ದಿನಗೂಲಿಯೊಬ್ಬನ ದಾರುಣ ಕಥೆ

‘ಗುಮ್ಮ ಬಂದ ಗುಮ್ಮ’ ಎಂದರೆ ಸಾಕು, ಮಕ್ಕಳು ಹೆದರಿ ನಡುಗುತ್ತವೆ ರಾತ್ರಿಯ ಹೊತ್ತು. ಹಾಗೆ ಹಾಡು ಹಗಲಿನಲ್ಲಿ ‘ವೀರಪ್ಪನ್ ಬಂದ’ ಎಂದರೆ ಸಾಕು ಕರ್ನಾಟಕ ಹಾಗೂ ತಮಿಳುನಾಡಿನ ಎರಡು ಸರಕಾರಗಳು ಗಡ ಗಡ ನಡುಗುತ್ತವೆ.

ಪರಮ ನೀಚನಾದ, ಅಮಾನವೀಯ ವರ್ತನೆಯ ಈ ವೀರಪ್ಪನ್ ಎಂಬ ಮೃಗ ಈ ಬಾರಿ ತನ್ನ ಬೇಡಿಕೆಗಳು ಈಡೇರಿಸಿಕೊಳ್ಳಲು ಹಸು ಮನಸ್ಸಿನ ಡಾ. ರಾಜ್‌ಕುಮಾರ್‍ ಅಂಥ ನಟ ಸಾರ್ವಭೌಮರನ್ನು ಅಪಹರಿಸಿ ೨೪ ದಿನಗಳು ಕಳೆದಿವೆ.

ಕನ್ನಡ ಕುಲಕೋಟಿ ಡಾ. ರಾಜ್‌ರ ಬರುವಿಕೆಗಾಗಿ ಶಬರಿಯಂತೆ ಕಾದು ಕುಳಿತಿದ್ದಾರೆ. ಯಾವ ಘಳಿಗೆ ಬಂದಾರು ಎಂದು ಎಲ್ಲ ಗಡಿಯಾರದ ಮುಳ್ಳುಗಳನ್ನು ಎಣಿಸುತ್ತಿದ್ದಾರೆ. ಹೀಗಾಗಿ ಚಿತ್ರರಂಗ ತಣ್ಣಗಿದೆ. ಚಿತ್ರ ಮಂದಿರಗಳು ಬಂದಾಗಿವೆ. ಷೂಟಿಂಗ್‌ಗಳು ನಡೆಯುತ್ತಿಲ್ಲ. ಶ್ರೀಮಂತ ನಿರ್ಮಾಪಕ-ನಿರ್ದೇಶಕರು, ನಟ-ನಟಿಯರು-ವಿತರಕರಿಗೆ ಈ ಪ್ರಸಂಗ ಭಾರಿ ಸಮಸ್ಯೆ ಎನಿಸಿಲ್ಲದಿರಲು ಕಾರಣ ಅವರ ಬ್ಯಾಂಕ್ ಬ್ಯಾಲೆನ್ಸ್ ಸಾಕಷ್ಟಿದೆ.

ನಿಜವಾಗಿ ಇಂದು ಹಸಿವಿನ ಹಿಂಸೆಗೆ ಸಿಲುಕಿ ವಿಲಿವಿಲಿ ಒದ್ದಾಡುತ್ತಿರುವವರು ದಿನಗೂಲಿಯವರು. ‘ಎರಡು ದಿನದಿಂದ ಊಟ ಇಲ್ರಣ್ಣ’, “ನಾಷ್ಟಾನೇ ಮಾಡಿಲ್ರಣ್ಣ”, “ಮನೆ ಮಂದಿ ೩ ದಿನದಿಂದ ಉಪಾಸನಣ್ಣೋ” ಎನ್ನುವವರನ್ನು ಗಾಂಧೀನಗರದಲ್ಲಿ ಸಾಕಷ್ಟು ಕಾಣಬಹುದು.

ಅಂಥ ದಿನಗೂಲಿ ಮಂದಿಯನ್ನು ಕರೆದು ಯಾವ ಚಾನೆಲ್‌ನವರೂ ಮಾತನಾಡಿಸಿಲ್ಲ. ಇಂಥ ಘಳಿಗೆಯಲ್ಲಿ ಮೊನ್ನೆ ಡಾ. ಚಂದ್ರಶೇಖರ ಕಂಬಾರರ ‘ಮಹಾಮಾಯಿ’ ನಾಟಕದ ಮೊದಲ ಪ್ರದರ್ಶನ ನೋಡಲು ಮೋಟಾರ್‍ ಬೈಕ್ ಹಿಡಿದು ಹೊರಟೆ. ಮಳೆ ‘ಧೋ’ ಎಂದು ಧುಮ್ಮಿಕಲು ಸುರುವಾಯಿತು.

