ನನ್ನ ಹಿಮಾಲಯ – ೧

ಕೊನೆಗೆ

ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ ಬರವಣಿಗೆಯ ರೀತಿಯಲ್ಲಿ ಎಷ್ಟು ನಿಜ ಹೇಳಲುಸಾಧ್ಯವೋ ಅಷ್ಟು ಹೇಳಿದ್ದೇನೆ.

ಇಲ್ಲಿ ಕಾಲಾನುಕ್ರಮ ಇಲ್ಲ. ಇದನ್ನು ಬರೆಯುವಾಗ ಮಾತುಗಳು ವಾಕ್ಯದ ರೂಪ ಪಡೆದ ಕ್ರಮ ಮಾತ್ರ ಇದೆ. ಬರೆದ ಅನುಕ್ರಮದಲ್ಲೆ ಈ ಬರೆವಣಿಗೆ ನಿಮ್ಮ ಎದುರಿನಲ್ಲಿದೆ. ನನ್ನ ಬಲ್ಲವರೊಡನೆ ಆಗಾಗ ಹೇಳಿಕೊಂಡರೆ ಹೇಗಿರುತ್ತದೋ ಹಾಗೆ ಓದುವವರು ತಮಗೆ ಬೇಕಾದಂತೆ ಬೇಕಾದ ಕ್ರಮದಲ್ಲಿ ಓದಿಕೊಳ್ಳಬಹುದು. ನಿಜವಾಗಿ ಇದಕ್ಕೆ ಕೊನೆ ಮೊದಲು ಇಲ್ಲ.

ತೀರ ಎಂದರೆ ತೀರ ಅಲ್ಪ ಪ್ರಮಾಣದಲ್ಲಿ ಒಂದೋ ಎರಡೋ ಪದ ಅಥವ ವಾಕ್ಯಗಳನ್ನು ತಿದ್ದಿರುವುದು ಮಾತ್ರ ಉಂಟು. ಮಾತು ಆಡುವಾಗ ತಿದ್ದುವುದು ಎಲ್ಲಿಂದ ಬಂತು? ಬರೆಯುವಲ್ಲಿ ನನಗೆ ದೊರೆಯುವ ತಿದ್ದುವ ಅವಕಾಶವನ್ನು ನಿರಾಕರಿಸಿದ್ದೇನೆ.

ಇದು ಚೆನ್ನಾಗಿದೆಯೋ? ಇಲ್ಲವೋ? ಇಷ್ಟ ಆದೀತೋ ಬೇರೆಯವರಿಗೆ? ಹೀಗೆಲ್ಲ ಆಗಾಗ ಯೋಚನೆ ಬರುತ್ತಿತ್ತು. ಈಗ ಇಲ್ಲ. ಇದು ಇರುವುದು ಹೀಗೆ. ನಾನು ಬರೆಯಬಹುದಾದದ್ದು ಹೀಗೆ. ನಿಮಗೆ ಏನೂ ಅನ್ನಿಸಬಹುದು. ಏನೂ ಹೇಳಲು ಆಗಿಲ್ಲ. ಹೇಳಬೇಕಾದದ್ದು ಹಾಗೇ ಉಳಿದೇ ಬಿಡುತ್ತದೆ ಅಂತ ನನಗನ್ನಿಸಿದೆ.

ಬೆಂಗಳೂರು
ಆಗಸ್ಟ್. ೧೯೯೬
ಓ. ಎಲ್. ನಾಗಭೂಷಣ ಸ್ವಾಮಿ

ಬರವಣಿಗೆಯ ಮೊದಲನೆಯ ದಿನ

ನನ್ನ ಹಿಮಾಲಯದ ಅನುಭವಗಳನ್ನು ಕುರಿತು ಬರೆಯಬೇಕೆಂಬ ಆಸೆಯೂ ಇದೆ. ಅನುಭವಗಳನ್ನು ಬರೆಯಲಾಗದೆಂಬ ಅನುಮಾನವೂ ಇದೆ. ಅಥವಾ-ಬರೆಯಲಾರೆನೆಂಬ ಅಳುಕು ನನ್ನ ಬಗ್ಗೆಯೇ ಇರುವ ಅಳುಕೋ ತಿಳಿಯುತ್ತಿಲ್ಲ. ಆದರೆ ಮನಸ್ಸಂತೂ ಹಿಮಾಲಯದ ಬಗ್ಗೆ ನಾನು ಬರೆದ ಪುಸ್ತಕ ಹೇಗಿರಬಹುದೆಂದು ಅನೇಕ ಬಾರಿ ಕಲ್ಪಿಸಿಕೊಂಡಿದೆ. ಮನಸ್ಸಿನಲ್ಲೇ ಹಲವಾರು ವಾಕ್ಯಗಳನ್ನೂ ಅಧ್ಯಾಯದ ಹೆಸರುಗಳನ್ನೂ ಬರೆದುಕೊಂಡಿದ್ದೇನೆ. ಓದುವವರಿಗೆ ಒಬ್ಬರೇ ಕೂತು ಓದುವಾಗ ಏನನ್ನಿಸೀತು, ಗುರುತಿನವರು ನನ್ನ ಹತ್ತಿರ ಬಂದು ‘ನಿಮ್ಮ ಪುಸ್ತಕ ಓದಿದೆ’ ಅಂದಾಗ ಅವರಿಗೇನು ಅನ್ನಿಸುತ್ತಿರುತ್ತದೆ, ನನಗೆ ಆಗ ಏನನ್ನಿಸಬಹುದು – ಹೀಗೆಲ್ಲ ಅಂದುಕೊಂಡಿದ್ದೇನೆ. ಆದರೆ ಈಗ ಮಾತ್ರ ಬರೆಯಲು ತೊಡಗಿದ್ದೇನೆ. ಈಗ ಬರೆಯುತ್ತಿರುವ ರೀತಿ ಇದೆಯಲ್ಲ ಅದು ಮಾತ್ರ ನಾನು ಕಲ್ಪಿಸಿಕೊಂಡ ಹಾಗೆ ಇಲ್ಲವೇ ಇಲ್ಲ.

ಮೊದಲು ಅಂದುಕೊಂಡಿದ್ದೆ – ಹಿಮಾಲಯದ ನನ್ನ ಅನುಭವ ತಡೆಯಲಾರದಂತೆ ಒಮ್ಮೆಗೇ ಕೂತು ಬರೆದುಬಿಡುತ್ತೇನೆ ಅಂತ. ಅನುಭವ ಆದದ್ದು ಹೌದು. ಆದರೆ ಬರೆಯದೆಯೇ ಇರಲಾರೆ ಅನ್ನುವಂಥ ಒತ್ತಡ ಇಲ್ಲ. ಹದಿನೈದು ವರ್ಷಗಳ ಹಿಂದೆ ನಾನು ಕಥೆಗಳನ್ನೂ ಕವನಗಳನ್ನೂ ಬರೆದಾಗ, ಬರೆಯುವ ಮುನ್ನ ಮತ್ತು ಬರೆಯುವಾಗ ಮನಸ್ಸೆಲ್ಲ ಬಿಗಿದುಕೊಂಡಿರುತ್ತಿತ್ತು. ಭಾರವಾಗಿರುತ್ತಿತ್ತು. ಮುಳುಗಿರುತ್ತಿತ್ತು. ದೈಹಿಕವಾಗಿಯೂ ನೋವು ಅನ್ನುವಂಥ , ಖುಶಿ ಅನ್ನುವಂಥ ಒತ್ತಡ ಇರುತ್ತಿತ್ತು. ಈಗ ಹಾಗೇನೂ ಇಲ್ಲ. ಅನುಭವದ ತೀವ್ರತೆಯನ್ನು ಅಳೆಯುವುದಾದರೂ ಹೇಗೆ? ಕಾಲ ಕಳೆಯುತ್ತ ಹೋದಂತೆ ಅನುಭವ ಆಗುವ ರೀತಿಯೂ ಬದಲಾಗುತ್ತದೋ ಏನೋ. ಇನ್ನೂ ಒಂದು ಕಾರಣ ಇರಬಹುದು. ಬುದ್ಧಿಯು ಹೆಚ್ಚಾಗಿ ಹದಿನೆಂಟು ವಯಸ್ಸಿನ ಬೆರಗು ಮುಗ್ಧತೆಗಳು ಕಡಿಮೆಯಾಗಿರಬಹುದು. ಹಾಗೂ ಹೇಳಲಾಗುವುದಿಲ್ಲ. ತಿಮ್ಮೇಗೌಡರು ಆಗಾಗ ಹೇಳುತ್ತಿರುತ್ತಾರೆ – ‘ಸ್ವಾಮಿ, ನಿಮಗೂ ನಮ್ಮ ದರ್ಶಿನಿಗೂ ಕೆಲವು ವಿಷಯದಲ್ಲಿ ವ್ಯತ್ಯಾಸವೇ ಇಲ್ಲ. ’ ಅಂತ. ದರ್ಶಿನಿ ಅವರ ಪುಟ್ಟ ಮಗಳು. ಅನುಭವವನ್ನು ಮುಗ್ಧವಾಗಿಯೇ ಪಡೆದುಕೊಂಡಿರಬಹುದು. ಆದರೆ ಬರೆಯುವಾಗ ಬುದ್ಧಿ ಕಡಿವಾಣ ಹಾಕುತ್ತದೆಯೋ? ‘ಸುಮ್ಮನೆ ನಿಮಗೆ ಅನ್ನಿಸಿದ ಹಾಗೆ ಬರೆಯುತ್ತಾ ಹೋಗಿ. ನಿಮಗೆ ಬರೆಯಲು ಆಗುತ್ತದೆ. ಬರೆಯಲೇ ಬೇಕು’ ಅಂತ ಶಿವರುದ್ರಪ್ಪನವರೂ ಹೇಳಿದರು. ಆದರೂ ಈ ವಿಮರ್ಶೆಯ ಬುದ್ಧಿ ಎಲ್ಲೋ ಕೆಲಸ ಮಾಡುತ್ತಲೇ ಇರುತ್ತದೆ. ಬಂಧ, ವಿನ್ಯಾಸ, ಶಿಲ್ಪ, ಆಕೃತಿ, ಲಯ ಅಂತೆಲ್ಲ ಪಾಠ ಮಾಡಿ ಮಾಡಿ, ಬರೆದು ಬರೆದು, ಅವೇ ವಿಚಾರಗಳೇ ತೊಡಕಾಗುತ್ತಿವೆಯೆ? ಬರೆಯುತ್ತ ಬರೆಯುತ್ತ ಅನುಭವ ಅದು ತನ್ನಷ್ಟಕ್ಕೇ ತಿಳಿಯುತ್ತ ಹೋಗುತ್ತದೆ. ರೂಪ ಪಡೆಯುತ್ತ ಹೋಗುತ್ತದೆ ಅನ್ನುವ ಮಾತನ್ನು ಟೆಸ್ಟು ಮಾಡುವ ಆಸೆ ಇದೆಯೊ? ಹಾಗೆ ಇದ್ದರೂ ಗೊತ್ತಾಗಿ ಆಗಬೇಕಾದ್ದು ಏನು? ಯಾರಿಗೆ? ಓದುವವರಿಗೆ? ನನಗೆ? ನಾನು ಏನು ಬರೆಯುತ್ತೇನೋ ನೋಡುತ್ತೇನೆ.

ಅಲ್ಲ. ಹಿಮಾಲಯದ ಬಗ್ಗೆ ಬರೆಯುತ್ತ ಬರೆಯುವ ಕಷ್ಟಗಳನ್ನೇ ಯಾಕೆ ಸುಮ್ಮನೆ ಹೀಗೆ ಹೇಳುತ್ತಿದ್ದೇನೆ? ಅಹಂಕಾರವೋ? ನಾನು ಹಿಮಾಲಯವನ್ನು ನೋಡಿದೆ. ಹಿಮಾಲಯದಲ್ಲಿ ನನ್ನನೇ ನೋಡಿಕೊಂಡೆ. ನನ್ನ ಮಟ್ಟಿಗೆ ನನಗೆ ಕಂಡಷ್ಟೇ ಹಿಮಾಲಯ. ಈಗ ನನ್ನ ಬಿಟ್ಟು ಹಿಮಾಲಯ ಇಲ್ಲ. ರಾಜುನ ತಮಾಷೆ ಮಾಡುತ್ತಿದ್ದೆವು. ರೈಲಿನಲ್ಲಿ. ಟೀ ಅಂಗಡಿಯಲ್ಲಿ, ನಡೆಯುವಾಗ ನಡೆದು ನಡೆದು ಕೂತಾಗ, ಟೆಂಟಲ್ಲಿ ಮಲಗುವ ಮೊದಲು, ಮತ್ತೆ ಎದ್ದ ಕೂಡಲೇ ಯಾವಗಲೂ ಅಂದರೆ ಯಾವಾಗಲೂ ನೋಟ್ಸ್ ಮಾಡಿಕೊಂಡದ್ದೇ ಮಾಡಿಕೊಂಡದ್ದು. ಆಗ ಒಂದು ಸಾರಿ ರಾಜುಗೆ ಹೇಳಿದ್ದೆ – ‘ನನ್ನೊಳಗೆ ಎಷ್ಟು ಹಿಮಾಲಯ ಉಳಿದಿರುತ್ತೊ ಅಷ್ಟನ್ನೇ ಬರೆಯುತ್ತೇನೆ. ಕನ್ನಡದಲ್ಲಿ ಇದುವರೆಗೆ ಯಾರೂ ಬರೆದಿರದ ಥರಾ’ ಅಂತ. ಅಗೋ, ನನ್ನ ಕಳ್ಳ ಮನಸ್ಸು. ಬರೆಯಬೇಕು ಅನ್ನುವ ಆಸೆ ಮೊದಲಿನಿಂದಲೂ ಇತ್ತು. ಬರೆಯಲು ಆಗುವುದಿಲ್ಲ ಅನ್ನುವುದು ಹೆದರಿಕೆ ಇರಬೇಕು – ಅಕಸ್ಮಾತ್ ಚೆನ್ನಾಗಿ ಬರೆಯಲು ಆಗದಿದ್ದರೆ ಅಂತ. ‘ಚೆನ್ನಾಗಿ’ ಅಂದರೆ ಹೇಗೆ? ಹಿಮಾಲಯದ ಬಗ್ಗೆ ಬರೆಯುವುದಷ್ಟೇ ಅಲ್ಲ ನನ್ನ ಬಗ್ಗೆಯೂ ಬರೆದುಕೊಳ್ಳುತ್ತೇನೆ. ನನಗೆ ಆದಷ್ಟು. ಆಗಷ್ಟು ಈಗಷ್ಟು. ಹೇಗೆ ಹೇಗೋ ಹಾಗೆ.

“ರೈಲಿನಲ್ಲಿ ಕನ್ನಡ ರೌಡಿಂಗಳ್”, “ಐ ವಿಲ್ ಈಟ್ ಯು ಅಲೈವ್”, “ಯು. ಡಿ. ಎಲ್” ಇವು ಕೆಲವು ನಾನು ಬರೆಯಬೇಕೆಂದುಕೊಂಡಿದ್ದ ಕೆಲವು ಅಧ್ಯಾಯದ ಹೆಸರುಗಳು. ಈಗ ಹಾಗೆ ಬರೆಯಲಾರೆ. ಇನ್ನೊಂದು ಸಾರಿ ಅನ್ನಿಸಿತ್ತು – ನಿರೀಕ್ಷೆ, ಆತಂಕ, ಸಿದ್ಧತೆ, ರೈಲಿನಲ್ಲಿ, ದಾರಿಯಲ್ಲಿ, ಬೇಸ್ ಕ್ಯಾಂಪು, ಟ್ರೆಕಿಂಗಿನ ಮೊದಲನೆಯ ದಿನ ಇತ್ಯಾದಿಯಾಗಿ ಹೀಗೆ ಕ್ರಮವಾಗಿ ಬರೆಯೋಣ ಅಂತ. ಯಾಂತ್ರಿಕವಾಗಿರುತ್ತೆ. ಥೂ. ಬೇಡ. ಹಾಗನ್ನಿಸಿತು. ರಾಮುಗೆ, ಮಾಲವಿಕಾಗೆ, ಅವರಿಗೆ ಇವರಿಗೆ ಕಾಗದ ಬರೆದಹಾಗೆ ಬರೆಯೋಣ ಅನ್ನಿಸಿತು. ಅವರಿವರ ನೆನಪು ಅಲ್ಲಿ ತುಂಬ ಬಂದದ್ದು ನಿಜ. ಆದರೆ ಕಣ್ಣೆದುರಿಗೆ ಇಲ್ಲದವರಿಗೆ ಕಾಗದದ ರೂಪದಲ್ಲಿ ಅನುಭವಗಳನ್ನು ಬರೆಯುವ ಉಪಾಯ ಸುಳ್ಳು ಅನ್ನಿಸಿತು. ನನಗೆ ಆದದ್ದನ್ನು ನನಗೇ ಅಲ್ಲದೆ ಇನ್ನು ಯಾರಿಗೆ ಹೇಳಿಕೊಳ್ಳಲಿ? ನಾನೇ ನನ್ನ ಅತ್ಯುತ್ತಮ ಶ್ರೋತೃ.

ಈಗ, ಹಿಮಾಲಯದಲ್ಲಿ ಅಲೆದು ವಾಪಸ್ಸು ಬಂದು ಎರಡೂವರೆ ತಿಂಗಳಾದಮೇಲೆ, ಕುತೂಹಲದಲ್ಲಿ, ಆಸೆಯಲ್ಲಿ, ಯಾವುದೂ ಉಪಾಯ ಮಾಡದೆ ಬರೆಯಲು ಕೂತಿದ್ದೇನೆ. ಯಾವುದೂ ಉಪಾಯ ಮಾಡಬಾರದು ಅನ್ನುವುದೇ ಉಪಾಯವಾಗಿಬಿಡುತ್ತದೋ ಹೇಗೋ ನೋಡೋಣ.

ಬರವಣಿಗೆಯ ಎರಡನೆಯ ದಿನ

ನಿನ್ನೆ ಬರೆದದ್ದನ್ನು ಇವತ್ತು ಸ್ವಲ್ಪವೆ ತಿದ್ದಿ ಬರೆದೆ. ರಾತ್ರಿ ನಿದೆ ಬರುವ ಮೊದಲು ಚಂದ್ರಖಾನಿಯ ಬಗ್ಗೆ ಯೋಚನೆಗಳು ಬರುತ್ತಿದ್ದವು. ಚಂದ್ರಖಾನಿ ಹೀಗೆ ನಿರಾಸೆ ಮಾಡುತ್ತದೆ ಅಂದುಕೊಂಡಿರಲಿಲ್ಲ. ಹಿಮಾಲಯ ಟ್ರೆಕಿಂಗ್ ಹೀಗೆ ನಿರರ್ಥಕ ಅನ್ನುವ ಭಾವನೆ ಹುಟ್ಟಿಸುತ್ತದೆ ಅಂದುಕೊಂಡಿರಲಿಲ್ಲ.

