ಶ್ರದ್ಧಾಂಜಲಿ

ಊರಿಗೇ ಮಾವನಾಗಿದ್ದ ನಾಗಪ್ಪ ವಯಸ್ಸಾಗಿ, ಜಡ್ಡಾಗಿ, ಕೊನೆಗೊಮ್ಮೆ ನರಳಿ ನಳಿ ಸತ್ತ. ‘ಪೀಡಾ ಹೋತು ಹಿಡಿ ಮಣ್ಣು ಹಾಕಿ ಬರೂಣ’ ಎಂದು ಸ್ಮಶಾನಕ್ಕೆ ಹೋದರು ಊರ ಜನ. ಕೂಡಿದ ಜನರಲ್ಲಿ ಕಿಡಿಗೇಡಿ ಒಬ್ಬ ಪಿಸುಗುಟ್ಟಿದ. ‘ಕಲ್ಲು ಮಣ್ಣು ಹಾಕಿ ಗಟ್ಟ್ಯಾಗಿ ತುಳೀರಿ. ಎದ್ದ ಬಂದಾನು.’ ಅಂತ. ಯಾರ ಬಾಯಿಂದಲೂ ಒಂದು ಒಳ್ಳೇ ಮಾತು ಬರಲಿಲ್ಲ. ‘ಶರಣ ಸಾವು ಮರಣದಲ್ಲಿ’ ಅನ್ನಲು ಅವನು ಶರಣನೂ ಅಲ್ಲ. ಸಭೆ ಸೇರಲಿಲ್ಲ. ಭಾಷಣ ನಡೆಯಲಿಲ್ಲ. ಅವನು ಧುರೀಣನೂ ಅಲ್ಲ. ಹುಟ್ಟಿ ಬಂದ. ಬಾಳಿದ. ಸತ್ತುಹೋದ. ನಾಗಪ್ಪ ಮಾವ ಹೇಗಿದ್ದ್ದ? ಏನು ಮಾಡಿದ? ಕುತೂಹಲವಿದೆಯೆ ನಿಮಗೆ? ಬನ್ನಿ ನಮ್ಮ ಜೊತೆ ಅವನ ಹಳ್ಳಿಯ ಮನೆಗೆ ಹೋಗೋಣ. ಒಬ್ಬೊಬ್ಬರಾಗಿ ಮಗ. ಮಗಳು. ಹೆಂಡತಿ ಎಲ್ಲರನ್ನೂ ಮಾತಾಡಿಸೋಣ.

ಬಸವರಾಜ: ನಮ್ಮಪ್ಪಗ. ನಾ ಒಬ್ಬನಽ ಗಂಡು ಮಗಾ. ಅದೂ ‘ಗಂಡು ಹುಟ್ಟಿತಽ ಬಂಗಾರ ಗುಂಡು ಹುಟ್ಟಿತಽ’ ಅನ್ನೂ ಹಾಂಗ ಇಬ್ರು ಹೆಣಮಕ್ಕಳ ಮ್ಯಾಲೆ ಹುಟ್ಟಿದಂವಾ. ಆಮ್ಯಾಲೆ ನಮ್ಮವ್ವ ಹಡೀಲೆ ಇಲ್ಲ. ಅಪ್ಪ ಪ್ರಪಂಚಾ ಸುತ್ತಿದಂವಾ. ಕಾಯಿದೆ ಕಾನೂನು ಗೊತ್ತಿದ್ದಂವಾ ಏನಾರ ಮಾಡಿದ್ದಾನು. ಒಬ್ಬನ ಮಗಾ ಅಂತ ಅಂವೇನ ಒಂದಿನಾನೂ ತೊಡಿ ಮ್ಯಾಲೆ ಕುಂದ್ರಿಸಿಕೊಂಡ ಕಿರೀಟಾ ಹಾಕಲಿಲ್ಲ. ‘ಲೇ. ಮಗನ ಹಲ್‌ಕಟ್ ಸೂಳಿ ಮಗನಽ ಬಾರಲೇ ಇಲ್ಲಿ. ಇನ್ನೊಮ್ಮೆ ಹಿಂಗ ಮಾಡಿದಿ ಅಂದರ ಕಾಲ್ಮರಿಲೆ ಹೊಡೀತೀನಿ ನಿನ್ನ’ ಅಂತ ಎದ್ದರ ಕುಂತರ ಸಿಟ್ಟಿಗೇಳಾಂವಾ.

ನನಗಂತೂ ದುಡದ ದುಡದ ಸಾಕಾಗಿ ವಾರಿಗೀ ಗೆಳೆಯಾರ್‍ನ ನೋಡಿ ಹೊಟ್ಟೀಕಿಚ್ಚಾಗಿ ಮನೀ ಬಿಟ್ಟು ಎಲ್ಲ್ಯರೇ ಓಡಿ ಹೋಗಲ್ಯಾ ಅಂತಿದ್ದೆ.
ಒಂದೆರಡ ಸಾರ ಪ್ಲ್ಯಾನೂ ಹಾಕಿದ್ದೆ. ನಮ್ಮವ್ವ ಅಳೂದು ಕರಿಯೂದು ನೋಡಲಾರದೆ ಸುಮ್ಮಕಾದೆ. ಅವ್ವ ಕಾದು ಮುಚ್ಚಿ ನೂರಾರು ರೂಪಾಯಿ ಕೈಯ್ಯಾಗ ತುತುಕಿ ಹೋಗ ಬೆಳಗಾಂವ್ಯಾಗ ಸಿನೇಮ. ಚಾದಂಗಡಿ ತಿರಗ್ಯಾಡಿ ತಿರಗ್ಯಾಡಿ ಬಾ ಅಂತ ಕಳಸತಿದ್ಲು. ಒಂದಿನಾನು ಆಕಿ ನನಗ ತಿನ್ನಾಕ ಉಣ್ಣಾಕ ಕಡಿಮಿ ಮಾಡಲಿಲ್ಲಾ. ನನ್ನ ಒಬ್ಬನ್ನ ಉಣ್ಣಾಕ ಕುಂದರಿಸಿ ಹಾಲು ಬೆಲ್ಲ ತುಪ್ಪ ಮಸರು ಮಜ್ಜಿಗಿ ಕೈ ಜಲ್ಲ ಬಿಟ್ಟ ಬೀಡತಿದ್ಲು. ಗರಡೀ ಮನೀಗಿ ಹೋಗಿ ಬಾ ಅಂತಿದ್ಲು. ಅದಕ್ಕಽ ನಾನೂ ಅಪ್ಪನಾಂಗ ಧಾಂಡಿಗ್ಯಾ ಆಗಿ ಮಸ್ತಾಗಿ ಬೆಳೆದೆ. ಅಪ್ಪನ ಸಿಟ್ಟಿಗೆ ಹೆದರಿ ನಾ ದುಡಿಯಾಕ ಕಲಿತೆ. ಹೊಲಾ ಕೊಂಡ್ವಿ. ಆಸ್ತಿ ಬೆಳೀತು. ಒಂದು ವ್ಯಾಳೆ ಅಚ್ಚಾ ಮಾಡಿದ್ದರ ನಾನೂ ರಮ್ಯಾ, ಎಂಕ್ಯಾ, ಸಿದ್ಯಾರ ಹಾಂಗ ಗುಟಕಾ ತಿನಕೊಂತ ಸೆರೇದ ಅಂಗಡಿ ಮುಂದ ಬಿದ್ದಿರತಿದ್ದೆ.

