ಹುಲಿ ಸವಾರಿ

ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು ದೇಶಗಳಿಂದ ಕರೆಸಲಾದ ಹನ್ನೆರಡು ಜನರಲ್ಲಿ ನಾನು ಮತ್ತು ಉಚೆ ಕೂಡ ಇದ್ದೆವು. ಇಂಥ ಶಿಬಿರಗಳಿಗೆ ಆಯ್ಕೆಯಾಗುವುದು ಬಹಳ ಮಹತ್ವದ ಸಂಗತಿಯೆಂಬ ಭಾವನೆಯಿತ್ತು. ಹೊಸಹೊಸ ಎತ್ತರದ ಹುದ್ದೆಗಳಿಗೆ, ಹೆಚ್ಚಿನ ಜವಾಬ್ದಾರಿಗೆ ನಮ್ಮನ್ನು ಸನ್ನದ್ಧಗೊಳಿಸುವ ಹಲವು ಪರಿಗಳಲ್ಲಿ ಈ ಶಿಬಿರದ ಯೋಜನೆಯೂ ಒಂದು. ಇತರ ದೇಶಗಳ ಸಂಸ್ಕೃತಿ, ಜೀವನ, ವ್ಯಾಪಾರವಹಿವಾಟು ಇತ್ಯಾದಿಗಳನ್ನು ಅರಿಯುವುದೂ ಇದರ ಮುಖ್ಯ ಉದ್ದೇಶಗಳಲ್ಲೊಂದು ಎಂದು ನಮಗೆ ತಿಳಿಸಿದ್ದರು. ಸಮುದ್ರದ ಎದುರಿಗೇ ಇರುವ ಕಂಪನಿಯ ಟ್ರೇನಿಂಗ್ ಸೆಂಟರಿನಲ್ಲಿ ಶಿಬಿರದ ವ್ಯವಸ್ಥೆ ಮಾಡಲಾಗಿತ್ತು. ಈ ಹವಾನಿಯಂತ್ರಿತ ಕಟ್ಟಡದ ಒಳಗೆ ಕೂತು, ಹೊರಗೆ ಬೇಯುವ ಬೇಸಿಗೆಯ ಸೆಖೆಗೂ, ಉಕ್ಕುವ ಕಡಲಿಗೂ, ಬೀಸುವ ಗಾಳಿಗೂ ಸಂಬಂಧವೇ ಇಲ್ಲದವರ ಹಾಗೆ ಏಳು ದಿನ ಕಳೆದಿದ್ದೆವು. ಶಬ್ದವೂ ಹಾದು ಬಾರದ ಹಾಗೆ ಮುಚ್ಚಿಬಿಟ್ಟಿರುವ ಗಾಜಿನ ದೊಡ್ಡ ಕಿಟಕಿಗಳಿಂದ ಆಚೆ ನೋಡಿದರೆ ಮೂಕಚಿತ್ರವೊಂದರ ದೃಶ್ಯ ನೋಡಿದಂತಾಗುತ್ತಿತ್ತು. ನೊರೆನೊರೆಯಾಗಿ ದಂಡೆಯನ್ನಟ್ಟಿ ಬರುವ ಎತ್ತರದ ಅಲೆಗಳು. ತೊಟ್ಟ ಬಟ್ಟೆ ಪತಾಕೆಯ ಹಾಗೆ ಪಟಪಟ ಹೊಡೆದುಕೊಳ್ಳುವಂತೆ ಬೀಸುವ ಗಾಳಿ. ದಂಡೆಯ ಗುಂಟ ಹಾದುಹೋಗುವ ರಸ್ತೆಯಲ್ಲಿ ಸಾಲು ವಾಹನಗಳು. ನೂರಾರು ಸಣ್ಣಸಣ್ಣ ತಳ್ಳುಗಾಡಿಯ ಅಂಗಡಿಗಳು. ಓಡಲು ನಡೆಯಲು ನೋಡಲು ಕೊಳ್ಳಲು ಬಂದ ಜನ. ಆಚೆ ಜಗತ್ತು ಸದ್ದೇ ಇಲ್ಲದೆ ಜರುಗಿ ಹೋಗುತ್ತಿರುವ ಹಾಗೆ ಕಾಣಿಸುತ್ತಿತ್ತು.

ಉಚೆ ನನ್ನ ಪಕ್ಕದ ರೂಮಿನಲ್ಲೇ ಇದ್ದ. ಅವನು ನನಗೆ ಹೆಚ್ಚು ಹತ್ತಿರವಾಗಲು ಅದೂ ಒಂದು ಕಾರಣವಾಯಿತು. ಇಡೀ ದಿನ ಆರ್ಥಿಕ ನೀತಿ, ವ್ಯಾಪಾರ ನೀತಿ, ಮಾರಾಟ, ಉತ್ಪಾದನೆ, ಯೋಜನೆಗಳನ್ನು ರೂಪಿಸುವುದು, ಯಾವುದೋ ದೇಶದ ಸಂಸ್ಥೆ ತನ್ನ ಬಿಕ್ಕಟ್ಟುಗಳನ್ನು ಹೇಗೆ ದಾಟಿ ಬಂತು – ಎಂದೆಲ್ಲ ಎಂರು ಗಂಟೆಗಳ ಕಾಲ ಮಾತು ಕೇಳಿಸಿಕೊಂಡು, ಕಡ್ಡಾಯವಾಗಿ ಇದನ್ನೆಲ್ಲ ಚರ್ಚಿಸಿ ದಣಿದು ಬಂದ ಎಲ್ಲರೂ ರಾತ್ರಿ ಊಟದ ನಂತರ ಕೂತು ಹರಟುತ್ತಿದ್ದೆವು. ಕೆಲವೊಮ್ಮೆ ಸಮುದ್ರದ ದಂಡೆಗುಂಟ ನಡೆಯುತ್ತಿದ್ದೆವು. ಉಚೆ ನಮ್ಮ ಮನರಂಜನೆಯ ಕೇಂದ್ರವಾಗಿದ್ದ. ತುಂಬ ಚೆನ್ನಾಗಿ ಹಾಡುತ್ತಿದ್ದ. ತನ್ನ ಜೊತೆ ತಂದಿದ್ದ ಕ್ಯಾಸೆಟ್ ಪ್ಲೇಯರ್‌ನಲ್ಲಿ ಸಂಗೀತ ಹಾಕಿ ಕುಣಿಯುತ್ತಿದ್ದ. ಹಾಡು ಮತ್ತು ಕುಣಿತ ಹುಟ್ಟಿನಿಂದಲೇ ಪಡೆದು ಬಂದಂತಿದ್ದ. ಕಪ್ಪಾಗಿ ಆರೋಗ್ಯದಿಂದ ಮಿರಿಮಿರಿ ಮಿಂಚುತ್ತಿದ್ದ ಅವನ ಸದೃಢ ದೇಹ, ಸಂಗೀತ ಕಿವಿಗೆ ಬಿದ್ದದ್ದೇ ಬಳುಕ ತೊಡಗುತ್ತಿತ್ತು. ಅವನ ಗುಂಗುರು ಕೂದಲನ್ನು ಎಳೆದು ಎಷ್ಟು ಉದ್ದ ಇದೆ ಎಂದು ತೋರಿಸಿದ. ತನ್ನ ದೇಶದ ಗುಲಾಮರ ಹಾಡುಗಳನ್ನು ಹಾಡಿ ತೋರಿಸಿದ. ಬ್ಲ್ಯಾಕ್ ಮ್ಯಾಜಿಕ್ ಮಾಡುತ್ತೇನೆಂದು ಹೇಳಿ ಚಾಕುವನ್ನು ಅಂಗೈಯ ಮೂಲಕ ಆಚೆಯಿಂದ ಈಚೆ ತರಿಸುವ ಸಣ್ಣ ಜಾದೂ ಮಾಡಿದ. ಹೀಗೆ ಉಚೆ ಎಲ್ಲರ ಸ್ನೇಹಿತನಾದ.