ಚಂದ್ರಖಾನಿ ನಮ್ಮೆಲ್ಲರ ಆಸೆಯಾಗಿತ್ತು. ನಮ್ಮೆಲ್ಲರ ಪ್ರಯಾಣದ ಗುರಿ ಆಗಿತ್ತು. ಅದರ ಬಗ್ಗೆ ಏನೆಲ್ಲ ಕಥೆ ಕೇಳಿದ್ದೆವು. ಮತ್ತೆ ಕಥೆ ಹೇಳಿದವರು ಒಬ್ಬಿಬ್ಬರಲ್ಲ. ಸಾಗರದ ವಿಜಯವಾಮನ, ಚಿಕ್ಕಮಗಳೂರಿನ ಶ್ರೀನಿವಾಸ, ರುಕ್ಮಣಿಹಾಲ್‌ನ ರಮೇಶ, ಕೆನರಾ ಬ್ಯಾಂಕಿನ ಹರೀಶ, ಯೂತ್ ಹಾಸ್ಟೆಲ್‌ನ ಬೇಗ್, ಬೆಂಗಳೂರಿನ ಅಜ್ಜಂಪುರ್-ಎಷ್ಟೊಂದು ಜನ ಚಂದ್ರಖಾನಿಯ ಬಗ್ಗೆ ಎಷ್ಟೊಂದು ಥರ ವರ್ಣನೆ ಮಾಡಿದ್ದರು. ಅವರೆಲ್ಲರ ವರ್ಣನೆ ಕೇಳಿ ಮನಸ್ಸು ಏನೆಲ್ಲ ಚಿತ್ರ ಬರೆದುಕೊಂಡಿತ್ತು. ವಾಮನನಂತೂ ಬೇಸರವಿಲ್ಲದೆ, ಪ್ರತಿಬಾರಿಯೂ ಅದೇ ಮೊದಲನೆಯ ಬಾರಿ ಎಂಬಂತೆ, ಮೂರು ವರ್ಷದ ನಂತರವೂ ನಿನ್ನೆಯಷ್ಟೆ ಅಲ್ಲಿಂದ ಬಂದವನಂತೆ, ಚಂದ್ರಖಾನಿಯನ್ನು ಬಹಳ ಚೆನ್ನಾಗಿ ವರ್ಣನೆ ಮಾಡುತ್ತಾನೆ. ಕಣ್ಣೆದುರು ಸಾಕ್ಷಾತ್ತಾಗುವ ಹಾಗೆ: ಚಂದ್ರಖಾನಿಯಲ್ಲಿ ನೀವು ಕಳೆಯುವ ಕಾಲ ಇದೆಯಲ್ಲ ಅದು ನಿಮ್ಮ ಬದುಕಿನ ಅಪೂರ್ವ ಕ್ಷಣಗಳು. ನಿಮ್ಮನ್ನು ಮರೆತು, ಕಾಲವನ್ನು ಮರೆತು, ಮರೆತಿದ್ದೇವೆ ಅನ್ನುವುದನ್ನು ಮರೆತು, ಜೀವನವೆಂದರೆ ‘ಇದೇ’ ಎಂದು ಸತ್ಯ ಸಾಕ್ಷಾತ್ಕಾರವಾಗುವ ಜಾಗ ಅದು. ಅದಕ್ಕೆ ಮುಖ್ಯಕಾರಣ ಅಲ್ಲಿರುವ ಹಿಮ. ನೆಲವೆಲ್ಲ ಹಿಮ. ಆಕಾಶವೆಲ್ಲ ನೀಲಿ. ನಡೆಯಲಾರದೆ ನಡೆಯಬೇಕು. ನಿಲ್ಲಲಾಗದು ಕಾಲು ಕೊರೆಯುತ್ತದೆ. ನಡೆಯಲಾಗದು ಕಾಲು ಹೂತು ಹೋಗುತ್ತದೆ. ನಡೆಯಬೇಕು ಆಯಾಸವಾಗುತ್ತದೆ. ನಡೆದು ನಡೆದು ಮೈ ಬಿಸಿಯಾಗಿರುತ್ತದೆ. ಚಳಿಗೆ ಮೈ ನಡುಗುತ್ತಿರುತ್ತದೆ. ಅಲ್ಲಿ ದಾಟುವಾಗ ಒಂದೈವತ್ತು ಅಡಿ ದೂರ ಹಿಮದ ಮೇಲೆ ಜಾರಬೇಕು. ಬೇರೆ ದಾರಿಯೇ ಇಲ್ಲ. ಬೆನ್ನ ಮೇಲಿನ ಚೀಲದ ಭಾರ ಬ್ಯಾಲೆನ್ಸು ಮಾಡುತ್ತ, ಕೆಳಗೆ ಕ್ಷಣ ಕ್ಷಣವೂ ನಮ್ಮನ್ನು ನುಂಗುವಂತೆ ಮೇಲೆದ್ದು ಬರುವ ಹನ್ನೆರಡು ಸಾವಿರ ಅಡಿ ಪ್ರಪಾತಕ್ಕೆ ಅಯ್ಯೋ ಬಿದ್ದೇ ಬಿಡುತ್ತೇವಲ್ಲ ಅಂತ ಅಪಾರವಾಗಿ ಹೆದರುತ್ತ, ರುಂರುಂಯ್ಯನೆ ಜಾರಿಹೋಗುತ್ತಿರುವ ನಮ್ಮನ್ನು ತಡೆದು ನಿಲ್ಲಿಸಲು, ಪಕ್ಕಕ್ಕೆ ಎಳೆದು ಹಾಕಲು, ಪ್ರಪಾತದ ನಾಲ್ಕೇ ಅಡಿ ಈಚೆ ನಿಂತಿರುವ ಹದಿನೈದು ವರ್ಷದ ಹುಡುಗನನ್ನೇ ಪೂರ್ತಿಯಾಗಿ ನಂಬಿ, ನಾಲ್ಕೇ ಕ್ಷಣಗಳಲ್ಲಿ ಸಾವು ಬದುಕು ಸೌಂದರ್ಯ ಭಯ ಎಲ್ಲವನ್ನೂ ಯಾವುದು ಯಾವುದು ಅಂತ ಗೊತ್ತಾಗದೆ ಒಟ್ಟಾಗಿ ಅನುಭವಿಸುತ್ತ ಅನುಭವ ಆಗುತ್ತಿದೆ ಆಗುತ್ತಿದೆ ಅನ್ನುವಷ್ಟರಲ್ಲೆ ಮುಗಿದು ಹೋಗುವ ಆ ಕ್ಷಣಗಳ ಹುಮ್ಮಸ್ಸಿನಲ್ಲಿ ಮೈ ಮರೆಯಬೇಕು – ಅಂತೆಲ್ಲ ವಾಮನ ಅಂಗ ಭಂಗಿಗಳೊಡನೆ ವಿವರಿಸಿದ್ದ. ವಾಮನ ತುಂಬ ಚೆನ್ನಾಗಿ ಕತೆ ಹೇಳುತ್ತಾನೆ.

ಸಹಜವಾಗಿಯೇ, ಚಂದ್ರಖಾನಿ ನಮ್ಮೆಲರ ಅನುಭವದ ಕ್ಲೈಮ್ಯಾಕ್ಸ್ ಆಗುತ್ತಿದ್ದೆ ಅಂತ ಕಾಯುತ್ತಿದ್ದೆವು. ಇಲ್ಲ. ನಮಗೆ ನಿರಾಸೆ ಆಗುತ್ತದೆ ಅಂತ ಸ್ವಲ್ಪ ಸೂಚನೆ ಸಿಕ್ಕಿತ್ತು. ಆದರೂ ಆ ಸೂಚನೆಯನ್ನು ಪೂರ್ತಿ ನಂಬಿರಲಿಲ್ಲ.

ಆಗಿನ್ನೂ ದೆಹಲಿಯಲ್ಲಿದ್ದೆವು. ಯೂತ್ ಹಾಸ್ಟೆಲ್‌ನ ಮುಂದೆ, ಬೆಳಗಿನ ಆರೂವರೆಯ ಬಿರು ಬಿರು ಧಗ ಧಗ ಧಗೆಯಲ್ಲಿ ಗರಿಕೆ ಹುಲ್ಲೂ ಕಾದ ದಬ್ಬಳದಂತೆ ಸುಡುತ್ತ ಚುಚ್ಚುತ್ತಿರುವಾಗ, ನಮ್ಮನ್ನು ಊರು ಸುತ್ತಿಸಲು ಇನ್ನೇನು ಈಗ ಬಸ್ಸು ಬರುತ್ತದೆ ಅಂತ ಕಾಯುತ್ತಿದ್ದಾಗ ಆ ಸೂಚನೆ ಸಿಕ್ಕಿತು. ಕೆಲವು ಕನ್ನಡದ ಜನ ನಮಗಿಂತ ಮೊದಲೇ ಟ್ರೆಕಿಂಗ್ ಮುಗಿಸಿ ವಾಪಸ್ಸು ಹೋಗುತ್ತಿದ್ದವರು ಸಿಕ್ಕಿ ಹೇಳಿದರು. ‘ಚಂದ್ರಖಾನಿಯಲ್ಲಿ ಐಸು ಇಲ್ಲ.’ ನಾನು ಅದನ್ನು ಮೂರ್ತಿಗೆ ಹೇಳಿದೆ. ಜೋರಾಗಿ ನಕ್ಕುಬಿಟ್ಟ. ನನ್ನ ತಮಾಷೆ ಮಾಡಿದ- ‘ಹಿಮಾಲಯದಲ್ಲಿ ಐಸು ಇರಲ್ಲ ಅಂದರೇನು ಅರ್ಥ. ಹೋಗೋಲೋ. ಡೋಂಟ್ ಬಿ ಸಿಲ್ಲಿ. ಒಂಚೂರು ಐಸು ಇರುತ್ತೆ. ಅದು ಕರಗಿ ಮುಗಿದು ಹೋಗಿಬಿಡುತ್ತದೆ ಅಂದುಕೊಂಡೆಯಾ? ಅದು ಹಿಮಾಲಯಾ ಕಣಯ್ಯಾ. ಯಾವಾಗಲೂ ಐಸು ಫಾರಂ ಆಗುತ್ತಲೇ ಇರುತ್ತೆ’-ಅಂದ. ಸ್ವಲ್ಪ ಹೊತ್ತಾದ ಮೇಲೆ ಇನ್ನೂ ಕೆಲವರು ಅದೇ ಮಾತು ಹೇಳಿದರು. ಚಂದ್ರಖಾನಿಯಲ್ಲಿ ಐಸು ಇಲ್ಲ. ಮೂರ್ತಿ ಸ್ವಲ್ಪ ಅಳುಕಿದನೋ? ನಮಗೆಲ್ಲಿ ತಾತ್ವಿಕನ ಹಾಗೆ ಸಮಾಧಾನ ಹೇಳಿದ-‘ಲೆಟ್ ಅಸ್ ಗೋ ಅಂಡ್ ಸೀ ವಾಟ್ ಎವರ್ ದಿ ಗ್ರೇಟ್ ನೇಚರ್ ಹ್ಯಾಸ್ ಇನ್ ಸ್ಟೋರ್ ಫಾರ್ ಅಸ್. ಹಾಗೇ ಇರುತ್ತೆ ಹೀಗೇ ಇರುತ್ತೆ ಅಂತೆಲ್ಲ ಯಾಕೆ ಕಲ್ಪನೆ ಮಾಡಿಕೊಳ್ಳಬೇಕು. ಇರುವುದು ಇದ್ದ ಹಾಗೇ ಇರುತ್ತೆ’-ಅಂದ. ಮೂರ್ತಿಗೆ ಇನ್ನೂ ಒಂದು ನಂಬಿಕೆ. ವಾಮನ ಕೂಡ ಜೂನ್ ತಿಂಗಳಲ್ಲಿ ಬಂದಿದ್ದ. ಆಗ ತುಂಬ ಐಸು ಇತ್ತಂತೆ. ಅವನು ಯಾಕೆ ಸುಳ್ಳು ಹೇಳುತ್ತಾನೆ? ಮೂರ್ತಿ ಹೆಂಡತಿ ಧಾರಿಣಿಗೆ, ನಾನು ನನ್ನ ಹೆಂಡತಿ ಚಂದ್ರಳಿಗೆ ನಾನು ನೋಡದಿದ್ದರೂ ಚಂದ್ರಖಾನಿಯ ವೈಭವವನ್ನು ವರ್ಣಿಸಿ ವರ್ಣಿಸಿ ನಮ್ಮ ಜೊತೆಗೆ ಹೊರಡಿಸಿದ್ದೆವಲ್ಲ. ವಾಮನ ಹೇಳಿದ ಮಾತುಗಳನ್ನು ನಾವೇ ಕಂಡ ನೋಟಗಳಾಗಿ ಮಾಡಿಕೊಂಡಿದ್ದೆವಲ್ಲ. ಈಗ ಅನುಮಾನಿಸುವುದು ಹೇಗೆ? ‘ಅಯ್ಯಯ್ಯೋ,’ ನಮ್ಮ ಮಾತು ಕೇಳಿಸಿಕೊಳ್ಳುತ್ತಿದ್ದ ಶ್ಯಾಮಾ ಘೋಷಣೆ ಮಾಡಿಬಿಟ್ಟಳು. ‘ಅಯ್ಯಯ್ಯೋ, ನಾನಂತೂ ಐಸು ನೋಡದೆ, ಮುಟ್ಟದೆ, ಬೆಂಗಳೂರಿಗೆ ವಾಪಸ್ಸೇ ಹೋಗಲ್ಲ.’

ಇದೆಲ್ಲ ದೆಹಲಿಯ ೪೬ ಡಿಗ್ರಿ ಬಿಸಿಲಿನ ಬೇಸಗೆ ಮಾತು ಹೋಗಲಿ ಅಂದುಕೊಂಡರೆ ನಮ್ಮ ಬೇಸ್ ಕ್ಯಾಂಪು ರಾಯ್‌ಸನ್ ನಲ್ಲಿ ಕೂಡ ಅದನ್ನೇ ಹೇಳಿದರು- ಚಂದ್ರಖಾನಿಯಲ್ಲಿ ಈ ವರ್ಷ ಐಸು ಇಲ್ಲ. ಮೂರ್ತಿಯದು ಒಂದೇ ನಿರ್ಧಾರ- ಐ ಡೋಂಟ್ ಬಿಲೀವ್ ಇಟ್. ಅವನು ಸ್ವಲ್ಪ ಕೆರಳಿದರೆ ಇಂಗ್ಲಿಷಿನಲ್ಲಿ ಮಾತನಾಡುತ್ತಾನೆ. ಹೋಗಲಿ. ನಾವು ಚಂದ್ರಖಾನಿಗೆ ಹೋಗುವ ಬದಲಾಗಿ ಕೊಹಲಿಪಾಸ್‌ಗೆ ಹೋಗುವ ಗುಂಪನ್ನು ಸೇರೋಣವೇ ಅಂತ ಕೂಡ ಯೋಚನೆ ಮಾಡಿದೆವು. ಆದರೆ ನಮ್ಮೆಲ್ಲರಿಗೂ ಚಂದ್ರಖಾನಿ ಚಂದ್ರಖಾನಿ ಅಂತ ಬೇರೆ ಎಲ್ಲರೂ ಹೇಳಿದ್ದು ಕೇಳಿ ಕೇಳಿ ತಲೆಯಲ್ಲಿ ಅದೇ ಇತ್ತು. ಅಲ್ಲವೆ. ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ನಿರ್ಧಾರವೇ ಎಲ್ಲಿ ಆಗಿರುತ್ತದೆ. ಅದರ ಮೆಲೆ ಎಷ್ಟೊಂದು ಜನರ ಮನಸ್ಸು. ಕಣ್ಣೆದುರಿಗಿಲ್ಲದಿದ್ದರೂ ಅವರ ಮಾತು, ಕೆಲಸ ಮಾಡುತ್ತಿರುತ್ತದೆ.

ದಾರಿಯ ಉದ್ದಕ್ಕೂ ಸೂಚನೆಗಳು ಗಟ್ಟಿಯಾಗುತ್ತಿದ್ದವು. ಆದರೂ ನಮ್ಮದೇ ಒಂದು ತತ್ವ ಮಾಡಿಕೊಂಡಿದ್ದೆವು. ಅದಕ್ಕೆ ಮಾಂಟಿಕಚೋರ್‌ನ ಕ್ಯಾಂಪ್ ಲೀಡರ್‌ನ ಬೆಂಬಲವೂ ಇತ್ತು. ಏನೆಂದರೆ, ಚಳಿ ಜಾಸ್ತಿ ಆದರೆ ಹಿಮ ಫಾರಂ ಆಗುತ್ತೆ. ಮಾಂಟಿಕಚೋರ್ ಬರೀ ಏಳುವರೆ ಸಾವಿರ ಅಡಿ ಎತ್ತರದ ಜಾಗ. ಅಲ್ಲೆ ೪ ಡಿಗ್ರಿ ಇದೆ ಟೆಂಪರೇಚರು. ಹಾಗಾದರೆ ಚಂದ್ರಖಾನಿ ಹದಿಮೂರು ಸಾವಿರ ಅಡಿ ಎತ್ತರದ ಜಾಗ. ಅಲ್ಲಿ ಇನ್ನೂ ಜಾಸ್ತಿ ಚಳಿ ಇರುತ್ತೆ. ಅಂದರೆ ಹಿಮ ಇರುತ್ತೆ. ಖಂಡಿತ. ಅಲ್ಲದೆ ಮಾಂಟಿಕಚೋರ್ ನಮ್ಮ ನಡಿಗೆಯ ಎರಡನೆಯ ದಿನದ ತಂಗುದಾಣ, ಚಂದ್ರಖಾನಿಗೆ ಇನ್ನೂ ಐದು ಆರು ದಿನದ ನಡಿಗೆ ಆದಮೇಲೆ ತಲುಪುವುದು. ಹಿಮ ಖಂಡಿತ ಇರುತ್ತದೆ. ಜೊತೆಗೆ ಆ ಎರಡನೆಯ ದಿನ ನಡೆಯುತ್ತ ದೂರ ದೂರ ಬೆಟ್ಟಗಳಲ್ಲಿ ಬಿಳೀ ಬಿಳೀ ಪಟ್ಟಿಗಳು ಕಾಣುತ್ತಿದ್ದವು. ನಾವು ನಿಧಾನವಾಗಿ ಹಿಮದ ನಾಡೊಳಗೆ ಹೆಜ್ಜೆ ಇಡುತ್ತಿದ್ದೇವೆ ಅನ್ನಿಸುತ್ತಿತ್ತು. ಒಂದೊಂದಾಗಿ ಹೆಸರಿರುವ ಪರ್ವತಗಳು ಹಿಮ ಶಿಖರಗಳು-ಕಿರೀಟಗಳು-ದೂರದಲ್ಲಿ ಕಾಣುತ್ತಿದ್ದವು. ಚಂದ್ರಖಾನಿ ಮೋಸ ಮಾಡಲಾರದು ಅನ್ನುವ ಆಸೆ.

