ಒಳ್ಗುರಿಗೆ


ನೀಲ ನೀಲ ನಿರ್ವಿಕಾರ ನಿರುತ ಬಾನಲಿ
ತಾಳಗೆಟ್ಟ, ತಿರೆಯ ಬಾಳಿನಾಚೆ ಬಯಲಲಿ
ತಿಳಿಯ ಬೆಳಕು ಚೆಲ್ಲವರಿದನಂತ ಪಟದಲಿ
ಬರೆದೆನಯ್ಯ ಗುರಿಯ ಚಿತ್ರ ಎದೆಯ ಕುದಿಯಲಿ.
ಒಳಿತು ಕೆಡಕು
ಮನದ ಮಿಡುಕು
ಮೇರೆ ಮೀರಿ ಹಾತೊರೆದಿರೆ
ದೇಹವೆಲ್ಲ ತತ್ತರಿಸಿರೆ
ಕಿರಣಕಂಡೆನು
ಹರುಷಗೊಂಡೆನು;
ಆದರೇಕೊ ಶಾಂತಿ ಬಾರದಯ್ಯೊ ಮನಸಿಗೆ
ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ.


ಕಲ್ಲು-ಮುಳ್ಳು ತುಳಿದು ದಾರಿ ಸಾಗುತಿರುವೆಡೆ
ಹೆಜ್ಜೆಗೊಂದು ಬಿಜ್ಜೆನುಡಿಯ ನೆನಪು ಬರುವೊಡೆ,
ನಂಬಿದಂಥ ಬಿಂಬ ಕಣ್ಣ ಸೂರೆಗೊಂಡೊಡೆ
ಒಲವಿನೊಂದು ಸೂತ್ರವಿಡಿದು ಬರುವೆ ನಿನ್ನೆಡೆ.
ನನ್ನದೇನು?
ನಾನೆ ನಾನು!
ಉಳಿದ ಒಡವೆ ವಸ್ತುವಿಲ್ಲ
ಅದರ ಬಯಕೆ ನನಗೆ ಹೊಲ್ಲ;
ಇದುವೆ ಪಂಥವು
ನನ್ನ ಹಂತವು.
ಬಾಡುತಿಹುದು ಎದೆಯ ಮುಗುಳು ಬೆಳಕಿನಾಸೆಗೆ
ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ.


ಬಿಡುವಿನೆಡೆಗೆ ಸಾಗಲೆಂದೆ; ಇಲ್ಲ ಬಿಡುಗಡೆ.
ಬಯಸಿದನಿತು ಬಿಗಿಯುತಿಹುದು ಬಂಧವೊಂದೆಡೆ.
ಎನ್ನ ಪಾಡಿಗೆನ್ನ ಬಿಡದು, ಎಲ್ಲಿ ನಿಲುಗಡೆ?
ಬೇರೆಯೊಂದು ಶಕ್ತಿ ಎಳೆಯುತಿಹುದು ತನ್ನೆಡೆ.
ಸಾಗಲೇನು,
ನೀಗಲೇನು?
ಎದೆಯು ಮಿಡಿದು ಕಾತರಿಸಿರೆ
ಬಾಳಿನಾಸೆ ಪೂತ್ಕರಿಸಿರೆ
ಕಣ್ಗೆ ಕತ್ತಲು
ಸುತ್ತು ಮುತ್ತಲು,
ಗಾಢತಮದ ಗೂಢ ನಿಬಿಡ ಕಾಡಿನೊಡಲಿಗೆ
ಉರುಳುತಿಹುದು ಜೀವ ಝರಿಯು ಆಳು ಕಡಲಿಗೆ.


ನನ್ನ ನಿನ್ನ ನಡುವೆ ನೂರು ಕೋಟೆ ಕೊತ್ತಲ,
ಇದ್ದರೇನು, ಇಲ್ಲವೆನಿಸಿಬಿಡುವ ಹಂಬಲ.
ಮತಿಯು ಕಲಕದಿರಲಿ, ಆಗದಿರಲಿ ಚಂಚಲ
ಸೋಲು-ಗೆಲವು, ನೋವು-ನಲವು ನೆಳಲು ಬೆಳಕಲ;
ಬಿಗಿದ ಮುಷ್ಟಿ
ನೆಗೆದ ದೃಷ್ಟಿ
ಕಲ್ಲಿಗಿಂತ ಕಲ್ಲಾಗಿರೆ
ಉಕ್ಕಿಗಿಂತ ಉಕ್ಕಾಗಿರೆ
“ಸಿಡಿಲ ಹಿಡಿವೆನು!
ಕಡಲ ಕುಡಿವೆನು!”
ಅಂತರಂಗ ನುಡಿವುದಿಂತು ಬಾರಿ ಬಾರಿಗೆ
ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ.


ಬಾನ ಗುರಿಯ ಬೆಳ್ಳಿ ಚಿಕ್ಕೆ ಮಿನುಗು ಮಿನುಗೆಲೆ
ನೊಂದ ಬೆಂದ ಜೀವಿಗಿನಿತು ಬೆಳಕ ತೋರೆಲೆ
ಪಂದೆಯಾಗಿ ಜೀವಿಸುವದು ಬೇಡ ಬೇಡೆಲೆ
ಮುಂದಿನೊಳಿತು ಬಟ್ಟೆಯಲ್ಲಿ ಜೀವ ತೇಯೆಲೆ.
ಇಂದಿನಿಂದ
ಗಂಧ ಚಂದ
ಕೀಳು ಬಾಳಿನಿಂದ ನೀನು
ಮೇಲಕೆತ್ತಲಾರೆಯೇನು?
ಹೇಳು ಒಳ್ಗುರಿ,
ತಾಳೆ ಬಾಳುರಿ
ನನ್ನದಲ್ಲವನ್ನು ಧಾರೆಯೆರೆಯ ಮಹಾದರ್ಶಕೆ
ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ.
*****