ತಕ್ಷಣ ಗಾಡಿ ಮನೆಯಲ್ಲೇ ಬಿಟ್ಟು ಒಂದು ಆಟೋ ಏರಿದೆ. ಮಾನವೀಯ ಹೃದಯವಿದ್ದ ಆಟೋದವ ಇದೆ ಸುಸಮಯವೆಂದು “ಡಬ್ಬಲ್ ಛಾರ್ಜ್ ನೀಡಿ” ಎಂದು ಕೇಳದೆ ಎ.ಡಿ.ಎ ರಂಗಮಂದಿರದತ್ತ ತೆರಳಿದ.

“ಹ್ಯಾಗಿದೆಯಣ್ಣ ಆಟೋ ಯವಾರ” ಎಂದೆ.

“ಯಾಪಾರ ಬೋ ಡಲ್ ಆಗದೆ ಗುರುವೇ. ಸಿನ್ಮಾ ಥೇಟರ್‌ಗಳು ಬಂದ್. ಜನಕ್ಕೂವೇ ಬೇಗ ಮನೆ ಸೇರ್‍ಕೊಳ್ಳೊ ಆತ್ರ. ೯ ಗಂಟೆ ಒಳಗೆ ಸಿಟಿ ಖಾಲಿ ಆಗ್ ಬುಡತದೆ ‘ಕರೋಡ್‌ಪತಿ’ ನೋಡಾಕೆ. ಅಂದ್ಮೇಲೆ ಡಬ್ಬಲ್ ಮೀಟರ್‍ ಛಾರ್ಜ್ ತೆಪ್ತು. ಬಾಳ ದಿನ ಬಾರ್‌ಗಳು ಬಂದಾಗಿದ್ದೋ. ಅಂದ್ಮಾಗೆ ಆ ಯಾಪಾರವೊ ತೆಪ್ಪೋಯಿತ್ರ. ಮುಂಚೆ ದಿನಾ ಮುನ್ನೂರು ರೂಪಾಯಿ ಸಂಪಾದ್ಸೇವೆ. ಈಗ ನೂರು ರೂ. ಕೂಡಾ ಆಗಕಿಲ್ಲ. ಯಾಕೆ ಹೇಳ್ತೀರಿ ನಮ್ಮ ಕಷ್ಟ”.

“ಇನ್ನೇನು ಒಂದೆಲ್ಡು ದಿನದಲ್ಲಿ ಡಾ. ರಾಜ್‌ಕುಮಾರ್‍ ಬಂದ್ ಬುಡ್ತಾರೆ ಬುಡು”

“ಆ ಎಪ್ನು ದೇವ್ರಂಥಾ ಮನ್ಸ ಸೊಮೆ. ಬರಬೇಕು ಬೇಗ. ಆದ್ರೆ ಬರೋವರೆಗೂ ದಿನಗೂಲಿಯೋರ ಕಥೆಯೇಳ್ರಿ?”

“ನಿಂದೇನು ದಿನಗೂಲಿ ಅಲ್ಲವಲ್ಲ. ಆಟೋ ಇದೆ. ಯಾಪಾರ ಆಗೆ ಆಗುತ್ತೆ”

“ಯಾರೇ ಆಗ್ಲಿ ನಾನೊಬ್ಬ ಆಯಾಗೀವ್ನಿ. ಬೇರವ್ರ ಕಷ್ಟ-ಸುಖ ಕಟ್ಕೊಂಡು ನಮಗೇನಾಗಬೇಕು ಅಂದ್ರೆ ಅದು ತೆಪ್ಪಾಯ್ತದೆ”.

“ಹಾಗಂತ ನೀನು ಸಂಪಾದಿಸಿದ್ರಲ್ಲಿ ಬೇರೆಯವರಿಗೆ ಹಂಚೋದು ಸಾಧ್ಯವೆ?”