ನಿರಾಸೆಗೆ ಸಿದ್ಧವಾಗುತ್ತ ನಮ್ಮೆಲ್ಲರ ಒಂದು ಭಾಗದ ಮನಸ್ಸು ಇತ್ತು. ದಾರಿಯಲ್ಲಿ ಸಿಕ್ಕ ಹಳ್ಳಿಯ ಒಬ್ಬ ಮನುಷ್ಯ ಹೇಳಿದ ‘ಹಿಮಾಲಯ ಈ ವರ್ಷ ಒಣಗಿ ಹೋಗಿದೆ ಸೂಖಾ ಪಡಾ ಹೈ’ ಅಂತ. ನಿರಾಸೆಗೆ ಸಿದ್ಧರಾಗುವುದೇ ಬೇರೆ ನಿರಾಸೆಯನ್ನೇ ಎದುರಿಸುವ, ಪಡುವ ಕ್ಷಣ ಬೇರೆ. ಚಂದ್ರಖಾನಿಗೆ ನಾಳೆ ತಲುಪುತ್ತೇವೆ ಅನ್ನುವಾಗ ನಾಗರೂನಿಯಲ್ಲಿ ಎಷ್ಟೊಂದು ಉಲ್ಲಾಸ. ಚಂದ್ರಖಾನಿಯಲ್ಲಿ ಹಿಮ ಇಲ್ಲವೇ ಇಲ್ಲ ಅಂತ ಖಚಿತವಾಗಿ ತಿಳಿಯಿತು. ಆದರೂ ಸಂತೋಷ. ನಾವೇ ನಡೆದು ಹತ್ತಿ ಮುಗಿಸಿದೆವಲ್ಲ. ನಾಳೆಗೆ ಈ ನಡಿಗೆ ಮುಗಿಯುತ್ತದಲ್ಲ. ನಮ್ಮ ಬಗ್ಗೆಯೇ ಹೆಮ್ಮೆ. ಹದಿಮೂರು ದಿನಗಳಲ್ಲಿ ಅದೇ ಮೊದಲನೆಯ ಬಾರಿಗೆ ವಿಶಾಲವಾಗಿಯೂ ಸಮವಾಗಿಯೂ ಇರುವ ನೆಲ. ಹನ್ನೊಂದು ಸಾವಿರ ಅಡಿ ಎತ್ತರವೆ ಇದು. ಸುತ್ತಲೂ ಕಣಿವೆಗಳು. ಸಂಜೆಯ ಬಿಸಿಲು. ಹಿತವಾದ ಚಳಿಗಾಳಿ. ಆಕಾಶ ಓ ಇಲ್ಲೆ ಇದೆ. ನಾವು ಅಲ್ಲೆ ಇದ್ದೇವೆ. ಒಂದಷ್ಟು, ಎಷ್ಟೊ, ಬೆಟ್ಟಗಳ ಅಲೆ ಅಲೆ ತೆರೆಗಳ ಆಚೆ ಅಲಿ ರತ್ನ, ಅಲಿ ರತ್ನಿ, ಟೈಗರ್ಸ್ ಟೀತ್ ಶಿಖರಗಳು. ಅವುಗಳ ತುಂಬ ಹಿಮ ಹಿಮ. ಅಲ್ಲಿಗೂ ನಾವು ಹೋಗುವಂತಿದ್ದರೆ.

ಚಂದ್ರಖಾನಿಗೆ ಹೊರಟೆವು. ಹತ್ತಿದೆವು. ಇನ್ನು ಎರಡು ಸಾವಿರ ಅಡಿ ಅಷ್ಟೆ. ಬಲಗಡೆಗೆ ಗುಡ್ಡದ ಕಡಿದಾದ ಮೈ. ಎಡಗಡೆಗೆ ಪ್ರಪಾತ. ಹತ್ತು. ಎಡಕ್ಕೆ ತಿರುಗು. ನಾಲ್ಕು ಹೆಜ್ಜೆ ನಡೆ. ಹತ್ತು. ಹತ್ತು. ಇವೆಂಥ ಬಂಡೆಗಳೋ. ಎಷ್ಟು ಹತ್ತಿದ್ದೇವೆ. ಬರೀ ಐವತ್ತು ಅಡಿಯೆ. ಇನ್ನೂ ಹೋಗಬೇಕೇ. ಸಾವಿರದ? ಅಥವ ಎರಡು ಸಾವಿರದ? ಒಂಬೈನೂರ ಐವತ್ತು ಅಡಿಗಳೆ? ದೇವರೆ. ನಾಲ್ಕು ಹೆಜ್ಜೆ ನಡೆದರೆ ಉಸಿರಾಡುವುದೆ ಕಷ್ಟ ಅನ್ನಿಸುತ್ತದಲ್ಲ. ಅಯ್ಯೊ, ಇವರೆಲ್ಲ ಯಾಕೆ ಹೀಗೆ ಬೇಗ ಬೇಗ ಹೋಗುತ್ತಾರೆ. ಬೆನ್ನಮೇಲಿನ ಚೀಲದ ಭಾರ, ಬರೀ ಎಂಟು ಕೇಜಿಯೂ ಇಲ್ಲ. ಎಂಬತ್ತು ಕೇಜಿಯಾಗಿ ತೋರುತ್ತದಲ್ಲ. ಚಂದ್ರ ಸುಸ್ತಾಗಿಬಿಟ್ಟಿದ್ದಾಳೆ. ಕಾಲು ಎತ್ತಿ ಇಡುವುದೇ ಅವಳಿಗೆ ಕಷ್ಟ ಆಗುತ್ತಿದೆ. ಮುಖವೆಲ್ಲ ಸಪ್ಪೆ ಸಪ್ಪೆ. ‘ನಿಧಾನ ನಿಧಾನ ಹೋಗೋಣ ಪುಟ್ಟಿ.’ ಕೂರುವ ಆಸೆ. ಕೂತರೆ ಮುಗಿಯಿತು. ಎರಡು ನಿಮಿಷ ಕೂತರೆ ಮೈ ಮತ್ತೆ ನಡಿಗೆಗೆ, ಹತ್ತುವುದಕ್ಕೆ ಹೊಂದಿಕೊಳ್ಳಲು ಇನ್ನರ್ಧ ಗಂಟೆ ಬೇಡುತ್ತದೆ. ನಡೆಯಲೇ ಬೇಕು. ಇಗೋ ಇನ್ನೆರಡು ತಿರುವು ದಾಟಿದರೆ ತುದಿ ಬಂತು. ಚಂದ್ರಳ ಬೆನ್ನಮೇಲಿನ ಚೀಲ ಕೇಳಲೇ ನಾನು? ಆದರೆ ನನ್ನ ಚೀಲವೇ ಭಾರ ಆಗಿದೆ. ಗೌಡರು ಮತ್ತು ಮೂರ್ತಿ ಕೇಳಿಬಿಟ್ಟರು: ‘ಮೇಡಂ, ನಿಮ್ಮ ಚೀಲ ಕೊಡಿ ಅಥವ ಅದರಲ್ಲಿನ ಭಾರ ನಮಗೆಲ್ಲರಿಗೂ ಹಂಚಿ.’ ನನಗೆ ಬೇಜಾರಾಯಿತೊ. ಸಿಟ್ಟು ಬಂತೊ?

ತುದಿ ಬಂತೆ? ಬಂಡೆ. ಅಗೊ, ಅಲ್ಲಿ ನೋಡಿದರೆ ಒಂದರ್ಧ ಕಿಲೋಮೀಟರು ಬೆಟ್ಟದ ಬೆನ್ನಲ್ಲಿ ಸುಮ್ಮನೆ ಬಿದ್ದಿರುವ ಕಾಲುದಾರಿ. ಸದ್ಯ. ಪ್ರಪಾತ ಇಲ್ಲ. ಸಲೀಸಾಗಿ ನಡೆಯಬಹುದು. ಹೌದೆ? ಅಯ್ಯೊ. ಈ ತಿರುವಿನಲ್ಲಿ ಮತ್ತೆ ಕಡಿದಾದ ಗೋಡೆ. ಚಂದ್ರಖಾನಿ ಎಲ್ಲಿದೆ? ಈ ಗೋಡೆ ಹತ್ತಿ ಇಳಿದರೆ ಆಯಿತೆ? ಸೂರ್ಯ ಚುಚ್ಚುತ್ತಾನಲ್ಲ. ಸ್ವೆಟರು ತೆಗೆಯೋಣವೆ? ಬೇಡ. ತೆಗೆದರೆ ಆ ಭಾರ ಮತ್ತೆ ಬೆನ್ನ ಮೇಲಿನ ಚೀಲದಲ್ಲಿ ಹೊರಬೇಕು. ಮೈ ಮೇಲೇ ಇರಲಿ ಅದು. ಭಾರ ಗೊತ್ತಾಗುವುದಿಲ್ಲ. ಎಷ್ಟೊಂದು ಬೆವರು. ಬೆವರು. ಮೈಯೆಲ್ಲ ನೀರಾಗಿಬಿಟ್ಟಿದೆಯಲ್ಲ. ನಿಂತರೆ ಸ್ವಲ್ಪ, ತಣ್ಣಗೆ ಚಳಿಗಾಳಿಗೆ ಬೆವರು ಒಣಗುತ್ತದೆ. ಅಯ್ಯಯ್ಯೊ ನಿಂತರೆ ಆಗದು. ನಡೆ ನಡೆ. ಆಹಾ ಹೂವು. ಗರಿಕೆ ಹುಲ್ಲುಗಳ ನಡುವೆ ಎಷ್ಟೊಂದು ಪುಟ್ಟ ಪುಟ್ಟ ಹೂವು. ಹೆಸರು ಬುದ್ಧ ಕಾರುಣ್ಯ. ಎಷ್ಟೊಂದು ಮುದ್ದಾಗಿವೆ. ಇರಲಿ ಇರಲಿ. ಈ ಹಾಳು ಸೂರ್ಯ ಒಂಬತ್ತು ಗಂಟೆಗೇ ಹೀಗೇಕೆ ಉರಿಯುತ್ತಾನೆ? ಮೈ ಅಸಹ್ಯ ಆಗುವಷ್ಟು ಬೆವರು. ಎರಡು ಗಂಟೆ ಹೊತ್ತು ನಡೆದು ಎಷ್ಟು ದೂರ ಬಂದೆವು? ಇನ್ನೂ ಒಂದೂವರೆ ಕಿಲೋಮೀಟರ್ ನಡೆಯ ಬೇಕೆ? ಆಗಿದ್ದಾಗಲಿ ಕೂರೋಣವೇ? ಅವರೆಲ್ಲ ಆಗಲೇ ಮುಂದೆ ಹೋದರೇ. ಈ ಬಂಡೆಗಳಿಗೆ ಅಯ್ಯೊ ಕೊನೆಯೇ ಇಲ್ಲವೆ. ಇದೆಂಥ ವಿಕಾರವಾದ ಬಂಡೆ. ಹತ್ತು ಆನೆ ಗಾತ್ರ. ದೊಡ್ಡ ವಜ್ರಾಯುಧ ತೆಗೆದುಕೊಂಡು ಮನಸ್ಸಿಗೆ ಬಂದಂತೆ ಕೊಚ್ಚಿ ಹಾಕಿದ ಹಾಗೆ. ಒಂದು ಫೋಟೋ. ಇಗೊ ಇದು ಐಸ್ ಕ್ರೀಮಿನ ಕೋನ್ ಅನ್ನು ಚಮಚದಲ್ಲಿ ಸವರಿ ಕಿತ್ತ ಹಾಗೆ. ಇನ್ನೊಂದು ವಿಚಿತ್ರ ಕೋಡುಗಲ್ಲು. ಎಂಟು ಹತ್ತು ಕೊಂಬುಗಳು. ಮೈಯೆಲ್ಲ ತರಚಲು ತರಚಲು ಬಂಡೆ. ಇದು ಕಲ್ಲಿನ ಕೋಟೆಯ ಮಹಾದ್ವಾರದ ಹಾಗೆ. ಇದು ಗೋಡೆಯಂಥ ಬಂಡೆ. ಇವುಗಳ ನಡುವೆ ಸುತ್ತಿ ಸುತ್ತಿ ತಿರುಗಿ ಸುತ್ತಿ ಹತ್ತುತ್ತ ಇದೇನು ಈ ಬೆಟ್ಟದ ತುದಿಯಲ್ಲಿ, ಇಷ್ಟೊಂದು ಮೇಲೆ ಇಷ್ಟೊಂದು ವಿಶಾಲ ಳಾಲಿ ಜಾಗ. ಎಕರೆಗಟ್ಟಲೆ ಗರಿಕೆ ಹುಲ್ಲು. ಒಂದಷ್ಟು ದೂರದಲ್ಲಿ ಗುಮ್ಮಟಕಲ್ಲು. ಬಲಗಡೆ ಒತ್ತಾಗಿ ಬೆಳೆದ ಮರಗಳ ಕಾಡು. ಇಳಿಜಾರು… ಇದೇ …ಚಂದ್ರಖಾನಿಯೆ…ಐದೇ ಐದುಪೈಸೆಯಷ್ಟು ಐಸು ಇಲ್ಲ. ನಿರಾಸೆ.

ಬರವಣಿಗೆಯ ಮೂರನೆಯ ದಿನ

ಹಿಮಾಲಯದಲ್ಲಿ ಭಯವಿತ್ತು. ಆದರೆ ಭಯವೇ ಆಗಿಲ್ಲವೆಂಬ ನಟನೆಯೂ ಇತ್ತು. ಆದ ಸ್ವಲ್ಪ ಭಯವನ್ನು ಸಾವಿರ ಪಟ್ಟು ಹೆಚ್ಚು ಮಾಡಿ ಹೇಳಿಕೊಳ್ಳುವ ಉತ್ಪ್ರೇಕ್ಷೆಯೂ ಇತ್ತು. ಈಗ ನೆನಪಿನಲ್ಲಿ ಅವೆಲ್ಲ ಕ್ಷಣಗಳು ಮತ್ತೆ ಬಂದರೆ ಎಂದು. ಬರಲಿ ಎಂದು ಹಂಬಲಿಸುವ ಕ್ಷಣಗಳಾಗಿ ಉಳಿದುಕೊಂಡಿವೆ.

ನಾವು ಮಾಟಿಕಚೋರ್ ತಲುಪಿದಾಗ ಸಂಜೆ ಐದು ಗಂಟೆ. ಮಧ್ಯಾಹ್ನದ ದಾರಿಯೆಲ್ಲ ಕಡಿದು ಹಾಕಿದ ದೊಡ್ಡ, ದೊಡ್ಡ ಬೃಹತ್, ಅಸಹಾಯಕ ದೇವದಾರು ಮರಗಳ ಹೆಣಗಳ ನಡುವೆ ನಡೆದ ನೋವಿನ ದಾರಿ. ಕಡಿದು ಉರುಳಿಸಿದ ಮರಗಳು ಮನಸ್ಸಿಗೆ ನೋವು ತರುತ್ತವೆ. ದೊಡ್ಡ ದಿಮ್ಮಿಗಳನ್ನು ಹೊತ್ತ ಲಾರಿಗಳು ಮುಖ ಪಕ್ಕಕ್ಕೆ ತಿರುಗಿಸಿಕೊಳ್ಳುವಂತೆ ಮಾಡುತ್ತವೆ. ನಾವೆಲ್ಲರೂ – ಅಯ್ಯೊ, ಹೀಗೆ ಇಂಥಾ ಮರಗಳನ್ನು ಇಷ್ಟೊಂದು ಕಡಿದು ಹಾಕಿದ್ದಾರಲ್ಲ ಅಂತ – ಮಾತಾಡಿಕೊಂಡೆವು. ಚಡಪಡಿಸಿದೆವು. ಆಮೇಲೆ, ರಸ್ತೆಯ ಬಲ ಅಂಚಿಗೆ ಪ್ರಪಾತದ ಪಕ್ಕದಲ್ಲಿ ತನ್ನ ಮರದ ದೇಹವನ್ನು ಕಳೆದುಕೊಂಡ ಸಿಂಹಾಸನ ಆಕಾರದ ಮರದ ದೊಡ್ಡ, ಬೊಡ್ಡೆ ಕಂಡಾಗ ಅದರ ಮೇಲೆ ಕೂತು ಒಂದು ಫೋಟೋ ತೆಗೆಸಿಕೊಂಡೆ.

ನಿಧಾನವಾಗಿ ಮೋಡ ಕವಿಯುತ್ತಿತ್ತು. ನಮಗೆ ಕೊಟ್ಟ ‘ದಾರಿ ಪುಸ್ತಕ’ದಲ್ಲಿ ಹಳೆಯ ಫಾರೆಸ್ಟ್ ಬಂಗಲೆಯಲ್ಲಿ ನಮ್ಮ ವಸತಿ ಅಂತ ಬರೆದಿತ್ತು. ಕಡಿದ ಮರಗಳ ಕಾಡು ಇತ್ತು. ಕಡಿತಕ್ಕೆ ಸಿದ್ಧವಾದ, ನಿಬಿಡ ವೃಕ್ಷ ಸಮೂಹ ಇತ್ತು. ಬಂಗಲೆ ಇರಲಿಲ್ಲ, ಮೋಡ. ಮೋಡ ನನಗೆ ಯಾವಾಗಲೂ ಭಯ ತರುತ್ತದೆ. ಮೈಸೂರಿನ ಸರಸ್ವತೀ ಪುರಂ ರೈಲ್ವೇ ಗೇಟಿನ ಹತ್ತಿರ ಒಂದು ಮಧ್ಯಾಹ್ನ, ಜೋರು ಮಳೆ ಶುರುವಾಗುವ ಇನ್ನೆರಡೇ ಕ್ಷಣಗಳ ಮೊದಲು, ತಲೆಯಮೇಲೇ ಬಿದ್ದು ಬಿಡುವಂತಿರುವ ಭಾರವಾದ ಮುಕ್ಕಾಲು ಆಕಾಶ ತುಂಬಿದ ಮೋಡ, ನಿರ್ಜನ ರೈಲು ಕಂಬಿ, ನಿರ್ಜನ ರಸ್ತೆ, ಮೋಡಗಳ ನಡುವೆ ವಿಕಾರವಾಗಿ ಕಾಣುವ ತುಣುಕು ಸ್ವಚ್ಛ ನೀಲಿಯ ಆಕಾಶ, ಗಾಳಿಯೂ ಬೀಸದ ಸ್ತಬ್ಧ ಭಯ, ಚಡಪಡಿಕೆ, ಓಡಿ ತಟ್ಟನೆ ಬೇರೆ ಎಲ್ಲಾದರೂ ಸರಿ ಇರುವ ಆಸೆ. ಅವೆಲ್ಲದರ ಹಿಂದೆ ಮಗ ಎಲ್ಲಿ ಮಳೆಗೆ ಸಿಕ್ಕಿದನೋ ಎಂದು ಆತಂಕ ಪಡುವ, ಮನೆಯಲ್ಲಿ ಸುಮ್ಮನೆ ಅತ್ತ ಇತ್ತ ಬೆನ್ನ ಹಿಂದೆ ಕೈ ಕಟ್ಟಿ ಓಡಾಡುವ ಅಪ್ಪ, ಬೆದರಿ ಕಣ್ಣಲ್ಲಿ ನೀರು ತುಂಬಿ ಹೆದರಿ ಕುಳಿತ ಅಮ್ಮ ಇವರ ಚಿತ್ರಗಳೂ ನೆನಪಿಗೆ ಬರುತ್ತಿದ್ದವೇನೋ. ನನ್ನಿಂದಾಗಿ ಅವರಿಗೆ ಹೀಗೆಲ್ಲ ಭಯವೂ ಆತಂಕವೂ ಆಯಿತು. ನಾನು ಏನೋ ತಪ್ಪು ಮಾಡಿ ಬಿಟ್ಟೆ ಅನ್ನಿಸುತ್ತಿತ್ತು. ಈಗ ಅಪ್ಪ ಇಲ್ಲ. ಅಮ್ಮನಿಗೆ ನಾನು ಹಿಮಾಲಯದಲ್ಲಿ ಹೀಗೆ ನಡೆದಾಡಲು ಹೋಗುತ್ತೇನೆ ಅಂತ ಹೇಳಿಲ್ಲ. ಅದು ಮೈಸೂರು. ಇದು ಹಿಮಾಲಯ. ಆದರೂ ನಾನು ನಾನೇ ಅಲ್ಲವೇ.

