ಜವಾಬ್ದಾರಿ ವಿ/ಎಸ್ ಬೇಜವಾಬ್ದಾರಿ

ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ ಹೋಗಲಿ ತಾನೊಬ್ಬ ಉದ್ಧಾರವಾದರೆ ಸಾಕು ಎನ್ನುವವರು, ದುಡ್ಡು ಬಾಚುವುದು ಸಾಧ್ಯವಾದಲ್ಲಿ ರಿಮೇಕೇನು-ಸ್ವಮೇಕೇನು ಎಲ್ಲಕ್ಕೂ ‘ಸೈ’ ಎನ್ನುವವರು, ಅಶ್ಲೀಲ-ಅಸಂಬದ್ಧ-ಅಸಡ್ಡಾಳ ಚಿತ್ರಗಳನ್ನು ಎಗ್ಗಿಲ್ಲದೆ ಚಿತ್ರಿಸುವವರು, ರೀಮೇಕು ರೈಟ್ಸ್ ಕೊಳ್ಳಲು ಹಿಮಾಲಯದೆತ್ತರ ಹಣ ಸುರಿಯುವವರು, ಚಿತ್ರದಲ್ಲಿ ಏನೇನೂ ಸ್ಟಫ್ ಇಲ್ಲದಿದ್ದರೂ ಪ್ರಚಾರದ ಗಿಮಿಕ್ಸ್‌ನಿಂದ ಚಿತ್ರ ಪ್ರಚಂಡ ಯಶಸ್ಸು ಗಳಿಸೀತು ಎಂಬ ಭ್ರಮಾಧೀನರು ಪ್ರತಿವಾರ ಸಿನಿಮಾ ಪುಟಗಳಲ್ಲಿ ರಂಗುರಂಗಾಗಿ ರಾರಾಜಿಸುತ್ತಿರುತ್ತಾರೆ.

ಸಿನಿಮಾ ಪುಟಗಳನ್ನು ಜನತೆಯ ರಂಜನೆಗಾಗಿ ತುಂಬಲೇ ಬೇಕಾದ ಪ್ರಸಂಗವಿರುವುದರಿಂದ ಗ್ಲಾಮರ್‍ ಜಗತ್ತಿನ ಮಂದಿ ಕೂತದ್ದು, ನಿಂತದ್ದು ಕೆಮ್ಮಿದ್ದು ಎಲ್ಲ ವಾರವಾರ ಸುದ್ದಿಯಾಗುತ್ತಲೇ ಇರುತ್ತದೆ.

ತಮ್ಮ ಹೇಳಿಕೆಗಳು ತುಂಬ ಜವಾಬ್ದಾರಿಯುತವಾಗಿರಬೇಕೆಂದು ಬಯಸುವ ನಿರ್ಮಾಪಕ, ನಿರ್ದೇಶಕ, ನಟ-ನಟಿಯರೂ ಇದ್ದಾರೆ. ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತ ಮಾತೆತ್ತಿದರೆ ಕೋಟಿ ಕೋಟಿ ಎಂದು ಬೊಬ್ಬೆ ಹೊಡಯುತ್ತ ಬಂದಿರುವುದನ್ನೂ ನಾವಿಂದು ಕಾಣಬಹುದು.

ಮೂರು ಕಾಸು ಕೊಟ್ಟರೆ ಮಾವನ ಕಡೆ, ಆರು ಕಾಸು ಕೊಟ್ಟರೆ ಅತ್ತೆ ಕಡೆ ಎನ್ನುವಂಥವರೇ ಈಗ ಎಲ್ಲೆಲ್ಲೂ ತುಂಬಿ ತುಳುಕಿದ್ದಾರೆ.

ಸಂಘಟನೆಗೆ ಬೆಲೆ ಎಂಬುದನ್ನು ತುಂಬ ತಡವಾಗಿಯಾದರೂ ಅರ್ಥ ಮಾಡಿಕೊಂಡ ಮಂದಿ ಈಗ ಒಂದಾಗತೊಡಗಿದ್ದಾರೆ. ಒಂದಾದ ನಂತರ ಬಾಯಿ ಬಂದ್ ಮಾಡಿಕೊಂಡಿದ್ದವರೂ ಅಬ್ಬರಿಸತೊಡಗಿದ್ದಾರೆ. ನಿರ್ಮಾಪಕರು-ನಿರ್ದೇಶಕರಾಗುತ್ತಿದ್ದಾರೆ. ನಿರ್ದೇಶಕರು ಹೀರೋಗಳಾಗುತ್ತಿದ್ದಾರೆ. ಹಳೆಯ ಹೀರೋಗಳು ತಮ್ಮ ಮಕ್ಕಳ ಪಾಲಿಗೆ ಗಾಡ್‌ಫಾದರ್‌ಗಳಾಗುತ್ತಿದ್ದಾರೆ. ಮದರ್‌ಗಳು ಗಾಡ್‌ಮದರ್‌ಗಳಾಗುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹೊಸ ಮುಖಗಳು ಬೇಕು. ಹಾಗೆ ಪರಿಚಯಿಸುವಾಗ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಬೇಕು ಅವರಿಗೆ ಗಾಡ್‌ಫಾದರ್‌ಗಳಿಲ್ಲದಿದ್ದರೂ. ಈಗ ಎಲ್ಲ ರವಿಚಂದ್ರನ್, ಎಷ್ಣು, ಉಪೇಂದ್ರ ಆಗಬಯಸುವವರೇ ಹೆಚ್ಚಾಗಿದ್ದಾರೆ.

