ಫಾತಿಮಾಗೆ ಮಳೆ ಎಂದರೆ ಇಷ್ಟ

ಸಲೀಮಾ ಪಾಟೀಲರ ಮನೆಯಾಗ ತುಡುಗು ಮಾಡಿದ್ಲಂತ.. ಸಲೀಮಾನ ಜೋಡಿ ಇನ್ನೊಂದು ಹುಡುಗಿ ಬರ್‍ತಿತ್ತಲ್ಲ .. ಆ ಹುಡುಗಿ ಕೈ ಸುಮಾರದ.. ಚಟಾನೂ ಸುಮಾರದ.. ಆಕಿನೆ ಹಚ್ಚಿಕೊಟ್ಟಿರಬೇಕ್ರೀ… ಆ ಸಲೀಮಾ ಇನ್ನಾ ಸಣ್ಣದು.. ತಿಳುವಳಿಕಿ ಕಡಿಮಿ.. ಪಾಪ ಆಸೇಕ ಬಿದ್ದದ… ಎಲ್ಲ ಸೇರಿ ಫಾತೀಮಾಗೆ ಕೆಟ್ಟ ಹೆಸರಲ್ರೀ. ಫಾತೀಮಾನ ಜೀಂವಾ ಅರಿಲಾಕ ಹುಟ್ಯಾವ ಹುಡುಗ್ರು ಹಿಂದಿನ ಮನೆಯವಳು ಹೇಳುತ್ತಲೇ ಇದ್ದಳು, ಕೇಳುತ್ತಿದ್ದ ಸರೋಜನಿಗೆ ಪ್ಯಾಂಟ್ ಒಗೆಯುವಾಗ ಗಂಡನ ಜೇಬಿನಲ್ಲಿ ಇಟ್ಟ ಹಣ, ರೊಟ್ಟಿ ಮಾಡುವಾಗ ತೆಗೆದಿಟ್ಟ ಬೆರಳಿನುಂಗುರವನ್ನು ಪರಾತದೊಂದಿಗೆ ತೊಳೆಯಲು ಇಟ್ಟಿದ್ದು.. ತಿಕ್ಕಕ್ಕ ಇಡೂ ಮುಂದ, ತೊಳಿಲಾಕ ಇಡೂ ಮುಂದ ಜರಾ ನೋಡಿ ಇಡಕ್ಕೆ ಬರಂಗಿಲ್ಲೇನು ಅಂತ ಬೈಯ್ದು ಒಳಗಿಟ್ಟು ಹೋದ ಫಾತೀಮಾನನ್ನು ನೆನೆಯುತ್ತ ಆ ಸಲೀಮಾ ಹೀಗೆ ಮಾಡಿದಳೇ ಎಂಬಂಥ ವಿಷಾದದ ಅಚ್ಚರಿಗೆ ಪಕ್ಕಾಗಿ ನಂಬಲಿಕ್ಕೇ ಆಗದಂತೆ ನಿಂತಿದ್ದಳು.

ಹಿಂದಿನ ಮನೆಯವಳು ಹೇಳಿದ್ದನ್ನು ಕೇಳಿಸಿಕೊಂಡ ಗೋಪಾಲ ಸಹಿತ ಹೇಳಿದ್ದ.. ಫಾತೀಮಾಗೆ ನೀ ಮತ್ತ ಅದನ್ನ ಕೇಳಬೇಡ ಎಂದು. ಯಾವಾಗಲೂ ಫಾತೀಮಾನ ಪರ ವಕಾಲತ್ತು ವಹಿಸುವ ಗಂಡನ ಬಗ್ಗೆ ಸರೋಜನಿಗೆ ತುಸು ಅಸಹನೆ ಕೂಡ. ಹೌದು ಬ್ಯಾರೆ ದಗದಿಲ್ಲ ನನಗ.. ಆಕಿ ಬರ್‍ತಿದ್ದಂಗ ಕೇಳ್ಕೋತ ನಿಂದ್ರತೀನಿ.. ನನಗೇನ ಅಷ್ಟ ಖಬರಿಲ್ಲೇನು.
ಹಂಗಲ್ಲ… ಮದ್ಲೇ ಆಕಿಗಿ ಬ್ಯಾಸರ ಆಗಿರ್‍ತದ.. ಮತ್ತ ನಾವಷ್ಟು ಕೇಳಿ ಲೊಚ್‌ಗುಟ್ಟಿ ಜೀಂವಾ ಹಿಡಿಯಾಗೂ ಹಂಗ ಎದಕ್ಕ ಮಾಡೂದು. ತುಡುಗು ಮಾಡಿದ್ದು ಆಕಿನ ಮಗಳು… ನಮ್ಮನ್ಯಾಗ ಒಂದಿನ ಆ ಹುಡುಗಿ ಹಂಗ ಮಾಡಿದಾಕಿ ಅಲ್ಲ… ಮತ್ತ ಆ ಸುದ್ದಿ ಎಷ್ಟ ಖರೇ ಅದೋ ಎಷ್ಟು ಸುಳ್ಳು ಅದನೋ ಯಾಂವ ಬಲ್ಲ

ಹಿಂದಿನ ಮನೆಯವಳು ಹೇಳಿದ್ದರಲ್ಲಿ ಗೋಪಾಲನಿಗೆ ಇನ್ನೂ ನಂಬಿಕೆಯಾದಂತಿರಲಿಲ್ಲ.
ಸರೋಜ ನಾಲ್ಕಾರು ದಿನ ಸುಮ್ಮನಿದ್ದರೂ ಕಡೆಗೊಂದು ದಿನ ತಡೆಯಲಾರದೆ ಕೇಳಿಯೇ ಬಿಟ್ಟಳು.
ಸಲೀಮನ್ನೂ ಬಿಟ್ಟು ಬರಾಕಹತ್ತಿ… ಒಬ್ಬಾಕಿನೇ ಎಷ್ಟ ಹೈರಾಣಾಗ್ತೀಯವ್ವ.. ಆಕಿ ಆರಾಮದಾಳಿಲ್ಲೋ? ಫಾತೀಮಾನ ಮುಖ ಚಿಕ್ಕದಾಯಿತು. ಇವರಿಗೂ ವಿಷಯ ಗೊತ್ತಾಗಿರಬಹುದೇ…
ಮುದುಕಂಗ ಜರಾ ಮೈಯಾಗ ಆರಾಮಿಲ್ರೀ… ಅದಕ್ಕ ಆಕಿ ಮನಿಯಾಗ ಅದಾಳ್ರೀ
ಫಾತೀಮಾನ ಮುಖಭಾವವನ್ನೇ ಗಮನಿಸುತ್ತಿದ್ದ ಸರೋಜನಿಗೆ ತಾನು ಕೇಳಬಾರದಿತ್ತು.. ಯಾಕೆ ಮನಸ್ಸು ಇಷ್ಟು ಕೀಳಾಗಿ ವರ್ತಿಸುತ್ತದೆ ಎನ್ನಿಸಿ ತನ್ನ ಮೇಲೆಯೇ ಬೇಸರವಾಗತೊಡಗಿತು.
ಮಳಿಗಪ್ಪಾಗೇದ. ಜರಾ ನಿಂತು ಹೋಗ್ತೀಯೇನ ನೋಡ ಎಂದರೂ ಕೇಳದೆ ಫಾತೀಮಾ ಹೊರಟೇ ಬಿಟ್ಟಳು. ಫಾತೀಮಾ ಮನೆ ತಲುಪುವಷ್ಟರಲ್ಲಿ ಜೋರು ಮಳೆ. ಗಾರೆ ಕೆಲಸಕ್ಕೆ ಹೋಗಿದ್ದ ಮಗ ಇನ್ನೂ ಬಂದಿರಲಿಲ್ಲ. ಮನೆ ಖರ್ಚಿಗೆಂದು ಮಗ ದುಡ್ಡು ಕೊಟ್ಟರೂ ಚೂರುಪಾರು ರೊಕ್ಕ ಉಳಿಸಿ ಪೋಲಿ ತಿರುಗುತ್ತಾನೆ ಎಂದು ಫಾತೀಮಾಗೆ ಬೇಸರ ಕೂಡ. ಸೋರುತ್ತಿದ್ದ ನಾಲ್ಕಾರು ಕಡೆ ಪಾತ್ರೆ ಇರಿಸಿ ಸಲೀಮಾ ಒಂದು ಮೂಲೆಯಲ್ಲಿ ಕುಳಿತಿದ್ದಳು. ಎರಡು ಕೊಠಡಿಯ ಆ ಚಿಕ್ಕ ಮನೆಯಲ್ಲಿ ಮುಂದಿನದರಲ್ಲಿ ಗೂರಲು ಕೆಮ್ಮಿನ ಗಂಡ ಮಲಗಿದ್ದ.
ಮಗಳಿಗೆ ಚಾ ಕಾಯಿಸುವಂತೆ ಹೇಳಿ ಗಪ್ಪನೆ ಕುಳಿತು ಮಳೆ ನೋಡತೊಡಗಿದಳು. ಫಾತೀಮಾಗೆ ವರ್ತಮಾನದ ಮಳೆಯ ಕ್ಷಣಗಳೆಂದರೆ ಹಿಂದಿನ ಎಷ್ಟೋ ಬೇಸಿಗೆಯ ಕ್ಷಣಗಳು ಒದ್ದೆಗೊಳ್ಳುವ ಹೊತ್ತಾಗಿರುತ್ತದೆ.

ಆ ದಿನ ಕೂಡ ಬಿರು ಬೇಸಿಗೆಯ ದಿನವಾಗಿತ್ತು. ಸಲೀಮಾ ಪಾಟೀಲನ ಕೈಯಲ್ಲಿ ಸಿಕ್ಕುಬಿದ್ದಾಗ ಯಾರದೋ ಮನೆಯ ಹಿತ್ತಲಿನಲ್ಲಿದ್ದ ಫಾತೀಮಾಳನ್ನು ಕರೆಸಿದ್ದ. ಕರೆಯಲು ಬಂದ ಹುಡುಗಿ ಅರೆಬರೆ ಹೇಳಿದ್ದನ್ನು ಕೇಳಿಯೇ ಫಾತೀಮಾಳಿಗೆ ಖಜೀಲಾಗತೊಡಗಿತ್ತು. ಹನಿಗಣ್ಣಾದ ಮಗಳು ಒಂದು ಮೂಲೆಯಲ್ಲಿ ನಿಂತಿದ್ದಳು. ಮತ್ತೊಂದಿಬ್ಬರು ಅಕ್ಕಪಕ್ಕದ ಹೆಣ್ಣುಮಕ್ಕಳು… ಫಾತೀಮಾ ಜೀವ ಅಂಗೈಯಲ್ಲಿ ಹಿಡಿದು ನಿಂತಿದ್ದಳು.
ಬಾಯಿ ಮಾಡಬ್ಯಾಡ್ರೀ ಅಣ್ಣಾರಾ.. ಏನೋ ಹುಡುಗಿ ತಪ್ಪು ಮಾಡ್ಯಾಳಾ… ಆ ರೊಕ್ಕ ನಾ ದುಡದು ಮುಟ್ಟಿಸತೀನ್ರೀ.. ಆದ್ರ ಬಾಯಿ ಮಾತ್ರ ಮಾಡಬ್ಯಾಡ್ರೀ…
ಕಡೆಯ ವಾಕ್ಯ ಹೇಳುವಷ್ಟರಲ್ಲಿ ಫಾತೀಮಾಗೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತ ಭೂಮಿ ಅಲ್ಲೇ ಬಾಯಿ ಬಿರಿಯಬಾರದೇ ಎನ್ನಿಸಿತು. ಮಗಳ ಕೈ ಹಿಡಿದು ಅಲ್ಲಿಂದ ದರದರ ಎಳೆಯುತ್ತ ರಸ್ತೆಯವರೆಗೆ ಬಂದವಳು ಮನೆ ಬಳಿ ಬಂದರೂ ಮಾತಾಡಿರಲಿಲ್ಲ. ಸೋಲಾಪುರ ನಾಖಾದಿಂದ ಮನೆಯತ್ತ ಹೊರಳುವಾಗ ನೂಕಿದಂತೆ ಮಾಡಿ ಕೈ ಬಿಟ್ಟವಳು ಆಗಲೂ ಮಾತನಾಡಿರಲಿಲ್ಲ. ಅವಳು ಅಲ್ಲಿಯೇ ಒಂದು ಹೊಡೆದಿದ್ದರೂ ಸಲೀಮನಿಗೆ ಅಷ್ಟು ಭಯವೆನ್ನಿಸ್ತಾ ಇರಲಿಲ್ಲ. ಸಲೀಮಾ ಒಳಗೊಳಗೇ ನಡುಗುತ್ತಿದ್ದಳು.
ಮರ್‍ಯಾದಿ ಅನ್ನೂದು ಇಷ್ಟೇ ಇರ್‍ತದ.. ಅದಿದ್ದರ ಪೂರ ಜಿಂದಗಿನೇ ಇದ್ದಂಗ.. ಕಳ್ಕೊಂಡ್ರ ಪೂರ ಜಿಂದಗಿನೇ ಬರಬಾದ ಆದಂಗ.. ಖೋಡಿ ಹುಚ್ಚು ಖೋಡಿ… ಕೈ ಸುಮಾರದ ಅಂತ ಗೊತ್ತಾದ್ರ ಯಾವ ಮನಿಯೋರಾದ್ರೂ ವಿಶ್ವಾಸ ಇಡ್ತಾರನು… ಅಷ್ಟ್ ಮಂದಿ ವಿಶ್ವಾಸ ಅದ ಅಂತ ನಾ ನಿಮ್ಮನ್ನ ಇಷ್ಟು ದೊಡ್ಡಾರಿನ್ನ ಮಾಡೀನಿ.. ಇಲ್ಲಾಂದ್ರ ಈ ಮುದುಕನ್ನ ಕಟ್ಕಂಡು ಚಂದಾಬಾವಡಿ ಹಾರೂದೊಂದ ಬಾಕಿ ಉಳೀತಿತ್ತು… ಮಂಗ್ಯಾನಂತಾಕೀನೆ.. ನಾ ಹೆಂಗ ಇನ್ನ ಮಂದಿಗೆ ಮಾರಿ ತೋರಿಸಬಕು..
ಒಳಹೋಗಿದ್ದೇ ಫಾತೀಮಾ ಮಗಳನ್ನು ನೂಕಿ ತಾನು ಕೆಳಗೆ ಕುಳಿತು ತಲೆ ಗಟ್ಟಿಸಿಕೊಳ್ಳುತ್ತ ಹೇಳತೊಡಗಿದಳು. ಮೆಲ್ಲಗೆ ಫಾತೀಮಾ ಕೂಡ ನಡುಗತೊಡಗಿ ಕೊನೆಯ ವಾಕ್ಯಕ್ಕೆ ಬರುವಷ್ಟರಲ್ಲಿ ಕುಸಿದು ಅಳತೊಡಗಿದಳು.