ಅಪ್ಪನೂ ಯಾರಿಗೂ ತಿಳೀಲಾರದಂಗ ಕುಡೀತಿದ್ದಾ. ಅದು ಒಂದ ಅಳತ್ಯಾಗ. ಕುಡದರೂ ಯಾರಿಗೂ ಗೋತ್ತ ಆಗತಿದ್ದಿಲ್ಲಾ ಅವ್ವನ್ನ ಬಿಟ್ಟು. ಯಾಕಂದರ ಅಂವಗ ಅವರ ಹೆದರಿಕಿ ಇತ್ತಲ್ಲ. ಯಾರರೆ ತೆಪ್ಪ ಮಾಡಿದರ ಬಾರಿಗೀಲೆ ಝಾಡಿಸಿ ಬಿಡತಿದ್ಲು ಗಂಗವ್ವಾಯಿ. ಅಪ್ಪ ಮೂಬೆರಕಿ. ಆಕಿಗೆ ಗೊತ್ತ ಆಗದಾಂಗ ಕಳವು. ಹಾದರ. ಕುಡತಾ ಎಲ್ಲಾ ಮಾಡತಿದ್ದಾ. ಚೆಂಜಿ ಆದ ಕೂಡಲೆ ಮಕಾ ತೊಳಕೊಂಡ. ಮೂರಬಟ್ಟ ಈಬೂತಿ ಪಟ್ಟಾ ಬಡಕೊಂಡ. ಈರಭದ್ರ ದೇವರ ಮುಂದ ಊದಬತ್ತಿ ಹಚ್ಚಿ ಅವ್ವನ ಕಾಲ ಬೀಳತಿದ್ದಾ. ಆಯಿಗೆ ಖುಷೀನ ಖುಷಿ. ಮನಸ ತುಂಬಿ ಹರಕೀ ಕೊಡತಿದ್ಲು. ಅಪ್ಪಗ ಅವ್ವ ಅಂದರ ದೇವ್ರು. ಆಕೀ ಮಾತು ಹಸೀಗ್ವಾಡ್ಯಾಗಿನ ಹಳ್ಳು. ಬಿದಿಕಿ ಇರೂತನಾ ಆಕೀದ ರಾಜ್ಯ ನಮ್ಮನ್ಯಾಗ. ನಮ್ಮ ಅವ್ವನ್ನೂ ನಾ ಹಾಂಗಽ ಇಟಗೋತೀನಿ ಅಂತಿದ್ದೆ. ಆದರ ನಮ್ಮಪ್ಪನ ಮುಂದ ನಂದೇನೂ ಆಟ ನಡೀತಿದ್ದಿಲ್ಲ. ಗೆಳೆಯರೆಲ್ಲಾ ‘ಹುಲೀ ಹೊಟ್ಟ್ಯಾಗ ಒಂದು ಇಲೀ ಹುಟ್ಟೈತಿ’ ಅಂತ ನಗಚಾಟಕಿ ಮಾಡತಿದ್ರು. ‘ಅಗಸರ ಕತ್ತೀ ಹಾಂಗ ದುಡಿಯೂದ ಒಂದಽ ಗೊತ್ತೈತಿ ನಿನಗ ತಲ್ಯಾಗ ಬಿದ್ಧೀನ ಇಲ್ಲಾ ಮಣ್ಣ ತುಂಬೈತಿ’ ಅಂತ ಪಿರೀತೀಲೆ ಬಯ್ಯತಿದ್ದರು. ಅಪ್ಪ ನನ ಮದುವೀ ಮಾಡತೀನಿ ಅಂತ ಓಡ್ಯಾಡಾಕ ಹತ್ತಿದಾ. ಒಂದಿನಾ ಅವ್ವನ ಕೈ ಹಿಡಕೊಂಡ ಹಿತ್ತಲದಾಗ ಅತ್ತೆ. ‘ಅಪ್ಪ ನಿನ್ನ ಇಷ್ಟ ದ್ವೇಷಾ ಮಾಡತಾನ. ನೀ ಅದೀ ಅಂತ ಬದಿಕೇನಿ. ನನ್ನ ಯಾಕ ಹುಟ್ಟಿಸಿದೆಬೆ’ ಅಂತ ಗೋಳಾಡಿದೆ.

