ಚಿಂತನ


ತೆರಳಿದರು
ಅತಿಧಿಗಳು ಮರಳಿದರು ಮನೆಗೆ
ನನ್ನ ಮನೆ
(ಗುಬ್ಬಿ ಹೆರವರ ಮನೆಗೆ
ತನ್ನ ಮನೆ ಎಂದಂತೆ)
ಬರಿದಾಯ್ತು ಕೊನೆಗೆ!

ಎದೆಯೊಲವನರಳಿಸುತ
ಕೆರಳಿಸುತ ಬಂದು
ಒಂದು ದಿನ ನಿಂದು,
ಏನೆಲ್ಲವನು ಒಮ್ಮೆ ಹೊಳಹಿನಲಿತಂದು
ಎದೆಯ ತೋಟಕೆ ದಯೆಯ ಮಳೆಗರೆದರು!
ಮೇಲುನೋಟಕೆ ತಣಿಸಿ
ಒಳಗೆ ಕನಿಕರಿಸಿ,
ಬೇಸಗೆಯ ಮಲ್ಲಿಗೆಯ ಗಾಳಿ ಬೀಸಿ
ಮೋಡದೊಲು ಬಯಲಾಗಿ
ಬೆರಗು ಗೊಳಿಸಿದರು.
…………
ತುಂಬಿದೀ ಬಟ್ಟಲವನಾರು ಕುಡಿದವರು?


ಅಲ್ಲೊಬ್ಬರು
ಇಲ್ಲೊಬ್ಬರು
ಬಾಳಕವಲುದಾರಿಯಲ್ಲಿ
ಸಾಗಿದತಿಧಿಗೆಳೆಯರು;
ನೋವಿನೆಳೆಯ ಜಗ್ಗಿದಂತೆ
ನೆನಹಿನೊಡನೆ ನುಡಿವರು;
ಹೀಜಿ ಬಿಟ್ಟ ರಬ್ಬರಿನೊಲು
ಎದೆಗೆ ಬಂದು ಬಡಿವರು!
ಕತ್ತರಿಸಿದ ಹಲ್ಲಿ ಬಾಲ
ಐದೊ ಆರೊ ಸಲ,
ಜಿಗಿದು ನೆಗೆದು ನಿಶ್ವೇತನ
ಅಂತ ಮನದ ಚಿಂತನ,
ಚಿರಂತನ
*****