ಆ ದಿನದಿಂದ ಮಗಳನ್ನು ಎಲ್ಲೂ ಕೆಲಸಕ್ಕೆ ಕಳಿಸಿರಲಿಲ್ಲ. ತಾನೇ ಎಲ್ಲ ಮನೆಗೆಲಸ ಮಾಡಿಕೊಂಡು ಬರುತ್ತಿದ್ದಳು. ಮಗಳೊಂದಿಗೆ ಹೆಚ್ಚು ಮಾತನ್ನೂ ಆಡಿರಲಿಲ್ಲ. ವಿಚಿತ್ರ ದುಗುಡ ಬೇಗುದಿಗೆ ಪಕ್ಕಾಗಿ ಮನೆ ಒಳಗಿನ ಮನೆ ಹೊರಗಿನ ಮಳೆ ನೋಡುತ್ತಾ ಕುಳಿತುಬಿಡುವ ಫಾತೀಮಾನ ಮನದೊಳಗೆ ಸದಾ ಬಿಸಿಲಿನ ಝಳ.

ಫಾತೀಮಾಗೆ ಅವಳ ಗಂಡನಿಗೆ ಕನಿಷ್ಟ ಇಪ್ಪತ್ತು ವರ್ಷಗಳಾದರೂ ಅಂತರವಿರಬಹುದು. ಫಾತೀಮಾ ಅವನಿಗೆ ಎರಡನೆಯ ಹೆಂಡತಿ. ಮೊದಲ ಹೆಂಡತಿ ತೀರಿದ ನಂತರ ಮಕ್ಕಳಿಬ್ಬರನ್ನೂ ತುಸು ಅನುಕೂಲಸ್ಥರಾದ ಆ ಹೆಂಡತಿಯ ತವರು ಮನೆಯವರೇ ಸಾಕುತ್ತಿದ್ದರು. ಫಾತೀಮಾಗೆ ಎರಡು ಮಕ್ಕಳಾದ ಮೇಲೆ ಗಂಡನ ದುಡಿಮೆಯೊಂದೇ ಯಾವುದಕ್ಕೂ ಸಾಲುವುದಿಲ್ಲ ಎಂದರಿವಾದಾಗ ಕೊನೇ ಮಗಳು ಸಲೀಮಳನ್ನು ಉಡಿಯಲ್ಲಿ ಹಾಕಿಕೊಂಡೇ ಕಾಲನಿಯಲ್ಲಿ ಕೆಲವು ಮನೆಗಳಿಗೆ ಕೆಲಸಕ್ಕೆ ಬರತೊಡಗಿದಳು. ಹಾಗೆ ಮೊದಲು ಹಿಡಿದಿದ್ದ ಮನೆಗಳಲ್ಲಿ ಸರೋಜನ ಮನೆಯೂ ಒಂದು. ಬಟ್ಟೆ ಕಲ್ಲಿನ ಆಚೆ ಇದ್ದ ಮರದ ನೆರಳಿನಲ್ಲಿ ಸರೋಜಳೇ ಕೊಟ್ಟಿದ್ದ ಹಳೇ ಹತ್ತಿ ಸೀರೆಯೊಂದರ ಮೇಲೆ ಮಗಳನ್ನು ಮಲಗಿಸಿ ಕೆಲಸಕ್ಕೆ ತೊಡಗುತ್ತಿದ್ದ ದಿನಗಳನ್ನು ಫಾತೀಮಾ ಎಂದೂ ಮರೆಯುವುದಿಲ್ಲ. ಫಾತೀಮಾ ಹಾಗೆ ಮರೆಯದ ಇನ್ನೂ ಹಲವಾರು ಸಂಗತಿಗಳೂ ಇದ್ದವು. ಸಲೀಮಳಿಗೆ ತನ್ನ ಮಕ್ಕಳ ಹಳೆ ಬಟ್ಟೆ ಸ್ವೆಟರ್ ಆಟದ ಸಾಮಾನು ಇತ್ಯಾದಿ ಕೊಡುತ್ತಿದ್ದ ಸರೋಜ ಮರೆಯದೇ ಅರ್ಧ ಲೋಟ ಹಾಲು ಕೊಡುತ್ತಿದ್ದಳು.

ಫಾತೀಮಾ ತನಗೆ ಹಿಡಿಸದ ಕೆಲವು ಮನೆಗಳನ್ನು ಬಿಟ್ಟು ಬಿಡುತ್ತಿದ್ದಳು. ಅದರಲ್ಲೂ ಹೊಸದಾಗಿ ಮದುವೆಯಾದವರು, ಒಂದು ಎರಡು ಮಕ್ಕಳಿರುವ ಚಿಕ್ಕ ಯುವ ದಂಪತಿಗಳ ಮನೆಯವರೊಂದಿಗೆ ಯಾಕೋ ಅವಳಿಗೆ ಸರಿ ಬರುತ್ತಲೇ ಇರಲಿಲ್ಲ. ಅವರೇನಾದರೂ ಹೊಸಬಟ್ಟೆ ತೊಟ್ಟುಕೊಂಡರೆ, ಒಡವೆ ಹಾಕಿಕೊಂಡರೆ, ಸಿನಿಮಾಗೆ ಗಂಡಂದಿರೊಡನೆ ಹೋದರೆ ಫಾತೀಮಾ ಏನಾದರೂ ಕೊಂಕು ನುಡಿದು ಬಿಡುತ್ತಿದ್ದಳು.
ಪಾಪ ಅಣ್ಣಾರು ಅಷ್ಟು ಕಷ್ಟಪಟ್ಟು ದುಡೀತಾರ.. ನಿಮಗೇನು ತ್ರಾಸದ… ಆರಾಮಾಗಿ ಹೋಗಿ ಚೈನಿ ಮಾಡಿಬರ್‍ತೀರಿ… ಎಂದೋ ಹೊಸಾದು ಹಾಕ್ಕೊಂಡೀರಲಾ… ನಿಮಗೇನವ್ವಾ.. ಎಲ್ಲಾ ಆರಾಮದ.. ನಕ್ಕೋತ ಹಾಕ್ಕೋತೀರಿ ಎಂದು ನುಡಿದು ಬಿಡುತ್ತಿದ್ದಳು.
ಹಾಗೆ ಹೇಳಿಸಿಕೊಂಡವರಿಗೆ ಸಿಟ್ಟು.
ಅಯ್ಯಾ.. ನಮ್ಮದ ನಾವ ಹಾಕ್ಕೊಂಡ್ರ ಈಕಿದೇನ ಕಾರಬಾರು.. ನಾವೆಲ್ಲಾರ ಹೋಕ್ಕೇವಿ, ಬರ್‍ತೇವಿ.. ಈಕಿಗೇನಂತ.. ತನ್ನದ ಎಷ್ಟ ಕೆಲಸ ಇರ್‍ತದ ಅಷ್ಟ ಮಾಡೂದು ಬಿಟ್ಟು ಸುಳ್ಳೆ ಒಣ ಕಾರಬಾರನ ಮಾಡ್ತಾಳ.. ಇತ್ಯಾದಿ ಅವರೂ ಅನ್ನುವಂತೆ ಮಾತಾಡಿ ಬಿಡುತ್ತಿದ್ದಳು. ತಾನು ಕೆಲಸ ಮಾಡುವ ಮನೆಗೆ ಯಾರು ಬಂದರು, ಅವರೇನಾಗಬೇಕು, ತವರು ಮನೆಯವರು ಈ ಸಲ ಹೋದಾಗ ಏನು ಕೊಟ್ಟರು, ನೆಂಟರು ಬಂದಾಗ ಏನು ಸಿಹಿ ತಿನಿಸು ಮಾಡಿದರು ಇತ್ಯಾದಿ ಎಲ್ಲ ವಿಚಾರಿಸಿಕೊಳ್ಳುವುದು ತನ್ನ ಹಕ್ಕು ಎಂದೇ ಭಾವಿಸಿದ್ದಳು. ನೆಂಟರು ಬಂದಾಗ, ಹಬ್ಬ ಹರಿದಿನಗಳಲ್ಲಿ ಏನಾದರೂ ಸಿಹಿತಿಂಡಿ ಮಾಡಿದಾಗ ಫಾತೀಮಾಳಿಗೆ ಕೊಡದಿದ್ದರೆ ಅಯ್ಯಾ ಅಷ್ಟ್ ತಿನಸು ಮಾಡ್ತಾರ.. ಅಷ್ಟ್ ಭಾಂಡೆ ತಿಕ್ಕಾಗ ಇಡ್ತಾರ.. ಒಂದಿನ ಫಾತೀಮಾ ಹಿಡಿಯ ಅಂತ್ಹೇಳಿ ಒಂದೀಟರ ಏನರ ಕೊಡೂದು ಮಾಡೂದು ಏನ ಕೇಳಬ್ಯಾಡ್ರೀ.. ಅಂತ ತನಗೆ ತೀರ ಹತ್ತಿರದ ಕೆಲವು ಮನೆಗಳಲ್ಲಿ ಹೇಳಿಕೊಳ್ಳುತ್ತಿದ್ದಳು.
ಇರ್‍ಲಿ ಬಿಡಾ ಪಾತೀಮಾ… ಕೆಲವು ಮಂದಿ ಹಂಗೇ ಇರ್‍ತಾರ.. ಅದ್ನೇ ಮತ್ತಮತ್ತ ಯಾಕ ಹೇಳ್ತೀ.. ಏನ ಅವರ ಮನ್ಯಾಗ ತಿನ್ನದಿದ್ದರೆ ನಿನಗೇನ ನಡಿಯೂದಿಲ್ಲೇನು ಸರೋಜ ಎಷ್ಟೋ ಬಾರಿ ಸಮಾಧಾನಿಸುತ್ತಿದ್ದಳು.
ಅಷ್ಟೇ ಅಲ್ಲ.. ಆ ಮನೆಗಳ ಹಿತ್ತಲಿನಲ್ಲಿ ಬೆಳೆಯುವ ಪೇರಲೆ, ಸೀತಾಫಲ, ಪಪ್ಪಾಯಿ ಇತ್ಯಾದಿ ಹಣ್ಣು ಹಂಪಲುಗಳನ್ನು ತೆಗೆದುಕೊಳ್ಳಬೇಕೆನ್ನಿಸಿದಾಗ ಮನೆಯವರನ್ನು ಕೇಳುವ ಅಗತ್ಯವಿದೆ ಎಂದು ಭಾವಿಸಿದವಳಲ್ಲ.
’ನಾನೂ ನೀರು ಹಾಕ್ಕೀನಿ.. ಅವಾಗವಾಗ ಹಿತ್ತಲ ಕಸಾ ಹೊಡದು ಸ್ವಚ್ಛ ಮಾಡ್ತೀನಿ.. ಗಿಡಗೋಳ ವಗಾಯ್ತಿ ಮಾಡ್ತೀನಿ.. ಗಿಡದಾಗಿರೂ ಎರಡು ಹಣ್ಣು ಹರ್‍ಕೊಂಡ್ರ ಏನಾತು’ ಎಂದುಕೊಳ್ಳುತ್ತಿದ್ದ ಫಾತೀಮಾ ನಾ ಎರಡು ಹರ್‍ಕೋತೀನ್ರೀ ಎಂದವಳೇ ಗಿಡ ಹತ್ತಿ ಹರಿದುಕೊಳ್ಳುತ್ತಿದ್ದಳು. ಫಾತೀಮಾನ ಈ ಸ್ವಭಾವದ ಅರಿವಿಲ್ಲದವರಿಗೆ ಸಿಟ್ಟು ಬರುತ್ತಿತ್ತು.
ನೀ ಯಾಕ ಕೈಹಾಕಿ ತಗೋತಿ.. ಕೇಳಿದ್ರ ನಾನ ಕೊಡ್ತಿದ್ನಲ್ಲವ್ವಾ ಎಂದು ಸಿಡುಕುತ್ತಿದ್ದರು. ಇಂತಹದು ನಾಲ್ಕಾರು ಬಾರಿ ನಡೆದ ನಂತರ ಮತ್ತೇನಕ್ಕೋ ಮನಸ್ತಾಪವಾಗಿ ಒಟ್ಟಾರೆ ಆ ಮನೆ ಬಿಟ್ಟಿರುತ್ತಿದ್ದಳು. ಫಾತೀಮಾಗೆ ಚಾ ಕುಡಿಯಲು ಹೊರಗಡೆಯೇ ಒಂದು ಕಪ್ ಇಟ್ಟಿರುವಂತಹವರ ಮನೆಗಳಲ್ಲಿ ಮೊದಮೊದಲು ಚಾ ಕುಡಿದರೂ ಕ್ರಮೇಣ ಚಾ ಬ್ಯಾಡ್ರೀ ಎಂದು ನಿಷ್ಟುರವಾಗಿಯೇ ಹೇಳಿಬಿಡುತ್ತಿದ್ದಳು. ಟಿವಿ ಇಟ್ಟಿರುವ ಹಾಲ್‌ನಿಂದ ಅಡಿಗೆ ಮನೆಯವರೆಗೆ ಫಾತೀಮಾ ಆರಾಮಾಗಿ ಓಡಾಡುವಂತಿಲ್ಲದ, ಹೊರಗಡೆಯಿಂದ ಹಿತ್ತಲಿಗೆ ಮಾತ್ರ ಪ್ರವೇಶ ಇರುವಂತಹ ಅತೀ ಮಡಿ ಮೈಲಿಗೆ ಇರುವಂತಹ ಮನೆಗಳಲ್ಲಿ ವರ್ಷಕ್ಕಿಂತ ಹೆಚ್ಚು ಫಾತೀಮಾ ನಿಲ್ಲುತ್ತಲೇ ಇರಲಿಲ್ಲ. ತಾನು ನೀರು ಕುಡಿಯುವಾಗ ಚೊಂಬು ಎಲ್ಲಿ ತುಟಿಗೆ ತಾಕಿಸಿಬಿಡ್ತೀನೋ ಎಂದು ಸೂಕ್ಷ್ಮವಾಗಿ ಅವರು ತನ್ನನ್ನೇ ನಿರುಕಿಸುತ್ತಿದ್ದಾರೆ ಎಂದರಿವಾದ ನಂತರ ಬೇಸಿಗೆ ದಿನಗಳಲ್ಲಿ ಗಂಟಲು, ಬಾಯೊಣಗಿ ಉಸಿರು ಕಟ್ಟುವಂತಾದರೂ ನೀರು ಕೇಳುತ್ತಿರಲಿಲ್ಲ. ಮನೆಯವರು ತುಸು ಔದಾರ್ಯವಿಲ್ಲದವರು, ಸಣ್ಣ ಮನಸ್ಸಿನವರು ಎಂದು ಒಂದು ಸಲ ಫಾತೀಮಾ ಗ್ರಹಿಸಿದಳೆಂದರೆ ಆ ಮನೆ ಬಿಟ್ಟಳೆಂದೇ ಅರ್ಥ. ಅವರು ಬೇರೆ ಯಾರನ್ನಾದರೂ ಮನೆಗೆಲಸಕ್ಕೆ ಇಟ್ಟುಕೊಂಡ ನಂತರ ಮತ್ತೆ ಅವರ ಮನೆ ಕಡೆ ಹೊಳ್ಳಿಯೂ ನೋಡುತ್ತಿರಲಿಲ್ಲ. ಹೊಸ ಕೆಲಸದವರು ಕೈ ಕೊಟ್ಟಾಗ ದಾರಿಯಲ್ಲಿ ಕಂಡ ಫಾತೀಮಾಗೆ ಇವತ್ತೊಂದಿನ ಭಾಂಡೆ ಬಟ್ಟೆ ಮಾಡಿಕೊಡವ್ವ ಎಂದರೆ ದಗದ ಭಾಳ ಅದರೀ ಎಂದು ನಯವಾಗಿ ಹೇಳಿ ಜಾರಿಕೊಂಡು ಬಿಡುತ್ತಿದ್ದಳು. ನಾಲ್ಕೈದು ಮನೆಗಳಲ್ಲಿ ಮಾತ್ರ ಕಳೆದ ಹದಿನೈದು ವರ್ಷಗಳಿಂದಲೂ ಬಿಡುವ ಮಾತೇ ಎತ್ತದೆ ಅವರ ಮನೆಯ ಒಂದು ಭಾಗವೆನ್ನುವಂತೆ ಆಗಿದ್ದಳು. ಅವರೆಲ್ಲರ ಒಂದೇ ಒಂದು ಸಾಮಾನ್ಯ ಗೊಣಗಾಟ ಎಂದರೆ ಆಗೀಗ ಫಾತೀಮಾ ಹೇಳದೆ ಕೇಳದೆ ಕೆಲಸಕ್ಕೆ ತಪ್ಪಿಸಿಬಿಡುತ್ತಿದ್ದುದು.
’ಯಾರೋ ಸತ್ತರು ಮಣ್ಣಿಗೆ ಹೋದೆ..’ ’ಮತ್ತಾರೋ ಹಡೆಯುವಾಗ ಜತೆಗ್ಯಾರಿರಲಿಲ್ಲ, ನಾನೇ ದವಾಖಾನಿಗಿ ಕರ್‍ಕೊಂಡು ಹೋದೆ..’ ’ಮತ್ತಾರಿಗೋ ದವಾಖಾನಿಗಿ ಹಾಕಿದ್ರು.. ನೋಡಾಕ ಹೋದೆ..’
ಅಷ್ಟೇ ಅಲ್ಲ.. ಸನಿಹದಲ್ಲಿ ಎಲ್ಲಾದರೂ ಆಕ್ಸಿಡೆಂಟ್ ಆಗಿ ಸರಕಾರಿ ದವಾಖಾನೆಗೆ ಮಂದಿಯನ್ನು ಸೇರಿಸಿದ್ದಾರೆ ಅಂತ ಗೊತ್ತಾದರೆ ಫಾತೀಮಾ ಅಲ್ಲಿಗೂ ನೋಡಲು ಹೋಗುವವಳೇ… ಗಾಯಾಳುಗಳ ಪೈಕಿ ಯಾರಾದರೂ ಇನ್ನೂ ಬಂದಿಲ್ಲವೆಂದರೆ ತಾನೇ ಚಾ ಬಿಸ್ಕೆಟ್ ಪುಡಿಕೆಯನ್ನು ತಂದುಕೊಡುವವಳೇ…
ಎದಕ್ಕೆ ಕೆಲಸಕ್ಕೆ ಬಂದಿಲ್ಲ ಎಂದು ಕೇಳುವ ಮುಂಚೆಯೇ ಫಾತೀಮಾನ ವಿವರಣೆ ಸಿದ್ಧವಾಗಿಬಿಟ್ಟಿರುತ್ತಿತ್ತು.
’ನಮಗೆ ಯಾವಾಗ ಅಗದಿ ಹರಕತ್ತಿರ್‍ತದ ಆಗೇ ಕೈ ಕೊಡ್ತಾಳ ಸುಬ್ಬಿ’ ಅಂತೆಲ್ಲ ಮನಸ್ಸಿನಲ್ಲಿಯೇ ಬೈದುಕೊಂಡು ಕೆಲಸ ಮುಗಿಸಿರುತ್ತಿದ್ದರು. ಫಾತೀಮಾ ತಾನು ಹಾಗೆ ಹೋಗಿಬಂದಿದ್ದನ್ನು ಹೇಗೆ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದಳೆಂದರೆ ಬೈಯಬೇಕೆಂದುಕೊಂಡು ಮನಸ್ಸಿನಲ್ಲಿಯೇ ಸಿದ್ಧತೆ ಮಾಡಿಕೊಂಡ ಸರೋಜ ಸುಮ್ಮನಾಗಿಬಿಡ್ತಿದ್ದಳು. ಹಾಗಂತ ಫಾತೀಮಾ ಆ ಎಲ್ಲ ಘಟನೆಗಳನ್ನು ತಾನು ಕೆಲಸ ಮಾಡುವ ಎಲ್ಲ ಮನೆಗಳಲ್ಲಿಯೂ ವಿವರಿಸುತ್ತಿರಲಿಲ್ಲ. ಫಾತೀಮಾನ ನೋಡಿದ್ದೇ ಹಿಂದಿನ ದಿನದಿಂದ ಹಾಗೇ ಇಟ್ಟುಕೊಂಡಿದ್ದ ಎಲ್ಲವನ್ನೂ ಹೊರಗಿಟ್ಟು ಒಂದೇ ಸಮನೆ ಗೊಣಗಾಡಲು ನಿಲ್ಲುವ ಹೆಂಗಸರೆದುರಿಗೆ ಅವಳು ಬಾಯಿ ಬಿಚ್ಚುತ್ತಲೇ ಇರಲಿಲ್ಲ. ಬರಾಕಾಗಿರಲಿಲ್ರೀ ಎಂದವಳೇ ಉಸಿರೆತ್ತದೆ ಕೆಲಸ ಮಾಡಿ ಮುಗಿಸಿ ಅವರು ಚಾ ಕುಡ್ದ ಹೋಗು ಫಾತೀಮಾ ಎಂದರೂ ಹಾಗೇ ಹೊರಟು ಬಿಡುತ್ತಿದ್ದಳು.
ಮನುಷ್ಯಾ ಅಂದಿಂದ ಅನುವು, ಆಪತ್ತಿಗಾಗದಿದ್ರ ಹೆಂಗ ಅವಳ ಈ ಮಾತಿಗೆ ಹೌದೇಳವ್ವಾ ಫಾತೀಮಾ ಎನ್ನುವ ಒಂದಿಬ್ಬರು ಹೆಂಗಸರೊಟ್ಟಿಗೆ ಮಾತ್ರ ಫಾತೀಮಾನ ಇಂತಹ ಕಾಳಜಿಗಳು ಜೀವ ತಳೆಯುತ್ತಿತ್ತು.