“ಅಂಗಾರೆ ದಿನಗೂಲಿಯವನ ಈ ಕಥೇ ಕೇಳ್ರಿ. ಈವೊತ್ತು ಬೆಳಗ್ಗೆ ಗಾಂಧೀನಗರದ ದರ್ಶಿನಿ ಓಟ್ಲಾಗೆ ಊಟ ಮಾಡಾಕೆ ಓಗಿದ್ದೆ ಸೋಮೆ. ಇನ್ನೇನು ಒಂದು ತುತ್ತು ಬಾಯಿಗಿಟ್ಕೊಂಬೇಕು ಹನ್ನೆಲ್ಡು ವರ್ಸದ ಉಡ್ಗ ಒಬ್ಬ ಬಂದ. ಬಾಡಿ ಬಸವಳಿದು ಓಗಿತ್ತು ಅವನ ಮುಖ. ಅವನ ಕಣ್ಣಾಗೆ ನೋವು ತುಂಬಿ ತುಳುಕಿತ್ತು. ನಾನು ತಿನ್ನೋದ್ನೇ ನೋಡ್ತಿದ್ದ. ಏನ್ ಮಗ ಅಂಗ ನೊಡ್ತಿದಿ ಅಂದೆ. “ಅಣ್ಣಾ, ಊಟ ಮಾಡಿ ಎಲ್ಡು ದಿನ ಆಯಿತು. ನಂಗೆ ಕಾಸು ಬೇಡ. ಪ್ಲೇಟ್ ಮೀಲ್ಸ್ ಕೊಡ್ಸಣ್ಣ” ಎಂದ. “ಏನು ಕೆಲಸ ಮಾಡ್ತಿದೀ” ಎಂದೆ. “ಸೈಕಲ್ ಸ್ಟಾಂಡ್‌ನಾಗೆ ದಿನಗೂಲಿ ಮಾಡಾವೆ. ಈಗ ಥೇಟ್ರೆಲ್ಲಾ ಬಂದಾಗವೆ. ಅಣ್ಣಾವ್ರು ಬರೋವರ್‍ಗೆ ಥೇಟ್ರುಗಳು ತೆಗೆಯಾಕಿಲ್ವಂತೆ. ಕೆಲ್ಸಾ ಇಲ್ಲ ಅದ್ಕೆ ಊಟಾನೂ ಇಲ್ಲಾ” ಅಂದ. ಆ ಹುಡುಗನ ಸ್ಥಿತಿ ಕಂಡು ಅಯ್ಯೋ ಎನಿಸಿತು. ಅವನಿಗೊಂದು ಊಟ ಕೊಡಿಸಿದೆ. ಊಟ ಮಾಡಿ ‘ಇವತ್ತಿನ ದಿನ ಕಳೀತ್ರಣ್ಣ ನಿಮ್ಮಿಂದ. ಬರ್‍ತೀನ್ರಿ’ ಎಂದ. “ಈಗ ಊಟ ಆಯಿತು. ನಾಳೆ ಏನು ಮಾಡ್ತಿ ಅಂದೆ?”

‘ಇಂಗೇ ನಾಳೆ ಯಾರಾನಾ ಪುಣ್ಯಾತ್ಮ ಸಿಗ್ತಾನೆ. ಆ ಎಪ್ನು ಊಟಾನೇ ಕೊಡಿಸಬೈದು- ಇಲ್ವೇ ಕೈಗೊಂದು ಎಲ್ಡು ರೂಪಾಯಿ ಕೊಡಬೈದು. ಆಗ ಫುಟ್ಪಾತಾಗೆ ಮಾರೋ ಇಡ್ಲಿಯೋ, ಚಿತ್ರಾನ್ನವೋ ಏನಾರಾ ತಿಂತೀನಿ’ ಎಂದ.

‘ಅಲ್ಲಾ ಮಗಾ, ದಿನಾ ನೀನು ಇಂಗೆ ಭಿಕ್ಷೆ ಬೇಡ್ತಾ ಓದ್ರೆ – ನೀನು ಭಿಕ್ಷುಕನಾಗ್ತೀಯೇ ಹೊರ್‍ತು ಒಳ್ಳೆ ಕೆಲಸಗಾರನಾಗಲ್ಲ. ನಿನ್ನ ಅನ್ನ ನೀನೇ ಸಂಪಾದಿಸ್ಕೊಳ್ಳೋ ದಿನಾ ಬರೋದೇ ಇಲ್ಲ. ನೀನು ನಿಗಾವಹಿಸಬೇಕಾದ್ದು ಆ ಕಡೆ ಅಂದೆ’

‘ನಮ್ಮಂತಾ ಬಡವರ ಕಸ್ಟ ಕೇಳಿ ರೆಕಮಂಡ್ ಮಾಡೋರು ಎಲ್ಲೌವ್ರೆ? ನಮ್ಮಂತಾ ಬಿಕನಾಸಿಗಳ ಕಸ್ಟ ಯಾರೂ ಕೇಳ್ತಾರೆ ಏಳ್ರಿ?’ ಎಂದ.