‘ಹುಚ್ಚ ನನ ಮಗನ. ಅವರ ಗುಣಾ ನಿನಗ ಗೊತ್ತಿಲ್ಲ. ನಿನ್ನ ಭಾಳ ಪಿರೀತಿ ಮಾಡತಾರೊ. ಹೊಲದ್ಯಾಗ ಮನ್ಯಾಗ ನನ ಮಗಾ ಇಷ್ಟ ದುಡೀತೈತಿ. ಅದಕ್ಕ ಹೊಟ್ಟಿಗಿ ಏನೂ ಕಡಿಮಿ ಮಾಡಬ್ಯಾಡಾ ಅಂತಾರ. ನಾ ನಿನಗ ಕೊಡೂದು ಅವರ್‍ದಽ ರೊಕ್ಕ ನನ ಹಂತ್ಯಾಕ ಒಂದ ದಮಡೀ ಇಲ್ಲಾ. ಎಲ್ಲಾ ಅವರ ಹೇಳದಾಂಗ ಮಾಡತೀನಿ’ ಅಂದು ನನ್ನ ಬೆನ್ನ ಮ್ಯಾಲೆ ಕೈಯಾಡಿಸಿ ಸಮಾಧಾನ ಹೇಳಿದ್ಲು. ನನಗ ನಂಬಾಕ ಆಗಲಿಲ್ಲ. ಏನ ವಿಚಿತ್ರ ಇದು ಅಂದಕೊಂಡೆ. ಅಂವಾ ಏನ ಮಾಡಿದ್ರೂ ನನ್ನ ಹಿತಕ್ಕ ಮಾಡತಾನ ಅಂದು ಅಂವನ್ನಽ ನಂಬಿದೆ. ಈಗ ಇಂದಾ ಅಪ್ಪನ್ನ ಕಳಕೊಂಡೆ. ನನ್ನ ಕಣ್ಣ ಮುಂದ ಕತ್ತಲಽ ಐತಿ. ಅಯ್ಯೋ ಯಪ್ಪಾಽ, ನಮ್ಮಪ್ಪಾಽ…
ಬಸವರಾಜನ ಅಳು ನಿಲ್ಲುವ ಮೊದಲೆ-

ಗಿರಿಜವ್ವ: ಅಪ್ಪನ ದೊಡ್ಡ ಮಗಳು ನಾನು. ಚೊಚ್ಚಲ ಹೆಣ್ಣ ಹುಟ್ಟಿತಂತ ಅಪ್ಪಗ ಸಿಟ್ಟ ಬಂದಿತ್ತಂತ. ‘ಮನೀ ಹೆಣ್ಣಮಗಳ ಅಂದರ ಲಗಸ್ಮೀ ಇದ್ದಾಂಗ. ಹುಟ್ಟಿದ ಮನೀಗೆ ಕೊಟ್ಟ ಮನೀಗೆ ಹೆಸರ ತರತಾಳ. ಮುಂದಿಂದು ಗಂಡಽ ಆಕ್ಕೈತೇಳ. ಈಗೇನ ಮುದುಕ ಆಗಿ ಹ್ವಾದೇನ’ ಅಂತ ಆಯಿ ಮೂತಿಗೆ ತಿವಿದ ಮ್ಯಾಲೆ ಕೂಸಿನ ನೋಡಾಕ ಬಂದನಂತ. ತಿಂಗಳ ಕೂಸಿನ್ನ ಕೈಯಾಗ ತೊಗೊಂಡು ಸಂಸ್ಕೃತದಾಗ ಮಂತ್ರಾ ಅಂದು ಆಸೀರ್ವಾದಾ ಮಾಡಿ ‘ಬಣ್ಣ ಕಡಿಮಿ ಇದ್ದರೂ ಕಣ್ಣು ಮೂಗಿಲೆ ನಿನ್ನಾಂಗ ಚೆಲುವಿ ಅದಾಳ ನಿನ ಮಗಳು’ ಅಂದನಂತ. ಅವ್ವ ಹಿಗ್ಗಿ ಹಿರೀಕಾಯಾಗಿ ಅವತ್ತ್ನಿಂದ ಕಣ್ಣೀರ ಹಾಕೂದ ಬಿಟ್ಟಳಂತ.

ನನ್ನ ಬೆನ್ನ ಮ್ಯಾಲೆ ತಂಗಿ ಸುಮ್ಮಿ ಹುಟ್ಟಿದಾಗ ಮಾತ್ರ ಬಾಣಂತೀನ ಹಿಡದು ಎಳದು ಹೊಡ್ಯಾಕ ಹೋಗಿದ್ದನಂತ. ಗಂಗವ್ವಾಯಿ ಸೊಸಿ ಸತ್ತಗಿತ್ತಾಳಂತ ಅಪ್ಪನ್ನ ನುಗಿಸಿ ‘ಈ ಸುಂದ್ರಿ ಮುಂದಿಂದು ಗಂಡ ಹಡೀದಿದ್ರ ಇಕೀನ್ನ ಬಿಟ್ಟ ಬ್ಯಾರೆ ಮದವೀ ಮಾಡ್ತೀನಿ ಬಾ ಮಗನ’ ಅಂತ ಸಮಾಧಾನ ಮಾಡಿ ಬಿಡಿಸಿದಳಂತ. ಅವ್ವ ಹೆದರಿ ಕಂಗಾಲಾಗಿ ಹೊಟ್ಟಿಗಿ ತಿನ್ನದ ಕೂಸಿಗಿ ಮಲೀ ಕುಡಸದ ಅತಗೊಂತ ಮಲಗಿದ್ಲು. ಅಪ್ಪ ಗುಡಾರ ಸರಿಸಿ ಬಂದು ‘ಸುಮ್ಮಿ ಸತ್ತಗಿತ್ತೀತು ಎದ್ದು ಮಲೀ ಕುಡಸಽ ಸುಂದ್ರಿ’ ಅಂತೇಳಿ ಅವ್ವನ ಬಾಯಾಗ ಎರಡು ಪೇಡೆ ಹಾಕಿದ್ದು ಕತ್ತಲ ಮೂಲ್ಯಾಗ ಕುಂತಾಕಿ ನಾನಽ ನೋಡಿ ಪಿಳಿ ಪಿಳಿ ಕಣ್ಣ ಬಿಟ್ಟಿದ್ದೆ. ಆಯೀ ಮುಂದ ಹೇಳಬ್ಯಾಡ ಅಂತ ಅವ್ವ ನನಗೂ ಪೇಡೆ ಕೊಟ್ಟಿದ್ಲು.
ನಾ ನೆರತ ಎರಡ ವರ್ಷದ ಮ್ಯಾಲೆ ಐದ ತೊಲಿ ಬಂಗಾರ ಹಾಕಿ ದುಮ್ಮಿಹಳ ನಿಂಗಪ್ಪಗ ನನ್ನ ಮದುವೀ ಮಾಡಿ ಕೊಟ್ಟಾ. ಒಟ್ಟ ಕುಟುಂಬಾ. ಮನೀ ತುಂಬ ಮಂದಿ. ದಿನಾ ನಾಲ್ವತ್ತು ರೊಟ್ಟೀ ಬಡೀತಿದ್ದೆ. ಹೊಲಕ್ಕೂ ಹೋಗತಿದ್ದೆ. ನನ್ನ ಗಂಡನ ಒಂದೀಟ ಹೊರ ಚಾಳಿ ಇತ್ತ. ನನಗ ಸುಳವ ಬಡದ ಕೂಡಲೆ ‘ಅಪ್ಪನ ಮುಂದ ಹೇಳ್ತೀನಿ ನೋಡ್ರಿ ನಿಮ್ಮನ್ನ ಆಕೀನ್ನ ಕೂಡೇ ಕಾಲ್ಮರೀಲೆ ಬಡೀತಾನ ನಮ್ಮಪ್ಪ ಭಾಳ ಸಿಟ್ಟಿನಾಂವ.’ ಅಂತ ತಾಕೀತ ಮಾಡಿದೆ.

