ದೊರೆಗೆ ಪ್ರಶ್ನೆಗಳು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ?
ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ?

ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು?
ದೊರೆ, ಚರಾಚರ ರೂಪಗಳ ಈ ಬೆಳಕು ಯಾವ ಸೀಮೆಯದು?

ಆಶ್ಚರ್ಯ! ದೊರೆ, ಈ ಸದ್ದು ದೇವತೆಗಳ ಸೈನ್ಯದ್ದೆ?
ಅದ್ಭುತ! ದೊರೆ, ಎದ್ದ ಈ ನಗುವಿನ ಅಲೆ ಸ್ವರ್ಗದಪ್ಸರೆಯರದೆ?

ಯಾವ ದಿವ್ಯಗಾನವಿದು? ಆತ್ಮ ಹುಚ್ಚೆದ್ದು ಕುಣಿದಿದೆ
ಯಾವ ಶಿಳ್ಳೆಯದು? ಎದೆಯ ಹಕ್ಕಿ ರೆಕ್ಕೆ ಬಿಚ್ಚಿ ಚಡಪಡಿಸಿದೆ

ಯಾವ ಮದುವೆಯೂಟವಿದು? ಎಂಥ ಮದುವೆ?
ಸ್ವರ್ಗವೇ ಅಂತಃಪಟವಾದಂತೆ, ಬಂಗಾರ ಹರಿವಾಣದ ಚಂದ್ರನೇ ಬಂದಂತೆ

ಎಂಥಾ ಬೇಟೆ ಇದು? ವಿಧಿಯ ಬಾಣವೇ ಹಾರುತ್ತಿದೆ
ಅಲ್ಲವೆಂದರೆ ಈ ದಿವ್ಯ ಗಾಂಡೀವವೇಕೆ ಮಿಡಿದಿದೆ

ಬೆಸಗೊಳ್ಳಿರಿ, ಸಖಿಯರೆ, ಸುಭಸುದ್ದಿ
ತಟ್ಟಿ ಚಪ್ಪಾಳೆ, ಮಿಕ್ಕು ಮೀರಿ ಹೋಹ ಚಪ್ಪಾಳೆಯೊಡನೆ ಬಂದ

ಆಕಾಶಗಳ ಕೋಟೆಯಿಂದ ಅಭಯದ ದನಿ ಕೇಳಿದೆ
ಕಡಲ ತೆರೆಗಳ ಮಧ್ಯದಿಂದ ಎಂಥದೋ ಭಯ ಮೊರೆದಿದೆ

ಶ್ರೀಮಂತ ನಯನಗಳಿಗೆ ಸೊಕ್ಕೇರಿದೆ ನಿನ್ನ ದರ್ಶನದಿಂದ
ಕಣ್ಣಾರೆ ಕಂಡದ್ದಕ್ಕೆ ಸ್ವತಃ ಸಾಕ್ಷಿ ಹೇಳಿದೆ

ಬರಗಾಲದ ಬದುಕಿನಿಂದ ಹಾರಿ ಹೋಗು
ಅಗುಳಿಗಾಗಿ ಆತ್ಮಘಾತವಾಗುವ ಕಡೆಯಿಂದ ದೂರ ಸಾಗು

ಜೀವನಕ್ಕಿಂತ ಯಾವುದು ಸುಂದರ?
ಜೀವ ಹಾರಿತೆ, ಭಯವಿರಲಿ ದೂರ

ಜೀವ ಹಾರಿದ್ದಕ್ಕೆ ಅಳುವೇಕೆ?
ಜೀವದಾಗಮನಕ್ಕಿಂತ ಅದು ಒಳಿತಲ್ಲವೆ?

ಪ್ರತಿಯೊಬ್ಬನೂ ಎಂಥದಕ್ಕೂ ವಿಸ್ಮಯ ಶೀಲ
ನನ್ನ ವಿಸ್ಮಯದ ಮೂಲ! ಈತ ನಡುಮಧ್ಯವಿದ್ದೂ ಇಲ್ಲವಲ್ಲ

ಇದೇ ಶೂನ್ಯ, ನಾನು ವಿವರಿಸುವುದಿಲ್ಲ
ಏನು ವಿವರಿಸುತ್ತಿದ್ದಿ?

ಅಗೊ ವಿವರಗಳಾತ್ಮವೇ ಬಂದ
*****