ಚಿಕ್ಕಮಗಳೂರಿನಲ್ಲಿ ಪ್ರೇಮಾಯಣ

ಚಲನಚಿತ್ರ ಚಿತ್ರರಂಗದವರಿಗೆ ಚಿಕ್ಕಮಗಳೂರೊಂದು ಸೆಂಟರ್‍ ಆಫ್ ಅಟ್ರಾಕ್ಷನ್. ಈಗಂತೂ ಅದೊಂದು ರೀತಿ ಪರ್ಟ್ ಅಂಡ್ ಪಾರ್ಸ್‌ಲ್ ಆಫ್ ಫಿಲಂ ಇಂಡಸ್ಟ್ರಿ ಎಂಬಂತಾಗಿದೆ. ೧೦೦ಕ್ಕೆ ೮೦ ಚಿತ್ರಗಳವರು ಒಂದಲ್ಲ ಒಂದು ಕಾರಣಕ್ಕೆ ಚಿಕ್ಕಮಗಳೂರಿಗೆ ಹೋಗೇ ಹೋಗುತ್ತಾರೆ.

ಈಗಲ್ಲಿ ತೆರಳಿರುವವರು ರೆಹಮಾನ್ ಅವರು. ವಿಷ್ಣು ಶಶಿಕುಮಾರ್‍ ಈ ಚಿತ್ರದ ಅಪರೂಪದ ಜೋಡಿಗಳು. ಈ ಬಾರಿ ಹಲವು ಮತೀಯವಾದಿಗಳು ಸೆಟ್ ಮೇಲೆ ದಾಂಧಲೆ ಮಾಡಿ ನಟಿ ಪ್ರೇಮಾ ಕಣ್ಣೀರು ಹಾಕಲು ಕಾರಣರಾಗಿದ್ದಾರೆ. ಆಕೆ ಹೇಳಿಲ್ಲದ ಮಾತೊಂದನ್ನು ಆಕೆಯ ಮೇಲೆ ಆರೋಪಿಸಿ ಅನವಶ್ಯಕವಾಗಿ ಈ ಪ್ರಕರಣಕ್ಕೆ ‘ಏಸು ಸ್ವಾಮಿ’ಯನ್ನು ಎಳೆದು ತಂದಿದ್ದಾರೆ.

ಆ ಕಾರಣಕ್ಕೆ ಪತ್ರಕರ್ತರ ದಂಡು ಅಲ್ಲಿ ತೆರಳಿದಾಗ ‘ಪ್ರೇಮ’ ಬಿಕ್ಕಿ ಬಿಕ್ಕಿ ಅತ್ತರಂತೆ ಎಂಬ ಸುದ್ದಿ ಓದಿದಾಗ

ಹೌದು!

‘ಈ ಅಳು ಯಾವಾಗ ಬರುತ್ತದೆ ಮತ್ತು ಏಕೆ ಬರುತ್ತದೆ’ ಎಂದು ಮಿ. ಎಂಕಣ್ಣ ಚಿಂತಿಸುತ್ತ ಈ ಪದ್ಯ ಬರಲು ಕಾರಣನಾದ.

ಅಳು ಬರುವುದು ಯಾವಾಗ?
ತಾಯಿ-ಮಗುವನ್ನು ಬೈದಾಗ.
ಹೆಂಡತಿ ಅಳುವುದು ಯಾವಾಗ?
ಗಂಡ-ಡೈವರ್‍ಸ್ ಎಂದಾಗ.
ಓದುಗ ಅಳುವುದು ಯಾವಾಗ?
ತನ್ನ ಪ್ರೀತಿಯ ಲೇಖಕ ಸತ್ತಾಗ.
ಪ್ರೇಮಾ ಅಳುವುದು ಯಾವಾಗ?
ಚಿಕ್ಕಮಗಳೂರಿಗೆ ಹೋದಾಗ.
ಅಳು ನಿಲ್ಲುವುದು ಯಾವಾಗ?
ಹಾಸ್ಯ ಪ್ರಜ್ಞೆ ಬೆಳೆದಾಗ.

-ಎಂಬ ಪದ್ಯ ಬರೆದ ಎಂಕನು ನಾಣಿ-ಸೀನ-ಮೈನಾ-ನಾನಾ-ಮಂಕ, ಮಡಿಯ, ಮುಠ್ಠಾಳ ಮುಂತಾದವರನ್ನೆಲ್ಲಾ ಒಂದೆಡೆ ಕಲೆ ಹಾಕಿ ಕವಿತಾ ವಾಚನ ಮಾಡಿ ಬಿಸಿ ಬಿಸಿ ಚರ್ಚೆಗೂ ನಾಂದಿಯಾದ. ಅಲ್ಲಿ ಬಗೆ ಬಗೆ ಮಾತುಗಳು ಹೇಳಿಕೆಗಳು ಅಲೆ ಅಲೆಯಾಗಿ ತೇಲಿ ಬಂದವು.

