದಿಗೆ ಕಾರಣವಾಗಿ ಆತ ನಮ್ಮ ತಾತನ ಜೊತೆ ಏನೋ ಹೊಟ್ಟೆ ಕೆಟ್ಟಿದೆ ಎಂಬ ಸಬೂಬು ಹೇಳಿದ್ದ. ಹೋಟೆಲಿಂದ ಎದ್ದು ಬೇಗ ಹೊರಟವನು, ನಾಳೆ ಕಾಸು ಕೊಡುವುದಾಗಿಯೂ ಹೊಟ್ಟೆ ರಿಪೇರಿ ಮಾಡಿಸಿಕೊಳ್ಳುವ ಸಲುವಾಗಿ ಪೇಟೆಯ ಡಾಕ್ಟರ ಬಳಿಗೆ ಹೋಗುತ್ತಿರುವುದಾಗಿಯೂ ಹೇಳಿ ಕ್ಷಣಾರ್ಧದಲ್ಲಿ ಮರೆಯಾಗಿದ್ದ. ನನಗಂತೂ ಅವನ ಹಾವಭಾವಗಳನ್ನು ನೋಡಿ ಎಲ್ಲೋ ಇವನಿಗೆ ಭೇದಿ ಹೊಡೆಯುತ್ತಿದೆ, ದಾರಿಯಲ್ಲಿ ಚಡ್ಡಿಗೆ ಏನಾದರೂ ತೊಂದರೆ ಮಾಡಿಕೊಳ್ಳುತ್ತಾನೆ ಎಂದು ಶಕುನವಾಗಿತ್ತು.
ಆಮೇಲೆ ಮುಂದೆ ಬೇರೆಯೇ ಆಗಿತ್ತು.

ಪೇಟೆಗೆ ಹೋಗುವುದೇ ಸರಿ ಎಂದು ಎಲ್ಲರೀತಿಯಿಂದಲೂ ಅವನಿಗೆ ಅನಿಸಿತ್ತು. ಅಲಾರಾಂ ಗಡಿಯಾರವನ್ನು ಕದ್ದಿದ್ದರಿಂದ ಅದನ್ನು ಅವನ ಹಳ್ಳಿಯಲ್ಲೇ ಯಾರಿಗಾದರೂ ಮಾರುವ ಅವಕಾಶವಿರಲಿಲ್ಲ. ಆ ವೇಳೆಗೆ ಅಲಾರಾಂ ಗಡಿಯಾರಗಳು ನಮ್ಮ ಊರಲ್ಲಿ ಗೌಡರ ಮನೆ ಬಿಟ್ಟರೆ ನಮ್ಮ ಮನೆಯಲ್ಲಿ ಮಾತ್ರ ಇತ್ತು. ಅದೂ ಅಲ್ಲದೆ ಅಲಾರಾಂ ಗಡಿಯಾರವನ್ನು ಇಟ್ಟುಕೊಂಡು ಅದರ ಪ್ರಕಾರ ಮುಂಜಾವಿಗೇ ಏಳಬೇಕಾದ ಅಗತ್ಯ ಊರಿನವರಿಗೆ ಇರಲಿಲ್ಲ. ಗೌಡರಿಗೂ ಇರಲಿಲ್ಲವಾದರೂ ಅವರನ್ನು ಬೇಗ ಎಚ್ಚರಿಸಲು ಹಿಂಡು ಹುಂಜಗಳೇ ಇದ್ದರೂ ಕೇವಲ ಗೌಡಿಕೆಯ ಗತ್ತು ತೋರಿಸಿಕೊಳ್ಳಲು ಹಾಗೂ ತಾವು ಬಹಳ ನಾಗರಿಕರು ಎಂದು ಗುರುತಿಸಿಕೊಳ್ಳಲು ತಂದು ಇಟ್ಟುಕೊಂಡಿದ್ದರು. ತೋಟದ ಆಳುಕಾಳುಗಳ ಲೆಕ್ಕಕ್ಕೂ ಬರುತ್ತದೆ ಎಂಬ ಅಭಿಲಾಷೆ ಅವರಿಗಿತ್ತು.