ನಮ್ಮಂದಿಗಿ ಯಾರಿಗರ ಹುಷಾರಿಲ್ಲ.. ಯಾರಾರ ಸತ್ತಾರ ನಮಗ ಹೋಗಾಕ ಸವುಡಿಲ್ಲ ಅಂದ್ರ ಫಾತೀಮಾಗ ನಮ್ಮನಿ ವತಿಯಿಂದ ಕಳ್ಸಬಹುದು ಸರೋಜ ಕೆಲವು ಬಾರಿ ಗೋಪಾಲನೊಂದಿಗೆ ತಮಾಶೆಗೆ ಹೇಳುತ್ತಿದ್ದಳು.

ಫಾತೀಮಾ ಏಳುವುದೇ ಬೆಳಗಿನ ನಮಾಜಿನ ದನಿಗೆ. ಯಾವ ಮನೆಗೆ ಹೋಗಬೇಕೆಂದು ಮೊದಲೇ ನಿರ್ಧಾರಿತವಾಗಿರುತ್ತಿತ್ತು. ಎದ್ದವಳೇ ಮೊದಲು ಆ ಪುಟ್ಟ ಗುಡಸಲಿನ ಮುಂದಿನ ಜಾಗವನ್ನು ಪರಪರ ಎಂದು ಕಸ ಹೊಡೆಯುತ್ತಿದ್ದಳು. ರಾತ್ರಿಯಿಡೀ ಸರಿಯಾಗಿ ನಿದ್ದೆಯಾಗಿರದಿದ್ದ ಗಂಡ ಕೆಲವೊಮ್ಮೆ ಬೈಯುತ್ತಿದ್ದ. ಆದರೆ ಫಾತೀಮಾ ಮಾತ್ರ ತನಗೆ ಎಂತಹ ಹುಷಾರಿಲ್ಲದಿದ್ದಾಗ ಕೂಡ ಈ ಅಭ್ಯಾಸ ಬಿಟ್ಟವಳಲ್ಲ. ಚಾ ಕುಡಿದು ಗಂಡನಿಗೆ ಏನಾದರೂ ತಿನ್ನಲು ಮಾಡಿಟ್ಟು ಹಾಗೇ ಹೊರಡುವ ಫಾತೀಮಾನ ಊಟ, ತಿಂಡಿ ಎಲ್ಲ ಕೆಲಸ ಮಾಡುವ ಮನೆಗಳಲ್ಲೇ ಆಗುತ್ತಿತ್ತು. ಸಂಜೆ ಬರುವಾಗ ಯಾರ್‍ಯಾರದೋ ಮನೆಗಳಲ್ಲಿ ಕೊಟ್ಟಿದ್ದನ್ನು ಬೇರೆ ಬೇರೆ ಪಾಲಿಥಿನ್ ಕವರ್‌ಗಳಲ್ಲಿ ಹಾಕಿಕೊಂಡು ಅದೆಲ್ಲವನ್ನೂ ಒಂದು ಚೀಲದಲ್ಲಿ ಇಟ್ಟುಕೊಂಡು, ಕೆಲವು ಸಲ ತಲೆಯ ಮೇಲಿಟ್ಟುಕೊಂಡು ಮನೆಗೆ ವಾಪಾಸಾಗುತ್ತಿದ್ದಳು.
ಫಾತೀಮಾ ತೆಗೆದುಕೊಂಡ ಅತೀ ಒಳ್ಳೆಯ ನಿರ್ಧಾರವೆಂದರೆ ಎರಡನೇ ಮಗುವಾಗುತ್ತಿದ್ದಂತೆ ಆಪರೇಷನ್ ಮಾಡಿಸಿಕೊಂಡಿದ್ದು. ಗಂಡನಿಗೆ ಹೇಳಿದರೆ ಅವನು ಇನ್ನೊಂದೆರಡಾಗಲೀ ಎನ್ನುವುದು ಖಂಡಿತ ಎಂದು ಫಾತೀಮಾ ಅವನಿಗೆ ಹೇಳಿರಲಿಲ್ಲ. ಸರಕಾರಿ ದವಾಖಾನೆಯಲ್ಲಿದ್ದ ಹಿರಿಯ ಡಾಕ್ಟರ್‌ಗೆ ಮೊದಲೇ ಹೇಳಿಬಿಟ್ಟಿದ್ದಳು. ಅಂವಾ ಏನ ಸಹಿ ಮಾಡ್ತಾನ್ರೀ.. ಹೆಂಗೂ ಹೆಬ್ಬಟ್ಟು ಒತ್ತತಾನ. ಮತ್ತ ಅಂವಂಗ ಕೇಳಿದ್ರ ಬ್ಯಾಡ, ಇನ್ನೊಂದೆರಡಾಗಲಿ ಅಂತಾನ, ನೀವ ಏನರ ಮಾಡ್ರೀ ಎಂದಿದ್ದಳು. ನಾ ಎಲ್ಲ ಸಂಭಾಳಿಸ್ತೀನೇಳವಾ ಎಂದ ಆ ಡಾಕ್ಟರ್‌ನನ್ನು ಫಾತೀಮಾ ಇನ್ನೂವರೆಗೆ ನೆನೆಯುತ್ತಾಳೆ.