ಏಳನೆಯ ದಿನ ರಾತ್ರಿ ಊಟದ ನಂತರ ನಮ್ಮೆಲ್ಲರನ್ನೂ ಒಂದೆಡೆ ಸೇರಿಸಿ ಮುಂದಿನ ಮೂರು ದಿನಗಳ ಕಾರ್ಯಕ್ರಮ ವಿವರಿಸಿದರು. ಶಿಬಿರದ ಕೊನೆಯ ಮೂರು ದಿನಗಳಲ್ಲಿ, ಇಷ್ಟುದಿನ ಕಲಿಸಿದ್ದನ್ನು ಅನುಭವಕ್ಕೆ ಭಟ್ಟಿ ಇಳಿಸಲೆಂಬಂತೆ ಒಂದು ಆಟವಿಟ್ತು. ಅದೊಂದು ಮ್ಯಾನೇಜ್‌ಮೆಂಟ್ ಗೇಮ್. ನಿಜಕ್ಕೆ ಹತ್ತಿರವಾದ ಅಂತರಾಷ್ರೀಯ ವ್ಯಾಪಾರ ಸನ್ನಿವೇಶವೊಂದನ್ನ್ ಸೃಷ್ಟಿಸಿ,ಅದರಲ್ಲಿ ನಾವೆಲ್ಲ ಪಾಲ್ಗೊಂಡು ನಮ್ಮ ಕೌಶಲ್ಯಗಳನ್ನು ಒರೆಗೆ ಹಚ್ಚುವುದು. ಇದ್ದ ಹನ್ನೆರಡು ಜನರನ್ನು ಮೂರು ಮೂರು ಜನರ ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದರು. ಪ್ರತಿ ಗುಂಪಿಗೂ ಒಂದೊಂದು ಕಾಲ್ಪನಿಕ ಕಂಪನಿಯನ್ನು ವಹಿಸಿಕೊಟ್ಟರು. ಎಲ್ಲವೂ ಸಮಾನ ಅವಸ್ತೆಯಲ್ಲಿರುವ ಕಂಪನಿಗಳನ್ನು – ಉತ್ಪಾದನಾ ಸಾಮರ್ಥ್ಯ, ಕಾರ್ಖಾನೆಗಳ ಸಂಖ್ಯೆ, ಕಾರ್ಮಿಕ ಸಂಖ್ಯೆ,ಬ್ಯಾಂಕಿನಲ್ಲಿದ್ದ ಹಾಣ, ಸಾಲದ ಮೊತ್ತ ಎಲ್ಲವೂ ಸಮವಾಗಿತ್ತು. ಪ್ರತಿ ಗುಂಪೂ ತನ್ನ ಕಂಪನಿಯನ್ನು ಮುಂದಿನ ಮೂರು ವರ್ಷಗಳ ಕಾಲ ನಡೆಸಬೇಕು. ಬೆಳಿಗ್ಗೆ ಎಂಟಕ್ಕೆ ಆಟ ಆರಂಭವಗುವುದು. ಪ್ರತಿ ಗಂಟೆ ಒಂದು ತಿಂಗಳಿಗೆ ಸಮ. ತಿಂಗಳ ಅಂತ್ಯದ ಉತ್ಪಾದನೆ, ಮಾರಾಟ, ಸಾಲಪಾವತಿ ಎಲ್ಲವೂ ಆ ಗಂಟೆಯ ಕೊನೆಗೆ ಜರುಗಬೇಕು. ಹೀಗೆ ಒಂದು ದಿನ ಅಂದರೆ ಒಂದು ವರ್ಷ. ವರ್ಷದ ಕೊನೆಗೆ ಪ್ರತಿ ಕಂಪನಿಯೂ ಆಯವ್ಯಯ ಲಾಭನಷ್ಟ ಪ್ರಕಟಿಸಬೇಕು. ಮೂರನೆಯ ವರ್ಷದ ಕೊನೆಗೆ ಅಂದರೆ ಮೂರನೆಯದಿನ ರಾತ್ರಿ ಪ್ರತಿ ತಂಡವೂ, ತಾನು ಯಾವ ರೀತಿ ವ್ಯವಹಾರಗಳನ್ನು ನಿರ್ವಹಿಸಿದೆ, ಆದ್ದರಿಂದ ಹೇಗೆ ಹೆಚ್ಚು ಲಾಭವಾಯಿತು. ಯಾವ ಉಪಾಯಗಳು ಸರಿಹೋಗಲಿಲ್ಲ,ಅಲ್ಲಿ ಹಿನ್ನೆಡೆಯಾಯಿತು ಇತ್ಯಾದಿ ಎಲ್ಲರಿಗೂ ವಿವರಿಸಬೇಕು.

ಇಷ್ಟೆಲ್ಲ ಹೇಳಿ ನಮಗೆ ಸುಮಾರು ಅರವತ್ತು ಪುಟಗಳನ್ನು ಓದಲು ಕೊಟ್ಟರು. ಅದರಲ್ಲಿ ಆಟದ ನಿಯಮಗಳು, ನಮಗೆ ಕೊಟ್ಟ ಕಾರ್ಖಾನೆಗಳ ಸಾಮರ್ಥ್ಯ, ಯಾವ ಯಾವ ರೀತಿಯ ವಸ್ತುಗಳನ್ನು ಅಲ್ಲಿ ತಯಾರಿಸಬಹುದು, ಹೊಸ ಕಾರ್ಖಾನೆ ತೆರೆಯುವ ವಿಧಾನಗಳು, ನಿಯಮಗಳು, ವೆಚ್ಚಗಳು ಯಾವ ಯಾವ ದೇಶಗಳಲ್ಲಿ ಏನೇನು ಮಾರಟ ಮಾಡಬಹುದು, ಎಲ್ಲೆಲ್ಲಿ ಯಾವ ರೀತಿಯ ತಂತ್ರಜ್ಞಾನ ಇದೆ, ಅದನ್ನು ಬೆಳೆಸುವುದಾದರೆ ಅದಕ್ಕೆ ತಗಲುವ ಕಾಲ ಮತ್ತು ವೆಚ್ಚವೇನು, ಎಲ್ಲೆಲ್ಲಿ ಕಾರ್ಮಿಕರ ಸಂಬಳ ಎಷ್ಟು, ಅವರ ಸಮಸ್ಯೆಗಳು, ಸಂಭವಿಸಬಹುದಾದ ಮುಷ್ಕರಗಳು, ವಿವಿದ ದೇಶಗಳಲ್ಲಿ ಸಾಗಣೆಯ ವೆಚ್ಚ, ಅಲ್ಲಿಯ ರಾಜಕೀಯ ಸ್ಥಿತಿ, ಆರ್ಥಿಕ ಸ್ಥಿತಿ, ಮಿಲಿಟರಿ ಆಡತಳಿತವೋ, ಪ್ರಜಾಪ್ರಭುತ್ವವೋ, ಆ ದೇಶದ ಆಯಾತ – ನಿರ್ಯಾತಗಳೇನು, ಬಹುಸಂಖ್ಯಾತ ಜನರ ಧರ್ಮ ಯಾವುದು ಇತ್ಯಾದಿ ಎಲ್ಲ ವಿವರಗಳೂ ಆ ಅರವತ್ತು ಪುಟಗಳಲ್ಲಿದ್ದವು. ಜಾಗತಿಕ ಮಟ್ಟದಲ್ಲಿ ವ್ಯವಹಾರ ನಿರ್ವಹಿಸಲು ತರಬೇತುಗೊಳಿಸುವ ಅತ್ಯುತ್ತಮ ವಿಧಾನವೆಂದು ಈ ಆಟ ಹೆಸರುವಾಸಿಯಂತೆ. ಇದನ್ನು ರೂಪಿಸಿದ ಪೀಟರ್ ಹಿಂದಿನ್ ರಾತ್ರಿಇಂಗ್ಲೆಂಡಿನಿಂದ ಬಂದಿಳಿದಿದ್ದ. ಒಂದು ಬಾರಿ ಇದನ್ನು ಆಡಲು ಅವನಿಗೆ ಕೊಡಬೇಕಾದ ರಾಯಲ್ಟಿಯ ಬಗ್ಗೆ ಕೇಳಿ ಅಸೂಯೆಪಟ್ಟೆವು. ಮುಂದಿನ ಮೂರು ದಿನಗಳಲ್ಲಿ ಈ ಆಟ ಸರಿಯಾಗಿ, ನಿಯಮಗಳ ಪ್ರಕಾರ ನ್ಯಾಯವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಪೀಟರ್, ವಿವಿಧ ದೇಶಗಳ ಸರ್ಕಾರಗಳ, ಬ್ಯಾಂಕುಗಳ ಪಾತ್ರ ವಹಿಸುವವನಿದ್ದ. ನಿಮ್ಮ ನಿಜವಾದ ಶಕ್ತಿಗಳನ್ನು ಉಪಯೋಗಿಸಲು ನಿಮಗೆ ತಿಳಿಸುವ, ಕುಂದುಕೊರತೆಗಳನ್ನು ಬೇರೆ ಯಾವುದರಿಂದ ತುಂಬಿಸಿಕೊಳ್ಳಬೇಕೆಂಬುದನ್ನು ನಿಮ್ಮ ಅರಿವಿಗೆ ತರುವ, ಇದನ್ನೆಲ್ಲ ನಿಜವಾದ ಸಂಧರ್ಭವೊಂದರಲ್ಲಿಟ್ಟು ಪ್ರಯೋಗಿಸಿ ಪರೀಕ್ಷಿಸಲು ಅವಕಾಶ ಕೊಡುವ ಆಟ…. ಎಂದೆಲ್ಲ ಈ ಆಟದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ. ನಮಗೆ ಒದಗಿಸಿದ ವಿವರಗಳೆಲ್ಲ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ ನಿಜವಾದ ವಿವರಗಲಂತೆ. ಪ್ರತೀ ತಿಂಗಳೂ ಈ ಅರವತ್ತು ಪುಟಗಳನ್ನು ಮರುಪರಿಶೀಲಿಸಿ, ವಿವರಗಳನ್ನು ತಕ್ಕಂತೆ ಬದಲಾಯಿಸುತ್ತಾನಂತೆ. ಅಂತೂ ಅವನ ಪ್ರಕಾರ ಇದೆಲ್ಲ ನಿಜಕ್ಕೆ ಅತಿ ಹತ್ತಿರವಾದ ಸಂದರ್ಭವೊಂದನ್ನು ಸೃಷ್ಟಿಸಿತ್ತು. ಇದನ್ನು ನಿರ್ವಹಿಸಲು ನಾವು ಸಜ್ಜಾದೆವು.