ನಾಲ್ಕು ಗೋಡೆಯ ಮಧ್ಯೆ ಉಸಿರು ಕಟ್ಟಿದ ವಾತಾವರಣದಲ್ಲಿ ಬಂಧಿತವಾಗಿದ್ದ ಕ್ಯಾಮರಾವನ್ನು ಹೊರಾಂಗಣಕ್ಕೆ ತೆಗೆದುಕೊಂಡು ಹೋದ ಭೂಪ ಕಣಗಾಲ್ ಪುಟ್ಟಣ್ಣ. ಬೆಳ್ಳಿ ಮೋಡ ಸೆರೆ ಹಿಡಿಯಲು ಕಣಗಾಲ್ ಚಿಕ್ಕಮಗಳೂರಿಗೆ ತೆರಳಿದರು. ಅಂದಿನಿಂದ ಇಂದಿನವರೆಗೂ ಅನೇಕ ಐತಿಹಾಸಿಕ ಘಟನೆಗಳು ನಡೆದಿವೆ ಅಲ್ಲಿ.

ಕಲ್ಪನಾ ಮಿನುಗು ತಾರೆಯಾದದ್ದು ‘ಬೆಳ್ಳಿ ಮೋಡ’ದಿಂದ. ಆನಂತರವೇ ಚಿತ್ರರಂಗದಲ್ಲಿ ಕಣಗಾಲ್ ಮುಗಿಲೆತ್ತರಕ್ಕೆ ಜಿಗಿದದ್ದು. ಆದರೆ ಅವರು ಪಟ್ಟ ಪಾಡೇನು ಕಮ್ಮಿಯೇ.

ಫೋಟೋಗ್ರಾಫರಾಗಬೇಕೆಂದು ಮೈಸೂರಿಗೆ ಬಂದ ಪುಟ್ಟಣ್ಣನವರನ್ನು ಕಾಣಲು ಅವರ ಮನೆಯವರೊಮ್ಮೆ ಬಂದರಂತೆ. ನೋಡಿದರೆ ಅಲ್ಲಿ ಆತ ತೆಗೆಯುತ್ತಿದ್ದುದು ಹೆಣಗಳ ಫೋಟೋಗಳನ್ನು. ಆಗ ಮನೆಯವರು ಬಿಕ್ಕಿ ಬಿಕ್ಕಿ ಅತ್ತರಂತೆ. ‘ಈ ಸಂಪತ್ತಿಗೆ ಮೈಸೂರಿಗೇಕೆ ಬರಬೇಕಿತ್ತು’ ಎಂದು.

ಪುಟ್ಟಣ್ಣ ಅಂದು ಅಳಲಿಲ್ಲ. ಗುರಿ ಮುಟ್ಟುವ ಛಲ ಹೊಂದಿದ್ದರು. ಆರಂಭಕ್ಕೆ ಫೋಟೋಗಳಲ್ಲಿ ಹೆಣಕ್ಕೆ ಜೀವ ತುಂಬಿದ ವ್ಯಕ್ತಿ-ಕ್ರಮೇಣ ಸಿಲ್ಲಿಲಾಯಿಡ್ ಪ್ರಪಂಚದಲ್ಲಿ ಕಗ್ಗಲ್ಲನ್ನೂ ಸುಂದರ ಶಿಲ್ಪಿ ಮಾಡಿ ತೋರಿದರು. ಇಂದಿಗೂ, ಹೀರೋ, ಹೀರೋಯಿನ್, ವಿಲನ್, ಕಾಮಿಡಿಯನ್ ಆಗಿ ಮಿಂಚುತ್ತಿರುವವರು ಕಣಗಾಲರ ಕೊಡುಗೆಗಳೆ.

ಆ ಕಾಲದಲ್ಲಿ ನಾಗರಹೊಳೆಯಂಥ ಉತ್ತಮ ಮಕ್ಕಳ ಚಿತ್ರ ಬರುವುದು ಸಾಧ್ಯವಾದದ್ದು ಚಿಕ್ಕಮಗಳೂರಿನವರಿಂದ.

ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿದ ಮೊದಲ ಕನ್ನಡ ವರ್ಣ ಚಿತ್ರ ಅದಾಯಿತು. ಆನಂತರವೇ ಅಲ್ಲವೆ ಚಿತ್ರರಂಗದ ಒಂದು ಬ್ರಾಂಚ್ ಆಫೀಸ್ ಆದದ್ದು ಚಿಕ್ಕಮಗಳೂರು.

ಚಿಕ್ಕಮಗಳೂರು ಹೊರಾಂಗಣಕ್ಕೆ ಹೋದವರೆಲ್ಲ ಸಖತ್ ದುಡ್ಡು ಮಾಡಿದರೆಂದು ಹೇಳುವಂತಿಲ್ಲ. ಹಣ ಮಾಡಿದವರೂ ಇದ್ದಾರೆ-ಸೋತು ಸಪ್ಪಗಾಗಿ ಅತ್ತವರೂ ಇದ್ದಾರೆ.

ಪರಮ ದೋಸ್ತಿಗಳಾಗಿದ್ದ ದ್ವಾರಕೀಶ್-ವಿಷ್ಣು ಒಂದಾದ ಸಂದರ್ಭದಲ್ಲೂ ಚಿಕ್ಕಮಗಳೂರಿನಲ್ಲಿ ನಡೆದ ಹಗರಣ ಭಾರಿ ಸುದ್ದಿಯಾಯಿತು. ದ್ವಾರಕೀಶ್ ಆಡಿದ ಮಾತಿನ ಕೊಂಚ ತಿರುಚುವಿಕೆಯಿಂದಾಗಿ ಅವರು ಹೇಳಿದ್ದೇ ಒಂದು-ಗಾಂಧಿ ನಗರ ತಲುಪಿದ ಸುದ್ದಿಯೇ ಮೊತ್ತೊಂದು.

ಋಷಿ ಮೂಲ-ನದಿ ಮೂಲ ಕೆದಕಬಾರದಂತೆ. ಹೋಗಲಿ ಬಿಡಿ. ಅದೂ ಒಂದು ನೋವಿನ ಪ್ರಸಂಗಕ್ಕೆ ನಾಂದಿಯಾಗಿತ್ತು ಎಂಬುದು ನಿಜ.

ಇಂಥ ಪ್ರಸಂಗಗಳು ಚಿತ್ರರಂಗದಲ್ಲಿ ಮಾತ್ರವಲ್ಲ ದಿನನಿತ್ಯ ನಮ್ಮ-ನಿಮ್ಮ ಮನೆ ಅಂಗಳದಲ್ಲೂ ನಡೆಯುವಂಥದೇ.

ಮಕ್ಕಳು ಜಗಳವಾಡಿದಾಗೊಮ್ಮೆ ಆ ಮನೆ ಈ ಮನೆಯವರು ಜಗಳಕ್ಕಿಳಿದರು. ನನ್ನ ಹಾಗಂತ ಬೈದ-ಹೀಗಂತ ಬೈದ ಅಂತ ಒಬ್ಬ, ನಾನು ಹಾಗೆ ಅನ್ಲೇ ಇಲ್ಲ ನಾನು ಅಂದಿದ್ದೆ ಬೇರೆ. ಇವನು ಹೇಳ್ತಿರೋದೇ ಬೇರೆ ಎಂದರೂ ಜಗಳ ಹಣಾಹಣಿಯಾಗಿ ಅಳುವ ಮಟ್ಟ ತಲುಪಿತ್ತು ಒಮ್ಮೆ.

ಪ್ರೇಮಾ ಕೇಸಿನಲ್ಲಿ ಆಗಿರುವುದೂ ಅದೇ. ಪ್ರೇಮಾ ಖಾಸಗಿಯಾಗಿ ಯುವ ಪತ್ರಕರ್ತೆಯೊಬ್ಬರೊಂದಿಗೆ ಆಂತರ್ಯ ತೋಡಿಕೊಂಡು, ಇನ್‌ಫೆಂಟ್ ಚರ್ಚಿಗೆ ಹೋಗುವ ಅಂಶ, ಮದುವೆ ಮಾತು ಹಂಚಿಕೊಂಡರಂತೆ. ಅದರ ರೂಪ-ವಿರೂಪಗಳು ಪ್ರೇಮಾಳನ್ನು ಅಳುವ ಮಟ್ಟಕ್ಕೆ ತಂದಿದೆ.

