ಫಿಲಂಚೇಂಬರ್ಸ್ ವಿ/ಎಸ್ ನಿರ್ಮಾಪಕರ ಸಂಘ

“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು.

ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ.

ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ ಸಂಘ-ಈಗ ನಿರ್ದೇಶಕರ ಸಂಘವನ್ನೂ ಜತೆಗೂಡಿಸಿ ಕೊಂಡು ‘ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದ’ ಎಂಬಂತೆ ಹುಚ್ಚು ರಭಸದಲ್ಲಿ ಓಡುತ್ತಿದ್ದಾರೆ.

ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವುದರಲ್ಲಿ ತಾವು ನಿಸ್ಸೀಮರು ಎಂದು ಹೇಳಿಕೊಳ್ಳಲು ಹೊರಟಿದ್ದಾರೆ.

ಅಶಿಸ್ತು-ಅನ್ಯಾಯ-ಸೇಡಿನಿಂದಲೇ ತುಂಬಿ ತುಳುಕಿರುವ ಚಿತ್ರರಂಗದ ಮಂದಿ ಈಗ ಶಿಸ್ತಿನ ಪಾಠ ಹೇಳಹೊರಟಿದ್ದಾರೆ.

ನಿರ್ದೇಶಕ ದಿನೇಶ್‌ಬಾಬು ಅವರನ್ನು ಮೂರು ತಿಂಗಳು ಸಸ್ಪೆಂಡ್ ಮಾಡಿ -೨೫ ಸಾವಿರ ದಂಡ ವಿಧಿಸಿದೆ ನಿರ್ಮಾಪಕರ ಸಂಘ, ಅದಕ್ಕೀಗ ಬಸಂತ್‌ಕುಮಾರ್‍ ಪಾಟೀಲ್ ನಾಯಕರು. ರಾಕ್‌ಲೈನ್ ವೆಂಕಟೇಶ್ ಪ್ರಕಾರ ಇದು ತುಂಬಾ ಸೌಮ್ಯ ಶಿಕ್ಷೆ. ಇದಕ್ಕಿಂತ ಉಗ್ರವಾದ ಶಿಕ್ಷೆ ಕೊಡಬೇಕಿತ್ತು ಎಂದವರ ವಾದ. ‘ನನ್ನ ಚಿತ್ರಕ್ಕೆ ಒಪ್ಪಿದವರು-ಅಡ್ವಾನ್ಸ್ ತೆಗೆದುಕೊಂಡಿದ್ದವರು – ಈಗ ರಾಮೋಜಿರಾವ್ ಚಿತ್ರ ಮಾಡಿದ ನಂತರ ನಮ್ಮ ಚಿತ್ರ ಎಂದರೆ ಸುಮ್ಮನಿರುತ್ತೇನೆಯೆ’ ಎಂದು ಅಬ್ಬರಿಸುತ್ತಾರೆ ರಾಕ್‌ಲೈನ್.

ಇಂಥ ಶಿಕ್ಷೆ ನೀಡುವಾಗ ರಾಜೇಂದ್ರಸಿಂಗ್ ಬಾಬು – “ಭಾರತ್ ೨೦೦೦” ದಿಂದ ಕನ್ನಡದವರಿಗೆ ಮಾಡಿದ ಅನ್ಯಾಯ ಎಲ್ಲ ಮರೆತು ಬಿಡುವುದು ಹೇಗೆ ಸರಿ?

ಈ ವಿಷಯ ಫಿಲಂ ಚೇಂಬರ್‍ ಮುಂದೆ ಬಂದಾಗ ನಟ ಲೋಕನಾಥ್ ಜಡ್ಜ್ ಆಗಿ ಕುಳಿತಿದ್ದರಂತೆ. ನಿರ್ದೇಶಕ ಸಿದ್ದಲಿಂಗಯ್ಯನವರೂ ಹಾಜರಿದ್ದರಂತೆ. ಅವರು ಈ ವಿಷಯ ಕೂಲಂಕುಷವಾಗಿ ಪರಿಶೀಲಿಸಿ ದಿನೇಶ್‌ಬಾಬು ಅವರನ್ನು ಚಿತ್ರರಂಗದಿಂದ ಆರು ತಿಂಗಳು ಸಸ್ಪೆಂಡ್ ಮಾಡಿ ೪೦ ಸಾವಿರ ದಂಡ ವಿಧಿಸಿದೆ ಫಿಲಂ ಚೇಂಬರ್ಸ್.