ತಲೆತುಂಬ ಆಟ. ಕೈಯಲ್ಲಿ ಆ ಅರವತ್ತು ಪುಟಗಳನ್ನು ಹಿಡಿದುಕೊಂಡು ನಮ್ಮ ನಮ್ಮ ಕೋಣೆಗೆ ಹಿಂದಿರುಗಿದೆವು. ನಮ್ಮ ಗುಂಪಿನಲ್ಲಿ ನಾನು, ಉಚೆ ಮತ್ತು ಜೆಫ್. ಡಚ್ ಮೂಲದ ಜೆಫ್ ಇಂಗ್ಲೆಂಡಿನಲ್ಲೇ ಹುಟ್ಟಿ ಬೆಳೆದವನು. ವಾಣಿಜ್ಯ ವಿಭಾಗದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿ ಸಣ್ಣ ವಯಸ್ಸಲ್ಲೇ ಎತ್ತರಕ್ಕೇರಿದ್ದ. ಉಚೆ ನಮ್ಮ ಜೊತೆಗಿದ್ದದ್ದು ನಮಗೆ ಖುಷಿಯಾಗಿತ್ತು. ಎಂದಿನಂತೆ ಈ ರಾತ್ರಿ ನಮ್ಮ ಮನರಂಜನೆ ಕಾರ್ಯಕ್ರಮ ನಡೆಯಲಿಲ್ಲ. ನಾಳೆ ಬೆಳಿಗ್ಗೆ ಆಟ ಆರಂಭವಾಗುವ ಮುನ್ನ ಕೊಟ್ಟಿದ್ದನ್ನೆಲ್ಲ ಓದಿ ಸನ್ನದ್ಧರಾಗಬೇಕೆಂಬ ಸ್ಪರ್ಧೆ ಒಳಗೊಳಗೇ ಶುರುವಾಗಿತ್ತು. ನಮ್ಮ ಗುಂಪಿನ ನಾವು ಮೂವರೂ ಪ್ರತ್ಯೇಕವಾಗಿ ಕೂತು ಎಲ್ಲವನ್ನೂ ಓದಿ, ನಂತರ ಒಂದೆಡೆ ಸೇರಿ ನಮ್ಮ ಪಾಲಿಗೆ ಬಂದ ಕಂಪನಿಯ ಸ್ಥಿತಿಗಳನ್ನು ಚರ್ಚಿಸಿದೆವು. ಆಟದ ನಿಯಮಗಳನ್ನು ಚರ್ಚಿಸಿದೆವು. ಆಟ ಒಳಗೆ ಇಳಿಯಲಾರಂಭಿಸಿತ್ತು. ರಾತ್ರಿ ಮಲಗಿದಾಗ ಒಂದೂವರೆ.

ಮರುದಿನ ಬೆಳಿಗ್ಗೆ ಪರೀಕ್ಷೆಗೆ ಹೊರಟವರಂತೆ ತಲೆತುಂಬ ನೂರು ಸಂಗತಿ ತುಂಬಿಕೊಂಡಿದ್ದೆವು. ಒಂದು ವಿಶಾಲವಾದ ಹಾಲ್‌ನಲ್ಲಿ ಆಟದ ವ್ಯವಸ್ಥೆ ಮಾಡಿದ್ದರು. ನಾಲ್ಕು ದೊಡ್ಡ ಟೇಬಲ್‌ಗಳನ್ನು ನಾಲ್ಕು ದಿಕ್ಕಿಗೆ ಇಟ್ಟು ಅದರ ಮೇಲೆ ಜಗತ್ತಿನ ದೊಡ್ಡ ನಕಾಶೆ ಹಾಸಿದ್ದರು. ಆಯಾ ದೇಶದ ಹೆಸರು ಬಿಟ್ಟರೆ ಬೇರೇನೂ ಇರಲಿಲ್ಲ. ನಮ್ಮ ಪಾಲಿಗೆ ಬಂದ ಕಂಪನಿಯ ಕಾರ್ಖಾನೆಯ ಒಂದು ಸಣ್ಣ ಪ್ಲಾಸ್ಟಿಕ್ ಅಚ್ಚನ್ನು ಅಲ್ಲಲ್ಲಿ ಇಟ್ಟಿದ್ದರು. ಉಚೆ ನಕಾಶೆಯಲ್ಲಿ ತನ್ನ ದೇಶವನ್ನು ಗುರುತಿಸಿ ಪುಲಕಿತನಾದ. ನಮಗೆಲ್ಲ ತೋರಿಸಿದ ವಿವರಗಳನ್ನೆಲ್ಲ ಗ್ರಹಿಸಲು. ಅನುಮಾನಗಳಿದ್ದರೆ ಸರಿಪಡಿಸಿಕೊಳ್ಳಲು ಅರ್ಧಗಂಟೆ ಕೊಡಲಾಯಿತು. ನಾವು ನಮ್ಮ ಸರಕುಗಳ ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಖರ್ಚು, ಸಾಗಣೆ, ನಮಗೆ ಬೇಕಾದ ಲಾಭ ಎಲ್ಲ ಎಣಿಸಿ ಯಾವ ಬೆಲೆಗೆ ಮಾರಬಹುದೆಂದು ಲೆಕ್ಕ ಹಾಕಿದೆವು. ಜೆಫ್ ಅಕೌಂಟೆಂಟ್ ಅದ್ದರಿಂದ ಚಕಚಕನೆ ಕೂಡಿ ಕಳೆಯುತ್ತ ಅದರಿಂದ ವರ್ಷದ ಕೊನೆಯಲ್ಲಿ ಲಾಭದ ಮೊತ್ತದ ಮೇಲಾಗುವ ಪರಿಣಾಮವನ್ನು ಅಂದಾಜು ಮಾಡಿದ. ಬಂದ ಹಣವನ್ನು ಎಲ್ಲಿ ತೊಡಗಿಸಬೇಕು, ಬ್ಯಾಂಕ್‌ನಿಂದ ಸಾಲ ತೆಗೆದೆರೆ ಆ ಬಡ್ಡಿಯ ದರದಲ್ಲಿ ಹೆಚ್ಚು ಲಾಭವೋ, ನಮ್ಮ ದುಡ್ಡೇ ತೊಡಗಿಸುವುದು ಒಳ್ಳೆಯದೋ ಎಂದು ತೂಗಿ ನೋಡಿದೆವು. ಎಲ್ಲವೂ ಬಹಳ ಸರಳವಾಗಿ ಕಂಡು ಎಲ್ಲ ಲೆಕ್ಕಾಚಾರದಂತೆ ನಡೆದೆರೆ ಭಾರೀ ಲಾಭ ಮಾಡುವ ಲಕ್ಷಣಗಳು ಕಂಡವು.

