ಹನುಮಂತನಗರ ‘ಬಿಂಬ’ ಮಕ್ಕಳ ಹೊಸ ಪ್ರಯೋಗ ‘ಬೇಗ ಬರಲಿ ಡಾ. ರಾಜ್’

ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ.

ದೊಡ್ಡವರು ಚರ್ಚೆಗೆ ಕುಳಿತಾಗ ತಮ್ಮದೇ ಆದ ಲಾಜಿಕ್ ಹಿಡಿದು ಎಲ್ಲರಿಗಿಂತ ತಾನೇ ಮಹಾ ಚಾಣಾಕ್ಷ ಎಂಬಂತೆ ಈ ಕ್ಷಣವೂ ಮಾತನಾಡುವವರನ್ನು ನೀವೂ ಕಂಡಿರುತ್ತೀರಿ-ಕೇಳಿರುತ್ತೀರಿ.

ಕನ್ನಡದ ವರನಟ ಡಾ. ರಾಜ್‌ಕುಮಾರ್‍ ಸುರಕ್ಷಿತವಾಗಿ ಹಿಂತಿರುಗಲಿ ಕನ್ನಡ ಜನಮನದ ದುಗುಡ ದುಮ್ಮಾನಗಳು ದೂರವಾಗಿ, ದಟ್ಟನೆ ಕವಿದಿರುವ ಕಪ್ಪನೆಯ ಮೋಡಗಳು ಮಂಜಿನಂತೆ ಕರಗಿ ಎಲ್ಲರ ಮುಖ ಕಮಲದಲ್ಲಿ ನಗೆ ತಾಂಡವವಾಡುವಂತಾಗಲಿ ಡಾ. ರಾಜ್ ಕುಟುಂಬ ವರ್ಗದಲ್ಲಿ ಮುಂಚಿನಂತೆ ಹರ್ಷ ಉಕ್ಕಿ ಬರಲಿ ಎಂದು ಹಾರೈಸಲು ‘ಬಿಂಬ’ ಮಕ್ಕಳು ಕಲಾಂಗಣದಲ್ಲಿ ತುಂಬಿ ತುಳುಕಿದ್ದರು. ಮಕ್ಕಳನ್ನು ಕರೆತಂದ ಪೋಷಕರು ನಮ್ಮ ಹಾರೈಕೆಯೂ ಅದೇ ಎಂದು ಕುಳಿತರು.

ಅಂದಿನ ಸರಳವಾದ ಸಮಾರಂಭದ ಹೊಣೆ ಹೊತ್ತ ವನಮಾಲಾ ಪ್ರಕಾಶ್ ಕಾರ್ಯಕ್ರಮದ ರೂವಾರಿ ನೀವು ಎಂದು ಕಲಾವಿದ ಎ.ಎಂ.ಪ್ರಕಾಶ್‌ಗೆ ಆ ಜವಾಬ್ದಾರಿ ನೀಡಿದರು.

ಕಾರ್ಯಕ್ರಮ ಅಲ್ಲೇ ಆ ಕ್ಷಣದಲ್ಲೇ ರೂಪುಗೊಳ್ಳಬೇಕಾಯಿತು. “ಡಾ. ರಾಜ್‌ಕುಮಾರ್‍ ಹಾಗೂ ಕಾಡುಗಳ್ಳ ವೀರಪ್ಪನ್ ಹೆಸರು ಈಗ ಜನಜನಿತವಾಗಿದೆ. ಇದಕ್ಕೆ ಕಾರಣವೇನು? ಎಂದು ಕೇಳಿದ ಮರುಘಳಿಗೆ “ನಾ ಮುಂದೆ-ತಾ ಮುಂದೆ” ಎಲ್ಲ ಒಬ್ಬೊಬ್ಬರಾಗಿ ನಿಂತು “ವರ್ಬಾಟಂ ರಿಪೋರ್ಟ್” ಎನ್ನುತ್ತಾರಲ್ಲ ಹಾಗೆ ಚಾಚೂ ತಪ್ಪದೆ ಎಲ್ಲ ವರದಿ ಮಾಡಿದರು.