ರಾಕ್‌ಲೈನ್ ವೆಂಕಟೇಶ್ ಇನ್ನೂ ಉಗ್ರವಾದ ಶಿಕ್ಷೆ ಕೊಡಬೇಕಿತ್ತು ಎಂಬ ಮಾತನ್ನು ಫಿಲಂ ಚೇಂಬರ್ಸ್ ನಿಜ ಮಾಡಿದೆ.

ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕ ಸಂಘದ ಎಗೋ ಕ್ಲಾಷ್‌ನಿಂದ ಈಗ ನೋವು ಅನುಭವಿಸಬೇಕಿರುವವರು ದಿನೇಶ್‌ಬಾಬು.

ದಿನೇಶ್‌ಬಾಬು ಮಲೆಯಾಳಿ ಇರಬಹುದು. ಆದರೆ ನಮ್ಮ ನಿರ್ಮಾಪಕ-ನಿರ್ದೇಶಕರಿಗೆ ಮಲೆಯಾಳಿ, ತೆಲುಗು, ತಮಿಳು, ಹಿಂದಿ ನಟಿಯರು ಬೇಕು. ಕನ್ನಡ ಪ್ರತಿಭೆಗಳು ಬೇಕಿಲ್ಲ –

ಫಿಲಂ ಚೇಂಬರ್ಸ್ ತಾನು ನಿರ್ಮಾಪಕರ ಸಂಘಕ್ಕಿಂತ ಹಿರಿದಾದ ಸಂಸ್ಥೆ ಎಂಬುದನ್ನು ಶಿಕ್ಷೆ ವಿಧಿಸುವುದರಲ್ಲಿ ತೋರಿದೆ.

ಟಿ.ವಿ. ಸೀರಿಯಲ್‌ಗಳು ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘದ ಕಕ್ಷೆಗೇ ಬರುವುದಿಲ್ಲ. ಅಂತಹುದರಲ್ಲಿ ಟಿ.ವಿ. ಧಾರವಾಹಿಗಳಲ್ಲಿ ಮಾಡುವಂತಿಲ್ಲ ಎನ್ನುವುದೂ ಡಿಕ್ಟೇಟರ್‌ಷಿಪ್ ಸೂಚನೆ.

ರಾಜೇಂದ್ರಸಿಂಗ್ ಬಾಬು ಸಹಾ ಈಗ ಬಸಂತ್‌ಕುಮಾರ್‍ ಪಾಟೀಲರೊಂದಿಗೆ ಕೈ ಜೋಡಿಸಿದ್ದಾರೆ. ಒಕ್ಕೂಟಕ್ಕೆ ಎದುರಾಗಿ ಒಂದು ಸಂಸ್ಥೆ ಕಟ್ಟಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ರಾಜೇಂದ್ರಸಿಂಗ್ ಬಾಬು ನಿರ್ದೇಶಕರ ಸಂಘಕ್ಕೆ ‘ಭಾರತ್ ೨೦೦೦’ ಸಮಯದಲ್ಲಿ ರಾಜೀನಾಮೆ ಇತ್ತಿದ್ದರು. ಆಗ ಫಿಲಂ ಚೇಂಬರ್ಸ್ ತೂಕಡಿಸುತ್ತಿತ್ತೆ?

ಬ್ಯಾಟಲ್ಲಿ ಹೊಡೆದ ಪ್ರಕರಣಕ್ಕೆ ಜಗ್ಗೇಶ್‌ನ ಬ್ಯಾನ್ ಮಾಡಿತ್ತು ಫಿಲಂ ಚೇಂಬರ್ಸ್. ಆ ಬ್ಯಾನ್ ಮಂಜಿನಂತೆ ಕರಗಿದ್ದು ಹೇಗೆ?