ಆಟ ಪ್ರಾರಂಭವಾಯಿತು. ತಿಂಗಳ ಕೊನೆಗೆ ಗುಪ್ತ ಟೆಂಡರು ಹಾಕಿ ಸರಕು ಮಾರಾಟ ಮಾಡಬೇಕಾಗಿತ್ತು. ಈ ತಿಂಗಳು ಎಲ್ಲೆಲ್ಲಿ ಯಾವ ವಸ್ತುವಿಗೆ ಬೇಡಿಕೆ ಇದೆ ಎಂದು ತಿಳಿಸುವ ವಿವರಗಳ ಪಟ್ಟಿ ಕೊಡಲಾಯಿತು. ಒಂದು ಚೀಟಿಯಲ್ಲಿ ನಾವು ಮಾರಬಯಸುವ ವಸ್ತುವಿನ ಬೆಲೆ ಮತ್ತು ಯಾವ ದೇಶಗಳಲ್ಲಿ ಎಷ್ಟೆಷ್ಟು ಎಂದು ಬರೆದು ಪೀಟೆರ್‌ಗೆ ಕೊಡಬೇಕು. ಇತರೆ ಗುಂಪುಗಳು ಎಷ್ಟು ಬೆಲೆ ನಮೂದಿಸಿಎ ಎಂದು ಪೀಟೆರ್ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ಅತ್ಯಂತ ಕಡಿಮೆ ಬೆಲೆಗೆ ಮಾರಲು ಸಿಧ್ಧರಾದವರಿಗೆ ಮೊದಲು ಅವಕಾಶ. ಅವರು ಬೇಡ ಅಂದರೆ ಅದರ ನಂತರದ ಕಡಿಮೆ ಬೆಲೆ ನಮೂದಿಸಿದವರಿಗೆ. ಎಲ್ಲ ಚೀಟಿಗಳನ್ನು ಸೇರಿಸಿ, ಮಾರುಕಟ್ಟೆಯ ಪ್ರಕಾರ, ವಸ್ತುಗಳ ಪ್ರಕಾರ ವಿಂಗಡಿಸಿ ಪ್ರತಿ ಮಾರುಕಟ್ಟೆಯಲ್ಲೂ ಯಾರ ಟೆಂಡರು ಸ್ವೀಕಾರವಾಯಿತೆಂದು ಕೂಗಿ ಹೇಳುತ್ತಿದ್ದ. ಮೊದಲ ತಿಂಗಳು ನಮ್ಮ ಬೆಲೆಗಳಲ್ಲಿ ಹೆಚ್ಚಾಗಿ ಒಂದೇ ಒಂದು ಟೆಂಡರೂ ನಮಗೆ ದಕ್ಕಲಿಲ್ಲ. ಕೆಲವು ವಸ್ತುಗಳ ಬೆಲೆ ಇಳಿಸಿದ್ದರಿಂದ ಎರಡನೆಯ ತಿಂಗಳು ಉತ್ಪಾದನೆಯ ಕಾಲುಭಾಗದಷ್ಟು ಖರ್ಚಾಯಿತು. ಇನ್ನೆರಡು ತಿಂಗಳು ಹೀಗೆ ಆದರೆ ಕಚ್ಚಾ ವಸ್ತು ಖರೀದಿಗೆ, ನೌಕರರ ಸಂಬಳಕ್ಕೆ ದುಡ್ಡು ಸಾಲದೇ ಹೋಗುವ ಪರಿಸ್ಥಿತಿ ಬರಲಿದೆ ಎಂದು ಜೆಫ್ ಎಚ್ಚರಿಸಿದ. ಯಾವುದೂ ನಾವು ಅಂದುಕೊಂಡಂತೆ ನಡೆಯೆದೇ, ನಮ್ಮ ಲೆಕ್ಕಚಾರವೆಲ್ಲಾ ತಲೆಕೆಳಗಾಗಿ, ಮೊದಲು ಬಹಳ ಸರಳವಾಗಿ ಕಂಡಿದ್ದೆಲ್ಲ ನೂರಾರು ಕ್ಲಿಷ್ಟ ಹೆಣಿಗೆಗೆಳು ಸೇರಿಕೊಂಡಂತೆ ಕಾಣತೊಡಗಿದವು. ಪ್ರತಿ ತಂಡವೂ ತನ್ನದೇ ಆದ ತಂತ್ರ ರೂಪಿಸಿಕೊಂಡಿತ್ತು. ಟೆಂಡರು ತಮಗೆ ದಕ್ಕಿದೊಡನೆ ಆ ಗುಂಪಿನಲ್ಲಿ ಕೇಕೆ ಕೋಲಾಹಲ. ನಿಜಕ್ಕೂ ಅಲ್ಲೊಂದು ಭೀಕರವಾದ ಸ್ಪರ್ಧೆ ಏರ್ಪಟ್ಟಿತ್ತು. ಇನ್ನೆರಡು ತಿಂಗಳು ಕಳೆಯುವುದರಲ್ಲಿ ನಮ್ಮ ಪರಿಸ್ಥಿತಿ ಸ್ವಲ್ಪ ಸುಧಾರಿಸಿತ್ತು. ಹೇಗೆ ಬೆಲೆಗಳನ್ನು ಇಳಿಸಬಹುದು ಎಂದು ಯೋಚಿಸುತ್ತ, ಯಾವ ಕಾರ್ಖಾನೆಯಲ್ಲಿ ಎಷ್ಟು ಉತ್ಪಾದಿಸಬೇಕು, ಎಲ್ಲಿಂದ ಎಲ್ಲಿಗೆ ಸಾಗಿಸಿದರೆ ಲಾಭದಾಯಕ ಎಂದು ಕಂಡುಕೊಂಡಿದ್ದೆವು. ನಕಾಶೆಯ ಮೇಲೆ ಕೇವಲ ಗುರುತಾಗಿ ಕಾಣುವ ಕಾರ್ಖಾನೆಯ ವಿವರಗಳೆಲ್ಲ ನಮ್ಮ ನಾಲಿಗೆಯ ತುದಿಯಲ್ಲಿದ್ದವು – ಎಷ್ಟು ಕಾರ್ಮಿಕರು, ಏನು ಸಂಬಳ, ಉತ್ಪಾದನಾ ಸಾಮರ್ಥ್ಯ ಮತ್ತು ನಿಜವಾಗಿ ಈಗ ಎಷ್ಟು ತಯಾರಾಗುತ್ತಿದೆ ಇತ್ಯಾದಿ ಇತ್ಯಾದಿ. ಹೊಸ ತಂತ್ರಜ್ಞಾನ ಉಪಯೋಗಿಸಿ ನಾವು ಹೊಸ ಕಾರ್ಖಾನೆಗಳನ್ನು ತೆರೆಯಬಹುದಿತ್ತು. ಹಾಗೆ ಮಾಡಿದರೆ ಆರಂಭದ ಖರ್ಚು ಬಿಟ್ಟರೆ ಅತಿ ಕಡಿಮೆ ಬೆಲೆಯಲ್ಲಿ ಉತ್ಪಾದಿಸಬಹುದಿತ್ತು. ನಮ್ಮ ಈಗಿನ ಎರಡು ಕಾರ್ಖಾನೆಗಳಲ್ಲಿ ಹೆಚ್ಚು ಸಾಮರ್ಥ್ಯವಿದ್ದೂ ನಾವು ಅಷ್ಟು ಉತ್ಪಾದಿಸುತ್ತಿರಲಿಲ್ಲ. ಅದನ್ನೇ ಸರಿಮಾಡಬೇಕೆಂದು ನಿರ್ಧರಿಸಿ ನಿಯಮಗಳಿಗಾಗಿ ಪುಟಗಳನ್ನು ತಿರುವಿ ಹಾಕಿದೆವು. ಅಲ್ಲಿ ಕಾರ್ಮಿಕರ ಸಮಸ್ಯೆಯೆಂತೆ. ಎರಡು ಬೇಡಿಕೆಗಳು ಈಡೇರಿದರೆ ಈಗಿನದ್ದಕ್ಕಿಂತ ಶೇಕಡಾ ಹತ್ತರಷ್ಟು ಹೆಚ್ಚು ಉತ್ಪಾದಿಸಬಲ್ಲದು. ಅಲ್ಲಿದ್ದ ಯಂತ್ರವೊಂದು ಹಳೆಯದಾಗಿದ್ದು ವರ್ಷಕ್ಕೆ ನಾಲ್ಕೈದು ಬಾರಿಯಾದರೂ ಅಪಘಾತವಾಗಿ ಕಾರ್ಮಿಕರು ಗಾಯಗೊಳ್ಳುತ್ತಿದ್ದರು. ಆ ಯಂತ್ರವನ್ನು ಬದಲಾಯಿಸಬೇಕು ಅನ್ನುವುದು ಮೊದಲ ಬೇಡಿಕೆ. ಅದಕ್ಕೆ ತಗಲುವ ವೆಚ್ಚ ಒಂದು ಲಕ್ಷ. ಎರಡನೇ ಬೇಡಿಕೆ ಶೇಕಡಾ ಹತ್ತರಷ್ಟು ಹೆಚ್ಚು ಸಂಬಳ. ಜೆಫ್ ಮತ್ತೆ ಕೂಡಿಸಿ ಕಳೆದು ಗುಣಿಸಿ ಲಾಭವಿಲ್ಲ ಬೇಡ ಅಂದುಬಿಟ್ಟ. ಅವನ ಪ್ರಕಾರ ಇಷ್ಟು ಖರ್ಚು ಮಾಡಿ ಹೆಚ್ಚು ಉತ್ಪಾದನೆ ಪಡೆಯತೊಡಗಿದರೆ ಅದರ ನಿಜವಾದ ಲಾಭ ಬರತೊಡಗುವುದು ನಾಲ್ಕನೇ ವರ್ಷದಿಂದ. ಈ ಆಟ ನಾವು ಆಡುವುದೇ ಮೂರು ವರ್ಷದವರೆಗಾದ್ದರಿಂದ ಈ ಖರ್ಚು ಅನಗತ್ಯ ಅಂದ. ಬದಲಿಗೆ ಹೊಸ ತಂತ್ರಜ್ಞಾನದ ಹೊಸ ಕಾರ್ಖಾನೆ ಆರಂಭಿಸೋಣ ಅಂದ. ನನ್ನ ಮತ್ತು ಉಚೆಯ ಅಭಿಪ್ರಾಯ ಬೇರೆಯಾಗಿತ್ತು. ಈ ಕಾರ್ಖಾನೆಯ ಸಮಸ್ಯೆ ಬಗೆಹರಿಸುವುದು ಒಳ್ಳೆಯ ಆಡಳಿತದ ಲಕ್ಷಣ ಎಂದು ನಾವು ಅಂದೆವು. ಅದು ಯಾಕೆ ಸರಿಯಾದ ನಿರ್ಧಾರವಲ್ಲ ಎಂದು ನಮಗೆ ಮನವರಿಕೆ ಮಾಡಿಕೊಡಲು ಜೆಫ್ ತನ್ನ ಲೆಕ್ಕಾಚಾರವನ್ನು ಮೊದಲಿನಿಂದ ವಿವರಿಸತೊಡಗಿದ. “ಸರಿ ಹೋಗಲಿ ಬಿಡು” ಅಂದ ಉಚೆ. ಹೊಸ ಕಾರ್ಖಾನೆಗೆ ಸಾಕಾಗುವಷ್ಟು ಹಣ ನಮ್ಮಲ್ಲಿರಲಿಲ್ಲ. ಬ್ಯಾಂಕ್ ಸಾಲ ತೆಗೆಯಬೇಕೆಂದು ಜೆಫ್ ಸೂಚಿಸಿದ. ಒಂದು ಕಾರ್ಖಾನೆ ಮುಚ್ಚಲು ಇಂತಿಷ್ಟು ದುಡ್ಡ ಅಲ್ಲಿಯ ಪ್ರತಿ ಕಾರ್ಮಿಕರಿಗೂ ಕೊಡಬೇಕು ಎಂಬ ನಿಯಮವಿತ್ತು. ಅದರ ನಂತರ ಆ ಜಾಗ ಮಾರಬಹುದು. ಇದೆಲ್ಲ ಲೆಕ್ಕಹಾಕಿ ಒಂದು ಕಾರ್ಖಾನೆ ಮುಚ್ಚಿಬಿಡುವಾ ಅಂದ. “ಅವಸರ ಮಾಡುವುದು ಬೇಡ. ಯೋಚಿಸೋಣ” ಎಂದು ನಾವಂದೆವು. ನಿಯಮಗಳ ಒಳಹೊಕ್ಕು ನೋಡುವ, ಪ್ರತಿಯೊಂದನ್ನೂ ರೂಪಾಯಿ ಪೈಸೆಗಳಲ್ಲಿ ಅಳೆದು, ಕೂಡಿ ಕಳೆದು ಜೋಡಿಸಿ ಚಕಚಕನೆ ಲೆಕ್ಕ ಹಾಕುವ, ಲಾಭ ನಷ್ಟದ ಮೊತ್ತವನ್ನು ಕರಾರುವಾಕ್ಕಾಗಿ ಹೇಳುವ ಅವನ ಶಕ್ತಿಯ ಎದುರು ನಮ್ಮ ಯಾವ ಮಾತೂ ನಡೆಯದ ಹಾಗಾಗತೊಡಗಿತ್ತು. ಜೆಫ್‌ನ ಲೆಕ್ಕದ ತರ್ಕದ ಖಡ್ಗ ಎಲ್ಲವನ್ನೂ ನಿರ್ದಯವಾಗಿ ತುಂಡರಿಸಬಲ್ಲದಾಗಿತ್ತು. ನಮ್ಮ ಪ್ರತಿ ಅನಿಸಿಕೆಗೂ ಅವನ ಹತ್ತಿರ ತರ್ಕಬದ್ಧವಾದ ಅಂಕಿಸಂಖ್ಯೆಗಳ ಬೆಂಬಲವಿರುವ ಉತ್ತರವಿರುತ್ತಿತ್ತು. ಜೆಫ್ ಟೀ ತರಲು ಎದ್ದು ಹೋದಾಗ “ಈತ ಅಸಾಧ್ಯದ ಮನುಷ್ಯ………ಒಂದು ದಿನ ಇವನು ಕಂಪನಿಯ ಮುಖ್ಯಸ್ಥನಾಗಬಲ್ಲ…….” ಎಂದು ಉಚೆ ನಿಟ್ಟುಸಿರಿಟ್ಟ.