‘ಹೋಗಲೇ ಏನ್ಹೇಳ್ತೀ ನಿಮ್ಮಪ್ಪಂದು. ಬಾಳ ಶುದ್ದ ಮನಿಶ್ಯಾ. ಊರಿಗೊಂದ ಹೆಂಗಸನ್ನ ಇಟ್ಟಾನಂವ. ಊರಾಗ ಸಾಜೂಗ ಆಗಿ ಮಂತ್ರೀ ಕೊಟ್ಟಾರ. ಎಮ್ಮೆಲ್ಲೆ ಕೊಟ್ಟಾರ. ಅಂತ ತಾನಽ ಕೊಡಿಸಿದ ಶಾಲ ಹೊತಕೊಂಡ ದಿಮಾಕಿಲೆ ಅಡ್ಡ್ಯಾತಾನ. ನಿಮ್ಮಪ್ಪನ ಐದೇಶಿ ಬಲ್ಲೆ ನಾನು’ ಅಂತ ತಿರಿಗಿ ತದಕಿದಾಗ ಗಪ್ಪಗಾರಾದೆ.

ಚೊಚ್ಚಲ ಹಡ್ಯಾಕ ತವರ್ಮನೀಗ ಬಂದೆ. ಮೊಮ್ಮಗಾ ಹುಟ್ಟಿದ ಸಂತೋಸಾ ಅಪ್ಪಗ ಭಾಳಾ ದಿನಾ ಉಳೀಲಿಲ್ಲಾ. ಒಂದಿನಾ ಬೆಳಗಾಂವಿಗಿ ಹೋಗೂ ಮುಂದ ಟ್ರಕ್ ಎಕ್ಸಿಡೆಂಟ ಆಗಿ ಅಪ್ಪನ ಕೈ ಕಾಲು ಮುರದ್ವು. ಮೂರ ತಿಂಗಳ ಬೆಳಗಾಂವಿ ದೊಡ್ಡ ದವಾಖಾನ್ಯಾಗ ಇದ್ದಾ. ಕರ್ಚ ಬಾಳಾತು. ಮನ್ಯಾಗಿನ ಬಂಗಾರಾ ಒತ್ತೀ ಇಟ್ಟಾ. ಅದರಾಗ ನಂದೂ ಕೂಡಿತ್ತು. ಗಂಡನ ಮನೀಯವರು ದಯಾಮಾಯಾ ಇಲ್ಲದ ಬಂಗಾರ ತಂದರ ಮನ್ಯಾಗ ಕಾಲಿಡು ಅಂದ ಬಿಟ್ಟರು. ತೊಟ್ಟಿಲ ನಿಬ್ಬಣ ಹೋಗಲೇ ಇಲ್ಲಾ. ನಾ ಮಗನ್ನ ಕಟಗೊಂಡ ಇಲ್ಲೇ ಉಳದ ಬಿಟ್ಟೆ. ಗಂಡಮಗನ ಜೋಡಿ ಹೊಲದಾಗ ಮನ್ಯಾಗ ದುಡಿಯಾಕ ಒಂದ ಆಳಾತ ಅಂತ ಅಪ್ಪನೂ ಸುಮ್ಮನಾಗಿಬಿಟ್ಟಾ. ಹಾಸಿಗೀ ಹಿಡಿದ ಗಂಗವ್ವಾಯಿ ಹೇಲು ಉಚ್ಚಿ ಬೊಳದೆ. ಸಾಯೂತನಾ ಸೇವಾ ಮಾಡಿದೆ. ನನಗೇನು ಗಂಡನ ಗರಜು ಇದ್ದಿದ್ದಿಲ್ಲಾ.

ಮೊಮ್ಮಗಾ ಎದೀ ಉದ್ದಽ ಬೆಳದಾ. ಅಪ್ಪನ ಜೀವ ಕುಟು ಕುಟು ಅಂತಿತ್ತೋ ಏನೋ. ದುಮ್ಮೀ ಹಾಳದವರ ಮ್ಯಾಲೆ ಮೊಮ್ಮಗನ ಪಾಲಿಗೆ ಕೋರ್ಟ ಕೇಸ ಹಾಕಿದಾ. ಬೆಳಗಾಂವಿಗೆ ಓಡ್ಯಾಡಿ, ಅವರ ಇವರ ಕೈಕಾಲ ಹಿದಕೊಂಡು ಕೇಸ ಗೆಲ್ಲಿಸಿದಾ. ರಿಜಿಸ್ಟ್ರಿ ಕಾಗದಾ ನನ ಕೈಯಾಗ ಕೊಟ್ಟು ‘ಹೋಗ ನನ ಮಗಳ ಮಗನ್ನ ಕರಕೊಂಡ ನಿನ ಮನ್ಯಾಗ ಇರಹೋಗ’ ಅಂದಾ. ನನ್ನ ಸಲುವಾಗಿ ಆಕೀ ಬಾಳೇ ಹಾಳಾತು ಅಂತ ಕಣ್ಣೀರ ಹಾಕಿದ್ನಂತ. ಅವ್ವ ಹೇಳಿದ್ಲು. ನೋಡಾಕ ಹೊರಗ ನಮ್ಮಪ್ಪ ಕಲ್ಲುಬಂಡಿ ಆದ್ರೂ ಒಳಗ ನೀರ ಸೆಲಿ ಇತ್ತು. ಹಂತಾ ಅಪ್ಪನ ಕಳಕೊಂಡ ನಾ ಪರದೇಶಿ ಆಗೀನ್ರೇಽ ಅಯ್ಯಯ್ಯೋ ನಮ್ಮಪ್ಪ ನಮ್ಮನ್ನ ಬಿಟ್ಟ ಹ್ವಾದಾನ್ರೇ…
ಗಿರಿಜವ್ವನ ಕಣ್ಣೀರು ಆರುವ ಮೊದಲೇ…