ಉಳಿದಿದ್ದವರು ನಾವು ನಾಲ್ಕು ಜನ. ಶ್ರೀನಾಥ, ರಾಜು, ಚಂದ್ರ ಮತ್ತು ನಾನು. ಮೂರ್ತಿ ನಮಗಿಂತ ಸ್ವಲ್ಪ ಮುಂದೆ ಅಥವಾ ಹಿಂದೆ. ಉಳಿದ ಮೂವತ್ತದು ಜನ ಆಗಲೇ ಹೋಗಿಬಿಟ್ಟಿದ್ದರು. ನಾನೂ ಒಬ್ಬನೇ ಸ್ವಲ್ಪ ಬೇಗ ಬೇಗ ನಡೆದೆ.

ಕೆಂಪು – ಕರಿ ಮಣ್ಣಿನ ಹಾದಿ. ಇನ್ನೇನು ಬರಬಹುದಾದ ಮಳೆ. ಥಂಡಿ ಮಳೆಗತ್ತಲು. ಅಗೊ, ಅಲ್ಲೊಂದು ತಗಡಿನ ಚಾವಣಿ. ಇನ್ನೊಂದು ಮರದ ದಿಮ್ಮಿಗಳ ಗುಡಿಸಲು. ಬಲಗಡೆ ತಗ್ಗಿನಲ್ಲಿ ಸ್ವಲ್ಪ ದೊಡ್ಡ ದೊಡ್ಡ ಕೋಣೆಗಳ ಒಂದು ಕಟ್ಟಡ. ಎಡಗದೆ ಗುಡ್ಡದ ಮೇಲೆ ಒಂದು ಕಾಟೇಜು. ಅದಕ್ಕೆ ಒಂದು ಬೇಲಿ. ಚಿಕ್ಕ ಗೇಟು. ಆದರೆ ಇದೇನು. ನಮ್ಮ ಗುಂಪಿನ ಒಬ್ಬರೂ ಇಲ್ಲವಲ್ಲ. ಶ್ರೀನಾಥ, ರಾಜು, ಚಂದ್ರ ಹಿಂದೆ ಉಳಿದರು. ಕಾಣುತ್ತಿಲ್ಲ. ಮುಂದೆ ದಾರಿ ಕಾಡಿನೊಳಗೆ ದಟ್ಟವಾದ ಮರಗಳ ನಡುವೆ ಮರೆಯಾಗಿದೆ. ಯಾವ ಗುಡಿಸಲಿನಲ್ಲೂ ಯಾವ ಕಟ್ಟಡದಲ್ಲೂ ಜನರಿಲ್ಲ. ಅಲ್ಲ. ಎಷ್ಟೋ ವರ್ಷಗಳಿಂದ ನಿರ್ಮಾನುಷ ಅನ್ನುವ ಹಾಗಿದೆ. ಗೋಡೆಗಳ ಬಣ್ಣ ಕಳೆದಿದೆ. ಗಾರೆ ಉದುರಿದೆ. ಕೆಲವು ಇಟ್ಟಿಗೆಗಳು ಕಾಣುತ್ತಿವೆ. ಹಲ್ಲು ಕಿರಿಯುತ್ತಿವೆ. ಗುಡಿಸಲು ಬಾಗಿಲು ಹಾರು ಹೊಡೆದಿದೆ. ಕಾಟೇಜು ಯಾರೂ ತನ್ನೊಳಕ್ಕೆ ಬರದಹಾಗೆ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡಿದೆ. ಯಾರನ್ನಾದರೂ ಕೇಳಬೇಕೆಂದುಕೊಂಡೆ, ಯಾರೂ ಇಲ್ಲ. ಮುಂದೆ ಹೋಗಿರಬಹುದಾದ ಮೂರ್ತಿಯನ್ನು ಹಿಡಿಯದೇ ಹೋಗಿ? ಅಥವ ಹಿಂದೆ ನಡೆದು ಶ್ರೀನಾಥ ಅವರನ್ನು ಸೇರಲೇ? ಕೂಗು ಹಾಕಲೋ? ನಿರ್ಜನ, ನಿರ್ಮಾನುಷ. ನಿಶ್ಯಬ್ದ, ನಿಶ್ಚಲ. ನನ್ನ ಕನಸಿನಲ್ಲಿ ಆಗಾಗ ಕಾಣುವ ಹಳೆಯ ಮನೆಯ ಹಾಗೆ. ಕನಸಿನಲ್ಲಿ ಆವು ಓಡಬೇಕೆನಿಸಿದರೂ ಓಡಲು ಆಗುವುದಿಲ್ಲವಲ್ಲ, ಹಾಗೆ. ನಿಜದಲ್ಲೂ, ನಿಜದಲ್ಲೂ ಹಾಗೇ ಆಗುತ್ತಿದೆ. ಬೂಟಿನ ಕೆಳಗೆ ಸಣ್ಣ ಸಣ್ಣ ಉರುಟು ಕಲ್ಲುಗಳು ಇರುವುದು ಕಾಲಿಗೆ ತಿಳಿಯುತ್ತಿದೆ. ಬೆನ್ನಿನ ಮೇಲಿನ ಭಾರ ತಿಳಿಯುತ್ತಿದೆ. ಈ ಖಾಲಿ ಮನೆಗಳನ್ನು ನೋಡಬಾರದೆಂದರೂ ಕಣ್ಣು ಮುಚ್ಚಿಕೊಳ್ಳಲು ಆಗುತ್ತಿಲ್ಲ. ಎಚ್ಚರವಾಗಿರುವಾಗಲೇ ಕನಸಿನಲ್ಲಿ ಆಗುವಂಥ ಭಯ. ತಲೆಯ ಮೇಲೆ ಬಿದ್ದುಬಿಡುವಂತಿರುವ ಮೋಡಗಳು. ಮೈಗೆಲ್ಲ ಬೀಸುತ್ತಿರುವಂಥ ಗಾಳಿ. ಅರ್ಧ ನಿದ್ದೆಯಿಂದ ಉದ್ದೇಶಪೂರ್ವಕವಾಗಿ ಎದ್ದೇಳಬೇಕೆಂದು ಬಯಸುತ್ತಿರುವಾಗ ಇರುತ್ತದಲ್ಲ ಅಂಥ ಹಿಂಸೆ. ಸದ್ಯ. ಅಗೋ. ಎದುರುಗಡೆ ಕಾಡೊಳಗಿಂದ ಮೂರ್ತಿ ಬಂದ. ಅಗೊ. ಹಿಂದೆ ರಾಜು, ಶ್ರೀನಾಥರ ಮಾತು ಕೇಳಿಸಿತು. ಅಗೊ. ಎರಡು ಹನಿ ಮಳೆ ಬಿತ್ತು. ಅಸಹ್ಯ ನಿಶ್ಚಲತೆಗೆ ಕೊನೆ ಬಂತು.

ನಮ್ಮ ಕ್ಯಾಂಪಿನ ಸ್ಥಳವನ್ನು ಈ ವರ್ಷದಿಂದ ಬದಲಾಯಿಸಿದ್ದಾರಂತೆ. ಇನ್ನೂ ಮುಂದೆ ಹೋಗಬೇಕಂತೆ. ಬೆನ್ನ ಮೇಲಿನ ಬ್ಯಾಗು ಇಳಿಸಿ ರೇನ್ ಕೋಟು ತೆಗೆದು ಹಾಕಿಕೊಳ್ಳುವಷ್ಟರಲ್ಲಿ ಬಂದ ಮಳೆ ಹೋಗಿಬಿಟ್ಟಿತು. ಮಾಟಿಕೊಚಾರ್ ಟೆಂಟುಗಳನ್ನು ತಲುಪಿದಾಗ ಚಳಿ ಜಾಸ್ತಿ ಆಗಿತ್ತು. ನನಗೆ ಕೊಟ್ಟ ನಾಲ್ಕು ಕಂಬಳಿಗಳನ್ನೂ ಹೊದ್ದು ಮಲಗಿಬಿಟ್ಟೆ. ನೆಲ ಕೊರೆಯುತ್ತಿತ್ತು. ಜೀನ್ಸ್ ದಾಟಿ ಸ್ವೆಟರು ದಾಟಿ ಜರ್ಕಿನ್ ದಾಟಿ ಅದರೊಳಗಿನ ಅರ್ಧ ಸ್ವೆಟರು ದಾಟಿ ಅಂಗಿ ದಾಟಿ ಬನಿಯನ್ ದಾಟಿ ಮೈ ಚರ್ಮ ದಾಟಿ ಮೂಳೆಗಳನ್ನು ಮುಟ್ಟಿ ಮೂಳೆಗಳಿಗೆಲ್ಲ ಯಾರೋ ಸುತ್ತಿಗೆ ತೆಗೆದುಕೊಂಡು ಮೊಳೆಗಳನ್ನು ಹೊಡೆಯುತ್ತಿದ್ದಾರೆ ಅನ್ನುವಂಥ ಚಳಿ. ಅಥವ ಆಯಾಸವೋ. ಕಣ್ಣು ಮುಚ್ಚಿದೆನೊ ನಿದ್ದೆ ಬಂದಿದ್ದಿತೋ – ಗಾಳಿ ಬಿರುಗಾಳಿ. ನಾನು ಮಲಗಿಲ್ಲ ಅಥವ ಏಳುವುದಿಲ್ಲ. ಇಲ್ಲಿ ಟೆಂಟು ಏನೂ ನನ್ನ ಕಾಪಾಡುವುದಿಲ್ಲ. ಈ ಗಾಳಿ ನಿಲ್ಲುವುದಿಲ್ಲವೋ ಟೆಂಟು ಹಾರಿ ಹೋಗುತ್ತದೋ ಹಗ್ಗಗಳು ಕಿತ್ತು ಹೋಗುತ್ತವೇನೋ. ಗೂಟಗಳು ಹಿಡಿದು ನಿಲ್ಲಿಸಲಾರವು. ಇಲ್ಲ. ನನ್ನ ಮೂಳೆಗೆ ಯಾರೂ ಸುತ್ತಿಗೆಯಿಂದ ಹೊಡೆಯುತ್ತಿಲ್ಲ. ಕಿತ್ತುಕೊಂಡು ಹಾರಿಹೋಗಲು ಬಯಸುವ ಟೆಂಟು, ಹಿಡಿದು ಇಟ್ಟುಕೊಳ್ಳಲು ಬಯಸುವ ಗೂಟ ಹಗ್ಗ. ಗಾಳಿ ಬೀಸಿದಂತೆಲ್ಲ ಪಟ ಪಟ ಪಟ ಶಬ್ದ. ಇಲ್ಲೇ ಒಳಗೆ ಮಲಗಿರಲೋ ಒಬ್ಬನೇ ಅಥವಾ ಹೊರಗೆ ಹೋಗಲೋ.

ಹೊರಗೆ ಬಂದರೆ ಥಳ ಥಳ ಥಳ ಸಂಜೆ ಬಿಸಿಲು. ನೀಲಿ ನೀಲಿ ಶುದ್ಧ ನೀಲಿ ಆಕಾಶ. ನಮ್ಮ ಕ್ಯಾಂಪಿನ ಸುತ್ತಲೂ ಇದ್ದ ಎತ್ತರವಾದ ದಟ್ಟ ಮರಗಳ ಎಲೆಗಳ ಮೇಲೆಲ್ಲ ಸವರಿಕೊಂಡು ಹೋಗುತ್ತಿರುವ ಬಿಳೀ ತೆಳು ಮೋಡಗಳ ಗುಂಪು. ಇಲ್ಲೊಂದು ಮೋಡದ ಮರಿ ಎಡಗಡೆ ಗುಡ್ಡ ಇಳಿದು ನಮ್ಮ ಟೆಂಟಿನ ಮೇಲೆ ಬರುತ್ತಿದೆ. ಇಗೋ ತಲೆಯ ಮೇಲೆ ತೆಳು ಬಿಳೀ ಮೋಡ ಚಾಪೆ ಸುರುಳಿ ಬಿಡಿಸಿದ ಹಾಗೆ ಹಾಸಿಕೊಳ್ಳುತ್ತ ಹೋಗುತ್ತಿದೆ. ಎದುರು ಕಣಿವೆಯಲ್ಲಿ ಬೇರೆ ಬೇರೆ ಆಕಾರಗಳ ಚೂರು ಚೂರು ಮೋಡಗಳು ಒಟ್ಟಾಗುತ್ತಿವೆ. ಕೆಲವು ಖಾಲಿ ಮೋಡಗಳು ಕೆಲವು ನೀರಿರುವ ಮೋಡಗಳು. ಸೂರ್ಯನ ಬಿಸಿಲಿಗೆ ಹೆಸರಿಸಲ್ಲದ ಬಣ್ಣಗಳು. ಸ್ವಲ್ಪ ಜೋರಾಗಿ ಹಾರಿದರೆ, ಕಣಿವೆ ಆಚೆ ತಲುಪಿಯೇ ಮುಟ್ಟಿಯೇ ಬಿಡಬಹುದು ಆ ಚೂಪು ಶಿಖರದ ಮೇಲಿನ ಹಿಮ. ಕಣ್ಣು ಕೋರೈಸುವಂತೆ ಇಳಿಬಿಸಿಲಿನ ಪ್ರತಿಫಲನ.

ಸಾರ್ ಸಾರ್ ಬೇಗ ಬನ್ನಿ ಸಾರ್ ಅಂತ ರಾಜು ಕೂಗದೆ ಇದ್ದಿದ್ದರೆ ಟೆಂಟಿನೊಳಗೇ ಇದ್ದುಬಿಡುತ್ತಿದ್ದೆ. ರಾಜು ಖುಷಿಯಾದ ಹಸುವಿನ ಕರು ಥರ ಇದ್ದರು. ಎಲ್ಲ ಜನ ಇಲ್ಲೇ ಇದ್ದಾರೆ. ಆಹಾ ಓಹೋ ಅಬ್ಬಾ ಛೇಛೇ ವಾ ಓ ಅಂತ ಉದ್ಗಾರಗಳನ್ನು ಬಿಟ್ಟರೆ ಬೇರೆ ಮಾತಿಲ್ಲ. ಸುಮ್ಮನೆ ಅತ್ತ ಇತ್ತ ಎಲ್ಲರೂ ಓಡಾಡುತ್ತಿದ್ದೇವೆ. ಅಲ್ಲಿ ನಿಂತು ಇಲ್ಲಿ ನಿಂತು ಎಲ್ಲೆಲ್ಲಿ ನಿಂತರೆ ಚೆನ್ನಾಗಿ ಕಾಣಿಸುತ್ತದೆನ್ನಿಸುತ್ತದೋ ಅದು ಯಾವುದನ್ನೂ ಬಿಡದೆ ಎಲ್ಲಕಡೆಯಿಂದಲೂ ಎಲ್ಲವನ್ನೂ ನೋಡಲೇ ಬೇಕೆಂಬ ಹಪಾ ಹಂಬಲ. ಎಲ್ಲಿ ಹೋದ ಶ್ರೀನಾಥ? ಎಲ್ಲಿ ಸ್ಟ್ಯಾಂಡು ಎಲ್ಲಿ ಕ್ಯಾಮರಾ ಅಂತ ಟೆಂಟಿನ ಒಳಕ್ಕೂ ಹೊರಕ್ಕೂ ಓಡಾಡುತ್ತಿದ್ದಾನೆ. ಕಾಣುತ್ತಿರುವುದೆಲ್ಲವನ್ನೂ ಶಾಶ್ವತವಾಗಿ ಫೋಟೋ ಆಗಿಸುವ ಆಸೆ ಅವನಿಗೆ. ಅಲ್ಲಿ ಆ ಎರಡು ಮರಗಳ ನಡುವಿನಿಂದ ಫೋಟೋ ತೆಗೆದರೆ ಚೆನ್ನ. ಇಲ್ಲ ಆ ಗುಡ್ಡ ಹತ್ತಬೇಕು ಅಂತ ಮೂರ್ತಿ. ಅಯ್ಯೋ ಸೂರ್ಯ ಹೋಗಿಬಿಡುತ್ತಾನೆ. ಆ ಲೆನ್ಸು. ಅಲ್ಲ. ಈ ಫಿಲ್ಟರ್. ಎಲ್ಲಿ ಆ ಸ್ಟ್ಯಾಂಡು. ಯಾವಾಗಲೂ ಸ್ಪೀಡು ಫೋಕಸ್ಸು ಅಪೆರ್ಚರು ಕಾಂಪೋಸಿಷನ್ನು ಅಂತೆಲ್ಲ ಕೂಡಿ ಕಳೆದು ಭಾಗಿಸಿ ಅತ್ಯಂತ ಕರಾರುವಾಕ್ಕಾಗಿ ಲೆಕ್ಕಾಚಾರದ ಅಂದರೆ ಸುಂದರವಾದ ಫೋಟೋ ತೆಗೆಯುವ ಶ್ರೀನಾಥ ತನ್ನ ಎಲ್ಲ ಲೆಕ್ಕಾಚಾರ ಮರೆತು ಸಿಕ್ಕಷ್ಟನ್ನು ಸಿಕ್ಕಹಾಗೆ ಕ್ಯಾಮರಾದಲ್ಲಿ ಹಿಡಿಯುವ ಆತುರದಲ್ಲಿ ಗುಡ್ಡ ಏರಿ ಓಟ. ಎಷ್ಟೊಂದು ಉದ್ವೇಗ. ಹಿಂದೆಯೇ ಮೂರ್ತಿ. ಇಬ್ಬರೂ ಮಾಯ ಆಗಿಬಿಟ್ಟರು. ಒಂದು ಸಿಗರೇಟು ಹಚ್ಚುವ ಮೊದಲೇ, ಶ್ರೀನಾಥ ಮತ್ತು ಮೂರ್ತಿಗೆ ತೃಪ್ತಿಯಾಗುವ ಮೊದಲೇ, ನಮ್ಮೆಲ್ಲರ ಆಹಾ ಓಹೋಗಳು ಗಾಳಿಯಲ್ಲಿ ಕರಗುವ ಮೊದಲೇ, ಸೂರ್ಯ ಮುಳುಗಿಬಿಟ್ಟಿದ. ಇದೆಲ್ಲ ಎರಡು ನಿಮಿಷವೂ ಇರಲಿಲ್ಲ. ಶ್ರೀನಾಥನೂ ಮೂರ್ತಿಯೂ ಬೇಜಾರಿನಿಂದ ಗುಡ್ದ ಇಳಿದು ಬರುತ್ತಿದ್ದರು. ಅನಂತ ನನ್ನದರಂಥದೇ ಒಂದು ತಗಡು ಕ್ಯಾಮರಾದಿಂದ ನಿಂತಲ್ಲೆ ಒಂದು ಫೋಟೋ ತೆಗೆದಿದ್ದ. ಸುಂದರ ದೃಶ್ಯ ಅವರವರ ಮನಸ್ಸಿನೊಳಗೆ ಅವರವರದೇ ರೀತುಯಲ್ಲಿ ಚಿತ್ರಗಳಾಗಿ ಮೂಡಿಕೊಳ್ಳುವುದರೊಳಗೇ ಟೀ ತಯಾರಾಗಿರುವ ಸುದ್ದಿ ತಿಳಿಯಿತು. ಹೋದ ಸೂರ್ಯ ಹೋಯಿತು. ಸೌಂದರ್ಯ. ಬಿಸಿ ಬಿಸಿ ಚಹಾದ ಆಸೆ ನಮ್ಮೆಲ್ಲರನ್ನೂ ತುಂಬಿಕೊಂಡುಬಿಟ್ಟಿತು. ಎರಡು ನಿಮಿಷ ಮರೆತಿದ್ದ ಚಳಿ ಇನ್ನೇನು ಸಿಗಲಿರುವ ಟೀಯ ನಿರೀಕ್ಷೆಯಲ್ಲಿ ಮೊದಲಿಗಿಂತ ಹೆಚ್ಚಾದಹಾಗೆ ಇತ್ತು.