ಆ ಹೊತ್ತಿಗೆ ಪೀಟರ್ ಮಾರುಕಟ್ಟೆಗಳ ಸಂಶೋಧನಾ ವರದಿ ಲಭ್ಯವಿದೆ ಎಂದು ಪ್ರಕಟಿಸಿದ. ಅದರ ಬೆಲೆ ಐದು ಸಾವಿರ. ಅದು ಪ್ರತಿ ಮಾರುಕಟ್ಟೆಯ ವಿವರಗಳು, ಕಾಲಕಾಲಕ್ಕೆ ಅದರ ಏರಿಳಿತ, ಯಾವ ದೇಶಗಳಲ್ಲಿ ಇನ್ನು ಮುಂದೆ ಯಾವ ವಸ್ತುಗಳಿಗೆ ಬೇಡಿಕೆಯಿದೆ, ಅಲ್ಲಿ ಅದನ್ನು ಮಾರುವ ನಿಯಮಗಳೇನು ಎಂದೆಲ್ಲ ಸೂಚಿಸುವ ಹತ್ತು ಪುಟಗಳ ವರದಿ. ನಾವೂ ಅದನ್ನು ಕೊಂಡೆವು. ಜೆಫ್ ಆಮೂಲಾಗ್ರ ಅದನ್ನು ಓದಿ, ನಮಗೆ ಅದನ್ನು ಓದಲು ಕೊಟ್ಟು ತಾನು ಏನೋ ಲೆಕ್ಕದಲ್ಲಿ ಮಗ್ನನಾದ. “ಅಫ್ರಿಕಾದಲ್ಲಿ ನಾವು ವ್ಯಾಪಾರ ವಿಸ್ತರಿಸಿದರೆ ಲಾಭ ಇದೆ” ಎಂದು ಏನೋ ಕಂಡುಹಿಡಿದವನಂತೆ ಉತ್ಸಾಹದಲ್ಲಿ ಹೇಳಿದ. “ಈಗ ಸದ್ಯಕ್ಕೆ ಬೇಡ. ಇನ್ನೆರಡು ತಿಂಗಳಾಗಲಿ” ಅಂದ.

ಆರು ತಿಂಗಳ ವ್ಯವಹಾರ ಮುಗಿದು ನಾವು ಊಟಕ್ಕೆ ಹೊರಟಾಗ ಇಡೀ ವಾತಾವರಣಕ್ಕೆ ಬೇರೆಯದೇ ರಂಗೇರಿತ್ತು. ಕಡಿಮೆ ಬೆಲೆಯಿಟ್ಟು ಟೆಂಡರ್ ಗಿಟ್ಟಿಸಿಕೊಂಡವರು ಅದು ಹೇಗೆ ಅಷ್ಟು ಕಡಿಮೆ ಬೆಲೆಗೆ ಮಾರಬಹುದೆಂದು ಅಸೂಯೆಯಲ್ಲಿ ಲೆಕ್ಕಹಾಕುವುದು, ಇನ್ನೊಬ್ಬರ ತಂತ್ರ ಊಹಿಸುವುದು, ಪ್ರತಿಯೇಟು ಹಾಕುವುದು, ಕೋಪ, ಕೃತಕ ನಗೆ, ಪಿಸುಮಾತಿನ ಚರ್ಚೆಗಳು, ಪರಸ್ಪರ ಭಯಾನಕ ಸ್ಪರ್ಧೆ, ಗುಟ್ಟುಗಳು ಚಕಚಕನೆ ಲಾಭನಷ್ಟ ಎಣಿಸುವುದು…… ಹೀಗೆ ರಣರಂಗದ ಕಳೆಯೇರಿತ್ತು. ಊಟದ ಬಿಡುವಿನಲ್ಲಿ ಯರೂ ಪರಸ್ಪರ ಬೆರೆಯದೇ ತಮ್ಮ ತಮ್ಮದೇ ಗುಂಪುಗಳಲ್ಲಿ ಚರ್ಚಿಸುವುದರಲ್ಲಿ ಮಗ್ನರಾಗಿದ್ದರು. ಕಿಟಕಿಯಿಂದ ಹೊರಗಿನ ಸಮುದ್ರವನ್ನೇ ನೋಡುತ್ತ ನಿಂತ ಉಚೆ ಯಾಕೋ ಅನ್ಯ ಮನಸ್ಕನಾಗಿದ್ದಂತೆ ಅನಿಸಿತು. “ಏನು ಉಚೆ, ಹೇಗೆ ಹೆಚ್ಚು ಲಾಭ ಮಾಡುವುದು ಅಂತ ಯೋಚಿಸುತ್ತಿದ್ದೀಯಾ?” ಅಂದೆ. “ನಾವು ಆಫ್ರಿಕಾದಲ್ಲಿ ಹೊಸ ಕಾರ್ಖಾನೆ ಹಾಕಬಾರದು. ಅಲ್ಲಿಯ ಮಾರುಕಟ್ಟೆಗೆ ಹೋಗಬಾರದು” ಅಂದ. “ಯಾಕೆ?” ಅಂದೆ, ಜೆಫ್‌ನ ಲೆಕ್ಕಾಚಾರದಲ್ಲಿ ಏನೋ ಊನ ಹುಡುಕಿದ್ದಾನೆ ಅಂದುಕೊಂಡು. “ಯಾಕೆಂದರೆ ಅದು ಜನರನ್ನು ನಾಶ ಮಾಡುತ್ತದೆ” ಅಂದ. ನಾನು ಬೆಚ್ಚಿದೆ. ಇವನು ತನ್ನ ದೇಶದ ನಕಾಶೆ ನೋಡಿ ಭಾವುಕನಾಗಿದ್ದಾನೆ ಅನಿಸಿ ರಿಲ್ಯಾಕ್ಸ್ ಅಂದೆ. “ನೀನೂ ಯಾಕೆ ಹೀಗನ್ನುತ್ತೀ…… ನೋಡು ಜೆಫ್‌ಗಿಂತ ನಿನಗೇ ಹೆಚ್ಚು ಇದು ಅರ್ಥವಾಗಬೇಕು. ನೂರಾರು ಜಾತಿ ಧರ್ಮ ದೇವರು ಇರುವ ನಿಮಗೂ ನಮಗೂ ಆಳದಲ್ಲಿ ಬಹಳ ಅಂತರವಿಲ್ಲ. ನಮ್ಮಲ್ಲಿ ಪ್ರತಿ ಊರಿಗೂ ಒಂದೊಂದು ಜೀವನ ವಿಧಾನವಿದೆ……” ಅಂದ. ನನಗಂತೂ ಅವನು ಏನನ್ನು ಉದ್ದೇಶಿಸಿ ಮಾತಾಡುತ್ತಿದ್ದಾನೆ ಅನ್ನುವುದು ಅರ್ಥವಾಗಲೇ ಇಲ್ಲ. ಊಟಕ್ಕೆ ಕೂತಾಗ “ನಿನ್ನ ವಾದ ನನಗೆ ಅರ್ಥವಾಗುತ್ತಿಲ್ಲ” ಅಂದೆ. “ನಾನು ವಾದ ಮಾಡುತ್ತಿಲ್ಲ. ಇದ್ದ ಸಂಗತಿ ಹೇಳಿದೆ ಅಷ್ಟೆ” ಅಂದ. ಆಮೇಲಿನ ದೀರ್ಘ ಮೌನ ಮುರಿದು ತನ್ನ ಬಗ್ಗೆ ತನ್ನ ದೇಶದ ಬಗ್ಗೆ ಬಹಳಷ್ಟು ಹೇಳಿದ.