ಇವೆಲ್ಲ ನೋಡುತ್ತ ಕುಳಿತಿದ್ದವರು ನಾನು ಹಾಗೂ ಪತ್ರಕರ್ತ ಮಿತ್ರ ಬಾಬೂ ದಿನಕರ್‍. “ಮುಂದೇನು ಮಾಡುತ್ತಾರೋ ನೋಡೋಣ” ಎಂಬುದು ನಮ್ಮ ಕುತೂಹಲವಾಗಿತ್ತು.

ಪ್ರಕಾಶ್ ಹೇಳಿದರು “ನಾನೀಗ ೧೫-೧೫ ಮಂದಿಯ ಎರಡು ಗುಂಪು ಮಾಡುತ್ತೇನೆ. ಒಂದಕ್ಕೆ ಅರ್ಜುನ್ ಹಾಗೂ ಪ್ರಿಯದರ್ಶಿನಿ ಲೀಡರ್‍ಸ್ ಆಗಿರುತ್ತಾರೆ. ಎರಡನೆ ಗುಂಪಿಗೆ ಅಖಿಲಾ, ಅನ್ವಿತಾ, ಅರ್ಚನಾ ಮುಂದಾಳುಗಳಾಗಿರುತ್ತಾರೆ. ಎರಡೂ ಗುಂಪಿನವರು ಬೇರೆ ಬೇರೆಯಾಗಿ ಕುಳಿತು ಚರ್ಚೆ ಮಾಡಿ, ಡಾ. ರಾಜ್‌ರನ್ನು ವೀರಪ್ಪನ್ ಕರೆದೊಯ್ದ ಘಳಿಗೆಯಿಂದ ಈವರೆಗೆ ಏನೇನಾಯಿತು ಎಂಬುದನ್ನು ನಮ್ಮ ಮುಂದೆ ನಾಟಕ ಆಡಿ ತೋರಬೇಕು. ಇದು ಹೇಗೆ ಮುಕ್ತಾಯವಾದೀತು ಎಂಬುದು ನಿಮ್ಮ ಕಲ್ಪನೆಗೆ ಬಿಟ್ಟ ವಿಷಯ. ಸಾಧಾರಣವಾಗಿ ಒಬ್ಬ ನಾಟಕಕಾರ ಬರೆದ ನಾಟಕ ಈವರೆಗೆ ಆಡಿದ್ದೀರಿ. ಇಂದು ನೀವೆಲ್ಲ ಸೇರಿ ಈ ನಾಟಕ ಚರ್ಚಿಸಿ-ಅಭಿನಯಿಸಬೇಕು. ನಿಮ್ಮ ಚಿಂತನಾ ಶಕ್ತಿಗೆ-ಸಂಘಟನಾ ಚಾತುರ್ಯಕ್ಕೆ ಇದೊಂದು ಸವಾಲು. ನಾಟಕಾಭಿನಯಿಸಲು ನಿಮಗೆ ನೀಡಿರುವ ಅವಕಾಶ ಅರ್ಧ ಗಂಟೆ” ಎಂದದ್ದೇ ತಡ-ಎರಡು ಗುಂಪುಗಳಲ್ಲಿ ಕತೆಯ ಬಗ್ಗೆ ಚರ್ಚೆ ನಡೆಯಿತು.

ನಾನು ವೀರಪ್ಪನ್ ಎಂದ ಒಬ್ಬ. ನಾನು ಡಾ. ರಾಜ್ ಆಗ್ತೀನಿ ಎಂದ ಮಗದೊಬ್ಬ. ನಾನು ಪಾರ್ವತಮ್ಮನವರಾಗ್ತೀನಿ ಎಂದಳು ಒಬ್ಬ ಹುಡುಗಿ. ಎರಡೂ ಗುಂಪುಗಳಲ್ಲಿ ನಾಟಕದ ತಯಾರಿ ನಡೆಯಿತು.