ಫಾತೀಮಾಗೆ ಮದುವೆಯಾಗಿ ಕೆಲವು ವರ್ಷಗಳವರೆಗೆ ವಿಚಿತ್ರ ನಿರೀಕ್ಷೆ ಇತ್ತು. ಬದುಕು ಬೇರೆ ಬಗೆಯಲ್ಲಿ ಸಾಗಬಹುದು ಎಂಬಂತಹದೇನೋ ಪುಟ್ಟ ನಿರೀಕ್ಷೆ ತೂಗಾಡುತ್ತಿತ್ತು. ಮಳೆ ನೋಡುತ್ತ ಕುಳಿತಾಗೆಲ್ಲ ಪುಟ್ಟ ಬೆಚ್ಚಗಿನ ಮನೆಯೊಂದರ ಕನಸು. ಗೋಪಾಲ ಸರೋಜನಂತಹವರ ಸಂಸಾರ ನೋಡುವಾಗೆಲ್ಲ ತಾನೂ ಎಂದಾದರೂ ಅಂತಹದಕ್ಕೆ ಪಕ್ಕಾಗುತ್ತೀನೇನೋ ಎಂಬಂತಹ ತೆಳು ಎಳೆಯೊಂದು ಹಾದು ಹೋಗುತ್ತಿತ್ತು. ತನ್ನನ್ನು ಯಾರಾದರೂ ಜೀವಕ್ಕಿಂತ ಅತಿಯಾಗಿ, ಆತ್ಯಂತಿಕವಾಗಿ, ಕಾರಣವೇ ಇಲ್ಲದೆ ಪ್ರೀತಿಸುವಂತಹ ಗಳಿಗೆಯೂ ಬರಬಹುದೇ ಎಂಬಂತಹ ಪ್ರತೀಕ್ಷೆ ಆತ್ಮದ ಮೂಲೆಯಲ್ಲಿ…. ಫಾತೀಮಾ ತೀರಾ ಮಹಾರಾಣಿ ರೀತಿಯಲ್ಲಿ ಜೀವಿಸುವ ಕನಸು ಕಂಡವಳಲ್ಲ. ಅವಳ ಕನಸು, ಪ್ರತೀಕ್ಷೆ ಎಲ್ಲ ಪ್ರೀತಿಸುವ ಒಂದು ಜೀವಕ್ಕಾಗಿ. ಅಪ್ಪ ಅಮ್ಮನ ಪ್ರೀತಿಯನ್ನೂ ಅನುಭವಿಸದ ಫಾತೀಮಾಗೆ ಪ್ರೀತಿಸುವ ಜೀವವೊಂದರ ತೊಡೆ ಮೇಲೆ ಮಲಗಿ ಮೆಲ್ಲಗೆ ಹಣೆ ಮೇಲೆ ತಟ್ಟಿಸಿಕೊಳ್ಳುತ್ತ ಹಾಗೆ ಹಾಗೆಯೇ ನಿದ್ದೆ ಹೋಗಿಬಿಡಬೇಕು… ಬೆಚ್ಚಗಿನ ಅಂಗೈಯೊಂದರಲ್ಲಿ ಮುಖ ಹುದುಗಿಸಿ ತಾನೊಂದು ಚಿಕ್ಕ ಗೆರೆಯಾಗಿ… ಗೆರೆಯೊಳಗಿನ ಜೀವಕಣವಾಗಿ ಕರಗಿಹೋಗಿಬಿಡಬೇಕು ಎಂಬ ಭಾವ ಆಗೀಗ. ಫಾತೀಮಾ ಆಗಸದಲ್ಲಿ ತೇಲುವ ಕನಸು ಕಂಡವಳಲ್ಲ. ನೆಲದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಿ ನಿಂತು ಎಲ್ಲವನ್ನೂ ಹಂಚಿಕೊಳ್ಳುವ… ಎಲ್ಲದಕ್ಕೆ ಜತೆಯಾಗುವ ಒಂದು ಜೀವದ ಪ್ರತೀಕ್ಷೆ ಮಾತ್ರ ಅವಳಲ್ಲಿತ್ತು. ಬರಬರುತ್ತ ಬದುಕಿನ ವಾಸ್ತವಗಳು ಹೇಗೆ ಅವಳನ್ನು ಹಣ್ಣು ಮಾಡಿತ್ತೆಂದರೆ ಇನ್ನು ಈ ಬದುಕಿನಲ್ಲಿ ಏನೂ ಸಾಧ್ಯವೇ ಇಲ್ಲ ಎಂಬಂತಹ ಆಳದ ಹತಾಶೆ ಅವಳನ್ನು ಆವರಿಸಿಕೊಳ್ಳುತ್ತಿತ್ತು. ಎಷ್ಟೇ ಎಲ್ಲವನ್ನೂ ಗಟ್ಟಿಯಾಗಿ ಎದುರಿಸಬೇಕೆಂದರೂ ಇನ್ನು ಏನೂ ಸಾಧ್ಯವೇ ಇಲ್ಲ ಎಂಬಂತಹ ಆಳದ ನೋವು ಅವಳನ್ನು ಅಲ್ಲಾಡಿಸಿ ತೀರಾ ಹತಾಶೆ ತಾಳಲಾರದೆ ಕೆಲವೊಮ್ಮೆ ಯಾರಿಗೂ ಗೊತ್ತಾಗದಂತೆ ಅಳುತ್ತ ಕುಳಿತುಬಿಡುತ್ತಿದ್ದಳು. ತಾನು ಹೀಗೆ ಯಾವ ಬಗೆಯ ಆತ್ಯಂತಿಕ ಪ್ರೀತಿಗೂ ಒಳಗಾಗದೆ, ಸಂಸಾರದ ಬೆಚ್ಚಗಿನ ಭಾವವನ್ನು ಅನುಭವಿಸದೇ ಹಾಗೆಯೇ ಒಂಟಿಯಾಗಿ ಸತ್ತು ಹೋಗಿಬಿಡುತ್ತೇನೆ ಎಂಬಂತಹ ಭಾವ ಆವರಿಸಿದಾಗ ತೀರಾ ಒಂಟಿ ಅನ್ನಿಸಿ ಅದನ್ನೆಲ್ಲ ಶಬ್ದದಲ್ಲೂ ಯಾರೊಂದಿಗೂ ಹಂಚಿಕೊಳ್ಳಲಾರದೆ ಒದ್ದಾಡಿ ಬಿಡುತ್ತಿದ್ದಳು.

ಫಾತೀಮಾಗೆ ಆಗೆಲ್ಲ ಎಲ್ಲಿಂದಲೋ ಕೇಳುವ ನಮಾಜಿನ ಧ್ವನಿ ವಿಚಿತ್ರ ಸಮಾಧಾನ ನೀಡಿದಂತೆ ಭಾಸವಾಗುತ್ತಿತ್ತು. ಎಷ್ಟೋ ಸಲ ಮಧ್ಯಾಹ್ನ ಒಂದು ಗಂಟೆ ಹೊತ್ತಿನಲ್ಲಿ ನಮಾಜಿನ ದನಿ ಕೇಳುತ್ತಿದ್ದಂತೆ ಕೈಯಲ್ಲಿದ್ದ ಭಾಂಡೆಯನ್ನೋ, ಬಟ್ಟೆಯನ್ನೋ ಹಿಡಿದು ಹಾಗೆಯೇ ಕುಳಿತುಬಿಡುತ್ತಿದ್ದಳು. ಆಗೆಲ್ಲ ಸರೋಜಳಂತೆ ತೀರಾ ಪರಿಚಯದ ಮನೆಯವರಾದರೆ ಏನ ಫಾತೀಮಾ ಕುಂತಲ್ಲೇ ನಮಾಜ ಮಾಡ್ಲಿಕ್ಕೆ ಹತ್ತೀಯೇನು ಎಂದು ಕೇಳುತ್ತಿದ್ದರು. ಫಾತೀಮಾ ಆಗೆಲ್ಲ ಉತ್ತರಿಸುತ್ತಲೇ ಇರಲಿಲ್ಲ. ಹನಿಗಣ್ಣಾಗಿ ಸುಮ್ಮನೆ ತಲೆ ತಗ್ಗಿಸಿ ಕೆಲಸ ಮುಂದುವರೆಸುತ್ತಿದ್ದಳು. ಅವಳು ಹಾಗೆ ಕುಳಿತಿದ್ದನ್ನು ಒಂದೆರಡು ಬಾರಿ ಗಮನಿಸಿದ ಸರೋಜ ಯಾಕ ಫಾತೀಮಾ… ಮನಸ್ಸಿಗಿ ಏನರ ತ್ರಾಸ ಮಾಡಿಕೊಂಡಿಯೇನ.. ಏನಾತ ಫಾತೀಮಾ ಎಂದು ಆಪ್ತವಾಗಿ ಕೇಳುತ್ತಿದ್ದಳು. ಸರೋಜ ಕೂಡ ಬಿಡುವಾಗಿದ್ದಾಳೆ ಅನ್ನಿಸಿದರೆ ಮಾತ್ರ ಫಾತೀಮಾ ಮೆಲ್ಲಗೆ ಯಾಕೋ ಜೀಂವಾ ಬ್ಯಾಸರಾಗೇದರೀ ಎಂದು ತುಸು ಹಂಚಿಕೊಳ್ಳುತ್ತಿದ್ದಳು.

ಮನೆಯಲ್ಲಿ ಎಷ್ಟೇ ಸೋರಿದರೂ ಜೋರಾಗಿ ಸುರಿಯುವ ಮಳೆಯೆಂದರೆ ಫಾತೀಮಾಗೆ ಖುಷಿ ಕೊಡುವ ಸಂಗತಿ.
ಅಯ್ಯಾ.. ಸೋರಿದ್ರೇನಂತ.. ಹಾಸಿಗಿ ಬಟ್ಟಿ ನೆನದ್ರ ಮತ್ತ ಒಣಗ್ತಾವ.. ಹೊಲದಾಗ ಕೆಲಸ ಮಾಡೋವ್ರಿಗಿ ಗೊತ್ರೀ ಮಳಿ ಬರದಿದ್ರ ಏನಾಗ್ತದ ಅಂತ. ಮಳಿಯಾಗಲಾರದ್ದಕ್ಕ ಎಷ್ಟ ಮಂದಿ ಮಹಾರಾಷ್ಟ್ರ ಕಡಿ ಗುಳೇ ಹೋಗ್ತಾರ… ನೆನಪಾದ್ರ ಜೀಂವಾ ಒಜ್ಜಿಯಾಗ್ತದ ಎನ್ನುತ್ತಿದ್ದಳು.
ಫಾತೀಮಾಗೆ ಗುಳೇ ಹೋಗುವ ಮಂದಿಯನ್ನು ನೋಡಿದಾಗೆಲ್ಲ ವಿಚಿತ್ರ ಸಂಕಟ. ಫಕ್ಕನೆ ಹಳೇ ನೆನಪಿಗೆ ಜಾರುವ ಫಾತೀಮಾಗೆ ಬಾಲ್ಯದಲ್ಲಿ ಆಲಿಯಾಬಾದಿನಲ್ಲಿದ್ದಾಗ ಪಕ್ಕದ ಮನೆಯ ಲತೀಫನ ಕುಟುಂಬದವರು ಗುಳೇ ಹೋಗಿದ್ದೇ ನೆನಪಾಗುತ್ತದೆ. ಲತೀಫಾ ಅವಳನ್ನು ಇಷ್ಟ ಪಟ್ಟಿದ್ದನೇ.. ಗೊತ್ತಿಲ್ಲ. ಮದುವೆಯಾಗೋಣ ಎಂದು ಹೇಳಿದ್ದನೇ.. ಇಲ್ಲ .. ಹಾಗೇನೂ ನಡೆದಿರಲೇ ಇಲ್ಲ. ಏನಾದರೂ ನಡೆಯುವ ಮುಂಚೆಯೇ ಗುಳೇ ಹೋದ ಆ ಕುಟುಂಬ ವಾಪಾಸಾಗಿರಲೇ ಇಲ್ಲ. ತಂದೆ ತಾಯಿ ಇಬ್ಬರೂ ಬೇಗನೆ ಸತ್ತಿದ್ದರಿಂದ ದುಡಿಯುವ ಅಣ್ಣನ ಮಾತನ್ನು ತೆಗೆದು ಹಾಕುವಂತೆಯೇ ಇರಲಿಲ್ಲ. ಅಣ್ಣ ಕೂಡ ಈ ದೊಡ್ಡ ಸಂಸಾರದ ತಾಪತ್ರಯಗಳಲ್ಲಿ ಮೆತ್ತಗಾಗುತ್ತಿದ್ದಾನೆ ಎಂದರಿವಾದ ಫಾತೀಮಾ ಅವನು ಮದುವೆಯನ್ನು ನಿಶ್ಚಿತಗೊಳಿಸಿದಾಗ ಉಸಿರೆತ್ತದೆ ಸಮ್ಮತಿಸಿದ್ದಳು. ಅವಳ ಅಭಿಪ್ರಾಯ, ಆಯ್ಕೆಯ ಪ್ರಶ್ನೆಯೇ ಇರಲಿಲ್ಲ. ವಾಸ್ತವ ಚೆನ್ನಾಗಿ ಅರಿತಿದ್ದ ಫಾತೀಮಾ ಎರಡನೇ ಗಂಡನಾದರೂ, ವಯಸ್ಸಿನಲ್ಲಿ ದೊಡ್ಡವನಾದರೂ ಸ್ವಲ್ಪ ಆತ ತನ್ನೊಂದಿಗೆ ಪ್ರೀತಿಯಿಂದಿದ್ದರೆ ಸಾಕು ಎಂದುಕೊಂಡಿದ್ದಳು. ಒಂದೆರಡು ವರ್ಷ ಏನೂ ತೊಂದರೆ ಅನ್ನಿಸಲಿಲ್ಲ. ಆದರೆ ಬರುಬರುತ್ತ ತಾನು ನಿರ್ಭಾವುಕ ವ್ಯಕ್ತಿಯೊಂದಿಗೆ ಸಂಸಾರ ಮಾಡ್ತಿದ್ದೇನೆ ಎನ್ನಿಸತೊಡಗಿ, ಬದುಕೆಂದರೆ ಎರಡು ಮಕ್ಕಳ ಹೊಟ್ಟೆ ಪಾಡಿಗೆ ದುಡಿಯುವುದು ಮಾತ್ರವಾಗುಳಿದಿತ್ತು.