“ನಾವೆಲ್ಲ ಇನ್ನೂ ಗುಲಾಮರು. ಹೆಸರಿಗೆ ಮಾತ್ರ ನಮ್ಮಲ್ಲಿ ಪ್ರಜಾಪ್ರಭುತ್ವ ಇದೆ. ನನ್ನ ದೂರದ ಸಂಬಂಧಿಯೊಬ್ಬ ಅಧ್ಯಕ್ಷನಾಗಿದ್ದ. ಅವನನ್ನು ಕೊಂದು ಈಗಿರುವಾತ ಮಿಲಿಟರಿ ಆಡಳಿತ ತಂದ. ಚುನಾವಣೆಯ ನಾಟಕವಾಡಿ ಹದಿನೈದು ವರ್ಷಗಳಿಂದ ಇದ್ದಾನೆ. ನಮ್ಮಲ್ಲಿ ಪ್ರೆಸಿಡೆಂಟ್ ಅನ್ನುವ ಶಬ್ದವನ್ನು ಅವನಿಗೆ ಬಿಟ್ಟರೆ ಬೇರೆ ಯಾರಿಗೂ ಬಳಸಬಾರದು. ನಮ್ಮ ದೇಶದಲ್ಲಿ ನಮ್ಮ ಕಂಪನಿಗೆ ಚೇರ್‌ಮನ್ ಇದ್ದಾನೆ. ನಿಮ್ಮಲ್ಲಿಯ ಹಾಗೆ ಪ್ರೆಸಿಡೆಂಟ್ ಇಲ್ಲ…… ನಮ್ಮ ದೇಶದ ಒಂದು ಕಾಲದಲ್ಲಿ ಬಹಳ ಕೋಕೋ ಬೆಳೆಯುತ್ತಿತ್ತು. ಹಿಂದಿನ ಆಡಳಿತ ಅದರ ರಫ್ತಿಗಾಗಿ ದೊಡ್ಡ ಸಂಗ್ರಹಾಲಯಗಳನ್ನು ನಿರ್ಮಿಸಿತ್ತು. ಅದು ಹಿಂದಿನ ಸರ್ಕಾರದ ದೊಡ್ಡ ಸಾಧನೆಯಾಗಿ ಜನರಿಗೆ ಕಂಡಿದ್ದರಿಂದ ಅವುಗಳನ್ನೆಲ್ಲ ನಾಶಮಾಡಿದ. ಜನರನ್ನು ಬಡವರನ್ನಾಗಿ ಮಾಡಿದ. ಆದರೆ ಅವರ ಕೊಳ್ಳುವ ಆಸೆಗಳನ್ನು ಹೆಚ್ಚಿಸಿದ. ಈ ರಾಜಕೀಯ ಹುನ್ನಾರಿನಲ್ಲಿ ಬೇರೆ ದೇಶದ ದೊಡ್ಡ ಕಂಪನಿಗಳೆಲ್ಲ ಶಾಮೀಲಾಗಿದ್ದವು. ನಮ್ಮಲ್ಲಿ ಏನೂ ತಯಾರಾಗದಂತೆ ಮಾಡಿದ. ನಾನು ಹಾಕಿರುವ ಈ ಶರ್ಟು ಕೂಡ ಬೇರೆ ಯಾರೋ ಮಾಡಿ ನಮಗೆ ಕೊಡಬೇಕು. ಇದ್ದ ದೇಶೀ ಉದ್ಯಮಗಳೆಲ್ಲ ಈ ಹೊಸ ತಂತ್ರಜ್ಞಾನ ಇಲ್ಲದೇ, ಸರ್ಕಾರದ ಬೆಂಬಲವಿಲ್ಲದೇ ಸೊರಗಿ ಸಾಯುತ್ತಲಿವೆ. ನಮ್ಮ ನೆಲದಲ್ಲಿ ಒಂದಿಷ್ಟು ಪೆಟ್ರೋಲ್, ಎಣ್ಣೆ ಸಿಗುವುದರಿಂದ ಬದುಕಿದ್ದೇವೆ. ಅದೆಲ್ಲ ಸರ್ಕಾರಕ್ಕೆ ಸೇರಿದ್ದು. ಆಹಾರ ವಿತರಣೆಯ ಸೂತ್ರ ಇರುವುದು ಸರ್ಕಾರದ ಕೈಯಲ್ಲಿ. ಅವರು ವಿತರಿಸುವುದು ದೊಡ್ಡ ಕಂಪನಿಗಳ ಉತ್ಪಾದನೆಗಳು. ನಮ್ಮ ರುಚಿ, ವಾಸನೆ, ಬಟ್ಟೆ, ಆಹಾರದ ಪ್ರಮಾಣ ಬದಲಾಗತೊಡಗಿದೆ. ಎಲ್ಲರ ಮನೆ ಊಟವೂ ಒಂದೇ ರೀತಿಯಾಗುತ್ತಲಿದೆ. ಯಾರಿಗೂ ವೈವಿಧ್ಯ ಬೇಕಿಲ್ಲ. ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಮಾರುವುದು ಬೇಕು. ಹೇರದೇ ಇದ್ದರೆ, ಆಯ್ಕೆ ಇದ್ದರೆ ಯಾರು ತಾನೆ ಕೊಳ್ಳುತ್ತಾರೆ? ನಾವು ಅವರಿಗಾಗಿ ದುಡಿಯುವುದು, ಅವರು ಮಾಡಿದ್ದನ್ನು ಕೊಳ್ಳುವುದು. ನಾವೆಲ್ಲ ಕಡಿಮೆ ಬೆಲೆಗೆ ಸಿಗುವ ಕೂಲಿಗಳಾಗುತ್ತಿದ್ದೇವೆ. ನನ್ನ ಮನೆಯಲ್ಲಿ ನನ್ನ ಇಬ್ಬರು ಚಿಕ್ಕಪ್ಪಂದಿರು ಕೆಲಸ ಕಳಕೊಂಡು ಕೂತಿದ್ದಾರೆ. ಒಬ್ಬನಂತೂ ಕೆಲಸ ಮಾಡುವಾಗ ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ……..”

ಉಚೆಯ ಮಾತುಗಳನ್ನು ಕೇಳಿ ನಾನು ಬೆರಗಾದೆ. ಅವನೊಳಗೆ ಇಂಥದ್ದೆಲ್ಲ ಇದೆ ಅನ್ನುವುದು, ಅವನು ಹೀಗೆಲ್ಲ ಯೋಚಿಸುತ್ತಾನೆ ಅನ್ನುವುದು ನನ್ನ ಕಲ್ಪನೆಯ ಆಚೆಯದಾಗಿತ್ತು. ಅವನು ತನ್ನ ಮಾತಲ್ಲಿ ಏನೆಲ್ಲ ಮೂಡಿಸಿದ. ಮನೆಯ ಒಳಗಿನ ಕತ್ತಲು, ಊಟದ ತಟ್ಟೆಗಳು, ಕೆಲಸ ಕಳಕೊಂಡ ಚಿಕ್ಕಪ್ಪಂದಿರ ಖಾಲೀನೋಟ, ಹಾಡುಗಳು,ಹಾಡುವಾಗ ಕಂಪಿಸಿದ ದನಿಗಳೂ,ಮರೆತುಹೋದ ಸಾಲುಗಳು, ನಿದ್ದೆಗೆಟ್ಟಕಣ್ಣುಗಳು, ಜೊತೆಜೊತೆಗೇ ನಂಬಿಕೆಗಳೂ, ಕನಸುಗಳು, ಓಡಿಬಂದ ಮಕಳನ್ನು ತೆಕ್ಕೆಗೆ ಸೇರಿಸಿಕೊಳ್ಳುವ ತೋಳುಗಳು, ಪ್ರೀತಿಯಲ್ಲಿ ಅರಳಿದ ನಗುವಿನಲ್ಲಿ ಹೊಳೆವೆ ಹಲ್ಲುಗಳು, ಹೆಂಡತಿಯನ್ನು ಪ್ರೀತಿಯಿಂದ ತಡವಲಾರದ ಹಾಗೆ ಮಾಡಿದ, ಧಡಕ್ಕನೆ ನಿಂತು ಹೋದ ಜೀವನ ಚಕ್ರಗಳು…… ನಕಾಶೆಯ ಮೇಲಿನ ಅಚ್ಚಿನ ಬೊಂಬೆಗಳ ಸರಿದಾಟವನ್ನು ಬರೀ ಜೆಫ್‌ನ ಲೆಕ್ಕದಲ್ಲಿ ತೂಗಿ ನೋಡದೇ, ಅದಕ್ಕೆ ಅಂಟಿಕೊಂಡ ನೂರಾರು ಹೆಣಿಗೆಗಳನ್ನು ಬಿಚ್ಚತೊಡಗಿದ. ನಾನು ಸುಮ್ಮನೇ ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತ ಕೂತೆ. “ತಡವಾಯಿತು ಬನ್ನಿ” ಎಂದು ಜೆಫ್ ಎದ್ದು ಹೋದ.