ನಮ್ಮ ತಾತನಂತೂ ಹೋಟೆಲಿನ ಗಿರಾಕಿಗಳಿಗೆ ಟೈಂ ತಿಳಿಯಲೆಂದೂ, ಬೇಗ ಎಚ್ಚರಗೊಳ್ಳಲು ಅಲಾರಾಂ ಯಂತ್ರ ಉಪಕಾರ ಮಾಡುತ್ತದೆಂತಲೂ ಭಾವಿಸಿದ್ದರಿಂದ ಹೋಟೆಲಿಗೆ ಒಂದು ಅಲಂಕಾರ ಎಂದು ಇಟ್ಟುಕೊಂಡಿದ್ದರು. ಜೋಗಿ ತಾನು ಕದ್ದಿದ್ದ ಅಲಾರಾಂ ಗಡಿಯಾರವನ್ನು ನಮಗೆ ಮಾರುವಂತಿರಲಿಲ್ಲ. ಊರಿನವರು ಅಲಾರಾಂ ಅನ್ನು ಜೋಗಿಯಿಂದ ಕಡಿಮೆ ಬೆಲೆಗೆ ಕದ್ದು ವ್ಯಾಪಾರ ಮಾಡಿ ತೆಗೆದುಕೊಂಡಿದ್ದರೂ ಕದ್ದೇ ಬಳಸಬೇಕಾಗಿತ್ತು. ಆದರೆ ಅಲಾರಾಂ ಅನ್ನು ಕದ್ದು ಬಳಸುವುದು ಹಾಗಿರಲಿ, ಅದರ ಅಲಾರಾಂ ಕೂಗನ್ನು ಸುಲಭದಲ್ಲಿ ಮುಚ್ಚಿ ಹಾಕಲು ಸಾಧ್ಯವಿರಲಿಲ್ಲ. ಮತ್ತೆ ಅಲಾರಾಂ ಗಡಿಯಾರ ಆಗ ಒಂದು ಸಾಮಾಜಿಕ ಪ್ರತಿಷ್ಠೆಯೂ, ಮೇಲರಿಮೆಯೂ ಆಗಿದ್ದರಿಂದ ಅದರ ಬಗ್ಗೆ ಹುಡುಗರು ಶಾಲೆಯ ಜೊತೆಗಾರರ ಜೊತೆ ಹೇಳಿಕೊಂಡು ನಮ್ಮ ಮನೆಯಲ್ಲೂ ಅಲಾರಾಂ ಗಡಿಯಾರ ಇದೆ ಎಂದು ಬೀಗುವ ಮೂಲಕ ಕಳ್ಳತನವನ್ನು ಬಯಲು ಮಾಡಿದಂತಾಗುತ್ತಿತ್ತು. ಈ ಅಲಾರಾಂ ಮಾಲಿನಿಂದ ಮುಂದಾಗುವ ಎಲ್ಲಾ ಲಾಭ ನಷ್ಟಗಳನ್ನು ಲೆಕ್ಕ ಹಾಕಿಯೇ ಜೋಗಿ ಇದನ್ನು ಯಾಕಾದರೂ ಕದ್ದೆನೋ, ಮೊದಲು ಇದರ ಫಜೀತಿಯಿಂದ ತಪ್ಪಿಸಿಕೊಳ್ಳಬೇಕೆಂದು ಕಳ್ಳಾ…..ಹೇ ಕಳ್ಳಾ ನನ್ನ ಕದ್ದುಕೊಂಡು ಬಂದಿದ್ದೀಯೇನೋ ಮೂರ್ಖ, ನಾನು ಯಾರು ಗೊತ್ತೇನೋ, ಕಾಲ ಕಣೋ ಕಾಲ. ಕಾಲಪುರುಷನಾದ ನನ್ನನ್ನು ನೀನು ಕದ್ದುಕೊಂಡು ಹೋಗುವಷ್ಟು ಎಚ್ಚರವಾಗಿ ಬಿಟ್ಟಿರುವೆಯಾ, ಕದಿಯಲು ನಿನಗೆ ಇನ್ನೇನೂ ಸಿಗಲಿಲ್ಲವಾ. ಕಾಲ ಕಣೋ ಮೂರ್ಖಾ ನಾನು ಕಾಲ. ಮೈ ನೇಮ್ ಈಸ್ ಟೈಂ, ನನ್ನನ್ನೇ ಹಿಡಿದು ಕಟ್ಟಿಹಾಕಿ ಮಾರಲು ತೆಗೆದುಕೊಂಡು ಹೋಗುತ್ತಿರುವೆಯಾ? ಎಂದು ರೇಗಿಸಿದಂತಾಗಿ ಅವನ ತಲೆ ಕೆಟ್ಟು ಹೋಯಿತು. ಎಲ್ಲಿಯಾದರೂ ತಿಪ್ಪೆಗೆ ಬಿಸಾಕಿ ಬರುವಾ ಎಂದರೆ ಗೌಡರು ವಿಪರೀತ ಕೆಲಸ ಮಾಡಿಸಿಕೊಂಡು ಯಾವುದೋ ಲಡಾಸು ಅಡ್ವಾನ್ಸ್‌ಗೆ ಎಲ್ಲವನ್ನೂ ಸಮ ಮಾಡಿಕೊಂಡು ಹೀಗೆ ಮಾಡಿರುವಾಗ ಈ ಗಡಿಯಾರವನ್ನು ಬಿಸಾಡಲೂ ಮನಸ್ಸು ಬರದೆ ಉದ್ವೇಗಕ್ಕೆ ಒಳಗಾದ.