ಗೋಪಾಲನಿಗೆ ಇತ್ತೀಚಿಗೆ ತುಸು ಹುಷಾರಿಲ್ಲದೆ ಆಗೀಗ ದವಾಖಾನೆಗೆ ಹೋಗಿ ಬಂದಿದ್ದು ಫಾತೀಮಾಗೂ ಗೊತ್ತಿತ್ತು. ಕ್ಯಾನ್ಸರ್ ಆಗೇದಂತಲ್ಲ ಫಾತೀಮಾ… ಸರೋಜಕ್ಕಾರು ನಿಂಗೇನು ಹೇಳೆ ಇಲ್ಲೇನು.. ಫಾತೀಮಾ ಕೆಲಸ ಮಾಡುವ ನಾಲ್ಕಾರು ಕಡೆ ಅವಳಿಗೇ ನೇರವಾಗಿ ಕೇಳಿದ್ದರು.
ಕ್ಯಾನ್ಸರ್ ಅಲ್ರೀ… ಮೈಯಾಗ ಜರಾ ಆರಾಮಿಲ್ಲ ಅಷ್ಟೇ ಹಿಂಜಿ ಹಿಂಜಿ ಕೇಳುವ ಜನರೆಂದರೆ ಫಾತೀಮಾಗೆ ಯಾವಾಗಲೂ ಮೈಯುರಿಯುತ್ತದೆ. ಸರೋಜ ನಾವು ಸೊಲ್ಲಾಪುರಕ್ಕ ಹೊಂಟೀವಿ.. ದವಾಖಾನಿಗಿ ತೋರಿಸಲಾಕ.. ಮನಿಯಾಗ ಹುಡುಗರಷ್ಟೇ ಇರ್‍ತಾರ.. ಭಾಂಡೆ ಬಟ್ಟೆ ಜೋಡಿ ಕಸಾ ಪರಿಷಿ ಮಾಡಿ ಹೋಗವಾ.. ಹಂಗೇ ಅಂಗಳಾ ಕಸಾನೂ ತೆಗೆದುಬಿಡವಾ ಎಂದಾಗ ಮಾತ್ರ ಅವಳಿಗೆ ’ಏನೋ ಗಡಬಡ್ ಅದ’ ಅನ್ನಿಸಿತು.
ಫಾತೀಮಾ ಕೇಳಿದರೂ ಸರೋಜ ಜಾಸ್ತಿ ಏನೂ ಹೇಳದಿದ್ದಾಗ ಕೆದಕಲು ಇಷ್ಟವಾಗದೆ ಸುಮ್ಮನಾದಳು.

ಪ್ರತಿ ದಿನ ಕೆಲಸಕ್ಕೆ ಬಂದಾಗ ಕಾಲೇಜಿಗೆ ಹೋಗುತ್ತಿದ್ದ ಸರೋಜನ ಮಗಳಿಗೆ ಹ್ಯಾಂಗದಾರಂತವ್ವಾ ಎಂದು ವಿಚಾರಿಸುತ್ತಿದ್ದಳು. ಹೊಟ್ಟಿ ಒಳಗೆ ಏನೋ ಗಡ್ಡಿ ಆಗೇದಂತ.. ಇನ್ನೂ ಸಣ್ಣದಂತ, ಈಗಲೇ ಆಪರೇಶನ್ ಮಾಡಿದ್ರ ಭೇಷ್ ಅಂತ ನನಗ ಪರೀಕ್ಷೆ ಅದಾವು, ತಮ್ಮಂಗ ಸಾಲಿ ಅದ ಹಂಗಾಗಿ ನಾವು ಹೋಗಂಗಿಲ್ಲ. ಅಪ್ಪಾನ ಜೀಂವ ನೆನಸಲಾಕ ಹತ್ತೇದ.. ನಾಳಿಗಿ ಆಪರೇಶನ್ ಅದಂತ.. ಅವ್ವಾನ ಜೋಡಿ ಮಾಮಾ ಅದಾನ
ಮಗಳು ದಿನಕ್ಕೊಂದು ಸುದ್ದಿ ಹೇಳುತ್ತಿದ್ದಳು. ಫಾತೀಮಾ ತನಗೆ ತಿಳಿದಂತೆ ಸಮಾಧಾನ ಮಾಡಿ ಹೋಗುತ್ತಿದ್ದಳು.

ಆಪರೇಶನ್ ಆಗಿದೆ ಎಂದು ಹೇಳಿದ ಮರುದಿನ ಯಾವ ದವಾಖಾನಿ, ಎಲ್ಲಿ ಅಂತ ಕೇಳಿಕೊಂಡ ಫಾತೀಮಾ ಮನಸ್ಸು ತಡೆಯದೇ ಸೊಲ್ಲಾಪುರಕ್ಕೆ ಹೊರಟೇ ಬಿಟ್ಟಳು. ದವಾಖಾನೆ ಹೊರಗಿನ ಮೆಡಿಕಲ್ ಶಾಪ್‌ನಿಂದ ಏನೋ ಔಷದಿ ತೆಗೆದುಕೊಂಡು ಒಳಹೊರಟಿದ್ದ ಸರೋಜನಿಗೆ ಅದೇ ತಾನೆ ಬಂದ ಫಾತೀಮಾನನ್ನು ನೋಡಿದ್ದೇ ತಡೆಯಲಾರದ ಅಚ್ಚರಿ.
ಇಲ್ನೋಡ್ರೀ… ಯಾರು ಬಂದಾರಂತ
ಫಾತೀಮಾ ಹೀಗೆ ಬರಬಹುದೆಂಬ ಊಹೆಯ ಬಿಂದುವಿನ ಬಳಿಯೂ ಹಾದು ಹೋಗಿರದಿದ್ದ ಗೋಪಾಲನಿಗೂ ಅಚ್ಚರಿ.
ಹೆಂಗ ಬಂದ್ಯವ್ವಾ…
ಹೆಂಗ ಅಂದ್ರ ಹಂಗಾ.. ರೇಲು ಗಾಡಿ ಒಳಗ ಕೂತು.. ನೀವು ಹೆಂಗದೀರ್ರೀ
ಆ ಸ್ಪೆಷಲ್ ರೂಮಿನ ಪುಟ್ಟ ಸ್ಟೂಲಿನ ಮೇಲೆ ಸರೋಜ ಒತ್ತಾಯಪಡಿಸಿ ಕೂರಿಸಿದ್ದರಿಂದ ಚೂಪಗೆ ಕುಳಿತ ಫಾತೀಮಾ ತನ್ನ ಎಂದಿನ ಹಗುರು ದನಿಯಲ್ಲಿದ್ದಳು. ಫಾತೀಮಾ ಹೇಳುವ ದವಾಖಾನೆಯ ಎಷ್ಟೋ ಘಟನೆಗಳೊಂದಿಗೆ ಸದಾ ಫಿನಾಯಿಲ್, ಔಷದಿಗಳು, ದವಾಖಾನೆಯ ಚಾದರದ ವಾಸನೆ ಇತ್ಯಾದಿ ಬೆರೆತಂತೆ ಸರೋಜನಿಗೆ ಅನ್ನಿಸುತ್ತಿತ್ತು. ಅದೀಗ ಈ ಸ್ಪೆಷಲ್ ರೂಮಿನಲ್ಲಿ ನೆನಪಾಗುತ್ತಿದ್ದಂತೆ ಫಾತೀಮಾನ ಕಾಳಜಿಗೆ ಕಣ್ಣುತುಂಬಿ ಬರುತ್ತಿತ್ತು. ಇಲ್ಲಿಗೆ ಬಂದಾಗಿನಿಂದ ಆಪರೇಶನ್ ಆದಾಗಿನವರೆಗೆ ಏನಾಯಿತೆಂದು ಸರೋಜ ಇಂಚಿಂಚೂ ಹೇಳತೊಡಗಿದಳು. ಇಷ್ಟು ದಿನ ಗೋಪಾಲನೆದುರಿಗೂ ತೋರಿಸದಿದ್ದ ಆತಂಕ, ಹೊಕ್ಕಳಿನಾಳದ ನಸುಕಂಪನ ಎಲ್ಲವನ್ನೂ ಬಿಟ್ಟೂ ಬಿಡದೆ ಹೇಳಿದಳು. ಹೊರಗೆ ತುಂಬ ಗಟ್ಟಿಯಿರುವಂತೆ ತೋರಿಸಿಕೊಂಡಿದ್ದ ಸರೋಜ ಒಳಗೆ ಇಷ್ಟು ಕಂಗಾಲು ಆಗಿದ್ದಳೇ… ಗೋಪಾಲ ಅವಳೊಳಗಿನ ನಡುಕವನ್ನು ಮೊದಲ ಬಾರಿ ಅನುಭವಿಸತೊಡಗಿದ್ದ. ಎಷ್ಟು ಸಹಜವಾಗಿ ಸರೋಜ ಫಾತೀಮಾನ ಬಳಿ ಅನಾವರಣಗೊಳ್ಳತೊಡಗಿದಳೆಂದರೆ ಅವಳು ಫಾತೀಮಾನೊಂದಿಗೆ ಹೇಳುತ್ತಿಲ್ಲ, ತನ್ನ ಆತ್ಮದೊಂದಿಗೆ ಮೆಲ್ಲ ಸಂವಾದದಲ್ಲಿ ತೊಡಗಿದ್ದಾಳೆ ಎಂಬಂತೆ.
ಕಾಲನಿ ಒಳಗ ಮಂದಿ ಕ್ಯಾನ್ಸರ್ ಅಂತ್ಲೇ ಸುದ್ದಿ ಹಬ್ಬಿಸಿರಬಹುದು ತುಸು ದಣಿದಿದ್ದ ಗೋಪಾಲ ನಗಲೆತ್ನಿಸಿದ. ಫಾತೀಮಾ ನಗಲಿಲ್ಲ.
ಮಂದಿಗೇನ್ರೀ.. ಆರಾಮಿಲ್ಲ ಅಂದ್ರ ಇಮಾನನೇ ಏರಿಸ್ತಾರ. ಮನಶ್ಯಾ ಯಾವಾಗೂ ಚಲೋ ಬಯಸಬೇಕ್ರೀ…. ನಿಮ್ಮ ಹಿಂದಿನ ಮನಿ ಅಕ್ಕೋರೆ ಕ್ಯಾನ್ಸರ್ ಅಂತ ಅರ್ಧ ಮಂದಿಗಿ ಹೇಳ್ಯಾರ್ರೀ..
ತುಸು ಹೊತ್ತಿನ ನಂತರ ಸರೋಜ ನೀವು ಕುಂತಿರ್ರೀ ನಾ ಚಾ ತರ್‍ತೀನು… ಫಾತೀಮಾ ಲಗೂನೆ ಮನಿ ಬಿಟ್ಟಂಗ ಕಾಣಿಸ್ತದ. ಎಂದು ಫ್ಲಾಸ್ಕ್ ತೆಗೆದುಕೊಂಡು ಹೊರಟಳು.
ನಾನೂ ಭಾಳಾ ಅಂಜಿದ್ನೇಳವ್ವಾ… ನಾ ಯಾರಿಗೇನ ಪಾಪ ಮಾಡೀನಿ, ಏನ ಕೆಟ್ಟ ಚಟ ಮಾಡೀನಿ ಅಂತ ನನಗ ಹಿಂಗಾತು ಅಂತ ಚಿಂತಿ ಶುರು. ಬಯಾಪ್ಸಿ ಮಾಡಿಂದ ಹೇಳಿದ್ರು. ಹಂಗೇ ಗಡ್ಡಿ ಅದ. ಕ್ಯಾನ್ಸರ್ ಗಡ್ಡಿ ಅಲ್ಲ ಅಂತ ಗೋಪಾಲ ನಿಧಾನ ಉಸಿರೆಳೆದುಕೊಂಡ.
ಅಯ್ಯಾ ಏನಾಗಂಗಿಲ್ರೀ.. ಸುಮ್ನಿರ್ರೀ ಅಣ್ಣಾರಾ… ಹಂಗೇನರಾ ಆತಂದ್ರ ಅದನ್ನ ತಪ್ಪಿಸಾಕ ಆಗತದೇನು… ನಮ್ಮ ಕೈಯಾಗೇನೈತ್ರೀ ಅಣ್ಣಾರಾ… ಎಲ್ಲ ಖುದಾನ ಮರ್ಜಿರೀ.. ಹೆಂಗ ಬರ್‍ತದ ಹಂಗ ಎದುರಿಸಬೇಕ್ರೀ…