ಆಟ ಮತ್ತೆ ಆರಂಭವಾಗಿತ್ತು. ಆಟದ ಮತ್ತು ಎಲ್ಲರ ತಲೆಗೇರಿತ್ತು. “ಉಚೆಗೆ ತಲೆಕೆಟ್ಟಿದೆ” ಎಂದು ಜೆಫ್ ನನ್ನ ಕಿವಿಯಲ್ಲಿ ಉಸುರಿದ. ಉಚೆಯ ಜೊತೆ ಹೆಚ್ಚು ವಾದ ಮಾಡದೇ ಸಧ್ಯಕ್ಕೆ ಆಫ್ರಿಕಾದಲ್ಲಿ ವಿಸ್ತರಣೆ ಬೇಡವೆಂದು ನಿರ್ಧರಿಸಿದೆವು. ಎಲ್ಲರೂ ತಮ್ಮ ಸರ್ವ ಶಕ್ತಿಯನ್ನೂ ಚಾಣಾಕ್ಷತೆಯನ್ನೂ ಪಣಕ್ಕೆ ಒಡ್ಡಿದಂತೆ ಆಡುತ್ತಿದ್ದರು. ಆಟ ಮುಂದುವರಿಯುತ್ತಿದ್ದ ಹಾಗೆ ಅದರ ನಿಯಮಗಳೆಲ್ಲ ನಮಗೆ ಎಂದಿನಿಂದಲೂ ಗೊತ್ತಿದ್ದವೇನೋ ಎಂಬಂತೆ ಕರಗತವಾಗಿದ್ದವು. ಒಮ್ಮೊಮ್ಮೆಯಂತೂ ಈ ಆಟದ ನಿಯಮಗಳೇ ನಮ್ಮನ್ನು ನಿಯಂತ್ರಿಸುತ್ತಿವೆ ಅನಿಸುತ್ತಿತ್ತು. ಎರಡು ಬಾರಿ ನಮ್ಮ ಲೆಕ್ಕಾಚಾರ ತಲೆಕೆಳಗಾಗಿ ಸಿದ್ಧವಸ್ತುಗಳು ಮಾರಾಟವಾಗದೇ ಪೇರತೊಡಗಿದ್ದವು. ವರ್ಷದ ಕೊನೆಗೆ ಎಲ್ಲರೂ ವಾರ್ಷಿಕ ವರದಿ ಪ್ರಕಟಿಸಿದಾಗ ನಾವು ನಷ್ಟದಲ್ಲಿಲ್ಲವಾದರೂ ಕೊನೆಯ ಸ್ಥಾನದಲ್ಲಿದ್ದೆವು. ಜೆಫ್‌ಗೆ ಯೋಚನೆಗಿಟ್ಟುಕೊಂಡಿತ್ತು. ಯಾವಗಲೂ ಗೆಲ್ಲಬೇಕು ಅನ್ನುವ ಪೈಕಿ ಅವನು. ರಾತ್ರಿ ಊಟಕ್ಕೆ ಕೂತಾಗ “ನಾಳೆ ನಾವೆಲ್ಲ ಸರಿಯಾಗಿ ಯೋಚಿಸಿಕೊಂಡು ಬರಬೇಕು. ಇವತ್ತಿನ ಹಾಗೆ ಮಾಡಿದರೆ ನಾವು ಕೊನೆಯವರೆಗೂ ಕೊನೆಯ ಸ್ಥಾನದಲ್ಲೇ ಇರುತ್ತೇವೆ” ಅಂದ. “ಬೇಗೆ ಮಲಗಿಕೊಳ್ಳಿ…… ಚೆನ್ನಾಗಿ ನಿದ್ದೆ ಮಾಡಿ” ಎಂದು ಹೋದ.

ಅದಾದ ಮೇಲೆ ನಾನು ಮತ್ತು ಉಚೆ ಬಹಳ ಹೊತ್ತು ಮಾತಾಡುತ್ತ ಕೂತೆವು. ಅವನಿಗೆ ನನ್ನ ಬಗ್ಗೆ, ನಮ್ಮ ದೇಶದ ಬಗ್ಗೆ ಏನೇನೆಲ್ಲ ಹೇಳಿದೆ. ನಮ್ಮ ಜೀವನದ ಆಚಾರಗಳನ್ನು, ನಂಬಿಕೆಗಳನ್ನು, ಮದುವೆಯ ಕಗ್ಗಂಟುಗಳನ್ನು, ಮಧ್ಯಮ ವರ್ಗದ ಕಾರ್ಮಿಕ ಕುಟುಂಬದ ನನ್ನ ತಂದೆತಾಯಿಯರ ಆಸೆಗಳನ್ನು, ನನು ಇಂಥ ಕೆಲಸದಲ್ಲಿರುವುದು ಕಾರ್ಮಿಕನಾದ ನನ್ನ ತಂದೆಗೆ ಕೊಟ್ಟ ಅಭಿಮಾನವನ್ನು ಹೇಳುತ್ತ ಹೇಳುತ್ತ ಹಳಿತಪ್ಪಿದೆ. ಗಾಂಧಿಯ ಬಗ್ಗೆ ಹೇಳಿದೆ, ನಲವತ್ತೇಳರ ಸ್ವಾತಂತ್ರ್ಯದ ಬಗ್ಗೆ, ದೇಶದ ರಾಜಕೀಯದ ಬಗ್ಗೆ ಹೇಳಿದೆ, ನನ್ನ ನಿದ್ದೆಗೇಡಿಗೆ ಕಾರಣವಾಗುವ ತಲ್ಲಣಗಳನ್ನು ಹೇಳಿದೆ, ನನ್ನ ಬಾಲ್ಯದ ಬಗ್ಗೆ ಹೇಳಿದೆ, ಹೆಂಡತಿಯ ಬಗ್ಗೆ ಹೇಳಿದೆ, ಮೈಮೇಲೆ ಗಣ ಬರುವುದನ್ನು ರಂಗಾಗಿ ವಿವರಿಸಿದೆ, ಪತ್ರೊಡೆಯ ರುಚಿ ಹೇಳಿದೆ……

ತೀರಾ ಮಾತಾಡಿದೆ ಎಂದು ಕಸಿವಿಸಿಪಡುತ್ತ ರ್ಮಿಗೆ ಹೋಗಿ ಮಲಗಿದೆ. ಸರಿಯಾಗಿ ನಿದ್ದೆ ಬರಲಿಲ್ಲ. ಮರುದಿನ ಬೆಳಗ್ಗೇ ಜೆಫ್ ನನ್ನ ರೂಮಿಗೆ ಬಂದು ತಾನು ಯೋಚಿಸಿದ ತಂತ್ರಗಳನ್ನು ಹೇಳಿದ. ಹಿಂದಿನ ದಿನ ಉಚೆ ಆಡಿದ ಮಾತುಗಳು ನನ್ನನ್ನು ಭಾಜಿಸಿದ್ದವು. ಈ ಆಟ ಹೇಗೆ ಕಾಡುತ್ತಿತ್ತೆಂದರೆ ನಡು ರಾತ್ರಿ ಎಚ್ಚರಾದಾಗ ಥಟ್ಟನೆ ಏನೋ ಹೊಳೆದಿತ್ತು. ಎದ್ದು ನೀರು ಕುಡಿದು ಮಲಗುವಾಗಲೂ ಅದೇ ಯೋಚನೆ. ನಮ್ಮ ಒಳಗಿನ ಕಾಮದಂಥ ಯಾವುದೋ ಪ್ರಕೃತಿಯನ್ನು ಹೊಡೆದೆಬ್ಬಿಸಿದ ಹಾಗಿತ್ತು. ಯಾವುದೂ ರುಚಿಸದ ಹಾಗೆ, ಯಾರ ಜೊತೆಯೂ ಬೆರೆಯದೆ ನಮ್ಮ ನಮ್ಮ ಗುಂಪುಗಳಲ್ಲಿ ನಮ್ಮನ್ನು ಕಟ್ಟಿಹಾಕಿದ ಇದರ ಹಿಡಿತಕ್ಕೆ ತಲ್ಲಣಿಸಿದೆ. ಎರಡು ದಿನಗಳಿಂದ ಅರ್ಧ ಓದಿಟ್ಟ ಪುಸ್ತಕ ಮುಂದುವರಿಸಲಾಗಿರಲಿಲ್ಲ. ಹಾಡು ಕುಣಿತ ಹರಟೆಗಳಿಲ್ಲ. ಸಮುದ್ರ ದಂಡೆಯ ಮೇಲೆ ವಾಕಿಂಗ್ ಇಲ್ಲ. ಬರೀ ಇದೇ.