ಅಂತೂ ಈ ಶನಿಯನ್ನು ಮೊದಲು ಎಲ್ಲಿಯಾದರೂ ಬಿಕರಿ ಮಾಡಿಯೇ ತೀರಬೇಕೆಂದು ಪೇಟೆಯ ಸಾಬರ ಕೇರಿಯಲ್ಲಿ ಇಂತಹ ಮಾಲನ್ನು ‘ಅರೇ ವಾರೇ ವಾಹ್, ಕ್ಯಾ ಮಾಲ್ ಹೈ’ ಎಂದು, ಆವ್‌ಜಿ ಜೋಗೀ ಎಂದು ಸಲಾಮ್ ಮಾಡಿ ಕರೆದುಕೊಂಡು ಗುಟ್ಟಾಗಿ ದುಡ್ಡುಕೊಟ್ಟು ಕಳಿಸ್ತಾರೆ ಎಂದು ಲೆಕ್ಕಿಸಿ, ಪೇಟೆಗೆ ಈ ಮಧ್ಯಾಹ್ನದ ಬಸ್ಸು ಹತ್ತುವುದೇ ಎಲ್ಲ ರೀತಿಯಿಂದಲೂ ಸೂಕ್ತ ಎಂದು ಸರ್ಕಲ್ಲಿಗೆ ಬಂದು ಬಸ್ಸಿಗೆ ಕಾದಿದ್ದ. ಬಸ್ಸೂ ಬಂತು. ಎಲ್ಲರಿಗಿಂತಲೂ ಮೊದಲೇ ನುಗ್ಗಿ ಸೀಟಿಗಾಗಿ ಹುಡುಕಾಡಿ ಸಿಗದೆ ನಿಂತುಕೊಂಡ. ಬಿಸಿಲು ಜಡಿಯುತ್ತಿತ್ತು. ಒಂದೇ ಸಮನೆ ಜನರ ದಂಡು ಬಸ್ಸಿನ ಒಳಕ್ಕೆ ಜಮಾಯಿಸಿಕೊಂಡಿತು. ಇಂತಹ ಬಿಸಿಲು ಧಗೆಯಲ್ಲೂ ಜನ ಪೇಟೆಗೆ ಯಾಕ್ಹೀಗೆ ಹೋಗುತ್ತಾರೋ ಎಂದು ಯಾರೋ ದೊಡ್ಡದನಿಯಲ್ಲಿ ಆರೋಪಿಸಿದಂತಾಗಿ, ಆ ಸುದ್ದಿಗೆ ಕಿವಿಗೊಟ್ಟು ಆ ಕಡೆ ನೋಡಿದ. ಆ ನೂಕುನುಗ್ಗಲಲ್ಲಿ ಮುಖ ಕಾಣಲಿಲ್ಲ. ಆದರೆ ಆ ದನಿಗೆ ಯಾಕೋ ಸಂಶಯ ಬಂತು. ನಮ್ಮ ಊರು ದೊಡ್ದದಾದ್ದರಿಂದಲೂ ಸ್ವಲ್ಪ ನಾಗರಿಕತೆ ಕಂಡಿದ್ದರಿಂದಲೂ ಸರ್ಕಲ್ಲಿನ ಬಳಿ ಬರುವ ಎಲ್ಲ ಬಸ್ಸುಗಳೂ ಒಂದೋ ಎರಡೋ ನಿಮಿಷ ನಿಂತು ಹೋಗುವುದು ವಾಡಿಕೆ. ಬಸ್ಸು ಹಾಗೇ ನಿಂತಿತು. ಕಂಡಕ್ಟರ್ ಯಾಕೋ ಅವತ್ತು ವಿಪರೀತ ತಡ ಮಾಡುತ್ತಿದ್ದ. ಜೊತೆಗೆ ಗೂಡಿನ ಹತ್ತಾರು ಮಂಕರಿಗಳನ್ನು ಟಾಪ್‌ಗೆ ಹಾಕಲು ನಿಧಾನ ಮಾಡುತ್ತಿದ್ದರು. ಹೀಗಾಗಿ ಡ್ರೈವರ್ ಎಂಜಿನ್ ಸ್ಟಾಪ್ ಮಾಡಿದ್ದ. ಇದ್ದಕ್ಕಿದ್ದಂತೆ ಗಪ್ ಎಂದು ಮೌನ ಆವರಿಸಿಕೊಳ್ಳತೊಡಗಿತು. ಕಂಡಕ್ಟರ್ ಮುಂದೆ ಹೋಗಿ ಎಂದು ಎಲ್ಲರನ್ನೂ ತಳ್ಳುತ್ತಿರುವಂತೆಯೇ ಸಂದರ್ಭ ಬಿಗಡಾಯಿಸಿತು.

