ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಪ್ರತಿ ಮುಂಜಾವು ಚಿನ್ನದ ತತ್ತಿ ಇಡುವ ಈ ಹಕ್ಕಿಗಳು
ಆಕಾಶದ ಕುದುರೆಗಳಿಗೇ ಜೀನು ಹಾಕುತ್ತವೆ
ನಾಗಾಲೋಟದಿಂದ ಅವು ನೆಗೆದಾಗ ಗುರಿ ಏಳನೇ ಸ್ವರ್ಗ
ನಿದ್ರಿಸಿದಾಗ ತಲೆದಿಂಬು ಅವು ಚಂದ್ರ ಸೂರ್ಯರಿಗೆ
ನರಕ ಭಾಜನರೆ ಸ್ವರ್ಗದಾತರೆ ಪುನರುತ್ಥಾನದ ದಿನದ
ನಾಯಕರು, ಹರಿಸುವ ಶಕ್ತಿಯೇ ಇಲ್ಲದವರು
ಬೆಟ್ಟ ಸಾಲು ಗಾಳಿಯಲ್ಲಿ ನರ್ತಿಸಿ ತೇಲುತ್ತದೆ
ಕಹಿಯಾದ ಕಡಲೇ ಅತಿಮಧುರ ಸಿಹಿಯಾಗುತ್ತದೆ
ಶರೀರಗಳೆ ಆತ್ಮಗಳಾಗುತ್ತವೆ, ಆತ್ಮಗಳು ಅನಂತವಾಗುತ್ತವೆ
ಕಗ್ಗಲ್ಲಿನ ಬಂಡೆ ರತ್ನದ ಗಣಿಯಾಗುತ್ತದೆ, ಪಾಷಂಡಿಯೂ ಪವಿತ್ರ
ಎಲ್ಲ ಬಚ್ಚಿಟ್ಟ ಬಯಲು, ರಹಸ್ಯದೊಳಗಿನ ರಹಸ್ಯ
ಕಾಣಬೇಕೆಂಬ ಕ್ಷಣದಲ್ಲೆ ಎಲ್ಲ ಕಣ್ಣ ಮುಂದೆ!
ಮಾತಿಗೆ ಅವಕಾಶವಿದೆಯೆಂದಾದರೆ ನನ್ನ ನುಡಿ ಕೇಳಿ
ಸ್ವರ್ಗದ ಕಿನ್ನರ ಕಿಂಪುರುಷರಿಂದ ಚಪ್ಪಾಳೆಯ ಹೊಳೆ
*****