ಸುಮಿತ್ರಾ: ನಾ ನಮ್ಮಪ್ಪನ ಎರಡ್ನೇ ಮಗಳು ಅನ್ನೂದಕ್ಕಿಂತ ಅವ್ವನ ಮಗಳು ಅನ್ನೂದಽ ಖರೇ. ಕ್ಯಾದಿಗಿ ಬಣ್ಣ. ನೆಟ್ಟನ್ನ ಮೂಗು. ದೊಡ್ಡ ಕಣ್ಣು. ತುಂಬಿದ ಗಲ್ಲ. ಕಪ್ಪನ ದಟ್ಟ ಕೂದಲಾ ಎಲ್ಲಾ ಥೇಟ ಸುಂದ್ರವ್ವನ ಹಾಂಗಽ ಅಂತಿದ್ರು ಮಂದಿ. ಆದರ ಚಂದ್ರಗ ಒಂದು ಕಪ್ಪು ಕಲಿ ಇದ್ದಾಂಗ ನನ್ನ ಹಣೀ ಮ್ಯಾಲೆ ಬಲಕ್ಕ ಒಂದು ಕಲೀ ಐತಿ. ನಮ್ಮನೀ ತಲಿಬಾಗಲಾ ದಾಟಿದ ಮ್ಯಾಲೆ ಬಲಕ್ಕ ಗ್ವಾದಲಿ. ನಾಕೇತ್ತು. ಎರಡೆಮ್ಮಿ ಆಕಳಾ. ಉಚ್ಚಿ-ಶಗಣೀ ನಾತಾ – ಎಡಕ್ಕ ನಾಕೈದ ಪಾವಟಗಿ ಏರಿದ ಮ್ಯಾಲೆ ಸಾಲ ಆರ ಕಂಬದ ಪಡಸಾಲಿ. ಅಪ್ಪ ಚಾಪೀ ಮ್ಯಾಲೆ ಗ್ವಾಡಿಗೆ ಆಕೆ ಕುಂತ ಬಂದ ಮಂದೀ ಕೂಡ ಮಾತಾಡಿಕೊಂತ ತನ್ನ ದರಬಾರಾ ನಡಸೂ ಜಾಗಾ ಅದು. ನನಗಿನ್ನೂ ಚೂರ ಚೂರ ನೆನಪೈತಿ. ನನಗ ತಿನ್ನಾಕ ಉಂಡೀ ಕೊಟ್ಟ ಆಯೀ ಅವ್ವ ಕೂಡಿ ಬಸ್ಸೂನ್ನ ಎರ್‍ಯಾಕ ಹೋಗಿದ್ರು. ನನ ಕೈಯಾಗಿನ ಉಂಡಿ ಪಡಸಾಲೀ ಕಟ್ಟೀ ಕೆಳಗ ಬಿತ್ತು. ಅದನ್ನ ತಗೊಳ್ಳಾಕ ಹೋಗಿ ನಾನೂ ಕೆಳಗೆ ಬಿದ್ದೆ. ಫರಸಿ ಹಣೀಗೆ ಬಡದು ರಕ್ತ ಪುಟಿಯಾಕ ಹತ್ತ್ಯು. ಮುಂದಿನ ಮನೀ ಸತೀಶ ಓಡಿ ಬಂದು ಎಬ್ಬಿಸಿದಾ. ಅಪ್ಪ ಓಡಿ ಬಂದ ದೋತರಲೆ ನನ ಮಾರೀ ಮ್ಯಲಿನ ರಕ್ತಾ ಒರಿಸಿ ಎತ್ತಗೊಂಡ ಡಾಕ್ಟರ ಕಡೆ ಒಯ್ದಾ. ನಾ ಹುಟ್ಟಿದ ಮ್ಯಾಲೆ ಅದಽ ಮೊದಲನೇ ಸಾರೆ ಅಂವ ನನ್ನ ಎತ್ತಿದ್ದು. ಅದಕ್ಕಽ ನೆನಪೈತಿ ನನಗ.

ದೊಡ್ಡಾಕಿ ಆದಂಗ ಸತೀಶನ ಕಣ್ಣು ಯಾವಾಗ ನೋಡಿದರೂ ನನ್ನ ಮ್ಯಾಲೆ ಇರತಾವ ಅನ್ನೂದ ತಿಳಿಯಾಕ ಹತ್ತಿತು.
‘ಸುಮೀ. ಹಿಡೀ ಈ ಕೆಂಪ ಗುಲಾಬಿ. ನಿನ್ನ ಜಡ್ಯಾಗ ಛಂದ ಕಾಣತೈತಿ’ ಅಂವಾ ಅಂದಾಗ ನಾನು ಅತ್ತಾಗ ಇತ್ತಾಗ ನೋಡಿ ‘ನೀನಽ ಮುಡಸು’ ಅನ್ನೂ ಹಾಂಗ ತಲಿ ತೋರಿಸಿ ತಿರಿಗಿ ನಿಲ್ಲತಿದ್ದೆ. ಅವನ ಬೆರಳು ಕುತ್ತಿಗಿ ಸುತ್ತ ಆಡಿದಾಗ ಕಚಗುಳಿ ಆಗಿ ಮೈ ಜುಂ ಅಂತಿತ್ತು. ಅವನ ಕಣ್ಣಾಗಿನ ಪ್ರೀತಿ. ತುಂಟಾಟ ನನಗ ಭಾಳ ಸೇರತಿತ್ತು.