ಗೌಡರೂ ಕೂಡ ಕಾರಣಾರ್ಥವಾಗಿ ಪೇಟೆಗೆ ಹೋಗಲು ಅದೇ ಬಸ್ಸು ಹತ್ತಿದ್ದು ಮುಂದೆ ಮುಂದೆ ಜಾಗ ಮಾಡಿಕೊಂಡು ಬಸ್ಸಿನ ಮಧ್ಯೆ ಬರುವುದಕ್ಕೂ ಜೋಗಿ ಅಲ್ಲಿ ನಿಂತಿರುವುದಕ್ಕೂ ಸರಿಯಾಗಿ, ಇನ್ನು ಹಿಂದಕ್ಕೂ ಮುಂದಕ್ಕೂ ಹೋಗಲು ಜಗ್ಗಲೂ ಆಗದಂತಾಗಿಬಿಟ್ಟಿತು. ‘ಓಹೋ ಏನ್ಲಾ ಜೋಗಿ, ಅಲೆ ಇಲ್ಲಿ ಬಸ್ಸಲ್ಲಿದ್ದಿಯೋ, ಏನ್ ಪಿಚ್ಚರಿಗೆ ಪ್ಯಾಟೇಗೊಯ್ತಿದ್ದಿಯಾ?’ ಎಂದು ಗೌಡರು ಕೇಳಿದರು. ‘ಆಯ್ ವೋಗ್ರಾಪ್ಪೋ ಯಾವ ನಿನ್ ಮಗ ಕಂಡಾ ಪಿಚ್ಚರ್‌ನಾಸೆಯಾ ತಿನ್ನುಕೇ ಇಟ್ಟಿಲ್ಲ ಇನ್ನು ಪಿಚ್ಚರ್ ಬ್ಯಾರೇ’ ಎಂದು ಗೌಡರ ಪಕ್ಕ ನಿಂತುಕೊಳ್ಳುವುದು ಸರಿ ಅಲ್ಲ ಎಂದು ಮುಂದಕ್ಕೆ ಹೋಗಲು ನುಗ್ಗಾಡಿದ.

ಹಿಂದೆ ಮುಂದೆ ನಿಂತಿದ್ದವರು ಇವನ ವಸಕಾಟ, ನೂಕಾಟ ಕಂಡು ರೇಗಿ ‘ಸುಮ್ನೆ ಒಂತಾವ ನಿಂತ್ಕಯ್ಯಾ, ಇಲ್ಲೆಲ್ಲ ನಿಂತಿರುರು ಜನಾ ಅಲ್ಲವಾ, ಏನೋ ಹೆಂಗುಸ್ರು ಮಕ್ಕಳು ಅನ್ನದು ಯಾವುದೂ ಬ್ಯಾಡವೇ, ಏನ್ ನೀನೇ ಸರಿಯಾ ಗಂಡ್ಸು, ಮೆತ್‌ಮೆತ್ಗೆ ವಸಿಕದ್ ಪಸಿಕಂದು ಒಳಾಕ್ ಬತ್ತೀಯಲಾ’ ಎಂದು ಯಾವುದೋ ಒಂದು ನಡು ವಯಸ್ಸಿನ ಹೆಂಗಸು ತನ್ನ ಮಗಳನ್ನು ಮುಂದೆ ಬಿಟ್ಟುಕೊಂಡು ಜೋಗಿಯ ಮೇಲೆ ರೇಗಾಡಿದಳು. ಅಕ್ಕಪಕ್ಕದ ಗಂಡಸರು ಅವನೇನೋ ತರಲೆ ಮಾಡಿರಬೇಕೆಂದು ಕೆಂಗಣ್ಣು ಕಾರಿ ಎಚ್ಚರಿಸಿದರು. ಅಯ್ಯೋ ದೇವ್ರೇ ಏನಪ್ಪಾ ಮಾಡುದು ಎನ್ನುತ್ತಾ ‘ರೀ ಡ್ರೈವರ್, ಬಸ್ಸಾ ಸುರು ಮಾಡ್ರಿ ಇನ್ನೂ ಯೆಸ್ಟೊತ್ತು ಅಂತ ನಿಲ್ಲಿಸ್ಕಂಡಿದ್ದೀರೀ’ ಎಂದು ಸಿಟ್ಟುಕಾರಿದ. ಗೌಡರು ಶಾಂತವಾಗಿ ‘ಅಯ್ಯೋ’ ಸುಮ್ಲಿರ್ಲಾ, ಗೂಡುನ್ ಮಂಕ್ರಿಯಾ ಮ್ಯಾಕೆ ಹಾಕ್ತಾವರೆ ಕನಾ’ ಎಂದು ಕಿಟಿಕಿಯ ಕಡೆಗೆ ತಿರುಗಿ ನಿಂತರು. ಕ್ಷಣ ಕ್ಷಣಕ್ಕೂ ಜೋಗಿಯ ಎದೆ ಬಡಿದುಕೊಳ್ಳುತ್ತಾ, ಅವನ ಹೊಟ್ಟೆಯೊಳಗಿನ ಅಲಾರಾಂ ಗಡಿಯಾರವೂ, ಎದೆಗುಂಡಿಗೆಯೂ ಒಂದಕ್ಕೊಂದು ಮಲ್ಲಯುದ್ಧಕ್ಕೆ ಸಜ್ಜಾಗಿ ನಿಂತವರಂತಾಗಿ ಆ ಅಲಾರಾಂ ಗಡಿಯಾರದ ಮೇಲೆ ಅಸಾಧ್ಯವಾದ ಸಿಟ್ಟು ಬಂದು ತಾನೆಂತಹ ದರಿದ್ರವನ್ನು ಕದ್ದೆನಲ್ಲಾ ಎಂದು ತನ್ನನ್ನು ತಾನೇ ಬೈದುಕೊಳ್ಳುತ್ತಾ, ಪಕ್ಕದಲ್ಲೇ ನಿಂತಿದ್ದ ಗೌಡರ ಮೇಲೂ ಸಿಟ್ಟು ಬರುತ್ತಾ, ಏನೂ ಮಾಡದೆ ನಿಂತಿದ್ದ. ಕ್ಷಣದಿಂದ ಕ್ಷಣಕ್ಕೆ ಅಲಾರಾಂ ಗಡಿಯಾರದ ಸದ್ದು ಅವನ ಹೊಟ್ಟೆಯನ್ನೇ ಬಗೆದುಕೊಂಡು ಈಚೆಗೆ ಬಂದು ಕೂಗಿ ಕೂಗಿ ಲಟ್‌ಲಟ್…..ಲಟ್‌ಲಟ್…..ಲಟ ಲಟ ಲಟಾರ್ ಎಂದು ಆರ್ಭಟಿಸಿದಂತಾಗಿ ಬೆರೆತು ಹೋದ. ‘ನಡೀ ಡ್ರೈವರಣ್ಣಾ’ ಎಂದು ಜೋಗಿ ಪ್ರಾರ್ಥಿಸಿದರೂ ಚಾಲಕ ಕೇಳಲಿಲ್ಲ. ಜೋಗಿಯ ಅದೃಷ್ಟ ಕೆಟ್ಟಿತ್ತು ಎಂದು ಕಾಣುತ್ತದೆ. ಆ ಅಲಾರಾಂ ಗಡಿಯಾರವನ್ನು ಗೌಡರು ಹಿಂದೆ ಯಾವುದೋ ಖುಷಿಗೆ ಒಳಗಾಗಿ ಹೊಂಗನೂರಿನ ಸಾಬರ ಬಳಿ ತೆಗೆದುಕೊಂಡು ಬಂದಿದ್ದರು. ಅದು ನೋಡಲು ಬಹಳ ಆಕರ್ಷಕವಾಗಿ ಸಾವಿರಾರು ರೂಪಾಯಿಗಳ ಬೆಲೆಯುಳ್ಳದ್ದು ಎಂಬಂತೆ ಚಿನ್ನದ ಬಣ್ಣದ ಗಿಲೀಟನ್ನು ಗಡಿಯಾರದ ಒಳಗೆಲ್ಲ ಹೊಂದಿದ್ದು ಕಂಗೊಳಿಸುತ್ತಿತ್ತು. ಅದನ್ನು ಯಾರಿಗಾದರೂ ಮಾರಿದರೆ ನಿಸ್ಸಂದೇಹವಾಗಿ ನೂರಾರು ರೂಗಳು ಕೈಗೆ ಬಂದು ಬೀಳುತ್ತವೆ ಎನಿಸುವಂತಿತ್ತು.

ಹೀಗಾಗಿಯೇ ಜೋಗಿ ಗೌಡರಿಗೆ ಪ್ರತಿಭಟನಾರ್ಥವಾಗಿ ತನ್ನ ಅಸಹಾಯತೆಗೊಂದು ಸಮಾಧಾನವಾಗಿ ಆ ಗಡಿಯಾರವನ್ನು ಕದ್ದು ಹೇಗೋ ಈ ಬೇಸಿಗೆಯ ನಾಲ್ಕಾರು ದಿನಗಳನ್ನು ಚೆಂದವಾಗಿ ಕಳೆಯಬಹುದೆಂದು ತಿಳಿದಿದ್ದ. ಆದರೆ ವಾಸ್ತವವೇ ಬೇರೆ ಇತ್ತು. ಗೌಡರ ಅನೇಕ ಅಂತಹ ಕಣ್‌ಸೆಳೆಯುವ ವಸ್ತುಗಳಲ್ಲಿ ಇದೂ ಕೂಡ ಒಂದು ಲಡಾಸು ಮಾಲಾಗಿದ್ದು, ಕೆಟ್ಟದ್ದು ಸರಿಯಾಗಿ ಟೈಂ ತೋರಿಸದೆ ಯಾವಾಗಲೋ ತಟ್ಟಕ್ಕನೆ ನಿಂತು, ಮತ್ಯಾವಾಗಲೋ ದಿಢೀರನೆ ವೇಗವಾಗಿ ಓಡಿ, ಮತ್ತೆ ಮಂದವಾಗಿ, ತನಗೆ ಇಷ್ಟ ಬಂದಂತೆಲ್ಲ ತಿರುಗಿಕೊಂಡು ತೋಟದ ಮನೆಯ ದೀಪದ ಗೂಡಿನಲ್ಲಿ ಕುಳಿತಿತ್ತು. ಇಂತಹ ಚರಿತ್ರೆಯುಳ್ಳ ಆ ಗಡಿಯಾರವನ್ನು ಗೌಡರು ವಿಕ್ಟೋರಿಯಾ ರಾಣಿಯ ಅರಮನೆಯಲ್ಲಿ ಇದು ಇತ್ತು ಎಂಬಂತೆ ಅದು ತನಗೆ ಬಳುವಳಿಯಾಗಿ ಬಂದಿದೆ ಎಂದು ಭ್ರಮಿಸಿ ಇಟ್ಟುಕೊಂಡಿದ್ದರು. ಈಗ ಕೆಟ್ಟು ನಿಂತು ನಡೆವ ಆ ಅಲಾರಾಂ ಗಡಿಯಾರ ಯಾಕೋ ಸಿಟ್ಟಾದಂತೆ ತನ್ನ ಮುಳ್ಳುಗಳನ್ನು ಸುತ್ತಿ ಸತ್ತಿರುವಂತಾಗಿತ್ತು. ಎಲ್ಲವೂ ಬಹಿರಂಗವಾಗಿತ್ತು. ಬಸ್ಸು ಇನ್ನೇನು ಹೊರಡಬೇಕು ಅನ್ನುವ ಹೊತ್ತಿಗೆ ಬಸ್ಸಿನಲ್ಲಿದ್ದ ಎಲ್ಲರಿಗೂ ತಿಳಿಯುವಂತೆ ಆ ಅಲಾರಾಂ ಗಡಿಯಾರ ಜೋಗಿಯ ಪಂಚೆ ಮರೆಯನ್ನು ಸೀಳಿ ಟಣ…ಣ…ಣ ಟ್ರಿಂಣ್ ಟ್ರಿಂಣ್ ಟ್ರೀ೦೦೦ ಎಂದು ಕರ್ಕಶವಾಗಿ ಕೂಗಿಕೊಂಡು ಎಲ್ಲರ ಗಮನ ಸೆಳೆಯಿತು.

ಇದ್ದಕ್ಕಿದ್ದಂತೆ ಗೌಡರು ಅವನ ಪಕ್ಕದಲ್ಲೇ ಇದ್ದವರು ವಿಶೇಷವಾಗಿ ಎಚ್ಚರಗೊಂಡು, ‘ಅರರೇ…..ಇದೇನ್ಲಾ ಜೋಗಿ ಅಲಾರಾಮು….. ಇದೆಲಿತ್ಲಾ ನಿನ್ನ ತಾವು….’ ಅನ್ನುವಷ್ಟರಲ್ಲೇ ಜೋಗಿ ಬೆದರಿದ ಗೊಂಬೆಯಾಗಿ ಕೊನೆಗೂ ನನ್ನನ್ನು ಸ್ವತಃ ನನ್ನ ಕಳ್ಳಮಾಲೇ ಹಿಡಿದುಕೊಟ್ಟುಬಿಟ್ಟಿತಲ್ಲಾ ಎಂದು ಹತಾಶನಾಗಿ ‘ಅಯ್ಯಯ್ಯೋ’ ತಪ್ಪಾಯ್ತು ಕಣ್ರಪ್ಪಾ, ಏನೋ ತಿಳಿದೇ ತಪ್ಪು ಮಾಡಿಬುಟ್ಟೆ. ಬುಟ್ ಬುಡ್ರಪ್ಪೋ’ ಎಂದು ಆ ನೂಕಾಟದಲ್ಲೂ ಗೌಡರ ಕಾಲು ಕಟ್ಟಿಕೊಳ್ಳಲು ಹೋದ. ಗೌಡರಿಗೆ ಅಲಾರಾಂ ಕಳುವಾಗಿದೆ ಎಂಬುದೇ ಗೊತ್ತಿರಲಿಲ್ಲ. ಸ್ವತಃ ಅವರೇ ಅವನ ಕಳ್ಳತನಕ್ಕೆ ಒಂದು ಕ್ಷಣ ಬೆಪ್ಪಾಗಿ ಮತ್ತೆ ಸಿಟ್ಟಾಗಿ, ಗಡಿಯಾರವನ್ನು ಅವನಿಂದ ಕಿತ್ತುಕೊಂಡು ಆ ಜನರ ಸಮ್ಮುಖದಲ್ಲಿ ಹೊಲಸಾಗಿ ಬೈಯ್ಯಲು ಆಗದಿದ್ದಕ್ಕೆ ಸಿಟ್ಟಾಗಿ, ಏನೂ ಮಾಡಲು ತೋಚದಾಗಿ, ಕೊನೆಗೆ ಆ ಗಡಿಯಾರದ ಕಳವಿನ ಸಮಾಚಾರ ಬಸ್ಸಿನವರಿಗೆಲ್ಲ ಅರಿವಾಗಿ, ಅವರೆಲ್ಲ ಗೊಳ್ಳನೆ ನಗುತ್ತಾ ಕಳ್ಳ ಕದ್ದ ಮಾಲ, ಅದೇ ಮಾಲು ಅವನನ್ನೇ ಹಿಡಿದುಕೊಟ್ಟಿತಲ್ಲಾ; ಗೌಡರು ಎಂತಾ ಇಕಮತ್ತಾದ ಅಲಾರಾಂ ಮಡಗಿದ್ದಾರು ನೋಡಿದಿರಾ ಎಂದು ಕತೆ ಕಟ್ಟಿ ಬೆರಗಾಗಿ ಜೋಗಿಗೆ ಛೀಮಾರಿ ಹಾಕಿ ನಗತೊಡಗಿದರು. ಡ್ರೈವರನೂ, ಕಂಡಕ್ಟರನೂ ಜೋಗಿಯ ಪಜೀತಿ ಕಂಡು ಕೆಳಗಿಳಿಸಿದರು.