‘ಅಂಗಾರೆ ಕುಂತ್ಕೋಬಾ’ ಅಂತ ಆಟೋಲಿ ಕೂರಿಸ್ಕೊಂಡು, ನಾನು ಆಟೋ ರಿಪೇರಿ ಮಾಡೋ ನಮ್ಮ ಗ್ಯಾರೇಜಿಗೆ ಕರ್‍ಕೊಂಡು ಓಗೀ ನೋಡು ಸಿವಾ, ಈ ಉಡ್ಗನ್ನ ನಿನ್ನ ಅಸಿಸ್ಟೆಂಟ್ ಆಗಿ ಮಡಿಕ್ಕೊಂಡು ಕೆಲ್ಸ ಕಲಿಸು. ದಿನಾ ಊಟಕ್ಕೆ ಒಂದಷ್ಟು ಕಾಸು ಕೊಡು. ಥೇಟರ್‌ನಲ್ಲಿ ದಿನಗೂಲಿ ಮಾಡ್ಕೊಂಡಿದ್ದ ಬಡಪಾಯಿ’ ಅಂದೆ.

‘ಆಗ್ಲಿ ಬಾ ತಮ್ಮ’ ಅಂತಂದು ‘ಆ ಸ್ಪಾನರ್‍ ತಕಾ’ ಅಂತ ಕೆಲ್ಸ ಹೇಳೇ ಬಿಟ್ಟ. ಹುಡುಗ ಹುಮ್ಮಸ್ಸಿನಿಂದ ಕೆಲಸ ಕಲಿಯಲು ಅನುವಾದ.

ಆ ಗಾಡಿ ರಿಪೇರಿಯಾದ ನಂತರ ನೋಡುತ್ತಾನೆ ಗೋಡೆಯ ಮೇಲೆ ಡಾ. ರಾಜ್ ಅವರ ದೊಡ್ಡ ಭಾವಚಿತ್ರವಿದೆ. ಕೆಳಗೆ ‘ಅಣ್ಣ – ನೀವಿಲ್ಲದ ಕನ್ನಡ ನಾಡು ತುಂಬ ಬಡವಾಗಿದೇಣ್ಣ – ಬೇಗ ಬಾರಣ್ಣ’ ಎಂಬ ಹೇಳಿಕೆ ಕಂಡು ನಾನೂ ಸುಸ್ತು” ಎಂದು ಆಟೋದವ ಕಥೆ ಮುಗಿಸುವ ಹೊತ್ತಿಗೆ ಎಡಿಎ ರಂಗಮಂದಿರ ಬಂದಿತ್ತು.

ಮೀಟರ್‍ ೧೯ ರೂ. ತೋರುತ್ತಿತ್ತು. ನಾನು ೨೦ ರೂ. ತೆತ್ತು ಹೊರಟೆ. ಆತ ಕರೆದು ‘ಸಾರ್‍! ಚಿಲ್ರೆ ತಗೊಳ್ಳಿ’ ಎಂದ.

“ಅದೂ ನೀನೇ ಇಟ್ಟುಕೊ. ನಾಳೆ ಹಸಿವು ಅಂತ ಇನ್ಯಾರಾರೂ ದಿನಗೂಲಿಯವನು ಬಂದಾಗ ಅವನಿಗೆ ಕೊಡು’ ಎಂದೆ.

ನಾಟಕ ಆರಂಭವಾಗಿತ್ತು. ಒಳಗೆ ನಡೆಯುತ್ತ ಯೋಚಿಸಿದೆ.

‘ಆ ಆಟೋದವನಿಗೆ ದಿನಗೂಲಿ ಹುಡುಗರ ಬಗ್ಗೆ ಇರುವ ಕಳಕಳಿ ಫಿಲಂ ಛೇಂಬರ್‌ನವರಿಗೆ, ಶ್ರೀಮಂತ ನಿರ್ಮಾಪಕ-ನಿರ್ದೇಶಕ-ನಟ-ನಟಿಯರಿಗಿಲ್ಲವಲ್ಲ’ ಎಂದುಕೊಂಡೆ.

ನಾಟಕ ನೋಡುತ್ತ ಕುಳಿತಾಗಲೂ ಈ ಅಂಶವೇ ನನ್ನ ಮನ ಕೊರೆಯುತ್ತಿತ್ತು.