ಎಲ್ಲಾರ ಕಣ್ಣ ತಪ್ಪಿಸಿ ಜಡೀ ಜಗ್ಗೂದು. ಮೈ ಮುಟ್ಟೂದು. ಗಲ್ಲಾ ಹಿಂಡೂದು ಮಾಡಿದಾಗ ನನ್ನ ಮೈ ಬಿಸಿ ಆಗಿ ಅವಂಗ ಅಲ್ಲೇ ಅಂಟಿಕೊಂಡ ಬಿಡಬೇಕ ಅನಸ್ತಿತ್ತು. ಗಿರಿಜಕ್ಕ. ಗಂಗವ್ವಾಯಿ ಕಣ್ಣ ತಪ್ಪಿಸಿ ಸಿನಿಮಾದಾಗ ನೋಡಿದಾಗ ಪ್ರೀತಿ ಆಟಾ ಆಡೂದಂದರ ಹುರುಪ ತುಂಬತಿತ್ತು. ಸತೀಶನ್ನಽ ಮದುವಿ ಆಗಬೇಕು ಅಂತ ಭಾಳ ಆಸೇ ಮಾಡಿದ್ದೆ. ಅವನೂ ಮುದ್ದು ಕೊಟ್ಟ ಕೊಟ್ಟ ಹಾಂಗಽ ಹೇಳಿದ್ದ.
ಹಳ್ಳ್ಯಾಗ ನಮ್ಮಪ್ಪ ಮಾಡೂ ಕಿತಾಪತಿ ಏನ ತುಸಾ ಅಲ್ಲ. ಸತೀಶನ ಅಪ್ಪ ಸದಾಶಿವಪ್ಪನ ಹೊಲದ ಬಾಂದಕಲ್ಲ ರಾತ್ರೋರಾತ್ರಿ ಕತ್ತಿ ಒಳಾಗ ಸರಿಸಿಬಿಟ್ಟಾ. ತೊಗೋ ಇಬ್ಬರಿಗೂ ಜಗಳ ಆತು. ಹೊಡೆದಾಟಕ್ಕ ಸದಾಶಿವಪ್ಪ ಆಳಲ್ಲ. ಸೂಕ್ಷ್ಮ ಮನಿಶ್ಯಾ. ಮಕ್ಕಳ್ನ ಕಲಸೂ ನೆವ ಮಾಡಿ ಊರಽ ಬಿಟ್ಟ ಹೋಗಿ ಬಿಟ್ಟಾ. ನಾ ಹುಚ್ಚೀ ಹಾಂಗ ಸತೀಶನ ದಾರೀ ನೋಡೇ ನೋಡ್ದೆ. ಕಾದೂ ಕಾದೂ ಮೈ ಮನಸು ಎಲ್ಲಾ ಸೋತ ಹ್ವಾದು. ದಿನಕ್ಕ ದಿನಾ ಸತೀಶ ಮಸಕ ಮಸಕ ಅಕ್ಕೋತ ಹ್ವಾದಾ. ಮಾಯ ಆಗಿಬಿಟ್ಟಾ…

ಅಪ್ಪ ನನ್ನ ಮದುವೀ ಮಾಡಾಕ ತಯಾರಾದಾ. ಬಂದವರ ಮುಂದ ಗೊಂಬೀ ಹಾಂಗ ಸಿಂಗಾರಾಗಿ ಕೂತೆ. ಎದ್ದೆ. ಯಾರಾರೋ ಹುಂ ಅಂದ್ರು. ಯಾರೋ ಒಲ್ಲೆ ಅಂದರು. ನಾ ವಿಚಾರಾ ಮಾಡಾಕ ಹೋಗಲಿಲ್ಲಾ. ಕುಡಗೋಲು ಕುಂಬಳಕಾಯಿ ಅಪ್ಪನ ಕೈಯಾಗ ಕೊಟ್ಟು ಕುಂತ ಬಿಟ್ಟೆ. ನೀ ಏನಂತೀ ಅಂತ ಅಪ್ಪ ಎಂದೂ ಕೇಳಲಿಲ್ಲ. ಸಾಲೀನೂ ಮುಗದಿತ್ತು. ಜೋಡಿಯವರೆಲ್ಲಾ ಮದಿವ್ಯಾಗಿ ಹೋಗಿದ್ರು. ಶೇಂಗಾ ಹರ್‍ಯಾಕ. ಕಸ ತಗ್ಯಾಕ ಅಕ್ಕ. ತಮ್ಮನ ಕೂಡ ಹೊಲಕ್ಕೆ ಹೋಗಿ ಮುಂಜಾವಿನಿಂದ ಸಂಜೀತನಾ ಇದ್ದ ಬರತಿದ್ದೆ.

ಬದುಕು ಯಂತ್ರದಾಂದ ಹ್ಯಾಂಗ ನಡೀತದ. ಎಷ್ಟ ದಿನಾ? ಉಪ್ಪು, ಹುಳಿ ಉಂಡ ದೇಹಾ ಏನೇನೋ ಬೇಕ ಅನಿಸತಿತ್ತು. ‘ಸುಮಿತ್ರಾಽ’ ಯಾರೋ ಕಿವಿ ಹತ್ತರ ಕರದರು. ಸಟ್ಟನ ತಿರುಗಿ ನೋಡಿದೆ. ಹುರಕಡ್ಲಿ ಶಂಬೂ ಹೆಗಲಿನ ಹತ್ತರ ನಿಂತಿದ್ದಾ. ಅವನ ಉಸರು ನನ್ನ ಗಲ್ಲಕ್ಕ ಬಡೀತಿತ್ತು. ಮೈಯಾಗ ಒಂಥರಾ ಆಗಿ ಮೈ ತುಂಬ ಹರಿದಾಡಿದಾಂಗ ಆತು. ಅಂವೇನ ನನಗ ಅರೇದಂವ ಅಲ್ಲ. ದಿನಾ ನಮ ಜೋಡಿ ಹೊಲ ಕೆಲಸಕ್ಕ ಬರತಿದ್ದ. ಕಪ್ಪ ಇದ್ದರೂ ಕಳಾ ಇದ್ದ. ಕಣ್ಣಾಗ ಕಣ್ಣಿಟ್ಟು ನೋಡಿದಾ. ಕಣ್ಣಿಗೆ ಕತ್ತಲಿ ಬಂದಂಗಾತು.