ಒಬ್ಬ ಹುಡುಗ ಬಂದೂಕು ಹಿಡಿಯುವುದು ಹೇಗೆಂದು ಹೇಳಿ ಕೊಡುತ್ತಿದ್ದ.

ಒಬ್ಬ ಹುಡುಗಿ ಪಾರ್ವತಮ್ಮನವರ ಪಾತ್ರಧಾರಿಗೆ ದೊಡ್ಡ ಕುಂಕುಮವಿಟ್ಟಳು. ನಾನು ಶಿವರಾಜ್‌ಕುಮಾರ್‍ ಎಂದ ಹುಡುಗ ಬಣ್ಣ ಬಣ್ಣದ ಷರಟು ಧರಿಸಿ ನಿಂತ.

ಎರಡೂ ತಂಡದವರು ‘ಅಭಿನಯ ತರಂಗ’ ನಾಟಕ ಶಾಲೆಯಲ್ಲಿದ್ದ ಹಲವು ರಂಗ ಸಜ್ಜಿಕೆಗೆ ಬೇಕಾದ ವಸ್ತುಗಳನ್ನು ತಂದಿಟ್ಟುಕೊಂಡರು.

ತಂಡದಲ್ಲೊಬ್ಬ ನಾನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಂದು ಸಂಭ್ರಮಿಸುತ್ತಿದ್ದ.

ಡ್ಯಾನ್ಸ್ ಚೆನ್ನಾಗಿ ಬಲ್ಲ ಹುಡುಗಿ ಸಪ್ಪಗಿದ್ದಳು. “ಏಕೆ” ಎಂದಾಗ “ವೀರಪ್ಪನ್ ವಿಷಯ ಕುರಿತ ನಾಟಕದಲ್ಲಿ ಸಂತೋಷಕ್ಕೆ-ಕುಣಿತಕ್ಕೆ ಜಾಗವೆಲ್ಲಿದೆ” ಎಂದಳು.

“ಪರವಾಗಿಲ್ವೆ-ಅಷ್ಟರಮಟ್ಟಿಗೆ ಚಿಂತಿಸಿದ್ದಾಳಲ್ಲ” ಎಂದು ನಾನಂದುಕೊಳ್ಳುತ್ತಿದ್ದಾಗ ಅಖಿಲ “ನೀನ್ಯಾಕೆ ಸಪ್ಪಗಿದ್ದಿ ಬಾ. ನೀನು ಪಾತ್ರ ವಹಿಸಬೇಕು ನಮ್ಮ ಜತೆ” ಎಂದು ಕರೆದೊಯ್ದಳು.

ಎಲ್ಲ ೧೦-೧೫ ನಿಮಿಷ ಹೊರಾಂಗಣದಲ್ಲಿ, ಮಹಡಿ ಮೇಲೆ ಎಲ್ಲ ಹೋಗಿ ರಿಹರ್‍ಸಲ್ ಮಾಡಿ “ನಾವೀಗ ರೆಡಿ” ಎಂದು ಬಂದರು.

ಮೊದಲ ಗುಂಪು ಅರ್ಜುನ್ ಅವರದು. ಅರ್ಜುನ್‌ಗೆ ವಯಸ್ಸು ೧೨. ಮಹಾ ಚೂಟಿ ಹುಡುಗ. “ಈಗ ನಾವು ನಾವೇ ಸಿದ್ಧಮಾಡಿರುವ ನಾಟಕ ನೋಡುತ್ತೀರಿ? ಎಂದು ಅನೌನ್ಸ್ ಮಾಡಿ ಪಕ್ಕಕ್ಕೆ ತೆರಳಿದ. ಟಿ.ವಿ. ಮುಂದೆ ಕೆಲವರು ಕುಳಿತಿದ್ದಾರೆ. ಇದ್ದಕ್ಕಿದ್ದಂತೆ ನಾಲ್ಕಾರು ಮಂದಿ ಗನ್ ಹಿಡಿದು ಬಂದರು. ‘ಸಾರ್‍ ಬೇಕು’ ಎಂದರು.