ಬೆಳಗಿನ ತಿಂಡಿಯಾಗಿ, ಆಟ ಶುರುವಾಗಿದ್ದೇ ಜೆಫ್ ಆಫ್ರಿಕಾದ ಮಾತೆತ್ತಿದ. ಉಚೆ ಸಾಧ್ಯವೇ ಇಲ್ಲ ಅಂದ. ನಮಗೆ ಉಚೆಯದು ಅತಿಯಾಯಿತು ಅನಿಸತೊಡಗಿತ್ತು. ನಾವು ಆಫ್ರಿಕಾದಲ್ಲಿ ವ್ಯಾಪಾರ ವಿಸ್ತರಿಸದೇ ಬೇರೆ ಉಪಾಯವಿರಲಿಲ್ಲ. ಬೆರೇ ಯಾವ ತಂಡವೂ ಇನ್ನೂ ಅಲ್ಲಿ ಕಾಲಿಟ್ಟಿರಲಿಲ್ಲ. ಅವರಿಗಿಂತ ಮುಂಚೆಯೆ ನಾವು ಹೋಗದಿದ್ದರೆ ಲಾಭ ಹೆಚ್ಚಿಸುವುದು ಸಾಧ್ಯವೇ ಇರಲಿಲ್ಲ. ನಾನು ಅವನಿಗೆ ನಮಗೆ ಒದಗಿಸಿದ್ದ ಪುಟಗಳಿಂದ ವಿವರಗಳನ್ನು ಎತ್ತಿ ತೋರಿಸುತ್ತ ಯಾಕೆ ನಾವು ಅಲ್ಲಿ ಹೋಗಬೇಕು ಎಂದು ಹೇಳಲು ಪ್ರಯತ್ನಿಸಿದೆ. ಏನನ್ನು ಹೇಳಿದರೂ “ಅದೇ, ಅದೇ ಕಾರಣಕ್ಕೆ ನಾನು ಬೇಡ ಅನ್ನುವುದು” ಎನ್ನುವುದು. ಜೆಫ್ ಅವನಿಗೆ “ಇಷ್ಟೊಂದು ಭಾವುಕವಾಗಿ, ಮಳ್ಳನ ಹಾಗೆ ಆಡಬೇಡ. ನಿನ್ನ ದೇಶದಲ್ಲಿ ಏನಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಈ ಪುಟಗಳಲ್ಲಿ ಎಷ್ಟಿದೆಯೋ ಅಷ್ಟು. ಇದೊಂದು ಆಟ ಅನ್ನುವುದು ತಿಳಕೋ” ಎಂದ. ಉಚೆ ತನ್ನ ಪಟ್ಟು ಬಿಡಲಿಲ್ಲ. “ಇದು ಆಟ. ಈಗ ಮಾತ್ರವಲ್ಲ ಯಾವಗಲೂ ಇದು ಹೀಗೇ. ಕಾಗದದ ಮೇಲಿನ ವಿವರಗಳು, ನಕಾಶೆಯ ಮೇಲಿನ ಹೆಸರುಗಳನ್ನು ನೋಡಿಕೊಂಡು ಅಧಿಕಾರ ಶಕ್ತಿಯ ತಂತಿಗಳನ್ನು ಎಳೆದಾಡಿಸುವುದು…… ಜನರನ್ನು ಕೊಲ್ಲುವ ಆಟ ಆಡಿಸಿದರೆ ನೀನು ಆಡುತ್ತೀಯಾ? ಅದರಲ್ಲಿ ನಿನ್ನ ಬಳಗದವರೆಲ್ಲ ಇದ್ದು ಇಂತಿಂಥವರನ್ನು ಕೊಂದೆ ಎಂದು ಬೊಂಬೆಗಳನ್ನು ಬದಿಗೆ ಸರಿಸಿಡುವ ಆಟವನ್ನು ಆಡುತ್ತೀಯಾ?” ಅಂದ. ಉಚೆಯ ಮಾತುಗಳು ಹರಿತವಾಗಿದ್ದವು. ಜೆಫ್ ಅವನನ್ನು ಬಗೆಬಗೆಯಾಗಿ ಸಮಾಧಾನಪಡಿಸಲು ನೋಡಿದ. “ನಾವೀಗ ನಷ್ಟದಲ್ಲಿಲ್ಲವಲ್ಲ. ಹೆಚ್ಚು ಲಾಭ ಬೇಡ. ಹೀಗೆಯೇ ನಿಭಾಯಿಸೋಣ” ಅಂದ. ಉಚೆಯ ಮಾತಿಗೆ ಜೆಫ್ “ಅಂದರೆ ನಷ್ಟದಲ್ಲಿದ್ದರೆ ನೀನು ಒಪ್ಪಿಕೊಳ್ಳುತ್ತಿದ್ದೆ ಅಂತಾಯಿತು…… ಹಣ ಇಟ್ಟುಕೊಳ್ಳುವುದರಲ್ಲಿ ಮಜವಿಲ್ಲ…… ಹಣ ಮಾಡುವುದರಲ್ಲಿ ಮಜ……” ಅಂದ. ಮತ್ತೆ ಉಚೆಯ ಮೊಂಡುವಾದ ಮುಂದುವರಿಯಿತು. ಉಚೆ ತೀರಾ ಅತಿಗೆ ಇಳಿಯುತ್ತಿದ್ದಾನೆ ಅನಿಸಿತು. ಅವನು ಒಪ್ಪದೇ ನಾವು ಏನೂ ಮಾಡುವಂತಿರಲಿಲ್ಲ. ಆಟದ ನಿಯಮವೇ ಹಾಗಿತ್ತು. ಎಲ್ಲರೂ ಸೇರಿ ಮಾಡಿದ ನಿರ್ಧಾರವಿರಬೇಕು. ಯಾರೊಬ್ಬ ವಿರೋಧಿಸಿದರೂ ಸರ್ಕಾರದ ಪಾತ್ರಧಾರಿ ಪೀಟರ್ ಅದನ್ನು ತಳ್ಳಿಹಾಕುತ್ತಿದ್ದ. ಉಚೆಯನ್ನು ಹೇಗಾದರೂ ಒಪ್ಪಿಸದೇ ಬೇರೆ ದಾರಿಯಿರಲಿಲ್ಲ.

“ನೀನಿಲ್ಲೇ ಇರು” ಎಂದು ನನಗೆ ಹೇಳಿ ಜೆಫ್, ಉಚೆಯನ್ನು ಆಚೆ ಕರೆದುಕೊಂಡು ಹೋದ. ಹತ್ತು ಹದಿನೈದು ನಿಮಿಷಗಳ ನಂತರ ಇಬ್ಬರೂ ಬಂದರು. “ಉಚೆ ಸಹಕರಿಸುತ್ತಾನೆ” ಎಂದು ಜೆಫ್ ಹೇಳಿದ. ಅವನೇನು ಹೇಳಿದನೋ, ಬೆದರಿಕೆ ಹಾಕಿದನೋ, ಇಬ್ಬರೂ ಜಗಳಾಡಿದರೋ, ಹೊಡೆದಾಡಿದರೋ ನನಗೆ ಗೊತ್ತಾಗಲಿಲ್ಲ. ಉಚೆಯ ಮೋರೆ ನೋಡಿ ಕೆಡುಕೆನಿಸಿತು. ನೀನು ಹೇಳಿದ್ದೆಲ್ಲ ಅರ್ಥವಾಗುತ್ತದೆ. ನಿನ್ನ ಹಾಗೆಯೇ ನಾನೂ ಇಂದು ಅವನಿಗೆ ತಿಳಿಸಲು ನಿನ್ನೆ ರಾತ್ರಿ ನನ್ನ ಬಗ್ಗೆ ಅಷ್ಟೆಲ್ಲ ಹೇಳಿಕೊಂಡೆನೇನೋ ಅನಿಸಿತು. ಹಾಗೆ ಅನಿಸುತ್ತಿದ್ದಂತೆಯೇ, ಅವನು ಹೇಳಿದ್ದನ್ನು ಅರ್ಥಮಾಡಿಕೊಂಡರೂ ಇದನ್ನು ಆಟವೆಂದು ಭಾವಿಸುವ ಪರಿವರ್ತನೆ ನನ್ನಲ್ಲಿ ಯಾವಾಗ, ನನ್ನ ಜೀವನದ ಯಾವ ಹಂತದಲ್ಲಿ ಹೇಗೆ ಆಯಿತು ಅಂತ ಅರಿವಾಗಲಿಲ್ಲ. ಉಚೆಯನ್ನು ಜೆಫ್ ಹೇಗೆ ಒಪ್ಪಿಸಿದ, ಅದು ಯಾವ ಶಕ್ತಿಯನ್ನು ಪ್ರಯೋಗಿಸಿದ, ಯಾವ ತಂತಿಯನ್ನಿ ಮೀಟಿದ ಎಂದು ಬಗೆಹರಿಯಲಿಲ್ಲ. ಉಚೆ ಎಲ್ಲದಕ್ಕೂ ಹೂಂ ಹೂಂ ಎಂದು ನಿರಾಸಕ್ತಿಯಲ್ಲಿ ತಲೆಯಾಡಿಸತೊಡಗಿದ. ಅಂತೂ ಮೂರನೇ ದಿನದ ಕೊನೆಗೆ ನಾವು ಎರಡನೇ ಸ್ಥಾನಕ್ಕೇರಿದ್ದೆವು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.