‘ಗಿರಿಜಕ್ಕಾ ಬಂದಿಲ್ಲಾ’ ಅಂದ. ನನ ಗಂಟಲು ಒಣಗಿತ್ತು. ಕೈಹಿಚಿಕಿ ಕಿವ್ಯಾಗ ಪಿಸಿ ಪಿಸಿ ಅಂದಾ. ಯಂತ್ರದಾಂಗ ಗೋಣು ಹಾಕಿದೆ.
ಅಂದ ಮನೀ ಮುಟ್ಟೂದರಾಗ ದೀಪ ಹತ್ತಿತ್ತು. ಅವ್ವ ಹೊರಗಽ ಇದ್ಲು. ‘ನಿಮ್ಮಪ್ಪ ಇನ್ನೂ ಮನೀಗೆ ಬಂದಿಲ್ಲ. ಸಪ್ಪಳಾ ಮಾಡದಾಂಗ ಹಿತ್ತಲ ಬಾಗಲದಾಗ ಬಾ. ಯಾರರೆ ಕೇಳಿದರ ಹಣುಮಪ್ಪನ ಗುಡೀಗ ಹೋಗಿದ್ದೆ ಅಂತ್ಹೇಳೆ. ಹಾದರದ ಜೋಡಿ ಸುಳ್ಳ ಹೇಳಾಕೂ ಕಲಿಸಿದ್ಲು ನಮ್ಮವ್ವ. ಹಾಂಗಽ ಮತ್ತ ಮತ್ತ ಗುಡೀಗೆ ಹೋಗಿ ಬಂದೆ. ಮುಟ್ಟ ನಿಂತು ಹೊಟ್ಟಿ ಮುಂದ ಬಂತು. ಶಂಭ್ಯಾ ನಮ್ಮ ಜಾತಿ ಅಲ್ಲ. ಅಪ್ಪಗ ಹೆದರಿ ಮಾರೀ ತಪ್ಪಸಾಕ ಹತ್ತಿದಾ. ಅಪ್ಪಗ ಗೊತ್ತಾದರ ಹೊಡದ ಕೊಂದಬಿಟ್ಟಾನ ಮಗಳ್ನ ಅಂತ ಚಿಂತೀ ಮಾಡಿ ಅವ್ವ ಮುಚ್ಚಿ ಮುಚ್ಚಿ ಇಟ್ಲು. ಸುದ್ದಿ ಗೊತ್ತ ಆದ ದಿನಾ ‘ಖಾತಾ ಮಾಡಿದ್ಯಽ ರಂಡೀ’ ಅಂತ ಚೀರ್‍ಯಾಡಿ ಕ್ವಾಣಿ ಬಾಗಲೂ ಹಾಕಿ ಹೊಡದಾ. ಹೊಡದಷ್ಟು ಹೊಡೀಲಿ ಹೊಟ್ಟ್ಯಾಗಿಂದು ಸತ್ತ ಹೋಗಲಿ ಅಂತ ನಾನೂ ಹಲ್ಲ ದವಡೀ ಕಚ್ಚಿ ಹೊಡಿಸಿಕೊಂಡೆ. ಅಷ್ಟಕ್ಕೆ ಅವನ ಸಿಟ್ಟು ಇಳೀಲಿಲ್ಲ. ನೀರೊಲಿ ಕೊಳ್ಳೀ ತಂದು ಬರೀ ಕೊಡಾಕ ಬಂದಾಗ ಮಾತ್ರ ಅವ್ವನ ಜೀವ ತಡೀಲಿಲ್ಲ. ಓಡಿಬಂದು ನನ್ನ ಅಪ್ಪಿಕೊಂಡು. ಬಾಳೇಕ ಬಂದ ಮ್ಯಾಲೆ ಮದಲ ಸಾರೆ ಅಪ್ಪಗ ತಿರಿಗಿ ನಿಂತ್ಲು.

“ಇಟ್ಟ ವಯಸ್ ಆದರೂ ಮನೀ ಹೆಂಡ್ತಿ ಒಬ್ಬಾ‌ಅಕಿ ಸಾಲೂದಿಲ್ಲ ನಿನಗ. ನಾಯೀ ಹಾಂಗ ತಿಪ್ಪೀ ಮೂಸಾಕ ಹೋಗ್ತಿ. ಅದು ಹರೇದ ಹುಡುಗಿ. ನೀನು ನಿಂತ ಮದುವೀ ಮಾಡಿಕೊಟ್ಟಿದ್ದರ ಗಂಡನ ಮನ್ಯಾಗ ಸುಖದಿಂದ ಇರತಿದ್ಲು. ತಿಳೀಲಾರದ ತೆಪ್ಪ ಮಾಡಿದರೆ ಜೀವಾನ ತಗೀತಿ ಏನು? ಅಕೀಕಿಂತ ಮದಲ ನನಗ ಬರೀ ಕೊಡು. ಈ ಹೆಣ್ಣ ಹಡದೀನಂತ.”

ಅವ್ವನ್ನ ದುರು ದುರು ನೋಡಿ ಅಪ್ಪ ಉರಕೊಂತ ಹೊರಗ ಹೋದಾ. ಬೆಳತನಕ ಅವ್ವ ಎಣ್ಣೀ ಹಚ್ಚಿ ನನ್ನ ಮೈ ತೀಡಿ ನೀರಿನ ಕಾವು ಕೊಟ್ಲು. ಮರದಿನಾ ಹೊಡತಕ್ಕ. ಜ್ವರಕ್ಕ ನನ್ನ ಮೈ ಇಳಿದು ಹೋಗಿತ್ತು. ಡಾಕ್ಟರ ಕಡೇಂದ ಔಷಧ. ಗುಳಿಗಿ ತಂದ ಅಪ್ಪ ಮಗಳಿಗೆ ಕಜ್ಜಿನ ಜ್ವರಾ ಅಂತ ದೊಡ್ಡ ದನ್ಯಾಗ ದೇಳಕೊಂತ ಬಂದಿದ್ದ. ನೆಲಕ್ಕ ಬಿದ್ದರೂ ಮೀಸಿ ಮಣ್ಣ ಆಗಲಿಲ್ಲಾ ಅನ್ನೂವಂಗಾ ಅಪ್ಪ.