ಹಂಗಲ್ಲ ಫಾತೀಮಾ.. ಮಾತಾಡೂದು, ಒಣ ವೇದಾಂತ ಹೇಳೂದು ಬ್ಯಾರೆ, ಸಾವು ಖರೇಖರೇ ಬಾಗಿಲದಾಗ ಹಣಿಕಿ ಹಾಕಲಾಕ ಹತ್ತೇದ ಅಂತ ಗೊತ್ತಾಗಿಂದ ಯಾ ವೇದಾಂತಕ್ಕೂನೂ ಬೆಲಿನೇ ಇಲ್ಲ ಅನ್ನಿಸ್ತದ. ಇಷ್ಟ್ ದಿನ ನಾ ಏನ ಬಡಿದಾಡೀನಿ, ನಾನೇ ಮಾಡೀನಿ ಅಂತ ಅಹಂ ಪಟ್ಟೀನಿ ಯಾವುದಕ್ಕೂ ಬೆಲಿನೇ ಇಲ್ಲ ಅನ್ನಿಸ್ತದ. ಕಣ್ಣ ಮುಚ್ಚಿದರ ಸರೋಜನ ಮಾರಿ, ಹುಡುಗರ ಮಾರಿ ಕಣ್ಣಾಗ ಕಟ್ಟಿದಂಗ… ನಾ ಇವರಿಗೆ ಇಷ್ಟ್ ದಿನ ಆರಾಮಾಗಿ ಇಡೂದು ಆಗಿರಲಿಲ್ಲ. ಹಿಂಗ ಏನೇನೋ ಅನ್ನಿಸೂದು. ಸರೋಜಂಗೆ ಹೇಳೂಣು ಅಂದ್ರ ಆಕಿಗಿ ಮತ್ತಷ್ಟು ಅಂಜಿಕಿಯಾದ್ರ ಅಂತ. ಮತ್ತ ಆಕಿನೂ ಗಪ್ಪಾಗಿಬಿಟ್ಟಿದ್ದಳು. ನೀ ನಂಬ್ತಿ ಇಲ್ಲೋ ಫಾತೀಮಾ.. ಆ ಗಡ್ಡಿ ಒಳಗಿಂದು ಏನೋ ಚೂರು ತೆಗದು ಬಯಾಪ್ಸಿಗೆ ಅಂತ ಒಯ್ದರಲ್ಲ ಆವಾಗ ಹಿಂತಾದೇ ಏನೇನೋ ಯೋಚ್ನೆ ಮನಸ್ಸಿನಾಗ ಲಗುಲಗೂನೆ ಹಾದುಹೋಗೂದು… ಮನಸ್ಸು ಕಡೀಕೆ ಹೆಂಗ ಖಾಲಿಯಾತು ಅಂದ್ರ ನಾ ಇನ್ನ ಎಷು ದಿನದಾಂವ ಅನ್ನೂ ಅಂಜಿಕಿ ಮಾತ್ರ… ಯಾರೂ ಹಮೇಶಾ ಬದುಕೂದು ಸಾಧ್ಯಿಲ್ಲ ಬಿಡು… ಆದ್ರ ಎಷ್ಟ್ ದಿನದಾಗ ಸಾಯ್ತೀನಿ ಅಂತ ಲೆಕ್ಕ ಗೊತ್ತಾಗೂದು ಅದಲಾ ಅದರ ನಡುಕ ಬ್ಯಾರೆನೇ ಇರ್‍ತದ ಫಾತೀಮಾ
ಗೋಪಾಲ ಮೆತ್ತಗೆ ಹೇಳುತ್ತಿದ್ದ.
ಗೋಪಾಲ ಫಾತೀಮಾ ಇಬ್ಬರೇ ಇದ್ದಾಗ ಮಾತ್ರ ಹೀಗೆ ಆತ್ಮದ ಕೆಲವು ಪದರಗಳು ರಾತ್ರಿ ಹೂವರಳಿದಂತೆ ಸಾವಕಾಶವಾಗಿ ಅನಾವರಣಗೊಳ್ಳುತ್ತಿತ್ತು. ಒಂದೆರಡು ಸಲ ಮನೆಗೆಲಸ ಮಾಡಿ ಮುಗಿಸಿದ ಫಾತೀಮಾ ಹೆಚ್ಚುವರಿ ಹಣ ಕೇಳಲೆಂದೋ, ಏನೋ ಕಷ್ಟ ಹೇಳಿಕೊಳ್ಳಲೆಂದೋ ಬಂದಾಗ ಸರೋಜ ಎಲ್ಲಿಯೋ ಹೊರಟು ಹೋಗಿದ್ದಳು. ಹಿತ್ತಲಿನಲ್ಲಿ ಒಗೆಯುವ ಕಲ್ಲಿನ ಬಳಿ ಚೂಪಗೆ ಕುಳಿತ ಫಾತೀಮಾಳನ್ನು ಅಡಿಗೆ ಮನೆ ಒಳಗೆ ಕರೆದ ಗೋಪಾಲ ಏನವ್ವಾ ಫಾತೀಮಾ ಎಂದು ವಿಚಾರಿಸಿಕೊಂಡಾಗ ಅವನೊಂದಿಗೇ ಹೇಳಿಕೊಂಡಿದ್ದಳು. ಆಗೆಲ್ಲ ಪಾತೀಮಾನ ಬದುಕಿನ ಕೆಲ ವಿವರಗಳೂ ಸಂಜೆಯ ನಸುಗತ್ತಲಿಗೆ ಸೇರಿಕೊಳ್ಳುತ್ತಿತ್ತು. ನಾಲ್ಕೈದು ಸಲ ಗೋಪಾಲ ದುಡ್ಡು ಕೊಟ್ಟಿದ್ದ ಕೂಡ.
ಇದನ್ನ ಪಗಾರದಾಗ ಹಿಡಿಬ್ಯಾಡ್ರೀ ಅಣ್ಣಾರೆ… ಇದರ ಲೆಕ್ಕ ಬ್ಯಾರೆ ಇಡ್ರೀ ತುಸು ಮಜುಗರದಿಂದ ಫಾತೀಮಾ ಮೊದಲ ಬಾರಿಗೇ ಹೇಳಿದ್ದರೂ ವಿಚಿತ್ರ ಸ್ವಾಭಿಮಾನವೂ ಬೆರೆತಂತೆ ಇತ್ತು. ಸೂಕ್ಷ್ಮವಾಗಿ ಅವಳ ಮುಖಭಾವ ಗಮನಿಸಿದ್ದ ಗೋಪಾಲ ಸರೋಜನ ಮುಂದೆ ದುಡ್ಡು ಕೊಟ್ಟಿದ್ದನ್ನು ಹೇಳಿದ್ದರೂ ಎಷ್ಟು, ಏನು ಎಂದು ಹೇಳಿರಲಿಲ್ಲ. ಪ್ರತಿಯೊಂದಕ್ಕೆ ಚೌಕಾಸಿ ಮಾಡುವ, ರಿಪಿರಿಪಿ ಮಾಡುವ ಸರೋಜ ಕೂಡ ಜಾಸ್ತಿ ಏನೂ ಕೇಳದೆ ಸುಮ್ಮನಾಗಿ ಬಿಟ್ಟಿದ್ದಳು. ಸರೋಜನಿಲ್ಲದ ಬದುಕನ್ನು ಊಹಿಸಿಕೊಳ್ಳಲಾರದಷ್ಟು ಅವಳನ್ನ ಹಚ್ಚಿಕೊಂಡಿದ್ದ ಗೋಪಾಲ ಫಾತೀಮಾ ಎಲ್ಲವನ್ನು ಒಬ್ಬಳೇ ಹೇಗೆ ನಿಭಾಯಿಸುತ್ತಾಳೆ ಎಂಬ ಅಚ್ಚರಿಗೆ ಪಕ್ಕಾಗಿ ನಿಲ್ಲುತ್ತಿದ್ದ.

ಅದೂ ಖರೇ ಅದ ಬಿಡ್ರೀ ಅಣ್ಣಾರೆ… ಹೊರಗಿಂದ ಮಾತಾಡೂದು ಬ್ಯಾರೆ ಆಗ್ತದ, ಒಳಗೆ ನಾವೇ ಅನುಭವಿಸ್ತೀವಲ್ಲ, ಅದರ ನಡುಕಾ ಬ್ಯಾರೆ ಇರ್‍ತದ… ಮತ್ತ ಆ ನಡುಕಕ್ಕೆ ಯಾರೂ ಜತಿಯಾಗಂಗಿಲ್ಲ… ನಾವ ಒಳಗನ ಗಟ್ಟಿಯಾಗಬೇಕ್ರೀ
ಫಾತೀಮಾ ಗೋಪಾಲನ ನಡುಕದ ಮೂಲ ಕಾರಣವನ್ನು ಸ್ಪರ್ಶಿಸಿದಂತೆ ಕುಳಿತಿದ್ದಳು.
ಗೋಪಾಲ ಸರೋಜನೊಂದಿಗೂ ತೋಡಿಕೊಳ್ಳಲು ಸಾಧ್ಯವಾಗದೆ ಉಳಿದಿದ್ದು ಈ ನಡುಕವಾಗಿತ್ತು. ಇದು ಸಾವಿನ ಕುರಿತಾದ ನಡುಕವೋ… ಅಥವಾ ತಾನೊಬ್ಬನೇ ಎಂಬ ನಡುಕವೋ…
ನೀ ಹೇಳೂದು ಬರೋಬ್ಬರಿ ಫಾತೀಮಾ.. ಆದರ ಹೆಂಗ ಗಟ್ಟಿಯಾಗಬಕು ಅನ್ನೂದು ತಿಳಿಲಾರದ್ದಕ್ಕ ನಡುಕ ಮತ್ತಷ್ಟು ಹೆಚ್ಚಾಗ್ತದಲಾ ಅದಕ್ಕೇನು ಮಾಡೂಣಂತೀ ಗೋಪಾಲ ತುಸು ತಮಾಶೆಯಾಗಿ ಹೇಳಲೆತ್ನಿಸುತ್ತಾ ನಗಲು ಯತ್ನಿಸಿದ.
ನಮ್ಮ ಮೂಗಿನ ನೇರಕ್ಕ ಎಲ್ಲ ಇರಬಕು ಅಂದ್ರ ಹೆಂಗ ಸಾದ್ಯ ಆಗ್ತದ.. ಎಷ್ಟ ಏನ ಮಾತಾಡಿದ್ರೂ ಕಡೀಕಿ ನಾವು ಒಬ್ಬರೇರೀ.. ಮತ್ಯಾರೂ ಜತಿಯಾಗಂಗಿಲ್ರೀ.. ನಮನಮಗ ಹೆಂಗ ಕಬೂಲೆನ್ನಿಸಿತದ ಹಂಗ ಗಟ್ಟಿಯಾಕ್ಕೋತ ಹೋಗೂದರೀ… ಜಿಂದಗೀ ದೊಡ್ಡದದರೀ ಅಣ್ಣಾರ.. ಫಾತೀಮಾ ಕಣ್ಣುಮುಚ್ಚಿ ನಿಡಿದಾಗಿ ಉಸಿರೆಳೆದುಕೊಂಡಳು. ಬದುಕಲ್ಲಿ ಒಂಟಿಯಾಗಿ ಎದುರಿಸಿದ ಎಷ್ಟೆಲ್ಲ ಕ್ಷಣಗಳು ಕಣ್ಣು ಮುಂದೆ ಹಾದು ಹೋಗುತ್ತ, ಅದೆಲ್ಲ ಎಲ್ಲಿ ತುಟಿ ಮೇಲೆ ಒಡಮೂಡಿಬಿಡುತ್ತದೆಯೋ ಎಂಬ ಕಂಪನದಿಂದ ಮತ್ತಷ್ಟು ಬಿಗಿಯಾಗಿ ಕಣ್ಣುಮುಚ್ಚಿದಳು. ಅರೆಕ್ಷಣ ಅಷ್ಟೇ… ತಟ್ಟನೆ ನೆನಪಾದವಳಂತೆ
ಅಯ್ಯಾ ಮರೆತೇ ಬಿಟ್ಟಿದ್ನಿ ಎನ್ನುತ್ತ ಕೈಯಲ್ಲಿ ಮಡಚಿ ಹಿಡಿದಿದ್ದ ಮಾಸಲು ಚೀಲದಿಂದ ಎರಡು ಬಿಸ್ಕೆಟ್ ಪುಡಿಕೆ ಹೊರತೆಗೆದಳು. ಗೋಪಾಲನಿಗೆ ತುಸು ಮಜುಗರವೆನ್ನಿಸಿತು. ಸ್ವತಃ ಫಾತೀಮಾಗೆ ಮಜುಗರ. ಮತ್ತೆ ಅದರಿಂದ ಯಾರೋ ಕೊಟ್ಟಿದ್ದ ಹಳೆಯ ಪರ್ಸ್‌ನ್ನು ತೆರೆದಳು.
ಅಣ್ಣಾರೆ ನಿಮ್ಮ ಗೂಡ ಆವಾಗವಾಗ ರೊಕ್ಕ ಇಸ್ಕೊಂಡಿದ್ದನಲ್ರೀ.. ಆ ರೊಕ್ಕ ತಂದೀನ್ರೀ ಮೆಲ್ಲನೆ ಅವನ ಪಕ್ಕದಲ್ಲಿಟ್ಟಳು. ’ಅದನ್ಯಾಕೆ ತರಾಕೆ ಹೋಗಿದ್ಯಾ ಫಾತೀಮಾ..’ ’ರೊಕ್ಕ ಹೆಂಗ ಹೊಂದಿಸಿದೆಯವ್ವಾ..’ ’ಈಗೇನ ಹಂತಾ ಪರಿಯಿಂದ ಹರಕತ್ತಾಗಿತ್ತಂತ ಅದನ್ನ ತರಾಕೆ ಹೋಗಿದ್ಯವ್ವಾ..’ ಎರಡು ಮೂರು ವಾಕ್ಯಗಳು ಮನಸ್ಸಿನಲ್ಲಿ ಹಾದು ಹೋಗುತ್ತಿರುವಂತೆ ಗೋಪಾಲ ಏನಾದ್ರೂ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸರೋಜ ಬಂದ ಸದ್ದಾಯಿತು. ತಟ್ಟನೆ ಅದನ್ನು ಹಾಗೇ ಚಾದರದ ಕೆಳಗಿಟ್ಟ.