ಜನಸಮೂಹದ ಮೇಲೆ ತುಂಬ ಪರಿಣಾಮ ಬೀರುವ ಸಿನಿ ಮಾಧ್ಯಮಕ್ಕೊಂದು ಜವಾಬ್ದಾರಿ ಇದೆ ಎಂಬುದನ್ನೇ ಬಹುಮಂದಿ ಅರಿತಂತಿಲ್ಲ.

ಚಿತ್ರರಂಗ ಇಂದು ತಾಂತ್ರಿಕವಾಗಿ ತುಂಬಾ ಎತ್ತರಕ್ಕೆ ಬೆಳೆದಿದೆ. ಗ್ರಾಫಿಕ್ಸ್‌ನ ಚಮತ್ಕಾರದಿಂದ ಜನರನ್ನು ಎಚ್ಚರಿಸುವ ಅವರ ಸಾಮಾಜಿಕ ಪ್ರಜ್ಞೆ ಹೆಚ್ಚಿಸುವ ಪ್ರಯತ್ನವೇನೂ ಮಾಡದೆ ಮೂಢನಂಬಿಕೆಗಳನ್ನು ಬಿತ್ತುವುದಕ್ಕೆ ಈ ತಂತ್ರ ಬಳಸುವುದನ್ನು ನಾವಿಂದು ಕಾಣುತ್ತಿದ್ದೇವೆ.

ಜವಾಬ್ದಾರಿಯುತ ಮಂದಿ ಹೀಗೆ ಮಾಡುವುದೆಷ್ಟು ಸರಿ ಎಂದು ಅವರೇ ಚಿಂತಿಸಬೇಕು. ಹೀಗಾಗಿ ಸುಮಾರು ೫೦-೬೦ ವರ್ಷ ಹಿಂದೆ ಬರಬಹುದಾಗಿದ್ದ ಚಿತ್ರಗಳು ಇಂದು ಬರಲಾರಂಭಿಸಿವೆ. ಜೀತಪದ್ಧತಿಯ ವಿಜೃಂಭಣೆಗೆ, ಹಾಸ್ಯದ ಹೆಸರಿನಲ್ಲಿ ಅಶ್ಲೀಲತೆ, ಅಂಡರ್‍ ವರ್ಲ್ಡ್‌ನ ಕಥಾನಕಗಳು ಯುವ ಜನಾಂಗಕ್ಕೆ ಮಾದರಿ ಆದೀತೆ? ಹೆಣ್ಣು ಗಂಡಿನ ಅಡಿಯಾಳು. ಅವನಿಗೆ ಎದುರುಮಾತು ಹೇಳುವಂತಿಲ್ಲ. ಎಂಥ ಕೆಟ್ಟ ಗಂಡನೇ ಆಗಿರಲಿ ಅವನ ಪಾದ ತೊಳೆದು ನೀರು ಕುಡಿಯಬೇಕು. ಅಡಿಗೆ ಮನೆಯಲ್ಲಿ ಅಡಿಗೆಯಾಳಾಗಿ ಜೀವ ಸವೆಸಬೇಕು ಎಂಬಂಥ ಚಿತ್ರ ಬಂದಾಗಲೂ ತಮ್ಮ ಜವಾಬ್ದಾರಿ ತೋರದೆ ತೆಪ್ಪಗಿರುವ ‘ವಿಮೋಚನಾ’ದಂಥ ಸಂಸ್ಥೆಗಳನ್ನು ನಾವಿಂದು ನೋಡುತ್ತಿದ್ದೇವೆ.

ಇಂಥ ವೇಳೆ ತುಂಬ ಜವಾಬ್ದಾರಿ ಹೊರಬಹುದಿದ್ದಂಥ ಸಿನಿ ಪತ್ರಕರ್ತರ ಪರಿಷತ್ತು ಮತ್ತು ವೇದಿಕೆ ಸಹ ತೆಪ್ಪಗಿದ್ದು ನಿರ್ಮಾಪಕ, ನಿರ್ದೇಶಕ, ನಟ-ನಟಿಯರ ಗ್ರಾಂಡ್ ಪಾರ್ಟಿಗಳಲ್ಲಿ ಅವರು ಹೇಳಿದ್ದನ್ನು ಬರೆಯಲು ಡಿಕ್ಟೇಶನ್ ತೆಗೆದುಕೊಳ್ಳುವಂಥ ಪರಿಸ್ಥಿತಿ ನಾವು ಕಾಣುತ್ತಿದ್ದೇವೆ. ಇದರಿಂದಾಗಿ ವಾರ್ತಾ ಸಚಿವರಿಗೆ ಹಲವು ಮಾಜಿಗಳು ಮಾತ್ರ ಧೂಳಿನಂಥೆ ಕಣ್ಣಿಗೆ ಬೀಳುತ್ತಿರುತ್ತಾರೆ. ಹಾಗಾಗಿ ಅವರೇ ಎಲ್ಲ ಕಮಿಟಿಗಳಲ್ಲಿರುವಂತಾಗಿದೆ. ಇಂಥ ಪರಿಸ್ಥಿತಿ ತಪ್ಪಿಸಲು ಈಗ ನಾವೆಲ್ಲರೂ ಒಂದಾಗಬೇಕು ಎಂಬ ಉತ್ಸಾಹ ಸಿನಿ ಪತ್ರಕರ್ತರಲ್ಲಿ ಬಂದಿರುವುದು ಶುಭ ಸೂಚನೆ. ಎಲ್ಲ ಅವರವರ ಜವಬ್ದಾರಿ ಅಂದಾಗ ಸಭೆ-ಸಮಾರಂಭ, ಚರ್ಚೆ, ಸಂವಾದ ಅರ್ಥಪೂರ್ಣವಾದೀತು.

ಸಿನಿ ಮಾಧ್ಯಮಕ್ಕೊಂದು ಜವಾಬ್ದಾರಿ ಇದೆ. ರಂಜನೆಯ ಜೊತೆ ಜೊತೆಗೆ ಗಂಭೀರ ವಿಚಾರ ಪ್ರತಿಪಾದಿಸುವ ಅರ್ಥಪೂರ್ಣ ಚಿತ್ರಗಳು ಬರುವಂತಾಗಬೇಕು ಎಂಬ ಮಾತನ್ನು ರಾಜ್ಯಪಾಲೆ ರಮಾದೇವಿಯವರು ‘ಧರ್ಮಪುರುಷ’ ಮೂಹೂರ್ತದಂದು ಹೇಳಿ ಆ ಕಥೆಯ ಅಂತ್ಯದಲ್ಲಿ ನಾಯಕನ ಸೋಲು ಮತ್ತು ಸಾವು ವಿಹಿತವಲ್ಲ. ಆದರ್ಶ ವ್ಯಕ್ತಿತ್ವ ರೂಪಿಸಿ ಕಡೆಗೆ ಆತ ಸಾಯುವಂತೆ ಮಾಡುವುದು ಏನನ್ನು ಹೇಳುತ್ತದೆ ಎಂಬುದನ್ನು ಚಿಂತಿಸಬೇಕು, ದಯಮಾಡಿ ಕೊನೆ ಬದಲು ಮಾಡಿ ಎಂದಿದ್ದಾರೆ.

ಮುಹೂರ್ತದಂದು ಈಗೀಗ ಕತೆಯನ್ನೇ ಹೇಳುವುದಿಲ್ಲ. ಸಸ್ಪೆನ್ಸ್ ಎಂದು ತೇಲಿಸಿ ಬಿಡುತ್ತಾರೆ. ಆದರೆ, ಒಬ್ಬ ಜವಾಬ್ದಾರಿ ನಿರ್ಮಾಪಕ-ನಿರ್ದೇಶಕರ ಹೊಣೆಯೇನು ಎಂಬುದನ್ನು ಹಿಂದೆ ಪತ್ರಕರ್ತೆಯೂ ಆಗಿದ್ದ ರಮಾದೇವಿ ಬಿಚ್ಚುಮಾತಿನಿಂದ ತಿಳಿಸಿದ್ದಾರೆ.

ನಿಜಕ್ಕೂ ತುಂಬ ಗಂಭೀರವಾಗಿ ಚಿಂತಿಸಬೇಕಾದ ವಿಷಯವಿದು.
*****
(೭-೯-೨೦೦೧)