ಟಿ.ವಿ.ಯವರದೇ ಆದ ಬೇರೆ ಸಂಘವೇ ಒಂದಿದೆ. ಅದರ ಮೇಲೆ ಈ ಎರಡು ಸಂಘಗಳವರು ಸ್ವಾಮ್ಯ ಸಾಧಿಸಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ. ದಿನೇಶ್‌ಬಾಬು ಕೇಳಿದರೆ “ರಾಕ್‌ಲೈನ್‌ಗೆ ಲಾಲಿ ಮಾಟಿಕೊಟ್ಟದ್ದು ನಾನು. ಈಗ ನಾನು ಯಾರಿಗೂ ಬೇಡವಾಗಿದ್ದೇನೆ. ಸಿದ್ಧಲಿಂಗಯ್ಯನವರಂತಹ ಹಿರಿಯ ನಿರ್ದೇಶಕರೂ ಫಿಲಂ ಚೇಂಬರ್ಸ್‌ನಲ್ಲಿದ್ದು ಇಂಥ ಕಠಿಣ ಶಿಕ್ಷೆ ಏಕೆ ನೀಡಿದರೋ ಅರ್ಥವಾಗುತ್ತಿಲ್ಲ. ಶಿಕ್ಷೆ ನೀಡುವುದರಲ್ಲಿ ಪೈಪೋಟಿ ಮಾಡಿಕೊಂಡು ನನಗೀಗ ಹಿಂಸೆಯಾಗಿದೆ” ಎಂದರು.

ಕಲಾವಿದರು ಅಡ್ವಾನ್ಸ್ ತೆಗೆದುಕೊಂಡು ಷೂಟಿಂಗ್‌ಗೆ ಹಾಜರಾಗದಿದ್ದರೂ ಪಾಟೀಲರು ಇಂಥ ನಿರ್ಧಾರಗಳಿಗೆ ಬರಲು ಸಾಧ್ಯವೆ?

ಪರಭಾಷಾ ನಿರ್ಮಾಪಕ-ನಿರ್ದೇಶಕರನ್ನು ಓಡಿಸಿ-ಪರಭಾಷಾ ನಟಿಯರನ್ನು ಮಾತ್ರ ಪ್ರೀತಿಯಿಂದ ಕರೆತರುವ ನಿರ್ಮಾಪಕ-ನಿರ್ದೇಶಕರಿಗೆ-ಫಿಲಂ ಚೇಂಬರ್ಸ್‌ನವರಿಗೆ ಕಠಿಣ ಶಿಕ್ಷೆ ಕೊಡುವ ಹೊಣೆ ಈಗ ಕನ್ನಡ ಚಿತ್ರ ರಸಿಕರದಾಗಿದೆ.

ಚಿದಂಬರಶೆಟ್ಟರಂತಹವರನ್ನು ಕೊಲೆ ಮಾಡಿದ ಮಂದಿ, ಅಂಡರ್‍ ವರ್ಲ್ಡ್‌ನವರು-ಚಿತ್ರರಂಗಕ್ಕೆ ಬಂದು ವಿಚಿತ್ರವಾಗಿ ನಡೆದುಕೊಂಡಾಗಲೂ ಇಂಥ ಕಠಿಣ ಕ್ರಮ ತೆಗೆದುಕೊಳ್ಳುವುದು ಸಾಧ್ಯವೇ ಎಂಬ ಮಾತನ್ನೀಗ ಅವರೇ ಹೇಳಬೇಕು.

ಹೆಚ್‌ಟುಓ ಈ ಹೊತ್ತಿಗೆ ಮುಗಿಯಬೇಕಿತ್ತು. ಅದಾಗಲಿಲ್ಲ ಎಂಬ ಕಾರಣಕ್ಕೆ ಈ ಸಂಸ್ಥೆಗಳು ಏನು ಮಾಡಲಾದೀತು?

ದಿನೇಶ್‌ಬಾಬುಗೆ ಪೈಪೋಟಿಯ ಮೇಲೆ ಶಿಕ್ಷೆ ಕೊಟ್ಟಿರಿ. ಸರಿ…. ಮುಂದೆ ಯಾರೇ ಇಂತ ತಪ್ಪು ಮಾಡಿದರೂ-ದಿಟ್ಟತನದ ನಿಲುವು ತೆಗೆದುಕೊಳ್ಳಬಲ್ಲಿರಾ ಪಾಟೀಲ್?