ಶ್ರೀನಾಥಗೆ ಇವತ್ತೂ ಬೇಜಾರಾಗಿದೆ – ಮಾಟಿಕಚೋರ್ ನ ಒಳ್ಳೆಯ ಫೋಟೋ ತೆಗೆಯಲಾಗಲಿಲ್ಲ ಅಂತ. ಅನಂತ ತೆಗೆದ ಫೋಟೋ ಒಂದೇ ಈಗ ಸಾಕ್ಷಿ. ಮರ ಮೋಡ ಬೆಟ್ಟ ಎಲ್ಲ ಅದರಲ್ಲಿ ಇವೆ ಅನ್ನಿಸುತ್ತೆ. ಆದರೆ ನೋಡಿದರೆ ಪಿಚ್ಚೆನ್ನಿಸುತ್ತೆ.

ಬರವಣಿಗೆಯ ನಾಲ್ಕನೆಯ ದಿನ

ಮಾಟಿಕಚೋರ್ ಬಗ್ಗೆಯೇ ಇನ್ನೂ ಬರೆಯಬೇಕು ಅನ್ನಿಸುತ್ತದೆ. ಅಲ್ಲಿನ ಕ್ಯಾಂಪ್ ಲೀಡರ್ ಪುರುಷೋತ್ತಮ ನಮ್ಮನ್ನೆಲ್ಲ ಕುಲು ಕಣಿವೆಯ ದೀಪಗಳನ್ನು ನೋಡಲು ಕರೆದುಕೊಂಡು ಹೋದ. ಮಬ್ಬು ಬೆಳಕು ಮಂಕು ಬೆಳಕಾಗಿ ಪೂರ್ತಿ ಕತ್ತಲಾಗುವ ಹೊತ್ತಿಗೆ ಎರಡು ಕಿಲೋ ಮೀಟರ್ ನಡೆದು ಕಮರಿಯ ಹತ್ತಿರ ಹೋದೆವು. ಏಳೆಂಟು ಸಾವಿರ ಅಡಿ ಆಳದಲ್ಲಿ ಬಿಯಾಸ್ ನದಿ. ಕತ್ತಲಲ್ಲಿ, ಆಳದಲ್ಲಿ ಕುಲು ಊರಿನ ದೀಪಗಳು. ಬೆಳಕಿನ ಚುಕ್ಕೆಗಳು. ನಮ್ಮ ತಂಡದಲ್ಲಿದ್ದ ಯುವಕರು ಚಪ್ಪಳೆ ತಟ್ಟುತ್ತ ಗಟ್ಟಿಯಾಗಿ ಮಾತಾಡುತ್ತ ಗಲಾಟೆ ಮಾಡದೆ ಇದ್ದಿದ್ದರೆ, ಕೊಹಲಿ ಪಾಸ್‌ಗೆ ಹೊರಟ ತಂಡ ಹಾಡುತ್ತ ಕುಣಿಯುತ್ತ ಇರದಿದ್ದರೆ-ಅಲ್ಲ ಹೀಗೆ ಏಕೆ ಯುವಕರನ್ನು ಇತರರನ್ನು ಆಪಾದಿಸುವ ಹಾಗೆ ನಾನು ಬರೆಯಬೇಕು? ಒಬ್ಬೊಬ್ಬರ ಸಂತೋಷದ ಕಲ್ಪನೆಯೂ ಬೇರೆ ಬೇರೆ. ಸಂತೋಷ ಪಡುವ ರೀತಿಯೂ ಬೇರೆ. ಮೌನವು ಪ್ರಬುದ್ಧತೆಯ ಲಕ್ಷಣವೋ? ನಿಜವಾಗಲೂ? ಅಥವ ನನಗೆ ಹಾಗೆ ಕುಣಿದು ಕುಪ್ಪಳಿಸಲಾಗದ್ದಕ್ಕೆ ಹೀಗೆಲ್ಲ ಯೋಚನೆಯೋ?

ನೆಲ ಕಾಣದ ಆಕಾಶ ಕಾಣದ ಖಾಲಿಯೊಳಗೆ ಥಳ ಥಳ ದೀಪಗಳು. ಕತ್ತಲಲ್ಲಿ ಅರಳಿದ ಬೆಳಕಿನ ಹೂಗಳು. ಶ್ರೀನಾಥ ಯಾವ ಲೆನ್ಸು ಬಳಸಿದನೋ ಯಾವ ಯಾವ ಲೆಕ್ಕಾಚಾರ ಹಾಕಿದನೋ ಹೂದೀಪಗಳ ಅದ್ಭುತ ಫೋಟೋ ಬಂದಿದೆ. ಆ ಸ್ಲೈಡನ್ನು ತೆರೆಯ ಮೇಲೆ ನೋಡಿದರೆ-ಸದ್ಯ ಫೋಟೋದಲ್ಲಿ ಗಲಾಟೆ ಕೇಳುವುದಿಲ್ಲ-ಸುಂದರವಾಗಿದೆ. ಆದರೆ ನೆನಪಿನಲ್ಲಿ ಮಾತ್ರ ಸುಂದರ ದೃಶ್ಯದೊಡನೆಯೇ ಗಲಾಟೆಯ ಕಸಿವಿಸಿ ಕೂಡ ಮನಸ್ಸಿಗೆ ಬರುತ್ತಿದೆ. ಬಹಳ ಹೊತ್ತು ಅಲ್ಲಿರಲಿಲ್ಲ.

ನಮ್ಮ ಕಾಲಿನ ಹೆಜ್ಜೆ ಇಡುವಷ್ಟು ಜಾಗಕ್ಕೆ ಮಾತ್ರ ನಮ್ಮ ಟಾರ್ಚಿನ ಬೆಳಕು ಬಿಟ್ಟುಕೊಳ್ಳುತ್ತ ಒಬ್ಬರ ಹಿಂದೆ ಒಬ್ಬರು ಸಾಲಾಗಿ ಹಿಂದಿರುಗಿದೆವು. ಕಗ್ಗತ್ತಲ ಕಾಡಿನಲ್ಲಿ ಅಲ್ಲೊಂದು ಇಲ್ಲೊಂದು ಮರದ ತುಂಡು ಆಯ್ದು ಹೊತ್ತು ನಡೆದೆವು. ಚಳಿ ತುಂಬ ಇದೆ. ಕರಡಿಗಳು ಇವೆಯಂತೆ. ಬೆಂಕಿ ಹಾಕಿಕೊಳ್ಳಬೇಕು. ಬಹುಶಃ ಎಲ್ಲರಿಗೂ ಆಯಾಸವಾಗಿತ್ತು. ಕತ್ತಲ ಕಾಡು ತುಂಬ ಮಾತು ಇರಲಿಲ್ಲ. ಸ್ವಲ್ಪ ಹೊತ್ತು. ಯಾರೋ ಜೋರಾಗಿ ನಕ್ಕರು. ಯಾರೋ ಮಾತಾಡಿದರು. ಮತ್ತೆ ಮೌನ. ಸ್ವಲ್ಪ ಹೊತ್ತು. ಹಿಂದಿ, ಮರಾಠಿ, ಕನ್ನಡ, ಇಂಗ್ಲೀಶ್ ಮಾತು ನಿಶ್ಯಬ್ದ.

ಬರವಣಿಗೆಯ ಐದನೆಯ ದಿನ

ಧಗಧಗನೆ ಬೆಂಕಿ ಉರಿಯುತ್ತಿತ್ತು. ನವೆಲ್ಲ ಬೆಂಕಿಯ ಸುತ್ತಲೂ ಕೂತಿದ್ದೆವು. ಬಿಸಿ ಬೋರ್ನ್‌ವಿಟಾ ಕುಡಿದೆವು. ಬೆಂಕಿ ಉರಿದಂತೆಲ್ಲಾ ಬದಲಾಗುವ ಬೆಳಕಿನಲ್ಲಿ ಮತ್ತು ಶಾಖದಲ್ಲಿ ನಮ್ಮೆಲ್ಲರ ಬಿಸಿಯೇರುವ ಹೊಳೆಯುವ ಮುಖಗಳು ನಮ್ಮ ನಮ್ಮ ಪರಿಚಿತ ಮುಖಗಳಂತೆಯೇ ಕಾಣುತ್ತಿರಲಿಲ್ಲ. ಗಂಟಲಲ್ಲಿ ಸುಡುವ ಬೋರ್ನ್‌ವಿಟಾ, ಕಿವಿ ಕೆನ್ನೆಯೆಲ್ಲ ಮುಚ್ಚಿದ ಟೋಪಿಗಳು. ನಮ್ಮೊಳಗಿನ ಮಾತುಗಳೂ ಬೆಚ್ಚಗಾಗಿ ಹಾಡಾಗಿ ನಗುವಾಗಿ ನಗೆಹನಿಯಾಗಿ ಕುಣಿತವಾಗಿ ಹೊರಬರಲು ತಯಾರಾಗುತ್ತಿದ್ದವು. ಬೆಂಕಿಯ ಬೆಳಕು ಹರಡಿರುವಷ್ಟು ಜಾಗ ಬಿಟ್ಟರೆ ಉಳಿದೆಲ್ಲ ಕಗ್ಗತ್ತಲು. ಇದು ಯಾವ ಊರು ಇದು ಯಾವ ಜಾಗ ಇದು ಯಾವ ನಾವು? ಇದನ್ನು ಮಾಟಿಕಚೋರ್ ಅಂತಲೇ ಯಾಕೆ ಕರೆಯಬೇಕು? ಈ ಬೆಂಕಿಯೂ ಬಿಸಿಯೂ ಸುತ್ತಲೂ ಕುಳಿತ ಮನುಷ್ಯರ ಮುಖಗಳೂ ಬೆಳಕಿನ ಮತ್ತು ಶಾಖದ ವರ್ತುಲ ದಲ್ಲಿ ನಮ್ಮನ್ನು ಎತ್ತಿ ಹಿಡಿದಿರುವ ನೆಲವೂ-ಇವು ಮಾತ್ರ ನಿಜ. ಸುತ್ತಲು ಕವಿದಿರುವ ಕತ್ತಲು ಮಾತ್ರ ನಿಜ. ಅದು ಕತ್ತಲು ಮಾತ್ರ. ನಮ್ಮೊಳಗಿರುವ ಮನುಷ್ಯ ಮನಸ್ಸು ಮಾತ್ರ ನಿಜ. ಅದು ಮನುಷ್ಯ ಮನಸ್ಸು ಮಾತ್ರ.

ಉದಾತ್ತ ಸ್ಥಿತಿಯಲ್ಲಿ ಎಷ್ಟು ಹೊತ್ತು ಇರಲು ಸಾಧ್ಯ. ಚಾವ್ಲಾ, ಸ್ವಲ್ಪ ಉಬ್ಬು ಹಲ್ಲಿನ, ಗುಂಡು ಮುಖದ, ದಪ್ಪ ಹೊಟ್ಟೆಯ, ಕುಳ್ಳು ದೇಹದ ಚಾವ್ಲಾ, ‘ನನ್ನ ಸ್ವಂತ ರಚಿತ ಕವನಗಳನ್ನು ಓದುತ್ತೇನೆ’ ಅಂತ ಘೋಷಿಸಿ ಅತೀ ಕ್ಷುದ್ರ ಪದ್ಯಗಲನ್ನು ಓದಿದ. ಹಾಳಾದ ನನ್ನ ವಿಮರ್ಶಕ ಬುದ್ಧಿ ಕವನವನ್ನು ವಿಮರ್ಶಿಸಿತೇ ಹೊರತು ಆ ಜಾಗದಲ್ಲಿ ಆ ಬೆಂಕಿ ಬೆಳಕಿನಲ್ಲಿ ಯಾರೋ ಮನುಷ್ಯ ಏನೋ ಹೇಳಲು ಬಯಸಿದ, ಅದಕ್ಕೆ ಅವನ ಕವನ ಬರೀ ಒಂದು ನೆಪ, ಅವನ ಬಯಕೆ ಮಾತ್ರ ನಿಜ ಅಂತ ಅರ್ಥ ಮಾಡಿಕೊಳ್ಳಲಿಲ್ಲ. ಇಂದೂರಿನ ಗುಪ್ತಾಜೀ ಕುಣಿದ. ಗಂಡಸಿನ ದೃಡತೆಯೂ ಇಲ್ಲ ಹೆಣ್ಣಿನ ಲಾಸ್ಯವೂ ಇಲ್ಲ. ಸಿನಿಮಾ ಡ್ಯಾನ್ಸಿನ ಕೆಟ್ಟ ಅನುಕರಣೆ. ಅದೇ ಇಂದೂರಿನ ಮೂನೂ, ಮೀನೂತಾಯಿ, ಆಶಾ ಬೋಂಸ್ಲೆಯ ಹಾಡನ್ನು ಸಾಧ್ಯವಾದಷ್ಟು ಅವಳದೇ ಧ್ವನಿಯಲ್ಲಿ ಹಾಡಿದಳು. ಅನುಕರಣೆಯ ಹಿಂದೀ ಸಿನಿಮಾ ಹಾಡು. ಅವಕ್ಕೆಲ್ಲ ಜನರ ಚಪ್ಪಾಲೆ, ಮೆಚ್ಚುಗೆ, ಈ ನರೋನಾ, ‘ವಹವ್ವಾ’ ಅಂತ ಮೆಚ್ಚಿದರೆ ಮೆಚ್ಚಿಕೊಳ್ಳಲಿ. ಅವನು ಸ್ವಲ್ಪ ಎಳಸು ಎಂದು ನೋಡಿದರೇ ತಿಳಿಯುತ್ತದೆ. ಆದರೆ ರಾಜೂನೂ ತಿಮ್ಮೇಗೌಡರೂ ಇಂಥ ಪದ್ಯ ಇಂಥ ಹಾಡು ಇಂಥ ಹುಣಿತ ಸುಖಿಸುತ್ತಿದ್ದಾರಲ್ಲ! ಆದರೆ ಈಗ ತಿಳಿಯುತ್ತಿದೆ. ಹೊತ್ತ ಭಾರ ನಡೆದ ಆಯಾಸ, ಚಳಿ, ನೋಡಿದ ಪ್ರತಿ ನಿಮಿಷ ವಿನೂತನ ದೃಶ್ಯಗಳು, ಸದಾ ಎಚ್ಚರವಾಗಿದ್ದ ಕಾಲು ಕಣ್ಣು-ನಮ್ಮೆಲ್ಲರ ಇಡೀ ಮೈ ಮನಸ್ಸು ಕಣ್ಣು ಬುದ್ಧಿ ಎಲ್ಲವನ್ನೂ ದಿನವಿಡೀ ಸುಮ್ಮನೆ ನೋಡುವುದಕ್ಕೆ‌ಏ ತೊಡಗಿಸಿಕೊಂಡಿದ್ದೇವಲ್ಲ ಎಲ್ಲದರ ಬಿಗಿ ಕಳೆಯುತ್ತ ರಿಲಾಕ್ಸ್ ಆಗುವಾಗ ಹಾಡು ಕುಣಿತ ಮಾತು ನಗು ಇವೆಲ್ಲ ಅನಿವಾರ್ಯವಾಗಿ ಬೇಕಾಗಿತ್ತು ಅಂತ. ಕವನ ದೈಹಿಕವಾಗಿಯೂ ಅನಿವಾರ್ಯ. ಹಾಡಲಾರದ ಶರ್ಮ, ಪಂಜಾಬಿನವನು, ನಗೆಹನಿ ಹೇಳಿದ. ನಾವೆಲ್ಲ ನಗಬೇಕಾಯಿತು. ನಗೆಹನಿ ಕೇಳಿದಾಗ ನಗುವುದು ಸಭ್ಯತೆಯ ಒಂದು ಲಕ್ಷಣ. ಆದರೂ ಎಲ್ಲೋ ಕೊರತೆ ಅನ್ನಿಸುತ್ತಿತ್ತು. ನಮ್ಮ ಮನಸ್ಸು ಹೃದಯ ತುಂಬಿ ಪಡೆವ ಮತ್ತು ಕೊಡುವ ರಂಜನೆಗೂ ಹಾಗೆ ರಂಜನೆ ಕೊಡುವುದು ಸಾಧ್ಯವಾಗಬಹುದು ಎಂಬ ಅರಿವೇ ಇಲ್ಲದೆ ಸುಮ್ಮನೆ ಸೆಕೆಂಡ್ ಹ್ಯಾಂಡ್ ರಂಜನೆ ಕೊಡುವುದಕ್ಕೂ ಸಾಧ್ಯವೇ ಇಲ್ಲವೇ? ಸಂತೋಷ ಕೂಟಗಳಲ್ಲಿ ಟ್ರೆಕಿಂಗ್‌ಗಳಲ್ಲಿ ಇಂಥ ಕೊರತೆ ಕಾಣುತ್ತದೆ. ಹೇಳಬೇಕಲ್ಲ ಅಂತ ಹೇಳಿದ್ದು. ಮೆಚ್ಚಿಸಬೇಕು ಅಂತ ಹಾಡಿದ್ದು. ಮೆಚ್ಚುವುದು ಸಭ್ಯತೆಯ ಲಕ್ಷಣ ಅಂತ ತಿಳಿದು ಮೆಚ್ಚಿದ್ದು ಎಲ್ಲ ಬರೀ ಸುಳ್ಳು ಅನ್ನಿಸುತ್ತದೆ.