ಸರೋಜ ಸ್ವಲ್ಪ ತಿಂಡಿಯನ್ನೂ ಕಟ್ಟಿಸಿಕೊಂಡು ಬಂದಿದ್ದಳು. ತಿಂಡಿ ತಿಂದ ಫಾತೀಮಾ ಅದನ್ನೆಲ್ಲ ತೊಳೆದು, ಸರೋಜ ಬೇಡವೆಂದರೂ ಕೇಳದೆ ಅಲ್ಲಿಯ ಪುಟ್ಟ ಬಚ್ಚಲಿನಲ್ಲಿಟ್ಟಿದ್ದ ನಾಲ್ಕಾರು ಬಟ್ಟೆಗಳನ್ನು ಒಗೆದಳು. ಮಧ್ಯಾಹ್ನದವರೆಗೂ ಬಿಟ್ಟೂ ಬಿಡದೆ ಸರೋಜ ಫಾತೀಮಾಳೊಂದಿಗೆ ಮಾತಾಡುವಾಗ ಗೋಪಾಲ ಮಾತ್ರೆಯ ಪ್ರಭಾವದಿಂದ ನಿದ್ದೆ ಮಾಡಿದ್ದ. ಮಧ್ಯಾಹ್ನ ಎರಡು ಘಂಟೆ ಸುಮಾರಿಗೆ ನಾ ಹೋಕ್ಕೀನ್ರೀ ಅಂತ ಹೊರಟ ಫಾತೀಮಾ ಗೋಪಾಲನಿಗೆ ಆರಾಮಿರ್ರೀ ಅಣ್ಣಾರಾ… ಎಲ್ಲಾ ಬರೋಬ್ಬರಿಯಾಗ್ತದ… ಅಕ್ಕೋರು, ಡಾಕ್ಟ್ರು ಸಾಯೇಬ್ರು ಹೇಳಿದಂಗ ಕೇಳೂದೊಂದ ಕೆಲಸ ನಿಮ್ಮದು… ಎಷ್ಟು ಲಗೂ ಆರಾಮಾಗ್ತೀರಿ ಅಷ್ಟ ನಿಮಗ ಛಲೋರೀ ಒತ್ತಿ ಒತ್ತಿ ಹೇಳಿದಳು.
ಅವಳನ್ನು ಕಳಿಸಲು ಗೇಟ್‌ವರೆಗೆ ಬಂದ ಸರೋಜ ರೈಲಿಗಿ ಅಂದ್ರ ತಡಾಗ್ತದ ಬಸ್ಸಿಗಿ ಹೋಗವ್ವಾ ಎಂದು ಫಾತೀಮಾನ ಕೈಗೆ ಐವತ್ತರ ನೋಟೊಂದನ್ನು ತುರುಕಿದಳು.
ಬ್ಯಾಡ್ರೀ ಅಕ್ಕಾರೆ.. ದವಾಖಾನ್ಯಾಗ ಇದ್ದಾಗ ಎಷ್ಟ್ ರೊಕ್ಕ ಇದ್ರೂ ಸಾಲಂಗಿಲ್ಲ… ರೊಕ್ಕ ಅಲ್ಲಿ, ಇಲ್ಲಿ ಖರ್ಚ ಮಾಡಬ್ಯಾಡ್ರೀ ಚಿಕ್ಕ ಮಕ್ಕಳಿಗೆ ಹೇಳುವಂತೆ ಹೇಳಿದ ಫಾತೀಮಾ ದುಡ್ಡನ್ನು ಮರಳಿ ಸರೋಜನ ಕೈಗೇ ತುರುಕಿದಳು.
ಮೇಲೆ ಬಂದ ಸರೋಜ ಮಂಪರು ಕವಿಯುತ್ತಿದ್ದ ಗಂಡನಿಗೆ ಚಾದರ ಸರಿಯಾಗಿ ಹೊದೆಸುವಾಗ ಮಾಸಲಾಗಿದ್ದ ನೋಟಿನ ಪುಡಿಕೆ ಕಾಣಿಸಿತು. ಅವಳ ಸ್ಪರ್ಶಕ್ಕೆ ಪೂರ್ಣ ಎಚ್ಚರವಾದ ಗೋಪಾಲ ಹೇಳುವ ಮೊದಲೇ ಸರೋಜನಿಗೆ ಅರ್ಥವಾದಂತೆ ಇತ್ತು.
ಫಾತೀಮಾ ಇದನ್ನ ಕೊಡಾಕೆ ಅಂತ್ಲೇ ಬಂದಿದ್ಲೋ ಏನೋ… ನೀವರ ಬ್ಯಾಡ ಅಂತ ಹೇಳಬಾರದಿತ್ತೇನು… ಎಲ್ಲಾರ ಸಾಲ ಮಾಡಿ ತಂದಿರ್‍ತಾಳ.. ಸಾಲ ತೀರಿಸಲಾಕ ಮತ್ತ ಎರಡು ಹೊಸ ಮನಿ ಕೆಲಸ ಹಿಡೀತಾಳ… ಆ ಮನಿಯವರು ಹಂಗಂದ್ರು, ಹಿಂಗಂದ್ರು ಅಂತ ಮನಸ್ಸಿಗಿ ತ್ರಾಸು ಮಾಡ್ಕೋತಾಳ… ಹಂಗಂತ ಸಾಲ ತೀರುವವರೆಗೆ ಕೆಲಸಕ್ಕೆ ಹೋಗೂದೂನೂ ಬಿಡಂಗಿಲ್ಲ ಗೊಣಗಿದಳು. ಗೋಪಾಲ ಮಾತಾಡಲಿಲ್ಲ.

ಬಸ್ಸಿನಲ್ಲಿ ಕುಳಿತ ಫಾತೀಮಾಗೆ ಬೈಪಾಸ್ ರಸ್ತೆ ಬರುವವರೆಗೆ ಜೋರು ನಿದ್ದೆ. ಸೊಲ್ಲಾಪುರ ನಾಖಾದ ಬಳಿ ನಿಲ್ಲಿಸ್ರೀ ಎಂದು ಕಂಡಕ್ಟರ್‌ಗೆ ನಾಲ್ಕಾರು ಬಾರಿ ತಾಕೀತು ಮಾಡಿದ್ದ ಫಾತೀಮಾ ಕಾಲೇಜಿನ ಬಳಿ ಬಸ್ಸು ಬರುತ್ತಿರುವಂತೆ ಕಾಲನಿಯಲ್ಲಿ ಸಂಜೆ ಕೆಲಸ ಮಾಡುವ ಒಂದೆರಡು ಮನೆಗಳ ಕೆಲಸವನ್ನಾದ್ರೂ ಮಾಡಿ ಹೋದ್ರಾಯ್ತು ಎಂದು ಅಲ್ಲಿಯೇ ಇಳಿದಳು.

ಎದಕ್ಕವ್ವಾ ಬೆಳಿಗ್ಗಿ ಬರಲೇ ಇಲ್ಲ.. ನಿನ್ನ ದಾರಿ ನೋಡಿ ನೋಡಿ ನಾವ ಎಲ್ಲ ಮಾಡಿ ಮುಗಿಸೀವಿ.. ಹೇಳಿನೂ ಕಳಿಸಂಗಿಲ್ಲ… ನಾವೇನ ರೊಕ್ಕ ಕೊಡ್ತೀವೋ ಹುಣಿಸಿಬೀಜ ಕೊಡ್ತೀವೋ… ಅದಕ್ಕೇನ ಕಿಮ್ಮತ್ತ ಇಲ್ಲೇನು ಎಂದೆಲ್ಲ ಬಾಯಿ ಮಾಡಿದವರಿಗೆ ಉತ್ತರಿಸುವ ಗೋಜಿಗೇ ಹೋಗದೆ ತಲೆಬಗ್ಗಿಸಿ ಕೆಲಸ ಮಾಡತೊಡಗಿದಳು. ಗೋಪಾಲನ ನೋಡಲು ಹೋಗಿದ್ದರ ಕುರಿತು ತುಟಿಪಿಟಕ್ ಎನ್ನದೆ ಹಾಗೇ ಹೊರಟಳು. ಅಲ್ಲಿಂದ ಸರೋಜನ ಮನೆಗೆ ಬಂದಳು. ದವಾಖಾನೆಗೆ ಹೋದ ಸುದ್ದಿ ಹೇಳಿದರೆ ಸರೋಜನ ಮಗಳಿಗೆ ನಂಬಿಕೆಯೇ ಆಗಲಿಲ್ಲ.
ಖರೇ ಹೇಳಾ ಫಾತೀಮಾ.. ನೀ ಹೋಗಿದ್ಯೇನಾ… ಮತ್ತ ಏನೂ ಹೇಳಲೇ ಇಲ್ಲ… ನೀ ಮದ್ಲಿಗೇ ಹೇಳಿದ್ಯಂದ್ರ ನಾ ಏನಾರ ಜರಾ ಬುತ್ತಿ ಮಾಡಿಕೊಡ್ತಿರಲಿಲ್ಲೇನು ಫಾತೀಮಾ ಅಂತ ನಾಲ್ಕಾರು ಸಲ ಹೇಳಿದಳು.
ನಾ ಸಜ್ಜಾಗಿದ್ದೇ ಬೆಳಿಗ್ಗಿ… ಇನ್ನ ಹೇಳ್ಕೋತ ಕೂತ್ರ ತಡಾಗ್ತದ ಅಂತ ಹಂಗೇ ಹೋದ್ನವ್ವಾ… ಅಷ್ಟ್ಯಾಕ ಮಾರಿ ಸಣ್ಣದ ಮಾಡ್ತೀಯವ್ವಾ… ಅಪ್ಪಾರು ಬೇಷ ಅದಾರ.. ಅವ್ವಾನೂ ಆರಾಮದಾಳ ಎಂದು ಸಮಾಧಾನಿಸಿದಳು. ಅಲ್ಲಿಂದ ಹೊರಡುವಾಗ ಸರೋಜನ ಮಗಳು ಮಳಿಗಪ್ಪಾಗೇದ.. ಜರಾ ನಿಂತ ಹೋಗವಾ. ಚಾ ಮಾಡಿ ಕೊಡ್ತೀನು ಎಂದರೂ ಕೇಳದೆ ಇಲ್ಲವಾ.. ನಾ ಬೆಳಿಗ್ಗಿ ಮನಿ ಬಿಟ್ಟಾಕಿ.. ಸಲೀಮಾ ಒಬ್ಬಳೇ ಮನ್ಯಾಗ ಅದಾಳ… ಮುದುಕಂಗೂ ಜರಾ ಬೇಷಿಲ್ಲ.. ಬರ್‍ತೀನವಾ ಎಂದು ಹೊರಟೇ ಬಿಟ್ಟಳು. ಅವಳು ಪಾಟೀಲನ ಮನೆ ಕಮ್ ಅಂಗಡಿ ಹತ್ತಿರ ಬರುವ ವೇಳೆಗೆ ಮುಂಗಾರು ಮಳೆ ರಪ್‌ರಪ್ ಹೊಡೆಯಲಾರಂಭಿಸಿತು. ಮೊದಲ ಮಳೆಗೆ ಸದಾ ಹೊಸಹೊಸ ಕಡೆ ಸೋರುವ ಮನೆ… ರಿಪೇರಿ ಮಾಡಲು ಸಾಧ್ಯವಾಗದೆ ಪ್ರತಿಸಲ ಅದರ ಮೇಲೆ ಪಾಲಿಥಿನ್ ಶೀಟ್ ಹೊಚ್ಚಿಸುವುದು… ’ಮನ್ಯಾಗ ಎಲ್ಲೆಲ್ಲಿ ಸೋರಲಾಕ ಹತ್ತದೇನ… ಶೀಟ್ ಇನ್ನ ಮ್ಯಾಗ ತರಬೇಕು.. ಹಾಸಿಗಿ ಗೀಸಗಿ ಮ್ಯಾಲ ಸೋರದಿದ್ದರ ಸಾಕು…’ ಯೋಚಿಸುತ್ತ ತಲೆ ಮೇಲೆ ಸೆರಗು ಹೊದ್ದುಕೊಂಡು ತೋಯ್ದುಕೊಂಡು ಬರುತ್ತಿದ್ದ ಫಾತೀಮಾಳನ್ನು ಅಂಗಡಿಯಲ್ಲಿ ಕೌಂಟರ್ ಮುಂದೆ ಕುಳಿತಿದ್ದ ಪಾಟೀಲ ನೋಡಿದ.

ತೋಯ್ಕಂಡು ಎದಕ್ಕ ಹೊಂಟೀಯ ಫಾತೀಮಾ.. ಅಂಗಡ್ಯಾಗ ನಿಂದ್ರು ಬಾ.. ಮಳಿ ನಿಂತಿಂದ ಹೋಗಾಕಂತಿ
ಫಾತೀಮಾ ಮರುಮಾತನಾಡದೆ ಅಂಗಡಿ ಒಳಗೆ ಸರಿದಳು.
ಹೋದವರ್ಷನೂ ಮಳಿ ಬೇಷಾಗಲಿಲ್ಲ. ಹೊಲದಾಗ ಹಾಕಿದ್ದೆಲ್ಲ ಒಣಗಿ ಕಟಗಿ ಆಗಿತ್ತು.. ಈ ವರ್ಷಾರ ಮಳಿ ಆದ್ರ ಮಂದಿಗಿ ನಾಕ ಜ್ವಾಳದ ತೆನಿಯಾರ ಕೈಗೆ ಹತ್ತತಾವ.. ಇಲ್ಲಂದ್ರ ಎಲ್ಲಾರ ಬಾಳೇ ಮೂರಾಬಟ್ಟಿಯಾಗ್ತದ..
ಪಾಟೀಲನ ಮಾತಿಗೆ ತಾನೂ ಒಂದೊಂದೇ ಮಾತು ಜೋಡಿಸುತ್ತ ನಿಂತ ಫಾತೀಮಾಗೆ ಆ ದಿನ ಮಗಳು ಚೂಪಗೆ ಇಲ್ಲಿ ನಿಂತಿದ್ದು.. ಎಂದೂ ತಲೆ ತಗ್ಗಿಸದ ತಾನು ಜೀವ ಮೂರು ಹಿಡಿಯಾಗಿಸಿಕೊಂಡು ನಿಂತಿದ್ದು ನೆನಪಾಗುತ್ತ ತುಸು ಮಜುಗರದಿಂದಲೇ ನಿಂತಳು. ಮಳೆಯ ರಭಸ ಕಡಿಮೆಯಾದರೂ ಇನ್ನೂ ಸಣ್ಣದಾಗಿ ಹನಿಯುತ್ತಲೇ ಇತ್ತು.
ಫಾತೀಮಾ ಚಾ ಕುಡಿತೀಯೇನು.. ನನಗರ ಥಂಡಿ ಹಿಡಿದದ, ಚಾಕ್ಕಿಡ್ತೀನಿ
ಪಾಟೀಲ ಒಳಗೆದ್ದು ಹೊರಟ.
ಯಾಕ್ರೀ ಅಕ್ಕೋರು ಊರಾಗಿಲ್ಲೇನು..
ನಮ್ಮ ಮಂದಿದೊಂದು ಮದಿವಿ ಅದ ಅಂತ ಆಕಿ ಊರಿಗಿ ಹೋಗ್ಯಾಳ.. ಬಾಂಡೆದಾಕಿನೂ ಎರಡು ಮೂರು ದಿನದಿಂದ ಬಂದಿಲ್ಲ. ನಂದೇನ ಫಜೀತಿ ಕೇಳ್ತೀಯವ್ವಾ.. ಹೇಳುತ್ತಲೇ ಪಾಟೀಲ ಒಳಗೆ ಹೋದ. ಮಳೆಯನ್ನೇ ದಿಟ್ಟಿಸುತ್ತ ಅರೆಕ್ಷಣ ಫಾತೀಮಾ ಅಲ್ಲಿಯೇ ನಿಂತಳು. ಸಿಂಕ್‌ನಲ್ಲಿ ಸದ್ದಾಗಿದ್ದನ್ನು ನೋಡಿ ಚಾಕ್ಕಿಡುತ್ತಿದ್ದ ಪಾಟೀಲ ತಿರುಗಿ ನೋಡಿದರೆ ಫಾತೀಮಾ ಪಾತ್ರೆ ತಿಕ್ಕತೊಡಗಿದ್ದಳು. ತಾನು ಅದಕ್ಕಾಗಿ ಕರೆದೆ, ತಾನಿಷ್ಟು ಸಣ್ಣ ಮನಸ್ಸಿನವನು ಎಂದವಳು ಭಾವಿಸಿಬಿಟ್ಟಳೇ ಎಂದು ಪಾಟೀಲನಿಗನ್ನಿಸಿತು.

