ವಸಂತೋತ್ಸವ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಪ್ರೇಮ ವಸಂತೋತ್ಸವದ ಮಂದ ಆಗಮನ
ಧೂಳಿನ ಬಟ್ಟಲಾಯಿತು ನಂದನವನ

ಎಲ್ಲೆಡೆಗೆ ದೇವಲೋಕದ ಧ್ವನಿ ಹಬ್ಬಿತು
ಆತ್ಮದ ಹಕ್ಕಿ ಚಡಪಡಿಸಿ ದಿಗಂತಕ್ಕೆ ಹಾರಿತು

ಮುತ್ತುಗಳಿಂದ ಕಿಕ್ಕಿರಿಯಿತು ಕಡಲು
ಕೌಥರ್‌ನ ಜಲದಷ್ಟು ಸಿಹಿಯಾಯಿತು ಉಪ್ಪಿನ ಬಯಲು

ಬೀದಿ ಬದಿಯ ಕಲ್ಲು ಆದೀತು ಕನಕ
ಒಡಲೇ ಆತ್ಮವಾಗುವ ತವಕ

ಪ್ರೇಮಿಗಳ ಕಣ್ಣು ಆತ್ಮಗಳ ಧೋ ಧೋ ಮಳೆಯ ಸೆಳೆತ
ಒಡಲ ಮೋಡದೊಳಗೆ ಹೃದಯ ಮಿಂಚಾಗಿ ಸಿಡಿತ

ಪ್ರೇಮದ ಮುಗಿಲಾದವೇಕೆ ನಲ್ಲ ನಲ್ಲೆಯರ ನಯನ
ಮೇಘದ ಮರೆಯಲಿ ಮಿಂಚುವುದೇ ಚಂದ್ರನ ಸ್ಥಾನ

ಇದು ಚೆಂದದ, ಭೋರ್ಗರೆವ ಸಂತೋಷದ ಗಳಿಗೆ, ದೊರೆ
ಎಂಥಾ ಆನಂದದ ತೊರೆ, ಮಿಂಚುಗಳ ಮಹಾ ನಗೆಯ ಮೊರೆ

ಬೀಳದು ನೆಲಕ್ಕೆ ಶತ ಸಾವಿರ ಕೋಟಿ ಹನಿಗಳಲ್ಲಿ ಒಂದರ ನೆರಳು
ಬಿದ್ದದ್ದಾದರೆ ಇಡೀ ಭೂಮಿಯೆ ಹಾಳು
*****