ಅದು ಈಗಲೂ ನನ್ನ ಕಿವಿಗೆ ಕೇಳಿಸುವಂತೆ ಇದೆ. ಚಂದ್ರಾ ಒಂದು ಹಾಡು ಹೇಳಿದಳು. ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಅನ್ನುವ ಹಾಡು. ಚಂದ್ರಾ ಯಾವತ್ತೂ ಅಷ್ಟು ಚೆನ್ನಾಗಿ ಹಾಡಿರಲಿಲ್ಲ. ಅವತ್ತು ಸುಮ್ಮನೇ ಹೇಳಿದಳು. ಐ ಕುಡ್ ಫೀಲ್ ದಟ್ ಎವೆರಿ ಒನ್ ವಾಸ್ ರಪ್ಟ್. ಎಲ್ಲರೂ ಮೌನವಾಗಿದ್ದರು. ಅದು ಸಭ್ಯತೆಯ ಮೌನವಲ್ಲ. ಅದಕ್ಕೇ ಬೆಂಕಿ ಉರಿಯುವ ಶಬ್ದ ಕೂಡ ಸ್ಪಷ್ಟವಾಗಿ ಕೇಳಿಸುತ್ತಿತ್ತು. ನಿಶ್ಚಲತೆ ಇತ್ತು. ಅದಕ್ಕೇ ನನಗೆ ತಲೆ ಎತ್ತಿ ಬೆಂಕಿಯ ಬೆಳಕಲ್ಲಿ ಯಾರ ಮುಖವನ್ನೂ ನೋಡಲು ಆಗಲಿಲ್ಲ. ಎಲ್ಲರೂ ಹಾಡನ್ನು ನಿಜವಾಗಿ ಕೇಳುತ್ತಿದ್ದರು. ಹಿಮಾಲಯದ ಘನ ಮೌನದಲ್ಲಿ ಕನ್ನಡ ಹಾಡು ಕನ್ನಡ ಹಾಡಾಗಿರಲಿಲ್ಲ. ಬರೀ ಹಾಡಾಗಿತ್ತು. ಸುಮ್ಮನೇ ಹಾಡಿದಳು. ಹಾಡು ಮೌನದಲ್ಲಿ ತನಗೆ ತಾನೇ ಪ್ರತಿಧ್ವನಿಯಾಗುತ್ತಿತ್ತು. ಅದನ್ನು ಚೆನ್ನಾಗಿದೆ ಎಂದು ಯಾರೂ ಹೇಳಬೇಕಾಗಿರಲಿಲ್ಲ. ಇತ್ತು. ನಮ್ಮನ್ನು ಪೂರ್ತಿ ತೊಡಗಿಸಿಕೊಂಡು ಹಾಡಿದರೆ, ಕೇಳಿದರೆ, ಹೇಗಿರುತ್ತದೆ ಅಂತ ತಿಳಿಯಿತು. ಆದರೆ ಹಾಡು ಹಾಡಲಾಗದ ನಾನು ಸುಮ್ಮನೆ ಕಲ್ಪಿಸಿಕೊಳ್ಳಬೇಕಷ್ಟೆ- ಹಾಡುತ್ತಿರುವಾಗ ಹಾಡುವ ಮನಸ್ಸು ಹೇಗಿರುತ್ತದೆ ಅಂತ. ಇನ್ನೂ ಒಂದು ಗೊತ್ತಾಯಿತು. ಹಾಡಿಗೆ ಭಾಷೆ ಬೇಡ. ಭಾಷೆಯ ಅರ್ಥ ಕೂಡ ಬೇಡ. ಅರ್ಥ ಆಗುತ್ತೆ-ಹಸಿವು ‘ಆಗು’ ವ ಹಾಗೆ, ಸಂತೋಷ ‘ಆಗು’ ವ ಹಾಗೆ. ಅವತ್ತು ಅಲ್ಲಿದ್ದ ಎಲ್ಲರಿಗೂ ಹಾಡು ಅರ್ಥ ಆಯಿತು. ಯಾಕೆಂದರೆ ಆಗ ನಾನು ಹಾಡು ಕೇಳುತ್ತ ಕನ್ನಡ ಗೊತ್ತಿರುವ ಚಂದ್ರಳ ಗಂಡ ಆಗಿರಲಿಲ್ಲ. ಅಲ್ಲಿದ್ದ ಸುಮ್ಮನೆ ಎಲ್ಲ ಕೇಳುವವರ ಹಾಗೆ ಕೇಳುವವನಷ್ಟೇ ಆಗಿದ್ದೆ. ನನಗೆ ಆದದ್ದು, ಎಲ್ಲರ ಜೊತೆ ಕೇಳುತ್ತ ಅವರಿಗೆಲ್ಲ ಏನು ಆಯಿತೋ ಅದೇ.

ಮತ್ತೆ ಅದೇ. ಮನುಷ್ಯನ ಮನಸ್ಸು ಒಂದೇ ಎತ್ತರದಲ್ಲಿ ಬಹಳ ಹೊತ್ತು ಇರುವುದಿಲ್ಲ. ನಾನು ಹಾಡನ್ನು ಇಂಗ್ಲೀಷಿನಲ್ಲಿ ಅವರಿಗೆಲ್ಲ ವಿವರಿಸಿದೆ. ಭಾಷೆಯ ಜಂಬ. ಶ್ರೀನಾಥನಿಗೆ ಖುಷಿ ಆಗಿತ್ತು. ‘ಆ ಮೀನೂ ತಾನೇ ಆಶಾ ಅಂದುಕೊಂಡಿದ್ದಾಳೆ ಮೇಡಂ. ನೀವು ಹಾಡಿ ಅವಳ ಜಂಬ ಇಳಿಯಿತು’ ಅಂದು ಖುಷಿಪಟ್ಟ. ಅಥವ ಅದು ಖುಷಿಯ ಕೆಳಗಿನ ಹಂತದ ವಿವರಣೆಯೊ, ನಮ್ಮ ಶುದ್ಧ ಅನುಭವವನ್ನು ನಮಗೆ ಪರಿಚಿತವಾದ ಹೆಸರಿರುವ ಭಾವನೆಗಳ ಸರಳ ರೂಪಕ್ಕೆ ಇಳಿಸುವ ಎಷ್ಟೊಂದು ಆತುರ.

ಹಿಮಾಲಯದ ಕಗ್ಗತ್ತಲಿನ ಬೆಂಕಿ, ಬೆಳಕು, ಶಾಖ, ಚಂದ್ರ ಹಾಡಿದ ಹಾಡು, ಹಾಡಿನ ಪದಗಳ ನಡುವೆ ಇದ್ದ ಮೌನ, ಅವನ್ನೆಲ್ಲ ಹಂಚಿಕೊಂಡ ನಲವತ್ತು ಮನಸ್ಸುಗಳು ಇನ್ನೂ ನನ್ನೊಳಗೆ ಇವೆಯಲ್ಲ. ಇದೇನು ಕಡಿಮೆಯೆ?

ಬರವಣಿಗೆಯ ಆರನೆಯ ದಿನ

ಯಾಕೋ ಹೀಗೆ ಬರೆಯುವುದು ಸರಿಹೋಗುತ್ತಿಲ್ಲ. ಈಗ ಇದುವರೆಗೆ ಬರೆದದ್ದನ್ನು ಓದಿದರೆ ಅನಗತ್ಯವಾಗಿ ತುಂಬ ಸುಂದರವಾಗಿ ಬರೆದೆನೇನೋ ಅನ್ನಿಸುತ್ತಿದೆ. ರಾಮು ಹೇಳಿದ್ದ-ನಿನ್ನ ಗದ್ಯ ತುಂಬ ಚೆನ್ನಾಗಿದೆ. ನೀನು ಬರೆಯಲ್ಲ ಅಷ್ಟೆ. ನೀನು ನಿನ್ನನ್ನೇ ಅನುಕರಿಸುವ ಅಪಾಯ ತಪ್ಪಿಸಿಕೋ-ಅಂತ. ತಿಮ್ಮೇಗೌಡರು ನಾನು ಬರೆದದ್ದನ್ನು ಓದಿದಮೇಲೆ ‘ತುಂಬ ಪೊಯೆಟಿಕ್ ಆಗಿದೆ’ ಅಂದಾಗ ರಾಮು ಹೇಳಿದ ಮಾತು ಜ್ಞಾಪಕ ಬಂತು. ಒಂದು ಸುಂದರವಾದ ವಾಕ್ಯ ರಚಿಸಿದ ಮೇಲೆ ಅದರ ಬಗ್ಗೆ ಮೋಹ ಹುಟ್ಟುತ್ತಲ್ಲ ಅದನ್ನು ತಪ್ಪಿಸಿಕೊಳ್ಳಬೇಕು. ಆಗುತ್ತಾದೋ ಇಲ್ಲವೋ ಗೊತ್ತಿಲ್ಲ. ಅಥವ ಹೀಗೆಲ್ಲ ಬರೆಯುತ್ತಿರುವುದೂ ಆತ್ಮ ವ್ಯಾಮೋಹದ ಒಂದು ಪರಿಯೋ? ಈಗ ಎಡಗೈಯಲ್ಲಿ ಒಂದು ಸೇಬು ಹಿಡಿದು ಕಚ್ಚಿ ತಿನ್ನುತ್ತಾ ಬರೆಯುತ್ತಿದ್ದೇನೆ. ಬ್ಯಾಂಕಿಗೆ ಹೋಗಬೇಕು. ಟಿ.ಪಿ ಅಶೋಕನಿಗೆ ಮತ್ತು ಅಮ್ಮನಿಗೆ ಕಾಗದ ಬರೆಯಬೇಕು. ‘ಪ್ರಜ್ಞಾಪ್ರವಾಹ ತಂತ್ರ’ದ ಬಗ್ಗೆ ಗಿರಡ್ಡಿ ಕಾಗದ ಬರೆಯುತ್ತಲೇ ಇದ್ದಾರೆ. ಮಾಡಲೇಬೇಕಾದ ಬೇರೆ ಕೆಲಸಗಳೂ ಇವೆ. ಆದರೆ ಇತ್ತೀಚಿಗೆ ಇದನ್ನೇ ಬರೆಯಬೇಕು ಅನ್ನಿಸುತ್ತಿದೆ. ಬೇಗ ಸಾಧ್ಯವಾದಷ್ಟು ಬೇಗ ಮುಗಿಸಬೇಕು.

ಬಿಂಗ್ಟಾ ಟಾಪಿನಲ್ಲಿ ಒಬ್ಬ ಮನುಷ್ಯ ಒಣಗಿದ ಪುಳ್ಳೆಗಳನ್ನು ಗುಪ್ಪೆ ಮಾಡಿ ಬೆಂಕಿ ಹಾಕಿ ಟೀ ಕಾಯಿಸುತ್ತಾ ಕುಳಿತಿದ್ದ. ಅಂದು ಬೆಳಗ್ಗೆ ಮಾಟಿಕಾಚೋರ್‌ನ ಕ್ಯಾಂಪ್ ಲೀಡರ್ ಪುರುಷೋತ್ತಮ ಜೋರು ಮಾಡಿ, ಹೆದರಿಸಿ, ಆತುರ ಮಾಡಿ ನಮ್ಮನ್ನೆಲ್ಲ ಬೇಗ ಹೊರಡಿಸಿದ್ದ. ಇವತ್ತು ಇಪ್ಪತ್ತೈದು ಕಿಲೋಮೀಟರ್ ನಡೆಯುವುದಿದೆ. ಬೇಗ ನಡೆಯದಿದ್ದರೆ ಸಂಜೆ ಆರು ಗಂಟೆಯಾದರೂ ನೀವು ಜಾರಿ ಹಳ್ಳಿ ತಲುಪಲು ಆಗುವುದಿಲ್ಲ ಅಂದ. ಅದು ನಮಗೇ ಹೇಳಿದ್ದು. ನಲವತ್ತು ಜನ ಗುಂಪಿನಲ್ಲಿ ಕೊನೆಯ ಮೊವರು ಯಾವಾಗಲೂ ನಾವೇ – ಶ್ರೀನಾಥ, ಚಂದ್ರ ಮತ್ತು ನಾನು. ಕೆಲವು ಬಾರಿ ನಮ್ಮ ಜೊತೆಗೆ ಅನಂತ ಅಥವ ರಾಜು ಅಥವ ತಿಮ್ಮೇಗೌಡ ಅಥವ ಶ್ಯಾಮಲಾ.

ಸೂರ್ಯ ಎದ್ದು ಮೈ ಮುರಿದು ಆಕಳಿಸುತ್ತ ಕಾಫಿ ಕುಡಿಯುವ ಹೊತ್ತಿಗೆ ಆಗಲೇ ನಾವು ಬ್ರಿಂಗ್ಟಾ ಗುಡ್ಡ ಏರಲು ತೊಡಗಿದ್ದೆವು. ನಮಗಿಂತ ಮುಂದಾಗಿ ಬಂದವರು ಕೂಡ ಇನ್ನೂ ಅಲ್ಲಲ್ಲೇ ಗುಡ್ಡದ ಮೇಲೆ ಹತ್ತಲು ಒದ್ದಾಡುತ್ತಿದ್ದರು. ಬಹಳ ಕಡಿದಾದ ಗುಡ್ಡ. ಮುಂದಕ್ಕೆ ಹೋಗಬೇಕು ಅಂದರೆ ಮೇಲಕ್ಕೇ ಏರಬೇಕು. ಆದರೆ ಹೆಜ್ಜೆ ಇಟ್ಟರೆ ಹಿಂದಕ್ಕೇ ಜಾರುವಂತಾಗುತ್ತದೆ. ಶ್ರೀನಾಥನನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ. ನಮ್ಮೆಲರ ಹಾಗೆ ಬೆನ್ನಮೇಲೆ ಅವನ ಚೀಲದ ಭಾರ ಅವನಿಗೂ ಇದೆ. ಜೊತೆಗೆ ಹೆಗಲಿಗೆ ಒಂದು ಬ್ಯಾಗು. ಅದರಲ್ಲಿ ಕ್ಯಾಮೆರಾ, ಲೆನ್ಸುಗಳು, ಫಿಲಂ ರೋಲುಗಳು,, ಫಿಲ್ಟರುಗಳು ಮತ್ತು ಫೊಟಾಗ್ರಫಿಯ ಒಂದು ದಪ್ಪನೆಯ ರೆಫರೆನ್ಸ್ ಪುಸ್ತಕ. ಕಂಕುಳು ಇನ್ನೊಂದರಲ್ಲಿ ಮೂರು ಕಾಲಿನ ಕ್ಯಾಮೆರಾ ಸ್ಟ್ಯಾಂಡು. ದೇವರೇ. ಸಹಾಯ ಮಾಡಬೇಕು ಅನ್ನಿಸಿದರೂ ಸಹಾಯ ಮಾಡುವುದಕ್ಕೆ ಮೈ ಮನಸ್ಸುಗಳು ಒಪ್ಪುವುದಿಲ್ಲ. ನನ್ನ ಎದು ಒಡೆದುಕೊಳ್ಳುವುದು ನನಗೇ ಕೇಳಿಸುತ್ತಿದೆ. ಎಷ್ಟು ಜೋರಾಗಿ ಹೊಡೆದುಕೊಳ್ಳುವುದು ಸಾಧ್ಯವಿದೆಯಲ್ಲ ಅದಕ್ಕೆ. ಬೆಳಗಿನ ಚಳಿ ಮೈಗೆ ತಗಲುತ್ತಲೇ ಇರಲಿಲ್ಲ. ಉಸಿರು ಬಿಸಿ ಬಿಸಿ. ಮೂಗಿನಲ್ಲಿ ಉಸಿರಾಡಿದರೆ ಸಾಕಾಗುವುದಿಲ್ಲ. ಬಾಯಿಯನ್ನೂ ತೆಗೆದು ಗಾಳಿಯನ್ನು ಒಳಗೆಳೆದುಕೊಳ್ಳಬೇಕು ಅನ್ನಿಸುತ್ತದೆ. ಹತ್ತುವುದು ಕಷ್ಟ. ನಿಂತು ಸುಧಾರಿಸಿಕೊಳ್ಳುವುದೂ ಕಷ್ಟ. ನಾವು ಎಷ್ಟುತಪ್ಪು ತಿಳಿದಿದ್ದೆವು. ನಮ್ಮ ಟ್ರೆಕಿಂಗಿನ ಆರಂಭದ ದಿನ ಜಾನಾಕ್ಕೆ ಏರಿದ ಏಳು ಕಿಲೋ ಮೀಟರಿನ ದಾರಿಯೇ ಕಡುಕಷ್ಟ ಅಂದುಕೊಂಡಿದ್ದೆವಲ್ಲ. ಮೆಟ್ಟಿಲು ಮೆಟ್ಟೀಲು ಏರುತ್ತ ಏರುವುದಕ್ಕೆ ಕೊನೆಯೇ ಇಲ್ಲವೆ ಎಂದು ಹೈರಾಣಾಗಿದ್ದೆವು. ಆಗಾಗ ಮೆಟ್ಟಿಲ ಮೇಲೆ ಕುಳಿತುಕೊಳ್ಳುತ್ತ ಈ ಹಾಳಾದ ತುಂಬ ಎತ್ತರದ ಮೆಟ್ಟಿಲುಗಳು ಇಲ್ಲದಿದ್ದರೇ ಹತ್ತುವುದು ತುಂಬ ಸುಲಭ ಅಂದುಕೊಂಡಿದ್ದೆವು. ಎರಡೇ ದಿನದ ಹಿಂದೆ. ದೂರ ದೂರ ಅಲ್ಲಲ್ಲಿ ಇರುವ ಮರಗಳ ನಡುವೆ ಒಣಮಣ್ಣಿನ ಸಣ್ಣ ಸಣ್ಣ ನುಣ್ಣನೆ ಕಲ್ಲುಗಳ ಸದಾ ಜಾರುವ ಭಯದ, ದಾರಿಯೇ ಇಲ್ಲದ ದಾರಿಯಲ್ಲಿ ಮೇಲೆ ಏರುವುದು ಇನ್ನೂ ಎಷ್ಟು ಕಷ್ಟ. ಆಗಲೇ ಒಂದಷ್ಟು ದೂರ ಏರಿದವರ ಮೇಲೆ ಅಸೂಯೆಯಾಗುತ್ತದೆ – ಅವರು ಆಗಲೇ ಅಷ್ಟು ಹತ್ತಿ ಮುಗಿಸಿಬಿಟ್ಟಿದ್ದಾರಲ್ಲ ಅಂತ. ಎಳೆ ಬಿಸಿಲು ಇತ್ತು. ಎಳೆ ನೆರಳುಗಳೂ ಇದ್ದವು. ಹಕ್ಕಿಗಳೂ ಇದ್ದವೋ ಏನೋ. ಏನೂ ನೋಡಬೇಕು ಅನ್ನಿಸಲಿಲ್ಲ. ಏನೂ ಕೇಳಬೇಕು ಅನ್ನಿಸಲಿಲ್ಲ. ಏರಿ ಏರಿ ಎದೆ ಬಡಿದುಕೊಳ್ಳುತ್ತದೆ. ಗಂಟಲು ಒಣಗಿಹೋಗುತ್ತದೆ. ಬೇಗ, ಸಾಧ್ಯವಾದಷ್ಟು ಬೇಗ ಈ ಏರು ಮುಗಿಯಬೇಕು ಅನ್ನಿಸುತ್ತಿತ್ತು. ಅಷ್ಟೆ. ಆದರೆ ಹೆಜ್ಜೆ ಹೆಜ್ಜೆಗೂ ಹತ್ತುವುದು ಮಾತ್ರ ತುಂಬ ನಿಧಾನ ನಿಧಾನ ಆಗುತ್ತಿತ್ತು.

ಬರವಣಿಗೆಯ ಏಳನೆಯ ದಿನ

ಇಂಗ್ಲೀಷಿನಲ್ಲಿ ಬ್ರೆತ್ ಲೆಸ್ ಅನ್ನುವ ಮಾತು ಇದೆ. ನಾವು ಬ್ರಿಂಗ್ಟಾ ತುದಿ ತಲುಪಿದಾಗ ಅಕ್ಷರಶಃ ಆ ಸ್ಥಿತಿಯಲ್ಲಿದ್ದೆವು. ಅದಿನ್ನೂ ನಮ್ಮ ನಡಿಗೆಯ ಮೂರನೆಯ ದಿವಸ. ಬದುಕಿನಲ್ಲಿ ಯಾವತ್ತೂ ಅಷ್ಟು ಎತ್ತರ ಅಷ್ಟು ಕಷ್ಟಪಟ್ಟು ಹತ್ತಿರಲಿಲ್ಲ. ಹತ್ತಬೇಕಾದ ಎತ್ತರಗಳು ಇನ್ನೂ ಬಹಳ ಇವೆ. ಇನ್ನೂ ಎಂಟು ದಿನ ನಡೆಯುವುದು ಇದೆ. ನಮ್ಮಲ್ಲೆ ಇಬ್ಬರ ಸಂಭಾಷಣೆ ಹೀಗಿತ್ತು: ‘ಎಂಥ ಕ್ಲೈಂಬು ಮಾರಾಯ ಇದು. ಚಡ್ದಿ ಹರಿಯುತ್ತೆ.’ ‘ಹರಿಯುವುದು ಚಡ್ಡಿ ಮಾತ್ರ ಅಲ್ಲ.’