ಆ ನಾಟಕದಲ್ಲಿ ಸಂಜೀವ ಶಿವ ಒಬ್ಬ ವೈದ್ಯ. ಆತನ ತಾಯಿ ಸಾವಿನ ಸಂಕೇತವಾದ ಶೆಟವಿ. ರೋಗಿ ಬಂದಾಗ ಆಕೆ ಒಂದು ಪಕ್ಕ ನಿಂತರೆ ಖಾಯಿಲೆ ವಾಸಿಯಾಗುತ್ತದೆಂದು. ಇನ್ನೊಂದು ಪಕ್ಕ ನಿಂತರೆ ರೋಗಿ ಗೊಟಕ್ ಎನ್ನುತ್ತಾನೆ ಎಂಬುದೊಂದು ಮುಢನಂಬಿಕೆ.

ಆ ಮೂಢನಂಬಿಕೆಗನುಗುಣವಾಗಿ ಮಗ ನಡೆದುಕೊಳ್ಳುತ್ತಾನೆ. ಸಾಯುವ ರೋಗಿ ಎಂದು ಗೊತ್ತಾದಾಗ ಆತ ಅವರಿಗೆ ಚಿಕಿತ್ಸೆ ನೀಡುವುದೇ ಇಲ್ಲ.

ತಾನೊಬ್ಬ ರಾಜಕುಮಾರಿಯನ್ನು ಮೋಹಿಸಿದಾಗ ತಾಯಿಯೊಂದಿಗೆ ಘರ್ಷಣೆಯುಂಟಾಗಿ ಅವಳಿಂದ ಬಿಡುಗಡೆ ಪಡೆಯಲು ಮುಂದಾಗುವುದೇ ನಾಟಕದ ತಿರುಳು.

ಆಗಲೂ ನನಗೆ ನೆನಪಾದದ್ದು ವೀರಪ್ಪನ್ ಹಿಡಿತದಲ್ಲಿ ಬಂಧಿಯಾಗಿರುವ ಡಾ. ರಾಜ್‌ರನ್ನು ಬಿಡಿಸಿಕೊಳ್ಳಲು ಎರಡು ಸರ್ಕಾರಗಳು ಪಡುತ್ತಿರುವ ಪಡಿಪಾಟಲು. ಸಂಯಮ ತಂದುಕೊಂಡು ಮಾಡಲು ಏನು ತೋರದೆ ಪೂಜೆ-ಪುನಸ್ಕಾರ, ಉರುಳುಸೇವೆ, ಈಡುಗಾಯಿ ಒಡೆತಕ್ಕೆ, ಹವನ ಹೋಮಗಳ ಪರಂಪರೆಗೆ ಜೋತುಬಿದ್ದ ಸಾಮಾನ್ಯರ ಅಸಹಾಯಕ ಪರಿಸ್ಥಿತಿ.

ನಾಟಕ ಮುಗಿದು ಹೊರಟಾಗ ಮತ್ತೊಂದು ಆಟೋ ಕಾಯುವ ಪರಿಸ್ಥಿತಿ ಬರಲಿಲ್ಲ. ಬಂಧುಗಳ ಕಾರು ನನ್ನನ್ನು ಮನೆಗೆ ಕರೆತಂದಿತ್ತು. ಅಂದು ನೋಡಿದ ‘ಮಹಾಮಾಯಿ’ ನಾಟಕಕ್ಕಿಂತ – ಆಟೋದವನ ಮಾನವೀಯತೆ, ದಿನಗೂಲಿಯವನ ಭವಿಷ್ಯದ ಬಗೆಗೆ ಆತ ಚಿಂತಿಸಿದ ದಿಕ್ಕು ನನ್ನ ಮನಸ್ಸಿನ ಮೇಲೆ ಮಹತ್ತರ ಪರಿಣಾಮ ಬೀರಿತ್ತು.

-ಕಣ್ತೆರೆದು ನೋಡಿದರೆ ಇಂಥ ದಿನಗೂಲಿಯವರ ದಾರುಣ ಕತೆಗಳು ಲೆಕ್ಕವಿಲ್ಲದಷ್ಟಿದೆ.

ಯಾರಿಗೆ ಬೇಕು ಅವರ ಕಥೆ?

ಯಾತಕೆ ಬೇಕು ಅವರ ಕಥೆ?
*****
(೨೫-೮-೨೦೦೦)