ಪಾರ್ವತಮ್ಮನವರ ಪಾತ್ರಧಾರಿ “ಏಕೆ” ಎಂದಾಗ ಒಬ್ಬಾತ ‘ಶ್’ ಎಂದ. ಡಾ. ರಾಜ್ ಪಾತ್ರಧಾರಿ ಗಂಭೀರವಾಗಿ ಎದ್ದು “ಪಾರ್ವತಿ-ನೀ ಏನೂ ಯೋಚ್ನೆ ಮಾಡಬೇಡ- ಧೈರ್ಯವಾಗಿರು- ಮಕ್ಕಳಿಗೆಲ್ಲ ಹೇಳು” ಎಂದು ಹೊರಟರು ಅವರ ಹಿಂದೆ.

ಲೈಟ್ಸ್ ಆಫ್ ಎಂದ ಅರ್ಜುನ್.

ಟೇಬಲ್ ಮೇಲೆ ಒಬ್ಬ ಕುಳಿತ. ‘ಉದಯ ಟಿವಿ ವಿಶೇಷ ವಾರ್ತೆ’ ಎಂದು ಡಾ.ರಾಜ್ ಅಪಹರಣದ ಸುದ್ದಿ ಬಿತ್ತಿರಿಸಿದ. ಮುಂದಿನ ದೃಶ್ಯ. ೧೦, ೧೨ ಹುಡುಗರು ಬರುತ್ತಿದ್ದಾರೆ.

‘ವೀರಪ್ಪನ್ ಒದ್ದು ಬಿಡಿ’ ‘ಡಾ. ರಾಜ್ ಬಿಟ್ಟುಬಿಡಿ’ ಎಂದು ಕೂಗುತ್ತಾ.

ಆನಂತರ ಬೇರೆ ಬೇರೆ ಕಡೆಯಿಂದ ಬಂದ ಹಲವು ಹುಡುಗರು ಕಲ್ಲು ಬೀರಿದರು. ಅಂಗಡಿ ಮುಚ್ಚಿ ಓಡಿದರು ಎಲ್ಲ. ಲೈಟ್ಸ್ ಆಫ್ ಎಂದ ಅರ್ಜುನ್.

ಕಾಡಿನಲ್ಲಿ ವೀರಪ್ಪನ್ ಡಾ. ರಾಜ್‌ಗೆ ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು ಒಂದೆಡೆ ಕೂರಿಸಿ “ಡಾ. ರಾಜ್ ಅವರೆ ನಿಮ್ಮ ಹೆಸರು ಕೇಳಿದೀನಿ-ಹಾಡು ಕೇಳಿದೀನಿ ನಿಮ್ಮ ಬಗ್ಗೆ ಎಲ್ಲರಿಗೂ ಗೌರವ ಅಂತ ಕೇಳಿದೀನಿ – ನೀವು ಅಂದ್ರೆ ಎಲ್ಲಾ ಸರಕಾರಗಳು ನಡುಗುತ್ವೇ ಅಂತ ಹಿಡ್ಕೊಂಡು ಬಂದಿದೀನಿ. ನೀವು ಇಲ್ಲಿ ಹಾಯಾಗಿರಬಹುದು. ನಿಮ್ಮಿಂದ ನನ್ನ ಕೆಲಸವೂ ಚಿಟಕೀಲಿ ಆಗುತ್ತೆ. ಅದಿರ್‍ಲಿ ಒಂದು ಹಾಡು ಹೇಳ್ತೀರಾ” ಎಂದಾಗ ಡಾ. ರಾಜ್ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುವರು. ವೀರಪ್ಪನ್ ಪಾತ್ರದ ಹುಡುಗ ತಾಳ ಹಾಕಿದ ಚಪ್ಪಾಳೆ ತಟ್ಟಿದ.

