ಬಟ್ಟ ಬಯಲು

ಇಲ್ಲಿ ಬಯಲಿದೆ,
ಬರೀ ಬಯಲು.
ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ
ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ
ಅನಾವಶ್ಯಕ ಮಹತ್ವ.

ಇಲ್ಲಿ ಇದ್ದವರು ಬಂದುಹೋದವರು
ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ
ಒಂದಲ್ಲಾ ಒಂದು ಕಿಟಿಪಿಟಿ
ನಡೆಸಿಯೇ ಇದ್ದಾರೆ.
ನನ್ನ ಸಂಬಂಧಿಗಳು ಅಪ್ಪನದೋ ಅಮ್ಮನದೋ ಕಡೆಯಿಂದ ಬಂದು
ತಾವೇ ಬಯಲುದ್ದಕ್ಕೂ ಬೆಳೆದೂ ಬೆಳೆದೂ
ಧುತ್ತೆಂದು ಬೆತ್ತಲಾಗಿ ಬಿದ್ದಿದ್ದಾರೆ ಈಗಲೂ.
ಕೆಲವು ಭಕ್ತಾಗ್ರಣಿಗಳಂತೂ ಗೇಣಿಕೊಟ್ಟು
ತೂಗಿಸಿ ತೂಗಿನಿಂತು ಹೊಗರಿ
ಧಾಂದಲೆ ಎಬ್ಬಿಸಿ ಕ್ರಾಂತಿಗಳ ತವರೀಗ
ಈ ಇದೇ ಬಯಲು…..

ದೊಡ್ಡ ಮೇಳಗಳು ಹಂದರ ಜಡಿದು ಕೊಳ್ಳೆ
ಹೊಡೆಯುವದು,
ಪರ್ವ ಕೀರ್ತನೆ ಕಾಲಕ್ಷೇಪ ದಾನ ಧರ್ಮ ನಂಜಿಕೊಂಡು ಬಂದಿದ್ದು..
ಮೇಳ ಸತ್ತು ಬೆಂಡಾದರೂ ಬಲವಂತದ
ಚಂಡೆ ಮೃದಂಗಗಳು ಅರಚುತ್ತಲೇ ಬಿದ್ದಿದ್ದು….
ಇವೆಲ್ಲ ಇಲ್ಲಿಯ ಖಾಯಂ ಸಂಕ್ಷಿಪ್ತ ಭೂತ ಸತ್ಯಗಳು.
ಆಗಾಗ ಶಿವರಾತ್ರಿಯ ಜಾಗರಣೆಗೆ ಬಂದು
ಇಲ್ಲಿ ಡೇರೆ ಹೂಡಿದ ಬೈಲು ಸೀಮೆಯ ಯಾತ್ರಿಕರು ಕಡೆಗೆ
ಬೈಲುಕಡೆಗೆ ಹೋಗುವುದೂ ಇಲ್ಲಿಯೇ.

ಇವೆಲ್ಲ ನಡೆದಂತೆ
ನನ್ನ ಮತ್ತು ಬಯಲ ಸಂಬಂಧ ಅಷ್ಟಕ್ಕಷ್ಟೇ ಆದರೂ
ಬಯಲ ಬಳಸದೆ ಇರುವದು ಅಪಚಾರ ಅವಿವೇಕ
ಎಂದು ಬಂದ ಕಂಪನಿಗೆಲ್ಲ ಜೋತು ಬಿದ್ದು
ಚಾರಕನಾಗಿಯೋ ಕೋಡಂಗಿಯಾಗಿಯೋ
ಕುಣಿದುಬಿಡುತ್ತೇನೆ.

ಎಲ್ಲರೂ ಕಿರೀಟ ಕಟ್ಟುತ್ತಾರೆ ಮತ್ತೆ ಬಿಚ್ಚುತ್ತಾರೆ
ಪಗಡೆ ಕಟ್ಟುತ್ತಾರೆ ಮತ್ತೆ ಬಿಚ್ಚುತ್ತಾರೆ
ಬಿಲ್ಲು ಹೆದೆಗೇರಿಸಿ ಝೇಂಕರಿಸಿ
ಬೊಬ್ಬಿರಿಯುತ್ತಾರೆ ಬೋಳುಬೋಳಾಗಿ
(ಹೇಳುತ್ತ ನಡೆದರೆ ಗದ್ಯವೇ ಆದೀತು)

ಹೀಗೆ
ನಾನಾ ರೀತಿಯ ಕಿಚಿಪಿಚಿ, ಪ್ರಭುತ್ವ, ನ್ಯಾಯ
ನಡೆದೇ ಇದೆ ಈ
ನಗ್ನ ವೇಧಶಾಲೆಯಲಿ ನಿತ್ಯ
ಆದರೆ ಅವರಿವರೆನ್ನದೆ ಅದೂ ಇದೂ ಎನ್ನದೆ
ಸಹಿಸಿ ತೆಪ್ಪಗಿದೆಯಲ್ಲ ಬಯಲು
ಅದೇ ವಿಚಿತ್ರ
ಆದರೂ ಸತ್ಯ
*****