ಯಾಕೋ, ಮಾಲು ಮತ್ತು ಜೋಗಿ ಸಹಿತ ಗೌಡರೂ ಬಸ್ಸಿಂದ ಕೆಳಗಿಳಿದರು. ಊರ ಜನ ಮುತ್ತಿಕೊಂಡರು. ಸುದ್ದಿ ಕ್ಷಣಾರ್ಧದಲ್ಲಿ ಸರ್ಕಲ್ಲಿನ ನಾಲ್ದೆಸೆಗಳ ಅಂಗಡಿ ಸಾಲುಗಳಿಗೂ ಬಡಿದು ಅದು ಅಲ್ಲಿಂದ ಊರೊಳಕ್ಕೂ ಮೊಳಗಿ ವಿಚಿತ್ರ ಪರಿವೇಷ ವಿರ್ಮಾಣವಾಯಿತು. ಜೋಗಿಗೆ ತಲೆಕೆಟ್ಟುಹೋಗಿತ್ತು. ಗೌಡರು ಕಳ್ಳನನ್ನು ಹಿಡಿದ ಗತ್ತಿನಿಂದ ಹತ್ತಾರು ಜನಕ್ಕೆ ಜೋಗಿಯ ಅಪರಾಧವನ್ನು ದೊಡ್ಡ ಗಂಟಲಿನಿಂದ ವಿವರಿಸುತ್ತಿದ್ದರು. ಗೌಡರೇ ಸ್ವತಃ ಒಂದು ವಾರ ಪೂರ್ತಿ ಕೆಲಸ ಮಾಡಿಸಿಕೊಂಡು, ಕೊಟ್ಟಿದ್ದ ಪುಡಿಕಾಸಿಗೆ ಅಷ್ಟೂ ಕೂಲಿಯ ಹಣವನ್ನು ಸಮ ಮಾಡಿಕೊಂಡರು ಎಂದು ಹೇಳಲು ಬಂದ ಧೈರ್ಯ ಬಾಯ ಹೊರಕ್ಕೆ ಬರದೇ ಅದೇ ಮರೆತು ಹೋಗಿ ಆ ಮರೆವೇ ಅವನನ್ನು ಮುಚ್ಚಿಕೊಂಡು ಜನರ ತಮಾಷೆ ಮಾತುಗಳೇ ಅಲ್ಲೆಲ್ಲ ಚೆಲ್ಲಾಡಿ, ಸ್ವತಃ ಜೋಗಿಯೇ ನಾಚಿಕೆಯಿಂದ ತಬ್ಬಿಬ್ಬಾಗಿ ಎಲ್ಲರ ಕಡೆ ಮಿಕಿ ಮಿಕಿ ನೋಡತೊಡಗಿದ.

ಗೌಡರಿಗೆ ಏನನಿಸಿತೋ ಏನೋ, ಅಷ್ಟು ದೂರ ತೋಟದ ದಾರಿ ಹಿಡಿದು ಹೋಗಿದ್ದವರು ಹಿಂತಿರುಗಿ ಬಂದು ಮರದ ಕೆಳಗೆ ಎತ್ತಲೋ ನೋಡುತ್ತ ಕುಳಿತಿದ್ದ ಜೋಗಿಯ ಬಳಿ ಹೋಗಿ ಆ ಅಲಾರಾಂ ಗಡಿಯಾರವನ್ನು ಅವನ ಕೈಗೇ ಕೊಟ್ಟು ‘ತಕೋ ಇದಾ…. ನೀನೇ ಮಡಿಕೋ ಹೋಗು’ ಎಂದು ತುಂಡರಿಸಿ, ಏನೋ ತಡವರಿಸಿ ಮುಂದೆ ಮಾತು ಹೊರಡದೆ ಹೊರಟುಹೋದರು. ಕಾಲವನ್ನು ಯಾರೂ ಕದಿಯಲು ಸಾಧ್ಯವಿರಲಿಲ್ಲ. ಅಥವಾ ಆ ಕಾಲವನ್ನು ಬಚ್ಚಿಟ್ಟುಕೊಂಡು ತನ್ನ ಸ್ವಂತಕ್ಕೆ ತನ್ನೊಳಗೇ ಬಂಧಿಸಿಡಲು ಸಾಧ್ಯವಿರಲಿಲ್ಲ ಎಂಬಂತೆ ಗೌಡರು ಆ ಅಲಾರಾಂ ಗಡಿಯಾರವನ್ನು ಜೋಗಿಗೇ ಕೊಟ್ಟುಬಿಟ್ಟು ಹೋದ ಮೇಲೆ ಎಷ್ಟೋ ಸಮಯದ ನಂತರ ಜೋಗಿ ಎದ್ದು ಹಿಂತಿರುಗಿ ಮತ್ತೆ ನಮ್ಮ ಹೋಟೆಲಿಗೆ ಬಂದ. ಅಷ್ಟು