ಮುಂದಿನ ದೃಶ್ಯದಲ್ಲಿ ಎಸ್.ಎಂ.ಕೃಷ್ಣ, ಪಾರ್ವತಮ್ಮ, ಶಿವರಾಜ್‌ಕುಮಾರ್‍, ರಾಘವೇಂದ್ರ ರಾಜ್‌ಕುಮಾರ್‍, ಪುನೀತ್ ರಾಜ್‌ಕುಮಾರ್‍ ಪ್ರೆಸ್ ಮೀಟ್ ಮಾಡಿದರು. ನಂತರ ಮದರಾಸಿಗೆ ತೆರಳಿದರು. ಹೀಗೆ ಸೀನ್ ಬೈ ಸೀನ್ ನಾಟಕ ನಡೆದು ಡಾ. ರಾಜ್ ವ್ಯಕ್ತಿತ್ವಕ್ಕೆ ಮನಸೋತ ವೀರಪ್ಪನ್ “ನಾನು ಈವರೆಗೆ ಗಂಧದ ಮರ ಕದೀತಿದ್ದೆ. ಆದರೆ ಆ ಗಂಧದ ಸುವಾಸನೆ ಮೂಸಿರಲಿಲ್ಲ. ನಿಮ್ಮ ಮಾತುಕತೆಯಿಂದ ನನ್ನ ಕಣ್ತೆರೆದಿದೆ. ನಾನೀಗ ನನ್ನ ದಂಧೆ ಬಿಟ್ಟು ಮನುಷ್ಯನಾಗಿ ಬಾಳುವೆ” ಎಂದು ಡಾ. ರಾಜ್‌ಗೆ ಶರಣಾದಾಗ ಅವರೇ ಆತನನ್ನು ಕರೆತರುವರು.

ಆಗ ನನಗೆ ರೋಲಿಲ್ಲ ಎಂದು ಸಪ್ಪಗಿದ್ದ ಹುಡುಗಿ “ಬಂದರು ಬಂದರು ಡಾ. ರಾಜ್” ಎಂದು ಸಂಭ್ರಮಿಸುವಳು. ಆಗ ಹಾಡು ಕುಣಿತ ಎಂಬಲ್ಲಿಗೆ ನಾಟಕ ಮುಗಿಯುತ್ತದೆ.

ಮಕ್ಕಳ ‘ಎ’ ಗುಂಪು ‘ಹೀಗಾದರೆ ಚೆನ್ನ’ ಎಂದು ಭಾವಿಸಿ ನಾಟಕ ರೂಪಿಸಿದ್ದರು.

ಎ ಗುಂಪಿಗೆ ಬಿದ್ದ ಚಪ್ಪಾಳೆಗಿಂತ ಹೆಚ್ಚು ಚೆಪ್ಪಾಳೆ ಗಿಟ್ಟಿಸಬೇಕೆಂಬುದು ಅಖಿಲಾ, ಅನ್ವಿತಾ, ಅರ್ಚನಾ ಆಶಯವಾಗಿತ್ತು. ಈ ಮೂವರೂ ಸಖತ್ ಚೂಟಿ ಮಕ್ಕಳು. ಹಾಡು-ಕುಣಿತ-ಚರ್ಚೆ-ಹರಟೆ-ತಲೆಹರಟೆಯಲ್ಲೂ ಹೆಸರಾದವರು.

