ಮೃತ್ಯುಬಂಧ


ಅಲ್ಲಿಯೇ ಕುಳಿತಿತ್ತು ಹಾವು!
ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು
ಕೈ ಮಾಡಿ ಕರೆವಂತೆ ಮೋಹಬಂಧ !
ಜೋಡು ನಾಲಗೆ-ನಾ ಮುಂಚು ತಾ ಮುಂಚು
ಮುಗಿಲ ಮೋಹರದಲ್ಲಿ
ಸಳ ಸಳ ಮಿಂಚು ಹರಿದಾಡಿ, ನಡೆದಂತೆ
ಸಿಡಿಲಿನೊಳಸಂಚು !
ನಾವು ನೀವೂ ಅಲ್ಲಿಯೇ
ಅಲೆದುದೆಷ್ಟೋ ಬಾರಿ,
ಒಮ್ಮೆಯಾದರೂ
ನಮ್ಮನದು ಕಂಡಿರಬೇಕು, ಖಂಡಿತ ;
ಮನದೊಳೇನೋ ಗುಣಾಕಾರ ಹಾಕಿರಬೇಕು
ಈಗಲಾದರೂ ಕಂಡಿರ, ಅದರದೆಂಧಾ ಚಮಕು ಚುರುಕು ?


ನೆರಳ ಜೊತೆ ನೆರಳಾಗಿ ಅರಿವಾಗಗೊಡದಂತೆ ಹುಟ್ಟಿನಿಂದಲೆ ಬಂತೊ ಬೆನ್ನ ಹಿಂದೆ !
ಹೆಜ್ಜೆಯಲಿ ಹೆಜ್ಜೆಯನಿಟ್ಟು
ಕಾಯ್ದು ಕೊಂಡೇ ಇತ್ತು
ಎಂಥಾ ಒಜ್ಜೆ ಹೊತ್ತರೂ ನುಜ್ಜುಗುಜ್ಜಾಗದೊಲು ಮಾಂಸಮಜ್ಜೆ!
ಜಪ್ಪಿಸಿ ಕುಳಿತು ನೋಡುವದು-ತಪ್ಪಿತೋ
ಕುನುಸಿಟ್ಟು ಕೊನೆಗಾಣಿಸಿಯೆ ಬಿಡುವ ಹಿಡಿತ ಹೊಡೆತ !
ಇದೆ ಈಗ ಸುರುಳಿಯ ಬಿಚ್ಚಿ ಮಿಂಚಿ ಮರೆಯಾಯ್ತು!
ನುಣ್ಣಗಿನ ಡೊಂಕುಗೆರೆ ಬದಿಗೆ ಹಕ್ಕಿಯ ಹೆಜ್ಜೆ
ನಕ್ಷತ್ರ ಮೂಡಿಸಿದೆ ! ಮುಂದೆ ಮಾತೇ ಇಲ್ಲ! ಅದರ ಗುರುತಿಲ್ಲ
ಯಾರು ಊದಿದರೇನು ಮನಸೆಳೆವ ಪುಂಗಿ
ಅದಕಿತ್ತು ಬೇರೊಂದು ಭಾವಭಂಗಿ !


ಉಸುಕಿನಲಿ ನಡೆದಂತೆ ಸಾಗಿತ್ತು ನಾಡೀಪರೀಕ್ಷೆ
ಔಷಧಿಯ ಚಮಚ ಎಣಿ ಎಣಿಸಿತ್ತು ಒಂದೊಂದೆ ಕೊನೆಯಗಳಿಗೆ
ಭೂಲೋಕವನು ಮೂರು ಸುತ್ತು ಸುತ್ತಿದರು
ಸಪ್ತಸಾಗರ ತಳವ ಶೋಧಿಸಿದರು
ಇಲ್ಲ…….. ……. ಎಲ್ಲೂ …………… ಇಲ್ಲ
ಬರಿಯ ಪಂಜರ ಕೆಳಗೆ ಜೋತಾಡುತಿತ್ತು
“ಸಣ್ಣ ಗಿಣಿಯು ಕತ್ತಲಲ್ಲಿ ಎಲ್ಲಿ ಹಾರಿತು?”
ಆಕಾಶವಾಣಿಯು ನುಡಿದು ಗುಡುಗು ಮಿಂಚನು ತಳೆದು
ದೇವದೇವಿಯರೊಲಿದು ಬರುವ ಮೊದಲೇ
ಮಣ್ಣ ಲೋಕದ ಸಣ್ಣ ಬೊಂಬೆ ಕೇಳಿತು ಜಗವ
“ಹೊತ್ತಾಯ್ತು ನಾನಿನ್ನು ಹೋಗಿ ಬರಲೆ?”
*****