ಹೊತ್ತಿಗಾಗಲೇ ನಮಗೆಲ್ಲ ಸುದ್ದಿ ಗೊತ್ತಾಗಿತ್ತು. ಸಂಜೆ ಆಗುತ್ತಿತ್ತು. ಕಾಲ ನಿಗೂಢವಾಗಿ ಸರಿಯುತ್ತಿತ್ತು. ಮರೆಯಲ್ಲಿ ಲಟಗುಟ್ಟುತ್ತಿದ್ದ ಅಲಾರಾಂ ಈಗ ಸ್ವತಃ ಜೋಗಿಯ ಅಂಗೈಯಲ್ಲಿ ಹೊಳೆಯುತ್ತ ಚೆಂದವಾಗಿ ಕುಳಿತಿತ್ತು. ನನ್ನ ತಾತ ಅವನನ್ನು ಎಂತದೋ ಮಾರ್ಮಿಕ ಭಾವದಲ್ಲಿ ನೋಡಿ ನಗಾಡಿ ಇದ್ದಕ್ಕಿದ್ದಂತೆ ಅವನಿಗೊಂದು ವಿಶೇಷಣವನ್ನಿಟ್ಟು ಗಂಟೆಜೋಗಿ ಎಂದು ಕರೆದರು. ಹೋಟೆಲಿನಲ್ಲಿದ್ದವರೆಲ್ಲ ಇದು ಸರಿಯಾದ ಹೆಸರು ಎಂಬಂತೆ ಗಡಿಯಾರ ಕದ್ದು ಕೊನೆಗೆ ಸಿಕ್ಕಿಬಿದ್ದು ಈಗ ಸ್ವತಃ ಅದನ್ನೇ ಅಸಲಿಯಾಗಿ ಪಡೆದು ಬಂದದ್ದಕ್ಕೆ ಗಂಟೆ ಎನ್ನುವುದು ಅವನಿಗೆ ಅನ್ವರ್ಥವಾಗಿತ್ತು.
ಆಮೇಲೆ ಊರಿನವರೆಲ್ಲ ಅವನನ್ನು ಗಂಟೆಜೋಗಿ ಎಂದೇ ಕರೆಯಲು ಆರಂಭಿಸಿ ಗೌಡರೂ ಕೂಡ ಗಂಟೆ ಜೋಗಿ ಎಂದೇ ಸಂಬೋಧಿಸುವಂತಾಯಿತು. ಇದ್ದಕ್ಕಿದ್ದಂತೆ ಒಂದು ದಿನ ಯಾರಿಗೂ ಏನನ್ನೂ ಹೇಳದೇ ಕೇಳದೇ ಜೋಗಿ ಬೆಂಗಳೂರಿಗೆ ಹೋದವನು ಹಿಂತಿರುಗಿ ಬರಲಿಲ್ಲ. ಊರಲ್ಲಿ ಜನ ಅವನ ಬಗ್ಗೇ ಕತೆ ಕಟ್ಟುತ್ತಾ ಬೆಂಗಳೂರಿನ ಎಚ್.ಎಂ.ಟಿ. ಕೈಗಡಿಯಾರ ಕಂಪನಿಯಲ್ಲೇ ಕದಿಯಲು ಹೋಗಿದ್ದಾನೆಂದು ಆಗಾಗ ನೆನಪಿಸಿಕೊಳ್ಳುತ್ತಾರೆ. ನಿಜಕ್ಕೂ ಆ ಜೋಗಿ, ನಮ್ಮ ಗಂಟೆ ಜೋಗಿ ಈಗ ಆ ಕಾಲದ ಯಾವ ಅಲೆಯ ಯಾವ ಜಾಲದಲ್ಲಿ ಎಲ್ಲಿ ಹಾರಿಹೋಗುತ್ತಿರುವನೋ! ಈ ಕಾಲದ ಮಾಯೆಯಲ್ಲಿ ಯಾವುದು ತಾನೇ ಸುಲಭವಾಗಿ ಅರಿವಿಗೆ ದಕ್ಕುತ್ತದೆ?
*****
ಬರೆದದ್ದು: ೧೯೯೩ ಪ್ರಕಟವಾದದ್ದು: ೧೯೯೯
(ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ)

ಕೀಲಿಕರಣ: ನಂದಿನಿಶೇಖರ್ ಮತ್ತು ಸೀತಾಶೇಖರ್
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.