ಇವರು ಅಭಿನಯಿಸಿದ ಕಿರು ನಾಟಕ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದ್ದರೂ ಅಲ್ಲಿ ಅವರದೇ ಆದ ವ್ಯಾಖ್ಯಾನವಿತ್ತು. ವೀರಪ್ಪನ್ ತನ್ನ ಕನಸು-ನನಸು ಮಾಡಿಕೊಳ್ಳಲು ಡಾ. ರಾಜ್‌ರನ್ನು ಅಪಹರಿಸಲು ಬೆಕ್ಕಿನಂತೆ ಹೊಂಚು ಹಾಕಿದ ಎಂಬುದರ ಸೂಚನೆ ಇತ್ತು.

ಕೋಲೆಬಸವನಂತೆ ಎಲ್ಲಕ್ಕೂ ‘ಹುಂ’ ಎನ್ನುವ ಬದಲು ಅನಿಸಿದ್ದನ್ನು ಅನಿಸಿದಂತೆ ಹೇಳಬೇಕು ‘ಇದು ಸರಿಯಲ್ಲ’ ಎನಿಸಿದಾಗ ಪ್ರತಿಭಟಿಸಬೇಕು ಎಂಬ ಧ್ವನಿ ಇತ್ತು.

ಯಾರೇ ಆಗಲಿ ಶಾಂತಿ ಕಾಪಾಡಿಕೊಳ್ಳಬೇಕಾದಾಗ ರೇಟಿಯೋ-ಟಿ.ವಿ. ಪತ್ರಿಕೆಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಚಿತ್ರಣವಿತ್ತು.

ದಿಕ್ಕು ತೋಚದಾದಾಗ, ಆಕಾಶವೇ ತಲೆಮೇಲೆ ಬಿದ್ದಂತಾದಾಗ-ನಾಸ್ತಿಕರೂ ಹೇಗೆ ಆಸ್ತಿಕರಾಗುತ್ತಾರೆ ಎಂಬುದರ ದೃಶ್ಯಗಳ ಪ್ರದರ್ಶನವಿತ್ತು.

ಡಾ. ರಾಜ್ ಸುರಕ್ಷಿತವಾಗಿ ಹಿಂತಿರುಗಿ ಬರಲಿ ಎಂಬುದೇ ಎಲ್ಲರ ‘ಕನಸಾದಾಗ’ ಜನರ ಭಯ ಭೀತಿ, ಕಾತರತೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಸ್ಪಷ್ಟ ಚಿತ್ರವಿತ್ತು.

ತನಗೆ ಬೇಕಾದುದನ್ನು ಬೇಕಾದಂತೆ ಹೇಳಿಸಬೇಕಾದಾಗ ಡಾ. ರಾಜ್ ಅವರನ್ನು ‘ಬಂದೂಕು ಹಿಡಿದು ಹೇಗೆ ಹೆದರಿಸಿರಬಹುದು’ ಎಂಬ ಒಂದು ದೃಶ್ಯವೂ ಇತ್ತು.

ಇವೆಲ್ಲವೂ ಗಾಜನೂರಿನಿಂದ ಹಿಡಿದು ಇಲ್ಲಿಯವರೆಗೆ ಏನೇನಾಯಿತು ಎಂಬುದನ್ನು ಸೀನ್ ಬೈ ಸೀನ್ ಬಿಚ್ಚಿಟ್ಟ ಸ್ಕ್ರೀನ್ ಪ್ಲೇ ಅಂತೆ ಇದ್ದದ್ದು ಮಕ್ಕಳ ಕ್ರಿಯಾಶೀಲತೆಗೊಂದು ಮಾದರಿ ಎನಿಸಿತು.