ನಾ ಹಂಗೇ ನಿನಗ ಚಾ ಕುಡ್ದು ಹೋಗು ಅಂದ್ನಿ.. ನೀ ಹಂಗೇ ಭಾಂಡೆಗೇ ಕೈ ಹಾಕಿದ್ಯಲಾ.. ಮತ್ತ ನಾ ಅದಕ್ಕ ಕರದೀನಿ ಅಂದ್ಕಂಡ್ಯೇನು
ಅಯ್ಯಾ ಹಂಗೇನಿಲ್ರೀ.. ಚಾ ಆಗೂ ತನ ನಾಕ ಭಾಂಡಿ ತೊಳಿತೀನ್ರೀ.. ಫಾತೀಮಾ ಮತ್ತೆ ಮಾತಾಡಲಿಲ್ಲ… ಫಾತೀಮಾನ ಮನಸ್ಸಿನಲ್ಲಿಯೇ ಉಳಿದ ಒಂದು ವಾಕ್ಯ ’ಈ ಫಾತೀಮಾ ಇಲ್ಲಿ ತನ್ಕಾ ಯಾರ ಮನ್ಯಾಗೂ ಪುಗಸಟ್ಟೆ ಚಾ ಕುಡ್ದಿಲ್ಲ. ಎಂದೂ ಕುಡಿಯಂಗೂ ಇಲ್ಲ’ ಅವಳು ಹೇಳದೆಯೇ ಅವಳು ನಿಂತು ಭಾಂಡೆ ತಿಕ್ಕುತ್ತಿದ್ದ ರೀತಿಯಿಂದಲೇ ಇಂತಹದ್ಯಾವುದೋ ಭಾವ ಹೊರಹೊಮ್ಮಿದಂತೆ ಅನ್ನಿಸಿದ ಪಾಟೀಲನಿಗೆ ಆ ದಿನ ತಾನು ಕಟುವಾಗಿ ನಡೆದುಕೊಂಡೆನೇನೋ ಅನ್ನಿಸಿತು.

’ತುಡುಗು ಮಾಡೂದೇನು ಛಲೋ ಚಟ ಏನು? ಎಷ್ಟ್ ಸಲ ಇವರ ಮೇಲೆ ನಂಬಿ ಮನಿ ಬಿಟ್ಟು ಹೋಗಂಗಿಲ್ಲ.. ಮತ್ತ ಹಿಂಗ ಮಾಡಿದ್ರ ಯಾರರ ನಂಬಿಕಿ ಇಡ್ತಾರನು.. ತಪ್ಪ ಮಾಡ್ಯಾಳ ಅಂತ ಈಗ ತಿದ್ದಲಾರದ ಹಂಗ ಬಿಟ್ರ ಮುಂದ ಅದಾ ದೊಡ್ಡದಾಗ್ತದ… ನಾ ಏನ ಆಕಿಗಿ ಸುಳ್ಳ ತ್ರಾಸ ಕೊಡಬಕು ಅಂತ ಏನ ಮಾಡಿಲ್ಲಲ್ಲ..’ ಪಾಟೀಲ ತನ್ನೊಳಗೇ ತನ್ನನ್ನು ಸಮರ್ಥಿಸಿಕೊಳ್ಳುತ್ತಿರುವಂತೆ ಫಾತೀಮಾ ಕೆಲಸ ಮುಗಿಸಿದ್ದಳು.
ಚಾ ಹೆಂಗಾಗೇದ ಫಾತೀಮಾ.. ನಿಮ್ಮ ಅಕ್ಕೋರಿಗಿಂತ ಛಲೋ ಮಾಡೀನಿಲ್ಲೋ ಪಾಟೀಲ ತುಸು ಹಗುರಾಗಲು ಪ್ರಯತ್ನಿಸಿದ.
ಅಗದಿ ಛಲೋ ಆಗೇದ… ದಿನಾ ಅಕ್ಕೋರಿಗೂ ನೀವ ಮಾಡಿಕೊಡ್ರಿ ಫಾತೀಮಾ ಕೂಡ ತುಸು ಬಿಡುಗಡೆಗೊಂಡಂತೆ ನಕ್ಕಳು. ಮಳೆ ಸ್ವಲ್ಪ ಕಡಿಮೆಯಾಗಿ ಈಗ ಸಣ್ಣಗೆ ಹನಿಯತೊಡಗಿತ್ತು.
ಛತ್ರಿ ಒಯ್ತೀಯೇನು? ಪಾಟೀಲ ಕೊಡಲು ಬಂದರೂ ಬೇಡವೆಂದು ಹಾಗೆಯೇ ಹೊರಟಳು.

ಮಳೆ ಬಂದ ನಂತರ ಕೆಲಸದ ಮನೆಗಳಿಂದ ಹೊರಡುವ ಫಾತೀಮಾಗೆ ಪ್ರತಿ ಬಾರಿ ಹೊಸದೇ ಪಯಣ ಆರಂಭಗೊಂಡಂತೆ… ಹೊಸದೇ ರಸ್ತೆಯಲ್ಲಿ ನಡೆಯುತ್ತಿರುವಂತೆ ಅನ್ನಿಸುತ್ತಿತ್ತು. ಮಳೆ ತುಸು ಹೊಳವಾಗಿ.. ಆಗಸ ನಸು ಸ್ವಚ್ಛವಾಗಿ.. ಇದೀಗ ಬೆಳಗಾದಂತಹ ಬೆಳಕು ಹರಡಿದ್ದ ಆ ಸಂಜೆಯಲ್ಲಿ ಮೆತ್ತಗೆ ದಾರಿಗುಂಟ ಹೊರಟ ಫಾತೀಮಾಳನ್ನು ನೋಡುತ್ತ ಪಾಟೀಲ ಮಾತ್ರ ಇಂಥದೆಂದು ಗುರುತಿಸಲಾಗದ ಭಾವಕ್ಕೆ ಪಕ್ಕಾಗಿ ನಿಂತಿದ್ದ.

ಫಾತೀಮಾಗೆ ಹೀಗೆ ಹನಿಯುವ ಜುಮುರು ಮಳೆಯೆಂದರೆ ತುಂಬ ಇಷ್ಟ. ಹನಿಗಳು ಸಿಡಿದು ಮುಖದ ಮೇಲಿನ ಬೆವರು, ಎಣ್ಣೆ ಜಿಡ್ಡು ಅಂಟಿಕೊಂಡಂತಿರುವ ನೀರು… ಎಲೆಗಳ ತುದಿಯಂಚಿನಿಂದ ಹಸಿರು ನೀರು… ಆಗಸದಿಂದ ಇಳಿಯುವ ಆಲಿಕಲ್ಲಿನಷ್ಟು ತಂಪಾದ ನೀರು.. ಮನೆಗಳ ತಾರಸಿಯಿಂದ ಇಳಿಯುವ ನಸುಗೆಂಪು ನೀರು.. ಎಲ್ಲ ಬಗೆಯ ನೀರಲ್ಲಿ ಆತ್ಮ ತೇವಗೊಳ್ಳುವಾಗ ಎಲ್ಲೋ ಒಣಗಿ ನಿಂತ ನೆಲ, ಗುಳೇ ಹೋಗುವ ಜನರ ನೆನಪುಗಳು ಒದ್ದೆಯಾಗುತ್ತ… ಮುಖಚಹರೆಯೂ ಮರೆತು ಲತೀಫ ಎಂಬ ಹೆಸರು ಮಾತ್ರವಾಗುಳಿದು, ಅವನೊಂದಿಗೆ ಮದುವೆಯಾಗಿದ್ದರೆ ಬದುಕು ಬೇರೆ ಬಗೆಯಲ್ಲಿರುತ್ತಿತ್ತೇ ಎಂಬ ನಿರೀಕ್ಷೆ ಕೂಡ ಬರಬರುತ್ತ ತೆಳ್ಳಗಾಗುತ್ತ… ಈ ದಾರಿಯಲ್ಲಿ ತಾನೊಬ್ಬಳೇ ಎಂಬ ವಾಸ್ತವವನ್ನು ಮುಖಕ್ಕೆ ಸಿಡಿಯುವ ಪ್ರತಿ ಮಳೆಹನಿಯೂ ಹೇಳಿದಂತೆ.. ಮೊದಲೆಲ್ಲ ಜೀವಕ್ಕಂಟಿದಂತೆ ಭಾಸವಾಗುತ್ತಿದ್ದ ಮಕ್ಕಳಿಬ್ಬರೂ ಕೂಡ ಬರಬರುತ್ತ ಪ್ರತ್ಯೇಕಗೊಂಡಂತೆ ಅಥವಾ ತಾನೇ ಅವರೆಲ್ಲರಿಂದ ಪ್ರತ್ಯೇಕಗೊಂಡು ನಡುಗಡ್ಡೆಯಾದಂತೆ… ಫಾತೀಮಾಗೆ ಹಾಗೆ ನಡೆಯುತ್ತ ಕಣ್ಣು ತುಂಬಿ ಬರುತ್ತಿತ್ತು.

ಫಾತೀಮಾಗೆ ಹಾಗೆ ಮಳೆಯಲ್ಲಿ ನಡೆಯುವುದೆಂದರೆ ತುಂಬ ಇಷ್ಟ…. ಯಾಕೆಂದರೆ ಅವಳು ಅಳುತ್ತಲೇ ನಡೆದರೂ ಕೆನ್ನೆ ಮೇಲೆ ಒಂದೇ ಸಮನೆ ನೀರು ಇಳಿದರೂ ಫಕ್ಕನೆ ಎದುರು ಬರುವವರಿಗೆ ಗೊತ್ತಾಗುವುದೇ ಇಲ್ಲ. ಅದು ಕಣ್ಣೀರು ಎನ್ನಿಸದೇ ಮಳೆಯ ನೀರು ಎನ್ನಿಸಿಬಿಡುತ್ತದೆ.

ಫಾತೀಮಾಗೆ ಮಳೆಯೆಂದರೆ ತುಂಬ ಇಷ್ಟ… ಮಳೆ ಹೊಳವಾದ ನಂತರ ಅತ್ತು ಮುಗಿಸಿದ ಫಾತೀಮಾ ಕೂಡ ಆಗಸದಷ್ಟೇ ನಿರಭ್ರವಾಗುತ್ತಾಳೆ…. ತೊಯ್ದ ಆತ್ಮ ಒದ್ದೆ ಭೂಮಿಯಂತೆ… ಫಾತೀಮಾ ಬೆಳಗು ಸಂಜೆಯ ಕ್ಷಣಗಳನ್ನು ಒದ್ದೆಭೂಮಿಯಲ್ಲಿ ಹೊಸದಾಗಿ ಚಿಗುರಿಸುತ್ತಾಳೆ.
*****
ಪದಗಳ ಅರ್ಥ.

ವಿಮಾನ/ಇಮಾನ: ಉತ್ತರ ಕರ್ನಾಟಕದ ಕೆಲವು ಜನಾಂಗಗಳಲ್ಲಿ ಹೆಣವನ್ನು ಮಲಗಿಸಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಹೆಣವನ್ನು ಕೂರಿಸಿ ನಂತರ ಒಂದು ಎತ್ತರದ ಗಾಡಿಯಲ್ಲಿರಿಸಿ ಸ್ಮಶಾನದವರೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆ ಗಾಡಿಗೆ ವಿಮಾನ/ಇಮಾನ ಎನ್ನುತ್ತಾರೆ.
ದಗದ- ಕೆಲಸ
ಹರಕತ್ತ – ಅವಶ್ಯಕತೆ
ಜೀಂವಾ ಅರೆಯುವುದು(ಜೀಂವಾ ಅರಿಯೂದು, ಜೀಂವಾ ಅರಿಲಾಕ) – ಮನಸ್ಸಿಗೆ ತುಂಬ ತೊಂದರೆ ಅಥವಾ ತ್ರಾಸು ಕೊಡುವುದು
ಕಸಪರಿಷಿ ಮಾಡುವುದು – ಕಸ ಹೊಡೆದು, ನೆಲ ಒರೆಸುವುದು (ಪರಿಷಿ ಅಂದರೆ ನೆಲಕ್ಕೆ ಸಿಮೆಂಟ್ ಬದಲಾಗಿ ಹಾಕುವ ಶಹಾಬಾದ್ ಚಪ್ಪಡಿ ಕಲ್ಲು)
ಜುಮುರು ಮಳೆ – ಸಣ್ಣದಾಗಿ, ಒಂದೇ ಸಮನೆ ಹನಿಯುವ ಮಳೆ.

ವಿಜಯಕರ್ನಾಟಕ – ೨೦೦೪ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಕತೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.