ದೇವರೆಲ್ಲಾ ಒಂದೇ ಎಂದ ಮೇಲೆ ಯಾರು ಯಾವ ದೇವಸ್ಥಾನಕ್ಕೆ ಹೋದರೇನು? ಪ್ರೇಮ ಚರ್ಚಿಗೂ ಹೋಗುತ್ತಾರೆ. ರಾಘವೇಂದ್ರಸ್ವಾಮಿ ಗುಡಿಗೂ ಹೋಗುತ್ತಾರೆ. ಯಜಮಾನ ಮುಹೂರ್ತವಾದಾಗ ರಾಮಾಂಜನೇಯ ಗುಡ್ಡಕ್ಕೂ ಬಂದಿದ್ದರು. ಅದನ್ನೆಲ್ಲಾ ಚೆಕ್ ಮಾಡಲು ಮತಾಂಧರಿಗೇನು ಹಕ್ಕು?

ಕನ್ನಡದ ಹಾಸ್ಯ ಲೇಖಕ ಬೀಚಿ ಖ್ಯಾತ ಲೇಖಕರು ಸತ್ತಾಗ ಶ್ರದ್ಧಾಂಜಲಿ ಸಂದರ್ಭದಲ್ಲಿ ಹೇಗೆ ಮಾತನಾಡುವರೆಂಬುದನ್ನು ವಿಡಂಬಿಸಿ -ಅನಕೃ-ಮಾಸ್ತಿ ಮುಂತಾದವರನ್ನು ಕುರಿತು ಒಂದು ಲೇಖನ ಮಾಲೆಯನ್ನೇ ಬರೆದರು.

ಆ ಲೇಖನಗಳು ಅಚ್ಚಾದಾಗ ಅವರೆಲ್ಲ ಇನ್ನೂ ಬದುಕಿದ್ದರು. ಒಂದು ಬೆಳಗ್ಗೆ ನನ್ನ ಶಿವಮೊಗ್ಗ ಗೆಳೆಯ ಬಂದವನೇ ಕಣ್ಣೀರು ಹಾಕಿದ.

“ಯಾರಿಗೇನಾಯಿತು” ಎಂದೆ.

“ಮಾಸ್ತಿ ತೀರಿಕೊಂಡರಂತೆ ಹೆಡ್‌ಲೈನ್ಸ್‌ನಲ್ಲೇ ಬಂದಿದೆ” ಎಂದು ಪತ್ರಿಕೆ ಮುಂದೆ ಹಿಡಿದ.

“ಅಯ್ಯೋ ಅದು ಬೀಚಿ ಬರೆದ ಹಾಸ್ಯ ಬರಹ” ಎಂದರೂ ಅವನು ನಂಬಲಿಲ್ಲ.

ಮಾಸ್ತಿಯವರ ಮನೆಗೆ ಕರೆದೊಯ್ದಾಗ ಅವನ ಮನಸ್ಸಿಗೆಷ್ಟೋ ಶಾಂತಿ.

-ಅನಂತರ ಬರವಣಿಗೆ ಯಾರಿಗೂ ನೋವುಂಟು ಮಾಡಬಾರದು ಎಂಬುದು ಸಾರಸ್ವತ ಲೋಕದ ಚರ್ಚೆ ಆದಾಗ ಬೀಚಿ ಆ ಲೇಖನ ಮಾಲೆಗೆ ಫುಲ್‌ಸ್ಟಾಪ್ ಇಟ್ಟರು.

-ಎಂಬ ಮಾತು ಕೊನೆಯಲ್ಲಿ ನುಡಿದ ಮಿಸ್ಟರ್‍ ಎಂಕಣ್ಣ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಕಣ್ಣೀರು ಹಾಕುವಂತ ಸ್ಥಿತಿ ಇನ್ನಾದರೂ ನಿಲ್ಲಲಿ” ಎಂದ. ಪರಭಾಷಾ ನಟಿಯರ ಹಾವಳಿಯೇ ಕನ್ನಡ ಚಿತ್ರರಂಗದಲ್ಲಿ ಅತಿಯಾಗಿರುವಾಗ ಕೊಡಗಿನ ಬೆಡಗಿ ಪ್ರೇಮಾ ಅಚ್ಚ ಕನ್ನಡಿತಿ ಎಂಬುದನ್ನು ಎಲ್ಲ ಮನಗಂಡು ಅನವಶ್ಯಕ ದೊಂಬಿ, ಪ್ರತಿಭಟನೆಗಳಿಗೆ ಫುಲ್‌ಸ್ಟಾಪ್ ಹಾಕುವುದು ಅಗತ್ಯ ಎಂದಾಗ ಎಲ್ಲ ಆ ಮಾತಿಗೆ ‘ಜೈ’ ಎಂದದ್ದು ಇತ್ತೀಚೆಗೆ.
*****
(೨೮-೦೪-೨೦೦೦)