ಮುಂದ ಆರ ತಿಂಗಳದಾಗ ಅಪ್ಪ ನನ್ನ ಮದುವೀ ಮಾಡಿ ಕೈ ತೊಳಕೊಂಡ. ಬೆಳಗಾಂವ್ಯಾಗ ಸಣ್ಣ ರೆಡಿಮೇಡ ಅಂಗಡೀ ಇಟಕೊಂಡ ಅದಾನ ರಾಜಶೇಖರ. ಶುಭಕಾರೇಕ ಊರವರ ಯಾರರೇ ಕಲ್ಲ ಹಾಕ್ಯಾರಂತ ಬೆಳಗಾಂವಿ ಗುಡ್ಯಾಗ ಮದುವೀ ಮಾಡಿ ಕೊಟ್ಟಾ. ನನ್ನ ಗಂಡ ಭಾಳಾ ಪ್ರೀತಿಯಿಂದ ನೋಡಿಕೊಂತಾನ. ನಾನೂ ಹಿಂದೆಂದೆಲ್ಲಾ ಮರತು ಸಿಕ್ಕಿದ್ದ ಶಿವಾ ಅಂತ ಬಾಳೇ ಮಾಡತೇನಿ. ಮಗನಿಗೆ ಅಪ್ಪನ ಹೆಸರು ನಾಗಭೂಷಣ ಅಂತ ಇಟ್ಟೇನಿ.

ಎಂದೂ ಕಣ್ಣೀರ ಹಾಕದ ಅಪ್ಪ ನಾ ತೊಟ್ಟಿಲ ನಿಬ್ಬಣದ ಜೋಡಿ ಬೆಳಗಾಂವಿಗಿ ಬರೂ ಮುಂದ ದೋತರಾ ಮರೀ ಮಾಡಿ ಅತ್ತಾ. ಮನಸ್ಸಿಗಿ ಹಳಿಹಳಿ ಆತು. ಇದ್ಯಾಕೋ ಅಪಶಕುನ. ಅಪ್ಪನಂಥಾ ಗಂಡಸು ಅಳಬಾರ್‍ದು. ಇನ್ನೊಮ್ಮೆ ಅಪ್ಪನ್ನ ನೋಡ್ತೀನೋ ಇಲ್ಲೊ ಅನ್ನಿಸ್ತು. ಹಾಂಗ ಆರು. ನಮ್ಮಪ್ಪನ್ನ ಕಳಕೊಂಡ ದಿಕ್ಕೇಡಿ ಆದೆ. ಅಯ್ಯೋ ಅಪ್ಪಾ… ನಮ್ಮಪ್ಪಾ… ಹೋಗಿಬಿಟ್ಯಲ್ಲೊ… ನಮ್ಮ ಕೈ ಬಿಟ್ಟೂ…

ಸುಂದರವ್ವ: ಸುಂದ್ರವ್ವಾಽ ಏಽ ಏಳಽ ಸುಂದ್ರೀ. ಏಳಽ ಮೂಳಾ. ಏಟೊತ್ತ ಗಂಡನ ಮಗ್ಗಲಾಗ ಬಿದ್ದಕೋತಿ. ಹೆಣಮಕ್ಕಳ ಸೂರ್‍ಜಾ ಮಾಡೂತನಾ ಮಲಗಬಾರ್‍ದ ಏಳ. ಅರಿಷ್ಟತನಾ. ಮನಾರ ಹ್ವಾಕೀ ಕುಂತೇತಿ. ಏಳಽ ಸುಂದ್ರೀ ಚುಚುಂದ್ರೀ.
ನಮ್ಮತ್ತಿ ಗಂಗವ್ವಾಯಿ ನಾ ನಡ್ಯಾಕ ಬಂದಾಗಿಂದ ಹಿಡಿದು ಆಕೀ ಸತ್ತು ಬಾಯಿ ಬಂದ ಆಗಿ ಗ್ವಾಡಿಗೆ ಕುಂಡ್ರೂ ತನ ದಿನಾ ಹಾಡಿದ ರಾಗ ಇದು. ಈ ಮನಿಗೀ ಬಂದಾಗ ಹನ್ನೆಡ್ಡು ವರ್ಸದ ಹುಡುಗಿ ನಾನು. ಅದಽ ವರ್ಸ ನೆರತಿದ್ದೆ. ರಾತ್ರೆಲ್ಲಾ ಗಂಡನ ಕಾಟಾ. ಬೆಳಗಾದರ ಅತ್ತೀ ಕಾಟಾ. ಮಾರೀ ತೊಳ್ಕೊಂಡು ನೀರೊಲಿಗೆ ಹರೀ ಹಾಕಿ ಜ್ವಾಳ ಬೀಸಾಕ ಕುಂದ್ರತಿದ್ದೆ. ಹಿತ್ತಲಕ ಹೋಗಾಕೂ ಹೆದರಿಕಿ ಕತ್ತಲ ಗವ್ ಅಂತಿತ್ತು.

ಮನೀ ಕೆಲಸ ಮುಗದ ಮ್ಯಾಲೆ ಚೆಂದುಳ್ಳಿ ಚೆಲುವಿ ಸೊಸಿನ್ನ ಮುಂದ ಹಾಕ್ಕೊಂಡ ಹೊಲಕ್ಕ ಒಯ್ಯಾಕಿ. ದುಡದ ದುಡದ ಸಾಕಾಗಿ ತವರ್ಮನಿ ನೆನಿಸಿ ಕಣ್ಣೀರ ತೆಗದರ. ಸ್ವಾಟಿಗೆ ತಿವೀತಿದ್ಲು.

‘ಹೊಯ್ಮಾಲೀ ಹುಲಿಯಂಥಾ ಅತ್ತಿ ಅದೀನಿ. ಬಾಳೆ ಮಾಡಾಕ ಗಂಡ ಅದಾನ. ಗಂಡ ಸತ್ತ ರಂಡಿ ನಾನು. ಮಗನ್ನ ಹೊಟ್ಟ್ಯಾಗ ಇಟಗೊಂಡ ಕೂಲೀ ಮಾಡಿ ಇಟ್ಟೆಲ್ಲಾ ಬದುಕ ಮಾಡೀನಿ. ನಿನಗ ಏನಾಗೇದ ಮೂಳಾ. ಯಾಕ ಅಳತೀ ಬಾಯ್ತುಂಬ ಹಲ್ಲ ಇಟಗೊಂಡ’ ಮಗನ ಕಿವಿ ಚುಚ್ಚಿದರ ಸಾಕು ಅವನೂ ಬಂದು ದಬಾ ದಬಾ ನಾಕೇಟು ಹಾಕವನ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.