ಬರವಣಿಗೆಯ ಎಂಟನೆಯ ದಿನ

ಆ ಮಾತಿನ ಜೊತೆಗೆ ನಾವು ಬ್ರಿಂಗ್ಟಾ ಟಾಪನ್ನು ಹತ್ತಿ ಮುಗಿಸಿದೆವು. ಹತ್ತು ಸಾವಿರ ಅಡಿ ಎತ್ತರದಲ್ಲಿದ್ದೆವು. ಆವಾಗಿನ ಒಂದು ಕಾಲು ಗಂಟೆಯನ್ನು ಕುರುತು ಬರೆಯುವುದೇ ಕಷ್ಟ. ಸುಮಾರು ನಾಲ್ಕು ದಿನ ತೆಗೆದುಕೊಂಡು ಮನಸ್ಸಿನಲ್ಲಿ ಏನೇನೋ ಮಾತುಗಳನ್ನು ಹೇಗೆ ಹೇಗೋ ಜೋಡಿಸಿಕೊಂಡು ಹೀಗೆ ಮತ್ತೆ ಆರಂಭಿಸಿದ್ದೇನೆ. ಒಂದೇ ಕಾಲದಲ್ಲಿ ಬೇರೆ ಬೇರೆ ರೀತಿಯ ಅನುಭವಗಳನ್ನು ತೀವ್ರವಾಗಿ ಆಗುತ್ತಿದ್ದುದನ್ನು ಹೇಗೆ ಬರವಣಿಗೆಯಲ್ಲಿ ಹೇಳಬಹುದು? ಒಂದು ಸಾರಿಗೆ ಒಂದೇ ಅಕ್ಷರ ಬರೆಯಲು ಸಾಧ್ಯ. ಅಕ್ಷರದ ಅತಿ ಪರಮಾಣುವುವಿನಿಂದ ಅನುಭವದ ಅಖಂಡ ಸಂಕೀರ್ಣತೆಯನ್ನು ಹಿಡಿದು ಕೊಡುವುದೇ ಮೂರ್ಖತನವೇನೋ.

ಆ ತುದಿಯಿಂದ ಕಂಡ ನೋಟ ಬ್ರೆತ್ ಟೇಕಿಂಗ್. ಅದು ಸರಿಯಾಗಿ ನನ್ನ ಗಮನಕ್ಕೆ ಒದಗುವ ಮೊದಲೇ ಅಥವ ಒದಗುತ್ತಿರುವಾಗಲೇ ಮನಸ್ಸು ಶಿವಮೊಗ್ಗಕ್ಕೆ ಮೈಸೂರಿಗೆ ಸಾಗರಕ್ಕೆ ಮಂಡ್ಯಕ್ಕೆ ನನ್ನ ಜೊತೆ ಆಗ ಇಲ್ಲದಿದ್ದ ಇದ್ದಿದ್ದರೆ ಅನ್ನಿಸುವಂಥ ಗೆಳೆಯ ಗೆಳತಿಯರನ್ನು ಕಲ್ಪಿಸಿಕೊಂಡು ಎಲ್ಲ ಕಡೆಗೆ ಕ್ಷಣದ ಅರ್ಧ ಭಾಗದಲ್ಲಿ ಹೋಗಿಬಂತು. ಆದರೆ ಮೈ ಮಾತ್ರ- ಬೆನ್ನ ಮೇಲಿನ ಭಾರವನ್ನು ದೊಪ್ಪನೆ ನೆಲಕ್ಕೆ ಎಸೆದು, ಎರಡೂ ಕಾಲನ್ನು ಎರಡು ದಿಕ್ಕಿಗೆ ವಿಶಾಲವಾಗಿ ಚಾಚಿ ಕೋತುಕೊಂಡರೆ, ಹಾಗೇ ಬೆನ್ನನ್ನೂ ನಿಧಾನವಾಗಿ ನೆಲಕ್ಕೆ ಒರಗಿಸಿ ಮಲಗಬೇಕೆಂದು ಅನ್ನಿಸುತ್ತದೆ. ದೇಹದಲ್ಲಿ ಒಂದೊಂದೂ ಅವಯವಗಳು ಇರುವುದು, ಕೀಲುಗಳು ಇರುವುದು, ಸ್ಪಷ್ಟವಾಗಿ ಅರಿವಾಗುವಂತೆ ಇರುತ್ತದೆ. ಒಂದೊಂದೇ ಕ್ಷಣ ಕಳೆದ ಹಾಗೆ ಎದೆಯ ಬಡಿತ ನಿಧಾನವಾಗಿ ಕಡಿಮೆಯಾಗುತ್ತ ಮಾಮೂಲಿಗೆ ಬರುವುದನ್ನು, ಉಸಿರಿನ ಏದು ಕಡಿಮೆಯಾಗುತ್ತ ಆಗುತ್ತ ಉಸಿರಿಗೆ ಮೊದಲಿನ ಲಯ ವಾಪಸ್ಸು ಸಿಕ್ಕುವುದನ್ನು ಅನುಭವಿಸುವುದಕ್ಕೆ ತುಂಬ ಹಿತವಾಗುತ್ತದೆ. ಎಳೆಯ ಬಿಸಿಲು ಸ್ವಲ್ಪ ಸ್ವಲ್ಪ ಬಡಿಯುತ್ತಿತ್ತು. ಸೂರ್ಯ ಡ್ರೆಸ್ ಮಾಡಿಕೊಂಡು ರೆಡಿಯಾಗಿ ತನ್ನ ಕೆಲಸ ಶುರುಮಾಡಿದ್ದ. ಕಣ್ಣು ಮುಚ್ಚಿಕೊಂಡಿದ್ದರೂ ಬಿಸಿಲು, ಸೂರ್ಯನ ಶಾಖ ಕಣ್ಣಿನ ರೆಪ್ಪೆಯೊಳಗೆಲ್ಲ ನಿಧಾನವಾಗಿ ಬಣ್ಣಗಳನ್ನು ಮೂಡಿಸುತ್ತ ಮೈಯನ್ನು ಬೆಚ್ಚಗಾಗಿಸುತ್ತಿದ್ದವು. ಗಟ್ಟಿ ನೆಲ ಬೆನ್ನ ಕೆಳಗೆ ಹಿತವಾದ ನೋವನ್ನು ಒತ್ತಿ ಎತ್ತಿ ಹಿಡಿಯುತ್ತಿತ್ತು. ಕೂದಲಿಗೆ ತಲೆಗೆ ಅಂಗೈಗೆ ಬೆರಳುಗಳಿಗೆ ಮಣ್ಣಿನ, ಕಲ್ಲಿನ ಕಣಗಳು ತಗಲುತ್ತಿದ್ದವು. ಎಲ್ಲೋ ಸೊಂಟದ ಹತ್ತಿರ ಒತ್ತಿಕೊಳ್ಳುತ್ತಿರುವ ಮಲಗಿದ ಮೈಯ ಸಮತೋಲನ ಕೆಡಿಸುತ್ತಿರುವ ಒತ್ತಿ ಒತ್ತುತ್ತಿರುವ ಕಲ್ಲು ಹರಳುಗಳನ್ನು ಬೆರಳು ತೆಗೆದು ಎಸೆದ ತಕ್ಷಣ ಒತ್ತು ಕಡಿಂಯೆನಿಸುತ್ತ ಎಷ್ಟೊಂದು ಹಾಯೆನಿಸುತ್ತದೆ. ದೇಹದ ಸ್ತ್ಯಗಳು ಗೊತ್ತಾಗಬೇಕಾದರೆ ದೇಹವನ್ನು ನಿರ್ದಯವಾಗಿ ಬಳಸಿಕೊಳ್ಳಬೇಕು. ಸ್ವಲ್ಪ ಹೊತ್ತು ಮನಸ್ಸು ಬುದ್ಧಿ ಎಲ್ಲ ಖಾಲಿಯಾಗಿರುತ್ತದೆ. ಹಾಗೆ ಖಾಲಿಯಾಗಿದೆ ಅನ್ನಿಸುವುದೇ ಆರಂಭ. ಮನಸ್ಸು ಎಲ್ಲೆಲ್ಲೋ ಹೋಗಿಬಿಟ್ಟಿರುವುದು, ತಲೆಗೆ ಏನೇನೋ ಯೋಚನೆಗಳು ಬರುತ್ತಿರುವುದು ಗೊತ್ತಾಗುತ್ತದೆ.

ಹಾಗೆ ಕಣ್ಣು ಮುಚ್ಚಿಕೊಂಡಿದ್ದಾಗಲೂ ಪುಳ್ಳೆಗಳನ್ನೆಲ್ಲ ರಾಶಿ ಮಾಡಿ ಬೆಂಕಿ ಹಚ್ಚಿ ಟೀ ಕಾಯಿಸುತ್ತ ಕೂತಿದ್ದ ಮನುಷ್ಯ ನನ್ನ ಮನಸ್ಸಿನಲ್ಲಿದ್ದ. ತುದಿಗೆ ತಲುಪುತ್ತಿದ್ದ ಹಾಗೇ ಕಣ್ಣಿಗೆ ಬಿದ್ದವನೇ ಅವನು. ಅರ್ಧ ವರ್ತುಲಾಕಾರದಲ್ಲಿ ಕಣ್ಣು ಹರಿಯುವಷ್ಟು ದೂರ ಹರಡಿಕೊಂಡು ನಿಶ್ಚಲವಾಗಿ ಬಿದ್ದಿದ್ದ. ಹತ್ತು ಸಾವಿರ ಅಡಿ ಎತ್ತರದಿಂದ ಕಾಣುತ್ತಿದ್ದ ವಕ್ರ ನಿರಂತರ ನಿಶ್ಚಲ ಏರು ಇಳಿತಗಳ ನಿಶ್ಯಬ್ದ ವಕ್ರ ಆಕಾರ ವಕ್ರವಾಗಿ ಇದ್ದ ನದಿಯ ಗೆರೆಯ-ಗೊತ್ತಿಲ್ಲ ವಾಕ್ಯ ಹೇಗೆ ಮುಗಿಸಲಿ ಅಂತ. ಮೈ ಹಾಯಾಗುತ್ತಿದ್ದಾಗ ಟೀ ಮಾಡುತ್ತಿರುವ ಬೆಂಕಿಯ ಹೊಗೆ ಗಾಳಿಯ ಜೊತೆ ಬಂದು ಮುಖಕ್ಕೆ ತಗಲುತ್ತಿತ್ತು. ಟೀ ಕುಡಿಯ ಬೇಕು ಅನ್ನಿಸುತ್ತಿತ್ತು. ಶ್ರೀನಾಥ, ಅನಂತ, ಮೂರ್ತಿ, ರಾಜು ಅವರ ಮಾತುಗಳು, ಧಾರಿಣು ಚಂದ್ರ ಅವರ ನಗು, ಶ್ಯಾಮಲೆಯ ಉದ್ಗಾರ, ಹಿಂದಿ ಸಿನಿಮಾ ಶೈಲಿಯಲ್ಲಿ ಸುಸ್ತನ್ನು ಹೇಳಿಕೊಳ್ಳುವ ನರೋನಾನ ಉದ್ಗಾರ ಗೋಳಾಟಗಳು-ನಿಂತಿದ್ದಾರೋ? ಕೂತಿದ್ದಾರೋ? ಕಣ್ಣು ಮುಚ್ಚಿಕೊಂಡು ಕಣ್ಣು ಮುಚ್ಚುವ ಒಂದೆರಡು ಕ್ಷಣ ಮೊದಲು ಕಂಡ ಕಮರಿಯ ದೃಶ್ಯಗಳು ಕಣ್ಣಿಂದ ಇಳಿದು ಮನಸ್ಸಿನಲ್ಲಿ ಮೂಡಿಕೊಳ್ಳುತ್ತಿರುವಾಗ, ಮನಸ್ಸು ಎಲ್ಲೆಲ್ಲೋ ಹೋಗುತ್ತಿದೆ ಅನ್ನಿಸಿದಾಗ, ಟೀ ಹೊಗೆ ಮುಖಕ್ಕೆ ತಗಲುತ್ತಿದ್ದಾಗ, ಸುಮ್ಮನೆ ಕಾಲು ಚಾಚಿ ಬಿದ್ದುಕೊಂಡಿರುವ ನಾನು ಅವರಿಗೆಲ್ಲ ಹೇಗೆ ಕಾಣುತ್ತಿದ್ದೆನೋ.

ಈಗ ಅನ್ನಿಸುತ್ತಿದೆ. ಆ ಜಾಗಕ್ಕೆ ಬ್ರಿಂಗ್ಟಾ ಟಾಪ್ ಅನ್ನುವ ಹೆಸರು ಯಾಕೆ ಬಂತು? ಬ್ರಿಂಗ್ಟಾ ಅನ್ನುವುದು ಏನು? ಅಥವ ಮನುಷ್ಯನೋ? ಯಾರು ಅವನು? ಯಾರನ್ನಾದರೂ ಕೇಳಬೇಕಾಗಿತ್ತು. ಆಗ ಅಂತಹ ಬುದ್ಧಿ ಕುತೂಹಲ ಹುಟ್ಟಲೇ ಇಲ್ಲ. ನನಗೆ ಮಾತ್ರ ಅಲ್ಲ. ನನ್ನ ಜೊತೆ ಇದ್ದ ಯಾರಿಗೂ. ಈಗ ಆ ವಿವರಗಳನ್ನೆಲ್ಲ ಪತ್ತೆ ಹುಡುಕಿಕೊಂಡು ಹೋಗಬೇಕು ಅನ್ನಿಸುವುದಿಲ್ಲ. ‘ಬ್ರಿಂಗ್ಟಾ ಟಾಪ್’ ಅನ್ನುವುದು ಒಂದು ಹೆಸರು. ನಮಗೆ ಒಂದು ಅನುಭವ. ಹೆಸರು ಉಳಿಯುತ್ತದೆ. ಇತಿಹಾಸದ ವಿವರ ಮರೆತು ಹೋಗುತ್ತದೆ. ಉಳಿದುಕೊಂಡ ಹೆಸರು ಆದ ಅನುಭವಕ್ಕೆ ಸಂಕೇತವಾಗಿ ಮನಸ್ಸಿನಲ್ಲಿ ಸುಮ್ಮನೆ ಇದ್ದುಕೊಂಡಿರುತ್ತದೆ.

ಆಗ ಕುತೂಹಲ ಹುಟ್ಟಿದ್ದು ಟೀ ಮಾಡುವ ಮನುಷ್ಯನ ಬಗ್ಗೆ. ಬೆಳಗಿನ ಹೊತ್ತಿಗೇ ಬಂದು ಹತ್ತು ಸಾವಿರ ಅಡಿ ಹತ್ತಿ ಗುಡ್ಡದ ಮೇಲೆ ಕೂತು, ಟ್ರೆಕಿಂಗ್ ಬರುವ ಮಂದಿಗಾಗಿ ಟೀ ಮಾಡಿಕೊಂಡು ಕಾಯುತ್ತ ಇರುವ ಮನುಷ್ಯ ತುಂಬ ಮನಸ್ಸನ್ನು ಹಿಡಿದು ಬಿಟ್ಟ. ಅಲ್ಲೆ ಎಲ್ಲೊ ಹತ್ತಿರದ ಹಳ್ಳಿಯಂತೆ. ಟ್ರೆಕಿಂಗ್ ಋತುವಿನಲ್ಲಿ ಹೀಗೆ ಬಂದು ಸರಿಯಾದ ಜಾಗ ಹಿಡಿದು ಟೀ ಕಾಯಿಸಿಕೊಟ್ಟು ಸ್ವಲ್ಪ ಸಂಪಾದನೆ ಮಾಡಿಕೊಳ್ಳುತ್ತಾನಂತೆ. ಕುರಿ ಕಾಯುವುದು ಮತ್ತು ವ್ಯವಸಾಯ ಅವನ ಕೆಲಸವಂತೆ. ಇಂಥ ಜನ ದಿನವೂ ಒಬ್ಬಿಬ್ಬರು ಸಿಕ್ಕುತ್ತಿದ್ದರು. ಈ ಟ್ರೆಕಿಂಗ್ ಅವಧಿಯಲ್ಲಿ ಅವನಿಗೆ ಸ್ವಲ್ಪ ಕೈ ತುಂಬ ಕಾಸು ಆಗುತ್ತದೆಯಂತೆ.

ಅವನು ಎಷ್ಟು ನಿಶ್ಚಲವಾಗಿ ಕೂತಿದ್ದ ಮಾತು ಎಷ್ಟು ಕಡಮೆ ಆಡುತ್ತಿದ್ದ ಅಂದರೆ ಅವನೂ ಒಂದು ಬಂಡೆ. ಮೋಟು ಮರ ಅನ್ನುವ ಹಾಗಿದ್ದ. ಬಣ್ಣ ಕಳೆದುಕೊಂಡ ಕೋಟು ತೊಟ್ಟಿದ್ದ. ಜಿಡ್ಡು ಜಿಡ್ಡಾಗಿತ್ತು. ಒಳಗೆ ಒಂದು ಸ್ವೆಟರು ಹಾಕಿಕೊಂಡಿದ್ದ. ಬೆನ್ನು ನೆಟ್ಟಗೆ ಕಾಲು ಚಾಚಿ ಕೂತಿದ್ದ. ತಲೆಯ ಮೇಲೆ ಬಣ್ಣ ಬಣ್ಣದ ಆದರೆ ಕೊಳೆಯಾದ ಗುಂಡನೆ ಕುಲು ಟೋಪಿ ಇತ್ತು. ತೆಳ್ಳಗೆ ಇದ್ದ. ಭುಜಗಳ ಅಳತೆಯೂ ಚಿಕ್ಕದು. ಕೆನ್ನೆಗಳು ತೆಳ್ಳಗೆ, ಅವನ ಷರಾಯಿ ತೆಳ್ಳಗೆ ಕೊಳವೆಯ ಹಾಗೆ, ಮೈಯಲ್ಲಿ ಎಲ್ಲೂ ಮಾಂಸ ಇಲ್ಲ. ಚಕ್ಕೆ ಹಾಗೆ ಮೈ. ಮುಖ ಚಪ್ಪಟೆ ಹಲಗೆ. ಕೆನ್ನೆ ತುಂಬ ಎದ್ದು ಕಾಣುವ ಎರದು ಗೆರೆಗಳು. ಮೂಗಿನ ಹೊಳ್ಳೆಗಳಿಂದ ಹೊರಟು ತುಟಿ ಅಂಚು ಮುಟ್ಟಿ ದಾಟಿದ್ದವು. ಸಣ್ಣ ಕಣ್ಣು. ಪಕ್ಕದಲ್ಲಿ ರಟ್ಟಿನ ಡಬ್ಬದ ತುಂಬ ಬಿಸ್ಕತ್ತು ಪೊಟ್ಟಣಗಳು. ಎದುರಿಗೆ ಉರಿಯುತ್ತಿರುವ ಬೆಂಕಿ. ಗಾಳಿ ಬೀಸಿದಂತೆ ಎಲ್ಲ ಕಡೆ ಹರಡುವ ಹೊಗೆ. ಅವನ ಫೋಟೋ ಒಂದು ತೆಗೆದೆ.