ಇವರ ನಾಟಕದಲ್ಲಿ ವೀರಪ್ಪನ್ ತನ್ನ ಹತ್ತಾರು ಬೇಡಿಕೆಗಳಲ್ಲಿ ತಾನೇ ಹಲವನ್ನು ಬಿಟ್ಟು ಡಾ. ರಾಜ್ ಅವರೊಂದಿಗೆ ಬರುವ. ಇಂಥ ವೇಳೆ ನಕ್ಕೀರನ್ ಗೋಪಾಲ್ ಮಧ್ಯವರ್ತಿಯಾಗಿ ಬಂದು ಅವನೂ ಡಾ. ರಾಜ್ ಅವರ ವ್ಯಕ್ತಿತ್ವಕ್ಕೆ ಮಾರು ಹೋದ ಎಂದು ಚಿತ್ರಿಸಲಾಗಿತ್ತು. ಎಸ್.ಎಂ ಕೃಷ್ಣ, ಕರುಣಾನಿಧಿ ಮುಂತಾದವರೂ ಪಾತ್ರಗಳಾಗಿ ತೇಲಿಬಂದರು.

ಪಾರ್ವತಮ್ಮ ರಾಜ್‌ಕುಮಾರ್‍ ತಮ್ಮ ನೋವು ನುಂಗಿ-ಎಲ್ಲರನ್ನೂ ಸಂತೈಸುತ್ತ-ದಿಟ್ಟ ಮಹಿಳೆಯಾಗಿ ಚಿತ್ರಿಸಿದುದು ಈ ಪ್ರಯೋಗದ ವಿಶೇಷ.

ಅನಂತರ ಪತ್ರಕರ್ತ ಬಾಬು ದಿನಕರ್‍ ಮಾತನಾಡಿ “ಪುಟ್ಟ ಪುಟ್ಟ ನಾಟಕಗಳೆರಡು ನನ್ನ ಕಣ್ಣೆದುರಿಗೇ ರೂಪುಗೊಂಡು ಬಿಂಬ ಮಕ್ಕಳಿಂದ ರಂಗಕ್ಕೆ ಬಂದುದು ಕಂಡೆ. ನನಗಿಲ್ಲಿ ತುಂಬ ತುಂಬ ಮೆಚ್ಚುಗೆಯಾದುದು ಎರಡು ತಂಡಗಳವರು-ರಂಗಭೂಮಿಯಲ್ಲಿ ಅಭಿನಯಿಸಲು ಅನುಕೂಲವಾಗುವಂತೆ ದೃಶ್ಯಗಳನ್ನು ವಿಂಗಡಿಸಿಕೊಂಡಿದ್ದ ರೀತಿ. ಆಯಾ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿ ತಮ್ಮದೇ ಮಾತಿನಲ್ಲಿ ಸಂಭಾಷಣೆ ಹೆಣೆದುಕೊಂಡಿದ್ದುದು ‘ಮಕ್ಕಳಿಗೇನು ಗೊತ್ತಾಗುತ್ತದೆ’ ಎಂದು ತಾತ್ಸಾರ ಮಾಡುವ ದೊಡ್ಡವರು ನಾಚಬೇಕು ಎನಿಸಿತು ಬಿಂಬ ಮಕ್ಕಳ ಈ ಪ್ರಯೋಗ ನೋಡಿದಾಗ” -ಡಾ. ರಾಜ್ ಸುರಕ್ಷಿತವಾಗಿ ಹಿಂತಿರುಗಿ ಬರಲಿ ಶಾಂತಿ ಸಮಾಧಾನ ಎಲ್ಲೆಲ್ಲೂ ನೆಲೆಸುವಂತಾಗಲಿ” ಎಂದು ಕಡೆಯಲ್ಲಿ ಹೇಳಿದವರು ಬಿಂಬ ಸಂಚಾಲಕಿ ವನಮಾಲಾ ಪ್ರಕಾಶ್.

-ಇಷ್ಟಂತೂ ನಿಜ-ಇಂದಿನ ಮಕ್ಕಳು ಯಾರಿಗೇನು ಕಡಿಮೆ ಇಲ್ಲ ಸಂದರ್ಭಕ್ಕೆ ಅನುಗುಣವಾಗಿ ಸ್ಪಂದಿಸುವ ದೃಷ್ಟಿಯಿಂದ.
*****
(೧೧-೮-೨೦೦೦)