ನಿಮ್ಮ ನಿರ್ಮಾಪಕರ ಸಂಘದಲ್ಲೇ ‘ಸೆಕ್ಸ್ ಫಿಲಂ’ ತೆಗೆಯುವವರು ತುಂಬಿದ್ದಾರೆ. ಅಂಥವರನ್ನು ದಾರಿಗೆ ತರಬಲ್ಲಿರಾ?

ಬಡ್ಡಿಗೆ ಚಕ್ರಬಡ್ಡಿ ಹಾಕುವವರನ್ನು ರಿಪೇರಿ ಮಾಡಬಲ್ಲಿರಾ?

ಚಿತ್ರ ನಿರ್ಮಾಪಕ-ನಿರ್ದೇಶಕರಿಗೂ ಒಂದು ಸಾಮಾಜಿಕ ಹೊಣೆ ಇದೆ. ಅದನ್ನರಿಯದವರು ಸಿನಿಮಾ ಮಾಡುವುದೇ ಒಂದು ದಂಧೆ ಮಾಡಿಕೊಂಡರೆ-ಪಡ್ಡೆ ಹುಡುಗರನ್ನು ಅಡ್ಡದಾರಿಗೆಳೆದರೆ ಅದನ್ನು ಶಿಸ್ತಿನ ಹೆಸರಿನಲ್ಲಿ ಕಂಟ್ರೋಲ್ ಮಾಡುವಿರಾ?

ಫಿಲಂ ಚೇಂಬರ್‍ಸ್‌ನವರು ಮಾಡಿದ ರೂಲ್ಸ್‌ಗಳೆಲ್ಲ ಎಷ್ಟರಮಟ್ಟಿಗೆ ಜಾರಿಗೆ ಬಂದಿದೆ. ಎಲ್ಲಾ ಲೆಕ್ಕಾಚಾರದಂತೆ ಆಗಬೇಕು ನಿಜ. ಫಿಲಂ ಚೇಂಬರ್ಸ್‌ನ ಚುನಾವಣೆ ಏಕಾಗಿಲ್ಲ ಹಾಗಾದಲ್ಲಿ?

ಫಿಲಂ ಫೆಸ್ಟಿವಲ್ ಕೀರ್ತಿ ಈ ಕಮಿಟಿಯವರಿಗೇ ಬರಬೇಕೆಂದೆ?

ನಿರ್ಮಾಪಕ-ನಿರ್ದೇಶಕರು-ಫಿಲಂ ಚೇಂಬರ್ಸ್‌ನಲ್ಲಿ ಒಂದಾಗಿರದೆ ಶಿಸ್ತು ಮುರಿದು ಈಚೆ ಬಂದದ್ದೇಕೆ? ಇಂಥ ಅನೇಕ ಪ್ರಶ್ನೆಗಳನ್ನು ಪ್ರತಿಯೊಬ್ಬರು ಕೇಳಿಕೊಳ್ಳುವುದು ವಾಸಿ.

ವಯಸ್ಸಾದ ಹೆಣ್ಣು ಮಕ್ಕಳನ್ನೆಲ್ಲ ‘ಡಕೋಟಾ’ ಎನ್ನುವ ಮಂದಿ ಕನ್ನಡ ಜನಕ್ಕೆ ಪಾಠ ಹೇಳುವ ದಿನ ಬಂತಲ್ಲ ಎಂಬುದು ದುರ್ದೈವ.

ಅಂಗೈ ಅಗಲದ ಪ್ರಪಂಚದಲ್ಲಿ ಒಬ್ಬರ ಮುಖ ಒಬ್ಬರು ದಿನ ಬೆಳಗಾದರೆ ನೋಡಬೇಕು. ಅಂತಹುದರಲ್ಲಿ ಐಕ್ಯತೆಯ ಮಾತನಾಡುತ್ತಾ-ದ್ವೇಷದಿಂದ ಬುಸುಗುಟ್ಟುವುದು ಸರಿಯೇ ಯೋಚಿಸಿ ನೋಡಿ. ಈಗ ಟಿ.ವಿ.ಯವರು ಎಚ್ಚೆತ್ತುಕೊಳ್ಳದಿದ್ದಲ್ಲಿ ನಾಳೆ ನಿಮಗೂ ಇದೇ ಗತಿ ಬಂದೀತು.
*****
(೩-೮-೨೦೦೧)