ಮೂರ್ತಿ ಮತ್ತು ರಾಜುಗೆ ಹೊಸಬರನ್ನು ಮಾತಾಡಿಸುವುದು, ತಾವೂ ಮಾತಾಡುವುದು, ತುಂಬ ಇಷ್ಟದ ಕೆಲಸ. ರಾಜುಗೆ ಹಿಂದಿ ಬರುವುದಿಲ್ಲ. ಮೂರ್ತಿ ಮಾತಾಡಿಸಿ ಆ ಬೇರೆಯವರು ಉತ್ತರ ಹೇಳಲು ತೊಡಗಿದರೆ ತಕ್ಷಣ ರಾಜು ಜೇಬಿನಿಂದ ಪುಸ್ತಕ ತೆಗೆದು ಬರೆದುಕೊಳ್ಳುವುದೇ ಶುರು. ಮೂರ್ತಿಯ ಮಾತೂ ಹಾಗೇ. ತನ್ನ ಗಟ್ಟಿ ದನಿಯಲ್ಲಿ ಅವನು ಏನು ಹೇಳುತ್ತಿದ್ದ ಅನ್ನುವುದಕ್ಕಿಂತ ಅವನ ಗತ್ತು, ತಲೆ ಹಾಕುವ ರೀತಿ, ಕೈಗಳನ್ನು ಗಾಳಿಯಲ್ಲಿ ಆಡಿಸುವ ವಿಧಾನ ಇವುಗಳಿಂದ ಅವನ ಮಾತು ಬೇರೆ ಜನರಿಗೆ ಅರ್ಥವಾಗುತ್ತಿತ್ತು. ಟೀ ಕಾಯಿಸುವ ಮನುಷ್ಯ ನಮ್ಮನ್ನು ನೀವು ಯಾವ ಊರು ಅಂತ ಕೇಳಿದ. ಕರ್ನಾಟಕ ಅಂದೆವು. ಬೆಂಗಳೂರು ಅಂದೆವು. ಎರಡು ಸಾವಿರ ಕಿಲೋಮೀಟರ್ ದೂರ ಅಂದೆವು. ಅರ್ಥ ಆದಹಾಗೆ ಕಾಣಲಿಲ್ಲ. ಹೀಗೆ ಎಲ್ಲೆಲ್ಲಿಂದಲೋ ಎಷ್ಟೆಷ್ಟು ದೂರದಿಂದಲೋ ಗುಡ್ಡ ಹತ್ತಲು ಬರುವವರನ್ನು ಕಂಡು ಅವನಿಗೆ ಏನನ್ನಿಸುತ್ತದೋ. ನಡಯಲು ನಾವು ಪಡುವ ಕಷ್ಟ ಕಂಡು ಮರುಕವೋ ತಮಾಷೆಯೋ ನಿರ್ಲಕ್ಷ್ಯವೋ? ಇಲ್ಲಿಂದ ಜಾರಿಗೆ ತಲುಪಲು ಇನ್ನೂ ಇಪ್ಪತ್ತು ಕಿಲೋಮೀಟರ್ ನಡೆಯಬೇಕು. ನೀವು ಅಲ್ಲಿಗೆ ತಲುಪುವ ಹೊತ್ತಿಗೆ ಸೂರ್ಯ ಮುಳುಗಿರುತ್ತಾನೆ ಅಂದ.

ಅವನಾಗಿ ಕೇಳಿದ ಪ್ರಶ್ನೆ ಒಂದೇ – ಎಲ್ಲರೂ ಬಂದು ಆಯಿತೋ ಅಥವಾ ಹತ್ತುತ್ತಿರುವವರು ಇನ್ನೂ ಇದ್ದಾರೋ?

ಬರವಣಿಗೆಯ ಒಂಬತ್ತನೆಯ ದಿನ

ಆಗ ಮಧ್ಯರಾತ್ರಿ ಕಲೆದಿತ್ತು. ನಾವು ಕುಲು ಬಸ್ ಸ್ಟ್ಯಾಂಡಿನಲ್ಲಿದ್ದೆವು. ಜ್ಞಾಪಿಸಿಕೊಂಡರೆ ಈಗ ನಾನು ಅಲ್ಲೇ ಇದ್ದೇನೆ ಅನ್ನಿಸುತ್ತದೆ.

ಮನೆ ಬಿಟ್ಟು, ಕಾಲೇಜು ಬಿಟ್ಟು, ಮನೆ ಕಾಲೇಜು ಇರುವ ಶಿವಮೊಗ್ಗ ಬಿಟ್ಟು, ಬೆಂಗಳೂರು ತಲುಪಿ, ರೈಲು ಹತ್ತಿ, ಇದುವರೆಗೂ ಹೆಸರು ಮಾತ್ರವಾಗಿದ್ದ, ಮ್ಯಾಪಿನ ಚುಕ್ಕೆಗಳು ಮಾತ್ರವಾಗಿದ್ದ, ಊರುಗಳನ್ನೆಲ್ಲ ಒಂದಾದಮೇಲೊಂದು ದಾಟಿ, ದೆಹಲಿ ತಲುಪಿಬಿಟ್ಟೆವು. ನನ್ನ ಮೈ ನಲವತ್ತೆಂಟು ಡಿಗ್ರಿ ಸೆಂ. ಧಗೆಯನ್ನು ತಾಳಿಕೊಳ್ಳುತ್ತದೆ ಎಂದು ಗೊತ್ತೇ ಇರಲಿಲ್ಲ. ಮೈ ಪಟ್ಟ ಹಿಂಸೆಯನ್ನು ಮೈಯೇ ಹೇಳಲಾರದು. ಬುದ್ಧಿ ಹುಟ್ಟಿಸಿಕೊಂಡ ಭಾಷೆ ಇನ್ನೆನು ಹೇಳೀತು. ಮೈಯೊಳಗೆ ಹರಿಯುತ್ತಿರುವುದು ರಕ್ತವಲ್ಲ, ಧಗೆಯ ನದಿ; ದೆಹಲಿಯೆಲ್ಲ ಒಂದು ದೊಡ್ಡ ಬಾಣಲೆ, ನಾವು ಅದರಲ್ಲಿ ಹುರಿದು ಹೋಗುತ್ತಿರುವ ಕಡಲೇಕಾಯಿಗಳು ಹೀಗೆ ಏನು ಹೇಳಿದರೂ ಅದು ಉತ್ಪ್ರೇಕ್ಷೆ ಅನ್ನಿಸುತ್ತದೆ ಅಥವ ಏನೇನೂ ಅಲ್ಲ. ವರ್ಣನೆಯೇ ಅಲ್ಲ ಅನ್ನಿಸುತ್ತದೆ. ಅಲ್ಲಿ ಎರಡೂವರೆ ದಿನ ಕಳೆದದ್ದೆ ನಾಳಿದ್ದು ನಾಳೆ ಇವತ್ತು ಇನ್ನರ್ಧಗಂಟೆಗೆ ಇಗೋ ಈಗ ಈ ಹಾಳು ಊರು ಬಿಟ್ಟು ಹಿಮಾಲಯದ ತಂಪಿಗೆ ಹೋಗಿಬಿಡುತ್ತೇವೆ ಅನ್ನುವ ನಿರೀಕ್ಷೆಯಲ್ಲಿ.

ಬೆಳಿಗ್ಗೆ ಆರುಗಂಟೆಗೇ ಕುಲುಗೆ ಹೊರಡುವ ಬಸ್ಸನ್ನು ದೆಹಲಿಯಲ್ಲಿ ಹತ್ತಿ ಕುಳಿತಮೆಲೆ ಇಂದೊಂದು ಕ್ಷಣವೂ ಧಗೆ ಕಡಿಮೆಯಾಗುತ್ತಿದೆ ಎಂದು ನನ್ನನ್ನೇ ನಾನು ನಂಬಿಸಿಕೊಳ್ಳುತ್ತಿದ್ದೆ. ಹದಿನೆಂಟು ಗಂಟೆಗಳ ಪ್ರಯಾಣ ಎಷ್ಟು ದೀರ್ಘವಾಗಿರಬಹುದು. ಗಡಿಯಾರದಲ್ಲಿ ಬಿಸಿಲಿನ ಹೊತ್ತು ಏರುತ್ತಿದ್ದಾಗ ನಿಜವಾಗಲೂ ದೆಹಲಿಯಿಂದ ದೂರ ಬಂದು ಧಗೆ ಕಡಿಮೆ ಆಗಿದೆ ಅಲ್ಲವೆ ಅಂತ ಮಾತಾಡಿಕೊಳ್ಳುತ್ತ ಚಂಡೀಗಢಕ್ಕೆ ಬಂದೆವು. ತಿಮ್ಮೇಗೌಡರಿಗೆ ಹೆದರಿಕೆ ಇತ್ತಂತೆ. ಪಂಜಾಬಿನಲ್ಲಿ ಯಾರಾದರೂ ನಮ್ಮನ್ನು ಅಡ್ಡಹಾಕಿ ಕೊಂದುಬಿಡುತ್ತಾರೆ ಅನ್ನುವ ಹೆದರಿಕೆ. ಪಂಜಾಬಿನಲ್ಲೂ ಬಿಸಿಲ ಧಗೆ ಕಡಿಮೆ ಏನೂ ಇಲ್ಲ. ಮಧ್ಯಾಹ್ನ. ಯಾಕೋ ಈ ಪ್ರಯಾಣ ಮುಗಿಯುವುದೇ ಇಲ್ಲ. ಹೊರಗಡೆ ರಾಚುವ ಬಿಸಿಲು. ಸುಮ್ಮನೆ ಸುಮ್ಮನೇ ಒಂದೇ ಸಮ ಶೃತಿ ಮಾಡಿಟ್ಟ ಶಬ್ದದಲ್ಲಿ ಓಡುವ ಬಸ್ಸು. ಬರೀ ಬಯಲು. ರಾಜು ಏನಾದರೂ ಮಾಡಿ ಇಲ್ಲದ ಕುತೂಹಲ ಹುಟ್ಟಿಸಿಕೊಳ್ಳಲು ಒದ್ದಾಡುತ್ತಿದ್ದರು. ಅಲ್ಲೊಂದು ಇಲ್ಲೊಂದು ಗುಡ್ಡಗಳು. ತೂಕಡಿಕೆ. ಎಚ್ಚರ. ತೂಕಡಿಕೆ. ಗಂಟೆಗಳು ಮುಂದೆ ಹೋಗುತ್ತಲೇ ಇಲ್ಲ. ಎಚ್ಚರ. ಗಡಿಯಾರದ ಮುಳ್ಳನ್ನು ನೋಡುತ್ತ ಕುಳಿತರೂ ಅಷ್ಟೆ. ಬಸ್ಸಿನ ಕಿಟಿಕಿಯಾಚೆ ಬಯಲನ್ನು ನೋಡುತ್ತಾ ಕುಳಿತರೂ ಅಷ್ಟೆ. ಬಸ್ಸಿನೊಳಗೆ ಆಯಾಸದಲ್ಲಿ ಅರೆನಿದ್ರೆಯಲ್ಲಿ ಬಿಗಿದ ಬೇರೆ ಮುಖಗಳನ್ನು ನೋಡಿದರೂ ಅಷ್ಟೆ. ಕಿಲೋ ಮೀಟರ್ ಕಲ್ಲುಗಳನ್ನು ಕಾಯುತ್ತ ಕುಳಿತರೂ ಅಷ್ಟೆ. ದೂರದಲ್ಲಿ ಸಣ್ನ ಗುಡ್ಡಗಳಂತೆ ಕಾಣುತ್ತಿವೆ ಏನೋ. ಅಯ್ಯೋ ಆ ಗುಡ್ದಗಳೇನೂ ಚಂದ ಇಲ್ಲ. ಬರೀ ಬೋಳು. ಕಣ್ಣು ಮುಚ್ಚಿದರೂ ಕಣ್ಣೊಳಗೆಲ್ಲ ಬಿಸಿಲು ಮತ್ತು ಗುಡ್ಡ. ತೆರೆದರೂ ಅಷ್ಟೆ. ಮುಚ್ಚಿದ್ದೆ. ತಟ್ಟನೆ ಒಮ್ಮೆ ಬಸ್ಸು ನಿಂತಿತು. ಅರೆ ಈ ಯಾಕೆ ಮಧ್ಯೆ ಗುಡ್ಡಗಳ ಮಧ್ಯೆ ಅರೆ ಯಾಕೆ? ಯಾರು ಇವರು? ಎಲ್ಲರನ್ನೂ ಇಳಿಯಿರಿ ಅನ್ನುತ್ತಿದ್ದಾರಲ್ಲ. ಎಲ್ಲರೂ ಇಳಿದೇಬಿಡುತ್ತಿದ್ದಾರೆ. ನಾನು ತೂಕಡಿಸಬಾರದಿತ್ತು. ಆದರೆ ತಾನೇ ಏನಾಗುತ್ತಿತ್ತು. ಬಸ್ಸನ್ನು ಸುತ್ತುವರೆದಿದ್ದಾರೆ. ಒಂದೇ ಥರ ಉಡುಪು. ಗಡ್ದ. ಪೇಟ. ಕ್ರಿಪಾಣಿ. ಕೊಲ್ಲಲು ಬಂದಿದ್ದಾರೋ? ಇಲ್ಲ. ಸದ್ಯ. ಪಾಪ. ಇವರು ಈ ದಾರಿಯಲ್ಲಿ ಹೋಗುವವರಿಗೆಲ್ಲ ಪಾನಕ ಕೊಡುತ್ತಾರಂತೆ. ಬಸ್ಸು ನಿಂತ ತಕ್ಷಣ ಗುಡ್ದಗಳ ನಡುವೆ ಮಧ್ಯಾಹ್ನ ಬಿಸಿಲ ಮೌನ. ಜನಗಳ ಮಾತು ಕೂಡ ಬಿಸಿಲ ಮೌನವನ್ನು ಕಲಕುತ್ತಿಲ್ಲ. ಪಾನಕ ತಣ್ಣಗಿತ್ತು.

ಬಸ್ಸು ಬೆಟ್ಟ ಹತ್ತುತ್ತಿತ್ತು. ಪಾನಕ ನಿದ್ರೆಯನ್ನು ತರುತ್ತಿತ್ತು. ಇದೂ ಹಿಮಾಲಯದ ಭಾಗವೇ ಅಂತೆ. ರಾಜು ‘ಅಲ್ಲಿ ನೋಡಿ. ಅದು ನೋಡಿ, ಇದು ನೋಡಿ’ ಅನ್ನುತ್ತಿದ್ದಾರೆ. ಹಿಮಾಲಯ ಹೀಗೇ ಇರುವುದಾದರೆ ನಾವು ಯಾಕಾದರೂ ಬಂದೆವು. ತೀರ್ಥಹಳ್ಳಿಯ ಹತ್ತಿರ. ಆಗುಂಬೆಯಲ್ಲಿ. ಹುಲಿಕಲ್ಲಿನಲ್ಲಿ ಇನ್ನೂ ಒಳ್ಳೆಯ ಕಣ್ಣು ತುಂಬುವ ಬೆಟ್ತ ಕಾಡುಗಳಿವೆ. ಶಿವಾಲಿಕ ಶ್ರೇಣಿಯಂತೆ ಇದು. ತುಂಬ ಎತ್ತರ ಎತ್ತರದ ಬೋಳು ಸುರಿವ ಗುಡ್ಡ. ಒಣ ಮರ. ಎಚ್ಚರವಾದಾಗಲೆಲ್ಲ ಅವೇ ಗುಡ್ಡಗಳು. ಅಗೋ ಅಲ್ಲಿ ಬಲಗಡೆ ಗುಡ್ಡದ ಮೇಲೆ, ಎತ್ತರದಲ್ಲಿ ಕಾಣುವ ರಸ್ತೆಯ ಮೇಲೂ ಹೋಗಬೇಕೆ? ಎಷ್ಟು ಹೊತ್ತಿಗೆ ಅಲ್ಲಿಗೆ ತಲುಪೀತು ಬಸ್ಸು? ಅಲ್ಲೊಂದು ಸೇತುವ ಕಾಣುತ್ತಿದೆ. ಎತ್ತರ ಕಂಬಗಳ ಮೇಲೆ ಎರಡು ಬೆಟ್ಟಗಳನ್ನು ಕೂಡಿಸುವ ಸೇತುವೆ. ಅದು ಬರುವವರೆಗೆ ಕಣ್ಣು ಮುಚ್ಚಿಕೊಂಡಿರುತ್ತೇನೆ. ಅದು ಬಂತೇ? ಮಾಯವಾಯುತೇ? ಈ ಬೆಟ್ಟದ ಇಳಿಜಾರಿನಲ್ಲೂ ಮನೆಗಳಿವೆ. ಜಾರಿ ಬೀಳುವುದಿಲ್ಲವಲ್ಲ ಇವು ಎಂಥ ಆಶ್ಚರ್ಯ. ಎಚ್ಚರವಾದಾಗಲೆಲ್ಲ ನಾವು ಇನ್ನೂ ಇಲ್ಲೇ ಇದ್ದೇವೆ ಅನ್ನಿಸುತ್ತಿದೆ. ನಿಜವಾಗಲೂ ಈ ದಾರಿ ಮುಗಿದು, ಈ ಗುಡ್ಡಗಳು ಮುಗಿದು ಕುಲು ಬರುತ್ತದೋ ಇಲ್ಲವೋ. ಎಚ್ಚರವಾಗಿರುವುದು ಸುಳ್ಳೋ ನಿದ್ದೆ ಮಾಡಿದ್ದು ಸುಳ್ಳೋ. ನಿದ್ದೆ ಮಾಡುತ್ತಿರುವುದು ಇದು ಸುಳ್ಳೋ. ಮನಸ್ಸಿನಲ್ಲಿ ದಿಕ್ಕಿಲ್ಲದ ಯೋಚನೆಗಳು.

ಮಳೆಯ ವಾಸನೆ. ಮಳೆ ಮತ್ತು ಇಳಿಬಿಸಿಲು ಸೇರಿದ ಗಂಧ. ಇದೀ ಹಳ್ಳಿಯೂ ಬಿಸಿಲೂ ಸ್ನಾನ ಮಾಡಿತ್ತು. ಚೆನ್ನಾಗಿ ಎಚ್ಚರವಾಗಿತ್ತು. ಜನ ನಿರುಂಬಳವಾಗಿ ನೆಮ್ಮದಿಯಾಗಿ ಮಾತಾಡಿಕೊಳ್ಳುತ್ತಿದ್ದಾರೆ. ಇಳಿದುಬಿಡಬೇಕು ಇಲ್ಲಿ ಅನ್ನಿಸಿತು. ಬಸ್ಸು ಹೊರಟಿತು.

ಇನ್ನೊಂದು ಗಲೀಜು ಊರು. ಚಾ ಕುಡಿಯಲೆಂದು ಬಸ್ಸು ನಿಂತಿತು. ಮಳೆ ನಿಂತಿಲ್ಲ. ಹೋಟೆಲ ಮಾಡಿನ ಅಂಚಿನಿಂದ ಧಾರೆಯಾಗಿ ಸುರಿಯುವ ನೀರು. ಎಲ್ಲರೂ ಎಲ್ಲರನ್ನೂ ಕೇಳಿದೆವು. ಕುಲು ಇಲ್ಲಿಂದ ಇನ್ನೆಷ್ಟು ದೂರ?
*****
ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.